![]() |
| ೨೦ ಮೇ ೧೯೫೫ - ೩೦ ನವಂಬರ್ ೨೦೨೧ |
ನಾವೆಲ್ಲ ಸಿನೆಮಾಗಳಲ್ಲಿ ನಾಯಕನನ್ನೋ, ನಾಯಕಿಯನ್ನೋ, ನಿರ್ದೇಶಕನನ್ನೋ ಮೊದಲ ಬಾರಿ ದೊಡ್ಡಮಟ್ಟದಲ್ಲಿ ಲಾಂಚ್ ಮಾಡುವುದು ಕೇಳಿದ್ದೇವೆ. ಮೊದಲ ಚಿತ್ರ ಹಿಟ್ ಆಗಿ ಜೀವದುದ್ದಕ್ಕೂ ಆ ಚಿತ್ರದ ಹೆಸರಿನೊಂದಿಗೆ ಸೇರಿಹೋದ ಅದೆಷ್ಟೋ ನಟ-ನಿರ್ದೇಶಕರಿದ್ದಾರೆ. ಈ ಅದೃಷ್ಟ ಉಳಿದವರಿಗೆ ಸಿಗುವುದು ಕಡಿಮೆ. ಆದರೆ ಚಿತ್ರದ ಗೀತರಚನೆಕಾರರೊಬ್ಬರು ಚಿತ್ರದ ನಿರ್ದೇಶಕ, ತಾರಬಳಗ, ಸಂಗೀತನಿರ್ದೇಶಕರನ್ನೂ ಮೀರಿಸಿ ಮೊದಲ ಚಿತ್ರದಲ್ಲೇ ತನ್ನ ಹೆಸರಿನಿಂದ ಚಿತ್ರವನ್ನೂ ಚಿತ್ರದ ಹೆಸರಿನೊಂದಿಗೆ ತನ್ನನ್ನೂ ಗುರುತಿಸುವಂತೆ ಮಾಡಿದ್ದು ಮಹತ್ಸಾಧನೆಯೇ ಸೈ. ಅದೂ ಯಾವ ಚಿತ್ರ ಅಂತೀರಿ. ಕೆ. ವಿಶ್ವನಾಥ್ ನಿರ್ದೇಶನದ, ಸರ್ವದಮನ ಬ್ಯಾನರ್ಜಿ, ಮೂನ್ ಮೂನ್ ಸೇನ್, ಸುಹಾಸಿನಿಯಂಥ ತಾರಾಗಣದ, ಕೆ.ವಿ.ಮಹದೇವನ್ - ಹರಿಪ್ರಸಾದ್ ಚೌರಾಸಿಯಾ ಸಂಗೀತ ನಿರ್ದೇಶನದ ’ಸಿರಿವೆನ್ನೆಲ’. ವಿಶ್ವನಾಥ್ ಚಿತ್ರವೆಂಬುದೊಂದನ್ನು ಹೊರತುಪಡಿಸಿ ಇಂದಿಗೂ ಸಿರಿವೆನ್ನೆಲವೆಂದರೆ ನೆನಪಾಗುವುದು ಸೀತಾರಾಮ ಶಾಸ್ತ್ರಿಗಳೇ. ಬಹುಶಃ ಅದೇ ಕಾರಣ ಅವರು ಸಿರಿವೆನ್ನೆಲ ಸೀತಾರಾಮಶಾಸ್ತ್ರಿಯಾಗಿ ಮನೆಮನೆಗಳಲ್ಲೂ ಗುರುತಿಸಿಕೊಂಡರು. ಇಂದು ಅಂದರೆ ನವಂಬರ್ ಮೂವತ್ತಕ್ಕೆ ಅವರು ಗತಿಸಿ ಒಂದು ವರ್ಷ. ಅವರ ನೆನಪಿನಲ್ಲಿ ಸಂತೆಯಲ್ಲಿ ಮೂರುಮೊಳ ನೆಯ್ದ ಹಾಗೆ ಚಿಕ್ಕದೊಂದು ಈ ಲೇಖನ.
ಒಳ್ಳೆಯ ಸಿನೆಮಾ ಸಾಹಿತ್ಯದಲ್ಲೂ ಎರಡು ಪ್ರಕಾರ. ಇಷ್ಟದ್ದೊಂದು-ಕಷ್ಟದ್ದೊಂದು. ಇಷ್ಟದ ಸಾಹಿತ್ಯ ಕೇಳುವುದಕ್ಕೆ ಇಂಪು. ಬಹುಕಾಲ ಕಾಡಲೂ ಬಹುದು. ಆದರೆ ಹೆಚ್ಚಾಗಿ ಅದು ಆಯಾ ಕಾಲಘಟ್ಟದಲ್ಲಿ ಇನ್‌ಸ್ಟಂಟ್ ಕಾಫಿಯಂತೆ ಜನರ ಬಾಯಲ್ಲಿ ನಲಿದು ಕಾಲಕ್ರಮೇಣ ಮರೆತುಹೋಗುತ್ತದೆ. ತೀರಾ ಎಂಬಂತೆ ಅಪವಾದವಿದ್ದರೂ ಸಂಗೀತವನ್ನು ಹೊರತುಪಡಿಸಿ ಸಿನೆಮಾ ಸಾಹಿತ್ಯವೊಂದು ಸ್ವತಂತ್ರವಾಗಿ ನೆಲೆನಿಲ್ಲುವುದು ಈ ಪ್ರಕಾರದಲ್ಲಿ ಕಷ್ಟವೇ. ಇವು ಬದುಕಿನ ಒಳಾರ್ಥಗಳನ್ನು, ಜೀವನ ಪ್ರೀತಿಯನ್ನು, ಸಾಮಾಜಿಕ ಚಿಂತನೆಯನ್ನು ಉದ್ದೀಪನಗೊಳಿಸುವುದಿಲ್ಲ. ಮನುಷ್ಯನ ಭಾವಭಿತ್ತಿಗಳನ್ನು ಬೇಧಿಸುವ ಶಕ್ತಿ ಇರುವುದಿಲ್ಲ. ಅದೇ ಕಷ್ಟದ ಹಾಡು, ಅದು ಸುಲಭವಾಗಿ ಅರ್ಥವಾಗುವುದಿಲ್ಲ, ತನ್ನ ಒಳಸುಳಿಗಳನ್ನು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ಭಾವುಕತೆ ಮಾತ್ರವಲ್ಲ, ಒಂದು ಜೀವನದ ಪಯಣ, ಸಮಾಜವನ್ನು ಪ್ರಶ್ನಿಸುವ ನೈತಿಕತೆ, ಸಾಮಾಜಿಕ ಎಲ್ಲೆಗಳನ್ನು ಮೀರುವ ತವಕದಂತಹ ಹಲವು ಆಯಾಮಗಳು ಇಂಥ ಹಾಡುಗಳಲ್ಲಿ ತುಂಬಿಕೊಂಡಿರುತ್ತವೆ. ಸಾಹಿತ್ಯ ಸರಳವಾಗಿರಬೇಕು, ಅದು ಎಲ್ಲ ಪ್ರೇಕ್ಷಕವರ್ಗಕ್ಕೂ ತಲುಪಬೇಕು. ಇದನ್ನು ಬಿಟ್ಟು ಅರ್ಥವಾಗದ ಸಾಹಿತ್ಯದಿಂದ ಏನು ಪ್ರಯೋಜನ? ಬರೀ ಪಾಂಡಿತ್ಯ ಪ್ರದರ್ಶನ ಅಂತ ಕೊಂಕು ಮಾತಗಳು ಈ ಕಷ್ಟದ ಗೀತೆಗಳ ಕಡೆಗೆ ಸದಾ ಇದ್ದಿದ್ದೆ. ಇಷ್ಟದ ಹಾಡುಗಳು ನಿಮಗೆ ಸಾಹಿತ್ಯದ ಆಯಾಮಗಳನ್ನು ಎಷ್ಟರಮಟ್ಟಿಗೆ ಪರಿಚಯಿಸುತ್ತವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ ಸುಲಭಗ್ರಾಹ್ಯ.
