Pages

Friday, December 6, 2013

ಇಲ್ಲದ ಅಶೋಕನನ್ನು ಪ್ರಚ್ಛನ್ನ ಬೌದ್ಧನನ್ನಾಗಿಸಿದ್ಯಾರು?

 
ಅಶೋಕನ ಸಾ೦ದರ್ಭಿಕ ಚಿತ್ರ(ಕೃಪೆ: ಗೂಗಲ್)
       ಗೌತಮ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಯಲ್ಲಿ ಅತ್ಯಂತ ಹಳೆಯ ಬೌದ್ಧ ದೇಗುಲವೊಂದು ಪತ್ತೆಯಾಗಿದೆಯಂತೆ. ಇದು ಬುದ್ಧ ಬದುಕಿದ್ದ ಅವಧಿ ಬಗೆಗೆ ಇನ್ನಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ನಂಬಲಾಗುವಂತೆ ಬುದ್ಧ ಹುಟ್ಟಿದ್ದ ಕಾಲ ಕ್ರಿ.ಪೂ 483 ರಿ೦ದ 563ರ ನಡುವೆ. ಇಲ್ಲಿಯೇ ವಿವಾದ ಶುರುವಾಗುವುದು. ಈ ಕಾಲವನ್ನು ನಿಷ್ಕರ್ಷೆಗೊಳಿಸಿದ್ದು ಸಾಮ್ರಾಟ ಅಶೋಕನ ಕಾಲವನ್ನಾಧರಿಸಿ. ಮಹಾವಂಶ ಮತ್ತು ದೀಪವಂಶಗಳೆಂಬ ಸಿಂಹಳೀಯ ಕೃತಿಗಳಲ್ಲಿ ಬುದ್ಧನ ನಿರ್ವಾಣದ 218ನೇ ವರ್ಷದಲ್ಲಿ ಅಶೋಕನು ಬೌದ್ಧಮತವನ್ನು ಸ್ವೀಕರಿಸಿದನೆನ್ನಲಾಗಿದೆ. ಈ ಅಶೋಕನ ಕಾಲವನ್ನು ನಿರ್ಧರಿಸಿದ್ದು ಅವನಜ್ಜ ಚಂದ್ರಗುಪ್ತನನ್ನು ಭೇಟಿಯಾದ ಮೆಗಸ್ತನೀಸ್‌ನ ಕಾಲದಿಂದ. ಆದರೆ ಮೆಗಸ್ತನೀಸ್‌ನ ಗ್ರೀಕ್ ದಾಖಲೆಗಳಲ್ಲಿರುವ 'ಸ್ಯಾಂಡ್ರೋಕಾಟಸ್' ಎಂಬ ಹೆಸರು ಮೌರ್ಯರ ಚಂದ್ರಗುಪ್ತನದ್ದಾಗಿರದೇ ಗುಪ್ತರ ಮೊದಲ ಚಂದ್ರಗುಪ್ತನದ್ದೆನ್ನಲು ಬಲವಾದ ಆಧಾರಗಳಿವೆ. ಈ ಚಂದ್ರಗುಪ್ತ 'ಜಂಡ್ರಮಸ್‌'ನ ಮಗನೂ 'ಸ್ಯಾಂಡ್ರೋಸಿಪ್ಟಸ್‌'ನ ತಂದೆಯೆಂದಿದೆ. 'ಜಂಡ್ರಮಸ್‌' ಎಂಬುದು ಗುಪ್ತರ ಮೊದಲ ಚಂದ್ರಗುಪ್ತನ ತಾಯಿ ಚಂದ್ರಮಸ್ ಮತ್ತು  'ಸ್ಯಾಂಡ್ರೋಸಿಪ್ಟಸ್‌' ಎಂಬುದು ಚಂದ್ರಗುಪ್ತನ ಮಗನಾದ ಸಮುದ್ರಗುಪ್ತನ ಗ್ರೀಕ್ ಅಪಭೃಂಶಗಳು. ಮೆಗಸ್ತನಿಸ್ ಚಂದ್ರಗುಪ್ತನ ರಾಜಧಾನಿ 'ಪಾಲಿಬೊತ್ರಾ' ಎನ್ನುತ್ತಾನೆ. ಆದು ಗುಪ್ತರ ರಾಜಧಾನಿಯಾದ ಪಾಟಲೀಪುತ್ರವೇ ಹೊರತೂ ಮೌರ್ಯರ ಗಿರಿವ್ರಜವಲ್ಲ. ಇಂಥ ಗೊಂದಲಗಳಿಗುತ್ತರಿಸಲು ಅಶೋಕನನ್ನು ಬಣ್ಣಿಸುವ ಯಾವ ಇತಿಹಾಸಕಾರನಿಗೂ ಆಗಿಲ್ಲ.  ಬುದ್ಧನ ಕಾಲವೇ ಬದಲಾದ ಮೇಲೆ, ಮೆಗಸ್ತನಿಸ್ ಭೇಟೀಯಾಗಿದ್ದು ಚಂದ್ರಗುಪ್ತ ಮೌರ್ಯನನ್ನಲ್ಲವೆಂದ ಮೇಲೆ ಅಶೋಕ ಯಾರು? ಯಾವ ಕಾಲದಲ್ಲಿದ್ದ? ಎಂಬ ಜಿಜ್ಞಾಸೆ ಶುರುವಾಗುವುದು ಸಹಜವೇ. ಅವನ ಕಾಲ ಬದಲಾದ ಬಗ್ಗೆ ಮತ್ತೆ ನೋಡೋಣ.  
     ಈಗಿನ ವಿಷಯವೆ೦ದರೆ, ಅಶೋಕನಿದ್ದುದೇ ಹೌದೆಂದಿಟ್ಟುಕೊಳ್ಳೋಣ. ಹಾಗಾದರೆ ಆತ ಬೌದ್ಧನಾಗಿದ್ದನೇ ಅಥವಾ ಜೈನನಾಗಿದ್ದನೇ ಎಂದು. ಅಶೋಕನು ಜೈನನೇ ಆಗಿರಬಹುದೆಂಬ ಊಹೆಯ ಮೊದಲ ಕಾರಣವೇ ಆತನ ಅಜ್ಜನೂ, ಮೌರ್ಯರ ಮೊದಲ ಅರಸನೂ ಆಗಿದ್ದ ಚಂದ್ರಗುಪ್ತಮೌರ್ಯನು ರಾಜ್ಯವನ್ನು ತೊರೆದು ಜೈನಸನ್ಯಾಸಿಯಾಗಿದ್ದು, ಈತನ ಮಗ ಬಿಂದುಸಾರನೂ ಜೈನಮತವನ್ನು ಸ್ವೀಕರಿಸಿದ್ದ. ಸಹಜವಾಗಿಯೇ ಜೈನಮತದ ನಂಬಿಕೆಗಳಲ್ಲೇ ಅಶೋಕ ಬೆಳೆದ. ಅವನದ್ದೆನ್ನುವ ಶಾಸನಗಳಲ್ಲಿರುವಂತೆ ಅವನಿಗೆ ಸಸ್ಯಾಹಾರದ ಬಗ್ಗೆ ಒಲವಿತ್ತು,  ಆತ ಸ್ವತಃ ಸಸ್ಯಾಹಾರಿಯಾಗಿದ್ದ, ತನ್ನ ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಷೇಧಿಸಿದ್ದನಂತೆ. ಇವೆರಡೂ ಅಪ್ಪಟ ಜೈನ ತತ್ತ್ವಗಳೇ. ಜೈನರಷ್ಟು ಪ್ರಾಣಿಪ್ರೀತಿಯನ್ನು ಬೇರಾವ ಮತದಲ್ಲೂ ಕಾಣಲು ಸಾಧ್ಯವಿಲ್ಲ. ಖರೋಷ್ತಿ ಲಿಪಿಯಲ್ಲಿ, ಗ್ರೀಕ್ ಮತ್ತು ಅರಾಮೈಕ್ ಭಾಷೆಯಲ್ಲಿರುವ ಕ೦ದಹಾರ್ ಶಾಸನ ಈತ ಮೀನುಗಾರಿಕೆಯನ್ನೂ, ಬೇಟೆಯನ್ನೂ ನಿಷೇಧಿಸಿದ್ದನೆನ್ನುತ್ತದೆ. ಇನ್ನು ಬೌದ್ಧಮತಕ್ಕೂ ಸಸ್ಯಾಹಾರಕ್ಕೂ ಎಲ್ಲಿಂದೆಲ್ಲಿಯ ಸಂಬಂಧ. ಮಹಾಪರಿನಿಬ್ಬಾಣ ಸುತ್ತ, ಮಜ್ಜಿಮ ನಿಕಾಯಗಳೇ ಇತ್ಯಾದಿಗಳಲ್ಲಿ ಉಲ್ಲೇಖಿಸಿದಂತೆ ಸ್ವತಃ ಬುದ್ಧನ ಮರಣ ಸಂಬಂಧಿಸಿದ್ದೇ ಕೊಳೆತ ಹಂದಿಮಾಂಸವನ್ನು ತಿಂದುಂಟಾದ ಅತಿಸಾರದಿಂದ. ಅಶೋಕನ ಹಿರಿಯ ಪತ್ನಿ ಬೌದ್ಧಮತೀಯಳಾದ ಶಾಕ್ಯಕುಮಾರಿ. ಈಕೆಯ ಜೋಡಿ ಮಕ್ಕಳು ಮಹೇಂದ್ರ ಮತ್ತು ಸಂಘಮಿತ್ರಾ. ಮಾತ್ರವಲ್ಲ ಈಕೆಗಿನ್ನೂ ಅನೇಕ ಮಕ್ಕಳಿದ್ದರು. ಅಶೋಕನ ಕಿರಿಯ
ಅವಲೋಕಿತೇಶ್ವರ
ಪತ್ನಿ ಜೈನಳಾದ ಪದ್ಮಾವತಿ. ಈಕೆಯ ಮಗ ಕುನಾಲನು ಅಶೋಕನ ರಾಜಾಜ್ಞೆಯ ಫಲವಾಗಿ ಕಣ್ಣುಕಳೆದುಕೊಂಡನಂತೆ. ತನ್ನ ಹಿರಿಯ ಪತ್ನಿಗೆ ಮಕ್ಕಳಿದ್ದಾಗ್ಯೂ ಸಹ ಅಶೋಕ ತನ್ನ ನಂತರ ಜೈನರಾಣಿ ಪದ್ಮಾವತಿಯ ಮೊಮ್ಮಗನೂ, ಕುನಾಲನ ಮಗನೂ ಆದಂತಹ ಸಂಪ್ರತಿಗೆ ಪಟ್ಟಕಟ್ಟಿದ್ದೇಕೆ? ಇದಕ್ಕಾತನಿಗೆ ಜೈನಮತದ ಬಗ್ಗೆ ಇದ್ದ ಅಪಾರ ಒಲವೇ ಕಾರಣವೇ? ಮಹೇಂದ್ರ ಮತ್ತು ಸಂಘಮಿತ್ರರು ಬೌದ್ಧಮತವನ್ನು ಪ್ರಸಾರಗೊಳಿಸಲು ಶ್ರೀಲಂಕಾಕ್ಕೆ ತೆರಳಿದರೆಂದು ನಂಬಲಾಗುವುದಾದರೂ ಅಶೋಕನ ಕಾಲದ ಮಾತ್ರವಲ್ಲ ಸಿಂಹಳೀಯರ ಯಾವ ದಾಖಲೆಗಳಲ್ಲೂ ಅದರ ಉಲ್ಲೇಖವಿಲ್ಲ. ಖ್ಯಾತ ಇತಿಹಾಸಕಾರ V.  