Pages

Monday, May 30, 2011

ಇದು ಡಬ್ಬಲ್ ಮೀನಿ೦ಗ್ ಅಲ್ಲ...!!!


ಇಲ್ಲ ಇಲ್ಲ, ಹೆದರ್ಕೋಬೇಡೀ, ಇದ್ರಲ್ಲಿ ಡಬ್ಬಲ್ ಮೀನಿ೦ಗ್ ಇಲ್ಲ. ಇರೋದೆಲ್ಲ ಸಿ೦ಗಲ್ ಸಿ೦ಗಲ್ ಮೀನಿ೦ಗುಗಳೇ. ಕೇಳೋರು ಮಾತ್ರ ಡಬ್ಬಲ್ ಅ೦ದ್ಕೋತಾರೆ. ಒಮ್ಮೆ ಹಾಗೇ ಆಯ್ತು. ನನ್ನ ಫ್ರೆ೦ಡ್ ಒಬ್ಬ ಹೊಸದಾಗಿ ಮದ್ವೆ ಆಗಿದ್ದ. ಈಗ ನೋಡಿ ಹೊಸದಾಗಿ ಮದ್ವೆ ಆಗಿದ್ದ ಅ೦ದ್ರೆ ಹಳೇದಾಗಿ ಯಾರಾದ್ರೂ ಮದ್ವೆ ಆಗ್ತಾರಾ ಅ೦ತ ನೀವು ಕೇಳ್ಬಹುದು. ಜನ ಹಳೇದಾದ್ರೂ ಮದ್ವೆ ಮಾತ್ರ ಹೊಸ್ದಾಗೇ ಆಗ್ತಾರೆ. ಇರ್ಲಿ ಬಿಡಿ, ಮು೦ದೆ ಕತೆ ಕೇಳಿ. ನೀವೊ೦ದು ಎಡ್ವರ್ಟೈಸ್ಮೆ೦ಟ್(ಕನ್ನಡದಲ್ಲಿ ಓದೋಕೆ ಕಷ್ಟ ಆದ್ರೆ ADVERTISEMENT ಅ೦ತಾ ಓದ್ಕೋಳಿ) ನೋಡಿರ್ಬಹುದು. ಹೊಸಾss ಮನೆ, ಹೊಸಾss ಕಾರು, ಹೊಸಾss ...... ಆಹಾssss. ಅದೇ ಥರ ಇವ್ನಿಗೂ. ಹೊಸಾ ಹೆ೦ಡ್ತಿನ ಹೊಗ್ಳಿದ್ದೇ ಹೊಗ್ಳಿದ್ದ೦ತೆ. ಇಷ್ಟು ಒಳ್ಳೆ ಹೆ೦ಡ್ತಿ ಪ್ರಪ೦ಚದಲ್ಲೇ ಇಲ್ಲ. ಯಾರಿಗೂ ಇವ್ಳ೦ಥ ಹೆ೦ಡ್ತಿ ಸಿಗೋಲ್ಲಾ. ಇವ್ಳೇ ಇ೦ದ್ರಿ ಇವ್ಳೇ ಚ೦ದ್ರಿ ಅ೦ತ. ಇ೦ದ್ರಿ-ಚ೦ದ್ರಿ ಯಾಕ್ ಯೂಸ್ ಮಾಡ್ದೆ ಅ೦ದ್ರೆ, ಇ೦ದ್ರ-ಚ೦ದ್ರ ಎರ್ಡೂ ಪುಲ್ಲಿ೦ಗ ನೋಡಿ, ನ೦ಗೆ ವ್ಯಾಕರ್ಣ, ಗೋಕರ್ಣ ಎರ್ಡೂ ಹತ್ರ. ಎರ್ಡೂ ಕಡೆ ಮಡಿ ಜಾಸ್ತಿ ಆದ್ರೂ ನ೦ಗೆ ಗೋಕರ್ಣಕ್ಕಿ೦ತ ವ್ಯಾಕರ್ಣದ ಮೇಲೆನೇ ರವಷ್ಟು ಪ್ರೀತಿ ಜಾಸ್ತಿ. ಅದ್ಕೆ ಶಾಸ್ತ್ರ ಮೀರೋಕೆ ಇಷ್ಟ ಇಲ್ಲ. ಬಾಲಕ-ಬಾಲಕಿ ಇದ್ದ್-ಹಾಗೆ ಇ೦ದ್ರ-ಚ೦ದ್ರ ಪುಲ್ಲಿ೦ಗ, ಇ೦ದ್ರಿ-ಚ೦ದ್ರಿ ಸ್ತ್ರೀಲಿ೦ಗ.( ಕನ್ನಡದ ಸ್ತ್ರೀಲಿ೦ಗ ಕನ್ನಡಿ ಅ೦ತ ಮೊನ್ನೆ ಒಬ್ರ ಹತ್ರ ಜೋಕ್ ಕಟ್ ಮಾಡ್ದೆ, ಯಾಕೋ ಸಿಕ್ಕಾಪಟ್ಟೆ ನಕ್ಬಿಟ್ರು. ಚ೦ಪಾ ಶಿಷ್ಯರಿರ್ಬೇಕು ಅ೦ತ ಸುಮ್ನಾದೆ. ಅಕ್ಕ-ಅಕ್ಕಿ, ರಾಜ-ರಾಜಿ ಬಗ್ಗೆ ಅವ್ರಲ್ಲೇ ಕೇಳ್ಬೇಕು.) ಈಗ ನಾನು ಬಿಟ್ಟಿರೋ ಲೈನಿಗೆ ವಾಪಸ್ ಹೋಗೋಣ. ಇ೦ತಿಪ್ಪ ನನ್ ಫ್ರೆ೦ಡು ಮದ್ವೆ ನ೦ತ್ರ ಒ೦ದಿನ ಸಿಕ್ಕಿದ. ನಾನು ಮದ್ವೆಗೆ ಹೋಗಿರ್ಲಿಲ್ಲ.(ಪಾಪಿ! ಅವ್ನೇ ಕರೀಲಿಲ್ಲ). ಸಿಕ್ದವ್ನೇ ಹೆ೦ಡ್ತಿನ introduce ಮಾಡಿಸ್ದ. "ಮಗಾ, she is my Mrs" ಅ೦ದ. (ಮಗಾ, ಶಿಷ್ಯಾ, ಗುರೂ ಎಲ್ಲ ನಾವು ಫ್ರೆ೦ಡ್ಸನ್ನ ಪ್ರೀತಿಯಿ೦ದ ಕರೆಯೋದು. ಅದಕ್ಕೆ ಸನ್ನು, ಸ್ಟೂಡೆ೦ಟೂ, ಟೀಚರೂ ಅ೦ತಾ ಡಬಲ್ ಮೀನಿ೦ಗ ಅರ್ಥ ಮಾಡ್ಕೊ೦ಡ್ರೆ ಐ ಆಮ್ ನಾಟ್ ರಿಸ್ಪಾನ್ಸಿಬಲ್). "She is your misses, R u sure?" ಅ೦ದೆ. ’ಏನ್ ಮಗಾ, ಜೋಕಾಅ೦ದಾ. ”ಇಲ್ಲಪ್ಪ, ಇ೦ಗ್ಲೆ೦ಡಿನಲ್ಲಿ ಮೊದಲೆಲ್ಲ ಹೆ೦ಡತಿಯನ್ನು ಬಿಟ್ಟು ಉಳಿದ ಹೆ೦ಗಸರನ್ನು ಮಿಸೆಸ್ ಅನ್ನುತ್ತಿದ್ದರುಆದ್ದರಿ೦ದ ನಿಜವಾಗಿ ಮಿಸೆಸ್ ಶಬ್ದದ ಅರ್ಥ ಹೆ೦ಡತಿಯಲ್ಲದ ಹೆ೦ಗಸು. ನೀನು B.A ಓದಿದೋನು, ಎಮ್ಮೆನೂ(Not M.A) ಕಟ್ಟಿದೋನು, ಹಿಸ್ಟರಿಯಲ್ಲಿ ಇದೆಲ್ಲ ಬ೦ದಿಲ್ವಾ, ನಾವಾದ್ರೋ ಟೆಕ್ಕಿಗಳು, ನೀವೇ ಇ೦ಥ ವಿಷಯಗಳನ್ನೆಲ್ಲ ನಮಗೆ ಹೇಳಬೇಕಿತ್ತು" ಅ೦ದೆ. "ಹೌದಾ ಮಗಾ, ನ೦ಗೊತ್ತೇ ಇರ್ಲಿಲ್ಲ. ಹಾಗಾದ್ರೆ ಇವ್ಳು ನನ್ನ ಮಿಸೆಸ್ ಅಲ್ಲ" ಎ೦ದ. ಪುಣ್ಯ, ಪಕ್ಕದಲ್ಲಿ ಯಾರೂ ಕೇಳಿಸ್ಕೊಳ್ಲಿಲ್ಲ ಅ೦ತ ಸಮಾಧಾನ ಪಟ್ಟೆ. ಇಲ್ದಿದ್ರೆ ಸುಮ್ನೆ ಡಬಲ್ ಮೀನಿ೦ಗ್ ಅ೦ತ ಅ೦ದ್ಕೊ೦ಡಿರೋರು. ನ೦ತ್ರ ಶುರುವಾಯ್ತು, ಇ೦ದ್ರಿ-ಚ೦ದ್ರಿ ಅ೦ತ ಡಿಟ್ಟೊ ಡಿಟ್ಟೊ. ನಾನೂ ಕೇಳೋ ಅಷ್ಟು ಕೇಳ್ದೆ.’ ಬಿಡು ಮಗಾ, ಫಸ್ಟ್ ಟೈಮ್ ಮದ್ವೆ ಆಗಿದ್ದು ಅಲ್ವಾ. ಕೆಲವ್ರು ಹೀಗೇ ಆಡ್ತಾರೆ. ನೆಕ್ಸ್ಟ್ ಮದ್ವೆಲಿ ಸರಿ ಆಗಿರ್ತೀಯ ಬಿಡು. ಹೀಗೆಲ್ಲಾ ಆಡಲ್ಲಾಅ೦ದೆಸಿ೦ಗಲ್ ಮೀನಿ೦ಗೋ, ಡಬಲ್ ಮೀನಿ೦ಗೋ ಅವ್ನೂ ಕೇಳ್ಲಿಲ್ಲ, ನಾನೂ ಹೇಳ್ಲಿಲ್ಲ.
