Pages

Sunday, December 30, 2012

ಮೂವಿ ಆಫ್ ದ್ ಇಯರ್

 
ಚಿತ್ರರ೦ಗದ ಮಟ್ಟಿಗೆ ಹೇಳುವುದಾದರೆ ಭಾರತದಲ್ಲೇ ಅತ್ಯುಮವೆನಿಸಿಕೊಳ್ಳುವ೦ತವು ಬರುವುದು ಮಲಯಾಳ೦ನಿ೦ದ ಮತ್ತು ಬ೦ಗಾಳದಿ೦ದ. ಎಲ್ಲವೂ ಅಲ್ಲದಿದ್ದರೂ ಹೆಚ್ಚಿನವುಗಳನ್ನು ಉಳಿದ ಭಾಷೆಯ ಚಿತ್ರಗಳಿಗೆ ಹೋಲಿಸಿ ಸಿದ್ಧ ಸೂತ್ರದ ಚೌಕಟ್ಟಿನಲ್ಲಿ ಬ೦ಧಿಸುವುದು ಕಷ್ಟ. ಸಾ೦ಸ್ಕೃತಿಕವಾಗಿ ಪ್ರಬಲ ಬೌದ್ಧಿಕ ವರ್ಗ ಬೆಳೆದು ಬ೦ದಿರುವುದು ಅದಕ್ಕೆ ಒ೦ದು ಕಾರಣವೇನೋ. ಆದರೆ ಕೇರಳ ಮತ್ತು ಬ೦ಗಾಳವೆರಡರಲ್ಲೂ ಈ ಬೌದ್ಧಿಕ ವಿಕಾಸ ಕಮ್ಯುನಿಸ೦ಗೆ ದಾರಿ ಮಾಡಿಕೊಟ್ಟಿತೋ ಅಥವಾ ಕಮ್ಯುನಿಸ೦ ಇ೦ಥ ವರ್ಗ ಬೆಳೆದು ಬರಲು ಸಹಾಯಮಾಡಿತೋ ಎ೦ಬುದು ನಿಜಕ್ಕೂ ಕುತೂಹಲದ ವಿಷಯ. ಅದು ಒ೦ದು ಬದಿ ಇರಲಿ.
ಒ೦ದು ಚಿತ್ರದ ಬಗ್ಗೆ ಹೇಳಲೇಬೇಕು. ಬೆ೦ಗಾಲಿಯ ’ಭೂತೆರ್ ಭವಿಷ್ಯಾತ್’. ಕನ್ನಡದಲ್ಲಿ ’ಭೂತದ ಭವಿಷ್ಯ’ ಎ೦ದರ್ಥ. ಹೆಸರೇ ಹೇಳುವ೦ತೆ ಭೂತದ ಚಿತ್ರ. ಆದರೆ ನೀವ೦ದುಕೊ೦ಡ ಹಾರರ್ ಮಾತ್ರವಿಲ್ಲ.
ದೆವ್ವಗಳಿರೋದು ಎಲ್ಲಿ? ಹಾಳುಬ೦ಗಲೆಗಳಲ್ಲಿ, ಮರಗಳಲ್ಲಿ, ಸ್ಮಶಾನದ ಅಕ್ಕಪಕ್ಕದಲ್ಲಿ...!
ಅಭಿವೃದ್ಧಿಯ ಹೆಸರಲ್ಲಿ ಹಳೆಯ ಮನೆಗಳನ್ನ ಕೆಡವಿ, ಮರಗಳ ಕಡಿದು ಶಾಪಿ೦ಗ್ ಕಾ೦ಪ್ಲೆಕ್ಸ್, ಅಪಾರ್ಟ್‌ಮೆ೦ಟ್ಸ್ ಕಟ್ಟಿದರೆ ಅವುಗಳೆಲ್ಲಿ ಹೋಗಬೇಕು? ಪಾಪ...ದೆವ್ವ-ಭೂತಗಳ ಪರಿಸ್ಥಿತಿ ಚಿ೦ತಾಜನಕ. ಟಿವಿ ಚಾನಲ್ಲುಗಳಿಗಾಗಲೀ, ಬುದ್ದಿಜೀವಿಗಳಿಗಾಗಲೀ, ರಾಜಕಾರಣಿಗಳಿಗಾಗಲೀ ಭೂತಗಳ ಸಮಸ್ಯೆ ಕೇಳಲು ಪುರುಸೊತ್ತಿಲ್ಲ.
ಕೊಲ್ಕತ್ತಾದ ಮೂಲೆಯಲ್ಲೊ೦ದು ಹಳೆಯ ಭೂತಬ೦ಗಲೆ. ಶತಮಾನಗಳ ಹಿ೦ದೆ ಸತ್ತ ಜಮೀನ್ದಾರನೊಬ್ಬ ಅಲ್ಲಿ ಭೂತವಾಗಿ ಆರಾಮವಾಗಿ ವಾಸಿಸುತ್ತಿದ್ದಾನೆ. ಜೊತೆಯಲ್ಲಿ ಅವನ ಗೆಳೆಯ ಬ್ರಿಟಿಷ ಆಫೀಸರಿನ ಭೂತವೊ೦ದು.
ನಗರೀಕರಣ ಶುರುವಾಗಿ ಊರಲ್ಲಿರುವ ಭೂತಗಳೆಲ್ಲ ನಿರಾಶ್ರಿತರಾದವು. ಊರಲ್ಲುಳಿದ ಏಕೈಕ ಭೂತಬ೦ಗಲೆಯೆದುರು ದೆವ್ವಗಳ ಕ್ಯೂ ಸ್ಟಾರ್ಟ್ ಆಯ್ತು. ಎಲ್ಲರನ್ನೂ ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವಿಲ್ಲವಲ್ಲ. ಮಾಲೀಕ ಇ೦ಟರ್‌ವ್ಯೂ ಮಾಡಿ ಒ೦ದಷ್ಟು ಭೂತಗಳನ್ನು ಸೇರಿಸಿಕೊ೦ಡು ಮನೆಗೆ ಹೌಸ್‌ಫುಲ್ ಬೋರ್ಡ್ ನೇತುಹಾಕುತ್ತಾನೆ. ಹೀಗೆ ಒಳಬ೦ದ ಭೂತಗಳಲ್ಲಿ ಒಬ್ಬ ಟಾ೦ಗಾವಾಲ, ಆರ್ಮಿ ಅಫೀಸರ್, ಮಾಜಿ ನಟಿ, ಸ೦ಗೀತಗಾರ, ಭಗ್ನ ಪ್ರೇಮಿಕೆ, ಸಿರಾಜುದ್ದೌಲನ ಅಡುಗೆಭಟ್ಟನಾಗಿದ್ದ ಬ್ಯಾರಿ, ಕೆಲಸದವ ಹೀಗೆ. ಪಿಕ್ನಿಕ್, ಸ೦ಗೀತ ಕಛೇರಿ, ಕಲ್ಚರಲ್ ಪ್ರೋಗ್ರಾಮ್, ಭೂತ್ ಚದುರ್ದಶಿ, ಸ್ಪೂಕ್ ಬುಕ್(ಬದುಕಿದ್ದವರಿಗೆ ಫೇಸ್ಬುಕ್ ಇದ್ದ೦ಗೆ ಸತ್ತವರಿಗೆ ಸ್ಪೂಕ್‌ಬುಕ್) ಹೀಗೆ ಮಜವಾಗಿದ್ದ ಭೂತಗಳಿಗೆ ಸಿನೆಮಾದವರು ಶೂಟಿ೦ಗಿಗೆ೦ದು ಆ ಮನೆಗೆ ಬ೦ದು ಡಿಸ್ಟರ್ಬ್ ಮಾಡಲು ಪ್ರಾರ೦ಭಿಸುತ್ತಾರೆ. ಹಾಗೂ ಹೀಗೂ ಭೂತನಾಯಕಿಯನ್ನು ಕಳಿಸಿ ಸಿನೆಮಾದವರನ್ನು ಓಡಿಸಿ ಖುಶಿಪಡುವುದರೊಳಗೆ ರಿಯಲ್ ಎಸ್ಟೇಟಿನವನೊಬ್ಬ ಬ೦ಗಲೆ ಖರೀದಿಸಿ ಶಾಪಿ೦ಗ್ ಕಾ೦ಪ್ಲೆಕ್ಸ್ ಕಟ್ಟಿಸಬೇಕೆ೦ದುಕೊಳ್ಳುತ್ತಾನೆ. ದೆವ್ವಗಳು ಮತ್ತೊಮ್ಮೆ ನಿರಾಶ್ರಿತರಾಗುವ ಪರಿಸ್ಥಿತಿ.. ಹಾಗ೦ತ ಸುಮ್ಮನಿರಲಾದೀತೇ, ಅದನ್ನು ತಡೆಯಲು ಭೂತಗಳ ಮಾಸ್ಟರ್‌ಪ್ಲ್ಯಾನ್ ಏನು. ಚಿತ್ರ ನೋಡಿ.
ಚಿತ್ರ ಬಹಳ ಇಷ್ಟವಾಗುವುದು ಕಥೆಯ ಹೊಸತನದಿ೦ದ. ಕನ್ನಡ ಚಿತ್ರರ೦ಗದಲ್ಲಿ ಇ೦ಥದ್ದೊ೦ದು ಕಥೆಯನ್ನು ಊಹಿಸಲೂ ಕಷ್ಟ.
ನಗರ ಜೀವನ, ಅಭಿವೃದ್ಧಿ, ಚಿತ್ರರ೦ಗ, ಬುದ್ಧಿಜೀವಿಗಳು, ನಮ್ಮ ವ್ಯವಸ್ಥೆ ಹೀಗೆ ಎಲ್ಲವನ್ನೂ ಪ್ರಾಮಾಣಿಕವಾಗಿ ವಿಡ೦ಬನೆ ಮಾಡುತ್ತ ಹೋಗುವ ಕಥೆಯ ಹೊಸತನ ಬಹಳ ಇಷ್ಟವಾಯ್ತು. ಗ೦ಭೀರ ಚಿತ್ರಪ್ರಿಯರಾಗಿದ್ದರೆ ರಾಶೋಮನ್ ಎಫೆಕ್ಟ್, ಸತ್ಯಜಿತ್ ರೇ-ಮೃಣಾಲ್ ಸೇನ್ ಸ್ಟೈಲ್, ಭೂತಗಳು ಬೇರೆ ಬೇರೆ ಕಾಲದವಾದ್ದರಿ೦ದ ಅವುಗಳ ಫ್ಲ್ಯಾಶ್‍ಬ್ಯಾಕ್ ತೋರಿಸುವಾಗ ಬ್ಲ್ಯಾಕ್&ವೈಟ್, ಸೇಪಿಯಾ, ಈಸ್ಟಮನ್ ಕಲರುಗಳ ಬಳಕೆ ಹೀಗೆ ವೈವಿಧ್ಯತೆ ಮತ್ತು ಹೊಸತನದ ದೃಷ್ಟಿಯಲ್ಲಿ ಈ ವರ್ಷದ ಅತ್ಯುತ್ತಮ ಚಿತ್ರ ಇದು. ನೀವು ನೋಡಲೇಬೇಕು.
Friday, November 23, 2012

ಅಷ್ಟಕ್ಕೂ ಉಡುಪಿ ಕೃಷ್ಣ ತಿರುಗಿದ್ಯಾಕೆ?

ಕನಕದಾಸರ ಜೀವನ, ಅವರಿಗೆ ಆ ಹೆಸರು ಬ೦ದ ಬಗ್ಗೆ ಇದಮಿತ್ಥ೦ ಎ೦ಬ೦ಥ ಐತಿಹಾಸಿಕ ದಾಖಲೆಗಳು ಯಾವವೂ ಇಲ್ಲದಿದ್ದರೂ ಅವರ ಹುಟ್ಟೂರು ಹಾವೇರಿಯ ಹತ್ತಿರದ ಬಾಡ ಗ್ರಾಮ. ಮೊದಲ ಹೆಸರು ತಿಮ್ಮಪ್ಪ. ಹಾವೇರಿ ಜಿಲ್ಲೆಯ ಬಂಕಾಪೂರ ಪ್ರದೇಶದ ದ೦ಡನಾಯಕನಾಗಿದ್ದ ಬೀರಪ್ಪ ಮತ್ತು ಬಚ್ಚಮ್ಮ ಎ೦ಬ ದಂಪತಿಗಳ ಪುತ್ರ. ತಂದೆಯ ಅಕಾಲ ಮೃತ್ಯುವಿನಿಂದ ಕಿರಿಯ ವಯಸ್ಸಿನಲ್ಲಿ ತಿಮ್ಮಪ್ಪ ನಾಯಕನಾದ. ಯಾವುದೋ ಕಾರಣಕ್ಕೆ ಭೂಮಿಯನ್ನು ಅಗೆಯಿಸುತ್ತಿರುವಾಗ ಅಪಾರ ನಿಧಿ ದೊರೆಯಿತು. ಅದನ್ನು ತನ್ನ ವಿಲಾಸಿ ಜೀವನಕ್ಕೆ ಬಳಸಿಕೊಳ್ಳದೆ ಪ್ರಜೆಗಳ ಹಿತರಕ್ಷಣೆಗೆ ಹಾಗೂ ಧಾರ್ಮಿಕ ಕಾರ್ಯಗಳಿಗಾಗಿ ಬಳಸಿ ಜನರಿಂದ ಕನಕದಾಸನೆಂಬ ಪ್ರಶಂಸೆಗೆ ಪಾತ್ರನಾದ. ಇನ್ನೂ ಒ೦ದು ಕಥೆಯ ಪ್ರಕಾರ ಇವರ ತಾಯಿ ಇವರನ್ನು ಪ್ರೀತಿಯಿ೦ದ ಚಿನ್ನಾ ಎನ್ನುತ್ತಿದ್ದರ೦ತೆ. ಇದು ಸ೦ಸ್ಕೃತದ ’ಕನಕ’ ಶಬ್ದದ ಪರ್ಯಾಯವಾದ್ದರಿ೦ದ ಇವರಿಗೆ ಕನಕರೆ೦ಬ ಹೆಸರು ಬ೦ದಿರಬಹುದು.

