Pages

Tuesday, November 21, 2017

ಪದ್ಮಾವತಿ: ಕಾವ್ಯಕನ್ನಿಕೆಯ ಸುತ್ತಮುತ್ತ

 
ಈ ಕಥೆ ಎಲ್ಲರೂ ಬಹಳಷ್ಟು ಸಾರಿ ಕೇಳಿದ್ದೇ, ಓದಿದ್ದೇ, ನೋಡಿದ್ದೇ. ಅದರೂ ನಾನೊಮ್ಮೆ ಹೇಳಿಬಿಡುತ್ತೇನೆ.
       ರಾಣಿ ಪದ್ಮಾವತಿ ಉರುಫ್ ಪದ್ಮಿನಿ. ಸಿಂಹಳದ ರಾಜಾ ಗಂಧರ್ವಸೇನನ ಮಗಳು. ಅವಳ ಸೌಂದರ್ಯದ ವರ್ಣನೆ ಸಪ್ತಸಾಗರಗಳಾಚೆ ದಾಟಿ ನಾಲ್ಕು ದಿಕ್ಕುಗಳಲ್ಲಿಯೂ ಹಬ್ಬಿತ್ತು. ಪದ್ಮಾವತಿಯ ಬಳಿ ಹಿರಾಮಣಿ ಎನ್ನುವ ಮಾತನಾಡುವ ಗಿಳಿಯಿತ್ತಂತೆ. ಒಮ್ಮೆ ಬೇಟೆಗಾರನೊಬ್ಬನ ಬಲೆಗೆ ಬಿದ್ದ ಗಿಳಿ ಹೇಗೋ ಮೇವಾಡದ ರಾಜಾ ರತ್ನಸಿಂಹನ ಬಳಿ ಸೇರಿತು. ರತ್ನಸಿಂಹ ಚಿತ್ರಕೂಟವನ್ನಾಳಿದ ಗುಹಿಲ ವಂಶದ ರಾವಲ ಶಾಖೆಯ ಅರಸು. ಇವನಿಗೆ ಈಗಾಗಲೆ ನಾಗಮತಿ ಎನ್ನುವ ರಾಜಕುಮಾರಿಯೊಡನೆ ಮದುವೆಯಾಗಿತ್ತು. ಗಿಳಿಯ ಬಾಯಿಂದ ಕೇಳಿದ ಪದ್ಮಾವತಿಯ ಬೆಡಗಿನ ಸ್ತುತಿಗೆ ಮಾರುಹೋದ ರತ್ನಸಿಂಹ ಅವಳನ್ನು ಮದುವೆಯಾಗಲು ನಿರ್ಧರಿಸುತ್ತಾನೆ. ತನ್ನ ಹದಿನಾರು ಸಾವಿರ ಸೈನಿಕರೊಡನೆ ಸಮುದ್ರದಾಟಿ ಮಾರುವೇಷದಲ್ಲಿ ಸಿಂಹಳಕ್ಕೆ ಬಂದ ರತ್ನಸಿಂಹ ಪದ್ಮಾವತಿಯ ಭೇಟಿಗೆ ದಿನಗಟ್ಟಲೆ ಕಾದ. ಅವಳ ಭೇಟಿ ಸಾಧ್ಯವಾಗದ ಹತಾಶೆನಾಗಿದ್ದವನ ಕನಸಿನಲ್ಲಿ ಕಾಣಿಸಿಕೊಂಡ ಶಿವಪಾರ್ವತಿಯರು ಸಿಂಹಳವನ್ನು ಯುದ್ಧದಲ್ಲಿ ಗೆದ್ದು ಪದ್ಮಾವತಿಯನ್ನು ತನ್ನವಳಾಗಿಸಿಕೊಳ್ಳುವಂತೆ ಉಸುರಿದರಂತೆ. ಯುದ್ಧದಲ್ಲಿ ಗಂಧರ್ವಸೇನನಿಗೆ ರತ್ನಸಿಂಹನ ಪರಾಕ್ರಮದ ಅರಿವಾಯ್ತು. ಅಂಥ ವೀರನ ಮನೆಗೆ ತನ್ನ ಮಗಳು ಸೇರುವುದು ಭಾಗ್ಯವೆಂದುಕೊಂಡು ಸಂತೋಷದಿಂದ ಪದ್ಮಾವತಿಯನ್ನು ಧಾರೆಯೆರೆದುಕೊಟ್ಟ. ಮಾತ್ರವಲ್ಲ ಅವಳ ಹದಿನಾರು ಸಾವಿರ ಗೆಳತಿಯರನ್ನು ರತ್ನಸಿಂಹನ ಜೊತೆಬಂದವರೊಟ್ಟಿಗೆ ಮದುವೆ ಮಾಡಿಸಿದ. ಮೇವಾಡಕ್ಕೆ ತಿರುಗಿ ಬಂದ ರತ್ನಸಿಂಹ ತನ್ನಿಬ್ಬರು ರಾಣಿಯರಾದ ನಾಗಮತಿ ಹಾಗೂ ಪದ್ಮಾವತಿಯರೊಡನೆ ಸುಖವಾಗಿ ಸಂಸಾರ ಮಾಡಿದ.
ಇದು ಕತೆಯ ಫಸ್ಟ್ ಹಾಫ್ ಆಯಿತು. ಇಂಟರ್ವಲ್ ಆದ ನಂತರ ಮುಂದೆ ಕೇಳಿ.
       ರತ್ನಸಿಂಹನ ಆಸ್ಥಾನದಲ್ಲಿ ರಾಘವ ಚೈತನ್ಯನೆಂಬ ಮಂತ್ರವಾದಿಯಿದ್ದ. ಒಮ್ಮೆ ವಾಮಾಚಾರದಲ್ಲಿ ಪಾಲ್ಗೊಂಡ ರಾಘವನನ್ನು ರತ್ನಸಿಂಹ ಗಡಿಪಾರು ಮಾಡುತ್ತಾನೆ. ಈ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ ರಾಘವ ಸೀದಾ ದೆಹಲಿಗೆ ತೆರಳಿ ಅಲ್ಲಾದ್ದೀನ್ ಖಿಲ್ಜಿಯ ಸ್ನೇಹ ಸಂಪಾದಿಸುತ್ತಾನೆ. ರಾಣಿ ಪದ್ಮಿನಿಯ ಅಪ್ರತಿಮ ಅಂದಚಂದವನ್ನು ಖಿಲ್ಜಿಯ ಎದುರು ಹೊಗಳಿ ಮೇವಾಡವನ್ನು ಮುತ್ತಿ ಪದ್ಮಿನಿಯನ್ನು ವಶಪಡಿಸಿಕೊಳ್ಳುವಂತೆ ಕಿವಿಯೂದುತ್ತಾನೆ. ಹೇಳಿಕೇಳಿ ಖಿಲ್ಜಿ ಮೊದಲೇ ಕಾಮುಕವ್ಯಾಘ್ರ. ಪಕ್ಕಾ ಬೈಸೆಕ್ಷುವಲ್ ಖಿಲ್ಜಿಗೆ ಹೆಣ್ಣುಗಂಡುಗಳ ವ್ಯತ್ಯಾಸವೇ ಗೊತ್ತಿರಲಿಲ್ಲ. ಗಂಡಸರು, ಹೆಂಗಸರು, ಮಕ್ಕಳು ಸೇರಿ ಅವನ ಹರೇಮ್‌ನಲ್ಲಿದ್ದವರು ಬರೋಬ್ಬರಿ ಎಪ್ಪತ್ತು ಸಾವಿರ ಮಂದಿ. ಅದರಲ್ಲೂ ಅವನಿಗೆ ಅತ್ಯಂತ ಪ್ರೀತಿಪಾತ್ರಳಾದವಳು, ಛೀ.... ಆದವನು ಚಾಂದರಾಮ. ಗುಜರಾತಿನ ಬಚ್ಚಾ ಬಾಝಿ ಮಾರ್ಕೇಟಿನಲ್ಲಿ ಚಾಂದರಾಮನನ್ನು ನೋಡಿದ ಕೂಡಲೆ ಖಿಲ್ಜಿಗೆ ಲವ್ ಎಟ್ ಫಸ್ಟ್ ಸೈಟ್ ಶುರುವಾಗಿತ್ತು.  (ಬಚ್ಚಾಬಾಝಿ ಎಂಬುದು ಅಫ್ಘಾನಿಸ್ತಾನದಿಂದ ಭಾರತದ ಒಳಪ್ರವೇಶಿಸಿದ್ದು. ದಾಳಿಕಾರರು ತಮ್ಮ ದಾಹ ತೀರಿಸಿಕೊಳ್ಳಲು ಪುರುಷ ನರ್ತಕರು ಹಾಗೂ ಗಂಡುಮಕ್ಕಳನ್ನು ಸ್ತ್ರೀವೇಷ ತೊಡಿಸಿ ತಮ್ಮೊಡನೆ ಕರೆತರುತ್ತಿದ್ದರು. ಇದು ಮುಂದೆ ಮುಘಲರ ಕಾಲದಲ್ಲಿ ದೊಡ್ಡ ದಂಧೆಯಾಗಿಯೇ ಬೆಳೆಯಿತು. ಈ ಬಚ್ಚಾ ಬಾಝಿ ಅಪ್ಘಾನಿಸ್ತಾನದಲ್ಲಿ ಇಂದಿಗೂ ದೊಡ್ಡ ಉದ್ಯಮ. ಅದರಲ್ಲಿ ಅಮೇರಿಕಾದ ಸೈನ್ಯದ ಪಾಲುದರಿಕೆಯೇನು ಕಡಿಮೆಯದ್ದಲ್ಲ. ಅದನ್ನು ಬರೆಯಹೊರಟರೆ ದೊಡ್ಡ ಪುರಾಣವಾದೀತು)  ಸಾವಿರ ವರಹಗಳನ್ನು ಕೊಟ್ಟು ಖರೀದಿಸಿದ್ದರಿಂದ ಇವನಿಗೆ ಹಜಾರಿ ದಿನಾರಿ ಎಂಬ ಹೆಸರು ಅಂಟಿಕೊಂಡಿತು. ಚಾ೦ದರಾಮನ ವೃಷಣಗಳನ್ನು ಛೇದಿಸಿ, ಇಸ್ಲಾಮಿಗೆ ಮತಾ೦ತರಿಸಿದ ಖಿಲ್ಜಿ ಅವನನ್ನು ತನ್ನ ಅ೦ತಃಪುರದಲ್ಲಿಟ್ಟುಕೊ೦ಡ. ಇವನ ಮೇಲೆ ಅಲಾದೀನನ ಬ್ಲೈ೦ಡ್ ಲವ್ ಎಷ್ಟರಮಟ್ಟಿತ್ತೆ೦ದರೆ ಇವನಿಗೋಸ್ಕರ ತನ್ನ ಸ್ವ೦ತ ಹೆ೦ಡತಿ ಮಾಲಿಕ್-ಇ-ಜಹಾನ್ ಮತ್ತು ಮಕ್ಕಳಾದ ಖಿಜರ್ ಖಾನ್ ಮತ್ತು ಶಾದಿ ಖಾನರನ್ನೇ ಜೈಲಿಗಟ್ಟಿದ. ಈ ಚಾ೦ದರಾಮನೇ ಮು೦ದೆ ಖಿಲ್ಜಿ ಸಾಮ್ರಾಜ್ಯ ಕ೦ಡ ಅಪ್ರತಿಮ ದ೦ಡನಾಯಕನೆನೆಸಿಕೊ೦ಡ ಮಲಿಕ್ ಕಾಫರ್.
ಅಲ್ಲಾದ್ದೀನ್ ಖಿಲ್ಜಿ
        ಇರಲಿ ಬಿಡಿ. ಇಷ್ಟೆಲ್ಲ ಘನಸ್ತಿಕೆಯ ಖಿಲ್ಜಿ ಜಗದೇಕಸುಂದರಿ ಪದ್ಮಿನಿಯ ವರ್ಣನೆ ಕೇಳಿದರೆ ಸುಮ್ಮನೇ ಬಿಡುತ್ತಾನೆಯೇ! ಪದ್ಮಿನಿಯನ್ನು ಒಮ್ಮೆ ಕಣ್ಣಾರೆ ನೋಡಬೇಕೆಂದು ರತ್ನಸಿಂಹನಿಗೆ ಸಂದೇಶ ಕಳುಹಿಸಿದ. ರತ್ನಸಿಂಹನಿಗೆ ಸಂದಿಗ್ಧ. ದೆಲ್ಲಿ ಸುಲ್ತಾನನಿಗೆ ಹೆಂಡತಿಯನ್ನು ತೋರಿಸುವುದಕ್ಕೆ ಒಪ್ಪಿಕೊಳ್ಳುವುದು ಹೇಗೆ? ಒಪ್ಪಿಕೊಳ್ಳದಿದ್ದರೆ ಸುಲ್ತಾನ ಸುಮ್ಮನೇ ಬಿಟ್ಟಾನಾ? ಅಳೆದು ತೂಗಿ ಕೊನೆಗೆ ಕನ್ನಡಿಯಲ್ಲಿ ಅವಳ ಮುಖ ತೋರಿಸಲು ಒಪ್ಪಿರುವುದಾಗಿ ಮಾರುತ್ತರ ನೀಡಿದ. ಸಿಂಗಾರ ರಾವಣನಂತೆ ಅಲಂಕರಿಸಿಕೊಂಡು ಮೇವಾಡಕ್ಕೆ ಬಂದ ಖಿಲ್ಜಿ ಕನ್ನಡಿಯಲ್ಲಿ ಪದ್ಮಿನಿಯ ಮುಖ ನೋಡಿದವನೇ ಹೌಹಾರಿಬಿದ್ದ. ತನ್ನ ಜನಾನಾದಲ್ಲಿದ್ದ ಎಲ್ಲರನ್ನು ಒಟ್ಟುಸೇರಿಸಿದರೂ ಇವಳಂಥ ಒಬ್ಬ ಸುಂದರಿ ಹುಟ್ಟಲಾರಳೆಂದು ಅವನಿಗೆ ಮನವರಿಕೆಯಾಗಿಯ್ತು. ಹೇಗಾದರೂ ಮಾಡಿ ಪದ್ಮಿನಿಯನ್ನು, ಮೇವಾಡವನ್ನು ವಶಪಡಿಸಿಕೊಳ್ಳಬೇಕೆಂಬ ಹಠಕ್ಕೆ ಬಿದ್ದವನೇ ರತ್ನಸಿಂಹನನ್ನು ಹೊಗಳಿ ದೆಹಲಿ ಮರುಪ್ರಯಾಣ ಬೆಳೆಸುವುದಾಗಿ ತಿಳಿಸಿದ. ರಾಜಮರ್ಯಾದೆಯಂತೆ ಅವನನ್ನು ಕೋಟೆಯ ದ್ವಾರದವರೆಗೆ ಬೀಳ್ಕೊಡಲು ಬಂದ ರತ್ನಸಿಂಹನನ್ನು ಮೊದಲೇ ತಯಾರಿದ್ದ ಖಿಲ್ಜಿಯ ಸೈನಿಕರು ಮುಗಿಬಿದ್ದು ಬಂಧಿಸಿದರು.  
ಮೇವಾಡದ ರಾಜಕವಿ ಪಂಡಿತ ನರೇಂದ್ರ ಮಿಶ್ರರ ಪದ್ಮಿನಿ ಗೋರಾಬಾದಲ್ ಎಂಬ ಅಪ್ರತಿಮ ವೀರರಸದ ಕವಿತೆ ಇಲ್ಲಿಂದ ಶುರುವಾಗುತ್ತದೆ.
दोहराता हूँ सुनो रक्त से लिखी हुई क़ुरबानी |
जिसके कारन मिट्टी भी चन्दन है राजस्थानी ||
रावल रत्न सिंह को छल से कैद किया खिलजी ने
काल गई मित्रों से मिलकर दाग किया खिलजी ने
जिसको सुनकर शक्ति शौर्य पर फिर अँधियारा छाया
दस दिन के भीतर न पद्मिनी का डोला यदि आया
यदि ना रूप की रानी को तुमने दिल्ली पहुँचाया
तो फिर राणा रत्न सिंह का शीश कटा पाओगे
शाही शर्त ना मानी तो पीछे पछताओगे
ಹತ್ತು ದಿನಗಳಲ್ಲಿ ಪದ್ಮಿನಿ ತನ್ನವಳಾಗದಿದ್ದರೆ ರತ್ನಸಿಂಹ ತಲೆಕಡಿದು ಕಳುಹಿಸುವುದಾಗಿ ಖಿಲ್ಜಿ ಬೆದರಿಕೆ ಹಾಕಿದ.
खिलजी मचला था पानी में आग लगा देने को
पर पानी प्यास बैठा था ज्वाला पी लेने को
गोरा का आदेश हुआ सज गए सात सौ डोले
और बाँकुरे बदल से गोरा सेनापति बोले
खबर भेज दो खिलजी पर पद्मिनी स्वयं आती है
अन्य सात सौ सखियाँ भी वो साथ लिए आती है
       ಇತ್ತ ಪದ್ಮಿನಿ ಮೇವಾಡದ ಸೇನಾಪತಿ ಗೋರಾನ ಜೊತೆ ಒಂದು ಕೂಟನೀತಿ ರಚಿಸಿದಳು. ಸೈನಿಕ ಪಹರೆ ಇಲ್ಲದೆ  ತನ್ನ ಪತಿಯನ್ನು  ಸಂಧಿಸಲು ಅವಕಾಶ ನೀಡಿದರೆ ತಾನು ತನ್ನ ಏಳುನೂರು ಸಖಿಯರೊಡನೆ ದಿಲ್ಲಿಗೆ ಬಂದು ನಿನ್ನವಳಾಗುವುದಾಗಿ ತಿಳಿಸಿದಳು. ಒಬ್ಬಳ ಜೊತೆ ಇನ್ನೂ ಏಳುನೂರು ಸಿಕ್ಕರೆ ಲಾಭವೇ ತಾನೆ ಎಂದು ಖಿಲ್ಜಿ ಮರುಮಾತಾಡದೇ ಒಪ್ಪಿಕೊಂಡ.
       ಆದರೆ ನಡೆದಿದ್ದೇ ಬೇರೆ. ಏಳುನೂರು ಪಲ್ಲಕಿಗಳಲ್ಲಿ ಪ್ರತಿ ಪಲ್ಲಕ್ಕಿಯಲ್ಲೂ ವೇಷಮರೆಸಿಕೊಂಡ ಸಶಸ್ತ್ರ ಸೈನಿಕರು ಜೊತೆಗೆ ನಾಲ್ಕು ಹೊರುವವರು ಒಟ್ಟೂ ಮೂರೂವರೆ ಸಾವಿರ ಮಂದಿ ಗೋರಾಬಾದಲರ ನೇತೃತ್ವದಲಿ ದಿಲ್ಲಿ ತಲುಪಿದರು. ಕೊಟ್ಟ ಮಾತಿನಂತೆ ಖಿಲ್ಜಿ ಪಲ್ಲಕ್ಕಿಯಲ್ಲಿದ್ದ ಪದ್ಮಿನಿಗೆ ರತ್ನಸಿಂಹನನ್ನು ಭೇಟಿಯಾಗಲು ಅವಕಾಶ ಕೊಟ್ಟ. ಆದರೆ ಪಲ್ಲಕಿಯಲ್ಲಿ ಅವಳಿದ್ದರೆ ತಾನೆ. ಸೈನಿಕರು ರಾಣನನ್ನು ಸೆರೆಯಿಂದ ಬಿಡಿಸಿ ಮೇವಾಡದತ್ತ ಕರೆದೊಯ್ದರು. ಸುದ್ದಿ ಖಿಲ್ಜಿಯ ದಂಡನಾಯಕ ಜಾಫರನಿಗೆ ತಲುಪಿತು. ಆತ ಸೈನ್ಯ ಸಜ್ಜುಗೊಳಿಸಿ ರತ್ನಸಿಂಹನ ಬೆನ್ನಟ್ಟಿದ್ದ.
राणा के पथ पर शाही सेना तनिक बढ़ा था
पर उसपर तो गोरा हिमगिरि सा अड़ा खड़ा था
ಆದರೆ ಅವರ ಎದುರಾದದ್ದು ರಾಜಸ್ಥಾನ ಕಂಡ ಎರಡು ಅಪ್ರತಿಮ ವೀರಮಣಿಗಳಾದ ಗೋರಾಬಾದಲರು.
यह कह के महाकाल बन गोरा रण में हुंकारा
लगा काटने शीश बही समर में रक्त की धारा
खिलजी की असंख्य सेना से गोरा घिरे हुए थे
लेकिन मानो वे रण में मृत्युंजय बने हुए थे
इस भीषण रण से दहली थी दिल्ली की दीवारें
गोरा से टकरा कर टूटी खिलजी की तलवारें
ಗೋರಾಬಾದಲರ ಶೌರ್ಯದೆದುರು ಖಿಲ್ಜಿಯ ಖಡ್ಗಗಳು ಕತ್ತರಿಸಿ ಬಿದ್ದವು. ಅವರನ್ನು ತಡೆವರಿಲ್ಲದೆ ದೆಹಲಿಯ ಕೋಟೆಗಳು ತತ್ತರಿಸಿ ಬಿದ್ದವು. ಲಕ್ಷ ಲಕ್ಷ ಸೈನಿಕರು ಗೋರಾಬಾದಲರ ಕತ್ತಿಗೆ ಸಿಕ್ಕು ತರಿದು ಹೋದರು.
मगर क़यामत देख अंत में छल से काम लिया था
गोरा की जंघा पर अरि ने छिप कर वार किया था
वहीँ गिरे वीर वर गोरा जफ़र सामने आया
शीश उतार दिया धोखा देकर मन में हर्षाया
ಎದುರಿಂದ ಗೆಲ್ಲಲಾಗದೇ ಹಿಂದಿನಿಂದ ಗೋರಾನ ಕಾಲಿಗೆ ಕತ್ತಿ ಬೀಸಿದನಂತೆ ಜಾಫರ್. ಕೆಳಗೆ ಬಿದ್ದವನ ಕುತ್ತಿಗೆಗೆ ಪ್ರಹಾರ ಮಾಡಿದ.
मगर वाह रे मेवाड़ी गोरा का धड़ भी दौड़ा
किया जफ़र पर वार की जैसे सर पर गिरा हतोड़ा
एक बार में ही शाही सेना पति चीर दिया था
जफ़र मोहम्मद को केवल धड़ ने निर्जीव किया था
ಎಂಥ ಅದ್ಭುತ ರೂಪಕವನ್ನು ಬಳಸುತ್ತಾರೆ ನರೇಂದ್ರಮಿಶ್ರರಿಲ್ಲಿ. ಕುತ್ತಿಗೆಯಿಲ್ಲದ ಗೋರಾನ ದೇಹ ವೈರಿಗಳ ಮೇಲೆ ಮುಗಿಬಿತ್ತಂತೆ. ಮುಂದಿನ ಹೊಡೆತಕ್ಕೆ ಜಾಫರ ನಿರ್ಜೀವನಾಗಿದ್ದ.
ज्यों ही जफ़र कटा शाही सेना का साहस लरज़ा
काका का धड़ लख बादल सिंह महारुद्र सा गरजा
ಚಿಕ್ಕಪ್ಪ ಗೋರಾನ ದೇಹ ಆರೀತಿ ಹೋರಾಡುವುದನ್ನು ನೋಡಿ ಬಾದಲ್ ತಾನೇನು ಕಡಿಮೆ ಎಂದು ಮಹಾರುದ್ರನಂತೆ ದೆಹಲಿಯ ಸೈನಿಕರ ಮೇಲೆರಗಿದ.
ज्वाला मुखी फहत हो जैसे दरिया हो तूफानी
सदियों दोहराएंगी बादल की रण रंग कहानी
अरि का भाला लगा पेट में आंते निकल पड़ी थीं
जख्मी बादल पर लाखो तलवारें खिंची खड़ी थी
कसकर बाँध लिया आँतों को केशरिया पगड़ी से
रण चक डिगा न वो प्रलयंकर सम्मुख मृत्यु खड़ी से
अब बादल तूफ़ान बन गया शक्ति बनी फौलादी
मानो खप्पर लेकर रण में लड़ती हो आजादी
उधर वीरवर गोरा का धड़ आर्दाल काट रहा था
और इधर बादल लाशों से भूदल पात रहा था
आगे पीछे दाएं बाएं जैम कर लड़ी लड़ाई
उस दिन समर भूमि में लाखों बादल पड़े दिखाई
ಎಂಥ ಅಪ್ರತಿಮ ವರ್ಣನೆ. ಪ್ರಳಯಭಯಂಕರ ಜ್ವಾಲಾಮುಖಿ ಬಾಯ್ದೆರೆದಂತೆ, ಭೀಕರ ಚಂಡಮಾರುತ ಅಪ್ಪಳಿಸಿದಂತೆ ಬಾದಲ್ ದೆಹಲಿಯ ಸೈನಿಕರ ಮೇಲೆ ಮುಗಿಬಿದ್ದ. ಹೊಟ್ಟೆಬಗೆದು ಕರುಳು ಹೊರಬಂದಿದ್ದರೂ ತನ್ನ ಪಗಡಿಯನ್ನು ಬಿಚ್ಚಿ ಹೊಟ್ಟೆಗೆ ಕಟ್ಟಿ ಹೋರಾಡುತ್ತಿದ್ದಾನೆ ಬಾದಲ್. ಆದರೆ......
मगर हुआ परिणाम वही की जो होना था
उनको तो कण कण अरियों के सोन तामे धोना था
अपने सीमा में बादल शकुशल पहुच गए थे
गारो बादल तिल तिल कर रण में खेत गए थे
ಕೊನೆಗೂ ಆಗುವುದೇ ಆಯಿತು. ತಮ್ಮ ಕಣಕಣದ ರಕ್ತವನ್ನೂ ಯುದ್ಧಭೂಮಿಯಲ್ಲಿ ಬಿತ್ತಿದ ಗೋರಾಬಾದಲರು ಭಾರತಮಾತೆಯ ಮಣ್ಣಿನಲ್ಲಿ ಒಂದಾಗಿ ಹೋದರು. ಅತ್ತ ರತ್ನಸಿಂಹ ಸುರಕ್ಷಿತವಾಗಿ ಮೇವಾಡ ತಲುಪಿದ್ದ.
       ಈ ಸೋಲಿನ ಅವಮಾನದಿಂದ  ಚೇತರಿಸಿಕೊಳ್ಳುವುದು ಅಲ್ಲಾವುದ್ದೀನನಿಗೆ ಬಹಳ ಕಷ್ಟವಾಯಿತು. ಮುಂದಿನ ವರ್ಷ ಆತ ಭಾರೀ ಸೈನ್ಯದೊಡನೆ ಚಿತ್ತೂರಿಗೆ ಬಂದು ಘನಘೋರವಾದ ಧಾಳಿ ಮಾಡಿದ. ಇತರೇ ರಜಪೂತರ ಸಹಾಯ ಪಡೆಯಲು ರತ್ನಸಿಂಹ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಚಿತ್ತೂರು ಏಳು ತಿಂಗಳುಗಳ ಕಾಲ ಏಕಾಂಗಿಯಾಗಿ ಹೋರಾಡಬೇಕಾಯಿತು. ಕೋಟೆಯಲ್ಲಿದ್ದ ಆಹಾರದ ದಾಸ್ತಾನು ಖಾಲಿಯಾಗಿತ್ತು.  ಇನ್ನು ಉಳಿಯುವುದು ಕಷ್ಟವೆಂದು ಕಂಡುಬಂದಾಗ ರತ್ನಸಿಂಹ ಮತ್ತವನ ಸೈನಿಕರು ಕೋಟೆಯ ಬಾಗಿಲನ್ನು ತೆರೆದು, ಸುಲ್ತಾನನ ಸೈನ್ಯದ ಮೇಲೆ ಬಿದ್ದು ಪ್ರಾಣವಿರುವವರೆಗೂ  ಹೋರಾಡಿ ಹುತಾತ್ಮರಾದರು.
       ಇತ್ತ ಚಿತ್ರಕೂಟ(ಚಿತ್ತೋರ್‌ಗಢ್) ಕೋಟೆಯೊಳಗೆ ಪದ್ಮಿನಿ ಮತ್ತವಳ ಸಖಿಯರು ವಿಶಾಲವಾದ ಅಗ್ನಿಕುಂಡವನ್ನು ಸಿದ್ಧಪಡಿಸಿ ಅದರಲ್ಲಿ ಧುಮುಕಿ ಜೋಹರ್ ಆಚರಿಸಿದರು.ಕೋಟೆ ಗೆದ್ದ ವಿಜಯೋತ್ಸಾಹದಲ್ಲಿ ಒಳಬಂದ ಖಿಲ್ಜಿಗೆ ಕಂಡಿದ್ದು ಬೂದಿಗಳ ರಾಶಿಯಷ್ಟೆ. ತಮ್ಮ ಆತ್ಮಬಲ, ಧರ್ಮಬಲಗಳ ಅಪ್ರತಿಮ ಉಪಮೆಯಾಗಿ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿ ಹೋದಳು.
       ಮೇವಾಡದ ಚಿತ್ತೋರ್‌ಗಢ್ ಕೋಟೆ ಮೂರು ಬಾರಿ ಜೋಹರ್ ಅನ್ನು ಕಂಡಿದೆ. ಖಿಲ್ಜಿಯ ಆಕ್ರಮಣವಾದಾಗ ಪದ್ಮಿನಿಯು ಆತ್ಮಾರ್ಪಣೆ ಮಾಡಿಕೊಂಡದ್ದು ಮೊದಲ ಬಾರಿ. ರಾಣಾ ಸಂಗನ ಕಾಲದಲ್ಲಿ ಬಹದೂರ್ ಷಾ ಜಾಫರನ ಆಕ್ರಮಣವಾದಾಗ ರಾಣಿ ಕರ್ಣಾವತಿಯದ್ದು ಎರಡನೇ ಬಾರಿ ಹಾಗೂ ರಾಣಾ ಉದಯ ಸಿಂಗನು ಅಕ್ಬರನೆದುರು ಸೋತಾಗ ಮೂರನೇ ಬಾರಿ .
ಇದು ಪದ್ಮಾವತಿ ಹಾಗೂ ಚಿತ್ತೋರಿನ ಸಂಕ್ಷಿಪ್ತ ಕಥೆ.
       ಕೇಳುಗ ಎಂಥವನೇ ಆಗಿರಲಿ, ಅವನ ಕಣ್ಣುಗಳಿಂದ ಎರಡು ಹನಿ ಕಣ್ಣೀರು ಉದುರದಿರುವುದೇ ಅಸಾಧ್ಯವಾಗಿರುವಷ್ಟು ಭಾವೋತ್ಕಟವಾದ ಕಥೆಯಿದು.  ಸಮಕಾಲೀನ ಜಗತ್ತಿನಲ್ಲಿ ಪದ್ಮಿನಿಯ ಬಗ್ಗೆ ಬಂದ ಎರಡು ಅತ್ಯುತ್ತಮ ಪುಸ್ತಕಗಳಲ್ಲಿ ಒಂದು ಜಗರ್ನಾಟಿನ ’ರಾಣಿ ಪದ್ಮಿನಿ: ದಿ ಬರ್ನಿಂಗ್ ಕ್ವೀನ’, ಇನ್ನೊಂದು ಅನುಜಾ ಚಂದ್ರಮೌಳಿ, ಮೃದುಲಾ ಬೆಹಾರಿಯವರ ’ಪದ್ಮಿನಿ: ದ ಸ್ಪಿರಿಟೆಡ್ ಕ್ವೀನ್ ಆಫ್ ಚಿತ್ತೋರ್’. ಎರಡನೇಯ ಪುಸ್ತಕದಲ್ಲಿ ಒಂದು ಸಂಭಾಷಣೆಯಿದೆ. ಖಿಲ್ಜಿ ಪದ್ಮಿನಿಯ ಮುಖ ತೋರಿಸುವಂತೆ ರತ್ನಸಿಂಹನಿಗೆ ಹೇಳಿದಾಗ ಆತ ಒಪ್ಪಿಕೊಂಡು ವಿಷಯವನ್ನು ಪದ್ಮಿನಿಯಲ್ಲಿ ಪ್ರಸ್ತಾಪಿಸುತ್ತಾನೆ. ಚಿತ್ತೋರಿನ ಭವಿಷ್ಯಕ್ಕೊಸ್ಕರ ಪದ್ಮಿನಿ ಇಷ್ಟಾದರೂ ತ್ಯಾಗ ಮಾಡಿಯಾಳೆಂದು ಅವನ ಭಾವನೆ. ಮಾತು ಮುಗಿಸುವುದರೊಳಗೆ ಪದ್ಮಿನಿ ಸಿಡಿದೇಳುತ್ತಾಳೆ. ’ಹಾಗಾದರೆ ಈ ಅರಸೊತ್ತಿಗೆಯವರಿಗೆ ಹೆಣ್ಣೆಂದರೆ ಏನೂ ಅಲ್ಲವೇ! ಹೆಣ್ಣು ಒಂದು ದೇಹವಲ್ಲ, ಅವಳೊಂದು ಸಂಸ್ಕೃತಿಯೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲವೇ ನಿಮಗೆ? ಹೆಣ್ಣೆಂದರೆ ತಾಯಿ, ಹೆಣ್ಣೆಂದರೆ ಶೀಲ, ಹೆಣ್ಣೆಂದರೆ ಹುಟ್ಟು. ಸಹಸ್ರ ಸಹಸ್ರ ವರ್ಷಗಳಿಂದ ನೆಲ ಮೌಲ್ಯಗಳನ್ನು, ಸಂಸ್ಕಾರಗಳನ್ನು, ಧ್ಯೇಯಗಳನ್ನು ಹೊತ್ತು ತಂದವಳು  ಹೆಣ್ಣು. ರಾಜರ ಕಿರೀಟಗಳು, ಸಿಂಹಾಸನಗಳು ಇಂದಿರುತ್ತವೆ, ನಾಳೆ ಬೀಳುತ್ತವೆ. ಸನಾತನ ಸಂಸ್ಕೃತಿಯೊಂದೇ ಕೊನೆಯವರೆಗೂ ಬಾಳಬೇಕಾದದ್ದು. ಆತನ ಬಲ, ಐಶ್ವರ್ಯ, ರಾಜ್ಯದ ವರ್ಣನೆ ನನಗೆ ಬೇಡ. ಅರ್ಯಾವರ್ತದ ಮಹಾರಾಜರುಗಳೆಲ್ಲ ಯಕಶ್ಚಿತ್ ತುರ್ಕನೆದುರು ಶರಣಾಗಿದ್ದು ರಜಪೂತ ಕುಲಕ್ಕೇ ಅವಮಾನ. ಹೆಣ್ಣಿನ ಘನತೆಗೆ ಕುಂದು ತರುವ ಆಚರಣೆ ಮಾಡೆಂದು ಅಪೇಕ್ಷಿಸುವುದು ಯಾವ ಸೀಮೆ ಧರ್ಮ’ ಎಂದು ಅಬ್ಬರಿಸುತ್ತಾಳೆ. ಅವಳ ಮಾತು ನಿಜವೂ ಹೌದು. ರಾಣಾ ಪ್ರತಾಪ, ರಾಣ ಸಂಗನಂಥವರನ್ನು ಬಿಟ್ಟು ಹೆಚ್ಚಿನೆಲ್ಲ ರಜಪೂತರು ಮೊಘಲರ ಕಾಲದಲ್ಲಿ ತಮ್ಮ ರಾಜ್ಯವನ್ನುಳಿಸಿಕೊಳ್ಳಲು ಮನೆಯ ಮಗಳನ್ನು ಸುಲ್ತಾನನಿಗೆ ಮದುವೆ ಮಾಡಿ ಕೊಡಬೇಕಾದ ದುಷ್ಕರ ಸ್ಥಿತಿಯನ್ನೆದುರಿಸಬೇಕಾಯಿತು. ರಜಪೂತರ ಮನೆಯ ಹೆಣ್ಣು ತರುವುದು ಆ ಕಾಲದಲ್ಲಿ ಮೊಘಲರಿಗೂ ಪ್ರತಿಷ್ಟೆಯ ವಿಷಯವಾಗಿತ್ತೆನ್ನಿ. ಇದರ ವಿರುದ್ಧವೇ ಪದ್ಮಿನಿ ಸಿಡಿದೆದ್ದಿದ್ದು. ಅಂಥವಳು ಭಾರತೀಯ ನಾರಿಯರ ಸಾರ್ವಕಾಲಿಕ ಐಕಾನ್ ಆಗದೇ ಇನ್ಯಾರಾಗಬೇಕು ಹೇಳಿ?
ಪದ್ಮಿನಿ ಮಹಲ್, ಚಿತ್ತೋರಗಢ ಕೋಟೆ
 ಹಾಗಾದರೆ ಪದ್ಮಿನಿಯ ಕಥೆ ನಿಜವೇ?!
       ಈ ಕಥೆ ನಮಗೆ ಮೊದಲು ಸಿಗುವುದು ಮಲಿಕ್ ಮಹಮ್ಮದ್ ಜಯಸಿ ಎಂಬ ಸೂಫಿ ಸಂತನ ಪದ್ಮಾವತ್ ಎಂಬ ಮಹಾಕಾವ್ಯದಲ್ಲಿ.  ಅದೂ ರಾಣಾ ರತ್ನಸಿಂಹನ ಮರಣದ ಬರೋಬ್ಬರಿ ಇನ್ನೂರ ಮೂವತ್ತೇಳು ವರ್ಷಗಳ ನಂತರ.  ಇದರ ಮೂಲ ಹೆಸರು ಪದ್ಮಾವತಿ ಎಂದೇ ಇರಬೇಕು. ಲಖ್ನೋದ ನವಲ್ ಕಿಶೋರ್ ಪ್ರೆಸ್ಸಿನಲ್ಲಿ ರಾಮಜಶನ ಮಿಶ್ರರಿಂದ ಮೊದಲು ಸಂಪಾದನೆಗೊಂಡು ಪದ್ಮಾವತ್ ಎಂಬ ಹೆಸರಿನೊಂದಿಗೆ ಮುದ್ರಣಗೊಂಡಿತು. ಡಾ.ಗ್ರಿಯರ್ಸನ್ ರಾಯಲ್ ಏಶಿಯಾಟಿಕ್ ಸೊಸೈಟಿ ಆಫ್ ಬೆಂಗಾಲದಲ್ಲಿ ಇದರ ಮುದ್ರಣವನ್ನು ಹೊರತರುವಾಗ ಪದ್ಮಾವತಿ ಎಂಬ  ಶುದ್ಧ ಹೆಸರೇ ಉಳಿಯಿತು. ಮುಂದೆ ಡಾ.ಸೂರ್ಯಕಾಂತ ಶಾಸ್ತ್ರೀ, ಆಚಾರ್ಯ ರಾಮಚಂದ್ರ ಶುಕ್ಲ, ಡಾ.ಮಾತಾಪ್ರಸಾದ ಗುಪ್ತ, ವಾಸುದೇವಶರಣ ಅಗರವಾಲರಂಥ ಪ್ರಗಲ್ಭರ ಸಂಪಾದಕತ್ವದ ಮರುಮುದ್ರಣಗಳಲ್ಲಿ ಮತ್ತೆ ಇದು ಪದ್ಮಾವತ್ ಎಂದು ಕರೆಸಿಕೊಂಡಿತು. ಇದರ ಮೂಲ ಹಸ್ತಪ್ರತಿಯಿರುವುದು ಪಾರಸಿ ಲಿಪಿಯಲ್ಲಿ. ಪಾರಸಿಯಲ್ಲಿ ದೀರ್ಘ ಈಕಾರಕ್ಕೆ ಸರಿಯಾದ ಅಕ್ಷರವಿದ್ದರೆ ಹೃಸ್ವ ಇಕಾರಕ್ಕೆ ’ಅ’ದ ಕೆಳಗೆ ’ಪೇಶ್’ ಎಂಬ ಚಿಹ್ನೆಯನ್ನು ಉಪಯೋಗಿಸಲಾಗುತ್ತದೆ. ಹಾಗಾಗಿ ಮೂಲಪ್ರತಿಯಲ್ಲಿ ಪದ್ಮಾವತಿ ಎಂದಿದ್ದರೂ ಪೇಶ್ ಒರೆಸಿಹೋಗಿರುವ ಕಾರಣಕ್ಕೋ ಅಥವಾ ಓದುವಾಗ ಬಿಟ್ಟುಹೋದ್ದರಿಂದಲೋ ಅದು ಮುಂದೆ ಪದ್ಮಾವತ್ ಆಗಿಯೇ ರೂಢಿಗೆ ಬಂದಿರಬೇಕು. ಹೆಸರೇನೇ ಇದ್ದರೂ ಆ ಕಾವ್ಯ ತನ್ನ ನಾಯಿಕೆ ಪದ್ಮಾವತಿಯಿಂದಲೇ ಹೆಸರು ಪಡೆದುಕೊಂಡಿತೆಂಬುದು ನಿರ್ವಿವಾದ. ಜಯಸಿ ಕಥೆಯುದ್ದಕ್ಕೂ ತನ್ನ ನಾಯಿಕೆಯನ್ನು ಪದ್ಮಾವತಿಯೆಂದೇ ಸಂಬೋಧಿಸುತ್ತಾನೆ. ಒಂದೆರಡು ಕಡೆ ಪದ್ಮಿನಿಯೆಂದು ಕರೆದಿದ್ದೂ ಇದೆ. ಅವನ ಕಾಲಕ್ಕೆ ಖ್ಯಾತವಾಗಿದ್ದ ಹಿಂದಿಯ ಸರ್ವಪ್ರಥಮ ಸಾಹಿತ್ಯವೆಂದು  ಪರಿಗಣಿತವಾಗುವ ಮುಲ್ಲಾ ದಾವೂದನ ಚಂದಾಯನ ಹಾಗೂ ಕುತುಬನ್‌ನ ಮೃಗಾವತಿ ಎಂಬೆರಡು ನಾಯಿಕಾ ಪ್ರಧಾನವಾದ ಮಹಾಕಾವ್ಯಗಳು ಪದ್ಮಾವತಿಯ ಶೀರ್ಷಿಕೆ ಮತ್ತು ಶೈಲಿಯ ಮೇಲೆ ಮಹದ್ಪ್ರಭಾವವನ್ನು ಬೀರಿರುವ ಸಾಧ್ಯತೆಯಿದೆ. ಇದೇ ಕಾಲಕ್ಕೆ ಮಂಝನನ ಮಧುಮಾಲತಿ, ಉಸ್ಮಾನನ ಚಿತ್ರಾವಳಿ, ನೂರ್ ಮಹಮ್ಮದನ ಇಂದ್ರಾವತಿಯಂಥ ನಾಯಿಕಾ ಪ್ರಧಾನ ಕಾವ್ಯಗಳ ಶೀರ್ಷಿಕೆಗಳನ್ನು ಗಮನಿಸಿದರೆ ಒಟ್ಟಾರೆಯಾಗಿ ಜಯಸಿ ಪದ್ಮಾವತಿಯನ್ನು ತನ್ನ ನಾಯಕಿಯಾಗಿಟ್ಟುಕೊಂಡು ಅದರ ಸುತ್ತಲೇ ಕಥೆ ಹೆಣೆದನೆಂಬುದನ್ನು ಯಾರೂ ಊಹಿಸಬಹುದು. 
ಪದ್ಮಾವತ್ 
       
