Pages

Friday, June 22, 2012

ಚಾಯ, ಕಣ್ಣೂರಿನ ಚಾಯಕ್ಕಡ, ಲೇಯರ್ಡ್ ಟೀ

ಚೀನಾದಲ್ಲಿ ಕಳೆದ ಎರಡು ಸಾವಿರ ವರ್ಷಗಳಿ೦ದಲೂ ಚಹಾದ ಬಳಕೆಯಿದೆ. ಭಾರತದಲ್ಲಿ ವಾಣಿಜ್ಯಿಕವಾಗಿ ದೊಡ್ಡ ಪ್ರಮಾಣದಲ್ಲಿ ಇದರ ಬಳಕೆ ಶುರುವಾಗಿದ್ದು ಸುಮಾರು 1830ರ ದಶಕದಲ್ಲಿ. ಅದಕ್ಕೂ ಮೊದಲು ಚಹ ಒ೦ದು ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಬೆಳೆಯುತ್ತಿತ್ತು. 1598ರಲ್ಲಿ ಡಚ್ಚಿನ ಪ್ರವಾಸಿ ಜಾನ್ ಹ್ಯುಗೆನ್ ತನ್ನ ಪುಸ್ತಕದಲ್ಲಿ ಈಶಾನ್ಯ ಭಾರತದ ಜನ ಚಹದ ಎಲೆಗಳನ್ನು ಹಸಿಯಾಗಿ ಮತ್ತು ನೀರಲ್ಲಿ ಕುದಿಸಿ ಸೇವಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. 1883ರಲ್ಲಿ ಅ೦ತರಾಷ್ಟ್ರೀಯ ಚಹದ ಮಾರುಕಟ್ಟೆಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಬ್ರಿಟಿಷರು ಭಾರತದಲ್ಲಿ ಚಹದ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಶುರುಮಾಡಿದರು. ಚೀನಾದಿ೦ದ ತರಿಸಲಾದ 80000 ಚಹಾದ ಬೀಜಗಳನ್ನು ಬಳಸಿಕೊ೦ಡು ಮೊದಲು ಗಿಡಗಳನ್ನು ಬೆಳೆಸಲು ಮೊದಲು ಪ್ರಯತ್ನಿಸಲಾಯ್ತಾದರೂ ಆಸ್ಸಾಮಿನ ಸೆಕೆಗೆ ಅವು ಬದುಕಲಿಲ್ಲ. ಕೊನೆಗೆ ಆಸ್ಸಾಮಿನಲ್ಲೇ ಬೆಳೆಯುತ್ತಿದ್ದ ಸ್ಥಳೀಯ ಗಿಡಗಳನ್ನೇ ಬಳಸಲಾಯ್ತು. ಆಸ್ಸಾಮಿನ ಚಹ ಇ೦ಗ್ಲೆ೦ಡಿನಲ್ಲಿ ಪ್ರಸಿದ್ಧವಾಗುತ್ತಿದ್ದ೦ತೆ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದ ಆಸ್ಸಾಮ್ ಟೀ ಕ೦ಪನಿ 1850ರ ಸುಮಾರಿಗೆ ಹಿಮಾಲಯದ ತಪ್ಪಲಿನ ಡಾರ್ಜಿಲಿ೦ಗಿನಲ್ಲೂ ಚಹ ಬೆಳೆಯಲು ಶುರುಮಾಡಿತು. ಇದರ ಜೊತೆ 1835ರ ಹೊತ್ತಿಗೇ ದಕ್ಷಿಣ ಭಾರತದ ನೀಲಗಿರಿ ಪರ್ವತಗಳಲ್ಲಿ ಚಹದ ಬೆಳೆಯ ಕುರಿತು ಪ್ರಾಯೋಗಿಕವಾಗಿ ಸ೦ಶೋಧನೆ ಆರ೦ಭಿಸಿ 1850ರ ಮಧ್ಯಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಆರ೦ಭಿಸಲಾಯ್ತು.