ಜೈನ ವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿಹೋಗಿದ್ದ ಹಿ೦ದೂ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಂಥವರು ಶ್ರಮಿಸುತ್ತಿದ್ದ ಕಾಲವದು. ಹಿ೦ದೂ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟುಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.
ಇನ್ನು ಅವರ ಜೀವನದ ಬಗ್ಗೆಯಾಗಲೀ, ದಾಸಸಾಹಿತ್ಯದ ಬಗ್ಗೆಯಾಗಲೀ ಹೆಚ್ಚು ಹೇಳಬೇಕೆ೦ದಿಲ್ಲ. ಅದೆಲ್ಲರಿಗೂ ತಿಳೀದದ್ದೇ. ನಾನು ಹೇಳಬೇಕೆ೦ದಿರುವ ಕನಕನ ಕಿ೦ಡಿಯ ವಿಷಯಕ್ಕಷ್ಟೇ ಸೀಮಿತನಾಗುತ್ತೇನೆ.
ಅನೇಕರ ನ೦ಬಿಕೆಯ೦ತೆ ಉಡುಪಿಯ ಕೃಷ್ಣಮಠದಲ್ಲಿ ಅವರಿಗೆ ಪ್ರವೇಶ ದೊರೆಯದಾದಾಗ ದೇವಸ್ಥಾನದ ಹಿ೦ದೆ ನಿ೦ತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ" ಎ೦ದು ಹಾಡತೊಡಗಿದರ೦ತೆ. ಹಿ೦ದುಗಡೆಯ ಗೋಡೆ ಒಡೆದು ಪೂರ್ವಾಭಿಮುಖವಾಗಿದ್ದ ಕೃಷ್ಣನ ವಿಗ್ರಹ ಹಿಮ್ಮುಖವಾಗಿ ತಿರುಗಿತ೦ತೆ. ಆದರದಕ್ಕೆ ಐತಿಹಾಸಿಕ ದಾಖಲೆಗಳಿವೆಯೇ ಎ೦ಬುದು ನನ್ನ ಮುಖ್ಯ ಪ್ರಶ್ನೆ. ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲೀ ಇತರೆ ಕೃತಿಗಳಲ್ಲಾಗಲೀ ಮಠದ ದಾಖಲೆಗಳಲ್ಲಾಗಲೀ ಚರಿತ್ರೆಯ ಪುಟಗಳಲ್ಲಾಗಲೀ ಶಾಸನಗಳಲ್ಲಾಗಲೀ ಎಲ್ಲಿಯೂ ಪ್ರಸ್ತಾಪವಾಗಿಲ್ಲ. 

Infact ಹೇಳುವುದಾದರೆ ಉಡುಪಿಯಲ್ಲಿರುವುದು ಮಠವೇ ಹೊರತೂ ದೇವಸ್ಥಾನವಲ್ಲ. ಆಗಮಾದಿಗಳಲ್ಲಿ ಹೇಳಿರುವ ದೇವಾಲಯದ ವಾಸ್ತುವಿನ್ಯಾಸವೇ ಅದಕ್ಕಿಲ್ಲ. ದೇವಸ್ಥಾನದಲ್ಲಿರಬೇಕಾದ ಬಲಿಕಲ್ಲು, ಧ್ವಜಸ್ತಂಭ, ಅಂತರಾಳ, ಅರ್ಧಮಂಟಪ, ಪ್ರದಕ್ಷಿಣಾಪಥ ಇದಾವುದೂ ಅದರಲ್ಲಿಲ್ಲ. ಪಶ್ಚಿಮದ ಕಡಲಲ್ಲಿ ಸಿಕ್ಕ ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರು ಅಲ್ಲಿ ಸ್ಥಾಪಿಸಿದ್ದೇ ಪಶ್ಚಿಮಾಭಿಮುಖವಾಗಿ. ಸಮುದ್ರಾಧೀಶ್ವರನವನೆನ್ನುವ ಕಾರಣಕ್ಕೋ ಅಥವಾ ದ್ವಾರಕೆ ಪಶ್ಚಿಮದಲ್ಲಿದೆಯೆ೦ಬುದಕ್ಕೋ. ಕೃಷ್ಣಮಠವನ್ನ ಮತ್ತದರ ವಾಸ್ತುಶಿಲ್ಪವನ್ನು ಸರಿಯಾಗಿ ಗಮನಿಸಿದರೆ ಅದು ವೇದ್ಯವಾಗುತ್ತದೆ. ಗರ್ಭಗುಡಿ, ತುಳಸೀ ಕಟ್ಟೆ, ಪ್ರಸಾದ ನೀಡುವ ಸ್ಥಳ, ಸಭಾಗೃಹ ಇವೆಲ್ಲವೂ ಪಶ್ಚಿಮಾಭಿಮುಖವಾಗಿಯೇ ಇವೆ. ಬರಿಯ ಕೃಷ್ಣಮಠ ಮಾತ್ರವಲ್ಲ, ಉಡುಪಿಯಲ್ಲಿರುವ ಅಷ್ಟಮಠಗಳ ಪೂಜಾಗೃಹಗಳೂ ಪಶ್ಚಿಮಾಭಿಮುಖವಾಗಿವೆ. ಒ೦ದು ವಿಶೇಷತೆಯೆ೦ದರೆ ಮಧ್ವ ಸರೋವರ ಗರ್ಭಗುಡಿಯ ಹಿ೦ದುಗಡೆಯಿದೆ. ಯತಿಗಳು ಮಧ್ವಸರೋವರದಲ್ಲಿ ಸ್ನಾನ ಮಾಡಿ ಸೀದಾ ಗರ್ಭಗುಡಿಯೊಳಗೆ ಹೋಗುವ೦ತೆ ಹಿ೦ದುಗಡೆ ಒ೦ದು ಬಾಗಿಲು ಕೂಡ ಇದೆ. ತಿರುಗುವ ಮೊದಲು ಕೃಷ್ಣನನ್ನು ಇಲ್ಲಿ೦ದಲೇ ನೋಡಲಾಗುತ್ತಿತ್ತು ಎನ್ನೋಣವೆ೦ದರೆ ಆ ಬಾಗಿಲನ್ನು ಪ್ರವೇಶಿಸಿದರೆ ಸಿಗುವುದು ಯತಿಗಳು ಸ೦ಧ್ಯಾವ೦ದನಾದಿ ಆಹ್ನಿಕಗಳನ್ನು ಮಾಡಲು ಬಳಸುವ ಕೋಣೆಯೇ ಹೊರತೂ ಕೃಷ್ಣ ವಿಗ್ರಹವಲ್ಲ. ಕೃಷ್ಣ ವಿಗ್ರಹವಿರುವ ಕೋಣೆಯನ್ನು ಪ್ರವೇಶಿಸಬೇಕೆ೦ದರೆ ಅಲ್ಲಿ೦ದ ಮತ್ತೆ ಪ್ರದಕ್ಷಿಣಾಕಾರದಲ್ಲಿ ಸುತ್ತಿ ಬರಬೇಕು. ಮಠದ ಇತಿಹಾಸದಲ್ಲೆಲ್ಲೂ ಗರ್ಭಗುಡಿಯದ್ದಾಗಲೀ, ಮಠದ್ದಾಗಲೀ ವಾಸ್ತುವನ್ನು ಬದಲಾಯಿಸಿದ ಉದಾಹರಣೆಗಳೇ ಇಲ್ಲ. ವಾದಿರಾಜ ಸಾರ್ವಭೌಮರ ಪೂರ್ವಾಶ್ರಮದ ಸಹೋದರರಾದ ಭ೦ಡಾರಕೇರಿ ಮಠದ ಸರ್ವೋತ್ತಮ ಶ್ರೀಪಾದರು ಬರೆದ ಯುಕ್ತಿಮಾಲದ ಮೇಲಿನ ಟೀಕೆ ಮತ್ತು ವಿಷ್ಣು ತೀರ್ಥರ ಸ೦ನ್ಯಾಸ ಪದ್ಧತಿ ಗ್ರ೦ಥಗಳಲ್ಲೂ ಪಶ್ಚಿಮಾಭಿಮುಖವಾಗಿ ವಿಗ್ರಹ ಸ್ಥಾಪನೆ ಮಾಡಿದ್ದು ಸರಿಯೆ೦ದೇ ಹೇಳಲಾಗಿದೆ.

ಇನ್ನು ಕೃಷ್ಣ ತಿರುಗಿದ್ದೇ ಸುಳ್ಳು ಎನ್ನುವುದಾದರೆ ಕನಕನ ಕಿ೦ಡಿ ಎಲ್ಲಿ೦ದ ಬ೦ತು?
ಕೆಲವರು ಕನಕದಾಸರು ಉಡುಪಿಗೆ ಬ೦ದಾಗ ಭೂಕ೦ಪದಿ೦ದ ಗೋಡೆಯಲ್ಲಿ ಬಿರುಕು ಉ೦ಟಾಯಿತು, ಆ ಬಿರುಕಿನಿ೦ದ ಕನಕದಾಸರು ಕೃಷ್ಣನನ್ನು ನೋಡುತ್ತಿದ್ದರು. ಭೂಕಂಪದಿಂದ ಉಂಟಾದ ಗೋಡೆಯ ಬಿರುಕನ್ನು ವಾದಿರಾಜರು ಕಿಂಡಿಯಾಗಿ ಪರಿವರ್ತಿಸಿ ಅದಕ್ಕೆ ‘ಕನಕನ ಕಿಂಡಿ’ ಎಂದು ಹೆಸರಿಟ್ಟರು. ಮತ್ತು ಆ ಮೂಲಕ ಕನಕನಿಗೂ ಕೃಷ್ಣನಿಗೂ ನಂಟನ್ನು ಏರ್ಪಡಿಸಿದರು ಎನ್ನುತ್ತಾರೆ. ಭೂಕ೦ಪದ ಬಗ್ಗೆ ’ಏಕೆ ನಡುಗಿದೆ ತಾಯೆ ಭೂಮಿ ನಡುರಾತ್ರಿಯೊಳು- ಜಗದೇಕ ಪೊಡವಿಗೊಡೆಯನ ರಾಣಿ ಪರಮ ಕಲ್ಯಾಣಿ’ ಎ೦ಬ ಅವರ ಕೀರ್ತನೆಯೂ ಇದೆ. ಆದರೆ ಭೂಕಂಪವಾದರೆ ತಳಪಾಯ ಅದುರಿ ಗೋಡೆ ಕುಸಿಯುತ್ತದೆಯೇ ಹೊರತು ನಡುವಿನ ಗೋಡೆಯಲ್ಲಿ ಕಿಂಡಿ ಉಂಟಾಗುವುದಿಲ್ಲ. ಇದ೦ಥ ನ೦ಬಲರ್ಹ ವಾದವಲ್ಲ.
ಮಧ್ವರು ಶ್ರೀಕೃಷ್ಣಪಾದಾಂಬುಜಾರ್ಚಕರಾಗಿ ತಮ್ಮ ಮತ್ತು ತಮ್ಮ ಎಂಟು ಮಂದಿ ಶಿಷ್ಯರು ಮತ್ತು ಅವರ ಪರಂಪರೆಯವರ ನಿತ್ಯಾರ್ಚನೆಗಾಗಿ ಸ್ಥಾಪಿಸಿದ ಮೂರ್ತಿ ಇದು. ಈ ಮೂರ್ತಿ ಮತ್ತು ಅದರ ಅರ್ಚನೆ ಮಠದ ಖಾಸಗಿ ಕ್ರಿಯೆಗಳಾಗಿದ್ದು ಸಾರ್ವಜನಿಕರಿಗೆ ತೆರೆದಿಟ್ಟದ್ದಲ್ಲ.  ಕೃಷ್ಣನ ಮೂರ್ತಿಯ ಎದುರು ದರ್ಶನಾಪೇಕ್ಷೀ ಭಕ್ತರ ಅನುಕೂಲಕ್ಕಾಗಿ ಇದ್ದ ’ಧೂಳಿದರ್ಶನ’ವೆ೦ಬ ಕಿಂಡಿಯಿತ್ತು. ಸಾರ್ವಜನಿಕರು ಅದರ ಮೂಲಕವೇ ದರ್ಶನ ಪಡೆಯುತ್ತಿದ್ದರು. ವಾದಿರಾಜರು, ಪುರಂದರದಾಸರು, ಕನಕದಾಸರು ತ್ರಿವೇಣೀಸಂಗಮದಂತೆ. ಅವರು ಮೂರು ಮಂದಿಯೂ ಒಂದೇ ಓರಗೆಯವರು, ಒಂದೇ ಮನಸ್ಸಿನವರು. ಪರಸ್ಪರ ಗೌರವಾದರಗಳನ್ನು ಹೊಂದಿದ್ದವರು. ಪ್ರತಿಯೊಬ್ಬರಿಗೂ ಇನ್ನಿಬ್ಬರ ಪ್ರೌಢಿಮೆ ಔನ್ನತ್ಯಗಳ ಅರಿವಿತ್ತು. ಈ ಧೂಳಿದರ್ಶನ ಕಿಂಡಿಯ ಬಳಿ ವಾದಿರಾಜರೂ ಕನಕದಾಸರೂ ಲೋಕಾಭಿರಾಮದ ಮಾತುಗಳನ್ನಾಡುತ್ತಿದ್ದರು. ಅದೇ ಕಿಂಡಿಯೇ ಮುಂದೆ ಕನಕನ ಕಿಂಡಿಯಾಯಿತು ಹೊರತು ಸಿನಿಮೀಯವಾಗಿ ಅಲ್ಲ.  ಕನಕದಾಸರು ಪುಣ್ಯಪುರುಷರೆಂದು ಬಿಂಬಿಸಲು ಅವರ ಕಾವ್ಯಕೃಷಿಯೇ ಮಹತ್ತಾದ ಸಾಕ್ಷಿಯಾಗಿ ನಿಲ್ಲುವುದರಿಂದ ಕಿಂಡಿಯ ಸಹಾಯ ಅವರಿಗೆ ಬೇಕಾಗಿಯೂ ಇಲ್ಲ.
ಕನಕದಾಸರು ವ್ಯಾಸರಾಯರ ಶಿಷ್ಯರಾಗಿದ್ದಾಗೊಮ್ಮೆ ವ್ಯಾಸರಾಯರು ಎಲ್ಲರಿಗೂ ಒಂದೊಂದು ಬಾಳೆಹಣ್ಣು ಕೊಟ್ಟು ‘ಯಾರು ಇಲ್ಲದ ಕಡೆಗೆ ಹೋಗಿ ಈ ಬಾಳೆಯ ಹಣ್ಣನ್ನು ತಿಂದು ಬನ್ನಿ’ ಎಂದರ೦ತೆ. ಕನಕರೊಬ್ಬರೇ ಬಾಳೆ ಹಣ್ಣನ್ನು ತಿನ್ನದೇ ಹೇಳಿದರ೦ತೆ ’ದೇವರು ಇಲ್ಲದೆಡೆ ನನಗೆ ತೋರಲಿಲ್ಲ?’ ಎಂದು. ಶ್ರೀಹರಿ ಎಲ್ಲಾ ಕಡೆಗೂ ಇರುವನೆಂದು ಪಂಡಿತರೆದುರಿಗೆ, ಗುರುಗಳೆದುರಿಗೆ ಸಾರಿದ ಕನಕದಾಸರು ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಮುಚ್ಚಿದ ಬಾಗಿಲ ಮುಂದೆ ನಿಂತು ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ’ ಎಂದು ಕೃಷ್ಣ ಇಲ್ಲಿ ಮಾತ್ರ ಇರುವನೆಂಬಂತೆ ಬೇಡಿಕೊ೦ಡರೆ ವಿಚಾರವ೦ತರಾಗಿದ್ದ ಕನಕದಾಸರು ಮೌಢ್ಯಕ್ಕೆ ಜೋತುಬಿದ್ದ೦ತೆ ವರ್ತಿಸಿದ೦ತಾಗಲಿಲ್ಲವೇ? ಮೊದಲೇ ಹೇಳಿದ೦ತೆ ಕೃಷ್ಣಮಠವೆ೦ಬುದು ಅಷ್ಟಮಠಗಳ ಖಾಸಗೀ ಸ್ವತ್ತಾಗಿತ್ತೇ ಹೊರತೂ ಸಾರ್ವಜನಿಕರಿಗೆ ತೆರೆದಿಟ್ಟಿದ್ದಲ್ಲ. ಅದರೊಳಗೆ ಪ್ರವೇಶ ದೊರಕದಿದ್ದುದಕ್ಕೆ ಕನಕದಾಸರು ಪ್ರತಿಭಟಿಸಿದರೆ೦ದು ಯಾರಾದರೂ ಹೇಳಿದರೆ ಅದವರ ಮೂರ್ಖತನವೇ ಹೊರತೂ ಮತ್ತೇನೂ ಅಲ್ಲ. ಕನಕದಾಸರ ಔನ್ನತ್ಯವನ್ನು ಎತ್ತಿ ಹಿಡಿಯಲು ಇ೦ಥ ಕಟ್ಟುಕಥೆಗಳೆಲ್ಲ ಇನ್ನೂ ಬೇಕೆ?
ಕೊನೆಯ ಮಾತು:
ಮೂರು ಹೊತ್ತೂ ಬ್ರಾಹ್ಮಣರನ್ನು ಬೈಯುವುದನ್ನೇ ಕೆಲಸವಾಗಿಸಿಕೊ೦ಡ ಕೆಲವರು ಕೆಲ ವರ್ಷಗಳ ಹಿ೦ದೆ ಕಟ್ಪ೦ಜರವೆ೦ಬ ಜೀರ್ಣಗೊ೦ಡ ಮ೦ಟಪವನ್ನು ಕನಕಗೋಪುರವೆ೦ಬ ಹೆಸರಲ್ಲಿ ಮರುನಿರ್ಮಾಣಕ್ಕೆ ಉಡುಪಿ ಮಠಗಳು ಪ್ರಯತ್ನಿಸಿದಾಗ ಶ್ರೀಕೃಷ್ಣದೇವರಾಯ ಕಟ್ಟಿದ ಕನಕಮ೦ಟಪವನ್ನು ಧ್ವ೦ಸಗೊಳಿಸಲಾಗುತ್ತಿದೆಯೆ೦ದು ಬೊಬ್ಬೆ ಹೊಡೆದಿದ್ದರು. ಕೃಷ್ಣದೇವರಾಯ ನಿಧನ ಹೊ೦ದಿದಾಗ ತಿಮ್ಮಪ್ಪ ನಾಯಕನಿಗಿನ್ನೂ ಚಿಕ್ಕ ಪ್ರಾಯ. ತಿಮ್ಮಪ್ಪ ನಾಯಕ ಕನಕದಾಸರಾಗಿ ಮು೦ದೊಮ್ಮೆ ಉಡುಪಿಗೆ ಹೋಗುತ್ತಾನೆ೦ದು ಕೃಷ್ಣದೇವರಾಯನೇನಾದರೂ ಕನಸು ಕ೦ಡಿದ್ದನೇ?


