Pages

Thursday, February 6, 2014

ಯಾವ ಚಂದ್ರಗುಪ್ತ? ಎಲ್ಲಿಯ ಇಂಡಿಕಾ? ಏನೀ ಗೋಳು?

ಅಶೋಕ ದ ಗ್ರೇಟ್ ಎಂಬ ಇಲ್ಲದ ವ್ಯಕ್ತಿಯನ್ನು ಬುದ್ಧನ ಮಟ್ಟಕ್ಕೇರಿಸಿದ ಬ್ರಿಟಿಷ್ ಬ್ರಹ್ಮರ ಕಥೆ ಹಿಂದೊಮ್ಮೆ ಹೇಳಿದ್ದೆನಷ್ಟೆ.
     ನಾವು ಸಾಧಾರಣವಾಗಿ ನಂಬಿಕೊಂಡುಬಂದ ಸಂಗತಿಯೇನೆಂದರೆ ಕ್ರಿ.ಪೂ 327ರ ಆಸುಪಾಸಿಗೆ ಮೌರ್ಯರ ಕಾಲದಲ್ಲಿ ಅಲೆಗ್ಸಾಂಡರ್ ನಮ್ಮ ಮೇಲೆ
ಚಂದ್ರಗುಪ್ತ ಮೌರ್ಯ
’ದಂಡ’ಯಾತ್ರೆ ನಡೆಸುವವರೆಗೂ ನಮ್ಮ ದೇಶಕ್ಕೆ ನಂಬಬಹುದಾದ ಇತಿಹಾಸವೆಂಬುದು ಯಾವುದೂ ಇರಲಿಲ್ಲ. ಈ ಗ್ರೀಕ್ ವೀರ ತನ್ನ ಜೊತೆ ಕರೆತಂದ ಕೆಲ ಮೇಧಾವಿಗಳು ಬರೆದಿಟ್ಟ ಪ್ರಾಚೀನ  ದಾಖಲೆಗಳಿಂದಲೇ ಭಾರತದ ಇತಿಹಾಸ ಶುರುವಾಗುವುದು. No  dates of ancient history of India can be divided. Indian history begins as far the exact dates are concerned, from the invansion of Alexander on India in 327 BC ಎಂದು V.A. Smithನಂಥ ಪ್ರಗಲ್ಭ ಇತಿಹಾಸಕಾರರೇ ಅಪ್ಪಣೆ ಹೊರಡಿಸಿದ್ದಾರೆ. ಇವನ ಕಾಲದ ಕೊಂಚ ನಂತರ ಅಂದರೆ ಅದೇ ಸುಮಾರು ಕ್ರಿ.ಪೂ ೪ನೇ ಶತಮಾನದಲ್ಲಿ ರಚಿಸಲ್ಪಟ್ಟ ಮೆಗಸ್ತನೀಸನ ’ಇಂಡಿಕಾ’ ಭಾರತದ ಇತಿಹಾಸದ ಕುರಿತಾಗಿರುವ ಮೊತ್ತಮೊದಲ ಅಧಿಕೃತ ದಾಖಲೆಯೆಂದು ನಮ್ಮ ಪ್ರಗತಿಪರ ನವ್ಯ ಇತಿಹಾಸಕಾರಿಂದೆಲ್ಲ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟಿದೆ. ಸಾವಿರದೈನೂರು ವರ್ಷಗಳ ಹಿಂದೆಯೇ ಹೆಸರೊಂದನ್ನು ಬಿಟ್ಟು ಮತ್ತೆಲ್ಲ ನಾಮಾವಶೇಷಗೊಂಡಿರುವ ಈ ಕೃತಿಯೇ ನಮ್ಮ ಬೃಹಸ್ಪತಿಗಳಿಗೆಲ್ಲ ಇತಿಹಾಸವನ್ನು ನಿರ್ಧರಿಸಲಿರುವ ಏಕೈಕ ಚಾರಿತ್ರಿಕ ಆಧಾರ. ಸೆಲ್ಯುಕಸ್‌ನ ರಾಯಭಾರಿಯಾಗಿ ಚಂದ್ರಗುಪ್ತ ಮೌರ್ಯನ ರಾಜಧಾನಿಯಾದ ಪಾಟಲೀಪುತ್ರದಲ್ಲಿದ್ದು ಮೆಗಸ್ತನೀಸನು ರಚಿಸಿದ ಇಂಡಿಕಾ ಆ ಕಾಲದ ಭಾರತದ ಆಡಳಿತಾತ್ಮಕ, ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಭಯಂಕರ ಬೆಳಕು ಬೀರುತ್ತದೆಂದು ನಾವು ಓದಿದ ಪಠ್ಯಪುಸ್ತಕಗಳಲ್ಲೆಲ್ಲ ಪ್ರಶಸ್ತಿಪತ್ರದೊಡನೆ ಗೋಲ್ಡ್ ಮೆಡಲ್ ನೀಡಲಾಗಿದೆ.
