Pages

Thursday, February 12, 2015

ಮಲಬಾರ ಮಹಾರಾಜ ಮೆಕ್ಕಾಕ್ಕೆ ಹೋಗಿ ಮಾಡಿದ್ದೇನು?

       
ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿ
         ನೋಡಲೇ ಬೇಕೆಂಬ ಆಸೆಯಿಂದ ಕಳೆದ ವಾರ ಕೇರಳದ ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿಗೆ ಭೇಟಿ ಕೊಟ್ಟಿದ್ದೆ. ತುಂಬ ದಿನಗಳಿಂದ ಹೋಗಲೇ ಬೇಕೆಂದುಕೊಂಡ ಸ್ಥಳವದು. ಭಾಷೆ ಹೇಗೋ ಮ್ಯಾನೇಜ್ ಮಾಡಬಹುದಾಗಿತ್ತಾದರೂ ಜೊತೆಯಲ್ಲಾರೂ ಇದ್ದಿರಲಿಲ್ಲ. ಕಾಸರಗೋಡು ಹೇಳಿಕೇಳಿ ಮತೀಯ ಗಲಭೆಗೆ ಹೆಸರುವಾಸಿ. ಅಲ್ಲದೇ ಸಣ್ಣಗೆ ಗಲಾಟೆಯೂ ನಡೆಯುತ್ತಿದ್ದ ಸಮಯ. ಅಂಥಹುದರಲ್ಲಿ ಮಸೀದಿಯ ಒಳಹೊಕ್ಕು ಅರ್ಧಂಬರ್ಧ ಮಲಯಾಳದಲ್ಲಿ ಅಲ್ಲಿದ್ದವರನ್ನು ಮಾತನಾಡಿಸಿ ಬಂದ ನನ್ನ ಧೈರ್ಯದ ಬಗ್ಗೆ ನನಗೇ ಆಶ್ಚರ್ಯವಿದೆ. ತಿರುಗಿ ಬರುವಾಗ ನನಗೆ ಗಾಢವಾಗಿ ನೆನಪಾಗಿದ್ದು ಕೊಡಂಗಾಲೂರು.......
        ಅದು ಕೇರಳ ದೇಶದ ರಾಜ್ಯಗಳ ರಾಜಧಾನಿಯಾಗಿ ಒಂದಾನೊಂದು ಕಾಲದಲ್ಲಿ ಮೆರೆದ ಊರು. ಅಲ್ಲಿನ ಸುಂದರ ಹಿನ್ನೀರು, ಕಣ್ಣಗಿ ಮುಕ್ತಿ ಪಡೆದ ಸ್ಥಳವಾದ ಕೊಡಂಗಾಲೂರ್ ಭಗವತಿ ಆಲಯ, ತಿರುವಂಚಿಕುಲಮ್ ಮಹಾದೇವ ಸೇರಿ ಹತ್ತು ಹಲವು ಹಳೆಯ ದೇವಸ್ಥಾನಗಳು, ಭರಣಿ ಜಾತ್ರೆ.... ಅಷ್ಟಾಗಿದ್ದರೆ ಹೇಳಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಇದು ಇನ್ನೂ ಒಂದು ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಭಾರತದ ನೆಲದಲ್ಲಿ ಪ್ರಪ್ರಥಮ ಮಸೀದಿ ಸ್ಥಾಪನೆಯಾದದ್ದು ಇಲ್ಲೇ. ಇದ್ದ ಕಥೆಯನ್ನೇ ನಂಬುವುದಾದರೆ ಕೇರಳದಲ್ಲಿ ಆದಿ ಶಂಕರರು ಹುಟ್ಟುವ ಮೊದಲು(ಶೃಂಗೇರಿ ಮಠದ ದಾಖಲೆಯಲ್ಲಿರುವ ಆದಿಶಂಕರರು), ಭಾರತಕ್ಕೆ ಹ್ಯುಯಾನ್‌ತ್ಸಾಂಗ್ ಬರುವ ಕಾಲದಲ್ಲೇ ಇಲ್ಲಿ ಇಸ್ಲಾಂ ನೆಲೆಯೂರಿ ಒಂದು ಮಸೀದಿಯೂ ಕಟ್ಟಲ್ಪಟ್ಟಿತ್ತು. ಇರಾಕ್, ಇರಾನ್, ಇಜಿಪ್ಟ್, ಟ್ಯುನೇಶಿಯಾಗಳಲ್ಲಿ ಇಸ್ಲಾಮ್ ಕಾಲಿಡುವ ಮೊದಲೇ ಈ ಮಸೀದಿ ನಿರ್ಮಾಣವಾಗಿತ್ತು. ಅರಬ್ಬಿನಿಂದ ದೂರದೂರದಲ್ಲೆಲ್ಲೋ ಇರುವ ಕೇರಳದ ಮೂಲೆಯೊಂದರಲ್ಲಿ ಆ ಮಸೀದಿ ತಲೆ ಎತ್ತಿದ್ದರ ಹಿಂದೆ ಒಂದು ಇಂಟರೆಸ್ಟಿಂಗ್ ಘಟನೆಯಿದೆ. ಹಾಗೆಂದು ಅವತ್ತಿನ ಇಸ್ಲಾಮಿನ ಪ್ರಸಾರವೇನೂ ನಾವಂದುಕೊಂಡಂತೆ ಖಡ್ಗದ ಬಲದಿಂದಾಗಿರಲಿಲ್ಲ. ಇಸ್ಲಾಮಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಅರಸನೊಬ್ಬನ ಉನ್ಮತ್ತ ಭಕ್ತಿಯ ಬಲದಿಂದ.
