Pages

Friday, July 11, 2014

ಆಷಾಢಕ್ಕೊಂದು ಅಮರ ವಿರಹ ಕಾವ್ಯ

     ಕಾಲಿದಾಸನ ಬಗ್ಗೆ ಕೆಲವಷ್ಟು ದಂತಕತೆಗಳಿವೆ. ಮಂತ್ರಿಯ ಕುತಂತ್ರದಿಂದ ಹಳ್ಳಿಯ ಹೆಡ್ಡನನ್ನು ರಾಜಕುಮಾರಿ ಮದುವೆಯಾದಳೆಂದೂ ಮೋಸದ ಅರಿವಾಗಿ ಗಂಡನಿಗೆ ಕಾಲಿಕಾಮಾತೆಯನ್ನು ಪ್ರಾರ್ಥಿಸಲು ಹೇಳಿದಳೆಂಬುದು ಅದರಲ್ಲೊಂದು. ಆ ಹೆಡ್ಡ ಅನನ್ಯ ಭಕ್ತಿಯಿಂದ ಕಾಲಿಯನ್ನಾರಾಧಿಸಿ ಅತುಲ ಪಾಂಡಿತ್ಯ ಮತ್ತು ಅಪ್ರತಿಮ ಕಾವ್ಯಪ್ರತಿಭೆಯನ್ನು ಪಡೆದುಕೊಂಡು ಕಾಲಿಯಲ್ಲಿ ತನಗುಂಟಾದ ಭಕ್ತಿಗಾಗಿ ’ಕಾಲಿದಾಸ’ ಎಂಬ ಹೆಸರಿಟ್ಟುಕೊಂಡು ಮರಳಿ ಬಂದನು. ಅವನ ಬರುವನ್ನೇ ನಿರೀಕ್ಷಿಸುತ್ತಿದ್ದ ರಾಜಕುಮಾರಿ ಕಾಲಿದಾಸ ಬಂದೊಡನೆ ’ಅಸ್ತಿ ಕಶ್ಚಿದ್ ವಾಗರ್ಥ?’ ಏನಾದರೂ ಪಾಂಡಿತ್ಯ ದೊರಕಿತೆ? ಎಂದು ಕೇಳಿದಳು. ಉತ್ತರ ರೂಪವಾಗಿ ಅವನ ಬಾಯಿಯಿಂದ ಲಲಿತವಾದ ಮಧುರ ಕವಿತೆಗಳೇ ಚಿಮ್ಮತೊಡಗಿದವು. ಕೇಳಿದ ಪ್ರಶ್ನೆಯಲ್ಲಿನ ಮೂರು ಶಬ್ದಗಳನ್ನೇ ತನ್ನ ಮೂರು ಕಾವ್ಯಗಳ ಮೊದಲ ಶಬ್ದಗಳನ್ನಾಗಿ ಮಾಡಿದನಂತೆ. ಕುಮಾರಸಂಭವದ ಮೊದಲ ಶ್ಲೋಕವು ’ಅಸ್ತಿ ಉತ್ತರಸ್ಯಾಂ ದಿಶಿ ದೇವತಾತ್ಮಾ’ ಎಂದು, ಮೇಘದೂತದ ಮೊದಲ ಶ್ಲೋಕ ’ಕಶ್ಚಿತ್ ಕಾಂತವಿರಹಗುರುಣಾ’ ಎಂದು, ರಘುವಂಶದ ಮೊದಲ ಶ್ಲೋಕ ’ವಾಗರ್ಥಾವಿವ ಸಂಪ್ರಕ್ತೌ’ ಎಂದೂ ಶುರುವಾಗುವುದಕ್ಕೆ ರಾಜಕುಮಾರಿಯ ಪ್ರಶ್ನೆಯೇ ಕಾರಣವಂತೆ.
ಒಂದು ಪ್ರಶ್ನೆಯ ಶಬ್ದಗಳು ಹೀಗೆ ಕಾವ್ಯನಿರ್ಮಾಣಕ್ಕೆ ಕಾರಣವಾಗುವುದು ಕಾಲಿದಾಸನ ವಿದ್ವತ್ತೆಯ ಲಕ್ಷಣವೆನ್ನಬಹುದಾದರೂ ಈ ಕತೆಗೂ ಒಂದು ಉದ್ದೇಶವಿರಬಹುದು. ಆಶ್ಚರ್ಯದ ಮಾತೆಂದರೆ ಮೇಘದೂತದಂಥ ಚಿಕ್ಕ ಕಾವ್ಯವನ್ನು ರಘುವಂಶದಂತಹ ಶ್ರೇಷ್ಠಕಾವ್ಯದ ಮಾಲಿಕೆಯಲ್ಲಿ ಸೇರಿಸಿದ್ದು. ಈ ಖಂಡಕಾವ್ಯವನ್ನು ಮೆಚ್ಚಿ, ಇದನ್ನೇ ಅನುಕರಿಸಿ ನೂರಾರು ದೂತಕಾವ್ಯಗಳು
ಸಂಸ್ಕೃತ ಸಾಹಿತ್ಯದಲ್ಲಿ ರಚಿತವಾಗಿವೆ. ಇದು ಕಾಲಿದಾಸನ ಶ್ರೇಷ್ಟ ಕಾವ್ಯವಲ್ಲವೆನ್ನುವ ವಿದ್ವಾಂಸರೂ ಇದನ್ನು ಸಾಹಿತ್ಯ ಪ್ರಪಂಚದ ಅತ್ಯಪರೂಪದ ಕೃತಿಗಳಲ್ಲೊಂದೆಂದು ಪರಿಗಣಿಸುತ್ತಾರೆ. ಮೇಘದೂತವು ಪ್ರೇಮದ ಪ್ರತಿಮುಖವಾದ ವಿಪ್ರಲಂಬದ ಭಾವಗೀತೆ. ಮಾನವನ ಹೃದಯರಂಗದಲ್ಲಿ ರಸವಾಗಿ ಉಕ್ಕಿ ಹರಿಯುವ ಅಂತರಂಗಸಾಗರದ ಭಾವತರಂಗಗಳೇ ಅದರ ಜೀವಾಳ. ಶುಷ್ಕವಾದ ಮಾನವಹೃದಯದಲ್ಲಿ ಪ್ರೇಮದ ಅಮೃತಸೇಚನೆಯಿಂದಾಗುವ ಆಹ್ಲಾದವನ್ನು ಋತುಸಂಹಾರದಲ್ಲಿ ತೋರಿಸಿದ ಕಾಲಿದಾಸ ವಿರಹದಲ್ಲಿ ಪ್ರೇಮ ಬತ್ತುವ ಬದಲು ನೂರ್ಮಡಿಯಾದ ಪ್ರಭಾಮಂಡಲವನ್ನು ಹೇಗೆ ತಳೆಯಬಹುದೆಂದು  ಮನೋಹರವಾಗಿ ಮಂದಾಕ್ರಾಂತವೃತ್ತಗಳಲ್ಲಿ ಮೇಘದೂತದ ತುಂಬೆಲ್ಲ ಹಾಡಿದ್ದಾನೆ.
