Pages

Tuesday, June 25, 2024

ನಾಳಂದಾ ನಾಶವಾಗಿದ್ದೆಂತು?

ನಾಳಂದಾ ಮಹಾವಿಹಾರ(ಚಿತ್ರಕೃಪೆ: ಗೂಗಲ್)

    
    ಕಳೆದ ವಾರ ನಾಳಂದಾ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಮಾನ್ಯ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಖಿಲ್ಜಿಯಿಂದ ನಾಶಗೊಂಡ ನಾಳಂದಾ ೮೩೧ ವರ್ಷಗಳ ನಂತರ ಪುನರುತ್ಥಾನಗೊಂಡಿತೆಂದು ವಾಟ್ಸಪ್ಪು ಫೇಸ್ಬುಕ್ಕುಗಳಲ್ಲಿ ಜನರೆಲ್ಲ ಸಂಭ್ರಮಪಟ್ಟರು. ವಿವಿವಿವಿ(ವಿಶ್ವ ವಿಖ್ಯಾತ ವಿಶ್ವ ವಿದ್ಯಾನಿಲಯ) ಮರಳಿ ಗತವೈಭವಕ್ಕೆ ಬಂದ ಶ್ರೇಯವನ್ನು ಸರ್ಕಾರದ ಪದತಲಕ್ಕರ್ಪಿಸುವ ಮೆಸೇಜುಗಳೆಲ್ಲ ಹರಿದಾಡಿದವು. ಇರಲಿ. ನಾಳಂದಾಕ್ಕೆ ಪುನರ್ಜೀವನ ಕೊಡಬೇಕೆಂಬ ಕೂಗಿಗೆ ಬಲ ಸಿಕ್ಕಿದ್ದು ೨೦೦೬ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ಅಬ್ದುಲ್ ಕಲಾಂ ಅವರು ಬಿಹಾರದ ಶಾಸನ ಸಭೆಯಲ್ಲಿ ಅಂಥದೊಂದು ಪ್ರಸ್ತಾವನೆಯನ್ನು ಮುಂದಿಟ್ಟ ಮೇಲೆ. ನಾಳಂದಾ ಯುನೆಸ್ಕೋವಿನ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದೆಂದು ನಿಮಗೆ ಗೊತ್ತೇ ಇದೆ. ೨೦೧೦ರಲ್ಲಿ ಭಾರತ ಸರ್ಕಾರ ರಾಜಗೀರ್(ಪುರಾತನ ರಾಜಗೃಹ)ದಲ್ಲಿ ಹೊಸ ನಾಳಂದಾ ವಿವಿಯನ್ನು ಸ್ಥಾಪಿಸುವ ಬಗ್ಗೆ ನಿರ್ಣಯವೊಂದನ್ನು ಕೈಗೊಂಡಿತು. ಅದೇ ವರ್ಷ ಅಗಸ್ಟಿನಲ್ಲಿ ಪಾರ್ಲಿಮೆಂಟಿನಲ್ಲಿ ನಾಳಂದಾ ವಿವಿ ಮಸೂದೆಯೂ ಮಂಡಿಸಲ್ಪಟ್ಟಿತು. ಬಿಹಾರ ಸರ್ಕಾರ ಹೊಸ ವಿವಿಗೆಂದು ೪೪೫ ಎಕರೆ ಸ್ಥಳವನ್ನು ದಾನಮಾಡಿತ್ತಲ್ಲದೇ ಪೂರ್ವ ಏಷಿಯಾ ಸಮಿಟ್‌ನ ಹದಿನೇಳು ದೇಶಗಳು ಸುಮಾರು ಹದಿನೆಂಟು ಕೋಟಿ ರುಪಾಯಿಗಳನ್ನು ಟೋಕನ್ ಮೊತ್ತವೆಂಬಂತೆ ನೀಡಿದವು. ಸಪ್ಟೆಂಬರ್ ೨೦೧೦ರಲ್ಲಿ ರಾಷ್ಟ್ರಪತಿಗಳ ಅಧಿಕೃತ ಮುದ್ರೆಯೊಂದಿಗೆ ೨೫ ನವಂಬರ್ ೨೦೧೦ರಿಂದ ಹೊಸ ನಾಳಂದಾ ವಿವಿ ಅಸ್ತಿತ್ವಕ್ಕೆ ಬಂತು. ೨೦೧೪ರಲ್ಲಿ ಇಲ್ಲಿ ಪ್ರಥಮ ಬ್ಯಾಚಿನ ದಾಖಲಾತಿ ಪ್ರಾರಂಭವಾಯ್ತು. ೨೦೧೭ಕ್ಕೆ ಶುರುವಾದ ಹೊಸ ಕ್ಯಾಂಪಸ್ಸಿನ ನಿರ್ಮಾಣ ೨೦೨೩ರಲ್ಲಿ ಪೂರ್ತಿಗೊಂಡು ಮೊನ್ನೆ ಮೊನ್ನೆ ಉದ್ಘಾಟಿಸಲ್ಪಟ್ಟಿತು. ಹೆಸರಿನಲ್ಲೇನಿದೆ ಎನ್ನಬೇಡಿ. ಇದರ ಹೆಸರು ಹಳತಾದರೂ ಈ ವಿವಿಗೂ ಹಳೆಯದಕ್ಕೂ ಏನೇನೂ ಸಂಬಂಧವಿಲ್ಲ. ಉಳಿದ ಕೇಂದ್ರಿಯ ವಿವಿಗಳ ಜೊತೆಗೆ ಇದೂ ಒಂದಷ್ಟೇ. ಹಳೆಯ ನಾಳಂದಾದ ಜೊತೆಗಾಗಲೀ ಈಗಿರುವ ಆಕ್ಸ್-ಫರ್ಡ್, ಕೆಂಬ್ರಿಡ್ಜುಗಳ ಜೊತೆಗಾಗಲೀ ಇದನ್ನು ಹೋಲಿಸುವ ಹಾಗಿಲ್ಲ.
ಈಗಿನ ನಾಳಂದಾ ವಿವಿಯ ಕ್ಯಾಂಪಸ್


    ಅದೆಲ್ಲ ಈಗಿನ ಕತೆಯಾಯಿತು. ನಾವು ಹಳೆಯ ನಾಳಂದಾದ ಕುರಿತು ಮಾತನಾಡೋಣ ಬನ್ನಿ. ನಾಲಂದಾವನ್ನು ಕಟ್ಟಿದ್ದು ಆರನೇ ಶತಮಾನದಲ್ಲಿ ಗುಪ್ತರು. ನಾಳಂದಾ ವಿಶ್ವದ ಅತಿ ಶ್ರೇಷ್ಟ ವಿಶ್ವವಿದ್ಯಾಲಯ. ಅದನ್ನು ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ. ಖಿಲ್ಜಿ ಇದಕ್ಕೆ ಬೆಂಕಿ ಹಚ್ಚಿದಾಗ ೯೦ ಲಕ್ಷ ಪುಸ್ತಕಗಳು ಸುಟ್ಟುಹೋದವು. ಮೂರು ತಿಂಗಳುಗಳ ಕಾಲ ಬೆಂಕಿ ಹೊತ್ತಿ ಉರಿದಿತ್ತು ಎಂದೆಲ್ಲಾ ಟಿವಿ ಆಂಕರುಗಳು ಹೇಳುವಾಗ, ಪತ್ರಿಕಾ ಲೇಖನಗಳನ್ನು ಓದುವಾಗ ರೋಮಾಂಚವೂ ಆಕ್ರೋಶವೂ ಒಟ್ಟೊಟ್ಟಿಗೆ ಉಂಟಾಗುತ್ತಿದ್ದವು. ಆ ಕಾಲದಲ್ಲಿ ನಾಳಂದಾ ವಿಶ್ವದ ಅತಿ ಶ್ರೇಷ್ಟ ವಿಶ್ವವಿದ್ಯಾಲಯ ಎಂಬುದರಲ್ಲಿ ಯಾವುದೇ ದೂಸರಾ ಮಾತಿಲ್ಲ. ನನಗೆ ತಕರಾರಿರುವುದು ಅದನ್ನು ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ ಎಂಬುದರ ಬಗ್ಗಷ್ಟೇ. ಅದೊಂದು ಅನೂಚಾನವಾಗಿ ಹೇಳಿಕೊಂಡು ಬಂದ ಶುದ್ಧ ಸುಳ್ಳು. ಭಕ್ತಿಯಾರ್ ಖಿಲ್ಜಿ ನಾಲಂದಾವನ್ನು ಒಡೆದುಬಿಟ್ಟ. ಮಾತ್ರವಲ್ಲ ಸುಟ್ಟ ಕೂಡ. ಅಷ್ಟೇ ಅಲ್ಲ. ಹೇಳುವ ಸುಳ್ಳಿಗೆ ಹೆಸರಿನ ಜೊತೆ ದಿನಾಂಕವನ್ನೂ ಸೇರಿಸಿಬಿಟ್ಟರೆ ಇನ್ನೂ ಹೆಚ್ಚು ಜನ ನಂಬುತ್ತಾರೆ. ಹಾಗಾಗಿ ಇದರ ಜೊತೆಗೆ ಅದಕ್ಕೊಂದು ಕಾಲ್ಪನಿಕ ಇಸವಿಯನ್ನೂ ಇಸವಿಯನ್ನೂ ಸೇರಿಸಲಾಯಿತು. ೧೧೯೧ ಎಂದು. 

 ಹಾಗಾದರೆ ಈ ಕತೆ ಹುಟ್ಟಿದ್ದೆಲ್ಲಿ?
 ಖಿಲ್ಜಿ ನಾಲಂದಾವನ್ನು ನಾಶಪಡಿಸಿದ ಎನ್ನುವುದಕ್ಕೆ ಮೂರು ಪುಸ್ತಕಗಳನ್ನು ಪುರಾವೆಯಾಗಿ ಹೆಸರಿಸಲಾಗುತ್ತದೆ. ಮೊದಲನೇಯದು ತಬಖತ್-ಎ-ನಾಸಿರಿ. ಇದನ್ನು ಬರೆದವನು ಮಿನಾಜ್-ಇ-ಸಿರಾಜ್ ಜುಜ್ಝನಿ ಎನ್ನುವ ಖಾಜಿ. ಇವನು ಮೂಲ ಅಪ್ಘನ್ನಿನ ಘುರ್ ಪ್ರದೇಶದವ. ೧೨೬೦ರಲ್ಲಿ ಪುಸ್ತಕವನ್ನು ಬರೆದು ಮುಗಿಸಿ ದೆಹಲಿಯ ನಾಸಿರುದ್ದಿನ್ ಮೊಹಮ್ಮದ್ ಷಾಹನಿಗೆ ಅರ್ಪಿಸಿದ್ದ. ಹಾಗಾಗಿ ಇದಕ್ಕೆ ನಾಸಿರಿ ಎಂದು ಹೆಸರು ಬಂದದ್ದು. ತಬಖಾತ್ ಅನ್ನು ಸುಮಾರಿಗೆ ’ಭೌಗೋಳಿಕ ನಿಘಂಟು’ ಎಂದು ಭಾಷಾಂತಿರಸಬಹುದು. ನಾಸಿರಿ ಮುಖ್ಯವಾಗಿ ದೆಹಲಿ ಸುಲ್ತಾನರ ಕುರಿತಾದಂಥದ್ದು. ಜೊತೆಗೆ ಇರಾನ್, ಮಧ್ಯ ಏಷಿಯಾದ ಹಲವಾರು ರಾಜಮನೆತನಗಳ ಕತೆಯೂ ಇದರಲ್ಲಿದೆ. ತಬಖತ್-ಎ-ನಾಸಿರಿಯು ದೆಹಲಿ ಸುಲ್ತಾನರ ವಿರುದ್ಧ ಬಂಗಾಳದಲ್ಲಿ ಖಲ್ಜಿಗಳು ದಂಗೆಯೆದ್ದುದರ ಬಗ್ಗೆ ಇರುವ ಒಂದೇ ಒಂದು ದಾಖಲೆಯೆಂದು ನಂಬಲಾಗಿದೆ. ನಾಸಿರಿಯ ಪ್ರಕಾರ ಭಕ್ತಿಯಾರ್ ಖಿಲ್ಜಿಯು ತನ್ನ ಚಿಕ್ಕಪ್ಪ ಮಹಮ್ಮದ್ ಖಿಲ್ಜಿಯ ಜೊತೆ ಮಹಮ್ಮದ್ ಘೋರಿಯ ಆಸ್ಥಾನದಲ್ಲಿದ್ದ. ಈ ಘೋರಿ ಯಾರೆಂದು ಗೊತ್ತಲ್ಲ? ತರೈನಿನ ಕಾಳಗದಲ್ಲಿ ಪ್ರಥ್ವಿರಾಜನ ಜೊತೆ ಸೆಣೆಸಿದವ. ಭಕ್ತಿಯಾರ್ ಅಲ್ಲಿಂದ ಕೆಲಸ ಕೇಳಿಕೊಂಡು ದೆಹಲಿಯಲ್ಲಿ ಘಜನಿಯ ಆಸ್ಥಾನಕ್ಕೆ ಬಂದಿಳಿದ. ಇವನ ಕುರೂಪವನ್ನು ಕಂಡು ಘಜನಿ ಇವನಿಗೆ ಕೆಲಸ ಕೊಡಲು ನಿರಾಕರಿಸಿದನಂತೆ. ಅಲ್ಲಿಂದಾತ ಬದಾಯುನಿನ ನವಾಬನ ಸೈನ್ಯದಲ್ಲೂ ಮುಂದೆ ಅವಧದ ನವಾಬನ ಆಸ್ಥಾನದಲ್ಲೂ ಕೆಲಸ ಗಿಟ್ಟಿಸಿಕೊಂಡ. ಖಲ್ಜ್ ಎಂಬುದು ಅಪ್ಘನ್ನಿನ ಒಂದು ಬುಡಕಟ್ಟು. ಇದಕ್ಕೆ ಸೇರಿದ್ದರಿಂದ ಖಲ್ಜಿ ಅಥವಾ ಖಿಲ್ಜಿ ಎಂಬ ಹೆಸರು ಬಂತು. ಭಕ್ತಿಯಾರ್ ದೊಡ್ಡ ಸೇನಾಧಿಪತಿಯೇನೂ ಆಗಿರಲಿಲ್ಲ. ತನ್ನ ಚಿಕ್ಕ ಪಡೆಯೊಂದಿಗೆ ಮೊದಲು ಸಂಪತ್ತನ್ನು ಲೂಟಿ ಮಾಡುವದನ್ನೇ ಕಾಯಕವಾಗಿಸಿಕೊಂಡಿದ್ದ. ಮುಂದೆ ಉತ್ತರ ಪ್ರದೇಶದ ಘಡವಾಲದ ಸಣ್ಣಪುಟ್ಟ ಪಾಳೇಗಾರರನ್ನು ಸೋಲಿಸಿ ಮುಂದೆ ಬಿಹಾರದತ್ತ ದಂಡೆತ್ತಿ ಹೋದ. ಮಿನಾಜ್ ಬಿಹಾರದ ’ಕಿಲಾ-ಎ-ಬಿಹಾರ’ನ್ನು ಭಕ್ತಿಯಾರ್ ಆಕ್ರಮಿಸಿದ ಎಂದು ಬರೆಯುತ್ತಾನೆ. ಅಲ್ಲಿ ಭಕ್ತಿಯಾರನಿಗೆ ಹಲವು ತಲೆ ಬೋಳಿಸಿಕೊಂಡಿದ್ದ ಸಾಧುಗಳ ಜೊತೆಗೆ ರಾಶಿಗಟ್ಟಲೆ ಹಣ ಹಾಗೂ ಪುಸ್ತಕಗಳು ಸಿಕ್ಕವಂತೆ. ದಂಡೆತ್ತಿ ಹೋದವರಿಗೆ ಆಮೇಲೆ ತಿಳಿದದ್ದೆಂದರೆ ಅದೊಂದು ಮದರಸಾ ಅಥವಾ ಬುದ್ಧ ವಿಹಾರವಾಗಿತ್ತು. ಬಿಹಾರ ತನ್ನ ಹೆಸರು ಗಳಿಸಿದ್ದೇ ಬೌದ್ಧರ ವಿಹಾರ ಶಬ್ದದಿಂದ. ಮಿನಾಜ್ ಅದನ್ನು ಕೇವಲ ಕಿಲಾ ಅಥವಾ ಕೋಟೆ ಎಂದು ಕರೆಯುತ್ತಾನೆ. ಈ ಕೋಟೆಯೊಳಗಿದ್ದ ವಿಹಾರವನ್ನು ಪ್ರಸಿದ್ಧ ಇತಿಹಾಸಕಾರ ಜುದಾನಾಥ ಸರ್ಕಾರ್ ಔದಂದ ಬಿಹಾರ ಅಥವಾ ಓದಂತಪುರಿ ಎಂದು ಗುರುತಿಸುತ್ತಾರೆ. ಸರ್ಕಾರರ ಪ್ರಕಾರ ಬಿಹಾರದ ಮೇಲೆ ಖಿಲ್ಜಿಯ ಮೊದಲ ದಾಳಿ ನಡೆದದ್ದು ೧೧೯೯ರಲ್ಲಿ. ಹಾಗಾದರೆ ೧೧೯೩ರಲ್ಲಿ ನಾಳಂದಾವನ್ನು ನಾಶಪಡಿಸಿದ್ಯಾರು? 
ಜುದಾನಾಥ ಸರ್ಕಾರರ ಹಿಸ್ಟರಿ ಆಫ್ ಬೆಂಗಾಲದಿಂದ

