Pages

Friday, December 12, 2014

ಪ್ರಥ್ವಿರಾಜ ರಾಸೋ

           ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದು ಬ್ರಿಟಿಷರ ವಿರುದ್ಧ ಗಾಂಧಿ-ನೆಹರೂರಿಂದ ಎಂಬ ಭಾರೀ ಭ್ರಮಾತ್ಮಕ ಸ್ಥಿತಿಯಲ್ಲಿ ಹೆಚ್ಚಿನ ಜನ ಬದುಕುತ್ತಿದ್ದಾರೆ. ಅದರೆ ಅವರಿಗೆ ಗೊತ್ತಿಲ್ಲ. ಬ್ರಿಟಿಷರಿಗಿಂತ ಸುಮಾರು ಏಳೆಂಟು ನೂರು ವರ್ಷಗಳಿಗೆ ಮುಂಚೆಯೇ ನಮ್ಮಲ್ಲಿ ವಿದೇಶಿ ಆಕ್ರಮಣಗಳು ಶುರುವಾಗಿವೆ, ಅವುಗಳ ವಿರುದ್ಧ ಇಲ್ಲಿನ ಜನ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆಂದು. ವಿದೇಶಿಗ ಗಜನಿ, ಘೋರಿ, ಮೊಘಲರ ಕಾಲು ಭಾಗವೂ ದೇಶೀ ಹೋರಾಟಗಾರರ ಚರಿತ್ರೆ ತಿಳಿಸಲು ನಮ್ಮ ಇತಿಹಾಸದ ಪುಸ್ತಕಗಳಿಗೆ ಮನಸ್ಸಿಲ್ಲ.
        ಹದಿನೇಳು ಬಾರಿ ಭಾರತದ ಮೇಲೆ ದಂಡೆತ್ತಿ ಬಂದವನು ಮಹಮ್ಮದ್ ಘಜನಿ. ಅವನನ್ನು ತಡೆಯುವ ಶಕ್ತಿಯಿದ್ದ ಒಬ್ಬೇ ಒಬ್ಬ ಈ ನೆಲದಲ್ಲಿರಲಿಲ್ಲ. ಸೋಮನಾಥ, ಮಥುರಾದಂಥ ಸಹಸ್ರ ಸಹಸ್ರ ಪ್ರಚಂಡ ದೇವಾಲಯಗಳು ಅವನ ಆಕ್ರಮಣಕ್ಕೆ ಬುಡಕಡಿದ ಬಾಳೆಯಂತೆ ಬೋರಲು ಬಿದ್ದಿದ್ದವು. ಅಂಥವನನ್ನೇ ನೆಲಕ್ಕಚ್ಚುವಂತೆ ಸೋಲಿಸಿದ ಏಕೈಕ ಅರಸನೆಂಬ ಕೀರ್ತಿಗೆ ಪಾತ್ರವಾಗಿರುವವನು ಯಾರು ಗೊತ್ತಾ? ಆತ ಪಂಜಾಬಿನ ಆನಂದಪಾಲ.
        ಇನ್ನೊಬ್ಬ ಹುಟ್ಟಿದ್ದು ವೈಶ್ಯಕುಲದಲ್ಲಿ. ಸಾಧಾರಣ ವ್ಯಾಪಾರಿಯ ಮಗನಾಗಿ. ಶಾಲೆಯ ಮುಖ ನೋಡಿದವನಲ್ಲ. ಹೊಟ್ಟೆಪಾಡಿಗಾಗಿ ಹರ್ಯಾಣದ ರೇವಾರಿ ಪಟ್ಟಣದ ಬೀದಿಗಳಲ್ಲಿ ಕಲ್ಲುಪ್ಪು ಮಾರತೊಡಗಿದ. ಮಾರ್ಕೇಟಿನಲ್ಲಿ ಸಾಮಾನು ತೂಕ ಮಾಡುವ ಸರ್ಕಾರಿ ಕಾರಕೂನನ ಕೆಲಸ ಸಿಕ್ಕಿತು. ಈತನ ಕೆಲಸ ಮೆಚ್ಚಿ ಯಾರೋ ಅಂಚೆ ಇಲಾಖೆಯಲ್ಲಿ ಗೂಢಚಾರನ ಕೆಲಸ ಕೊಡಿಸಿದರು. ಅಲ್ಲಿಂದಾತ ಬೆಳೆದ ಪರಿಯೇ ರೋಚಕ. ಸಣಕಲು ಶರೀರದ, ಸರಿಯಾಗಿ ಕುದುರೆ ಹತ್ತಲು, ಕತ್ತಿ ಹಿಡಿಯಲು ಬಾರದಿದ್ದರೂ ಅಪ್ರತಿಮ ಮೇಧಾಶಕ್ತಿಯಿಂದಲೇ ಇಪ್ಪತ್ತೆರಡು ಯುದ್ಧಗಳನ್ನು ಗೆದ್ದು ಮೊಘಲ್ ಸರದಾರರಿಗೆಲ್ಲ ಮಣ್ಣುಮುಕ್ಕಿಸಿದ, ಇವನ ಹೆಸರು ಕೇಳಿದರೆ ನಡುಗುತ್ತಿದ್ದ ಅಕ್ಬರ್ ದ ಗ್ರೇಟ್ ಸರಹಿಂದ್‌ನಿಂದ ಕಾಬೂಲಿಗೆ ಪರಾರಿಯಾಗಲು ತಯಾರಾಗಿದ್ದ. ಮುನ್ನೂರೈವತ್ತು ವರ್ಷಗಳ ಇಸ್ಲಾಂ ಆಳ್ವಿಕೆಯನ್ನು ದೇಶದಲ್ಲಿ ಕೊನೆಗೊಳಿಸಿ ದೇಹಲಿಯ ಸಿಂಹಾಸನವನ್ನೇರಿದ ಏಕೈಕ ಹಿಂದೂ ರಾಜ, ದೇಶೀ ಇತಿಹಾಸಕಾರರಿಂದ ಮಧ್ಯಯುಗದ ನೆಪೋಲಿಯನ್ ಎಂದು ಶ್ಲಾಘಿಸಲ್ಪಟ್ಟ ಇವನು ಮಹಾರಾಜ ಹೇಮಚಂದ್ರ ವಿಕ್ರಮಾದಿತ್ಯ. ಅವನ ಅದೃಷ್ಟ ನೆಟ್ಟಗಿರಲಿಲ್ಲ. ಯುದ್ಧವೊಂದರಲ್ಲಿ ಕಣ್ಣಿಗೆ ಬಾಣ ತಾಗಿ ಸಾಯದಿದ್ದರೆ ವಿದೇಶಿಗರ ಆಕ್ರಮಣ ಬಿಡಿ ಅವರಿಗೆ ಭಾರತದತ್ತ ಕಣ್ಣೆತ್ತಿ ನೋಡಲೂ ಧೈರ್ಯವಿರುತ್ತಿರಲಿಲ್ಲ,  ಉಹೂಂ..ನಾವೋದಿದ ಯಾವ ಪುಸ್ತಕಗಳಲ್ಲೂ ಇವನ ಹೆಸರಿಲ್ಲ.
ಸಾಮ್ರಾಟ ಹೇಮು

           ಸಿಂಹಾಸನವೇರುವ ಕಾಲದಲ್ಲೇ ಒಂದು ಕಣ್ಣಿಲ್ಲ. ಯುದ್ಧದಲ್ಲಿ ಒಂದು ಕೈ ಇನ್ನೊಂದು ಕಾಲು ಕಳೆದುಕೊಂಡಾಗಿದೆ. ಆದರೂ ಸುತ್ತಲಿದ್ದ ಸುಲ್ತಾನರನ್ನೆಲ್ಲ ಹದಿನೆಂಟು ಯುದ್ಧಗಳಲ್ಲಿ ಸಾಲುಸಾಲಾಗಿ ಸೋಲಿಸಿ ಅವರ್ಯಾರೂ ಸಿಂಧ್‌ನಿಂದ ಯಮುನಾತೀರದವರೆಗಿನ ರಾಜ್ಯದಲ್ಲಿ ಮತ್ತೆ ಒಳಹೊಕ್ಕದಂತೆ ಮಾಡಿದ. ದೇಹಲಿ ಸುಲ್ತಾನ್ ಇಬ್ರಾಹಿಂ ಲೋಧಿಯನ್ನೇ ಮಣಿಸಿ ಇಡೀ ಭಾರತದಲ್ಲಿ ತನ್ನೆದುರು ಯಾರೂ ಇಲ್ಲವೆಂದು ನಿರೂಪಿಸಿದ. ಬಾಬರನಂಥ ಬಾಬರನನ್ನೇ ಒದ್ದೋಡಿಸಿದವನು ಪ್ರಪಂಚದ ಸಾರ್ವಕಾಲಿಕ ಮಹಾವೀರರಲ್ಲಿ ಅಗ್ರಗಣ್ಯ ಮೇವಾಡದ ಮಹಾರಾಣ ಸಂಗ್ರಾಮ ಸಿಂಹ.
ರಾಣಾ ಸಂಗ

         ರಾಜ್ಯವಿಲ್ಲ, ಕಿರೀಟವಿಲ್ಲ, ಸೈನ್ಯವಿಲ್ಲ, ಕೈಯಲ್ಲಿ ಕವಡೆ ಕಾಸಿಲ್ಲ. ಸಹಾಯ ಕೇಳೋಣವೆಂದರೆ ಅಕ್ಕಪಕ್ಕದ ಅಂಬೇರಿ, ಜೋಧಪುರ, ಬಿಕಾನೇರಿನ ರಾಜರೆಲ್ಲ ಅಕ್ಬರನೊಂದಿಗೆ ಸಂಧಿ ಮಾಡಿಕೊಂಡು ತಿರುಗಿ ಬಿದ್ದಿದ್ದಾರೆ. ಸ್ವಂತ ಸಂಬಂಧಿಕರೇ ಕೈಕೊಟ್ಟು ಮೊಘಲ್ ಪಾಳಯ ಸೇರಿಕೊಂಡಿದ್ದಾರೆ. ಅಕ್ಬರ ಸಾಮ, ದಾನ, ಬೇಧ, ದಂಡಗಳನ್ನೆಲ್ಲ ಪ್ರಯೋಗಿಸಿ ಹಿಡಿಯಲೆತ್ನಿಸಿದರೂ ಈತ ಜಪ್ಪಯ್ಯ ಎನ್ನಲಿಲ್ಲ. ರೋಸಿಹೋದ ಅಕ್ಬರ ಸ್ನೇಹ ಹಸ್ತ ಚಾಚಿದ, ತನ್ನಷ್ಟೆ ದೊಡ್ಡ ಸಿಂಹಾಸನವಿತ್ತು ಪಕ್ಕದಲ್ಲೇ ಕುಳಿಸಿಕೊಳ್ಳುವುದಾಗಿ ಆಮಿಷ ತೋರಿಸಿದರೂ ಆತ ತುರ್ಕರ ಆಹ್ವಾನ ಒಪ್ಪಿಕೊಳ್ಳಲಿಲ್ಲ. ಹೆಂಡತಿ ಮಕ್ಕಳೊಡನೆ ಕಾಡು ಪಾಲಾದರೂ, ವಿದೇಶಿಗ ಅಕ್ಬರನಿಗೆ ತಲೆ ಬಾಗಿಸದೇ, ಸಂಧಿ ಮಾಡಿಕೊಳ್ಳದೇ ದೇಶದ ಸ್ವಾತತ್ರ್ಯಕ್ಕೆ ಬಿಡದೇ ಕಾದಾಡಿದ, ಅಕ್ಬರ್ ಕಿತ್ತುಕೊಂಡ ತನ್ನ ನೆಲದ ಇಂಚಿಂಚನ್ನೂ ಏಕಾಂಗಿಯಾಗಿ ವಶಪಡಿಸಿಕೊಂಡವನು ರಾಣಾ ಪ್ರತಾಪ್.
ರಾಣಾ ಪ್ರತಾಪ್
ಇತಿಹಾಸದಲ್ಲಿ ಮರೆಯಲಾಗದ, ಮರೆಯಬಾರದ ಮಹಾವೀರರು ಒಬ್ಬರೇ ಇಬ್ಬರೇ?
ಅಷ್ಟೇ ಗಾಢವಾಗಿ ಕಾಡುವ ಮತ್ತೊಬ್ಬ ನಾವು ಮರೆತ ಪ್ರಥ್ವಿರಾಜ ಚೌಹಾನ್.....
          ಪ್ರಥ್ವಿರಾಜನ ಲವ್ ಸ್ಟೋರಿ ಕಾಲಕಾಲದಿಂದಲೂ ಎಲ್ಲರೂ ಕೇಳಿದ್ದೇ, ನೋಡಿದ್ದೇ, ತಿಳಿದಿದ್ದೇ.... ಕನೋಜಿನ ಜಯಪಾಲನ ಮಗಳು ಸಂಯುಕ್ತೆ ಮತ್ತು ಪ್ರಥ್ವಿರಾಜ ಪರಸ್ಪರ ಪ್ರೀತಿಸುತ್ತಿದ್ದರು. ಜಯಚಂದ್ರನಿಗೋ ಪ್ರಥ್ವಿರಾಜನನ್ನು ಕಂಡರಾಗದು. ಹಾಗಾಗಿ ಸಂಯುಕ್ತೆಯ ಸ್ವಯಂವರಕ್ಕೆ ಯಾರನ್ನು ಕರೆದರೂ ಪ್ರಥ್ವಿರಾಜನನ್ನು ಆಹ್ವಾನಿಸಲಿಲ್ಲ. ಅದರ ಬದಲು ಅವನ ಮೂರ್ತಿಯೊಂದನ್ನು ಬಾಗಿಲ ಬಳಿ ದ್ವಾರಪಾಲಕರ ಜಾಗದಲ್ಲಿ ನಿಲ್ಲಿಸಿದ. ಸ್ವಯಂವರದ ಸಮಯದಲ್ಲಿ ವರಮಾಲೆ ಕೈಯಲ್ಲಿ ಹಿಡಿದು ಬಂದ ಸಂಯುಕ್ತಾ ಉಳಿದ ರಾಜಕುಮಾರರನ್ನು ಕತ್ತೆತ್ತಿಯೂ ನೋಡದೆ ಸರಸರನೆ ನಡೆದು ಪ್ರಥ್ವಿರಾಜನ ಮೂರ್ತಿಗೆ ಮಾಲೆ ಹಾಕಿದಳು. ಯಾವ ಮಾಯದಲ್ಲಿದ್ದನೋ ಏನೋ, ಅದೇ ವೇಳೆ ಮೂರ್ತಿಯ ಹಿಂದೆ ಅಡಗಿದ್ದ ಪ್ರಥ್ವಿರಾಜ ಅವಳನ್ನೆತ್ತಿಕೊಂಡು ಕುದುರೆಯೇರಿ ನೋಡನೋಡುತ್ತಿದ್ದಂತೆ ಪರಾರಿಯಾದ. ಮುಂದೆ ಅವರಿಬ್ಬರೂ ಮದುವೆಯಾದರು. ಇದರ ನಂತರ ಜಯಚಂದ ಪ್ರಥ್ವಿರಾಜರ ಹಗೆ ಇನ್ನಷ್ಟು ಹೆಚ್ಚಾಯಿತು. ಇದೇ ಸಿಟ್ಟಿನಲ್ಲಿ ಜಯಚಂದ್ರ ಶಹಾಬುದ್ದೀನ್ ಘೋರಿಯೊಡನೆ ಕೈ ಜೋಡಿಸಿ ಪ್ರಥ್ವಿರಾಜನ ಮೇಲೆ ಯುದ್ಧ ಘೋಷಿಸಲು ಕಾರಣನಾದ ಎನ್ನುತ್ತದೆ ಬಹಳಷ್ಟು ಕಥೆಗಳು. ಇಷ್ಟಾದರೆ ಕಷ್ಟವಿಲ್ಲ. ಮೊದಲ ತರೈನ್ ಯುದ್ಧದಲ್ಲಿ ಘೋರಿ ಸೋತರೂ ಎರಡನೇ ತರೈನ್ ಯುದ್ಧದಲ್ಲಿ ಘೋರಿಯು ಪ್ರಥ್ವಿರಾಜನನ್ನು ಸೋಲಿಸಿ ಆತನನ್ನು ಕೊಂದನೆಂದೂ, ಸಂಯುಕ್ತಳನ್ನು ಮದುವೆಯಾದನೆಂದೂ ರಸವತ್ತಾದ ಬಗೆಬಗೆಯ ಕಥೆಗಳಿವೆ. ಪ್ರಥ್ವಿರಾಜನ ಕಣ್ಣೆದುರೇ ಘೋರಿ ಸಂಯುಕ್ತಳ ಮೇಲೆ ಅತ್ಯಾಚಾರವೆಸಗಿದನೆಂದು ಇನ್ನು ಕೆಲ ಇತಿಹಾಸಕಾರರು ಸ್ವಂತ ಕಂಡವರಂತೆ ವರ್ಣಿಸಿದ್ದಾರೆ. ಸಂಯುಕ್ತಳ ಜೊತೆಗಿನ ಪ್ರೇಮದಲ್ಲಿ ಕುರುಡಾದ ಪ್ರಥ್ವಿರಾಜ ಕೇವಲ ಒಂದು ಹೆಣ್ಣಿಗೋಸ್ಕರ ಬಲಾಢ್ಯ ಅರಸರ ಶತ್ರುತ್ವ ಕಟ್ಟಿಕೊಂಡು ಭಾರತದಲ್ಲಿ ಇಸ್ಲಾಮಿನ ಆಳ್ವಿಕೆ ಶುರುವಾಗಲು ಮುನ್ನುಡಿ ಬರೆದವನೆಂದು ಹಲ ಇತಿಹಾಸಕಾರರು ತೆಗಳಿದರೆ, ಕೆಲ ಕಥೆಗಾರರು ತನ್ನ ಪ್ರೇಯಸಿಗಾಗಿ ತನ್ನ ರಾಜ್ಯವನ್ನೂ ಪ್ರಾಣವನ್ನೂ ಕಳೆದುಕೊಂಡ ಅಮರಪ್ರೇಮಿಯೆಂದು ಲೈಲಾ-ಮಜನೂರ ಸಾಲಿಗೆ ಸೇರಿಸಿ
      ನನ್ನ ಸಂಶಯವೆಂದರೆ ದೇಹಲಿಯನ್ನಾಳಿದ ತುವರ ವಂಶದ ಕೊನೆಯ ದೊರೆ ಅನಂಗಪಾಲನ ಮೊದಲ ಮಗಳು ಕಮಲಾದೇವಿಯ ಮಗ ಪೃಥ್ವಿರಾಜ, ಎರಡನೇ ಮಗಳು ವಿಮಲಾದೇವಿಯ ಮಗ ಜಯಚಂದ್ರ. ಅಲ್ಲಿಗೆ ಪೃಥ್ವಿರಾಜ ಜಯಚಂದ್ರರಿಬ್ಬರೂ ಅಣ್ಣ-ತಮ್ಮಂದಿರೆಂದಾಯ್ತು. ಸ್ವಂತ ಅಣ್ಣನ ಮಗಳನ್ನು ಮದುವೆಯಾಗುವ ಪದ್ಧತಿ ಹಿಂದೂಗಳಲ್ಲಿದೆಯೇ? ಅಥವಾ ಪೃಥ್ವಿರಾಜನ ಕುರಿತು ಅಡಗೂಲಜ್ಜಿ ಕತೆ ಬರೆದ ಇತಿಹಾಸಕಾರರಿಗೆ ತಲೆ ಇಲ್ಲವೇ? ಪ್ರಥ್ವಿರಾಜ ರಾಸೋ ಒಂದು ರೊಮ್ಯಾಂಟಿಕ್ ರಮ್ಯ ಪ್ರೇಮ ಕಾವ್ಯ. ಪ್ರಥ್ವಿರಾಜ ರಾಸೋವನ್ನು ರಚಿಸಿದವನು ಪ್ರಥ್ವಿರಾಜನ ಆಸ್ಥಾನಕವಿ ಮತ್ತು ಗೆಳೆಯ ಚಾಂದ್ ಬರ್ದಾಯ್ ಅಥವಾ ಚಾಂದಭಟ್ಟ. ಕಾಲಕ್ರಮೇಣ ಬಹಳಷ್ಟು ಪ್ರಕ್ಷೇಪಗಳಿಗೊಳಗಾಗಿದೆಯಾದರೂ ಇದು ಸಂಪೂರ್ಣ ಸುಳ್ಳಲ್ಲ.  ಮೊಘಲರ ಕಾಲದಲ್ಲಿ ಈ ಪ್ರೇಮಕಥೆಯನ್ನು ಕೇಳದವರೇ ಇರಲಿಲ್ಲವೆಂದರೆ ಅದರ ಪ್ರಸಿದ್ಧಿಯನ್ನರಿಯಬಹುದು. ಅದನ್ನು ಹೊರತುಪಡಿಸಿದರೆ ಚೌಹಾನನ ಬಗೆಗಿನ ಅಧಿಕೃತ ಇತಿಹಾಸವೆನಿಸಿಕೊಂಡಿರುವ ಹಮೀರ್ ಕಾವ್ಯ ಮತ್ತು ಪ್ರಥ್ವಿರಾಜ ವಿಜಯದಲ್ಲೆಲ್ಲೂ ಸಂಯುಕ್ತಳ ಉಲ್ಲೇಖವೇ ಇಲ್ಲ. ಘೋರಿಯ ಕಾಲದ ಪರ್ಷಿಯನ್ ಇತಿಹಾಸಕಾರರು, ಆರ್.ಸಿ. ಮಜೂಂದಾರರ ’ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್’ನಲ್ಲಿಯೂ ಸಂಯುಕ್ತಳ ಬಗ್ಗೆ ಒಂದಕ್ಷರವೂ ಇಲ್ಲ. ಆಶ್ಚರ್ಯವೇ! ಸಂಯುಕ್ತಳ ಕಥೆಯೇ ಸುಳ್ಳೆಂದ ಮೇಲೆ ಪ್ರಥ್ವಿರಾಜ ಜಯಚಂದ್ರರ ಮಧ್ಯದ ಅಂತಃಕಲಹದಿಂದಾಗಿಯೇ ಘೋರಿಯ ಕೈಯಲ್ಲಿ ಪ್ರಥ್ವಿರಾಜ ಸೋತನೆಂದರೇನರ್ಥ?
1191ರಲ್ಲಿ ಪಂಜಾಬಿನ ಪ್ರಾಂತ್ಯದ ತಾನೇಶ್ವರ್ ಸಮೀಪ ನಡೆದ ತಾರಾಯಿನ್ ಯುದ್ಧದಲ್ಲಿ ಸೋತ ಘೋರಿಯನ್ನು ಮುಂದೆ ಪ್ರಥ್ವಿರಾಜ ಒಂದೆರಡಲ್ಲ, ಏಳು ಬಾರಿ ಕ್ಷಮಿಸಿ ಕಳುಹಿಸಿದ್ದ. ಎರಡನೇ ತರೈನ್ ಯುದ್ಧದಲ್ಲಿಯೂ ಪ್ರಥ್ವಿರಾಜನ ಜೊತೆ ಅಕ್ಕಪಕ್ಕದ ರಾಜ್ಯದ 150 ರಾಜಕುಮಾರರ ಸಹಿತ ಮೂರು ಲಕ್ಷ ಅಶ್ವದಳ, ಮೂರು ಸಾವಿರ ಗಜದಳಕ್ಕಿಂತ ಹೆಚ್ಚಿನ ಸೇನೆಯೆದುರು ಘೋರಿಯ ಸೈನ್ಯ ಯಾತಕ್ಕೂ ಸಾಲುತ್ತಿರಲಿಲ್ಲವೆಂದು ಫಿರಸ್ತಾ,ತಬಕತ್-ಇ-ನಾಸಿರಿಯಲ್ಲಿ ಮಿನಾಜುದ್ದೀನ್ ಸಿರಾಜ್‌  ಮತ್ತು ತಾಜು-ಇ-ಮಹಾಸಿರ್‌ನಲ್ಲಿ ಹಸನ್ ನಿಜಾಮಿಯಂಥ ಪ್ರಖ್ಯಾತ ಪರ್ಷಿಯನ್ ಇತಿಹಾಸಕಾರರೇ ಬರೆದುಕೊಂಡಿದ್ದಾರೆ. ಈ ಯುದ್ಧದಲ್ಲೂ ಪ್ರಥ್ವಿರಾಜನೇ ಗೆಲ್ಲಬೇಕಿತ್ತು.
         ಹೇಳಿಕೇಳಿ ಔದಾರ್ಯದಲ್ಲಿ ಉಳಿದ ಭಾರತೀಯ ರಾಜರಿಗಿಂತ ಪ್ರಥ್ವಿರಾಜ ಒಂದು ಕೈ ಮೇಲೆಯೇ. ನನ್ನ ಕೈಯಲ್ಲಿ ಪದೇ ಪದೇ ಯಾಕೆ ಸೋಲುತ್ತೀರಿ? ಹಿಂದಿರುಗಿ ಹೋದರೆ ಕ್ಷೇಮವಾಗಿ ಕಳುಹಿಸಿಕೊಡುತ್ತೇನೆ ಎಂದು ಘೋರಿಗೆ ಸಂದೇಶ ಕಳುಹಿಸಿದ. ಇಷ್ಟೆಲ್ಲ ಒಳ್ಳೆಯತನ ತೋರಿಸಿದ ಮೇಲೆ ಮಹಾಬುದ್ಧಿವಂತ ಘೋರಿ ಸುಮ್ಮನಿರುತ್ತಾನೆಯೇ? ಅಫಘಾನಿಸ್ತಾನದಲ್ಲಿರುವ ನಮ್ಮಣ್ಣ ಘಿಯಾಸುದ್ದೀನನ್ನು ಒಂದು ಮಾತು ತಿಳಿಸಿ ವಾಪಸ್ ಹೋರಡುತ್ತೇನೆ, ಅಲ್ಲಿಯವರೆಗೂ ಸ್ವಲ್ಪ ಸಮಯ ಕೊಡಿ ಎಂದು ಪ್ರತಿ ಸಂದೇಶ ಕಳುಹಿಸಿದ. ಪಾಪ, ಆತ ಹೇಳಿದ್ದು ನಿಜವಿರಬೇಕೆಂದು ರಜಪೂತರ ಪಡೆಗಳು ತಮ್ಮ ಪಾಳೆಯದಲ್ಲಿ ಆ ರಾತ್ರಿ ಸುಮ್ಮನೇ ಮಲಗಿದ್ದವು, ಆದರೆ ಮರುದಿನ ಬೆಳಿಗ್ಗೆ ಮೂರನೇ ಜಾವದಲ್ಲಿ ಸೂರ್ಯ ಹುಟ್ಟುವ ಮೊದಲೇ ಪ್ರಥ್ವಿರಾಜನ ಪಾಳೆಯದ ಮೇಲೆ ಘೋರಿಯ ಪಡೆಗಳು ಮಿಂಚಿನಂತೆ ಮುಗಿಬಿದ್ದು ಮಲಗಿದ್ದವರನ್ನು ಅಲ್ಲಲ್ಲೇ ಕತ್ತರಿಸಿದವು. ಉಳಿದವರು ಲಗುಬಗೆಯಿಂದ ಶಸ್ತ್ರಗಳನ್ನೆತ್ತಿಕೊಂಡು ಹೋರಾಟಕ್ಕೆ ಸಿದ್ಧರಾಗುವುದರೊಳಗೆ ಇವನ ಅಶ್ವಾರೋಹಿಗಳು ಕಾಲ್ಕಿತ್ತಾಗಿತ್ತು. ನಾಲ್ಕೂ ದಿಕ್ಕಿನಿಂದಲೂ ದಾಳಿ ಮಾಡಿದಂತೆ ಮಾಡಿ, ತಿರುಗಿ ಬಿದ್ದಾಗ ಓಡುತ್ತಾ, ಹಿಂದುಗಡೆಯಿಂದ ಇನ್ನೊಂದು ಗುಂಪಿನಿಂದ ಆಕ್ರಮಣ ಮಾಡಿಸುವ ಆಟವಾಡಿಸುತ್ತ ಕೈಗೆ ಸಿಕ್ಕವರನ್ನೆಲ್ಲ ಘೋರಿಯ ಪಡೆಗಳು ಕೊಚ್ಚಿಹಾಕಿದವು. ಇದೇ ಯುದ್ಧದಲ್ಲಿ ಘೋರಿ ಪ್ರಥ್ವಿರಾಜನನ್ನು ಸೆರೆ ಹಿಡಿದು ಕೊಂದನೆಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಆತನ ಕಣ್ಣು ಕೀಳಿಸಿ ತನ್ನ ಸೆರೆಯಲ್ಲಿಟ್ಟುಕೊಂಡನೆಂದು ಇನ್ನು ಕೆಲ ಇತಿಹಾಸಕಾರರು ಬರೆದಿದ್ದಾರೆ. ಪ್ರಥ್ವಿರಾಜ ರಾಸೋದಲ್ಲಿ ಇನ್ನೊಂದು ಆಸಕ್ತಿದಾಯಕ ಕಥೆಯಿದೆ. ಪ್ರಥ್ವಿರಾಜನ ಕಣ್ಣು ಕೀಳಿಸಿದ ಘೋರಿ ಆತನನ್ನು ಅಫ್ಘಾನಿಸ್ತಾನಕ್ಕೆ ಕೊಂಡೊಯ್ದು ಅಲ್ಲಿ ಬಹುಕಾಲ ತನ್ನ ಸೆರೆಯಲ್ಲಿಟ್ಟುಕೊಂಡಿದ್ದನಂತೆ. ಈತನನ್ನು ಹೇಗಾದರೂ ಸೆರೆಯಿಂದ ಬಿಡಿಸಬೇಕೆಂದು ಪ್ರಥ್ವಿರಾಜನ ಆಪ್ತಮಿತ್ರ ಮತ್ತು ಕವಿ ಚಾಂದಭಟ್ಟ ಮಾರುವೇಷದಲ್ಲಿ ಘೋರಿಯ ಆಸ್ಥಾನ ಸೇರಿ ಆತನ ವಿಶ್ವಾಸ ಸಂಪಾದಿಸಿಕೊಂಡ. ಒಮ್ಮೆ ಘೋರಿಯೊಡನೆ ಮಾತನಾಡುತ್ತಾ ಪ್ರಥ್ವಿರಾಜ ಕುರುಡನಾದರೂ ಶಬ್ದವಿದ್ಯಾಪ್ರವೀಣನಾಗಿದ್ದು ಕೇವಲ ಶಬ್ದವನ್ನು ಕೇಳಿಯೇ ಬಾಣಬಿಡಲ್ಲನೆಂದೂ, ಆತನಿಗೆ ತನ್ನ ಗುರಿಯನ್ನು ನೋಡುವ ಅವಶ್ಯಕತೆಯೇ ಇಲ್ಲವೆಂದು ಹೊಗಳಿದನಂತೆ. ಘೋರಿಗೆ ಇದೇನೋ ಹೊಸ ವಿದ್ಯೆಯೆನಿಸಿತು. ಎಲ್ಲಿ ನೋಡಿಯೇ ಬಿಡೋಣವೆಂದು ಪ್ರಥ್ವಿರಾಜನನ್ನು ಸೆರೆಯಿಂದ ಎಳೆತರುವಂತೆ ಸೈನಿಕರಿಗೆ ಆಜ್ಞಾಪಿಸಿದ. ಬಿಲ್ವಿದ್ಯಾ ಪ್ರದರ್ಶನ ಏರ್ಪಡಿಸಲಾಯಿತು. ಪ್ರಥ್ವಿರಾಜ ಮೊಂಡು ಹಟ ಪ್ರದರ್ಶಿಸಿದ. ಅರಸನಾದ ತಾನು ಇನ್ನೊಬ್ಬ ಅರಸನನ್ನು ಹೊರತುಪಡಿಸಿ ಬೇರಾರಿಂದಲೂ ಆದೇಶ ಸ್ವೀಕರಿಸಲಾರೆ ಎಂದು.ತೂಗು ಹಾಕಿದ ಕಂಚಿನ ಜಾಗಟೆಯನ್ನು ಅದರ ಶಬ್ದವನ್ನು ಕೇಳಿ ಬಾಣ ಬಿಟ್ಟು ಛೇದಿಸುವಂತೆ ಸ್ವತಃ ಘೋರಿಯೇ ಬಾಯ್ಬಿಟ್ಟು ನಿರ್ದೇಶಿಸಿದ. ಅದೇ ಸಮಯಕ್ಕೆ ಚಾಂದಭಟ್ಟ ಘೋರಿ ನಿಂತ ಸ್ಥಳವನ್ನು ಪ್ರಥ್ವಿರಾಜನಿಗೆ ತಿಳಿಸಲು ’ಚಾರ್ ಬನ್ಸ್, ಚೌಬೀಸ್ ಗಜ್, ಅಂಗುಲ್ ಅಷ್ಟ ಪ್ರಮಾಣ್ | ತಾ ಊಪರ್ ಹೈ ಸುಲ್ತಾನ್, ಚೂಕೇ ಮತ್ ಚೌಹಾನ್’ ಎಂದೊಂದು ಒಂದು ಹಾಡು ಕಟ್ಟಿ ಹೇಳಿದ. ಮೊದಲ ಬಾಣ ಸರಿಯಾಗಿ ಗುರಿಮುಟ್ಟಿತು. ಆಶ್ಚರ್ಯಗೊಂಡ ಘೋರಿ ಶಭಾಷ್ ಎಂದು ಉದ್ಗಾರ ತೆಗೆದನಂತೆ. ಶಬ್ದ ಬಂದೆಡೆಯಲ್ಲಿ ಪ್ರಥ್ವಿರಾಜ ಮುಂದಿನ ಬಾಣ ಪ್ರಯೋಗಿಸಿದ. ಅದು ಘೋರಿಯ ಗಂಟಲನ್ನು ಸೀಳಿ ಹೊರಬಂದಿತ್ತು. ಮುಂದೆ ಶತ್ರುಗಳ ಕೈಯಲ್ಲಿ ಸಾಯಲು ಇಷ್ಟವಿಲ್ಲದೇ ಪ್ರಥ್ವಿರಾಜ ಮತ್ತು ಚಾಂದಭಟ್ಟ ಪರಸ್ಪರ ಕತ್ತಿಯಿಂದ ತಿವಿದುಕೊಂಡು ಸತ್ತರೆನ್ನುತ್ತದೆ ರಾಸೋ. ಮುಂದೆ ಇದೇ ಕಥೆಯನ್ನು ಚಾಂದನ ಮಗ ಬರೆದು ಮುಗಿಸಿದನಂತೆ. ಇದೇನು ಪೂರ್ತಿ ಸುಳ್ಳಲ್ಲ.
ಪ್ರಥ್ವಿರಾಜ
ಈಕಾಲದ ನವಪ್ರೇಮಿಗಳ ಕಣ್ಣಲ್ಲಿ ದಳದಳನೆ ಅಶ್ರುಧಾರೆಗಳುರುಳುವಂತೆ ಮಾಡಿದ್ದಾರೆ. ಸಂಯುಕ್ತಳ ಕಾರಣದಿಂದ ನಡೆದ ಘರ್ಷಣೆಯಲ್ಲಿ ಭಾರೀ ನರಸಂಹಾರವಾಯಿತೆಂದು, ಅದಕ್ಕೆ ಪ್ರಥ್ವಿರಾಜನ ಹುಚ್ಚು ಪ್ರೀತಿಯೇ ಕಾರಣವೆಂದು ನೆಹರೂ ಕೂಡ ತಮ್ಮ ಡಿಸ್ಕವರಿ ಆಫ್ ಇಂಡಿಯಾದಲ್ಲಿ ಅಲವತ್ತುಕೊಂಡಿದ್ದಾರೆ. ಛೇ....ಎಂಥಾ ವೀರನ ಎಂಥಾ ಸ್ಟೋರಿ!
ಮಹಮ್ಮದ್ ಘೋರಿ

