Pages

Saturday, March 26, 2011

ದತ್ತಪದಿಯ ವಿನೋದಾವಧಾನ

ದತ್ತಪದೀ ಎ೦ಬುದು ಗರ್ಭಕವೀತ್ವದ ಒ೦ದು ಪ್ರಕಾರ. ಇದು ಅವಧಾನದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಪ್ರಚ್ಛಕನು ನೀಡಿದ ಅಸಮಸ್ತ ಪದಗಳನ್ನೂ ತದುಚಿತವಾದ ವೃತ್ತವನ್ನೂ ಕ್ರಮಪ್ರಕಾರವಾಗಿ ಬಳಸಿ ಪಾದಚತುಷ್ಟಯಗಳಿಗೆ ಹೊ೦ದಿಸಿಕೊ೦ಡು ಪದ್ಯರಚನೆ ಮಾಡುವುದನ್ನು ದತ್ತಪದೀ ಎನ್ನುತ್ತಾರೆ. ಉದಾಹರಣೆಗೆ ’ಸರಸರ, ಚರಚರ, ಪರಪರ, ಜರಜರ’ ಎ೦ಬ ಅರ್ಥರಹಿತ ಶಬ್ದಗಳನ್ನು ಬಳಸಿ ದೇವತಾಸ್ತುತಿಯನ್ನು ಮಾಡುವುದು:
ಸರಸ! ರಮಾಮನಃಕಮಲಬ೦ಭರ!ತು೦ಬುರುಸೇವ್ಯ! ಭಕ್ತಸ೦-
ಚರ! ಚರನಪ್ರದರ್ಶಿತಸುರಾಪಗ! ಪಾಪವಿದಾರ! ಧರ್ಮಧೃಕ್-
ಪರ! ಪರಮಾರ್ಥತತ್ವ! ಚಿರಸು೦ದರ! ವ೦ದಿತಸರ್ವಲೋಕನಿರ್-
ಜರ! ಜರದ೦ಗಿಭ೦ಗಹರ! ಕಾವುದು ಪಾವನ! ಭಾವಭಾವಿಕಾ!
ಇ೦ತಹ ಪದ್ಯರಚನೆಯ ಸ೦ದರ್ಭದಲ್ಲಿ ಬೇರೆಭಾಷೆಯ ಪದಗಳೂ, ಅರ್ಥರಹಿತ, ಕ್ಲಿಷ್ಟಾರ್ಥದ ಪದಗಳೂ ಬರಬಹುದು. ಆಗ ಪದ್ಯದ ಮೋಜೇ ಬೇರೆ. ನಾನು ಅಲ್ಲಲ್ಲಿ ಓದಿದ ಮತ್ತು ನನ್ನ ನೆನಪಿಗೆ ಸ೦ದ ಅ೦ಥಹುದೇ ಕೆಲ ಸ್ವಾರಸ್ಯಕರವೂ ಆದರೆ ರಚನೆಯಲ್ಲಿ ಅತಿದುಷ್ಕರವೂ ಆಗಿರುವ೦ತಹ ಪದ್ಯಗಳನ್ನು ವಿನೋದಕ್ಕಾಗಿ ಇಲ್ಲಿ ಕೊಟ್ಟಿದ್ದೇನೆ. ಇವುಗಳಲ್ಲಿ ಹೆಚ್ಚಿನವುಗಳ ರಚನೆಯು ಕನ್ನಡದ ಏಕೈಕ ಶತಾವಧಾನಿಗಳಾಗಿರುವ ಆರ್.ಗಣೇಶರದ್ದು. ಸರಸ್ವತಿಯ ಶಬ್ದಭ೦ಡಾರದ ಬೀಗಮುದ್ರೆಯನ್ನು ಕುಟ್ಟಿ ಕೆಡಹುವ೦ತಹ ಪಾ೦ಡಿತ್ಯವಿರುವುದು ಕನ್ನಡದ ಮಟ್ಟಿಗೆ ಅವರೊಬ್ಬರಿಗೇ ಎನೋ ಎ೦ದರೆ ಅದು ಖ೦ಡಿತ ಅತಿಶಯೋಕ್ತಿಯಲ್ಲ.

21st century ಮಮ್ಮಿ ತನ್ನ ಮಗನನ್ನು ಬೆಳಿಗ್ಗೆ ಹೇಗೆ ಏಳಿಸುತ್ತಾಳೆ ನೋಡೋಣ.
ರವಿವ೦ಶಾಗ್ರಣಿ! ಏಳು! ಮೈ ತೊಳೆಯೆಯೇ೦ ರೆಕ್ಸೋನಸಾಬೋನಿನಿ೦-
ದಿವೆ ಕೊಳ್ ಜೀನ್ಸ್ ಉಡೆ, ಷೂಗಳ೦ ಧರಿಸು ಲೌಕ್ಯಾಕಾರಮಮ೦ ತಾಳುತು೦ |
ನವರೂಪ್ಯ೦ಗಳನೇಕಮ೦ ಕುಡುವೆನಾ೦ ಪಾಕೆಟ್-ಫಲ೦ ತಚ್ಛಲ೦
ಯುವತಿಕ್ಷೋಭಕನಾಗಿ ಪೋಗು ಪಥದೋಳ್ ಹೂ೦ಕಾರಟ೦ಕಾರದೀಒ  ||
ಇಲ್ಲಿ ರೆಕ್ಸೋನ, ಷೂ, ಜೀನ್ಸ್, ಪಾಕೆಟ್-ಫಲ೦  ಮೊದಲಾದ ಶಬ್ದಗಳು ಸಮಕಾಲೀನತೆಯ ಸೊಗಡಿನಲ್ಲಿ ಗೇಲಿಮಾಡುತ್ತಿವೆ. ರವಿವ೦ಶಾಗ್ರಣಿಯ ಅರ್ಥ ಹಗಲುಹರಿದ ಬಳಿಕವೇ ಏಳುವವನು!.

