Pages

Thursday, December 8, 2016

ಭಾರತದಲ್ಲಿ ಯಹೂದಿಗಳ ಹೆಜ್ಜೆಗುರುತು: ಒಂದು ಅಧ್ಯಯನ - 1


ಕ್ರಿ.ಪೂ ೬೮ರಲ್ಲಿ ಬಂದ ಯಹೂದಿಗಳನ್ನು ಬರಮಾಡಿಕೊಳ್ಳುತ್ತಿರುವ ಮಲಬಾರಿನ ರಾಜ(ಕೊಚ್ಚಿನ್ ಜೂದಪಳ್ಳಿಯ ಪೇಂಟಿಂಗ್)
       ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಮಯ. ಕಣ್ಣೂರು, ಕ್ಯಾಲಿಕಟ್ಟುಗಳೆಲ್ಲ ವೀಕೆಂಡ್ ಡೆಸ್ಟಿನೇಶನ್ನುಗಳಾಗಿದ್ದ ಕಾಲ. ಅಲ್ಲಿನ ಗಲ್ಲಿಗಲ್ಲಿಗಳೆಲ್ಲ ಚಿರಪರಿಚಿತವಾಗಿತ್ತು. ಹಾಗೆ ಗಲ್ಲಿ ಸುತ್ತುವಾಗ ಕಣ್ಣಿಗೆ ಬಿದ್ದ ಒಂದು ರಸ್ತೆಯ ಹೆಸರಿದ್ದುದು ’ಜೂದಾ ಬಜಾರ್’. ಆ ರಸ್ತೆಯಲ್ಲಿದ್ದದ್ದೇ ಒಂದು ಚಪ್ಪಲಿ ಅಂಗಡಿ. ಹಾಗಿದ್ದಾಗ ಅದನ್ಯಾಕೆ ಜೂತಾ ಬಜಾರ್ ಎನ್ನುತ್ತಾರೆಂದು ನನಗೆ ಕುತೂಹಲ. ಕ್ಯಾಲಿಕಟ್ಟಿನ ಮೂಲೆಮೂಲೆಯ ಪರಿಚಯವಿರುವ ಗೆಳತಿ ಹಿತಳಿಗೆ ಕೇಳಿದೆ. ಸುಮಾರಷ್ಟು ಸರ್ಕಸ್ ಮಾಡಿದವಳು ಕೊನೆಗೆ ಪ್ರಾಯಶಃ ಹಿಂದೆ ಜ್ಯೂಗಳು ವಾಸವಾಗಿದ್ದ ಜಾಗವಾದ್ದರಿಂದ ಜೂದಾ(ಮಲಯಾಳದಲ್ಲಿ ಜೂದ ಅಂದರೆ ಜ್ಯೂಗಳ) ಬಜಾರ್ ಎಂಬ ಹೆಸರು ಬಂದಿದ್ದಿರಬಹುದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಇಲ್ಲ ಎಂದಳು. ಕ್ಯಾಲಿಕಟ್ಟಿನಲ್ಲಿ ಜ್ಯೂಗಳು ಇದ್ದರೆಂದು ಸ್ಥಳೀಯ ಇತಿಹಾಸಕಾರರಿಗೆ ನಂಬಿಕೆಯಿಲ್ಲ. ನನಗೂ ಆ ವಿಷಯ ಹೊಸದು. ಭಾರತಕ್ಕೆ ಪಾರ್ಸಿಗಳು ಬಂದು ನೆಲೆಸಿದ್ದರೆಂಬುದು ಅರಿವಿತ್ತು. ಯಹೂದಿಗಳೂ ಇದ್ದಾರೆಂಬುದೇ ನನಗೆ ಆಶ್ಚರ್ಯವುಂಟುಮಾಡಿತ್ತಾಗ. ಇನ್ನೊಮ್ಮೆ ಹೋದಾಗ ಪ್ರಾಯಶಃ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಬಂದಿದ್ದ ಜೂದಾ ಬಜಾರಿನ ಬಗೆಗಿನ ಲೇಖನವೊಂದನ್ನು ತೋರಿಸಿದಳು. ಕ್ಯಾಲಿಕಟ್ ಹೆರಿಟೇಜ್ ಫೋರಂ ಎಂಬ ಸಂಸ್ಥೆ ಕ್ಯಾಲಿಕಟ್ಟಿನಲ್ಲಿ ಯಹೂದಿಗಳ ರಸ್ತೆಯೊಂದನ್ನು ಕಂಡುಹಿಡಿದುದಾಗಿ ಹೇಳಿಕೊಂಡಿತ್ತು.

ಕ್ಯಾಲಿಕಟ್ಟಿನ ಜೂದಬಜಾರಿನಲ್ಲಿ ಉಳಿದುಕೊಂಡಿರುವ ಯಹೂದಿ ಪೂಜಾಮಂದಿರ
      
 ಆಶ್ಚರ್ಯವೇನಿಲ್ಲ. ಕ್ಯಾಲಿಕಟ್ ನೂರಾರು ವರ್ಷಗಳ ಕಾಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಿದ್ದ ನಗರ ಹಾಗೂ ಬಂದರು. ಝಾಮೋರಿನ್ನನ ರಾಜಧಾನಿಯಾಗಿದ್ದ ಊರು. ವಾಸ್ಕೋಡಗಾಮ ಮೊದಲು ಬಂದಿಳಿದಿದ್ದು ಇಲ್ಲಿಗೇ.  ಅರಬ್ಬರು, ಡಚ್ಚರು, ಇಂಗ್ಲೀಷರು, ಪೋರ್ಚುಗೀಸರು, ಚೀನಿಯರು ಇನ್ನೂ ಪೂರ್ವದ ಎಷ್ಟೇಷ್ಟೋ ದೇಶಗಳ ಸ್ನೇಹದ,  ಯುದ್ಧದ, ವ್ಯಾಪಾರದ, ವಿಜಯದ ಮೈಲಿಗಲ್ಲುಗಳನ್ನು ಹೊತ್ತು ನೆಲದ ಚರಿತ್ರೆಯನ್ನು ಸಮೃದ್ಧಗೊಳಿಸಿದ ತಾಣವದು. ಮತ್ತೂ ಎಷ್ಟೆಷ್ಟು ನಿಗೊಢಗಳನ್ನು ತನ್ನೊಳಗೆ ಹೊತ್ತಿದೆಯೋ. ಹಾಗೆ ಹುದುಗಿ ಹೋಗಿದ್ದ ಚರಿತ್ರೆಯ ಪುಟವೊಂದು ಮೊನ್ನೆ ಮೊನ್ನೆ ತೆರೆದುಕೊಂಡಿದ್ದು ಇತಿಹಾಸಕಾರ ಫ್ರಾಂಕೋಯಿಸ್ ಪೈರಾಡ್‌ನ “The voyages of Francois Pyrard of Laval, to the east indies, the Maldives, the molucass and Brazil” ಎಂಬ ಮರೆತುಹೋಗಿದ್ದ ಕಥನವೊಂದರ ಪುನರ್ದಶನವಾದ ಮೇಲೆ. ಅದರ ನಂತರವೇ ಕ್ಯಾಲಿಕಟ್ಟಿನ ಬೀದಿಗಳಲ್ಲಿ ಯಹೂದಿಗಳು ಮೂಡಿಸಿದ ಹೆಜ್ಜೆಗುರುತನ್ನು ಕಂಡು ಅಲ್ಲಿನ ಸ್ಥಳೀಕರು ಮೂಗಿನ ಮೇಲೆ ಬೆರಳಿಟ್ಟಿದ್ದು. ಪೋರ್ಚುಗೀಸ್ ಪ್ರವಾಸಿಗಳು ಹದಿನೈದನೇ ಶತಮಾನದಲ್ಲೇ ಇಲ್ಲಿ ವಾಸಿಸುತ್ತಿದ್ದ ಯಹೂದಿಗಳ ಬಗ್ಗೆ ಬರೆದಿದ್ದಾರೆ. ಡಚ್ಚರ ’ಹೀಬ್ರೂ ಕ್ರೊನಿಕಲ್ಸ್ ಆಫ್ ಕೊಚಿನ್’ ಯಹೂದಿಗಳ ರಾಜಕುಮಾರನೊಬ್ಬನ ಸಮಾಧಿಯೂ ಕ್ಯಾಲಿಕಟ್ಟಿನಲ್ಲಿರುವುದಾಗಿ ಉಲ್ಲೇಖಿಸುತ್ತದೆ. ಶಾಲಿಯಾತ್ ಎಂದು ಅರಬ್ಬರಿಂದಲೂ, ಚಾಲೆ ಎಂದು ಪೋರ್ಚುಗೀಸರಿಂದಲೂ, ಚಲಿ ಎಂದು ಡಚ್ಚರಿಂದಲೂ ಕರೆಯಲ್ಪಟ್ಟ ಕ್ಯಾಲಿಕಟ್ಟಿನ ಸಮೀಪದ ಚಲಿಯಾಮ್ ಪಟ್ಟಣದಲ್ಲಿ ಆಗಾಗ ಕ್ರಿಶ್ಚಿಯನ್ನರು ಹಾಗೂ ಯಹೂದಿಗಳ ಮಧ್ಯದ ಆಂತರಿಕ ಘರ್ಷಣೆಗಳ ಮಾಹಿತಿ ಸಿಗುತ್ತದೆ. ವಾಸ್ಕೋಡಗಾಮನ ಯಹೂದಿ ನಾವಿಕ ಕಲ್ಲಿಕೋಟೆಯಲ್ಲಿ ಇರುವ ಹತ್ತು ಯಹೂದಿ ಪಂಗಡಗಳನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದನ್ನು ಅವನೊಡನೆ ಬಂದ ಪ್ರವಾಸಿಗ ಗಿರೋಲಾಮೋ ಸೆರ್ನಿಗಿ ಬರೆದಿಟ್ಟಿದ್ದಾನೆ. ಕೊಚ್ಚಿಯ ರಾಜ ಹಾಗೂ ಕ್ಯಾಲಿಕಟ್‌ನ ಝಾಮೋರಿನ್ ಇಬ್ಬರ ಸೈನ್ಯದಲ್ಲೂ ಜ್ಯೂ ಬೆಟಾಲಿಯನ್ ಇದ್ದ ಬಗ್ಗೆ ಕ್ರೊನಿಕಲ್ಸ್ ಆಫ್ ಕೊಚಿನ್ ತಿಳಿಸುತ್ತದೆ.
