Pages

Tuesday, March 8, 2016

ಟಿಪ್ಪು ಕಾ ಬೇಟಾ, ಮಲಬಾರ್ ಕಿ ಬೀವಿ

ಜಾನ್ ಜೊಟ್ಟಮ್‌ನ ಟಿಪ್ಪುವಿನ ತೈಲಚಿತ್ರ(೧೭೮೦)

       ಅತ್ತ ಹೈದ್ರಾಬಾದಿನ ನಿಜಾಮರು, ಇತ್ತ ಮರಾಠರು, ಟಿಪ್ಪುವಿಗೆ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದರು. ಒಡೆಯರ್ ಮನೆತನ ಒಳಗೊಳಗೆ ದಂಗೆಯೇಳುವ ಭೀತಿ ಬೇರೆ. ಬ್ರಿಟಿಷರು, ಡಚ್ಚರ್, ಪೋರ್ಚುಗೀಸರು ಮೂವರನ್ನೂ ಸೋಲಿಸಿದ ಏಕೈಕ ಅರಸನೆಂಬ ಖ್ಯಾತಿಯ ಧರ್ಮರಾಜಾರಾಮವರ್ಮನ ತಿರುವಾಂಕೂರಿಗೆ ಎದುರಾಳಿಗಳೇ ಇರಲಿಲ್ಲ. ಬ್ರಿಟಿಷರೂ ನಿಧಾನಕ್ಕೆ ತಿರುವಾಂಕೂರಿನ ಜೊತೆ ಕೈಜೋಡಿಸಿ ಇಬ್ಬರೂ ಮತ್ತಷ್ಟು ಪ್ರಬಲವಾಗುತ್ತಿದ್ದುದು ಟಿಪ್ಪುವಿನ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಜೊತೆಗೆ ಮಲಬಾರಿನಲ್ಲಿ ಸ್ಥಳೀಯ ಮಾಪಿಳ್ಳೆ ಮುಸ್ಲೀಮರೂ ತಿರುಗಿ ಬಿದ್ದಿದ್ದರು. ಹಿಂದೂ ತುಂಡರಸರುಗಳು ಕೊಟ್ಟಾಯಂ ರಾಜ್ಯದ ನೇತೃತ್ವದಲ್ಲಿ ಒಟ್ಟುಗೂಡತೊಡಗಿದ್ದರು. ಟಿಪ್ಪುವಿಗೆ ತನ್ನ ಖುರ್ಚಿ ಗಟ್ಟಿಮಾಡಿಕೊಳ್ಳುವ ಉಪಾಯವ್ಯಾವುದೂ ಉಳಿದಿರುವ ಲಕ್ಷಣಗಳು ಕಾಣುತ್ತಿರಲಿಲ್ಲ. ಹಿಂದೂ ಅರಸರಿಂದ ಸಹಾಯ ದೊರಕುವುದಂತೂ ದೂರದ ಮಾತು. ಮುಸ್ಲೀಮರ ಮಧ್ಯದಲ್ಲಿ ಇರುವ ನೆಲೆಯೂ ಕುಸಿಯುವ ಹಂತ ತಲುಪಿತ್ತು. ಆದರೆ ಟಿಪ್ಪು ಬುದ್ಧಿವಂತ. ಮಲಬಾರಿನ ಮುಸ್ಲಿಂ ರಾಜಮನೆತನ ಅರಕ್ಕಲ್ ಸುಲ್ತಾನರಲ್ಲಿ ತನ್ನ ಮಗನ ವಿವಾಹ ಸಂಬಂಧ ಬೆಳೆಸಬಯಸಿ ಸಂದೇಶ ಕಳುಹಿಸಿದ. ಅದೇ ಸಮಯದಲ್ಲಿ ಮಲಬಾರಿನ ದಂಗೆಕೋರರಿಗೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಕೋರಿ ತಲಶೇರಿಯಲ್ಲಿನ ಬ್ರಿಟಿಷರಿಗೆ ಪತ್ರ ಬರೆದ. ಎರಡನೇ ಐಡಿಯಾ ಫ್ಲಾಪ್ ಆದರೆ ಮೊದಲನೇಯ ಬಾಣ ಗುರಿಮುಟ್ಟಿತ್ತು.
       ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ದಾಖಲೆಗಳ ಪ್ರಕಾರ ೧೭೮೯ರಂದು ಟಿಪ್ಪು ಕಣ್ಣೂರಿಗೆ ಭೇಟಿ ಕೊಟ್ಟಿದ್ದ. ಟಿಪ್ಪುವಿನ ಮಗ ಅಬ್ದುಲ್ ಖಾಲಿಕ್‌ನ ಜೊತೆ ಕಣ್ಣೂರಿನ ಅಲಿ ವಂಶದ ಅರಕ್ಕಲ್ ಬೀವಿಯ ಮಗಳ ಮದುವೆ ಏರ್ಪಾಡಾಗಿತ್ತು. ೧೭೮೨ರಲ್ಲಿ ಹುಟ್ಟಿದ್ದ ಖಾಲಿಕನಿಗೆ ಆಗ ಕೇವಲ ೭ ವರ್ಷ. ಇದಾಗಿ ಮೂರೇ ವರ್ಷಗಳ ನಂತರ ಟಿಪ್ಪುವಿನ ಇನ್ನೊಬ್ಬ ಮಗ ಮುಯಿಜುದ್ದೀನನೊಡನೆ ಖಾಲಿಕ್ ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಬ್ರಿಟಿಷರ ಯುದ್ಧ ಕೈದಿಯಾಗಿ ಉಳಿಯಬೇಕಾಯಿತು. ಸೆಪ್ಟೆಂಬರ್ ೧೨, ೧೮೦೬ರಲ್ಲಿ ಸಾಯುವಾಗ ಅಬ್ದುಲ್ ಖಾಲೀಕನಿಗೆ ಬರೀ ೨೪ ವರ್ಷ ವಯಸ್ಸು.        ವಿಲಿಯಮ್ ಲೋಗನ್ನಿನ ಮಲಬಾರ್ ಮ್ಯಾನ್ಯುವೆಲ್ಲಿನಲ್ಲಿ ಈ ಬಗ್ಗೆ ವಿಸ್ತ್ರತ ವರದಿಯಿದೆ. ತಾಮ್ರಶೇರಿ ಘಾಟಿನ ಮೂಲಕ ತನ್ನ ಬೃಹತ್ ಸೈನ್ಯದೊಡನೆ ಮಲಬಾರ್ ಪ್ರವೇಶಿಸಿದ ಟಿಪ್ಪು ಕಣ್ಣೂರಿನನಲ್ಲಿ ವೈಭವದಿಂದ ನಡೆದ ತನ್ನ ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದ. ಇದೇ ಖುಷಿಗೆ ಆಗ ತಾನೆ ಮೈಸೂರಿನವರು ಗೆದ್ದಿದ್ದ ಕೊಳತ್ತಿರಿ ಪ್ರಾಂತ್ಯವನ್ನು  ವಧುದಕ್ಷಿಣೆಯಾಗಿ ಅರಕ್ಕಲ್ ರಾಜ್ಯಕ್ಕೆ ಬಳುವಳಿ ನೀಡಲಾಗಿತ್ತು. ಪ್ರಾಯಶಃ ಟಿಪ್ಪುವಿನ ಆ ನಿರ್ಧಾರ ಆ ದಿನಗಳ ಮಟ್ಟಿಗೆ ಒಂದು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್. ಕೇರಳದ ಏಕೈಕ ಮುಸ್ಲಿಂ ರಾಜಮನೆತನದ ಜೊತೆಗಿನ ವೈವಾಹಿಕ ಸಂಬಂಧ ಆ ಪ್ರದೇಶದಲ್ಲಿ ಸಡಿಲಗೊಳ್ಳುತ್ತಿದ್ದ ಬೇರುಗಳನ್ನು ಬಿಗಿಗೊಳಿಸಿಕೊಳ್ಳುವಲ್ಲಿ ಟಿಪ್ಪುವಿಗೆ ಬಹುಮಟ್ಟಿಗೆ ನೆರವು ನೀಡಿತು. ಇದು ಇನ್ನೂ ಒಂದು ಕಾರಣಕ್ಕೆ ಇಂಟರೆಸ್ಟಿಂಗ್. ಹೈದರಾಲಿಗೆ ತನ್ನ ಮಗನಿಗೆ ಹೈದರಾಬಾದಿನ ನಿಜಾಮರ ಮನೆಯಿಂದ ಹೆಣ್ಣು ತರಬೇಕೆಂಬ ಮಹದಾಸೆಯಿತ್ತು. ಉತ್ತರದಲ್ಲಿ ಮುಘಲರನ್ನು ಹೊರತುಪಡಿಸಿದರೆ ದಕ್ಷಿಣ ಭಾರತದ ನಿಜಾಮರೇ ಅತಿ ಪ್ರಬಲ ಮುಸ್ಲಿಂ ಅರಸರಾಗಿದ್ದರು. ಹೆಣ್ಣು ಕೇಳಿಕೊಂಡು ನಿಜಾಮರ ಮನೆಬಾಗಿಲಿಗೂ ಹೈದರಾಲಿ ಎಡತಾಕಿದ್ದ. ಪ್ರಪಂಚದಲ್ಲೇ ಅತಿ ಶ್ರೀಮಂತ ಅರಸೊತ್ತಿಗೆಯಾದ ನಿಜಾಮರು ಹೋಗಿ ಹೋಗಿ ಕುದುರೆ ಮಾಲಿಯ ಸಂಬಂಧ ಬೆಳೆಸುತ್ತಾರೆಯೇ? ಕೆಳ ಜಾತಿಯ ಪಂಜಾಬಿ ಸೈನಿಕನ ಮಗನಿಗೆ ಹೆಣ್ಣು ಕೊಡುವುದಿಲ್ಲವೆಂದು ನಿಜಾಮ ಕಡ್ಡಿ ಮುರಿದಂತೆ ಹೇಳಿಬಿಟ್ಟ. ಹೈದರನಿಗೆ ದೊಡ್ಡ ಮುಖಭಂಗವುಂಟಾಗಿತ್ತು. ಹಾಗೆ ಶುರುವಾದ ನಿಜಾಮ ಮತ್ತು ಮೈಸೂರು ಸಂಸ್ಥಾನಗಳ ಮುಸುಕಿನ ಗುದ್ದಾಟವೇ ಟಿಪ್ಪುವಿನ ಕಾಲದಲ್ಲಿ ಹೊಗೆಯಾಡಿ ಬೆಂಕಿಹೊತ್ತಿಕೊಂಡಿದ್ದು. ಹೈದರಾಲಿ ಆರ್ಕಾಟಿನ ನವಾಯತಿ ಇಮಾಮ್ ಸಾಹೆಬ್ ಬಕ್ಷಿಯ ಮಗಳು ರೌಶಾನಾ ಬೇಗಮ್ಮಳೊಡನೆ ಟಿಪ್ಪುವಿಗೆ ಮದುವೆ ಮಾಡಿಸಿದ. ಅದು ಅರೇಂಜ್ಡ್ ಮ್ಯಾರೇಜಿನ ಕಥೆಯಾಯಿತು. ಜೊತೆಜೊತೆಗೆ ಟಿಪ್ಪು ತಾನು ಚಿಕ್ಕಂದಿನಿಂದ ಪ್ರೀತಿಸುತ್ತಿದ್ದ ಜನರಲ್ ಲಾಲಾ ಮಿಯಾನ ಮಗಳು ರುಕಯ್ಯಾ ಬಾನುವನ್ನು ಮದುವೆಯಾದ. ಮಜಾ ಎಂದರೆ ಅವೆರಡೂ ಮದುವೆ ನಡೆದದ್ದು ಒಂದೇ ದಿನ. ೧೭೭೪ರಲ್ಲಿ ಮದುವೆಯಾದಾಗ ಟಿಪ್ಪುವಿಗೆ ೨೪ ವರ್ಷ ವಯಸ್ಸು.
       ಅರಕ್ಕಲ್ ಸಂಸ್ಥಾನದಲ್ಲಿ ಒಂದು ವಿಶೇಷತೆಯಿದೆ. ಅಲ್ಲಿ ರಾಜ್ಯಾಡಳಿತ ನಡೆಸಿದವರಲ್ಲಿ ಹೆಚ್ಚಿನವರೆಲ್ಲ ಮಹಿಳೆಯರೇ ಮತ್ತು ಅವರನ್ನೂ ’ರಾಜಾ’ ಎಂಬ ವಿಶೇಷಣದಿಂದಲೇ ಸಂಬೋಧಿಸಲಾಗುತ್ತಿತ್ತು. ೧೭೫೯ರಲ್ಲಿ ಕೃಷ್ಣರಾಜ ಒಡೆಯರನ್ನು ಸಿಂಹಾಸನದಿಂದ ಹೈದರಾಲಿ ಉಚ್ಛಾಟಿಸಿದಾಗ ಜಾತಿಯ ಕಾರಣಕ್ಕೆ ಅರಕ್ಕಲ್ ರಾಜ ಕುಞಿ ಅಂಸಾ ಹೈದರನ ಪಕ್ಷ ವಹಿಸಿದ್ದ. ಮಾಲ್ಡೀವ್ಸಿನ ಸುಲ್ತಾನ್ ಮಹಮ್ಮದ್ ಉಮಾದುದ್ದೀನನನ್ನು ಕುಞಿ ಅಂಸಾ ಸೆರೆಹಿಡಿದ ಬಳಿಕ ಹೈದರ ಮತ್ತವನ ದೋಸ್ತಿ ಶುರುವಾಗಿತ್ತು. ೧೭೬೩ರಲ್ಲಿ ಬಿದನೂರಿನ ದಂಗೆಯನ್ನಡಗಿಸಲು ಅರಕ್ಕಲ್ ರಾಜ್ಯ ಸಹಾಯ ಮಾಡಿದ ನಂತರ ಅದು ಮತ್ತೂ ಗಾಢವಾಯಿತು. ಹಾಗೆ ನೋಡಿದರೆ ಅರಕ್ಕಲ್ ಸಂಸ್ಥಾನ ಹೈದರ್ ಸಂತತಿಗಿಂತ  ಕುಲೀನ ವಂಶದವರು. ಮಲಬಾರಿನ ಇತಿಹಾಸದಲ್ಲಿ ಅಲಿ ವಂಶಕ್ಕೊಂದು ವಿಶಿಷ್ಟ ಸ್ಥಾನವಿದೆ. ಅವರ ಮೂಲ ಹುಡುಕುತ್ತ ಹೋದರೆ ಅದು ಹೋಗಿ ನಿಲ್ಲುವುದು ಇತಿಹಾಸ ಪ್ರಸಿದ್ಧ ಕೊಲತ್ತಿರಿ ಸೇನಾಧಿಪತಿ ಆರ್ಯಕುಲಂಗರ ನಾಯರ್‌ ಇಸ್ಲಾಮಿಗೆ ಮತಾಂತರವಾಗುವಲ್ಲಿ. ವಾಸ್ಕೋಡಿಗಾಮನ ಪಡೆಗಳ ವಿರುದ್ಧ ಹೋರಾಡಿದವರಲ್ಲಿ ಅರಕ್ಕಲ್ ರಾಜಕುಮಾರಿ ಆಯೇಶಳದ್ದು ದೊಡ್ಡ ಹೆಸರು. ಅಂಥಹ ಪ್ರತಿಷ್ಟಿತ ಮನೆತನದೊಟ್ಟಿಗೆ ಸಂಬಂಧ ಬೆಳೆಸುವುದು ಜಟಕಾ ಸಾಬಿ ಮಗ ಟಿಪ್ಪುವಿಗೆ ಹೆಮ್ಮೆ ತರುವ ವಿಷಯವಾಗಿತ್ತು.
       ಅಷ್ಟು ಮಾತ್ರವಲ್ಲ. ಅರಕ್ಕಲ್ ಮನೆತನದ ಇತಿಹಾಸ ಬಹಳ ಕುತೂಹಲಕರವಾದದ್ದು ಕೂಡ. ಇದರ ಬಗ್ಗೆ ಎರಡು ಕತೆಗಳು ಮಲಬಾರಿನಲ್ಲಿ ಚಾಲ್ತಿಯಲ್ಲಿವೆ. ಚೇರಾಮನ್ ಪೆರುಮಾಳ ಇಸ್ಲಾಮಿಗೆ ಮತಾಂತರವಾದ ವಿಷಯ ತಿಳಿದೇ ಇದೆ. ಈ ಪೆರುಮಾಳನ ಮೈದುನ ಮಾಬೇಲಿ ಆರ್ಯಕುಲಂಗರ ನಾಯರ್‌ ಕೊಳತ್ತನಾಡಿನ ಮುಖ್ಯ ಸೇನಾನಿಯಾಗಿದ್ದ. ಹೆಂಡತಿ ಶ್ರೀದೇವಿ ಕೊಳತ್ತಿರಿಯ ರಾಜಕುಮಾರಿ. ಪೆರುಮಾಳನ ಸಂದೇಶ ಹೊತ್ತು ಬಂದಿದ್ದ ಮಲಿಕ್ ದಿನಾರನ ಪ್ರಭಾವಕ್ಕೊಳಗಾಗಿ ಪೆರುಮಾಳನ ಹಲವು ಸಂಬಧಿಕರು ಇಸ್ಲಾಮಿಗೆ ಮತಾಂತರಗೊಂಡರು. ಕಣ್ಣೂರ್ ನಗರದ ಉತ್ತರಕ್ಕೆ ಮದಾಯಿಯಲ್ಲಿ ಮಲಿಕ್ ದಿನಾರ್ ಕಟ್ಟಿಸಿದ ಮಸೀದಿಗೆ ಭಾರತದ ಮೂರನೇ ಅತಿ ಹಳೆಯ ಮಸೀದಿಯೆಂಬ ಹೆಗ್ಗಳಿಕೆಯೂ ಇದೆ.(ಮೊದಲೆರಡೂ ಕೇರಳದಲ್ಲೇ ಇದೆ ಬಿಡಿ). ಮಾಬೇಲಿಯೂ ಮಲಿಕ್ ದಿನಾರಿನ ಪ್ರಭಾವದಿಂದ ಇಸ್ಲಾಮಿಗೆ ಮತಾಂತರವಾಗಿ ಮಹಮ್ಮದ್ ಅಲಿ ಎಂಬ ಹೆಸರಿಟ್ಟುಕೊಂಡ. ಕಣ್ಣೂರಿನ ತಲಶೇರಿಯ ಉತ್ತರಕ್ಕಿರುವ ಹಿನ್ನೀರಿನ ಮಧ್ಯದ ಸುಂದರ ದ್ವೀಪವಾದ ಧರ್ಮದಮ್‌ನ್ನು ಮುಖ್ಯಸ್ಥಾನವಾಗಿಟ್ಟುಕೊಂಡು ಈತನೇ ಅರಕ್ಕಲ್ ವಂಶವನ್ನು ಸ್ಥಾಪಿಸಿದನೆಂಬ ಪ್ರತೀತಿಯಿದೆ. ಹಾಗಾದರೂ ಮಾಬೇಲಿ ಕೊಳತ್ತಿರಿ ರಾಜ್ಯಕ್ಕೆ ತನ್ನ ನಿಷ್ಠೆಯನ್ನು ಮುಂದುವರೆಸಿದ. ಇವನ ಸಂತತಿಯವರು ಇಸ್ಲಾಂ ಸ್ವೀಕರಿಸಿದ್ದರೂ ಕೊಳತ್ತಿರಿ ರಾಜ್ಯದ ಜೊತೆ ವೈವಾಹಿಕ ಸಂಬಂಧ ಬೆಳೆಸುತ್ತ ತಮ್ಮ ನಾಯರ್ ಮೂಲವನ್ನು ಪೂರ್ತಿ ಬಿಟ್ಟುಕೊಡಲಿಲ್ಲ. ಜೊತೆಗೆ ನಾಯರ್ ಸಮುದಾಯದಲ್ಲಿ ಸಾಧಾರಣವಾಗಿ ಪ್ರಚಲಿತದಲ್ಲಿರುವ ಕುಟುಂಬದ ಒಡೆತನದ ಹಕ್ಕು ಹಿರಿಯ ಮಗಳಿಗೆ ವರ್ಗಾವಣೆಯಾಗುವ ಪದ್ಧತಿಯೂ ಅರಕ್ಕಲ್ ವಂಶಸ್ಥರಲ್ಲಿ ಮುಂದುವರೆಯಿತು. ೧೬ನೇ ಶತಮಾನದ ಹೊತ್ತಿಗೆ ಮಲಬಾರಿನಲ್ಲಿ ಹಲವು ಮುಸ್ಲಿಂ ಕುಟುಂಬಗಳು ಆರ್ಥಿಕವಾಗಿ ಶಕ್ತಿಶಾಲಿಯಾಗಿದ್ದವು. ಇದೇ ಸಮಯ ಲಕ್ಷದ್ವೀಪದ ಮೇಲೆ ದಂಡೆತ್ತಿ ಹೋಗಿ ಜಯಿಸಿದ ಅರಕ್ಕಲ್ ವೀರರ ಶೌರ್ಯ ಸಾಹಸಗಳು ಅವರಿಗೆ ರಾಜಪದವಿಗೆ ಸಮಾನವಾದ ಗೌರವವನ್ನು ಮಲಬಾರಿನಲ್ಲಿ ತಂದುಕೊಟ್ಟವು. ಸಮುದ್ರವನ್ನು ದಾಟಿ ಲಕ್ಷದ್ವೀಪವನ್ನು ಜಯಿಸಿದ್ದರಿಂದ ಅರಕ್ಕಲ್ ಅರಸರಿಗೆ ’ಅಳಿ ರಾಜ’ ಅಥವಾ ಸಮುದ್ರ ರಾಜರೆಂಬ ಉಪಾಧಿ ಅಂಟಿಕೊಂಡಿತು.’ಅಳಿ’ ಕಾಲಕ್ರಮೇಣ ಅಳಿದು ಆ ವಂಶಕ್ಕೆ ಅರಕ್ಕಲ್ ’ಅಲಿ’ ವಂಶವೆಂಬ ಹೆಸರು ಬಂತು. ರಾಜಕೀಯವಾಗಿ ಮತ್ತು ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶವಾದ ಅರಕ್ಕಲ್ಲಿನ ರಾಜಧಾನಿ ಧರ್ಮದಂ‌ ಅನ್ನು ಕೈವಶ ಮಾಡಿಕೊಳ್ಳಲು ವರ್ಷಗಳ ಕಾಲ ಬ್ರಿಟಿಷರು ಒದ್ದಾಡಿದರು. ಆದರೆ ನಾಯರ ಸೈನಿಕರ ಬಲದೊಂದಿಗೆ ಅರಕ್ಕಲ್ ಎಷ್ಟು ಬಲಶಾಲಿಯಾಗಿತ್ತೆಂದರೆ ಅಲ್ಲೊಂದು ಮಿಲಿಟರಿ ಕ್ಯಾಂಪನ್ನು ಸ್ಥಾಪಿಸಲೂ ಅವರಿಗಾಗಲಿಲ್ಲ.
       ಅರಕ್ಕಲ್ಲಿನ ಬಗ್ಗೆ ಇನ್ನೂ ಒಂದು ಕಥೆಯಿದೆ. ಚಿರಕ್ಕಲ್ಲಿನ ರಾಜಕುಮಾರಿ ಒಂದು ದಿನ ಸ್ನಾನಕ್ಕೆಂದು ತೆರಳಿದವಳು ಕೆರೆಯಲ್ಲಿ ಮುಳುಗತೊಡಗಿದಳಂತೆ. ಅವಳನ್ನು ಮೇಲೆತ್ತಲಾಗದೇ ಭಯದಿಂದ ಸ್ನೇಹಿತೆಯರು ಬೊಬ್ಬೆ ಹೊಡೆಯತೊಡಗಿದರು. ಮಹಮ್ಮದ್ ಅಲಿ ಎಂಬ ಮುಸ್ಲಿಂ ತರುಣ ಕೂಗು ಕೇಳಿ ಓಡಿಬಂದ. ನೋಡಿದರೆ ರಾಜಕುಮಾರಿ ನೀರಿನಲ್ಲಿ ಮುಳುಗುತ್ತಿದ್ದಾಳೆ. ಅವಳನ್ನು ರಕ್ಷಿಸುವುದನ್ನು ಬಿಟ್ಟು ಇವನೂ ಬೊಬ್ಬೆಹೊಡೆಯತೊಡಗಿದ. ಕಾರಣ ಕೆಳಜಾತಿಯವನೊಬ್ಬ ಮೇಲ್ಜಾತಿಯ ಹೆಂಗಸನ್ನು ಸ್ಪರ್ಶಿಸುವುದು ಆಕಾಲಕ್ಕೆ ಶಿಕ್ಷಾರ್ಹ ಅಪರಾಧವಾಗಿತ್ತು. ಹತ್ತಿರದಲ್ಲಿ ಸಹಾಯಕ್ಕೆ ಬರುವವರು ಯಾರೂ ಇರಲಿಲ್ಲ. ಕೊನೆಗೆ ಆದದ್ದಾಗಲಿ ಎಂದು ಕೆರೆಗೆ ಹಾರಿ ಅವಳನ್ನು ದಡಕ್ಕೆಳೆದು ತಂದ. ಮೈಮುಚ್ಚಲು ತನ್ನ ಪಂಚೆಯನ್ನೂ ತೆಗೆದು ಕೊಟ್ಟ. ಸುದ್ದಿ ಊರಿಡೀ ಹರಡಿತು. ಕೆಳಜಾತಿಯ ಮುಸ್ಲಿಮನೊಬ್ಬ ರಾಜಕುಮಾರಿಯ ಮೈಮುಟ್ಟಿದನೆಂಬ ಸುದ್ದಿ ಜನರಿಗೆ ಆಡಿಕೊಳ್ಳುವ ವಿಷಯವಾಯಿತು. ಅದೂ ಅಲ್ಲದೇ ಆ ಕಾಲದಲ್ಲಿ ಹೆಣ್ಣೊಬ್ಬಳು ಗಂಡಸು ನೀಡಿದ ಪುದುವಾ ಎಂಬ ಮೇಲ್ವಸ್ತ್ರವನ್ನು ಸ್ವೀಕರಿಸಿದರೆ ಅದು ಅವನೊಟ್ಟಿಗಿನ ಮದುವೆಗೆ ಒಪ್ಪಿಗೆ ಸೂಚಿಸಿದಂತಾಗುತ್ತಿತ್ತಂತೆ. ಆಳುವವನೇ ಧರ್ಮ ತಪ್ಪಿ ನಡೆಯಲಾದೀತೇ! ರಾಜನಿಗೆ ಬೇರೆ ದಾರಿಕಾಣದೇ ಮಗಳನ್ನು ಮಹಮ್ಮದ್ ಅಲಿಗೆ ಮದುವೆ ಮಾಡಿಕೊಟ್ಟ. ರಾಜಕುಮಾರಿಯ ಗಂಡ ಬಡವನಾದರಾದೀತೇ? ತನ್ನದೇ ರಾಜ್ಯದ ಭಾಗವೊಂದನ್ನು ನೀಡಿ ಅಲ್ಲಿಯೇ ಆಳಿಕೊಂಡಿರಲು ಸೂಚಿಸಿದ. ಆ ಪ್ರದೇಶದ ಹೆಸರಿನ ಮೇಲೆ ಮಹಮ್ಮದ್ ಅಲಿಯ ರಾಜ್ಯಕ್ಕೆ ಅರಕ್ಕಲ್ ಎಂದು ಹೆಸರಾಯ್ತು. ಕೇರಳವನ್ನು ಈವರೆಗೆ ಆಳಿದ ಏಕೈಕ ಮುಸ್ಲಿಂ ಶಾಸಕರೆಂಬ ಹೆಗ್ಗಳಿಕೆ ಅರಕ್ಕಲ್ ವಂಶಕ್ಕಿದೆ. ಕೇವಲ ಕಣ್ಣೂರು ನಗರವನ್ನೊಳಗೊಂಡ ಸುತ್ತಲಿನ ಪ್ರದೇಶ ಮತ್ತು ಲಕ್ಷದ್ವೀಪದ ಆಡಳಿತಕ್ಕೆ ಇವರು ಸೀಮಿತರಾದರೂ ೧೯೧೧ರಲ್ಲಿ ಬ್ರಿಟಿಷರಿಂದ ಸಂಪೂರ್ಣವಾಗಿ ರಾಜ್ಯವನ್ನೂ ರಾಜಪದವಿಯನ್ನೂ ಕಳೆದುಕೊಳ್ಳುವವರೆಗೂ ಮಲಬಾರಿನ ಸಾಂಸ್ಕೃತಿಕ, ರಾಜಕೀಯ ವ್ಯವಸ್ಥೆಗೆ ಅಲಿರಾಜರಿಗೆ ಕೊಡುಗೆ ಗಮನಾರ್ಹವಾದದ್ದು. ಕೊಚ್ಚಿಯ ಸಾಮೂದಿರಿ ಅರಸರ ಸಾಮಂತರಾಗಿದ್ದಷ್ಟು ಸಮಯ ಅಲಿರಾಜರಿಂದಾಗಿ ಮಲಬಾರಿನಲ್ಲಿ ಮುಸ್ಲೀಮರ ಜನಜೀವನ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ವೈಭವದ ತುದಿ ತಲುಪಿತ್ತು.