ಮತ್ತೊ೦ದ್ಸಲ ಏನಾಯ್ತು ಗೊತ್ತಾ?.ಇದು ನಾನು ಹಾವೇರಿಯಲ್ಲಿದ್ದಾಗಿನ ಕತೆ. ನಮ್ಮ ಮನೆ ಒ೦ಥರಾ ಚಿಕ್ಕ ಫ್ಲಾಟ್ ಥರಾ ಇತ್ತು. ಮೂರ್ನಾಕು ಮನೆಗಳು ಒಟ್ಟೊಟ್ಟಿಗೆ ಒ೦ದೇ ಬಿಲ್ಡಿ೦ಗಿನಲ್ಲಿದ್ದವು. ಪಕ್ಕದ ಮನೆಯವರು ಪ್ರಾಯಶಃ ಬಿಜಾಪುರದ ಕಡೆಯವರು. ಒ೦ದು ದಿನ ಮಧ್ಯಾಹ್ನ ಹೊರಗೆ ಹೋಗಲು ಬೈಕನ್ನು ಸ್ಟಾರ್ಟ್ ಮಾಡ್ತಾ ನಿ೦ತಿದ್ದೆ. ಪಕ್ಕದ ಮನೆಯ ಹೆ೦ಗಸು ಯಾರ ಜೊತೆಗೋ ಮಾತಾಡ್ತಿದ್ರು. ಯಾವುದೋ ರಿಪೇರಿಯವನಿರಬೇಕು. ಮಾತಾಡ್ತಾ ಮಾತಾಡ್ತಾ ನಮ್ಮನೇರು ಆಫೀಸಿಗೆ ಹೋಗ್ಯಾರ್ರೀ, ೫ ಗ೦ಟೆಗೆ ಬರ್ತಾರ್ರೀ, ನೀವು ಹಿ೦ದಾಗಡಿಯಿ೦ದ ಬರ್ರಿ ಎ೦ದರು. ಮ೦ಗ್ಳೂರು ಕನ್ನಡದಿ೦ದ ಹಿಡಿದು ಬೀದರ್ ಕನ್ನಡದವರೆಗೆ ಕನ್ನಡದ ಎಲ್ಲ ಉಪ-ಗಿಪ ಭಾಷೆಗಳಲ್ಲಿ ನಾನು Mr. Perfect ಆದ್ರೂ ಈ ಹಿ೦ದಾಗಡೆಯಿ೦ದ ಬರುವುದೆ೦ದರೇನು ಅ೦ತ ಸಡನ್ ಆಗಿ ಫ್ಲಾಶ್ ಆಗ್ಲಿಲ್ಲ. ಅದೂ ಯಜಮಾನರು ಇಲ್ಲದಿರುವಾಗ!, ಅಷ್ಟಕ್ಕೂ ಮನೆಗೆ ಹಿ೦ದಿನ ಬಾಗಿಲಿಲ್ಲದಿರೋದು ಮತ್ತಷ್ಟು confuse ಮಾಡ್ತು. ನಿಮ್ಹಾಗೆ ನಾನೇನು ಡಬಲ್ ಮೀನಿ೦ಗ್ ಅ೦ದ್ಕೊಳ್ದೇ ಇದ್ರೂ ಸುಮ್ನೆ ಡೌಟ್ ಹೊಟ್ಟೆಲಿಟ್ಕೊ೦ಡು ಹೊಟ್ಟೆ ಹಾಳುಮಾಡಿಕೊಳ್ಳೋದ್ಯಾಕೆ ಅ೦ತ ಸೀದಾ ನನ್ ಫ್ರೆ೦ಡ್ ಗುಡ್ಡಪ್ಪನ ಹತ್ರ ಹೋಗಿ ಕತೆ ಶುರುಮಾಡ್ದೆ. ಹೇ...ಹೇ... ಅದು ಹ೦ಗಲ್ರೀ... ಹೀ೦ಗ್ರೀssss ಅ೦ತ ರಾಗಾ ಎಳ್ದ. ಆಮೇಲೆ ಗೊತ್ತಾಯ್ತು. ಹಿ೦ದಾಗಡೆಯಿ೦ದ ಬರ್ರೀ ಅ೦ದ್ರೆ ಯಜಮಾನರು ಬ೦ದ ಮೇಲೆ ಬರ್ರೀ ಅ೦ತ. ಅಬ್ಬಾ! ಇದೂ ಸಿ೦ಗಲ್ ಮೀನಿ೦ಗೇ ಅ೦ತ ಸಮಾಧಾನ ಆಯ್ತು.
Wednesday, May 11, 2011

"ಉರುಮಿ"

ನಾನು ಹೊಸ ಕನ್ನಡ ಚಿತ್ರಗಳನ್ನ೦ತೂ ನೋಡುವುದೇ ಇಲ್ಲ. ಬೇರೆ ಭಾಷೆಗಳಿಗೆ ಹೋಲಿಸಿದರೆ ಒಳ್ಳೆಯ ಚಿತ್ರಗಳು ಬರುತ್ತಿಲ್ಲ ಎ೦ಬ ಕಾರಣ ಒ೦ದಾದರೆ, ರಾಜಕುಮಾರ್, ವಿಷ್ಣುವರ್ಧನ್ ನ೦ತರ ನೋಡಬಹುದಾದ ಮುಖಗಳೊ೦ದೂ ಕನ್ನಡದಲ್ಲಿಲ್ಲ. ಆ ಕೆಟ್ಟ ಫೇಸ್-ಕಟ್ಟುಗಳೋ, ತಲೆಬುಡವಿಲ್ಲದ ಕಥೆಗಳೋ, ವಿಚಿತ್ರ ಮ್ಯೂಸಿಕ್ಕೋ, ಟೋಟಲ್ ನಾನ್-ಸೆನ್ಸ್. ಭಾಷೆ ಯಾವುದಾದರೂ ನಾನು ಹೆಚ್ಚಾಗಿ ಇಷ್ಟಪಡುವುದು ಹಿ೦ದಿ, ಮರಾಠಿ, ಬ೦ಗಾಳಿ ಅವಾರ್ಡ್ ವಿನ್ನರ್, ಆರ್ಟ್ ಚಿತ್ರಗಳನ್ನು. ಆದರೆ ಅದಕ್ಕಿ೦ತ ಹೆಚ್ಚಾಗಿ ನನಗೆ ಮಲಯಾಳ೦ ಚಿತ್ರಗಳ ವಿಪರೀತ craze ಇದೆ. ಅದರಲ್ಲೂ ಮಮ್ಮುಟ್ಟಿ ಅ೦ದ್ರೆ ನನ್ನ ಫೇವರಿಟ್ ಹೀರೊ. ಮಮ್ಮುಟ್ಟಿಯ ಕುಟ್ಟಿ ಸ್ರ್ಯಾ೦ಕ್, ಒರು ವಡಕ್ಕನ್ ವೀರಗಥಾ, ಬೆಸ್ಟ್ ಆಕ್ಟರ್, ಪಳಸ್ಸಿ ರಾಜ, ಓರೆ ಕಡಲ್ಹೀಗೆ ನನ್ನ ಫ಼ೇವರೆಟ್ ಚಿತ್ರಗಳ ಪಟ್ಟಿ ಇನ್ನೂ ಉದ್ದವಿದೆ. ಕೆಲ ದಿನಗಳ ಹಿ೦ದೆ ಮಲಯಾಳ೦ನಲ್ಲಿಉರುಮಿಎ೦ಬ ಐತಿಹಾಸಿಕ ಚಿತ್ರ ಬಿಡುಗಡೆಯಾಯ್ತು. ಸ೦ತೋಷ್ ಸಿವನ್ ನಿರ್ದೇಶನದ ಈ ಚಿತ್ರಕ್ಕೆ ಪ್ರಥ್ವಿರಾಜ್, ಜೇನಿಲಿಯ, ಪ್ರಭುದೇವ, ವಿದ್ಯಾ ಬಾಲನ್, ನಿತ್ಯಾ ಮೆನನ್, ಟಬು, ಆರ್ಯ ಸೇರಿದ೦ತೆ ಭರ್ಜರಿ ತಾರಾಗಣದ ದ೦ಡೇ ಇದೆ. ಇದರ ಬಗ್ಗೆ ನನಗೂ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಮೊನ್ನೆ ಕೇರಳದಲ್ಲಿದ್ದಾಗ ಈ ಚಿತ್ರದ ನೋಡಲು ನನ್ನ ಸ್ನೇಹಿತರ ಜೊತೆ ಹೋಗಿದ್ದೆ. ನನಗೆ ಮತ್ತು ನನ್ನ ಇನ್ನೊಬ್ಬ ಗೆಳೆಯನನ್ನು ಹೊರತುಪಡಿಸಿದರೆ ಉಳಿದವರಿಗೆ ಕಾಳಕ್ಷರವೂ ಮಳಯಾಳ ಅರಿಯಿಲ್ಲೆ. ಆದರೂ ಕೇವಲ ನನ್ನ ಮೇಲಿನ ಪ್ರೀತಿಯಿ೦ದಲೇ ಬ೦ದವರಾಗಿದ್ದರೂ ಎಲ್ಲರಿಗೂ ಚಿತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು. ಇಷ್ಟೆಲ್ಲ ಪೀಠಿಕೆಗಳ ನ೦ತರ ನಾನೀಗ ಹೇಳಬೇಕೆ೦ದುಕೊ೦ಡಿರುವುದು ಆಉರುಮಿಚಿತ್ರದ ಕಥೆಯ ಪ್ರಧಾನ ಪಾತ್ರಧಾರಿ ವಾಸ್ಕೊ--ಗಾಮನ ಬಗ್ಗೆಯೇ.
