Pages

Monday, August 17, 2015

ಕಲ್ಕತ್ತಾ ಡೈರಿ: ಬಂಗಾಳದ ಇತಿಹಾಸದಲ್ಲೊಂದು ಕಳಚಿದ ಕೊಂಡಿ

     ಸಣ್ಣಗೆ ಮಳೆ ಜಿನುಗುತ್ತಿತ್ತು. ಹೀಗೇ ಇನ್ನೊಂದು ಗಂಟೆ ಮಳೆ ಸುರಿದರೆ ಈಡೀ ಕಲ್ಕತ್ತಾಕ್ಕೆ ಕಲ್ಕತ್ತವೇ ತೇಲಲು ಶುರುಮಾಡುತ್ತಿತ್ತೇನೋ. ಬಾರಾಸಾತ್ ಬಸ್ ಸ್ಟಾಪಿಗೆ ಬಂದು ನೋಡಿದರೆ ಅದು ಅಕ್ಷರಶಃ ಕಲಕಿಟ್ಟ ಕೊಚ್ಚೆಸಮುದ್ರ. ಹೊರಡಲು ರೆಡಿಯಾಗಿದ್ದ ೭೩ ನೇ ನಂಬ್ರದ ಮರದ ಪೆಟ್ಟಿಗೆಯಂಥಹ ಬಸ್ ಹಿಡಿದು ವಿಂಡೋ ಸೀಟಿನಲ್ಲಿ ಕೂತೆ. ಬಸ್ ಎಷ್ಟು ಹಳೆಯದೆಂದರೆ ಅದರ ಕಿಡಕಿ ಕೂಡ ಮರದ್ದೇ. ಶಕ್ತಿಯನ್ನೆಲ್ಲ ಪ್ರಯೋಗಿಸಿ ಎತ್ತಿ ಮೇಲಿನ ಕೊಕ್ಕೆಗೆ ಸಿಲುಕಿಸಿದರೆ ಒಳಗೆ ಬರುವ ನೀರು ಒಂದಿಷ್ಟು ಕಡಿಮೆಯಾಗುತ್ತದೆ.  ಹೊರಗಡೆ ಜುಲೈ ತಿಂಗಳ ಜೋರುಮಳೆಯಾದರೂ ಒಳಗೆ ಬೆವರು ಕಿತ್ತೆದ್ದು ಬರುತ್ತಿತ್ತು. ಡ್ರೈವರ್ ಕಂಡಕ್ಟರುಗಳಿಬ್ಬರೂ ಕಾಂಪಿಟೀಶನ್ನಿಗೆ ಬಿದ್ದವರಂತೆ ಬೀಡಿಯ ಮೇಲೊಂದು ಬೀಡಿ ಸೇದಿ ಬಿಸಾಕುತ್ತಿದ್ದರು. ಹೆಚ್ಚಿನ
ಕಲ್ಕತ್ತಾವಾಲಾಗಳು ಹೊಟ್ಟೆಗಿಲ್ಲದೇ ಬದುಕಿದರೂ, ಸಿಗರೇಟು ಸೇದದೇ ಬದುಕುವುದಿಲ್ಲವೆಂದು ನೆನಪಾಯ್ತು. ಹಳೆಯ ರಿಕಾರ್ಡರಿನಿಂದ ರಬೀಂದ್ರ ಸಂಗೀತ ಹಾಗೇ ಅಲೆಯಲೆಯಾಗಿ ತೇಲಿ ಬಸ್ಸೊಳಗಿನ ವಾತಾವರಣವನ್ನೆಲ್ಲ ಆಕ್ರಮಿಸಿಕೊಳ್ಳುತ್ತಿತ್ತು. ಲಟಾರಿ ಬಸ್ಸು ಬಾರಾಸಾತ್ ಜಂಕ್ಷನ್ನಿನಿಂದ ಎಡಕ್ಕೆ ತಿರುಗಿ ಸಪುರ ರೋಡಿನಲ್ಲಿ ಕಲ್ಕತ್ತದ ಹೊರವಲಯದತ್ತ ಸಾಗುತ್ತಿದ್ದಂತೆ ಬಂಗಾಳದ ಬಡತನ ಜೀವಂತವಾಗುತ್ತದೆ. ಮಾಡಿನ ಮೇಲೆಲ್ಲ ಹುಲ್ಲುಬೆಳೆದ ಧೂಳುಹಿಡಿದ ಅಂಗಡಿಗಳ ಸಾಲುಸಾಲು, ಮೀನಿನಂಗಡಿಯ ಪಕ್ಕದ ಸಣ್ಣ ಮಿಠಾಯಿ ದುಕಾನಿನಲ್ಲಿ ರೊಶೊಗುಲ್ಲಾ ಸವಿಯಲು ಸಾಲುಗಟ್ಟಿದ ಜನ, ಮೋರಿಗಳ ಪಕ್ಕ ಕೋಳಿ ಗೂಡುಗಳಂಥ ಮನೆಗಳು. ಇವೆಲ್ಲ ದಾಟಿ ಹಸಿರು ಶುರುವಾಗುತ್ತಿದ್ದಂತೆ ಗೋಚರಿಸುವುದು ವಿಶಾಲ ಭತ್ತದ ಗದ್ದೆಗಳು, ಥೇಟ್ ನಮ್ಮೂರನ್ನೇ ನೆನಪಿಸುವ ಹಳ್ಳಿಗಳು, ಮನೆ ಮುಂದೆ ತೆಂಗು, ಅಡಿಕೆ, ಹಲಸು. ಬಸ್ಸು ಹತ್ತಿದ ಇಪ್ಪತ್ತು ನಿಮಿಷಗಳೊಳಗೆ ಬೇಡಾಚಂಪಾದ ಬೋರ್ಡು ಕಾಣಿಸಿತು. ರಸ್ತೆಯ ಮಧ್ಯೆಯೊಂದು ಮಾರ್ಕೇಟಿದೆ ಎನ್ನುವುದು ಬಿಟ್ಟರೆ ಅದೇನು ಅಂಥ ದೊಡ್ಡ ಊರಲ್ಲ. ಹಾಗೆಂದು ಬಂಗಾಳಿಗಳೂರಲ್ಲಿ ಸದ್ದುಗದ್ದಲಗಳಿಗೇನು ಕಡಿಮೆಯಿಲ್ಲ. ಬಸ್ಸಿಳಿದವ ಎದುರಿನ ಸರ್ಕಲ್ಲಿನಲ್ಲಿದ್ದ ಕಾಳಿಮಂದಿರದ ಎಡಪಕ್ಕದ ಕಚ್ಚಾ ರಸ್ತೆ ಹಿಡಿದೆ. ಕೇರಿಗಳು ಕಳೆದು ದೂರದೂರದವರೆಗೆ ಸೆಣಬಿನ ಗದ್ದೆಗಳು ಕಾಣಲು ಶುರುವಾದವು. ಕಣ್ಣರಳಿಸಿ ಬೆರಗಿಂದ ಆಚೀಚೆ ನೋಡುತ್ತ ಮುಕ್ಕಾಲು ಕಿಲೋಮೀಟರ್ ನಡೆದಾದಮೇಲೆ ಕಂಡಿದ್ದು ಒಂದು ದೊಡ್ಡ ಕಂಪೌಂಡ್. ಒಂದು ಪಕ್ಕ ರಸ್ತೆ, ಅಲ್ಲಲ್ಲಿ ಸಣ್ಣ ಸಣ್ಣ ಗೂಡು ಮನೆಗಳ ರಾಶಿರಾಶಿ, ನಾಲ್ಕಾರು ಕೆರೆಗಳು, ಹಳ್ಳಿಗಳ ಬೇಣದಂಥ ಜಾಗ. ಇದು ಅದೇನಾ? ನಾನಿಷ್ಟು ದಿನಗಳ ಕಾಲ ಓದಿದ, ಕಲ್ಲತ್ತದಲ್ಲಿ ನೋಡಲೇಬೇಕೆಂದುಕೊಂಡ ಸ್ಥಳವಾ? ಇದೇನಾ ಅವಿಭಜಿತ ಬಂಗಾಳದ ಪುರಾತತ್ತ್ವ ವಿಭಾಗದ ಅತಿದೊಡ್ಡ ಸಂಶೋಧನೆಯೆನಿಸಿದ್ದು? ಇದೇಯಾ ಭಾರತದ ಅತಿಹಳೆಯ ನಗರಗಳಲ್ಲೊಂದೆಡು ಖ್ಯಾತಿಗೊಳಗಾಗಿದ್ದು? ಏನೋ ಹುಡುಕಿ ಬಂದವನಿಗೆ ಒಂದು ಥರಹದ ಶಾಕ್.
ರಸ್ತೆ ಪಕ್ಕ ಸುತ್ತಲಿನ ಸ್ಥಳವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟ ಪುರಾತತ್ತ್ವ ಇಲಾಖೆಯ ಸೈನ್ ಬೋರ್ಡೋಂದು ರಾರಾಜಿಸುತ್ತಿತ್ತು. ಒಂದು ಕಾಲು ಊನಗೊಂಡ ತುಕ್ಕುಹಿಡಿದ ಆ ಬೋರ್ಡ್ ಒಂದು ಸಾಕಿತ್ತು ಇಡೀ ಪ್ರದೇಶ ಎಷ್ಟು ಸಂರಕ್ಷಣೆಗೊಳಪಟ್ಟಿದೆಯೆಂದು ಹೇಳಲು. ಬೋರ್ಡಿನಲ್ಲಾದರೂ ಏನಾದರೂ ಹೊಸ ವಿಷಯ ಸಿಗಬಹುದೆಂದು ಹತ್ತಿರ ಹೋಗಿ ಓದಿದೆ. ಬರೆದಿತ್ತು. ಖನ ಮಿಹಿರೇರ್ ಧಿಪಿ ಅಥವಾ ಬರಾಹಮಿಹಿರೆರ್ ಧಿಪಿ........


ಇಲ್ಲೊಂದು ಗುಪ್ತರ ಕಾಲದ ನಕ್ಷತ್ರಾಕಾರದಲ್ಲಿದ್ದ ಇಟ್ಟಿಗೆಯಿಂದ ಕಟ್ಟಿದ ವಿಶಾಲ ದೇವಸ್ಥಾನದ ಅವಶೇಷವಿದೆ. ಐವತ್ತರ ದಶಕದ ಸುಮಾರಿಗೆ ಇಲ್ಲಿ ನಡೆದ ಉತ್ಖನನದಲ್ಲಿ ಸಿಕ್ಕ ಎಡಗೈನಲ್ಲಿ ಕನ್ನಡಿ ಹಿಡಿದ, ಕಾಲಡಿ ವಿಚಿತ್ರ ಪ್ರಾಣಿಯನ್ನು ವಾಹನವಾಗಿಸಿಕೊಂಡ ಗುಪ್ತಪೂರ್ವ ಯುಗದ ಕಂಚಿನ ಮೈತ್ರೇಯಿ ದೇವಿಯ ವಿಗ್ರಹ ತುಂಬ ಸುದ್ದಿಮಾಡಿತ್ತು. ಗೋಡೆಗಳು, ಛಾವಣಿ ನಾಶವಾಗಿದ್ದರೂ ನೆಲಗಟ್ಟು, ಎತ್ತರದ ಕಟ್ಟೆಗಳು, ಕೋಣೆಗಳು, ಪ್ರಾಕಾರ, ಇಪ್ಪತ್ತು ಮೆಟ್ಟಿಲುಗಳ ರಚನೆ ಗಟ್ಟಿಯಾಗಿ ಉಳಿದಿದೆ. ಅಮೃತಕುಂಡ ಮತ್ತು ಜೀವಿತ ಕುಂಡವೆಂದು ಕರೆಯಲ್ಪಡುವ ಎರಡು ಚಿಕ್ಕ ಕೆರೆಗಳೂ ಬದುಕುಳಿದಿವೆ. ಇದರ ಹೊರ ಪ್ರಾಕಾರದ ಗೋಡೆಯ ಅವಶೇಷವಿರುವುದು ಅಲ್ಲಿಂದ ಎರಡು ಕಿ.ಮೀ ಆಚೆ ಎಂದರೆ ಅದೆಷ್ಟು ವಿಸ್ತಾರವಾಗಿದ್ದಿರಬಹುದೆಂದು ಊಹಿಸಿ. ಮಧ್ಯದ ಜಾಗವೆಲ್ಲ ಜನವಸತಿಯಿಂದ ತುಂಬಿಹೋಗಿರುವಾಗ ಉತ್ಖನನ ಮಾಡುವುದಾದರೂ ಎಲ್ಲಿ? ಖನ-ಮಿಹಿರೆರ್ ಧಿಪಿಯ ಹೆಸರು ಬಂದಿರುವುದು ಖ್ಯಾತ ಜ್ಯೋತಿಷ್ಯಾಸ್ತ್ರಜ್ಞ ವರಾಹಮಿಹಿರ ಮತ್ತು ಅವನ ಪತ್ನಿಯೆನ್ನಲಾಗುವ ಖನಳಿಂದ. ವರಾಹಮಿಹಿರ ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಬ್ಬ. ಆತನ ಪತ್ನಿ ಖನಳೂ ದೊಡ್ಡ ಜ್ಯೋತಿಷಾಸ್ತ್ರಜ್ಞಳಾಗಿದ್ದಳಂತೆ. ಫಲಜ್ಯೋತಿಷ್ಯದ ನಿಖರ predictionsಗಳಿಂದ ಅವಳ ಖ್ಯಾತಿ ವರಾಹಮಿಹಿರನಿಗಿಂದ ಹೆಚ್ಚಾದಾಗ ಅಸೂಯೆಗೊಂಡ ಮಿಹಿರ ಅವಳ ನಾಲಿಗೆ ಕತ್ತರಿಸಿದನಂತೆ. ಈ ಖನಲನ್ನು ಬಂಗಾಳದ ಮೊದಲ ಕವಯಿತ್ರಿಯೆಂದು ಗುರುತಿಸಲಾಗುತ್ತದೆ. ಬಂಗಾಳಿ ಸಾಹಿತ್ಯದ ಮೊದಮೊದಲ ರಚನೆಗಳಲ್ಲೊಂದಾದ ಖನೆರ್ ಬಚನ್(ಖನಳ ವಚನ) ಬಂಗಾಳದಲ್ಲಿ ಮನೆಮಾತು, ಥೇಟ್ ನಮ್ಮ ಅಕ್ಕಮಹಾದೇವಿಯಂತೆ. ಐತಿಹಾಸಿಕವಾಗಿ ಅವಳು ೯ರಿಂದ ೧೨ನೇ ಶತಮಾನದ ಮಧ್ಯದಲ್ಲಿ ಜೀವಿಸಿರಬಹುದು. ಕ್ರಿ.ಶ ಮೊದಲ ಶತಮಾನದ ವರಾಹಮಿಹಿರನನ್ನು ಉಜ್ಜೈನಿಯವನೆಂದು ಗುರುತಿಸಲಾಗುತ್ತದೆ. ಹಾಗಾದರೆ ಆತನೊಂದಿಗಿನ ಖನಳ ಕಥೆ ಕಾಲ್ಪನಿಕವಿರಬಹುದೇ? ಅಥವಾ ಇದ್ಯಾವ ವರಾಹಮಿಹಿರನೋ!!
