FDI ಬಗೆಗಿನ ಹಿಂದಿನ ಲೇಖನ ಓದಿದ ನನ್ನ ಗೆಳೆಯನೊಬ್ಬ ಇದರಿಂದ ಲಾಭಗಳೂ ಇವೆ, ಮೇಲಾಗಿ ಸರ್ಕಾರಕ್ಕೆ ಎಷ್ಟೆಲ್ಲ ತೆರಿಗೆ ಸಂಗ್ರಹವಾಗುತ್ತದೆ. ನೀನು ಬರೆದಿದ್ದು ತೀರಾ ಏಕಪಕ್ಷೀಯವಾಯ್ತು ಎಂದ. ವಸ್ತುನಿಷ್ಟತೆಯೆಂದರೆ ಅದಲ್ಲ. ವಸ್ತುನಿಷ್ಟತೆಯೆಂದರೆ ಲಾಭಗಳ ಬಗ್ಗೆಯೂ ಹೇಳಬೇಕು ಅಂದ. ಅಭಿಪ್ರಾಯ ಭೇದಗಳು ಸಹಜ. ಆದರೆ ನಾನು ಬರೆದಿದ್ದರಲ್ಲಿ ತಪ್ಪೇಲ್ಲಿದೆ ತೋರಿಸು. ಮಾತ್ರವಲ್ಲ ಸಂತೆಯಲ್ಲಿ ತರಕಾರಿ ಮಾರುವವಳು 1೦ರೂ.ಗೆ 3 ಕಟ್ಟು ಬಸಳೆ ಸೊಪ್ಪು ಎಂದರೆ ಅವಳೊಡನೆ ಜಗಳ ಮಾಡಿ ಪಕ್ಕದಲ್ಲಿದ್ದವಳ ಹತ್ತಿರ ಚೌಕಾಸಿಯಲ್ಲಿ 8ರೂ.ಗೆ ನಾಲ್ಕು ಕಟ್ಟು ಕೊಳ್ಳುವವರು ನಾವು. ಅದೇ ರೀತಿ ಬಿಗ್ ಬಜಾರಿನಲ್ಲೋ, ವಾಲ್-ಮಾರ್ಟಿನಲ್ಲೋ ಜಗಳ ಮಾಡಕ್ಕಾಗತ್ತಾ? ಯಾವುದು ಲಾಭ ಹೇಳು ಅಂದೆ. ಆದರೆ ಅವನು ಹೇಳುವುದೂ ಒಂದು ರೀತಿ ಸರಿಯೇ. 4 ಕೋಟಿ ಚಿಲ್ಲರೆ ವ್ಯಾಪಾರಿಗಳು ಬೀದಿ ಪಾಲಾದರೂ ವಾಲ್-ಮಾರ್ಟಿನಂಥ ನಾಲ್ಕೈದು ಕಂಪನಿಗಳಿಗೆ ಲಾಭ ತಾನೇ? ಮೇಲಾಗಿ ಇದರಿಂದ 9೦ ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆಂದು ಸರ್ಕಾರ ಹೇಳುತ್ತಿದ್ದೆ. ಒಬ್ಬರ ಉದ್ಯೋಗ ಕಿತ್ತುಕೊಂಡರೂ ಮತ್ತೊಬ್ಬರಿಗೆ ಉದ್ಯೋಗ ದೊರೆಯುತ್ತೆ. ಜನ ಹಾಳಾಗಿ ಹೋಗಲಿ ಬಿಡಿ, ಸರ್ಕಾರಕ್ಕೆ ಎಷ್ಟು ತೆರಿಗೆ ಸಂಗ್ರಹವಾಗುತ್ತೆ, ಎಷ್ಟು ರಾಜಕಾರನಿಗಳ ಕಿಸೆ ತುಂಬುತ್ತೆ ಅಲ್ವಾ? ಈಗಾಗಲೇ ಕರ್ನಾಟಕದಲ್ಲಿ ಜರ್ಮನಿಯ ಮೆಟ್ರೊ ಕಂಪನಿಯ ಮಳಿಗೆಗಳಿವೆ. ಮಾರುಕಟ್ಟೆ ಪ್ರವೇಶಿಸಿದ ಒಂಭತ್ತು ತಿಂಗಳುಗಳಲ್ಲಿ 2.5 ಲಕ್ಷ ’ಲಾಯಲ್ಟಿ ಕಾರ್ಡ್’ಗಳನ್ನು ವಿತರಿಸಿದ ಮೆಟ್ರೊ ವ್ಯಾಪಾರಿಗಳಿಗೆ ಮಾತ್ರ ಸಗಟು ವ್ಯಾಪಾರ ಮಾಡಬೇಕೆಂಬ ನಿಯಮ ಉಲ್ಲಂಘಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾರಂಭಿಸಿತ್ತು. ಲಾಯಲ್ಟಿ ಕಾರ್ಡುಗಳೆಂದರೆ ಇಂತಿಷ್ಟು ಖರೀದಿ ಮಾಡಿದರೆ ಇಷ್ಟು ಬೋನಸ್ ಪಾಯಿಂಟ್ ಸಿಗುತ್ತದೆ. ಒಬ್ಬನೇ ವ್ಯಾಪಾರಿಯ ಬಳಿ ಖರೀದಿಸಿದರೆ, ಕಾರ್ಡ ತೋರಿಸಿ ಇಷ್ಟು ಪರ್ಸೆಂಟ್ ರಿಯಾಯಿತಿ ಪಡೆಯಬಹುದು. ಹೀಗೆ ಬೇಕಾಬಿಟ್ಟಿಯಾಗಿ ವೈದ್ಯರು, ಇಂಜಿನಿಯರುಗಳು, ವಕೀಲರೆನ್ನದೇ ವ್ಯಾಪಾರಿಗಳಲ್ಲದ ವ್ಯಕ್ತಿಗಳಿಗೂ ಲಾಯಲ್ಟಿ ಕಾರ್ಡ್ ನೀಡಲಾಗಿದೆ. ಇದರಿಂದ ಒಂದೆರಡು ರೂಪಾಯಿ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆಂದು ಯೋಚಿಸುವ ಬದಲು ಪಕ್ಕದ ಮನೆಯ ಸಣ್ಣ ವ್ಯಾಪಾರಿ ಬೀದಿಪಾಲಾಗುತ್ತಾನೆ ಎಂದು ಯೋಚಿಸಿದಾಗ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ನೀವು ಪಕ್ಕದ ಮನೆಯವ ಬೀದಿಪಾಲಾದರೆ ನನಗೇನು ಎನ್ನುವ ವ್ಯಕ್ತಿಗಳಾದರೆ ನನ್ನದು no comments.
ಇದು ಕೇವಲ ವಾಲ್-ಮಾರ್ಟ್ ಅಥವಾ FDI ಪ್ರಶ್ನೆಯಲ್ಲ. ವಿದೇಶಿ ಕಂಪನಿಗಳಿಗೆ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆದ ಪರಿಣಾಮ ಭಾರತದ ಗೃಹಕೈಗಾರಿಕಾ ಕ್ಷೇತ್ರ ಸರ್ವನಾಶವಾಗಿದೆ. ಮೊದಲ ಮೂರ್ನಾಲ್ಕು ವರ್ಷ ನಷ್ಟವಾದರೂ ಪರವಾಗಿಲ್ಲ, ಒಂದು ಸಲ ಮಾರುಕಟ್ಟೆ ತಮ್ಮ ಕೈಗೆ ಬಂದಮೇಲೆ ತಾವು ಹೇಳಿದ್ದೇ ಬೆಲೆ ಎಂಬ ಮನಸ್ಥಿಯಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಸ್ಪರ್ಧಿಸುವ ಶಕ್ತಿ ಯಾರಲ್ಲಿದೆ? ಈಗಾಗಲೇ ಚೀನಾ ತನ್ನ ಅಗ್ಗದ ಎಲೆಕ್ಟ್ರಾನಿಕ್ ವಸ್ತುಗಳನ್ನು ನಮ್ಮ ಮಾರುಕಟ್ಟೆಯಲ್ಲಿ ತಂದು ಸುರಿಯುತ್ತಿದೆ. ಇನ್ನೇನು ತೈವಾನಿನ ಸಿದ್ಧ ಉಡುಪುಗಳು 2೦ ರೂ.ಗೆ ಸಿಗುವ ಕಾಲ ಬರಲಿವೆ. ತಾಕತ್ತಿದ್ದರೆ ಅದರೊಂದಿಗೆ ಸ್ಪರ್ಧಿಸಿ ನೋಡೋಣ. ಕಾರಣ ಸಿಂಪಲ್. ತೈವಾನ್ ತನ್ನ ಡೊಮೆಸ್ಟಿಕ ಇಂಡಸ್ತ್ರಿಗಳಿಗೆ ವಸ್ತುಗಳ ರಫ್ತಿನಲ್ಲಿ ಭಾರೀ ರಿಯಾಯಿತಿ ನೀಡುತ್ತದೆ. ಸಣ್ಣ ಕೈಗಾರಿಕೋದ್ಯಮಿಗಳಿಗೆ 3% ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದೇ ಭಾರತದಲ್ಲಿ ಬಡ್ಡಿದರ 14% ಕ್ಕಿಂತ ಹೆಚ್ಚು. ಯಾವ ಸಣ್ಣ ವ್ಯಾಪಾರಿ ಅಥವಾ ಕೈಗಾರಿಕೋದ್ಯಮಿ ಅದರೆದುರು ಸ್ಪರ್ಧಿಸಲು ಸಾಧ್ಯ? ಅಷ್ಟಕ್ಕೂ ಗೃಹಕೈಗಾರಿಕೆಗಳಿಗೆ ನಮ್ಮ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವಾದರೂ ಎಷ್ಟು? ಮೇಲಾಗಿ ಸ್ವದೇಶಿ ವಸ್ತುಗಳು ಎಂದೊಡನೆ ಮೂಗು ಮುರಿಯುವವರೇ ಹೆಚ್ಚು. ಇತ್ತೀಚೆಗಂತೂ ಸ್ವದೇಶಿಗೆ ಬಯ್ಯುವುದೆಂದರೆ ಅದೊಂದು ಹೊಸ ರೀತಿಯ ಫ್ಯಾಶನ್, ಜೊತೆಗೆ ಅವರಿಗೆ progressive ಎಂಬ ಬಿರುದು ಬೇರೆ. ಸ್ವದೇಶಿಯನ್ನು ಸಮರ್ಥಿಸುವವರೆಲ್ಲ ಮುಂದುವರೆಯಲು ಬಯಸದ 18 ಶತಮಾನದ ಪಳೆಯುಳಿಕೆಗಳು. ನಮ್ಮ ಕರ್ಮವೆಂದರೆ ರಾಷ್ಟ್ರೀಯತೆ ಅಥವಾ ಭಾಷಾಪ್ರೇಮವನ್ನು ತಿಳಿಸಲೂ ನಮಗೆ ಚೀನಾ ಅಥವಾ ಜಪಾನುಗಳ ಉದಾಹರಣೆಗಳು ಬೇಕು. ನಮ್ಮ ದೇಶದ ಉದಾಹರಣೆ ನೀಡಿ ನಾವು ರಾಷ್ಟ್ರೀಯತೆಯ ವ್ಯಾಖ್ಯಾನ ನೀಡುವಂತಿಲ್ಲ.
ಒಂದೆಡೆ ಬೇಡದ ವಿದೇಶಿ ಕಂಪನಿಯ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತಿದ್ದರೆ ಇನ್ನೊಂದೆಡೆ ಅವಶ್ಯ ವಸ್ತುಗಳ ಮಾರುಕಟ್ಟೆಯೂ ಸಂಪೂರ್ಣವಾಗಿ ಅವುಗಳ ಪಾಲಾಗುತ್ತಿದೆ. ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಅಂದು ಗಾಂಧೀಜಿ ಅಂದು ನಡೆಸಿದ್ದ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿತ್ತು. ಅದೇ ಇಂದು ಜಾಗತೀಕರಣದ ಪರಿಣಾಮವಾಗಿ 5೦ ಪೈಸೆಗೆ ಸಿಗಬೇಕಿದ್ದ ಉಪ್ಪು 1೦ ರೂ.ಗೆ ಮಾರಾಟವಾಗುತ್ತಿದೆ. ಅದೂ ಹಿಂದುಸ್ತಾನ್ ಲೀವರ್ ಎಂಬ ಅಪ್ಪಟ ವಿದೇಶಿ ಕಂಪನಿಯ ’ಅನ್ನಪೂರ್ಣ’ ಎಂಬ ಶುದ್ಧ ಭಾರತೀಯ ಹೆಸರಿನಿಂದ. ಜೊತೆಗೆ ನಮ್ಮ ಕೇಂದ್ರ ಸರ್ಕಾರ ’ಆಯೋಡಿನ್’ಯುಕ್ತ ಪುಡಿ ಉಪ್ಪನ್ನು( ’ಅನ್ನಪೂರ್ಣ’ ಎಂದು ಓದಿಕೊಳ್ಳಿ) ಮಾತ್ರ ಮಾರಾಟಮಾಡಬೇಕೆಂದು ಕಾನೂನು ರೂಪಿಸಿದೆ. ಅಯೋಡಿನ್ ಎಲ್ಲ ಬಗೆಯ ಉಪ್ಪುಗಳಲ್ಲೂ ಇರುತ್ತದೆ ಮತ್ತು ಮನುಷ್ಯನಿಗೆ ದಿನವೊಂದಕ್ಕೆ ಅಬ್ಬಬ್ಬ ಎಂದರೆ 125 ಮೈಕ್ರೋ ಗ್ರಾಮ್ ಅಯೋಡಿನ್ ಸಾಕು