Pages

Tuesday, March 28, 2017

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶೃಂಗೇರಿ ಪ್ರಕರಣ

      
 ಮಂಡನ ಮಿಶ್ರ ಹಾಗೂ ಆಚಾರ್ಯರ ವಾದದ ಕಥೆಯನ್ನು ಹಿಂದಿನ ಸಂಚಿಕೆಯಲ್ಲಿ ನೋಡಿದ್ದೇವಷ್ಟೆ. ಮಂಡನರ ಪತ್ನಿ ಉಭಯಭಾರತಿ. ಈಕೆಗೆ ಸರಸವಾಣಿಯೆಂಬ ಇನ್ನೊಂದು ಹೆಸರೂ ಇತ್ತು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಬ್ರಹ್ಮನ ಅಂಶವಾದ ಮಂಡನರ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ತನ್ನ ಶಂಕರವಿಜಯದಲ್ಲಿ ಸೂಚಿಸಿದ್ದಾನೆ. ವಾದದಲ್ಲಿ ಆಚಾರ್ಯರೆದುರು ಮಂಡನರು ಸೋಲುವುದು ತಿಳಿದೇ ಇದೆ. ಮಾಧವೀಯದಲ್ಲೂ, ಆನಂದಗಿರೀಯದಲ್ಲೂ, ಚಿದ್ವಿಲಾಸೀಯದಲ್ಲೂ ಇರುವ ಸಾಮಾನ್ಯ ಕಥೆಯಿದು. ಗಂಡನು ಸೋತಕೂಡಲೇ ಶಾಪಮುಕ್ತಳಾದ ವಾಣಿಯು ಶಂಕರರನ್ನು ಸ್ತುತಿಸಿ ಆಕಾಶಕ್ಕೆ ಹಾರಿ ಸತ್ಯಲೋಕಕ್ಕೆ ಹೊರಡಳು ಅನುವಾದಳು. ಆಗ ಶಂಕರರು ಅವಳನ್ನು ವನದುರ್ಗಾ ಮಂತ್ರದಿಂದ ಬಂಧಿಸಿ ’ನನ್ನೊಡನೆ ವಾದ ಮಾಡಿ ಜಯಿಸದೇ ಎಲ್ಲಿ ಹೋಗುತ್ತಿರುವೆ’ ಎಂದು ಆಕೆಯನ್ನು ವಾದಕ್ಕೆ ಕರೆದರಂತೆ. ಆನಂದಗಿರಿ ಇನ್ನೂ ಒಂದು ಹೆಜ್ಜೆ ಮುಂದೆ ಕರ್ಮಫಲವನ್ನು ಕೊಡುವ ಭೂಮಿಯನ್ನು ಪುನಃ ಮುಟ್ಟಲಾರೆನೆಂದು ಭಾರತಿಯು ನೆಲದಿಂದ ಆರಂಗುಲ ಮೇಲೆ ಆಕಾಶದಲ್ಲಿಯೇ ವಾದಕ್ಕೆ ನಿಂತಳೆನ್ನುತ್ತಾನೆ. ಜಿ.ಕೆ.ಭಾರವಿಯಂಥ ಶಂಕರಾಚಾರ್ಯರ ಚಿತ್ರನಿರ್ದೇಶಕರಿಗೆ ಒಳ್ಳೆಯ ಫ್ಯಾಂಟಸಿ ಕಥೆ. ಹಾಗೆಂದು ಆತ್ಮಬೋಧರ ಸುಷುಮಾ ವ್ಯಾಖ್ಯಾನದಲ್ಲೂ, ವಿದ್ಯಾಶಂಕರವಿಜಯದಲ್ಲೂ ಮಂಡನರ ಜೊತೆಗಿನ ವಾದದ ನಂತರ ಆಕೆ ಕೂಡಲೇ ಶಾಪವಿಮುಕ್ತಳಾಗಿ ಅಂತರ್ಧಾನಳಾಗುತ್ತಾಳೆ. ’ಅಂತರ್ದಧೇ ಸುವದನಾ ಕಿಲ ಶಾಪಮುಕ್ತಾ’ ಎಂದು ಮಂಡನವಾದ ವೃತ್ತಾಂತವನ್ನು ಮುಗಿಸಿದ್ದು ನೋಡಿದರೆ ಅಲ್ಲಿ ಉಭಯಭಾರತಿಯ ಜೊತೆಗಿನ ವಾದದ ಪ್ರಸ್ತಾಪವೇ ಇಲ್ಲ.
       ತಮ್ಮ ಮತವೇ ಸರ್ವಸಮ್ಮತವೆಂದು ಸಿದ್ಧಪಡಿಸಲು ಆಚಾರ್ಯರೇ ಆಕಾಶದಲ್ಲಿ ಆಕೆಯನ್ನು ನಿರ್ಬಂಧಿಸಿ ವಾದಕ್ಕೆ ಕರೆದರೆಂದು ಎಂಟನೇ ಆಧ್ಯಾಯದಲ್ಲಿ ಬರೆದ ಮಾಧವ ಮುಂದಿನ ಅಧ್ಯಾಯದಲ್ಲಿ ’ವಪುರಧರ್ಮಸ್ಯ ನ ಜಿತಾ ಮತಿಮನ್ಯಪಿ ಮಾಂ ವಿಜಿತ್ಯ ಕುರು ಶಿಷ್ಯಮಿಮಂ’ ಮಂಡನನ ಅರ್ಧಾಂಗಿಯಾದ ನನ್ನನ್ನು ಜಯಿಸಿದ ಮೇಲೆಯೇ ಅವರನ್ನು ಶಿಷ್ಯನನ್ನಾಗಿಸಿಕೊಳ್ಳಿ ಎಂದು ಭಾರತಿಯ ಬಾಯಿಂದ ಹೇಳಿಸುತ್ತಾನೆ. ಶಂಕರರೇ ಕಾಲ್ಕೆರೆದು ಭಾರತಿಯನ್ನು ವಾದಕ್ಕೆ ಕರೆಯುವ ಅವಶ್ಯಕತೆ ಏನಿತ್ತೆಂದು ಶಂಕರವಿಜಯಕಾರರೇ ಹೇಳಬೇಕು.