 ಮುಂದೇನು ಮಾಡುವುದೆಂದು ತಲೆಕೆರೆದುಕೊಂಡು ಆಚೀಚೆ ನೋಡಿದರೆ ಕಾಣಿಸಿದ್ದು ಎರಡು ಯುವ ಪ್ರೇಮಿಗಳ ಜೋಡಿ, ಮೂರ್ನಾಲ್ಕು ಸಿಗರೇಟ್ ಸೇದುತ್ತ ಕುಳಿತ ಪಡ್ಡೆ ಹೈಕಳು, ಇನ್ನೊಬ್ಬ ಕುರಿ ಮೇಯಿಸುತ್ತಿದ್ದವ. ’ಮೊಶಾಯ್, ಯಹಾಂ ಕಿಲಾ ದೇಖ್‌ನೇ ಕೇಲಿಯೆ ಕಹಾಂ ಮಿಲೇಗಾ?’ ಎಂದು ಅಲ್ಲಿ ಕುಳಿತಿದ್ದ ಹುಡುಗರ ಗುಂಪಿಗೆ ಕೇಳಿದೆ. ಪರಮ ಸುಖೀ ಪುರುಷನಂತೆ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತದ್ದವನೊಬ್ಬ ನಿರ್ಲಿಪ್ತನಾಗಿ ಉತ್ತರಿಸಿದ ’ಉಸೀಪೇಹಿ ಆಪ್ ಖಡೇಹೋ, ದೇಖ್ಲೋ’.
ಕಾಲಕೆಳಗೆ ನೋಡಿಕೊಂಡೆ. ಇಲ್ಲ...ಇದು ಮಾಮೂಲಿನಂಥ ನೆಲವಲ್ಲ. ಸುತ್ತಣ ಹಚ್ಚಹಸುರಿನ ಮಧ್ಯೆ ಕಡುಕೆಂಪು ನೆಲದಿಂದ ಸುಟ್ಟ ಇಟ್ಟಿಗೆಯ ಚೂರುಗಳು ಹೊರಗಿಣುಕುವುದನ್ನು ಗಮನಿಸುವುದನ್ನೇ ಮರೆತುಬಿಟ್ಟಿದ್ದೆ. ಅದು ಬರಿ ಖನಮಿಹಿರೆರ್ ಧಿಪಿಯ ಕಂಪೌಂಡಿನೊಳಗೊಂದೇ ಅಲ್ಲ. ಹೊರ ಬಂದು ಪಕ್ಕದ ದಿಬ್ಬ ಹತ್ತಿಳಿದು ಆಚೆಯ ಕಾಲುಹಾದಿಗೆ ಬಂದು ನೋಡಿದರೆ ಅಲ್ಲಿನ ನೆಲವೂ ಥೇಟ್ ಅದೇ ರೀತಿ. ಮುಂದಕ್ಕೆ ಹೋಗಿ ಗದ್ದೆಯ ಅಂಚಿಲ್ಲಿ ನಿಂತು ನೋಡಿದರೆ ಇಲ್ಲಿನ ನೆಲವೂ ಅದೇ ಥರದ ಇಟ್ಟಿಗೆಯದ್ದು. ದೂರದಲ್ಲಿ ಗದ್ದೆಗಳ ಮಧ್ಯೆ ಕಲ್ಲು ಕ್ವಾರಿಗಳಂಥ ಸಣ್ಣ ಸಣ್ಣ ಹೊಂಡಗಳು. ಅಲ್ಲಿನ ನೆಲ, ಗೋಡೆಗಳೂ ಅಂಥದೇ. ಇಟ್ಟಿಗೆಯ ಫ್ಲೋರಿಂಗ್ ಅಂಥ ವಿಶೇಷವೇನಲ್ಲ. ಆದರಿದು ಅಂಥಿಂಥ ಇಟ್ಟಿಗೆಯದಲ್ಲ. ಈ ಇಟ್ಟಿಗೆಯ ಚೂರುಗಳು ಮೂರು ಸಾವಿರ ವರ್ಷಗಳ ಕಥೆ ಹೇಳುತ್ತವೆ. ಇಪ್ಪತ್ತೈದು-ಮೂವತ್ತು ಶತಮಾನಗಳ ಕಾಲ ಕಾಲನ ಹೊಡೆತ ತಾಳಿಕೊಂಡು ಊರವರ ದಿವ್ಯ ನಿರ್ಲಕ್ಷದ ಮಧ್ಯೆ ಇವು ಉಳಿದು ಬಂದಿರುವುದೇ ಒಂದು ಸೋಜಿಗ.