ಎನ್ನುವುದು ವಿಜ್ಞಾನ ಬಲ್ಲವರಿಗೆಲ್ಲ ತಿಳಿದ ಸಂಗತಿ. ಮಾತ್ರವಲ್ಲ ಪರ್ವತ ಪ್ರದೇಶದವರನ್ನು ಹೊರತುಪಡಿಸಿ ಉಳಿದವರಿಗೆ ಅಯೋಡಿನ್ ಕೊರತೆಯಿಂದ ಬರುವ ರೋಗಗಳು ತೀರಾ ಕಡಿಮೆ. ಆದರೂ ದೇಶೀ ಉಪ್ಪಿನಲ್ಲಿ ಅಯೋಡಿನ್ ಇಲ್ಲವೆಂದು, ಅದರಿಂದ ಜನರಿಗೆ ಗಳಗಂಡದಂಥ ರೋಗಗಳು ಬರಬಹುದೆಂಬ so called ಅತೀವ ಕಾಳಜಿಯಿಂದ ಸರ್ಕಾರ ವಿದೇಶಿ ಕಂಪನಿಗೆ ಉಪ್ಪು ಮಾರಾಟಮಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಕಂಪನಿಗಳು ಕೇವಲ ಉಪ್ಪಿನ ಹೆಸರಿನಲ್ಲೇ ವರ್ಷವೊಂದಕ್ಕೆ 2೦೦೦ ಕೋಟಿ ರೂ.ಗಳನ್ನು ಲೂಟಿ ಹೊಡೆಯುತ್ತಿವೆ.ಉಳ್ಳವರು ದಿನಕ್ಕೆರಡು ಬಾರಿ ’ಕಾಫೀ ಡೇ’ನಲ್ಲಿ ಕಾಫಿ ಕುಡಿಯಬಹುದು. ಮಾಂಟೇಕ್ ಸಿಂಗ್ ಅಹ್ಲುವಾಲಿಯಾನಂಥ 5 star ಅರ್ಥಶಾಸ್ತ್ರಿಗಳು 26 ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರೆಲ್ಲ ಶ್ರೀಮಂತರೇ ಎನ್ನಬಹುದು. ಆದರೆ ಇವತ್ತಿಗೂ ದೇಶದ 4೦ ಕೋಟಿ ಜನರ ದಿನದ ಆದಾಯ 1೦ರೂ.ಗಿಂತ ಕಡಿಮೆ. ಅವರು ತಮ್ಮ ದಿನದ ಊಟಕ್ಕೂ 1೦ರೂ. ಕೊಟ್ಟೇ ಉಪ್ಪು ಖರೀದಿಸಬೇಕು. ಇಲ್ಲವಾದರೆ ಅದೂ ಇಲ್ಲ ಎಂಬುದು ವ್ಯವಸ್ಥೆಯ ಕ್ರೂರ ವ್ಯ೦ಗ್ಯ.
ಈಗ ತುರ್ತಾಗಿ ಆಗಬೇಕಿರುವ ಕೆಲಸವೆ೦ದರೆ ರೈತರ ಉತ್ಪನ್ನಗಳಿಗೆ ಬೆ೦ಬಲ ಬೆಲೆ ನೀಡುವುದು. ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ವಸ್ತುಗಳು ಲಭ್ಯವಾಗಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು ಮತ್ತು APMC ವ್ಯವಸ್ತೆಯನ್ನು ಬಲಪಡಿಸುವುದು. ಇವೆಲ್ಲವೂ ಕೂಡ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ವಿದೇಶಿ ಕ೦ಪನಿಗಳಿಗೆ ರತ್ನಗ೦ಬಳಿ ಹಾಸುವುದು ಸಮಸ್ಯೆಗೆ ಪರಿಹಾರ ಅಲ್ಲವೇ ಅಲ್ಲ.
Last byte: ಭಾರತ ಸೂಪರ್ ಪವರ್ ಆಗುತ್ತಿದೆಯೆ೦ಬುದು ಎಲ್ಲರ ಕನಸು. ಈಗಿನ ಪರಿಸ್ಥಿತಿಯಲ್ಲಿ ಸೂಪರ್ ಪಾಪರ್ ಆಗದಿದ್ದರೆ ಸಾಕೆ೦ದು ನಮ್ಮ ಆಶಯ.