       ಅವರಿಬ್ಬರಿಗೂ ಹದಿನೇಳು ದಿನಗಳ ಕಾಲ ವಾದವಾಯ್ತೆಂದು ಮಾಧವೀಯ ಹೇಳುತ್ತದೆ. ಶಂಕರರನ್ನು ಯಾವ ಶಾಸ್ತ್ರದಲ್ಲಿಯೂ ಗೆಲ್ಲಲಾಗದೆಂದು ಅರಿತ ಉಭಯಭಾರತಿ ಸಂನ್ಯಾಸಿಯಾಗಿ ಅವರಿಗೆ ಪರಿಚಯವಿಲ್ಲದ ವಾತ್ಸಾಯನಸೂತ್ರದ ಮೇಲೆ ಪ್ರಶ್ನೆಮಾಡಿದಳು. ನಿಮಗೆ ತಿಳಿಯದ ಶಾಸ್ತ್ರವೂ ಇದೆ ಎಂದು ಆನಂದಗಿರಿಯು ಭಾರತಿಯ ಬಾಯಿಂದ ಕುಹಕವಾಡಿಸುತ್ತಾನೆ. ಶಂಕರರಿಗೀಗ ಧರ್ಮಸಂಕಟದ ಸ್ಥಿತಿ. ಅಂಥ ಪ್ರಶ್ನೆಗಳಿಗೆ ಉತ್ತರ ಹೇಳಿದರೆ ಯತಿಧರ್ಮಕ್ಕೆ ಭಂಗಬಂದಂತೆ. ಹೇಳದಿದ್ದರೆ ತಾನು ಅಸರ್ವಜ್ಞನೆಂದು ತೋರಿಸಿಕೊಂಡಂತಾಯ್ತು. ಯೋಚಿಸಿದ ಶಂಕರರು ಉತ್ತರ ನೀಡಲು ಒಂದು ತಿಂಗಳು ಸಮಯಾವಕಾಶ ಕೇಳಿದರು. ಮಂಡನನ ಜೊತೆಗೆ ಎಷ್ಟು ದಿನ ವಾದವಾಯ್ತೆಂದು ಶಂಕರವಿಜಯಗಳಲ್ಲಿ ಒಮ್ಮತವಿಲ್ಲ. ಐದೆಂದೂ, ಆರೆಂದೂ, ಹದಿನೇಳು ಶಾಸ್ತ್ರಗಳ ಮೇಲೆ ಹದಿನೇಳು ದಿನಗಳೆಂದೂ, ಕೊನೆಗೆ ನೂರು ದಿನವೆಂದೂ ಒಂದೊಂದು ಶಂಕರವಿಜಯಗಳಲ್ಲಿ ಒಂದೊಂದು ರೀತಿಯಿದೆ. ಅದೇ ರೀತಿ ಶಂಕರರ ಪರಕಾಯಪ್ರವೇಶದ ಅವಧಿ ಒಂದು ತಿಂಗಳೆಂದು ಮಾಧವೀಯ ಹೇಳಿದರೆ, ಆರು ತಿಂಗಳೆಂದು ಆನಂದಗಿರೀಯ ಹೇಳುತ್ತದೆ. ಶಂಕರರು ಕಾಮಶಾಸ್ತ್ರವನ್ನು ತಿಳಿದುಕೊಳ್ಳಲು  ಯೋಗಶಕ್ತಿಯಿಂದ ಆಕಾಶಮಾರ್ಗದಲ್ಲಿ ತೆರಳಿದರಂತೆ. ವೇದಾಂತನಿರೂಪಣೆಗೆ ಹೊರಟ ಆಚಾರ್ಯರ ಇಂಥ ಸಿದ್ಧಾಂತದ ವಿಷಯದಲ್ಲೂ ನಿರೂಪಣೆಗೆ ಹೊರಟರೆಂಬುದೇ ಅಸಂಗತ. ಸಾಕ್ಷಾತ್ ಸರಸ್ವತಿಯ ಅವತಾರವಾದ ಭಾರತಿ ಮೀಮಾಂಸಾ-ವೇದಾಂತಗಳ ಚರ್ಚೆಗೆ ಸಂಬಂಧವೇ ಪಡದ ಕಾಮಶಾಸ್ತ್ರದ ಪ್ರಶ್ನೆಯನ್ನು ಕೇಳಿದಳೆಂಬುದು ಇನ್ನೂ ವಿಚಿತ್ರ.  ಅದೂ ಪರಪುರುಷನೊಬ್ಬನನ್ನು ಅಂಥ ವಿಷಯದ ಬಗ್ಗೆ ಚರ್ಚೆಗೆಳೆದಳೆಂಬುದು ಶಾಂಕರಾನುಯಾಯಿಗಳೀಗೆ ಯೋಚಿಸಲೂ ಆಗದ ವಿಷಯ. ಶಂಕರರು ಸರ್ವಜ್ಞರೆಂದು ಒಂದು ಕಡೆಯೂ, ಅವರಿಗಾ ವಿಷಯ ಮೊದಲೇ ಗೊತ್ತಿಲ್ಲ ಎಂದು ಸೂಚಿಸಲು ಇನ್ನೊಂದು ಕಡೆಯೂ ಶಂಕರವಿಜಯಕಾರರು ಇಲ್ಲಿ ಪ್ರಯಾಸಪಟ್ಟಿದ್ದಾರೆ. ಸರ್ವಜ್ಞತ್ವ ಹಾಗೂ ಬ್ರಹ್ಮಚರ್ಯಗಳೆರಡನ್ನೂ ಸರಿತೂಗಿಸಹೋರಟ ಈ ಕಥೆ ಮಣಿಮಂಜರಿಯಂಥ ಕುಗ್ರಂಥದ ಕರ್ತರಿಗೂ ಶಂಕರದ್ವೇಷಿಗಳಿಗೂ, ಕಾಲ್ಪನಿಕ ಕಾದಂಬರಿ ರಚಯಿತರಿಗೂ ಒಂದು ಅವಕಾಶ ಕಲ್ಪಿಸಿಕೊಟ್ಟಿತೇ ಹೊರತೂ ಇನ್ನೇನೂ ಸಾಧಿಸಲಿಲ್ಲ.
