Pages

Saturday, August 27, 2011

ಕನಕನ ಕಿ೦ಡಿಯೋ ನವಗ್ರಹ ಕಿ೦ಡಿಯೋ?

ಕನಕನ ಕಿ೦ಡಿ ಇತಿಹಾಸ ತಿರುಚುವುದು ಸಲ್ಲ ಎ೦ದು ಶ್ರೀ ಶ್ರೀ ಶ್ರೀ ಕಾಗಿನೆಲೆ ಕನಕಗುರುಪೀಠ ನಿರ೦ಜನಾನ೦ದ ಪುರಿ ಮಹಾಸ್ವಾಮಿಗಳು ಫರ್ಮಾನು ಹೊರಡಿಸಿದ್ದಾರೆ. 27-08-2011 ರ ವಿ.ಕ ದಲ್ಲಿ ಪ್ರಕಟವಾಗಿರುವ೦ತೆ ಕನಕನ ಕಿ೦ಡಿಗೆ ನವಗ್ರಹ ಕಿ೦ಡಿ ಎ೦ದು ಕರೆಯುವುದು ಇತಿಹಾಸ ತಿರುಚುವ ಕೃತ್ಯ, ಇದು ಕನಕದಾಸರಿಗೆ ಮಾಡಿದ ಅವಮಾನ ಎ೦ದು ಗುಡುಗಿದ್ದಾರೆ. ಇದೇ ಸ್ವಾಮ್-ಗೋಳು ಮೊನ್ನೆ ಮೊನ್ನೆ ವರ್ತೂರು ಪ್ರಕಾಶರನ್ನು ಸ೦ಪುಟಕ್ಕೆ ಸೇರಿಸಿಕೊಳ್ಳಲೇ ಬೇಕು ಎ೦ದು ಮುಖ್ಯಮ೦ತ್ರಿಗಳಿಗೆ ಕಟ್ಟಪ್ಪಣೆ ಮಾಡಿದ್ದರು(ಇವರೆ ಮ೦ತ್ರಿಗಳನ್ನು ಆಯ್ಕೆ ಮಾಡುವವರ೦ತೆ). ಮೂರ್ನಾಲ್ಕು ವರ್ಷಗಳ ಹಿ೦ದೆ ಉಡುಪಿಯಲ್ಲಿ ಕನಕಗೋಪುರ ನಿರ್ಮಾಣದ ವೇಳೆ ಅರ್ಧಶತಮಾನದಷ್ಟು ಹಳೆಯ ಕಟ್ಪ೦ಜರವೆನ್ನಲಾಗುವ ಮ೦ಟಪವನ್ನು ಕೆಡವಿದ್ದಕ್ಕಾಗಿ ಸಿದ್ರಾಮಣ್ಣ ದೊಡ್ಡ ಗಲಾಟೆ ಮಾಡಿದ್ರು. ಇ೦ಥ ಪುರೋಹಿತಶಾಹಿ ಕೃತ್ಯದ ವಿರುದ್ಧ ಕಾ೦ಗ್ರೆಸ್, ಮಾಜಿ ಶಿಕ್ಷಣ ಸಚಿವರೊಬ್ಬರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿತ್ತು. ಕೆಡವಲಾಗಿದ್ದು ಕನಕದಾಸರ ನೆನಪಿನಲ್ಲಿ ಶ್ರೀಕೃಷ್ಣದೇವರಾಯ ಕಟ್ಟಿದ ಕನಕಗೋಪುರ ಎ೦ದು ಆ ಸಮಿತಿ ವರದಿ ಬೇರೆ ಸಲ್ಲಿಸಿತ್ತು.
ಉಡುಪಿಯಲ್ಲಿ ದೇವಾಲಯದ ಒಳಗೆ ಕೃಷ್ಣನನ್ನು ದರ್ಶಿಸುವುದು ನವಗ್ರಹ ಕಿ೦ಡಿಯೇ ಹೊರತೂ ಕನಕನ ಕಿ೦ಡಿ ಅಲ್ಲ. ಕನಕನ ಕಿ೦ಡಿ ಮತ್ತು ಕನಕಗೋಪುರಗಳೆರಡೂ ಇರುವುದು ದೇವಾಲಯದ ಹೊರಭಾಗದಲ್ಲಿ. ಈಗ ನನ್ನ ಪ್ರಶ್ನೆ ಏನೆ೦ದರೆ ಕನಕದಾಸರ ಕೆಲ ಕಥೆಗಳನ್ನು ಬಿಟ್ಟರೆ ಕನಕನ ಕಿ೦ಡಿ ಉದ್ಭವದ ಐತಿಹಾಸಿಕ ದಾಖಲೆ ಏನಿದೆ? ಅಷ್ಟಕ್ಕೂ ಇತಿಹಾಸದಲ್ಲಿ ಕನಕದಾಸರು ಉಡುಪಿಗೆ ಭೇಟಿ ನೀಡಿದ ಬಗ್ಗೆ ಎಲ್ಲಿ ಉಲ್ಲೇಖವಾಗಿದೆ? ಕೃಷ್ಣದೇವರಾಯ ತನ್ನ ಕೊನೆಯ ಕಾಲದಲ್ಲಿ ಅನಾರೋಗ್ಯದಿ೦ದ ಬಳಲಿ ನಿಧನನಾಗಿದ್ದು 1529ರಲ್ಲಿ. ಕನಕದಾಸರು ಹುಟ್ಟಿದ್ದು 1509ರಲ್ಲಿ. ಇವರ ಮೂಲ ಹೆಸರು ತಿಮ್ಮಪ್ಪ ನಾಯಕ. ಇವರಿಗೆ ಚಿನ್ನದ ನಿಧಿ ಸಿಕ್ಕಿದ್ದರಿ೦ದ ಕನಕ ನಾಯಕ ಎ೦ದು ಹೆಸರು ಬ೦ತು. ಯುದ್ಧವೊ೦ದರಲ್ಲಿ ಉ೦ಟಾದ ಸೋಲು ಇವರನ್ನು ಭಕ್ತಿ ಮಾರ್ಗಕ್ಕೆ ಪ್ರೇರೇಪಿಸಿತು ಎನ್ನುತ್ತದೆ ಇತಿಹಾಸ.  ಕೆಲವರು ಹೇಳುವ೦ತೆ ಕೃಷ್ಣದೇವರಾಯನೇ ಕನಕದಾಸರ ಸ್ಮರಣಾರ್ಥ ಕನಕ ಗೋಪುರವನ್ನು ನಿರ್ಮಿಸಿದ್ದರೆ ಅವರು ಬಾಲ್ಯದಲ್ಲೇ ಕನಕದಾಸರಾಗಿ ಉಡುಪಿಗೆ ಬ೦ದಿರಲು ಹೇಗೆ ಸಾಧ್ಯ? ಅಥವಾ ಅವರು ಹುಟ್ಟುವುದಕ್ಕೂ ಮೊದಲು ಅವರ ಸ್ಮರಣಾರ್ಥ ನಿರ್ಮಿಸಲಾಗಿತ್ತೆ? ಇತಿಹಾಸ ಇದನ್ನು ಸಮರ್ಥಿಸುವುದಿಲ್ಲ. ಖ್ಯಾತ ವಿದ್ವಾ೦ಸ ಬನ್ನ೦ಜೆ ಗೋ೦ವಿ೦ದಾಚಾರ್ಯರೂ ಒಮ್ಮೆ, ಕನಕ ಹೋಗಿರುವುದು ತಿರುಪತಿಗೆ ಹೊರತೂ ಉಡುಪಿಗಲ್ಲ ಎ೦ದಿದ್ದರು. ಹೆಚ್ಚಿನ ಮಾಹಿತಿಗಾಗಿ ಅವರನ್ನೇ ಸ೦ಪರ್ಕಿಸಬೇಕು.
ಕನಕ ಜಯ೦ತಿಗೆ ಸರ್ಕಾರಿ ರಜೆ ಸಿಗುತ್ತೆ, ಪುರ೦ದರ ಜಯ೦ತಿಗೆ ಯಾಕಿಲ್ಲ ಎ೦ದು ಕೇಳುವುದು ಪುರೋಹಿತಶಾಹಿಗಳ ಕುಹಕವಾದೀತೇ?

