Pages

Monday, September 25, 2017

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶೃಂಗೇರಿ ಪ್ರಕರಣ-೨


       ಶಾಂಕರ ಪರಂಪರೆಯ ಮಠಗಳ ಸ್ವರೂಪ, ವಿಶೇಷಣಗಳ ವಿವರವಾದ ಉಲ್ಲೇಖವಿರುವ ಗ್ರಂಥ ಮಠಾಮ್ನಾಯ ಸೇತು ಎಂದು ಕಳೆದ ಲೇಖನದಲ್ಲಿ ಹೇಳಿದ್ದೆನಷ್ಟೆ. ವಿವಿಧ ಲೇಖಕರಿಂದ ರಚಿತವಾದ ಇದರ ಬೇರೆ ಬೇರೆ ಪಾಠಬೇಧಗಳೂ ಇದೆ. ಮಠಾಮ್ನಾಯ ಶಾಸನ, ಪೂರ್ವಾಮ್ನಾಯ, ಉತ್ತರಾಮ್ನಾಯ, ಮಠಾಮ್ನಾಯ ಸೇತು ಎಂಬ ಮೂರ್ನಾಲ್ಕು ಗ್ರಂಥಗಳನ್ನು ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಕಾಣಬಹುದು. ಚತುರಾಮ್ನಾಯಗಳೆಂದರೆ ನಾಲ್ಕು ವೇದಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಮೀಸಲಾದ ಮಠಗಳು. ಮೊದಲನೇಯದಾಗಿ ಪಶ್ಚಿಮದಲ್ಲಿ ಸಾಮವೇದಪರಂಪರೆಯ ದ್ವಾರಕೆಯ ಕಾಳಿಕಾಪೀಠ. ಇದು ಕೀಟವಾಳ ಸಂಪ್ರದಾಯದ್ದು. ಶಾಂಕರಮಠಗಳ ಸನ್ಯಾಸಿಗಳ ಉಪಾಧಿಯಾದ ದಶನಾಮೀ ಪರಂಪರೆಯಲ್ಲಿ ಆಶ್ರಮ ಹಾಗೂ ತೀರ್ಥ ಎಂಬ ಹೆಸರುಗಳು ಇಲ್ಲಿನ ಪೀಠಾಧಿಪತಿಗಳಿಗೆ. ಸಿದ್ಧೇಶ್ವರ ದೇವನೂ, ಭದ್ರಕಾಳಿಯೆಂಬ ಶಕ್ತಿಯೂ ಇಲ್ಲಿನ ಆರಾಧ್ಯದೈವಗಳು. ಗೋಮತಿಯೆಂಬ ತೀರ್ಥ. ತತ್ತ್ವಮಸಿಯೆಂಬ ಮಹಾವಾಕ್ಯ. ಪದ್ಮಪಾದರು ಮೊದಲ ಆಚಾರ್ಯರು.
ಪಶ್ಚಿಮೇ ಕಾಳಿಕಾಪೀಠಂ ದ್ವಾರಕಾಕ್ಷೇತ್ರ ಉಚ್ಯತೇ
ಕೀಟವಾರಃ ಸಂಪ್ರದಾಯಸ್ತೀರ್ಥಾಶ್ರಮಪದೇ ಉಭೇ ||
ದೇವಃ ಸಿದ್ಧೇಶ್ವರಃ ಶಕ್ತಿರ್ಭದ್ರಕಾಲೀತಿ ವಿಶ್ರುತಾ
ಸ್ವರೂಪಬ್ರಹ್ಮಚಾರ್ಯಾಖ್ಯ ಆಚಾರ್ಯಃ ಪದ್ಮಪಾದಕಃ ||
ವಿಖ್ಯಾತಂ ಗೋಮತೀತೀರ್ಥಂ ಸಾಮವೇದದ್ತಥೋಚ್ಯತೇ
ತತ್ತ್ವಮಸ್ಯಾದಿವಾಕ್ಯಂ ಚ ಜಿವಾತ್ಮಪರಮಾತ್ಮನೋಃ |
ಏಕೀಭಾವಂ ವಿನಿರ್ದಿಶ್ಯ ನಾಮಾನ್ಯುಕ್ತಾನ್ಯನುಕ್ರಮಾತ್
       ಎರಡನೇಯದಾಗಿ ಋಗ್ವೇದಕ್ಕೆ ಪೂರ್ವದ ಪುರಿಯಲ್ಲಿ ಭೋಗವಾಳ ಸಂಪ್ರದಾಯದ ಗೋವರ್ಧನ ಮಠ. ವನ ಹಾಗೂ ಅರಣ್ಯವೆಂಬ ಉಪಾಧಿ ಇಲ್ಲಿನ ಪೀಠಾಧಿಪತಿಗಳಿಗೆ. ಮಹೋದಧಿಯೆಂಬ ತೀರ್ಥ(ಬಂಗಾಳ ಕೊಲ್ಲಿಗೆ ಮೊದಲು ಮಹೋದಧಿಯೆಂಬ ಹೆಸರಿತ್ತು). ಪ್ರಜ್ಞಾನಂ ಬ್ರಹ್ಮ ಎಂಬ ಧ್ಯೇಯವಾಕ್ಯ. ದೇವ ಜಗನ್ನಾಥ, ಶಕ್ತಿ ವೃಷಲಾದೇವಿ ಆರಾಧನೆಯ ಈ ಮಠಕ್ಕೆ ಹಸ್ತಾಮಲಕರು ಮೊದಲ ಆಚಾರ್ಯರು.
ದ್ವಿತೀಯಃ ಪೂರ್ವದಿಗ್ಭಾಗೇ ಗೋವರ್ಧನಮಠಃ ಸ್ಮೃತಃ |
ಭೋಗವಾರಃ ಸಂಪ್ರದಾಯೋ ವನಾರಣ್ಯಪದೇ ತಥಾ
ತಸ್ಮಿನ್ ದೇವೋ ಜಗನ್ನಾಥಃ ಪುರುಷೋತ್ತಮಸಂಜ್ಞಕಃ |
ಕ್ಷೇತ್ರಂ ಚ ಸರ್ವಲೋಕೇಷು ತನ್ನಾಮ್ನೈವ ಹಿ ವಿಶ್ರುತಮ್
ಪ್ರಕಾಶಬ್ರಹ್ಮಚಾರೀತಿ ಹಸ್ತಾಮಲಕಸಂಜ್ಞಿತಹ್ಃ |
ಆಚಾರ್ಯಃ ಪ್ರಥಿತಸ್ತತ್ರ ನಾಮ್ನಾಂ ಭೇದಃ ಪೃಥಕ್ ಪೃಥಕ್
ಸ್ಥಾನಂ ಮಹೋದಧೇಸ್ತೀರ್ಥಂ ಶುಕ್ಲಂ ಯಜುರುದಾಹೃತಮ್ |
ಮಹಾವಾಕ್ಯಂ ಚ ತತ್ರೋಕ್ತಂ ’ಪ್ರಜ್ಞಾನಂ ಬ್ರಹ್ಮ’ ಸಂಜ್ಞಿತಮ್
        ಮೂರನೇಯದಾಗಿ ಅಥರ್ವಣವೇದಕ್ಕೆ ಉತ್ತರದ ಬದರಿಕಾಶ್ರಮದಲ್ಲಿ ಆನಂದವಾಳ ಪರಂಪರೆಯ ಶ್ರೀಮಠ. ನಾರಾಯಣ ದೇವ ಹಾಗೂ ಪೂರ್ಣಗಿರಿ ಶಕ್ತಿಯನ್ನು ಆರಾಧಿಸುವ ಇಲ್ಲಿನ ಆಚಾರ್ಯರಿಗೆ ಗಿರಿ, ಪರ್ವತ, ಸಾಗರಗಳೆಂಬ ಉಪಾಧಿಗಳು. ನಂದವಾರವೆಂಬ ತೀರ್ಥವೂ, ಅಯಮಾತ್ಮಾ ಬ್ರಹ್ಮವೆಂಬ ಮಹಾವಾಕ್ಯವೂ ಈ ಮಠಕ್ಕೆ. ತ್ರೋಟಕರು ಇಲ್ಲಿನ ಮೊದಲ ಪೀಠಾಧಿಪತಿಗಳು.