ಕೆ. ವಿಶ್ವನಾಥರ ಚಿತ್ರಗಳನ್ನು ಯಾವ ಚಿತ್ರಪ್ರೇಮಿ ನೋಡಿಲ್ಲ? ಶಂಕರಾಭರಣಂ, ಸ್ವಾತಿಮುತ್ಯಂ, ಸಾಗರಸಂಗಮಂಗಳಂತಹ ಸಾರ್ವಕಾಲಿಕ ಕ್ಲಾಸಿಕ್‌ಗಳನ್ನು ನಿರ್ದೇಶಿಸಿದವರು. ಇವರೊಮ್ಮೆ ತಮ್ಮ ’ಸಿರಿವೆನ್ನೆಲ’ ಚಿತ್ರದ ಚಿತ್ರಕಥೆ ತಯಾರಿಸುತ್ತಿದ್ದರಂತೆ. ಅದೊಂದು ದಿನ ಕೆಲಸದ ಮಧ್ಯೆ ತೆಲುಗಿನ ವಾರಪತ್ರಿಕೆಯೊಂದರ ಮೇಲೆ ಕಣ್ಣಾಡಿಸುತ್ತಾರೆ. ಅದರಲ್ಲಿ ಶಿವತಾಂಡವದ ಬಗ್ಗೆ ಅದ್ಭುತವಾದ ಕಾವ್ಯವೊಂದು ಅವರ ಕಣ್ಣಿಗೆ ಬೀಳುತ್ತದೆ. ಅದನ್ನು ಓದಿದವರಿಗೆ ಆ ಕವಿತೆ ರೋಮಾಂಚನಗೊಳಿಸುತ್ತದೆ. ಭರಣಿ ಎಂಬ ಕಾವ್ಯನಾಮದವರ್ಯಾರೋ ಬರೆದಿದ್ದು. ಈ ಕವಿಪುಂಗವನ ಕೈಯಲ್ಲಿ ತನ್ನ ಮುಂದಿನ ಚಿತ್ರದಲ್ಲಿ ಒಂದು ಪದ್ಯವನ್ನು ಬರೆಸುವ ಇಚ್ಛೆ ಅವರದಾಗುತ್ತದೆ. ಸಂಪಾದಕರಿಗೆ ಕರೆಮಾಡಿ ಸಾಹಿತಿಯ ವಿಳಾಸ ಮತ್ತು ದೂರವಾಣಿ ಯನ್ನು ಪತ್ತೆಹಚ್ಚಿದ ವಿಶ್ವನಾಥ್ ಅವರು ತಮ್ಮ ಮುಂದಿನ ಚಿತ್ರದ ಒಂದು ಹಾಡು ಬರೆಯುವಂತೆ ಕೇಳಿಕೊಳ್ಳಲು ಅವರನ್ನು ತಮ್ಮ ಚೆನ್ನೈನ ಕಚೇರಿಗೆ ಆಹ್ವಾನಿಸುತ್ತಾರೆ. ಮಹಾಪಂಡಿತರೊಬ್ಬರು ನಮ್ಮ ಕಚೇರಿಗೆ ಬರುತ್ತಾರೆ ಅಂತ ಕಾತರದಿಂದ ಕಾಯುತ್ತಿದ್ದ ವಿಶ್ವನಾಥ್ ಮುಂದೆ ಬಂದು ನಿಂತಿದ್ದು ಮೂವತ್ತರ ಪ್ರಾಯದ ವಿಜಯವಾಡ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದ ಚೆಂಬೋಲು ಸೀತಾರಾಮ ಶಾಸ್ತ್ರಿಗಳು. ಆಗಿನ ಕಾಲಕ್ಕೆ ತೆಲುಗು ಚಿತ್ರಸಾಹಿತ್ಯದ ಕವಿಕುಲಗುರು ವೇಟೂರಿ ಸುಂದರರಾಮ ಮೂರ್ತಿ, ಜ್ಞಾನಪೀಠ ಪುರಸ್ಕೃತ ಸಿ. ನಾರಾಯಣ ರೆಡ್ಡಿಯಂಥ ಪ್ರಗಲ್ಭರು ವಿಶ್ವನಾಥರ ಆಸ್ಥಾನಕವಿಗಳಾಗಿದ್ದ ಕಾಲ. ಅವರನ್ನೆಲ್ಲ ಪಕ್ಕಕ್ಕಿಟ್ಟು ಸೀತಾರಾಮ ಶಾಸ್ತ್ರಿಗಳ ಕೈಲಿ ಚಿತ್ರದ ಅಷ್ಟೂ ಹಾಡುಗಳನ್ನು ಬರೆಸಿದ ವಿಶ್ವನಾಥ್, ಸೀತಾರಾಮಶಾಸ್ತ್ರಿ ಎಂಬ ಹೆಸರು ಮರೆತುಹೋಗಿ 'ಸಿರಿವೆನ್ನೆಲ' ಎಂಬ ಹೆಸರಿನಲ್ಲಿ ಅವರನ್ನು ತೆಲುಗು ಸಿನಿಮಾರಂಗ ಗುರುತಿಸುವಂತೆ, ಜನಸಾಮಾನ್ಯರು ಪ್ರೀತಿಸುವಂತೆ ಮಾಡಿದರೆಂದರೆ ಅತಿಶಯೋಕ್ತಿಯಲ್ಲ. ಚಿತ್ರಸಾಹಿತಿಯಾಗಿ ಕೊನೆಯವರೆಗೂ ಸಿರಿವೆನ್ನೆಲ(ಬೆಳದಿಂಗಳು)ವನ್ನೇ ಉಣಬಡಿಸಿದ ಶಾಸ್ತ್ರಿಗಳ ಕೊನೆಯ ಹಾಡೂ ಸಿರಿವೆನ್ನೆಲವೆಂಬುದು ಸಾರ್ಥಕತೆಯೋ ವಿಷಾದವೋ ಗೊತ್ತಿಲ್ಲ. ಅವರು ’ಅಮವಸ’ ನಿಶಿಯಂತಿದ್ದ ತೆಲುಗು ತೆರೆಯಮೇಲೆ ಪೂರ್ಣಚಂದ್ರನಂತೆ ಉದಿಸಿಬಂದವರು. ಚೋದಕ ಭಾಷೆಯಲ್ಲಿ ನಿರತವಾಗಿದ್ದ ತೆಲುಗು ಸಿನಿ ಹಾಡುಗಳನ್ನು ಬೋಧಕ ಭಾಷೆಯಾಗಿಸಿದ ಕೀರ್ತಿ ಅವರದು.
