Pages

Tuesday, April 2, 2019

ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು – ೨

ಬೇಪೋರ್ ಸೀವಾಕ್
ಬೇಪೋರ್ ಹಾಗೂ ಫೆರೋಕ್. ಕ್ಯಾಲಿಕಟ್ಟಿನ  ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಚಾಲಿಯಾಮ್ ನದಿ ಸಮುದ್ರ ಸೇರುವಲ್ಲಿನ ಎರಡು ದಡಗಳು. ಭಾರತದ ಮೊದಲ ಸೀವಾಕ್ ನಿರ್ಮಾಣವಾಗಿದ್ದು ಇಲ್ಲೇ. ಭಾರತದಲ್ಲಿ ಮೊದಲು ಹಡಗು ಕಟ್ಟುವ ತಂತ್ರಜ್ಞಾನ ಶುರುವಾಗಿದ್ದೂ ಇಲ್ಲೇ ಅನ್ನಿ. ಬರೀ ಕಾಳ್ಮೆಣಸಲ್ಲ, ಜಪಾನ್, ಅರಬ್, ಮೆಸಪೋಟಮಿಯಾದಂಥ ದೇಶಗಳಿಗೆ ಸಾವಿರಾರು ವರ್ಷಗಳ ಹಿಂದೇ ಹಡಗುಗಳನ್ನು ರಫ್ತು ಮಾಡಿದ ಖ್ಯಾತಿ ಈ ಪ್ರದೇಶಕ್ಕಿದೆ. ಕೇರಳದ ಅತಿ ಸುಂದರ ಸಮುದ್ರ ತೀರಗಳಲ್ಲಿ ಇದೂ ಒಂದು. ಸುಮಾರು ಒಂದು ಮೈಲಿಯುದ್ದ ಸಮುದ್ರವನ್ನು ಸೀಳಿ ಚಾಚಿಕೊಂಡಿರುವ ಸೀವಾಕ್ನಲ್ಲಿ ನಡೆಯುವ ಮಜವೇ ಬೇರೆ. ಇದು ಚಾಲಿಯಾಂನ ಎರಡೂ ಕಡೆ ನಿರ್ಮಾಣವಾಗಿದೆ. ವಾಸ್ಕೋಡಗಾಮ ಮೊದಲು ಭಾರತಕ್ಕೆ ಕಾಲಿಟ್ಟ ಜಾಗವೆಂದು ನಂಬಲ್ಪಡುವ ಜಾಗವಾದ ಬೇಪೋರ್ ಉತ್ತರದಲ್ಲಿದ್ದರೆ, ದಕ್ಷಿಣದಲ್ಲಿರುವ ಫೆರೋಕ್ ಇನ್ನೊಂದು ವಿಶಿಷ್ಟ ಕಾರಣಕ್ಕಾಗಿ ಹೆಸರುವಾಸಿ. ಕ್ಯಾಲಿಕಟ್ಟಿಗೆ ಹೋದಾಗಲೆಲ್ಲ ಇದೆರಡು ಜಾಗಗಳಿಗೆ ಭೇಟಿ ಕೊಡುವುದನ್ನು ನಾನೆಂದೂ ತಪ್ಪಿಸಿಕೊಳ್ಳುವುದಿಲ್ಲ. 
ಫೆಲೆನಾ ಬ್ಲಾವಟ್ಸ್ಕೈ. ಈ ವಿಚಿತ್ರ ಹೆಸರನ್ನು ಯಾರೂ ಕೇಳಿರಲಿಕ್ಕಿಲ್ಲ. ಈಕೆ ರಷ್ಯದ ತತ್ವಶಾಸ್ತ್ರಜ್ಞೆ ಹಾಗೂ ಲೇಖಕಿ. ಮಾತ್ರವಲ್ಲ ಥಿಯೋಸೋಫಿಕಲ್ ಸೊಸೈಟಿಯ ಸ್ಥಾಪಕರಲ್ಲಿ ಒಬ್ಬಳು ಕೂಡ. ೧೮೮೦ರಲ್ಲಿ ಆಕೆ ಮತ್ತು ಆಕೆಯ ಅಮೇರಿಕನ್ ಗಂಡ ಭಾರತಕ್ಕೆ ಬಂದಿಳಿದರು. ಅಡ್ಯಾರನ್ನು ಕೇಂದ್ರವಾಗಿಟ್ಟುಕೊಂಡು ಆರ್ಯ ಸಮಾಜದೊಟ್ಟಿಗೆ ಹಲ ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಫೆಲೆನಾ ದಂಪತಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಮೊದಲ ವಿದೇಶಿ  ಕೂಡ. ಥಿಯೋಸೋಫಿಕಲ್ ಸೊಸೈಟಿ ಬಹುಬೇಗ ಜನಪ್ರಿಯಗೊಂಡಿದ್ದರೂ ಆಕೆಯ ಮೇಲೆ ಬಂದ ಕೆಲ ಆಪಾದನೆಗಳಿಂದ ಅದು ಅಷ್ಟೇ ವೇಗವಾಗಿ ಬಾಗಿಲು ಮುಚ್ಚಿಕೊಂಡಿತು. ಇದಾದ ನಂತರ ಯುರೋಪಿಗೆ ತೆರಳಿದ ಫೆಲೆನಾ ಭಾರತದ ಹಲವು ಸಂಗತಿಗಳ ಬಗ್ಗೆ ವಿವರವಾದ ಲೇಖನಗಳನ್ನು ಬರೆದಿದ್ದಾಳೆ. ಅವುಗಳಲ್ಲೊಂದು ಇನ್ಸ್ಟಿಟ್ಯುಟ್ ಆಫ್ ಫ್ರಾನ್ಸ್ ಮುದ್ರಿಸಿದ ’ಸೀಕ್ರೆಟ್ ಡಾಕ್ಟ್ರೈನ್’. ಇದರಲ್ಲಿನ ಚಟ್ಟಮ್ ಪರಂಬ ಅಥವಾ ಸಾವಿನ ಮೈದಾನ ಎಂಬ ಶೀರ್ಷಿಕೆಯಡಿ ಪ್ರಕಟವಾದ ಮಲಬಾರಿನ ಸ್ಥಳದಲ್ಲಿರುವ ಬೃಹತ್ ಶಿಲಾಯುಗದ ಕಾಲದ ಗೋರಿಗಳು, ಅಲ್ಲಿ ಸಿಕ್ಕ ರಾಶಿಗಟ್ಟಲೆ ಮೂಳೆಗಳು, ವೃತ್ತಾಕಾರದ ಶಿಲೆಗಳು, ಪ್ರಾಗೈತಿಹಾಸಿಕ ಬೌದ್ಧ ವಿಹಾರಗಳ ಅವಶೇಷಗಳ ಮಾಹಿತಿಗಳು ಭಾರತೀಯ ಪುರಾತತ್ವಶಾಸ್ತ್ರಜ್ಞರಿಗೆ ಭಾರೀ ಕುತೂಹಲ ಕೆರಳಿಸಿದ್ದವು.  ೧೯೩೧ರಲ್ಲಿ ಡಾ.ಡುಬ್ರೈಲ್ರ ಮುಂದಾಳತ್ವದಲ್ಲಿ ಮಲಬಾರಿನಲ್ಲಿ ನಡೆದ ಉತ್ಖನನ ಕಾರ್ಯದಲ್ಲಿ ಕ್ರಿ.ಪೂ೨೦೦ರ ಸುಮಾರಿನ ನಾಗರಿಕತೆಯ ಮಜಲೊಂದು ಜಗತ್ತಿಗೆ ತೆರೆದುಕೊಂಡಿತು. ಈ ಚಟ್ಟಮ್ ಪರಂಬ ಎಂದು ಆಪಭೃಂಶಿಕವಾಗಿ ಕರೆಯಲ್ಪಟ್ಟದ್ದು ಇದೇ ಫೆರೋಕಿನ ಚೆನ್ನಪರಂಬು. ಆ ಕತೆ ಇನ್ನೊಮ್ಮೆ ನೋಡೋಣ. ಈಗ ಟಿಪ್ಪುವಿನದ್ದು ಮುಂದುವರೆಸಬೇಕಲ್ಲ!
ಹದಿನೆಂಟನೇ ಶತಮಾನದ ಉತ್ತರಾರ್ಧ ದಕ್ಷಿಣ ಭಾರತದ ಚರಿತ್ರೆಯಲ್ಲೊಂದು ಮಹತ್ವದ ಕಾಲಘಟ್ಟ. ಈ ಭಾಗದ ಎರಡು ಅತಿಮುಖ್ಯ ರಾಜ್ಯಗಳಾದ ಕರ್ನಾಟಿಕ್ ಹಾಗೂ ಮೈಸೂರು ರಾಜಕೀಯ ಕ್ಷೋಭೆ ಮತ್ತು ಆರ್ಥಿಕ ದಿವಾಳಿತನಕ್ಕೆ ಈಡಾಗುವ ಹಂತದಲ್ಲಿದ್ದವು. ಇಂತಹ ಗೊಂದಲಕಾರಿ ಪರಿಸ್ಥಿತಿಯ ಲಾಭವನ್ನು ಆಯಕಟ್ಟಿನ ಜಾಗೆಯಲ್ಲಿರುವ ಯಾವುದೇ ಮಹತ್ವಾಕಾಂಕ್ಷಿ ಪಡೆಯದೇ ಬಿಟ್ಟಾನೇ? ಹೈದರಾಲಿ ಮಾಡಿದ್ದೂ ಅದೇ. ಆತನ ಪ್ರಬಲ ಮಿಲಿಟರಿ ಬಲ ಹಾಗೂ ದೂರದೃಷ್ಟಿ ೧೭೬೧ರಲ್ಲಿ ಮೈಸೂರಿನ ಗದ್ದುಗೆಯವರೆಗೆ ತಂದು ಕೂರಿಸಿತು. ಸಿಂಹಾಸನ ಸಿಕ್ಕ ಮೇಲೆ ಬರೀ ತನ್ನ ರಾಜ್ಯವೊಂದು ಸಾಕಾದೀತೇ? ಆತನ ಕಣ್ಣು ಅಕ್ಕಪಕ್ಕದ ರಾಜ್ಯಗಳ ಮೇಲೂ ಬಿತ್ತು. ಇನ್ನೇನು! ಸ್ವಲ್ಪವೂ ತಡಮಾಡದೇ ಸಾಮ್ರಾಜ್ಯ ವಿಸ್ತಾರದ ಕೆಲಸ ಶುರುವಿಟ್ಟುಕೊಂಡ. ೧೭೬೩ರಲ್ಲಿ ಬಿದನೂರಿನ ವಶ ಆತನನ್ನು ಕೇರಳದ ಗಡಿಯವರೆಗೆ ತಂದು ನಿಲ್ಲಿಸಿತ್ತು. ಕೇರಳದಲ್ಲಿ ಒಂದು ಪ್ರಬಲ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇಲ್ಲದೇ ಹೋಗಿದ್ದು ಕೂಡ ಹೈದರನಿಗೆ ವರವಾಗಿ ಪರಿಣಮಿಸಿತು. ಆ ಕಾಲಕ್ಕೆ ಕೇರಳ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಹಂಚಿ ಹೋಗಿತ್ತು. ಅವೇ ಕಲ್ಲೀಕೋಟೆ, ಕೊಲತ್ತನಾಡು, ಕೊಚ್ಚಿ ಹಾಗೂ ತ್ರಾವೆಂಕೂರು. ಅದೂ ಅಲ್ಲದೇ ಕಣ್ಣೂರು, ಪಾಲ್ಘಾಟ್,  ಕುರುಂಬನಾಡು, ಕೊಟ್ಟಾಯಂನಂಥ ಸಣ್ಣಪುಟ್ಟ ಪಾಳೆಪಟ್ಟುಗಳೂ ಹತ್ತಾರಿದ್ದವು. ಅಂದಕಾಲತ್ತಿಲೈ ಕಾಲದಿಂದಲೂ ಕೇರಳದ ಅರಸೊತ್ತಿಗೆಗಳೆಲ್ಲ ತಮ್ಮತಮ್ಮಲ್ಲೇ ದುಸುಮುಸು ಎಂದು ಸಣ್ಣಪುಟ್ಟ ಜಗಳವಾಡಿಕೊಂಡಿದ್ದವೇ ಹೊರತೂ ಅವು ಮೂಲತಃ ಹೊರಗಿನ ಯಾರ ಮೇಲೂ ಏರಿ ಹೋದವಲ್ಲ. ಭಾರತಕ್ಕೆ ಯಹೂದಿಗಳೂ, ಕ್ರೈಸ್ತರೂ, ಮುಸ್ಲೀಮರೂ ಮೊದಲು ಆಗಮಿಸಿದ್ದು ಕೇರಳದ ಮೂಲಕವೇ ಅಲ್ಲವೇ.  ಅವರೆಲ್ಲ ಆ ಸಂಸ್ಕೃತಿಯಲ್ಲಿ ಬೆರೆತುಹೋದರೇ ವಿನಹ ಯಾರೂ ಯಾರ ಮೇಲೂ ಆಕ್ರಮಣ ಮಾಡಿದವರಲ್ಲ. ಹಾಗಾಗಿ ಕೇರಳ ಪ್ರಬಲ ಮಿಲಿಟರಿ ಶಕ್ತಿಯಾಗಿ ಇತಿಹಾಸದಲ್ಲಿ ಬೆಳೆದ ಯಾವ ದಾಖಲಾತಿಗಳೂ ಇಲ್ಲ. ಹೆಚ್ಚಿನಂಶ ಆ ಅವಶ್ಯಕತೆಯೇ ಅವರಿಗಿರಲಿಲ್ಲ ಎನ್ನಿ. ಇದೇ ಕಾರಣದ ಜೊತೆಗೆ ಮಲಬಾರಿನ ಕಣ್ಣುಕುಕ್ಕುವ ಶ್ರೀಮಂತಿಕೆ, ಸಮುದ್ರವ್ಯಾಪಾರಗಳೆಲ್ಲ ಸೇರಿ ಹೈದರನನ್ನು ಕೇರಳದ ಮೇಲೆ ಆಕ್ರಮಣ ಮಾಡುವಲ್ಲಿ ಪ್ರಚೋದಿಸಿದ್ದು ಸ್ವಾಭಾವಿಕವೇ. 