 ಮಿನಾಜನಿಗೆ ಈ ಕತೆಯನ್ನು ಹೇಳಿದ್ದು ಬಿಹಾರದ ಮೇಲೆ ಭಕ್ತಿಯಾರನ ಆಕ್ರಮಣದ ಸಮಯದಲ್ಲಿ ಅವನ ಜೊತೆ ಇದ್ದ ನಿಜಾಂ ಮತ್ತು ಸಂಸಾಂ ಎಂಬಿಬ್ಬರು ಸಹಯೋಗಿಗಳು. ೬೪೧ ಹಿಜರಿ ಅಂದರೆ ಸುಮಾರು ೧೨೪೧-೪೨ರಲ್ಲಿ ಈ ಘಟನೆಯನ್ನು ಮಿನಾಜ್ ದಾಖಲಿಸುತ್ತಾನೆ. ಮಿನಾಜಿನ ನಾಸಿರಿಯಲ್ಲೆಲ್ಲೂ ನಾಳಂದಾದ ಹೆಸರಿಲ್ಲ. ಅದರಲ್ಲಿರುವುದು ಓದಂತಪುರಿಯ ಬಗ್ಗೆ. ಇದೂ ಕೂಡ ಬಂಗಾಳದ ಪಾಲರಿಂದ ಸ್ಥಾಪನೆಗೊಂಡ ಒಂದು ಪ್ರಸಿದ್ಧ ಬೌದ್ಧ ವಿಹಾರವೇ. ’Antiquarian Remains In Bihar’ವನ್ನು ಬರೆದ ಡಿ.ಆರ್.ಪಾಟೀಲರ ಪ್ರಕಾರ ಓದಂತಪುರಿಗೆ ಪಾಲರ ದಾನದತ್ತಿಗಳು ಹೆಚ್ಚಾದ ಕಾರಣ ನಾಳಂದಾದ ಪ್ರಮುಖ್ಯತೆ ಕ್ಷೀಣಿಸಿತಂತೆ. ನಾಸಿರಿಯಲ್ಲಿ ಮುಂದುವರೆದು ಮಿನಾಜ್ ಹೇಳುತ್ತಾನೆ: ಭಕ್ತಿಯಾರ್ ಬಿಹಾರದಿಂದ ಬಂಗಾಳದ ಕಡೆ ತೆರಳಿದನಂತೆ. ಗಹಡವಾಲದ ಜೊತೆ ಹಗೆ ಇಟ್ಟುಕೊಂಡಿದ್ದ ಸೇನರು ಭಕ್ತಿಯಾರ್ ಅಲ್ಲಿಗೇ ತೃಪ್ತನಾಗುತ್ತಾನೆಂದೆನಿಸಿದ್ದರಂತೆ. ಅವನ ಬರುವಿಕೆಯ ನಿರೀಕ್ಷೆಯಲ್ಲಿಲ್ಲದ ಲಕ್ಷ್ಮಣ ಸೇನನಿಗೆ ಆಘಾತವಾಗಿತ್ತು. ಭಕ್ತಿಯಾರ್ ಸೇನರ ರಾಜಧಾನಿ ನಾದಿಯಾ ಪ್ರವೇಶಿಸಿದ್ದೇ, ತೀರಾ ವೃದ್ಧಾಪ್ಯದಲ್ಲಿದ್ದ ಲಕ್ಷ್ಮಣಸೇನ ಅರಮನೆಯ ಹಿಂಬಾಗಿಲಿನಿಂದ ಓಡಿಹೋದನಂತೆ. ಖಿಲ್ಜಿಯ ಬಂಗಾಳದ ಆಕ್ರಮಣದ ಕತೆ ದೊಡ್ಡದಿದೆ. ಅದನ್ನು ಮುಂದೆಂದಾದರೂ ಇನ್ನೊಂದು ಲೇಖನದಲ್ಲಿ ನೋಡೋಣ. ಖಿಲ್ಜಿಯ ದಾಳಿ ನಡೆದದ್ದೇ ಆದರೆ ಅದು ಓದಂತಪುರಿಯ ಮೇಲೆಯೇ ಹೊರತೂ ನಾಳಂದಾದಲ್ಲಲ್ಲ. 

