Pages

Tuesday, April 28, 2015

ಅಹಿಚ್ಛತ್ರ ಬ್ರಾಹ್ಮಣಾಗಮನಕಥಾ - ೨

ಶಾತವಾಹನ ಸಾಮ್ರಾಜ್ಯ
ಕಳೆದ ಲೇಖನದಲ್ಲಿ ಕದಂಬರು ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆತಂದು ಇಲ್ಲಿ ನೆಲೆಗೊಳಿಸಿದ್ದರ ವಿಷಯವಾಗಿ ಕೆಲ ಉತ್ತರ ಸಿಗದ ಪ್ರಶ್ನೆಗಳಿವೆ ಎಂದಿದ್ದೆನಷ್ಟೆ!
       ಶಾತವಾಹನರ ಯಜ್ಞಾನುಷ್ಟಾನಗಳಿಗೋಸ್ಕರ ಉತ್ತರದ ಅಹಿಚ್ಛತ್ರದಿ೦ದ ಅವರ ರಾಜ್ಯಕ್ಕೆ ಬ೦ದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿ ನೆಲೆನಿ೦ತಿದ್ದ ವೈದಿಕರನ್ನೇ ಕದ೦ಬರು ಕರೆತ೦ದು ಇಲ್ಲಿ ನೆಲೆಗೊಳಿಸಿದರೆ? ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಹಾಗಾದರೆ ಈ ಗೋದಾವರಿ ತೀರವಿರುವುದು ಮಹಾರಾಷ್ಟ್ರದಲ್ಲೇ ಅಥವಾ ಆ೦ಧ್ರದಲ್ಲೇ?
ಕದ೦ಬ ರಾಜರ ಕು೦ತಳ  ರಾಜ್ಯದಲ್ಲಿ ತುಳುನಾಡಿನ ಆಲುಪರು ದರ್ಮಾಭಿಮಾನಿಗಳೂ, ಸತ್ಯಪುತ್ರರೂ ಆಗಿದ್ದರಿ೦ದ ಅವರ ಆಶಯ ಪ್ರೋತ್ಸಾಹವೂ ಸೇರಿ ಕ್ರಿ.ಶ. ಮೂರನೇ ಶತಮಾನದ ಸುಮಾರಿಗೆ ಅಹಿಚ್ಛತ್ರದ ಬ್ರಾಹ್ಮಣರು ಬ೦ದರೇ? ಹಾಗೆ ಬಂದವರು ಬ್ರಾಹ್ಮಣರು ಮಾತ್ರವಲ್ಲ. ನಂಬೂದಿರಿಗಳು, ತಮಿಳಿನ ಗೌಂಡರ್ ಸಮುದಾಯ, ನಾಗಾ ಸಮುದಾಯಕ್ಕೆ ಸೇರಿದ ಕೇರಳದ ನಾಯರರು, ತುಳುನಾಡಿನ ಬಂಟರು, ಆಂಧ್ರದ ನಾಯ್ಡುಗಳು ಕೂಡ ಇದ್ದಾರೆ. ಇವರೆಲ್ಲರ ಇತಿಹಾಸಗಳೂ ಅಹಿಚ್ಛತ್ರವನ್ನೇ ಉಲ್ಲೇಖಿಸುತ್ತವೆ. ಹಾಗಾದರೆ ಆ ಅಹಿಚ್ಛತ್ರ ಒಂದೇ ಆಗಿತ್ತೇ ಅಥವಾ ಹಲವು ಪ್ರದೇಶಗಳಿಗೆ ಆ ಹೆಸರಿತ್ತೇ? ಒಂದೇ ಪ್ರದೇಶದಿಂದ ಬೇರೆ ಬೇರೆ ಸಮುದಾಯಗಳ ಅಷ್ಟು ದೊಡ್ಡ ಮಟ್ಟಿನ ವಲಸೆಗೆ ಕಾರಣಗಳೇನು?
       ಕೋಟ ಬ್ರಾಹ್ಮಣರು ಅಹಿಚ್ಛತ್ರದಿ೦ದ ಆಂಧ್ರದ ಗೋದಾವರಿ, ಗೋದಾವರಿಯಿ೦ದ ಬನವಾಸಿ, ಬನವಾಸಿಯ ಬಳಿಕ ಈ ಹಾದಿಯಲ್ಲಿ ಹಾಡುವಳ್ಳಿ, ಬೈ೦ದೂರು ಮಾರ್ಗವಾಗಿ ಸಹ್ಯಾದ್ರಿಯ ತಪ್ಪಲಿನ ಪ್ರಮುಖ ಸ೦ಪರ್ಕಪ್ರದೇಶವಾದ ಗ೦ಗನಾಡಿಗೆ ಬ೦ದು ನೆಲೆಸಿದರೆಂದು ಪಿ.ಎನ್. ನರಸಿ೦ಹಮೂರ್ತಿಯವರು ಸಂಪಾದಿಸಿದ ಕು೦ದನಾಡಿನ ಶಾಸನಗಳಲ್ಲಿ ತಿಳಿಸಲಾಗಿದೆ. ಶಾಂಕರ, ಮಾಧ್ವ ಮತಗಳ ಪ್ರಭಾವಕ್ಕೊಳಗಾಗದೇ ತಮ್ಮ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದ ಕರಾವಳಿಯ ಏಕೈಕ ಬ್ರಾಹ್ಮಣ ಸಮುದಾಯವಿದ್ದರೆ ಅದು ಕೂಟ ಬ್ರಾಹ್ಮಣರು. ಅವರ ಆರಾಧ್ಯ ದೈವ ನರಸಿಂಹ. ಆಂಧ್ರದಲ್ಲಿರುವಷ್ಟು ದೊಡ್ಡ ಮಟ್ಟಿನ ನರಸಿಂಹಾರಾಧನೆಯನ್ನು ಬೇರಾವ ರಾಜ್ಯಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದೊಂದು ವಿಶೇಷ. ’ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ವಿಪ್ರರ ವಲಸೆಯನ್ನು ಪ್ರೋತ್ಸಾಹಿಸಿತು. ಕ್ರಿ.ಪೂ ೫೦ ರಿ೦ದ ಕ್ರಿ.ಶ ೨೦೦ರ ತನಕ ದಕ್ಷಿಣದಲ್ಲಿ ರಾಜ್ಯವಾಳಿದ ಶಕಪುರುಷ, ದಕ್ಷಿಣಾಪಥಪತಿ ಶಾಲಿವಾಹನ ಚಕ್ರವರ್ತಿಯ ಆಶ್ರಯ, ನಿರ೦ತರ ಯಜ್ಞಯಾಗದಿ೦ದ ಇವರ ವಲಸೆಗೆ ನೆರವು ಸಿಕ್ಕಿತು’ ಎಂದು ಉಪ್ಪುಂದ ಚಂದ್ರಶೇಖರ ಹೊಳ್ಳರು ತಮ್ಮ ’ಕೂಟಮಹಾಜಗತ್ತು’ ಎಂಬ ಸಂಶೋಧನಾ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಊಹೆ ಸರಿಯಾದುದಾದರೂ, ಗ್ರಹಿಕೆ ಸರಿಯಿಲ್ಲವೆನ್ನುವುದು ನನ್ನಭಿಪ್ರಾಯ. ಮೌರ್ಯರಿದ್ದುದು ಕ್ರಿ.ಪೂ ಹತ್ತನೇ ಶತಮಾನಕ್ಕೂ ಹಿಂದೆ, ಅಲೆಕ್ಸಾಂಡರ್ ದಾಳಿಮಾಡಿದ್ದು ಗುಪ್ತರ ಕಾಲದಲ್ಲಿ, ಮೇಲಾಗಿ ಅಸಲಿ ಶಾಲಿವಾಹನನಾಳಿದ್ದು ಉಜ್ಜೈನಿಯನ್ನೇ ಹೊರತೂ ದಕ್ಷಿಣಾಪಥವನ್ನಲ್ಲ, ಕ್ರಿ.ಶ ೭೮ರಲ್ಲಿ ಪ್ರಾರಂಭವಾದ ಶಾಲಿವಾಹನ ಶಕೆಯ ಪ್ರಾರಂಭಕರ್ತೃ ಶಕಪುರುಷ ಶಾಲಿವಾಹನನೆಂದೇ ತಲೆಕೆಟ್ಟ ಬ್ರಿಟಿಷ್ ಇತಿಹಾಸಕಾರರಿಂದ ಗುರುತಿಸಲ್ಪಟ್ಟ ದಕ್ಷಿಣಾಪಥಪತಿ, ತ್ರಿಸಮುದ್ರತೋಯಪೀತವಾಹನನೆಂದೆಲ್ಲ ಬಿರುದಾಂಕಿತ ಗೌತಮೀಪುತ್ರಶಾತಕರ್ಣಿ ಆಳ್ವಿಕೆ ನಡೆಸಿದ ಕಾಲ ಕ್ರಿ.ಪೂ ೪ನೇ ಶತಮಾನ. ಈ ಮೂರೂ ಅಂಶಗಳಿಗೂ ತಾಳಮೇಳವಿಲ್ಲ. ಮೇಲಾಗಿ ಅಲೆಕ್ಸಾಂಡರಿನ ಆಕ್ರಮಣವಾದರೂ ಆತ ಸಿಂಧೂನದಿಯನ್ನು ದಾಟಲಾಗಲಿಲ್ಲವೆಂಬುದು ಸತ್ಯ. ಕಾರಣ, ಆಗ ಉತ್ತರ ಭಾರತವನ್ನಾಳುತ್ತಿದ್ದುದು ಯಾವುದೋ ಸಣ್ಣ ಪುಟ್ಟ ಚಿಲ್ಲರೆ ರಾಜವಂಶವಲ್ಲ. ಭಾರತದ ಸ್ವರ್ಣಯುಗದ ಸೃಷ್ಟಿಕರ್ತೃರೆನಿಸಿಕೊಂಡ ಗುಪ್ತರು ಅಲ್ಲಿ ಪಟ್ಟಕ್ಕೇರಿದ್ದರು. ವೈದಿಕ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಗುಪ್ತರ ಕೊಡುಗೆ ಕಡಿಮೆಯೇನಲ್ಲ. ಅಲೆಕ್ಸಾಂಡರಿನಂಥ ವೀರನೇ ಭಾರತದೊಳಬರಲು ಹೆದರಿದ್ದನೆಂದರೆ ಸಮಕಾಲೀನ ರಾಜನೀತಿಯಲ್ಲಿ ಗುಪ್ತರ ಪ್ರಾಬಲ್ಯವನ್ನು ಊಹಿಸಬಹುದು. ಅಂಥಹುದರಲ್ಲಿ ಉತ್ತರ ಭಾರತದಲ್ಲಿ ವಿದೇಶಿಗರ ಆಕ್ರಮಣ ತಾಳಲಾರದೇ ಬ್ರಾಹ್ಮಣರು ಅಲ್ಲಿಂದ ದಕ್ಷಿಣಕ್ಕೆ ವಲಸೆಬಂದರೆಂಬುದು ಸಾಧುವಾದವಲ್ಲ.
       ಸುದೀರ್ಘ ೫೦ ವರ್ಷಗಳ ಕಾಲ ರಾಜ್ಯವಾಳಿದ ಸಮುದ್ರಗುಪ್ತ , ಸಪ್ತಸಿ೦ಧೂ ಪ್ರದೇಶಗಳನ್ನು ಆಕ್ರಮಿಸಿ ಆ ಭಾಗದ ಯೌಧೇಯರನ್ನು ತನ್ನ ಅಧೀರರನ್ನಾಗಿಸಿದ ವಿಚಾರ ಅವನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಉಲ್ಲೇಖಿತವಾಗಿದೆ. ಅದರಲ್ಲಿ ಸಮುದ್ರಗುಪ್ತನು ಸಟ್ಲೇಜ್ ನದಿ ಪ್ರದೇಶದ ಬ್ರಹ್ಮಾವರ್ತವನ್ನೂ,  ದಕ್ಷಿಣಾಪಥವನ್ನೂ ಆಕ್ರಮಿಸಿ ಅಹಿಚ್ಛತ್ರದ ರಾಜನಾದ ಅಚ್ಯುತನನ್ನೂ, ಚಂಪಾವತಿಯ ನಾಗಸೇನನನ್ನೂ, ಕೋಟದ ಮುಖ್ಯಸ್ಥನನ್ನೂ ಜಯಿಸಿದನೆ೦ದು ಹೇಳಿಕೊಂಡಿದ್ದಾನೆ. ಪೊಳಲಿ ನಾರಾಯಣ ಮಯ್ಯರು ’ಕೂಟಬಂಧು’ ಮಾಸಿಕದಲ್ಲಿ ಇದನ್ನೊಮ್ಮೆ ಪ್ರಸ್ತಾವಿಸಿದ್ದರು. ಆಂಧ್ರದ ಗೋದಾವರಿಯ ದಕ್ಷಿಣಕ್ಕೆ ಚಂಪಾವತಿ ನದಿಮುಖಜ ಭೂಮಿಯ ಪ್ರದೇಶಕ್ಕೆ ಚಂಪಾವತಿಯೆಂದು ಹೆಸರು. ಅವೆರಡೂ ಒಂದೇ ಆಗಿರಬಹುದೇ? ಕೋಟ ಎಂಬ ಹೆಸರಿನ ಊರು ಕರ್ನಾಟಕದ ಉಡುಪಿ ಹಾಗೂ ಆಂಧ್ರಪ್ರದೇಶ ನೆಲ್ಲೂರು ಈ ಎರಡೂ ಕಡೆಯೂ ಇವೆ(ರಾಜಸ್ಥಾನ, ಮಲೇಷಿಯಾಗಳಲ್ಲೂ ಇವೆ). ಅಹಿಚ್ಛತ್ರವೂ ಅಲ್ಲೆಲ್ಲೋ ಹತ್ತಿರದಲ್ಲೇ ಇರಬಹುದೇ? ಇದೇ ಸಮುದ್ರಗುಪ್ತ ಪಲ್ಲವರೊಡನೆ ಕಾದಾಡಿ ಶಿವಸ್ಕಂಧವರ್ಮನನ್ನು ಸೋಲಿಸಿದ್ದ. ಈ ಸೋಲಿನಿಂದ ಪಲ್ಲವರು ಬಲಗುಂದಿದ್ದನ್ನೇ ನೋಡಿಕೊಂಡು ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಸಮುದ್ರಗುಪ್ತ, ಪಲ್ಲವರ ಶಿವಸ್ಕಂಧವರ್ಮ ಮತ್ತು ಕದಂಬರ ಮಯೂರವರ್ಮ ಈ ಮೂವರೂ ನಿಸ್ಸಂದೇಹವಾಗಿ ಸಮಕಾಲೀನರು. ಸಮುದ್ರಗುಪ್ತನ ಕಾಲವನ್ನು ತಪ್ಪುತಪ್ಪಾಗಿ ಲೆಕ್ಕಹಾಕಿದ ಇತಿಹಾಸಕಾರರ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆ. ಮಹಾಭಾರತ ಯುದ್ಧ ನಡೆದ ಸುಮಾರು 1500 ವರ್ಷಗಳಿಗೆ ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವಕನ ಸಹಾಯದಿಂದ ಕೊಲ್ಲಿಸಿದ ಚಾಣಕ್ಯ ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ಶಾತವಾಹನ ವಂಶಗಳು ಆಳ್ವಿಕೆ ನಡೆಸಿದವು. ಆಂಧ್ರವಂಶದ ಚಂದ್ರಶ್ರೀ ಅಥವಾ ಚಂದ್ರಮಸುವಿನ ಆಳ್ವಿಕೆಯಲ್ಲೇ ಅಲೆಕ್ಸಾಂಡರಿನ ದಂಡಯಾತ್ರೆ ನಡೆದದ್ದು. ಈ ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದಿದ್ದು. ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದವನು ಮೊದಲನೇ ಚಂದ್ರಗುಪ್ತ. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಈ ಆಂಧ್ರಭೃತ್ಯರು ಗುಪ್ತರಲ್ಲದೇ ಮತ್ಯಾರೂ ಅಲ್ಲ. ಸಮುದ್ರಗುಪ್ತ ಪಟ್ಟಕ್ಕೆ ಬಂದಿದ್ದು ಕಲಿಯುಗದ ೨೭೮೩ನೇ ವರ್ಷದಲ್ಲಿ ಅಂದರೆ ಸುಮಾರಿಗೆ ಕ್ರಿ.ಪೂ ೩೨೦ರ ಆಜುಬಾಜು. ಹಾಗಿದ್ದಲ್ಲಿ ಮಯೂರವರ್ಮನೂ ಅದೇ ಕಾಲದವನಾಗಬೇಕಾಯಿತಲ್ಲವೇ? ಅಲ್ಲಿಗೆ ಬ್ರಾಹ್ಮಣರು ಅಹಿಚ್ಛತ್ರದಿಂದ ವಲಸೆಬಂದರೆನ್ನಲಾದ ಕಾಲ ಸುಮಾರು ಐನೂರು ವರ್ಷಗಳಷ್ಟು ಹಿಂದೆ ದೂಡಲ್ಪಟ್ಟಿತು(?).