       ಇರಲಿ. ಒಂದು ತಿಂಗಳ ಸಮಯ ತೆಗೆದುಕೊಂಡು ಆಕಾಶಮಾರ್ಗವಾಗಿ ಹೊರಟ ಆಚಾರ್ಯರು ಅಮೃತಪುರವೆಂಬ ರಾಜ್ಯಕ್ಕೆ ಬಂದರಂತೆ. ಅದರ ರಾಜನ ಹೆಸರು ಅಮರುಕ. ಆ ರಾಜ ಅದೇ ಸಮಯದಲ್ಲಿ ಬೇಟೆಯಾಡಲು ಹೋದಾಗ ಪ್ರಜ್ಞೆತಪ್ಪಿ ಬಿದ್ದು ಮೃತಪಟ್ಟಿದ್ದ. ಶಂಕರರು ತಮ್ಮ ಶರೀರವನ್ನು ಬೆಟ್ಟದ ಮೇಲಿನ ಗುಹೆಯೊಂದರಲ್ಲಿಟ್ಟು ಕಾಪಾಡುವಂತೆ ಶಿಷ್ಯರಿಗೆ ಹೇಳಿ ಪರಕಾಯ ಪ್ರವೇಶದ ಮೂಲಕ ರಾಜನ ಶರೀರವನ್ನು ಪ್ರವೇಶಿಸಿದರು. ಹೊಸ ರಾಜ ರಾಜ್ಯಭಾರವನ್ನೆಲ್ಲ ಮಂತ್ರಿಗಳಿಗೊಪ್ಪಿಸಿ ತನ್ನ ನೂರು ಜನ ಹೆಂಡತಿಯರೊಡನೆ ವಿಷಯಸುಖವನ್ನನುಭವಿಸತೊಡಗಿದ. 
       ಈ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ವತ್ಯ್ಸಾಯನ ಸೂತ್ರಗಳನ್ನೋದಿ ಅವುಗಳ ಮೇಲೆ ಒಂದು ನಿಬಂಧವನ್ನು ಬರೆದರೆಂದು ಮಾಧವೀಯದ ಪ್ರತೀತಿ.  ’ಶತಸಂಖ್ಯಾ ಸತೀರತೇಃ’ ನೂರು ಶ್ಲೋಕಗಳ ಗ್ರಂಥವೆಂದು ಆನಂದಗಿರೀಯದಲ್ಲಿದೆ.  ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಅಮರುಕನ ದೇಹದಲ್ಲಿದ್ದಾಗ ಶಂಕರರು ಬರೆದರೆಂದು ಹೇಳಲಾಗುತ್ತದೆ. ಇದರಲ್ಲೂ ನೂರು ಶ್ಲೋಕಗಳಿದ್ದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ. ಆನಂದವರ್ಧನನ ಧ್ವನ್ಯಾಲೋಕದಲ್ಲಾಗಲೀ, ವೇಮಭೂಪಾಲನ ವ್ಯಾಖ್ಯಾನದಲ್ಲಾಗಲೀ ಇದು ಆಚಾರ್ಯಕೃತವೆಂಬ ದಾಖಲೆಗಳಿಲ್ಲ. ಹಾಗೆ ನೋಡಿದರೆ ಶಂಕರರ ಭಾಷ್ಯಗಳಲ್ಲಿ ಬಳಸಲಾದ ಭಾಷೆಗೂ, ಸೌಂದರ್ಯ ಲಹರಿ, ಭಜಗೋವಿಂದಂಗಳ ಭಾಷೆಗೂ ತುಂಬ ವ್ಯತ್ಯಾಸವಿದೆ. ಹಾಗಾಗಿ ಸ್ತೋತ್ರಸಾಹಿತ್ಯದಲ್ಲಿ ಹೆಚ್ಚಿನವುಗಳನ್ನು ಶಂಕರರೇ ರಚಿಸಿದರೆಂಬುವುದಕ್ಕೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಅಮರುಶತಕದ ಧಾಟಿಯೂ ಶಂಕರರ ಇವೆರಡೂ ಧಾಟಿಗಳಿಗಿಂತ ಭಿನ್ನ. ಆದರೆ ಇದನ್ನು ಶಂಕರಕೃತವೆಂದು ತಿಳಿಯಲು ಇರುವ ಏಕೈಕ ಊಹೆ ಇದರ ವಿಖ್ಯಾತಿ, ಲಾಲಿತ್ಯ ಹಾಗೂ ನಾವಿನ್ಯತೆ. ಭರ್ತೃಹರಿಯ ಶೃಂಗಾರ ಶತಕದಲ್ಲೂ ಅಂಥ ವೈಶಿಷ್ಟ್ಯವಿಲ್ಲ. ಶೃಂಗಾರದಲ್ಲಿ ಒಂದೇ ತೀವ್ರ ವಿಷಯಾಸಕ್ತಿ ಇಲ್ಲವೇ ಪೂರ್ಣ ವಿರಕ್ತಿ ಇವೆರಡು ತುದಿಗಳನ್ನು ಮಾತ್ರ ಭರ್ತೃಹರಿ ಸ್ಪರ್ಶಿಸುತ್ತಾನೆ. ಶೃಂಗಾರದಲ್ಲಿ ಭರ್ತೃಹರಿ ಸರಳನಾದರೂ ಶಿಥಿಲ. ಅಲ್ಲಿ ಭಾವನಾವಿಲಾಸಕ್ಕೂ ಆಸ್ಪದವಿಲ್ಲ. ಚಮತ್ಕಾರಾಂಶದ ನವಿರುತನವೂ ಇಲ್ಲ. ಶೃಂಗಾರವು ವಾಚ್ಯವಾದರೆ ಅದು ಭೀಭತ್ಸವಾಗುವ ಭೀತಿಯೂ ಇಲ್ಲದಿಲ್ಲ. ಅದೇ ಅಮರುಕ ಹಾಗಲ್ಲ. ಕಾವ್ಯಮೀಮಾಂಸಕರಲ್ಲಿ ಮೂರ್ಧನ್ಯ ಆನಂದವರ್ಧನನಿಂದಲೇ ಮುಕ್ತಕಂಠದಲ್ಲಿ ಶ್ಲಾಘಿಸಲ್ಪಟ್ಟದ್ದೆಂದರೆ ಅದರ ಮಹಾತ್ಮೆ ಅರ್ಥವಾಗಬಹುದು. ಶೃಂಗಾರಭಾವದ ಸೂಕ್ಷ್ಮತೆ, ಶೈಲಿಯಲ್ಲಿನ ಮನೋಜ್ಞತೆ, ಏನನ್ನೂ ವಾಚ್ಯವಾಗಿಸದ ವ್ಯಂಗ್ಯದ ನವಿರುತನ, ಸಂಬಂಧಗಳ ಅನಂತಸಾಧ್ಯತೆಗಳ ಸಿದ್ಧಿ ಅಮರುಶತಕದ ಒಂದೊಂದು ಶ್ಲೋಕಕ್ಕೂ ಒಂದೊಂದು ಮಹಾಕಾವ್ಯದ ಪದವಿಯನ್ನು ದಯಪಾಲಿಸಿದೆ. ಇಡಿಯ ಸಂಸ್ಕೃತ ಸಾಹಿತ್ಯದಲ್ಲಿ ಇದಕ್ಕೆ ಹೆಗೆಲೆಣೆಯಾದ ಇನ್ನೊಂದು ಕೃತಿ ಇಲ್ಲವೇ ಇಲ್ಲ. ವೈರಾಗ್ಯ ಹಾಗೂ ಶೃಂಗಾರಗಳ ಸಮೀಕರಣದ ಪರಮೋಚ್ಚ ಸಿದ್ಧಿ ಸಿದ್ಧಿಸಿರುವುದು ಅಮರುಕ ಹಾಗೂ ಅಮರುಕನಿಗೆ ಮಾತ್ರ. ಅಂತಹ ಸರ್ವೋತ್ಕೃಷ್ಟ ಕೃತಿಯೊಂದು ಶಂಕರರ ರಚನೆಯಾಗಿರಬಹುದೆಂಬ ಊಹೆ ಸತ್ಯವಲ್ಲದಿದ್ದರೂ ಅಸಾಧುವಂತೂ ಅಲ್ಲ.