       ಹೇಳಿಕೇಳಿ ಕ್ಯಾಲಿಕಟ್ ಕೇರಳದ ಪ್ರಮುಖ ವ್ಯಾಪಾರೀ ಕೇಂದ್ರ. ವ್ಯಾಪಾರಕ್ಕಾಗಿ ಏನಾದರೂ ಬಂದಿರಬಹುದೇ ಎಂದು ಯಹೂದಿಗಳ ಹಿನ್ನೆಲೆ ಹುಡುಕಿದರೆ ಎದುರಾಗುವುದು ಆಶ್ಚರ್ಯಗಳ ಸರಮಾಲೆ. ಕೇರಳದ ಹೆಚ್ಚುಕಮ್ಮಿ ಎಲ್ಲ ನಗರಗಳಲ್ಲೂ ಯಹೂದಿಗಳ ರಸ್ತೆ, ಸಿನಗಾಗ್(ಯಹೂದಿಗಳ ಪೂಜಾಸ್ಥಳ, ಮಲಯಾಳದಲ್ಲಿ ಜೂದಪಳ್ಳಿ), ಸ್ಮಶಾನಗಳು ಕಾಣಸಿಗುತ್ತವೆ. ಕೇರಳದ ಮೂಲೆಮೂಲೆಯಲ್ಲಿ ಅವರ ಇರುವಿಕೆಯ ಕುರುಹುಗಳಿದೆ. ಎರ್ನಾಕುಲಂನಲ್ಲಿ ಜ್ಯೂ ಸ್ಟ್ರೀಟ್, ಜ್ಯೂ ಮಾರ್ಕೆಟ್, ಕೊಡಂಗಾಲೂರಿನ ಜೂದಕಂಬಲಂ, ಕೊಚ್ಚಿ, ಪೊನ್ನಾನಿ ಎಲ್ಲೆಡೆಯೂ ಯಹೂದಿಗಳ ಗಾಢ ಹೆಜ್ಜೆಗುರುತು ಕಾಣಸಿಗುತ್ತದೆ. ಐನೂರರಿಂದ ಸಾವಿರ ವರ್ಷಗಳಷ್ಟು ಪುರಾತನವಾದ ಏಳು ಜೂದಪಳ್ಳಿಗಳೂ, ಆರು ನಗರಗಳಲ್ಲಿ ಜೂಸ್ಟ್ರೀಟ್‌ಗಳು, ಸ್ಮಶಾನಗಳು, ಜ್ಯೂಯಿಶ್ ಚಿಲ್ಡ್ರನ್ ಪ್ಲೇ ಗ್ರೌಂಡ್‌ಗಳು, ಹತ್ತುಹಲವು ಸ್ಮಾರಕಗಳು ಕೇರಳದಲ್ಲಿವೆ.
       ಕ್ರಿಶ್ಚಿಯಾನಿಟಿ, ಇಸ್ಲಾಂ, ಜುದಾಯಿಸಂ ಮೂರೂ ಸೆಮೆಟಿಕ್ ಮತಗಳೂ ಪಶ್ಚಿಮವನ್ನು ಮುಟ್ಟುವ ಬಹುಮುಂಚೆಯೇ ಭಾರತವನ್ನು ತಲುಪಿದ್ದವು. ಮಜವೆಂದರೆ ಈ ಮೂರೂ ಮತಗಳಿಗೆ ಭಾರತಕ್ಕೆ ಸ್ವಾಗತಗೋಪುರವಾಗಿದ್ದು ಕೇರಳ. ಕ್ರಿ.ಶ ೫೨ರಲ್ಲಿ ಸಂತ ಥಾಮಸ್ ಏಸು ಕ್ರಿಸ್ತನ ಕಾಲದಲ್ಲೇ ಕೇರಳಕ್ಕೆ ಬಂದು ಏಳು ಚರ್ಚುಗಳನ್ನು ಕಟ್ಟಿ ಮತಾಂತರವನ್ನೂ ಶುರುಮಾಡಿದ್ದ. ಮಹಮ್ಮದ್ ಪೈಗಂಬರ್ ಬದುಕಿದ್ದಾಗಲೇ ಇಸ್ಲಾಮ್ ಕೇರಳಕ್ಕೆ ಬಂದು ಒಂಭತ್ತು ಮಸೀದಿಗಳು ನಿರ್ಮಾಣವಾಗಿದ್ದವು. ಅಂತೇ, ಅತಿ ಹಳೆಯ ಏಕದೇವೋಪಾಸಕ ಮತ ಜುದಾಯಿಸಂ ಕೂಡ ವಿಶ್ವದ ಬಹುಭಾಗವನ್ನು ವ್ಯಾಪಿಸುವುದರೊಳಗೆ ಭಾರತಕ್ಕೆ ಕಾಲಿಟ್ಟಾಗಿತ್ತು. ಇರುವ ದಾಖಲೆಗಳನ್ನೇ ನಂಬುವುದಾದರೆ ಸೊಲೋಮನ್ ರಾಜನಿದ್ದ ಕ್ರಿ.ಶ ೧ನೇ ಶತಮಾನದಲ್ಲೇ ಕೇರಳದಲ್ಲಿ ಯಹೂದಿಗಳ ಕಾಲನಿಯೊಂದು ನಿರ್ಮಾಣಗೊಂಡಿತ್ತು. ಇನ್ನೂ ಮಜವೆಂದರೆ ಇವು ಮೂರೂ ಕೇರಳದಲ್ಲಿ ಮೊದಲು ಕಾಲಿಟ್ಟಿದ್ದು ಮಲಬಾರಿಗೆ. ಇನ್ನೂ specific ಆಗಿ ಹೇಳುವುದಾದರೆ ಕೊಡಂಗಾಲೂರಿಗೆ. ಎರಡು ಸಾವಿರ ವರ್ಷಗಳ ಹಿಂದೆಯೇ ರೋಮನ್ನರು ಕೇರಳ ಕರಾವಳಿಯ ಮುಜರಿಸ್ ಬಂದರುಗಳಿಂದ ಕಾಳುಮೆಣಸನ್ನು ಅವ್ಯಾಹತವಾಗಿ ಕೊಂಡೊಯ್ಯುತ್ತಿದ್ದರೆಂದು ಪಾಶ್ಚಾತ್ಯ ಭೂಗೋಳಶಾಸ್ತ್ರಜ್ಞರಾದ ಸ್ಟ್ರಾಬೋ ಮತ್ತು ಪ್ಲೈನಿ ತಿಳಿಸಿದ್ದಾರೆ. ಈ ಮುಜಿರಿಸ್ ಬಂದರೇ ಕೊಡಂಗಾಲೂರು. ರಾಮಾಯಣದ ಅರಣ್ಯಕಾಂಡದಲ್ಲಿ ಉಲ್ಲೇಖಿತಗೊಂಡ ಮರೀಚ ಪಟ್ಟಣವೂ ಇದೇ. ವಾಲ್ಮೀಕಿ ರಾಮಾಯಣದಲ್ಲಿ ಖರದೂಷಣರನ್ನು ಕೊಂದ ವಿಷಯವನ್ನು ರಾವಣನಿಗೆ ತಿಳಿಸಲು ಶೂರ್ಪಣಖಿ ಲಂಕೆಗೆ ಓಡುವ ಪ್ರಕರಣವಿದೆ. ಶೂರ್ಪಣಖಿಗಾದ ಅವಮಾನದ ಸೇಡು ತೀರಿಸಿಕೊಳ್ಳಲು ರಾವಣ ಕತ್ತೆಗಳಿಂದ ಎಳೆಯಲ್ಪಟ್ಟ ರಥವನ್ನೇರಿ ಮಾರೀಚನ ಆಶ್ರಮವನ್ನು ತಲಪುತ್ತಾನೆ. ದಾರಿ ಮಧ್ಯದಲ್ಲಿ ಬರುವುದು ಮರೀಚಪಟ್ಟಣದ ಸಮುದ್ರತೀರದ ಸೂರ್ಯಾಸ್ತ, ಮರೀಚ(ಕಾಳುಮೆಣಸಿನ) ತೋಟಗಳು, ಶಂಖ ಮತ್ತು ಮುತ್ತಿನ ರಾಶಿಗಳು. ಇವೆಲ್ಲ ಪಕ್ಕಾ ಪಶ್ಚಿಮ ಸಮುದ್ರ ತೀರದ ವರ್ಣನೆಗಳು. ರಾಮಾಯಣದಲ್ಲಿ ದಕ್ಷಿಣ ಭಾರತದ ಹೆಚ್ಚಿನ ಯಾವ ಪ್ರದೇಶಗಳ ವರ್ಣನೆಯಿಲ್ಲದಿದ್ದರೂ ಮರೀಚಪಟ್ಟಣ ಒಂದಕ್ಕಿಂತ ಹೆಚ್ಚು ಬಾರಿ ಉಲ್ಲೇಖಿತವಾಗಲು ಕಾರಣ ಈ ಕೊಡಂಗಾಲೂರಿನ ವಿಶ್ವಪ್ರಸಿದ್ಧಿಯೇ. ಭಾರತದ ಅತಿ ಹಳೆಯ ಚರ್ಚ್ ಇರುವುದು ಕೊಡಂಗಾಲೂರಿನ ಸಮೀಪದ ಪಲಯೂರಿನಲ್ಲಿ. ಭಾರತದ ಅತಿ ಹಳೆಯ, ವಿಶ್ವದ ಎರಡನೇ ಪುರಾತನ ಮಸೀದಿಯಿರುವುದು ಕೊಡಂಗಾಲೂರಿನಲ್ಲಿ. ಸಂತ ಥಾಮಸ್ ಬರುವುದಕ್ಕಿಂತ ನೂರಾರು ವರ್ಷ ಮುಂಚೆಯೇ ಯಹೂದಿಗಳ ಸಿನಗಾಗ್(ಮಲಯಾಳದಲ್ಲಿ ’ಜೂದ ಪಳ್ಳಿ’) ನಿರ್ಮಾಣಗೊಂಡಿದ್ದೂ ಕೊಡಂಗಾಲೂರಿನಲ್ಲೇ.

ಭಾರತದ ಮೊದಲ ಚರ್ಚ್, ಸಂತ ಥಾಮಸ್ ಚರ್ಚ್, ಪಲಯೂರು
ಭಾರತದ ಮೊದಲ ಮಸೀದಿ, ಕೊಡಂಗಾಲೂರು
ಕೊಚ್ಚಿಯ ಜ್ಯೂಸ್ಟ್ರೀಟ್

ಜ್ಯೂಸ್ಟ್ರೀಟಿನ ಹಳೆಯ ಯಹೂದಿಗಳ ಮನೆ
ಇತಿಹಾಸಪ್ರಸಿದ್ಧ ಕೊಚ್ಚಿನ್ ಪರದೇಸಿ ಜೂದಪಳ್ಳಿ
       
ಪರದೇಸಿ ಜೂದಪಳ್ಳಿ

ಕೊಚ್ಚಿಯಲ್ಲಿ ಪತ್ತೆಯಾದ ಹಿಬ್ರೂ ಶಿಲಾಶಾಸನಗಳು
ಕೊಚ್ಚಿನ್ ಜೂದಪಳ್ಳಿಯ ನಾನೂರನೇ ವರ್ಷಾಚರಣೆಯ ನೆನಪಿನಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಚೆಚೀಟಿ
ಮಟ್ಟಂಚೇರಿ ಜ್ಯೂಟೌನ್
       ಮಹೋದಯಪುರಂ, ಮುಜಿರಿಸ್, ಚಿಂಕಾಲಿ, ಕ್ರಾಂಗಾನೂರ್, ಬಾಲಕ್ರೀಡಪುರಮ್ ಎಂಬಿತ್ಯಾದಿ ಮೂವತ್ತಕ್ಕೂ ಹೆಚ್ಚು ಹೆಸರುಗಳಿಂದ ಇತಿಹಾಸದಲ್ಲಿ ಕರೆಯಲ್ಪಟ್ಟ ಕೊಡಂಗಾಲೂರು ರಾಮಾಯಣ, ಮಹಾಭಾರತ, ಸಂಗಂನ ಅಗನಾನೂರು, ಶಿಲಪ್ಪದಿಕಾರಂನಂಥ ಪೌರಾಣಿಕ ಕೃತಿಗಳಲ್ಲಿ ಬಾರಿ ಬಾರಿ ಹೆಸರಿಸಲ್ಪಟ್ಟಿದೆ. ಗ್ರೀಕರು, ರೋಮನ್ನರು, ಅರಬ್ಬರು ಬಂದಂತೆಯೇ ಬೇರೆ ಬೇರೆ ಕಾಲದಲ್ಲಿ ವ್ಯಾಪಾರಕ್ಕಾಗಿ ಇಲ್ಲಿ ಯಹೂದಿಗಳೂ ಬಂದರು. ಕ್ರಿ.ಪೂ ೯೩೧ರಿಂದ ೧೦೧೧ರವರೆಗೆ ಜೆರುಸಲೇಮನ್ನಾಳಿದ  ಸೋಲೋಮನ್ ಸಾಮ್ರಾಟನ ಕಾಲದಲ್ಲೇ ಇಲ್ಲಿನ ಬಂದರುಗಳಿಂದ ಈಗಿನ ಇಸ್ರೇಲಿನ ಪ್ರದೇಶಕ್ಕೆ ಸಾಂಬಾರು ಪದಾರ್ಥಗಳು, ಶ್ರೀಗಂಧ, ದಂತಗಳು ರಫ್ತಾಗುತ್ತಿದ್ದವು. ಆಗಿನ ಕಾಲದಲ್ಲೇ ಕೇರಳಕ್ಕೆ ಯಹೂದಿಗಳ ವಲಸೆ ಪ್ರಾರಂಭವಾಯಿತು. ಕ್ರಿ.ಶ ೭೦ರಲ್ಲಿ ಜೆರುಸಲೇಮಿನ ಪವಿತ್ರ ದೇವಾಲಯ ನಾಶಗೊಂಡ ಮೇಲೆ ಇನ್ನಷ್ಟು ಯಹೂದಿಗಳು ಕೇರಳದತ್ತ ಮುಖಮಾಡಿದರು. ಮತಪ್ರಚಾರಕ್ಕಾಗಿ ಮಲಬಾರಿಗೆ ಬಂದ ಸಂತ ಥಾಮಸ್ ಕೊಡಂಗಾಲೂರಿನಲ್ಲಿ ನಡೆಯುತ್ತಿದ್ದ ಕುಲೀನ ಮನೆತನದ ಮದುವೆಯೊಂದರಲ್ಲಿ ಪಾಲ್ಗೊಂಡನಂತೆ. ಆತ ಹಿಬ್ರೂವಿನಲ್ಲಿ ಮದುವೆಯ ಶುಭಾಶಯಗಳನ್ನು ತಿಳಿಸುವ ಹಾಡೊಂದನ್ನು ಹೇಳಿದ. ಒಬ್ಬಳು ಯಹೂದಿ ಹುಡುಗಿಯನ್ನು ಬಿಟ್ಟರೆ ಅಲ್ಲಿದ್ದವರ್ಯಾರಿಗೂ ಅವನ ಭಾಷೆ ಅರ್ಥವಾಗಲಿಲ್ಲ. ಮುಂದೆ ಥಾಮಸನಿಗೆ ದುಭಾಷಿಯಾಗಿ ಆ ಹುಡುಗಿಯೇ ಸಹಾಯ ಮಾಡಿದಳಂತೆ. ಈ ಐತಿಹ್ಯವನ್ನು ನೋಡಿದರೆ ಕ್ರಿ.ಪೂರ್ವಕ್ಕೂ ಸುಮಾರು ಮುಂಚೆಯೇ ಕೇರಳದಲ್ಲಿ ಯಹೂದಿಗಳು ನೆಲೆಸಿದ್ದ ದಾಖಲೆಗಳಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ.
