Pages

Sunday, June 5, 2016

ಆಂಧ್ರಕಾವ್ಯ ಪರಂಪರೆ ಹಾಗೂ ಕವಿಸಾರ್ವಭೌಮ ಶ್ರೀನಾಥ


आन्ध्रत्वमान्ध्रभाषा च प्राभाकरपरिश्रम: |
तत्रापि याजुषी शाखा नाಽल्पस्य तपस: फलम् ||
      ಆ೦ಧ್ರದಲ್ಲಿ ಜನಿಸುವುದು, ಆಂಧ್ರಭಾಷೆಯನ್ನು ಮಾತನಾಡುವುದು, ಜೊತೆಗೆ ಯಜುರ್ವೇದ ಶಾಖೆಗೆ ಸೇರಿದವನಾಗುವುದು ಇವೆಲ್ಲ ಸಣ್ಣಪುಟ್ಟ ತಪಸ್ಸಿಗೆಲ್ಲ ಒಲಿಯುವ ಫಲವಲ್ಲವೆಂದಿದ್ದಾರೆ ಖ್ಯಾತ ಕವಿ, ತತ್ತ್ವಜ್ಞಾನಿ ಅಪ್ಪಯ್ಯದೀಕ್ಷಿತರು. ’ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ’ ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಸಂಸ್ಕೃತವೂ, ವಿಷ್ಣುವಿಗೆ ತೆಲುಗೂ, ಶಿವನಿಗೆ ಪ್ರಾಕೃತವು ಪ್ರಿಯವಾದ ಭಾಷೆಗಳೆಂದು ತೆಲುಗರ ಆರಾಧ್ಯದೈವ ಶ್ರೀಕಾಕುಳಾಂಧ್ರ ಮಹಾವಿಷ್ಣು ಹೇಳಿದ್ದಾನಂತೆ.
ಆ೦ಧ್ರಕ್ಕೆ ಹಿಂದೆ ತ್ರಿಲಿ೦ಗ ಕ್ಷೇತ್ರವೆ೦ಬ ಹೆಸರೂ ಇತ್ತು. ದ್ರಾಕ್ಷಾರಾಮ, ಶ್ರೀಶೈಲ, ಕಳೇಶ್ವರಗಳೆ೦ಬ ಮೂರು ಪ್ರಸಿದ್ಧ ಶಿವಕ್ಷೇತ್ರಗಳಿ೦ದ ಈ ಹೆಸರು ಬ೦ದಿದ್ದು. ಈ ತ್ರಿಲಿಂಗವೇ ತೆನುಂಗುವಾಗಿ ಕೊನೆಗೆ ತೆಲುಗು ಆಯಿತಂತೆ. ಪುರಾಣಕಾಲದ ಛಪ್ಪನ್ನೈವತ್ತಾರು ದೇಶಗಳಲ್ಲಿ ಆಂಧ್ರವೂ ಒಂದು. ರಾಮಾಯಣ, ಮಹಾಭಾರತ, ಐತರೇಯ ಬ್ರಾಹ್ಮಣ, ಸ್ಕಾಂದಪುರಾಣ ಸೇರಿ ಆಂಧ್ರದ ಉಲ್ಲೇಖವಿಲ್ಲದ ಪುರಾಣ ಗ್ರಂಥಗಳಿಲ್ಲ. ಕಾವೇರಿಯಿ೦ದ ಮಾ ಗೋದಾವರಿಪರ್ಯ೦ತವೆ೦ಬ ಕನ್ನಡನಾಡಿನ ಸೀಮೆಯ ಬಗೆಗೆ ಮಾರ್ಗಕಾರನು ಹೇಳಿದ೦ತೆ ಆ೦ಧ್ರದ ಸೀಮೆಯನ್ನು ಕಾಕತೀಯರ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ವಿದ್ಯಾನ೦ದ ಹೀಗೆ ವಿವರಿಸುತ್ತಾನೆ.
पश्चात्पुरस्तादपि यस्य देशौ
ख्यातौ महाराष्ट्रकळिंगदेशौ |
अवागुदक्पाण्ड्यककन्यकुब्जौ
देशस्स तत्रास्ति त्रिलिंगनामा || 
       ಆಗಿನ ಆ೦ಧ್ರ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನೂ, ಪೂರ್ವದಲ್ಲಿ ಕಳಿ೦ಗವನ್ನೂ, ದಕ್ಷಿಣದಲ್ಲಿ ಪಾ೦ಡ್ಯವನ್ನ್ಪೂ ಉತ್ತರದಲ್ಲಿ ಕನ್ಯಕುಬ್ಜವನ್ನೂ ಒಳಗೊ೦ಡಿತ್ತ೦ತೆ. ಗೋದಾವರಿ ಕೃಷ್ಣೆಯರ ಮಧ್ಯದ ಅಚ್ಚತೆಲುಗಿನ ಆಂಧ್ರನೆಲ ಹಿಂದೆ ವೆಂಗಿನಾಡೆಂದು ಹೆಸರಾಗಿತ್ತು, ವೆಂಗಿ ಅಥವಾ ರಾಜಮಹೇಂದ್ರಪುರ(ಈಗಿನ ರಾಜಮಂಡ್ರಿ) ಅದರ ರಾಜಧಾನಿ.  ಕಡಪದಿಂದ ನಂದಿಬೆಟ್ಟದವರೆಗಿನ ಪೊಟ್ಟಿಪಿನಾಡು, ಕರ್ನೂಲಿನಿಂದ ಬಳ್ಳಾರಿಯವರೆಗಿನ ರೇನಾಡು, ಗುಂಟೂರು-ಪ್ರಕಾಶಂಗಳ ಪಾಲ್ನಾಡು, ಮದ್ರಾಸಿನಿಂದ ಕೃಷ್ಣೆಯವರೆಗಿನ ಪಾಕನಾಡು, ಗುಂಟೂರಿನ ಪೂರ್ವೋತ್ತರದ ಕಮ್ಮನಾಡುಗಳೆಲ್ಲ ಆಗಿನ ಆಂಧ್ರನಾಡಿನ ವಿವಿಧ ಭಾಗಗಳು.
       ರಾವಣ ಬರೆದ ’ರಾವಣೀಯಂ’ ತೆಲುಗಿನ ಮೊದಲ ವ್ಯಾಕರಣ ಗ್ರಂಥವೆಂದೇ ಪ್ರಸಿದ್ಧಿ. ಪೈಥಾಗೋರಸ್ಸಿನ ಪ್ರಮೇಯದ ಮೂಲರೂಪವಾದ ಶುಲ್ಬಸೂತ್ರಗಳನ್ನು ರಚಿಸಿದ ಬೋಧಾಯನ, ಆಪಸ್ಥ೦ಭ ಸೂತ್ರವೆ೦ದೇ ಪ್ರಸಿದ್ಧವಾದ ಗೃಹ್ಯಸೂತ್ರಗಳನ್ನು ರಚಿಸಿದ ಆಪಸ್ಥ೦ಭ ಇವರಿಬ್ಬರೂ ಆ೦ಧ್ರದವರೇ. ಅಲ್ಲಿ೦ದ ಶುರುವಾದ ಆ೦ಧ್ರದ ಕಾವ್ಯಪರ೦ಪರೆ ಮು೦ದುವರೆದದ್ದು ಪ್ರತಾಪರುದ್ರೀಯವನ್ನು ಬರೆದ ಖ್ಯಾತ ಅಲ೦ಕಾರಶಾಸ್ತ್ರಜ್ಞ ವಿದ್ಯಾನಾಥನಿ೦ದ. ಸಾಯಣರ ಭಾಷ್ಯವಿಲ್ಲದೇ ವೇದಗಳ ಅಧ್ಯಯನ ಪೂರ್ತಿಗೊಳ್ಳುವುದೆ೦ತು? ಪ೦ಚಾದಶಿ, ಜೀವನ್ಮುಕ್ತಿವಿವೇಕಗಳಿಲ್ಲದ ಅದ್ವೈತ ವೇದಾ೦ತವೆಲ್ಲಿ? ಅನ್ನಮಭಟ್ಟನ ತರ್ಕಸ೦ಗ್ರಹದೀಪಿಕೆಯಿಲ್ಲದೆ ತರ್ಕಶಾಸ್ತ್ರವನ್ನು ಪ್ರಾರ೦ಭಿಸುವುದೆ೦ತು? ಪ೦ಡಿತರಾಜ ಜಗನ್ನಾಥ ಕೈಯಾಡಿಸದೇ ಬಿಟ್ಟ ಕಾವ್ಯಕ್ಷೇತ್ರವಾವುದು? ವ್ಯಾಖ್ಯಾನರ೦ಗದ ಚಕ್ರವರ್ತಿ ಮಲ್ಲಿನಾಥನ ವ್ಯಾಖ್ಯಾವಿಲ್ಲದೇ ಪ೦ಚಮಹಾಕಾವ್ಯಗಳೆಲ್ಲಿ?
