Pages

Friday, January 24, 2014

ಬೇಡನಾದ ಬ್ರಾಹ್ಮಣ..!


     ವಾಲ್ಮೀಕಿಗಿರಿಸಂಭೂತವಾಗಿ ರಾಮಸಾಗರವನ್ನು ಸೇರಿದ ರಾಮಾಯಣವೇ ಒಂದು ಮಹಾನದಿ. ಅದು ಸಾವಿರಾರು ಕವಿಗಳ ಪ್ರತಿಭೆಗೆ ಸ್ಫೂರ್ತಿದಾಯಿನಿಯಾಗಿ ಅನಂತಕಾಲದಿಂದಲೂ ಈ ಭೂಮಿಯನ್ನು ಪಾವನಗೊಳಿಸುತ್ತಿರುವ ಪುಣ್ಯಗಂಗೆ. ಅಂದಿನಿಂದ ಇಂದಿನವರೆಗೆ ರಾಮಾಯಣವು ಸಹಸ್ರ ಸಹಸ್ರ ಕವಿಗಳಿಂದ ಸಾವಿರ ಸಾವಿರ ಬಾರಿ ಪುನಃ ಪುನಃ ಬರೆಯಲ್ಪಟ್ಟಿದೆ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಭಾರದಲಿ’ ಎಂಬಂತೆ ಅದೆಷ್ಟೇ ರಾಮಾಯಣಗಳಿದ್ದರೂ ಪುರ್ವೋತ್ತರದ ವಿಚಾರಮಾಡುವ ಕೆಲಸ ವಿದ್ವಾಂಸನಿಗೆ ಬಂದರೆ ಎಲ್ಲದಕ್ಕೂ ಮೂಲವಾಗುವುದು ವಾಲ್ಮೀಕಿ ರಾಮಾಯಣವೇ. ಪ್ರಚಲಿತ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕೆಲವೊಂದು ಭಾಗಗಳು ಪ್ರಕ್ಷಿಪ್ತವಾದರೂ ರಾಮಾಯಣ ಮತ್ತು ವಾಲ್ಮೀಕಿಯ ವೃತ್ತಾಂತದ ಬಗ್ಗೆ ತಿಳಿಯಲು ಅವೇ ಮೂಲ ಆಧಾರ. ಅಗಸನ ಮಾತು ಕೇಳಿ ಕಾಡಿಗಟ್ಟಲ್ಪಟ್ಟ ಸೀತೆಗೆ ಆಶ್ರಯಕೊಟ್ಟು, ಲವಕುಶರನ್ನು ಸಾಕಿ ಅವರಿಗೆ ರಾಮಾಯಣವನ್ನು ಕಲಿಸಿ ಮತ್ತೆ ಸೀತೆಯು ರಾಮನನ್ನು ಯಾಗಮಂಟಪದಲ್ಲಿ ಸಂಧಿಸುವಂತೆ ಮಾಡಿದ ಕೀರ್ತಿ ವಾಲ್ಮೀಕಿಯದ್ದೆಂದು ಉತ್ತರ ರಾಮಾಯಣ ತಿಳಿಸುತ್ತದೆ. ಹೀಗೆ ವಾಲ್ಮೀಕಿಯು ರಾಮಾಯಣವನ್ನು ಬರೆದ ಕವಿಯಷ್ಟೇ ಅಲ್ಲ, ರಾಮಾಯಣದ ಪ್ರಮುಖ ಪಾತ್ರಧಾರಿಯೂ ಹೌದು. ಅಯೋಧ್ಯಾ ಕಾಂಡದ ಸರ್ಗವೊಂದರಲ್ಲಿ ರಾಮ, ಲಕ್ಷ್ಮಣ, ಸೀತೆಯರು  ಚಿತ್ರಕೂಟದ ಸಮೀಪ ವಾಲ್ಮೀಕಿಯನ್ನು ಕಂಡು ವಂದಿಸಿದರೆಂದಿದೆ. ಬಾಲಕಾಂಡದ ಕ್ರೌಂಚ ಪ್ರಸಂಗದಿಂದ ವಾಲ್ಮೀಕಿಯ ಆಶ್ರಮ ತಮಸಾನದಿ ತೀರದಲ್ಲಿತ್ತೆಂದು ತಿಳಿಯುತ್ತದೆ. ಈ ವಾಲ್ಮೀಕಿ ಬೇಡಕುಲದವನೆಂಬ ರೂಢಿ ನಮ್ಮಲ್ಲಿ ಬಹುಮಟ್ಟಿಗೆ ಪ್ರಚಾರದಲ್ಲಿದೆ. ನಮ್ಮ ಹಿಂದಿನ ’ಗನ’ ಸರ್ಕಾರವು ಸಿದ್ರಾಮಯ್ಯನವರಿಂದ ಕುರುಬರ ಓಟು ಕದಿಯಲು ’ಕನಕ’ಜಯಂತಿಯಂದೂ, ಶ್ರೀರಾಮುಲುವನ್ನು ಸಂತೈಸಲು ’ವಾಲ್ಮೀಕಿ’ ಜಯಂತಿಯಂದೂ ರಜೆ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಒಕ್ಕಲಿಗರಿಗಾಗಿ ಕೆಂಪೇಗೌಡ ಜಯಂತಿಯಂದೂ, ಮುಸ್ಲೀಮರಿಗಾಗಿ ಟಿಪ್ಪುಸುಲ್ತಾನ್ ಜಯಂತಿಗೂ ಹೀಗೆ ಜಾತಿಗೊಂದು ಜಯಂತಿಗಳಿಗೆ ರಜೆ ಘೋಷಿಸಿ ಸೆಕ್ಯುಲರಿಸಮ್ಮನ್ನು ಎತ್ತಿಹಿಡಿಯಲು ತುದಿಗಾಲಲ್ಲಿ ನಿಂತಿದೆ. ಪ್ರಚಲಿತವೂ, ಪ್ರಚಾರವೂ ಏನೇ ಇದ್ದರೂ ವಾಲ್ಮೀಕಿ ಬೇಡನಾಗಿದ್ದನೇ? ಎಂಬ ಸತ್ಯಾಸತ್ಯತೆಯನ್ನು ಸ್ವಲ್ಪ ವಿಚಾರಿಸೋಣ.