      ಕಾಲಿದಾಸನ ಕೃತಿಗಳಲ್ಲಿ ರಾಮಾಯಣದ ಗಾಢ ಪ್ರಭಾವವಿದೆ. ಅದರಲ್ಲೂ ಮೇಘದೂತದಲ್ಲಿ ಒಂದು ವಿಶೇಷವಿದೆ. ಆಕಾಶದಲ್ಲಿ ಮೇಘದೊಡನೆ ಸಂದೇಶವನ್ನು ಕಳುಹಿಸುವ ವಿಚಾರವು ರಾಮಾಯಣದಲ್ಲಿ ಆಕಾಶದಲ್ಲಿ ಹಾರುವ ಹನುಮಂತನು ಸೀತೆಗೆ ಸಂದೇಶವನ್ನು ಕೊಂಡೊಯ್ಯುವುದರಿಂದ ಪ್ರೇರಿತವಾದುದು. ಮೇಘದೂತದ ಮೊದಲ ಶ್ಲೋಕದಲ್ಲಿರುವ ’ಕಾಂತಾವಿರಹಗುರುಣಾ’, ’ರಾಮಗಿರಿ’ ಮತ್ತು ’ಜನಕತನಯಾ’ ಶಬ್ದಗಳಿಂದ ಅದು ಸ್ಪಷ್ಟ. ಎರಡರಲ್ಲೂ ವಿರಹದಲ್ಲಿದ್ದ ಗಂಡ ತನ್ನ ಹೆಂಡತಿಗೆ ಸಂದೇಶವನ್ನು ಕಳಿಸುತ್ತಾನೆ. ಮುಂದೆ ೯೭ನೇ ಶ್ಲೋಕದಲ್ಲಿ ’ಇತ್ಯಾಖ್ಯಾತೇ ಪವನತನಯಂ ಮೈಥಿಲೀವೋನ್ಮುಖೀ ಸಾ’, ನೀನಿದನ್ನು ಹೇಳಿದಾಗ ಜಾನಕಿಯು ಹನುಮಂತನನ್ನು ನೋಡಿದಂತೆ ನನ್ನ ಹೆಂಡತಿಯು ಮುಖವನ್ನೆತ್ತಿ ನಿನ್ನನ್ನು ನೋಡುವಳು ಎಂದು ಯಕ್ಷನು ಹೇಳುವ ಮಾತು ಕೂಡ ರಾಮಾಯಣವು ಸ್ಫೂರ್ತಿಮೂಲವೆಂದು ಸೂಚಿಸುತ್ತದೆ.(ಅಭಿಜ್ಞಾನ ಶಾಕುಂತಲದ ಮೂಲ ಮಹಾಭಾರತವಾದರೂ ಮೂಲದಲ್ಲಿಲ್ಲದ ಅಭಿಜ್ಞಾನ ಉಂಗುರದ ಕಥೆ ರಾಮಾಯಣದಿಂದ ಪ್ರೇರಿತವಾದ್ದೇ). ಇದೂ ಅಲ್ಲದೇ ಋಗ್ವೇದದ ೫ನೇ ಮಂಡಲದಲ್ಲಿ ಆತ್ರೇಯಿಯೆಂಬವನು ತನ್ನ ಭಾವೀಪತ್ನಿಯ ಬಳಿ ರಾತ್ರಿಯನ್ನೇ ದೂತಿಯನ್ನಾಗಿ ಕಳಿಸಿದ್ದು, ಜಾತಕ ಕತೆಯ ಕಾಕದೌತ್ಯಗಳ ಪ್ರಭಾವವನ್ನೂ ಅಲ್ಲಗಳೆಯುವಂತಿಲ್ಲ.