        ಅಲ್ಲಿಂದ  ವ್ಯಾಸಾಚಲೀಯದ ಹನ್ನೆರಡನೇ ಅಧ್ಯಾಯಕ್ಕೆ ಬರೋಣ. ಶಂಕರರು ಸರ್ವಜ್ಞ ಪೀಠವನ್ನೇರುವಾಗ ಶಾರದೆ ಪ್ರತ್ಯಕ್ಷಳಾಗಿ ಅವರನ್ನು ತಡೆಯುತ್ತಾಳೆ . ಅಲ್ಲಿ ಶಂಕರರಿಗೂ ಶಾರದೆಗೂ ಮತ್ತೆ ಹದಿನೇಳು ದಿನಗಳ ವಾದವಾಯಿತು. ಮತ್ತೆ ಶಾರದೆ ವಾತ್ಸ್ಯಾಯನ ಯಂತ್ರದದಲ್ಲಿ ಪ್ರಶ್ನೆಯನ್ನು ಹಾಕಿದಳು. ಇನ್ನೊಮ್ಮೆ ಏಳು ದಿನಗಳ ಗಡುವು ತೆಗೆದುಕೊಂಡ ಶಂಕರರು ಅಮರುಕನ ಶರೀರವನ್ನು ಹೊಕ್ಕು ಬಂದರು. ಮಾಧವೀಯದಲ್ಲೂ ಇದೇ ಕಥೆಯಿದೆ. ೯ನೇ ಅಧ್ಯಾಯದಲ್ಲಿ ಉಭಯಭಾರತಿಯೊಡನೆ ಚರ್ಚೆಮಾಡಿ ಶಂಕರರಿಗೆ ಪರಕಾಯ ಪ್ರವೇಶ ಮಾಡಿಸಿದ ಕವಿ ಮತ್ತೆ ೧೬ನೇ ಅಧ್ಯಾಯದಲ್ಲಿ ಸಾಕ್ಷಾತ್ ಸರಸ್ವತಿಯೊಡನೆ ಚರ್ಚೆಗಿಳಿಸಿ ಮಗದೊಮ್ಮೆ ಪರಕಾಯ ಪ್ರವೇಶ ಮಾಡಿಸುತ್ತಾನೆ. ಎಂಟನೇ ದಿನ ತಿರುಗಿ ಬಂದ ಶಂಕರರು ಶಾರದೆಯ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತಾರೆ. ತೃಪ್ತಳಾಗದ ಆಕೆ ಸ್ತ್ರೀಸಂಗವನ್ನು ಮಾಡಿ ಕಲಾರಹಸ್ಯವನ್ನು ಕಲಿತದ್ದರಿಂದ ನಿನಗೆ ಪಾರಿಶುದ್ಧ್ಯವು ಹೇಗೆ ಬಂತು ಎಂದು ತಿರುಗಿ ಪ್ರಶ್ನಿಸುತ್ತಾಳೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ.  ಅದೇ ಸಮಯದಲ್ಲಿ ಸರಸ್ವತಿಯು ಅಮರುಶತಕದಂಥ ಶೃಂಗಾರಕಾವ್ಯ ರಚಿಸಿದ್ದರ ಉದ್ದೇಶವನ್ನೂ ಪ್ರಶ್ನಿಸಿದಳಂತೆ. ಆಗ ಶಂಕರರು ಅದರ ಒಂದೊಂದು ಶೃಂಗಾರಭರಿತ ಶ್ಲೋಕಕ್ಕೂ ವೈರಾಗ್ಯ ಪರವಾದ ಅರ್ಥವನ್ನು ಹೇಳಿ ಸರ್ವಜ್ಞಪೀಠವೇರಿದರೆನ್ನುತ್ತದೆ ಇನ್ನೊಂದು ಕಥೆ.
        ಅದೇನೇ ಆಗಿರಲಿ. ಶಂಕರರು ಅಮರುಕನ ಶರೀರವನ್ನು ಪ್ರವೇಶಿಸಿ ಐಹಿಕ ಭೋಗಗಳಲ್ಲಿ ನಿರತರಾದರು. ಅಮರುಕನ ಗುಣಗಳು ಮೊದಲಿಗಿಂತ ತೀರ ಭಿನ್ನವಾಗಿರುವುದರಿಂದ ರಾಣಿಗೆ ಅನುಮಾನ ಬಂತು. ಯಾವನೋ ಪುಣ್ಯಾತ್ಮ ಇವನ ಶರೀರ ಹೊಕ್ಕಿರಬಹುದೆಂದು ಗ್ರಹಿಸಿ ಆತ ತನ್ನ ಮೂಲಶರೀರಕ್ಕೆ ತಿರುಗಿ ಹೋಗದಂತೆ ರಾಜ್ಯದಲ್ಲಿ ಎಲ್ಲೇ ಶವವನ್ನು ಕಂಡರೂ ಸುಡುವಂತೆ ಭಟರಿಗೆ ಆಜ್ಞಾಪಿಸಿದಳು. ಈ ಕಥೆಯಂತೂ ಕಲ್ಪನಾವಿಲಾಸದ ಪರಮಾವಧಿ. ಗಡುವು ಮುಗಿದು ಕೆಲದಿನಗಳಾದರೂ ಅಮರುಕನ ದೇಹವನ್ನು ಬಿಟ್ಟು ಶಂಕರರು ಬರದಿದ್ದಾಗ ಶಿಷ್ಯರು ಬಂದು ಅವರನ್ನೆಚ್ಚರಿಸಿದ್ದು,  ಪೊಟರೆಯಲ್ಲಿ ಬಚ್ಚಿಟ್ಟಿದ್ದ ಶರೀರಕ್ಕೆ ರಾಣಿಯ ಕಡೆಯ ಸೈನಿಕರು ಬೆಂಕಿಯಿಕ್ಕುವಾಗ ಶಂಕರರು ಅಮರುಕನ ಶರೀರವನ್ನು ತ್ಯಜಿಸಿ ತಮ್ಮ ದೇಹವನ್ನು ಪುನರ್ಪ್ರವೇಶಿಸಿದ್ದು, ನರಸಿಂಹ ಕರಾವಲಂಬನ ಸ್ತೋತ್ರದಿಂದ ಪ್ರಸನ್ನನಾದ ನರಸಿಂಹ ಬೆಂಕಿಯಲ್ಲಿ ಬಿದ್ದ ಶಂಕರರ ದೇಹವನ್ನು ಮೇಲೆತ್ತಿದ್ದು ಇವೆಲ್ಲವೂ ಕೇವಲ ಸ್ವಾರಸ್ಯಕರ ಮಾತ್ರ ಎನ್ನಬಹುದಾದ ದೊಡ್ಡ ಕಥೆಗಳೇ.
        ಪುನಃ ಉಭಯಭಾರತಿಯ ಕಥೆಗೆ ಬರೋಣ. ಭಾರತಿಯು ತನ್ನ ಪ್ರಶ್ನೆಗಳಿಗೆ ಶಂಕರರು ಉತ್ತರ ನೀಡಿದ್ದನ್ನು ಕಂಡು ಸಂತುಷ್ಟಳಾದಳು. ಆ ಸಮಯದಲ್ಲಿ ಭಾರತಿಯನ್ನು ಸ್ತುತಿಸಿದ ಶಂಕರರು ತನ್ನೊಡನೆ ಬಂದು ಋಷ್ಯಶೃಂಗಕ್ಷೇತ್ರದಲ್ಲಿ ಶಾರದೆಯೆಂಬ ಹೆಸರಿನಿಂದ ನೆಲೆಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.
ಯತ್ರಾಧುನಾಪ್ಯುತ್ತಮಮೃಗಶೃಂಗಸ್ತಪಶ್ಚರತ್ಯಾತ್ಮಭೃದನ್ತರಂಗಃ |
ಸಂಸ್ಪರ್ಶಮಾತ್ರೇಣ ವಿತೀರ್ಣಭದ್ರಾ ವಿದ್ಯೋತತೇ ಯತ್ರ ಚ ತುಂಗಭದ್ರಾ ||

ಮಾಧವೀಯದ ಈ ಶ್ಲೋಕದಲ್ಲಿ ತುಂಗಭದ್ರಾ ಎಂದಿರುವುದು ಗಮನಿಸತಕ್ಕ ವಿಚಾರ. ಆನಂದಗಿರೀಯದ ಪ್ರಕಾರ ’ತತಃ ಪರಂ ಸರಸವಾಣೀಃ ಮಂತ್ರಬದ್ಧಾಂ ಕೃತ್ವಾ ಗಗನಮಾರ್ಗಾದೇವ ಶೃಂಗಗಿರಿಸಮೀಪೇ ತುಂಗಭದ್ರಾತೀರೇ ಚಕ್ರಂ ನಿರ್ಮಾಯ ತದಗ್ರೇ ಪರದೇವತಾಂ ಸರಸವಾಣೀಂ ನಿಧಾಯ’ ಹೊರಟುನಿಂತ ಸರಸವಾಣಿಯನ್ನು ಮಂತ್ರಬಲದಿಂದ ಕಟ್ಟಿಹಾಕಿ ತುಂಗಭದ್ರಾತೀರದ ಶೃಂಗೇರಿಯಲ್ಲಿ ಚಕ್ರವನ್ನು ನಿರ್ಮಾಣಮಾಡಿ ಅದರಲ್ಲಿ ಮೇಲಿಟ್ಟರು.
        ಶಂಕರಕೃತವಾದ ಶಾರದಾ ಭುಜಂಗ ಸ್ತೋತ್ರವನ್ನೂ ಹಿಡಿದು ಎಲ್ಲ ಶಂಕರವಿಜಯಗಳಲ್ಲೂ, ಮಠಾಮ್ನಾಯಶಾಸನಗಳಲ್ಲೂ ಶಾರದೆಯನ್ನು ತುಂಗಭದ್ರಾತೀರವಾಸಿನಿಯೆನ್ನಲಾಗಿದೆ.  ಆದರೆ ಶೃಂಗೇರಿಯಿರುವುದು ತುಂಗಾ ತೀರದಲ್ಲೇ ಹೊರತೂ ತುಂಗಭದ್ರಾ ತೀರದಲ್ಲಲ್ಲ. ಶಿವಮೊಗ್ಗದ ಸಮೀಪ ತುಂಗಾ-ಭದ್ರಾ ನದಿಗಳ ಸಂಗಮವಾಗುವಲ್ಲಿ ಕೂಡಲಿ ಶೃಂಗೇರಿ ಎಂಬ ಇನ್ನೊಂದು ಕ್ಷೇತ್ರವಿದೆ. ಇಲ್ಲಿಯೂ ಒಂದು ಶಂಕರಸ್ಥಾಪಿತ ಮಠವಿದೆ. ಹಾಗಾದರೆ ಅಸಲು ಶೃಂಗೇರಿ ಇರುವುದೆಲ್ಲಿ? ಶೃಂಗೇರಿ ಆಚಾರ್ಯರಿಗೆ ಪರಿಚಿತವಾದ ಸ್ಥಳವಲ್ಲ. ಋಷ್ಯಶೃಂಗವೆಂಬ ಹೆಸರು ಯಾವ ಶಂಕರವಿಜಯಗಳಲ್ಲೂ ಈ ಮೊದಲು ಪ್ರಸ್ತಾಪಿತವಾಗಿಲ್ಲ. ಹಾಗಾದರೆ ಹಠಾತ್ತನೆ ಶಂಕರರು ಶಾರದೆಯನ್ನು ಉತ್ತರ ದೇಶದಿಂದ ಕರೆತಂದು ಶೃಂಗೇರಿಯಲ್ಲಿ ನೆಲೆಗೊಳಿಸಿದ್ದೇಕೆ?