ಈ ಲೇಖನವೇನು ಅವರ ಹಾಡುಗಳ ವಿಮರ್ಶೆಯಲ್ಲ. ಅದು ನನ್ನಂಥ ಗದ್ಯ ಸಾಹಿತ್ಯವನ್ನು ಮಾತ್ರ ಓದಿದವನಿಗೆ ಸಾಧ್ಯವೂ ಇಲ್ಲ. ಅವರ ನೆನಪಲ್ಲಿ ನನ್ನ ನೆಚ್ಚಿನ ಐದು ಹಾಡುಗಳನ್ನು ಪಟ್ಟಿಮಾಡಲಷ್ಟೇ ಇದನ್ನು ಸೀಮಿತಗೊಳಿಸುತ್ತೇನೆ. ಕೇಳಿದರೆ ನಿಮಗೂ ಇಷ್ಟವಾಗಬಹುದು.
೧. ಸಿರಿವೆನ್ನಲ ಚಿತ್ರದ ವಿಧಾತ ತಲಪುನ
ಈ ಹಾಡನ್ನು ನಾನು ಒಂದಾನೊಂದು ಕಾಲದಿಂದ ಕೇಳುತ್ತಿದ್ದೇನೆ. ಅದು ಕೆ.ವಿ. ಮಹದೇವನ್ ಸಂಗೀತಕ್ಕೆ, ಹಿನ್ನೆಲೆಯಲ್ಲಿ ಬರುವ ಚೌರಾಸಿಯಾರ ಕೊಳಲಿನ ನಾದಕ್ಕಷ್ಟೇ ಸೀಮಿತವಾಗಿತ್ತು ಬಿಟ್ಟರೆ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ತೆಲುಗಿನ ಸಾರ್ವಕಾಲಿಕ ಶ್ರೇಷ್ಟ ರಚನೆಗಳಲ್ಲೊಂದೆಂದು ಇದು ಈಗಲೂ ಗುರುತಿಸಲ್ಪಡುತ್ತದೆ. ಓಂಕಾರದ ಪ್ರಣವ ನಾದ ಹುಟ್ಟಿನಿಂದ ಮೊದಲುಗೊಂಡು ಸೃಷ್ಟಿಯ ಎಲ್ಲ ರಹಸ್ಯಗಳ ಅನಾವರಣಗೊಳಿಸುವ ಹಾಡಿದು. ಬರೆದ ಮೊದಲ ಹಾಡಿಗೇ ಪ್ರತಿಷ್ಟಿತ ನಂದಿ ಪ್ರಶಸ್ತಿ ಹುಡುಕಿ ಬಂತು.
ವಿಧಾತ ತಲಪುನ ಪ್ರಭವಿಂಚಿನದಿ ! ಅನಾದಿ ಜೀವನ ವೇದಂ...!
ಓಂ... ಪ್ರಾಣನಾಡುಲಕು ಸ್ಪಂದನ ನೊಸಗಿನ ! ಆದಿ ಪ್ರಣವ ನಾದಂ...!
ಕನುಲ ಕೋಲನುಲೋ ಪ್ರತಿಬಿಂಬಿಂಚಿನ ! ವಿಶ್ವರೂಪ ವಿನ್ಯಾಸಮ್...!
ಎದಕನುಮಲಲೋ ಪ್ರತಿಧ್ವನಿಂಚಿನ !! ವಿರಿಂಚಿ ವಿಪಂಚಿ ಗಾನಂ...
ಸರಸಸ್ವರ ಸುರಝಾರಿಗಮನಮೌ ! ಸಾಮವೇದ ಸಾರಮಿದಿ... ನೀಪಾಡಿನ ಜೀವನ ಗೀತಂ...! ಈ ಗೀತಂ...
ವಿರಿಂಚಿನೈ ವಿರಚಿಂಚಿತಿನಿ ! ಈ ಕವನಮ್...ವಿಪಂಚಿನೈ ವಿನಿಪಿಂಚಿತಿನಿ !! ಈ ಗೀತಂ...
ವಿರಿಂಚಿ, ವಿರಚಿಂಚಿ, ವಿಪಂಚಿ, ವಿನಿಪಿಂಚಿಯಂತ ಬಹುಪ್ರಾಸಗಳೇ ಶಾಸ್ತ್ರಿಗಳ ಟ್ರೇಡ್‌ಮಾರ್ಕ್. ಸಂಸ್ಕೃತಭೂಯಿಷ್ಟದಲೇ ಹೆಚ್ಚು ಭಾವಾಭಿವ್ಯಕ್ತಿ ಸಾಧಿಸಿದ ಅವರ ಶೈಲಿ ಥೇಟ್ ಸುರಝರಿಗಮನದಂತೆ. ಅದೇ ಹಾಡಿನ ಒಂದು ಸಾಲು ನೋಡಿ.