     ಮೇಘದೂತದಲ್ಲಿ ೧೧೦ ಶ್ಲೋಕಗಳಿವೆ. ಮೊದಲ ಶ್ಲೋಕದಲ್ಲೇ ಕವಿಯು ಕಥೆಯನ್ನು ಪ್ರಾರಂಭಿಸುತ್ತಾನೆ. ಕುಬೇರನಿಂದ ಶಾಪಕ್ಕೊಳಗಾಗಿ ಯಕ್ಷನೊಬ್ಬ ಹೆಂಡತಿಯಿಂದ ಒಂದು ವರ್ಷದ ವಿರಹರೂಪದ ಶಿಕ್ಷೆಯನ್ನು ಭೋಗಿಸುತ್ತಿದ್ದ. ತನ್ನ ಅಲಕಾನಗರದಿಂದ ಅತಿದೂರವಾದ ರಾಮಗಿರಿಯ ಆಶ್ರಮದಲ್ಲಿ ಅವನ ವಾಸ. ಕಥೆ ಪ್ರಾರಂಭವಾಗುವಾಗ ಯಕ್ಷನ ಶಿಕ್ಷಾವಧಿಯ ಒಂದು ವರ್ಷದಲ್ಲಿ ಎಂಟು ತಿಂಗಳು ಕಳೆದು ನಾಲ್ಕು ತಿಂಗಳು ಬಾಕಿಯಿತ್ತು. ಆಗಷ್ಟೆ ಮಳೆಗಾಲವು ಪ್ರಾರಂಭವಾಯಿತು.
ಆಷಾಢದ ಮೊದಲ ಮೋಡವನ್ನು ಕಂಡೊಡನೆ ಅಲ್ಲಿಯವರೆಗೂ ತಡೆದುಕೊಂಡಿದ್ದ ವಿರಹ ವ್ಯಥೆ ಕಟ್ಟೆಯೊಡೆದು ಚಿಮ್ಮಿತು. ದೂರದ ಅಲಕೆಯಲ್ಲಿರುವ ಪ್ರಿಯೆ ಹೇಗಿದ್ದಾಳೋ? ಆಕೆಗೊಂದು ಕ್ಷೇಮಸಮಾಚಾರವನ್ನಾದರೂ ಕಳುಹಿಸದಿದ್ದರೆ ಮನಸ್ಸಮಾಧಾನವಿಲ್ಲ. ಆ ನಿರ್ಜನ ಪ್ರದೇಶದಲ್ಲಿ ದೂತರೆಲ್ಲಿಂದ ಸಿಗಬೇಕು?
ಮೇಘಲೋಕೇ ಭವತಿ ಸುಖಿನೋಽನ್ಯಥಾವೃತ್ತಿ ಚೇತಃ |
ಕಂಠಾಶ್ಲೇಷಪ್ರಣಯಿನಿ ಜನೇ ಕಿಂ ಪುನರ್ದೂರಸಂಸ್ಥೇ ||

ಮೇಘದರ್ಶನದಿಂದ ಸುಖದಲ್ಲಿದ್ದವರ ಮನಸ್ಸೂ ಅಸುಖಿಯಾಗುವುದು. ಇನ್ನು ಒಬ್ಬರನ್ನೊಬ್ಬರು ಪ್ರೇಮದಿಂದ ಅಲಂಗಿಸಲು ಉತ್ಸುಕರಾದವರು ಒಬ್ಬರಿಂದೊಬ್ಬರು ದೂರದಲ್ಲಿದ್ದರೆ ಏನಾಗಬಹುದು?
ಮೇಘದರ್ಶನದಿಂದಲೇ ಅಲ್ಲವೇ ವಿರಹ ವ್ಯಾಪಿಸಿದ್ದು. ಅದನ್ನೇ ಯಾಚಿಸಿದರೆ ದೂತನಾದಾನೆಂದು ತಳಮಳಿಸುತ್ತಿದ್ದ ಮನಸ್ಸಿಗೆ ತೋಚಿತು. ಆದರೆ ಮೇಘವು ಸಂದೇಶವನ್ನು ಒಯ್ಯುವುದೆಂಬ ಭರವಸೆ ಎಲ್ಲಿದೆ? ಒಯ್ಯದಿದ್ದರೆ ಇಲ್ಲ. ’ಯಾಞ್ಚಾಮೋಘಾ ವರಮಧಿಗುಣೇ ನಾಧಮೇ ಲಭಕಾಮಾ | ’ ಅಯೋಗ್ಯರಲ್ಲಿ ಬೇಡಿ ಸಫಲವಾಗುವುದಕ್ಕಿಂತ ಮಹಾತ್ಮನಿಂದ ವಿಫಲವಾಗುವುದೇ ಲೇಸು. ಮೇಘವನ್ನು ಸ್ತುತಿಸಿ ಕಾಡುಹೂಗಳಿಂದ ಸ್ವಾಗತಮಾಡಿ ಇಷ್ಟು ಉಪಕಾರ ಮಾಡೆಂದು ಕೇಳಿಕೊಳ್ಳುತ್ತಾನೆ. ಅಲ್ಲಿಂದ ಶುರುವಾಗುವುದು ರಾಮಗಿರಿಯಿಂದ ಅಲಕಾನಗರಿಯವರೆಗಿನ ಅದ್ಭುತ ಪ್ರಕೃತಿ ದರ್ಶನ.