 ಈಗ ಕೆಲ ಇತಿಹಾಸಕಾರರು ಹೇಳುವ ಎರಡನೇ ಪುರಾವೆಗೆ ಬರೋಣ. ಅದು ಧರ್ಮಸ್ವಾಮಿನ್ ಎಂಬ ಟಿಬೆಟಿನ ಸಂನ್ಯಾಸಿಯದ್ದು. ಧರ್ಮಸ್ವಾಮಿನ್ ೧೨೩೪ನಲ್ಲಿ ಭಾರತಕ್ಕೆ ಬಂದ. ಬೌದ್ಧ ಧರ್ಮಶಾಸ್ತ್ರವನ್ನು ಅಭ್ಯಾಸಮಾಡಲು ಬೋಧಗಯೆಗೆ ಭೇಟಿಕೊಟ್ಟ. ತನ್ನ ಜೀವನ ವೃತ್ತಾಂತದಲ್ಲಿ ಧರ್ಮಸ್ವಾಮಿನ್ ರಾಜಸಿಂಹ ಹಾಗೂ ಬುಧಸೇನ ಎಂಬ ಇಬ್ಬರು ರಾಜರನ್ನು ಬಹುವಾಗಿ ಹೊಗಳಿದ್ದಾನೆ. ಧರ್ಮಸ್ವಾಮಿಯ ವೃತ್ತಾಂತ ಐತಿಹಾಸಿಕವಾಗಿ ತುಂಬ ಬೆಲೆಬಾಳುವಂತದ್ದು. ಇದು ಬಿಹಾರ ಮತ್ತು ಸುತ್ತಲಿನ ಪ್ರದೇಶದಲ್ಲಿ ನಡೆದ ಬಹಳಷ್ಟು ಮುಸ್ಲಿಂ ಆಕ್ರಮಣದ ಫಸ್ಟ್ ಹ್ಯಾಂಡ್ ಮಾಹಿತಿಯನ್ನು ನೀಡುತ್ತದೆ. ಆಕ್ರಮಣಕಾರರು ನಿರಂತರವಾಗಿ ದಾಳಿಮಾಡುತ್ತಿದ್ದರೆಂಬುದೇನೋ ನಿಜ. ಆದರೆ ಅಲ್ಲೆಲ್ಲೂ ಅವರ ಸ್ಥಾಪಿತ ಆಡಳಿತವಾಗಲಿ ಸತ್ತೆಯಾಗಲೀ ಇರಲಿಲ್ಲ. ಲೂಟಿ ಮಾಡಿ ಓಡುವುದಷ್ಟೇ ಅವರ ಕೆಲಸವಾಗಿತ್ತು. ಬಿಹಾರದಲ್ಲಿ ಆ ಸಮಯದಲ್ಲಿ ಬಹಳಷ್ಟು ಸಣ್ಣಪುಟ್ಟ ಹಿಂದೂ-ಬೌದ್ಧ ರಾಜರು ಸಾಕಷ್ಟು ಪ್ರಬಲವಾಗಿಯೇ ಇದ್ದರು. ಧರ್ಮಸ್ವಾಮಿ ಗಯೆಯನ್ನು ತಲುಪಿದಾಗ ವಿಕ್ರಮಶಿಲಾ ಪೂರ್ತಿ ನಾಶವಾಗಿತ್ತು. ಅಲ್ಲಿನ ಕಟ್ಟಡದ ಕಲ್ಲುಗಳನ್ನೆಲ್ಲ ದಾಳಿಕಾರರು ಬೇರೆಡೆ ಸಾಗಿಸಿದ್ದರು. ಅಲ್ಲಿಂದಾತ ನಾಳಂದಾಕ್ಕೆ ತೆರಳಿ ಸುಮಾರು ಆರು ತಿಂಗಳು ವಾಸವಾಗಿದ್ದ. ಅವನ ಕಾಲಕ್ಕೆ ನಾಳಂದಾ ವಿ.ವಿ ತನ್ನ ಗತವೈಭವವನ್ನು ಕಳೆದುಕೊಂಡರೂ ಇನ್ನೂ ಜೀವಂತವಾಗಿತ್ತು. ನಾಳಂದಾದ ಮೇಲೆ ಭಕ್ತಿಯಾರನ ಆಕ್ರಮಣ ನಿಜವೇ ಆಗಿದ್ದರೆ, ಧರ್ಮಸ್ವಾಮಿ ಅದನ್ನು ಖಂಡಿತಾ ಉಲ್ಲೇಖಿಸುತ್ತಿದ್ದ. ಅದರ ನೆನಪು ಆಗಿನ ಜನರಲ್ಲಿ ತಾಜಾ ಆಗಿ ಉಳಿದಿರಲೇಬೇಕಿತ್ತು. ಅಂತಹ ಯಾವ ಘಟನೆಯನ್ನೂ ಆತ ಬರೆದಿಟ್ಟಿಲ್ಲ. ಅವನ ಕತೆಯನ್ನೇ ನಂಬುವುದಾರೆ, ಅವನ ಕಾಲಕ್ಕೆ ನಾಳಂದಾದ ಉಳಿದಿರಲು ಎರಡು ಕಾರಣಗಳನ್ನು ಕೊಡುತ್ತಾನೆ. ಮೊದಲನೇಯದು ದೆಹಲಿಯಿಂದ ಬಂಗಾಳಕ್ಕೆ ತೆರಳುವ ಹಾದಿಯಲ್ಲಿ ವಿಕ್ರಮಶಿಲಾ ಸಿಗುತ್ತದೆಯೇ ಹೊರತೂ ನಾಳಂದವಲ್ಲ. ಹಾಗಾಗಿ ವಿಕ್ರಮಶಿಲೆ ನಾಶಗೊಂಡಿತು. ಮುಖ್ಯ ದಾರಿಯಿಂದ ತೀರಾ ಒಳಗಿದ್ದ ನಾಳಂದಾವನ್ನು ನಾಶಮಾಡುವುದು ಸುಲಭವಾಗಿರಲಿಲ್ಲ. ಆಗಿನ ಕಾಲಕ್ಕೆ ಇರುವ ಕಟ್ಟಡವನ್ನು ಒಡೆದು ಅದರ ವಸ್ತುಗಳಿಂದ ಬೇರೆ ಕಟ್ಟಡವನ್ನು ನಿರ್ಮಿಸುವುದು, ಪೂರ್ತಿ ಹೊಸದಾಗಿ ಕಟ್ಟುವುದಕ್ಕಿಂದ ಸುಲಭವಾಗಿತ್ತು. ಹಾಗಾಗಿಯೇ ಮುಸ್ಲಿಂ ಆಕ್ರಮಣಕಾರರ ಆಡಳಿತದಲ್ಲಿ ಒಡೆದು ಕಟ್ಟಿದ್ದೇ ಜಾಸ್ತಿ. ಜೊತೆಗೆ ನಾಳಂದಾದಲ್ಲಿ ಆಕ್ರಮಣಕಾರರಿಗೆ ಸಾಗಿಸುವಷ್ಟು ಕಲ್ಲಿನ ರಚನೆಗಳಿರಲಿಲ್ಲ. ಮಾತ್ರವಲ್ಲ ಅದು ಒಂದು ಆಕ್ರಮಣದಲ್ಲಿ ಪೂರ್ತಿ ನಾಶವಾಗುವಷ್ಟು ಸಣ್ಣದೂ ಆಗಿರಲಿಲ್ಲ. ಎರಡನೇಯದಾಗಿ ಒಮ್ಮೆ ತುರ್ಕರ ಸೈನ್ಯದ ತುಕಡಿಯೊಂದು ನಾಳಂದಾದ ಮೇಲೆ ಆಕ್ರಮಣ ಮಾಡಲು ಬಂದಿತ್ತಂತೆ. ಕೆಲ ಸೈನಿಕರು ಅಲ್ಲಿನ ಜ್ಞಾನನಾಥ ದೇಗುಲವನ್ನು ಒಡೆದು ಕಲ್ಲುಗಳನ್ನು ಓದಂತಪುರಿಗೆ ಕೊಂಡೊಯ್ದರಂತೆ. ಓದಂತಪುರಿಗೆ ಕೊಂಡೊಯ್ದ ದಿವಸವೇ ಅಲ್ಲಿನ ಮುಖ್ಯ ಸೈನಿಕ ತೀವ್ರ ಜ್ವರದಿಂದ ಸತ್ತ. ಹಾಗಾಗಿ ಮೂಢನಂಬಿಕೆಯ ಕಾರಣದಿಂದ ನಾಳಂದಾ ಸ್ವಲ್ಪಕಾಲ ಸುರಕ್ಷಿತವಾಗಿತ್ತು(ಪುಟ ೯೪). ಮುಂದೆ ಧರ್ಮಸ್ವಾಮಿ ನಾಳಂದಾದ ಮುಖ್ಯ ಗುರು ರಾಹುಲ ಶ್ರೀ ಭದ್ರರ ಅಡಿಯಲ್ಲಿ ಬೌದ್ಧ ತತ್ತ್ವಶಾಸ್ತ್ರವನ್ನು ಕಲಿತು ಅಲ್ಲಿಂದ ತೆರಳುವವರೆಗೆ ನಡೆದ ಘಟನೆಗಳನ್ನು ವಿವರವಾಗಿ ಬರೆದಿಟ್ಟಿದ್ದಾನೆ. ಇಷ್ಟೆಲ್ಲ ಬರೆದರೂ ಧರ್ಮಸ್ವಾಮಿ ಭಕ್ತಿಯಾರನ ಆಕ್ರಮಣದ ಬಗ್ಗೆ ಬರೆದಿಲ್ಲ. ಹಾಂ, ೧೨೩೫ರಲ್ಲಿ ನಡೆದ ನಾಳಂದಾದ ಮೇಲೆ ತುರ್ಕರ ದಾಳಿಯೊಂದನ್ನು ಉಲ್ಲೇಖಿಸುತ್ತಾನೆ. ಆದರೆ ಆಗ ಖಿಲ್ಜಿ ಸತ್ತು ಇಪ್ಪತ್ತೆಂಟು ವರ್ಷಗಳಾಗಿದ್ದವು. 

