ಭಯಂಕರ ಇಂಟರೆಸ್ಟಿಂಗ್ ಪತ್ತೆದಾರಿ ಕಾದಂಬರಿ ಓದುವಾಗ ನಡುವಿನಲ್ಲಿ ಒಂದಿಷ್ಟು ಹಾಳೆಗಳೇ ನಾಪತ್ತೆಯಾದರೆ ಹೇಗಿರುತ್ತೋ ಅದೇ ಅನುಭವ ಇತಿಹಾಸಕಾರನೊಬ್ಬನಿಗೆ ಚಂದ್ರಕೇತುಘರದ ಕಳೆದುಹೋದ ಇತಿಹಾಸ ಕಟ್ಟಿಕೊಡುತ್ತದೆ. ಬೇಡಾಚಂಪಾದಿಂದ ಹಿಂದಿರುಗಿದ ಮೇಲೂ ಅನ್ನಿಸುತ್ತಿದ್ದುದು ಒಂದೇ ಪ್ರಶ್ನೆ. ನಮ್ಮ ಸಂಸ್ಕೃತಿ, ಇತಿಹಾಸ, ಕಲೆಗಳ ಬಗ್ಗೆ ನಮಗೇಕಿಂಥ ಅಸಡ್ಡೆ? ಪ್ರಪಂಚದ ಯಾವ ಮೂಲೆಗಾದರೂ ಹೋಗಿ ಅಲ್ಲಿನ ಜನರಿಗೆ ಹೇಳಿ, ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಇಷ್ಟು ಹಳೆ ಹಳೆಯದು, ನಿಮ್ಮ ಪೂರ್ವಿಕರು ಇಷ್ಟು ಭವ್ಯವಾಗಿ ಬಾಳಿಬದುಕಿದ್ದರೆಂದು......ಖುಷಿಯಿಂದೆದ್ದು ಕುಣಿದಾದಿ ಅದನ್ನು ತಲೆಯ ಮೇಲೆತ್ತು ಮೆರೆಸುತ್ತಾರೆ. ಅದೇ ನಮ್ಮವರಿಗೆ ಹೇಳಿನೋಡಿ. ಸತ್ತರೂ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಹಿಟ್ಲರ್ ಒಮ್ಮೆ ಹೇಳಿದ್ದ fight people and they fight back; destroy their culture and they cease to exist. ದೇಶವೊಂದನ್ನು ನಾಶಮಾಡುವುದೆಂದರೆ ಅಲ್ಲಿನ ಜನರೊಡನೆ ಬಡಿದಾಡುವುದಲ್ಲ. ಅವರು ಬಡಿದಷ್ಟೂ ಮತ್ತೆ ಮೇಲೆದ್ದು ಬರುತ್ತಾರೆ. ಬದಲಾಗಿ ಅವರ ಸಂಸ್ಕೃತಿಯನ್ನು ನಾಶಮಾಡಿ, ಆ ದೇಶ ಸ್ವಯಂ ನಾಶವಾಗುತ್ತದೆ. ಮೆಕಾಲೆ ಹೇಳಿದ್ದು, ಬ್ರಿಟಿಷರು ಮಾಡಿದ್ದೂ, ಈಗಿನ ನಮ್ಮದೇ ಸರಕಾರಗಳು ಅನುಸರಿಸುತ್ತಿರುವುದೂ ಅದನ್ನೇ. ಇಂಥ ಅಪವಸ್ಯಗಳ ಮಧ್ಯದಲ್ಲೂ ದಿಲೀಪ್ ಕುಮಾರ್ ಮೈತ್ರೆಯವರಂಥವರಿದ್ದಾರೆಂಬುದೇ ಸಮಾಧಾನದ ಸಂಗತಿ. ತಿರುಗಿ ಬಂದ ಮೇಲೂ ಯಾಕೋ ಚಂದ್ರಕೇತುಘರ್ ಕಾಡುವುದನ್ನು ಬಿಡಲಿಲ್ಲ. ಜೊತೆಜೊತೆಗೆ ಅಷ್ಟೇ ಗಾಢವಾಗಿ ನೆನಪಾದವನು ಆ ಪಠಾಣ.
ಮುಂದಿನ ವೀಕೆಂಡ್ ಆಪ್ತಮಿತ್ರ ಸಂದೀಪ್ ಸೇನ್ಗುಪ್ತನೊಡನೆ ನಮ್ಮ ಸವಾರಿ ಹೊರಟಿದ್ದು ಮೇದಿನಿಪುರ ಅಥವಾ ಮಿಡ್ನಾಪುರದ ಸಮೀಪದ ಒಂದು ಚಿಕ್ಕ ಊರಿಗೆ. ಬಾಂಗಾಲಿ ಕಲೆ, ವಾಸ್ತುಶಿಲ್ಪ, ಪುರಾತತ್ವಗಳ ಸಂಶೋಧಕರಿಗೆ ಆ ಊರೊಂದು ಅಕ್ಷಯಪಾತ್ರೆ. ಆ ಅಕ್ಷಯಪಾತ್ರೆಯನ್ನು ನೋಡಬಹುದೆಂಬ ಕಾರಣ ಒಂದಾದರೆ ಅದರ ಆಪದ್ಭಾಂಧವ ಪಠಾಣ ಸಾಬಿ ಸಿಗಬಹುದೆಂಬುದು ಇನ್ನೊಂದು ಕಾರಣ. ಆ ಊರಿನ ಹೆಸರು ಪಾತ್ರಾ..... ಮಂದಿರ್ ಮೋಯ್ ಪಾತ್ರಾ. ಬಂಗಾಳದ ದೇವಾಲಯಗಳ ಊರದು. ಕಂಗ್ಸಾಬಾಟಿ ನದಿಯ ದಡದಲ್ಲಿರುವ ಈ ಹಳ್ಳಿಗೆ ಕಾಲಿಟ್ಟರೆ ಹೆಜ್ಜೆಗೊಂದು ದೇವಸ್ಥಾನಗಳೆದುರಾಗುತ್ತವೆ. ಬೆಂಗಳೂರಲ್ಲಿ ಒಗೆದ ಕಲ್ಲು ಹೋಗಿ ಬೀಳುವುದು ಇಂಜಿನಿಯರನ ತಲೆಯಮೇಲಾದರೆ ಇಲ್ಲಿ ಬೀಳುವುದು ಯಾವುದಾದರೊಂದು ಗುಡಿಯ ಮೇಲೆ. ಅದೂ ಇಂದುನಿನ್ನೆಯದವುಗಳಲ್ಲ. ಅಲ್ಲಿನ ಇತಿಹಾಸ ಕೆದುಕುತ್ತ ಹೋದರೆ ಹೋಗಿ ನಿಲ್ಲುವುದದು ಗುಪ್ತರ ಕಾಲಕ್ಕೆ. ಗುಪ್ತರ ಆಳ್ವಿಕೆಯೆಂಬುದು ಹೇಳಿಕೇಳಿ ಭಾರತದ ಸ್ವರ್ಣಯುಗ. ತಾಮ್ರಲಿಪ್ತವೆಂದು ಕರೆಯಲ್ಪಡುತ್ತಿದ್ದ ಈ ಸುತ್ತಲಿನ ಪ್ರದೇಶ ಮೌರ್ಯಕಾಲದಿಂದ ಹಿಡಿದು ಗುಪ್ತರವರೆಗೂ ದಕ್ಷಿಣಪೂರ್ವ ಏಶಿಯಾದ ಹೆಬ್ಬಾಗಿಲೆಂದೇ ವಿಶ್ವವಿಖ್ಯಾತವಾಗಿತ್ತು. ಚೀನ, ಗ್ರೀಕ್, ಮಧ್ಯಪ್ರಾಚ್ಯ, ಯುರೋಪ್, ಈಶಾನ್ಯ ಏಶಿಯಾ ಸೇರಿ ವಿಶ್ವದ ಹಲಭಾಗಗಳೊಡನೆ ಬಂಗಾಳದ ವ್ಯಾಪಾರ ವಹಿವಾಟುಗಳನ್ನು ಬೆಸೆದ ಮುಖ್ಯಕೊಂಡಿಯಾಗಿತ್ತಿದು. ಅದಕ್ಕೊಂದು ಕಾರಣವೆಂಬಂತೆ ಗುಪ್ತರ ಮೂಲ ಇಲ್ಲೇ ಪಕ್ಕದ ಮುರ್ಷಿದಾಬಾದ್ ಎಂದೂ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ತಾಮ್ರಲಿಪ್ತದ ಉಲ್ಲೇಖವಿದೆ. ಭೀಮ ಈ ಭಾಗವನ್ನು ಗೆದ್ದಿದ್ದನಂತೆ. ಈ ಪ್ರದೇಶವನ್ನಾಳುತ್ತಿದ್ದ ತಾಮ್ರಧ್ವಜನೆಂಬ ಅರಸನಿಂದ ಈ ಹೆಸರು ಬಂದಿತೆಂಬ ಪ್ರತೀತಿಯಿದೆ. ತಾಮ್ರದ ಅದಿರು ಹೇರಳವಾಗಿ ದೊರೆಯುವುದರಿಂದ ತಾಮ್ರಲಿಪ್ತವೆಂದು ಕರೆಯಲ್ಪಟ್ಟಿತೆಂಬ ಮಾತೂ ಇದೆ. ಪುರಾತನ ಸಿಲೋನಿನ ಬೌದ್ಧ ಕಾವ್ಯಗಳಲ್ಲಿ, ಗ್ರೀಕ್, ಚೈನಾದ ಪ್ರವಾಸಿಗರ ದಾಖಲೆಗಳಲ್ಲಿ ತಾಮ್ರಲಿಪ್ತದ ಹೆಸರಿದೆ. ಪ್ಟಾಲೆಮಿ ಇದನ್ನು ತಾಮಲಿಟಿಯೆಂದು ಕರೆದು ಇದನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬಂದರು ಎನ್ನುತ್ತಾನೆ. ಅಶೋಕನ ಕಾಲದಲ್ಲಿ ಇಲ್ಲಿ ಬೌದ್ಧಮತವೂ ಪ್ರಚಾರಕ್ಕೆ ಬಂದಿತು. ಅಶೋಕನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರರು ಮತಪ್ರಚಾರಕ್ಕಾಗಿ ಸಿಲೋನಿಗೆ ತೆರಳಿದ್ದು ಇದೇ ಸ್ಥಳದಿಂದಂತೆ. ಅಲ್ಲಿಂದ ಕ್ರಿ.ಶ ೧೨ನೇ ಶತಮಾನದವರೆಗೂ ಹಿಂದೂ, ಜೈನ, ಬೌದ್ಧ ಮತಗಳ ಮುಖ್ಯಕೇಂದ್ರವಾಗಿ ತಾಮ್ರಲಿಪ್ತ ಹೆಸರುವಾಸಿಯಾಯಿತು. ೧೯೬೧ರಲ್ಲಿ ಇಲ್ಲಿ ಉತ್ಖನನ ನಡೆದಾಗ ಗುಪ್ತೋತ್ತರ ಕಾಲದ ವಿಷ್ಣು ಲೋಕೇಶ್ವರನ ಎಂಟಡಿ ಎತ್ತರದ ವಿಗ್ರಹವೊಂದು ಸಿಕ್
ಕು ತಾಮ್ರಲಿಪ್ತದ ಹಳೆಯ ಇತಿಹಾಸದ ಪುಟಗಳನ್ನು ಮತ್ತೆ ಕೆದಕಿ ಮುನ್ನೆಲೆಗೆ ತಂದಿತ್ತು. ಹಿಂದೂಗಳ ವಿಷ್ಣು, ಬೌದ್ಧರ ಲೋಕೇಶ್ವರನ ಸ್ವರೂಪಗಳ ಸುಂದರ ಮಿಶ್ರಣದ ಈ ವಿಗ್ರಹ ಶತಶತಮಾನಗಳ ಹಿಂದೂ ಬೌದ್ಧ ಸಾಮರಸ್ಯದ ಕಥೆ ಹೇಳುತ್ತದೆ. ತಾಮ್ರಲಿಪ್ತದ ಶ್ರೀಮಂತ ವಾಸ್ತುವೈಭವದ ಕುರುಹುಗಳನ್ನು ನೋಡುವುದಿದ್ದರೆ ಕೋಲ್ಕತ್ತಾಕ್ಕೆ ಭೇಟಿ ನೀಡಿದವರು ಇಂಡಿಯನ್ ಮ್ಯೂಸಿಯಮ್ಮಿಗೆ ಹೋಗುವುದನ್ನು ಮರೆಯಬೇಡಿ. ಮಹಾಭಾರತದ ಸಮಯದಿಂದ ದಕ್ಷಿಣ ಏಷಿಯಾದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ತಾಮ್ರಲಿಪ್ತದ ಪ್ರಸಿದ್ಧಿಯ ಕೊನೆಯ ಉಲ್ಲೇಖ ಸಿಗುವುದು ೯ನೇ ಶತಮಾನದ ಪಾಲರ ಉದಯಮಾನನ ದೂಧ್ಪಾನಿ ಶಿಲಾಶಾಸನದಲ್ಲಿ. ನಂತರ ಬಂಗಾಳವನ್ನಾಳಿದವರು ಅಚ್ಚಕನ್ನಡ ಮೂಲದ ಸೇನರು. ಸೇನ ವಂಶದ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ. ಬ್ರಾಹ್ಮಣರಿಗೆ ಸಮುದ್ರ ಪ್ರಯಾಣ ನಿಷಿದ್ಧವಾಗಿದ್ದರಿಂದ ಕಟ್ಟಾ ವೈದಿಕರಾಗಿದ್ದ ಸೇನ ಅರಸರ ಕಾಲದಲ್ಲಿ ಸಮುದ್ರವ್ಯಾಪಾರಗಳಿಗೆ ನಿರ್ಭಂಧ ಹೇರಲ್ಪಟ್ಟವು. ಸೇನರ ಕೊನೆಯ ಅರಸು ಲಕ್ಷ್ಮಣ ಸೇನನ ಕಾಲದಲ್ಲಂತೂ ಈ ಹುಚ್ಚಾಟ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಶ್ರವಣಮತಾವಲಂಬಿಗಳಾದ ಪಕ್ಕದರಾಜ್ಯಗಳು ಹಾಗೂ ವಿದೇಶಗಳೊಡಗಿನ ವ್ಯವಹಾರಗಳು ಕೂಡ ಬಂದಾದವು. ಹಿಂದಿನ ಪಾಲರ ಕಾಲದಲ್ಲಿ ಬಳಕೆಯಲ್ಲಿದ್ದ ಪಾಲಿ, ಪ್ರಾಕೃತ, ಬಂಗಾಳಿಗಳ ಬದಲಾಗಿ ಸಂಸ್ಕೃತ ಮತ್ತೆ ಪ್ರವರ್ಧಮಾನಕ್ಕೆ ಬಂತು. ಗೀತಗೋವಿಂದವೆಂಬ ಸರ್ವಕಾಲೀನ ಅಮರ ಕೃತಿಯನ್ನು ಬರೆದ ಜಯದೇವ ಇದೇ ಲಕ್ಷ್ಮಣಸೇನನ ಆಸ್ಥಾನದಲ್ಲಿದ್ದವ. ಕಲೆ, ಸಾಹಿತ್ಯ, ಸಂಗೀತಗಳು ಅದ್ಭುತವಾಗಿ ವಿಜೃಂಭಿಸಿದವು. ಆದರೇನು ಫಲ? ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದೇ ಸೇನರಿಗೆ ಮುಳುವಾಯಿತು. ಬಿಹಾರವನ್ನು ಧ್ವಂಸಗೊಳಿಸಿದ ಭಕ್ತಿಯಾರ್ ಖಿಲ್ಜಿಯ ಕಣ್ಣು ಬಿದ್ದಿದ್ದು ಸಂಪದ್ಭರಿತ ಬಂಗಾಳದ ಮೇಲೆ. ಲಕ್ಷ್ಮಣ ಸೇನ ತೀರ್ಥಯಾತ್ರೆಗೆ ಹೋಗಿದ್ದ ಸಮಯವನ್ನೇ ನೋಡಿಕೊಂಡು ಖಿಲ್ಜಿ ಬಂಗಾಳದ ಮೇಲೆ ದಾಳಿಯಿಟ್ಟಾಗ ಸಹಾಯಕ್ಕೆ ಬರುವವರಾರೂ ಇರಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ಅರ್ಧ ಬಂಗಾಳ ಮುಸ್ಲೀಮರ ವಶವಾಗಿತ್ತು. ಗಂಗಾತೀರದಲ್ಲೆಲ್ಲೋ ತೀರ್ಥಯಾತ್ರೆಯಲ್ಲಿ ಮುಳುಗಿಹೋಗಿದ್ದ ಲಕ್ಷ್ಮಣಸೇನ ವಿಷಯ ತಿಳಿದವನೇ ಜೀವಭಯದಿಂದ ಸಮುದ್ರಮಾರ್ಗವಾಗಿ ಪೂರ್ವಬಂಗಾಳಕ್ಕೆ ಪಲಾಯನಗೈದನಂತೆ ಎಂಬುದು ಕಥೆಯಾದರೂ ವಿಪರ್ಯಾಸವೇ. ನನ್ನ ಗೆಳೆಯ ಸೇನ್ಗುಪ್ತಾ ಒಮ್ಮೆ ತಮಾಷೆ ಮಾಡಿದ್ದ. ಮುಸ್ಲೀಮರು ಅರಬ್ಬಿ ಕುದುರೆಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಲು ತಮ್ಮ ಕತ್ತಿ ಮಸೆದುಕೊಳ್ಳುತ್ತಿರುವಾಗ ನಮ್ಮವರು ಅವರನ್ನೆದುರಿಸಲು ಶತ್ರುಸಂಹಾರ ಯಾಗಕ್ಕೆ ತಯಾರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರಂತೆ. ಮುಂದೆ ಬಂದ ಇಸ್ಲಾಮಿಕ್ ಯುಗದಲ್ಲಿ ಸಾವಿರಾರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ಉಚ್ಛ್ರಾಯ ಸಂಸ್ಕೃತಿಯೊಂದು ಪಾತಾಳದ ಬುಡ ಕಂಡಿತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ತಾಮ್ರಲಿಪ್ತದ ಕತೆಯೂ ಇದಕ್ಕೇನು ಹೊರತಾಗಿರಲಿಲ್ಲ. ಇಲ್ಲಿನ ಇತಿಹಾಸಕ್ಕೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ಈ ಭಾಗವನ್ನಾಳುತ್ತಿದ್ದ ನವಾಬ ಅಲಿವರ್ದಿ ಖಾನ್ ರತ್ನಚೌಕ ಪರಗಣದ ಕಂದಾಯ ಇಲಾಖೆಯ ಕಲೆಕ್ಟರನ್ನಾಗಿ ಬಿದ್ಯಾನಂದ ಘೋಷ್ ಎಂಬ ಅಧಿಕಾರಿಯನ್ನು ನೇಮಿಸುತ್ತಾನೆ. ಆತನೋ ಮಹಾನ್ ದೈವಭಕ್ತ. ಒಂದಾದ ಹಿಂದೊಂದರಂತೆ ನೂರಾರು ದೇವಾಲಯಗಳನ್ನು ಬಿದ್ಯಾನಂದ ಈ ಪ್ರದೇಶದಲ್ಲಿ ಕಟ್ಟಿಸಿದ. ಸೇನರ ಕಾಲದ ಹಳೆಯ ದೇವಸ್ಥಾನಗಳನ್ನೆಲ್ಲ ದುರಸ್ಥಿ ಮಾಡಿ ಸುಸ್ಥಿತಿಗೆ ತಂದ. ತಾಮ್ರಲಿಪ್ತದ ಈ ಪ್ರದೇಶ ಹಳೆಯ ಕಳೆಯೆದ್ದು ಕುಣಿಯತೊಡಗಿತು. ತನ್ನ ಕೈಕೆಳಗೆ ಕೆಲಸಕ್ಕಿರುವ ಕಾಫೀರನೊಬ್ಬ ಹೀಗೆ ಪ್ರಸಿದ್ಧನಾಗುವುದನ್ನು ನೋಡಿ ಸಹಿಸಲು ನವಾಬನಿಗಾಗಲಿಲ್ಲ. ಬಿದ್ಯಾನಂದನನ್ನು ಸೆರೆಗೆ ತಳ್ಳಿ ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಸ್ಥಳೀಯರ ಕತೆಯನ್ನೇ ನಂಬುವುದಾದರೆ ಇವನ ತಲೆಯನ್ನು ಮೆಟ್ಟಿ ಅಪ್ಪಚ್ಚಿ ಮಾಡಲು ಬಂದಿದ್ದ ಆನೆ ಯಾರೆಷ್ಟೇ ಸರ್ಕಸ್ ಮಾಡಿದರೂ ಕಾಲನ್ನು ಮೇಲೆತ್ತಲಿಲ್ಲವಂತೆ. ಬಿದ್ಯಾನಂದ ಬಚಾವಾದ. ಪಾ-ಉತ್ರಾ(ಕಾಲಿಂದ ಪಾರಾದ) ಆ ಸ್ಥಳದ ಹೆಸರು ಪೌತ್ರಾ ಎಂದಾಗಿ ಕಾಲಕ್ರಮೇಣ ಪಾತ್ರಾ ಎಂದು ಬಳಕೆಗೆ ಬಂತು. ಘೋಷ್ ಕುಟುಂಬ ಅದರ ನಂತರ ೧೮ನೇ ಶತಮಾನದ ಕೊನೆಯವರೆಗೂ ಮಂದಿರಗಳ ನಿರ್ಮಾಣ ಕಾರ್ಯವನ್ನು ಮುಂದುವರೆಸಿತು. ಇದರಿಂದ ಪ್ರಭಾವಿತವಾದ ಬಂಡೋಪಾಧ್ಯಾಯ ಎಂಬ ಶ್ರೀಮಂತ ವರ್ತಕರ ಕುಟುಂಬವೂ ಹಲವು ಮಂದಿರಗಳನ್ನು ಈ ಭಾಗದಲ್ಲಿ ನಿರ್ಮಿಸಿತು. ಈ ಪರಂಪರೆ ಅಂತ್ಯಕಂಡಿದ್ದು ಆ ಎರಡೂ ಕುಟುಂಬಗಳೂ ವ್ಯಾಪಾರಕ್ಕಾಗಿ ಕಲ್ಕತ್ತಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದಾಗಿನಿಂದ. ಮುಂದೆ ದೇವಸ್ಥಾನಗಳು ಪೋಷಕರಿಲ್ಲದೇ ಅನಾಥವಾದವು. ಮೂರ್ತಿಗಳು ಕಳುವಾಗತೊಡಗಿದವು. ನದಿಗೆ ನೆರೆಬಂದ ಕಾಲದಲ್ಲಿ ನದಿದಡದಲ್ಲಿದ್ದ ಒಂದೆರಡು ತೊಳೆದು ಹೋದವು. ಕಳ್ಳರ ನಿಧಿಯಾಸೆಗೆ ಬಲಿಯಾಗಿ ಕೆಲವು ನೆಲಸಮವಾದವು. ಉದುರಿ ಬಿದ್ದ ಕಟ್ಟಡದ ಗೋಡೆಗಳ ಇಟ್ಟಿಗೆಗಳು ಅಕ್ಕಪಕ್ಕದವರ ಮನೆಕಟ್ಟಲು ಬಳಕೆಯಾದವು. ದೇವಾಲಯಗಳ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನವೆಲ್ಲ ಕಮ್ಯುನಿಸ್ಟ್ ಸರ್ಕಾರದ್ದಾಗಿರಲಿಲ್ಲ ಬಿಡಿ.
ಮುಂದಿನ ವೀಕೆಂಡ್ ಆಪ್ತಮಿತ್ರ ಸಂದೀಪ್ ಸೇನ್ಗುಪ್ತನೊಡನೆ ನಮ್ಮ ಸವಾರಿ ಹೊರಟಿದ್ದು ಮೇದಿನಿಪುರ ಅಥವಾ ಮಿಡ್ನಾಪುರದ ಸಮೀಪದ ಒಂದು ಚಿಕ್ಕ ಊರಿಗೆ. ಬಾಂಗಾಲಿ ಕಲೆ, ವಾಸ್ತುಶಿಲ್ಪ, ಪುರಾತತ್ವಗಳ ಸಂಶೋಧಕರಿಗೆ ಆ ಊರೊಂದು ಅಕ್ಷಯಪಾತ್ರೆ. ಆ ಅಕ್ಷಯಪಾತ್ರೆಯನ್ನು ನೋಡಬಹುದೆಂಬ ಕಾರಣ ಒಂದಾದರೆ ಅದರ ಆಪದ್ಭಾಂಧವ ಪಠಾಣ ಸಾಬಿ ಸಿಗಬಹುದೆಂಬುದು ಇನ್ನೊಂದು ಕಾರಣ. ಆ ಊರಿನ ಹೆಸರು ಪಾತ್ರಾ..... ಮಂದಿರ್ ಮೋಯ್ ಪಾತ್ರಾ. ಬಂಗಾಳದ ದೇವಾಲಯಗಳ ಊರದು. ಕಂಗ್ಸಾಬಾಟಿ ನದಿಯ ದಡದಲ್ಲಿರುವ ಈ ಹಳ್ಳಿಗೆ ಕಾಲಿಟ್ಟರೆ ಹೆಜ್ಜೆಗೊಂದು ದೇವಸ್ಥಾನಗಳೆದುರಾಗುತ್ತವೆ. ಬೆಂಗಳೂರಲ್ಲಿ ಒಗೆದ ಕಲ್ಲು ಹೋಗಿ ಬೀಳುವುದು ಇಂಜಿನಿಯರನ ತಲೆಯಮೇಲಾದರೆ ಇಲ್ಲಿ ಬೀಳುವುದು ಯಾವುದಾದರೊಂದು ಗುಡಿಯ ಮೇಲೆ. ಅದೂ ಇಂದುನಿನ್ನೆಯದವುಗಳಲ್ಲ. ಅಲ್ಲಿನ ಇತಿಹಾಸ ಕೆದುಕುತ್ತ ಹೋದರೆ ಹೋಗಿ ನಿಲ್ಲುವುದದು ಗುಪ್ತರ ಕಾಲಕ್ಕೆ. ಗುಪ್ತರ ಆಳ್ವಿಕೆಯೆಂಬುದು ಹೇಳಿಕೇಳಿ ಭಾರತದ ಸ್ವರ್ಣಯುಗ. ತಾಮ್ರಲಿಪ್ತವೆಂದು ಕರೆಯಲ್ಪಡುತ್ತಿದ್ದ ಈ ಸುತ್ತಲಿನ ಪ್ರದೇಶ ಮೌರ್ಯಕಾಲದಿಂದ ಹಿಡಿದು ಗುಪ್ತರವರೆಗೂ ದಕ್ಷಿಣಪೂರ್ವ ಏಶಿಯಾದ ಹೆಬ್ಬಾಗಿಲೆಂದೇ ವಿಶ್ವವಿಖ್ಯಾತವಾಗಿತ್ತು. ಚೀನ, ಗ್ರೀಕ್, ಮಧ್ಯಪ್ರಾಚ್ಯ, ಯುರೋಪ್, ಈಶಾನ್ಯ ಏಶಿಯಾ ಸೇರಿ ವಿಶ್ವದ ಹಲಭಾಗಗಳೊಡನೆ ಬಂಗಾಳದ ವ್ಯಾಪಾರ ವಹಿವಾಟುಗಳನ್ನು ಬೆಸೆದ ಮುಖ್ಯಕೊಂಡಿಯಾಗಿತ್ತಿದು. ಅದಕ್ಕೊಂದು ಕಾರಣವೆಂಬಂತೆ ಗುಪ್ತರ ಮೂಲ ಇಲ್ಲೇ ಪಕ್ಕದ ಮುರ್ಷಿದಾಬಾದ್ ಎಂದೂ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ತಾಮ್ರಲಿಪ್ತದ ಉಲ್ಲೇಖವಿದೆ. ಭೀಮ ಈ ಭಾಗವನ್ನು ಗೆದ್ದಿದ್ದನಂತೆ. ಈ ಪ್ರದೇಶವನ್ನಾಳುತ್ತಿದ್ದ ತಾಮ್ರಧ್ವಜನೆಂಬ ಅರಸನಿಂದ ಈ ಹೆಸರು ಬಂದಿತೆಂಬ ಪ್ರತೀತಿಯಿದೆ. ತಾಮ್ರದ ಅದಿರು ಹೇರಳವಾಗಿ ದೊರೆಯುವುದರಿಂದ ತಾಮ್ರಲಿಪ್ತವೆಂದು ಕರೆಯಲ್ಪಟ್ಟಿತೆಂಬ ಮಾತೂ ಇದೆ. ಪುರಾತನ ಸಿಲೋನಿನ ಬೌದ್ಧ ಕಾವ್ಯಗಳಲ್ಲಿ, ಗ್ರೀಕ್, ಚೈನಾದ ಪ್ರವಾಸಿಗರ ದಾಖಲೆಗಳಲ್ಲಿ ತಾಮ್ರಲಿಪ್ತದ ಹೆಸರಿದೆ. ಪ್ಟಾಲೆಮಿ ಇದನ್ನು ತಾಮಲಿಟಿಯೆಂದು ಕರೆದು ಇದನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬಂದರು ಎನ್ನುತ್ತಾನೆ. ಅಶೋಕನ ಕಾಲದಲ್ಲಿ ಇಲ್ಲಿ ಬೌದ್ಧಮತವೂ ಪ್ರಚಾರಕ್ಕೆ ಬಂದಿತು. ಅಶೋಕನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರರು ಮತಪ್ರಚಾರಕ್ಕಾಗಿ ಸಿಲೋನಿಗೆ ತೆರಳಿದ್ದು ಇದೇ ಸ್ಥಳದಿಂದಂತೆ. ಅಲ್ಲಿಂದ ಕ್ರಿ.ಶ ೧೨ನೇ ಶತಮಾನದವರೆಗೂ ಹಿಂದೂ, ಜೈನ, ಬೌದ್ಧ ಮತಗಳ ಮುಖ್ಯಕೇಂದ್ರವಾಗಿ ತಾಮ್ರಲಿಪ್ತ ಹೆಸರುವಾಸಿಯಾಯಿತು. ೧೯೬೧ರಲ್ಲಿ ಇಲ್ಲಿ ಉತ್ಖನನ ನಡೆದಾಗ ಗುಪ್ತೋತ್ತರ ಕಾಲದ ವಿಷ್ಣು ಲೋಕೇಶ್ವರನ ಎಂಟಡಿ ಎತ್ತರದ ವಿಗ್ರಹವೊಂದು ಸಿಕ್
ಲೋಕೇಶ್ವರ(ಕಲ್ಕತ್ತದ ಇಂಡಿಯನ್ ಮ್ಯೂಸಿಯಂ) |
![]() |
ಕಂಗ್ಸಾಬಾಟಿ ನದಿ |
![]() |
ಟೆರಾಕೋಟಾ ಮಾದರಿಗಳು |
![]() |
ದುರ್ಗಾದಲನ್ ಮಂದಿರ |
ಅಷ್ಟು ಯೋಚಿಸುತ್ತಿದ್ದಾಗ ಬರಿ ಹೊಂಡಗಳು ಮಾತ್ರವೇ ತುಂಬಿದ್ದ ಧೂಳು ರಸ್ತೆಯಲ್ಲಿ ದಡಬಡ ಸದ್ದು ಮಾಡುತ್ತ ಸಾಗಿದ್ದ ಲಟಾರಿ ಬಸ್ಸಿಗೆ ಗಕ್ಕನೆ ಬ್ರೇಕು ಬಿತ್ತು. ಬಂಗಾಳಿ ಬಸ್ಸುಗಳಿಗೆ ನಿಲ್ದಾಣಗಳೆಂಬುದಿಲ್ಲ. ಜೊತೆಗೆ ಎಷ್ಟು ಸಪೂರದ ದಾರಿಯಾದರೂ ಅವು ಹೋಗುವುದು ವಿಮಾನದ ಸ್ಪೀಡಿನಲ್ಲೇ. ಜನರ ಕೈ ಕಂಡಲ್ಲೆಲ್ಲ ರಪ್ಪನೆ ಬ್ರೇಕು ಹಾಕಿ ನಿಲ್ಲಿಸುವುದೊಂದೇ ಅಲ್ಲಿನ ಡ್ರೈವರುಗಳಿಗೆ ಗೊತ್ತಿರುವ ವಿದ್ಯೆ. ಅದು ಫ್ಲೈ ಓವರಿನ ಮೇಲಾಗಿರಬಹುದು, ಸಿಗ್ನಲ್ಲಿನ ನಟ್ಟ ನಡುವಾಗಿರಬಹುದು. ಅದಕ್ಕೆಲ್ಲ ಅವರು ಬಂಗಾಳಿಗಳು ಕೆಡಿಸಿಕೊಳ್ಳುವವರಲ್ಲ. ಯಾವುದೋ ಲಹರಿ ಲಹರಿ ಲಹರಿಯಲ್ಲಿದ್ದವ ಹಾಕಿದ ಬ್ರೇಕಿಗೆ ಮೂಗು ಜಜ್ಜಿಕೊಳ್ಳುವುದರಿಂದ ಬಚಾವಾಗಿದ್ದೆ. ಕಿಡಕಿಯಿಂದ ಹೊರನೋಡಿದರೆ ರಸ್ತೆ ಪಕ್ಕದಲ್ಲೇ ಅಲ್ಲಲ್ಲಿ ಸಣ್ಣ ಸಣ್ಣ ಮಂದಿರಗಳು ಕಣ್ಣಿಗೆ
ಬೀಳಲು ಶುರುವಾದವು. ಪಾತ್ರಾ ಹತ್ತಿರ ಬರುತ್ತಿದ್ದುದು ಖಾತ್ರಿಯಾಯ್ತು. ಕಲ್ಕತ್ತದಲ್ಲಿ ಪುಸ್ತಕದೊಳಗೆ ಮುಖ ಸಿಕ್ಕಿಸಿಕೊಂಡು ಕೂತಿದ್ದ ಸೇನ್ಗುಪ್ತಾ ಇನ್ನೂ ಮುಖ ಮೇಲೆತ್ತಿರಲಿಲ್ಲ. ಪಕ್ಕಾ orthodox ಬಂಗಾಳಿ ಆತ. TCSನಲ್ಲಿ ಉದ್ಯೋಗಿಯಾಗಿದ್ದರೂ ಶೇಕ್ಸ್ಪಿಯರಿನಿಂದ ಹಿಡಿದು ಪ್ರೇಮಚಂದ್ರರ ತನಕ ಒಬ್ಬರನ್ನೂ ಬಿಡದೇ ಓದಿಕೊಂಡಿದ್ದಾನೆ. ಸ್ವಂತ ಬಂಗಾಳಿ rock band ನಡೆಸುತ್ತಿದ್ದರೂ ರವೀಂದ್ರ ಸಂಗೀತದ ಕಟ್ಟಾಭಿಮಾನಿ. ತನ್ನದೇ ಸಂಗೀತದ ಒಂದೆರಡು ಆಲ್ಬಮ್ಮುಗಳನ್ನೂ ಹೊರತಂದಿದ್ದಾನೆ. triathlonನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್. ಅರ್ಧ ಭಾರತವನ್ನು ಬರಿ ಸೈಕಲ್ಲಿನಲ್ಲಿಯೇ ಸುತ್ತಿಮುಗಿಸಿದ್ದಾನೆ. ಜೊತೆಗೆ ಅದ್ಭುತ ಪೇಂಟರ್ ಕೂಡ. ರಪ್ಪನೆ ಪುಸ್ತಕದಿಂದ ತಲೆ ಹೊರಗೆ ಹಾಕಿದವನೇ ’ಅಬೇ, ವೋ ದೇಖ್ ಮಂದಿರ್, ಪಾತ್ರಾ ಆಗಯಾ, ಉತರೋ ಉತರೋ’ ಎಂದ. ಮುಂದಿನ ಸ್ಟಾಪಿನಲ್ಲಿ ಇಬ್ಬರೂ ಇಳಿದಾಯ್ತು. ಮೋಟು ಬೀಡಿ ಸೇದಿ ಮುಗಿಸಿದ ಕಂಡಕ್ಟರ್ ರೈಟ್ ಎಂದ. ಇದ್ದೂ ಇಲ್ಲದ ಬಸ್ ಸ್ಟಾಪಿನಿಂದ ಬಸ್ಸು ಹೊರಟು ಧೂಳೆಬ್ಬಿಸುತ್ತ ಮುಂದಿನ ತಿರುವಲ್ಲಿ ತಿರುಗುತ್ತಿದ್ದಂತೆ ರಸ್ತೆಯ ಕೆಳಗೆ ಹತ್ತಡಿ ದೂರದಲ್ಲಿ ಕಂಡೂ ಕಾಣದಷ್ಟು ಸಣ್ಣಗಿನ ಹಳದಿ ಪೇಂಟಿನ ಶೆಡ್ಡಿನಂಥ ಮನೆಯೊಂದು ಕಣ್ಣಿಗೆ ಬೀಳುತ್ತದೆ. ’ವಹೀ ಹೈ ದೇಖೋ ಉಸ್ಕಾ ಘರ್’ ಎಂದ ಸೇನ್ಗುಪ್ತಾ ಖುಷಿಯಿಂದ. ಹತ್ತಿರ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಪಕ್ಕದ ಗೂಡಂಗಡಿಯಲ್ಲಿ ಕೇಳಿದರೆ ಮಿಡ್ನಾಪುರದ ಆಸ್ಪತ್ರೆಗೆ ಹೋಗಿರಬಹುದೆಂಬ ಉತ್ತರ ಸಿಕ್ಕಿತು. ಆ ಮನೆಯ ಮಾಲೀಕನೇ ನಾವು ಹುಡುಕಿ ಬಂದ ಪಠಾಣ. ಪೂರ್ತಿ ಹೆಸರು ಮಹಮ್ಮದ್ ಯಾಸಿನ್ ಪಠಾಣ್. ಹಾಗೆಂದು ಆತನ್ಯಾವ ಸೆಲೆಬ್ರಿಟಿಯೂ ಅಲ್ಲ, ಇತಿಹಾಸಕಾರನೂ ಅಲ್ಲ. ರಾಜಕಾರಣಿಯಾಗಲಿ, NGO ಕಟ್ಟಿ ಹೋರಾಡಿದವನಾಗಲೀ ಅಲ್ಲವೇ ಅಲ್ಲ. ಅರವತ್ತು ದಾಟಿದ ಐದುಕಾಲಡಿ ಮೀರದ ಸಣಕಲು ಕಡ್ಡಿ ದೇಹ, ಹಳೆಯ ಮಾಸಿದ ದೊಗಲೆ ಅಂಗಿ, ನಿರ್ಜೀವ ಮುಖಚರ್ಯೆಯ ಆತ ಮೊದಲ ನೋಟದಲ್ಲಿ ನಿಮ್ಮಲ್ಲೇನೂ ಇಂಟರೆಸ್ಟ್ ಮೂಡಿಸುವುದಿಲ್ಲ. ಮೂಲತಃ ಪಕ್ಕದ ಹಾತಿಹಲ್ಕಾ ಗ್ರಾಮದವನು. ಅಲ್ಲಿನ ಉರ್ದು ಹೈಸ್ಕೂಲೊಂದರಲ್ಲಿ ಪ್ಯೂನ್ ಆಗಿದ್ದು ರಿಟೈರಾದವ. ಸಿಗುವ ಮೂರೂವರೆ ಸಾವಿರ ಪೆನ್ಷನ್ನಿನಲ್ಲಿ ನಾಲ್ಕು ಮಕ್ಕಳ ಸಂಸಾರ ನಿಭಾಯಿಸುವ ಹೊಣೆ ಇವನ ಹೆಗಲ ಮೇಲಿದೆ. ಆದರೆ ಬಂಗಾಳಿ ಪುರಾತತ್ವ ಸಂಶೋಧಕರನ್ನು ರೋಮಾಂಚಿತಗೊಳಿಸುವ ಹೆಸರಿದು. He is a man with mission. ಸುಮಾರು ಅರವತ್ತರ ದಶಕದ ಮದ್ಯಭಾಗ. ಡೇವಿಡ್ ಮೆಕ್ಟನ್ ಎಂಬ ಪ್ರಖ್ಯಾತ ಆಂಗ್ಲ ಇತಿಹಾಸಕಾರ ಪಾತ್ರಾದ ಭಾಗದಲ್ಲಿದ್ದ ಪುರಾತನ ದೇವಾಲಯ ಶಿಲ್ಪಗಳನ್ನು ಸಂದರ್ಶಿಸಿ ಪುಸ್ತಕವೊಂದನ್ನು ಬರೆಯಲು ಬಂದಿದ್ದ. ಬೆಂಗಾಳಿ ವಾಸ್ತುಶಿಲ್ಪದ ಪ್ರಸಿದ್ಧ ಕುರುಹಾದ ಸುಟ್ಟ ಇಟ್ಟಿಗೆಗಳ(ಟೆರಾಕೋಟಾ) ರಚನೆಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರ ಹಿಂದೆ ಬಂಗಾಳಿಗಳ ಪ್ರೀತಿಯ ಡೇವಿಡ್ಬಾಬುವಿನ ಶ್ರಮವಿದೆ. ಆತನ Late Medieval Temples of Bengal ಪುಸ್ತಕ ಮುಂದೆ ವಿಶ್ವಮಟ್ಟದಲ್ಲಿ ಬಂಗಾಳಿ ವಾಸ್ತುಶಿಲ್ಪವನ್ನು ಪರಿಚಯಿಸಿತ್ತು. ಹೀಗೆ ಬಂದಾಗ ಅವನ ಜೊತೆಗೆ ಸಹಾಯಕನಾಗಿ ಚೀಲ ಹೊರಲು ಬಂದ, ಆಚೆಯೂರಿನ ಮದರಸಾದಲ್ಲಿ ಪ್ಯೂನ್ ಕೆಲಸಕ್ಕಿದ್ದ ಇಪ್ಪತ್ತರ ಹರೆಯದ ಒಬ್ಬ ಗುಮಾಸ್ತನೇ ಈ ಪಠಾಣ. ೧೯೭೨ರಲ್ಲಿ ತನ್ನ ೪೨ನೇ ವರ್ಷದಲ್ಲಿ ಡೇವಿಡ್ ಮೆಕ್ಟನ್ ಮಲೇರಿಯಾದಿಂದ ಸಾಯದಿದ್ದರೆ ಈ ಪಠಾಣನ ಕೆಲಸವನ್ನು ನೋಡಿ ಎಷ್ಟು ಖುಷಿಪಡುತ್ತಿದ್ದನೋ ಏನೋ. ಮುಸ್ಲೀಮನಾದರೇನು? ಅವನಿಗೆ ತನ್ನ ನೆಲದ ಭವ್ಯ ಇತಿಹಾಸದ ಬಗ್ಗೆ ಅದಮ್ಯ ಹೆಮ್ಮೆಯಿತ್ತು. ಜೊತೆಗೆ ತಮ್ಮ ಜನರ ನಿರಭಿಮಾನದ ಕೊರಗೂ ಕೂಡ. ಪಾತ್ರಾದ ಸುಂದರ ಮಂದಿರಗಳು ಅವನಲ್ಲಿ ವಿಕ್ಷಿಪ್ತ ಪ್ರೀತಿಯೊಂದನ್ನು ಹುಟ್ಟುಹಾಕಿದವು.
![]() |
ಯಾಸಿನ್ ಪಠಾಣ್(ಸೇನ್ಗುಪ್ತನ ಚಿತ್ರಗಳಿಂದ) |
ಇಂದು ಪಾತ್ರಾ ಪ್ರವಾಸೋದ್ಯಮದಲ್ಲಿ, ವಾಸ್ತುಶಿಲ್ಪದಲ್ಲಿ ಮೊದಲಿನ ವೈಭವ ಪಡೆದಿದ್ದರೆ ಅವೆಲ್ಲವುಗಳ ಹಿಂದಿನ ಪ್ರೇರಕ ಶಕ್ತಿ ಅವನೊಬ್ಬ ಮತ್ತು ಅವನೊಬ್ಬ ಮಾತ್ರ. ಹಿಂದೂ ದೇವಾಲಯಗಳೆಡೆಗಿನ ಅವನ ಆ ನಿಸ್ವಾರ್ಥ ಪ್ರೀತಿ ನಾಲ್ಕೂವರೆ ದಶಕಗಳಾದರೂ ಇನ್ನೂ ಕರಗಿಲ್ಲ. ಆ ದಾರಿಯಲ್ಲಿ ಅವನನುಭವಿಸಿದ ಕಷ್ಟ, ನಷ್ಟ, ಹಲ್ಲೆ, ಅವಮಾನ, ಸಂಕಟಗಳಿಗೆ ಲೆಕ್ಕವಿಲ್ಲ. ಹೆಚ್ಚಿನ ದೇವಾಲಯಗಳೇನೋ ಇವನ ಕಾರಣದಿಂದ ಇಂದು ಒಂದು ಮಟ್ಟಿಗೆ ರಕ್ಷಿಸಲ್ಪಟ್ಟಿವೆ. ಆದರೆ ಆ ಕೆಲಸದಲ್ಲಿ ಯಾವ ಪ್ರತಿಫಲವೂ ಇಲ್ಲದೇ ದುಡಿದ ಪಠಾಣನ ಪರಿಸ್ಥಿತಿಯೇನೂ ಅಂದಿನ ಮಂದಿರಗಳಿಗಿಂತ ಭಿನ್ನವಾಗುಳಿದಿಲ್ಲ. ವಯಸ್ಸು ಅರವತ್ತು ದಾಟಿ ಸಾಗಿದೆ. ದುಡಿದ ದುಡ್ಡಿನ ಹೆಚ್ಚಿನಂಶವೆಲ್ಲ ಮಂದಿರ ನಿರ್ಮಾಣಕ್ಕೇ ಖಾಲಿಯಾಗಿದೆ. ರಸ್ತೆಯ ಕೆಳಗಿನ ನದಿಪಾತ್ರದ ಹತ್ತಿರದ ಸಣ್ಣ ತಗಡಿನ ಮಾಡಿನ ಮುರುಕಲು ಮನೆಯಲ್ಲೇ ಆತನ ವಾಸ. ವರ್ಷಂಪ್ರತಿ ನದಿ ಉಕ್ಕಿ ಬಂದಾಗಲೆಲ್ಲ ಮನೆಯೊಳಗೆ ನೀರು ನುಗ್ಗುತ್ತದೆ. ಕೆಲ ವರ್ಷಗಳ ಹಿಂದೆ ಇಡೀ ಮನೆಗೆ ಮನೆಯೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ದೇಶದ ಮೂಲೆಮೂಲೆಗಳಿಂದ ಅರಸಿ ಬಂದ ಪುರಸ್ಕಾರ, ಪ್ರಶಸ್ತಿ, ಸರ್ಟಿಫಿಕೇಟು, ಶಾಲುಗಳು ಸ್ವಂತಕ್ಕೆ ಐದು ಪೈಸೆಯ ಲಾಭವನ್ನೂ ತಂದುಕೊಡಲಿಲ್ಲ. ಜೊತೆಗೆ ಎರಡು ಬಾರಿ ಹೃದಯಾಘಾತವೂ ಆಗಿದೆ. ಒಂದು ಕಿಡ್ನಿಯೂ ಕೈಕೊಟ್ಟಿದೆ. ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲದೇ ಮೂವತ್ತು ವರ್ಷಗಳಷ್ಟು ದೀರ್ಘಕಾಲ ಕಷ್ಟಪಟ್ಟು ಸಂಪಾದಿಸಿದ ಪಾತ್ರಾದ ಇತಿಹಾಸದ ಬಗೆಗಿನ ಡಾಕ್ಯುಮೆಂಟರಿಯ ಹಸ್ತಪ್ರತಿ ’ಮಂದಿರ್ಮೋಯ್ ಪಾತ್ರಾರ್ ಇತಿಬ್ರಿತಾ’ವನ್ನು ಪುಸ್ತಕವಾಗಿ ಪ್ರಕಟಿಸಲು ಪ್ರಕಾಶಕನೊಬ್ಬನಿಗೆ ಯಕಃಶ್ಚಿತ್ ಹದಿನೈದು ಸಾವಿರಕ್ಕೆ ಮಾರಿದನೆಂದರೆ ಅವನ ಪರಿಸ್ಥಿತಿ ಹೇಗಿರಬಹುದೆಂಬುದು ನಿಮ್ಮ ಊಹೆಗೆ ಬಿಟ್ಟದ್ದು.
ಏಳೆಂಟು ಮಂದಿರಗಳನ್ನು ನೋಡುತ್ತಿದ್ದಂತೆ ನಿಧಾನಕ್ಕೆ ಸಂಜೆಯಾಗಲು ಶುರುವಾಗಿತ್ತು. ಪಾತ್ರಾವನ್ನು ತಲುಪಿದ್ದೇ ತಡವಾದದ್ದರಿಂದ ಅಲ್ಲಿ ಹೆಚ್ಚಿನ ಸಮಯ ಕಳೆಯಲು ಅವಕಾಶವಾಗಲಿಲ್ಲ. ರಾತ್ರಿಯಾಗುವುದರೊಳಗೆ ಹಾವಡಾ ತಲುಪಿ ಅಲ್ಲಿಂದ ಬಾರಾಸಾತಿಗೆ ಸಿಟಿಬಸ್ಸು ಹಿಡಿಯಬೇಕಾಗಿತ್ತು. ಪಾತ್ರಾವನ್ನು ಸುಲಭಕ್ಕೆ ಬಿಟ್ಟುಬರಲು ಮನಸ್ಸಾಗಲಿಲ್ಲ. ಮನಸ್ಸೆಲ್ಲ ಬರೀ ಪಠಾಣನನ್ನೇ ತುಂಬಿಕೊಂಡು ಭಾರವಾಗಿತ್ತು. ಪಾತ್ರಾದ ಕಥೆ ಶುರುವಾಗುವುದು, ಮುಗಿಯುವುದು ಅವನಿಂದಲೇ. ಅವನನ್ನು ಭೇಟಿಯಾಗದೇ ಹಿಂದಿರುಗುವುದೆಂತು! ಮತ್ತೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ? ಹಾಗೊಂದು ವೇಳೆ ಬಂದರೂ ಅವನಿರುತ್ತಾನೋ? ಸಿಗುತ್ತಾನೋ?
ಸೂರ್ಯ ನಿಧಾನಕ್ಕೆ ಕೆಂಪಾಗತೊಡಗಿದ್ದ. ಸುಮಾರು ಹೊತ್ತು ಕಾದನಂತರ ದಡಬಡ ಸದ್ದು ಮಾಡುತ್ತ ಬಸ್ಸು ಸುಯ್ಯನೆ ಸುಂಟರಗಾಳಿಯಂತೆ ಬಂದು ನಿಂತಿತು. ಉಸಿರಾಡಲು ಸಾಧ್ಯವಿಲ್ಲದಷ್ಟು ರಶ್ ಇದ್ದರೂ ತೂರಿಕೊಂಡು ಮೆಟ್ಟಿಲಿನ ಮೇಲೆ ಜನರ ಮಧ್ಯೆ ಜಾಗಮಾಡಿಕೊಂಡು ನಿಂತೆ. ಸೇನ್ಗುಪ್ತಾ ಫುಟ್ಬೋರ್ಡ್ ಮೇಲೆ ನೇತಾಡುತ್ತಿದ್ದ. ಅವರಿವರು ಏನಾದರೂ ಅಂದುಕೊಂಡಾರು ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನ ಅವನದಲ್ಲವೇ ಅಲ್ಲ. ಬಸ್ ಹೊರಟಿತ್ತಷ್ಟೆ. ’ಅಬೇ ತೇರಾ ದೋಸ್ತ್ ಇಸೀ ಬಸ್ ಸೆ ಉತ್ರಾ ಹೈ, ಜಲ್ದಿ ದೇಖ್, ಜಲ್ದೀ ದೇಖ್’ ಎಂದು ಕಿರುಚತೊಡಗಿದ. ಪಠಾಣ ಅದೇ ಬಸ್ಸಿನಿಂದ ಇಳಿದನಂತೆ. ಅವನೆಲ್ಲಿಯಾದರೂ ಕಾಣಬಹುದಾ ಎಂದು ಬಗ್ಗಿ ಬಗ್ಗಿ ನೋಡತೊಡಗಿದೆ. ಉಹೂಂ....... ಬಸ್ಸು ಹೊರಟಾಗಿತ್ತು. ’ಅಬೇ ಉತರ್ ಜಾಯೆಂಗೆ ಆಜಾ’ ಎಂದ. ಏನಾಯಿತೋ ಏನೋ, ಬೇಡವೆಂದು ಕಣ್ಸನ್ನೆ ಮಾಡಿದೆ. ’ಇತ್ನಾ ದೂರ್ ಆಕೆ ಉಸೆ ಬಿನಾ ದೇಖೆ ಜಾಯೇಗಾ ಕ್ಯಾ’ ಎಂದು ಅಲ್ಲಿದ್ದವರ ಮುಂದೆಯೇ ಮಂತ್ರಪುಷ್ಪ ಉದುರಿಸಲು ಶುರುಮಾಡಿದ. ನನ್ನ ಮನಸ್ಸು ಹೇಳುತ್ತಿತ್ತು. ಮುಂದಿನ ಬಾರಿ ಪಾತ್ರಾಕ್ಕೆ ಬಂದಾಗ ಆತ ಖಂಡಿತ ಸಿಕ್ಕೇ ಸಿಗುತ್ತಾನೆ. ಅಂಥವರ ಸಂತತಿ ಸಾವಿರವಾಗಲಿ..