ವೇದಾ೦ತದರ್ಶನ ಪರ೦ಪರೆಯ ಎಲ್ಲ ದಾರ್ಶನಿಕರೂ, ಅಚಾರ್ಯರೂ ಹುಟ್ಟಿದ್ದು ದಕ್ಷಿಣದಲ್ಲೇ. ಅದು ಶ೦ಕರರಿರಬಹುದು, ರಾಮಾನುಜರಿರಬಹುದು, ಮಧ್ವ, ನಿ೦ಬಾರ್ಕ, ಶ್ರೀಕ೦ಠ ಅಥವಾ ವಲ್ಲಭರಿರಬಹುದು. ಬ್ರಹ್ಮಸೂತ್ರಗಳಿಗೆ ಭಾಷ್ಯವಾದ ವೇದಾ೦ತಪಾರಿಜಾತಸೌರಭವನ್ನು ಬರೆದ ನಿ೦ಬಾರ್ಕಾಚರ್ಯರು ಆ೦ಧ್ರ-ಬಳ್ಳಾರಿ ಗಡಿಯ ನಿ೦ಬಪುರದವರು. ರಾಮಾನುಜರ ಮನೆತನದ ಹೆಸರಾದ ’ಆಸುರಿ’ ಮೂಲತಃ ಆ೦ಧ್ರದ್ದು. ಮನೆತನದ ಹೆಸರಿನಿ೦ದ ಗುರುತಿಸಿಕೊಳ್ಳುವುದು ಆ೦ಧ್ರಬ್ರಾಹ್ಮಣರಲ್ಲಿ ಸಾಮಾನ್ಯ ಸ೦ಗತಿ. ತೆಲುಗಿನ ನಡುಮಿ೦ಟಿಯ ತುಳು ರೂಪವೇ ಮಧ್ವಾಚಾರ್ಯರ ಮನೆತನದ ಹೆಸರಾದ ನಡಿಲ್ಲಾಯ. ಕನ್ನಡ ಕರಾವಳಿಯ ಹವ್ಯಕ, ಶಿವಳ್ಳಿ, ಕೇರಳದ ನಂಬೂದಿರಿಗಳೆಲ್ಲ ಮಯೂರವರ್ಮನ ಕಾಲದಲ್ಲಿ ವಲಸೆ ಬಂದ ಗೋದಾವರಿ ಸೀಮೆಯ ಅಹಿಚ್ಛತ್ರದವರು. ಅಚ್ಚಕನ್ನಡದ ಮೊದಲ ರಾಜವಂಶ ಕದಂಬರ ಸ್ಥಾಪಕ ಮಯೂರನ ಮೊದಲ ರಾಜಧಾನಿಯಾಗಿದ್ದುದು ಆಂಧ್ರದ ಶ್ರೀಶೈಲ. ಕದಂಬರು, ಪಲ್ಲವರು, ಸೇನ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲ ಆಂಧ್ರಶಾತವಾಹನರು. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಹೊಗಳಿದ ಭಾರತದ ಸ್ವರ್ಣಯುಗದ ನಿರ್ಮಾತೃರಾದ ಗುಪ್ತರು ಮೂಲತಃ ಆಂಧ್ರಭೃತ್ಯರೆಂದೇ ಹೆಸರಾದವರು. ಅದ್ವೈತ ದರ್ಶನದ ಪರ೦ಪರೆಯಲ್ಲ೦ತೂ ಆ೦ಧ್ರದ ಕೊಡುಗೆ ಕೊನೆಯಿಲ್ಲದ್ದು. ಕಾಕತೀಯರ ಕಾಲದ ಖ್ಯಾತ ಕವಿ ಅಚಿ೦ತೇ೦ದ್ರದೇವನು ಅದ್ವೈತಾಮೃತಯತಿಗಳ ಶಿಷ್ಯ. ಅದ್ವೈತಾಚಾರ್ಯತಿರುಮಲನೆ೦ದು ಪ್ರಾಖ್ಯಾತಿಗಳಿಸಿದವ ಅನ್ನಮಭಟ್ಟನ ತ೦ದೆ ಮೇಲಿಗಿರಿ ಮಲ್ಲಿನಾಥ. ಅದ್ವೈತ ದರ್ಶನದ ಮೇಲಿನ ’ತತ್ತ್ವಪ್ರದೀಪಿಕ’ದ ಕರ್ತೃ ಚಿತ್ಸುಖಾಚಾರ್ಯರು, ಅದ್ವೈತದ ಅತಿಕ್ಲಿಷ್ಟ ಭಾಷ್ಯಗಳಲ್ಲೊ೦ದಾದ ಶ್ರೀಹರ್ಶನ ’ಖ೦ಡನಖ೦ಡಖಾದ್ಯ’ದ ಮೇಲಿನ ಟೀಕೆಯನ್ನು ರಚಿಸಿದ ಗು೦ಡಯ್ಯಭಟ್ಟರು ಪುನಃ ಆ೦ಧ್ರದೇಶದವರೇ. 
       ಅಬ್ಬ, ಆಂಧ್ರವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆಂದು ತೆಗಳಬೇಡಿ. ಇಷ್ಟೆಲ್ಲ ಪೀಠಿಕೆ ನನ್ನ ಮೂಲ ಗೋದಾವರಿ ಸೀಮೆಯ ಅಹಿಚ್ಛತ್ರದ ಆಂಧ್ರನಾಡಿನ ಮೇಗಣ ಅಭಿಮಾನವಷ್ಟೇ. 
       ತೆಲುಗಿನ ಮೊತ್ತಮೊದಲ ಕಾವ್ಯವೆಂದು ಪರಿಗಣಿತವಾಗಿರುವುದು ಸುಮಾರು ಕ್ರಿ.ಶ ೧೦೨೦ರಲ್ಲಿ ಚಂಪೂಶೈಲಿಯಲ್ಲಿ ರಚಿತವಾದ ನನ್ನಯನ ಮಹಾಭಾರತ. ತೆಲುಗಿನಲ್ಲಿ ಮಾರ್ಗೀ ಶೈಲಿಯ ಪ್ರವರ್ತಕನೆಂಬ, ಆದಿಕವಿಯೆಂಬ ಹೆಗ್ಗಳಿಕೆ ನನ್ನಯ ಭಟ್ಟಾರಕನಿಗಿದೆ. ತೆಲುಗಿನ ಮೊದಲ ವ್ಯಾಕರಣ ಗ್ರಂಥ ಆಂಧ್ರಶಬ್ದಚಿಂತಾಮಣಿಯನ್ನು ಸಂಸ್ಕೃತದಲ್ಲಿ ರಚಿಸಿದವನೂ ಇವನೇ. ನನ್ನಯ ಭಾರತದ ಅತ್ಯುತ್ಕೃಷ್ಟ ಮತ್ತು ಸುವ್ಯವಸ್ಥಿತ ಶೈಲಿಯನ್ನು ಗಮನಿಸಿದರೆ ಅವನಿಗಿಂತ ಮೊದಲೇ ತೆಲುಗು ಸಾಹಿತ್ಯ ಸಮೃದ್ಧವಾಗಿಯೇ ಬೆಳೆದಿರಬೇಕು. ದುರದೃಷ್ಟವೆಂದರೆ ನನ್ನಯನ ಹಿಂದೆ ತೆಲುಗಿನಲ್ಲಿ ರಚಿತವಾದ ಯಾವ ಕೃತಿಯೂ ಲಭ್ಯವಿಲ್ಲ. ಈತನದೇ ಆದ ’ವಾಗಾನುಶಾಸನ’ದಲ್ಲಿಯೂ ಪೂರ್ವಸೂರಿಗಳ ಸ್ಮೃತಿಯಿಲ್ಲ. ವಿಜಯವಾಡದ ’ಯುದ್ಧಮಲ್ಲ ಶಾಸನಮು’ ಮತ್ತು ಮೋಪೂರ್ ಶಾಸನವೇತ್ಯಾದಿ ನನ್ನಯನ ಪೂರ್ವದ ಶಾಸನಗಳು ದೊರೆತಿದ್ದರೂ ತೆಲುಗು ಸಾಹಿತ್ಯದ ಗತದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಗಿಲ್ಲ. ನನ್ನಯನಿಂದ ಶುರುವಾಗಿತ್ತೆನ್ನಬಹುದಾದ ಆಂಧ್ರಸಾಹಿತ್ಯ ಪರಂಪರೆ ಮುಂದುವರೆದದ್ದು ಹದಿಮೂರನೇ ಶತಮಾನದಲ್ಲಿ ತಿಕ್ಕನ ಹಾಗೂ ಯರ್ರನರಿಂದ. ನನ್ನಯ ಮಹಾಭಾರತದ ಆದಿ, ಸಭಾ ಮತ್ತು ವನಪರ್ವದ ೧೪೨ ಶ್ಲೋಕಗಳನ್ನು ರಚಿಸಿದ್ದ. ನನ್ನಯ ಬಿಟ್ಟ ಉಳಿದ ಪರ್ವಗಳನ್ನು ಮುಗಿಸಿದವನು ಕವಿಬ್ರಹ್ಮ ತಿಕ್ಕನ ಸೋಮಯಾಜಿ. ತಿಕ್ಕನನ ರಚನೆಯ ಐವತ್ತು ವರ್ಷಗಳ ತರುವಾಯ ಆತ ಅರ್ಧ ಬರೆದು ಬಿಟ್ಟ ವನಪರ್ವವನ್ನು ಸಂಪೂರ್ಣಗೊಳಿಸಿದವನು ಯೆರ್ರನ. ಅದಲ್ಲದೇ ತೆಲುಗಿನಲ್ಲಿ ಮೊದಲ ಬಾರಿ ಪ್ರಬಂಧ ಶೈಲಿಯಲ್ಲಿ ತನ್ನದೇ ಸ್ವತಂತ್ರ ಮಹಾಭಾರತವನ್ನು ಹರಿವಂಶವೆಂಬ ಹೆಸರಲ್ಲಿ ರಚಿಸಿ ಪ್ರಬಂಧ ಪರಮೇಶ್ವರನೆಂದು ಹೆಸರಾದವನಿವನು. ಮೊದಲ ಮಹಾಭಾರತವನ್ನು ತೆಲುಗಿನಲ್ಲಿ ರಚಿಸಿದ ಈ ಮೂವರೂ ಆಂಧ್ರದ ಕವಿತ್ರಯರೆಂದೇ ಹೆಸರಾದವರು. ಹನ್ನೊಂದು ಹನ್ನೆರಡನೇಯ ಶತಮಾನದ ನಂತರ ತೆಲುಗಿನಲ್ಲಿ ಅಸಂಖ್ಯ ಸಂಖ್ಯೆಯ ಮಹಾಕವಿಗಳುದಿಸಿದರು. ಆಂಧ್ರದ ದಕ್ಷಿಣದಲ್ಲಿ ರಾಮಾನುಜರಿಂದ ಬೆಳೆಯುತ್ತಿದ್ದ ವೈಷ್ಣವಮತ, ಕರ್ನಾಟಕದ ಬಸವಪಂಥದ ಪ್ರಭಾವ, ಕೃಷ್ಣೆ-ಗೋದಾವರಿಯ ಮಧ್ಯದ ಅಚ್ಚವೈದಿಕ ಧರ್ಮಗಳು ತೆಲುಗಿನಲ್ಲಿ ವಿವಿಧ ಮಾದರಿಯ ಕೃತಿಗಳ ಹುಟ್ಟಿಗೆ ಕಾರಣವಾದವು. ತೆಲುಗು ಮತ್ತು ಸಂಸ್ಕೃತದಲ್ಲಿ ’ನೀತಿಸೂತ್ರ’ವನ್ನು ರಚಿಸಿದ ಮೊದಲನೇ ಪ್ರತಾಪರುದ್ರ, ’ಪಂಡಿತಾರಾಧ್ಯ ಚರಿತ’, ’ಬಸವ ಪುರಾಣ’ಗಳ ಪಾಲ್ಕುರಿಕೆ ಸೋಮನಾಥ, ’ಕುಮಾರಸಂಭವ’ದ ತೆಂಕಣಾಮಾತ್ಯರ ಮೇಲೆ ವೀರಶೈವ ಮತದ ಗಾಢ ಪ್ರಭಾವವನ್ನು ಕಾಣಬಹುದು. ಕವಿತ್ರಯರಿಂದ ಮೂರು ಶತಮಾನದಲ್ಲಿ ಪೂರ್ಣಗೊಂಡ ಮಹಾಭಾರತ, ರಾಮಾನುಜರ ಭಕ್ತಿಪಂಥದ ಪ್ರಭಾವ, ತೆಲುಗಿನಲ್ಲಿ ಇನ್ನೂ ರಚನೆಯಾಗದ ರಾಮಾಯಣ ಹದಿಮೂರನೇ ಶತಮಾನದಲ್ಲಿ ರಂಗನಾಥಕವಿಯನ್ನು ತೆಲುಗು ರಾಮಾಯಣವನ್ನು ರಚಿಸುವಂತೆ ಪ್ರೇರೇಪಿಸಿದವು(ಯರ್ರನ ಚಂಪೂರಾಮಾಯಣವನ್ನು ಬರೆದಿದ್ದನೆನ್ನಲಾಗುವುದಾದರೂ ಅದಿಂದು ಲಭ್ಯವಿಲ್ಲ). ರಂಗನಾಥ ರಾಮಾಯಣದಿಂದ ನಿನ್ನೆಮೊನ್ನೆಯ ಮಲ್ಲೆಮಾಲಾ ರಾಮಾಯಣದವರೆಗೆ ತೆಲುಗಿನಲ್ಲಿ ಪ್ರತಿ ಶತಮಾನವೂ ರಚನೆಯಾದ ರಾಮಾಯಣದ ಸಂಖ್ಯೆ ಲೆಕ್ಕವಿಟ್ಟವರಿಲ್ಲ. ರಾಮಾಯಣ ಕವಿಭಾರದಲಿ ಫಣಿರಾಯ ಇನ್ನಷ್ಟು ತಿಣುಕಿರಬಹುದು. ನನ್ನಯನ ನಂತರ ಎರಡನೇ ತೆಲುಗು ವ್ಯಾಕರಣ ಗ್ರಂಥ ತ್ರಿಲಿಂಗ ಶಬ್ದಾನುಶಾಸನದ ಕರ್ತೃ ಅಥರ್ವಣ. ನನ್ನಯ ಬರೆಯದೇ ಬಿಟ್ಟ ಮಹಾಭಾರತದ ವಿರಾಟ, ಉದ್ಯೋಗ, ಭೀಶ್ಮ ಪರ್ವಗಳನ್ನು ಅಥರ್ವಣ ಪೂರ್ತಿಗೊಳಿಸಿದ್ದನಂತೆ. ಅಪ್ಪಾಕವಿ ತನ್ನ ಕೃತಿಯಲ್ಲಿ ಉದ್ಧರಿಸಿದ ಅಥರ್ವಣನ ಭಾರತದ ಕೆಲ ಶ್ಲೋಕಗಳನ್ನು ಬಿಟ್ಟರೆ ಆ ಗ್ರಂಥ ಸಿಕ್ಕಿಲ್ಲ. ಪ್ರಾಯಃ ಪ್ರಥಮಾಚಾರ್ಯ ಆದಿಕವಿ ನನ್ನಯನ ನಂತರ ತೆಲುಗು ವ್ಯಾಕರಣವನ್ನೂ, ಭಾರತವನ್ನೂ ಮುಂದುವರೆಸಿದವನೆಂಬ ಕಾರಣಕ್ಕಾಗಿ ಅಥರ್ವಣನಿಗೆ ದ್ವಿತೀಯಾಚಾರ್ಯನೆಂಬ ವಿಶೇಷಣವೂ ಇದೆ. ತೆಲುಗಿನಲ್ಲಿ ದಶಕುಮಾರಚರಿತೆಯನ್ನು ಬರೆದ ಕೇತನ, ನೀತಿಶಾಸ್ತ್ರವನ್ನು ಬರೆದ ಬೆದ್ದನ, ಮಾರ್ಕಂಡೇಯ ಪುರಾಣದ ಮಾರನ್ನ, ಕೇಯೂರಬಾಹುಚರಿತದ ಮಂಚನ್ನ, ಚಂಪೂರಾಮಾಯಣದ ಹುಲ್ಲಂಕಿ ಭಾಸ್ಕರರೆಲ್ಲ ಹದಿಮೂರು ಹದಿನಾಲ್ಕನೇ ಶತಮಾನದಲ್ಲಿ ಆಂಧ್ರದ ಕವ್ಯಾಗಸವನ್ನು ಬೆಳಗಿದವರೇ.(ಕನ್ನಡದ ರನ್ನ-ಜನ್ನ-ಪೊನ್ನ, ಕಾಶ್ಮೀರದ ಕಲ್ಹಣ-ಜಲ್ಹಣ-ಮಲ್ಹಣ-ಶಿಲ್ಹಣರು, ಭಲ್ಹಟ-ಉದ್ಭಟ-ಮಮ್ಮಟರು, ತೆಲುಗಿನ ತಿಕ್ಕನ-ಯರ್ರನ-ಪೋತನ-ಕೇತನರ ಹೆಸರಿನ ಪ್ರಾಸವೇ ವಿಚಿತ್ರ.). ಇವರ ನಂತರ ಬಂದವನು ಆಂಧ್ರ ಸಾಹಿತ್ಯದ ಸ್ವರ್ಣಯುಗದ ನಿರ್ಮಾತೃ, ಕವಿಸಾರ್ವಭೌಮ ಶ್ರೀನಾಥ ಭಟ್ಟ. ಹದಿನಾಲ್ಕನೇ ಶತಮಾನದ ಅಂತ್ಯ, ಹದಿನೈದನೇ ಶತಮಾನದ ಆರಂಭಕಾಲದಲ್ಲಿ ಕೊಂಡವೀಡು ರೆಡ್ಡಿ ವಂಶವೆಂಬ ಚಿಕ್ಕ ಸಾಮ್ರಾಜ್ಯದಲ್ಲಿ ಪದಕೋಮಟಿ ವೇಮಭೂಪಾಲ ರೆಡ್ಡಿಯ ಅಸ್ಥಾನಕವಿಯಾಗಿದ್ದ ಶ್ರೀನಾಥನಿಗೆ ತೆಲುಗು ಕವಿವರ್ಯರಲ್ಲೇ ಅಪ್ರತಿಮನೂ, ಅಸಮನಾನೂ ಎಂಬ ಕೀರ್ತಿಯಿದೆ. ’ದೇಶಭಾಷಲಂದು ತೆಲುಗು ಲೆಸ್ಸ’ ಎಂದು ಕನ್ನಡರಾಜ್ಯರಮಾರಮಣ ಶ್ರೀಕೃಷ್ಣದೇವರಾಯ ಉದ್ಘೋಷಿಸುವ ಶತಮಾನಕಾಲ ಮುನ್ನವೇ ಕರ್ನಾಟಕ ರಾಜ್ಯಸಭೆಯಲ್ಲಿ ತೆಲುಗು ಝಂಡಾ ರಾರಾಜಿಸುವಂತೆ ಮಾಡಿದವ ಈ ಕವಿಚಕ್ರವರ್ತಿ. ಕನ್ಯೆಮೈಯ ಪರಿಮಳದಿಂದ ಕರಿಬೇವಿನೆಲೆಯೆ ಸುವಾಸನೆಯವರೆಗೆ ಆತ ರಚಿಸದ ಪದ್ಯಗಳಿಲ್ಲ, ಶೃಂಗಾರದಿಂದ ವೈರಾಗ್ಯದವರೆಗೆ ಆತ ಬಣ್ಣಿಸದ ರಸಗಳಿಲ್ಲ, ಪುರಾಣದಿಂದ ವ್ಯಾಕರಣದವರೆಗೆ, ಚಂಪುವಿನಿಂದ ಚಾಟುವಿನವರೆಗೆ ಆತ ಕೈಯಾಡಿಸದ ಕ್ಷೇತ್ರಗಳಿಲ್ಲ. ತೆಲುಗಿನಲ್ಲಿ ಶಾಲಿವಾಹನ ಸಪ್ತಶತಿ, ಪಂಡಿತಾರಾಧ್ಯಚರಿತ, ಶಿವರಾತ್ರಿ ಮಾಹಾತ್ಯ್ಮಂ, ಮಾನಸೋಲ್ಲಾಸ, ಹರಿವಿಲಾಸ, ಭೀಮಖಂಡಂ, ಕಾಶಿಕಾಖಂಡಂ, ಪಾಲಾಂಟಿ ವೀರಚರಿತ್ರ, ಧನಂಜಯ ವಿಜಯ, ಶೃಂಗಾರದೀಪಿಕಾ, ಕೃತಾಭಿರಾಮಂ, ಶೃಂಗಾರ ನೈಷಧಂ, ವಲ್ಲಭಾಭ್ಯುದಯ, ವಿಧಿನಾಟಕ ಹೀಗೆ ಶ್ರೀನಾಥನ ಕೃತಿಗಳು ಅವೆಷ್ಟೋ. ಶ್ರೀಹರ್ಷನ ನೈಷಧದ ತೆಲುಗು ಅವತರಣಿಕೆ ಶೃಂಗಾರ ನೈಷಧಕ್ಕಂತೂ ಕಾವ್ಯಸೌಂದರ್ಯದಲ್ಲಿ ಮೂಲವನ್ನು ಮೀರಿಸಿದ ಖ್ಯಾತಿಯಿದೆ. ತನ್ನ ಅಪಾರ ವಿದ್ವತ್ತಿನಿಂದ ಸಮಕಾಲೀನ, ಪ್ರಾಚೀನ ಕವಿಗಳನ್ನೂ ಮೀರಿಬೆಳೆದವನೆಂಬ ಕೀರ್ತಿ ಈತನದು. 
       ಕೊಂಡವೀಡಿನ ರೆಡ್ಡಿಗಳಲ್ಲಿ, ರಾಚಕೊಂಡದ ವೇಲಮರಲ್ಲಿ, ವಿಜಯನಗರ ಸಾಮ್ರಾಜ್ಯದಲ್ಲಿ ತನ್ನ ಕವಿತ್ವಕ್ಕಾಗಿ ಬಹುಪರಾಕು ಹೇಳಿಸಿಕೊಂಡವನು. ಕೊಂಡವೀಡಿನ ಕುಲದೈವ ಪೋತರಾಜು ಕಟಾರಿಯನ್ನು ದೇವರಕಂಡ ಪಾಳೇಗರರು ಹೊತ್ತೊಯ್ದಾದ ತನ್ನ ವಿದ್ವದ್ಬಲದಿಂದ ಅವರನ್ನು ಗೆದ್ದು ಕಟಾರಿಯನ್ನು ವಾಪಸ್ ತಂದವನು. ವಿಜಯನಗರದ ಗೌಡಡಿಂಡಿಮ ಕವಿಯನ್ನು ಸೋಲಿಸಿ ಎರಡನೇ ದೇವರಾಯನಿಂದ ಕನಕಾಭಿಷೇಕ ಮಾಡಿಸಿಕೊಂಡವನು. ಹೀಗಿಪ್ಪ ಶ್ರೀನಾಥ ಕವಿ ಮಹಾ ರಸಿಕ. ಭಾರೀ ಸುಖಜೀವಿ. ಸಂಸ್ಕೃತದ ಜಗನ್ನಾಥ ಪಂಡಿತನಂತೆ ಅಹಂಕಾರಿಯೆಂದೂ, ಕಾಲಕಾಲಕ್ಕೆ ರಾಜರುಗಳನ್ನು ಹೊಗಳಿ ಕಪ್ಪಕಾಣಿಕೆ ಪಡೆದು ರಾಜವೈಭೋಗ ನಡೆಸಿದನೆಂಬ  ಪುಕಾರು ಶ್ರೀನಾಥನ ಬಗೆಗಿರುವುದಾದರೂ ಕವಿತ್ವದಲ್ಲಿ, ಭಾಷಾಪ್ರೌಢಿಮೆಯಲ್ಲಿ ತೆಲುಗು ನಾಡಿನಲ್ಲೇ ಅವನನ್ನು ಸರಿಗಟ್ಟುವ ಇನ್ನೊಬ್ಬ ಕವಿ ಬರಲಿಲ್ಲವೆಂಬುದೇ ಅವನ ಅಗ್ಗಳಿಕೆಗೆ ಸಾಕ್ಷಿ. ತೆಲುಗಿನಲ್ಲಿ ಚಾಟುಪದ್ಯಗಳ, ಆಶುಕವಿತೆಗಳ ಪರಂಪರೆಯನ್ನೇ ಶುರುಮಾಡಿದವನೂ ಇವನೇ. ಕೂತಲ್ಲಿ ನಿಂತಲ್ಲಿ ಪದ್ಯಹೇಳುವ ಈ ಕವಿಗೆ ಸ್ವತಃ ವಿದ್ವಾಂಸರಾಗಿದ್ದ ಕಾವ್ಯಪ್ರಿಯ ಕೊಂಡವೀಡು ರೆಡ್ಡಿಗಳು ವಿಶೇಷ ಗೌರವ ಕೊಡುತ್ತಿದ್ದರಲ್ಲಿ ಆಶ್ಚರ್ಯವಿಲ್ಲ.
ಎಷ್ಟೆಂದರೂ ಶೄಂಗಾರ ನೈಷದದ ಕರ್ತೃವಲ್ಲವೇ! ಶ್ರೀನಾಥ ರಸಿಕ ಶಿಖಾಮಣಿ. ರಾಜಮಂಡ್ರಿಯ ಬೀದಿಗಳಲ್ಲಿ ತಾನು ಭೇಟಿಯಾದ ಹೆಣ್ಮಕ್ಕಳ ಸೌಂದರ್ಯವನ್ನೆಲ್ಲ ತನ್ನ ವಿಧಿನಾಟಕದಲ್ಲಿ ಬಾಯ್ತುಂಬ ಹೊಗಳಿದ್ದಾನೆ. ರಾಜನರ್ತಕಿಯರಿಂದ ಹಿಡಿದು ಬೀದಿಯಲ್ಲಿ ಹೂಮಾರುವವಳು, ನೀರು ತರಲು ಬಂದವಳು, ಹೊಲಕ್ಕೆ ಬುತ್ತಿ ಒಯ್ಯುವವಳು ಈಗೆ ಒಬ್ಬರನ್ನೂ ಶ್ರೀನಾಥ ತನ್ನ ಕಾವ್ಯದಲ್ಲಿ ಬಿಟ್ಟಿಲ್ಲ.  
ಸೊಗಸು ಕೀಲ್ಜಡ ದಾನ ಸೋಗ ಕನ್ನುಲ ದಾನ
ವಜ್ರಾಲ ವಂಟಿ ಪಲ್ಚರುಸ ದಾನ.............
ತಿರಿಗಿಚೂಡವೇ ಮುತ್ಯಾಲ ಸರುಲ ದಾನ
ಚೇರಿ ಮಾಟಾಡು ಚಂಗಾವಿ ಚೀರದಾನ |
- ಸೊಗಸು ನೀಽಳ್ಜಡೆಯವಳೆ, ಕೋಲ್ಮಿಂಚು ಕಣ್ಣವಳೆ
ಬೆಳ್ ಹಾಲನೊರೆಯ ನಗುವಿನೆಳೆಯವಳೆಽಽಽಽ
ತಿರುಗಿ ನೋಡೆಲೇ, ನೋಡೆಲೇ.....ಮುತ್ತ ಮಣಿ ಮಾಲೆಯವಳೆ
ಸೇರಿ ಮಾತಾಡಲು ಬಾ ಕೆಂಪು ಸೀರೆಯವಳೇಽಽಽಽ
ಎಂದು ಶ್ರೀನಾಥನಿಂದ ಹೊಗಳಿಸಿಕೊಳ್ಳದ ಸುಂದರಿ ಕೊಂಡವೀಡಿನಲ್ಲಿರಲಿಲ್ಲ.