ಅಮೇಠಿಯಲ್ಲಿರುವ ಜಯಸಿಯ ಸಮಾಧಿ
     ಇವೆಲ್ಲವುಗಳಿಗಿಂತ ಹೆಚ್ಚಾಗಿ ಜಯಸಿಯನ್ನು ಪ್ರಭಾವಿಸಿದ್ದು ಹದಿನೈದನೇ ಶತಮಾನದ ನಯಚಂದ್ರಸೂರಿಯ ಹಮ್ಮೀರ ಮಹಾಕಾವ್ಯ. ಇದು ಹದಿಮೂರನೇ ಶತಮಾನದಲ್ಲಿ ರಣಥಂಬೋರನ್ನಾಳಿದ ಹಮ್ಮೀರ ದೇವನ ಕುರಿತು ರಚನೆಗೊಂಡಿದ್ದು. ಜಲಾಲುದ್ದೀನ ಖಿಲ್ಜಿಯ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ ಹಮ್ಮೀರದೇವ ದಿಲ್ಲಿ ಸಾಮ್ರಾಜ್ಯಕ್ಕೆ ದೊಡ್ಡ ಕಂಟಕವಾಗಿ ಬೆಳೆಯುತ್ತಾನೆ. ಜಲಾಲುದ್ದೀನನ ನಂತರ ಅಲ್ಲಾದ್ದೀನ್ ಖಿಲ್ಜಿ ಮೂರು ಬಾರಿ ಹಮ್ಮೀರ ರಾಜ್ಯದ ಮೇಲೆ ಆಕ್ರಮಣ ಮಾಡಿದ. ಮೊದಲೆರಡು ಬಾರಿ ಹಮ್ಮೀರ ಖಿಲ್ಜಿಯನ್ನು ಸೋಲಿಸಿ ದೆಹಲಿಯ ಸೀಮೆಯ ತನಕ ಅಟ್ಟಿಕೊಂಡು ಹೋಗುತ್ತಾನೆ. ಮೂರನೇ ಬಾರಿ ಹಮೀರನ ಅದೃಷ್ಟ ಕೈಕೊಟ್ಟಿತು. ದೊಡ್ಡ ಮೊತ್ತದ ರಾಯಧನವನ್ನೂ ಜೊತೆಗೆ ಮಗಳನ್ನೂ ಕೊಡುವಂತೆ ಖಿಲ್ಜಿ ಬೇಡಿಕೆಯಿಟ್ಟ. ಮಗಳೂ ಕೂಡ ಖಿಲ್ಜಿಯನ್ನು ಮದುವೆಯಾಗಲು ಒಪ್ಪಿದಳು. ರಾಯಸವನ್ನು ಕೊಡಲೇನೋ ಮನಸ್ಸು ಮಾಡಿದ್ದ ಹಮ್ಮೀರ ಯಾವ ಕಾರಣಕ್ಕೂ ಕಲುಷಿತ ರಕ್ತದ ಮ್ಲೇಚ್ಛನಿಗೆ ರಜಪೂತ ಕನ್ಯೆಯನ್ನು ಕೊಡಲು ಸಾಧ್ಯವಿಲ್ಲವೆಂದು ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಖಿಲ್ಜಿ ತನ್ನ ಹಳೆಯ ವಿದ್ಯೆ ಪ್ರಯೋಗಿಸಿದ. ಕೋಟೆಯನ್ನು ತಿಂಗಳುಗಳ ಕಾಲ ಮುತ್ತಿ ನೀರು, ಆಹಾರ ಸಿಗದಂತೆ ನೋಡಿಕೊಂಡ. ಕೊನೆಗೆ ಕೋಟೆ ಬಿಟ್ಟು ಮೈದಾನಕ್ಕಿಳಿದ ರಜಪೂತರು ಯುದ್ಧದಲ್ಲಿ ಮಡಿದರು. ಒಳಗೆ ಅವರ ಹೆಂಡಂದಿರು, ಹೆಣ್ಮಕ್ಕಳು ತಮ್ಮ ಮಾನ ಕಾಪಾಡಿಕೊಳ್ಳಲು ಜೋಹರ್ ಪ್ರವೇಶಿಸಿದರು.  ಈ ಕಥೆ ಜಯಸಿಯ ಪದ್ಮಾವತದ ರಚನೆಯ ಮೂಲಪ್ರೇರಣೆಯಾಗಿರಬಹುದೆಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಸೂರಿಯ ಕಾವ್ಯದ ಹಮ್ಮೀರ ಹದಿನಾರನೇ ಶತಮಾನಕ್ಕೆ ಬರುವಾಗ ಜಯಸಿಯ ಕೈಯಲ್ಲಿ ರತ್ನಸಿಂಹನಾಗಿದ್ದ. ತನ್ನ ಮಗಳನ್ನು ತುರ್ಕನಿಗೆ ಕೊಡಲು ಒಪ್ಪದೇ ರಜಪೂತರ ಸ್ವಾಭಿಮಾನದ ಪ್ರತೀಕವಾಗಿ ನಿಂತಿದ್ದ ಹಮ್ಮೀರದೇವನ ಕಥೆ ಹೆಂಡತಿಯನ್ನು ಬಿಟ್ಟುಕೊಡಲೊಪ್ಪದ ರತ್ನಸಿಂಹನ ಕಥೆಯಗಿ ರೂಪಾಂತರವಾಯಿತು. ಅಲ್ಲಿ ಹಮ್ಮೀರನ ಮಗಳು ಖಿಲ್ಜಿಯನ್ನು ಮದುವೆಯಾಗಲು ಒಪ್ಪಿದರೆ ಇಲ್ಲಿ ರತ್ನಸಿಂಹನ ಪತ್ನಿ ಪದ್ಮಿನಿ ರಜಪೂತರ ಸಾರ್ವಕಾಲಿಕ ರೆಬೆಲ್ ಮಹಿಳೆಯಾಗಿ ಬೆಳೆದುನಿಲ್ಲುತ್ತಾಳೆ. ಹಾಗೆಂದು ಇದು ಹಮ್ಮೀರಕಾವ್ಯದ ಭಟ್ಟಿಯೆಂದು ತಿಳಿದರೆ ಅದು ಜಯಸಿಯಂಥ ಮಹಾಕವಿಗೆ ಮಾಡಿದ ಅಪಮಾನವಾದೀತು. ಇಂದಿಗೂ ಪದ್ಮಿನಿ ಭಾರತೀಯರ ಮನೆಮನಗಳಲ್ಲಿ ಚಿರಸ್ಥಾಯಿಯಾಗಿದ್ದರೆ ಅದರ ಹೆಚ್ಚಿನ ಶ್ರೇಯ ಸಲ್ಲುವುದು ಅವನಿಗೇ.
        ನಲ್ವತ್ತೇಳು ಖಂಡಗಳ ಈ ಮಹಾಕಾವ್ಯ ರಚನೆಗೊಂಡಿದ್ದು ೧೫೪೦-೪೧ರ ಆಸುಪಾಸಿನಲ್ಲಿ. ಜಯಸಿಯ ಕಾವ್ಯಗಳ ಮೆಲೆ ವರ್ಷಗಳ ಕಾಲ ಸಂಶೋಧನೆ ನಡೆಸಿದ ಪಂಡಿತ ಮಾತಾಪ್ರಸಾದ್ ಗುಪ್ತಾ ಪರ್ಷಿಯನ್, ನಾಗರಿ, ಮುಘಲರ ಕಾಲದಲ್ಲಿ ಪ್ರಸಿದ್ಧಿಯಲ್ಲಿದ್ದ ಕೈಥಿ ಲಿಪಿಯ ಪದ್ಮಾವತ್‌ನ ಐದು ಹಸ್ತಪ್ರತಿಗಳನ್ನು ಹುಡುಕಿ ತೆಗೆದಿದ್ದಾರೆ. ಅವೆಲ್ಲವೂ ಹದಿನೇಳನೇ ಶತಮಾನದ ಅಂತ್ಯದವು. ಅವುಗಳಲ್ಲಿ ಮೊದಲನೇಯದು ಹಾಗೂ ಇದ್ದುದರಲ್ಲಿ ಜಯಸಿಯ ಮೂಲಕೃತಿಯ ಆಶಯಕ್ಕೆ ಹೋಲುವಂಥದ್ದು ೧೬೭೫ರಲ್ಲಿ ಅಮರೋಹಾದ ಮುಹಮ್ಮದ್ ಶಾಕೀರನ ರಾಂಪುರ ಹಸ್ತಪ್ರತಿ. ಪದ್ಮಾವತ್‌ದ ಬೇರೆ ಬೇರೆ ವ್ಯಾಖ್ಯಾನಗಳನ್ನು, ದೊರಕಿರುವ ಹತ್ತಕ್ಕೂ ಹೆಚ್ಚು ಪಾಠಬೇಧಗಳನ್ನು ಗಮನಿಸಿದರೆ ಅದು ಜಯಸಿಯ ರಚನೆಯಿಂದ ಹಾಡುಗಬ್ಬಗಳ ಮೂಲಕ, ಅನುವಾದ, ಭಾವಾಂತರಗಳ ಮೂಲ ಹದಿನೇಳನೇ ಶತಮಾನದ ಅಂತ್ಯಭಾಗಕ್ಕಾಗಲೇ ಉತ್ತರ ಭಾರತದ ಮೂಲೆಮೂಲೆಗಳನ್ನು ತಲುಪಿರಬೇಕು. ದೃಶ್ಯ,ಶೃವ್ಯ ಮಾಧ್ಯಮದ ಮೂಲಕವೂ ಪದ್ಮಾವತಿಯ ಬೇರೆಬೇರೆ versionಗಳು ಬೆಳೆದುಬಂದವು. ಜಯಸಿಯ ಈ ಕಾವ್ಯವನ್ನು ಬರೆದು ಐವತ್ತು ವರ್ಷಗಳ ನಂತರ ಕವಿ ಹೇಮರತ್ನನ ಗೋರಾಬಾದಲ್ ’ಪದ್ಮಿನಿ ಚೌಪದ’ ಕಾವ್ಯದೊಡನೆ ರಾಜಸ್ಥಾನದಲ್ಲಿ ಪದ್ಮಿನಿಯ ಕಥೆ ಪ್ರಚಾರಕ್ಕೆ ಬಂತು. ಈ ಕಾವ್ಯಗಳೆರಡೂ ಬೇರೆ ಬೇರೆ ರಾಜಾಸ್ಥಾನಗಳನ್ನು ಹಾದು ೧೬೨೩ರಲ್ಲಿ ಜಟ್ಮಲ್ ನಹರ್‌ನ ’ಗೋರಾಬಾದಲ್ ಕಿ ಕಥಾ’, ೧೬೪೫ರಲ್ಲಿ ಲಬ್ಧೋದಯನ ’ಪದ್ಮಿನೀ ಚರಿತ್ರ’, ೧೭೦೨ರಲ್ಲಿ ಭಾಗ್ಯವಿಜಯನ ’ಪದ್ಮಿನಿ ಚರಿತ್‌’ದಂಥ ಗ್ರಂಥಗಳ ಹುಟ್ಟಿಗೆ ಕಾರಣವಾದವು. ಈ ಕಥೆಗಳು ಅದೆಷ್ಟು ಜನಪ್ರಿಯವಾದವೆಂದರೆ ಮುಂದೆ  ’ರಾಜಾವಿಲಾಸ’, ’ಖುಮ್ಮನ ರಾಸೋ’,  ಮುಹೋಂತ್ ನೈನಸಿಯ ’ನೈನ್ಸಿ ರಿ ಖ್ಯಾತ್’, ’ಮರ್ವಾರ್ ರಾ ಪರ್ಗಾನಾ ರಿ ವಿಗತ್’, ’ರಾವಲ್ ರಾಂಜಿ ರಿ ಬಾತ್’, ’ಸಿಸೋದಿಯಾ ವಂಶಾವಳಿ’, ’ಚಿತ್ತೋರ್ ಉದಯಪುರ ಪಾಠನಾಮಾ’ನಂಥ ಹದಿನೇಳನೇ ಶತಮಾನದಲ್ಲಿ ರಚಿತಗೊಂಡಿರುವ ರಾಜವಂಶಾವಳಿಗಳಲ್ಲೂ ಸೇರಿಕೊಂಡಿತು. ಜೋಧಪುರದ ರಾಣಾ ಜಸವಂತ ಸಿಂಗನ ದೀವಾನ ನೈನಸಿ ತಾನು ಪದ್ಮಿನಿಯ ಕಾರಣಕ್ಕೆ ರತ್ನಸಿಂಹ ಖಿಲ್ಜಿಯಿಂದ ಕೊಲ್ಲಲ್ಪಟ್ಟ ಕಥೆಯನ್ನು ಹಾಡುಗಳಲ್ಲಿ ಕೇಳಿದ್ದಾಗಿ ಹೇಳಿಕೊಳ್ಳುತ್ತಾನೆ. ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಹುಟ್ಟಿದ್ದ ಪದ್ಮಿನಿ ಪಾತ್ರ ನೂರುವರ್ಷಗಳೊಳಗೆ  ಮೇವಾಡದ ರಾಣಿಯಾಗಿ ಇಡೀ ರಾಜಸ್ಥಾನ ಹಾಗೂ ಪಶ್ಚಿಮ ಭಾರತವನ್ನು ವ್ಯಾಪಿಸಿಕೊಳ್ಳುತ್ತದೆ. ನಾಥ, ಜೈನ, ಸೂಫಿ ಪಂಥಗಳ ವಿವಿಶ ಉಪಾಖ್ಯಾನಗಳಲ್ಲಿ ಪದ್ಮಿನಿಯ ಕಥೆ ಬೆಳೆದು ನಿಲ್ಲುತ್ತದೆ. ಅಷ್ಟಾಗಿದ್ದರೆ ವಿಶೇಷವಿಲ್ಲ. ೧೬೫೧ರಲ್ಲಿ ದೂರದ ಬರ್ಮಾದ ಅರಕನ್ ಪ್ರದೇಶದ(ರೋಹಿಂಗ್ಯಾಗಳು ಮೂಲ ಇಲ್ಲಿಯವರೇ) ಸಯ್ಯದ್ ಆಲೋಲ್ ಎಂಬ ಸೂಫಿ ಸಂತನ ಕೈಲಿ ಇದೇ ಪದ್ಮಾವತ್ ’ಪದ್ಮಬತ್ತಿ’ಯಾಗಿ ಜನ್ಮತಳೆದು ಹಳೆಯ ವಂಗದೇಶದಲ್ಲಿ ಪ್ರಸಿದ್ಧಿ ಗಳಿಸುತ್ತದೆ. ಮುಂದೆ ಹದಿನೆಂಟನೇ ಶತಮಾನದಲ್ಲಿ ಕರ್ನಲ್ ಜೇಮ್ಸ್ ಟೋಡ್‌ನ ’Annals and Antiquities of Rajast'han’ದಲ್ಲಿ ಮತ್ತೆ ಉಲ್ಲೇಖಿಸಲ್ಪಡುವ ಪದ್ಮಾವತಿಯ ಕತೆ ಇಂಗ್ಲೀಷಿನಲ್ಲಿಯೂ ಪ್ರಚಲಿತಕ್ಕೆ ಬರುತ್ತದೆ. ಟೋಡ್‌ನ ಪ್ರಕಾರ ಪದ್ಮಾವತಿ ಸಿಲೋನಿನ ಹಮಿರ್ ಸಂಕ್‌ ಎಂಬ ರಾಜನ ಮಗಳು ಹಾಗೂ ಮೇವಾಡದ ಭೀಮಸಿಂಗನ ಮಡದಿ. ಅದರಾಚೆಯಂತೂ ಪದ್ಮಾವತಿಯ ಕಥೆ ದೇಶವಿದೇಶಗಳಲ್ಲಿ ಎಷ್ಟು ಬಾರಿ ಜನ್ಮತಳೆದಿದೆಯೋ ಲೆಕ್ಕವಿಟ್ಟವರಿಲ್ಲ. ರಂಗಲಾಲ ಬಂಡೋಪಾಧ್ಯಾಯರ ’ಪದ್ಮಿನಿ ಉಪಾಖ್ಯಾನ’, ಜ್ಯೋತೀಂದ್ರನಾಥ ಠಾಕೂರರ ’ಚಿತ್ತೋರ್ ಆಕ್ರಮಣ’ಗಳ ಮೂಲಕ ಪೂರ್ವದಲ್ಲೂ ಪದ್ಮಾವತಿ ಜನಪ್ರಿಯಳಾದಳು.
       ಅವಳೆಷ್ಟು ಬಾರಿ ಜನ್ಮತಳೆದರೂ ಅವೆಲ್ಲವುಗಳೂ ಮೂಲಕಥೆಯಾದ ಪದ್ಮಾವತ್‌ನಿಂದಲೇ ಸ್ಫೂರ್ತಿಗೊಂಡವು. ಅದರಾಚೆ ಪದ್ಮಿನಿಯನ್ನು ಹುಡುಕಹೊರಟರೆ ನಿರಾಸೆ ಕಾದಿಟ್ಟಿದ್ದೆ.  ಭಾರತೀಯ ವಿದ್ಯಾಭವನದ ಭಾರತೀಯ ಇತಿಹಾಸವನ್ನು ತೆಗೆದು ನೋಡಿದರೆ ಜನವರಿ ೧೩೦೩ರಂದು ಖಿಲ್ಜಿ ಚಿತ್ತೋರನ್ನು ಮುತ್ತಿದ ಘಟನೆಯಿಂದ ಹಿಡಿದು ರಜಪೂತರು ಏಳು ತಿಂಗಳು ಬಿಡದೇ ಕಾದಾಡಿದ್ದು, ಕೊನೆಗೂ ಅಗಸ್ಟಿನಲ್ಲಿ ಕೋಟೆ ವಶವಾದಾಗ ಒಳಗಿದ್ದ ಹೆಂಗಸರೆಲ್ಲ ಜೌಹರಿಗೆ ಹಾರಿ ಬೂದಿಯಾಗಿದ್ದು ದಾಖಲಾಗಿದ್ದರೂ ಪದ್ಮಿನಿಯ ಹೆಸರು ಮಾತ್ರ ನಾಪತ್ತೆ. ಇನ್ನು ಪದ್ಮಿನಿಯ ಸಮಕಾಲೀನ ಇತಿಹಾಸಕಾರರ ಪುಸ್ತಕಗಳಲ್ಲಿ ಅವಳನ್ನು ಹುಡುಕೋಣವೆಂದರೆ ಅಲ್ಲೂ ನಿರಾಸೆಯೇ. ಅಲ್ಲಾದ್ದೀನ್ ಖಿಲ್ಜಿಯ ಆಸ್ಥಾನ  ಕವಿ ಅಮೀರ್ ಖುಸ್ರೋ ಖಿಲ್ಜಿಯ ಜೊತೆಗೇ ಬಂದು ಚಿತ್ತೋರಿನ ಘಟನೆಗೆ ಸಾಕ್ಷಿಯದವ. ಆದರಾತ ತನ್ನ ತ್ವಾರಿಕ್-ಎ-ಅಲ್ಲಾಹಿಯಲ್ಲಿ ಪದ್ಮಿನಿಯ ಬಗ್ಗೆ ಒಂದಕ್ಷರವನ್ನೂ ನುಡಿಯುವುದಿಲ್ಲ. ತನ್ನದೇ ಇನ್ನೊಂದು ಕೃತಿಯಾದ ಖಾಜಾಂ-ಉಲ್-ಫತೂಹ್‌ನಲ್ಲಿ ರಾಣಿ ಶೆಬಾ ಎನ್ನುವವಳನ್ನುಲ್ಲೇಖಿಸಿದರೂ ಅವಳೇ ಪದ್ಮಿನಿಯೆಂದು ಹೇಳುವ ಹಾಗಿಲ್ಲ.  ರಾಜಾಸ್ಥಾನಗಳಲ್ಲಿ ಚಾಕರಿಗಿದ್ದ ಬಹುಪರಾಕ್ ಲೇಖಕರೆಲ್ಲ ಇದ್ದದ್ದನ್ನು ಇದ್ದಂತೆ ಬರೆದಿಟ್ಟಿದ್ದಾರಂತೇನಲ್ಲ. ಅವರಿಗೂ ಅವರದೇ ಆದ ಇತಿಮಿತಿಗಳಿರುತ್ತವೆ. ಮೊಘಲರ ಆಸ್ಥಾನದಲ್ಲಿದ್ದ ಖ್ಯಾತ ಇತಿಹಾಸಕಾರ  ಅಬುಲ್ ಫಜಲ್‌ನಿಗೆ ಅವನ್ನ ಐನ್-ಎ-ಅಕ್ಬರಿಯಲ್ಲಿ ಜಹಾಂಗೀರನ ಪತ್ನಿ ಮೆಹ್ರುನ್ನಿಸಾ ಉರುಫ್ ನೂರ್ ಜಹಾನಳ ಬಗ್ಗೆ ಬರೆಯದಂತೆ ಅಕ್ಬರನ ನಿರ್ಬಂಧವಿತ್ತು. ಯಾಕೆಂದರೆ ಅದಾಗಲೇ ಶೇರ್ ಅಫ್ಘನ್ ಎನ್ನುವ ಪರ್ಷಿಯನ್ ಸೈನಿಕನೊಡನೆ ಮದುವೆಯಾಗಿದ್ದ ನೂರ್ ಜಹಾನಳನ್ನು ರಾಜಕುಮಾರ ಸಲೀಮ್ ಉರುಫ್ ಜಹಾಂಗೀರ್ ಪ್ರೀತಿಸುತ್ತಿದ್ದ ವಿಷಯ ಅಕ್ಬರನಿಗೆ ಸಾಕಷ್ಟು ಇರುಸುಮುರುಸು ತಂದಿತ್ತು. ಇದೇ ಅಬುಲ್ ಫಜಲ್ ಮುಂದೆ ಜಹಾಂಗೀರ್ ಪಟ್ಟಕ್ಕೇರಿದಾಗ ತುಝಕ್-ಎ-ಜಹಾಂಗರಿಯಲ್ಲಿ ನೂರಜಹಾನಳ ಬಗ್ಗೆ ವಿಸ್ತೃತವಾಗಿ ಬರೆಯುತ್ತಾನೆ. ಈ ನೂರ್ ಜಹಾನಳನ್ನು ಅನಾರ್ಕಲಿ ಎಂದು ತಪ್ಪು ತಿಳಿದ ಇತಿಹಾಸಕಾರರಿಗೇನು ಕಡಿಮೆ ಇಲ್ಲ. ಅಸಲಿಗೆ ಅನಾರ್ಕಲಿ ಎಂಬೊಬ್ಬಳು ಚರಿತ್ರೆಯಲ್ಲಿರಲೇ ಇಲ್ಲ. ಅಕ್ಬರ, ಜಹಾಂಗೀರರ ಕಾಲದ ಅಕ್ಬರನಾಮಾ, ತುಝಕ್-ಎ-ಜಹಾಂಗರಿ ಇನ್ನಿತರ ದಾಖಲೆಗಳಲ್ಲಿ ಅವಳ ಹೆಸರೆಲ್ಲೂ ಇಲ್ಲ. ಮುಂದೆ ಅಬ್ದುಲ್ ಹಲೀಮ್ ಶರಾರ್ ತನ್ನ ಕೃತಿಗಳಲ್ಲಿ ಅನಾರ್ಕಲಿ ಎಂಬ ಕಾಲ್ಪನಿಕ ಸುಂದರಿಯನ್ನು ಸೃಷ್ಟಿಸಿ ಜಗತ್ಪ್ರಸಿದ್ಧಗೊಳಿಸಲಿಲ್ಲವೇ! ಅದರ ಮೇಲೆ ಬಂದ ಸಿನೆಮಾಗಳಿಗೇನು ಕೊರತೆಯೇ!
       ಅದರ ಕಥೆ ಏನೇ ಇದ್ದರೂ ಅಮೀರ್ ಖುಸ್ರೋನಂಥ ದಾರ್ಶನಿಕ, ಚಿತ್ತೋರಿನ ಮೇಲೆ ಖಿಲ್ಜಿಯ ಆಕ್ರಮಣವನ್ನು ಕಣ್ಣಾರೆ ಕಂಡವನು ಎಲ್ಲಿಯೂ ಪದ್ಮಿನಿಯ ಹೆಸರೆತ್ತದಿರುವುದೇಕೆ? ಕರ್ನಲ್ ಜೇಮ್ಸ್ ಟೋಡಿನ Annals and Antiquities of Rajast'hanದಲ್ಲಿ ಪದ್ಮಿನಿಯ ಪ್ರಸಂಗವಿದ್ದರೂ ಖಿಲ್ಜಿ ಅವಳ ಸೌಂದರ್ಯಕ್ಕೆ ಮನಸೋತು ಚಿತ್ತೋರಿನ ಮೇಲೆ ದಾಳಿ ಮಾಡಿದ ಕಥೆಯಿಲ್ಲ. ಪದ್ಮಿನಿ ಜೌಹರ್ ಪ್ರವೇಶಿಸಿದ ನಂತರದ ಇನ್ನೂರ ಮೂವತ್ತು ಚಿಲ್ಲರೆ ವರ್ಷಗಳವರೆಗೆ ಆಕೆಯ ಬಗ್ಗೆ ಒಂದೇ ಒಂದು ಉಲ್ಲೇಖವನ್ನೂ ಯಾವ ಕವಿ, ಇತಿಹಾಸಕಾರನೂ ಒಂದೇ ಒಂದು ಕಡೆಯೂ ಮಾಡಿಲ್ಲ. ಇನ್ನು ಜಯಸಿಯ ಪದ್ಮಾವತ್ ಅಪ್ಪಟ ಇತಿಹಾಸವೆನ್ನುವಂತಿಲ್ಲ. ಸಮಕಾಲೀನ  ಚಂದಾಯಣ, ಮೃಗಾವಲಿಗಳಂತೆ ಅದೂ ಒಂದು ಐತಿಹಾಸಿಕ ಕಾಲ್ಪನಿಕ ಕೃತಿ. ತನ್ನ ಕಾವ್ಯದಲ್ಲಿ ಪದ್ಮಾವತಿಯನ್ನು ಸಿಂಹಳದ ಗಂಧರ್ವಸೇನನ ಮಗಳೆನ್ನುತ್ತಾನೆ ಜಯಸಿ. ಆ ಹೆಸರಿನ ರಾಜನೊಬ್ಬ ಸಿಂಹಳವನ್ನಾಳಿದ ಯಾವುದೇ ಕುರುಹಿಲ್ಲ. ಹದಿಮೂರನೇ ಶತಮಾನದಲ್ಲಿ ಸಿಂಹಳವನ್ನಾಳಿದ ದಂಬದೇನಿಯ ವಂಶದ ಮೂವರು ರಾಜರ ಹೆಸರು ಮೂರನೇ ವಿಜಯಬಾಹು(೧೨೨೦-೧೨೨೪), ಒಂದನೇ ಭುವನೈಕಬಾಹು(೧೨೭೧-೧೨೮೩) ಹಾಗೂ ಇಂತರಗ್ನಂ(೧೨೮೩-೧೩೦೨). ಈ ಮೂವರಲ್ಲಿ ಪದ್ಮಿನಿಯ ತಂದೆಯೆನ್ನಲಾಗುವ ಗಂಧರ್ವಸೇನ ಯಾರು? ಇನ್ನು ಮಾತಾಡುವ ಗಿಳಿಯೊಂದು ಸಿಂಹಳದಿಂದ ಚಿತ್ತೂರಿಗೆ ಹಾರಿ ಬರುವುದು, ಅದರ ಮಾತು ಕೇಳಿ ರತ್ನಸಿಂಹ ಸಮುದ್ರ ದಾಟಿ ಸಿಂಹಳಕ್ಕೆ ಬಂದು ಗಂಧರ್ವಸೇನನನ್ನು ಗೆದ್ದು ಪದ್ಮಿನಿಯನ್ನು ವರಿಸುವುದು ಇವೆಲ್ಲ ಕವಿಕಲ್ಪನೆಯ ರಮ್ಯಚೈತ್ರಕಾವ್ಯವಷ್ಟೆ.
       ಇಲ್ಲಿ ಇನ್ನೂ ಎರಡು ಉಲ್ಲೇಖಿಸಲರ್ಹವಾದ ವಿಷಯಗಳಿವೆ. ರಾಣಾಸಂಗನ ನಂತರ ಮೇವಾಡವನ್ನಾಳಿದ ಎರಡನೇ ರತ್ನಸಿಂಹ ಜಯಸಿಯ ಸಮಕಾಲೀನ. ರಜಪೂತರ ಜೊತೆ ಹತ್ತಿರದ ಒಡನಾಟವಿಟ್ಟುಕೊಂಡಿದ್ದ ಜಯಸಿ ಆತನನ್ನೇ ನಾಯಕನನ್ನಾಗಿಟ್ಟುಕೊಂಡು ಈ ಕೃತಿಯನ್ನು ಬರೆದಿರಬಹುದು ಎಂದು ಕೆಲ ಚರಿತ್ರಕಾರರ ಊಹೆ. ಮನ್ನಣೆಗಾಗಿ ರಜಪೂತ ಮಹಾರಾಜನನ್ನು ಖುಷಿಪಡಿಸಲು ಬರೆದಿರಬಹುದೆಂದಿಟ್ಟುಕೊಂಡರೂ ಹಾಗೆ ತಿಳಿಯಲು ಇನ್ನೊಂದು ಕಾರಣವೂ ಇದೆ.  ತನ್ನ ಸಮಕಾಲೀನ ಘಟನೆಗಳನ್ನು ಜಯಸಿ ತನ್ನ ಕಾವ್ಯದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾನೆ. ದೆಹಲಿಯನ್ನಾಳಿದ್ದ ಶೇರ್ ಶಾ ಸೂರಿ ಕೂಡ ಇವನ ಸಮಕಾಲೀನ. ರೊಹ್ತಾಸಿನ ಕೋಟೆ ಆಗ ಹಿಂದೂ ರಾಜರ ಕೈಲಿತ್ತು. ಅದೇ ಸಮಯಕ್ಕೆ ಶೇರ್ ಶಾ ಹುಮಾಯೂನನ ವಿರುದ್ಧ ಯುದ್ಧದಲ್ಲಿ ಚುನಾರ್ ಕೋಟೆಯನ್ನು ಕಳೆದುಕೊಂಡಿದ್ದ. ತಾನು ದೂರದ ಬಂಗಾಳದಲ್ಲಿರುವುದಾಗಿಯೂ ಕೆಲ ದಿನಗಳ ಮಟ್ಟಿಗೆ ತನ್ನ ಅರಮನೆಯಲ್ಲಿರುವ ಹೆಂಗಸರು, ಮಕ್ಕಳು ಹಾಗೂ ನಗನಾಣ್ಯಗಳನ್ನು ಮುಘಲರಿಂದ ರಕ್ಷಣೆ ಪಡೆಯಲು ತಮ್ಮ ಕೋಟೆಯಲ್ಲಿರಿಸಿಕೊಳ್ಳಲು ದಯಮಾಡಿ ಅವಕಾಶ ನೀಡಬೇಕಾಗಿಯೂ ರೊಹ್ತಾಸಿನ ರಾಜನಿಗೆ ಪತ್ರ ಬರೆದ. ಭೋಳಾಶಂಕರ ರೊಹ್ತಾಸ್ ರಾಜ ಉದಾರ ಮನಸ್ಸಿನಿಂದ ಹೂಂ ಅಂದ. ಬಂದ ನೂರಾರು ಪಲ್ಲಕ್ಕಿಗಳಲ್ಲಿ ಎದುರಿಗಿದ್ದವರು ಮಾತ್ರ ಹೆಂಗಸರು, ಮಕ್ಕಳು. ಹಿಂದಿದ್ದವರೆಲ್ಲ ಅಫ್ಘನ್ ಸೈನಿಕರು. ರಾತ್ರಿ ಬೆಳಗಾಗುವುದರೊಳಗೆ ಯುದ್ಧ ಮಾಡದೇ ಕೋಟೆ ಶೇರ್ ಶಾನ ವಶವಾಗಿತ್ತು. ಇದೇ ಘಟನೆ ಜಯಸಿಯ ಕಾವ್ಯದ ಭಾಗವೊಂದಕ್ಕೆ ಸ್ಫೂರ್ತಿಯಾಗಿರಬಹುದೇ!
       ಸಮಕಾಲೀನ ಸಾಹಿತ್ಯದಲ್ಲಿ ಎಲ್ಲೂ ಉಲ್ಲೇಖಿಸಲ್ಪಡದ ಪದ್ಮಾವತಿ ಅಸಲು ಇದ್ದಳೆಂದು ನಂಬಲರ್ಹವಾಗುವ ಆಧಾರ ಇದುವರೆಗೂ ದೊರಕಿಲ್ಲ. ಹಾಗೆಂದು ಅವಳು ಇಲ್ಲವೇ ಇಲ್ಲ ಎನ್ನುವುದಕ್ಕೆ ನನಗಂತೂ ಧೈರ್ಯ ಸಾಲದು. ರಾಜಸ್ಥಾನದ ಜನಪದದಲ್ಲಿ, ಲಾವಣಿಗಳಲ್ಲಿ ಹಾಡುಗಬ್ಬಗಳಲ್ಲಿ ಅವಳಿಂದಿಗೂ ಜೀವಂತವಾಗಿದ್ದಾಳೆ. ಪದ್ಮಿನಿಯೇನೋ ಇದ್ದಳು ಎಂದಿಟ್ಟುಕೊಳ್ಳೋಣ. ಲಾಹೋರಿನ ಜಟ್ಮಲ್ ನಹರನಿಂದ ಬರ್ಮಾದ ಆಲೋಲನ ತನಕ, ಮುಸ್ಲಿಂ ಮಲಿಕ್ ಮಹಮ್ಮದ ಜಯಸಿಯಿಂದ ನಾಥ ಪಂಥದ ಹೇಮರತ್ನನ ತನಕ ನೂರಾರು ಕವಿಗಳ ಬಾಯಲ್ಲಿ ಸಾವಿರ ಸಾವಿರ ಬಾರಿ ಪದ್ಮಿನಿ ಜನ್ಮತಳೆದಿದ್ದಾಳೆ. ಬನ್ಸಾಲಿಯದ್ದು ಸಾವಿರದ ಒಂದನೇಯದ್ದಷ್ಟೆ. ಆ ಸಾಗರದಲ್ಲಿ ಅಸಲು ಪದ್ಮಿನಿಯನ್ನು ಹುಡುಕುವುದು ಹೇಗೆ? ಯಾರ ಕಥೆ ನಿಜ, ಯಾರ ಕಥೆ ಸುಳ್ಳು?  ಹದಿನಾರನೇ ಶತಮಾನದ ಜಯಸಿಯ ಕಲ್ಪನೆಯ ಕೂಸು ಈ ಪದ್ಮಾವತಿ. ಕಳೆದ ನಾನೂರೈವತ್ತು ವರ್ಷಗಳಲ್ಲಿ ಆ ಪದ್ಮಾವತಿಗಿಲ್ಲದ ವಿರೋಧ ಬನ್ಸಾಲಿ ಚಿತ್ರ ಮಾಡುತ್ತೇನೆಂದ ಕೂಡಲೇ ಹುಟ್ಟಿದ್ದು ಯಾಕೆಂಬ ಯಕ್ಷಪ್ರಶ್ನೆಗೆ ಪ್ರಜ್ಞಾವಂತರ್ಯಾರಿಗೂ ಉತ್ತರ ಹುಟ್ಟಲು ಸಾಧ್ಯವಿಲ್ಲ.
       ಹದಿನೈದನೇ ಶತಮಾನದ ಭೋಜಪ್ರಬಂಧವೆಂಬ ಕಾಲ್ಪನಿಕ ಕೃತಿಯನ್ನಾಧರಿಸಿ ನಿರ್ಮಿಸಿದ ಕವಿರತ್ನ ಕಾಳಿದಾಸ ಎಂಬ ಚಿತ್ರದಲ್ಲಿ ಕ್ರಿ.ಪೂರ್ವದಲ್ಲಿದ್ದವನನ್ನು ಹನ್ನೊಂದನೇ ಶತಮಾನಕ್ಕೆಳೆತಂದು ಭೋಜನ ಆಸ್ಥಾನದಲ್ಲಿ ಕೂಡ್ರಿಸಿದ್ದಲ್ಲದೇ ಶುದ್ಧ ವೈದಿಕ ಕಾಳಿದಾಸನನ್ನು ಕುರಿ ಕಾಯುವ ಪೆಕ್ರನಂತೆ ತೋರಿಸಲಾಯಿತು. ಹಾಗೆಂದು ಆ ಚಿತ್ರವನ್ನು ಚಿತ್ರವಾಗಿ ನೋಡಿದರಲ್ಲದೇ ಅದನ್ನು ನಿಷೇಧಿಸಿ, ರಾಜಕುಮಾರರ ಮೂಗು ಕತ್ತರಿಸಿ ಎಂದು ಯಾವ ಸಂಘಟನೆಯೂ ಕರೆಕೊಡಲಿಲ್ಲ. ರಾಜಸ್ಥಾನಕ್ಕೆ ಪದ್ಮಿನಿ ಹೇಗೋ ಕೇರಳಿಗರ ಪಾಲಿಗೆ ಉನ್ನಿಯಾರ್ಚೆ ವೀರನಾರಿ. ೧೯೮೯ರಲ್ಲಿ ಜ್ಞಾನಪೀಠಿ ಎಮ್.ಟಿ.ವಾಸುದೇವನ್ ನಾಯರ್ ಮಲಬಾರಿನ ವಡಕ್ಕನ್ ಪಾಟ್ಟುಗಳಲ್ಲಿ ಬರುವ ಉನ್ನಿಯಾರ್ಚೆಯ ಕಥೆಯನ್ನಾಧರಿಸಿ ಆವರೆಗೆ ಪ್ರಚಲಿತದಲ್ಲಿದ್ದ ನಿರೂಪಣೆಯನ್ನೇ ಸ್ವಲ್ಪ ಬದಲಿಸಿ ಒರು ವಡಕ್ಕನ್ ವೀರಗಥಾ ಎನ್ನುವ ಚಿತ್ರ ನಿರ್ಮಿಸಿದ್ದರು. ವಡಕ್ಕನ್ ಪಾಟ್ಟುಗಳ ಖಳನಾಯಕ ಛಾಯೆಯುಳ್ಳ ಚತ್ತಿಯಾನ್ ಚಂದುವಿನ ದೃಷ್ಟಿಕೋನದಲ್ಲಿ ನಿರೂಪಿಸಲ್ಪಟ್ಟ ಚಿತ್ರದಲ್ಲಿ ಅವನೇ ನಾಯಕನಾಗಿದ್ದ. ದೇಶವಿದೇಶಗಳಲ್ಲಿ ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದ ಈ ಚಿತ್ರವನ್ನು ನಿಷೇಧಿಸಿ ಎಂದು ಯಾವ ಮಲಯಾಳಿಯೂ ಬೀದಿಗಿಳಿಯಲಿಲ್ಲ. ಪದ್ಮಾವತಿ ಖಿಲ್ಜಿಯ ಒಂದೇ ಫ್ರೇಮಿನಲ್ಲಿ ಕಾಣಿಸಿಕೊಳ್ಳುವುದಿಲ್ಲವೆಂದೂ ಅವರಿಬ್ಬರ ಮಧ್ಯೆ ಯಾವ ರೊಮ್ಯಾನ್ಸ್ ದೃಶ್ಯವೂ ಇಲ್ಲವೆಂದು ಬನ್ಸಾಲಿ ಈಗಾಗಲೇ ಸಾರಿ ಹೇಳಿದ ಮೇಲೂ ಚಿತ್ರವನ್ನೂ ಪ್ರತಿಭಟನೆಯನ್ನು ಮುಂದುವರೆಸಿರುವ ಉದ್ದೇಶವೇನು? ಈಗಾಗಲೇ ಪ್ರಚಲಿತದಲ್ಲಿರುವ ಕಾವ್ಯವೊಂದನ್ನು ಭಟ್ಟಿಯಿಳಿಸುವ ಸ್ವಾತಂತ್ರ್ಯವೂ ನಿರ್ದೇಶಕನಿಗಿಲ್ಲವೆಂದಮೇಲೆ ನಮ್ಮಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉಳಿದ ಬೆಲೆಯಾದರೂ ಏನು? ದೇಶದಲ್ಲಿ ಭ್ರಷ್ಟಾಚಾರದ ಪ್ರಕರಣಗಳಲ್ಲಿ ನಂಬರ್ ಒನ್, ದಲಿತರ ವಿರುದ್ಧ ನಡೆಯುವ ದೌರ್ಜನ್ಯದಲ್ಲಿ ಎರಡನೇ ಸ್ಥಾನ, ಅತ್ಯಾಚಾರದಲ್ಲಿ ಮೂರನೇ ಸ್ಥಾನ, ಮಹಿಳಾ ದೌರ್ಜನ್ಯದಲ್ಲಿ ನಾಲ್ಕನೇ ಸ್ಥಾನ, ಮಹಿಳಾ ಸಾಕ್ಷರತೆಯಲ್ಲಿ ಕೊನೆಯ ಸ್ಥಾನ, ಶಿಶು ಮರಣದಲ್ಲಿ ಮೊದಲ ಸ್ಥಾನದಲ್ಲಿರುವ ರಾಜಸ್ಥಾನಕ್ಕೆ ಪದ್ಮಿನಿಯನ್ನು ಬಿಟ್ಟರೆ ಪ್ರತಿಭಟಿಸಲು ಉಳಿದ ವಿಷಯಗಳೇ ಇಲ್ಲವೇ?
       ರಾಜಸ್ಥಾನದಲ್ಲಿ ಮುಂದಿನ ವರ್ಷ ಚುನಾವಣೆ. ರಾಜಕಾರಣಿಗಳಿಗೆ ಪ್ರತಿಭಟನೆಯ ನೆಪದಲ್ಲಿ ಹುಲುಸಾದ ವೋಟುಗಳ ಬೆಳೆ. ಸಂಕ ಮುರಿದಲ್ಲೇ ಸ್ನಾನ ಎಂಬಂತೆ ಮಧ್ಯಪ್ರದೇಶದ ಶಿವರಾಜ್ ಚೌಹಾನ್ ಪದ್ಮಾವತಿಗೆ ಕೆಲವು ಕೋಟಿಗಳ ಭವ್ಯ ಸ್ಮಾರಕ ಸ್ಮಾರಕವನ್ನು ನಿರ್ಮಿಸಿ, ಅವಳ ಹೆಸರಲ್ಲಿ ಪ್ರಶಸ್ತಿಯನ್ನು ಸ್ಥಾಪಿಸುವ ಸೂಚನೆ ನೀಡಿದ್ದಾರೆ. ಟಿವಿ ಚಾನಲ್ಲುಗಳಿಗೆ ಇನ್ನೊಂದಾರು ತಿಂಗಳ ಚರ್ಚೆಗೆ ಬರವಿಲ್ಲ. ಆಮೇಲೆ ಯಥಾ ಪ್ರಕಾರ ರಾಮಮಂದಿರ ಯಾವಾಗ ನಿರ್ಮಾಣವಾಗಬೇಕು? ಟಿಪ್ಪು ಜಯಂತಿ ಆಚರಿಸಬೇಕೋ ಇಲ್ಲವಾ? ಥೇಟರುಗಳಲ್ಲಿ ಜನಗಣಮನಕ್ಕೆ ನಿಲ್ಲಬೇಕಾ ಬೇಡ್ವಾ? ಇತ್ಯಾದಿ ಇತ್ಯಾದಿ ದೇಶ ಜನ ಎದುರಿಸುತ್ತಿರುವ ಜ್ವಲಂತ ಚರ್ಚೆಗಳು ಮುನ್ನೆಲೆಗೆ ಬರುತ್ತವೆ. ಇವುಗಳ ಜೊತೆಗೆ ವಂದೇ ಮಾತರಂ, ಪಾಕಿಸ್ತಾನ, ಕಾಶ್ಮೀರ, ಲವ್ ಜಿಹಾದ್, ಹಿಂದು ಮುಸ್ಲಿಂಗಳಲ್ಲಿ ಕಾಲೌ ಗಚ್ಛತು ಧೀಮತಾಂ.
Thats how years will pass, our lives will pass too. ಲೋಗ್ ಮರ್ ಜಾಯೇಂಗೆ, ಸಬ್ ಠೀಕ್ ಹೋಜಾಯೇಗಾ....ಓಂ ಶಾಂತಿ.

