Pages

Friday, March 27, 2015

ಅಹಿಚ್ಛತ್ರ ಬ್ರಾಹ್ಮಣಾಗಮನಕಥಾ - ೧

ಮಯೂರವರ್ಮ
       ರಾಜಕುಮಾರರ ’ಮಯೂರ’ ಚಲನಚಿತ್ರವನ್ನು ನೋಡದ, ಮಯೂರವರ್ಮನ ಹೆಸರು ಕೇಳದ ಕನ್ನಡಿಗರ್ಯಾರಾದರೂ ಇದ್ದಾರೆಯೇ? ಸುಮಾರು ಕ್ರಿ.ಶ. ಮೂರನೇ ಶತಮಾನದ ಅ೦ತ್ಯದಲ್ಲಿ ಉತ್ತರಕನ್ನಡದ ವೈಜಯಂತೀಪುರ  ಅಥವಾ ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊ೦ಡು ಅಚ್ಚಕನ್ನಡದ ಮೊತ್ತಮೊದಲ ರಾಜವ೦ಶವನ್ನು ಸ್ಥಾಪಿಸಿದ ಕೀರ್ತಿ ಕದ೦ಬ ಮಯೂರವರ್ಮನದ್ದು. ಮಯೂರವರ್ಮನ ಜನನದ ಬಗ್ಗೆ, ಆತ ಕದ೦ಬರಾಜ್ಯವನ್ನು ಕಟ್ಟಿದ ಬಗ್ಗೆ ಲೆಕ್ಕವಿಲ್ಲದಷ್ಟು ದ೦ತಕಥೆಗಳಿವೆ. ತ್ರಿಪುರಾಸುರರನ್ನು ಸ೦ಹರಿಸಿದ ಶಿವ ಸಹ್ಯಾದ್ರಿಯಲ್ಲಿ ವಿಶ್ರಾ೦ತಿ ಪಡೆಯುತ್ತಿದ್ದಾಗ ಅವನ ಬೆವರಿನ ಹನಿ ಕದ೦ಬ ಮರದಡಿ ಬಿದ್ದು, ಆ ಹನಿಯಿ೦ದ ಮಗುವೊ೦ದು ಜನ್ಮತಳೆಯಿತ೦ತೆ. ಕದ೦ಬ ವೃಕ್ಷದಡಿ ಶಿವನಿಗೆ ಜನಿಸಿದ್ದರಿ೦ದ ’ಕಾದ೦ಬರುದ್ರನೆ೦ದೂ’, ನವಿಲುಗಳು ಈ ಮಗುವನ್ನು ಆಟವಾಡಿಸಿದ್ದರಿ೦ದ ’ಮಯೂರ’ನೆ೦ದೂ ಹೆಸರಾಯ್ತು. ಈ ಮಗುವಿಗೆ ಹುಟ್ಟುವಾಗಲೇ ಮೂರುಕಣ್ಣು, ನಾಲ್ಕು ಭುಜಗಳಿದ್ದವ೦ತೆ.
ಹರಚತುರ ಲಲಾಟಸ್ವೇದ ಬಿ೦ದೋಃಕದ೦ಬ |
ಕ್ಷಿತಿಜತಳಧರಣ್ಯಾ ಮಾವಿರಾಶೀತ್ಕದ೦ಬಃ ||
ಸಕಲಭುಜ ಚತುಷ್ಕೋ ಭಾಳನೇತ್ರಃ ಪುರಾರಿಃ |
.......ನಿಜಭುಜನಿರ್ಜಿತವರ್ಮಾ ಮಯೂರವರ್ಮಾ ಧರಾಧೀಶಃ ||
ಎ೦ದು ಬೆಳಗಾವಿಯ ಹಲಸಿ ತಾಮ್ರಶಾಸನವು ಹೇಳುವ೦ತೆ ಈತನಿಗೆ ಮೂರು ಕಣ್ಣುಗಳಿದ್ದುದರಿಂದ ಇವನನ್ನು ಲಲಾಟಲೋಚನನೆಂದೂ, ತ್ರಿನೇತ್ರ ಕದಂಬ ಅಥವಾ ಮುಕ್ಕಂಟಿ ಕದಂಬನೆ೦ದೂ ಕರೆದರು. ಹಣೆಯಲ್ಲಿ ಮೂರನೇ ಕಣ್ಣಿದ್ದುದರಿ೦ದ ಪಟ್ಟಾಭಿಷೇಕದ ಸಂದರ್ಭದಲ್ಲಿ ತಲೆಗೆ ಕಿರೀಟವನ್ನು ಕಟ್ಟಲು ಸಾಧ್ಯವಾಗದೇ ಕೊನೆಗೆ ಮಂಡಿಗೆ ಕಟ್ಟಿದರೆಂದು ದಾವಣಗೆರೆಯ ಶಿಲಾಶಾಸನ ತಿಳಿಸುತ್ತದೆ.
 ನೊಸಲೊಳುರಿಗಣ್ಣ ವಂದದಿ
ಮಿಸೆಮರೆಯನಲ್ಲಿ ಪಟ್ಟಮಂ ಕಟ್ಟಿದ ಜಾನು
ಸಮುದ್ದೇಶದೊಳಂತದನೆಸದಿರೆ
ಕಟ್ಟಿದರೆನದಲ್ಕ ದಿನ್ನೇವೊಗಳ್ವೆಂ
       ನಾಗರಖಂಡದ ಶಿಲಾಶಾಸನದಲ್ಲಿ ನಂದ ಅರಸನು ಕೈಲಾಸದಲ್ಲಿ ಶಿವನನ್ನು ಕದಂಬ ಪುಷ್ಪಗಳಿಂದ ಪೂಜಿಸಲು, ಶಿವನ ವರಪ್ರಸಾದದಿಂದ ಜನ್ಮಿಸಿದವನೇ ಮಯೂರನೆಂದು ಹೇಳಲಾಗಿದೆ. ಸೊರಬದ ಶಾಸನವು ಮಯೂರನನ್ನು ಜೈನ ತೀರ್ಥಂಕರ ಆನಂದ ಜೀನವ್ರತೀಂದ್ರನ ತಂಗಿಯ ಮಗನೆಂದು ಹೇಳುತ್ತದೆ. ಕಾವೇರಿ ಪುರಾಣದ ಪ್ರಕಾರ ಚಂದ್ರಾಂಗದವರ್ಮನೆಂಬ ಅರಸು ಸರ್ಪದಮನ ಚಿಕಿತ್ಸೆಗಾಗಿ ವಲ್ಲಭೀಪುರಕ್ಕೆ ಬಂದವನು ಛತ್ರವೊಂದರಲ್ಲಿ ಉಳಿದುಕೊಂಡಾಗ ಅಲ್ಲಿನ ಪರಿಚಾರಿಕೆ ಅವನ ಜೀವವುಳಿಸುತ್ತಾಳೆ. ಅವಳಲ್ಲಿ ಪ್ರೇಮಗೊಂಡು ಆಕೆಯನ್ನೇ ಮದುವೆಯಾದ ಅರಸ ಗರ್ಭಿಣಿಯಾದ ಮೊದಲ ಹೆಂಡತಿ ಪುಷ್ಪಾವತಿಯನ್ನು ತ್ಯಜಿಸುತ್ತಾನೆ. ಇವಳ ಮಗನೇ ಮಯೂರ.
        ಇಂಥಹ ರೋಚಕ ಅಖ್ಯಾಯಿಕೆಗಳು ನಂಬಲು ಎಷ್ಟು ಅರ್ಹವೋ ತಿಳಿದಿಲ್ಲ. ಮುಕ್ಕಂಟಿ ಕದಂಬನಂತೆ ಮುಕ್ಕಂಟಿ ಕಡುವೆಟ್ಟಿ ಪಲ್ಲವನೆಂಬ ಪಾತ್ರವನ್ನು ತಮ್ಮ ಮೂಲಪುರುಷನನ್ನಾಗಿ ಪಲ್ಲವರು ಸೃಷ್ಟಿಸಿಕೊಂಡಿದ್ದೂ ಇದೆ.[KR Subramanian. (1989). Buddhist remains in Āndhra and the history of Āndhra]. ಇದು ವ್ಯತಿರಿಕ್ತವಾಗಿಯೂ ಇರಬಹುದು. ಇಂಥವುಗಳಾಚೆ ಮಯೂರನ ಹಿನ್ನೆಲೆಯ ಕುರಿತಾದ ಮತ್ತೊಂದು ಕಥೆ ದೊರಕುವುದು ಗುಡ್ನಾಪುರ ಹಾಗೂ ಅವನ ಮರಿಮೊಮ್ಮಗ ಕಾಕುಸ್ಥವರ್ಮನ ತಾಳಗುಂದದ ಶಾಸನಗಳಲ್ಲಿ. ಹಾರೀತಿ ವಂಶದ, ಅಂಗೀರಸ(ಮಾನವ್ಯಸ) ಗೋತ್ರದ ಅಂಗೀರಸ-ಅಂಬರೀಷ-ಯೌವನಾಶ್ವ ತ್ರಯಾರ್ಷೇಯ ಪರಂಪರೆಯ ಯಜುರ್ವೇದಿ ಬ್ರಾಹ್ಮಣನಾದ ವೀರಶರ್ಮನೆಂಬುವವನ ಮಗನಾದ ಬಂಧುಷೇಣನ ಮಗನೇ ಮಯೂರಶರ್ಮ. ’ಮಾನವ್ಯಸ ಗೋತ್ರಾಣಾಂ ಹಾರೀತಿ ಪುತ್ರಾಣಾಂ ಪ್ರತಿಕೃತ ಸ್ವಾಧ್ಯಾಯ ಚರ್ಚಾಪಾರಗಾನಾಂ ಕದಂಬಾನಾಂ’ ಎಂದು ಮೃಗೇಶವರ್ಮನ ದೇವಗಿರಿ ಶಾಸನ ಸೇರಿ ಕದಂಬರ ಹಲವು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.
        ಕದ೦ಬರ ಬ್ರಾಹ್ಮಣ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿದ್ದು ಇವರು ಗಿರಿಜನರೆಂಬ ವಾದವೂ ಇದೆ. ಇದನ್ನು ಪುಷ್ಟೀಕರಿಸುವಂತೆ ಶ೦ಗ೦ ಕಾಲದಲ್ಲಿ ಕಟ೦ಬುಗಳು ಪ್ರಸಿದ್ಧ ಕಡಲ ದೊರೆಗಳಾಗಿದ್ದರು. ಇವರೇ ಕದ೦ಬರಾಗಿದ್ದರೆಂಬ ಅನುಮಾನವಿದೆ(?). ಇವರನ್ನು ಕಡಲ್ಗಳ್ಳರೆ೦ದೂ, ಚೇರನ್ ಚೆ೦ಗುಟ್ಟವನ್ ಇವರನ್ನು ನಿಗ್ರಹಿಸಲು ಮೇಲಿ೦ದ ಮೇಲೆ ಹೋರಾಡಬೇಕಾಯಿತೆ೦ದೂ ತಮಿಳಿನ ಮಹಾಕಾವ್ಯಗಳಾದ ಪದಿಳ್ರುಪತ್ತು ಮತ್ತು ಶಿಲಪ್ಪದಿಗಾರ೦ನಲ್ಲಿ ತಿಳಿಸಲಾಗಿದೆ. ಈ ಕಡಲ್ಗಳ್ಳರು ಅನುರಾಧಪುರದ ಅರಿಪೋ ನದಿಮುಖದಲ್ಲಿ ತಮ್ಮ ನೆಲೆಯನ್ನು ಗುರುತಿಸಿಕೊ೦ಡಿದ್ದರೆಂದೂ ಮತ್ತು ಇದನ್ನು ಕದ೦ಬನದಿಯೆ೦ದು ಕರೆಯಲಾಗುತ್ತಿತ್ತೆಂದೂ ಇತಿಹಾಸಕಾರರ ಅಭಿಪ್ರಾಯ. ಆ ಕಾಲದಲ್ಲಿ ಸಮುದ್ರಾಧಿಪತಿಗಳಾದ ಕದ೦ಬರು ಅಧಿಕಾರವನ್ನು ವಿಸ್ತರಿಸಿಕೊಳ್ಳಲು, ಸಿ೦ಹಳದೊಡನೆ ವಾಣಿಜ್ಯ ಸ೦ಬ೦ಧ ಹೊ೦ದಲು ತಮಿಳರೊಡನೆ ಕಾದಾಡಬೇಕಾಗಿ ಬ೦ದಿದ್ದು ಆಶ್ಚರ್ಯವಲ್ಲ. ಚಿತ್ರದುರ್ಗದ ತಮಟಕಲ್ಲು ವೀರಗಲ್ಲು ಈ ಹೋರಾಟಗಳನ್ನು ಪ್ರಸ್ತಾಪಿಸುತ್ತದೆ. ’ನರವು’ ಎಂಬ ಪಟ್ಟಣಕ್ಕೆ ಸ೦ಬ೦ಧಿಸಿದ೦ತೆ ಚೇರ ಮತ್ತು ಕದ೦ಬರ ನಡುವಿನ ಯುದ್ಧದ ಬಗ್ಗೆ ಹಲವು ದಾಖಲೆಗಳಿವೆ. ಈ ಪಟ್ಟಣದ ಹೆಸರು ’ಪತಿಳ್ರಪತ್ತು’ವಿನಲ್ಲಿ ೨ ಬಾರಿ ಬ೦ದಿದ್ದು ಅದರಲ್ಲಿ ನೀಲಗಿರಿಯಲ್ಲಿ ಹುಟ್ಟಿ ಕೊಯಮತ್ತೂರಿನ ಉತ್ತರಕ್ಕೆ ಸಾಗಿ, ಕಾವೇರಿಯನ್ನು ಸೇರುವ ವಾಣಿ ಎ೦ಬ ನದಿಯ ವಿವರಗಳಿವೆ. ಪೆರಿಪ್ಲಸ್ ಕರ್ತೃ ಟಾಲೆಮಿ ಈ ಪಟ್ಟಣವು ಕಡಲ್ಗಳ್ಳರಾದ ಕದ೦ಬರ ವಶದಲ್ಲಿತ್ತೆನ್ನುತ್ತಾನೆ. ಇ೦ದಿನ ಸೇಲ೦ ಮತ್ತು ಕೊಯಮತ್ತೂರನ್ನೊಳಗೊ೦ಡ ಕೊ೦ಕನಾಡು ಕೆಲವೊಮ್ಮೆ ಚೇರರ ಅಧೀನದಲ್ಲಿದ್ದರೆ ಕೆಲ ಕಾಲ ಕದ೦ಬರ ವಶದಲ್ಲಿರುತ್ತಿದ್ದವ೦ತೆ. ಕದ೦ಬರು ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊಳ್ಳುವ ನೂರಾರು ವರ್ಷ ಮೊದಲೇ ಕಡಲಿನಲ್ಲಿ ತಮ್ಮ ಅಧಿಕಾರವನ್ನು ಪ್ರತಿಪಾದಿಸಿಕೊಳ್ಳತೊಡಗಿದ್ದರೆ೦ದು ಶ೦ಗ೦ನ ಪದಿಳ್ರುಪತ್ತು, ಅಹನಾನೂರು, ಶಿಲಪ್ಪದಿಗಾರ೦ಗಳಲ್ಲಿ ಕವಿಗಳಾದ ಕಮಟ್ಟೂರ್, ಕಣ್ಣನಾರ್, ಮಾಮೂಲಣಾರ್, ಇಳ೦ಗೋ ಅಡಿಗಳ್ ವಿವರಿಸಿದ್ದಾರೆ. ಇವರ ಕುಲಸ೦ಕೇತವಾದ ಕದ೦ಬ ವೃಕ್ಷವು ಕದಂಬರ ಅರಮನೆಯಾದ ಕದ೦ಪಿಲ್ ಪೆರುವಾಯಿಲ್ಲಿನ ದ್ವಾರಮ೦ಟಪದಲ್ಲಿದ್ದುದನ್ನೂ(ಚಂದ್ರವಳ್ಳಿಯ ಶಾಸನದ ಪ್ರಕಾರ ’ಕದಂಬದೃಮಮದುನೀಪಂ’- ಮನೆಯೆದುರು ಕದಂಬ ವೃಕ್ಷವಿರುವುದರಿಂದ ಕದಂಬರೆಂಬ ಹೆಸರು ಬಂದಿತ್ತಂತೆ) , ಅದನ್ನು ಬೇರುಸಹಿತ ಕಿತ್ತ ’ನೆಡು೦ಚೇರಲ್ ಆದನ್’ ಅದರ ಕಾ೦ಡದಿ೦ದ ನಗಾರಿಯೊ೦ದನ್ನು ತಯಾರಿಸಿದನೆ೦ದೂ ಅಹನಾನೂರರಲ್ಲಿ ಹೇಳಲಾಗಿದೆ. ಕಡಲ್ಗಳ್ಳರಾದ ಕದ೦ಬರನ್ನು ನಾಶಮಾಡಿದ ಅರಸ ಶೆ೦ಗುಟ್ಟವನ್ನಿನ ಕೀರ್ತಿ ಎಲ್ಲೆಡೆ ಹರಡಲಿ ಎ೦ದು ಆಶಯ ವ್ಯಕ್ತಪಡಿಸಿದ ಶಿಲಪ್ಪದಿಗಾರ೦ನ ಕವಿ, ಅವನ ಪ್ರತಾಪವನ್ನು ಉತ್ತರದ ಅರಸರಿಗೆ ತಿಳಿಸುತ್ತ ’ಕಪ್ಪ ತ೦ದೊಪ್ಪಿಸಿ ಕರುಣೆ ಗಳಿಸಿಕೊಳ್ಳಿ, ಇಲ್ಲದಿದ್ದರೆ ಕದ೦ಬರ ಅನುಭವವನ್ನು ನೆನಪಿಸಿಕೊಳ್ಳಿ’ ಎನ್ನುತ್ತಾನೆ. ಕದ೦ಬರ ಹಡಗುಗಳಿ೦ದ ತಪ್ಪಿಸಿಕೊಳ್ಳಲು ಗ್ರೀಕ್ ಮತ್ತು ರೋಮನ್ ಹಡಗುಗಳು ಹರಸಾಹಸ ಮಾಡಬೇಕಾಯ್ತೆ೦ದು ಟಾಲೆಮಿಯಿ೦ದಲೂ, ಪೆರಿಪ್ಲಸ್ಸಿನಿ೦ದಲೂ ತಿಳಿದುಬರುತ್ತದೆ.
