Pages

Sunday, July 22, 2018

ಬೆಳಗೊಳಕ್ಕೆ ಬಂದ ಚಂದ್ರಗುಪ್ತ

       ಭದ್ರಬಾಹು ಮುನಿಗಳು ತಮ್ಮ ಶಿಷ್ಯ ಚಂದ್ರಗುಪ್ತನೊಡನೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ತಪಸ್ಸನ್ನಾಚರಿಸಿದ್ದು ಕರ್ನಾಟಕದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆ. ಈ ಮೂಲಕ ಜೈನ ಧರ್ಮವು ಕರ್ನಾಟಕಕ್ಕೆ ಬಂದ ಧರ್ಮಗಳಲ್ಲಿಯೇ ಅತಿ ಪ್ರಾಚೀನವಾದುದು ಎಂಬುದು ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಜೈನ ಧರ್ಮ ಕಾಲಿಟ್ಟಿದ್ದು, ಪ್ರಸಾರಗೊಂಡಿದ್ದು ಶ್ರವಣಬೆಳಗೊಳದ ನೆಲದಲ್ಲಿ ಎಂಬುದು ವಿಶೇಷ. ಈ ಘಟನೆ ನಡೆದಿದ್ದು ಕ್ರಿ.ಪೂ ೨೯೮ರಲ್ಲೆಂದು ಹಾಸನ ಜಿಲ್ಲಾ ಗೆಜೆಟಿಯರ್ ತಿಳಿಸುತ್ತದೆ. ಜೈನರ ಪರಂಪರೆ, ಸಾಹಿತ್ಯ ಹಾಗೂ ಶಾಸನಗಳು ತಿಳಿಸುವಂತೆ ಶ್ರುತಕೇವಲಿಗಳಲ್ಲಿ ಕೊನೆಯವರಾದ ಭದ್ರಬಾಹು ಮುನಿಗಳು ತಮ್ಮ ತ್ರಿಕಾಲಜ್ಞಾನದಿಂದ ಮುಂದೆ ಉತ್ತರ ಭಾರತದಲ್ಲಿ ಬರಬಹುದಾದ ಹನ್ನೆರಡು ವರ್ಷಗಳ ಮಹಾಕ್ಷಾಮದ ಬಗ್ಗೆ ತಿಳಿದುಕೊಂಡು ಉತ್ತರಭಾರತದ ಬೇರೆಬೇರೆ ಭಾಗಗಳ ಜೈನಾನುಯಾಯಿಗಳೊಂದಿಗೆ ಉಜ್ಜಯಿನಿಯನ್ನು ಬಿಟ್ಟು ಕರ್ನಾಟಕದ ಹಾಸನ ಜಿಲ್ಲೆಯ ಕಟವಪ್ರ(ಕಳ್ವಪ್ಪು) ಎಂಬ ಸ್ಥಾನಕ್ಕೆ ಬಂದು ನಿಂತರು.  
       ತೀರ್ಥಂಕರರ ಬೋಧನೆಯನ್ನು ಕಿವಿಯಾರೆ ನೇರವಾಗಿ ಕೇಳಿದವರನ್ನು ಶ್ರುತಕೇವಲಿ  ಎನ್ನುತ್ತಾರೆ.  ದಿಗಂಬರ ಜೈನರ ಐತಿಹ್ಯದ ಪ್ರಕಾರ ಗೋವರ್ಧನ ಮಹಾಮುನಿ, ಆಚಾರ್ಯ ವಿಷ್ಣು, ನಂದಿಮಿತ್ರ, ಅಪರಾಜಿತ ಹಾಗೂ ಭದ್ರಬಾಹುಗಳು ಪಂಚಶ್ರುತಕೇವಲಿಗಳು. ಅಲ್ಲದೇ ಭದ್ರಬಾಹುಗಳು ಅವಿಭಜಿತ ಜೈನಸಂಘದ ಕೊನೆಯ ಆಚಾರ್ಯರು ಕೂಡ. ಈಗಿನ ಬಾಂಗ್ಲಾದೇಶದ ಪುಂಡ್ರವರ್ಧನ ಎಂಬಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಇವರ ಜನನವಾಯ್ತು. ಚಿಕ್ಕಂದಿನಲ್ಲೇ ತಾವು ಶ್ರುತಕೇವಲಿಗಳಾಗುವುದನ್ನು