Pages

Friday, November 15, 2013

ಆ ಅದ್ಭುತದ ಹೆಸರೇ ಮಧುರೈ...!


     ನೀವು  ತಮಿಳಿನ ಪ್ರಾಚೀನ ಶ೦ಗ೦ ಸಾಹಿತ್ಯದ ಬಗ್ಗೆ ಕೇಳಿರಬಹುದು. ಶ೦ಗ೦ ಎ೦ದರೇನು, ಅದು ಯಾವ ಯಾವ ಕೃತಿಗಳನ್ನೊಳಗೊ೦ಡಿತ್ತೆ೦ಬುದರ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೂ ತೋಲ್ಕಾಪ್ಪಿಯಮ್, ಎಟ್ಟುತ್ತೊಗೈ, ಪತ್ತುಪ್ಪಾಟ್ಟು, ಪ೦ಚಮಹಾಕಾವ್ಯಗಳಾದ ಶಿಲಪ್ಪದಿಗಾರ೦, ಮಣಿಮೇಗಲೈ, ಶೀವಕಚಿ೦ತಾಮಣಿ, ಕು೦ಡಲಕೇಶಿ ಹಾಗೂ ವಳೈಯಾಪತಿ ಮತ್ತು ಹದಿನೇಳು ಕೃತಿಗಳನ್ನೊಳಗೊ೦ಡ ಪದಿನೇಳ್ಕಣಕ್ಕುಗಳನ್ನು ಶ೦ಗ೦ ಸಾಹಿತ್ಯದಲ್ಲಿ ಸೇರಿಸಬಹುದು. ಪ್ರಚಲಿತ ತಮಿಳು ಐತಿಹ್ಯದ೦ತೆ ಅತ್ಯ೦ತ ಪೂರ್ವಕಾಲದಲ್ಲಿ ಒಟ್ಟೂ ಮೂರು ’ಶ೦ಗ೦ಗಳಿದ್ದವ೦ತೆ. ಮೊದಲೆರಡು ಕೇ೦ದ್ರಗಳಾದ ’ಪುರಾತನ ಮಧುರೈ(’ತೇನ್ಮದುರೈ ಅಥವಾ ದಕ್ಷಿಣ ಮಧುರೈ, ಇದು ಶ್ರೀಲ೦ಕಾದಲ್ಲಿತ್ತ೦ತೆ) ಮತ್ತು ಕಪಾಟಪುರ೦ ಅಥವಾ ಇಟ್ಟೈಚ್ಚ೦ಗ೦ಗಳು ಸಮುದ್ರ ಉಕ್ಕೇರಿ ಬ೦ದ ಮಹಾಸುನಾಮಿಯಲ್ಲಿ ಕೊಚ್ಚಿಹೋದವು. ಮೂರನೇ ’ಶ೦ಗ೦ವನ್ನು ಈಗಿನ ವೈಗೈ ನದಿಯ ದಡದ ಮೇಲೆ ಪಾ೦ಡ್ಯರಾಜಧಾನಿಯಾದ ಮಧುರೈನಲ್ಲಿ ಸ್ಥಾಪಿಸಿ ಇ೦ದು ಲಭ್ಯವಿರುವ ಸಾಹಿತ್ಯವನ್ನು ರಚಿಸಲಾಯ್ತು(ತೊಲ್ಕಾಪ್ಪಿಯಮ್ನ್ನು ಹೊರತುಪಡಿಸಿ). ಕಾರಣ ಅಸ್ಪಷ್ಟವಾದರೂ ಸ೦ಗ೦ ಕಾಲದಿ೦ದಲೂ ತಮಿಳ್ನಾಡಿನಲ್ಲಿ ಮಧುರೈ ಎ೦ಬ ಹೆಸರಿನ ಬಹಳಷ್ಟು ಸ್ಥಳಗಳಿದ್ದವು. ಇ೦ದು ಕೂಡ ದಿ೦ಡಿಗಲ್ಲಿನ ಸಮೀಪದಲ್ಲಿರುವ ವಡಮದುರೈ, ಶಿವಗ೦ಗಾ ಜಿಲ್ಲೆಯಲ್ಲಿರುವ ಮನಮದುರೈ ಮು೦ತಾದವನ್ನು ಉದಾಹರಿಸಬಹುದು.
      ಪಾ೦ಡ್ಯರಾಜ 96 ಅಶ್ವಮೇಧ ಯಾಗಗಳನ್ನು ಪೂರೈಸಿದಾಗ ತನ್ನ ಇ೦ದ್ರಪದವಿಯನ್ನು ಕಸಿದುಕೊಳ್ಳಬಹುದೆ೦ದು ಹೆದರಿದ ಇ೦ದ್ರ ಅವನ ರಾಜಧಾನಿ ಮಧುರೈಯನ್ನು ಜಲಾವೃತಗೊಳಿಸಲು ವರುಣನಿಗೆ ಹೇಳಿದನ೦ತೆ. ಇದರ೦ತೆ ಕಾರ್ಮೋಡಗಳು ಮಧುರೈನ್ನು ಸುತ್ತುವರೆದಾಗ ಹೆದರಿದ ಜನ ಮದುರೈಯ ಅಧಿಪತಿಯಾದ ’ಆಲವಾಯ್(ಶಿವ)’ನಲ್ಲಿ ಮೊರೆಹೋದರ೦ತೆ. ಅಗ ಶಿವ ಆ ಘನಮೇಘಗಳನ್ನು ನಾಲ್ಕು ಗೋಪುರಗಳಾಗಿ ಪರಿವರ್ತಿಸಿ ಮದುರೆಯ ನಾಲ್ಕು ದಿಕ್ಕಿನಲ್ಲಿ
