Pages

Tuesday, January 24, 2017

ಭಾರತದಲ್ಲಿ ಯಹೂದಿಗಳ ಹೆಜ್ಜೆಗುರುತು: ಚಿತ್ಪಾವನ ಹಾಗೂ ಕೊಡವರು

       

       ಮಹಾರಾಷ್ಟ್ರದ ಬುಡದಿಂದ ಕೇರಳದ ದಕ್ಷಿಣ ತುದಿಯವರೆಗಿನ ಭೂಮಿಯು ಪರಶುರಾಮ ಸೃಷ್ಟಿಯೆ೦ದೇ ಪ್ರತೀತಿ. ತನ್ನ ತ೦ದೆ ಜಮದಗ್ನಿಯ ಹತ್ಯೆಯ ಪ್ರತೀಕಾರವಾಗಿ ಭೂಮ೦ಡಲವನ್ನು 21 ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಸ೦ಹರಿಸಿ ಕ್ಷತ್ರಿಯ ಕುಲವನ್ನೇ ನಿರ್ವಂಶಗೊಳಿಸುತ್ತಾನೆ.  ಹತ್ಯೆಗೈದ ಪಾಪದ ಪ್ರಾಯಶ್ಚಿತಕ್ಕೋಸ್ಕರ ಮಹೇಂದ್ರ ಪರ್ವತಕ್ಕೆ ಬ೦ದು ತಪಸ್ಸು ಮಾಡುವ ಪರಶುರಾಮ ಗೆದ್ದ ಭೂಮಿಯನ್ನೆಲ್ಲ ಕಶ್ಯಪ ಮಹರ್ಷಿಗೆ ದಾನ ಮಾಡುತ್ತಾನೆ. ಇರುವ ನೆಲವೆಲ್ಲ ಕಶ್ಯಪನಿಗೆ ದಾನವಾಗಿ ಕೊಟ್ಟಮೇಲೆ ತನಗೆ ನೆಲೆನಿಲ್ಲಲು ಒಂದು ಸ್ಥಳ ಬೇಕಾಯಿತಲ್ಲ! ವರುಣದೇವನ ಆಜ್ಞೆಯ೦ತೆ ಸಹ್ಯಪರ್ವತದಿಂದ ತನ್ನ ಕೊಡಲಿಯನ್ನು ಬೀಸಿ ಒಗೆದನಂತೆ. ಆ ಪರಶು ಎಲ್ಲಿಯವರೆಗೆ ಹೋಗಿ ಬಿತ್ತೋ ಅಲ್ಲಿಯವರೆಗೆ ಸಮುದ್ರ ಹಿಂದೆ ಸರಿಯಿತು. ಹೀಗೆ ಹೊಸದಾಗಿ ನಿರ್ಮಾಣವಾದ ಭೂಭಾಗ ಪರಶುರಾಮ ಸೃಷ್ಟಿ ಎಂದು ಹೆಸರಾಯ್ತು. ಕೇರಳೋತ್ಪತ್ತಿ ಮಾರ್ತಾ೦ಡ, ಸ್ಕಾಂದಪುರಾಣ, ಪ್ರಪಂಚ ಹೃದಯವೇ ಮುಂತಾದ ಗ್ರಂಥಗಳ ಪ್ರಕಾರ ಪರಶುರಾಮ ಹಾಗೆ ಪಡೆದ ಭೂಭಾಗವೇ ಸಪ್ತಕೊಂಕಣ.
ಸಹ್ಯಪಾದೇ ಪರಶುರಾಮಭೂಮಿಃ | ಸಾ ಸಪ್ತಕೋಂಕಣಾಖ್ಯಾ |
ಕೂಪಕ ಕೇರಲ ಮೂಷಿಕ ಆಲುವ ಪಶು ಕೋಂಕಣ ಪರಕೋಂಕಣ
ಭೇದೇನ ದಕ್ಷಿಣೋತ್ತರಾಯಾಮೇನ ಚ ವ್ಯವಸ್ಥಿತಾ ||
ಸಹ್ಯಾಚಲದ ಉಪತ್ಯಕಾ ಪ್ರದೇಶವಾದ ಪರಶುರಾಮ ಭೂಮಿಯನ್ನು ಸಪ್ತಕೊಂಕಣವೆನ್ನುತ್ತಾರೆ. ಇದರಲ್ಲಿ ಕೂಪಕ, ಕೇರಲ, ಮೂಷಿಕ, ಆಳುವ(ತುಳುವ), ಪಶು, ಕೊಂಕಣ ಮತ್ತು ಪರ ಕೊಂಕಣ ಎಂದು ೭ ದೇಶಗಳಿವೆ. ಇದನ್ನೇ ಸ್ಕಾಂದ ಪುರಾಣ ಹಾಗೂ ಬ್ರಹ್ಮಾಂಡ ಪುರಾಣಗಳಲ್ಲಿ  ಬರ್ಬರ, ಸೌರಾಷ್ಟ್ರ, ಕೊಂಕಣ, ಕರ್ಹಾಟ, ಕರ್ಣಾಟ, ತೌಳವ, ಕೇರಳ ಎಂದು ಕರೆಯಲಾಗಿದೆ. ಪ್ರಪಂಚ ಹೃದಯದಲ್ಲೂ
ಖರಾಟಂಚ ವರಾಟಂಚ ಮರಾಟಂ ಕೊಂಕಣಂ ತಥಾ |
ಹವಿಗಂ ತೌಳವಂ ಚಾಥ ಕೇರಳಂ ಚೇತಿ ಸಪ್ತಕಂ ||
ಖರಾಟ, ವರಾಟ ಮರಾಟ, ಕೊಂಕಣ, ಹೈಗ, ತೌಳವ, ಕೇರಳ ಎಂದು ಸಪ್ತಕೊಂಕಣಗಳನ್ನು ವರ್ಗೀಕರಿಸಲಾಗಿದೆ.
       ಪಯಸ್ವಿನಿ ಅಥವಾ ಚಂದ್ರಗಿರಿ ನದಿಯ ಉತ್ತರಕ್ಕೆ ಆಳುವ ಅಥವಾ ತುಳುನಾಡು. ಪ್ಟಾಲೆಮಿಯ ದಾಖಲೆಗಳಲ್ಲಿ, ಹೊಯ್ಸಳ ವಿಷ್ಣುವರ್ಧನನ ಆಳೊತ್ತಿನ ಶಾಸನದಲ್ಲಿ, ಹೊಯ್ಸಳರ ನರಸಿಂಹನ ಕಂಬಾಳು ಹಾಗೂ ವೀರಬಲ್ಲಾಳನ ಸಂತೆಶಿವರ ಶಿಲಾಲೇಖಗಳಲ್ಲೂ ಇದು ’ಕೊಂಕಣನಾಡಾಳ್ವಖೇಡ’ ಎಂದು ಕರೆಯಲ್ಪಟ್ಟಿದೆ. ಪಯಸ್ವಿನಿಯಿಂದ ಪುದು ಪಟ್ಟಣದವರೆಗೆ ಕೂಪಕ, ಪುದುಪಟ್ಟಣದಿಂದ ಕನ್ನೇಟ್ಟಿವರೆಗೆ ಕೇರಲ, ಕನ್ನೇಟ್ಟಿಯಿಂದ ಕನ್ಯಾಕುಮಾರಿಯವರೆಗೆ ಮೂಷಿಕ. ಈ ಕೂಪಕ, ಮೂಷಕ, ಕೇರಲಗಳ ಉಲ್ಲೇಖ ಚಳುಕ್ಯ ಮಂಗಲೇಶನ ಕ್ರಿ.ಶ. ೬೦೨ರ ಮಹಾಕೂಟದ ಸ್ತಂಭಲೇಖದಲ್ಲಿಯೂ ಇದೆ. ಐದನೇ ಕೊಂಕಣವೆಂದರೆ ಪಶು ಅಥವಾ ಹೈಗದೇಶ. ಇದು ಉತ್ತರ ಕನ್ನಡ. ಉತ್ತರ ಕನ್ನಡ ಜಿಲ್ಲೆಯ ನಾಡುನುಡಿಯಲ್ಲಿ ಪಶುಕವು ಕ್ರಮೇಣ ಪಯಿಕ-ಪಯಿಗವಾಗಿ ತದ್ಭವಿಸಿ ಹೈಗವೆಂದು ರೂಪಾಂತರಗೊಂಡಿತು. ೬ನೆಯ ಕೊಂಕಣವೆಂದರೆ ಈಗಣ ಗೋವೆಯ ಸೀಮೆಯನ್ನೂ ಮುಂಬಯಿಯ ರತ್ನಗಿರಿ ಜಿಲ್ಲೆಯನ್ನೂ ಒಳಗೊಂಡಿರುವ ಕೊಂಕಣ ಅಥವಾ ದಕ್ಷಿಣ ಕೊಂಕಣ. ೭ನೆಯ ಕೊಂಕಣವೆಂದರೆ ಕೊಲಾಬಾ ಹಾಗೂ ಠಾಣಾ ಜಿಲ್ಲೆಗಳುಳ್ಳ ಪರ ಕೊಂಕಣ. ಪರಶುರಾಮನ ತಾಯಿ ರೇಣುಕಾ ದೇವಿ ಅಥವಾ ಕುಂಕಣಾ ದೇವಿಯಿಯಿಂದ ಈ ಸಮುದ್ರದಿಂದ ಪಡೆದ ಈ ಭಾಗಕ್ಕೆ ಕೊಂಕಣವೆಂದು ನಾಮಕರಣ ಮಾಡಿದನಂತೆ. ಹೊಸದಾಗಿ ಸೃಷ್ಟಿಸಿದ ಈ ಭೂಭಾಗದಲ್ಲಿ ದೇಶದ ಬೇರೆ ಬೇರೆ ಮೂಲೆಯಿಂದ ಬ್ರಾಹ್ಮಣರನ್ನು ಕರೆತಂದು ನೆಲೆಗೊಳಿಸಿದನೆನ್ನುತ್ತವೆ ಹೆಚ್ಚಿನೆಲ್ಲ ಪುರಾಣಗಳು. ಕೊಂಕಣದಲ್ಲಿ ಈ ಬ್ರಾಹ್ಮಣರು ನೆಲೆನಿಂತಿದ್ದರಿಂದ ಅವರಿಗೆ ಕೊಂಕಣಸ್ಥ ಅಥವಾ ಕೋಕಣಸ್ಥ ಬ್ರಾಹ್ಮಣರೆಂಬ ಹೆಸರಾಯ್ತು. ಹೀಗೆ ಪರಶುರಾಮನೊಡನೆ ಇಲ್ಲಿ ಬಂದರೆನ್ನಲಾಗುವ ಒಂದು ಬ್ರಾಹ್ಮಣ ಸಮುದಾಯದ ಹೆಸರು ಚಿತ್ಪಾವನ ಬ್ರಾಹ್ಮಣರು.