೧೭೬೬ರಲ್ಲಿ ಹೈದರ್ ತನ್ನ ಹನ್ನೆರಡು ಸಾವಿರ ಸೈನಿಕರೊಡನೆ ಮಲಬಾರಿನತ್ತ ಹೊರಟ. ಕಣ್ಣೂರನ್ನಾಳುತ್ತಿದ್ದ ಅಲಿರಾಜನ ಕಥೆ ನಿಮಗೆ ಗೊತ್ತೇ ಇದೆ. ಕೇರಳದ ಏಕೈಕ ಮುಸ್ಲಿಂ ರಾಜವಂಶವದು. ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಹೈದರನಿಗೆ ಸರ್ವಸಹಾಯವನ್ನೂ ಅಲಿರಾಜ ಒದಗಿಸಿದ. ಜಾತಿಯ ಕಾರಣಕ್ಕೆ ಕೆಲ ಸ್ಥಳೀಯ ಮಾಪಿಳ್ಳೆಗಳ ಸಹಾಯವೂ ಒಟ್ಟಿಗಿತ್ತು. ಮತ್ತೇನು ಬೇಕು? ನೋಡನೋಡುತ್ತಿದ್ದಂತೆ ಕೊಲತ್ತನಾಡು, ಕೊಟ್ಟಾಯಂ,  ಕಡತ್ತನಾಡು, ಕುರುಂಬನಾಡು, ಕೊಟ್ಟಾಯಂಗಳನ್ನು ಒಂದರ ಹಿಂದೊಂದರಂತೆ ವಶಪಡಿಸಿಕೊಂಡ ಮೈಸೂರು ಪಡೆ ಕಲ್ಲಿಕೋಟೆಯ ಬಾಗಿಲಲ್ಲಿ ನಿಂತಿತ್ತು. ತನ್ನ ಪರಿವಾರದವರನ್ನು ತ್ರಾವೆಂಕೂರಿಗೆ ಕಳಿಸಿದ ಸಾಮೂದಿರಿ ರಾಜ ಅರಮನೆಗೆ ಬೆಂಕಿಯಿಟ್ಟು ಆತ್ಮಹತ್ಯೆ ಮಾಡಿಕೊಂಡ. ಯುದ್ಧವಿಲ್ಲದೇ ಕಲ್ಲಿಕೋಟೆ ಮೈಸೂರಿನ ತೆಕ್ಕೆ ಸೇರಿತು.  ಸಾಮೂದಿರಿಗಳ ಕೊನೆಯೊಂದಿಗೆ ಮಲಬಾರಿನ ವಿದೇಶಿ ವ್ಯಾಪಾರದ ಸಂಪೂರ್ಣ ಹಿಡಿತ ಹೈದರನ ಕೈಸೇರಿತು. ಇದೇ ಸಂಬಂಧ ವಡಗರದಲ್ಲಿ ವಸಾಹತೊಂದನ್ನು ನಿರ್ಮಿಸಲಾಯಿತು. ಮರಾಠರನ್ನು ನಿಯಂತ್ರಿಸುವ ಕೆಲಸವಿದ್ದುದರಿಂದ ಆತ ಕೇರಳದಲ್ಲಿ ಹೆಚ್ಚು ಸಮಯ ಕಳೆಯಬಯಸಲಿಲ್ಲವಿರಬೇಕು. ತನ್ನ ಮಂತ್ರಿ ಮಾದಣ್ಣನನ್ನು ಮಲಬಾರಿನ ರಾಜ್ಯಪಾಲನಾಗಿ ನೇಮಿಸಿದ ಹೈದರ್ ಕೊಯಂಬತ್ತೂರಿನತ್ತ ತೆರಳಿದ. ಕೊಲತ್ತನಾಡು, ಕಲ್ಲಿಕೋಟೆಯ ಅನುಪಸ್ಥಿತಿಯಲ್ಲಿ ಕಣ್ಣೂರಿನ ಅಲಿರಾಜರು ಉತ್ತರ ಕೇರಳದ ಪ್ರಬಲ ಶಕ್ತಿಯಾಗಿ ಉದಯಿಸಲು ಈ ಘಟನೆ ಸಹಾಯಕವಾಯ್ತು.
ಆದರೆ ಅಷ್ಟೊತ್ತಿಗೆ ಇನ್ನೊಂದು ಸಮಸ್ಯೆ ಶುರುವಾಯಿತು. ಕೊಟ್ಟಾಯಂ ಹಾಗೂ ಕಡತ್ತನಾಡುಗಳಲ್ಲಿ ನಾಯರ್ ಯೋಧರು ಮೈಸೂರಿನ ವಿರುದ್ಧ ಸಾಮೂಹಿಕವಾಗಿ ಬಂಡೆದ್ದರು. ಕೊಟ್ಟಾಯಂನಿಂದ ನಾಲ್ಕು ಸಾವಿರ ಬಲದ ಹೈದರನ ಸೈನ್ಯವನ್ನು ಜನರೇ ಒಟ್ಟುಗೂಡಿ ಒದ್ದೋಡಿಸಿದರು. ಇದು ಪೊನ್ನಾನಿ ಸೇರಿ ಮಲಬಾರಿನ ಉಳಿದ ಭಾಗಗಳಿಗೂ ವ್ಯಾಪಿಸಿತು. ಅದೃಷ್ಟವಶಾತ್ ಮಾದಣ್ಣನ ರಾಜತಾಂತ್ರಿಕತೆ ಹೈದರನ ಸಹಾಯಕ್ಕೆ ಬಂದಿತು. ಅಲಿರಾಜನಿಗೆ ತೊಂದರೆ ಕೊಡಬಾರದು, ಪಾಲ್ಘಾಟಿನ ಕೋಟೆಯನ್ನು ವಶಪಡಿಸಿಕೊಳ್ಳಬಾರದು ಎಂಬ ಎರಡು ಕೋರಿಕೆಗಳನ್ನಿಟ್ಟು ೧೭೬೮ರಲ್ಲಿ ಹೈದರನ ಸೈನ್ಯ ಮಲಬಾರಿನಿಂದ ಕಾಲ್ಕಿತ್ತಿತು. ಸಾಮೂದಿರಿ, ಕೊಳತ್ತಿರಿ ಹಾಗೂ ಕೊಟ್ಟಾಯಂ ಅರಸರು ತಮ್ಮ ರಾಜ್ಯಕ್ಕೆ ಹಿಂದಿರುಗಿದರು. ಇದಾಗಿ ಆರು ವರ್ಷ ಹೈದರ ಕೇರಳದತ್ತ ಹೈದರ್ ತಲೆಹಾಕಲಿಲ್ಲ.  ಇಷ್ಟಾದರೂ ಮಲಬಾರಿಗಳು ಪಾಠಕಲಿಯಲಿಲ್ಲ. ತಮ್ಮ ಸೈನ್ಯಬಲವನ್ನು ಹೆಚ್ಚಿಸಿಕೊಳ್ಳುವುದನ್ನು ಬಿಟ್ಟು ಇನ್ನು ಹೈದರನ ಕಾಟವಿಲ್ಲವೆಂದು ಆರಾಮಾಗಿ ಕಾಲಕಳೆಯುವ ಮಲಯಾಳಿಗಳ ಹಳೆಯ ಚಾಳಿ ಮುಂದುವರೆಯಿತು. ತ್ರಿಪ್ಪರಯೂರಿನ ದೇವಸ್ಥಾನವೊಂದಕ್ಕೆ ಯಾರನ್ನು ಅರ್ಚಕರಾಗಿ ನೇಮಿಸಬೇಕೆಂಬ ಕ್ಷುಲ್ಲಕ ವಿಷಯಕ್ಕೆ ಸಾಮೂದಿರಿಯೂ ಕೊಚ್ಚಿಯ ಪೆರುಂಪಡಪ್ಪು ರಾಜನೂ ಕಿತ್ತಾಡಿ ಒಬ್ಬರ ಮುಖ ಇನ್ನೊಬ್ಬರು ನೋಡುವುದನ್ನು ಬಿಟ್ಟರು. 