ಕೊಡಂಗಾಲೂರಿನ ಚೇರಮನ್ ಮಸೀದಿ

         ಆಗಿನ ಕಾಲದಲ್ಲಿ ಕೇರಳವನ್ನಾಳುತ್ತಿದ್ದ ಚೇರ ರಾಜ್ಯದ ಕೊನೆಯ ಅರಸ ಚೇರಮನ್ ಪೆರುಮಾಳ್, ಮೊಹಮ್ಮದ ಪೈಗಂಬರರ ಪವಾಡವೊಂದಕ್ಕೆ ಮನಸೋತು ಮೆಕ್ಕಾಗೆ ಪ್ರಯಾಣ ಬೆಳೆಸಿ ಪೈಗಂಬರರಿಂದಲೇ ಇಸ್ಲಾಮ್ ಸ್ವೀಕರಿಸಿ ಭಾರತದಲ್ಲಿ ಮೊತ್ತಮೊದಲು ಇಸ್ಲಾಮಿನ ಪ್ರಸಾರಕ್ಕೆ ಕಾರಣನಾದ. ಇದು ಸತ್ಯವೇ? ಗೊತ್ತಿಲ್ಲ. ಅಥವಾ ಸುಳ್ಳೇ? ಹೇಳಲಾಗದು. ಈ ಕಥೆಯಂತೂ ಕೇರಳದ ಮುಸ್ಲೀಮರಲ್ಲಿ ಮನೆಮಾತು. ಲೆಕ್ಕವಿಲ್ಲದಷ್ಟು ಬಾರಿ ಇದೇ ಕಥೆ ಅವರ ಪುಸ್ತಕಗಳಲ್ಲಿ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಿದೆ. ಕೇರಳೋತ್ಪತ್ತಿ ಮಾರ್ತಾಂಡದ ಗುಂಡರ್ಟ್‌ನ ಭಾಷಾಂತರ, ಲೋಗನ್ನಿನ ಮಲಬಾರ್ ಮ್ಯಾನುವೆಲ್, ಟ್ರಾವೆಂಕೋರ್ ಮ್ಯಾನುವೆಲ್ಲುಗಳ ಹಲವು ಆವೃತ್ತಿಗಳಲ್ಲಿನ ವಿವಾದಿತ ’ಮಿಥ್’ಗಳಷ್ಟೇ ನಮಗಿಂದು ಸಿಗುವ ಆಧಾರಗಳು. ಹಾಗೆಂದು ಕೇರಳದವರಾಗಲೀ, ದಕ್ಷಿಣ ಭಾರತದವರಾಗಲೀ ಬಹಳ ಹಿಂದಿನಿಂದಲೂ ತಮ್ಮ ಇತಿಹಾಸವನ್ನು ಇದಮಿತ್ಥಂ ಎಂದು ಬರೆದಿಟ್ಟಿದ್ದು ಕಡಿಮೆಯೇ. ಕಾವ್ಯಕ್ಕೆ ತೋರಿಸಿದ ಆಸ್ಥೆಯನ್ನು ಚರಿತ್ರೆಗೆ ತೋರಿಸಿದ ಬರಹಗಾರರೂ ಬೆರಳೆಣಿಕೆಯಷ್ಟೇ. ಅದು ನಮ್ಮ ದೇಶದ ದುರಂತವೇ. ಕ್ಯಾಲಿಕಟ್ ಯಾ ಕಲ್ಲೀಕೋಟೆಯು ಕ್ಯಾಲಿಕೋ ಎಂಬ ಬಟ್ಟೆಯ ಮೇಲಿನ ಪ್ರಿಂಟಿಂಗಿಗೆ ಒಂದಾನೊಂದು ಕಾಲದಲ್ಲೇ ದೇಶಾಂತರದಲ್ಲೂ ಹೆಸರುವಾಸಿಯಾಗಿತ್ತಾದರೂ ಅದರ ಮೇಲೆ ಬರೆದಿಟ್ಟಿದ್ದು ಅಷ್ಟಕ್ಕಷ್ಟೇ. ಝಾಮೋರಿನ್ ರಾಜರುಗಳ ಅಧಿಕೃತ ಚರಿತ್ರೆಯಾದ ಗ್ರಂಥಾವಳಿಯ ಬಹುಭಾಗ ನಾಶವಾಗಿ ಉಳಿದ ಸಣ್ಣ ತುಣುಕೊಂದು ಓದಲೂ ಬಾರದಷ್ಟು ಗೆದ್ದಲು ಹಿಡಿದು ವಲ್ಲತ್ತೋಲ್ ಲೈಬ್ರರಿಯಲ್ಲಿ ಸುರಕ್ಷಿತವಾಗಿದೆ. ಅಲ್ಲಿಂದೀಚೆ ಹಿಂದಿನ ಜನ ಬದಲಾದರು, ಹಿಂದಿನ ಸಂಸ್ಕೃತಿ ಬದಲಾಯಿತು. ಕೆಲವು ಗುರುತು ಕೂಡ ಸಿಕ್ಕದಂತೆ. ಹಳೆಯ ಇತಿಹಾಸ ಭಾಷೆ, ಸಂಸ್ಕೃತಿ ಬರದ ಬ್ರಿಟೀಷ್ ಇತಿಹಾಸಕಾರರ ಕೃಪೆಯಿಂದ ಇಂಗ್ಲೀಷಿಗೆ ಭಾಷಾಂತರಗೊಂಡು ಅಲ್ಲಿಂದ ಮತ್ತೆ ಮಲಯಾಳಕ್ಕೋ ಉಳಿದ ಭಾಷೆಗೋ ಬಂದುದನ್ನೇ ಅಧಿಕೃತವೆಂದು ಮಹಾಪ್ರಸಾದದಂತೆ ನಮ್ಮ ಜನ ಸ್ವೀಕರಿಸಿದರು. ಅದರಲ್ಲಿ ಆಳ ಕೊರೆದಷ್ಟೂ ಸಿಗುವುದು ಒಂದಿಷ್ಟು ಕಥೆಗಳು, ಜಾನಪದದ ನಂಬಿಕೆಗಳು, ವ್ಯಕ್ತಿ ವೈಭವೀಕರಣಗಳು, ರೋಚಕ ಕಾವ್ಯಗಳು, ಬಾಕಿ ಉಳಿದರೆ ಸ್ವಲ್ಪ ಸತ್ಯ. ಆ ಬಾಕಿ ಉಳಿವ ಸತ್ಯವನ್ನು ಹುಡುಕ ಹೊರಟರೆ ಅದೊಂದು ಬಿಟ್ಟು ಮತ್ತೆಲ್ಲವೂ ಇತಿಹಾಸಕಾರನ ಕಾಲಿಗೆ ಎಡತಾಕುತ್ತದೆ.