       ಸರಿಸುಮಾರು ಹದಿನಾರನೇ ಶತಾಬ್ದದವರೆಗೂ ಚಿತ್ಪಾವನರ ಇತಿಹಾಸದ ಬಗ್ಗೆ ದೊರೆಯುವುದು ಅಷ್ಟಕ್ಕಷ್ಟೆ.  ೧೬೯೦ರಲ್ಲಿ ಬಾಲಾಜಿ ವಿಶ್ವನಾಥ ಭಟ್ಟನೆಂಬ ಚಿತ್ಪಾವನ ಬ್ರಾಹ್ಮಣ ಕೆಲಸ ಹುಡುಕಿಕೊಂಡು ಪುಣೆಗೆ ಬಂದು ಗುಮಾಸ್ತನಾಗಿ ಮರಾಠರಲ್ಲಿ ಉದ್ಯೋಗಕ್ಕೆ ಸೇರಿಕೊಂಡ. ತನ್ನ ಶ್ರಮ ಹಾಗೂ ತೀಕ್ಷ್ಣ ಬುದ್ಧಿಮತ್ತೆಯಿಂದ ಅಚ್ಚರಿಪಡುವಂತೆ ಬೆಳೆದ ಬಾಲಾಜಿ ಭಟ್ಟ ಮರಾಠರ ಸೇನಾಧಿಪತಿಯಾಗಿ ಪೇಶ್ವೆಯೆಂಬ ಉಪಾಧಿಗೆ ಪಾತ್ರನಾದದ್ದು ಇತಿಹಾಸ. ಮುಂದೆ ಬಾಲಾಜಿಯ ವಂಶದವರು ಸುಮಾರು ನೂರು ವರ್ಷಗಳ ಕಾಲ ಮರಾಠರ ಆಳ್ವಿಕೆಯಲ್ಲಿ ಪೇಶ್ವೆಗಳಾಗಿ ಮೆರೆದರು. ಬಾಜಿರಾವ ಭಟ್ಟನ ನೇತೃತ್ವದಲ್ಲಿ ಮರಾಠರ ಪ್ರಸಿದ್ಧಿ ಚರಮಸೀಮೆಯನ್ನು ಮುಟ್ಟಿದ್ದು, ಇವನ ಅಧಿಪತ್ಯದಲ್ಲಿ ಅರ್ಧ ಭಾರತದದಾದ್ಯಂತೆ ಮರಾಠರ ಕೇಸರಿ ಧ್ವಜ ರಾರಾಜಿಸುವಂತಾದದ್ದು ತಿಳಿದೇ ಇದೆ. ಪೇಶ್ವೆಗಳ ಆಳ್ವಿಕೆ ಕೊಂಕಣದಲ್ಲಿ ಚಿತ್ಪಾವನರ ಭಾಗ್ಯದ ಬಾಗಿಲು ತೆರೆದಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರಾದ ಚಿತ್ಪಾವನರು ದೇಶದ ವಿವಿಧೆಡೆ ಬೇರೆ ಬೇರೆ ರಂಗಗಳಲ್ಲಿ ತಮ್ಮ ಛಾಪೊತ್ತಲು ತೊಡಗಿದರು.೧೮೧೮ರಲ್ಲಿ ಮರಾಠಾ ಸಾಮ್ರಾಜ್ಯ ಬ್ರಿಟಿಷರ ವಶವಾದಮೇಲೂ ಚಿತ್ಪಾವನರು ಇಂಗ್ಲೀಷ್ ಶಿಕ್ಷಣದ ಕಾರಣದಿಂದ ಆ ಭಾಗದಲ್ಲಿ ಹೆಚ್ಚಿನೆಲ್ಲ ರಂಗಗಳಲ್ಲೂ ಸಾಟಿಯಿಲ್ಲದಂತೆ ಮೆರೆದರು. ೧೮೭೯ರಲ್ಲಿ ವಾಸುದೇವ ಬಲವಂತ ಫಡ್ಕೆ ಪೇಶ್ವೆಗಳ ಆಡಳಿತವನ್ನು ಪುನರ್ಸ್ಥಾಪಿಸಲು ವಿದೇಶಿ ಆಡಳಿತದ ವಿರುದ್ಧ ತಿರುಗಿ ಬಿದ್ದ ಮೇಲಷ್ಟೆ ಬ್ರಿಟಿಷರ ಕಣ್ಣು ಕೆಂಪಗಾದದ್ದು. ಆಮೇಲೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ಪಾವನರ ಕೊಡುಗೆ ಬೆಲೆಕಟ್ಟಲಾಗದಷ್ಟು. ಡಿ.ಕೆ.ಕರ್ವೆಯವರ ವಿಧವಾ ವಿವಾಹ ಚಳುವಳಿ ಮಹಾರಾಷ್ಟ್ರದಲ್ಲಿ ಹೊಸ ಸಾಮಾಜಿಕ ಅಧ್ಯಾಯಕ್ಕೊಂದು ನಾಂದಿ ಹಾಡಿತು. ಮಂದಗಾಮಿ ಹೋರಾಟಗಾರರಾದ ಗೋಪಾಲಕೃಷ್ಣ ಗೋಖಲೆ, ಜಿ.ವಿ.ಜೋಶಿ, ಮಹದೇವ ಗೋವಿಂದ ರಾನಡೆಯಂಥವರು ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ,  ಪೂರ್ಣ್ ಸಾರ್ವಜನಿಕ ಸಭಾದ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸಿದರೆ ಬಾಲಗಂಗಾಧರ ತಿಲಕ, ವಿ.ಡಿ ಸಾವರ್ಕರ್, ವಿಷ್ಣುಶಾಸ್ತ್ರಿ ಚಿಪ್ಳೂಣಕರ್, ಚಾಪೇಕರ್ ಬಂಧುಗಳು, ಶಿವರಾಮ ಪರಾಂಜಪೆಯಂಥವರು ತೀವ್ರಗಾಮಿ ಮಾರ್ಗದ ಮೂಲಕ ಬ್ರಿಟಿಷರಿಗೆ ಬಿಸಿಮುಟ್ಟಿಸತೊಡಗಿದರು. ಇನ್ನು ನಾಥುರಾಮ್ ಗೋಡ್ಸೆಯ ವಿಚಾರ ಹೇಳುವುದೇ ಬೇಡ ಬಿಡಿ. 
ಬಾಲಾಜಿ ವಿಶ್ವನಾಥ
       ದಾದಾಸಾಹೇಬ್ ಫಾಲ್ಕೆಯಿಂದ ಮಾಧುರೀ ದೀಕ್ಷಿತಳವರೆಗೆ, ತಿಲಕರಿಂದ ನಾಥೂರಾಮ ಗೋಡ್ಸೆಯವರೆಗಿನ ಖ್ಯಾತನಾಮರೆಲ್ಲ ಚಿತ್ಪಾವನರೇ. ಹೀಗಿದ್ದರೂ ಇವರ ಮೂಲ, ಇತಿಹಾಸ, ಹಿನ್ನೆಲೆ ಇವ್ಯಾವವೂ ಇತಿಹಾಸಕಾರರಿಗೆ ತಿಳಿದಿದ್ದು ಅಷ್ಟಕ್ಕಷ್ಟೆ. ಚಿತ್ಪಾವನರ ಕುಲನಾಮಗಳಾದ ಗಣಪುಲೆ, ರಾನಡೆ, ಪರಾಂಜಪೆಯಂಥ ಹೆಸರುಗಳು ಅಲ್ಲಿಲ್ಲಿ ಇತಿಹಾಸದಲ್ಲಿ ಸಿಕ್ಕಿದರೂ ಚಿತ್ಪಾವನ ಶಬ್ದದ ಮೊದಲ ಉಲ್ಲೇಖ ದೊರಕುವುದೇ ಹದಿನಾರನೇ ಶತಮಾನದಲ್ಲಿ ಕಾಶಿಯ ಸ್ಮಾರ್ತಪಂಡಿತ ರಘುನಾಥ ಭಟ್ಟನ ಮುಹೂರ್ತಮಾಲಾ ಗ್ರಂಥದಲ್ಲಿ. ಆತ ತನ್ನನ್ನು ತಾನು ಶಾಂಡಿಲ್ಯ ಗೋತ್ರದ ಕೊಂಕಣ ಸೀಮೆಯ ಚಿತ್ಪಾವನ ಬ್ರಾಹ್ಮಣನೆಂದು ಕರೆದುಕೊಳ್ಳುತ್ತಾನೆ. ಅದಕ್ಕೂ ಹಿಂದೆ ಮುಘಲ್ ಬಾದಷಾ ಅಕ್ಬರನಿಂದ ಜ್ಯೋತಿರ್ವಿಶಾರದನೆಂದು ಬಿರುದು ಪಡೆದಿದ್ದ ನರಸಿಂಹ ಭಟ್ಟ ಇವನ ಅಜ್ಜ. ಅದನ್ನು ಬಿಟ್ಟರೆ ಚಿತ್ಪಾವನರ ಎರಡನೇ ಉಲ್ಲೇಖ ಸಿಗುವುದು ೧೬೭೭ರಲ್ಲಿ ಕರ್ಹಾಡ ಹಾಗೂ ಚಿತ್ಪಾವನ ಕುಲದ ಬ್ರಾಹ್ಮಣರಿಗೆ ಶಿವಾಜಿ ಉಂಬಳಿ ನೀಡಿದ ದಾಖಲೆಗಳಲ್ಲಿ.
       ವಲಸೆ ಬಂದು ಇಲ್ಲಿ ನೆಲೆನಿಂತ ಬ್ರಾಹ್ಮಣ ಸಮುದಾಯದ ಹೆಸರು ಅವರು ನೆಲೆನಿಂತ ಜಾಗದೊಡನೆ ತಳುಕು ಹಾಕಿಕೊಳ್ಳುವುದು ರೂಢಿ. ಮಯೂರವರ್ಮನ ಕಾಲದಲ್ಲಿ ಶಿವಳ್ಳಿಯಲ್ಲಿ ನೆಲೆನಿಂತವರು ಶಿವಳ್ಳಿಯಾದಂತೆ, ಕೋಟದಲ್ಲಿ ನೆಲೆಸಿದವರು ಕೋಟ ಬ್ರಾಹ್ಮಣರಾದಂತೆ, ಹೈಗ ದೇಶದಲ್ಲಿ ವಾಸಿಸಿದವರು ಹೈಗರಾದಂತೆ.  ಮಿಥಿಲಾ ಪ್ರದೇಶಕ್ಕೆ ಬಂದವರು ಮೈಥಿಲಿ ಬ್ರಾಹ್ಮಣರೆಂದು ಕರೆಯಲ್ಪಟ್ಟರು, ಶಿಲಾಹಾರರ ಕಾಲದಲ್ಲಿ ಕರ್ಹಾಡ(ಟ) ಸೀಮೆಗೆ ಬಂದವರು ಕರಾಡ ಬ್ರಾಹ್ಮಣರಾದರು, ಮಧ್ಯ ಮಹಾರಾಷ್ಟ್ರದಲ್ಲಿ ವಾಸಿಸತೊಡಗಿದವರು ದೇಶಸ್ಥರಾದರು. ಆದರೆ ಈ ಚಿತ್ಪಾವನವೆಂಬ ಹೆಸರು ಬಂದಿದ್ದು ನಿಗೂಢವೇ. ಆ ಹೆಸರಿನ ಪ್ರದೇಶವ್ಯಾವುದೂ ಭಾರತದಲ್ಲಿಲ್ಲ. ಚಿತ್ತ+ಪಾವನ, Pure Heart , ಶುದ್ಧ ಮನಸ್ಸು ಎಂಬ ಭಾಷಾಂತರವನ್ನೇನೋ ಕೆಲವರು ಮಾಡಿದ್ದಾರೆ. ೧೬ನೇ ಶತಮಾನದಲ್ಲಿ ವಿಶ್ವನಾಥ ಭಟ್ಟ ರಚಿಸಿದ ವ್ಯಾಡೇಶ್ವರ ಮಹಾತ್ಮ್ಯದಲ್ಲಿ ಇವರನ್ನು ಚಿತ್ತಪ ಅಥವಾ ಚಿತ್ತಪಾವನರೆಂದು ಕರೆದಿದ್ದಾನೆ. ಅಬ್ರಾಹ್ಮಣವಾಗಿದ್ದ ಕೊಂಕಣದಲ್ಲಿ ಬ್ರಾಹ್ಮಣರನ್ನು ನೆಲೆಗೊಳಿಸಲು ಪರಶುರಾಮ ಚಿಂತಿಸಿದನಂತೆ. ಒಮ್ಮೆ ದಕ್ಷಿಣದ ಕಾವೇರಿ ನದಿಯ ಉಗಮಸ್ಥಾನಕ್ಕೆ ತೀರ್ಥಯಾತ್ರೆಗೆ ತೆರಳಿದ್ದಾಗ ಅಲ್ಲಿಗೆ ಪಶ್ಚಿಮಕ್ಕಿರುವ ಪಯೋಷ್ಣಿ ನದಿದಡದಿಂದ ಕೆಲ ಬ್ರಾಹ್ಮಣ ಕುಟುಂಬಗಳು ಬಂದು ನೆಲೆಸಿದ್ದವಂತೆ. ಆ ಬ್ರಾಹ್ಮಣರ ಪಾಂಡಿತ್ಯಕ್ಕೆ ಮೆಚ್ಚಿದ ಪರಶುರಾಮ ಅವರ ರಕ್ಷಣೆಯ ಅಭಯವಿತ್ತು ಕೊಂಕಣ ಪ್ರದೇಶದಲ್ಲಿ ನೆಲೆಸುವಂತೆ ಕೇಳಿದ. ಅವನ ಕೋರಿಕೆಯನ್ನು ಅಲ್ಲಿನ ಬ್ರಾಹ್ಮಣರು ಒಪ್ಪಿ ಕೊಂಕಣಕ್ಕೆ ಬಂದರು. ಅವರ ಉದಾರ ಮನಸ್ಸನ್ನು ಕಂಡು ಪರಶುರಾಮನ ಹೃದಯ ತುಂಬಿ ಬಂತು. ಆತ ಅವರು ನೆಲೆಸಿದ ಪ್ರದೇಶಕ್ಕೆ ಚಿತ್ತಪಾವನವೆಂದು ಹೆಸರಿಟ್ಟ. ಅಲ್ಲಿ ನೆಲೆಸಿದ ಬ್ರಾಹ್ಮಣರಿಗೂ ಅದೇ ಹೆಸರಾಯಿತು. ವ್ಯಾಡೇಶ್ವರದ ಸ್ಥಳಪುರಾಣದಂತೆ ಪರಶುರಾಮನ ಸಂಗಡ ಬಂದ ವ್ಯಾಡನೆಂಬ ಬ್ರಾಹ್ಮಣ ಇಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಮಂದಿರವೊಂದನ್ನು ನಿರ್ಮಿಸಿದ್ದರಿಂದ ಆ ಸ್ಥಳಕ್ಕೆ ವ್ಯಾಡೇಶ್ವರವೆಂಬ ಹೆಸರು ಬಂದಿತು. ಹೆಚ್ಚಿನ ಕೋಕಣಸ್ಥ ಚಿತ್ಪಾವನರ ಕುಲದೇವರು ಇದೇ. ಪರಶುರಾಮನ ಈ ಕಥೆ ಎಷ್ಟು ಸತ್ಯವೋ ಆದರೆ ಇದು ಅವರ ಹೆಸರು ಚಿತ್ಪಾವನರೆಂದೇಕಾಯ್ತೆಂದು ವಿವರಿಸುವುದಿಲ್ಲ. ಏನೇ ಆದರೂ ಚಿತ್ತಪಾವನದಿಂದ ಚಿತ್ಪಾವನವಾಯ್ತೆಂದು ಬರೆದಿರುವುದು ಒಳ್ಳೆಯ ಕವಿ ಪ್ರಯತ್ನ. ವ್ಯಾಡೇಶ್ವರ ಮಹಾತ್ಮೆಯಲ್ಲಿ ಪಯೋಷ್ಣಿ ಅಥವಾ ಪಯಸ್ವಿನಿ ಎಂಬ ನದಿದಡದಿಂದ ಚಿತ್ಪಾವನರ ಆಗಮನವಾಯ್ತೆಂದು ಬರೆದಿದೆ. ಆದರೆ ಪಯೋಷ್ಣಿಯೆಂಬ ಹೆಸರಿನ ನದಿ ಯಾವುದೂ ದಕ್ಷಿಣ ಭಾರತದಲ್ಲಿಲ್ಲ. ಪಯ ಎಂಬುದಕ್ಕೆ ನೀರು ಎಂಬರ್ಥವೂ ಇದೆ. ಉಷ್ಣವೆಂದರೆ ಬಿಸಿ. ಉತ್ತರ ಮಹಾರಾಷ್ಟ್ರದ ಜಲಗಾಂವಿನ ಹತ್ತಿರದ ಉನಪದೇವ ಪ್ರದೇಶದಲ್ಲಿ ಬಿಸಿನೀರಿನ ಚಿಲುಮೆಯೊಂದಿದೆ. ಪಯೋಶ್ಣಿ ಎಂದು ಉಲ್ಲೇಖಿಸಲ್ಪಟ್ಟ ನದಿ ಇದೇ ಆಗಿರಬಹುದೇ?  ಕೆಲ ಚಿತ್ಪಾವನರ ಕುಲದೇವತೆ ವಿಂಧ್ಯವಾಸಿನಿಯಾಗಿರುವುದಕ್ಕೂ, ಈ ಉನಪದೇವ ಬಿಸಿನೀರ ಹರಿವು ವಿಂಧ್ಯ ಪರ್ವತದ ಸಾಲಿನಲ್ಲಿಯೇ ಬರುವುದಕ್ಕೂ ಏನಾದರೂ ಸಂಬಂಧವಿರಬಹುದೇ? ವಿಂಧ್ಯಾಚಲದಲ್ಲೇ ಇರುವ ಅಂಬೇಜೋಗಿಯ ಯೋಗೇಶ್ವರಿ ಹಲವು ಚಿತ್ಪಾವನರ ಕುಲದೇವಿ ಕೂಡ. ಇದನ್ನು ಹೊರತುಪಡಿಸಿ ಹಿಮಾಚಲಪ್ರದೇಶದ ತಟ್ಟಾಪಾನಿ(ಸಟ್ಲೇಜ್ ನದಿ), ಮನಿಕರಣ್, ಡೆಹ್ರಾಡೂನಿನ ಸಮೀಪದ ಸಹಸ್ರಧಾರಾ ಸೇರಿ ಹಿಮಾಲಯದ ಕೆಲಭಾಗಗಳಲ್ಲಿ ಬಿಸಿ ನೀರ ಚಿಲುಮೆಗಳಿವೆ. ಪಾಕಿಸ್ತಾನದ ಈಶಾನ್ಯಭಾಗದ ಚಿತ್ರಾಲ್ ಜಿಲ್ಲೆಯ ಗರಮ್ ಚಶ್ಮಾ, ಮುರ್ತಾಝಾಬಾದ್, ಗಿಲ್ಗಿಟ್, ಅಪ್ಘಾನಿಸ್ತಾನದ ಚಿಶ್ಮಾ-ಇ-ಆಯುಬ್, ಹೇರತ್‌ನ ಸಫೇದ್ ಕೋಹ್, ಬಲ್ಖ್‌ನ ಆಬೆ ಗರಮ್‌ಗಳಲ್ಲಿ ಸಹ ಬಿಸಿನೀರ ತೊರೆಗಳಿವೆ. ಇನ್ನೊಂದು ಸಾಧ್ಯತೆಯುಂಟು. ದಕ್ಷಿಣ ಕನ್ನಡದ ಪುತ್ತೂರಿನ ಸಮೀಪದ ಬೆಂದ್ರು ತೀರ್ಥ ದಕ್ಷಿಣ ಭಾರತದ ಏಕೈಕ ಬಿಸಿನೀರ ಕೊಳ. ಅಲ್ಲೇ ಪಕ್ಕದಲ್ಲಿ ಹರಿಯುವ ಸೀರೆ ಹೊಳೆಯ ಉಗಮ ಮೊದಲು ಇಲ್ಲಿಯೇ ಆಗುತ್ತಿತ್ತೇ? ಊರ ತುಂಬ ಕೊಳವೆ ಬಾವಿ ಕೊರೆದು ಈಗ ಅಲ್ಲಿ ನೀರು ಸಿಗುವುದೂ ಕಷ್ಟವಾಗಿದೆ ಬಿಡಿ. ಒಂದು ಕಾಲದಲ್ಲಿ ಪುತ್ತೂರಿನಲ್ಲಿ ಸಾವಿರಾರು ಚಿತ್ಪಾವನರ ವಸತಿಯಿತ್ತು. ಕಳೆದೆರಡು ಶತಮಾನದಲ್ಲಿ ಬಹಳ ಜನ ಅಲ್ಲಿಂದ ಮಾಳ, ಕಾರ್ಕಳ, ಮುಂಡಾಜೆಗಳ ಕಡೆ ವಲಸೆ ಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಪುತ್ತೂರಿನ ಸಮೀಪ ಎರಡು ಪರಶುರಾಮ ಮಂದಿರಗಳಿವೆ. ಒಂದು ಧರ್ಬೆತಡ್ಕದಲ್ಲಿರುವ ಚಿತ್ಪಾವನ ಗುರು ಪರಶುರಾಮ ಮಂದಿರ, ಇನ್ನೊಂದು ಮುಂಡಾಜೆಯಲ್ಲಿರುವುದು. ಬೇರೆಲ್ಲಿಂದಲೋ ಬಂದು ಪುತ್ತೂರಿನ ಆಸುಪಾಸು ನಿಂತ ಚಿತ್ಪಾವನ ಬ್ರಾಹ್ಮಣರನ್ನೇ ಪರಶುರಾಮ ಕೊಂಕಣ ಪ್ರಾಂತ್ಯಕ್ಕೆ ತನ್ನೊಡನೆ ಕರೆದೊಯ್ದನೇ? ಜೊತೆಗೆ ಪಯಸ್ವಿನಿಯೆಂಬ ಹೆಸರಿನ ನದಿಯೊಂದು ಕಾಸರಗೋಡಿನಲ್ಲಿಯೂ ಹರಿಯುತ್ತಿದೆ. ಕಾವೇರಿ ಉಗಮಸ್ಥಾನಕ್ಕೆ ಇದು ಸಮೀಪವಿರುವುದರಿಂದ ವ್ಯಾಡೇಶ್ವರ ಮಹಾತ್ಮ್ಯದಲ್ಲಿ ಹೇಳಿದಂತೆ ಚಿತ್ಪಾವನರ ಮೂಲವೇನಾದರೂ ದಕ್ಷಿಣ ಕನ್ನಡ ಅಥವಾ ಕಾಸರಗೋಡು ಪ್ರಾಂತ್ಯವೇ ಇರಬಹುದೇ?