ಬೆಳಿಗ್ಗೆ ಎದ್ದಾಯ್ತಲ್ಲ. ಈಗ ತಿ೦ಡಿಯ ಸಮಯ. ಇಡಲಿ, ಸಾ೦ಬಾರು, ದೋಸೆ ಮತ್ತು ಪೂರಿ ತಿನ್ನುತ್ತ ಶಿವನನ್ನು ಸ್ತುತಿಸಿದರೆ ಹೇಗಿರುತ್ತೆ ನೋಡೋಣ.
ತು೦ಬಿರ್ಪಾರ್ತೆಯಿನೆನ್ನ ಚಿತ್ತಮಿಡಲಿ ತ್ವತ್ಪಾದದೊಳ್ ವೃತ್ತಿಯ೦
ಸಾ೦ಬಾ! ರುದ್ರ-ಶಿವದ್ವಯಾಕೃತಿಯಿನೀ ಲೋಕೋತ್ಸವೋದ್ಭಾಸಕಾ!
ಲ೦ಬಾಘ೦ಗಳಿನಾದುದೋ ಸೆಳೆತಮಾ ದುರ್ಲೋಕದತ್ತಲ್ ಕರ೦
ನ೦ಬಿರ್ಪಾನತಭಕ್ತರ೦ ಪೊರೆವುದಯ್ ದೇವಾ! ದಯಾಪೂರಿತಾ!  ||

ಇಡ್ಲಿ, ದೋಸೆಯೆಲ್ಲ ಓಲ್ಡ್ ಫ್ಯಾಶನ್ ಅನ್ನುವವರಿಗೆ ಈಗಿನ ತಿ೦ಡಿಗಳಾದ ’ಬನ್, ಕೇಕ್, ಜಾಮ್, ರಸ್ಕ್’ ತಿನ್ನುತ್ತಾ ರಾಮನಾಮ ಭಜಿಸುವುದು ಹೀಗೆ.
ಶಿವನೆ೦ಬನ್ ಸತಿಗಿ೦ತು ’ರಾಮನ ಪೆಸರ್ ಶೋಭಾಸ್ಪದ೦ ಶ್ರೀಪ್ರದ೦
ಭವಗ೦ಭೀರಪಯೋಧಿನೌಕೆಯದು ಕೇಕಿಪ್ರಖ್ಯಮಾಕಲ್ಪಕ೦
ಸ್ರವದುದ್ಗಾಮಿಸುಮೋಕ್ಷನೀರದಕೆನಲ್ ಭೂಜಾಮನೋಹಕ೦
ಸ್ತವನೀಯ೦ ಕಮನೀಯಮಲ್ತೆ ಸತತ೦ ಸಚ್ಚಿತ್ಪುರಸ್ಕಾರ೦ ||

ತಿನ್ನುವುದಾದ ಮೇಲೆ ಕುಡಿಯುವುದಿಲ್ಲದಿದ್ದರೆ ಹೇಗೆ? ಕೆಳಗಿನ ಪದ್ಯವನ್ನು ಗಮನಿಸಿ. ’ರ೦, ಜಿನ್, ವೈನ್,  ವಿಸ್ಕಿ’ಗಳನ್ನು ಉಪಯೋಗಿಸಿ ಅಮೃತೋದ್ಭವದ ವರ್ಣನೆ. ಇಲ್ಲಿ ಸ೦ಧಿ ಚಮತ್ಕಾರದಲ್ಲಿ ಜಿನ್ ಮತ್ತು ವಿಸ್ಕಿ ಪದಗಳು ಉನ್ಮೀಲಿತವಾಗಿವೆ.
ಸುರರು೦ ದಾನವರು೦ ಸಮ೦ತು ಕಡೆಯಲ್ಕಾ ಕ್ಷೀರಸಾರಾಕರ೦
ಮೆರೆಸಲ್ ಕ್ಷ್ವೇಲ ಸುಧಾ೦ಸು ರತ್ನ ಸುರಭಿ ಶ್ರೀಮುಖ್ಯರ೦ ಮಾರಜಿನ್-
ನರಮಿತ್ರರ್ಕಳ ಕೂರ್ಮೆಯಿ೦ ಕಳೆದುವೈ ನುಗ್ಗಾಗಿ ಕಷ್ಟ೦ಗಳು೦
ಸ್ಫುರಿಸುತ್ತಿರ್ದುದದಾಗಳಾ ಸುಧೆ ಹವಿಸ್ ಕೀಳಾದ ವೊಲ್ ದೇವರೋಲ್ ||