       ಕರಾವಳಿಯಲ್ಲಿ ಮೊದಲೇ ಬ್ರಾಹ್ಮಣ ವಸತಿ ಇದ್ದಿತ್ತು ಎಂದಿಟ್ಟುಕೊಳ್ಳೋಣ. ಆದರೆ ಯಜ್ಞಯಾಗಾದಿಗಳನ್ನು ಋಷಿಸ೦ಪ್ರದಾಯ ಪ್ರವರ್ತಕರೂ, ಮ೦ತ್ರವೇತ್ತರೂ, ಮ೦ತ್ರದೃಷ್ಟಾರರೂ ಅಗಿರುವವರಿ೦ದಲೇ ಮಾಡಿಸಬೇಕಿತ್ತು. (ಹೆಚ್ಚಿನ ವಿವರ ವೇ.ಬ್ರ. ಬನವತಿ ರಾಮಕೃಷ್ಣ ಶಾಸ್ತ್ರಿಗಳ ’ಗೋತ್ರಪ್ರವರ ವಿಷಯ’). ಹಾಗಾಗಿದ್ದರಿಂದಲೇ ಮಯೂರ ವರ್ಮ ವೇದಪಾರಂಗತರನ್ನು ಬೇರೆಡೆಯಿಂದ ಕರೆಸಬೇಕಾಯ್ತು. ಕರ್ನಾಟಕ ಚರಿತ್ರೆ ಸ೦ಪುಟ ೧ ಪುಟ ೩೧೬ರಲ್ಲಿಯೂ ಉಲ್ಲೇಖಿಸಿದ೦ತೆ ನಾಸಿಕದ ಮಾಧವಪುರ ಷಟ್‌ಕೋನ ಸ್ಯೂಪಸ್ಥ೦ಭ ಶಾಸನವು ಸಾಕೇತ ಅಯೋಧ್ಯೆಯಿ೦ದ ಬ೦ದ ಕಾಶ್ಯಪ ಗೋತ್ರದ ಕಠಶಾಖೆಯ ಸೋಮಯಶಸ್ ಬ್ರಾಹ್ಮಣನು ಕ್ರಿ.ಶ ೧೦೨ರಲ್ಲಿ(?) ವಾಜಪೇಯ ಯಾಗವನ್ನು ಶಾತವಾಹನ ರಾಜರ ಪರವಾಗಿ ನೇರವೇರಿಸಿದ ಎಂದಿದೆ. ಈ ಶಾತವಾಹನರ ಪ್ರಾ೦ತೀಯ ರಾಜಧಾನಿ ಬನವಾಸಿಯಾಗಿತ್ತು.  ಶಾತವಾಹನರ ಬಳಿಕ ಕರಾವಳಿ ಮ೦ಡಲವನ್ನಾಳತೊಡಗಿದ ಒ೦ದನೇ ಚುಟುಕುಲಾನ೦ದ ಶಾತಕರ್ಣಿ ಮತ್ತವನ ಮಗ ಎರಡನೇ ಮಗ ವಿಣ್ಹೆ ಚುಟುಕುಲಾನ೦ದ ಶಾತಕರ್ಣಿಯರು ಅನೇಕ ಯಾಗಗಳನ್ನು ನೆರವೇರಿಸಿ ದಾನದತ್ತಿ ನೀಡಿದ ಬಗ್ಗೆ ಶಾಸನಗಳಿವೆ. ಶಾತವಾಹನರು ಹಾರೀತ ಪುತ್ರರೆ೦ದೂ, ಮಾನ್ಯ ಗೋತ್ರದವರೆ೦ದೂ ತಮ್ಮನ್ನು ಕರೆದುಕೊ೦ಡಿದ್ದರು. ಅವರ ನ೦ತರ ಆಳ್ವಿಕೆಗೆ ಬ೦ದ ಮಯೂರವರ್ಮ ತಾನು ಶಿವಸ್ಕ೦ದವರ್ಮನ ಮರಿಮೊಮ್ಮಗ, ವೀರಶರ್ಮನ ಮೊಮ್ಮಗ, ಬ೦ಧುಷೇಣನ ಮಗನೆಂದೂ ಹಾರೀತ ಪುತ್ರ, ಮಾನ್ಯ ಗೋತ್ರದವನೆ೦ದೂ ಹೇಳಿಕೊಂಡು ತನ್ನ ಮೂಲವನ್ನು ಶಾಲಿವಾಹನರ ಜೊತೆ ಗುರುತಿಸಿಕೊಂಡಿದ್ದಾನೆ.
        ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ,  ಅಶೋಕನ ಮೊಮ್ಮಗ ಸಮ್ಪ್ರತಿಯ ಕಾಲದಲ್ಲಿ ಆ೦ಧ್ರದ ಗೋದಾವರಿ ತಟದವರೆಗೆ ಹಬ್ಬಿದ್ದ ಕಳಿ೦ಗರಾಜ್ಯದಲ್ಲಿ ಜೈನಮತಾಚರಣೆ ವ್ಯಾಪಕಗೊ೦ಡಿದ್ದು ವಿಪ್ರರ ವಲಸೆಯನ್ನು ಗೋದಾವರಿಯ ದಕ್ಷಿಣಕ್ಕೆ ಪ್ರೋತ್ಸಾಹಿಸಿತು. ಕಳಿ೦ಗ ರಾಜ್ಯದ ರಾಜಧಾನಿ ಕಳಿ೦ಗಪಟ್ಟಣವಿರುವುದು ಆ೦ಧ್ರದ ಗೋದಾವರಿ ತೀರದ ಶ್ರೀಕಾಕುಳ೦ನಲ್ಲಿ. ಖಾರವೇಲರ ಕಾಲದಲ್ಲಿ ಉತ್ತರ ಆ೦ಧ್ರದ ಬಹುಭಾಗ ಜೈನಮತ ಪ್ರವರ್ಧಮಾನಕ್ಕೆ ಬ೦ದು ವೈದಿಕ ಮತ ಅನಾದರಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೋ ಏನೋ ಕಳಿ೦ಗ ರಾಜ್ಯಕ್ಕೆ ಕಾಲಿಟ್ಟರೆ ಪ್ರಯಶ್ಚಿತ್ತ ಮಾಡಿಕೊಳ್ಳಬೇಕೆ೦ದು ಬೋಧಾಯನ ಒ೦ದು ಕಡೆ ಹೇಳುತ್ತಾನೆ. ಹಾಗೆ ನೋಡಿದರೆ ಯಜುರ್ವೇದದ ಸೂತ್ರಕಾರರಾದ ಆಪಸ್ತಂಭ ಮತ್ತು ಬೋಧಾಯನರಿಬ್ಬರೂ ಆಂಧ್ರದೇಶದವರೇ.(’Encyclopaedia of the History of Science, Technology, and Medicine in Non-Western Cultures edited by Helaine Selin’). ಅದರರ್ಥ ಆಂಧ್ರದೇಶವು ಮೊದಲಿನಿಂದಲೂ ವೈದಿಕ ಚಟುವಟಿಕೆಗಳ ಮುಖ್ಯಕೇಂದ್ರವಾಗಿತ್ತು. ಉತ್ತರದಿಂದ ಗೋದಾವರೀ ತೀರಕ್ಕೆ ಬಂದಿರಬಹುದಾಗಿದ್ದ ವಿಪ್ರರು ಶಾತವಾಹನರ ನಂತರ ಅಲ್ಲಿಂದ ಮತ್ತೆ ದಕ್ಷಿಣದತ್ತ ಉನ್ನತ ಸ್ಥಾನಮಾನವನ್ನರಸಿ ತೆರಳಿರಬಹುದು.
       ಶಾತವಾಹನ ಸಾಮ್ರಾಜ್ಯದಲ್ಲಿ ಮೊದಲ ಮಗ ಪಟ್ಟಕ್ಕೇರುತ್ತಿದ್ದ. ಉಳಿದ ಮಕ್ಕಳು ಮತ್ತು ಅಳಿಯಂದಿರು ವಿವಿಧ ಮಂಡಳಗಳ ಅಥವಾ ಪ್ರಾಂತ್ಯಗಳ ಅಧಿಪತಿಗಳಾಗುತ್ತಿದ್ದರು. ಶಾತವಾಹನರ ಕೊನೆಯ ಅರಸು ಪುಲೋಮಶ್ರೀ ಶಾತಕರ್ಣಿಯ ಕಾಲದಲ್ಲಿ ಸಾಮ್ರಾಜ್ಯ ಶಿಥಿಲವಾಗಿತ್ತು. ಚಿಕ್ಕ ಚಿಕ್ಕ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿದ್ದ ವಂಶಸ್ಥರೆಲ್ಲ ದಾಯಾದಿ ಕಲಹದಲ್ಲಿ ತೊಡಗಿ ಹೊಡೆದಾಡತೊಡಗಿದರು. ಅವರಲ್ಲಿ ಕೆಲವರು ಸ್ವಾತಂತ್ರ್ಯವನ್ನು  ಘೋಷಿಸಿಕೊಂಡು ತಮ್ಮದೇ ರಾಜ್ಯ ಕಟ್ಟಿಕೊಂಡರು. ಮುಂದೆ ಶಾತವಾಹನ ಸಾಮ್ರಾಜ್ಯ ಹನ್ನೆರಡು ಕವಲುಗಳಾಗಿ ಒಡೆದು ಹೋಯಿತೆಂದು ಬ್ರಹ್ಮಾಂಡಪುರಾಣ(ಅಂಧ್ರಾರಾಮ್ ಸಂಸ್ಥಿತಾಃ ಪಂಚ ತೇಷಾಮ್ ವಸಶ್ಚಃ ಯೇ ಪುನ ಸಪ್ತೈವತು ಭವಿಷ್ಯಂತಿ -ಅಧ್ಯಾಯ ೭೭, ೧೭೧) ಮತ್ತು ವಾಯುಪುರಾಣಗಳು ತಿಳಿಸುತ್ತವೆ. ಪಲ್ಲವರು, ಸೇನ, ಕದಂಬ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲವೂ ಆಂಧ್ರಶಾತವಾಹನರೇ. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ಮುಂದೆ ಸ್ಕಂದವರ್ಮನ ಕಾಲದಲ್ಲಿ ಅದು ಕೃಷ್ಣಾ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ವರೆಗೂ ಪಶ್ಚಿಮದಲ್ಲಿ ಬಳ್ಳಾರಿಯವರೆಗೂ ವಿಸ್ತರಣೆಯಾಯಿತು. ಪಲ್ಲವ ಶಬ್ದಾರ್ಥವೇ ಬಳ್ಳಿ ಅಥವಾ ಎಲೆ.
     
ಪಲ್ಲವ ರಾಜ್ಯ
ಅದು ಮುಂದೆ ತಮಿಳೀಕರಣಗೊಂಡು ಪಲ್ಲವರು ತೊಂಡೈಯಾರರೆಂದು ಹೆಸರಾದರು. ತೊಂಡೆ ಬಳ್ಳಿಯನ್ನು ಲಾಂಛನವಾಗಿ ಹೊಂದಿದವರೆಂಬರ್ಥದಲ್ಲಿ. ಪಲ್ಲವರ ತಮಿಳು ಶಾಸನಗಳಲ್ಲೆಲ್ಲ ತೊಂಡೈಯಾರ ಮತ್ತು ಕಡುವೆಟ್ಟಿ ಎಂಬ ಶಬ್ದಗಳು ಸಮಾನಾರ್ಥಕಗಳಾಗಿ ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ತೆಲುಗು ಪಲ್ಲವರ ಮೂಲಪುರುಷ ತ್ರಿನೇತ್ರ ಪಲ್ಲವ ಅಥವಾ ಮುಕ್ಕಂಟಿ ಕಡುವೆಟ್ಟಿ ಪಲ್ಲವನ ಹೆಸರು ಅವರ ಮೊದಮೊದಲ ನೆಲ್ಲೂರು ಶಾಸನದಿಂದ ಹಿಡಿದು ಹೆಚ್ಚಿನೆಲ್ಲ ಶಾಸನಗಳಲ್ಲಿ ಬಳಕೆಯಾಗಿದೆ.