 ಮೂರನೇ ಪುರಾವೆಯೆಂದು ಹೆಸರಿಸಲಾಗುವುದು ಇನ್ನೊಬ್ಬ ಟಿಬೇಟಿಯನ್ ಸಂನ್ಯಾಸಿ ತಾರಾನಾಥನದ್ದು. ಅವನದ್ದು ಹದಿನೇಳನೇ ಶತಮಾನದ ಮೊದಲ ಭಾಗ. ತಾರಾನಾಥ ಭಾರತಕ್ಕೆ ಬಂದ ಮಾಹಿತಿಯಿಲ್ಲ. ಅವನ ನಮೂದುಗಳಲ್ಲೂ ಖಿಲ್ಜಿಯ ಸುಳಿವಿಲ್ಲ. ಹಾಗೆಂದು ತಾರಾನಾಥ ಓದಂತಪುರಿ ಹಾಗೂ ವಿಕ್ರಮಶಿಲೆಯ ಮೇಲೆ ಮೂನ್ ಎಂಬ ತುರುಷ್ಕ ರಾಜ ಆಕ್ರಮಣ ಮಾಡಿದ ಬಗ್ಗೆ ಬರೆದಿದ್ದಾನೆ. ಆದರೆ ಇವೆರಡೂ ನಳಂದಾ ಅಲ್ಲವಲ್ಲ. ಭಕ್ತಿಯಾರ್ ಬೆಂಕಿಹಚ್ಚಿದ ಎಂದು ಹೇಳಲಾಗುವ ೪೫೦ ವರ್ಷಗಳ ನಂತರವೂ ಆತ ನಾಳಂದಾವನ್ನು ನಾಶಪಡಿಸಿದ ಪುರಾವೆಗಳು ನಮಗೆ ಲಭ್ಯವಿಲ್ಲ. 