ಅರಕ್ಕಲ್ ಅರಮನೆ(ಈಗ ಮ್ಯೂಸಿಯಮ್)  
ಅರಕ್ಕಲ್ ಅರಸರ ಲಾಂಛನ
ಸೈಂಟ್ ಆಂಜಲೋ ಕೋಟೆ, ಕಣ್ಣೂರ್
ಸೈಂಟ್ ಆಂಜಲೋ ಕೋಟೆ, ಕಣ್ಣೂರ್
ಮ್ಯೂಸಿಯಮ್
ಧರ್ಮದಂ
ಧರ್ಮದಂ ದ್ವೀಪ(ತಲಶ್ಶೇರಿ)
       
ಅಬ್ದುಲ್ ಖಾಲಿಕ್
       ಟಿಪ್ಪುವಿಗೆ ಹಲವು ಹೆಂಡಿರಲ್ಲಿ ಒಟ್ಟೂ ೧೬ ಮಕ್ಕಳಿದ್ದರು. ೧೧ನೇಯ ಮತ್ತು ಕೊನೆಯ ಮಗು ಚಿಕ್ಕ ಪ್ರಾಯದಲ್ಲೇ ಮೃತಪಟ್ಟಿತ್ತು. ಇತಿಹಾಸದಲ್ಲಿ ಉಳಿದ ೧೪ ಜನರ ಹೆಸರು ದಾಖಲಾಗಿದೆ. ಫತೇ ಹೈದರ್ ಅಲಿ(೧೭೮೨-೧೮೦೬), ಅಬ್ದುಲ್ ಖಾಲಿಕ್(೧೭೮೨-೧೮೦೬), ಮೌಯುದ್ದೀನ್(೧೭೮೩-೧೮೧೧), ಮುಯಿಜುದ್ದೀನ್(೧೭೮೩-೧೮೧೬), ಮಿರಾಜುದ್ದೀನ್(೧೭೮೪-), ಮೌಯಿನುದ್ದೀನ್(೧೭೮೪-), ಮುಹಮ್ಮದ್ ಯಾಸಿನ್(೧೭೮೪-೧೮೪೯), ಮುಹಮ್ಮದ್ ಸುಭಾನ್(೧೭೮೫-೧೮೪೫), ಮುಹಮ್ಮದ್ ಶುಕ್ರುಲ್ಲಾಹ್(೧೭೮೫-೧೮೩೭), ಸರ್ವಾರುದ್ದೀನ್(೧೭೯೦-೧೮೩೩), ಜಮಾಲುದ್ದೀನ್(೧೭೯೫-೧೮೭೨) ಮತ್ತು ಗುಲಾಮ್ ಅಹ್ಮದ್(೧೭೯೬-೧೮೨೪). ೧೭೮೨ರಲ್ಲಿ ಇಬ್ಬರು, ೧೭೮೫ರಲ್ಲಿ ಇಬ್ಬರು, ೧೭೯೫ರಲ್ಲಿ ಮೂವರು ಮಕ್ಕಳು ಹುಟ್ಟಿದ್ದು. ತಿರುವಾಂಕೂರಿನವರಿಂದ ಕಾಲ್ಮುರಿಸಿಕೊಂಡು, ಬ್ರಿಟಿಷರಿಂದ ಒದೆಸಿಕೊಂಡು ಶ್ರೀರಂಗಪಟ್ಟಣ ಸಂಧಿ ಮಾಡಿಕೊಂಡಾಗಿನಿಂದ ಹೆದರಿ ಜನಾನಾ ಹೊಕ್ಕ ಟಿಪ್ಪು ಬಹುಕಾಲ ಅದರಿಂದಾಚೆ ಬರಲೇ ಇಲ್ಲ. ೧೭೯೫ರಲ್ಲಿ ಮೂವರು ಮಕ್ಕಳು ಅದರ ಫಲಶೃತಿಯೇ! ಟಿಪ್ಪು ಸತ್ತಾಗ ಕ್ಯಾಪ್ಟನ್ ಥಾಮಸ್ ಮರಿಯೋಟ್ ಟಿಪ್ಪುವಿನ ಜನಾನಾದಲ್ಲಿದ್ದ ಆರುನೂರಕ್ಕೂ ಹೆಚ್ಚಿನ ಹೆಂಗಸರನ್ನು ಲೆಕ್ಕ ಹಾಕಿ ಪಟ್ಟಿಮಾಡಿಯೇ ಸುಸ್ತಾಗಿದ್ದನಂತೆ! ಟರ್ಕಿಯಾ, ಜಾರ್ಜಿಯಾ, ಪರ್ಷಿಯಾ ಜೊತೆಗೆ ತಂಜಾವೂರು, ದೇಹಲಿ, ಹೈದ್ರಾಬಾದಿನ ಹೆಣ್ಮಕ್ಕಳೆಲ್ಲ ಜನಾನಾದಲ್ಲಿದ್ದರು. ಹಾಗೆ ಇದ್ದವರಲ್ಲಿ ಕೊಡಗಿನ ಅರಸನ ಇಬ್ಬರು ಸಹೋದರಿಯರು, ದಿವಾನ್ ಪೂರ್ಣಯ್ಯನ ತಮ್ಮನ ಮಗಳು, ಒಡೆಯರ್ ಮನೆತನದ ಮೂವರು ಸಂಬಂಧಿಕರೂ ಸೇರಿದ್ದರು. ಇವೆಲ್ಲವನ್ನೂ ಬ್ರಿಟಿಷರಿಗೆ ದೊರಕಿದ ಡೈರಿಯಲ್ಲಿ ಸ್ವತಃ ಟಿಪ್ಪುವೇ ಬರೆದಿಟ್ಟಿದ್ದಾನೆ. ಟಿಪ್ಪುವಿನ ಸಹೋದರ ಅಬ್ದುಲ್ ಕರೀಮನ ಹೆಂಡತಿ ಸವಣೂರಿನ ನವಾಬನ ಮಗಳು ಮೊದಲು ಹೈದರನ ಜನಾನಾದಲ್ಲಿದ್ದಳಂತೆ. ಹೈದರ ಸತ್ತ ನಂತರ ಅವಳು ಟಿಪ್ಪುವಿನ ಜನಾನಾಕ್ಕೆ ಸೇರಿಸಲ್ಪಟ್ಟಳೆಂದು ತಾರೀಖ್-ಎ-ಟಿಪ್ಪುವಿನಲ್ಲಿ ಕಿರ್ಮಾನಿ ಉಲ್ಲೇಖಿಸುತ್ತಾನೆ. ಕರೀಮನ ಮಗ ಫತೇ ಹೈದರ ಟಿಪ್ಪುವಿನ ಮಗನೆಂದೇ ಎಲ್ಲೆಡೆ ದಾಖಲಿಸಲ್ಪಟ್ಟಿದೆ. ಅಣ್ಣತಮ್ಮಂದಿರಿಬ್ಬರಿಗೂ ಒಬ್ಬನೇ ಮಗನೆಂಬ ವಿಶೇಷಣ ಹೊತ್ತ ಕರೀಮ ಮುಂದೆ ಟಿಪ್ಪುವಿನ ವಾರಸುದಾರರಲ್ಲೊಬ್ಬನಾದದ್ದು ಬೇರೆ ಕಥೆ. ಇವೆಲ್ಲ ಅನಧಿಕೃತ ಹೆಂಡತಿಯರ ಕಥೆಯಾಯಿತು. ಟಿಪ್ಪು ಅಧಿಕೃತವಾಗಿ ಮೊದಲ ಬಾರಿ ರೌಶಾನಾ ಮತ್ತು ರುಕಯ್ಯಾ ಎಂಬಿಬ್ಬರನ್ನು ಮದುವೆಯಾದದ್ದು ೧೭೭೪ರಲ್ಲಿ ತನ್ನ ೨೪ನೇ ವಯಸ್ಸಿನಲ್ಲಿ ಮತ್ತು ಕೊನೆಯ ಬಾರಿ ೧೭೯೬ರಲ್ಲಿ ಖದೀಜಾ ಬೇಗಂಳನ್ನು. ಆಕೆ ಮರುವರ್ಷವೇ ಮೃತಪಟ್ಟಳು. ಟಿಪ್ಪುವಿನ ಪ್ರಿಯಪತ್ನಿ ರುಕಯ್ಯಾ ಬೇಗಂ ೧೭೯೯ರಲ್ಲಿ ಟಿಪ್ಪು ಬ್ರಿಟಿಷರ ಕೈಯಲ್ಲಿ ಸಿಕ್ಕು ಸತ್ತ ಸುದ್ದಿ ಕೇಳಿದ ಆಘಾತಕ್ಕೆ ಎದೆಯೊಡೆದು ಸತ್ತಳಂತೆ(ಬನ್ಸಾಲಿಯ ಮುಂದಿನ ಚಿತ್ರಕ್ಕೆ ಬಾಜಿರಾವ್ ಮಸ್ತಾನಿ ರೇಂಜಿನ ಕಥೆ ಸಿಕ್ಕಬಹುದೇನೋ)