ಅರಿತಿದ್ದ ಭದ್ರಬಾಹುಗಳು ಸಂನ್ಯಾಸ ಸ್ವೀಕರಿಸಿ ಆಚಾರ್ಯ ಪದವಿಯನ್ನು ಹೊಂದಿದರಂತೆ. ಒಮ್ಮೆ ಕಾರ್ತಿಕ ಪೌರ್ಣಿಮೆಯಂದು ಚಂದ್ರಗುಪ್ತನಿಗೆ ಸೂರ್ಯಾಸ್ತಮಾನ, ತೆಂಗಿನ ಮರ ಮುರಿದು ಬೀಳುವುದು, ಕಪ್ಪಾನೆಗಳ ಹೊಡೆದಾಟ, ಸಿಂಹಾಸನದ ಮೇಲೆ ಕೂತ ಮಂಗ, ತುಂಡಾದ ಚಂದ್ರ, ಒಣಗಿದ ಕೆರೆ, ಸ್ವರ್ಣಪಾತ್ರೆಯಲ್ಲಿನ ಪಾಯಸ ತಿನ್ನುತ್ತಿರುವ ನಾಯಿ, ಕತ್ತೆಯ ಮೇಲೆ ಕೂತ ಕ್ಷತ್ರಿಯ ಯೋಧ, ಆಕಾಶದಿಂದಿಳಿದು ಬಂದ ರಥ, ಹುಣ್ಣಿಮೆಯ ರಾತ್ರಿಯಲ್ಲಿ ಮಿಂಚುಹುಳಗಳು, ಊರನ್ನಾವರಿಸಿದ ಹೊಗೆ,  ಗದ್ದೆಯೂಳುತ್ತಿರುವ ಎತ್ತುಗಳು, ಹಂಸಗಳನ್ನು ಸರೋವರದಿಂದ ಓಡಿಸುತ್ತಿರುವ ಕಪಿಗಳು, ಸಮುದ್ರಕ್ಕೆ ಬೀಳುತ್ತಿರುವ ಕರು, ಮುದಿ ಎತ್ತಿನ ಮೇಲೆ ಕೂತ ನರಿ , ಹನ್ನೆರಡು ಹೆಡೆಯ ಸರ್ಪ ಹೀಗೆ ಹದಿನಾರು ಬಗೆಯ ಸ್ವಪ್ನಗಳುಂಟಾದವಂತೆ. ಗಾಬರಿಗೊಂಡ ಚಂದ್ರಗುಪ್ತ ಈ ಕನಸುಗಳ ಮರ್ಮವೇನೆಂದು ತಿಳಿಸಲು ಆಚಾರ್ಯರಾದ ಭದ್ರಬಾಹುಗಳನ್ನು ಕೇಳಿಕೊಂಡ. ರಾಜ್ಯದಲ್ಲಿ ಹನ್ನೆರಡು ವರ್ಷಗಳ ಭೀಕರ ಕ್ಷಾಮ ಬರುವುದಾಗಿಯೂ, ಧರ್ಮ ಹಾಗು ಸತ್ತೆ ಅಪಾಯಕ್ಕೆ ಸಿಲುಕುವುದಾಗಿಯೂ ಅರಿತ ಭದ್ರಬಾಹುಗಳು ತಮ್ಮೆಲ್ಲ ಅನುಯಾಯಿಗಳನ್ನು ಕೂಡಿಕೊಂಡು ಉತ್ತರವನ್ನು ತೊರೆದು ದಕ್ಷಿಣದ ಕಟವಪ್ರದತ್ತ ಪ್ರಯಾಣ ಬೆಳೆಸಿದರಂತೆ.ಚಂದ್ರರಾಜಾಕಥಾವಳಿಯ ಪ್ರಕಾರ ಈರೀತಿ ಭದ್ರಬಾಹುಮುನಿಗಳ ಸಂಗಡ ಬೆಳಗೊಳಕ್ಕೆ ಬಂದ ಅನುಯಾಯಿಗಳ ಸಂಖ್ಯೆ ಬರೋಬ್ಬರಿ ಹನ್ನೆರಡು ಸಾವಿರ.  ಕಟವಪ್ರ ಅಥವಾ ಕಳ್ವಪ್ಪುವಿಗೆ ಕಪ್ಪಾದ ಗುಡ್ಡ, ಸಮಾಧಿಬೆಟ್ಟವೆಂಬೆಲ್ಲ ವಿವರಣೆಗಳಿವೆ. ಶಾಸನಗಳಲ್ಲಿ ಕಟಪ, ಕಟವಪ್ರ, ವೆಳ್ಗೊಳವೇತ್ಯಾದಿಯಾಗಿ ಕರೆಯಲ್ಪಟ್ಟ ಪ್ರದೇಶ ಸುಮಾರು ೧೯ನೇ ಶತಮಾನದಲ್ಲಿ ಶ್ರವಣಬೆಳಗೊಳವೆಂದು ಹೆಸರಾಯ್ತು. ಚಾವುಂಡರಾಯ ಮಸ್ತಕಾಭಿಷೇಕ ನೆರವೇರಿಸುವ ಸಂದರ್ಭದಲ್ಲಿ ಗುಳ್ಳೇಕಾಯಿ ಅಜ್ಜಿ ತನ್ನ ಸೋರೆಬುರುಡೆಯಿಂದ ಅಭಿಷೇಕ ಮಾಡಿದ ಹಾಲು ಬಾಹುಬಲಿಯನ್ನು ತೋಯಿಸಿ ದೊಡ್ಡಬೆಟ್ಟದಿಂದ ಕೆಳಗಿಳಿದು ಬಂದು ಬೆಳ್ಳಗಿನ ಪುಷ್ಕರಣಿಯಾಯ್ತೆಂದೂ ಅದರಿಂದಾಗಿಯೇ ಈ ಊರಿಗೆ ಬೆಳಗೊಳವೆಂಬ ಹೆಸರು ಬಂತೆಂದೂ ಇರುವ ಕತೆಯನ್ನು ನೀವು ಕೇಳಿಯೇ ಇರುತ್ತೀರಿ. ಆದರೆ ಬೆಳಗೊಳದ ಇತಿಹಾಸದುದ್ದಕ್ಕೂ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ಎದುರಿಗಿನ ಚಿಕ್ಕಬೆಟ್ಟವೇ. ಕಟವಪ್ರ, ಕಳ್ವಪ್ಪುಗಳೇ ಮುಂತಾಗಿ ಹೆಸರು ಬರಲೂ ಈ ಬೆಟ್ಟವೇ ಕಾರಣ. ಇಲ್ಲಿರುವ ಎರಡು ಬೆಟ್ಟಗಳಲ್ಲಿ ಬಾಹುಬಲಿ ಇರುವುದನ್ನು ದೂಡ್ಡಬೆಟ್ಟ ಅಥವಾ ಇಂದ್ರಗಿರಿಯೆಂದೂ, ಎದುರಿಗಿದ್ದುದನ್ನು ಚಿಕ್ಕಬೆಟ್ಟ ಅಥವಾ ಚಂದ್ರಗಿರಿಯೆಂದೂ ಕರೆಯುತ್ತಾರೆ. ಈ ಬೆಟ್ಟಕ್ಕೆ ಚಂದ್ರಗಿರಿ ಎಂದು ಹೆಸರು ಬಂದಿದ್ದು ಚಂದ್ರಗುಪ್ತನಿಂದ. ಆತ ತಪಸ್ಸಿನಿಂದ ದೇಹತ್ಯಾಗ ಮಾಡಿದ ಸ್ಥಳದಲ್ಲಿ ನಿರ್ಮಿಸಿದ ಚಂದ್ರಗುಪ್ತ ಬಸದಿ, ಇಲ್ಲಿ ಕಂಡುಬರುವ ಭದ್ರಬಾಹುಮುನಿಗಳ ಪಾದಚಿಹ್ನೆ ಹಾಗೂ ತಪಸ್ಸು ಮಾಡಿದ ಗುಹೆ ಪ್ರಚಲಿತದಲ್ಲಿರುವ ವಾದಕ್ಕೆ ಪ್ರತ್ಯಕ್ಷಸಾಕ್ಷಿಗಳಾಗಿವೆ. ಭದ್ರಬಾಹುಗಳು ತಮ್ಮ ಅವಸಾನಕಾಲವನ್ನು ತಿಳಿದು ತಮ್ಮ ಇಬ್ಬರು ಶಿಷ್ಯರಾದ ಪ್ರಭಾಚಂದ್ರ ಹಾಗೂ ಚಂದ್ರಗುಪ್ತರನ್ನು ತಮ್ಮ ಬಳಿ ಇರಿಸಿಕೊಂಡು ಉಳಿದವರನ್ನು ರಾಮಿಲಾಚಾರ್ಯ ಮತ್ತು ವಿಶಾಖಾಚಾರ್ಯರ ನೇತೃತ್ವದಲ್ಲಿ ತಮಿಳ್ನಾಡಿನ ಚೋಳ ಮತ್ತು ಪಾಂಡ್ಯ ರಾಜ್ಯಗಳಿಗೆ ಕಳಿಸಿಕೊಟ್ಟರು. ಹೀಗೆ ಭದ್ರಬಾಹುಗಳ ಮೂಲಕವೇ ಜೈನಧರ್ಮ ತಮಿಳುನಾಡನ್ನೂ ಪ್ರವೇಶಿಸಿತು. ಇಂಥ ಐತಿಹಾಸಿಕ ಮಹತ್ವವುಳ್ಳ ಘಟನೆಗೆ ಸಾವಿರಾರು ಜೈನ ಕಥನಗಳು, ಶಾಸನಗಳು ಹಾಗೂ ದಂತಕಥೆಗಳು ಬೆಳಕು ಚೆಲ್ಲುತ್ತವೆ. ಇಷ್ಟಾದರೂ ಬೆಳಗೊಳಕ್ಕೆ ಆಗಮಿಸಿದ ಚಂದ್ರಗುಪ್ತ ಮತ್ತು ಶ್ರುತಕೇವಲಿ ಭದ್ರಬಾಹುಮುನಿಗಳು ಯಾರು ಎಂಬ ವಿಷಯದ ಕುರಿತು ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ.  