 ಹಾಗೆಂದು ನಾಳಂದಾ ಸುಟ್ಟಿದ್ದು ಸುಳ್ಳೇ? ಖಂಡಿತಾ ಅಲ್ಲ. 
ಅರ್ಕಿಯಾಲಜಿಯ ಉತ್ಖನನಗಳಲ್ಲೂ ನಾಳಂದ ಭಾಗಶಃ ಸುಟ್ಟ ಬಗ್ಗೆ ಅದರ ಮೇಲಿನ ಪದರದಲ್ಲಿ ಸುಟ್ಟ ಮಣ್ಣಿನ, ಬೂದಿಯ ಅವಶೇಷಗಳು ಸಿಕ್ಕಿವೆ. ಹಾಗಾದರೆ ಅದನ್ನು ಸುಟ್ಟವರು ಯಾರು? 
ಪುನಃ ತಾರಾನಾಥನ ಗ್ರಂಥಕ್ಕೆ ಬರೋಣ. ಕಾಕುಟಸಿದ್ಧ ಎಂಬವನು ಮಗಧದ ಮಂತ್ರಿಯಾಗಿದ್ದ. ಆತ ನಾಲೇಂದ್ರ ಅಥವಾ ನಾಳಂದಾವನ್ನು ನಿರ್ಮಿಸಿದನಂತೆ. ಇದರ ಕಟ್ಟಡವೊಂದರ ಉದ್ಘಾಟನೆಗೆ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ. ಇದಕ್ಕೆ ಇಬ್ಬರು ತೀರ್ಥಕರು ಭಿಕ್ಷೆಗಾಗಿ ಬಂದರು. ಆದರೆ ಅಲ್ಲಿದ್ದ ಶ್ರಮಣರು ಅವರನ್ನು ನಾಳಂದಾದಿಂದ ಓಡಿಸಿಬಿಟ್ಟರು. ಸಿಟ್ಟಿಗೆದ್ದ ತೀರ್ಥಕರಿಬ್ಬರೂ ಹನ್ನೆರಡು ವರ್ಷಗಳ ಕಾಲ ಸೂರ್ಯಸಿದ್ಧಿ ಎಂಬ ಯಾಗವೊಂದನ್ನು ಮಾಡಿ ಅದರ ಬೂದಿಯನ್ನು ನಾಳಂದಾದತ್ತ ಎರಚಿದರು. ಬೂದಿಯಿಂದ ಎದ್ದ ಕಾಳ್ಗಿಚ್ಚು ನಾಳಂದಾದ ೮೪ ಬುದ್ಧವಿಹಾರಗಳನ್ನು ನಾಶಪಡಿಸಿತು. ಮಾತ್ರವಲ್ಲ ಅಲ್ಲಿದ್ದ ಅಪಾರ ಗ್ರಂಥರಾಶಿಯೂ ಬೆಂಕಿಯಲ್ಲಿ ಸುಟ್ಟುಹೋಯಿತು. ಈ ಗ್ರಂಥಗಳ ಪೈಕಿ ರತ್ನಬೋಧಿ ಹಾಗೂ ರತ್ನಸಾಗರವೂ ಸೇರಿದ್ದವು. ತೀರ್ಥಕರಿಬ್ಬರೂ ಅಲ್ಲಿಂದ ಹಸಾಮ(ಆಸ್ಸಾಂ)ಕ್ಕೆ ಓಡಿಹೋದರು. ಸ್ವಾರಸ್ಯವೆಂದರೆ ಇಲ್ಲಿ ತೀರ್ಥಕರೆಂದರೆ ಭಿಕ್ಷಾಯಾಚನೆಗೆ ಬರುತ್ತಿದ್ದ ಬ್ರಾಹ್ಮಣ ಅಥವಾ ತೀರ್ಥಯಾತ್ರಿಗಳು ಎಂದು ಅರ್ಥೈಸಬಹುದು. ಮೇಲ್ನೋಟಕ್ಕೆ ಇದೊಂದು ಕಾಗಕ್ಕ ಗುಬ್ಬಕ್ಕನ ಕತೆಯಂತಿದೆ. ಆದರೆ ಇದೊಂದೇ ಪುಸ್ತಕದಲ್ಲಿದ್ದರೆ, ನಿರ್ಲಕ್ಷಿಸಬಹುದು. ಆದರೆ ಇದೇ ತರದ ಘಟನೆ ಹದಿನೆಂಟನೇ ಶತಮಾನದ ಸುಂಪಾ ಖಾನ್ಪೋವಿನ ಪುಸ್ತಕದಲ್ಲೂ ಸಿಗುತ್ತದೆ. ಇವನೂ ಒಬ್ಬ ಟಿಬೇಟಿಯನ್ ಸಂನ್ಯಾಸಿ. ಇಬ್ಬರು ಬ್ರಾಹ್ಮಣರು ನಾಳಂದಾಕ್ಕೆ ಬಂದರು. ಅಲ್ಲಿನ ಬೌದ್ಧ ಭಿಕ್ಷುಗಳು ಅವರನ್ನು ನೀರೆರಚಿ ಅವಮಾನಿಸಿ ಓಡಿಸಿದರು. ಸಿಟ್ಟಿಗೆದ್ದ ಬ್ರಾಹ್ಮಣರು ಅಲ್ಲಿನ ಮೂರು ಕಟ್ಟಡಗಳಿಗೆ ಬೆಂಕಿಯಿಟ್ಟರು. 


    ಅಂದರೆ ಇದರ ಅರ್ಥ, ಹದಿನೆಂಟನೇ ಶತಮಾನದವರೆಗೂ ಭಕ್ತಿಯಾರ್ ಖಿಲ್ಜಿ ನಾಳಂದಾವನ್ನು ನಾಶಗೊಳಿಸಿ ಬೆಂಕಿಯಿಟ್ಟ ಕತೆ ಎಲ್ಲೂ ಪ್ರಚಲಿತದಲ್ಲಿರಲಿಲ್ಲ. ಡಿ. ಆರ್ ಪಾಟೀಲ್, ಇದೆರಡೂ ಪುಸ್ತಕಗಳ ಆಧಾರದ ಮೇಲೆ ಪ್ರಾಯಶಃ ಶೈವರಿಗೂ ಬೌದ್ಧರಿಗೂ ನಡೆದ ಘರ್ಷಣೆಯಲ್ಲಿ ನಾಳಂದಾ ಸುಟ್ಟುಹೋಗಿರಬೇಕೆಂದು ಅಂದಾಜಿಸುತ್ತಾರೆ. ಮುಸ್ಲಿಮರು ದೇವಸ್ಥಾನಗಳನ್ನು ಒಡೆದರು ಎನ್ನುವ ಇತಿಹಾಸಕಾರರೆಲ್ಲ ಹಿಂದೂ ಅರಸರಿಂದ ಬುದ್ಧ ಹಾಗೂ ಜೈನ ಮಂದಿರಗಳ ಮೇಲಾದ ದಾಳಿಯನ್ನು ಬಹಳ ಚಾಲಾಕಿತನದಿಂದ ಮರೆಮಾಚುತ್ತಾರೆ. ಹತ್ತನೇ ಶತಮಾನದಲ್ಲಿ ಕ್ಷೇಮಗುಪ್ತ ಜಯೇಂದ್ರವಿಹಾರವನ್ನು ಹೊಡೆದುರುಳಿಸಿದ. ಹನ್ನೊಂದನೇ ಶತಮಾನದಲ್ಲಿ ರಾಜೇಂದ್ರ ಚೋಳ ನೂರಾರು ಜೈನಮಂದಿರಗಳನ್ನು ನಾಶಪಡಿಸಿದ. ಕರ್ನಾಟಕದ ಮೇಲೆ ದಾಳಿ ಮಾಡಿದ್ದ ಪರಂಜೋತಿ ವಾತಾಪಿ ಗಣಪತಿ ದೇವಾಲಯವನ್ನು ನಾಶಮಾಡಿ ಮೂರ್ತಿಯನ್ನು ಕದ್ದೊಯ್ದ. ಎಂಟನೇ ಶತಮಾನದಲ್ಲಿ ತಿರುಮಂಗೈ ಆಳ್ವಾರ್ ಬುದ್ಧನ ದೇಗುಲವನ್ನು ನೆಲಸಮಗೊಳಿಸಿ, ಚಿನ್ನದ ಬುದ್ಧನನ್ನು ಕರಗಿಸಿ ಅದರಿಂದ ವಿಷ್ಣುವಿನ ಮೂರ್ತಿಯನ್ನು ನಿರ್ಮಿಸಿದ. ನಾಳಂದಾಕ್ಕೆ ಯಾರು ಬೆಂಕಿಯಿಕ್ಕಿದರೆಂದು ಹೇಳುವುದು ಸುಲಭವಲ್ಲದಿದ್ದರೂ ಆಲ್ಲಿ ಬೆಂಕಿಯಿಂದಾದ ನಾಶದ ಬಗ್ಗೆ ಒಂದು ಶಿಲಾಶಾಸನವೂ ಇದೆ. ೧೦೦೩ರದ್ದು. ನಾಳಂದಾದ ಸೈಟ್ ೧೨ ರಲ್ಲಿ ದೊರಕಿದ್ದು. ಇದರ ಪ್ರಕಾರ ಒಂದು  ದೊಡ್ಡ ಕಾಳ್ಗಿಚ್ಚಿನಿಂದ ನಾಳಂದಾ ಬೆಂಕಿಗಾಹುತಿಯಾಯ್ತು. ಮುಂದೆ ಮಹಿಪಾಲನ ಕಾಲದಲ್ಲಿ ತೆಲಹಾರದ ನಿವಾಸಿ ಬಾಲಾದಿತ್ಯನೆಂಬವ ಇದರ ಕೆಲಭಾಗವನ್ನು ಪುನರುಜ್ಜೀವನಗೊಳಿಸಿದ. ಇಲ್ಲಿ ಯಾರು ನಾಶಪಡಿಸಿದರು ಎಂಬುದು ನಿಖರವಾಗಿಲ್ಲದಿದ್ದರೂ, ಖಿಲ್ಜಿ ಬಿಹಾರದತ್ತ ಬರುವ ಸುಮಾರು ೯೦ ವರ್ಷಗಳ ಮುಂಚೆಯೇ ನಾಳಂದಾ ಸುಟ್ಟುಹೋಗಿತ್ತು. ಕೆಲ ಇತಿಹಾಸಕಾರರ ಪ್ರಕಾರ ನಾಳಂದಾದಲ್ಲಿ ಮುಚ್ಚಿದ ಕೋಣೆಗಳಲ್ಲಿ ಅಡುಗೆ ನಡೆಯುತ್ತಿತ್ತು. ಇದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದ್ದರೂ ಆಗಿರಬಹುದು. ಬೆಂಕಿ ಆಕಸ್ಮಿಕವಾಗಿ ಉಂಟಾಯ್ತೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಚ್ಚಿದರೋ ಹೇಳುವುದು ಕಷ್ಟ. ಆದರೆ ಅದಕ್ಕೂ ಖಿಲ್ಜಿಗೂ ಯಾವ ಸಂಬಂಧವೂ ಇಲ್ಲ. 



    ಇತಿಹಾಸ ಅನ್ನೋದು ಸಿನೆಮಾವಲ್ಲ. ಸಡನ್ ಕ್ಲೈಮ್ಯಾಕ್ಸುಗಳಿರುವುದಕ್ಕೆ. ಬರಿ ಬೆಂಕಿ ಹೊತ್ತಿಕೊಳ್ಳುವುದರಿಂದ ನಾಳಂದಾದಂತ ಒಂದಿಡೀ ಊರು ಏಕಾಏಕಿ ನಾಶವಾಯ್ತೆನ್ನುವುದನ್ನು ನಂಬುವುದು ಸಾಧ್ಯವಿಲ್ಲ. ಇದರ ಅಂತ್ಯ ಒಂಬತ್ತರಿಂದ ಹನ್ನೊಂದನೇ ಶತಮಾನಗಳವರೆಗೆ ಹಲವಾರು ಘಟ್ಟಗಳಲ್ಲಿ ನಡೆದಿದೆ. ಇದಕ್ಕೆ ಹಲವು ಘಟನೆಗಳು ಸಾಥ್ ನೀಡಿದವು. ಅದರಲ್ಲಿ ಮುಖ್ಯವಾಗಿದ್ದು ಬಂಗಾಳದ ಪಾಲರ ಕಾಲದಲ್ಲಿ ಓದಂತಪುರಿ, ವಿಕ್ರಮಶಿಲ ಹಾಗೂ ಸೋಮಪುರಿಯಂತಹ ಹೊಸ ವಿಹಾರಗಳು ತಲೆಯೆತ್ತಿದ್ದು. ಇವು ಪಾಲರ ಧರ್ಮಪಾಲ ಮತ್ತವನ ಮಗ ಎರಡನೇ ದೇವಪಾಲನ ಕಾಲದಲ್ಲಿ ನಿರ್ಮಿಸಲ್ಪಟ್ಟವು. ನಾಳಂದಾಕ್ಕೆ ಮೊದಲಿನಿಂದಲೂ ಬರುತ್ತಿದ್ದ ಧನಸಹಾಯಗಳೆಲ್ಲ ಕ್ರಮೇಣ ಕಡಿಮೆಯಾದವು. ಯಾವುದೇ ಧಾರ್ಮಿಕ ಅಥವಾ ಶಿಕ್ಷಣ ಸಂಸ್ಥೆಯನ್ನು ಧನಸಹಾಯವಿಲ್ಲದೇ ಬಹಳ ವರ್ಷ ನಡೆಸಲು ಕಷ್ಟ. ಅಲ್ಲಿಂದಲೇ ನಾಳಂದಾದ ಅವನತಿ ಪ್ರಾರಂಭವಾಯ್ತು. ಪಾಲರ ಆಳ್ವಿಕೆ ಕೂಡ ಕೊನೆಯ ಹಂತದಲ್ಲಿತ್ತು. ಸೇನ ಮತ್ತು ಗಹಡವಾಲರ ಜೊತೆ ಪಾಲರಿಗೆ ಮೇಲಿಂದ ಮೇಲೆ ಯುದ್ಧಗಳಾಗುತ್ತಿದ್ದವು. ಅದಷ್ಟೇ ಅಲ್ಲದೇ, ಬೌದ್ಧರ ವಿವಿಧ ಪಂಥಗಳಲ್ಲೂ ಆಗ್ಗಿದ್ದಾಂಗ್ಯೆ ತಿಕ್ಕಾಟಗಳಾಗುತ್ತಿದ್ದವು. ಇಲ್ಲಿನ ಅಸಮಾನತೆ, ಹಣದ ದುರ್ಬಳಕೆಗಳಂತಹ ಕಾರಣಗಳಿಂದ ಸುತ್ತಲಿನ ಜನರೂ ಸಹಾಯ ಮಾದುವುದನ್ನು ನಿಲ್ಲಿಸಿದರು. ಈ ಮಾತಿಗೆ ಧರ್ಮಸ್ವಾಮಿಯ ಕೃತಿಯಲ್ಲೂ ಉದಾಹರಣೆಗಳಿವೆ. ಧರ್ಮಸ್ವಾಮಿ ನಾಳಂದಾಕ್ಕೆ ಬಂದಾಗ ಅದಾಗಲೇ ಜೀರ್ಣಾವಸ್ಥೆಯಲ್ಲಿತ್ತು. ಹಲವಾರು ಕಟ್ಟಡಗಳಿಗೆ ರಿಪೇರಿಯ ಅವಶ್ಯತೆಯಿತ್ತು. ಅಷ್ಟರಲ್ಲಿ ಓದಂತಪುರಿಯ ಸಮೀಪದ ಬಿಹಾರ್ ಶರೀಫ್‌ನಲ್ಲಿ ಮುಸ್ಲಿಂ ಸೈನ್ಯದ ಮಿಲಿಟರಿ ಬೇಸ್ ಒಂದು ಶುರುವಾಗಿತ್ತು. ಅದರ ಮುಖಂಡ ನಾಳಂದಾಕ್ಕೆ ಸಹಾಯ ಮಾಡುತ್ತಿದ್ದ ಜಯದೇವನನ್ನು ಸೆರೆಯಲ್ಲಿಟ್ಟ. ಇದರಿಂದಾಗಿ ನಾಳಂದಾ ತುಂಬ ಆರ್ಥಿಕ ತೊಂದರೆಗೊಳಗಾಯಿತು. 