ಉನಪದೇವದ ಬಿಸಿನೀರಿನ ಚಿಲುಮೆ
ಚಿತ್ಪಾವನರ ಕುಲದೈವ ವ್ಯಾಡೇಶ್ವರ ಮಂದಿರ

       ಚಿತ್ಪಾವನವೆಂಬ ಹೆಸರು ಬರಲು ಇನ್ನೂ ಒಂದು ಕಾರಣವನ್ನು ಇತಿಹಾಸಕಾರರು ವಿವರಿಸುತ್ತಾರೆ. ಚಿತಾ ಅಥವಾ ಚಿತೆಯಿಂದ ಪಾವನರಾದ್ದರಿಂದ ಅವರ ಹೆಸರು ಚಿತ್ಪಾವನವೆಂದಾಯ್ತಂತೆ. ಸ್ಕಂದಪುರಾಣದ ಉತ್ತರಸಹ್ಯಾದ್ರಿ ಖಂಡದಲ್ಲೊಂದು ಕಥೆಯಿದೆ.  ಕ್ಷತ್ರಿಯ ವಂಶವನ್ನು ನಿರ್ಮೂಲಗೊಳಿಸಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪರಶುರಾಮ ಮಹೇಂದ್ರಪರ್ವತದಲ್ಲಿ ಯಾಗವೊಂದಕ್ಕೆ ಸಿದ್ಧತೆ ನಡೆಸಿದ. ಇಡೀ ಕ್ಷತ್ರಿಯಕುಲದ ರುಂಡಚಂಡಾಡಿದ ಪರಶುರಾಮನ ಕೋಪದ ಹೆದರಿಕೆಯಿಂದ ಬ್ರಾಹ್ಮಣರ್ಯಾರೂ ಆ ಯಾಗದ ಅಧ್ವರ್ಯ ವಹಿಸಲು ಮುಂದಾಗಲಿಲ್ಲ. ಅದೇ ಸಮಯಕ್ಕೆ ಪಶ್ಚಿಮ ಸಮುದ್ರದಲ್ಲಿ ಬರುತ್ತಿದ್ದ ಹಡಗೊಂದು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಪರಶುರಾಮ ನೀರುಪಾಲಾದ ಹದಿನಾಲ್ಕು ಶವಗಳನ್ನು ಚಿತೆಯಲ್ಲಿಟ್ಟು ಪಾವನಗೊಳಿಸಿ ಜೀವ ತುಂಬಿ ಬ್ರಾಹ್ಮಣ್ಯವನ್ನು ನೀಡಿದನಂತೆ. ಅವರಿಗೆ ಹದಿನಾಲ್ಕು ಗೋತ್ರಪ್ರವರಗಳನ್ನು ನೀಡಿ ತನ್ನ ಕಾರ್ಯವನ್ನು ಸಾಂಗಗೊಳಿಸಿಕೊಂಡನೆನ್ನುತ್ತದೆ ಕಥೆ. ಯಹೂದಿಗಳ ಬೇನೆ ಇಸ್ರೇಲಿ ಪಂಗಡದ್ದೂ ಇದೇ ಕಥೆ ಎಂದು ಕಳೆದ ಬಾರಿ ಹೇಳಿದ್ದೆನಷ್ಟೆ.  ಕ್ರಿ.ಪೂ ೨ನೇ ಶತಮಾನಕ್ಕೂ ಹಿಂದೆ ಪಶ್ಚಿಮದ ಕೊಂಕಣ ಪಟ್ಟಿಗೆ ಇವರು ಆಗಮಿಸಿದರೆಂದು ಭಾವಿಸಲಾಗುತ್ತದೆ. ಸಮುದ್ರದಲ್ಲಿ ಬರುತ್ತಿರುವಾಗ ಹಡಗು ಒಡೆದು ನೀರುಪಾಲಾದವರಲ್ಲಿ ಏಳು ಪುರುಷರೂ, ಏಳು ಮಹಿಳೆಯರೂ ಒಟ್ಟೂ ಹದಿನಾಲ್ಕು ಜನ ಹೇಗೋ ಬದುಕಿ ಉಳಿದರಂತೆ. ಅವರ ಸಹಯಾತ್ರಿಗಳು, ಸ್ವತ್ತುಗಳೊಡನೆ ಧರ್ಮಗ್ರಂಥಗಳೂ ನಾಶವಾಗಿದ್ದವು. ಶೇಮಾ ಪ್ರಾರ್ಥನೆಯನ್ನು ಮಾತ್ರ ನೆನಪಿಟ್ಟುಕೊಂಡ ಒಂದು ಕಾರಣದಿಂದ ತಮ್ಮ ನೆಲೆಯಿಂದ ಬಹುದೂರ ಬಂದಿದ್ದರೂ ಅವರು ಮೂಲವನ್ನು ಮರೆಯಲಿಲ್ಲವಂತೆ. ಏನೇ ಅಂದರೂ ಪರಶುರಾಮನ ಈ ಕಥೆಗೆ ಮೂರ್ನಾಲ್ಕು ಶತಮಾನಗಳಿಗಿಂತ ಹೆಚ್ಚಿನ ಆಯುಷ್ಯವಿದ್ದಂತಿಲ್ಲ. ಮಹಾರಾಷ್ಟ್ರದ ರಾಜಕೀಯದಲ್ಲಿ ಚಿತ್ಪಾವನರು ಪ್ರವರ್ಧಮಾನಕ್ಕೆ ಬಂದ ಮೇಲೆ ಈ ಕಥೆ ಹುಟ್ಟಿಕೊಂಡಿರಬೇಕು. ಭೂಪ, ನೃಪ ಎಂಬಂತೆ ಚಿತ್ ಶಬ್ದಕ್ಕೆ ಪ ಪ್ರತ್ಯಯ ಸೇರಿ ಚಿತ್ಪ ಅಥವಾ ಚಿತ್ಪಾವನ ಎಂದಾಗಿರಬೇಕು. ಬುದ್ಧಿ ಅಥವಾ ಜ್ಞಾನದ ರಕ್ಷಕರೆಂಬ ಅರ್ಥದಲ್ಲಿ. ಪರ್ಶಿಯನ್ನಿನಲ್ಲಿ ಹಾಗೂ ಅವೆಸ್ತಾದಲ್ಲಿಯೂ ಚಿತ್ ಶಬ್ದಕ್ಕೆ ಜ್ಞಾನವೆಂಬ ಅರ್ಥವೇ ಇದೆ. ಅಚ್ಚಬಿಳಿ ಮೈಬಣ್ಣ, ಬಿಳುಚಿಕೊಂಡಿರುವ ಚರ್ಮ, ನೀಲಿ ಅಥವಾ ಹಸಿರು ಕಣ್ಣು, ಚೂಪು ಮೂಗು, ಕಂದು ಛಾಯೆಯ ತಲೆಗೂದಲು ಚಿತ್ಪಾವನರಲ್ಲಿರುವಂತೆ ಬೇರೆ ಯಾವ ಬ್ರಾಹ್ಮಣ ಪಂಗಡದಲ್ಲಿಯೂ ಕಂಡುಬರುವುದಿಲ್ಲ. ಇವರ ದೈಹಿಕ ಚರ್ಯೆಯು ಮಧ್ಯ ಏಶಿಯನ್ನರನ್ನು ಬಹುಮಟ್ಟಿಗೆ ಹೋಲುತ್ತದೆ. ಹಾಗಾಗಿ ಇವರು ಹೆಚ್ಚಾಗಿ ಮಧ್ಯ ಏಶಿಯಾದ ಈಜಿಪ್ಟ್ ಅಥವಾ ಗ್ರೀಕ್ ಪ್ರಾಂತ್ಯದವರಿರಬೇಕೆಂದು ಇತಿಹಾಸಕಾರ ವಿ.ಎನ್.ಮಾಂಡಲಿಕ ಅಭಿಪ್ರಾಯಪಟ್ಟಿದ್ದಾರೆ. ಇಜಿಪ್ಟಿನ ಗಿಪ್ತ್ವಾನ್ ಶಬ್ದವೇ ಚಿತ್ಪಾವನದ ಮೂಲವೆಂದು ಇವರ ಭಾವನೆ. ಹಾಗೆ ನೋಡಿದರೆ ಭಾರತ ಹಾಗೂ ಗ್ರೀಕಿನ ಮಧ್ಯದ ವ್ಯಾಪಾರ ಸಂಬಂಧ ಎರಡು ಸಾವಿರ ವರ್ಷಗಳಿಗಿಂತ ಹಳೆಯದು. ಪೆರಿಪ್ಲಸ್ ಮಾರ್ಸ್‌ನಲ್ಲಿ ದಾಖಲಾಗಿರುವ ಜಲಮಾರ್ಗದ ಮ್ಯಾಪಿನಲ್ಲಿ ಸಿಂಧೂ ನದಿಯ ನದಿಮುಖವು ಬಾರ್ಬರಿಕಮ್ ಎಂದು ದಾಖಲಾಗಿದೆ. ಪ್ರಾಯಶಃ ಗ್ರೀಕರು ಈ ಭಾಗದಲ್ಲಿ ವಾಸಿಸುವವರನ್ನು ಬರ್ಬರರೆಂದು ಕರೆದಿರಬೇಕು. ಶಕರು ಈ ಪ್ರದೇಶವನ್ನು ಆಳುತ್ತಿದ್ದುದೇ ಅದಕ್ಕೆ ಕಾರಣವಿರಬಹುದು. ಅಥವಾ ಗ್ರೀಕರಿಗೆ ಎಲ್ಲ ಗ್ರೀಕರಲ್ಲದ ಜನರನ್ನು ಬರ್ಬರರೆಂದು ಕರೆಯುವ ರೂಢಿಯಿರಬೇಕು. ಅನಾರ್ಯ ಎಂಬರ್ಥದಲ್ಲಿ ಬಳಸಲ್ಪಡುವ ಸಂಸ್ಕೃತದ ಬರ್ಬರ ಶಬ್ದವೂ ಗ್ರೀಕಿನದ್ದೇ ಎರವಲು. ಮಜದ ವಿಚಾರವೆಂದರೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟಿರುವ ಸಪ್ತಕೊಂಕಣದ ಒಂದು ಪ್ರದೇಶದ ಹೆಸರು ಕೂಡ ಬರ್ಬರವೆಂದೇ. ಆದರೂ ಗ್ರೀಕಿನಿಂದ ದೊಡ್ಡ ಮಟ್ಟಿನ ವಲಸೆ ಮಧ್ಯ-ದಕ್ಷಿಣ ಭಾರತದ ಭಾಗಕ್ಕೆ ನಡೆದ ದಾಖಲೆ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ. ಹಾಗೆಂದು ಯಹೂದಿಗಳು ಹಾಗೂ ಪಾರಸಿಗಳು ಇರಾನ್, ಮಧ್ಯ ಏಶಿಯಾದ ಭಾಗದಿಂದ ಇಲ್ಲಿ ಬಂದಿದ್ದಾರೆ. ಕೆಲ ಇತಿಹಾಸಕಾರರು ಹೇಳುವಂತೆ ಚಿತ್ಪಾವನರು ಮೂಲತಃ ಯಹೂದಿಗಳಾಗಿದ್ದರೆ ಅವರು ಬ್ರಾಹ್ಮಣರಾದುದು ಹೇಗೆಂಬುದೇ ದೊಡ್ಡ ಪ್ರಶ್ನೆ! ಮಹಾರಾಷ್ಟ್ರವೂ ಸೇರಿ ಉಳಿದ ಕಡೆಗಳಲ್ಲೆಲ್ಲ ಎರಡೂವರೆ ಸಾವಿರ ವರ್ಷದ ಹಿಂದೆಯೇ ವಲಸೆ ಬಂದಿದ್ದ ಯಹೂದಿಗಳಲ್ಲಿ ಹೆಚ್ಚಿನವರು ತಮ್ಮ ಮತವನ್ನು, ಮೂಲವನ್ನು ನೆನಪಿಟ್ಟುಕೊಂಡಿರುವಾಗ ಕೆಲವೇ ಕೆಲವು ಜನ ಬ್ರಾಹ್ಮಣರಾಗುವುದು ಹೇಗೆ ಸಾಧ್ಯ? ಜೊತೆಗೆ ಪಶ್ಚಿಮ ಕರಾವಳಿಗೆ ಇರಾನಿನಿಂದ ಪಾರ್ಸಿಗಳೂ ತಮ್ಮ ಆಚರಣೆಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಭಾರತದಲ್ಲಿ ಅದೂ ಹಿಂದೂಗಳಲ್ಲಿ ಯಾವ ಮತಶ್ರದ್ಧೆಯವರಾದರೂ ತಮ್ಮ ತಮ್ಮ ಆಚರಣೆಗಳನ್ನು ಆಚರಿಸಿಕೊಳ್ಳಲು ಸರ್ವತಂತ್ರ ಸ್ವತಂತ್ರರು. ಬೇರೆಯವರಂತೆ ಮತಾಂತರವಾಗಲೀ, ಘರ್ ವಾಪಸಿಯಾಗಲೀ ಇಲ್ಲಿಲ್ಲವೇ ಇಲ್ಲ. ಅದರಲ್ಲೂ ಉಳಿದೆಲ್ಲ ಮತಗಳೂ ತಾವೇ ಶ್ರೇಷ್ಟ, ಎಲ್ಲರೂ ನಮ್ಮಲ್ಲಿ ಬನ್ನಿ ಎಂದು ಕರೆದರೆ ಬ್ರಾಹ್ಮಣರು ಮಾತ್ರವೇ ತಮ್ಮ ಮತವೇ ಶ್ರೇಷ್ಟ, ನಮ್ಮ ಹತ್ತಿರ ಯಾರೂ ಬರಬೇಡಿ ಎನ್ನುವವರು. ಹಾಗಿರುವಾಗ ವಿದೇಶದಿಂದ ಬಂದ ಗುಂಪೊಂದು ಬ್ರಾಹ್ಮಣರಾಗುವುದು ಕನಸಿನ  ಮಾತಷ್ಟೆ.
       ಹಾಗೆಂದು ಚಿತ್ಪಾವನರು ಹೊರಗಿನಿಂದ ಬಂದಿರಲು ಸಾಧ್ಯವೇ ಇಲ್ಲ ಎನ್ನುವುದೂ ಕಷ್ಟ. ಮಧ್ಯ ಏಶಿಯಾ ಹಾಗೂ ಗಾಂಧಾರ(ಅಪ್ಘಾನಿಸ್ತಾನ)ದ ಕೆಲ ಪಂಗಡಗಳ ಬಿಳಿಯ ಬಣ್ಣ, ನೀಲಿ-ಹಸಿರು ಕಣ್ಣುಗಳ ಮುಖಚರ್ಯೆಗೂ ಚಿತ್ಪಾವನರ ಮುಖಚರ್ಯೆಗೂ ತುಂಬ ಸಾಮ್ಯತೆಯಿದೆ. ಇದೇ ಚರ್ಹೆಯನ್ನು ಹೋಲುವ ಗಾಂಧಾರದ ಕಲಶ್ ಎಂಬ ಪಂಗಡ ಅಲೆಕ್ಸಾಂಡರಿನೊಡನೆ ಬಂದು ಗಾಂಧಾರದಲ್ಲಿ ನೆಲೆಸಿದ ಗ್ರೀಕರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತವೆ. ಚಿತ್ಪಾವನರ ಒಂದು ಅಡ್ಡಹೆಸರು ಗಾಂಧಾರ ಎಂಬುದೂ ಇಲ್ಲಿ ಉಲ್ಲೇಖಾರ್ಹ. ಚಿತ್ಪಾವನರು ಆಚರಿಸುವ ಬೋಧನ್ ಎಂಬ ಅನ್ನಪೂರ್ಣಾದೇವಿಯ ಆರಾಧನೆ ಬೇರೆ ಬ್ರಾಹ್ಮಣ ಪಂಗಡಗಳಲ್ಲಿಲ್ಲ. ಪೂರ್ವ ಇರಾನಿಯನ್ ಭಾಷೆಯಲ್ಲಿ ಬೋಧನ್ ಎಂದರೆ ಅತ್ತರು. ಸಂಸ್ಕೃತದಲ್ಲಿಯೂ ಬೋಧನ್ ಹಾಗೂ ಗಂಧ ಎಂಬೆರಡು ಶಬ್ದಗಳ ಅರ್ಥ ಒಂದೇ. ಇವೆರಡಕ್ಕೂ ಏನಾದರೂ ಸಂಬಂಧವಿರಬಹುದೇ? ಇನ್ನೂ ಇಂಟರೆಸ್ಟಿಂಗ್ ಎಂದರೆ ಚಿತ್ಪಾವನರಲ್ಲಿರುವ ಹಲವು ಅಡ್ಡಹೆಸರುಗಳು ಇರಾನಿ ಭಾಷೆಯಲ್ಲೂ ಇವೆ. ಇರಾನಿಯಲ್ಲಿ ಮಾಯ್ ಎಂದರೆ ವೈನ್. ಚಿತ್ಪಾವನರ ಒಂದು ಅಡ್ಡಹೆಸರು ಮಾಯದೇವ್(ಮಾಯ್ದೇವ್). ಗ್ರೀಕರ ವೈನಿನ ದೇವತೆ ದಿಯೋನಸಸ್ ಹಿಮಾಲಯದಲ್ಲಿ ಹುಟ್ಟಿದವನೆಂದು ಮೆಗಸ್ತನಿಸ್ ಬಣ್ಣಿಸಿದ್ದಾನೆ. ಓಜಲೆ, ಬಾಮೆ, ಮಾತೆ, ಮಾಯೀಲ್ ಶಬ್ದಗಳ ಓಜ, ಬಾಮ್(Radiance), ಮಾ(ಚಂದ್ರ) ಇರಾನಿಯಲ್ಲೂ ಬಳಕೆಯಲ್ಲಿದೆ. ಘಾರೆ, ಘಾರ್ಪುರೆ(ಪೂರ್ವ ಇರಾನಿ ಭಾಷೆಯಲ್ಲಿ ಘಾರ್ ಎಂದರೆ ಪರ್ವತ), ದಾಮ್ಲೆ(ಇರಾನಿಯಲ್ಲಿ ದಾಮ್ - ಮನೆ, ಸಂಸ್ಕೃತದ ಧಾಮದಿಂದ ನಿಷ್ಪನ್ನ), ಪಾವಗಿ(ಪಾವ್ - ರಕ್ಷಕ), ವಾಝೆ(ವಾಝ್ - ನಾಯಕ). ಸಂಸ್ಕೃತದ ಕರ್ ಶಬ್ದಕ್ಕೆ ಇರಾನಿಯಲ್ಲೂ ಅದೇ ಅರ್ಥ. ವೇಲನ್ ಊರನ್ನು ನಿರ್ಮಿಸಿದವ ವೇಲನ್‌ಕರ್, ಚಿಪ್ಳೂಣನ್ನು ನಿರ್ಮಿಸಿದವ ಚಿಪ್ಳೂಣ್‌ಕರ್.