ಸುಟ್ಟ ಇಟ್ಟಿಗೆಯಂಥ ನೆಲ


೧೯೦೭ರಲ್ಲಿ ರಾಖಲ್ ದಾಸ್ ಬಂಡೋಪಾಧ್ಯಾಯ ಎಂಬ ಒಬ್ಬ ಯುವ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ಈ ಬೇಡಾಚಂಪಾದ ಪ್ರದೇಶದಲ್ಲಿ ವ್ಯಾಪಕ ಅಧ್ಯಯನ ಕೈಗೊಂಡ. ಸುತ್ತಲಿನ ಸ್ಥಳಗಳಲ್ಲಿ ಅಗೆದಲ್ಲೆಲ್ಲ ಸಿಕ್ಕುತ್ತಿದ್ದ ಸುಟ್ಟ ಮಣ್ಣಿನ ಇಟ್ಟಿಗೆಗಳು, ಟೆರಾಕೋಟಾದ ಮಾದರಿಗಳು ಅವನಲ್ಲಿ ಭಾರೀ ಆಸಕ್ತಿ ಕೆರಳಿಸಿದ್ದವು. ಇದರ ಐತಿಹಾಸಿಕತೆಯ ಬಗ್ಗೆ ಬಸುಮತಿ ಎಂಬ ಬಂಗಾಳಿ ಮಾಸಿಕದಲ್ಲೂ ಆತ ಸರಣಿ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ ತನ್ನ ಅಧ್ಯಯನದ ವಿಸ್ತೃತ ವರದಿಯೊಂದನ್ನ ASIಗೂ ಕಳಿಸಿಕೊಟ್ಟ. ಪ್ರಾಚ್ಯವಸ್ತು ಇಲಾಖೆ ಆತನ ಸಂಶೋಧನೆಯನ್ನು ಕೆಲಸಕ್ಕೆ ಬಾರದ್ದೆಂದು ಮೂಲೆಗೆಸೆಯಿತು. ಇದೇ ಬಂಡೋಪಾಧ್ಯಾಯನ ಸಂಶೋಧನೆಯಿಂದ ಹದಿನೈದು ವರ್ಷಗಳ ನಂತರ ಯಾವತ್ತು ಮೆಹಂಜೋದಾರೋ ವಿಶ್ವವಿಖ್ಯಾತಿಗಳಿಸಿತೋ ಬಂಗಾಳದ ಸರ್ಕಾರ ದೀರ್ಘ ಆಕಳಿಕೆ ಮುಗಿಸಿ ಎದ್ದು ಕೂತಿತು. ಅತ್ತ ರಾಖಲ್ ದಾಸ್‌ ಹರಪ್ಪಾದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಿದ್ದಂತೆ ಹದಿನೈದಿಪ್ಪತ್ತು ವರ್ಷಗಳಿಂದ ಮೂಲೆಯಲ್ಲಿ ಧೂಳುತಿನ್ನುತ್ತಿದ್ದ  ವರದಿಗೆ ಎಲ್ಲಿಲ್ಲದ ಮಹತ್ವ ಬಂತು. ಆಶುತೋಷ್ ಮ್ಯೂಸಿಯಂ ಆಫ್ ಇಂಡಿಯನ್ ಆರ್ಟ್‌ನ ಸಹಾಯದಿಂದ ಇಲ್ಲಿನ ಕೆಲ ಸ್ಥಳಗಳಲ್ಲಿ ಉತ್ಖನನ ನಡೆದಾಗ ನಾಲ್ಕು ಮಡಿಕೆಯ ಚೂರು, ಒಂದಿಷ್ಟು ಹಳೆಯ ನಾಣ್ಯಗಳು ಸಿಕ್ಕರೆ ದೊಡ್ಡದೆಂಬ ಭಾವನೆಯಿದ್ದ ಇತಿಹಾಸಕಾರರೆಲ್ಲ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟರು. ಅದುವರೆಗೂ ಕಂಡುಕೇಳರಿಯದಿದ್ದ ಮೂರು ಸಾವಿರ ವರ್ಷಗಳ ಹಳೆಯ ಭವ್ಯ ನಗರವೊಂದು ಧಿಗ್ಗನೆದ್ದು ಜಗತ್ತಿನೆದುರು ತೆರೆದುಕೊಂಡಿತು. ಇಷ್ಟಾಗಿದ್ದೇ ತಡ, ಒಂದಿಷ್ಟು ಜಾಗಕ್ಕೆ ಕಂಪೌಂಡ್ ಗೋಡೆಕಟ್ಟಿ ಮೂರ್ನಾಲ್ಕು ಬೋರ್ಡು ತೂಗುಹಾಕಿ ಸುತ್ತಲಿನ ಸ್ಥಳವನ್ನು ಸಂರಕ್ಷಿತ ವಲಯವೆಂದು ಘೋಷಿಸಿ ಸರ್ಕಾರ ಕೈತೊಳೆದುಕೊಂಡಿತು. ಮುಂದೆ ಖ್ಯಾತ ಬಂಗಾಳಿ ಲೇಖಕ ಕಾಲಿದಾಸ ದತ್, ಕಲ್ಯಾಣ ಕುಮಾರ್ ಗಂಗೂಲಿ, ಕುಂಜಗೋಬಿಂದ ಗೋಸ್ವಾಮಿ, ದೇವಿಪ್ರಸಾದ್ ಘೋಷರಂಥವರ ಪರಿಶ್ರಮದಿಂದ ಆಶುತೋಷ್ ಮ್ಯೂಸಿಯಂ ಇನ್ನೂ ಕೆಲವೆಡೆ ಉತ್ಖನನ ಕೈಗೊಂಡಿತು. ಅಗೆದಲ್ಲೆಲ್ಲ ತೆರೆದುಕೊಳ್ಳುತ್ತಿದ್ದ ಆ ನಾಗರಿಕತೆಯ ಹೊಸ ಕುರುಹುಗಳು ಪ್ರಾಚ್ಯವಸ್ತು ಸಂಶೋಧಕರನ್ನು ಬೆಚ್ಚಿಬೀಳಿಸಿದ್ದವು. ನಿನ್ನೆಮೊನ್ನೆಯಷ್ಟೆ ಖನ ಮಿಹಿರೆರ್ ಧಿಪಿಯ ಪಕ್ಕ ವೊಡಾಫೋನ್ ಕಂಪನಿ ಮೊಬೈಲ್ ಟವರಿಗಾಗಿ ನೆಲವಗೆಯುತ್ತಿದ್ದಾಗ ಸಿಕ್ಕ ಕೆಲ ಬೆಲೆಬಾಳುವ ಮೂರ್ತಿಗಳು ಬೇಡಾಚಂಪಾವನ್ನು ಮತ್ತೆ ಸುದ್ದಿಗೆ ತಂದಿದ್ದವು. ಚೌಕಾಶಿ ನಡೆಸಿದರೆ ಇಲ್ಲಿ ಸಿಕ್ಕ ಚಿಕ್ಕಪುಟ್ಟ ಐತಿಹಾಸಿಕ ಮಹತ್ವದ ವಸ್ತುಗಳನ್ನು ಸಾವಿರ ಎರಡು ಸಾವಿರಕ್ಕೆ ಮಾರುವವರೂ ಇದ್ದಾರೆ. ಇಲ್ಲಿ ಸಿಗುವ ಟೆರಾಕೋಟಾದ ಮಾದರಿಗಳಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆಯಿದೆ. ಮಣ್ಣಿನ ಕಲಾಕೃತಿಗಳಿಗೆ ಹೆಸರಾದ ಬಿಶ್ನುಪುರದ ಕಲಾವಿದರಿಂದ ನಕಲಿ ಟೆರಾಕೋಟಾದ ಮೂರ್ತಿಗಳನ್ನು ಮಾಡಿ, ಅದರ ಮೇಲೆ ಖರೋಷ್ಟಿ ಲಿಪಿಯಲ್ಲಿ ಅಚ್ಚು ಕೆತ್ತಿಸಿ ಥೇಟ್ ಅಸಲಿಯೆಂದು ನಂಬಿಸಿ ಮಾರುವ ದಂಧೆಯೂ ಶುರುವಾಗಿದೆ.
