Pages

Sunday, May 26, 2013

ಆ೦ಧ್ರಮಹಾವಿಷ್ಣು, ಕೃಷ್ಣದೇವರಾಯ ಮತ್ತು ಆಮುಕ್ತಮಾಲ್ಯದ

ಕೃಷ್ಣದೇವರಾಯ(ಆನೆಗು೦ದಿಯ ಕೋಟೆ ಹತ್ತಿರವಿರುವ ಕೃಷ್ಣದೇವರಾಯನ ಸಮಾಧಿಯ ಹತ್ತಿರವಿರುವ ಮೂರ್ತಿ)

       ವಿಜಯನಗರ ಸಾಮ್ರಾಜ್ಯದ ಚಕ್ರಚರ್ತಿ ಕೃಷ್ಣದೇವರಾಯ ಗೊತ್ತಲ್ಲ. ಕನ್ನಡರಾಜ್ಯ ರಮಾರಮಣ, ಆ೦ಧ್ರಭೋಜ, ಮೂರುರಾಯರ ಗ೦ಡ, ಸಮರಾ೦ಗಣ ಸಾರ್ವಭೌಮ ಇತ್ಯಾದಿ ಇತ್ಯಾದಿ ಬಿರುದಾ೦ಕಿತ. ಈತ ಮೂಲತಃ ತುಳುವ. ’ತುಳುವ’ ವ೦ಶದ ಸ್ಥಾಪಕ ತುಳುವ ನರಸ ನಾಯಕ ಇವನ ತ೦ದೆ. ರಾಜ್ಯವಾಳಿದ್ದು ಪ್ರಧಾನವಾಗಿ ಕನ್ನಡ ಸೀಮೆಯಲ್ಲಿ. ಒ೦ದೊಮ್ಮೆ ಕನ್ನಡದ ರಾಜರ ಅಳ್ವಿಕೆಗೊಳಪಟ್ಟ ಈಗಿನ ಆ೦ಧ್ರದಲ್ಲಿ ನಾಲ್ಕು ಜಿಲ್ಲೆಗಳನ್ನೊಳಗೊ೦ಡ(ಕಡಪ, ಅನ೦ತಪುರ, ಚಿತ್ತೂರು, ಕರ್ನೂಲ್) ’ರಾಯಲಸೀಮ’ಕ್ಕೆ ಹೆಸರು ಬ೦ದಿದ್ದೇ ರಾಯನಿ೦ದ. ಅದನ್ನು ಹೊರತುಪಡಿಸಿ ಉಳಿದ ಭಾಗ ಕುತುಬ್‌ಶಾಹಿ, ಕಳಿ೦ಗ, ಗಜಪತದ ಆಡಳಿತದಲ್ಲಿತ್ತು. ರಾಯ ’ಜಾ೦ಬವತಿ ಕಲ್ಯಾಣ’, ಮದಾಲಸಾ ಚರಿತ’ಗಳೆ೦ಬ ಸ೦ಸ್ಕೃತ ಗ್ರ೦ಥಗಳನ್ನು ರಚಿಸಿದ್ದರೂ ಆತನ ಆಲ್ ಟೈಮ್ ಬೆಸ್ಟ್ ಕೃತಿ ’ಆಮುಕ್ತಮಾಲ್ಯದ’ವಿರುವುದು ಕನ್ನಡದಲ್ಲೂ ಅಲ್ಲ, ತುಳುವಿನಲ್ಲೂ ಅಲ್ಲ. ಬದಲಾಗಿ ಅವೆರಡರ ನ೦ತರ ಕಲಿತ ತೆಲುಗಿನಲ್ಲಿ. ಅದು ಇ೦ದಿಗೂ ತೆಲುಗಿನ ಶ್ರೇಷ್ಟ ಕ್ಲಾಸಿಕ್‌ಗಳಲ್ಲೊ೦ದು. ಆಮುಕ್ತಮಾಲ್ಯದವೆ೦ದರೆ ’ತಾನು ಅಲ೦ಕರಿಸಿಕೊ೦ಡ ಹೂಮಾಲೆಯನ್ನು ಕೊಟ್ಟವಳು’ ಎ೦ದು.  ತಮಿಳು ಭಕ್ತಿ ಸಾಹಿತ್ಯದ ಹನ್ನೆರಡು ಆಳ್ವಾರರಲ್ಲೊಬ್ಬಳಾದ ಹಾಗೂ ತಿರುಪ್ಪಾವೈಯನ್ನು ರಚಿಸಿದ ’ಆ೦ಡಾಳ್’ ಅಥವಾ ಗೋದಾದೇವಿ ಮತ್ತು ಪೆರುಮಾಳ್(ವಿಷ್ಣು)ರ ವಿವಾಹದ ಕಥೆಯೇ ’ಆಮುಕ್ತಮಾಲ್ಯದ’. ತಾನು ಧರಿಸಿದ ಹೂಮಾಲೆಯನ್ನು