೧೭೭೩ರಲ್ಲಿ ಕೊಡಗನ್ನು ಗೆದ್ದ ಹೈದರನಿಗೆ ವಯನಾಡಿನ ಮೂಲಕ ಕೇರಳ ಸುಲಭದ ತುತ್ತಾಗಿತ್ತು. ಒಂದು ಕಡೆ ಸಯೀದ್ ಸಾಹಿಬನ ನೇತೃತ್ವದಲ್ಲಿ ತಾಮ್ರಶ್ಶೇರಿ ಘಟ್ಟದ ಮಾರ್ಗವಾಗಿ ಇನ್ನೊಂದು ಕಡೆ ಶ್ರೀನಿವಾಸ ರಾಯನ ಮುಂದಾಳತ್ವದಲ್ಲಿ ಕೊಯಂಬತ್ತೂರು, ಪಾಲ್ಘಾಟಿನ ಮಾರ್ಗವಾಗಿ ಬಂದ ಹೈದರನ ಪಡೆ ಮಲಬಾರನ್ನು ಎರಡೂ ಕಡೆಯಿಂದ ಮುತ್ತಿತು. ಅದಾಗಲೇ ಫ್ರೆಂಚರೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಹೈದರನಿಗೆ ಅತ್ಯಾಧುನಿಕ ಯುದ್ಧಸಲಕರಣೆಗಳೂ ದೊರಕಿದ್ದವು. ಮಲಬಾರನ್ನು ಮುಗಿಸಿದ ಬಳಿಕ ಆತನ ಮುಂದಿನ ಗುರಿಯಿದ್ದುದು ಕೊಚ್ಚಿ. ಸರ್ದಾರ್ ಖಾನಿನ ಜೊತೆ ಕಳಿಸಲ್ಪಟ್ಟ ದೊಡ್ಡದೊಂದು ಸೈನ್ಯ ತ್ರಿಶ್ಶೂರಿನ ತನಕದ ರಾಜ್ಯಗಳನ್ನೆಲ್ಲ ಕಬಳಿಸಿತು. ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಸಿಕ್ಕ ಕೊಚ್ಚಿ ರಾಜ ಹೈದರನಿಗೆ ಕಪ್ಪ ಕೊಡಲು ಒಪ್ಪಿಕೊಂಡ. ಹೈದರನ ಮುಂದಿನ ಗುರಿಯಿದ್ದುದು ತ್ರಾವೆಂಕೂರು. ಕೊಚ್ಚಿಯನ್ನು ದಾಟಿ ಚೆಟ್ಟುವಾಯಿ, ಪಾಪ್ಪಿನಿವಟ್ಟಂಗಳಲ್ಲಿನ ಡಚ್ಚರ ವಸಾಹತುಗಳನ್ನು ವಶಪಡಿಸಿಕೊಂಡು, ಕೊಡಂಗಾಲ್ಲೂರು ರಾಜನನ್ನು ಸೋಲಿಸಿ  ಮುಂದುವರೆದ ಮೈಸೂರಿನ ಪಡೆಗಳನ್ನು ಸಮರ್ಥವಾಗಿ ಎದುರಿಸಿದವನು ತ್ರಾವೆಂಕೂರಿನ ರಾಜಾ ಕೇಶವದಾಸ. ಐದು ವರ್ಷ ಭಗೀರತ ಯತ್ನ ಮಾಡಿದರೂ ತ್ರಾವೆಂಕೂರಿನ ಕೂದಲು ಕೊಂಕಿಸಲೂ ಮೈಸೂರಿಗಾಗಲಿಲ್ಲ. ಇದರ ಮಧ್ಯೆ ಇಂಗ್ಲೀಷರು ಮಾಹೆ ಮತ್ತು ತಲಶೇರಿಯನ್ನು ಪುನಃ ಕೈವಶಮಾಡಿಕೊಂಡುಬಿಟ್ಟರು. ಒಂದೂವರೆ ವರ್ಷ ಬರಿ ಅವರೊಡನೆ ಗುದ್ದಾಡುವುದರಲ್ಲೇ ಹೈದರ ಕಳೆದ. ಅದಕ್ಕಾಗಿ ಆತನಿಗೆ ದೊಡ್ಡಮೊತ್ತದ ಹಣದ ಅವಶ್ಯಕತೆ ಬಿತ್ತು. ಅತ್ತ ರಟ್ಟಿಹಳ್ಳಿಯ ಹತ್ತಿರ ನಡೆದ ಕದನದಲ್ಲಿ ಮರಾಠರಿಗೆ ಸೋತು ೩೫ ಲಕ್ಷ ಕಪ್ಪ ಕೊಡಬೇಕಾಗಿ ಬಂದುದರಿಂದ ಬೊಕ್ಕಸ ಬರಿದಾಗಿತ್ತು.ಪರಿಣಾಮವಾಗಿ ಅತಿಕ್ರೂರ ತೆರಿಗೆ ಪದ್ಧತಿಯನ್ನು ಮಲಬಾರಿನ ಹಿಂದೂಗಳ ಮೇಲೆ ಹೇರಲಾಯಿತು. ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಮಲಬಾರಿನ ಇತಿಹಾಸದಲ್ಲಿ ಮೊದಲ ಬಾರಿ ಅಧಿಕೃತ ಭೂಕಂದಾಯದ ವ್ಯವಸ್ಥೆ ಜಾರಿಯಾಗಿದ್ದು ಹೈದರನ ಕಾಲದಲ್ಲೇ. ತ್ರಾವೆಂಕೋರ್, ಕಲ್ಲಿಕೋಟೆ, ಕೊಚ್ಚಿನ್ ಸಂಸ್ಥಾನಗಳಲ್ಲೆಲ್ಲ ಅಲ್ಲಿನ ಜನ ಗೌರವಪೂರ್ವಕವಾಗಿ ರಾಜನಿಗೆ ಕೊಡುತ್ತಿದ್ದುದು ವರ್ಷಕ್ಕಿಂತಿಷ್ಟೆಂದು ರಕ್ಷಣಾ ನಿಧಿ ಮಾತ್ರ. ಇಂಥದ್ದರಲ್ಲಿ ಇದ್ದಕ್ಕಿದ್ದಂತೆ ಮಲಬಾರಿನಲ್ಲಿ ಭೂಕಂದಾಯ, ಆದಾಯ ತೆರಿಗೆಗಳೆಲ್ಲ ಒಟ್ಟೊಟ್ಟಿಗೆ ಜಾರಿಗೆ ಬಂದವು. ಅದರಲ್ಲೂ ಹಿಂದೂಗಳು ಆದಾಯದ ೫೦% ಕಂದಾಯ ಕಟ್ಟಬೇಕಾಗಿದ್ದರೆ ಮುಸ್ಲಿಮರಿಗೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಯಿತು. ಆದರಿದು ಬಹಳ ಕಾಲ ನಡೆಯಲಿಲ್ಲ.  ಮಲಬಾರಿನ ಸಣ್ಣಪುಟ್ಟ ಆಳರಸರೆಲ್ಲ ಇಂಗ್ಲೀಷರ ಜೊತೆ ಕೈಜೋಡಿಸಿ ಮೈಸೂರಿನ ಸೈನ್ಯವನ್ನು ಮತ್ತೊಮ್ಮೆ ಕೇರಳದಿಂದ ಕಾಲ್ಕೀಳುವಂತೆ ಮಾಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದವು. ಅಳಿದುಳಿದ ಕೋಟೆಗಳನ್ನು ರಕ್ಷಿಸಿಕೊಳ್ಳಲು ಟಿಪ್ಪು ಕೇರಳಕ್ಕೆ ಬಂದಿಳಿಯುತ್ತಿದ್ದಂತೆ ಅತ್ತ ಹೈದರನೂ ಮೃತಪಟ್ಟ(೧೭೮೨ ಡಿಸೆಂಬರ್ ೭). ರಾಜ್ಯ ಕೈಜಾರಬಹುದೆಂಬ ಹೆದರಿಕೆಯಿಂದ ಹೈದರನ ಆಪ್ತವಲಯ ಹೊರಜಗತ್ತಿಗೆ ವಿಷಯ ತಿಳಿಸದೇ ಟಿಪ್ಪುವಿಗೆ ಮಾತ್ರ ಗುಪ್ತ ಸಂದೇಶ ಕಳುಹಿಸಿತು. ಮಲಬಾರಿನ ದಂಗೆಯನ್ನಡಗಿಸಲು ಬಂದವ ಸಿಂಹಾಸನ ತಪ್ಪಿದರೆ ಎಂಬ ಹೆದರಿಕೆಯಿಂದ ಓಡೋಡಿ ಹೋಗಿ ಕುರ್ಚಿ ಹತ್ತಿ ಕೂತ. ಸರ್ ಅಯರ್ ಕೂಟ್ ನಿವೃತ್ತನಾಗಿ ಹೊಸ ಎಳೆನಿಂಬೆಕಾಯಿ ಬ್ರಿಟಿಷ್ ಅಧಿಕಾರಿ ಬಂದಿದ್ದರಿಂದ ಸಂದರ್ಭವನ್ನುಪಯೋಗಿಸಿಕೊಳ್ಳುವ ಅವಕಾಶ ಬ್ರಿಟಿಷರಿಗೂ ತಪ್ಪಿಹೋಯ್ತು. ಹೈದರನ ಮರಣಕಾಲಕ್ಕೆ ಮೈಸೂರು ದಕ್ಷಿಣ ಭಾರತದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿತ್ತು. ಹೈದರನನ್ನು ತೆಗಳಲು ಸಾವಿರ ಕಾರಣಗಳಿರಬಹುದು. ಆದ ಹುಟ್ಟಾ ದರಿದ್ರನಾದ ಹೆಬ್ಬೆಟ್ಟು ಹೈದನೊಬ್ಬ ತನ್ನ ಅಪ್ರತಿಮ ಮಹತ್ವಾಕಾಂಕ್ಷೆ, ಅದಮ್ಯ ಶಕ್ತಿಯಿಂದ ಅಷ್ಟು ದೊಡ್ಡ ಸಾಮ್ರಾಜ್ಯವೊಂದಕ್ಕೆ ಒಡೆಯನಾದದ್ದು ಖಂಡಿತ ಮೆಚ್ಚತಕ್ಕ ವಿಷಯ. He was a self made man. ತನ್ನ ಬುದ್ಧಿವಂತಿಕೆ, ಯುದ್ಧಕೌಶಲ, ರಾಜತಾಂತ್ರಿಕತೆಯ ಮೂಲಕ ಆತ ಸಾಧಿಸಿದ ವಿಜಯಗಳು ಭಾರತೀಯ ಇತಿಹಾಸಕ್ಕೆ ಸಾಹಸಮಯ ಅಧ್ಯಾಯವೊಂದನ್ನು ಸೇರಿಸಿದ ಅಗ್ಗಳಿಕೆಯಂತೂ ಹೌದು. 
ಪಾಲಕ್ಕಾಡ್ ಕೋಟೆ
ಟಿಪ್ಪು ಪಟ್ಟಕ್ಕೇರಿದ್ದಷ್ಟೆ. ಮೈಸೂರಿನೊಳಗಿನ ಬಂಡಾಯವನ್ನು ಥಂಡಾಗೊಳಿಸಲು ಆತ ಸಾಕಷ್ಟು ಒದ್ದಾಡಬೇಕಾಯಿತು. ಬ್ರಿಟಿಷರು ಬಿಡುತ್ತಾರೆಯೇ? ಸಮಯ ನೋಡಿ ಬಿದನೂರು ಹಾಗೂ ಮಂಗಳೂರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ದಕ್ಷಿಣದಿಂದಲೂ ಆಕ್ರಮಿಸಿ ಪಾಲ್ಘಾಟಿನ ಕೋಟೆಯನ್ನೂ ವಶಪಡಿಸಿಕೊಂಡು ಸಾಮೂದಿರಿಗೆ ಬಿಟ್ಟುಕೊಟ್ಟರು. ಈ ಘಟನೆ ಟಿಪ್ಪುವನ್ನು ಕೆರಳಿಸಿದ್ದಲ್ಲದೇ ಮಲಬಾರಿನ ಮೇಲೆ ಮತ್ತೊಮ್ಮೆ ದಾಳಿ ಮಾಡುವ ಅವಕಾಶವನ್ನು ಒದಗಿಸಿತು. ತಾನೇ ಮುಂದೆ ನಿಂತು ಯುದ್ಧ ಸಂಘಟಿಸಿದವ ಪಾಲ್ಘಾಟಿನ ಮೇಲೆ ಆಕ್ರಮಣವೆಸಗಿಯೇ ಬಿಟ್ಟ. ಈಬಾರಿ ಇದನ್ನು ಮೊದಲೇ ಊಹಿಸಿದ್ದ ಸಾಮೂದಿರಿ ಟಿಪ್ಪುವನ್ನು ಸಮರ್ಥವಾಗಿ ಎದುರಿಸಿದ. ಟಿಪ್ಪುವಿಗೆ ಕೂಟನೀತಿಗಳಿಗೇನು ಬರವೇ? ಸಾಮೂದಿರಿಯನ್ನು ಮಣಿಸಲು ಅವನಿಗೆ ಬೇರೆ ದಾರಿಗಳೂ ಇದ್ದವು. ಪಾಲಕ್ಕಾಡ್ ಬ್ರಾಹ್ಮಣರನ್ನೆಲ್ಲ ಹಿಡಿದು ತರುವಂತೆ ತನ್ನ ಸೈನಿಕರಿಗೆ ಆದೇಶಿಸಿದ. ಹಾಗೆ ಹಿಡಿದು ತಂದವರನ್ನು ದಿನಕ್ಕಿಂತಿಷ್ಟು ಎಂಬಂತೆ ಪಾಲ್ಘಾಟ್ ಕೋಟೆಯ ಎದುರು ನಿಲ್ಲಿಸಿ ಸಾಮೂದಿರಿ ಹಾಗೂ ಊರವರಿಗೆ ಕಾಣುವಂತೆ ಸಾಲಾಗಿ ತಲೆಕಡಿಸಿ ದೊಡ್ಡ ಬಿದಿರು ಗಳಗಳಿಗೆ ತೂಗಿಹಾಕಿದ. ಸಾಮೂದಿರಿ ಅಂಥ ಬರ್ಬರತೆಯನ್ನು ಕಣ್ಣಾರೆ ನೋಡುವುದಕ್ಕಿಂದ ಕೋಟೆ ಬಿಟ್ಟುಕೊಡುವುದೇ ಉಚಿತವೆಂದು ಭಾವಿಸಿದ. ತನ್ನ ಕಡೆಯ ನಾಲ್ಕು ಸೈನಿಕರೂ ಸಾಯದೇ ಕೊಟ್ಟ ನದಿಯವರೆಗಿನ ಪ್ರದೇಶ ಟಿಪ್ಪುವಿನ ಕೈವಶವಾಯ್ತು. ಮುಂದೆ ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಂಧಿಯಂತೆ ಬ್ರಿಟಿಷರು ಮಲಬಾರಿನ ಮೇಲಿದ್ದ ತಮ್ಮ ಅಧಿಪತ್ಯವನ್ನು ಟಿಪ್ಪುವಿಗೆ ಬಿಟ್ಟುಕೊಟ್ಟರು. ಅಲ್ಲಿಂದ ಶುರುವಾಗಿದ್ದು ಕೇರಳ ಕನಸುಮನಸ್ಸಿನಲ್ಲೂ ಯೋಚಿಸದಿದ್ದ ಕರಾಳ ಅಧ್ಯಾಯ. ಟಿಪ್ಪು ಮಾಡಿದ ಮೊದಲ ಕೆಲಸವೆಂದರೆ ಹೈದರನ ಕಾಲದಿಂದಿದ್ದ ದೇವಸ್ಥಾನಗಳ ತೆರಿಗೆ ವಿನಾಯಿತಿ ರದ್ದುಗೊಳಿಸಿದ್ದು ಹಾಗೂ ಆದಾಯದಲ್ಲಿ ಮುಕ್ಕಾಲು ಪಾಲು ಕಡ್ಡಾಯವಾಗಿ ತೆರಿಗೆ ಕಟ್ಟಬೇಕೆಂದು ಕಟ್ಟಾಜ್ಞೆಯನ್ನು ಹೊರಡಿಸಿದ್ದು. ಅಷ್ಟು ಮಾತ್ರವಲ್ಲ. ಕಂಡಕಂಡವರನ್ನು ಸಿಕ್ಕಸಿಕ್ಕಲ್ಲಿ ಮತಾಂತರಿಸಲಾಯ್ತು. ಪರಪ್ಪನಾಡು, ನಿಲಂಬೂರು, ಚಿರಕ್ಕಲ್, ಪುನ್ನತ್ತೂರು, ಕವಲಪಾರಾ, ಅಲವಂಚೇರಿ, ತ್ರಿಂಚೆರದ ಆಳರಸರನ್ನು ಪರಿವಾರ ಸಮೇತ ಹಿಡಿದು ಸುನ್ನತ್ ಮಾಡಿಸಿ, ದನದ ಮಾಂಸ ತಿನ್ನಿಸಿ ಇಸ್ಲಾಮಿಗೆ ಮತಾಂತರಿಸಿಬಿಟ್ಟ. ಏಳುಸಾವಿರ ಮನೆಗಳಿದ್ದ ಕಲ್ಲಿಕೋಟೆ ಪಟ್ಟಣದಲ್ಲಿ ಒಂದು ಮನೆಯೂ ಉಳಿಯದಂತೆ ನೆಲಸಮ ಮಾಡಲಾಯ್ತು. ಕಲ್ಲೀಕೋಟೆಯೊಂದರಲ್ಲೇ ಹನ್ನೆರಡು ಸಾವಿರ ಹಿಂದೂಗಳಿಗೆ ಇಸ್ಲಾಮಿನ ಗೌರವವನ್ನು ಪ್ರದಾನಮಾಡಿದ್ದಾಗಿಯೂ(!?), ಐದು ಸಾವಿರ ನಂಬೂದಿರಿಗಳನ್ನು ಕೊಂದು ಮರಕ್ಕೆ ನೇತು ಹಾಕಲಾಯ್ತೆಂದೂ ಟಿಪ್ಪು ಪತ್ರಗಳಲ್ಲಿ ಸ್ವತಃ ಬರೆದುಕೊಂಡಿದ್ದಾನೆ(ಜನವರಿ ೧೮,೧೭೯೦ರಂದು ಸಯದ್ ಅಬ್ದುಲ್ ದುಲಾಯಿ, ಮಾರ್ಚ್ ೨೨, ೧೭೮೮ರಂದು ಕಟ್ಟಂಚೇರಿ ಅಬ್ದುಲ್ ಖಾದರ್, ಡಿಸೆಂಬರ್ ೧೪, ೧೭೮೮ರಂದು ಬದ್ರೊಸ್ ಸಮಾನ ಖಾನರಿಗೆ ಬರೆದದ್ದು). ಆತನೇ ಬರೆದುಕೊಂಡಂತೆ ಮಲಬಾರಲ್ಲಿ ಅಧಿಕೃತವಾಗಿ ಮತಾಂತರಗೊಂಡ ಹಿಂದೂಗಳ ಸಂಖ್ಯೆ ಬರೋಬ್ಬರಿ ನಾಲ್ಕು ಲಕ್ಷ. ಅದಕ್ಕೊಪ್ಪದವರನ್ನು ಆನೆಯ ಕಾಲ್ಕೆಳಗೆ ತುಳಿಸಿ ಕೊಲ್ಲಲಾಯ್ತು. ಫ್ರೆಂಚ್ ಕಮಾಂಡರ್ ಲಲ್ಲಿಯ ನೇತೃತ್ವದಲ್ಲಿ ಮೂವತ್ತು ಸಾವಿರ ಸೈನಿಕರು ಹಗಲು ರಾತ್ರಿಯೆನ್ನದೇ ಮಲಬಾರಿನ ಒಂದು ಮನೆಯನ್ನೂ ಬಿಡದೇ ಒಂದೋ ಮತಾಂತರಿಸಲಾಯ್ತು ಇಲ್ಲವೇ ಕೊಲ್ಲಲಾಯ್ತು. ಮೂವತ್ತು ಸಾವಿರ ನಂಬೂದಿರಿಗಳು ತಮ್ಮ ಜೀವವನ್ನೂ, ಧರ್ಮವನ್ನೂ ಉಳಿಸಿಕೊಳ್ಳಲು ಮನೆಮಾರುಗಳನ್ನು ಬಿಟ್ಟು ತ್ರಾವೆಂಕೋರಿಗೆ ಓಡಿಹೋಗಿ ಧರ್ಮರಾಜ ರಾಜಾರಾಮವರ್ಮನ ಆಶ್ರಯ ಪಡೆದರು. ಜೀವವೊಂದು ಉಳಿದರೆ ಸಾಕೆಂದು ಕೆಲವರು ಮತಾಂತರಗೊಂಡು ಮಲಬಾರಿನಲ್ಲೇ ಉಳಿದರು. ಬ್ರಾಹ್ಮಣರನ್ನೆಲ್ಲ ಮುಗಿಸಿದ ಬಳಿಕ ಆತನ ಸಿಟ್ಟು ತಿರುಗಿದ್ದು ನಾಯರ್ ಸಮುದಾಯದ ಮೇಲೆ. ಅದಕ್ಕೊಂದು ಕಾರಣವೂ ಇತ್ತು. ಕಲ್ಲೀಕೋಟೆಯಲ್ಲಿ ಝಾಮೋರಿನ್ನಿನ ಸೋದರಳಿಯ ರವಿವರ್ಮ ಸ್ಥಳೀಯ ನಾಯರ್ ಯೋಧರ ಸಹಾಯದಿಂದ ಮೈಸೂರು ಪಡೆಯ ವಿರುದ್ಧ ಗೆರಿಲ್ಲಾ ಯುದ್ಧ ಶುರುಮಾಡಿದ. ಜಪ್ಪಯ್ಯ ಎಂದರೂ ರವಿವರ್ಮನನ್ನು ಹಿಡಿಯಲು ಟಿಪ್ಪುವಿನಿಂದಾಗಲಿಲ್ಲ. ಅದೇ ಸಮಯಕ್ಕೆ ಕಡತ್ತನಾಡು ಹಾಗೂ ಕೊಟ್ಟಾಯಂನ ಪಳಸ್ಸಿರಾಜರು ಮೈಸೂರಿನ ವಿರುದ್ಧ ಯುದ್ಧ ಘೋಷಿಸಿದರು. ಪಾಲಕ್ಕಾಡಿನಿಂದ ಕೊಟ್ಟಾಯಂನ ತನಕ ಒಬ್ಬ ನಾಯರ್ ಯುವಕನ ತಲೆಯೂ ಉಳಿಯುವಂತಿಲ್ಲ ಎಂದು ಟಿಪ್ಪು ತನ್ನ ಸೈನ್ಯಕ್ಕೆ ಆಜ್ಞೆ ಹೊರಡಿಸಿದ. ನಾಯರ್ ಸಮುದಾಯದ ಯಾವುದೇ ವ್ಯಕ್ತಿಗೆ ಆಶ್ರಯ ಕೊಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬ್ರಿಟಿಷರಿಗೂ ಫರ್ಮಾನು ಜಾರಿಗೊಳಿಸಿದ. ಮಲಬಾರ್ ಮ್ಯಾನುಯೆಲ್ ಹೇಳುವಂತೆ ನಾಯರ್ ಸಮುದಾಯಕ್ಕೆ ರಕ್ಷಣೆ ನೀಡಿದ ಕಾರಣಕ್ಕೆ ಹದಿನೇಳು ಜನ ಚಿರಕ್ಕಲ್ಲಿನ ರಾಜಪರಿವಾರದವರನ್ನು ಆನೆಯ ಕಾಲುಗಳಿಗೆ ಕಟ್ಟಿ ಎಳೆಸಿ ದೇಹವನ್ನು ಊರಬಾಗಿಲಲ್ಲಿ ನೇತು ಹಾಕಲಾಯ್ತು. ಹೇಳುತ್ತ ಹೋದರೆ ಕೇರಳದಲ್ಲಿ ಟಿಪ್ಪು ಎಸಗಿದ ಕ್ರೌರ್ಯಕ್ಕೆ ಕೊನೆಮೊದಲಿಲ್ಲ. ಕನಿಷ್ಟ ಹತ್ತು ಪುಸ್ತಕಗಳಿಗಾಗುವ ಸರಕದು(ವಿಷದವಾದ ಮಾಹಿತಿಗೆ ನೋಡಿ: ಎ.ಎಸ್.ಶ್ರೀಧರ ಮೆನನ್ನಿನ ಕೇರಳ ಇತಿಹಾಸ, ವೇಲು ಪಿಳ್ಳೈನ ತ್ರಾವೆಂಕೂರ್ ಸ್ಟೇಟ್ ಮ್ಯಾನುವೆಲ್, ಉಲ್ಲೂರು ಪರಮೇಶ್ವರ ಐಯ್ಯರಿನ ಕೇರಳ ಸಾಹಿತ್ಯ ಚರಿತ್ರಂ, ಫಾ.ಬಾರ್ತೊಲೊಮ್ಯಾಕೋನ ವಾಯೇಜಸ್ ಟು ಈಸ್ಟ್ ಇಂಡೀಸ್).
ಕಲ್ಲೀಕೊಟೆಯಲ್ಲಿ ಟಿಪ್ಪು ಎಸಗಿದ ಕ್ರೌರ್ಯಕ್ಕೆ ಸಾಕ್ಷಿಯಾಗಿರುವ ಹಳೆಯ ಚಿತ್ರ
ಮೋದಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣತೊಟ್ಟಂತೆ ಟಿಪ್ಪು ಹಿಂದೂ ಮುಕ್ತ ಮಲಬಾರಿಗೆ ಪಣತೊಟ್ಟಿದ್ದ. ಅದರಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆದ. ವಿಶ್ವಪ್ರಸಿದ್ದ ನಗರಿ ಕಲ್ಲೀಕೋಟೆ ಧ್ವಂಸಗೊಂಡು ನೆಲಸಮಗೊಂಡಿತ್ತು. ಮಂಗಳೂರಿನಿಂದ ಕೊಚ್ಚಿಯವರೆಗಿನ ರಾಜ್ಯಗಳು, ಅರಸೊತ್ತಿಗೆಗಳೆಲ್ಲ ಟಿಪ್ಪುವಿನ ಪದಾಕ್ರಾಂತವಾಗಿದ್ದವು. ಮಲಬಾರಿನಲ್ಲಿ ಇವನ ಸಾರ್ವಭೌಮತ್ವವನ್ನು ಬ್ರಿಟಿಷರೂ ಒಪ್ಪಿಕೊಂಡಿದ್ದರು. ಇದಕ್ಕಿಂತ ಪ್ರಶಸ್ತ ಸ್ಥಳವಿದೆಯೇ? ಮೈಸೂರಲ್ಲಾದರೆ ಬ್ರಿಟಿಷರು, ನವಾಬರು, ಮರಾಠರು ಹಾಗೂ ಕೊಡವರ ಕಾಟ. ನಾಲ್ಕು ದಿಕ್ಕುಗಳಿಂದಲೂ ನೆಮ್ಮದಿಯಿಲ್ಲ. ಟಿಪ್ಪು ಮಲಬಾರಿನಲ್ಲಿ ಹೊಸ ರಾಜಧಾನಿಯನ್ನೇ ನಿರ್ಮಿಸಲು ನಿರ್ಧರಿಸಿದ. ಪ್ರಾಯಶಃ ಶ್ರೀರಂಗಪಟ್ಟಣಕ್ಕಿಂತ ಇದು ಸೂಕ್ತ ಸ್ಥಳವಾಗಿತ್ತು ಎಂದಾತ ಭಾವಿಸಿದನೋ ಏನೋ!. ೧೭೮೮ರಲ್ಲಿ ಕಲ್ಲೀಕೋಟೆಯಿಂದ ಆರು ಮೈಲು ದಕ್ಷಿಣಕ್ಕೆ ಚಾಲಿಯಾಂ ನದಿದಡದಲ್ಲಿ ಸ್ಥಳವೊಂದನ್ನು ಹುಡುಕಿ ಹೊಸ ನಗರ ಹಾಗೂ ಕೋಟೆಯ ನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಿದ.  ಆತ ಅದಕ್ಕಿಟ್ಟ ಹೆಸರು ಫಾರೂಕಾಬಾದ್ ಅಥವಾ ಫಾರೂಕಿ ಅರ್ಥಾತ್ ವಿಜಯದ ನಗರ. ಬ್ರಿಟಿಷರು ಹಾಗೂ ಸಾಮೂದಿರಿಗಳ ಮೇಲೆ  ತಾನು ಸಾಧಿಸಿದ ಘನವಿಜಯದ ಪ್ರತೀಕವಾಗಿ ಈ ಹೆಸರಿಟ್ಟಿರಬಹುದು. ಇಲ್ಲಿನ ’ಮಮ್ಮಲ್ಲಿ’ ಎಂಬ ಬೆಟ್ಟದ ಮೇಲೆ ೯ ಎಕರೆಯಷ್ಟು ವಿಶಾಲದ ಕೋಟೆಯೊಂದರ ನಿರ್ಮಾಣವೂ ನಡೆಯಿತು. ಎತ್ತರದ ಸ್ಥಳದಲ್ಲಿದ್ದ ಕಾರಣ ರಕ್ಷಣಾತ್ಮಕವಾಗಿಯೂ ಅದು ಆಯಕಟ್ಟಿನ ಜಾಗವಾಗಿತ್ತು. ಟಿಪ್ಪುವಿನ ಮಲತಮ್ಮ ಆಯಾಜ್ ಮೂಲತಃ ಇದೇ ಪ್ರದೇಶದವ. 