ಅದು ಚಂದ್ರಕೇತುಘರ್....
ಜಗತ್ತಿನ ಇತಿಹಾಸಕಾರರನ್ನೆಲ್ಲ ಒಂದು ಕಾಲದಲ್ಲಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಈ ಸ್ಥಳ ನಿಜಕ್ಕೂ ಬಂಗಾಳದ ಇತಿಹಾಸದ ಒಂದು ಕಳೆದುಹೋದ ಕೊಂಡಿ. ಅದೆಷ್ಟು ರೋಚಕತೆಯನ್ನು ಹುಟ್ಟುಹಾಕಿದೆಯೋ ಅಷ್ಟೇ ನಿಗೂಢತೆಗಳನ್ನೂ ತನ್ನೊಡಲೊಳಗದು ಬಚ್ಚಿಟ್ಟುಕೊಂಡಿದೆ. ಇದರ ಒಗಟನ್ನು ಬಿಡಿಸಲಾಗದೇ ಕೈಚೆಲ್ಲಿದ ಪುರಾತತ್ವ ಸಂಶೋಧಕರೇ ಹೆಚ್ಚು. ಹೆಚ್ಚೆಚ್ಚು ಬಿಡಿಸಿಕೊಂಡಂತೆ ಅಷ್ಟಷ್ಟೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗಳನ್ನು ನಮ್ಮ ಮುಂದದು ಹರಡುತ್ತ ಹೋಗುತ್ತದೆ. ಅದೇ ಕಾರಣಕ್ಕೇನೋ ಭಾರತದ ಅತಿ ಹಳೆಯ ನಗರಗಳಲ್ಲೊಂದೆಂಬ ಖ್ಯಾತಿ ಇದಕ್ಕಿದ್ದರೂ, ಹರಪ್ಪ, ಮೆಹಂಜೋದಾರೋಗಳ ಸಾಲಿನಲ್ಲಿ ನಿಲ್ಲುವ ತಾಕತ್ತಿದ್ದರೂ ಇದಕ್ಕಿನ್ನೂ ಅವುಗಳ ಮಟ್ಟಿಗೆ ಪ್ರಸಿದ್ಧಿ ದಕ್ಕದಿರುವುದು. ಕ್ರಿ.ಶ ಒಂದನೇ ಶತಮಾನದಲ್ಲೇ ಪ್ಟಾಲೆಮಿ ತನ್ನ ಜಿಯೋಗ್ರಾಫಿಯಾದಲ್ಲಿ ಗಂಗಾತೀರದಲ್ಲಿದ್ದ ದಕ್ಷಿಣ ಬಂಗಾಳದ ಈ ನಗರವನ್ನು ಗಂಗೆ ಎಂದು ಕರೆದಿದ್ದಾನೆ. ಅವನಿಗಿಂತ ಹಿಂದಿನ ಗ್ರೀಕ್ ಇತಿಹಾಸಕಾರ ಪ್ಲುಟಾರ್ಚ್ ಗಂಗಾರಿದಯ್ ಎಂಬ ಶಕ್ತಿಶಾಲಿ ಬುಡಕಟ್ಟೊಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. ಕ್ರಿ.ಪೂ ಒಂದನೇ ಶತಮಾನದ ಅನಾಮಧೇಯ ಇತಿಹಾಸಕಾರನೊಬ್ಬನ Periplus of the Erythraean Seaಗಳಲ್ಲಿ ಗಂಗಾತೀರದ ಈ ನಗರದದಿಂದ ರೋಮಿಗೆ ಬೆಲೆಬಾಳುವ ವಸ್ತುಗಳು, ಮಸ್ಲಿನ್ ಬಟ್ಟೆ ರಫ್ತಾಗುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಡಿಯೋಡ್ರಸ್ ಸಿಕಲಸ್, ಮೆಗಸ್ತನೀಸ್‌‌ರ ಪ್ರಕಾರ ಅಲೆಗ್ಸಾಂಡರ್ ಭಾರತದಿಂದ ತಿರುಗಿ ಓಡಿಹೋಗಲು ಅವನಿಗಿದ್ದ ನಂದ ಮತ್ತು ಗಂಗರಿದಯ್ ರಾಜ್ಯಗಳ ಒಕ್ಕೂಟದ ಸೈನ್ಯಬಲದ ಹೆದರಿಕೆಯೇ ಕಾರಣವಂತೆ. ನಂದರು ಆಳಿದ್ದು ಈಗಿನ ಬಿಹಾರವನ್ನು. ಆ ಗಂಗರಿದಯ್ ಸಾಮ್ರಾಜ್ಯವೇ ಈ ಇತಿಹಾಸ ಪ್ರಸಿದ್ಧ ಚಂದ್ರಕೇತುಘರ್. 
ರೋಮಿನಿಂದ ಜಲಮಾರ್ಗ

ಅಲೆಕ್ಸಾಂಡರಿನ ಕಾಲದ ಸಾಮ್ರಾಜ್ಯಗಳು
ಹಾಗಾದರೆ ಇದಕ್ಕೆ ಚಂದ್ರಕೇತುಘರ್ ಎಂಬ ಹೆಸರು ಬರಲು ಕಾರಣವೇನು?