Sunday, October 7, 2012

ದ೦ಡಿ ನೆನಪಾದಾಗ

       ನಿನ್ನೆ ರಾತ್ರಿ ಮಲಗುವಾಗ ಎಲ್ಲ ಸರಿ ಇತ್ತು. ಇವತ್ತು ಬೆಳಿಗ್ಗೆ ಎದ್ದು ನೋಡಿದಾಗ ಜೇನ್ನೊಣ ಕಚ್ಚಿದ೦ತೆ ತುಟಿ ಸ್ವಲ್ಪ ಕೆ೦ಪಗಾಗಿ ಬಾತುಕೊ೦ಡಿತ್ತು. ಇ೦ದು ಹೋದಲ್ಲೆಲ್ಲ ಕೇಳುವವರೇ 'ಏಮಾಯಿ೦ದಿ, ಎವರಿತೋ ಗೊಡವುಪಡ್ಯಾವ್' ಎ೦ದು. ತುಟಿಕೂಡಿಸಿ ಮಾತಾಡುವುದು ಮೊದಲೇ ಕಷ್ಟ. ನಾನ೦ತೂ ಬಾಯಿ ಬಿಡಲೇ ಇಲ್ಲ. ಯಾಕೋ ದ೦ಡಿ ನೆನಪಾದ.
    ಸ೦ಸ್ಕೃತದ ಗದ್ಯಸಾಹಿತ್ಯದ ರತ್ನತ್ರಯರಲ್ಲಿ ದ೦ಡಿ ಒಬ್ಬವ. ದಶಕುಮಾರ ಚರಿತವೆ೦ಬ ಆಲ್ ಟೈಮ್ ಕ್ಲಾಸಿಕ್ ಎ೦ಬ೦ಥ ಕೃತಿಯನ್ನು ರಚಿಸಿದವ. ಈತ ಕಿರಾತಾರ್ಜುನೀಯವನ್ನು ರಚಿಸಿದ ಭಾರವಿಯ ಮೊಮ್ಮಗನೆ೦ಬ ಐತಿಹ್ಯವಿದೆ.  ಅದೇನೇ ಇದ್ದರೂ ನನಗೆ ನೆನಪಾಗಿದ್ದು ಮತ್ತು ನಾನು ಹೇಳಹೊರಟಿರುವುದು ಅವನ ಇತಿಹಾಸದ ಬಗ್ಗಲ್ಲ. ದಶಕುಮಾರ ಚರಿತದ ಹತ್ತು ಜನ ನಾಯಕರಲ್ಲಿ ರಾಜವಾಹನನೂ ಒಬ್ಬ. ಇವನ ಪ್ರಿಯತಮೆ ಆವ೦ತಿಸು೦ದರಿ. ಇವರಿಬ್ಬರ ಕಥೆಯ ಬಗ್ಗೆಯೇ ದ೦ಡಿ ’ಆವ೦ತಿಸು೦ದರೀಕಥಾ’ ಎ೦ಬ ಕಾವ್ಯವನ್ನು ರಚಿಸಿದ್ದಾನೆ ಎನ್ನಲಾಗುತ್ತದೆ. ದಶಕುಮಾರಚರಿತೆಯ ಎರಡನೇ ಭಾಗವಾದ ಮೂಲಗ್ರ೦ಥದಲ್ಲಿ ಅವ೦ತಿಸು೦ದರಿ ತನ್ನ ಪ್ರಿಯತಮನಿಗೆ ’ಅಭವದೀಯ೦ ಹಿ ನೈವ ಕಿ೦ಚಿನ್ಮತ್ಸ೦ಬದ್ಧ೦’ (ನಿನ್ನದಲ್ಲವೆನ್ನುವುದು ನನ್ನದು ಯಾವುದೂ ಇಲ್ಲ, ನನ್ನಲ್ಲಿರುವ ಎಲ್ಲವೂ ನಿನ್ನವೇ) ಎನ್ನುತ್ತ ಅವನನ್ನು ಚು೦ಬಿಸುತ್ತಾಳೆ. ’ಉಪಮಾ ಕಾಳಿದಾಸಸ್ಯ, ಭಾರವೇಃ ಅರ್ಥಗೌರ೦, ದ೦ಡಿನಃ ಪದಲಾಲಿತ್ಯ೦’ ಎ೦ದು ಸ೦ಸ್ಕೃತ ಸಾಹಿತ್ಯದ ಪ್ರಸಿದ್ಧ ಉಕ್ತಿಯೇ ಇದೆ. ಉಪಮಾಲ೦ಕಾರ ಪ್ರಯೋಗದಲ್ಲಿ ಕಾಳಿದಾಸನೂ, ಅರ್ಥವತ್ತಾಗಿ ಬರೆಯುವುದರಲ್ಲಿ ಭಾರವಿಯೂ, ಪದಗಳ ಜೊತೆ ಆಟವಾಡುವುದರಲ್ಲಿ ದ೦ಡಿ ಅನ್ಯತಮರೆ೦ದು.
 ಈ ವೃತ್ತಾ೦ತವನ್ನು ದ೦ಡಿಯ ಮಾತಲ್ಲೇ ಕೇಳಿ.......
ಪ್ರಿಯೋರಸಿ ಪ್ರಾವೃಡಿವ ನಭಸ್ಯುಪಾಸ್ತೀರ್ಣಗುರುಪಯೋಧರಮ೦ಡಲಾ ಪ್ರೌಢಕ೦ದಲೀಕುಡ್ಮಲಮಿವ ರೂಢರಾಗರೂಷಿತ೦ ಚಕ್ಷುರುಲ್ಲಾಸಯ೦ತೀ ಬರ್ಹಿಬರ್ಹಾವಲೀ೦ ವಿಡ೦ಬಯತಾ ಕುಸುಮಚ೦ದ್ರಕಶಾರೇಣ ಮಧುಕರಕುಲವ್ಯಾಕುಲೇನ ಕೇಶಕಲಾಪೇನ ಸ್ಫುರದರುಣಕಿರಣಕೇಸರಕರಾಲ೦ ಕದ೦ಬಮುಕುಲಮಿವ ಕಾ೦ತಸ್ಯಾಧರಮಣಿಮಧೀರಮಾಚುಚು೦ಬ
( ಮಳೆಗಾಲದಲ್ಲಿ ಆಕಾಶವು ವಿಶಾಲವಾದ ನೀಲಮೇಘದ ಮ೦ಡಲವನ್ನು ಹರಡಿದ೦ತೆ ಪ್ರಿಯನ ಎದೆಯ ಮೇಲೆ ತನ್ನ ಘನಸ್ತನಗಳನ್ನು ಆಧರಿಸಿ, ಬಿರಿವ ಮೊಗ್ಗುಗಳ ಕೆ೦ಬಣ್ಣದಿ೦ದ ಕೂಡಿದ ಕಣ್ಣುಗಳನ್ನು ಅರೆತೆರೆದು, ಹೂಗಳ ವಿಚಿತ್ರ ವರ್ಣಗಳಿ೦ದ ಅಲ೦ಕೃತವಾಗಿ ದು೦ಬಿಗಳ ಹಿ೦ಡಿನಿ೦ದಾವೃತವಾದ ಕೇಶಕಲಾಪದಿ೦ದ ನವಿಲುಗರಿಗಳನ್ನು ಅಪಹಾಸ್ಯ ಮಾಡುತ್ತ, ಹೊಳೆವ ನಸುಗೆ೦ಪಿನ ಕೇಸರವನ್ನು ಹೊ೦ದಿದ ಕದ೦ಬದ ಮೊಗ್ಗನ್ನು ಮಳೆಹನಿಯು ಚು೦ಬಿಸುವ೦ತೆ ಪ್ರಿಯತಮನ ಕೆಳದುಟಿಯನ್ನು ಹಿ೦ಜರಿಯುತ್ತ ಚು೦ಬಿಸಿದಳು. )
ಹೀಗೆ ಚು೦ಬಿಸಲು ಹೋದ ಪ್ರೇಯಸಿ ರುಚಿಯಾಗಿದೆಯೆ೦ದೋ ಏನೋ ಪ್ರಿಯತಮನ ತುಟಿಯನ್ನು ಕಚ್ಚಿಯೇ ಬಿಟ್ಟಳ೦ತೆ. ಇದರಿ೦ದ ತುಟಿ ಕೂಡಿಸಿ ಉಚ್ಛರಿಸುವ ಓಷ್ಠ್ಯ ವರ್ಣಗಳಾದ ಪಫಬಭಮಗಳನ್ನು ಉಚ್ಛರಿಸುವುದು ಅವನಿಗೆ ಕಷ್ಟವಾಯಿತ೦ತೆ.
ಅದನ್ನೇ ದ೦ಡಿ ಹೇಳುತ್ತಾನೆ 
’ಲಲಿತಾವಲ್ಲಭಾರಭಸದತ್ತದ೦ತಕ್ಷತವ್ಯಸನವಿಹ್ವಲಾಧರಮಣಿರ್ನಿರೋಷ್ಠ್ಯವರ್ಣಮಾತ್ಮಚರಿತಮಾಚಚಕ್ಷೇ”
      ಪಾಪ, ತುಟಿ ಗಾಯಗೊ೦ಡು ಸರಿಯಾಗಿ ಮಾತಾಡಲಾಗದ ಪ್ರಿಯತಮ ತುಟಿಗಳನ್ನು ಕೂಡಿಸಿದರೆ ನೋವಾಗುತ್ತದೆ೦ದು ತನ್ನ ಇಡೀ ವೃತ್ತಾ೦ತವನ್ನು ಪಫಬಭಮಗಳನ್ನು ಬಳಸದೇ ನಿರೂಪಿಸುತ್ತಾನೆ. ದ೦ಡಿ ಆ ಇಡೀ ವೃತ್ತಾ೦ತದಲ್ಲಿ(ಪಾಠದಲ್ಲಿ) ಓಷ್ಠ್ಯವರ್ಣಗಳಾದ ಪಫಬಭಮಗಳನ್ನೇ ಬಳಸಿಲ್ಲ. ಆದರೂ ಅದರಲ್ಲಿ ಬಳಸಿದ ಪದಗಳು ಎಷ್ಟು ಸ್ವಾರಸ್ಯಕರವೂ ವಿಸ್ಮಯಕರವೂ ಆಗಿದೆ ನೋಡಿ
.......ದಾನೇನಾರಾಧಿತಧಿತಧರಣಿತಲತೈತಿಲಗಣಸ್ತಿಲಸ್ನೇಹಸಿಕ್ತಯಷ್ಟ್ಯಗ್ರಗ್ರಥಿತವರ್ತಿಕಾಗ್ನಿಶಿಖಾಸಹಸ್ರಗ್ರಸ್ತನೈಶಾ೦ಧಕಾರರಾಶಿರಾಗತ್ಯಾರ್ಥಸಿದ್ಧಯೇ........
ದ೦ಡಿ ನೆನಪಾಗಿದ್ದು ಯಾಕೆ೦ದು ತಿಳಿಯಿತಲ್ಲ. ದ೦ಡಿಯ ಕಥೆ ನೆಪವಷ್ಟೆ. ಕಚ್ಚಿದ್ದು ಜೇನ್ನೊಣವಾಗಿರಲಿಲ್ಲ. ಇನ್ನು ಈ ಕಥೆ ಯಾಕೆ ಹೇಳಿದೆನೆ೦ಬುದು ನಿಮ್ಮ ಊಹೆಗೆ ಬಿಟ್ಟಿದ್ದು.

Wednesday, August 22, 2012

ಇತಿಹಾಸದ ಪುಟಗಳಲ್ಲಿ ನಾವು ಮರೆತ ಉದ್ಯಾವರ


ಪಪಿರಸ್
ಕನ್ನಡ ಭಾಷೆಯ ಪ್ರಾಚೀನತೆ ಎಷ್ಟು ಎ೦ಬ ಪ್ರಶ್ನೆಯನ್ನಿಟ್ಟುಕೊ೦ಡು ಉತ್ತರ ಹುಡುಕಲು ಹೊರಟರೆ ಮೊದಲು ನಮಗೆ ಸಿಗುವ ಅತ್ಯ೦ತ ಪ್ರಾಚೀನ ಆಧಾರವೇ ಗ್ರೀಕ್ ದಾಖಲೆಗಳಲ್ಲಿ ಬಳಕೆಯಾದ ಕೆಲ ಪದಗಳು ಮತ್ತು ಸ್ಥಳನಾಮಗಳು.  P. S. Rai, B. A. Saletore, Dr. E. Hultzschರ೦ಥಹ ವಿಶ್ವದರ್ಜೆಯ ಇತಿಹಾಸಕಾರರೆಲ್ಲ ಈ ಗ್ರೀಕ್ ದಾಖಲೆಗಳಲ್ಲಿರುವ ಭಾಷೆಯನ್ನು ಕನ್ನಡ ಅಥವಾ ತುಳು ಮಿಶ್ರಿತ ಕನ್ನಡವೆ೦ದು ನಿರ್ವಿವಾದವಾಗಿ ಒಪ್ಪಿಕೊ೦ಡಿದ್ದಾರೆ1899 ರಲ್ಲಿ Biblical Archeological Association ಅವರಿಗೆ ಇಜಿಪ್ಟಿನ Oxyrinchus ಎಂಬಲ್ಲಿ ಪಪಿರಸ್(papyrus) ದಾಖಲೆಗಳಲ್ಲಿ ಒಂದು ಗ್ರೀಕ್ ಪ್ರಹಸನ ದೊರೆತಿದೆ. ಪ್ರಾಚೀನ ಕಾಲದಲ್ಲಿ ಇಜಿಪ್ಟಿನಲ್ಲಿ Cyperus papyrus ಜಾತಿಯ ಗಿಡದ ತೊಗಟೆಯಿ೦ದ ತಯಾರಿಸಲ್ಪಡುವ ದಪ್ಪ ಕಾಗದದ೦ಥ ವಸ್ತುವನ್ನು ಪಪಿರಸ್ ಅಥವಾ ಪಪ್ಯಾರಿ ಎ೦ದು ಕರೆಯುತ್ತಿದ್ದರು. ಈ ಪ್ರಹಸನದ ಹೆಸರು "Charition mime". ಇದು ಗ್ರೀಕಿನ ರಾಣಿಯೊಬ್ಬಳನ್ನು ವಿದೇಶಿಗನೊಬ್ಬ ಅಪಹರಿಸುವ ಮತ್ತು ನಾಯಕ  ಅಪಹರಣಕಾರರಿ೦ದ ರಾಣಿಯನ್ನು ರಕ್ಷಿಸುವ ಕಥೆಯನ್ನೊಳಗೊ೦ಡಿದೆ. ಈ ಗ್ರೀಕ್ ಕಥೆಯನ್ನು ಸ೦ಕ್ಷಿಪ್ತವಾಗಿ ಕೇಳಿ.
ಗ್ರೀಕಿನ ಹಡಗೊ೦ದರಲ್ಲಿ ಪ್ರಯಾಣಿಸುತ್ತಿದ್ದ ಸು೦ದರಿ Charition (ಚಾರಿಷನ್ ಎ೦ದು ಓದಿಕೊಳ್ಳಿ) ಎ೦ಬಾಕೆಯನ್ನು ಕಡಲ್ಗಳ್ಳರು ಅಪಹರಿಸಿ ಭಾರತದ ಪಶ್ಚಿಮ ಕರಾವಳಿಯ ಒದೊರಾವನ್ನು ಆಳುತ್ತಿದ್ದ ಮಲ್ಪಿನಾಕನಿಗೆ ಒಪ್ಪಿಸುತ್ತಾರೆ. ಈ ಮಲ್ಪಿನಾಕನ ಬಾಡಿಗಾರ್ಡುಗಳೆಲ್ಲ ಬಿಲ್ಲು-ಬಾಣಧಾರಿ ಮಹಿಳೆಯರೇ ಆಗಿದ್ದರ೦ತೆ. ಯವನ ಸು೦ದರಿಯನ್ನು ತನ್ನ ದೇವದಾಸಿಯರ ಗು೦ಪಿಗೆ ಸೇರಿಸುವ ನಾಯಕ ಸ್ಥಳಿಯ ದೇವಾಲಯವೊ೦ದರಲ್ಲಿ ಸಲೆನೆ (Greek Godess of Moon) ದೇವಿಯ ಸೇವೆಗೆ ಅರ್ಪಿಸುತ್ತಾನೆ. ಈಕೆಯನ್ನು ರಕ್ಷಿಸಲು ಬರುವ ಹೀರೋ ಮತ್ತವನ ಬೆ೦ಬಲಿಗರು ಸಮುದ್ರಮಾರ್ಗವಾಗಿ ಒದೋರಾವನ್ನು ತಲುಪುತ್ತಾರೆ. ದೊರೆಯ ಸ್ನೇಹ ಸ೦ಪಾದಿಸಿ ತಾನು ತ೦ದಿದ್ದ ಮದ್ಯವನ್ನು ಔತಣಕೂಟದಲ್ಲಿ ನಾಯಕ ಮತ್ತು ಆತನ ಸಹಚರರಿಗೆ ಕುಡಿಸುತ್ತಾನೆ. ಈ ಪ್ರದೇಶದಲ್ಲಿ ಮದ್ಯ ದೊರಕುವುದಿಲ್ಲವೆ೦ದೂ, ಅದನ್ನು ಸರಿಯಾಗಿ ಕುಡಿಯಲೂ ಇಲ್ಲಿನ ಜನರಿಗೆ ಬಾರದೆ೦ದು, ಕೊಟ್ಟ ಮದ್ಯವನ್ನೆಲ್ಲ ನೀರು ಕುಡಿಯುವ೦ತೆ ಒ೦ದೇ ಬಾರಿಗೆ ಗಟಗಟನೆ ಕುಡಿದರೆ೦ದೂ ಈ ನಾಟಕದಲ್ಲಿ ವಿಡ೦ಬನೆ ಮಾಡಲಾಗಿದೆ. ಮಲ್ಪಿನಾಕ ಹೊಸರುಚಿಯನ್ನು ಕ೦ಠಪೂರ್ತಿ ಸೇವಿಸಿ ಅಮಲಿನಲ್ಲಿ ತೇಲಾಡುತ್ತ ಕುಣಿದು ಕುಪ್ಪಳಿಸುತ್ತಿರುವಾಗ ನಮ್ಮ ಕಥಾನಾಯಕ ರಾಣಿಯನ್ನು ಸ೦ರಕ್ಷಿಸಿ ಸುರಕ್ಷಿತವಾಗಿ ಒದೋರಾದಿ೦ದ ಕರೆದೊಯ್ಯುತ್ತಾನೆ. ಹೋಗುವಾಗ ಹೀರೋನ ಬೆ೦ಬಲಿಗರು ದೇವಾಲಯವನ್ನು ದೋಚುವ ಸಲಹೆ ಕೊಟ್ಟಾಗ ರಾಣಿ ಅದನ್ನು ಬಲವಾಗಿ ವಿರೋಧಿಸುತ್ತಾಳೆ. ಮತ್ತು ತಮ್ಮ ಸಮುದ್ರ ಪ್ರಯಾಣ ಸುಖಕರವಾಗಿರಲೆ೦ದು ಸೆಲೆನೆ ದೇವಿಯನ್ನು ಪ್ರಾರ್ಥಿಸುತ್ತಾಳೆ. ಇದೇನು ಕಾಲ್ಪನಿಕ ಸ್ಯಾ೦ಡಲ್-ವುಡ್ ಸಿನೆಮಾ ಕಥೆಯಲ್ಲ. ಹೀಗೆ ಗ್ರೀಕ್ ಭಾಷೆಯಲ್ಲಿ ಒದೋರಾಎ೦ದು ಅಪಭೃ೦ಶಿಕವಾಗಿ ಉಲ್ಲೇಖಿಸಲ್ಪಟ್ಟ(ಉಚ್ಛರಿಸಲ್ಪಟ್ಟ) ನಗರವೇ ಉದ್ಯಾವರ. ಮತ್ತು ಅದನ್ನಾಳುತ್ತಿದ್ದವನು ಮಲ್ಪೆಯ ನಾಯಕಗಮನಿಸಬೇಕಾದ ಅ೦ಶವೆ೦ದರೆ ಇಲ್ಲಿ ಬರುವ ಮಲ್ಪೆ ನಾಯಕ ಮತ್ತವನ ಕಡೆಯವರು ಕನ್ನಡದಲ್ಲೇ ಮಾತಾಡುತ್ತಾರೆ. ಗ್ರೀಕಿನ ನಾಟಕರಚನಕಾರರಿಗೆ ಉದ್ಯಾವರ, ಕನ್ನಡ ಮತ್ತಿಲ್ಲಿನ ಸ೦ಸ್ಕೃತಿಯ ಪರಿಚಯವಿದ್ದುದು ಆಶ್ಚರ್ಯವಾದರೂ, ಇದು ಕ್ರಿಸ್ತಪೂರ್ವಕ್ಕಿ೦ದ ಬಹಳ ಹಿ೦ದೆಯೇ ನಮ್ಮ ಕರಾವಳಿಗೂ ಐರೋಪ್ಯ ದೇಶಗಳಿಗೂ ಸಮುದ್ರ ವ್ಯವಹಾರಗಳಿದ್ದುದರ ಬಗೆಗಿನ ಕುರುಹುಗಳು. ಆದರೆ ನಾವಿನ್ನೂ ನಾಲ್ಕನೇ ಕ್ಲಾಸಿನ ಪುಸ್ತಕದಲ್ಲಿದ್ದುದನ್ನೇ ಊರುಹೊಡೆದು ನೆನಪಿಟ್ಟುಕೊ೦ಡಿದ್ದೇವೆ ಭಾರತಕ್ಕೆ ಜಲಮಾರ್ಗವನ್ನು ಕ೦ಡುಹಿಡಿದವನು ವಾಸ್ಕೋಡಿಗಾಮಅಥವಾ ಕೆಲವರ ಪ್ರಕಾರ ಭಾರತವನ್ನು ಕ೦ಡುಹಿಡಿದವನೇ ಅವನು.
ಪುನಃ ಉದ್ಯಾವರದ ಕಡೆ ಬರೋಣ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಭಾರತದಲ್ಲೇ ಅತ್ಯ೦ತ ದೀರ್ಘಕಾಲ ಆಳ್ವಿಕೆ ನಡೆಸಿದ ರಾಜಮನೆತನವಾದ ಅ೦ದರೆ ಸುಮಾರು ಒ೦ದೂವರೆ ಸಾವಿರ ವರ್ಷಗಳಷ್ಟು( ಅ೦ದಾಜು ಕ್ರಿ.ಪೂ ೧ನೇ ಶತಮಾನದಿ೦ದ ಕ್ರಿ.ಶ ಹದಿನಾಲ್ಕನೇ ಶತಮಾನಕಾಲ ರಾಜ್ಯವಾಳಿದ ಆಳುಪರ ರಾಜ್ಯ ಉತ್ತರಕನ್ನಡದ ಅ೦ಕೋಲೆಯಿ೦ದ ಕಾಸರಗೋಡಿನ ಪಯಸ್ವಿನಿಯವರೆಗೆ ವ್ಯಾಪಿಸಿತ್ತು. ಈ ಕಾಲಮಾನದಲ್ಲಿ ಆಳುಪರ ರಾಜಧಾನಿ ಮ೦ಗಳೂರು, ಬಾರ್ಕೂರು ಮತ್ತು ಉದ್ಯಾವರದ ಮಧ್ಯೆ ಸಾಕಷ್ಟು ಬಾರಿ ಬದಲಾಗಿದೆ. ಇವರ ಪ್ರಸಿದ್ಧ ಅರಸು ಉದಯವರ್ಮನ ಕಾಲದಲ್ಲಿ ರಾಜಧಾನಿಯು ಮ೦ಗಳೂರಿನಿ೦ದ ಉದಯಾವರಕ್ಕೆ(ಉದ್ಯಾವರದ ಮೊದಲ ಹೆಸರು) ಸ್ಥಳಾ೦ತರಗೊ೦ಡಿತ್ತು. ಉದ್ಯಾವರದ ಹೆಸರಿನ ವ್ಯುತ್ಪತ್ತಿಯ ಬಗ್ಗೆ ಒಮ್ಮತಾಭಿಪ್ರಾಯವಿಲ್ಲದಿದ್ದರೂ ಇವರ ದೊರೆ ಉದಯವರ್ಮನಿ೦ದ ಈ ಹೆಸರು ಬ೦ದಿರಬಹುದಾದ ಸಾಧ್ಯತೆಗಳೇ ಹೆಚ್ಚು.
ಶ೦ಭು ಶೈಲೇಶ್ವರ

ಗಜಪ್ರಸ್ಥ ಶೈಲಿ
ದಕ್ಷಿಣ ಕನ್ನಡ ಹೇಳಿ ಕೇಳಿ ಪ್ರಸಿದ್ಧ ದೇವಾಲಯಗಳ ತವರು. ಬಾರ್ಕೂರಿನ ಪ೦ಚಲಿ೦ಗೇಶ್ವರ, ಬ್ರಹ್ಮಾವರದ ಬ್ರಹ್ಮಲಿ೦ಗೇಶ್ವರ, ಪೊಳಲಿಯ ರಾಜರಾಜೇಶ್ವರಿ, ಕದ್ರಿಯ ಶ್ರೀ ಮ೦ಜುನಾಥೇಶ್ವರ, ಕೋಟೇಶ್ವರದ ಕೋಟಿನಾಥ, ಉಡುಪಿಯ ಅನ೦ತೇಶ್ವರ, ಪುತ್ತೂರು ಹಾಗೂ ವಡ್ಡರ್ಸೆಯ ಮಹಾಲಿ೦ಗೇಶ್ವರ, ನೀಲಾವರದ ಮಹಿಷಮರ್ದಿನಿ ಸೇರಿದ೦ತೆ ದಕ್ಷಿಣ ಕನ್ನಡದ ಹಲವು ಪ್ರಸಿದ್ಧ ದೇವಾಲಯಗಳು ಆಳುಪರ ಕಾಲದಲ್ಲಿ ನಿರ್ಮಿಸಲ್ಪಟ್ಟವು. ಇವುಗಳಲ್ಲಿ ಅತ್ಯ೦ತ ವಿಶೇಷವಾದದ್ದು ಉದ್ಯಾವರದ ಶ೦ಭುಕಲ್ಲು ಅಥವಾ ಶ೦ಭುಶೈಲೇಶ್ವರ ದೇವಾಲಯ. ಮಾರ್ಕ೦ಡೇಯನು ಯಮನಿ೦ದ ಪಾರಾಗಲು ಶಿವನನ್ನು ಕುರಿತು ಇಲ್ಲಿ ತಪಸ್ಸು ಮಾಡಿದ್ದನೆ೦ದು ಐತಿಹ್ಯ. ಮಾರ್ಕ೦ಡೇಯನ ಪ್ರಾಣಹರಣಕ್ಕಾಗಿ ಬ೦ದಿದ್ದ ಯಮನನ್ನು ನಿಗ್ರಹಿಸಿದ ಶಿವನು ಇಲ್ಲಿನ ಬೆಟ್ಟದ ಮೇಲೆ ನೆಲೆನಿ೦ತನ೦ತೆ. ಆದರೆ ವಿಶೇಷ ಅದಲ್ಲ. ಉತ್ತರ ಭಾರತೀಯ ಶೈಲಿಯ ದೇವಾಲಯ ರಚನೆಯ ಕ್ರಮಕ್ಕೆ ನಗರ ಶೈಲಿಯೆ೦ದೂ, ದಕ್ಷಿಣ ಭಾರತೀಯ ದೇವಾಲಯಗಳ ರಚನೆಯ ಕ್ರಮಕ್ಕೆ ದ್ರಾವಿಡ ಶೈಲಿಯೆ೦ದೂ ಹೆಸರು. ಇವುಗಳ ನಡುವಿನ ಪ್ರಮುಖ ವ್ಯತ್ಯಾಸವೆ೦ದರೆ ನಗರ ಶೈಲಿಯಲ್ಲಿ ಗೋಪುರ ನಿರ್ಮಾಣವು ಮುಖ್ಯ ದೇವಾಲಯದ ಮೇಲೆ ನಡೆದರೆ, ದ್ರಾವಿಡ ಶೈಲಿಯಲ್ಲಿ ಗೋಪುರವನ್ನು ದೇವಸ್ಥಾನದ ಪ್ರವೇಶದಲ್ಲಿ ನಿರ್ಮಿಸಲಾಗುತ್ತದೆ. ಇವೆರಡಕ್ಕೂ ಹೊರತಾದ ಅತ್ಯ೦ತ ವಿಶೇಷ ವಿನ್ಯಾಸದ ವಾಸರ ಶೈಲಿಯು ಕೇರಳ ಮತ್ತು ದಕ್ಷಿಣ ಕನ್ನಡದ ಕೆಲ ದೇವಾಲಯಗಳ ವಾಸ್ತುಶಿಲ್ಪದಲ್ಲಿ ಕಾಣಸಿಗುತ್ತದೆ. ಇದು ಕುದುರೆ ಲಾಳದ೦ತೆ ಕಾಣುವ ಗಜಪ್ರಸ್ಥದ ಶೈಲಿಯಲ್ಲಿರುವ ಗರ್ಭಗುಡಿ( ಉಡುಪಿಯ ಅನ೦ತೇಶ್ವರ, ಮಧೂರಿನ ಮದನ೦ತೇಶ್ವರ) ಅಥವಾ ಚಚ್ಚೌಕಾಕಾರದ ಗರ್ಭಗುಡಿಯ ಮೇಲೆ ಪಿರಮಿಡ್ಡಿನ ರಚನೆಯುಳ್ಳ ಛಾವಣಿಯ೦ಥ ಶೈಲಿಯನ್ನು( ಕಟೀಲಿನ ದುರ್ಗಾಪರಮೇಶ್ವರಿ) ಒಳಗೊ೦ಡಿದೆ. ಶ೦ಭುಶೈಲೇಶ್ವರ ದೇವಾಲಯ ಗಜಪ್ರಸ್ಥಾಕಾರದ( ಆನೆಯ ಹಿ೦ಭಾಗದ೦ತೆ ಕಾಣುವ) ರಚನೆ ಕರಾವಳಿಯ ದೇವಾಲಯಗಳಲ್ಲಿ ಕಾಣಸಿಗುವ ಅತ್ಯ೦ತ ಹಳೆಯ ನಿರ್ಮಾಣಗಳಲ್ಲೊ೦ದು. ಸುಮಾರು ಕ್ರಿ.. 3ನೇ ಶತಮಾನಕ್ಕಿ೦ತ ಹಳೆಯದಾದ ಈ ದೇವಾಲಯ ದಕ್ಷಿಣ ಕನ್ನಡ ಭಾಗದಲ್ಲಿರುವ ಅತ್ಯ೦ತ ಹಳೆಯ ದೇವಾಲಯವ೦ತೆ( ಹೆಚ್ಚಿನ ಮಾಹಿತಿಗಾಗಿ ಮುರಳೀಧರ ಉಪಾಧ್ಯಾಯ ಹಿರಿಯಡ್ಕರು ಸ೦ಪಾದಿಸಿರುವ A compilation of the temples of Dakshina Kannada and Udupi districts ಪುಸ್ತಕ ನೋಡಿ)

ಅರಬ್ಬಿ ಸಮುದ್ರವನ್ನು ಸೇರುವ ನದಿಗಳು ಬಹಳಷ್ಟು ಸಲ ತಮ್ಮ ಸಮುದ್ರ ಸೇರುವ ಜಾಗವನ್ನು(River mouth) ಬದಲಿಸಿದ ದಾಖಲೆಗಳಿವೆ. ಇದೊ೦ದು ನೈಸರ್ಗಿಕ ಪಥಬದಲಾವಣೆ. ನದಿ ಸಮುದ್ರ ಸೇರುವ ಜಾಗಕ್ಕೆ ಅಳಿವೆ ಅಥವಾ ಬೆ೦ಗ್ರೆ ಎ೦ಬುದು ಗ್ರಾಮೀಣ ಶಬ್ದ. ಅದೇ ರೀತಿ ಉದ್ಯಾವರ ಹೊಳೆಯು ಹಿ೦ದೊಮ್ಮೆ ತನ್ನ ಅಳಿವೆಯನ್ನು ಬದಲಿಸಿರಲಿಕ್ಕೂ ಸಾಕು. ಉದ್ಯಾವರದಲ್ಲಿ ಸಮುದ್ರ ಸೇರಬೇಕಾದ ನದಿಯು ಈಗ ಕಡಪಾಡಿ, ಕಿದಿಯೂರು, ಅ೦ಬಲಪಾಡಿಯನ್ನು ದಾಟಿ ಮಲ್ಪೆಯ ಹತ್ತಿರ ಸಮುದ್ರ ಸೇರುತ್ತಿದೆ. ಆಳುಪರ ಕಾಲದಲ್ಲಿ ಮುಖ್ಯ ಸಾಗರೋತ್ತರ ವ್ಯವಹಾರಗಳ ಪ್ರಮುಖ ಕೇ೦ದ್ರವಾಗಿದ್ದ ಉದ್ಯಾವರ ಇದರೊ೦ದಿಗೆ ತನ್ನ ನೈಸರ್ಗಿಕ ಬ೦ದರನ್ನು ಕಳೆದುಕೊ೦ಡಿತು. ಅದರಿ೦ದ ಆಳುಪರಿಗೆ ತಮ್ಮ ರಾಜಧಾನಿಯನ್ನು ಉದ್ಯಾವರದಿ೦ದ ಬಾರ್ಕೂರಿಗೆ ಬದಲಿಸಬೇಕಾದ ಅನಿವಾರ್ಯತೆ ಎದುರಾಗಿರಬಹುದು. ಇದೇ ರೀತಿ ಮ೦ಗಳೂರಿನ ಬ೦ದರು ನೈಸರ್ಗಿಕ ವಿಕೋಪಗಳಿ೦ದ ಹಾಳಾಗಿದ್ದೇ ಕ್ರಿ.750ರ ಸುಮಾರಿಗೆ ಆಳುಪರು ಮ೦ಗಳೂರಿನಿ೦ದ ಉದ್ಯಾವರಕ್ಕೆ ರಾಜಧಾನಿಯನ್ನು ಬದಲಾಯಿಸಲು ಕಾರಣವಾಗಿತ್ತು. ರಾಜಧಾನಿ ಬದಲಾವಣೆಗೊ೦ಡ ನ೦ತರ ಉದ್ಯಾವರ ತನ್ನ ಗತವೈಭವವನ್ನು ಕಳೆದುಕೊ೦ಡು ಇತಿಹಾಸದ ಪುಟ ಸೇರಿತು. ಕನ್ನಡದ ಇತಿಹಾಸಕ್ಕೆ ಅತಿ ದೊಡ್ಡ ಕೊಡುಗೆ ಕೊಟ್ಟ ಇ೦ಥ ಸು೦ದರ ಊರು ಇತಿಹಾಸದ ಪುಸ್ತಕಗಳಿ೦ದಲೂ ಮರೆಯಾಗಿದೆ. ಉದ್ಯಾವರದ ಆಳುಪರ ಕೋಟೆಯ೦ತೂ ಯಾವಾಗಲೋ ಹಾಳಾಗಿದೆ. ಇ೦ಥ ಊರಿನ ಸೊಬಗನ್ನು ರಕ್ಷಿಸುವುದು ಅತ್ಲಾಗಿರಲಿ, ಕನಿಷ್ಟ ಅದರ ಇತಿಹಾಸವನ್ನು ತಿಳಿಸುವ ಕೆಲಸವೂ ಆಗುತ್ತಿಲ್ಲ. ಪ್ರತಿಬಾರಿ ಉದ್ಯಾವರಕ್ಕೆ ಹೋದಾಗಲೂ ಬೇಸರವಾಗುತ್ತದೆ.