        ಶಂಗಂನ ಇಂಥ ಕಥೆಗಳು ಪೂರ್ತಿ ಅತಾರ್ಕಿಕವಲ್ಲದಿದ್ದರೂ ಆ ಕಟಂಬುಗಳೇ ಕದಂಬರೆಂಬುದು ಚರ್ಚಾರ್ಹ. ಕದ೦ಬ ಶಾಸನಗಳಲ್ಲಿ  ’ಕದ೦ಬಕುಲೇ ಶ್ರೀಮನ್ಮಭೂವ ದ್ವಿಜೋತ್ತಮಃ ನಾಮತೋ ಮಯೂರಶರ್ಮೇತಿ ಶ್ರುತಿ ಶೀಲ ಶೌಚಾದ್ಯಲ೦ಕೃತಃ’ ಎ೦ದೂ, ’ಸ್ವಧ್ಯಾಯಚರ್ಚಾಪಾರಗಾನಾ೦’ ಎ೦ದಿರುವುದೂ, ತಾಳಗು೦ದದ ಶಾಸನದ ’ದ್ವಿಜಕುಲ೦’, ಚ೦ದವಳ್ಳಿಯ ಶಾಸನದ ’ಕದ೦ಬಾನಾ ಮಯೂರಶಮ್ಮಣಾ’ ಎ೦ಬ ಪ್ರಯೋಗಗಳೂ, ಜೊತೆಗೆ ಹಲಸಿಯ ಏಳು ಮತ್ತು ದೇವಗಿರಿಯ ಮೂರು ತಾಮ್ರಶಾಸನಗಳೂ, ಸಹ್ಯಾದ್ರಿ ಖಂಡವೇತ್ಯಾದಿ ಇತಿಹಾಸ-ಪುರಾಣಗಳೂ ಕೂಡ ಕದ೦ಬರು ಬ್ರಾಹ್ಮಣರೆ೦ಬುದನ್ನೇ ಸೂಚಿಸುತ್ತದೆ. ಕೆಲ ಇತಿಹಾಸಕಾರರು ಕದ೦ಬರ ಪೂರ್ವಜರನ್ನು ನ೦ದರ ಜೊತೆಗೂ, ಶಾತವಾಹನರ ಜೊತೆಗೂ ಸೇರಿಸುವುದಿದೆ. ಕದ೦ಬ ವ೦ಶದ ಹಿರಿಯರು ಶಾತವಾಹನರ ಪ್ರಭುತ್ವದಲ್ಲಿ ಅಧಿಕಾರ ಸ್ಥಾನದಲ್ಲಿದ್ದವರು. 
ತಾಳಗುಂದ ಶಾಸನ

        ಮಯೂರನ ಬಗ್ಗೆ ಒಂದು ಪ್ರಸಿದ್ಧವಾದ ಕಥೆಯಿದೆ. ತಾಳಗುಂದದ ಪ್ರಣವೇಶ್ವರ ದೇವಾಲಯದ ಶಾಸನದ ಪ್ರಕಾರ ವೇದಾಧ್ಯಯನಕ್ಕಾಗಿ  ಒಮ್ಮೆ ಮಯೂರಶರ್ಮ ತನ್ನ ಅಜ್ಜ ವೀರಶರ್ಮನೊಡನೆ ಪಲ್ಲವರ ರಾಜಧಾನಿಯಾಗಿದ್ದ ಕ೦ಚಿಯ ಘಟಿಕಾಸ್ಥಾನ(ವೇದಾಧ್ಯಯನ ಕೇ೦ದ್ರ)ಕ್ಕೆ ತೆರಳಿದ್ದನ೦ತೆ. ಆ ಸಮಯದಲ್ಲಿ ಪಲ್ಲವ ರಾಜ ಶಿವಸ್ಕ೦ದವರ್ಮ(ಕ್ರಿ.ಶ 345–355) ಅಶ್ವಮೇಧ ಯಾಗವನ್ನು ನಡೆಸುತ್ತಿದ್ದ. ಅಲ್ಲಿ ನಡೆದ ಜಗಳವೊ೦ದರಲ್ಲಿ ಪಲ್ಲವರ ಸೈನಿಕರಿ೦ದ ಅವಮಾನಿತಗೊ೦ಡ ಮಯೂರಶರ್ಮ ಆಳರಸರಿಗೆ ದೂರಿತ್ತ. ಅಲ್ಲಿಯೂ ನ್ಯಾಯ ದೊರಕದೆ ಆತ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತು.('ತತ್ರಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ' - ತಾಳಗುಂದ ಶಾಸನ) ಇದರಿಂದ ಸಿಟ್ಟಿಗೆದ್ದ ಮಯೂರ ಪಲ್ಲವರ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆಮಾಡಿ ವೇದಾಧ್ಯಯನವನ್ನು ಅರ್ಧಕ್ಕೇ ಬಿಟ್ಟು ಕ೦ಚಿಯನ್ನು ತೊರೆದ. ದರ್ಭೆ ಹಿಡಿಯುವ ಕೈಯಲ್ಲಿ ಶಸ್ತ್ರವನ್ನು ಹಿಡಿದು ಬ್ರಾಹ್ಮಣಸೂಚಕವಾದ ಮಯೂರಶರ್ಮನ ಬದಲಾಗಿ ಕ್ಷತ್ರಿಯಸೂಚಕವಾದ ಮಯೂರವರ್ಮನೆ೦ಬ ಅಭಿದಾನವನ್ನಿಟ್ಟುಕೊ೦ಡು ತ್ರಿಪರ್ವತ ಅಥವಾ ಶ್ರೀಶೈಲದತ್ತ ತೆರಳಿ ಅಲ್ಲಿನ ದಟ್ಟಕಾಡುಗಳಲ್ಲಿ ಬುಡಕಟ್ಟು ಜನರೊಡನೆ ಸೇರಿ ಸ್ವ೦ತ ಪಡೆಯನ್ನು ಕಟ್ಟಿದ. ಬರಿಯಾ, ಬೃಹದ್ಬಾಣ ಮು೦ತಾದ ರಾಜರನ್ನು ಸೋಲಿಸಿ ಕಪ್ಪಕಾಣಿಕೆ ಪಡೆದ. ಪಲ್ಲವರ ಕೈಗೆ ಸಿಗದೇ ತ್ರಿಪರ್ವತದ ಸುತ್ತಲಿನ ಪ್ರದೇಶದಿ೦ದ ಅವರ ಸಾಮ೦ತರಾದ ಆ೦ದ್ರಪಾಲರನ್ನು ಓಡಿಸಿ ತನ್ನ ಪ್ರಾ೦ತ್ಯವನ್ನು ಬಲಪಡಿಸಿಕೊ೦ಡ. ಪಲ್ಲವರ ಗಡಿಯ ಪ್ರದೇಶಗಳನ್ನು ಒಂದೊಂದಾಗಿ ವಶಪಡಿಸಿಳ್ಳತೊಡಗಿದ. ಕ್ರಿ.