ಚಂದ್ರಕೇತು ಬಂಗಾಳದ ಜನಪದ ಇತಿಹಾಸದ ಅತಿ ಖ್ಯಾತ ಅರಸರಲ್ಲೊಬ್ಬ. ಆ ಹೆಸರಿನ ಅರಸನೊಬ್ಬನಿದ್ದ ಎಂಬ ಬಗ್ಗೆ ಇತಿಹಾಸಕಾರರಲ್ಲೇ ಒಮ್ಮತಾಭಿಪ್ರಾಯವಿಲ್ಲ. ಆದರೂ ಬಂಗಾಳದ ಜನಪದದಲ್ಲಿ ಇವನ ಕುರಿತಾದ ನೂರಾರು ಕಥೆಗಳಿವೆ. ಬಂಗಾಳಕ್ಕೆ ಇಸ್ಲಾಂನ್ನು ಮೊದಲು ಪ್ರಸಾರ ಮಾಡಲು ಬಂದಿದ್ದ ಹಜರತ್ ಸಯ್ಯದ್ ಅಬ್ಬಾಸ್ ಅಲಿ ಅಲಿಯಾಸ್ ಪೀರ್ ಗೋರಾಚಂದನನ್ನು ತಡೆದ ಆತನ ಕಥೆಗಳು ಬಂಗಾಳದಲ್ಲಿ ಮನೆಮಾತಾಗಿವೆ. ತನ್ನ ಅತಿಮಾನುಷ ಶಕ್ತಿಗಳಿಗೆ ಹೆಸರಾಗಿದ್ದ ಚಂದ್ರಕೇತು ತನ್ನನ್ನು ಇಸ್ಲಾಂಗೆ ಮತಾಂತರಿಸಲು ಬಂದಿದ್ದ ಪೀರ್ ಗೋರಾಚಂದನ ಸವಾಲು ಸ್ವೀಕರಿಸಿ ಒಣಗಿದ ಬೇಲಿಗುಟ್ಟದಲ್ಲಿ ಸಂಪಿಗೆಯ ಹೂವರಳುವಂತೆ ಮಾಡಿದನಂತೆ. ಹಾಗಾಗಿ ಈ ಸ್ಥಳ ಬೇಡಾ(ಬೇಲಿ)ಚಂಪಾ(ಸಂಪಿಗೆ) ಎಂದು ಹೆಸರಾಯಿತಂತೆ. ಚಂದ್ರಕೇತುಘರದ ಸುತ್ತಲಿನ ೧೧ ಊರುಗಳ ಹೆಸರುಗಳ ಹುಟ್ಟಿಗೂ ಇಂಥದ್ದೇ ಕಥೆಗಳಿವೆ. ಚಂದ್ರಕೇತು-ಗೋರಾಚಂದನ ನಡುವೆ ಯುದ್ಧ ನಡೆದ ಸ್ಥಳ ರಣ್(ಯುದ್ಧ)ಖೋಲಾ, ಗೋರಾಚಂದ ಸತ್ತ ಸ್ಥಳ ಗೋರಾಪೋಟಾ ಜೊತೆಗೆ ರಾಜನ ಧನಾಗಾರವಿದ್ದ ಸ್ಥಳ ಧನಪೋಟಾ, ಅರಮನೆಯ ಸಿಂಹದ್ವಾರ ಶಿಂಗೇರ್ ಆಟಿ, ಸ್ನಾನ ಮಾಡುವ ಸ್ಥಳ ಶಾನ್ ಪುಕುರ್ ಹೀಗೆ ಸುತ್ತಮುತ್ತಲಿನ ಹಳ್ಳಿಗಳೆಲ್ಲ ಒಂದಿಲ್ಲೊಂದು ಥರದಲ್ಲಿ ಚಂದ್ರಕೇತುವಿನೊಡನೆ ತಳುಕು ಹಾಕಿಕೊಳ್ಳುತ್ತವೆ.
ಚಂದ್ರಕೇತುಘರದ ಸ್ವಲ್ಪ ದೂರದಲ್ಲೇ ಬಿದ್ಯಾಧರಿ ನದಿ ಹರಿಯುತ್ತದೆ. ಮೊದಲೊಂದು ಕಾಲದಲ್ಲಿ ಇಲ್ಲಿ ಗಂಗಾನದಿ ಹರಿದಿದ್ದ, ಬಂದರುಗಳಿದ್ದ ಕುರುಹುಗಳಿವೆ. ಹಡಗುಗಳ ಅವಶೇಷಗಳೂ ಸಿಕ್ಕಿವೆ. ಗಂಗೆ ನಂತರ ತನ್ನ ಪಥ ಬದಲಿಸಿ ಇಲ್ಲಿಂದ ೨೦ ಕಿ.ಮೀ ದೂರದಲ್ಲಿ ಕಲ್ಕತ್ತದಲ್ಲಿ ಹರಿಯಲಾರಂಭಿಸಿತು. ಇದರ ಹಿಂದೆ ಒಂದು ಕಥೆಯೂ ಇದೆಯಂತೆ. ಚಂದ್ರಕೇತು ತನ್ನ ಮಗನ ನಾಮಕರಣಕ್ಕೆ ಗಂಗಾದೇವಿಯನ್ನು ಆಹ್ವಾನಿಸಿದ್ದ. ಆದರೆ ಪೀರ್ ಗೋರಾಚಂದ ಗಂಗೆಗೆ ಚಾಡಿಹೇಳಿ ನಾಮಕರಣಕ್ಕೆ
ಹಿಂದೊಮ್ಮೆ ನದಿ ಹರಿದಿದ್ದಿರಬಹುದಾದ ಕುರುಹಾಗಿ ಅಗೆದಲ್ಲೆಲ್ಲ ಸಿಗುವ ಉಸುಕು
ಹೋಗದಂತೆ ತಡೆಯಲು ಯಶಸ್ವಿಯಾದ. ಗೋರಾಚಂದನ ಚಾಡಿಮಾತು ಕೇಳಿ ಅರಸನ ಮೇಲೆ ಕೋಪಗೊಂಡ ಗಂಗೆ ಚಂದ್ರಕೇತುಘರವನ್ನು ಬಿಟ್ಟು ದೂರ ಸರಿದಳು. ಗಂಗೆ ದೂರಸರಿದಿದ್ದ ಈ ಇಡೀ ಸ್ಥಳ ದೂರಸರಿದ ಗಂಗೆ ಅಥವಾ ದೇಗಂಗಾ ಎಂದು ಕರೆಯಲ್ಪಡುತ್ತದೆ. ವಿಚಿತ್ರವೆಂದರೆ ಆ ಹೆಸರಿನ ಅರಸನೊಬ್ಬ ಈ ಸ್ಥಳವನ್ನು ಆಳಿದ್ದನೆಂಬ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಮೌರ್ಯಯುಗದ ಹಿಂದಿನಿಂದಲೂ ಸುಮಾರು ಕ್ರಿ.ಪೂ ೧೦೦೦ದಿಂದಲೂ ಬೇಡಾಚಂಪಾ ಮತ್ತು ಸುತ್ತಲಿನ ಪ್ರದೇಶ ಬಹುದೊಡ್ಡ ನಾಗರಿಕತೆಯ ಕೇಂದ್ರವಾಗಿತ್ತು. ನಂತರ ಶುಂಗರು, ಕುಶಾನರು, ಗುಪ್ತರಿಂದ ಹಿಡಿದು ಪಾಲರು ಹಾಗೂ ಸೇನರ ತನಕ ಕ್ರಿ.