     ದುರದೃಷ್ಟವೆಂದರೆ ನಮ್ಮ ಪುರಾಣೇತಿಹಾಸಗಳಲ್ಲಿ ಸೂಚ್ಯವಾಗಿಯೋ, ವಾಚ್ಯವಾಗಿಯೋ ದಿನ, ತಾರೀಖು, ಸಂವತ್ಸರಗಳು ಮಾತ್ರವಲ್ಲದೇ ನಕ್ಷತ್ರಗಳ ಚಲನೆ, ಅವುಗಳ ಸ್ಥಾನವನ್ನೂ ಸೇರಿದಂತೆ ಸೂಕ್ಷ್ಮಾತಿಸೂಕ್ಷ್ಮ ಅಂಶಗಳನ್ನೂ ಬರೆದಿಟ್ಟಿರುವಾಗ ಅವ್ಯಾವವೂ ನಮಗೆ ಸರಿಯೆನಿಸುವುದೇ ಇಲ್ಲ. ಕಲಿಯುಗ ಪ್ರಾರಂಭವಾಗಿದ್ದು ಮಹಾಭಾರತ ಯುದ್ಧ ನಡೆದ 36ನೇ ವರ್ಷವಾದ ಕ್ರಿ.ಪೂ 3102ರಲ್ಲೆಂದು ವೈಜ್ಞಾನಿಕವಾಗಿಯೇ ಅನುಮಾನಕ್ಕೆಡೆಯಿಲ್ಲದಂತೆ ಸಾಬೀತಾಗಿದೆ. ಕಲಿಯುಗ ಪ್ರಾರಂಭಗೊಂಡಿದ್ದು ಪ್ರಮಾದಿ ಸಂವತ್ಸರದ ಯುಗಾದಿಯಂದೆಂದೂ, ಆ ದಿನ ಮೇಷ ರಾಶಿಯಲ್ಲಿ ಏಳು ಗ್ರಹಗಳು ಸೇರಿದ್ದವೆಂದು ನಮ್ಮ ಪುರಾಣಗಳು ದಾಖಲಿಸಿದ ಸತ್ಯಕ್ಕೆ ಖಗೋಳಶಾಸ್ತ್ರಜ್ಞರೆಲ್ಲ ಒಪ್ಪಿ ಅಹುದಹುದೆಂದಿದ್ದಾರೆ. ಮಹಾಭಾರತ ಯುದ್ದದಿಂದಲೇ ಮೊದಲ್ಗೊಂಡು ವಿವಿಧ ರಾಜರ ಆಳ್ವಿಕೆಯ ಕ್ರಮಗಳನ್ನು   ಭಾಗವತ, ಮತ್ಸ್ಯ, ವಾಯು, ಬ್ರಹ್ಮಾಂಡ, ಭವಿಷ್ಯತ್, ವಿಷ್ಣುಪುರಾಣಗಳಿಂದ ಹಿಡಿದು ವೃದ್ಧಗರ್ಗ, ಬೃಹತ್ಸಂಹಿತೆ, ಶತಪಥ ಬ್ರಾಹ್ಮಣ, ಕಲ್ಹಣನ ರಾಜತರಂಗಿಣಿ, ನೇಪಾಳರಾಜವಂಶಾವಳೀ, ಭಾಸ್ಕರಾಚಾರ್ಯರ ಸಿದ್ಧಾಂತ ಶಿರೋಮಣಿ, ಅದರ ಮೇಲಿನ ಟೀಕೆಯಾದಂಥ ಕೃಷ್ಣ ಮಿಶ್ರನ ಜ್ಯೋತಿಷ್ಯ ಫಲರತ್ನಮಾಲ, ಸೋಮನಾಥ ಮಿಶ್ರನ ಜ್ಯೋತಿಷ್ಯ ಕಲ್ಪಲತಾ, ಕಲಿಯುಗ ರಾಜ ವೃತ್ತಾಂತಗಳವರೆಗೆ ಲೆಕ್ಕವಿಲ್ಲದಷ್ಟು ಪೌರಾಣಿಕ, ಐತಿಹಾಸಿಕ ಕೃತಿಗಳು ಖಚಿತವಾಗಿಯೇ ವಿವರಿಸಿವೆ. ನಮಗೆ ರಾಮಾಯಣ, ಮಹಾಭಾರತವನ್ನೋದಲೇ ಪುರುಸೊತ್ತಿಲ್ಲದ ಮೇಲೆ ಇವನ್ನೆಲ್ಲ ಕೇಳೋರು ಯಾರು ಬಿಡಿ. ಮಹಾಭಾರತದ ವಿಷಯಕ್ಕೇ ಬನ್ನಿ.
ಮಹಾಭಾರತದಲ್ಲಿ ಉತ್ತರೆಗೆ ಪರೀಕ್ಷಿತನು ಜನಿಸುವ ದಿನ ಸಪ್ತರ್ಷಿ ಮಂಡಲವು ಮಘಾ ನಕ್ಷತ್ರವನ್ನು ಪ್ರವೇಶಿಸಿತೆಂದು ಉಲ್ಲೇಖವಿದೆ. ಸಪ್ತರ್ಷಿ ಮಂಡಲವು ನೂರು ವರ್ಷಕ್ಕೆ ಒಂದೊಂದೆ ನಕ್ಷತ್ರವಾಗಿ ಹಿಂದೆ ಸರಿಯುತ್ತ 2700 ವರ್ಷಗಳಿಗೆ ಮತ್ತೆ ಪುನಃ ಅದೇ ಸ್ಥಾನಕ್ಕೆ ಬಂದುನಿಲ್ಲುತ್ತದೆ. ಇದು ಪಕ್ಕಾ ಖಗೋಳ ಜ್ಯೋತಿಷ್ಯವನ್ನಾಧರಿಸಿದ ವೈಜ್ಞಾನಿಕ ಲೆಕ್ಕಾಚಾರ. ಮತ್ಸ್ಯಪುರಾಣವನ್ನೇ ಗಮನಿಸಿ.
ಊರ್ಧ್ವಂ ಪ್ರವಕ್ಷ್ಯಾಮಿ ಮಾಗಧಾ ಏಬೃಹಧೃಥಾಃ |
ಸಂಗ್ರಾಮೇ ಭಾರತೇ ವೃತ್ತೇ ಸಹದೇವೇ ನಿಪಾತಿತೇ |
ಸೋಮಾಧಿಸ್ತಸ್ಯ ದಾಯಾದೋ ರಾಜಾಭೂತ್ಸ ಗಿರಿವ್ರಜೇ ||
(ಅಧ್ಯಾಯ 271, ಶ್ಲೋಕ 18,18)
ಬೃಹಧೃಥ ವಂಶದ ಮಗಧ ರಾಜರ ಬಗ್ಗೆ ಹೀಗಿದೆ.
ಭಾರತ ಯುದ್ಧದಲ್ಲಿ ಜರಾಸಂಧನ ಮಗ ಸಹದೇವ ಮಡಿದನು. ಅವನ ಮಗ ಸೋಮಧಿಯು ಗಿರಿವ್ರಜದಲ್ಲಿ ರಾಜನಾಗಿ ಐವತ್ತೆ೦ಟು ವರ್ಷ ರಾಜ್ಯಭಾರ ಮಾಡಿದನು.
ಮಹಾಪದ್ಮಾಭಿಷೇಕಾಸ್ತು ಯಾವಜ್ಜನ್ಮ ಪರೀಕ್ಷಿತಃ |
ಏಕಮೇವ ಸಹಸ್ರಂತು ಜ್ಞೇಯಂ ಪಂಚಶತೋತ್ತರಂ ||
(ಅಧ್ಯಾಯ 273, ಶ್ಲೋಕ 36)
ಪರೀಕ್ಷಿತನ ಹುಟ್ಟಿನಿಂದ ಮಹಾಪದ್ಮನ ಪಟ್ಟಾಭಿಷೇಕದವರೆಗೆ ಸಾವಿರದ ಐದುನೂರು ವರ್ಷಗಳಾದವು.
ಪೌಲೋಮಾಸ್ತು ತದಾಂಧ್ರಾಸ್ತು ಮಹಾಪದ್ಮಾಂತರೇಪುನಃ |
ಅನಂತರಂ ಶತಾನ್ಯಷ್ಟೌ ಷಟ್ತ್ರಿಂಶತ್ ಸಮಾಸ್ತಥಾ ||
ತಾವತ್ಕಾಲಾಂತರಂ ಭಾವ್ಯಮಾಂಧ್ರಾಂತಾದಾಪರೀಕ್ಷಿತಃ |
ಭವಿಷ್ಯೇ ತೇ ಪ್ರಸಂಖ್ಯಾತಾ ಪುರಾಣಜ್ಞೈಃ ಶ್ರುತರ್ಷಿಭಿಃ ||
ಸಪ್ತರ್ಷಯಸ್ತಥಾ ಪ್ರಾಂಶುಃ ಪ್ರದೀಪ್ತೇನಾಗ್ನಿನಾ ಸಮಾಃ |
ಸಪ್ತವಿಂಶತಿ ಭಾವ್ಯಾನಾ ಮಾಂಧ್ರಾಣಾಂತು ಯದಾಪುನಃ ||
(273, 37,38,39)
ಮಹಾಪದ್ಮ ನಂದನಿಂದ ಆಂಧ್ರ ಪುಲೋಮನ ನಡುವಿನ ಅವಧಿ 836 ವರ್ಷಗಳು. ಅಂದರೆ ಪರೀಕ್ಷಿದ್ರಾಜನ ಕಾಲದಿಂದ ಆಂಧ್ರರ ಪತನದವರೆಗೆ ಒಂದುಸಾವಿರದ ಎಂಟುನೂರ ಎಂಭತ್ತಾರು ವರ್ಷಗಳು ಕಳೆದಂತಾಗುವವು.