Monday, September 25, 2017

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶೃಂಗೇರಿ ಪ್ರಕರಣ-೨


       ಶಾಂಕರ ಪರಂಪರೆಯ ಮಠಗಳ ಸ್ವರೂಪ, ವಿಶೇಷಣಗಳ ವಿವರವಾದ ಉಲ್ಲೇಖವಿರುವ ಗ್ರಂಥ ಮಠಾಮ್ನಾಯ ಸೇತು ಎಂದು ಕಳೆದ ಲೇಖನದಲ್ಲಿ ಹೇಳಿದ್ದೆನಷ್ಟೆ. ವಿವಿಧ ಲೇಖಕರಿಂದ ರಚಿತವಾದ ಇದರ ಬೇರೆ ಬೇರೆ ಪಾಠಬೇಧಗಳೂ ಇದೆ. ಮಠಾಮ್ನಾಯ ಶಾಸನ, ಪೂರ್ವಾಮ್ನಾಯ, ಉತ್ತರಾಮ್ನಾಯ, ಮಠಾಮ್ನಾಯ ಸೇತು ಎಂಬ ಮೂರ್ನಾಲ್ಕು ಗ್ರಂಥಗಳನ್ನು ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಕಾಣಬಹುದು. ಚತುರಾಮ್ನಾಯಗಳೆಂದರೆ ನಾಲ್ಕು ವೇದಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಮೀಸಲಾದ ಮಠಗಳು. ಮೊದಲನೇಯದಾಗಿ ಪಶ್ಚಿಮದಲ್ಲಿ ಸಾಮವೇದಪರಂಪರೆಯ ದ್ವಾರಕೆಯ ಕಾಳಿಕಾಪೀಠ. ಇದು ಕೀಟವಾಳ ಸಂಪ್ರದಾಯದ್ದು. ಶಾಂಕರಮಠಗಳ ಸನ್ಯಾಸಿಗಳ ಉಪಾಧಿಯಾದ ದಶನಾಮೀ ಪರಂಪರೆಯಲ್ಲಿ ಆಶ್ರಮ ಹಾಗೂ ತೀರ್ಥ ಎಂಬ ಹೆಸರುಗಳು ಇಲ್ಲಿನ ಪೀಠಾಧಿಪತಿಗಳಿಗೆ. ಸಿದ್ಧೇಶ್ವರ ದೇವನೂ, ಭದ್ರಕಾಳಿಯೆಂಬ ಶಕ್ತಿಯೂ ಇಲ್ಲಿನ ಆರಾಧ್ಯದೈವಗಳು. ಗೋಮತಿಯೆಂಬ ತೀರ್ಥ. ತತ್ತ್ವಮಸಿಯೆಂಬ ಮಹಾವಾಕ್ಯ. ಪದ್ಮಪಾದರು ಮೊದಲ ಆಚಾರ್ಯರು.
ಪಶ್ಚಿಮೇ ಕಾಳಿಕಾಪೀಠಂ ದ್ವಾರಕಾಕ್ಷೇತ್ರ ಉಚ್ಯತೇ
ಕೀಟವಾರಃ ಸಂಪ್ರದಾಯಸ್ತೀರ್ಥಾಶ್ರಮಪದೇ ಉಭೇ ||
ದೇವಃ ಸಿದ್ಧೇಶ್ವರಃ ಶಕ್ತಿರ್ಭದ್ರಕಾಲೀತಿ ವಿಶ್ರುತಾ
ಸ್ವರೂಪಬ್ರಹ್ಮಚಾರ್ಯಾಖ್ಯ ಆಚಾರ್ಯಃ ಪದ್ಮಪಾದಕಃ ||
ವಿಖ್ಯಾತಂ ಗೋಮತೀತೀರ್ಥಂ ಸಾಮವೇದದ್ತಥೋಚ್ಯತೇ
ತತ್ತ್ವಮಸ್ಯಾದಿವಾಕ್ಯಂ ಚ ಜಿವಾತ್ಮಪರಮಾತ್ಮನೋಃ |
ಏಕೀಭಾವಂ ವಿನಿರ್ದಿಶ್ಯ ನಾಮಾನ್ಯುಕ್ತಾನ್ಯನುಕ್ರಮಾತ್
       ಎರಡನೇಯದಾಗಿ ಋಗ್ವೇದಕ್ಕೆ ಪೂರ್ವದ ಪುರಿಯಲ್ಲಿ ಭೋಗವಾಳ ಸಂಪ್ರದಾಯದ ಗೋವರ್ಧನ ಮಠ. ವನ ಹಾಗೂ ಅರಣ್ಯವೆಂಬ ಉಪಾಧಿ ಇಲ್ಲಿನ ಪೀಠಾಧಿಪತಿಗಳಿಗೆ. ಮಹೋದಧಿಯೆಂಬ ತೀರ್ಥ(ಬಂಗಾಳ ಕೊಲ್ಲಿಗೆ ಮೊದಲು ಮಹೋದಧಿಯೆಂಬ ಹೆಸರಿತ್ತು). ಪ್ರಜ್ಞಾನಂ ಬ್ರಹ್ಮ ಎಂಬ ಧ್ಯೇಯವಾಕ್ಯ. ದೇವ ಜಗನ್ನಾಥ, ಶಕ್ತಿ ವೃಷಲಾದೇವಿ ಆರಾಧನೆಯ ಈ ಮಠಕ್ಕೆ ಹಸ್ತಾಮಲಕರು ಮೊದಲ ಆಚಾರ್ಯರು.
ದ್ವಿತೀಯಃ ಪೂರ್ವದಿಗ್ಭಾಗೇ ಗೋವರ್ಧನಮಠಃ ಸ್ಮೃತಃ |
ಭೋಗವಾರಃ ಸಂಪ್ರದಾಯೋ ವನಾರಣ್ಯಪದೇ ತಥಾ
ತಸ್ಮಿನ್ ದೇವೋ ಜಗನ್ನಾಥಃ ಪುರುಷೋತ್ತಮಸಂಜ್ಞಕಃ |
ಕ್ಷೇತ್ರಂ ಚ ಸರ್ವಲೋಕೇಷು ತನ್ನಾಮ್ನೈವ ಹಿ ವಿಶ್ರುತಮ್
ಪ್ರಕಾಶಬ್ರಹ್ಮಚಾರೀತಿ ಹಸ್ತಾಮಲಕಸಂಜ್ಞಿತಹ್ಃ |
ಆಚಾರ್ಯಃ ಪ್ರಥಿತಸ್ತತ್ರ ನಾಮ್ನಾಂ ಭೇದಃ ಪೃಥಕ್ ಪೃಥಕ್
ಸ್ಥಾನಂ ಮಹೋದಧೇಸ್ತೀರ್ಥಂ ಶುಕ್ಲಂ ಯಜುರುದಾಹೃತಮ್ |
ಮಹಾವಾಕ್ಯಂ ಚ ತತ್ರೋಕ್ತಂ ’ಪ್ರಜ್ಞಾನಂ ಬ್ರಹ್ಮ’ ಸಂಜ್ಞಿತಮ್
        ಮೂರನೇಯದಾಗಿ ಅಥರ್ವಣವೇದಕ್ಕೆ ಉತ್ತರದ ಬದರಿಕಾಶ್ರಮದಲ್ಲಿ ಆನಂದವಾಳ ಪರಂಪರೆಯ ಶ್ರೀಮಠ. ನಾರಾಯಣ ದೇವ ಹಾಗೂ ಪೂರ್ಣಗಿರಿ ಶಕ್ತಿಯನ್ನು ಆರಾಧಿಸುವ ಇಲ್ಲಿನ ಆಚಾರ್ಯರಿಗೆ ಗಿರಿ, ಪರ್ವತ, ಸಾಗರಗಳೆಂಬ ಉಪಾಧಿಗಳು. ನಂದವಾರವೆಂಬ ತೀರ್ಥವೂ, ಅಯಮಾತ್ಮಾ ಬ್ರಹ್ಮವೆಂಬ ಮಹಾವಾಕ್ಯವೂ ಈ ಮಠಕ್ಕೆ. ತ್ರೋಟಕರು ಇಲ್ಲಿನ ಮೊದಲ ಪೀಠಾಧಿಪತಿಗಳು.
ಉತ್ತರೇ ಶ್ರೀಮಠಃ ಕ್ಷೇತ್ರಂ ಖ್ಯಾತೋ ಬದರಿಕಾಶ್ರಮಃ |
ದೇವೋ ನಾರಾಯಣೋ ದೇವೀ ಶಕ್ತಿಃ ಪೂರ್ಣಗಿರೀತಿ ಚ
ಸಂಪ್ರದಾಯೋ ನನ್ದವಾರಸ್ತೀರ್ಥಂ ಚಾಲಕನನ್ದಕಾ |
ಆನನ್ದಬ್ರಹ್ಮಚಾರೀತಿ ಗಿರಿಪರ್ವತಸಾಗರಾಃ
ನಾಮಾನಿ ತ್ರೋಟಕಾಚಾರ್ಯೋ ವೇದೋಥರ್ವಣಸಂಜ್ಞಕಃ |
ಮಹಾವಾಕ್ಯಂ ಚ ಕಥಿತಮಯಮಾತ್ಮಾ ಬ್ರಹ್ಮೇತಿ ಚ
ದಿಗ್ಭಾಗೇ ದಕ್ಷಿಣೇ ರಮ್ಯಃ ಶೃಂಗೇರ್ಯಾಂ ಶಾರದಾಮಠಃ |
ವರಾಹೋ ದೇವತಾ ತತ್ರ ರಾಮಕ್ಷೇತ್ರಮುದಾಹೃತಮ್
ತೀರ್ಥಂ ಚ ತುಂಗಭದ್ರಾಖ್ಯಾಂ ಶಕ್ತಿಃ ಶ್ರೀಶಾರದೇತಿ ಚ |
ಚೈತನ್ಯ ಬ್ರಹ್ಮಚಾರ್ಯಾಖ್ಯಾ ಆಚಾರ್ಯೋ ವಿಶ್ವರೂಪಕಃ
ಸರಸ್ವತೀತಿ ನಾಮಾನಿ ಭಾರತೀತಿ ಪುರೀತಿ ಚ |
ಸಂಪ್ರದಾಯೋ ಭೂರಿವಾರಃ ಕೃಷ್ಣಂ ಯಜುರುದಾಹೃತಮ್
ಮಹಾವಾಕ್ಯಂ ಚ ಕಥಿತಮಹಂ ಬ್ರಹ್ಮಾಸ್ಮಿನಾಮತಃ ||
       ಕೊನೆಯದಾಗಿ ದಕ್ಷಿಣದಲ್ಲಿ ಯಜುರ್ವೇದಪರಂಪರೆಗೆ ಶೃಂಗೇರಿಯ ಶಾರದಾಮಠ. ವರಾಹ ಇಲ್ಲಿಯ ದೇವತೆ. ರಾಮಕ್ಷೇತ್ರವೆಂಬ ಪ್ರಸಿದ್ಧಿ. ವಿಶ್ವರೂಪರು ಇಲ್ಲಿನ ಮೊದಲ ಪೀಠಾಧಿಪತಿ. ಸರಸ್ವತಿ, ಭಾರತಿ ಎಂಬ ಉಪಾಧಿಗಳು ಇಲ್ಲಿನ ಆಚಾರ್ಯರಿಗೆ. ಭೂರಿವಾಳ ಪರಂಪರೆ. ಅಹಂ ಬ್ರಹ್ಮಾಸ್ಮಿ ಎಂಬ ಮಹಾವಾಕ್ಯ.
      ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಠಾಮ್ನಾಯದಲ್ಲೂ ಉಲ್ಲೇಖಿತವಾಗಿರುವ ಶೃಂಗೇರಿ ತುಂಗಭದ್ರಾನದೀತೀರದಲ್ಲೇ ಇದೆ. ಇಲ್ಲಿನ ಮೊದಲ ಪೀಠಾಧಿಪತಿಗಳೆಂದು ನಂಬಲಾಗುವ ಸುರೇಶ್ವರಾಚಾರ್ಯರೆಂದು ಖ್ಯಾತರಾದ ವಿಶ್ವರೂಪೇ ಮಂಡನಮಿಶ್ರರೇ ಎಂಬುದು ಚರ್ಚಾರ್ಹ. ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’ ಎಂದು ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ, ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಇನ್ನು ಕಂಚಿ ಮಠದವರೂ ಸುರೇಶ್ವರರನ್ನು ತಮ್ಮ ಮೊದಲ ಪೀಠಾಧಿಪತಿಯೆನ್ನುತ್ತಾರೆ. ಕಂಚಿಯ ಐದನೇ ಆಚಾರ್ಯರಾದ ಆನಂದಜ್ಞಾನರ ಪುಣ್ಯಶ್ಲೋಕಮಂಜರಿ, ಐವತ್ತೈದನೇ ಆಚಾರ್ಯರಾದ ಪರಮಶಿವೇಂದ್ರರ ಶಿಷ್ಯರಾದ ಸದಾಶಿವಬ್ರಹ್ಮೇಂದ್ರರ ಗುರುರತ್ನಮಾಲಿಕೆ, ಆತ್ಮಬೋಧರ ಸುಷುಮಾ ವ್ಯಾಖ್ಯಾನಗಳಲ್ಲಿ ಮೊದಲ ಪೀಠಾಧಿಪತಿಗಳಾದ ಸುರೇಶ್ವರರ ವಿಸ್ತೃತ ಮಾಹಿತಿಯಿದೆ. ಜೊತೆಗೆ ಸುರೇಶ್ವರರು ಸಂಸಾರಿಯಾಗಿದ್ದರಿಂದ ಅಪರಮಹಂಸರಾಗಿದ್ದರಿಂದ ಅವರನ್ನು ಪೀಠವ್ಯವಸ್ಥೆಯನ್ನು ನೋಡಿಕೊಳ್ಳಲಷ್ಟೇ ಶಂಕರರು ನೇಮಕಮಾಡಿದ್ದರೆಂಬ ಮಾಹಿತಿಯೂ ಇದೆ. ಕೆಲ ಪಾಠಬೇಧಗಳು ಸುರೇಶ್ವರರನ್ನು ದ್ವಾರಕಾಮಠದಲ್ಲಿಯೂ ಕೂರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
        ಶೃಂಗೇರಿ ಪರಂಪರೆಯಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ತುಂಗಭದ್ರಾತೀರದ ರಾಮಕ್ಷೇತ್ರವೆಂಬ ಹೆಸರಿನ ಇದಕ್ಕೆ ವರಾಹ ಮುಖ್ಯದೇವತೆ! ಇದರ ಒಗಟೇನೆಂಬುದನ್ನು ಒಡೆಯಲು ಬಹುಕಾಲದಿಂದ ಸಾಧ್ಯವಾಗಿರಲಿಲ್ಲ. ಆದರೆ ಮೊನ್ನೆ ಕೂಡಲಿ ಶ್ರೀಗಳನ್ನು ಭೇಟಿಮಾಡಿದ ಮೇಲೆ ಆ ಜಿಜ್ಞಾಸೆಗೊಂದು ಹೊಳಹು ಸಿಕ್ಕಿತು.
ಯತ್ರಾಧುನಾಪ್ಯುತ್ತಮಮೃಗಶೃಂಗಸ್ತಪಶ್ಚರತ್ಯಾತ್ಮಭೃದನ್ತರಂಗಃ |
ಸಂಸ್ಪರ್ಶಮಾತ್ರೇಣ ವಿತೀರ್ಣಭದ್ರಾ ವಿದ್ಯೋತತೇ ಯತ್ರ ಚ ತುಂಗಭದ್ರಾ ||
ಮಾಧವೀಯದ ಈ ಶ್ಲೋಕದಲ್ಲಿ ತುಂಗಭದ್ರಾ ಎಂದಿರುವುದು ಗಮನಿಸತಕ್ಕ ವಿಚಾರ. ಆನಂದಗಿರೀಯದ ಪ್ರಕಾರ ’ತತಃ ಪರಂ ಸರಸವಾಣೀಃ ಮಂತ್ರಬದ್ಧಾಂ ಕೃತ್ವಾ ಗಗನಮಾರ್ಗಾದೇವ ಶೃಂಗಗಿರಿಸಮೀಪೇ ತುಂಗಭದ್ರಾತೀರೇ ಚಕ್ರಂ ನಿರ್ಮಾಯ ತದಗ್ರೇ ಪರದೇವತಾಂ ಸರಸವಾಣೀಂ ನಿಧಾಯ’ ಹೊರಟುನಿಂತ ಸರಸವಾಣಿಯನ್ನು ಮಂತ್ರಬಲದಿಂದ ಕಟ್ಟಿಹಾಕಿ ತುಂಗಭದ್ರಾತೀರದ ಶೃಂಗೇರಿಯಲ್ಲಿ ಚಕ್ರವನ್ನು ನಿರ್ಮಾಣಮಾಡಿ ಅದರಲ್ಲಿ ಮೇಲಿಟ್ಟರು. ಶಂಕರಕೃತವಾದ ಶಾರದಾ ಭುಜಂಗ ಸ್ತೋತ್ರವನ್ನೂ ಹಿಡಿದು ಎಲ್ಲ ಶಂಕರವಿಜಯಗಳಲ್ಲೂ ಶಾರದೆಯನ್ನು ತುಂಗಭದ್ರಾತೀರವಾಸಿನಿಯೆನ್ನಲಾಗಿದೆ.  ಆದರೆ ಶೃಂಗೇರಿಯಿರುವುದು ತುಂಗಾ ತೀರದಲ್ಲೇ ಹೊರತೂ ತುಂಗಭದ್ರಾ ತೀರದಲ್ಲಲ್ಲ. ಶಿವಮೊಗ್ಗದ ಸಮೀಪ ತುಂಗಾ-ಭದ್ರಾ ನದಿಗಳ ಸಂಗಮವಾಗುವಲ್ಲಿ ಕೂಡಲಿ ಶೃಂಗೇರಿ ಎಂಬ ಇನ್ನೊಂದು ಕ್ಷೇತ್ರವಿದೆ. ಇಲ್ಲಿಯೂ ಒಂದು ಶಂಕರಸ್ಥಾಪಿತ ಮಠವಿದೆ. ಹಾಗಾದರೆ ಅಸಲು ಶೃಂಗೇರಿ ಇರುವುದೆಲ್ಲಿ? ಶೃಂಗೇರಿ ಆಚಾರ್ಯರಿಗೆ ಪರಿಚಿತವಾದ ಸ್ಥಳವಲ್ಲ. ಋಷ್ಯಶೃಂಗವೆಂಬ ಹೆಸರು ಯಾವ ಶಂಕರವಿಜಯಗಳಲ್ಲೂ ಈ ಮೊದಲು ಪ್ರಸ್ತಾಪಿತವಾಗಿಲ್ಲ. ಹಾಗಾದರೆ ಹಠಾತ್ತನೆ ಶಂಕರರು ಶಾರದೆಯನ್ನು ಉತ್ತರ ದೇಶದಿಂದ ಕರೆತಂದು ಶೃಂಗೇರಿಯಲ್ಲಿ ನೆಲೆಗೊಳಿಸಿದ್ದೇಕೆ?
       ಶೃಂಗೇರಿಯ ಬಗ್ಗೆ ಎರಡು ಬಹುಶ್ರುತವಾದ ಕಥೆಗಳಿವೆ. ಒಂದು ಚಿದ್ವಿಲಾಸೀಯ ಶಂಕರವಿಜಯದ್ದು. "ಶಾಲೂರೀ ಮತಿಗರ್ಭಭಾರವಿಷಹಾಂ ಸದ್ಯಃ ಪ್ರಸೂತ್ಯುನ್ಮುಖೀಂ ತೀವ್ರೋದಗ್ರದಿವಾಕರಾತಪಪರಿಕ್ಲಾಂತಾಮ್ | ಭುಜಂಗೀ ಫಣಾಮಾಸ್ತೀರ್ಯಾತಪವಾರಣಾಯ ಪರಿತಃ ಪಾಂತೀಂ ದೃಶಾಲೋಕತ ||" ಆಚಾರ್ಯರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಬಿಸಿಲ ಬೇಗೆಯನ್ನು ತಾಳಲಾರದೆ ಬಳಲಿದ್ದ ಪ್ರಸವವೇದನೆಯ ಸ್ಥಿತಿಯಲ್ಲಿದ್ದ ಕಪ್ಪೆಯೊಂದಕ್ಕೆ ಹಾವೊಂದು ಹೆಡೆಬಿಚ್ಚಿ ನೆರಳು ನೀಡುತ್ತಿತ್ತಂತೆ. ಈ ಅದ್ಭುತವನ್ನು ಕಂಡ ಶಂಕರರು ಪ್ರಾಣಿಗಳು ವೈರತ್ವವನ್ನು ಮರೆತ ಸ್ಥಳದಲ್ಲೇ ಸರಸವಾಣಿಯನ್ನು ನೆಲೆಗೊಳಿಸಿದರಂತೆ. ಹೆಣುಕಪ್ಪೆ ಮರಿಗಳನ್ನು ಹೆರುವುದಿಲ್ಲವೆಂದು ಚಿದ್ವಿಲಾಸೀಯಕಾರನಿಗೆ ಯಾರೂ ಹೇಳಿರಲಿಲ್ಲವೇನೋ ! 
      ಶೃಂಗೇರಿಯಲ್ಲಿ ಶಾರದಾ ಸ್ಥಾಪನೆಯಾದುದರ ಬಗ್ಗೆ ಸರ್ವ ಗ್ರಂಥಗಳಲ್ಲೂ ಒಮ್ಮತಾಭಿಪ್ರಾಯವಿರುವುದಾದರೂ ಅಲ್ಲಿ ಶಂಕರರು ಮಠವನ್ನು ನಿರ್ಮಿಸಿದ ಬಗ್ಗೆ ಸ್ವತಃ ಶೃಂಗೇರಿ ಗುರುಪರಂಪರೆಯ ಮಾಧವ ವಿದ್ಯಾರಣ್ಯರೇ ರಚಿಸಿದರೆಂದು ಭಾವಿಸಲಾಗುವ ಮಾಧವೀಯದಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲ.  ಶೃಂಗೇರಿಯನ್ನು ಹೊಗಳಲೋಸುಗ ಒಂದು ಅಧ್ಯಾಯವನ್ನು ಮೀಸಲಿಟ್ಟ ಆನಂದಗಿರೀಯ ಕೊನೆಯೊಂದು ಭಾಗದಲ್ಲಿ ಮಾತ್ರ ಶಂಕರರು ಇಲ್ಲಿ ಮಠವೊಂದನ್ನು ಸ್ಥಾಪಿಸಿ ವಿದ್ಯಾಪೀಠವನ್ನು ಏರ್ಪಡಿಸಿದರು ಎಂದು ಮುಗಿಸುತ್ತಾನೆ. ಇದ್ದುದರಲ್ಲಿ ಚಿದ್ವಿಲಾಸೀಯಕಾರನೇ ಪರವಾಗಿಲ್ಲ. ಒಟ್ಟೂ ೩೨ ಅಧ್ಯಾಯಗಳಲ್ಲಿ ನಾಲ್ಕು ಅಧ್ಯಾಯಗಳನ್ನು ಶೃಂಗೇರಿ ಮಠದ ಬಗೆಗಿನ ವಿಸ್ತಾರವಾದ ಮಾಹಿತಿಗಾಗಿಯೇ ಮೀಸಲಿದಲಾಗಿದೆ. ಕೆಲವು ಶಂಕರವಿಜಯಗಳ ಉಲ್ಲೇಖ ಹಾಗೂ ಬಹುಜನರ ನಂಬಿಕೆಯೆಂಬುದನ್ನು ಬಿಟ್ಟರೆ ಶೃಂಗೇರಿ ಮಠ ಸ್ಥಾಪನೆಯ ಬಗ್ಗೆ ಶಾಸನಾಧಾರಗಳೂ ಇಲ್ಲ. ೧೩೪೫ರ ವೀರಹರಿಹರ ಒಡೆಯರ ಶಾಸನದಲ್ಲೂ ’ಭಾರತೀತೀರ್ಥ ಶ್ರೀಪಾದರು ಶೃಂಗೇರಿಯ ತೀರ್ಥವಾಸದಲ್ಲಿ ಅನುಷ್ಟಾನಮಾಡಲಿಕ್ಕೆ’ ಎಂದಿದೆಯೇ ಹೊರತೂ ಶಾರದಾಪೀಠದ ಪ್ರಸ್ತಾಪವಿಲ್ಲ.
ಇನ್ನು ತುಂಗಭದ್ರೆಯನ್ನು ಬಿಟ್ಟರೂ ರಾಮಕ್ಷೇತ್ರಕ್ಕೂ ವರಾಹ ದೇವತೆಗೂ ಶೃಂಗೇರಿಗೂ ಇರುವ ಸಂಬಂಧ ಅಗೋಚರವೇ.
ದಂಷ್ಟ್ರಾಭ್ಯಾಂ ನಿಸೃತೇ ಘೋರೇತರಾ ಭೂಚ್ಚ ನದೀದ್ವಯಂ
ತುಂಗಭದ್ರೇತಿ ವಿಖ್ಯಾತಾ ನದೀನಾಂ ಪ್ರವರಾ ಶುಭಾ
ವೇದಪಾದೋದ್ಭವೇ ದೇವೀ ಶ್ರೀ ಶೈಲೋತ್ತುಂಗ ಗಾಮಿನಿ
ತುಂಗಭದ್ರೇತಿ ವಿಖ್ಯಾತಾ ಮಹಾಪಾತಕನಾಶಿನೀ ||
ಎಂಬ ವಾಕ್ಯಗಳು ಬ್ರಹ್ಮಾಂಡಪುರಾಣದಲ್ಲಿವೆ. ಮಹಾವಿಷ್ಣುವು ವರಾಹಾವತಾರವನ್ನು ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸುತ್ತಾನೆ. ಅನಂತರ ಸಹ್ಯ ಪರ್ವತಕ್ಕೆ ಬಂದು ದಣಿವಾರಿಸಿಕೊಂಡನಂತೆ. ಆಗ ಆತನ ಎರಡು ದಾಡೆಗಳಿಂದ ಸುರಿದ ಬೆವರು ನದಿ ರೂಪವನ್ನು ತಳೆದು ಹರಿಯತೊಡಗಿತಂತೆ. ಈ ಸ್ಥಳವನ್ನು ವೇದಪಾದ ಎಂದು ಕರೆಯುತ್ತಾರೆ. ಚಿಕ್ಕಮಗಳೂರಿನ ಕುದುರೆಮುಖದ ಹತ್ತಿರ ವೇದಪಾದ ಎಂಬ ಸ್ಥಳವೂ ವರಾಹಮೂಲ ಎಂಬ ಪ್ರದೇಶವೂ ಇವೆ. ಅಲ್ಲಿ ವರಾಹದ ದಾಡೆಗಳ ಆಕೃತಿಯಲ್ಲಿರುವ ಬಂಡೆಗಳಿಂದ ಎರಡು ನದಿಗಳು ಹುಟ್ಟುತ್ತವೆ. ಎಡದಾಡೆಯಿಂದ ತುಂಗಾ ನದಿಯೂ ಬಲದಾಡೆಯಿಂದ ಭದ್ರಾ ನದಿಯೂ ಹುಟ್ಟಿತೆಂಬುದು ಬ್ರಹ್ಮಾಂಡಪುರಾಣದ ಕಥೆ.
ವರಾಹ ವಾಮದಂಷ್ಟ್ರಾಸ್ತು ತುಂಗಾ ತುಂಗಫಲಪ್ರದಾ |
ಸಮುದ್ಭೂತಾ ನೃಪಶ್ರೇಷ್ಠ ಭದ್ರಾ ದಕ್ಷಿಣದಂಷ್ಟ್ರದಃ ||
ಈ ಎರಡೂ ನದಿಗಳು ಮುಂದೆ ಶಿವಮೊಗ್ಗದಿಂದ ೨೦ ಕಿಮೀ ದೂರದ ಕೂಡಲಿ ಎಂಬ ಸ್ಥಳದಲ್ಲಿ ಸಂಗಮವಾಗುತ್ತವೆ. ಈ ಊರನ್ನು ಪುರಾಣಗಳು ಯಮಳ ಪುರಿಯೆಂದೂ, ದ್ರೋಣಪರ್ವತವೆಂದೂ, ಕೂಡಲಿಯೆಂದೂ ಕರೆದಿವೆ.
ತುಂಗಾನಾರಾಯಣಃ ಸಾಕ್ಷಾತ್ ಭದ್ರಾದೇವೋ ಮಹೇಶ್ವರಃ |
ತುಂಗಭದ್ರಾತ್ಮಕಂ ವಿದ್ಧಿ ಹರಿಶಂಕರಯೋರ್ವಪುಃ ||
ತುಂಗೆಯು ಸಾಕ್ಷಾತ್ ಹರಿಯ ಅಂಶವೂ, ಭದ್ರೆಯು ಹರನ ಅಂಶವೂ ಆಗಿರುವುದರಿಂದ ಅವೆರಡೂ ಸಂಗಮಿಸುವ ಕೂಡಲಿಗೆ ಹರಿಹರಕ್ಷೇತ್ರವೆಂಬ ಹೆಸರೂ ಇದೆ.
       ಸ್ಕಾಂದಪುರಾಣದ ಪ್ರಕಾರ ಪಟ್ಟಾಭಿಷೇಕದ ನಂತರ ಶ್ರೀರಾಮ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಒಂದು ದಿನ ಬೆಳಿಗ್ಗೆ ಉದ್ಯಾನದಲ್ಲಿ ಅಡ್ಡಾಡುತ್ತಿರುವಾಗ ತನ್ನನ್ನು ಕಪಿಯ ಆಕೃತಿಯ ನೆರಳೊಂದು ಅನುಸರಿಸಿ ಬರುವಂತೆ ಆತನಿಗೆ ಕಂಡಿತು. ಆಶ್ಚರ್ಯವೂ ಆತಂಕವೂ ಉಂಟಾಗಿ ಶ್ರೀರಾಮ ವಸಿಷ್ಟರಲ್ಲಿ ಈ ವಿಷಯವನ್ನು ತಿಳಿಸಿದ. ಆಗ ಅವರು ಆ ಕಪಿಯ ನೆರಳು ವಾಲಿಯ ಪ್ರೇತವೆಂದೂ, ಪ್ರೇತಬಾಧೆಯನ್ನು ಕಳೆಯಲು ಹರಿಹರಕ್ಷೇತ್ರದಲ್ಲಿ ಶಿವನನ್ನು ಪೂಜಿಸಲು ಸೂಚಿಸುತ್ತಾರೆ. ತಕ್ಷಣ ರಾಮ ತುಂಗಭದ್ರಾ ನದಿ ಸಂಗಮದ ಯಮಳಪುರಿಗೆ ಬಂದು ಸ್ನಾನಮಾಡಿ ದಡದಲ್ಲಿ ಶಿವಲಿಂಗವನ್ನು ಸ್ಥಾಪಿಸಿ ಅರ್ಚಿಸಿದನಂತೆ. ರಾಮ ಸ್ಥಾಪಿಸಿದ ಲಿಂಗವನ್ನು ವಸಿಷ್ಟರು ಶ್ರೀರಾಮೇಶ್ವರನೆಂದು ನಾಮಕರಣಗೈದರು. ಅಲ್ಲಿಗೆ ಮಠಾಮ್ನಾಯಗಳಲ್ಲಿ ಉಲ್ಲೇಖಿತವಾದ ತುಂಗಭದ್ರಾ, ವರಾಹ ಹಾಗೂ ರಾಮಕ್ಷೇತ್ರಗಳು ಶೃಂಗೇರಿಗಿಂತ ಕೂಡಲಿಗೇ ಹೆಚ್ಚು ಹೊಂದುತ್ತವೆ ಎಂದಾಯಿತು.
ತುಂಗಭದ್ರಾ ಸಂಗಮ
ರಾಮೇಶ್ವರ ದೇವಾಲಯ