ಟಿಪ್ಪುವಿನ ಕಾಲದ ನಾಣ್ಯಗಳು
ಅದಕ್ಕೂ ಮೊದಲು ಮಲಬಾರಿನಲ್ಲಿ ಚಾಲ್ತಿಯಲ್ಲಿದ್ದ’ವೀರರಾಯ ಫಣ’ ಎಂಬ ಕರೆನ್ಸಿಯನ್ನು ನಿಲ್ಲಿಸಿದ ಟಿಪ್ಪು ತನ್ನ ಹೊಸ ರಾಜಧಾನಿಯ ಸ್ಮರಣಾರ್ಥ ’ಫರೂಕಿ ಪಗೋಡಾ’ ಎಂಬ ನಾಣ್ಯವನ್ನು ಚಲಾವಣೆಗೆ ತಂದ. ಎಷ್ಟಿದ್ದರೂ ಅದು ಟಿಪ್ಪುವಿನ ಕನಸಿನ ರಜಧಾನಿ. ಹಲವು ತಿಂಗಳುಗಳ ಕಾಲ ಅಲ್ಲೇ ಝಾಂಡಾ ಊರಿ ಎಲ್ಲ ಉಸ್ತುವಾರಿಗಳನ್ನೂ ಸ್ವತಃ ನಿಂತು ನೆರವೇರಿಸಿದ. ಬಹುತೇಕ ಆಡಳಿತ ಕೇಂದ್ರಗಳು ಹೊಸ ರಾಜಧಾನಿಗೆ ವರ್ಗಾವಣೆಗೊಂಡವು. ಅಷ್ಟರಲ್ಲಿ ಮಳೆಗಾಲ ಸಮೀಪಿಸಿತು. ಟಿಪ್ಪೂ ತನ್ನ ಅಧಿಕಾರಿಗಳನ್ನು ಅಲ್ಲೇ ಬಿಟ್ಟು  ಕೊಯಂಬತೂರಿನಲ್ಲಿ ವಾಸ್ತವ್ಯ ಹೂಡಿದ. ಆತನ ಅಧಿಕಾರಿಗಳಾದ ಅರ್ಷದ್ ಬೇಗ್, ಅಬ್ದುಲ್ ಕರೀಮ್ ಹಾಗೂ ಮಹಮ್ಮದ್ ಅಲಿ  ೧೭೮೮-೧೭೯೦ರವರೆಗೆ ಫೆರೋಕೆಯನ್ನೇ ಇದ್ದು ಹೊಸ ನಗರವನ್ನು ಕಟ್ಟುವ ಎಲ್ಲ ಉಸ್ತುವಾರಿಗಳನ್ನೂ ನೋಡಿಕೊಂಡರು. ೧೭೮೯ರಲ್ಲಿ ಸಯೀದ್ ಅಬ್ದುಲ್ಲಾನಿಗೆ ಬರೆದ ಪತ್ರದಲ್ಲಿ ಟಿಪ್ಪು ’ಅಲ್ಲಾಹ್ ಹಾಗೂ ಪೈಗಂಬರರ ಕೃಪೆಯಿಂದ ಸ್ಥಾಪಿಸಲ್ಪಟ್ಟ ನಮ್ಮ ಹೊಸ ರಾಜಧಾನಿಯಾದ ಫರೂಕಿಯ ನೆಲ ಇಸ್ಲಾಮಿನಿಂದ ಪಾವನವಾಯ್ತು. ಕೇಶವದಾಸನನ್ನೊಂದು ಸೋಲಿಸಿಬಿಟ್ಟರೆ ಇಡೀ ದಕ್ಷಿಣ ಭಾರತ ಸುಲ್ತಾನ್-ಎ-ಖುದಾಬಾದ್ ಆಗುವ ದಿನ ದೂರವಿಲ್ಲ ’ ಎಂದು ಬರೆದುಕೊಂಡಿದ್ದಾನೆ.
ಅಲ್ಲಿಯವರೆಗೂ ಎಲ್ಲ ಸರಿಯಾಗೇ ಇತ್ತು. ಯಾವತ್ತು ಟಿಪ್ಪುವಿನ ದೃಷ್ಟಿ ಕೇಶವದಾಸನ ಮೇಲೆ ಬಿದ್ದಿತೋ ಅವನ ಜಾತಕದಲ್ಲಿ ಶನಿ ವಕ್ಕರಿಸಿಕೊಂಡುಬಿಟ್ಟ. ಈ ಕೇಶವದಾಸ ಅಂಥಿಂಥವನಲ್ಲ. ತ್ರಾವೆಂಕೂರಿನ ಧರ್ಮರಾಜ ರಾಜಾ ರಾಮವರ್ಮನ ದೀವಾನ. ಇವನ ಕಾರಣದಿಂದ ಇಪ್ಪತ್ತೊಂದು ವರ್ಷ ತಿಪ್ಪರಲಾಗ ಹೊಡೆದರೂ ಹೈದರ್ ಹಾಗೂ ಟಿಪ್ಪುವಿಗೆ ತ್ರಾವೆಂಕೂರಿನ ರಾಜ್ಯದೊಳಗೆ ಎಡಗಾಲಿಡಲೂ ಸಾಧ್ಯವಾಗದೇ ಹೋದ್ದು. ಟಿಪ್ಪು ಮತ್ತದೇ ತಪ್ಪು ಮಾಡಿದ. ೨೦೦೦೦ ಸೈನಿಕರ ಪ್ರಚಂಡ ಸೇನಾಬಲದೊಡನೆ ತ್ರಾವೆಂಕೂರಿನ ಗಡಿಯಾದ ನೆಡುಂಕೊಟ್ಟವನ್ನು ಮುತ್ತಿದ. ಬರೀ ೬ ಫಿರಂಗಿಗಳು ಮತ್ತು ೫೦೦ ಜನರಿದ್ದ ತ್ರಾವೆಂಕೂರಿನ ಪರಯೂರು ಬೆಟಾಲಿಯನ್ನಿನ ಶೌರ್ಯದೆದುರು ಟಿಪ್ಪುವಿನ ಸೈನ್ಯ ನಿಲ್ಲದಾಯ್ತು. ಸೋತರೇನಂತೆ, ನರಿ ಬುದ್ಧಿ ಬಿಡಲಾದೀತೇ? ಟಿಪ್ಪು ಮಹಾನ್ ಚಾಲಾಕಿ.  ಓಡಿ ಹೋದಂತೆ ಮಾಡಿ ೨೮ ಡಿಸೆಂಬರ್ ೧೭೮೯ರ ರಾತ್ರೋರಾತ್ರಿ ರಕ್ಷಣಾವ್ಯವಸ್ಥೆ ಕಡಿಮೆಯಿದ್ದ ವಾಯುವ್ಯ ಭಾಗದಲ್ಲಿ ಈಗಿನ ಚಾಲಕ್ಕುಡಿಯ ಹತ್ತಿರದ ನೆಡುಂಕೊಟ್ಟವನ್ನು ಭೇದಿಸಿ ಒಳನುಗ್ಗಿದ. ಮುರಿಂಗೂರಿನಲ್ಲಿ ಮೈಸೂರು ಮತ್ತು ತಿರುವಾಂಕೂರು ಪಡೆಗಳು ಎದುರುಬದುರಾದವು. ಮೈಸೂರು ಪಡೆಗೆ ಟಿಪ್ಪುವೇ ಮುಂದಾಳತ್ವ ವಹಿಸಿದ್ದರೆ ತಿರುವಾಂಕೂರಿನ ಸೈನ್ಯವನ್ನು ದಿವಾನ್ ಕೇಶವದಾಸ ಪಿಳ್ಳೈ ಮುನ್ನಡೆಸಿದ್ದ. ಈ ಯುದ್ಧ ನೆಡುಂಕೊಟ್ಟ ಕದನವೆಂದೇ ಇತಿಹಾಸ ಪ್ರಸಿದ್ಧವಾಯ್ತು. ತಿರುವಾಂಕೂರಿನ ನಾಯರ್ ಸೈನಿಕರು ಮೈಸೂರಿನವರಿಗೆ ಸಾಯುವಂತೆ ಹಿಡಿದು ಬಡಿದರು. ಅದೇ ಸಮಯಕ್ಕೆ ಸರಿಯಾಗಿ ಕರ್ನಲ್ ಹಾರ್ಟ್ಲೇಯ ಇಂಗ್ಲೀಷ್ ಬೆಟಾಲಿಯನ್ ಕಲ್ಲಿಕೋಟೆಯನ್ನು ಮುತ್ತಿ ಮೈಸೂರಿನ ಸೈನ್ಯವನ್ನು ಸೋಲಿಸಿ ಫೆರೋಕನ್ನು ವಶಪಡಿಸಿಕೊಂಡಿತು.  ಟಿಪ್ಪು ಮತ್ತೆಂದೂ ಕೇರಳದತ್ತ ತಲೆಹಾಕುವ ಧೈರ್ಯ ಮಾಡಲಿಲ್ಲ. ಬ್ರಿಟಿಷರು ಫೆರೋಕನ್ನು ಬಿಟ್ಟು ಆಡಳಿತ ಕೇಂದ್ರವನ್ನು ಪುನಃ ಕಲ್ಲೀಕೋಟೆಗೇ ಸ್ಥಳಾಂತರಿಸಿದರು. ಒಂದೂವರೆ ವರ್ಷಗಳ ಕಾಲ ಅತಿ ಚಿಕ್ಕ ಅವಧಿಯ ರಾಜಧಾನಿಯಾಗಿ ಮೆರೆದ ಫೆರೋಕ್ ಆ ವೈಭವದ ದಿನಗಳನ್ನು ಮತ್ತೆ ನೋಡಲೇ ಇಲ್ಲ ಎನ್ನಬಹುದು. ಹಾಗಿದ್ದೂ  ಫೆರೋಕ್ ಮುಂದೆ ಬ್ರಿಟಿಷರ ಕಾಲದಲ್ಲೇ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯಿತು. ಅದು ಕೇರಳದ ಎರಡನೇ ಅತಿದೊಡ್ಡ ಇಂಡಸ್ಟ್ರಿಯಲ್ ಏರಿಯಾ. ಟಿಂಬರ್ ಮತ್ತು ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಇದು ದೇಶದಲ್ಲೇ ನಂಬರ್ ಒನ್. ಇವತ್ತಿಗೂ ಬ್ರಿಟಿಷರು ಸ್ಥಾಪಿಸಿದ್ದ ಹಲ ಕಾರ್ಖಾನೆಗಳು ಇಲ್ಲಿವೆ.  ಕಾರ್ಖಾನೆಗಳು ಬೆಳೆದಂತೆ ಹಳೆಯ ಸ್ಮಾರಕಗಳೆಲ್ಲ ಒತ್ತುವರಿಯಾಗಿವೆ. ಆದರೆ ನೂರೈವತ್ತು ವರ್ಷದ ಹಿಂದೆ ಬೇಪೋರ್ ಹಾಗೂ ಫೆರೋಕನ್ನು ಸಂಪರ್ಕಿಸಲು ಕಟ್ಟಲ್ಪಟ್ಟ ಉಕ್ಕಿನ ಸೇತುವೆ ಇಂದೂ ಚಾಲ್ತಿಯಲ್ಲಿದೆ. ರೇಲ್ವೇ ಸ್ಟೇಶನ್ನಿಗೆ ಹೋಗುವ ದಾರಿಯಲ್ಲಿ ಎಡಭಾಗದಲ್ಲಿ ಟಿಪ್ಪು ಕಟ್ಟಿದ ಕೋಟೆಯನ್ನು ಇನ್ನೂ ನೋಡಬಹುದು. ಚಾಲಿಯಾಮ್ ನದಿಗೆ ಸೇರುವ ಅದರೊಳಗಿನ ಸುರಂಗ ಮಾರ್ಗ ಕೂಡ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದೆ. ೧೯೯೧ರಂದು ಈ ಸ್ಥಳಗಳನ್ನೆಲ್ಲ ಸಂರಕ್ಷಿತ ಸ್ಮಾರಕಗಳೆಂದು ಪುರಾತತ್ವ ವಿಭಾಗ ಘೋಷಿಸಿದೆ ಬಿಟ್ಟರೆ ಫೆರೋಕಿನ ಇತಿಹಾಸವನ್ನು ಈಗಿನವರಿಗೆ ತಿಳಿಸುವ ಕೆಲಸ ಇನ್ನೂ ಶುರುವಾಗಿಲ್ಲ.

Thursday, March 21, 2019

ಯಾರೆಂದವರು ಹೋಳಿ ಬರಿ ಹಿಂದೂಗಳದ್ದೆಂದು?