       ಅಲೆಕ್ಸಾಂಡರ್ ಹಿಂದೂಕುಷ್‌ ಅನ್ನು ದಾಟಿ ಗಾಂಧಾರದ ಮೂಲಕ ಭಾರತವನ್ನು ಪ್ರವೇಶಿಸುವಾಗ ಆತ ತಕ್ಷಶಿಲೆಯಲ್ಲಿದ್ದ ದಂಡಾಮಿಸ್ ಎಂಬ ಒಬ್ಬ ಪಂಡಿತನ ಹೆಸರು ಕೇಳುತ್ತಾನೆ. ಅಲೆಕ್ಸಾಂಡರನ ಮಂತ್ರಿಗೂ ದಂಡಾಮಗೂ ನಡೆದ ತತ್ತ್ವಶಾಸ್ತ್ರದ ಸಂಭಾಷಣೆ ಬಹು ಸ್ವಾರಸ್ಯಕರವಾಗಿದೆ. ದಂಡಾಮಿಸನೆಂದು ಗ್ರೀಕರಿಂದ ಕರೆಯಲ್ಪಟ್ಟ ಅವನಿಗೂ ದಂಡೇಕರ್ ಎಂಬ ಚಿತ್ಪಾವನರ ಕುಲನಾಮಕ್ಕೂ ಸಾಮ್ಯತೆಗಳನ್ನು ನೋಡಿದರೆ ಚಿತ್ಪಾವನರ ಮೂಲ ಈಗಿನ ಅಪ್ಘನ್ ಅಥವಾ ಇರಾನ್ ಆಗಿರುವುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ.
       ಅಷ್ಟೇ ಅಲ್ಲ. ಆಸಕ್ತಿಕರವಾದ ವಿಚಾರವೆಂದರೆ ೨೦೦೫ರಲ್ಲಿ National DNA Analysis Center, Central Forensic Science Laboratory, Kolkataದಲ್ಲಿ ನಡೆದ ಒಂದು ಸಂಶೋಧನೆಯ ವರದಿಯ ಪ್ರಕಾರ ಹೆಚ್ಚಿನ ಭಾರತೀಯ ಬ್ರಾಹ್ಮಣ ಸಮುದಾಯಗಳ ಮಾತೃ ವಂಶವಾಹಿ(mt-DNA) ಕೇವಲ macro-haplogroup M (mt-DNA) ಪಂಗಡಕ್ಕೆ ಸೇರಿದ್ದರೆ ಚಿತ್ಪಾವನರ ವಂಶವಾಹಿಯಲ್ಲಿ ಮಧ್ಯಪ್ರಾಚ್ಯ ಏಷಿಯಾದ mt-DNA haplogroupಗಳೂ(U (mt-DNA), H (mt-DNA), HV (mt-DNA)) ಪತ್ತೆಯಾಗಿದ್ದವು. 
ಚಿತ್ಪಾವನರನ್ನು ನೋಡಿದಾಗಲೆಲ್ಲ ನನಗೆ ಗಾಢವಾಗಿ ನೆನಪಾಗುವವಳು ನ್ಯಾಶನಲ್ ಜಿಯೋಗ್ರಾಫಿ ಮುಖಪುಟದಲ್ಲಿ ಹಿಂದೊಮ್ಮೆ ಕಾಣಿಸಿಕೊಂಡಿದ್ದ ಅಪ್ಘನ್ನಿನ ಈ ಹುಡುಗಿ

       ಚಿತ್ಪಾವನರ ಮೂಲದ ಬಗ್ಗೆ ಅದಕ್ಕಿಂತ ಆಸಕ್ತಿಕರವಾದ ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ೧೯೪೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ನಾಟಕ ಮಾಸಪತ್ರಿಕೆಯಲ್ಲಿ ಖ್ಯಾತ ಪುರಾತತ್ತ್ವಶಾಸ್ತ್ರಜ್ಞರಾದ ಎಮ್.ಎನ್.ರಾಜಪುರೋಹಿತರ ಸಂಶೋಧನಾ ಲೇಖನವೊಂದು ಪ್ರಕಟಗೊಂಡಿತ್ತು. ’ತಾಳಗುಂದ ಹಾಗೂ ಚಿಪ್ಳೂಣ್ ಅಗ್ರಹಾರಗಳು’ ಎಂಬ ಶಿರೋನಾಮೆಯಡಿ. ತಾಳಗುಂದದ ಕದಂಬರ ಶಾಸನವನ್ನು ಆಧರಿಸಿ ಕ್ರಿ.ಶ ೩೫೦ ಹಾಗೂ ಕ್ರಿ.ಶ ೧೧೭೪ರಲ್ಲಿ ಅಹಿಚ್ಛತ್ರದಿಂದ ದಕ್ಷಿಣಕ್ಕೆ ನಡೆದ ಎರಡು ವಲಸೆಗಳನ್ನು ರಾಜಪುರೋಹಿತ್ ಪುರಾತತ್ವಶಾಸ್ತ್ರೀಯ ಆಧಾರಗಳೊಂದಿದೆ ನಿರೂಪಿಸಿದ್ದಾರೆ. ಪ್ರತಿ ವೇದಶಾಖೆಗೆ ಹದಿನಾರರಂತೆ ಒಟ್ಟೂ ೬೪ ಬ್ರಾಹ್ಮಣ ಕುಟುಂಬಗಳನ್ನು ಮಯೂರ ವರ್ಮನ ಅಶ್ವಮೇಧ ಯಾಗದ ಅಧ್ವರ್ಯ ವಹಿಸಲು ಅಹಿಚ್ಛತ್ರದಿಂದ ಕರೆತಂದು ಕೊಂಕಣದ ಚಿಪ್ಳೂಣಿನಲ್ಲಿ ನೆಲೆಗೊಳಿಸಲಾಯ್ತಂತೆ. ಕದಂಬರ ಹಿಂದಿನ ತಲೆಮಾರಿನ ಶಾತವಾಹನರು ಮಹಾರಾಷ್ಟ್ರದ ಪ್ರತಿಷ್ಟಾನಪುರವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಆಳಿದ್ದು ನೆನಪಿಸಿಕೊಳ್ಳಬಹುದು. ಈ ಬ್ರಾಹ್ಮಣ ಕುಟುಂಬಗಳಲ್ಲಿ ಕೆಲವು ಕರ್ನಾಟಕಕ್ಕೂ ವಲಸೆ ಬಂದವು. ಆ ಕುಟುಂಬಗಳು ಇವತ್ತಿಗೂ ಷಷ್ಟಿಕ ಅಥವಾ ಅರವತ್ತೊಕ್ಲು ಮಾಧ್ವ ಬ್ರಾಹ್ಮಣರೆಂದೇ ಕರೆಯಲ್ಪಡುತ್ತಿವೆ. ಮರಾಠಿಯಲ್ಲಿ ಚಿತ್ಪಾವನರ ಡೋಂಗ್ರೆ ಕನ್ನಡದಲ್ಲಿ ಷಷ್ಟಿಕರಲ್ಲಿ ಬೆಟ್ಟದ ಮನೆತನವಾಯ್ತು, ಗೋಡ್‌ಬೋಲೆ ಎಂಬುದು ಸಿಹಿನುಡಿಯವರು ಎಂದಾಯ್ತು. ಹೀಗೆ ಚಿತ್ಪಾವನರಲ್ಲಿರುವ ಬಹಳಷ್ಟು ಅಡ್ಡಹೆಸರುಗಳು ಷಷ್ಟಿಕರಲ್ಲೂ ಇದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಶ್ರೀಪಾದರಾಜರು, ವ್ಯಾಸರಾಜರು ಇವರೆಲ್ಲ ಅರವತ್ತೊಕ್ಲು ಬ್ರಾಹ್ಮಣ ಪಂಗಡಕ್ಕೆ ಸೇರಿದವರು. ಕೊಟಾರಿ ಶ್ರೀನಿವಾಸರಾಯರ ಶ್ರೀ ರಾಘವೇಂದ್ರ ಚರಿತ್ರ, ಅರವತ್ತೊಕ್ಲು ಬ್ರಾಹ್ಮಣರ ವಂಶಚರಿತ್ರೆಯಾದ ’ಷಷ್ಟಿಕ ವಂಶ ಪ್ರದೀಪ’ ಗ್ರಂಥಗಳಲ್ಲಿಯೂ ಷಷ್ಟಿಕ ಬ್ರಾಹ್ಮಣರನ್ನು ಅಹಿಚ್ಛತ್ರದಿಂದ ಮಯೂರನ ಕಾಲದಲ್ಲಿ ವಲಸೆ ಬಂದವರೆಂದೇ ಹೇಳಲಾಗಿದೆ. ಶಾತವಾಹನರ ಯಜ್ಞಾನುಷ್ಟಾನಗಳಿಗೋಸ್ಕರ ಉತ್ತರದ ಅಹಿಚ್ಛತ್ರದಿ೦ದ ಅವರ ರಾಜ್ಯಕ್ಕೆ ಬ೦ದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿ ನೆಲೆನಿ೦ತಿದ್ದ ವೈದಿಕರನ್ನೇ ಕದ೦ಬರು ಕರೆತ೦ದು ಇಲ್ಲಿ ನೆಲೆಗೊಳಿಸಿದರೆ? ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಕದಂಬರ ಕಾಲದಲ್ಲಿಯೇ ಅಹಿಚ್ಛತ್ರದಿಂದ ಬಂದ ಹವ್ಯಕ, ಶಿವಳ್ಳಿ ಹಾಗೂ ಕೋಟ ಬ್ರಾಹ್ಮಣರ ಮೂಲಕ್ಕೂ ಚಿತ್ಪಾವನರ ಮೂಲಕ್ಕೂ ಏನಾದರೂ ಸಂಬಂಧವಿದೆಯೇ? ಮುಂದೆ ನೋಡೋಣ.