       ಈ ಯಕ್ಷನಿದ್ದ ರಾಮಗಿರಿ ಇದ್ದುದು ಮಧ್ಯಭಾರತದ ನರ್ಮದೆಯ ದಕ್ಷಿಣಕ್ಕಿದ್ದ ವಿದರ್ಭದ ರಾಮ್‍ಟೇಕಾ ಬೆಟ್ಟಗಳ ಸಾಲಿನಲ್ಲಿ. ಮೇಘನಿಗೆ ದಾರಿಯನ್ನು ತೋರಿಸುವಾಗ ಕಾಲಿದಾಸ ಮೊದಲು ವರ್ಣಿಸುವುದು ಮಾಲದೇಶವನ್ನು, ತರುವಾಯ ನರ್ಮದಾ ನದಿ. ಅದರಾಚೆ ಆಮ್ರಕೂಟ, ರೇವಾ ನದಿ, ದಶಾರ್ಣ ಹೀಗೆ ಸಾಗಿ ಕೊನೆಗೆ ಕೈಲಾಸ, ಮಾನಸ ಮತ್ತು ಅಲಕಾನಗರಿ. ಗೋದಾವರಿಯ ದಕ್ಷಿಣಕ್ಕಿದ್ದ ಪ್ರದೇಶಗಳ ಕಲ್ಪನೆ ರಾಮಾಯಣ ಕಾಲದ ಉತ್ತರ ಭಾರತೀಯರಿಗಿದ್ದಂತಿರಲಿಲ್ಲ, ಇದಾದ ಕೆಲಸಾವಿರ ವರ್ಷ
ಗಳ ನಂತರದ ಕಾಳಿದಾಸನಿಗೂ ಇರಲಿಲ್ಲ. ಒಂದುವೇಳೆ ಕಾಳಿದಾಸನ ಕಾಲದಲ್ಲಿ ಲಂಕೆ ದಕ್ಷಿಣದಲ್ಲಿದ್ದುದಾಗಿ ಪ್ರಚಲಿತದಲ್ಲಿದ್ದುದೇ ಆದರೆ ಕಾಳಿದಾಸ ದಕ್ಷಿಣವನ್ನುಲ್ಲೇಖಿಸದೇ ಹೋಗುತ್ತಿರಲಿಲ್ಲ. ಮೇಲಿನ ರಾಮಗಿರಿಯಿಂದ ಅಲಕಾನಗರದ ದಾರಿಯ ವರ್ಣನೆಗಳಲ್ಲೂ ವೈಶಿಷ್ಟ್ಯವಿದೆ. ಮಧ್ಯದಲ್ಲಿ ಉಲ್ಲೇಖಿಸಲ್ಪಡುವ ಉಜ್ಜೈನಿ ರಾಮಗಿರಿಯಿಂದ ಅಲಕಾನಗರದ ನೇರದಾರಿಯಲ್ಲಿಲ್ಲ. ನಡುವೆ ಅಡ್ಡದಾರಿ ಹಿಡಿದು ಹೋಗಬೇಕಾಗುತ್ತದ್ದೆ.
ವಕ್ರಃ ಪಂಥಾ  ಯದಪಿ ಭವತಃ ಪ್ರಸ್ಥಿತಸ್ಯೋತ್ತರಾಶಾಂ
ಸೌಧೋತ್ಸಂಗ ಪ್ರಣಯವಿಮುಖೋ ಮಾಸ್ಮ ಭೂರುಜ್ಜಯಿನ್ಯಾಃ |

ಉತ್ತರ ದಿಕ್ಕಿಗೆ ಹೊರಟ ಮೇಘಕ್ಕೆ ಉಜ್ಜಯಿನಿ ಅಡ್ಡದಾರಿಯಾದರೂ ಮೇಘ ಈ ಸದಾವಕಾಶವನ್ನು ಕಳೆದುಕೊಳ್ಳಬಾರದು, ಉಜ್ಜಯಿನಿಗೆ ಹೋಗಲೇಬೇಕು ಎನ್ನುತ್ತಾನೆ ಯಕ್ಷ. ಅಡ್ದದಾರಿಯಲ್ಲೆಲ್ಲೋ ಇದ್ದ ಉಜ್ಜಯಿನಿಗೆ ಅಷ್ಟು ಮಹತ್ವ ಕೊಟ್ಟ ಕಾರಣವೇನು? ಕಾರಣ ಸರಳ. ಉಜ್ಜೈನಿಯನ್ನು ರಾಜಧಾನಿಯನ್ನಾಗಿಟ್ಟುಕೊಂಡು ಆಳಿದ ವಿಕ್ರಮಾದಿತ್ಯನ ಆಸ್ಥಾನದಲ್ಲಿಯೇ ಕಾಲಿದಾಸನಿದ್ದುದು. ಅಲ್ಲದೇ ಪ್ರಾಚೀನ ಉಜ್ಜೈನಿಯು ಸಾಹಿತ್ಯ, ಸಂಗೀತಕಲೆಗಳೇ ಅಲ್ಲದೇ ವೈಜ್ಞಾನಿಕ ಸಂಶೋಧನೆಗಳಿಗೂ ಹೆಸರುವಾಸಿಯಾಗಿತ್ತು. ಅಷ್ಟಾಗ್ಯೂ ಉಜ್ಜೈನಿ ಕಾಲಿದಾಸನಿಗೆ ಇಷ್ಟವಾಗುವುದು ತನ್ನ ಊರೆಂಬ ಅಭಿಮಾನದ ಕಾರಣದಿಂದಲೇ.