ಪರೀಕ್ಷಿತನ ಜನನದಿಂದ ಆಂಧ್ರರಾಜರ ಕಾಲದವರೆಗೆ 2700 ವರ್ಷಗಳಲ್ಲಿ ಅಗ್ನಿನಕ್ಷತ್ರದಲ್ಲಿದ್ದ ಸಪ್ತರ್ಷಿ ಮಂಡಲದ ಒಂದು ಸುತ್ತು ಪೂರ್ಣಗೊಂಡಿತು.
     ಮಹಾಭಾರತ ನಡೆಯುವುದಕ್ಕಿಂಥ 571 ವರ್ಷಗಳ ಮೊದಲು ಕ್ರಿ.ಪೂ 3709 ಕುರುವಂಶದ ಬೃಹದ್ರಥನಿಂದ ರಾಜಗೃಹ ಅಥವಾ ಗಿರಿವ್ರಜವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಮಗಧ ಸಾಮ್ರಾಜ್ಯ ಅಥವಾ ಬೃಹದ್ರಥ ರಾಜವಂಶ ಸ್ಥಾಪಿಸಲ್ಪಟ್ಟಿತು. ಈ ವಂಶದ ಹತ್ತನೇ ತಲೆಮಾರೇ ಮಹಾಭಾರತದ ಸಂದರ್ಭದಲ್ಲಿ ಭೀಮನಿಂದ ಕೊಲ್ಲಲ್ಪಟ್ಟ ಜರಾಸಂಧ. ಇವನ ಮಗ ಸಹದೇವನ ನಂತರ ಈ ವಂಶದ 22 ರಾಜರು ಒಟ್ಟೂ 1006 ವರ್ಷಗಳ ಕಾಲ ಅಂದರೆ ಕ್ರಿ.ಪೂ 2132ರವರೆಗೆ ಮಗಧವನ್ನಾಳಿದರು. ಬೃಹದ್ರಥ ವಂಶದ ಕೊನೆಯ ಅರಸು ರಿಪುಂಜಯನನ್ನು ಹತ್ಯೆಗೈದು ಅವನ ಮಂತ್ರಿಯಾಗಿದ್ದ ಶುನಕ ತನ್ನ ಮಗ ಪ್ರದ್ಯೋತನನನ್ನು ಪಟ್ಟಕ್ಕೇರಿಸಿದ. ಕ್ರಿ.ಪೂ 2132ರಿಂದ ಕ್ರಿ.ಪೂ 1994ರವರೆಗೆ 138 ವರ್ಷ ಐದು ತಲೆಮಾರುಗಳ ಕಾಲ ಮಗಧವನ್ನಾಳಿದವರು ಈ ಪ್ರದ್ಯೋತನ ರಾಜವಂಶದವರು. ಪ್ರದ್ಯೋತರ ನಂತರ ಕ್ರಿ.ಪೂ 1994ರಿಂದ 1634ರವರೆಗೆ 360 ವರ್ಷಗಳ ಕಾಲ ಮಗಧವು ಶಿಶುನಾಗ ವಂಶದ ಹತ್ತು ರಾಜರುಗಳಿಂದ ಆಳಲ್ಪಟ್ಟಿತು. ಈ ಸಾಮ್ರಾಜ್ಯವನ್ನು ಸ್ಥಾಪಿಸಿದವನು ಶಿಶುನಾಗ. ಇವನ ಮಗ ಕಾಕವರ್ಣ. ಶಿಶುನಾಗರ ೪,೫,೬ನೇ ರಾಜರಾದ ಕ್ಷೇಮಜಿತ್, ಬಿಂಬಿಸಾರ ಮತ್ತು ಅಜಾತಶತ್ರುಗಳ ಕಾಲದಲ್ಲಿಯೇ ಬುದ್ಧನು ಬದುಕಿದ್ದು.