ಚಂದ್ರಗುಪ್ತ ಬಸದಿ

    
ಎದುರಿಗೆ ಕಾಣುವ ಇಂದ್ರಗಿರಿ


ಹೋದಲ್ಲೆಲ್ಲ ಇದೇ ಕೆಲಸ

ಚಂದ್ರಗಿರಿಯ ಬಸದಿಯೊಂದರಲ್ಲಿ

ಚಂದ್ರಗಿರಿಯ ಸೂರ್ಯಾಸ್ತ

ಭದ್ರಬಾಹು ಶಾಸನ
  ಶ್ರವಣಬೆಳಗೊಳದಲ್ಲಿ ಸಿಕ್ಕ ಮುಖ್ಯ ಶಾಸನಗಳ ಸಂಖ್ಯೆ ಬರೋಬ್ಬರಿ ೭೫೩. ಜೈನಕಾಶಿಯೊಟ್ಟಿಗೆ ಅದನ್ನು ಭಾರತದ ಶಾಸನಕಾಶಿಯೆಂದು ಕರೆದರೂ ಅದು ಅತಿಶಯದ ಮಾತಲ್ಲ. ಶ್ರವಣಬೆಳಗೊಳದ ಶಾಸನ ಸಂಖ್ಯೆ ೧(ಕ್ರಿ.ಶ ೬೦೦), ೩೧(ಕ್ರಿ.ಶ ೬೫೦), ೬೪(ಕ್ರಿ.ಶ ೧೧೬೩), ೬೭(ಕ್ರಿ.ಶ  ೧೧೨೯), ೨೫೮(ಕ್ರಿ.ಶ ೧೪೨೧) ಮತ್ತು ಶ್ರೀರಂಗಪಟ್ಟಣದ ಎರಡು ಶಾಸನಗಳು ಭದ್ರಬಾಹು-ಚಂದ್ರಗುಪ್ತರು ಈ ಸ್ಥಳಕ್ಕೆ ಬಂದ ವಿಷಯವನ್ನು ತಿಳಿಸುತ್ತವೆ. ಆದರೆ ಯಾವ ಶಾಸನಗಳೂ ಇವರಿಬ್ಬರು ಯಾರು ಎನ್ನುವುದನ್ನು ಅರಹುವುದಿಲ್ಲ. ಹರಿಸೇನನ ಬೃಹತ್ಕಥಾಕೋಶದ ಪ್ರಕಾರ ೧೨ ವರ್ಷಗಳ ಕ್ಷಾಮದ ಕಾರಣದಿಂದ ತನ್ನ ಶಿಷ್ಯರಿಗೆ ದಕ್ಷಿಣಕ್ಕೆ ತೆರಳುವಂತೆ ಭದ್ರಬಾಹು ಆಜ್ಞಾಪಿಸುತ್ತಾನೆ. ಅರಸು ಚಂದ್ರಗುಪ್ತ ಜೈನದೀಕ್ಷೆ ಪಡೆದು ವಿಶಾಖಾಚಾರಿ ಎಂಬ ಹೆಸರು ಪಡೆದು ಕರ್ನಾಟಕಕ್ಕೆ ತೆರಳಿ ೧೨ ವರ್ಷಗಳ ನಂತರ ಪುನಃ ತನ್ನ ದೇಶಕ್ಕೆ ಸೇರಿದ. ರತ್ನನಂದಿಯ ಭದ್ರಬಾಹುಚರಿತೆಯಲ್ಲೂ ಅಜಮಾಸು ಇದೇ ಕಥೆಯಿದೆ.  ಚಿದಾನಂದನ ಮುನಿವಂಶಾಭ್ಯುದಯದ ಪ್ರಕಾರ ಕಳ್ವಪ್ಪುವಿನಲ್ಲಿ ನೆಲೆಸಿದ ಭದ್ರಬಾಹು ಹುಲಿಯ ಬಾಯಿಗೆ ತುತ್ತಾದ. ಆಗ ಅಲ್ಲಿಗೆ ಬಂದ ಚಂದ್ರಗುಪ್ತ ಜೈನದೀಕ್ಷೆ ಪಡೆದು ಭದ್ರಬಾಹುವಿನ ಪಾದಗಳನ್ನು ಪೂಜಿಸತೊಡಗಿದ. ಇನ್ನು ದೇವಚಂದ್ರನ ರಾಜಾವಳಿ ಈ ಕುರಿತಾಗಿ ಹೇಳುವ ಇತ್ತೀಚಿನ ಕಾವ್ಯ. ದಕ್ಷಿಣಾಪಥಕ್ಕೆ ಹೊರಟಿದ್ದ ಭದ್ರಬಾಹುವಿನ ಸಂಗಡ ಪಾಟಲೀಪುತ್ರದ ರಾಜ ಚಂದ್ರಗುಪ್ತನೂ ಕೂಡಿಕೊಂಡು ಕಳ್ವಪ್ಪುವನ್ನು ತಲುಪಿದ. ಅವನ ಮೊಮ್ಮಗ ಇಲ್ಲಿಗೆ ಬಂದು ಚಂದ್ರಗುಪ್ತನ ಸ್ಮರಣಾರ್ಥ ಕೆಲ ಬಸದಿಗಳನ್ನೂ, ಬೆಳಗೊಳ ಎಂಬ ಪಟ್ಟಣವನ್ನೂ ಕಟ್ಟಿಸಿದ.  