ಅಪ್ಯನ್ಯಸ್ಮಿನ್ ಜಲಧರ ಮಹಾಕಾಲಮಾಸಾದ್ಯ ಕಾಲೇ |
ಸ್ಥಾತವ್ಯಂ ತೇ ನಯನವಿಷಯಂ ಯಾವದತ್ಯೇತಿ ಭಾನುಃ ||

ಮೇಘವು ಸಂಜೆ ಉಜ್ಜೈನಿಯನ್ನು ಮುಟ್ಟಿದರೆ ಸಾಯಂಕಾಲದ ಮಹಾಕಾಲನ ಪೂಜೆಯಲ್ಲಿ ಭಾಗವಹಿಸಿ, ರಾತ್ರಿಯ ಕತ್ತಲಿನಲ್ಲಿ ರಮಣನ ಕಡೆ ಹೋಗುವ ಯುವತಿಯರಿಗೆ ದಾರಿ ತೋರಿಸಿ, ಆ ರಾತ್ರಿಯನ್ನು ಪಾರಿವಾಳಗಳು ಮನೆಮಾಡಿಕೊಂಡಿರುವ ಉಪ್ಪರಿಗೆಯಲ್ಲಿ ಕಳೆದು ದಣಿವಾರಿಸಿಕೊಂಡು ಬೆಳಗಾದಕೂಡಲೇ ತನ್ನ ದಾರಿಯನ್ನು ಹಿಡಿಯಬೇಕು. ಒಳ್ಳೆಯ ಜನ ಒಪ್ಪಿಕೊಂಡ ಕೆಲಸವನ್ನು ನೆರವೇರಿಸಲು ತಡಮಾಡುವುದಿಲ್ಲ ಎನ್ನುತ್ತಾನೆ ಯಕ್ಷ. ಉಜ್ಜೈನಿಯ ಬಗ್ಗೆ ಪಕ್ಷಪಾತ ತೋರಿಸಿದರೂ ಯಕ್ಷ ಹೆಂಡತಿಯನ್ನು ಮರೆಯುವುದಿಲ್ಲ.
       ಆದಷ್ಟು ಬೇಗ ಹೆಂಡತಿಗೆ ಸಂದೇಶವನ್ನು ಕೊಡಬೇಕು ಎಂದು ಮೇಘವನ್ನು ತ್ವರೆಮಾಡುವ ಯಕ್ಷನೇ ಸುಮಾರು ಐವತ್ತು ಶ್ಲೋಕಗಳಲ್ಲಿ ಅಲಕಾದ ದಾರಿಯನ್ನೂ, ಇನ್ನೈವತ್ತು ಶ್ಲೋಕಗಳಲ್ಲಿ ತನ್ನ ಹೆಂಡತಿಯನ್ನೂ ವರ್ಣಿಸಿ ತಕ್ಕಮಟ್ಟಿಗೆ ಲಂಬಿಸಿದ್ದಾನೆ ಎಂದು ಕಾಳಿದಾಸನ ಮೇಲೆ ಟೀಕೆಯಿರುವುದಾದರೂ ಅರ್ಧ ಭಾರತದ ವರ್ಣನೆಯನ್ನು ಕಣ್ಣಿಗೆ ಕಟ್ಟುವಂತೆ ಸಮಯೋಚಿತ ಶಬ್ದಗಳಲ್ಲಿ ನಿಲ್ಲಿಸುವುದು ಕಾಲಿದಾಸನ ಕವಿತ್ವದ ಅದ್ವಿತೀಯ ಗುಣ. ಅದನ್ನು ಮೀರಿದ ವಿಪ್ರಲಂಬ ಶೃಂಗಾರ, ಔಚಿತ್ಯ ಸಿದ್ಧಿ, ರಸಪ್ರಜ್ಞೆಗಳು ಮೇಘದೂತದ ಸಾರ್ವತ್ರಿಕತೆ, ಸರ್ವಕಾಲಿಕತೆಗೆ ಕಾರಣಗಳಾಗಿವೆ.
       ಮೇಘದೂತದ ತುಂಬ ಬಣ್ಣಗಳ ಸಾಮ್ರಾಜ್ಯವಿದೆ. ಪರ್ವತಗಳು, ನದಿಗಳು, ಅವುಗಳೊಟ್ಟಿಗಿನ ಮೇಘದ ಸಂಬಂಧ, ಹಳ್ಳಿಯ ಮುಗ್ಧೆಯರು, ನಗರದ ವಿಲಾಸಿನಿಯರು, ಸಾದ್ಯಂತ ಬರುವ ಶೃಂಗಾರ. ದೂತನಿಗೆ ರಾಜಹಂಸಗಳೇ ಸಹಯಾತ್ರಿಕರು, ಸಾರಂಗಗಳೇ ದಾರಿತೋರಿಸುವವು, ಭೂಮಿ ಸುರಭಿಯಾಗಿ ಹರ್ಷದಿಂದ ಹಸಿರಾಗುತ್ತದೆ, ಒಂದೊಂದು ನದಿಯೂ ಅವನ ಬರುವಿಕೆಗಾಗಿ ಎದುರುನೋಡಿ ಬಡವಾಗಿರುವ ಪ್ರೇಯಸಿಯೇ.ಇಲ್ಲಿ ಯಾವ ವರ್ಣನೆಯೂ ಅನವಶ್ಯಕವೆನಿಸಿ ಬೇಸರ ತರಿಸುವುದಿಲ್ಲ. ಆಮ್ರಕೂಟ ಪರ್ವತದ ಉಪಾಂತಗಳಲ್ಲಿ ಹಣ್ಣುಗಳಿಂದ ಪೂರ್ತಿ ಮುಚ್ಚಿದ ಕಾಡುಮಾವಿನ ಮರಗಳು ಹಬ್ಬಿವೆ. ಅದರ ಬುಡದಿಂದ ಮೇಲಿನವರೆಗೂ ಎಲ್ಲವೂ ಹಳದಿಯಾಗಿ ಕಾಣುತ್ತಿದೆ. ಕಪ್ಪುಕಾಡಿಗೆಯ ಬಣ್ಣದ ಮೋಡ ಆ ಪರ್ವತದ ತುದಿಯಲ್ಲಿ ಆಸೀನವಾದರೆ ಆಗಸದಿಂದ ನೋಡುವ ದೇವದಂಪತಿಗಳಿಗೆ ಆಮ್ರಕೂಟವು ಭೂಮಿಯ ಸ್ತನವೋ ಎಂಬಂತೆ ಕಾಣಿಸುತ್ತಿದೆ.
ಛನ್ನೋಪಾಂತಃ ಪರಿಣತಫಲದ್ಯೋತಿಭಿಃ ಕಾನನಾಮ್ರೈಃ
ತ್ವಯ್ಯಾಸನ್ನೇ ಶಿಖರಮಚಲ ಸ್ನಿಗ್ಧವೇಣೀ ಸವರ್ಣೇ |
ನೂನಂ ಯಾಸ್ಯತ್ಯಮರಮಿಥುನಪ್ರೇಕ್ಷಣೀಯಾಮವಸ್ಥಾಂ
ಮಧ್ಯೇಶ್ಯಾಮಃ ಸ್ತನ ಇವ ಭುವಃ ಶೇಷವಿಸ್ತಾರಪಾಂಡುಃ ||

ಮುಂದೆ ಉಜ್ಜೈನಿಯ ಹತ್ತಿರದ ನಿರ್ವಿಂಧ್ಯಾ ನದಿ. ನದಿಯ ತರಂಗಗಳು, ನೀರಿನ ಮೇಲೆ ಕಲಕಲ ಸದ್ದಿನ ಹಕ್ಕಿಗಳ ಕಾಂಚೀಧಾಮ, ಅಂಕುಡೊಂಕು ಪ್ರವಾಹದ ವಯ್ಯಾರದ ನಡಿಗೆಯಂತೆ, ನೀರಿನ ಸುಳಿ ನಾಭಿಯಂತೆ, ಕಾಮಿನಿಯಂತಿದ್ದ ನದಿಯಲ್ಲಿ ಮೇಘವು ನೀರು ಸುರಿಸಿದರೆ ಪ್ರಿಯೆಯಲ್ಲಿ ಪ್ರಣಯವಚನವನ್ನು ನುಡಿದಂತಾಗುತ್ತದೆ - ಎಂದು ಯಕ್ಷ ಮೇಘಕ್ಕೆ ಪ್ರಣಯ ಪಾಠವನ್ನು ಕಲಿಸುತ್ತಾನೆ.
ಅದಕ್ಕೂ ಮುಂದೆ ಗಂಭೀರಾ ಎಂಬ ನದಿ. ಅದರ ನೀರು ಆಕೆ ಉಟ್ಟ ಸೀರೆಯ ಬಣ್ಣದಂತೆ ನೀಲಿ. ವಾನೀರ ಗಿಡಗಳ ಶಾಖೆಗಳು ಕೈಯಾಗಿ ಆ ಸೀರೆಯನ್ನು ಹಿಡಿದುಕೊಂಡಿವೆ. ಬೇಸಿಗೆಯಲ್ಲಿ ದಡದಿಂದ ಸರಿದ ನೀರು ನಿತಂಬದಿಂದ ಜಾರಿದ ವಸ್ತ್ರದಂತೆ ಕಾಣುತ್ತಿತ್ತಂತೆ. ’ಆ ದೃಶ್ಯವು ನಿನ್ನನ್ನು ತಡೆದು ನಿಲ್ಲಿಸಬಹುದು, ವಸನವು ನಿತಂಬದಿಂದ ಜಾರಿದ ಅವಕಾಶವನ್ನು ಯಾವ ರಸಿಕ ತಾನೇ ಕಳೆದುಕೊಳ್ಳುವನು?’ ಎಂದು ಯಕ್ಷ ಮೇಘಕ್ಕೆ ಸಹಾನುಭೂತಿ ಸೂಚಿಸುತ್ತಾನೆ. ಎಂಟು ತಿಂಗಳ ವಿರಹ ಒಂದುಕಡೆಯಾದರೆ, ವಿಯೋಗವು ಅಸಹನೀಯವೆನ್ನಿಸುವ ಮಳೆಗಾಲದ ಆಗಮನ ಇನ್ನೊಂದು ಕಡೆ. ಕಾಂತಾಸಂಗಮದ ಕಾತುರತೆಯಲ್ಲಿದ್ದವನಿಗೆ ಕಂಡದ್ದೆಲ್ಲ ಪ್ರಣಯಿಗಳ ಅನುಭವರೂಪದಲ್ಲೇ ಇದ್ದುದರಲ್ಲಿ ಆಶ್ಚರ್ಯವಿಲ್ಲ!
ಭೂಲೋಕದಿಂದ ಮೇಘ ಅಲಕೆಯಲ್ಲಿರುವ ಯಕ್ಷನ ಮನೆಯನ್ನು ಸೇರುವಂತೆಯೇ ಕಾಲಿದಾಸನ ಕಲ್ಪನೆ ಭೂಮಿಯನ್ನು ಬಿಟ್ಟು ಸ್ವರ್ಗಚುಂಬಿಯಾಗುತ್ತದೆ. ಕಾಮನಬಿಲ್ಲಿನ ಕಮಾನಿರುವ ತೋರಣ, ಮನೆಸುತ್ತ ಮಂದಾರ, ಅಶೋಕ ವೃಕ್ಷಗಳು, ಹೊನ್ನಕಮಲಗಳರಳುವ ರತ್ನಸೋಪಾನದ ಪುಷ್ಕರಿಣಿ, ಅದರ ಅಂಚಿನಲ್ಲಿ ಬಂಗಾರದ ಬಾಳೆಗಳ ಸಾಲು, ಮಾಧವಿಲತಾಮಂಟಪ, ನವಿಲು ನರ್ತಿಸುವ ಸುವರ್ಣದಂಡ, ಬಾಗಿಲ ಮೇಲೆ ಶಂಖಪದ್ಮಗಳ ದಂಡ ಒಂದೊಂದು ವರ್ಣನೆಯೂ ಒಂದೊಂದು ದೃಶ್ಯಕಾವ್ಯವೇ.
ಇಷ್ಟೆಲ್ಲ ಹಿನ್ನೆಲೆಯನ್ನು ಕಲ್ಪಿಸಿದ ಮೇಲೆ ವಿರಹಿಣಿಯಾದ ತನ್ನ ಪತ್ನಿಯನ್ನು ಯಕ್ಷ ಬಣ್ಣಿಸುವ ಒಂದು ಸಂದರ್ಭವಿದೆ.
ಉತ್ಸಂಗೇ ವಾ ಮಲಿನವಸನೇ ಸೌಮ್ಯ ನಿಕ್ಷಿಪ್ಯ ವೀಣಾಂ
ಮದ್ಗೋತ್ರಾಂಕಂ ವಿರಚಿತಪದಂ ಗೇಯಮುದ್ಗಾತಕಾಮಾ |
ತಂತ್ರೀರಾರ್ದ್ರಾ ನಯನಸಲಿಲೈಃ ಸಾರಯಿತ್ವಾ ಕಥಂಚಿತ್
ಭೂಯೋ ಭೂಯಃ ಸ್ವಯಮಪಿ ಕೃತಾಂ ಮೂರ್ಚ್ಛನಾಂ ವಿಸ್ಮರಂತೀಂ ||
 ಆಕೆ ಪತಿವಿಯೋಗವೆಂಬುದಕ್ಕೆ ಮಲಿನ ವಸ್ತ್ರವನ್ನು ಧರಿಸಿದ್ದಾಳೆ, ಹೊತ್ತು ಹೋಗದ್ದಕ್ಕೆ ವೀಣೆಯನ್ನು ತೆಗೆದುಕೊಂಡರೂ ಅದರಲ್ಲೂ ಆಸಕ್ತಿ ಮೂಡದೇ ಹೇಗೋ ತೊಡೆಯ ಮೇಲಿಟ್ಟುಕೊಂಡಿದ್ದಾಳೆ. ನನ್ನ ಹೆಸರಿನ ಪದವುಳ್ಳ ಹಾಡನ್ನು ಹಾಡಬೇಕೆನ್ನುತ್ತಾಳೆ, ವಿಯೋಗದ ಕಲ್ಪನೆ ಅನಿವಾರ್ಯವಾಗಿ ಕಣ್ಗಳಿಂದ ನೀರು ಸುರಿದು ತಂತಿಗಳನ್ನು ತೋಯಿಸುತ್ತಿದೆ. ಕೈ ತಾನಾಗಿಯೇ ಅವುಗಳನ್ನು ಒರೆಸುತ್ತಿದೆ. ಹಾಡಲು ಬಾಯ್ದೆರೆಯುತ್ತಿದೆ, ಎಷ್ಟು ಪ್ರಯತ್ನ ಮಾಡಿದರೂ ತಾನೇ ರಚಿಸಿದ ಹಾಡಿನ ಶಬ್ದಗಳನ್ನು ಮರೆಯುತ್ತಾಳೆ.
      ಮೇಘವು ಆ ವಿರಹಿಣಿಯನ್ನು ಕಂಡು ಹೇಳಬೇಕಾದ ಸಂದೇಶವಿಷ್ಟೇ. ನಿನ್ನ ಕಾಂತನೂ ಹೀಗೆಯೇ ವಿರಹಾಗ್ನಿಯಲ್ಲಿ ಬೆಂದು, ಕೊರಗಿ ಸೊರಗಿದ್ದಾನೆ. ಆದರೆ ಸಮಾಗಮದ ಆಸೆಯಿಂದ ಹೇಗೋ ಜೀವವನ್ನು ಬಿಗಿಹಿಡಿದುಕೊಂಡು ನಿನ್ನ ಕುಶಲವನ್ನು ಕೇಳುತ್ತಾನೆ. ವಿರಹದಲ್ಲಿ ಪ್ರೇಮವು ಅಳಿಯುವುದಿಲ್ಲ, ಮೊದಲಿಗಿಂತ ನೂರ್ಮಡಿಯಾಗಿ ಉಜ್ವಲವಾಗುತ್ತದೆ. ಹೀಗೆ ಉಪಕಾರಿಯಾದ ಮೇಘನಿಗೆಂದೂ ಪ್ರಿಯೆಯಾದ ಮಿಂಚಿನಿಂದ ವಿಯೋಗ ಬಾರದಿರಲೆಂಬ ಹಾರೈಕೆಯಿಂದ ಕಾವ್ಯ ಮುಗಿಯುತ್ತದೆ.