 
       ಸುಮಾರು ಒಂದೂವರೆ, ಎರಡು ಸಾವಿರ ವರ್ಷಗಳಿಗಿಂತ ಸ್ವಲ್ಪ ಮೊದಲು. ರೋಮನ್ನರಾಯಿತು, ಪರ್ಷಿಯನ್ನರಾಯಿತು. ಮುಸ್ಲೀಮರು ಬಂದ ನಂತರ ಅವರೂ ಆಯಿತು. ಯಹೂದಿಗಳ ನಾಡು ಅವರೆಲ್ಲರ ಆಕ್ರಮಣಕ್ಕೆ ಸಿಕ್ಕು ನರಕಸದೃಶವಾಗಿತ್ತು. ಜೊತೆಗೆ ಇಜಿಪ್ತಿನ ಫೆರೋಗಳ ದುರಾಡಳಿತ ಬೇರೆ. ಯಹೂದಿಗಳು ತಮ್ಮ ನಾಡಲ್ಲೇ ಗಾಣದೆತ್ತುಗಳಿಗಿಂತ ಕಡೆಯಾಗಿ ಹೋದರು. ಹೆಚ್ಚಾಗಿ ಅದೇ ಕಾರಣಕ್ಕೇ ಇರಬೇಕು, ಜೀವ ಉಳಿದರೆ ಸಾಕೆಂದುಕೊಂಡು ಹೆಚ್ಚಿನವರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲ ವಲಸೆ ಹೋಗತೊಡಗಿದರು. ಕೆಲವರು ನೈಲ್ ನದಿಯನ್ನು ದಾಟಿ ಸೈನಾಯಿ ಪ್ರಾಂತ್ಯಕ್ಕೆ ಬಂದು ಅಲ್ಲಿಂದ ಫಿಲಿಸ್ಥಾನವನ್ನು ತಲುಪಿ ಜೋರ್ಡಾನ್ ನದಿಮುಖಜ ಭೂಮಿಯ ಆಸುಪಾಸು ನೆಲೆಸಿದರು. ಇನ್ನು ಕೆಲವರು ದಕ್ಷಿಣಾಭಿಮುಖವಾಗಿ ನೆಗೆವ್ ಮರುಭೂಮಿಯನ್ನು ಹಾದು, ಐಲ್ಯಾಂಡಿನ ಬಂದರಿನ ಮುಖಾಂತರ ಮುಂದಿನ ದಾರಿ ಕಂಡುಕೊಂಡರು. ಕೇರಳ ಸಾವಿರಾರು ವರ್ಷಗಳಿಂದಲೂ ವಿಶ್ವಪ್ರಸಿದ್ಧ ನಾಡಾಗಿತ್ತು ಎಂದು ಹೇಳಿದ್ದೆನಷ್ಟೆ. ಅಖಾಬಾ ಖಾರಿಯಿಂದ ಹೊರಟು ಜಲಮಾರ್ಗದ ಮುಖಾಂತರ ಭಾರತಕ್ಕೆ ಬರುತ್ತಿದ್ದ ಅರಬ್ಬಿ ವರ್ತಕರಿಂದ ಕೇರಳದ ಸಂಪದ್ಭರಿತತೆಯನ್ನೂ ಸೌಹಾರ್ದವನ್ನೂ ಸಹಜ ಜಾತ್ಯತೀತತೆಯನ್ನೂ ಅರಿತು ಭಾರತದ ಪಶ್ಚಿಮ ತೀರದತ್ತ ಯಹೂದಿಗಳು ಪ್ರಯಾಣಿಸಿದರು. ಹಾಗೆ ಬಂದವರು ಮೊದಲು ತಲುಪಿದ್ದು ಕೊಡಂಗಾಲೂರಿನ ಸನಿಹದ ಮಟ್ಟಂಚೇರಿಯನ್ನು. ಅತ್ತ ಕ್ರಿ.ಶ ೬೧೪ರಲ್ಲಿ ಪರ್ಷಿಯನ್ನರು ಜೆರುಸಲೇಮನ್ನು ಆಕ್ರಮಿಸಿಕೊಂಡರು. ಮುಂದೆ ೬೨೯ರಲ್ಲಿ ರೋಮನ್ನಿನ ಬೈಜಾಂಟೈನನ ಸೈನ್ಯ ಜೆರುಸಲೇಮಿಗೆ ಮುತ್ತಿಗೆ ಹಾಕಿತು. ರೋಮನ್ನರ ಕ್ರೂರ ರಾಜ್ಯಾಡಳಿತಕ್ಕೆ ಯಹೂದಿಗಳ ನಾಡು, ಪ್ರಾರ್ಥನಾ ಮಂದಿರಗಳು, ಜನಜೀವನವೆಲ್ಲ ಸಂಪೂರ್ಣ ಬಲಿಯಾಗಿ ಹೋದವು. ಪ್ರಾಯಶಃ ಅವರ ಎರಡನೇ ವಲಸೆ ನಡೆದದ್ದು ಇದೇ ಕಾಲಕ್ಕೆ. ಸಾಲದೆಂಬಂತೆ ಮುಂದೆ ಜೆರುಸಲೇಮನ್ನು ಮುತ್ತಿಗೆ ಹಾಕಿದ ಕ್ರುಸೇಡರುಗಳು ಕ್ರಿಶ್ಚಿಯನ್ನರನ್ನುಳಿದು ಬೇರೆ ಎಲ್ಲರನ್ನೂ ಹತ್ಯೆಗೈಯುವಂತೆ ರಾಜಾಜ್ಞೆ ಹೊರಡಿಸಿದವು. ಈ ಆಜ್ಞೆಗೆ ನಡುಗಿ ಹೋದ ಯಹೂದಿಗಳೂ ಸೇರಿ ಹತ್ತು ಪಂಗಡಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದವು. ಹೀಗೆ ಹೋದವರಲ್ಲಿ ಡ್ರೂಸ್, ಮರೋನೈಟ್, ಕಕೇಷಿಯನ್ನರೂ ಸೇರಿದ್ದರು. ಆಶ್ಚರ್ಯವೆಂದರೆ ವಾಸ್ಕೋಡಗಾಮನ ಯಹೂದಿ ನಾವಿಕ ಕಲ್ಲಿಕೋಟೆಯಲ್ಲಿ ಇರುವ ಹತ್ತು ಯಹೂದಿ ಪಂಗಡಗಳನ್ನು ಕಂಡು ಬೆರಗಾಗಿದ್ದನ್ನು ಅವನೊಡನೆ ಬಂದ ಪ್ರವಾಸಿಗ ಗಿರೋಲಾಮೋ ಸೆರ್ನಿಗಿ ಬರೆದಿಟ್ಟಿದ್ದಾನೆ. ಮೇಯೂಹಾಶಿಮ್, ಮೇಶುಹರಾರಿಮ್‌ನಂಥ ಮೂರ್ನಾಲ್ಕು ಪಂಗಡಗಳು ಪಂಗಡಗಳು ಕೇರಳದಲ್ಲಿ ನೆಲೆನಿಂತವು. ಉಳಿದವರು ಹೋದದ್ದೆಲ್ಲಿಗೆ ಎನ್ನುವುದು ದೊಡ್ಡ ಪ್ರಶ್ನೆ! ಹಾಗೆ ಬಂದಿರಬಹುದಾದ ಒಂದು ಗುಂಪಿನ ಹೆಸರು ಡ್ರೂಸ್. ಹಿಂದೂ ವೈದಿಕ ಪರಂಪರೆ ಹಾಗೂ ಗ್ರೀಕ್ ಪುರಾಣಗಳ ಗಾಢ ಹಿನ್ನೆಲೆಯ ಇವರು ಮೂಲ ಯಹೂದಿಗಳಾದರೂ ಏಳನೇ ಶತಮಾನದೊತ್ತಿಗೆ ನಡೆದ ಬಲವಂತದ ಮತಾಂತರಕ್ಕೊಳಗಾಗಿ ಇಸ್ಲಾಂನ ಅನುಯಾಯಿಯಾದವರು. ಆದರೆ ಸಮಸ್ಯೆ ಶುರುವಾಗಿದ್ದು ಅಲ್ಲೇ. ಕಾಡು ಹಂದಿಗಳನ್ನು ಬೇಟೆಯಾಡಿ ಆಹಾರವಾಗಿ ಉಪಯೋಗಿಸುತ್ತಿದ್ದ ವಿಗ್ರಹಾರಾಧಕ ಜನಾಂಗ ಆ ಎರಡೂ ಅಭ್ಯಾಸಗಳನ್ನು ತೊರೆಯಲು ಸಿದ್ಧರಿರಲಿಲ್ಲ. ಈ ಮುಖ್ಯ ಕಾರಣಗಳಿಂದಲೇ ಮುಂದೆ ಇವರು ಒಂದೋ ಇಸ್ಲಾಮಿನಿಂದ ವಿಮುಖರಾದರು ಇಲ್ಲವೇ ಇಸ್ಲಾಮಿನಿಂದ ಬಹಿಷ್ಕೃತರಾದರು. ಇಂದು ಇಸ್ರೇಲಿನಲ್ಲಿ ಇವರ ಜನಸಂಖ್ಯೆ ಸರಿಸುಮಾರು ಇಪ್ಪತ್ತೈದರಿಂದ ಮೂವತ್ತು ಸಾವಿರದ ಒಳಗಿರಬಹುದಷ್ಟೆ. ಇಸ್ರೇಲಿನ ಉತ್ತರ ಗೆಲಿಲಿ ಸಮುದ್ರ ತೀರದ ಗುಡ್ಡಗಾಡು ಪ್ರದೇಶಗಳ ಬಯಲಿನಲ್ಲಿ ವಾಸಿಸುವ ಇವರ ಮೂಲ ಆಚಾರ, ವಿಚಾರ, ಸಂಪ್ರದಾಯಗಳು ಹೊರಜಗತ್ತಿಗೆ ಇವತ್ತಿಗೂ ನಿಗೂಢ. ಉಳಿದ ಯಹೂದಿಗಳೊಡನೆ ಕೊಡಂಗಾಲೂರಿನ ಮಟ್ಟಂಚೇರಿಯಲ್ಲಿಳಿದ ಒಳಪಂಗಡಗಳಲ್ಲಿ ಈ ಡ್ರೂಸರೂ ಇದ್ದರು. ಅಲ್ಲಿಂದ ಕಾಲಕ್ರಮೇಣ ಪಶ್ಚಿಮ ಘಟ್ಟಗಳನ್ನು ಹತ್ತಿ ವಯನಾಡು, ಕೊಡಗಿನಲ್ಲಿ ನೆಲೆಸಿರಬಹುದಾದ ಸಾಧ್ಯತೆಯೂ ಇದೆ. 