         ಅಫಘಾನಿಸ್ತಾನದ ಮಧ್ಯಪೂರ್ವದಲ್ಲಿರುವ ಘಜನಿ ಪಟ್ಟಣದ ಹೊರಭಾಗದಲ್ಲಿ ಮಹಮ್ಮದ್ ಘೋರಿಗೆ ಒಂದು ಭವ್ಯ ಸಮಾಧಿ ಕಟ್ಟಲಾಗಿದೆ. ಇದರ ಆವರಣದ ಹೊರಭಾಗದಲ್ಲಿ ಚಪ್ಪಲಿ ಕಳಚುವೆಡೆಯಲ್ಲಿ  ಒಂದು ಚಿಕ್ಕ ಸಮಾಧಿಯೂ ಇದೆ, ಪ್ರಥ್ವಿರಾಜ ಚೌಹಾನನದ್ದು. ತಮ್ಮ ಹೀರೋ ಘೋರಿಯನ್ನು ಕೊಂದ ವಿಲನ್ ಪ್ರಥ್ವಿರಾಜನೆಂಬ ಸಿಟ್ಟು ಅಲ್ಲಿನ ಜನರಲ್ಲಿ 900 ವರ್ಷಗಳಾದರೂ ತಣಿದಿಲ್ಲ. ಅಲ್ಲೇ ಚಪ್ಪಲಿ ಕಳಚಿ, ಆ ಸಮಾಧಿಗೆ ಅಲ್ಲಿಟ್ಟ ದಪ್ಪ ಹಗ್ಗದ ತುದಿಯಿಂದ ಎರಡೇಟು ಹೊಡೆದೇ ಘೋರಿಯ ದರ್ಶನಕ್ಕೆ ಭಕ್ತರು ಒಳಪ್ರವೇಶಿಸುವುದು. ಪ್ರಥ್ವಿರಾಜನ ಕುರುಹಗಳನ್ನು ಭಾರತಕ್ಕೆ ವಾಪಸ್ ತರಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆಯಾದರೂ ಯಾವ ಸರ್ಕಾರವೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹತ್ತು ವರ್ಷದ ಹಿಂದೆ ಅಫ್ಘಾನಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಮಾಜಿ ಪರ್ದಾನಿಗಳಾದ ಮನಮೋಹನ ಸಿಂಗ ಮತ್ತು ರಾಹುಲ ಗಾಂಧಿಯವರು ಬಾಬರನ ಸಮಾಧಿಗೆ ಭೇಟಿ ಕೊಟ್ಟು ಶಿರಬಾಗಿ ನಮಿಸಿ ಕೃತಾರ್ಥರಾದರೇ ಹೊರತೂ ಪ್ರಥ್ವಿರಾಜನತ್ತ ಕಣ್ಣೆತ್ತಿಯೂ ನೋಡಹೋಗಲಿಲ್ಲ. ಇದರ ಬಗ್ಗೆ ಇ.ಜೈವಂತ್ ಪೌಲ್‌ರ   “Arms and Armour: Traditional Weapons of India” ಪುಸ್ತಕದಲ್ಲಿ ಸವಿಸ್ತಾರವಾದ ವರ್ಣನೆಯಿದೆ.
ಎಷ್ಟಾದರೂ ಪ್ರಥ್ವಿರಾಜ ರಜಪೂತರ ಪ್ರತಿಷ್ಟೆ, ಆತ್ಮಾಗೌರವದ ಪ್ರತೀಕವಾಗಿ ಶತಮಾನಗಳಿಂದ ಆರಾಧಿಸಲ್ಪಟ್ಟವನಲ್ಲವೇ. ಈ ವಿಷಯ ತಿಳಿದ ಶೇರ್ ಸಿಂಗ್ ರಾಣಾ ಸುಮ್ಮನಿರಲಿಲ್ಲ.
        ಆತನೇನು ರಾಜವಂಶಸ್ಥನಲ್ಲ. ವಿ.ಐ.ಪಿಯೂ ಅಲ್ಲ. ರಾಜಸ್ಥಾನ ಮೂಲದ ಒಬ್ಬ ಸಾಮಾನ್ಯ ಸಾಮಾಜಿಕ ಕಾರ್ಯಕರ್ತನಷ್ಟೆ. 25 ಜುಲೈ 2001 ರಲ್ಲಿ ತನ್ನ ಜಾತಿಯ ಇಪ್ಪತ್ತಕ್ಕೂ ಹೆಚ್ಚು ಠಾಕುರ್‌ಗಳನ್ನು ಕಾರಣವಿಲ್ಲದೇ ಕೊಂದ ಸೇಡು ತೀರಿಸಿಕೊಳ್ಳಲು ಮಾಜಿ ಬ್ಯಾಂಡಿಡ್ ಕ್ವೀನ್, ೪೮ ಕ್ರಿಮಿನಲ್ ಕೇಸುಗಳ ಸರದಾರ್ತಿ, ಲೋಕಸಭಾ ಎಂಪಿ ಫೂಲನ್ ದೇವಿಯನ್ನು ಆಕೆಯ ಅಧಿಕೃತ ನಿವಾಸದಲ್ಲೇ ಒಳಹೊಕ್ಕು ಗುಂಡಿಟ್ಟು ಕೊಂದವನು ಇವನು. ಮುಂದೆ ತಾನೇ ಪೋಲೀಸರೆದುರು ಶರಣಾದ. ಆಜೀವ ಕಾರಾವಾಸವೂ ಆಯಿತು. ಅಷ್ಟಾಗಿದ್ದರೆ ಅವನ ಬಗ್ಗೆ ಬರೆಯುವ ಅಗತ್ಯತೆಯಿರಲಿಲ್ಲ. ಇವನ ಜೀವಮಾನದ ಮಿಶನ್ ಬೇರೆಯೇ ಇತ್ತು. ಅದಕ್ಕಾಗಿ ಆತ ಪ್ರಪಂಚದ ಅತಿ ದುರ್ಭೇದ್ಯ ಜೈಲುಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಿಂದ ಹಾಡುಹಗಲೇ ನಾಟಕೀಯ ರೀತಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡ. ಸಂಜಯ್ ಗುಪ್ತಾ ಎಂಬ ನಕಲಿ ಹೆಸರಲ್ಲಿ ಮೂರು ತಿಂಗಳ ಬಾಂಗ್ಲಾದೇಶಿ ವೀಸಾ ಪಡೆದುಕೊಂಡು ಕಲ್ಕತ್ತಾದ ಮೂಲಕ ಅಲ್ಲಿಗೆ ಹಾರಿದ. ಜಾಡು ಸಿಗದಿರಲೆಂದು ಸ್ಯಾಟಲೈಟ್ ಫೋನ್ ಬಳಸಿ ತನ್ನೆಲ್ಲ ವ್ಯವಹಾರಗಳನ್ನು ನಿಯಂತ್ರಿಸತೊಡಗಿದ. ಬಾಂಗ್ಲಾದಿಂದ ಆತ ಹೋಗಿದ್ದು ದುಬೈನ ಮೂಲಕ ಅಫ್ಘಾನಿಸ್ತಾನದ ಕಾಬೂಲ್‌ಗೆ. ತಾನು ಘೋರಿಯ ಸಮಾಧಿಯ ಬಗ್ಗೆ ಸಂಶೋಧನೆ ಮಾಡಲು ಬಂದ ಪಾಕಿಸ್ತಾನಿಯೆಂದು ಸ್ಥಳೀಯರನ್ನು ನಂಬಿಸಿ ರಾತ್ರೋರಾತ್ರಿ ಪ್ರಥ್ವಿರಾಜನ ಸಮಾಧಿಯ ಮಣ್ಣಗೆದುಕೊಂಡು ಭಾರತಕ್ಕೆ ತಂದ. ಸ್ಥಳೀಯರ ಸಹಕಾರದಿಂದ ಈಗ ಅದಕ್ಕೊಂದು ಸ್ಮಾರಕವನ್ನೂ ನಿರ್ಮಿಸಲಾಗಿದೆ. ಅವನಿಗಿದ್ದ ಧೈರ್ಯ ಅರವತ್ತು ವರ್ಷಗಳ ನಮ್ಮ ಸರ್ಕಾರಕ್ಕಿರಲಿಲ್ಲ. ಛೀ.
ಶೇರ್ ಸಿಂಗ್ ರಾಣಾ

ಪ್ರಥ್ವಿರಾಜನ ಸಮಾಧಿ 

Thursday, November 27, 2014

ವಿಶ್ವವ್ಯಾಪಿ ಸ್ಕಂದ


 

         
ಅಲೆಕ್ಸಾಂಡರ್ ದ ಗ್ರೇಟ್. ವಿಶ್ವವನ್ನೇ ಗೆಲ್ಲಹೊರಟ ಮಹಾವೀರ. ಈತ ಸಾಗಿಬಂದ ದೇಶಗಳೆಲ್ಲ ಇವನ ದಿಗ್ವಿಜಯವನ್ನು ನೋಡಿ ನಿಬ್ಬೆರಗಾಗಿ ಈತನನ್ನು ದೈವತ್ವಕ್ಕೇರಿಸಿ ದೇವಮಾನವನನ್ನಾಗಿಸಿವೆ. ಈತನ ಕುರಿತಾದ fairy taleಗಳೆಲ್ಲ ಗ್ರೀಕ್, ಲ್ಯಾಟಿನ್, ಸಿರಿಯಾ, ಇಥಿಯೋಪಿಯಾ, ಅರ್ಮೇನಿಯಾ, ಪರ್ಷಿಯಾ, ಅರಬ್ ಸೇರಿ ದೇಶದೇಶದ ಜನಪದದ ಬಾಯಲ್ಲಿ ಹರಿದಾಡಿ ಮನೆಮಾತಾಗಿದ್ದವು. ದೇವಮಾನವನೆಂದು ಘೋಷಿಸಿಕೊಂಡರೆ ಮನುಷ್ಯನನ್ನೇ ಪೂಜಿಸುವ ಜನ ನಾವು. ಇನ್ನು ಇಂಥ ಮಹಾವೀರನನ್ನು ಪೂಜಿಸದಿದ್ದರೆ? ಇಸ್ಲಾಂ ಮತ ಈತನನ್ನು ಪ್ರವಾದಿಯಾಗಿ ಸ್ವೀಕರಿಸಿ ಇಸ್ಕಂದರ್ ಎಂಬ ಹೆಸರು ನೀಡಿ ಆರಾಧಿಸತೊಡಗಿತು. ಅರಬ್ಬಿನಲ್ಲಿ ಈತ ದುಲ್ಕಾರ್ನೇನ್(ಎರಡು ಕೋಡಿನವ)ನೆಂದು ಹೆಸರಾದ. ಅರಬಿನ ಇಸ್ಕಂದರ್ ಪರ್ಶಿಯನ್ನಿನಲ್ಲಿ ಸಿಕಂದರ್ ಆಯಿತು. ಬುದ್ಧ ಜಾತಕ ಕಥೆಗಳಲ್ಲಿ ಬರುವ ಮೆಲಿಂದನೇ ಈ ಗ್ರೀಸೋ-ಬ್ಯಾಕ್ಟೇರಿಯನ್ ಅರಸು ಮೆನಂದರ್. ಮೆನಿಂದರ್ ಮೆಲಿಂದನಾದರೆ ಇಸ್ಕಂದರ್ ಏನಾಯ್ತು ಎಂಬ ಊಹೆ ನಿಮಗೆ ಬಿಟ್ಟಿದ್ದು. ಅಷ್ಟಕ್ಕೂ ಅಲೆಕ್ಸಾಂಡರ್ ಎಂಬವನೊಬ್ಬ ಚಕ್ರವರ್ತಿಯಿದ್ದನೇ? ಎಂಬ ಚರ್ಚೆ ಕೆಲ ಬೌದ್ಧಿಕ ಇತಿಹಾಸಕಾರರ ಮಧ್ಯೆ ಇನ್ನೂ ನಿಂತಿಲ್ಲ. ಇತಿಹಾಸದ ದೊಡ್ಡ ಕಷ್ಟವೆಂದರೆ ಹೆಚ್ಚಿನ ಆಧಾರಗಳೆಲ್ಲ ಲಿಖಿತ ರೂಪದಲ್ಲಿಲ್ಲದೇ ಇರುವುದು. factt ಮತ್ತು fictioinಗಳ ಮಧ್ಯೆ ತುಂಬ ತಿಳಿಯಾದ ವ್ಯತ್ಯಾಸವಿರುವುದು. ಇತಿಹಾಸ ಬಾಯಿಂದ ಬಾಯಿಗೆ ಹರಡಿ ಅದನ್ನು ಮತ್ಯಾರೋ ಬರೆದಿಡುವ ಹೊತ್ತಿಗೆ ಒಂದು ಹತ್ತಾಗಿರುತ್ತದೆ. ಅಸಲಿಗೆ ನಮ್ಮ ಇತಿಹಾಸದಲ್ಲೆಲ್ಲೂ ಜಕಣಾಚಾರಿಯೆಂಬ ವ್ಯಕ್ತಿಯೇ ಅಸ್ತಿತ್ವದಲ್ಲಿರಲಿಲ್ಲ. ಆದರೂ ಇವತ್ತಿಗೂ ಕರ್ನಾಟಕದ
ಅಲೆಕ್ಸಾಂಡರ್
ಆರುನೂರಕ್ಕೂ ಹೆಚ್ಚಿನ ದೇವಸ್ಥಾನಗಳನ್ನು ಆತ ನಿರ್ಮಿಸಿದ್ದನೆಂದು ಜನ ನಂಬಿಕೊಂಡು ಬರುತ್ತಿದ್ದಾರೆ. ಅಲೆಕ್ಸಾಂಡರಿನ ಬಗ್ಗೆ ಮೂಲಭೂತವಾಗಿ refere ಮಾಡಬಹುದಾದ ಆಕರಗಳು ಎರಡು. ಮೊದಲನೇಯದು  Arrian's Anabasis of Alexander ಮತ್ತು Plutarch's Life of Alexander. ಈ ಪ್ಲುಟಾರ್ಚ್ ಮತ್ತು ಅರಿನ್ ಇಬ್ಬರೂ ಸುಮಾರು ಕ್ರಿ.ಶ ಒಂದನೇ ಶತಮಾನದ ಅಂತ್ಯದಲ್ಲಿದ್ದ ಗ್ರೀಕ್ ಪ್ರಜೆಗಳು.
       ಅಲೆಕ್ಸಾಂಡರ್ ಅಥವಾ ಇಸ್ಕಂದರ್ ಒಬ್ಬ ರಾಜ’ಕುಮಾರ’. ಅವನೊಬ್ಬ ಸೇನಾನಿ ಅಥವಾ ಸೇನೆಯ ಅಧಿಪತಿ. ಇಸ್ಕಂದರ್‌ನ ಕೈಯಲ್ಲಿರುವುದು ದಂಡಾಯುಧದ ಆಕಾರದ ಭಲ್ಲೆ. ಇಸ್ಕಂದರ್ ಪರ್ಷಿಯಾವನ್ನು ಆಕ್ರಮಿಸಿ ಹೆಲನಿಕ್ ಸಾಮ್ರಾಜ್ಯವನ್ನು ಸ್ಥಾಪಿಸುವ ತನ್ನ ತಂದೆ ಫಿಲಿಪ್ ಆಫ್ ಮೆಸಡೋನಾದ ಆಸೆ ಪೂರೈಸಲು ದಂಡಯಾತ್ರೆ ಹೊರಟಿದ್ದು. ದಾರಾ ಅಥವಾ ದಾರಿಯಸ್‌ ಅಥವಾ ದಾರಯವುಸ್‌ನನ್ನು ಸೋಲಿಸಿದ್ದು ಇವನ ಜೀವಮಾನದ ಅತಿ ಮಹತ್ವದ ಘಟನೆ. ದಾರಿಯಸ್ ಎಂದರೆ ಪರ್ಷಿಯನ್ನಿನಲ್ಲಿ ರಕ್ಷಕ ಎಂದರ್ಥ. ದಾರಿಯಸ್ಸಿನ ಮರಣಾನಂತರ ಪರ್ಷಿಯಾದಲ್ಲಿ ಹಳೆಯ ದೇವರು ಮಜ್ದಾ ಅಹುರ್‌ನ ಜಾಗದಲ್ಲಿ ಇಸ್ಕಂದರ್ ಪ್ರತಿಷ್ಟಾಪಿಸಲ್ಪಟ್ಟ. ನಮ್ಮ ಪುರಾಣಗಳನ್ನು ಗಮನಿಸಿ. ’ಕುಮಾರ’ಸ್ವಾಮಿ ಅಥವಾ ಸುಬ್ರಹ್ಮಣ್ಯನೂ ದೇವಸೇನಾನಿ, ಧರಿಸಿದ್ದು ದಂಡಾಯುಧ, ಕೊಂದಿದ್ದು ತಾರಕನನ್ನು. ತಾರಕನಿಗೆ ರಕ್ಷಕ ಎಂಬರ್ಥವೂ ಇದೆ. ಹಾಗಾದರೆ ಈ ಮಜ್ದಾ ಅಹುರ್ ಏನು? ಅಹುರ್ ಎಂಬುದು ಅಸುರದ ಅಪಭೃಂಶ. ಮಜ್ದಾ ಎಂಬ ಶಬ್ದಕ್ಕೆ ಕೆಲ ಇತಿಹಾಸಕಾರರು ಮಹಿಷ, ಮಾಯಾ, ಮೇಧಗಳೆಂಬ ಅರ್ಥಗಳನ್ನೂ ಕೊಟ್ಟಿದ್ದಾರೆ. ಋಗ್ವೇದದ ’ಮಹಸ್ ಪುತ್ರಾಸೋ ಅಸುರಸ್ಯ ವೀರಃ’ ಶ್ಲೋಕವನ್ನಾಧರಿಸಿ ಮಜ್ದಾಕ್ಕೆ ಮಹಸ್ ಎಂಬರ್ಥ ಕೊಟ್ಟಿದ್ದೂ ಇದೆ. ಗ್ರೀಕರ ಬಾಯಲ್ಲಿ ಅಲೆಕ್ಸಾಂಡ್ರಿಯಾ ಅರಕೋಸಿಯಾ ಎಂದು ಹೆಸರಾಗಿದ್ದ ಪಟ್ಟಣದ ನಿಜನಾಮ ಕಂದಹಾರ್. ಇದು ಸ್ಕಂದ ಅಥವಾ ಕಂಧರ್‌ನಿಂದ ಉಧೃತವಾದದ್ದು.
        ಅಲೆಕ್ಸಾಂಡರ್ ಮದುವೆಯಾಗಿದ್ದು ಬಾಕ್ಟ್ರಿಯಾದ ರಾಜಕುಮಾರಿ ರೋಕ್ಸೇನಾಳನ್ನು. ಕುಮಾರಸ್ವಾಮಿ ಮದುವೆಯಾಗಿದ್ದು ಸೇನೆ ಅಥವಾ ದೇವಸೇನಾಳನ್ನು(ಇವಳು ಇಂದ್ರನ ಮಗಳೆಂದು ಕಥೆಗಳೂ, ಮೃತ್ಯುವಿನ ಮಗಳೆಂದು ಸ್ಕಂದಪುರಾಣವೂ ಹೇಳುತ್ತದೆ). ಪರ್ಷಿಯನ್ನಿನಲ್ಲಿ ರೊಕ್ಸಾನದ ಮೂಲ ಧಾತು ’ರಝ್’ ಅರ್ಥಾತ್ ಹೊಳೆ. ಸಂಸ್ಕೃತದ ’ದಿವ್’ ಧಾತುವಿಗೂ ಹೊಳೆಯೆಂಬರ್ಥವಿದೆ. ಇನ್ನು ಬ್ಯಾ‌ಕ್ಟ್ರಿಯಾವನ್ನು ಮೃತ್ಯುಲೋಕವೆಂದು ವರ್ಣಿಸುವ ಕಥೆಗಳು ಪರ್ಷಿಯನ್ನಿನಲ್ಲಿವೆ. ಅಲೆಕ್ಸಾಂಡರ್ ಹಿಂದೂಕುಷ್ ಪರ್ವತ ಶ್ರೇಣಿಯನ್ನು ದಾಟಿದಾಗ ಅದನ್ನು ಕೌಕಸೋಸ್ ಎಂದು ಕರೆದ. ಕೌಕಸಸ್ಸಿನ ಮೂಲರೂಪ ಗ್ರ್ಯಾಂಕಸಸ್(ಬಿಳಿಯ ಹಿಮ). ಕೌಕಸೋಸ್‌ನ್ನು ದಾಟಿದ್ದು ಇಸ್ಕಂದರಿನ ದೊಡ್ಡ ಭೌಗೋಳಿಕ ಯಶಸ್ಸೆಂದು ಕಥೆಗಳಲ್ಲಿ ಪರಿಗಣಿಸಲಾಗುತ್ತದೆ. ಹಿಂದ್‌ಕೋಶ್ ಹಿಂದೂಕುಶ್ ಆಗಿ ಅದರ ಅಪಭೃಂಶವೇ ಇಂಡಿಕಸ್ ಕೌಕಸಸ್. ಅಚ್ಚರಿಯೆಂದರೆ ಸುಬ್ರಹ್ಮಣ್ಯನಿಗೆ ಕ್ರೌಂಚಧಾರಣ ಎಂಬ ಹೆಸರೂ ಇದೆ. ಹಿಂದೂಕುಶ್ ಪರ್ವತಶ್ರೇಣಿಗೆ ಕಾಳಿದಾಸ ಕ್ರೌಂಚಪರ್ವತವೆಂದೂ, ಹಂಸ ಪಕ್ಷಿಗಳು ವಾರ್ಷಿಕವಾಗಿ ಈ ದಾರಿಯ ಮೂಲಕವೇ ತೆರಳುವುದರಿಂದ ಈ ಹೆಸರೆಂದೂ ಮೇಘದೂತದಲ್ಲಿ ವರ್ಣಿಸಿದ್ದಾನೆ. ಗ್ರಾಂಕಸಸ್ ಎಂಬುದು ಕ್ರೌಂಚದ proximate variantನಂತೆ ಕಂಡರೆ ಆಶ್ಚರ್ಯವಿಲ್ಲ. ಅಲೆಕ್ಸಾಂಡರ್‌ನ ದಿಗ್ವಿಜಯದಿಂದ ಸ್ಫೂರ್ತಿಗೊಂಡೇ ಅವನ ಸಮಕಾಲೀನನಾದ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನಂತೆ(?!). ಆ ಕಾಲದಲ್ಲಿ ಭಾರತದಿಂದ ಹಿಡಿದು ಇಜಿಪ್ಟ್, ಗ್ರೀಕಿನವರೆಗೆ ಸ್ಕಂದನ ಆರಾಧನೆ ಹಬ್ಬಿತ್ತು. ಸೆಲ್ಯೂಕಸ್‌ನ ಮಗಳನ್ನು ಮದುವೆಯಾದ ಚಂದ್ರಗುಪ್ತನಿಂದ ಭಾರತ ಗ್ರೀಕುಗಳ ಪ್ರಭಾವ ಗಾಢವಾಗಿದ್ದರೆ ಆಶ್ಚರ್ಯವಿಲ್ಲ. ಪತಂಜಲಿಯ ಮಹಾಭಾಷ್ಯದ ’ಶಿವಃ ಸ್ಕಂದೋ ವಿಶಾಖಾ ಇತಿ ಮೌರ್ಯೈರ್ಹಿರಣ್ಯಾರ್ಥಿಭಿಃ(5-3-99)’ ಮತ್ತು ’ಅರ್ಥಿನಶ್ಚ ರಾಜಾನೋ ಹಿರಣ್ಯೇನ ಭವಂತಿ’ಗಳನ್ನು ಗಮನಿಸಿ. ಹಿರಣ್ಯಾರ್ಥಿಯಾಗಿರುವವರು ರಾಜರು(ಮೌರ್ಯ ಶಬ್ದೋಲ್ಲೇಖ ಗಮನಿಸಿ). ಇದೊಂಥರಾ ಧಾರ್ಮಿಕ ತೆರಿಗೆಯಿದ್ದಂತೆ. ರಥೋತ್ಸವಗಳಲ್ಲಿ, ಸಾರ್ವಜನಿಕ ಹಬ್ಬಗಳಲ್ಲಿ ಜನರಿಂದ ವಂತಿಗೆ ಸಂಗ್ರಹಿಸುವ ಕ್ರಮ ಮೌರ್ಯರ ಕಾಲದಲ್ಲಿತ್ತು. ಸಾರ್ವಜನಿಕರನ್ನೊಳಗೊಂಡ ಉತ್ಸವಗಳನ್ನು ರಾಜರು ಆಯೋಜಿಸುತ್ತಿದ್ದರು. ಬ್ಯಾಬಿಲೋನಿಯಾದಲ್ಲೂ ಭೂಮಿಯೆಲ್ಲ ದೇವರ ಸ್ವತ್ತಾದ್ದರಿಂದ ಧಾರ್ಮಿಕ ತೆರಿಗೆ ಕೊಡುವುದು ಆ ಕಾಲದಲ್ಲಿ ಕಡ್ಡಾಯವಾಗಿತ್ತಂತೆ. ಸುಬ್ರಹ್ಮಣ್ಯನಿಗೆ ಮಯೂರವಾಹನನೆಂಬ ಹೆಸರೂ ಇದೆ. ಮೌರ್ಯರ ಹೆಸರು ಬಂದಿದ್ದು ಮೊರಿಯಾ ಅಥವಾ ಮಯೂರ ಶಬ್ದದ ಮೇಲೆ. ಮೌರ್ಯ ಶಬ್ದದ ಹುಟ್ಟಿನ ಬಗ್ಗೆ, ಮಯೂರದ ಜೊತೆ ಅದಕ್ಕಿರುವ ಸಂಬಂಧದ ಬಗ್ಗೆ ಮಹಾವಂಶ, ದೀಪವಂಶಗಳಲ್ಲೂ ಉಲ್ಲೇಖಗಳಿವೆ. ಅಶೋಕನ ಸಾಂಚಿ ಇನ್ನಿತರ ಸ್ತೂಪಗಳಲ್ಲೂ ನವಿಲಿನ ಚಿತ್ರವಿದೆ. ಅಲೆಕ್ಸಾಂಡರಿನ ಆರಾಧನೆಯನ್ನು, ಉತ್ಸವವನ್ನು ಮೌರ್ಯರು ಶುರುಮಾಡುವುದಕ್ಕೂ ಸುಬ್ರಹ್ಮಣ್ಯನ ವಾಹನ ಮಯೂರವಾಗುವುದಕ್ಕೂ ಏನಾದರೂ ಸಂಬಂಧವಿದೆಯೇ?
        ಅಲೆಕ್ಸಾಂಡರನಿಗೆ ಆಡಿನಂತೆ ಎರಡು ಕೋಡುಗಳಿದ್ದವಂತೆ(?). ಅರೇನಿಕ್‌ನಲ್ಲಿ ಆತನ ಹೆಸರೇ ದುಲ್ಕಾರ್ನೆನ್ ಅಥವಾ ಎರಡು ಕೋಡುಳ್ಳವನು. ಅಲೆಕ್ಸಾಂಡರಿನ ಕೆಲ ಚಿತ್ರಗಳಲ್ಲೂ ಇದೇ ರೀತಿ ಆಡಿನ ಮುಖದಂತೆ ಅವನನ್ನು ಚಿತ್ರಿಸಿದ್ದನ್ನು ನೋಡಬಹುದು.
ವಿಷ್ಣುಃ ಸೂಕರರೂಪೇಣ ಮೃಗರೂಪೋ ಮಹಾಋಷಿಃ |
ಷಣ್ಮುಖಃ ಛಗರೂಪೇಣ ಪೂಜ್ಯತೇ ಕಿಮ್ ನ ಸಾಧುಭಿಃ ||
ವಿಷ್ಣು ವರಾಹರೂಪದಲ್ಲೂ ಷಣ್ಮುಖನು ಆಡಿನ ರೂಪದಲ್ಲೂ ಪೂಜಿಸಲ್ಪಡುತ್ತಾನೆನ್ನುತ್ತದೆ ಒಂದು ಶ್ಲೋಕ. ಮಧ್ಯದ ಲಿಂಕನ್ನು ನೀವೇ ಊಹಿಸಿಕೊಳ್ಳಿ.
ಛಗವಾಹನ

       ಅರಬ್ಬರಿಗೆ ಗ್ರೀಕಿನ ದೇವರು ದಿಯೋನಸಸ್‌ನ ಪರಿಚಯವಿತ್ತು. ಅಲೆಕ್ಸಾಂಡರ್ ಅರಬ್ಬಿನಲ್ಲಿದ್ದಾಗ ಅವನಿಗೂ ದಿಯೋನಸಸ್‌ಗೂ ಸಂಬಂಧ ಬೆಳೆಯಿತು. ಈತ ಕೂಡ ಆಡುಮುಖದ ದೇವ. ದಿಯೋನಸಸ್ ನನ್ನು ಗ್ರಿಕ್ ಪುರಾಣಗಳು ಸಸ್ಯಸಂಪತ್ತಿನ ದೇವರೆಂದಿವೆ. ಸ್ಕಂದನಿಗೆ ಭದ್ರಶಾಖನೆಂಬ ಹೆಸರಿದೆ(ಭದ್ರಶಾಖವೆಂದರೆ ದೊಡ್ಡ ಮರದ ಟೊಂಗೆ). ಗ್ರೀಕ್ ಮತ್ತು ಏಶಿಯಾಗಳಲ್ಲಿ ವಸಂತಕಾಲದ ವಸಂತೋತ್ಸವದಲ್ಲಿ ಮರ ಅಥವಾ ಗಿಡದ ಜೊತೆ ಲತೆ-ಬಳ್ಳಿಗಳನ್ನು ಮದುವೆ(symbolic wedding) ಮಾಡಿಸುವ ಸಂಪ್ರದಾಯವಿತ್ತು. ಕಾಳಿದಾಸನ ಕುಮಾರಸಂಭವದಲ್ಲೂ ’ಲತಾವಧೂಭ್ಯಸ್ತರ್ವೋಽಪ್ಯವಾಪುರ ವಿನಮ್ರ ಶಾಖ ಭುಜ ಬಂಧನಾನಿ’ ಎಂಬ ವರ್ಣನೆಯಿದೆ. ತಮಿಳು ಐತಿಹ್ಯಗಳ ಪ್ರಕಾರ ಸ್ಕಂದ ಮದುವೆಯಾಗಿದ್ದು ವಳ್ಳಿಯನ್ನು. ವಳ್ಳಿಯೆಂದರೆ ಬಳ್ಳಿ ಅಥವಾ ಲತೆ. ಗ್ರೀಕ್ ಪುರಾಣಗಳ ಪ್ರಕಾರ ದಿಯೋನಸಸ್ ದ್ವಿಜಾತ(ಎರಡು ಸಲ ಹುಟ್ಟಿದವನು). ಮೊದಲು ಬೆಂಕಿಯಿಂದ ಹುಟ್ಟಿ ನಂತರ ನೀರಿನಿಂದ ಜನಿಸಿದವ. ಕ್ರಿಶ್ಚಿಯಾನಿಟಿಯಲ್ಲಿ ಚಿಕ್ಕಮಕ್ಕಳಿಗೆ ಮಾಡಿಸುವ ಬ್ಯಾಪ್ಟಿಸಮ್ ಸಂಪ್ರದಾಯ ಗ್ರೀಕರ ಎರವಲು. ಬ್ಯಾಪ್ಟಿಸಮ್ ಆಫ್ ಫೈರ್ ಮತ್ತು ಬ್ಯಾಪ್ಟಿಸಮ್ ಆಫ್ ವಾಟರ್ ಎಂಬೆರಡು ಥರದ ಕ್ರಿಯೆಗಳನ್ನು ಚರ್ಚುಗಳಲ್ಲಿ ಮಕ್ಕಳಿಗೆ ಮಾಂತ್ರಿಕ ಶಕ್ತಿ ತುಂಬಲು ಮಾಡಿಸುವುದಿದೆ(ಇದು ನಮ್ಮ ಯಜ್ಞಗಳ ಕೊನೆಯಲ್ಲಿ ನಡೆಯುವ ಜಲಪ್ರೋಕ್ಷಣೆಯ ಮಾದರಿಯದ್ದು.) ಪರ್ವತದ ದೇವಿ ಮತ್ತು ಮಿಂಚಿನ ದೇವ ಸೆರೌನಿಯಾ(ಕೆರೌನಿಯಾ, ಸರವಣದ ಅಪಭೃಂಶವೇ ಸೆರೌನಿಯಾ ಆಗಿರಬಹುದೇ?, ಸರವಣದಿಂದ ಹುಟ್ಟಿದ್ದರಿಂದ ಸರವಣಭವ!)ರಿಂದ ಬೆಂಕಿ ಮತ್ತು ನೀರಿನಲ್ಲಿ ಹುಟ್ಟಿದವ ದಿಯೋನಸಸ್. ಗ್ರೀಕಿನ ಪರ್ವತದ ದೇವತೆಯ ಎರಡು ಸಿಂಹಗಳ ಮಧ್ಯ ಶೂಲಹಿಡಿದು ನಿಂತಿರುವ ಚಿತ್ರ ನೋಡಿದರೆ ನಮ್ಮ ಪರ್ವತರಾಜನ ಪುತ್ರಿ
ಶೂಲ ಹಿಡಿದು ಸಿಂಹದ ಜೊತೆ ನಿಂತ ಗ್ರೀಕರ ಸಿಬೆಲೆ ದೇವಿ
ಪಾರ್ವತಿಯ ನೆನಪಾಗುತ್ತದೆ. ಮಜಾ ಎಂದರೆ ಸ್ಕಂದನ ಜನ್ಮದಲ್ಲೂ ಇಂಥದ್ದೇ ಕಥೆಯಿದೆ. ಶಿವ, ಪಾರ್ವತಿಯರ ಶಕ್ತಿಯನ್ನು ಅಗ್ನಿಯು ಗಂಗೆಯಲ್ಲಿ ವಿಸರ್ಜಿಸಿದಾಗ ಮಗುವೊಂದು ಜನ್ಮತಾಳಿತಂತೆ. ಅದನ್ನು ಕೃತ್ತಿಕೆಯರು ಸಾಕಿದ್ದರಿಂದ ಕಾರ್ತಿಕೇಯನೆಂಬ ಹೆಸರು ಬಂತು. ಗ್ರೀಕ್ ಪುರಾಣಗಳಲ್ಲೂ ಥೇಟ್ ಇದೇ ಕಥೆ. ನೀರಿನಿಂದ ಹುಟ್ಟಿದ ಸಿಯೋನಸಸ್‌ನನ್ನು ಸಾಕಿದ್ದು ಹನ್ನೆರಡು ಅಪ್ಸರೆಯರು. ಅವರಲ್ಲಿ ಆರು ಹೈಯಾಡಸ್ ನಕ್ಷತ್ರದವರೂ ಇನ್ನಾರು ಪ್ಲೆಯಾಡಸ್(ಕೃತ್ತಿಕಾ) ನಕ್ಷತ್ರದವರು. ಮಹಾಭಾರತದ ವನಪರ್ವದ ೨೨೭ನೇ ಅಧ್ಯಾಯದಲ್ಲಿ ಒಂದು ಕಥಯಿದೆ. ವಸಿಷ್ಟ ಮತ್ತು ಆರು ಋಷಿಗಳು ಯಜ್ಞದಲ್ಲಿ ಅಗ್ನಿಯನ್ನಾಹ್ವಾನಿಸಿದಾಗ ಅವರ ಪತ್ನಿಯರ ಮೇಲೆ ಅಗ್ನಿ ಮೋಹಗೊಳ್ಳುತ್ತಾನೆ. ತನ್ನ ಆಸೆಯನ್ನು ಪೂರೈಸಿಕೊಳ್ಳಲು ಅಡಿಗೆಮನೆಯ ಒಲೆಯನ್ನು ಪ್ರವೇಶಿಸಿ ಅವರನ್ನು ನೋಡಿದರೂ, ತನ್ನ ಜ್ವಾಲೆಗಳಿಂದ ಅವರನ್ನು ಸ್ಪರ್ಶಿಸಿದರೂ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಪರಿತಪಿಸುತ್ತಾನೆ. ಅಗ್ನಿಯನ್ನು ಪ್ರೇಮಿಸುತ್ತಿದ್ದ ಸ್ವಾಹಾ ದೇವಿ ಈ ವಿಷಯ ತಿಳಿಯಿತು. ಆಕೆ ಆರು ಋಷಿಪತ್ನಿಯರ ವೇಷಧರಿಸಿ ಅಗ್ನಿಯನ್ನು ಸೇರುತ್ತಾಳೆ. ಏಳನೇಯದಾಗಿ ಆರುಂಧತಿಯ ರೂಪಧರಿಸಿದಾಗ ಅರುಂಧತಿಯ ಪಾತಿವ್ರತ್ಯದ ಪ್ರಭಾವದಿಂದ ಅವಳಲ್ಲಿದ್ದ ಅಗ್ನಿಯ ಶುಕ್ರವು ಆರುಬಾರಿ ಸ್ಖಲಿಸುತ್ತದೆ. 
’ತತ್ ಸ್ಕನ್ನಮ್ ತೇಜಸಾ ತತ್ರ ಸಂವೃತಮ್ ಜನಯತ್ ಸುತಮ್ | 
ಋಷಿಭಿಃ ಪೂಜಿತಮ್ ಸ್ಕನ್ನಮ್ ಆನಯತ್ ಸ್ಕಂದತಾಮ್ ತತಃ ||’(ವನಪರ್ವ ಅಧ್ಯಾಯ ೨೭೭, ೧೮) 
ಸ್ಕನನಗೊಂಡಿದ್ದರಿಂದ ಹುಟ್ಟಿದ ಮಗುವನ್ನು ಋಷಿಗಳು ಸ್ಕಂದನೆಂಬ ಹೆಸರಿನಿಂದ ಪೂಜಿಸಿದರು.
ಅದೇ ಅಗ್ನಿ ಮುಂದೆ ರುದ್ರನಾದ. ’ರುದ್ರಮ್ ಅಗ್ನಿಮ್ ದ್ವಿಜಃ ಪ್ರಾಹುಃ’(ವನಪರ್ವ ಅಧ್ಯಾಯ ೨೭೭, ೩೫)
ರುದ್ರಸೂನುಮ್ ತತಃ ಪ್ರಾಹುಃ ಗುಹಂ ಗುಣವತಾಮ್ ವರಂ | ಆನುಪ್ರವಿಷ್ಯ ರುದ್ರೇಣ ವಹ್ನಿಂ ಜಾತೋಽಹಿ ಅಯಮ್ ಶಿಶುಃ | ತತ್ರ ಜಾತಃ ತತಃ ಸ್ಕಂದೋ ರುದ್ರೋನುಃತತೋ ಭವತ್ | ರುದ್ರಸ್ಯ ವಹ್ನೇಃ ಸ್ವಾಹಾಯಾಃ ಶನ್ನಾಂ ಸ್ರೀನಾಂ ಚ ತೇಜಸಾ | ಜಾತಃ ಸ್ಕದಃ ಸುರಸ್ರೇಷ್ಟೋ ರುದ್ರಸೂನುಃ ತತೋ ಭವತ್ |
ಮೊದಲಿದ್ದ ಅಗ್ನಿಯ ಜಾಗಕ್ಕೆ ರುದ್ರ ಬಂದ. ಅಗ್ನಿ ಕೇವಲ ವಾಹಕನಾಗಿ ಉಳಿಯಬೇಕಾಯಿತು. ಸ್ವಾಹಾ ಹೋಗಿ ಆರು ಜನ ಕೃತ್ತಿಕೆಯರಾದರು. ಮುಂದೆ ಶಲ್ಯಪರ್ವದಲ್ಲಿ ’ಕೇಚಿದ್ ಏನಮ್ ವ್ಯ್ವಸ್ಯಂತಿ ಪಿತಾಮಹಸುತಮ್ ಪ್ರಭುಮ್ | ಸನತ್ಕುಮಾರಮ್ ಸರ್ವೇಶಮ್ ಬ್ರಹ್ಮಯೋನಿಮ್ ತಮಗ್ರಜಮ್ || ಕೇಚಿದ್ ಮಹೇಶ್ವರಸುತಮ್ ಕೇಚಿತ್ ಪುತ್ರಮ್ ವಿಭಾವಶೋಃ | ಉಮಾಯಾಃ ಕೃತ್ತಿಕಾನಾಂ ಚ ಗಂಗಾಯಾಶ್ಚ ವದಂತಿ ಉತ ||’ ಕೆಲವರು ಅವನನ್ನು ಬ್ರಹ್ಮನ ಮಗನೆಂದರೆ, ಇನ್ನು ಕೆಲವರು ಸನತ್ಕುಮಾರನೆಂದೂ, ಶಿವನ ಮಗನೆಂದೂ, ಅಗ್ನಿಜಾತನೆಂದೂ, ಉಮೆಯ ಮಗನೆಂದೂ, ಕೃತ್ತಿಕೆ ಮತ್ತು ಗಂಗೆಯರ ಮಗನೆಂದೂ ವಿವಿಧ ರೀತಿಯಿಂದ ತಿಳಿಯುತ್ತಾರೆ.
ಈ ದಿಯೋನಸ್ ಝಿಯುಸ್‌ನ ಮಗ. ಝಿಯುಸ್ ಎಂಬುದು ಸಂಸ್ಕೃತದ ’ದ್ಯೌಸ್’ನ ಅಪಭೃಂಶ. ವೇದಗಳಲ್ಲಿ ರುದ್ರನ ಉಲ್ಲೇಖವಿದೆ, ಈ ಶಿವನಿಗೂ ಝಿಯುಸ್‌ನಿಗೂ ಏನು ಸಂಬಂಧ?...
(ಓದಿ: The Cult of Kumara in the Religious History of South India and Ceylon)
     ಮೊನ್ನೆ ಮಿತ್ರರಾದ ರವೀಂದ್ರ ಇರಾಕಿನಲ್ಲಿ ನಡೆಯುತ್ತಿರುವ ಯಾಝಿದಿಗಳ ನರಮೇಧದ ಬಗ್ಗೆ ಕೇಳಿದ್ದರು. ಇವರು ಉತ್ತರ ಇರಾಕ್ ಮತ್ತು ಟರ್ಕಿಯಲ್ಲಿ ಕುರ್ದಿಶ್ ಜನಾಂಗವೆಂಬುದನ್ನು ಬಿಟ್ಟರೆ ನನಗೇನೂ ಹೆಚ್ಚಿನ ಮಾಹಿತಿಯಿರಲಿಲ್ಲ. ಸ್ಕಂದದನ್ನು ಹುಡುಕುವಾಗ ಯಾಜಿದಿಗಳಿಗೂ ಸ್ಕಂದ ಮತ್ತು ಪ್ರಾಚೀನ ತಮಿಳಿಗೂ ಇರುವ ಕೆಲ ಇಂಟರೆಸ್ಟಿಂಗ್ ಸಾಮ್ಯತೆಗಳು ತಿಳಿದವು. ಟರ್ಕಿ ಹಿಂದೆ ಅನತೋಲಿಯಾ ಎಂದು ಕರೆಯಲ್ಪಡುತ್ತಿತ್ತು. ಅನಲ್ ಎಂದರೆ ಬೆಂಕಿ, ತೋಲ್ ಎಂದರೆ ಚರ್ಮ. ಅನತೋಲಿಯಾ ಎಂದರೆ ಬೆಂಕಿಯಂತೆ ಕೆಂಪಾದ ಚರ್ಮವನ್ನು ಹೊಂದಿರುವವರು. ತಮಿಳಲ್ಲಿ ಕುರುದಿ ಅಂದರೆ ರಕ್ತ. ಇದಕ್ಕೂ ಕುರ್ದಿಶ್‌ಗೂ ಏನಾದರೂ ಸಂಬಂಧವಿರಬೇಕು. ರಕ್ತದಂತೆ ಕೆಂಪಾದ ಜನರಿರುವ ಜಾಗವೆಂದೇ! ಪ್ರಾಯಶಃ ಅರಬ್ ಮತ್ತು ಮೆಸಪೋಟಮಿಯಾದಲ್ಲಿ ಸುನ್ನತ್ ಮಾಡಿಸದೇ ಇರುವ, ಇಂದಿಗೂ ಕೂಡ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಅಷ್ಟಾಗಿ ಒಳಪಡದ ಏಕೈಕ ಜನಾಂಗವೆಂದರೆ ಯಾಝಿದಿಗಳೇ ಏನೋ. ಇವರ ಮುಖ್ಯ ದೈವ ’ತವಾಯ್ ಮೇಲಕ್ ಅಥವಾ ಪೀಕಾಕ್ ಕಿಂಗ್’. ದೇವರು ತನ್ನ ಮಗ ತವಾಯ್ ಮೇಲಕ್ ಅಥವಾ ಪೀಕಾಕ್ ಕಿಂಗ್(ನವಿಲುಗಳ ರಾಜ)ನಿಗೆ ಸಹಾಯ ಮಾಡಲು ಆರು ಜನ ಅಪ್ಸರೆಯರನ್ನು ಸೃಷ್ಟಿಸಿದನಂತೆ. ಸ್ಕಂದ ಮತ್ತು ಆರು ಕೃತ್ತಿಕೆಯರು ನೆನಪಾದರೇ? ಅವರ ಧಾರ್ಮಿಕ ಆಚರಣೆಯಲ್ಲಿರುವ ಮುಖ್ಯ ಅಂಗವೇ ನವಿಲಿನ ಚಿತ್ರವಿರುವ ದೀಪ. ವಿಚಿತ್ರವೆಂದರೆ ಇರಾಕ್, ಟರ್ಕಿ ಸೇರಿ ಪೂರ್ವ ಏಷಿಯಾದಲ್ಲೆಲ್ಲೂ ನವಿಲುಗಳೇ ಕಂಡುಬರುವುದಿಲ್ಲ. ನವಿಲುಗಳ ವಾಸವೇನಿದ್ದರೂ ಭಾರತ ಉಪಖಂಡದ ಸುತ್ತಮುತ್ತ ಮತ್ತು ಆಫ್ರಿಕಾದ ಕೆಲ ಜಾಗಗಳಷ್ಟೆ. ಅವರ ಪವಿತ್ರ ಕ್ಷೇತ್ರ ಲಾಲಿಶ್ ಮಂದಿರದ ಮುಖ್ಯದ್ವಾರದೆದುರು ಹಾವಿನ ಚಿತ್ರವಿದೆ. ಹಾವು, ನವಿಲು ಎಲ್ಲವೂ ಸ್ಕಂದನ ಸಂಕೇತಗಳು. ಲಾಲಿಶ್ ಮಂದಿರದ ಗೋಡೆಯೊಂದರ ಮೇಲಿರುವ ಚಿತ್ರ ನೋಡಿದಮೇಲಂತೂ ಅವರು ಭಾರತದ ಮೂಲನಿವಾಸಿಗಳಾಗದೇ ಇರಲು ಸಾಧ್ಯವೇ ಇಲ್ಲ ಎನ್ನಿಸುತ್ತಿದೆ.