     ಈ ಕಥೆ ಮೊದಲು ದೊರಕುವುದು ಆಧ್ಯಾತ್ಮ ರಾಮಾಯಣದಲ್ಲಿ. ಚಿತ್ರಕೂಟದ ಸಮೀಪ ವಾಲ್ಮೀಕಿ ದರ್ಶನಕ್ಕೆ ಬಂದ ರಾಮನಿಗೆ ವಾಲ್ಮೀಕಿಯೇ ಹೇಳುವುದು:
ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ |
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ||

ನಾನು ಬೆಳೆದದ್ದೆಲ್ಲ ಕಿರಾತರ ನಡುವೆ, ಶೂದ್ರಾಚಾರದಲ್ಲೇ ನಾನಿದ್ದೆ. ಕೇವಲ ಜನ್ಮದಿಂದ ಮಾತ್ರ ನಾನು ದ್ವಿಜನಾಗಿದ್ದೆ.(ಗಮನಿಸಿ ಇಲ್ಲಿ ಕಿರಾತನೆಂದಿದೆಯೇ ಹೊರತೂ ಬೇಡನೆಂದಲ್ಲ)
ಅನಂತರ ಕಳ್ಳರ ಸಹವಾಸದಿಂದ ಕಳ್ಳನಾದೆ. ಒಮ್ಮೆ ಸಪ್ತರ್ಷಿಗಳ ವಸ್ತುಗಳನ್ನು ಅಪಹರಿಸಲು ಹೊರಟಾಗ ಅವರೆಂದರು "ನೀನು ಯಾವ ಹೆಂಡತಿ ಮಕ್ಕಳಿಗಾಗಿ ಇಷ್ಟು ಪಾಪಕಾರ್ಯಗಳನ್ನು ಮಾಡುತ್ತಿರುವೆಯೋ ಅದರಲ್ಲಿಯೂ ಅವರು ಭಾಗಿಗಳಾಗುವರೋ ಕೇಳಿಕೊಂಡು ಬಾ" ಎಂದು. ನಾನು ಹಾಗೆ ಕೇಳಿದಾಗ ಯಾರೂ ಭಾಗಿಗಳಾಗಲು ಒಪ್ಪಲಿಲ್ಲ. ಅದರಿಂದ ವೈರಾಗ್ಯವುಂಟಾಯಿತು. ಅವರು ಅಲ್ಲಿಯೇ ಜಪಮಾಡುವಂತೆ ’ಮರಾ’ ಎಂಬ ಮಂತ್ರೋಪದೇಶ ಮಾಡಿದರು.
’ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ’
ನಾನು ಹಾಗೆಯೇ ಮಾಡುತ್ತಿರಲು ನನ್ನಮೇಲೆ ಹುತ್ತ ಬೆಳೆಯಿತು. ವರ್ಷಗಳ ನಂತರ ಋಷಿಗಳು ಬಂದು ನನ್ನನ್ನು ಹೊರಬರುವಂತೆ ಕರೆದರು.
ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ |
ಮಾಮಪ್ಯಾಹುರ್ಮುನಿಗಣಾಃ ವಾಲ್ಮೀಕಿಸ್ತ್ವಂ ಮುನೀಶ್ವರಃ ||

ವಲ್ಮೀಕದಿಂದ ಹೊರಬಂದುದರಿಂದ ಮುಂದೆ ಈತ ವಾಲ್ಮೀಕಿಯೆಂದೇ ಹೆಸರಾದ. ಅಲ್ಲದೇ ವರುಣನು(ಪ್ರಚೇತ) ಮಳೆಯನ್ನು ಸುರಿಸಿ ಹುತ್ತವನ್ನು ಕರಿಗಿಸಿದ್ದರಿಂದ ಪ್ರಾಚೇತಸನೆಂಬ ಹೆಸರೂ ಬಂದಿತು. ಇದಕ್ಕೂ ಮೊದಲು ಆತನಿಗೆ ಯಾವ ಹೆಸರಿತ್ತೆಂಬುದು ರಾಮಾಯಣದಲ್ಲೆಲ್ಲೂ ಉಲ್ಲೇಖವಿಲ್ಲ.
     ಇದೇ ಕಥೆಯು ಮುಂದೆ ಆನಂದ ರಾಮಾಯಣದಲ್ಲೂ ಇದೆ. ಇದಕ್ಕೆ ಪುಷ್ಟಿಕೊಡುವ ವಿಚಾರ ಮಹಾಭಾರತದ ಅನುಶಾಸನ ಪರ್ವದಲ್ಲೂ ಕಂಡುಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ವಾಲ್ಮೀಕಿಯು ಹೇಳುತ್ತಾನೆ.
ವಾಲ್ಮೀಕಿಶ್ಚಾಹ ಭಗವಾನ್ ಯುಧಿಷ್ಠಿರಮಿದಂ ವಚಃ |
ವಿವಾದೇ ಸಾಗ್ನಿಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ
ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ |
ಸೋಽಹಮೀಶಾನಮನಘಂ ಅಮೋಘಂ ಶರಣಂ ಗತಃ ||
ಮುಕ್ತಶ್ಚಾಸ್ಮಿತತೋ ಪಾಪೈಃ

"ಅಗ್ನಿಪೂಜಕರಾದ ಮುನಿಗಳೊಡನೆ ನಾನು ವಿವಾದ ಮಾಡಿದ್ದರಿಂದ ನೀನು ಬ್ರಹ್ಮಘ್ನನೆಂದುಬಿಟ್ಟರು. ಕೂಡಲೇ ನಾನು ಅಧರ್ಮಿಷ್ಟನಾದೆ. ಕಡೆಗೆ ಈಶ್ವರನನ್ನು ಶರಣುಹೋಗಿ ಪಾಪಮುಕ್ತನಾದೆ."
ಅಶ್ವಘೋಷನ ಬುದ್ಧಚರಿತ್ರೆಯಲ್ಲೂ ವಾಲ್ಮೀಕಿಯ ವೃತ್ತಾಂತವಿದೆ. ಅಲ್ಲಿ ವಾಲ್ಮೀಕಿಯನ್ನು ಚ್ಯವನ ಮಹರ್ಷಿಯ ಮಗನೆಂದಿದೆ.
’ವಾಲ್ಮೀಕಿರಾದೌ ಚ ಸಸರ್ಜ ಪದ್ಯಂ ಜಗ್ರಂಥಯನ್ನ ಚ್ಯವನೋ ಮಹರ್ಷಿಃ ’
ಈ ಚ್ಯವನನು ಭೃಗುವಿನ ಮಗ.
’ಭೃಗೋಮಹರ್ಷೇಃ ಪುತ್ರೋಽಭೂತ್ ಚ್ಯವನೋ ನಾಮ ಭಾರ್ಗವಃ’
ಭಾರ್ಗವನಾದ ವಾಲ್ಮೀಕಿಯೇ ರಾಮಚರಿತೆಯನ್ನು ಬರೆದವನೆಂದು ಶಾಂತಿಪರ್ವದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಶ್ಲೋಕಶ್ಚಾಯಂ ಪುರಾಗೀತೋ ಭಾರ್ಗವೇನ ಮಹಾತ್ಮನಾ |
ಆಖ್ಯಾತೇ ರಾಮಚರಿತೇ ನೃಪಂತಿ ಪ್ರತಿ ಭಾರತ ||

ಸ್ವತಃ ರಾಮಾಯಣ, ಮಹಾಭಾರತಗಳಲ್ಲೇ ವಾಲ್ಮೀಕಿಯು ಬ್ರಾಹ್ಮಣನೆಂದಿದೆಯೇ ಹೊರತೂ ಬೇಡನೆಂದಲ್ಲ. ಆದರೆ ಕೆಲವು ಕಾಲ ಶೂದ್ರಾಚಾರ ನಿರತನಾಗಿದ್ದರೂ ಇರಬಹುದು.