      ಮಹಾಭಾರತ ಯುದ್ಧ ನಡೆದ ಸುಮಾರು 15೦೦ ವರ್ಷಗಳಿಗೆ ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವಕನ ಸಹಾಯದಿಂದ ಕೊಲ್ಲಿಸಿದ ಚಾಣಕ್ಯ ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ವಂಶಗಳು ಮಗಧವನ್ನಾಳಿದವು. ಆಂಧ್ರವಂಶದ ಕೊನೆಯ ರಾಜ ಚಂದ್ರಶ್ರೀ ಅಥವಾ ಚಂದ್ರಮಸುವಿನ ಆಳ್ವಿಕೆಯಲ್ಲೇ ಅಲೆಕ್ಸಾಂಡರಿನ ದಂಡಯಾತ್ರೆ ನಡೆದದ್ದು(ಕ್ರಿ.ಪೂ 327). ಈ ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದಿದ್ದು. ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದವನು ಮೊದಲನೇ ಚಂದ್ರಗುಪ್ತ. ’ಆಂಧ್ರಭೃತ್ಯಾಸ್ಸಪ್ತಃ’ ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ ಎಂದು ಮತ್ಸ್ಯ ಪುರಾಣವೂ ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಈ ಆಂಧ್ರಭೃತ್ಯರೇ ಭಾರತೀಯ ಇತಿಹಾಸದ ಸ್ವರ್ಣಯುಗದ ನಿರ್ಮಾತೃರೆನಿಸಿಕೊಂಡ ಗುಪ್ತರು. ಗುಪ್ತರ ಚಂದ್ರಗುಪ್ತನ ಕಾಲದಲ್ಲಿ ಸೆಲ್ಯುಕಸ್ಸಿನ ರಾಯಭಾರಿಯಾಗಿ ಭಾರತಕ್ಕೆ ಬಂದವನು ಮೆಗಸ್ತನೀಸ್. ಈ ಚಂದ್ರಗುಪ್ತನ ಮಗನೇ ಇತಿಹಾಸ ಕಂಡ ಅಪ್ರತಿಮ ದಂಡನಾಯಕನೆಂದು ಹೊಗಳಲ್ಪಟ್ಟ ಸಮುದ್ರಗುಪ್ತ. ಈ ರಾಜರ ವಂಶಕ್ರಮವನ್ನು ಹಿಂದೂ ಪುರಾಣಗಳು ಮಾತ್ರವಲ್ಲ, ಪ್ರಾಚೀನ ಬೌದ್ಧ ಸಾಹಿತ್ಯವೂ, ಎಲಿಯಂ ಜೋನ್ಸಿನಂಥ ಮಹಾನ್ ಇತಿಹಾಸಕಾರರೂ ಒಪ್ಪಿಕೊಂಡಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಾಧಾರಗಳಿದ್ದರೂ ಕ್ರಿ.ಪೂ 1534ರಲ್ಲಿದ್ದ ಚಂದ್ರಗುಪ್ತ ಮೌರ್ಯನನ್ನು ಕ್ರಿ.ಪೂ 327ಕ್ಕೆ ದರದರನೆ ಎಳೆದುಕೊಂಡು ತಂದುಬಿಟ್ಟದ್ದಲ್ಲದೇ, ಇವನನ್ನೇ ಅಲೆಕ್ಸಾಂಡರಿನ
ಗುಪ್ತರ ಮತ್ತು ಮೌರ್ಯರ ಕಾಲದ ನಾಣ್ಯಗಳು
ಸಮಕಾಲೀನನ್ನಾಗಿಸಿ ಭಾರತದ ಚರಿತ್ರೆಯ ಸಾವಿರದೈನೂರು ವರ್ಷಗಳನ್ನೇ ಮಂಗಮಾಯಮಾಡಿದವರಿಗೇನೆನ್ನಬೇಕು? ಮೂರ್ಖ ಬ್ರಿಟಿಷರು ಮಾಡಿಟ್ಟುಹೋದ ತಪ್ಪು ಕಾಲನಿರ್ಣಯಗಳನ್ನೇ ಸರಿಯೆಂದುಕೊಂಡು ಅವರು ಹೋದ ಎಪ್ಪತ್ತು ವರ್ಷಗಳ ನಂತರವೂ ನಾವು ಕೋಲೆ ಬಸವನಂತೆ ತಲೆ ಅಲ್ಲಾಡಿಸುತ್ತಿದ್ದೇವೆ. ಹಾಗೆಂದು