        ಭಾರತದಲ್ಲಿ ನೆಲೆಸಿರುವ ಯಹೂದಿಗಳಲ್ಲಿ ಮೂರು ಮುಖ್ಯ ಪಂಗಡಗಳಿವೆ. ಕೇರಳ ಜ್ಯೂಗಳೆಂದು ಪ್ರಸಿದ್ಧವಾಗಿರುವ ಕೊಚ್ಚಿ ಜೂಗಳು. ಇವರು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದವರು. ಎರಡನೇಯದು ೨೧೦೦ ವರ್ಷಗಳ ಹಿಂದೆ ಆಗಮಿಸಿದ ’ಬೆನೆ ಇಸ್ರೇಲ್’ ಪಂಗಡ. ಭಾರತೀಯ ಯಹೂದಿಗಳಲ್ಲಿ ಅತಿ ದೊಡ್ಡ ಸಮುದಾಯವಿದು. ಕ್ರಿ.ಪೂ ೨ನೇ ಶತಮಾನಕ್ಕೂ ಹಿಂದೆ ಪಶ್ಚಿಮದ ಕೊಂಕಣ ಪಟ್ಟಿಗೆ ಇವರು ಆಗಮಿಸಿದರೆಂದು ಭಾವಿಸಲಾಗುತ್ತದೆ. ಸಮುದ್ರದಲ್ಲಿ ಬರುತ್ತಿರುವಾಗ ಹಡಗು ಒಡೆದು ನೀರುಪಾಲಾದವರಲ್ಲಿ ಏಳು ಪುರುಷರೂ, ಏಳು ಮಹಿಳೆಯರೂ ಹೇಗೋ ಬದುಕಿ ಉಳಿದರಂತೆ. ಅವರ ಸಹಯಾತ್ರಿಗಳು, ಸ್ವತ್ತುಗಳೊಡನೆ ಧರ್ಮಗ್ರಂಥಗಳೂ ನಾಶವಾಗಿದ್ದವು. ಶೇಮಾ ಪ್ರಾರ್ಥನೆಯನ್ನು ಮಾತ್ರ ನೆನಪಿಟ್ಟುಕೊಂಡ ಒಂದು ಕಾರಣದಿಂದ ತಮ್ಮ ನೆಲೆಯಿಂದ ಬಹುದೂರ ಬಂದಿದ್ದರೂ ಅವರು ಮೂಲವನ್ನು ಮರೆಯಲಿಲ್ಲವಂತೆ. ಹಾಗೆ ಉಳಿದುಕೊಂಡವರು ಕೊಂಕಣದಲ್ಲಿ ಎಣ್ಣೆ ತೆಗೆಯುವ ಕೆಲಸಕ್ಕೆ ಸೇರಿಕೊಂಡರು. ಯಹೂದಿಗಳ ಪವಿತ್ರ ದಿನ ಸಬ್ಬತ್ ಅಥವಾ ಶನಿವಾರದಂದು ರಜೆ ಹಾಕುತ್ತಿದ್ದರಿಂದ ಮಹಾರಾಷ್ಟ್ರದಲ್ಲಿ ಇವರಿಗೆ ಶನ್ವಾರ್ ತೇಲಿ ಎಂದೇ ಹೆಸರಾಗಿದೆ. ಈ ಸಮುದಾಯ ಸಾವಿರಾರು ವರ್ಷಗಳ ಕಾಲ ಹೊರಜಗತ್ತಿಗೆ ತೆರೆದುಕೊಳ್ಳದೇ ಮಹಾರಾಷ್ಟ್ರದ ಕೊಲಾಬಾ ಸುತ್ತಮುತ್ತ ಅಜ್ಞಾತವಾಗಿ ವಾಸಿಸುತ್ತಿತ್ತು. ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ ಡೇವಿಡ್ ರಹಾಬಿ ಎಂಬ ಮಲಯಾಳಿ ಯಹೂದಿ ವರ್ತಕ ಇಲ್ಲಿಗೆ ಬಂದಾಗ ಯಹೂದಿಗಳ ಜೊತೆಗಿನ ಇವರ ಸಾಮ್ಯವನ್ನು ಕಂಡು ಆಶ್ಚರ್ಯಗೊಂಡ. ಹಿಂದೂ ಹೆಸರುಗಳನ್ನಿಟ್ಟುಕೊಂಡು, ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರೂ ಶೇಮಾ ಪ್ರಾರ್ಥನೆಯಂಥ ಅಲ್ಪಸ್ವಲ್ಪ ಯಹೂದಿ ಪರಂಪರೆ ಹಾಗೇ ಉಳಿದುಕೊಂಡಿತ್ತು. ಸ್ವತಃ ಅವರಿಗೂ ತಾವು ಯಹೂದಿಗಳೆಂದು ಅರಿವಾದದ್ದು ಆವಾಗಲೇ.
        ಸ್ಕಂದ ಪುರಾಣದ ಉತ್ತರ ಸಹ್ಯಾದ್ರಿ ಖಂಡದಲ್ಲೊಂದು ಕಥೆಯಿದೆ. ಭೂಮಂಡಲವನ್ನು ೨೧ ಬಾರಿ ಪ್ರದಕ್ಷಿಣೆಗೈದ ಪರಶುರಾಮ ಕ್ಷತ್ರಿಯ ವಂಶವನ್ನು ನಿರ್ಮೂಲಗೊಳಿಸಿದ. ಆ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪರಶುರಾಮ ಮಹೇಂದ್ರಪರ್ವತದಲ್ಲಿ ಯಾಗವೊಂದಕ್ಕೆ ಸಿದ್ಧತೆ ನಡೆಸಿದ. ಇಡೀ ಕ್ಷತ್ರಿಯಕುಲದ ರುಂಡಚಂಡಾಡಿದ ಪರಶುರಾಮನ ಕೋಪವೆಂದ ಮೇಲೆ ಕೇಳಬೇಕೇ! ಹೆದರಿಕೆಯಿಂದ ಬ್ರಾಹ್ಮಣರ್ಯಾರೂ ಆ ಯಾಗದ ಅಧ್ವರ್ಯ ವಹಿಸಲು ಮುಂದಾಗಲಿಲ್ಲ. ಅದೇ ಸಮಯಕ್ಕೆ ಪಶ್ಚಿಮ ಸಮುದ್ರದಲ್ಲಿ ಬರುತ್ತಿದ್ದ ಹಡಗೊಂದು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಪರಶುರಾಮ ನೀರುಪಾಲಾದ ಹದಿನಾಲ್ಕು ಶವಗಳನ್ನು ಚಿತೆಯಲ್ಲಿಟ್ಟು ಪಾವನಗೊಳಿಸಿ ಜೀವ ತುಂಬಿ ಬ್ರಾಹ್ಮಣ್ಯವನ್ನು ನೀಡಿದನಂತೆ. ಅವರಿಗೆ ಹದಿನಾಲ್ಕು ಗೋತ್ರಪ್ರವರಗಳನ್ನು ನೀಡಿ ತನ್ನ ಕಾರ್ಯವನ್ನು ಸಾಂಗಗೊಳಿಸಿಕೊಂಡನೆನ್ನುತ್ತದೆ ಕಥೆ. ಚಿತೆಯಲ್ಲಿ ಪಾವನರಾದ್ದರಿಂದ ಅವರ ಹೆಸರು ಚಿತ್ಪಾವನರೆಂದಾಯ್ತೆಂದು ವಾದವಿದೆ. ಮಹಾರಾಷ್ಟ್ರವನ್ನಾಳಿದ ಪೇಶ್ವೆಗಳು, ಸ್ವಾತಂತ್ರ್ಯ ಹೋರಾಟಗಾರರಾದ ಮಹದೇವ ಗೋವಿಂದ ರಾನಡೆ, ಬಾಲಗಂಗಾಧರ ತಿಲಕ, ವಿ.ಡಿ.