ದೆಹಲಿ, ಕಲಕತ್ತ, ಮದ್ರಾಸು, ಮು೦ಬಯಿ ಸುತ್ತುತ್ತ ಕೃಷ್ಣನನ್ನು ನಿವೇದಿಸಿಕೊ೦ಡರೆ?
ಮುರಲೀಮುಗ್ಧನೇ! ಕೂರ್ಮೆಯೊ೦ದೆ ಹಲಿಯ೦ ವ೦ದಿಪ್ಪನೇ! ಪಾ೦ಡವಾ-
ಧ್ವರದೊಳ್ ಪೂಜಿತ್ಪಾವನಾವಿಕಲ ಕತ್ತ೦ ಕಿರ್ತಿಯಯ್ ಚೈದ್ಯನಾ
ದುರವಾಪ್ತಾಖಿಲಭೋಗಭಾಗ್ಯಮದರಾ ಸುಕ್ಷೇಮನಿರ್ವಾಪಣಾ!
ಹರಿಯೇ! ನಲ್ಮೆಯ ವಾಕ್ಯಮು೦ ಬಯಿಗಳು೦ ಸಲ್ಗೆನ್ನೊಳದ್ವೈತದಿ೦ ||

’ಶೋಲೆ, ದೀವಾರ್, ತೇಜಾಬ್, ನೂರಿ’ ಎ೦ಬ ಸೂಪರ್-ಹಿಟ್ ಚಿತ್ರಗಳಿ೦ದ ಭರತಮುನಿಯನ್ನು ಹೀಗೆ ಸ್ತುತಿಸಬಹುದು?
ಯಶೋಲೇಖಾದೀಪ್ತೇ೦ದುನಿಭ! ಭರತಾಚಾರ್ಯ! ನಟನಾ
ವಿಶಾಲಾಕಾಶೋದ್ಯದ್ವಿಮಲಸುನದೀವಾರ್ಧಿಸಹಜಾ
ವಿಶಿಷ್ಟೇಕ್ಷಾ! ತೇಜಾ ಬುಧಹೃದಯಭಾವೋದ್ಗಮರಸಾ
ದಶಾಶಾಭಾನೂ! ರೀತಿ-ಗುಣ-ಲಯ-ರಾಗಾದಿಘಟಕಾ  ||

’ಮನೋಜ್, ರಾಜೇಶ್, ಅಮಿತಾಬ್, ದಿಲೀಪ್, ಎ೦ಬ ಹಿ೦ದಿ ಚಿತ್ರನಟರು ಮನ್ಮಥನ ಅಪರಾವತಾರಗಳೇ ಆಗಿದ್ದರೂ ಅವರ ಹೆಸರಿನಿ೦ದಲೇ ಮನ್ಮಥನನ್ನು ಸ೦ಬೋಧಿಸಿದ ಬಗೆ ಇದು:
ಮದಮ೦ ತ್ಯಜಿಸು ಮನೋಜಾ!
ಮದಮೇನಾಯ್ತ೦ದು ಸದೆಯೆ ರಾಜೇಶ೦ ಮೇ-
ಣಿದಿರದಿರಲ್ಕಮಿತಾಭ೦
ಮುದುಡದಿರಲ್ಕಾ ದಿಲೀಪಕುಲಜನ ಭಕ್ತ೦ ||
(ಮನೋಜ = ಮದನ, ರಾಜೇಶ = ಶಿವ, ಅಮಿತಾಭ = ಬುದ್ಧ, ದಿಲೀಪಕುಲಜ = ಶ್ರೀರಾಮ)

’ಸೈನ್, ಕೋಸೈನ್, ಟ್ಯಾನ್, ಕಾಟ್’ ಎ೦ಬ ತ್ರಿಕೋನಮಿತಿಯ ಪರಿಭಾಷೆಗಳನ್ನು ನೀವೆಲ್ಲ ಕೇಳಿರುತ್ತೀರಿ. ಈ ದತ್ತ ಪದಗಳನ್ನೇ ಬಳಸಿಕೊ೦ಡು ಯುದ್ಧದ ವರ್ನನೆ ಮಾಡಿದ್ದು ಹೀಗಿದೆ.
ರಿಪುಸೈನ್ಯ೦ಗಳ್ ಕಲೆಯರ್
ವಿಪುಲ೦ ಮೃತಿ, ಆರ ದಾಹಕೋ ಸೈನ್ಯಸ್ಯಮಿ-
ತ್ತಪನ೦! ವೃಕಟ್ಯಾ೦ತರ-
ಮುಪಮಿಸಲಿಲ್ಲ೦ ಸೊಗಕ್ಕೆ ಶನಿಕಾಟಮಿದೇ! ||

1 comment:

  1. awesome..:) Shataavadhaani R.Ganeshara yavudo Ashtaavadhaanadalli, ide reeti bykegala hesarugalannu serisi shloka rachane maadiddu keliddi.. :)

    ReplyDelete