ಡ್ರೂಸ್ ಗಂಡಸಿನ ವೇಷವನ್ನು ಕೊಡವರ ವೇಷದೊಡನೆ ಹೋಲಿಸಿ ನೋಡಿ

ಕೊಡವ ಕುಟುಂಬದ ಹಳೆಯ ಚಿತ್ರ

       ಇವತ್ತಿಗೂ ಕೊಡವರ  ಮೂಲದ ಬಗ್ಗೆ ಇದಮಿತ್ಥ ಎಂಬ ವ್ಯಾಖ್ಯಾನಗಳಿಲ್ಲ. ಹಿಂದೂಗಳ ಯಾವ ಪಂಗಡದಲ್ಲಿಯೂ ಇವರನ್ನು ಹಿಡಿಸುವುದು ಕಷ್ಟ. ಯಾವ ಸಿದ್ಧಾಂತವೂ ಇವರನ್ನು ಇದೇ ಮೂಲದವರು ಅಥವಾ ಜನಾಂಗದವರೆಂದು ಸಾಬೀತುಪಡಿಸಿಲ್ಲ. ಅಲೆಕ್ಸಾಂಡರಿನ ಜೊತೆ ಬಂದ ಗ್ರೀಕರಿಗೆ ಸ್ಥಳೀಯ ಮಹಿಳೆಯರಲ್ಲಿ ಹುಟ್ಟಿದವರೆಂಬ ಅರ್ಥವಿಲ್ಲದ ಥಿಯರಿಗಳಿಂದ ಹಿಡಿದು ಇರಾಕಿನಿಂದ ಭಾರತಕ್ಕೆ ಓಡಿ ಬಂದ ಕುರ್ದಿಶ್ ಜನಾಂಗವೇ ಇವರೆನ್ನುವವರೆಗೆ ಬೇಕಾದಷ್ಟು ವಾದಗಳು ಚಾಲ್ತಿಯಲ್ಲಿವೆ. ಉತ್ತರ ಭಾರತದಲ್ಲೆಲ್ಲೂ ಇಲ್ಲದ ಅಲೆಕ್ಸಾಂಡರಿನ ಸಂತತಿ ಇಲ್ಲಿ ಮಾತ್ರ ಉದ್ಭವಿಸಿದ್ದು ಹೇಗೆಂಬುದಕ್ಕೆ ಉತ್ತರವಿಲ್ಲ. ಇದ್ದುದರಲ್ಲಿ ಸ್ವಲ್ಪ ಮಾಹಿತಿ ಸಿಗುವುದು ಸ್ಕೊಲೆರ್ಟ್ಕ್ ಹೆಫ಼್ ಬರೆದ ’ಮಿಡಲ್ ಈಸ್ಟ್ ಪ್ಯಾಟರ್ನ್ಸ’ ಹಾಗೂ ಮೊರ್ಷನ್ ಗಿಲ್ಬೆಸ್ಟಿನ ’ಜೆರುಸಲೇಮ್ ಹಿಸ್ಟೋಲೋಜರ್ಸ’ ಎಂಬೆರಡು ಪುಸ್ತಕಗಳಲ್ಲಿ. ಮಿಡಲ್ ಈಸ್ಟ್ ಪ್ಯಾಟರ್ನ್ಸ್‌ನಲ್ಲುಲೇಖಿತಗೊಂಡಂತೆ ಇಸ್ರೇಲಿನ ಮೂಲನಿವಾಸಿಗಳಲ್ಲೇ ಹಿಂದೂಗಳ ಆಚರಣೆಗಳಿಗೆ ಅತಿಹೆಚ್ಚು ಸಾಮೀಪ್ಯವಿರುವುದು ಡ್ರೂಸರ ಆಚರಣೆಗಳೇ(ಡ್ರೂಜರ ಹಿನ್ನೆಲೆ ಹಾಗೂ ಹಿಂದೂ ಧರ್ಮದೊಡನೆ ಅವರ ಸಂಬಂಧದ ಕುರಿತು ಇಸ್ರೇಲಿನಲ್ಲಿ ಇಸ್ಕಾನಿನ ಧರ್ಮಪ್ರಚಾರಕರಾದ ಡೇವಿಡ್ ವೂಲ್ಫ್ ಬರೆದ Krsna, Israel and the Druze - An Interreligious Odyssey ಸಿಕ್ಕಿದರೆ ಓದಿ ನೋಡಿ). ಯಹೂದಿಗಳ ಕೆಲ ಪಂಗಡಗಳು ಹಾಗೂ ಕೊಡವರ ಸಂಸ್ಕೃತಿಯ ತುಲನಾತ್ಮಕ ಅಧ್ಯಯನ ನಡೆಸುವವರಿದ್ದರೆ ಇವೆರಡು ಆಧಾರಗಳು ಸಹಾಯಕಾರಿ. ಭಾರತದ ಯಹೂದಿಗಳ DNA ವಿನ್ಯಾಸದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಮಿನಿ ಕಾರ್ಯಪ್ಪ ಕೂಡ ಯಹೂದಿಗಳು ಹಾಗೂ ಕೊಡವರ DNA ಸಾಮ್ಯತೆಯ ಸಾಧ್ಯತೆಗಳ ಬಗ್ಗೆ ಯೋಚಿಸಿದಂತಿಲ್ಲ. (ಆಸಕ್ತರು ಅವರ Genetic structure of Indian Jewish Diaspora and their genetic affinity with rest of the Jews from the world ಓದಿ ನೋಡಿ). ಇನ್ನೊಂದು ಅಚ್ಚರಿಯ ವಿಚಾರವೆಂದರೆ ಇಸ್ರೇಲಿನ ಸಸ್ಸೇರಿಯ ಬಳಿ ಉತ್ಖನನದಲ್ಲಿ ಸಿಕ್ಕಿರುವ ರೋಮನ್ ಸಾಮ್ರಾಜ್ಯದ ಕಾಲದ ಚಿನ್ನಾಭರಣಗಳಿಗೂ ಕೊಡವರು ಧರಿಸುವ ಆಭರಣಗಳ ವಿನ್ಯಾಸಗಳಿಗೂ ಪೂರ್ತಿ ಹೋಲಿಕೆಯಿದೆಯಂತೆ. ಬೇಟೆಗಾರಿಕೆಯಲ್ಲಿ ಕುಶಲರಾಗಿದ್ದರಿಂದ ಇವರಿಗೆ ಆಹಾರಕ್ಕಾಗಿ ವಯನಾಡು, ಕೊಡಗು ಭಾಗಗಳಲ್ಲಿ ಸಮೃದ್ಧವಾಗಿದ್ದ ಕಾಡುಹಂದಿಗಳಿರುವುದೂ ಇದೇ ಪ್ರದೇಶದಲ್ಲಿ ಪ್ರದೇಶದಲ್ಲಿ ನೆಲೆನಿಲ್ಲಲು ಒಂದು ಕಾರಣವಾಗಿರಬಹುದು. ಜೊತೆಗೆ ಇದೇ ಭಾಗದಲ್ಲಿ ಇನ್ನಿತರ ಬೇಟೆಗಾರ ಜನಾಂಗಗಳಾದ ಕೊರಗ, ಮಲೆಕುಡಿಯರಂಥವರಿರುವುದೂ ಶತಮಾನಗಳಿಂದ ಕ್ರೂರ ಆಡಳಿತಕ್ಕೆ ಬೇಸತ್ತಿರುವವರಿಗೆ ಸ್ಥಳೀಯ ವನವಾಸಿಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದಕ್ಕೂ ಪ್ರೇರೇಪಿಸಿರಬಹುದು. ಕೊಡವರ ಆಡುಭಾಷೆಯಲ್ಲಿ ’ಕೊಡಯಿ’ ಎಂದರೆ ಬೇಟೆಯಾಡುವ ಸ್ಥಳ ಎಂದಿರುವುದೂ ಈ ವಾದಕ್ಕೆ ಪುಷ್ಟಿ ನೀಡುತ್ತದೆ. ಕೊಡಗು ಗೆಜೆಟಿಯರ್ ಸುಮಾರು ಹತ್ತನೇ ಶತಮಾನದಷ್ಟರೊಳಗಾಗಲೇ ಕೊಡವ ಸಮುದಾಯ ಈ ಭಾಗದಲ್ಲಿ ನೆಲೆಸಿರುವುದನ್ನು ಧೃಡೀಕರಿಸುತ್ತದೆ. ಕೊಡವರು ಏಳನೇ ಶತಮಾನದ ಸುಮಾರಿಗೆ ಗಂಗರ ಭೂ ವಿಕ್ರಮ ಅಥವಾ ೪ನೇ ರಾಜಮಲ್ಲನ ಕಾಲದಲ್ಲಿ ಇಲ್ಲಿ ವಲಸೆಬಂದರೆಂದು ಬಹಳಷ್ಟು ಇತಿಹಾಸಕಾರರು ಊಹಿಸುತ್ತಾರೆ. ಮಧ್ಯಪ್ರಾಚ್ಯದಲ್ಲಾದ ರಾಜಕೀಯ ಕ್ಷೋಭೆಯ ಕಾರಣದಿಂದ ಜೀವ ಉಳಿಸಿಕೊಳ್ಳಲು ಭಾರತಕ್ಕೆ ಯಹೂದಿಗಳು  ಜೊಸೆಫ್ ರಬ್ಬನಿನ ನೇತೃತ್ವದಲ್ಲಿ ಮೂರನೇ ಬಾರಿ ಕಾಲಿಟಿದ್ದು ನಾಲ್ಕನೇ ಶತಮಾನದಲ್ಲಿ, ಹಾಗೂ ನಾಲ್ಕನೇ ಬಾರಿ ಕಾಲಿಟ್ಟಿದ್ದು ಆರರಿಂದ ಏಳನೇ ಶತಮಾನದಲ್ಲಿ. ಈ ಕಾಲವನ್ನು ತಾಳೆ ಹಾಕಿ ನೋಡಿದರೆ ಕೊಡಂಗಾಲೂರಿನಲ್ಲಿಳಿದ ಯಹೂದಿಗಳ ಒಳಪಂಗಡವೊಂದು ಮುಂದೆ ವಯನಾಡಿನ ಮೂಲಕ ಕೊಡಗನ್ನು ತಲುಪಿ ಅಲ್ಲಿಯೇ ನೆಲೆನಿಂತ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕುವಂತೆಯೇ ಇಲ್ಲ. ಪರಯೂರಿನಲ್ಲಿ ದೊರಕಿರುವ ಯಹೂದಿಗಳ ಶಾಸನಗಳಲ್ಲಾಗಲೀ, ತೆಕ್ಕುಬಾಗಂನ ಜೂದಪಳ್ಳಿಯಲ್ಲಾಗಲೀ ಅಥವಾ ಬೇರೆ ಯಾವುದೇ ಯಹೂದಿ ಮೂಲಗಳಿಂದಾಗಲೀ ಈ ಬಗ್ಗೆ ಯಾವುದಾದರೂ ಆಧಾರ ದೊರಕಬಹುದೇ ಎಂಬುದನ್ನು ಯಾರಾದರೂ ಆಸಕ್ತರು ಪ್ರಯತ್ನಿಸುತ್ತಾರೆಯೇ? ಆಸಕ್ತರಿದ್ದರೆ ಒಮ್ಮೆ ಜೊತೆಯಲ್ಲಿ ಪರಯೂರಿಗೆ ಹೋಗಿಬರಬಹುದು.