ಸಾವರ್ಕರ್, ಗೋಪಾಲ ಕೃಷ್ಣ ಗೋಖಲೆ, ಭಾರತರತ್ನ ಧಂಡೋ ಕೇಶವ ಕರ್ವೆ, ವಿನೋಬಾ ಭಾವೆ, ನಾಥೂರಾಮ್ ಗೋಡ್ಸೆ, ದಾದಾಸಾಹೇಬ್ ಫಾಲ್ಕೆರಂಥ ಖ್ಯಾತನಾಮರೆಲ್ಲ ಚಿತ್ಪಾವನ ಬ್ರಾಹ್ಮಣ ಸಮುದಾಯದವರೇ. ಈ ಕಥೆ ಸತ್ಯವೋ ಸುಳ್ಳೋ ಗೊತ್ತಿಲ್ಲ. ಚಿತ್ಪಾವನ ಶಬ್ದದ ಉಗಮ ಮತ್ತವರ ಮೂಲದ ಬಗ್ಗೆ ಮುಂದಿನ ಲೇಖನದಲ್ಲಿ ನೋಡೋಣ. ಆದರೆ ಚಿತ್ಪಾವನ ಬ್ರಾಹ್ಮಣರ ಚರ್ಯೆ ಇತರ ಬ್ರಾಹ್ಮಣರಿಗಿಂತ ಸಂಪೂರ್ಣ ವಿಭಿನ್ನ. ಬಿಳಿಬಣ್ಣವೂ ನಾಚುವಷ್ಟು ಬಿಳುಚಿಕೊಂಡಿರುವ ಚರ್ಮ, ನೀಲಿ ಅಥವಾ ಹಸಿರು ಕಣ್ಣು, ಚೂಪು ಮೂಗು, ಕಂದು ಛಾಯೆಯ ತಲೆಗೂದಲು ಚಿತ್ಪಾವನರಲ್ಲಿರುವಂತೆ ಬೇರೆ ಯಾವ ಬ್ರಾಹ್ಮಣ ಪಂಗಡದಲ್ಲಿಯೂ ಕಂಡುಬರುವುದಿಲ್ಲ.  ಇಂಥದ್ದೇ ಕಥೆ ಬೇನೆ ಇಸ್ರೇಲಿನಲ್ಲಿಯೂ ಇದೆ. ಜೆರುಸಲೇಮಿನಿಂದ ಬರುತ್ತಿದ್ದ ಯಹೂದಿಗಳ ಹಡಗು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಕೆಲವರು ಹೇಗೋ ಬದುಕಿ ಉಳಿದರೆ ಉಳಿದವರು ಮೃತಪಟ್ಟರು. ಪ್ರಾಯಶಃ ಬದುಕಿ ಉಳಿದವರಲ್ಲಿ ಕೆಲವರು ಸಮಾಜದಲ್ಲಿ ಕುಲೀನ ಸ್ಥಾನಮಾನ ಪಡೆದಿರಬೇಕು.
ಈ ಚಿತ್ಪಾವನ ಯಾರೆಂದು ಗೊತ್ತಿರಬೇಕು.!
         ಮೂರನೇಯದು ಸುಮಾರು ೨೫೦ ವರ್ಷಗಳ ಹಿಂದೆ ಬಂದ ’ಬಗ್ದಾದಿ ಜ್ಯೂ’ಗಳದ್ದು. ೧೭೩೦ರ ಸುಮಾರಿಗೆ ಇರಾಕಿನಿಂದ ಭಾರತಕ್ಕೆ ಬಂದ ಜೋಸೆಫ್ ಸೆಮಾ ಮತ್ತು ಶಾಲೋಮ್ ಕೊಹೆನ್ ಎಂಬ ವ್ಯಾಪಾರಿಗಳ ಸಹಾಯದಿಂದ ಇಲ್ಲಿ ನೆಲೆಸಿದ ಇವರ ಮುಖ್ಯಕೇಂದ್ರ ಕಲ್ಕತ್ತ. ಬ್ರಿಟಿಷರ ಕಾಲದಲ್ಲಿ ಇವರಿಂದ ನಡೆಸಲ್ಪಟ್ಟ ಶಾಲೆಗಳು, ಆಸ್ಪತ್ರೆ, ಸಂಘಸಂಸ್ಥೆಗಳು ಇಂದಿಗೂ ಹೆಸರುವಾಸಿಯಾಗಿವೆ. ಹಿಬ್ರೂ ಭಾಷೆಗೆ ಭಾಷಾಂತರಕ್ಕಾಗಿ ಇವರಿಂದ ಶುರುವಾದ ಒಂದು ಪ್ರಿಂಟಿಂಗ್ ಪ್ರೆಸ್ ಇವತ್ತಿಗೂ ಕಲ್ಕತ್ತದಲ್ಲಿದೆ. ಸ್ವಾತಂತ್ರ್ಯಪೂರ್ವ ಕನಿಷ್ಟ ನಾಲ್ಕೈದು ಪ್ರಿಂಟಿಂಗ್ ಪ್ರೆಸ್ಸುಗಳು ಕಲ್ಕತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಮೇವಾಸ್ಸರ್, ಪೇರಾ, ಮಗ್ಗಿಡ್ ಮಯ್‌ಶಾರಿಮ್, ಶೋಶಾನ್ನಾಹ್ ಎಂಬ ನಾಲ್ಕು ಹಿಬ್ರೂ ವಾರಪತ್ರಿಕೆಗಳೂ ಕಲ್ಕತ್ತದಿಂದ ಹೊರಡುತ್ತಿದ್ದವು. ಭಾರತದ ಮೊದಲ ಮಿಸ್ ಇಂಡಿಯಾ, ಹಿಂದಿ ಚಿತ್ರರಂಗದ ಮೊದಲ ಮಹಿಳಾ ನಿರ್ಮಾಪಕಿ ಎಂಬ ಖ್ಯಾತಿಯ ಈಸ್ತರ್ ವಿಕ್ಟೋರಿಯಾ ಅಬ್ರಹಾಮ್ ಇದೇ ಕಲ್ಕತ್ತದ ಬಾಗ್ದಾದಿ ಯಹೂದಿ ಸಮುದಾಯಕ್ಕೆ ಸೇರಿದವಳು. ತೆರೆಯ ಮೇಲೆ ಪ್ರಮಿಳಾ ಎಂಬ ಹೆಸರಿನಿಂದ ಪ್ರಸಿದ್ಧಗೊಂಡ ಇವಳ ಮುಖಪರಿಚಯ ಹಳೆಯ ಬ್ಲ್ಯಾಕ್ ಎಂಡ್ ವೈಟ್ ಚಿತ್ರಪ್ರಿಯರಿಗೆ ಇರಲೇ ಬೇಕು. ಈಕೆಯ ಮಗಳು ನಕಿ ಜಹಾನ್ ಕೂಡ ೧೯೬೭ರಲ್ಲಿ ಮಿಸ್ ಇಂಡಿಯಾ ಆಗಿ ಆಯ್ಕೆಗೊಂಡಿದ್ದಳು. ಮಿಸ್ ಇಂಡಿಯಾ ಪಟ್ಟ ಪಡೆದ ಏಕೈಕ ತಾಯಿ-ಮಗಳ ಜೋಡಿ ಇದು. ಹಿಂದಿ ಚಿತ್ರನಟ, ಜೋಧಾ ಅಕ್ಬರದಂಥ ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ ಹೈದರ್ ಅಲಿ ಇವಳ ಮಗ. ಪಾಕಿಸ್ತಾನದ ಮೇಲೆ ದಾಳಿ ಮಾಡಿ ಬಾಂಗ್ಲಾ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೇನಾ ಪ್ರಮುಖ ಲೆಫ್ಟಿನೆಂಟ್ ಜನರಲ್ ಜಕ್ಕಾ ಜಾಕೋಬ್(ಇವರ ಬಗ್ಗೆ ಸಂತೋಷ ತಮ್ಮಯ್ಯ ಬರೆದ ಲೇಖನವೊಂದು ಇಲ್ಲಿದೆ https://santoshthammaiah.wordpress.com/2016/04/01/%E0%B2%87%E0%B2%B8%E0%B3%8D%E0%B2%B0%E0%B3%87%E0%B2%B2%E0%B3%8D-%E0%B2%86%E0%B2%B0%E0%B3%8D%E0%B2%AE%E0%B2%BF-%E0%B2%95%E0%B2%B0%E0%B3%86%E0%B2%A6%E0%B2%B0%E0%B3%82-%E0%B2%A8%E0%B2%A8%E0%B3%8D/), ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸುಲೋಚನಾ ಉರುಫ್ ರೂಬಿ ಮೇಯರ್ಸ್ ಸೇರಿ ಹಲವು ಖ್ಯಾತನಾಮರು ಇದೇ ಬಗ್ದಾದಿ ಜೂಗಳು. ಈವರೆಗೆ ಮಿಸ್ ಇಂಡಿಯಾ ಪಟ್ಟವನ್ನು ಮುಡಿಗೇರಿಸಿಕೊಂಡವರಲ್ಲಿ ನಾಲ್ವರು ಈ ಸಮುದಾಯದವರೇ.