ಶ 340ರ ಸುಮಾರಿಗೆ ಗುಪ್ತ ಸಾಮ್ರಾಜ್ಯದ ಚಕ್ರವರ್ತಿ ಸಮುದ್ರಗುಪ್ತನ ದಕ್ಷಿಣಾಪಥದ ದ೦ಡಯಾತ್ರೆಯಲ್ಲಿ ಅವನ ವಿರುದ್ಧದ ಯುದ್ಧದಲ್ಲಿ ಪಲ್ಲವರ ರಾಜ ವಿಷ್ಣುಗೋಪ ಸೋತ. ಅಷ್ಟರಲ್ಲಾಗಲೇ ಪ್ರಬಲವಾಗಿ ಬೆಳೆದಿದ್ದ ಮಯೂರವರ್ಮ ಅದೇ ಅವಕಾಶವನ್ನುಪಯೋಗಿಸಿಕೊಂಡು ಕನ್ನಡ ನಾಡಿನ ಮೈಸೂರು ಪ್ರಾಂತ್ಯ, ಕುಂತಳ, ಶಿವಮೊಗ್ಗ, ಬಾದಾಮಿ, ಕರಾವಳಿ ಭಾಗಗಳನ್ನು ಸ್ವಾಧೀನಪಡಿಸಿಕೊಂಡು ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊ೦ಡು ಕದ೦ಬವ೦ಶವನ್ನು ಸ್ಥಾಪಿಸಿದ. ಮೌರ್ಯರು, ತದನಂತರ ಶಾತವಾಹನರು, ಚುಟುಶಾತಕರ್ಣಿಗಳು ಮತ್ತು ಪಲ್ಲವರ ಕಾಲದಲ್ಲಿ ಕುಂತಳ ರಾಜ್ಯದಲ್ಲಿ ಬನವಾಸಿಯು ಕುಂತಳನಗರವೆಂದು ಪ್ರಸಿದ್ಧಿ ಪಡೆದಿತ್ತು. ಜೊತೆಗೆ ಕೃತಯುಗದಲ್ಲಿ ಕೌಮುದೀ ಎಂದೂ, ತ್ರೇತಾಯುಗದಲ್ಲಿ ಚೈದಲೀಪುರವೆಂದೂ, ದ್ವಾಪರದಲ್ಲಿ ಜಯಂತೀಪುರವೆಂದೂ, ಕಲಿಯುಗದಲ್ಲಿ ವನವಾಸಿಯೆಂದೂ ಬನವಾಸಿಯು ಯುಗಯುಗಗಳಲ್ಲಿ ಹಲವು ರಾಜ್ಯಗಳ ರಾಜಧಾನಿಯಾಗಿ ಮೆರೆದ ಊರು. ಪಲ್ಲವರ ಅರಸು ಶಿವಸ್ಕ೦ದವರ್ಮನೇ ಪಶ್ಚಿಮ ಸಮುದ್ರದಿ೦ದ ಮಲಪ್ರಭೆಯ ಪ್ರೇಹರದವರೆಗಿನ ಭೂಭಾಗದವರೆಗೆ ಕದ೦ಬರ ಸಾರ್ವಭೌತೆಯನ್ನು ಒಪ್ಪಿ ಬನವಾಸಿಗೆ ಬಂದು ಮಯೂರನ ಪಟ್ಟಾಭಿಷೇಕವನ್ನು ನೆರವೇರಿಸಿದನಂತೆ. 
ಕದಂಬ ಸಾಮ್ರಾಜ್ಯ

       ಕದ೦ಬರ ಮಾ೦ಧಾತೃವರ್ಮ, ವೀರಸೋಮಭೂತಿ ಹಾಗೂ ತೈಲಪದೇವನ ಶಿಲಾಶಾಸನಗಳು ಸೇರಿದ೦ತೆ ಇನ್ನಿತರ ದಾಖಲೆಗಳಿ೦ದ ಮಯೂರವರ್ಮನು ಅಷ್ಟಾದಶ ಅಶ್ವಮೇಧಯಾಗಗಳನ್ನು ಮಾಡಿದನೆ೦ದು ಹಲವು ಯಜ್ಞಯಾಗಾದಿಗಳನ್ನು ನೆರವೇರಿಸಿದನೆ೦ದೂ ತಿಳಿದುಬರುತ್ತದೆ, ಶಿಕಾರಿಪುರದ ತಾಮ್ರಶಾಸನವು ಮಯೂರವರ್ಮನು ಹಿಮಾಲಯಯದವೆರೆಗೆ ಭೂಭಾಗವನ್ನಾಕ್ರಮಿಸಿ ಹಿಮವತ್ಪರ್ವತದ ತಪ್ಪಲಲ್ಲಿ ತನ್ನ ಸಾಧನೆಯ ಶಿಲಾಲೇಖವನ್ನು ನೆಡಿಸಿದ('ಕೇದಾರೋದಾರ ದೇಶ೦ಗಳ೦') ಎ೦ದು ಹೇಳುತ್ತದಾದರೂ ಆತ ಮಾಳವವನ್ನು ದಾಟಲಿಲ್ಲವೆ೦ಬುದು ಸತ್ಯ. ಸ್ಕಾ೦ದಪುರಾಣದ ಉತ್ತರ ಸಹ್ಯಾದ್ರಿ ಖ೦ಡದ ಪ್ರಕಾರ ಮಯೂರವರ್ಮನು ರಾಜ್ಯವಾಳುತ್ತಿದ್ದಾಗ ಕಶ್ಯಪಮುನಿಯ ಅಪ್ಪಣೆಯ೦ತೆ ಬನವಾಸಿ ದೇಶದಲ್ಲಿ ಸಮರ್ಥ ಬ್ರಾಹ್ಮಣರಿರದ ಕಾರಣ ಅಹಿಚ್ಛತ್ರದಿ೦ದ ಷಟ್ಕರ್ಮನಿರತರೂ, ನಾನಾಗೋತ್ರದವರೂ, ಮ೦ತ್ರಶಾಸ್ತ್ರಸ೦ಪನ್ನರೂ, ಶಿಷ್ಯಸಹಿತರೂ ಆದ೦ಥ ಮೂವತ್ತೆರಡು ಕುಟು೦ಬದ ಹನ್ನೆರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರನ್ನು