ವಿಧಿನಾಟಕದಲ್ಲಿ ಬರುವ ಆತನ ಒಂದು ಚಾಟುಪದ್ಯವನ್ನು ನೋಡಿ.
ಪೂಜಾರಿವಾರಿ ಕೋಡಲು ತಾಜಾರಗ
ಬಿಂದೆ ಜಾರಿ ಡಬ್ಬುನ ಬಡಿಯನ್
ಮೈಜಾರಿಕೊಂಬು ತಡಿಸಿನ ಬಾಜಾರೆ
ತಿರುಗಿ ಚೂಚಿ ಪಕ್ಕನ ನವ್ವುನ್
-ಪೂಜಾರಿಯಾ ಮಗಳು ತಾಜಾರಲು
ಬಿಂದಿ ಜಾರಿ ಡಬ್ಬನೆ ಬಡಿಯಲ್
ಮೈಜಾರಿಕೊಂಡರು ಸಾವರಿಸಿ ಬಾಜಾರಿ 
ತಿರುಗಿ ನೋಡಿ, ಪಕ್ಕುನೆ ನಕ್ಕಳ್

ರಾಮಾಯಣ, ಮಹಾಭಾರತ, ಸಂಸ್ಕೃತ ಕಾವ್ಯಗಳ ಪ್ರಭಾವದಾಚೆ ತಾನು ದಿನನಿತ್ಯ ನೋಡುವ ವಸ್ತುವನ್ನಿಟ್ಟುಕೊಂಡು ಕಾವ್ಯಗಳ ರಚನೆ ಮಾಡಿದ್ದು ಶ್ರೀನಾಥನ ವೈಶಿಷ್ಟ್ಯ.
       ತೆಲುಗಿನಲ್ಲಿ ಭಾಗವತವನ್ನು ಬರೆದ ಮಹಾಕವಿ ಬಮ್ಮೆರ ಪೋತನ ಶ್ರೀನಾಥನ ಭಾವ. ಆತ ಶ್ರೀಮಂತನಲ್ಲ. ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದವನು. ಶ್ರೀನಾಥನಿಗೆ ಬಡವನಾದ ಪೋತನನ್ನು ಕಂಡರೆ ಹಾಸ್ಯ. ಒಂದು ದಿನ ಶ್ರೀನಾಥ ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದಾಗ ಉಳುತ್ತಿದ್ದ ಪೋತನನನ್ನು ಕಂಡು ’ಹಾಲಿಕರು ಸುಖವಾಗಿದ್ದೀರಾ?’ ಎಂದು ತಮಾಶೆ ಮಾಡಿದನಂತೆ. ಅದಕ್ಕೆ ಪೋತನರಾಜು ಕೊಟ್ಟ ಉತ್ತರ ಹೀಗಿದೆ.
ಬಾಲರಸಾಲನವಪಲ್ಲವ ಕೋಮಲ ಕಾವ್ಯಕನ್ನಿಕನ್
ಗೂಳುಲಕಿಚ್ಚಿ ಯಪ್ಪುಡುಪುಕೂಡು ಭುಜಿಂಚುಟಕಂಟಿ ಸತ್ಕವುಲ್ |
ಹಾಲಿಕಲೈನನೇಮಿ ಗಹನಾಂತರಸೀಮಲ ಕಂದಮೂಲಿಕೌ
ದ್ದಾಲಿಕು ಲೈನ ನೇಮಿ ನಿಜದಾರಸುತೋದರ ಪೋಷಣಾರ್ಥಮೈ ||
- ಎಳೆಮಾವಿನಾ ಚಿಗುರಂಥ ಕೋಮಲ ಕಾವ್ಯಕನ್ನಿಕೆಯನ್ನು,
ಖೂಳರಿಗೆ ಕೊಟ್ಟು ನೀಚ ಕೂಳ ತಿನ್ನುವುದಕಿಂತ 
ಸತ್ಕವಿಗಳು ತಮ್ಮ ಹೆಂಡತಿ ಮಕ್ಕಳ ಪೋಷಣೆಗಾಗಿ 
ಹಾಲಿಕರಾದರೂ ಸರಿಯೆ, ಕಂದಮೂಲಗಳ ಕಿತ್ತು ತಿಂದರೂ ಸರಿಯೆ.

       ಇನ್ನೊಮ್ಮೆ ಶ್ರೀನಾಥನು ಬಡತನದಲ್ಲಿ ಬೇಯುವುದಕ್ಕಿಂತ ಭಾಗವತಕಾವ್ಯವನ್ನು ಯಾವನಾದರೂ ಅರಸನಿಗೆ ಅಂಕಿತಕೊಟ್ಟರೆ ಬೇಕಾದ ಭಾಗ್ಯ ಲಭಿಸುವುದೆಂದು ಹೇಳಿ ಪೋತನನನ್ನು ರಾಜಾಸ್ಥಾನಕ್ಕೆ ಕರೆದುಕೊಂಡು ಹೋಗಲೆತ್ನಿಸಿದನಂತೆ. ಶ್ರೀನಾಥ ಹೇಳಿದ ಮಾತುಗಳು ಪೋತನನಿಗೆ ಚಿಂತೆಯನ್ನು ಉಂಟುಮಾಡಿದವು. ತನ್ನ ಬಡತನದ ಬಗ್ಗೆ ಚಿಂತಿಸುತ್ತ ಮಲಗಿದ್ದ ಪೋತನನನಿಗೆ ಆ ರಾತ್ರಿ ಬಿಳಿಯ ಉಡುಪನ್ನು ಧರಿಸಿದ, ಹೊಳೆಯುವ ಕಿರೀಟವನ್ನು ಹಾಕಿಕೊಂಡ, ತೇಜೋಮೂರ್ತಿಯಾದ ದೇವಿಯೊಬ್ಬಳನ್ನು ಕಂಡಂತೆ ಆಯಿತು. ಸ್ವಲ್ಪ ಗಮನವಿಟ್ಟು ನೋಡಿದಾಗ ಅವಳು ಸರಸ್ವತಿ ಎಂದು ಗುರುತಿಸಿದ. ಆದರೆ ಸರಸ್ವತಿ ಅಳುತ್ತಿದ್ದಾಳೆ! ಪೋತನನಿಗೆ ಆಶ್ಚರ್ಯವಾಯಿತು. ಇದೇನು ಬ್ರಹ್ಮನ ರಾಣಿ, ವಿದ್ಯಾಭಿಮಾನಿ ದೇವತೆಯ ಕಣ್ಣುಗಳಲ್ಲಿ ನೀರು! ಇದಕ್ಕೆ ಕಾರಣವೇನು? ತಾನು ಎಲ್ಲಿ ಭಾಗವತವನ್ನು ರಾಜನಿಗೆ ಅಂಕಿತ ಮಾಡಿಬಿಡುತ್ತೇನೆಯೋ ಎಂದು ಸರಸ್ವತಿ ಅಳುತ್ತಿದ್ದಾಳೆ ಎನ್ನಿಸಿತು. ಆಗ ಪೋತನ ಅವಳಿಗೆ ಹೇಳಿದ:
ಕಾಟುಕಕಂಟಿನೀರು ಚನುಕಟ್ಟುಪಯಿ ಬಡ ನೇಲ ಯೇಡ್ಚೆದೋ
ಕೈಟಭದೈತ್ಯಮರ್ದನುನಿ ಗಾದಿಲಿಕೋಡಲ! ಯೋಮದಂಬ! ಯೋ 
ಹಾಟಕುಗರ್ಭುರಾಣಿ! ನಿನು ನಾಕಟಿಕಿಂಗೊನಿಪೋಯಿ ಯಲ್ಲ ಕ
ರ್ಣಾಟ ಕಿರಾಟ ಕೀಚಕುಲ ಕಮ್ಮಿ ದ್ರಿಶುದ್ಧಿಗೆ ನಮ್ಮು ಭಾರತೀ ||
ತಾಯೇ, ರಾಕ್ಷಸರನ್ನು ಕೊಂದ ವಿಷ್ಣುವಿನ ಸೊಸೆ ಭಾರತೀಯೆ,, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗುವಂತೆ ಏಕೆ ಕಣ್ಣೀರು ಹರಿಸುತ್ತಿರುವೆ? ಹಸಿವನ್ನು ಕಳೆದುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ದುಷ್ಟರಾದ ರಾಜರಿಗೆ ಮಾರುವುದಿಲ್ಲ. ನನ್ನ ಮಾತುಗಳನ್ನು ನಂಬು.

       ಒಮ್ಮೆ ಶ್ರೀನಾಥ ವಿಜಯನಗರದ ಆಹ್ವಾನದ ಮೇರೆಗೆ ಪ್ರೌಢದೇವರಾಯನನ್ನು ನೋಡಬಯಸಿ ಕನ್ನಡ ರಾಜ್ಯಕ್ಕೆ ಬಂದನಂತೆ. ಆದರೆ ಎಷ್ಟು ದಿನ ಕಾದರೂ ರಾಜನ ದರ್ಶನ ಲಭಿಸಲಿಲ್ಲ. ಆಗ ಆತನು ಬೇಸರಗೊಂಡು ಹೇಳಿದ ಪದ್ಯವಿದು.