ಈಸ್ತರ್ ವಿಕ್ಟೋರಿಯಾ ಅಬ್ರಹಾಮ್

         ಸುಮಾರು ಮೂವತ್ತು ನಲವತ್ತು ವರ್ಷಗಳೀಚೆಗೆ ಇನ್ನೆರಡು ಪಂಗಡಗಳು ತಮ್ಮ ಯಹೂದಿಮೂಲವನ್ನು ಗುರುತಿಸಿಕೊಂಡಿವೆ. ಅವುಗಳಲ್ಲಿ ಒಂದು ’ಬೆನೆ ಮೆನಾಶೆ’ ಅಥವಾ ಕಲ್ಕತ್ತಾ ಜೂಗಳು. ಕಲ್ಕತ್ತ ಹಾಗೂ ಪೂರ್ವಭಾರತದಲ್ಲಿ ಕಂಡುಬರುವ ಇರುವ ಇನ್ನೊಂದು ಯಹೂದಿಗಳ ಪಂಗಡವಿದು. ಮತ್ತೊಂದು ಆಂಧ್ರದಲ್ಲಿ ’ಬೆನೆ ಎಫ್ರೆಮ್’ ಅಥವಾ ತೆಲುಗು ಜೂಗಳು. ಹಿಟ್ಲರನ ಕಾಲದಲ್ಲಿ ಜರ್ಮನಿಯಿಂದ ಓಡಿಬಂದ ಕೆಲ ಯಹೂದಿಗಳೂ ಭಾರತದಲ್ಲಿದ್ದಾರೆ. ಆದರೆ ಹೆಮ್ಮೆಯ ವಿಷಯವೆಂದರೆ ಹಾಗೆ ಬಂದವರು ತಮ್ಮ ಮೂಲ ಗುರುತುಗಳನ್ನಿಟ್ಟುಕೊಂಡೇ ನಮ್ಮಲ್ಲಿ ಒಂದಾಗಿ ಹೋದರು. ಯಹೂದಿಗಳು ನೆಲೆಸಿರುವ ೧೪೮ ರಾಷ್ಟ್ರಗಳಲ್ಲಿ ಅವರ ಮೇಲೆ, ಅವರ ನಂಬಿಕೆಯ ಮೇಲೆ, ಅವರ ಶ್ರದ್ಧಾಕೇಂದ್ರಗಳ ಮೇಲೆ ದಾಳಿಯಾಗದ ಏಕೈಕ ದೇಶ ಭಾರತ ಮತ್ತು ಭಾರತವೊಂದೇ. ಅದಕ್ಕೂ ಮೀರಿದ ಪರಿಭಾಷೆ ಇಲ್ಲಿನ ಸೆಕ್ಯುಲರಿಸಮ್ಮಿಗೆ ಸಿಗುವುದು ಊಹೂಂ ಸಾಧ್ಯವೇ ಇಲ್ಲ.
        ಇಲ್ಲಿ ಬಂದ ಯಹೂದಿಗಳೆಲ್ಲ ಹಾಗೆ ನೋಡಿದರೆ ಒಟ್ಟಾಗಿ ಆಗಮಿಸಿದವರೇನು ಅಲ್ಲ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಕಾರಣಗಳಿಂದ ಇಲ್ಲಿ ಬಂದು ನೆಲೆಸಿದವರು. ಕೇರಳದಲ್ಲೂ ಕೂಡ ಸೊಲೋಮನ್ ರಾಜನ ಕಾಲದಲ್ಲಿ ಬಂದವರು ’ಮೆಯೂಹಾಸ್ಸಿಮ್’ ಅಥವಾ ’ಮಲಬಾರಿ ಜೂ’ಗಳೆಂದು ಕರೆಯಲ್ಪಡುತ್ತಾರೆ. ಭಾರತಕ್ಕೆ ಬಂದ ಅತಿ ಹಳೆಯ ಯಹೂದಿ ಪಂಗಡವಿದು. ಕೇರಳದ ಯಹೂದಿಗಳಲ್ಲಿ ಸುಮಾರು ೮೦% ಈ ಮಲಬಾರಿ ಜ್ಯೂಗಳೇ. ಯುರೋಪ್, ಈಜಿಪ್ಟ್, ಸಿರಿಯಾದ ಸುತ್ತಲಿಂದ ವಲಸೆ ಬಂದ ಎರಡನೇ ಪಂಗಡಕ್ಕೆ ’ಪರದೇಸಿ ಜ್ಯೂ’ಗಳೆಂದು ಹೆಸರು. ’ಮೇಶುಹರಾರಿಮ್’ ಎಂಬ ಇನ್ನೊಂದು ಅತಿಸಣ್ಣ ಗುಂಪನ್ನು ಮೊದಲೆರಡು ಪಂಗಡಗಳು ಕರೆತಂದ ಗುಲಾಮರೆಂದು ಭಾವಿಸಲಾಗುತ್ತದೆ. ಇವರ ಚರ್ಮದ ಬಣ್ಣದ ಮೇಲೆ ಪರದೇಸಿಗಳನ್ನು ಬಿಳು ಜ್ಯೂಗಳೆಂದೂ, ಮಲಬಾರಿಗಳನ್ನು ಕರಿ ಜ್ಯೂಗಳೆಂದೂ, ಮೇಶುಹರಾರಿಮ್ಮರನ್ನು ಕಂದು ಜ್ಯೂಗಳೆಂದೂ ಕರೆಯಲಾಗುತ್ತದೆ. ಜಾತಿ ಆಧಾರದಲ್ಲಿ, ಚರ್ಮದ ಬಣ್ಣದ ಆಧಾರದಲ್ಲಿ ನಮ್ಮ ಜನರನ್ನು ಒಡೆದಾಳುವುದು ಬಹುಸುಲಭ. ತಮ್ಮ ಚರ್ಮದ ಬಣ್ಣ ಮತ್ತು ಐರೋಪ್ಯ ಮೂಲದ ಕಾರಣದಿಂದಲೇ ಪರದೇಸಿ ಜ್ಯೂಗಳು ನಂತರ ಬಂದವರಾದರೂ ಮಲಬಾರಿಗಳನ್ನು ಬದಿಗೆ ಸರಿಸಿ ಬ್ರಿಟಿಷ್ ಆಳ್ವಿಕೆಯಲ್ಲಿ ಅಚ್ಚರಿಪಡುವಷ್ಟು ಪ್ರವರ್ಧಮಾನಕ್ಕೆ ಬಂದರು. ಅದೇ ಕಾರಣಕ್ಕಿರಬೇಕು. ಪರದೇಸಿಗಳಿಗೆ ಸಿಕ್ಕ ಅಗತ್ಯಕ್ಕಿಂತ ಜಾಸ್ತಿ ಮನ್ನಣೆಯಿಂದ ಮಲಬಾರಿ ಜ್ಯೂಗಳು ಇಂದಿಗೂ ಅಜ್ಞಾತರಾಗಿಯೇ ಉಳಿದುಹೋಗಿದ್ದಾರೆ. ಭಾರತದಲ್ಲಿ ಪಾರ್ಸಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ನೈಜ ಅಲ್ಪಸಂಖ್ಯಾತ ಜನಾಂಗವಿದು. ಒಂದು ಕಾಲದಲ್ಲಿ ಕೇರಳವೊಂದರಲ್ಲೇ ಸಾವಿರ ಸಾವಿರ ಸಂಖ್ಯೆಯಲ್ಲಿದ್ದವರು ಇಂದು ಬೆರಳೆಣಿಕೆಯಷ್ಟು ಉಳಿದುಕೊಂಡಿದ್ದಾರೆ.