        ಈ ಕಥೆ ಶುರುವಾಗುವುದು ಸಾವಿರ ಮುನ್ನೂರು ವರ್ಷಗಳ ಹಿಂದೆ ಸುಮಾರು ಕ್ರಿ.ಶ ೬೨೩ರ ಸುಮಾರಿಗೆ. ಕೇರಳವನ್ನಾಳಿದ ಕೊನೆಯ ಚೇರ ಅರಸು ಚೇರಮನ್ ಪೆರುಮಾಳ್. ಆ ಕಾಲದಲ್ಲೇ ಪಶ್ಚಿಮದ ಜೊತೆಗಿನ ಸಮುದ್ರಾಂತರ ವ್ಯವಹಾರದಲ್ಲಿ ಕೇರಳ ವಿಶ್ವಪ್ರಸಿದ್ಧವಾಗಿತ್ತು. ಮುಜಿರಿಸ್ ಮತ್ತು ಅರಬ್ ಬಂದರುಗಳ ಮಧ್ಯೆ ಹಡಗುಗಳ ಓಡಾಟ ಅವ್ಯಾಹತವಾಗಿತ್ತು. ಕಾಳುಮೆಣಸು, ಸಾಂಬಾರ್ ಪದಾರ್ಥಗಳು, ಬೆಲೆಬಾಳುವ ಹರಳುಗಳು, ಮಸ್ಲಿನ್ ಬಟ್ಟೆ, ಮರದ ಕೆತ್ತನೆಗಳು ಕೇರಳದಿಂದ ಅರಬ್, ಇಜಿಪ್ಟ್, ಯುರೋಪಿಗೆ ಸಾಗಣೆಯಾದರೆ ಪ್ರತಿಯಾಗಿ ಅಲ್ಲಿಂದ ಅತ್ತರು, ಚಿನ್ನ ಮುತ್ತುಗಳು ಇಲ್ಲಿ ಬರುತ್ತಿದ್ದವು. ಹತ್ತು ಹನ್ನೊಂದನೇ ಶತಮಾನದ ಹೊತ್ತಿನಲ್ಲೇ ಕೊಡಂಗಾಲೂರಿನಲ್ಲಿದ್ದ ಕಂಚು ಮತ್ತು ಹಿತ್ತಾಳೆಯ ಕಾರ್ಖಾನೆಯಿಂದ ಯುರೋಪಿನ ಮಾರ್ಕೇಟಿಗೆ ಬಗೆಬಗೆಯ ಡಿಸೈನುಗಳ ಪಾತ್ರೆಗಳ ಸಾಗಣೆಯಾಗುತ್ತಿದ್ದ ಬಗ್ಗೆ ಕೈರೋದ ಟ್ಯೂನೀಶಿಯನ್ ಜ್ಯೂನ ಕಾಲದ ದಾಖಲೆಗಳಿವೆ. ಅದೊಂದೇ ಸಾಕು ವಿದೇಶಗಳಲ್ಲಿ ಹಬ್ಬಿದ್ದ ಕೇರಳದ ಕೀರ್ತಿಯ ಬಗ್ಗೆ ತಿಳಿಯಲು.