       ಹಾಗಾದರೆ ಶಂಕರರು ಸ್ಥಾಪಿಸಿದ ಮೂಲ ಶೃಂಗೇರಿ ಮಠ ಕೂಡಲಿಯಲ್ಲಿತ್ತೇ? ಇದಕ್ಕೆ ಉತ್ತರ ನೀಡುವುದು ನಿಜಕ್ಕೂ ಕಷ್ಟವೇ! ಸಿಗುವ ಅಲ್ಪ ದಾಖಲೆಗಳನ್ನು ಗಮನಿಸಿದರೆ ಶೃಂಗೇರಿಯಲ್ಲಿ ರಾಮಚಂದ್ರಭಾರತಿಗಳ ನಂತರ ಬಂದ ನೃಸಿಂಹಭಾರತಿಗಳೆಂಬುವವರು ಉತ್ತರ ಭಾರತಕ್ಕೆ ತೀರ್ಥಯಾತ್ರೆಗೆ ಹೋಗಿದ್ದರಂತೆ. ಹೋಗುವಾಗ ತಮ್ಮ ಶಿಷ್ಯನೊಬ್ಬನಿಗೆ ವಿದ್ಯಾರಣ್ಯಭಾರತಿಯೆಂದು ನಾಮಕರಣ ಮಾಡಿ ಉತ್ತರಾಧಿಕಾರಿಯನ್ನಾಗಿ ನೇಮಿಸಿ ಹೋದರು. ಅದೇ ಸಮಯದಲ್ಲಿ ಅಂದರೆ ಕ್ರಿ.ಶ ೧೫೬೫ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರದ ಅರಸರು ಸೋತು ಸಾಮ್ರಾಜ್ಯ ನಿರ್ನಾಮವಾಯಿತು. ವಿಜಯನಗರ ಅರಸರ ಗೌರವಕ್ಕೆ ಪಾತ್ರವಾಗಿದ್ದ ಧರ್ಮಪೀಠಗಳೆಲ್ಲ ನಿರಾಶ್ರಿತವಾದವು. ಪರಿಣಾಮ ಮುಸ್ಲೀಮರ ದಬ್ಬಾಳಿಕೆ ರಾಜ್ಯದಲ್ಲಿ ಹೆಚ್ಚಾಯ್ತು. ಇದೇ ಕಾರಣಗಳಿಂದ ವಿದ್ಯಾರಣ್ಯಭಾರತಿಗಳು ಶೃಂಗೇರಿಯನ್ನು ಬಿಟ್ಟು ಕೂಡಲಿಗೆ ಬಂದು ನೆಲೆಸಿದರು. ಇತ್ತ ಪರ್ಯಟನೆಗೆ ಹೋದವರು ಹನ್ನೆರಡು ವರ್ಷಗಳಾದರೂ ಹಿಂದಿರುಗಲಿಲ್ಲ. ಬಹುಕಾಲ ಪೀಠವನ್ನು ಪೀಠಾಧಿಪತಿಯಿಲ್ಲದೇ ಬಿಡುವುದು ಸರಿಯಲ್ಲವೆಂದು ಊರ ಜನರೆಲ್ಲ ಸೇರಿ ಇನ್ನೊಬ್ಬ ಸಂನ್ಯಾಸಿಗೆ ಪಟ್ಟಕಟ್ಟಿದರು.  ಇದಾಗಿ ಸುಮಾರು ಸಮಯದ ನಂತರ ಇಪ್ಪತ್ತು ವರ್ಷಗಳ ತೀರ್ಥಯಾತ್ರೆಯನ್ನು ಮುಗಿಸಿ ಹಳೆಯ ಸ್ವಾಮಿಗಳ ಆಗಮನವಾಯ್ತು.  ಊರವರೆಲ್ಲ ಹೊಸ ಸ್ವಾಮಿಗಳಿಗೆ ಪಟ್ಟಕಟ್ಟಿದ ವಿಷಯ ತಿಳಿದು ನೃಸಿಂಹ ಭಾರತಿಗಳು ಕೂಡಲಿಯಲ್ಲೇ ನೆಲೆಸುವ ನಿರ್ಧಾರ ಕೈಗೊಂಡರು. ಪರಿಣಾಮವಾಗಿ ಸ್ವಾಮಿಗಳ ಜೊತೆ ಬಂದಿದ್ದ ಶೃಂಗೇರಿಯ ಪರಿವಾರ ದೇವರುಗಳೆಲ್ಲ ಕೂಡಲಿಯಲ್ಲೇ ಉಳಿದುಕೊಂಡವು. ಅಲ್ಪಸ್ವಲ್ಪ ವ್ಯತ್ಯಾಸವಿದ್ದರೂ ಈ ಕಥೆ ಸತ್ಯವೇ. ಆದರೆ ಶಂಕರವಿಜಯಗಳಲ್ಲಿ ಅವುಗಳಿಗಿಂತ ಮೊದಲೇ ಶೃಂಗೇರಿಯ ಬದಲು ಕೂಡಲಿಯ ಉಲ್ಲೇಖ ಸಿಗಲು ಕಾರಣವೇನೆಂಬುದಕ್ಕೆ ಸಮಂಜಸ ವ್ಯಾಖ್ಯಾನಗಳು ದೊರಕುತ್ತಿಲ್ಲ. ಕೆಲ ಐತಿಹ್ಯಗಳ ಪ್ರಕಾರ ಮೂಲತಃ ಕೂಡಲಿಯಲ್ಲೇ ಇದ್ದ ಮಠವು ವಿದ್ಯಾರಣ್ಯರ ಕಾಲದಲ್ಲಿ ಶೃಂಗೇರಿಗೆ ಸ್ಥಳಾಂತರಗೊಂಡಿತು. ಶೃಂಗೇರಿ ಪರಂಪರೆಯಲ್ಲಿ ಭಾರತೀ ಎಂಬ ಉಪಾಧಿ ಶುರುವಾಗುವುದು ವಿದ್ಯಾರಣ್ಯರ ನಂತರವೇ. ಕೂಡಲಿಯಲ್ಲಿ ಶಂಕರರು ಸ್ಥಾಪಿಸಿದ ನಿಂತ ಭಂಗಿಯಲ್ಲಿರುವ  ಉಭಯಭಾರತಿ ಅಥವಾ ಶಾರದೆಯ ಮೂರ್ತಿಯನ್ನು ಈಗಲೂ ನೋಡಬಹುದು. ವಾಸ್ತುಶಿಲ್ಪದ ಪ್ರಕಾರ ಇಂಥ ಮಾದರಿ ಬಹು ಅಪರೂಪದ್ದು. ಅದೇ ಶೃಂಗೇರಿಯಲ್ಲಿರುವುದು ಕುಳಿತ ಭಂಗಿಯ ಶಾರದೆ. ವಿದ್ಯಾರಣ್ಯರು ಹಂಪಿಯ ವಿರೂಪಾಕ್ಷ ಮಠದಲ್ಲಿ ಸ್ಥಾಪಿಸಿದ ಶಾರದೆಯೂ ಕುಳಿತ ಭಂಗಿಯಲ್ಲೇ ಇದೆ. ಪ್ರಾಯಶಃ ಮೊದಲು ಕೂಡಲಿಯಲ್ಲಿದ್ದ ಮಠ ಕಾರಣಾಂತರಗಳಿಂದ ಶೃಂಗೇರಿಗೆ ಹೋಗಿ ಪುನಃ ನೃಸಿಂಹಭಾರತಿಗಳ ಕಾಲದಲ್ಲಿ ಹಿಂದಿರುಗಿ ಕೂಡಲಿಗೇ ಬಂದಿರಬಹುದು. ಇರಲಿ, ಋಷಿಮೂಲ ಕೆದಕದಿದ್ದಷ್ಟೂ ಕ್ಷೇಮವೇ.
       ಶಾಂಕರ ಪರಂಪರೆಯ ಸಂನ್ಯಾಸಿಗಳ ಹೆಸರಲ್ಲಿ ಒಂದು ವಿಶೇಷತೆಯುಂಟು. ಶೃಂಗೇರಿ ಮಠದ ಈಗಿನ ಪೀಠಾಧಿಪತಿಗಳು ಭಾರತೀ ತೀರ್ಥ ಶ್ರೀಪಾದರು, ಅವರ ಶಿಷ್ಯರು ವಿಧುಶೇಖರ ಭಾರತಿ. ಸಾಧಾರಣವಾಗಿ ಭಾರತಿ  ಎನ್ನುವ ಉಪಾಧಿ ಶೃಂಗೇರಿ ಮಠದ ಜಗದ್ಗುರುಗಳಿಗುಂಟು. ಸ್ವರೂಪಾನಂದ ಸರಸ್ವತಿಗಳು ದ್ವಾರಕಾ ಮಠದ ಈಗಿನ ಪೀಠಾಧಿಪತಿಗಳು. ಪುರಿಗೆ ಈಗ ನಿಶ್ಚಲಾನಂದ ತೀರ್ಥ, ಅವರ ಹಿಂದೆ ನಿರಂಜನ ದೇವ ತೀರ್ಥರು. ಜ್ಯೋತಿರ್ಮಠಕ್ಕೆ ಹಿಂದಿನ ಪೀಠಾಧಿಪತಿಗಳಾಗಿದ್ದವರು ಕೃಷ್ಣಬೋಧಾಶ್ರಮರು. ನಮ್ಮಲ್ಲಿ ಅಡ್ಡಹೆಸರುಗಳಿದ್ದಂತೆ ಚತುರಾಮ್ನಾಯಗಳ ಮಠಾಧಿಪತಿಗಳ ಕೊನೆಯ ಹೆಸರು ತೀರ್ಥ, ಭಾರತೀ ಇತ್ಯಾದಿಗಳಿಂದ ಕೊನೆಯಾಗುತ್ತವೆ.  ಕಂಚಿ ಮಠದಲ್ಲೂ ಹಾಗೆ. ಅದರ ಪೀಠಾಧಿಪತಿಗಳ ಹೆಸರು ಇಂದ್ರಸರಸ್ವತಿಯಿಂದ ಕೊನೆಯಾಗುತ್ತದೆ. ’ಏಷಾಂ ನಾಮ ತು ವಿಖ್ಯಾತಮಿಂದ್ರಪೂರ್ವಾಸರಸ್ವತೀ’ ಎಂಬ ವಚನವಿದೆ. ಜಯೇಂದ್ರ ಸರಸ್ವತಿ ಈಗಿನ ಕಂಚಿಶ್ರೀ. ಶಂಕರರು ಅನಾರೋಗ್ಯಪೀಡಿತರಾದ ಸುರೇಶ್ವರರ ಸುಶ್ರೂಷೆಗೆ ಅಶ್ವಿನಿದೇವತೆಗಳ ಸಹಾಯವನ್ನು ಪಡೆದಾಗ ಸಿಟ್ಟಿಗೆದ್ದ ಇಂದ್ರ ತನ್ನ ವಜ್ರಾಯುಧವನ್ನು ಅಶ್ವಿನಿದೇವತೆಗಳ ಮೇಲೆ ಪ್ರಯೋಗಿಸಿದನಂತೆ.  ಶಂಕರರ ತಪೋಬಲದಿಂದ ಅದು ಮುಂದಕ್ಕೆ ಚಲಿಸದೇ ಹೋಯಿತು. ಆಚಾರ್ಯರೆದುರು ಸೋಲೊಪ್ಪಿದ ಇಂದ್ರ ತನ್ನ ಬಿರುದನ್ನು ಜಗದ್ಗುರುಗಳಿಗೆ ನೀಡಿದನಂತೆ.(ಇಂದ್ರ ಎನ್ನುವುದು ಬಿರುದು ಅಥವಾ ಪಟ್ಟವೇ ಹೊರತೂ ವ್ಯಕ್ತಿಯ ಹೆಸರಲ್ಲವೆಂಬುದು ಗಮನಿಸತಕ್ಕ ವಿಚಾರ. ಈಗ ಇಂದ್ರಪದವಿಯಲ್ಲಿರುವವನು ಜಯಂತೋ ನಾಮ ಇಂದ್ರಃ). ಕಾಶ್ಮೀರದಲ್ಲಿ ಆಚಾರ್ಯರು ಸರಸ್ವತಿಯನ್ನು ಜಯಿಸಿದ್ದರಿಂದ ಸರಸ್ವತಿ ಎಂಬ ಬಿರುದೂ ಅವರಿಗಂಟಿಕೊಂಡಿತು.
ಈ ಉಪಾಧಿಯಗಳ ಕುರಿತು ಮಠಾಮ್ನಾಯಶಾಸನದಲ್ಲಿ ವಿವರವಾದ ಉಲ್ಲೇಖವಿದೆ.
ತೀರ್ಥಾಶ್ರಮವನಾರಣ್ಯಗಿರಿಪರ್ವತಸಾಗರಾಃ |
ಸರಸ್ವತೀ ಭಾರತೀ ಚ ಪುರೀ ನಾಮಾನಿ ವೈ ದಶಃ ||
ತೀರ್ಥ, ಆಶ್ರಮ, ವನ, ಅರಣ್ಯ, ಗಿರಿ, ಪರ್ವತ, ಸಾಗರ, ಸರಸ್ವತೀ, ಭಾರತೀ ಹಾಗೂ ಪುರಿ ಎಂಬುದು ಶಂಕರರ ದಶನಾಮಿ ಪರಂಪರೆಯ ಸಂನ್ಯಾಸಿಗಳ ಬಿರುದು ಅಥವಾ ಉಪಾಧಿಗಳು. ಹಾಗೆಂದು ಇವು ಸುಮ್ಮನೆ ಬರುವವಲ್ಲ. ಪ್ರತಿಯೊಂದು ಹೆಸರಿಗೂ ಒಂದೊಂದು ವೈಶಿಷ್ಟ್ಯವುಂಟು.
ತ್ರಿವೇಣಿ ಸಂಗಮೇ ತೀರ್ಥೇ ತತ್ತ್ವಮಸ್ಯಾದಿಲಕ್ಷಣೇ ||
ಸ್ನಾಯಾತ್ ತತ್ತ್ವಾರ್ಥಭಾವೇನ ತೀರ್ಥನಾಮಾ ಸೌಚ್ಯತೇ ||
- ತತ್ತ್ವಮಸಿ ಇತ್ಯಾದ ತ್ರಿವೇಣಿ ಸಂಗಮತೀರ್ಥದಲ್ಲಿ ತತ್ತ್ವಾರ್ಥಭಾವನೆಯಿಂದ ಸ್ನಾನಮಾಡುವವ ತೀರ್ಥನೆಂಬ ಉಪಾಧಿ ಪಡೆಯುತ್ತಾನೆ.
ಆಶ್ರಮಗ್ರಹಣೇ ಪ್ರೌಢ ಆಶಾಪಾಶವಿವರ್ಜಿತಃ |
ಯಾತಾಯಾತವಿನಿರ್ಮುಕ್ತ ಏಷ ಆಶ್ರಮ ಉಚ್ಯತೇ ||
- ಆಶ್ರಮಗ್ರಹಣದಲ್ಲಿ ಪ್ರೌಢನಾಗಿ ಆಶಾಪಾಶಗಳಿಂದ ಮುಕ್ತನಾಗುವವನಿಗೆ ಆಶ್ರಮನೆಂದು ಹೆಸರು.
ಸುರಮ್ಯೇ ನಿರ್ಜನೇ ಸ್ಥಾನೇ ವನೇ ವಾಸಂ ಕರೋತಿ ಯಃ |
ಆಶಾಪಾಶವಿನಿರ್ಮುಕ್ತೋ ವನನಾಮಾ ಸ ಉಚ್ಯತೇ ||
- ರಮಣೀಯವಾದ ನಿರ್ಜನವಾದ ವನದಲ್ಲಿ ವಾಸಮಾಡಿಕೊಂಡು ಆಶಾಪಾಶಗಳಿಂದ ಬಿಡುಗಡೆಯಾಗುವವನಿಗೆ ವನನೆನ್ನುವರು.
ಅರಣ್ಯೇ ಸಂಸ್ಥಿತೋ ನಿತ್ಯಮಾನಂದೇ ನಂದನೇ ವನೇ |
ತ್ಯಕ್ತ್ವಾ ಸರ್ವಮಿದಂ ವಿಶ್ವಮರಣ್ಯಃ ಪರಿಕೀರ್ತ್ಯತೇ ||
- ವಿಶ್ವವೆಲ್ಲವನ್ನೂ ತ್ಯಾಗಮಾಡಿ ಆನಂದವನವೆಂಬ ಅರಣ್ಯದಲ್ಲಿ ಯಾವನು ಸದಾ ವಾಸಿಸುತ್ತಾನೋ ಅವನು ಅರಣ್ಯನೆಂಬ ಉಪಾಧಿಗೆ ಪಾತ್ರನಾಗುತ್ತಾನೆ.
ವಾಸೋ ಗಿರಿವನೇ ನಿತ್ಯಂ ಗೀತಾಧ್ಯಯನತತ್ಪರಃ |
ಗಂಭೀರಾಚಲ ಬುದ್ಧಿಶ್ಚ ಗಿರಿನಾಮಾ ಸ ಉಚ್ಯತೇ ||
- ಗಿರಿಗಳಲ್ಲಿ ವಾಸಮಾಡುತ್ತಾ ಗೀತಾಧ್ಯಯನನಿರತನಾದ ಗಂಭೀರವಾದ ನಿಶ್ಚಲ ಬುದ್ಧಿಯುಳ್ಳವನು ಗಿರಿಯೆನಿಸಿಕೊಳ್ಳುತ್ತಾನೆ.
ವಸೇತ್ ಪರ್ವತಮೂಲೇಷು ಪ್ರೌಢೋ ಯೋ ಧ್ಯಾನತತ್ಪರಃ |
ಸಾರಾಸಾರಂ ವಿಜಾನಾತಿ ಪರ್ವತಃ ಪರಿಕೀರ್ತಿತಃ ||
ಪರ್ವತಗಳ ತಪ್ಪಲಲ್ಲಿ ವಾಸಮಾಡುತ್ತ ಪ್ರೌಢವಾದ ಜ್ಞಾನವನ್ನು ಧರಿಸಿಕೊಂಡು ಶಾಸ್ತ್ರಗಳ ಸಾರಾಸಾರವನ್ನು ತಿಳಿದುಕೊಂಡವನು ಪರ್ವತನೆನಿಸಿಕೊಳ್ಳುತ್ತಾನೆ.
ತತ್ತ್ವಸಾಗರಗಂಭೀರೋ ಜ್ಞಾನರತ್ನಪರಿಗ್ರಹಃ |
ಮರ್ಯಾದಾಂ ನೈವ ಲಂಘತೇ ಸಾಗರಃ ಪರಿಕೀರ್ರ್ತ್ಯತೇ ||
ತತ್ತ್ವಸಾಗರದಷ್ಟು ಆಳವುಳ್ಳವನಾಗಿ ಜ್ಞಾನರತ್ನಗಳ ಪರಿಗ್ರಹವುಳ್ಳವನಾಗಿ ಆಶ್ರಮ ಮರ್ಯಾದೆಯನ್ನು ಲಂಭಿಸದವನು ಸಾಗರನೆಂದು ಹೆಸರಾಗುತ್ತಾನೆ.
ಸ್ವರಜ್ಞಾನರತೋ ನಿತ್ಯಂ ಸ್ವರವಾದೀ ಕವೀಶ್ವರಃ |
ಸಂಸಾರಸಾಗರೇ ಸಾರಾಭಿಜ್ಞೋ ಯಃ ಸ ಸರಸ್ವತೀ ||
ಯಾವಾಗಲೂ ಓಂಕಾರದಲ್ಲಿ ನಿರತನಾಗಿ ಜ್ಞಾನಶ್ರೇಷ್ಟನಾಗಿ ಸಂಸಾರಸಾಗರವನ್ನು ದಾಟಿದವನು ಸರಸ್ವತಿ.
ವಿದ್ಯಾಭಾರೇಣ ಸಂಪೂರ್ನಃ ಸರ್ವಭಾರಂ ಪರಿತ್ಯಜನ್ |
ದುಃಖಭಾರಂ ನ ಜಾನಾತಿ ಭಾರತೀ ಪರಿಕೀರ್ತ್ಯತೇ ||
ಸರ್ವಭಾರವನ್ನೂ ಪರಿತ್ಯಾಗಮಾಡಿ ಕೇವಲ ವಿದ್ಯಾಭಾರದಿಂದ ಸಂಪೂರ್ಣನಾಗಿ ದುಃಖಭಾರವನ್ನು ಅರಿಯದವನಾಗುತ್ತಾನೋ ಆತ ಭಾರತೀ.
ಜ್ಞಾನತತ್ತ್ವೇನ ಸಂಪೂರ್ಣಃ ಪೂರ್ಣತತ್ತ್ವಪದೇ ಸ್ಥಿತಃ |
ಪರಬ್ರಹ್ಮರತೋ ನಿತ್ಯಂ ಪುರೀ ನಾಮಾ ಸ ಉಚ್ಯತೇ ||
 -ಜ್ಞಾನತತ್ವದಿಂದ ಪೂರ್ಣನಾಗಿ ನಿತ್ಯವೂ ಪರಬ್ರಹ್ಮನನ್ನೇ ಧ್ಯಾನಿಸುವವನು ಪುರಿ ಎಂದು ಕರೆಯಲ್ಪಡುತ್ತಾನೆ..
ಮೊದಲೆಲ್ಲ ಇಂಥಿಂಥ ಯೋಗ್ಯತೆಯುಳ್ಳವರೆಂದು ನೋಡಿದ ಮೇಲೆಯೇ ಈ ಹೆಸರನ್ನು ಕೊಡುತ್ತಿದ್ದರೆಂಬುದು ಸ್ಪಷ್ಟ. ಭಾರತೀ ಪರಂಪರೆಯ ಶೃಂಗೇರಿಯಲ್ಲಿ ಅರಣ್ಯ ಉಪಾಧಿಯ ವಿದ್ಯಾರಣ್ಯರೂ ಮಠಾಧಿಪತಿಗಳಾಗಿದ್ದರು. ಜ್ಯೋತಿರ್ಮಠದಲ್ಲಿ ಸರಸ್ಚತಿ ಉಪಾಧಿಯವರೂ ಇದ್ದರು.