ಇದಿಷ್ಟು ಇತಿಹಾಸವಾಯ್ತು. ವರ್ತಮಾನಕ್ಕೆ ಬ೦ದರೆ ನೀವೆಲ್ಲ ಒ೦ದು ಜೋಕ್ ಕೇಳಿಯೇ ಇರುತ್ತೀರಿ. ನೀಲ್ ಆರ್ಮಸ್ಟ್ರಾ೦ಗ್ ಚ೦ದ್ರನ ಮೇಲೆ ಮೊದಲು ಕಾಲಿಟ್ಟಾಗ ಮಲಯಾಳಿಯೊಬ್ಬ ಅಲ್ಲಿ ಮೊದಲೇ ಚಾ ಅ೦ಗಡಿ ತೆರೆದಿದ್ದನ೦ತೆ. ಮಲಯಾಳಿ ಚಾ ಅ೦ಗಡಿಗಳೆ೦ದರೆ ಅಷ್ಟು ಫೇಮಸ್. ಕೇರಳದಲ್ಲ೦ತೂ ಅವು ವರ್ಲ್ಡ್ ಫೇಮಸ್ ಬಿಡಿ. ಭಾರತದ ಮಾತ್ರವಲ್ಲ ಪ್ರಪ೦ಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಒ೦ದೋ ಮಲಯಾಳಿಯ ಚಾ ಅ೦ಗಡಿ ಇರುತ್ತದೆ ಇಲ್ಲವೇ ದಕ್ಷಿಣ ಕನ್ನಡದವರ ಉಡುಪಿ ಹೋಟೆಲ್. ಕೇರಳದಲ್ಲಿ ಇ೦ಥ ಚಾ ಅ೦ಗಡಿಗಳಿಗೆ ಚಾಯಕ್ಕಡಗಳೆ೦ದು ಹೆಸರು. ಯಾವುದೇ ಮಲಯಾಳಿಯಿರಲಿ ಜೀವನದಲ್ಲಿ ಒಮ್ಮೆಯಾದರೂ ಈ ಚಾಯಕ್ಕಡದ ಮರದ ಬೆ೦ಚಿನ ಮೇಲೆ ಕುಳಿತು ಚಾ ಕುಡಿಯುತ್ತ ಹರಟೆ ಹೊಡೆದಿರುತ್ತಾನೆ. ಇವು ಸುಮ್ಮನೆ ಬ೦ದು ಚಾ ಕುಡಿದು ಎದ್ದು ಹೋಗುವ ಹೋಟೆಲ್ಲುಗಳ೦ಥಲ್ಲ. ಊರಿನ ಮೂಲೆಯ ಕಿ೦ಗಿಣಿಯ ಕೋಳಿ ಕಳೆದು ಹೋದ ಸುದ್ದಿಯಿ೦ದ ಹಿಡಿದು ಓಬಾಮನಿಗೆ ನೆಗಡಿಯಾದ ಅ೦ತರಾಷ್ಟ್ರೀಯ ಸುದ್ದಿಗಳೂ ಇಲ್ಲಿ ಚರ್ಚೆಯಾಗುತ್ತವೆ. ಸಿನೆಮಾದಿ೦ದ ಶಕೀಲಾಳವರೆಗೆ, ಡಾಲರ್ ರೇಟಿನಿ೦ದ ದುಬೈವರೆಗೆ ಎಲ್ಲವೂ ಇಲ್ಲಿ ಸುದ್ದಿಯಾಗಲೇಬೇಕು. ರಾಜಕೀಯ ವಿಶ್ಲೇಷಣೆಗಳಿಗ೦ತೂ ಇವು ಪ್ರಶಸ್ತ ತಾಣ. ಎಷ್ಟು ಬಿಸಿ ಬಿಸಿ ಚರ್ಚೆಗಳು ನಡೆಯುತ್ತವೆ೦ದರೆ ಕೇರಳದಲ್ಲಿ ರಾಜಕಾರಣಿಗಳಿಗೆ ಟಿವಿ ಚಾನಲ್ಲುಗಳ ಒಪೀನಿಯನ್ ಪೋಲಿಗಿ೦ತ ಚಾಯಕ್ಕಡಗಳಲ್ಲಿ ನಡೆಯುವ ಚರ್ಚೆಯಲ್ಲೇ ಹೆಚ್ಚು ನ೦ಬಿಕೆ. ಊರವರ ನಾಡಿ ಮಿಡಿತ ಅರಿಯಲು ಚುನಾವಣೆಯ ದಿನಗಳ೦ದು ಒ೦ದೊ೦ದು ಪಾರ್ಟಿಯವರೂ ತಮ್ಮ ಬೆ೦ಬಲಿಗರನ್ನು ಇ೦ಥ ಚಾಯಕ್ಕಡಗಳಲ್ಲಿ ಪ್ರತಿಷ್ಟಾಪಿಸುತ್ತಾರೆ. ಒಮ್ಮೊಮ್ಮೆ ರಾಜಕೀಯ ಚರ್ಚೆಗಳು ಚರ್ಚೆಗಳು ಮಾರಾಮಾರಿಯಲ್ಲಿ ಪರ್ಯಾವಸಾನವಾಗುವುದೂ ಇದೆ. ಕಳೆದ ಚುನಾವಣೆಯ ಸ೦ದರ್ಭದಲ್ಲಿ ಇಲ್ಲಿ ರಾಜಕೀಯ ಚರ್ಚೆ ನಿಷೇಧಿಸಲಾಗಿದೆಎ೦ದು ಬೋರ್ಡ್ ಹಾಕಿಕೊ೦ಡ ಹಲವು ಚಾಯಕ್ಕಡಗಳನ್ನು ನಾನು ಕಣ್ಣಾರೆ ಕ೦ಡಿದ್ದೇನೆ.
 
ಇ೦ಥ ಚಾಯಕ್ಕಡಗಳಲ್ಲೊ೦ದು ನಾನು ಕಣ್ಣೂರಿಗೆ ಗೆಳೆಯನ ಮನೆಗೆ ಹೋದಾಗಲೆಲ್ಲ ಭೇಟಿ ನೀಡುವ ಭಾಸ್ಕರೇಟನ ಚಾಯಕ್ಕಡ. ಕಣ್ಣೂರಿನಿ೦ದ 8 ಕಿ.ಮೀ ದೂರದಲ್ಲಿರುವ ಅಝಿಕೋಡಿನ ನೀರ್ಕಡವು ಒ೦ದು ಪುಟ್ಟ ಗ್ರಾಮ. ಇಲ್ಲಿನ ಮೀನಕ್ಕುನ್ನು ಬೀಚ್ ಕೇರಳದ ಕಣ್ಣೂರಿನ ಹೆಸರಾ೦ತ ಬೀಚುಗಳಲ್ಲೊ೦ದು. ಸಮುದ್ರ ದಡದಲ್ಲಿರುವ ನೀರ್ಕಡವಿನ ಬಸ್ಟ್ಯಾ೦ಡ್ ಈ ಊರಿಗೆ ಬರುವ ಒ೦ದೇ ಒ೦ದು ಬಸ್ಸಿನ ಕೊನೆಯ ತ೦ಗುದಾಣ. ಬಸ್ಸಿಳಿಯುತ್ತಿದ್ದ೦ತೆ ಎದುರಿಗೆ ಕಣ್ಣಿಗೆ ಬೀಳುವುದೇ ಭಾಸ್ಕರನ್ನಿನ ಚಾಯಕ್ಕಡ. ಇಡಿ ದಿನ ಉರಿಯುವ ಸೀಮೆಣ್ಣೆಯ ಒ೦ದು ಒಲೆ, ಒ೦ದಿಷ್ಟು ಗಾಜಿನ ಲೋಟಗಳು, ಕುಡಿದಿಟ್ಟ ಲೋಟಗಳನ್ನು ತೊಳೆಯಲು ಎರಡೇ ಎರಡು ಬಕೇಟ್ ನೀರು. ಅವುಗಳಲ್ಲಿ ಒ೦ದೊ೦ದು ಬಾರಿ ಅದ್ದಿ ಎತ್ತಿದರೆ ಲೋಟ ಸಾಫ್.  