ಉತ್ತರೇ ಶ್ರೀಮಠಃ ಕ್ಷೇತ್ರಂ ಖ್ಯಾತೋ ಬದರಿಕಾಶ್ರಮಃ |
ದೇವೋ ನಾರಾಯಣೋ ದೇವೀ ಶಕ್ತಿಃ ಪೂರ್ಣಗಿರೀತಿ ಚ
ಸಂಪ್ರದಾಯೋ ನನ್ದವಾರಸ್ತೀರ್ಥಂ ಚಾಲಕನನ್ದಕಾ |
ಆನನ್ದಬ್ರಹ್ಮಚಾರೀತಿ ಗಿರಿಪರ್ವತಸಾಗರಾಃ
ನಾಮಾನಿ ತ್ರೋಟಕಾಚಾರ್ಯೋ ವೇದೋಥರ್ವಣಸಂಜ್ಞಕಃ |
ಮಹಾವಾಕ್ಯಂ ಚ ಕಥಿತಮಯಮಾತ್ಮಾ ಬ್ರಹ್ಮೇತಿ ಚ
ದಿಗ್ಭಾಗೇ ದಕ್ಷಿಣೇ ರಮ್ಯಃ ಶೃಂಗೇರ್ಯಾಂ ಶಾರದಾಮಠಃ |
ವರಾಹೋ ದೇವತಾ ತತ್ರ ರಾಮಕ್ಷೇತ್ರಮುದಾಹೃತಮ್
ತೀರ್ಥಂ ಚ ತುಂಗಭದ್ರಾಖ್ಯಾಂ ಶಕ್ತಿಃ ಶ್ರೀಶಾರದೇತಿ ಚ |
ಚೈತನ್ಯ ಬ್ರಹ್ಮಚಾರ್ಯಾಖ್ಯಾ ಆಚಾರ್ಯೋ ವಿಶ್ವರೂಪಕಃ
ಸರಸ್ವತೀತಿ ನಾಮಾನಿ ಭಾರತೀತಿ ಪುರೀತಿ ಚ |
ಸಂಪ್ರದಾಯೋ ಭೂರಿವಾರಃ ಕೃಷ್ಣಂ ಯಜುರುದಾಹೃತಮ್
ಮಹಾವಾಕ್ಯಂ ಚ ಕಥಿತಮಹಂ ಬ್ರಹ್ಮಾಸ್ಮಿನಾಮತಃ ||
       ಕೊನೆಯದಾಗಿ ದಕ್ಷಿಣದಲ್ಲಿ ಯಜುರ್ವೇದಪರಂಪರೆಗೆ ಶೃಂಗೇರಿಯ ಶಾರದಾಮಠ. ವರಾಹ ಇಲ್ಲಿಯ ದೇವತೆ. ರಾಮಕ್ಷೇತ್ರವೆಂಬ ಪ್ರಸಿದ್ಧಿ. ವಿಶ್ವರೂಪರು ಇಲ್ಲಿನ ಮೊದಲ ಪೀಠಾಧಿಪತಿ. ಸರಸ್ವತಿ, ಭಾರತಿ ಎಂಬ ಉಪಾಧಿಗಳು ಇಲ್ಲಿನ ಆಚಾರ್ಯರಿಗೆ. ಭೂರಿವಾಳ ಪರಂಪರೆ. ಅಹಂ ಬ್ರಹ್ಮಾಸ್ಮಿ ಎಂಬ ಮಹಾವಾಕ್ಯ.
      ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಠಾಮ್ನಾಯದಲ್ಲೂ ಉಲ್ಲೇಖಿತವಾಗಿರುವ ಶೃಂಗೇರಿ ತುಂಗಭದ್ರಾನದೀತೀರದಲ್ಲೇ ಇದೆ. ಇಲ್ಲಿನ ಮೊದಲ ಪೀಠಾಧಿಪತಿಗಳೆಂದು ನಂಬಲಾಗುವ ಸುರೇಶ್ವರಾಚಾರ್ಯರೆಂದು ಖ್ಯಾತರಾದ ವಿಶ್ವರೂಪೇ ಮಂಡನಮಿಶ್ರರೇ ಎಂಬುದು ಚರ್ಚಾರ್ಹ. ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’ ಎಂದು ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ, ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಇನ್ನು ಕಂಚಿ ಮಠದವರೂ ಸುರೇಶ್ವರರನ್ನು ತಮ್ಮ ಮೊದಲ ಪೀಠಾಧಿಪತಿಯೆನ್ನುತ್ತಾರೆ. ಕಂಚಿಯ ಐದನೇ ಆಚಾರ್ಯರಾದ ಆನಂದಜ್ಞಾನರ ಪುಣ್ಯಶ್ಲೋಕಮಂಜರಿ, ಐವತ್ತೈದನೇ ಆಚಾರ್ಯರಾದ ಪರಮಶಿವೇಂದ್ರರ ಶಿಷ್ಯರಾದ ಸದಾಶಿವಬ್ರಹ್ಮೇಂದ್ರರ ಗುರುರತ್ನಮಾಲಿಕೆ, ಆತ್ಮಬೋಧರ ಸುಷುಮಾ ವ್ಯಾಖ್ಯಾನಗಳಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರರ ವಿಸ್ತೃತ ಮಾಹಿತಿಯಿದೆ. ಜೊತೆಗೆ ಸುರೇಶ್ವರರು ಸಂಸಾರಿಯಾಗಿದ್ದರಿಂದ ಅಪರಮಹಂಸರಾಗಿದ್ದರಿಂದ ಅವರನ್ನು ಪೀಠವ್ಯವಸ್ಥೆಯನ್ನು ನೋಡಿಕೊಳ್ಳಲಷ್ಟೇ ಶಂಕರರು ನೇಮಕಮಾಡಿದ್ದರೆಂಬ ಮಾಹಿತಿಯೂ ಇದೆ. ಕೆಲ ಪಾಠಬೇಧಗಳು ಸುರೇಶ್ವರರನ್ನು ದ್ವಾರಕಾಮಠದಲ್ಲಿಯೂ ಕೂರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
        ಶೃಂಗೇರಿ ಪರಂಪರೆಯಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ತುಂಗಭದ್ರಾತೀರದ ರಾಮಕ್ಷೇತ್ರವೆಂಬ ಹೆಸರಿನ ಇದಕ್ಕೆ ವರಾಹ ಮುಖ್ಯದೇವತೆ! ಇದರ ಒಗಟೇನೆಂಬುದನ್ನು ಒಡೆಯಲು ಬಹುಕಾಲದಿಂದ ಸಾಧ್ಯವಾಗಿರಲಿಲ್ಲ. ಆದರೆ ಮೊನ್ನೆ ಕೂಡಲಿ ಶ್ರೀಗಳನ್ನು ಭೇಟಿಮಾಡಿದ ಮೇಲೆ ಆ ಜಿಜ್ಞಾಸೆಗೊಂದು ಹೊಳಹು ಸಿಕ್ಕಿತು.