ಕೊನೆಹನಿ:ಕ್ರಿ.ಶ ೧೭೯೨ರ ಸುಮಾರಿಗೆ ಇಂಗ್ಲೀಷರಿಗೂ ಟಿಪ್ಪೂ ಸುಲ್ತಾನನಿಗೂ ಯುದ್ಧವಾಯಿತು. ಆಗ ಇಂಗ್ಲಿಷರಿಗೆ ಸಹಾಯ ಮಾಡುವುದಕ್ಕೆ ಸವಾಯಿ ಮಾಧವರಾವ ಪೇಶ್ವೆಯು ತನ್ನ ಸರದಾರನಾದ ಪರಶುರಾಮ ಭಾವೂ ಎನ್ನುವವನ ಮುಂದಾಳತ್ವದಲ್ಲಿ ಸೇನೆಯನ್ನು ಕಳಿಸಿದ. ಈ ಸೈನ್ಯವು ಕೂಡಲಿ ಮಠದ ಮೇಲೆ ಆಕ್ರಮಣ ಮಾಡಿ ಮಠವನ್ನು ಲೂಟಿ ಹೊಡೆದದ್ದಲ್ಲದೇ ಅದನ್ನು ಸುಟ್ಟು ಹಾಕಿದರು. ಗವರ್ನರ್ ಕಾರ್ನವಾಲೀಸನ ಪ್ರತಿನಿಧಿಯಾದ ಬುಚನನ್ ಎಂಬ ಇತಿಹಾಸಕಾರ ಈ ಘಟನೆಯ ಬಗ್ಗೆ ಹೀಗೆ ಬರೆದಿದ್ದಾನೆ. "Among those the most conspicuous of whom I have heard is the swamy of Kudli", "Marathas did not even spare the Kudli swamy. His matham or college was plundered and burnt, but this cost the Peshwa dear, the enraged swamy geld out threats of instant excommunication." ಮರಾಠರ ಪುಂಡಾಟಿಕೆ ಅಷ್ಟಕ್ಕೇ ನಿಲ್ಲಲಿಲ್ಲ. ರಘುನಾಥರಾವ ಪಟವರ್ಧನನೆಂಬ ದಳಪತಿಯ ನೇತೃತ್ವದಲ್ಲಿ ಶೃಂಗೇರಿ ಮಠವನ್ನೂ ಕೊಳ್ಳೆ ಹೊಡೆದು ಶಾರದಾಂಬೆಯ ದೇವಾಲಯಕ್ಕೆ ಹಾನಿ ಮಾಡಲಾಯ್ತು. ಆಗ ಹಾನಿಗೊಳಗಾದ ಶಾರದಾ ಮೂರ್ತಿ ಈಗಲೂ ವಿದ್ಯಾಶಂಕರ ದೇವಳದಲ್ಲಿರುವುದಂತೆ. ಮರಾಠರ ದಾಳಿಯ ತೀವ್ರತೆ ಎಷ್ಟಿತ್ತೆಂದರೆ ಅಂದಿನ ಜಗದ್ಗುರು ಮೂರನೇ ಸಚ್ಚಿದಾನಂದ ಭಾರತಿಗಳು ಶೃಂಗೇರಿಯನ್ನು ತೊರೆದು ಕಾರ್ಕಳದಲ್ಲಿ ಆಶ್ರಯ ಪಡೆಯಬೇಕಾಯ್ತು. ಆಶ್ಚರ್ಯವೆಂದರೆ ಎರಡೂ ಕಡೆಗಳಲ್ಲಿಯೂ ಮಠದ ಪುನರ್ನಿರ್ಮಾಣಕ್ಕೆ ಮುಂದಾಗಿ ಬಂದವನು ಟಿಪ್ಪು ಸುಲ್ತಾನ. ನಾನೂರು ರತ್ತಿಗಳಷ್ಟು ಹಣವನ್ನೂ ಶಾರದಾ ಅಮ್ಮನವರಿಗೆ ಉಡುಗೊರೆಯನ್ನೂ ಆತ ಮಠಕ್ಕೆ ಕಳುಹಿಸುತ್ತಾನೆ. ಅಷ್ಟೊಂದು ದೇವಸ್ಥಾನಗಳನ್ನು ಧ್ವಂಸಗೊಳಿಸಿದವ ಶೃಂಗೇರಿದ್ವಯ ಮಠಗಳಿಗೆ ಸಹಾಯ ಮಾಡಲು ಮುಂದೆ ಬಂದನೆಂಬುದು ಆಶ್ಚರ್ಯವೇ. ಅದಕ್ಕಿಂತ ಆಶ್ಚರ್ಯ ತಮ್ಮನ್ನು ತಾವು ಹಿಂದುತ್ವದ ರಕ್ಷಕರೆನಿಸಿಕೊಂಡ ಮರಾಠರ ನಡೆ. ಹಾಗೆ ನೋಡಿದರೆ ದೇವಸ್ಥಾನಗಳನ್ನು ಉರುಳಿಸುವ ಮತದ್ವೇಷ ಕೇವಲ ಮುಸ್ಲೀಮರೆಗೆ ಕಟ್ಟಿಟ್ಟದ್ದೇನಲ್ಲ. ಮಲ್ಪೆಯ ಮಲ್ಲಿಕಾರ್ಜುನನನ್ನು ಕಿತ್ತು ಬಾವಿಗೆಸೆದು ಶಂಕರನಾರಾಯಣನನ್ನು ಪ್ರತಿಷ್ಟೆಗೊಳಿಸಲಾಗಿದೆ. ನಿಟ್ಟೂರಿನ ಸೋಮಲಿಂಗನ ಜಾಗದಲ್ಲಿ ವೇಂಕಟರಮಣ ಬಂದು ಕೂತಿದ್ದಾನೆ, ಉದ್ಯಾವರದ ಮಹಾದೇವನಿದ್ದಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸಲಾಗಿದೆ, ಕುಕ್ಕೆಯ ಸುಬ್ರಹ್ಮಣ್ಯಲಿಂಗ ಸುಬ್ರಹ್ಮಣ್ಯ ಸ್ವಾಮಿಯಾಗಿ ಮತಾಂತರಗೊಂಡಿದ್ದಾನೆ. ಅಲ್ಲೇ ಇದ್ದ ಸಂಪುಟ ವಿನಾಯಕನನ್ನು ಹೊರತಳ್ಳಿ ನರಸಿಂಹನಿಗೆ ಗುಡಿ ನಿರ್ಮಿಸಲಾಗಿದೆ. ಹೊರನಾಡಿನ ಪದ್ಮಾವತಿ ಅನ್ನಪೂರ್ಣೇಶ್ವರಿಯಾಗಿದ್ದಾಳೆ. ನಮ್ಮಲ್ಲಿ ಮತದ್ವೇಷಕ್ಕೆ ಸಿಕ್ಕು ನಾಶಗೊಂಡ, ಹೆದರಿ ಮತಾಂತರಗೊಂಡ ದೇವರುಗಳು ಒಂದೇ ಎರಡೇ.

Tuesday, March 28, 2017

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶೃಂಗೇರಿ ಪ್ರಕರಣ

      
 ಮಂಡನ ಮಿಶ್ರ ಹಾಗೂ ಆಚಾರ್ಯರ ವಾದದ ಕಥೆಯನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವಷ್ಟೆ. ಮಂಡನರ ಪತ್ನಿ ಉಭಯಭಾರತಿ. ಈಕೆಗೆ ಸರಸವಾಣಿಯೆಂಬ ಇನ್ನೊಂದು ಹೆಸರೂ ಇತ್ತು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಬ್ರಹ್ಮನ ಅಂಶವಾದ ಮಂಡನರ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ತನ್ನ ಶಂಕರವಿಜಯದಲ್ಲಿ ಸೂಚಿಸಿದ್ದಾನೆ. ವಾದದಲ್ಲಿ ಆಚಾರ್ಯರೆದುರು ಮಂಡನರು ಸೋಲುವುದು ತಿಳಿದೇ ಇದೆ. ಮಾಧವೀಯದಲ್ಲೂ, ಆನಂದಗಿರೀಯದಲ್ಲೂ, ಚಿದ್ವಿಲಾಸೀಯದಲ್ಲೂ ಇರುವ ಸಾಮಾನ್ಯ ಕಥೆಯಿದು. ಗಂಡನು ಸೋತಕೂಡಲೇ ಶಾಪಮುಕ್ತಳಾದ ವಾಣಿಯು ಶಂಕರರನ್ನು ಸ್ತುತಿಸಿ ಆಕಾಶಕ್ಕೆ ಹಾರಿ ಸತ್ಯಲೋಕಕ್ಕೆ ಹೊರಡಳು ಅನುವಾದಳು. ಆಗ ಶಂಕರರು ಅವಳನ್ನು ವನದುರ್ಗಾ ಮಂತ್ರದಿಂದ ಬಂಧಿಸಿ ’ನನ್ನೊಡನೆ ವಾದ ಮಾಡಿ ಜಯಿಸದೇ ಎಲ್ಲಿ ಹೋಗುತ್ತಿರುವೆ’ ಎಂದು ಆಕೆಯನ್ನು ವಾದಕ್ಕೆ ಕರೆದರಂತೆ. ಆನಂದಗಿರಿ ಇನ್ನೂ ಒಂದು ಹೆಜ್ಜೆ ಮುಂದೆ ಕರ್ಮಫಲವನ್ನು ಕೊಡುವ ಭೂಮಿಯನ್ನು ಪುನಃ ಮುಟ್ಟಲಾರೆನೆಂದು ಭಾರತಿಯು ನೆಲದಿಂದ ಆರಂಗುಲ ಮೇಲೆ ಆಕಾಶದಲ್ಲಿಯೇ ವಾದಕ್ಕೆ ನಿಂತಳೆನ್ನುತ್ತಾನೆ. ಜಿ.ಕೆ.ಭಾರವಿಯಂಥ ಶಂಕರಾಚಾರ್ಯರ ಚಿತ್ರನಿರ್ದೇಶಕರಿಗೆ ಒಳ್ಳೆಯ ಫ್ಯಾಂಟಸಿ ಕಥೆ. ಹಾಗೆಂದು ಆತ್ಮಬೋಧರ ಸುಷುಮಾ ವ್ಯಾಖ್ಯಾನದಲ್ಲೂ, ವಿದ್ಯಾಶಂಕರವಿಜಯದಲ್ಲೂ ಮಂಡನರ ಜೊತೆಗಿನ ವಾದದ ನಂತರ ಆಕೆ ಕೂಡಲೇ ಶಾಪವಿಮುಕ್ತಳಾಗಿ ಅಂತರ್ಧಾನಳಾಗುತ್ತಾಳೆ. ’ಅಂತರ್ದಧೇ ಸುವದನಾ ಕಿಲ ಶಾಪಮುಕ್ತಾ’ ಎಂದು ಮಂಡನವಾದ ವೃತ್ತಾಂತವನ್ನು ಮುಗಿಸಿದ್ದು ನೋಡಿದರೆ ಅಲ್ಲಿ ಉಭಯಭಾರತಿಯ ಜೊತೆಗಿನ ವಾದದ ಪ್ರಸ್ತಾಪವೇ ಇಲ್ಲ.
       ತಮ್ಮ ಮತವೇ ಸರ್ವಸಮ್ಮತವೆಂದು ಸಿದ್ಧಪಡಿಸಲು ಆಚಾರ್ಯರೇ ಆಕಾಶದಲ್ಲಿ ಆಕೆಯನ್ನು ನಿರ್ಬಂಧಿಸಿ ವಾದಕ್ಕೆ ಕರೆದರೆಂದು ಎಂಟನೇ ಆಧ್ಯಾಯದಲ್ಲಿ ಬರೆದ ಮಾಧವ ಮುಂದಿನ ಅಧ್ಯಾಯದಲ್ಲಿ ’ವಪುರಧರ್ಮಸ್ಯ ನ ಜಿತಾ ಮತಿಮನ್ಯಪಿ ಮಾಂ ವಿಜಿತ್ಯ ಕುರು ಶಿಷ್ಯಮಿಮಂ’ ಮಂಡನನ ಅರ್ಧಾಂಗಿಯಾದ ನನ್ನನ್ನು ಜಯಿಸಿದ ಮೇಲೆಯೇ ಅವರನ್ನು ಶಿಷ್ಯನನ್ನಾಗಿಸಿಕೊಳ್ಳಿ ಎಂದು ಭಾರತಿಯ ಬಾಯಿಂದ ಹೇಳಿಸುತ್ತಾನೆ. ಶಂಕರರೇ ಕಾಲ್ಕೆರೆದು ಭಾರತಿಯನ್ನು ವಾದಕ್ಕೆ ಕರೆಯುವ ಅವಶ್ಯಕತೆ ಏನಿತ್ತೆಂದು ಶಂಕರವಿಜಯಕಾರರೇ ಹೇಳಬೇಕು.
       ಅವರಿಬ್ಬರಿಗೂ ಹದಿನೇಳು ದಿನಗಳ ಕಾಲ ವಾದವಾಯ್ತೆಂದು ಮಾಧವೀಯ ಹೇಳುತ್ತದೆ. ಶಂಕರರನ್ನು ಯಾವ ಶಾಸ್ತ್ರದಲ್ಲಿಯೂ ಗೆಲ್ಲಲಾಗದೆಂದು ಅರಿತ ಉಭಯಭಾರತಿ ಸಂನ್ಯಾಸಿಯಾಗಿ ಅವರಿಗೆ ಪರಿಚಯವಿಲ್ಲದ ವಾತ್ಸಾಯನಸೂತ್ರದ ಮೇಲೆ ಪ್ರಶ್ನೆಮಾಡಿದಳು. ನಿಮಗೆ ತಿಳಿಯದ ಶಾಸ್ತ್ರವೂ ಇದೆ ಎಂದು ಆನಂದಗಿರಿಯು ಭಾರತಿಯ ಬಾಯಿಂದ ಕುಹಕವಾಡಿಸುತ್ತಾನೆ. ಶಂಕರರಿಗೀಗ ಧರ್ಮಸಂಕಟದ ಸ್ಥಿತಿ. ಅಂಥ ಪ್ರಶ್ನೆಗಳಿಗೆ ಉತ್ತರ ಹೇಳಿದರೆ ಯತಿಧರ್ಮಕ್ಕೆ ಭಂಗಬಂದಂತೆ. ಹೇಳದಿದ್ದರೆ ತಾನು ಅಸರ್ವಜ್ಞನೆಂದು ತೋರಿಸಿಕೊಂಡಂತಾಯ್ತು. ಯೋಚಿಸಿದ ಶಂಕರರು ಉತ್ತರ ನೀಡಲು ಒಂದು ತಿಂಗಳು ಸಮಯಾವಕಾಶ ಕೇಳಿದರು. ಮಂಡನನ ಜೊತೆಗೆ ಎಷ್ಟು ದಿನ ವಾದವಾಯ್ತೆಂದು ಶಂಕರವಿಜಯಗಳಲ್ಲಿ ಒಮ್ಮತವಿಲ್ಲ. ಐದೆಂದೂ, ಆರೆಂದೂ, ಹದಿನೇಳು ಶಾಸ್ತ್ರಗಳ ಮೇಲೆ ಹದಿನೇಳು ದಿನಗಳೆಂದೂ, ಕೊನೆಗೆ ನೂರು ದಿನವೆಂದೂ ಒಂದೊಂದು ಶಂಕರವಿಜಯಗಳಲ್ಲಿ ಒಂದೊಂದು ರೀತಿಯಿದೆ. ಅದೇ ರೀತಿ ಶಂಕರರ ಪರಕಾಯಪ್ರವೇಶದ ಅವಧಿ ಒಂದು ತಿಂಗಳೆಂದು ಮಾಧವೀಯ ಹೇಳಿದರೆ, ಆರು ತಿಂಗಳೆಂದು ಆನಂದಗಿರೀಯ ಹೇಳುತ್ತದೆ. ಶಂಕರರು ಕಾಮಶಾಸ್ತ್ರವನ್ನು ತಿಳಿದುಕೊಳ್ಳಲು  ಯೋಗಶಕ್ತಿಯಿಂದ ಆಕಾಶಮಾರ್ಗದಲ್ಲಿ ತೆರಳಿದರಂತೆ. ವೇದಾಂತನಿರೂಪಣೆಗೆ ಹೊರಟ ಆಚಾರ್ಯರ ಇಂಥ ಸಿದ್ಧಾಂತದ ವಿಷಯದಲ್ಲೂ ನಿರೂಪಣೆಗೆ ಹೊರಟರೆಂಬುದೇ ಅಸಂಗತ. ಸಾಕ್ಷಾತ್ ಸರಸ್ವತಿಯ ಅವತಾರವಾದ ಭಾರತಿ ಮೀಮಾಂಸಾ-ವೇದಾಂತಗಳ ಚರ್ಚೆಗೆ ಸಂಬಂಧವೇ ಪಡದ ಕಾಮಶಾಸ್ತ್ರದ ಪ್ರಶ್ನೆಯನ್ನು ಕೇಳಿದಳೆಂಬುದು ಇನ್ನೂ ವಿಚಿತ್ರ.  ಅದೂ ಪರಪುರುಷನೊಬ್ಬನನ್ನು ಅಂಥ ವಿಷಯದ ಬಗ್ಗೆ ಚರ್ಚೆಗೆಳೆದಳೆಂಬುದು ಶಾಂಕರಾನುಯಾಯಿಗಳೀಗೆ ಯೋಚಿಸಲೂ ಆಗದ ವಿಷಯ. ಶಂಕರರು ಸರ್ವಜ್ಞರೆಂದು ಒಂದು ಕಡೆಯೂ, ಅವರಿಗಾ ವಿಷಯ ಮೊದಲೇ ಗೊತ್ತಿಲ್ಲ ಎಂದು ಸೂಚಿಸಲು ಇನ್ನೊಂದು ಕಡೆಯೂ ಶಂಕರವಿಜಯಕಾರರು ಇಲ್ಲಿ ಪ್ರಯಾಸಪಟ್ಟಿದ್ದಾರೆ. ಸರ್ವಜ್ಞತ್ವ ಹಾಗೂ ಬ್ರಹ್ಮಚರ್ಯಗಳೆರಡನ್ನೂ ಸರಿತೂಗಿಸಹೋರಟ ಈ ಕಥೆ ಮಣಿಮಂಜರಿಯಂಥ ಕುಗ್ರಂಥದ ಕರ್ತರಿಗೂ ಶಂಕರದ್ವೇಷಿಗಳಿಗೂ, ಕಾಲ್ಪನಿಕ ಕಾದಂಬರಿ ರಚಯಿತರಿಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿತೇ ಹೊರತೂ ಇನ್ನೇನೂ ಸಾಧಿಸಲಿಲ್ಲ.
       ಇರಲಿ. ಒಂದು ತಿಂಗಳ ಸಮಯ ತೆಗೆದುಕೊಂಡು ಆಕಾಶಮಾರ್ಗವಾಗಿ ಹೊರಟ ಆಚಾರ್ಯರು ಅಮೃತಪುರವೆಂಬ ರಾಜ್ಯಕ್ಕೆ ಬಂದರಂತೆ. ಅದರ ರಾಜನ ಹೆಸರು ಅಮರುಕ. ಆ ರಾಜ ಅದೇ ಸಮಯದಲ್ಲಿ ಬೇಟೆಯಾಡಲು ಹೋದಾಗ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿದ್ದ. ಶಂಕರರು ತಮ್ಮ ಶರೀರವನ್ನು ಬೆಟ್ಟದ ಮೇಲಿನ ಗುಹೆಯೊಂದರಲ್ಲಿಟ್ಟು ಕಾಪಾಡುವಂತೆ ಶಿಷ್ಯರಿಗೆ ಹೇಳಿ ಪರಕಾಯ ಪ್ರವೇಶದ ಮೂಲಕ ರಾಜನ ಶರೀರವನ್ನು ಪ್ರವೇಶಿಸಿದರು. ಹೊಸ ರಾಜ ರಾಜ್ಯಭಾರವನ್ನೆಲ್ಲ ಮಂತ್ರಿಗಳಿಗೊಪ್ಪಿಸಿ ತನ್ನ ನೂರು ಜನ ಹೆಂಡತಿಯರೊಡನೆ ವಿಷಯಸುಖವನ್ನನುಭವಿಸತೊಡಗಿದ. 
       ಈ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ವತ್ಯ್ಸಾಯನ ಸೂತ್ರಗಳನ್ನೋದಿ ಅವುಗಳ ಮೇಲೆ ಒಂದು ನಿಬಂಧವನ್ನು ಬರೆದರೆಂದು ಮಾಧವೀಯದ ಪ್ರತೀತಿ.  ’ಶತಸಂಖ್ಯಾ ಸತೀರತೇಃ’ ನೂರು ಶ್ಲೋಕಗಳ ಗ್ರಂಥವೆಂದು ಆನಂದಗಿರೀಯದಲ್ಲಿದೆ.  ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಅಮರುಕನ ದೇಹದಲ್ಲಿದ್ದಾಗ ಶಂಕರರು ಬರೆದರೆಂದು ಹೇಳಲಾಗುತ್ತದೆ. ಇದರಲ್ಲೂ ನೂರು ಶ್ಲೋಕಗಳಿದ್ದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ. ಆನಂದವರ್ಧನನ ಧ್ವನ್ಯಾಲೋಕದಲ್ಲಾಗಲೀ, ವೇಮಭೂಪಾಲನ ವ್ಯಾಖ್ಯಾನದಲ್ಲಾಗಲೀ ಇದು ಆಚಾರ್ಯಕೃತವೆಂಬ ದಾಖಲೆಗಳಿಲ್ಲ. ಹಾಗೆ ನೋಡಿದರೆ ಶಂಕರರ ಭಾಷ್ಯಗಳಲ್ಲಿ ಬಳಸಲಾದ ಭಾಷೆಗೂ, ಸೌಂದರ್ಯ ಲಹರಿ, ಭಜಗೋವಿಂದಂಗಳ ಭಾಷೆಗೂ ತುಂಬ ವ್ಯತ್ಯಾಸವಿದೆ. ಹಾಗಾಗಿ ಸ್ತೋತ್ರಸಾಹಿತ್ಯದಲ್ಲಿ ಹೆಚ್ಚಿನವುಗಳನ್ನು ಶಂಕರರೇ ರಚಿಸಿದರೆಂಬುವುದಕ್ಕೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಅಮರುಶತಕದ ಧಾಟಿಯೂ ಶಂಕರರ ಇವೆರಡೂ ಧಾಟಿಗಳಿಗಿಂತ ಭಿನ್ನ. ಆದರೆ ಇದನ್ನು ಶಂಕರಕೃತವೆಂದು ತಿಳಿಯಲು ಇರುವ ಏಕೈಕ ಊಹೆ ಇದರ ವಿಖ್ಯಾತಿ, ಲಾಲಿತ್ಯ ಹಾಗೂ ನಾವಿನ್ಯತೆ. ಭರ್ತೃಹರಿಯ ಶೃಂಗಾರ ಶತಕದಲ್ಲೂ ಅಂಥ ವೈಶಿಷ್ಟ್ಯವಿಲ್ಲ. ಶೃಂಗಾರದಲ್ಲಿ ಒಂದೇ ತೀವ್ರ ವಿಷಯಾಸಕ್ತಿ ಇಲ್ಲವೇ ಪೂರ್ಣ ವಿರಕ್ತಿ ಇವೆರಡು ತುದಿಗಳನ್ನು ಮಾತ್ರ ಭರ್ತೃಹರಿ ಸ್ಪರ್ಶಿಸುತ್ತಾನೆ. ಶೃಂಗಾರದಲ್ಲಿ ಭರ್ತೃಹರಿ ಸರಳನಾದರೂ ಶಿಥಿಲ. ಅಲ್ಲಿ ಭಾವನಾವಿಲಾಸಕ್ಕೂ ಆಸ್ಪದವಿಲ್ಲ. ಚಮತ್ಕಾರಾಂಶದ ನವಿರುತನವೂ ಇಲ್ಲ. ಶೃಂಗಾರವು ವಾಚ್ಯವಾದರೆ ಅದು ಭೀಭತ್ಸವಾಗುವ ಭೀತಿಯೂ ಇಲ್ಲದಿಲ್ಲ. ಅದೇ ಅಮರುಕ ಹಾಗಲ್ಲ. ಕಾವ್ಯಮೀಮಾಂಸಕರಲ್ಲಿ ಮೂರ್ಧನ್ಯ ಆನಂದವರ್ಧನನಿಂದಲೇ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟದ್ದೆಂದರೆ ಅದರ ಮಹಾತ್ಮೆ ಅರ್ಥವಾಗಬಹುದು. ಶೃಂಗಾರಭಾವದ ಸೂಕ್ಷ್ಮತೆ, ಶೈಲಿಯಲ್ಲಿನ ಮನೋಜ್ಞತೆ, ಏನನ್ನೂ ವಾಚ್ಯವಾಗಿಸದ ವ್ಯಂಗ್ಯದ ನವಿರುತನ, ಸಂಬಂಧಗಳ ಅನಂತಸಾಧ್ಯತೆಗಳ ಸಿದ್ಧಿ ಅಮರುಶತಕದ ಒಂದೊಂದು ಶ್ಲೋಕಕ್ಕೂ ಒಂದೊಂದು ಮಹಾಕಾವ್ಯದ ಪದವಿಯನ್ನು ದಯಪಾಲಿಸಿದೆ. ಇಡಿಯ ಸಂಸ್ಕೃತ ಸಾಹಿತ್ಯದಲ್ಲಿ ಇದಕ್ಕೆ ಹೆಗೆಲೆಣೆಯಾದ ಇನ್ನೊಂದು ಕೃತಿ ಇಲ್ಲವೇ ಇಲ್ಲ. ವೈರಾಗ್ಯ ಹಾಗೂ ಶೃಂಗಾರಗಳ ಸಮೀಕರಣದ ಪರಮೋಚ್ಚ ಸಿದ್ಧಿ ಸಿದ್ಧಿಸಿರುವುದು ಅಮರುಕ ಹಾಗೂ ಅಮರುಕನಿಗೆ ಮಾತ್ರ. ಅಂತಹ ಸರ್ವೋತ್ಕೃಷ್ಟ ಕೃತಿಯೊಂದು ಶಂಕರರ ರಚನೆಯಾಗಿರಬಹುದೆಂಬ ಊಹೆ ಸತ್ಯವಲ್ಲದಿದ್ದರೂ ಅಸಾಧುವಂತೂ ಅಲ್ಲ.
        ಅಲ್ಲಿಂದ  ವ್ಯಾಸಾಚಲೀಯದ ಹನ್ನೆರಡನೇ ಅಧ್ಯಾಯಕ್ಕೆ ಬರೋಣ. ಶಂಕರರು ಸರ್ವಜ್ಞ ಪೀಠವನ್ನೇರುವಾಗ ಶಾರದೆ ಪ್ರತ್ಯಕ್ಷಳಾಗಿ ಅವರನ್ನು ತಡೆಯುತ್ತಾಳೆ . ಅಲ್ಲಿ ಶಂಕರರಿಗೂ ಶಾರದೆಗೂ ಮತ್ತೆ ಹದಿನೇಳು ದಿನಗಳ ವಾದವಾಯಿತು. ಮತ್ತೆ ಶಾರದೆ ವಾತ್ಸ್ಯಾಯನ ಯಂತ್ರದದಲ್ಲಿ ಪ್ರಶ್ನೆಯನ್ನು ಹಾಕಿದಳು. ಇನ್ನೊಮ್ಮೆ ಏಳು ದಿನಗಳ ಗಡುವು ತೆಗೆದುಕೊಂಡ ಶಂಕರರು ಅಮರುಕನ ಶರೀರವನ್ನು ಹೊಕ್ಕು ಬಂದರು. ಮಾಧವೀಯದಲ್ಲೂ ಇದೇ ಕಥೆಯಿದೆ. ೯ನೇ ಅಧ್ಯಾಯದಲ್ಲಿ ಉಭಯಭಾರತಿಯೊಡನೆ ಚರ್ಚೆಮಾಡಿ ಶಂಕರರಿಗೆ ಪರಕಾಯ ಪ್ರವೇಶ ಮಾಡಿಸಿದ ಕವಿ ಮತ್ತೆ ೧೬ನೇ ಅಧ್ಯಾಯದಲ್ಲಿ ಸಾಕ್ಷಾತ್ ಸರಸ್ವತಿಯೊಡನೆ ಚರ್ಚೆಗಿಳಿಸಿ ಮಗದೊಮ್ಮೆ ಪರಕಾಯ ಪ್ರವೇಶ ಮಾಡಿಸುತ್ತಾನೆ. ಎಂಟನೇ ದಿನ ತಿರುಗಿ ಬಂದ ಶಂಕರರು ಶಾರದೆಯ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾರೆ. ತೃಪ್ತಳಾಗದ ಆಕೆ ಸ್ತ್ರೀಸಂಗವನ್ನು ಮಾಡಿ ಕಲಾರಹಸ್ಯವನ್ನು ಕಲಿತದ್ದರಿಂದ ನಿನಗೆ ಪಾರಿಶುದ್ಧ್ಯವು ಹೇಗೆ ಬಂತು ಎಂದು ತಿರುಗಿ ಪ್ರಶ್ನಿಸುತ್ತಾಳೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ.  ಅದೇ ಸಮಯದಲ್ಲಿ ಸರಸ್ವತಿಯು ಅಮರುಶತಕದಂಥ ಶೃಂಗಾರಕಾವ್ಯ ರಚಿಸಿದ್ದರ ಉದ್ದೇಶವನ್ನೂ ಪ್ರಶ್ನಿಸಿದಳಂತೆ. ಆಗ ಶಂಕರರು ಅದರ ಒಂದೊಂದು ಶೃಂಗಾರಭರಿತ ಶ್ಲೋಕಕ್ಕೂ ವೈರಾಗ್ಯ ಪರವಾದ ಅರ್ಥವನ್ನು ಹೇಳಿ ಸರ್ವಜ್ಞಪೀಠವೇರಿದರೆನ್ನುತ್ತದೆ ಇನ್ನೊಂದು ಕಥೆ.
        ಅದೇನೇ ಆಗಿರಲಿ. ಶಂಕರರು ಅಮರುಕನ ಶರೀರವನ್ನು ಪ್ರವೇಶಿಸಿ ಐಹಿಕ ಭೋಗಗಳಲ್ಲಿ ನಿರತರಾದರು. ಅಮರುಕನ ಗುಣಗಳು ಮೊದಲಿಗಿಂತ ತೀರ ಭಿನ್ನವಾಗಿರುವುದರಿಂದ ರಾಣಿಗೆ ಅನುಮಾನ ಬಂತು. ಯಾವನೋ ಪುಣ್ಯಾತ್ಮ ಇವನ ಶರೀರ ಹೊಕ್ಕಿರಬಹುದೆಂದು ಗ್ರಹಿಸಿ ಆತ ತನ್ನ ಮೂಲಶರೀರಕ್ಕೆ ತಿರುಗಿ ಹೋಗದಂತೆ ರಾಜ್ಯದಲ್ಲಿ ಎಲ್ಲೇ ಶವವನ್ನು ಕಂಡರೂ ಸುಡುವಂತೆ ಭಟರಿಗೆ ಆಜ್ಞಾಪಿಸಿದಳು. ಈ ಕಥೆಯಂತೂ ಕಲ್ಪನಾವಿಲಾಸದ ಪರಮಾವಧಿ. ಗಡುವು ಮುಗಿದು ಕೆಲದಿನಗಳಾದರೂ ಅಮರುಕನ ದೇಹವನ್ನು ಬಿಟ್ಟು ಶಂಕರರು ಬರದಿದ್ದಾಗ ಶಿಷ್ಯರು ಬಂದು ಅವರನ್ನೆಚ್ಚರಿಸಿದ್ದು,  ಪೊಟರೆಯಲ್ಲಿ ಬಚ್ಚಿಟ್ಟಿದ್ದ ಶರೀರಕ್ಕೆ ರಾಣಿಯ ಕಡೆಯ ಸೈನಿಕರು ಬೆಂಕಿಯಿಕ್ಕುವಾಗ ಶಂಕರರು ಅಮರುಕನ ಶರೀರವನ್ನು ತ್ಯಜಿಸಿ ತಮ್ಮ ದೇಹವನ್ನು ಪುನರ್ಪ್ರವೇಶಿಸಿದ್ದು, ನರಸಿಂಹ ಕರಾವಲಂಬನ ಸ್ತೋತ್ರದಿಂದ ಪ್ರಸನ್ನನಾದ ನರಸಿಂಹ ಬೆಂಕಿಯಲ್ಲಿ ಬಿದ್ದ ಶಂಕರರ ದೇಹವನ್ನು ಮೇಲೆತ್ತಿದ್ದು ಇವೆಲ್ಲವೂ ಕೇವಲ ಸ್ವಾರಸ್ಯಕರ ಮಾತ್ರ ಎನ್ನಬಹುದಾದ ದೊಡ್ಡ ಕಥೆಗಳೇ.
        ಪುನಃ ಉಭಯಭಾರತಿಯ ಕಥೆಗೆ ಬರೋಣ. ಭಾರತಿಯು ತನ್ನ ಪ್ರಶ್ನೆಗಳಿಗೆ ಶಂಕರರು ಉತ್ತರ ನೀಡಿದ್ದನ್ನು ಕಂಡು ಸಂತುಷ್ಟಳಾದಳು. ಆ ಸಮಯದಲ್ಲಿ ಭಾರತಿಯನ್ನು ಸ್ತುತಿಸಿದ ಶಂಕರರು ತನ್ನೊಡನೆ ಬಂದು ಋಷ್ಯಶೃಂಗಕ್ಷೇತ್ರದಲ್ಲಿ ಶಾರದೆಯೆಂಬ ಹೆಸರಿನಿಂದ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಯತ್ರಾಧುನಾಪ್ಯುತ್ತಮಮೃಗಶೃಂಗಸ್ತಪಶ್ಚರತ್ಯಾತ್ಮಭೃದನ್ತರಂಗಃ |
ಸಂಸ್ಪರ್ಶಮಾತ್ರೇಣ ವಿತೀರ್ಣಭದ್ರಾ ವಿದ್ಯೋತತೇ ಯತ್ರ ಚ ತುಂಗಭದ್ರಾ ||

ಮಾಧವೀಯದ ಈ ಶ್ಲೋಕದಲ್ಲಿ ತುಂಗಭದ್ರಾ ಎಂದಿರುವುದು ಗಮನಿಸತಕ್ಕ ವಿಚಾರ. ಆನಂದಗಿರೀಯದ ಪ್ರಕಾರ ’ತತಃ ಪರಂ ಸರಸವಾಣೀಃ ಮಂತ್ರಬದ್ಧಾಂ ಕೃತ್ವಾ ಗಗನಮಾರ್ಗಾದೇವ ಶೃಂಗಗಿರಿಸಮೀಪೇ ತುಂಗಭದ್ರಾತೀರೇ ಚಕ್ರಂ ನಿರ್ಮಾಯ ತದಗ್ರೇ ಪರದೇವತಾಂ ಸರಸವಾಣೀಂ ನಿಧಾಯ’ ಹೊರಟುನಿಂತ ಸರಸವಾಣಿಯನ್ನು ಮಂತ್ರಬಲದಿಂದ ಕಟ್ಟಿಹಾಕಿ ತುಂಗಭದ್ರಾತೀರದ ಶೃಂಗೇರಿಯಲ್ಲಿ ಚಕ್ರವನ್ನು ನಿರ್ಮಾಣಮಾಡಿ ಅದರಲ್ಲಿ ಮೇಲಿಟ್ಟರು.
        ಶಂಕರಕೃತವಾದ ಶಾರದಾ ಭುಜಂಗ ಸ್ತೋತ್ರವನ್ನೂ ಹಿಡಿದು ಎಲ್ಲ ಶಂಕರವಿಜಯಗಳಲ್ಲೂ, ಮಠಾಮ್ನಾಯಶಾಸನಗಳಲ್ಲೂ ಶಾರದೆಯನ್ನು ತುಂಗಭದ್ರಾತೀರವಾಸಿನಿಯೆನ್ನಲಾಗಿದೆ.  ಆದರೆ ಶೃಂಗೇರಿಯಿರುವುದು ತುಂಗಾ ತೀರದಲ್ಲೇ ಹೊರತೂ ತುಂಗಭದ್ರಾ ತೀರದಲ್ಲಲ್ಲ. ಶಿವಮೊಗ್ಗದ ಸಮೀಪ ತುಂಗಾ-ಭದ್ರಾ ನದಿಗಳ ಸಂಗಮವಾಗುವಲ್ಲಿ ಕೂಡಲಿ ಶೃಂಗೇರಿ ಎಂಬ ಇನ್ನೊಂದು ಕ್ಷೇತ್ರವಿದೆ. ಇಲ್ಲಿಯೂ ಒಂದು ಶಂಕರಸ್ಥಾಪಿತ ಮಠವಿದೆ. ಹಾಗಾದರೆ ಅಸಲು ಶೃಂಗೇರಿ ಇರುವುದೆಲ್ಲಿ? ಶೃಂಗೇರಿ ಆಚಾರ್ಯರಿಗೆ ಪರಿಚಿತವಾದ ಸ್ಥಳವಲ್ಲ. ಋಷ್ಯಶೃಂಗವೆಂಬ ಹೆಸರು ಯಾವ ಶಂಕರವಿಜಯಗಳಲ್ಲೂ ಈ ಮೊದಲು ಪ್ರಸ್ತಾಪಿತವಾಗಿಲ್ಲ. ಹಾಗಾದರೆ ಹಠಾತ್ತನೆ ಶಂಕರರು ಶಾರದೆಯನ್ನು ಉತ್ತರ ದೇಶದಿಂದ ಕರೆತಂದು ಶೃಂಗೇರಿಯಲ್ಲಿ ನೆಲೆಗೊಳಿಸಿದ್ದೇಕೆ?
       ಇನ್ನು ಶೃಂಗೇರಿಯ ಬಗ್ಗೆ ಎರಡು ಬಹುಶ್ರುತವಾದ ಕಥೆಗಳಿವೆ. ಒಂದು ಚಿದ್ವಿಲಾಸೀಯ ಶಂಕರವಿಜಯದ್ದು. "ಶಾಲೂರೀ ಮತಿಗರ್ಭಭಾರವಿಷಹಾಂ ಸದ್ಯಃ ಪ್ರಸೂತ್ಯುನ್ಮುಖೀಂ ತೀವ್ರೋದಗ್ರದಿವಾಕರಾತಪಪರಿಕ್ಲಾಂತಾಮ್ | ಭುಜಂಗೀ ಫಣಾಮಾಸ್ತೀರ್ಯಾತಪವಾರಣಾಯ ಪರಿತಃ ಪಾಂತೀಂ ದೃಶಾಲೋಕತ ||" ಆಚಾರ್ಯರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಬಿಸಿಲ ಬೇಗೆಯನ್ನು ತಾಳಲಾರದೆ ಬಳಲಿದ್ದ ಪ್ರಸವವೇದನೆಯ ಸ್ಥಿತಿಯಲ್ಲಿದ್ದ ಕಪ್ಪೆಯೊಂದಕ್ಕೆ ಹಾವೊಂದು ಹೆಡೆಬಿಚ್ಚಿ ನೆರಳು ನೀಡುತ್ತಿತ್ತಂತೆ. ಈ ಅದ್ಭುತವನ್ನು ಕಂಡ ಶಂಕರರು ಪ್ರಾಣಿಗಳು ವೈರತ್ವವನ್ನು ಮರೆತ ಸ್ಥಳದಲ್ಲೇ ಸರಸವಾಣಿಯನ್ನು ನೆಲೆಗೊಳಿಸಿದರಂತೆ. ಹೆಣುಕಪ್ಪೆ ಮರಿಗಳನ್ನು ಹೆರುವುದಿಲ್ಲವೆಂದು ಚಿದ್ವಿಲಾಸೀಯಕಾರನಿಗೆ ಯಾರೂ ಹೇಳಿರಲಿಲ್ಲವೇನೋ ! 
       ಇನ್ನೊಂದು ಕೂಷ್ಮಾಂಡ ಶಂಕರವಿಜಯದ್ದು.  ಆತ ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾನೆ.  ಶಂಕರರು ಸರಸವಾಣಿಯನ್ನು ತಮ್ಮ ಜೊತೆಗೆ ಬರುವಂತೆ ಪ್ರಾರ್ಥಿಸಿದರು. ಅದಕ್ಕೊಪ್ಪಿದ ಸರಸವಾಣಿ  ಹಿಂದಿರುಗಿ ನೋಡಬಾರದೆಂದೂ, ನೋಡಿದರೆ ಆ ಸ್ಥಳದಲ್ಲೇ ಅದೃಶ್ಯಳಾಗುವೆಳೆಂದೂ ಷರತ್ತೊಂದನ್ನು ಮುಂದಿಟ್ಟಳು. ಇಬ್ಬರೂ ಹಂಪೆಯೆಡೆಗೆ ತೆರೆಳತೊಡಗಿದರು. ಮಾರ್ಗಮಧ್ಯದಲ್ಲಿ ಶೃಂಗೇರಿಯಲ್ಲಿ ಸರಸವಾಣಿ ತನ್ನ ಕಾಲ್ಗೆಜ್ಜೆಯನ್ನು ಕಳಚಿ ಹಿಡಿದಳಂತೆ. ಗೆಜ್ಜೆಯ ಶಬ್ದ ನಿಂತಾಗ ಆಕೆಯು ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನದಲ್ಲಿ ಶಂಕರರು ತಿರುಗಿ ನೋಡಿದರು ಎಂದೂ ಕಥೆಯಿದೆ. ಮಗಧದಿಂದ ಹಂಪೆಗೆ ಬರುವಾಗ ಸಿಗುವ ಶೃಂಗೇರಿ ಯಾವುದು ಎಂದು ಕೂಷ್ಮಾಂಡ ಶಂಕರವಿಜಯಕಾರನೇ ಹೇಳಬೇಕು. ಶಂಕರರನ್ನು ಜಾರಸಂಜಾತನೆಂದೂ, ಸಂಕರನೆಂದೂ ಕುಹಕವಾಡಿದ ಈ ಕುಗ್ರಂಥದ ಕಥೆ ಉಳಿದವುಗಳಿಗಿಂತ ಪ್ರಸಿದ್ಧಿಯಲ್ಲಿರುವುದು ಕಲಿಮಹಿಮೆಯೆನ್ನಬೇಕಷ್ಟೆ.
       ಶೃಂಗೇರಿಯಲ್ಲಿ ಶಾರದಾ ಸ್ಥಾಪನೆಯಾದುದರ ಬಗ್ಗೆ ಸರ್ವ ಗ್ರಂಥಗಳಲ್ಲೂ ಒಮ್ಮತಾಭಿಪ್ರಾಯವಿರುವುದಾದರೂ ಅಲ್ಲಿ ಶಂಕರರು ಮಠವನ್ನು ನಿರ್ಮಿಸಿದ ಬಗ್ಗೆ ಸ್ವತಃ ಶೃಂಗೇರಿ ಗುರುಪರಂಪರೆಯ ಮಾಧವ ವಿದ್ಯಾರಣ್ಯರೇ ರಚಿಸಿದರೆಂದು ಭಾವಿಸಲಾಗುವ ಮಾಧವೀಯದಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲ.  ಶೃಂಗೇರಿಯನ್ನು ಹೊಗಳಲೋಸುಗ ಒಂದು ಅಧ್ಯಾಯವನ್ನು ಮೀಸಲಿಟ್ಟ ಆನಂದಗಿರೀಯ ಕೊನೆಯೊಂದು ಭಾಗದಲ್ಲಿ ಮಾತ್ರ ಶಂಕರರು ಇಲ್ಲಿ ಮಠವೊಂದನ್ನು ಸ್ಥಾಪಿಸಿ ವಿದ್ಯಾಪೀಠವನ್ನು ಏರ್ಪಡಿಸಿದರು ಎಂದು ಮುಗಿಸುತ್ತಾನೆ. ಇದ್ದುದರಲ್ಲಿ ಚಿದ್ವಿಲಾಸೀಯಕಾರನೇ ಪರವಾಗಿಲ್ಲ. ಒಟ್ಟೂ ೩೨ ಅಧ್ಯಾಯಗಳಲ್ಲಿ ನಾಲ್ಕು ಅಧ್ಯಾಯಗಳನ್ನು ಶೃಂಗೇರಿ ಮಠದ ಬಗೆಗಿನ ವಿಸ್ತಾರವಾದ ಮಾಹಿತಿಗಾಗಿಯೇ ಮೀಸಲಿದಲಾಗಿದೆ. ಕೆಲವು ಶಂಕರವಿಜಯಗಳ ಉಲ್ಲೇಖ ಹಾಗೂ ಬಹುಜನರ ನಂಬಿಕೆಯೆಂಬುದನ್ನು ಬಿಟ್ಟರೆ ಶೃಂಗೇರಿ ಮಠ ಸ್ಥಾಪನೆಯ ಬಗ್ಗೆ ಶಾಸನಾಧಾರಗಳೂ ಇಲ್ಲ. ೧೩೪೫ರ ವೀರಹರಿಹರ ಒಡೆಯರ ಶಾಸನದಲ್ಲೂ ’ಭಾರತೀತೀರ್ಥ ಶ್ರೀಪಾದರು ಶೃಂಗೇರಿಯ ತೀರ್ಥವಾಸದಲ್ಲಿ ಅನುಷ್ಟಾನಮಾಡಲಿಕ್ಕೆ’ ಎಂದಿದೆಯೇ ಹೊರತೂ ಶಾರದಾಪೀಠದ ಪ್ರಸ್ತಾಪವಿಲ್ಲ.
       ಶಾಂಕರ ಪರಂಪರೆಯ ಮಠಗಳ ಸ್ವರೂಪ, ವಿಶೇಷಣಗಳ ವಿವರವಾದ ಉಲ್ಲೇಖವಿರುವ ಗ್ರಂಥ ಮಠಾಮ್ನಾಯ ಸೇತು. ವಿವಿಧ ಲೇಖಕರಿಂದ ರಚಿತವಾದ ಇದರ ಬೇರೆ ಬೇರೆ ಪಾಠಬೇಧಗಳೂ ಇದೆ. ಇದರ ಪ್ರಕಾರ ಭಾರತದ ನಾಲ್ಕು ಮೂಲೆಗಳಲ್ಲಿ ಶಂಕರರು ನಾಲ್ಕು ಆಮ್ನಾಯಗಳನ್ನು ಸ್ಥಾಪಿಸಿದರು. ಚತುರಾಮ್ನಾಯಗಳೆಂದರೆ ನಾಲ್ಕು ವೇದಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಮೀಸಲಾದ ಮಠಗಳು. ಮೊದಲನೇಯದಾಗಿ ಪಶ್ಚಿಮದಲ್ಲಿ ಸಾಮವೇದಪರಂಪರೆಯ ದ್ವಾರಕೆಯ ಕಾಳಿಕಾಪೀಠ. ಇದು ಕೀಟವಾಳ ಸಂಪ್ರದಾಯದ್ದು. ಶಾಂಕರಮಠಗಳ ಸನ್ಯಾಸಿಗಳ ಉಪಾಧಿಯಾದ ದಶನಾಮೀ ಪರಂಪರೆಯಲ್ಲಿ ಆಶ್ರಮ ಹಾಗೂ ತೀರ್ಥ ಎಂಬ ಹೆಸರುಗಳು ಇಲ್ಲಿನ ಪೀಠಾಧಿಪತಿಗಳಿಗೆ. ಸಿದ್ಧೇಶ್ವರ ದೇವನೂ, ಭದ್ರಕಾಳಿಯೆಂಬ ಶಕ್ತಿಯೂ ಇಲ್ಲಿನ ಆರಾಧ್ಯದೈವಗಳು. ಪದ್ಮಪಾದರು ಮೊದಲ ಆಚಾರ್ಯರು. ಎರಡನೇಯದಾಗಿ ಋಗ್ವೇದಕ್ಕೆ ಪೂರ್ವದ ಪುರಿಯಲ್ಲಿ ಭೋಗವಾಳ ಸಂಪ್ರದಾಯದ ಗೋವರ್ಧನ ಮಠ. ವನ ಹಾಗೂ ಅರಣ್ಯವೆಂಬ ಉಪಾಧಿ ಇಲ್ಲಿನ ಪೀಠಾಧಿಪತಿಗಳಿಗೆ. ದೇವ ಜಗನ್ನಾಥ, ಶಕ್ತಿ ವೃಷಲಾದೇವಿ ಆರಾಧನೆಯ ಈ ಮಠಕ್ಕೆ ಹಸ್ತಾಮಲಕರು ಮೊದಲ ಆಚಾರ್ಯರು. ಮೂರನೇಯದಾಗಿ ಅಥರ್ವಣವೇದಕ್ಕೆ ಉತ್ತರದ ಬದರಿಕಾಶ್ರಮದಲ್ಲಿ ಆನಂದವಾಳ ಪರಂಪರೆಯ ಶ್ರೀಮಠ. ನಾರಾಯಣ ದೇವ ಹಾಗೂ ಪೂರ್ಣಗಿರಿ ಶಕ್ತಿಯನ್ನು ಆರಾಧಿಸುವ ಇಲ್ಲಿನ ಆಚಾರ್ಯರಿಗೆ ಗಿರಿ, ಪರ್ವತ, ಸಾಗರಗಳೆಂಬ ಅಪಾಧಿಗಳು. ತ್ರೋಟಕರು ಇಲ್ಲಿನ ಮೊದಲ ಪೀಠಾಧಿಪತಿಗಳು.
ದಿಗ್ಭಾಗೇ ದಕ್ಷಿಣೇ ರಮ್ಯಃ ಶೃಂಗೇರ್ಯಾಂ ಶಾರದಾಮಠಃ |
ವರಾಹೋ ದೇವತಾ ತತ್ರ ರಾಮಕ್ಷೇತ್ರಮುದಾಹೃತಮ್ ||
ತೀರ್ಥಂ ಚ ತುಂಗಭದ್ರಾಖ್ಯಂ ಶಕ್ತಿಃ ಶ್ರೀ ಶಾರದೇತಿ ಚ |
ಚೈತನ್ಯ ಬ್ರಹ್ಮಚಾರ್ಯಾಖ್ಯ ಆಚಾರ್ಯೋ ವಿಶ್ವರೂಪಕಃ ||

ದಕ್ಷಿಣದಲ್ಲಿ ಯಜುರ್ವೇದಪರಂಪರೆಗೆ ಶೃಂಗೇರಿಯ ಶಾರದಾಮಠ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಠಾಮ್ನಾಯದಲ್ಲೂ ಉಲ್ಲೇಖಿತವಾಗಿರುವ ಶೃಂಗೇರಿ ತುಂಗಭದ್ರಾನದೀತೀರದಲ್ಲೇ ಇದೆ. ವಿಶ್ವರೂಪರು ಇಲ್ಲಿನ ಮೊದಲ ಪೀಠಾಧಿಪತಿ. ಸುರೇಶ್ವರಾಚಾರ್ಯರೆಂದು ಖ್ಯಾತರಾದ ಮಂಡನಮಿಶ್ರರು ಹಾಗೂ ವಿಶ್ವರೂಪರು ಇಬ್ಬರೂ ಒಬ್ಬರೆಯೇ ಎಂಬುದೂ ಚರ್ಚಾರ್ಹ. ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’ ಎಂದು ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ, ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು? ಶೃಂಗೇರಿ ಪರಂಪರೆಯಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ರಾಮಕ್ಷೇತ್ರವೆಂಬ ಹೆಸರಿನ ಇದಕ್ಕೆ ವರಾಹ ಮುಖ್ಯದೇವತೆ! ಇದರ ಒಗಟೇನೆಂಬುದನ್ನು ಒಡೆಯಲು ಇನ್ನೂ ಸಾಧ್ಯವಾಗಿಲ್ಲ.
       ಶಂಕರಾಚಾರ್ಯಪರಂಪರೆಯ ರಾಮಚಂದ್ರಾಪುರ ಮಠ ತಮ್ಮದು ಭೋಗವರ್ಧನವಾಳ ಪರಂಪರೆಯೆಂದು ಹೇಳಿಕೊಳ್ಳುತ್ತದೆ. ಇತ್ತೀಚೆಗೆ ಮಠದ ಮಂತ್ರಾಕ್ಷತೆಯ ಪುಸ್ತಕಗಳಲ್ಲಿ ಇದು ಚರ್ಚಿತಚರ್ವನವಾಗಿದ್ದರೂ ಸುಮಾರು ಮೂವತ್ತು ವರ್ಷಗಳಿಗಿಂತ ಹಿಂದಿನ ಮಠದ ಯಾವ ಪುಸ್ತಕಗಳಲ್ಲಿಯೂ ಇದರ ಉಲ್ಲೇಖವಿಲ್ಲ. ಭೋಗವರ್ಧನ ಶಬ್ದದ ವ್ಯುತ್ಪತ್ತಿಯ ಬಗ್ಗೆಯೂ ಯಾರಿಗೂ ಅರಿವಿಲ್ಲ. ಶೃಂಗೇರಿ ಮಠ ಭೋಗವಾಳ ಪರಂಪರೆಯಾದ್ದರಿಂದ ರಾಮಚಂದ್ರಾಪುರದವರು ತಮ್ಮದು ಭೋಗವರ್ಧನವೆಂದು ಕರೆದುಕೊಂಡರೋ! ಕಂಚಿ, ಶೃಂಗೇರಿಯಂಥ ಮಠಗಳೇ ಶಂಕರಸ್ಥಾಪಿತವೋ ! ಎಂಬುದೇ ಶಂಕರವಿಜಯಗಳಲ್ಲಿ ಪ್ರಶ್ನಿತವಾಗಿರುವಾಗ ಶಂಕರರು ರಾಮಚಂದ್ರಾಪುರದಲ್ಲೋ ಅಥವಾ ಗೋಕರ್ಣದಲ್ಲೋ ಶಂಕರವಿಜಯಕಾರರ ಕಣ್ಣು ತಪ್ಪಿಸಿ ಮಠ ಸ್ಥಾಪನೆ ಮಾಡಿದ ಸಂದರ್ಭ ಯಾವುದು? ಮಠಾಮ್ನಾಯಸೇತುಗಳಾವುದರಲ್ಲಿ ಅಪ್ಪಿತಪ್ಪಿಯೂ ಗೋಕರ್ಣದ ಹೆಸರಿಲ್ಲ. ವಿದ್ಯಾರಣ್ಯರ ಕಾಲದಲ್ಲಿ ಹರಿಹರ, ಕೂಡ್ಲಿಗಿ, ಕೋಲಾರ ಸೇರಿ ಎಂಟು ಕಡೆಗಳಲ್ಲಿ ಶೃಂಗೇರಿಯ ಶಾಖಾಮಠಗಳನ್ನು ಸ್ಥಾಪಿಸಿದ್ದುದರ ಬಗ್ಗೆ ದಾಖಲೆಗಳಿವೆ. ರಾಮಚಂದ್ರಾಪುರ ಅವುಗಳಲ್ಲೊಂದಾಗಿರಬಹುದೇ?


                                                                                                                                                    .....ಸಶೇಷ

Tuesday, January 24, 2017

ಭಾರತದಲ್ಲಿ ಯಹೂದಿಗಳ ಹೆಜ್ಜೆಗುರುತು: ಚಿತ್ಪಾವನ ಹಾಗೂ ಕೊಡವರು

       

       ಮಹಾರಾಷ್ಟ್ರದ ಬುಡದಿಂದ ಕೇರಳದ ದಕ್ಷಿಣ ತುದಿಯವರೆಗಿನ ಭೂಮಿಯು ಪರಶುರಾಮ ಸೃಷ್ಟಿಯೆ೦ದೇ ಪ್ರತೀತಿ. ತನ್ನ ತ೦ದೆ ಜಮದಗ್ನಿಯ ಹತ್ಯೆಯ ಪ್ರತೀಕಾರವಾಗಿ ಭೂಮ೦ಡಲವನ್ನು 21 ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಸ೦ಹರಿಸಿ ಕ್ಷತ್ರಿಯ ಕುಲವನ್ನೇ ನಿರ್ವಂಶಗೊಳಿಸುತ್ತಾನೆ.  ಹತ್ಯೆಗೈದ ಪಾಪದ ಪ್ರಾಯಶ್ಚಿತಕ್ಕೋಸ್ಕರ ಮಹೇಂದ್ರ ಪರ್ವತಕ್ಕೆ ಬ೦ದು ತಪಸ್ಸು ಮಾಡುವ ಪರಶುರಾಮ ಗೆದ್ದ ಭೂಮಿಯನ್ನೆಲ್ಲ ಕಶ್ಯಪ ಮಹರ್ಷಿಗೆ ದಾನ ಮಾಡುತ್ತಾನೆ. ಇರುವ ನೆಲವೆಲ್ಲ ಕಶ್ಯಪನಿಗೆ ದಾನವಾಗಿ ಕೊಟ್ಟಮೇಲೆ ತನಗೆ ನೆಲೆನಿಲ್ಲಲು ಒಂದು ಸ್ಥಳ ಬೇಕಾಯಿತಲ್ಲ! ವರುಣದೇವನ ಆಜ್ಞೆಯ೦ತೆ ಸಹ್ಯಪರ್ವತದಿಂದ ತನ್ನ ಕೊಡಲಿಯನ್ನು ಬೀಸಿ ಒಗೆದನಂತೆ. ಆ ಪರಶು ಎಲ್ಲಿಯವರೆಗೆ ಹೋಗಿ ಬಿತ್ತೋ ಅಲ್ಲಿಯವರೆಗೆ ಸಮುದ್ರ ಹಿಂದೆ ಸರಿಯಿತು. ಹೀಗೆ ಹೊಸದಾಗಿ ನಿರ್ಮಾಣವಾದ ಭೂಭಾಗ ಪರಶುರಾಮ ಸೃಷ್ಟಿ ಎಂದು ಹೆಸರಾಯ್ತು. ಕೇರಳೋತ್ಪತ್ತಿ ಮಾರ್ತಾ೦ಡ, ಸ್ಕಾಂದಪುರಾಣ, ಪ್ರಪಂಚ ಹೃದಯವೇ ಮುಂತಾದ ಗ್ರಂಥಗಳ ಪ್ರಕಾರ ಪರಶುರಾಮ ಹಾಗೆ ಪಡೆದ ಭೂಭಾಗವೇ ಸಪ್ತಕೊಂಕಣ.
ಸಹ್ಯಪಾದೇ ಪರಶುರಾಮಭೂಮಿಃ | ಸಾ ಸಪ್ತಕೋಂಕಣಾಖ್ಯಾ |
ಕೂಪಕ ಕೇರಲ ಮೂಷಿಕ ಆಲುವ ಪಶು ಕೋಂಕಣ ಪರಕೋಂಕಣ
ಭೇದೇನ ದಕ್ಷಿಣೋತ್ತರಾಯಾಮೇನ ಚ ವ್ಯವಸ್ಥಿತಾ ||
ಸಹ್ಯಾಚಲದ ಉಪತ್ಯಕಾ ಪ್ರದೇಶವಾದ ಪರಶುರಾಮ ಭೂಮಿಯನ್ನು ಸಪ್ತಕೊಂಕಣವೆನ್ನುತ್ತಾರೆ. ಇದರಲ್ಲಿ ಕೂಪಕ, ಕೇರಲ, ಮೂಷಿಕ, ಆಳುವ(ತುಳುವ), ಪಶು, ಕೊಂಕಣ ಮತ್ತು ಪರ ಕೊಂಕಣ ಎಂದು ೭ ದೇಶಗಳಿವೆ. ಇದನ್ನೇ ಸ್ಕಾಂದ ಪುರಾಣ ಹಾಗೂ ಬ್ರಹ್ಮಾಂಡ ಪುರಾಣಗಳಲ್ಲಿ  ಬರ್ಬರ, ಸೌರಾಷ್ಟ್ರ, ಕೊಂಕಣ, ಕರ್ಹಾಟ, ಕರ್ಣಾಟ, ತೌಳವ, ಕೇರಳ ಎಂದು ಕರೆಯಲಾಗಿದೆ. ಪ್ರಪಂಚ ಹೃದಯದಲ್ಲೂ
ಖರಾಟಂಚ ವರಾಟಂಚ ಮರಾಟಂ ಕೊಂಕಣಂ ತಥಾ |
ಹವಿಗಂ ತೌಳವಂ ಚಾಥ ಕೇರಳಂ ಚೇತಿ ಸಪ್ತಕಂ ||
ಖರಾಟ, ವರಾಟ ಮರಾಟ, ಕೊಂಕಣ, ಹೈಗ, ತೌಳವ, ಕೇರಳ ಎಂದು ಸಪ್ತಕೊಂಕಣಗಳನ್ನು ವರ್ಗೀಕರಿಸಲಾಗಿದೆ.
       ಪಯಸ್ವಿನಿ ಅಥವಾ ಚಂದ್ರಗಿರಿ ನದಿಯ ಉತ್ತರಕ್ಕೆ ಆಳುವ ಅಥವಾ ತುಳುನಾಡು. ಪ್ಟಾಲೆಮಿಯ ದಾಖಲೆಗಳಲ್ಲಿ, ಹೊಯ್ಸಳ ವಿಷ್ಣುವರ್ಧನನ ಆಳೊತ್ತಿನ ಶಾಸನದಲ್ಲಿ, ಹೊಯ್ಸಳರ ನರಸಿಂಹನ ಕಂಬಾಳು ಹಾಗೂ ವೀರಬಲ್ಲಾಳನ ಸಂತೆಶಿವರ ಶಿಲಾಲೇಖಗಳಲ್ಲೂ ಇದು ’ಕೊಂಕಣನಾಡಾಳ್ವಖೇಡ’ ಎಂದು ಕರೆಯಲ್ಪಟ್ಟಿದೆ. ಪಯಸ್ವಿನಿಯಿಂದ ಪುದು ಪಟ್ಟಣದವರೆಗೆ ಕೂಪಕ, ಪುದುಪಟ್ಟಣದಿಂದ ಕನ್ನೇಟ್ಟಿವರೆಗೆ ಕೇರಲ, ಕನ್ನೇಟ್ಟಿಯಿಂದ ಕನ್ಯಾಕುಮಾರಿಯವರೆಗೆ ಮೂಷಿಕ. ಈ ಕೂಪಕ, ಮೂಷಕ, ಕೇರಲಗಳ ಉಲ್ಲೇಖ ಚಳುಕ್ಯ ಮಂಗಲೇಶನ ಕ್ರಿ.ಶ. ೬೦೨ರ ಮಹಾಕೂಟದ ಸ್ತಂಭಲೇಖದಲ್ಲಿಯೂ ಇದೆ. ಐದನೇ ಕೊಂಕಣವೆಂದರೆ ಪಶು ಅಥವಾ ಹೈಗದೇಶ. ಇದು ಉತ್ತರ ಕನ್ನಡ. ಉತ್ತರ ಕನ್ನಡ ಜಿಲ್ಲೆಯ ನಾಡುನುಡಿಯಲ್ಲಿ ಪಶುಕವು ಕ್ರಮೇಣ ಪಯಿಕ-ಪಯಿಗವಾಗಿ ತದ್ಭವಿಸಿ ಹೈಗವೆಂದು ರೂಪಾಂತರಗೊಂಡಿತು. ೬ನೆಯ ಕೊಂಕಣವೆಂದರೆ ಈಗಣ ಗೋವೆಯ ಸೀಮೆಯನ್ನೂ ಮುಂಬಯಿಯ ರತ್ನಗಿರಿ ಜಿಲ್ಲೆಯನ್ನೂ ಒಳಗೊಂಡಿರುವ ಕೊಂಕಣ ಅಥವಾ ದಕ್ಷಿಣ ಕೊಂಕಣ. ೭ನೆಯ ಕೊಂಕಣವೆಂದರೆ ಕೊಲಾಬಾ ಹಾಗೂ ಠಾಣಾ ಜಿಲ್ಲೆಗಳುಳ್ಳ ಪರ ಕೊಂಕಣ. ಪರಶುರಾಮನ ತಾಯಿ ರೇಣುಕಾ ದೇವಿ ಅಥವಾ ಕುಂಕಣಾ ದೇವಿಯಿಯಿಂದ ಈ ಸಮುದ್ರದಿಂದ ಪಡೆದ ಈ ಭಾಗಕ್ಕೆ ಕೊಂಕಣವೆಂದು ನಾಮಕರಣ ಮಾಡಿದನಂತೆ. ಹೊಸದಾಗಿ ಸೃಷ್ಟಿಸಿದ ಈ ಭೂಭಾಗದಲ್ಲಿ ದೇಶದ ಬೇರೆ ಬೇರೆ ಮೂಲೆಯಿಂದ ಬ್ರಾಹ್ಮಣರನ್ನು ಕರೆತಂದು ನೆಲೆಗೊಳಿಸಿದನೆನ್ನುತ್ತವೆ ಹೆಚ್ಚಿನೆಲ್ಲ ಪುರಾಣಗಳು. ಕೊಂಕಣದಲ್ಲಿ ಈ ಬ್ರಾಹ್ಮಣರು ನೆಲೆನಿಂತಿದ್ದರಿಂದ ಅವರಿಗೆ ಕೊಂಕಣಸ್ಥ ಅಥವಾ ಕೋಕಣಸ್ಥ ಬ್ರಾಹ್ಮಣರೆಂಬ ಹೆಸರಾಯ್ತು. ಹೀಗೆ ಪರಶುರಾಮನೊಡನೆ ಇಲ್ಲಿ ಬಂದರೆನ್ನಲಾಗುವ ಒಂದು ಬ್ರಾಹ್ಮಣ ಸಮುದಾಯದ ಹೆಸರು ಚಿತ್ಪಾವನ ಬ್ರಾಹ್ಮಣರು.
       ಸರಿಸುಮಾರು ಹದಿನಾರನೇ ಶತಾಬ್ದದವರೆಗೂ ಚಿತ್ಪಾವನರ ಇತಿಹಾಸದ ಬಗ್ಗೆ ದೊರೆಯುವುದು ಅಷ್ಟಕ್ಕಷ್ಟೆ.  ೧೬೯೦ರಲ್ಲಿ ಬಾಲಾಜಿ ವಿಶ್ವನಾಥ ಭಟ್ಟನೆಂಬ ಚಿತ್ಪಾವನ ಬ್ರಾಹ್ಮಣ ಕೆಲಸ ಹುಡುಕಿಕೊಂಡು ಪುಣೆಗೆ ಬಂದು ಗುಮಾಸ್ತನಾಗಿ ಮರಾಠರಲ್ಲಿ ಉದ್ಯೋಗಕ್ಕೆ ಸೇರಿಕೊಂಡ. ತನ್ನ ಶ್ರಮ ಹಾಗೂ ತೀಕ್ಷ್ಣ ಬುದ್ಧಿಮತ್ತೆಯಿಂದ ಅಚ್ಚರಿಪಡುವಂತೆ ಬೆಳೆದ ಬಾಲಾಜಿ ಭಟ್ಟ ಮರಾಠರ ಸೇನಾಧಿಪತಿಯಾಗಿ ಪೇಶ್ವೆಯೆಂಬ ಉಪಾಧಿಗೆ ಪಾತ್ರನಾದದ್ದು ಇತಿಹಾಸ. ಮುಂದೆ ಬಾಲಾಜಿಯ ವಂಶದವರು ಸುಮಾರು ನೂರು ವರ್ಷಗಳ ಕಾಲ ಮರಾಠರ ಆಳ್ವಿಕೆಯಲ್ಲಿ ಪೇಶ್ವೆಗಳಾಗಿ ಮೆರೆದರು. ಬಾಜಿರಾವ ಭಟ್ಟನ ನೇತೃತ್ವದಲ್ಲಿ ಮರಾಠರ ಪ್ರಸಿದ್ಧಿ ಚರಮಸೀಮೆಯನ್ನು ಮುಟ್ಟಿದ್ದು, ಇವನ ಅಧಿಪತ್ಯದಲ್ಲಿ ಅರ್ಧ ಭಾರತದದಾದ್ಯಂತೆ ಮರಾಠರ ಕೇಸರಿ ಧ್ವಜ ರಾರಾಜಿಸುವಂತಾದದ್ದು ತಿಳಿದೇ ಇದೆ. ಪೇಶ್ವೆಗಳ ಆಳ್ವಿಕೆ ಕೊಂಕಣದಲ್ಲಿ ಚಿತ್ಪಾವನರ ಭಾಗ್ಯದ ಬಾಗಿಲು ತೆರೆದಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಬಲಾಢ್ಯರಾದ ಚಿತ್ಪಾವನರು ದೇಶದ ವಿವಿಧೆಡೆ ಬೇರೆ ಬೇರೆ ರಂಗಗಳಲ್ಲಿ ತಮ್ಮ ಛಾಪೊತ್ತಲು ತೊಡಗಿದರು.೧೮೧೮ರಲ್ಲಿ ಮರಾಠಾ ಸಾಮ್ರಾಜ್ಯ ಬ್ರಿಟಿಷರ ವಶವಾದಮೇಲೂ ಚಿತ್ಪಾವನರು ಇಂಗ್ಲೀಷ್ ಶಿಕ್ಷಣದ ಕಾರಣದಿಂದ ಆ ಭಾಗದಲ್ಲಿ ಹೆಚ್ಚಿನೆಲ್ಲ ರಂಗಗಳಲ್ಲೂ ಸಾಟಿಯಿಲ್ಲದಂತೆ ಮೆರೆದರು. ೧೮೭೯ರಲ್ಲಿ ವಾಸುದೇವ ಬಲವಂತ ಫಡ್ಕೆ ಪೇಶ್ವೆಗಳ ಆಡಳಿತವನ್ನು ಪುನರ್ಸ್ಥಾಪಿಸಲು ವಿದೇಶಿ ಆಡಳಿತದ ವಿರುದ್ಧ ತಿರುಗಿ ಬಿದ್ದ ಮೇಲಷ್ಟೆ ಬ್ರಿಟಿಷರ ಕಣ್ಣು ಕೆಂಪಗಾದದ್ದು. ಆಮೇಲೆ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಚಿತ್ಪಾವನರ ಕೊಡುಗೆ ಬೆಲೆಕಟ್ಟಲಾಗದಷ್ಟು. ಡಿ.ಕೆ.ಕರ್ವೆಯವರ ವಿಧವಾ ವಿವಾಹ ಚಳುವಳಿ ಮಹಾರಾಷ್ಟ್ರದಲ್ಲಿ ಹೊಸ ಸಾಮಾಜಿಕ ಅಧ್ಯಾಯಕ್ಕೊಂದು ನಾಂದಿ ಹಾಡಿತು. ಮಂದಗಾಮಿ ಹೋರಾಟಗಾರರಾದ ಗೋಪಾಲಕೃಷ್ಣ ಗೋಖಲೆ, ಜಿ.ವಿ.ಜೋಶಿ, ಮಹದೇವ ಗೋವಿಂದ ರಾನಡೆಯಂಥವರು ಸರ್ವೆಂಟ್ಸ್ ಆಫ್ ಇಂಡಿಯನ್ ಸೊಸೈಟಿ,  ಪೂರ್ಣ್ ಸಾರ್ವಜನಿಕ ಸಭಾದ ಮೂಲಕ ಬ್ರಿಟಿಷ್ ಆಡಳಿತದ ವಿರುದ್ಧ ಜನಜಾಗೃತಿ ಮೂಡಿಸಿದರೆ ಬಾಲಗಂಗಾಧರ ತಿಲಕ, ವಿ.ಡಿ ಸಾವರ್ಕರ್, ವಿಷ್ಣುಶಾಸ್ತ್ರಿ ಚಿಪ್ಳೂಣಕರ್, ಚಾಪೇಕರ್ ಬಂಧುಗಳು, ಶಿವರಾಮ ಪರಾಂಜಪೆಯಂಥವರು ತೀವ್ರಗಾಮಿ ಮಾರ್ಗದ ಮೂಲಕ ಬ್ರಿಟಿಷರಿಗೆ ಬಿಸಿಮುಟ್ಟಿಸತೊಡಗಿದರು. ಇನ್ನು ನಾಥುರಾಮ್ ಗೋಡ್ಸೆಯ ವಿಚಾರ ಹೇಳುವುದೇ ಬೇಡ ಬಿಡಿ. 
ಬಾಲಾಜಿ ವಿಶ್ವನಾಥ
       ದಾದಾಸಾಹೇಬ್ ಫಾಲ್ಕೆಯಿಂದ ಮಾಧುರೀ ದೀಕ್ಷಿತಳವರೆಗೆ, ತಿಲಕರಿಂದ ನಾಥೂರಾಮ ಗೋಡ್ಸೆಯವರೆಗಿನ ಖ್ಯಾತನಾಮರೆಲ್ಲ ಚಿತ್ಪಾವನರೇ. ಹೀಗಿದ್ದರೂ ಇವರ ಮೂಲ, ಇತಿಹಾಸ, ಹಿನ್ನೆಲೆ ಇವ್ಯಾವವೂ ಇತಿಹಾಸಕಾರರಿಗೆ ತಿಳಿದಿದ್ದು ಅಷ್ಟಕ್ಕಷ್ಟೆ. ಚಿತ್ಪಾವನರ ಕುಲನಾಮಗಳಾದ ಗಣಪುಲೆ, ರಾನಡೆ, ಪರಾಂಜಪೆಯಂಥ ಹೆಸರುಗಳು ಅಲ್ಲಿಲ್ಲಿ ಇತಿಹಾಸದಲ್ಲಿ ಸಿಕ್ಕಿದರೂ ಚಿತ್ಪಾವನ ಶಬ್ದದ ಮೊದಲ ಉಲ್ಲೇಖ ದೊರಕುವುದೇ ಹದಿನಾರನೇ ಶತಮಾನದಲ್ಲಿ ಕಾಶಿಯ ಸ್ಮಾರ್ತಪಂಡಿತ ರಘುನಾಥ ಭಟ್ಟನ ಮುಹೂರ್ತಮಾಲಾ ಗ್ರಂಥದಲ್ಲಿ. ಆತ ತನ್ನನ್ನು ತಾನು ಶಾಂಡಿಲ್ಯ ಗೋತ್ರದ ಕೊಂಕಣ ಸೀಮೆಯ ಚಿತ್ಪಾವನ ಬ್ರಾಹ್ಮಣನೆಂದು ಕರೆದುಕೊಳ್ಳುತ್ತಾನೆ. ಅದಕ್ಕೂ ಹಿಂದೆ ಮುಘಲ್ ಬಾದಷಾ ಅಕ್ಬರನಿಂದ ಜ್ಯೋತಿರ್ವಿಶಾರದನೆಂದು ಬಿರುದು ಪಡೆದಿದ್ದ ನರಸಿಂಹ ಭಟ್ಟ ಇವನ ಅಜ್ಜ. ಅದನ್ನು ಬಿಟ್ಟರೆ ಚಿತ್ಪಾವನರ ಎರಡನೇ ಉಲ್ಲೇಖ ಸಿಗುವುದು ೧೬೭೭ರಲ್ಲಿ ಕರ್ಹಾಡ ಹಾಗೂ ಚಿತ್ಪಾವನ ಕುಲದ ಬ್ರಾಹ್ಮಣರಿಗೆ ಶಿವಾಜಿ ಉಂಬಳಿ ನೀಡಿದ ದಾಖಲೆಗಳಲ್ಲಿ.
       ವಲಸೆ ಬಂದು ಇಲ್ಲಿ ನೆಲೆನಿಂತ ಬ್ರಾಹ್ಮಣ ಸಮುದಾಯದ ಹೆಸರು ಅವರು ನೆಲೆನಿಂತ ಜಾಗದೊಡನೆ ತಳುಕು ಹಾಕಿಕೊಳ್ಳುವುದು ರೂಢಿ. ಮಯೂರವರ್ಮನ ಕಾಲದಲ್ಲಿ ಶಿವಳ್ಳಿಯಲ್ಲಿ ನೆಲೆನಿಂತವರು ಶಿವಳ್ಳಿಯಾದಂತೆ, ಕೋಟದಲ್ಲಿ ನೆಲೆಸಿದವರು ಕೋಟ ಬ್ರಾಹ್ಮಣರಾದಂತೆ, ಹೈಗ ದೇಶದಲ್ಲಿ ವಾಸಿಸಿದವರು ಹೈಗರಾದಂತೆ.  ಮಿಥಿಲಾ ಪ್ರದೇಶಕ್ಕೆ ಬಂದವರು ಮೈಥಿಲಿ ಬ್ರಾಹ್ಮಣರೆಂದು ಕರೆಯಲ್ಪಟ್ಟರು, ಶಿಲಾಹಾರರ ಕಾಲದಲ್ಲಿ ಕರ್ಹಾಡ(ಟ) ಸೀಮೆಗೆ ಬಂದವರು ಕರಾಡ ಬ್ರಾಹ್ಮಣರಾದರು, ಮಧ್ಯ ಮಹಾರಾಷ್ಟ್ರದಲ್ಲಿ ವಾಸಿಸತೊಡಗಿದವರು ದೇಶಸ್ಥರಾದರು. ಆದರೆ ಈ ಚಿತ್ಪಾವನವೆಂಬ ಹೆಸರು ಬಂದಿದ್ದು ನಿಗೂಢವೇ. ಆ ಹೆಸರಿನ ಪ್ರದೇಶವ್ಯಾವುದೂ ಭಾರತದಲ್ಲಿಲ್ಲ. ಚಿತ್ತ+ಪಾವನ, Pure Heart , ಶುದ್ಧ ಮನಸ್ಸು ಎಂಬ ಭಾಷಾಂತರವನ್ನೇನೋ ಕೆಲವರು ಮಾಡಿದ್ದಾರೆ. ೧೬ನೇ ಶತಮಾನದಲ್ಲಿ ವಿಶ್ವನಾಥ ಭಟ್ಟ ರಚಿಸಿದ ವ್ಯಾಡೇಶ್ವರ ಮಹಾತ್ಮ್ಯದಲ್ಲಿ ಇವರನ್ನು ಚಿತ್ತಪ ಅಥವಾ ಚಿತ್ತಪಾವನರೆಂದು ಕರೆದಿದ್ದಾನೆ. ಅಬ್ರಾಹ್ಮಣವಾಗಿದ್ದ ಕೊಂಕಣದಲ್ಲಿ ಬ್ರಾಹ್ಮಣರನ್ನು ನೆಲೆಗೊಳಿಸಲು ಪರಶುರಾಮ ಚಿಂತಿಸಿದನಂತೆ. ಒಮ್ಮೆ ದಕ್ಷಿಣದ ಕಾವೇರಿ ನದಿಯ ಉಗಮಸ್ಥಾನಕ್ಕೆ ತೀರ್ಥಯಾತ್ರೆಗೆ ತೆರಳಿದ್ದಾಗ ಅಲ್ಲಿಗೆ ಪಶ್ಚಿಮಕ್ಕಿರುವ ಪಯೋಷ್ಣಿ ನದಿದಡದಿಂದ ಕೆಲ ಬ್ರಾಹ್ಮಣ ಕುಟುಂಬಗಳು ಬಂದು ನೆಲೆಸಿದ್ದವಂತೆ. ಆ ಬ್ರಾಹ್ಮಣರ ಪಾಂಡಿತ್ಯಕ್ಕೆ ಮೆಚ್ಚಿದ ಪರಶುರಾಮ ಅವರ ರಕ್ಷಣೆಯ ಅಭಯವಿತ್ತು ಕೊಂಕಣ ಪ್ರದೇಶದಲ್ಲಿ ನೆಲೆಸುವಂತೆ ಕೇಳಿದ. ಅವನ ಕೋರಿಕೆಯನ್ನು ಅಲ್ಲಿನ ಬ್ರಾಹ್ಮಣರು ಒಪ್ಪಿ ಕೊಂಕಣಕ್ಕೆ ಬಂದರು. ಅವರ ಉದಾರ ಮನಸ್ಸನ್ನು ಕಂಡು ಪರಶುರಾಮನ ಹೃದಯ ತುಂಬಿ ಬಂತು. ಆತ ಅವರು ನೆಲೆಸಿದ ಪ್ರದೇಶಕ್ಕೆ ಚಿತ್ತಪಾವನವೆಂದು ಹೆಸರಿಟ್ಟ. ಅಲ್ಲಿ ನೆಲೆಸಿದ ಬ್ರಾಹ್ಮಣರಿಗೂ ಅದೇ ಹೆಸರಾಯಿತು. ವ್ಯಾಡೇಶ್ವರದ ಸ್ಥಳಪುರಾಣದಂತೆ ಪರಶುರಾಮನ ಸಂಗಡ ಬಂದ ವ್ಯಾಡನೆಂಬ ಬ್ರಾಹ್ಮಣ ಇಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪಿಸಿ ಮಂದಿರವೊಂದನ್ನು ನಿರ್ಮಿಸಿದ್ದರಿಂದ ಆ ಸ್ಥಳಕ್ಕೆ ವ್ಯಾಡೇಶ್ವರವೆಂಬ ಹೆಸರು ಬಂದಿತು. ಹೆಚ್ಚಿನ ಕೋಕಣಸ್ಥ ಚಿತ್ಪಾವನರ ಕುಲದೇವರು ಇದೇ. ಪರಶುರಾಮನ ಈ ಕಥೆ ಎಷ್ಟು ಸತ್ಯವೋ ಆದರೆ ಇದು ಅವರ ಹೆಸರು ಚಿತ್ಪಾವನರೆಂದೇಕಾಯ್ತೆಂದು ವಿವರಿಸುವುದಿಲ್ಲ. ಏನೇ ಆದರೂ ಚಿತ್ತಪಾವನದಿಂದ ಚಿತ್ಪಾವನವಾಯ್ತೆಂದು ಬರೆದಿರುವುದು ಒಳ್ಳೆಯ ಕವಿ ಪ್ರಯತ್ನ. ವ್ಯಾಡೇಶ್ವರ ಮಹಾತ್ಮೆಯಲ್ಲಿ ಪಯೋಷ್ಣಿ ಅಥವಾ ಪಯಸ್ವಿನಿ ಎಂಬ ನದಿದಡದಿಂದ ಚಿತ್ಪಾವನರ ಆಗಮನವಾಯ್ತೆಂದು ಬರೆದಿದೆ. ಆದರೆ ಪಯೋಷ್ಣಿಯೆಂಬ ಹೆಸರಿನ ನದಿ ಯಾವುದೂ ದಕ್ಷಿಣ ಭಾರತದಲ್ಲಿಲ್ಲ. ಪಯ ಎಂಬುದಕ್ಕೆ ನೀರು ಎಂಬರ್ಥವೂ ಇದೆ. ಉಷ್ಣವೆಂದರೆ ಬಿಸಿ. ಉತ್ತರ ಮಹಾರಾಷ್ಟ್ರದ ಜಲಗಾಂವಿನ ಹತ್ತಿರದ ಉನಪದೇವ ಪ್ರದೇಶದಲ್ಲಿ ಬಿಸಿನೀರಿನ ಚಿಲುಮೆಯೊಂದಿದೆ. ಪಯೋಶ್ಣಿ ಎಂದು ಉಲ್ಲೇಖಿಸಲ್ಪಟ್ಟ ನದಿ ಇದೇ ಆಗಿರಬಹುದೇ?  ಕೆಲ ಚಿತ್ಪಾವನರ ಕುಲದೇವತೆ ವಿಂಧ್ಯವಾಸಿನಿಯಾಗಿರುವುದಕ್ಕೂ, ಈ ಉನಪದೇವ ಬಿಸಿನೀರ ಹರಿವು ವಿಂಧ್ಯ ಪರ್ವತದ ಸಾಲಿನಲ್ಲಿಯೇ ಬರುವುದಕ್ಕೂ ಏನಾದರೂ ಸಂಬಂಧವಿರಬಹುದೇ? ವಿಂಧ್ಯಾಚಲದಲ್ಲೇ ಇರುವ ಅಂಬೇಜೋಗಿಯ ಯೋಗೇಶ್ವರಿ ಹಲವು ಚಿತ್ಪಾವನರ ಕುಲದೇವಿ ಕೂಡ. ಇದನ್ನು ಹೊರತುಪಡಿಸಿ ಹಿಮಾಚಲಪ್ರದೇಶದ ತಟ್ಟಾಪಾನಿ(ಸಟ್ಲೇಜ್ ನದಿ), ಮನಿಕರಣ್, ಡೆಹ್ರಾಡೂನಿನ ಸಮೀಪದ ಸಹಸ್ರಧಾರಾ ಸೇರಿ ಹಿಮಾಲಯದ ಕೆಲಭಾಗಗಳಲ್ಲಿ ಬಿಸಿ ನೀರ ಚಿಲುಮೆಗಳಿವೆ. ಪಾಕಿಸ್ತಾನದ ಈಶಾನ್ಯಭಾಗದ ಚಿತ್ರಾಲ್ ಜಿಲ್ಲೆಯ ಗರಮ್ ಚಶ್ಮಾ, ಮುರ್ತಾಝಾಬಾದ್, ಗಿಲ್ಗಿಟ್, ಅಪ್ಘಾನಿಸ್ತಾನದ ಚಿಶ್ಮಾ-ಇ-ಆಯುಬ್, ಹೇರತ್‌ನ ಸಫೇದ್ ಕೋಹ್, ಬಲ್ಖ್‌ನ ಆಬೆ ಗರಮ್‌ಗಳಲ್ಲಿ ಸಹ ಬಿಸಿನೀರ ತೊರೆಗಳಿವೆ. ಇನ್ನೊಂದು ಸಾಧ್ಯತೆಯುಂಟು. ದಕ್ಷಿಣ ಕನ್ನಡದ ಪುತ್ತೂರಿನ ಸಮೀಪದ ಬೆಂದ್ರು ತೀರ್ಥ ದಕ್ಷಿಣ ಭಾರತದ ಏಕೈಕ ಬಿಸಿನೀರ ಕೊಳ. ಅಲ್ಲೇ ಪಕ್ಕದಲ್ಲಿ ಹರಿಯುವ ಸೀರೆ ಹೊಳೆಯ ಉಗಮ ಮೊದಲು ಇಲ್ಲಿಯೇ ಆಗುತ್ತಿತ್ತೇ? ಊರ ತುಂಬ ಕೊಳವೆ ಬಾವಿ ಕೊರೆದು ಈಗ ಅಲ್ಲಿ ನೀರು ಸಿಗುವುದೂ ಕಷ್ಟವಾಗಿದೆ ಬಿಡಿ. ಒಂದು ಕಾಲದಲ್ಲಿ ಪುತ್ತೂರಿನಲ್ಲಿ ಸಾವಿರಾರು ಚಿತ್ಪಾವನರ ವಸತಿಯಿತ್ತು. ಕಳೆದೆರಡು ಶತಮಾನದಲ್ಲಿ ಬಹಳ ಜನ ಅಲ್ಲಿಂದ ಮಾಳ, ಕಾರ್ಕಳ, ಮುಂಡಾಜೆಗಳ ಕಡೆ ವಲಸೆ ಬಂದಿದ್ದಾರೆ. ಇನ್ನೊಂದು ವಿಶೇಷವೆಂದರೆ ಪುತ್ತೂರಿನ ಸಮೀಪ ಎರಡು ಪರಶುರಾಮ ಮಂದಿರಗಳಿವೆ. ಒಂದು ಧರ್ಬೆತಡ್ಕದಲ್ಲಿರುವ ಚಿತ್ಪಾವನ ಗುರು ಪರಶುರಾಮ ಮಂದಿರ, ಇನ್ನೊಂದು ಮುಂಡಾಜೆಯಲ್ಲಿರುವುದು. ಬೇರೆಲ್ಲಿಂದಲೋ ಬಂದು ಪುತ್ತೂರಿನ ಆಸುಪಾಸು ನಿಂತ ಚಿತ್ಪಾವನ ಬ್ರಾಹ್ಮಣರನ್ನೇ ಪರಶುರಾಮ ಕೊಂಕಣ ಪ್ರಾಂತ್ಯಕ್ಕೆ ತನ್ನೊಡನೆ ಕರೆದೊಯ್ದನೇ? ಜೊತೆಗೆ ಪಯಸ್ವಿನಿಯೆಂಬ ಹೆಸರಿನ ನದಿಯೊಂದು ಕಾಸರಗೋಡಿನಲ್ಲಿಯೂ ಹರಿಯುತ್ತಿದೆ. ಕಾವೇರಿ ಉಗಮಸ್ಥಾನಕ್ಕೆ ಇದು ಸಮೀಪವಿರುವುದರಿಂದ ವ್ಯಾಡೇಶ್ವರ ಮಹಾತ್ಮ್ಯದಲ್ಲಿ ಹೇಳಿದಂತೆ ಚಿತ್ಪಾವನರ ಮೂಲವೇನಾದರೂ ದಕ್ಷಿಣ ಕನ್ನಡ ಅಥವಾ ಕಾಸರಗೋಡು ಪ್ರಾಂತ್ಯವೇ ಇರಬಹುದೇ?
ಉನಪದೇವದ ಬಿಸಿನೀರಿನ ಚಿಲುಮೆ
ಚಿತ್ಪಾವನರ ಕುಲದೈವ ವ್ಯಾಡೇಶ್ವರ ಮಂದಿರ

       ಚಿತ್ಪಾವನವೆಂಬ ಹೆಸರು ಬರಲು ಇನ್ನೂ ಒಂದು ಕಾರಣವನ್ನು ಇತಿಹಾಸಕಾರರು ವಿವರಿಸುತ್ತಾರೆ. ಚಿತಾ ಅಥವಾ ಚಿತೆಯಿಂದ ಪಾವನರಾದ್ದರಿಂದ ಅವರ ಹೆಸರು ಚಿತ್ಪಾವನವೆಂದಾಯ್ತಂತೆ. ಸ್ಕಂದಪುರಾಣದ ಉತ್ತರಸಹ್ಯಾದ್ರಿ ಖಂಡದಲ್ಲೊಂದು ಕಥೆಯಿದೆ.  ಕ್ಷತ್ರಿಯ ವಂಶವನ್ನು ನಿರ್ಮೂಲಗೊಳಿಸಿದ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪರಶುರಾಮ ಮಹೇಂದ್ರಪರ್ವತದಲ್ಲಿ ಯಾಗವೊಂದಕ್ಕೆ ಸಿದ್ಧತೆ ನಡೆಸಿದ. ಇಡೀ ಕ್ಷತ್ರಿಯಕುಲದ ರುಂಡಚಂಡಾಡಿದ ಪರಶುರಾಮನ ಕೋಪದ ಹೆದರಿಕೆಯಿಂದ ಬ್ರಾಹ್ಮಣರ್ಯಾರೂ ಆ ಯಾಗದ ಅಧ್ವರ್ಯ ವಹಿಸಲು ಮುಂದಾಗಲಿಲ್ಲ. ಅದೇ ಸಮಯಕ್ಕೆ ಪಶ್ಚಿಮ ಸಮುದ್ರದಲ್ಲಿ ಬರುತ್ತಿದ್ದ ಹಡಗೊಂದು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಪರಶುರಾಮ ನೀರುಪಾಲಾದ ಹದಿನಾಲ್ಕು ಶವಗಳನ್ನು ಚಿತೆಯಲ್ಲಿಟ್ಟು ಪಾವನಗೊಳಿಸಿ ಜೀವ ತುಂಬಿ ಬ್ರಾಹ್ಮಣ್ಯವನ್ನು ನೀಡಿದನಂತೆ. ಅವರಿಗೆ ಹದಿನಾಲ್ಕು ಗೋತ್ರಪ್ರವರಗಳನ್ನು ನೀಡಿ ತನ್ನ ಕಾರ್ಯವನ್ನು ಸಾಂಗಗೊಳಿಸಿಕೊಂಡನೆನ್ನುತ್ತದೆ ಕಥೆ. ಯಹೂದಿಗಳ ಬೇನೆ ಇಸ್ರೇಲಿ ಪಂಗಡದ್ದೂ ಇದೇ ಕಥೆ ಎಂದು ಕಳೆದ ಬಾರಿ ಹೇಳಿದ್ದೆನಷ್ಟೆ.  ಕ್ರಿ.ಪೂ ೨ನೇ ಶತಮಾನಕ್ಕೂ ಹಿಂದೆ ಪಶ್ಚಿಮದ ಕೊಂಕಣ ಪಟ್ಟಿಗೆ ಇವರು ಆಗಮಿಸಿದರೆಂದು ಭಾವಿಸಲಾಗುತ್ತದೆ. ಸಮುದ್ರದಲ್ಲಿ ಬರುತ್ತಿರುವಾಗ ಹಡಗು ಒಡೆದು ನೀರುಪಾಲಾದವರಲ್ಲಿ ಏಳು ಪುರುಷರೂ, ಏಳು ಮಹಿಳೆಯರೂ ಒಟ್ಟೂ ಹದಿನಾಲ್ಕು ಜನ ಹೇಗೋ ಬದುಕಿ ಉಳಿದರಂತೆ. ಅವರ ಸಹಯಾತ್ರಿಗಳು, ಸ್ವತ್ತುಗಳೊಡನೆ ಧರ್ಮಗ್ರಂಥಗಳೂ ನಾಶವಾಗಿದ್ದವು. ಶೇಮಾ ಪ್ರಾರ್ಥನೆಯನ್ನು ಮಾತ್ರ ನೆನಪಿಟ್ಟುಕೊಂಡ ಒಂದು ಕಾರಣದಿಂದ ತಮ್ಮ ನೆಲೆಯಿಂದ ಬಹುದೂರ ಬಂದಿದ್ದರೂ ಅವರು ಮೂಲವನ್ನು ಮರೆಯಲಿಲ್ಲವಂತೆ. ಏನೇ ಅಂದರೂ ಪರಶುರಾಮನ ಈ ಕಥೆಗೆ ಮೂರ್ನಾಲ್ಕು ಶತಮಾನಗಳಿಗಿಂತ ಹೆಚ್ಚಿನ ಆಯುಷ್ಯವಿದ್ದಂತಿಲ್ಲ. ಮಹಾರಾಷ್ಟ್ರದ ರಾಜಕೀಯದಲ್ಲಿ ಚಿತ್ಪಾವನರು ಪ್ರವರ್ಧಮಾನಕ್ಕೆ ಬಂದ ಮೇಲೆ ಈ ಕಥೆ ಹುಟ್ಟಿಕೊಂಡಿರಬೇಕು. ಭೂಪ, ನೃಪ ಎಂಬಂತೆ ಚಿತ್ ಶಬ್ದಕ್ಕೆ ಪ ಪ್ರತ್ಯಯ ಸೇರಿ ಚಿತ್ಪ ಅಥವಾ ಚಿತ್ಪಾವನ ಎಂದಾಗಿರಬೇಕು. ಬುದ್ಧಿ ಅಥವಾ ಜ್ಞಾನದ ರಕ್ಷಕರೆಂಬ ಅರ್ಥದಲ್ಲಿ. ಪರ್ಶಿಯನ್ನಿನಲ್ಲಿ ಹಾಗೂ ಅವೆಸ್ತಾದಲ್ಲಿಯೂ ಚಿತ್ ಶಬ್ದಕ್ಕೆ ಜ್ಞಾನವೆಂಬ ಅರ್ಥವೇ ಇದೆ. ಅಚ್ಚಬಿಳಿ ಮೈಬಣ್ಣ, ಬಿಳುಚಿಕೊಂಡಿರುವ ಚರ್ಮ, ನೀಲಿ ಅಥವಾ ಹಸಿರು ಕಣ್ಣು, ಚೂಪು ಮೂಗು, ಕಂದು ಛಾಯೆಯ ತಲೆಗೂದಲು ಚಿತ್ಪಾವನರಲ್ಲಿರುವಂತೆ ಬೇರೆ ಯಾವ ಬ್ರಾಹ್ಮಣ ಪಂಗಡದಲ್ಲಿಯೂ ಕಂಡುಬರುವುದಿಲ್ಲ. ಇವರ ದೈಹಿಕ ಚರ್ಯೆಯು ಮಧ್ಯ ಏಶಿಯನ್ನರನ್ನು ಬಹುಮಟ್ಟಿಗೆ ಹೋಲುತ್ತದೆ. ಹಾಗಾಗಿ ಇವರು ಹೆಚ್ಚಾಗಿ ಮಧ್ಯ ಏಶಿಯಾದ ಈಜಿಪ್ಟ್ ಅಥವಾ ಗ್ರೀಕ್ ಪ್ರಾಂತ್ಯದವರಿರಬೇಕೆಂದು ಇತಿಹಾಸಕಾರ ವಿ.ಎನ್.ಮಾಂಡಲಿಕ ಅಭಿಪ್ರಾಯಪಟ್ಟಿದ್ದಾರೆ. ಇಜಿಪ್ಟಿನ ಗಿಪ್ತ್ವಾನ್ ಶಬ್ದವೇ ಚಿತ್ಪಾವನದ ಮೂಲವೆಂದು ಇವರ ಭಾವನೆ. ಹಾಗೆ ನೋಡಿದರೆ ಭಾರತ ಹಾಗೂ ಗ್ರೀಕಿನ ಮಧ್ಯದ ವ್ಯಾಪಾರ ಸಂಬಂಧ ಎರಡು ಸಾವಿರ ವರ್ಷಗಳಿಗಿಂತ ಹಳೆಯದು. ಪೆರಿಪ್ಲಸ್ ಮಾರ್ಸ್‌ನಲ್ಲಿ ದಾಖಲಾಗಿರುವ ಜಲಮಾರ್ಗದ ಮ್ಯಾಪಿನಲ್ಲಿ ಸಿಂಧೂ ನದಿಯ ನದಿಮುಖವು ಬಾರ್ಬರಿಕಮ್ ಎಂದು ದಾಖಲಾಗಿದೆ. ಪ್ರಾಯಶಃ ಗ್ರೀಕರು ಈ ಭಾಗದಲ್ಲಿ ವಾಸಿಸುವವರನ್ನು ಬರ್ಬರರೆಂದು ಕರೆದಿರಬೇಕು. ಶಕರು ಈ ಪ್ರದೇಶವನ್ನು ಆಳುತ್ತಿದ್ದುದೇ ಅದಕ್ಕೆ ಕಾರಣವಿರಬಹುದು. ಅಥವಾ ಗ್ರೀಕರಿಗೆ ಎಲ್ಲ ಗ್ರೀಕರಲ್ಲದ ಜನರನ್ನು ಬರ್ಬರರೆಂದು ಕರೆಯುವ ರೂಢಿಯಿರಬೇಕು. ಅನಾರ್ಯ ಎಂಬರ್ಥದಲ್ಲಿ ಬಳಸಲ್ಪಡುವ ಸಂಸ್ಕೃತದ ಬರ್ಬರ ಶಬ್ದವೂ ಗ್ರೀಕಿನದ್ದೇ ಎರವಲು. ಮಜದ ವಿಚಾರವೆಂದರೆ ಪುರಾಣಗಳಲ್ಲಿ ಉಲ್ಲೇಖಿಸಲ್ಪಟಿರುವ ಸಪ್ತಕೊಂಕಣದ ಒಂದು ಪ್ರದೇಶದ ಹೆಸರು ಕೂಡ ಬರ್ಬರವೆಂದೇ. ಆದರೂ ಗ್ರೀಕಿನಿಂದ ದೊಡ್ಡ ಮಟ್ಟಿನ ವಲಸೆ ಮಧ್ಯ-ದಕ್ಷಿಣ ಭಾರತದ ಭಾಗಕ್ಕೆ ನಡೆದ ದಾಖಲೆ ಇತಿಹಾಸದಲ್ಲೆಲ್ಲೂ ದಾಖಲಾಗಿಲ್ಲ. ಹಾಗೆಂದು ಯಹೂದಿಗಳು ಹಾಗೂ ಪಾರಸಿಗಳು ಇರಾನ್, ಮಧ್ಯ ಏಶಿಯಾದ ಭಾಗದಿಂದ ಇಲ್ಲಿ ಬಂದಿದ್ದಾರೆ. ಕೆಲ ಇತಿಹಾಸಕಾರರು ಹೇಳುವಂತೆ ಚಿತ್ಪಾವನರು ಮೂಲತಃ ಯಹೂದಿಗಳಾಗಿದ್ದರೆ ಅವರು ಬ್ರಾಹ್ಮಣರಾದುದು ಹೇಗೆಂಬುದೇ ದೊಡ್ಡ ಪ್ರಶ್ನೆ! ಮಹಾರಾಷ್ಟ್ರವೂ ಸೇರಿ ಉಳಿದ ಕಡೆಗಳಲ್ಲೆಲ್ಲ ಎರಡೂವರೆ ಸಾವಿರ ವರ್ಷದ ಹಿಂದೆಯೇ ವಲಸೆ ಬಂದಿದ್ದ ಯಹೂದಿಗಳಲ್ಲಿ ಹೆಚ್ಚಿನವರು ತಮ್ಮ ಮತವನ್ನು, ಮೂಲವನ್ನು ನೆನಪಿಟ್ಟುಕೊಂಡಿರುವಾಗ ಕೆಲವೇ ಕೆಲವು ಜನ ಬ್ರಾಹ್ಮಣರಾಗುವುದು ಹೇಗೆ ಸಾಧ್ಯ? ಜೊತೆಗೆ ಪಶ್ಚಿಮ ಕರಾವಳಿಗೆ ಇರಾನಿನಿಂದ ಪಾರ್ಸಿಗಳೂ ತಮ್ಮ ಆಚರಣೆಯನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಭಾರತದಲ್ಲಿ ಅದೂ ಹಿಂದೂಗಳಲ್ಲಿ ಯಾವ ಮತಶ್ರದ್ಧೆಯವರಾದರೂ ತಮ್ಮ ತಮ್ಮ ಆಚರಣೆಗಳನ್ನು ಆಚರಿಸಿಕೊಳ್ಳಲು ಸರ್ವತಂತ್ರ ಸ್ವತಂತ್ರರು. ಬೇರೆಯವರಂತೆ ಮತಾಂತರವಾಗಲೀ, ಘರ್ ವಾಪಸಿಯಾಗಲೀ ಇಲ್ಲಿಲ್ಲವೇ ಇಲ್ಲ. ಅದರಲ್ಲೂ ಉಳಿದೆಲ್ಲ ಮತಗಳೂ ತಾವೇ ಶ್ರೇಷ್ಟ, ಎಲ್ಲರೂ ನಮ್ಮಲ್ಲಿ ಬನ್ನಿ ಎಂದು ಕರೆದರೆ ಬ್ರಾಹ್ಮಣರು ಮಾತ್ರವೇ ತಮ್ಮ ಮತವೇ ಶ್ರೇಷ್ಟ, ನಮ್ಮ ಹತ್ತಿರ ಯಾರೂ ಬರಬೇಡಿ ಎನ್ನುವವರು. ಹಾಗಿರುವಾಗ ವಿದೇಶದಿಂದ ಬಂದ ಗುಂಪೊಂದು ಬ್ರಾಹ್ಮಣರಾಗುವುದು ಕನಸಿನ  ಮಾತಷ್ಟೆ.
       ಹಾಗೆಂದು ಚಿತ್ಪಾವನರು ಹೊರಗಿನಿಂದ ಬಂದಿರಲು ಸಾಧ್ಯವೇ ಇಲ್ಲ ಎನ್ನುವುದೂ ಕಷ್ಟ. ಮಧ್ಯ ಏಶಿಯಾ ಹಾಗೂ ಗಾಂಧಾರ(ಅಪ್ಘಾನಿಸ್ತಾನ)ದ ಕೆಲ ಪಂಗಡಗಳ ಬಿಳಿಯ ಬಣ್ಣ, ನೀಲಿ-ಹಸಿರು ಕಣ್ಣುಗಳ ಮುಖಚರ್ಯೆಗೂ ಚಿತ್ಪಾವನರ ಮುಖಚರ್ಯೆಗೂ ತುಂಬ ಸಾಮ್ಯತೆಯಿದೆ. ಇದೇ ಚರ್ಹೆಯನ್ನು ಹೋಲುವ ಗಾಂಧಾರದ ಕಲಶ್ ಎಂಬ ಪಂಗಡ ಅಲೆಕ್ಸಾಂಡರಿನೊಡನೆ ಬಂದು ಗಾಂಧಾರದಲ್ಲಿ ನೆಲೆಸಿದ ಗ್ರೀಕರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತವೆ. ಚಿತ್ಪಾವನರ ಒಂದು ಅಡ್ಡಹೆಸರು ಗಾಂಧಾರ ಎಂಬುದೂ ಇಲ್ಲಿ ಉಲ್ಲೇಖಾರ್ಹ. ಚಿತ್ಪಾವನರು ಆಚರಿಸುವ ಬೋಧನ್ ಎಂಬ ಅನ್ನಪೂರ್ಣಾದೇವಿಯ ಆರಾಧನೆ ಬೇರೆ ಬ್ರಾಹ್ಮಣ ಪಂಗಡಗಳಲ್ಲಿಲ್ಲ. ಪೂರ್ವ ಇರಾನಿಯನ್ ಭಾಷೆಯಲ್ಲಿ ಬೋಧನ್ ಎಂದರೆ ಅತ್ತರು. ಸಂಸ್ಕೃತದಲ್ಲಿಯೂ ಬೋಧನ್ ಹಾಗೂ ಗಂಧ ಎಂಬೆರಡು ಶಬ್ದಗಳ ಅರ್ಥ ಒಂದೇ. ಇವೆರಡಕ್ಕೂ ಏನಾದರೂ ಸಂಬಂಧವಿರಬಹುದೇ? ಇನ್ನೂ ಇಂಟರೆಸ್ಟಿಂಗ್ ಎಂದರೆ ಚಿತ್ಪಾವನರಲ್ಲಿರುವ ಹಲವು ಅಡ್ಡಹೆಸರುಗಳು ಇರಾನಿ ಭಾಷೆಯಲ್ಲೂ ಇವೆ. ಇರಾನಿಯಲ್ಲಿ ಮಾಯ್ ಎಂದರೆ ವೈನ್. ಚಿತ್ಪಾವನರ ಒಂದು ಅಡ್ಡಹೆಸರು ಮಾಯದೇವ್(ಮಾಯ್ದೇವ್). ಗ್ರೀಕರ ವೈನಿನ ದೇವತೆ ದಿಯೋನಸಸ್ ಹಿಮಾಲಯದಲ್ಲಿ ಹುಟ್ಟಿದವನೆಂದು ಮೆಗಸ್ತನಿಸ್ ಬಣ್ಣಿಸಿದ್ದಾನೆ. ಓಜಲೆ, ಬಾಮೆ, ಮಾತೆ, ಮಾಯೀಲ್ ಶಬ್ದಗಳ ಓಜ, ಬಾಮ್(Radiance), ಮಾ(ಚಂದ್ರ) ಇರಾನಿಯಲ್ಲೂ ಬಳಕೆಯಲ್ಲಿದೆ. ಘಾರೆ, ಘಾರ್ಪುರೆ(ಪೂರ್ವ ಇರಾನಿ ಭಾಷೆಯಲ್ಲಿ ಘಾರ್ ಎಂದರೆ ಪರ್ವತ), ದಾಮ್ಲೆ(ಇರಾನಿಯಲ್ಲಿ ದಾಮ್ - ಮನೆ, ಸಂಸ್ಕೃತದ ಧಾಮದಿಂದ ನಿಷ್ಪನ್ನ), ಪಾವಗಿ(ಪಾವ್ - ರಕ್ಷಕ), ವಾಝೆ(ವಾಝ್ - ನಾಯಕ). ಸಂಸ್ಕೃತದ ಕರ್ ಶಬ್ದಕ್ಕೆ ಇರಾನಿಯಲ್ಲೂ ಅದೇ ಅರ್ಥ. ವೇಲನ್ ಊರನ್ನು ನಿರ್ಮಿಸಿದವ ವೇಲನ್‌ಕರ್, ಚಿಪ್ಳೂಣನ್ನು ನಿರ್ಮಿಸಿದವ ಚಿಪ್ಳೂಣ್‌ಕರ್.
       ಅಲೆಕ್ಸಾಂಡರ್ ಹಿಂದೂಕುಷ್‌ ಅನ್ನು ದಾಟಿ ಗಾಂಧಾರದ ಮೂಲಕ ಭಾರತವನ್ನು ಪ್ರವೇಶಿಸುವಾಗ ಆತ ತಕ್ಷಶಿಲೆಯಲ್ಲಿದ್ದ ದಂಡಾಮಿಸ್ ಎಂಬ ಒಬ್ಬ ಪಂಡಿತನ ಹೆಸರು ಕೇಳುತ್ತಾನೆ. ಅಲೆಕ್ಸಾಂಡರನ ಮಂತ್ರಿಗೂ ದಂಡಾಮಗೂ ನಡೆದ ತತ್ತ್ವಶಾಸ್ತ್ರದ ಸಂಭಾಷಣೆ ಬಹು ಸ್ವಾರಸ್ಯಕರವಾಗಿದೆ. ದಂಡಾಮಿಸನೆಂದು ಗ್ರೀಕರಿಂದ ಕರೆಯಲ್ಪಟ್ಟ ಅವನಿಗೂ ದಂಡೇಕರ್ ಎಂಬ ಚಿತ್ಪಾವನರ ಕುಲನಾಮಕ್ಕೂ ಸಾಮ್ಯತೆಗಳನ್ನು ನೋಡಿದರೆ ಚಿತ್ಪಾವನರ ಮೂಲ ಈಗಿನ ಅಪ್ಘನ್ ಅಥವಾ ಇರಾನ್ ಆಗಿರುವುದನ್ನು ತಳ್ಳಿಹಾಕಲು ಸಾಧ್ಯವೇ ಇಲ್ಲ.
       ಅಷ್ಟೇ ಅಲ್ಲ. ಆಸಕ್ತಿಕರವಾದ ವಿಚಾರವೆಂದರೆ ೨೦೦೫ರಲ್ಲಿ National DNA Analysis Center, Central Forensic Science Laboratory, Kolkataದಲ್ಲಿ ನಡೆದ ಒಂದು ಸಂಶೋಧನೆಯ ವರದಿಯ ಪ್ರಕಾರ ಹೆಚ್ಚಿನ ಭಾರತೀಯ ಬ್ರಾಹ್ಮಣ ಸಮುದಾಯಗಳ ಮಾತೃ ವಂಶವಾಹಿ(mt-DNA) ಕೇವಲ macro-haplogroup M (mt-DNA) ಪಂಗಡಕ್ಕೆ ಸೇರಿದ್ದರೆ ಚಿತ್ಪಾವನರ ವಂಶವಾಹಿಯಲ್ಲಿ ಮಧ್ಯಪ್ರಾಚ್ಯ ಏಷಿಯಾದ mt-DNA haplogroupಗಳೂ(U (mt-DNA), H (mt-DNA), HV (mt-DNA)) ಪತ್ತೆಯಾಗಿದ್ದವು. 
ಚಿತ್ಪಾವನರನ್ನು ನೋಡಿದಾಗಲೆಲ್ಲ ನನಗೆ ಗಾಢವಾಗಿ ನೆನಪಾಗುವವಳು ನ್ಯಾಶನಲ್ ಜಿಯೋಗ್ರಾಫಿ ಮುಖಪುಟದಲ್ಲಿ ಹಿಂದೊಮ್ಮೆ ಕಾಣಿಸಿಕೊಂಡಿದ್ದ ಅಪ್ಘನ್ನಿನ ಈ ಹುಡುಗಿ

       ಚಿತ್ಪಾವನರ ಮೂಲದ ಬಗ್ಗೆ ಅದಕ್ಕಿಂತ ಆಸಕ್ತಿಕರವಾದ ಎರಡು ವಿಚಾರಗಳನ್ನು ಇಲ್ಲಿ ಉಲ್ಲೇಖಿಸಲೇಬೇಕು. ೧೯೪೬ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರಬುದ್ಧ ಕರ್ನಾಟಕ ಮಾಸಪತ್ರಿಕೆಯಲ್ಲಿ ಖ್ಯಾತ ಪುರಾತತ್ತ್ವಶಾಸ್ತ್ರಜ್ಞರಾದ ಎಮ್.ಎನ್.ರಾಜಪುರೋಹಿತರ ಸಂಶೋಧನಾ ಲೇಖನವೊಂದು ಪ್ರಕಟಗೊಂಡಿತ್ತು. ’ತಾಳಗುಂದ ಹಾಗೂ ಚಿಪ್ಳೂಣ್ ಅಗ್ರಹಾರಗಳು’ ಎಂಬ ಶಿರೋನಾಮೆಯಡಿ. ತಾಳಗುಂದದ ಕದಂಬರ ಶಾಸನವನ್ನು ಆಧರಿಸಿ ಕ್ರಿ.ಶ ೩೫೦ ಹಾಗೂ ಕ್ರಿ.ಶ ೧೧೭೪ರಲ್ಲಿ ಅಹಿಚ್ಛತ್ರದಿಂದ ದಕ್ಷಿಣಕ್ಕೆ ನಡೆದ ಎರಡು ವಲಸೆಗಳನ್ನು ರಾಜಪುರೋಹಿತ್ ಪುರಾತತ್ವಶಾಸ್ತ್ರೀಯ ಆಧಾರಗಳೊಂದಿದೆ ನಿರೂಪಿಸಿದ್ದಾರೆ. ಪ್ರತಿ ವೇದಶಾಖೆಗೆ ಹದಿನಾರರಂತೆ ಒಟ್ಟೂ ೬೪ ಬ್ರಾಹ್ಮಣ ಕುಟುಂಬಗಳನ್ನು ಮಯೂರ ವರ್ಮನ ಅಶ್ವಮೇಧ ಯಾಗದ ಅಧ್ವರ್ಯ ವಹಿಸಲು ಅಹಿಚ್ಛತ್ರದಿಂದ ಕರೆತಂದು ಕೊಂಕಣದ ಚಿಪ್ಳೂಣಿನಲ್ಲಿ ನೆಲೆಗೊಳಿಸಲಾಯ್ತಂತೆ. ಕದಂಬರ ಹಿಂದಿನ ತಲೆಮಾರಿನ ಶಾತವಾಹನರು ಮಹಾರಾಷ್ಟ್ರದ ಪ್ರತಿಷ್ಟಾನಪುರವನ್ನು ರಾಜಧಾನಿಯನ್ನಾಗಿಟ್ಟುಕೊಂಡು ಆಳಿದ್ದು ನೆನಪಿಸಿಕೊಳ್ಳಬಹುದು. ಈ ಬ್ರಾಹ್ಮಣ ಕುಟುಂಬಗಳಲ್ಲಿ ಕೆಲವು ಕರ್ನಾಟಕಕ್ಕೂ ವಲಸೆ ಬಂದವು. ಆ ಕುಟುಂಬಗಳು ಇವತ್ತಿಗೂ ಷಷ್ಟಿಕ ಅಥವಾ ಅರವತ್ತೊಕ್ಲು ಮಾಧ್ವ ಬ್ರಾಹ್ಮಣರೆಂದೇ ಕರೆಯಲ್ಪಡುತ್ತಿವೆ. ಮರಾಠಿಯಲ್ಲಿ ಚಿತ್ಪಾವನರ ಡೋಂಗ್ರೆ ಕನ್ನಡದಲ್ಲಿ ಷಷ್ಟಿಕರಲ್ಲಿ ಬೆಟ್ಟದ ಮನೆತನವಾಯ್ತು, ಗೋಡ್‌ಬೋಲೆ ಎಂಬುದು ಸಿಹಿನುಡಿಯವರು ಎಂದಾಯ್ತು. ಹೀಗೆ ಚಿತ್ಪಾವನರಲ್ಲಿರುವ ಬಹಳಷ್ಟು ಅಡ್ಡಹೆಸರುಗಳು ಷಷ್ಟಿಕರಲ್ಲೂ ಇದೆ. ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಶ್ರೀಪಾದರಾಜರು, ವ್ಯಾಸರಾಜರು ಇವರೆಲ್ಲ ಅರವತ್ತೊಕ್ಲು ಬ್ರಾಹ್ಮಣ ಪಂಗಡಕ್ಕೆ ಸೇರಿದವರು. ಕೊಟಾರಿ ಶ್ರೀನಿವಾಸರಾಯರ ಶ್ರೀ ರಾಘವೇಂದ್ರ ಚರಿತ್ರ, ಅರವತ್ತೊಕ್ಲು ಬ್ರಾಹ್ಮಣರ ವಂಶಚರಿತ್ರೆಯಾದ ’ಷಷ್ಟಿಕ ವಂಶ ಪ್ರದೀಪ’ ಗ್ರಂಥಗಳಲ್ಲಿಯೂ ಷಷ್ಟಿಕ ಬ್ರಾಹ್ಮಣರನ್ನು ಅಹಿಚ್ಛತ್ರದಿಂದ ಮಯೂರನ ಕಾಲದಲ್ಲಿ ವಲಸೆ ಬಂದವರೆಂದೇ ಹೇಳಲಾಗಿದೆ. ಶಾತವಾಹನರ ಯಜ್ಞಾನುಷ್ಟಾನಗಳಿಗೋಸ್ಕರ ಉತ್ತರದ ಅಹಿಚ್ಛತ್ರದಿ೦ದ ಅವರ ರಾಜ್ಯಕ್ಕೆ ಬ೦ದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿ ನೆಲೆನಿ೦ತಿದ್ದ ವೈದಿಕರನ್ನೇ ಕದ೦ಬರು ಕರೆತ೦ದು ಇಲ್ಲಿ ನೆಲೆಗೊಳಿಸಿದರೆ? ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಕದಂಬರ ಕಾಲದಲ್ಲಿಯೇ ಅಹಿಚ್ಛತ್ರದಿಂದ ಬಂದ ಹವ್ಯಕ, ಶಿವಳ್ಳಿ ಹಾಗೂ ಕೋಟ ಬ್ರಾಹ್ಮಣರ ಮೂಲಕ್ಕೂ ಚಿತ್ಪಾವನರ ಮೂಲಕ್ಕೂ ಏನಾದರೂ ಸಂಬಂಧವಿದೆಯೇ? ಮುಂದೆ ನೋಡೋಣ.

 
       ಸುಮಾರು ಒಂದೂವರೆ, ಎರಡು ಸಾವಿರ ವರ್ಷಗಳಿಗಿಂತ ಸ್ವಲ್ಪ ಮೊದಲು. ರೋಮನ್ನರಾಯಿತು, ಪರ್ಷಿಯನ್ನರಾಯಿತು. ಮುಸ್ಲೀಮರು ಬಂದ ನಂತರ ಅವರೂ ಆಯಿತು. ಯಹೂದಿಗಳ ನಾಡು ಅವರೆಲ್ಲರ ಆಕ್ರಮಣಕ್ಕೆ ಸಿಕ್ಕು ನರಕಸದೃಶವಾಗಿತ್ತು. ಜೊತೆಗೆ ಇಜಿಪ್ತಿನ ಫೆರೋಗಳ ದುರಾಡಳಿತ ಬೇರೆ. ಯಹೂದಿಗಳು ತಮ್ಮ ನಾಡಲ್ಲೇ ಗಾಣದೆತ್ತುಗಳಿಗಿಂತ ಕಡೆಯಾಗಿ ಹೋದರು. ಹೆಚ್ಚಾಗಿ ಅದೇ ಕಾರಣಕ್ಕೇ ಇರಬೇಕು, ಜೀವ ಉಳಿದರೆ ಸಾಕೆಂದುಕೊಂಡು ಹೆಚ್ಚಿನವರು ಸಿಕ್ಕ ಸಿಕ್ಕ ಕಡೆಯಲ್ಲೆಲ್ಲ ವಲಸೆ ಹೋಗತೊಡಗಿದರು. ಕೆಲವರು ನೈಲ್ ನದಿಯನ್ನು ದಾಟಿ ಸೈನಾಯಿ ಪ್ರಾಂತ್ಯಕ್ಕೆ ಬಂದು ಅಲ್ಲಿಂದ ಫಿಲಿಸ್ಥಾನವನ್ನು ತಲುಪಿ ಜೋರ್ಡಾನ್ ನದಿಮುಖಜ ಭೂಮಿಯ ಆಸುಪಾಸು ನೆಲೆಸಿದರು. ಇನ್ನು ಕೆಲವರು ದಕ್ಷಿಣಾಭಿಮುಖವಾಗಿ ನೆಗೆವ್ ಮರುಭೂಮಿಯನ್ನು ಹಾದು, ಐಲ್ಯಾಂಡಿನ ಬಂದರಿನ ಮುಖಾಂತರ ಮುಂದಿನ ದಾರಿ ಕಂಡುಕೊಂಡರು. ಕೇರಳ ಸಾವಿರಾರು ವರ್ಷಗಳಿಂದಲೂ ವಿಶ್ವಪ್ರಸಿದ್ಧ ನಾಡಾಗಿತ್ತು ಎಂದು ಹೇಳಿದ್ದೆನಷ್ಟೆ. ಅಖಾಬಾ ಖಾರಿಯಿಂದ ಹೊರಟು ಜಲಮಾರ್ಗದ ಮುಖಾಂತರ ಭಾರತಕ್ಕೆ ಬರುತ್ತಿದ್ದ ಅರಬ್ಬಿ ವರ್ತಕರಿಂದ ಕೇರಳದ ಸಂಪದ್ಭರಿತತೆಯನ್ನೂ ಸೌಹಾರ್ದವನ್ನೂ ಸಹಜ ಜಾತ್ಯತೀತತೆಯನ್ನೂ ಅರಿತು ಭಾರತದ ಪಶ್ಚಿಮ ತೀರದತ್ತ ಯಹೂದಿಗಳು ಪ್ರಯಾಣಿಸಿದರು. ಹಾಗೆ ಬಂದವರು ಮೊದಲು ತಲುಪಿದ್ದು ಕೊಡಂಗಾಲೂರಿನ ಸನಿಹದ ಮಟ್ಟಂಚೇರಿಯನ್ನು. ಅತ್ತ ಕ್ರಿ.ಶ ೬೧೪ರಲ್ಲಿ ಪರ್ಷಿಯನ್ನರು ಜೆರುಸಲೇಮನ್ನು ಆಕ್ರಮಿಸಿಕೊಂಡರು. ಮುಂದೆ ೬೨೯ರಲ್ಲಿ ರೋಮನ್ನಿನ ಬೈಜಾಂಟೈನನ ಸೈನ್ಯ ಜೆರುಸಲೇಮಿಗೆ ಮುತ್ತಿಗೆ ಹಾಕಿತು. ರೋಮನ್ನರ ಕ್ರೂರ ರಾಜ್ಯಾಡಳಿತಕ್ಕೆ ಯಹೂದಿಗಳ ನಾಡು, ಪ್ರಾರ್ಥನಾ ಮಂದಿರಗಳು, ಜನಜೀವನವೆಲ್ಲ ಸಂಪೂರ್ಣ ಬಲಿಯಾಗಿ ಹೋದವು. ಪ್ರಾಯಶಃ ಅವರ ಎರಡನೇ ವಲಸೆ ನಡೆದದ್ದು ಇದೇ ಕಾಲಕ್ಕೆ. ಸಾಲದೆಂಬಂತೆ ಮುಂದೆ ಜೆರುಸಲೇಮನ್ನು ಮುತ್ತಿಗೆ ಹಾಕಿದ ಕ್ರುಸೇಡರುಗಳು ಕ್ರಿಶ್ಚಿಯನ್ನರನ್ನುಳಿದು ಬೇರೆ ಎಲ್ಲರನ್ನೂ ಹತ್ಯೆಗೈಯುವಂತೆ ರಾಜಾಜ್ಞೆ ಹೊರಡಿಸಿದವು. ಈ ಆಜ್ಞೆಗೆ ನಡುಗಿ ಹೋದ ಯಹೂದಿಗಳೂ ಸೇರಿ ಹತ್ತು ಪಂಗಡಗಳು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿಹೋದವು. ಹೀಗೆ ಹೋದವರಲ್ಲಿ ಡ್ರೂಸ್, ಮರೋನೈಟ್, ಕಕೇಷಿಯನ್ನರೂ ಸೇರಿದ್ದರು. ಆಶ್ಚರ್ಯವೆಂದರೆ ವಾಸ್ಕೋಡಗಾಮನ ಯಹೂದಿ ನಾವಿಕ ಕಲ್ಲಿಕೋಟೆಯಲ್ಲಿ ಇರುವ ಹತ್ತು ಯಹೂದಿ ಪಂಗಡಗಳನ್ನು ಕಂಡು ಬೆರಗಾಗಿದ್ದನ್ನು ಅವನೊಡನೆ ಬಂದ ಪ್ರವಾಸಿಗ ಗಿರೋಲಾಮೋ ಸೆರ್ನಿಗಿ ಬರೆದಿಟ್ಟಿದ್ದಾನೆ. ಮೇಯೂಹಾಶಿಮ್, ಮೇಶುಹರಾರಿಮ್‌ನಂಥ ಮೂರ್ನಾಲ್ಕು ಪಂಗಡಗಳು ಪಂಗಡಗಳು ಕೇರಳದಲ್ಲಿ ನೆಲೆನಿಂತವು. ಉಳಿದವರು ಹೋದದ್ದೆಲ್ಲಿಗೆ ಎನ್ನುವುದು ದೊಡ್ಡ ಪ್ರಶ್ನೆ! ಹಾಗೆ ಬಂದಿರಬಹುದಾದ ಒಂದು ಗುಂಪಿನ ಹೆಸರು ಡ್ರೂಸ್. ಹಿಂದೂ ವೈದಿಕ ಪರಂಪರೆ ಹಾಗೂ ಗ್ರೀಕ್ ಪುರಾಣಗಳ ಗಾಢ ಹಿನ್ನೆಲೆಯ ಇವರು ಮೂಲ ಯಹೂದಿಗಳಾದರೂ ಏಳನೇ ಶತಮಾನದೊತ್ತಿಗೆ ನಡೆದ ಬಲವಂತದ ಮತಾಂತರಕ್ಕೊಳಗಾಗಿ ಇಸ್ಲಾಂನ ಅನುಯಾಯಿಯಾದವರು. ಆದರೆ ಸಮಸ್ಯೆ ಶುರುವಾಗಿದ್ದು ಅಲ್ಲೇ. ಕಾಡು ಹಂದಿಗಳನ್ನು ಬೇಟೆಯಾಡಿ ಆಹಾರವಾಗಿ ಉಪಯೋಗಿಸುತ್ತಿದ್ದ ವಿಗ್ರಹಾರಾಧಕ ಜನಾಂಗ ಆ ಎರಡೂ ಅಭ್ಯಾಸಗಳನ್ನು ತೊರೆಯಲು ಸಿದ್ಧರಿರಲಿಲ್ಲ. ಈ ಮುಖ್ಯ ಕಾರಣಗಳಿಂದಲೇ ಮುಂದೆ ಇವರು ಒಂದೋ ಇಸ್ಲಾಮಿನಿಂದ ವಿಮುಖರಾದರು ಇಲ್ಲವೇ ಇಸ್ಲಾಮಿನಿಂದ ಬಹಿಷ್ಕೃತರಾದರು. ಇಂದು ಇಸ್ರೇಲಿನಲ್ಲಿ ಇವರ ಜನಸಂಖ್ಯೆ ಸರಿಸುಮಾರು ಇಪ್ಪತ್ತೈದರಿಂದ ಮೂವತ್ತು ಸಾವಿರದ ಒಳಗಿರಬಹುದಷ್ಟೆ. ಇಸ್ರೇಲಿನ ಉತ್ತರ ಗೆಲಿಲಿ ಸಮುದ್ರ ತೀರದ ಗುಡ್ಡಗಾಡು ಪ್ರದೇಶಗಳ ಬಯಲಿನಲ್ಲಿ ವಾಸಿಸುವ ಇವರ ಮೂಲ ಆಚಾರ, ವಿಚಾರ, ಸಂಪ್ರದಾಯಗಳು ಹೊರಜಗತ್ತಿಗೆ ಇವತ್ತಿಗೂ ನಿಗೂಢ. ಉಳಿದ ಯಹೂದಿಗಳೊಡನೆ ಕೊಡಂಗಾಲೂರಿನ ಮಟ್ಟಂಚೇರಿಯಲ್ಲಿಳಿದ ಒಳಪಂಗಡಗಳಲ್ಲಿ ಈ ಡ್ರೂಸರೂ ಇದ್ದರು. ಅಲ್ಲಿಂದ ಕಾಲಕ್ರಮೇಣ ಪಶ್ಚಿಮ ಘಟ್ಟಗಳನ್ನು ಹತ್ತಿ ವಯನಾಡು, ಕೊಡಗಿನಲ್ಲಿ ನೆಲೆಸಿರಬಹುದಾದ ಸಾಧ್ಯತೆಯೂ ಇದೆ. 
ಡ್ರೂಸ್ ಗಂಡಸಿನ ವೇಷವನ್ನು ಕೊಡವರ ವೇಷದೊಡನೆ ಹೋಲಿಸಿ ನೋಡಿ

ಕೊಡವ ಕುಟುಂಬದ ಹಳೆಯ ಚಿತ್ರ

       ಇವತ್ತಿಗೂ ಕೊಡವರ  ಮೂಲದ ಬಗ್ಗೆ ಇದಮಿತ್ಥ ಎಂಬ ವ್ಯಾಖ್ಯಾನಗಳಿಲ್ಲ. ಹಿಂದೂಗಳ ಯಾವ ಪಂಗಡದಲ್ಲಿಯೂ ಇವರನ್ನು ಹಿಡಿಸುವುದು ಕಷ್ಟ. ಯಾವ ಸಿದ್ಧಾಂತವೂ ಇವರನ್ನು ಇದೇ ಮೂಲದವರು ಅಥವಾ ಜನಾಂಗದವರೆಂದು ಸಾಬೀತುಪಡಿಸಿಲ್ಲ. ಅಲೆಕ್ಸಾಂಡರಿನ ಜೊತೆ ಬಂದ ಗ್ರೀಕರಿಗೆ ಸ್ಥಳೀಯ ಮಹಿಳೆಯರಲ್ಲಿ ಹುಟ್ಟಿದವರೆಂಬ ಅರ್ಥವಿಲ್ಲದ ಥಿಯರಿಗಳಿಂದ ಹಿಡಿದು ಇರಾಕಿನಿಂದ ಭಾರತಕ್ಕೆ ಓಡಿ ಬಂದ ಕುರ್ದಿಶ್ ಜನಾಂಗವೇ ಇವರೆನ್ನುವವರೆಗೆ ಬೇಕಾದಷ್ಟು ವಾದಗಳು ಚಾಲ್ತಿಯಲ್ಲಿವೆ. ಉತ್ತರ ಭಾರತದಲ್ಲೆಲ್ಲೂ ಇಲ್ಲದ ಅಲೆಕ್ಸಾಂಡರಿನ ಸಂತತಿ ಇಲ್ಲಿ ಮಾತ್ರ ಉದ್ಭವಿಸಿದ್ದು ಹೇಗೆಂಬುದಕ್ಕೆ ಉತ್ತರವಿಲ್ಲ. ಇದ್ದುದರಲ್ಲಿ ಸ್ವಲ್ಪ ಮಾಹಿತಿ ಸಿಗುವುದು ಸ್ಕೊಲೆರ್ಟ್ಕ್ ಹೆಫ಼್ ಬರೆದ ’ಮಿಡಲ್ ಈಸ್ಟ್ ಪ್ಯಾಟರ್ನ್ಸ’ ಹಾಗೂ ಮೊರ್ಷನ್ ಗಿಲ್ಬೆಸ್ಟಿನ ’ಜೆರುಸಲೇಮ್ ಹಿಸ್ಟೋಲೋಜರ್ಸ’ ಎಂಬೆರಡು ಪುಸ್ತಕಗಳಲ್ಲಿ. ಮಿಡಲ್ ಈಸ್ಟ್ ಪ್ಯಾಟರ್ನ್ಸ್‌ನಲ್ಲುಲೇಖಿತಗೊಂಡಂತೆ ಇಸ್ರೇಲಿನ ಮೂಲನಿವಾಸಿಗಳಲ್ಲೇ ಹಿಂದೂಗಳ ಆಚರಣೆಗಳಿಗೆ ಅತಿಹೆಚ್ಚು ಸಾಮೀಪ್ಯವಿರುವುದು ಡ್ರೂಸರ ಆಚರಣೆಗಳೇ(ಡ್ರೂಜರ ಹಿನ್ನೆಲೆ ಹಾಗೂ ಹಿಂದೂ ಧರ್ಮದೊಡನೆ ಅವರ ಸಂಬಂಧದ ಕುರಿತು ಇಸ್ರೇಲಿನಲ್ಲಿ ಇಸ್ಕಾನಿನ ಧರ್ಮಪ್ರಚಾರಕರಾದ ಡೇವಿಡ್ ವೂಲ್ಫ್ ಬರೆದ Krsna, Israel and the Druze - An Interreligious Odyssey ಸಿಕ್ಕಿದರೆ ಓದಿ ನೋಡಿ). ಯಹೂದಿಗಳ ಕೆಲ ಪಂಗಡಗಳು ಹಾಗೂ ಕೊಡವರ ಸಂಸ್ಕೃತಿಯ ತುಲನಾತ್ಮಕ ಅಧ್ಯಯನ ನಡೆಸುವವರಿದ್ದರೆ ಇವೆರಡು ಆಧಾರಗಳು ಸಹಾಯಕಾರಿ. ಭಾರತದ ಯಹೂದಿಗಳ DNA ವಿನ್ಯಾಸದ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಅನೇಕ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಡಾ. ಮಿನಿ ಕಾರ್ಯಪ್ಪ ಕೂಡ ಯಹೂದಿಗಳು ಹಾಗೂ ಕೊಡವರ DNA ಸಾಮ್ಯತೆಯ ಸಾಧ್ಯತೆಗಳ ಬಗ್ಗೆ ಯೋಚಿಸಿದಂತಿಲ್ಲ. (ಆಸಕ್ತರು ಅವರ Genetic structure of Indian Jewish Diaspora and their genetic affinity with rest of the Jews from the world ಓದಿ ನೋಡಿ). ಇನ್ನೊಂದು ಅಚ್ಚರಿಯ ವಿಚಾರವೆಂದರೆ ಇಸ್ರೇಲಿನ ಸಸ್ಸೇರಿಯ ಬಳಿ ಉತ್ಖನನದಲ್ಲಿ ಸಿಕ್ಕಿರುವ ರೋಮನ್ ಸಾಮ್ರಾಜ್ಯದ ಕಾಲದ ಚಿನ್ನಾಭರಣಗಳಿಗೂ ಕೊಡವರು ಧರಿಸುವ ಆಭರಣಗಳ ವಿನ್ಯಾಸಗಳಿಗೂ ಪೂರ್ತಿ ಹೋಲಿಕೆಯಿದೆಯಂತೆ. ಬೇಟೆಗಾರಿಕೆಯಲ್ಲಿ ಕುಶಲರಾಗಿದ್ದರಿಂದ ಇವರಿಗೆ ಆಹಾರಕ್ಕಾಗಿ ವಯನಾಡು, ಕೊಡಗು ಭಾಗಗಳಲ್ಲಿ ಸಮೃದ್ಧವಾಗಿದ್ದ ಕಾಡುಹಂದಿಗಳಿರುವುದೂ ಇದೇ ಪ್ರದೇಶದಲ್ಲಿ ಪ್ರದೇಶದಲ್ಲಿ ನೆಲೆನಿಲ್ಲಲು ಒಂದು ಕಾರಣವಾಗಿರಬಹುದು. ಜೊತೆಗೆ ಇದೇ ಭಾಗದಲ್ಲಿ ಇನ್ನಿತರ ಬೇಟೆಗಾರ ಜನಾಂಗಗಳಾದ ಕೊರಗ, ಮಲೆಕುಡಿಯರಂಥವರಿರುವುದೂ ಶತಮಾನಗಳಿಂದ ಕ್ರೂರ ಆಡಳಿತಕ್ಕೆ ಬೇಸತ್ತಿರುವವರಿಗೆ ಸ್ಥಳೀಯ ವನವಾಸಿಗಳೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕುವುದಕ್ಕೂ ಪ್ರೇರೇಪಿಸಿರಬಹುದು. ಕೊಡವರ ಆಡುಭಾಷೆಯಲ್ಲಿ ’ಕೊಡಯಿ’ ಎಂದರೆ ಬೇಟೆಯಾಡುವ ಸ್ಥಳ ಎಂದಿರುವುದೂ ಈ ವಾದಕ್ಕೆ ಪುಷ್ಟಿ ನೀಡುತ್ತದೆ. ಕೊಡಗು ಗೆಜೆಟಿಯರ್ ಸುಮಾರು ಹತ್ತನೇ ಶತಮಾನದಷ್ಟರೊಳಗಾಗಲೇ ಕೊಡವ ಸಮುದಾಯ ಈ ಭಾಗದಲ್ಲಿ ನೆಲೆಸಿರುವುದನ್ನು ಧೃಡೀಕರಿಸುತ್ತದೆ. ಕೊಡವರು ಏಳನೇ ಶತಮಾನದ ಸುಮಾರಿಗೆ ಗಂಗರ ಭೂ ವಿಕ್ರಮ ಅಥವಾ ೪ನೇ ರಾಜಮಲ್ಲನ ಕಾಲದಲ್ಲಿ ಇಲ್ಲಿ ವಲಸೆಬಂದರೆಂದು ಬಹಳಷ್ಟು ಇತಿಹಾಸಕಾರರು ಊಹಿಸುತ್ತಾರೆ. ಮಧ್ಯಪ್ರಾಚ್ಯದಲ್ಲಾದ ರಾಜಕೀಯ ಕ್ಷೋಭೆಯ ಕಾರಣದಿಂದ ಜೀವ ಉಳಿಸಿಕೊಳ್ಳಲು ಭಾರತಕ್ಕೆ ಯಹೂದಿಗಳು  ಜೊಸೆಫ್ ರಬ್ಬನಿನ ನೇತೃತ್ವದಲ್ಲಿ ಮೂರನೇ ಬಾರಿ ಕಾಲಿಟಿದ್ದು ನಾಲ್ಕನೇ ಶತಮಾನದಲ್ಲಿ, ಹಾಗೂ ನಾಲ್ಕನೇ ಬಾರಿ ಕಾಲಿಟ್ಟಿದ್ದು ಆರರಿಂದ ಏಳನೇ ಶತಮಾನದಲ್ಲಿ. ಈ ಕಾಲವನ್ನು ತಾಳೆ ಹಾಕಿ ನೋಡಿದರೆ ಕೊಡಂಗಾಲೂರಿನಲ್ಲಿಳಿದ ಯಹೂದಿಗಳ ಒಳಪಂಗಡವೊಂದು ಮುಂದೆ ವಯನಾಡಿನ ಮೂಲಕ ಕೊಡಗನ್ನು ತಲುಪಿ ಅಲ್ಲಿಯೇ ನೆಲೆನಿಂತ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕುವಂತೆಯೇ ಇಲ್ಲ. ಪರಯೂರಿನಲ್ಲಿ ದೊರಕಿರುವ ಯಹೂದಿಗಳ ಶಾಸನಗಳಲ್ಲಾಗಲೀ, ತೆಕ್ಕುಬಾಗಂನ ಜೂದಪಳ್ಳಿಯಲ್ಲಾಗಲೀ ಅಥವಾ ಬೇರೆ ಯಾವುದೇ ಯಹೂದಿ ಮೂಲಗಳಿಂದಾಗಲೀ ಈ ಬಗ್ಗೆ ಯಾವುದಾದರೂ ಆಧಾರ ದೊರಕಬಹುದೇ ಎಂಬುದನ್ನು ಯಾರಾದರೂ ಆಸಕ್ತರು ಪ್ರಯತ್ನಿಸುತ್ತಾರೆಯೇ? ಆಸಕ್ತರಿದ್ದರೆ ಒಮ್ಮೆ ಜೊತೆಯಲ್ಲಿ ಪರಯೂರಿಗೆ ಹೋಗಿಬರಬಹುದು.