 
 ತೀರ ಈಚೀಚೆಗೆ ದಕ್ಷಿಣದಲ್ಲಿ ಹಬ್ಬುತ್ತಿದೆಯೆಂಬುದನ್ನು ಬಿಟ್ಟರೆ ಹೋಳಿ ಮುಖ್ಯವಾಗಿ ಉತ್ತರ ಭಾರತದ ಹಬ್ಬವೇ. ನಾವೆಲ್ಲ ಚಿಕ್ಕಂದಿನಲ್ಲಿ ಹೋಳಿಯೆಂಬ ಹೆಸರು ಕೇಳಿದ್ದೇ ಅಪರೂಪ. ನಮ್ಮ ಉತ್ತರ ಕನ್ನಡದವರಿಗೆ ಅದು ಸುಗ್ಗಿ ಹಬ್ಬ. ಅದೂ ಕೂಡ ಹಾಲಕ್ಕಿ, ಕುಣುಬಿ ಮತ್ತು ಮರಾಠಿಗರಲ್ಲೇ ಆ ಭರಾಟೆ ಹೆಚ್ಚು. ಗುಮ್ಮಟೆ ಪಾಂಗ್ ನುಡಿಸುತ್ತ, ಧುಮ್ಸೋಲೆ ಎಂದು ಕೂಗುತ್ತಾ ಮನೆಮನೆಗೆ ಬರುವ ಸುಗ್ಗಿಕುಣಿತದ ತಂಡಗಳನ್ನು ನೋಡುವುದೇ ಒಂದು ಖುಷಿ. ಸಮೃದ್ಧಿಯ ಬೆಳೆ ಕೊಯ್ಲಿನ ಒಳಿತಿನ ಹಾಡುಗಳನ್ನು ಹಾಡುತ್ತ ಕಾಣಿಕೆಗಳನ್ನು ಪಡೆದುಕೊಂಡು ತಮ್ಮೂರಿಗೆ ಮರಳುತ್ತಾರೆ. ಕಾಮ ಎಂಬ ಆಕೃತಿಯನ್ನು ಸುಟ್ಟು ಹಾಕಿ ತಮ್ಮ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊರೆದುಕೊಳ್ಳುತ್ತಾರೆ. ನಂತರ ಎಲ್ಲರೂ ಗ್ರಾಮವೆಲ್ಲ ಮೆರವಣಿಗೆ ಹೊರಡುತ್ತಾರೆ, ಈ ಮೆರವಣಿಗೆಯಿಂದ ಗ್ರಾಮದಲ್ಲಿ ಒಳ್ಳೆಯ ಮಳೆ ಬೆಳೆ ಆಗುತ್ತದೆ, ಗ್ರಾಮಸ್ಥರು ರೋಗ ರುಜಿನಗಳಿಂದ ದೂರವಿರುತ್ತಾರೆ ಎಂಬುದು ನಂಬಿಕೆ. ಚಿಕ್ಕಂದಿನಲ್ಲಿ ಅದನ್ನು ಬಿಟ್ಟರೆ ಹೋಳಿಯ ದಿನ ಒಬ್ಬರಿಗೊಬ್ಬರು ಬಣ್ಣ ಎರಚುವುದನ್ನು ನಾವು ನೋಡಿದ್ದೇ ಟಿವಿಯಲ್ಲಿ. ಅಷ್ಟರಮಟ್ಟಿಗದು ಉತ್ತರದ ಸಂಪ್ರದಾಯವೇ. ಅಲ್ಲಿಯ ಹೋಳಿಯಾಚರಣೆಯ ಮಜವೇ ಬೇರೆ ಬಿಡಿ. ಇಡೀ ಊರಿಗೆ ಊರೇ ಬಣ್ಣದಲ್ಲಿ ಮುಳುಗೆದ್ದು ಒದ್ದೆಯಾಗುತ್ತದೆ. ಅದರಲ್ಲೂ ಮಥುರಾ, ಬೃಂದಾವನಗಳಂಥ ಸ್ಥಳಗಳಲ್ಲಂತೂ ಹೋಳಿಯ ಭಯಂಕರ ಸಂಭ್ರಮವನ್ನು ಅನುಭವಿಸಿಯೇ ತೀರಬೇಕು. ಎಷ್ಟೆಂದರೂ ಕೃಷ್ಣ ರಾಧೆಯರು ಹೋಳಿಯಾಡಿದ ಸ್ಥಳವದು.
ಹಾಲಕ್ಕಿಗಳ ಸುಗ್ಗಿ(ಚಿತ್ರಕೃಪೆ:ದಿನೇಶ್ ಮಾನೀರ್)

     ಭಾರತಕ್ಕೂ ಬಣ್ಣಗಳಿಗೂ ಬಿಡಿಸಲಾಗದ ಪುರಾನಾ ರಿಶ್ತಾ. ಭಿನ್ನ ಭಿನ್ನ ರಂಗುಗಳೆಲ್ಲ ಕಲೆತಲ್ಲವೇ ಭಾರತೀಯ ಸಂಸ್ಕೃತಿಯ ರಾಗಿಣಿಯಾಗಿದ್ದು. ಜಾತಿ, ಮತ, ಪಂಥಗಳಾಚೆ ಬೆಳೆದು ಭಾರತದ ನೈಜ ಶತರಂಗಿ ಬಣ್ಣಗಳನ್ನು ತೆರೆದಿಡುವ ಹಬ್ಬವದು ಹೋಳಿ. ಹಬ್ಬವೆಂಬುದು ಬರಿ ಆಚರಣೆಯಲ್ಲ, ಅದೊಂದು ಅನುಭವ. ಶಾಸ್ತ್ರವೊಂದೇ ಅಲ್ಲ, ಅದು ಸಂಪ್ರದಾಯ. ಅಲ್ಲಿ ಬರಿ ಸಂಸ್ಕೃತಿಯಿಲ್ಲ, ಫ್ಯಾಂಟಸಿಯೂ ಇದೆ. ಒಂದೊಂದು ಹಬ್ಬದ ಜೊತೆಗೂ ಸಾವಿರಾರು ಕತೆಗಳು ಹೆಣೆದುಕೊಂಡಿವೆ. ಹೋಳಿಹುಣ್ಣಿಮೆಯ ಅವೆಲ್ಲ ಕತೆಗಳನ್ನು ನೀವು ಕೇಳಿಯೇ ಇರುತ್ತೀರಿ.  ಹೋಳಿಯನ್ನು ಭಾರತದಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಳ್ಳುತ್ತ ಬರಲಾಗಿದೆ. ಫಾಗುನ್, ಫಗ್, ಆಬ್-ಪಾಶಿ, ಈದ್-ಎ-ಗುಲಾಬಿ ಇನ್ನೂ ಎಷ್ಟೆಷ್ಟೋ ಹೆಸರುಗಳಿಂದ. ಧಮ್ಮಪದದಲ್ಲಿ ಬುದ್ಧ ಕೂಡ ಹೋಳಿಯಲ್ಲಿ ಪಾಲ್ಗೊಂಡ ಒಂದು ಘಟನೆಯ ಉಲ್ಲೇಖವಿದೆ. ಶುದ್ಧ ಜಾನಪದ ಹಿನ್ನೆಲೆಯ ಸುಗ್ಗಿಹಬ್ಬವಾದರೂ ಹೋಳಿಯು ಅವೈದಿಕವಲ್ಲವೆಂದು ನಿರೂಪಿಸುವ ಕೆಲಸವೂ ಮೀಮಾಂಸಾದರ್ಶನದ ಹೋಲಿಕಾ ಅಧಿಕರಣದಲ್ಲಿ ನಡೆದಿದೆ. ಸಂಸ್ಕೃತದ ಕವಿಗಳೆಲ್ಲ ಇದನ್ನು ನವಾನ್ನೇಷ್ಟಿ, ಪುಷ್ಪಪ್ರಚಾಯಿಕಾ, ವಸಂತೋತ್ಸವ, ಮದನೋತ್ಸವ, ಹೋಲಿಕೋತ್ಸವ, ಉದಕ್ಷ್ವೋಡಿಕಾ ಇತ್ಯಾದಿ ಇತ್ಯಾದಿ ವಿಭಿನ್ನ ಹೆಸರುಗಳಿಂದ ಕರೆದಿದ್ದಾರೆ. ಹೋಳಿಯೆಂಬುದು ಹರಾಮ್ ಎಂದು ಜಾಕೀರ್ ನಾಯ್ಕ್ ಎಷ್ಟು ಬಡಕೊಂಡರೂ, ಸರ್ಫ್ ಎಕ್ಸೆಲ್ ಜಾಹಿರಾತು ನೋಡಿ ಭಕ್ತಕೋಟಿ ಕುಂಯ್ಯೋ-ಮರ್ರೋ ಎಂದರೂ ಹಿಂದೂ-ಇಸ್ಲಾಮ್‌ಗಳೆರಡೂ ಇತಿಹಾಸದುದ್ದಕ್ಕೂ ಹೋಳಿಯ ಬಣ್ಣಗಳಲ್ಲಿ ಮಿಂದೆದ್ದಿವೆ. ಹಿಂದೂಗಳ ಕತೆಬಿಡಿ. ಇಸ್ಲಾಮಿನ ಸುಪ್ರಸಿದ್ಧ ಕವಿಗಳೆಲ್ಲ ಹೋಳಿಯ ಮೇಲೆ ಟನ್ನುಗಟ್ಟಲೆ ಕವಿತೆಗಳನ್ನು ರಚಿಸಿದ್ದಾರೆ. ಮುಘಲರ ಕಾಲದಲ್ಲಿ ಈದ್‌ಗಿಂತ ವಿಜೃಂಭಣೆಯಿಂದ ಹೋಳಿಯಾಡಲಾಗುತ್ತಿತ್ತು. ಹೋಳಿಗೆ ಈಪಾಟಿ ಪ್ರಸಿದ್ಧಿ ಬರಲು ಮುಕ್ಕಾಲಂಶ ಕೊಡುಗೆ ಮೊಘಲರದೇ.  ’ಆಜ್ ಹೋರೀ ರೇ ಮೋಹನ್ ಹೋರೀ, ಅಬ್ ಕ್ಯುಂ ದೂರ ಬೈಠೇ ನಿಕಸೋ ಕುಂಜ್ ಬಿಹಾರಿ’ ಎಂಬ ಅಕ್ಬರನ ಮಾತನ್ನು ಇಬ್ರಾಹಿಂ ರಸಖಾನ್ ತನ್ನ ಕವಿತೆಗಳಲ್ಲಿ ಹಲವು ಬಾರಿ ಸ್ಮರಿಸಿದ್ದಾನೆ. ’ಕ್ಯುಂ ಮೂಹ್ ಪೆ ಮಾರೆ ರಂಗ್ ಕಿ ಪಿಚಕಾರಿ, ದೇಖೋ ಕುಂವರ್ಜಿ ದೂಂಗಿ ಗಾರಿ’ ಎಂದು ಬಾದಷಾ ಬಹದೂರ್ ಷಾ ಜಾಫರ್ ಬರೆದ ಖ್ಯಾತ ಪದ್ಯವೊಂದಿದೆ. ಆತನ ಕಾಲದಲ್ಲಿ ಕಡುಬಡವನೂ ಅರಸನ ಹಣೆಗೆ ಗುಲಾಲು ಮೆತ್ತುವ ಅವಕಾಶ ಪಡೆಯುತ್ತಿದ್ದ. ಸ್ವತಃ ಷಹಜಹಾನ್ ಹೋಳಿಯನ್ನು ಈದ್-ಎ-ಗುಲಾಬಿ(ಗುಲಾಬಿ ಈದ್), ಆಬ್-ಎ-ಪಾಶಿ(ಬಣ್ಣದ ಹೂಮಳೆ)ಎಂದು ಕರೆದ. ಅವನಿಗಿಂತ ಮೊದಲು ತಜ್ಕ್-ಎ-ಜಹಾಂಗೀರಿಯಲ್ಲಿ ಜಹಾಂಗೀರ ಕೂಡ ಹೋಳಿ ಉತ್ಸವವನ್ನು ಉಲ್ಲೇಖಿಸಿದ್ದಾನೆ. ಗೋವರ್ಧನ ಹಾಗೂ ರಸಿಕರಂಥ ಮೊಘಲರ ಆಸ್ಥಾನಕವಿಗಳು ಜಹಾಂಗೀರ್ ತನ್ನ ಬೇಗಂ ನೂರ್‌ಜಹಾನಳೊಡನೆ ಹೋಳಿಯಾಡಿದ ಘಟನೆಗಳನ್ನು ಬಹುರಮ್ಯವಾಗಿ ಚಿತ್ರಿಸಿದ್ದಾರೆ. ಮುಘಲ್ ಬಾದಶಾಹ್ ಮಹಮ್ಮದ್ ಶಾ ರಂಗೀಲಾ ತನ್ನ ಜನಾನಾದವರೊಡನೆ ಹೋಳಿಯಾಡುವ ಪೇಂಟಿಂಗುಗಳಂತೂ ವಿಶ್ವಪ್ರಸಿದ್ಧಿ. ನಿಧಾಮಲ್ ಹಾಗೂ ಭೋಪಾಲ್ ಸಿಂಗ್ ಎಂಬಿಬ್ಬರು ಚಿತ್ರಕಾರರು ರಚಿಸಿದ ಮುಘಲರ ಕಾಲದ ಹೋಳಿ ಚಿತ್ರಗಳನ್ನು ಇವತ್ತಿಗೂ ನ್ಯೂಯಾರ್ಕಿನ ಏಶಿಯಾ ಸೊಸೈಟಿ ಮ್ಯೂಸಿಯಮ್ಮಿನಲ್ಲಿ ಕಾಣಬಹುದು. ಇದನ್ನು ನೋಡಿಯೇ ಉರ್ದುವಿನ ಸುಪ್ರಸಿದ್ಧ ಕವಿ ಮುನ್ಷಿ ಮೊಹಮ್ಮದ್ ಝಕೌಲ್ಲಾ ತನ್ನ ’ತಾರೀಕ್-ಎ-ಹಿಂದೂಸ್ತಾನಿ’ಯಲ್ಲಿ ಹೇಳಿರಬೇಕು ’ಯಾರಂದವರು ಹೋಳಿ ಹಿಂದುಗಳದ್ದೆಂದು?’