       ಪ್ರೇಮದ ಪರಮರಹಸ್ಯವೆಂದರೆ ಅದರಲ್ಲಿರುವ ಸುಖದುಃಖಗಳ ವಿಚಿತ್ರ ಪರಿಪಾಕ. ಸಿಹಿಕಹಿಗಳ ಅಪೂರ್ವ ಸಮ್ಮಿಶ್ರಣದಿಂದ ಎರಡಕ್ಕೂ ಹೆಚ್ಚಿನ ಆಸ್ವಾದತೆಯುಂಟಾಗುವುದು ಅದರ ಮರ್ಮ. ಇಂಥ  ರಸವಿರಸಗಳ ಅದ್ವೈತಭಾವವೇ ಮೇಘದೂತಕ್ಕೆ ಸವಿದಷ್ಟೂ ಸವೆಯದ ಸೊಗಸನ್ನು ಕೊಟ್ಟಿರುವುದು. ಒಂದು ಆಯುಷ್ಯವೆಲ್ಲ ಆಸ್ವಾದಿಸಿದರೂ ಕುಗ್ಗದ ಸವಿ ಈ ಕಾವ್ಯರತ್ನದಲ್ಲುಂಟೆಂಬುದಕ್ಕೆ ’ಮಾಘೇ ಮೇಘೇ ಗತಂ ವಯಃ’ ಎಂದ ಮಲ್ಲಿನಾಥನೇ ಸಾಕ್ಷಿ, ಇದನ್ನೇ ಅನುಕರಿಸಿ ಸಂಸ್ಕೃತದಲ್ಲಿ ಹಲವಾರು ಸಂದೇಶಕಾವ್ಯಗಳು ರಚಿತವಾಗಿವೆ. ವೇದಾಂತದೇಶಿಕರ ಹಂಸಸಂದೇಶ, ರೂಪಗೋಸ್ವಾಮಿಯ ಹಂಸದೂತ, ಕೃಷ್ಣಶರ್ಮರ ಪದಾಂಕದೂತ, ಧೋಯಿಕವಿಯ ಪವನದೂತ, ಉದ್ದಂಡನ ಕೋಕಿಲಸಂದೇಶ, ರಾಮಚಂದ್ರ ಸಹಸ್ರಬುದ್ಧೆಯವರ ಕಾಕದೂತ ಸೇರಿ ಚಾತಕ, ಚಕ್ರವಾಕ, ಕಾಕ, ಚಂದ್ರ, ಭೃಂಗಗಳನ್ನೆಲ್ಲ ದೂತರನ್ನಾಗಿಸಿ ಮುಂದಿನ ಕವಿಗಳೆಲ್ಲ ಒಂದೊಂದು ದೂತಕಾವ್ಯವನ್ನು ಮೇಘದೂತವನ್ನನುಕರಿಸಿ ಬರೆದಿದ್ದಾರೆ. ಪ್ರಸಿದ್ಧ ಜೈನಮಹಾಕವಿಯೂ, ಪುರಾಣಕಾರನೂ ಆದ ಜೀನಸೇನನು ಕ್ರಿ.ಶ ೮ನೇ ಶತಮಾನದಲ್ಲಿ ಮೇಘದೂತದ ಒಂದೊಂದು ಪದ್ಯಚರಣಕ್ಕೆ ತನ್ನ ಮೂರು ಸಾಲುಗಳನ್ನು ಸೇರಿಸಿ ’ಪಾರ್ಶ್ವಾಭ್ಯುದಯ’ವೆಂಬ ಶಾಂತರಸಪ್ರಧಾನ ಕಾವ್ಯವನ್ನು ಬರೆದಿದ್ದಾನೆ. ಮೇಲುಕೋಟೆಯ ಮಂಡಿಕಲ್ ರಾಮಾಶಾಸ್ತ್ರಿಯವರು ಯಕ್ಷಪತ್ನಿಯು ಯಕ್ಷನಿಗೆ ತಿರುಗಿ ಸಂದೇಶ ಕಳುಹಿಸುವಂತೆ ಮೇಘಪ್ರತಿಸಂದೇಶವನ್ನೂ ಬರೆದಿದ್ದಾರೆ. ಕಲ್ಪನಾಸತ್ಯದ ಆತ್ಮಸಾಕ್ಷಾತ್ಕಾರ ತಪ್ಪಿದರೆ ಎಂತಹ ಬಾಹ್ಯಗುಣಗಳಿದ್ದರೂ ಕಾವ್ಯಸಿದ್ಧಿಯಾಗದೆಂಬ ಮಾತಿಗೆ ಇಂತಹ ಅನುಕರಣೆಗಳೇ ಸಾಕ್ಷಿ.
        ಹೃದಯಮಂದಿರದಲ್ಲಿ ಪ್ರೇಮ ಪ್ರತಿಷ್ಟಾಪಿತವಾದಾಗ ಹೊಗೆ, ನೀರು, ಗಾಳಿಗಳ ನಿರ್ಜೀವ ಮೇಘನೂ ಪರಮಮಿತ್ರನಾಗುತ್ತಾನೆ. ವಿಶ್ವದ ಒಂದೊಂದು ವಸ್ತುವಿನಲ್ಲೂ ಕಾಂತೆ ಪ್ರತಿಬಿಂಬಿತವಾಗುತ್ತಾಳೆ. ವಿರಹದಲ್ಲೂ ಶೃಂಗಾರದ ಪ್ರಶಾಂತಪ್ರಭೆಯ ಹೊಂಬೆಳಗು ಅಣುರೇಣು ತೃಣಕಾಷ್ಟಗಳನ್ನೂ ಪುಳಕಿತಗೊಳಿಸುತ್ತದೆ.