       ಅದಿರಲಿ. ತಿರುಗಿ ಖಾಲೀಕನ ಕಡೆ ಬರೋಣ. ೧೭೯೨ರಲ್ಲಿ ಬ್ರಿಟಿಷರು ಟಿಪುವಿನ ೨ ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಾಗ ಅವನಿಗೆ ಬರಿ ೧೦ ವರ್ಷ. ಆತ ಯಾರ ಮಗನೆಂಬ ಬಗ್ಗೆ ಇನ್ನೂ ಭಿನ್ನಾಭಿಪ್ರಾಯಗಳಿವೆ. ರುಕಯ್ಯ ಭಾನುವಿನ ಮಗನೆಂಬ ವಾದವಿದ್ದರೂ ಅವಳ ಮಗನ ಹೆಸರು ಅಧಿಕೃತ ದಾಖಲೆಗಳ ಪ್ರಕಾರ ಮುಯಿಝ್. ಇನ್ನು ಆತ ಉನ್ನಿಯಾರ್ಚೆಯ ಮಗನೆಂಬ ಮತ್ತೊಂದು ವಾದವೂ ಇದೆ. ಅದನ್ನು ಧೃಢೀಕರಿಸುವುದು ಸ್ವಲ್ಪ ಕಷ್ಟವಾದರೂ ಅವನ ತಾಯಿ ಮಲಬಾರ್ ಮೂಲದ ಹಿಂದುವಾಗಿದ್ದಳೆಂಬ ಮಾತಿದೆ. ಅದೇ ಕಾರಣಕ್ಕೇ ಏನೋ ಟಿಪ್ಪು ತನ್ನ ಮಗನಿಗೆ ಮಲಬಾರಿನ ಸಂಬಂಧ ಬೆಳೆಸಿದ್ದು. ಆ ಕಾಲಕ್ಕೆ ಮಲಬಾರಿನಲ್ಲಿ ಟಿಪ್ಪುವಿನ ವಿರುದ್ಧ ಮಾಪಿಳ್ಳೆಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಸ್ಥಳೀಯ ಮಾಪಿಳ್ಳೆಗಳ ಸಹಾಯವಿಲ್ಲದೇ ಕಣ್ಣೂರಿನ ಅರಕ್ಕಲ್ ಸುಲ್ತಾನರಿಗೆ ಆಡಳಿತ ನಡೆಸುವುದು ಅಸಂಭವ. ಉಪಾಯವಾಗಿ ದಾಳ ಉರುಳಿಸಿದ ಜುನುಮಾಬೆ ಟಿಪ್ಪುವಿನಿಂದ ರಕ್ಷಣೆ ಕೋರಿ ಬ್ರಿಟಿಷರ ಮೊರೆ ಹೊಕ್ಕಳು. ಮಾಪಿಳ್ಳೆಗಳ ವಿರೋಧ ಕಟ್ಟಿಕೊಳ್ಳುವುದಂತೂ ಅಸಾಧ್ಯದ ಮಾತಲ್ಲ!. ೧೭೮೯ರಲ್ಲಿ ಮಲಬಾರಿಗೆ ಟಿಪ್ಪು ಎರಡನೇ ಬಾರಿ ಭೇಟಿಕೊಟ್ಟಾಗ ಕಡತ್ತನಾಡು ಮತ್ತು ಕೊಳತ್ತಿರಿ ಪಾಳೆಪಟ್ಟುಗಳು ಮೈಸೂರಿನ ವಶವಾದವು. ಕೊಳತ್ತಿರಿಯ ರಾಜಕುಮಾರನನ್ನು ಆನೆಗಳಿಂದ ಎಳೆಸಿ ಅವನ ಹದಿನೇಳು ಜನ ಸಹಚರರೊಡನೆ ಮರಕ್ಕೆ ನೇಣು ಹಾಕಲಾಯ್ತು. ಇದೇ ಕೊಳತ್ತಿರಿ ವಂಶಕ್ಕೆ ಸೇರಿದವನೇ ಹೈದರನ ಕಾಲದಲ್ಲಿ ಹಿಂದೆ ಸೆರೆಹಿಡಿಯಲ್ಪಟ್ಟಿದ್ದ ಅವನ ಸಾಕುಮಗ ಆಯಾಜ್ ಖಾನ್. ೧೭೮೬ರಲ್ಲಿ ತಿರುವಾಂಕೂರಿನ ಅಶ್ವತ್ಥಿ ತಿರುನಾಳ್ ಮರಣಿಸಿದಾಗ ತಿರುವಾಂಕೂರು ರಾಜಮನೆತನ ಕೊಳತ್ತನಾಡು ಅರಸುಮನೆತನದ ಇಬ್ಬರು ಮಕ್ಕಳನ್ನು ದತ್ತುಪಡೆದಿತ್ತು. ಅರಕ್ಕಲ್ ಅರಸರ ಮೂಲವೂ ಕೊಳತ್ತಿರಿಯ ಅರಸು ಮನೆತನವೇ. ಸ್ವತಂತ್ರವಾಗಿ ಆಳ್ವಿಕೆ ಶುರುಮಾಡಿದ ಬಹುಕಾಲದವರೆಗೂ ತಮ್ಮ ಮೂಲವಾದ ಕೊಳತ್ತನಾಡಿಗೆ ಅಧೀನರಾಗಿಯೇ ಅವರಿದ್ದರು. ಟಿಪ್ಪುವಿನ ಹುಚ್ಚಾಟದಿಂದ ಮೊದಲೇ ಸಿಟ್ಟಿಗೆದ್ದಿದ್ದ ಮಲಬಾರಿನ ಸಣ್ಣಪುಟ್ಟ ಪಾಳೆಗಾರರೆಲ್ಲ ಈ ಘಟನೆಯ ನಂತರ ಕೊಟ್ಟಾಯಂನ ಪಳಸ್ಸಿರಾಜನ ನೇತೃತ್ವದಲ್ಲಿ ಮೈಸೂರಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡರು. ಹಿಂದೊಮ್ಮೆ ಕೊಡವರು, ಮೈಸೂರಿಗರು, ಬ್ರಿಟಿಷರು ಸೇರಿ ಮುಗಿಬಿದ್ದಿದ್ದರೂ ಪಳಸಿರಾಜನನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿರಲಿಲ್ಲ. ಈಗ ಬ್ರಿಟಿಷರೂ, ಕೊಡವರೂ ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದಾರೆ. ಕೊಳತ್ತನಾಡಿನ ಮೇಲಿನ ಆಕ್ರಮಣದ ಪ್ರತೀಕಾರ ತೀರಿಸಿಕೊಳ್ಳಲು ತಿರುವಾಂಕೂರು ಕೂಡ ಕಾದುಕುಳಿತಿತ್ತು. ಅದೇ ಸಂದರ್ಭದಲ್ಲಿ ಇವರ ವಿರುದ್ಧ ಸಹಾಯಕ್ಕೆ ಬರುವವರು ಯಾರಾದರೂ ಇದ್ದಾರಾ ಎಂದು ಆಸೆಗಣ್ಣಿನಿಂದ ಕಂಡ ಟಿಪ್ಪುವಿನ ಕಣ್ಣಿಗೆ ಬಿದ್ದದ್ದು ಕಣ್ಣೂರು. ಮಲಬಾರಿನಲ್ಲಿ ಗಟ್ಟಿಯಾಗಿ ಕಾಲೂರಲು ಅವಕಾಶ ಕಾಯುತ್ತಿದ್ದವ ಉಪಾಯವಾಗಿ ಅರಕ್ಕಲ್ ಬಿವಿಯತ್ತ ಸ್ನೇಹಹಸ್ತ ಚಾಚಿ ಮಗನನ್ನು ಮದುವೆ ಮಾಡಿಕೊಟ್ಟ. ಅರಕ್ಕಲ್ ಬಿವಿಯಂತೂ ಗಾಳಿ ಬಂದಾಗ ತೂರಿಕೋ ಎಂಬುದನ್ನೇ ಧ್ಯೇಯವಾಕ್ಯವಾಗುಳ್ಳವಳು. ಒಮ್ಮೊಮ್ಮೆ ಹೈದರನ ಜೊತೆ, ಕೆಲವೊಮ್ಮೆ ಬ್ರಿಟಿಷರ ಜೊತೆ ಬೇಕಾದ ಹಾಗೆ ಬಣ್ಣ ಬದಲಿಸುವ ಕಲೆ ಬಿವಿಗೆ ಚೆನ್ನಾಗಿ ಸಿದ್ಧಿಸಿತ್ತು. ಊಹೂಂ ಎಂದರೆ ಕಣ್ಣೂರನ್ನು ಮುಗಿಸುವುದು ಟಿಪ್ಪುವಿಗೇನು ದೊಡ್ಡ ವಿಷಯವಾಗಿರಲಿಲ್ಲ. ಕಣ್ಮುಚ್ಚಿ ಟಿಪ್ಪುವಿನ ಸಂಬಂಧಕ್ಕೆ ಸೈ ಎಂದಳು. ಟಿಪ್ಪು ಕಣ್ಣೂರಿನ ಬೀಗನಾದ ವಿಷಯ ತಿಳಿಯುತ್ತಿದ್ದಂತೆ ಮಾಪಿಳ್ಳೆಗಳ ದಂಗೆ ಒಂದು ಹಂತದಲ್ಲಿ ಠುಸ್ಸಾಯಿತು. ಇಷ್ಟಾದರೂ ಕೇರಳದ ಎರಡು ದೊಡ್ಡ ವೈರಿಗಳಾದ ತಿರುವಾಂಕೂರು ಮತ್ತು ಪಳಸಿರಾಜನನ್ನು ಸೋಲಿಸುವ ಟಿಪ್ಪುವಿನ ಕನಸು ಕೊನೆಗೂ ನನಸಾಗಲಿಲ್ಲ.
       ಮದುವೆಯಾಗಿ ಮೂರು ವರ್ಷವಾಗುವುದರೊಳಗೆ ಖಾಲಿಕ್ ಬ್ರಿಟಿಷರ ಕೈಲಿ ಯುದ್ಧಕೈದಿಯಾಗಿ ಸಿಕ್ಕಿಬಿದ್ದ. ಶ್ರೀರಂಗಪಟ್ಟಣದ ಸಂಧಿಯ ಪ್ರಕಾರ ಟಿಪ್ಪು ಬ್ರಿಟಿಷರಿಗೆ ನಾಲ್ಕು ತಿಂಗಳೊಳಗೆ ನಿಗದಿತ ರಾಜಧನವನ್ನು ಪಾವತಿಸುವವವರೆಗೆ ಅವನಿಬ್ಬರು ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಾಗಿರಿಸಬೇಕಾಗಿತ್ತು. ಆದರೆ ಆ ಕಾಲಕ್ಕಾಗಲೇ ದಿವಾಳಿಯಾಗಿದ್ದ ಟಿಪ್ಪು ಹಣ ಪಾವತಿಸಲು ಬರೋಬ್ಬರಿ ಒಂದೂವರೆ ವರ್ಷಕ್ಕೂ ಮಿಕ್ಕಿ ಸಮಯ ತೆಗೆದುಕೊಂಡ. ೧೭೯೯ರ ನಾಲ್ಕನೇ ಆಂಗ್ಲೋಮೈಸೂರು ಯುದ್ಧದಲ್ಲಿ ಬ್ರಿಟಿಷರು ಟಿಪ್ಪುವನ್ನು ಬಡಿದು ಹಾಕಿದ ಮೇಲೆ ಅವನ ಮಕ್ಕಳು ಮತ್ತೆ ಬ್ರಿಟಿಶರ ಕೈಲಿ ಸೆರೆಸಿಕ್ಕರು. ಅದೇ ವರ್ಷ ಅವರನ್ನೆಲ್ಲ ವೆಲ್ಲೂರು ಕೋಟೆಗೆ ವರ್ಗಾಯಿಸಲಾಯ್ತು. ೧೮೦೬, ಜುಲೈ ೧೦ರಂದು ವಲ್ಲೂರು ಬ್ರಿಟಿಷ್ ಆಡಳಿತದ ಮೊದಲ ಸಿಪಾಯಿ ದಂಗೆಗೆ ಸಾಕ್ಷಿಯಾಯ್ತು. ಅದೂ ಕೂಡ ೧೮೫೭ರಲ್ಲಿ ನಡೆದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೂ ೫೧ ವರ್ಷಗಳ ಮುಂಚೆ. ಮೊದಲ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೊಘಲರ ಬಹದ್ದೂರ್ ಶಾ ಜಾಫರನನ್ನು ದೆಹಲಿಯ ಸುಲ್ತಾನನಾಗಿ ಘೋಷಿಸಲಾದ ರೀತಿಯಲ್ಲೇ ವೆಲ್ಲೂರಿನ ಸ್ವಾತಂತ್ರ್ಯ ಹೋರಾಟಗಾರರು ಟಿಪ್ಪುವಿನ ಮಗ ಶಹಜಾದಾ ಫತೇ ಹೈದರ್ ಅಲಿಯನ್ನು ತಮ್ಮ ರಾಜನನ್ನಾಗಿ ಘೋಷಿಸಿಕೊಂಡು ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟ ಪ್ರಾರಂಭಿಸಿದರು. ಆ ದಂಗೆಯನ್ನು ಹತ್ತಿಕ್ಕಲು ಬ್ರಿಟಿಷರಿಗೇನೂ ಹೆಚ್ಚು ಸಮಯ ಬೇಕಾಗಲಿಲ್ಲವೆನ್ನಿ. ಫತೇ ಹೈದರ್ ವೆಲ್ಲೂರಿನಿಂದ ತಪ್ಪಿಸಿಕೊಂಡು ಹೋಗಿ ಮರಾಠರೊಡನೆ ಕೈಜೋಡಿಸಿದ. ತುರಾತುರಿಯಲ್ಲಿ ಬ್ರಿಟಿಷರು ಟಿಪ್ಪುವಿನ ಉಳಿದ ಮಕ್ಕಳನ್ನು ವೆಲ್ಲೊರಿನಿಂದ ಕೊಲ್ಕತ್ತದ ಕೋಟೆಗೆ ಸಾಗಹಾಕಿದರು. ಇದಾಗಿ ಸುಮಾರು ವರ್ಷಗಳ ನಂತರವೂ ಬ್ರಿಟಿಷರಿಗೆ ಟಿಪ್ಪುವಿನ ಸಂತತಿ ದಕ್ಷಿಣ ಭಾರತದಲ್ಲೆಲ್ಲಾದರೂ ಉಳಿದುಕೊಂಡಿರುವ ಹೆದರಿಕೆ ಕಾಡುತ್ತಲೇ ಇತ್ತು. ಅಬ್ದುಲ್ ಖಾಲೀಕ್ ೨೪ರ ಸಣ್ಣ ವಯಸ್ಸಿನಲ್ಲೇ ಮೃತಪಟ್ಟ. ಮುಂದೆ ಟಿಪ್ಪುವಿನ ಕೊನೆಯ ಮಗ ಗುಲಾಮ್ ಮೊಹಮ್ಮದ್ ಖಾನ್‌ನನ್ನು ಟಿಪ್ಪುವಿನ ವಾರಸುದಾರನೆಂದು ಕಂಪನಿ ಘೋಷಿಸಿತು. ಈತನ ಸೇವೆಯನ್ನು ಮೆಚ್ಚಿ ೧೮೭೦ರಲ್ಲಿ ಕಂಪನಿ ’ಸರ್’ ಪದವಿ ನೀಡಿ ಗೌರವಿಸಿತು. ೧೮೭೨ರಲ್ಲಿ ಸರ್ ಗುಲಾಮ್ ಮೊಹಮ್ಮದ್ ಖಾನ್ ಡೆಂಗ್ಯೂ ಜ್ವರದಿಂದ ಮೃತಪಟ್ಟ. ಈತನ ವಂಶಜರು ಈಗಲೂ ಬದುಕಿದ್ದಾರಂತೆ.

       ಟಿಪ್ಪು ಮತ್ತು ಅರಕ್ಕಲ್ ಸಂಸ್ಥಾನದವರು ಸಂಬಂಧ ಬೆಳೆಸಿದ ಮುಹೂರ್ತವೇ ಸರಿಯಿರಲಿಲ್ಲವೇನೋ! ಟಿಪ್ಪು ಕೇರಳಕ್ಕೆ ಬಂದಿದ್ದು ಆ ವರ್ಷವೇ ಕೊನೆಯದಾಗಿ. ನೆಡುಂಕೊಟ್ಟ ಯುದ್ಧದಲ್ಲಿ ಕಾಲುಮುರಿಸಿಕೊಂಡ ನಂತರ ಮತ್ತೆ ಅತ್ತ ತಲೆಹಾಕಿ ಮಲಗುವ ಸಾಹಸವನ್ನು ಆತ ಮಾಡಲಿಲ್ಲ. ಮರುವರ್ಷ ೧೭೯೦ರಲ್ಲಿ ಕಣ್ಣೂರನ್ನು ಮುತ್ತಿದ ಬ್ರಿಟಿಷರು ಅರಕ್ಕಲ್ ಸುಲ್ತಾನರ ಆಳ್ವಿಕೆಯನ್ನು ಕೊನೆಗಾಣಿಸಿದರು. ಜನರಲ್ ರಾಬರ್ಟ್ ಅಬೆಕ್ರೋಂಬಿಯ ನೇತೃತ್ವದಲ್ಲಿ ನಡೆದ ಯುದ್ಧದಲ್ಲಿ ಕಣ್ಣೂರಿನ ಸೇಂಟ್ ಏಂಜಲೋ ಕೋಟೆ ಕಂಪನಿಯ ವಶವಾಯ್ತು. ೧೭೭೨ರಲ್ಲಿ ಈ ಕೋಟೆಯ ಜೊತೆ ಕಣ್ಣೂರು ಅರಮನೆ ಒಂದು ಲಕ್ಷ ರೂಪಾಯಿಗೆ ಡಚ್ಚರಿಂದ ಅರಕ್ಕಲ್ಲಿನವರಿಗೆ ಮಾರಲ್ಪಟ್ಟಿತ್ತು. ಧರ್ಮದಮ್‌ನಂಥ ಆಯಕಟ್ಟಿನ ದ್ವೀಪಪ್ರದೇಶವನ್ನು ಬಿಟ್ಟು ಕಣ್ಣೂರಿನ ಬಯಲಿಗೆ ಬಂದು ಕೂತ ಅರಕ್ಕಲ್ಲಿನ ಅತಿಬುದ್ಧಿವಂತಿಕೆಯೇ ಅವರಿಗೆ ಮುಳುವಾಗಿದ್ದು. ಈ ಯುದ್ಧದೊಂದಿಗೆ ಕಣ್ಣೂರು ಪ್ರಾಂತ್ಯದಲ್ಲಿ ಬ್ರಿಟಿಷರ ಏಕಾಧಿಪತ್ಯ ಸ್ಥಾಪಿತವಾಯ್ತು. ಆದರೆ ಮುಂದೆ ನಡೆದದ್ದು ಬ್ರಿಟಿಷರು ಮತ್ತು ಪಳಸಿ ರಾಜನ ನಡುವಿನ ಘೋರ ಸಂಗ್ರಾಮ. ಆತ ತನ್ನವರೇ ಬೆನ್ನಿಗಿರಿದಾಗಲೂ ತಲೆಬಾಗದೇ ರಾಣಾ ಪ್ರತಾಪನಂತೆ ಕಾಡು ಮೇಡಲೆದ. ಪ್ರಥ್ವಿರಾಜನಂತೆ ಕೊಟ್ಟ ಕೊನೆಯ ಸೈನಿಕ ನೆಲಕ್ಕಚ್ಚುವವರೆಗೆ ಗೆಲ್ಲುವ ಆಸೆಯೇ ಇಲ್ಲದ ಯುದ್ಧಮಾಡಿದ. ಅಪಮಾನಕರ ರಾಜಿಗೆ ಸಿದ್ಧನಾದರೂ ಕಪಟನಾಟಕದಿಂದ ಬ್ರಿಟಿಷರು ಮತ್ತು ಟಿಪ್ಪುವಿನ ಮಧ್ಯೆ ತಂದಿಟ್ಟು ಶಿವಾಜಿಯಂತೆ ವಿರೋಧಿಗಳನ್ನು ಮಣ್ಣುಮುಕ್ಕಿಸಿದ. ಕೊನೆಗೆ ರಣಾಂಗಣದಲ್ಲಿ ವೀರಾವೇಶದಿಂದ ಕಾದಾಡಿ ಲಕ್ಷ್ಮೀಬಾಯಿಯಂತೆ ವೀರಸ್ವರ್ಗ ಸೇರಿದ. ಆತನಿಲ್ಲದೇ ಟಿಪ್ಪುವಿನನದಾಗಲೀ, ಮಲಬಾರಿನ ಇತಿಹಾಸವಾಗಲೀ ಮುಗಿಯುವುದೆಂತು?