ಪ್ರಾಗ್ದಿಶ ವೀಣೈಯ ಪೈನ ದಿನಕರ ಮಯೂಖತಂತ್ರುಲ ಪೈನ... ಜಾಗೃತ ವಿಹಾಂಗ ತತುಲೇ ವಿನೀಲ ಗಗನಪು ವೇದಿಕ ಪೈನ...!
ಪೂರ್ವದ ವೀಣೆಯ ಹಿಡಿದ ದಿನಕರ ತನ್ನ ಕಿರಣಗಳೆಂಬ ತಂತಿಗಳನ್ನು ಮೀಟಿದನಂತೆ. ಪ್ರಾಗ್ದಿಶ-ಮಯೂಖಗಳೆಂಬ ನಿಘಂಟುಗಳಲ್ಲೇ ಉಳಿದುಹೋದ ಪದಗಳನ್ನು ಬಳಸಿ ಬರಿ ಜನರಿಗೆ ಅರ್ಥವಾಗುವಂತೆ ಬರೆಯುವುದು ಮಾತ್ರವಲ್ಲ, ಜನ ಅರ್ಥ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿಸುವಂತೆಯೂ ಸಿನೆಮಾ ಸಾಹಿತ್ಯವನ್ನನ್ನು ಬರೆಯಬಹುದೆಂಬುದನ್ನು ತೋರಿಸಿಕೊಟ್ಟ ಶಾಸ್ತ್ರಿಗಳ ಸಾಧನೆ ಕಡಿಮೆಯಲ್ಲ.
೨. ತೆಲವಾರದೇಮೋ ಸ್ವಾಮಿ
೧೯೮೭ರಲ್ಲಿ ಬಿಡುಗಡೆಯಾದ ಕೆ. ವಿಶ್ವನಾಥರ ಶ್ರುತಿಲಯಾಲು ಚಿತ್ರದ್ದು. ಸಿರಿವೆನ್ನೆಲದ ನಂತರ ತಮಗೆ ಬೇರಾವ ಚಿತ್ರದಲ್ಲೂ ಅವಕಾಶಗಳು ಸಿಗಲಿಕ್ಕಿಲ್ಲ ಎಂದುಕೊಂಡವರಿಗೆ ಮುಂದಿನ ವರ್ಷ ಬಿಡುಗಡೆಯಾದ ಈ ಚಿತ್ರದ ತೆಲವಾರದೇಮೋ ಹಾಡಿನ ಸಾಹಿತ್ಯಕ್ಕೆ ಎರಡನೇ ಬಾರಿ ನಂದಿ ಪ್ರಶಸ್ತಿ ಒದಗಿಬಂತು. ವಿಶೇಷವೆಂದರೆ ಇದವರ ನೂರನೇ ಗೀತೆಯೂ ಹೌದು. ಕೆ. ವಿ. ಮಹದೇವನ್ ಸಂಯೋಜನೆಯಲ್ಲಿ ಮೂಡಿಬಂದ ಆಭೇರಿ ರಾಗದ ಹಾಡು. ತೆಲುಗು ಚಿತ್ರರಂಗದಲ್ಲೇ ಅತಿ ಅಪರೂವೆಂದು ಪರಿಗಣಿಸಲ್ಪಡುವ ರಚನೆಯಿದು. ಅನ್ನಮಾಚಾರ್ಯರ ’ವಿನ್ನಪಾಲು ವಿನವಲೆ’ ಯ ಧಾಟಿ ಹಾಗೂ ವಿಷಯಗಳೆರಡರಲ್ಲೂ ಅನುಕರಿಸಿ ಬರೆದ ಇದು ಶೃಂಗಾರ ಹಾಗೂ ಶರಣಾಗತಿಭಾವಗಳ ಸಮ್ಮಿಳಿತವಾಗಿ ಅಮೋಘವಾಗಿ ಮೂಡಿಬಂದಿದೆ. ಇಷ್ಟು ದಿನ ಬರೆಯುತ್ತಿದ್ದ ಸಂಸ್ಕೃತಭೂಯಿಷ್ಟ ಶೈಲಿಯಿಂದ ಶುದ್ಧ ಹಳೆತೆಲುಗು ಕೀರ್ತನೆಯ ಧಾಟಿಯಲ್ಲಿ ರಚಿಸಿದ್ದನ್ನು ನೋಡಿ ಚಿತ್ರರಸಿಕರು ಮೂಗಿನ ಮೇಲೆ ಬೆರಳಿಟ್ಟರಂತೆ. ನಾನೂ ಕೂಡ ಚಿತ್ರ ನೋಡಿದ ಬಹುಕಾಲದ ನಂತರವೂ ಇದು ಅನ್ನಮಯ್ಯನ ರಚನೆಯೆಂದೇ ತಿಳಿದಿದ್ದೆ. ಬೆಳಗಾಗಲಿಲ್ಲವೇ ಸ್ವಾಮಿ? ಅಲಮೇಲು ಮಂಗಳಿಗೆ ನಿನ್ನ ಕನಸಿನಲ್ಲಿ ವಿಹರಿಸಿ ದಣಿವಾಗಿದೆ. ನಿನಗಿನ್ನೂ ಬೆಳಗಾಗಲಿಲ್ಲವೇ ಸ್ವಾಮಿ ಎಂಬ ಸುಪ್ರಭಾತ ಶೈಲಿಯದ್ದು. ಇದೇ ಚಿತ್ರದಲ್ಲಿ ಅನ್ನಮಯ್ಯನದ್ದೇ ಆದ ’ಇನ್ನಿ ರಾಸುಲಯುನಿಕಿ ಇಂಟಿ ಚಲುವಪುರಾಸಿ’, ನಾರಾಯಣತೀರ್ಥರ ’ಆಲೋಕಯೆ ಶ್ರೀ ಬಾಲಕೃಷ್ಣಂ’ ಇದ್ದರೂ ತೆಲವಾರದೇಮೋ ಸಾಹಿತ್ಯ ಒರಿಜಿನಲ್ಲುಗಳ ತಲೆಯ ಮೇಲೆ ಹೊಡೆದಂತಿದೆ. ’ಚೆಲುವಮುನೇಲಗ ಚೆಂಗಟ ಲೇವನಿ ಕಲಟಕು ನೆಲವೈ ನಿಲಿಚಿನ ನೆಲಟಕು’, ಶಾಸ್ತ್ರಿಗಳ ಟ್ರೇಡ್‌ಮಾರ್ಕ್ ಶೈಲಿಯ ಬಹುಪ್ರಾಸ ಇಲ್ಲೂ ಸೊಗಸಾಗಿ ಮೂಡಿಬಂದಿದೆ.