A. Smith ಸೇರಿ ಅನೇಕರು ಶ್ರೀಲಂಕಾ ಮಹೇಂದ್ರನಿಂದ ಮತಾಂತರಗೊಂಡಿತೆಂಬ ವಾದವನ್ನೇ ನಿರಾಕರಿಸುತ್ತಾರೆ. ವಿದೇಶಗಳಲ್ಲಿ ಅಶೋಕನು ಧರ್ಮಪ್ರಸಾರಕ್ಕೆ ವಿದ್ವಾಂಸರನ್ನು ಕಳುಹಿಸಿದ್ದನ್ನು ಉಲ್ಲೇಖಿಸುವ ಆತನದ್ದೆನ್ನಲಾಗುವ ೨ ಮತ್ತು ೧೩ನೇ ಶಾಸನಗಳು ಈ ಕುರಿತು ಏನನ್ನೂ ತಿಳಿಸುವುದಿಲ್ಲ ಮಾತ್ರವಲ್ಲ ಅಶೋಕನ ಯಾವ ಶಾಸನಗಳಲ್ಲೂ ಅವರಿಬ್ಬರ ಹೆಸರಿಲ್ಲ. ಮೇಲಿನೆರಡೂ ಶಾಸನಗಳಲ್ಲಿ ತಂಬಪಣ್ಣಿ ಅಥವಾ ತಾಮ್ರಪರ್ಣಿಯ ತನಕ ಶ್ರವಣ ಧರ್ಮದ ಪ್ರಚಾರಕರು ತಲುಪಿದ ಹೇಳಿಕೆಯಿದೆ. ಆದರೆ ಇದಿದ್ದುದು ತಮಿಳ್ನಾಡಿನ ತಿರುನಲ್ವೇಲಿಯ ಸಮೀಪ. ಅಲ್ಲಿಗೆ ಅಶೋಕನ ಧರ್ಮಪ್ರಚಾರಕರು ತಮಿಳ್ನಾಡಿನ ತಾಮ್ರಪರ್‍ಣಿ ನದಿಯನ್ನು ದಾಟಲಿಲ್ಲವೆಂದಾಯ್ತು. ಅದೂ ಅಲ್ಲದೇ ಶ್ರವಣವೆಂಬುದು ಕೇವಲ ಬೌದ್ಧಮತ ಮಾತ್ರವಲ್ಲ. ಜೈನ, ಬೌದ್ಧ, ಚಾರ್ವಾಕ, ಅಜೀವಿಕ, ಗೋಸಲ ಸೇರಿದಂತೆ ಎಲ್ಲ ಅವೈದಿಕ ಮತಗಳೂ ಶ್ರವಣಮತಗಳೆಂದೇ ಕರೆಯಲ್ಪಡುತ್ತವೆ. ಅಶೋಕನ ಮಗ ಮಹೇಂದ್ರನು ಹುಣ್ಣಿಮೆಯ ರಾತ್ರಿಯಂದು ರಾಜಹಂಸದಂತೆ ಆಕಾಶಮಾರ್ಗವಾಗಿ ಸಿಂಹಳವನ್ನು ತಲುಪಿ, ತನ್ನ ಮೊದಲ ಭೇಟಿಯಲ್ಲೇ ಮಿಹಿಂತಲೆಯಲ್ಲಿ ಅಲ್ಲಿನ ರಾಜ ದೇವಾನಾಂಪಿಯತಿಸ್ಸನನ್ನೂ ಅವನ ನಲವತ್ತು ಸಾವಿರ ಅನುಯಾಯಿಗಳನ್ನೂ ಮತಾಂತರಿಸಿದನೆಂಬ ದೀಪವಂಸದ ಕಥೆಯು ಚಂದಮಾಮ, ಬಾಲಮಿತ್ರದಷ್ಟೇ ರಸವತ್ತಾಗಿದೆಯೇ ಹೊರತೂ ಬೇರೇನೂ ಅಲ್ಲ. ಬಿಂದುಸಾರನ ಮಕ್ಕಳ ಸಂಖ್ಯೆಯು ಒಂದೆಡೆ ೯೦, ಇನ್ನೊಂದೆಡೆ ೯೯, ಮತ್ತೊಂದೆಡೆ ೧೦೧ ಹೀಗೆ ಬೇರೆ ಬೇರೆ ಕಡೆ ಬೇರೆಬೇರೆಯಾಗಿದೆ. ಇರಲಿ ಬಿಡಿ. ತನ್ನ 90+ ಅಣ್ಣತಮ್ಮಂದಿರನ್ನೆಲ್ಲರನ್ನೂ ಕೊಂದು ಅಶೋಕ ಪಟ್ಟಕ್ಕೇರಿದ್ದ. ಬೌದ್ಧ-ಜೈನಮತಗಳು ಪರಸ್ಪರ ವಿರೋಧಿಗಳೆಂದೇ ಪರಿಗಣಿಸಲ್ಪಡುತ್ತಿದ್ದ ಆ ಕಾಲದಲ್ಲಿ ಜೈನಸಂಪ್ರದಾಯದ ಸಂಪ್ರತಿ ಪಟ್ಟಕ್ಕೇರಿದ್ದರಿಂದ ಬೌದ್ಧಾನುಯಾಯಿ ಮಹೇಂದ್ರನೇನಾದರೂ ಕೊಲ್ಲಲ್ಪಡುವ ಭಯದಿಂದ ದೇಶಬಿಟ್ಟು ತೆರಳಿರಬಹುದೇ?