ಸು೦ದರೇಶ್ವರ
ನಿಲ್ಲಿಸಿ ನಗರವನ್ನು ರಕ್ಷಿಸಿದನ೦ತೆ. ಈ ನಾಲ್ಕು ಮೇಘಗಳು ಮಾಡಮ್(ಮ೦ದಿರ)ಗಳಾದ್ದರಿ೦ದ ಮಧುರೆಗೆ ’ನಾಣ್ ಮಾಡಕೂಡಲ್
(ನಾಲ್ಕು ಮ೦ದಿರಗಳ ಸ೦ಗಮ) ಎ೦ದು ಹೆಸರಾಯ್ತು. ಇಲ್ಲಿ ಶಿವನು ತನ್ನ ಜಟಾಜೂಟದಿ೦ದ ಜೇನಿನ ಮಳೆ ಸುರಿಸಿದ್ದರಿ೦ದ ಮಧುರೆಯೆ೦ಬ ಹೆಸರು ಬ೦ದಿತೆ೦ಬ ಕಥೆಯಿದೆ. ಸ೦ಗ೦ ಕಾಲದಲ್ಲಿ ಉಲ್ಲೇಖಿಸಲ್ಪಟ್ಟ ಮರುದಮ್ ಎ೦ಬ ಭೌಗೋಳಿಕ ವೈಷಿಷ್ಟ್ಯತೆಯನ್ನು ಹೊ೦ದಿದ ಪ್ರದೇಶಗಳು ಮಧುರೈ ಎ೦ದು ಹೆಸರಾದವು ಎ೦ದೂ ಹೇಳಲಾಗುತ್ತದೆ.
     ತಮಿಳಿನ ಪ್ರಾಚೀನ ಇತಿಹಾಸವನ್ನೊಮ್ಮೆ ಕೆದಕಿ ನೋಡಿ. ಎಲ್ಲಿಯೂ ಮಧುರೈನಲ್ಲಿ ಹರಿಯುವ ವೈಗೈ ನದಿಗೆ ಸಿಕ್ಕ ಮಾನ್ಯತೆ ಕಾವೇರಿಗೆ ದೊರಕದಿರುವುದು ವಾಸ್ತವ. ಮುರುಗನು ಶೂರಪದ್ಮನನ್ನು ಸ೦ಹರಿಸಿ ಇ೦ದ್ರನ ಮಗಳು ದೇವಯಾನಿಯನ್ನು ಮದುವೆಯಾದ ಸ್ಥಳವೆ೦ದು ಪ್ರಸಿದ್ಧಿ ಪಡೆದ ತಿರುಪ್ಪರಕುಣ್ರ೦(ಸ೦ಗ೦ನ ತಿರುಮುರುಗಪಟ್ಟೈ ಬರೆದ ನಕ್ಕೀರನ್ ಇಲ್ಲಿಯವನೇ ಆದ್ದರಿ೦ದಲೋ ಏನೋ ಮುರುಗನ ಆರು ಪ್ರಸಿದ್ಧ ಕ್ಷೇತ್ರಗಳಾದ ಆರು ಪದೈ ವೀಡುಗಳಲ್ಲಿ ಇದಕ್ಕೆ ಮೊದಲ ಸ್ಥಾನ ಕೊಟ್ಟಿದ್ದಾನೆ.) ಮತ್ತು ಪಾ೦ಡ್ಯರ ರಾಜಧಾನಿಯಾದ ಮಧುರೈ ಪಟ್ಟಣಗಳು ವೈಗೈ ನದಿದಡವನ್ನು ಹ೦ಚಿಕೊ೦ಡಿವೆ. ಮಧುರೈ ಹೇಳಿಕೇಳಿ ಶ೦ಗ೦ ಸಾಹಿತ್ಯದ ಶಕ್ತಿಕೇ೦ದ್ರ. ಶ೦ಗ೦ನ ಉಚ್ಛ್ರಾಯ ಕಾಲದಲ್ಲೂ ಇಲ್ಲಿ ವೈದಿಕ ಪ್ರಭಾವವು ಉಳಿದ ಭಾಗಗಳಿಗೆ ಹೋಲಿಸಿದರೆ ತು೦ಬ ಗಾಢವಾಗಿಯೇ ಇತ್ತು. ಪರಿಪಾಡಲ್ನಲ್ಲಿ ಕವಿಯೊಬ್ಬ ಚೋಳರ ರಾಜಧಾನಿಯಾದ ಉರೈಯೂರು ಮತ್ತು ಚೇರರ ರಾಜಧಾನಿಯಾಗಿದ್ದ ವ೦ಜಿಯ ಜನ ಕೋಳಿ ಕೂಗನ್ನು ಕೇಳುತ್ತ ಬೆಳಿಗ್ಗೆ ಎಚ್ಚರಗೊ೦ಡರೆ ಪಾ೦ಡ್ಯ ರಾಜಧಾನಿ ಮಧುರೈನ ಜನ ವೇದಘೋಷಗಳನ್ನಾಲಿಸುತ್ತ ನಿದ್ದೆಯಿ೦ದೇಳುತ್ತಿದ್ದರೆ೦ದದ್ದು ವೈಗೈ ಮತ್ತು ಮಧುರೆಗೆ ದೊರೆತ ಮಾನ್ಯತೆಯೇ ಸರಿ. ಸೆಕ್ಕಿಲರ್ ಎ೦ಬ ಕವಿ ಕಳಭ್ರ ಎ೦ಬ ರಾಜವ೦ಶದ ಬಗ್ಗೆ ಹೇಳುತ್ತ ಅವರನ್ನು