ಪಾಟಲೀಪುತ್ರದ ಅರಸ ಎಂಬ ಈ ರಾಜಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡೇ ಈ ಚಂದ್ರಗುಪ್ತನು ಮೌರ್ಯರ ಚಂದ್ರಗುಪ್ತನೇ ಆಗಿರಬೇಕೆಂಬ ಊಹೆ ಬೆಳೆಯಲು ಕಾರಣವಾಯಿತು. 
       ಜೈನಸಂಪ್ರದಾಯದ ದಿಗಂಬರ ಐತಿಹ್ಯದ ಪ್ರಕಾರ ಮಹಾವೀರನ ನಿರ್ವಾಣದ ೧೬೨ನೇ ವರ್ಷದಲ್ಲಿ ಅಂದರೆ ಕ್ರಿ.ಪೂ ೩೬೫ರಲ್ಲಿ ಪಂಚಮಶೃತಕೇವಲಿ ಭದ್ರಬಾಹು ಜಿನೈಕ್ಯಗೊಂಡ. ಶ್ವೇತಾಂಬರ ಐತಿಹ್ಯದ ಪ್ರಕಾರ ೧೭೦ನೇ ವರ್ಷದಲ್ಲಿ ಕಾಲವಾದ. ಮಹಾವಂಶವು ಮಹಾವೀರನ ನಿರ್ವಾಣದ ೧೫೫ನೇ ವರ್ಷದಲ್ಲಿ ಚಂದ್ರಗುಪ್ತ ಪಟ್ಟಾಭಿಷಕ್ತನಾದನೆಂದು ತಿಳಿಸುತ್ತದೆ. ಮೌರ್ಯರ ಚಂದ್ರಗುಪ್ತನ ಆಳ್ವಿಕೆಯ ಕ್ರಿ.ಪೂ ೩೦೦ರ ಆಚೀಚೆಗೂ ಭದ್ರಬಾಹುವಿನ ಕೊನೆಗಾಲಕ್ಕೂ ಸುಮಾರು ೬೦ ವರ್ಷಗಳ ವ್ಯತ್ಯಾಸವಿರುವುದರಿಂದ ಭದ್ರಬಾಹುವಿನ ಶಿಷ್ಯನಾದ ಚಂದ್ರಗುಪ್ತ ಮೌರ್ಯಚಂದ್ರಗುಪ್ತನಲ್ಲ. ಬದಲಾಗಿ ಉಜ್ಜೈನಿಯ ಚಂದ್ರಗುಪ್ತ. ಜೊತೆಗೆ ಮೌರ್ಯ ಚಂದ್ರಗುಪ್ತನ ಆಳ್ವಿಕೆಯಲ್ಲಿ ಸಾಮ್ರಾಜ್ಯದಲ್ಲಿ ಕ್ಷಾಮ ತಲೆದೋರಿದ ಪ್ರಸ್ತಾಪವಿಲ್ಲವೆಂದೂ, ಮೆಗಸ್ತನಿಸನ ಬರವಣಿಗೆಗಳಲ್ಲಿ ಚಂದ್ರಗುಪ್ತ ಶ್ರಮಣನಾದ ಉಲ್ಲೇಖವಿಲ್ಲದಿರುವುದರಿಂದ ಮೌರ್ಯ ಚಂದ್ರಗುಪ್ತ ಭದ್ರಬಾಹುವಿನ ಶಿಷ್ಯನಲ್ಲವೆಂದು ಎಂ.ಗೋವಿಂದ ಪೈಗಳು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಬೌದ್ಧರ ಆರ್ಯಮಂಜುಶ್ರೀ ಮೂಲಕಲ್ಪದಲ್ಲಿ ಬರುವ ಮೌರ್ಯವಂಶಾವಳಿಯ ವಿವರಣೆಯಲ್ಲಿ ಚಂದ್ರಗುಪ್ತ ಸಿಡುಬು ಕಾಯಿಲೆಯಿಂದ ಮೃತಪಟ್ಟ ಕಥೆಯಿರುವುದರಿಂದ ಶ್ರವಣಬೆಳಗೊಳಕ್ಕೆ ಬಂದಿದ್ದು ಮೌರ್ಯವಂಶಸ್ಥಾಪಕನಲ್ಲವೆನ್ನುವುದು ನಿಸ್ಸಂದೇಹ. ಆದರೆ ಆತ ಮೌರ್ಯ ಚಂದ್ರಗುಪ್ತನೇ ಎಂದು ಬಿ.