Pages

Tuesday, June 25, 2024

ನಾಳಂದಾ ನಾಶವಾಗಿದ್ದೆಂತು?

ನಾಳಂದಾ ಮಹಾವಿಹಾರ(ಚಿತ್ರಕೃಪೆ: ಗೂಗಲ್)

    
    ಕಳೆದ ವಾರ ನಾಳಂದಾ ವಿಶ್ವವಿದ್ಯಾನಿಲಯದ ಕಟ್ಟಡವನ್ನು ಮಾನ್ಯ ಪ್ರಧಾನ ಮಂತ್ರಿಗಳು ಉದ್ಘಾಟಿಸಿದರು. ಖಿಲ್ಜಿಯಿಂದ ನಾಶಗೊಂಡ ನಾಳಂದಾ ೮೩೧ ವರ್ಷಗಳ ನಂತರ ಪುನರುತ್ಥಾನಗೊಂಡಿತೆಂದು ವಾಟ್ಸಪ್ಪು ಫೇಸ್ಬುಕ್ಕುಗಳಲ್ಲಿ ಜನರೆಲ್ಲ ಸಂಭ್ರಮಪಟ್ಟರು. ವಿವಿವಿವಿ(ವಿಶ್ವ ವಿಖ್ಯಾತ ವಿಶ್ವ ವಿದ್ಯಾನಿಲಯ) ಮರಳಿ ಗತವೈಭವಕ್ಕೆ ಬಂದ ಶ್ರೇಯವನ್ನು ಸರ್ಕಾರದ ಪದತಲಕ್ಕರ್ಪಿಸುವ ಮೆಸೇಜುಗಳೆಲ್ಲ ಹರಿದಾಡಿದವು. ಇರಲಿ. ನಾಳಂದಾಕ್ಕೆ ಪುನರ್ಜೀವನ ಕೊಡಬೇಕೆಂಬ ಕೂಗಿಗೆ ಬಲ ಸಿಕ್ಕಿದ್ದು ೨೦೦೬ರಲ್ಲಿ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ಅಬ್ದುಲ್ ಕಲಾಂ ಅವರು ಬಿಹಾರದ ಶಾಸನ ಸಭೆಯಲ್ಲಿ ಅಂಥದೊಂದು ಪ್ರಸ್ತಾವನೆಯನ್ನು ಮುಂದಿಟ್ಟ ಮೇಲೆ. ನಾಳಂದಾ ಯುನೆಸ್ಕೋವಿನ ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದೆಂದು ನಿಮಗೆ ಗೊತ್ತೇ ಇದೆ. ೨೦೧೦ರಲ್ಲಿ ಭಾರತ ಸರ್ಕಾರ ರಾಜಗೀರ್(ಪುರಾತನ ರಾಜಗೃಹ)ದಲ್ಲಿ ಹೊಸ ನಾಳಂದಾ ವಿವಿಯನ್ನು ಸ್ಥಾಪಿಸುವ ಬಗ್ಗೆ ನಿರ್ಣಯವೊಂದನ್ನು ಕೈಗೊಂಡಿತು. ಅದೇ ವರ್ಷ ಅಗಸ್ಟಿನಲ್ಲಿ ಪಾರ್ಲಿಮೆಂಟಿನಲ್ಲಿ ನಾಳಂದಾ ವಿವಿ ಮಸೂದೆಯೂ ಮಂಡಿಸಲ್ಪಟ್ಟಿತು. ಬಿಹಾರ ಸರ್ಕಾರ ಹೊಸ ವಿವಿಗೆಂದು ೪೪೫ ಎಕರೆ ಸ್ಥಳವನ್ನು ದಾನಮಾಡಿತ್ತಲ್ಲದೇ ಪೂರ್ವ ಏಷಿಯಾ ಸಮಿಟ್‌ನ ಹದಿನೇಳು ದೇಶಗಳು ಸುಮಾರು ಹದಿನೆಂಟು ಕೋಟಿ ರುಪಾಯಿಗಳನ್ನು ಟೋಕನ್ ಮೊತ್ತವೆಂಬಂತೆ ನೀಡಿದವು. ಸಪ್ಟೆಂಬರ್ ೨೦೧೦ರಲ್ಲಿ ರಾಷ್ಟ್ರಪತಿಗಳ ಅಧಿಕೃತ ಮುದ್ರೆಯೊಂದಿಗೆ ೨೫ ನವಂಬರ್ ೨೦೧೦ರಿಂದ ಹೊಸ ನಾಳಂದಾ ವಿವಿ ಅಸ್ತಿತ್ವಕ್ಕೆ ಬಂತು. ೨೦೧೪ರಲ್ಲಿ ಇಲ್ಲಿ ಪ್ರಥಮ ಬ್ಯಾಚಿನ ದಾಖಲಾತಿ ಪ್ರಾರಂಭವಾಯ್ತು. ೨೦೧೭ಕ್ಕೆ ಶುರುವಾದ ಹೊಸ ಕ್ಯಾಂಪಸ್ಸಿನ ನಿರ್ಮಾಣ ೨೦೨೩ರಲ್ಲಿ ಪೂರ್ತಿಗೊಂಡು ಮೊನ್ನೆ ಮೊನ್ನೆ ಉದ್ಘಾಟಿಸಲ್ಪಟ್ಟಿತು. ಹೆಸರಿನಲ್ಲೇನಿದೆ ಎನ್ನಬೇಡಿ. ಇದರ ಹೆಸರು ಹಳತಾದರೂ ಈ ವಿವಿಗೂ ಹಳೆಯದಕ್ಕೂ ಏನೇನೂ ಸಂಬಂಧವಿಲ್ಲ. ಉಳಿದ ಕೇಂದ್ರಿಯ ವಿವಿಗಳ ಜೊತೆಗೆ ಇದೂ ಒಂದಷ್ಟೇ. ಹಳೆಯ ನಾಳಂದಾದ ಜೊತೆಗಾಗಲೀ ಈಗಿರುವ ಆಕ್ಸ್-ಫರ್ಡ್, ಕೆಂಬ್ರಿಡ್ಜುಗಳ ಜೊತೆಗಾಗಲೀ ಇದನ್ನು ಹೋಲಿಸುವ ಹಾಗಿಲ್ಲ.
ಈಗಿನ ನಾಳಂದಾ ವಿವಿಯ ಕ್ಯಾಂಪಸ್


    ಅದೆಲ್ಲ ಈಗಿನ ಕತೆಯಾಯಿತು. ನಾವು ಹಳೆಯ ನಾಳಂದಾದ ಕುರಿತು ಮಾತನಾಡೋಣ ಬನ್ನಿ. ನಾಲಂದಾವನ್ನು ಕಟ್ಟಿದ್ದು ಆರನೇ ಶತಮಾನದಲ್ಲಿ ಗುಪ್ತರು. ನಾಳಂದಾ ವಿಶ್ವದ ಅತಿ ಶ್ರೇಷ್ಟ ವಿಶ್ವವಿದ್ಯಾಲಯ. ಅದನ್ನು ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ. ಖಿಲ್ಜಿ ಇದಕ್ಕೆ ಬೆಂಕಿ ಹಚ್ಚಿದಾಗ ೯೦ ಲಕ್ಷ ಪುಸ್ತಕಗಳು ಸುಟ್ಟುಹೋದವು. ಮೂರು ತಿಂಗಳುಗಳ ಕಾಲ ಬೆಂಕಿ ಹೊತ್ತಿ ಉರಿದಿತ್ತು ಎಂದೆಲ್ಲಾ ಟಿವಿ ಆಂಕರುಗಳು ಹೇಳುವಾಗ, ಪತ್ರಿಕಾ ಲೇಖನಗಳನ್ನು ಓದುವಾಗ ರೋಮಾಂಚವೂ ಆಕ್ರೋಶವೂ ಒಟ್ಟೊಟ್ಟಿಗೆ ಉಂಟಾಗುತ್ತಿದ್ದವು. ಆ ಕಾಲದಲ್ಲಿ ನಾಳಂದಾ ವಿಶ್ವದ ಅತಿ ಶ್ರೇಷ್ಟ ವಿಶ್ವವಿದ್ಯಾಲಯ ಎಂಬುದರಲ್ಲಿ ಯಾವುದೇ ದೂಸರಾ ಮಾತಿಲ್ಲ. ನನಗೆ ತಕರಾರಿರುವುದು ಅದನ್ನು ಭಕ್ತಿಯಾರ್ ಖಿಲ್ಜಿ ನಾಶಪಡಿಸಿದ ಎಂಬುದರ ಬಗ್ಗಷ್ಟೇ. ಅದೊಂದು ಅನೂಚಾನವಾಗಿ ಹೇಳಿಕೊಂಡು ಬಂದ ಶುದ್ಧ ಸುಳ್ಳು. ಭಕ್ತಿಯಾರ್ ಖಿಲ್ಜಿ ನಾಲಂದಾವನ್ನು ಒಡೆದುಬಿಟ್ಟ. ಮಾತ್ರವಲ್ಲ ಸುಟ್ಟ ಕೂಡ. ಅಷ್ಟೇ ಅಲ್ಲ. ಹೇಳುವ ಸುಳ್ಳಿಗೆ ಹೆಸರಿನ ಜೊತೆ ದಿನಾಂಕವನ್ನೂ ಸೇರಿಸಿಬಿಟ್ಟರೆ ಇನ್ನೂ ಹೆಚ್ಚು ಜನ ನಂಬುತ್ತಾರೆ. ಹಾಗಾಗಿ ಇದರ ಜೊತೆಗೆ ಅದಕ್ಕೊಂದು ಕಾಲ್ಪನಿಕ ಇಸವಿಯನ್ನೂ ಇಸವಿಯನ್ನೂ ಸೇರಿಸಲಾಯಿತು. ೧೧೯೧ ಎಂದು. 

 ಹಾಗಾದರೆ ಈ ಕತೆ ಹುಟ್ಟಿದ್ದೆಲ್ಲಿ?
 ಖಿಲ್ಜಿ ನಾಲಂದಾವನ್ನು ನಾಶಪಡಿಸಿದ ಎನ್ನುವುದಕ್ಕೆ ಮೂರು ಪುಸ್ತಕಗಳನ್ನು ಪುರಾವೆಯಾಗಿ ಹೆಸರಿಸಲಾಗುತ್ತದೆ. ಮೊದಲನೇಯದು ತಬಖತ್-ಎ-ನಾಸಿರಿ. ಇದನ್ನು ಬರೆದವನು ಮಿನಾಜ್-ಇ-ಸಿರಾಜ್ ಜುಜ್ಝನಿ ಎನ್ನುವ ಖಾಜಿ. ಇವನು ಮೂಲ ಅಪ್ಘನ್ನಿನ ಘುರ್ ಪ್ರದೇಶದವ. ೧೨೬೦ರಲ್ಲಿ ಪುಸ್ತಕವನ್ನು ಬರೆದು ಮುಗಿಸಿ ದೆಹಲಿಯ ನಾಸಿರುದ್ದಿನ್ ಮೊಹಮ್ಮದ್ ಷಾಹನಿಗೆ ಅರ್ಪಿಸಿದ್ದ. ಹಾಗಾಗಿ ಇದಕ್ಕೆ ನಾಸಿರಿ ಎಂದು ಹೆಸರು ಬಂದದ್ದು. ತಬಖಾತ್ ಅನ್ನು ಸುಮಾರಿಗೆ ’ಭೌಗೋಳಿಕ ನಿಘಂಟು’ ಎಂದು ಭಾಷಾಂತಿರಸಬಹುದು. ನಾಸಿರಿ ಮುಖ್ಯವಾಗಿ ದೆಹಲಿ ಸುಲ್ತಾನರ ಕುರಿತಾದಂಥದ್ದು. ಜೊತೆಗೆ ಇರಾನ್, ಮಧ್ಯ ಏಷಿಯಾದ ಹಲವಾರು ರಾಜಮನೆತನಗಳ ಕತೆಯೂ ಇದರಲ್ಲಿದೆ. ತಬಖತ್-ಎ-ನಾಸಿರಿಯು ದೆಹಲಿ ಸುಲ್ತಾನರ ವಿರುದ್ಧ ಬಂಗಾಳದಲ್ಲಿ ಖಲ್ಜಿಗಳು ದಂಗೆಯೆದ್ದುದರ ಬಗ್ಗೆ ಇರುವ ಒಂದೇ ಒಂದು ದಾಖಲೆಯೆಂದು ನಂಬಲಾಗಿದೆ. ನಾಸಿರಿಯ ಪ್ರಕಾರ ಭಕ್ತಿಯಾರ್ ಖಿಲ್ಜಿಯು ತನ್ನ ಚಿಕ್ಕಪ್ಪ ಮಹಮ್ಮದ್ ಖಿಲ್ಜಿಯ ಜೊತೆ ಮಹಮ್ಮದ್ ಘೋರಿಯ ಆಸ್ಥಾನದಲ್ಲಿದ್ದ. ಈ ಘೋರಿ ಯಾರೆಂದು ಗೊತ್ತಲ್ಲ? ತರೈನಿನ ಕಾಳಗದಲ್ಲಿ ಪ್ರಥ್ವಿರಾಜನ ಜೊತೆ ಸೆಣೆಸಿದವ. ಭಕ್ತಿಯಾರ್ ಅಲ್ಲಿಂದ ಕೆಲಸ ಕೇಳಿಕೊಂಡು ದೆಹಲಿಯಲ್ಲಿ ಘಜನಿಯ ಆಸ್ಥಾನಕ್ಕೆ ಬಂದಿಳಿದ. ಇವನ ಕುರೂಪವನ್ನು ಕಂಡು ಘಜನಿ ಇವನಿಗೆ ಕೆಲಸ ಕೊಡಲು ನಿರಾಕರಿಸಿದನಂತೆ. ಅಲ್ಲಿಂದಾತ ಬದಾಯುನಿನ ನವಾಬನ ಸೈನ್ಯದಲ್ಲೂ ಮುಂದೆ ಅವಧದ ನವಾಬನ ಆಸ್ಥಾನದಲ್ಲೂ ಕೆಲಸ ಗಿಟ್ಟಿಸಿಕೊಂಡ. ಖಲ್ಜ್ ಎಂಬುದು ಅಪ್ಘನ್ನಿನ ಒಂದು ಬುಡಕಟ್ಟು. ಇದಕ್ಕೆ ಸೇರಿದ್ದರಿಂದ ಖಲ್ಜಿ ಅಥವಾ ಖಿಲ್ಜಿ ಎಂಬ ಹೆಸರು ಬಂತು. ಭಕ್ತಿಯಾರ್ ದೊಡ್ಡ ಸೇನಾಧಿಪತಿಯೇನೂ ಆಗಿರಲಿಲ್ಲ. ತನ್ನ ಚಿಕ್ಕ ಪಡೆಯೊಂದಿಗೆ ಮೊದಲು ಸಂಪತ್ತನ್ನು ಲೂಟಿ ಮಾಡುವದನ್ನೇ ಕಾಯಕವಾಗಿಸಿಕೊಂಡಿದ್ದ. ಮುಂದೆ ಉತ್ತರ ಪ್ರದೇಶದ ಘಡವಾಲದ ಸಣ್ಣಪುಟ್ಟ ಪಾಳೇಗಾರರನ್ನು ಸೋಲಿಸಿ ಮುಂದೆ ಬಿಹಾರದತ್ತ ದಂಡೆತ್ತಿ ಹೋದ. ಮಿನಾಜ್ ಬಿಹಾರದ ’ಕಿಲಾ-ಎ-ಬಿಹಾರ’ನ್ನು ಭಕ್ತಿಯಾರ್ ಆಕ್ರಮಿಸಿದ ಎಂದು ಬರೆಯುತ್ತಾನೆ. ಅಲ್ಲಿ ಭಕ್ತಿಯಾರನಿಗೆ ಹಲವು ತಲೆ ಬೋಳಿಸಿಕೊಂಡಿದ್ದ ಸಾಧುಗಳ ಜೊತೆಗೆ ರಾಶಿಗಟ್ಟಲೆ ಹಣ ಹಾಗೂ ಪುಸ್ತಕಗಳು ಸಿಕ್ಕವಂತೆ. ದಂಡೆತ್ತಿ ಹೋದವರಿಗೆ ಆಮೇಲೆ ತಿಳಿದದ್ದೆಂದರೆ ಅದೊಂದು ಮದರಸಾ ಅಥವಾ ಬುದ್ಧ ವಿಹಾರವಾಗಿತ್ತು. ಬಿಹಾರ ತನ್ನ ಹೆಸರು ಗಳಿಸಿದ್ದೇ ಬೌದ್ಧರ ವಿಹಾರ ಶಬ್ದದಿಂದ. ಮಿನಾಜ್ ಅದನ್ನು ಕೇವಲ ಕಿಲಾ ಅಥವಾ ಕೋಟೆ ಎಂದು ಕರೆಯುತ್ತಾನೆ. ಈ ಕೋಟೆಯೊಳಗಿದ್ದ ವಿಹಾರವನ್ನು ಪ್ರಸಿದ್ಧ ಇತಿಹಾಸಕಾರ ಜುದಾನಾಥ ಸರ್ಕಾರ್ ಔದಂದ ಬಿಹಾರ ಅಥವಾ ಓದಂತಪುರಿ ಎಂದು ಗುರುತಿಸುತ್ತಾರೆ. ಸರ್ಕಾರರ ಪ್ರಕಾರ ಬಿಹಾರದ ಮೇಲೆ ಖಿಲ್ಜಿಯ ಮೊದಲ ದಾಳಿ ನಡೆದದ್ದು ೧೧೯೯ರಲ್ಲಿ. ಹಾಗಾದರೆ ೧೧೯೩ರಲ್ಲಿ ನಾಳಂದಾವನ್ನು ನಾಶಪಡಿಸಿದ್ಯಾರು? 
ಜುದಾನಾಥ ಸರ್ಕಾರರ ಹಿಸ್ಟರಿ ಆಫ್ ಬೆಂಗಾಲದಿಂದ

 ಮಿನಾಜನಿಗೆ ಈ ಕತೆಯನ್ನು ಹೇಳಿದ್ದು ಬಿಹಾರದ ಮೇಲೆ ಭಕ್ತಿಯಾರನ ಆಕ್ರಮಣದ ಸಮಯದಲ್ಲಿ ಅವನ ಜೊತೆ ಇದ್ದ ನಿಜಾಂ ಮತ್ತು ಸಂಸಾಂ ಎಂಬಿಬ್ಬರು ಸಹಯೋಗಿಗಳು. ೬೪೧ ಹಿಜರಿ ಅಂದರೆ ಸುಮಾರು ೧೨೪೧-೪೨ರಲ್ಲಿ ಈ ಘಟನೆಯನ್ನು ಮಿನಾಜ್ ದಾಖಲಿಸುತ್ತಾನೆ. ಮಿನಾಜಿನ ನಾಸಿರಿಯಲ್ಲೆಲ್ಲೂ ನಾಳಂದಾದ ಹೆಸರಿಲ್ಲ. ಅದರಲ್ಲಿರುವುದು ಓದಂತಪುರಿಯ ಬಗ್ಗೆ. ಇದೂ ಕೂಡ ಬಂಗಾಳದ ಪಾಲರಿಂದ ಸ್ಥಾಪನೆಗೊಂಡ ಒಂದು ಪ್ರಸಿದ್ಧ ಬೌದ್ಧ ವಿಹಾರವೇ. ’Antiquarian Remains In Bihar’ವನ್ನು ಬರೆದ ಡಿ.ಆರ್.ಪಾಟೀಲರ ಪ್ರಕಾರ ಓದಂತಪುರಿಗೆ ಪಾಲರ ದಾನದತ್ತಿಗಳು ಹೆಚ್ಚಾದ ಕಾರಣ ನಾಳಂದಾದ ಪ್ರಮುಖ್ಯತೆ ಕ್ಷೀಣಿಸಿತಂತೆ. ನಾಸಿರಿಯಲ್ಲಿ ಮುಂದುವರೆದು ಮಿನಾಜ್ ಹೇಳುತ್ತಾನೆ: ಭಕ್ತಿಯಾರ್ ಬಿಹಾರದಿಂದ ಬಂಗಾಳದ ಕಡೆ ತೆರಳಿದನಂತೆ. ಗಹಡವಾಲದ ಜೊತೆ ಹಗೆ ಇಟ್ಟುಕೊಂಡಿದ್ದ ಸೇನರು ಭಕ್ತಿಯಾರ್ ಅಲ್ಲಿಗೇ ತೃಪ್ತನಾಗುತ್ತಾನೆಂದೆನಿಸಿದ್ದರಂತೆ. ಅವನ ಬರುವಿಕೆಯ ನಿರೀಕ್ಷೆಯಲ್ಲಿಲ್ಲದ ಲಕ್ಷ್ಮಣ ಸೇನನಿಗೆ ಆಘಾತವಾಗಿತ್ತು. ಭಕ್ತಿಯಾರ್ ಸೇನರ ರಾಜಧಾನಿ ನಾದಿಯಾ ಪ್ರವೇಶಿಸಿದ್ದೇ, ತೀರಾ ವೃದ್ಧಾಪ್ಯದಲ್ಲಿದ್ದ ಲಕ್ಷ್ಮಣಸೇನ ಅರಮನೆಯ ಹಿಂಬಾಗಿಲಿನಿಂದ ಓಡಿಹೋದನಂತೆ. ಖಿಲ್ಜಿಯ ಬಂಗಾಳದ ಆಕ್ರಮಣದ ಕತೆ ದೊಡ್ಡದಿದೆ. ಅದನ್ನು ಮುಂದೆಂದಾದರೂ ಇನ್ನೊಂದು ಲೇಖನದಲ್ಲಿ ನೋಡೋಣ. ಖಿಲ್ಜಿಯ ದಾಳಿ ನಡೆದದ್ದೇ ಆದರೆ ಅದು ಓದಂತಪುರಿಯ ಮೇಲೆಯೇ ಹೊರತೂ ನಾಳಂದಾದಲ್ಲಲ್ಲ. 

 ಈಗ ಕೆಲ ಇತಿಹಾಸಕಾರರು ಹೇಳುವ ಎರಡನೇ ಪುರಾವೆಗೆ ಬರೋಣ. ಅದು ಧರ್ಮಸ್ವಾಮಿನ್ ಎಂಬ ಟಿಬೆಟಿನ ಸಂನ್ಯಾಸಿಯದ್ದು. ಧರ್ಮಸ್ವಾಮಿನ್ ೧೨೩೪ನಲ್ಲಿ ಭಾರತಕ್ಕೆ ಬಂದ. ಬೌದ್ಧ ಧರ್ಮಶಾಸ್ತ್ರವನ್ನು ಅಭ್ಯಾಸಮಾಡಲು ಬೋಧಗಯೆಗೆ ಭೇಟಿಕೊಟ್ಟ. ತನ್ನ ಜೀವನ ವೃತ್ತಾಂತದಲ್ಲಿ ಧರ್ಮಸ್ವಾಮಿನ್ ರಾಜಸಿಂಹ ಹಾಗೂ ಬುಧಸೇನ ಎಂಬ ಇಬ್ಬರು ರಾಜರನ್ನು ಬಹುವಾಗಿ ಹೊಗಳಿದ್ದಾನೆ. ಧರ್ಮಸ್ವಾಮಿಯ ವೃತ್ತಾಂತ ಐತಿಹಾಸಿಕವಾಗಿ ತುಂಬ ಬೆಲೆಬಾಳುವಂತದ್ದು. ಇದು ಬಿಹಾರ ಮತ್ತು ಸುತ್ತಲಿನ ಪ್ರದೇಶದಲ್ಲಿ ನಡೆದ ಬಹಳಷ್ಟು ಮುಸ್ಲಿಂ ಆಕ್ರಮಣದ ಫಸ್ಟ್ ಹ್ಯಾಂಡ್ ಮಾಹಿತಿಯನ್ನು ನೀಡುತ್ತದೆ. ಆಕ್ರಮಣಕಾರರು ನಿರಂತರವಾಗಿ ದಾಳಿಮಾಡುತ್ತಿದ್ದರೆಂಬುದೇನೋ ನಿಜ. ಆದರೆ ಅಲ್ಲೆಲ್ಲೂ ಅವರ ಸ್ಥಾಪಿತ ಆಡಳಿತವಾಗಲಿ ಸತ್ತೆಯಾಗಲೀ ಇರಲಿಲ್ಲ. ಲೂಟಿ ಮಾಡಿ ಓಡುವುದಷ್ಟೇ ಅವರ ಕೆಲಸವಾಗಿತ್ತು. ಬಿಹಾರದಲ್ಲಿ ಆ ಸಮಯದಲ್ಲಿ ಬಹಳಷ್ಟು ಸಣ್ಣಪುಟ್ಟ ಹಿಂದೂ-ಬೌದ್ಧ ರಾಜರು ಸಾಕಷ್ಟು ಪ್ರಬಲವಾಗಿಯೇ ಇದ್ದರು. ಧರ್ಮಸ್ವಾಮಿ ಗಯೆಯನ್ನು ತಲುಪಿದಾಗ ವಿಕ್ರಮಶಿಲಾ ಪೂರ್ತಿ ನಾಶವಾಗಿತ್ತು. ಅಲ್ಲಿನ ಕಟ್ಟಡದ ಕಲ್ಲುಗಳನ್ನೆಲ್ಲ ದಾಳಿಕಾರರು ಬೇರೆಡೆ ಸಾಗಿಸಿದ್ದರು. ಅಲ್ಲಿಂದಾತ ನಾಳಂದಾಕ್ಕೆ ತೆರಳಿ ಸುಮಾರು ಆರು ತಿಂಗಳು ವಾಸವಾಗಿದ್ದ. ಅವನ ಕಾಲಕ್ಕೆ ನಾಳಂದಾ ವಿ.ವಿ ತನ್ನ ಗತವೈಭವವನ್ನು ಕಳೆದುಕೊಂಡರೂ ಇನ್ನೂ ಜೀವಂತವಾಗಿತ್ತು. ನಾಳಂದಾದ ಮೇಲೆ ಭಕ್ತಿಯಾರನ ಆಕ್ರಮಣ ನಿಜವೇ ಆಗಿದ್ದರೆ, ಧರ್ಮಸ್ವಾಮಿ ಅದನ್ನು ಖಂಡಿತಾ ಉಲ್ಲೇಖಿಸುತ್ತಿದ್ದ. ಅದರ ನೆನಪು ಆಗಿನ ಜನರಲ್ಲಿ ತಾಜಾ ಆಗಿ ಉಳಿದಿರಲೇಬೇಕಿತ್ತು. ಅಂತಹ ಯಾವ ಘಟನೆಯನ್ನೂ ಆತ ಬರೆದಿಟ್ಟಿಲ್ಲ. ಅವನ ಕತೆಯನ್ನೇ ನಂಬುವುದಾರೆ, ಅವನ ಕಾಲಕ್ಕೆ ನಾಳಂದಾದ ಉಳಿದಿರಲು ಎರಡು ಕಾರಣಗಳನ್ನು ಕೊಡುತ್ತಾನೆ. ಮೊದಲನೇಯದು ದೆಹಲಿಯಿಂದ ಬಂಗಾಳಕ್ಕೆ ತೆರಳುವ ಹಾದಿಯಲ್ಲಿ ವಿಕ್ರಮಶಿಲಾ ಸಿಗುತ್ತದೆಯೇ ಹೊರತೂ ನಾಳಂದವಲ್ಲ. ಹಾಗಾಗಿ ವಿಕ್ರಮಶಿಲೆ ನಾಶಗೊಂಡಿತು. ಮುಖ್ಯ ದಾರಿಯಿಂದ ತೀರಾ ಒಳಗಿದ್ದ ನಾಳಂದಾವನ್ನು ನಾಶಮಾಡುವುದು ಸುಲಭವಾಗಿರಲಿಲ್ಲ. ಆಗಿನ ಕಾಲಕ್ಕೆ ಇರುವ ಕಟ್ಟಡವನ್ನು ಒಡೆದು ಅದರ ವಸ್ತುಗಳಿಂದ ಬೇರೆ ಕಟ್ಟಡವನ್ನು ನಿರ್ಮಿಸುವುದು, ಪೂರ್ತಿ ಹೊಸದಾಗಿ ಕಟ್ಟುವುದಕ್ಕಿಂದ ಸುಲಭವಾಗಿತ್ತು. ಹಾಗಾಗಿಯೇ ಮುಸ್ಲಿಂ ಆಕ್ರಮಣಕಾರರ ಆಡಳಿತದಲ್ಲಿ ಒಡೆದು ಕಟ್ಟಿದ್ದೇ ಜಾಸ್ತಿ. ಜೊತೆಗೆ ನಾಳಂದಾದಲ್ಲಿ ಆಕ್ರಮಣಕಾರರಿಗೆ ಸಾಗಿಸುವಷ್ಟು ಕಲ್ಲಿನ ರಚನೆಗಳಿರಲಿಲ್ಲ. ಮಾತ್ರವಲ್ಲ ಅದು ಒಂದು ಆಕ್ರಮಣದಲ್ಲಿ ಪೂರ್ತಿ ನಾಶವಾಗುವಷ್ಟು ಸಣ್ಣದೂ ಆಗಿರಲಿಲ್ಲ. ಎರಡನೇಯದಾಗಿ ಒಮ್ಮೆ ತುರ್ಕರ ಸೈನ್ಯದ ತುಕಡಿಯೊಂದು ನಾಳಂದಾದ ಮೇಲೆ ಆಕ್ರಮಣ ಮಾಡಲು ಬಂದಿತ್ತಂತೆ. ಕೆಲ ಸೈನಿಕರು ಅಲ್ಲಿನ ಜ್ಞಾನನಾಥ ದೇಗುಲವನ್ನು ಒಡೆದು ಕಲ್ಲುಗಳನ್ನು ಓದಂತಪುರಿಗೆ ಕೊಂಡೊಯ್ದರಂತೆ. ಓದಂತಪುರಿಗೆ ಕೊಂಡೊಯ್ದ ದಿವಸವೇ ಅಲ್ಲಿನ ಮುಖ್ಯ ಸೈನಿಕ ತೀವ್ರ ಜ್ವರದಿಂದ ಸತ್ತ. ಹಾಗಾಗಿ ಮೂಢನಂಬಿಕೆಯ ಕಾರಣದಿಂದ ನಾಳಂದಾ ಸ್ವಲ್ಪಕಾಲ ಸುರಕ್ಷಿತವಾಗಿತ್ತು(ಪುಟ ೯೪). ಮುಂದೆ ಧರ್ಮಸ್ವಾಮಿ ನಾಳಂದಾದ ಮುಖ್ಯ ಗುರು ರಾಹುಲ ಶ್ರೀ ಭದ್ರರ ಅಡಿಯಲ್ಲಿ ಬೌದ್ಧ ತತ್ತ್ವಶಾಸ್ತ್ರವನ್ನು ಕಲಿತು ಅಲ್ಲಿಂದ ತೆರಳುವವರೆಗೆ ನಡೆದ ಘಟನೆಗಳನ್ನು ವಿವರವಾಗಿ ಬರೆದಿಟ್ಟಿದ್ದಾನೆ. ಇಷ್ಟೆಲ್ಲ ಬರೆದರೂ ಧರ್ಮಸ್ವಾಮಿ ಭಕ್ತಿಯಾರನ ಆಕ್ರಮಣದ ಬಗ್ಗೆ ಬರೆದಿಲ್ಲ. ಹಾಂ, ೧೨೩೫ರಲ್ಲಿ ನಡೆದ ನಾಳಂದಾದ ಮೇಲೆ ತುರ್ಕರ ದಾಳಿಯೊಂದನ್ನು ಉಲ್ಲೇಖಿಸುತ್ತಾನೆ. ಆದರೆ ಆಗ ಖಿಲ್ಜಿ ಸತ್ತು ಇಪ್ಪತ್ತೆಂಟು ವರ್ಷಗಳಾಗಿದ್ದವು. 

 ಮೂರನೇ ಪುರಾವೆಯೆಂದು ಹೆಸರಿಸಲಾಗುವುದು ಇನ್ನೊಬ್ಬ ಟಿಬೇಟಿಯನ್ ಸಂನ್ಯಾಸಿ ತಾರಾನಾಥನದ್ದು. ಅವನದ್ದು ಹದಿನೇಳನೇ ಶತಮಾನದ ಮೊದಲ ಭಾಗ. ತಾರಾನಾಥ ಭಾರತಕ್ಕೆ ಬಂದ ಮಾಹಿತಿಯಿಲ್ಲ. ಅವನ ನಮೂದುಗಳಲ್ಲೂ ಖಿಲ್ಜಿಯ ಸುಳಿವಿಲ್ಲ. ಹಾಗೆಂದು ತಾರಾನಾಥ ಓದಂತಪುರಿ ಹಾಗೂ ವಿಕ್ರಮಶಿಲೆಯ ಮೇಲೆ ಮೂನ್ ಎಂಬ ತುರುಷ್ಕ ರಾಜ ಆಕ್ರಮಣ ಮಾಡಿದ ಬಗ್ಗೆ ಬರೆದಿದ್ದಾನೆ. ಆದರೆ ಇವೆರಡೂ ನಳಂದಾ ಅಲ್ಲವಲ್ಲ. ಭಕ್ತಿಯಾರ್ ಬೆಂಕಿಹಚ್ಚಿದ ಎಂದು ಹೇಳಲಾಗುವ ೪೫೦ ವರ್ಷಗಳ ನಂತರವೂ ಆತ ನಾಳಂದಾವನ್ನು ನಾಶಪಡಿಸಿದ ಪುರಾವೆಗಳು ನಮಗೆ ಲಭ್ಯವಿಲ್ಲ. 


 ಹಾಗೆಂದು ನಾಳಂದಾ ಸುಟ್ಟಿದ್ದು ಸುಳ್ಳೇ? ಖಂಡಿತಾ ಅಲ್ಲ. 
ಅರ್ಕಿಯಾಲಜಿಯ ಉತ್ಖನನಗಳಲ್ಲೂ ನಾಳಂದ ಭಾಗಶಃ ಸುಟ್ಟ ಬಗ್ಗೆ ಅದರ ಮೇಲಿನ ಪದರದಲ್ಲಿ ಸುಟ್ಟ ಮಣ್ಣಿನ, ಬೂದಿಯ ಅವಶೇಷಗಳು ಸಿಕ್ಕಿವೆ. ಹಾಗಾದರೆ ಅದನ್ನು ಸುಟ್ಟವರು ಯಾರು? 
ಪುನಃ ತಾರಾನಾಥನ ಗ್ರಂಥಕ್ಕೆ ಬರೋಣ. ಕಾಕುಟಸಿದ್ಧ ಎಂಬವನು ಮಗಧದ ಮಂತ್ರಿಯಾಗಿದ್ದ. ಆತ ನಾಲೇಂದ್ರ ಅಥವಾ ನಾಳಂದಾವನ್ನು ನಿರ್ಮಿಸಿದನಂತೆ. ಇದರ ಕಟ್ಟಡವೊಂದರ ಉದ್ಘಾಟನೆಗೆ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ. ಇದಕ್ಕೆ ಇಬ್ಬರು ತೀರ್ಥಕರು ಭಿಕ್ಷೆಗಾಗಿ ಬಂದರು. ಆದರೆ ಅಲ್ಲಿದ್ದ ಶ್ರಮಣರು ಅವರನ್ನು ನಾಳಂದಾದಿಂದ ಓಡಿಸಿಬಿಟ್ಟರು. ಸಿಟ್ಟಿಗೆದ್ದ ತೀರ್ಥಕರಿಬ್ಬರೂ ಹನ್ನೆರಡು ವರ್ಷಗಳ ಕಾಲ ಸೂರ್ಯಸಿದ್ಧಿ ಎಂಬ ಯಾಗವೊಂದನ್ನು ಮಾಡಿ ಅದರ ಬೂದಿಯನ್ನು ನಾಳಂದಾದತ್ತ ಎರಚಿದರು. ಬೂದಿಯಿಂದ ಎದ್ದ ಕಾಳ್ಗಿಚ್ಚು ನಾಳಂದಾದ ೮೪ ಬುದ್ಧವಿಹಾರಗಳನ್ನು ನಾಶಪಡಿಸಿತು. ಮಾತ್ರವಲ್ಲ ಅಲ್ಲಿದ್ದ ಅಪಾರ ಗ್ರಂಥರಾಶಿಯೂ ಬೆಂಕಿಯಲ್ಲಿ ಸುಟ್ಟುಹೋಯಿತು. ಈ ಗ್ರಂಥಗಳ ಪೈಕಿ ರತ್ನಬೋಧಿ ಹಾಗೂ ರತ್ನಸಾಗರವೂ ಸೇರಿದ್ದವು. ತೀರ್ಥಕರಿಬ್ಬರೂ ಅಲ್ಲಿಂದ ಹಸಾಮ(ಆಸ್ಸಾಂ)ಕ್ಕೆ ಓಡಿಹೋದರು. ಸ್ವಾರಸ್ಯವೆಂದರೆ ಇಲ್ಲಿ ತೀರ್ಥಕರೆಂದರೆ ಭಿಕ್ಷಾಯಾಚನೆಗೆ ಬರುತ್ತಿದ್ದ ಬ್ರಾಹ್ಮಣ ಅಥವಾ ತೀರ್ಥಯಾತ್ರಿಗಳು ಎಂದು ಅರ್ಥೈಸಬಹುದು. ಮೇಲ್ನೋಟಕ್ಕೆ ಇದೊಂದು ಕಾಗಕ್ಕ ಗುಬ್ಬಕ್ಕನ ಕತೆಯಂತಿದೆ. ಆದರೆ ಇದೊಂದೇ ಪುಸ್ತಕದಲ್ಲಿದ್ದರೆ, ನಿರ್ಲಕ್ಷಿಸಬಹುದು. ಆದರೆ ಇದೇ ತರದ ಘಟನೆ ಹದಿನೆಂಟನೇ ಶತಮಾನದ ಸುಂಪಾ ಖಾನ್ಪೋವಿನ ಪುಸ್ತಕದಲ್ಲೂ ಸಿಗುತ್ತದೆ. ಇವನೂ ಒಬ್ಬ ಟಿಬೇಟಿಯನ್ ಸಂನ್ಯಾಸಿ. ಇಬ್ಬರು ಬ್ರಾಹ್ಮಣರು ನಾಳಂದಾಕ್ಕೆ ಬಂದರು. ಅಲ್ಲಿನ ಬೌದ್ಧ ಭಿಕ್ಷುಗಳು ಅವರನ್ನು ನೀರೆರಚಿ ಅವಮಾನಿಸಿ ಓಡಿಸಿದರು. ಸಿಟ್ಟಿಗೆದ್ದ ಬ್ರಾಹ್ಮಣರು ಅಲ್ಲಿನ ಮೂರು ಕಟ್ಟಡಗಳಿಗೆ ಬೆಂಕಿಯಿಟ್ಟರು. 