       ಕಾಲ ಅಸ್ಪಷ್ಟವಾದರೂ ಇದೇ ಕೊಡಂಗಾಲೂರನ್ನಾಳುತ್ತಿದ್ದವನು ಚೇರಮನ್ ಪೆರುಮಾಳ್. ಒಂದು ಪೂರ್ಣಿಮೆಯ ರಾತ್ರಿಯಲ್ಲಿ ಆತ ಬಾಲ್ಕನಿಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ(ಹಳೆಯ ಕೇರಳದ ತರವಾಡು ಮನೆಗಳಲ್ಲಿ ಬಾಲ್ಕನಿಗಳಿರುತ್ತಿರಲಿಲ್ಲವೆಂಬುದು ಬೇರೆ ವಿಷಯ) ಅಚ್ಚರಿಯೊಂದು ಕಣ್ಣಿಗೆ ಬಿದ್ದಿತಂತೆ. ಚಂದ್ರ ಎರಡಾಗಿ ಹೋಳಾಗಿ ಪುನಃ ಒಂದಾದ ದೃಶ್ಯ. ರಾಜ ಆ ಪವಾಡವನ್ನು ಕಂಡು ದಂಗಾದ. ಆಸ್ಥಾನ ಜ್ಯೋತಿಷಿಗಳು ಅಂಥಹ ಒಂದು ಘಟನೆ ನಡೆದಿರುವುದನ್ನು ಪ್ರಮಾಣೀಕರಿಸಿದರು. ಕೆಲ ದಿನಗಳ ನಂತರ ಅರೇಬಿಯಾದಿಂದ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದ ಶೇಕ್ ಸಾಜುದ್ದೀನ್ ಎಂಬ ಯಾತ್ರಿ ಮುಜಿರಿಸ್ ಬಂದರಿನಲ್ಲಿ ಬಂದಿಳಿದನಂತೆ, ಆತನಿಂದ ಮಹಮ್ಮದ್ ಪೈಗಂಬರರು ಸ್ಥಾಪಿಸಿದ ಇಸ್ಲಾಮ್ ಮತದ ಬಗ್ಗೆ, ಅವರು ಚಂದ್ರನನ್ನು ಹೋಳಾಗಿಸಿ ಪುನಃ ಜೋಡಿಸಿದ ಪವಾಡದ ಬಗ್ಗೆ ಕೇಳಿ ಕುತೂಹಲಗೊಂಡ ಪೆರುಮಾಳ್ ಮೆಕ್ಕಾಕ್ಕೆ ತೆರಳಲು ನಿರ್ಧರಿಸಿದ. ತನ್ನ ಸಿಂಹಾಸನವನ್ನು ತೊರೆದು, ರಾಜ್ಯವನ್ನು ೩೨ ಭಾಗಗಳಾಗಿಸಿ ತನ್ನ ಅಳಿಯಂದಿರಿಗೆ ಹಂಚಿ ಮೆಕ್ಕಾದ ಹಡಗು ಹತ್ತಿದ. ಅಲ್ಲಿ ಪೈಗಂಬರರನ್ನು ಭೆಟ್ಟಿಯಾದ ಪೆರುಮಾಳ್ ಹೊಸ ಮತವನ್ನು ಸ್ವೀಕರಿಸಿ ತೌಜ್ ಉಲ್ ಹರೀದ್ ಎಂಬ ಹೊಸ ಹೆಸರು ಪಡೆದನಂತೆ. ಜೆಡ್ಡಾದ ರಾಜನ ಮಗಳನ್ನು ಮದುವೆಯಾಗಿ ಹನ್ನೆರಡು ವರ್ಷ ಮೆಕ್ಕಾದಲ್ಲೇ ಕಳೆದ ಆತ ಪೈಗಂಬರರ ಆಣತಿಯಂತೆ ಹೊಸ ಮತವನ್ನು ಕೇರಳದಲ್ಲಿ ಪಸರಿಸಲು ಪುನಃ ತನ್ನೂರಿನತ್ತ ಪ್ರಯಾಣ ಬೆಳೆಸಿದ, ಆತನ ದುರಾದೃಷ್ಟ, ಆತನಿಗೆ ಪುನಃ ಕೇರಳವನ್ನು ಕಾಣಲಾಗಲಿಲ್ಲ. ಸಮುದ್ರಮಾರ್ಗದ ಮಧ್ಯದಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆದನಂತೆ. ಸಾಯುವುದಕ್ಕಿಂತ ಮೊದಲು ತನ್ನ ಕುಟುಂಬಕ್ಕೆ ಪತ್ರ ಬರೆದವನು ಸಂಗಡಿಗರಿಗೆ ಆಶ್ರಯ ನೀಡುವಂತೆಯೂ, ಅವರ ಧರ್ಮಪ್ರಸಾರದಲ್ಲಿ ನೆರವಾಗುವಂತೆಯೂ ಹೇಳಿದನಂತೆ.  