ಕುಲ್ಲಾಯುಂಚಿತಿ ಗೋಕಸುಟ್ಟಿತಿ ಮಹಾಕೂರ್ಪಾಸಮುನ್ದೊಡಗಿತಿನ್
ವೆಲ್ಲುಲ್ಲಿನ್ ತಿಲಪಿಷ್ಟಮುನ್ ಪಿಸಿಕಿತಿನ್ ವಿಶ್ವಸ್ತ ವಡ್ಡಿಂಪಗಾ
ಸಲ್ಲಾನಂಬಲಿ ದ್ರಾವಿತಿನನ್ ರುಚುಲು ದೋಸಂಬಂಚು ಬೋನಾಡಿತಿನ್
ತಲ್ಲೀ ಕನ್ನಡರಾಜ್ಯಲಕ್ಷ್ಮೀ ದಯಲೇದಾ ನೇನು ಶ್ರೀನಾಥುಡನ್ !
ಕುಲಾವಿಯನ್ನಿಟ್ಟುಕೊಂಡೆ. ರುಮಾಲನ್ನು ತಲೆಗೆ ಸುತ್ತಿದೆ. ನಿಲುವಂಗಿಯನ್ನು ತೊಟ್ಟುಕೊಂಡೆ. ಬೆಳ್ಳುಳ್ಳಿ-ಎಳ್ಳುಗಳ ಚಟ್ಣಿಯನ್ನು ತಿನ್ನಲಾಗದೇ ಹಿಸುಕಿ ಬಿಸಾಟೆ. ಗಂಜಿಯನ್ನು ಕುಡಿದೆ. ರುಚಿಗಳು ದೋಷವೆಂದು ಬಿಟ್ಟುಬಿಟ್ಟೆ. ತಾಯೀ, ಕನ್ನಡ ರಾಜ್ಯಲಕ್ಷ್ಮೀ, ಇಷ್ಟಾದರೂ ನಿನಗೆ ದಯೆ ಬರಲಿಲ್ಲವೇ! ನಾನು ಶ್ರೀ’ನಾಥ’.
ಇದನ್ನು ಕೇಳಿಸಿಕೊಂಡ ದೇವರಾಯ ಮುಜುಗರಪಟ್ಟುಕೊಂಡು ರಾಜಸಂದರ್ಶನ ನೀಡಿದ್ದಲ್ಲದೇ ಕನಕಾಭಿಷೇಕವನ್ನೂ ನೆರವೇರಿಸಿದನಂತೆ.
ಕನಕಾಭಿಷೇಕ ಮಾಡಿಸಿಕೊಂಡ ಮೇಲೆ ಶ್ರೀನಾಥ ’ನಾ ಕವಿತ್ವಂಬು ನಿಜಮು ಕರ್ನಾಟ ಭಾಷಾ’ ಕವಿತ್ವದ ನಿಜಭಾಷೆಯೆಂದರೆ ಕನ್ನಡಭಾಷೆಯೇ ಎಂದು ಕನ್ನಡವನ್ನು ಹೊಗಳದೇ ಇರಲಿಲ್ಲ.

       ವಿಜಯನಗರದ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿದ ಶ್ರೀನಾಥ ಕನ್ನಡರಾಜ್ಯದಲ್ಲಿ ವಿಜಯೋತ್ಸವವನ್ನಾಚರಿಸಿ ತನ್ನ ನಾಡಿದೆ ಹಿಂದಿರುಗುವಷ್ಟರಲ್ಲಿ ಕೊಂಡವೀಡನ್ನು ಮೋಸದಿಂದ ಆಕ್ರಮಿಸಿದ ರಾಚಕೊಂಡದ ರಾವುಸಿಂಗಭೂಪಲನು ಕೊಂಡವೀಡಿನ ವೇಮರೆಡ್ಡಿಯನ್ನು ಕೊಂದು ಕುಲದೈವ ಪುತರಾಜು ಕಟಾರಿಯನ್ನು ಕದ್ದೊಯ್ದನಂತೆ. ಶ್ರೀನಾಥ ತನ್ನ ಅಪ್ರತಿಮ ವಿದ್ವದ್ಬಲದಿಂದ ರಾಜಕೊಂಡ ಅರಸನ ಮನಗೆದ್ದು ಕೊಂಡವೀಡಿನ ಕುಲದೈವವನ್ನು ರಾಜ್ಯಕ್ಕೆ ತಂದು ಪುನರ್ಪ್ರತಿಷ್ಟಾಪಿಸಿದನೆಂದು ಐತಿಹ್ಯವಿದೆ. ಮುಂದೆ ತನ್ನ ಪ್ರಭು ವೇಮನಾಥನಿಲ್ಲದ ರಾಜ್ಯದಲ್ಲಿರಲಾಗದೇ ಶ್ರೀನಾಥ ಕೊಂಡವೀಡನ್ನು ತೊರೆದ. ಅವಕಾಶಕ್ಕಾಗಿ ಕಾಯುತ್ತಿದ್ದ ಗಜಪತಿ ರಾಜರು ಕೊಂಡವೀಡನ್ನಾಕ್ರಮಿಸಿದರು.
ಬಹುರಾಜ ಸಮ್ಮಾನಿತನಾಗಿ ವೈಭವದ ಜೀವನವನ್ನು ನಡೆಸಿದ್ದ ಶ್ರೀನಾಥ ತನ್ನ ಕೊನೆಯ ಕಾಲಕ್ಕೆ ಬಹಳ ಕಷ್ಟಕ್ಕೀಡಾದ. ರಾಜಾಶ್ರಯ ತಪ್ಪಿಹೋಗಿತ್ತು. ಕೊಂಡವೀಡಿನಲ್ಲಿರಲಾರದೇ ಗುಂಟೂರು ಪ್ರಾಂತ್ಯದ ಪಾಲ್ನಾಡಿಗೆ ವಲಸೆ ಹೋದ. ’ಚಿನ್ನ ಚಿನ್ನ ಗುಳ್ಳು, ಚಿಲ್ಲರೆ ದೇವುಳ್ಳು, ನಾಕು ಲೇನಿ ನೀಳ್ಳು, ಸಜ್ಜ ಜೊನ್ನ ಕೂಳ್ಳು’(ಸಣ್ಣ ಸಣ್ಣ ಗುಡಿಗಳು, ಚಿಲ್ಲರೆ ದೇವರುಗಳು, ನೀರಿಲ್ಲದ ಊರುಗಳು, ಸಜ್ಜೆ ಜೋಳದೂಟಗಳು) ಎಂದು ಪಾಲ್ನಾಡನ್ನು ತಾತ್ಸಾರ ಮಾಡುತ್ತಿದ್ದವ ಕೊನೆಗೆ ಅಲ್ಲಿಯೇ ಇರಬೇಕಾಯಿತು.
ಭೋಜನಪ್ರಿಯ ಶ್ರೀನಾಥ ಪಾಲ್ನಾಡಿಗೆ ಹೋದಾಗ ಹೇಳಿದ ಪದ್ಯವಿದು.
ಗರಳಮು ಮ್ರಿಂಗಿತಿ ನಂಚುಂ
ಮುರಹರ! ಗರ್ವಿಂಚಬೋಕು ಪೋಪೋ ನೀ
ಬಿರುದಿಂಕ ಗಾನವಚ್ಚೆಡಿ 
ಮೆರೆಸೆಡಿ ರೇನಾಟಿಜೊನ್ನಮೆದುಕುಲು ತಿನುಮೀ
ಗರಲವ ನುಂಗಿದೆನೆಂದು ಗರ್ವಿಸಬೇಡವೋ 
ಮುರಹರ! ಆ ಬಿರುದಿನ್ನು ಅಳಿಸು 
ರೇನಾಡಿನ ಜೋಳದಗುಳನ್ನು ತಿಂದು ನೋಡೆಲೋ
ಆಮೇಲೆ ನಿನ್ನ ಮಹಿಮೆಯನು ತಿಳಿಸು

ಪಲ್ನಾಡಿನಲ್ಲಿ ಭಾರೀ ಜಲಕ್ಷಾಮ. ಜೊತೆಗೆ ಬಡತನ. ಅಲ್ಲಿನ ದುರವಸ್ಥೆಯನ್ನು ಎಷ್ಟು ಹೇಳಿದರೂ ಶ್ರೀನಾಥನಿಗೆ ತೃಪ್ತಿಯಿಲ್ಲ.
ರಸಿಕುಡು ಪೋವಡು ಪಲ್ನಾಡು 
ಎಸಗಂಗಾ ರಂಭಯೈನ ನೇಕುಲೆವಡುಕುನ್
ವಸುಧೇಶುಡೈನ ದುನ್ನುನು 
ಕುಸುಮಾಸ್ತ್ರುಂಡೈನ ಜೊನ್ನಕೂಡೇ ಕುಡುಚುನ್ |
- ರಸಿಕನಾದವನು ಪಲ್ನಾಡಿಗೆ ಹೋಗಬಾರದು. ಅಲ್ಲಿ ರಂಭೆಯಾದರೂ ಹತ್ತಿ ನೂಲಬೇಕು. ರಾಜನಾದರೂ ಉಳಬೇಕು. ಸಾಕ್ಷಾತ್ ಮನ್ಮಥನಾದರೂ ಜೋಳದ ಕೂಳನ್ನೇ ತಿನ್ನಬೇಕು.