    ಅಂದರೆ ಇದರ ಅರ್ಥ, ಹದಿನೆಂಟನೇ ಶತಮಾನದವರೆಗೂ ಭಕ್ತಿಯಾರ್ ಖಿಲ್ಜಿ ನಾಳಂದಾವನ್ನು ನಾಶಗೊಳಿಸಿ ಬೆಂಕಿಯಿಟ್ಟ ಕತೆ ಎಲ್ಲೂ ಪ್ರಚಲಿತದಲ್ಲಿರಲಿಲ್ಲ. ಡಿ. ಆರ್ ಪಾಟೀಲ್, ಇದೆರಡೂ ಪುಸ್ತಕಗಳ ಆಧಾರದ ಮೇಲೆ ಪ್ರಾಯಶಃ ಶೈವರಿಗೂ ಬೌದ್ಧರಿಗೂ ನಡೆದ ಘರ್ಷಣೆಯಲ್ಲಿ ನಾಳಂದಾ ಸುಟ್ಟುಹೋಗಿರಬೇಕೆಂದು ಅಂದಾಜಿಸುತ್ತಾರೆ. ಮುಸ್ಲಿಮರು ದೇವಸ್ಥಾನಗಳನ್ನು ಒಡೆದರು ಎನ್ನುವ ಇತಿಹಾಸಕಾರರೆಲ್ಲ ಹಿಂದೂ ಅರಸರಿಂದ ಬುದ್ಧ ಹಾಗೂ ಜೈನ ಮಂದಿರಗಳ ಮೇಲಾದ ದಾಳಿಯನ್ನು ಬಹಳ ಚಾಲಾಕಿತನದಿಂದ ಮರೆಮಾಚುತ್ತಾರೆ. ಹತ್ತನೇ ಶತಮಾನದಲ್ಲಿ ಕ್ಷೇಮಗುಪ್ತ ಜಯೇಂದ್ರವಿಹಾರವನ್ನು ಹೊಡೆದುರುಳಿಸಿದ. ಹನ್ನೊಂದನೇ ಶತಮಾನದಲ್ಲಿ ರಾಜೇಂದ್ರ ಚೋಳ ನೂರಾರು ಜೈನಮಂದಿರಗಳನ್ನು ನಾಶಪಡಿಸಿದ. ಕರ್ನಾಟಕದ ಮೇಲೆ ದಾಳಿ ಮಾಡಿದ್ದ ಪರಂಜೋತಿ ವಾತಾಪಿ ಗಣಪತಿ ದೇವಾಲಯವನ್ನು ನಾಶಮಾಡಿ ಮೂರ್ತಿಯನ್ನು ಕದ್ದೊಯ್ದ. ಎಂಟನೇ ಶತಮಾನದಲ್ಲಿ ತಿರುಮಂಗೈ ಆಳ್ವಾರ್ ಬುದ್ಧನ ದೇಗುಲವನ್ನು ನೆಲಸಮಗೊಳಿಸಿ, ಚಿನ್ನದ ಬುದ್ಧನನ್ನು ಕರಗಿಸಿ ಅದರಿಂದ ವಿಷ್ಣುವಿನ ಮೂರ್ತಿಯನ್ನು ನಿರ್ಮಿಸಿದ. ನಾಳಂದಾಕ್ಕೆ ಯಾರು ಬೆಂಕಿಯಿಕ್ಕಿದರೆಂದು ಹೇಳುವುದು ಸುಲಭವಲ್ಲದಿದ್ದರೂ ಆಲ್ಲಿ ಬೆಂಕಿಯಿಂದಾದ ನಾಶದ ಬಗ್ಗೆ ಒಂದು ಶಿಲಾಶಾಸನವೂ ಇದೆ. ೧೦೦೩ರದ್ದು. ನಾಳಂದಾದ ಸೈಟ್ ೧೨ ರಲ್ಲಿ ದೊರಕಿದ್ದು. ಇದರ ಪ್ರಕಾರ ಒಂದು  ದೊಡ್ಡ ಕಾಳ್ಗಿಚ್ಚಿನಿಂದ ನಾಳಂದಾ ಬೆಂಕಿಗಾಹುತಿಯಾಯ್ತು. ಮುಂದೆ ಮಹಿಪಾಲನ ಕಾಲದಲ್ಲಿ ತೆಲಹಾರದ ನಿವಾಸಿ ಬಾಲಾದಿತ್ಯನೆಂಬವ ಇದರ ಕೆಲಭಾಗವನ್ನು ಪುನರುಜ್ಜೀವನಗೊಳಿಸಿದ. ಇಲ್ಲಿ ಯಾರು ನಾಶಪಡಿಸಿದರು ಎಂಬುದು ನಿಖರವಾಗಿಲ್ಲದಿದ್ದರೂ, ಖಿಲ್ಜಿ ಬಿಹಾರದತ್ತ ಬರುವ ಸುಮಾರು ೯೦ ವರ್ಷಗಳ ಮುಂಚೆಯೇ ನಾಳಂದಾ ಸುಟ್ಟುಹೋಗಿತ್ತು. ಕೆಲ ಇತಿಹಾಸಕಾರರ ಪ್ರಕಾರ ನಾಳಂದಾದಲ್ಲಿ ಮುಚ್ಚಿದ ಕೋಣೆಗಳಲ್ಲಿ ಅಡುಗೆ ನಡೆಯುತ್ತಿತ್ತು. ಇದು ಬೆಂಕಿ ಹೊತ್ತಿಕೊಳ್ಳಲು ಕಾರಣವಾಗಿದ್ದರೂ ಆಗಿರಬಹುದು. ಬೆಂಕಿ ಆಕಸ್ಮಿಕವಾಗಿ ಉಂಟಾಯ್ತೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಚ್ಚಿದರೋ ಹೇಳುವುದು ಕಷ್ಟ. ಆದರೆ ಅದಕ್ಕೂ ಖಿಲ್ಜಿಗೂ ಯಾವ ಸಂಬಂಧವೂ ಇಲ್ಲ. 



    ಇತಿಹಾಸ ಅನ್ನೋದು ಸಿನೆಮಾವಲ್ಲ. ಸಡನ್ ಕ್ಲೈಮ್ಯಾಕ್ಸುಗಳಿರುವುದಕ್ಕೆ. ಬರಿ ಬೆಂಕಿ ಹೊತ್ತಿಕೊಳ್ಳುವುದರಿಂದ ನಾಳಂದಾದಂತ ಒಂದಿಡೀ ಊರು ಏಕಾಏಕಿ ನಾಶವಾಯ್ತೆನ್ನುವುದನ್ನು ನಂಬುವುದು ಸಾಧ್ಯವಿಲ್ಲ. ಇದರ ಅಂತ್ಯ ಒಂಬತ್ತರಿಂದ ಹನ್ನೊಂದನೇ ಶತಮಾನಗಳವರೆಗೆ ಹಲವಾರು ಘಟ್ಟಗಳಲ್ಲಿ ನಡೆದಿದೆ. ಇದಕ್ಕೆ ಹಲವು ಘಟನೆಗಳು ಸಾಥ್ ನೀಡಿದವು. ಅದರಲ್ಲಿ ಮುಖ್ಯವಾಗಿದ್ದು ಬಂಗಾಳದ ಪಾಲರ ಕಾಲದಲ್ಲಿ ಓದಂತಪುರಿ, ವಿಕ್ರಮಶಿಲ ಹಾಗೂ ಸೋಮಪುರಿಯಂತಹ ಹೊಸ ವಿಹಾರಗಳು ತಲೆಯೆತ್ತಿದ್ದು. ಇವು ಪಾಲರ ಧರ್ಮಪಾಲ ಮತ್ತವನ ಮಗ ಎರಡನೇ ದೇವಪಾಲನ ಕಾಲದಲ್ಲಿ ನಿರ್ಮಿಸಲ್ಪಟ್ಟವು. ನಾಳಂದಾಕ್ಕೆ ಮೊದಲಿನಿಂದಲೂ ಬರುತ್ತಿದ್ದ ಧನಸಹಾಯಗಳೆಲ್ಲ ಕ್ರಮೇಣ ಕಡಿಮೆಯಾದವು. ಯಾವುದೇ ಧಾರ್ಮಿಕ ಅಥವಾ ಶಿಕ್ಷಣ ಸಂಸ್ಥೆಯನ್ನು ಧನಸಹಾಯವಿಲ್ಲದೇ ಬಹಳ ವರ್ಷ ನಡೆಸಲು ಕಷ್ಟ. ಅಲ್ಲಿಂದಲೇ ನಾಳಂದಾದ ಅವನತಿ ಪ್ರಾರಂಭವಾಯ್ತು. ಪಾಲರ ಆಳ್ವಿಕೆ ಕೂಡ ಕೊನೆಯ ಹಂತದಲ್ಲಿತ್ತು. ಸೇನ ಮತ್ತು ಗಹಡವಾಲರ ಜೊತೆ ಪಾಲರಿಗೆ ಮೇಲಿಂದ ಮೇಲೆ ಯುದ್ಧಗಳಾಗುತ್ತಿದ್ದವು. ಅದಷ್ಟೇ ಅಲ್ಲದೇ, ಬೌದ್ಧರ ವಿವಿಧ ಪಂಥಗಳಲ್ಲೂ ಆಗ್ಗಿದ್ದಾಂಗ್ಯೆ ತಿಕ್ಕಾಟಗಳಾಗುತ್ತಿದ್ದವು. ಇಲ್ಲಿನ ಅಸಮಾನತೆ, ಹಣದ ದುರ್ಬಳಕೆಗಳಂತಹ ಕಾರಣಗಳಿಂದ ಸುತ್ತಲಿನ ಜನರೂ ಸಹಾಯ ಮಾದುವುದನ್ನು ನಿಲ್ಲಿಸಿದರು. ಈ ಮಾತಿಗೆ ಧರ್ಮಸ್ವಾಮಿಯ ಕೃತಿಯಲ್ಲೂ ಉದಾಹರಣೆಗಳಿವೆ. ಧರ್ಮಸ್ವಾಮಿ ನಾಳಂದಾಕ್ಕೆ ಬಂದಾಗ ಅದಾಗಲೇ ಜೀರ್ಣಾವಸ್ಥೆಯಲ್ಲಿತ್ತು. ಹಲವಾರು ಕಟ್ಟಡಗಳಿಗೆ ರಿಪೇರಿಯ ಅವಶ್ಯತೆಯಿತ್ತು. ಅಷ್ಟರಲ್ಲಿ ಓದಂತಪುರಿಯ ಸಮೀಪದ ಬಿಹಾರ್ ಶರೀಫ್‌ನಲ್ಲಿ ಮುಸ್ಲಿಂ ಸೈನ್ಯದ ಮಿಲಿಟರಿ ಬೇಸ್ ಒಂದು ಶುರುವಾಗಿತ್ತು. ಅದರ ಮುಖಂಡ ನಾಳಂದಾಕ್ಕೆ ಸಹಾಯ ಮಾಡುತ್ತಿದ್ದ ಜಯದೇವನನ್ನು ಸೆರೆಯಲ್ಲಿಟ್ಟ. ಇದರಿಂದಾಗಿ ನಾಳಂದಾ ತುಂಬ ಆರ್ಥಿಕ ತೊಂದರೆಗೊಳಗಾಯಿತು. 

 ತಾರಾನಾಥ ಓದಂತಪುರಿ ಮತ್ತು ಸೋಮಪುರಗಳ ಮೇಲೆ ತುರುಷ್ಕರು ಆಕ್ರಮಣ ಮಾಡಿದ ಬಗ್ಗೆ ಹೇಳಿದ್ದಾನೆಂದೆನಷ್ಟೆ. ಈ ತುರುಷ್ಕ ಎಂಬುದು ಬಹಳ ಆಸಕ್ತಿಕರ ಶಬ್ದ. ಕಲ್ಹಣ ತನ್ನ ರಾಜತರಂಗಿಣಿಯಲ್ಲಿ ಕಾಶ್ಮೀರದ ಶ್ರೀಹರ್ಷನ್ನು ತುರುಷ್ಕ ರಾಜನೆಂದು ಮೂದಲಿಸುತ್ತಾನೆ. ಈ ಹರ್ಷ ಬೌದ್ಧ ದೇವಾಲಯಗಳನ್ನು ನೆಲಸಮ ಮಾಡಲು ’ದೇವೋತ್ಪೀಡನ ನಾಯಕ’ನೆಂಬ ಅಧಿಕಾರಿಯನ್ನೇ ನೇಮಿಸಿದ್ದ. ಸೌರಾಷ್ಟ್ರವನ್ನು ಹತ್ತನೇ ಶತಮಾನದಲ್ಲಿ ಆಳಿದ್ದ ಗ್ರಹರಿಪು ಸೋಮನಾಥದ ದರ್ಶನಕ್ಕೆ ಬರುತ್ತಿದ್ದ ಯಾತ್ರಿಕರನ್ನು ಪರಿಪರಿಯಾಗಿ ಹಿಂಸಿಸುತ್ತಿದ್ದನಂತೆ. ಅವನಿಗೂ ತುರುಷ್ಕ ಎಂದು ಹೆಸರಿತ್ತು. ಈ ತುರುಷ್ಕ ಹಾಗೂ ಯವನ(ಗ್ರೀಕ್ ಶಬ್ದ ಅಯೋನಿಯನ್ ಇಂದ ಬಂದಿದ್ದು) ಶಬ್ದಗಳು ಅಧರ್ಮಿ ಎಂಬಅರ್ಥದಲ್ಲಿ ಬಳಸಲ್ಪಡುವಂಥವು. ಮುಸ್ಲಿಂ ಮತ್ತು ವಿದೇಶಿಗರನ್ನೂ ಈ ಅರ್ಥದಲ್ಲೇ ಕರೆಯಲಾಗಿದೆ. ಎಲ್ಲದಕ್ಕೂ ಕೊನೆ ಇದೆ. ಕಾಲನ ಹೊಡೆತಕ್ಕೆ ಸಿಕ್ಕು ವೈಭವದಿಂದ ನೂರಾರು ವರ್ಷಗಳ ಕಾಲ ಆಳಿದ ದೊಡ್ಡ ದೊಡ್ಡ ಅರಸು ಮನೆತನೆಗಳೇ ಕೊನೆಯಾಗಿವೆ. ಅದೇ ಪರಿಸ್ಥಿತಿ ನಾಳಂದಾಕ್ಕೆ ಬಂದಿರಲೂ ಸಾಕು. ಅದನ್ನು ಬಿಟ್ಟು ಖಿಲ್ಜಿ ನಾಳಂದಾಕ್ಕೆ ಬೆಂಕಿಯಿಟ್ಟು ನಾಶಮಾಡಿದ ಎಂಬುದು ಕತೆ ಕಾದಂಬರಿಗಳಲ್ಲಿ ಓದಲಷ್ಟೇ ಚಂದ. ಈ ಕತೆಯೂ ಕೂಡ ತೀರಾ ಇತ್ತೀಚೆಗೆ ಪ್ರಚಲಿತಕ್ಕೆ ಬಂದಿದ್ದು. 

ಕೊನೆಯ ಮಾತು: 
ನಾಳಂದಾ ಬೌದ್ಧ ವಿಶ್ವವಿದ್ಯಾನಿಲಯ ತಕ್ಷಶಿಲಾ ಬೌದ್ಧ ವಿಶ್ವವಿದ್ಯಾನಿಲಯ 
ಓದಂತಪುರಿ ಬೌದ್ಧ ವಿಶ್ವವಿದ್ಯಾನಿಲಯ ಜಗದ್ದಲ, 
ಸೋಮಪುರ, ನಾಗಾರ್ಜುನ, ವಲ್ಲಭಿ, ಪುಶ್ಪಗಿರಿ, ವಿಕ್ರಮಶಿಲಾಗಳೂ ಕೂಡ. 

 ಗ್ರಂಥಋಣ: 
Minhaj-i-Siraj Juzjani, Tabaqat-i-Nasiri, 1864, Calcutta edition 
Sumpa Khan-Po, History of the Rise, Progress and Downfall of Buddhism in India, Part I, 1908 
H.D. Sankalia, University of Nalanda, 1934 
Taranatha's History of Buddhism in India by Debiprasad Chattopadhyaya, 1946 
George Roerich, Biography of Dharmasvamin, 1959 
D.R. Patil, The Antiquarian Remains in Bihar, 1963 
Lama Chipa, Alka Chattopadhyay, Taranath’s History of Buddhism, 1990 
Sukumar Dutt, Buddhist Monks and Monasteries of India, 2000 
Jadunath Sarkar, The History of Bengal, Vol. III, 2003

Tuesday, November 29, 2022

ಸಿರಿವೆನ್ನಲ - ಅಮವಸನಿಶಿಯಲ್ಲುದಿಸಿದ ಪೂರ್ಣಚಂದಿರ

೨೦ ಮೇ ೧೯೫೫ - ೩೦ ನವಂಬರ್ ೨೦೨೧

 ನಾವೆಲ್ಲ ಸಿನೆಮಾಗಳಲ್ಲಿ ನಾಯಕನನ್ನೋ, ನಾಯಕಿಯನ್ನೋ, ನಿರ್ದೇಶಕನನ್ನೋ ಮೊದಲ ಬಾರಿ ದೊಡ್ಡಮಟ್ಟದಲ್ಲಿ ಲಾಂಚ್ ಮಾಡುವುದು ಕೇಳಿದ್ದೇವೆ. ಮೊದಲ ಚಿತ್ರ ಹಿಟ್ ಆಗಿ ಜೀವದುದ್ದಕ್ಕೂ ಆ ಚಿತ್ರದ ಹೆಸರಿನೊಂದಿಗೆ ಸೇರಿಹೋದ ಅದೆಷ್ಟೋ ನಟ-ನಿರ್ದೇಶಕರಿದ್ದಾರೆ. ಈ ಅದೃಷ್ಟ ಉಳಿದವರಿಗೆ ಸಿಗುವುದು ಕಡಿಮೆ. ಆದರೆ ಚಿತ್ರದ ಗೀತರಚನೆಕಾರರೊಬ್ಬರು ಚಿತ್ರದ ನಿರ್ದೇಶಕ, ತಾರಬಳಗ, ಸಂಗೀತನಿರ್ದೇಶಕರನ್ನೂ ಮೀರಿಸಿ ಮೊದಲ ಚಿತ್ರದಲ್ಲೇ ತನ್ನ ಹೆಸರಿನಿಂದ ಚಿತ್ರವನ್ನೂ ಚಿತ್ರದ ಹೆಸರಿನೊಂದಿಗೆ ತನ್ನನ್ನೂ ಗುರುತಿಸುವಂತೆ ಮಾಡಿದ್ದು ಮಹತ್ಸಾಧನೆಯೇ ಸೈ. ಅದೂ ಯಾವ ಚಿತ್ರ ಅಂತೀರಿ. ಕೆ. ವಿಶ್ವನಾಥ್ ನಿರ್ದೇಶನದ, ಸರ್ವದಮನ ಬ್ಯಾನರ್ಜಿ, ಮೂನ್ ಮೂನ್ ಸೇನ್, ಸುಹಾಸಿನಿಯಂಥ ತಾರಾಗಣದ, ಕೆ.ವಿ.ಮಹದೇವನ್ - ಹರಿಪ್ರಸಾದ್ ಚೌರಾಸಿಯಾ ಸಂಗೀತ ನಿರ್ದೇಶನದ ’ಸಿರಿವೆನ್ನೆಲ’. ವಿಶ್ವನಾಥ್ ಚಿತ್ರವೆಂಬುದೊಂದನ್ನು ಹೊರತುಪಡಿಸಿ ಇಂದಿಗೂ ಸಿರಿವೆನ್ನೆಲವೆಂದರೆ ನೆನಪಾಗುವುದು ಸೀತಾರಾಮ ಶಾಸ್ತ್ರಿಗಳೇ. ಬಹುಶಃ ಅದೇ ಕಾರಣ ಅವರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿಯಾಗಿ ಮನೆಮನೆಗಳಲ್ಲೂ ಗುರುತಿಸಿಕೊಂಡರು. ಇಂದು ಅಂದರೆ ನವಂಬರ್ ಮೂವತ್ತಕ್ಕೆ ಅವರು ಗತಿಸಿ ಒಂದು ವರ್ಷ. ಅವರ ನೆನಪಿನಲ್ಲಿ ಸಂತೆಯಲ್ಲಿ ಮೂರುಮೊಳ ನೆಯ್ದ ಹಾಗೆ ಚಿಕ್ಕದೊಂದು ಈ ಲೇಖನ.

ಒಳ್ಳೆಯ ಸಿನೆಮಾ ಸಾಹಿತ್ಯದಲ್ಲೂ ಎರಡು ಪ್ರಕಾರ. ಇಷ್ಟದ್ದೊಂದು-ಕಷ್ಟದ್ದೊಂದು. ಇಷ್ಟದ ಸಾಹಿತ್ಯ ಕೇಳುವುದಕ್ಕೆ ಇಂಪು. ಬಹುಕಾಲ ಕಾಡಲೂ ಬಹುದು. ಆದರೆ ಹೆಚ್ಚಾಗಿ ಅದು ಆಯಾ ಕಾಲಘಟ್ಟದಲ್ಲಿ ಇನ್‌ಸ್ಟಂಟ್ ಕಾಫಿಯಂತೆ ಜನರ ಬಾಯಲ್ಲಿ ನಲಿದು ಕಾಲಕ್ರಮೇಣ ಮರೆತುಹೋಗುತ್ತದೆ.  ತೀರಾ ಎಂಬಂತೆ ಅಪವಾದವಿದ್ದರೂ ಸಂಗೀತವನ್ನು ಹೊರತುಪಡಿಸಿ ಸಿನೆಮಾ ಸಾಹಿತ್ಯವೊಂದು ಸ್ವತಂತ್ರವಾಗಿ ನೆಲೆನಿಲ್ಲುವುದು ಈ ಪ್ರಕಾರದಲ್ಲಿ ಕಷ್ಟವೇ. ಇವು ಬದುಕಿನ ಒಳಾರ್ಥಗಳನ್ನು, ಜೀವನ ಪ್ರೀತಿಯನ್ನು, ಸಾಮಾಜಿಕ ಚಿಂತನೆಯನ್ನು ಉದ್ದೀಪನಗೊಳಿಸುವುದಿಲ್ಲ. ಮನುಷ್ಯನ ಭಾವಭಿತ್ತಿಗಳನ್ನು ಬೇಧಿಸುವ ಶಕ್ತಿ ಇರುವುದಿಲ್ಲ. ಅದೇ ಕಷ್ಟದ ಹಾಡು, ಅದು ಸುಲಭವಾಗಿ ಅರ್ಥವಾಗುವುದಿಲ್ಲ, ತನ್ನ ಒಳಸುಳಿಗಳನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ಭಾವುಕತೆ ಮಾತ್ರವಲ್ಲ, ಒಂದು ಜೀವನದ ಪಯಣ, ಸಮಾಜವನ್ನು ಪ್ರಶ್ನಿಸುವ ನೈತಿಕತೆ, ಸಾಮಾಜಿಕ ಎಲ್ಲೆಗಳನ್ನು ಮೀರುವ ತವಕದಂತಹ ಹಲವು ಆಯಾಮಗಳು ಇಂಥ ಹಾಡುಗಳಲ್ಲಿ ತುಂಬಿಕೊಂಡಿರುತ್ತವೆ. ಸಾಹಿತ್ಯ ಸರಳವಾಗಿರಬೇಕು, ಅದು ಎಲ್ಲ ಪ್ರೇಕ್ಷಕವರ್ಗಕ್ಕೂ ತಲುಪಬೇಕು. ಇದನ್ನು ಬಿಟ್ಟು ಅರ್ಥವಾಗದ ಸಾಹಿತ್ಯದಿಂದ ಏನು ಪ್ರಯೋಜನ? ಬರೀ ಪಾಂಡಿತ್ಯ ಪ್ರದರ್ಶನ ಅಂತ ಕೊಂಕು ಮಾತಗಳು ಈ ಕಷ್ಟದ ಗೀತೆಗಳ ಕಡೆಗೆ ಸದಾ ಇದ್ದಿದ್ದೆ. ಇಷ್ಟದ ಹಾಡುಗಳು ನಿಮಗೆ ಸಾಹಿತ್ಯದ ಆಯಾಮಗಳನ್ನು ಎಷ್ಟರಮಟ್ಟಿಗೆ ಪರಿಚಯಿಸುತ್ತವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಸುಲಭಗ್ರಾಹ್ಯ.

ಕೆ. ವಿಶ್ವನಾಥರ ಚಿತ್ರಗಳನ್ನು ಯಾವ ಚಿತ್ರಪ್ರೇಮಿ ನೋಡಿಲ್ಲ? ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರಸಂಗಮಂಗಳಂತಹ ಸಾರ್ವಕಾಲಿಕ ಕ್ಲಾಸಿಕ್‌ಗಳನ್ನು ನಿರ್ದೇಶಿಸಿದವರು. ಇವರೊಮ್ಮೆ ತಮ್ಮ ’ಸಿರಿವೆನ್ನೆಲ’ ಚಿತ್ರದ ಚಿತ್ರಕಥೆ ತಯಾರಿಸುತ್ತಿದ್ದರಂತೆ. ಅದೊಂದು ದಿನ ಕೆಲಸದ ಮಧ್ಯೆ ತೆಲುಗಿನ ವಾರಪತ್ರಿಕೆಯೊಂದರ ಮೇಲೆ ಕಣ್ಣಾಡಿಸುತ್ತಾರೆ. ಅದರಲ್ಲಿ ಶಿವತಾಂಡವದ ಬಗ್ಗೆ ಅದ್ಭುತವಾದ ಕಾವ್ಯವೊಂದು ಅವರ ಕಣ್ಣಿಗೆ ಬೀಳುತ್ತದೆ. ಅದನ್ನು ಓದಿದವರಿಗೆ ಆ ಕವಿತೆ ರೋಮಾಂಚನಗೊಳಿಸುತ್ತದೆ. ಭರಣಿ ಎಂಬ ಕಾವ್ಯನಾಮದವರ್ಯಾರೋ ಬರೆದಿದ್ದು. ಈ ಕವಿಪುಂಗವನ ಕೈಯಲ್ಲಿ ತನ್ನ ಮುಂದಿನ ಚಿತ್ರದಲ್ಲಿ ಒಂದು ಪದ್ಯವನ್ನು ಬರೆಸುವ ಇಚ್ಛೆ ಅವರದಾಗುತ್ತದೆ. ಸಂಪಾದಕರಿಗೆ ಕರೆಮಾಡಿ ಸಾಹಿತಿಯ ವಿಳಾಸ ಮತ್ತು ದೂರವಾಣಿ ಯನ್ನು ಪತ್ತೆಹಚ್ಚಿದ ವಿಶ್ವನಾಥ್ ಅವರು ತಮ್ಮ ಮುಂದಿನ ಚಿತ್ರದ ಒಂದು ಹಾಡು ಬರೆಯುವಂತೆ ಕೇಳಿಕೊಳ್ಳಲು ಅವರನ್ನು ತಮ್ಮ ಚೆನ್ನೈನ ಕಚೇರಿಗೆ ಆಹ್ವಾನಿಸುತ್ತಾರೆ. ಮಹಾಪಂಡಿತರೊಬ್ಬರು ನಮ್ಮ ಕಚೇರಿಗೆ ಬರುತ್ತಾರೆ ಅಂತ ಕಾತರದಿಂದ ಕಾಯುತ್ತಿದ್ದ ವಿಶ್ವನಾಥ್ ಮುಂದೆ ಬಂದು ನಿಂತಿದ್ದು ಮೂವತ್ತರ ಪ್ರಾಯದ ವಿಜಯವಾಡ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದ ಚೆಂಬೋಲು ಸೀತಾರಾಮ ಶಾಸ್ತ್ರಿಗಳು. ಆಗಿನ ಕಾಲಕ್ಕೆ ತೆಲುಗು ಚಿತ್ರಸಾಹಿತ್ಯದ ಕವಿಕುಲಗುರು ವೇಟೂರಿ ಸುಂದರರಾಮ ಮೂರ್ತಿ, ಜ್ಞಾನಪೀಠ ಪುರಸ್ಕೃತ ಸಿ. ನಾರಾಯಣ ರೆಡ್ಡಿಯಂಥ ಪ್ರಗಲ್ಭರು ವಿಶ್ವನಾಥರ ಆಸ್ಥಾನಕವಿಗಳಾಗಿದ್ದ ಕಾಲ. ಅವರನ್ನೆಲ್ಲ ಪಕ್ಕಕ್ಕಿಟ್ಟು ಸೀತಾರಾಮ ಶಾಸ್ತ್ರಿಗಳ ಕೈಲಿ ಚಿತ್ರದ ಅಷ್ಟೂ ಹಾಡುಗಳನ್ನು ಬರೆಸಿದ ವಿಶ್ವನಾಥ್, ಸೀತಾರಾಮಶಾಸ್ತ್ರಿ ಎಂಬ ಹೆಸರು ಮರೆತುಹೋಗಿ 'ಸಿರಿವೆನ್ನೆಲ' ಎಂಬ ಹೆಸರಿನಲ್ಲಿ ಅವರನ್ನು ತೆಲುಗು ಸಿನಿಮಾರಂಗ ಗುರುತಿಸುವಂತೆ, ಜನಸಾಮಾನ್ಯರು ಪ್ರೀತಿಸುವಂತೆ ಮಾಡಿದರೆಂದರೆ ಅತಿಶಯೋಕ್ತಿಯಲ್ಲ. ಚಿತ್ರಸಾಹಿತಿಯಾಗಿ ಕೊನೆಯವರೆಗೂ ಸಿರಿವೆನ್ನೆಲ(ಬೆಳದಿಂಗಳು)ವನ್ನೇ ಉಣಬಡಿಸಿದ ಶಾಸ್ತ್ರಿಗಳ ಕೊನೆಯ ಹಾಡೂ ಸಿರಿವೆನ್ನೆಲವೆಂಬುದು ಸಾರ್ಥಕತೆಯೋ ವಿಷಾದವೋ ಗೊತ್ತಿಲ್ಲ. ಅವರು ’ಅಮವಸ’ ನಿಶಿಯಂತಿದ್ದ ತೆಲುಗು ತೆರೆಯಮೇಲೆ ಪೂರ್ಣಚಂದ್ರನಂತೆ ಉದಿಸಿಬಂದವರು. ಚೋದಕ ಭಾಷೆಯಲ್ಲಿ ನಿರತವಾಗಿದ್ದ ತೆಲುಗು ಸಿನಿ ಹಾಡುಗಳನ್ನು ಬೋಧಕ ಭಾಷೆಯಾಗಿಸಿದ ಕೀರ್ತಿ ಅವರದು.

ಈ ಲೇಖನವೇನು ಅವರ ಹಾಡುಗಳ ವಿಮರ್ಶೆಯಲ್ಲ. ಅದು ನನ್ನಂಥ ಗದ್ಯ ಸಾಹಿತ್ಯವನ್ನು ಮಾತ್ರ ಓದಿದವನಿಗೆ ಸಾಧ್ಯವೂ ಇಲ್ಲ. ಅವರ ನೆನಪಲ್ಲಿ ನನ್ನ ನೆಚ್ಚಿನ ಐದು ಹಾಡುಗಳನ್ನು ಪಟ್ಟಿಮಾಡಲಷ್ಟೇ ಇದನ್ನು ಸೀಮಿತಗೊಳಿಸುತ್ತೇನೆ. ಕೇಳಿದರೆ ನಿಮಗೂ ಇಷ್ಟವಾಗಬಹುದು.

೧. ಸಿರಿವೆನ್ನಲ ಚಿತ್ರದ ವಿಧಾತ ತಲಪುನ

ಈ ಹಾಡನ್ನು ನಾನು ಒಂದಾನೊಂದು ಕಾಲದಿಂದ ಕೇಳುತ್ತಿದ್ದೇನೆ. ಅದು ಕೆ.ವಿ. ಮಹದೇವನ್ ಸಂಗೀತಕ್ಕೆ, ಹಿನ್ನೆಲೆಯಲ್ಲಿ ಬರುವ ಚೌರಾಸಿಯಾರ ಕೊಳಲಿನ ನಾದಕ್ಕಷ್ಟೇ ಸೀಮಿತವಾಗಿತ್ತು ಬಿಟ್ಟರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ತೆಲುಗಿನ ಸಾರ್ವಕಾಲಿಕ ಶ್ರೇಷ್ಟ ರಚನೆಗಳಲ್ಲೊಂದೆಂದು ಇದು ಈಗಲೂ ಗುರುತಿಸಲ್ಪಡುತ್ತದೆ. ಓಂಕಾರದ ಪ್ರಣವ ನಾದ ಹುಟ್ಟಿನಿಂದ ಮೊದಲುಗೊಂಡು ಸೃಷ್ಟಿಯ ಎಲ್ಲ ರಹಸ್ಯಗಳ ಅನಾವರಣಗೊಳಿಸುವ ಹಾಡಿದು. ಬರೆದ ಮೊದಲ ಹಾಡಿಗೇ ಪ್ರತಿಷ್ಟಿತ ನಂದಿ ಪ್ರಶಸ್ತಿ ಹುಡುಕಿ ಬಂತು.

ವಿಧಾತ ತಲಪುನ ಪ್ರಭವಿಂಚಿನದಿ ! ಅನಾದಿ ಜೀವನ ವೇದಂ...! 

ಓಂ... ಪ್ರಾಣನಾಡುಲಕು ಸ್ಪಂದನ ನೊಸಗಿನ ! ಆದಿ ಪ್ರಣವ ನಾದಂ...! 

ಕನುಲ ಕೋಲನುಲೋ ಪ್ರತಿಬಿಂಬಿಂಚಿನ ! ವಿಶ್ವರೂಪ ವಿನ್ಯಾಸಮ್...! 

ಎದಕನುಮಲಲೋ ಪ್ರತಿಧ್ವನಿಂಚಿನ !! ವಿರಿಂಚಿ ವಿಪಂಚಿ ಗಾನಂ... 

ಸರಸಸ್ವರ ಸುರಝಾರಿಗಮನಮೌ ! ಸಾಮವೇದ ಸಾರಮಿದಿ... ನೀಪಾಡಿನ ಜೀವನ ಗೀತಂ...! ಈ ಗೀತಂ... 

ವಿರಿಂಚಿನೈ ವಿರಚಿಂಚಿತಿನಿ ! ಈ ಕವನಮ್...ವಿಪಂಚಿನೈ ವಿನಿಪಿಂಚಿತಿನಿ !! ಈ ಗೀತಂ... 

ವಿರಿಂಚಿ, ವಿರಚಿಂಚಿ, ವಿಪಂಚಿ, ವಿನಿಪಿಂಚಿಯಂತ ಬಹುಪ್ರಾಸಗಳೇ ಶಾಸ್ತ್ರಿಗಳ ಟ್ರೇಡ್‌ಮಾರ್ಕ್. ಸಂಸ್ಕೃತಭೂಯಿಷ್ಟದಲೇ ಹೆಚ್ಚು ಭಾವಾಭಿವ್ಯಕ್ತಿ ಸಾಧಿಸಿದ ಅವರ ಶೈಲಿ ಥೇಟ್ ಸುರಝರಿಗಮನದಂತೆ. ಅದೇ ಹಾಡಿನ ಒಂದು ಸಾಲು ನೋಡಿ.

ಪ್ರಾಗ್ದಿಶ ವೀಣೈಯ ಪೈನ ದಿನಕರ ಮಯೂಖತಂತ್ರುಲ ಪೈನ... ಜಾಗೃತ ವಿಹಾಂಗ ತತುಲೇ ವಿನೀಲ ಗಗನಪು ವೇದಿಕ ಪೈನ...! 

ಪೂರ್ವದ ವೀಣೆಯ ಹಿಡಿದ ದಿನಕರ ತನ್ನ ಕಿರಣಗಳೆಂಬ ತಂತಿಗಳನ್ನು ಮೀಟಿದನಂತೆ. ಪ್ರಾಗ್ದಿಶ-ಮಯೂಖಗಳೆಂಬ ನಿಘಂಟುಗಳಲ್ಲೇ ಉಳಿದುಹೋದ ಪದಗಳನ್ನು ಬಳಸಿ ಬರಿ ಜನರಿಗೆ ಅರ್ಥವಾಗುವಂತೆ ಬರೆಯುವುದು ಮಾತ್ರವಲ್ಲ, ಜನ  ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿಸುವಂತೆಯೂ ಸಿನೆಮಾ ಸಾಹಿತ್ಯವನ್ನನ್ನು ಬರೆಯಬಹುದೆಂಬುದನ್ನು ತೋರಿಸಿಕೊಟ್ಟ ಶಾಸ್ತ್ರಿಗಳ ಸಾಧನೆ ಕಡಿಮೆಯಲ್ಲ.

 ೨. ತೆಲವಾರದೇಮೋ ಸ್ವಾಮಿ

೧೯೮೭ರಲ್ಲಿ ಬಿಡುಗಡೆಯಾದ ಕೆ. ವಿಶ್ವನಾಥರ ಶ್ರುತಿಲಯಾಲು ಚಿತ್ರದ್ದು. ಸಿರಿವೆನ್ನೆಲದ ನಂತರ ತಮಗೆ ಬೇರಾವ ಚಿತ್ರದಲ್ಲೂ ಅವಕಾಶಗಳು ಸಿಗಲಿಕ್ಕಿಲ್ಲ ಎಂದುಕೊಂಡವರಿಗೆ ಮುಂದಿನ ವರ್ಷ ಬಿಡುಗಡೆಯಾದ ಈ ಚಿತ್ರದ ತೆಲವಾರದೇಮೋ ಹಾಡಿನ ಸಾಹಿತ್ಯಕ್ಕೆ ಎರಡನೇ ಬಾರಿ ನಂದಿ ಪ್ರಶಸ್ತಿ ಒದಗಿಬಂತು. ವಿಶೇಷವೆಂದರೆ ಇದವರ ನೂರನೇ ಗೀತೆಯೂ ಹೌದು. ಕೆ. ವಿ. ಮಹದೇವನ್ ಸಂಯೋಜನೆಯಲ್ಲಿ ಮೂಡಿಬಂದ ಆಭೇರಿ ರಾಗದ ಹಾಡು. ತೆಲುಗು ಚಿತ್ರರಂಗದಲ್ಲೇ ಅತಿ ಅಪರೂವೆಂದು ಪರಿಗಣಿಸಲ್ಪಡುವ ರಚನೆಯಿದು. ಅನ್ನಮಾಚಾರ್ಯರ ’ವಿನ್ನಪಾಲು ವಿನವಲೆ’ ಯ ಧಾಟಿ ಹಾಗೂ ವಿಷಯಗಳೆರಡರಲ್ಲೂ ಅನುಕರಿಸಿ ಬರೆದ ಇದು ಶೃಂಗಾರ ಹಾಗೂ ಶರಣಾಗತಿಭಾವಗಳ ಸಮ್ಮಿಳಿತವಾಗಿ ಅಮೋಘವಾಗಿ ಮೂಡಿಬಂದಿದೆ. ಇಷ್ಟು ದಿನ ಬರೆಯುತ್ತಿದ್ದ ಸಂಸ್ಕೃತಭೂಯಿಷ್ಟ ಶೈಲಿಯಿಂದ ಶುದ್ಧ ಹಳೆತೆಲುಗು ಕೀರ್ತನೆಯ ಧಾಟಿಯಲ್ಲಿ ರಚಿಸಿದ್ದನ್ನು ನೋಡಿ ಚಿತ್ರರಸಿಕರು ಮೂಗಿನ ಮೇಲೆ ಬೆರಳಿಟ್ಟರಂತೆ. ನಾನೂ ಕೂಡ ಚಿತ್ರ ನೋಡಿದ ಬಹುಕಾಲದ ನಂತರವೂ ಇದು ಅನ್ನಮಯ್ಯನ ರಚನೆಯೆಂದೇ ತಿಳಿದಿದ್ದೆ. ಬೆಳಗಾಗಲಿಲ್ಲವೇ ಸ್ವಾಮಿ? ಅಲಮೇಲು ಮಂಗಳಿಗೆ ನಿನ್ನ ಕನಸಿನಲ್ಲಿ ವಿಹರಿಸಿ ದಣಿವಾಗಿದೆ. ನಿನಗಿನ್ನೂ ಬೆಳಗಾಗಲಿಲ್ಲವೇ ಸ್ವಾಮಿ ಎಂಬ ಸುಪ್ರಭಾತ ಶೈಲಿಯದ್ದು. ಇದೇ ಚಿತ್ರದಲ್ಲಿ ಅನ್ನಮಯ್ಯನದ್ದೇ ಆದ ’ಇನ್ನಿ ರಾಸುಲಯುನಿಕಿ ಇಂಟಿ ಚಲುವಪುರಾಸಿ’, ನಾರಾಯಣತೀರ್ಥರ ’ಆಲೋಕಯೆ ಶ್ರೀ ಬಾಲಕೃಷ್ಣಂ’ ಇದ್ದರೂ ತೆಲವಾರದೇಮೋ ಸಾಹಿತ್ಯ ಒರಿಜಿನಲ್ಲುಗಳ ತಲೆಯ ಮೇಲೆ ಹೊಡೆದಂತಿದೆ. ’ಚೆಲುವಮುನೇಲಗ ಚೆಂಗಟ ಲೇವನಿ ಕಲಟಕು ನೆಲವೈ ನಿಲಿಚಿನ ನೆಲಟಕು’, ಶಾಸ್ತ್ರಿಗಳ ಟ್ರೇಡ್‌ಮಾರ್ಕ್ ಶೈಲಿಯ ಬಹುಪ್ರಾಸ ಇಲ್ಲೂ ಸೊಗಸಾಗಿ ಮೂಡಿಬಂದಿದೆ. 


೩. ಶಿವಪೂಜಕು ಚಿಗುರಿಂಚಿನ

೧೯೮೮ರಲ್ಲಿ ಬಿಡುಗಡೆಯಾದ ಮತ್ತದೇ ಕೆ. ವಿಶ್ವನಾಥರ ಸ್ವರ್ಣಕಮಲಂ ಚಿತ್ರದ ಹಾಡು. ಸಂಗೀತ ನಿರ್ದೇಶನ ಇಳಯರಾಜ. ಈ ಚಿತ್ರದ ಸಾಹಿತ್ಯಕ್ಕಾಗಿ ಮೂರನೇ ವರ್ಷವೂ ನಂದಿ ಪ್ರಶಸ್ತಿ ಸಂದಾಯವಾಯಿತು. ಇದರ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಮಿಗಿಲಾಗಿದ್ದರೂ, ಶಿವಪೂಜಕು ನನ್ನ ಅಚ್ಚುಮೆಚ್ಚು. ಸಿರಿವೆನ್ನೆಲದಲ್ಲಿ ಹರಿಪ್ರಸಾದ್ ಚೌರಾಸಿಯಾರಿಂದ ಹಿನ್ನೆಲೆ ಸಂಗೀತ ನೀಡಿಸಿದ್ದ ವಿಶ್ವನಾಥ್ ಇದರಲ್ಲಿ ಕೇಳುಚರಣ್ ಮಹೋಪಾತ್ರರಿಂದ ಕುಚಿಪುಡಿ ನೃತ್ಯ ಸಂಯೋಜಿಸಿದ್ದರು. ಸಿರಿವೆನ್ನೆಲದಲ್ಲಿ ರಾಜಸ್ಥಾನದ ಜೈಪುರದ ಹಿನ್ನೆಲೆಯಲ್ಲಿ ಹಾಡುಗಳು ಚಿತ್ರಿತವಾಗಿದ್ದವು. ಅದಕ್ಕೆ ಕಾರಣ ಜೈಪುರ ಪ್ರವಾಸಿ ತಾಣವೆಂದಲ್ಲ. ಹಿಂದೂಸ್ತಾನಿ ಸಂಗೀತದ ಒಂದು ಪ್ರಮುಖ ನೆಲೆಯೆಂಬ ಕಾರಣದಿಂದ. ಅದೇ ರೀತಿ ಸ್ವರ್ಣಕಮಲದಲ್ಲಿ ಪುರಿ ಮತ್ತು ಹಿಮಾಲಯದ ತಪ್ಪಲಲ್ಲಿ ಹಾಡುಗಳು ಚಿತ್ರಿತವಾಗಿವೆ. ಪುರಿ ಕೂಚಿಪುಡಿಯ ಪ್ರಧಾನ ಕೇಂದ್ರದಲ್ಲೊಂದು ಎಂದಾದರೆ, ಹಿಮಾಲಯವು ಹಾಡುಗಳ ಸಾಹಿತ್ಯದಲ್ಲಿ ಅದ್ವೈತದ ಛಾಯೆ ಢಾಳಾಗಿ ಎದ್ದುಕಾಣುವ ಕಾರಣದಿಂದ. ಅದು ಚಿರಿಂಜೀವಿಯ ಸ್ಟಾರ್‌ಡಮ್ ಚರಮಸೀಮೆ ತಲುಪಿದ್ದ ಕಾಲ. ಪುಡಿರೌಡಿ, ಹರಿದಂಗಿಯ ಹೀರೋ ಹಾಡು ಶುರುವಾಗುವಾಗ ಸ್ವಿಡ್ಜರ್‌ಲ್ಯಾಂಡಿನಲ್ಲಿರುತ್ತಿದ್ದುದು ಹೆಚ್ಚಿನೆಲ್ಲ ಚಿತ್ರದಲ್ಲಿ ಸರ್ವೇಸಾಧಾರಣವಾಗಿತ್ತು. ಅದೇ ವಿಶ್ವನಾಥರ ಚಿತ್ರದ ಹಾಡುಗಳೆಲ್ಲ ಚಿತ್ರಿತವಾಗುತ್ತಿದ್ದುದು ಒಂದಲ್ಲ ಒಂದು ತೀರ್ಥಕ್ಷೇತ್ರದಲ್ಲಿ. ಇದೇ ವಿಶ್ವನಾಥ್ ಆ ಕಾಲದ ಮಾರ್ವೆಲ್-ಡಿಸಿ ಸೂಪರ್ ಹೀರೋ ರೇಂಜಿನ ಚಿರಂಜೀವಿಯ ಕೈಲಿ ’ಸ್ವಯಂಕೃಷಿ’ಯಲ್ಲಿ ಚಪ್ಪಲಿ ಹೊಲಿಯುವವನ ಪಾತ್ರ ಮಾಡಿಸಿದ್ದರು. ಈ ಹುಚ್ಚಿನ ವಿರುದ್ಧ ಈಜಿ ಜಯಿಸಿದ್ದೇ ವಿಶ್ವನಾಥರನ್ನು ಚಿತ್ರರಂಗದಲ್ಲಿ ಚಿರಸ್ಥಾಯಿಗೊಳಿಸಿದ್ದು. 

ಚಿತ್ರ ನೋಡಿದವರಿಗೆ ಅದರ ಕತೆ ನೆನಪಿರಬಹುದು. ನಾಯಕ ಕಲಾರಾಧಕ. ನರ್ತಕಿಯೂ ಆಗಿರುವ ನಾಯಕಿಗೆ ವಸ್ತುಸುಖಾಕರ್ಷಣೆ ಜಾಸ್ತಿ. ಇಲ್ಲಿ ನಾಯಕ, ನಾಯಕಿಯಲ್ಲಿ ಅಡಗಿರುವ ಕಲಾವಿದೆಯನ್ನು ಹೊರಹೊಮ್ಮಿಸುವ ಪ್ರಯತ್ನದಲ್ಲಿರುತ್ತಾನೆ. ಈ ಹಾಡು ಅವರಿಬ್ಬರ ಮಧ್ಯದ ಜುಗಲ್ಬಂದಿಯಂತೆ ಮೂಡಿಬಂದಿದೆ. ಇಬ್ಬರಿಗೂ ತಮ್ಮ ದಾರಿಯನ್ನು ಸಮರ್ಥಿಸಿಕೊಳ್ಳಲು ಕಾರಣಗಳುಂಟು. 

ಶಿವಪೂಜಕು ಚಿಗುರಿಂಚಿನ ಸಿರಿಸಿರಿಮುವ್ವ, ಮೃದು ಮಂಜುಲ ಪದ ಮಂಜರಿ ಪೂಚಿನ ಪೂವ

ಯತಿರಾಜುಕು ಜತಿಸ್ವರಮುಲ ಪರಿಮಲಮಿವ್ವ, ನಟನಾಂಜಲಿತೋ ಬ್ರದುಕುನು ತರಿಂಚನೀವಾ

ಶಿವಪೂಜೆಗಾಗಿ ನಿನ್ನ ನಾಟ್ಯವನ್ನರ್ಪಿಸು ಎನ್ನುವ ನಾಯಕನಿಗೆ ನಾಯಕಿ ಹೇಳುವ ಮಾತು

ಪರುಗಾಪಗ ಪಯಣಿಂಚವೆ ತಲಪುಲನಾವಾ, ಕೆರಟಾಲಕು ತಲವಂಚಿತೆ ತರಗದು ದ್ರೋವಾ

ಎದಿರಿಂಚಿನ ಸುಡಿಗಾಡಿನಿ ಜಯಿಂಚಿರಾವಾ, ಮದಿಕೋರಿನ ಮಧುಸೀಮಲು ವರಿಂಚಿರಾವಾ

ಇದೇ ಹಾಡು ಮುಂದುವರೆದು ನಾಯಕ ಹೇಳುವುದು

ಪಡಮರ ಪಡಗಲಪೈ ಮೆರಿಸೇ ತಾರಲಪೈ, ರಾತ್ರಿನಿ ವಂರಿಚಕೆ ಸಂಧ್ಯಾ ಸುಂದರಿ

ತೂರುಪು ವೇದಿಕಪೈ ವೇಕುವ ನರ್ತಿಕವೈ ಧಾತ್ರಿನಿ ಮುರಿಪಿಂಚೆ ಕಾಂತಿನಿ ಚಿಂದನಿ

ಪಶ್ಚಿಮದೆಡೆಯಲ್ಲಿ ಮೆರೆಯುವ ತಾರೆಯಂತೆ ರಾತ್ರಿಯನ್ನು ವರಿಸಬೇಡವೇ ಸಂಧ್ಯಾ ಸುಂದರಿ

ಪೂರ್ವದ ವೇದಿಕೆಯಲಿ ಮೂಡುವ ನರ್ತಕಿಯಂತೆ ಧಾತ್ರಿಯ ಬೆಳಗಿಸುನೀ 

ಸಾಹಿತ್ಯವಲಯ ದಿಗ್ಭ್ರಾಂತಗೊಳಿಸುವ ರಚನೆಯಿದು. ಆವಾಗಲೆಲ್ಲ ಚಿತ್ರದ ಮಧ್ಯದಲ್ಲಿ ಗಂಡಸರಿಗೆ ಹೊರಹೋಗಿ ಸಿಗರೇಟು ಸೇದುವ ಬ್ರೇಕ್ ಆಗಿದ್ದ ಹಾಡು-ಕುಣಿತಗಳಿಗೆ  ಒಂದು ಘನತೆ ತಂದುಕೊಟ್ಟಿದ್ದು ಶಾಸ್ತ್ರಿಗಳ ಖ್ಯಾತಿ. ಇದೇ ಹಾಡಿನ ಚರಣ ಎರಡರಲ್ಲಿ ಬರುವ ನಾಲ್ಕು ಸಾಲುಗಳನ್ನು ವಿಶೇಷವಾಗಿ ಅನೇಕರು ಚರ್ಚೆ ಮಾಡಿದ್ದಾರೆ.

ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ 

ಆಮನಿಕೈ ಎದುರು ಚೂಸ್ತೂ ಆಗಿಪೋಕು ಎಕ್ಕಡಾ 

ಅವಧಿ ಲೇನಿ ಅಂದಮುಂದಿ ಅವನಿಕಿ ನಲುದಿಕ್ಕುಲಾ.

ತನ್ನ ಬೆರೆಳು (ಬೇರು)ಗಳಿಂದಲ್ಲೇ ಬಂಧಿಸಲ್ಪಟ್ಟ ಗಿಡ ಮುಂದಕ್ಕೆ ಚಲಿಸಲಾಗದೆ, ಇರುವ ಕಡೆಯಿಂದಲ್ಲೇ ವಸಂತನಿಗಾಗಿ, ಹೊಸಚೈತ್ರಕ್ಕಾಗಿ ಎದುರು ನೋಡುತ್ತಿರುತ್ತದೆ. ಅದೇ ಭೂಮಿಗೆ ಕಾಲಾತೀತವಾದ ಅಂದ-ಆಕರ್ಷಣೆ, ರಸ, ಶೃಂಗಾರ ನಾಲ್ಕುದಿಕ್ಕಗಳಲ್ಲಿಯೂ ಇದೇ. ಇದನ್ನು ನೋಡಬೇಕಾದರೆ ಬಂಧನದಿಂದ ಮುಕ್ತವಾಗಬೇಕಾಗಿದೆ. ಇದನ್ನೇ ಯೋಚಿಸಿ ನೋಡಿದಾಗ ಹೌದು ನಾವೆಲ್ಲಾ ಒಂದಲ್ಲಾ ಒಂದು ಬಂಧನ ಬೇರುಗಳಿಂದ ಬಂಧಿಸಲಪಟ್ಟಿದ್ದೇವೆ. ಅದನ್ನು ಮೀರಲಾರದೇ ವಸಂತದ ಅನ್ವೇಷಣೆಯಲ್ಲಿ ಜೀವಿಸುತ್ತಿದ್ದೇವೆ. ಈ ಬಂಧನದ ಮಿತಿಯನ್ನು ದಾಟಿ ನೋಡದೇ ಹೋದರೆ ಹೊಸದಿಕ್ಕು, ದಿಗಂತದ ಅನುಭವ ದಕ್ಕುವುದಾದ್ದರೂ ಹೇಗೆ? ಕಷ್ಟದ ಸಾಹಿತ್ಯ ಹೀಗೆ ಬೇರಿನ ಬಂಧನದಿಂದ ಮುಕ್ತವಾಗಿ ನಾನು ಜಗತ್ತಿನಲ್ಲಿ ಏನು ನೋಡಬಹುದು ಅಂತ ಯೋಚಿಸುವುದಕ್ಕೆ ಪ್ರೇರಿಪಿಸುತ್ತಿದೆ. ಇದಕ್ಕಿಂತ ಸಾಹಿತ್ಯಕ್ಕೆ ಇನ್ನೇನು ಬೇಕು?

೪. ತರಲಿರಾದತನೇ ವಸಂತಂ

ಕೆ. ಬಾಲಚಂದರ್ ಅವರ ಸರ್ವಶ್ರೇಷ್ಟ ಕೃತಿಯೆಂದು ಪರಿಗಣಿಸಲ್ಪಡುವ ರುದ್ರವೀಣ ಚಿತ್ರದ ಗೀತೆ. ಗೀತಸಂಯೋಜನೆ ಇಳಯರಾಜ. ಸ್ವರ್ಣಕಮಲಕ್ಕೂ ಈ ಚಿತ್ರಕ್ಕೂ ಒಂಥರಹದ ವೈಚಾರಿಕ ವೈರುಧ್ಯ. ಜೊತೆಗೆ ಶಿವಪೂಜಕು ಹಾಗೂ ಈ ಗೀತೆಗೂ ಕೂಡ. ಅಲ್ಲಿ ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ ಎಂದ ಕವಿ ಇಲ್ಲಿ 

’ತರಲಿರಾದತನೇ ವಸಂತಂ, ತನ ದರಿಕಿರಾನಿ ವನಾಲಕೋಸಂ, 

ಗಗನಾಲದಾಕ ಅಲ ಸಾಗುಕುಂಟೆ, ಮೇಘಾಲ ರಾಗಂ ಇಲ ಚೇರುಕೋದಾ?’ ಎನ್ನುತ್ತಾನೆ. 

ವನಕ್ಕೆ ವಸಂತದ ಬಳಿ ತೆರಳುವ ಶಕ್ತಿಯಿಲ್ಲದಿದ್ದರೇನಂತೆ, ವಸಂತವು ವನದ ಬಳಿ ಬರುವುದನ್ನು ತಪ್ಪಿಸುತ್ತದೆಯೇ? ಗಗನದವರೆಗೆ ಸಾಗಲು ಅಲೆಗೆ ಸಾಧ್ಯವಾಗದಿದ್ದರೆ, ಮೇಘಗಳ ಮೂಲಕ ಗಗನವು ಸಾಗರವ ಸೇರುವುದಿಲ್ಲವೇ?  

ಊರಿನ ಜನರ ಒಳಿತಿಗಾಗಿ ತನ್ನೆಲ್ಲವನ್ನೂ ಬಿಡುವ ನಾಯಕ, ಜನರ ಬದುಕಿನಲ್ಲಿ ಬದಲಾವಣೆ ತರಲು ಹೊರಡುವ ಹೆನ್ನೆಲೆಯುಳ್ಳ ಕತೆಗೆ ಈ ಹಾಡೇ ಚಿತ್ರಕತೆ ಬರೆದಂತಿದೆ. ’ವೆನ್ನೆಲ ದೀಪಂ ಕೊಂದರಿದಾ? ಅಡವಿನಿ ಸೈತಂ ವೆಲುಗು ಕದಾ?’ ಬೆಳದಿಂಗಳೇನು ಕೆಲವರದಾ? ಅಡವಿಯನು ಕೂಡ ಅದು ಬೆಳಗದಾ ಎಂಬ ಹಾಡು ಇನ್ನಾವ ಕವಿಯೂ ಬರೆಯಲು ಸಾಧ್ಯವಿಲ್ಲ. ಅದೇ ಹಾಡಿನ ಇನ್ನೊಂದು ಸಾಲು ’ಕೂಸೇ ಕೋಕಿಲ ಪೋತೆ ಕಾಲಂ ಆಗಿಂದಾ?’, ಕೂಗುವ ಕೋಗಿಲೆ ಹೋದರೆ ಕಾಲವು ನಿಲ್ಲುವುದೇ?

೫. ಆದಿಭಿಕ್ಷುವುವಾಡಿನೇದಿಕೋರೇದಿ

ಶಾಸ್ತ್ರಿಗಳು ಪರಮ ಸಾತ್ವಿಕ ವಿಶ್ವನಾಥರ ಆಸ್ಥಾನಕವಿಯಾಗುವ ಜೊತೆಗೆ ಘೋರನಾಸ್ತಿಕ ರಾಮ್ ಗೋಪಾಲ್ ವರ್ಮಾನಿಗಾಗಿಯೂ ಖಾಯಂ ಆಗಿ ಬರೆದರು. ಶಿವ ಚಿತ್ರದ ಬಾಟನಿ ಪಾಟಮುಂದಿ, ಮ್ಯಾಟನಿ ಆಟಮುಂದಿ ಎಂಬ ಕಾಲೇಜ್ ಯುಗಳಗೀತೆ, ಕ್ಷಣಕ್ಷಣಂ ಚಿತ್ರದ ಜಾಮುರಾತ್ರಿ ಜಾಬಿಲಮ್ಮ ಎಂಬ ಪಕ್ಕಾ ರಾ ಹಾಡು, ಸಿಂಧೂರಮ್ ಚಿತ್ರದ ಅರ್ಧಸತಾಬ್ದಪು ಎಂಬ ಸ್ವಾತಂತ್ರ್ಯದ ಐವತ್ತು ವರ್ಷದ ರಿಪೋರ್ಟ್ ಕಾರ್ಡ್ ಹೀಗೆ ಮೂರು ಸಾವಿರಕ್ಕೂ ಮಿಕ್ಕಿ ಒಂದಕ್ಕಿಂತ ಒಂದು ಚಂದದ ಹಾಡುಗಳನ್ನು ಬರೆದ ಶಾಸ್ತ್ರಿಗಳ ಈ ಗೀತೆ ನನ್ನ ಇಷ್ಟದ ಗೀತೆಗಳಲ್ಲೊಂದು. ಚಿತ್ರ ಅದೇ ಸಿರಿವೆನ್ನೆಲ. ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧಿಯಾಗಿರುವ ಗಂಭೀರ ನಿಂದಾಸ್ತುತಿ ಮಾದರಿಯ ಹಾಡಿದು. ಆತನೇ ಆದಿಭಿಕ್ಷು, ಅವನೇನ ಕೋರಲಿ ನಾನು? ಬುದಿಬಳಿದ ಸ್ಮಶಾನವಾಸಿಯ ಹತ್ತಿರ ಏನ ಕೇಳಲಿ ನಾನು? ಎಂಬರ್ಥದಲ್ಲಿರುವ ಹಾಡು.

ತೀಪಿರಾಗಾಲ ಆ ಕೋಕಿಲಮ್ಮಕು ನಲ್ಲ ರಂಗುನಲಮಿನವಾಡಿನೇದಿ ಕೋರೇದಿ?

ತರಕು ಗರ್ಜನಲ ಮೇಘಮುಲ ಮೇನಿಕಿ ಹಂಗು ಕೂರ್ಚಿನವಾಡಿನೇದಿ ಅಡಿಗೇದಿ?

ತೇನಲೊಲಿಕೆ ಪೂಲ ಬಾಲಲಕು ಮೂನಾಳು ಆಯುವಿಚ್ಚಿನವಾಡಿನೇದಿ ಕೋರೇದಿ?

ಬಂಡರಾಳ್ಳನು ಚಿರಾಯುವುಗ ಜೀವಿಂಚಮನಿ ಆಣತಿಚ್ಚಿನವಾಡಿನೇದಿ ಅಡಿಗೇದಿ?

ಮಧುರರಾಗದ ಕೋಗಿಲೆಗೆ ಕಪ್ಪು ಬಣ್ಣವ ಬಳಿದವನ ಏನ ಕೋರಲಿ ನಾನು?

ಗರ್ಜಿಸುವ ಮೇಘಗಳ ಕೊರಳಿಗೆ ಮಿಂಚಮಾಲೆಯನು ತೊಡಿಸಿದವ ಏನ ಕೇಳಲಿ ನಾನು?

ಹೂಗಳೆಂಬ ಬಾಲಕರಿಗೆ ಮೂರು ಕ್ಷಣಗಳ ಆಯುವಿತ್ತವನ  ಏನ ಕೋರಲಿ ನಾನು?

ಬಂಡೆಕಲ್ಲಿಗೆ ಚಿರಾಯುವಾಗುವ ವರಕೊಟ್ಟವನ ಏನ ಕೇಳಲಿ ನಾನು?


ಕಳೆದೈವತ್ತು ವರ್ಷಗಳಲ್ಲಿ ಬೇರೆ ಬೇರೆ ಚಿತ್ರರಂಗದಲ್ಲಿ ನೂರಾರು ಸಂಗೀತ ನಿರ್ದೇಶಕರು, ಸಾಹಿತಿಗಳು ಬಂದರು, ಹೋದರು. ಹೆಚ್ಚಿನೆಲ್ಲರೂ ನಿರ್ಮಾಪಕರ, ಸಮಯದ  ಬೇಡಿಕೆಗನುಗುಣವಾಗಿ ವಾದ್ಯ, ಶೈಲಿ, ಧಾಟಿಗಳನ್ನು ಬದಲಿಸಿದವರು. ಆದರೆ ಒಬ್ಬ ನೌಷದ್ ಅಲಿ, ಒಬ್ಬ ಕೆ. ವಿ. ಮಹದೇವನ್, ಒಬ್ಬ ವೇಟೂರಿ, ಒಬ್ಬ ಸಿರಿವೆನ್ನಲ, ಒಬ್ಬ ರವೀಂದ್ರನ್ ಮಾಸ್ತರರಂಥವರು ಮಾತ್ರ ತಮ್ಮ ಬ್ರ್ಯಾಂಡಿಗೆ ಅಂಟಿಕೊಂಡೇ ಬದುಕ ಕಳೆದವರು. ಮೊದಲಿಂದ ಕೊನೆಯ ಚಿತ್ರದವರೆಗೂ ಅದೇ ಗಾಂಭೀರ್ಯ, ಅದೇ ರಾಜತ್ವ. ಬಾಲಿವುಡ್ಡಿನಲ್ಲಿ ಅದೊಂದು ಫಾರ್ಮುಲಾ ಇತ್ತು. ಆಸೀಫ್-ಬಿಮಲ್ ರಾಯರಂತಹ ನಿರ್ದೇಶಕರ ಚಿತ್ರದಲ್ಲಿ ಶಕೀಲ್ ಬದಾಯುನಿಯ ಗೀತರಚನೆ, ಲತಾ ರಫಿ ಗಾಯನ, ನೌಷದರ ಸಂಗೀತ ತ್ರಿಕೋನದ ಮೂರು ಬಿಂದುಗಳಿದ್ದಂತೆ. ಇಂತದೇ ಫಾರ್ಮುಲಾ ಗುರುದತ್, ಶಾಂತಾರಾಂರ ಟೀಮಿನಲ್ಲಿದ್ದರೂ ಇವರು ಕಂಡಂತ ಗೆಲುವನ್ನುಉಳಿದವರು ಕಾಣಲು ಸಾಧ್ಯವಾಗಲಿಲ್ಲ. ತೆಲುಗಿನಲ್ಲಿ ವಿಶ್ವನಾಥರ ಚಿತ್ರಗಳಿಗೆ ಕೆ.ವಿ. ಮಹದೇವನ್ ಸಂಗೀತ, ವೇಟೂರಿ-ಸಿರಿವೆನ್ನಲರ ಗೀತರಚನೆ, ಎಸ್ಪಿ-ಜಾನಕಮ್ಮನ ಗಾಯನ. ಮಲಯಾಳಂನಲ್ಲಿ ರವೀಂದ್ರನ್ನರ ಸಂಗೀತ, ಕೈದಂಪುರಂರ ಸಾಹಿತ್ಯ, ಯೇಸುದಾಸ್-ಚಿತ್ರಾರ ಗಾಯನದ ಹಿಸ್ ಹೈನೆಸ್ ಅಬ್ದುಲ್ಲಾ, ಭರತಂ, ಕಮಲದಳಂ, ನಂದನಂ. ಈ ಮೂರು ಟೀಮುಗಳನ್ನು ಬಿಟ್ಟರೆ ಅಂಥ ಅದ್ಭುತಗಳನ್ನು ಸರ್ಜಿಸುವ ಕೀರ್ತಿ ಮತ್ತು ಛಾತಿ ನಾಲ್ಕನೇಯವರಿಗಿಲ್ಲ. ಅಂಥವರಿನ್ನೂ ಬಂದಿಲ್ಲ, ಮುಂದೆ ಬರುವುದೂ ಇಲ್ಲ.

Monday, December 20, 2021

ಕಟ್ಟುಜಾಣ್ಮೆಯ ಕತೆ- ೧


 "ಪ್ರಕೃತಿಯಲ್ಲಿ ಮಾನವ ಅತ್ಯಂತ ಬುದ್ದಿವಂತ ಪ್ರಾಣಿ" ಎಂದು ಹದಿನೈದಿಪ್ಪತ್ತು ವರ್ಷಗಳ ಹಿಂದೆ ಕನ್ನಡ ಶಾಲೆಯಲ್ಲಿ ಕೇಳಿದ ಪಾಠ ಕೌತುಕವನ್ನು ಕಳೆದುಕೊಂಡು ಸಮಯ ಸುಮಾರಷ್ಟು ಸಂದಿದೆ. ಒಂದು ಕಾಲದಲ್ಲಿ ಅತೀಂದ್ರಿಯ ಎಂಬಂತಿದ್ದ ಸಂಗತಿಗಳು ಇಂದು ಅಚ್ಚರಿಯ ಸಂಗತಿಗಳೇನಲ್ಲ. ಇದು ಕೃತಕ ಬುದ್ದಿಮತ್ತೆಯ ಕಾಲಘಟ್ಟ. ಮುಂದಿನ ನಾಗರಿಕತೆ ರೂಪುಗೊಳ್ಳುವುದು ಕೃತಕ ಬುದ್ದಿಮತ್ತೆಯ ಆಧಾರದಲ್ಲಿ ಎಂಬ ಸಂಶಯ ಇಂದು ಯಾರಲ್ಲೂ ಉಳಿದಿಲ್ಲ. ಇಂದು ಜನಜೀವನ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಂದಲ್ಲಾ ಒಂದು ರೀತಿಯಲ್ಲಿ ಕೃತಕ ಬುದ್ದಿಮತ್ತೆಯ ಜೀವನವಾಗಿಬಿಟ್ಟಿದೆ. ಮುಂದಿನ ದಿನಗಳು ಅದು ಮನುಷ್ಯ ಬದುಕನ್ನು ಇನ್ನಷ್ಟು ಆವರಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ನಾವಿಂದು ನಿಚ್ಚಳವಾಗಿ ಕಾಣುತ್ತಿದ್ದೇವೆ. ಹಾಗಾದರೆ ಇನ್ನು ಸಾವಿರ ವರ್ಷದ ಮಾನವೇತಿಹಾಸದ ಕಥೆ ಅಥವಾ ನಾಗರಿಕತೆಯ ಕಥೆ ಹೇಗಿರಬಹುದು? ಪಾಶ್ಚಾತ್ಯ ತತ್ವಶಾಸ್ತ್ರ ಕಾಲಗಳೆದಂತೆ ನಾಗರಿಕತೆ ವಿಕಾಸಗೊಳ್ಳುತ್ತದೆ ಅನ್ನುತ್ತವೆ. ಅದೇ ಭಾರತೀಯ ಶಾಸ್ತ್ರಗಳ ಪ್ರಕಾರ ನಾಗರಿಕತೆಯು ಸಮಯ ಸರಿದಂತೆ ಹ್ರಾಸಗೊಳ್ಳುತ್ತದಂತೆ.

ಈಚಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಹೊಸ ವಿಷಯಗಳ ಪೈಕಿ ಕೃತಕ ಬುದ್ಧಿಮತ್ತೆ ಕೂಡ ಒಂದು. ಇದನ್ನು ಅಚ್ಚಕನ್ನಡದಲ್ಲಿ ’ಕಟ್ಟುಜಾಣ್ಮೆ’ ಎನ್ನಬಹುದು. ಕಲಿಯುವ ಮತ್ತು ಕಲಿತದ್ದನ್ನು ಸರಿಯಾಗಿ ಬಳಸುವ ಅಳವೇ ಜಾಣ್ಮೆ. ಮನುಷ್ಯ ಅಥವಾ ಇತರ ಪ್ರಾಣಿಗಳಲ್ಲಿ ಸಹಜವಾಗಿ ಕಂಡುಬರುವ ಈ ಸಾಮರ್ಥ್ಯವನ್ನು ’ಹುಟ್ಟು ಜಾಣ್ಮೆ’ ಎಂದರೆ ಮನುಷ್ಯರು ತಯಾರಿಸಿದ ಯಂತ್ರಗಳು ತೋರುವ ಇಂಥಹದ್ದೇ ಅನುಕರಣೆಯನ್ನು ’ಕಟ್ಟುಜಾಣ್ಮೆ’ ಎನ್ನಬಹುದು. ಬೇರೆಬೇರೆ ಸಂದರ್ಭಗಳಿಗೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುವ  ಮನುಷ್ಯನ ಸಾಮರ್ಥ್ಯವನ್ನು ಯಂತ್ರಗಳಲ್ಲೂ ಅಭಿವೃದ್ಧಿಪಡಿಸುವ ಉದ್ದೇಶ ವಿಜ್ಞಾನದ ಈ ಶಾಖೆಯದ್ದು. ಯತ್ರವೊಂದು ಜಾಣನೆನಿಸಿಕೊಳ್ಳಲು ಅದಕ್ಕೆ ತನ್ನ ಸುತ್ತಲನ್ನು ಅರಿತು ಅದರಂತೆ ನಡೆದು ಗುರಿಮುಟ್ಟುವ ಹೊಳಹು ಇರಬೇಕು. ಚಾಲಕನಿಲ್ಲದೇ ಓಡುವ ಕಾರು ರಸ್ತೆಯಲ್ಲಿ ನಿಂತಿರುವ ಇಲ್ಲವೇ ಎದುರಿಂದ ಬರುವ ವಾಹನಗಳನ್ನು ಗುರುತಿಸಿ ಅವುಗಳಿಗೆ ಡಿಕ್ಕಿ ಹೊಡೆಯದೇ ಇರಲು ಅದಕ್ಕೆ ಜಾಣ್ಮೆ ಬೇಕು. ಇಂಥ ’ತಾನೋಡುವ ಬಂಡಿ’ ಕಟ್ಟುಜಾಣ್ಮೆಗೊಂದು ಉದಾಹರಣೆ. ಇಂತಹ ಬೆಳವಣಿಗೆಗಳ ದೆಸೆಯಿಂದ ನಮ್ಮ ಅನೇಕ ಕೆಲಸಗಳು ಮುಂದೆ ಇನ್ನೂ ಸುಲಭವಾಗಲಿವೆ ಎನ್ನುವುದರಿಂದ ಪ್ರಾರಂಭಿಸಿ ಇದು ನಮ್ಮ ಕೆಲಸಗಳನ್ನೆಲ್ಲ ಕಿತ್ತುಕೊಂಡು ಮನುಷ್ಯರ ಶತ್ರುವಾಗಿ ಬೆಳೆಯಲಿದೆ ಎನ್ನುವವರೆಗೆ ಹಲವು ಅಭಿಪ್ರಾಯಗಳನ್ನು ನಾವು ಕೇಳಬಹುದು. ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಾಳಿದ ಈ ಕಟ್ಟುಜಾಣ್ಮೆಯ ಚಳಕ ಈಗ ಮಾನವನಿಗೇ ಸವಾಲೆಸೆಯುತ್ತಿದೆ. ಮುಂದಿನ 15 ವರ್ಷಗಳಲ್ಲಿ ಇದು ಮನುಷ್ಯನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸುತ್ತದೆ. ಇನ್ನು 100 ವರ್ಷಗಳಲ್ಲಿ ವಿಶ್ವದ ಒಟ್ಟಾರೆ ಜನರ ಬುದ್ಧಿಶಕ್ತಿಯನ್ನು ಒಟ್ಟುಗೂಡಿಸಿದರೂ ಇದಕ್ಕೆ ಸರಿಸಾಟಿಯಾಗಲಾರದು ಎಂದು ಬಲ್ಲಿದರು ಎಚ್ಚರಿಸುತ್ತಿದ್ದಾರೆ.!! 

ಅಷ್ಟಕ್ಕೂ, ಯಂತ್ರಗಳಲ್ಲಿ ಬುದ್ಧಿಮತ್ತೆ ಬೆಳೆಸುವುದು ಎಂದರೇನು? ಮೇಷ್ಟ್ರು ನಮಗೆಲ್ಲ ಪಾಠ ಹೇಳಿ ಬೆಳೆಸಿದಂತೆ ಯಂತ್ರಗಳಿಗೂ ಪಾಠ ಹೇಳಿಕೊಡುವುದು ಸಾಧ್ಯವೇ? ಈ ಪ್ರಶ್ನೆಗಳಿಗೆ ಉತ್ತರ ಹೇಳುವ ಪರಿಕಲ್ಪನೆಯೇ ಯಂತ್ರ ಕಲಿಕೆ(ಮಶೀನ್ ಲರ್ನಿಂಗ್). ಯಂತ್ರಗಳು ಬುದ್ಧಿವಂತರೆಂದು ಕರೆಸಿಕೊಳ್ಳಬೇಕಾದರೆ ಅವು ಹೊಸ ಸಂಗತಿಗಳನ್ನು ಕಲಿಯುತ್ತಿರಬೇಕು ಎನ್ನುವುದು ಈ ಪರಿಕಲ್ಪನೆಯ ಮೂಲಮಂತ್ರ. ಹೀಗೆ ಮಾಡುವುದರಿಂದ ಯಂತ್ರಗಳು ಮನುಷ್ಯರನ್ನು ಅನುಕರಿಸುವುದು, ಮನುಷ್ಯ ಸ್ವಭಾವಗಳನ್ನು ಅಳವಡಿಸಿಕೊಳ್ಳುವುದು ಸಾಧ್ಯವಾಗುತ್ತದೆ ಎನ್ನುವುದು ಇದರ ಉದ್ದೇಶ.

ಈ ತಂತ್ರಜ್ಞಾನವನ್ನು ಸರಳವಾಗಿ ಹೇಳುವುದಾದರೆ ಇದು ಕೇವಲ ಒಂದು ಹಮ್ಮುಗೆ(ಪ್ರೋಗ್ರಾಮ್). ಆದರೆ, ಇದು ಇಷ್ಟಕ್ಕೇ ಸೀಮಿತವಾಗಿದ್ದರೆ ಇದರ ಬಗ್ಗೆ ಹೆಚ್ಚು ಚರ್ಚಿಸುವ ಅವಶ್ಯಕತೆ ಇರುತ್ತಿರಲಿಲ್ಲ. ಆದರೆ, ಇದು ಸಾಮಾನ್ಯ ಹಮ್ಮುಗೆಯಲ್ಲ. ಪರಿಸ್ಥಿತಿಗಳಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುವ ಹಮ್ಮುಗೆ! ಎಣ್ಣುಕಗಳು(ಕಂಪ್ಯೂಟರು) ಕೆಲಸಮಾಡುವುದೇನಿದ್ದರೂ ಹಮ್ಮುಗೆಗಳು ಹೇಳಿದ್ದನ್ನು ಚಾಚೂತಪ್ಪದೆ ಪಾಲಿಸುವುದನ್ನು ಮಾತ್ರವೇ. ತಮ್ಮ ಕಾರ್ಯಾಚರಣೆಯ ಅವಧಿಯಲ್ಲಿ ಕಂಪ್ಯೂಟರುಗಳು ನೂರೆಂಟು ಬಗೆಯ ತಿಳಿಹ(ಡೇಟಾ)ಗಳನ್ನು ಸಂಸ್ಕರಿಸುತ್ತವಲ್ಲ, ಅದನ್ನೆಲ್ಲ ನಾವು ಹೇಳಿದಂತೆ ಸಂಸ್ಕರಿಸುತ್ತಾ ಹೋಗುವ ಬದಲಿಗೆ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ? ಮುಂದಿನ ಬಾರಿ ನಾವು ಕೇಳದೆಯೇ ನಮಗೆ ಬೇಕಾದ ಮಾಹಿತಿಯನ್ನು ನೀಡಿಬಿಡಬಹುದು ಅಲ್ಲವೇ? ಕಟ್ಟುಜಾಣ್ಮೆಯ ಪರಿಕಲ್ಪನೆ ಹೇಳುವುದೂ ಇದನ್ನೇ. 

 ಕಟ್ಟುಜಾಣ್ಮೆಯ ಗುರಿ ಸಾಧಾರಣವಾಗಿ ಮನುಷ್ಯನಿಗೆ ತೊಡಕೆಂದು ಎಣಿಸಲಾಗುವ ಸಮಸ್ಯೆಗಳನ್ನು ಬಿಡಿಸುವುದು. ಮಜದ ಸಂಗತಿಯೆಂದರೆ ಮನುಷ್ಯನಿಗೆ ತೀರ ಸುಲಭದ ಕೆಲಸಗಳು ಕಂಪ್ಯೂಟರಿಗೆ ಬಲುಕಷ್ಟ. ಎದುರಿನಲ್ಲಿರುವ ವ್ಯಕ್ತಿ ಯಾರು ಅಥವಾ ಕೊಟ್ಟ ಚಿತ್ರದಲ್ಲಿ ಅವನಿದ್ದಾನೋ ಇಲ್ಲವೋ ಎಂಬುದಕ್ಕೆಲ್ಲ ತಡವಿಲ್ಲದೇ ಮನುಷ್ಯ ಉತ್ತರಿಸಬಲ್ಲ. ಆದರೆ ಹಮ್ಮುಗೆಗಳಿಗೆ ಅದು ಕಷ್ಟ. ಹಾಗೆಂದು ನಾವು ಕಲಿಯಲು ಕಷ್ಟವೆನಿಸುವ ಚೆಸ್ ಆಟವನ್ನು ಕಂಪ್ಯೂಟರ್ ಒಂದು ನಮಗಿಂತ ಬೇಗ ಕಲಿಯಬಲ್ಲುದು. ಇದಕ್ಕೊಂದು ಕಾರಣವೂ ಇದೆಯೆನ್ನಿ. ಚೆಸ್ ಒಂದು ನಿರ್ದಿಷ್ಟ ನಿಯಮಗಳಿಗೆ ಒಳಪಟ್ಟ ಆಟ. ಆ ನಿಯಮಗಳಡಿ ಇಡುವ ಪ್ರತಿಯೊಂದು ಚಲನೆಗೂ ಒಂದಿಷ್ಟು ಚೌಕಟ್ಟುಗಳಿರುತ್ತವೆ. ಕಾಯಿಯೊಂದನ್ನು ಮುಂದಡಿಯಿಡುವುದು ಹೇಗೆ, ಎಷ್ಟು ಬಗೆಗಳಲ್ಲಿ ಮುಂದಿನ ಆಟವನ್ನು ಆಡಬಹುದು, ಚೆಕ್ ಕೊಡುವುದು ಹೇಗೆ, ರಕ್ಷಣೆ ಮಾಡಿಕೊಳ್ಳುವುದು ಹೇಗೆ ಇವೆಲ್ಲ ಒಂದಿಷ್ಟು ನಿಯಮಗಳ ಅನುಸಾರ ಜರುಗಬೇಕು. ಕಂಪ್ಯೂಟರ್ ನಿಯಮಗಳ ಕಟ್ಟುಪಾಡಿನಲ್ಲಿ ಕೆಲಸಮಾಡುವ ಪೆರ್ಚೂಟಿ(ಮಶಿನ್). ಹಾಗಾಗಿ ಇಂಥ ನಿಯಮಗಳನ್ನು ಹಮ್ಮುಗೆಗೆ ಅಳವಡಿಸಿದರೆ ಅಂಥವುಗಳನ್ನು ಅದು ಬಹುಬೇಗ ಕಲಿತು ಜಾಣ್ಮೆಯನ್ನು ತೋರುತ್ತದೆ. ಈ ಥರದ ಜಾಣ್ಮೆಯನ್ನು ತೋರುಜಾಣ್ಮೆ(ಸಿಂಬಾಲಿಕ್ ಏಐ) ಎನ್ನುತ್ತಾರೆ. ಅದೇ ಇನ್ನೊಂದು ಉದಾಹರಣೆಯನ್ನು ಗಮನಿಸೋಣ. ಗುಂಪಿನಲ್ಲಿರುವ ನಿಮ್ಮ ಸ್ನೇಹಿತನನ್ನು ನೀವು ಪತ್ತೆಹಚ್ಚುವುದು ಅಥವಾ ಎಂದೋ ಭೇಟಿಯಾಗಿದ್ದ ಸಂಬಂಧಿಕರನ್ನು  ನೀವು ಗುರುತಿಸುವುದು ಹೇಗೆ? ಅವರ ಮುಖ ಅಥವಾ ಚರ್ಯೆಯನ್ನು ನೋಡಿ ಎಂದು ನೀವನ್ನಬಹುದು. ಆದರೆ ಹಾಗೆ ಗುರುತಿಸುವುದು ಹೇಗೆಂದು ಸ್ಪಷ್ಟವಾಗಿ ವಿವರಿಸಲು ಸಾಧ್ಯವೇ?! ಅದು ನಿಯಮಗಳಿಗೆ ನಿಲುಕದ ವಿಷಯ. ಹಾಗಾಗಿ ಅಂಥವನ್ನು ಕಂಪ್ಯೂಟರಿಗೆ ಕಲಿಸುವುದು ಚೆಸ್ಸಿನ ಉದಾಹರಣೆಗಿಂತ ಕಷ್ಟ.

ಈಚಿನ ದಿನಗಳಲ್ಲಿ ಹೆಚ್ಚು ಸುದ್ದಿಮಾಡಿದ್ದರೂ ಕೂಡ ’ಏ.ಐ’ತೀರಾ ಹೊಸದೇನಲ್ಲ. ಇದರ ಬಗ್ಗೆ ಮೊದಲು ಚರ್ಚೆಯಾದದ್ದು ೧೯೫೦ರ ದಶಕದಲ್ಲಿ. ಎಲ್ಐಎಸ್ಪಿ ಎನ್ನುವ ಹಮ್ಮುಗೆಯನುಡಿ(ಪ್ರೊಗ್ರಾಮಿಂಗ್ ಲಾಂಗ್ವೇಜ್) ಅಭಿವೃದ್ಧಿಪಡಿಸಿದ ಜಾನ್ ಮೆಕ್ಕಾರ್ತಿ ಎನ್ನುವ ವಿಜ್ಞಾನಿ ಇದಕ್ಕೆ ‘ಆರ್ಟಿಫಿಶಿಯಲ್ ಇಂಟಲಿಜೆನ್ಸ್’ ಎಂಬ ಹೆಸರನ್ನು ಸೂಚಿಸಿದರು. ಐಬಿಎಂ ಸಂಸ್ಥೆಯ ಉದ್ಯೋಗಿ ಆರ್ಥರ್ ಲೀ ಸ್ಯಾಮ್ಯುಯೆಲ್ ಎಂಬಾತ ಯಂತ್ರಕಲಿಕೆ ಎಂಬ ಕಲ್ಪನೆಯನ್ನು ಅಭಿವೃದ್ಧಿಪಡಿಸಿದ. ತನ್ನದೇ ಹಿಂದಿನ ಅನುಭವಗಳ ಮೂಲಕ ತಾನು ಮಾಡುವ ಕೆಲಸವನ್ನು ಇನ್ನಷ್ಟು ಪಕ್ವಗೊಳಿಸುವ, ತನ್ನ ಗೇಯ್ಮೆ(ಎಫಿಶಿಯನ್ಸಿ)ಯನ್ನು ತಾನೇ ಹೆಚ್ಚಿಸಿಕೊಳ್ಳುವ ಎಣಿವರಸೆ(ಅಲ್ಗೋರಿದಂ)ಯನ್ನು ಮಶಿನ್ ಲರ್ನಿಂಗ್ ಎನ್ನಲಾಗುತ್ತದೆ. ಆಗಲಿಂದಲೇ ಇವೆರಡೂ ಪರಿಕಲ್ಪನೆಗಳು ಅಲ್ಲಲ್ಲಿ ಒಂದಕ್ಕೊಂದು ಸಂವಾದಿಯಾಗಿ ಬಳಕೆಯಾಗುತ್ತ ಬಂದಿದೆ. ಈಚಿನ ದಿನಗಳಲ್ಲಿ ಇದು ಇನ್ನಷ್ಟು ವಿಸ್ತಾರವಾಗಿ ಬೆಳೆದಿದೆ, ಇನ್ನಷ್ಟು ವ್ಯಾಪಕವಾಗಿ ಬೆಳೆದಿದೆ. 

ಕಟ್ಟುಜಾಣ್ಮೆ ಮೊದಲು ಪ್ರಚಲಿತವಾಗಿದ್ದು ಚೆಸ್ಸಿನಿಂದ!! ಮಾನವನನ್ನು ಬಿಟ್ಟರೆ ಇತರರಿಂದ ಚೆಸ್ ಆಡಲು ಸಾಧ್ಯವೇ ಇಲ್ಲ ಎನ್ನುವ ಕಾಲದಲ್ಲಿ ಐಬಿಎಂನ ’ಡೀಪ್ ಬ್ಲೂ’ ಸೂಪರ್ ಕಂಪ್ಯೂಟರ್ ಕಟ್ಟುಜಾಣ್ಮೆಯ ಚಳಕದಿಂದ ವಿಶ್ವ ಚೆಸ್ ಚಾಂಪಿಯನ್ ಆಗಿದ್ದ ಗ್ಯಾರಿ ಕಾಸ್ಪೆರೆಸೊ ಅವರನ್ನು ಸೋಲಿಸಿತು. ಈ ಘಟನೆ ನಂತರ ಕಟ್ಟುಜಾಣ್ಮೆಯ ಶಕ್ತಿ ಏನೆಂಬುದು ವಿಶ್ವಕ್ಕೆ ತಿಳಿಯಿತು.!! ಇಂದು ಈ ತಂತ್ರಜ್ಞಾನ ನಮಗೆ ಅರಿವಿಲ್ಲದಂತೆಯೇ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ.!! ನಮ್ಮ ಆಲೋಚನೆಗಳನ್ನು ಗ್ರಹಿಸಿ ಅದಕ್ಕೆ ಅನುಗುಣವಾದ ಕೆಲಸಗಳನ್ನು ಮಾಡುತ್ತಿರುವ ಇವೆಲ್ಲಾ ಕಟ್ಟುಜಾಣ್ಮೆಯ ರೂಪಗಳೇ. ಹೀಗೆ ನಮಗೆ ಅರಿವಿಲ್ಲದಂತೆ ಇದು ನಮ್ಮ ಜೀವನಕ್ಕೆ ಕಾಲಿಟ್ಟಿದೆ. ಯಾವುದಾದರೂ ಮಾಹಿತಿಗಾಗಿ ಗೂಗಲ್ನಲ್ಲಿ ಎರಡು ಅಕ್ಷರಗಳನ್ನು ಟೈಪ್ ಮಾಡುತ್ತಿದ್ದಂತೇ ನಾವು ಏನು ಹುಡುಕಲು ಪ್ರಯತ್ನಿಸುತ್ತಿದ್ದೇವೆ ಎಂದು ಊಹಿಸಿಸುವುದು ಇದರಿಂದಲೇ.!! ಹಿಂದಿನ ಕ್ರಿಕೆಟ್ ಪಂದ್ಯಗಳಿಗೆ ಸಂಬಂಧಿಸಿದ ತಿಳಿಹಗಳನ್ನು ವಿವರವಾಗಿ ವಿಶ್ಲೇಷಿಸಿ ತಂತ್ರಾಂಶವೇ ಇಂದಿನ ಮ್ಯಾಚಿನ ಫಲಿತಾಂಶವನ್ನು ಊಹಿಸುವುದು, ನಾವು ಯಾವ ಇಮೇಲ್ ಸಂದೇಶಗಳನ್ನು ರದ್ದಿ ಎಂದು ಗುರುತಿಸುತ್ತೇವೆ ಎನ್ನುವುದನ್ನು ಗಮನಿಸಿಕೊಂಡು ಮುಂದಿನಬಾರಿ ಅಂತಹ ಸಂದೇಶಗಳನ್ನು ತಾನೇ ವರ್ಗೀಕರಿಸುವುದು, ಜಾಲದಲ್ಲಿ ನಾವು ಮೆಚ್ಚುವ ಪೋಸ್ಟುಗಳನ್ನು ಗಮನಿಸಿ ಅಂಥದ್ದೇ ಇನ್ನಷ್ಟನ್ನು ತೋರಿಸುವುದು, ಆನ್ಲೈನ್ ಅಂಗಡಿಗಳಲ್ಲಿ ನಮಗೆ ಯಾವ ಸಾಮಗ್ರಿ ಇಷ್ಟವಾಗಬಹುದು ಎಂದು ಪಟ್ಟಿಮಾಡುವುದೆಲ್ಲ ಇದೀಗ ಸಾಧ್ಯವಾಗಿದೆಯಲ್ಲ, ಇವೆಲ್ಲ ಯಂತ್ರಕಲಿಕೆಯದ್ದೇ ಫಲಿತಾಂಶಗಳು. ಧ್ವನಿರೂಪದ ಆದೇಶಗಳನ್ನು ಪಡೆದುಕೊಂಡು ಪ್ರತಿಕ್ರಿಯೆ ನೀಡುವ ಅಮೆಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟೆಂಟ್ ಮುಂತಾದ ಸೌಲಭ್ಯಗಳೂ ತಮ್ಮ ಕಾರ್ಯನಿರ್ವಹಣೆಯನ್ನು ಉತ್ತಮಪಡಿಸಿಕೊಳ್ಳಲು ಯಂತ್ರಕಲಿಕೆಯ ಪರಿಕಲ್ಪನೆಯನ್ನು ಬಳಸುತ್ತವೆ.

ಯಂತ್ರಗಳು ಈ ಕೆಲಸಗಳನ್ನೆಲ್ಲ ಮಾಡುತ್ತವೆ ಎಂದಮಾತ್ರಕ್ಕೆ ಇವೆಲ್ಲ ತನ್ನಷ್ಟಕ್ಕೆ ತಾನೇ ಆಗುವ ಕೆಲಸಗಳೇನಲ್ಲ. ಇಷ್ಟೆಲ್ಲ ಬುದ್ಧಿ ಉಪಯೋಗಿಸಲಿಕ್ಕೆ ಅವಕ್ಕೆ ಹೇಳಿಕೊಡುವುದು ಹಮ್ಮುಗೆಗಳೇ. ಕೆಲಸ ಮಾಡುವುದು ಹೇಗೆ ಎನ್ನುವುದರ ಬದಲಿಗೆ ಮಾಡಬೇಕಾದ ಕೆಲಸವನ್ನು ಕಲಿಯುವುದು ಹೇಗೆಂದು ಹೇಳಿಕೊಡುವುದು ಈ ಹಮ್ಮುಗೆಗಳ ವೈಶಿಷ್ಟ್ಯ. ಮಕ್ಕಳು ಚಿಕ್ಕವಯಸ್ಸಿನಲ್ಲಿ ಪ್ರಾರಂಭಿಸಿ ಹಂತಹಂತವಾಗಿ ಹೊಸ ಸಂಗತಿಗಳನ್ನು ಕಲಿಯುತ್ತಾರಲ್ಲ, ಇದು ಕೂಡ ಅಷ್ಟೇ ಸಂಕೀರ್ಣವಾದ ಪ್ರಕ್ರಿಯೆ. ತಂತ್ರಾಂಶಕ್ಕೆ ಇದನ್ನೆಲ್ಲ ಹೇಳಿಕೊಡುವುದು ಯಂತ್ರಕಲಿಕೆಯ ಎಣಿವರಸೆಗಳ ಕೆಲಸ. ಈ ಎಣಿವರಸೆಗಳಿಗೆ ಮಾದರಿ ದತ್ತಾಂಶವನ್ನು ಊಡಿಸಿ ತರಬೇತುಗೊಳಿಸಿದಾಗ ಸಿಗುವುದೇ ಯಂತ್ರಕಲಿಕಾ ಮಾದರಿ. ಮೇಲಿನ ಉದಾಹರಣೆಗಳಲ್ಲಿನ ದತ್ತಾಂಶವನ್ನು ತೆಗೆದುಕೊಂಡು, ಅದನ್ನು ವಿಶ್ಲೇಷಿಸಿ ಅಪೇಕ್ಷಿತ ರೂಪದ ಫಲಿತಾಂಶ ನೀಡುವುದು ಈ ಮಾದರಿಗಳೇ. ಇತರ ತಂತ್ರಾಂಶಗಳಂತೆ ಇವನ್ನೂ ನಿರ್ದಿಷ್ಟ ಹಮ್ಮುಗೆಯನುಡಿಗಳನ್ನು ಬಳಸಿ ಬರೆದಿರುತ್ತಾರೆ. ಅಂಥ ನುಡಿಗಳಲ್ಲಿ ಆರ್ ಹಾಗೂ ಪೈಥನ್ ಪ್ರಮುಖವಾದವು.

ಯಂತ್ರಗಳನ್ನು ನಿರ್ದಿಷ್ಟ ಕಾರ್ಯಗಳನ್ನು ನಿರ್ವಹಿಸುವಂತೆ ವಿನ್ಯಾಸಗೊಳಿಸಿರುತ್ತಾರೆ. ಅಷ್ಟನ್ನು ಅವು ಸಮರ್ಥವಾಗಿ ನಿರ್ವಹಿಸುತ್ತವೆ ಎಂಬುದೇನೋ ನಿಜ. ಅದೇ, ಈವರೆಗೆ ಗೊತ್ತಿರದ ಒಂದು ಸಮಸ್ಯೆಯನ್ನು ಅವುಗಳಿಗೆ ನೀಡಿದರೆ? ಅಂಥವುಗಳಿಗೆ ಯಂತ್ರಗಳು ಪ್ರತಿಕ್ರಿಯಿಸಲಾಗುವುದಿಲ್ಲ ಅಲ್ಲವೇ! ಹಾಗಾದರೆ ಯಂತ್ರಗಳೇ ಸ್ವತಃ ಆಲೋಚಿಸಿ ಕಾರ್ಯನಿರ್ವಹಿಸುವಂತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಬಹಳ ಕಾಲದಿಂದಲೂ ಮನುಷ್ಯನನ್ನು ಕಾಡಿದ್ದಿದೆ. ಆ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಹುಟ್ಟಿದ ಕ್ಷೇತ್ರವೇ ಏಐ. ಈ ಕಲ್ಪನೆಯೇನೋ ಸುಮಾರು ಹಿಂದೆಯೇ ಹುಟ್ಟಿದ್ದರೂ ಏಐ ಎಂಬ ಪದಬಳಕೆ ಅಧಿಕೃತವಾಗಿ ಆರಂಭಗೊಂಡಿದ್ದು ೧೯೫೬ರಲ್ಲಿ ಡಾರ್ತ್‌ಮೌತ್ ಕಾಲೇಜಿನ ಆವರಣದಲ್ಲಿ ನಡೆದ ಸಮ್ಮೇಳನವೊಂದರಲ್ಲಿ. ಇದನ್ನು ಆಯೋಜಿಸಿದ್ದ ಜಾನ್ ಮೆಕಾರ್ಥಿ ಬುದ್ಧಿವಂತ ಯಂತ್ರಗಳನ್ನು ಸೃಷ್ಟಿಸುವ ವಿಜ್ಞಾನದ ಶಾಖೆಯಾಗಿ ಏಐಯನ್ನು ಪರಿಚಯಿಸಿದ. ಕ್ಲೌಡ್ ಶಾನನ್, ಮಾರ್ವಿನ್ ಮಿನ್‌ಸ್ಕಿ, ಅರ್ಥರ್ ಸ್ಯಾಮುಯೆಲ್, ಟ್ರೆನ್‌ಚಾರ್ಡ್ ಮೂರ್, ರೇ ಸೋಲೋಮೋನ್, ಆಲಿವರ್ ಸೆಲ್ಫ್ರಿಡ್, ಅಲೆನ್ ನವೆಲ್, ಹರ್ಬರ್ಟ್ ಸೈಮನ್ ಸೇರಿದಂತೆ ಹತ್ತು ಮಂದಿ ಚಿಂತಕರು ಇದರಲ್ಲಿ ಪಾಲ್ಗೊಂಡಿದ್ದರು. ಈ ಎಲ್ಲ ಮಹನೀಯರೂ ಮುಂದೆ ದಶಕಗಳ ಕಾಲ ಅಕ್ಷರಶಃ ಆ ಕ್ಷೇತ್ರವನ್ನು ಆಳಿದರೆಂದೇ ಹೇಳಬೇಕು. ಇದಕ್ಕೆಲ್ಲ ಅಡಿಪಾಯ ಹಾಕಿದ್ದು ಅಲನ್ ಟ್ಯುರಿಂಗಿನ ಟ್ಯುರಿಂಗ್ ಪರೀಕ್ಷೆ ಎಂಬ ಸಿದ್ಧಾಂತ. ಇತಿಹಾಸದುದ್ದಕ್ಕೂ ಕಟ್ಟುಜಾಣ್ಮೆಯನ್ನು ಪ್ರಮುಖವಾಗಿ ಗುರಿ(ಗೋಲ್) ಮತ್ತು ದಾರಿ(ಟೂಲ್) ಎಂಬೆರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಉಕ್ಕಾಳಿಕೆ(ರೊಬೋಟಿಕ್ಸ್) ಹಾಗೂ ಯಂತ್ರಕಲಿಕೆ ಮೊದಲ ಭಾಗವಾದರೆ, ತರ್ಕ ಹಾಗೂ ಮೆದುಳರಿಮೆ ಎರಡನೇ ಭಾಗವೆಂದು ಅಂದಾಜಿಸಬಹುದು. ಕಟ್ಟುಜಾಣ್ಮೆಯ ಕುರಿತಾದ ಸಂಶೋಧನೆಯನ್ನು ಮುಖ್ಯವಾಗಿ ಐದು ಅಂಶಗಳ ಮೇಲೆ ಕೇಂದ್ರೀಕರಿಸಿ ಮಾಡಲಾಗುತ್ತಿದೆ. ಅವೆಂದರೆ ಕಲಿಕೆ, ತರ್ಕ, ಸಮಸ್ಯೆಯನ್ನು ಪರಿಹರಿಸುವಿಕೆ, ಗ್ರಹಿಕೆ ಮತ್ತು ಭಾಷೆಯನ್ನು ಅರ್ಥಮಾಡಿಕೊಳ್ಳುವಿಕೆ. ಸಾಮಾನ್ಯ ಕಂಪ್ಯೂಟರುಗಳಿಗೂ ಈ ಕಟ್ಟುಜಾಣ್ಮೆಯ ಯಂತ್ರಗಳಿಗೂ ಏನು ವ್ಯತ್ಯಾಸವೆಂದರೆ ಇವು ಒಮ್ಮೆ ಮಾಡಿದ ತಪ್ಪುಗಳಿಂದ ಕಲಿಯುತ್ತವೆ. ಅಂದರೆ ಒಂದು ಚೆಸ್ ಆಟದ ಸಮಸ್ಯೆಯನ್ನು ನೀಡಿದಾಗ ಅದು ಚೆಕ್‌ಮೇಟ್ ಆಗುವವರೆಗೆ ಮನಬಂದಂತೆ ಆಡುತ್ತದೆ. ಆದರೆ ತನ್ನ ಹೆಜ್ಜೆಯನ್ನೆಲ್ಲ ನೆನಪಿಟ್ಟುಕೊಂಡಿದ್ದು, ಇನ್ನೊಮ್ಮೆ ಅದೇ ಸಮಸ್ಯೆಯನ್ನು ಅದಕ್ಕೆ ನೀಡಿದಾಗ, ತಕ್ಷಣ ಸುಲಭದ ಹಂತಗಳನ್ನು ಬಳಸುತ್ತದೆ. ಒಂದು ಕಾರ್ಯ ಅಥವಾ ಸಮಸ್ಯೆಯನ್ನು ನೀಡಿದಾಗ ಕಟ್ಟುಜಾಣ್ಮೆಯು ತರ್ಕಿಸಿ ಸುಸಂಬದ್ಧವಾದ ನಿರ್ಣಯಕ್ಕೆ ಬರುತ್ತದೆ. ಅಂಥ ನಿರ್ಣಯಕ್ಕೆ ಬರಲು ಸಂಖ್ಯಾಶಾಸ್ತ್ರೀಯ ವಿಧಾನಗಳು, ಗಣನಾಚಾತುರ್ಯ, ಸಂಕೇತಶಾಸ್ತ್ರವೇ ಇತ್ಯಾದಿ ವಿಧಾನಗಳನ್ನು ಅನುಸರಿಸಲಾಗುತ್ತದೆ.

ಜಾನ್ ಮೆಕಾರ್ಥಿ

ಮಾನವನ ಬುದ್ಧಿಮತ್ತೆಯನ್ನು ನಿಖರವಾಗಿ ವಿವರಿಸಿ ಅದನ್ನು ಅನುಸರಿಸುವ ಯಂತ್ರವೊಂದನ್ನು ತಯಾರಿಸಬಹುದು ಎಂಬ ಕಲ್ಪನೆಯ ಮೇಲೆ ಈ ಕ್ಷೇತ್ರವನ್ನು ಹುಟ್ಟುಹಾಕಲಾಯ್ತು. ೧೯೫೯ರಲ್ಲಾಗಲೇ ಮನುಷ್ಯನಿಗಿಂತ ಉತ್ತಮವಾಗಿ ಚಕ್ಕರ್(ಚೆಸ್‌ನಂಥ ಒಂದು ಆಟ) ಆಡುತ್ತಿದ್ದವೆಂದು ವರದಿಯಾಯಿತು. ಬೀಜಗಣಿತದ ಸಮಸ್ಯೆಗಳನ್ನು ಪರಿಹರಿಸುವುದು, ತಾರ್ಕಿಕ ಪ್ರಮೇಯಗಳನ್ನು ಸಾಬೀತುಪಡಿಸುವುದು, ಇಂಗ್ಲೀಶ್ ಮಾತಾಡುವುದೇ ಮುಂತಾದ ಆವಿಷ್ಕಾರಗಳು ಹುಟ್ಟಿದ ಕೆಲವೇ ವರ್ಷಗಳಲ್ಲಿ ಕಟ್ಟುಜಾಣ್ಮೆಯಿಂದ ಹೊರಹೊಮ್ಮಿದವು. ಇದರ ಸಂಶೋಧನೆಯ ಮೇಲೆ ಲಕ್ಷಗಟ್ಟಲೆ ಡಾಲರ್ ಹೂಡಿಕೆ ಮಾಡಲು ವಿಶ್ವಾದ್ಯಂತ ಸರ್ಕಾರಗಳು ಮುಂದೆ ಬಂದವು. ಆ ದಶಕವನ್ನು ’ಏಐನ ಮೊದಲ ವಸಂತ’ವೆಂದೇ ಪರಿಗಣಿಸಲಾಗುತ್ತದೆ. ಕಟ್ಟುಜಾಣ್ಮೆಯ ಸಂಸ್ಥಾಪಕರು ಭವಿಷ್ಯದ ಬಗ್ಗೆ ಭಾರೀ ಆಶಾವಾದಿಗಳಾಗಿದ್ದರು. ಹರ್ಬರ್ಟ್ ಸೈಮನ್ ಇನ್ನು ಇಪ್ಪತ್ತು ವರ್ಷಗಳಲ್ಲಿ ಮನುಷ್ಯ ಮಾಡುವ ಯಾವುದೇ ಕೆಲಸವನ್ನು ಯಂತ್ರಗಳು ಮಾಡುವ ಸಾಮರ್ಥ್ಯವನ್ನು ಹೊಂದುತ್ತವೆ ಎಂದು ಭವಿಷ್ಯ ನುಡಿದ. ಮನುಷ್ಯನನ್ನು ಚೆಸ್ಸಿನಲ್ಲಿ ಸೋಲಿಸುವ, ನುಡಿಮಾರಿಕೆ (ಒಂದು ನುಡಿಯಲ್ಲಿರುವ ಬರಹವನ್ನು ಯಾವುದೇ ಬೇರೆ ನುಡಿಗೆ ಭಾಷಾಂತರಿಸುವ), ತಾನೋಡುವ ಕಾರುಗಳ ಬಗ್ಗೆ ಭಾರೀ ಗುಲ್ಲೆದ್ದಿತು. ವರ್ಷಗಳುರುಳಿದರೂ ಇದ್ಯಾವುದೂ ಕಾರ್ಯರೂಪಕ್ಕೆ ಬರಲಿಲ್ಲ. ಹೆಚ್ಚಿನ ಸಂಶೋಧಕರು ಸಂಶೋಧನೆಯ ಸಮಯದಲ್ಲಿ ಎದುರಾದ ಸಮಸ್ಯೆಗಳಿಗೆ ಕಾರಣವನ್ನು ಕಂಡುಕೊಳ್ಳಲಾಗದೇ ಕೈಚೆಲ್ಲುತ್ತಿದ್ದರು. ಚೆಸ್ಸಿನಲ್ಲಿ ಕಂಪ್ಯೂಟರ್ ಒಂದು ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದು ೧೯೯೭ರಲ್ಲಿ. ಇಂದಿಗೂ ಯಂತ್ರಗಳ ನುಡಿಮಾರಿಕೆ ಮನುಷ್ಯನ ಮಟ್ಟದ ಹತ್ತಿರ ಬರಲೂ ಸಾಧ್ಯವಾಗಿಲ್ಲ. ಇನ್ನು ಸ್ವಯಂಚಾಲಿತ ಯಂತ್ರಗಳಿಂದ ಲಕ್ಷಾಂತರ ಮಂದಿ ಕೆಲಸ ಕಳೆದುಕೊಳ್ಳುವ ಭಯವೂ ನಿಜವಾಗಲಿಲ್ಲ. ಕಟ್ಟುಜಾಣ್ಮೆ ಭರವಸೆ ಮೂಡಿಸಿದಷ್ಟೇ ವೇಗವಾಗಿ ಭ್ರಮನಿರಸನವನ್ನೂ ಜನರಲ್ಲಿ ಉಂಟುಮಾಡಿದ್ದು ಸುಳ್ಳಲ್ಲ. ಇದೇ ಸಂದರ್ಭದಲ್ಲಿ ೧೯೭೩ರಲ್ಲಿ ಗಣಿತಜ್ಞ ಸರ್ ಜೇಮ್ಸ್ ಲೈಟ್‌ಹಿಲ್ ಬರೆದ ಸಂಶೋಧನಾ ಬರಹವೊಂದು ಈ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವನ್ನೇ ಉಂಟುಮಾಡಿತ್ತು. ಅಮೇರಿಕಾ ಮತ್ತು ಬ್ರಿಟನ್ ಸರ್ಕಾರಗಳು ಕಟ್ಟುಜಾಣ್ಮೆಯ ಸಂಶೋಧನೆಗೆ ಕೊಡುತ್ತಿದ್ದ ಧನಸಹಾಯವನ್ನು ನಿಲ್ಲಿಸಿದವು. ಮುಂದಿನ ಆರೇಳು ವರ್ಷಗಳು ’ಏಐನ ಚಳಿಗಾಲ’ವೆಂದು ಪ್ರಸಿದ್ಧವಾದವು. ಮುಂದೆ ಜಪಾನ್ ಸರ್ಕಾರದ ದೂರದೃಷ್ಟಿಯ ಕಾರಣದಿಂದ ೧೯೮೦ರಲ್ಲಿ ಮತ್ತೆ ಸಂಶೋಧನೆಗಳು ಪ್ರಾರಂಭವಾದವು. ಅಲ್ಲಿಯವರೆಗೂ ನಡೆದ ಸಂಶೋಧನೆಗಳನ್ನು ’ಹಳೆಯ ಮಾದರಿಯ ಏಐ’ ಅಥವಾ ಗುಡ್ ಓಲ್ಡ್ ಫ್ಯಾಶನ್‌ಡ್ ಏಐ(ಗೋಫೈ) ಎಂದು ಕರೆಯಲಾಗುತ್ತಿತ್ತು. ೧೯೮೦ರ ನಂತರ ಎಕ್ಸ್‌ಪರ್ಟ್ ಸಿಸ್ಟಮ್ಸ್ (ತಜ್ಞ ಏಐ)ಗಳ ಯುಗ ಶುರುವಾಯಿತು.  ಅಮೇರಿಕ ಮತ್ತು ಬ್ರಿಟನ್ ಧನಸಹಾಯವನ್ನು ಪುನರಾರಂಭಿಸಿದವು. ೧೯೮೫ರ ವೇಳೆಗೆ ಕಂಪ್ಯೂಟರುಗಳ ಮಾರುಕಟ್ಟೆ ಬಿಲಿಯ ಡಾಲರ್ ವ್ಯವಹಾರವನ್ನು ತಲುಪಿತ್ತು. ಸರ್ಕಾರ ಮಾತ್ರವಲ್ಲದೇ ಖಾಸಗಿ ಕಂಪನಿಗಳೂ ಹಣಹೂಡಿಕೆ ಮಾಡಲು ಆಸಕ್ತಿ ವಹಿಸಲು ತೋರಿಸಿದವು. ಆದರೆ ೧೯೮೭ರಲ್ಲಿ ಆವರೆಗೂ ಬಳಕೆಯಲ್ಲಿದ್ದ ಲಿಸ್ಟ್ ಮಷೀನುಗಳ ಮಾರುಕಟ್ಟೆ ಬಿದ್ದು ಹೋದ್ದರಿಂದ ಮತ್ತೆ ಸಂಶೋಧನೆ ಭಾರೀ ಹಿನ್ನಡೆ ಅನುಭವಿಸಿತು. ಈ ಕಾಲವನ್ನು ’ಏಐನ ಎರಡನೇ ಚಳಿಗಾಲ’ವೆಂದು ಪರಿಗಣಿಸಲಾಗುತ್ತದೆ. ಕಟ್ಟುಜಾಣ್ಮೆಯೆಂಬುದೊಂದು ಈಡೇರಿಸಲಾಗದ ಭರವಸೆಗಳು ಹಾಗೂ ನಷ್ಟದ ಹೂಡಿಕೆಯ ಬಾಬ್ತೆಂದು ಬಹುತೇಕ ತಜ್ಞರು ಷರಾ ಬರೆದರು. ಇದರ ಯುಗ ಮುಗಿಯಿತೆಂದು ಎಲ್ಲ ಹೂಡಿಕೆದಾರರ ಅಂಬೋಣವಾಗಿತ್ತು. ಆದರೆ ಸಂಶೋಧಕರು ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ೧೯೯೭ರಲ್ಲಿ ಯಂತ್ರವೊಂದು ಚೆಸ್ಸಿನಲ್ಲಿ ವಿಶ್ವಚಾಂಪಿಯನ್ ಎನಿಸಿಕೊಂಡಿತು. ಯಂತ್ರಗಳು ಮಾನವನನ್ನು ಎಂದಿಗೂ ಹಿಂದಿಕ್ಕಲಾರವು ಎನ್ನುವ ಆಳವಾಗಿ ಬೇರುಬಿಟ್ಟ ನಂಬಿಕೆಯನ್ನು ಈ ಘಟನೆ ಅಲ್ಲಾಡಿಸಿತು. ೨೦೦೫ರಲ್ಲಿ ಡಿಎಆರ್‌ಪಿ ಗ್ರ್ಯಾಂಡ್ ಚಾಲೆಂಜ್ ಎಂಬ ರೇಸಿನಲ್ಲಿ ರೋಬೋಟ್ ಒಂದು ೧೩೧ ಕಿಮೀ ದೂರ ಮರುಭೂಮಿಯಲ್ಲಿ ವಾಹನ ಚಲಾಯಿಸಿ ಜನರು ಹುಬ್ಬೇರುವಂತೆ ಮಾಡಿತು. ಕೆಲ ವರ್ಷಗಳ ನಂತರ ಇದೇ ಸ್ಪರ್ಧೆಯಲ್ಲಿ ರೋಬೋಟ್ ಒಂದು ನಗರದ ರಸ್ತೆಗಳಲ್ಲಿ ೫೫ ಕಿಮೀ ವಾಹನ ಚಲಾಯಿಸಿ ಪಂದ್ಯವನ್ನು ಗೆದ್ದಿತು. ೨೦೦೦ದ ದಶಕದಲ್ಲಿ ಯಂತ್ರಕಲಿಕೆಯ ಎಣಿವರಸೆಗಳ ಸುಧಾರಣೆ ಹಾಗೂ ಇದಾಗಿ ಹತ್ತು ವರ್ಷಗಳಲ್ಲಿ ಶುರುವಾದ ಆಳಕಲಿಕೆ ಆವಿಷ್ಕಾರ ಪುನಃ ಕಟ್ಟುಜಾಣ್ಮೆಯನ್ನು ಹೊಸ ಎತ್ತರಕ್ಕೇರುವಂತೆ ಪ್ರಚೋದಿಸಿದವು. ಆಳಕಲಿಕೆಯ ವಿಧಾನಗಳಿಂದ ಅಲ್ಲಿಯವರೆಗೆ ಕಷ್ಟಸಾಧ್ಯವೆನಿಸಿದ್ದ ಧ್ವನಿಯ ಗುರುತಿಸುವಿಕೆ(ವಾಯ್ಸ್ ರಿಕೊಗ್ನಿಶನ್), ಬಗೆ ತೀರ್ಮಾನ(ಕ್ಲಾಸಿಫಿಕೇಶನ್), ಮುನ್ಹೊಳಹುವಿಕೆ(ಪ್ರೆಡಿಕ್ಷನ್), ಬೇನೆ ಗುರುತಿಸುವಿಕೆ(ಮೆಡಿಕಲ್ ಡಯಾಗ್ನೋಸಿಸ್), ನೈಸರ್ಗಿಕ ನುಡಿ ಸಂಸ್ಕರಣೆ(ನ್ಯಾಚುರಲ್ ಲ್ಯಾಂಗವೇಜ್ ಪ್ರೊಸೆಸಿಂಗ್)ಗಳು ಮನುಷ್ಯನ ಹಸ್ತಕ್ಷೇಪವಿಲ್ಲದೇ ನಡೆಯಲು ಸಾಧ್ಯವಾಯಿತು. 

ಬುದ್ಧಿವಂತ ಯಂತ್ರಗಳನ್ನೂ ಕೃತಕ ಮಾನವನನ್ನೂ ಸೃಷ್ಟಿಸುವ ಕಲೆ ಹೊಸತೇನೂ ಅಲ್ಲ. ಅದು ಅನಾದಿಕಾಲದಿಂದಲೂ ಕಲ್ಪನೆಯಲ್ಲಿ ಒಡಮೂಡುತ್ತಲೇ ಬಂದಿದೆ. ಬಹುಶಃ ಮನುಷ್ಯ ದೇವರನ್ನು ಸೃಷ್ಟಿಸಿದಷ್ಟೇ ಇತಿಹಾಸ ಇದಕ್ಕೂ ಇರಬಹುದು. ರಾಮಾಯಣದಲ್ಲಿ ಬರುವ ಪುಷ್ಪಕ ವಿಮಾನ, ಸಿಂಹಾಸನ ದ್ವಾತ್ರಿಂಶತ್‌ನಲ್ಲಿ ಬರುವ ವಿಕ್ರಮಾದಿತ್ಯನ ಮಾತಾಡುವ ಗೊಂಬೆಗಳು ಹೀಗೆ ಅನೇಕ ಸ್ವಯಂಚಾಲಿತ ಯಂತ್ರಗಳು, ರೋಬೋಗಳ ಕತೆಗಳನ್ನೆಲ್ಲ ನೀವು ಕೇಳಿಯೇ ಇರುತ್ತೀರಿ. ಇಜಿಪ್ತಿನ ಪುರಾಣಗಳಲ್ಲಿ ಬರುವ ತಾನೋಡುವ ಹಡಗುಗಳ ಕತೆ, ಹೋಮರಿನ ಇಲಿಯಡ್ ಕಾವ್ಯದಲ್ಲಿ ಯಥೇಚ್ಚವಾಗಿ ಸಿಗುವ ಕೃತಕ ಪ್ರಾಣಿಗಳು, ಯಂತ್ರಮಾನವರುಗಳೆಲ್ಲ ನಮ್ಮ ಪೂರ್ವಸೂರಿಗಳಿಗೆ ಈ ವಿಷಯದ ಬಗೆಗಿದ್ದ ಕುತೂಹಲವನ್ನು ತಿಳಿಸುತ್ತವೆ.  ಬುದ್ಧ ಜಾತಕ ಕತೆಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿವೆ. ಲೋಕಪನ್ನಟಿ ಮತ್ತು ಮಹಾಪರಿನಿಬ್ಬಾನಸುತ್ತದ ಪ್ರಕಾರ ಯಂತ್ರಕಾರರೆಂಬ ವೃತ್ತಿಯವರು ಯವನ ದೇಶದ ರೋಮವಿಶಯ ಎಂಬ ಪ್ರದೇಶದಲ್ಲಿದ್ದರಂತೆ. ಇವರು ತಮ್ಮ ನಿಗೂಢ ಶಕ್ತಿಯಿಂದ ಗಾಡಿಗಳನ್ನೆಳೆಯುವ, ಗದ್ದೆ ಹೂಡುವ, ಕಳ್ಳರನ್ನು ಹಿಡಿಯುವ ಶಕ್ತಿಯುಳ್ಳ ಯಂತ್ರಗಳನ್ನು ತಯಾರಿಸುತ್ತಿದ್ದರಂತೆ. ಪಾಟಲೀಪುತ್ರದ ತರುಣನೊಬ್ಬ ಈ ವಿಷಯ ಕೇಳಿ ರೋಮಿಗೆ ತೆರಳುತ್ತಾನೆ. ಅಲ್ಲಿನ ಯಂತ್ರಕಾರರ ಮುಖಂಡನ ಮಗಳನ್ನು ಮದುವೆಯಾಗಿ ಅವರ ವಿದ್ಯೆಯನ್ನು ಕಲಿಯುತ್ತಾನೆ. ಒಂದು ದಿನ ರೋಬೋಗಳ ವಿನ್ಯಾಸದ ಮಾದರಿಗಳನ್ನು ಕದ್ದು ತನ್ನ ತೊಡೆಯಲ್ಲಿ ಅಡಗಿಸಿಟ್ಟುಕೊಂಡು ಮಗಧಕ್ಕೆ ಹಿಂದಿರುಗಲು ಹವಣಿಸಿದ. ದಾರಿಮಧ್ಯದಲ್ಲಿ ರೋಮನ್ನರಲ್ಲಿ ಸಿಕ್ಕಿಬಿದ್ದ ಆತ ಕೊಲ್ಲಲ್ಪಡುತ್ತಾನೆ. ಶವದೊಂದಿಗೆ ಭಾರತಕ್ಕೆ ಬಂದ ಇವನ ಮಗ ಆ ನಿಗೂಢ ವಿದ್ಯೆಗಳನ್ನೆಲ್ಲ ಅರಿತು ಮಗಧದ ದೊರೆ ಅಜಾತಶತ್ರುವಿಗೆ ರೋಬೋಗಳ ದೊಡ್ಡ ಸೈನ್ಯವನ್ನೇ ತಯಾರಿಸಿಕೊಟ್ಟನಂತೆ. ಅಜಾತಶತ್ರು ಬುದ್ಧನ ದೇಹದ ಪಳೆಯುಳಿಕೆಗಳನ್ನು ಬೇರೆಯವರ ಕಣ್ಣಿಗೆ ಬೀಳದಿರಲು ಸ್ತೂಪವೊಂದರೆ ಕೆಳಗೆ ಅಡಗಿಸಿಟ್ಟಿದ್ದ. ಇದನ್ನು ಕಾಯಲು ಭೂತವಾಹನಯಂತ್ರಗಳೆಂಬ ಈ ರೋಬೋ ಸೈನಿಕರನ್ನು ಕಾವಲಿಗಿಟ್ಟಿದ್ದನಂತೆ. ಮುಂದೆ ಪಟ್ಟಕ್ಕೆ ಬಂದ ಅಶೋಕ ವಿಷಯ ತಿಳಿದು ಆ ಸೈನಿಕರನ್ನು ಎದುರಿಸಿ ಅವುಗಳನ್ನು ನಿರಸ್ತ್ರಗೊಳಿಸಿ ಬುದ್ಧನ ಅವಶೇಷಗಳನ್ನು ಹೊರತೆಗೆದ.  ಅವುಗಳನ್ನು ಎಂಭತ್ನಾಲ್ಕು ಸಾವಿರ ಭಾಗಗಳನ್ನಾಗಿಸಿ ಪ್ರತಿಯೊಂದನ್ನೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಪ್ರತಿಷ್ಟಾಪಿಸಿ ಅವುಗಳ ಮೇಲೆ ಸ್ತೂಪಗಳನ್ನು ಕಟ್ಟಿಸಿದ. ಭೂತವಾಹನ ಯಂತ್ರಗಳನ್ನು ಎದುರಿಸಲು ವಿಶ್ವಕರ್ಮ ವಿಶೇಷವಾದ ಯಂತ್ರಮಾನವರನ್ನು ಅಶೋಕನಿಗಾಗಿ ಮಾಡಿಕೊಟ್ಟನೆಂಬುದು ಇನ್ನೊಂದು ಆವೃತ್ತಿಯೂ ಇದೆ.  ಕತೆಗಳೇನೇ ಇರಲಿ. ಅಶೋಕ ಕಳೆದುಹೋಗಿದ್ದ ಬುದ್ಧನ ಅವಶೇಷಗಳನ್ನು ಹುಡುಕಿತೆಗೆದುದು ಐತಿಹಾಸಿಕ ಸತ್ಯ. ಜೊತೆಗೆ ಆ ಕಾಲದಲ್ಲೇ ಮಗಧ ಮತ್ತು ರೋಮಿನ ಮಧ್ಯೆ ತಂತ್ರಜ್ಞಾನದ ಕೊಡುಕೊಳ್ಳುವಿಕೆಯೂ ಇತ್ತೆಂದು ಇದರಿಂದ ತಿಳಿಯುತ್ತದೆ. ಗ್ರೀಕಿನ ಪುರಾಣಗಳಿಂದ ರೋಬೋಗಳ ಕತೆ ಭಾರತೀಯತೆಗೆ ಅವತೀರ್ಣಗೊಂಡ ಮೊದಲ ದಾಖಲಾತಿಯಿದು.  ಹೀಗೆ ಜಗತ್ತಿನ ಎಲ್ಲ ನಾಗರಿಕತೆಗಳಲ್ಲೂ ಒಂದಿಲ್ಲೊಂದು ವಿಧದಲ್ಲಿ ಕಟ್ಟುಜಾಣ್ಮೆಯ ಉಲ್ಲೇಖ ಸಿಕ್ಕಿಯೇ ಸಿಗುತ್ತವೆ. ಅದರ ಹುಟ್ಟು ಮತ್ತು ಬೆಳವಣಿಗೆಗಳ ಬಗ್ಗೆ ಬೆಳಕು ಚೆಲ್ಲುವ ಅಂತಹ ಕೆಲ ಸನ್ನಿವೇಶಗಳನ್ನು ಮುಂದೆ ನೋಡೋಣ.


Friday, May 1, 2020

ಇಟಲಿ ಬ್ರಾಹ್ಮಣ

       ಇಲ್ಲ,ಇಲ್ಲ.....ಈ ಲೇಖನಕ್ಕೂ ಕೌಲ್ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ರಾಹುಲ್ ಗಾಂಧಿಗೂ ಯಾವ ಸಂಬಂಧವೂ ಇಲ್ಲ. ತಲೆಬರಹ ನೋಡಿ ಹಾಗೆಂದುಕೊಂಡೇನಾದರೂ ಇದನ್ನು ಓದಿದರೆ ನಿಮಗೆ ನಿರಾಸೆ ಖಂಡಿತ.
       ನಾವೀಗ ಆರುನೂರು ವರ್ಷ ಹಿಂದೆ ಹೋಗೋಣ. ೧೪೯೮ನೇ ಇಸ್ವಿಯಲ್ಲಿ ವಾಸ್ಕೋಡಗಾಮನ ನೇತೃತ್ವದಲ್ಲಿ ಆಗಷ್ಟೆ ಕೇರಳದ ತೀರಕ್ಕಾಗಮಿಸಿದ್ದ ಪೋರ್ಚುಗೀಸರ ಪ್ರಭಾವ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿತ್ತು. ಪಶ್ಚಿಮ ಸಮುದ್ರದಿಂದ ನಡೆಯುತ್ತಿದ್ದ ಸಾಂಬಾರ್ ಪದಾರ್ಥಗಳ ವ್ಯಾಪಾರದಲ್ಲಿ ಏಕಸ್ವಾಮ್ಯ ಸಾಧಿಸುವುದು ಅವರ ಮುಂದಿದ್ದ ಏಕೈಕ ಧ್ಯೇಯ. ಇದಕ್ಕಾಗಿ ಕಲ್ಲೀಕೋಟೆಯ ಝಾಮೋರಿನ್ನನ ಸಂಗಡ ಆವಾಗಾವಾಗ ಯುದ್ಧಮೈತ್ರಿಗಳೆರಡೂ ಮಾಮೂಲಿ. ಇವೆರಡರ ಮಧ್ಯ ಸಮಯ ಸಿಕ್ಕಾಗೆಲ್ಲ ಸ್ಥಳೀಯರನ್ನು ಮತಾಂತರಿಸುತ್ತಿದ್ದರು. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಉಳಿದ ಭಾಗಗಳನ್ನೂ ತಮ್ಮ ಕೈವಶ ಮಾಡಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದರು. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ಮತ್ತು ಮಧ್ಯಪ್ರಾಚ್ಯ ನಂಬಿಕೊಂಡಿದ್ದು ಕೇರಳದ ಮುಸ್ಲಿಂ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಎಲ್ಲವೂ ಸೇರಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಇದರಿಂದ ಪೋರ್ಚುಗೀಸರಿಗಿಂತ ಹೆಚ್ಚು ತೊಂದರೆಯಾದದ್ದು ಪಾರವ ಎಂಬ ಮೀನುಗಾರ ಸಮುದಾಯಕ್ಕೆ. ತಮಿಳ್ನಾಡಿನ ರಾಮೇಶ್ವರದಿಂದ ಕೇರಳದ ಕಣ್ಣೂರಿನವರೆಗಿನ ಪಾರವ ಮೀನುಗಾರರು ತಲತಲಾಂತರದಿಂದ ಸಮುದ್ರದಲ್ಲಿ ಮುತ್ತು ತೆಗೆಯುವ ಕಸುಬು ಮಾಡಿಕೊಂಡವರು. ಕನ್ಯಾಕುಮಾರಿಯ ಆಸುಪಾಸು ಸಿಗುವ ಮುತ್ತುಗಳು ಪ್ರಪಂಚದಲ್ಲೇ ಶ್ರೇಷ್ಟವೆಂಬ ನಂಬಿಕೆಯಿತ್ತು. ಮುಸ್ಲೀಮರ ಪ್ರಾಬಲ್ಯ ಇವರನ್ನು ಅಕ್ಷರಶಃ ಗುಲಾಮರ ಸ್ಥಿತಿಗೆ ತಳ್ಳಿದ್ದಲ್ಲದೇ ಮುತ್ತಿನ ವ್ಯವಸಾಯ ಹದಿನಾರನೇ ಶತಮಾನದ ಆರಂಭದಲ್ಲಿ ಪೂರ್ತಿಯಾಗಿ ಇವರ ಕೈತಪ್ಪಿತ್ತು. ದಬ್ಬಾಳಿಕೆಯ ವಿರುದ್ಧ ಉಸಿರೆತ್ತಿದವರನ್ನು ಥೇಟ್ ತಮಿಳು ಸಿನೆಮಾ ಮಾದರಿಯಲ್ಲಿ ದಮನಿಸಿ ಕಿವಿ ಕತ್ತರಿಸಿ ಕಳಿಸಲಾಗುತ್ತಿತ್ತು. ೧೫೩೪ರಲ್ಲಿ ತೂತುಕುಡಿಯಲ್ಲಿ ಇದರ ವಿರುದ್ಧ ದೊಡ್ಡಮಟ್ಟಿನಲ್ಲಿ ಪಾರವರು ದಂಗೆಯೆದ್ದರೂ ಬಲಾಢ್ಯ ಮುಸ್ಲಿಮರ ಎದುರು ಇವರ ಆಟವೇನೂ ನಡೆಯಲಿಲ್ಲ. ಹಿಂದೂ ಅರಸರೆಲ್ಲ ಈ ಕೆಳಜಾತಿಯ ಮೀನುಗಾರರಿಗಾಗಿ ದುಡ್ಡಿದ್ದವರನ್ನು ಎದುರು ಹಾಕಿಕೊಳ್ಳಲು ತಯಾರಿರಲಿಲ್ಲ. ಆಗ ಪಾರವರ ಸಹಾಯಕ್ಕೆ ಬಂದಿದ್ದು ಇದೇ ಪೋರ್ಚುಗೀಸರು. ಪಾರವರ ಮುಖಂಡನೊಬ್ಬ ಗೋವಾಕ್ಕೆ ತೆರಳಿ ಪೋರ್ಚುಗೀಸರಲ್ಲಿ ಸಹಾಯಕ್ಕೆ ಮೊರೆಯಿಟ್ಟ. ಒಂದು ಷರತ್ತಿನ ಮೇಲೆ ಇಡೀ ಪಾರವ ಸಮುದಾಯದ ರಕ್ಷಣೆಯನ್ನು ವಹಿಸಿಕೊಳ್ಳುವುದಾಗಿ ಅವರು ಮಾತಿತ್ತರು. ಸಹಾಯವೇನೂ ದೊಡ್ಡದಲ್ಲ. ಕೊಟ್ಟ ಮಾತಿನಂತೆ ೮೦ ಪಾರವರು ಕೊಚ್ಚಿಯಲ್ಲಿ ಅಧಿಕೃತವಾಗಿ ಕ್ರಿಶ್ಚಿಯಾನಿಟಿಗೆ ಮತಾಂತರವಾದರು.  ಅರಬ್ಬರನ್ನು ಸಂಪೂರ್ಣ ಹಿಮ್ಮೆಟ್ಟಿಸಿ ಮುತ್ತಿನ ವ್ಯಾಪಾರವನ್ನು ಪುನಃ ಕೈಗಿತ್ತ ಪೋರ್ಚುಗೀಸ ಸಹಾಯಕ್ಕೆ ಪ್ರತಿಯಾಗಿ ೧೫೩೭ರಲ್ಲಿ ಇಡೀ ಪಾರವ ಜನಾಂಗ ತಮ್ಮನ್ನು ಕ್ರಿಶ್ಚಿಯನ್ನರೆಂದು ಘೋಷಿಸಿಕೊಂಡಿತು. ಅಲ್ಲಿಯವರೆಗೆ ಸಿಕ್ಕಸಿಕ್ಕವರನ್ನು ಕಂಡಕಂಡಲ್ಲಿ ಮತಾಂತರಿಸಿ ಇಡೀ ಕೇರಳದಲ್ಲಿ ಕುಖ್ಯಾತಿ ಪಡೆದಿದ್ದ ಪೋರ್ಚುಗೀಸರಿಗೆ ಮೊದಲ ಬಾರಿ ಮತಾಂತರವಾಗಲು ಜನ ಸಾಲುಗಟ್ಟಿ ನಿಂತಿದ್ದನ್ನು ನೋಡಿ ಆಶ್ಚರ್ಯವೋ ಆಶ್ಚರ್ಯ. 
ಜೆಸ್ಯುಟ್ಸ್ ಇನ್ ಮಲಬಾರ್ ಪುಸ್ತಕದ ಒಂದು ಅಧ್ಯಾಯ
        ಅಂಥ ಶೋಷಣೆಗೊಳಗಾದ ಇನ್ನೂ ಬೇಕಷ್ಟು ಜನಾಂಗಗಳು ಸಮಾಜದಲ್ಲಿದ್ದವು. ಅವರನ್ನೆಲ್ಲ ಪವಿತ್ರಾತ್ಮರನ್ನಾಗಿಸಲು ಸಂತ ಕ್ಸೇವಿಯರ್ ಕೇರಳಕ್ಕೆ ಓಡೋಡಿ ಬಂದ. ಮುಂದಿನ ಒಂದೂವರೆ ವರ್ಷದಲ್ಲಿ ಅಳಿದುಳಿದ ಪಾರವರೂ ಸೇರಿ ಕ್ಸೇವಿಯರ್ರನಿಂದ ಮತಾಂತರಗೊಂಡವರ ಸಂಖ್ಯೆ ಇಪ್ಪತ್ತು ಸಾವಿರ ದಾಟಿತ್ತು. ಬ್ಯಾಪ್ಟೈಸಿಗೊಳಪಟ್ಟ ಪಾರವರು ಫರ್ಡಿನೆಂಡೋ ಎಂದು ಕರೆಯಲ್ಪಟ್ಟರು. ಮುಂದೆ ೧೫೪೨ರವರೆಗೆ ದಕ್ಷಿಣ ಭಾರತದಲ್ಲಿ ಪೋರ್ಚುಗೀಸರಿಗೆ ಹುಲುಸು ಬೆಳೆ. ಮಧುರೈ, ರಾಮೇಶ್ವರ, ರಾಮನಾಥಪುರಂ, ಕನ್ಯಾಕುಮಾರಿಯ ಸುತ್ತಮುತ್ತ ದೊಡ್ಡ ಮಟ್ಟಿನಲ್ಲಿ ಕ್ಸೇವಿಯರನ ನೇತೃತ್ವದಲ್ಲಿ ಧರ್ಮ ಪ್ರಚಾರ ಆರಂಭವಾಯ್ತು. ಈತನ ತೂತುಕುಡಿಯ ಮೊದಲ ಭೇಟಿಯಲ್ಲೇ ಇಡೀ ಕೊಂಬುತುರೈ ಗ್ರಾಮ ಮತಾಂತರಗೊಂಡಿತು. ವೀರಪಾಂಡ್ಯಪಟ್ಟನಮ್, ಕಾಯಲ್ಪಟ್ಟನಮ್, ವಂಬರ್ ಸೇರಿ ಇಪ್ಪತ್ತೆರಡು ಊರುಗಳು ಕ್ರೈಸ್ತಮತ ಸ್ವೀಕರಿಸಿದವು. ೧೫೪೩ರಲ್ಲಿ ರಾಮೇಶ್ವರದ ಸಮೀಪ ಚಾಪೆಲ್ ಒಂದು ತಲೆಯೆತ್ತಿತು. ೧೫೫೧ರಲ್ಲಿ ಇವುಗಳ ಸಂಖ್ಯೆ ಮೂವತ್ತಕ್ಕೇರಿತು. ಸೊಸೈಟಿ ಆಫ್ ಜೀಸಸ್ ಭಾರತದಲ್ಲಿ ಶುಭಾರಂಭ ಮಾಡಿದ್ದು ಇಲ್ಲಿಂದಲೇ. ಕ್ರೈಸ್ತಮತ ಭಾರತದಲ್ಲಿ ಏಸು ಬದುಕಿರುವಾಗಲೇ ಬಂದಿದ್ದರೂ ಮಿಷನರಿಗಳ ಅಧಿಕೃತ ಮತಾಂತರ ಶುರುವಾಗಿತ್ತು ಸಾವಿರದೈನೂರರ ನಂತರವೇ. ಹಾಗೆ ಮತಾಂತರಗೊಂಡವರೆಲ್ಲ ಸಮಾಜದ ಕೆಳಸ್ತರದಿಂದ ಬಂದವರೇ. ಮೇಲ್ವರ್ಗದ ಶೋಷಣೆಯನ್ನು ತಾಳಲಾರದೇ ತಮ್ಮದೇ ಧರ್ಮದಿಂದ ಹೊರಬಿದ್ದುಹೋದವರೆಲ್ಲ ಸಿಕ್ಕಿದ್ದು ಪೋರ್ಚುಗೀಸರ ಕೈಗೆ. ಅದೊಂದು ತಮಾಷೆಯ ಮಾತಿದೆ. ಜಗತ್ತಿನ ಎಲ್ಲ ಮತಗಳೂ ತಾವೇ ಶ್ರೇಷ್ಟ, ಎಲ್ಲರೂ ತಮ್ಮಲ್ಲಿ ಬನ್ನಿ ಎಂದು ಕರೆದರೆ ವೈದಿಕ ಮತವೊಂದೇ(ಹಿಂದೂ ಎಂದು ಬೇಕಾದರೂ ಓದಿಕೊಳ್ಳಿ) ತಾವೇ ಶ್ರೇಷ್ಟ, ನಮ್ಮ ಹತ್ತಿರ ಯಾರೂ ಬರಬೇಡಿ ಎನ್ನುವುದು.
       ಆದರೆ ಕಾಲಕ್ರಮೇಣ ಪೋರ್ಚುಗೀಸರಿಗೆ ಒಂದು ಸಮಸ್ಯೆಯೂ ಎದುರಾಯಿತು. ಪೋರ್ಚುಗೀಸರು ಈ ನೆಲಕ್ಕೆ ಕಾಲಿಟ್ಟಾಗ ಇಲ್ಲಿನ ಜನ ಕೇಳಿದ ಮೊದಲ ಪ್ರಶ್ನೆಯೆಂದರೆ ನಿಮ್ಮ ಜಾತಿ ಯಾವುದು? ಅದಕ್ಕುತ್ತರ ಅವರಿಗೂ ಗೊತ್ತಿರಲಿಲ್ಲ. ಇದೆಂಥ ಮೂಢ, ಮೂರ್ಖ ಜನಾಂಗವಪ್ಪಾ? ತಾನ್ಯಾವ ಜಾತಿಗೆ ಸೇರಿದ್ದೇನೆ ಎಂಬುದೇ ತಿಳಿಯದಷ್ಟು! ಜಾತಿಭೃಷ್ಟನೋ, ಧರ್ಮಭೃಷ್ಟನೋ ಹೇಳುವ ಮಾತಿದು. ಜಾತಿ ಇಲ್ಲದ ಮೇಲೆ ಸಾಮಾಜಿಕ ಧಾರ್ಮಿಕ ಅಂತಸ್ತಿನ ಪ್ರಶ್ನೆ ಎಲ್ಲಿಂದ ಬಂತು. ತನ್ನ ಕುಲದ ಶ್ರೇಷ್ಟತೆಯಿರುವ ಧಾರ್ಮಿಕ ಹಿಂದೂವೊಬ್ಬ ಇಂಥದ್ದನ್ನು ಎಂದಿಗೂ ಸಹಿಸಲಾರ. ಅದೂ ಅಲ್ಲದೇ ಮಾಂಸ ತಿನ್ನುವ, ಮೂರುಹೊತ್ತೂ ಕುಡಿಯುವ, ಆವಾಗೀವಾಗ ಸ್ನಾನಮಾಡುವ, ಚರ್ಮದ ಚಪ್ಪಲಿ ಧರಿಸುವ, ಇನ್ನೂ ಏನೇನೋ ಧರ್ಮಬಾಹಿರ ಕೆಲಸಗಳನ್ನು ಮಾಡುವ ಇವರ ಜೊತೆ ವ್ಯವಹಾರವೊಂದನ್ನು ಬಿಟ್ಟು ಬೇರೆ ಯಾವ ರೀತಿಯ ಸಂಬಂಧವೂ ಇಟ್ಟುಕೊಳ್ಳದಂತೆ ಜನ ಎಚ್ಚರಿಕೆ ವಹಿಸತೊಡಗಿದರು.  ಹಾಗಾಗಿ ತೀರ ದಲಿತರನ್ನು ಬಿಟ್ಟು ಉಳಿದವರ ತಂಟೆಗೆ ಹೋಗುವುದೂ ಪರಂಗಿಗಳಿಗೆ ಕಷ್ಟವಾಯ್ತು. ನಿಮ್ನವರ್ಗದವರು ಎಷ್ಟು ಸಂಖ್ಯೆಯಲ್ಲಿ ಮತಾಂತರವಾದರೂ ಉಳಿದವರು ಅದರ ಬಗ್ಗೆ ಐದು ಪೈಸೆ ತಲೆಕೆಡಿಸಿಕೊಳ್ಳಲಿಲ್ಲ. ಅದಕ್ಕಿಂತ ದೊಡ್ಡ ಕಷ್ಟವೆಂದರೆ ಹಾಗೆ ಮತಾಂತರವಾದಮೇಲೂ ಅವರು ಕೆಳವರ್ಗವರಾಗಿಯೇ ಇರುತ್ತಿದ್ದರು. ಹಿಂದೂಧರ್ಮದಲ್ಲಿನ ತಾರತಮ್ಯದ ಲಾಭಪಡೆಯ ಹೊರಟ ಪೋರ್ಚುಗೀಸರಿಗೆ ಇದೊಂಥರಾ ಗಂಟಲಗಾಣ. ಇಷ್ಟು ದೊಡ್ಡ ದೇಶದಲ್ಲಿ ಅಕ್ಕಿಯಾಸೆ ತೋರಿಸಿ ಎಷ್ಟು ಜನರನ್ನೆಂದು ಮತಾಂತರಿಸುವುದು?
      ಹಾಗೆ ನೋಡಿದರೆ ನಮ್ಮಲ್ಲಿ ಮತಾಂತರ ಹಿಂದಿನಿಂದಲೂ ಇತ್ತು. ಆಗೆಲ್ಲ ಎರಡು ಮತಗಳ ಅನುಯಾಯಿಗಳ ಮಧ್ಯೆ ದಿನಗಟ್ಟಲೆ, ವಾರಗಟ್ಟಲೆ ಶಾಸ್ತ್ರಾರ್ಥ ನಡೆದು ಸೋತವರು ಗೆದ್ದವರ ಮತವನ್ನು ಅನುಸರಿಸುತ್ತಿದ್ದರು. ಶಂಕರಾಚಾರ್ಯ ಹಾಗೂ ಮಂಡನಮಿಶ್ರರ ವಾದವನ್ನೊಮ್ಮೆ ನೆನಪಿಸಿಕೊಳ್ಳಿ. ಪೂರ್ವಮೀಮಾಂಸೆಯ ಪ್ರಕಾಂಡ ಪಂಡಿತ ಮಂಡನರು ಶಂಕರರೆದುರು ವಾದದಲ್ಲಿ ಸೋತು ಸನ್ಯಾಸ ಸ್ವೀಕರಿಸಬೇಕಾಯಿತು. ಮಿಶನರಿಗಳೂ ಅದೇ ಕೆಲಸಕ್ಕಿಳಿದರೆ? ಈಗ ಅಂಥದ್ದೇ ಒಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಪಕ್ಕಾ ಪರಂಗಿಯೊಬ್ಬ ಕಚ್ಚೆಯುಟ್ಟು, ಜುಟ್ಟುಬಿಗಿದು, ಗೋಪಿಚಂದನವನ್ನು ಮೈತುಂಬ ಬಳಿದುಕೊಂಡು, ಜನಿವಾರ ಧರಿಸಿ ದೊಡ್ಡ ದೊಡ್ಡ ಬ್ರಾಹ್ಮಣ ವಿದ್ವಾಂಸರೊಡನೆ ಹಿಂದೂ ಧರ್ಮಶಾಸ್ತ್ರದ ಕುರಿತು ಚರ್ಚೆನಡೆಸಿ, ಅವರನ್ನು ಸೋಲಿಸಿ ಕ್ರೈಸ್ತಮತಕ್ಕೆ ಮತಾಂತರಿಸಿದರೆ?
ನೋ ಚಾನ್ಸ್ ಅಂತೀರಾ? ಹಾಗಾದರೆ ಮುಂದೆ ಕೇಳಿ.
      ರಾಬರ್ಟ್ ಡಿ ನೊಬಿಲಿ. ಹುಟ್ಟಿದ್ದು ೧೫೭೭ರಂದು ಇಟಲಿಯ ಟಸ್ಕನಿ ಪ್ರಾಂತ್ಯದ ಶ್ರೀಮಂತ ಕುಟುಂಬವೊಂದರಲ್ಲಿ. ಮೂಲದಲ್ಲಿ ಈ ಕುಟುಂಬ ರೋಮನ್ ಅರಸೊತ್ತಿಗೆಗೆ ಹತ್ತಿರದ ಸಂಬಂಧವುಳ್ಳದ್ದು. ಯುರೋಪಿನ ಹಲವಾರು ಮತಪ್ರಚಾರಕರು, ಪಾದ್ರಿಗಳು ಮಾತ್ರವಲ್ಲ ಇಬ್ಬರು ಪೋಪರು ಸಹ ಈ ಕುಟುಂಬದಿಂದ ಆಗಿಹೋಗಿದ್ದರು. ಇಂಥ ಪಕ್ಕಾ ಧಾರ್ಮಿಕ ಹಿನ್ನೆಲೆಯಿಂದ ಬಂದ ನೊಬಿಲಿ ತನ್ನ ಹತ್ತೊಂಬ್ಬತ್ತನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಧರ್ಮಪ್ರಚಾರವೇ ತನ್ನ ಧ್ಯೇಯವೆಂದು ಘೋಷಿಸಿಕೊಂಡ. ನಾಲ್ಕೈದು ವರ್ಷ ಕ್ರೈಸ್ತಮತವನ್ನು ಗಾಢವಾಗಿ ಅಭ್ಯಸಿಸಿದ ನಂತರ ಭಾರತದಲ್ಲಿ ಕ್ರಿಸ್ತನ ಸಂದೇಶವನ್ನು ಪಸರಿಸಲು ಹೊರಟುನಿಂತ. ಭಾರತಕ್ಕೆ ಬಂದಾಗಲೇ ಆತನಿಗೆ ಇಲ್ಲಿಯ ಸಮಸ್ಯೆಯ ಅರಿವಾಗಿದ್ದು. ಕ್ಸೇವಿಯರಿನ ನಂತರ ದಕ್ಷಿಣದಲ್ಲಿ ಮತಾಂತರದ ಕಾರ್ಯ ಹೆಚ್ಚುಕಡಿಮೆ ನಿಂತೇ ಹೋಗಿತ್ತೆನ್ನಿ. ಮತಾಂತರಗೊಂಡ ಪಾರವರನ್ನು ಜನ ಪರಂಗಿ ಕ್ರಿಶ್ಚಿಯನ್ನರೆಂದು ಕರೆದು ಅವರನ್ನು ದೂರವೇ ಇಟ್ಟಿದ್ದರು. ಮತಾಂತರಗೊಂಡಮೇಲೂ ಅದೇ ಜಾತಿಯಲ್ಲಿ ಉಳಿದರೆ ಲಾಭವೇನೆಂದು ಕೆಲವರು ಹಿಂದಿನ ಆಚಾರವನ್ನೇ ಪಾಲಿಸಹತ್ತಿದರು.  ನೊಬಿಲಿಗೆ ನಿಧಾನವಾಗಿ ಇಲ್ಲಿಯ ಪರಿಸ್ಥಿತ ಅರಿವಾಯ್ತು. ಭಾರತೀಯ ಸಮಾಜ ಮತ್ತು ಸಂಸ್ಕೃತಿ ನಿಂತಿರುವುದೇ ಜಾತಿಪದ್ಧತಿಯ ಮೇಲೆ. ಹಿಂದೂವೊಬ್ಬನಿಗೆ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವ ಏಕೈಕ ಸಂಕೇತವೆಂದರೆ ಅವನ ಜಾತಿ. ಅದನ್ನೇ ಅವನಿಂದ ಕಿತ್ತುಕೊಳ್ಳುವುದು ಸಾಧ್ಯವಾದೀತೇ? ಹುಟ್ಟಿನಿಂದ ದೈವದತ್ತವಾಗಿ ಬಂದ ಬಳುವಳಿಯದು. ಅದನ್ನೆಲ್ಲಾದರೂ ಬಿಡಲಿಕ್ಕುಂಟೇ? ಇಂಥವರ ಮಧ್ಯ ಪರಂಗಿ ಕ್ರಿಶ್ಚಿಯಾನಿಟಿಯನ್ನು ಮುಂದಿಟ್ಟುಕೊಂಡು ಜನರಿಗೆ ಗಾಸ್ಪೆಲ್ ಬೋಧಿಸುವುದು ಸಾಧ್ಯವೇ ಇಲ್ಲವೆಂದು ಮನವರಿಕೆಯಾಗಿತ್ತು. ತನ್ನನ್ನು ಪರಂಗಿ ಎಂದು ಗುರುತಿಸಲು ಇರುವ ಗುರುತುಗಳನ್ನೆಲ್ಲ ಮೊದಲು ಕಳಚಿಕೊಳ್ಳಲು ನಿರ್ಧರಿಸಿದ.

   ಕೆಲ ಸಮಯ ಗೋವಾ, ಕೊಚ್ಚಿನುಗಳಲ್ಲಿ ಕಳೆದ ನೊಬಿಲಿ ಮಧುರೈಯನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಬೋಧನೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದ. ಅದಕ್ಕೊಂದು ಕಾರಣವೂ ಇತ್ತು. ಮಧುರೈ ದಕ್ಷಿಣ ಭಾರತದ ಅತಿದೊಡ್ಡ ವೈದಿಕ ಕೇಂದ್ರವಾಗಿತ್ತಾಗ. ಇಲ್ಲಿ ಶಿವನು ತನ್ನ ಜಟಾಜೂಟದಿ೦ದ ಜೇನಿನ ಮಳೆ ಸುರಿಸಿದ್ದರಿ೦ದ ಮಧುರೆಯೆ೦ಬ ಹೆಸರು ಬ೦ದಿತೆ೦ಬ ಕಥೆಯಿದೆ. ಸಂಗಂನ ಉಚ್ಛ್ರಾಯಕಾಲದಲ್ಲೂ ವೈದಿಕ ಪ್ರಾಬಲ್ಯವನ್ನು ಸಶಕ್ತವಾಗಿ ಉಳಿಸಿಕೊಂಡು ಬಂದ ಸ್ಥಳ. ಕವಿಯೊಬ್ಬ ಚೋಳರ ರಾಜಧಾನಿಯಾದ ಉರೈಯೂರು ಮತ್ತು ಚೇರರ ರಾಜಧಾನಿಯಾಗಿದ್ದ ವ೦ಜಿಯ ಜನ ಕೋಳಿ ಕೂಗನ್ನು ಕೇಳುತ್ತ ಬೆಳಿಗ್ಗೆ ಎಚ್ಚರಗೊ೦ಡರೆ ಪಾ೦ಡ್ಯ ರಾಜಧಾನಿ ಮಧುರೈನ ಜನ ವೇದಘೋಷಗಳನ್ನಾಲಿಸುತ್ತ ನಿದ್ದೆಯಿ೦ದೇಳುತ್ತಿದ್ದರೆ೦ದದ್ದು ವೈಗೈ ಮತ್ತು ಮಧುರೆಗೆ ದೊರೆತ ಮಾನ್ಯತೆಯೇ ಸರಿ. ಇಂಥ ಸ್ಥಳದಲ್ಲಿ ನೆಲೆನಿಂತ ನೊಬಿಲಿ ಸಮಾಜದ ಮೇಲ್‌ಸ್ತರದಿಂದಲೇ ತನ್ನ ಕೆಲಸ ಶುರುಮಾಡಲು ನಿರ್ಧರಿಸಿದ. ಬ್ರಾಹ್ಮಣನಾಗದೇ ಅಂಥವರ ಮಧ್ಯ ಸೇರುವುದು ಹೇಗೆ? ಸರಿ, ಬ್ರಾಹ್ಮಣನಾಗಬೇಕೆಂದುಕೊಂಡವ  ಅದಕ್ಕಾಗಿ ಕೊಡಂಗಾಲೂರಿನ ಆರ್ಚ್‌ಬಿಷಪ್‌ನ ಅನುಮತಿಯನ್ನೂ ಪಡೆದುಕೊಂಡ. ವೇದೋಪನಿಷತ್ತುಗಳನ್ನೋದಲು ಸಂಸ್ಕೃತ ಬರಬೇಕಲ್ಲ! ತೂತುಕುಡಿಯಲ್ಲಿ ಒಬ್ಬ ಬ್ರಾಹ್ಮಣ ಗುರುವನ್ನು ಗೊತ್ತುಮಾಡಿ ಸಂಸ್ಕೃತ, ತೆಲುಗು ಹಾಗೂ ತಮಿಳಿನಲ್ಲಿ ಪ್ರಾವೀಣ್ಯತೆ ಸಾಧಿಸಿದ. ಈತ ಒಟ್ಟೂ ೩೨ ಭಾಷೆಗಳನ್ನು ಕಲಿತು ಮಾತಾಡಬಲ್ಲವನಾಗಿದ್ದನಂತೆ ಅಂದರೆ ಎಂಥಾ ಪ್ರತಿಭಾಸಂಪನ್ನನಿರಬಹುದು ಆಲೋಚಿಸಿ. ತನ್ನ ಕರಿಕೋಟು ಕಳಚಿಟ್ಟು ಕಾಷಾಯವುಟ್ಟ. ತಲೆಬೋಳಿಸಿಕೊಂಡು ಹಣೆಗೆ ಚಂದನವಿಟ್ಟು, ಚರ್ಮದ ಬೂಟುಗಳ ಬದಲು ಮರದ ಪಾದುಕೆ ತೊಟ್ಟ. ಶಿವಧರ್ಮ ಎಂಬ ಬ್ರಾಹ್ಮಣ ವಿದ್ವಾಂಸನೊಬ್ಬನ ಬಳಿ ವೇದಪಾಠವನ್ನೂ ಶುರುವಿಟ್ಟುಕೊಂಡ. ಪ್ರಾಯಶಃ ಹಿಂದೂಧರ್ಮಶಾಸ್ತ್ರವನ್ನು ಕಲಿತ ಅಥವಾ ಕಣ್ಣಲ್ಲಿ ಕಂಡ ಮೊದಲ ಐರೋಪ್ಯ ನೋಬಿಲಿಯೇ ಇರಬೇಕು. ಬರೀ ಮೂರು ವರ್ಷಗಳಲ್ಲಿ ವೇದ, ಉಪನಿಷತ್ತು, ಪುರಾಣ, ಸಂಸ್ಕೃತ ವ್ಯಾಕರಣಗಳನ್ನೆಲ್ಲ ಅರೆದು ಕುಡಿದ.  ಇದಿಷ್ಟೂ ವರ್ಷ ತುಂಬ ಬುದ್ಧಿವಂತಿಕೆಯಿಂದ ಸ್ಥಳೀಯ ಕ್ರೈಸ್ತ ಪಾದ್ರಿಗಳ, ಚರ್ಚಿನ, ಕೆಳವರ್ಗದ ಹಿಂದೂಗಳ ಹತ್ತಿರವೂ ಸುಳಿಯದಂತೆ ಎಚ್ಚರಿಕೆ ವಹಿಸಿದ. ಇದೇ ಸಮಯದಲ್ಲಿ ಡಯಲಾಗ್ ಆಫ್ ಎಟರ್ನಲ್ ಲೈಫ್ ಮತ್ತು ನ್‌ಕ್ವೈರಿ ಇಂಟು ಮೀನಿಂಗ್ ಆಫ್ ಲೈಫ್ ಎಂಬ ಎರಡು ಪುಸ್ತಕಗಳನ್ನು ಇಂಗ್ಲೀಷ್, ತಮಿಳುಗಳೆರಡರಲ್ಲೂ ಬರೆದ. ಧರ್ಮಶಾಸ್ತ್ರಗಳ ಪ್ರವಚನ ಶುರುಹಚ್ಚಿಕೊಂಡಿದ್ದಲ್ಲದೇ ಸ್ಥಳೀಯ ಬ್ರಾಹ್ಮಣರಲ್ಲಿ ಧಾರ್ಮಿಕ ಚರ್ಚೆಯನ್ನೂ ಪ್ರಾರಂಭಿಸಿದ. ಹೊಸ ಅವತಾರವೇನಾದರೂ ಕಂಡರೆ ನಮ್ಮ ಜನ ಸುಮ್ಮನಿರುತ್ತಾರೆಯೇ? ಗೌರವದಿಂದ ತತ್ತ್ವಬೋಧಾಚಾರ್ಯ ಸ್ವಾಮಿಗಳೇ ಎಂದು ಕರೆಯಹತ್ತಿದರು. ಟಿವಿಯಲ್ಲಿ ಬರುವ ಮೂರುಕಾಸಿನ ಜ್ಯೋತಿಷಿಗಳೆಲ್ಲ ಗುರೂಜಿಯಾಗಿರುವಾಗ ಇದೇನೂ ವಿಶೇಷವಲ್ಲ ಬಿಡಿ. ದೂರದೂರದಿಂದ ಫಾರಿನ್ ಸ್ವಾಮಿಯನ್ನು ನೋಡಲು ಜನ ಗುಂಪುಗೂಡಿ ಬರತೊಡಗಿದರು. ಹಾಗೆ ಬಂದರೂ ನೋಡಲು, ಮಾತಾಡಲು ಅವಕಾಶ ಸಿಗುತ್ತಿದ್ದುದು ಬ್ರಾಹ್ಮಣ ಹಾಗೂ ಮೇಲ್ವರ್ಗದ ಹಿಂದೂಗಳಿಗೆ ಮಾತ್ರವಾಗಿತ್ತು. ಸಣ್ಣದೊಂದು ಪ್ರಾರ್ಥನಾ ಮಂದಿರ ಅಲ್ಲಿ ತಲೆಯೆತ್ತಿತು. ಅದನ್ನಾತ ಕೋವಿಲ್ ಎಂದು ಕರೆದ. ಪ್ರತಿವಾರ ಮಾಸ್ ಅಲ್ಲಲ್ಲ ಪೂಜೆ ಏರ್ಪಡಿಸಿದ. ಬಂದವರಿಗೆ ಪ್ರಸಾದ ವಿತರಣೆ ನಡೆಯುತ್ತಿತ್ತು. ಅಲ್ಲಿ ಕ್ರೈಸ್ತನ ಭಜನೆಗಳನ್ನು ತಮಿಳಿನಲ್ಲಿ ರಚಿಸಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಡಲಾಗುತ್ತಿತ್ತು. ಹಾಡಿನಲ್ಲಿ ಬರುವ
ಏಂಜಲ್ಲುಗಳು, ಸಂತರು, ಇತರ ಪಾತ್ರಗಳ ಹೆಸರೆಲ್ಲ ತಮಿಳಿಗೆ ಭಾಷಾಂತರಗೊಂಡವು. ಬ್ಯಾಪ್ಟಿಸಂ ಸಂಸ್ಕಾರವಾಯ್ತು. ನಾಮಕರಣ, ಮದುವೆ, ಪೊಂಗಲ್ಲುಗಳ ಆಚರಣೆ ಶುರುವಾಯ್ತು. ನೊಬಿಲಿ ತನ್ನ ನೋಡಬಂದವರನ್ನು ಹೇಗೆ ಮಂತ್ರಮುಗ್ಧಗೊಳಿಸುತ್ತಿದ್ದನೆಂದರೆ ಕೆಲವೇ ತಿಂಗಳುಗಳಲ್ಲಿ ಅಂಥ ೬೩ ಜನ ಮತಾಂತರಗೊಂಡರು. ಹಾಗೆ ಮತಾಂತರಗೊಂಡವರಲ್ಲಿ ಮೊದಲಿಗ ಇಷ್ಟು ವರ್ಷ ನೊಬಿಲಿಗೆ ವೇದಪಾಠಮಾಡಿದ ಸಾಕ್ಷಾತ್ ಅವನ ಗುರು ಶಿವಧರ್ಮ. ನೊಬಿಲಿಯ ಕ್ರಿಸ್ತಧರ್ಮವನ್ನು ಅನುಸರಿಸುವುದು ಅಷ್ಟೇನೂ ಕಷ್ಟವಾಗಿರಲಿಲ್ಲ. ಮೊದಲನೇಯದಾಗಿ ಅದು ಪಕ್ಕಾ ಬ್ರಾಹ್ಮಣ ಕ್ರೈಸ್ತಧರ್ಮ. ಅಲ್ಲಿ ಬ್ರಾಹ್ಮಣ ಹಾಗೂ ಮೇಲ್ವರ್ಗದವರಿಗೆ ಮಾತ್ರ ಪ್ರವೇಶ. ಹಾಗಾಗಿ ಜಾತಿ ಹಾಳಾಯ್ತೆನ್ನುವ ಪ್ರಶ್ನೆಯೇ ಇಲ್ಲ. ಎರಡನೇಯದಾಗಿ ಮತಾಂತರಗೊಂಡವರು ತಮ್ಮ ಜುಟ್ಟು, ಜನಿವಾರ ಸೇರಿ ಹಿಂದಿನ ಆಚಾರ-ಆಹಾರಗಳನ್ನೆಲ್ಲ ಹಾಗೇ ಉಳಿಸಿಕೊಳ್ಳಬಹುದಿತ್ತು. ಕೇವಲ ಹಿಂದೆ ಪೂಜಿಸಿದ ದೇವರನ್ನು ಬಿಟ್ಟು ಕ್ರಿಸ್ತನನ್ನು ಆರಾಧಿಸಿದರಾಗಿತ್ತಷ್ಟೆ. ನಾಲ್ಕು ವೇದಗಳ ಜೊತೆಗೆ ಬೈಬಲ್ಲನ್ನೊಂದು ಓದಿಕೊಂಡರಾಯ್ತು.
       ಹಾಗೆಂದು ನೊಬಿಲಿಯ ಬೋಧನೆಗಳು ಎಲ್ಲರಿಗೂ ಹಿಡಿಸಲಿಲ್ಲ. ಹೆಚ್ಚಿನ ಬ್ರಾಹ್ಮಣರು ಈತ ತಮ್ಮನ್ನು ಧರ್ಮಭೃಷ್ಟಗೊಳಿಸುತ್ತಿದ್ದಾನೆಂದು ಆಪಾದಿಸಿ ಪಂಚಾಯಿತಿ ಕರೆದರು. ನೊಬಿಲಿ ಕಿಲಾಡಿ ಆಸಾಮಿ. ತಾನು ರೋಮ್ ದೇಶದ ಬ್ರಾಹ್ಮಣನೆಂದು ಅಲ್ಲಿಂದ ತಂದ ಒಂದು ಸರ್ಟಿಫಿಕೇಟ್ ತೋರಿಸಿದ. ರೋಮಿನ ಬ್ರಾಹ್ಮಣರು ಭಾರತದ ಬ್ರಾಹ್ಮಣರಿಗಿಂತ ಮೊದಲೇ ಜನ್ಮತಳೆದವರೆಂದೂ, ಅವರೆಲ್ಲ ಸಾಕ್ಷಾತ್ ಬ್ರಹ್ಮನ ಮಾನಸಪುತ್ರರೆಂದೂ ನಂಬಿಸಿದ.  ತಾನು ಸಮಾಜದಲ್ಲಿ ಬ್ರಾಹ್ಮಣರ ಸ್ಥಾನಮಾನಗಳನ್ನು ಉತ್ತಮಪಡಿಸಲು ಬಂದಿದ್ದೇನೆಂದೂ, ಜಾತಿ ಪದ್ಧತಿಯ ಪ್ರಬಲ ಪ್ರತಿಪಾದಕನೆಂದೂ ಹೇಳಿಕೊಂಡ. ಮಾತ್ರವಲ್ಲ, ಇಷ್ಟುಕಾಲ ಲುಪ್ತವಾಗಿ ಹೋಗಿದ್ದ ಪಂಚಮವೇದವಾದ ಏಸುವೇದವನ್ನು ಪುನಃ ಪ್ರಚಾರಕ್ಕೆ ತಂದು ವೈದಿಕ ಮತವನ್ನು ಉದ್ಧಾರಗೊಳಿಸಲು ತನಗೆ ದೇವರಿಂದ ಆಜ್ಞೆಯಾಗಿದೆಯೆಂದೂ ನಂಬಿಸಿದ(ತಮಿಳು ಜನಪದದ ಪ್ರಕಾರ ಐದನೇ ವೇದ ನಷ್ಟವಾಗಿತ್ತಂತೆ). ಸಂಸ್ಕೃತ ಬಲ್ಲವರ ತಲೆಮೇಲೆ ಹೊಡೆದಷ್ಟು ಬುದ್ಧಿವಂತಿಕೆಯಿಂದ ಈತ ಬರೆದ ಯೇಸುವೇದವನ್ನು ನೋಡಿದರೆ ಯಾರೂ ಅಹುದಹುದೆನ್ನಬೇಕಿತ್ತು. ಇಷ್ಟರವರೆಗೆ ಇವನಿಂದ ಮತಾಂತರಗೊಂಡವರೆಲ್ಲ ಗಟ್ಟಿಯಾಗಿ ಇವನ ಬೆನ್ನಿಗೆ ನಿಂತಕಾರಣ ಉಳಿದವರು ಏನೂ ಮಾಡಲಾಗದೇ ಹಿಂದಿರುಗಬೇಕಾಯಿತು. ಮ್ಯಾಕ್ಸ್ ಮುಲ್ಲರಿನಂಥ ಮ್ಯಾಕ್ಸ್ ಮುಲ್ಲರನೇ ನೊಬಿಲಿಯನ್ನು - "ಸಂಸ್ಕೃತ ಬಲ್ಲವರಲ್ಲೂ ಕೆಲವರಿಗೆ ಮಾತ್ರ ತಿಳಿದಿರಬಹುದಾದ ಮನುಸ್ಮೃತಿಯನ್ನೂ, ಪುರಾಣಗಳನ್ನೂ, ಆಪಸ್ಥಂಭ ಸೂತ್ರವನ್ನೂ ಈತ ತನ್ನ ನೆನಪಿನಿಂದಲೇ ಉದ್ಧರಿಸುತ್ತಾನೆಂದರೆ ದೇವಭಾಷೆಯಲ್ಲೂ, ವೈದಿಕ ಸಾಹಿತ್ಯದಲ್ಲೂ ಇವನ ಪಾಂಡಿತ್ಯ ಅಸಮಾನವಾದದ್ದು" ಎಂದು ಬಾಯಿತುಂಬ ಹೊಗಳಿದ್ದಾನೆಂದರೆ ಅವನ ಹಿರಿಮೆ ಅಂಥದ್ದು.
       ಆತನ ಸಮಕಾಲೀನ ಇತಿಹಾಸಜ್ಞ ಈನಿಸ್ ಝುಪಾನೋವ್ ಹೇಳುವಂತೆ ನೊಬಿಲಿ ಒಬ್ಬ ಅದ್ಭುತ ವಾಗ್ಮಿ. ಅದಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಟ ಬರಹಗಾರ. ಯೇಸುರ್ವೇದವನ್ನು ಎಷ್ಟು ಚಾಕಚಕ್ಯತೆಯಿಂದ ಬರೆದನೆಂದರೆ ಶುದ್ಧ ಬ್ರಾಹ್ಮಣರೂ ಅದನ್ನು ವೇದದ ಒಂದು ಅಂಗವೆಂದೇ ಭಾವಿಸತೊಡಗಿದರು. ಸೇಲಂನಲ್ಲಿ ಹೊಸ ಚರ್ಚೊಂದನ್ನು ಉದ್ಘಾಟಿಸಿದಾಗ ಬರೀ ಮೇಲ್ವರ್ಗದವರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಿ ಜಾತಿಕ್ರೈಸ್ತರೂ ಸೇರಿ ಉಳಿದವರನ್ನು ಬಾಗಿಲ ಹೊರಗೆ ನಿಲ್ಲುವಂತೆ ಮಾಡಿದ. ಇವನ ಹುಚ್ಚಾಟಕ್ಕೆ ಬೇಸತ್ತ ಈತನ ಮೇಲಧಿಕಾರಿ ಫಾದರ್ ಟ್ರ್ಯಾಂಕೋಸೋ ಪೋರ್ಚುಗೀಸರಿಗೆ ಇವನ ವಿರುದ್ಧ ದೂರಿತ್ತರೂ ನೊಬಿಲಿಯ ಸಾಮರ್ಥ್ಯವನ್ನು ತಿಳಿದಿದ್ದ ಅವರು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹಿಂದೂಗಳನ್ನು ಪವಿತ್ರಾತ್ಮರನ್ನಾಗಿಸಲು ಹಾತೊರೆಯುತ್ತಿದ್ದ ಪ್ರತಿಸ್ಪರ್ಧಿಗಳು ಇವನ ಯಶಸ್ಸು ನೋಡಿ ಕೈಕೈ ಹಿಸುಕಿಕೊಳ್ಳಬೇಕಾಯಿತು. ಹಿಂದೂಗಳನ್ನು ಮತಾಂತರಗೊಳಿಸುವ ಬದಲು ಇವನೇ ಮತಾಂತರಗೊಂಡಿದ್ದಾನೆ ಎಂದು ಅವರೆಲ್ಲ ಸೇರಿ ಮೇಲಧಿಕಾರಿಗಳಿಗೆ ದೂರಿತ್ತರು. ೧೬೧೯ರಲ್ಲಿ ಗೋವಾದ ಚರ್ಚು ಇವನಿಗೆ ಸಮನ್ಸ್ ಜಾರಿ ಮಾಡಿತು. ಜನಿವಾರ ಧರಿಸಿ, ಜುಟ್ಟು ಬಿಟ್ಟು ನೀನು ಕ್ರೈಸ್ತಧರ್ಮಕ್ಕೆ ಅಪಚಾರವೆಸಗುತ್ತಿದ್ದೀಯ ಎಂದು ಆರೋಪಿಸಿತು. ಕ್ರಿಸ್ತಮತ ಹೇಗೆ ಗ್ರೀಸೋರೋಮನ್ನಿನ ಸಾಂಸ್ಕೃತಿಕ ನಡಾವಳಿಗಳನ್ನ, ಸಂಕೇತಗಳನ್ನ, ಧಾರ್ಮಿಕ ಚಿಹ್ನೆಗಳನ್ನ ಹೀರಿಕೊಂಡು ಬೆಳೆಯಿತೋ ಹಾಗೇ ಭಾರತದಲ್ಲೂ ಇಲ್ಲಿನ ಸಂಸ್ಕೃತಿಯ ಜೊತೆಜೊತೆಗೇ ಸಾಗಬೇಕೆಂದು ಸರ್ಚಿನೆದುರು ಬಲವಾಗಿ ಪ್ರತಿಪಾದಿಸಿದ. ಜೊತೆಗೆ ಸಂತ ತಿಮೋತಿಯ "Behold! this incident: he circumcises to destroy circumcision." ಎಂಬ ಮಾತನ್ನುಲ್ಲೇಖಿಸಿ ನಾನು ಹಾಗೆಲ್ಲ ಮಾಡುತ್ತಿರುವುದು ಹಿಂದೂಧರ್ಮದಲ್ಲಿರುವ ಜಾತಿಪದ್ಧತಿಯ ವಿನಾಶಕ್ಕೆ ಎಂಬ ಜಾಣ್ಮೆಯ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ. ಅಷ್ಟಾದರೆ ದೊಡ್ಡದಲ್ಲ. ನೀವೆಲ್ಲ ಜಾತಿಭೃಷ್ಟರಾದ ಕಾರಣ ಮೇಲ್ಜಾತಿಯ ಬ್ರಾಹ್ಮಣ ತಾನು ನಿಮ್ಮೊಡನೆ ಕೂತು ಊಟಮಾಡಲಾರೆ ಎಂದುಬಿಟ್ಟ ಮಹಾಶಯ.  ದೂರು ವ್ಯಾಟಿಕನ್ ತಲುಪಿತ್ತು. ಆಗಿನ ಪೋಪ್ ಹದಿನೈದನೇ ಗ್ರೆಗೋರಿ ಇವನ ಕಾರ್ಯವನ್ನು ವಿಮರ್ಶಿಸಲು ಸಮಿತಿಯೊಂದನ್ನು ನೇಮಿಸಿದರು. ಭಾರತದಲ್ಲಿ ಜನರು ಕ್ರಿಸ್ತನನ್ನು ಕಾಣಲು ಹಾತೊರೆಯುತ್ತಿದ್ದಾರೆ. ಒಂದು ವೇಳೆ ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಹಾಗೇ ಉಳಿಸಲು ಅವಕಾಶ ಕೊಟ್ಟರೆ ಕಾಲಿಡಲು ಸಾಧ್ಯವಾಗದಷ್ಟು ಚರ್ಚುಗಳು ಕಿಕ್ಕಿರಿಯಲಿವೆ ಎಂದು ಸಮಿತಿಯೆದುರು ಬೂಸಿ ಬಿಟ್ಟ. ಹದಿನಾಲ್ಕು ವರ್ಷಗಳ ಕಾಲ ಆತನ ಕೆಲಸವನ್ನು ವಿಮರ್ಶಿಸಿದ ಸಮಿತಿ ಅವನ ವಿಧಾನಕ್ಕೆ ಅಧಿಕೃತ ಮುದ್ರೆಯೊತ್ತಿತು. ಸ್ವತಃ ಪೋಪ್ ಈತನ ಮಧುರೈ ಮಿಶನ್‌ನ್ನು ಸಮರ್ಥಿಸಿಕೊಂಡರು. ೧೬೨೩ರಲ್ಲಿ ಮಾರಮಂಗಲಂ ಅನ್ನು ಭೇಟಿಯಿತ್ತಾಗ ಅಲ್ಲಿನ ಅರಸ ರಾಮಚಂದ್ರ ನಾಯಕ ಮತ್ತವನ ಕುಟುಂಬ ಬ್ಯಾಪ್ಟೈಸಿಗೊಳಪಟ್ಟಿತು. ೧೬೨೬ರಲ್ಲಿ ಅಲ್ಲಿನ ಶಿವ ದೇವಸ್ಥಾನದ ಅರ್ಚಕರೊಬ್ಬರು ಸೇರಿ ನಲವತ್ತು ಜನ ಹೊಸದಾಗಿ ಕ್ರೈಸ್ತಧರ್ಮವನ್ನಪ್ಪಿದರು. ಸೇಲಂ ಪ್ರಾಂತ್ಯದಲ್ಲಿ ನೂರೈವತ್ತು ಜನರನ್ನು ಮತಾಂತರಿಸಲಾಯಿತು. ಎರಡು ಬ್ರಾಹ್ಮಣ ಚರ್ಚುಗಳು ತಲೆಯೆತ್ತಿದವು. ೧೬೨೭ರಲ್ಲಿ ತಿರುಚಿನಾಪಳ್ಳಿಗೆ ತೆರಳಿ ಕ್ರೈಸ್ತ ಮಿಶನ್ ಸೆಂಟರ್ ಒಂದನ್ನು ಸ್ಥಾಪಿಸಿದ. ಮುಂದೆ ತಮಿಳ್ನಾಡಿನಾದ್ಯಂತ ಅದರ ಶಾಖೆಗಳು ಹುಟ್ಟಿಕೊಂಡವು. ಈತನ ಕೆಲಸಗಳಿಂದ ದಕ್ಷಿಣ ಭಾರತದಲ್ಲಿ ಕ್ರೈಸ್ತರ ಸಂಖ್ಯೆ ಮೂವತ್ತು ಸಾವಿರದಿಂದ ಹಿಗ್ಗಿ ಒಂದು ಲಕ್ಷ ತಲುಪಿತ್ತು.  ಮಧುರೈ ಮಿಶನ್ನಿನ ದಾಖಲೆಗಳ ಪ್ರಕಾರ ಮುಂದೆ ಇವನನ್ನು ಅನುಕರಿಸಿ ೧೨೨ ಜೀಸ್ಯುಟ್ ಮಿಶನರಿಗಳು ಆಗಿಹೋದರು. ೧೭೭೩ರಲ್ಲಿ ಮಿಶನ್ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸುವವರೆಗೆ ಅವರೆಲ್ಲ ಹಿಂದೂ ಸನ್ಯಾಸಿಗಳ ದಿರಿಸಿನಲ್ಲಿ ನೊಬಿಲಿ ಹೇಳಿದಂತೆ ಬಾಳಿದರು. 
ದಕ್ಷಿಣ ಭಾರತದ ಹೆಸರಾಂತ ಯೋಗಿಗಳಲ್ಲೊಬ್ಬರೆನಿಸಿದ ಬೇಡ್ ಗ್ರಿಫಿತ್ಸ್ ಉರುಫ್ ಸ್ವಾಮಿ ದಯಾನಂದ
      ಯಾರೇನೇ ಹೇಳಿದರೂ, ಭಾರತ ಕಂಡ ಅತ್ಯುತ್ತಮ ಧರ್ಮಪ್ರಚಾರಕರಲ್ಲಿ ನೊಬಿಲಿಗೆ ಇವತ್ತಿಗೂ ಒಂದು ಮಹತ್ವದ ಸ್ಥಾನವಿದೆ. ಅದಕ್ಕಾಗಿ ತನ್ನ ಜೀವಿತಾವಧಿಯಲ್ಲಿ ಹಿಂದೂಗಳ ಹಾಗೂ ಕ್ರೈಸ್ತರಿಬ್ಬರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಯಿತು. ಆತನ ಕಾಲದ ಹೆಚ್ಚಿನ ಕ್ರೈಸ್ತ ಲೇಖಕರೆಲ್ಲ ಇವನನ್ನು ಒಬ್ಬ ಮೋಸಗಾರನೆಂದೂ, ಗಾಸ್ಪೆಲ್ಲಿನ ಬೋಧನೆಗಳನ್ನು ಕಲುಷಿತಗೊಳಿಸಿದವನೆಂದೂ, ಕ್ರಿಶ್ಚಿಯಾನಿಟಿಗೆ ಕಳಂಕ ತಂದವನೆಂದೂ ಜರಿದರು. ಆದರೆ ನೊಬಿಲಿ ಮಾತ್ರ ಭಾರತದಲ್ಲಿ ಧಾರ್ಮಿಕ ಮತಾಂತರ ಸಾಧ್ಯವೇ ಹೊರತೂ ಸಾಂಸ್ಕೃತಿಕ ಮತಾಂತರ ಯಾವತ್ತಿಗೂ ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದ. ಅತ ನಿಧನಹೊಂದಿದ ಮೂರು ವರ್ಷಗಳ ತರುವಾಯ Sacred Congregation for the Propagation of the Faith ಸಂಸ್ಥೆ ಒಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು. ಐರೋಪ್ಯ ಮಿಶನರಿಗಳು ತಮ್ಮೊಂದಿಗೆ ಫ್ರಾನ್ಸ್, ಸ್ಪೇನ್, ಇಟಲಿ ಅಥವಾ ಯುರೋಪಿಯ ಯಾವುದೇ ಭಾಗದ ಕ್ರಿಶ್ಚಿಯಾನಿಟಿಯನ್ನು ಭಾರತಕ್ಕೆ ತರಬೇಕಾಗಿಲ್ಲ. ಇಲ್ಲಿನ ಜನರ ಸಾಂಪ್ರದಾಯಿಕ ನಂಬಿಕೆ ಮತ್ತು ಆಚಾರಗಳಿಗೆ ಧಕ್ಕೆ ತರದ  ರೀತಿಯಲ್ಲಿ ಮತಪ್ರಾಚಾರಕ್ಕೆ ಒತ್ತುನೀಡಬೇಕೆಂದು ಆಗ್ರಹಿಸಿತು. ನೊಬಿಲಿಯ ಪ್ರವಿರೋಧಗಳೇನೂ ಇರಬಹುದು. ಆದರೆ ನೊಬಿಲಿ ಮಾತ್ರ ತಾನಂದುಕೊಂಡಿದ್ದನ್ನು ಸತತ ಐವತ್ತು ವರ್ಷ ಒಂದು ತಪಸ್ಸಿನಂತೆ ಸಾಧಿಸಿಕೊಂಡು ಬಂದ. ಅದಕ್ಕಾದರೂ ಅವನಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.
       ಆ ಕಾಲದ ಬಹುಪಾಲು ಕ್ರಿಶ್ಚಿಯನ್ ಲೇಖಕರು ನೊಬಿಲಿಯ ವಿರೋಧಿಗಳಾಗಿದ್ದರು. ಹಾಗಾಗಿ ಅವನ ಬಗ್ಗೆ ಇದಮಿತ್ಥಂ ಎಂಬಂಥ ದಾಖಲೆ ಸಿಕ್ಕುವುದು ಸ್ವಲ್ಪ ಕಷ್ಟವೇ. ಮೇಲಿರುವ ಅಂಕೆಸಂಖ್ಯೆಗಳೂ ಪರಮಸತ್ಯವೇನೂ ಅಲ್ಲ. ಇದ್ದುದರಲ್ಲಿ ಸ್ಟೀಫನ್ ನೀಲ್‌ನ ’ಎ ಹಿಸ್ಟರಿ ಆಫ್ ಕ್ರಿಶ್ಚಿಯಾನಿಟಿ ಇನ್ ಇಂಡಿಯಾ: ದ ಬಿಗಿನಿಂಗ್ ಟು ೧೭೦೭’ ಪರವಾಗಿಲ್ಲ. Religion as Culture: Anthropological Critique of de Nobili’s Approach to Religion and Culture by Dr.C. Joe Arun SJ ಎಂಬೊಂದು ಪುಸ್ತಕವೂ ಇದೆ. ಅದನ್ನು ಬಿಟ್ಟರೆ ಇಂಡಿಯನ್ ಚರ್ಚ್ ಹಿಸ್ಟರಿ ರಿವ್ಯೂ ಜರ್ನಲ್ಲಿನಲ್ಲಿ ನೊಬಿಲಿಯ ಬಗ್ಗೆ ಒಂದೆರಡು ಸಂಶೋಧನಾತ್ಮಕ ಲೇಖನಗಳಿವೆ. 

Wednesday, April 15, 2020

ಮೂವರು ಗಂಡಂದಿರು ಮತ್ತು ಮೊದಲ ಸ್ವಾತಂತ್ರ್ಯ ಸಮರ : ಭಾಗ 1

      ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟಕ್ಕಿಂದು ಮೂರು ಶತಮಾನ
    ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟ ಯಾವುದು? ಹೆಸರಿಗೆ 1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮವೇನೋ ಹೌದು. ಆದರೆ ಅದಕ್ಕೂ ಹಿಂದೆಯೇ ಬೇಕಷ್ಟು ಸ್ವಾತಂತ್ರ್ಯ ಹೋರಾಟಗಳು ಜರುಗಿವೆ.  1817ರಲ್ಲಿ ಓಡಿಸ್ಸಾದ ’ಪೈಕಾ ಬಿದ್ರೋಹ’ ಹಾಗೆ ನಡೆದ ಮೊದಲ ಹೋರಾಟ ಎಂದು ಬಹಳಷ್ಟು ಇತಿಹಾಸಕಾರರು ಭಾವಿಸುತ್ತಾರೆ. ಆದರೆ ಊಹೂಂ, ಅದೂ ಅಲ್ಲ. 1806ರ ವೆಲ್ಲೋರ್ ಸಿಪಾಯಿ ದಂಗೆ, 1799ರ ಟಿಪ್ಪೂ-ಬ್ರಿಟಿಷರ ಆಂಗ್ಲೋ-ಮೈಸೂರಿಯನ್ ಯುದ್ದ, 1793ರ ವಯನಾಡಿನ ಆದಿವಾಸಿಗಳ ಕೊಟ್ಟಯತ್ತು ಕದನ ಇವೆಲ್ಲ ಸ್ವಾತಂತ್ರ ಸಂಗ್ರಾಮಗಳೇ. ಆದರೆ ಇವೆಲ್ಲವುಗಳಿಗಿಂತ ಮೊದಲು 15 ಏಪ್ರಿಲ್, 1721ರಂದು ಸಂಭವಿಸಿ ಇತಿಹಾಸದಲ್ಲಿ ಮರೆಯಾಗಿಹೋದ ಅಟ್ಟಿಂಗಳ್ ಕ್ರಾಂತಿಯು ಭಾರತದಲ್ಲಿ ಬ್ರಿಟಿಷರ ವಿರುದ್ದ ದಾಖಲಾದ ಮೊತ್ತಮೊದಲ ಅಧಿಕೃತ ಸ್ವಾತಂತ್ರ್ಯ ಸಂಗ್ರಾಮ. ಇವತ್ತಿಗೆ ಬರೋಬ್ಬರಿ ಮೂರು ಶತಮಾನದ ಹಿಂದೆ ಕೇರಳದ ತಿರುವನಂತಪುರಂನಲ್ಲಿ ನಡೆದ ಸಾಮಾನ್ಯ ಜನರ ಹೋರಾಟವೊಂದು ಮೊದಲ ಬಾರಿ ಈಸ್ಟ್ ಇಂಡಿಯಾ ಕಂಪನಿಯನ್ನು ಬಗ್ಗುಬಡಿದಿತ್ತು. ಈ ಚಾರಿತ್ರಾರ್ಹ ಹೋರಾಟದ ಬಗ್ಗೆ ಹೇಳುವ ಮೊದಲು ಅದಕ್ಕೆ ಸಂಬಂಧಿಸಿದ ಇನ್ನೊಂದು ಆಸಕ್ತಿಕರ ವಿಚಾರವನ್ನು ಹೇಳುವುದಕ್ಕಿದೆ.  
       ಮಾರ್ಚ್ 9, 1709 ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಹೊತ್ತ ಲಾಯಲ್ ಬ್ಲಿಸ್ ಎಂಬ ನೌಕೆ ಇಂಗ್ಲೆಂಡಿನಿಂದ ಕಲ್ಕತ್ತದತ್ತ ಹೊರಟಿತ್ತು. ಅದರಲ್ಲಿದ್ದ ಪ್ರಯಾಣಿಕರಲ್ಲಿ ಕ್ಯಾಪ್ಟನ್ ಗೆರಾರ್ಡ್ ಕುಕ್‌, ಆತನ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೂ ಸೇರಿದ್ದರು. ಕ್ಯಾಪ್ಟನ್ ಕುಕ್ ಬಹುಕಾಲ ಕಂಪನಿಗಾಗಿ ಫೋರ್ಟ್ ವಿಲಿಯಮ್ಮಿನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸಿದವ. ಕಂಪನಿಯ ಹಲವು ಮಹತ್ವಪೂರ್ಣ ಯುದ್ಧಗಳಲ್ಲಿ ಭಾಗವಹಿಸಿದವ. ಈತನ ಸೇವೆಯನ್ನು ಪರಿಗಣಿಸಿ ಕಂಪನಿ ಕ್ಯಾಪ್ಟನ್ ದರ್ಜೆಗೆ ಭಡ್ತಿ ನೀಡಿ ಬಂಗಾಲದಲ್ಲಿ ನಿಯೋಜಿಸಿತ್ತು. ಕುಟುಂಬದೊಟ್ಟಿಗೆ ಇಂಗ್ಲೆಂಡಿನಲ್ಲಿ ರಜಾದಿನಗಳನ್ನು ಕಳೆಯಲು ಬಂದಿದ್ದ ಕುಕ್ ತನ್ನ ಮತ್ತಿಬ್ಬರು ಹೆಣ್ಮಕ್ಕಳನ್ನು ಅಲ್ಲಿಯೇ ಬಿಟ್ಟು ಉಳಿದವರೊಡನೆ ಹೊಸ ಗಮ್ಯದತ್ತ ಹುಮ್ಮಸ್ಸಿನಿಂದ ಹೊರಟಿದ್ದ. ಹಡಗು ಕೇಪ್ ಆಫ್ ಗುಡ್‌ಹೋಪ್ ತಲುಪುವಾಗ ಜೋರು ಮಳೆಗಾಲ. ಚಂಡಿಹಿಡಿದ ಮಳೆಯಲ್ಲಿ ದಾರಿತಪ್ಪಿದ ಲಾಯಲ್ ಬ್ಲಿಸ್ ಕಲ್ಕತ್ತ ತಲುಪಲಾಗದೇ ಪಶ್ಚಿಮಕ್ಕೆ ತಿರುಗಬೇಕಾಯಿತು. ಬೇರೆ ದಾರಿಕಾಣದೇ ಅದು ಬಂದುತಲುಪಿದ್ದು ಕಾರವಾರದ ಕಡಲ ತೀರಕ್ಕೆ. ಅಂದು ಅಕ್ಟೋಬರ್ 7. ದಿಕ್ಕುತಪ್ಪಿ ಕಾರವಾರಕ್ಕೆ ಬಂದಿಳಿದ ಕ್ಯಾಪ್ಟನ್ನನಿಗೆ ಈಸ್ಟ್ ಇಂಡಿಯಾ ಕಂಪನಿ ಭವ್ಯ ಸ್ವಾಗತ ಕೋರಿತು. ಆಗ ಮರಾಠಾ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಕಾರವಾರ. ಇಂಗ್ಲೀಷ್ ಕೋರ್ಟೀನ್ ಆಸೋಸಿಯೇಶನ್ನಿನವರು ಸಮೀಪದ ಕಡವಾಡದಲ್ಲಿ 1638ರಲ್ಲೇ ಒಂದು ಫ್ಯಾಕ್ಟರಿಯನ್ನು ತೆರೆದಿದ್ದರು. ಆ ಕಾಲದಲ್ಲಿ ಪಶ್ಚಿಮ ಕರಾವಳಿಯ ಸುಪ್ರಸಿದ್ದ ಬಂದರುಗಳಲ್ಲಿ ಒಂದಾದ ಕಾರವಾರದಿಂದ ದೂರದ ಅರಬ್ ಹಾಗೂ ಆಫ್ರಿಕಗಳಿಗೆ ಅವ್ಯಾಹತವಾದ ವ್ಯಾಪಾರ ಸಂಪರ್ಕವಿತ್ತು. ಮುಂದೆ 1649ರಲ್ಲಿ ಇದು ಕಂಪನಿಯೊಂದಿಗೆ ವಿಲೀನವಾದ ಮೇಲೆ ಯುದ್ಧನೌಕೆಗಳನ್ನು ತಯಾರಿಸುವ ಪ್ರಮುಖ
ಕಾರವಾರ
ಕೇಂದ್ರವಾಗಿಯೂ ಕಾರವಾರ ಬೆಳೆಯಿತು. ಕಾರವಾರದ ಈಸ್ಟ್ ಇಂಡಿಯಾ ಫ್ಯಾಕ್ಟರಿಯ ಮುಖ್ಯಸ್ಥ ಕ್ಯಾಪ್ಟನ್ ಜಾನ್ ಹಾರ್ವೇನ ಆತಿಥ್ಯದಲ್ಲಿ ಅವರೆಲ್ಲ ಕೆಲ ದಿನ ಅಲ್ಲಿಯೇ ತಂಗಿದರು. ಹಾಲಿವುಡ್ ಚಿತ್ರಗಳನ್ನು ನೋಡಿ ಅಭ್ಯಾಸವಿದ್ದವರಿಗೆ ಮುಂದಿನ ಕಥೆ ಊಹಿಸುವುದು ಕಷ್ಟದ ಕೆಲಸವಲ್ಲ. ಕುಕ್‌ನ ಮಗಳು ಕ್ಯಾಥರೀನಿಗೂ ಕ್ಯಾಪ್ಟನ್ ಹಾರ್ವೇಗೂ ಥಟ್ಟಂತ ಪ್ರೇಮಾಂಕುರವಾಯ್ತು. ಅಷ್ಟೇ ವೇಗದಲ್ಲಿ ಮದುವೆಯೂ ಆಗಿ ಹೋಯ್ತು. ಹಾರ್ವೇಗೆ ಈಗಾಗಲೇ ಅರ್ಧ ವಯಸ್ಸು ದಾಟಿದ್ದರೂ, ನಾಲ್ಕು ಹೆಣ್ಮಕ್ಕಳ ತಂದೆ ಕುಕ್‌ನಿಗೆ ಕಂಪನಿಯ ಕ್ಯಾಪ್ಟನ್ ತನ್ನ ಮಗಳ ಕೈಹಿಡಿಯುವುದು ಖುಷಿಯ ವಿಚಾರವೇ ತಾನೇ? ಆದರೆ ಆ ಸಂಭ್ರಮದಲ್ಲಿ ಬಹಳ ಕಾಲ ಪಾಲ್ಗೊಳ್ಳುವಷ್ಟು ಕುಕ್ಕನಿಗೆ ವ್ಯವಧಾನವಿರಲಿಲ್ಲ. ಮಾರ್ಚಿನಲ್ಲೇ ಇಂಗ್ಲೆಂಡ್ ಬಿಟ್ಟ ಕಾರಣ ಹೊಸ ಕೆಲಸಕ್ಕೆ ಸೇರಬೇಕಾದ ಸಮಯ ಮೀರಿಹೋಗಿತ್ತು. ತುರಾತುರಿಯಲ್ಲಿ ಮಗಳ ಮದುವೆ ಮಾಡಿ ಅಕ್ಟೋಬರ್ 22ರಂದು ಕಲ್ಕತ್ತಕ್ಕೆ ಹಡಗು ಹತ್ತಿದ. ಇತ್ತ ಹಾರ್ವೇಗೂ ಹೊಸ ಹೆಂಡತಿಯೊಂದಿಗೆ ಕಾರವಾರದಲ್ಲಿ ಬಹಳ ಕಾಲ ನಿಲ್ಲಲು ಮನಸ್ಸಿರಲಿಲ್ಲ. ಬಂದರಿನಲ್ಲಿ ಸುಂಕ ತಪ್ಪಿಸಿ ಬರುವ ವಸ್ತುಗಳಿಗೆ ಕಮಿಷನ್ ಬಿಜಿನೆಸ್ ಮಾಡಿಕೊಂಡು ಅಷ್ಟಿಷ್ಟು ಕಾಸು ಕೂಡಿಟ್ಟುಕೊಂಡಿದ್ದ ಹಾರ್ವೆ ಒಂದು ದಿನ ಕಂಪನಿಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಹಿಂದಿರುಗಲು ನಿಶ್ಚಯಿಸಿದ. 1711ರ ಏಪ್ರಿಲ್ಲಿನಲ್ಲಿ ಅವರಿಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿ ತಲುಪಿದರು. ಅಲ್ಲಿ ಅವರಿಗೊಂದು ಸಮಸ್ಯೆ ಕಾಯುತ್ತಿತ್ತು. ಹಾರ್ವೇ ಕಾರವಾರದಲ್ಲಿದ್ದಾಗ ನಾನೂರು ಪಗೋಡಗಳಷ್ಟು ಹಣವನ್ನು ಮುಂಗಡವಾಗಿ ಕಂಪನಿಯಿಂದ ಪಡೆದುಕೊಂಡಿದ್ದ. ಅದನ್ನು ಚುಕ್ತಾ ಮಾಡದ ಹೊರತೂ ಅವನಿಗೆ ಭಾರತ ಬಿಡುವುದು ಸಾಧ್ಯವಿಲ್ಲ. ಆಗೆಲ್ಲ ಕಂಪನಿ ತನ್ನ ನೌಕರರಿಗೆ ಕೊಡುತ್ತಿದ್ದ ಪಗಾರ ಅಷ್ಟಕ್ಕಷ್ಟೆ. ಅದರ ನೌಕರರೆಲ್ಲ ಸಣ್ಣಪುಟ್ಟ ವ್ಯಾಪಾರ, ಕಳ್ಳಸಾಗಾಣಿಕೆಯ ದಾರಿ ಹಿಡಿದು ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಕಂಪನಿಯ ನಿಯಮಗಳಿಗೆ ಅಡ್ಡಿ ಬರದಿದ್ದರೆ ಅವರು ಮಾಡುವ ಕೆಲಸಗಳಿಗೆಲ್ಲ ಕಂಪನಿಯ ಮಾಫಿಯಿತ್ತೆನ್ನಿ.  ಮುಂಗಡ ಹಣವನ್ನು ಚುಕ್ತಾ ಮಾಡುವಂತೆ ಕಂಪನಿ ನಿರ್ದೇಶಿಸಿದ್ದರಿಂದ ಬೇರೆ ದಾರಿ ಕಾಣದೇ ಹಾರ್ವೇ ಕ್ಯಾಥರೀನರಿಬ್ಬರೂ ಇಂಗ್ಲೆಂಡಿನ ಆಸೆ ಬಿಟ್ಟು ತಿರುಗಿ ಕಾರವಾರಕ್ಕೆ ಬರಬೇಕಾಯ್ತು. ದುರದೃಷ್ಟಕ್ಕೆ ಕಾರವಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಹಾರ್ವೇ ಅಚಾನಕ್ಕಾಗಿ ಮೃತಪಟ್ಟ. ಹಾರ್ವೇಗೂ ಸವಣೂರಿನ ನವಾಬನಿಗೂ ಒಳ್ಳೆಯ ದೋಸ್ತಿ. ಅಪ್ಘನ್ ಮೂಲದ ಸವಣೂರಿನ ನವಾಬನ ಆಡಳಿತದಲ್ಲಿ ಹುಬ್ಬಳ್ಳಿ ದೊಡ್ಡ  ವ್ಯವಹಾರ ಕೇಂದ್ರವಾಗಿ ಬೆಳೆದಿತ್ತು. ನವಾಬ್ ಅಬ್ದುಲ್ ಮಜೀದ್ ಖಾನ್ ಹುಬ್ಬಳ್ಳಿಯಲ್ಲಿ ತನ್ನ ಹೆಸರಿನ ಮಜೀದ್‌ಪುರ್ ಎಂಬ ಹೊಸ ಊರೊಂದನ್ನೂ ಕಟ್ಟಿಕೊಂಡಿದ್ದ. ಯುದ್ದದ ಬದಲು ಬ್ರಿಟೀಷರೊಡನೆ  ವ್ಯಾವಹಾರಿಕ ಒಪ್ಪಂದ ಮಾಡಿಕೊಂಡ ಕಾರಣ ಸವಣೂರಿನ ಆರ್ಥಿಕ ಸ್ಥಿತಿ ಉತ್ತಮವಾಗೇ ಇತ್ತು.  ಅಲ್ಲಿನ ವ್ಯಾಪಾರವೆಲ್ಲ ಆಗುತ್ತಿದ್ದುದು ಕಾರವಾರ ಬಂದರಿನ ಮೂಲಕ. ಅದೂ ಹಾರ್ವೇಯ ಮೂಗಿನಡಿಯಲ್ಲಿ. ಗಂಡನ ಈ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಕ್ಯಾಥರಿನ್ ಕಾರವಾರದಲ್ಲೇ ಉಳಿದಳು. 
ಕಾರವಾರದ ಕೋಟೆ
       ಆ ಸಮಯಕ್ಕೆ ಚೋನ್ ಎಂಬ ಹೊಸ ಅಧಿಕಾರಿ ಕಾರವಾರದ ಕ್ಯಾಪ್ಟನ್ ಆಗಿ ನೇಮಕಗೊಂಡ. ಕಾರವಾರದಲ್ಲಿ ಹಾರ್ವೆಯ ಎಸ್ಟೇಟ್ ಒಂದಿತ್ತು. ಆದರೆ ಹಾರ್ವೇ ತನ್ನ ಹೆಸರಲ್ಲಿ ಯಾವ ವಿಲ್ ಕೂಡ ಬಿಟ್ಟು ಹೋಗಿರಲಿಲ್ಲ. ಎಸ್ಟೇಟ್‌ನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಕ್ಯಾಥರೀನಳ ಪ್ರಯತ್ನ ಯಶಕಾಣಲಿಲ್ಲ. ಅದು ಕಂಪನಿಯ ವಶವಾದರೂ ಕ್ಯಾಪ್ಟನ್ ಚೋನ್ ಮುತುವರ್ಜಿ ವಹಿಸಿ ಕಂಪನಿಯಿಂದ ಕ್ಯಾಥರಿನ್ನಳಿಗೆ 13146 ರೂಪಾಯಿಗಳಷ್ಟು ಪರಿಹಾರ ಬರುವಂತೆ ನೋಡಿಕೊಂಡ. ಅಷ್ಟಾಗಿದ್ದರೆ ವಿಶೇಷವಿರಲಿಲ್ಲ. ಆಗ ಕ್ಯಾಥರೀನ್‌ಗೆ ಇನ್ನೂ ಹದಿನಾರರ ಪ್ರಾಯ. ಉಳಿದವರು ಮದುವೆಯೇ ಆಗದ ಕಾಲದಲ್ಲಿ ಈಕೆ ಗಂಡನನ್ನು ಕಳೆದುಕೊಂಡಿದ್ದಳು. ಆದರೇನಂತೆ!, ಹಾರ್ವೇ ತೀರಿಕೊಂಡ ಎರಡೇ ತಿಂಗಳಲ್ಲಿ ಕ್ಯಾಥರೀನ್ ಮತ್ತೊಂದು ಮದುವೆಯಾದಳು. ಇನ್ಯಾರನ್ನು?, ತನ್ನ ಮೊದಲ ಗಂಡನಿಗಿಂತ ಚಿಕ್ಕ ಪ್ರಾಯದ ಕ್ಯಾಪ್ಟನ್ ಚೋನನ್ನು. ಮದುವೆಯಾಗಿ ತಿಂಗಳಾಗುವುದರೊಳಗೆ ಇಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿಯಲ್ಲಿ ನೆಲೆಸಲು ನಿರ್ಧರಿಸಿದರು. ನವಂಬರ್ 3, 1712ರಂದು ಎನ್ನೆ ಎಂಬ ಹಡಗಿನಲ್ಲಿ ಕಾಳುಮೆಣಸನ್ನು ತುಂಬಿಕೊಂಡು ಗವರ್ನರ್ ವಿಲಿಯಮ್ ಎಸ್ಲಾಬಿ ಮತ್ತವನ ಸೈನಿಕರ ಜೊತೆ ಇಬ್ಬರೂ ಬೊಂಬಾಯಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಯೂ ದುರದೃಷ್ಟ ಕ್ಯಾಥರೀನಿನ ಬೆನ್ನುಬಿಡಲಿಲ್ಲ. ಅದೇ ರಾತ್ರಿ ಮರಾಠರ ನೌಕಾನಾಯಕ ಕನ್ಹೋಜಿ ಆಂಗ್ರೆಯ ನೇತೃತ್ವದ ಪಡೆಗಳು ಹಡಗಿನ ಮೇಲೆ ದಾಳಿ ಮಾಡಿದವು. ಬ್ರಿಟಿಷ್ ಸೈನಿಕರು ಹಾಗೂ ಮರಾಠರ ನಡುವೆ ನಡೆದ ಹೋರಾಟದಲ್ಲಿ ಬ್ರಿಟಿಷರು ನೆಲಕ್ಕಚ್ಚಬೇಕಾಯ್ತು. ಯುದ್ಧದಲ್ಲಿ ಗುಂಡು ತಾಗಿ ಕ್ಯಾಥರೀನಳ ಬಾಹುಗಳಲ್ಲೇ ಕ್ಯಾಪ್ಟನ್ ಚೋನ್ ಮಡಿದ. ಮೂರು ತಿಂಗಳ ಗರ್ಭಿಣಿಯಾಗಿದ್ದ ಹದಿನೆಂಟು ವರ್ಷದ ಕ್ಯಾಥರಿನ್ ಎರಡನೇ ಬಾರಿ ವಿಧವೆಯಾದಳು. ಅವಳನ್ನೂ ಸೇರಿ ಹಡಗಿನಲ್ಲಿ ಬದುಕುಳಿದ ಹದಿನೇಳು ಜನರನ್ನು ಕನ್ಹೋಜಿ ಬಂಧಿಸಿ ಕೊಲಾಬಾದ ಸೆರೆಮನೆಯಲ್ಲಿ ಯುದ್ಧಕೈದಿಗಳನಾಗಿ ಕೂಡಿಹಾಕಿದ. ಕಂಪನಿ ಕಂಗಾಲಾಗಿತ್ತು. ತನ್ನ ಜನರನ್ನು ಬಿಟ್ಟುಕೊಡುವಂತೆ ಕನ್ಹೋಜಿಗೆ ದಮ್ಮಯ್ಯ ಹಾಕಿ ಪತ್ರ ಬರೆಯಿತು. ಕೊನೆಗೂ ಒಂದು ತಿಂಗಳ ಚೌಕಾಶಿಯ ನಂತರ 30000 ರೂಪಾಯಿಗಳನ್ನು ತೆತ್ತು ತನ್ನ ಯುದ್ಧಕೈದಿಗಳನ್ನು ಬಿಡಿಸಿಕೊಂಡಿತು. ಯುದ್ಧದಲ್ಲಿ ಗಂಡನನ್ನು ಕಳೆದುಕೊಂಡ ಕ್ಯಾಥರೀನಿಗೆ ಕಂಪನಿ ಸಾವಿರ ರೂಪಾಯಿ ಪರಿಹಾರವನ್ನೂ ಪ್ರತಿ ತಿಂಗಳು ನೂರು ರೂಪಾಯಿಗಳ ಮಾಸಾಶನವನ್ನೂ ಮಂಜೂರು ಮಾಡಿತು.  
       ಈ ಕನ್ಹೋಜಿ ಆಂಗ್ರೆ ಸಾಮಾನ್ಯ ಆಸಾಮಿಯಲ್ಲ. ಬ್ರಿಟಿಷರ ಪಾಲಿಗೆ ಆತನೊಬ್ಬ ಪಕ್ಕಾ ಪೈರೆಟ್ ಉರುಫ್ ಕಡಲ್ಗಳ್ಳ. ಯುರೋಪಿನ ಹಡಗುಗಳಿಗೆ ಗಂಟಲಗಾಣ. ಆದರೆ ಮರಾಠಿಗರಿಗೆ ಆತ ಭಾರತದ ನೌಕಾದಳದ ಪಿತಾಮಹ. ತನ್ನ ಜೀವಮಾನದಲ್ಲೇ ಸೋಲೆಂಬುದೇನೆಂದು ಕಾಣದ ಮಹಾನ್ ಸಮರವೀರ. ಹದಿನೇಳನೇ ಶತಮಾನ ಮುಗಿದು ಹದಿನೆಂಟು ಶುರುವಾಗಿತ್ತಷ್ಟೆ. ತಿರುವಾಂಕೂರಿನ ಧರ್ಮರಾಜರೆದುರು ಡಚ್ಚರು ಧೂಳು ಮುಕ್ಕಿದ್ದರು. ಇಂಗ್ಲೀಷ್ ಹಾಗೂ ಪೋರ್ಚುಗೀಸರೆದುರು ಹೊಸದೊಂದು ಅಪಾಯ ಅವತಾರವೆತ್ತಿತ್ತು. 1707ರಲ್ಲಿ ಔರಂಗಜೇಬನ ನಿಧನದೊಂದಿಗೆ ಮುಘಲ್ ಸಾಮ್ರಾಜ್ಯ ಕುಸಿದು ಬಿತ್ತು. ಅಷ್ಟೇ ವೇಗವಾಗಿ ಮಧ್ಯಪೂರ್ವ ಭಾರತದ ಬಹುಭಾಗ ಮುಘಲರ ಕೈಯಿಂದ ಮರಾಠರ ವಶವಾಯ್ತು. ಗೆರಿಲ್ಲಾ ತಂತ್ರಜ್ಞರಾಗಿ ಹೆಸರಾಗಿದ್ದ ಮರಾಠರು ನಿಧಾನವಾಗಿ ಬೇರೆ ಬೇರೆ ಯುದ್ಧಕಲೆಗಳಲ್ಲಿಯೂ ಕ್ಷಿಪ್ರವಾಗಿ ಪಳಗಿದರು. ಆಗ ಪ್ರವರ್ಧಮಾನಕ್ಕೆ ಬಂದವನೇ ಈ ಕನ್ಹೋಜಿ ಆಂಗ್ರೆ. ಈತನ ತಂದೆ ತುಕೋಜಿಯು ಶಿವಾಜಿಯ ಕಾಲದಲ್ಲಿ ಸಾವನದುರ್ಗ ಕೋಟೆಯ ಸುಬೇದಾರನಾಗಿದ್ದ. ಕಂಪನಿಯ ಸಣ್ಣಪುಟ್ಟ ಸರಕು ಸಾಗಾಣಿಕಾ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತ ತನ್ನ ವೃತ್ತಿಜೀವನ ಶುರುಮಾಡಿದ್ದ ಕನ್ಹೋಜಿ 1702ರಲ್ಲಿ ಕ್ಯಾಲಿಕಟ್ ಬಂದರನ್ನು ಆಕ್ರಮಿಸಿ ಅಲ್ಲಿದ್ದ ಸಂಪತ್ತನ್ನು ದೋಚಿ ಬ್ರಿಟಿಷರಿಗೆ ಮೊದಲ ಬಾರಿ ಚುರುಕು ಮುಟ್ಟಿಸಿದ್ದ. ಮುಂದೆ
ಕನೋಜಿ ಆಂಗ್ರೆ
1707ರಲ್ಲಿ ಬಾಂಬೆ ಬಂದರಲ್ಲೂ ತನ್ನ ಕೈಚಳಕ ತೋರಿಸಿ ಬ್ರಿಟಿಷರಿಗೆ ಭಾರೀ ನಷ್ಟ ಉಂಟುಮಾಡಿದ. ಅದೇ ವರ್ಷ ಮರಾಠರ ಅಧಿಪತ್ಯ ಛತ್ರಪತಿ ಸಾಹು ಮಹಾರಾಜನ ಕೈಗೆ ಬಂದಿತ್ತು. ಬಾಲಾಜಿ ವಿಷ್ವನಾಥ ಭಟ್ಟ ಮರಾಠರ ಸೇನಾಧಿಪತಿಯಾಗಿ ನೇಮಿಸಲ್ಪಟ್ಟ. ಈ ವಿಶ್ವನಾಥ ಭಟ್ಟನಿಗೂ ಕನ್ಹೋಜಿಗೂ ಮೊದಲಿಂದಲೂ ಅಷ್ಟಕ್ಕಷ್ಟೆ. ಬಾಲಾಜಿ ವಿಶ್ವನಾಥ ಸಾಹು ಮಹರಾಜನನ್ನು ಪಟ್ಟಕ್ಕೇರಿಸಲು ಪ್ರಯತ್ನಪಟ್ಟರೆ, ಕನ್ಹೋಜಿ ತಾರಾಬಾಯಿಯ ಪರವಾಗಿದ್ದ. ಆದರೆ ಕನ್ಹೋಜಿಯ ಪ್ರತಾಪವನ್ನರಿತಿದ್ದ ಸಾಹು ಮಹಾರಾಜ ಅವರಿಬ್ಬರಿಗೂ ಸಂಧಾನ ಮಾಡಿಸಿ 1712ರಲ್ಲಿ ಮರಾಠರ ನೌಕಾದಳದ ಪ್ರಥಮ ಮಹಾದಂಡನಾಯಕನನ್ನಾಗಿ ನೇಮಿಸಿದ. ಯುರೋಪಿನ ಎಲ್ಲ ಇತಿಹಾಸಕಾರರಿಂದ ಕಡಲ್ಗಳ್ಳನೆಂದು ತೆಗಳಲ್ಪಟ್ಟ ಕನ್ಹೋಜಿ ಕೊಂಕಣದ ಸಮುದ್ರಮಾರ್ಗದ ಏಕಮೇವಾದ್ವಿತೀಯ ಸರದಾರನಾದವ. ಬ್ರಿಟಿಷ್ ಹಾಗೂ ಪೋರ್ಚುಗೀಸರ ಹಡಗುಗಳನ್ನು ಲೂಟಿ ಹೊಡೆದು, ವಶದಲ್ಲಿಟ್ಟುಕೊಂಡು ಬಗೆಬಗೆಯಾಗಿ ಕಾಡಿದವ. ಮರಾಠರ ನೌಕಾಪಡೆ ಯುರೋಪಿಯನ್ನರಿಗಿಂತ ಹಲವು ಪಟ್ಟು ಮುಂದಿದ್ದುದರಿಂದ ಕಣ್ಕಣ್ಣು ಬಾಯ್ಬಾಯಿ ಬಿಟ್ಟು ನೋಡುವುದನ್ನು ಹೊರತುಪಡಿಸಿದರೆ ಬೇರೇನೂ ಮಾಡುವಂತಿರಲಿಲ್ಲ. ಕೊಂಕಣ ಸಮುದ್ರದಲ್ಲಿ ಅವನಿಗೆ ಸುಂಕ ನೀಡದೇ ಯಾವ ಹಡಗೂ ಚಲಿಸುವಂತಿರಲಿಲ್ಲ. ಬ್ರಿಟೀಷರಿಗೆ ಇದು ದೊಡ್ಡ ತಲೆನೋವಾಗಿತ್ತು. ಇವನಿಗೊಂದು ಗತಿ ಕಾಣಿಸಲು ನಿರ್ಧರಿಸಿ ಬೊಂಬಾಯಿಯಲ್ಲಿದ್ದ ಕಂಪನಿ ದೊಡ್ಡದೊಂದು ದಾಳಿಗೆ ಸಿದ್ಧವಾಯ್ತು. 1718ರಲ್ಲಿ ಕನ್ಹೋಜಿಯ ವಿಜಯದುರ್ಗ ಕೋಟೆಯನ್ನು ಮುತ್ತಿದ ಬ್ರಿಟಿಷರು ಕೇವಲ ನಾಲ್ಕೇ ದಿನಗಳಲ್ಲಿ ಹಿಮ್ಮೆಟ್ಟಬೇಕಾಯಿತು. ಬ್ರಿಟಿಷರು ಹಾಗೂ ಪೋರ್ಚುಗೀಸರು ವಿಜಯದುರ್ಗವನ್ನು ವಶಪಡಿಸಿಕೊಳ್ಳಲು ಬಾರಿ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಉಳಿದ ಯುರೋಪಿಯನ್ನರು ಕನ್ಹೋಜಿಯ ಜೊತೆ ಮೈತ್ರಿ ಮಾಡಿಕೊಂಡು ತೆಪ್ಪಗೆ ಕುಳಿತರೆ ಬ್ರಿಟಿಷರು ಮಾತ್ರ 1722ರಲ್ಲಿ ಇಂಗ್ಲೆಂಡಿನ ರಾಯಲ್ ನೇವಿಯ ಸಹಾಯದಿಂದ ದೊಡ್ಡದೊಂದು ಸೈನ್ಯದೊಂದಿಗೆ ಮತ್ತೊಮ್ಮೆ ವಿಜಯದುರ್ಗವನ್ನು ಮುತ್ತಿದರು. ಆಗಲೂ ಅವರಿಗೆ ಕಾದಿದ್ದು ಸೋಲೇ. ಸೋಲಿಲ್ಲದ ಸರದಾರ ಕನ್ಹೋಜಿ ಆಂಗ್ರೆ 1729ರಲ್ಲಿ ಮೃತಪಟ್ಟ. ಅವನ ಉತ್ತರಾಧಿಕಾರಿಯಾಗಿ ಬಂದ ತುಳಜಿ ಆಂಗ್ರೆಯ ನೇತೃತ್ವದಲ್ಲಿ ಮರಾಠರು ಮತ್ತೆ ಎರಡು ದಶಕಗಳ ಕಾಲ ಬ್ರಿಟಿಷರನ್ನು ಇನ್ನಿಲ್ಲದಂತೆ ಆಟವಾಡಿಸಿದರು. ಅದು ಕೊನೆಗೊಂಡಿದ್ದು 1756ರ ಸುಮಾರಿಗೆ. ಈ ಬಾರಿ ಬ್ರಿಟಿಷರಿಗೆ ನೆರವಾದದ್ದು ಮರಾಠರ ಆಂತರಿಕ ಕದನ. ಭಾರತದಲ್ಲಿ ಮೀರ್‌ಸಾದಿಕ್‌ಗಳಿಗೇನು ಕಡಿಮೆ! ತುಳಜಿ ಆಂಗ್ರೆಗೂ ಬಾಲಾಜಿ ಬಾಜಿರಾವ್ ಪೆಶ್ವೆಗೂ ಇದ್ದ ವೈಮನಸ್ಯ ಹಳೆಯದೇ. ಅದನ್ನೇ ದಾಳವಾಗಿ ಬಳಸಿಕೊಂಡ ಬ್ರಿಟಿಷರು ಮಸಲತ್ತು ರೂಪಿಸಿದರು. ಏಕಕಾಲದಲ್ಲಿ ಬ್ರಿಟಿಷರು ಸಮುದ್ರಮಾರ್ಗದಿಂದಲೂ, ಪೇಶ್ವೆಗಳು ಭೂಮಾರ್ಗದಿಂದಲೂ ವಿಜಯದುರ್ಗವನ್ನು ಮುತ್ತಿದರು. ಅರ್ಧಶತಮಾನಗಳ ಕಾಲ ಬ್ರಿಟಿಷರಿಂದ ಕೂದಲು ಕೊಂಕಿಸಲೂ ಸಾಧ್ಯವಾಗದಷ್ಟು ಅಭೇದ್ಯವಾಗಿದ್ದ ಕೋಟೆ ಮರಾಠರ ಒಳಜಗಳದಲ್ಲಿ ನಾಶವಾಯ್ತು. ಮಹಾರಾಷ್ಟ್ರದಲ್ಲಿ ಪೆಶ್ವೆಗಳ ಪ್ರಾಬಲ್ಯ ಬಹುಕಾಲ ಮುಂದುವರೆದರೂ ಸಮುದ್ರದ ಮೇಲಿನ ಅವರ ಹಿಡಿತ ಆಂಗ್ರೆಯೊಟ್ಟಿಗೇ ಕೊನೆಗೊಂಡಿತು.
       ಅತ್ತ ಕ್ಯಾಥರೀನಳಕಥೆ ಮುಗಿದಿಲ್ಲ. ಕಂಪನಿ ಹಾಗೂ ಕನ್ಹೋಜಿಯ ನಡುವೆ ನಡೆದ ಒಪ್ಪಂದದಂತೆ ಫ಼ೆಬ್ರವರಿ 22, 1713ರಂದು ಕ್ಯಾಥರೀನಳ ಬಿಡುಗಡೆಯಾಯ್ತು. ಈ ಮಾತುಕಥೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಲೆಫ್ಟಿನೆಂಟ್ ಮ್ಯಾಕಿಂತಸ್ ಹಾಗೂ ಒಂದಾನೊಂದು ಕಾಲದಲ್ಲಿ ಕಾರವಾರದಲ್ಲಿ ಸೇನಾನಾಯಕನಾಗಿದ್ದ ಗೈಫರ್ಡ್.  ಗೈಫರ್ಡನಿಗಿನ್ನೂಇಪ್ಪತ್ತೈದು, ಕ್ಯಾಥರಿನ್ನಳಿಗೆ ಇಪ್ಪತ್ತಷ್ಟೆ. ಸ್ವಲ್ಪ ಸಮಯದಲ್ಲೇ ಕ್ಯಾಥರೀನ್ ಗೈಫರ್ಡನನ್ನು ಮದುವೆಯಾದಳು. ಗವರ್ನರಿನ ಖಾಸಾ ಮನುಷ್ಯ ಗೈಫರ್ಡ್ ಬಾಂಬೆ ಮಾರ್ಕೇಟಿನ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ. ಇದಾಗಿ ಎರಡು ವರ್ಷಗಳಲ್ಲಿ ತಿರುವನಂತಪುರದ ಸಮೀಪದ ಅಂಜುತೆಂಗು ಎಂಬ ಸುಪ್ರಸಿದ್ಧ ಬಂದರು ಹಾಗೂ ಕೋಟೆಯ ಮುಖ್ಯಸ್ಥನೂ ಆದ. ಅಂಚುತೆಂಗು ಕೇರಳದಲ್ಲಿ ಬ್ರಿಟಿಷರ ಬಹುಮುಖ್ಯ ಫ್ಯಾಕ್ಟರಿಗಳಲ್ಲಿ ಒಂದಾಗಿತ್ತು. ಮೊದಲು ಪೋರ್ಚುಗೀಸರು, ನಂತರ ಡಚ್ಚರ ಕೈಲಿದ್ದ ಇದನ್ನು ಅಟ್ಟಿಂಗಲ್ಲಿನ ರಾಣಿಯ ಅಶ್ವಥಿ ತಿರುನಾಳ್ ಉಮಯಮ್ಮಾ 1696ರಲ್ಲಿ ಬ್ರಿಟಿಷರಿಗೆ ಹಸ್ತಾಂತರಿಸಿದ್ದಳು. ಇಲ್ಲಿ ಬ್ರಿಟಿಷರು ತಮ್ಮ ವ್ಯವಹಾರದ ಅನುಕೂಲತೆಗೆ ಅಂಜೆಂಗೋ ಎಂಬ ಕೋಟೆಯೊಂದನ್ನು ಕಟ್ಟಿಕೊಂಡು ವ್ಯಾಪಾರ ಶುರುವಿಟ್ಟುಕೊಂಡರು. ಈ ಬೆಳವಣಿಗೆ ಡಚ್ಚರಿಗೆ ಸಹಿಸಲಾಗಲಿಲ್ಲ. ಅವರ ಚಿತಾವಣೆಯಿಂದ ರಾಣಿಗೂ ಬ್ರಿಟಿಷರಿಗೂ ವೈಮನಸ್ಯ ಶುರುವಾಯ್ತು. ಕಟ್ಟುತ್ತಿರುವ ಕೋಟೆಯನ್ನು ಅರ್ಧಕ್ಕೇ ನಿಲ್ಲಿಸುವಂತೆ ರಾಜಾಜ್ಞೆ ಹೊರಬಿತ್ತು. ಬ್ರಿಟಿಷರು ಕಿವಿಗೊಡಲಿಲ್ಲ. ಅದೇ ಸಮಯಕ್ಕೆ, ಅಂದರೆ 1717ರ ಮಳೆಗಾಲದಲ್ಲಿ ಕ್ಯಾಥರೀನ್ ತನ್ನ ಮೂರನೇ ಗಂಡನೊಡನೆ ಅಂಜುತೆಂಗಿಗೆ ಬಂದಿಳಿದಳು. 
ಮುಂದಿನ ಕತೆ ಇನ್ನೊಂದು ಭಾಗದಲ್ಲಿ.
ಅಂಜೆಂಗೋ ಕೋಟೆ

Tuesday, April 2, 2019

ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು – ೨

ಬೇಪೋರ್ ಸೀವಾಕ್
ಬೇಪೋರ್ ಹಾಗೂ ಫೆರೋಕ್. ಕ್ಯಾಲಿಕಟ್ಟಿನ  ದಕ್ಷಿಣಕ್ಕೆ ಸ್ವಲ್ಪ ದೂರದಲ್ಲಿ ಚಾಲಿಯಾಮ್ ನದಿ ಸಮುದ್ರ ಸೇರುವಲ್ಲಿನ ಎರಡು ದಡಗಳು. ಭಾರತದ ಮೊದಲ ಸೀವಾಕ್ ನಿರ್ಮಾಣವಾಗಿದ್ದು ಇಲ್ಲೇ. ಭಾರತದಲ್ಲಿ ಮೊದಲು ಹಡಗು ಕಟ್ಟುವ ತಂತ್ರಜ್ಞಾನ ಶುರುವಾಗಿದ್ದೂ ಇಲ್ಲೇ ಅನ್ನಿ. ಬರೀ ಕಾಳ್ಮೆಣಸಲ್ಲ, ಜಪಾನ್, ಅರಬ್, ಮೆಸಪೋಟಮಿಯಾದಂಥ ದೇಶಗಳಿಗೆ ಸಾವಿರಾರು ವರ್ಷಗಳ ಹಿಂದೇ ಹಡಗುಗಳನ್ನು ರಫ್ತು ಮಾಡಿದ ಖ್ಯಾತಿ ಈ ಪ್ರದೇಶಕ್ಕಿದೆ. ಕೇರಳದ ಅತಿ ಸುಂದರ ಸಮುದ್ರ ತೀರಗಳಲ್ಲಿ ಇದೂ ಒಂದು. ಸುಮಾರು ಒಂದು ಮೈಲಿಯುದ್ದ ಸಮುದ್ರವನ್ನು ಸೀಳಿ ಚಾಚಿಕೊಂಡಿರುವ ಸೀವಾಕ್ನಲ್ಲಿ ನಡೆಯುವ ಮಜವೇ ಬೇರೆ. ಇದು ಚಾಲಿಯಾಂನ ಎರಡೂ ಕಡೆ ನಿರ್ಮಾಣವಾಗಿದೆ. ವಾಸ್ಕೋಡಗಾಮ ಮೊದಲು ಭಾರತಕ್ಕೆ ಕಾಲಿಟ್ಟ ಜಾಗವೆಂದು ನಂಬಲ್ಪಡುವ ಜಾಗವಾದ ಬೇಪೋರ್ ಉತ್ತರದಲ್ಲಿದ್ದರೆ, ದಕ್ಷಿಣದಲ್ಲಿರುವ ಫೆರೋಕ್ ಇನ್ನೊಂದು ವಿಶಿಷ್ಟ ಕಾರಣಕ್ಕಾಗಿ ಹೆಸರುವಾಸಿ. ಕ್ಯಾಲಿಕಟ್ಟಿಗೆ ಹೋದಾಗಲೆಲ್ಲ ಇದೆರಡು ಜಾಗಗಳಿಗೆ ಭೇಟಿ ಕೊಡುವುದನ್ನು ನಾನೆಂದೂ ತಪ್ಪಿಸಿಕೊಳ್ಳುವುದಿಲ್ಲ. 
ಫೆಲೆನಾ ಬ್ಲಾವಟ್ಸ್ಕೈ. ಈ ವಿಚಿತ್ರ ಹೆಸರನ್ನು ಯಾರೂ ಕೇಳಿರಲಿಕ್ಕಿಲ್ಲ. ಈಕೆ ರಷ್ಯದ ತತ್ವಶಾಸ್ತ್ರಜ್ಞೆ ಹಾಗೂ ಲೇಖಕಿ. ಮಾತ್ರವಲ್ಲ ಥಿಯೋಸೋಫಿಕಲ್ ಸೊಸೈಟಿಯ ಸ್ಥಾಪಕರಲ್ಲಿ ಒಬ್ಬಳು ಕೂಡ. ೧೮೮೦ರಲ್ಲಿ ಆಕೆ ಮತ್ತು ಆಕೆಯ ಅಮೇರಿಕನ್ ಗಂಡ ಭಾರತಕ್ಕೆ ಬಂದಿಳಿದರು. ಅಡ್ಯಾರನ್ನು ಕೇಂದ್ರವಾಗಿಟ್ಟುಕೊಂಡು ಆರ್ಯ ಸಮಾಜದೊಟ್ಟಿಗೆ ಹಲ ವರ್ಷಗಳ ಕಾಲ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಫೆಲೆನಾ ದಂಪತಿ ಬೌದ್ಧಧರ್ಮಕ್ಕೆ ಮತಾಂತರಗೊಂಡ ಮೊದಲ ವಿದೇಶಿ  ಕೂಡ. ಥಿಯೋಸೋಫಿಕಲ್ ಸೊಸೈಟಿ ಬಹುಬೇಗ ಜನಪ್ರಿಯಗೊಂಡಿದ್ದರೂ ಆಕೆಯ ಮೇಲೆ ಬಂದ ಕೆಲ ಆಪಾದನೆಗಳಿಂದ ಅದು ಅಷ್ಟೇ ವೇಗವಾಗಿ ಬಾಗಿಲು ಮುಚ್ಚಿಕೊಂಡಿತು. ಇದಾದ ನಂತರ ಯುರೋಪಿಗೆ ತೆರಳಿದ ಫೆಲೆನಾ ಭಾರತದ ಹಲವು ಸಂಗತಿಗಳ ಬಗ್ಗೆ ವಿವರವಾದ ಲೇಖನಗಳನ್ನು ಬರೆದಿದ್ದಾಳೆ. ಅವುಗಳಲ್ಲೊಂದು ಇನ್ಸ್ಟಿಟ್ಯುಟ್ ಆಫ್ ಫ್ರಾನ್ಸ್ ಮುದ್ರಿಸಿದ ’ಸೀಕ್ರೆಟ್ ಡಾಕ್ಟ್ರೈನ್’. ಇದರಲ್ಲಿನ ಚಟ್ಟಮ್ ಪರಂಬ ಅಥವಾ ಸಾವಿನ ಮೈದಾನ ಎಂಬ ಶೀರ್ಷಿಕೆಯಡಿ ಪ್ರಕಟವಾದ ಮಲಬಾರಿನ ಸ್ಥಳದಲ್ಲಿರುವ ಬೃಹತ್ ಶಿಲಾಯುಗದ ಕಾಲದ ಗೋರಿಗಳು, ಅಲ್ಲಿ ಸಿಕ್ಕ ರಾಶಿಗಟ್ಟಲೆ ಮೂಳೆಗಳು, ವೃತ್ತಾಕಾರದ ಶಿಲೆಗಳು, ಪ್ರಾಗೈತಿಹಾಸಿಕ ಬೌದ್ಧ ವಿಹಾರಗಳ ಅವಶೇಷಗಳ ಮಾಹಿತಿಗಳು ಭಾರತೀಯ ಪುರಾತತ್ವಶಾಸ್ತ್ರಜ್ಞರಿಗೆ ಭಾರೀ ಕುತೂಹಲ ಕೆರಳಿಸಿದ್ದವು.  ೧೯೩೧ರಲ್ಲಿ ಡಾ.ಡುಬ್ರೈಲ್ರ ಮುಂದಾಳತ್ವದಲ್ಲಿ ಮಲಬಾರಿನಲ್ಲಿ ನಡೆದ ಉತ್ಖನನ ಕಾರ್ಯದಲ್ಲಿ ಕ್ರಿ.ಪೂ೨೦೦ರ ಸುಮಾರಿನ ನಾಗರಿಕತೆಯ ಮಜಲೊಂದು ಜಗತ್ತಿಗೆ ತೆರೆದುಕೊಂಡಿತು. ಈ ಚಟ್ಟಮ್ ಪರಂಬ ಎಂದು ಆಪಭೃಂಶಿಕವಾಗಿ ಕರೆಯಲ್ಪಟ್ಟದ್ದು ಇದೇ ಫೆರೋಕಿನ ಚೆನ್ನಪರಂಬು. ಆ ಕತೆ ಇನ್ನೊಮ್ಮೆ ನೋಡೋಣ. ಈಗ ಟಿಪ್ಪುವಿನದ್ದು ಮುಂದುವರೆಸಬೇಕಲ್ಲ!
ಹದಿನೆಂಟನೇ ಶತಮಾನದ ಉತ್ತರಾರ್ಧ ದಕ್ಷಿಣ ಭಾರತದ ಚರಿತ್ರೆಯಲ್ಲೊಂದು ಮಹತ್ವದ ಕಾಲಘಟ್ಟ. ಈ ಭಾಗದ ಎರಡು ಅತಿಮುಖ್ಯ ರಾಜ್ಯಗಳಾದ ಕರ್ನಾಟಿಕ್ ಹಾಗೂ ಮೈಸೂರು ರಾಜಕೀಯ ಕ್ಷೋಭೆ ಮತ್ತು ಆರ್ಥಿಕ ದಿವಾಳಿತನಕ್ಕೆ ಈಡಾಗುವ ಹಂತದಲ್ಲಿದ್ದವು. ಇಂತಹ ಗೊಂದಲಕಾರಿ ಪರಿಸ್ಥಿತಿಯ ಲಾಭವನ್ನು ಆಯಕಟ್ಟಿನ ಜಾಗೆಯಲ್ಲಿರುವ ಯಾವುದೇ ಮಹತ್ವಾಕಾಂಕ್ಷಿ ಪಡೆಯದೇ ಬಿಟ್ಟಾನೇ? ಹೈದರಾಲಿ ಮಾಡಿದ್ದೂ ಅದೇ. ಆತನ ಪ್ರಬಲ ಮಿಲಿಟರಿ ಬಲ ಹಾಗೂ ದೂರದೃಷ್ಟಿ ೧೭೬೧ರಲ್ಲಿ ಮೈಸೂರಿನ ಗದ್ದುಗೆಯವರೆಗೆ ತಂದು ಕೂರಿಸಿತು. ಸಿಂಹಾಸನ ಸಿಕ್ಕ ಮೇಲೆ ಬರೀ ತನ್ನ ರಾಜ್ಯವೊಂದು ಸಾಕಾದೀತೇ? ಆತನ ಕಣ್ಣು ಅಕ್ಕಪಕ್ಕದ ರಾಜ್ಯಗಳ ಮೇಲೂ ಬಿತ್ತು. ಇನ್ನೇನು! ಸ್ವಲ್ಪವೂ ತಡಮಾಡದೇ ಸಾಮ್ರಾಜ್ಯ ವಿಸ್ತಾರದ ಕೆಲಸ ಶುರುವಿಟ್ಟುಕೊಂಡ. ೧೭೬೩ರಲ್ಲಿ ಬಿದನೂರಿನ ವಶ ಆತನನ್ನು ಕೇರಳದ ಗಡಿಯವರೆಗೆ ತಂದು ನಿಲ್ಲಿಸಿತ್ತು. ಕೇರಳದಲ್ಲಿ ಒಂದು ಪ್ರಬಲ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇಲ್ಲದೇ ಹೋಗಿದ್ದು ಕೂಡ ಹೈದರನಿಗೆ ವರವಾಗಿ ಪರಿಣಮಿಸಿತು. ಆ ಕಾಲಕ್ಕೆ ಕೇರಳ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಹಂಚಿ ಹೋಗಿತ್ತು. ಅವೇ ಕಲ್ಲೀಕೋಟೆ, ಕೊಲತ್ತನಾಡು, ಕೊಚ್ಚಿ ಹಾಗೂ ತ್ರಾವೆಂಕೂರು. ಅದೂ ಅಲ್ಲದೇ ಕಣ್ಣೂರು, ಪಾಲ್ಘಾಟ್,  ಕುರುಂಬನಾಡು, ಕೊಟ್ಟಾಯಂನಂಥ ಸಣ್ಣಪುಟ್ಟ ಪಾಳೆಪಟ್ಟುಗಳೂ ಹತ್ತಾರಿದ್ದವು. ಅಂದಕಾಲತ್ತಿಲೈ ಕಾಲದಿಂದಲೂ ಕೇರಳದ ಅರಸೊತ್ತಿಗೆಗಳೆಲ್ಲ ತಮ್ಮತಮ್ಮಲ್ಲೇ ದುಸುಮುಸು ಎಂದು ಸಣ್ಣಪುಟ್ಟ ಜಗಳವಾಡಿಕೊಂಡಿದ್ದವೇ ಹೊರತೂ ಅವು ಮೂಲತಃ ಹೊರಗಿನ ಯಾರ ಮೇಲೂ ಏರಿ ಹೋದವಲ್ಲ. ಭಾರತಕ್ಕೆ ಯಹೂದಿಗಳೂ, ಕ್ರೈಸ್ತರೂ, ಮುಸ್ಲೀಮರೂ ಮೊದಲು ಆಗಮಿಸಿದ್ದು ಕೇರಳದ ಮೂಲಕವೇ ಅಲ್ಲವೇ.  ಅವರೆಲ್ಲ ಆ ಸಂಸ್ಕೃತಿಯಲ್ಲಿ ಬೆರೆತುಹೋದರೇ ವಿನಹ ಯಾರೂ ಯಾರ ಮೇಲೂ ಆಕ್ರಮಣ ಮಾಡಿದವರಲ್ಲ. ಹಾಗಾಗಿ ಕೇರಳ ಪ್ರಬಲ ಮಿಲಿಟರಿ ಶಕ್ತಿಯಾಗಿ ಇತಿಹಾಸದಲ್ಲಿ ಬೆಳೆದ ಯಾವ ದಾಖಲಾತಿಗಳೂ ಇಲ್ಲ. ಹೆಚ್ಚಿನಂಶ ಆ ಅವಶ್ಯಕತೆಯೇ ಅವರಿಗಿರಲಿಲ್ಲ ಎನ್ನಿ. ಇದೇ ಕಾರಣದ ಜೊತೆಗೆ ಮಲಬಾರಿನ ಕಣ್ಣುಕುಕ್ಕುವ ಶ್ರೀಮಂತಿಕೆ, ಸಮುದ್ರವ್ಯಾಪಾರಗಳೆಲ್ಲ ಸೇರಿ ಹೈದರನನ್ನು ಕೇರಳದ ಮೇಲೆ ಆಕ್ರಮಣ ಮಾಡುವಲ್ಲಿ ಪ್ರಚೋದಿಸಿದ್ದು ಸ್ವಾಭಾವಿಕವೇ. 
೧೭೬೬ರಲ್ಲಿ ಹೈದರ್ ತನ್ನ ಹನ್ನೆರಡು ಸಾವಿರ ಸೈನಿಕರೊಡನೆ ಮಲಬಾರಿನತ್ತ ಹೊರಟ. ಕಣ್ಣೂರನ್ನಾಳುತ್ತಿದ್ದ ಅಲಿರಾಜನ ಕಥೆ ನಿಮಗೆ ಗೊತ್ತೇ ಇದೆ. ಕೇರಳದ ಏಕೈಕ ಮುಸ್ಲಿಂ ರಾಜವಂಶವದು. ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಹೈದರನಿಗೆ ಸರ್ವಸಹಾಯವನ್ನೂ ಅಲಿರಾಜ ಒದಗಿಸಿದ. ಜಾತಿಯ ಕಾರಣಕ್ಕೆ ಕೆಲ ಸ್ಥಳೀಯ ಮಾಪಿಳ್ಳೆಗಳ ಸಹಾಯವೂ ಒಟ್ಟಿಗಿತ್ತು. ಮತ್ತೇನು ಬೇಕು? ನೋಡನೋಡುತ್ತಿದ್ದಂತೆ ಕೊಲತ್ತನಾಡು, ಕೊಟ್ಟಾಯಂ,  ಕಡತ್ತನಾಡು, ಕುರುಂಬನಾಡು, ಕೊಟ್ಟಾಯಂಗಳನ್ನು ಒಂದರ ಹಿಂದೊಂದರಂತೆ ವಶಪಡಿಸಿಕೊಂಡ ಮೈಸೂರು ಪಡೆ ಕಲ್ಲಿಕೋಟೆಯ ಬಾಗಿಲಲ್ಲಿ ನಿಂತಿತ್ತು. ತನ್ನ ಪರಿವಾರದವರನ್ನು ತ್ರಾವೆಂಕೂರಿಗೆ ಕಳಿಸಿದ ಸಾಮೂದಿರಿ ರಾಜ ಅರಮನೆಗೆ ಬೆಂಕಿಯಿಟ್ಟು ಆತ್ಮಹತ್ಯೆ ಮಾಡಿಕೊಂಡ. ಯುದ್ಧವಿಲ್ಲದೇ ಕಲ್ಲಿಕೋಟೆ ಮೈಸೂರಿನ ತೆಕ್ಕೆ ಸೇರಿತು.  ಸಾಮೂದಿರಿಗಳ ಕೊನೆಯೊಂದಿಗೆ ಮಲಬಾರಿನ ವಿದೇಶಿ ವ್ಯಾಪಾರದ ಸಂಪೂರ್ಣ ಹಿಡಿತ ಹೈದರನ ಕೈಸೇರಿತು. ಇದೇ ಸಂಬಂಧ ವಡಗರದಲ್ಲಿ ವಸಾಹತೊಂದನ್ನು ನಿರ್ಮಿಸಲಾಯಿತು. ಮರಾಠರನ್ನು ನಿಯಂತ್ರಿಸುವ ಕೆಲಸವಿದ್ದುದರಿಂದ ಆತ ಕೇರಳದಲ್ಲಿ ಹೆಚ್ಚು ಸಮಯ ಕಳೆಯಬಯಸಲಿಲ್ಲವಿರಬೇಕು. ತನ್ನ ಮಂತ್ರಿ ಮಾದಣ್ಣನನ್ನು ಮಲಬಾರಿನ ರಾಜ್ಯಪಾಲನಾಗಿ ನೇಮಿಸಿದ ಹೈದರ್ ಕೊಯಂಬತ್ತೂರಿನತ್ತ ತೆರಳಿದ. ಕೊಲತ್ತನಾಡು, ಕಲ್ಲಿಕೋಟೆಯ ಅನುಪಸ್ಥಿತಿಯಲ್ಲಿ ಕಣ್ಣೂರಿನ ಅಲಿರಾಜರು ಉತ್ತರ ಕೇರಳದ ಪ್ರಬಲ ಶಕ್ತಿಯಾಗಿ ಉದಯಿಸಲು ಈ ಘಟನೆ ಸಹಾಯಕವಾಯ್ತು.
ಆದರೆ ಅಷ್ಟೊತ್ತಿಗೆ ಇನ್ನೊಂದು ಸಮಸ್ಯೆ ಶುರುವಾಯಿತು. ಕೊಟ್ಟಾಯಂ ಹಾಗೂ ಕಡತ್ತನಾಡುಗಳಲ್ಲಿ ನಾಯರ್ ಯೋಧರು ಮೈಸೂರಿನ ವಿರುದ್ಧ ಸಾಮೂಹಿಕವಾಗಿ ಬಂಡೆದ್ದರು. ಕೊಟ್ಟಾಯಂನಿಂದ ನಾಲ್ಕು ಸಾವಿರ ಬಲದ ಹೈದರನ ಸೈನ್ಯವನ್ನು ಜನರೇ ಒಟ್ಟುಗೂಡಿ ಒದ್ದೋಡಿಸಿದರು. ಇದು ಪೊನ್ನಾನಿ ಸೇರಿ ಮಲಬಾರಿನ ಉಳಿದ ಭಾಗಗಳಿಗೂ ವ್ಯಾಪಿಸಿತು. ಅದೃಷ್ಟವಶಾತ್ ಮಾದಣ್ಣನ ರಾಜತಾಂತ್ರಿಕತೆ ಹೈದರನ ಸಹಾಯಕ್ಕೆ ಬಂದಿತು. ಅಲಿರಾಜನಿಗೆ ತೊಂದರೆ ಕೊಡಬಾರದು, ಪಾಲ್ಘಾಟಿನ ಕೋಟೆಯನ್ನು ವಶಪಡಿಸಿಕೊಳ್ಳಬಾರದು ಎಂಬ ಎರಡು ಕೋರಿಕೆಗಳನ್ನಿಟ್ಟು ೧೭೬೮ರಲ್ಲಿ ಹೈದರನ ಸೈನ್ಯ ಮಲಬಾರಿನಿಂದ ಕಾಲ್ಕಿತ್ತಿತು. ಸಾಮೂದಿರಿ, ಕೊಳತ್ತಿರಿ ಹಾಗೂ ಕೊಟ್ಟಾಯಂ ಅರಸರು ತಮ್ಮ ರಾಜ್ಯಕ್ಕೆ ಹಿಂದಿರುಗಿದರು. ಇದಾಗಿ ಆರು ವರ್ಷ ಹೈದರ ಕೇರಳದತ್ತ ಹೈದರ್ ತಲೆಹಾಕಲಿಲ್ಲ.  ಇಷ್ಟಾದರೂ ಮಲಬಾರಿಗಳು ಪಾಠಕಲಿಯಲಿಲ್ಲ. ತಮ್ಮ ಸೈನ್ಯಬಲವನ್ನು ಹೆಚ್ಚಿಸಿಕೊಳ್ಳುವುದನ್ನು ಬಿಟ್ಟು ಇನ್ನು ಹೈದರನ ಕಾಟವಿಲ್ಲವೆಂದು ಆರಾಮಾಗಿ ಕಾಲಕಳೆಯುವ ಮಲಯಾಳಿಗಳ ಹಳೆಯ ಚಾಳಿ ಮುಂದುವರೆಯಿತು. ತ್ರಿಪ್ಪರಯೂರಿನ ದೇವಸ್ಥಾನವೊಂದಕ್ಕೆ ಯಾರನ್ನು ಅರ್ಚಕರಾಗಿ ನೇಮಿಸಬೇಕೆಂಬ ಕ್ಷುಲ್ಲಕ ವಿಷಯಕ್ಕೆ ಸಾಮೂದಿರಿಯೂ ಕೊಚ್ಚಿಯ ಪೆರುಂಪಡಪ್ಪು ರಾಜನೂ ಕಿತ್ತಾಡಿ ಒಬ್ಬರ ಮುಖ ಇನ್ನೊಬ್ಬರು ನೋಡುವುದನ್ನು ಬಿಟ್ಟರು. 
೧೭೭೩ರಲ್ಲಿ ಕೊಡಗನ್ನು ಗೆದ್ದ ಹೈದರನಿಗೆ ವಯನಾಡಿನ ಮೂಲಕ ಕೇರಳ ಸುಲಭದ ತುತ್ತಾಗಿತ್ತು. ಒಂದು ಕಡೆ ಸಯೀದ್ ಸಾಹಿಬನ ನೇತೃತ್ವದಲ್ಲಿ ತಾಮ್ರಶ್ಶೇರಿ ಘಟ್ಟದ ಮಾರ್ಗವಾಗಿ ಇನ್ನೊಂದು ಕಡೆ ಶ್ರೀನಿವಾಸ ರಾಯನ ಮುಂದಾಳತ್ವದಲ್ಲಿ ಕೊಯಂಬತ್ತೂರು, ಪಾಲ್ಘಾಟಿನ ಮಾರ್ಗವಾಗಿ ಬಂದ ಹೈದರನ ಪಡೆ ಮಲಬಾರನ್ನು ಎರಡೂ ಕಡೆಯಿಂದ ಮುತ್ತಿತು. ಅದಾಗಲೇ ಫ್ರೆಂಚರೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಹೈದರನಿಗೆ ಅತ್ಯಾಧುನಿಕ ಯುದ್ಧಸಲಕರಣೆಗಳೂ ದೊರಕಿದ್ದವು. ಮಲಬಾರನ್ನು ಮುಗಿಸಿದ ಬಳಿಕ ಆತನ ಮುಂದಿನ ಗುರಿಯಿದ್ದುದು ಕೊಚ್ಚಿ. ಸರ್ದಾರ್ ಖಾನಿನ ಜೊತೆ ಕಳಿಸಲ್ಪಟ್ಟ ದೊಡ್ಡದೊಂದು ಸೈನ್ಯ ತ್ರಿಶ್ಶೂರಿನ ತನಕದ ರಾಜ್ಯಗಳನ್ನೆಲ್ಲ ಕಬಳಿಸಿತು. ಪರಿಸ್ಥಿತಿ ಕೈಮೀರುತ್ತಿರುವ ಸೂಚನೆ ಸಿಕ್ಕ ಕೊಚ್ಚಿ ರಾಜ ಹೈದರನಿಗೆ ಕಪ್ಪ ಕೊಡಲು ಒಪ್ಪಿಕೊಂಡ. ಹೈದರನ ಮುಂದಿನ ಗುರಿಯಿದ್ದುದು ತ್ರಾವೆಂಕೂರು. ಕೊಚ್ಚಿಯನ್ನು ದಾಟಿ ಚೆಟ್ಟುವಾಯಿ, ಪಾಪ್ಪಿನಿವಟ್ಟಂಗಳಲ್ಲಿನ ಡಚ್ಚರ ವಸಾಹತುಗಳನ್ನು ವಶಪಡಿಸಿಕೊಂಡು, ಕೊಡಂಗಾಲ್ಲೂರು ರಾಜನನ್ನು ಸೋಲಿಸಿ  ಮುಂದುವರೆದ ಮೈಸೂರಿನ ಪಡೆಗಳನ್ನು ಸಮರ್ಥವಾಗಿ ಎದುರಿಸಿದವನು ತ್ರಾವೆಂಕೂರಿನ ರಾಜಾ ಕೇಶವದಾಸ. ಐದು ವರ್ಷ ಭಗೀರತ ಯತ್ನ ಮಾಡಿದರೂ ತ್ರಾವೆಂಕೂರಿನ ಕೂದಲು ಕೊಂಕಿಸಲೂ ಮೈಸೂರಿಗಾಗಲಿಲ್ಲ. ಇದರ ಮಧ್ಯೆ ಇಂಗ್ಲೀಷರು ಮಾಹೆ ಮತ್ತು ತಲಶೇರಿಯನ್ನು ಪುನಃ ಕೈವಶಮಾಡಿಕೊಂಡುಬಿಟ್ಟರು. ಒಂದೂವರೆ ವರ್ಷ ಬರಿ ಅವರೊಡನೆ ಗುದ್ದಾಡುವುದರಲ್ಲೇ ಹೈದರ ಕಳೆದ. ಅದಕ್ಕಾಗಿ ಆತನಿಗೆ ದೊಡ್ಡಮೊತ್ತದ ಹಣದ ಅವಶ್ಯಕತೆ ಬಿತ್ತು. ಅತ್ತ ರಟ್ಟಿಹಳ್ಳಿಯ ಹತ್ತಿರ ನಡೆದ ಕದನದಲ್ಲಿ ಮರಾಠರಿಗೆ ಸೋತು ೩೫ ಲಕ್ಷ ಕಪ್ಪ ಕೊಡಬೇಕಾಗಿ ಬಂದುದರಿಂದ ಬೊಕ್ಕಸ ಬರಿದಾಗಿತ್ತು.ಪರಿಣಾಮವಾಗಿ ಅತಿಕ್ರೂರ ತೆರಿಗೆ ಪದ್ಧತಿಯನ್ನು ಮಲಬಾರಿನ ಹಿಂದೂಗಳ ಮೇಲೆ ಹೇರಲಾಯಿತು. ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಮಲಬಾರಿನ ಇತಿಹಾಸದಲ್ಲಿ ಮೊದಲ ಬಾರಿ ಅಧಿಕೃತ ಭೂಕಂದಾಯದ ವ್ಯವಸ್ಥೆ ಜಾರಿಯಾಗಿದ್ದು ಹೈದರನ ಕಾಲದಲ್ಲೇ. ತ್ರಾವೆಂಕೋರ್, ಕಲ್ಲಿಕೋಟೆ, ಕೊಚ್ಚಿನ್ ಸಂಸ್ಥಾನಗಳಲ್ಲೆಲ್ಲ ಅಲ್ಲಿನ ಜನ ಗೌರವಪೂರ್ವಕವಾಗಿ ರಾಜನಿಗೆ ಕೊಡುತ್ತಿದ್ದುದು ವರ್ಷಕ್ಕಿಂತಿಷ್ಟೆಂದು ರಕ್ಷಣಾ ನಿಧಿ ಮಾತ್ರ. ಇಂಥದ್ದರಲ್ಲಿ ಇದ್ದಕ್ಕಿದ್ದಂತೆ ಮಲಬಾರಿನಲ್ಲಿ ಭೂಕಂದಾಯ, ಆದಾಯ ತೆರಿಗೆಗಳೆಲ್ಲ ಒಟ್ಟೊಟ್ಟಿಗೆ ಜಾರಿಗೆ ಬಂದವು. ಅದರಲ್ಲೂ ಹಿಂದೂಗಳು ಆದಾಯದ ೫೦% ಕಂದಾಯ ಕಟ್ಟಬೇಕಾಗಿದ್ದರೆ ಮುಸ್ಲಿಮರಿಗೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಯಿತು. ಆದರಿದು ಬಹಳ ಕಾಲ ನಡೆಯಲಿಲ್ಲ.  ಮಲಬಾರಿನ ಸಣ್ಣಪುಟ್ಟ ಆಳರಸರೆಲ್ಲ ಇಂಗ್ಲೀಷರ ಜೊತೆ ಕೈಜೋಡಿಸಿ ಮೈಸೂರಿನ ಸೈನ್ಯವನ್ನು ಮತ್ತೊಮ್ಮೆ ಕೇರಳದಿಂದ ಕಾಲ್ಕೀಳುವಂತೆ ಮಾಡುವಲ್ಲಿ ಬಹುಮಟ್ಟಿಗೆ ಯಶಸ್ವಿಯಾದವು. ಅಳಿದುಳಿದ ಕೋಟೆಗಳನ್ನು ರಕ್ಷಿಸಿಕೊಳ್ಳಲು ಟಿಪ್ಪು ಕೇರಳಕ್ಕೆ ಬಂದಿಳಿಯುತ್ತಿದ್ದಂತೆ ಅತ್ತ ಹೈದರನೂ ಮೃತಪಟ್ಟ(೧೭೮೨ ಡಿಸೆಂಬರ್ ೭). ರಾಜ್ಯ ಕೈಜಾರಬಹುದೆಂಬ ಹೆದರಿಕೆಯಿಂದ ಹೈದರನ ಆಪ್ತವಲಯ ಹೊರಜಗತ್ತಿಗೆ ವಿಷಯ ತಿಳಿಸದೇ ಟಿಪ್ಪುವಿಗೆ ಮಾತ್ರ ಗುಪ್ತ ಸಂದೇಶ ಕಳುಹಿಸಿತು. ಮಲಬಾರಿನ ದಂಗೆಯನ್ನಡಗಿಸಲು ಬಂದವ ಸಿಂಹಾಸನ ತಪ್ಪಿದರೆ ಎಂಬ ಹೆದರಿಕೆಯಿಂದ ಓಡೋಡಿ ಹೋಗಿ ಕುರ್ಚಿ ಹತ್ತಿ ಕೂತ. ಸರ್ ಅಯರ್ ಕೂಟ್ ನಿವೃತ್ತನಾಗಿ ಹೊಸ ಎಳೆನಿಂಬೆಕಾಯಿ ಬ್ರಿಟಿಷ್ ಅಧಿಕಾರಿ ಬಂದಿದ್ದರಿಂದ ಸಂದರ್ಭವನ್ನುಪಯೋಗಿಸಿಕೊಳ್ಳುವ ಅವಕಾಶ ಬ್ರಿಟಿಷರಿಗೂ ತಪ್ಪಿಹೋಯ್ತು. ಹೈದರನ ಮರಣಕಾಲಕ್ಕೆ ಮೈಸೂರು ದಕ್ಷಿಣ ಭಾರತದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿತ್ತು. ಹೈದರನನ್ನು ತೆಗಳಲು ಸಾವಿರ ಕಾರಣಗಳಿರಬಹುದು. ಆದ ಹುಟ್ಟಾ ದರಿದ್ರನಾದ ಹೆಬ್ಬೆಟ್ಟು ಹೈದನೊಬ್ಬ ತನ್ನ ಅಪ್ರತಿಮ ಮಹತ್ವಾಕಾಂಕ್ಷೆ, ಅದಮ್ಯ ಶಕ್ತಿಯಿಂದ ಅಷ್ಟು ದೊಡ್ಡ ಸಾಮ್ರಾಜ್ಯವೊಂದಕ್ಕೆ ಒಡೆಯನಾದದ್ದು ಖಂಡಿತ ಮೆಚ್ಚತಕ್ಕ ವಿಷಯ. He was a self made man. ತನ್ನ ಬುದ್ಧಿವಂತಿಕೆ, ಯುದ್ಧಕೌಶಲ, ರಾಜತಾಂತ್ರಿಕತೆಯ ಮೂಲಕ ಆತ ಸಾಧಿಸಿದ ವಿಜಯಗಳು ಭಾರತೀಯ ಇತಿಹಾಸಕ್ಕೆ ಸಾಹಸಮಯ ಅಧ್ಯಾಯವೊಂದನ್ನು ಸೇರಿಸಿದ ಅಗ್ಗಳಿಕೆಯಂತೂ ಹೌದು. 
ಪಾಲಕ್ಕಾಡ್ ಕೋಟೆ
ಟಿಪ್ಪು ಪಟ್ಟಕ್ಕೇರಿದ್ದಷ್ಟೆ. ಮೈಸೂರಿನೊಳಗಿನ ಬಂಡಾಯವನ್ನು ಥಂಡಾಗೊಳಿಸಲು ಆತ ಸಾಕಷ್ಟು ಒದ್ದಾಡಬೇಕಾಯಿತು. ಬ್ರಿಟಿಷರು ಬಿಡುತ್ತಾರೆಯೇ? ಸಮಯ ನೋಡಿ ಬಿದನೂರು ಹಾಗೂ ಮಂಗಳೂರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ದಕ್ಷಿಣದಿಂದಲೂ ಆಕ್ರಮಿಸಿ ಪಾಲ್ಘಾಟಿನ ಕೋಟೆಯನ್ನೂ ವಶಪಡಿಸಿಕೊಂಡು ಸಾಮೂದಿರಿಗೆ ಬಿಟ್ಟುಕೊಟ್ಟರು. ಈ ಘಟನೆ ಟಿಪ್ಪುವನ್ನು ಕೆರಳಿಸಿದ್ದಲ್ಲದೇ ಮಲಬಾರಿನ ಮೇಲೆ ಮತ್ತೊಮ್ಮೆ ದಾಳಿ ಮಾಡುವ ಅವಕಾಶವನ್ನು ಒದಗಿಸಿತು. ತಾನೇ ಮುಂದೆ ನಿಂತು ಯುದ್ಧ ಸಂಘಟಿಸಿದವ ಪಾಲ್ಘಾಟಿನ ಮೇಲೆ ಆಕ್ರಮಣವೆಸಗಿಯೇ ಬಿಟ್ಟ. ಈಬಾರಿ ಇದನ್ನು ಮೊದಲೇ ಊಹಿಸಿದ್ದ ಸಾಮೂದಿರಿ ಟಿಪ್ಪುವನ್ನು ಸಮರ್ಥವಾಗಿ ಎದುರಿಸಿದ. ಟಿಪ್ಪುವಿಗೆ ಕೂಟನೀತಿಗಳಿಗೇನು ಬರವೇ? ಸಾಮೂದಿರಿಯನ್ನು ಮಣಿಸಲು ಅವನಿಗೆ ಬೇರೆ ದಾರಿಗಳೂ ಇದ್ದವು. ಪಾಲಕ್ಕಾಡ್ ಬ್ರಾಹ್ಮಣರನ್ನೆಲ್ಲ ಹಿಡಿದು ತರುವಂತೆ ತನ್ನ ಸೈನಿಕರಿಗೆ ಆದೇಶಿಸಿದ. ಹಾಗೆ ಹಿಡಿದು ತಂದವರನ್ನು ದಿನಕ್ಕಿಂತಿಷ್ಟು ಎಂಬಂತೆ ಪಾಲ್ಘಾಟ್ ಕೋಟೆಯ ಎದುರು ನಿಲ್ಲಿಸಿ ಸಾಮೂದಿರಿ ಹಾಗೂ ಊರವರಿಗೆ ಕಾಣುವಂತೆ ಸಾಲಾಗಿ ತಲೆಕಡಿಸಿ ದೊಡ್ಡ ಬಿದಿರು ಗಳಗಳಿಗೆ ತೂಗಿಹಾಕಿದ. ಸಾಮೂದಿರಿ ಅಂಥ ಬರ್ಬರತೆಯನ್ನು ಕಣ್ಣಾರೆ ನೋಡುವುದಕ್ಕಿಂದ ಕೋಟೆ ಬಿಟ್ಟುಕೊಡುವುದೇ ಉಚಿತವೆಂದು ಭಾವಿಸಿದ. ತನ್ನ ಕಡೆಯ ನಾಲ್ಕು ಸೈನಿಕರೂ ಸಾಯದೇ ಕೊಟ್ಟ ನದಿಯವರೆಗಿನ ಪ್ರದೇಶ ಟಿಪ್ಪುವಿನ ಕೈವಶವಾಯ್ತು. ಮುಂದೆ ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಂಧಿಯಂತೆ ಬ್ರಿಟಿಷರು ಮಲಬಾರಿನ ಮೇಲಿದ್ದ ತಮ್ಮ ಅಧಿಪತ್ಯವನ್ನು ಟಿಪ್ಪುವಿಗೆ ಬಿಟ್ಟುಕೊಟ್ಟರು. ಅಲ್ಲಿಂದ ಶುರುವಾಗಿದ್ದು ಕೇರಳ ಕನಸುಮನಸ್ಸಿನಲ್ಲೂ ಯೋಚಿಸದಿದ್ದ ಕರಾಳ ಅಧ್ಯಾಯ. ಟಿಪ್ಪು ಮಾಡಿದ ಮೊದಲ ಕೆಲಸವೆಂದರೆ ಹೈದರನ ಕಾಲದಿಂದಿದ್ದ ದೇವಸ್ಥಾನಗಳ ತೆರಿಗೆ ವಿನಾಯಿತಿ ರದ್ದುಗೊಳಿಸಿದ್ದು ಹಾಗೂ ಆದಾಯದಲ್ಲಿ ಮುಕ್ಕಾಲು ಪಾಲು ಕಡ್ಡಾಯವಾಗಿ ತೆರಿಗೆ ಕಟ್ಟಬೇಕೆಂದು ಕಟ್ಟಾಜ್ಞೆಯನ್ನು ಹೊರಡಿಸಿದ್ದು. ಅಷ್ಟು ಮಾತ್ರವಲ್ಲ. ಕಂಡಕಂಡವರನ್ನು ಸಿಕ್ಕಸಿಕ್ಕಲ್ಲಿ ಮತಾಂತರಿಸಲಾಯ್ತು. ಪರಪ್ಪನಾಡು, ನಿಲಂಬೂರು, ಚಿರಕ್ಕಲ್, ಪುನ್ನತ್ತೂರು, ಕವಲಪಾರಾ, ಅಲವಂಚೇರಿ, ತ್ರಿಂಚೆರದ ಆಳರಸರನ್ನು ಪರಿವಾರ ಸಮೇತ ಹಿಡಿದು ಸುನ್ನತ್ ಮಾಡಿಸಿ, ದನದ ಮಾಂಸ ತಿನ್ನಿಸಿ ಇಸ್ಲಾಮಿಗೆ ಮತಾಂತರಿಸಿಬಿಟ್ಟ. ಏಳುಸಾವಿರ ಮನೆಗಳಿದ್ದ ಕಲ್ಲಿಕೋಟೆ ಪಟ್ಟಣದಲ್ಲಿ ಒಂದು ಮನೆಯೂ ಉಳಿಯದಂತೆ ನೆಲಸಮ ಮಾಡಲಾಯ್ತು. ಕಲ್ಲೀಕೋಟೆಯೊಂದರಲ್ಲೇ ಹನ್ನೆರಡು ಸಾವಿರ ಹಿಂದೂಗಳಿಗೆ ಇಸ್ಲಾಮಿನ ಗೌರವವನ್ನು ಪ್ರದಾನಮಾಡಿದ್ದಾಗಿಯೂ(!?), ಐದು ಸಾವಿರ ನಂಬೂದಿರಿಗಳನ್ನು ಕೊಂದು ಮರಕ್ಕೆ ನೇತು ಹಾಕಲಾಯ್ತೆಂದೂ ಟಿಪ್ಪು ಪತ್ರಗಳಲ್ಲಿ ಸ್ವತಃ ಬರೆದುಕೊಂಡಿದ್ದಾನೆ(ಜನವರಿ ೧೮,೧೭೯೦ರಂದು ಸಯದ್ ಅಬ್ದುಲ್ ದುಲಾಯಿ, ಮಾರ್ಚ್ ೨೨, ೧೭೮೮ರಂದು ಕಟ್ಟಂಚೇರಿ ಅಬ್ದುಲ್ ಖಾದರ್, ಡಿಸೆಂಬರ್ ೧೪, ೧೭೮೮ರಂದು ಬದ್ರೊಸ್ ಸಮಾನ ಖಾನರಿಗೆ ಬರೆದದ್ದು). ಆತನೇ ಬರೆದುಕೊಂಡಂತೆ ಮಲಬಾರಲ್ಲಿ ಅಧಿಕೃತವಾಗಿ ಮತಾಂತರಗೊಂಡ ಹಿಂದೂಗಳ ಸಂಖ್ಯೆ ಬರೋಬ್ಬರಿ ನಾಲ್ಕು ಲಕ್ಷ. ಅದಕ್ಕೊಪ್ಪದವರನ್ನು ಆನೆಯ ಕಾಲ್ಕೆಳಗೆ ತುಳಿಸಿ ಕೊಲ್ಲಲಾಯ್ತು. ಫ್ರೆಂಚ್ ಕಮಾಂಡರ್ ಲಲ್ಲಿಯ ನೇತೃತ್ವದಲ್ಲಿ ಮೂವತ್ತು ಸಾವಿರ ಸೈನಿಕರು ಹಗಲು ರಾತ್ರಿಯೆನ್ನದೇ ಮಲಬಾರಿನ ಒಂದು ಮನೆಯನ್ನೂ ಬಿಡದೇ ಒಂದೋ ಮತಾಂತರಿಸಲಾಯ್ತು ಇಲ್ಲವೇ ಕೊಲ್ಲಲಾಯ್ತು. ಮೂವತ್ತು ಸಾವಿರ ನಂಬೂದಿರಿಗಳು ತಮ್ಮ ಜೀವವನ್ನೂ, ಧರ್ಮವನ್ನೂ ಉಳಿಸಿಕೊಳ್ಳಲು ಮನೆಮಾರುಗಳನ್ನು ಬಿಟ್ಟು ತ್ರಾವೆಂಕೋರಿಗೆ ಓಡಿಹೋಗಿ ಧರ್ಮರಾಜ ರಾಜಾರಾಮವರ್ಮನ ಆಶ್ರಯ ಪಡೆದರು. ಜೀವವೊಂದು ಉಳಿದರೆ ಸಾಕೆಂದು ಕೆಲವರು ಮತಾಂತರಗೊಂಡು ಮಲಬಾರಿನಲ್ಲೇ ಉಳಿದರು. ಬ್ರಾಹ್ಮಣರನ್ನೆಲ್ಲ ಮುಗಿಸಿದ ಬಳಿಕ ಆತನ ಸಿಟ್ಟು ತಿರುಗಿದ್ದು ನಾಯರ್ ಸಮುದಾಯದ ಮೇಲೆ. ಅದಕ್ಕೊಂದು ಕಾರಣವೂ ಇತ್ತು. ಕಲ್ಲೀಕೋಟೆಯಲ್ಲಿ ಝಾಮೋರಿನ್ನಿನ ಸೋದರಳಿಯ ರವಿವರ್ಮ ಸ್ಥಳೀಯ ನಾಯರ್ ಯೋಧರ ಸಹಾಯದಿಂದ ಮೈಸೂರು ಪಡೆಯ ವಿರುದ್ಧ ಗೆರಿಲ್ಲಾ ಯುದ್ಧ ಶುರುಮಾಡಿದ. ಜಪ್ಪಯ್ಯ ಎಂದರೂ ರವಿವರ್ಮನನ್ನು ಹಿಡಿಯಲು ಟಿಪ್ಪುವಿನಿಂದಾಗಲಿಲ್ಲ. ಅದೇ ಸಮಯಕ್ಕೆ ಕಡತ್ತನಾಡು ಹಾಗೂ ಕೊಟ್ಟಾಯಂನ ಪಳಸ್ಸಿರಾಜರು ಮೈಸೂರಿನ ವಿರುದ್ಧ ಯುದ್ಧ ಘೋಷಿಸಿದರು. ಪಾಲಕ್ಕಾಡಿನಿಂದ ಕೊಟ್ಟಾಯಂನ ತನಕ ಒಬ್ಬ ನಾಯರ್ ಯುವಕನ ತಲೆಯೂ ಉಳಿಯುವಂತಿಲ್ಲ ಎಂದು ಟಿಪ್ಪು ತನ್ನ ಸೈನ್ಯಕ್ಕೆ ಆಜ್ಞೆ ಹೊರಡಿಸಿದ. ನಾಯರ್ ಸಮುದಾಯದ ಯಾವುದೇ ವ್ಯಕ್ತಿಗೆ ಆಶ್ರಯ ಕೊಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬ್ರಿಟಿಷರಿಗೂ ಫರ್ಮಾನು ಜಾರಿಗೊಳಿಸಿದ. ಮಲಬಾರ್ ಮ್ಯಾನುಯೆಲ್ ಹೇಳುವಂತೆ ನಾಯರ್ ಸಮುದಾಯಕ್ಕೆ ರಕ್ಷಣೆ ನೀಡಿದ ಕಾರಣಕ್ಕೆ ಹದಿನೇಳು ಜನ ಚಿರಕ್ಕಲ್ಲಿನ ರಾಜಪರಿವಾರದವರನ್ನು ಆನೆಯ ಕಾಲುಗಳಿಗೆ ಕಟ್ಟಿ ಎಳೆಸಿ ದೇಹವನ್ನು ಊರಬಾಗಿಲಲ್ಲಿ ನೇತು ಹಾಕಲಾಯ್ತು. ಹೇಳುತ್ತ ಹೋದರೆ ಕೇರಳದಲ್ಲಿ ಟಿಪ್ಪು ಎಸಗಿದ ಕ್ರೌರ್ಯಕ್ಕೆ ಕೊನೆಮೊದಲಿಲ್ಲ. ಕನಿಷ್ಟ ಹತ್ತು ಪುಸ್ತಕಗಳಿಗಾಗುವ ಸರಕದು(ವಿಷದವಾದ ಮಾಹಿತಿಗೆ ನೋಡಿ: ಎ.ಎಸ್.ಶ್ರೀಧರ ಮೆನನ್ನಿನ ಕೇರಳ ಇತಿಹಾಸ, ವೇಲು ಪಿಳ್ಳೈನ ತ್ರಾವೆಂಕೂರ್ ಸ್ಟೇಟ್ ಮ್ಯಾನುವೆಲ್, ಉಲ್ಲೂರು ಪರಮೇಶ್ವರ ಐಯ್ಯರಿನ ಕೇರಳ ಸಾಹಿತ್ಯ ಚರಿತ್ರಂ, ಫಾ.ಬಾರ್ತೊಲೊಮ್ಯಾಕೋನ ವಾಯೇಜಸ್ ಟು ಈಸ್ಟ್ ಇಂಡೀಸ್).
ಕಲ್ಲೀಕೊಟೆಯಲ್ಲಿ ಟಿಪ್ಪು ಎಸಗಿದ ಕ್ರೌರ್ಯಕ್ಕೆ ಸಾಕ್ಷಿಯಾಗಿರುವ ಹಳೆಯ ಚಿತ್ರ
ಮೋದಿ ಕಾಂಗ್ರೆಸ್ ಮುಕ್ತ ಭಾರತಕ್ಕೆ ಪಣತೊಟ್ಟಂತೆ ಟಿಪ್ಪು ಹಿಂದೂ ಮುಕ್ತ ಮಲಬಾರಿಗೆ ಪಣತೊಟ್ಟಿದ್ದ. ಅದರಲ್ಲಿ ಬಹುಮಟ್ಟಿಗೆ ಯಶಸ್ವಿಯೂ ಆದ. ವಿಶ್ವಪ್ರಸಿದ್ದ ನಗರಿ ಕಲ್ಲೀಕೋಟೆ ಧ್ವಂಸಗೊಂಡು ನೆಲಸಮಗೊಂಡಿತ್ತು. ಮಂಗಳೂರಿನಿಂದ ಕೊಚ್ಚಿಯವರೆಗಿನ ರಾಜ್ಯಗಳು, ಅರಸೊತ್ತಿಗೆಗಳೆಲ್ಲ ಟಿಪ್ಪುವಿನ ಪದಾಕ್ರಾಂತವಾಗಿದ್ದವು. ಮಲಬಾರಿನಲ್ಲಿ ಇವನ ಸಾರ್ವಭೌಮತ್ವವನ್ನು ಬ್ರಿಟಿಷರೂ ಒಪ್ಪಿಕೊಂಡಿದ್ದರು. ಇದಕ್ಕಿಂತ ಪ್ರಶಸ್ತ ಸ್ಥಳವಿದೆಯೇ? ಮೈಸೂರಲ್ಲಾದರೆ ಬ್ರಿಟಿಷರು, ನವಾಬರು, ಮರಾಠರು ಹಾಗೂ ಕೊಡವರ ಕಾಟ. ನಾಲ್ಕು ದಿಕ್ಕುಗಳಿಂದಲೂ ನೆಮ್ಮದಿಯಿಲ್ಲ. ಟಿಪ್ಪು ಮಲಬಾರಿನಲ್ಲಿ ಹೊಸ ರಾಜಧಾನಿಯನ್ನೇ ನಿರ್ಮಿಸಲು ನಿರ್ಧರಿಸಿದ. ಪ್ರಾಯಶಃ ಶ್ರೀರಂಗಪಟ್ಟಣಕ್ಕಿಂತ ಇದು ಸೂಕ್ತ ಸ್ಥಳವಾಗಿತ್ತು ಎಂದಾತ ಭಾವಿಸಿದನೋ ಏನೋ!. ೧೭೮೮ರಲ್ಲಿ ಕಲ್ಲೀಕೋಟೆಯಿಂದ ಆರು ಮೈಲು ದಕ್ಷಿಣಕ್ಕೆ ಚಾಲಿಯಾಂ ನದಿದಡದಲ್ಲಿ ಸ್ಥಳವೊಂದನ್ನು ಹುಡುಕಿ ಹೊಸ ನಗರ ಹಾಗೂ ಕೋಟೆಯ ನಿರ್ಮಾಣಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಿದ.  ಆತ ಅದಕ್ಕಿಟ್ಟ ಹೆಸರು ಫಾರೂಕಾಬಾದ್ ಅಥವಾ ಫಾರೂಕಿ ಅರ್ಥಾತ್ ವಿಜಯದ ನಗರ. ಬ್ರಿಟಿಷರು ಹಾಗೂ ಸಾಮೂದಿರಿಗಳ ಮೇಲೆ  ತಾನು ಸಾಧಿಸಿದ ಘನವಿಜಯದ ಪ್ರತೀಕವಾಗಿ ಈ ಹೆಸರಿಟ್ಟಿರಬಹುದು. ಇಲ್ಲಿನ ’ಮಮ್ಮಲ್ಲಿ’ ಎಂಬ ಬೆಟ್ಟದ ಮೇಲೆ ೯ ಎಕರೆಯಷ್ಟು ವಿಶಾಲದ ಕೋಟೆಯೊಂದರ ನಿರ್ಮಾಣವೂ ನಡೆಯಿತು. ಎತ್ತರದ ಸ್ಥಳದಲ್ಲಿದ್ದ ಕಾರಣ ರಕ್ಷಣಾತ್ಮಕವಾಗಿಯೂ ಅದು ಆಯಕಟ್ಟಿನ ಜಾಗವಾಗಿತ್ತು. ಟಿಪ್ಪುವಿನ ಮಲತಮ್ಮ ಆಯಾಜ್ ಮೂಲತಃ ಇದೇ ಪ್ರದೇಶದವ. 
ಟಿಪ್ಪುವಿನ ಕಾಲದ ನಾಣ್ಯಗಳು
ಅದಕ್ಕೂ ಮೊದಲು ಮಲಬಾರಿನಲ್ಲಿ ಚಾಲ್ತಿಯಲ್ಲಿದ್ದ’ವೀರರಾಯ ಫಣ’ ಎಂಬ ಕರೆನ್ಸಿಯನ್ನು ನಿಲ್ಲಿಸಿದ ಟಿಪ್ಪು ತನ್ನ ಹೊಸ ರಾಜಧಾನಿಯ ಸ್ಮರಣಾರ್ಥ ’ಫರೂಕಿ ಪಗೋಡಾ’ ಎಂಬ ನಾಣ್ಯವನ್ನು ಚಲಾವಣೆಗೆ ತಂದ. ಎಷ್ಟಿದ್ದರೂ ಅದು ಟಿಪ್ಪುವಿನ ಕನಸಿನ ರಜಧಾನಿ. ಹಲವು ತಿಂಗಳುಗಳ ಕಾಲ ಅಲ್ಲೇ ಝಾಂಡಾ ಊರಿ ಎಲ್ಲ ಉಸ್ತುವಾರಿಗಳನ್ನೂ ಸ್ವತಃ ನಿಂತು ನೆರವೇರಿಸಿದ. ಬಹುತೇಕ ಆಡಳಿತ ಕೇಂದ್ರಗಳು ಹೊಸ ರಾಜಧಾನಿಗೆ ವರ್ಗಾವಣೆಗೊಂಡವು. ಅಷ್ಟರಲ್ಲಿ ಮಳೆಗಾಲ ಸಮೀಪಿಸಿತು. ಟಿಪ್ಪೂ ತನ್ನ ಅಧಿಕಾರಿಗಳನ್ನು ಅಲ್ಲೇ ಬಿಟ್ಟು  ಕೊಯಂಬತೂರಿನಲ್ಲಿ ವಾಸ್ತವ್ಯ ಹೂಡಿದ. ಆತನ ಅಧಿಕಾರಿಗಳಾದ ಅರ್ಷದ್ ಬೇಗ್, ಅಬ್ದುಲ್ ಕರೀಮ್ ಹಾಗೂ ಮಹಮ್ಮದ್ ಅಲಿ  ೧೭೮೮-೧೭೯೦ರವರೆಗೆ ಫೆರೋಕೆಯನ್ನೇ ಇದ್ದು ಹೊಸ ನಗರವನ್ನು ಕಟ್ಟುವ ಎಲ್ಲ ಉಸ್ತುವಾರಿಗಳನ್ನೂ ನೋಡಿಕೊಂಡರು. ೧೭೮೯ರಲ್ಲಿ ಸಯೀದ್ ಅಬ್ದುಲ್ಲಾನಿಗೆ ಬರೆದ ಪತ್ರದಲ್ಲಿ ಟಿಪ್ಪು ’ಅಲ್ಲಾಹ್ ಹಾಗೂ ಪೈಗಂಬರರ ಕೃಪೆಯಿಂದ ಸ್ಥಾಪಿಸಲ್ಪಟ್ಟ ನಮ್ಮ ಹೊಸ ರಾಜಧಾನಿಯಾದ ಫರೂಕಿಯ ನೆಲ ಇಸ್ಲಾಮಿನಿಂದ ಪಾವನವಾಯ್ತು. ಕೇಶವದಾಸನನ್ನೊಂದು ಸೋಲಿಸಿಬಿಟ್ಟರೆ ಇಡೀ ದಕ್ಷಿಣ ಭಾರತ ಸುಲ್ತಾನ್-ಎ-ಖುದಾಬಾದ್ ಆಗುವ ದಿನ ದೂರವಿಲ್ಲ ’ ಎಂದು ಬರೆದುಕೊಂಡಿದ್ದಾನೆ.
ಅಲ್ಲಿಯವರೆಗೂ ಎಲ್ಲ ಸರಿಯಾಗೇ ಇತ್ತು. ಯಾವತ್ತು ಟಿಪ್ಪುವಿನ ದೃಷ್ಟಿ ಕೇಶವದಾಸನ ಮೇಲೆ ಬಿದ್ದಿತೋ ಅವನ ಜಾತಕದಲ್ಲಿ ಶನಿ ವಕ್ಕರಿಸಿಕೊಂಡುಬಿಟ್ಟ. ಈ ಕೇಶವದಾಸ ಅಂಥಿಂಥವನಲ್ಲ. ತ್ರಾವೆಂಕೂರಿನ ಧರ್ಮರಾಜ ರಾಜಾ ರಾಮವರ್ಮನ ದೀವಾನ. ಇವನ ಕಾರಣದಿಂದ ಇಪ್ಪತ್ತೊಂದು ವರ್ಷ ತಿಪ್ಪರಲಾಗ ಹೊಡೆದರೂ ಹೈದರ್ ಹಾಗೂ ಟಿಪ್ಪುವಿಗೆ ತ್ರಾವೆಂಕೂರಿನ ರಾಜ್ಯದೊಳಗೆ ಎಡಗಾಲಿಡಲೂ ಸಾಧ್ಯವಾಗದೇ ಹೋದ್ದು. ಟಿಪ್ಪು ಮತ್ತದೇ ತಪ್ಪು ಮಾಡಿದ. ೨೦೦೦೦ ಸೈನಿಕರ ಪ್ರಚಂಡ ಸೇನಾಬಲದೊಡನೆ ತ್ರಾವೆಂಕೂರಿನ ಗಡಿಯಾದ ನೆಡುಂಕೊಟ್ಟವನ್ನು ಮುತ್ತಿದ. ಬರೀ ೬ ಫಿರಂಗಿಗಳು ಮತ್ತು ೫೦೦ ಜನರಿದ್ದ ತ್ರಾವೆಂಕೂರಿನ ಪರಯೂರು ಬೆಟಾಲಿಯನ್ನಿನ ಶೌರ್ಯದೆದುರು ಟಿಪ್ಪುವಿನ ಸೈನ್ಯ ನಿಲ್ಲದಾಯ್ತು. ಸೋತರೇನಂತೆ, ನರಿ ಬುದ್ಧಿ ಬಿಡಲಾದೀತೇ? ಟಿಪ್ಪು ಮಹಾನ್ ಚಾಲಾಕಿ.  ಓಡಿ ಹೋದಂತೆ ಮಾಡಿ ೨೮ ಡಿಸೆಂಬರ್ ೧೭೮೯ರ ರಾತ್ರೋರಾತ್ರಿ ರಕ್ಷಣಾವ್ಯವಸ್ಥೆ ಕಡಿಮೆಯಿದ್ದ ವಾಯುವ್ಯ ಭಾಗದಲ್ಲಿ ಈಗಿನ ಚಾಲಕ್ಕುಡಿಯ ಹತ್ತಿರದ ನೆಡುಂಕೊಟ್ಟವನ್ನು ಭೇದಿಸಿ ಒಳನುಗ್ಗಿದ. ಮುರಿಂಗೂರಿನಲ್ಲಿ ಮೈಸೂರು ಮತ್ತು ತಿರುವಾಂಕೂರು ಪಡೆಗಳು ಎದುರುಬದುರಾದವು. ಮೈಸೂರು ಪಡೆಗೆ ಟಿಪ್ಪುವೇ ಮುಂದಾಳತ್ವ ವಹಿಸಿದ್ದರೆ ತಿರುವಾಂಕೂರಿನ ಸೈನ್ಯವನ್ನು ದಿವಾನ್ ಕೇಶವದಾಸ ಪಿಳ್ಳೈ ಮುನ್ನಡೆಸಿದ್ದ. ಈ ಯುದ್ಧ ನೆಡುಂಕೊಟ್ಟ ಕದನವೆಂದೇ ಇತಿಹಾಸ ಪ್ರಸಿದ್ಧವಾಯ್ತು. ತಿರುವಾಂಕೂರಿನ ನಾಯರ್ ಸೈನಿಕರು ಮೈಸೂರಿನವರಿಗೆ ಸಾಯುವಂತೆ ಹಿಡಿದು ಬಡಿದರು. ಅದೇ ಸಮಯಕ್ಕೆ ಸರಿಯಾಗಿ ಕರ್ನಲ್ ಹಾರ್ಟ್ಲೇಯ ಇಂಗ್ಲೀಷ್ ಬೆಟಾಲಿಯನ್ ಕಲ್ಲಿಕೋಟೆಯನ್ನು ಮುತ್ತಿ ಮೈಸೂರಿನ ಸೈನ್ಯವನ್ನು ಸೋಲಿಸಿ ಫೆರೋಕನ್ನು ವಶಪಡಿಸಿಕೊಂಡಿತು.  ಟಿಪ್ಪು ಮತ್ತೆಂದೂ ಕೇರಳದತ್ತ ತಲೆಹಾಕುವ ಧೈರ್ಯ ಮಾಡಲಿಲ್ಲ. ಬ್ರಿಟಿಷರು ಫೆರೋಕನ್ನು ಬಿಟ್ಟು ಆಡಳಿತ ಕೇಂದ್ರವನ್ನು ಪುನಃ ಕಲ್ಲೀಕೋಟೆಗೇ ಸ್ಥಳಾಂತರಿಸಿದರು. ಒಂದೂವರೆ ವರ್ಷಗಳ ಕಾಲ ಅತಿ ಚಿಕ್ಕ ಅವಧಿಯ ರಾಜಧಾನಿಯಾಗಿ ಮೆರೆದ ಫೆರೋಕ್ ಆ ವೈಭವದ ದಿನಗಳನ್ನು ಮತ್ತೆ ನೋಡಲೇ ಇಲ್ಲ ಎನ್ನಬಹುದು. ಹಾಗಿದ್ದೂ  ಫೆರೋಕ್ ಮುಂದೆ ಬ್ರಿಟಿಷರ ಕಾಲದಲ್ಲೇ ದೊಡ್ಡ ಕೈಗಾರಿಕಾ ಪ್ರದೇಶವಾಗಿ ಬೆಳೆಯಿತು. ಅದು ಕೇರಳದ ಎರಡನೇ ಅತಿದೊಡ್ಡ ಇಂಡಸ್ಟ್ರಿಯಲ್ ಏರಿಯಾ. ಟಿಂಬರ್ ಮತ್ತು ಚರ್ಮದ ವಸ್ತುಗಳ ತಯಾರಿಕೆಯಲ್ಲಿ ಇದು ದೇಶದಲ್ಲೇ ನಂಬರ್ ಒನ್. ಇವತ್ತಿಗೂ ಬ್ರಿಟಿಷರು ಸ್ಥಾಪಿಸಿದ್ದ ಹಲ ಕಾರ್ಖಾನೆಗಳು ಇಲ್ಲಿವೆ.  ಕಾರ್ಖಾನೆಗಳು ಬೆಳೆದಂತೆ ಹಳೆಯ ಸ್ಮಾರಕಗಳೆಲ್ಲ ಒತ್ತುವರಿಯಾಗಿವೆ. ಆದರೆ ನೂರೈವತ್ತು ವರ್ಷದ ಹಿಂದೆ ಬೇಪೋರ್ ಹಾಗೂ ಫೆರೋಕನ್ನು ಸಂಪರ್ಕಿಸಲು ಕಟ್ಟಲ್ಪಟ್ಟ ಉಕ್ಕಿನ ಸೇತುವೆ ಇಂದೂ ಚಾಲ್ತಿಯಲ್ಲಿದೆ. ರೇಲ್ವೇ ಸ್ಟೇಶನ್ನಿಗೆ ಹೋಗುವ ದಾರಿಯಲ್ಲಿ ಎಡಭಾಗದಲ್ಲಿ ಟಿಪ್ಪು ಕಟ್ಟಿದ ಕೋಟೆಯನ್ನು ಇನ್ನೂ ನೋಡಬಹುದು. ಚಾಲಿಯಾಮ್ ನದಿಗೆ ಸೇರುವ ಅದರೊಳಗಿನ ಸುರಂಗ ಮಾರ್ಗ ಕೂಡ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದೆ. ೧೯೯೧ರಂದು ಈ ಸ್ಥಳಗಳನ್ನೆಲ್ಲ ಸಂರಕ್ಷಿತ ಸ್ಮಾರಕಗಳೆಂದು ಪುರಾತತ್ವ ವಿಭಾಗ ಘೋಷಿಸಿದೆ ಬಿಟ್ಟರೆ ಫೆರೋಕಿನ ಇತಿಹಾಸವನ್ನು ಈಗಿನವರಿಗೆ ತಿಳಿಸುವ ಕೆಲಸ ಇನ್ನೂ ಶುರುವಾಗಿಲ್ಲ.