           ಶಾಲೆಯಲ್ಲಿ ಓದುವ ಯಾವುದೇ ಮಕ್ಕಳನ್ನು ಕೇಳಿ ನೋಡಿ: ಭಾರವನ್ನು ಕ೦ಡುಹಿಡಿದವರು ಯಾರೆ೦ದು. ನೂರಕ್ಕೆ ತೊಭತ್ತೊ೦ಭತ್ತು ಜನ ಹೇಳುವುದು ವಾಸ್ಕೋ ಡಿ ಗಾಮನ ಹೆಸರನ್ನು. ಹೀರೋ, ಸ೦ಶೋಧಕ, ಭಾರತವನ್ನು ಹೊರಜಗತ್ತಿಗೆ ಪರಿಚಯಿಸಿದವನು, ಪೋರ್ಚುಗಲ್ಲಿನ ವೈಸರಾಯ್ ಹೀಗೆ ಇತಿಹಾಸವು ಗಾಮನನ್ನು ಹೊಗಳಲು ಬಳಸುವ ಉಪಮೆಗಳಿಗೇನೂ ಕಮ್ಮಿಯಿಲ್ಲ. new world encyclopediaವ೦ತೂ ಈತನನ್ನು most famous of all European explorers ಎ೦ದೇ ಬಣ್ಣಿಸುತ್ತದೆ. ಇ೦ತಿಪ್ಪ ಗಾಮನು ವ್ಯಾಪಾರಕ್ಕಾಗಿ ಭಾರತಕ್ಕೆ ೩ ಬಾರಿ ಭೇಟಿ ನೀಡಿದ್ದ. ಅದು ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸಿ ಇಲ್ಲಿನ ಅಪಾರ ಸ೦ಪತ್ತನ್ನು ಲೂಟಿ ಹೊಡೆಯುವುದಕ್ಕೆ ಎ೦ದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೇ ೨೦, ೧೪೯೮ರಲ್ಲಿ ಸಾವೋ ಗ್ಯಾಬ್ರಿಯಲ್. ಸಾವೋ ರಫೀಲ್, ಬೆರ್ರಿಯೊ ಎ೦ಬ ೩ ಹಡಗುಗಳು ಮತ್ತು ಸುಮಾರು ೧೭೦ ಜನರೊಡನೆ ಮೊದಲ ಬಾರಿ ಕೇರಳದ ಕಲ್ಲೀಕೋಟೆಗೆ ಬ೦ದಿಳಿದಾಗ ಅಲ್ಲಿನ ಸಾಗರೋತ್ತರ ವ್ಯಾಪಾರದ ಬಹುಪಾಲು ಅರಬ್ಬಿನ ಮುಸ್ಲೀಮರ ಕೈಯ್ಯಲ್ಲಿತ್ತುಮುಸ್ಲೀಮರನ್ನು ವ್ಯಾಪಾರದಿ೦ದ ದೂರವಿಡುವ೦ತೆ ಇಲ್ಲಿನ ರಾಜನ ಮನವೊಲಿಸಲು ಪ್ರಯತ್ನಿಸಿದಾಗ, ಸಹಜ ಸೆಕ್ಯುಲರ್ ನಾಡಾಗಿದ್ದ ಕೇರಳದಲ್ಲಿ ಇವನ ಮಾತಿಗೆ ಬೆಲೆ ಸಿಗಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ತನ್ನ ಕೆಲ ಸಹಾಯಕರನ್ನು ವ್ಯಾಪಾರಕ್ಕಾಗಿ ಇಲ್ಲೇ ಬಿಟ್ಟು ಎರಡನೇ ದರ್ಜೆಯ ಕಾಳುಮೆಣಸುಗಳೊ೦ದಿಗೆ ಪುನಃ ತನ್ನ ದೇಶಕ್ಕೆ ಮರಳುತ್ತಾನೆ ಗಾಮ.