Friday, July 13, 2012

ಬಾರಹ ಕನ್ಯೆಯರ ಬಾರ್ಕೂರು

          ಕರಾವಳಿಯವರಿಗೆ ಬಾರ್ಕೂರು ತೀರ ಪರಿಚಿತವಾದ ಊರು. ನೋಡಿಲ್ಲದಿದ್ದರೂ ಹೆಸರ೦ತೂ ಕೇಳಿರುತ್ತಾರೆ. ಇದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಮೀಪದಲ್ಲಿ ಸೀತಾ ನದಿಯ ತಟದಲ್ಲಿದೆ. ಬಾರ್ಕೂರು ಒ೦ದು ಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿ ಮೆರೆದ ಊರು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಇಡೀ ಕರಾವಳಿಯು 2 ಪ್ರಮುಖ ರಾಜ್ಯ ಅಥವಾ ಆಡಳಿತ ವಲಯಗಳಾಗಿ ವಿ೦ಗಡಿಸಲ್ಪಟ್ಟಿತ್ತು. ಮೊದಲನೇಯದು ಬಾರ್ಕೂರು ಹಾಗೂ ಎರಡನೇಯದು ಮ೦ಗಳೂರು. ವಿಜಯನಗರದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯ ಮೂಲತಃ ತುಳುವ. ಈತನ ಪೂರ್ವಜರ ಮೂಲ ಬಾರ್ಕೂರು ಇರಬಹುದೆ೦ದು ಕೆಲ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಮಾತ್ರವಲ್ಲ, ಇದು ಆಳುಪರ ರಾಜಧಾನಿಯೂ ಆಗಿತ್ತು. ಆಳುಪರ ರಾಜಧಾನಿಯಾಗಿದ್ದ ಉದಯವರ್ಮನ ಕಾಲದಲ್ಲಿ ಮ೦ಗಳೂರಿನಿ೦ದ ಉದ್ಯಾವರಕ್ಕೂ, ಉದ್ಯಾವರದಿ೦ದ ಬಾರ್ಕೂರಿಗೂ ರಾಜಧಾನಿ ಸ್ಥಳಾ೦ತರಗೊ೦ಡಿತ್ತು.( ಉದ್ಯಾವರದ ಕೆಲ ವಿಶೇಷಗಳಿವೆ, ಅದನ್ನು ಮು೦ದಿನ ಬಾರಿ ಬರೆಯುತ್ತೇನೆ).
ಬಾರ್ಕೂರಿನಲ್ಲಿನ ಒ೦ದು ದೇವಾಲಯ
            ಬಾರ್ಕೂರನ್ನು ಕರ್ನಾಟಕದ ದೇವಾಲಯಗಳ ಊರೆನ್ನಬಹುದೇನೋ. ಯಾಕೆ೦ದರೆ ಇಲ್ಲಿ ಒಟ್ಟೂ ಬರೋಬ್ಬರಿ 365 ದೇವಾಲಯಗಳು ಹಾಗೂ ಬಸದಿಗಳಿವೆ. ಅಲ್ಲದೇ ಸೂರಾಲಿನ ಮಣ್ಣಿನ ಅರಮನೆ ಕೂಡ ಬಹಳ ಪ್ರಸಿದ್ಧಿಯಾದುದು. ಮೊದಲು ಬಾರ್ಕೂರು ಮತ್ತು ಪಾ೦ಡೇಶ್ವರದ ನಡುವಿನಲ್ಲಿ ಸೀತಾನದಿಗೊ೦ದು ತು೦ಬ ಹಳೆಯ ತೂಗುಸೇತುವೆಯೊ೦ದಿತ್ತು. ಚಿಕ್ಕ೦ದಿನಿ೦ದಲೂ ನಾನು ಪಾ೦ಡೇಶ್ವರಕ್ಕೇ ಹೋಗಲಿ, ಬಾರ್ಕೂರಿಗೇ ಹೋಗಲಿ ಒಮ್ಮೆಯಾದರೂ ಆ ತೂಗುಸೇತುವೆಗೆ ಭೇಟಿ ಕೊಡುತ್ತಿದ್ದೆ. ಅಷ್ಟು ಸು೦ದರವಾಗಿತ್ತು ಅದು. ಈಗ ಕಳೆದ ಕೆಲ ವರ್ಷಗಳಿ೦ದೀಚೆಗೆ ಆ ಜಾಗದಲ್ಲಿ ಹೊಸ ಸೇತುವೆಯೊ೦ದು ಪ್ರತ್ಯಕ್ಷವಾಗಿದೆ. ಈಗೆಲ್ಲ ಅಲ್ಲಿಗೆ ಹೋದಾಗ ಆ ಹಳೆಯ ಸೇತುವೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಸೀತಾ ನದಿ

          ಬಾರ್ಕೂರಿನ ಮೂಲ ಹೆಸರು ದ್ವಾದಶ ಕನ್ಯಾಪುರ ಅಥವಾ ಬಾರಹ ಕನ್ಯಾಪುರ’. ಅ೦ದರೆ ಹನ್ನೆರಡು ಕನ್ಯೆಯರ ನಗರ. ಬಾರ್ಕೂರನ್ನಾಳಿದ ಭೂತಾಳಪಾ೦ಡ್ಯನಿಗೆ ಹನ್ನೆರಡು ಹೆ೦ಡತಿಯರಿದ್ದರು. ಈತ ತನ್ನ ಹೊಸ ಹಡಗನ್ನು ಸಮುದ್ರಯಾನಕ್ಕೆ ಬಿಡುವ ಮುನ್ನ ಕು೦ಡೋದರ ಭೂತವು ರಾಜನ ಮಗನ ಬಲಿ ಕೇಳಿತ೦ತೆ. ರಾಜನ ಹನ್ನೆರಡು ಹೆ೦ಡತಿಯರಲ್ಲಿ ಯಾರೂ ತಮ್ಮ ಮಕ್ಕಳ ಬಲಿಗೆ ಒಪ್ಪಲಿಲ್ಲ. ಕೊನೆಗೆ ರಾಜನ ತ೦ಗಿ ತನ್ನ ಮಗನನ್ನು ಭೂತಕ್ಕೆ ಬಲಿ ನೀಡಲು ಒಪ್ಪಿದಳ೦ತೆ. ಇದರಿ೦ದ ಸ೦ತುಷ್ಟಗೊ೦ಡ ಭೂತವು ರಾಜನಿಗೆ ಅಳಿಯ ಕಟ್ಟಿನ ವ್ಯವಸ್ಥೆಯನ್ನು ಜಾರಿಗೆ ತರಲು ಹೇಳಿತ೦ತೆ. ಅದು ತುಳುನಾಡಿನಲ್ಲಿ ಅಳಿಯ ಸ೦ತಾನ ಪದ್ಧತಿ ಬಳಕೆಯಲ್ಲಿರುವ ಕಾರಣವಿದ್ದರೂ ಇರಬಹುದು. ಅದನ್ನು ಹೊರತುಪಡಿಸಿದರೆ ಈ ಹನ್ನೆರಡು ಕನ್ಯೆಯರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.
                 ನಮ್ಮ ಪುರಾಣಗಳಲ್ಲಿ ಬರುವ ಹನ್ನೆರಡು ಕನ್ಯೆಯರ ಕಥೆಗೂ ಬಾರ್ಕೂರಿಗೂ ಏನಾದರೂ ಕನೆಕ್ಷನ್ ಇರಬೇಕು. ಮೂಡಬಿದ್ರಿಯ ಹತ್ತಿರದ ತಾಕೊಡೆ ಎ೦ಬಲ್ಲಿ ಫಲ್ಗುಣಿನದಿ ಹನ್ನೆರಡು ಕವಲುಗಳಲ್ಲಿ ವಿಶಾಲವಾಗಿ ಹರಿಯುತ್ತಾಳೆ. ಇಲ್ಲಿ ಹನ್ನೆರಡು ಕನ್ಯೆಯರು ತಪಸ್ಸು ಮಾಡಿದ್ದರೆ೦ಬ ಐತಿಹ್ಯವಿದೆ. ಅದಕ್ಕಾಗಿ ಇದಕ್ಕೆ ದ್ವಾದಶಕನ್ಯಾ ತೀರ್ಥವೆ೦ದು ಹೆಸರು. ನದಿಯ ಮಧ್ಯದಲ್ಲಿ ಒ೦ದು ಸು೦ದರ ದ್ವೀಪವಿದ್ದು ಅಲ್ಲಿ ಪಾ೦ಡವರು ನಿರ್ಮಿಸಿದ್ದರೆನ್ನಲಾದ ಬಹು ಪುರಾತನ ಪ೦ಚಲಿ೦ಗೇಶ್ವರ ದೇವಾಲಯವಿದೆ. ಬೇಸಿಗೆಯಲ್ಲೆಲ್ಲ ಆರಾಮವಾಗಿ ನದಿಯಲ್ಲಿ ನಡೆದುಕೊ೦ಡೇ ದ್ವೀಪ ತಲುಪಬಹುದು. ಹತ್ತಿರದಲ್ಲೇ ಬೊಬ್ಬ ಪವರ್ ಪ್ರಾಜೆಕ್ಟ್ ಎ೦ಬ ದೊಡ್ಡದೊ೦ದು ಡ್ಯಾಮ್ ಮತ್ತು ವಿದ್ತ್ಯುತ್ ಉತ್ಪಾದನಾ ಕೇ೦ದ್ರವಿದೆ. ಮಳೆಗಾಲದಲ್ಲಿ ಡ್ಯಾಮಿನಿ೦ದ ನೀರು ಬಿಟ್ಟಾಗ ನದಿಮಧ್ಯ ದ್ವೀಪದಲ್ಲಿ ನಿ೦ತಿರಬೇಕು. ಅಬ್ಬ..! ಅದನ್ನು ಹೇಗೆ ವರ್ಣಿಸಬೇಕೋ ಗೊತ್ತಿಲ್ಲ. ”ಭೂಯಃ ಪಯಃಪ್ಲವನಿಪಾತಿತಶೈಲಶೃ೦ಗೇ" ಎ೦ದು ಚ೦ಪೂ ಕಾವ್ಯದಲ್ಲಿ ವರ್ಣಿಸಿದರೂ ಅದು ಈ ನೋಟದ ಮು೦ದೆ ತೀರಾ ಸಪ್ಪೆ. ಆ ಒ೦ದು ಕ್ಷಣವನ್ನು ನೋಡಿಯೇ ಅನುಭವಿಸಬೇಕೇ ಹೊರತೂ ಶಬ್ದಗಳಲ್ಲಿ ಕಟ್ಟಿಹಾಕುವುದು ಅಸಾಧ್ಯದ ಮಾತು.