೩. ಶಿವಪೂಜಕು ಚಿಗುರಿಂಚಿನ
೧೯೮೮ರಲ್ಲಿ ಬಿಡುಗಡೆಯಾದ ಮತ್ತದೇ ಕೆ. ವಿಶ್ವನಾಥರ ಸ್ವರ್ಣಕಮಲಂ ಚಿತ್ರದ ಹಾಡು. ಸಂಗೀತ ನಿರ್ದೇಶನ ಇಳಯರಾಜ. ಈ ಚಿತ್ರದ ಸಾಹಿತ್ಯಕ್ಕಾಗಿ ಮೂರನೇ ವರ್ಷವೂ ನಂದಿ ಪ್ರಶಸ್ತಿ ಸಂದಾಯವಾಯಿತು. ಇದರ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಮಿಗಿಲಾಗಿದ್ದರೂ, ಶಿವಪೂಜಕು ನನ್ನ ಅಚ್ಚುಮೆಚ್ಚು. ಸಿರಿವೆನ್ನೆಲದಲ್ಲಿ ಹರಿಪ್ರಸಾದ್ ಚೌರಾಸಿಯಾರಿಂದ ಹಿನ್ನೆಲೆ ಸಂಗೀತ ನೀಡಿಸಿದ್ದ ವಿಶ್ವನಾಥ್ ಇದರಲ್ಲಿ ಕೇಳುಚರಣ್ ಮಹೋಪಾತ್ರರಿಂದ ಕುಚಿಪುಡಿ ನೃತ್ಯ ಸಂಯೋಜಿಸಿದ್ದರು. ಸಿರಿವೆನ್ನೆಲದಲ್ಲಿ ರಾಜಸ್ಥಾನದ ಜೈಪುರದ ಹಿನ್ನೆಲೆಯಲ್ಲಿ ಹಾಡುಗಳು ಚಿತ್ರಿತವಾಗಿದ್ದವು. ಅದಕ್ಕೆ ಕಾರಣ ಜೈಪುರ ಪ್ರವಾಸಿ ತಾಣವೆಂದಲ್ಲ. ಹಿಂದೂಸ್ತಾನಿ ಸಂಗೀತದ ಒಂದು ಪ್ರಮುಖ ನೆಲೆಯೆಂಬ ಕಾರಣದಿಂದ. ಅದೇ ರೀತಿ ಸ್ವರ್ಣಕಮಲದಲ್ಲಿ ಪುರಿ ಮತ್ತು ಹಿಮಾಲಯದ ತಪ್ಪಲಲ್ಲಿ ಹಾಡುಗಳು ಚಿತ್ರಿತವಾಗಿವೆ. ಪುರಿ ಕೂಚಿಪುಡಿಯ ಪ್ರಧಾನ ಕೇಂದ್ರದಲ್ಲೊಂದು ಎಂದಾದರೆ, ಹಿಮಾಲಯವು ಹಾಡುಗಳ ಸಾಹಿತ್ಯದಲ್ಲಿ ಅದ್ವೈತದ ಛಾಯೆ ಢಾಳಾಗಿ ಎದ್ದುಕಾಣುವ ಕಾರಣದಿಂದ. ಅದು ಚಿರಿಂಜೀವಿಯ ಸ್ಟಾರ್‌ಡಮ್ ಚರಮಸೀಮೆ ತಲುಪಿದ್ದ ಕಾಲ. ಪುಡಿರೌಡಿ, ಹರಿದಂಗಿಯ ಹೀರೋ ಹಾಡು ಶುರುವಾಗುವಾಗ ಸ್ವಿಡ್ಜರ್‌ಲ್ಯಾಂಡಿನಲ್ಲಿರುತ್ತಿದ್ದುದು ಹೆಚ್ಚಿನೆಲ್ಲ ಚಿತ್ರದಲ್ಲಿ ಸರ್ವೇಸಾಧಾರಣವಾಗಿತ್ತು. ಅದೇ ವಿಶ್ವನಾಥರ ಚಿತ್ರದ ಹಾಡುಗಳೆಲ್ಲ ಚಿತ್ರಿತವಾಗುತ್ತಿದ್ದುದು ಒಂದಲ್ಲ ಒಂದು ತೀರ್ಥಕ್ಷೇತ್ರದಲ್ಲಿ. ಇದೇ ವಿಶ್ವನಾಥ್ ಆ ಕಾಲದ ಮಾರ್ವೆಲ್-ಡಿಸಿ ಸೂಪರ್ ಹೀರೋ ರೇಂಜಿನ ಚಿರಂಜೀವಿಯ ಕೈಲಿ ’ಸ್ವಯಂಕೃಷಿ’ಯಲ್ಲಿ ಚಪ್ಪಲಿ ಹೊಲಿಯುವವನ ಪಾತ್ರ ಮಾಡಿಸಿದ್ದರು. ಈ ಹುಚ್ಚಿನ ವಿರುದ್ಧ ಈಜಿ ಜಯಿಸಿದ್ದೇ ವಿಶ್ವನಾಥರನ್ನು ಚಿತ್ರರಂಗದಲ್ಲಿ ಚಿರಸ್ಥಾಯಿಗೊಳಿಸಿದ್ದು.
ಚಿತ್ರ ನೋಡಿದವರಿಗೆ ಅದರ ಕತೆ ನೆನಪಿರಬಹುದು. ನಾಯಕ ಕಲಾರಾಧಕ. ನರ್ತಕಿಯೂ ಆಗಿರುವ ನಾಯಕಿಗೆ ವಸ್ತುಸುಖಾಕರ್ಷಣೆ ಜಾಸ್ತಿ. ಇಲ್ಲಿ ನಾಯಕ, ನಾಯಕಿಯಲ್ಲಿ ಅಡಗಿರುವ ಕಲಾವಿದೆಯನ್ನು ಹೊರಹೊಮ್ಮಿಸುವ ಪ್ರಯತ್ನದಲ್ಲಿರುತ್ತಾನೆ. ಈ ಹಾಡು ಅವರಿಬ್ಬರ ಮಧ್ಯದ ಜುಗಲ್ಬಂದಿಯಂತೆ ಮೂಡಿಬಂದಿದೆ. ಇಬ್ಬರಿಗೂ ತಮ್ಮ ದಾರಿಯನ್ನು ಸಮರ್ಥಿಸಿಕೊಳ್ಳಲು ಕಾರಣಗಳುಂಟು.