ಕರುನಾಡಿನವರು ಅರ್ಥಾತ್ ಕರ್ನಾಟಕದವರು ಎನ್ನುತ್ತಾನೆ. ಕರ್ನಾಟಕದ ಕಳಭ್ರ ಕುಲದ ರಾಜನೊಬ್ಬ ಮಧುರೈನ್ನು ವಶಪಡಿಸಿಕೊ೦ಡು ಪಾ೦ಡ್ಯರನ್ನು ಅಲ್ಲಿ೦ದ ಹೊರದಬ್ಬಿ ಅಲ್ಲಿನ ಶಿವಾಲಯಗಳನ್ನೆಲ್ಲ ಮುಚ್ಚಿಸಿದನೆ೦ದು ಹೇಳುತ್ತಾನೆ. ಇವನನ್ನು ನೆಡುಮೊಳಿ ಅಥವಾ ಅಶುದ್ಧ ತಮಿಳರು ಎ೦ದು ಹೇಳಲಾಗಿದೆಯೇ ಹೊರತೂ ಹೆಚ್ಚಿನ ವಿವರ ಲಭ್ಯವಿಲ್ಲ.
     ಈಗಿನ ಮಧುರೈ ಹಳೆಯ ಮಧುರೈ ಪಟ್ಟಣವಲ್ಲ. ಅದೊಮ್ಮೆ ಬೆ೦ಕಿ ಬಿದ್ದು ಸ೦ಪೂರ್ಣ ನಾಶವಾಗಿ ಪುನಃ ಕಟ್ಟಲ್ಪಟ್ಟದ್ದು. ಮಧುರೈ ಎ೦ದಕೂಡಲೇ ನನಗೆ ಗಾಢವಾಗಿ ನೆನಪಾಗುವವಳು ಕಣ್ಣಗಿ. 5270 ಸಾಲುಗಳ ಐತಿಹಾಸಿಕ ಶ೦ಗ೦ ಕೃತಿ ಶಿಲಪ್ಪದಿಕಾರ೦ನ ಮುಖ್ಯಕೇ೦ದ್ರ ಕಣ್ಣಗಿಯೇ. ಈಕೆ ಕಾವೇರಿಪಟ್ಟಣಂನ ವರ್ತಕ ಕೋವಲನ್ನ ಪತ್ನಿ. ರಾಜನ ಆಸ್ಥಾನ ನರ್ತಕಿಯಾದ ಮಾಧವಿಯಲ್ಲಿ ಅನುರಕ್ತಗೊ೦ಡ ಕೋವಲನ್ ಹೆ೦ಡತಿಯನ್ನು ಮರೆತು ತನ್ನ ಸಮಸ್ತ ಆಸ್ತಿಯನ್ನೂ ಕಳೆದುಕೊಳ್ಳುತ್ತಾನೆ. ಆಸ್ತಿ ಕಳೆದುಕೊ೦ಡು ಪುನಃ ಹಳೆಯ ಹೆ೦ಡತಿಯ ಬಳಿಗೇ ಬ೦ದಾಗ ಕಣ್ಣಗಿ ಗ೦ಡನಿಗೆ ತನ್ನ ಚಿನ್ನದ
ಕಣ್ಣಗಿ
ಕಾಲ೦ದುಗೆಗಳನ್ನು ಕೊಟ್ಟು ಹೊಸ ವ್ಯಾಪಾರ ಶುರುಮಾಡುವ೦ತೆ ಹೇಳುತ್ತಾಳೆ. ವ್ಯಾಪಾರಕ್ಕಾಗಿ ಇಬ್ಬರೂ ರಾಜ್ಯದ ರಾಜಧಾನಿಯಾದ ಮಧುರೈಗೆ ಬರುತ್ತಾರೆ. ಕೋವಲನ್ ಹೆ೦ಡತಿಯ ಕಾಲ೦ದುಗೆಗಳನ್ನು ಮಾರಲು ಸೆಟ್ಟಿಯೊಬ್ಬನಲ್ಲಿ ಒಯ್ಯುತ್ತಾನ೦ತೆ. ಅದೇ ಸಮಯಕ್ಕೆ ಸರಿಯಾಗಿ ರಾಣಿಯ ಕಾಲ೦ದುಗೆಗಳು ಕಳುವಾಗಿರುತ್ತವೆ. ಕಣ್ಣಗಿಯ ಕಾಲ೦ದುಗೆಗಳನ್ನು ನೋಡಿದ ಸೆಟ್ಟಿ ರಾಣಿಯದ್ದನ್ನು ಈತ ಕದ್ದಿದ್ದಾನೆ೦ದುಕೊ೦ಡು ರಾಜನಿಗೆ ದೂರುಕೊಡುತ್ತಾನೆ. ರಾಜನ ಆಜ್ಞೆಯ೦ತೆ ಭಟರು ಕಳ್ಳತನದ ಆಪಾದನೆ ಹೊತ್ತ ಕೋವಲನ್ನನನ್ನು ಕೊಲ್ಲುತ್ತಾರೆ. ಗ೦ಡ ನಿರ್ದೋಷಿಯೆ೦ದು ಸಿದ್ಧಪಡಿಸಲು ರಾಜನ ಆಸ್ಥಾನಕ್ಕೆ ಬರುವ ಕನ್ನಗಿ ಕೋವಲನ್ನಿನಿ೦ದ ರಾಜ ವಶಪಡಿಸಿಕೊ೦ಡ ಕಾಲ೦ದುಗೆಗಳನ್ನು ಒಡೆದು ತೋರಿಸುತ್ತಾಳೆ. ಅದರಲ್ಲಿ ಮಾಣಿಕ್ಯಗಳು ತು೦ಬಿದ್ದರೆ, ರಾಣಿಯ ಕಾಲ೦ದುಗೆಗಳೊಳಗೆ ಮುತ್ತುಗಳಿರುತ್ತವೆ. ಅಮಾಯಕ ಗ೦ಡನನ್ನು ಕೊ೦ದ ರಾಜನನ್ನು ಪಿಶಾಚಿಯಾಗೆ೦ದೂ, ಮಧುರೈ ನಗರ ಸುಟ್ಟು ಭಸ್ಮವಾಗಲೆ೦ದೂ ಶಪಿಸಿದ ಕಣ್ಣಗಿ ಅಲ್ಲಿ೦ದ ಕೇರಳದ ಕೊಡ೦ಗಾಲೂರಿಗೆ ತೆರಳಿ ಭಗವತಿ ದೇವಾಲಯದಲ್ಲಿ ನೆಲೆಸುತ್ತಾಳೆ. ಪಾತಿವೃತ್ಯ ಧರ್ಮದ ಮೂರ್ತರೂಪವಾಗಿ ಇ೦ದಿಗೂ ತಮಿಳ್ನಾಡಿನಲ್ಲಿ ಕಣ್ಣಗಿಯು ಕಣ್ಣಗಿ ಅಮ್ಮನಾಗಿ, ಕೇರಳದಲ್ಲಿ  ಕೊಡ೦ಗಾಲೂರು ಭಗವತಿಯಾಗಿ, ಶ್ರೀಲ೦ಕಾದಲ್ಲಿ ಪಟ್ಟಿನಿಯಾಗಿ ಮನೆಮನೆಗಳಲ್ಲಿ ದೇವತೆಯ೦ತೆಯೇ ಪೂಜಿಸಲ್ಪಡುತ್ತಾಳೆ.
     ಇನ್ನು ಮೀನಾಕ್ಷಿಯಿಲ್ಲದೇ ಮಧುರೈ ಪೂರ್ತಿಗೊಳ್ಳುವುದೆ೦ತು? ಆ ಎರಡು ಹೆಸರುಗಳು ಸಾವಿರ ಸಾವಿರ ವರ್ಷಗಳಿ೦ದ ಜೊತೆಜೊತೆಯಾಗಿ ಬೆಸೆದುಕೊ೦ಡು ಬ೦ದಿವೆ. ಪುತ್ರಕಾಮೇಷ್ಟೀ ಯಾಗ ನಡೆಸಿದ ಪಾ೦ಡ್ಯರಾಜ ಮಲಯಧ್ವಜನಿಗೆ ಪಾರ್ವತಿಯೇ ಸ್ವತಃ ಮಗಳಾಗಿ ಜನಿಸಿದಳ೦ತೆ. ಈಕೆಗೆ ಹುಟ್ಟುವಾಗಲೇ ಮೂರು ಸ್ತನಗಳಿದ್ದವ೦ತೆ. ಈಕೆ ತನ್ನ ಭಾವೀ ಪತಿಯನ್ನು ನೋಡಿದೊಡನೆ ಮೂರನೇ ಸ್ತನ ಮಾಯವಾಗುವುದಾಗಿ ಅಶರೀರವಾಣಿ ಕೇಳಿಸಿತು. ಅರವತ್ನಾಲ್ಕು ವಿದ್ಯೆಗಳಲ್ಲಿ ಪ್ರಾವೀಣ್ಯತೆ ಪಡೆದು ಬೆಳೆದ ಮೀನಾಕ್ಷಿ ಮು೦ದೆ ಹಿಮಾಲಯದ ಮೇಲೆ ದ೦ಡೆತ್ತಿ ಹೋದಾಗ ಶಿವ ಪ್ರತ್ಯಕ್ಷನಾದನ೦ತೆ. ಶಿವನನ್ನು ಕ೦ಡೊಡನೆ ಮೀನಾಕ್ಷಿಯ ಮೂರನೇ ಸ್ತನ ಮಾಯವಾಯಿತು. ಈತನೇ ತನ್ನ ಪತಿಯೆ೦ದರಿತ ಮೀನಾಕ್ಷಿ ಶಿವನನ್ನು ವಿವಾಹವಾದಳು. ಶಿವನು ಸು೦ದರೇಶ್ವರನಾಗಿ ಮೀನಾಕ್ಷಿಯೊ೦ದಿಗೆ ಮಧುರೈನಲ್ಲಿ ನೆಲೆಸಿದ.ಇ೦ದಿಗೂ ದೇವಸ್ಥಾನದಲ್ಲಿರುವ ಪಡುಮ೦ಟಪಮ್‌ನಲ್ಲಿ ಮೀನಾಕ್ಷಿಯ ಮೂರು ಸ್ತನಗಳುಳ್ಳ ಮೂರ್ತಿಯನ್ನು ನೋಡಬಹುದು. ಮಧುರೈನಲ್ಲಿ ಮೀನಾಕ್ಷಿ-ಸು೦ದರೇಶ್ವರರ ದೇವಾಲಯವನ್ನು ನಿರ್ಮಿಸಿದವರ್ಯಾರೆ೦ದು ಅಸ್ಪಷ್ಟತೆಯಿದ್ದರೂ ಶಿವನಿ೦ದ ಸೋಲಲ್ಪಟ್ಟ ಇ೦ದ್ರ ಇಲ್ಲಿ ಶಿವಲಿ೦ಗವೊ೦ದನ್ನು ಪ್ರತಿಷ್ಟಾಪಿಸಿ, ದೇವಾಲಯವನ್ನು ನಿರ್ಮಿಸಿ ಹೊನ್ನಿನ ತಾವರೆಗಳಿ೦ದ ಪೂಜಿಸಿದ್ದನ೦ತೆ. ಇದರ
ಪೋರ್ತಾಮರೈ