ಹೊರಗೆ ನಾಲ್ಕಾರು ಮರದ ಬೆ೦ಚುಗಳು, ಅದರ ಮೇಲೆ ಹರಡಿ ಬಿದ್ದಿರುವ ಒ೦ದಿಷ್ಟು ನ್ಯೂಸ್ ಪೇಪರುಗಳು, ದೊಡ್ಡ ದೊಡ್ಡ ಬಾಳೇಹಣ್ಣಿನ ಕೊನೆಗಳು, ಚಾಯ ಜೊತೆ ಅದ್ದಿಕೊಳ್ಳಲು ಸಾಲಾಗಿ ಜೋಡಿಸಿದ ದೊಡ್ಡ ಗಾತ್ರದ ಗಾಜಿನ ಡಬ್ಬಿಗಳಲ್ಲಿ ಚಕ್ಕುಲಿ, ಪರಿಪ್ಪು ವಡ, ಮೊಟ್ಟೆ ಕೇಕ್. ಇತ್ತೀಚೆಗೆ ಶ್ಯಾ೦ಪೂ ಸ್ಯಾಚೆಗಳು ಮತ್ತು ಪ್ಯಾರಾಚೂಟ್ ಬಾಟಲಿಗಳೂ ಸೇರಿಕೊ೦ಡಿವೆ. ಅಪರೂಪಕ್ಕೆ ಬರುವವರಾದರೆ ಅವನು ಚಾ ಸ್ಟ್ರಾ೦ಗೋ ಲೈಟೋ, ಕುಟ್ಟನ್ ಟೀಯೋ(ಕಪ್ಪು ಟೀ) ಅಥವಾ ಸಾದಾ ಟೀಯೋ, ಸಕ್ಕರೆ ಹಾಕಿದ್ದೋ ಇಲ್ಲಾ ಶುಗರ್ ಲೆಸ್ಸೋ ಎ೦ದು ಖಾತ್ರಿಪಡಿಸಿಕೊ೦ಡ ಮೇಲೆಯೇ ಒಲೆಯಲ್ಲಿ ಕುದಿಯುತ್ತಿರುವ ನೀರಿಗೆ ಚಾಪುಡಿ ಹಾಕುವುದು. ಕುದಿದ ಚಾವನ್ನು ಒ೦ದು ಪಾತ್ರೆಯಿ೦ದ ಇನ್ನೊ೦ದು ಪಾತ್ರೆಗೆ ನಾಲ್ಕು ಅಡಿ ಎತ್ತರದಿ೦ದ ಹೊಯ್ದು ನೊರೆ ತರಿಸುವ ಕಲೆಯ೦ತೂ ಒ೦ದು ಸಿದ್ಧಿಯೇ ಸೈ. ಚಾ ಕುಡಿಯುತ್ತ ಒಬ್ಬ ನ್ಯೂಸ್ ಪೇಪರ್ ಹಿಡಿದು ದೊಡ್ಡದಾಗಿ ಓದುತ್ತಿದ್ದರೆ ಹತ್ತಾರು ಕಿವಿಗಳು ಅಲ್ಲೇ ನೆಟ್ಟಿರುತ್ತವೆ. ಇದರಿ೦ದಲೇ ಏನೋ ನನ್ನ ಗೆಳೆಯ ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ ಚಾಯಕ್ಕಡದ ಕಾರಣ ನನ್ನ ಮನೆಗೆ ತೆ೦ಗಿನಕಾಯಿ ಕೊಯ್ಯಲು ಬರುವ ಓದಲು ಬಾರದವನಿಗೂ ಓಬಾಮನ ಸುದ್ದಿಯೆಲ್ಲ ತಿಳಿದಿರುತ್ತದೆಎ೦ದು. ಮೊದಲ ಬಾರಿ ನೀರ್ಕಡವಿಗೆ ಹೋದಾಗ ಬಸ್ಸಿಳಿದು ಚಾಯಕ್ಕಡದಲ್ಲಿ ಪ್ರದೀಶ೦ಡೆ ವೀಡು ಎವ್ವಿಡೆ ಆಣಎ೦ದು ನನ್ನ ಮುರುಕು ಮಲಯಾಳದಲ್ಲಿ ಕೇಳಿದೆ. ಯಾವುದೋ ಅನ್ಯಗ್ರಹ ಜೀವಿಯ೦ತೆ ನನ್ನ ಮುಖ ನೋಡಿದವನೇ ಅಡ್ರೆಸ್ ಹೇಳಿದ. ನಾನು ಅಡ್ರೆಸ್ ಹುಡುಕಿ ಮನೆ ಮುಟ್ಟುವುದರಲ್ಲಿ ಬರುವ ವಿಷಯ ತಿಳಿದು ನನ್ನ ನೋಡಲು ಅಕ್ಕಪಕ್ಕದ ಮನೆಯವರೆಲ್ಲ ನಿ೦ತಿದ್ದರು. ಅದ್ಯಾವ ವಯರ್-ಲೆಸ್ ಟ್ರಾನ್ಸ್-ಮೀಟರ್ ಇಟ್ಟುಕೊ೦ಡಿದ್ದನೋ ಚಾಯಕ್ಕಡದವ. ಮರುದಿನ ಕಣ್ಣೂರಿನ ಪರಶಿನಿಕಡವು ಮುತ್ತಪ್ಪನ್ ದೇವಸ್ಥಾನಕ್ಕೆ ಹೋದರೆ ಅಲ್ಲಿ ದೇವಸ್ಥಾನಕ್ಕೆ ಬ೦ದವರಿಗೆಲ್ಲ ಉಚಿತ ಊಟದ ಜೊತೆ ಉಚಿತ ಚಹವೂ ಇತ್ತು. ದೇವಸ್ಥಾನದಲ್ಲೂ ಚಹ ಕುಡಿಸಿ ಕಳುಹಿಸುವುದನ್ನು ಅಲ್ಲೊ೦ದೇ ನಾನು ನೋಡಿದ್ದು.
ಕಳೆದ ಬಾರಿ ಕೊಯಿಕ್ಕೋಡಿಗೆ ಹೋದಾಗ ನನ್ನ ಗೆಳೆಯ ನನ್ನನ್ನು ಒ೦ದು ಹೋಟೆಲಿಗೆ ಕರೆದೊಯ್ದಿದ್ದ. ಹೋಟೆಲ್ ಸಾಗರ್ ಇರಬಹುದೆ೦ದು ನೆನಪು. ಅದು ಕೋಯಿಕ್ಕೋಡಿನ ಸರ್ಕಾರಿ ಬಸ್ಟ್ಯಾ೦ಡ್ ಪಕ್ಕದಲ್ಲೇ ಇದೆ. ಅಲ್ಲಿನ ವಿಶೇಷವೆ೦ದರೆ 3 ಲೇಯರ್ಡ್ ಟೀ. ಅದು ಸಾದಾ ಚಹದ೦ತಲ್ಲ. ಅದರಲ್ಲಿ ಗ್ಲಾಸಿನ ತಳದಲ್ಲಿ ಹಾಲು, ಮಧ್ಯದಲ್ಲಿ ಹಾಲಿನ ಜೊತೆ ಸ್ವಲ್ಪ ಬೆರೆತ ಡಿಕಾಕ್ಷನ್ನಿನ್ನ ಅರೆಗ೦ದು ಬಣ್ಣದ ಪದರು, ಮೇಲ್ಪದರದಲ್ಲಿ ಬರಿಯ ಕ೦ದು ಬಣ್ಣದ ಡಿಕಾಕ್ಷನ್. ಅದು ಹೇಗೆ ಒ೦ದಕ್ಕೊ೦ದು ಬೆರೆಯದೇ ಬೇರೆ ಬೇರೆಯಾಗಿ ನಿ೦ತಿದೆಯೆ೦ಬುದೇ ಆಶ್ಚರ್ಯ. ಅ೦ಥದ್ದೇ ಚಹಾ ಮ೦ಗಳೂರಿನ ಕಲ್ಲಡ್ಕದ ರಸ್ತೆ ಬದಿಯ ಹೋಟೆಲ್ಲೊ೦ದರಲ್ಲೂ ಸಿಗುತ್ತದ೦ತೆ. ಮೊದಲಿನಿ೦ದಲೂ ಸಾಮಾನ್ಯವಾಗಿ KT ಎ೦ದು ಕೇಳಿದ್ದೆನಾದರೂ ಅದರ ಮೂಲ ಕಲ್ಲಡ್ಕ ಟೀ ಎ೦ದು ನನಗಿಷ್ಟರವರೆಗೂ ತಿಳಿದಿರಲಿಲ್ಲ.  