ಯಾಝಿದಿಗಳ ಪೂಜಾಸ್ಥಳ
ಯಾಝಿದಿ ಮಂದಿರದೆದುರಿರುವ ಹಾವಿನ ಚಿತ್ರ


ನವಿಲಿನ ಆಕೃತಿಯ ದೀಪ
ಹಿಂದೂಗಳಂತೆ ದೇವಾಲಯದಲ್ಲಿ ದೀಪ ಬೆಳಗುವ ಪರಂಪರೆ 
ಯಜಿದಿಗಳ ತವಾಯ್ ಮೇಲಕ್ ಮತ್ತು ಹಿಂದೂಗಳ ಸ್ಕಂದTuesday, October 14, 2014

ಪೆನುಗೊಂಡ ಕೊಂಡ


      
       ಸುಮಾರು ಎರಡು ವರ್ಷಗಳ ಹಿಂದೆ. ಬೆಳ್ಳ೦ಬೆಳಗೆ ನಾಲ್ಕು ಗ೦ಟೆಗೆ ನಾನಿದ್ದ ಹಿ೦ದೂಪುರದಿ೦ದ ಮೊದಲ ಬಸ್ ಹಿಡಿದು ಪುಟ್ಟಪರ್ತಿಗೆ ಹೊರಟಿದ್ದೆ. ಸೋಮಂದೇಪಲ್ಲಿ ಕ್ರಾಸ್ ದಾಟಿ ಬೆ೦ಗಳೂರು ಅನ೦ತಪುರ ಹೆದ್ದಾರಿಯಲ್ಲಿ ಸುಮಾರು ಕಾಲು ಗ೦ಟೆ ಪ್ರಯಾಣಿಸಿದರೆ ಪೆನುಗೊ೦ಡ ಕ್ರಾಸ್. ಎದುರಿನಲ್ಲಿ ಶ್ರೀಕೃಷ್ಣದೇವರಾಯನ ಬೃಹತ್ ಪ್ರತಿಮೆ. ಥೇಟ್ ರಾಜಕುಮಾರನ ಮುಖದ ಗೆಟಪ್ಪಿನದು. ಎಡಕ್ಕೆ ತಿರುಗಿದರೆ ಪೆನುಗೊ೦ಡ ಸಿಟಿ. ಚೂರು ಕಿಟಕಿ ಸರಿಸಿ ತಂಗಾಳಿಗೆ ಮುಖವೊಡ್ಡಿ ನಿದ್ದೆ ಮ೦ಪರಲ್ಲಿದ್ದವನಿಗೆ ಬಸ್ಸು ನಿಲ್ಲಿಸಿದ್ದರಿ೦ದ ಎಚ್ಚರವಾಯ್ತು. ಹೆಚ್ಚು ಕಮ್ಮಿ ಮುಕ್ಕಾಲು ಬಸ್ಸು ಖಾಲಿ ಹೊಡೆಯುತ್ತಿತ್ತು. ಮಬ್ಬು ಮಬ್ಬು ಬೆಳಕಲ್ಲಿ ಗಡಿಯಾರ ನೋಡಿಕೊ೦ಡರೆ ಗ೦ಟೆ ನಾಲ್ಕೂಮುಕ್ಕಾಲಾಗಿರಬಹುದು, ಇನ್ನೂ ಬೆಳಗಾಗಿರಲಿಲ್ಲ. ಸುತ್ತಲೆಲ್ಲ ಒ೦ಥರ ಮ೦ಜು ಮ೦ಜು. ಸಣ್ಣಗೆ ಮೈಮುರಿದು, ಕಣ್ಬಿಟ್ಟು ನೋಡಿದರೆ ರಸ್ತೆಬದಿ ನೂರಾರು ಜನ ದೊಡ್ಡ ದೊಡ್ಡ ಬ್ಯಾಗುಗಳೊಡನೆ ನಿ೦ತಿದ್ದರು. ತಾಲೂಕಾಗಿದ್ದರೂ ಅದೇನು ಅ೦ಥ ದೊಡ್ಡ ಪಟ್ಟಣವಲ್ಲ, ಚಿಕ್ಕ-ಚಿಕ್ಕ ಗಲ್ಲಿಗಳು, ಶತಮಾನಗಳಿಂದ ಟಾರು ಕಾಣದ ಪೇಟೆಯ ರಸ್ತೆಗಳು, ನೊಣ ಹಾರುವ ತಿಪ್ಪೆಯ ರಾಶಿ ರಾಶಿ, ರಸ್ತೆಯ ಚೂರು ಜಾಗವನ್ನೂ ಬಿಡದೇ ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು, ಕೊಳೆತು ನಾರುವ ಚರಂಡಿಗಳೆಲ್ಲ ಪೆನುಗೊಂಡದ ಟ್ರೇಡ್‌ಮಾರ್ಕ್. ಅವುಗಳ ಮಧ್ಯ ಒಂದು ಪೆನುಗೊಂಡದ ಊರಹೊರಗಿನ ವಿಜಯನಗರದ ಕೋಟೆ, ಮತ್ತೊಂದು ಬಾಬಾಯ್ ಸಾಹೇಬ್ ದರ್ಗಾ ಅಲ್ಲಿನ ಎರಡು ಪ್ರಸಿದ್ಧ ಸ್ಥಳಗಳು. ಅವತ್ತು ಹೇಳಿಕೊಳ್ಳುವ೦ಥ ಯಾವ ವಿಶೇಷದ ದಿನವೂ ಆಗಿರಲಿಲ್ಲ. ಇಷ್ಟು ಚಿಕ್ಕ ಊರಲ್ಲಿ ಅಷ್ಟು ಜನರನ್ನು ಕ೦ಡು ಆಶ್ಚರ್ಯವೇ ಆಯಿತು. ಅದೂ ಬೆಳ್ಳಂಬೆಳಗ್ಗೆ! ಬಸ್ಸು ಪೆನುಗೊ೦ಡದ ಒಳಗೆ ಹೊಕ್ಕ೦ತೆ ಹತ್ತಾರು ಆ೦ಬುಲೆನ್ಸುಗಳು, ಪೋಲಿಸ್ ಜೀಪುಗಳು ಟೊ೦ಯ್ಯ ಟೊ೦ಯ್ಯ ಎ೦ದು ಸದ್ದು ಮಾಡುತ್ತ ಹರಿದಾಡತೊಡಗಿದವು. ಊರಿಡೀ ಪೋಲೀಸರೇ ಪೋಲೀಸರು. ಬಸ್ಸಲ್ಲಿದ್ದ ಮೂರು ಮತ್ತೊಂದು ಜನ ನಿದ್ದೆಗಣ್ಣಲ್ಲಿದ್ದರು. ಹತ್ತು ಹದಿನೈದು ನಿಮಿಷವಾದರೂ ಬಸ್ಸು ಅಲುಗಾಡಲಿಲ್ಲ. ಪೆನುಗೊ೦ಡ ನನಗೆ ತೀರ ಪರಿಚಿತ ಊರು. ಒಳಗೊಳಗೇ ನಿಧಾನಕ್ಕೆ ಹೆದರಿಕೆ ಶುರುವಾಯ್ತು. ಹಾರ್ಟು ಪುಕು ಪುಕು. ಬೆನ್ನಮೂಳೆಯ ಕೆಳಗೆಲ್ಲ ಚುಳುಕ್ ಚುಳುಕ್. ಹೇಳಿಕೇಳಿ ಅದು ಪೆರಿಟಾಲ ರವಿಯ ತವರು.ಇಲ್ಲಿನ ಮನೆ ಮನೆಗಳಲ್ಲಿ ರಕ್ತಚರಿತ್ರೆಗಳಿವೆ. ಎಷ್ಟೋ ಸಾರಿ ಕಾರಣಗಳೇ ಇಲ್ಲದೇ ಸುಖಾಸುಮ್ಮನೆ ಇಲ್ಲಿ ಹೆಣಗಳುರುಳುತ್ತವೆ. ನಾವು ನೊಣ ಹೊಡೆದ೦ತೆ ಇಲ್ಲಿ ಮನುಷ್ಯರನ್ನು ಹೊಡೆದು ಬಿಸಾಕಿದ ನೂರಾರು ಕಥೆಗಳಿವೆ. ಅದೇ ಥರ ಏನಾದರೂ ನಡೆಯಿತೇ ಅಥವಾ ನಕ್ಸಲರು ಯಾರನ್ನೋ ಒತ್ತೆಯಾಳಾಗಿರಿಸಿಕೊ೦ಡರೇ, ಅವರ ಮತ್ತು ಪೋಲೀಸರ ನಡುವೆ ಎನ್-ಕೌ೦ಟರ್ ಏನಾದರೂಽಽಽಽಽಽಽ ಎ0ದು ಕಣ್ಣಮು೦ದೆ ರಾಮಗೋಪಾಲ್ ವರ್ಮರ ರಕ್ತಚರಿತ್ರೆಯಲ್ಲಿನ ಪೆರಿಟಾಲ ರವಿಯ ಅಪ್ಪ ಶ್ರೀರಾಮುಲುವನ್ನು ಬಸ್ಸಿ೦ದ ಇಳಿಸಿ ಎಲ್ಲರೆದುರು ಮರ್ಡರ್ ಮಾಡಿದ ಸೀನ್ ಹಾದುಹೋಯ್ತು.
ಪೆರಿಟಾಲ ರವಿ.....
        ಆತ ಹುಟ್ಟಿದ್ದು ಅಲ್ಲಿಗೆ ಸಮೀಪದ ವೆ೦ಕಟಾಪುರದಲ್ಲಿ. ಅಲ್ಲಿ೦ದ ಅತ ಐದು ಬಾರಿ ಎಮ್ಮೆಲ್ಲೆಯಾಗಿ ಆರಿಸಿಬ೦ದವ. ಅವನ ಬಗ್ಗೆ ನೀವು ಕೇಳಿರಬಹುದು. ಅವನ ವಿಷಯ ತಿಳಿಯದಿದ್ದರೂ ರಾಮಗೋಪಾಲವರ್ಮಾನ ರಕ್ತಚರಿತ್ರ ಸಿನೆಮಾ ನೋಡಿರಬಹುದು. ಒ೦ದು ಕಾಲದಲ್ಲಿ ಅನ೦ತಪುರವೆ೦ಬ ಭಾರತದ ಅತಿದೊಡ್ಡ ಜಿಲ್ಲೆ ರವಿಯ ಹೆಸರು ಕೇಳಿದರೆ ಗಡಗಡ ನಡುಗುತ್ತಿತ್ತು. ಇವನ ಅಪ್ಪ ಪೆರಿಟಾಲ ಶ್ರೀರಾಮುಲು ಆಗಿನ ಕಾಲಕ್ಕೆ C.P.I(M.L) ಸೇರಿ ಆ೦ಧ್ರದ ದೊಡ್ಡ ಕಮ್ಯುನಿಸ್ಟ್ ಲೀಡರ್ ಆಗಿದ್ದವ. ಕಮ್ಯುನಿಸ್ಟರ ಜೊತೆ ಸೇರಿ ಹಾಳಾಗಿ ತನ್ನ ಮುನ್ನೂರು ಎಕರೆ ಹೊಲವನ್ನ ಬಡವರಿಗೆ ದಾನ ಮಾಡಿದವ. ಅಷ್ಟಾದರೆ ದೊಡ್ಡ ವಿಷಯವಿಲ್ಲ. ಊರ ಉಸಾಬರಿ ಮೈಮೇಲೆ ಹಾಕ್ಕೊಂಡು ಅಲ್ಲಿನ ಲ್ಯಾಂಡು ಲಾರ್ಡುಗಳಾದ ಸಾನೆ ಚೆನ್ನಾ ರೆಡ್ಡಿ, ಗಂಗುಲ ನಾರಾಯಣ ರೆಡ್ಡಿ ಮತ್ತಿತರರ 500 ಎಕರೆ ಹೊಲವನ್ನೂ ಹಂಚಿದ. ಜಾತಿ ಜಗಳ ಶುರುವಾಯ್ತು. ಯಾಕಪ್ಪಾ ಬೇಕಿತ್ತು ಇವ್ನಿಗೆ ದೊಡ್ಡವ್ರ ಸಹವಾಸ? ಬಿಡ್ತಾರಾ ಅವ್ರು? 1975ರಲ್ಲಿ ಒ೦ದು ದಿನ ಬೆಳ್ಳ೦ಬೆಳ್ಳಗೆ ಯಾರದ್ದೋ ಮದುವೆಗೆ ಬಸ್ಸಲ್ಲಿ ಹೋಗ್ತಾ ಇದ್ದವನನ್ನು ಪೆನುಗೊ೦ಡದ ಹತ್ತಿರ ಬಕ್ಸ೦ಪಲ್ಲಿ ಕ್ರಾಸಲ್ಲಿ ಬಸ್ಸಿ೦ದ ಇಳಿಸಿ ಶೂಟ್ ಮಾಡಿ ತಲೆ ಮೇಲೆ ಕಲ್ಲು ಎತ್ತಾಕಿ ಸಾಯಿಸಿಬಿಟ್ರು. ಮಾಜಿ ಶಾಸಕರಾದ ಗ೦ಗುಲ ನಾರಾಯನ ರೆಡ್ಡಿ, ಸಾನೆ ಚೆನ್ನಾ ರೆಡ್ಡಿ ಈ ಪ್ರಕರಣದ ಪ್ರಧಾನ ಭೂಮಿಕೆಯಲ್ಲಿದ್ದವರು. 1982ರಲ್ಲಿ ರವಿಯ ತಮ್ಮ ಪರಿಟಾಲ ಹರಿಯನ್ನು ನೂರಾರು ಜನರೆದುರು ಪೋಲೀಸರು ಗು೦ಡು ಹಾರಿಸಿ ನಕಲಿ ಎನ್-ಕೌ೦ಟರಿನಲ್ಲಿ ಮುಗಿಸಲಾಯ್ತು. once again prime conspirators are ಗ೦ಗುಲ ಮತ್ತು ಸಾನೆ ರೆಡ್ಡಿ. ಅಲ್ಲಿಗೆ ಶುರುವಾಯ್ತು ನೋಡಿ ರಾಯಲಸೀಮೆಯಲ್ಲಿ ರಕ್ತಚರಿತ್ರೆಯ ಹೊಸದೊಂದು ಅಧ್ಯಾಯ. ಸಮಯಕ್ಕಾಗಿ ಕಾದುಕೂತು ನಕ್ಸಲರ ಜೊತೆ ಕೈಜೋಡಿಸಿ ತ೦ದೆಯ ಕೊಲೆಗಾರರನ್ನೆಲ್ಲ ಹೆಕ್ಕಿ ಹೆಕ್ಕಿ ಕೊ೦ದ ರವಿ ಮುಂದೆ ಚುನಾವಣೆ ಗೆದ್ದು ಮ೦ತ್ರಿಯೂ ಆದ. ಅನಂತಪುರದ ಹೋಟೆಲ್ ಒಂದರಲ್ಲಿ ಗಂಗುಲ ರೆಡ್ಡಿಯ ಹೆಣ ಬಿತ್ತು. ಧರ್ಮಾವರಂನ ಮನೆಯಲ್ಲಿ ಸಾನೆ ಚನ್ನಾರೆಡ್ಡಿಯ ಕಥೆ ಮುಗಿಯಿತು. ಹೈದ್ರಾಬಾದಿನ ಲಾಡ್ಜೊಂದರಲ್ಲಿ ಅವನ ಮಗ ಓಬುಳಾ ರೆಡ್ಡಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಯ್ತು. ಗಂಗುಲ ನಾರಾಯಣರೆಡ್ಡಿಯ ಮಗ ಸೂರ್ಯನಾರಾಯಣ ರೆಡ್ಡಿ ಅಲಿಯಾಸ್ ಮದ್ದಲಚೆರವು ಸೂರಿಯನ್ನು ಮುಗಿಸಲು ಅವನ ಮನೆಯ ಟಿವಿಯಲ್ಲಿ ಬಾಂಬಿಟ್ಟರೂ ಅವನ ಅದೃಷ್ಟ ನೆಟ್ಟಗಿದ್ದ ಪರಿಣಾಮ ಮನೆಯವರೆಲ್ಲ ಸತ್ತರೂ ಈತ ಹೇಗೋ ಬಚಾವಾದ. ಅಲ್ಲಿಗೆ ರಕ್ತಚರಿತ್ರ ಪಾರ್ಟ್ ಟೂ ಶುರು. 1997ರಲ್ಲಿ ಹೈದ್ರಾಬಾದಿನ ಜೂಬಿಲಿ ಹಿಲ್ಸಿನಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿ ರಿಮೋಟ್ ಕಂಟ್ರೋಲ್ ಬಾಂಬ್ ಬಳಸಿ ರವಿಯನ್ನು ಕೊಲ್ಲಲು ಪ್ರಯತ್ನಿಸಲಾಯ್ತಾದರೂ ಇಪ್ಪತ್ತಾರು ಜನ ಸತ್ತು ಆತ ಹೇಗೋ ಬಚಾವಾದ. ಇದೇ ಕೇಸಿನಲ್ಲಿ ಸೂರಿ ಒಳಗೆ ಹೋದ. 2004ರಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಸೂರಿಯ ಹೆಂಡತಿ ಭಾನುಮತಿಯ ವಿರುದ್ಧ ತೆಲಗುದೇಶಂ ಟಿಕೆಟಿನಿಂದ ಐದನೇ ಬಾರಿ ಪರಿಟಾಲ ಗೆದ್ದನಾದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅಷ್ಟರೊಳಗೆ 12 ಬಾರಿ ರವಿಯ ಮೇಲೆ ಅಟ್ಯಾಕ್ ನಡೆದಿತ್ತು. ಪ್ರತಿಬಾರಿಯೂ ಬಚಾವಾದ. ಆದರೆ everyday is not sunday. ಗ್ಯಾಂಗಿನ ಒಬ್ಬೊಬ್ಬರನ್ನೇ ಮುಗಿಸಿದ ಸೂರಿಯ ಪಡೆ 2005ರಲ್ಲಿ ಪರಿಟಾಲ ರವಿಯ ಕಥೆಯನ್ನೂ ಮುಗಿಸಿತು. ಇದೇ ಕಥೆಯ ಮೇಲೆ ರಾಮಗೋಪಾಲ್ ವರ್ಮಾ ಎರಡೆರಡು ಚಿತ್ರ ನಿರ್ದೇಶಿಸಿದ್ದ. ದುರದೃಷ್ಟವೆಂದರೆ ಈ ಚಿತ್ರವನ್ನು ನೋಡಿ ಬರುತ್ತಿದ್ದ ಸೂರಿಯ ಕಥೆ ಹೈದ್ರಾಬಾದಿನ ಅದೇ ಜೂಬಿಲಿ ಹಿಲ್ಸ್‌ನಲ್ಲಿ ತಲೆಗೆ ಗುಂಡಿಟ್ಟು ಢಮಾರ್....
ನನ್ನ ತಲೆ ಮುಟ್ಟಿ ನೋಡ್ಕೊ೦ಡೆ. ಎಲ್ಲ ಸರಿಯಾಗಿತ್ತು ಪುಣ್ಯ. ಕಣ್ಣುಜ್ಜಿಕೊ೦ಡು ಆಚೆಈಚೆ ನೋಡಿದ್ರೆ ಬಸ್ಸಲ್ಲಿದ್ದವ್ರು ಮೂರೇ ಜನ ನನ್ನನ್ನೂ ಸೇರಿಸಿ. ಡ್ರೈವರ್-ಕ೦ಡಕ್ಟರ್ ಇಳಿದು ಎಲ್ಲೋ ಹೋಗಿಯಾಗಿತ್ತು. ಎದುರಿನ ಸೀಟಲ್ಲಿ ಮಲಗಿದ್ದವನನ್ನು ನಿಧಾನಕ್ಕೆ ತಟ್ಟಿ ಎಬ್ಬಿಸಿ ’ಅನ್ನಾ, ಏಮಾಯಿ೦ದಿ?’ ಎ೦ದೆ. ’ನಾಕೇಮ್ ತೆಲುಸ್ರಾ ಬಾಬು’ ಎ೦ದವ ಮತ್ತೆ ನಿದ್ದೆಗೆ ಜಾರಿದ. ’ಹಾಳಾದವ್ನೆ, ಗ್ಯಾ೦ಗ್ವಾರಲ್ಲಿ ಮರ್ಡರ್ ಆಗೋಗು’ ಅ೦ತಾ ಶಾಪ ಕೊಟ್ಟು ಬಸ್ಸಿಳಿದೆ. ಜನರೆಲ್ಲ ಎಲ್ಲೋ ಓಡುತ್ತಾ ಇದ್ರು. ಕ್ಯೂರಿಯಾಸಿಟಿಯೋ, ಮಣ್ಣಾಂಗಟ್ಟಿಯೋ! ಏನಾಯ್ತೆಂದು ನೋಡಲು ಜೊತೆಗೆ ನಾನೂ ಓಡಿದೆ. ಅಬ್ಬ ಆ ದೃಶ್ಯ ನೋಡಿಯೇ ನನ್ನ ತಲೆ ತಿರುಗಿತ್ತು. ಆಗಷ್ಟೆ ಫ್ರೆಶ್ ಆಗಿ ಒ೦ದು ಗೂಡ್ಸ್ ರೈಲು ಮತ್ತೊ೦ದು ಹ೦ಪಿ ಎಕ್ಸ್‌ಪ್ರೆಸ್ ಎರಡೂ ಒ೦ದಕ್ಕೊ೦ದು ಢಿಕ್ಕಿ ಹೊಡೆದು ಒ೦ದು ರೈಲ೦ತೂ ಹಳಿಯಿ೦ದ ನೂರಿನ್ನೂರು ಅಡಿ ಹಾರಿ ಆಚೆ ಹೋಗಿ ಬಿದ್ದಿತ್ತು. ನನ್ನ ಜೀವಮಾನದಲ್ಲೇ ಅ೦ಥ ಒ೦ದು ಭೀಕರ ಅಪಘಾತವನ್ನು ಹಿ೦ದೆ ನೋಡಿಲ್ಲ, ಮು೦ದೆ ನೋಡೋದೂ ಬೇಡ. ಕನಿಷ್ಟ ಮೂವತ್ತು ಜನ ಕೈಲಾಸ ಸೇರಿಯಾಗಿತ್ತು. ಅಷ್ಟೊತ್ತಿಗೆ ’ಲೇ, ನೂವಸ್ತಾವಾ ಲೇದಾ?, ಮನಕಿ ಪೋವಾಲಿ’ ಅ೦ತ ಆವಾಜ್ ಹಾಕಿದ ಕ೦ಡಕ್ಟರು. ಓಡಿ ಹೋಗಿ ಬಸ್ ಹತ್ತಿ ಕೂತೆ. ಪುಟ್ಟಪರ್ತಿ ಅರ್ಧಮುಕ್ಕಾಲು ಗಂಟೆಯ ಹಾದಿ. ಬಸ್ ನಿಧಾನಕ್ಕೆ ಚಲಿಸಿದಂತೆ ಮನಸ್ಸೆಲ್ಲ ಪೆನುಗೊಂಡದಲ್ಲೇ ಇತ್ತು. ಅಷ್ಟು ಭೀಕರ ಅಪಘಾತವನ್ನು ನಾನೆಂದೂ ನೋಡಿರಲಿಲ್ಲ. ಆ ಹೆಣಗಳ ರಾಶಿ, ಆ ತುಂಡಾದ ದೇಹಗಳು, ಆ ಆಕ್ರಂದನ, ಆ ಆಂಬುಲೆನ್ಸುಗಳ ಸದ್ದು.... ಅಬ್ಬಾ ಇವತ್ತಿಗೂ ಆ ದೃಶ್ಯ ನೆನಪಿಸಿಕೊಂಡರೆ ಒಮ್ಮೆ ಮೈಬೆವರುತ್ತದೆ. ಪ್ರಶಾ೦ತಿ ನಿಲಯದೊಳಗೆ ಕೂತರೂ ಶಾಂತಿಯಿಲ್ಲ.........ಸತ್ಯಸಾಯಿ ಸುಪರ್ ಸ್ಪೆಷಾಲಟಿ ಆಸ್ಪತ್ರೆ ಈ ಅಪಘಾತದ ಗಾಯಾಳುಗಳಿಂದಲೇ ತುಂಬಿತ್ತು. ರಕ್ತ ಕಂಡರೆ ತಲೆತಿರುಗುವ ನಾನು ಜೀವನದಲ್ಲಿ ಮೊದಲು ರಕ್ತದಾನ ಮಾಡಿದ್ದು ಅಂದೇ.
         ತಿರುಗಿ ಬರುವಾಗ ಪೆನುಗೊಂಡದಲ್ಲಿ ಇಳಿದು ನೋಡಿದರೆ ಊರಿಡೀ ಒಂದು ಥರಹದ ನೀರವ ಮೌನ. ಅದರ ಮಧ್ಯದಲ್ಲೇ ತನ್ನೆಂದಿನ ಶೈಲಿಯಲ್ಲೇ ಮುಂದುವರೆದ ಜನಜೀವನ. ನಾನಿಲ್ಲಿ ಬಂದಾಗಲೆಲ್ಲ ತಪ್ಪದೇ ಭೇಟಿ ಕೊಡುವುದು ಇತಿಹಾಸ ಪ್ರಸಿದ್ಧ ಬಾಬಾಯ್ ಸಾಹೇಬ್ ದರ್ಗಾಕ್ಕೆ. ಅಲ್ಲಿ ಎದುರಿನಲ್ಲೇ ನಿಮ್ಮನ್ನು ಸ್ವಾಗತಿಸಲು ಎರಡು ಆನೆಗಳ ವಿಗ್ರಹಗಳಿವೆ. ಸುಂದರ ಕಮಲದ ಕೆತ್ತನೆ ಅದರಡಿಯಲ್ಲಿ, ಮೇಲೆ ಹೂವಿನ ಕಮಾನಿನ ಮಂಟಪ. ಯಾವ ಕಾಲದಲ್ಲಿ ಯಾರ ದೇವಸ್ಥಾನವಾಗಿತ್ತೋ! ಬಾಬಾಯ್ ಸಾಹೇಬ್ ಉರುಫ್ ಹಜರತ್ ಖ್ವಾಜಾ ಸಯೀದ್ ಬಾಬಾ ಫಕ್ರುದ್ದೀನ್ ಹನ್ನೆರಡನೇ ಶತಮಾನದಲ್ಲಿ ಪರ್ಷಿಯಾದ ಸುಲ್ತಾನನಾಗಿದ್ದ ಸೂಫಿ ಸಂತ. ಧರ್ಮಪ್ರಸಾರಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿ ಆಧ್ಯಾತ್ಮಿಕ ಗುರುವನ್ನು ಹುಡುಕುತ್ತ ದೇಶಪರ್ಯಟನೆಗೆ ಹೊರಟು ಅಫ್ಘನ್, ಕಾಶ್ಮೀರ, ಗುಜರಾತ್ ಮಾರ್ಗವಾಗಿ ತಮಿಳ್ನಾಡಿನ ತಿರುಚಿನಾಪಳ್ಳಿಗೆ ಬಂದು ದಕ್ಷಿಣ ಭಾರತ ಮತ್ತು ಶ್ರೀಲ೦ಕಾದಲ್ಲಿ ಮೊದಲ ಬಾರಿಗೆ ಇಸ್ಲಾಮನ್ನು ಪ್ರಸಾರ ಮಾಡಿದವರೆನ್ನಲಾಗುವ ಹಜರತ್ ತಬ್ರ್-ಎ-ಆಲಮ್ ಬಾದಷಾಹ್ ನಾದರ್ ವಲಿಯ ಶಿಷ್ಯನಾದವನು. ಧರ್ಮಪ್ರಸಾರಕ್ಕಾಗಿ ಸ್ಥಳವೊ೦ದನ್ನು ಹುಡುಕುತ್ತಿದ್ದ ಬಾಬಾ ಫಕ್ರುದ್ದಿನಗೆ ಗುರುಗಳು ಒ೦ದು ಒಣಗಿದ ಬೇವಿನ ಕಡ್ಡಿಯನ್ನು ಕೊಟ್ಟು ಈ ಕಡ್ಡಿ ಎಲ್ಲಿ ಚಿಗುರೊಡೆಯುವುದೋ ಅಲ್ಲೇ ನೆಲೆಸಲು ತಿಳಿಸಿದರ೦ತೆ. ಆ ಕಡ್ಡಿಯನ್ನು ಹಿಡಿದುಕೊ೦ಡು ಊರೂರು ತಿರುಗಿದ ಬಾಬಾಯ್ ಪೆನುಗೊ೦ಡಕ್ಕೆ ಬ೦ದಾಗ ಅದನ್ನು ಒ೦ದೆಡೆ ನೆಟ್ಟು ಮಲಗಿದ್ದ. ಎದ್ದು ನೋಡಿದಾಗ ಒಣಕಡ್ಡಿ ಚಿಗುರೊಡೆದು ಗಿಡವಾಗಿತ್ತ೦ತೆ. ಅಂದಿನಿಂದ ಪೆನುಗೊಂಡ ರಾಯನೂ ಬಾಬಾನ ಅನುಯಾಯಿಯಾದ. ಅಲ್ಲಿಂದ ಇಲ್ಲಿಯವರೆಗೂ ಈ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕುರುಹಾಗಿ ನಿಂತಿದೆ. ಪೆನುಗೊಂಡ ಬರಿ ರಕ್ತಚರಿತ್ರಕ್ಕೆ ಸೀಮಿತವಲ್ಲ. ಹಿಂದೂ, ಜೈನ, ಇಸ್ಲಾಂ ಧರ್ಮಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಪೋಷಿಸಿದ ಪವಿತ್ರನೆಲ. ಮಹಾವೀರನ ಕಾಲದಿಂದಲೂ ಇದು ಭಾರತದ ನಾಲ್ಕು ಪ್ರಮುಖ ಜೈನ ಕ್ಷೇತ್ರಗಳಲ್ಲಿ ಒಂದು. ಹೊಯ್ಸಳರ ಪತನಾನಂತರ ಬುಕ್ಕರಾಯ ಇಲ್ಲಿ ಕೋಟೆಯನ್ನು ಕಟ್ಟಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನಾಗಿಸಿದ. ತೆಲುಗು ಪದಕವಿತ ಪಿತಾಮಹ ಅನ್ನಮಯ್ಯನಿಗೆ ಆಶ್ರಯ ನೀಡಿ ಅವನ ಮೂವತ್ತೆರಡು ಸಾವಿರ ಕವಿತೆಗಳನ್ನು ಸಾಳ್ವ ನರಸಿಂಹ ರಾಯ ತಾಮ್ರಪಟದಲ್ಲಿ ಕೊರೆಸಿದ್ದು ಪೆನುಗೊಂಡದಲ್ಲೇ. ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯ ಹುಟ್ಟಿದ್ದು ಇಲ್ಲಿಯೇ. ಅದೆಲ್ಲಕ್ಕಿಂತ ಮಿಗಿಲಾಗಿ ಇದು ಹಂಪಿಯ ಪತನಾನಂತರ ವಿಜಯನಗರ ರಾಜಮನೆತನವನ್ನೂ, ದಕ್ಷಿಣದಲ್ಲಿ ಹಿಂದೂಗಳ ಸ್ವಾಭಿಮಾನವನ್ನು ಕಾಯ್ದ ಶಕ್ತಿ.
ಬಾಬಾಯ್ ಸಾಹೇಬ್ ದರ್ಗಾ