ಅವರೇನು ಸುಮ್ಮನೇ ಹೆಸರು ಕಲ್ಪಿಸಿದ್ದರೇ ಎನ್ನಬೇಡಿ! ಹಾಗೆ ಮಾಡಲು ಅವರಿಗಿದ್ದ ಒಂದೇ ಒಂದು ಆಧಾರ ಗ್ರೀಕ್ ಲೇಖಕರು ಉಲ್ಲೇಖಿಸಿದ ’ಸ್ಯಾಂಡ್ರೋಕಾಟಸ್’ ಎಂಬ ಹೆಸರು. ಮೆಗಸ್ತನೀಸ್ ಮಾತ್ರವಲ್ಲದೇ ಡಿಯೋಡೊರಸ್, ಕರ್ಟಿಯಸ್‌ನಂಥ ಗ್ರೀಕ್ ಲೇಖಕರೇ ’ಕ್ಸಂಡ್ರಮಸ್‌’ನನ್ನು ಕೊಂದು ಸ್ಯಾಂಡ್ರೋಕಾಟಸ್ ಪಟ್ಟಕ್ಕೇರಿದನೆಂದೂ, ಆತನ ನಂತರ ಅವನ ಮಗ ’ಸ್ಯಾಂಡ್ರೋಸಿಪ್ಟಸ್’ ರಾಜ್ಯವಾಳಿದನೆಂದೂ ಹೇಳಿದ್ದಾರೆ. ಚಂದ್ರಗುಪ್ತ ಮೌರ್ಯ ಧನನಂದನನ್ನು ಕೊಂದು ಸಿಂಹಾಸನಕ್ಕೇರಿದ, ಅವನ ನಂತರ ಆಳಿದವನು ಮಗ ಬಿಂದುಸಾರ. ಗುಪ್ತ ಚಂದ್ರಗುಪ್ತನು ಚಂದ್ರಮಸುವನ್ನು ಕೊಂದು ಗುಪ್ತ ವಂಶವನ್ನು ಸ್ಥಾಪಿಸಿದ್ದು. ಅವನ ನಂತರ ಅವನ ಮಗ ಸಮುದ್ರಗುಪ್ತ ರಾಜನಾದ. ಈಗ ನೀವೇ ಹೇಳಿ ’ಕ್ಸಂಡ್ರಮಸ್’ ಮತ್ತು ’ಸ್ಯಾಂಡ್ರೋಸಿಪ್ಟಸ್’ ಹೆಸರುಗಳು ಧನನಂದ ಮತ್ತು ಬಿಂದುಸಾರನ ಗ್ರೀಕ್ ಅಪಭೃಂಶದ ಹೆಸರುಗಳೋ ಅಥವಾ ಚಂದ್ರಮಸ್ ಮತ್ತು ಸಮುದ್ರಗುಪ್ತರದ್ದೋ? ಸ್ಯಾಂಡ್ರೋಕಾಟಸ್ ಆ ಕಾಲದ ಭಾರತೀಯ ರಾಜರಲ್ಲೇ ಶ್ರೇಷ್ಟನೆಂದೂ, ಕುಲೀನ ಮನೆತನದವನೆಂದೂ, ದೊಡ್ಡ ಸೈನ್ಯದೊಂದಿಗೆ ಇಡೀ ಭಾರತವನ್ನೇ ಗೆದ್ದನೆಂದೂ ಗ್ರೀಕರ ಅಂಬೋಣ. ಶೂದ್ರ ಸ್ತ್ರೀಯ ಮಗನಾದ ಚಂದ್ರಗುಪ್ತ ಮೌರ್ಯ ಕುಲೀನ ಮನೆತನದವನೂ ಅಲ್ಲ, ಚಾಣಕ್ಯನ ಕೃಪೆಯಿಂದ, ಕೋಸಲ, ವಿದೇಹದಂಥ ಅಕ್ಕಪಕ್ಕದ ರಾಜರ ಸಹಾಯದಿಂದ ಅಧಿಕಾರವುಳಿಸಿಕೊಂಡಿದ್ದನ್ನು ಬಿಟ್ಟರೆ ಅವನಂಥ ಶ್ರೇಷ್ಟ ರಾಜನೂ ಅಲ್ಲ. ಅದೇ ಮೊದಲನೇ ಚಂದ್ರಗುಪ್ತ ಹಾಗಲ್ಲ. ಸೂರ್ಯವಂಶಕ್ಕೆ ಸೇರಿದ ಇವನಿಗೆ ವಿಜಯಾದಿತ್ಯನೆಂಬ ಬಿರುದಿತ್ತು. ಇವನ ಮಗ ಸಮುದ್ರಗುಪ್ತನು ಅಶೋಕಾದಿತ್ಯನೆಂದೂ, ಮೊಮ್ಮಗ ಎರಡನೇ ಚಂದ್ರಗುಪ್ತನು ವಿಕ್ರಮಾದಿತ್ಯನೆಂದೂ ಬಿರುದಾಂಕಿತರಾಗಿದ್ದರು. ತನ್ನ ಗುಪ್ತಚರರಿಂದ ಚಂದ್ರಗುಪ್ತನ ಸೈನ್ಯಬಲವನ್ನು ತಿಳಿದುಕೊಂಡ ಮಹಾಶೂರವೀರ ಗ್ರೀಕ್ ರಾಜನಿಗೆ ಕೈಕಾಲು ನಡುಕ ಶುರುವಾಗಿ ಗಂಗೆಯನ್ನು ದಾಟದೇ ತನ್ನ ದಂಡಯಾತ್ರೆಯನ್ನು ಬಿಟ್ಟು ಪಲಾಯನಗೈದನಂತೆ. ಸಾವಿರ ವರ್ಷಗಳಿಗಿಂತ ಹೆಚ್ಚು ಕಾಲದ ಅಂತರವನ್ನು ಹೊಂದಿರುವ ಈ ಇಬ್ಬರು ಚಂದ್ರಗುಪ್ತರಿಗೆ ಎತ್ತಣಿಂದೆತ್ತಣ ಸಂಬಂಧ. ಅಶೋಕನ ಕಥೆಯೂ ಅಷ್ಟೇ. ಇತಿಹಾಸದಲ್ಲಿ ಮೂವರು ಅಶೋಕರ ಉಲ್ಲೇಖವಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಪ್ರಸ್ತಾಪಿಸಲ್ಪಟ್ಟ ಕಾಶ್ಮೀರವನ್ನಾಳಿ ತದನಂತರ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಗೋನಂದ ವಂಶದ ಧರ್ಮಾಶೋಕ ಮೊದಲಿನವನು. ಈತ ಕಾಶ್ಮೀರವನ್ನಾಳಿದ ನಲವತ್ತೆಂಟನೇ ಅರಸು. ಇವನ ಮರಿಮೊಮ್ಮಗನೇ ಕನಿಷ್ಕ ಚಕ್ರವರ್ತಿ. ಎರಡನೇಯವನು ಇದೇ ಕಾಲದಲ್ಲಿದ್ದ ಅಶೋಕವರ್ಧನನೆಂದು ಹೆಸರಾಗಿದ್ದ ಚಂದ್ರಗುಪ್ತ ಮೌರ್ಯನ ಮೊಮ್ಮಗ. ಮೂರನೇಯವನು ನಾವಿಂದು ಅಶೋಕಾ ದ ಗ್ರೇಟ್ ಅಂದುಕೊಳ್ಳುವ ಮಹಾಶೋಕನೆಂದು ಹೆಸರಾಗಿದ್ದ ಸಮುದ್ರಗುಪ್ತ. ಎಷ್ಟೋ ಶತಮಾನಗಳ ನಂತರ ಬಂದ ದೀಪವಂಶ, ಅಶೋಕವದನದಂಥ ಫ್ಯಾಂಟಸಿ ಕಥೆಗಳೆಲ್ಲ ಕ್ರಿ.ಪೂ ಮೂರನೇ ಶತಮಾನದ ಸುಮಾರಿಗೆ ಇಡೀ ಭರತಖಂಡವನ್ನು ಏಕಚಕ್ರಾಧಿಪತ್ಯದಡಿ ತಂದು ಆಳಿದ ಈ ಸಮುದ್ರಗುಪ್ತನ ಕುರಿತಾದವೇ. ಇವನ ಜೀವನಚರಿತ್ರೆಯನ್ನು ಬರೆದ ಹರಿಸೇನ, ಕಲಿಯುಗ ರಾಜ ವೃತ್ತಾಂತ, ಕಲ್ಹಣನ ರಾಜತರಂಗಿಣಿಗಳೆಲ್ಲ ಈ ಅಶೋಕನನ್ನೇ ದ ಗ್ರೇಟ್ ಎಂದು ಸಾರಿವೆ. ಬುದ್ಧರ ಮಂಜುಷ್ರೀಮೂಲಕಲ್ಪದಲ್ಲಿರುವ ಹೆಸರು ಸಮುದ್ರಗುಪನದ್ದೇ. ಈಗ ಅಶೋಕನ ಹೆಸರಲ್ಲಿ ಸಿಕ್ಕಿರುವ  ಶಾಸನಗಳೆಲ್ಲ ಕ್ರಿ.ಪೂ ಮೂರನೇ ಶತಮಾನದವೇ. ಯಾರೊಪ್ಪಲಿ ಬಿಡಲಿ, ಆ ಕಾಲದಲ್ಲಿ ಸಮುದ್ರಗುಪ್ತನನ್ನು ಹೊರತುಪಡಿಸಿದರೆ ಅಶೋಕನೆಂಬ ಹೆಸರಿನ ಮತ್ತೊಬ್ಬ ರಾಜ ಭಾರತದಲ್ಲೇ ಇರಲಿಲ್ಲವೆಂಬುದು ಐತಿಹಾಸಿಕ ಸತ್ಯ. ಹೆಸರೊಂದೇ ಎಂಬ ಕಾರಣಕ್ಕೆ ಯಾರ್ಯಾರನ್ನೋ ಎಲ್ಲೆಲ್ಲಿಗೋ ಎತ್ತಿಹಾಕಿ ಏನೇನೋ ಬಿಡಿಸಲಾಗದ ಗೋಜಲು ಗೋಜಲಾಗಿಸಿದ ಕೀರ್ತಿಯೆಲ್ಲ ಮಾಕ್ಸ್‌ಮುಲ್ಲರ್, ವಿ.ಎ.ಸ್ಮಿತ್‌, ಜೇಮ್ಸ್ ಪ್ರಿನ್ಸೆಪ್‌ನಂಥ ಬ್ರಿಟಿಷ್ ಇತಿಹಾಸಕಾರರಿಗೆ ಸಲ್ಲಬೇಕು. ಈಗ ಅದೇ ತಲೆಕೆಟ್ಟ ಕೆಲಸವನ್ನು ಅವರ ಮಾನಸ ಪುತ್ರರಾದ ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಕೋಶಾಂಬಿಯಂಥ ಬುರುಡೆ ದಾಸರು ಮುಂದುವರೆಸಿದ್ದಾರೆ. ಈಗ್ಗೆ ಹತ್ತಾರು ಸಾವಿರ ವರ್ಷಗಳ ಹಿಂದೆ ಯುರೋಪಿಯನ್ನರು ಹುಟ್ಟುವ ಮೊದಲೇ, ಅಮೇರಿಕನ್ನರು ಕಣ್ಣುಬಿಡುವ ಮುಂದೇ, ಪ್ರಪಂಚದ ಇತರೆಡೆ ಬಟ್ಟೆಯುಡದೇ ತಿರುಗುತ್ತಿದ್ದ ಕಾಲದಲ್ಲಿ ಕಣ್ಣುಕೂರೈಸುವ ಅದ್ಭುತ ವೈದಿಕ ನಾಗರಿಕತೆಯೊಂದು ಭಾರತದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿ ನಾವಿಂದೂ ನೆನೆಸಿಕೊಂಡು ತಲೆ ಎತ್ತಿ ನಿಲ್ಲುವಂತೆ ಅವಿಚ್ಛಿನ್ನವಾಗಿ, ಅಖಂಡವಾಗಿ ವಿಕಸನಗೊಂಡಿತ್ತು. ಅಂಥ ವೇದಕಾಲವನ್ನು ಜಗ್ಗಿ ಮೂರು ಸಾವಿರ ವರ್ಷದ ಹಿಂದೆ ತಂದುಬಿಟ್ಟಿದ್ದಲ್ಲದೇ, ಐದು ಸಾವಿರ ವರ್ಷಗಳ ಹಿಂದೆ ನಡೆದ ಮಹಾಭಾರತ ಯುದ್ಧದ ಕಾಲವನ್ನು ಮೂರು ಸಾವಿರ ವರ್ಷಗಳೀಚೆ ಎಸೆದು, ಕ್ರಿ.ಪೂ 1800ರಲ್ಲಿದ್ದ ಬುದ್ಧನನ್ನು ಕ್ರಿ.ಪೂ 5ನೇ ಶತಮಾನದಲ್ಲಿ ಮತ್ತೊಮ್ಮೆ ಹುಟ್ಟಿಸಿ, ಎರಡೂವರೆ ಸಾವಿರ ವರ್ಷಗಳ ಹಿಂದೆ ಬದುಕಿದ್ದ ಆಚಾರ್ಯ ಶಂಕರರು ಎಂಟನೇ ಶತಮಾನದಲ್ಲಿ ಇನ್ನೊಮ್ಮೆ ಅವತರಿಸುವಂತೆ ಮಾಡಿ, ಕ್ರಿ.ಪೂ 1500ರಲ್ಲೇ ಸತ್ತು ಸ್ವರ್ಗ ಸೇರಿದ್ದ ಚಂದ್ರಗುಪ್ತ ಮೌರ್ಯನನ್ನೇ ಅಲೆಕ್ಸಾಂಡರಿನ ಸಮಕಾಲೀನನನ್ನಾಗಿಸಿದವರ ಬುದ್ಧಿಮತ್ತೆಗಂತೂ ಅಬ್ಬಾ..... ಸಲಾಮ್ ಹೊಡೆಯಲೇ ಬೇಕು.
      ಪ್ರಪಂಚದ ಯಾವ ದೇಶದ ಯಾವ ಮೂಲೆಗಾದರೂ ಹೋಗಿ ಹೇಳಿ ’ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಹಳೆಯದು, ನಿಮ್ಮ ಹಿರಿಯರು ಪ್ರಪಂಚ ಕಾಣದ ವೈಭವದಲ್ಲಿ ಶ್ರೇಷ್ಟ ನಾಗರಿಕತೆಯೊಂದನ್ನು ನಡೆಸಿದರು’ ಎಂದು. ಖುಷಿಯಿಂದ ಕುಣಿದಾಡುತ್ತಾರೆ. ಅದೇ ಮಾತನ್ನು ನಮ್ಮವರಿಗೆ ಹೇಳಿ ನೋಡಿ. ಸತ್ತರೂ ನಂಬಲಿಕ್ಕಿಲ್ಲ. ನಮಗಿನ್ನೂ ನಮ್ಮ ಪೂರ್ವಜರು ಎಲ್ಲಿಂದಲೋ ಬಂದು ದಾಳಿಮಾಡಿದವರು, ನಮ್ಮದು ದಟ್ಟ ದರಿದ್ರ ಅನಾಗರೀಕ ದೇಶ, ನಾವು ಸಂಸ್ಕೃತಿ ಕಲಿತಿದ್ದೇ ಬ್ರಿಟಿಷರಿಂದ ಎಂದುಕೊಳ್ಳುವುದರಲ್ಲೇ ಪರಮಸುಖ.

ಆಕರ: The plot in Indian Chronology: ಪಂಡಿತ ಕೋಟಾ ವೇಂಕಟಾಚಲಂ
J.M. McCrindle: Ancient India as Described by Megasthenes and Arrian
E.J Rapson: The Cambridge History of India
 ವಾಜಪೇಯಂ ಶ್ರೀರಂಗಾಚಾರ್ಯ, ಶ್ರೀಮದ್ವೈಪಾಯನಮುನಿಪ್ರಣೀತಂ ಶ್ರೀಮತ್ಸ್ಯಮಹಾಪುರಾಣಂ
Dates in ancient history of india: Aryasomayajulu