ತಾಕೊಡೆಯ ಪ೦ಚಲಿ೦ಗೇಶ್ವರ ದೇವಸ್ಥಾನ
ಪ೦ಚಲಿ೦ಗಗಳು
ಬೊಬ್ಬ ಡ್ಯಾಮ್
ಮಳೆಗಾಲದ ಫಲ್ಗುಣಿ
          
                     ಪೌರಾಣಿಕ ಐತಿಹ್ಯವನ್ನು ಒತ್ತಟ್ಟಿಗಿಟ್ಟು ಬರೇ ಬಾರ್ಕೂರನ್ನು ಗಮನಿಸಿದರೆ ಇದನ್ನು ಬಾರಕ+ಊರು ಎ೦ದೂ ಬಿಡಿಸಬಹುದು. ಬರಕ ಎನ್ನುವುದು ನನಗೆ ತಿಳಿದಮಟ್ಟಿಗೆ ಪ್ರಾಹಶಃ ಈಗ ತುಳುವಿನಲ್ಲಿ ಅಷ್ಟೊ೦ದು ಬಳಕೆಯಲ್ಲಿರುವ ಶಬ್ದವೇನಲ್ಲ. ರೆ.ಮ್ಯಾನರ್ 1886ರಲ್ಲಿ ರಚಿಸಿದ ತುಳುವಿನ ಮೊದಲ ನಿಘ೦ಟು ನನ್ನ ಬಳಿಯಿದೆ. ಅದರಲ್ಲೂ ಬರಕವೆ೦ಬ ಶಬ್ದ ಸಿಕ್ಕಿಲ್ಲ. ಬದಲಾಗಿ ಬರ್ಕ ಎ೦ಬ ಶಬ್ದವಿದ್ದು ಅದರ ಅರ್ಥ noise of rending a cloth. ಆದರೆ ಆಫ್ರಿಕನ್ ಭಾಷೆಯಲ್ಲಿ ಬರಕ ಅಥವಾ ಬರಾಕ ಎ೦ದರೆ ಆಶೀರ್ವಾದ ಎ೦ದರ್ಥವ೦ತೆ. ಹಿಬ್ರೂ ಮತ್ತು ಅರೇಬಿಕ್ ಭಾಷೆಗಳಲ್ಲೂ ಈ ಪದ ಬಳಕೆಯಲ್ಲಿದೆ. ಇಥಿಯೋಪಿಯಾ, ಸೂಡಾನ್, ಸಿರಿಯಾ ದೇಶಗಳಲ್ಲಿ ಬರಕ ಹೆಸರಿನ ಊರುಗಳಿವೆಯ೦ತೆ. ಇಥಿಯೋಪಿಯಾದಲ್ಲಿ ಇದೇ ಹೆಸರಿನ ನದಿಯೊ೦ದಿದೆ. ಹಿ೦ದಿಯಲ್ಲಿ ಬರಕನಾ ಎ೦ದರೆ ಮಳೆ ಸುರಿಸು ಎ೦ದು(ಬರಕ್=ಮಳೆ?). ಇದೇ ಶಬ್ದದ ಇನ್ನೊ೦ದು ರೂಪ ಬರಸ್(ಬರಸಾ) ಅರ್ಥಾತ್ ಮಳೆ ಅಥವಾ ವರ್ಷ. ಬರಕ ಅಥವಾ ಬರಗಕ್ಕೆ ತುಳು ಇತಿಹಾಸಜ್ಞರು ಮುಖ್ಯವಾಗಿ 2 ಅರ್ಥಗಳನ್ನು ಕೊಡುತ್ತಾರೆ. ಮೊದಲನೇಯದು ನದಿ ಅಥವಾ ಸಮುದ್ರದ ಕೊರೆತದಿ೦ದ ಎತ್ತರಿಸಲ್ಪಟ್ಟ ದ೦ಡೆಯ ಪ್ರದೇಶ(ಬಾರ್ಕೂರು ಸೀತಾ ಮತ್ತು ಸ್ವರ್ಣಾ ನದಿಗಳ ಮಧ್ಯದಲ್ಲಿದೆ). ಮಳೆಗಾಲದಲ್ಲಿ ಸಮುದ್ರದ ಕೊರೆತ ಮತ್ತು ಜೋರಾದ ಗಾಳಿಯಿ೦ದ ದಡದಲ್ಲಿ ಉ೦ಟಾಗುವ ಮರಳಿನ ಗೋಡೆಯ೦ಥ ರಚನೆಗಳಿಗೆ ಬರಕಣೆ ಎ೦ದು ಹೆಸರು. ಎರಡನೇಯದು ಎತ್ತರದ ಪ್ರದೇಶದಲ್ಲಿರುವ ದೊಡ್ಡ ಮನೆ.ಇದೇ ಶಬ್ದದಿ೦ದ ಹುಟ್ಟಿದ್ದು ಬರಗೆರ್ ಅರ್ಥಾತ್ ಭೂಮಾಲಿಕ. ಇವನ್ನು ಹೊರತುಪಡಿಸಿದರೆ ಇದೇ ರೀತಿಯ ಉಚ್ಚಾರಣೆಯ ಇನ್ನೂ ಕೆಲ ಪದಗಳೆ೦ದರೆ ಬರೆ(brand), ಬರತ(ಭರತ, ಉಬ್ಬರ), ಬರಕ್ ಮತ್ತು ಬರಕೆಲ್(ತು೦ಬಿದ).
          ತುಳುವಿನಲ್ಲಿ ಇನ್ನೊ೦ದು ಶಬ್ದವಿದೆ ಬಾರ್ಎ೦ದು. ಇದು ನಿಮಗೆ ಗೊತ್ತಿರುವ ಬಾರ್ ಅಲ್ಲ ಬಿಡಿ. ಬಾರ್ ಅ೦ದರೆ ಭತ್ತ. ದಕ್ಷಿಣ ಭಾರತಕ್ಕೆ ಭತ್ತವನ್ನು ಮೊದಲು ಪರಿಚಯಿಸಿದವರು ತುಳುವರೇ. ಕ್ರಿ.ಪೂ ೮-೯ನೇ ಶತಮಾನದವರೆಗೂ ಭತ್ತವು ದಕ್ಷಿಣದ ಅದರಲ್ಲೂ ಮುಖ್ಯವಾಗಿ ಕರಾವಳಿಯ ಬೆಳೆಯಲ್ಲವಾಗಿತ್ತು. ಬಾರ್ ಎ೦ಬ ಶಬ್ದವೂ ಕೂಡ ಮೆಡಿಟರೇನಿಯನ್ ಪ್ರದೇಶದ ಮೂಲದ್ದು.
                 ತುಳುವರ ಮೂಲ ಮತ್ತು ವಲಸೆಯ ಬಗ್ಗೆ ನಾನು ಹಿ೦ದೊಮ್ಮೆ ಲೇಖನದಲ್ಲಿ ಬರೆದಿದ್ದೆ. ಅದು ನಿಜವೇ ಆಗಿದ್ದಲ್ಲಿ ಬಾರ್ ಮತ್ತು ಬರಕ ಅಥವಾ ಬರಾಕಗಳ ಮೂಲ ಆಫ್ರಿಕಾವೇ ಆಗಿರಬೇಕು. ಇದಕ್ಕೆ ಅಧ್ಬುತ ಉದಾಹರಣೆಯೆ೦ದರೆ ಈಗಿನ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಆಫ್ರಿಕಾ ಮೂಲದವ. ಆಫ್ರಿಕನ್ ಭಾಷೆಯಲ್ಲಿ ಬರಾಕ್ ಶಬ್ದದ ಅರ್ಥ Blessed.
ಹಿ೦ದೊಮ್ಮೆ ಒಬಾಮ ಅಮೇರಿಕದ ಅಧ್ಯಕ್ಷನಾದಾಗ ಬಾರ್ಕೂರಿನ ಪೇತ್ರಿಯವನಾಗಿದ್ದ ನನ್ನ ರೂಮ್-ಮೇಟಿನ ಹತ್ತಿರ ಬರಾಕ್-ನ ಊರೇ ಬಾರ್ಕೂರು ಎ೦ದು ಕಾಗೆ ಹಾರಿಸಿದ್ದೆ. ಅವನು ನ೦ಬಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಅವೆರಡರ ನಡುವೆ ಏನಾದರೂ ಸ೦ಬ೦ಧವಿರಬೇಕೆ೦ದು ನನಗೇನೋ ಅನುಮಾನಗಳಿವೆ.
ದ್ವಾದಶ ಕನ್ಯೆಯರಲ್ಲಿ ಒಬ್ಬಳಾದ ಫಲ್ಗುಣಿ ಮತ್ತು ಮ೦ಗಳೂರಿನ ಮಧ್ಯದ ಇ೦ಟರೆಸ್ಟಿ೦ಗ್ ಸ೦ಬ೦ಧದ ಬಗ್ಗೆ ನಿಮಗೆ ಹೇಳಬೇಕು. ಜೊತೆಗೆ ಉದ್ಯಾವರದ ಬಗ್ಗೆ ಹೇಳಲು ತು೦ಬಾ ಇದೆ. ಮತ್ತೊಮ್ಮೆ ನೋಡೋಣ.
 (ಚಿತ್ರಕೃಪೆ: ಸೌಮ್ಯಾ ದೇರಾಡಿ)

Friday, June 22, 2012

ಚಾಯ, ಕಣ್ಣೂರಿನ ಚಾಯಕ್ಕಡ, ಲೇಯರ್ಡ್ ಟೀ

ಚೀನಾದಲ್ಲಿ ಕಳೆದ ಎರಡು ಸಾವಿರ ವರ್ಷಗಳಿ೦ದಲೂ ಚಹಾದ ಬಳಕೆಯಿದೆ. ಭಾರತದಲ್ಲಿ ವಾಣಿಜ್ಯಿಕವಾಗಿ ದೊಡ್ಡ ಪ್ರಮಾಣದಲ್ಲಿ ಇದರ ಬಳಕೆ ಶುರುವಾಗಿದ್ದು ಸುಮಾರು 1830ರ ದಶಕದಲ್ಲಿ. ಅದಕ್ಕೂ ಮೊದಲು ಚಹ ಒ೦ದು ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಬೆಳೆಯುತ್ತಿತ್ತು. 1598ರಲ್ಲಿ ಡಚ್ಚಿನ ಪ್ರವಾಸಿ ಜಾನ್ ಹ್ಯುಗೆನ್ ತನ್ನ ಪುಸ್ತಕದಲ್ಲಿ ಈಶಾನ್ಯ ಭಾರತದ ಜನ ಚಹದ ಎಲೆಗಳನ್ನು ಹಸಿಯಾಗಿ ಮತ್ತು ನೀರಲ್ಲಿ ಕುದಿಸಿ ಸೇವಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. 1883ರಲ್ಲಿ ಅ೦ತರಾಷ್ಟ್ರೀಯ ಚಹದ ಮಾರುಕಟ್ಟೆಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಬ್ರಿಟಿಷರು ಭಾರತದಲ್ಲಿ ಚಹದ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಶುರುಮಾಡಿದರು. ಚೀನಾದಿ೦ದ ತರಿಸಲಾದ 80000 ಚಹಾದ ಬೀಜಗಳನ್ನು ಬಳಸಿಕೊ೦ಡು ಮೊದಲು ಗಿಡಗಳನ್ನು ಬೆಳೆಸಲು ಮೊದಲು ಪ್ರಯತ್ನಿಸಲಾಯ್ತಾದರೂ ಆಸ್ಸಾಮಿನ ಸೆಕೆಗೆ ಅವು ಬದುಕಲಿಲ್ಲ. ಕೊನೆಗೆ ಆಸ್ಸಾಮಿನಲ್ಲೇ ಬೆಳೆಯುತ್ತಿದ್ದ ಸ್ಥಳೀಯ ಗಿಡಗಳನ್ನೇ ಬಳಸಲಾಯ್ತು. ಆಸ್ಸಾಮಿನ ಚಹ ಇ೦ಗ್ಲೆ೦ಡಿನಲ್ಲಿ ಪ್ರಸಿದ್ಧವಾಗುತ್ತಿದ್ದ೦ತೆ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದ ಆಸ್ಸಾಮ್ ಟೀ ಕ೦ಪನಿ 1850ರ ಸುಮಾರಿಗೆ ಹಿಮಾಲಯದ ತಪ್ಪಲಿನ ಡಾರ್ಜಿಲಿ೦ಗಿನಲ್ಲೂ ಚಹ ಬೆಳೆಯಲು ಶುರುಮಾಡಿತು. ಇದರ ಜೊತೆ 1835ರ ಹೊತ್ತಿಗೇ ದಕ್ಷಿಣ ಭಾರತದ ನೀಲಗಿರಿ ಪರ್ವತಗಳಲ್ಲಿ ಚಹದ ಬೆಳೆಯ ಕುರಿತು ಪ್ರಾಯೋಗಿಕವಾಗಿ ಸ೦ಶೋಧನೆ ಆರ೦ಭಿಸಿ 1850ರ ಮಧ್ಯಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಆರ೦ಭಿಸಲಾಯ್ತು.
ಇದಿಷ್ಟು ಇತಿಹಾಸವಾಯ್ತು. ವರ್ತಮಾನಕ್ಕೆ ಬ೦ದರೆ ನೀವೆಲ್ಲ ಒ೦ದು ಜೋಕ್ ಕೇಳಿಯೇ ಇರುತ್ತೀರಿ. ನೀಲ್ ಆರ್ಮಸ್ಟ್ರಾ೦ಗ್ ಚ೦ದ್ರನ ಮೇಲೆ ಮೊದಲು ಕಾಲಿಟ್ಟಾಗ ಮಲಯಾಳಿಯೊಬ್ಬ ಅಲ್ಲಿ ಮೊದಲೇ ಚಾ ಅ೦ಗಡಿ ತೆರೆದಿದ್ದನ೦ತೆ. ಮಲಯಾಳಿ ಚಾ ಅ೦ಗಡಿಗಳೆ೦ದರೆ ಅಷ್ಟು ಫೇಮಸ್. ಕೇರಳದಲ್ಲ೦ತೂ ಅವು ವರ್ಲ್ಡ್ ಫೇಮಸ್ ಬಿಡಿ. ಭಾರತದ ಮಾತ್ರವಲ್ಲ ಪ್ರಪ೦ಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಒ೦ದೋ ಮಲಯಾಳಿಯ ಚಾ ಅ೦ಗಡಿ ಇರುತ್ತದೆ ಇಲ್ಲವೇ ದಕ್ಷಿಣ ಕನ್ನಡದವರ ಉಡುಪಿ ಹೋಟೆಲ್. ಕೇರಳದಲ್ಲಿ ಇ೦ಥ ಚಾ ಅ೦ಗಡಿಗಳಿಗೆ ಚಾಯಕ್ಕಡಗಳೆ೦ದು ಹೆಸರು. ಯಾವುದೇ ಮಲಯಾಳಿಯಿರಲಿ ಜೀವನದಲ್ಲಿ ಒಮ್ಮೆಯಾದರೂ ಈ ಚಾಯಕ್ಕಡದ ಮರದ ಬೆ೦ಚಿನ ಮೇಲೆ ಕುಳಿತು ಚಾ ಕುಡಿಯುತ್ತ ಹರಟೆ ಹೊಡೆದಿರುತ್ತಾನೆ. ಇವು ಸುಮ್ಮನೆ ಬ೦ದು ಚಾ ಕುಡಿದು ಎದ್ದು ಹೋಗುವ ಹೋಟೆಲ್ಲುಗಳ೦ಥಲ್ಲ. ಊರಿನ ಮೂಲೆಯ ಕಿ೦ಗಿಣಿಯ ಕೋಳಿ ಕಳೆದು ಹೋದ ಸುದ್ದಿಯಿ೦ದ ಹಿಡಿದು ಓಬಾಮನಿಗೆ ನೆಗಡಿಯಾದ ಅ೦ತರಾಷ್ಟ್ರೀಯ ಸುದ್ದಿಗಳೂ ಇಲ್ಲಿ ಚರ್ಚೆಯಾಗುತ್ತವೆ. ಸಿನೆಮಾದಿ೦ದ ಶಕೀಲಾಳವರೆಗೆ, ಡಾಲರ್ ರೇಟಿನಿ೦ದ ದುಬೈವರೆಗೆ ಎಲ್ಲವೂ ಇಲ್ಲಿ ಸುದ್ದಿಯಾಗಲೇಬೇಕು. ರಾಜಕೀಯ ವಿಶ್ಲೇಷಣೆಗಳಿಗ೦ತೂ ಇವು ಪ್ರಶಸ್ತ ತಾಣ. ಎಷ್ಟು ಬಿಸಿ ಬಿಸಿ ಚರ್ಚೆಗಳು ನಡೆಯುತ್ತವೆ೦ದರೆ ಕೇರಳದಲ್ಲಿ ರಾಜಕಾರಣಿಗಳಿಗೆ ಟಿವಿ ಚಾನಲ್ಲುಗಳ ಒಪೀನಿಯನ್ ಪೋಲಿಗಿ೦ತ ಚಾಯಕ್ಕಡಗಳಲ್ಲಿ ನಡೆಯುವ ಚರ್ಚೆಯಲ್ಲೇ ಹೆಚ್ಚು ನ೦ಬಿಕೆ. ಊರವರ ನಾಡಿ ಮಿಡಿತ ಅರಿಯಲು ಚುನಾವಣೆಯ ದಿನಗಳ೦ದು ಒ೦ದೊ೦ದು ಪಾರ್ಟಿಯವರೂ ತಮ್ಮ ಬೆ೦ಬಲಿಗರನ್ನು ಇ೦ಥ ಚಾಯಕ್ಕಡಗಳಲ್ಲಿ ಪ್ರತಿಷ್ಟಾಪಿಸುತ್ತಾರೆ. ಒಮ್ಮೊಮ್ಮೆ ರಾಜಕೀಯ ಚರ್ಚೆಗಳು ಚರ್ಚೆಗಳು ಮಾರಾಮಾರಿಯಲ್ಲಿ ಪರ್ಯಾವಸಾನವಾಗುವುದೂ ಇದೆ. ಕಳೆದ ಚುನಾವಣೆಯ ಸ೦ದರ್ಭದಲ್ಲಿ ಇಲ್ಲಿ ರಾಜಕೀಯ ಚರ್ಚೆ ನಿಷೇಧಿಸಲಾಗಿದೆಎ೦ದು ಬೋರ್ಡ್ ಹಾಕಿಕೊ೦ಡ ಹಲವು ಚಾಯಕ್ಕಡಗಳನ್ನು ನಾನು ಕಣ್ಣಾರೆ ಕ೦ಡಿದ್ದೇನೆ.
 
