Pages

Monday, May 25, 2015

ನಮ್ಮ ದೇವಾಲಯಗಳು: ಮತ್ಸ್ಯ, ಕೂರ್ಮ ವರಾಹಶ್ಚ

       ವೈದಿಕ ವಾಙ್ಮಯಗಳನ್ನಾಗಲೀ, ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನಾಗಲೀ ಸೂಕ್ಷ್ಮವಾಗಿ ಗಮನಿಸಿ. ಅವುಗಳಲ್ಲಿ ಅಲ್ಲಿಲ್ಲಿ ಪ್ರಾಣಿಗಳ ಹೆಸರುಗಳು ಬಹಳ ಮುಕ್ತವಾಗಿ ಬಳಸಲ್ಪಟ್ಟಿವೆ. ಮನುಷ್ಯರನ್ನು ಪ್ರಾಣಿಗಳ ಹೆಸರು ಬಳಸಿ ಕರೆದಿದ್ದೂ ಇದೆ. ಸಾಹಿತ್ಯಕ್ಕೆ ಪ್ರಾಣಿಗಳ ಹೆಸರಿಡಲಾಗಿದೆ, ದೇವರನ್ನು ಪ್ರಾಣಿರೂಪದಲ್ಲಿ ಪೂಜಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅದು ವಿಡಂಬನೆಯೆಂದು ಕರೆಸಿಕೊಂಡವರಾಗಲೀ ಓದುಗರಾಗಲೀ ಭಾವಿಸಿಕೊಳ್ಳುತ್ತಿರಲಿಲ್ಲ. ವೈದಿಕ ಸಾಹಿತ್ಯದಲ್ಲಿ ಇಂಥ ಹತ್ತುಹಲ ಉದಾಹರಣೆಗಳಿವೆ. ಋಗ್ವೇದದಲ್ಲಿ 24 ಶಾಖೆಗಳೂ, ಯಜುರ್ವೇದಲ್ಲಿ 101 ಶಾಖೆಗಳೂ, ಸಾಮವೇದಲ್ಲಿ 1000 ಶಾಖೆಗಳೂ, ಅಥರ್ವವೇದಲ್ಲಿ 12 ಶಾಖೆಗಳೂ ಇದ್ದವಂತೆ. ಹೀಗೆ ಒಟ್ಟೂ ನಾಲ್ಕು ವೇದಗಳಿಗೆ 1137 ಸಂಹಿತೆಗಳು. ಅವೆಲ್ಲವೂ ಇಂದು ದೊರಕಿಲ್ಲ. ಕೆಲವಂತೂ ಹೆಸರುಗಳಷ್ಟೇ ಉಳಿದುಕೊಂಡಿವೆ. ಹಾಗೆ ಉಳಿದ ಹೆಚ್ಚಿನವುಗಳನ್ನು ನೋಡಿದರೆ ಸಾಮಾನ್ಯವಾಗಿ ಅವು ಪ್ರಾಣಿಗಳ ಅಥವಾ ಸಸ್ಯಗಳ ಹೆಸರುಗಳಿಂದ ಪ್ರಾದುರ್ಭಾವಿಸಿರುವಂಥವು. ಋಗ್ವೇದದ ಶಾಕಲ ಶಾಖೆಯ ಸಂಹಿತೆ ನಮಗೆ ದೊರಕಿರುವುದು. ಅದು ಹಾವಿನ ಸಂತತಿಯದು. ಪ್ರಾತಿಶಾಖ್ಯೆಯಲ್ಲಿ ಇದಲ್ಲದೇ ನಾಲ್ಕು ಇನ್ನಿತರ ಶಾಖೆಗಳನ್ನು ಹೆಸರಿಸಲಾಗಿದೆ. ಅಶ್ವಲಾಯಯನ, ಬಾಷ್ಕಲ, ಸಾಂಖ್ಯಾಯನ ಮತ್ತು ಮಾಂಡೋಕೇಯ. ಅಶ್ವಲಾಯನ ಕುದುರೆಗೆ ಸಂಬಂಧಿಸಿದ್ದು. ಕಡೆಯದು ಕಪ್ಪೆಯಿಂದ ಹೆಸರು ಪಡೆದಿದ್ದು. ಉಳಿದ ಎರಡೂ ಕೂಡ ಯಾವುದೋ ಪ್ರಾಣಿಗೋ ಅಥವಾ ಸಸ್ಯಕ್ಕೋ ಸಂಬಂಧಿಸಿದೆಯೋ?
       ಸಾಮವೇದಕ್ಕೆ ಸಾವಿರ ಶಾಖೆಗಳು. ಇವನ್ನು ಇಂದ್ರ ಹಾಳುಗೆಡವಿದನಂತೆ. ಹಾಗಿದ್ದರೂ ಏಳು ಶಾಖೆಗಳು ಉಳಿದುಕೊಂಡಿವೆ. ಅವುಗಳ ಹೆಸರೂ ಅಶ್ಚರ್ಯಕರವೇ. ಕೌಥುಮ, ಸತ್ಯಮುಗ್ರ, ರಾಣ್ಯಾಯನೀಯ, ಕಪೋಲ, ಮಹಾಕಪೋಲ, ಲಾಂಗುಲೀಕ ಮತ್ತು ಶಾರ್ದೂಲಿಯ. ಕಡೆಯದು ಹುಲಿಗೆ ಸಂಬಂಧಪಟ್ಟಿದ್ದು. ಲಾಂಗೋಲವೆಂದರೆ ಬಾಲ. ಯಾವುದರದ್ದೋ?! ಕೃಷ್ಣಯಜುರ್ವೇದದ ಶಾಖೆಗಳಲ್ಲಿ ಒಂದು ತೈತ್ತರೀಯ ಸಂಹಿತೆ. ಅದು ತಿತ್ತರೀ ಪಕ್ಷಿಗೆ ಸಂಬಂಧಿಸಿದ್ದು. ಅದಕ್ಕೊಂದು ಕುತೂಹಲದ ಕಥೆಯಿದೆ. ಯಾಜ್ನವಲ್ಕ್ಯರಿಗೂ ಅವರ ಗುರುಗಳಿಗೂ ಯಾವುದೋ ವಿಷಯದಲ್ಲಿ ಮನಸ್ತಾಪವಾಯಿತಂತೆ. ಗುರುಗಳಾದ ವೈಶಂಪಾಯನರು ಕಲಿತ ವೇದವನ್ನೆಲ್ಲ ಹಿಂದಿರುಗಿಸುವಂತೆ ಆದೇಶಿಸಿದರು. ಯಾಜ್ನವಲ್ಕ್ಯರು ಕಲಿತದ್ದನ್ನೆಲ್ಲ ವಾಂತಿ ಮಾಡಿಬಿಟ್ಟರು. ವೈಶಂಪಾಯನರ ಶಿಷ್ಯರು ತಿತ್ತರಿ ಹಕ್ಕಿಗಳ ರೂಪತಾಳಿ ಆ ವಾಂತಿಯನ್ನು ತಿಂದುಬಿಟ್ಟರಂತೆ. ಹಾಗಾಗಿ ಆ ಶಾಖೆ ತೈತ್ತರೀಯವೆಂದು ಹೆಸರಾಯ್ತು. ಮುಂದೆ ಯಾಜ್ನವಲ್ಕ್ಯರು ಸೂರ್ಯನನ್ನು ಕುರಿತು ತಪಸ್ಸು ಮಾಡಿದಾಗ ಸೂರ್ಯದೇವ ಕುದುರೆಯ ರೂಪತಾಳಿ ಯಜುರ್ವೇದವನ್ನು ಅವರಿಗೆ ಉಪದೇಶಿಸಿದನಂತೆ. ಸೂರ್ಯ ಉಪದೇಶಿಸಿದ್ದರಿಂದ ಅದು ಶುಕ್ಲಯಜುರ್ವೇದವೆಂದಾಯ್ತು. ಇವೆರಡೂ ಶಾಖೆಗಳ ಕೆಲ ಉಪಶಾಖೆಗಳಾದ ಮಾನವ, ವರಾಹ, ಛಾಗಲೇಯ, ಹರದ್ರವೀಯ, ದುಂದುಭ ಮತ್ತು ಶ್ಯಾಮಾಯನೀಯಗಳಲ್ಲಿ ಮೊದಲ ಮೂರು ಮನುಷ್ಯ, ಹಂದಿ ಮತ್ತು ಮೇಕೆಗೆ ಸಂಬಂಧಿಸಿದ್ದು. ಇನ್ನು ಅಥರ್ವವೇದದಲ್ಲಿ ಪಿಪ್ಪಲಾದ, ಬ್ರಹ್ಮಪಲಾಶ, ಶೌನಕ ಎಂಬ ಉಪಶಾಖೆಗಳಿವೆ. ಮೊದಲನೆಯದು ಪಿಪ್ಪಲಾದ ಪಕ್ಷಿಗೂ, ಕೊನೆಯದು ನಾಯಿಗೂ ಸಂಬಂಧಪಟ್ಟದ್ದು. ಇದೇನು ವಿಡಂಬನೆಯೇ ಎನ್ನಲು ಅಲ್ಲೆಲ್ಲೂ ವಿಡಂಬನೆ ಅಥವಾ ವ್ಯಂಗ್ಯಕ್ಕೆ ಸಂಬಂಧಿಸಿದ ವಿಷಯಗಳೇ ಇಲ್ಲ. ಕೆಲ ಹೆಸರುಗಳು ಯಾವುದನ್ನೂ ಸ್ಪಷ್ಟವಾಗಿ ಸೂಚಿಸುವುದಿಲ್ಲ. ಹಾಗೆಂದು ಸ್ಪಷ್ಟವಾಗಿರುವವನ್ನು ತಳ್ಳಿಹಾಕಲಾಗದು. ವೈದಿಕ ಋಷಿಗಳು ತಮ್ಮ ಸಾಹಿತ್ಯಕ್ಕೆ ಪ್ರಾಣಿಗಳ ಹೆಸರಿಡುತ್ತಿದ್ದರು. ಆಯಾ ಪ್ರಾಣಿಯ ಹೆಸರಿನವರದ್ದು ಆಯಾ ಪ್ರಾಣಿಯ ಹೆಸರಿರುವ ಶಾಖೆಗಳು ಎಂದು ತೀರ್ಮಾನಿಸಲಡ್ಡಿಯಿಲ್ಲ. ಮುಂದೆ ಉಪನಿಷತ್ತುಗಳನ್ನೇ ಗಮನಿಸಿ. ಶ್ವೇತಾಶ್ವರವು ಬಿಳಿಕುದುರೆಗೂ, ಮಾಂಡೂಕ್ಯವು ಕಪ್ಪೆಗೂ, ಕೌಷಿತಕಿಯವು ಗೂಬೆಗೂ, ತೈತ್ತರೀಯವು ಪಕ್ಷಿಗೂ ಸೇರಿದ್ದು. ಹಾಗೆಂದು ವೈದಿಕ ಸಾಹಿತ್ಯದಲ್ಲಿ ಪ್ರಾಣಿಗಳ ಹೆಸರೆಲ್ಲ ಪ್ರಾಣಿಗಳಿಗೆ ಸಂಬಂಧಿಸಿದ್ದು ಎನ್ನಲು ಬರುವುದಿಲ್ಲ. ಮತ್ತು ಆ ಹೆಸರುಗಳು ಮನುಷ್ಯರಿಗೆ ಸೇರಿದ್ದಾದರೂ ಅಲ್ಲಿ ವಿಡಂಬನೆಯೂ ಇಲ್ಲ. ಜೊತೆಗೆ ಮಾನವರ ಗುಂಪನ್ನು ಪ್ರಾಣಿಗಳ ಹೆಸರುಗಳಿಂದ ಗುರುತಿಸುವುದೂ ಹಿಂದಿನಿಂದ ನಡೆದು ಬಂದಿದೆ. ಋಗ್ವೇದದಲ್ಲಿ ಅಜರು ಅಥವಾ ಆಡುಗಳು ಎಂಬ ಜನಾಂಗವಿದೆ. ಜೊತೆಗೆ ಸಿಗ್ರುಗಳಿದ್ದಾರೆ(ಮೂಲಂಗಿ??). ಮತ್ಸ್ಯರಿದ್ದಾರೆ. ಐತರೇಯ ಬ್ರಾಹ್ಮಣ, ಅಥರ್ವವೇದದಲ್ಲಿ ಬರುವ ಕಾಶ್ಯಪರು ಆಮೆಯ ಸಂಬಂಧಿಗಳು. ಅದೇ ಹೆಸರಿನ ಒಬ್ಬ ಋಷಿಯೂ ಇದ್ದಾನೆ. ಕೌಶಿಕ-ಗೂಬೆ, ಮಾಂಡೂಕೇಯ -ಕಪ್ಪೆ, ಗೋತಮ-ಎತ್ತು, ವತ್ಸ-ಕರು, ಶುನಕ-ನಾಯಿ, ಕಾಪೇಯ-ಮಂಗ. ಛಾಂದೋಗ್ಯೋಪನಿಷತ್ತಿನ ಮೊದಲ ಅಧ್ಯಾಯದ ಹನ್ನೆರಡನೇಯ ಖಂಡದ ಪ್ರಸಿದ್ಧ ನಾಯಿಗಳ ಸಾಮಗಾನದ ಕಥೆಯಲ್ಲಿ ಬರುವ ನಾಯಿಗಳು ಮನುಷ್ಯರೇ ಆಗಿರಬೇಕು. ಮಹಾಭಾರತದಲ್ಲಿ, ವಿಷ್ಣುಪುರಾಣದಲ್ಲಿ ಕುಕ್ಕುರುರು ಅಥವಾ ನಾಯಿಗಳು ಎಂಬ ಋಷಿ ಹಾಗೂ ಜನರ ಹೆಸರಿದೆ. ಐತರೇಯ ಬ್ರಾಹ್ಮಣದ ಹರೀಶ್ಚಂದ್ರೋಪಾಖ್ಯಾನದಲ್ಲಿ ಉಲ್ಲೇಖಿಸಲ್ಪಟ್ಟ ಅಜೀಗರ್ತನಿಗೆ ಮೂವರು ಮಕ್ಕಳು. ಶುನಃಪುಛ್ಛ, ಶುನಃಶೇಫ, ಶುನಃಲಾಂಗೂಲ. ಮೂರರ ಅರ್ಥವೂ ನಾಯಿಬಾಲವೆಂದೇ! ಯೂಪಸ್ಥಂಭಕ್ಕೆ ಕಟ್ಟಲ್ಪಟ್ಟ ಶುನಃಶೇಫನನ್ನು ಕರೆತಂದ ವಿಶ್ವಾಮಿತ್ರ "ಈತ ಶುನಶ್ಯೇಪ, ಈತನನ್ನು ನನ್ನ ಹಿರಿಯ ಮಗನಾಗಿ ದತ್ತು ತೆಗೆದುಕೊಂಡು ದೇವರಾತನೆಂದು ಹೆಸರಿಟ್ಟಿದ್ದೇನೆ, ಇನ್ನು ಮು೦ದೆ ನೀವೆಲ್ಲರೂ ಇವನ ಸಹೋದರರೆಂದು ಲೋಕಕ್ಕೆ ಪರಿಚಿತರಾಗುವಿರಿ. ಹಿರಿಯ ಸೋದರನಾಗಿ ಭಾವಿಸಿ ಇವನ ಆಜ್ಞೆಯನ್ನು ನೀವೆಲ್ಲ ಶಿರಸಾ ವಹಿಸಿ ಪಾಲಿಸಬೇಕು" ಎಂದು ತನ್ನ ಮಕ್ಕಳಿಗೆ ಹೇಳುತ್ತಾನೆ. ಈ ಬೆಳವಣಿಗೆಯಿಂದ ಹಿರಿಯನಾದ ಅಷ್ಟಕನಿಗೆ ಮತ್ತಿತರರಿಗೆ ಆಶ್ಚರ್ಯವಾಗುತ್ತದೆ. ಇರುವ ನೂರು ಮಕ್ಕಳು ಸಾಲವೆಂದು ಇನ್ನೊಬ್ಬನನ್ನ ಕರೆತಂದು ಅವನನ್ನೇ ಹಿರಿಯನನ್ನಾಗಿ ಮಾಡಿದರೆ ನಮ್ಮ ಗತಿಯೇನೆಂದು. ಅವರಲ್ಲಿ ಐವತ್ತು ಮಕ್ಕಳು ತಂದೆಗೆ ಎದುರು ಬಿದ್ದರು. ಉಳಿದ ಐವತ್ತು ಜನ ಅಪ್ಪನಿಗೆ ಜೀ ಹುಜೂರ್ ಎಂದರು. ಎಷ್ಟಾದರೂ ಅವನು ವಿಶ್ವಾಮಿತ್ರ. ಸೃಷ್ಟಿಗೆ ಪ್ರತಿಸೃಷ್ಟಿಯನ್ನು ನಿರ್ಮಿಸಹೋಗಿ ವಿಶ್ವಕ್ಕೆ ಅಮಿತ್ರನೆಂದು ಕರೆಯಲ್ಪಟ್ಟವ. ಅಪ್ಪನ ಮಾತು ಕೇಳದಿದ್ದಕ್ಕೆ ನೀವೆಲ್ಲ ಕುಲಭೃಷ್ಟರಾಗಿ ಸಮಾಜದಿಂದ ಬಹಿಷ್ಕರಿಸಲ್ಪಡಿ ಎಂದು ಶಾಪಕೊಟ್ಟ. ಹೀಗೆ ಶಾಪದಿಂದ ಭೃಷ್ಟರಾದ ಐವತ್ತು ಸೋದರರೇ ಆಂಧ್ರ, ಪುಂಢ್ರ ಮತ್ತು ಶಬರರಾದರು ಎಂದು ಐತ್ತರೇಯ ಬ್ರಾಹ್ಮಣ ಹೇಳುತ್ತದೆ.