ಎಲ್.ರೈಸ್, ವಿ.ಎ.ಸ್ಮಿತ್‌ರಂಥ ವಿದೇಶಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನಾರಾಯಣಾಚಾರ್ಯರ ಚಾಣಕ್ಯ ಕಾದಂಬರಿಯಲ್ಲಿಯೂ ಮೌರ್ಯ ಅರಸು ಬೆಳಗೊಳಕ್ಕೆ ಬಂದ ಕಥನವಿದೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಚಾಣಕ್ಯ-ಚಂದ್ರಗುಪ್ತರೇ ಮುಂದೆ ಏಳನೇಯ ಜನ್ಮದಲ್ಲಿ ವಿಷ್ಣುವರ್ಧನ-ರಾಮಾನುಜಾಚಾರ್ಯರಾಗಿ ಹುಟ್ಟುವರೆಂದು ತಮ್ಮ ಮತಕ್ಕೆ ತಕ್ಕಂತೆ ಹೊಸಕಥೆಯೊಂದನ್ನು ಸೃಜಿಸಿಕೊಂಡು ವೈಷ್ಣವಭಕ್ತಿಯನ್ನು ಮೆರೆದಿದ್ದಾರೆ.  ಡಾ. ಶಾಮಾಶಾಸ್ತ್ರಿ, ಹುಲ್ಲೂರು ಶ್ರೀನಿವಾಸಜೋಯಿಸರಂಥವರ ಪ್ರಕಾರ ಬೆಳಗೊಳಕ್ಕೆ ಬಂದವನು ಗುಪ್ತರ ಎರಡನೇ ಚಂದ್ರಗುಪ್ತ. ಕದಂಬರಿಗೂ ಗುಪ್ತರಿಗೂ ವೈವಾಹಿಕ ಸಬಂಧವಿತ್ತು. (ಕಾಕುಸ್ಥವರ್ಮನ ಮಗಳ ವಿವಾಹ ಚಂದ್ರಗುಪ್ತ ವಿಕ್ರಮಾದಿತ್ಯನ ಜೊತೆ ಜರುಗಿತ್ತು. ಕಾಕುಸ್ಥವರ್ಮನು ತನ್ನ ನಾಲ್ಕು ಹೆಣ್ಣುಮಕ್ಕಳನ್ನು ಆಗಿನ ಸುಪ್ರಸಿದ್ಧ ರಾಜವಂಶಗಳಾದ ಗಂಗರ ಇಮ್ಮಡಿ ಮಾಧವ, ಗುಪ್ತರ ಎರಡನೇ ಚಂದ್ರಗುಪ್ತ, ವಾಕಾಟಕರ ನರೇಂದ್ರಸೇನ, ಆಳುಪರ ಪಶುಪತಿಗೆ ಮದುವೆಮಾಡಿಕೊಟ್ಟಿದ್ದ). ಆದ್ದರಿಂದ ಗುಪ್ತರ ಎರಡನೇ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂದು ಎಂಬುದು ಅವರ ಅಂಬೋಣ. ಆದರೆ ಶೃತಕೇವಲಿ ಭದ್ರಬಾಹುವಿಗೂ ವಿಕ್ರಮಾದಿತ್ಯನಿಗೂ ಐನೂರು ವರ್ಷಕ್ಕೂ ಮಿಕ್ಕಿ ಅಂತರವಿರುವುದರಿಂದ ಅವರಿಬ್ಬರೂ ಸಮಕಾಲೀನರಾಗಿರಲು ಸಾಧ್ಯವೇ ಇಲ್ಲ.