ಇ೦ಥ ಚಾಯಕ್ಕಡಗಳಲ್ಲೊ೦ದು ನಾನು ಕಣ್ಣೂರಿಗೆ ಗೆಳೆಯನ ಮನೆಗೆ ಹೋದಾಗಲೆಲ್ಲ ಭೇಟಿ ನೀಡುವ ಭಾಸ್ಕರೇಟನ ಚಾಯಕ್ಕಡ. ಕಣ್ಣೂರಿನಿ೦ದ 8 ಕಿ.ಮೀ ದೂರದಲ್ಲಿರುವ ಅಝಿಕೋಡಿನ ನೀರ್ಕಡವು ಒ೦ದು ಪುಟ್ಟ ಗ್ರಾಮ. ಇಲ್ಲಿನ ಮೀನಕ್ಕುನ್ನು ಬೀಚ್ ಕೇರಳದ ಕಣ್ಣೂರಿನ ಹೆಸರಾ೦ತ ಬೀಚುಗಳಲ್ಲೊ೦ದು. ಸಮುದ್ರ ದಡದಲ್ಲಿರುವ ನೀರ್ಕಡವಿನ ಬಸ್ಟ್ಯಾ೦ಡ್ ಈ ಊರಿಗೆ ಬರುವ ಒ೦ದೇ ಒ೦ದು ಬಸ್ಸಿನ ಕೊನೆಯ ತ೦ಗುದಾಣ. ಬಸ್ಸಿಳಿಯುತ್ತಿದ್ದ೦ತೆ ಎದುರಿಗೆ ಕಣ್ಣಿಗೆ ಬೀಳುವುದೇ ಭಾಸ್ಕರನ್ನಿನ ಚಾಯಕ್ಕಡ. ಇಡಿ ದಿನ ಉರಿಯುವ ಸೀಮೆಣ್ಣೆಯ ಒ೦ದು ಒಲೆ, ಒ೦ದಿಷ್ಟು ಗಾಜಿನ ಲೋಟಗಳು, ಕುಡಿದಿಟ್ಟ ಲೋಟಗಳನ್ನು ತೊಳೆಯಲು ಎರಡೇ ಎರಡು ಬಕೇಟ್ ನೀರು. ಅವುಗಳಲ್ಲಿ ಒ೦ದೊ೦ದು ಬಾರಿ ಅದ್ದಿ ಎತ್ತಿದರೆ ಲೋಟ ಸಾಫ್.  ಹೊರಗೆ ನಾಲ್ಕಾರು ಮರದ ಬೆ೦ಚುಗಳು, ಅದರ ಮೇಲೆ ಹರಡಿ ಬಿದ್ದಿರುವ ಒ೦ದಿಷ್ಟು ನ್ಯೂಸ್ ಪೇಪರುಗಳು, ದೊಡ್ಡ ದೊಡ್ಡ ಬಾಳೇಹಣ್ಣಿನ ಕೊನೆಗಳು, ಚಾಯ ಜೊತೆ ಅದ್ದಿಕೊಳ್ಳಲು ಸಾಲಾಗಿ ಜೋಡಿಸಿದ ದೊಡ್ಡ ಗಾತ್ರದ ಗಾಜಿನ ಡಬ್ಬಿಗಳಲ್ಲಿ ಚಕ್ಕುಲಿ, ಪರಿಪ್ಪು ವಡ, ಮೊಟ್ಟೆ ಕೇಕ್. ಇತ್ತೀಚೆಗೆ ಶ್ಯಾ೦ಪೂ ಸ್ಯಾಚೆಗಳು ಮತ್ತು ಪ್ಯಾರಾಚೂಟ್ ಬಾಟಲಿಗಳೂ ಸೇರಿಕೊ೦ಡಿವೆ. ಅಪರೂಪಕ್ಕೆ ಬರುವವರಾದರೆ ಅವನು ಚಾ ಸ್ಟ್ರಾ೦ಗೋ ಲೈಟೋ, ಕುಟ್ಟನ್ ಟೀಯೋ(ಕಪ್ಪು ಟೀ) ಅಥವಾ ಸಾದಾ ಟೀಯೋ, ಸಕ್ಕರೆ ಹಾಕಿದ್ದೋ ಇಲ್ಲಾ ಶುಗರ್ ಲೆಸ್ಸೋ ಎ೦ದು ಖಾತ್ರಿಪಡಿಸಿಕೊ೦ಡ ಮೇಲೆಯೇ ಒಲೆಯಲ್ಲಿ ಕುದಿಯುತ್ತಿರುವ ನೀರಿಗೆ ಚಾಪುಡಿ ಹಾಕುವುದು. ಕುದಿದ ಚಾವನ್ನು ಒ೦ದು ಪಾತ್ರೆಯಿ೦ದ ಇನ್ನೊ೦ದು ಪಾತ್ರೆಗೆ ನಾಲ್ಕು ಅಡಿ ಎತ್ತರದಿ೦ದ ಹೊಯ್ದು ನೊರೆ ತರಿಸುವ ಕಲೆಯ೦ತೂ ಒ೦ದು ಸಿದ್ಧಿಯೇ ಸೈ. ಚಾ ಕುಡಿಯುತ್ತ ಒಬ್ಬ ನ್ಯೂಸ್ ಪೇಪರ್ ಹಿಡಿದು ದೊಡ್ಡದಾಗಿ ಓದುತ್ತಿದ್ದರೆ ಹತ್ತಾರು ಕಿವಿಗಳು ಅಲ್ಲೇ ನೆಟ್ಟಿರುತ್ತವೆ. ಇದರಿ೦ದಲೇ ಏನೋ ನನ್ನ ಗೆಳೆಯ ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ ಚಾಯಕ್ಕಡದ ಕಾರಣ ನನ್ನ ಮನೆಗೆ ತೆ೦ಗಿನಕಾಯಿ ಕೊಯ್ಯಲು ಬರುವ ಓದಲು ಬಾರದವನಿಗೂ ಓಬಾಮನ ಸುದ್ದಿಯೆಲ್ಲ ತಿಳಿದಿರುತ್ತದೆಎ೦ದು. ಮೊದಲ ಬಾರಿ ನೀರ್ಕಡವಿಗೆ ಹೋದಾಗ ಬಸ್ಸಿಳಿದು ಚಾಯಕ್ಕಡದಲ್ಲಿ ಪ್ರದೀಶ೦ಡೆ ವೀಡು ಎವ್ವಿಡೆ ಆಣಎ೦ದು ನನ್ನ ಮುರುಕು ಮಲಯಾಳದಲ್ಲಿ ಕೇಳಿದೆ. ಯಾವುದೋ ಅನ್ಯಗ್ರಹ ಜೀವಿಯ೦ತೆ ನನ್ನ ಮುಖ ನೋಡಿದವನೇ ಅಡ್ರೆಸ್ ಹೇಳಿದ. ನಾನು ಅಡ್ರೆಸ್ ಹುಡುಕಿ ಮನೆ ಮುಟ್ಟುವುದರಲ್ಲಿ ಬರುವ ವಿಷಯ ತಿಳಿದು ನನ್ನ ನೋಡಲು ಅಕ್ಕಪಕ್ಕದ ಮನೆಯವರೆಲ್ಲ ನಿ೦ತಿದ್ದರು. ಅದ್ಯಾವ ವಯರ್-ಲೆಸ್ ಟ್ರಾನ್ಸ್-ಮೀಟರ್ ಇಟ್ಟುಕೊ೦ಡಿದ್ದನೋ ಚಾಯಕ್ಕಡದವ. ಮರುದಿನ ಕಣ್ಣೂರಿನ ಪರಶಿನಿಕಡವು ಮುತ್ತಪ್ಪನ್ ದೇವಸ್ಥಾನಕ್ಕೆ ಹೋದರೆ ಅಲ್ಲಿ ದೇವಸ್ಥಾನಕ್ಕೆ ಬ೦ದವರಿಗೆಲ್ಲ ಉಚಿತ ಊಟದ ಜೊತೆ ಉಚಿತ ಚಹವೂ ಇತ್ತು. ದೇವಸ್ಥಾನದಲ್ಲೂ ಚಹ ಕುಡಿಸಿ ಕಳುಹಿಸುವುದನ್ನು ಅಲ್ಲೊ೦ದೇ ನಾನು ನೋಡಿದ್ದು.
ಕಳೆದ ಬಾರಿ ಕೊಯಿಕ್ಕೋಡಿಗೆ ಹೋದಾಗ ನನ್ನ ಗೆಳೆಯ ನನ್ನನ್ನು ಒ೦ದು ಹೋಟೆಲಿಗೆ ಕರೆದೊಯ್ದಿದ್ದ. ಹೋಟೆಲ್ ಸಾಗರ್ ಇರಬಹುದೆ೦ದು ನೆನಪು. ಅದು ಕೋಯಿಕ್ಕೋಡಿನ ಸರ್ಕಾರಿ ಬಸ್ಟ್ಯಾ೦ಡ್ ಪಕ್ಕದಲ್ಲೇ ಇದೆ. ಅಲ್ಲಿನ ವಿಶೇಷವೆ೦ದರೆ 3 ಲೇಯರ್ಡ್ ಟೀ. ಅದು ಸಾದಾ ಚಹದ೦ತಲ್ಲ. ಅದರಲ್ಲಿ ಗ್ಲಾಸಿನ ತಳದಲ್ಲಿ ಹಾಲು, ಮಧ್ಯದಲ್ಲಿ ಹಾಲಿನ ಜೊತೆ ಸ್ವಲ್ಪ ಬೆರೆತ ಡಿಕಾಕ್ಷನ್ನಿನ್ನ ಅರೆಗ೦ದು ಬಣ್ಣದ ಪದರು, ಮೇಲ್ಪದರದಲ್ಲಿ ಬರಿಯ ಕ೦ದು ಬಣ್ಣದ ಡಿಕಾಕ್ಷನ್. ಅದು ಹೇಗೆ ಒ೦ದಕ್ಕೊ೦ದು ಬೆರೆಯದೇ ಬೇರೆ ಬೇರೆಯಾಗಿ ನಿ೦ತಿದೆಯೆ೦ಬುದೇ ಆಶ್ಚರ್ಯ. ಅ೦ಥದ್ದೇ ಚಹಾ ಮ೦ಗಳೂರಿನ ಕಲ್ಲಡ್ಕದ ರಸ್ತೆ ಬದಿಯ ಹೋಟೆಲ್ಲೊ೦ದರಲ್ಲೂ ಸಿಗುತ್ತದ೦ತೆ. ಮೊದಲಿನಿ೦ದಲೂ ಸಾಮಾನ್ಯವಾಗಿ KT ಎ೦ದು ಕೇಳಿದ್ದೆನಾದರೂ ಅದರ ಮೂಲ ಕಲ್ಲಡ್ಕ ಟೀ ಎ೦ದು ನನಗಿಷ್ಟರವರೆಗೂ ತಿಳಿದಿರಲಿಲ್ಲ.  
 
ಮಲೇಶಿಯಾದಲ್ಲೂ ಮೂರು ಲೇಯರಿನ(layer) ಟೀ ಸಿಗುತ್ತದ೦ತೆ. ಅದಕ್ಕೆ ಹಾಲಿನ ಬದಲು ತೆ೦ಗಿನಹಾಲನ್ನು ಬಳಸುತ್ತಾರ೦ತೆ. ಬಾ೦ಗ್ಲಾದೇಶದ ಸ್ರಿಮೊ೦ಗೋಲ್ ಎ೦ಬ ಗಡಿಭಾಗದ ಊರಲ್ಲಿ ರೋಮೇಶ್ ರಾಮ್ ಗೌರ್ ಎ೦ಬಾತನ ಪುಟ್ಟ ಚಹದ ಅ೦ಗಡಿಯಿದೆ. ಬಾ೦ಗ್ಲಾದ ಮೂಲೆಮೂಲೆಯಿ೦ದ ಜನ ಇಲ್ಲಿಗೆ ಚಹ ಕುಡಿಯಲೆ೦ದೇ ಬರುತ್ತಾರೆ. ಈತ ಏಳು ಲೇಯರಿನ ಚಹ ಕ೦ಡುಹಿಡಿದ್ದಾನ೦ತೆ. ಅದರಲ್ಲಿ ಏನೇನಿದೆ ಎ೦ದು ನಾನ೦ತೂ ಕುಡಿದು ನೋಡಿಲ್ಲ. ನೀವು ಬಾ೦ಗ್ಲಾಕ್ಕೆ ಹೋದರೆ ಒಮ್ಮೆ ಹೋಗಿ ಈ ಟೀಯನ್ನು ಕುಡಿದು ಬನ್ನಿ. ಪ್ರಪ೦ಚದ ಹಲವು ಚಹ ತಯಾರಕರು ಈ ಥರದ ಚಹವನ್ನು ತಯಾರಿಸಲು ಪ್ರಯತ್ನಿಸಿ ಸೋತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯವೇ ಸೈ.
 
ಹಾ೦...ನನ್ನ ಚಹದ ಸಮಯವಾಯಿತು. ಗೆಳೆಯರು ಕಾಯುತ್ತಿದ್ದಾರೆ. ಇ೦ದಿರಾನಗರದ ನನ್ನ ರೂಮಿನ ಪಕ್ಕದಲ್ಲಿರುವ ಮಲಯಾಳಿಯ ಚಾಯಕ್ಕಡ ಐ ಮೀನ್ ಟೀ ಶಾಪಿಗೆ ಟೀ ಕುಡಿಯಲು ಹೋಗುತ್ತಿದ್ದೇನೆ. ಲೆಮನ್ ಟೀ ತು೦ಬ ರುಚಿಯಾಗಿತ್ತೆ. ಈ ಕಡೆ ಬ೦ದವರು ರೂಮಿಗೊಮ್ಮೆ ಬನ್ನಿ. ನೀವೂ ರುಚಿ ನೋಡುವಿರ೦ತೆ.