       ಮನುಷ್ಯರಿಗೆ ಇಂಥ ಪ್ರಾಣಿನಾಮಗಳು ಬರಲು ಕಾರಣವೇನು? ವೈದಿಕ ಸಾಹಿತ್ಯದ ಋಷಿಗಳು ಮಾತ್ರವಲ್ಲ ಸಾಹಿತ್ಯವೂ ಪ್ರಾಣಿಗಳ ಹೆಸರಿನಿಂದ ಕರೆಯಲ್ಪಟ್ಟಿವೆ. ಹಾಗೆಂದು ಅದು ಅಡ್ಡಹೆಸರಾಗಲೀ, ತಮಾಷೆಗೆ ಕರೆದಿರುವುದಾಗಲೀ ಅಲ್ಲ. ಅವೆಲ್ಲವೂ ಗೌರವಪೂರಕವಾಗಿಯೇ ಪ್ರಕಟವಾಗಿವೆ. ಮನುಷ್ಯರನ್ನು ಬಿಡಿ. ದೇವರನ್ನು ನೋಡಿದರೂ ಪ್ರಾಣಿರೂಪಗಳಿವೆ ಇಲ್ಲಾ ಪ್ರಾಣಿವಾಹನಗಳಿವೆ. ಗಣೇಶ ಆನೆಯ ಮುಖದವ, ಹನುಮಂತ ಮಂಗ, ಹಯಗ್ರೀವನಿಗೆ ಕುದುರೆಯ ತಲೆ. ಅಷ್ಟೇಕೆ ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲ ನಾಲ್ಕು ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಅವತಾರಗಳು ಪ್ರಾಣಿರೂಪಗಳೇ. ಆದರೆ ಅಂಥ ಹೆಸರುಗಳು ಬಂದಿದ್ದು ಹೇಗೆ ಎಂಬುದನ್ನು ವ್ಯಾಖ್ಯಾನಿಸುವುದು ಪಾಷಾಣ ಪಾಕ ಪ್ರತಿಕಾಶವೇ. ಡಾರ್ವಿನ್ನಿನ ವಿಕಾಸವಾದಕ್ಕೂ ವಿಷ್ಣುವಿನ ದಶಾವತಾರಕ್ಕೂ ಹತ್ತಿರದ ಸಂಬಂಧವಿದೆಯೆಂದು ತಾಳೆ ಹಾಕಬಹುದು. ವಿಕಾಸವಾದದ ಪ್ರಕಾರ ಮೊದಲು ಕಾಣಿಸಿಕೊಂಡಿದ್ದು ಜಲಚರಗಳು, ನಂತರ ಉಭಯವಾಸಿಗಳು ಸೃಷ್ಟಿಯಾದವು. ನಂತರ ಕ್ರಮೇಣ ಪ್ರಾಣಿಗಳೂ ಮನುಷ್ಯರೂ ವಿಕಾಸಗೊಂಡರು. ವಿಕಾಸದ ಹಾದಿಯಲ್ಲಿ ಮೊದಲು ಜಲಚರಗಳು ಕಾಣಿಸಿಕೊಂಡಿದ್ದು ಎಂಬುದನ್ನು ಮತ್ಸ್ಯಾವತಾರ ಸೂಚಿಸುತ್ತದೆ. ಉಭಯವಾಸಿ ಕೂರ್ಮವಾಗಿ ಎರಡನೇಯ ಅವತಾರ. ಅಲ್ಲಿಂದ ಸಸ್ತನಿಗಳ ರೂಪದಲ್ಲಿ ಮೂರನೇಯ ವರಾಹಾವತಾರ. ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ಅರ್ಧಪ್ರಾಣಿ, ಅರ್ಧ ಮನುಷ್ಯನ ನರಸಿಂಹಾವತಾರ ತಿಳಿಸುತ್ತದೆ. ಆರಂಭ ಕಾಲದ ಕುಬ್ಜ ಮಾನವ, ವಿಕಾಸಗೊಂಡ ಆದರ್ಶವಾದಿ ಮಾನವ ಹೀಗೆ ವಾಮನ, ರಾಮ, ಕೃಷ್ಣಾವತಾರಗಳು ಸಾಗುತ್ತವೆ. ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ಮೂರು ಅವತಾರಗಳಾದ ಮತ್ಸ್ಯ, ಕೂರ್ಮ ಮತ್ತು ವರಾಹಾವತಾರಗಳು ಪೂರ್ಣವಾಗಿ ಪ್ರಾಣಿರೂಪದವು. ಇವುಗಳನ್ನು ಸಾಂಕೇತಿಕ ಅಥವಾ ಅಂಶಾವತಾರಗಳೆಂದೂ ಕರೆಯುತ್ತಾರೆ. ಡಾರ್ವಿನ್ನಿನ ವಾದದೊಡಗಿನ ಹೋಲಿಕೆ ಒತ್ತಟ್ಟಿಗಿದ್ದರೂ ದೇವರು ಪ್ರಾಣಿರೂಪದಲ್ಲಿ ಅವತಾರವೆತ್ತುವ ಕಥೆ ನಮಗೆ ಸ್ವಲ್ಪ ಸೋಜಿಗವೇ. ಅವು ನಿಜವಾಗಿ ಪ್ರಾಣಿ ರೂಪಗಳೇ ಅಥವಾ ಅದರ ಹಿಂದೆ ಇನ್ನೇನಾದರೂ ನಿಗೂಢ ಅರ್ಥವಿದೆಯೋ? ಹಾಗಿದ್ದರೂ ನಮ್ಮಲ್ಲಿ ಈ ಪ್ರಾಣಿರೂಪದ ಅವತಾರಗಳನ್ನು ಪೂಜಿಸುವ ಪರಂಪರೆ ಕಡಿಮೆ. ಉಳಿದ ಅವತಾರಗಳಾದ ರಾಮ, ಕೃಷ್ಣರಿಗಿದ್ದಷ್ಟು ಪೂಜಾಲಯಗಳು ಮೊದಲ ಮೂರು ಅವತಾರಗಳಿಗಿಲ್ಲ. ಕೇರಳದಲ್ಲಿ ವಾಮನಾವತಾರಕ್ಕೆ ಸಂಬಂಧಿಸಿದ ಹಲವು ದೇವಸ್ಥಾನಗಳಿವೆ. ತಮಿಳುನಾಡು ಮುರುಗನ ಆರಾಧನೆಗೂ, ಕೇರಳ ಶಾಸ್ತನ ಆರಾಧನೆಗೂ ಹೆಸರಾದಂತೆ ಆಂಧ್ರ ಪ್ರದೇಶದಲ್ಲಿ ನರಸಿಂಹಾರಾಧನೆ ತುಂಬ ಪ್ರಸಿದ್ಧಿ. ಅಹೋಬಿಲಂ, ಯಾದಗಿರಿಗುಟ್ಟ, ಹರಿವಾಡಂ. ಮಲಯಾದ್ರಿ, ಮಂಗಳಗಿರಿ, ವೇದಾದ್ರಿ, ಸಿಂಹಾಚಲ, ಪನಕಾಲ ಸೇರಿ ನೂರಾರು ಇತಿಹಾಸ ಪ್ರಸಿದ್ಧ ನರಸಿಂಹಸ್ಥಾನಗಳು ಆಂಧ್ರದಲ್ಲಿವೆ. ಹಾಗೆಂದು ಮತ್ಸ್ಯ, ಕೂರ್ಮ, ವರಾಹ ಅವತಾರಗಳಿಗೆ ಮೀಸಲಾದ ದೇವಾಲಯಗಳು ನಮ್ಮಲ್ಲಿವೆಯೇ ಎಂಬುದು ಪ್ರಶ್ನೆ? ಇಷ್ಟೆಲ್ಲ ಪೀಠಿಕೆಯ ನಂತರ ಇಂದಿನ ಲೇಖನದ ಮುಖ್ಯಾಂಶ ಇದೇ.