. ಇನ್ನೂ ಮುಂದುವರೆದು ’ಮೆರೆ ಹಜರತ್ ನೆ ಮದೀನಾ ಮೆಂ ಮನಾಯಿ ಹೋಲಿ’, ನನ್ನ ದೇವರು ಮದೀನಾದಲ್ಲೂ ಹೋಳಿಯಾಡುತ್ತಾನೆ ಎಂದುಬಿಟ್ಟಿದ್ದ ಆತ. ನಜೀರ್ ಅಕ್ಬರ್ ಬಂದಿ, ಮೆಹಜೂರು ಲಖನವಿ, ಶಾಹ್ ನಿಯಾಜ್, ಮೀರ್ ತಾಕಿ ಮೀರ್‌ರಂಥ ಮುಘಲ ಜಮಾನಾದ ಕವಿಸಾಮ್ರಾಟರೆಲ್ಲ ಹೋಳಿಯ ಬಗ್ಗೆ ಹಾಡು ಹಾಡಿ ಕುಣಿದಿದ್ದಾರೆ. ಮೊಘಲರ ಕಾಲದಿಂದ ಹೋಳಿ ಅಷ್ಟು ವಿಸ್ತೃತ ಸ್ವರೂಪ ಪಡೆದಿತ್ತು. ಆಗ ಅದೊಂದು ಹಬ್ಬವೆನ್ನುವುದಕ್ಕಿಂತ ಅದೊಂದು ಭಾವೈಕ್ಯತೆಯ ಪರ್ವವಾಗಿತ್ತು. ಔರಂಗಜೇಬನ ಮಗ ಷಾ ಆಲಂ ಹೋಳಿಯ ಬಗ್ಗೆ ’ನಾದಿರಾತ್-ಎ-ಶಾಹಿ’ ಎಂಬ ಅಪರೂಪದ ಕೃತಿಯೊಂದನ್ನು ರಚಿಸಿದ್ದಾನೆ. ಇದು ಬಹಳಷ್ಟು ಕಾರಣಗಳಿಗೆ ವೈಶಿಷ್ಟ್ಯಪೂರ್ಣ. ಈ ಉರ್ದು ಕೃತಿ ದೇವನಾಗರಿ ಲಿಪಿಯಲ್ಲಿ ರಚಿಸಲ್ಪಟ್ಟಿದೆ ಎನ್ನುವುದೂ ಅದರಲ್ಲೊಂದು.  ಅದರ ಒಂದು ಸಾಲು - 
ಲೇ ಪಿಚಕಾರಿ ಚಲಾಯೇ ಲಲಾ, ತಬ್ ಚಂಚಲ್ ಚೋಟ್ ಬಚಾಏ ಗಯೀ ಹೈ | 
ಅಪನೀ ನಾಕ್ ಸು ಖೇಳತ್ ಹೈ, ಕಹಾ ಚಾತುರ ನಾರ ಖಿಲಾರ್ ನಯೀ ಹೈ ||
ನಿಧಾಮಲ್ ಬಿಡೀಸಿದ ಮಹಮ್ಮದ್ ಷಾ ರಂಗೀಲಾ(೧೭೦೨-೧೭೪೮)ನ ಚಿತ್ರಪಟ

ಹೋಳಿಯಾಡುತ್ತಿರುವ ಜಹಾಂಗೀರ್(೧೬೩೫)

ಜಹಾಂಗೀರನದೇ ಇನ್ನೊಂದು ಚಿತ್ರಪಟ

ಭೂಪಾಲ್ ಸಿಂಗ್ ರಚಿಸಿದ ಮಹಮ್ಮದ್ ಷಾನ ಹೋಳಿ ಆಚರಣೆ(೧೭೩೫)

ಮೀರ್ ಕಲನ್ನಿನ ಚಿತ್ರಪಟ, ಮುಘಲರ ಜಮಾನಾದ ಹೋಳಿ

ಗೋಲ್ಕೋಂಡಾದ ನವಾಬನೂ ಹೋಳಿಯಾಡುತ್ತಿದ್ದ, ೧೮೦೦, ನ್ಯಾಶನಲ್ ಮ್ಯೂಸಿಯಂ, ದೆಲ್ಲಿ
 ನಾಥ ಸಂಪ್ರದಾಯದ ಸಾರ್ವಕಾಲಿಕ ಶ್ರೇಷ್ಟ ಸೂಫಿ ಸಂತನಾದ ಬುಲ್ಲೇ ಷಾನ ಪ್ರಸಿದ್ಧ ಪಂಜಾಬಿ ಗೀತೆಯೊಂದಿದೆ ಹೋಲಿಯ ಬಗ್ಗೆ. 
ಹೋಲಿ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ನಾಮ್ ನಬಿ ಕಿ ರತನ್ ಚಡಿ, ಬೂಂದ್ ಪಡಿ ಅಲ್ಲಾಹ್ ಅಲ್ಲಾಹ್
ರಂಗ್ ರಂಗೀಲೀ ಓಹಿ ಖಿಲಾವೆ, ಜಿಸ್ ಸೀಖೀ ಹೋ ಫನಾ ಫಿ ಅಲ್ಲಾಹ್
’ಅಲಸ್ತು ಬಿ ರಬ್ಬಿಕುಮ್’ ಪ್ರಿತಮ್ ಬೋಲೇ, ಸಬ್ ಸಖಿಯಾಂ ನೆ ಘೂಂಗಟ್ ಖೋಲೆ
’ಕಲೂ ಬಲಾ’ ಯೂಂ ಹಿ ಕರ್ ಬೋಲೇ, ’ಲಾ ಇಲಾಹ್ ಇಲ್ಲಲ್ಲಾಹ್’
ಹೋಲೀ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ಪ್ರಪಂಚದ ದೇಶಗಳೆಲ್ಲ ದ್ವೇಷ, ಅಸಹನೆ, ಧಾರ್ಮಿಕ ಮೂಲಭೂತವಾದದ ಬೆಂಕಿಯಲ್ಲಿ ಬೇಯುತ್ತಿರುವಾಗ ಇಂಥೊಬ್ಬ ಪಂಥಗಳನ್ನು ಮೀರಿದ ಅದ್ಭುತ ದಾರ್ಶನಿಕನೊಬ್ಬನಿದ್ದನೆಂದು ಜಗತ್ತಿಗೆ ತೋರಿಸುವುದಕ್ಕಿಂತ ಹೆಚ್ಚಿನ ಮದ್ದೇನಿದೆ? ಮುನ್ನೂರು ವರ್ಷಗಳ ಹಿಂದೆಯೂ ಇದೇ ಸ್ಥಿತಿಯಿತ್ತು. ಅದೂ ಔರಂಗಜೇಬನ ಕಾಲದಲ್ಲಿ. ಈಗ ಸರ್ಕಾರವನ್ನು ಟೀಕಿಸುವುದೇ ದೇಶದ್ರೋಹವೆನಿಸಿಕೊಂಡಂತೆ ಆಗ ರಾಜನ ವಿರುದ್ಧ ಉಸಿರೆತ್ತುವುದು ಧರ್ಮದ್ರೋಹವೆನಿಸಿತ್ತು. ಸಂಗೀತ, ನಾಟ್ಯಗಳನ್ನೆಲ್ಲ ಹರಾಮ್ ಎಂದು ಘೋಷಿಸಲಾಗಿತ್ತು. ಬುಲ್ಲೇ ಷಾ ಮೊಘಲರ ವಿರುದ್ಧ ತಿರುಗಿ ಬಿದ್ದ. ಗುರುಗೋವಿಂದ ಸಿಂಗರು ಔರಂಗಜೇಬನ ವಿರುದ್ಧ ಕತ್ತಿ ಎತ್ತಿದರೆ, ಬುಲ್ಲೆ ಷಾ ಎಕ್‌ತಾರಾ ಹಿಡಿದು ಪಂಜಾಬಿನ ಹಳ್ಳಿಗಳಿಗೆ ತೆರಳಿ ಜನರನ್ನು ಜಾಗರೂಕರನ್ನಾಗಿಸಿದ. ಔರಂಗಜೇಬ ಬರಿ ಹಿಂದೂದ್ವೇಷಿಯಲ್ಲ. ಷಿಯಾ ಸಂಪ್ರದಾಯ ಪಾಲಿಸುತ್ತಿದ್ದ ಕಾರಣಕ್ಕೆ ತನ್ನ ತಮ್ಮನನ್ನೇ ಕೊಂದ ಮನುಷ್ಯದ್ವೇಷಿ. ಅಂಥ ಕಾಲದಲ್ಲೇ ಬುಲ್ಲೇ ಷಾ ಹಿಂದೂ-ಇಸ್ಲಾಮುಗಳೆರಡನ್ನೂ ತಿರಸ್ಕರಿಸಿ ಮೊದಲು ಮನುಶ್ಯರಾಗಲು ಕರೆಕೊಟ್ಟ.
ಮಕ್ಕಾ ಗಯಾಂ, ಗಲ್ ಮುಕ್ತೀ ನಹೀಂ
ಪಾವೇಂ ಸೊ ಸೊ ಜುಮ್ಮೇ ಪಾರ್ ಆಯೀ |
ಗಂಗಾ ಗಯಾ, ಗಲ್ ಮುಕ್ತೀ ನಹೀಂ
ಪಾವೇಂ ಸೋ ಸೋ ಗೋಟೇ ಖಾಯೀಂ|
ಬುಲ್ಲೇ ಷಾ ಗಲ್ ತಂಯೋ ಮುಕ್ತೀ
ಜದೋಂ ಮೇಂ ನು ದಿಲ್ಲೋಂ ಗವಾಯಿ ||
ಬುಲ್ಲೇ ಷಾ
ಉರ್ದು ಸಾಹಿತ್ಯದಲ್ಲಿ ಹೋಳಿಗೆ ಮೀಸಲಾದ ರಚನೆಗಳೆಷ್ಟೆಂದು ಲೆಕ್ಕವಿಟ್ಟವರಿಲ್ಲ. ಅವುಗಳಲ್ಲಿ ಮಹಮ್ಮದ್ ಕತೀಲನ ’ಹಫ್ತ್ ತಮಾಶಾ’ ಎಂಬ ಪರ್ಷಿಯನ್ ಕೃತಿ ಹೋಳಿಯ ಬಗ್ಗಿನ ಕೃತಿಗಳಲ್ಲೇ ಅತ್ಯುತ್ತಮವೆಂದು ವಿಮರ್ಶಕರು ಪರಿಗಣಿಸುತ್ತಾರೆ. ಬೃಜ್ ಮತ್ತು ಬುಂದೇಲಖಂಡದ ರಂಗಿನಾಚರಣೆಯ ಬಗ್ಗೆ ಕುಲಿ ಕುತುಬ್ ಷಾ ಹೈದ್ರಾಬಾದಿ ಉರ್ದುವಿನಲ್ಲಿ ಬರೆದ ಪದ್ಯಗಳೂ ಇಲ್ಲಿ ಸ್ಮರಣಾರ್ಹ. ವಾಜಿದ್ ಸೆಹ್ರಿ, ಫಯಾಜ್ ದೆಹಲವಿ, ನಾಜಿರ್ ಅಕ್ಬರಾಬಾದಿಗಳ ಹೋಳಿಯ ಕವಿತೆಗಳು ಸಾಟಿಯಿಲ್ಲದವು.  ನವಾಬ್ ಅಸಫ್-ಉದ್ದೌಲನ ಆಸ್ಥಾನದಲ್ಲಿದ್ದ ಮೀರ್ ತಾಕಿ ಮೀರನ ಜಶ್ನೆ-ಹೋಲಿ ಇಂದಿಗೂ ಹಾಡಲ್ಪಡುತ್ತದೆ.   