ಸ೦ಕೇತವಾಗಿ ದೇವಾಲಯದ ’ಪೋರ್ತಾಮರೈ ಎ೦ಬ ಪುಷ್ಕರಣಿಯಲ್ಲಿ ದೊಡ್ದದೊ೦ದು ಬ೦ಗಾರದ ಕಮಲವಿದೆ. ಮಧುರೆಯೇ ಶ೦ಗ೦ನ ಕೇ೦ದ್ರವೆ೦ದು ಹೇಳಿದೆನಷ್ಟೆ. ಯಾವುದೇ ಕೃತಿ ಶ೦ಗಂ ಸಾಹಿತ್ಯದಲ್ಲಿ ಮಾನ್ಯತೆ ಪಡೆಯಲು ಅದನ್ನು ಪೋರ್ತಾಮರೈ ಕೊಳದಲ್ಲಿ ಬಿಡಕಾಗುತ್ತಿತ್ತ೦ತೆ, ಕೃತಿಯು ಮುಳುಗದೇ ನೀರಿನಲ್ಲಿ ತೇಲಿದರೆ ಮಾತ್ರ ಆದಕ್ಕೆ ಶ೦ಗ೦ನಲ್ಲಿ ಸ್ಥಾನಮಾನಗಳು ಲಭ್ಯವಾಗುತ್ತಿದ್ದವ೦ತೆ. ಇನ್ನು ತಮಿಳು ಸಾಹಿತ್ಯದಲ್ಲಿ ಎರಡು ಸಾವಿರ ವರ್ಷಗಳ ಹಿ೦ದೆಯೇ ಇಲ್ಲಿ ದೇವಾಲಯ ನಿರ್ಮಿಸಲ್ಪಟ್ಟ ಬಗ್ಗೆ ಉಲ್ಲೇಖಗಳು ದೊರಕುತ್ತವೆ. ಆ ಕಾಲದಲ್ಲೇ ದೇವಸ್ಥಾನವನ್ನು ಹೃದಯಭಾಗದಲ್ಲಿಟ್ಟು ಸುತ್ತಲೂ ಚೌಕದೊಳಗೊ೦ದು ಚೌಕದ೦ತೆ ಊರಿನ ಪ್ರತಿ ಬೀದಿಯನ್ನೂ ಚಚ್ಚೌಕಾಕಾರದಲ್ಲಿ ವಿನ್ಯಾಸಗೊಳಿ ಕಟ್ಟಲಾಗಿತ್ತು. ಹದಿನಾಲ್ಕು ರಾಜಗೋಪುರಗಳೂ, 33 ಸಾವಿರಕ್ಕಿ೦ತ ಹೆಚ್ಚಿನ ಶಿಲ್ಪಗಳಿ೦ದ ಕೂಡಿದ ದೇವಾಲಯವೇ 45 ಎಕರೆಗಳಿಗಿ೦ತ ಹೆಚ್ಚಿನ ವಿಸ್ತೀರ್ಣವನ್ನಾಕ್ರಮಿಸಿದೆ. ಹಳೆಯ ದೇವಾಲಯದ ಬಹುಭಾಗ ಕ್ರಿ.ಶ 1310ರಲ್ಲಿ ಮಲಿಕ್ ಕಾಫರಿನಿ೦ದ ಧ್ವ೦ಸಗೊ೦ಡಿದ್ದು, ಈಗಿನ ನಿರ್ಮಿತಿ ಹದಿನೈದನೇ ಶತಮಾನದಲ್ಲಿ ನಾಯಕ ವ೦ಶದ ಮೊದಲ ಅರಸು ವಿಶ್ವನಾಥನ ಆಜ್ಞೆಯ೦ತೆ ಆತನ ಪ್ರಧಾನಮ೦ತ್ರಿ ಅರಿಯನಾಥ ಮುದಲಿಯಾರನಿ೦ದ ಪುನರ್ನಿಮಿಸಲ್ಪಟ್ಟಿತು. ಆಲಯದೊಳಗಿನ ’ಆಯಿರಮ್ ಕಾಲ ಮ೦ಡಪಮ್ ಅಥವಾ ’ಸಾವಿರ ಕ೦ಬಗಳ ಮ೦ಟಪವೂ ಈತನ ಕಾಲದ್ದೇ. ವಾರ೦ಗಲ್, ತಿರುನಲ್ವೇಲಿ, ತಿರುವಾರೂರ್, ಚಿದ೦ಬರ೦ನೊಡನೆ ಭಾರತದಲ್ಲಿರುವ ಕೆಲವೇ ಕೆಲ ಸಾವಿರ ಕ೦ಬಗಳ ಮ೦ಟಪದಲ್ಲಿ ಮಧುರೈಯದ್ದೂ ಒ೦ದು. ಇಲ್ಲಿರುವ ಯಾವ ಕ೦ಬದ ರಚನೆಯೂ ಮತ್ತೊ೦ದರ೦ತಿಲ್ಲ. 1930ರ ಸುಮಾರಿಗೆ ಇಲ್ಲಿಗೆ ಭೇಟಿ ಕೊಟ್ಟಿದ್ದ ಫಿಲಿಡೆಲ್ಫಿಯಾದ ಮಹಿಳೆಯೊಬ್ಬಳು ಇಲ್ಲಿನ ವಾಸ್ತುಶಿಲ್ಪಕ್ಕೆ ಮರುಳಾಗಿ ಅನಾಥವಾಗಿ ಬಿದ್ದಿದ್ದ ಈ ಮ೦ಟಪದ ಕ೦ಬವೊ೦ದನ್ನು ಅಮೇರಿಕದ ಫಿಲಿಡೆಲ್ಫಿಯಾ ಮ್ಯೂಸಿಯಮ್ ಆಫ್ ಆರ್ಟ್‍ಗೆ ಹಡಗಿನಲ್ಲಿ ಸಾಗಿಸಿದ್ದಳ೦ತೆ.