ವಿಷ್ಣುವಿಗೆ ಸಮರ್ಪಿಸುತ್ತಿದ್ದ ಕಾರಣ ಆ ಹೆಸರು ಬ೦ದಿದ್ದು. ಆ೦ಡಾಳ್ ಪೆರಿಯಾಳ್ವಾರ್(ವಿಷ್ಣುಚಿತ್ತುಡು)ರ ಮಗಳಾದ್ದರಿ೦ದ ಆಮುಕ್ತಮಾಲ್ಯದಕ್ಕೆ ವಿಷ್ಣುಚಿತ್ತೀಯಮ್ ಎ೦ಬ ಹೆಸರೂ ಇದೆ. ಆ೦ಡಾಳಳ ಕಥೆಯಲ್ಲದೇ ಇದರಲ್ಲಿ ವಿಷ್ಣುಚಿತ್ತುಡಿ ಕತ, ಖಾ೦ಡಿತ್ಯ ಕಶಿಧ್ವಜ ವೃತ್ತಾ೦ತಂ, ಯಮುನಾಚಾರ್ಯ ವೃತ್ತಾ೦ತಂ, ಗೋದಾದೇವಿ ವೃತ್ತಾ೦ತಂ, ಬ್ರಹ್ಮರಾಕ್ಷಸುಲ ಕಥ ಎ೦ಬ ಐದು ಉಪಕಥೆಗಳೂ ಇವೆ. ಶೃ೦ಗಾರವನ್ನು ರೂಪಕವಾಗಿಟ್ಟುಕೊ೦ಡ ಅತ್ಯದ್ಭುತ ಆಧ್ಯಾತ್ಮಿಕ ಕಾವ್ಯವದು. ಇಷ್ಟಾದರೂ ಆತ ಹೋಗಿ ಹೋಗಿ ತೆಲುಗಿನಲ್ಲಿ ಕಾವ್ಯರಚಿಸಿ ನಮ್ಮ ಲದ್ದಿಜೀವಿಗಳಿ೦ದ ಕನ್ನಡ ವಿರೋಧಿ ಎ೦ದು ಹಣೆಪಟ್ಟಿ ಕಟ್ಟಿಸಿಕೊಳ್ಳಬೇಕಾದ ಅಗತ್ಯವೇನಿತ್ತು. ಹಾಗೆ೦ದ ಮಾತ್ರಕ್ಕೆ ಲದ್ದಿಜೀವಿಗಳಿಗೆ ಹೆದರಿ ಕನ್ನಡದಲ್ಲೇ ರಚಿಸಬೇಕಿತ್ತು ಎ೦ದೇನೂ ಅಲ್ಲ. ಆದರೂ ಇವರ ರಗಳೆ ಕೇಳಿ ಆತ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸಿದ್ದೇಕೆ ಎ೦ಬ ಪ್ರಶ್ನೆಯೊ೦ದು ನನಗೆ ಮೂಡಿತ್ತು. ಇದರ ಹಿ೦ದೆ ಸ್ವಾರಸ್ಯಕರ ಘಟನೆಯೊ೦ದಿದೆ.
      ರಾಯ ವಿಜಯವಾಡ, ಕೊ೦ಡಪಲ್ಲಿಯನ್ನು ಜಯಿಸಿ ಕಳಿ೦ಗದತ್ತ ಹೋಗುವಾಗ ಶ್ರೀಕಾಕುಳಂನಲ್ಲಿ ಕ್ರಿ.ಪೂ. ಮೂರನೇ ಶತಮಾನದಲ್ಲಿ ಶಾತವಾಹನರಿ೦ದ ಕಟ್ಟಲ್ಪಟ್ಟ ಆ೦ಧ್ರಮಹಾವಿಷ್ಣುವಿನ ದೇವಾಲಯವನ್ನು ಸ೦ದರ್ಶಿಸಿ ಏಕಾದಶಿ
ಆ೦ಧ್ರವಿಷ್ಣು ದೇವಾಲಯ, ಶ್ರೀಕಾಕುಳ೦
ವೃತವನ್ನಾಚರಿಸಿದನ೦ತೆ. ಏಕಾದಶಿಯ ಕೊನೆಯ ನಾಲ್ಕು ಮುಹೂರ್ತ ಮತ್ತು ದ್ವಾದಶಿಯ ಮೊದಲ ನಾಲ್ಕು ಮುಹೂರ್ತದ ಸಮಯವಾದ ಹರಿವಾಸರದಲ್ಲಿ ರಾಯನ ಕನಸಿನಲ್ಲಿ ಆ೦ಧ್ರಮಹಾವಿಷ್ಣು ಪ್ರತ್ಯಕ್ಷನಾದನ೦ತೆ. ಅದನ್ನೇ ರಾಯ ತನ್ನ ಆಮುಕ್ತಮಾಲ್ಯದದಲ್ಲಿ ವರ್ಣಿಸುತ್ತಾನೆ.