ಯತ್ರಾಧುನಾಪ್ಯುತ್ತಮಮೃಗಶೃಂಗಸ್ತಪಶ್ಚರತ್ಯಾತ್ಮಭೃದನ್ತರಂಗಃ |
ಸಂಸ್ಪರ್ಶಮಾತ್ರೇಣ ವಿತೀರ್ಣಭದ್ರಾ ವಿದ್ಯೋತತೇ ಯತ್ರ ಚ ತುಂಗಭದ್ರಾ ||
ಮಾಧವೀಯದ ಈ ಶ್ಲೋಕದಲ್ಲಿ ತುಂಗಭದ್ರಾ ಎಂದಿರುವುದು ಗಮನಿಸತಕ್ಕ ವಿಚಾರ. ಆನಂದಗಿರೀಯದ ಪ್ರಕಾರ ’ತತಃ ಪರಂ ಸರಸವಾಣೀಃ ಮಂತ್ರಬದ್ಧಾಂ ಕೃತ್ವಾ ಗಗನಮಾರ್ಗಾದೇವ ಶೃಂಗಗಿರಿಸಮೀಪೇ ತುಂಗಭದ್ರಾತೀರೇ ಚಕ್ರಂ ನಿರ್ಮಾಯ ತದಗ್ರೇ ಪರದೇವತಾಂ ಸರಸವಾಣೀಂ ನಿಧಾಯ’ ಹೊರಟುನಿಂತ ಸರಸವಾಣಿಯನ್ನು ಮಂತ್ರಬಲದಿಂದ ಕಟ್ಟಿಹಾಕಿ ತುಂಗಭದ್ರಾತೀರದ ಶೃಂಗೇರಿಯಲ್ಲಿ ಚಕ್ರವನ್ನು ನಿರ್ಮಾಣಮಾಡಿ ಅದರಲ್ಲಿ ಮೇಲಿಟ್ಟರು. ಶಂಕರಕೃತವಾದ ಶಾರದಾ ಭುಜಂಗ ಸ್ತೋತ್ರವನ್ನೂ ಹಿಡಿದು ಎಲ್ಲ ಶಂಕರವಿಜಯಗಳಲ್ಲೂ ಶಾರದೆಯನ್ನು ತುಂಗಭದ್ರಾತೀರವಾಸಿನಿಯೆನ್ನಲಾಗಿದೆ.  ಆದರೆ ಶೃಂಗೇರಿಯಿರುವುದು ತುಂಗಾ ತೀರದಲ್ಲೇ ಹೊರತೂ ತುಂಗಭದ್ರಾ ತೀರದಲ್ಲಲ್ಲ. ಶಿವಮೊಗ್ಗದ ಸಮೀಪ ತುಂಗಾ-ಭದ್ರಾ ನದಿಗಳ ಸಂಗಮವಾಗುವಲ್ಲಿ ಕೂಡಲಿ ಶೃಂಗೇರಿ ಎಂಬ ಇನ್ನೊಂದು ಕ್ಷೇತ್ರವಿದೆ. ಇಲ್ಲಿಯೂ ಒಂದು ಶಂಕರಸ್ಥಾಪಿತ ಮಠವಿದೆ. ಹಾಗಾದರೆ ಅಸಲು ಶೃಂಗೇರಿ ಇರುವುದೆಲ್ಲಿ? ಶೃಂಗೇರಿ ಆಚಾರ್ಯರಿಗೆ ಪರಿಚಿತವಾದ ಸ್ಥಳವಲ್ಲ. ಋಷ್ಯಶೃಂಗವೆಂಬ ಹೆಸರು ಯಾವ ಶಂಕರವಿಜಯಗಳಲ್ಲೂ ಈ ಮೊದಲು ಪ್ರಸ್ತಾಪಿತವಾಗಿಲ್ಲ. ಹಾಗಾದರೆ ಹಠಾತ್ತನೆ ಶಂಕರರು ಶಾರದೆಯನ್ನು ಉತ್ತರ ದೇಶದಿಂದ ಕರೆತಂದು ಶೃಂಗೇರಿಯಲ್ಲಿ ನೆಲೆಗೊಳಿಸಿದ್ದೇಕೆ?
       ಶೃಂಗೇರಿಯ ಬಗ್ಗೆ ಎರಡು ಬಹುಶ್ರುತವಾದ ಕಥೆಗಳಿವೆ. ಒಂದು ಚಿದ್ವಿಲಾಸೀಯ ಶಂಕರವಿಜಯದ್ದು. "ಶಾಲೂರೀ ಮತಿಗರ್ಭಭಾರವಿಷಹಾಂ ಸದ್ಯಃ ಪ್ರಸೂತ್ಯುನ್ಮುಖೀಂ ತೀವ್ರೋದಗ್ರದಿವಾಕರಾತಪಪರಿಕ್ಲಾಂತಾಮ್ | ಭುಜಂಗೀ ಫಣಾಮಾಸ್ತೀರ್ಯಾತಪವಾರಣಾಯ ಪರಿತಃ ಪಾಂತೀಂ ದೃಶಾಲೋಕತ ||" ಆಚಾರ್ಯರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಬಿಸಿಲ ಬೇಗೆಯನ್ನು ತಾಳಲಾರದೆ ಬಳಲಿದ್ದ ಪ್ರಸವವೇದನೆಯ ಸ್ಥಿತಿಯಲ್ಲಿದ್ದ ಕಪ್ಪೆಯೊಂದಕ್ಕೆ ಹಾವೊಂದು ಹೆಡೆಬಿಚ್ಚಿ ನೆರಳು ನೀಡುತ್ತಿತ್ತಂತೆ. ಈ ಅದ್ಭುತವನ್ನು ಕಂಡ ಶಂಕರರು ಪ್ರಾಣಿಗಳು ವೈರತ್ವವನ್ನು ಮರೆತ ಸ್ಥಳದಲ್ಲೇ ಸರಸವಾಣಿಯನ್ನು ನೆಲೆಗೊಳಿಸಿದರಂತೆ. ಹೆಣುಕಪ್ಪೆ ಮರಿಗಳನ್ನು ಹೆರುವುದಿಲ್ಲವೆಂದು ಚಿದ್ವಿಲಾಸೀಯಕಾರನಿಗೆ ಯಾರೂ ಹೇಳಿರಲಿಲ್ಲವೇನೋ ! 
      ಶೃಂಗೇರಿಯಲ್ಲಿ ಶಾರದಾ ಸ್ಥಾಪನೆಯಾದುದರ ಬಗ್ಗೆ ಸರ್ವ ಗ್ರಂಥಗಳಲ್ಲೂ ಒಮ್ಮತಾಭಿಪ್ರಾಯವಿರುವುದಾದರೂ ಅಲ್ಲಿ ಶಂಕರರು ಮಠವನ್ನು ನಿರ್ಮಿಸಿದ ಬಗ್ಗೆ ಸ್ವತಃ ಶೃಂಗೇರಿ ಗುರುಪರಂಪರೆಯ ಮಾಧವ ವಿದ್ಯಾರಣ್ಯರೇ ರಚಿಸಿದರೆಂದು ಭಾವಿಸಲಾಗುವ ಮಾಧವೀಯದಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲ.  ಶೃಂಗೇರಿಯನ್ನು ಹೊಗಳಲೋಸುಗ ಒಂದು ಅಧ್ಯಾಯವನ್ನು ಮೀಸಲಿಟ್ಟ ಆನಂದಗಿರೀಯ ಕೊನೆಯೊಂದು ಭಾಗದಲ್ಲಿ ಮಾತ್ರ ಶಂಕರರು ಇಲ್ಲಿ ಮಠವೊಂದನ್ನು ಸ್ಥಾಪಿಸಿ ವಿದ್ಯಾಪೀಠವನ್ನು ಏರ್ಪಡಿಸಿದರು ಎಂದು ಮುಗಿಸುತ್ತಾನೆ. ಇದ್ದುದರಲ್ಲಿ ಚಿದ್ವಿಲಾಸೀಯಕಾರನೇ ಪರವಾಗಿಲ್ಲ. ಒಟ್ಟೂ ೩೨ ಅಧ್ಯಾಯಗಳಲ್ಲಿ ನಾಲ್ಕು ಅಧ್ಯಾಯಗಳನ್ನು ಶೃಂಗೇರಿ ಮಠದ ಬಗೆಗಿನ ವಿಸ್ತಾರವಾದ ಮಾಹಿತಿಗಾಗಿಯೇ ಮೀಸಲಿದಲಾಗಿದೆ. ಕೆಲವು ಶಂಕರವಿಜಯಗಳ ಉಲ್ಲೇಖ ಹಾಗೂ ಬಹುಜನರ ನಂಬಿಕೆಯೆಂಬುದನ್ನು ಬಿಟ್ಟರೆ ಶೃಂಗೇರಿ ಮಠ ಸ್ಥಾಪನೆಯ ಬಗ್ಗೆ ಶಾಸನಾಧಾರಗಳೂ ಇಲ್ಲ. ೧೩೪೫ರ ವೀರಹರಿಹರ ಒಡೆಯರ ಶಾಸನದಲ್ಲೂ ’ಭಾರತೀತೀರ್ಥ ಶ್ರೀಪಾದರು ಶೃಂಗೇರಿಯ ತೀರ್ಥವಾಸದಲ್ಲಿ ಅನುಷ್ಟಾನಮಾಡಲಿಕ್ಕೆ’ ಎಂದಿದೆಯೇ ಹೊರತೂ ಶಾರದಾಪೀಠದ ಪ್ರಸ್ತಾಪವಿಲ್ಲ.
ಇನ್ನು ತುಂಗಭದ್ರೆಯನ್ನು ಬಿಟ್ಟರೂ ರಾಮಕ್ಷೇತ್ರಕ್ಕೂ ವರಾಹ ದೇವತೆಗೂ ಶೃಂಗೇರಿಗೂ ಇರುವ ಸಂಬಂಧ ಅಗೋಚರವೇ.
ದಂಷ್ಟ್ರಾಭ್ಯಾಂ ನಿಸೃತೇ ಘೋರೇತರಾ ಭೂಚ್ಚ ನದೀದ್ವಯಂ
ತುಂಗಭದ್ರೇತಿ ವಿಖ್ಯಾತಾ ನದೀನಾಂ ಪ್ರವರಾ ಶುಭಾ
ವೇದಪಾದೋದ್ಭವೇ ದೇವೀ ಶ್ರೀ ಶೈಲೋತ್ತುಂಗ ಗಾಮಿನಿ
ತುಂಗಭದ್ರೇತಿ ವಿಖ್ಯಾತಾ ಮಹಾಪಾತಕನಾಶಿನೀ ||
ಎಂಬ ವಾಕ್ಯಗಳು ಬ್ರಹ್ಮಾಂಡಪುರಾಣದಲ್ಲಿವೆ. ಮಹಾವಿಷ್ಣುವು ವರಾಹಾವತಾರವನ್ನು ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸುತ್ತಾನೆ. ಅನಂತರ ಸಹ್ಯ ಪರ್ವತಕ್ಕೆ ಬಂದು ದಣಿವಾರಿಸಿಕೊಂಡನಂತೆ. ಆಗ ಆತನ ಎರಡು ದಾಡೆಗಳಿಂದ ಸುರಿದ ಬೆವರು ನದಿ ರೂಪವನ್ನು ತಳೆದು ಹರಿಯತೊಡಗಿತಂತೆ. ಈ ಸ್ಥಳವನ್ನು ವೇದಪಾದ ಎಂದು ಕರೆಯುತ್ತಾರೆ. ಚಿಕ್ಕಮಗಳೂರಿನ ಕುದುರೆಮುಖದ ಹತ್ತಿರ ವೇದಪಾದ ಎಂಬ ಸ್ಥಳವೂ ವರಾಹಮೂಲ ಎಂಬ ಪ್ರದೇಶವೂ ಇವೆ. ಅಲ್ಲಿ ವರಾಹದ ದಾಡೆಗಳ ಆಕೃತಿಯಲ್ಲಿರುವ ಬಂಡೆಗಳಿಂದ ಎರಡು ನದಿಗಳು ಹುಟ್ಟುತ್ತವೆ. ಎಡದಾಡೆಯಿಂದ ತುಂಗಾ ನದಿಯೂ ಬಲದಾಡೆಯಿಂದ ಭದ್ರಾ ನದಿಯೂ ಹುಟ್ಟಿತೆಂಬುದು ಬ್ರಹ್ಮಾಂಡಪುರಾಣದ ಕಥೆ.
ವರಾಹ ವಾಮದಂಷ್ಟ್ರಾಸ್ತು ತುಂಗಾ ತುಂಗಫಲಪ್ರದಾ |
ಸಮುದ್ಭೂತಾ ನೃಪಶ್ರೇಷ್ಠ ಭದ್ರಾ ದಕ್ಷಿಣದಂಷ್ಟ್ರದಃ ||
ಈ ಎರಡೂ ನದಿಗಳು ಮುಂದೆ ಶಿವಮೊಗ್ಗದಿಂದ ೨೦ ಕಿಮೀ ದೂರದ ಕೂಡಲಿ ಎಂಬ ಸ್ಥಳದಲ್ಲಿ ಸಂಗಮವಾಗುತ್ತವೆ. ಈ ಊರನ್ನು ಪುರಾಣಗಳು ಯಮಳ ಪುರಿಯೆಂದೂ, ದ್ರೋಣಪರ್ವತವೆಂದೂ, ಕೂಡಲಿಯೆಂದೂ ಕರೆದಿವೆ.
ತುಂಗಾನಾರಾಯಣಃ ಸಾಕ್ಷಾತ್ ಭದ್ರಾದೇವೋ ಮಹೇಶ್ವರಃ |
ತುಂಗಭದ್ರಾತ್ಮಕಂ ವಿದ್ಧಿ ಹರಿಶಂಕರಯೋರ್ವಪುಃ ||
ತುಂಗೆಯು ಸಾಕ್ಷಾತ್ ಹರಿಯ ಅಂಶವೂ, ಭದ್ರೆಯು ಹರನ ಅಂಶವೂ ಆಗಿರುವುದರಿಂದ ಅವೆರಡೂ ಸಂಗಮಿಸುವ ಕೂಡಲಿಗೆ ಹರಿಹರಕ್ಷೇತ್ರವೆಂಬ ಹೆಸರೂ ಇದೆ.
       ಸ್ಕಾಂದಪುರಾಣದ ಪ್ರಕಾರ ಪಟ್ಟಾಭಿಷೇಕದ ನಂತರ ಶ್ರೀರಾಮ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಒಂದು ದಿನ ಬೆಳಿಗ್ಗೆ ಉದ್ಯಾನದಲ್ಲಿ ಅಡ್ಡಾಡುತ್ತಿರುವಾಗ ತನ್ನನ್ನು ಕಪಿಯ ಆಕೃತಿಯ ನೆರಳೊಂದು ಅನುಸರಿಸಿ ಬರುವಂತೆ ಆತನಿಗೆ ಕಂಡಿತು. ಆಶ್ಚರ್ಯವೂ ಆತಂಕವೂ ಉಂಟಾಗಿ ಶ್ರೀರಾಮ ವಸಿಷ್ಟರಲ್ಲಿ ಈ ವಿಷಯವನ್ನು ತಿಳಿಸಿದ. ಆಗ ಅವರು ಆ ಕಪಿಯ ನೆರಳು ವಾಲಿಯ ಪ್ರೇತವೆಂದೂ, ಪ್ರೇತಬಾಧೆಯನ್ನು ಕಳೆಯಲು ಹರಿಹರಕ್ಷೇತ್ರದಲ್ಲಿ ಶಿವನನ್ನು ಪೂಜಿಸಲು ಸೂಚಿಸುತ್ತಾರೆ. ತಕ್ಷಣ ರಾಮ ತುಂಗಭದ್ರಾ ನದಿ ಸಂಗಮದ ಯಮಳಪುರಿಗೆ ಬಂದು ಸ್ನಾನಮಾಡಿ ದಡದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅರ್ಚಿಸಿದನಂತೆ. ರಾಮ ಸ್ಥಾಪಿಸಿದ ಲಿಂಗವನ್ನು ವಸಿಷ್ಟರು ಶ್ರೀರಾಮೇಶ್ವರನೆಂದು ನಾಮಕರಣಗೈದರು. ಅಲ್ಲಿಗೆ ಮಠಾಮ್ನಾಯಗಳಲ್ಲಿ ಉಲ್ಲೇಖಿತವಾದ ತುಂಗಭದ್ರಾ, ವರಾಹ ಹಾಗೂ ರಾಮಕ್ಷೇತ್ರಗಳು ಶೃಂಗೇರಿಗಿಂತ ಕೂಡಲಿಗೇ ಹೆಚ್ಚು ಹೊಂದುತ್ತವೆ ಎಂದಾಯಿತು.
ತುಂಗಭದ್ರಾ ಸಂಗಮ
ರಾಮೇಶ್ವರ ದೇವಾಲಯ

       ಹಾಗಾದರೆ ಶಂಕರರು ಸ್ಥಾಪಿಸಿದ ಮೂಲ ಶೃಂಗೇರಿ ಮಠ ಕೂಡಲಿಯಲ್ಲಿತ್ತೇ? ಇದಕ್ಕೆ ಉತ್ತರ ನೀಡುವುದು ನಿಜಕ್ಕೂ ಕಷ್ಟವೇ! ಸಿಗುವ ಅಲ್ಪ ದಾಖಲೆಗಳನ್ನು ಗಮನಿಸಿದರೆ ಶೃಂಗೇರಿಯಲ್ಲಿ ರಾಮಚಂದ್ರಭಾರತಿಗಳ ನಂತರ ಬಂದ ನೃಸಿಂಹಭಾರತಿಗಳೆಂಬುವವರು ಉತ್ತರ ಭಾರತಕ್ಕೆ ತೀರ್ಥಯಾತ್ರೆಗೆ ಹೋಗಿದ್ದರಂತೆ. ಹೋಗುವಾಗ ತಮ್ಮ ಶಿಷ್ಯನೊಬ್ಬನಿಗೆ ವಿದ್ಯಾರಣ್ಯಭಾರತಿಯೆಂದು ನಾಮಕರಣ ಮಾಡಿ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಹೋದರು. ಅದೇ ಸಮಯದಲ್ಲಿ ಅಂದರೆ ಕ್ರಿ.ಶ ೧೫೬೫ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರದ ಅರಸರು ಸೋತು ಸಾಮ್ರಾಜ್ಯ ನಿರ್ನಾಮವಾಯಿತು. ವಿಜಯನಗರ ಅರಸರ ಗೌರವಕ್ಕೆ ಪಾತ್ರವಾಗಿದ್ದ ಧರ್ಮಪೀಠಗಳೆಲ್ಲ ನಿರಾಶ್ರಿತವಾದವು. ಪರಿಣಾಮ ಮುಸ್ಲೀಮರ ದಬ್ಬಾಳಿಕೆ ರಾಜ್ಯದಲ್ಲಿ ಹೆಚ್ಚಾಯ್ತು. ಇದೇ ಕಾರಣಗಳಿಂದ ವಿದ್ಯಾರಣ್ಯಭಾರತಿಗಳು ಶೃಂಗೇರಿಯನ್ನು ಬಿಟ್ಟು ಕೂಡಲಿಗೆ ಬಂದು ನೆಲೆಸಿದರು. ಇತ್ತ ಪರ್ಯಟನೆಗೆ ಹೋದವರು ಹನ್ನೆರಡು ವರ್ಷಗಳಾದರೂ ಹಿಂದಿರುಗಲಿಲ್ಲ. ಬಹುಕಾಲ ಪೀಠವನ್ನು ಪೀಠಾಧಿಪತಿಯಿಲ್ಲದೇ ಬಿಡುವುದು ಸರಿಯಲ್ಲವೆಂದು ಊರ ಜನರೆಲ್ಲ ಸೇರಿ ಇನ್ನೊಬ್ಬ ಸಂನ್ಯಾಸಿಗೆ ಪಟ್ಟಕಟ್ಟಿದರು.  ಇದಾಗಿ ಸುಮಾರು ಸಮಯದ ನಂತರ ಇಪ್ಪತ್ತು ವರ್ಷಗಳ ತೀರ್ಥಯಾತ್ರೆಯನ್ನು ಮುಗಿಸಿ ಹಳೆಯ ಸ್ವಾಮಿಗಳ ಆಗಮನವಾಯ್ತು.  ಊರವರೆಲ್ಲ ಹೊಸ ಸ್ವಾಮಿಗಳಿಗೆ ಪಟ್ಟಕಟ್ಟಿದ ವಿಷಯ ತಿಳಿದು ನೃಸಿಂಹ ಭಾರತಿಗಳು ಕೂಡಲಿಯಲ್ಲೇ ನೆಲೆಸುವ ನಿರ್ಧಾರ ಕೈಗೊಂಡರು. ಪರಿಣಾಮವಾಗಿ ಸ್ವಾಮಿಗಳ ಜೊತೆ ಬಂದಿದ್ದ ಶೃಂಗೇರಿಯ ಪರಿವಾರ ದೇವರುಗಳೆಲ್ಲ ಕೂಡಲಿಯಲ್ಲೇ ಉಳಿದುಕೊಂಡವು. ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಈ ಕಥೆ ಸತ್ಯವೇ. ಆದರೆ ಶಂಕರವಿಜಯಗಳಲ್ಲಿ ಅವುಗಳಿಗಿಂತ ಮೊದಲೇ ಶೃಂಗೇರಿಯ ಬದಲು ಕೂಡಲಿಯ ಉಲ್ಲೇಖ ಸಿಗಲು ಕಾರಣವೇನೆಂಬುದಕ್ಕೆ ಸಮಂಜಸ ವ್ಯಾಖ್ಯಾನಗಳು ದೊರಕುತ್ತಿಲ್ಲ. ಕೆಲ ಐತಿಹ್ಯಗಳ ಪ್ರಕಾರ ಮೂಲತಃ ಕೂಡಲಿಯಲ್ಲೇ ಇದ್ದ ಮಠವು ವಿದ್ಯಾರಣ್ಯರ ಕಾಲದಲ್ಲಿ ಶೃಂಗೇರಿಗೆ ಸ್ಥಳಾಂತರಗೊಂಡಿತು. ಶೃಂಗೇರಿ ಪರಂಪರೆಯಲ್ಲಿ ಭಾರತೀ ಎಂಬ ಉಪಾಧಿ ಶುರುವಾಗುವುದು ವಿದ್ಯಾರಣ್ಯರ ನಂತರವೇ. ಕೂಡಲಿಯಲ್ಲಿ ಶಂಕರರು ಸ್ಥಾಪಿಸಿದ ನಿಂತ ಭಂಗಿಯಲ್ಲಿರುವ  ಉಭಯಭಾರತಿ ಅಥವಾ ಶಾರದೆಯ ಮೂರ್ತಿಯನ್ನು ಈಗಲೂ ನೋಡಬಹುದು. ವಾಸ್ತುಶಿಲ್ಪದ ಪ್ರಕಾರ ಇಂಥ ಮಾದರಿ ಬಹು ಅಪರೂಪದ್ದು. ಅದೇ ಶೃಂಗೇರಿಯಲ್ಲಿರುವುದು ಕುಳಿತ ಭಂಗಿಯ ಶಾರದೆ. ವಿದ್ಯಾರಣ್ಯರು ಹಂಪಿಯ ವಿರೂಪಾಕ್ಷ ಮಠದಲ್ಲಿ ಸ್ಥಾಪಿಸಿದ ಶಾರದೆಯೂ ಕುಳಿತ ಭಂಗಿಯಲ್ಲೇ ಇದೆ. ಪ್ರಾಯಶಃ ಮೊದಲು ಕೂಡಲಿಯಲ್ಲಿದ್ದ ಮಠ ಕಾರಣಾಂತರಗಳಿಂದ ಶೃಂಗೇರಿಗೆ ಹೋಗಿ ಪುನಃ ನೃಸಿಂಹಭಾರತಿಗಳ ಕಾಲದಲ್ಲಿ ಹಿಂದಿರುಗಿ ಕೂಡಲಿಗೇ ಬಂದಿರಬಹುದು. ಇರಲಿ, ಋಷಿಮೂಲ ಕೆದಕದಿದ್ದಷ್ಟೂ ಕ್ಷೇಮವೇ.
       ಶಾಂಕರ ಪರಂಪರೆಯ ಸಂನ್ಯಾಸಿಗಳ ಹೆಸರಲ್ಲಿ ಒಂದು ವಿಶೇಷತೆಯುಂಟು. ಶೃಂಗೇರಿ ಮಠದ ಈಗಿನ ಪೀಠಾಧಿಪತಿಗಳು ಭಾರತೀ ತೀರ್ಥ ಶ್ರೀಪಾದರು, ಅವರ ಶಿಷ್ಯರು ವಿಧುಶೇಖರ ಭಾರತಿ. ಸಾಧಾರಣವಾಗಿ ಭಾರತಿ  ಎನ್ನುವ ಉಪಾಧಿ ಶೃಂಗೇರಿ ಮಠದ ಜಗದ್ಗುರುಗಳಿಗುಂಟು. ಸ್ವರೂಪಾನಂದ ಸರಸ್ವತಿಗಳು ದ್ವಾರಕಾ ಮಠದ ಈಗಿನ ಪೀಠಾಧಿಪತಿಗಳು. ಪುರಿಗೆ ಈಗ ನಿಶ್ಚಲಾನಂದ ತೀರ್ಥ, ಅವರ ಹಿಂದೆ ನಿರಂಜನ ದೇವ ತೀರ್ಥರು. ಜ್ಯೋತಿರ್ಮಠಕ್ಕೆ ಹಿಂದಿನ ಪೀಠಾಧಿಪತಿಗಳಾಗಿದ್ದವರು ಕೃಷ್ಣಬೋಧಾಶ್ರಮರು. ನಮ್ಮಲ್ಲಿ ಅಡ್ಡಹೆಸರುಗಳಿದ್ದಂತೆ ಚತುರಾಮ್ನಾಯಗಳ ಮಠಾಧಿಪತಿಗಳ ಕೊನೆಯ ಹೆಸರು ತೀರ್ಥ, ಭಾರತೀ ಇತ್ಯಾದಿಗಳಿಂದ ಕೊನೆಯಾಗುತ್ತವೆ.  ಕಂಚಿ ಮಠದಲ್ಲೂ ಹಾಗೆ. ಅದರ ಪೀಠಾಧಿಪತಿಗಳ ಹೆಸರು ಇಂದ್ರಸರಸ್ವತಿಯಿಂದ ಕೊನೆಯಾಗುತ್ತದೆ. ’ಏಷಾಂ ನಾಮ ತು ವಿಖ್ಯಾತಮಿಂದ್ರಪೂರ್ವಾಸರಸ್ವತೀ’ ಎಂಬ ವಚನವಿದೆ. ಜಯೇಂದ್ರ ಸರಸ್ವತಿ ಈಗಿನ ಕಂಚಿಶ್ರೀ. ಶಂಕರರು ಅನಾರೋಗ್ಯಪೀಡಿತರಾದ ಸುರೇಶ್ವರರ ಸುಶ್ರೂಷೆಗೆ ಅಶ್ವಿನಿದೇವತೆಗಳ ಸಹಾಯವನ್ನು ಪಡೆದಾಗ ಸಿಟ್ಟಿಗೆದ್ದ ಇಂದ್ರ ತನ್ನ ವಜ್ರಾಯುಧವನ್ನು ಅಶ್ವಿನಿದೇವತೆಗಳ ಮೇಲೆ ಪ್ರಯೋಗಿಸಿದನಂತೆ.  ಶಂಕರರ ತಪೋಬಲದಿಂದ ಅದು ಮುಂದಕ್ಕೆ ಚಲಿಸದೇ ಹೋಯಿತು. ಆಚಾರ್ಯರೆದುರು ಸೋಲೊಪ್ಪಿದ ಇಂದ್ರ ತನ್ನ ಬಿರುದನ್ನು ಜಗದ್ಗುರುಗಳಿಗೆ ನೀಡಿದನಂತೆ.(ಇಂದ್ರ ಎನ್ನುವುದು ಬಿರುದು ಅಥವಾ ಪಟ್ಟವೇ ಹೊರತೂ ವ್ಯಕ್ತಿಯ ಹೆಸರಲ್ಲವೆಂಬುದು ಗಮನಿಸತಕ್ಕ ವಿಚಾರ. ಈಗ ಇಂದ್ರಪದವಿಯಲ್ಲಿರುವವನು ಜಯಂತೋ ನಾಮ ಇಂದ್ರಃ). ಕಾಶ್ಮೀರದಲ್ಲಿ ಆಚಾರ್ಯರು ಸರಸ್ವತಿಯನ್ನು ಜಯಿಸಿದ್ದರಿಂದ ಸರಸ್ವತಿ ಎಂಬ ಬಿರುದೂ ಅವರಿಗಂಟಿಕೊಂಡಿತು.
ಈ ಉಪಾಧಿಯಗಳ ಕುರಿತು ಮಠಾಮ್ನಾಯಶಾಸನದಲ್ಲಿ ವಿವರವಾದ ಉಲ್ಲೇಖವಿದೆ.
ತೀರ್ಥಾಶ್ರಮವನಾರಣ್ಯಗಿರಿಪರ್ವತಸಾಗರಾಃ |
ಸರಸ್ವತೀ ಭಾರತೀ ಚ ಪುರೀ ನಾಮಾನಿ ವೈ ದಶಃ ||
ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ, ಸರಸ್ವತೀ, ಭಾರತೀ ಹಾಗೂ ಪುರಿ ಎಂಬುದು ಶಂಕರರ ದಶನಾಮಿ ಪರಂಪರೆಯ ಸಂನ್ಯಾಸಿಗಳ ಬಿರುದು ಅಥವಾ ಉಪಾಧಿಗಳು. ಹಾಗೆಂದು ಇವು ಸುಮ್ಮನೆ ಬರುವವಲ್ಲ. ಪ್ರತಿಯೊಂದು ಹೆಸರಿಗೂ ಒಂದೊಂದು ವೈಶಿಷ್ಟ್ಯವುಂಟು.
ತ್ರಿವೇಣಿ ಸಂಗಮೇ ತೀರ್ಥೇ ತತ್ತ್ವಮಸ್ಯಾದಿಲಕ್ಷಣೇ ||
ಸ್ನಾಯಾತ್ ತತ್ತ್ವಾರ್ಥಭಾವೇನ ತೀರ್ಥನಾಮಾ ಸೌಚ್ಯತೇ ||
- ತತ್ತ್ವಮಸಿ ಇತ್ಯಾದ ತ್ರಿವೇಣಿ ಸಂಗಮತೀರ್ಥದಲ್ಲಿ ತತ್ತ್ವಾರ್ಥಭಾವನೆಯಿಂದ ಸ್ನಾನಮಾಡುವವ ತೀರ್ಥನೆಂಬ ಉಪಾಧಿ ಪಡೆಯುತ್ತಾನೆ.
ಆಶ್ರಮಗ್ರಹಣೇ ಪ್ರೌಢ ಆಶಾಪಾಶವಿವರ್ಜಿತಃ |
ಯಾತಾಯಾತವಿನಿರ್ಮುಕ್ತ ಏಷ ಆಶ್ರಮ ಉಚ್ಯತೇ ||
- ಆಶ್ರಮಗ್ರಹಣದಲ್ಲಿ ಪ್ರೌಢನಾಗಿ ಆಶಾಪಾಶಗಳಿಂದ ಮುಕ್ತನಾಗುವವನಿಗೆ ಆಶ್ರಮನೆಂದು ಹೆಸರು.
ಸುರಮ್ಯೇ ನಿರ್ಜನೇ ಸ್ಥಾನೇ ವನೇ ವಾಸಂ ಕರೋತಿ ಯಃ |
ಆಶಾಪಾಶವಿನಿರ್ಮುಕ್ತೋ ವನನಾಮಾ ಸ ಉಚ್ಯತೇ ||
- ರಮಣೀಯವಾದ ನಿರ್ಜನವಾದ ವನದಲ್ಲಿ ವಾಸಮಾಡಿಕೊಂಡು ಆಶಾಪಾಶಗಳಿಂದ ಬಿಡುಗಡೆಯಾಗುವವನಿಗೆ ವನನೆನ್ನುವರು.
ಅರಣ್ಯೇ ಸಂಸ್ಥಿತೋ ನಿತ್ಯಮಾನಂದೇ ನಂದನೇ ವನೇ |
ತ್ಯಕ್ತ್ವಾ ಸರ್ವಮಿದಂ ವಿಶ್ವಮರಣ್ಯಃ ಪರಿಕೀರ್ತ್ಯತೇ ||
- ವಿಶ್ವವೆಲ್ಲವನ್ನೂ ತ್ಯಾಗಮಾಡಿ ಆನಂದವನವೆಂಬ ಅರಣ್ಯದಲ್ಲಿ ಯಾವನು ಸದಾ ವಾಸಿಸುತ್ತಾನೋ ಅವನು ಅರಣ್ಯನೆಂಬ ಉಪಾಧಿಗೆ ಪಾತ್ರನಾಗುತ್ತಾನೆ.
ವಾಸೋ ಗಿರಿವನೇ ನಿತ್ಯಂ ಗೀತಾಧ್ಯಯನತತ್ಪರಃ |
ಗಂಭೀರಾಚಲ ಬುದ್ಧಿಶ್ಚ ಗಿರಿನಾಮಾ ಸ ಉಚ್ಯತೇ ||
- ಗಿರಿಗಳಲ್ಲಿ ವಾಸಮಾಡುತ್ತಾ ಗೀತಾಧ್ಯಯನನಿರತನಾದ ಗಂಭೀರವಾದ ನಿಶ್ಚಲ ಬುದ್ಧಿಯುಳ್ಳವನು ಗಿರಿಯೆನಿಸಿಕೊಳ್ಳುತ್ತಾನೆ.
ವಸೇತ್ ಪರ್ವತಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |
ಸಾರಾಸಾರಂ ವಿಜಾನಾತಿ ಪರ್ವತಃ ಪರಿಕೀರ್ತಿತಃ ||
ಪರ್ವತಗಳ ತಪ್ಪಲಲ್ಲಿ ವಾಸಮಾಡುತ್ತ ಪ್ರೌಢವಾದ ಜ್ಞಾನವನ್ನು ಧರಿಸಿಕೊಂಡು ಶಾಸ್ತ್ರಗಳ ಸಾರಾಸಾರವನ್ನು ತಿಳಿದುಕೊಂಡವನು ಪರ್ವತನೆನಿಸಿಕೊಳ್ಳುತ್ತಾನೆ.
ತತ್ತ್ವಸಾಗರಗಂಭೀರೋ ಜ್ಞಾನರತ್ನಪರಿಗ್ರಹಃ |
ಮರ್ಯಾದಾಂ ನೈವ ಲಂಘತೇ ಸಾಗರಃ ಪರಿಕೀರ್ರ್ತ್ಯತೇ ||
ತತ್ತ್ವಸಾಗರದಷ್ಟು ಆಳವುಳ್ಳವನಾಗಿ ಜ್ಞಾನರತ್ನಗಳ ಪರಿಗ್ರಹವುಳ್ಳವನಾಗಿ ಆಶ್ರಮ ಮರ್ಯಾದೆಯನ್ನು ಲಂಭಿಸದವನು ಸಾಗರನೆಂದು ಹೆಸರಾಗುತ್ತಾನೆ.
ಸ್ವರಜ್ಞಾನರತೋ ನಿತ್ಯಂ ಸ್ವರವಾದೀ ಕವೀಶ್ವರಃ |
ಸಂಸಾರಸಾಗರೇ ಸಾರಾಭಿಜ್ಞೋ ಯಃ ಸ ಸರಸ್ವತೀ ||
ಯಾವಾಗಲೂ ಓಂಕಾರದಲ್ಲಿ ನಿರತನಾಗಿ ಜ್ಞಾನಶ್ರೇಷ್ಟನಾಗಿ ಸಂಸಾರಸಾಗರವನ್ನು ದಾಟಿದವನು ಸರಸ್ವತಿ.
ವಿದ್ಯಾಭಾರೇಣ ಸಂಪೂರ್ನಃ ಸರ್ವಭಾರಂ ಪರಿತ್ಯಜನ್ |
ದುಃಖಭಾರಂ ನ ಜಾನಾತಿ ಭಾರತೀ ಪರಿಕೀರ್ತ್ಯತೇ ||
ಸರ್ವಭಾರವನ್ನೂ ಪರಿತ್ಯಾಗಮಾಡಿ ಕೇವಲ ವಿದ್ಯಾಭಾರದಿಂದ ಸಂಪೂರ್ಣನಾಗಿ ದುಃಖಭಾರವನ್ನು ಅರಿಯದವನಾಗುತ್ತಾನೋ ಆತ ಭಾರತೀ.
ಜ್ಞಾನತತ್ತ್ವೇನ ಸಂಪೂರ್ಣಃ ಪೂರ್ಣತತ್ತ್ವಪದೇ ಸ್ಥಿತಃ |
ಪರಬ್ರಹ್ಮರತೋ ನಿತ್ಯಂ ಪುರೀ ನಾಮಾ ಸ ಉಚ್ಯತೇ ||
 -ಜ್ಞಾನತತ್ವದಿಂದ ಪೂರ್ಣನಾಗಿ ನಿತ್ಯವೂ ಪರಬ್ರಹ್ಮನನ್ನೇ ಧ್ಯಾನಿಸುವವನು ಪುರಿ ಎಂದು ಕರೆಯಲ್ಪಡುತ್ತಾನೆ..
ಮೊದಲೆಲ್ಲ ಇಂಥಿಂಥ ಯೋಗ್ಯತೆಯುಳ್ಳವರೆಂದು ನೋಡಿದ ಮೇಲೆಯೇ ಈ ಹೆಸರನ್ನು ಕೊಡುತ್ತಿದ್ದರೆಂಬುದು ಸ್ಪಷ್ಟ. ಭಾರತೀ ಪರಂಪರೆಯ ಶೃಂಗೇರಿಯಲ್ಲಿ ಅರಣ್ಯ ಉಪಾಧಿಯ ವಿದ್ಯಾರಣ್ಯರೂ ಮಠಾಧಿಪತಿಗಳಾಗಿದ್ದರು. ಜ್ಯೋತಿರ್ಮಠದಲ್ಲಿ ಸರಸ್ಚತಿ ಉಪಾಧಿಯವರೂ ಇದ್ದರು.

ಕೊನೆಹನಿ:ಕ್ರಿ.ಶ ೧೭೯೨ರ ಸುಮಾರಿಗೆ ಇಂಗ್ಲೀಷರಿಗೂ ಟಿಪ್ಪೂ ಸುಲ್ತಾನನಿಗೂ ಯುದ್ಧವಾಯಿತು. ಆಗ ಇಂಗ್ಲಿಷರಿಗೆ ಸಹಾಯ ಮಾಡುವುದಕ್ಕೆ ಸವಾಯಿ ಮಾಧವರಾವ ಪೇಶ್ವೆಯು ತನ್ನ ಸರದಾರನಾದ ಪರಶುರಾಮ ಭಾವೂ ಎನ್ನುವವನ ಮುಂದಾಳತ್ವದಲ್ಲಿ ಸೇನೆಯನ್ನು ಕಳಿಸಿದ. ಈ ಸೈನ್ಯವು ಕೂಡಲಿ ಮಠದ ಮೇಲೆ ಆಕ್ರಮಣ ಮಾಡಿ ಮಠವನ್ನು ಲೂಟಿ ಹೊಡೆದದ್ದಲ್ಲದೇ ಅದನ್ನು ಸುಟ್ಟು ಹಾಕಿದರು. ಗವರ್ನರ್ ಕಾರ್ನವಾಲೀಸನ ಪ್ರತಿನಿಧಿಯಾದ ಬುಚನನ್ ಎಂಬ ಇತಿಹಾಸಕಾರ ಈ ಘಟನೆಯ ಬಗ್ಗೆ ಹೀಗೆ ಬರೆದಿದ್ದಾನೆ. "Among those the most conspicuous of whom I have heard is the swamy of Kudli", "Marathas did not even spare the Kudli swamy. His matham or college was plundered and burnt, but this cost the Peshwa dear, the enraged swamy geld out threats of instant excommunication." ಮರಾಠರ ಪುಂಡಾಟಿಕೆ ಅಷ್ಟಕ್ಕೇ ನಿಲ್ಲಲಿಲ್ಲ. ರಘುನಾಥರಾವ ಪಟವರ್ಧನನೆಂಬ ದಳಪತಿಯ ನೇತೃತ್ವದಲ್ಲಿ ಶೃಂಗೇರಿ ಮಠವನ್ನೂ ಕೊಳ್ಳೆ ಹೊಡೆದು ಶಾರದಾಂಬೆಯ ದೇವಾಲಯಕ್ಕೆ ಹಾನಿ ಮಾಡಲಾಯ್ತು. ಆಗ ಹಾನಿಗೊಳಗಾದ ಶಾರದಾ ಮೂರ್ತಿ ಈಗಲೂ ವಿದ್ಯಾಶಂಕರ ದೇವಳದಲ್ಲಿರುವುದಂತೆ. ಮರಾಠರ ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಅಂದಿನ ಜಗದ್ಗುರು ಮೂರನೇ ಸಚ್ಚಿದಾನಂದ ಭಾರತಿಗಳು ಶೃಂಗೇರಿಯನ್ನು ತೊರೆದು ಕಾರ್ಕಳದಲ್ಲಿ ಆಶ್ರಯ ಪಡೆಯಬೇಕಾಯ್ತು. ಆಶ್ಚರ್ಯವೆಂದರೆ ಎರಡೂ ಕಡೆಗಳಲ್ಲಿಯೂ ಮಠದ ಪುನರ್ನಿರ್ಮಾಣಕ್ಕೆ ಮುಂದಾಗಿ ಬಂದವನು ಟಿಪ್ಪು ಸುಲ್ತಾನ. ನಾನೂರು ರತ್ತಿಗಳಷ್ಟು ಹಣವನ್ನೂ ಶಾರದಾ ಅಮ್ಮನವರಿಗೆ ಉಡುಗೊರೆಯನ್ನೂ ಆತ ಮಠಕ್ಕೆ ಕಳುಹಿಸುತ್ತಾನೆ. ಅಷ್ಟೊಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದವ ಶೃಂಗೇರಿದ್ವಯ ಮಠಗಳಿಗೆ ಸಹಾಯ ಮಾಡಲು ಮುಂದೆ ಬಂದನೆಂಬುದು ಆಶ್ಚರ್ಯವೇ. ಅದಕ್ಕಿಂತ ಆಶ್ಚರ್ಯ ತಮ್ಮನ್ನು ತಾವು ಹಿಂದುತ್ವದ ರಕ್ಷಕರೆನಿಸಿಕೊಂಡ ಮರಾಠರ ನಡೆ. ಹಾಗೆ ನೋಡಿದರೆ ದೇವಸ್ಥಾನಗಳನ್ನು ಉರುಳಿಸುವ ಮತದ್ವೇಷ ಕೇವಲ ಮುಸ್ಲೀಮರೆಗೆ ಕಟ್ಟಿಟ್ಟದ್ದೇನಲ್ಲ. ಮಲ್ಪೆಯ ಮಲ್ಲಿಕಾರ್ಜುನನನ್ನು ಕಿತ್ತು ಬಾವಿಗೆಸೆದು ಶಂಕರನಾರಾಯಣನನ್ನು ಪ್ರತಿಷ್ಟೆಗೊಳಿಸಲಾಗಿದೆ. ನಿಟ್ಟೂರಿನ ಸೋಮಲಿಂಗನ ಜಾಗದಲ್ಲಿ ವೇಂಕಟರಮಣ ಬಂದು ಕೂತಿದ್ದಾನೆ, ಉದ್ಯಾವರದ ಮಹಾದೇವನಿದ್ದಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದೆ, ಕುಕ್ಕೆಯ ಸುಬ್ರಹ್ಮಣ್ಯಲಿಂಗ ಸುಬ್ರಹ್ಮಣ್ಯ ಸ್ವಾಮಿಯಾಗಿ ಮತಾಂತರಗೊಂಡಿದ್ದಾನೆ. ಅಲ್ಲೇ ಇದ್ದ ಸಂಪುಟ ವಿನಾಯಕನನ್ನು ಹೊರತಳ್ಳಿ ನರಸಿಂಹನಿಗೆ ಗುಡಿ ನಿರ್ಮಿಸಲಾಗಿದೆ. ಹೊರನಾಡಿನ ಪದ್ಮಾವತಿ ಅನ್ನಪೂರ್ಣೇಶ್ವರಿಯಾಗಿದ್ದಾಳೆ. ನಮ್ಮಲ್ಲಿ ಮತದ್ವೇಷಕ್ಕೆ ಸಿಕ್ಕು ನಾಶಗೊಂಡ, ಹೆದರಿ ಮತಾಂತರಗೊಂಡ ದೇವರುಗಳು ಒಂದೇ ಎರಡೇ.