ಒಮ್ಮೆ ಪಾಲ್ನಾಡಿನಲ್ಲಿ ದಾಹ ತಾಳಲಾರದೇ ಶ್ರೀನಾಥ ತನ್ನ ಇಷ್ಟದೈವ ಶಿವನನ್ನು ಕುರಿತು ಹೀಗೆ ನುಡಿದನಂತೆ.
ಸಿರಿಗಲವಾನಿಕಿ ಜೆಲ್ಲುನು 
ತರುಣುಲ ಬದಿಯಾರುವೇಲ ತಗ ಪೆಂಡ್ಲಾಡನ್ 
ತಿರಿಪೆಮುನಕಿದ್ದರಾಂಡ್ರಾ ಪರಮೇಶಾ ! 
ಗಂಗ ವಿಡುಮು ಪಾರ್ವತಿ ಚಾಲು
- ಸಿರಿತನದಲ್ಲಿ ಮುಳುಗೆದ್ದ ಶ್ರೀಕೃಷ್ಣನಂಥವರು ಹದಿನಾರು ಸಾವಿರ ಮದುವೆಯಾದರೂ ನಡೆದೀತು. ನಿನ್ನಂಥ ತಿರುಪೆಯವನಿಗೇಕಯ್ಯ ಎರಡು ಹೆಂಡತಿಯರು ಪರಮೇಶಾ! ಗಂಗೆಯನ್ನು ಬಿಟ್ಟುಕೊಡಯ್ಯ. ಪಾರ್ವತಿ ಸಾಕು. (ಈ ಶ್ಲೋಕವನ್ನು ಕೇಳಿದ ಶಿವ ಶ್ರೀನಾಥನೂರಿನಲ್ಲಿ ಮಳೆಯನ್ನೇ ಸುರಿಸಿದನಂತೆ ಎಂಬುದು ಕಥೆಯಷ್ಟೆ) 

       ರಾಜಾಶ್ರಯವಿಲ್ಲದೇ ಹೋದಾಗ ಶ್ರೀನಾಥ ಕೃಷ್ಣಾ ತೀರದ ಬೊಡ್ಡುಪಲ್ಲಿಯೆಂಬ ಗ್ರಾಮವನ್ನು ಗುತ್ತಿಗೆಗೆ ತೆಗೆದುಕೊಂಡ. ದುರ್ದೈವದಿಂದ ಮೂರು ವರ್ಷ ಪ್ರವಾಹ ಬಂದು ಬೆಳೆಯೆಲ್ಲ ನಾಶವಾಯಿತು. ಗುತ್ತಿಗೆ ಕಾಸು ಹೊರಡುವುದೇ ಅಸಾಧ್ಯವಾಯಿತು. ಶ್ರೀನಾಥನನ್ನು ಕಂಡರಾಗದವರು ಗಜಪತಿ ರಾಜನಿಗೆ ದೂರಿತ್ತರು. ಜಮೀನ್ದಾರ ಕವಿರಾಜನಿಗೆ ಕೋಳ ತೊಡಿಸಿ, ಕಲ್ಗುಂಡು ಹೊರಿಸಿ ಮೆರವಣಿಗೆ ಮಾಡಿ ಅವಮಾನಪಡಿಸಿದನಂತೆ. ಕನ್ನಡರಾಯನ ಮುತ್ತಿನ ಸಾಲೆಯಲ್ಲಿ ಕನಕಸ್ನಾನ ಮಾಡಿದ ಕವಿ ತನ್ನ ಪೂರ್ವವೈಭವವನ್ನು ನೆನೆಸಿಕೊಂಡು ಪ್ರಲಾಪಿಸುತ್ತಾನೆ.
ಕವಿರಾಉಕಂಠಂಬು ಕೌಗಿಲಿಂಚೆನು ಗದಾ
ಪುರವೀಧಿನೆದುರೇಗ ಬೊಗಡದಂಡ
ಸಾರ್ವಭೌಮುನಿ ಭುಜಾಸ್ತಂಭಮೆಕ್ಕೆನುಗದಾ
ನಗರಿವಾಕಿಟಿನುಂಡು ನಲ್ಲಗುಂಡು ||
ವೀರಭದ್ರಾರೆಡ್ಡಿ ವಿದ್ವಾಂಸು ಮುಂಜೇತ
ವಿಯ್ಯಮಂದೆನುಗದಾ ವೆದುರುಗೊಡಿಯ
ಆಂಧ್ರನೈಷಧಕರ್ತ ಯಂಘ್ರಿಯುಗ್ಮಂಬುನ
ದಗಿಲಿಯುಂಡೆನುಗದಾ ನಿಗಳಯುಗಮು ||
ಕೃಷ್ಣವೇಣಮ್ಮ ಗೊನಿಪೋಯೆನಿಂತ ಫಲಮು
ವಿಲವಿಲಾಕ್ಷುಲು ದಿನಿಪೋಯೆ ತಿಲಲುಪೆಸಲು
ಬೊಡ್ಡುಪಲ್ಲೆನು ಗೊಡ್ಡೇರಿ ಮೋಸಪೋತಿ
ನೆಟ್ಟು ಚೆಲ್ಲಿಂತು ಡಂಕಂಬುಲೇಡುನೂರ್ಲು ?
- ಕವಿರಾಜನ ಕೊರಳಿಗೂ  ಅಪಮಾನಕರ ದಂಡೆ ಬಿತ್ತಲ್ಲವೇ? ಕವಿಸಾರ್ವಭೌಮನ ಭುಜದಿಂದ ಊರ ಬಾಗಿಲ ಕರಿಗುಂಡನ್ನು ಎತ್ತಿಸಿದರಲ್ಲವೇ? ವೀರಭದ್ರಾರೆಡ್ಡಿಯ ಆಸ್ಥಾನ ವಿದ್ವಾಂಸನ ಮುಂಗೈಗೆ ಬಿದಿರ ಕೋಳವನ್ನು ಹಾಕಿದರೇ? ಆಂಧ್ರನೈಷಧಕರ್ತನ ಅಂಘ್ರಿಯುಗ್ಮಕ್ಕೆ ಸಂಕೋಲೆ ತೊಡಿಸಿದರೆ! ಕೃಷ್ಣಮ್ಮ ಫಲವನೆಲ್ಲ ಕೊಂಡುಹೋದಳು. ಬೊಡ್ಡುಪಲ್ಲಿಯ ಕುಗ್ರಾಮಕ್ಕೆ ಬಂದು ಮೋಸಹೋದೆ. ಏಳುನೂರು ಟಂಕಗಳ ಕಂದಾಯವನ್ನೆಂತು ಸಲ್ಲಿಸಲಿ?

       ಶ್ರೀನಾಥನ ಕಷ್ಟವನ್ನು ನೋಡಲಾಗದೇ ದುಃಖಪಟ್ಟ ಊರಜನ ತಾವೇ ಒಂದಕ್ಕೆರಡು ಕಂದಾಯಕೊಟ್ಟು ಅವನನ್ನು ಸೆರೆಯಿಂದ ಬಿಡಿಸಿದರಂತೆ. ಸಂಸ್ಕೃತದ ಜಗನ್ನಾಥ ಪಂಡಿತನಿಗೂ, ಈ ಶ್ರೀನಾಥನಿಗೂ ಎಷ್ಟೆಲ್ಲ ಸಾಮ್ಯಗಳಿವೆ. ಇಬ್ಬರೂ ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಗಳು. ಒಬ್ಬ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿಯಾದರೆ ಇನೊಬ್ಬ ಆಂಧ್ರಭಾಷೆಯ ಕವಿತ್ವವನ್ನು ಮುಗಿಲೆತ್ತರಕ್ಕೆ ಬೆಳೆಸಿದ ಮೊದಲಿಗ. ಇಬ್ಬರೂ ಪರಮ ರಸಿಕ ಶಿಖಾಮಣಿಗಳು. ರಾಜಾಧಿರಾಜರುಗಳನ್ನು ಹೊಗಳಿ ಜೀವನಪೂರ್ತಿ ವೈಭವದ ಸುಪ್ಪತ್ತಿಗೆಯಲ್ಲಿ ಬದುಕಿದವರೇ. ಪಂಡಿತಕುಲವನ್ನೆಲ್ಲ ಚೆಂಡಾಡಿ ಪಾಖಂಡಿಗಳೆನಿಸಿದರೂ ಒಬ್ಬ ಪರಮ ವೈಷ್ಣವ, ಇನ್ನೊಬ್ಬ ಮಹಾ ಶಿವಭಕ್ತ. ಆದರೆ ಕೊನೆಗಾಲದಲ್ಲಿ ಇಬ್ಬರೂ ಪಡಬಾರದ ಕಷ್ಟಪಡಬೇಕಾಯಿತು. ಜಗನ್ನಾಥ ಗಂಗೆಯಲ್ಲಿ ಐಕ್ಯಗೊಂಡರೆ ಶ್ರೀನಾಥ ಕೃಷ್ಣಾನದಿಯನ್ನು ಪ್ರವೇಶಿಸಿ ಪ್ರಾಣತ್ಯಾಗಕ್ಕೆ ಮುಂದಾದ. ಆ ಅವಸಾನಕಾಲದಲ್ಲೂ ಸಹ ಆತ ತನ್ನ ಆತ್ಮಪ್ರತ್ಯಯವನ್ನು ಬಿಡಲಿಲ್ಲ.