       ಇನ್ನು ಬೆಳಗೊಳಕ್ಕೆ ಬಂದವನು ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತನೆಂಬ ವಾದವೂ ಇದೆ. ಶತಾವಧಾನಿ ಆರ್. ಗಣೇಶರೂ ಇದನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಇದಕ್ಕೂ ಯಾವುದೇ ಆಧಾರಗಳಿಲ್ಲ. ಅಶೋಕನ ನಂತರ ಸಂಪ್ರತಿ ಎಂಬ ರಾಜ ಮೌರ್ಯ ಕುಲದಲ್ಲಿ ಇದ್ದಿರಬಹುದಾದರೂ ಆತ ಸಂಪ್ರತಿ ಚಂದ್ರಗುಪ್ತನೆಂದು ಕರೆಯಲ್ಪಟ್ಟ ಬಗ್ಗೆ ಯಾವುದೇ ಪುರಾಣಗಳಲ್ಲಿ ಹೇಳಲ್ಪಟ್ಟಿಲ್ಲ. ಚಂದ್ರಗುಪ್ತನ ಮೌರ್ಯನ ಐತಿಹ್ಯವೇ ಸಂಪ್ರತಿಯ ಐತಿಹ್ಯವಾಗಿ ಪರಿವರ್ತನೆಗೊಂಡು ದಿವ್ಯಾವದಾನ, ಪರಿಶಿಷ್ಟ ಪರ್ವ, ವಡ್ಡಾರಾಧನೆಯಂಥ ಕೃತಿಗಳಲ್ಲಿ ಕಾಣಿಸಿಕೊಂಡಿರಬಹುದು. ಮೇಲಾಗಿ ಚಂದ್ರಗುಪ್ತನಿಗೂ ಅಶೋಕನ ಮೊಮ್ಮಗನಿಗೂ ಸರಿಸುಮಾರು ೧೦೦ ವರ್ಷಗಳಿಗೂ ಮಿಕ್ಕಿ ಅಂತರವಿರುವುದರಿಂದ ಅವನ ಕಾಲಮಾನ ಭದ್ರಬಾಹುವಿನ ಜೀವಿತಾವಧಿಯ ಜೊತೆ ತಾಳೆಯಾಗುವುದಿಲ್ಲ. ಅದೂ ಅಲ್ಲದೇ ಅಶೋಕನ ಮೊಮ್ಮಗ ಬೌದ್ಧಧರ್ಮವನ್ನು ಬಿಟ್ಟು ಜೈನಧರ್ಮವನ್ನು ಯಾಕಾಗಿ ಸ್ವೀಕರಿಸಿದನೆಂಬುದಕ್ಕೆ ಉತ್ತರ ಹುಡುಕುವುದು ಕಷ್ಟ.