     ಪ್ರಾಕಾರದೊಳಗಿನ ಇಲ್ಲಿರುವ ಎರಡು ಮುಖ್ಯ ಆಲಯಗಳಲ್ಲಿ ಒ೦ದು ಪ್ರಾಕಾರ ಮಧ್ಯಭಾಗದಲ್ಲಿರುವ ಸು೦ದರೇಶ್ವರ ಮತ್ತು ಅದರ ಪಕ್ಕದ ಪಕ್ಕದ ಮೀನಾಕ್ಷಿಯ ಗರ್ಭಗುಡಿ. ವಾಸ್ತುಶಿಲ್ಪವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಮೊದಲು ಶಿವಾಲಯವಾಗಿತ್ತೆ೦ದೂ ತದನ೦ತರ ಮೀನಾಕ್ಷಿಯ ಪೂಜೆ ಪ್ರವರ್ಧಮಾನಕ್ಕೆ ಬ೦ದಿತೆ೦ದೂ ಊಹಿಸಬಹುದು. ಸು೦ದರೇಶ್ವರ ಆಲಯದಿ೦ದ ಹೊರಗೆ ಮೀನಾಕ್ಷಿಯತ್ತ ತೆರಳುವಾಗ ದಾರಿಯಲ್ಲಿ ಸಿಗುವುದೇ ಮುಕ್ಕುರುನಿ ವಿನಾಯಕನ ಗುಡಿ. ಮೂರು
’ಕುರುಣಿ(ಸುಮಾರು ಹದಿನೆ೦ಟು ಕೆ.ಜಿ)ಯಷ್ಟು ದೊಡ್ಡ ಕೊಳುಕ್ಕಟ್ಟೈ ಅಥವಾ ಮೋದಕವನ್ನು ಅರ್ಪಿಸುವುದರಿ೦ದ ಇದಕ್ಕೆ ಈ ಹೆಸರ೦ತೆ. ಈ ವಿನಾಯಕನ ಮೂರ್ತಿ ಸುಮಾರು ಏಳು ಅಡಿಗಳಿಗಿ೦ತಲೂ ಎತ್ತರದ್ದು. ರಾಜಾ ತಿರುಮಲ ನಾಯಕ ಮೀನಾಕ್ಷಿ
ಮುಕ್ಕುರುನಿ ವಿನಾಯಕ
ದೇವಾಲಯದಿ೦ದ ಸುಮಾರು ಎರಡು ಕಿ.ಮೀ ದೂರದಲ್ಲಿರುವ ’ತೆಪ್ಪಕೊಳ೦
ಎ೦ಬ ಕೆರೆಯನ್ನು ತೋಡಿಸುವಾಗ ಈ ಏಕಶಿಲಾ ಮೂರ್ತಿ ಸಿಕ್ಕಿತೆ೦ದು ಐತಿಹ್ಯ, ತಮಿಳ್ನಾಡಿನ ಅತಿದೊಡ್ಡ ಕೆರೆಯಾದ ಇಲ್ಲಿ ಪ್ರತಿವರ್ಷದ ಪುಷ್ಯಾ ಪೌರ್ಣಿಮೆಯ೦ದು ಜರಗುವ ಮೀನಾಕ್ಷಿಯ ತೆಪ್ಪೋತ್ಸವ ಬಹುಪ್ರಸಿದ್ಧಯು, ನಯನಮನೋಹರವು. 
     ದೇವಾಲಯದ ಇನ್ನೊ೦ದು ವಿಶೇಷವೆ೦ದರೆ ಇಲ್ಲಿ ಶಿವನು ರೂಪ(ಸು೦ದರೇಶ್ವರ), ಅರೂಪ ಮತ್ತು ರೂಪಾರೂಪ(ಲಿ೦ಗ)ವೆ೦ಬ ಮೂರು ವಿಧಗಳಲ್ಲಿ ಭಕ್ತರನ್ನು ಹರಸುತ್ತಾನೆ೦ಬ ನ೦ಬಿಕೆಯಿದೆ. ಮರ್ಕಾಳಿ ಅರುದ್ರ ಉತ್ಸವದ೦ದು ನಟರಾಜನ ಮೂರ್ತಿಯೆದುರು ಕನ್ನಡಿಯನ್ನಿಟ್ಟು ಅದರ ಪ್ರತಿಬಿ೦ಬದ ಅರೂಪ ಮೂರ್ತಕ್ಕೆ ಪೂಜಿಸುವ ಸ೦ಪ್ರದಾಯವಿದೆ.
ಇಲ್ಲಿನ ಇನ್ನೊ೦ದು ಪ್ರಮುಖ ಆಕರ್ಷಣೆ ವಿವಿಧ ಸ೦ಗೀತ ಸ್ವರಗಳನ್ನು ಹೊಮ್ಮಿಸುವ ಕ೦ಬಗಳು. ದೇವಾಲಯದ ಹೊರಗಿನ ಆದಿ ವೀಥಿಯಲ್ಲಿನ ಐದು ಕ೦ಬಗಳು ಮಾತ್ರವಲ್ಲದೇ ಕ೦ಪತ್ತಾಡಿ ಮ೦ಟಪ  ಮತ್ತು ಸಾವಿರ ಕ೦ಬಗಳ ಮ೦ಟಪದಲ್ಲೂ ಸ೦ಗೀತಸ್ತ೦ಭಗಳಿವೆ. ಇಡೀ ಭಾರತದಲ್ಲಿ ಇ೦ಥ ಸ೦ಗೀತಸ್ತ೦ಭಗಳಿರುವ ಉಳಿದ ಸ್ಥಳಗಳೆ೦ದರೆ ಕರ್ನಾಟಕದ ಹ೦ಪಿ,
ಸ೦ಗೀತಸ್ತ೦ಭ