ನಮ್ಮಲ್ಲಿವೆಯೇ? ಇಲ್ಲವೇ ಇಲ್ಲವೆಂದಲ್ಲ. ಇವೆ. ಎಲ್ಲಿವೆ, ವಿಶೇಷಗಳೇನು ಗೊತ್ತೆ?
ಮತ್ಸ್ಯಾವತಾರ:
ಮತ್ಸ್ಯಾವತಾರದ ಕಲಂಕಾರಿ ಚಿತ್ರಕಲೆ
       ಒಂದೊಂದು ಮನ್ವಂತರ ಮುಗಿದಾಗಲೂ ಒಂದು ಚಿಕ್ಕ ಪ್ರಳಯವಾಗುತ್ತದೆ. ಆ ಪ್ರಳಯವನ್ನು ಪುರಾಣಗಳು ಅವಾಂತರ ಪ್ರಳಯವೆಂದು ಕರೆದಿವೆ. ಅದು ಬ್ರಹ್ಮನ ಒಂದು ದಿನಕಳೆದು ರಾತ್ರಿಯಾದಾಗ ಆಗುವಂಥದ್ದು ಹಾಗೆಯೇ ಬ್ರಹ್ಮನ ನೂರು ವರ್ಷಕಾಲದ ನಂತರ ಅವನ ಅವಸಾನಕಾಲದಲ್ಲಿ ಬರುವುದು ಮಹಾಪ್ರಳಯ. ಅವಾಂತರ ಪ್ರಳಯಕಾಲದಲ್ಲಿ ಭೂಮಿಯ ಮೇಲಿನ ಬಹುತೇಕ ನಾಗರಿಕತೆ ನಾಶವಾಗುತ್ತದೆ. ಈ ಕಾಲದಲ್ಲಿ ಬದುಕುಳಿದ ಜನಾಂಗದಿಂದ ಮತ್ತೆ ಮರಳಿ ನಾಗರಿಕತೆ ಬೆಳೆಯುತ್ತದೆ. ಭಾಗವತದ ಪ್ರಕಾರ ಹೀಗೆ ಚಾಕ್ಷುಷ ಮತ್ತು ವೈವಸ್ವತ ಮನ್ವಂತರದ ಸಂಧಿಕಾಲದಲ್ಲಿ ಪ್ರಳಯವಾದಾಗ ಸತ್ಯವ್ರತ ಮನುವನ್ನು ರಕ್ಷಿಸುವುದಕ್ಕೋಸ್ಕರ ಮೀನಿನ ರೂಪದಲ್ಲಿ ಭಗವಂತ ಅವತರಿಸಿದ. ಇನ್ನೊಂದು ಕತೆಯ ಪ್ರಕಾರ ಬ್ರಹ್ಮ ನಿದ್ರಿಸಿದಾಗ ಸೋಮಕನೆಂಬ ಅಸುರ ವೇದಗಳನ್ನು ಕದ್ದೊಯ್ದು ಸಮುದ್ರದಲ್ಲಿ ಅಡಗಿಸಿಟ್ಟನಂತೆ. ಇನ್ನೇನು ಪ್ರಳಯಕಾಲ ಸಮೀಪಿಸಿದ್ದರಿಂದ ಬ್ರಹ್ಮನಿಗೆ ಹೊಸ ಸೃಷ್ಟಿ ಮಾಡಲು ವೇದಜ್ಞಾನದ ಅಗತ್ಯತೆಯಿತ್ತು. ಆಗ ದೇವತೆಗಳೆಲ್ಲ ಶ್ರೀಹರಿಯನ್ನು ಪ್ರಾರ್ಥಿಸಲು ಹರಿಯು ಮತ್ಸ್ಯಾವತಾರವನ್ನೆತ್ತಿ ಸೋಮಕನನ್ನು ಸಂಹರಿಸಿ ವೇದಗಳನ್ನು ಉದ್ಧರಿಸಿದನಂತೆ. ಮತ್ಸ್ಯ ಪುರಾಣದಲ್ಲಿಯೂ ಈ ಕತೆಯಿದೆ. ಸೂರ್ಯಪುತ್ರನಾದ ಸತ್ಯವ್ರತ ಮನುವೆಂಬ ರಾಜ ಹತ್ತುಲಕ್ಷ ವರ್ಷಗಳ ಕಾಲ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಪ್ರಳಯಕಾಲದಲ್ಲಿ ಸಮಸ್ತ ಜೀವವರ್ಗಗಳ ರಕ್ಷಣೆಗೆ ಶಕ್ತನಾಗುವ ವರ ಪಡೆದ. ಈ ಸತ್ಯವ್ರತ ಮನು ಆಶ್ರಮದಲ್ಲೊಮ್ಮೆ ಪಿತೃತರ್ಪಣ ನೀಡುತ್ತಿರಲು ನೀರಿನೊಡನೆ ಅವನ ಬೊಗಸೆಯಲ್ಲಿ ಚಿಕ್ಕ ಮೀನೊಂದು ಕೈಸೇರಿತು. ದಯಾಳುವಾದ ರಾಜ ಆ ಮೀನನ್ನು ಕಂಡು ತನ್ನ ಕಮಂಡಲದಲ್ಲಿಟ್ಟು ರಕ್ಷಿಸಲು ಯತ್ನಿಸಿದ. ರಾತ್ರಿ ಕಳೆಯುವುದರೊಳಗೆ ಆ ಮೀನು ಕಮಂಡಲದಲ್ಲಿ ಹಿಡಿಯಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು. ಅವನು ಅದನ್ನೆತ್ತಿ ಹಂಡೆಯಲ್ಲಿರಿಸಿದ. ಅಲ್ಲೂ ಅದು ಮೂರು ಮೊಳದುದ್ದ ಬೆಳೆದು ರಕ್ಷಿಸುವಂತೆ ಕೇಳಿತು. ರಾಜ ಅದನ್ನು ಕೆರಯಲ್ಲಿ ಬಿಟ್ಟರೆ ಅದು ಕೆರೆ ಮುಚ್ಚುವಷ್ಟು ಬೆಳೆಯಿತು. ಕೊನೆಗೆ ದಾರಿ ಕಾಣದೆ ಆ ಮೀನನ್ನು ಸಮುದ್ರದಲ್ಲಿ ಬಿಟ್ಟನಂತೆ. ಆಗ ಸಮುದ್ರಜಲವನ್ನೆಲ್ಲ ವ್ಯಾಪಿಸುವಷ್ಟು ವಿಸ್ತಾರವಾಗಿ ಮೀನು ಬೆಳೆದಾಗ ಮನುವು ಹೆದರಿ ತನ್ನ ನಿಜರೂಪವನ್ನು ತೋರುವಂತೆ ಪ್ರಾರ್ಥಿಸಿದ. ಮತ್ಸ್ಯರೂಪಿ ಮಹಾವಿಷ್ಣು ಪ್ರತ್ಯಕ್ಷನಾಗಿ ಇನ್ನು ಕೆಲ ಕಾಲದಲ್ಲಿ ಪ್ರಳಯ ಸಂಭವಿಸಿ ಭೂಮಿಯು ನೀರಿನಲ್ಲಿ ಮುಳುಗಿ ಹೋಗುವುದು, ಆ ಸಮಯದಲ್ಲಿ ಬೆವರಿನಿಂದ ಹುಟ್ಟಿದ ಹೇನು ಮುಂತಾದವು, ಮೊಟ್ಟೆಯಿಂದ ಬಂದ ಪಕ್ಷಿಗಳು, ನೆಲವನ್ನು