       ಎಲ್ಲ ಯಹೂದಿಗಳೂ ಜೆರುಸಲೇಮನ್ನು ಪವಿತ್ರ ಭೂಮಿಯೆಂದು ಭಾವಿಸುತ್ತಾರೆ. ಇಸ್ರೇಲಿನ ಹುಟ್ಟಿಗೂ ಅದೇ ಕಾರಣ. ಕೊಚ್ಚಿ ಅವರ ಪಾಲಿಗೆ ಪುಟ್ಟ ಜೆರುಸಲೇಮ್ ಆಗಿತ್ತು. ಹಾಗಿದ್ದರೂ ಇನ್ನೊಂದು ದೊಡ್ಡ ಜೆರುಸಲೇಮ್ ಅವರ ಬರುವಿಕೆಗೆ ಕಾಯುತ್ತಿತ್ತು. ಅದೂ ಅಲ್ಲದೇ ಮಲಬಾರಿ ಹಾಗೂ ಪರದೇಸಿ ಜ್ಯೂಗಳ ಮಧ್ಯದ ಅಸಮಾಧಾನ ತುಂಬ ಕಾಲದ ಹಿಂದಿನದ್ದು. ಕೇರಳದಂಥ ಸುಭಿಕ್ಷ ನಾಡಿಗೆ ಬ್ರಿಟಿಷರು ಬಂದನಂತರವಂತೂ ಸಾಮಾಜಿಕ, ಆರ್ಥಿಕ ಬದಲಾವಣೆಗಳು ಬಹಳ ವೇಗವಾಗಿ ಘಟಿಸಿದವು. ಇಂಗ್ಲೀಷ್ ಶಿಕ್ಷಣ ಎರಡೂ ಸಮುದಾಯಗಳ ಮಧ್ಯದ ಅಂತರವನ್ನು ಬಹಳಷ್ಟು ಕಡಿಮೆ ಮಾಡಿದ್ದು ಪರದೇಸಿ ಜ್ಯೂಗಳಿಗೆ ಹಿಡಿಸದಿದ್ದುದು ಮೊದಲ ಕಾರಣವಾದರೆ. ಡಚ್ಚರು ಬ್ರಿಟಿಷರ ಕೈಯಲ್ಲಿ ಸೋತ ನಂತರ ಡಚ್ಚರ ಜೊತೆ ಆಪ್ತಸಂಬಂಧ ಹೊಂದಿದ್ದ  ಪರದೇಸಿಗಳಿಗೆ ಸಮಸ್ಯೆ ತಂದೊಡ್ಡಿದ್ದು ಎರಡನೇ ಕಾರಣ. ಅದೂ ಅಲ್ಲದೇ ಹತ್ತೊಂಬತ್ತನೇ ಶತಮಾನದ ದ್ವಿತೀಯಾರ್ಧದ ನಂತರ ಕೊಚ್ಚಿಯಲ್ಲಿ ಕೇಂದ್ರಿತವಾಗಿದ್ದ ವ್ಯಾಪಾರದ ಪವರ್ ಸೆಂಟರ್ ಕಲ್ಕತ್ತ, ಬಾಂಬೆ, ಮದ್ರಾಸುಗಳಿಗೂ ವಿಕೇಂದ್ರೀಕರಣಗೊಂಡಿದ್ದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಗುಜರಾತಿಗಳಿಗಿಂತ ಒಂದು ಕೈ ಜೋರಾಗಿದ್ದ ಯಹೂದಿಗಳು ಅಲ್ಲೆಲ್ಲ ಸ್ಥಳಾಂತರಗೊಂಡರು. ಇದು ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕಿತು. ತಮ್ಮ ನೆಲೆಯನ್ನು ಬಿಟ್ಟು ಅಪರಿಚಿತ ಊರಿಗೆ ವ್ಯಾಪಾರಕ್ಕೆ ಹೋದವರು ವ್ಯಾಪಾರದಲ್ಲಿ ಅಲ್ಲಿನ ಮೂಲನಿವಾಸಿಗಳ ಪ್ರತಿರೋಧ ಎದುರಿಸಬೇಕಾಯ್ತು. ಡಚ್ಚರ ಪತನಾನಂತರ ಬ್ರಿಟಿಷರ ಸಹಾಯವೂ ಅವರಿಗೆ ಸಿಗಲಿಲ್ಲ. ಫ್ಯೂಡಲಿಸ್ಟಿಕ್ ವ್ಯವಸ್ಥೆ ಬಿದ್ದು ಹೋದ ನಂತರ ಆರ್ಥಿಕ ಅಡಚಣೆಗಳೂ ಜೋರಾದವು. ಕೇರಳದಲ್ಲಿ ಎದುರಾದ ಸಮಸ್ಯೆ ಇನ್ನೊಂದು ತೆರನದ್ದು. ಕೊಚ್ಚಿಯ ರಾಜಾಶ್ರಯದಲ್ಲಿ ಕೊಚಿನ್ ಎಲೆಕ್ಟ್ರಿಕ್ ಕಂಪನಿಯನ್ನು ಶುರುಮಾಡಿದ ಸ್ಯಾಮ್ಯುಯೆಲ್ ಕೋಡರ್ ಒಬ್ಬ ಯಹೂದಿ. ಮಟ್ಟಂಚೇರಿ ಹಾಗೂ ಕೊಚ್ಚಿ ನಗರಗಳಿಗೆ ಕರೆಂಟ್ ಉತ್ಪಾದಿಸುವ ವ್ಯವಸ್ಥೆ ಹೊಂದಿದ್ದ ಇದು ಮಲಬಾರಿನಲ್ಲಿ ಯಹೂದಿಗಳಿಗೆ ಉದ್ಯೋಗ ಜೊತೆಗೆ ಪ್ರತಿಷ್ಟೆಯನ್ನೂ ಒದಗಿಸಿಕೊಟ್ಟಿತ್ತು. ಇದಕ್ಕೆ ಪೆಟ್ಟು ಬಿದ್ದಿದ್ದು ಭಾರತ ಸರ್ಕಾರದ ಉದ್ಯಮಗಳ ರಾಷ್ಟ್ರೀಕರಣ ನೀತಿ. ಯಹೂದಿಗಳ ಕೈಯಲ್ಲೇ ಇದ್ದ ಕೊಚ್ಚಿನ್ ಬಂದರಿನ ಫೆರ್ರಿ ಏಕಸ್ವಾಮ್ಯವೂ ಕೈತಪ್ಪಿತು. ಕೇರಳದ ಭೂಸುಧಾರಣಾ ಕಾಯ್ದೆ ಯಹೂದಿಗಳ ಕೈಯಲ್ಲಿದ್ದ ಭೂಮಿಯನ್ನೂ ಕಿತ್ತುಕೊಂಡಿತು. ಕಡಿಮೆಯಾಗುತ್ತಿದ್ದ ಜನಸಂಖ್ಯೆಯಿಂದ ಸೃಷ್ಟಿಯಾದ ವಧುವರರ ಅಭಾವ, ತೆಕ್ಕುಂಬಾಗಂ ಜೂದಪಳ್ಳಿಯ ಶಾಪದ ಅಜ್ಜಿಕಥೆಗಳೆಲ್ಲ ಸೇರಿಕೊಂಡು ಕೇರಳದ ಯಹೂದಿಗಳಿಗೆ ಇಲ್ಲಿಯೇ ನೆಲೆಸುವ ಕುರಿತು ಪುನರಾಲೋಚನೆ ನಡೆಸುವಂತೆ ಮಾಡಿದವು. ಹಿಟ್ಲರಿನ ಹೊಲೋಕಾಸ್ಟಿನ ನಂತರ ವಿಶ್ವಾದ್ಯಂತ ಯಹೂದಿಗಳ ಪರವಾಗಿ ಎದ್ದ ಅನುಕಂಪದ ಅಲೆ, ಜೆರಸಲೇಮಿನತ್ತ ಯಹೂದಿಗಳಿಗಿದ್ದ ಧಾರ್ಮಿಕ ಬಾಂಧವ್ಯ, ಇಂಗ್ಲೆಂಡಿನ ಸಹಾಯ, ಪ್ರಪಂಚದ ಅತಿ ಬುದ್ಧಿವಂತ ಪಂಗಡವೆನಿಸಿಕೊಂಡ ಯಹೂದಿಗಳ ಅದಮ್ಯ ಇಚ್ಛಾಶಕ್ತಿ, ಅಮೇರಿಕದ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅವರಿಗಿದ್ದ ಹಿಡಿತ ಇವೆಲ್ಲವೂ ಸೇರಿ ಇಸ್ರೇಲ್ ಎಂಬ ಹೊಸ ದೇಶದ ಉದಯಕ್ಕೆ ನಾಂದಿ ಹಾಡಿದವು. ಯಾವತ್ತು ಇಸ್ರೇಲ್ ಎಂಬ ಯಹೂದಿಗಳ ಸ್ವಂತ ದೇಶವೊಂದು ಜನ್ಮತಾಳಿತೋ, ಅಲ್ಲಿನ ಸರ್ಕಾರ ಪ್ರಪಂಚದ ಮೂಲೆಮೂಲೆಗಳಿಂದ ಯಹೂದಿಗಳನ್ನು ಕೈಬೀಸಿ ಕರೆಯಲಾರಂಭಿಸಿತು. ಕೈಬೀಸಿ ಕರೆಯುವುದೇನು, ಯಹೂದಿಯೊಬ್ಬ ಜಗತ್ತಿನ ಯಾವ ಭಾಗದಲ್ಲಿದ್ದರೂ ಹೆಕ್ಕಿಹೆಕ್ಕಿ ತನ್ನತ್ತ ಸೆಳೆದುಕೊಳ್ಳಲು ಉತ್ಸುಕವಾಗಿತ್ತು. ವಿಶ್ವಾದ್ಯಂತ ಯಹೂದಿಗಳೆಲ್ಲ ಇಸ್ರೇಲಿನತ್ತ ಮುಖ ಮಾಡಿದರು. ಮೂಲದೆಡೆಗಿನ ಅವರ ವಲಸೆ ’ಆಲಿಯಾಹ್’ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಶುರುವಾಯ್ತು. ಕೇರಳದ ಯಹೂದಿಗಳೂ ಇಸ್ರೇಲಿನ ಸೆಳೆತದಿಂದ ಹೊರತಾಗಲಿಲ್ಲ. ಡಾ. ಇಮ್ಯಾನುವೆಲ್ ಓಲ್ಸ್‌ವ್ಯಾಂಗರ್ ಎಂಬ ಇಸ್ರೇಲಿ ರಾಜತಾಂತ್ರಿಕ ಕೇರಳದ ವಿವಿಧ ಭಾಗಗಳಿಗೆ ಭೇಟಿ ನೀಡಿ ’ಝಿಯೋನಿಸಂ’ನ(ಯಹೂದಿಗಳ ಪ್ರತ್ಯೇಕ ದೇಶ, ರಕ್ಷಣೆ ಹಾಗೂ ಪುನರ್ಮಿಲನದ ಚಳುವಳಿ) ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡ.   ಕೇರಳದ ಜ್ಯೂಗಳ ಮುಖಂಡ, ಯಹೂದಿ ಗಾಂಧಿಯೆಂದು ಪ್ರಖ್ಯಾತರಾಗಿದ್ದ ಎ.ಬಿ.ಸಲೆಂ ಹಾಗೂ ಇಸ್ರೇಲಿ ಪ್ರಧಾನಿ ಬೆನ್ ಗುರಿಯನ್‌ರ ನಡುವೆ ನಡೆದ ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ಏಳು ಸಾವಿರ ಜನ ಇಸ್ರೇಲಿಗೆ ಹೊರಟು ನಿಂತರು (ಕೊಚ್ಚಿಯ ರಸ್ತೆಯೊಂದಕ್ಕೆ ಎ.ಬಿ.ಸಲೇಂರ ಹೆಸರಿಡಲಾಗಿದೆ. ದುರಂತವೆಂದರೆ ಅದು ಸ್ಥಳೀಯರ ಬಾಯಲ್ಲಿ ಇವತ್ತು ಆಗಿರುವುದ್ ಅಬು ಸಲೇಂ ರೋಡ್.). ಅದಾದ ನಂತರ ೫೦ರ ದಶಕದಿಂದ ೭೦ರ ದಶಕದವರೆಗೆ ನಡೆದ ’ಆಲಿಯಾಹ್’ದ ಪರಿಣಾಮವಾಗಿ ಕೇರಳದ ೯೦%ದಷ್ಟು ಯಹೂದಿಗಳು ಇಸ್ರೇಲಿನತ್ತ ಮುಖಮಾಡಿದರು. ಭಾರತದ ಬೇರೆ ಬೇರೆ ಕಡೆಗಳಲ್ಲಿರುವವರೂ ಇದರಿಂದ ಹೊರತಾಗಲಿಲ್ಲ. ಒಂದು ಕಾಲದಲ್ಲಿ ಲಕ್ಷದಷ್ಟಿದ್ದ ಯಹೂದಿಗಳ ಸಂಖ್ಯೆ ಇಂದು ಬರಿ ಮೂರು ಸಾವಿರಕ್ಕೆ ಕುಸಿದಿದೆ. ಕೇರಳದ ಜ್ಯೂಗಳ ಒಂದು ಕಾಲದ ಪ್ರಧಾನಕೇಂದ್ರ ಕೊಚ್ಚಿನಿನ ಮಟ್ಟಂಚೇರಿಯಲ್ಲಿ ಇಂದು ಉಳಿದುಕೊಂಡ ಯಹೂದಿಗಳ ಸಂಖ್ಯೆ ಕೇವಲ ಇಪ್ಪತ್ತೇಳು. ಜನಸಂಖ್ಯೆಯಲ್ಲಿ ಭಾರತದಲ್ಲಿ ಪಾರ್ಸಿಗಳಿಗಿಂತ ಕೆಳಗಿರುವವರಿವರು. ಏಳೆಂಟು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವವರೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿ ಆರಾಮವಾಗಿರುವಾಗ ಮೂರುಸಾವಿರ ವೋಟುಗಳಿರುವ ಯಹೂದಿಗಳತ್ತ ನಮ್ಮ ಸರ್ಕಾರದ ಗಮನ ಹರಿಯಬಹುದೆಂದುಕೊಳ್ಳುವುದು ಭ್ರಮೆಯೇ ಸರಿ. ಅದೊಂದು ಪಂಗಡ ಭಾರತದಿಂದ ಕಣ್ಮರೆಯಾಗಿ ಹೋಗುವುದರೊಳಗೆ ಅವರ ಅವಶೇಷಗಳನ್ನು, ಸ್ಮಾರಕಗಳನ್ನು, ನೆನಪುಗಳನ್ನು ರಕ್ಷಿಸಿಡುವುದು ಮಾತ್ರ ಈಗ ತುರ್ತಾಗಿ ಆಗಬೇಕಿರುವ ಕೆಲಸ.

ಎ.ಬಿ.ಸಲೇಂ ರಸ್ತೆ, ಕೊಚ್ಚಿ

ಕೊನೆ ಹನಿ: ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಆವರಣ ಹತ್ತಿರ ಒಂದು ಸಣ್ಣ ಪಾಳು ಬಿದ್ಧ ಕಂಪೌಂಡಿನಲ್ಲಿ ಯಹೂದಿ ರುದ್ರಭೂಮಿಯಿದೆ. ಅಲ್ಲಿ ಭಗ್ನಾವಶೇಷಗಳಲ್ಲುಳಿದುಕೊಂಡ ೧೮೭೨ರಿಂದ ೧೯೫೭ರವರೆಗಿನ ಕನಿಷ್ಟ ೨೦ ಯಹೂದಿಗಳ ಸಮಾಧಿಗಳಿವೆ. ಹೆಚ್ಚಿನವೆಲ್ಲ ಕಾಲನ ಹೊಡೆತಕ್ಕೆ ಸಿಕ್ಕು ನಾಶವಾಗಿದ್ದರೂ ಮೂರ್ನಾಲ್ಕು ಇಂದಿಗೂ ಸುಸ್ಥಿತಿಯಲ್ಲಿವೆ. ಸುಬೇದಾರ್ ಮೇಜರ್ ಹುಸ್ಕೇಲ್ಜಿ ಬಾಪೂಜಿ ಬಹಾದೂರ್, ಶಾಲೋಮ್ ಎಲಿಜಾ ವಾಲ್ವಟ್ಕರ್ ಇತ್ಯಾದಿ ಹೆಸರುಗಳು, ಹಿಬ್ರೂವಿನಲ್ಲಿ ಕೆತ್ತಿದ ಸಂದೇಶಗಳನ್ನು ಅವುಗಳಲ್ಲಿ ಕಾಣಬಹುದು. ಒಂದೆರಡು ಉದಾಹರಣೆಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಬೇರೆಲ್ಲೂ ಯಹೂದಿಗಳ ಕುರುಹು ಕಾಣಸಿಗುವುದು ಕಡಿಮೆ. ಧಾರವಾಡದಲ್ಲಿ ಒಂದು ಕಾಲಕ್ಕೆ ಯಹೂದಿಗಳು ತುಂಬ ಸಂಖ್ಯೆಯಲ್ಲಿದ್ದಿರಬಹುದೇ? ಯಾರಾದರೂ ಆಸಕ್ತರು ಹುಡುಕಿದರೆ ಇನ್ನಷ್ಟು ಮಾಹಿತಿ ಸಿಗಬಹುದೇನೋ!