       ಇನ್ನು ಶೃಂಗೇರಿಯ ಬಗ್ಗೆ ಎರಡು ಬಹುಶ್ರುತವಾದ ಕಥೆಗಳಿವೆ. ಒಂದು ಚಿದ್ವಿಲಾಸೀಯ ಶಂಕರವಿಜಯದ್ದು. "ಶಾಲೂರೀ ಮತಿಗರ್ಭಭಾರವಿಷಹಾಂ ಸದ್ಯಃ ಪ್ರಸೂತ್ಯುನ್ಮುಖೀಂ ತೀವ್ರೋದಗ್ರದಿವಾಕರಾತಪಪರಿಕ್ಲಾಂತಾಮ್ | ಭುಜಂಗೀ ಫಣಾಮಾಸ್ತೀರ್ಯಾತಪವಾರಣಾಯ ಪರಿತಃ ಪಾಂತೀಂ ದೃಶಾಲೋಕತ ||" ಆಚಾರ್ಯರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕಿಳಿದಾಗ ಬಿಸಿಲ ಬೇಗೆಯನ್ನು ತಾಳಲಾರದೆ ಬಳಲಿದ್ದ ಪ್ರಸವವೇದನೆಯ ಸ್ಥಿತಿಯಲ್ಲಿದ್ದ ಕಪ್ಪೆಯೊಂದಕ್ಕೆ ಹಾವೊಂದು ಹೆಡೆಬಿಚ್ಚಿ ನೆರಳು ನೀಡುತ್ತಿತ್ತಂತೆ. ಈ ಅದ್ಭುತವನ್ನು ಕಂಡ ಶಂಕರರು ಪ್ರಾಣಿಗಳು ವೈರತ್ವವನ್ನು ಮರೆತ ಸ್ಥಳದಲ್ಲೇ ಸರಸವಾಣಿಯನ್ನು ನೆಲೆಗೊಳಿಸಿದರಂತೆ. ಹೆಣುಕಪ್ಪೆ ಮರಿಗಳನ್ನು ಹೆರುವುದಿಲ್ಲವೆಂದು ಚಿದ್ವಿಲಾಸೀಯಕಾರನಿಗೆ ಯಾರೂ ಹೇಳಿರಲಿಲ್ಲವೇನೋ ! 
       ಇನ್ನೊಂದು ಕೂಷ್ಮಾಂಡ ಶಂಕರವಿಜಯದ್ದು.  ಆತ ಇದಕ್ಕಿಂತ ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾನೆ.  ಶಂಕರರು ಸರಸವಾಣಿಯನ್ನು ತಮ್ಮ ಜೊತೆಗೆ ಬರುವಂತೆ ಪ್ರಾರ್ಥಿಸಿದರು. ಅದಕ್ಕೊಪ್ಪಿದ ಸರಸವಾಣಿ  ಹಿಂದಿರುಗಿ ನೋಡಬಾರದೆಂದೂ, ನೋಡಿದರೆ ಆ ಸ್ಥಳದಲ್ಲೇ ಅದೃಶ್ಯಳಾಗುವೆಳೆಂದೂ ಷರತ್ತೊಂದನ್ನು ಮುಂದಿಟ್ಟಳು. ಇಬ್ಬರೂ ಹಂಪೆಯೆಡೆಗೆ ತೆರೆಳತೊಡಗಿದರು. ಮಾರ್ಗಮಧ್ಯದಲ್ಲಿ ಶೃಂಗೇರಿಯಲ್ಲಿ ಸರಸವಾಣಿ ತನ್ನ ಕಾಲ್ಗೆಜ್ಜೆಯನ್ನು ಕಳಚಿ ಹಿಡಿದಳಂತೆ. ಗೆಜ್ಜೆಯ ಶಬ್ದ ನಿಂತಾಗ ಆಕೆಯು ಬರುತ್ತಿದ್ದಾಳೋ ಇಲ್ಲವೋ ಎಂಬ ಅನುಮಾನದಲ್ಲಿ ಶಂಕರರು ತಿರುಗಿ ನೋಡಿದರು ಎಂದೂ ಕಥೆಯಿದೆ. ಮಗಧದಿಂದ ಹಂಪೆಗೆ ಬರುವಾಗ ಸಿಗುವ ಶೃಂಗೇರಿ ಯಾವುದು ಎಂದು ಕೂಷ್ಮಾಂಡ ಶಂಕರವಿಜಯಕಾರನೇ ಹೇಳಬೇಕು. ಶಂಕರರನ್ನು ಜಾರಸಂಜಾತನೆಂದೂ, ಸಂಕರನೆಂದೂ ಕುಹಕವಾಡಿದ ಈ ಕುಗ್ರಂಥದ ಕಥೆ ಉಳಿದವುಗಳಿಗಿಂತ ಪ್ರಸಿದ್ಧಿಯಲ್ಲಿರುವುದು ಕಲಿಮಹಿಮೆಯೆನ್ನಬೇಕಷ್ಟೆ.
       ಶೃಂಗೇರಿಯಲ್ಲಿ ಶಾರದಾ ಸ್ಥಾಪನೆಯಾದುದರ ಬಗ್ಗೆ ಸರ್ವ ಗ್ರಂಥಗಳಲ್ಲೂ ಒಮ್ಮತಾಭಿಪ್ರಾಯವಿರುವುದಾದರೂ ಅಲ್ಲಿ ಶಂಕರರು ಮಠವನ್ನು ನಿರ್ಮಿಸಿದ ಬಗ್ಗೆ ಸ್ವತಃ ಶೃಂಗೇರಿ ಗುರುಪರಂಪರೆಯ ಮಾಧವ ವಿದ್ಯಾರಣ್ಯರೇ ರಚಿಸಿದರೆಂದು ಭಾವಿಸಲಾಗುವ ಮಾಧವೀಯದಲ್ಲಿ ಒಂದಕ್ಷರದ ಉಲ್ಲೇಖವೂ ಇಲ್ಲ.  ಶೃಂಗೇರಿಯನ್ನು ಹೊಗಳಲೋಸುಗ ಒಂದು ಅಧ್ಯಾಯವನ್ನು ಮೀಸಲಿಟ್ಟ ಆನಂದಗಿರೀಯ ಕೊನೆಯೊಂದು ಭಾಗದಲ್ಲಿ ಮಾತ್ರ ಶಂಕರರು ಇಲ್ಲಿ ಮಠವೊಂದನ್ನು ಸ್ಥಾಪಿಸಿ ವಿದ್ಯಾಪೀಠವನ್ನು ಏರ್ಪಡಿಸಿದರು ಎಂದು ಮುಗಿಸುತ್ತಾನೆ. ಇದ್ದುದರಲ್ಲಿ ಚಿದ್ವಿಲಾಸೀಯಕಾರನೇ ಪರವಾಗಿಲ್ಲ. ಒಟ್ಟೂ ೩೨ ಅಧ್ಯಾಯಗಳಲ್ಲಿ ನಾಲ್ಕು ಅಧ್ಯಾಯಗಳನ್ನು ಶೃಂಗೇರಿ ಮಠದ ಬಗೆಗಿನ ವಿಸ್ತಾರವಾದ ಮಾಹಿತಿಗಾಗಿಯೇ ಮೀಸಲಿದಲಾಗಿದೆ. ಕೆಲವು ಶಂಕರವಿಜಯಗಳ ಉಲ್ಲೇಖ ಹಾಗೂ ಬಹುಜನರ ನಂಬಿಕೆಯೆಂಬುದನ್ನು ಬಿಟ್ಟರೆ ಶೃಂಗೇರಿ ಮಠ ಸ್ಥಾಪನೆಯ ಬಗ್ಗೆ ಶಾಸನಾಧಾರಗಳೂ ಇಲ್ಲ. ೧೩೪೫ರ ವೀರಹರಿಹರ ಒಡೆಯರ ಶಾಸನದಲ್ಲೂ ’ಭಾರತೀತೀರ್ಥ ಶ್ರೀಪಾದರು ಶೃಂಗೇರಿಯ ತೀರ್ಥವಾಸದಲ್ಲಿ ಅನುಷ್ಟಾನಮಾಡಲಿಕ್ಕೆ’ ಎಂದಿದೆಯೇ ಹೊರತೂ ಶಾರದಾಪೀಠದ ಪ್ರಸ್ತಾಪವಿಲ್ಲ.
       ಶಾಂಕರ ಪರಂಪರೆಯ ಮಠಗಳ ಸ್ವರೂಪ, ವಿಶೇಷಣಗಳ ವಿವರವಾದ ಉಲ್ಲೇಖವಿರುವ ಗ್ರಂಥ ಮಠಾಮ್ನಾಯ ಸೇತು. ವಿವಿಧ ಲೇಖಕರಿಂದ ರಚಿತವಾದ ಇದರ ಬೇರೆ ಬೇರೆ ಪಾಠಬೇಧಗಳೂ ಇದೆ. ಇದರ ಪ್ರಕಾರ ಭಾರತದ ನಾಲ್ಕು ಮೂಲೆಗಳಲ್ಲಿ ಶಂಕರರು ನಾಲ್ಕು ಆಮ್ನಾಯಗಳನ್ನು ಸ್ಥಾಪಿಸಿದರು. ಚತುರಾಮ್ನಾಯಗಳೆಂದರೆ ನಾಲ್ಕು ವೇದಗಳ ರಕ್ಷಣೆ ಹಾಗೂ ಪ್ರಚಾರಕ್ಕಾಗಿ ಮೀಸಲಾದ ಮಠಗಳು. ಮೊದಲನೇಯದಾಗಿ ಪಶ್ಚಿಮದಲ್ಲಿ ಸಾಮವೇದಪರಂಪರೆಯ ದ್ವಾರಕೆಯ ಕಾಳಿಕಾಪೀಠ. ಇದು ಕೀಟವಾಳ ಸಂಪ್ರದಾಯದ್ದು. ಶಾಂಕರಮಠಗಳ ಸನ್ಯಾಸಿಗಳ ಉಪಾಧಿಯಾದ ದಶನಾಮೀ ಪರಂಪರೆಯಲ್ಲಿ ಆಶ್ರಮ ಹಾಗೂ ತೀರ್ಥ ಎಂಬ ಹೆಸರುಗಳು ಇಲ್ಲಿನ ಪೀಠಾಧಿಪತಿಗಳಿಗೆ. ಸಿದ್ಧೇಶ್ವರ ದೇವನೂ, ಭದ್ರಕಾಳಿಯೆಂಬ ಶಕ್ತಿಯೂ ಇಲ್ಲಿನ ಆರಾಧ್ಯದೈವಗಳು. ಪದ್ಮಪಾದರು ಮೊದಲ ಆಚಾರ್ಯರು. ಎರಡನೇಯದಾಗಿ ಋಗ್ವೇದಕ್ಕೆ ಪೂರ್ವದ ಪುರಿಯಲ್ಲಿ ಭೋಗವಾಳ ಸಂಪ್ರದಾಯದ ಗೋವರ್ಧನ ಮಠ. ವನ ಹಾಗೂ ಅರಣ್ಯವೆಂಬ ಉಪಾಧಿ ಇಲ್ಲಿನ ಪೀಠಾಧಿಪತಿಗಳಿಗೆ. ದೇವ ಜಗನ್ನಾಥ, ಶಕ್ತಿ ವೃಷಲಾದೇವಿ ಆರಾಧನೆಯ ಈ ಮಠಕ್ಕೆ ಹಸ್ತಾಮಲಕರು ಮೊದಲ ಆಚಾರ್ಯರು. ಮೂರನೇಯದಾಗಿ ಅಥರ್ವಣವೇದಕ್ಕೆ ಉತ್ತರದ ಬದರಿಕಾಶ್ರಮದಲ್ಲಿ ಆನಂದವಾಳ ಪರಂಪರೆಯ ಶ್ರೀಮಠ. ನಾರಾಯಣ ದೇವ ಹಾಗೂ ಪೂರ್ಣಗಿರಿ ಶಕ್ತಿಯನ್ನು ಆರಾಧಿಸುವ ಇಲ್ಲಿನ ಆಚಾರ್ಯರಿಗೆ ಗಿರಿ, ಪರ್ವತ, ಸಾಗರಗಳೆಂಬ ಅಪಾಧಿಗಳು. ತ್ರೋಟಕರು ಇಲ್ಲಿನ ಮೊದಲ ಪೀಠಾಧಿಪತಿಗಳು.
ದಿಗ್ಭಾಗೇ ದಕ್ಷಿಣೇ ರಮ್ಯಃ ಶೃಂಗೇರ್ಯಾಂ ಶಾರದಾಮಠಃ |
ವರಾಹೋ ದೇವತಾ ತತ್ರ ರಾಮಕ್ಷೇತ್ರಮುದಾಹೃತಮ್ ||
ತೀರ್ಥಂ ಚ ತುಂಗಭದ್ರಾಖ್ಯಂ ಶಕ್ತಿಃ ಶ್ರೀ ಶಾರದೇತಿ ಚ |
ಚೈತನ್ಯ ಬ್ರಹ್ಮಚಾರ್ಯಾಖ್ಯ ಆಚಾರ್ಯೋ ವಿಶ್ವರೂಪಕಃ ||

ದಕ್ಷಿಣದಲ್ಲಿ ಯಜುರ್ವೇದಪರಂಪರೆಗೆ ಶೃಂಗೇರಿಯ ಶಾರದಾಮಠ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಮಠಾಮ್ನಾಯದಲ್ಲೂ ಉಲ್ಲೇಖಿತವಾಗಿರುವ ಶೃಂಗೇರಿ ತುಂಗಭದ್ರಾನದೀತೀರದಲ್ಲೇ ಇದೆ. ವಿಶ್ವರೂಪರು ಇಲ್ಲಿನ ಮೊದಲ ಪೀಠಾಧಿಪತಿ. ಸುರೇಶ್ವರಾಚಾರ್ಯರೆಂದು ಖ್ಯಾತರಾದ ಮಂಡನಮಿಶ್ರರು ಹಾಗೂ ವಿಶ್ವರೂಪರು ಇಬ್ಬರೂ ಒಬ್ಬರೆಯೇ ಎಂಬುದೂ ಚರ್ಚಾರ್ಹ. ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’ ಎಂದು ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ, ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು? ಶೃಂಗೇರಿ ಪರಂಪರೆಯಲ್ಲಿ ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ರಾಮಕ್ಷೇತ್ರವೆಂಬ ಹೆಸರಿನ ಇದಕ್ಕೆ ವರಾಹ ಮುಖ್ಯದೇವತೆ! ಇದರ ಒಗಟೇನೆಂಬುದನ್ನು ಒಡೆಯಲು ಇನ್ನೂ ಸಾಧ್ಯವಾಗಿಲ್ಲ.
       ಶಂಕರಾಚಾರ್ಯಪರಂಪರೆಯ ರಾಮಚಂದ್ರಾಪುರ ಮಠ ತಮ್ಮದು ಭೋಗವರ್ಧನವಾಳ ಪರಂಪರೆಯೆಂದು ಹೇಳಿಕೊಳ್ಳುತ್ತದೆ. ಇತ್ತೀಚೆಗೆ ಮಠದ ಮಂತ್ರಾಕ್ಷತೆಯ ಪುಸ್ತಕಗಳಲ್ಲಿ ಇದು ಚರ್ಚಿತಚರ್ವನವಾಗಿದ್ದರೂ ಸುಮಾರು ಮೂವತ್ತು ವರ್ಷಗಳಿಗಿಂತ ಹಿಂದಿನ ಮಠದ ಯಾವ ಪುಸ್ತಕಗಳಲ್ಲಿಯೂ ಇದರ ಉಲ್ಲೇಖವಿಲ್ಲ. ಭೋಗವರ್ಧನ ಶಬ್ದದ ವ್ಯುತ್ಪತ್ತಿಯ ಬಗ್ಗೆಯೂ ಯಾರಿಗೂ ಅರಿವಿಲ್ಲ. ಶೃಂಗೇರಿ ಮಠ ಭೋಗವಾಳ ಪರಂಪರೆಯಾದ್ದರಿಂದ ರಾಮಚಂದ್ರಾಪುರದವರು ತಮ್ಮದು ಭೋಗವರ್ಧನವೆಂದು ಕರೆದುಕೊಂಡರೋ! ಕಂಚಿ, ಶೃಂಗೇರಿಯಂಥ ಮಠಗಳೇ ಶಂಕರಸ್ಥಾಪಿತವೋ ! ಎಂಬುದೇ ಶಂಕರವಿಜಯಗಳಲ್ಲಿ ಪ್ರಶ್ನಿತವಾಗಿರುವಾಗ ಶಂಕರರು ರಾಮಚಂದ್ರಾಪುರದಲ್ಲೋ ಅಥವಾ ಗೋಕರ್ಣದಲ್ಲೋ ಶಂಕರವಿಜಯಕಾರರ ಕಣ್ಣು ತಪ್ಪಿಸಿ ಮಠ ಸ್ಥಾಪನೆ ಮಾಡಿದ ಸಂದರ್ಭ ಯಾವುದು? ಮಠಾಮ್ನಾಯಸೇತುಗಳಾವುದರಲ್ಲಿ ಅಪ್ಪಿತಪ್ಪಿಯೂ ಗೋಕರ್ಣದ ಹೆಸರಿಲ್ಲ. ವಿದ್ಯಾರಣ್ಯರ ಕಾಲದಲ್ಲಿ ಹರಿಹರ, ಕೂಡ್ಲಿಗಿ, ಕೋಲಾರ ಸೇರಿ ಎಂಟು ಕಡೆಗಳಲ್ಲಿ ಶೃಂಗೇರಿಯ ಶಾಖಾಮಠಗಳನ್ನು ಸ್ಥಾಪಿಸಿದ್ದುದರ ಬಗ್ಗೆ ದಾಖಲೆಗಳಿವೆ. ರಾಮಚಂದ್ರಾಪುರ ಅವುಗಳಲ್ಲೊಂದಾಗಿರಬಹುದೇ?


                                                                                                                                                    .....ಸಶೇಷ