     ರಾಮಾಯಣದ ಹುಟ್ಟಿಗೆ ಕಾರಣವೆನಿಕೊಂಡ ’ಮಾನಿಷಾದ’ ಶ್ಲೋಕವನ್ನೇ ಗಮನಿಸಿ. ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಕ್ರೌಂಚ ಪಕ್ಷಿಯೊಂದನ್ನು ನಿಷಾದನೊಬ್ಬನು ಕೊಂದು ಕೆಡಹುತ್ತಾನೆ. ನೆಲಕ್ಕೆ ಬಿದ್ದು ಹೊರಳಾಡಿ ಸಾಯುತ್ತಿರುವ ಅದನ್ನು ಕಂಡ ವಾಲ್ಮೀಕಿಯ ಬಾಯಿಂದ ಹೊರಬಂದ ಶ್ಲೋಕವಿದು. ಪಕ್ಷಿಯನ್ನು ಕೊಂದದ್ದಕ್ಕಾಗಿ ವಾಲ್ಮೀಕಿ ನಿಷಾಧನನ್ನು ಶಪಿಸುತ್ತಾನೆ. ಬೇಟೆಯಾಡುವುದು ಬೇಡನ ಸಹಜ ಧರ್ಮ. ವಾಲ್ಮೀಕಿ ಮೂಲತಃ ಬೇಡನೇ ಆಗಿದ್ದಲ್ಲಿ ಹಕ್ಕಿಯನ್ನು ಕೊಂದವನೊಬ್ಬನನ್ನು ಹೀಗೆ ಶಪಿಸಲು ಸಾಧ್ಯವೇ ಇರುತ್ತಿರಲಿಲ್ಲ.
      ರಾಜಸ್ಥಾನ, ಪಂಜಾಬ್, ಗುಜರಾತಿನಲ್ಲಿ ಬಹುಸಂಖ್ಯೆಯಲ್ಲಿರುವ ಈಗಿನ ವಾಲ್ಮೀಕಿ ಸಮುದಾಯದವರಿಗೆ ಆ ಹೆಸರು ಬ್ರಿಟಿಷರ ಕಾಲದಲ್ಲಿ ಹೇಗೆ ಬಂತೆಂಬ ವಿವರಣೆಗೆ ಪಂಡಿತ ಅಮಿತ್‌ಚಂದ ಶರ್ಮಾರ ’’ಬಾಲ್ಮೀಕಿ ಪ್ರಕಾಶ್’ ಎಂಬ ಹಿಂದಿ ಹೊತ್ತಿಗೆಯನ್ನು ಗಮನಿಸಿ.

Wednesday, January 1, 2014

ಸ್ವಾಮಿಯೇ ಶರಣಂ ಅಯ್ಯಪ್ಪ: ಒಂದಿಷ್ಟು ಇತಿಹಾಸ, ಇನ್ನೊಂದಿಷ್ಟು ಪುರಾಣ

     
     ಮಕರ ಸಂಕ್ರಮಣ ಹತ್ತಿರ ಬರುತಿದೆ. ಅಯ್ಯಪ್ಪ ಭಕ್ತರೆಲ್ಲ ೪೧ ದಿನದ ವ್ರತದ ನಂತರ ಇರುಮುಡಿ ಹೊತ್ತು ಶಬರಿಮಲೈನತ್ತ ತೆರಳಿದ್ದಾರೆ. ಕಠಿಣ ವ್ರತವನ್ನು ಪಾಲಿಸಿ, ಕಾಡುಮೇಡುಗಳಲ್ಲಿ ಕಲ್ಲುಮುಳ್ಳುಗಳ ಹಾದಿಯಲ್ಲಿ ಬರಿಗಾಲಲ್ಲಿ ನಡೆಯುವ ಕಷ್ಟದ ಮಧ್ಯದಲ್ಲೂ ವರ್ಷದಿಂದ ವರ್ಷಕ್ಕೆ ಶಬರಿಮಲೆ ಆಸ್ತಿಕರ ಬಹುದೊಡ್ಡ ಶೃದ್ಧಾಕೇಂದ್ರವಾಗಿ ಬೆಳೆಯುತ್ತಲೇ ಇದೆ. ತ್ಯಾಗ, ಪ್ರೇಮಗಳ ಸಾಕಾರಮೂರ್ತಿಯಾಗಿ ಅಯ್ಯಪ್ಪನು ವರ್ಷಾನುವರ್ಷಗಳಿಂದ ಭಕ್ತರನ್ನುದ್ಧರಿಸುತ್ತಲೇ ಇದ್ದಾನೆ. ಹಾಗಾದರೆ ಶಬರಿಮಲೆ ಮತ್ತು ಅಯ್ಯಪ್ಪನ ನೈಜ ಹಿನ್ನೆಲೆಯೇನು?
    ಅಯ್ಯಪ್ಪನಿಗೆ ಎರಡು ಮುಖಗಳಿವೆ. ಮೊದಲನೇಯದು ಪೌರಾಣಿಕ, ಇನ್ನೊಂದು ಐತಿಹಾಸಿಕ. ಪೌರಾಣಿಕ ಕಥೆ ನಿಮಗೆಲ್ಲ ತಿಳಿದದ್ದೇ. ಮಹಿಷಾಸುರನ ತಂಗಿಯಾದ ಮಹಿಷಿಯು ಹರಿಹರಪುತ್ರರಿಂದಲ್ಲದೇ ಬೇರಾರಿಂದಲೂ ಸಾವುಬರದಂತೆ ಬ್ರಹ್ಮನಿಂದ ವರಪಡೆದು ಲೋಕಕಂಟಕಳಾಗಿ ಮೆರೆಯುತ್ತಾಳೆ. ಕೆಲ ಐತಿಹ್ಯಗಳ ಪ್ರಕಾರ ಭಸ್ಮಾಸುರನ ಸಂಹಾರಕ್ಕಾಗಿ ಮೋಹಿನಿ ಅವತಾರ ತಳೆಯುವ ವಿಷ್ಣುವನ್ನು ಶಿವನು ಮೋಹಿಸುತ್ತಾನೆ. ಇವರೀರ್ವರ ಶಕ್ತಿಯಿಂದ  ಹರಿಹರಸುತನಾಗಿ ಜನಿಸಿದ ಮಗುವೇ ಅಯ್ಯಪ್ಪ. ಮಕ್ಕಳಿಲ್ಲದ ಪಾಂಡ್ಯರಾಜ ಪಂಪಾತೀರದಲ್ಲಿದ್ದ ಈ ಮಗುವನ್ನು ನೋಡಿ ತನ್ನ ಮಗನಂತೆ ಸಾಕುತ್ತಾನೆ. ಹುಟ್ಟುವಾಗಲೇ ಕೊರಳಲ್ಲಿ ಮಣಿಯಿದ್ದುದರಿಂದ ಇವನಿಗೆ ಮಣಿಕಂಠನೆಂದು ನಾಮಕರಣ ಮಾಡಲಾಯ್ತು. ಮಾತುಬಾರದ, ಕಣ್ಣುಕಾಣದ ಗುರುಪುತ್ರನನ್ನು ಅನುಗ್ರಹಿಸುವುದು, ರಾಣಿಯ ಹೊಟ್ಟೆ ನೋವು ನಿವಾರಿಸಲು ಹುಲಿಯ ಹಾಲನ್ನು ತರಲು ಕಾಡಿಗೆ ತೆರಳುವುದು, ದೇವೇಂದ್ರನನ್ನು ಬ೦ಧಿಯನ್ನಾಗಿಸಿದ್ದ ಮಹಿಷಿಯನ್ನು ಕೊಲ್ಲುವುದು, ಶಬರಿಮಲೆಯ ಕಾಡಿನಲ್ಲಿ ನೆಲೆನಿಲ್ಲುವುದೇ ಮುಂತಾದ ಕಥೆಗಳನ್ನೆಲ್ಲ ನೀವು ತಿಳಿದೇ ಇರುತ್ತೀರಿ. ಈಗ ಅದಕ್ಕಿಂತ ವಿಭಿನ್ನವಾದ, ನೀವು ಕೇಳದ, ಯಾವ ಐತಿಹಾಸಿಕ ಚಿತ್ರಕ್ಕೂ ಕಡಿಮೆಯಿಲ್ಲದ ಅತಿರೋಚಕ ಕಥೆಯುಳ್ಳ ಅಯ್ಯಪ್ಪನ ಇತಿಹಾಸವನ್ನೊಮ್ಮೆ ನೋಡೋಣ.