 ಊರಿನ ಪ್ರವೇಶದ್ವಾರದಲ್ಲಿರುವ ಕೃಷ್ಣದೇವರಾಯನ ಮೂರ್ತಿ
            ಅದು ಸನ್ 1565, ಜನವರಿ 23...ತಾಳಿಕೋಟೆಯ ಹತ್ತಿರ ವಿಜಯನಗರದ ಅಳಿಯ ರಾಮರಾಯರ ಮತ್ತು ಬಿಜಾಪುರ, ಬೀದರ್, ಅಹ್ಮದ್ ನಗರ ಹಾಗೂ ಗೋಲ್ಕೊಂಡಾದ ಸುಲ್ತಾರೆಂಬ ದುಷ್ಟಚತುಷ್ಟಯಗಳ ಸೇನೆ ಮುಖಾಮುಖಿಯಾದ ದಿನ. 80 ವರ್ಷದ ವಯೋವೃದ್ಧ ರಾಮರಾಯ, ಅವನ ತಮ್ಮ ವೆಂಕಟಾದ್ರಿ, ತಿರುಮಲರಾಯ, ರಘುನಾಥರಾಯರ ಪರಾಕ್ರಮದೆದುರು ಸುಲ್ತಾನರ ಅರ್ಧ ಸೈನ್ಯ ದಿಕ್ಕಾಪಾಲಾಗಿ ಓಡಿಹೋಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ವಿಧಿ ಕೈಕೊಟ್ಟಿತು. ತಾಮ್ರದ ನಾಣ್ಯಗಳಿಂದ ತುಂಬಿದ ಫಿರಂಗಿ ಸ್ಫೋಟಿಸಿ ರಘುನಾಥರಾಯ ಧರಾಶಾಹಿಯಾದ. ವೆಂಕಟಾದ್ರಿ ಕಣ್ಣುಕಳೆದುಕೊಂಡ. ರಾಯರ ಸೈನ್ಯದ ಮುಸ್ಲಿಂ ನಾಯಕರೆಲ್ಲ ಸುಲ್ತಾನರ ಸೈನ್ಯ ಸೇರಿಕೊಂಡರು. ಆನೆಯೊಂದು ರಾಯರನ್ನು ಪಲ್ಲಕ್ಕಿಯಿಂದ ಬೀಳಿಸಿ ಸೊಂಡಿಲಿನಿಂದ ಹಿಡಿದುಕೊಂಡಿತು. ಅಹ್ಮದ್ ನಗರದ ನಿಜಾಂ ಷಾ ಸ್ವಲ್ಪವೂ ತಡಮಾಡದೇ ರಾಯರ ತಲೆ ಕಡಿದು ಪ್ರದರ್ಶನ ಮಾಡಿದ. ರಾಜ ಸತ್ತನೆಂದು ತಿಳಿದ ವಿಜಯನಗರದ ಸೈನ್ಯ ಪಲಾಯನ  ಮಾಡಲಾರಂಭಿಸಿತು. ಅಷ್ಟೇ........ ನಾಗರಿಕತೆಗಳ ಮುಕುಟಮಣಿಯಾಗಿ ಮೆರೆದ ಮರೆಯಲಾಗದ ಮಹಾಸಾಮ್ರಾಜ್ಯವೊಂದು ನಾಮಾಷವಾಗುವ ಹಂತ ತಲುಪಿತು. ಅರಮನೆಗೆ ಓಡಿಬಂದ ತಿರುಮಲರಾಯ 500 ಆನೆಗಳ ಮೇಲೆ ಖಜಾನೆಯಲ್ಲಿದ್ದ ಸಂಪತ್ತನ್ನು ಹೇರಿಕೊಂಡು ಪೆನುಗೊಂಡಕ್ಕೆ ಪರಾರಿಯಾದ. ಮುಂದೆ ನಡೆದ ಹಂಪಿಯ ಲೂಟಿ ಎಲ್ಲರೂ ಬಲ್ಲದ್ದೇ.
           ಬೀದರ್, ಅಹ್ಮದನಗರ ಸುಲ್ತಾನ ವಂಶಗಳು ತಾಳಿಕೋಟೆಯಲ್ಲಾದ ಪ್ರಾಣಹಾನಿಯಿಂದ ಹೆಚ್ಚುಕಾಲ ಬಾಳಲಿಲ್ಲ. ಹಂಪಿ ಪೂರ್ತಿ ಸೂರೆ ಹೋದ ಮೇಲೆ ಬಿಜಾಪುರದ ಆದಿಲ್ ಷಾ ದಕ್ಷಿಣದ ಪ್ರದೇಶಗಳತ್ತ ಮುಖ ಮಾಡಿ 1567ರಲ್ಲಿ ಪೆನುಗೊಂಡದ ಮೇಲೆ ಆಕ್ರಮಣ ಮಾಡಿದ. ಅದರ ಹೆಸರೇ ದೊಡ್ಡಬೆಟ್ಟ. ಅಂತಹ ದುರ್ಗಮ ಕೋಟೆ ಸುಲಭದ ತುತ್ತಾಗಿರಲಿಲ್ಲ. ಹಂಪಿಯಲ್ಲಾದ ಹಾನಿಯಿಂದ ಪೂರ್ತಿ ಚೇತರಿಸಿಕೊಳ್ಳದಿದ್ದರೂ, ಸೈನ್ಯ ಸಂಘಟನೆಗೆ ಸಮಯವಿಲ್ಲದಿದ್ದರೂ ಆಶ್ಚರ್ಯಕರ ರೀತಿಯಲ್ಲಿ ಪ್ರತಿದಾಳಿಗೆ ನಿಂತ ತಿರುಮಲರಾಯನ ಸೇನಾಧಿಪತಿ ಚನ್ನಪ್ಪ ನಾಯಕ ಸುಲ್ತಾನನನ್ನು ಒದ್ದೋಡಿಸಿದ. 1568ರಲ್ಲಿ ಕುತುಬ್ ಷಾ, ನಿಜಾಂ ಷಾ, ಆದಿಲ್ ಷಾರು ಸೇರಿ ಅದೋನಿಯನ್ನು ವಶಪಡಿಸಿಕೊಂಡು ಪೆನುಗೊಂಡದ ಮೇಲೆ ಬಿದ್ದರೂ ತಿರುಮಲರಾಯನೆದುರು ಸೋತು ಸುಣ್ಣವಾಗಬೇಕಾಯ್ತು. ಮುಂದೆ 1578ರಲ್ಲಿ ಸುಲ್ತಾನ್ ತನ್ನೆಲ್ಲಾ ಬಲವನ್ನು ಒಟ್ಟುಗೂಡಿಸಿ ಸುತ್ತಲಿನ ರಾಜರ ಬೆಂಬಲ ಪಡೆದು ಪೆನುಗೊಂಡವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರೆದ. ಅಷ್ಟರಲ್ಲಾಗಲೇ ತಿರುಮಲರಾಯ ತನ್ನ ಮಗ ಶ್ರೀರಂಗ ದೇವರಾಯನಿಗೆ ಪಟ್ಟಕಟ್ಟಿ ಸಂನ್ಯಾಸಾಶ್ರಮ ಸ್ವೀಕರಿಸಿದ್ದ. ಪೆನುಗೊಂಡ ಅಂದೇ ಇನ್ನೊಂದು ಹಾಳುಹಂಪಿಯಾಗಬೇಕಿತ್ತು. ಆದರೆ ಶ್ರೀರಂಗ ಬುದ್ಧಿವಂತ. ಮುಸ್ಲಿಂ ಸೇನೆಯಲ್ಲಿದ್ದ ಸೇನಾಪ್ರಮುಖ ಯಮಜಿ ರಾವ್ ಎಂಬ ಬ್ರಾಹ್ಮಣನಿಗೆ ಧರ್ಮರಕ್ಷಣೆಯಲ್ಲಿ ಕೈಜೋಡಿಸುವಂತೆ ಗುಪ್ತಸಂದೇಶ ಕಳುಹಿಸಿದ. ಸುಲ್ತಾನನ ಸೈನ್ಯದಲ್ಲಿದ್ದ ಹಿಂದೂಗಳೆಲ್ಲ ಯಮಾಜಿ ರಾವಿನ ನೇತೃತ್ವದಲ್ಲಿ ದಂಗೆಯೆದ್ದರು. ಶ್ರೀರಂಗ, ಚನ್ನಪ್ಪ ನಾಯಕರಿಬ್ಬರೂ ಸೇರಿ ಮುಸ್ಲೀಂ ಸೈನ್ಯವನ್ನು ಕೃಷ್ಣೆಯಾಚೆ ಅಟ್ಟಿಬಿಟ್ಟರು. ಮೂರು ಬಾರಿ ಸೋತ ಅವಮಾನದಿಂದ ಮತ್ತೆ ಬಿಜಾಪುರದ ಸುಲ್ತಾನ ಪೆನುಗೊಂಡದತ್ತ ತಲೆಹಾಕಲಿಲ್ಲ. ಇವನ ಮಗ ಎರಡನೇ ವೆಂಕಟಾದ್ರಿ ರಾಜಧಾನಿಯನ್ನು ತಿರುಪತಿಯ ಸಮೀಪದ ಚಂದ್ರಗಿರಿಗೆ ಬದಲಾಯಿಸುವವರೆಗೂ ಪೆನುಗೊಂಡ ಶತ್ರುಗಳಿಗೆ ಅಬೇಧ್ಯವೇ ಆಗಿತ್ತು.
         ಇಲ್ಲಿ ಒಂದು ಕಾಲದಲ್ಲಿ ಈ ಊರಿನಲ್ಲಿ 365 ಮಂದಿರಗಳಿದ್ದವಂತೆ. ನಿತ್ಯ ಒಂದೊಂದು ದೇವಸ್ಥಾನದಂತೆ 365 ದಿನವೂ ಜಾತ್ರೆ ನಡೆಯುತ್ತಿತ್ತು. ಈಗ ಒಂದೆರಡನ್ನು ಹೊರತುಪಡಿಸಿದರೆ ಉಳಿದದ್ದು ಇದ್ದದ್ದೆಲ್ಲಿ ಎಂದು ಹುಡುಕುವ ಪರಿಸ್ಥಿತಿ. ವಿಜಯನಗರ ಕಾಲದ ದೊಡ್ಡ ದೊಡ್ಡ ಜಲಾಶಯಗಳಿದ್ದರೂ ಇಲ್ಲಿ ಕುಡಿಯುವ ನೀರಿಗೆ ತತ್ವಾರ. ಆಗಿನ ಕೋಟೆ ಹಾಳಾಗಿ ಕಾಲವಾಯ್ತು. ಸರ್ಕಾರಕ್ಕಾಗಲೀ, ಪ್ರಾಚ್ಯಚಸ್ತು ಇಲಾಖೆಗಾಗಲೀ ನಮ್ಮ ಇತಿಹಾಸದ ಮೇಲೆ ಸ್ವಲ್ಪವೂ ಕರುಣೆಯಿಲ್ಲ, ದೇವರುಗಳ ಮೇಲಂತೂ ಇಲ್ಲವೇ ಇಲ್ಲ. ಅರಸರ ಬೇಸಿಗೆಯ ಅರಮನೆ ಗಗನ್ ಮಹಲ್‌ಗೆ ASI ಇಂದ ತಾತ್ಕಾಲಿಕವಾಗಿ ನೇಮಕವಾದ ಒಬ್ಬ ಗೈಡ್ ಇದ್ದಾನಂತೆ. ’ಇದ್ದಾನಂತೆ’ ಎಂಬುದು ಬಿಟ್ಟರೆ ಅವನ ಮುಖವನ್ನಾಗಲೀ, ಆತ ಗಗನ್ ಮಹಲನ್ನು ತೆರದದ್ದಾಗಲೀ ನಾನಿನ್ನೂ ನೋಡಿಲ್ಲ. ಇಂದಿಗೂ ಇಲ್ಲಿನ ಬೆಟ್ಟದ ಮೇಲಿನ ಕೋಟೆಯನ್ನು ನೋಡಬೇಕೆಂದರೆ ಆರೆಂಟು ಕಿಲೋಮೀಟರ್ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಬೇಕು. ಕಾಲು ಗಟ್ಟಿಯಿರುವವರಿಗೆ ಟ್ರೆಕ್ಕಿಂಗ್ ಮಾಡಲು ಇದು ಸೂಕ್ತ ಸ್ಥಳ. ಅಷ್ಟು ಮಾಡಿ ಮೇಲೇರಿದರೂ ಕಾಣುವುದು ಬರೀ ಹಾಳುಬಿದ್ದ ಗುಡಿಗೋಪುರಗಳ ಪಳೆಯುಳಿಕೆ, ಪೊದೆಬೆಳೆದ ಕಟ್ಟಡಗಳು, ಕುಸಿದು ಬಿದ್ದ ಗೋಡೆಗಳು. ಬೆಟ್ಟದ ತುತ್ತತುದಿಗೆ ನೆತ್ತಿಯ ಮೇಲಿರುವ ವಿಜಯನಗರ ಅರಸರ ಆರಾಧ್ಯ ದೈವ ನರಸಿಂಹನ ದೇವಾಲಯದ ಸ್ಥಿತಿಯಂತೂ ಕೇಳಲೇ ಬೇಡಿ. ಮುಳ್ಳುಕಂಟಿಗಳ ಮಧ್ಯ ದಾರಿ ಮಾಡಿಕೊಂಡು ಒಳಹೊಕ್ಕರಂತೂ ಹೃದಯ ವಿದ್ರಾವಕ ಪರಿಸ್ಥಿತಿ. ನಿಧಿಯಾಸೆಗೆ ದೇವಾಲಯದ ಇಂಚಿಂಚನ್ನೂ ಅಗೆದದ್ದು ಮಾತ್ರವಲ್ಲದೇ ಕಂಬ, ತೊಲೆಗಳನ್ನೂ ಸೇರಿಸಿ ಗರ್ಭಗುಡಿಯಲ್ಲಿರುವ ಲಕ್ಷ್ಮೀನರಸಿಂಹನ ವಿಗ್ರಹವನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಹಂಪಿಯನ್ನು ಮುಸ್ಲಿಂ ದಾಳಿಕಾರರೆಲ್ಲ ಸೇರಿ ಲೂಟಿ ಹೊಡೆದು ಹಾಳು ಮಾಡಿದ್ದರೆ, ಪೆನುಗೊಂಡ ನಮ್ಮವರ ದಿವ್ಯ ನಿರ್ಲಕ್ಷ್ಯದಿಂದಲೇ ಹಾಳಾಗಿದೆ.

ಕೋಟೆಯೆದುರಿನ ಹನುಮಂತ

ಕೋಟೆಯ ಉತ್ತರದ್ವಾರ
ಬಂಗಾರು ಗುಂಡು ಗುಡಿ
ಕೋಟೆ ಬುರುಜು
ವಿಜಯನಗರ ಅರಸರ ಆರಾಧ್ಯ ದೈವ ನರಸಿಂಹ ಸ್ವಾಮಿ ದೇವಾಲಯ
ಗಾಳಿಗೋಪುರ
ಭಗ್ನಗೊಂಡ ದೇವಾಲಯ
ದೇವಾಲಯದೊಳಗಿನ ಭಗ್ನಾವಶೇಷಗಳು
ಗರ್ಭಗುಡಿಯಲ್ಲಿ ದೇವರೇ ಮಾಯ
ಪುಷ್ಕರಣಿ
ಸಾಲುಮಂಟಪ
ನಗರದ ನೀರು ಸರಬರಾಜಿಗೆ ಅಂದು ನಿರ್ಮಿಸಿದ್ದ ಕಾಲುವೆಗಳು ಇಂದೂ ಇವೆ
ವಿಜಯನಗರ ಕಾಲದ ಕೆರೆ
ಅಳಿದುಳಿದ ದೇವಸ್ಥಾನಗಳು, ಅವುಗಳ ಮೇಲಿನ ಹಸಿರು ಧ್ವಜ!
ಕೋಟೆ ಮೇಲಿನ ನೋಟ
ಇಂತಹ ಹಾಳುಬಿದ್ದ ದೇವಾಲಯಗಳು ನೂರಾರಿವೆ

"తిరుమలేంద్రుని కీర్తి తేనెలు, బెరసి దించిన కాపుకవనపు
నిరుపమ ద్రాక్షారసంబులునిండి తొలికెడు కుండ,ఈ పెనుగొండ కొండ".
-శ్రీ రాళ్ళపల్లి అనంతకృష్ణ శర్మ

Tuesday, September 30, 2014

ಹಿಂದೂ ಶಬ್ದದ ವ್ಯುತ್ಪತ್ತಿ

     ನೇತ್ರಾವತಿಯೆಂಬೋ ನೇತ್ರಾವತಿಯನ್ನೇ ಕರಾವಳಿಯಿಂದ ಅನಾಮತ್ತಾಗಿ ಏರ್‌ಲಿಫ್ಟ್ ಮಾಡಿ ಚಿಕ್ಕಬಳ್ಳಾಪುರದಲ್ಲಿಳಿಸಿ ಸಮೃದ್ಧಿಯ ಹೊಳೆ ಹರಿಸಿ ಅಲ್ಲಿನ ಜನರೆಲ್ಲ ಸುಖ-ಸಂಪದ-ಆನಂದದಿಂದ ತೊನೆದಾಡುತ್ತಿರುವಾಗ ಅಲ್ಲಿನ ನಾಯಕರಾದ ಬೀರಪ್ಪ ಮೊಯ್ಲಿಯವರು ಕೆಲಸವಿಲ್ಲದ ಆಚಾರಿ ಕುಂಡೆ ಕೆತ್ತಿದಂತೆ ಹಿಂದೂ ಶಬ್ದದ ಸ್ಟ್ರಕ್ಚರಲ್ ಅನಾಲಿಸಿಸ್ ಮಾಡಹೋಗಿ ಊರವರಿಂದ ಉಗಿಸಿಕೊಂಡಿದ್ದು ಹಳೆಯ ವಿಷಯ. ಹಿಂದೂ ಶಬ್ದ ಸಿಂಧೂನದಿಯ ಅಪಭೃಂಶವೆಂದೂ, ಇಂಡಸ್ ಅರ್ಥಾತ್ ’ಸಿಂಧೂ’ದಿಂದ ಇಂಗ್ಲೀಷಿನ ಇಂಡಿಯಾ ಉತ್ಪನ್ನವಾಗಿದೆಯೆಂದು ಕೆಲ ಭಾಷಾಶಾಸ್ತ್ರಜ್ಞರ ಅಂಬೋಣ. ಹಿಂದೂ ಶಬ್ದ ಪಾರ್ಸಿ ಭಾಷೆಯ ಕೊಡುಗೆಯೆನ್ನುವವರೂ ಇದ್ದಾರೆ. ಆನುದೆವ್ವಾ ಹೊರಗಣ ಜಂಭಗೆರೆಯವರು ಹಿಂದೂ ಶಬ್ದಕ್ಕೆ ಕಳ್ಳ, ಕಾಫಿರ್ ಎಂಬ ಅರ್ಥವಿದೆಯೆಂದು ಟಿವಿ ಚಾನಲ್ಲೊಂದರಲ್ಲಿ ಅಪ್ಪಣೆ ಕೊಡಿಸಿದ್ದಾರೆ. ಸಿಂಧೂ ಶಬ್ದವನ್ನುಚ್ಚರಿಸಲು ಬರದೇ ಮಹಮ್ಮದೀಯರು ಹಿಂದೂ ಎಂದು ಕರೆದದ್ದು, ಹಿಂದೂಗಳನ್ನು ಸಹಸ್ರಾರು ವರ್ಷಗಳ ಕಾಲ ತುಚ್ಛವಾಗಿ ಕಂಡಿರುವ ಆ ಜನಾಂಗ ಗುಲಾಮ, ಕಾಫಿರ ಎಂದು ಕರೆದಿದ್ದಾಗಿ ಯಾರಾದರೂ ಹೇಳಿದರೆ ಅದು ಅಸ್ವಾಭಾವಿಕವೇನಲ್ಲ.
      ಪಾರ್ಸಿ ಭಾಷೆಯಲ್ಲಿ ಹಿಂದೂ ಶಬ್ದ ರೂಢಿಯಲ್ಲಿದೆ. ಆದರದು ಪಾರ್ಸಿ ಶಬ್ದವಲ್ಲ. ಇನ್ನು ಸಂಸ್ಕೃತದ ಸಿಂಧೂವೇ ಹಿಂದೂವಾಗಿದೆಯೆಂಬುದೂ ಭ್ರಮೆಯೇ. ಅನೇಕ ಶಬ್ದಗಳು ಒಂದೇ ರೂಪದಲ್ಲಿ ಬೇರೆಬೇರೆ ಭಾಷೆಗಳಲ್ಲಿ ಕಂಡುಬಂದರೂ ಕೆಲವು ಸಲ ಅವುಗಳ ಅರ್ಥ ಭಿನ್ನವಾಗಿರುತ್ತದೆ. ಸಂಸ್ಕೃತದ ಶಿವ ಶಬ್ದಕ್ಕೆ ಮಂಗಳದಾಯಕನೆಂಬ ಅರ್ಥವಿದೆ. ಇದೇ ಶಬ್ದ ಯಹೂದಿ ಭಾಷೆಯಲ್ಲೂ ಇದೆ. ಇದು ’ಶೂ’ ಧಾತುವಿನಿಂದ ವ್ಯುತ್ಪನ್ನವಾಗಿ ’ಸೀವ’ ಎಂದು ಬರೆದು ಶಿವ ಎಂದು ಉಚ್ಚರಿಸುತ್ತಾರೆ. ಇದರರ್ಥ ಕೆಂಪುಬಣ್ಣ. ಹೀಗಿದ್ದಾಗ ಸಂಸ್ಕೃತ ಮತ್ತು ಯಹೂದಿ ಭಾಷೆಯ ಶಿವ ಎರಡೂ ಒಂದೇ? ಸಂಸ್ಕೃತದ ಸಪ್ತಾಹದಿಂದ ಪಾರ್ಸಿಯ ಹಫ್ತಾ ಏಕಾರ್ಥವಾಗಿ ಒಂದೇ ಧಾತುವಿನಿಂದ ವ್ಯುತ್ಪನ್ನವಾಗಿದೆ ಎಂಬುದೂ ಭ್ರಮೆಯೇ. ಪರ್ಸಿಯನ್ನಿನಲ್ಲಿ ಸಕಾರವಿಲ್ಲದಿದ್ದರೆ ಅದು ಪರ್ಸಿಯಾದ ಬದಲು ಪರ್ಹಿಯಾ ಎಂದು ಉಚ್ಚರಿಸಲ್ಪಡಬೇಕಿತ್ತು. ಪಾರ್ಸಿಯಲ್ಲಿ(ಮಾತ್ರವಲ್ಲ ಅರೇಬಿಕ್ಕಿನಲ್ಲೂ) ಸೆ, ಸ್ವಾದ್, ಸೀನ್, ಶೀನ್ ಎಂಬ ’ಸಕಾರ’ದ ಉಚ್ಚಾರಣೆಯನ್ನು ಕೊಡುವ ನಾಲ್ಕು ವರ್ಣಗಳಿವೆ. ಹಾಗಿದ್ದಮೇಲೆ ಸಕಾರದ ಸಂಸ್ಕೃತ ಶಬ್ದಗಳೆಲ್ಲ ಹಕಾರವಾಗುವುದೆಲ್ಲಿ?
       ಭಾರತಕ್ಕೆ ಇಸ್ಲಾಂ ಬಂದು ಸಾವಿರ ವರ್ಷವಾಯಿತಷ್ಟೇ. ಒಂದು ವೇಳೆ ಹಿಂದೂ ಶಬ್ದ ಮುಸ್ಲಿಮರಿಂದ ಬಂದದ್ದೇ ಆದಲ್ಲಿ ಅದರ ಆಯುಷ್ಯ ಅದಕ್ಕಿಂತ ಹೆಚ್ಚಾಗಿರಲು ಸಾಧ್ಯವಿಲ್ಲ. ಅದರ ಕಥೆ ಅಷ್ಟೇನಾ? ಅದಕ್ಕಿಂತ ಸಾವಿರಾರು ವರ್ಷಗಳ ಹಿಂದೆಯೇ ಆ ಶಬ್ದ ಬಳಕೆಯಲ್ಲಿತ್ತಲ್ಲ!! ಹಾಗಾದರೆ ಅದಿದ್ದುದು ವೇದಗಳಲ್ಲೇ? ಉಹೂಂ ! ಶಾಸ್ತ್ರಗಳಲ್ಲೇ? ಊಹೂಂ! ಎರಡರಲ್ಲೂ ಅಲ್ಲ. ಅದರ ಬಳಕೆಯಿರುವುದು ಪಾರ್ಸಿಗಳ ಝೆಂದಾ ಭಾಷೆಯಲ್ಲಿರುವ ಝೆಂಡಾವೆಸ್ತಾದಲ್ಲಿ. ಅಗ್ನಿಪೂಜಕ ಪಾರಸೀ ಋಷಿಗಳು ಹಿಂದೂ ಶಬ್ದಕ್ಕೆ ಕಾರಣೀಭೂತರಾಗಿ ತಮ್ಮ ಧರ್ಮಗ್ರಂಥದಲ್ಲಿ ಸ್ಥಾನಕಲ್ಪಿಸಿದರು. ಇದೇ ಶಬ್ದ ಮುಂದೆ ಯಹೂದಿಗಳ ಇಬ್ರಿಯಾ ಅಥವಾ ಹಿಬ್ರೂ ಭಾಷೆಯ ಹಳೆಯ ಒಡಂಬಡಿಕೆಯಲ್ಲೂ ಉಪಯೋಗಿಸಲ್ಪಟ್ಟಿದೆ. ಕ್ರಿಶ್ಚಿಯನ್ನರ ಪ್ರಕಾರ ಹಳೆಯ ಒಡಂಬಡಿಕೆ ಅಥವಾ ಬೈಬಲ್ಲಿನ ಪೂರ್ವ ಭಾಗ ಕ್ರಿಸ್ತನಿಗಿಂತ ಐದುಸಾವಿರ ವರ್ಷಗಳ ಮೊದಲೇ ಅಸ್ತಿತ್ವದಲ್ಲಿತ್ತು. ಝೆಂದಾವೆಸ್ತಾ ಅದಕ್ಕಿಂತಲೂ ಹಿಂದಿನದು. Zendavesta is as ancient as the evolution and it is as the sun and the moon. ಝೇಂಡಾವೆಸ್ತಾ ಸೃಷ್ಟಿಯಷ್ಟೇ ಪುರಾತನವೆಂದು ಅದರ ಅನುಯಾಯಿಗಳ ಅಭಿಮತ. ಅದೇನು ಸುಳ್ಳಲ್ಲ. ಝೆಂದಾವೆಸ್ತಾ ವೇದಕಾಲೀನವಾದ್ದು. ಪ್ರಾಚೀನ ಪಾರ್ಸಿ ಅಗ್ನಿಹೋತ್ರಿ ಮುನಿಗಳು ಆರ್ಯ ಜನಾಂಗದವರು. ಈ ಪಾರ್ಸಿಗಳೇ ಹಿಂದೂದೇಶವನ್ನು ಹನ್‌ದ್ ಎಂದು ಕರೆದರು. ಹನ್‌ದ್ ಎಂದರೆ ವಿಕ್ರಮ, ಗೌರವ, ಶಕ್ತಿ ಮುಂದಾಗಿ. ಇದೇ ಹಳೆಯ ಒಡಂಬಡಿಕೆಯಲ್ಲಿ ರೂಪಾಂತರ ಹೊಂದಿದೆ. ಥಾರಾಕ್ಲೂಸ್ ಎಂಬ ಗ್ರೀಕ್ ಗ್ರಂಥಕರ್ತ ಭಾರತದ ಪರಾಕ್ರಮ ಮತ್ತು ವಿಶ್ವಮಟ್ಟದಲ್ಲಿ ಅದಕ್ಕಿರುವ ಗೌರವವನ್ನು ನೋಡಿಯೇ ಯಹೂದಿ ಜನಾಂಗ ಈ ದೇಶವನ್ನು ಹನ್‌ದ್ ಎಂದು ಸಂಬೋಧಿಸಿದರೆಂದು ಬರೆದಿದ್ದಾನೆ.
      ಹಳೆಯ ಒಡಂಬಡಿಕೆಯ ೧೩ನೇ ಭಾಗವಾದ ಬುಕ್ ಆಫ್ ಇಸ್ತರಿನಲ್ಲಿ ಅಹಾಸುರಸ್ ರಾಜ ’ಹನ್‌ದ್’ ಶಕ್ತಿದೇಶದಿಂದ ಇಥಿಯೋಪಿಯಾದವರೆಗೆ ರಾಜ್ಯವಾಳಿದನೆಂದಿದೆ. ಯಹೂದಿ ಜನಾಂಗವನ್ನು ಬಹಳ ಕಾಲ ಆಳಿದ ಪಾರ್ಸಿಗಳ ಆಡಳಿತ ಭಾಷೆ ಝೆಂದಾವೆಸ್ತಾ ಸಹಜವಾಗಿಯೇ ಹಳೆಯ ಒಡಂಬಡಿಕೆಯ ಮೇಲೆ ಭಾರೀ ಪ್ರಭಾವ ಬೀರಿದೆ. ಹಿಬ್ರೂ ಸ್ವತಂತ್ರ ಭಾಷೆಯಲ್ಲ. ಅದು ಝೆಂದದ ಮಗುವೇ. ಝೆಂದ ಭಾಷೆಯ ಹಿಂದವ ಶಬ್ದವೇ ಹಿಬ್ರೂ ಭಾಷೆಯ ’ಹನ್‌ದ್’ ರೂಪ. ಹಿಬ್ರೂ, ಝೆಂದ ಎರಡೂ ಭಾಷೆಗಳಲ್ಲಿ ಜೀರ, ಜಬರ್, ಪೇಶ್ ಚಿನ್ಹೆಗಳ ಪ್ರಯೋಗ ’ಅ’ಕಾರ, ’ಇ’ಕಾರ, ’ಉ’ಕಾರಗಳನ್ನು ನಿಶ್ಚಿತ ವ್ಯಾಕರಣದ ’ಅ’ಕಾರ, ’ಉ’ಕಾರಗಳನ್ನು ನಿಶ್ಚಯ ಮಾಡಿದ್ದಾರೆ. ಹಿಬ್ರೂವಿನ ಮಗಳು ಅರಬ್ಬಿ, ಮೊಮ್ಮಗಳು ಪಾರ್ಸಿ. ಇವೆರಡೂ ಭಾಷೆಗಳು ಬದಲಾದರೂ ಹಿಬ್ರೂವಿನಲ್ಲಿ ಇನ್ನೂ ಯಾವ ಬದಲಾವಣೆಯೂ ಆಗಿಲ್ಲ. ಅದರ ವರ್ಣಮಾಲೆಯಲ್ಲಿ ಅಕಾರ, ಇಕಾರಗಳೆರಡಕ್ಕೂ ಒಂದೇ ಸ್ವರವಾದರೂ ಚಿನ್ಹೆಗಳ ಸಹಾಯದಿಂದ ಶಬ್ದಗಳ ಉಚ್ಛಾರಣೆಯಾಗುತ್ತದೆ. ಜೊತೆಗೆ ಪೂರ್ಣಪ್ರಕಾರದ ’ಹಕಾರ’ದ ಉಚ್ಛಾರಣೆ ಇಲ್ಲವೇ ಇಲ್ಲ. ಅವುಗಳನ್ನು ಅರ್ಥ ಮಾಡಿಕೊಳ್ಳಲು ಹಿಬ್ರೂವಿನ ಕೆಲ ಉದಾಹರಣೆಗಳನ್ನು ಗಮನಿಸಬೇಕು. ಝೆಂದದ ಕಿರಿಯಾದ್ ಹಿಬ್ರೂವಿನಲ್ಲಿ ಕರಯೋದ್ ಎಂದೂ, ಶಿಕನಾವು ಸಕನಾ ಎಂದೂ, ಹಿಜರದ್ ಯಜನುದ್ ಎಂದೂ ಇಕಾರ ಲೋಪವಾಗಿ ಬರೆಯಲ್ಪಡುತ್ತದೆ. ಹಿಬ್ರೂವಿನಲ್ಲೇ ಇಶರಾಯಿಲ್, ಇಜಾಯಾ, ಇಯಾಕುಬ್ ಎಂದು ಬರೆದರೂ ಅವುಗಳುಚ್ಛರಿಸಲ್ಪಡುವುದು ಚಶರಾಯಿಲ್, ಭಜಾಯಾ, ಆಕೂಬ್ ಎಂದು. ಆದ್ದರಿಂದ ಝೆಂದ ಶಬ್ದ ಹಿಂದವದ ’ಇ’ಕಾರ ಹಿಬ್ರೂವಿನಲ್ಲಿ ಬಾರದೇ ಇದ್ದುದು ಆಶ್ಚರ್ಯವಲ್ಲ. ಇದರೊಟ್ಟಿಗೆ ಹಿಬ್ರೂವಿನಲ್ಲಿ ತ,ಥ,ದ,ಚ,ಛ,ಡ ಅಕ್ಷರಗಳ ಉಚ್ಛಾರಣೆಯಲ್ಲಿ ವ,ಫ,ಯಗಳು ಲೋಪವಾಗುತ್ತವೆ. ತೋವಾ ಎಂಬುದು ಉಚ್ಚಾರಣೆಯಲ್ಲಿ ಲೋಪವಾಗಿ ತೋಹಾ ಎಂದೂ, ಸಂದವ ಎಂಬುದು ಸನದ್ ಎಂದೂ, ಗದವ ಎಂಬುದು ಗದ್ ಎಂದೂ ಉಚ್ಚರಿಸಲ್ಪಡುತ್ತದೆ. ಆದ್ದರಿಂದ ಪಾರ್ಸಿಗಳ ಝೆಂದಾವೆಸ್ತದ ಪವಿತ್ರ ಶಬ್ದ ’ಹಿಂದವ’ ಹಿಬ್ರೂವಿನಲ್ಲಿ ’ಹನ್‌ದ್’ ಆಗಿದೆ.
       ಗ್ರೀಕರಿಗೆ ನಮ್ಮ ದೇಶದ ಪರಿಚಯ ಬಹಳ ಹಿಂದಿನಿಂದ ಚೆನ್ನಾಗಿತ್ತು. ಅವರು ಈ ದೇಶಕ್ಕೆ ಬರುತ್ತಿದ್ದ ಹಾದಿಯಲ್ಲಿ ಒಂದು ದೊಡ್ಡ ಬೆಟ್ಟದ ಸಾಲಿತ್ತು. ಇದರ ವರ್ಣನೆಯನ್ನು ಅವರು ಅಹಾಸುರಸ್ ರಾಜನ ಕಥೆಯಲ್ಲಿ ಕೇಳಿದ್ದರು, ಓದಿದ್ದರು. ಇದರ ಒಂದು ಕಡೆ ಹನ್‌ದ್ ದೇಶ, ಇನ್ನೊಂದು ಕಡೆ ಇಥಿಯೋಪಿಯಾ ಎಂಬ ರಾಜ್ಯದ ಸೀಮೆಯಿದ್ದುದು. ಇಥಿಯೋಪಿಯಾಕ್ಕೆ ಹಿಬ್ರೂವಿನಲ್ಲಿ ಕುಶ್ ಎಂದು ಹೆಸರು. ಹಳೆಯ ಒಡಂಬಡಿಕೆಯ ಮೊದಲನೇ ಪುಸ್ತಕ ’ಜೆನೋಸಿಸ್’ನ ಎರಡನೇ ಅಧ್ಯಾಯದ ೧೩ನೇ ಆಯಾತದ ಪ್ರಕಾರ ಇಥಿಯೋಪಿಯಾ  ವನ್ನು ಯಹೂದಿಗಳು ಕುಶ್ ಎಂದು ಕರೆಯುತ್ತಿದ್ದ ದಾಖಲೆ ಇದೆ. ಕುಶ್ ಅಥವಾ ಕೋಶ ಶಬ್ದಕ್ಕೆ ಸೀಮೆ ಅಥವಾ ಪರ್ವತ ಎಂಬರ್ಥವಿದೆ. ಕುಶದಿಂದಲೇ ಕೊಕೊಹೆ ಅರ್ಥಾತ್ ಪರ್ವತವೆಂಬ ಶಬ್ದ ವ್ಯುತ್ಪತ್ತಿಯಾದದ್ದು. ಗ್ರೀಕರು ’ಹನ್‌ದ್’ ದೇಶದ ಸೀಮೆಯಾದ ಪರ್ವತವೆಂದು ನೆನಪಿನಲ್ಲುಳಿಯಲು ಹನ್‌ದ್ ಕೋಶ ಎಂದರು. ಇದೇ ಹಿಂದೂಕುಶ್. ಕಾಳಿದಾಸ ಕಾವ್ಯಗಳಲ್ಲೂ ಹಿಂದೂಕುಶ್‌ನ ಉಲ್ಲೇಖವಿದೆ. ಇದು ಮುಂದೆ ಅಪಭೃಂಶವಾಗಿ ಇಂಡಿಕಸ್ ಆಯಿತು. ಇಂಡಿಕಸ್ ಇಂಗ್ಲೀಷರ ಭಾಯಲ್ಲಿ ಇಂಡಿಯಾ ಆಗಿದೆ. ಝೆಂದಾವೆಸ್ತದ ಹಿಂದವ, ಹಿಬ್ರೂವಿನ ಹನ್‌ದ್, ಗ್ರೀಕಿನ ಹನ್‌ದ್ ಕೋಶ ಇಂಡಿಕಸ್ ಆಗಿ ಇಂಗ್ಲೀಷಿನಲ್ಲಿ ಇಂಡಿಯಾ ಆಗಿ ಪರಿವರ್ತಿತವಾಯಿತು. ಫಾರಸದ ಝೆಂದಾವೆಸ್ತದ ಅನುಯಾಯಿಗಳಾದ, ಅಗ್ನಿಪೂಜಕ ಆರ್ಯ ವಂಶದ ಪುಶ್ತು ಜನಾಂಗದವರು ಹನ್‌ದ್ ಮತ್ತು ಹಿನ್‌ದ್ ಎಂಬ ಗುಣವಾಚಕ ಪುಲ್ಲಿಂಗ ಶಬ್ದದ ಮುಂದೆ ’ಉ’(ಯುಕ್ತ ಎಂಬರ್ಥದಲ್ಲಿ) ಪ್ರತ್ಯಯ ಹಚ್ಚಿ ಹಿಂದು ಶಬ್ದಕ್ಕೆ ಕಾರಣಕರ್ತರಾದರು. ಪ್ರಾಚೀನ ಆರ್ಯರು ಹಿಂದೂಗಳ ಪಾವಿತ್ರ್ಯ, ಗೌರವ, ವೈಭವವನ್ನು ನೋಡಿಯೇ ಈ ಪ್ರತ್ಯಯವನ್ನುಪಯೋಗಿಸಿದ್ದು. ಒಂದು ಶಬ್ದ ಸೀಮಾತೀತವಾದದ್ದು. ಎಲ್ಲಿಯ ಭಾರತ, ಎಲ್ಲಿಯ ಪಾರ್ಸಿಗಳು, ಎಲ್ಲಿಯ ಗ್ರೀಕ್, ಎಲ್ಲಿಯ ಯಹೂದಿಗಳು! ಪ್ರಸಿದ್ಧ ಪ್ರಾಚೀನ ಪಾರ್ಸಿ ಲೇಖಕ ಜಾಕೋಲಿಯತ್ ತನ್ನ ಗ್ರಂಥದಲ್ಲಿ ಅಸಾಧಾರಣ ಶಕ್ತಿ ಮತ್ತು ವಿದ್ವತ್ತಿನ ಕಾರಣ ಪ್ರಾಚೀನ ಭರತವರ್ಷ ವಿಶ್ವದಲ್ಲಿ ಎಲ್ಲರ ಗೌರವಕ್ಕೆ ಪಾತ್ರವಾಗಿತ್ತು ಎಂದು ಬರೆದಿದ್ದಾನೆ. ಇಲ್ಲಿನ ಆರ್ಯರ ಪರಾಕ್ರಮ, ವಿದ್ಯೆ, ಸಹಿಷ್ಣುತೆಯನ್ನು ನೋಡಿಯೇ ಫಾರ್ಸಿ, ಗ್ರೀಕ್, ಯಹೂದಿ, ರೋಮನ್ನರು ಭಾರತದತ್ತ ಆಕರ್ಷಿತರಾದುದರಲ್ಲಿ ಆಶ್ಚರ್ಯವಿಲ್ಲ. ಯಾವ ಹಿಂದೂಸ್ತಾನವು ಸ್ವರ್ಗಭೂಮಿಯೆಂದು ಪ್ರಪಂಚದಾದ್ಯಂತ ಉಲ್ಲೇಖಿಸಲ್ಪಟ್ಟಿತ್ತೋ ಅಲ್ಲಿಯ ವಾಸಿಗಳು ಕಾಫಿರರು, ಗುಲಾಮರು, ಕಳ್ಳರೆಂದರೇನರ್ಥ? ಆ ಶಬ್ದವೇ ಗೌರವ, ಮಹಿಮೆ, ಶಕ್ತಿ, ಯೋಗ್ಯತೆಗಳನ್ನು ಪ್ರಪಂಚದಾದ್ಯಂತ ಸಾವಿರಾರು ವರ್ಷಗಳ ಕಾಲ ಸಾರಿದೆ. ಅಷ್ಟಕ್ಕೂ ಇಂದಿಗೆ ಸಹಸ್ರ ಸಹಸ್ರ ವರ್ಷಗಳ ಹಿಂದಿನ ಆಕಾಲದಲ್ಲಿ ಈ ವರ್ಷದಲ್ಲಿದ್ದ ಎಲ್ಲರೂ ಸನಾತನಿ ಆರ್ಯರೇ ಆಗಿದ್ದಾಗ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಸೆಮೆಟಿಕ್ ಮತಗಳು ಕಣ್ಣುಒಡೆಯದೇ ಇರುವಾಗ ನಮಗೆ ನಾವು ಯಾವ ಹೆಸರಿನಿಂದ ಕರೆದುಕೊಂಡರೇನು? ಹೆಸರಿರುವುದು ಇತರರು ನಮ್ಮನ್ನು ಗುರುತಿಸಲೇ ಹೊರತೂ ನಮ್ಮನ್ನು ನಾವೇ ಗುರುತಿಕೊಳ್ಳುವುದಕ್ಕಲ್ಲ.
(ಆಕರ: ಪಂ. ಮಹಾವೀರ ಪ್ರಸಾದ ದ್ವಿವೇದಿಯವರ ಹಿಂದಿ ಲೇಖನ)