ಸೀಳಿ ಮೆಲಕ್ಕೆದ್ದ ಪಕ್ಷಿಗಳು, ಗರ್ಭದಿಂದ ಹುಟ್ಟಿದ ಪ್ರಾಣಿಗಳು ಹೀಗೆ ನಾಲ್ಕು ಬಗೆಯ ಜೀವರಾಶಿಗಳ ಜೊತೆ ತಾನು ಕಳಿಸಿದ ವೇದಮಯವಾದ ದೋಣಿಯೇರುವಂತೆ ಸೂಚಿಸಿದನಂತೆ. ಜಲಪ್ರಳಯ ಪ್ರಾರಂಭವಾಯಿತು. ಮಹಾವಿಷ್ಣು  ಕೊಂಬುಳ್ಳ ಮೀನಿನ ರೂಪದಲ್ಲಿ ವಾಸುಕಿಯನ್ನು ಹಗ್ಗವಾಗಿ ಕಟ್ಟಿ ದೋಣಿಯನ್ನು ಎಳೆದು ತಂದ. ಸತ್ಯವ್ರತನ ಜೊತೆ ಎಲ್ಲ ಬಗೆಯ ಜೀವರಾಶಿಗಳೂ ವೇದಪುರಾಣಗಳಿಂದಾವೃತ ಜ್ಞಾನರಾಶಿಯೂ ಸಪ್ತರ್ಷಿಗಳೇದ್ಯಾತಿಗಳು ದೋಣಿಯನ್ನೇರಿದವು. ಪ್ರಳಯಕಾಲದುದ್ದಕ್ಕೂ ಮೀನಿನಿಂದ ಹಿಡಿಯಲ್ಪಟ್ಟಿದ್ದ ದೋಣಿ ನೀರಿನಲ್ಲಿ ತೇಲುತ್ತಿದ್ದ ಕಾರಣ ದೋಣಿಯಲ್ಲಿದ್ದವರೆಲ್ಲ ರಕ್ಷಿಸಲ್ಪಟ್ಟರು. ಈ ಕಾಲದಲ್ಲಿ ಮಹಾವಿಷ್ಣುವು ಸತ್ಯವ್ರತನಿಗೆ ಉಪದೇಶಿಸಿದ್ದೇ ಮತ್ಸ್ಯಪುರಾಣವೆಂದು ಪ್ರಸಿದ್ಧವಾಯ್ತು. ಅದೊಂದು ಅದ್ಭುತವಾದ ಸಂಕೇತ. ಇಂಥದ್ದೇ ಕಥೆ ಬೈಬಲ್ಲಿಂದ ಮೊದಲ್ಗೊಂಡು ಗ್ರೀಕರಲ್ಲೂ, ರೋಮನ್ನರಲ್ಲೂ ಕಾಣಬಹುದು. ಆದರೆ ವ್ಯತ್ಯಾಸವಿಷ್ಟೇ. ಅಲ್ಲಿ ನೋಹಾ ಎಂಬುವವ ತನ್ನ ಹೆಂಡತಿ, ಮೂರು ಮಕ್ಕಳು ಮತ್ತು ಮೂವರು ಸೊಸೆಯರೊಂದಿಗೆ ನೌಕೆಯನ್ನು ನಿರ್ಮಾಣ ಮಾಡಿ ಪ್ರಳಯಕಾಲದಲ್ಲಿ ಬಚಾವಾದರಂತೆ. ನಮ್ಮ ಪುರಾಣಗಳು ಹಾಗಲ್ಲ. ಇಲ್ಲಿ ಮನುವಿನ ಜೊತೆ ಅವನ ಹೆಂಡತಿ ಮನಾವಿ, ಭೌತಿಕ ಜಗತ್ತಿನ ಪ್ರತಿನಿಧಿಗಳಾದ ಎಲ್ಲ ಜೀವರಾಶಿಗಳೂ, ಆಧ್ಯಾತ್ಮ ಜಗತ್ತಿನ ಪ್ರತಿನಿಧಿಗಳಾದ ಸಪ್ತರ್ಷಿಗಳೂ, ವೇದರಾಶಿಗಳೂ ಇದ್ದಾರೆ. ಮನುಷ್ಯ ತಾನು ಉಳಿಯಬೇಕಾದರೆ ಇಡೀ ಪ್ರಪಂಚವನ್ನುಳಿಸಿಕೊಳ್ಳಬೇಕು. ಪ್ರಪಂಚ ಮುಳುಗುವಾಗ ಮುಂದಿನ ಜಗದ್ಬೀಜವಾಗಿ ಈ ಎಲ್ಲ ರೀತಿಯ ಜೀವಿಗಳುಳಿಯಬೇಕು. ಅಷ್ಟೇ ಅಲ್ಲ ಮಾನವ ಸಂಸ್ಕೃತಿಯ ದೀಪಧಾರಿಗಳಾದ ಜ್ಞಾನರಾಶಿಯೂ ಉಳಿಯಬೇಕು.
ಭಾರತದಲ್ಲಿ ಮಹಾವಿಷ್ಣುವು ಮತ್ಸ್ಯಾವತಾರದಲ್ಲಿ ಕೇವಲ ಎರಡು ಕಡೆಗಳಲ್ಲಿ ಪೂಜಿಸಲ್ಪಡುತ್ತಾನೆ. ಅದರಲ್ಲಿ ವಿಖ್ಯಾತವಾದದ್ದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗಲಾಪುರ. ಈ ಪಟ್ಟಣವನ್ನು ಶ್ರೀಕೃಷ್ಣದೇವರಾಯ ತನ್ನ ತಾಯಿ ನಾಗಲಾದೇವಿಯ ನೆನಪಿಗಾಗಿ ಕಟ್ಟಿಸಿದ್ದನಂತೆ. ಇದು ತಿರುಪತಿಯಿಂದ ದಕ್ಷಿಣದಲ್ಲಿ ೭೦ ಕಿ.ಮೀ , ಚೆನ್ನೈನಿಂದ ಉತ್ತರದಲ್ಲಿ ೯೦ ಕಿ.ಮೀ ದೂರದಲ್ಲಿದೆ. ಇದೇ ಊರಿನಲ್ಲಿ ಕೃಷ್ಣದೇವರಾಯನಿಂದ ನಿರ್ಮಿಸಲ್ಪಟ್ಟ ವೇದನಾರಾಯಣ ಸ್ವಾಮಿಯ ಮಂದಿರವಿದೆ. ವೇದಗಳನ್ನುದ್ಧರಿಸಿದ ವಿಷ್ಣು ಶ್ರೀದೇವಿ, ಭೂದೇವಿ ಸಮೇತನಾಗಿ ಇಲ್ಲಿ ಮತ್ಸ್ಯಾವತಾರಿಯಾಗಿ ಪೂಜಿಸಲ್ಪಡುತ್ತಾನೆ. ಪ್ರತಿವರ್ಷ ವೈಶಾಖ ಮಾಸದ ದ್ವಾದಶಿಯಿಂದಾರಂಭಿಸಿ ಮೂರು ದಿನಗಳ ಕಾಲ ಸೂರ್ಯಾಸ್ತದ ಸಮಯ ಸೂರ್ಯನ ಕಿರಣಗಳು ಗರ್ಭಗುಡಿಯ ವಿಗ್ರಹದ ಪಾದ, ಹೊಕ್ಕಳು, ಹಣೆಯ ಮೇಲೆ ಬೀಳುವ ಪವಾಡವನ್ನು ನೋಡಲು ದೇಶದ ಮೂಲೆಮೂಲೆಯಿಂದ ಜನರಾಗಮಿಸುತ್ತಾರೆ. ಇದನ್ನು ಬಿಟ್ಟರೆ ತಮಿಳ್ನಾಡಿನ ತುವರಿಮನ್ ಅಗ್ರಹಾರದಲ್ಲೂ ಒಂದು ಮತ್ಸ ದೇವಸ್ಥಾನವಿದೆ.
ನಾಗಲಾಪುರಮ್ ವೇದನಾರಾಯಣ
ವೈಶಾಖ ದ್ವಾದಶಿಯಂದು ಗರ್ಭಗುಡಿಯ ವಿಗ್ರಹದ ಮೇಲೆ ಬೀಳುವ ಸೂರ್ಯರಶ್ಮಿ

ಕೂರ್ಮಾವತಾರ:

       ದೇವದಾನವರಿಬ್ಬರೂ ಸಮುದ್ರ ಮಥನಕ್ಕಾಗಿ ಕೈಜೋಡಿಸಿದಾಗ ಕಡುಗೋಲಿನಂತಿದ್ದ ಮಂದರ ಪರ್ವತ ಮುಳುಗಿ ಹೋಗದಂತೆ ಮಹಾವಿಷ್ಣು ಕೂರ್ಮಾವತಾರಿಯಾಗಿ ತನ್ನ ಬೆನ್ನ ಮೇಲೆ ಹೊತ್ತು ಸ್ಥಿರವಾಗಿ ನಿಲ್ಲಿಸಿದನಂತೆ. ಇಡೀ ಪ್ರಪಂಚದಲ್ಲಿ ಒಂದೇ ಒಂದು ಕಡೆ ವಿಷ್ಣುವು ಕೂರ್ಮಾವತಾರಿಯಾಗಿ ಪೂಜಿಸಲ್ಪಡುತ್ತಾನೆ. ಅದು ಆಂಧ್ರದ ಶ್ರೀಕಾಕುಳಂನ ಸಮೀಪ ಬಂಗಾಳ ಕೊಲ್ಲಿಯ ದಡದಲ್ಲಿರುವ ಶ್ರೀಕೂರ್ಮಂನಲ್ಲಿ. ೨೮ನೇ ಕೃತಯುಗದ ವೈವಸ್ವತ ಮನ್ವಂತರದಲ್ಲಿ ಶ್ವೇತ ಮಹಾರಾಜನ ತಪಸ್ಸಿಗೆ ಮೆಚ್ಚಿ ವಿಷ್ಣು ಇಲ್ಲಿ ಸ್ವಯಂಭೂ ಕೂರ್ಮರೂಪಿಯಾಗಿ ನೆಲೆನಿಂತನೆಂದು ವಿಷ್ಣು, ಪದ್ಮ ಮತ್ತು ಬ್ರಹ್ಮಾಂಡಪುರಾಣಗಳಲ್ಲಿ ಉಲ್ಲೇಖವಿದೆ. ಇದು ಮೂಲತಃ ಬ್ರಹ್ಮನಿಂದ ಪ್ರತಿಷ್ಟಾಪಿಸಲ್ಪಟ್ಟು ಹತ್ತುಸಾವಿರ ವರ್ಷಗಳಿಗಿಂತಲೂ ಹಿಂದಿನಿಂದ ಪೂಜಾಸ್ಥಳವಾಗಿ ಪ್ರಸಿದ್ಧಿಯಾಗಿತ್ತೆಂಬ ನಂಬಿಕೆಯಿದೆ. ಈಗಿರುವ ದೇವಸ್ಥಾನ ನಿರ್ಮಾಣಗೊಂಡಿದ್ದು ೮೦೦ ವರ್ಷಗಳಷ್ಟು ಹಿಂದೆ ಕಳಿಂಗವನ್ನಾಳುತ್ತಿದ್ದ ನರಹರಿ ತೀರ್ಥರ ಕಾಲದಲ್ಲಿ. ಚೋಳರು, ಕಳಿಂಗರಾಜ ಗಂಗರು, ವಿಕ್ರಮ ಗಜಪತಿಯರು, ವಿಜಯನಗರ, ಆನಂದಗಜಪತಿಯರು ಹೀಗೆ ಹಲ ಸಾಮ್ರಾಜ್ಯಗಳ ಕಾಲದಲ್ಲಿ ಶ್ರೀಕುರ್ಮಮ್  ಪ್ರಮುಖ ಕೇಂದ್ರವಾಗಿ ಮೆರೆದಿತ್ತು. ಇದು ಮೂಲತಃ ಶೈವಕ್ಷೇತ್ರವಾಗಿದ್ದು ಇಲ್ಲೊಂದು ಲಿಂಗವಿತ್ತೆಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕೂರ್ಮದ ಬಾಲದ ಹತ್ತಿರ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಚಿಕ್ಕದೊಂದು ಸಾಲಿಗ್ರಾಮವಿದೆ. ಮುಂದೆ ಕಳಿಂಗವನ್ನಾಳುತ್ತಿದ್ದ ಅನಂತವರ್ಮ ಚೋದಗಂಗದೇವನ ಕಾಲದಲ್ಲಿ ರಾಮಾನುಜಾಚಾರ್ಯರು ಈ ಕ್ಷೇತ್ರವನ್ನು ಸಂದರ್ಶಿಸಿದ್ದರು. ಆ ಸಮಯದಲ್ಲಿ ಶೈವ ಮತ್ತು ವೈಷ್ಣವರ ನಡುವೆ ಮೂಲದೈವದ ವಿಗ್ರಹವು ಶಿವಲಿಂಗವೋ ಅಥವಾ ಕೂರ್ಮವೋ ಎಂಬುದರ ಬಗ್ಗೆ ವಿವಾದ ಚಾಲ್ತಿಯಲ್ಲಿತ್ತಂತೆ. ಈ ವಿವಾದವನ್ನು ಬಗೆಹರಿಸಲು ಶ್ರೀವೈಷ್ಣವರಾಗಿದ್ದ ರಾಮಾನುಜರು ಗರ್ಭಗುಡಿಯಲ್ಲಿ ವಿಗ್ರಹದ ಹಿಂದೆ ನಿಂತು ಇದು ವಿಷ್ಣುರೂಪಿಯಾಗಿದ್ದರೆ ತನ್ನತ್ತ ತಿರುಗುವಂತೆ ಪ್ರಾರ್ಥಿಸಿದರಂತೆ. ಅಷ್ಟರವರೆಗೆ ಪೂರ್ವಾಭಿಮುಖವಾಗಿದ್ದ ವಿಗ್ರಹ ರಾಮಾನುಜರ ಕೋರಿಕೆಯ ಮೇರೆಗೆ ಪಶ್ಚಿಮಾಭಿಮುಖವಾಗಿ ಅವರತ್ತ ತಿರುಗಿ ನಿಂತಿತಂತೆ. ಅಂದಿನಿಂದ ಈ ವಿಗ್ರಹದ ಕುರಿತಾದ ವಿವಾದ ಬಗೆಹರಿಯಿತು. ಇದು ಆಚಾರ್ಯರ ಸೂಕ್ತಿಮುಕ್ತಾವಲಿಯಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಇದರ ಕುರುಹಾಗಿ ದೇವಸ್ಥಾನದಲ್ಲಿ ಎರಡು ಧ್ವಜಸ್ಥಂಭಗಳನ್ನು ಕಾಣಬಹುದು. ಮೂಲದ್ದು ಪೂರ್ವದಲ್ಲಿದ್ದರೆ, ರಾಮಾನುಜರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಪಶ್ಚಿಮ ಭಾಗದಲ್ಲಿದೆ. ಎರಡೂ ದಿಕ್ಕುಗಳಲ್ಲಿ ಧ್ವಜಸ್ಥಂಭ ಮತ್ತು ಪ್ರವೇಶದ್ವಾರವನ್ನು ಹೊಂದಿರುವ ಪ್ರಪಂಚದ ಅತ್ಯಂತ ಅಪರೂಪದ ಮಂದಿರವಿದು. ಅಷ್ಟೇ ಅಲ್ಲ, ಶ್ರೀಕುರ್ಮಮ್ ಪ್ರಸಿದ್ದಿಯಾಗಿರುವುದಕ್ಕೆ ಇನ್ನೂ ಕೆಲ ಕಾರಣಗಳಿವೆ. ೧೧ನೇ ಶತಮಾನದಲ್ಲಿ ಮಹಮ್ಮದ್ ಗಜನಿಯ ದಂಡಯಾತ್ರೆಯ ಕಾಲದಲ್ಲಿ ಕೊಳ್ಳೆಹೊಡೆಯಲ್ಪಡುವ ಭಯದಿಂದ ಮೂಲ ದೇವಸ್ಥಾನವನ್ನು ಮಣ್ಣಿನಲ್ಲಿ ಮುಚ್ಚಿ ಎದುರು ಸಣ್ಣದೊಂದು ಹೊಸ ನಿರ್ಮಿತಿಯನ್ನು ರಚಿಸಲಾಗಿತ್ತಂತೆ. ಅಂದಿನ ದಾಳಿಯಲ್ಲಿ ಹಾಳಾಗಿ ಉಳಿದ ಕೆಲ ರಚನೆಗಳನ್ನು ಇಂದಿಗೂ ಇಲ್ಲಿ ನೊಡಬಹುದು. 