ಅವುಗಳೆಲ್ಲವುಗಳಿಗೆ ಕಳಸವಿಟ್ಟಂತಿರುವುದು ಅಮೀರ್ ಖುಸ್ರೋನ ರಚನೆ. ಖುಸ್ರೋ ಒಂದು ಕಡೆ ಹೇಳುತ್ತಾನೆ:
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ
ಮೊರೇ ಮೆಹಬೂಬ್ ಕಾ ಘರ್ ರಂಗ್ ಹೈ
ಸಜನ್ ಮಿಲಾವರಾ, ಸಜನ್ ಮಿಲಾವರಾ ಮೊರೆ ಆಂಗನ್ ಕೊ
ಮೊಹೆ ಪೀರ್ ಪಾಯೋ ನಿಜಾಮುದೀನ್ ಔಲಿಯಾ.
ದೇಸ್ ಬಿದೇಸ್ ಮೇಂ ಢೂಂಡ್ ಫಿರೇ ಹೋ
ತೊರಾ ರಂಗ್ ಮನ ಭಾಯೋ ರಿ
ಜಗ್ ಉಜಿಯಾರೋ, ಜಗತ್ ಉಜಿಯಾರೋ
ಮೆಂ ತೋ ಐಸೋ ರಂಗ್ ಔರ್ ನಹಿಂ ದೆಖಿ ರೇ
ಮಂ ತೋ ಜಬ್ ದೇಖೂಂ ಮೊರೆ ಸಂಗ್ ಹೈ
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ ರಿ
ಪ್ರಾಯಶಃ ಉರ್ದುವಿನಲ್ಲಿ ಹೋಳೀಗೆ ರಂಗುತುಂಬಿದ ಮೊದಮೊದಲ ರಚನೆಯಿದು. ಆಮೇಲೆ ಬಂದ ಎಲ್ಲ ಸೂಫಿಗಳೂ ಇದೇ ರಂಗಿನಲ್ಲಿ ಹೋಳಿಯಾಡಿದವರು. ಆ ಸಮಯದಲ್ಲಿ ಹಿಂದೂಮುಸ್ಲೀಮರಿಬ್ಬರಿಗೂ ನಿಧಾನವಾಗಿ ಒಬ್ಬರ ರಂಗು ಇನ್ನೊಬ್ಬರು ತುಂಬಿಕೊಳ್ಳತೊಡಗಿದ್ದರು. ಆ ರಂಗು ’ಗಗನಮಂಡಲ ಬೀಚ್ ಹೋಲೀ ಮಚೀ ಹೈ, ಕೊಯಿ ಗುರು ಗಮ್ ತೇ ಲಖಿ ಪಾಯೀ’ ಎಂದ ಕಬೀರನ ದೋಹೆಗಳಲ್ಲೂ ಕಾಣಬಹುದು. 
ಫಗುವಾ ನಾಮ ದಿಯೋ ಮೊಹಿ ಸತಗುರು, ತನ ಕೀ ತಪನ ಬುಝಾಯೀ’ ಎಂದ ಕಬೀರ ಸ್ವತಃ ಫಗುವಾ ಆಗಿಬಿಟ್ಟ. ಕಬೀರನಿಗೇ ಹೋಳಿ ಇಷ್ಟು ಹುಚ್ಚು ಹಿಡಿಸಿದ್ದರೆ ಸಾಮಾನ್ಯರ ಪಾಡೇನು? 
ಝೂಲತ್ ರಾಧಾ ಸಂಗ್, ಗಿರಿಧರ್ ಝೂಲತ್ ರಾಧಾ ಸಂಗ್ | 
ಅಬೀರ್ ಗುಲಾಲ್ ಕೀ ಧೂಮ್ ಮಚಾಯೀ, ಡಾರತ್ ಪಿಚಕಾರೀ ರಂಗ್ || 
ಎಂದಸಂತ  ಮೀರಾಳೂ ಇದೇ ರಂಗಿನಲ್ಲಿ ಮಿಂದೆದ್ದವಳು. ಮೀರಾಳಂತೆ ಕೃಷ್ಣನೊಂದಿಗೆ ಹೋಳಿಯಾಡಿದವರಲ್ಲಿ ’ಸೋಹೀ ಚೂನರಯಾ ರಂಗ್ ದೇ ಮೋಕಾ, ಓ ರಂಗರೇಜ್ ರಂಗೀಲೇ ಯಾರ್’ ಎಂದ ಶಾಹ್ ತುರಾಬ್ ಅಲಿ ಕಲಂದರನೂ ಒಬ್ಬ. ಕಟ್ಟಾ ಮುಸ್ಲೀಮನಾದರೂ
 ’ಶಾಮ್ ಬಿಹಾರಿ ಚತುರ್ ಖಿಲಾರೀ, ಖೇಲ್ ರಹಾ ಹೋರೀ ಸಖಿಯನ್ ಮಾ | 
ಅಬ್ ಕೀ ಹೋರೀ ಕಾ ರಂಗ್ ನ ಪೂಛೋ, ಧೂಮ್ ಮಚೀ ಹೈ ಬೃಂದಾವನ್ ಮಾ|
ಹಾತ್ ಲಿಯೆ ಪಿಚಕಾರೀ ಫಿರತ್ ಹೈ, ಅಬೀರ ಗುಲಾಲ್ ಭರೇ ದಾವನ ಮಾ |
ಕೈಸೆ ಸಖೀ ಕೋವೂ ನಿಕಸೆ ಮಂದಿರ, ಠಾಡೋ ಹೈ ಡೀಠ್ ಲಂಗರ್ ಆಂಗನ ಮಾ |
ಮೋ ಕಾ ಕಹಾಂ ವಹ ಢೂಂಢ್ ಪಾವೈ, ಮೇಂ ತೋ ಛುಪೀ ಹೂಂ ತುರಾಬ ಕೆ ಮನ ಮಾ||’ ಎಂದ ಕಲಂದರ ಯಾವ ಮೀರಳಿಗೆ ಕಮ್ಮಿ?
ಹದಿನೆಂಟನೇ ಶತಮಾನದಲ್ಲಿ ನಡೆದ ಭಕ್ತಿ ಚಳುವಳಿಯಲ್ಲಿ ಹಲವಾರು ನಿರ್ಗುಣ ಸಂತರು ಆಗಿಹೋದರು. ಅವರಲ್ಲಿ ಎರಡು ಪ್ರಮುಖ ಹೆಸರುಗಳು ಗುಲಾಲ್ ಸಾಹೇಬ್ ಹಾಗೂ ಬೀಖಾ ಸಾಹೇಬ್. ಇಬ್ಬರ ರಚನೆಗಳಲ್ಲೂ ಹೋಳಿ ಹಲವಷ್ಟು ಸಲ ಇಣುಕಿದೆ.
ಕೋಊ ಗಗನ ಮೇಂ ಹೋರೀ ಖೇಲೈ
ಪಾಂಚ್ ಪಚೀಸೋ ಸಖಿಯಾಂ ಗಾವಂಹೀ ಬಾನಿ ದಸೌ ದಿಸಿ ಮೆಲೈ
- ಗುಲಾಲ್ ಸಾಹೇಬ್
ಮನ ಮೇಂ ಆನಂದ್ ಫಾಗ್ ಉಠೋ ರೀ
ಇಂಗಲಾ ಪಿಂಗಲಾ ತಾರೀ ದೇವೈ ಸುಖಮನ್ ಗಾವತ್ ಹೋರಿ
- ಭೀಖಾ ಸಾಹೆಬ್
ದೇವಾ ಶರೀಫ್‌ನ ಉಲ್ಲೇಖವಿಲ್ಲದೇ ಭಾರತದಲ್ಲಿ ಹೋಳಿಯ ಆಚರಣೆಯ ಬಗ್ಗೆ ಹೇಳಿದರೆ ಅದು ಪೂರ್ತಿಯಾದಂತೆನಿಸುವುದಿಲ್ಲ. ಬಾರಾಬಂಕಿಯಲ್ಲಿ ಹಜರತ್ ವಾರಿಸ್-ಎ-ಪಾಕ್ ಎಂಬ ದರ್ಗಾವಿದೆ. ಹಜರತರ ಕಾಲದಿಂದಲೂ ಈ ಸ್ಥಳ ಹೋಳಿಹಬ್ಬಕ್ಕೆ ಹೆಸರುವಾಸಿ. ವಾರಿಸ್ ಅಂದೇ ಕರೆಕೊಟ್ಟಿದ್ದ ’ಧರ್ತಿ ಅಂಬರ್ ಝೂಮ್ ರಹೇ ಹೈಂ ಬರಸ್ ರಹಾ ಹೈ ರಣ್ಗ್, ಆವೋ ವರ್ಸಿಯಾಂ ಹೋಲಿ ಖೇಲೇಂ ವಾರಿಸ್ ಪಿಯಾ ಕೆ ಸಂಗ್’. ಇದು ಹೋಳೀಯಾಚರಿಸುವ ದೇಶದ ಏಕೈಕ ದರ್ಗಾ. ಅಂದು ಗುಲಾಲನ್ನೆರೆಚಲು ದೇಶದ ಮೂಲೆಮೂಲೆಯಿಂದ ಜನ ಇಲ್ಲಿಗಾಗಮಿಸುತ್ತಾರೆ. ಮಾತ್ರವಲ್ಲ, ಇಲ್ಲಿ ವರ್ಷಂಪ್ರತಿ ಎರಡು ಬಾರಿ ಉರುಸ್ ನಡೆಯುತ್ತದೆ. ಒಮ್ಮೆ ಸಫರ್ ತಿಂಗಳಲ್ಲಿ ಮುಸ್ಲೀಮರು ನಡೆಸಿಕೊಟ್ಟರೆ, ಇನ್ನೊಮ್ಮೆ ಕಾರ್ತಿಕ ಪೌರ್ಣಿಮೆಯಂದು ಹಿಂದೂಗಳು ನಡೆಸಿಕೊಡುವುದು. 
ಹಿಂದೂಸ್ತಾನದ ಮಣ್ಣಿನ ಗುಣವೇ ಅದಲ್ಲವೇ? ಇಲ್ಲಿ ಕೇಸರಿ ಬಣ್ಣವೂ ಇದೆ, ಹಸಿರೂ ಇದೆ, ಬಿಳಿಯೂ ಇದೆ. ಅವೆಲ್ಲವೂ ಸೇರಿಯೇ ಭಾರತವೆಂಬ ರಂಗೋಲಿಯಾಗಿದ್ದು. ಅನಾಮಿಕ ಸೂಫಿ ಕವಿಯೊಬ್ಬ ಹೇಳಿದಂತೆ
ರಂಗ್ ಹೋ, ಗುಲಾಲ್ ಹೋ, ವಿಶಾಲ್ ಹೀ ವಿಶಾಲ್ ಹೋ | ಯಾರ್ ಸಂಗ್ ಮಯ ಪಿಯೋ, ಯಾರ್ ಹೀ ಹಲಾಲ್ ಹೋ ||
ಹಾಜಿ ವಾರಿಸ್ ಅಲಿ ಷಾಹ್ ದರ್ಗಾದಲ್ಲಿ ವರ್ಷಂಪ್ರತಿ ಆಚರಿಸಲ್ಪಡುವ ಹೋಳಿ
ಹೌದು. ಬಣ್ಣಗಳಿಗೆ ಧರ್ಮವಿಲ್ಲ. ಬಣ್ಣಗಳಿಲ್ಲದೇ ಬದುಕಿಲ್ಲ. ಬದುಕು ಬಣ್ಣಗಳಂತೆ ರಂಜನೀಯವಾಗಿರಬೇಕೆಂದು ಬಯಸುವುದು ಸಹಜ ಧರ್ಮ. 
ಬದುಕು ಬಣ್ಣವಾಗಲಿ. ಬಣ್ಣಗಳಂತೆ ವಿಶಾಲವಾಗಲಿ. ಪವಿತ್ರವಾಗಲಿ.
ಕಹಿಂ ಅಬೀರ್ ಕೀ ಖುಷಬೂ, ಕಹಿಂ ಗುಲಾಲ್ ಕೆ ರಂಗ್
ಕಹಿಂ ಪರ್ ಶರ್ಮ್ ಸೆ ಲಿಪಟೆ ಹುಯೆ ಜಮಾಲ್ ಕಾ ರಂಗ್
ಚಲೆ ಭೀ ಆಓ ಭುಲಾಕರ್ ಕೆ ಸಬ್ ಗಿಲೆ ಶಿಕವೇ
ಬರಸನಾ ಚಾಹಿಯೇ ಹೋಲಿ ಕೆ ದಿನ್ ವಿಸಾಲ್ ಕಾ ರಂಗ್

ಹೋಲಿ ಮುಬಾರಕ್. ಸರ್ಫ್ ಎಕ್ಸೆಲ್ ಜಾಹಿರಾತಿನಿಂದ ಹಿಂದೂ ಧರ್ಮಕ್ಕೆ ಅವಮಾನವಾಯ್ತೆಂದುಕೊಂಡ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ.