Pages

Tuesday, June 26, 2018

ಹೊಯ್ಸಳ ಲಾಂಛನದಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳ: ಒಂದು ವಿಮರ್ಶೆ

     
  ಆರೇಳು ತಿಂಗಳ ಹಿಂದೆ ಗೆಳತಿ ಅನಘಾ ನಾಗಭೂಷಣ ಒಂದು ಪ್ರಶ್ನೆ ಕೇಳಿದ್ದರು.  ಆದರೆ ನಾವೆಲ್ಲ ಕೇಳಿದ ಕಥೆಯ ಪ್ರಕಾರ ಸುದತ್ತಾಚಾರ್ಯರ ಶಿಷ್ಯ ಸಳ ಗುರುಗಳ ಆಜ್ಞೆಯಂತೆ ’ಹುಲಿ’ಯನ್ನು ಸಂಹರಿಸುತ್ತಾನೆ. ಹೊಯ್ಸಳರ ಲಾಂಛನದಲ್ಲಿ ಸಳ ಸಂಹರಿಸುತ್ತಿರುವುದು ಸಿಂಹವನ್ನಲ್ಲವೇ? ಹಾಗೇಕೆ? ಎಂದು. ಅಲ್ಲಿಯವರೆಗೂ ನಾನೊಮ್ಮೆಯೂ ಆಬಗ್ಗೆ ಯೋಚಿಸಿರಲಿಲ್ಲ. ಅದು ಹೊಳೆದಿರಲೂಇಲ್ಲ.
       ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಎದ್ದು ಕಾಣುವ ಗುರುತು ಹುಲಿಯನ್ನು ಕೊಲ್ಲುತ್ತಿರುವ ಮನುಷ್ಯ. ಇದು ಹೊಯ್ಸಳರ ದೇವಸ್ಥಾನಗಳ ಮೇಲಿನ ಶುಕನಾಸಿಗಳಲ್ಲಿ ಇಲ್ಲವೇ ಬೇಲೂರಲ್ಲಿದ್ದಂತೆ ಪ್ರವೇಶದ್ವಾರದಲ್ಲಿ ಇದ್ದೇ ಇರುವ ಶಿಲ್ಪ. ಇದು ಹೊಯ್ಸಳರ ರಾಜಲಾಂಛನವಾಗಿತ್ತೆಂದೂ, ಆ ಶಿಲ್ಪದಲ್ಲಿರುವುದು ಹುಲಿಯನ್ನು ಕೊಲ್ಲುತ್ತಿರುವ ಸಳನೆಂದೂ ಹೆಚ್ಚಿನೆಲ್ಲಾ ಇತಿಹಾಸಕಾರರ ಅಭಿಪ್ರಾಯ. ಆದರೆ ವಿಚಿತ್ರವೆಂದರೆ ಆ ಶಿಲ್ಪದಲ್ಲಿರುವುದು ಹುಲಿಯಲ್ಲ ಸಿಂಹ. ಹುಲಿಗೆ ಕೇಸರಗಳಿರುವುದಿಲ್ಲ ಬದಲಾಗಿ ಸಿಂಹಕ್ಕಿರುತ್ತವೆ. ಶಿಲ್ಪದಲ್ಲಿರುವ ಪ್ರಾಣಿಗೆ ಕೇಸರಗಳಿವೆಯೇ ಹೊರತೂ ಹುಲಿಗಿದ್ದಂತೆ ಪಟ್ಟೆಗಳಿಲ್ಲ. ಕೊಂಡಜ್ಜಿಯ ರವಳನಾಥನ ಪಂಚೆಯ ನೆರಿಗೆಗಳನ್ನು, ಹಳೆಬೀಡಿನಲ್ಲಿ ಅಂಗುಷ್ಟದುದ್ದದ ತಲೆಬುರುಡೆಗಳಲ್ಲಿ ಒಳಗಿನ ಟೊಳ್ಳನ್ನೂ, ಆಭರಣಗಳ ಸೂಕ್ಷ್ಮ ಕೆತ್ತನೆಯನ್ನೂ ಕೆತ್ತಿದ ಹೊಯ್ಸಳ ಶಿಲ್ಪಿಗಳಿಗೆ ಹುಲಿಯ ಮೇಲೆ ನೆರಿಗೆಗಳನ್ನು ಬಿಡಿಸುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಹಾಗಾದರೆ ಅವರು ಹುಲಿಯ ಬದಲು ಸಿಂಹವನ್ನು ಕೆತ್ತಿದ್ಯಾಕೆ? ಅದರ ಅಂಗಸೌಷ್ಟವವೇ ಇತ್ಯಾದಿ ಕಾರಣದಿಂದ ಸಿಂಹದ ಶಿಲ್ಪದ ಕೆತ್ತುಗೆ ಸುಲಭ. ಹುಲಿಗೆ ಸಿಂಹಕ್ಕಿದ್ದಂತೆ ಪ್ರಮಾಣಲಕ್ಷಣಗಳಿಲ್ಲ. ಆದುದರಿಂದ ಹುಲಿಯದ್ದು ಅಷ್ಟು ಸುಲಭವಲ್ಲ ಎಂಬ ಮಾತಿದೆ. ಹೀಗಿದ್ಯಾಗ್ಯೂ ಹುಲಿ ಕರ್ನಾಟಕದಲ್ಲಿ ಸಾಧಾರಣವಾಗಿ ಎಲ್ಲ ಕಡೆಯೂ ಕಂಡುಬರುವ ಪ್ರಾಣಿ. ಆದರೆ ಸಿಂಹ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಗುಜರಾತ್ ಹಾಗೂ ಬಂಗಾಳದ ಪ್ರದೇಶದಲ್ಲಿ. ಹಾಗಾಗಿ ಶಿಲ್ಪಿಗಳಿಗೆ ಸಿಂಹಕ್ಕಿಂತ ಹುಲಿಯೇ ಹೆಚ್ಚು ಪರಿಚಿತ. ಅಷ್ಟಿದ್ದೂ ಎಲ್ಲ ಕಡೆಗಳಲ್ಲೂ ಸಿಂಹವನ್ನು ಕೆತ್ತಿದ್ದಕ್ಕೆ ಬಲವಾದ ಕಾರಣಗಳಿರಲೇ ಬೇಕು.
       ಮೊದಲನೇಯದಾಗಿ ಆ ಶಿಲ್ಪ ಹುಲಿಯನ್ನು ಕೊಲ್ಲುತ್ತಿರುವ ಸಳನದ್ದೆನ್ನುವುದು ತಪ್ಪುಕಲ್ಪನೆ. ಜೊತೆಗೆ ಸಿಂಹವನ್ನು ಒಂದೇ ಪ್ರಕಾರವಾಗಿ ಕೆತ್ತಿದ್ದರೂ ಅದರ ಜೊತೆ ಇರುವ ಮನುಷ್ಯ ಚರ್ಯೆ ಮತ್ತು ಲಕ್ಷಣಗಳು ಶಿಲ್ಪದಿಂದ ಶಿಲ್ಪಕ್ಕೆ ಬೇರೆಯಾಗಿವೆ. ಬೇಲೂರಿನಲ್ಲಿರುವ ಎರಡು ಶಿಲ್ಪಗಳಲ್ಲಿ ಆ ಮನುಷ್ಯನಿಗೆ ಕೊಂಬುಗಳಿದ್ದರೆ ಸಾಗರದ ನಾಡಕಲಸಿ, ಹಾಸನ ಸಮೀಪದ ದೇವರಗದ್ದವಳ್ಳಿ, ಮೊಸಳೆ ಹಾಗೂ ಶಿವಮೊಗ್ಗದ ಶಿರಾಳಕೊಪ್ಪದ ಸಮೀಪದ ಬಳ್ಳಿಗಾವೆಗಳಲ್ಲಿ ಕೋರೆಹಲ್ಲುಗಳೂ ಇವೆ. ಬೇಲೂರಿನಲ್ಲಿ ಮುಖ್ಯ ದ್ವಾರದ ಬಳಿಯ ಎರಡು ಶಿಲ್ಪಗಳಲ್ಲಿ ಒಂದರ ಮನುಷ್ಯನ ಕೈಲಿ ಕತ್ತಿಯಿದ್ದರೆ ಇನ್ನೊಬ್ಬ ಬರಿಗೈಲಿದ್ದಾನೆ. ಬರಿಗೈಯಲ್ಲಿರುವವನ ಮುಖದಲ್ಲಿ ಭಯದ ಚಹರೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಮೊದಲನೇಯವನ ತಲೆಕೂದಲು ನೇರವಾಗಿದ್ದರೆ ಎರಡನೇಯವನದ್ದು ಗುಂಗುರಾಗಿದೆ. ಅದೇ ಇನ್ನೊಂದು ಬಾಗಿಲಲ್ಲಿರುವ ಶಿಲ್ಪದಲ್ಲಿರುವ ವ್ಯಕ್ತಿ ತಲೆಯನ್ನು ಆಚೆ ತಿರುಗಿಸಿ ಓಡಲು ಸಿದ್ಧವಾಗಿರುವಂತಿದೆ. ಬೇಲೂರಿನ ಇಂಥ ಆರು ಶಿಲ್ಪಗಳಲ್ಲಿರುವ ಮನುಷ್ಯನ ಕೇಶವಿನ್ಯಾಸ, ಕರ್ಣಕುಂಡಲ, ಆಭರಣ ಇವ್ಯಾವವೂ ಒಂದಿದ್ದಂತೆ ಇನ್ನೊಂದರಲ್ಲಿಲ್ಲ. ನಾಡಕಲಸಿ, ದೇವರಗದ್ದವಳ್ಳಿ, ಹಳೆಬೀಡಿನ ಶಿಲ್ಪಗಳಲ್ಲಿ ರಾಕ್ಷಸ ಕಳೆ ಢಾಳಾಗಿದೆ. ಇದನ್ನು ಗಮನಿಸಿದರೆ ಸಿಂಹದ ಜೊತೆ ಹೋರಾಡುತ್ತಿರುವ ಸಳನ ಶಿಲ್ಪವಿದಾಗಿರದೇ ಸಿಂಹವೊಂದು ರಾಕ್ಷಸನ ಮೇಲೆ ದಾಳಿಮಾಡುತ್ತಿರುವಂತೆ ಈ ಶಿಲ್ಪಗಳನ್ನು ಕೆತ್ತಲಾಗಿದೆ. 


ರಾಕ್ಷಸ ಛಾಯೆಯನ್ನು ಗಮನಿಸಿ

ಬೇಲೂರಿನ ಬಾಗಿಲಲ್ಲಿರುವ ಒಂದು ಶಿಲ್ಪದಲ್ಲಿ ಮನುಷ್ಯನ ಮೇಲೆ ಸಿಂಹ ಆಕ್ರಮಣ ಮಾಡುವಂತಿದೆ


       ಎರಡನೇಯದಾಗಿ ಈ ಮೂರ್ತಿ ಎಲ್ಲ ಹೊಯ್ಸಳ ದೇವಾಲಯಗಳಲ್ಲಿದ್ದರೂ ಇದು ಅವರ ರಾಜಲಾಂಛನವಲ್ಲ. ಹೊಯ್ಸಳರ ಅಧಿಕೃತ ಲಾಂಛನ ಸೆಳೆ(ಬೆತ್ತ)ಯೊಂದಿಗೆ ಇರುವ ಹುಲಿ. ಹೆರದು, ಶಾಂತಿಗ್ರಾಮ ಸೇರಿ ಹೊಯ್ಸಳರ ಹಲವಾರು ಶಾಸನಗಳಲ್ಲಿ ’ಪುಲಿಯ ಲಾಂಛನ’, ’ಶಾರ್ದೂಲ ಲಾಂಛನ’ ಹಾಗೂ ’ವ್ಯಾಘ್ರ ಕೇತನ’ಗಳೆಂಬ ಪ್ರಸ್ತಾವನೆ ಸಿಗುತ್ತದೆ. ಬೇಲೂರಿನ ಕುವರಲಕ್ಷ್ಮನ ಶಾಸನದಲ್ಲಿ ’ಜಿನಮುನಿಪೋತ್ತಮಂ ಬೆತ್ತದ ಸೆಳೆಯಿನೀ ಪುಲಿಯಂ ಪೊಯ್ಸಳೆಂದೊಡಾ ಸಳ ನೃಪಂಗೆ ಪೊಯ್ಸಳಾಭಿದಾನಮಾದುದಾ ಶಾರ್ದೂಲಂ ಪತಾಕಾ ಪ್ರವಿರಾಜಿತ ಚಿತ್ರ ಚಿಹ್ನಮಾದುದು’ ಎಂಬ ಒಕ್ಕಣೆಯಿದೆ. ’ಶಾರ್ದೂಳದೊಳುಕೂಡಿದ ಸೆಳೆ ಪಿರಿದುಂ ಚಿಹ್ನಮ’ ಎಂದು ಅರಸಿಕೆರೆ ಶಾಸನವೂ, ’ಧ್ವಜಪಟದೊಳು ಹೊನ್ನೊಳೊತ್ತಿ ಪುಲಿಯುಂ ಸೆಳೆಯುಂ ನಿಜಲಾಂಛನಮಾದುದು’ ಎಂದು ಚನ್ನರಾಯಪಟ್ಟಣದ ಬಳಗಟ್ಟೆ ಶಾಸನವೂ. ’ಪೊಯ್ಸಳ ನೀನೀಸೀಯಿಂದನೆ ಮುನೀಂದ್ರನ್ ಅವನು ಆ ಪುಲಿಯಂ ಪೋಸೆಳೆದು ಸೆಳೆಯನ್ ಆ ಪುಲಿಯ ಸೆಳೆಯುಂಡಿಗೆಯದಾಯ್ತು ಪೊಯ್ಸಳ ವಂಶಂ’ ಎಂದು ಚಿಕ್ಕಮಗಳೂರಿನ ಖಾಂಡ್ಯ ಶಾಸನವೂ, ’ಸಳನಿಂದ ಹುಲಿಯ ಸೆಳೆಯುಂಡಿಗೆಯಾದುದು ಚಿಹ್ನಂ’ ಎಂದು ಕಳಸಾಪುರ ಶಾಸನವೂ ಉಲ್ಲೇಖಿಸುತ್ತದೆ. ಇದೆಲ್ಲವುಗಳಿಂದ ಸೆಳೆಯೊಡನೆ ಇರುವ ಹುಲಿ ಹೊಯ್ಸಳರ ಲಾಂಛನವಾಗಿತ್ತಲ್ಲದೇ ಸಿಂಹದೊಂದಿಗಿರುವ ಮನುಷ್ಯ ಅಲ್ಲವೆಂದು ಸ್ಪಷ್ಟವಾಗುತ್ತದೆ. ಸಳನು ಬೆತ್ತದ ಸೆಳೆಯಿಂದ ಹುಲಿಯನ್ನು ಕೊಂದ ಸ್ಮರಣಾರ್ಥ ಹೊಯ್ಸಳರು ಅದನ್ನೇ ರಾಜಲಾಂಛನವಾಗಿಟ್ಟುಕೊಂಡರೆಂಬುದೇ ಸರಿ. ಜೊತೆಗೆ ಹೊಯ್ಸಳರ ಕಾಲದ ಎಲ್ಲ ತಾಮ್ರಶಾಸನಗಳಲ್ಲಿ ರಾಜಮುದ್ರೆಯ ಭಾಗದಲ್ಲಿ ಹುಲಿಯ ಮುದ್ರೆಯಿರುತ್ತದೆ. 
ಹೀಗಿದ್ದಾಗ್ಯೂ ದೇವಾಲಯಗಳ ಆವರಣದಲ್ಲಿ ಸಿಂಹದೊಂದಿಗಿನ ಮನುಷ್ಯ ಶಿಲ್ಪ ಕಂಡುಬರಲು ಕಾರಣವೇನು?
       ನನಗನ್ನಿಸಿದಂತೆ ಹೊಯ್ಸಳರ ಶಿಲ್ಪಶೈಲಿ ಪ್ರಭಾವಿತಗೊಂಡಿದ್ದು ಚಾಲುಕ್ಯರಿಂದ. ಚಾಲುಕ್ಯರ ಶೈಲಿಯೇ ತುಂಗಭದ್ರೆಯ ದಕ್ಷಿಣಕ್ಕೆ ಮುಂದೆ ಸ್ವತಂತ್ರವಾಗಿ ಬೆಳೆದು ಹೊಯ್ಸಳ ಶೈಲಿಯೆಂದೆನಿಸಿತು. ಚಾಲುಕ್ಯ-ಹೊಯ್ಸಳ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೋಲಿಕೆ ಸ್ವವೇದ್ಯ. ಹೊಯ್ಸಳರ ಶೈಲಿ ದಕ್ಷಿಣಾಚಾರ್ಯ ಪಂಥವೆನೆಸಿದ್ದರಿಂದ ಇದರ ಶಿಲ್ಪಿಗಳಿಗೆ ದಕ್ಷಿಣಾಚಾರಿ ಅಥವಾ ತದ್ಭವದಲ್ಲಿ ಜಕ್ಕಣಾಚಾರಿ ಎಂಬ ಅಭಿದಾನ ಬಂದಿರಲೂ ಸಾಕೇ ಹೊರತೂ ಜಕ್ಕಣಾಚಾರಿ ಎಂಬ ಯಾವೊಬ್ಬ ಶಿಲ್ಪಿಯೂ ಇತಿಹಾಸದಲ್ಲಿ ಇದ್ದ ಯಾವ ದಾಖಲೆಯೂ ಇಲ್ಲ. ಚಾಲುಕ್ಯರ ಗುಲ್ಬರ್ಗ, ಏವೂರಿನಂಥ ಕೆಲ ದೇವಾಲಯಗಳಲ್ಲಿ ಇದೇ ಶಿಲ್ಪವಿದೆ.  ಹೊಯ್ಸಳರು ನರ’ಸಿಂಹ’ನ ಆರಾಧಕರು. ಹಾಸನದ ಎಂಟು ದಿಕ್ಕುಗಳಲ್ಲೂ ಹೊಯ್ಸಳರ ಎಂಟು ನರಸಿಂಹ ದೇವಸ್ಥಾನಗಳೇ ಅದಕ್ಕೆ ಸಾಕ್ಷಿ. ಬೇಲೂರು, ಹಳೆಬೀಡು ಸೇರಿ ಹೆಚ್ಚಿನೆಲ್ಲ ಕಡೆ ಪ್ರಾಂಗಣದಲ್ಲಿ, ಮುಖ್ಯದ್ವಾರದ ಮೇಲೆ ನರಸಿಂಹನ ಉಬ್ಬುಶಿಲ್ಪಗಳಿವೆ. ಜೊತೆಗೆ ಚಾಲುಕ್ಯರಂತೆ ಹೊಯ್ಸಳರೂ ಚಾಮುಂಡೇಶ್ವರಿಯ ಆರಾಧಕರು. ಆದ್ದರಿಂದ  ಚಾಮುಂಡಿಯ ವಾಹನವಾದ ಸಿಂಹ ರಾಕ್ಷಸರ ಮೇಲೆ ದಾಳಿ ಮಾಡುತ್ತಿದ್ದಂಥ ಶಿಲ್ಪವನ್ನು ಅವರು ತಮ್ಮ ದೇವಾಲಯಗಳಲ್ಲಿ ಕಡೆದಿರಬಹುದು. ಯಾಕೆಂದರೆ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲಿ ಚಾಮುಂಡೇಶ್ವರಿಯ ಶಿಲ್ಪಗಳಿವೆ. ಅವರ ನಾಣ್ಯಗಳ ಮೇಲೆ ಸಿಂಹ ಅಥವಾ ಸಿಂಹವಾಹನೆ ದುರ್ಗೆಯ ಚಿತ್ರಗಳನ್ನು ಕಾಣಬಹುದು. ವಿಷ್ಣುವರ್ಧನನ ನಾಣ್ಯಗಳಲ್ಲಿ ಒಂದು ಕಡೆ ಸಿಂಹದ ಚಿತ್ರವೂ ಇನ್ನೊಂದೆಡೆ ತಳಕಾಡುಗೊಂಡ ವಂಬ ಬರಹವಿದೆ. ಇನ್ನೊಂದು ನಾಣ್ಯದಲ್ಲಿ ಒಂದೆಡೆ ಹುಲಿಯೂ ಇನ್ನೊಂದೆಡೆ ನೊಳಂಬವಾಡಿಗೊಂಡ ಎಂಬ ಬರಹವೂ ಮೂರನೇ ಥರದ ನಾಣ್ಯದಲ್ಲಿ ಮಲಪೆರುಳ್ಗೊಂಡ ಎಂಬ ಬರಹವೂ ಇದೆ. ಇನ್ನು ಒಂದನೇ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ದುರ್ಗೆಯ ಚಿತ್ರ ಇನ್ನೊಂದೆಡೆ ಶ್ರೀಪತಾಪನಾರಸಿಂಹ ಎಂಬ ಬರಹವಿದ್ದರೆ ಇಮ್ಮಡಿ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ಸಿಂಹ ಇನ್ನೊಂದೆಡೆ ನರಸಿಂಹನ ಚಿತ್ರವಿದೆ. ಹಾಗಾಗಿ ದುರ್ಗೆಯ ವಾಹನ ಸಿಂಹ ಹಾಗೂ ನರ’ಸಿಂಹ’ನ ಕಾರಣದಿಂದಲೇ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಆ ಶಿಲ್ಪವಿದೆಯೇ ಹೊರತೂ ಅದು ಸಳ ಹುಲಿ(ಸಿಂಹ)ಯನ್ನು ಕೊಲ್ಲುವ ಶಿಲ್ಪವಾಗಿರಲು ಸಾಧ್ಯವಿಲ್ಲ.
ವಿಷ್ಣುವರ್ಧನನ ನಾಣ್ಯ(ಒಂದೆಡೆ ಹುಲಿ)

ವಿಷ್ಣುವರ್ಧನನ ನಾಣ್ಯ(ಇನ್ನೊಂದೆಡೆ ಮಲಪೆರುಳ್ಗೊಂಡ ಎಂಬ ಬರಹ )


ಶಾರ್ದೂಲದ ಚಿತ್ರವಿರುವ ಇನ್ನೊಂದು ನಾಣ್ಯ