ಕಾಶಿಕಾವಿಶ್ವೇಷು ಗಲಿಸೆ ವೀರಾರೆಡ್ಡಿ
ರತ್ನಾಂಬರಂಬು ಲೇರಾಯಡಿಚ್ಚು
ರಂಭಗೂಡೆ ತೆನುಂಗುರಾಯರಾಹತ್ತುಂಡು
ಕಸ್ತೂರಿ ಕೇರಾಜು ಪ್ರಸ್ತುತಿಂತು |
ಸ್ವರ್ಗಸ್ಥುಡಯ್ಯೆ ವಿಸನಮಂತ್ರಿ ಮರಿ ಹೇಮ
ಪಾತ್ರಾನ್ನ ಮೆವ್ವನಿಪಂಕ್ತಿ ಗಲದು
ಕೈಲಾಸಗಿರಿ ಬಂದೆ ಮೈಲಾರುವಿಭುಡೇಗಿ
ದಿನವೆಚ್ಚ ಮೇರಾಜು ತೀರ್ಪಗಲಡು |
ಭಾಸ್ಕರುಡು ಮುನ್ನೆ ದೇವುನಿಪಾಲಿ ಕರಿಗೆ
ಗಲಿಯುಗಂಬುನ ನಿಕನುಂಡ ಗಷ್ಟಮನುಚು
ದಿವಿಜಕವಿವರು ಗುಂಡಿಯಲ್ ದಿಗ್ಗುರನಗ
ನರುಗುಚುನ್ನಾಡು ಶ್ರೀನಾಥುಡಮರಪುರಿಕಿ |
- ವೀರಾರೆಡ್ಡಿ ಕಾಶಿ ವಿಶ್ವೇಶ್ವರನನ್ನು ಸೇರಿಬಿಟ್ಟ. ಇನ್ನು ರತ್ರಾಂಬರಗಳನ್ನು ಯಾವ ರಾಯ ಕೊಡುತ್ತಾನೆ? ತೆಲುಗುರಾಯ ರಂಭೆಯನ್ನು ಕೂಡಿದ. ಕಸ್ತೂರಿಗಾಗಿ ಇನ್ಯಾರನ್ನು ಹೊಗಳಲಿ? ವಿಸನ ಮಂತ್ರಿ ಸ್ವರ್ಗಸ್ಥನಾದ. ಹೇಮಪಾತ್ರಾನ್ನವಿನ್ನು ಯಾರ ಪಂಕ್ತಿಯಲ್ಲಿ ಲಭಿಸೀತು? ಮೈಲಾರ ವಿಭುವು ಕೈಲಾಸಗಿರಿಯನ್ನು ಹತ್ತಿದ. ಇನ್ನು ನನ್ನ ದಿನದ ವೆಚ್ಚವನ್ನು ಯಾವ ರಾಜ ತೀರಿಸುತ್ತಾನೆ? ಭಾಸ್ಕರನು ಮೊದಲೇ ದೇವರ ಬಳಿ ಸೇರಿದ. ಇನ್ನು ಕಲಿಯುಗದಲ್ಲಿರುವುದು ಕಷ್ಟವೆಂದು ಯೋಚಿಸಿ ಶ್ರೀನಾಥನೂ ಅಮರಪುರಿಗೆ ಹೋಗುತ್ತಿದ್ದಾನೆ. ಅಯ್ಯೋ ಶ್ರೀನಾಥ ಸ್ವರ್ಗಕ್ಕೆ ಬಂದರೆ ನನ್ನ ಸ್ಥಾನಕ್ಕೆ ಸಂಚಕಾರವೆಂದು ದೇವಕವಿ ಶುಕ್ರನ ಎದೆ ದಿಗ್ಗೆಂದು ಹೊಡೆದುಕೊಳ್ಳುತ್ತಿದೆ.

       ಶ್ರೀನಾಥನ ಕಾವ್ಯವೈದೂಷ್ಯಕ್ಕೆ ಆತನ ಮಾನಸೋಲ್ಲಾಸವೊಂದು ಅದ್ಭುತ ಉದಾಹರಣೆ. ಈ ಚತುಷ್ಪಾದ ಯಮಕಚಿತ್ರಕವಿತೆಯನ್ನು ನೋಡಿ. ಇದು ಶುರುವಾಗುವುದು ಈ ಸೀಸಪದ್ಯ ಮತ್ತದರ ತೇಟಗೀತದಿಂದ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ |
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ ||
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು |
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು ||
ಸೀಸಗೀತದ ಮತ್ತು ತೇಟಗೀತೆಯ ಮೊಲನೇ ಸಾಲಿನ ಅರ್ಥ ರಾಜ=ಚಂದ್ರನಿಗೆ, ನಂದನ=ಮಗನಾದ ಬುಧನು, ರಾಜ, ರ=ಸಮರ್ಥನಾದ, ಅಜ=ಈಶ್ವರನು, ರಾಜ=ದೇವೇಂದ್ರನು, ಆತ್ಮಜ=ಬ್ರಹ್ಮ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಬುದ್ಧಿಯಲ್ಲಿ, ಭವ= ಐಶ್ವರ್ಯದಲ್ಲಿ, ಭೋಗ=ವೈಭವದಲ್ಲಿ, ಸತ್ಕಳಾ= ಶ್ರೇಷ್ಠವಾದ ವಿದ್ಯೆಗಳ, ಭಾವ=ಅತಿಶಯದಲ್ಲಿ.
ಅದೇ ಎರಡನೆಯಪಾದದಲ್ಲಿ
ರಾಜನಂದನ, ರ=ಮನೋಹರವಾದ, ಅಜ=ಶಿವನಿಗೆ, ನಂದನ=ಮಗನಾದ ಕುಮಾರಸ್ವಾಮಿ, ರಾಜ=ಕುಬೇರ, ರಾಜ ರ=ಶ್ರೇಷ್ಠನಾದ ಅಜ= ರಘುಕುಮಾರನಾದ ಅಜ, ಆತ್ಮಜ = ಚಂದ್ರ, ಇವರು ಸಾಟಿ. ಯಾವುದರಲ್ಲಿ ಎಂದರೆ, ಭಾವ=ಕ್ರಿಯೆಯಲ್ಲಿ, ಭವ=ಧನದಲ್ಲಿ, ಭೋಗ=ಪಾಲನೆಯಲ್ಲಿ, ಸತ್ಕಳಾ, ಸತ್=ಯೋಗ್ಯವಾದ, ಕಳಾ=ಕಾಂತಿಯ, ಭಾವ=ಬೃಂದದಲ್ಲಿ.
ಅದೇ ಮೂರನೆಯಪಾದ
ರಾಜನಂದನ, ರ= ಚಿನ್ನದಂಥ ದೀಪ್ತಿಯುಳ್ಳ, ಅಜ=ಬ್ರಹ್ಮನಿಗೆ, ನಂದನ=ಪುತ್ರನಾದ ಸನತ್ಕುಮಾರನೂ, ರಾಜ= ಕ್ಷತ್ರಿಯನು, ರಾಜ ರ=ಶ್ರೇಷ್ಠನಾದ ಅ=ಬ್ರಹ್ಮನ ಜ=ಮಗ ವಸಿಷ್ಠನೂ, ಆತ್ಮ= ಬೃಹಸ್ಪತಿಯಲ್ಲಿ ಜ=ಹುಟ್ಟಿದ ಕಚನೂ ಸಾಟಿ. ಯಾವವಿಷಯಗಳಲ್ಲಿ ಎಂದರೆ, ಭಾವ=ಆತ್ಮಜ್ಞಾನದಲ್ಲಿ, ಭವ=ಜನನದಲ್ಲಿ, ಭೋಗ=ಅನುಭವದಲ್ಲಿ, ಸತ್ಕಳಾ=ಅಭಿವೃದ್ಧಿಹೊಂದುವ, ಭಾವ=ಪದ್ಧತಿಯಲ್ಲಿ. 
ನಾಲ್ಕನೆಯಪಾದದಲ್ಲಿ
ರಾಜನಂದನ, ರ=ಗೌರವಯುಕ್ತನಾದ ಅಜ=ಮನ್ಮಥನಿಗೆ ನಂದನ=ಕುಮಾರನಾದ ಅನಿರುದ್ಧನು, ರಾಜ, ರ= ಎಲ್ಲೆಡೆ ವ್ಯಾಪಿಸಿರುವ ಅಜ= ವಿಷ್ಣು, ರಾಜ=ಯಕ್ಷ, ಆತ್ಮಜ=ಮನ್ಮಥ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಆಕಾರದಲ್ಲಿ, ಭವ=ಸಂಸಾರದಲ್ಲಿ, ಭೋಗ= ಸಂಭೋಗದಲ್ಲಿ, ಸತ್ಕಳಾ= ಸೌಂದರ್ಯದ ಒಂದು ಭಾವ=ರೀತಿಯಲ್ಲಿ.
ಶ್ರೀನಾಥ ಕಾವ್ಯಪ್ರೌಢಿಮೆಗೆ ಬೇರೆ ಉದಾಹರಣೆ ಬೇಕೇ?