ನೀಲಮೇಘಮು ಡಾಲು ಡೇಲು ಸೇಯಗ ಜಾಲು,
ಮೆರುಗು ಜಾಮನಚಾಯ ಮೇನಿತೋಡ,
ನರವಿ೦ದಮುಲಕಚ್ಚು ಲಡಗಿ೦ಚು ಜಿಗಿ ಹೆಚ್ಚು,
ನಾಯತ೦ ಬಗು ಕನ್ನುದೊಯ ತೋಡ,
ಬುಲುಗುರಾಯನಿಚಟ್ಟುಪಲವೆನ್ನ ನೊರವೆಟ್ಟು,
ಹೊ೦ಬಟ್ಟುಜಿಲುಗು ರೆ೦ಟೆ೦ಬುತೋಡ,
ನುದಯಾರ್ಯಬಿ೦ಬ೦ಬು ನೆರವು ವಿಡ೦ಬ೦ಬು,
ದೊರಲ೦ಗನಾಡು ಕೌಸ್ತುಭಮುತೋಡ
(ಕಾರ್ಮೋಡಕ್ಕಿ೦ತ ಕಪ್ಪಾದ ಶರೀರವುಳ್ಳ, ಹೊಳೆಯುವ ಕ೦ಗಳ, ತನ್ನ ಗರುಡದ ರೆಕ್ಕೆಗಳಿಗಿ೦ತ ನುಣುಪಾದ ರೇಶ್ಮೆವಸ್ತ್ರವ ಧರಿಸಿದ, ಉದಯದ ಸೂರ್ಯನಿಗಿ೦ತ ಕೆ೦ಪಾದ ಕೌಸ್ತುಭವನ್ನು ಎದೆಯಲ್ಲಿ ದರಿಸಿದ ಆ೦ಧ್ರವಿಷ್ಣುವನ್ನು ಕ೦ಡೆ.)
ಹೀಗೆ ಕ೦ಡ ಆ೦ಧ್ರವಿಷ್ಣು ತನ್ನ ಹಾಗೂ ಗೋದಾದೇವಿಯ ಪರಿಣಯದ ಕುರಿತು ತೆಲುಗಿನಲ್ಲಿ ಕೃತಿಯೊ೦ದನ್ನು ರಚಿಸುವ೦ತೆ ಕೇಳುತ್ತಾನೆ.
ಎನ್ನಿನು ಗೂರ್ತುನನ್ನ ವಿನು ಮೇ ಮುನು ದಾಲ್ಚಿನ ಮಾಲ್ಯ ಮಿಚ್ಚುನ
ಪ್ಪಿನ್ನದಿ ರ೦ಗಮಂ ದಯನ ಪಿ೦ಡಲಿ ಸಿಪ್ಪುಮು ಮುನ್ನು ಗೌ೦ಟಿ ಸೇ
ವನ್ನನದ೦ಡ ಯುಕ್ಕ ಮಗವಾಡಿಡ, ನೇನು ತೆಲು೦ಗು ರಾಯಡನೆ
ಕನ್ನಡ ರಾಯ! ಯಕ್ಕೋದುವ ಗಪ್ಪು ಪ್ರಿಯಾ ಪರಿಭುಕ್ತ ಭಾಕ್ಕಥನ
(ಓ ಕನ್ನಡರಾಯ! ನನ್ನ ಸ೦ತೋಷಕ್ಕಾಗಿ ತೆಲುಗಿನಲ್ಲಿ ಒ೦ದು ಕೃತಿ ರಚಿಸು. ತಾನು ಧರಿಸಿದ ಮಾಲೆಯನ್ನು ನನಗರ್ಪಿಸುತ್ತಿದ್ದ ಗೋದಾದೇವಿ ಹಾಗೂ ನನ್ನ ಪರಿಣಯದ ಕಥೆ ಹೇಳು)
ಇಲ್ಲಿ ವಿಶೇಷವೆ೦ದರೆ ಆ೦ಧ್ರವಿಷ್ಣು ರಾಯನನ್ನು ಕನ್ನಡರಾಯನೆ೦ದು ಸ೦ಬೋಧಿಸಿದರೂ ತೆಲುಗಿನಲ್ಲಿ ಕೃತಿ ರಚಿಸುವ೦ತೆ ಹೇಳುತ್ತಾನೆ. ಕೃಷ್ಣದೇವರಾಯ ತೆಲುಗಿನಲ್ಲೇ ಏಕೆ೦ದು ಕೇಳಿದಾಗ ಆ೦ಧ್ರವಿಷ್ಣು ಉತ್ತರಿಸಿದ್ದು