ಸತ್ಕರಿಸಿ ತನ್ನ ರಾಜ್ಯದ ಸ್ಥಾಣಗು೦ದ ಅಥವಾ ತಾಳಗು೦ದಕ್ಕೆ ಕರೆಸಿ 32 ಅಗ್ರಹಾರಗಳನ್ನು ನಿರ್ಮಿಸಿ ಅವರನ್ನು ನೆಲೆಗೊಳಿಸಿದನ೦ತೆ('ಅಹಿಚ್ಛತ್ರ ಸಮಾಗತರ್ ದ್ವಾದಶಸಹಸ್ರಾಗ್ನಿಹೋತ್ರ ಪರಿವೃತರ್'- ನ೦ಜನಗೂಡಿನ ಗ೦ಗರ ತಾಮ್ರಶಾಸನ). ಈತನ ಹದಿನೆ೦ಟು ಅಶ್ವಮೇಧಗಳನ್ನು ನಡೆಸಿಕೊಟ್ಟ ನೆನಪಿಗೆ ಇವರು 144 ಗ್ರಾಮಗಳನ್ನು ದಕ್ಷಿಣಾರೂಪವಾಗಿ ಪಡೆದರು. ಮಯೂರನ ನ೦ತರ ಅವನ ಮಗ ಚ೦ದ್ರಾ೦ಗದನ ಆಳ್ವಿಕೆಯಲ್ಲಿ ಈ ಬ್ರಾಹ್ಮಣರಿಗೆ ಅವಿಶ್ವಾಸವು೦ಟಾಗಲು ಅವರೆಲ್ಲ ಹಿ೦ದಿರುಗಿ ಅಹಿಚ್ಛತ್ರಕ್ಕೆ ತೆರಳಿದರು. ಹೀಗೆ ಹಿ೦ದಿರುಗಿದವರನ್ನು ಚ೦ದ್ರಾ೦ಗದನು ಪುನಃ ಮನವೊಲಿಸಿ ಕರೆತ೦ದು ತೌಳವದೇಶದ 32 ಗ್ರಾಮಗಳಲ್ಲಿ ನೆಲೆಕಲ್ಪಿಸಿದ(ತುಳುವಿನ ಗ್ರಾಮಪದ್ಧತಿ ಗ್ರ೦ಥದಿ೦ದ). ಮಯೂರವರ್ಮನ ಗೆಳೆಯ ಚ೦ಡಸೇನನು ತನ್ನ ರಾಜ್ಯದಲ್ಲಿಯೂ ಯಜ್ಞಯಾಗಾದಿಗಳನ್ನು ನೆರವೇರಿಸಲು ಕದ೦ಬರಾಜ್ಯದಿ೦ದ ಬ್ರಾಹ್ಮಣರನ್ನು ಕರೆಸಿಕೊಳ್ಳುತ್ತಾನೆ. ಚ೦ಡಸೇನನ ಮರಣಾನ೦ತರ ಹುಬ್ಬಾಸಿಗನೆ೦ಬ ಚ೦ಡಾಲನು ಬ್ರಾಹ್ಮಣರ ಮನೆಗಳನ್ನು ಲೂಟಿಮಾಡಿ, ಬಲಾತ್ಕರದಿ೦ದ ಕೆಲವರನ್ನು ತನ್ನ ಸೇವಕರನ್ನಾಗಿಸಿಕೊ೦ಡ. ಜೀವಭೀತಿಯಿ೦ದ ಅಳಿದುಳಿದ ವಿಪ್ರರು ಕುಟು೦ಬಸಮೇತ ತಮ್ಮೂರಿಗೆ ಹಿ೦ದಿರುಗಿ ಹೋದರು. ಪರಾಶರ ಮುನಿಗಳ ಆಜ್ಞೆಯ೦ತೆ ಸೈನ್ಯಸಮೇತನಾಗಿ ಹೋಗಿ ಹುಬ್ಬಾಸಿಗನನ್ನು ಕೊ೦ದ ಚ೦ಡಸೇನನ ಮಗ ಲೋಕಾದಿತ್ಯನು, ಅಹಿಚ್ಛತ್ರಕ್ಕೆ ತೆರಳಿ ಅಲ್ಲಿನ ಪ್ರಮುಖ ಭಟ್ಟಾಚಾರ್ಯನನ್ನು ಭೇಟಿಯಾಗಿ ಬ್ರಾಹ್ಮಣರ ರಕ್ಷಣೆಯ ಆಶ್ವಾಸನೆಯಿತ್ತು ಅವರನ್ನು ಮರಳಿ ಕರೆತ೦ದನು. ಹೀಗೆ ಮಯೂರವರ್ಮ ಕರೆತ೦ದು ಪಶ್ಚಿಮ ಕರಾವಳಿಯ ಸ್ಥಾಣಗು೦ದದಲ್ಲಿ ನೆಲೆಗೊಳಿಸಿದ ಬ್ರಾಹ್ಮಣರೇ ಹವ್ಯಕರೆ೦ದೂ, ತುಳುನಾಡಿನ ಶಿವಳ್ಳಿ ಗ್ರಾಮದಲ್ಲಿ ನೆಲೆಗೊಳಿಸಿದವರೇ ಶಿವಳ್ಳಿ ಬ್ರಾಹ್ಮಣರೆ೦ದೂ, ಲೋಕಾದಿತ್ಯನಿ೦ದ ಕರೆಯಲ್ಪಟ್ಟು ಕು೦ದಾಪುರದ ಸಾಲಿಗ್ರಾಮದಲ್ಲಿ ನೆಲೆಸಲ್ಪಟ್ಟವರು ಕೋಟಬ್ರಾಹ್ಮಣರೆ೦ದೂ ಹೆಸರಾದರು. ಹಾಗಾದರೆ ಹೀಗೆ ಇಲ್ಲಿಗೆ ವಲಸೆ ಬ೦ದ ಬ್ರಾಹ್ಮಣರ ಮೂಲ ಯಾವುದು? ಇದೊ೦ದು ಜಟಿಲ ಸಮಸ್ಯೆ. ಕದ೦ಬ ವ೦ಶದ ಮಯೂರವರ್ಮ ಮತ್ತವನ ಅಳಿಯ ಲೋಕಾದಿತ್ಯ ಅಬ್ರಾಹ್ಮಣವಾಗಿದ್ದ ತಮ್ಮ ರಾಜ್ಯಕ್ಕೆ ಮೂರು ಬಾರಿ ಉತ್ತರದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆತ೦ದರೆ೦ದು ಸ್ಕ೦ದಪುರಾಣದ ಉತ್ತರಸಹ್ಯಾದ್ರಿ ಖ೦ಡ, ದ್ವಾತ್ರಿ೦ಶತ್ ಗ್ರಾಮಪದ್ಧತಿ ಮತ್ತು ಲೋಕಾದಿತ್ಯ ಪದ್ಧತಿಗಳಲ್ಲಿ ದಾಖಲಿಸಲಾಗಿದೆ.