ಶ ೧೩೦೦ರವರೆಗೂ ಇದನ್ನು ಬೇರೆ ಬೇರೆ ರಾಜಮನೆತನಗಳು ಆಳಿವೆ. ಆದರೆ ಅವುಗಳಲ್ಯಾರೂ ಚಂದ್ರಕೇತು ಎಂಬ ಹೆಸರಿನವರಿಲ್ಲ. ಅಲ್ಲಿ ಆಳಿದವರ್ಯಾರೂ ಪ್ರಸಿದ್ಧರಾಗದೇ ಚಂದ್ರಕೇತುವೆಂಬ ಕಾಲ್ಪನಿಕ ಅರಸು ಅಷ್ಟು ಹೆಸರುವಾಸಿಯಾದನೆಂದರೆ, ಇಲ್ಲದೇ ಇರುವ ವ್ಯಕ್ತಿಯೊಬ್ಬನ ಬಗ್ಗೆ ನೂರಾರು ರೋಚಕ ಕಥಗಳೂ, ಅವನದೇ ಹೆಸರಿನಿಂದ ಇಡೀ ನಗರವೂ ಬೆಳೆದು ಬಂದಿತೆಂಬುದು ಆಶ್ಚರ್ಯ ಮಾತ್ರವಲ್ಲ, ಇಡೀ ಇತಿಹಾಸವನ್ನು ಇನ್ನಷ್ಟು ನಿಗೂಢತೆಗೆ ತಳ್ಳುವ ಸಂಗತಿಯೇ ಸೈ. ಗ್ರೀಕರ, ಮೆಗಸ್ತನೀಸನ ದಾಖಲೆಗಳಲ್ಲಿ ಸೆಲ್ಯುಕಸ್‌ನನ್ನು ಸೋಲಿಸಿದ ಸ್ಯಾಂಡ್ರೋಕುಟಸ್ ಎಂಬ ರಾಜನ ಉಲ್ಲೇಖವಿದೆ. ಅದು ಚಂದ್ರಗುಪ್ತನ ಗ್ರೀಕ್ ಅಪಭೃಂಶವಾಗಿರಬಹುದೆಂಬ ಅನುಮಾನಗಳಿವೆ. ಈ ಸಂಡ್ರೋಕುಟಸ್ ಜನರ ಬಾಯಲ್ಲಿ ಚಂದ್ರಕೇತುವಾಗಿರಬಹುದೇ ಎಂಬುದು ನನ್ನ ಸಪ್ರಶ್ನ ಸಂಶಯ.!
ಆದರೆ ಇನ್ನೊಂದು ಸಮಸ್ಯೆ, ಚಂದ್ರಕೇತುವಿನ ಸಮಕಾಲೀನನೆನ್ನಲಾದ ಪೀರ ಗೋರಾಚಂದ ಅಥವಾ ಹಜರತ್ ಸಯ್ಯದ್ ಅಬ್ಬಾಸ್ ಅಲಿಯ ಕೆಲವಷ್ಟು ದರ್ಗಾಗಳು ಬಂಗಾಳದಲ್ಲಿವೆ. ಗೋರಾಚಂದ್ ರೋಡ್ ಎಂಬ ಹೆಸರಿನ ರಸ್ತೆಯೂ ಕಲ್ಕತ್ತಾದಲ್ಲಿದೆ. ಹನ್ನೆರಡನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿಯ ದಾಳಿಯ ನಂತರ ಬಂಗಾಳದಲ್ಲಿ ಸೇನ ಸಾಮ್ರಾಜ್ಯದ ಅವಸಾನ ಶುರುವಾಯಿತು. ಇದೇ ಸಮಯದಲ್ಲಿ ಮುಸ್ಲಿಂ ಮತಪ್ರಚಾರಕರ, ದಾಳಿಕಾರರ ಪ್ರಭಾವದಿಂದ ಈ ಭಾಗದಲ್ಲಿ ಇಸ್ಲಾಂ ವ್ಯಾಪಕವಾಗಿ ಹರಡಲು ಪ್ರಾರಂಭವಾಯ್ತು. ಸರಿಸುಮಾರು ಇದೇ ಸಮಯದಲ್ಲಿ ಮತಪ್ರಚಾರಕ್ಕಾಗಿ ಗೋರಾಚಂದ ಮೆಕ್ಕಾದಿಂದ ಬಂಗಾಳಕ್ಕೆ ಬಂದನೆಂಬ ನಂಬಿಕೆಯಿದೆ. ಬೇಡಾಚಂಪಾದಿಂದ ೬ ಕಿ.ಮೀ ದೂರದ ಹಾರ(ಡ)ವಾದಲ್ಲಿ ಚಂದ್ರಕೇತುವಿನ ಅನುಮತಿಯಿಲ್ಲದೇ ಗೋರಾಚಂದ ಮಸೀದಿಯೊಂದನ್ನು ನಿರ್ಮಿಸಲು ಶುರುಮಾಡಿದ. ವಿಷಯ ತಿಳಿದ ಚಂದ್ರಕೇತು ಗೋರಾಚಂದನ ಮೇಲೆ ದಂಡೆತ್ತಿ ಹೋದನಂತೆ. ಇಬ್ಬರಿಗೂ ವಿಶೇಷ ಮಾಂತ್ರಿಕ ಶಕ್ತಿಗಳಿದ್ದವು. ಘನಘೋರ ಯುದ್ಧ ನಡೆದು ಕೊನೆಗೆ ಗೋರಾಚಂದ ಮೃತಪಟ್ಟ. ಅವನ ದೇಹವನ್ನು ಆತ ನಿರ್ಮಿಸಲು ಹೊರಟಿದ್ದ ಮಸೀದಿಯ ಪಕ್ಕದಲ್ಲೇ ಸಮಾಧಿ ಮಾಡಿಲಾಯ್ತು. ಕೆಂಪು ಕಲ್ಲಿನ ಈ ಮಸೀದಿ ಸ್ಥಳೀಯವಾಗಿ ಲಾಲ್ ಮಸ್ಜಿದ್ ಎಂದೇ ಹೆಸರಾಗಿದೆ. ಇದರ ಅವಶೇಷಗಳನ್ನು ಇನ್ನೂ ನೋಡಬಹುದು. ಮಸೀದಿಯ ಹೆಚ್ಚಿನಂಶ ನಾಶವಾಗಿದ್ದರೂ, ಇದರ ಒಂದು ಭಾಗದ ಗೋಡೆ ಇನ್ನೂ ಮೂಲರೂಪದಲ್ಲಿಯೇ ನಿಂತಿದೆ. ಆದರಿದು ಮಸೀದಿಯಲ್ಲವೆಂದೂ, ಪಾಲ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲ್ಪಟ್ಟ ಬೌದ್ಧ ಸ್ತೂಪವೊಂದರ ಅವಶೇಷವೆಂದೂ ರಾಖಲದಾಸ್ ಬಂಡೋಪಾಧ್ಯಾಯ ಸೇರಿ ಹಲ ಇತಿಹಾಸಕಾರರು ವಾದಿಸಿದ್ದಾರೆ. ಗೋರಾಚಂದನ ಅನುಯಾಯಿಗಳು ಅವನ ಸಮಾಧಿಯಿಂದ ಅಸ್ತಿಪಂಜರವನ್ನು ತೆಗೆದು ಪಕ್ಕದ ಮಸೀದಿಯಲ್ಲಿ ಸಂರಕ್ಷಿಸಿಟ್ಟರಂತೆ. ಹಾಗಾಗಿ ಆ ಸ್ಥಳ ಹಾರವಾ(ಹಾರೋ=ಮೂಳೆ) ಎಂದು ಹೆಸರಾಯ್ತು. ಸಮಾಧಿಯಿದ್ದ ಜಾಗ ಇಂದು ದೊಡ್ಡ ದರ್ಗಾ ಆಗಿ ಬದಲಾಗಿದೆ. ಪ್ರತಿವರ್ಷ ಬಂಗಾಳ ಸಾವಿರಾರು ಜನ ಇಲ್ಲಿ ಭೇಟಿಕೊಡುತ್ತಾರೆ. ಪಕ್ಕದಲ್ಲೇ ಇರುವ ಲಾಲ್ ಮಸ್ಜಿದ್, ಚಂದ್ರಕೇತುಘರ್ ಕೇಳುವವರಿಲ್ಲದೇ ಹಾಳು ಬಿದ್ದಿದೆ. ASI ಎರಡು ಕಡೆ ಹೊಂಡ ತೋಡಿ, ಇನ್ನೆರಡು ಕಂಪೌಂಡ್ ಹಾಕಿ, ಬೋರ್ಡ್ ನೆಟ್ಟಿದ್ದು ಬಿಟ್ಟರೆ ಹೆಚ್ಚಿನದೇನೂ ಮಾಡಿಲ್ಲ. ಎರಡು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ಇದನ್ನು ಹೆರಿಟೇಜ್ ವಿಲೇಜ್ ಎಂದು ಘೋಷಿಸಿದೆಯೆಂಬುದು ಬಿಟ್ಟರೆ ಮತ್ತೇನೂ ಕೆಲಸವಾಗಿಲ್ಲ. ಕಲ್ಕತ್ತಾ ವಿಶ್ವವಿದ್ಯಾಲಯದ ಆಶುತೋಷ್ ಮ್ಯೂಸಿಯಮ್ಮಿನ ಕೆಲಸಗಳಿಂದ ಕೆಲಮಟ್ಟಿನ ಉತ್ಖನನ ನಡೆದು ಇತಿಹಾಸದ ಮೇಲೆ ಬೆಳಕು ಬೀರುವ ಪ್ರಯತ್ನಗಳು ನಡೆದಿವೆ. ಅದನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಹೆಸರು ಸ್ವಲ್ಪವಾದರೂ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಕಾರಣ ದಿಲೀಪ್ ಕುಮಾರ್ ಮೈತ್ರೆ ಎಂಬ ಒಬ್ಬ ಸಾಧಾರಣ ಮನುಷ್ಯನಿಂದ. ಚಂದ್ರಕೇತುಘರ್ ಸುತ್ತಮುತ್ತಲಿನ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಏಕೈಕ ವ್ಯಕ್ತಿ ಅವರು. ಮಾತ್ರವಲ್ಲ ಈ ಪರಿಸರದಲ್ಲಿ ಪ್ರಾಚ್ಯವಸ್ತುಗಳನ್ನು ಉತ್ಖನನ ಮಾಡಿ, ಸಂಗ್ರಹಿಸಲು ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ವ್ಯಕ್ತಿಯೂ ಇವರೊಬ್ಬರೆ. ರಾಖಲದಾಸ ಬಂಡೋಪಾಧ್ಯಾಯರ ಸಂಶೋಧನಾ ವರದಿಯನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಇತಿಹಾಸದ ಬಗ್ಗೆ ಅರಿಯಲು ಇಂದು ಮೈತ್ರೆ ಬರೆದ ’ಚಂದ್ರಕೇತುಘರ್’, ’ಅತೀತ್ ಅಲೋಕೆ ಚಂದ್ರಕೇತುಘರ್’, ’ಘರ್ ಚಂದ್ರಕೇತುರ್ ಕಥಾ’, ’ಇತಿಹಾಸೇರ್ ದೇಗಂಗಾ’ ಎಂಬ ನಾಲ್ಕು ಪುಸ್ತಕಗಳೇ ಅಧಿಕೃತ ಆಧಾರ. ಬೇಡಾಚಂಪಾದ ಬಸ್‌ಸ್ಟ್ಯಾಂಡ್ ಪಕ್ಕದಲ್ಲೇ ಇರುವ ಇವರ ಮನೆಯಲ್ಲಿ ಇಲ್ಲಿ ಸಿಕ್ಕ ಲಕ್ಷಾಂತರ ಪ್ರಾಚ್ಯವಸ್ತುಗಳ ಸಂಗ್ರಹವಿದೆ.  ಕಳೆದ ೫೦ ವರ್ಷಗಳಿಂದ ಇಲ್ಲಿನ ಐತಿಹಾಸಿಕ ಸ್ಥಳಗಳ, ವಸ್ತುಗಳ ರಕ್ಷಣೆಯನ್ನು ಮೈತ್ರೆ ಒಂದು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದಾರೆ. ಒಂದು ವಿಶ್ವಪ್ರಸಿದ್ಧ ನಾಗರಿಕತೆಯ ಅವಶೇಷಗಳನ್ನು ಪುನರುಜ್ಜೀವನಗೊಳಿಸುವ, ನಮ್ಮ ಸಂಸ್ಕೃತಿಯ ಭಾಗವೊಂದನ್ನುಳಿಸುವ ಕಾರ್ಯದಲ್ಲಿ ೮೫ರ ಹರೆಯದ ಮೈತ್ರೆ ಇನ್ನೂ ವಿಶ್ರಮಿಸಿಲ್ಲ. ಒಂದೀಡೀ ಸರ್ಕಾರ ಮಾಡಬೇಕಾಗಿದ್ದ ಕೆಲಸವದು. ಅವರಿಗೆ ನನ್ನದೊಂದು ಹ್ಯಾಟ್ಸಾಫ್.
ಹಾಳು ಹಂಪೆ ನಮ್ಮಲ್ಲಿನ ಪ್ರತಿ ಊರುಗಳಲ್ಲೂ ಇದೆ.
ಕಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ಮಿನಲ್ಲಿರುವ ಚಂದ್ರಕೇತುಘರದ ಒಂದು ಶಿಲ್ಪ 
ದಿಲೀಪ್ ಕುಮಾರ್ ಮೈತ್ರೆ 
ವಸ್ತುಸಂಗ್ರಹಾಲಯವಾಗಿರುವ ಮೈತ್ರೆಯವರ ಮನೆ

ಗುಪ್ತಪೂರ್ವ ಯುಗದ ಟೆರಾಕೋಟಾ ಮಾದರಿಗಳು