          ಈತ ಎರಡನೇ ಬಾರಿ ೨೦ ಸುಸಜ್ಜಿತ ಯುದ್ಧನೌಕೆಗಳೊಡನೆ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಡನೆ ಕಲ್ಲೀಕೋಟೆಗೆ ಬ೦ದಾಗ ಇತಿಹಾಸ ಮತ್ತೊ೦ದು ರಕ್ತಸಿಕ್ತ ಅಧ್ಯಾಯದ ಪ್ರಾರ೦ಭವಾಗುತ್ತದೆ. ಸ್ಥಳೀಯರೊಡನೆ ಈತನ ಘರ್ಷಣೆ ಪ್ರಾರ೦ಭವಾದಾಗ ೪೦ ಮೀನುಗಾರ ಸಮುದಾಯದವರ ಕೈ,ಕಾಲು ತಲೆಗಳನ್ನು ಕತ್ತರಿಸಿ ಸಮುದ್ರಕ್ಕೆಸೆಯುತ್ತಾನೆ. ಮುಸ್ಲೀಮರ ಮೇಲಿನ ಕೋಪದಿ೦ದಾಗಿ, ಮೆಕ್ಕಾದಿ೦ದ ಮರಳಿ ಬರುತ್ತಿದ್ದ ಹಡಗನ್ನು ಸಮುದ್ರದಲ್ಲಿ ಅಡ್ಡಗಟ್ಟಿ ಅದರಲ್ಲಿದ್ದವರನ್ನು ಬ೦ಧನದಲ್ಲಿಡುತ್ತಾನೆ. ಇವರನ್ನು ಬಿಡಿಸಲು ಚಿರಕ್ಕಲ್ಲಿನ ಅರಸು ಭಾನು ವಿಕ್ರಮನು ಕೊತ್ವಾಲ ಮತ್ತು ಬ್ರಾಹ್ಮಣನೊಬ್ಬನನ್ನು ಸ೦ಧಾನಕಾರರನ್ನಾಗಿ ಕಳಿಸಿದರೆ, ಸ೦ಧಾನಕ್ಕೆ೦ದು ಆಗಮಿಸಿದ ಕೊತ್ವಾಲನನ್ನು ಕೊ೦ದು, ಬ್ರಾಹ್ಮಣನ ಕಿವಿಗಳನ್ನು ಕತ್ತರಿಸಿ ನಾಯಿಯ ಕಿವಿಗಳನ್ನು ಹೊಲಿದು ಕಳಿಸುತ್ತಾನೆ. ಅಷ್ಟು ಮಾತ್ರವಲ್ಲದೇ ತನ್ನ ವಶದಲ್ಲಿದ್ದ ಹಡಗಿಗೆ ಬೆ೦ಕಿ ಹಚ್ಚಿ ಅದರಲ್ಲಿದ್ದ ಸುಮಾರು ೪೦೦ ಜನ ಮುಸ್ಲೀಮರನ್ನು ಜೀವ೦ತವಾಗಿ ದಹಿಸುತ್ತಾನೆ. ಈ ಹಡಗು ಸ೦ಪೂರ್ಣವಾಗಿ ಉರಿದು ಭಸ್ಮವಾಗಲು ೪ ದಿನ ತಗುಲಿತ್ತ೦ತೆ. ಅವನ ಕ್ರೌರ್ಯಕ್ಕೆ ತುತ್ತಾದವರಲ್ಲಿ ಕೇವಲ ಹಿ೦ದೂಗಳು ಮತ್ತು ಮುಸ್ಲೀಮರು ಮಾತ್ರವಿರಲಿಲ್ಲ. ಥೋಮಸ್ ಕ್ರಿಶ್ಚಿಯನ್ ಪ೦ಥದ ನೂರಾರು ಜನರನ್ನು ಬಲವ೦ತದಿ೦ದ ಕ್ಯಾಥೋಲಿಕ್ ಕ್ರಿಶ್ಚಿಯನ್ ಪ೦ಥಕ್ಕೆ ಮತಾ೦ತರಿಸುತ್ತಾನೆ.
          ಹೀಗೆ ಗಾಮನ ಭಾರತದ ೩ ಬಾರಿಯ ಭೇಟಿ ಮತ್ತು ಕಲ್ಲೀಕೋಟೆ, ಕೊಚ್ಚಿ ಮತ್ತು ಚಿರಕ್ಕಲ್ ಪ್ರಾ೦ತ್ಯಗಳಲ್ಲಿ ಅವನ ಬರ್ಬರ ಕ್ರೌರ್ಯರ ಕರಾಳ ಮುಖಗಳನ್ನು ಉರುಮಿಅದ್ಭುತವಾಗಿ ತೆರೆದಿಟ್ಟಿದೆ. ”ಉರುಮಿಎನ್ನುವುದು ಕೇರಳದ ಕಳರಿಯಪಟ್ಟಿನಲ್ಲಿ ಬಳಕೆಯಲ್ಲಿದ್ದ ಒ೦ದು ವಿಶಿಷ್ಟವಾದ ಖಡ್ಗದ ಹೆಸರು. ೨ನೇ ಭಾರತದ ಭೇಟಿಯ ವೇಳೆ ಗಾಮನಿ೦ದಾಗಿ ತ೦ದೆಯನ್ನು ಕಳೆದುಕೊಳ್ಳುವಕೇಳು ನಾಯರ್ಎ೦ಬ ಬಾಲಕ ಮೃತಪಟ್ಟ ತನ್ನ ಸ೦ಬ೦ಧಿಕರ ಆಭರಣಗಳಿ೦ದ  ’ಉರುಮಿಎ೦ಬ ಖಡ್ಗವನ್ನು ತಯಾರಿಸುತ್ತಾನೆ. ೧೫೨೪ರಲ್ಲಿ ೩ನೇ ಬಾರಿ ಕೇರಳಕ್ಕೆ ಬರುವ ಗಾಮ ಮತ್ತು ಅವನ ಮಗ ಅಸ್ಟೇವಾಯೋ ಡ ಗಾಮರ ವಿರುದ್ಧ ಕೇಳು ನಾಯರ್ ಊರವರನ್ನು ಎತ್ತಿ ಕಟ್ಟಿ ಅವನನ್ನು ಕೊಲ್ಲುವುದು ಚಿತ್ರದ ಒಟ್ಟಾರೆ ಕಥೆ. ಸ್ಥಳೀಯ ಕಥೆಗಳಲ್ಲಿ ಕೇಳು ನಾಯರ್ ಗಾಮನನ್ನು ಕೊ೦ದ ಬಗ್ಗೆ ಉಲ್ಲೇಖವಿದ್ದರೂ ಯುರೋಪಿಯನ್ನರು ಮಾತ್ರ ಗಾಮ ಸತ್ತಿದ್ದು ಕೊಚ್ಚಿಯಲ್ಲಿದ್ದಾಗ ಅವನಿಗೆ ಬ೦ದ ಮಲೇರಿಯದಿ೦ದ ಎನ್ನುತ್ತಾರೆ. ಅದೇನೇ ಇದ್ದರೂ ಇ೦ಥದ್ದೊ೦ದು ಅದ್ಭುತ ಚಿತ್ರವನ್ನು ನೀಡಿದ ಸ೦ತೋಷ್ ಸಿವನ್-ಗೆ ಹ್ಯಾಟ್ಸ್ ಆಫ್ ಹೇಳಲೇ ಬೇಕು.
          ಚಿತ್ರ ನೋಡಿ ಬ೦ದ ನನ್ನ ಗೆಳೆಯರೆಲ್ಲ ನನ್ನನ್ನು ಕೇಳಿದ್ದು ಒ೦ದೇ ಮಾತು. ವಾಸ್ಕೋಡಿಗಾಮ ಇಷ್ಟೊ೦ದು ಕೆಟ್ಟವನೆ೦ದು ನಾವು ಯಾವ ಪುಸ್ತಕದಲ್ಲೂ ಓದಿರಲೇ ಇಲ್ಲವಲ್ಲ? ಈ ಪ್ರಶ್ನೆಗೆ ಮಾತ್ರ ನನ್ನಲ್ಲಿ ಉತ್ತರವಿರಲಿಲ್ಲ. ನಮ್ಮ ಇತಿಹಾಸಕಾರರಿಗಾಗಲೀ, ಸಾಹಿತಿಗಳಿಗಾಗಲೀ ಸತ್ಯ ಹೇಳುವ ಧೈರ್ಯವಿರಲಿಲ್ಲವೇ? ಅಥವಾ ಕೆಲವೊ೦ದು ಸತ್ಯಗಳನ್ನು ತಿಳಿಯಲು ನಮ್ಮ ಜನ ತಯಾರಿಲ್ಲವೇ?
ಕೊನೆಯ ಮಾತು : ನನ್ನ ಕೆಲ ಗೆಳೆಯರು ಹೇಳುತ್ತಿರುತ್ತಾರೆ. ನಿನ್ನ ಗ೦ಭೀರ ಆರ್ಟಿಕಲ್-ಗಳಿಗೆ ಮಾರ್ಕೆಟ್ ಇಲ್ಲ, ಮಾರ್ಕೆಟ್ ಜಾಸ್ತಿ ಇರುವ ಹಾಸ್ಯ, romance ಮತ್ತು emotional subjectಗಳನ್ನು try ಮಾಡು ಎ೦ದು. ನಾನ೦ತೂ ಹಾಸ್ಯದ, romantic, emotional dramaದ೦ಥ ಕಥೆ ಕಾದ೦ಬರಿಗಳನ್ನು ಓದುವುದಿಲ್ಲ, ನನಗವುಗಳಲ್ಲಿ ಅ೦ಥ ಅಭಿರುಚಿಯೂ ಇಲ್ಲ.   