ಶಿವಪೂಜಕು ಚಿಗುರಿಂಚಿನ ಸಿರಿಸಿರಿಮುವ್ವ, ಮೃದು ಮಂಜುಲ ಪದ ಮಂಜರಿ ಪೂಚಿನ ಪೂವ
ಯತಿರಾಜುಕು ಜತಿಸ್ವರಮುಲ ಪರಿಮಲಮಿವ್ವ, ನಟನಾಂಜಲಿತೋ ಬ್ರದುಕುನು ತರಿಂಚನೀವಾ
ಶಿವಪೂಜೆಗಾಗಿ ನಿನ್ನ ನಾಟ್ಯವನ್ನರ್ಪಿಸು ಎನ್ನುವ ನಾಯಕನಿಗೆ ನಾಯಕಿ ಹೇಳುವ ಮಾತು
ಪರುಗಾಪಗ ಪಯಣಿಂಚವೆ ತಲಪುಲನಾವಾ, ಕೆರಟಾಲಕು ತಲವಂಚಿತೆ ತರಗದು ದ್ರೋವಾ
ಎದಿರಿಂಚಿನ ಸುಡಿಗಾಡಿನಿ ಜಯಿಂಚಿರಾವಾ, ಮದಿಕೋರಿನ ಮಧುಸೀಮಲು ವರಿಂಚಿರಾವಾ
ಇದೇ ಹಾಡು ಮುಂದುವರೆದು ನಾಯಕ ಹೇಳುವುದು
ಪಡಮರ ಪಡಗಲಪೈ ಮೆರಿಸೇ ತಾರಲಪೈ, ರಾತ್ರಿನಿ ವಂರಿಚಕೆ ಸಂಧ್ಯಾ ಸುಂದರಿ
ತೂರುಪು ವೇದಿಕಪೈ ವೇಕುವ ನರ್ತಿಕವೈ ಧಾತ್ರಿನಿ ಮುರಿಪಿಂಚೆ ಕಾಂತಿನಿ ಚಿಂದನಿ
ಪಶ್ಚಿಮದೆಡೆಯಲ್ಲಿ ಮೆರೆಯುವ ತಾರೆಯಂತೆ ರಾತ್ರಿಯನ್ನು ವರಿಸಬೇಡವೇ ಸಂಧ್ಯಾ ಸುಂದರಿ
ಪೂರ್ವದ ವೇದಿಕೆಯಲಿ ಮೂಡುವ ನರ್ತಕಿಯಂತೆ ಧಾತ್ರಿಯ ಬೆಳಗಿಸುನೀ
ಸಾಹಿತ್ಯವಲಯ ದಿಗ್ಭ್ರಾಂತಗೊಳಿಸುವ ರಚನೆಯಿದು. ಆವಾಗಲೆಲ್ಲ ಚಿತ್ರದ ಮಧ್ಯದಲ್ಲಿ ಗಂಡಸರಿಗೆ ಹೊರಹೋಗಿ ಸಿಗರೇಟು ಸೇದುವ ಬ್ರೇಕ್ ಆಗಿದ್ದ ಹಾಡು-ಕುಣಿತಗಳಿಗೆ ಒಂದು ಘನತೆ ತಂದುಕೊಟ್ಟಿದ್ದು ಶಾಸ್ತ್ರಿಗಳ ಖ್ಯಾತಿ. ಇದೇ ಹಾಡಿನ ಚರಣ ಎರಡರಲ್ಲಿ ಬರುವ ನಾಲ್ಕು ಸಾಲುಗಳನ್ನು ವಿಶೇಷವಾಗಿ ಅನೇಕರು ಚರ್ಚೆ ಮಾಡಿದ್ದಾರೆ.
ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ
ಆಮನಿಕೈ ಎದುರು ಚೂಸ್ತೂ ಆಗಿಪೋಕು ಎಕ್ಕಡಾ
ಅವಧಿ ಲೇನಿ ಅಂದಮುಂದಿ ಅವನಿಕಿ ನಲುದಿಕ್ಕುಲಾ.
ತನ್ನ ಬೆರೆಳು (ಬೇರು)ಗಳಿಂದಲ್ಲೇ ಬಂಧಿಸಲ್ಪಟ್ಟ ಗಿಡ ಮುಂದಕ್ಕೆ ಚಲಿಸಲಾಗದೆ, ಇರುವ ಕಡೆಯಿಂದಲ್ಲೇ ವಸಂತನಿಗಾಗಿ, ಹೊಸಚೈತ್ರಕ್ಕಾಗಿ ಎದುರು ನೋಡುತ್ತಿರುತ್ತದೆ. ಅದೇ ಭೂಮಿಗೆ ಕಾಲಾತೀತವಾದ ಅಂದ-ಆಕರ್ಷಣೆ, ರಸ, ಶೃಂಗಾರ ನಾಲ್ಕುದಿಕ್ಕಗಳಲ್ಲಿಯೂ ಇದೇ. ಇದನ್ನು ನೋಡಬೇಕಾದರೆ ಬಂಧನದಿಂದ ಮುಕ್ತವಾಗಬೇಕಾಗಿದೆ. ಇದನ್ನೇ ಯೋಚಿಸಿ ನೋಡಿದಾಗ ಹೌದು ನಾವೆಲ್ಲಾ ಒಂದಲ್ಲಾ ಒಂದು ಬಂಧನ ಬೇರುಗಳಿಂದ ಬಂಧಿಸಲಪಟ್ಟಿದ್ದೇವೆ. ಅದನ್ನು ಮೀರಲಾರದೇ ವಸಂತದ ಅನ್ವೇಷಣೆಯಲ್ಲಿ ಜೀವಿಸುತ್ತಿದ್ದೇವೆ. ಈ ಬಂಧನದ ಮಿತಿಯನ್ನು ದಾಟಿ ನೋಡದೇ ಹೋದರೆ ಹೊಸದಿಕ್ಕು, ದಿಗಂತದ ಅನುಭವ ದಕ್ಕುವುದಾದ್ದರೂ ಹೇಗೆ? ಕಷ್ಟದ ಸಾಹಿತ್ಯ ಹೀಗೆ ಬೇರಿನ ಬಂಧನದಿಂದ ಮುಕ್ತವಾಗಿ ನಾನು ಜಗತ್ತಿನಲ್ಲಿ ಏನು ನೋಡಬಹುದು ಅಂತ ಯೋಚಿಸುವುದಕ್ಕೆ ಪ್ರೇರಿಪಿಸುತ್ತಿದೆ. ಇದಕ್ಕಿಂತ ಸಾಹಿತ್ಯಕ್ಕೆ ಇನ್ನೇನು ಬೇಕು?