ತಮಿಳ್ನಾಡಿನ ಪುದುಕೊಟ್ಟೈನ ಸಮೀಪದ ಶಂಗಂ ಪೂರ್ವಕಾಲದ ಶಾಸ್ತನ ವಿಗ್ರಹ
      
ಪಂಡಾಲಂ ಅರಮನೆ
     ಮುಸಲ್ಮಾನ ದಾಳಿಕಾರರು ಮಧುರೈಯನ್ನಾಕ್ರಮಿಸಿದ್ದ ಕಥೆಯನ್ನು ಹಿಂದಿನ ಲೇಖನದಲ್ಲಿ ಬರೆದಿದ್ದೆ. ಈ ದಾಳಿಯನ್ನು ತಾಳಲಾಗದೇ ಮಧುರೈನಿಂದ ಕೇರಳಕ್ಕೆ ವಲಸೆಬಂದ ಪಾಂಡ್ಯರಾಜಮನೆತನವೊಂದು ತಿರುವಾಂಕೂರು ಅರಸರ ನೆರವಿನೊಂದಿಗೆ ಸುಮಾರು ಕ್ರಿ.ಶ 1194-1202ರ ನಡುವೆ ಪಂಡಾಲಂ ರಾಜ್ಯವನ್ನು ಸ್ಥಾಪಿಸಿತು. ಕೇರಳ ಕ್ಷತ್ರಿಯರು ಸಾಧಾರಣವಾಗಿ ವಿಶ್ವಾಮಿತ್ರ ಗೋತ್ರದವರಾದರೆ ಪಂಡಾಲಂನವರು ತಮಿಳ್ನಾಡು ಮೂಲದ ಭಾರ್ಗವ ಗೋತ್ರದವರು. ಕೇರಳದಲ್ಲೂ, ತಮಿಳ್ನಾಡಿನಲ್ಲೂ ಶಂಗಂನ ಪೂರ್ವ ಕಾಲದಿಂದಲೂ ಹರಿಹರ ಪುತ್ರನೆನ್ನಲಾಗುವ ಅಯ್ಯನಾರ್ ಶಾಸ್ತನ ಆರಾಧನೆ ಜಾರಿಯಲ್ಲಿದೆ. ಸಹಜವಾಗಿಯೇ ಶಬರಿಮಲೆಯ ಕಾಡುಗಳಲ್ಲಿದ್ದ ಪುರಾತನ ಕಾಲದಿಂದಲೂ ಸುತ್ತಲಿನ ಜನರಿಂದ, ಆಳರಸರಿಂದ ಪೂಜಿಸಲ್ಪಡುತ್ತಿದ್ದ ಶಾಸ್ತನನ್ನೇ ತನ್ನ ಆರಾಧ್ಯ ದೈವವನ್ನಾಗಿ ಪಂಡಾಲಂ ರಾಜಮನೆತನ ಸ್ವೀಕರಿಸಿತು. ಮುಸ್ಲೀಮರಿಂದ 
ದೇಶಭೃಷ್ಟರಾದರೂ ಪಂಡಾಲಂ ಮತ್ತು ಸಮೀಪದ ಕಡಕ್ಕಡದಲ್ಲಿ ಹಲವಾರು ಮಸೀದಿಗಳನ್ನೂ, ಚರ್ಚುಗಳನ್ನೂ, ಅವಲೋಕಿತೇಶ್ವರನ ಬೌದ್ಧವಿಹಾರಗಳನ್ನೂ ನಿರ್ಮಿಸಿದ್ದ ಪಂಡಾಲಂ ರಾಜರು ಮೊದಲಿನಿಂದಲೂ ಕೇರಳದ ಆತ್ಮವಾಗಿದ್ದ ಪರಮತ ಸಹಿಷ್ಣುತೆಯನ್ನು ಎತ್ತಿ ಹಿಡಿದವರು. ಕೆಲಕಾಲದ ನಂತರ ಪಂಡಾಲಂ ರಾಜ್ಯಕ್ಕೆ ’ಉದಯನ’ನೆಂಬ ದರೋಡೆಕೋರನ ಕಾಟ ಶುರುವಾಯ್ತು. ಕರಿಮಲ, ತಲಪರ, ಇಂಚಿಪ್ಪರದ ದಟ್ಟಕಾಡುಗಳಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡು ಸುತ್ತಲಿನ ರಾಜ್ಯಗಳನ್ನು ದೋಚುವುದೇ ಆತನ ಮುಖ್ಯ ಕಸುಬಾಗಿತ್ತು. ಕೇರಳ-ತಮಿಳ್ನಾಡುಗಳೆರಡನ್ನೂ ಬೆಸೆಯುತ್ತಿದ್ದ ಶಬರಿಮಲೆ ಆಕಾಲದ ಯಾತ್ರಿಗಳ ಮತ್ತು ವ್ಯಾಪಾರಿಗಳ ಪ್ರಮುಖ ಮಾರ್ಗ. ಇದೇ ದಾರಿಯಲ್ಲಿದ್ದು ವ್ಯಾಪಾರಿಗಳನ್ನೂ ಸುತ್ತಲಿನ ಗ್ರಾಮಗಳನ್ನೂ ದೋಚುತ್ತಿದ್ದ ಉದಯನ ಮೂಲತಃ ಬೌದ್ಧನಾಗಿದ್ದು ಶಬರಿಮಲೆಯಲ್ಲಿದ್ದ ಪುರಾತನ ಶಾಸ್ತನ ದೇವಾಲಯವನ್ನು ಧ್ವಂಸಗೊಳಿಸಿ ಮೂರ್ತಿಯನ್ನು ನಾಶಮಾಡಿದನಂತೆ. ಅರಮನೆಯ ಸಮೀಪದಲ್ಲಿದ್ದ ದೇವಾಲಯಗಳನ್ನು ದೋಚಿ ಅರಮನೆಯಲ್ಲಿದ್ದ ಪಾಂಡ್ಯರಾಜನ ತಂಗಿಯನ್ನು ಹೊತ್ತೊಯ್ದ. ತನ್ನನ್ನು ಮದುವೆಯಾಗಲು ರಾಜಕುಮಾರಿಗೆ ೨೧ ದಿನಗಳ ಗಡುವು ವಿಧಿಸಿದ ಉದಯನ ಆಕೆಯನ್ನು ಸೆರೆಯಲ್ಲಿಟ್ಟ. ರಾಜಕುಮಾರಿಯ ಕನಸಲ್ಲಿ ಕಾಣಿಸಿಕೊಂಡ ಧರ್ಮಶಾಸ್ತನು ಶೀಘ್ರದಲ್ಲೇ ಸೆರೆವಾಸದಿಂದ ಬಿಡುಗಡೆಯಾಗುವುದೆಂದೂ, ತನ್ನ ಪರಮಭಕ್ತರಾದ ಪಂಡಾಲಂ ಮನೆತನವನ್ನು ಕಾಪಾಡಲು ತಾನೇ ಸ್ವತಃ ಅವಳ ಮಗನಾಗಿ ಜನಿಸುವೆನೆಂದೂ ಭರವಸೆಯಿತ್ತನಂತೆ. ಅದೇ ಸಮಯಕ್ಕೆ ಆಕೆಯ ಬಹುವಾಗಿ ಪ್ರೀತಿಸುತ್ತಿದ್ದ ರಾಜ್ಯದ ಸೇನಾಧಿಪತಿ ಕಾಂಪಿಲ್ಲಿಲ್ ಪಿಳ್ಳೈನ ಮಗ ಜಯಂತನು ರಾತ್ರಿ ಸಮಯದಲ್ಲಿ ಉದಯನನ ಶಿಬಿರದ ಮೇಲೆ ದಾಳಿ ನಡೆಸಿ ರಾಜಕುಮಾರಿಯನ್ನು ಸೆರೆಯಿಂದ ಬಿಡಿಸಿ ಕರೆದೊಯ್ದ. ತನ್ನ ಮರಳುವಿಕೆಯಿಂದ ರಾಜಮನೆತನ ಮರ್ಯಾದೆ ಹಾಳಾಗಬಹುದೆಂಬ ಅಂಜಿಕೆಯಿಂದ ಆಕೆ ಅರಮನೆಗೆ ಹೋಗಲೊಪ್ಪದೇ ಕಾಡಿನಲ್ಲೇ ಉಳಿಯುವುದಾಗಿ ತಿಳಿಸಿದಳು. ರಾಜಕುಮಾರಿಯನ್ನು ವರಿಸಿದ ಜಯಂತನು ಆಕೆಯೊಡನೆ ಪೊನ್ನಂಬಲದ ಕಾಡುಗಳಲ್ಲಿ ವಾಸಮಾಡತೊಡಗಿದ. ಉದಯನನ ಕೈಯಲ್ಲಿ ಇಬ್ಬರೂ ಮೃತಪಟ್ಟರೆಂದು ಅವರಿಬ್ಬರನ್ನೂ ರಾಜಮನೆತನದವರು ಮರೆತರು. ಇವರೀರ್ವರ ಮಗನೇ ಆರ್ಯನ್ ಅಥವಾ ಅಯ್ಯನ್. ಆರ್ಯನ್ ಎಂಬುದು ಶಾಸ್ತನ ಹೆಸರುಗಳಲ್ಲೊಂದು ಕೂಡ ಹೌದು. ಅಯ್ಯನನ ತಂದೆಯೆನ್ನಲಾಗುವ ಜಯಂತನು ಉದಯನನಿಂದ ಕೊಲ್ಲಲ್ಪಟ್ಟ ಶಬರಿಮಲೆಯ ಅರ್ಚಕರ ಮಗನಾಗಿದ್ದನೆಂಬ ಕಥೆಯೂ ಇದೆ. ಆದರೆ ಆತ ’ವೆಲ್ಲಲಾರ್ ಕುಲಜಾತನ್ ಅಯ್ಯನ್ ಅಯ್ಯಪ್ಪನ್’ ಎಂದು ಭಕ್ತರಿಂದ ಕರೆಯಲ್ಪಡುವುದೂ, ’ಇಳವರ್ಸೆವಂಪತ್ತು’ ಮತ್ತು ನಾಲಂಕಲ್ ಕೃಷ್ಣ ಪಿಳ್ಳೈರ ’ಮಹಾಕ್ಷೇತ್ರಂಗಳ್ಕುಮುಂಬಿಲ್’ಗಳೂ ಆತ ಬ್ರಾಹ್ಮಣನಾಗಿರದೇ ಕೊಟ್ಟಾಯಮ್ ಸಮೀಪದ ಎರುಮೇಲಿಯ ವೆಲ್ಲಾಲ ಸಮುದಾಯದವನೆಂಬುದನ್ನೇ ಧೃಡೀಕರಿಸುತ್ತವೆ. ಕೆಲ ವರ್ಷಗಳ ನಂತರ ಕುಲಪೊನ್ನಂಬಲಮೇಡುವಿಗೆ ಬೇಟೆಗೆ ಬಂದಿದ್ದ ಪಂಡಾಲಂ ರಾಜ ಕಾಡುಪ್ರಾಣಿಗಳೊಡನೆ ಆಡುತ್ತಿದ್ದ ಅಯ್ಯನನ್ನು ನೋಡಿ ಅವನ ಹಿನ್ನೆಲೆಯನ್ನು ತಿಳಿದು ತನ್ನ ರಾಜ್ಯಕ್ಕೆ ಕರೆದೊಯ್ಯುತ್ತಾನೆ. ಶಾಸ್ತನ ಅನುಗ್ರಹದಿಂದ ಹುಟ್ಟಿನಿಂದಲೇ ಅತಿಮಾನುಶ ಶಕ್ತಿಗಳನ್ನು ಹೊಂದಿದ್ದ ಅಯ್ಯಪ್ಪ ತನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಉದಯನನ್ನು ಸೋಲಿಸಿ, ಶಾಸ್ತನ ದೇವಸ್ಥಾನವನ್ನು ಮರುನಿರ್ಮಿಸುವ ಶಪಥಮಾಡಿ ಅದಕ್ಕಾಗಿ ದೊಡ್ಡ ಸೈನ್ಯವೊಂದನ್ನು ಕಟ್ಟಲಾರಂಭಿಸುತ್ತಾನೆ. ಅಯ್ಯಪ್ಪನ ತಂದೆ ಆಲಂಗಾಡ್ ರಾಜ್ಯಕ್ಕೆ ಸೇರಿದ ಮುಪ್ಪತ್ತಡಮ್‍ನ ನಾಯರ್ ಮನೆತನಕ್ಕೆ ಸೇರಿದವನು. ಸ್ವತಃ ಅಯ್ಯಪ್ಪನು ಕಳರಿ ಸೇರಿದಂತೆ ಶಸ್ತ್ರವಿದ್ಯೆಗಳನ್ನೆಲ್ಲ ಕಲಿತದ್ದಿಲ್ಲೇ. ಪಾಂಡ್ಯರಾಜನ ತಾಯಿ ಅಂಬಲಪ್ಪುಳ ರಾಜಮನೆತನಕ್ಕೆ ಸೇರಿದವಳು. ಪಂಡಾಲಂನ ಜೊತೆ ಈ ಎರಡೂ ರಾಜ್ಯದ ಸೈನ್ಯವನ್ನೊಟ್ಟುಗೂಡಿಸಿ, ಅರಬ್ಬಿನ ಕಡಲ್ಗಳ್ಳ(pirate) ವಾವರನನ್ನು ಯುದ್ದದಲ್ಲಿ ಸೋಲಿಸಿ ಆತನ ಸ್ನೇಹ ಸಂಪಾದಿಸಿ, ಪಾಂಡ್ಯರಾಜರಿಗೆ ನಿಷ್ಟನಾಗಿದ್ದ ಕೊಚ್ಚು ಕಡುತ, ತಳಪರದ ವಿಲ್ಲನ್ ಮತ್ತು ಮಲ್ಲನ್ ಎಂಬ ಯುದ್ಧವೀರರೊಡನೆ ಉದಯನನ ವಿರುದ್ದ ಯುದ್ಧ ಸಾರುತ್ತಾನೆ. ಕರಿಮಲೈ ಕೊಟ್ಟದ ಕರಿಕಾನನದಲ್ಲಿ ನಡೆದ ಭೀಕರ ಯುದ್ಧದಲ್ಲಿ ಉದಯನನ ಪಡೆಯನ್ನು ಅಯ್ಯಪ್ಪನ ಸೈನ್ಯ ನಾಮಾವಶೇಷಗೊಳಿಸಿತು. ಅಯ್ಯಪ್ಪನ ಬಲಗೈ ಬಂಟನಾಗಿದ್ದ ಕೊಚ್ಚು ಕಡುತ ಉದಯನನನ್ನು ತರಿದು ಬಿಸುಡುತ್ತಾನೆ. ಯುದ್ಧದ ನಂತರ ಎರುಮೇಲಿಯ ಶರಂಗುಟ್ಟಿಯಲ್ಲಿ ತನ್ನ ಶಸ್ತ್ರಾಸ್ತ್ರಗಳನ್ನೆಲ್ಲ ಇಟ್ಟು ಸೀದಾ ಶಬರಿಮಲೈಗೆ ತೆರಳಿದ ಅಯ್ಯಪ್ಪ ಅಲ್ಲಿ ಶಾಸ್ತನ ದೇವಾಲಯವನ್ನು ಪುನರ್ನಿಮಿಸುವಂತೆ ತನ್ನ ಸಹಚರರಿಗೆ ತಿಳಿಸಿ ಮಣಿಮಂಟಪದಲ್ಲಿ ತಪಸ್ಸಿಗೆ ತೊಡಗುತ್ತಾನೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಶುಭದಿನವಾದ ಮಕರ ಸಂಕ್ರಾಂತಿಯಂದು ಸ್ವತಃ ತಾನೇ ಶಾಸ್ತನ ಮೂರ್ತಿಯನ್ನು ಹೊಸದಾಗಿ ನಿರ್ಮಿಸಿದ ಶಬರಿಮಲೆಯ ದೇವಾಲಯದಲ್ಲಿ ಪ್ರತಿಷ್ಟಾಪಿಸುತ್ತಾನೆ. ಅಲ್ಲಿಂದ ಒಬ್ಬನೇ ಪೊನ್ನಂಬಲಮೇಡುವಿನ ಕಾಡಿಗೆ ತೆರಳಿದ ಅಯ್ಯಪ್ಪ ಜ್ಯೋತಿರೂಪದಲ್ಲಿ ಕೊನೆಯದಾಗಿ ದರ್ಶನ ನೀಡಿದನೆಂದು ಹೇಳಲಾಗುತ್ತದೆ. (ಇದರ ಪ್ರತೀಕವೇ ಈಗ ಬೆಟ್ಟದಲ್ಲಿ ಕಾಣುವ ಮಕರಜ್ಯೋತಿ, ಮಕರವಿಳಕ್ಕು ಎಂಬುದು ಪೂಜಾಕಾಲದಲ್ಲಿ ಆಕಾಶದಲ್ಲಿ ಕಾಣಿಸಿಕೊಳ್ಳುವ ನಕ್ಷತ್ರ. ಮಕರಜ್ಯೋತಿ ಮಾನವನಿರ್ಮಿತವೆಂದು ಬೊಬ್ಬೆಹೊಡೆಯುವವರಿಗೆ ಜ್ಯೋತಿ ಮತ್ತು ವಿಳಕ್ಕುಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲವೆಂದೇ ಅರ್ಥ). ಅದರಾಚೆ ಅಯ್ಯಪ್ಪನನ್ನು ಕಂಡವರಿಲ್ಲ. ಪಂಡಾಲಂನ ಜನರಿಗೆ ಬಾಲಕ ಅಯ್ಯಪ್ಪನು ಸ್ವತಃ ಧರ್ಮಶಾಸ್ತನ ಅವತಾರವೆಂದು ಮನವರಿಕೆಯಾಗುತ್ತದೆ. ಅಲ್ಲಿಂದಾಚೆ ಮಲೆಯಲ್ಲಿ ಶಾಸ್ತನ ರೂಪದಲ್ಲಿ ಸ್ವತಃ ಅಯ್ಯಪ್ಪನೇ ಪೂಜಿಸಲ್ಪಡುತ್ತಾನೆ. ಧರ್ಮಶಾಸ್ತನೆಂದರೆ ಧರ್ಮವನ್ನು ಶಾಸಿಸುವನೆಂದು. ನಾವಿಂದು ಅಯ್ಯಪ್ಪನದೆಂದು ಕೇಳುವ ಕಥೆಯೆಲ್ಲ ಅವನ ಜೊತೆ ಸಮೀಕರಿಸಲ್ಪಟ್ಟ ಹರಿಹರ ಪುತ್ರ ಧರ್ಮಶಾಸ್ತನದ್ದು. ಯಜುರ್ವೇದದಲ್ಲೂ ’ಶಾಸ್ತಃ ಅಧಿಪತಿರ್ ವೋ ಅಸ್ತು’ ಎಂದು ಶಾಸ್ತನನ್ನು ಸ್ತುತಿಸಲಾಗಿದೆ. ಕಾಲಾಗ್ನಿ ರುದ್ರೋಪನಿಷತ್, ಮೈತ್ರೇಯಿ ಉಪನಿಷತ್, ತೈತ್ತರೀಯ ಅರಣ್ಯಕದಲ್ಲೂ ಶಾಸ್ತನ ಕುರಿತಾದ ಶ್ಲೋಕಗಳಿವೆ. ಶಾಸ್ತನೆಂಬ ಹೆಸರು ಕೇವಲ ಭಾರತದ ಮಾತ್ರವಲ್ಲ ಪ್ರಾಚೀನ ಗ್ರೀಕಿನ ಪುರಾಣಗಳಲ್ಲೂ ಪ್ರಸ್ತಾಪಿಸಲ್ಪಟ್ಟಿದೆ. ಇಜಿಪ್ಟಿನ ಕೆಂಪು ಸಮುದ್ರದ ಹತ್ತಿರ ಕಜಿರ್-ಅಲ್-ಖದಿಮ್ ಎಂಬ ಸ್ಥಳದಲ್ಲಿ ದೊರಕಿದ  ಕ್ರಿ.ಪೂ ೨ನೇ ಶತಮಾನದ ಪ್ಯಾಪಿರಸ್ ದಾಖಲೆಗಳಲ್ಲೂ ಶಾಸ್ತನ ಉಲ್ಲೇಖವಿದೆ. ತಮಿಳಿನ ಪ್ರಾಚೀನ ಶೈವ ಭಕ್ತಿ ಸಾಹಿತ್ಯವಾದ ತಿರುಮುರೈನ ತೇವಾರಮ್‌ನಲ್ಲಿ ಶಾಸ್ತನನ್ನು ಶಿವನ ಮಗನೆನ್ನಲಾಗಿದೆ("ಶಾಸ್ತಾನೈ ಮಗನೈ ವೈದಾರ್). ನನ್ನ ಅನುಮಾನದಂತೆ ತುಳುನಾಡಿನಲ್ಲಿ ಸುಬ್ರಹ್ಮಣ್ಯ, ಮಲಯಾಳದೇಶದ ಶಾಸ್ತ ಮತ್ತು ತಮಿಳಿನ ಬ್ರಹ್ಮಶಾಸ್ತನೆಂದು ಕರೆಯಲ್ಪಡುವ ಮುರುಗ ಒಂದೇ ಆಗಿರಬಹುದೇ?(ನನ್ನ ಅನುಮಾನವಷ್ಟೇ!). ಭಗವದ್ಗೀತೆಯಂತೆಯೇ ಬ್ರಹ್ಮಾಂಡಪುರಾಣದ ಒಂದು ಭಾಗವಾದ
    
ಕಂಚಿಯಲ್ಲಿರುವ ಶಾಸ್ತನ ಮೂರ್ತಿ
’ಭೂತನಾಥೋಪಾಖ್ಯಾನ’ವು ಶಾಸ್ತನು ರಾಜಶೇಖರ ಪಾಂಡ್ಯನಿಗೆ ನೀಡಿದ ಉಪದೇಶಗಳ ಸಂಗ್ರಹ. ಇನ್ನು ಶಬರಿಮಲೆಯು ಬೌದ್ಧ ದೇವಾಲಯವೆಂದೂ, ಶಾಸ್ತನೆನ್ನುವುವುದು ಬುದ್ಧನ ಹೆಸರೆಂದೂ ವಾದ ಮಾಡುವ ಅಂಬೇಡ್ಕರ್‌ವಾದಿಗಳೂ ಇದ್ದಾರೆ(http://www.ambedkar.org/Tirupati/). ಬುದ್ಧನಿಗೆ ಶಾಸ್ತನೆಂಬ ಹೆಸರಿರುವ ಉಲ್ಲೇಖ ದೊರಕುವುದು ಅಮರಕೋಶದ मुनींद्रः श्रीधनः शास्ता मुनिः शाक्यमुनिस्तु यः ಎಂಬ ಶ್ಲೋಕದಲ್ಲಿ. ಹಾಗೆ ನೋಡಿದರೆ ಅದನ್ನು ರಚಿಸಿದ ಅಮರಸಿಂಹ ಮೂಲತಃ ಜೈನ. ಇದೇ ಅಮರಕೋಶವು ಭಗವಾನ್ ಬುದ್ಧ ಮತ್ತು ಗೌತಮ ಬುದ್ಧರಿಬ್ಬರೂ ಬೇರೆಬೇರೆ, ಮೂಲ ಬುದ್ಧನು ವಿಷ್ಣುವಿನ ಅವತಾರವಾದರೆ ಗೌತಮನೊಬ್ಬ ಸಾಧಾರಣ ಮನುಷ್ಯನೆನ್ನುತ್ತದೆ. ಜೊತೆಗೆ ’ತಥಾಗಥ’ನೆನ್ನುವುದು ಬುದ್ಧನದ್ದಲ್ಲದೇ ಮಹಾವೀರನ ಹೆಸರೆನ್ನುತ್ತದೆ. ಹಾಗಾದರೆ ಬುದ್ಧ ಮಹಾವೀರರಿಬ್ಬರೂ ಒಬ್ಬರೇ ಆಥವಾ ಬುದ್ಧನೆನ್ನಲಾಗುವ ಎಷ್ಟು ವ್ಯಕ್ತಿಗಳಿದ್ದರು?
ವಾವರ ಮತ್ತು ಅಯ್ಯಪ್ಪ
  ಶಬರಿಮಲೈನಲ್ಲಿ ಅಯ್ಯಪ್ಪನ ಜೊತೆ ವಾವರಸ್ವಾಮಿಯಾಗಿ ಪೂಜಿಸಲ್ಪಡುವವನು ಆತನ ಸಹಚರ ಮುಸ್ಲಿಂ ಯೋಧ ವಾವರ. ಈ ವಾವರ ಯಾರೆಂಬ ಬಗ್ಗೆ ಬಹಳಷ್ಟು ಕಥೆಗಳೂ ಜೊತೆಗೊಂದಿಷ್ಟು ಗೊಂದಲಗಳೂ ಇವೆ. ಈತನ ೧೫ನೇ ಪೀಳಿಗೆಯವರೆನ್ನಲಾಗುವ ವೆಟ್ಟಿಪ್ಲಕ್ಕಲ್ ಕುಟುಂಬದವರು ಅಲಪ್ಪುಳದ ಹತ್ತಿರ ವಾಸಿಸುತ್ತಿದ್ದಾರೆ. ಶಬರಿಮಲೆಯಲ್ಲಿರುವ ವಾವರನ ದೇವಾಲಯದ ಪೂಜೆಯ ಉಸ್ತುವಾರಿ ಇವರದ್ದೇ. ಒಂದು ಕಥೆಯ ಪ್ರಕಾರ ಪಂಡಾಲಂನ ಮೇಲೆ ದಾಳಿ ಮಾಡಿದ ವಾವರನನ್ನು ಅಯ್ಯಪ್ಪನು ಸೋಲಿಸುತ್ತಾನೆ. ಈ ಘಟನೆಯ ನಂತರ ಅವರಿಬ್ಬರೂ ಒಳ್ಳೆಯ ಗೆಳೆಯರಾಗುತ್ತಾರೆ. ಈತ ಕೇರಳದಲ್ಲಿ ಇಸ್ಲಾಮಿನ ಪ್ರಸಾರಕ್ಕಾಗಿ ಬಂದಿದ ಹಜರತ್ ವಾವರ್ ಬಾಬಾ ಎಂಬ ಸಂತನಾಗಿದ್ದನೆಂಬ ವಾದವೂ ಇದೆ. ಆದರೆ ಹೆಚ್ಚಿನ ದಾಖಲೆಗಳು ಮತ್ತು ಜನಪದ ಕಥೆಗಳು ಹೇಳುವಂತೆ ಈತನೊಬ್ಬ ಅರೇಬಿಯಾ ಮೂಲದ ಕಡಲುಗಳ್ಳ. ಕೇರಳಕ್ಕೂ ಅರಬ್ಬಿಗೂ ಮಧ್ಯ ಸಾವಿರಾರು ವರ್ಷದಿಂದ ಜಲಮಾರ್ಗದ ಮೂಲಕ ವ್ಯಾಪಾರ ವ್ಯವಹಾರದ ನಂಟಿತ್ತು. ಇಸ್ಲಾಮ್ ಭಾರತದಲ್ಲಿ ಮೊದಲು ಕಾಲಿಟ್ಟಿದ್ದೇ ಕೇರಳದ ಮಲಬಾರಿನಲ್ಲಿ. ಇಲ್ಲಿನ ಕಾಳುಮೆಣಸಿನ ರುಚಿಯ ಬೆನ್ನತ್ತಿ ಬಂದಿದ್ದ ವಾಸ್ಕೋಡಗಾಮನೂ ಒಬ್ಬ ಅಪ್ಪಟ ಕಡಲ್ಗಳ್ಳನೇ. ಕಡಲ್ಗಳ್ಳನಾಗಿ ಕೊಳ್ಳೆಹೊಡೆಯಲು ಕೇರಳದ ಕಾಯಂಕುಳಂನ ತೀರಕ್ಕೆ ವಾವರ ಬಂದಿದ್ದನಂತೆ. ಈತ ಅರಬಿನ ವ್ಯಾಪಾರಿಯಾಗಿದ್ದನೆಂಬ ವಾದಕ್ಕೆ ಪುಷ್ಟಿಕೊಡುವುದೇ ಇಂದಿಗೂ ಶಬರಿಮಲೆಗೆ ಇರುಮುಡಿ ಕಟ್ಟುವವರು ವಾವರನಿಗಾಗಿ ಕಾಳುಮೆಣಸನ್ನು ತೆಗೆದುಕೊಂಡು ಹೋಗಿ ಸಮರ್ಪಿಸುವುದು. ಕಾಯಂಕುಳಂನ ರಾಜನ ಕೋರಿಕೆಯ ಮೇರೆಗೆ ಅಯ್ಯಪ್ಪನು ವಾವರನನ್ನು ಯುದ್ಧದಲ್ಲಿ ಸೋಲಿಸಿ ತನ್ನ ಅನುಯಾಯಿಯಾಗಿಸಿಕೊಳ್ಳುತ್ತಾನೆ.  ಮುಂದೆ ಅಯ್ಯಪ್ಪ ವಾವರರಿಬ್ಬರೂ ಗಾಢ ಸ್ನೇಹಿತರಾದರು. ವಾವರನಿಗೊಂದು ದೇವಾಲಯವನ್ನು ನಿರ್ಮಿಸುವಂತೆಯೂ ತನ್ನನ್ನು ಪೂಜಿಸುವ ಮೊದಲು ವಾವರನನ್ನು ದರ್ಶಿಸುವಂತೆಯೂ ಅಯ್ಯಪ್ಪ ತನ್ನ ಭಕ್ತರಿಗೆ ತಿಳಿಸಿದನೆಂದು ನಂಬಿಕೆ. ಇದೇ ಕಾರಣಕ್ಕೆ ಅಯ್ಯಪ್ಪನ ದೇವಾಲಯಕ್ಕೆ ತೆರಳುವ ಮುನ್ನ ಭಕ್ತರು ಪಕ್ಕದಲ್ಲಿರುವ ವಾವರನ ಮಸೀದಿಗೆ ಭೇಟಿಕೊಡುವ ಸಂಪ್ರದಾಯವಿದೆ.
      ನರರ ನಡುವಿನ ಅಡ್ಡಗೋಡೆಗಳನ್ನು ಕುಟ್ಟಿ ಕೆಡುಹಿ, ಕಂದಕಗಳನ್ನು ತುಂಬಿ, ಜನಕೋಟಿಯನ್ನು ಒಂದು ದಿವ್ಯ ಆದರ್ಶ ಸಾಧನೆಗಾಗಿ ಒಗ್ಗೂಡಿಸಿದ ಅದ್ಭುತ ಶಕ್ತಿ ಅಯ್ಯಪ್ಪನದು. ಮಾಲಾಧಾರಣೆ, ಮಂಡಲವ್ರತ, ಶಬರಿಮಲೆ ಯಾತ್ರೆ, ಮಕರ ಜ್ಯೋತಿ ದರ್ಶನ, ಮಕರ ಬೆಳಕು ಉತ್ಸವದಲ್ಲಿ ಪಾಲ್ಗೊಳ್ಳುವಿಕೆ - ಇವೆಲ್ಲ ಇಂದು ಲಕ್ಷ-ಲಕ್ಷ ಅಯ್ಯಪ್ಪ ಭಕ್ತರಿಗೆ ಮುದನೀಡುವ ಸಂಗತಿಗಳು. ದೇಶ-ಭಾಷೆ ಯಾವುದೇ ಇರಲಿ, ಪರಸ್ಪರ ಒಡನಾಡಿಗಳಾಗಿ ಶಬರಗಿರಿ ಯಾತ್ರೆ ಮಾಡಿ, ಸ್ವಾಮಿದರ್ಶನ ಪಡೆದು ಪುಲಕಿತರಾಗಿ ಬರುವ ಭಕ್ತಾದಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ದೇಶಾದ್ಯಂತ ಹೆಚ್ಚುತ್ತಿದೆ. ಇದು ಜನಜೀವನದಲ್ಲಿ ಹಿಂದೂ ಧರ್ಮದ ಅಂತಸ್ಸತ್ತ್ವದ ಅಭಿವ್ಯಕ್ತಿಗೊಂದು ಜ್ವಲಂತ ನಿದರ್ಶನ.