ಆ೦ಧ್ರದ ಲೇಪಾಕ್ಷಿ, ತಾಡಪತ್ರಿ, ತಮಿಳ್ನಾಡಿನ ಸುಚೀ೦ದ್ರಮ್, ತಿರುನಲ್ವೇಲಿ ಮತ್ತು ಆಲ್ವಾತ್ತಿರುನಗರಿಗಳು ಮಾತ್ರ. ಇಡೀ ಭಾರತದಲ್ಲಿ ಇ೦ಥ ಸ೦ಗೀತಸ್ತ೦ಭಗಳಿರುವ ಉಳಿದ ಸ್ಥಳಗಳೆ೦ದರೆ ಕರ್ನಾಟಕದ ಹ೦ಪಿ, ಆ೦ಧ್ರದ ಲೇಪಾಕ್ಷಿ, ತಾಡಪತ್ರಿ, ತಮಿಳ್ನಾಡಿನ ಸುಚೀ೦ದ್ರಮ್, ತಿರುನಲ್ವೇಲಿ ಮತ್ತು ಆಲ್ವಾತ್ತಿರುನಗರಿಗಳು ಮಾತ್ರ.
     ಮಧುರೈ ಮೀನಾಕ್ಷಿ ದೇವಾಲಯದ ಬಗ್ಗೆ ಹೇಳಿದಷ್ಟೂ ಮುಗಿಯದ ಕಥೆಗಳಿವೆ. ಮೀನಾಕ್ಷಿಯ ಆಭರಣಗಳ ಮೋಹಕತೆಗೆ ಮರುಳಾದ ಇ೦ಗ್ಲೆ೦ಡಿನ ರಾಣಿ ವಿಕ್ಟೋರಿಯಾ ದೇವಿಯ ಕ೦ಠೀಹಾರವನ್ನು ಲ೦ಡನ್ನಿಗೆ ತರಿಸಿಕೊ೦ಡಿದ್ದಳ೦ತೆ. ಇಲ್ಲಿನ ವಾಸ್ತುಶಿಲ್ಪಕ್ಕೆ ಮರುಳಾಗಿ ಫಿಲಿಡೆಲ್ಫಿಯಾ ಮತ್ತು ಆಕ್ಸ್ಫರ್ಡಿನ ಆಶ್ಮೋಲೀನ್ ಮ್ಯೂಸಿಯಮ್ಗಳು ಇಲ್ಲಿ ಬಿದ್ದಿದ್ದ ಕ೦ಬಗಳನ್ನು ತಮ್ಮಲ್ಲಿ ಸಾಗಿಸಿದ್ದವ೦ತೆ. 1982ರ ಸುಮಾರಿಗೆ ಹೋಸ್ಟನ್ನಿನಲ್ಲಿ ನಿರ್ಮಿಸಲಾಗುತ್ತಿದ್ದ ಮೀನಾಕ್ಷಿ ದೇವಾಲಯಕ್ಕೆ ಉಡುಗೊರೆಯಾಗಿ ಇಲ್ಲಿ೦ದ ಒ೦ದು ಮೂರ್ತಿಯನ್ನು ಕಳಿಸಲಾಗಿತ್ತು. ಮು೦ಬೈನಲ್ಲಿ ವಿಮಾನ ಅಪಘಾತವಾಗಿ ಹಲವಾರು ಜನ ಮೃತಪಟ್ಟರೂ ಮೂರ್ತಿ ಮತ್ತು ಅದನ್ನೊಯ್ಯುತ್ತಿದ್ದ ಅರ್ಚಕರು ತರಚುಗಾಯವೂ ಇಲ್ಲದೇ ಬಚಾವಾಗಿದ್ದರು.
     ಮಧುರೆಯ ಬಗೆಗಿನ fairy taleಗಳೇನೇ ಇರಲಿ. ಇದನ್ನು ಒಮ್ಮೆಯಾದರೂ ಸರಿಯಾಗಿ ಕಣ್ಣುಬಿಟ್ಟು ನೋಡಿದವರಿದ್ದರೆ ಇದು ಪ್ರಪ೦ಚದ ಯಾವ ಅದ್ಭುತಕ್ಕೂ ಗು೦ಜಿತೂಕವೂ ಕಡಿಮೆಯಿಲ್ಲವೆನ್ನುವುದನ್ನು ಒಪ್ಪದೇ ಹೋಗಲು ಸಾಧ್ಯವಿಲ್ಲ. ಬರಿಯ ಮಧುರೈ ಮಾತ್ರವಲ್ಲ. ಅದು ತ೦ಜಾವೂರಿರಬಹುದು, ತಿರುಚಿನಪಳ್ಳಿಯಿರಬಹುದು, ರಾಮೇಶ್ವರವೇ ಅಗಿರಬಹುದು. ಅವುಗಳನ್ನು ನಿರ್ಮಿಸಿದ ಪರಿ ಇ೦ದಿಗೂ ವಿಸ್ಮಯವೇ, ಅನನ್ಯವೇ, ಅದ್ಭುತವೇ. ನಲವತ್ತು ವರ್ಷಗಳ ಹಿ೦ದೆ ಲ೦ಡನ್ ಹೊರತ೦ದ ಪ್ರಪ೦ಚದ ಅದ್ಭುತಗಳ ಪುಸ್ತಕಮಾಲಿಕೆಯಲ್ಲಿ ಮಧುರೈ ಸ್ಥಾನಪಡೆದಿದ್ದು. ಕಳೆದೆರಡು ವರ್ಷಗಳ ಹಿ೦ದೆ  "New Seven Wonders of the World"ನ ಮೊದಲ ಸುತ್ತಿನಲ್ಲೇ ಭಾರತದಿ೦ದ ಆಯ್ಕೆಗೊ೦ಡ ಏಕೈಕ ನಿರ್ಮಿತಿಯಾಗಿ ಹೊರಹೊಮ್ಮಿದ್ದು ಸುಮ್ಮನೇ ಏನಲ್ಲ. ನಾವಿನ್ನೂ ಏಕೈಕ ಅದ್ಭುತವೆ೦ದೇ ತಿಳಿದುಕೊ೦ಡಿರುವ ತಾಜ್‌ಮಹಲನ್ನು ಬಿಟ್ಟು ಆಚೀಚೆ ಕಣ್ಣು ಹಾಯಿಸಬೇಕಾಷ್ಟೆ.

17 comments:

 1. ತುಂಬಾ ದಾಖಲೆಗಳುಳ್ಳ, ವಿಷಯಗಳುಳ್ಳ ಒಳ್ಳೆಯ ಲೇಖನ.. ತುಂಬಾ ಚೆನ್ನಾಗಿದೆ ..

  ReplyDelete
  Replies
  1. ಧನ್ಯವಾದಗಳು ಕಿರಣ ಭಟ್ರೆ

   Delete
 2. ಐತಿಹಾಸಿಕ ಮಾಹಿತಿಗಳ ಸಹಿತದ ವಿವರಣೆ ಚೆಂದ...

  ReplyDelete
 3. ಕೆಲವು ದಿನದ ಹಿ೦ದಷ್ಟೇ ಮಧುರೈಗೆ ಮೊದಲ ಭೇಟಿಯಿತ್ತು ಬ೦ದಿದ್ದೆ.. ಆ ಭೇಟಿ ಇ೦ದು ಪೂರ್ಣಗೊ೦ಡ೦ತೆ ಅನಿಸಿತು.. ಒಳ್ಳೆಯ ಮಾಹಿತಿ, ಚೆ೦ದದ ವಿವರಣೆ.

  ReplyDelete
  Replies
  1. ಧ.ವಾ.... ಆದರೂ ಎನ್ನ ಬಿಟ್ಟಿಕ್ಕಿ ಹೋಯಿದೆ ಅಲ್ಲದೋ ರವಿ.

   Delete
 4. also, the article makes us aware of the fact that high Vedic sanatana hindu dharma culture or society existed in the tamilnadu region for thousands of years, with deep roots there, and, not the anti-Brahmin, anti-hindu distortions that have happened mainly during last two centuries, made possible mainly because of the "help" of hidden foreign colonial, Christianity, Islamic forces "using", manipulating, influencing internal elements and vested interests.

  ReplyDelete
  Replies
  1. ಹೌದು ತಿರುಮಲರಾಯಣ್ಣ. ಕಾಶಿ ಮತ್ತು ಕ೦ಚಿ ಪ್ರಾಚೀನ ಭಾರತದ ಅತಿಪ್ರಾಚೀನ ನಗರಗಳು. ಕ೦ಚಿಯ ಘಟಿಕಾಸ್ಥಾನದಲ್ಲಿ ವಿದ್ಯಾರ್ಜನೆಗಾಗಿ ಆ ಕಾಲದಲ್ಲಿ ಉತ್ತರದಿ೦ದ ದಕ್ಷಿಣಕ್ಕೆ ಬ್ರಾಹ್ಮಣ ದೊಡ್ಡ ವಲಸೆಯೇ ನಡೆದಿದೆ.

   Delete
 5. ಉತ್ತಮ ಸಂಶೋಧನಾತ್ಮಕ ಲೇಖನ

  ReplyDelete
 6. ಸಖತ್ತಾದ ಮಾಹಿತಿಪೂರ್ಣ ಲೇಖನ :-) ಸುಮಾರು ಸಂಶೋಧನೆ ಮಾಡಿದ್ಯೋ ಅಣ್ಣ.. ಎಂದಿನಂತೆ.. ಓದಕ್ಕೆ ಖುಷಿ ಆಗ್ತು :-)

  ReplyDelete
 7. ಧ.ವಾ...
  ಎಲ್ಲೋ ಅಪರೂಪಕ್ಕೊ೦ದೊ೦ದು ಲೇಖನ ಪ್ರಶಸ್ತಿ. ನಿನ್ನಷ್ಟು flow ಇಲ್ಲೆ.

  ReplyDelete
 8. ಸರ್ ಇದು ನಿಜಕ್ಕೂ ಅದ್ಭುತವಾದ ಮಾಹಿತಿಯುಳ್ಳ ಬರಹ. ನಾನೂ ಕೂಡ ತಮಿಳಿಗನಾಗಿ ತಮಿಳು ಸಾಹಿತ್ಯವನ್ನು ಓದಿದ್ದೇನೆ ಸಂಗಂ ಬಗ್ಗೆ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಅರಂ ಪುರಂ ಓದಿದ್ದೇನೆ.ಆದ್ರೆ ಇಷ್ಟು ಸವಿಸ್ತಾರವಾಗಿ ತಿಳಿದುಕೊಳ್ಳಲು ಖಂಡಿತ ಸಾಧ್ಯವಾಗಿಲ್ಲ.ಈ ಬರಹ ಓದಿದ ಮೇಲೆ ನನಗೆ ನಿಜವಾಗಲೂ ನಾಚಿಕೆಯಾಯಿತು.

  ReplyDelete
 9. ಧನ್ಯೋಸ್ಮಿ ಅಶೋಕ್. ಅಷ್ಟೊ೦ದೆಲ್ಲ ಹೊಗಳಿಕೆಗೆ ನಾನು ಅರ್ಹನಲ್ಲವೇ ಅಲ್ಲ.

  ReplyDelete
 10. Sachin, Once again, you proved your good ability to put forth very much valuable articles. Really, I haven't known this reality til today, Now it is Crystal clear. Thank You very much, for your effort.

  ReplyDelete