೪. ತರಲಿರಾದತನೇ ವಸಂತಂ
ಕೆ. ಬಾಲಚಂದರ್ ಅವರ ಸರ್ವಶ್ರೇಷ್ಟ ಕೃತಿಯೆಂದು ಪರಿಗಣಿಸಲ್ಪಡುವ ರುದ್ರವೀಣ ಚಿತ್ರದ ಗೀತೆ. ಗೀತಸಂಯೋಜನೆ ಇಳಯರಾಜ. ಸ್ವರ್ಣಕಮಲಕ್ಕೂ ಈ ಚಿತ್ರಕ್ಕೂ ಒಂಥರಹದ ವೈಚಾರಿಕ ವೈರುಧ್ಯ. ಜೊತೆಗೆ ಶಿವಪೂಜಕು ಹಾಗೂ ಈ ಗೀತೆಗೂ ಕೂಡ. ಅಲ್ಲಿ ತನ ವೇಳ್ಳೇ ಸಂಕಳ್ಳೈ ಕದಲಲೇನಿ ಮೊಕ್ಕಲಾ ಎಂದ ಕವಿ ಇಲ್ಲಿ
’ತರಲಿರಾದತನೇ ವಸಂತಂ, ತನ ದರಿಕಿರಾನಿ ವನಾಲಕೋಸಂ,
ಗಗನಾಲದಾಕ ಅಲ ಸಾಗುಕುಂಟೆ, ಮೇಘಾಲ ರಾಗಂ ಇಲ ಚೇರುಕೋದಾ?’ ಎನ್ನುತ್ತಾನೆ.
ವನಕ್ಕೆ ವಸಂತದ ಬಳಿ ತೆರಳುವ ಶಕ್ತಿಯಿಲ್ಲದಿದ್ದರೇನಂತೆ, ವಸಂತವು ವನದ ಬಳಿ ಬರುವುದನ್ನು ತಪ್ಪಿಸುತ್ತದೆಯೇ? ಗಗನದವರೆಗೆ ಸಾಗಲು ಅಲೆಗೆ ಸಾಧ್ಯವಾಗದಿದ್ದರೆ, ಮೇಘಗಳ ಮೂಲಕ ಗಗನವು ಸಾಗರವ ಸೇರುವುದಿಲ್ಲವೇ?
ಊರಿನ ಜನರ ಒಳಿತಿಗಾಗಿ ತನ್ನೆಲ್ಲವನ್ನೂ ಬಿಡುವ ನಾಯಕ, ಜನರ ಬದುಕಿನಲ್ಲಿ ಬದಲಾವಣೆ ತರಲು ಹೊರಡುವ ಹೆನ್ನೆಲೆಯುಳ್ಳ ಕತೆಗೆ ಈ ಹಾಡೇ ಚಿತ್ರಕತೆ ಬರೆದಂತಿದೆ. ’ವೆನ್ನೆಲ ದೀಪಂ ಕೊಂದರಿದಾ? ಅಡವಿನಿ ಸೈತಂ ವೆಲುಗು ಕದಾ?’ ಬೆಳದಿಂಗಳೇನು ಕೆಲವರದಾ? ಅಡವಿಯನು ಕೂಡ ಅದು ಬೆಳಗದಾ ಎಂಬ ಹಾಡು ಇನ್ನಾವ ಕವಿಯೂ ಬರೆಯಲು ಸಾಧ್ಯವಿಲ್ಲ. ಅದೇ ಹಾಡಿನ ಇನ್ನೊಂದು ಸಾಲು ’ಕೂಸೇ ಕೋಕಿಲ ಪೋತೆ ಕಾಲಂ ಆಗಿಂದಾ?’, ಕೂಗುವ ಕೋಗಿಲೆ ಹೋದರೆ ಕಾಲವು ನಿಲ್ಲುವುದೇ?
೫. ಆದಿಭಿಕ್ಷುವುವಾಡಿನೇದಿಕೋರೇದಿ
ಶಾಸ್ತ್ರಿಗಳು ಪರಮ ಸಾತ್ವಿಕ ವಿಶ್ವನಾಥರ ಆಸ್ಥಾನಕವಿಯಾಗುವ ಜೊತೆಗೆ ಘೋರನಾಸ್ತಿಕ ರಾಮ್ ಗೋಪಾಲ್ ವರ್ಮಾನಿಗಾಗಿಯೂ ಖಾಯಂ ಆಗಿ ಬರೆದರು. ಶಿವ ಚಿತ್ರದ ಬಾಟನಿ ಪಾಟಮುಂದಿ, ಮ್ಯಾಟನಿ ಆಟಮುಂದಿ ಎಂಬ ಕಾಲೇಜ್ ಯುಗಳಗೀತೆ, ಕ್ಷಣಕ್ಷಣಂ ಚಿತ್ರದ ಜಾಮುರಾತ್ರಿ ಜಾಬಿಲಮ್ಮ ಎಂಬ ಪಕ್ಕಾ ರಾ ಹಾಡು, ಸಿಂಧೂರಮ್ ಚಿತ್ರದ ಅರ್ಧಸತಾಬ್ದಪು ಎಂಬ ಸ್ವಾತಂತ್ರ್ಯದ ಐವತ್ತು ವರ್ಷದ ರಿಪೋರ್ಟ್ ಕಾರ್ಡ್ ಹೀಗೆ ಮೂರು ಸಾವಿರಕ್ಕೂ ಮಿಕ್ಕಿ ಒಂದಕ್ಕಿಂತ ಒಂದು ಚಂದದ ಹಾಡುಗಳನ್ನು ಬರೆದ ಶಾಸ್ತ್ರಿಗಳ ಈ ಗೀತೆ ನನ್ನ ಇಷ್ಟದ ಗೀತೆಗಳಲ್ಲೊಂದು. ಚಿತ್ರ ಅದೇ ಸಿರಿವೆನ್ನೆಲ. ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧಿಯಾಗಿರುವ ಗಂಭೀರ ನಿಂದಾಸ್ತುತಿ ಮಾದರಿಯ ಹಾಡಿದು. ಆತನೇ ಆದಿಭಿಕ್ಷು, ಅವನೇನ ಕೋರಲಿ ನಾನು? ಬುದಿಬಳಿದ ಸ್ಮಶಾನವಾಸಿಯ ಹತ್ತಿರ ಏನ ಕೇಳಲಿ ನಾನು? ಎಂಬರ್ಥದಲ್ಲಿರುವ ಹಾಡು.