ಶ್ರೀಕೂರ್ಮನಾಥ 

ಶ್ರೀಕುರ್ಮಮ್
 ದೇಗುಲದ ಐತಿಹ್ಯದ ಪ್ರಕಾರ ರಾಮನ ಮಕ್ಕಳಾದ ಲವ ಕುಶರು ಇಲ್ಲಿಗೆ ಶನಿದೋಷ ನಿವಾರಣೆಗಾಗಿ ಭೇಟಿ ನೀಡಿದ್ದರು. ಉತ್ತರ ರಾಮಾಯಣ ತಿಳಿಸುವಂತೆ ಕುಶನ ರಾಜ್ಯವಾಗಿದ್ದ ದಕ್ಷಿಣ ಕೋಸಲ ಇದೇ ಭಾಗದಲ್ಲಿತ್ತು. ಮಧ್ಯಭಾರತದಲ್ಲಿ ಕಂಡುಬರುವ ಕುರ್ಮಿ  ಜನಾಂಗ ತಮ್ಮನ್ನು ಕುಶನ ಕುಲದವರೆಂದುಕೊಳ್ಳುತ್ತದೆ. ಅಲ್ಲದೇ ಇವರು ಕುರ್ಮನಾಥನ ಆರಾಧಕರೆಂದೂ ಹಾಗಾಗಿ ಕಶ್ಯಪ ಗೋತ್ರದವರೆಂದೂ ಕರೆದುಕೊಳ್ಳುತ್ತಾರೆ. ಸಂಸ್ಕೃತದಲ್ಲಿ ಕಶ್ಯಪವೆಂದರೆ ಕೂರ್ಮವೆಂದೇ ಅರ್ಥ. ಜೊತೆಗೆ ಓರಿಸ್ಸಾದಲ್ಲಿ ವಿಶೇಷವಾಗಿ ಕಂಡುಬರುವ ನಿಲ್ಸೋನಿಯಾ ಗ್ಯಾಂಗೇಟಿಕಾ ಮತ್ತು ನಿಲ್ಸೋನಿಯಾ ಹುರುಮ್ ಎಂಬ ಜಾತಿಯ ನಕ್ಷತ್ರ ಆಮೆಗಳ ರಕ್ಷಿತ ತಾಣವಾಗಿಯೂ ಶ್ರೀಕುರ್ಮಮ್ ಪ್ರಸಿದ್ಧಿ. ಈ ದೇವಸ್ಥಾನ ಈಗಿನ ಕಟ್ಟಡ ನಿರ್ಮಾಣಗೊಂಡಿದ್ದು ಕಳಿಂಗವನ್ನಾಳಿದ್ದ ನರಹರಿ ತೀರ್ಥರ ಕಾಲದಲ್ಲಿ ಎಂದೆನಷ್ಟೆ. ಇದೇ ನರಹರಿ ತೀರ್ಥರು ಮುಂದೆ ಮಧ್ವಾಚಾರ್ಯರ ಅನುಯಾಯಿಯಾಗಿ ಉತ್ತರಾದಿ ಮಠದ ಪೀಠಾಧಿಪತಿಗಳಾದರು. ಆಂಧ್ರ ಯಕ್ಷಗಾನ ಮತ್ತು ಕುಚಿಪುಡಿಯಿಂದ ಪ್ರೇರಿತಗೊಂಡು ಕರ್ನಾಟಕದ ಕರಾವಳಿಯಲ್ಲಿ ಯಕ್ಷಗಾನ ಮತ್ತು ಕೇರಳದ ಕಥಕ್ಕಳಿಯನ್ನು ಪ್ರಾರಂಭಿಸಿದ ಕೀರ್ತಿ ಇವರಿಗೇ ಸಲ್ಲಬೇಕು.
ವರಾಹಾವತಾರ
ಭೂದೇವಿಯನ್ನೆತ್ತಿರುವ ವರಾಹದ ಉಬ್ಬುಶಿಲ್ಪ, ಮಹಾಬಲಿಪುರಂ
ಖುಜರಾಹೋದ ಪ್ರಸಿದ್ಧ ವರಾಹಮೂರ್ತಿ
       ಭಾರತದಲ್ಲಿ ಏಳು ಕಡೆಗಳಲ್ಲಿ ಪ್ರಸಿದ್ಧ ವರಾಹ ಕ್ಷೇತ್ರಗಳಿವೆಯಂತೆ. ಓರಿಸ್ಸಾದ ವೈತರಣಿ ನದಿದ್ವೀಪದಲ್ಲಿರುವ ಯಜ್ಞವರಾಹ ದೇವಾಲಯ, ಖುಜರಾಹೋದ ವರಾಹ ಮಂದಿರ, ಮಹಾಬಲಿಪುರದ ವರಾಹ ಗುಹಾಂತರ್ದೇವಾಲಯ, ತಿರುಮಲದ ಪುಷ್ಕರಣೀ ನದೀತಟದ ಆದಿವರಾಹ ಕ್ಷೇತ್ರ, ಚಿದಂಬರಂನ ಬಳಿಯ ಶ್ರೀಮುಷ್ಣಂನ ಸ್ವಯಂಭು ಭೂವರಾಹ ಕ್ಷೇತ್ರಗಳು ಸುಪ್ರಸಿದ್ಧವಾದವು. ಬಹಳಷ್ಟು ಜನರಿಗೆ ತಿಳಿಯದ್ದೇನೆಂದರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಅರಬ್ಬೀ ಸಮುದ್ರ ಮತ್ತು ಸೌಪರ್ಣಿಕಾ ನದಿಯ ಮಧ್ಯದ ಕಿರಿದಾದ ಭೂಭಾಗದಲ್ಲಿರುವ ಮಹಾರಾಜಸ್ವಾಮಿ ವರಾಹ ದೇವಾಲಯ ಭಾರತದ ಏಳೇ ಏಳು ವರಾಹ ಕ್ಷೇತ್ರಗಳಲ್ಲೊಂದು. ವಿಷ್ಣುವಿನೊಡನೆ ವರಾಹ ಮತ್ತು ನರಸಿಂಹಾವತಾರಗಳು ಒಂದೇ ಗರ್ಭಗುಡಿಯಲ್ಲಿ ಪೂಜಿಸಲ್ಪಡುವುದು ಈ ದೇವಸ್ಥಾನದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೂ ಪೂಜೆ ನಡೆದರೂ ಪೂಜೆ ಉತ್ಸವಗಳೆಲ್ಲ ವರಾಹ ಕೇಂದ್ರಿತ. ಹಿಂದೆ ತ್ರೇತೆಯಲ್ಲಿ ಗೌತಮನ ಶಾಪವಿಮೋಚನೆಗಾಗಿ ಇಂದ್ರ ಬೃಹಸ್ಪತಿಯ ಸೂಚನೆಯಂತೆ ಸೌಪರ್ಣಿಕಾ ನದಿದಡದಲ್ಲಿ ಗಂಗಾಧರವೆಂಬ ಲಿಂಗವನ್ನು ಸ್ಥಾಪಿಸಿ ಪೂಜಿಸಿದನಂತೆ. ಮುಂದೆ ೨೮ನೇ ಕಲಿಯುಗದಲ್ಲಿ ಅರಸನೊಬ್ಬನಿಗಾದ ದೈವೀ ಪ್ರೇರಣೆಯಂತೆ ಗಂಗಾಧರೇಶ್ವರ ಸನ್ನಿಧಿಯಲ್ಲಿ ವರಾಹ, ನರಸಿಂಹ ಸಹಿತವಾದ ವಿಷ್ಣುಮೂರ್ತಿಗಳನ್ನು ಸ್ಥಾಪಿಸಿದನಂತೆ. ಇದು ಇಂದು ಮಾರಸ್ವಾಮಿ ವರಾಹ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಮರವಂತೆಯ ಮನಮೋಹಕ ಕಡಲ ತೀರದಲ್ಲಿ ಸಮುದ್ರ ಮತ್ತು ಸೌಪರ್ಣಿಕಾ ನದಿಗಳ ಮಧ್ಯ ಈ ದೇವಸ್ಥಾನವಿದೆ. ಮರವಂತೆಯ ಸುಂದರ ಸೂರ್ಯಾಸ್ತ ಸವಿಯಲು ಬರುವ ಪ್ರಯಾಣಿಕರು ಈ ದೇವಸ್ಥಾನಕ್ಕೊಮ್ಮೆ ಭೇಟಿ ಕೊಡಲೇ ಬೇಕು.
ಮರವಂತೆ ಮಾರಸ್ವಾಮಿ ಕಡಲತೀರ
ಮಹಾರಾಜ ವರಾಹಸ್ವಾಮಿ ಮಂದಿರ, ಮರವಂತೆ
ಸೌಪರ್ಣಿಕಾ ನದಿ

ಒಂದೇ ಗರ್ಭಗುಡಿಯಲ್ಲಿ ವಿಷ್ಣು, ನರಸಿಂಹರೊಟ್ಟಿಗೆ ಪೂಜಿಸಲ್ಪಡುವ ವರಾಹಸ್ವಾಮಿ
       ಒಂದಾನೊಂದು ಕಾಲದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಭೂಮಿಯನ್ನು ನಾಶಮಾಡಬೇಕೆಂದು ಆದಿ ದೈತ್ಯ ಹಿರಣ್ಯಾಕ್ಷ ಭೂಮಿಯನ್ನು ಕಕ್ಷೆಯಿಂದ ಕಳಚಿ ಹೊತ್ತೊಯ್ದನಂತೆ. ಸ್ವಾಯಂಭು ಮನುವು ಬ್ರಹ್ಮನನ್ನು ರಕ್ಷಿಸುವಂತೆ ಪ್ರಾರ್ಥಿಸಿದಾಗ ಬ್ರಹ್ಮ ವಿಷ್ಣುವಿನ ಮೊರೆಹೊಕ್ಕ. ವಿಷ್ಣುವು ವರಾಹಾವತಾರದಲ್ಲಿ ಬಂದು ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮತ್ತೆ ಕಕ್ಷೆಯಲ್ಲಿ ಎತ್ತಿಟ್ಟನಂತೆ. ಸಣ್ಣವರಿರುವಾಗ ನಾವೆಲ್ಲ ಈ ರೋಚಕ ಕಥೆಯನ್ನು ಬಾಯ್ತೆರೆದು ಕೇಳಿದ್ದೇವೆ. ಆದರೆ ಅಷ್ಟು ದೊಡ್ಡ ಭೂಮಿಯನ್ನ ರಾಕ್ಷಸನೊಬ್ಬ ಹೇಗೆ ಹೊತ್ತುಕೊಂಡು ಹೋದ ಎಂದು ತಿರುಗಿ ಯಾರೂ ಕೇಳಿದಂತಿಲ್ಲ. ದೈತ್ಯನಿಂದ ಕಕ್ಷೆ ತಪ್ಪಿ ನಾಶವಾಗುತ್ತಿದ್ದ ಭೂಮಿಯನ್ನು ಶ್ರೀಹರಿ ವರಾಹ ರೂಪದಲ್ಲಿ ಬಂದು ಎತ್ತಿ ಹಿಡಿದನೆಂಬುದು ಕಥೆ. ಖ್ಯಾತ ರಷ್ಯನ್ ವಿಜ್ಞಾನಿ ವೆಲಿಕೋಸ್ಕಿ ಇದರ ಬಗ್ಗೆಯೇ ವರ್ಲ್ಡ್ಸ್ ಇನ್ ಕೊಲಿಷನ್ ಎಂಬ ಪುಸ್ತಕ ಬರೆದಿದ್ದಾನೆ. ವಿಜ್ಞಾನಿಗಳು ಹೇಳುವಂತೆ ವೈಜ್ಞಾನಿಕವಾಗಿ ಸಾವಿರಾರು ವರ್ಷದ ಹಿಂದೊಮ್ಮೆ ಆಕಾಶಕಾಯವೊಂದರಿಂದಾಗಿ ಭೂಮಿ ತನ್ನ ಕಕ್ಷೆಯಿಂದ ಬೇರ್ಪಟ್ಟಿತ್ತಂತೆ. ಕಕ್ಷೆಯಿಂದ ಕಳಚಿಕೊಂಡರೆ ಅದು ಬೇರೆ ಗ್ರಹಗಳಿಗೆ ಢಿಕ್ಕಿ ಹೊಡೆದು ನಾಶವಾಗುತ್ತದೆ. ಆದರೆ ಮತ್ತೆ ಅದು ಕಕ್ಷೆಗೆ ಪುನಃ ಇದ್ದಕ್ಕಿದ್ದಂತೆ ಬಂದು ಕುಳಿತುಬಿಟ್ಟಿತು. ಹೇಗೆ? ವಿಜ್ಞಾನಿಗಳಿಗೂ ಗೊತ್ತಿಲ್ಲ. ಕಕ್ಷೆಯಿಂದ ಕಳಚಿಕೊಂಡಿದ್ದರ ಕಾರಣ ತಿಳಿದಿದ್ದರೂ ಪುನಃ ಬಂದು ಕುಳಿತ ಕಾರಣ ವಿಜ್ಞಾನಿಗಳಿಗೂ ಗೊತ್ತಿಲ್ಲ. ಅದನ್ನೇ ನಮ್ಮ ಪುರಾಣಕಾರರು ಭಗವಚ್ಛಕ್ತಿ ಎಂದರು. ಆ ಶಕ್ತಿ ನಮ್ಮ ಸನಾತನ ಋಷಿಗಳಿಗೆ ವರಾಹ ರೂಪದಲ್ಲಿ ಕಂಡಿತು. ವರವೆಂದರೆ ಶ್ರೇಷ್ಟ. ವರಾಹನೆಂದರೆ ದೊಡ್ಡದು ಎಂಬರ್ಥವೇ ಹೊರತೂ ಹಂದಿಯೆಂದಲ್ಲ. ಹರಿ ವರಾಹಾವತಾರದಲ್ಲಿ ಹಂದಿಯ ರೂಪತಾಳಿ ಭೂಮಿಯನ್ನು ಎತ್ತಿದ್ದರಿಂದ ಹಂದಿಗಳಿಗೆಲ್ಲ ವರಾಹವೆಂಬ ಹೆಸರು ಬಂದಿದ್ದು. ಹಂದಿಗೆ ಭೂದಾರವೆಂಬ ಹೆಸರಿದೆ. ನೆಲದೊಳಗಿನ ಗಡ್ಡೆಯನ್ನು ಅಗೆದು ತಿಂದು ಬದುಕುವ ಪ್ರಾಣಿಯೆಂಬರ್ಥದಲ್ಲಿ. ಆದರೆ ಈ ಪದದ ಅರ್ಥ ವಿಶೇಷವಾದದ್ದು. ಸಂಸ್ಕೃತದಲ್ಲಿ ’ದಾರ’ ಎಂದರೆ ಹೆಂಡತಿ. ತನ್ನ ಹೆಂಡತಿಯಾದ ಭೂದೇವಿಯನ್ನು ರಕ್ಷಿಸಲು ಭಗವಂತ ತಾಳಿದ ಅವತಾರವಿದೆ. ವರೇಣ್ಯವೆಂಬ ಗಾಯತ್ರಿಯಲ್ಲಿರುವ ಶಬ್ದವೂ ಭೂಮಿಯನ್ನು ಧಾರಣೆ ಮಾಡಿದ ವರಾಹ ರೂಪದ ವರ್ಣನೆಯೇ. ಕೃಷ್ಣ ಗೀತೆಯಲ್ಲಿ ’ಗ್ರಾಮ್ ಧಾರಯಾಮಿ’ ಎನ್ನುತ್ತಾನೆ. ಗ್ರಾಮ್ ಎಂದರೆ ಭೂಮಿ. ಭೂಮಿಯಲ್ಲಿರುವ ಸರ್ವಜೀವಿಗಳ ಒಳಗೆ ಜೀವಾತ್ಮನಾಗಿದ್ದು ಭೂಮಿಯನ್ನು ಹೊತ್ತು ರಕ್ಷಿಸುವವನು ಅವನು. ’ಯ ಪ್ರಥಿವಿ ಅಂತರೋ ಯಮಯತಿ ಏಷತ ಆತ್ಮಾ ಅಂತರ್ಯಾಮಿ ಅಮೃತಃ’ ಎಂಬ ಉಪನಿಷದ್ವಾಣಿ ಹೇಳುವಂತೆ ಭೂಮಿಯೊಳಗಿದ್ದು ನಮ್ಮೆಲ್ಲರನ್ನು ರಕ್ಷಿಸುವವನವನು.
ನಮ್ಮ ಪುರಾಣಗಳೆಂದರೆ ತಮಾಷೆಯಲ್ಲ.