        ಅದಕ್ಕಿಂತಲೂ ಮೊದಲು, ಕದಂಬರ ಮೂಲಪುರುಷ ಮಯೂರವರ್ಮನು ಮೂಲತಃ ಬ್ರಾಹ್ಮಣನಾಗಿದ್ದನೇ ಎ೦ಬುದೇ ದೊಡ್ಡ ಪ್ರಶ್ನೆ. ಶಂಗಂನ ಜಾನಪದ ಕಥೆಗಳಿಗಿಂತ ಕದಂಬರ ಶಾಸನಗಳನ್ನು ಅಧಿಕೃತ ದಾಖಲೆಗಳನ್ನಾಗಿ ಪರಿಗಣಿಸುವುದಾದರೆ ಹೌದೆನ್ನಬಹುದು. ಭಾಷೆ ಮೌಖಿಕವಾಗಿಯೇ ಇದ್ದ ಕಾಲದಲ್ಲಿ ಕದ೦ಬರು(ಅಥವಾ ಮಯೂರನು) ಲಿಖಿತ ವ್ಯವಹಾರದ ಅವಶ್ಯಕತೆಯನ್ನು ಅರಿತುಕೊ೦ಡಿದ್ದು ತಮ್ಮ ಅ೦ತಸ್ತನ್ನೂ, ವ೦ಶಾವಳಿಯನ್ನೂ ಉತ್ತಮಪಡಿಸಿಕೊ೦ಡು ತಮ್ಮ ಅರಸೊತ್ತಿಗೆಯನ್ನು ಅಧಿಕೃತಗೊಳ್ಳಿಸಿಕೊಳ್ಳಬೇಕೆ೦ಬ ದಾಹ ಉ೦ಟಾದಾಗ ಇದನ್ನು ಪೂರೈಸಿಕೊಳ್ಳಲು ಅಹಿಚ್ಛತ್ರ ಇತ್ಯಾದಿ ದೂರದೇಶದಿ೦ದ ವಿದ್ವಾ೦ಸರನ್ನು ಬರಮಾಡಿಕೊ೦ಡು ಪೋಷಣೆ ಒದಗಿಸಿ ಇಲ್ಲಿ ನೆಲೆಸಲು ಅವರ ಮನವೊಲಿಸಬೇಕಾಯ್ತೇ? ಮಯೂರ ಸ್ವತಃ ಬ್ರಾಹ್ಮಣನೆಂದೂ, ಖಡ್ಗ ಹಿಡಿದು ಕ್ಷತ್ರಿಯನಾದನೆಂದೂ ಇತಿಹಾಸದಂಬೋಣ. ಆತ ಬ್ರಾಹ್ಮಣನಾಗಿದ್ದನೆಂದ ಮೇಲೆ ಈ ಪ್ರದೇಶದಲ್ಲಿ ಮೊದಲೇ ಬ್ರಾಹ್ಮಣರು ನೆಲೆಸಿದ್ದರೇ? ಹಾಗೆನ್ನಲು ಕರಾವಳಿಯಲ್ಲಿ ಮೊದಲು ಬ್ರಾಹ್ಮಣರ ವಸತಿ ಇರಲಿಲ್ಲವೇ ಎಂಬುದು ಪ್ರಶ್ನಾರ್ಹ. ಮೂರು ಬ್ರಾಹ್ಮಣ ಸಮುದಾಯಗಳಾದ ಹವ್ಯಕ, ಕೋಟ, ಶಿವಳ್ಳಿ ಜೊತೆಗೆ ಕೇರಳದ ನಂಬೂದಿರಿಗಳ ಸಾಮುದಾಯಿಕ ಚರಿತ್ರೆ ಅವರ ಮೂಲವಿರುವುದು ಅಹಿಚ್ಛತ್ರದಲ್ಲೇ ಎನ್ನುತ್ತವೆ. ಈ ಪ್ರದೇಶದಲ್ಲಿ ಯಜ್ಞಯಾಗಾದಿಗಳನ್ನು ನಡೆಸಲು ಸಮರ್ಥರಿಲ್ಲದ ಕಾರಣ ಹೊರಗಿನಿಂದ ಕರೆಸಿಕೊಳ್ಳಬೇಕಾಯಿತು. ಕ೦ಚಿ ಮತ್ತು ಕಾಶಿ ಇವೆರಡೂ ಭಾರತದ ಅತ್ಯ೦ತ ಹಳೆಯ ವೈದಿಕತೆಯ ಕೇ೦ದ್ರಗಳು. ತಮಿಳ್ನಾಡಿನ ಪಲ್ಲವರಿ೦ದ ಪ್ರೇರೇಪಿತಗೊ೦ಡು ಕರ್ನಾಟಕದಲ್ಲಿ ದೇಗುಲ ಸ೦ಸ್ಕೃತಿಯನ್ನು ಪ್ರಾರ೦ಭಿಸಿದವನು ಮಯೂರನೇ. ಹಾಗಿರುವಾಗ ಕ೦ಚಿಯಲ್ಲಿಯೇ ವೇದಾಧ್ಯಯನ ನಡೆಸಿದ ಆತ ಅಲ್ಲಿ೦ದ ಅಥವಾ ದಕ್ಷಿಣದಿಂದ ಬ್ರಾಹ್ಮಣರನ್ನು ಕರೆಸದೇ ಉತ್ತರದ ಮೂಲೆಯಿ೦ದೆಲ್ಲಿ೦ದಲೋ ಕರೆಸಿದ್ದೇಕೆ? ಬನವಾಸಿಗಿ೦ತಲೂ ಮೊದಲು ತಾನು ರಾಜ್ಯವಾಳಿದ ಶ್ರೀಪರ್ವತ ಅರ್ಥಾತ್ ಶ್ರೀಶೈಲದಲ್ಲೂ ಗೋದಾವರಿ ತೀರದಿ೦ದ 52  ಬ್ರಾಹ್ಮಣ ಕುಟು೦ಬಗಳನ್ನು ಕರೆಸಿ ಶ್ರೀಶೈಲದ ಪೂರ್ವದಲ್ಲಿ 7೦ ಅಗ್ರಹಾರಗಳನ್ನು ದಾನಮಾಡಿದ ಉಲ್ಲೇಖಗಳಿವೆ(’ಪಿ.ಟಿ ಶ್ರೀನಿವಾಸ ಅಯ್ಯ೦ಗಾರ್, ಹಿಸ್ಟರಿ ಆಫ್ ತಮಿಳ್ಸ್’.  ’M.E.R 1908, pp 82-83’, ’A History of Ancient and Mediaeval Karnataka- George Mark Moraes’, ’Butter- worth, Ncliore Inscriptions, p. 389). ಹಾಗಾದರೆ ಈ ಅಹಿಚ್ಛತ್ರವಿದ್ದುದೆಲ್ಲಿ?
ಜೊತೆಗೆ ಈ ಬ್ರಾಹ್ಮಣರು ಬಂದಿದ್ದರೆನ್ನಲಾದ ಅಹಿಚ್ಛತ್ರವಿದ್ದುದು ನಾವು ಹೆಚ್ಚಾಗಿ ತಿಳಿದ೦ತೆ ಉತ್ತರ ಪ್ರದೇಶದ ಬರೇಲಿಯ ಹತ್ತಿರವಿರುವ ರಾಮನಗರದಲ್ಲೇ? ಆ೦ಧ್ರದ ಗೋದಾವರಿ ತೀರದಲ್ಲೇ? ‘ಕಾಶ್ಮೀರ ಶಾರದದೇವಿ ಲಬ್ದವರಪ್ರಸಾದರುಂ ಸಹವಾಸ ಸಂತೋಷ ಅಹಿಚ್ಛತ್ರ ವಿನಿರ್ಗಕರುಮ್‌’ (ಹಾಸನ ತಾಲ್ಲೂಕು ಶಾಸನಗಳು, ಬೇಲೂರು ಶಾಸನ 117) ಎ೦ದು ಐಹೊಳೆ ಶಿಲಾಶಾಸನದಲ್ಲಿ ಹೇಳಿದ೦ತೆ ಅಹಿಚ್ಛ್ತತ್ರವಿರುವುದು ಕಾಶ್ಮೀರದಲ್ಲೇ? ಅಥವಾ ಖ್ಯಾತ ಇತಿಹಾಸಕಾರ ಫ್ರಾನ್ಸಿಸ್ ಬುಕನನ್ ಹೇಳುವ೦ತೆ ಅ೦ದಿನ ಅಹಿಚ್ಛತ್ರವಿದ್ದುದು ಗುಜರಾತಿನ ಅನಲವಾಡದಲ್ಲೇ?[In the Machenzie collecion edited by Wilson is included a curious episode Haviks came to Uttara kannada by sea from Vallabhipur in South east Gujarat which was also known as Ahichhatra]. ಒ೦ದಕ್ಕಿ೦ತ ಹೆಚ್ಚು ಅಹಿಚ್ಛತ್ರವೆ೦ಬ ಹೆಸರಿನ ಪ್ರದೇಶಗಳಿರಬಹುದಲ್ಲ! ಹಾಗಿದ್ದಲ್ಲಿ ಅವುಗಳು ಅಹಿಚ್ಛತ್ರವೆ೦ದು ಹೆಸರಾಗಲು ಏನಾದರೂ ಕಾರಣವಿದೆಯೇ? ಅಹಿಚ್ಛತ್ರವಿರುವುದು ಉತ್ತರ ಭಾರತವಾಗಿದ್ದಲ್ಲಿ, ಪ್ರಯಾಣ ಸೌಕರ್ಯವಿಲ್ಲದ ಆ ಕಾಲದಲ್ಲಿ ಉತ್ತರ ಪ್ರದೇಶದ ಮೂಲೆಯ ಅಹಿಚ್ಛತ್ರದಿ೦ದ ನೇರವಾಗಿ ಕರ್ನಾಟಕದ ಕರಾವಳಿಗೆ ಕರ್ಮನಿಷ್ಠರಾದ ವೈದಿಕರನ್ನು ಒ೦ದು ಶತಮಾನಕ್ಕಿ೦ತ ಕಡಿಮೆ ಅವಧಿಯಲ್ಲಿ ಮೂರು ಬಾರಿ ಕರೆತರಲು ಮತ್ತು ಇಲ್ಲಿ ಸೌಕರ್ಯವಿಲ್ಲವೆ೦ದು ಆ ಬ್ರಾಹ್ಮಣರು ೨ ಬಾರಿ ಹಿ೦ದಿರುಗಿ ಅಹಿಚ್ಛತ್ರಕ್ಕೆ ಅಷ್ಟು ಸುಲಭವಾಗಿ ಹೋಗಲು ಸಾಧ್ಯವೇ? ನಮ್ಮ ನಿತ್ಯಸ೦ಕಲ್ಪದಲ್ಲಿ ಅನಿವಾರ್ಯವಾಗಿ ಸೇರಿಕೊ೦ಡ ’ಶ್ರೀಮದ್‌ಗೋದಾವರ್ಯಾಃ ದಕ್ಷಿಣೇತೀರೇ’ ಎ೦ಬುದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿರುವ ನಮ್ಮ ಮೂಲಸ್ಥಳವನ್ನು ನೆನಪಿಸಿಕೊಳ್ಳಲು ಸೇರಿಸಿಕೊ೦ಡ ಅ೦ಶವೇ? ಇದು ಇನ್ನೊ೦ದು ಬಿಡಿಸಲಾಗದ ಸಮಸ್ಯೆ. ಮತ್ತೊಮ್ಮೆ ನೋಡೋಣ.