ತೀಪಿರಾಗಾಲ ಆ ಕೋಕಿಲಮ್ಮಕು ನಲ್ಲ ರಂಗುನಲಮಿನವಾಡಿನೇದಿ ಕೋರೇದಿ?
ತರಕು ಗರ್ಜನಲ ಮೇಘಮುಲ ಮೇನಿಕಿ ಹಂಗು ಕೂರ್ಚಿನವಾಡಿನೇದಿ ಅಡಿಗೇದಿ?
ತೇನಲೊಲಿಕೆ ಪೂಲ ಬಾಲಲಕು ಮೂನಾಳು ಆಯುವಿಚ್ಚಿನವಾಡಿನೇದಿ ಕೋರೇದಿ?
ಬಂಡರಾಳ್ಳನು ಚಿರಾಯುವುಗ ಜೀವಿಂಚಮನಿ ಆಣತಿಚ್ಚಿನವಾಡಿನೇದಿ ಅಡಿಗೇದಿ?
ಮಧುರರಾಗದ ಕೋಗಿಲೆಗೆ ಕಪ್ಪು ಬಣ್ಣವ ಬಳಿದವನ ಏನ ಕೋರಲಿ ನಾನು?
ಗರ್ಜಿಸುವ ಮೇಘಗಳ ಕೊರಳಿಗೆ ಮಿಂಚಮಾಲೆಯನು ತೊಡಿಸಿದವ ಏನ ಕೇಳಲಿ ನಾನು?
ಹೂಗಳೆಂಬ ಬಾಲಕರಿಗೆ ಮೂರು ಕ್ಷಣಗಳ ಆಯುವಿತ್ತವನ ಏನ ಕೋರಲಿ ನಾನು?
ಬಂಡೆಕಲ್ಲಿಗೆ ಚಿರಾಯುವಾಗುವ ವರಕೊಟ್ಟವನ ಏನ ಕೇಳಲಿ ನಾನು?
ಕಳೆದೈವತ್ತು ವರ್ಷಗಳಲ್ಲಿ ಬೇರೆ ಬೇರೆ ಚಿತ್ರರಂಗದಲ್ಲಿ ನೂರಾರು ಸಂಗೀತ ನಿರ್ದೇಶಕರು, ಸಾಹಿತಿಗಳು ಬಂದರು, ಹೋದರು. ಹೆಚ್ಚಿನೆಲ್ಲರೂ ನಿರ್ಮಾಪಕರ, ಸಮಯದ ಬೇಡಿಕೆಗನುಗುಣವಾಗಿ ವಾದ್ಯ, ಶೈಲಿ, ಧಾಟಿಗಳನ್ನು ಬದಲಿಸಿದವರು. ಆದರೆ ಒಬ್ಬ ನೌಷದ್ ಅಲಿ, ಒಬ್ಬ ಕೆ. ವಿ. ಮಹದೇವನ್, ಒಬ್ಬ ವೇಟೂರಿ, ಒಬ್ಬ ಸಿರಿವೆನ್ನಲ, ಒಬ್ಬ ರವೀಂದ್ರನ್ ಮಾಸ್ತರರಂಥವರು ಮಾತ್ರ ತಮ್ಮ ಬ್ರ್ಯಾಂಡಿಗೆ ಅಂಟಿಕೊಂಡೇ ಬದುಕ ಕಳೆದವರು. ಮೊದಲಿಂದ ಕೊನೆಯ ಚಿತ್ರದವರೆಗೂ ಅದೇ ಗಾಂಭೀರ್ಯ, ಅದೇ ರಾಜತ್ವ. ಬಾಲಿವುಡ್ಡಿನಲ್ಲಿ ಅದೊಂದು ಫಾರ್ಮುಲಾ ಇತ್ತು. ಆಸೀಫ್-ಬಿಮಲ್ ರಾಯರಂತಹ ನಿರ್ದೇಶಕರ ಚಿತ್ರದಲ್ಲಿ ಶಕೀಲ್ ಬದಾಯುನಿಯ ಗೀತರಚನೆ, ಲತಾ ರಫಿ ಗಾಯನ, ನೌಷದರ ಸಂಗೀತ ತ್ರಿಕೋನದ ಮೂರು ಬಿಂದುಗಳಿದ್ದಂತೆ. ಇಂತದೇ ಫಾರ್ಮುಲಾ ಗುರುದತ್, ಶಾಂತಾರಾಂರ ಟೀಮಿನಲ್ಲಿದ್ದರೂ ಇವರು ಕಂಡಂತ ಗೆಲುವನ್ನುಉಳಿದವರು ಕಾಣಲು ಸಾಧ್ಯವಾಗಲಿಲ್ಲ. ತೆಲುಗಿನಲ್ಲಿ ವಿಶ್ವನಾಥರ ಚಿತ್ರಗಳಿಗೆ ಕೆ.ವಿ. ಮಹದೇವನ್ ಸಂಗೀತ, ವೇಟೂರಿ-ಸಿರಿವೆನ್ನಲರ ಗೀತರಚನೆ, ಎಸ್ಪಿ-ಜಾನಕಮ್ಮನ ಗಾಯನ. ಮಲಯಾಳಂನಲ್ಲಿ ರವೀಂದ್ರನ್ನರ ಸಂಗೀತ, ಕೈದಂಪುರಂರ ಸಾಹಿತ್ಯ, ಯೇಸುದಾಸ್-ಚಿತ್ರಾರ ಗಾಯನದ ಹಿಸ್ ಹೈನೆಸ್ ಅಬ್ದುಲ್ಲಾ, ಭರತಂ, ಕಮಲದಳಂ, ನಂದನಂ. ಈ ಮೂರು ಟೀಮುಗಳನ್ನು ಬಿಟ್ಟರೆ ಅಂಥ ಅದ್ಭುತಗಳನ್ನು ಸರ್ಜಿಸುವ ಕೀರ್ತಿ ಮತ್ತು ಛಾತಿ ನಾಲ್ಕನೇಯವರಿಗಿಲ್ಲ. ಅಂಥವರಿನ್ನೂ ಬಂದಿಲ್ಲ, ಮುಂದೆ ಬರುವುದೂ ಇಲ್ಲ.

No comments:
Post a Comment