(Butterworth, Nellore inscriptions, I, p.389, I, p. 671, XI, p. 340 ಮತ್ತು Prof. Eilson, catalogue of the Oriental Manuscripts of Colonel Mackenzie) ವೇಲನಾಡು ಹಾಗೂ ಕೊಂಡಪದ್ಮಟಿ ಸಾಮಂತರಸರ ಶಾಸನಗಳಲ್ಲಲ್ಲದೇ ನೊಳಂಬರ ದಾಖಲೆಗಳಲ್ಲೂ ಮುಕ್ಕಂಟಿ ಪಲ್ಲವನನ್ನು ಹೊಗಳಲಾಗಿದೆ. ತೆಲುಗು ಚೋಳರು ತಮ್ಮ ಮೂಲಪುರುಷ ಕರಿಕಾಲ ಚೋಳನನ್ನು ಎಲ್ಲೆಡೆಯೂ ನೆನೆದಂತೆ ತೆಲುಗು ಪಲ್ಲವರೂ ’ಕಾಡುಕಡಿದು ನಾಡು ಕಟ್ಟಿದವನೆಂದು, ಬ್ರಾಹ್ಮಣರ ಭಾಗ್ಯವಿಧಾತನೆಂದೂ’ ಮುಕ್ಕಂಟಿಯನ್ನು ಹೊಗಳುವ ಯಾವ ಅವಕಾಶವನ್ನೂ ತಮ್ಮ ಶಾಸನಗಳಲ್ಲಿ ಕಳೆದುಕೊಂಡಿಲ್ಲ. ಪಿ.ಟಿ ಶ್ರೀನಿವಾಸ್ ಅಯ್ಯಂಗಾರ್ ತಮ್ಮ History of the Tamils from the Earliest Times to 600 A.D ಗ್ರಂಥದಲ್ಲಿ ಇದನ್ನು ಸವಿವರವಾಗಿ ಚರ್ಚಿಸಿದ್ದಾರೆ. ಈ ತ್ರಿಲೋಚನನ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲದಿದ್ದರೂ ಅವನ ಬಗ್ಗೆ ಸಾಕಷ್ಟು ಸಂಶೋಧನೆಗಳಿನ್ನೂ ನಡೆದಿಲ್ಲ. ಈತ ಕರಿಕಾಲ ಚೋಳನ ಸಮಕಾಲೀನ. ಕರಿಕಾಲ ಚೋಳನ ಕಾಲ ಈಗ ನಂಬಲ್ಪಡುವಂತೆ Gajabahu synchronismನ ಪ್ರಕಾರ ಕ್ರಿ.ಶ ೧೯೦. ಅಂದರೆ ಮಯೂರ ವರ್ಮನಿಗಿಂತ ಕನಿಷ್ಟ ನೂರೈವತ್ತು ವರ್ಷಗಳ ಹಿಂದೆ. ಇದೇ ಕರಿಕಾಲ ಚೋಳ ಕಾವೇರಿ ತೀರದಲ್ಲಿ ತ್ರಿನೇತ್ರ ಪಲ್ಲವನನ್ನು ಸೋಲಿಸಿದ್ದನೆಂದು ಚೋಳರ ಶಾಸನಗಳಲ್ಲಿ ದಾಖಲಾಗಿದೆ(ಕರುಣಾ ಸರೋರುಹ ವಿಹಿತ ವಿಲೋಚನ ಪಲ್ಲವ ತ್ರಿಲೋಚನ ಪ್ರಮುಖ ಕಿಲಪ್ರಿಥ್ವೀಶ್ವರ ಕರಿತ ಕಾವೇರಿ ತೀರ- ಪುಣ್ಯಕುಮಾರನ ಮೇಲಪಾಡು ತಾಮ್ರಶಾಸನ). ಈ ತ್ರಿನೇತ್ರ ಪಲ್ಲವ ಈಗಿನ ಕಡಪ ಪ್ರಾಂತ್ಯದಲ್ಲಿ ತ್ರಿಲೋಚನಪುರಿಯೆಂಬ ನಗರವನ್ನು ಕಟ್ಟಿಸಿದ್ದನಂತೆ. ಅದೀಗ ಪೆದ್ದಮುಡಿಯಂ ಎಂದು ಹೆಸರಾಗಿದೆ. ಜೊತೆಗೆ ತೆಲುಗು ಚೋಳರ ಶಾಸನಗಳಲ್ಲಿ ಈತ ಪೆರುಗಂದೂರಿನಲ್ಲಿ ೫೨ ಬ್ರಾಹ್ಮಣರಿಗೆ ದಾನನೀಡಿದ ಸಾಲುಗಳಿವೆ. ಗುಂಟೂರಿನ ಶಾಸನವೊಂದರಲ್ಲಿ ಬಾಪಟ್ಲದಲ್ಲಿ ೭ ಗ್ರಾಮಗಳನ್ನು ಬ್ರಾಹ್ಮಣರಿಗೆ ದಾನಮಾಡಿದ್ದಕ್ಕೆ ಆಧಾರವಿದೆ. ಆದರೆ ಈತ ಅತಿ ಹೆಚ್ಚಾಗಿ ನೆನೆಯಲ್ಪಟ್ಟಿದ್ದು ಶ್ರೀಪರ್ವತದಲ್ಲಿ ಅಹಿಚ್ಛತ್ರದಿಂದ ೭೦ ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ನೆಲೆಗೊಳಿಸಿದ ಕಾರ್ಯಕ್ಕೆ. ಮುಂದೆ ಈ ಪ್ರಾಂತ್ಯವನ್ನಾಳಿದ್ದ ಮಯೂರವರ್ಮ ಅದೇ ಬ್ರಾಹ್ಮಣರನ್ನು ಕರಾವಳಿಗೆ ಕರೆತಂದನೇ? ಇದೇ ಮುಕ್ಕಂಟಿಯ ಕುರಿತು ವಲ್ಲಭಾಬ್ಯುದಯಮ್ ಮತ್ತು ಶ್ರೀಕಾಕುಳಂನ ಇತಿಹಾಸದ ಬಗೆಗಿನ ಶ್ರೀಕಾಕುಳ ಮಹಾತ್ಮ್ಯಮ್‌ಗಳಲ್ಲಿ ಎರಡು ಆಸಕ್ತಿದಾಯಕ ಕಥೆಯಿದೆ. ಧರಣೀಕೋಟವನ್ನಾಳುತ್ತಿದ್ದ ಮುಕ್ಕಂಟಿ ಪಲ್ಲವ ಶಿವನ ವರಪ್ರಸಾದದಿಂದ ಜನಿಸಿದವನು. ಅದೇ ಕಾರಣಕ್ಕಾಗಿ ಅವನಿಗೆ ಹಣೆಯ ಮೇಲೆ ಮೂರನೇ ಕಣ್ಣೊಂದಿತ್ತಂತೆ(ಮಯೂರನನ್ನೊಮ್ಮೆ ನೆನಪಿಸಿಕೊಳ್ಳಿ). ಈತ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಹಾರುವ ಪಾದರಕ್ಷೆಗಳನ್ನು ಪಡೆದುಕೊಂಡಿದ್ದ. ಒಂದು ದಿನ ನಾರದರ ಮಾತಿನಂತೆ ಗಂಗಾ ನದೀ ತೀರದ ಅಹಿಚ್ಛತ್ರದಲ್ಲಿರುವ ಶ್ರೀವಲ್ಲಭನನ್ನು ಪೂಜಿಸಲು ತೆರಳಿದ. ಆತ ಗಂಗೆಯಲ್ಲಿ ಸ್ನಾನಮಾಡುವಾಗ ಕಳಚಿಟ್ಟ ಪಾದರಕ್ಷೆಗಳು ಹಿಂದಿರುಗಿ ಬರುವಾಗ ಕಳುವಾಗಿದ್ದವು. ಆಗ ಅಲ್ಲಿದ್ದ ಬ್ರಾಹ್ಮಣರು ತಮ್ಮ ತಪಶ್ಶಕ್ತಿಯಿಂದ ಕಳುವಾಗಿದ್ದ ಪಾದುಕೆಗಳನ್ನು ಹುಡುಕಿ ಕೊಟ್ಟರಂತೆ. ಅವರ ಶಕ್ತಿಯನ್ನು ನೋಡಿ ಪ್ರಭಾವಿತಗೊಂಡ ಮುಕ್ಕಂಟಿ ಪಲ್ಲವ ಆರು ಸಾವಿರ ಬ್ರಾಹ್ಮಣರನ್ನು ತನ್ನ ರಾಜ್ಯಕ್ಕಾಹ್ವಾನಿಸಿ ಶ್ರೀಕಾಕುಳದಲ್ಲಿ ನೆಲೆಗೊಳಿಸಿದನಂತೆ. ಜೊತೆಗೆ ತನ್ನ ರಾಜ್ಯದಲ್ಲಿ ಶ್ರೀವಲ್ಲಭನಿಗೆ ದೇವಸ್ಥಾನವೊಂದನ್ನೂ ಕಟ್ಟಿಸಿದ. ಆನಂತರ ಅವರನ್ನು ಶ್ರೀಪರ್ವತಕ್ಕೂ ಕರೆಸಿಕೊಂಡ. ಮೂಲ ಹಸ್ತಪ್ರತಿಗಳಲ್ಲಿ ದೊರಕದಿದ್ದರೂ ಶ್ರೀಕಾಕುಳಮಹಾತ್ಮ್ಯಮ್‌ ಬ್ರಹ್ಮಾಂಡಪುರಾಣದ ಉತ್ತರಖಂಡದ್ದೆನ್ನಲಾಗಿದೆ. ಹಾಗಲ್ಲದಿದ್ದರೂ ಅದು ಐತಿಹಾಸಿಕವಾಗಿ ಬಹಳ ಮಹತ್ವಪೂರ್ಣ ಕೃತಿ, ಅದರ ಪ್ರಕಾರ ಕಳಿಂಗದಲ್ಲಿ ಜೈನಮತಕ್ಕೂ, ಅಮರಾವತಿ, ನಾಗಾರ್ಜುನಕೊಂಡಗಳಲ್ಲಿ ಬೌದ್ಧಮತಕ್ಕೂ ಮನ್ನಣೆ ಹೆಚ್ಚಾಗಿ ಆಂಧ್ರದೇಶದಲ್ಲಿ ಅವೈದಿಕ ಮತಗಳ  ಪ್ರಾಬಲ್ಯ ಜಾಸ್ತಿಯಾಯಿತು. ಬ್ರಾಹ್ಮಣರಿಗೂ ಬೌದ್ಧರಿಗೂ ವಾದ ವಾಗ್ವಾದಗಳು ಜಾಸ್ತಿಯಾದವು. ಒಮ್ಮೆ ಅದೇ ಪ್ರಾಂತ್ಯವನ್ನಾಳುತ್ತಿದ್ದ ಮಹಾಮತಿ ಎಂಬ ಅರಸ ಶ್ರೀವಲ್ಲಭನನ್ನು ಅರ್ಚಿಸಲು ಶ್ರೀಕಾಕುಳಕ್ಕೆ ತೆರಳಿದ್ದನಂತೆ. ವೈದಿಕ-ಬೌದ್ಧರನ್ನು ಪರೀಕ್ಷಿಸಲು ಕೊಡವೊಂದರಲ್ಲಿ ಹಾವನ್ನಿಟ್ಟು ಅದರೊಳಗಿರುವ ವಸ್ತುವಾವುದೆಂದು ತಿಳಿಸಲು ಇಬ್ಬರಿಗೂ ಪಂಥಾಹ್ವಾನವೊಡ್ಡಿದ. ಬೌದ್ಧ ಗುರು ಅದರಲ್ಲಿರುವ ವಸ್ತು ಹಾವೆಂದರೆ, ಬ್ರಾಹ್ಮಣರು ಅದರಲ್ಲಿರುವುದು ಕೊಡೆಯೆಂದರಂತೆ. ಮುಚ್ಚಳ ತೆಗೆದು ನೋಡಲಾಗಿ ಹಾವು ಬೆಳ್ಗೊಡೆಯಾಗಿ ಬದಲಾಗಿತ್ತು. ವೈದಿಕರ ಶಕ್ತಿಯಿಂದ ಸಂತೋಷಗೊಂಡ ಅರಸ ಅವರನ್ನು ಬಹುವಾಗಿ ಸತ್ಕರಿಸಿದನಂತೆ. ಅಂದಿನಿಂದ ಆ ಸ್ಥಳ ದಕ್ಷಿಣದ ಅಹಿಚ್ಛತ್ರವೆಂದು ಹೆಸರಾಯಿತು(ಅಹಿ=ಹಾವು, ಛತ್ರ=ಕೊಡೆ). ಬ್ರಹ್ಮ ವೈವರ್ತತ ಪುರಾಣದಲ್ಲಿ ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ಅನಂತನು ಸರ್ಪಪುರವೆಂಬಲ್ಲಿ ಮಹಾವಿಷ್ಣುವನ್ನು ಕುರಿತು ತಪಸ್ಸನ್ನಾಚರಿಸಿದನಂತೆ. ತಪಸ್ಸಿಗೆ ಮೆಚ್ಚಿದ ವಿಷ್ಣುವು ತಾನು ಅನಂತಶಯನನಾಗುವುದಾಗಿ ವರವಿತ್ತ. ಅನಂತನು ವಿಷ್ಣುವಿಗೆ ನೆರಳಾದ ಹಿನ್ನೆಲೆಯಲ್ಲಿ ಸ್ಥಳ ಅಹಿಚ್ಛತ್ರವೆಂಬ ಹೆಸರು ಪಡೆಯಿತೆಂಬ ಕಥೆಯಿದೆ. ಮುಕ್ಕಂಟಿ ಪಲ್ಲವ ವಲ್ಲಭನನ್ನೂ, ಬ್ರಾಹ್ಮಣರನ್ನೂ ಉತ್ತರ ಅಹಿಚ್ಛತ್ರದಿಂದ ದಕ್ಷಿಣದ ಅಹಿಚ್ಛತ್ರಕ್ಕೆ ಕರೆತಂದನೆಂದೆನಷ್ಟೆ. ವಲ್ಲಭಾಭ್ಯುದಯದ ಪ್ರಕಾರ ಮುಂದೆ ನೆರೆಯಲ್ಲಿ ದೇವಸ್ಥಾನ ನಾಶವಾದಾಗ ವಲ್ಲಭಸ್ವಾಮಿ ಪುನಃ ತನ್ನ ಅಹಿಚ್ಛತ್ರಕ್ಕೆ ತಿರುಗಿ ಹೋದನಂತೆ. ಇದಾದ ಎಷ್ಟೋ ಕಾಲದ ನಂತರ ಕಳಿಂಗದಲ್ಲಿ ಪೂರ್ವ ಗಂಗರ ಆಳ್ವಿಕೆ ಸುರುವಾಗಿ ಹೈಂದವ ಮತಾಚರಣೆ ಪ್ರವರ್ಧಮಾನಕ್ಕೆ ಬಂದಿತು. ಕಳಿಂಗವನ್ನಾಳಿದ್ದ ಅನಂಗಭೀಮನ ಮಗ ನರಸಿಂಹವರ್ಮ ತೀರ್ಥಯಾತ್ರೆಗಾಗಿ ಈ ಸ್ಥಳಕ್ಕೆ ಬಂದಾಗ ವಲ್ಲಭನನ್ನು ಪುನರ್ಪ್ರತಿಷ್ಟಾಪಿಸಲಿಚ್ಛಿಸಿದ. ಆಗ ನರಸಿಂಹವರ್ಮನ ಕನಸ್ಸಿನಲ್ಲಿ ಕಾಣಿಸಿಕೊಂಡ ವಲ್ಲಭಸ್ವಾಮಿ ತಾನು ದೇವಸ್ಥಾನದ ಬ್ರಹ್ಮಕುಂಡದ ಪಕ್ಕದಲ್ಲಿನ ಕರವೀರ ಗಿಡದ ಮೂಲೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದನಂತೆ. ಅಲ್ಲಿ ಸಿಕ್ಕ ವಿಗ್ರಹವನ್ನು ಪ್ರತಿಷ್ಟಾಪಿಸಿ ನರಸಿಂಹವರ್ಮ ಹೊಸ ದೇವಾಲಯವನ್ನು ಕಟ್ಟಿಸಿದನಂತೆ. ವಲ್ಲಭಾಬ್ಯುದಯದ ಈ ಕಥೆ ಐತಿಹಾಸಿಕವಾಗಿ ಸತ್ಯವೋ ಅಥವಾ ಸುಳ್ಳೋ, ದೇವಾಲಯ ನಿಜವಾಗಿ ಕೊಚ್ಚಿ ಹೋಗಿ ವಿಷ್ಣು ಪುನಃ ಹಿಂದಿರುಗಿದನೇ ಎಂಬ ವಿಮರ್ಶೆ ಬೇರೆ. ಆದರೆ ಇದು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ಬೆಳಕು ಚೆಲ್ಲುತ್ತದೆ. ಬೌದ್ಧಮತದ ಬಲ ಹೆಚ್ಚಾಗಿ ವೈದಿಕ ಮತ ಅನಾದರಕ್ಕೊಳಗಾಗಿರಬಹುದು ಮತ್ತು ಆಗಿತ್ತು ಕೂಡ. ಇದು ಅಲ್ಲಿನ ವಿಪ್ರರನ್ನು ಪುನಃ ತಮ್ಮ ಮೂಲಸ್ಥಳದೆಡೆಗೋ ಅಥವಾ ಇತರೆಡೆಗಿನ ವಲಸೆಗೆ ಪ್ರೋತ್ಸಾಹಿಸಿರಬಹುದು. ವಲ್ಲಭನ ಕಥೆ ಅದಕ್ಕೊಂದು ರೂಪಕವಿರಬೇಕು. ಮುಂದೆ ಅವೈದಿಕ ಮತಗಳು ಬಲಗುಂದಿದಾಗ ಪುನಃ ವಲ್ಲಭ ಸ್ವಾಮಿ ಪ್ರತಿಷ್ಟಾಪಿಸಲ್ಪಟ್ಟಂತೆ ವೈದಿಕರು ಹಿಂದಿರುಗಿ ಬಂದರು. ವೈದಿಕ ಮತಾಚರಣೆ ಆ ಭಾಗದಲ್ಲಿ ಹೆಚ್ಚಾಯಿತು. ಇದೇ ಘಟನೆಯನ್ನೇ ತಾನೆ ನಾವು ಮಯೂರ ವರ್ಮನ ಕಥೆಯಲ್ಲಿಯೂ ಓದಿದ್ದು?