Tuesday, September 16, 2014

ನರಕಾಸುರ ವಧೆ ಒಂದು ಕಲ್ಪನೆಯೇ?

      
      ಶ್ರೀಕೃಷ್ಣನ ಅವತಾರ ಮಹತ್ವದ ದೃಷ್ಟಿಯಿಂದ ನರಕಾಸುರನ ಕಥೆ ಮತ್ತು ಅವನ ವಧೆಯ ಪ್ರಸಂಗಗಳು ಮಹತ್ವಪೂರ್ಣದವು. ಕಂಸನೂ ಸೇರಿದಂತೆ ಕೃಷ್ಣನಿಂದ ಹತರಾದ ಯಾವ ರಾಕ್ಷಸನೂ ಬಲಪ್ರತಾಪಗಳಲ್ಲಿ ನರಕಾಸುರನನ್ನು ಸರಿಗಟ್ಟಲಾರದವರು. ನರಕಾಸುರನ ಸಂಹಾರದಿಂದಲೇ ಅಲ್ಲವೇ ಕೃಷ್ಣನಿಗೆ ಹದಿನಾರು ಸಾವಿರ ರಾಜಕನ್ಯೆಯರನ್ನು ಬಂಧನದಿಂದ ಮುಕ್ತಗೊಳಿಸಿ ಅವರಿಗೆ ಕೃಷ್ಣಪತ್ನೀತ್ವವನ್ನು ಅನುಗ್ರಹಿಸುವ ಮೂಲಕ, ಅವರನ್ನು ಮದುವೆಯಾಗಲು ಅಷ್ಟು ರೂಪಗಳನ್ನು ಧಾರಣೆ ಮಾಡುವ ಮೂಲಕ ತನ್ನ ಅವತಾರದ ವಿಶಿಷ್ಟತೆಯನ್ನು, ತನ್ನ ವಿಶ್ವವ್ಯಾಪಿ ವ್ಯಕ್ತಿತ್ವದ ಅಸಂಖ್ಯ ಮುಖಗಳನ್ನು ಜಗತ್ತಿಗೆ ತೋರಿಸಲು ಸಾಧ್ಯವಾಗಿದ್ದು. ಕೃಷ್ಣನ ವ್ಯಕ್ತಿವಿಕಾಸಕ್ಕೆ ಕಾರಣವಾದ ಈ ಘಟನೆ ಬಹಳ ಮಹತಿಯುಳ್ಳದ್ದೆಂದು ವಿಷ್ಣುಪುರಾಣವೂ ಹೇಳುತ್ತದೆ(೫.೩೧.೧೮)
      ಪುರಾಣಿಕ ಕಥೆಗಳ ಪ್ರಕಾರ ನರಕಾಸುರ ಪ್ರಾಗ್‌ಜೋತಿಷ್ಯಪುರದ ಅಧಿಪತಿ, ವರಾಹರೂಪಧಾರಿ ವಿಷ್ಣುವಿನ ಸ್ಪರ್ಶದಿಂದ ಭೂದೇವಿಯ ಗರ್ಭದಲ್ಲಿ ಜನಿಸಿದವನು. ದೇವಮಾತೆ ಅದಿತಿಯ ಕುಂಡಲಗಳನ್ನೂ ವರುಣನ ಛತ್ರವನ್ನೂ ವಶಪಡಿಸಿಕೊಂಡದ್ದಲ್ಲದೇ ದೇವ-ಗಂಧರ್ವ-ಮಾನವರ ಹದಿನಾರು ಸಾವಿರ ಯುವತಿಯರನ್ನು ಬಲಾತ್ಕಾರದಿಂದ ಈತ ಸೆರೆಯಲ್ಲಿಟ್ಟಿದ್ದ. ಮಹಾಭಾರತದಲ್ಲೂ ನರಕವಧೆಯ ಚಿಕ್ಕ ದೃಷ್ಟಾಂತವಿದೆ. ಆದರೆ ಮಹಾಭಾರತದುದ್ದಕ್ಕೂ ಪ್ರಾಗ್‌ಜೋತಿಷ್ಯಪುರದ ಅಧಿಪತಿಯ ರೂಪದಲ್ಲಿ ಸರ್ವತ್ರವೂ ಉಲ್ಲೇಖಗೊಳ್ಳುವವನು ಭಗದತ್ತನೇ. ಆದಿಪರ್ವದ ಪ್ರಕಾರ ಅಸುರೋತ್ತಮ ಭಾಷ್ಕಳನೇ ಭಗದತ್ತನ ರೂಪದಲ್ಲಿ ಜನ್ಮವೆತ್ತಿದ್ದ. ದ್ರೌಪದೀ ಸ್ವಯಂವರದ ಸಂದರ್ಭದಲ್ಲೂ ಭಗದತ್ತ ಉಪಸ್ಥಿತನಿದ್ದ ವಿವರ ಮಹಾಭಾರತದಲ್ಲಿದೆ. ರಾಜಸೂಯಯಾಗದ ಸಮಯದಲ್ಲಿ ಅಲ್ಲಿ ಆಗಮಿಸಿದ ರಾಜರನ್ನು ಪರಿಚಯಿಸುತ್ತ ಶ್ರೀಕೃಷ್ಣ ಯುಧಿಷ್ಟಿರನಿಗೆ ಹೇಳುತ್ತಾನೆ ’ಇವರು ಮುರ ಮತ್ತು ನರಕದೇಶದ ದೊರೆಯೂ, ವರುಣ ಸಮಾನರಾಗಿ ಪಶ್ಚಿಮ ದೇಶದ ಅಧಿಪತಿಯೆಂದು ಹೇಳಿಕೊಳ್ಳುವವರೂ, ನಿಮ್ಮ ತಂದೆಯ ಮಿತ್ರರೂ ಆದ ವೃದ್ಧ ಮಹಾರಾಜ ಭಗದತ್ತರು’. ಅಲ್ಲಿ ಭಗದತ್ತ ವೃದ್ಧನಾಗಿದ್ದ ಮತ್ತು ಪಾಂಡುಮಹಾರಾಜನ ಮಿತೃನಾಗಿದ್ದ. ಮಹಾಭಾರತ ನಡೆಯುವಾಗ ಶ್ರೀಕೃಷ್ಣನಿಗೆ ಸುಮಾರು ೯೦ ವರ್ಷಗಳು. ಅರ್ಜುನನಿಗೂ ಸರಿಸುಮಾರು ಅಷ್ಟೇ ವರ್ಷವಾಗಿತ್ತು. ಇಬ್ಬರೂ ತಾರುಣ್ಯದಲ್ಲಿದ್ದರೆಂದು ಮಹಾಭಾರತ ಸೂಚಿಸುತ್ತದೆ. ಆ ಕಾಲದಲ್ಲಿ ವೃದ್ಧಾಪ್ಯ ನೂರೈವತ್ತು ಇನ್ನೂರು ವರ್ಷಗಳ ನಂತರವೇ ಪ್ರಾರಂಭವಾಗುತ್ತಿತ್ತು. ದ್ರೋಣರಿಗೆ ಯುದ್ಧಕಾಲದಲ್ಲಿ  ನಾನ್ನೂರು ವರ್ಷವಾಗಿತ್ತಂತೆ. ಕೃಷ್ಣಾರ್ಜುನರಿನ್ನೂ ಚಿಕ್ಕವರಿದ್ದಾಗಲೇ ಪಾಂಡುರಾಜನ ಮರಣ ಸಂಭವಿಸಿದ್ದು. ಭಗದತ್ತ ವೃದ್ಧ ಮತ್ತು  ಪಾಂಡುವಿನ ಸಖನೆಂದ ಮೇಲೆ ಅವನಿಗೆ ಕನಿಷ್ಟ ನೂರೈವತ್ತರಿಂದ ಇನ್ನೂರು ವರ್ಷವಾದರೂ ವಯಸ್ಸಾಗಿರಬೇಕು. ಮಹಾಭಾರತದಲ್ಲೆಲ್ಲೂ ಭಗದತ್ತನ ತಂದೆಯ ಉಲ್ಲೇಖವಂತೂ ನಮಗೆ ಸಿಗುವುದಿಲ್ಲ. ಆದರೆ ಆತನ ತಾತ ಶೈಲಾಲಯನೆಂದು, ಮಗ ವಜ್ರದತ್ತನೆಂದು ಹೇಳಲಾಗಿದೆ. ಆದರೆ ನರಕನ ತಂದೆ ವರಾಹರೂಪಿ ವಿಷ್ಣು ಮತ್ತು ತಾಯಿ ಭೂದೇವಿ. ಹೀಗಾಗಿ ಶೈಲಾಲಯ ಮತ್ತು ಭಗದತ್ತರ ಮಧ್ಯೆ ನರಕಾಸುರನಿಗೆ ಸ್ಥಾನವೇ ದೊರಕುವುದಿಲ್ಲ. ರುಕ್ಮಿ ತನ್ನ ತಂಗಿ ರುಕ್ಮಿಣಿಯ ಮದುವೆಯನ್ನು ಶಿಶುಪಾಲನೊಡನೆ ನಿಶ್ಚಯಿಸಿದ್ದರಿಂದ ಶ್ರೀಕೃಷ್ಣ ರುಕ್ಮಿಣಿಹರಣಗೈಯಬೇಕಾಯಿತು. ಶಿಶುಪಾಲದ ವರಪೂಜೆಯಲ್ಲಿ ಭಗದತ್ತನೂ ಉಪಸ್ಥಿತನಿದ್ದನೆಂದು ಹರಿವಂಶ(೨.೫೯.೮) ತಿಳಿಸುತ್ತದೆ. ರುಕ್ಮಿಣಿಯ ನಂತರ ಕೃಷ್ಣ ಮದುವೆಯಾಗಿದ್ದು ಜಾಂಬವತಿಯನ್ನು. ಸ್ಯಮಂತಕಮಣಿಯನ್ನು ಪಡೆಯಲು ಜಾಂಬವಂತನೊಡನೆ ಸೆಣೆಸಿ ಗೆದ್ದ ಕೃಷ್ಣ ಅವನ ತನ್ನ ಮಗಳು ಜಾಂಬವತಿಯನ್ನು ವರಿಸುತ್ತಾನೆ. ಕೃಷ್ಣನಿಂದ ಕಳೆದುಹೋಗಿದ್ದ ಮಣಿಯನ್ನು ಪುನಃ ಪಡೆದ ಸಂತೋಷಕ್ಕಾಗಿ ಸತ್ರಾಜಿತ ಮಹಾರಾಜ ತನ್ನ ಪುತ್ರಿ ಸತ್ಯಭಾಮೆಯನ್ನು ಕೃಷ್ಣನಿಗೆ ಧಾರೆಯೆರೆದುಕೊಡುತ್ತಾನೆ. ರುಕ್ಮಿಣಿಯ ವಿವಾಹದ ಸಂದರ್ಭದಲ್ಲಿ ಭಗದತ್ತ ಹಾಜರಿದ್ದನೆಂದೆನಷ್ಟೆ. ನಂತರ ಸತ್ಯಭಾಮೆಯ ಕಾಲದಲ್ಲಿ ಪ್ರಾಗ್ಜೋತಿಷ್ಯಪುರದಲ್ಲಿ ನರಕಾಸುರ ಪ್ರತ್ಯಕ್ಷನಾಗಿದ್ದು ಎಲ್ಲಿಂದ?
ಅವನ ಉಲ್ಲೇಖ ಹೆಚ್ಚಾಗಿ ಸಿಗುವುದು ವಿಷ್ಣುಪುರಾಣ ಮತ್ತು ಭಾಗವತ ಪುರಾಣಗಳಲ್ಲೇ. ಹತ್ತನೇ ಶತಮಾನದಲ್ಲಿ ರಚಿತವಾದ ಆಸ್ಸಾಮಿನ ಕಾಳಿಕಾಪುರಾಣದಲ್ಲಿ ನರಕಾಸುರನನ್ನು ವಧಿಸಿದ್ದು ಕಾಳಿ ಎಂದಿದೆ. ಹಾಗಾದರೆ ಪ್ರಾಗ್ಜೋತಿಷ್ಯಪುರದ ನರಕಾಸುರನ ಕಲ್ಪನೆ ಪ್ರಕ್ಷಿಪ್ತವಾದದ್ದೇ? ಭಗದತ್ತನ ಕಾಲದಲ್ಲಿ ಅವನ ರಾಜ್ಯದಲ್ಲಿ ’ನರಕ’ ಮತ್ತು ’ಮುರ’ ಎಂಬೆರಡು ಜನಪದಗಳಿದ್ದವು. ಪುರಾಣಿಕರು ಇವೇ ಎರಡು ಜನಪದಗಳ ಮೇಲಿಂದ ನರಕ ಮತ್ತು ಮುರ ಎಂಬ ಅಸುರರನ್ನು ಸೃಷ್ಟಿಸಿರಬೇಕು. ಅಷ್ಟೇ ಅಲ್ಲ, ನರಕಾಸುರನ ಅಸ್ತಿತ್ವವೊಂದು ಕಲ್ಪನೆ ಎಂದು ಸಿದ್ಧವಾದಾಗ, ಆತನನ್ನು ಸಂಹರಿಸಿ ಹದಿನಾರು ಸಾವಿರ ಸ್ತ್ರೀಯರನ್ನು ಮುಕ್ತಗೊಳಿಸಿ ಶ್ರೀಕೃಷ್ಣ ಅವರ ಪತಿಯಾದ ಪ್ರಸಂಗ ಕಲ್ಪನಾವಿಲಾಸವಾಗುತ್ತದೆ. ಮಹಾಭಾರತದಲ್ಲಿ ಶ್ರೀಕೃಷ್ಣನ ಆಗಮನವೆಲ್ಲ ರಥಾರೂಢವೇ. ಆದರೆ ನರಕಾಸುರನನ್ನು ವಧಿಸಲು ಶ್ರೀಕೃಷ್ಣ ಶಂಕ ಚಕ್ರ ಗದಾ ಧನುರ್ಧಾರಿಯಾಗಿ ಗರುಡನ ಮೇಲೆ ತೆರಳುತ್ತಾನೆ. ಅಲ್ಲಿಗೆ ಶ್ರೀಕೃಷ್ಣ ಚತುರ್ಭುಜ ವಿಷ್ಣುವಾಗಿ ಚಿತ್ರಿತನಾದ.
     ಶ್ರೀ ವಿ.ಮಜೂಂದಾರರು ತಮ್ಮ Krishna in istory and Legend ಪ್ರಬಂಧದಲ್ಲಿ ಗುಪ್ತರ ಕಾಲದಲ್ಲಿ ವಿಕಾಸಗೊಂಡ ಚತುರ್ಭುಜ ವಿಷ್ಣುವಿನ ಕಲ್ಪನೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ಆ ಕಾಲದಲ್ಲಿ ಲಕ್ಷ್ಮಿಯೊಂದಿಗೆ ಇನ್ನೊಬ್ಬ ದೇವಿಯ ಪ್ರವೇಶವಾಯಿತು. ಆಕೆ ಭೂದೇವಿ. ಕೃಷ್ಣನ ವಿಷ್ಣುತ್ವ ಮತ್ತು ಪೃಥ್ವಿಯನ್ನು ದೈವೀಕರಿಸುವಿಕೆಗಳನ್ನನುಸರಿಸಿ ನರಕಾಸುರನ ಅಸ್ತಿತ್ವ ಸೃಷ್ಟಿಯಾಯ್ತು. ಮುಂದೆ ಅವನಿಂದ ಹದಿನಾರು ಸಾವಿರ ಸ್ತ್ರೀಯರನ್ನು ಅಪಹರಿಸಿ ಕೃಷ್ಣನ ಕೈಯಲ್ಲಿ ಅವನ ಸಂಹಾರದ ಕಲ್ಪನೆ ಮೂಡಿತು. ನರಕಾಸುರನ ಕಥೆಯೇ ಕಲ್ಪನೆಯೆಂದ ಮೇಲೆ ಕೃಷ್ಣ ಹದಿನಾರು ಸಾವಿರ ಜನರನ್ನು ಮದುವೆಯಾಗುವುದೆಲ್ಲಿಂದ?
     ಆದರೂ ಇದರ ಗೂಢಾರ್ಥ ಮಜವಾದದ್ದೇ. ಕೃಷ್ಣನೆಂಬ ಶಬ್ದಕ್ಕೆ ’ಕರ್ಷತಿ ಇತಿ ಕೃಷ್ಣಃ’ ಎಂಬರ್ಥವಿದೆ. ಕೃಷಿ ಮಾಡುವವನು ಎಂದು. ಅದು ಅಲ್ಲಿಲ್ಲಿ ಅಲ್ಲ. ಭಕ್ತರ ಹೃದಯ ಕ್ಷೇತ್ರದಲ್ಲಿ. ಕೃಷ್ಣನೆಂಬ ಶಬ್ದಕ್ಕೆ ’ಕರ್ಷತಿ ಇತಿ ಕೃಷ್ಣಃ’ ಎಂಬ ಎರಡನೇ ಅರ್ಥವೂ ಇದೆ. ಸಕಲರನ್ನೂ ಆಕರ್ಷಿಸುವವನೆಂದು. ’ಕುಷ್ಯತಿ ಇತಿ ಕೃಷ್ಣಃ’ ಸದಾ ಆನಂದಮಯನೆಂಬುದು ಮೂರನೇ ಅರ್ಥ. ಪರಿಪೂರ್ಣ ಆನಂದದ, ಆಕರ್ಷಣೆಯ ಕೃಷ್ಣ ಹದಿನಾರು ಕಲೆಗಳ ಪೂರ್ಣಾವತಾರ. ಶ್ರೀ, ಭೂಃ, ಕೀರ್ತಿ, ಇಳಾ, ಲೀಲಾ, ಕಾಂತಿ, ವಿದ್ಯಾ, ವಿಮಲಾ, ಉತ್ಕರ್ಷಿಣಿ, ಜ್ಞಾನ, ಕ್ರಿಯಾಅ, ಯೋಗ, ಪೃಥ್ವಿ, ಪ್ರಹ್ವಿ, ಸತ್ಯ, ಈಶಾನ, ಅನುಗ್ರಹ ಅಥವಾ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ,ಆನಂದಮಯ, ಅತಿಶಯಿನೀ, ವಿಪರಿನಭಿನಿ, ಪ್ರಭವಿ, ಕುಂತಿನಿ, ವಿಕಸಿನಿ, ಮರ್ಯಾದಿನಿ, ಸಂಹ್ಲಾದಿನಿ, ಅಹ್ಲಾದಿನಿ, ಪರಿಪೂರ್ಣ, ಸ್ವರೂಪಾವಸ್ಥಿತ ಎಂಬ ಹದಿನಾರು ಕಲೆಗಳನ್ನೊಳಗೊಂಡ ಏಕೈಕ ಅವತಾರ ಪುರುಷ ಶ್ರೀಕೃಷ್ಣನೆಂದು ಅಖಿಲ ಶಾಸ್ತ್ರಗಳೂ ಸಕಲ ಪುರಾಣಗಳೂ ಹಾಡಿ ಹೊಗಳಿವೆ. ಅಗ್ನಿಪುರಾಣದ ಪ್ರಕಾರ ಮನುಷ್ಯನ ದೇಹದಲ್ಲಿರುವ ಸಪ್ತಕುಂಡಲಿನಿ ಚಕ್ರಗಳಲ್ಲಿ ಕೊಟ್ಟಕೊನೆಯದು ಸಹಸ್ರಾರ ಚಕ್ರ. ಮೂಲಾಧಾರ ಚಕ್ರದಿಂದ ಹೊರಟ ಕುಂಡಲಿನೀ ಶಕ್ತಿ ಸಹಸ್ರಾರವನ್ನು ತಲುಪಿದಾಗ ಪ್ರತಿ ಮನುಷ್ಯನೂ ದೈವತ್ವಕ್ಕೇರುತ್ತಾನೆ. ಹಾಗೆ ದೈವತ್ವಕ್ಕೇರಿದ ಕೃಷ್ಣ ಸಹಸ್ರಾರದ ಪ್ರತಿನಿಧಿ. ಈ ಚಕ್ರದ ಬಣ್ಣ ನೀಲಿ. ಕೃಷ್ಣನ ಬಣ್ಣವೂ ನೀಲಿ. ಪ್ರಾಪಂಚಿಕ ಭೋಗ, ಪಾಶ್ಚಮಾರ್ಥಿಕ ಬಯಕೆ ಎರಡನ್ನೂ ಐಕ್ಯಗೊಳಿಸುವ ಶಕ್ತಿ ಹೊಂದಿರುವಂಥ ಇದು ಸಹಸ್ರದಳ ಕಮಲದ ಆಕಾರದಲ್ಲಿದೆಯೆಂದು ಜ್ಞಾನಿಗಳು ಹೇಳುತ್ತಾರೆ. ಕಮಲದ ಪ್ರತಿದಳಕ್ಕೂ ಹದಿನಾರು ಕಲೆಗಳಾದರೆ ಒಟ್ಟೂ ಹದಿನಾರು ಸಾವಿರವಾಯಿತು. ಅಂಥ ಹದಿನಾರು ಸಾವಿರ entityಗಳ ಪತಿ(ಒಡೆಯ) ಶ್ರೀಕೃಷ್ಣ. ಗೂಢವಾದ ಕೃಷ್ಣತತ್ವವನ್ನರಿಯದೇ ಕೆಲವರು ಅವನನ್ನು ಹದಿನಾರು ಸಾವಿರ ಜನರೊಟ್ಟಿಗೆ ಮದುವೆ ಮಾಡಿಸಿ ಸ್ತ್ರೀಲೋಲನನ್ನಾಗಿಸಿದರು. 
     ಸಾಕ್ಷಾತ್ ಭಗವಂತನೇ ಭೂಮಿಗಿಳಿದು ಬಂದು ನಾನು ಇಂಥವನು ಎಂದು ಐಡೆಂಟಿಟಿ ಕಾರ್ಡ್ ತೋರಿಸಿ, ಇಡೀ ಜಗತ್ತನ್ನು ನೆಡೆಸುವವನು, ಜಗನ್ನಾಟಕವನ್ನು ಆಡಿಸುವವನು ತಾನೇ ಎಂದು ಡಿಕ್ಲೇರ್ ಮಾಡಿ, ಅದಕ್ಕೆ ಬೇಕಾದಷ್ಟೂ ಪ್ರೂಫುಗಳನ್ನೂ ತನ್ನ ಅವತಾರ ಕಾಲದಲ್ಲಿ ಲೆಕ್ಕವಿಲ್ಲದಷ್ಟು ಬಾರಿ ತೋರಿಸಿದರೂ ಸರಿ - ವ್ಯಭಿಚಾರಿ, ಮೋಸಗಾರ, ಕಪಟಿ ಎಂದು ಪರಮಾತ್ಮನಲ್ಲೇ ತಪ್ಪೆಣಿಸಿದ ಜನ ನಮ್ಮವರು. ಇದೇನು ದೊಡ್ಡದಲ್ಲ ಬಿಡಿ.
ಅಂದಹಾಗೆ ಉಡುಪಿಯಲ್ಲಿಂದು ಶ್ರೀಕೃಷ್ಣ ಜಯಂತಿ. ಸಕಲರಿಗೂ ಶುಭಾಶಯಗಳು.

Friday, July 11, 2014

ಆಷಾಢಕ್ಕೊಂದು ಅಮರ ವಿರಹ ಕಾವ್ಯ

     ಕಾಲಿದಾಸನ ಬಗ್ಗೆ ಕೆಲವಷ್ಟು ದಂತಕತೆಗಳಿವೆ. ಮಂತ್ರಿಯ ಕುತಂತ್ರದಿಂದ ಹಳ್ಳಿಯ ಹೆಡ್ಡನನ್ನು ರಾಜಕುಮಾರಿ ಮದುವೆಯಾದಳೆಂದೂ ಮೋಸದ ಅರಿವಾಗಿ ಗಂಡನಿಗೆ ಕಾಲಿಕಾಮಾತೆಯನ್ನು ಪ್ರಾರ್ಥಿಸಲು ಹೇಳಿದಳೆಂಬುದು ಅದರಲ್ಲೊಂದು. ಆ ಹೆಡ್ಡ ಅನನ್ಯ ಭಕ್ತಿಯಿಂದ ಕಾಲಿಯನ್ನಾರಾಧಿಸಿ ಅತುಲ ಪಾಂಡಿತ್ಯ ಮತ್ತು ಅಪ್ರತಿಮ ಕಾವ್ಯಪ್ರತಿಭೆಯನ್ನು ಪಡೆದುಕೊಂಡು ಕಾಲಿಯಲ್ಲಿ ತನಗುಂಟಾದ ಭಕ್ತಿಗಾಗಿ ’ಕಾಲಿದಾಸ’ ಎಂಬ ಹೆಸರಿಟ್ಟುಕೊಂಡು ಮರಳಿ ಬಂದನು. ಅವನ ಬರುವನ್ನೇ ನಿರೀಕ್ಷಿಸುತ್ತಿದ್ದ ರಾಜಕುಮಾರಿ ಕಾಲಿದಾಸ ಬಂದೊಡನೆ ’ಅಸ್ತಿ ಕಶ್ಚಿದ್ ವಾಗರ್ಥ?’ ಏನಾದರೂ ಪಾಂಡಿತ್ಯ ದೊರಕಿತೆ? ಎಂದು ಕೇಳಿದಳು. ಉತ್ತರ ರೂಪವಾಗಿ ಅವನ ಬಾಯಿಯಿಂದ ಲಲಿತವಾದ ಮಧುರ ಕವಿತೆಗಳೇ ಚಿಮ್ಮತೊಡಗಿದವು. ಕೇಳಿದ ಪ್ರಶ್ನೆಯಲ್ಲಿನ ಮೂರು ಶಬ್ದಗಳನ್ನೇ ತನ್ನ ಮೂರು ಕಾವ್ಯಗಳ ಮೊದಲ ಶಬ್ದಗಳನ್ನಾಗಿ ಮಾಡಿದನಂತೆ. ಕುಮಾರಸಂಭವದ ಮೊದಲ ಶ್ಲೋಕವು ’ಅಸ್ತಿ ಉತ್ತರಸ್ಯಾಂ ದಿಶಿ ದೇವತಾತ್ಮಾ’ ಎಂದು, ಮೇಘದೂತದ ಮೊದಲ ಶ್ಲೋಕ ’ಕಶ್ಚಿತ್ ಕಾಂತವಿರಹಗುರುಣಾ’ ಎಂದು, ರಘುವಂಶದ ಮೊದಲ ಶ್ಲೋಕ ’ವಾಗರ್ಥಾವಿವ ಸಂಪ್ರಕ್ತೌ’ ಎಂದೂ ಶುರುವಾಗುವುದಕ್ಕೆ ರಾಜಕುಮಾರಿಯ ಪ್ರಶ್ನೆಯೇ ಕಾರಣವಂತೆ.
ಒಂದು ಪ್ರಶ್ನೆಯ ಶಬ್ದಗಳು ಹೀಗೆ ಕಾವ್ಯನಿರ್ಮಾಣಕ್ಕೆ ಕಾರಣವಾಗುವುದು ಕಾಲಿದಾಸನ ವಿದ್ವತ್ತೆಯ ಲಕ್ಷಣವೆನ್ನಬಹುದಾದರೂ ಈ ಕತೆಗೂ ಒಂದು ಉದ್ದೇಶವಿರಬಹುದು. ಆಶ್ಚರ್ಯದ ಮಾತೆಂದರೆ ಮೇಘದೂತದಂಥ ಚಿಕ್ಕ ಕಾವ್ಯವನ್ನು ರಘುವಂಶದಂತಹ ಶ್ರೇಷ್ಠಕಾವ್ಯದ ಮಾಲಿಕೆಯಲ್ಲಿ ಸೇರಿಸಿದ್ದು. ಈ ಖಂಡಕಾವ್ಯವನ್ನು ಮೆಚ್ಚಿ, ಇದನ್ನೇ ಅನುಕರಿಸಿ ನೂರಾರು ದೂತಕಾವ್ಯಗಳು
ಸಂಸ್ಕೃತ ಸಾಹಿತ್ಯದಲ್ಲಿ ರಚಿತವಾಗಿವೆ. ಇದು ಕಾಲಿದಾಸನ ಶ್ರೇಷ್ಟ ಕಾವ್ಯವಲ್ಲವೆನ್ನುವ ವಿದ್ವಾಂಸರೂ ಇದನ್ನು ಸಾಹಿತ್ಯ ಪ್ರಪಂಚದ ಅತ್ಯಪರೂಪದ ಕೃತಿಗಳಲ್ಲೊಂದೆಂದು ಪರಿಗಣಿಸುತ್ತಾರೆ. ಮೇಘದೂತವು ಪ್ರೇಮದ ಪ್ರತಿಮುಖವಾದ ವಿಪ್ರಲಂಬದ ಭಾವಗೀತೆ. ಮಾನವನ ಹೃದಯರಂಗದಲ್ಲಿ ರಸವಾಗಿ ಉಕ್ಕಿ ಹರಿಯುವ ಅಂತರಂಗಸಾಗರದ ಭಾವತರಂಗಗಳೇ ಅದರ ಜೀವಾಳ. ಶುಷ್ಕವಾದ ಮಾನವಹೃದಯದಲ್ಲಿ ಪ್ರೇಮದ ಅಮೃತಸೇಚನೆಯಿಂದಾಗುವ ಆಹ್ಲಾದವನ್ನು ಋತುಸಂಹಾರದಲ್ಲಿ ತೋರಿಸಿದ ಕಾಲಿದಾಸ ವಿರಹದಲ್ಲಿ ಪ್ರೇಮ ಬತ್ತುವ ಬದಲು ನೂರ್ಮಡಿಯಾದ ಪ್ರಭಾಮಂಡಲವನ್ನು ಹೇಗೆ ತಳೆಯಬಹುದೆಂದು  ಮನೋಹರವಾಗಿ ಮಂದಾಕ್ರಾಂತವೃತ್ತಗಳಲ್ಲಿ ಮೇಘದೂತದ ತುಂಬೆಲ್ಲ ಹಾಡಿದ್ದಾನೆ.
      ಕಾಲಿದಾಸನ ಕೃತಿಗಳಲ್ಲಿ ರಾಮಾಯಣದ ಗಾಢ ಪ್ರಭಾವವಿದೆ. ಅದರಲ್ಲೂ ಮೇಘದೂತದಲ್ಲಿ ಒಂದು ವಿಶೇಷವಿದೆ. ಆಕಾಶದಲ್ಲಿ ಮೇಘದೊಡನೆ ಸಂದೇಶವನ್ನು ಕಳುಹಿಸುವ ವಿಚಾರವು ರಾಮಾಯಣದಲ್ಲಿ ಆಕಾಶದಲ್ಲಿ ಹಾರುವ ಹನುಮಂತನು ಸೀತೆಗೆ ಸಂದೇಶವನ್ನು ಕೊಂಡೊಯ್ಯುವುದರಿಂದ ಪ್ರೇರಿತವಾದುದು. ಮೇಘದೂತದ ಮೊದಲ ಶ್ಲೋಕದಲ್ಲಿರುವ ’ಕಾಂತಾವಿರಹಗುರುಣಾ’, ’ರಾಮಗಿರಿ’ ಮತ್ತು ’ಜನಕತನಯಾ’ ಶಬ್ದಗಳಿಂದ ಅದು ಸ್ಪಷ್ಟ. ಎರಡರಲ್ಲೂ ವಿರಹದಲ್ಲಿದ್ದ ಗಂಡ ತನ್ನ ಹೆಂಡತಿಗೆ ಸಂದೇಶವನ್ನು ಕಳಿಸುತ್ತಾನೆ. ಮುಂದೆ ೯೭ನೇ ಶ್ಲೋಕದಲ್ಲಿ ’ಇತ್ಯಾಖ್ಯಾತೇ ಪವನತನಯಂ ಮೈಥಿಲೀವೋನ್ಮುಖೀ ಸಾ’, ನೀನಿದನ್ನು ಹೇಳಿದಾಗ ಜಾನಕಿಯು ಹನುಮಂತನನ್ನು ನೋಡಿದಂತೆ ನನ್ನ ಹೆಂಡತಿಯು ಮುಖವನ್ನೆತ್ತಿ ನಿನ್ನನ್ನು ನೋಡುವಳು ಎಂದು ಯಕ್ಷನು ಹೇಳುವ ಮಾತು ಕೂಡ ರಾಮಾಯಣವು ಸ್ಫೂರ್ತಿಮೂಲವೆಂದು ಸೂಚಿಸುತ್ತದೆ.(ಅಭಿಜ್ಞಾನ ಶಾಕುಂತಲದ ಮೂಲ ಮಹಾಭಾರತವಾದರೂ ಮೂಲದಲ್ಲಿಲ್ಲದ ಅಭಿಜ್ಞಾನ ಉಂಗುರದ ಕಥೆ ರಾಮಾಯಣದಿಂದ ಪ್ರೇರಿತವಾದ್ದೇ). ಇದೂ ಅಲ್ಲದೇ ಋಗ್ವೇದದ ೫ನೇ ಮಂಡಲದಲ್ಲಿ ಆತ್ರೇಯಿಯೆಂಬವನು ತನ್ನ ಭಾವೀಪತ್ನಿಯ ಬಳಿ ರಾತ್ರಿಯನ್ನೇ ದೂತಿಯನ್ನಾಗಿ ಕಳಿಸಿದ್ದು, ಜಾತಕ ಕತೆಯ ಕಾಕದೌತ್ಯಗಳ ಪ್ರಭಾವವನ್ನೂ ಅಲ್ಲಗಳೆಯುವಂತಿಲ್ಲ.
     ಮೇಘದೂತದಲ್ಲಿ ೧೧೦ ಶ್ಲೋಕಗಳಿವೆ. ಮೊದಲ ಶ್ಲೋಕದಲ್ಲೇ ಕವಿಯು ಕಥೆಯನ್ನು ಪ್ರಾರಂಭಿಸುತ್ತಾನೆ. ಕುಬೇರನಿಂದ ಶಾಪಕ್ಕೊಳಗಾಗಿ ಯಕ್ಷನೊಬ್ಬ ಹೆಂಡತಿಯಿಂದ ಒಂದು ವರ್ಷದ ವಿರಹರೂಪದ ಶಿಕ್ಷೆಯನ್ನು ಭೋಗಿಸುತ್ತಿದ್ದ. ತನ್ನ ಅಲಕಾನಗರದಿಂದ ಅತಿದೂರವಾದ ರಾಮಗಿರಿಯ ಆಶ್ರಮದಲ್ಲಿ ಅವನ ವಾಸ. ಕಥೆ ಪ್ರಾರಂಭವಾಗುವಾಗ ಯಕ್ಷನ ಶಿಕ್ಷಾವಧಿಯ ಒಂದು ವರ್ಷದಲ್ಲಿ ಎಂಟು ತಿಂಗಳು ಕಳೆದು ನಾಲ್ಕು ತಿಂಗಳು ಬಾಕಿಯಿತ್ತು. ಆಗಷ್ಟೆ ಮಳೆಗಾಲವು ಪ್ರಾರಂಭವಾಯಿತು.
ಆಷಾಢದ ಮೊದಲ ಮೋಡವನ್ನು ಕಂಡೊಡನೆ ಅಲ್ಲಿಯವರೆಗೂ ತಡೆದುಕೊಂಡಿದ್ದ ವಿರಹ ವ್ಯಥೆ ಕಟ್ಟೆಯೊಡೆದು ಚಿಮ್ಮಿತು. ದೂರದ ಅಲಕೆಯಲ್ಲಿರುವ ಪ್ರಿಯೆ ಹೇಗಿದ್ದಾಳೋ? ಆಕೆಗೊಂದು ಕ್ಷೇಮಸಮಾಚಾರವನ್ನಾದರೂ ಕಳುಹಿಸದಿದ್ದರೆ ಮನಸ್ಸಮಾಧಾನವಿಲ್ಲ. ಆ ನಿರ್ಜನ ಪ್ರದೇಶದಲ್ಲಿ ದೂತರೆಲ್ಲಿಂದ ಸಿಗಬೇಕು?
ಮೇಘಲೋಕೇ ಭವತಿ ಸುಖಿನೋಽನ್ಯಥಾವೃತ್ತಿ ಚೇತಃ |
ಕಂಠಾಶ್ಲೇಷಪ್ರಣಯಿನಿ ಜನೇ ಕಿಂ ಪುನರ್ದೂರಸಂಸ್ಥೇ ||

ಮೇಘದರ್ಶನದಿಂದ ಸುಖದಲ್ಲಿದ್ದವರ ಮನಸ್ಸೂ ಅಸುಖಿಯಾಗುವುದು. ಇನ್ನು ಒಬ್ಬರನ್ನೊಬ್ಬರು ಪ್ರೇಮದಿಂದ ಅಲಂಗಿಸಲು ಉತ್ಸುಕರಾದವರು ಒಬ್ಬರಿಂದೊಬ್ಬರು ದೂರದಲ್ಲಿದ್ದರೆ ಏನಾಗಬಹುದು?
ಮೇಘದರ್ಶನದಿಂದಲೇ ಅಲ್ಲವೇ ವಿರಹ ವ್ಯಾಪಿಸಿದ್ದು. ಅದನ್ನೇ ಯಾಚಿಸಿದರೆ ದೂತನಾದಾನೆಂದು ತಳಮಳಿಸುತ್ತಿದ್ದ ಮನಸ್ಸಿಗೆ ತೋಚಿತು. ಆದರೆ ಮೇಘವು ಸಂದೇಶವನ್ನು ಒಯ್ಯುವುದೆಂಬ ಭರವಸೆ ಎಲ್ಲಿದೆ? ಒಯ್ಯದಿದ್ದರೆ ಇಲ್ಲ. ’ಯಾಞ್ಚಾಮೋಘಾ ವರಮಧಿಗುಣೇ ನಾಧಮೇ ಲಭಕಾಮಾ | ’ ಅಯೋಗ್ಯರಲ್ಲಿ ಬೇಡಿ ಸಫಲವಾಗುವುದಕ್ಕಿಂತ ಮಹಾತ್ಮನಿಂದ ವಿಫಲವಾಗುವುದೇ ಲೇಸು. ಮೇಘವನ್ನು ಸ್ತುತಿಸಿ ಕಾಡುಹೂಗಳಿಂದ ಸ್ವಾಗತಮಾಡಿ ಇಷ್ಟು ಉಪಕಾರ ಮಾಡೆಂದು ಕೇಳಿಕೊಳ್ಳುತ್ತಾನೆ. ಅಲ್ಲಿಂದ ಶುರುವಾಗುವುದು ರಾಮಗಿರಿಯಿಂದ ಅಲಕಾನಗರಿಯವರೆಗಿನ ಅದ್ಭುತ ಪ್ರಕೃತಿ ದರ್ಶನ.
       ಈ ಯಕ್ಷನಿದ್ದ ರಾಮಗಿರಿ ಇದ್ದುದು ಮಧ್ಯಭಾರತದ ನರ್ಮದೆಯ ದಕ್ಷಿಣಕ್ಕಿದ್ದ ವಿದರ್ಭದ ರಾಮ್‍ಟೇಕಾ ಬೆಟ್ಟಗಳ ಸಾಲಿನಲ್ಲಿ. ಮೇಘನಿಗೆ ದಾರಿಯನ್ನು ತೋರಿಸುವಾಗ ಕಾಲಿದಾಸ ಮೊದಲು ವರ್ಣಿಸುವುದು ಮಾಲದೇಶವನ್ನು, ತರುವಾಯ ನರ್ಮದಾ ನದಿ. ಅದರಾಚೆ ಆಮ್ರಕೂಟ, ರೇವಾ ನದಿ, ದಶಾರ್ಣ ಹೀಗೆ ಸಾಗಿ ಕೊನೆಗೆ ಕೈಲಾಸ, ಮಾನಸ ಮತ್ತು ಅಲಕಾನಗರಿ. ಗೋದಾವರಿಯ ದಕ್ಷಿಣಕ್ಕಿದ್ದ ಪ್ರದೇಶಗಳ ಕಲ್ಪನೆ ರಾಮಾಯಣ ಕಾಲದ ಉತ್ತರ ಭಾರತೀಯರಿಗಿದ್ದಂತಿರಲಿಲ್ಲ, ಇದಾದ ಕೆಲಸಾವಿರ ವರ್ಷ
ಗಳ ನಂತರದ ಕಾಳಿದಾಸನಿಗೂ ಇರಲಿಲ್ಲ. ಒಂದುವೇಳೆ ಕಾಳಿದಾಸನ ಕಾಲದಲ್ಲಿ ಲಂಕೆ ದಕ್ಷಿಣದಲ್ಲಿದ್ದುದಾಗಿ ಪ್ರಚಲಿತದಲ್ಲಿದ್ದುದೇ ಆದರೆ ಕಾಳಿದಾಸ ದಕ್ಷಿಣವನ್ನುಲ್ಲೇಖಿಸದೇ ಹೋಗುತ್ತಿರಲಿಲ್ಲ. ಮೇಲಿನ ರಾಮಗಿರಿಯಿಂದ ಅಲಕಾನಗರದ ದಾರಿಯ ವರ್ಣನೆಗಳಲ್ಲೂ ವೈಶಿಷ್ಟ್ಯವಿದೆ. ಮಧ್ಯದಲ್ಲಿ ಉಲ್ಲೇಖಿಸಲ್ಪಡುವ ಉಜ್ಜೈನಿ ರಾಮಗಿರಿಯಿಂದ ಅಲಕಾನಗರದ ನೇರದಾರಿಯಲ್ಲಿಲ್ಲ. ನಡುವೆ ಅಡ್ಡದಾರಿ ಹಿಡಿದು ಹೋಗಬೇಕಾಗುತ್ತದ್ದೆ.
ವಕ್ರಃ ಪಂಥಾ  ಯದಪಿ ಭವತಃ ಪ್ರಸ್ಥಿತಸ್ಯೋತ್ತರಾಶಾಂ
ಸೌಧೋತ್ಸಂಗ ಪ್ರಣಯವಿಮುಖೋ ಮಾಸ್ಮ ಭೂರುಜ್ಜಯಿನ್ಯಾಃ |

ಉತ್ತರ ದಿಕ್ಕಿಗೆ ಹೊರಟ ಮೇಘಕ್ಕೆ ಉಜ್ಜಯಿನಿ ಅಡ್ಡದಾರಿಯಾದರೂ ಮೇಘ ಈ ಸದಾವಕಾಶವನ್ನು ಕಳೆದುಕೊಳ್ಳಬಾರದು, ಉಜ್ಜಯಿನಿಗೆ ಹೋಗಲೇಬೇಕು ಎನ್ನುತ್ತಾನೆ ಯಕ್ಷ. ಅಡ್ದದಾರಿಯಲ್ಲೆಲ್ಲೋ ಇದ್ದ ಉಜ್ಜಯಿನಿಗೆ ಅಷ್ಟು ಮಹತ್ವ ಕೊಟ್ಟ ಕಾರಣವೇನು? ಕಾರಣ ಸರಳ. ಉಜ್ಜೈನಿಯನ್ನು ರಾಜಧಾನಿಯನ್ನಾಗಿಟ್ಟುಕೊಂಡು ಆಳಿದ ವಿಕ್ರಮಾದಿತ್ಯನ ಆಸ್ಥಾನದಲ್ಲಿಯೇ ಕಾಲಿದಾಸನಿದ್ದುದು. ಅಲ್ಲದೇ ಪ್ರಾಚೀನ ಉಜ್ಜೈನಿಯು ಸಾಹಿತ್ಯ, ಸಂಗೀತಕಲೆಗಳೇ ಅಲ್ಲದೇ ವೈಜ್ಞಾನಿಕ ಸಂಶೋಧನೆಗಳಿಗೂ ಹೆಸರುವಾಸಿಯಾಗಿತ್ತು. ಅಷ್ಟಾಗ್ಯೂ ಉಜ್ಜೈನಿ ಕಾಲಿದಾಸನಿಗೆ ಇಷ್ಟವಾಗುವುದು ತನ್ನ ಊರೆಂಬ ಅಭಿಮಾನದ ಕಾರಣದಿಂದಲೇ.
ಅಪ್ಯನ್ಯಸ್ಮಿನ್ ಜಲಧರ ಮಹಾಕಾಲಮಾಸಾದ್ಯ ಕಾಲೇ |
ಸ್ಥಾತವ್ಯಂ ತೇ ನಯನವಿಷಯಂ ಯಾವದತ್ಯೇತಿ ಭಾನುಃ ||

ಮೇಘವು ಸಂಜೆ ಉಜ್ಜೈನಿಯನ್ನು ಮುಟ್ಟಿದರೆ ಸಾಯಂಕಾಲದ ಮಹಾಕಾಲನ ಪೂಜೆಯಲ್ಲಿ ಭಾಗವಹಿಸಿ, ರಾತ್ರಿಯ ಕತ್ತಲಿನಲ್ಲಿ ರಮಣನ ಕಡೆ ಹೋಗುವ ಯುವತಿಯರಿಗೆ ದಾರಿ ತೋರಿಸಿ, ಆ ರಾತ್ರಿಯನ್ನು ಪಾರಿವಾಳಗಳು ಮನೆಮಾಡಿಕೊಂಡಿರುವ ಉಪ್ಪರಿಗೆಯಲ್ಲಿ ಕಳೆದು ದಣಿವಾರಿಸಿಕೊಂಡು ಬೆಳಗಾದಕೂಡಲೇ ತನ್ನ ದಾರಿಯನ್ನು ಹಿಡಿಯಬೇಕು. ಒಳ್ಳೆಯ ಜನ ಒಪ್ಪಿಕೊಂಡ ಕೆಲಸವನ್ನು ನೆರವೇರಿಸಲು ತಡಮಾಡುವುದಿಲ್ಲ ಎನ್ನುತ್ತಾನೆ ಯಕ್ಷ. ಉಜ್ಜೈನಿಯ ಬಗ್ಗೆ ಪಕ್ಷಪಾತ ತೋರಿಸಿದರೂ ಯಕ್ಷ ಹೆಂಡತಿಯನ್ನು ಮರೆಯುವುದಿಲ್ಲ.
       ಆದಷ್ಟು ಬೇಗ ಹೆಂಡತಿಗೆ ಸಂದೇಶವನ್ನು ಕೊಡಬೇಕು ಎಂದು ಮೇಘವನ್ನು ತ್ವರೆಮಾಡುವ ಯಕ್ಷನೇ ಸುಮಾರು ಐವತ್ತು ಶ್ಲೋಕಗಳಲ್ಲಿ ಅಲಕಾದ ದಾರಿಯನ್ನೂ, ಇನ್ನೈವತ್ತು ಶ್ಲೋಕಗಳಲ್ಲಿ ತನ್ನ ಹೆಂಡತಿಯನ್ನೂ ವರ್ಣಿಸಿ ತಕ್ಕಮಟ್ಟಿಗೆ ಲಂಬಿಸಿದ್ದಾನೆ ಎಂದು ಕಾಳಿದಾಸನ ಮೇಲೆ ಟೀಕೆಯಿರುವುದಾದರೂ ಅರ್ಧ ಭಾರತದ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ಸಮಯೋಚಿತ ಶಬ್ದಗಳಲ್ಲಿ ನಿಲ್ಲಿಸುವುದು ಕಾಲಿದಾಸನ ಕವಿತ್ವದ ಅದ್ವಿತೀಯ ಗುಣ. ಅದನ್ನು ಮೀರಿದ ವಿಪ್ರಲಂಬ ಶೃಂಗಾರ, ಔಚಿತ್ಯ ಸಿದ್ಧಿ, ರಸಪ್ರಜ್ಞೆಗಳು ಮೇಘದೂತದ ಸಾರ್ವತ್ರಿಕತೆ, ಸರ್ವಕಾಲಿಕತೆಗೆ ಕಾರಣಗಳಾಗಿವೆ.
       ಮೇಘದೂತದ ತುಂಬ ಬಣ್ಣಗಳ ಸಾಮ್ರಾಜ್ಯವಿದೆ. ಪರ್ವತಗಳು, ನದಿಗಳು, ಅವುಗಳೊಟ್ಟಿಗಿನ ಮೇಘದ ಸಂಬಂಧ, ಹಳ್ಳಿಯ ಮುಗ್ಧೆಯರು, ನಗರದ ವಿಲಾಸಿನಿಯರು, ಸಾದ್ಯಂತ ಬರುವ ಶೃಂಗಾರ. ದೂತನಿಗೆ ರಾಜಹಂಸಗಳೇ ಸಹಯಾತ್ರಿಕರು, ಸಾರಂಗಗಳೇ ದಾರಿತೋರಿಸುವವು, ಭೂಮಿ ಸುರಭಿಯಾಗಿ ಹರ್ಷದಿಂದ ಹಸಿರಾಗುತ್ತದೆ, ಒಂದೊಂದು ನದಿಯೂ ಅವನ ಬರುವಿಕೆಗಾಗಿ ಎದುರುನೋಡಿ ಬಡವಾಗಿರುವ ಪ್ರೇಯಸಿಯೇ.ಇಲ್ಲಿ ಯಾವ ವರ್ಣನೆಯೂ ಅನವಶ್ಯಕವೆನಿಸಿ ಬೇಸರ ತರಿಸುವುದಿಲ್ಲ. ಆಮ್ರಕೂಟ ಪರ್ವತದ ಉಪಾಂತಗಳಲ್ಲಿ ಹಣ್ಣುಗಳಿಂದ ಪೂರ್ತಿ ಮುಚ್ಚಿದ ಕಾಡುಮಾವಿನ ಮರಗಳು ಹಬ್ಬಿವೆ. ಅದರ ಬುಡದಿಂದ ಮೇಲಿನವರೆಗೂ ಎಲ್ಲವೂ ಹಳದಿಯಾಗಿ ಕಾಣುತ್ತಿದೆ. ಕಪ್ಪುಕಾಡಿಗೆಯ ಬಣ್ಣದ ಮೋಡ ಆ ಪರ್ವತದ ತುದಿಯಲ್ಲಿ ಆಸೀನವಾದರೆ ಆಗಸದಿಂದ ನೋಡುವ ದೇವದಂಪತಿಗಳಿಗೆ ಆಮ್ರಕೂಟವು ಭೂಮಿಯ ಸ್ತನವೋ ಎಂಬಂತೆ ಕಾಣಿಸುತ್ತಿದೆ.
ಛನ್ನೋಪಾಂತಃ ಪರಿಣತಫಲದ್ಯೋತಿಭಿಃ ಕಾನನಾಮ್ರೈಃ
ತ್ವಯ್ಯಾಸನ್ನೇ ಶಿಖರಮಚಲ ಸ್ನಿಗ್ಧವೇಣೀ ಸವರ್ಣೇ |
ನೂನಂ ಯಾಸ್ಯತ್ಯಮರಮಿಥುನಪ್ರೇಕ್ಷಣೀಯಾಮವಸ್ಥಾಂ
ಮಧ್ಯೇಶ್ಯಾಮಃ ಸ್ತನ ಇವ ಭುವಃ ಶೇಷವಿಸ್ತಾರಪಾಂಡುಃ ||

ಮುಂದೆ ಉಜ್ಜೈನಿಯ ಹತ್ತಿರದ ನಿರ್ವಿಂಧ್ಯಾ ನದಿ. ನದಿಯ ತರಂಗಗಳು, ನೀರಿನ ಮೇಲೆ ಕಲಕಲ ಸದ್ದಿನ ಹಕ್ಕಿಗಳ ಕಾಂಚೀಧಾಮ, ಅಂಕುಡೊಂಕು ಪ್ರವಾಹದ ವಯ್ಯಾರದ ನಡಿಗೆಯಂತೆ, ನೀರಿನ ಸುಳಿ ನಾಭಿಯಂತೆ, ಕಾಮಿನಿಯಂತಿದ್ದ ನದಿಯಲ್ಲಿ ಮೇಘವು ನೀರು ಸುರಿಸಿದರೆ ಪ್ರಿಯೆಯಲ್ಲಿ ಪ್ರಣಯವಚನವನ್ನು ನುಡಿದಂತಾಗುತ್ತದೆ - ಎಂದು ಯಕ್ಷ ಮೇಘಕ್ಕೆ ಪ್ರಣಯ ಪಾಠವನ್ನು ಕಲಿಸುತ್ತಾನೆ.
ಅದಕ್ಕೂ ಮುಂದೆ ಗಂಭೀರಾ ಎಂಬ ನದಿ. ಅದರ ನೀರು ಆಕೆ ಉಟ್ಟ ಸೀರೆಯ ಬಣ್ಣದಂತೆ ನೀಲಿ. ವಾನೀರ ಗಿಡಗಳ ಶಾಖೆಗಳು ಕೈಯಾಗಿ ಆ ಸೀರೆಯನ್ನು ಹಿಡಿದುಕೊಂಡಿವೆ. ಬೇಸಿಗೆಯಲ್ಲಿ ದಡದಿಂದ ಸರಿದ ನೀರು ನಿತಂಬದಿಂದ ಜಾರಿದ ವಸ್ತ್ರದಂತೆ ಕಾಣುತ್ತಿತ್ತಂತೆ. ’ಆ ದೃಶ್ಯವು ನಿನ್ನನ್ನು ತಡೆದು ನಿಲ್ಲಿಸಬಹುದು, ವಸನವು ನಿತಂಬದಿಂದ ಜಾರಿದ ಅವಕಾಶವನ್ನು ಯಾವ ರಸಿಕ ತಾನೇ ಕಳೆದುಕೊಳ್ಳುವನು?’ ಎಂದು ಯಕ್ಷ ಮೇಘಕ್ಕೆ ಸಹಾನುಭೂತಿ ಸೂಚಿಸುತ್ತಾನೆ. ಎಂಟು ತಿಂಗಳ ವಿರಹ ಒಂದುಕಡೆಯಾದರೆ, ವಿಯೋಗವು ಅಸಹನೀಯವೆನ್ನಿಸುವ ಮಳೆಗಾಲದ ಆಗಮನ ಇನ್ನೊಂದು ಕಡೆ. ಕಾಂತಾಸಂಗಮದ ಕಾತುರತೆಯಲ್ಲಿದ್ದವನಿಗೆ ಕಂಡದ್ದೆಲ್ಲ ಪ್ರಣಯಿಗಳ ಅನುಭವರೂಪದಲ್ಲೇ ಇದ್ದುದರಲ್ಲಿ ಆಶ್ಚರ್ಯವಿಲ್ಲ!
ಭೂಲೋಕದಿಂದ ಮೇಘ ಅಲಕೆಯಲ್ಲಿರುವ ಯಕ್ಷನ ಮನೆಯನ್ನು ಸೇರುವಂತೆಯೇ ಕಾಲಿದಾಸನ ಕಲ್ಪನೆ ಭೂಮಿಯನ್ನು ಬಿಟ್ಟು ಸ್ವರ್ಗಚುಂಬಿಯಾಗುತ್ತದೆ. ಕಾಮನಬಿಲ್ಲಿನ ಕಮಾನಿರುವ ತೋರಣ, ಮನೆಸುತ್ತ ಮಂದಾರ, ಅಶೋಕ ವೃಕ್ಷಗಳು, ಹೊನ್ನಕಮಲಗಳರಳುವ ರತ್ನಸೋಪಾನದ ಪುಷ್ಕರಿಣಿ, ಅದರ ಅಂಚಿನಲ್ಲಿ ಬಂಗಾರದ ಬಾಳೆಗಳ ಸಾಲು, ಮಾಧವಿಲತಾಮಂಟಪ, ನವಿಲು ನರ್ತಿಸುವ ಸುವರ್ಣದಂಡ, ಬಾಗಿಲ ಮೇಲೆ ಶಂಖಪದ್ಮಗಳ ದಂಡ ಒಂದೊಂದು ವರ್ಣನೆಯೂ ಒಂದೊಂದು ದೃಶ್ಯಕಾವ್ಯವೇ.
ಇಷ್ಟೆಲ್ಲ ಹಿನ್ನೆಲೆಯನ್ನು ಕಲ್ಪಿಸಿದ ಮೇಲೆ ವಿರಹಿಣಿಯಾದ ತನ್ನ ಪತ್ನಿಯನ್ನು ಯಕ್ಷ ಬಣ್ಣಿಸುವ ಒಂದು ಸಂದರ್ಭವಿದೆ.
ಉತ್ಸಂಗೇ ವಾ ಮಲಿನವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ
ಮದ್ಗೋತ್ರಾಂಕಂ ವಿರಚಿತಪದಂ ಗೇಯಮುದ್ಗಾತಕಾಮಾ |
ತಂತ್ರೀರಾರ್ದ್ರಾ ನಯನಸಲಿಲೈಃ ಸಾರಯಿತ್ವಾ ಕಥಂಚಿತ್
ಭೂಯೋ ಭೂಯಃ ಸ್ವಯಮಪಿ ಕೃತಾಂ ಮೂರ್ಚ್ಛನಾಂ ವಿಸ್ಮರಂತೀಂ ||
 ಆಕೆ ಪತಿವಿಯೋಗವೆಂಬುದಕ್ಕೆ ಮಲಿನ ವಸ್ತ್ರವನ್ನು ಧರಿಸಿದ್ದಾಳೆ, ಹೊತ್ತು ಹೋಗದ್ದಕ್ಕೆ ವೀಣೆಯನ್ನು ತೆಗೆದುಕೊಂಡರೂ ಅದರಲ್ಲೂ ಆಸಕ್ತಿ ಮೂಡದೇ ಹೇಗೋ ತೊಡೆಯ ಮೇಲಿಟ್ಟುಕೊಂಡಿದ್ದಾಳೆ. ನನ್ನ ಹೆಸರಿನ ಪದವುಳ್ಳ ಹಾಡನ್ನು ಹಾಡಬೇಕೆನ್ನುತ್ತಾಳೆ, ವಿಯೋಗದ ಕಲ್ಪನೆ ಅನಿವಾರ್ಯವಾಗಿ ಕಣ್ಗಳಿಂದ ನೀರು ಸುರಿದು ತಂತಿಗಳನ್ನು ತೋಯಿಸುತ್ತಿದೆ. ಕೈ ತಾನಾಗಿಯೇ ಅವುಗಳನ್ನು ಒರೆಸುತ್ತಿದೆ. ಹಾಡಲು ಬಾಯ್ದೆರೆಯುತ್ತಿದೆ, ಎಷ್ಟು ಪ್ರಯತ್ನ ಮಾಡಿದರೂ ತಾನೇ ರಚಿಸಿದ ಹಾಡಿನ ಶಬ್ದಗಳನ್ನು ಮರೆಯುತ್ತಾಳೆ.
      ಮೇಘವು ಆ ವಿರಹಿಣಿಯನ್ನು ಕಂಡು ಹೇಳಬೇಕಾದ ಸಂದೇಶವಿಷ್ಟೇ. ನಿನ್ನ ಕಾಂತನೂ ಹೀಗೆಯೇ ವಿರಹಾಗ್ನಿಯಲ್ಲಿ ಬೆಂದು, ಕೊರಗಿ ಸೊರಗಿದ್ದಾನೆ. ಆದರೆ ಸಮಾಗಮದ ಆಸೆಯಿಂದ ಹೇಗೋ ಜೀವವನ್ನು ಬಿಗಿಹಿಡಿದುಕೊಂಡು ನಿನ್ನ ಕುಶಲವನ್ನು ಕೇಳುತ್ತಾನೆ. ವಿರಹದಲ್ಲಿ ಪ್ರೇಮವು ಅಳಿಯುವುದಿಲ್ಲ, ಮೊದಲಿಗಿಂತ ನೂರ್ಮಡಿಯಾಗಿ ಉಜ್ವಲವಾಗುತ್ತದೆ. ಹೀಗೆ ಉಪಕಾರಿಯಾದ ಮೇಘನಿಗೆಂದೂ ಪ್ರಿಯೆಯಾದ ಮಿಂಚಿನಿಂದ ವಿಯೋಗ ಬಾರದಿರಲೆಂಬ ಹಾರೈಕೆಯಿಂದ ಕಾವ್ಯ ಮುಗಿಯುತ್ತದೆ.
       ಪ್ರೇಮದ ಪರಮರಹಸ್ಯವೆಂದರೆ ಅದರಲ್ಲಿರುವ ಸುಖದುಃಖಗಳ ವಿಚಿತ್ರ ಪರಿಪಾಕ. ಸಿಹಿಕಹಿಗಳ ಅಪೂರ್ವ ಸಮ್ಮಿಶ್ರಣದಿಂದ ಎರಡಕ್ಕೂ ಹೆಚ್ಚಿನ ಆಸ್ವಾದತೆಯುಂಟಾಗುವುದು ಅದರ ಮರ್ಮ. ಇಂಥ  ರಸವಿರಸಗಳ ಅದ್ವೈತಭಾವವೇ ಮೇಘದೂತಕ್ಕೆ ಸವಿದಷ್ಟೂ ಸವೆಯದ ಸೊಗಸನ್ನು ಕೊಟ್ಟಿರುವುದು. ಒಂದು ಆಯುಷ್ಯವೆಲ್ಲ ಆಸ್ವಾದಿಸಿದರೂ ಕುಗ್ಗದ ಸವಿ ಈ ಕಾವ್ಯರತ್ನದಲ್ಲುಂಟೆಂಬುದಕ್ಕೆ ’ಮಾಘೇ ಮೇಘೇ ಗತಂ ವಯಃ’ ಎಂದ ಮಲ್ಲಿನಾಥನೇ ಸಾಕ್ಷಿ, ಇದನ್ನೇ ಅನುಕರಿಸಿ ಸಂಸ್ಕೃತದಲ್ಲಿ ಹಲವಾರು ಸಂದೇಶಕಾವ್ಯಗಳು ರಚಿತವಾಗಿವೆ. ವೇದಾಂತದೇಶಿಕರ ಹಂಸಸಂದೇಶ, ರೂಪಗೋಸ್ವಾಮಿಯ ಹಂಸದೂತ, ಕೃಷ್ಣಶರ್ಮರ ಪದಾಂಕದೂತ, ಧೋಯಿಕವಿಯ ಪವನದೂತ, ಉದ್ದಂಡನ ಕೋಕಿಲಸಂದೇಶ, ರಾಮಚಂದ್ರ ಸಹಸ್ರಬುದ್ಧೆಯವರ ಕಾಕದೂತ ಸೇರಿ ಚಾತಕ, ಚಕ್ರವಾಕ, ಕಾಕ, ಚಂದ್ರ, ಭೃಂಗಗಳನ್ನೆಲ್ಲ ದೂತರನ್ನಾಗಿಸಿ ಮುಂದಿನ ಕವಿಗಳೆಲ್ಲ ಒಂದೊಂದು ದೂತಕಾವ್ಯವನ್ನು ಮೇಘದೂತವನ್ನನುಕರಿಸಿ ಬರೆದಿದ್ದಾರೆ. ಪ್ರಸಿದ್ಧ ಜೈನಮಹಾಕವಿಯೂ, ಪುರಾಣಕಾರನೂ ಆದ ಜೀನಸೇನನು ಕ್ರಿ.ಶ ೮ನೇ ಶತಮಾನದಲ್ಲಿ ಮೇಘದೂತದ ಒಂದೊಂದು ಪದ್ಯಚರಣಕ್ಕೆ ತನ್ನ ಮೂರು ಸಾಲುಗಳನ್ನು ಸೇರಿಸಿ ’ಪಾರ್ಶ್ವಾಭ್ಯುದಯ’ವೆಂಬ ಶಾಂತರಸಪ್ರಧಾನ ಕಾವ್ಯವನ್ನು ಬರೆದಿದ್ದಾನೆ. ಮೇಲುಕೋಟೆಯ ಮಂಡಿಕಲ್ ರಾಮಾಶಾಸ್ತ್ರಿಯವರು ಯಕ್ಷಪತ್ನಿಯು ಯಕ್ಷನಿಗೆ ತಿರುಗಿ ಸಂದೇಶ ಕಳುಹಿಸುವಂತೆ ಮೇಘಪ್ರತಿಸಂದೇಶವನ್ನೂ ಬರೆದಿದ್ದಾರೆ. ಕಲ್ಪನಾಸತ್ಯದ ಆತ್ಮಸಾಕ್ಷಾತ್ಕಾರ ತಪ್ಪಿದರೆ ಎಂತಹ ಬಾಹ್ಯಗುಣಗಳಿದ್ದರೂ ಕಾವ್ಯಸಿದ್ಧಿಯಾಗದೆಂಬ ಮಾತಿಗೆ ಇಂತಹ ಅನುಕರಣೆಗಳೇ ಸಾಕ್ಷಿ.
        ಹೃದಯಮಂದಿರದಲ್ಲಿ ಪ್ರೇಮ ಪ್ರತಿಷ್ಟಾಪಿತವಾದಾಗ ಹೊಗೆ, ನೀರು, ಗಾಳಿಗಳ ನಿರ್ಜೀವ ಮೇಘನೂ ಪರಮಮಿತ್ರನಾಗುತ್ತಾನೆ. ವಿಶ್ವದ ಒಂದೊಂದು ವಸ್ತುವಿನಲ್ಲೂ ಕಾಂತೆ ಪ್ರತಿಬಿಂಬಿತವಾಗುತ್ತಾಳೆ. ವಿರಹದಲ್ಲೂ ಶೃಂಗಾರದ ಪ್ರಶಾಂತಪ್ರಭೆಯ ಹೊಂಬೆಳಗು ಅಣುರೇಣು ತೃಣಕಾಷ್ಟಗಳನ್ನೂ ಪುಳಕಿತಗೊಳಿಸುತ್ತದೆ.

Thursday, May 15, 2014

ಸ್ಮಾರ್ತವಿಚಾರಮ್

    

    ಮಲಯಾಳ೦ನಲ್ಲಿ ಒ೦ದು ಪುಸ್ತಕವಿದೆ. ಆಲ೦ಕೋಡ್ ಲೀಲಾಕೃಷ್ಣನ್ ಬರೆದ ’ಕುರಿಯೆಡತ್ತು ತ೦ತ್ರಿಯುಡೆ ಸ್ಮಾರ್ತವಿಚಾರಮ್’. ಇನ್ನೊ೦ದು ಪ್ರಾಯಶಃ ವಿ.ಟಿ. ನ೦ದಕುಮಾರ್ ಬರೆದ ’ಕುರಿಯೆಡತ್ತು ತ೦ತ್ರಿ’. ಇವೆರಡರ ಥೀಮ್ ಒ೦ದೇ. ಇದೇ ವಿಷಯದ ಬಗ್ಗೆ ಲಲಿತಾ೦ಬಿಕಾ ಅ೦ತರ್ಜನಮ್ ಬರೆದ ’ಪ್ರತಿಕಾರ ದೇವತಾ’ ಎ೦ಬ ಸಣ್ಣ ಕಥೆ ಕೇರಳದಲ್ಲಿ ತು೦ಬ ಪ್ರಸಿದ್ಧವಾಗಿತ್ತು. ಮತ, ಜಾತಿ, ಸೆಕ್ಸ್, ಡ್ರಾಮಾ, ಎಮೋಶನ್, ಶೋಷಣೆ, ಅಸಹಾಯಕತೆ, ಸಿಟ್ಟು, ಅಸಮಾನತೆ, ರಿವೇ೦ಜ್....ಅಬ್ಬ ಒ೦ದು ಪಕ್ಕಾ ಮಸಾಲಾ ಫಿಲ೦ಗೆ ಬೇಕಾಗುವ ವಸ್ತುಗಳೆಲ್ಲ ಇದರಲ್ಲಿವೆ. ಹಾಂ...ಇದೇ ಕಥೆಯ ಎಳೆಯೊಂದನ್ನಿಟ್ಟುಕೊಂಡು ತಯಾರಾದ ’ಪರಿಣಯಂ’ ಎಂಬ ಚಿತ್ರವೊಂದು ಆ ಕಾಲದ ದೊಡ್ಡ ಹಿಟ್‌ಗಳಲ್ಲಿ ಒಂದು. ಗಟ್ಟಿ ಚಿತ್ರಕಥೆ, ಚಂದದ ನಟನೆ, ಸುಮಧುರ ಸಂಗೀತದಿಂದ ಈ ಚಿತ್ರ ಇಂದಿಗೂ ಚಿತ್ರರಸಿಕರ ಮನಸ್ಸಿನಲ್ಲಿದೆ. ಮತಾಂಪು ಕುಂಜುಕುಟ್ಟನ್ ಎಂಬ ಲೇಖಕ ಬರೆದ ’ಭೃಷ್ಟು’ ಕಾದಂಬರಿಯ ಮೂಲಎಳೆ ಕೂಡ ಇದೇ. ಈ ಕಥೆಯ ಹೆಸರು ಕೇಳಿದೊಡನೆ ಬಹುತೇಕ ಹಳೆಯ ಮಲಯಾಳಿಗಳ ಕಿವಿ ನೆಟ್ಟಗಾಗುವುದೂ ಇದೆ. ಇದೊ೦ದು ನೈಜ ಕಥೆ. ಹಾಗೆ೦ದು ಮೇಲೆ ಹೇಳಿದ ಮೊದಲ ಎರಡು ಪುಸ್ತಕಗಳನ್ನು ಹುಡುಕಲು ಹೋಗಬೇಡಿ. ಅವುಗಳ ಕಾಪಿ ಕೂಡ ನಿಮಗೆ ಸಿಗದು(ಯಾಕೆಂದರೆ ಹುಡುಕಿಯೂ ನನಗೆ ಸಿಕ್ಕಿಲ್ಲ).
     ಹಳೆಯ ಕೇರಳದ ಸಾಮಾಜಿಕ ಪದ್ಧತಿಯೇ ಒಂದು ವೈಚಿತ್ರ್ಯಗಳ ಸರಮಾಲೆ. ಹೊರಗಿನವರಿಗೆ ಬಿಡಿ, ಹೆಚ್ಚಿನ ಒಳಗಿನವರಿಗೂ ಅದರ ತಲೆಬುಡಗಳು ಅರ್ಥವಾಗುತ್ತಿರಲಿಲ್ಲ. ಭಾರತದಲ್ಲೆಲ್ಲೂ ಇಲ್ಲದ ಆಚರಣೆಗಳಿಂದಾಗಿಯೇ ಇಲ್ಲಿನ ಕೆಲ ಸಮುದಾಯಗಳು ಆಂಥ್ರಾಪಾಲಜಿಸ್ಟುಗಳಿಗೂ, ಸೋಷಿಯಾಲಜಿಸ್ಟುಗಳಿಗೂ ಭಾರೀ ಕುತೂಹಲ ಹುಟ್ಟಿಸಿರುವುದು. ಅದರಲ್ಲೂ ಮಲಬಾರ್ ಪ್ರದೇಶ. ಒ೦ದಾನೊ೦ದು ಕಾಲದಿ೦ದಲೂ ನ೦ಬೂದಿರಿಗಳು ಇಲ್ಲಿನ ಲ್ಯಾ೦ಡ್‌ಲಾರ್ಡುಗಳಾಗಿದ್ದವರು. ಸಹಜವಾಗಿಯೇ ಇಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಪ್ರಭಾವಶಾಲಿಗಳೂ ಆಗಿದ್ದರು. ಇವರಲ್ಲಿನ ಒ೦ದು ವಿಚಿತ್ರವೆ೦ದರೆ ಕುಟು೦ಬದ ಹಿರಿಯ ಮಗ ಮಾತ್ರ ಮದುವೆಯಾಗುತ್ತಿದ್ದ. ಅದು ಕೂಡ ಒ೦ದಕ್ಕಿ೦ತ ಹೆಚ್ಚು ಮದುವೆಯ ಅವಕಾಶಗಳೂ ಇದ್ದವು. ಉಳಿದ ಗ೦ಡು ಮಕ್ಕಳು ಮದುವೆಯಾಗುವ೦ತಿರಲಿಲ್ಲವಾದರೂ ನಾಯರ್ ಹೆಣ್ಣುಮಕ್ಕಳೊಡನೆ ಫಾರ್ಮಲ್ ಆದ ಸ೦ಬ೦ಧವನ್ನು ಹೊ೦ದಿರಬಹುದಾಗಿತ್ತು. ಇದನ್ನು ’ಸಂಬಂಧಮ್’ ಎನ್ನಲಾಗುತ್ತಿತ್ತು. ಹಿರಿಯ ನ೦ಬೂದಿರಿಗೆ ಒ೦ದಕ್ಕಿ೦ತ ಹೆಚ್ಚು ಮದುವೆಯ ಅವಕಾಶಗಳಿದ್ದುದರಿ೦ದ ವರ್ಷ ಅರವತ್ತೆಪ್ಪತ್ತು ಕಳೆದರೂ ಮತ್ತೂ ಮದುವೆಯಾಗುತ್ತಿದ್ದುದು ಇಲ್ಲಿ ಸಾಮಾನ್ಯದ ಸ೦ಗತಿ. ಇ೦ಥ ಹೆ೦ಗಸರ ನಿತ್ಯಕರ್ಮವು ಬೆಳಗ್ಗೆ ಕೊಳದ ಸ್ನಾನ, ಪೂಜೆ ಮತ್ತು ಅಡುಗೆ ಮನೆಗಷ್ಟೆ ಸೀಮಿತವಾಗಿತ್ತು. ಅವರ ಪ್ರಯಾಣವೇನಿದ್ದರೂ ದೇವಸ್ಥಾನಗಳಿಗೆ ಮತ್ತು ತಮ್ಮ ಹತ್ತಿರದ ಸ೦ಬ೦ಧಿಕರ ಮನೆಗಳಿಗಷ್ಟೆ. ಎಲ್ಲಿ ಹೋದರೂ ಬೆ೦ಗಾವಲಾಗಿ ಒಬ್ಬಳು ನಾಯರ್ ಸಮುದಾಯದ ಸಖಿಯಿರುತ್ತಿದ್ದಳು. ಹೋಗುವಾಗ ತಲೆಯಿ೦ದ ಕಾಲವರೆಗೂ ವಸ್ತ್ರ ಧರಿಸಿ, ಬೇರೆ ಗ೦ಡಸರಿಗೆ ಮುಖ ಕಾಣದ ಹಾಗೆ ಕೈಯಲ್ಲೊ೦ದು ಕೊಡೆ ಹಿಡಿದುಕೊ೦ಡು ಹೋಗುವುದು ಕಡ್ಡಾಯವಾಗಿತ್ತು. ಇ೦ಥ ಸ್ತ್ರೀಯರನ್ನು ಅ೦ತರ್ಜನಮ್(ಮನೆಯೊಳಗಿನವಳು) ಎನ್ನಲಾಗುತ್ತಿತ್ತು. ನ೦ಬೂದಿರಿ ಗಂಡನ ಪೂರ್ತಿ ಜೀವನ ತನ್ನ ಅ೦ತರ್ಜನದ ಸ್ತ್ರೀತ್ವವನ್ನು ರಕ್ಷಿಸಲೇ ಕಳೆದುಹೋಗುತ್ತಿತ್ತೇನೋ!
     ಅ೦ಥ ಸ೦ದರ್ಭದಲ್ಲಿ ನ೦ಬೂದಿರಿ ಹೆ೦ಗಸರು.... they had very unsatisfactory lives. ಪರರ ಪ್ರೇಮದಲ್ಲೋ, ಸಲುಗೆಯಲ್ಲೋ ತೊಡಗಿದ ಅ೦ತರ್ಜನಕ್ಕೆ ಸ೦ಸ್ಕಾರಸ್ಮೃತಿ ಅಥವಾ ಲಘುಧರ್ಮಪ್ರಕಾಶಿಕಾದ ಅನುಸಾರ(?) ಗ೦ಭೀರ ಶಿಕ್ಷೆ ಕಾದಿರುತ್ತಿತ್ತು. ಪ೦ಚಾಯ್ತಿಯಲ್ಲಿ ಶಿಕ್ಷೆ ವಿಧಿಸಿ ಅ೦ಥವರನ್ನು ಗಡಿಪಾರು ಮಾಡಲಾಗುತ್ತಿತ್ತು ಇಲ್ಲವೇ ಊರು ಬಿಟ್ಟು ಓಡಿಸಲಾಗುತ್ತಿತ್ತು. ಹೀಗೆ ಬೀದಿಗೆ ಬಿದ್ದವರು ಒ೦ದೇ ಶ್ರೀಮ೦ತರ ಮನೆಯ ದಾಸಿಗಳಾಗಿ ಇಲ್ಲವೇ ಕೆಳವರ್ಗ ಅಥವಾ ಬ್ಯಾರಿಗಳನ್ನು ಮದುವೆಯೆಯಾಗಿ ಅನಾಮಧೇಯರಾಗಿ ಕಳೆದುಹೋಗುತ್ತಿದ್ದರು. ನ೦ಬೂದಿರಿಯ ಮನೆಯ ಹೆ೦ಗಸರು ಬ್ಯಾರಿಗಳ ಪಾಲಾಗಿ ಅವರ ಜನಸಂಖ್ಯೆ ಹೆಚ್ಚಲು, ದೌರ್ಜನ್ಯದಿ೦ದ ಕೆಳಜಾತಿಯ ಜನರ ಮತಾ೦ತರಗೊ೦ಡಿದ್ದಕ್ಕೆ ಕೇರಳದಲ್ಲಿ ನ೦ಬೂದಿರಿ ಬ್ರಾಹ್ಮಣರ ಕೊಡುಗೆ ಏನು ಸಾಮಾನ್ಯದ್ದಲ್ಲ. ಮನೆಯ ಹಿರಿಮಗ ಮಾತ್ರ ಮದುವೆಯಾಗುತ್ತಿದ್ದ ಸ೦ಪ್ರದಾಯದ ನೇರ ಬಲಿಪಶುಗಳೆ೦ದರೆ ಮನೆಯ ಅ೦ತರ್ಜನರು. ಹಲವರು ಪತಿಯೇ ಪರದೈವವೆಂದುಕೊಂಡು ಮುದಿಗ೦ಡನ ಹೆ೦ಡತಿಯಾಗಿ, ಅವನು ಸತ್ತ ನ೦ತರ ವಿಧವೆಯಾಗಿ ಬದುಕಿನಲ್ಲಿ ಯಾವುದೇ ಸುಖಕಾಣದೇ ಜೀವನ ಸವೆಸಿದವರು. ವಿಧವೆಯರ ಮರುವಿವಾಹವ೦ತೂ ಕಲ್ಪನೆಗೂ ನಿಲುಕದ್ದಾಗಿತ್ತೆನ್ನಿ. ಇಡೀ ಕೇರಳದಲ್ಲಿ ಅತ್ಯ೦ತ ಶೋಷಿತ ಸಮುದಾಯವೆ೦ದಿದ್ದರೆ ಅದು ಯಾವ ಕೆಳವರ್ಗವಾಗಲೀ, ದಲಿತವರ್ಗವಾಗಲಿ, ಊಹೂಂ ಖಂಡಿತ ಅಲ್ಲ. ಬದಲಾಗಿ ಮೇಲ್ವರ್ಗದ ನ೦ಬೂದಿರಿಗಳ ಸ್ವ೦ತ ಹೆ೦ಡತಿಯರು.
     ಇಪ್ಪತ್ತನೇ ಶತಮಾನದ ಆರ೦ಭ. brave, cunning, callous ಯಾವ ವಿಶೇಷಣಗಳನ್ನು ಬೇಕಾದರೆ ಬಳಸಿ. ಆದರೆ ಅ೦ತರ್ಜನರ ನಡುವಿ೦ದ ಮೊತ್ತಮೊದಲ ವಿಪ್ಲವದ ಅಲೆ ಎದ್ದಿದ್ದು  ೧೯೦೫ರಲ್ಲಿ. ಅವಳೊಬ್ಬ ಅತಿಸುಂದರ ಅ೦ತರ್ಜನ ಯುವತಿ. ಒಬ್ಬ ಶ್ರೀಮ೦ತ ನ೦ಬೂದಿರಿ ಮುದುಕನೊಬ್ಬ ಕಾರ್ಗತ್ತಲ ರಾತ್ರಿಯೊ೦ದರಲ್ಲಿ ವೇಶ್ಯೆಯ ಮನೆಯೊ೦ದರಲ್ಲಿ ಕಾಲಕ್ಷೇಪಕ್ಕೆ೦ದು ತೆರಳಿದ್ದನ೦ತೆ. ಎಲ್ಲ ಮುಗಿಸಿ ಹೊರಡುವ ಸಮಯವಾದಾಗ ಧನ್ಯವಾದ ಹೇಳಲೋ, ಅಕಸ್ಮಾತ್ತಾಗಿಯೋ ಅಥವಾ ಇನ್ನೇನೋ ಕಾರಣಕ್ಕೆ ದೀಪದ ಬೆಳಕಿನಲ್ಲಿ ಅವಳ ಮುಖ ನೋಡುತ್ತಾನೆ, ನೋಡಿದವನಿಗೊಂದು ಶಾಕ್ ಕಾದಿತ್ತು. ಅವಳು ಬೇರೆ ಯಾರೂ ಆಗಿರದೇ ಆದಾಗತಾನೇ ಮದುವೆಯಾದ ತನ್ನ ಸ್ವ೦ತ ಹೆ೦ಡತಿಯಾದ ಸಾವಿತ್ರಿ. ಹೊರಗೆ ಓಡಿ ಬ೦ದವನೇ ಆಕಾಶ ಕಳಚಿ ತಲೆಮೇಲೆ ಬಿದ್ದವನ೦ತೆ ಬೊಬ್ಬೆ ಹೊಡೆಯಲು ಶುರುಮಾಡಿದ. ಸುತ್ತಮುತ್ತಲಿನವರೆಲ್ಲ ಓಡಿ ಬ೦ದರು. ಅವಳನ್ನು ಹಿಡಿದು ಚಚ್ಚಿ, ಕೊಚ್ಚಿ ರಾಜನ ಆಸ್ಥಾನದಲ್ಲಿ ಹಾಜರುಪಡಿಸಿದರು. ಅರವತ್ತು ದಾಟಿದ ಚೆಮ್ಮಂತಟ್ಟು ಕುರಿಯಡತ್ತು ರಾಮನ್ ನಂಬೂದಿರಿಯ ಹೆಂಡತಿಯೂ ಕಲ್ಪಕಶ್ಶೇರಿ ಅಷ್ಟಮೂರ್ತಿ ನಂಬೂದಿರಿಯ ಮಗಳೂ ಆದ ಹದಿನೆಂಟರ ಸುರಸುಂದರಿ ಕುರಿಯೆಡತ್ತು ಸಾವಿತ್ರಿ ತ೦ತ್ರಿಯ ’ಸ್ಮಾರ್ತವಿಚಾರಮ್’ ವಿಚಾರಣೆ ಶುರುವಾಯ್ತು. ಅವಳ ಈ ವಿಚಾರಣೆಗೆ ’ಸ್ಮಾರ್ತನ್’(ಮುಖ್ಯ ವಿಚಾರಕ) ಆಗಿ ಆಗಮಿಸಿದವನು ಆಗಿನ ಖ್ಯಾತ ವಿದ್ವಾ೦ಸ ಪೆರುಮಣ್ಣನ್ ಜಾತವೇದನ್ ನ೦ಬೂದಿರಿ. ಇವಳ ಸೌ೦ದರ್ಯದ ಬಗ್ಗೆ ಕೇಳಿದ್ದ ಜನ ಸ್ಮಾರ್ತವಿಚಾರ೦ನ್ನು ನೋಡಲು ತ೦ಡೋಪತ೦ಡವಾಗಿ ಊರೂರುಗಳಿ೦ದ ಬರಲಾರ೦ಭಿಸಿದರು. ಅವಳೇನು ಸಾಮಾನ್ಯ ಹೆಂಗಸಾಗಿರಲಿಲ್ಲ. ವಿಚಾರಣೆಯ ವೇಳೆ ತನ್ನನ್ನು ಬಲವಾಗಿ ಸಮರ್ಥಿಸಿಕೊ೦ಡ ಆಕೆ ನ್ಯಾಯವು ಎಲ್ಲರಿಗೂ ಸಮನಾಗಿರಬೇಕೆ೦ದೂ, ಒ೦ದು ವೇಳೆ ತನ್ನನ್ನು ಶಿಕ್ಷಿಸುವುದಾದರೆ ತನ್ನ ಜೊತೆ ಮಲಗಿದ ಎಲ್ಲ ಗ೦ಡಸರನ್ನೂ ಶಿಕ್ಷಿಸಬೇಕೆ೦ಬ ಬೇಡಿಕೆ ಮು೦ದಿಟ್ಟಳು. ಆದರದು ಅಷ್ಟು ಸುಲಭದ ಮಾತಾಗಿರಲಿಲ್ಲ, ಅದೂ ಆ ಕಾಲದ ಕೇರಳದಲ್ಲಿ. ಆ ತ೦ತ್ರಿ ಎಷ್ಟು ಬುದ್ಧಿವ೦ತಳೆ೦ದರೆ ತನ್ನ ಜೊತೆ ಕಾಲ ಕಳೆದ ಪ್ರತಿ ಗ೦ಡಸಿನ ವಿವರಗಳನ್ನೂ, ಅದಕ್ಕೆ ದಾಖಲೆಗಳನ್ನೂ(ಪ್ರೇಮ ಪತ್ರ, ದೇಹದ ಮೇಲಿನ ಗುರುತು ಇತ್ಯಾದಿ) ಒದಗಿಸತೊಡಗಿದಳು. ಒಂದೊಂದೇ ಹೆಸರುಗಳು ಹೊರಬರುತ್ತಿದ್ದಂತೆ ಕೇರಳದ ಸಾಮಾಜಿಕ ಪದ್ಧತಿಯೊಡನೆ ಸಾ೦ಪ್ರದಾಯಿಕ ನ೦ಬಿಕೆಗಳ ಬುಡವೂ ಅಲ್ಲಾಡತೊಡಗಿತ್ತು. ಇಡಿ ಮಲಬಾರಿನಲ್ಲಿ ಇದು ಎಷ್ಟು ದೊಡ್ಡ ಸೆನ್ಸೇಶನ್ ಹುಟ್ಟುಹಾಕಿತೆ೦ದರೆ ಜನ ಅವಳ ಪರವಾಗಿ ಬೀದಿಗಿಳಿಯತೊಡಗಿದರು. ಜನಾಕ್ರೋಶ ಜಾಸ್ತಿಯಾಗಿ ದಿಕ್ಕುತೋಚದೇ ಕೊಚ್ಚಿಯ ರಾಜ ಕೇವಲ ಅ೦ತರ್ಜನ೦ಳನ್ನು ಮಾತ್ರ ಶಿಕ್ಷಿಸುವ ಸ್ಮಾರ್ತವಿಚಾರ೦ನ ವಿಧಿಗಳಿಗೆ ವಿರುದ್ಧವಾಗಿ ಆಪಾದಿತ ಗ೦ಡಸರನ್ನೂ ಶಿಕ್ಷೆಗೊಳಪಡಿಸುವ ಆಶ್ವಾಸನೆಯಿತ್ತ. ಹಾಗೆ೦ದು ಅವಳ ಹಿಟ್‌ಲಿಸ್ಟಿನಲ್ಲಿದ್ದವರಾರೂ ಸಾಮಾನ್ಯರಾಗಿರಲಿಲ್ಲ. ಆಕಾಲದ ಖ್ಯಾತ ಕಥಕ್ಕಳಿ ಕಲಾವಿದರಾದ ಕವು೦ಗಲ್ ಶ೦ಕರ ಪಣಿಕ್ಕರ್, ಕಾಟ್ಟಲತ್ತು ಮಾಧವನ್ ನಾಯರ್, ಪನ೦ಗವಿಲ್ ಗೋವಿ೦ದನ್ ನ೦ಬಿಯಾರ್, ಅಚ್ಯುತ ಪೊಡುವಾಲ್ ಸೇರಿದ೦ತೆ ಒಬ್ಬರ ಹಿ೦ದೊಬ್ಬ ಸಮಾಜದ ಗಣ್ಯಸ್ತರದ ವ್ಯಕ್ತಿಗಳ ವಿರುದ್ಧ ಪ್ರಬಲ ಸಾಕ್ಷಿಗಳನ್ನೊದಗಿಸಿತೊಡಗಿದಳು. ಇಡೀ ವಿಚಾರಣೆಯ ’ಸ್ಮಾರ್ತನ್’ ಆಗಿದ್ದ ಜಾತವೇದನ್ ನಂಬೂದಿರಿಯ ಇಬ್ಬರು ಸಹೋದರರ ಮೇಲೆ ಸಾವಿತ್ರಿ ತಂತ್ರಿ ಆರೋಪಿಸಿದ ಮೇಲಂತೂ ಮಲಬಾರಿಗೆ ಮಲಬಾರೇ ಅಲ್ಲೋಲಕಲ್ಲೋಲವಾಯ್ತು. ಹೆಸರು ಹೊರಬಂದ ಅವಮಾನ ತಾಳಲಾರದೇ ಕೆಲವರು ಅಲೆಮರೆಸಿಕೊಂಡರೆ ಇನ್ನು ಕೆಲವರು ನಾಡುಬಿಟ್ಟು ಪರಾರಿಯಾದರು, ಕೆಲವರಂತೂ ಅವಳಿಗೆ ತಮ್ಮ ಹೆಸರು, ತಮ್ಮ ದೇಹದ ಮೇಲಿನ ಗುರುತುಗಳೆಲ್ಲ ಮರೆತುಹೋದರೆ ಸಾಕಪ್ಪಾ ಎಂದು ಕಂಡ ಕಂಡ ದೇವರಿಗೆಲ್ಲ ಅಡ್ಡಬಿದ್ದು ದೊಡ್ಡ ದೊಡ್ಡ ಪೂಜೆ, ಹೋಮಗಳಲ್ಲಿ ತೊಡಗಿದರು. ಇಬ್ಬರ೦ತೂ ಆತ್ಮಹತ್ಯೆಯನ್ನೇ ಮಾಡಿಕೊ೦ಡರ೦ತೆ. ಒಂದಲ್ಲ, ಎರಡಲ್ಲ, ಹತ್ತಲ್ಲ, ಇಪ್ಪತ್ತಲ್ಲ ಬರೋಬ್ಬರಿ ಅರವತ್ತ ನಾಲ್ಕು. ಹೌದು..... ಅವಳು ೬೪ ಜನರ ವಿರುದ್ಧ ಹೀಗೆ ಸಾಕ್ಷ್ಯವೊದಗಿಸಿ ಇನ್ನೇನು ೬೫ನೇಯವನ ಹೆಸರೆತ್ತಬೇಕೆನ್ನುವಾಗ ಕ೦ಗೆಟ್ಟ ಕೊಚ್ಚಿಯ ರಾಜ ಇಡೀ ವಿಚಾರಣೆಯನ್ನೇ ಬರ್ಖಾಸ್ತುಗೊಳಿಸಿ, ಸುಮ್ಮನೆ ಖಜಾನೆಯ ಕಾಸುದಂಡವೆಂಬ ಕಾರಣ ಮುಂದೊಡ್ಡಿ ಇನ್ನುಮು೦ದೆ ಸ್ಮಾರ್ತವಿಚಾರ೦ ಪ್ರಕ್ರಿಯೆಯೇ ನಡೆಯದ೦ತೆ ನಿಷೇಧ ಹೇರಿದನ೦ತೆ. ಅವಳ ಲಿಸ್ಟಿನಲ್ಲಿದ್ದ ೬೫ನೇ ವ್ಯಕ್ತಿ ಸ್ವತಃ ಆ ರಾಜನೇ ಆಗಿದ್ದನೆ೦ದೂ , ತನ್ನ ಹೆಸರು ಹೊರಬರಬಹುದೆ೦ದು ಹೆದರಿದ ರಾಜ ಅವಳನ್ನು ಚಲಕ್ಕುಡಿಯ ಮನೆಯೊ೦ದರಲ್ಲಿ ಗೃಹಬ೦ಧನದಲ್ಲಿರಿಸಿದನೆ೦ದೂ ಸುದ್ದಿ ಕೇರಳದ ಮೂಲೆಮೂಲೆಗೆ ಕಾಳ್ಗಿಚ್ಚಿನಂತೆ ಹಬ್ಬತೊಡಗಿತು, ಭೃಷ್ಟು ಕಾದಂಬರಿಯನ್ನು ಇಂಗ್ಲೀಷಿಗೆ ಅನುವಾದಿಸಿದ ವಾಸಂತಿ ನಂದಕುಮಾರರ ’ಔಟ್‌ಕಾಸ್ಟ್’ ಪ್ರಕಾರ ನ೦ತರ ಸಾವಿತ್ರಿ ಆ೦ಗ್ಲೋಇ೦ಡಿಯನ್ ಒಬ್ಬನನ್ನು ಮದುವೆಯಾಗಿ ಕೊಯ೦ಬತ್ತೂರಿಗೆ ತೆರಳಿದಳಂತೆ. ಅವಳು ನೂರಕ್ಕೂ ಹೆಚ್ಚಿನ ಜನರ ಹೆಸರು ಹೇಳಿದ್ದಳೆಂದೂ ಅದರಲ್ಲಿ ೬೪ ಜನರ ವಿರುದ್ಧ ಸಾಕ್ಷಾಧಾರಗಳಿಂದ ತಪ್ಪು ಸಾಬೀತಾಯ್ತೆಂಬ ಮಾತೂ ಇದೆ. ಇದರಲ್ಲಿ ಕೇರಳದ ಪ್ರಸಿದ್ಧ ಕಲಾವಿದರೂ, ರಾಜಾಸ್ಥಾನದವರೂ, ಸಂಗೀತಗಾರರೂ ಸೇರಿದ್ದರು. ಹೆಸರು ಹೊರಬಂದ ಪ್ರತಿಷ್ಟಿತರೆಲ್ಲ ಅವಮಾನ ತಾಳಲಾರದೇ ತಮ್ಮ ಕಾರ್ಯಕ್ಷೇತ್ರಗಳನ್ನು ಬಿಡಬೇಕಾಯ್ತು. 
     ಆರ೦ಗೋತುಕರದ ಕಾರ್ತ್ಯಾಯನಿ ದೇವಾಲಯದ ಎದುರಿನ ಪ್ರಸಿದ್ಧ ಕಲ್ಪಕಶ್ಶೇರಿ ಕುಟು೦ಬದಲ್ಲಿ ಜನಿಸಿದ ಈಕೆಯ ಮನೆ ಇಂದೂ ಇದೆ. ಆದರೆ ಇಲ್ಲೀಗ ಯಾರೂ ಇಲ್ಲ. ಊರಿನವರೆಲ್ಲ ಅದನ್ನು ಶಾಪಗ್ರಸ್ಥ ಮನೆಯಾಗಿ ನೋಡುತ್ತಾರೆ. ಹೆ೦ಗಸರನ್ನು ಅಡುಗೆಮನೆ, ದೇವರಕೋಣೆಯ ಒಳಗೋಡೆಗಳಿಗಷ್ಟೇ ಸೀಮಿತಗೊಳಿಸಿದ ಸ೦ಪ್ರದಾಯಸ್ಥ ಮನೆತನದಲ್ಲಿ ಹುಟ್ಟಿ ಸಾಹಿತ್ಯ, ಸ೦ಗೀತ, ಕಥಕ್ಕಳಿಗಳಲ್ಲಿ ಆಳ ಜ್ಞಾನವನ್ನು ಹೊ೦ದಿ, ಸ೦ಪ್ರದಾಯದ ವಿರುದ್ಧ ಬ೦ಡೆದ್ದು ಮಲಬಾರಿನ ಗ೦ಡಸರ ನಿದ್ದೆಗೆಡಿಸಿದವಳು(ಒಳ್ಳೆಯ ಮತ್ತು ಕೆಟ್ಟ ಕಾರಣಗಳಿ೦ದ), ಪುರುಷ ಶೋಷಣೆಯ ಸದ್ದಡಗಿಸಿದವಳು ಸಾವಿತ್ರಿ ಕುರಿಯಡತ್ತ ತ೦ತ್ರಿ. ಅವಳು ತನ್ನ ಹೋರಾಟದಲ್ಲಿ ಗೆದ್ದಳೋ ಸೋತಳೋ ಗೊತ್ತಿಲ್ಲ. ಅವಳು ಮಾಡಿದ್ದು ಸರಿಯೋ ತಪ್ಪೋ ಅದೂ ಚರ್ಚಾಸ್ಪದವೇ! ಆದರೆ ಈ ಘಟನೆಯ ನ೦ತರ ಕೇರಳದ ಕೆಲ ಪ್ರಜ್ಞಾವ೦ತ ನ೦ಬೂದಿರಿಗಳ ದೂರದೃಷ್ಟಿಯ ಫಲವಾಗಿ ರೂಪಗೊ೦ಡ ಯೋಗಕ್ಷೇಮ೦ ಎ೦ಬ ಸ೦ಘಟನೆ ಸ್ತ್ರೀ ಸಬಲೀಕರಣದಲ್ಲಿ ಮತ್ತು ನ೦ಬೂದರಿಗಳ ಮದುವೆಯ ಕಟ್ಟಳೆಗಳನ್ನು ಸಡಿಲಗೊಳಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡಿದೆ. ಆಕೆಯ ವಿಚಾರಣೆಯನ್ನು ನಡೆಸಿದ ಸ್ಮಾರ್ತನ್ ಜಾತವೇದನ್ ನ೦ಬೂದಿರಿಯ ಮೊಮ್ಮಗ ಮತಾ೦ಪು ಕು೦ಜಿಕುಟ್ಟನ್ ಬರೆದ ಭೃಷ್ಟು ಕಾದ೦ಬರಿಯೂ ಈ ವಿಚಾರದ ಬಗ್ಗೆ ಬೆಳಕು ಚೆಲ್ಲುತ್ತದೆ. ತಮಿಳಿನ ಪ್ರಖ್ಯಾತ ನಟ, ರಾಜಕಾರಣಿಯೊಬ್ಬರ ತಂದೆ ಹೀಗೆ ಹೆಸರಿಸಲ್ಪಟ್ಟವರಲ್ಲಿ ಒಬ್ಬನೆಂದೂ, ಮಲಯಾಳದ ಖ್ಯಾತ ನಟಿ ಶೀಲಾಳ ಅಜ್ಜಿಯೇ ಈ ಸಾವಿತ್ರಿ ತಂತ್ರಿಯೆಂದೂ ಕೇಳಿದ್ದೇನೆ ಬಿಟ್ಟರೆ ಹೆಚ್ಚಿನ ಮಾಹಿತಿ ನನ್ನಲ್ಲಿಲ್ಲ.
     ಮೇಲಿನ ಘಟನೆ ನೂರಕ್ಕೆ ನೂರು ಸತ್ಯವೋ ಅಲ್ಲವೋ ತಿಳಿದಿಲ್ಲ. ತ್ರಿಶೂರಿನ ಅಪ್ಪನ್ ತಂಬುರಾನ್ ಲೈಬ್ರರಿ ಮತ್ತು ಎರ್ನಾಕುಲಂನ ಸೆಂಟ್ರಲ್ ಆರ್ಚಿವ್‌ನಲ್ಲಿ ಈ ಕೇಸಿನ ಕುರಿತಾದ ಸ್ಮಾರ್ತನ್ ಜಾತವೇದ ನಂಬೂದಿರಿಯ ಸಂಪೂರ್ಣ ಮತ್ತು ಅಧಿಕೃತ ದಾಖಲೆಗಳು ಲಭ್ಯವಿದೆಯಂತೆ. ಆದರೆ ಈ ಘಟನೆಯ ನ೦ತರ ಕೇರಳದ ಆ ಸಮಾಜದಲ್ಲೊ೦ದು ಬದಲಾವಣೆಯ ಗಾಳಿ ಬೀಸಲು ಶುರುವಾಗಿದ್ದ೦ತೂ ಸುಳ್ಳಲ್ಲ.

Tuesday, April 22, 2014

ಯಾರೀ ವಿಕ್ರಮಾದಿತ್ಯ?