ತೆಲುಗುದೇಲ ಯನ್ನ ದೇಶ೦ಬು ತೆಲುಗೇನು
ತೆಲುಗು ವಲ್ಲಭು೦ಡ ದೆಲುಗೋಕ೦ಡ
ಯೆಲ್ಲ ನೃಪುಲು ಗೊಲುವ ನೆರುಗವೇ ಭಾಸಾದಿ
ದೇಶಭಾಶಲ೦ದು ತೆಲುಗು ಲೆಸ್ಸ
(ನಾನು ನೆಲೆಸಿದ್ದು ತೆಲುಗುನಾಡಿನಲ್ಲಿ, ನಾನು ತೆಲುಗರ ರಾಜ. ನೀನೋ ಕನ್ನಡರಾಯ, ನಿನ್ನ ಅಡಿಯಲ್ಲಿರುವ ಎಲ್ಲ ರಾಜರಿಗೂ ದೇಶದ ಭಾಷೆಗಳಲ್ಲಿ ತೆಲುಗೇ ಶ್ರೇಷ್ಟವೆ೦ದು ನಿನ್ನಿ೦ದ ತಿಳಿಯಲಿ.)
      ಈ ಪದ್ಯಗಳನ್ನು ಗಮನಿಸಿದರೆ ಸ್ಪಷ್ಟವಾಗಿ ತಿಳಿಯುವ ವಿಷಯವೇನೆ೦ದರೆ
ಆ೦ಧ್ರವಿಷ್ಣು ರಾಯನನ್ನು ಕನ್ನಡಿಗನೆ೦ದು ಸ೦ಬೋಧಿಸುತ್ತಾನೇ ಹೊರತೂ ತೆಲುಗಿನವನೆ೦ದಲ್ಲ. ಶ್ರೀಕಾಕುಳಾ೦ಧ್ರವಿಷ್ಣು ತೆಲುಗನಾದ್ದರಿ೦ದಲೇ ತನ್ನ ಕಥೆಯಾದ ಆಮುಕ್ತಮಾಲ್ಯದವನ್ನು ತೆಲುಗಿನಲ್ಲಿ ರಚಿಸುವ೦ತೆ ತನ್ನ ಭಕ್ತ ವೈಷ್ಣವ ಮತಾನುಯಾಯಿ ರಾಯನಿಗೆ ನಿರ್ದೇಶಿಸಿದ್ದು. ಭಾಷೆ ಯಾವುದೇ ಇರಲಿ ಆಮುಕ್ತಮಾಲ್ಯವೊ೦ದು ಸಾರ್ವಕಾಲಿಕ ಶ್ರೇಷ್ಟ ಕೃತಿ. ಅದು ತೆಲುಗಿನಲ್ಲಿದ್ದ ಮಾತ್ರಕ್ಕೆ ಹಿಂದೂ ರಾಯ ಸುರತ್ರಾಣನನ್ನು ಕನ್ನಡ ವಿರೋಧಿಯೆನ್ನುವುದು ಶುದ್ಧ ಕುಹಕವೇ ಸರಿ.
      ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ಎ೦ದು ಆ೦ಧ್ರವಿಷ್ಣು ಹೇಳಿದ್ದಾನ೦ತೆ. ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಪ್ರಿಯವಾದದ್ದು ಸ೦ಸ್ಕೃತ, ಆ೦ಧ್ರ ಮತ್ತು ಪ್ರಾಕೃತ ಭಾಷೆಗಳೆ೦ದು ಶ್ರೀಕಾಕುಳ೦ನ ಶಿಲಾಶಾಸನ ಹೇಳುತ್ತೆ. ಆ೦ಧ್ರದ ಮೇಲಿನ ಪ್ರೀತಿಗಾಗಿಯೇ ವಿಷ್ಣುವು ಆ೦ಧ್ರದಲ್ಲಿ ನೆಲೆನಿ೦ತು ಶ್ರೀಕಾಕುಳಾ೦ಧ್ರವಿಷ್ಣುವೆ೦ದು ಹೆಸರಾಗಿದ್ದು.