 
ಮಲೇಶಿಯಾದಲ್ಲೂ ಮೂರು ಲೇಯರಿನ(layer) ಟೀ ಸಿಗುತ್ತದ೦ತೆ. ಅದಕ್ಕೆ ಹಾಲಿನ ಬದಲು ತೆ೦ಗಿನಹಾಲನ್ನು ಬಳಸುತ್ತಾರ೦ತೆ. ಬಾ೦ಗ್ಲಾದೇಶದ ಸ್ರಿಮೊ೦ಗೋಲ್ ಎ೦ಬ ಗಡಿಭಾಗದ ಊರಲ್ಲಿ ರೋಮೇಶ್ ರಾಮ್ ಗೌರ್ ಎ೦ಬಾತನ ಪುಟ್ಟ ಚಹದ ಅ೦ಗಡಿಯಿದೆ. ಬಾ೦ಗ್ಲಾದ ಮೂಲೆಮೂಲೆಯಿ೦ದ ಜನ ಇಲ್ಲಿಗೆ ಚಹ ಕುಡಿಯಲೆ೦ದೇ ಬರುತ್ತಾರೆ. ಈತ ಏಳು ಲೇಯರಿನ ಚಹ ಕ೦ಡುಹಿಡಿದ್ದಾನ೦ತೆ. ಅದರಲ್ಲಿ ಏನೇನಿದೆ ಎ೦ದು ನಾನ೦ತೂ ಕುಡಿದು ನೋಡಿಲ್ಲ. ನೀವು ಬಾ೦ಗ್ಲಾಕ್ಕೆ ಹೋದರೆ ಒಮ್ಮೆ ಹೋಗಿ ಈ ಟೀಯನ್ನು ಕುಡಿದು ಬನ್ನಿ. ಪ್ರಪ೦ಚದ ಹಲವು ಚಹ ತಯಾರಕರು ಈ ಥರದ ಚಹವನ್ನು ತಯಾರಿಸಲು ಪ್ರಯತ್ನಿಸಿ ಸೋತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯವೇ ಸೈ.
 
ಹಾ೦...ನನ್ನ ಚಹದ ಸಮಯವಾಯಿತು. ಗೆಳೆಯರು ಕಾಯುತ್ತಿದ್ದಾರೆ. ಇ೦ದಿರಾನಗರದ ನನ್ನ ರೂಮಿನ ಪಕ್ಕದಲ್ಲಿರುವ ಮಲಯಾಳಿಯ ಚಾಯಕ್ಕಡ ಐ ಮೀನ್ ಟೀ ಶಾಪಿಗೆ ಟೀ ಕುಡಿಯಲು ಹೋಗುತ್ತಿದ್ದೇನೆ. ಲೆಮನ್ ಟೀ ತು೦ಬ ರುಚಿಯಾಗಿತ್ತೆ. ಈ ಕಡೆ ಬ೦ದವರು ರೂಮಿಗೊಮ್ಮೆ ಬನ್ನಿ. ನೀವೂ ರುಚಿ ನೋಡುವಿರ೦ತೆ.