      ಅಶೋಕನ ರಾಜ್ಯದಲ್ಲಿ ವೈದಿಕ, ಬೌದ್ಧ, ಜೈನ, ನಾಸ್ತಿಕ ಅಜೀವಿಕ ಮತಗಳು ಸಮಾನ ಪ್ರಾಮುಖ್ಯತೆಯನ್ನು ಪಡೆದಿದ್ದವು. ಎಲ್ಲ ಮತಗಳಿಗೂ, ಅವುಗಳ ಪ್ರಚಾರಕ್ಕೂ ಅಶೋಕ ಮಹತ್ವವನ್ನು ನೀಡಿದ್ದ. ತನ್ನ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ಮತಪಂಡಿತರುಗಳನ್ನೂ, ಮಿಶನರಿಗಳನ್ನೂ ಈತ ವಿದೇಶಗಳಿಗೆ ಕಳುಹಿಸಿದ್ದ. ಬೇರೆ ದೇಶಗಳಲ್ಲಿ ಚಿಕಿತ್ಸಾಲಯಗಳನ್ನು ಸ್ಥಾಪಿಸಿ, ಜನಸೇವೆ ಮಾಡಿ ತಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಿಕೊಳ್ಳುವ ಅಶೋಕನ ನೀತಿಯನ್ನೇ ಈಗಿನ ಕಾಲದ ಹೆಚ್ಚಿನ ಮಿಶನರಿಗಳೆಲ್ಲ ಪಾಲಿಸುತ್ತಿರುವುದು. ಸರಿಸುಮಾರು ಕ್ರಿ.ಪೂ ಮೂರನೇ ಶತಮಾನದ ಕಾಲದಲ್ಲೇ ರೋಮನ್, ಪರ್ಶಿಯನ್ ಸಾಮ್ರಾಜ್ಯಗಳಲ್ಲಿ ಋಗ್ವೇದಕಾಲದ ದೇವತೆಯಾಗಿದ್ದ ಮಿತ್ರನನ್ನು ಪೂಜಿಸುವ ರೋಮನ್ ಮಿತ್ರಾಯಿಸಮ್ ಮತ್ತು  ಪರ್ಶಿಯನ್ ಮಿತ್ರಾಯಿಸಮ್ ಎಂಬ ಮತಗಳು ಪ್ರವರ್ಧಮಾನಕ್ಕೆ ಬ೦ದವು. ಭಾರತದಿಂದ ರೋಮ್ ಸಾಮ್ರಾಜ್ಯಕ್ಕೆ ಹಬ್ಬಿದ್ದ ಮಿತ್ರಾಯಿಸಂ ಮುಂದೆ ಕ್ರೈಸ್ತ ಮತದ ಹುಟ್ಟಿಗೆ ಕಾರಣವಾಯ್ತೆಂಬ ವಾದಗಳೂ ಇವೆ. ಅಶೋಕನದ್ದೆನ್ನಲಾಗುವ ಶಾಸನಗಳಲ್ಲಿ ಐದು ಯವನ(ರೋಮನ್) ರಾಜರುಗಳ ಹೆಸರುಗಳಿವೆ. ಹಾಗೆಂದು ಅವನ ಕಾಲದ ಯಾವ ಗ್ರೀಕ್ ದಾಖಲೆಗಳಲ್ಲೂ ಅಶೋಕನ ಹೆಸರೂ ಇಲ್ಲ, ಆತನ ಬೌದ್ಧಮತದ ಬಗ್ಗೆಯೂ ಇಲ್ಲದಿರುವುದೇಕೆ? ಆದರೂ ಅವನ ಕಾಲದಲ್ಲಿ ಬೌದ್ಧಮತವು ಭಾರತದಲ್ಲಿ ವ್ಯಾಪಕವಾಗಿಯೇ ಬೆಳೆಯುತ್ತಿತ್ತೆಂದಿಟ್ಟುಕೊಳ್ಳೋಣ. ಅಶೋಕನೂ ಅದಕ್ಕೆ ಅವಕಾಶವನ್ನೂ ಆದ್ಯತೆಯನ್ನೂ ನೀಡಿದ್ದ.
ಬೌದ್ಧಿಸಂನಲ್ಲಿ ಬ್ರಹ್ಮ ಮತ್ತು ಶಿವ
ಅಧಿಕಾರಸ್ಥಾನದಲ್ಲಿರುವವರನ್ನು ಓಲೈಸುವ ಮತಪಂಡಿತರ ಚಾಳಿ ಅಂದಿನಿಂದ ಇಂದಿನವರೆಗೂ ಹಾಗೇ ಉಳಿದುಕೊಂಡು ಬಂದಿದೆ. ನಿನ್ನೆ ಮೊನ್ನೆ ಯಡಿಯೂರಪ್ಪ, ಶೆಟ್ಟರ ಹಿಂದೆ ತಿರುಗುತ್ತಿದ್ದ ಆಸ್ಥಾನ ಜ್ಯೋತಿಷಿಗಳು ಇಂದು ಸಿದ್ದರಾಮಯ್ಯನ ಹಿಂದೆ ತಿರುಗಿದಂತೆ. ಅದೇ ಕಾರಣಕ್ಕೆ ಆತ ಪಾಟಲಿಪುತ್ರದಲ್ಲಿ ಮೊಗ್ಗಲಿಪುಟ್ಟಸಿಸ್ಯ ಭಿಕ್ಷು ಆಯೋಜಿಸಿದ್ದ ಮೂರನೇ ಶ್ರವಣ ಸಮ್ಮೇಳನದಲ್ಲಿ ಭಾಗವಹಿಸಿದ್ದಿರಬಹುದು. ಇನ್ನು ಆರ್ಯಮಂಜುಶ್ರೀಮೂಲಕಲ್ಪ ಮತ್ತು ದೀಪವಂಶಗಳಲ್ಲಿರುವಂತೆ ಸ್ವತಃ ಬುದ್ಧನೇ ತನ್ನ ಮರಣದ 218ನೇ ವರ್ಷದಲ್ಲಿ ಚಕ್ರವರ್ತಿಯೊಬ್ಬ ಬಂದು ತನಗಾಗಿ 84 ಸಾವಿರ ಸ್ತೂಪಗಳನ್ನು ನಿರ್ಮಿಸುವುದಾಗಿ ಹೇಳಿದ್ದನೆನ್ನುವುದು ಮೂರ್ತಿಪೂಜೆಯನ್ನು ಎಲ್ಲ ವಿಧಗಳಲ್ಲೂ ನಿರಾಕರಿಸಿದ ಬುದ್ಧನ ಮೂಲತತ್ತ್ವಗಳಿಗೆ ಮಾಡಿದ ಅವಮಾನವೇ ಸರಿ. ಮೂಲವೆಲ್ಲವನ್ನೂ ಬಿಟ್ಟು ಅಳಿದ ಧರ್ಮಗುರುಗಳ ಹೆಸರಲ್ಲಿ ಉಳಿದ ಜನ ತಮ್ಮ ಬೇಳೆಬೇಯಿಸಿಕೊಳ್ಳುವುದು ಹೊಸತೂ ಅಲ್ಲ, ಅದರಿಂದಲೇ ಇ೦ದಿನ ಧರ್ಮಗಳೆಲ್ಲ ಕೆಟ್ಟು ಕೆರ ಹಿಡಿಯುತ್ತಿರುವುದು ಸುಳ್ಳೂ ಅಲ್ಲ.
      ಇನ್ನು ಕಳಿ೦ಗ ಯುದ್ಧದ ವಾದವ೦ತೂ ವಿಚಿತ್ರ. ಕಳಿಂಗವು ಮೊದಲು ನಂದರ ವಶದಲ್ಲಿದ್ದು ಚಂದ್ರಗುಪ್ತನ ಕಾಲದಲ್ಲಿ ಸ್ವತಂತ್ರವಾಗಿತ್ತು. ಕಳಿಂಗ, ದಕ್ಷಿಣ ಭಾರತದ ತುದಿಯನ್ನು ಹೊರತುಪಡಿಸಿ ಈಗಿನ  ಪಾಕಿಸ್ತಾನ, ಅಫ್ಘಾನಿಸ್ತಾನಗಳನ್ನೂ ಒಳಗೊಂಡಿದ್ದ ಭಾರತದ ಬಹುಭಾಗ ಮೌರ್ಯಸಾಮ್ರಾಜ್ಯದ ತೆಕ್ಕೆಯಲ್ಲೇ ಇತ್ತೆನ್ನಲಾಗುತ್ತದೆ.  ಚಕ್ರವರ್ತಿಯಾದವನೊಬ್ಬನ ಪಾಲಿಗೆ ಯುದ್ಧ, ಸಾವು, ನೋವುಗಳು, ಆಸ್ತಿ-ಪಾಸ್ತಿನಾಶಗಳೆಲ್ಲ ಸಾಮಾನ್ಯ. ಅದು ಯಾವುದೇ ಯುದ್ಧದಲ್ಲಾಗಿರಬಹುದು. ಸ್ವಂತ
ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯ
ಅಣ್ಣತಮ್ಮಂದಿರನ್ನು ಕೊಲೆಗೈದು ಪಟ್ಟಕ್ಕೇರಿದ, ತನಗೆ ನಿಷ್ಟರಲ್ಲವೆಂಬ ಅನುಮಾನದಿಂದ ೫೦೦ ಮಂತ್ರಿಗಳನ್ನು ಕೊಲ್ಲಿಸಿದ, ಹಿಟ್ಲರಿನ ಗ್ಯಾಸ್ ಚೇಂಬರಿನಂತೆ ಜನರನ್ನು ಚಿತ್ರಹಿಂಸೆ ಕೊಟ್ಟು ಕೊಲ್ಲಲೆಂದೇ ಅಶೋಕನ ನರಕವೆಂಬ ಅರಮನೆಯೊಂದನ್ನೇ ಕಟ್ಟಿದ ಅಶೋಕಾ ದ ಗ್ರೇಟ್‌ನ ಪಾಲಿಗಂತೂ ಹೇಳುವುದೇ ಬೇಡ ಬಿಡಿ.
      ಅಶೋಕನ ಜೀವನದ ಬಗ್ಗೆ ಮಾಹಿತಿ ನೀಡುವ ಪ್ರಮುಖ ಗ್ರಂಥಗಳೆಂದರೆ ಮಥುರಾದ ಬೌದ್ಧಸನ್ಯಾಸಿಯೊಬ್ಬ ಕ್ರಿ.ಶ. 1ನೇ ಶತಮಾನದಲ್ಲಿ ಬರೆದಿದ್ದ ಅಶೋಕವದನ ಮತ್ತು ಕ್ರಿ.ಶ 5ನೇ ಶತಮಾನದಲ್ಲಿ ರಚಿತಗೊಂಡ ಪಾಲಿ ಭಾಷೆಯಲ್ಲಿರುವ ಸಿಂಹಳದ ಎರಡು ಕೃತಿಗಳಾದ ದೀಪವಂಶ ಹಾಗೂ ಮಹಾವಂಶಗಳು ಮಾತ್ರ. ಇವೆರಡೂ ಅಶೋಕನಿಗಿಂತ ಎಷ್ಟೋ ಕಾಲದ ನಂತರ ರಚನೆಗೊಂಡವು. ಬಿಟ್ಟರೆ ಅಶೋಕನದೆಂದು ಹೇಳಲಾಗುವ 14 ಮುಖ್ಯ ಶಾಸನಗಳು. ತಮಾಶೆಯೆಂದರೆ ಇವಾವುದರಲ್ಲೂ ಅಶೋಕನ ಕಳಿಂಗ ಯುದ್ಧದ ಬಗ್ಗೆ ಹಾಗೂ ಆತನ ಮಗನಾದ ಮಹೇಂದ್ರನ ಒ೦ದೇ ಒಂದು ಸಾಲು ಕೂಡ ಇಲ್ಲ. ಅದೂ ಅಲ್ಲದೇ ಅಶೋಕವದನದ ಪ್ರಕಾರ ಆತ ಪೌಂಡ್ರದೇಶದ ಹದಿನೆಂಟು ಸಾವಿರ ನಾಸ್ತಿಕವಾದಿ ಅಜೀವಿಕ ಪರಂಪರೆಯವರನ್ನು ಕೊಲ್ಲಿಸಿ, ಇನ್ನುಳಿದವರ ತಲೆಕಡಿದು ತಂದರೆ ತಲೆಗೆ ತಲಾ ಒಂದು ಬೆಳ್ಳಿನಾಣ್ಯವನ್ನು ಕೊಡುವುದಾಗಿ ಶಾಸನವನ್ನೂ ಹೊರಡಿಸಿದನಂತೆ. ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದ ಇಂಥ ಕ್ರೂರಿಯೊಬ್ಬನಿಗೆ ಪುಟ್ಟ ಕಳಿಂಗ ರಾಜ್ಯದ ವಿರುದ್ಧ ನಡೆದ ಯುದ್ಧದ ಸಾವು-ನೋವು ಏನೇನೂ ಆಗಿರಲಿಲ್ಲ. ಹಾಗೊಂದುವೇಳೆ ಯುದ್ಧದ ನಾಶದಿಂದ ಮನನೊಂದು ಅಹಿಂಸೆಯ ಹಾದಿ ಹಿಡಿಯಬೇಕೆಂದರೆ ಆತನ ಮೊದಲ ಆಯ್ಕೆ ಜೈನ ಮತವಾಗುತ್ತಿತ್ತೇ ಹೊರತೂ ಬೌದ್ಧಮತವಲ್ಲ. ಇನ್ನು ಪ್ರಾಣಿಬಲಿಯನ್ನು ನಿಷೇಧಿಸಿದ್ದನ್ನೇ ಮುಂದಿಟ್ಟುಕೊಂಡು ಆತ ಯಜ್ಞಯಾಗಾದಿಗಳ ವಿರೋಧಿಯಾದ ಬೌದ್ಧಮತಾನುಯಾಯಿಯೆಂದು ಹೇಳಲಾಗದು, ಈತನ 13ನೇ ಶಿಲಾಲೇಖ ನಿಜವಾಗಿಯೂ ಈತನದ್ದೇ? ಈತನದ್ದಾದರೆ ಅದನ್ನು ಕೆತ್ತಿಸಿದ್ದು ಪಟ್ಟಕ್ಕೆ ಬಂದ 14ನೇ ವರ್ಷದಲ್ಲೋ? ಅಥವಾ 28ನೇ ವರ್ಷದಲ್ಲೋ? ಅಥವಾ ಅದಕ್ಕೂ ನಂತರವೇ? ಎಂಬ ಚರ್ಚೆಯೇ ಇನ್ನೂ ನಿಂತಿಲ್ಲ. ಆದರೂ ಇದರಲ್ಲಿ ಕಾಣಬರುವ ’ಧರ್ಮ’ ಮತ್ತು ’ಉಪಾಸಕ’ ಶಬ್ದಗಳನ್ನು ಕೇವಲ ಬೌದ್ಧ ತತ್ತ್ವಶಾಸ್ತ್ರದೊಡನೆ ಸಮೀಕರಿಸುವುದೆಲ್ಲ ’ಎಡ’ದವರಿಗೆ ಮಾತ್ರ ಸಾಧ್ಯವೇನೋ. ಧರ್ಮವೆಂಬ ಶಬ್ದ ಕೌಟಿಲ್ಯನ ಅರ್ಥಶಾಸ್ತ್ರದಲ್ಲೂ ಬಹಳಷ್ಟು ಬಾರಿ ಬಂದಿದೆ. ಹಾಗೆಂದಮಾತ್ರಕ್ಕೆ ಅವನನ್ನೂ ಬೌದ್ಧನೆನ್ನಲಾದೀತೇ? ಇನ್ನು ’ಧರ್ಮ‌ಅಶೋಕ’ ಅಥವಾ ’ಧರ್ಮ‌ಅಶೋಕ ಬಿಂದುಸಾರ ಮೌರ್ಯ’ನೆಂದು ಅಶೋಕನು ತನ್ನನ್ನು ಕರೆದುಕೊಂಡಿದ್ದು ತನ್ನ ಹೆಸರನ್ನು ತನ್ನ ತಾಯಿಯಾದ ’ಮಹಾರಾಣಿ ಧರ್ಮಾ’ ಅಥವಾ ’ಶುಭದ್ರಾಂಗಿ’ಯೊಡನೆ ಸಮೀಕರಿಸಿಕೊಂಡಿದ್ದಷ್ಟೆ. ಬಿಂದುಸಾರನಿಗಿದ್ದ ಹಲವಾರು ಪತ್ನಿಯರ ನಡುವೆ ತನ್ನ ಮಾತೃಪರಂಪರೆಯನ್ನು ಗುರುತಿಸಲು ಹೀಗೆ ಮಾಡಿರಬಹುದು. ಆತನ ಹೆಚ್ಚಿನ ಶಾಸನಗಳ ಭಾಷೆ ’ಪ್ರಾಕೃತ’ ಮತ್ತು ಅದರ ಉಪಭಾಷೆಯಾದ ’ಮಾಗಧಿ’ಯೇ ಹೊರತೂ ಬೌದ್ಧರು ಬಳಸುತ್ತಿದ್ದ ’ಪಾಲಿ’ ಅಲ್ಲ. ಹಾಗೆ ನೋಡಿದರೆ ಅಶೋಕನದ್ದೆಂದು ಹೇಳಲಾಗುವ ಯಾವ ಶಾಸನಗಳಲ್ಲೂ ಅವನ ಹೆಸರಿನ ಉಲ್ಲೇಖವಿಲ್ಲ. ಅಲ್ಲಿ ಬಳಕೆಯಲ್ಲಿರುವುದು ’ದೇವಾನಂಪಿಯ’ ಮತ್ತು ’ಪಿಯದಸಿ’ ಎಂಬ ಹೆಸರುಗಳು. ಈ ಪಿಯದಸಿಯೇ ಅಶೋಕನೆನ್ನಲು ಇರುವ ಏಕೈಕ ಆಧಾರ ಸಿಂಹಳದ ದೀಪವಂಶ. ಬಿಟ್ಟರೆ 1915ರಲ್ಲಿ ಸಿಕ್ಕ ರಾಯಚೂರಿನ ಮಸ್ಕಿಯ ಶಿಲಾಲೇಖವೊಂದರಲ್ಲೇ ಅಶೋಕನ ಹೆಸರಿನ ಉಲ್ಲೇಖವಿರುವುದು. ಸಾರಾನಾಥದ ಅಶೋಕ ಸ್ತಂಭದಿಂದ(Lion Capital of Asoka) ನಾಲ್ಕು ಸಿಂಹಗಳ ಚಿಹ್ನೆಯನ್ನು ಭಾರತದ ಅಧಿಕೃತ ರಾಜಮುದ್ರೆಯನ್ನಾಗಿ ತೆಗೆದುಕೊಳ್ಳಲಾಗಿದೆ. ಹಿಂದೂಧರ್ಮದಲ್ಲಿ ಸಿಂಹವನ್ನು ರಾಜತ್ವ ಮತ್ತು ಶೌರ್ಯದ ಪ್ರತೀಕವಾಗಿ ಗಣಿಸಲಾಗಿದೆ. ಜೈನ ತತ್ತ್ವಶಾಸ್ತ್ರದಂತೆ ಸಿಂಹವು ಅವರ ೨೪ನೇ
ಸಾರಾನಾಥ ಸ್ತೂಪ
ತೀರ್ಥಂಕರ ಮಹಾವೀರನ ಪ್ರತೀಕವೂ ಹೌದು. ಜಾತಕ ಕಥೆಗಳನ್ನಾಗಲೀ, ಬೌದ್ಧ ತತ್ತ್ವಶಾಸ್ತ್ರವನ್ನಾಗಲೀ ತೆಗೆದು ನೋಡಿದರೆ ಬುದ್ಧನ ಪ್ರತೀಕವೇನಿದ್ದರೂ ಅದು ಜಿಂಕೆ ಅಥವಾ ಸಾರಂಗ. ಸಿಂಹಕ್ಕೂ ಶ್ರವಣಮತಕ್ಕೂ ಸಂಬಂಧವೇ ಇಲ್ಲ. ಸಿಂಹದ ಕೆಳಗಿರುವ ಆನೆಯೂ ಮತ್ತೆ ರಾಜತ್ವ ಹಾಗೂ ಶುಭಸೂಚನೆಯ ಪ್ರತೀಕವೇ. ಇಂದ್ರನ ಐರಾವತ ತನ್ನ ಗರ್ಭವನ್ನು ಪ್ರವೇಶಿಸುವಂತೆ ಮಹಾವೀರ ಮತ್ತು ಗೌತಮ ಬುದ್ಧರೀರ್ವರ ತಾಯಂದಿರಿಗೂ ಕನಸು ಬಿದ್ದಿತ್ತಂತೆ. ಅಂದಿನ ಕಾಲದಲ್ಲಿ ಶುಭಶಕುನದ ಇಂಥ ಸ್ವಪ್ನಗಳನ್ನು ಕಾಣುತ್ತಿದ್ದುದು ಸಹಜ. ಅಶೋಕ ಸ್ತಂಭದಲ್ಲಿರುವ ಆನೆ, ಕುದುರೆ, ಸಿಂಹ, ಎತ್ತುಗಳನ್ನೆಲ್ಲ ಹಿಂದೂ ಧರ್ಮಶಾಸ್ತ್ರವು ಜೈನ, ಬೌದ್ಧ ಮತಗಳು ಜನ್ಮತಾಳುವ ಸಹಸ್ರ ಸಹಸ್ರ ವರ್ಷಗಳಿಂದಲೂ ಬಲ, ವೇಗ, ಪರಾಕ್ರಮ ಪ್ರತೀಕವಾಗಿ ಗ್ರಹಿಸುತ್ತ ಬಂದಿದೆ. ಒಂದು ಕಡೆ ಹಿಂದೂದೇವರ ಮೇಲೆ ನಂಬಿಕೆ ಇಲ್ಲವೆನ್ನುತ್ತ ಮತ್ತೊಂದೆಡೆ ಶಿವನನ್ನು ಯಮಾರಿ, ಲೋಕೇಶ್ವರನನ್ನಾಗಿಸಿ, ವಿಷ್ಣುವನ್ನು ಅವಲೋಕಿತೇಶ್ವರನನ್ನಾಗಿಸಿ, ಕುಬೇರನನ್ನು ಜಂಭಲನನ್ನಾಗಿ, ದುರ್ಗೆಯನ್ನು ಆರ್ಯತಾರೆಯನ್ನಾಗಿ, ಇಂದ್ರನನ್ನು ಸಕ್ಕನನ್ನಾಗಿಸಿ ವೈದಿಕ ದೇವತೆಗಳನ್ನೆಲ್ಲ ಕದ್ದು ತಮ್ಮದೆಂದು ಕಥೆ ಬೆಳೆಸುವುದು ಬೌದ್ಧಶಾಸ್ತ್ರಗಳಲ್ಲಿ ಮಾಮೂಲು. ಇನ್ನು ಚಕ್ರವು ಸಾರ್ವಭೌಮತೆಯ ಸಂಕೇತ. ಚಕ್ರವರ್ತಿಯೆಂಬ ಶಬ್ದ ಹುಟ್ಟಿದ್ದೇ ಚಕ್ರದಿಂದ. ನೀವು ರಾಜನಾಗಿದ್ದಲ್ಲಿ, ನಿಮ್ಮ ರಾಜ್ಯದ ಸುತ್ತ ಇರುವ ಉಳಿದ ರಾಜ್ಯಗಳೂ, ಅವುಗಳ ಸುತ್ತಲಿರುವ ಇನ್ನುಳಿದ ರಾಜ್ಯಗಳೂ ಎಲ್ಲವನ್ನೂ ಸೇರಿಸಿ ’ಚಕ್ರ’ ಎನ್ನಲಾಗುತ್ತಿತ್ತು. ಆ ಇಡೀ ಚಕ್ರವನ್ನು ಗೆದ್ದು ಆಳಿದವನೇ ’ಚಕ್ರವರ್ತಿ’. 24 ಕಡ್ಡಿಗಳುಳ್ಳ ಚಕ್ರವು ಜೈನರ 24 ತೀರ್ಥಂಕರರನ್ನು ಪ್ರತಿನಿಧಿಸುತ್ತದೆ ವಿನಃ ಬುದ್ಧನನ್ನಲ್ಲ. ಬೌದ್ದರ ’ಆರ್ಯಾಷ್ಟಾಂಗಮಾರ್ಗ’(ಅತ್ತಾಂಗಿಕೋ ಮಗ್ಗೊ)ವನ್ನು ಪ್ರತಿನಿಧಿಸುವ ಧರ್ಮಚಕ್ರಕ್ಕಿರುವುದು 8 ಕಡ್ಡಿಗಳು ಮಾತ್ರ. ಅಲ್ಲಿಗೆ ಅಶೋಕಚಕ್ರಕ್ಕೂ ಬುದ್ಧಮತಕ್ಕೂ ಯಾವ ಸಂಬಂಧವೂ ಇಲ್ಲವೆಂದಾಯ್ತು.
     ಅಸಲಿಗೆ ಸಾಮ್ರಾಟ ಅಶೋಕನೆಂಬ ಹೆಸರಿನ ರಾಜನೊಬ್ಬನಿದ್ದನೆಂಬುದರ ಬಗ್ಗೆಯೇ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿವೆ. ಆ ಹೆಸರಿನ ಒಬ್ಬನಿದ್ದರೂ ಆತ ಜನಪದದ ಮಾನಸದಿಂದ ಮರೆತು ಹೇಳಹೆಸರಿಲ್ಲದೇ ಮೂಲೆಗುಂಪಾಗಿ ಇತಿಹಾಸದ ಪುಟಗಳಲ್ಲಿ ಹುದುಗಿಹೋಗಿದ್ದ. 1837ರಲ್ಲಿ ಬ್ರಿಟಿಷ್ ಉತ್ಖನನಶಾಸ್ತ್ರಜ್ಞ ಜೇಮ್ಸ್ ಪ್ರಿನ್ಸೆಪ್ ಶ್ರೀಲಂಕಾದ ಬೌದ್ಧ ಕಾವ್ಯಗಳಾದ ಪಂಚತಂತ್ರದ ಫ್ಯಾಂಟಸಿ ಕಥೆಗಳಂತಿರುವ ದೀಪವಂಶ ಮತ್ತು ಮಹಾವಂಶಗಳಿಂದ ಆ ಹೆಸರನ್ನು ಉದ್ಧರಿಸಿದ್ದನ್ನು ಬಿಟ್ಟರೆ ಅಶೋಕನ ಬಗೆಗಿನ ಯಾವ ಐತಿಹಾಸಿಕ ದಾಖಲೆಗಳೂ ನಮ್ಮಲ್ಲಿ ಲಭ್ಯವಿಲ್ಲ. ಇತ್ತೀಚಿಗಿನ ಸಂಶೋಧನೆಗಳಿಂದ ಬುದ್ಧನ ಜೀವಿತಕಾಲವೇ ಕ್ರಿ.ಪೂ ಒಂದುಸಾವಿರಕ್ಕಿಂತ ಹಿಂದೆ ಹೋಗಿರುವಾಗ ಬುದ್ಧನಿರ್ವಾಣದ 218ನೇ ವರ್ಷದಲ್ಲಿ ಅಶೋಕ ಬುದ್ಧದೀಕ್ಷೆ ಸ್ವೀಕರಿಸಿದನೆಂಬ ಕಥೆಯಿರುವ ದೀಪವಂಶ, ಮಹಾವಂಶಗಳ ಕಥೆ ಎಷ್ಟು ನಂಬಲರ್ಹ?