     


             
        ವಿಕ್ರಮಾದಿತ್ಯನ ಹೆಸರು ಕೇಳದ ಭಾರತೀಯರ್ಯಾರಿದ್ದಾರೆ ಹೇಳಿ! ಬರೀ ಭಾರತೀಯರು ಮಾತ್ರವಲ್ಲ ನೇಪಾಳದವರಿಗೂ ವಿಕ್ರಮಾದಿತ್ಯ ಚಿರಪರಿಚಿತ. ಆತನಿಂದ ಶುರುವಾದ ವಿಕ್ರಮಶಕೆ ನೇಪಾಳದ ಅಧಿಕೃತ ರಾಷ್ಟ್ರೀಯ ಪಂಚಾಂಗ. ಕಾಬಾ ಮೂಲತಃ ವಿಕ್ರಮಾದಿತ್ಯ ನಿರ್ಮಿಸಿದ ಶಿವಾಲಯವೆನ್ನುವವರೂ ಇದ್ದಾರೆ(ಹೆಚ್ಚಿನ ಮಾಹಿತಿಗಾಗಿ ಪಿ.ಎನ್.ಓಕ್‌ರ ಕೃತಿಗಳನ್ನು ಗಮನಿಸಿ). ಆದರೂ ಅಸಲು ಈ ವಿಕ್ರಮಾದಿತ್ಯ ಯಾರು ಎಂಬ ಬಗ್ಗೆ ಇತಿಹಾಸಕಾರರಿಗೇ ಸರಿಯಾಗಿ ಗೊತ್ತಿಲ್ಲ. ಹೆಚ್ಚಿನವರು ಗುಪ್ತರ ಎರಡನೇ ಚಂದ್ರಗುಪ್ತನನ್ನೇ ವಿಕ್ರಮಾದಿತ್ಯನೆಂದರೆ ಇನ್ನು ಕೆಲವರು ಮಾಳವದ ಯಶೋವರ್ಮನನ್ನೇ ವಿಕ್ರಮಾದಿತ್ಯನೆಂದು ತಿಳಿದಿದ್ದಾರೆ. ಇತಿಹಾಸದಲ್ಲೂ ಆ ಹೆಸರಿನ, ಬಿರುದಿನ ಹಲವಾರು ರಾಜರು ಆಗಿಹೋದ್ದಿದೆ. ಆತನೊಬ್ಬ ಕಾಲ್ಪನಿಕ ವ್ಯಕ್ತಿ ಎನ್ನುವ ಇತಿಹಾಸಕಾರರ ಸಂಖ್ಯೆ ದೊಡ್ಡದೇ.
        ವಿಕ್ರಮಾದಿತ್ಯ ಯಾರೆಂದು ತಿಳಿಯುವ ಮೊದಲು ಭಾರತೀಯ ಇತಿಹಾಸದ ಪಿತಾಮಹನೆಂದೇ ಕರೆಯಲ್ಪಡುವ ಪ್ರಸಿದ್ಧ ಬ್ರಿಟಿಷ್ ಇತಿಹಾಸಕಾರ ವಿ.ಎ.ಸ್ಮಿತ್‌ ಮಹಾಶಯನ ಮಾತುಗಳನ್ನು ಕೇಳಿ “The popular belief which associates the Vikrama era of 58-57 BCE with a Raja, Vikramaditya or Bikram of Ujjain at that date is erroneous. There was no such person then. It is however true that probably it was invented by the astronomers of Ujjain. The first name of it was Malwa era. The term Vikramakala used in the later times must refer to one or other of the many kings with the title of Vikramaditya or Vikrama, who was believed to have established the era. The king referred to may be presumed to be Chandragupta II. Vikramaditya who conquered Ujjain about CE 390.“ (the Oxford Students’ History of India P.P 80, 81 by V.A Smith Ed 1915)
"ಕ್ರಿ.ಪೂ 57ರಲ್ಲಿ ವಿಕ್ರಮ ಶಕೆಯನ್ನು ಶುರುಮಾಡಿದನೆನ್ನಲಾಗುವ ವಿಕ್ರಮಾದಿತ್ಯ ಕಾಲವೇ ಅಸ್ಪಷ್ಟ. ಆ ಹೆಸರಿನ ವ್ಯಕ್ತಿಯೇ ಇಲ್ಲ. ಈ ಶಕೆ ಶುರುವಾಗಿದ್ದು ಉಜ್ಜೈನಿಯ ಕೆಲ ಜ್ಯೋತಿಷಿಗಳಿಂದಿರಬಹುದು. ಮಾಳವ ಶಕೆಗೇ ಯಾವುದೋ ಒಬ್ಬ ವಿಕ್ರಮಾದಿತ್ಯನೆಂಬ ರಾಜ ತನ್ನ ಹೆಸರಿಟ್ಟುಕೊಂಡ. ಆ ವಿಕ್ರಮಾದಿತ್ಯ ಬಹುಶಃ ಕ್ರಿ.ಶ 390ರಲ್ಲಿ ಉಜ್ಜೈನಿಯನ್ನಾಕ್ರಮಿಸಿದ್ದ ಗುಪ್ತರ 2ನೇ ಚಂದ್ರಗುಪ್ತನಿರಬಹುದು."
     ನೋಡ್ರಪ್ಪಾ. ಭಾರತೀಯರ ಜನಮಾನಸದಲ್ಲಿ ಬೆರೆತುಹೋದ ಪ್ರಸಿದ್ಧ ವಿಕ್ರಮ ಶಕೆಯ ಶಕಪುರುಷ, ವೇತಾಳಪಂಚವಿಂಶತಿ(ವಿಕ್ರಮ ಬೇತಾಳವೆಂಬ ಹೆಸರಿನಿಂದ ಪ್ರಖ್ಯಾತವಾದ ಬೇತಾಳ ಹೇಳಿದ ಇಪ್ಪತ್ತೈದು ಕಥೆಗಳು), ಸಿಂಹಾಸನ ದ್ವಾತ್ರಿಂಶತ್‌(ಸಿಂಹಾಸನದ ಗೊಂಬೆ ಹೇಳಿದ ಮೂವತ್ತೆರಡು ಕಥೆಗಳು)ನಂಥ ಕಥೆಗಳ ನಾಯಕ, ಮೇಲಾಗಿ ಇಡಿಯ ಭಾರತವನ್ನು ಅಖಂಡವಾಗಿ ಆಳಿದ ಮಹಾರಾಜಾಧಿರಾಜನೊಬ್ಬನನ್ನು ಥಟ್ ಎಂದು ಒಂದೇಟಿಗೆ ಮಾಯ ಮಾಡಿದ ಈ ಇತಿಹಾಸಕಾರರು ಯಾವ ಪಿ.ಸಿ ಸರ್ಕಾರಿಗೆ ಕಡಿಮೆ ಹೇಳಿ.
      ಹಾಗೆಂದ ಮಾತ್ರಕ್ಕೆ ಅವರಿಗ್ಯಾರಿಗೂ ವಿಕ್ರಮಾದಿತ್ಯನ ಇರುವಿಕೆಯ ಅರಿವಿರಲಿಲ್ಲವೆನ್ನಬೇಡಿ. ಪಾಪ, ಎಲ್ಲರಿಗೂ ಅವರವರದೇ ಕಷ್ಟಗಳಿರುತ್ತವೆ. ಇವರಿಗಿದ್ದ ದೊಡ್ಡ ಕಷ್ಟವೆಂದರೆ ಚರ್ಚ್ ಮತ್ತು ಬೈಬಲ್. ಬೈಬಲ್ಲಿನ ಪ್ರಕಾರ ಕ್ರಿ.ಪೂ 4004, ಅಕ್ಟೋಬರ್ 23ರ ಬೆಳಿಗ್ಗೆ 9 ಗಂಟೆಗೆ ಭೂಮಿಯ ಮೇಲೆ ಮೊದಲ ಸೃಷ್ಟಿ ಕಾರ್ಯ ನಡೆಯಿತು ಎಂದು ಚರ್ಚೇ ಘಂಟಾಘೋಷವಾಗಿ ಸಾರಿದೆಯಲ್ಲ. ಹೋಗಿ ಹೋಗಿ ಚರ್ಚಿನ ಮಾತು ಮೀರುವವರುಂಟೇ. ಬೈಬಲ್ಲಿನಲ್ಲಿ ಹೇಳಿದಂತೆ ಕ್ರಿ.ಪೂ 4004ರಲ್ಲಿ ಹುಟ್ಟಿದ ಆಡಮ್‌ಗೆ 130ನೇ ವರ್ಷದಲ್ಲಿ ಮಗನೂ, 235ನೇ ವರ್ಷದಲ್ಲಿ ಮೊಮ್ಮಗನೂ ಹುಟ್ಟಿ 930ನೇ ವರ್ಷದಲ್ಲಿ ಅಂದರೆ ಕ್ರಿ.ಪೂ 3074ರಲ್ಲಿ ಸಾಯುವಾಗ ಏಳನೇ ತಲೆಮಾರು ಹುಟ್ಟಿತ್ತು. ಇಂತಿಪ್ಪ ಬೈಬಲ್ಲೇ ಇದಮಿತ್ಥಂ ಎಂದು ಹೇಳಿದಾಗ ಅಂದಿಗೆ ಹತ್ತಾರು ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ನಾಗರಿಕತೆ ಬೆಳೆದು ಉಚ್ಛ್ರಾಯ ಸ್ಥಿತಿಗೆ ತಲುಪಿದ್ದೆಂದರೇನು? ಭಾರತದಲ್ಲಿ ರಾಜಾಧಿರಾಜರು ಆಳಿದ್ದರೆಂದರೇನು? ಶುದ್ಧ ನಾನ್‌ಸೆನ್ಸ್. ಅದಕ್ಕಾಗಿಯೇ ಅಂದೆಂದೋ ಇದ್ದ ಸರಸ್ವತಿ ನಾಗರಿಕತೆಯನ್ನು ರಪಕ್ಕನೆ ಎಳೆದು ತಂದು ಕ್ರಿ.ಪೂ 2000ರದಾಚೀಚೆ ಬಿಸಾಕಿದರು. ರಾಮಾಯಣ, ಮಹಾಭಾರತಗಳೆಲ್ಲ ಅದರ ನಂತರವೇ ಆಯಿತು. ಕ್ರಿ.ಪೂ 16ನೇ ಶತಮಾನದಲ್ಲಿದ್ದ ಚಂದ್ರಗುಪ್ತ ಮೌರ್ಯ ಕ್ರಿ.ಪೂ 237ರಲ್ಲಿ ಅಲೆಕ್ಸಾಂಡರ್ ಬರುವಾಗ ಹೇಗೂ ಸಿಕ್ಕಿಬಿದ್ದ. ಅಷ್ಟೇ ಆಗಿದ್ದರೆ ಕಷ್ಟವಿರುತ್ತಿರಲಿಲ್ಲ. ಇತಿಹಾಸದ ಪುಟಗಳಲ್ಲಿ ಎರಡು ಸಾವಿರ ವರ್ಷಗಳನ್ನು ಮಾಯಮಾಡಿದವರಿಗೆ ಆ ಕಾಲದಲ್ಲಿ ಆಳಿದ ರಾಜರನ್ನೂ, ರಾಜವಂಶಗಳನ್ನೂ ಏನು ಮಾಡುವುದೆಂಬ ಸಮಸ್ಯೆ ಎದುರಾಯಿತು. ಚಂದ್ರಗುಪ್ತ ಮೌರ್ಯನನ್ನು ಅಲೆಕ್ಸಾಂಡರಿನೊಡನೆ ಸಿಕ್ಕಿಸಲು ಹೋಗಿ ಸಾವಿರದ ಮುನ್ನೂರು ವರ್ಷಗಳ ಕಾಲ ಆಳ್ವೆಕೆ ನಡೆಸಿದ್ದ ಅಗ್ನಿವಂಶದ ನಾಲ್ಕು ರಾಜಮನೆತನಗಳೇ ಚರಿತ್ರೆಯ ಪುಟಗಳಲ್ಲಿ ಕಳೆದುಹೋದವು. ಇಲ್ಲಿ ಆಳ್ವಿಕೆ ನಡೆಸಿದ್ದ ನೂರಾರು ಅರಸರಲ್ಲಿ ಅವರಿಗೆ ಸಿಕ್ಕಿದ್ದು ಭೋಜರಾಜನೊಬ್ಬನೇ. ಬೇರೆ ಬೇರೆ ಕಾಲದಲ್ಲಿದ್ದ ಶುಂಗ, ಕಣ್ವ, ಆಂಧ್ರ ರಾಜವಂಶಗಳನ್ನು ಒಂದೇ ಸಮಯದಲ್ಲಿ ಒಂದೇ ಕಡೆ ಆಳುವಂತೆ ಮಾಡಿ ಕಲಸುಮೆಲೋಗರಗೊಳಿಸಿದರು. ಅಷ್ಟು ಮಾತ್ರವಲ್ಲ. ಕ್ರಿ.ಪೂ 918ರಿಂದ-833ರವರೆಗೆ ಕಣ್ವ ವಂಶದ ನಾಲ್ವರು ರಾಜರು ಆಳಿದ್ದಾರೆಂದು ಪುರಾಣಗಳು ಹೇಳಿದರೆ ವಿಲಿಯಂ ಜೋನ್ಸ್ ಎಂಬ ಮಹಾನ್ ಇತಿಹಾಸಕಾರ ಶುಂಗರ ಕಾಲವನ್ನು ಮಾತ್ರ ಕಣ್ವರಿಗೆ ಜೋಡಿಸಿ, ಆ ರಾಜರನ್ನು ಬದಿಗೊತ್ತಿ ಕ್ರಿ.ಪೂ 1253ರಿಂದ - ಕ್ರಿ.ಪೂ 908ರವರೆಗೆ ಕಣ್ವರ ನಾಲ್ಕು ರಾಜರು ಆಳ್ವಿಕೆ ನಡೆಸಿದರೆ ಒಬ್ಬೊಬ್ಬರ ಕೋಟಾದಲ್ಲೂ 86 ವರ್ಷಗಳು ಬರುತ್ತವೆ. ಇಷ್ಟು ವರ್ಷ ಆಳ್ವಿಕೆ ನಡೆಸುವುದು ಪ್ರಕೃತಿ ಕ್ರಮಕ್ಕೆ ವಿರುದ್ಧ, ಹಿಂದೂ ಸಂಸ್ಕೃತಿಗೆ ಸಾಧ್ಯವಾದಷ್ಟು ಹಿಂದಿನ ಪ್ರಾಚೀನತೆಯನ್ನು ಕೊಡಲು ಇವೆಲ್ಲ ಪುರೋಹಿತಷಾಹಿ ಬ್ರಾಹ್ಮಣರು ಮಾಡಿದ ಕುತಂತ್ರ ಎಂದು ಥೇಟ್ ನಮ್ಮ ಚಂಪಾ, ಅನಂತಮೂರ್ತಿಗಳಂತೆ ಅಪ್ಪಣೆ ಹೊರಡಿಸಿದ್ದಾರೆ. ಸಿಕ್ಕಸಿಕ್ಕವರನ್ನು ಕಂಡಕಂಡಲ್ಲಿ ತುಂಬಿಸಿ ಹೆಚ್ಚುಳಿದ ರಾಜರು ಅಸಲು ಹುಟ್ಟಿಯೇ ಇಲ್ಲ, ಅವರ ಅಸ್ತಿತ್ವವೆಲ್ಲ ಸುಳ್ಳೆಂದು ನಿರ್ಧರಿಸಿ ಸಮಾಧಿ ಮಾಡಿಬಿಟ್ಟರು. ಹೀಗೆ ಸಮಾಧಿಗೊಂಡವರಲ್ಲಿ ಪ್ರಸಿದ್ಧ ಶಕಕರ್ತರಾದ ವಿಕ್ರಮಾದಿತ್ಯ ಮತ್ತು ಶಾಲಿವಾಹನರು ಮೊದಲಿಗರು.
       ಕಾರಣ ಸಿಂಪಲ್. ಬ್ರಿಟಿಷ್ ಚರಿತ್ರಕಾರರ ಎಳೆದಾಟದಲ್ಲಿ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯ ಅಲೆಕ್ಸಾಂಡರಿನ ಕಾಲವಾದ ಕ್ರಿ.ಪೂ 322ಕ್ಕೆ ಬಂದುಬಿದ್ದಿದ್ದ. ಅದೇ ಕಾಲದಲ್ಲಿದ್ದ ಗುಪ್ತರು ಕ್ರಿ.ಶ 320 ರಷ್ಟು ಈಚೆಗೆ ಸರಿದು ಹೋದರು. ಅವರ ನಂತರ ಬಂದ ವಿಕ್ರಮಾದಿತ್ಯನನ್ನು ಇಡುವುದೆಲ್ಲಿ? ಸಣ್ಣಪುಟ್ಟ ರಾಜನಾಗಿದ್ದರೆ ಹುಷ್ ಕಾಗೆ ಎನ್ನಬಹುದಿತ್ತು. ಆದರೆ ಅವನು ಕ್ರಿ.ಪೂ 57ರಲ್ಲಿ ಶುರುಮಾಡಿದ ವಿಕ್ರಮ ಶಕೆ ಇಂದಿಗೂ ಜನಮಾನಸದ ಮನಸ್ಸಿನಲ್ಲಿ ಭದ್ರವಾಗಿ ಕೂತಿದೆಯಲ್ಲ. ಅಂಥವನನ್ನು ಗುಪ್ತರ ಕಾಲದೀಚೆ ಎಳೆಯುವುದು ಸುಲಭದ ಮಾತಾಗಿರಲಿಲ್ಲ. ಆದ್ದರಿಂದ ಆ ವ್ಯಕ್ತಿ ಹುಟ್ಟಿಯೇ ಇಲ್ಲ, ಅವನೊಬ್ಬ ಅಪ್ಪಟ್ಟ ಕಾಲ್ಪನಿಕ ಕಥೆಯವನು ಎಂದು ಆಜ್ಞೆ ಮಾಡಿ ಚರಿತ್ರೆಯಲ್ಲಿ ಸ್ವಲ್ಪವೂ ಜಾಗಸಿಗದಂತೆ ಮಾಡಿಬಿಟ್ಟರು. ಅವನ ನಂತರ ಬಂದ ಶಾಲಿವಾಹನನಿಗೂ ಇದೇ ಗತಿಯಾಯ್ತು.
       ಅಸಲಿಗೆ ಇವರಿಬ್ಬರೂ ಹಿಮಾಲಯದಿಂದ ದಕ್ಷಿಣದವರೆಗೆ ಭಾರತವನ್ನಾಳಿದ ಪ್ರಮೇರ ಅಥವಾ ಪನ್ವರ್ ರಾಜವಂಶದ ಮಹಾನ್ ಚಕ್ರವರ್ತಿಗಳು. ಆದರೆ ನಮ್ಮ ಇತಿಹಾಸಕಾರರು ಇವರನ್ನು ಕಾಲ್ಪನಿಕರನ್ನಾಗಿಸಿ ಇವರು ಪ್ರಾರಂಭಿಸಿದ ಶಕೆಗಳನ್ನು ಅನಾಮಧೇಯ ಶಕ ಅರಸರೊಟ್ಟಿಗೆ ಸೇರಿಸಿದ್ದಾರಷ್ಟೆ.
ಪೂರ್ಣೇ ತ್ರಿಂಶಶ್ಚಟೇ ವರ್ಷೇ ಕಲೌ ಪ್ರಾಪ್ತೇ ಭಯಂಕರೇ
ಶಕಾನಾಂಚ ವಿನಾಶಾರ್ಧಮ್ ಆರ್ಯಧರ್ಮ ವಿವೃದ್ಧಯೇ
ಜಾತಶ್ಶಿವಂಜಯಸ್ಸೋಪಿ ಕೈಲಾಸಾತ್ ಗುಹ್ಯಕಾಲಯತ್

...................................................................... (ಭವಿಷ್ಯತ್ಪುರಾಣ, ಶ್ಲೋಕ 3-1-7-14,15)
ಮೂರುಸಾವಿರ ವರ್ಷಗಳ ಭಯಂಕರ ಕಲಿಯುಗದ ನಂತರ ಶಕರನ್ನು ನಾಶಗೊಳಿಸಲು, ಆರ್ಯಧರ್ಮವನ್ನು ಎತ್ತಿಹಿಡಿಯಲು ಶಿವನ ವರಪ್ರಸಾದದಿಂದ ಒಬ್ಬನು ಜನಿಸಿದನು. ಅವನ ತಂದೆಯ ಹೆಸರು ಗಂಧರ್ವಸೇನ. ಗಂಧರ್ವಸೇನನು ತನ್ನ ಮಗನಿಗೆ ವಿಕ್ರಮಾದಿತ್ಯನೆಂದು ಹೆಸರಿಟ್ಟನು. ವಿಕ್ರಮನು ಐದು ವರ್ಷದವನಿದ್ದಾಗ ಕಾಡಿಗೆ ತೆರಳಿ ಹನ್ನೆರಡು ವರ್ಷಗಳ ಕಾಲ ತಪಸ್ಸನ್ನಾಚರಿಸಿದನು. ತಪಸ್ಸಿನ ನಂತರ ಪುನಃ ಅಂಬಾವತಿ(ಉಜ್ಜೈನಿ)ಗೆ ಮರಳಿ 32 ಮೂರ್ತಿಗಳುಳ್ಳ ಸ್ವರ್ಣಸಿಂಹಾಸನವನ್ನೇರಿದನು.
       ಮೇಲಿನ ಭವಿಷ್ಯತ್ಪುರಾಣದ ಶ್ಲೋಕಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕಲಿಯುಗ ಪ್ರಾರಂಭವಾಗಿದ್ದು ಕ್ರಿ.ಪೂ 3101-02 ರ ಸುಮಾರಿಗೆ. ಕಲಿಯುಗದ ೩೦೦೦ನೇ ವರ್ಷದಲ್ಲಿ ವಿಕ್ರಮಾದಿತ್ಯನ ಜನನವಾಗಿದ್ದು ಅರ್ಥಾತ್ ಕ್ರಿ.ಪೂ 101ರಲ್ಲಿ. ಈತ ಸಿಂಹಾಸನವನ್ನೇರಿದ್ದು ಕ್ರಿ.ಪೂ 82ರಲ್ಲಿ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ವಿಕ್ರಮಾದಿತ್ಯನೆಂಬುದು ಹುಟ್ಟಿದಾಗಿನಿಂದ ಇದ್ದ ಹೆಸರೇ ಹೊರತೂ ಇತಿಹಾಸಕಾರರು ಹೇಳುವಂತೆ ಬಿರುದು ಬಾವಲಿಯಲ್ಲ.
       ನಮ್ಮ ಪುರಾಣಗಳು ಪ್ರಮಾರ ರಾಜವಂಶದ 32 ರಾಜರುಗಳ ವರ್ಣನೆಯನ್ನು ನೀಡಿದೆ. ಈ ರಾಜವಂಶದ 8ನೇ ಚಕ್ರವರ್ತಿಯೇ ವಿಕ್ರಮಾದಿತ್ಯ. ವಿಕ್ರಮನ ನಂತರ ಅವನ ರಾಜ್ಯವು ಹದಿನೆಂಟು ಭಾಗಗಳಾಗಿ ಒಡೆದು ಹೋಯ್ತು. ಶಕರು, ಹೂಣರು ಮತ್ತೊಮ್ಮೆ ಭಾರತದತ್ತ ದಂಡೆತ್ತಿ ಬಂದರು. ಇಂಥ ಸಂದರ್ಭದಲ್ಲಿ ಇಡೀ ಭಾರತವನ್ನು ಏಕಛತ್ರಾಧಿಪತ್ಯದಡಿ ತಂದು ಶಕರನ್ನು ದೇಶದಾಚೆ ಒದ್ದೋಡಿಸಿದವನೇ ವಿಕ್ರಮನ ಮರಿಮೊಮ್ಮಗನಾದ ಪ್ರಮಾರರ 11ನೇ ಚಕ್ರವರ್ತಿ ಶಾಲಿವಾಹನ.  ಭವಿಷ್ಯತ್ ಪುರಾಣದ ನೂರು ಅಧ್ಯಾಯಗಳಲ್ಲಿ 72 ಅಧ್ಯಾಯಗಳು ಅಗ್ನಿವಂಶದ ನಾಲ್ಕು ರಾಜಕುಲಗಳ ವರ್ಣನೆಗೇ ಮೀಸಲಾಗಿವೆ. ಇವುಗಳಲ್ಲಿ 44 ಅಧ್ಯಾಯಗಳಲ್ಲಿರುವುದು ಬರೇ ವಿಕ್ರಮಾದಿತ್ಯ ಮತ್ತು ಶಾಲಿವಾಹನರ ವರ್ಣನೆಯೇ. ಇಷ್ಟೆಲ್ಲ ದಾಖಲೆಗಳಿದ್ದಾಗ್ಗೆಯೂ ಇವರಿಬ್ಬರನ್ನೂ ಛೂ ಮಂತರ್ ಎಂದು ಮಾಯಗೊಳಿಸಿದರಲ್ಲ ನಮ್ಮ ಬೃಹಸ್ಪತಿಗಳು. ಬ್ರಿಟೀಷ್ ಘ್ನಾನಪೀಠಿಗಳೇ ಹೇಳಿದಮೇಲೆ ಗೊಡ್ಡು ಪುರಾಣದ ಕಥೆ ಕೇಳುವವರಾರು?
     ಇದೇ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಂದಾಗಿ ಮೆರೆದವನು ಕವಿಕುಲಗುರು ಕಾಳಿದಾಸ. ವಿಕ್ರಮನನ್ನು ಇಲ್ಲವೆನಿಸಿದಂತೆ ಕಾಳಿದಾಸನನ್ನು ಇಲ್ಲವೆನಿಸುವುದು ಅಸಂಭವ. ಅದಕ್ಕೇ ಅವನನ್ನು ಗುಪ್ತರ ಕಾಲದಿಂದ ಹಿಡಿದು ಏಳನೇ ಶತಮಾನದ ಭೋಜರಾಜನವರೆಗೆ ಎಳೆದಾಡಿ ಅವನಿಗೂ ಸರಿಯೊಂದು ನೆಲೆಯಿಲ್ಲದಂತೆ ಮಾಡಿಬಿಟ್ಟರು. ನಮಗೆ ತಿಳಿದ ಏಳು ಕೃತಿಗಳನ್ನು ಹೊರತುಪಡಿಸಿ ಈ ಕಾಳಿದಾಸ ಶ್ಯಾಮಲಾ ದಂಡಕ, ಘಟಕರ್ಪರ ಕಾವ್ಯವೇ ಇತ್ಯಾದಿ ಸಣ್ಣ ಪುಟ್ಟ ಲಘುಕಾವ್ಯಗಳನ್ನು ರಚಿಸಿದ್ದನೆಂದು ತಿಳಿದುಬರುತ್ತದೆ. ಇದೇ ಕಾಳಿದಾಸನ ಇನ್ನೊಂದು ಕೃತಿ ಜ್ಯೋತಿಷ್ಯಾಸ್ತ್ರವನ್ನಾಧರಿಸಿದ ’ಜ್ಯೋತಿರ್ವಿದಾಭರಣ’. ಇದರಲ್ಲಿ ಕಾಳಿದಾಸ ವಿವಿಧ ಶಕೆಗಳ ಬಗ್ಗೆ ವಿವರವಾಗಿ ಬರೆದಿದ್ದಾನೆ. ಅವನೇ ಹೇಳುವಂತೆ ಕಲಿಯುಗದಲ್ಲಿ ಆರು ಶಕೆಗಳು ಮತ್ತು ಶಕಕರ್ತೃರಿದ್ದಾರೆ.
ಯುಧಿಷ್ಟಿರೋ ವಿಕ್ರಮಶಾಲಿವಾಹನೌ
ನರಾಧಿನಾಥೋ ವಿಜಯಾಭಿನಂದನಃ |
ಇಮೇನ ನಾಗಾರ್ಜುನಮೇದಿನೀವಿಭು
ರ್ಬಲಿ ಕ್ಷಮಾತ್ ಷಟ್ ಶಕಕಾರಕಾ: ||

ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.
ಕ್ರಿ.ಪೂ 3102ರಲ್ಲಿ ಶುರುವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು(ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).
ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78)
ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)
ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟು ತಿರುಗಿ ಜ್ಯೋತಿರ್ವಿಧಾಭರಣದತ್ತ ಬರೋಣ.
ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||
ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||
ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||

ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.
ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದನ್ನು ಗಮನಿಸಿ
ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |
ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತು ||
ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |
ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |
ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||
ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತು. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.
ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಪರಾಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ದೊರಕದು.
ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಕಾಪಿ-ಪೇಸ್ಟ್ ಮಾಡಲಾಗಿದೆ. ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಇರೋ-ಬರೋ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ’ಹಿತಿಆಸ’ಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯಿಂದ ಕದ್ದಿದ್ದು. ಶುದ್ಧ ವೈದಿಕ ಕಾಳಿದಾಸನನ್ನು ಕುರಿಕಾಯುವ ಪೆದ್ದನನ್ನಾಗಿಸಿ ಕನ್ನಡಿಗರಿಗೆ ಚರಿತ್ರೆಯ ದಾರಿತಪ್ಪಿಸಿದ ರಾಜಕುಮಾರರ ’ಕಪಿರತ್ನ ಕಾಳಿದಾಸ’ವೂ ಇದೇ ಕೃತಿಯನ್ನಾಧರಿಸಿದ್ದು.
ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥವನ್ನು ಗಮನಿಸೋಣ.
ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||
ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||

ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ.
       ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಶಾಸಿಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.
ಕಾಶ್ಮೀರವನ್ನಾಳಿದ 82ನೇ ಅರಸು ಹಿರಣ್ಯನು ಸಂತಾನವಿಲ್ಲದೇ ಕ್ರಿ.ಶ 14ರಲ್ಲಿ ತೀರಿಕೊಂಡಾದ ಸಿಂಹಾಸನ ಮ್ಲೇಚ್ಛರ ವಶವಾಗಬಹುದೆಂದು ಹೆದರಿ ಕಾಶ್ಮೀರ ರಾಜಾಸ್ಥಾನದವರು ವಿಕ್ರಮನಲ್ಲಿ ಮೊರೆಯಿಟ್ಟರಂತೆ. ಆಗ ತನ್ನ ಮಂತ್ರಿ ಮಾತ್ರಗುಪ್ತನನ್ನು ಕಾಶ್ಮೀರದ ಅರಸನನ್ನಾಗಿ ವಿಕ್ರಮನು ನೇಮಿಸಿ ಇಡೀ ಭರತವರ್ಷವನ್ನು ಏಕಚಕ್ರಾಧಿಪತ್ಯದಡಿ ತಂದನು. ಈ ಘಟನೆ ನಡೆದಾಗ ಅವನಿಗೆ ೧೧೫ ವರ್ಷಗಳಾಗಿದ್ದವು. ಇದಾದ ಐದನೇ ವರ್ಷ ವಿಕ್ರಮನು ಅಸ್ತಂಗತನಾದನೆಂದು ಕಲ್ಹಣನ ರಾಜತರಂಗಿಣಿಯೂ ಉಲ್ಲೇಖಿಸುತ್ತದೆ. ಕಲ್ಹಣನು ಕಾಳಿದಾಸನಿಗಿಂತ ಒಂದು ಹೆಜ್ಜೆ ಮುಂದೆಯೇ ಹೋಗಿ ’ಶಕರನ್ನೂ, ಮ್ಲೇಚ್ಛರನ್ನೂ ಸಂಹರಿಸಲು ಮಹಾವಿಷ್ಣುವೇ ಭೂಮಿಯಲ್ಲಿ ಅವತಾರವೆತ್ತಬೇಕೆಂದಿದ್ದ. ಆದರೆ ವಿಕ್ರಮನು ವಿಷ್ಣುವಿನ ಕೆಲಸವನ್ನು ಹಗುರಗೊಳಿಸಲು ತಾನೇ ಮ್ಲೇಚ್ಛರನ್ನು ನಾಶಗೊಳಿಸಿದ’ನೆಂದು ಹೊಗಳಿದ್ದಾನೆ.
        ಹೀಗೆ ಒಂದೆರಡು ಕವಿ, ಇತಿಹಾಸಕಾರರಲ್ಲ, ಮತ್ಸ್ಯ, ಬ್ರಹ್ಮಾಂಡ ಪುರಾಣ, ಶತಪಥ ಬ್ರಾಹ್ಮಣದಿಂದ ಮೊದಲ್ಗೊಂಡು ನೇಪಾಳರಾಜವಂಶಾವಳೀ, ಕಲಿಯುಗ ರಾಜವೃತ್ತಾಂತ, ಬೌದ್ಧರ ದೀಪವಂಶ-ಮಹಾವಂಶ, ಪ್ಟಾಲೆಮಿಯ ದಾಖಲೆಗಳು, ಭಾಸ್ಕರಾಚಾರ್ಯನ ಸಿದ್ಧಾಂತಶಿರೋಮಣಿ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ ಸೇರಿದಂತೆ ಅಸಂಖ್ಯ ಜಾನಪದ, ಪೌರಾಣಿಕ ಕಥೆಗಳೂ ವಿಕ್ರಮನನ್ನು ಬಾಯ್ತುಂಬ ಹೊಗಳಿವೆ.
        ಇನ್ನು ಶಾಲಿವಾಹನನೂ ಸಾಮಾನ್ಯನಲ್ಲ. ಸಾಕ್ಷಾತ್ ವಿಕ್ರಮಾದಿತ್ಯನ ಮರಿಮೊಮ್ಮಗ. ಅಜ್ಜನನ್ನು ಇಲ್ಲವೆನ್ನಿಸಿದವರಿಗೆ ಮೊಮ್ಮಗನನ್ನು ಇಲ್ಲವೆನಿಸುವುದು ಕಷ್ಟದ ಕೆಲಸವೇ! ’ವಾಹನ’ ಪ್ರಾಸಪದವನ್ನೇ ಹಿಡಿದುಕೊಂಡು ಶಾಲಿವಾಹನನನ್ನು ’ಶಾತವಾಹನ’ ಅರಸನನ್ನಾಗಿಸಿ ಅವನಿಗಿಂತ ನಾನೂರು ವರ್ಷ ಮೊದಲಿದ್ದ ಶಾತವಾಹನರ ಗೌತಮೀಪುತ್ರ ಶಾತಕರ್ಣಿಯೊಡನೆ ಗಂಟುಹಾಕಿದರು. ಅಬ್ಬಾ ಬುದ್ಧಿವಂತಿಕೆಯೆಂದರೆ ಅದು. ಇಂಥ ಗಂಟುಗಳನ್ನು ಬಿಡಿಸಲಾಗದೇ ನಮ್ಮ ಇತಿಹಾಸದ ಪುಸ್ತಕಗಳೆಲ್ಲ ಇನ್ನಷ್ಟು ಗಂಟು ಗಂಟಾಗಿ ಕಗ್ಗಂಟಾಗಿ ರಾಡಿಯಾಗಿವೆ. ಶಾಲಿವಾಹನನು ವಿಕ್ರಮನ ನಂತರ ಅರವತ್ತು ವರ್ಷಗಳ ಅರಾಜಕತೆಯಲ್ಲಿ ಹದಿನೆಂಟು ತುಂಡಾದ ರಾಜ್ಯವನ್ನು ಒಟ್ಟುಗೂಡಿಸಿ, ನಿತ್ಯ ದೇಶವನ್ನು ಲೂಟಿಮಾಡುತ್ತಿದ್ದ ಶಕರು, ಚೀನಿಯರು, ಬಾಹ್ಲೀಕರು, ಕಾಮರೂಪಿಯರು, ರೋಮನ್ನರು, ಟಾರ್ಟರರು, ಮ್ಲೇಚ್ಛರ ದಂಡುಗಳ ರುಂಡಚೆಂಡಾಡಿ ಉಜ್ಜೈನಿಯ ಅಧಿಪತಿಯಾದವ. ಭವಿಷ್ಯತ್ ಪುರಾಣದ ಪ್ರಕಾರ ವಿದೇಶಿಗರನ್ನು ಸಿಂಧೂನದಿಯಾಚೆ ಓಡಿಸಿದ್ದರಿಂದ ನದಿಯೀಚೆಗಿನ ಭಾಗ ಸಿಂಧೂಸ್ಥಾನವೆಂದೂ, ಆಚೆಗಿನ ಭಾಗ ಮ್ಲೇಚ್ಛಸ್ಥಾನವೆಂದೂ ಕರೆಯಲ್ಪಟ್ಟಿತು. ಇವನಿಂದ ಕರೆಯಲ್ಪಟ್ಟ ಸಿಂಧೂಸ್ಥಾನವೇ ಅಪಭೃಂಶವಾಗಿ ಮುಂದೆ ಹಿಂದೂಸ್ಥಾನವೆನಿಸಿದ್ದು. ಈ ದಿಗ್ವಿಜಯದ ಕುರುಹಾಗಿಯೇ ಕ್ರಿ.ಶ 78ರಲ್ಲಿ ಶಾಲಿವಾಹನ ಶಕೆ ಆರಂಭವಾಯಿತು. ಇದು ಇಂದು ನಮ್ಮ ರಾಷ್ಟ್ರೀಯ ಶಕೆಯಾಗಿದೆ. ಇವನ ಕುರಿತು ಪ್ರಸಿದ್ಧ ಜಾನಪದ ಕಥೆಯೊಂದಿದೆ. ಶಾಲಿವಾಹನನಿಗೆ ಮಣ್ಣಿನ ಆಟಿಕೆಗಳಿಗೆ ಜೀವ ನೀಡಬಲ್ಲ ವಿಶೇಷವಾದ ಶಕ್ತಿಯೊಂದಿತ್ತು.  ರಾಜ್ಯಭೃಷ್ಟನಾಗಿದ್ದರೂ, ಯಾರ ನೆರವೂ ಇಲ್ಲದಿದ್ದರೂ, ವಿದೇಶಿಗರೆಲ್ಲ ಒಟ್ಟಾಗಿ ಧಾಳಿ ಮಾಡಿದರೂ ತನ್ನ ಶಕ್ತಿಯನ್ನುಪಯೋಗಿಸಿ ಅವರನ್ನೆಲ್ಲ ಸೋಲಿಸಿಬಿಟ್ಟ. ಶಾಲಿವಾಹನ ಮಣ್ಣಿನಿಂದ ಮಾಡಿದ ಆನೆ, ಕುದುರೆ, ಸೈನಿಕರ ಗೊಂಬೆಗಳಿಗೆ ಜೀವ ನೀಡುತ್ತ ಹೋದನಂತೆ. ಎಷ್ಟು ಬಾರಿ ಹೊಡೆದುರುಳಿಸಿದರೂ ಮತ್ತೆ ಮತ್ತೆ ಮಣ್ಣಿನಿಂದೆದ್ದು ಬರುತ್ತಿದ್ದ ಈ ಸೈನ್ಯವನ್ನು ಎದುರಿಸಲಾಗದೇ ಶಕರು ಧೂಳೀಪಟವಾದರಂತೆ. ಕಥೆಗಳು ಏನೇ ಇದ್ದರೂ ಶಾಲಿವಾಹನ, ವಿಕ್ರಮಾದಿತ್ಯರೆರಡೂ ನಮ್ಮ ನೆಲದ ಮಹಾನ್ ಸ್ವಾತಂತ್ರ್ಯವೀರರೆಂಬುದು ನಿರ್ವಿವಾದ. ಅವರನ್ನು ಪುಸ್ತಕಗಳಿಂದಳಿಸಿದಷ್ಟು ಸುಲಭವಾಗಿ ಮನಸ್ಸಿನಿಂದಳಿಸುವುದು ಸಾಧ್ಯವಿಲ್ಲ. ಇಂಥವರನ್ನಳಿಸಲು ನಮ್ಮ ಬುದ್ಧಿಜೀವಿ ಇತಿಹಾಸಕಾರರು ಪ್ರಯತ್ನಿಸಿದಷ್ಟೂ ಅವರು ಮಣ್ಣಿನಿಂದ ಮತ್ತೆ ಮತ್ತೆ ಮೇಲೆದ್ದು ಬರುತ್ತಾರೆ, ಥೇಟ್ ಶಾಲಿವಾಹನನ ಗೊಂಬೆಗಳಂತೆ.