ಆತನ ಶವವನ್ನು ಯೆಮನ್ನಿನ ಝಫರ್‌ನಲ್ಲಿ ದಫನ ಮಾಡಲಾಯಿತೆಂದು ಕೆಲವರು ನಂಬಿದರೆ, ಸಲಾಲಾಹ್‌ನಲ್ಲೆಂದು ಇನ್ನು ಕೆಲವರು, ಶಹರ್ ಅಲ್ ಮುಕಲ್ಲಾದಲ್ಲೆಂದು ಮತ್ತೆ ಕೆಲವರು ಹೇಳುತ್ತಾರೆ. ಸಲಾಲಾಹ್ ಸಮುದ್ರ ತೀರದಲ್ಲಿರುವುದರಿಂದ ಅಲ್ಲೇ ಇದೆ ಎಂಬ ವಾದವೂ ಇದೆ. ಇದೇ ಸಲಾಲಾಹ್ ಮತ್ತು ಮುಕಲ್ಲಾ ಹೆಸರಿನ ಸ್ಥಳಗಳು ಅವನ ಮಾವನ ಮನೆಯಾದ ಜೆಡ್ಡಾದಲ್ಲೂ ಇರುವುದರಿಂದ ಅಲ್ಲೂ ಸಮಾಧಿ ಇರಬಹುದಾದ ಬಗ್ಗೆ ಗೊಂದಲವಿದೆ. ಆತನ ಪತ್ರವನ್ನು ತಂದ ಪೈಗಂಬರರ ಹದಿಮೂರು ಶಿಷ್ಯರಲ್ಲಿ ಒಬ್ಬನಾದ ಮಲೀಕ್ ದಿನಾರ್ ತನ್ನ ಸಂಗಡಿಗರೊಡನೆ ಕೊಡಂಗಾಲೂರಿಗೆ ಬಂದಿಳಿದ. ಇವರಿಗೋಸ್ಕರ ಸ್ಥಳೀಯ ರಾಜ ಮಸೀದಿ ನಿರ್ಮಿಸಲು ನೆರವು ನೀಡಿದ. ಆ ಮಸೀದಿಯೇ ಕೊಡಂಗಾಲೂರಿನ ಪ್ರಸಿದ್ಧ ಚೇರಮನ್ ಜುಮ್ಮಾ ಮಸೀದಿ. ಈ ಕಥೆಯನ್ನೇ ನಂಬುವುದಾದರೆ ಭಾರತದ ಅತಿ ಹಳೆಯ ಮಸೀದಿಗಳಲ್ಲೊಂದೆಂದು ಖ್ಯಾತಿ ಪಡೆದ ಇದು ಮದೀನಾದ ನಂತರದ ಪ್ರಪಂಚದ ಎರಡನೆ ಅತ್ಯಂತ ಪುರಾತನ ಜುಮ್ಮಾ ಮಸ್ಜಿದ್. ಕಳೆದ ೧೩೭೫ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಶುಕ್ರವಾರದ ಜುಮ್ಮಾ ನಮಾಜ್ ನಡೆಯುತ್ತಿದೆ. ಬರೀ ಅಲ್ಲಿ ಮಾತ್ರವಲ್ಲದೇ ಮಲಿಕ್ ದಿನಾರ ಮತ್ತವನ ಸಂಗಡಿಗರು ಕೇರಳದ ಕೊಲ್ಲಂ, ಕಾಸರಗೋಡಿನ ತಳಂಗರ ಸೇರಿ ಒಂಭತ್ತು ಮಸೀದಿಗಳನ್ನು ನಿರ್ಮಿಸಿದ್ದಾರೆ.

ಪುನರ್ನಿರ್ಮಿತ

ಮುಚ್ಚಿದ ಗರ್ಭಗುಡಿ, ಎದುರಿಗೆ ತೂಗುದೀಪ
        
ಈ ಮಸೀದಿ ಉಳಿದವುಗಳಂತಲ್ಲ. ಎಲ್ಲ ಮಸೀದಿಗಳೂ ಮೆಕ್ಕಾದ ದಿಕ್ಕಾಗ ಪಶ್ಚಿಮದತ್ತ ಮುಖ ಮಾಡಿದ್ದರೆ ಇದಿರುವುದು ಪೂರ್ವಾಭಿಮುಖವಾಗಿ. ಇದರ ರಚನೆಯೂ ಥೇಟ್ ಹಿಂದೂಗಳ ದೇವಾಲಯದ ಮಾದರಿಯದ್ದು. ಬಹುತೇಕ ಕೇರಳದ ಹೆಚ್ಚಿನ ಹಳೆಯ ಆಲಯ ಅಥವಾ ತರವಾಡುಗಳನ್ನು ಹೋಲುವಂಥದ್ದು. ಇಡಿಯ ಕಟ್ಟಡ ತೇಗದ ಮರದ ಸುಂದರ ಕೆತ್ತನೆಗಳನ್ನೊಳಗೊಂಡಿದೆ. ಒಳಗಡೆ ಗರ್ಭಗುಡಿಯಂಥ ರಚನೆಯೂ ಇದೆ. ದೇವಸ್ಥಾನದಲ್ಲಿರುವಂತೆ ದೊಡ್ಡದೊಂದು ಸದಾ ಉರಿಯುತ್ತಿರುವ ದೀಪ ಇಲ್ಲಿನ ವಿಶೇಷತೆ. ಬಂದ ಭಕ್ತರೆಲ್ಲ ಹಚ್ಚಿ ಹೋಗುವ ಊದಿನಕಡ್ಡಿಗಳೆಲ್ಲ ಮತ್ತೆ ದೇವಸ್ಥಾನದ ನೆನಪನ್ನೇ ಕೊಡುತ್ತವೆ. ಈಚೆಗೆ ಈ ಮಸೀದಿ ಹೊಸದಾಗಿ ಪುನರ್ನಿರ್ಮಾಣಗೊಂಡಿದ್ದರೂ ತಲಂಗರ, ಕೊಲ್ಲಂನ ಮಸೀದಿಗಳೆಲ್ಲ ಇನ್ನೂ ತಮ್ಮ ಹಳೆಯ ವಿನ್ಯಾಸವನ್ನು, ಹೊಳಹನ್ನು ಹಾಗೆಯೇ ಉಳಿಸಿಕೊಂಡಿವೆ. ಅವೆರಡೂ ಮಸೀದಿಗಳಿಗೆ ಭೇಟಿ ಕೊಟ್ಟು ನಾನು ಸ್ವತಃ ಒಳಹೊಕ್ಕು ಕೂಲಂಕುಶವಾಗಿ ನೋಡಿ ಬಂದಿದ್ದೇನೆ. ಈ ಮಸೀದಿಯನ್ನು ಕಟ್ಟಿದ ಮತಾಂತರಿ ಹಿಂದೂ ರಾಜನ ಬಗ್ಗೆ ಇಂಡಿಯಾ ಆಫೀಸ್ ಲೈಬ್ರರಿ, ಲಂಡನ್ನಿನ ದಾಖಲೆಗಳಲ್ಲೂ ಉಲ್ಲೇಖವಿದೆ(reference number: Arabic, 2807, 152-173). ಆ ರಾಜನ ಹೆಸರನ್ನು ಚಕ್ರವರ್ತಿ ಫರ್ಮಸ್ ಎನ್ನಲಾಗಿದೆ. ಚಕ್ರವರ್ತಿ ಶಬ್ದವನ್ನು ಅರೇಬಿಕ್‌ನಲ್ಲಿ ಸರಿಯಾಗಿ ಉಚ್ಛರಿಸಲು ಬಂದಮೇಲೆ ಫರ್ಮಸ್ ಮಾತ್ರ ಯಾಕೆ ಅಪಭೃಂಶಗೊಂಡಿತೋ ನಾಕಾಣೆ! ಈತ ಇಸ್ಲಾಂ ಸ್ವೀಕರಿಸಿ ಶೇಖ್ ತಾಜುದ್ದೀನ ಎಂದು ಹೆಸರಾದನಂತೆ. ಅಬು ಸಯೀದ್ ಅಲ್ ಕಾದ್ರಿ ಎಂಬ ಅರಬ್ ಲೇಖಕ ಈ ಫಾರ್ಮಸ್ ಪೈಗಂಬರರಿಗೆ ಒಂದು ಭರಣಿ ಶುಂಠಿ ಬೆರೆಸಿದ ತರಕಾರಿ ಉಪ್ಪಿನಕಾಯಿಯನ್ನು ಕೊಟ್ಟ ಕಥೆಯನ್ನೂ ಬರೆದಿಟ್ಟಿದ್ದಾನೆ.(ಆ ಕಾಲದಲ್ಲಿ ಕೇರಳದಲ್ಲಿ ತರಕಾರಿ ಉಪ್ಪಿನಕಾಯಿಯನ್ನೂ ಮಾಡುತ್ತಿರಲಿಲ್ಲ, ಶುಂಠಿಯ ಪರಿಚಯ ಮೊದಲೇ ಇರಲಿಲ್ಲ ಎಂಬುದು ಐತಿಹಾಸಿಕ ಸತ್ಯ.). ಇದೇ ರಾಜನನ್ನು ಬ್ರಿಟಿಷ್ ಲೈಬ್ರರಿಯ ಇತಿಹಾಸ ಪುಸ್ತಕ "Qissat Shakruti Firmad" ಆ ರಾಜನ ಹೆಸರನ್ನು ಶಕ್ರುತಿ ಎನ್ನುತ್ತದೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆತ ಭೇಟಿ ಕೊಟ್ಟ ಸಮಯವನ್ನು ೯ನೇ ಶತಮಾನದ ಅಂತ್ಯಕ್ಕೆ ಎಳೆತರುತ್ತದೆ. ಮೆಕ್ಕಾಗೆ ಭೇಟಿ ನೀಡಿದ ಮತ್ತು ಮಸೀದಿಯನ್ನು ನಿರ್ಮಿಸಿದ ಪೆರುಮಾಳರಿಬ್ಬರೂ ಬೇರೆ ಎನ್ನುವ ವಾದವೂ ಇದೆ. ಸಿಕ್ಕುವ ಆಧಾರಗಳೆಲ್ಲ ಘಟನೆ ನಡುದು ಕನಿಷ್ಟ ನಾಲ್ಕೈದು ನೂರು ವರ್ಷಗಳ ನಂತರ ಬರೆಯಲ್ಪಟ್ಟವು. ಕೇರಳೋತ್ಪತ್ತಿ ಮಾರ್ತಾಂಡದಲ್ಲಿ ಈ ಕಥೆ ಇರುವುದಾದರೂ ಅದರ ಕಾಲ ಚರ್ಚಾರ್ಹ. ಪ್ರಾಯಶಃ ಅದು ಕ್ರಿ.ಶ ಸಾವಿರದೈನೂರಕ್ಕಿಂತ ಹಳೆಯದೇನೂ ಅಲ್ಲ. ಲೋಗನ್ನಿನ ಮಲಬಾರ್ ಮ್ಯಾನುವಲ್ಲಿನ ಪ್ರಕಾರ ಮೆಕ್ಕಾಗೆ ಭೇಟಿ ನೀಡಿದವನು ಪೆರುಮಾಳನಲ್ಲ, ಬದಲಾಗಿ ಝಾಮೋರಿನ್ ಅರಸು. ಆತ ಅಬ್ದುಲ್ಲಾ ಸಮೀರಿ ಎಂಬ ಹೆಸರಿನೊಂದಿಗೆ ಮತಾಂತರಗೊಂಡ(ಝಾಮೋರಿನ ಅಪಭೃಂಶಗೊಂಡು ಸಮೀರಿ ಎಂದಾಯ್ತೇ!). ತಲಂಗರದ ಮಸೀದಿಯಲ್ಲಿರುವ ದಾಖಲೆಗಳೂ ಇದನ್ನೇ ಪುಷ್ಟೀಕರಿಸುತ್ತವೆ. ಇನ್ನೊಂದಿಷ್ಟು ಗೊಂದಲಕ್ಕೆ ಕಾರಣವಾಗುವಂತೆ ಯೆಮೆನ್ನಿನ ಝಪರ್‌ನ ಕೇರಳರಾಜನ ಸಮಾಧಿಯ ಕಾಲವೂ ೯ನೇ ಶತಮಾನವೇ ಮತ್ತು ಆತನ ಹೆಸರು ಅಬ್ದುಲ್ ಸಮೀರಿ. ಕಹಾನಿಮೇಂ ಇನ್ನೂ ಒಂದು ಟ್ವಿಸ್ಟ್ ಎಂದರೆ ಎರಡನೇ ಚೇರ ಸಾಮ್ರಾಜ್ಯ ಶುರುವಾಗಿದ್ದು ಕ್ರಿ.ಶ ೮೦೦ ರ ಸುಮಾರಿಗೆ ಕುಲಶೇಖರ ಆಳ್ವಾರ್ ಪೆರುಮಾಳನಿಂದ, ಕೊನೆಗೊಂಡಿದ್ದು ರಾಮ ಕುಲಶೇಖರ ಪೆರುಮಾಳನಿಂದ ೧೧೦೨ರಲ್ಲಿ. ಅಂದರೆ ಮಹಮ್ಮದ್ ಪೈಗಂಬರರ ಕಾಲದಲ್ಲಿ ಚೇರ ರಾಜ್ಯವೇ ಅಸ್ತಿತ್ವದಲ್ಲಿರಲಿಲ್ಲ. ಒಬ್ಬ ರಾಜ ಇಸ್ಲಾಮಿಗೆ ಮತಾಂತರಗೊಂಡಿದ್ದು ನಿಜವೇ ಆಗಿದ್ದರೂ ಅದು ಪೈಗಂಬರರ ಕಾಲಕ್ಕಿಂತ ಕನಿಷ್ಟ ಮೂರು ಶತಮಾನದ ನಂತರವಿರಬಹುದು. ಅದಕ್ಕೆ ಪೂರಕವಾಗಿ ಮಲಯಾಳದ ಒಂದು ಜಾನಪದ ಕಥೆಯೂ ಇದೆ. ಪೆರುಮಾಳ ಎಂಬ ರಾಜ ಹೆಂಡತಿಯ ಮಾತು ಕೇಳಿ ತನ್ನ ಪ್ರಾಮಾಣಿಕ ಸೇನಾಧಿಪತಿಯನ್ನು ಕೊಲ್ಲಿಸುತ್ತಾನೆ. ಈ ಅನ್ಯಾಯದ ವಿರುದ್ಧ ಜನ ದಂಗೆ ಎದ್ದರು. ತಲೆತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ರಾಜನನ್ನು ಅರಬ್ಬಿ ವರ್ತಕರು ರಕ್ಷಿಸಿದರು. ತಮ್ಮ ಧರ್ಮವನ್ನು ಸ್ವೀಕರಿಸಿದರೆ ತಮ್ಮೊಡನೆ ಕರೆದೊಯ್ಯುವುದಾಗಿ ಹೇಳಿದರು. ಧರ್ಮಕ್ಕಿಂತ ಜೀವ ದೊಡ್ಡದಲ್ಲವೇ! ಪೆರುಮಾಳ ಅರಬ್ಬಿನ ವರ್ತಕರೊಡನೆ ಪರಾರಿಯಾದ. ಇದಕ್ಕೆ ಪೂರಕವೆಂಬಂತೆ ’ಪೆಂಚೊಳ್ಳು ಕೆಟ್ಟ ಪೆರುಮಾಳೆ, ಮಕ್ಕತ್ತು ಪೋಯಿ ಟೊಪ್ಪಿ ಎತ್ತಲ’(ಹೆಂಡ್ತಿ ಮಾತು ಕೇಳಿ ಹಾಳಾದ ಪೆರುಮಾಳ, ಮಕ್ಕಾಗೆ ಓಡಿಹೋಗಿ ಟೊಪ್ಪಿ ಹಾಕಿಕೊಂಡ) ಎಂಬೊಂದು ಪ್ರಸಿದ್ಧವಾದ ಗಾದೆಯೇ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ.
       ಕೊನೆಯ ಚೇರ ಪೆರುಮಾಳನ ನಂತರ ಕ್ಯಾಲಿಕಟ್ ಝಾಮೋರಿನ್‌ಗಳ ಆಳ್ವಿಕೆಗೊಳಪಟ್ಟಿತು. ಝೆಮೋರಿನ್‌ಗಳ ಕಾಲದಲ್ಲಿಯೇ ಅರಬ್ಬಿನ ನಡುವಿನ ವ್ಯವಹಾರಗಳು ಮತ್ತು ಕೇರಳದಲ್ಲಿ ಇಸ್ಲಾಮಿನ ಬೆಳವಣಿಗೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು. ಅದಕ್ಕೆ ಸಾಕ್ಷಿಯಾಗಿ ಝಾಮೋರೀನಗಳು ಕಟ್ಟಿಸಿದ ಮುಕ್ಕಂಟಿ ಮಸೀದಿ, ಶಾಹ್ ಬುಂದರ್ ಎನ್ನುವವನನ್ನು ಕ್ಯಾಲಿಕಟ್‌ನ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದು, ಮುಸ್ಲೀಂ ವಸಾಹತುಶಾಹಿಗಳಿಗೆ ಸಿಕ್ಕ ಎಲ್ಲೂ ಇಲ್ಲದ ಗೌರವದ ಸರಮಾಲೆಗಳೇ ಸಾಕ್ಷಿ. ಮಧ್ಯಪ್ರಾಚ್ಯದೊಡಗಿನ ವ್ಯಾಪಾರವನ್ನು ಉತ್ತಮಗೊಳಿಸಲು, ಅಲ್ಲಿಂದ ಬರುವ ಹೊನ್ನಿನಾಸೆಗೆ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಝಾಮೋರಿನ್ ಅರಸನೊಬ್ಬ ಹಣದಾಸೆಗೆ ಬಲಿಬಿದ್ದು ಇಸ್ಲಾಮನ್ನು ಸ್ವೀಕರಿಸಿರಬಹುದು ಎಂದೂ ಕೆಲ ಇತಿಹಾಸಕಾರರು ವಾದಿಸುತ್ತಾರೆ. ಮಲಯದ ಇತಿಹಾಸವನ್ನು ಗಮನಿಸಿದರೆ ಅಲ್ಲಿನ ಶ್ರೀವಿಜಯ ವಂಶದ ಪರಮೇಶ್ವರ ಎಂಬ ತಮಿಳು ಮೂಲದ ರಾಜ ಜಾವಾವನ್ನಾಳುತ್ತಿದ್ದ. ಸಿಂಗಪುರವನ್ನು ಹುಟ್ಟುಹಾಕಿದ ಕೀರ್ತಿಯೂ ಇವನಿಗೇ ಸಲ್ಲಬೇಕು. ತಮಿಳು ಮುಸ್ಲೀಂ ವ್ಯಾಪಾರಿಗಳ ಪ್ರಭಾವಳಿಗೆ ಸಿಲುಕಿ ಇಸ್ಲಾಮಿಗೆ ಮತಾಂತರಗೊಂಡ ಈತನ ಕಥೆ ಮಲೇಷಿಯಾದಲ್ಲಿ ಪ್ರಸಿದ್ಧವಾದುದೇ. ಹಿಂದೂಗಳ ಅದ್ಭುತ ಇತಿಹಾಸ ಹೊಂದಿದ್ದ ಮಲಯ ದ್ವೀಪ ಮೂರ್ಖ ರಾಜನೊಬ್ಬನ ಗಡಿಬಿಡಿಯಿಂದ ದೇಶಕ್ಕೆ ದೇಶವೇ ಮತಾಂತರಗೊಂಡು ತನ್ನ ಬೇರುಗಳಿಂದ ದೂರವಾದದ್ದು ಖೇದಕರವಾದರೂ ಸತ್ಯ. ಇಲ್ಲಿಯೂ ಹಾಗೇನಾದರೂ ನಡೆದಿತ್ತೇ?
       ಕಾಲದ ಕುರಿತು ಅಸ್ಪಷ್ಟತೆಗಳಿದ್ದರೂ, ರಾಜನ ಹೆಸರಿನ ಬಗ್ಗೆಯೇ ವಿವಾದವಿದ್ದರೂ ಕೇರಳದ ಮಲಬಾರನ್ನಾಳುತ್ತಿದ್ದವನೊಬ್ಬ ಮಕ್ಕಾಕ್ಕೆ ತೆರಳಿ, ಇಸ್ಲಾಮಿಗೆ ಮತಾಂತರವಾಗಿ, ಯಮನ್ನಿನಲ್ಲಿ ಸಮಾಧಿಗೊಂಡು, ಪರೋಕ್ಷವಾಗಿ ಕೇರಳದಲ್ಲಿ ಇಸ್ಲಾಮ್ ಹರಡಲು ಮತ್ತು ಭಾರತದ ಅತಿ ಹಳೆಯದೆನ್ನಲಾದ ಮಸೀದಿಯೊಂದು ಸ್ಥಾಪಿತಗೊಳ್ಳಲು ಕಾರಣನಾಗಿದ್ದನೆಂಬುದು ಐತಿಹಾಸಿಕ ಸತ್ಯ. ಇರುವ ಕಥೆ ಒಂದು ವೇಳೆ ನಿಜವೇ ಆಗಿದ್ದರೆ ಅರಬ್ಬಿನ ಬಹುಭಾಗಕ್ಕಿಂತ ಮೊದಲೇ ಇಲ್ಲಿನ ನೆಲದಲ್ಲಿ ಇಸ್ಲಾಂ ನೆಲೆನಿಂತು ಪಸರಿಸಿತ್ತೆಂಬುದು ಅಲ್ಲಿನ ಮುಸ್ಲೀಮರಿಗೆ ಹರ್ಷದ ಸಂಗತಿಯೇ. ಪೆರುಮಾಳನಿಂದ ಮತ್ತು ಮುಂದೆ ಝಾಮೋರಿನ್ ಅರಸರ ಕಾಲದಲ್ಲಿ ಅರಬ್ಬೀ ವರ್ತಕರಿಗೆ ಸಿಕ್ಕ ಸನ್ಮಾನಗಳಿಂದ ಕೇರಳ ಇಸ್ಲಾಂ ಹುಲುಸಾಗಿ ಬೆಳೆಯಲು ಹದಗೊಂಡ ಭೂಮಿಯಾಯಿತು. ಮುಂದೆ ಟಿಪ್ಪೂವಿನ ಆಕ್ರಮಣಕ್ಕೆ ಸಿಕ್ಕು ಮಲಬಾರ್ ಅರ್ಧಕ್ಕರ್ಧ ಬಲವಂತದ ಮತಾಂತರಕ್ಕೊಳಪಡುವುದರೊಂದಿಗೆ ಇಂದು ಕೇರಳದಲ್ಲಿ ಮೂಲನಿವಾಸಿಗಳೇ  ಅಲ್ಪಸಂಖ್ಯಾತರಾಗುವ ಹೊಸ್ತಿಲಲ್ಲಿದ್ದಾರೆ ಎಂಬುದು ಬೇರೆ ವಿಚಾರ ಬಿಡಿ.