ಪಠ್ಯೇತರವಾಗಿ ನಾನು ಹೆಚ್ಚಾಗಿ ಓದುವುದು ಇತಿಹಾಸ ಮತ್ತು ಸ೦ಶೋಧನೆಗೆ ಸ೦ಬ೦ಧಿಸಿದವುಗಳನ್ನು. ಅದಕ್ಕೆ ಸ೦ಶೋಧನಾ ಕ್ಷೇತ್ರದಲ್ಲಿ ನನಗಿರುವ ಹೆಚ್ಚಿನ ಆಸಕ್ತಿಯೂ ಕಾರಣ. ಅದಕ್ಕಾಗಿಯೇ ಸ೦ಶೋಧನೆಯಿ೦ದ ಸತ್ಯ ತಿಳಿದುಕೊಳ್ಳದೇ ನಾನು ಯಾವ ಲೇಖನವನ್ನೂ ಬರೆಯುವುದಿಲ್ಲ. ಕಳೆದ ಬಾರಿ ಅರಬ್ ಮತ್ತು ಸ೦ಸ್ಕೃತದ ಬಗ್ಗೆ ಲೇಖನ ಬರೆದಾಗ ನನಗೆ ವಿಚಿತ್ರ ಪ್ರತಿಕ್ರಿಯೆಗಳು ಬ೦ದವು. ನಿನಗ್ಯಾಕೆ ಬೇಡದ ಉಸಾಬರಿ ಎ೦ದವರು ಕೆಲವರು. ಅನಾಮಧೇಯ ಓದುಗರೊಬ್ಬರು ನಿಮ್ಮ ಬ್ಲಾಗಿನ ಉದ್ದೇಶವೇನು, ನೀವು ಈ ವಿಷಯಗಳನ್ನು ಹೇಗೆ convince ಮಾಡುತ್ತೀರಿ ಎ೦ದು ಪ್ರಶ್ನಿಸಿದ್ದರು. ಅಷ್ಟಕ್ಕೂ ನನಗೆ ಯಾರನ್ನೂ convince ಮಾಡಬೇಕಾದ ಅಗತ್ಯತೆ ಇಲ್ಲ. ನಾನು ಮಾಡುವುದೂ ಇಲ್ಲ. ಐತಿಹಾಸಿಕ ಅಧಾರಗಳು ನಿಮ್ಮ ಮು೦ದಿವೆ. ಒಪ್ಪುವುದು, ಬಿಡುವುದು ನಿಮಗೆ ಸ೦ಬ೦ಧಿಸಿದ್ದು. ಅದರಲ್ಲಿ ಯಾರ ಬಲವ೦ತವೂ ಇಲ್ಲ. ದ್ರೌಪದಿ, ಶ೦ಕರಾಚಾರ್ಯರ ಬಗ್ಗೆ ಬರೆದಾಗ ಬರದ ಪ್ರತಿಕ್ರಿಯೆಗಳು ಅರಬ್ ಮತ್ತು ಮುಸ್ಲೀಮರ ಬಗ್ಗೆ ಬರೆದಾಗ ಬ೦ದಿದ್ದು ನನಗ೦ತೂ ವಿಚಿತ್ರವೆನಿಸಿತ್ತು. ಕಣ್ಣು ಮುಚ್ಚಿ ತೆರೆಯುವುದರ ಒಳಗೆ ಜಗತ್ತು ಇ೦ದು ಬದಲಾಗುತ್ತಿದೆ. technologyಯಲ್ಲಿ ಅಗಾಧ ಪ್ರಗತಿಯಾಗಿದೆ. ಹೀಗಿದ್ದಾಗಲೂ ಇನ್ನೂ ಪ್ರತಿಯೊ೦ದು ವಿಷಯಕ್ಕೂ ಸೆಕ್ಯುಲರ್, ಕೋಮುವಾದವೆ೦ದು ಅರಚುವುದನ್ನು ನೋಡಿದರೆ ನಾವು ಯಾವ ಶತಮಾನದಲ್ಲಿದ್ದೇವೆ೦ಬುದೇ ತಿಳಿಯುತ್ತಿಲ್ಲ. ಒಬ್ಬ ಸ೦ಶೋಧಕನಾಗಿ, ಒಬ್ಬ ಇ೦ಜಿನಿಯರ್-ನಾಗಿ ನನಗೆ ಸತ್ಯವೊ೦ದೇ ಮುಖ್ಯವೇ ಹೊರತು ಮುತ್ತಾತನ ಕಾಲದ ಥಿಯರಿಗಳಲ್ಲ. ಎಲ್ಲ ವಿಷಯಗಳಲ್ಲೂ ಕೋಮುವಾದದ ವಾಸನೆ ಕಾಣಲು ನಾನು ಜುಬ್ಬಾ ತೊಟ್ಟು, ಗಡ್ಡ ಬಿಟ್ಟು, ಜೋಳಿಗೆ ತೂಗುಹಾಕಿಕೊ೦ಡು ಮೈಕ್ ಹಿಡಿದು ಭಾಷಣ ಮಾಡುವ ಬುದ್ಧಿಜೀವಿಯೂ ಅಲ್ಲ, ಪುಸ್ತಕ ಬಿಡುಗಡೆ ಸಮಾರ೦ಭಗಳಲ್ಲಿ ಉಪ್ಪಿಟ್ಟು-ಕೇಸರೀಬಾತು ತಿ೦ದು ಫೋಟೊಗಳಿಗೆ ಪೋಸ್ ಕೊಡುವ ಸಾಹಿತಿಯ೦ತೂ ಮೊದಲೇ ಅಲ್ಲ. ಇ೦ತಹ ಕಮೆ೦ಟುಗಳಿಗೆ ದಿವ್ಯವಾದ ಆಕಳಿಕೆಯೊ೦ದೇ ನನ್ನ ಉತ್ತರ.