 ತಾರಾನಾಥ ಓದಂತಪುರಿ ಮತ್ತು ಸೋಮಪುರಗಳ ಮೇಲೆ ತುರುಷ್ಕರು ಆಕ್ರಮಣ ಮಾಡಿದ ಬಗ್ಗೆ ಹೇಳಿದ್ದಾನೆಂದೆನಷ್ಟೆ. ಈ ತುರುಷ್ಕ ಎಂಬುದು ಬಹಳ ಆಸಕ್ತಿಕರ ಶಬ್ದ. ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಕಾಶ್ಮೀರದ ಶ್ರೀಹರ್ಷನ್ನು ತುರುಷ್ಕ ರಾಜನೆಂದು ಮೂದಲಿಸುತ್ತಾನೆ. ಈ ಹರ್ಷ ಬೌದ್ಧ ದೇವಾಲಯಗಳನ್ನು ನೆಲಸಮ ಮಾಡಲು ’ದೇವೋತ್ಪೀಡನ ನಾಯಕ’ನೆಂಬ ಅಧಿಕಾರಿಯನ್ನೇ ನೇಮಿಸಿದ್ದ. ಸೌರಾಷ್ಟ್ರವನ್ನು ಹತ್ತನೇ ಶತಮಾನದಲ್ಲಿ ಆಳಿದ್ದ ಗ್ರಹರಿಪು ಸೋಮನಾಥದ ದರ್ಶನಕ್ಕೆ ಬರುತ್ತಿದ್ದ ಯಾತ್ರಿಕರನ್ನು ಪರಿಪರಿಯಾಗಿ ಹಿಂಸಿಸುತ್ತಿದ್ದನಂತೆ. ಅವನಿಗೂ ತುರುಷ್ಕ ಎಂದು ಹೆಸರಿತ್ತು. ಈ ತುರುಷ್ಕ ಹಾಗೂ ಯವನ(ಗ್ರೀಕ್ ಶಬ್ದ ಅಯೋನಿಯನ್ ಇಂದ ಬಂದಿದ್ದು) ಶಬ್ದಗಳು ಅಧರ್ಮಿ ಎಂಬಅರ್ಥದಲ್ಲಿ ಬಳಸಲ್ಪಡುವಂಥವು. ಮುಸ್ಲಿಂ ಮತ್ತು ವಿದೇಶಿಗರನ್ನೂ ಈ ಅರ್ಥದಲ್ಲೇ ಕರೆಯಲಾಗಿದೆ. ಎಲ್ಲದಕ್ಕೂ ಕೊನೆ ಇದೆ. ಕಾಲನ ಹೊಡೆತಕ್ಕೆ ಸಿಕ್ಕು ವೈಭವದಿಂದ ನೂರಾರು ವರ್ಷಗಳ ಕಾಲ ಆಳಿದ ದೊಡ್ಡ ದೊಡ್ಡ ಅರಸು ಮನೆತನೆಗಳೇ ಕೊನೆಯಾಗಿವೆ. ಅದೇ ಪರಿಸ್ಥಿತಿ ನಾಳಂದಾಕ್ಕೆ ಬಂದಿರಲೂ ಸಾಕು. ಅದನ್ನು ಬಿಟ್ಟು ಖಿಲ್ಜಿ ನಾಳಂದಾಕ್ಕೆ ಬೆಂಕಿಯಿಟ್ಟು ನಾಶಮಾಡಿದ ಎಂಬುದು ಕತೆ ಕಾದಂಬರಿಗಳಲ್ಲಿ ಓದಲಷ್ಟೇ ಚಂದ. ಈ ಕತೆಯೂ ಕೂಡ ತೀರಾ ಇತ್ತೀಚೆಗೆ ಪ್ರಚಲಿತಕ್ಕೆ ಬಂದಿದ್ದು. 

ಕೊನೆಯ ಮಾತು: 
ನಾಳಂದಾ ಬೌದ್ಧ ವಿಶ್ವವಿದ್ಯಾನಿಲಯ ತಕ್ಷಶಿಲಾ ಬೌದ್ಧ ವಿಶ್ವವಿದ್ಯಾನಿಲಯ 
ಓದಂತಪುರಿ ಬೌದ್ಧ ವಿಶ್ವವಿದ್ಯಾನಿಲಯ ಜಗದ್ದಲ, 
ಸೋಮಪುರ, ನಾಗಾರ್ಜುನ, ವಲ್ಲಭಿ, ಪುಶ್ಪಗಿರಿ, ವಿಕ್ರಮಶಿಲಾಗಳೂ ಕೂಡ. 

 ಗ್ರಂಥಋಣ: 
Minhaj-i-Siraj Juzjani, Tabaqat-i-Nasiri, 1864, Calcutta edition 
Sumpa Khan-Po, History of the Rise, Progress and Downfall of Buddhism in India, Part I, 1908 
H.D. Sankalia, University of Nalanda, 1934 
Taranatha's History of Buddhism in India by Debiprasad Chattopadhyaya, 1946 
George Roerich, Biography of Dharmasvamin, 1959 
D.R. Patil, The Antiquarian Remains in Bihar, 1963 
Lama Chipa, Alka Chattopadhyay, Taranath’s History of Buddhism, 1990 
Sukumar Dutt, Buddhist Monks and Monasteries of India, 2000 
Jadunath Sarkar, The History of Bengal, Vol. III, 2003