       ಹಾಗಾಗಿ ಚಂದ್ರಗುಪ್ತ ಮೌರ್ಯ, ಎರಡನೇ ಚಂದ್ರಗುಪ್ತ ಅಥವಾ ಸಂಪ್ರತಿ ಚಂದ್ರಗುಪ್ತ ಇವರಲ್ಲಿ ಯಾರೊಬ್ಬರೂ ಬೆಳಗೊಳಕ್ಕೆ ಬಂದಿರಲು ಸಾಧ್ಯವಿಲ್ಲವೆನ್ನುವುದು ದಿಟ. ಇತಿಹಾಸದಲ್ಲಿ ಇನ್ನುಳಿದವನು ಒಬ್ಬನೇ ಒಬ್ಬ. ಆತ ನಂದ ಚಂದ್ರಗುಪ್ತ. ನಂದ ವಂಶದ ಐದನೇ ಅರಸನಾದ ಈತ ಪಟ್ಟಕ್ಕೇರಿದ್ದು ಕ್ರಿ.ಪೂ ೩೭೨ರಲ್ಲಿ. ಪ್ರದ್ಯೋತನಿಂದ ೧೭ನೇಯವನಾದ ಈತ ಒಟ್ಟೂ ಐದು ವರ್ಷಗಳ ಕಾಲ ರಾಜ್ಯವಾಳಿದ್ದ. ನಂತರ ತನ್ನ ಮಗ ಸಿಂಹಸೇನನಿಗೆ ರಾಜ್ಯವನ್ನು ವಹಿಸಿಕೊಟ್ಟು ಹೊರಟುಹೋದನೆಂದು ವಡ್ಡಾರಾಧನೆ ಪ್ರಸ್ತಾಪಿಸುತ್ತದೆ. ಈ ಚಂದ್ರಗುಪ್ತನೇ ಜೈನದೀಕ್ಷೆಯನ್ನು ಸ್ವೀಕರಿಸಿದನೆಂಬುದಕ್ಕೆ ಬೇಕಾದಷ್ಟು ಆಧಾರಗಳು ದೊರಕುತ್ತವೆ. 
ಯಾವುದೋ ಸಂದರ್ಭದಲ್ಲುಂಟಾದ ತಪ್ಪುಗ್ರಹಿಕೆಯಿಂದ ಬೆಳಗೊಳಕ್ಕೆ ಭ್ರದ್ರಬಾಹುವೊಡನೆ ಬಂದವನು ಚಂದ್ರಗುಪ್ತಮೌರ್ಯನೆಂಬ ಗ್ರಹಿಕೆ ಉಂಟಾಯಿತು. ಗೋವಿಂದ ಪೈಗಳು ತಮ್ಮ ನಂತರದ ಎರಡು ಲೇಖನಗಳಲ್ಲಿ ಸಂಪ್ರತಿ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂಬ ನಿಲುವನ್ನು ತಳೆದಿದ್ದಾರೆ. ಈ ವಿಷಯದ ಕುರಿತು ದೀರ್ಘಕಾಲದ ಸಂಶೋಧನೆ ನಡೆಸಿದ ಪ್ರೊ.ವಸಂತರಾಜ್, ಎಂ.ವಿ.ಶ್ರೀನಿವಾಸರಂಥವರು ಚಂದ್ರಗುಪ್ತ ಮೌರ್ಯನಾಗಲೀ, ಸಂಪ್ರತಿಯಾಗಲೀ ಭದ್ರಬಾಹುಗಳೊಡನೆ ಬಂದಿರಲು ಸಾಧ್ಯವಿಲ್ಲವೆಂದು ಬಹುಸಮರ್ಪಕವಾಗಿ ನಿರೂಪಿಸಿದ್ದಾರೆ. 
       ಜೈನಧರ್ಮದ ಇತಿಹಾಸದಲ್ಲೇ ಇದೊಂದು ಅತಿಮಹತ್ವದ ಸಂಗತಿ. ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಜೈನ ಧರ್ಮದ ಪ್ರಾಚೀನತೆಯನು ನಿರ್ಧರಿಸಲು ಇರುವ ಆಧಾರ ಇದೊಂದೇ. ಹಾಗಾಗಿಯೇ ಇಲ್ಲಿಗೆ ಬಂದ ಚಂದ್ರಗುಪ್ತ ಯಾರೆಂಬುದು ಮಹತ್ವ ಪಡೆದುಕೊಳ್ಳುವ ಸಂಗತಿ. ಭದ್ರಬಾಹುವಿನೊಡನೆ ಬಂದವನು ನಂದಚಂದ್ರಗುಪ್ತನೇ ಎಂದಾದರೆ ಕರ್ನಾಟಕಕ್ಕೆ ಜೈನಧರ್ಮವು ಆಗಮಿಸಿದ ಕಾಲಮಾನವನ್ನು ಸುಮಾರು ನೂರು ವರ್ಷಗಳಿಗೂ ಮಿಕ್ಕಿ ಹಿಂದೆ ತಳ್ಳಬೇಕಾದ ಅಗತ್ಯತೆಯಿದೆ.