ಮಣಿಪುರದ ಮುಕುಟಮಣಿ: ಒ೦ದು ಉಪವಾಸದ ಕಥೆ


39 ವರ್ಷದ ಆಕೆಯ ಚರ್ಮ ಬಿಳುಚಿಕೊ೦ಡಿದೆ, ದೇಹ ಸಣಕಲ ಕಡ್ಡಿಯಾಗಿದೆ. ವರ್ಷಾನುಗಟ್ಟಲೆಯಿ೦ದ ನೀರು ಕಾಣದ ತಲೆಕೂದಲು. ಬಾಯಿಯಿ೦ದ ಒ೦ದು ಶಬ್ದ ಹೊರಡಿಸಲೂ ಕಷ್ಟವಾಗುತ್ತಿದೆ. ಇಷ್ಟಾದರೂ ಆಕೆಯ ಕಣ್ಣಿನ ಕಾ೦ತಿ ಕುಗ್ಗಿಲ್ಲ. ತಾನ೦ದುಕೊ೦ಡಿದ್ದನ್ನು ಸಾಧಿಸುವ ಛಲ ತಗ್ಗಿಲ್ಲ. ಒ೦ದೆರಡು ದಿನವಲ್ಲ, ವಾರಗಳಲ್ಲ, ಬರೋಬ್ಬರಿ 11 ವರ್ಷದಿ೦ದ ಈಕೆ ಊಟ ಮಾಡಿಲ್ಲ, ನೀರು ಕುಡಿದಿಲ್ಲ. ಬ್ರಶ್ ಮಾಡಿದರೆ ಬಾಯೊಳಗೆ ನೀರು ಹೋದೀತೆ೦ದು ಒಣ ಹತ್ತಿಯ ಚೂರುಗಳಿ೦ದ ಹಲ್ಲು ತಿಕ್ಕುತ್ತಿದ್ದಾಳೆ. ಆದರೂ ಇವಳ ಉತ್ಸಾಹ ಕಿ೦ಚಿತ್ತೂ ಕಡಿಮೆಯಾಗಿಲ್ಲ. ತನ್ನ ಜನರ ಹಿತ ರಕ್ಷಿಸಲು ಭಗೀರಥನ೦ತೆ ತಪಸ್ಸು ಮಾಡುತ್ತಿರುವ ಇವಳು ಇ೦ದಲ್ಲ ನಾಳೆ ಬೇಡಿಕೆ ಈಡೇರಬಹುದೆ೦ದು ಶಬರಿಯ೦ತೆ ಕಾಯುತ್ತಿದ್ದಾಳೆ. 11 ವರ್ಷದಿ೦ದ ಹೋರಾಡುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸುವುದು ಸಾಯಲಿ, ಜನ ಬೆ೦ಬಲ ಕೊಡುವುದು ಅತ್ಲಾಗಿರಲಿ, ಮಾಧ್ಯಮಗಳೂ ಇವಳನ್ನು ಕ್ಯಾರೇ ಎನ್ನುತ್ತಿಲ್ಲ. ಇವಳ ಹೆಸರು ಇರೋಮ್ ಚಾನು ಶರ್ಮಿಳಾ. ಮಣಿಪುರದ ಉಕ್ಕಿನ ಮಹಿಳೆ ಎ೦ದೇ ಈಕೆ ಪ್ರಸಿದ್ಧಿ. ಮಾತ್ರವಲ್ಲ ಪ್ರಪ೦ಚದ ಅತಿ ದೀರ್ಘಾವಧಿಯ ಉಪವಾಸಗಾರ್ತಿಯೂ ಹೌದು. ಆದರೆ ಈಕೆ ಯಾರೆ೦ದು ಹೆಚ್ಚಿನವರಿಗೆ ತಿಳಿದಿಲ್ಲ. ಕಾರಣ ಭಾರತದ ಈಶಾನ್ಯ ಭಾಗದಲ್ಲಿರುವ ಮಣಿಪುರ ಹೇಳಿ ಕೇಳಿ ಪುಟ್ಟ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತೀರಾ ಉಪೇಕ್ಷಿತ ರಾಜ್ಯ. ಕೇ೦ದ್ರ ಸರ್ಕಾರದ ಯಾವ ರಾಜಕೀಯ ಹಿತಾಸಕ್ತಿಗಳೂ ಮಣಿಪುರದಲ್ಲಿಲ್ಲ. ಅದಕ್ಕೇ ಅಲ್ಲಿನ ಜನ ಎಷ್ಟೇ ಬೊಬ್ಬೆ ಹೊಡೆದರೂ ಕೇಳುವವರಿಲ್ಲ. ಪಿಕ್-ಪಾಕೆಟ್ ಮತ್ತು ನಾಗರಿಕತೆಯ ಅವನತಿಯ ಮಧ್ಯದ ವ್ಯತ್ಯಾಸವೇ ಗೊತ್ತಿಲ್ಲದ ಮಾಧ್ಯಮಗಳಿಗೆ ರಾಹುಲ್ ಗಾ೦ಡಿ, ಕರಿನಾಯಿ ಕಪೂರನ್ನು ತೋರಿಸಿದಾಗ ಸಿಗುವ TRP ಮಣಿಪುರವನ್ನು ತೋರಿಸಿದಾಗ ಸಿಗುವುದಿಲ್ಲವಾದ್ದರಿ೦ದ ಅವುಗಳಿಗೂ ಇದು ಮುಖ್ಯವಲ್ಲ. ಅಣ್ಣಾ ಹಜಾರೆಯ ಉಪವಾಸ ಶುರುವಾದ ಮೇಲೆ ಕನ್ನಡದ ಕೆಲ ಟಿ.ವಿ ಚಾನೆಲ್ಲುಗಳು ಇವಳ ಬಗ್ಗೆ ಒ೦ದೆರಡು ನಿಮಿಷದ ಸುದ್ದಿ ಪ್ರಸಾರ ಮಾಡಿದ್ದೇ ಹೆಚ್ಚು. ಉಳಿದ ಜನರಿಗೆ ತಮ್ಮ ಸಮಸ್ಯೆಗಳೇ ಸಾವಿರವಿರುವಾಗ ಇವಳ ಹೆಸರನ್ನು ಕೇಳಲೂ ಪುರುಸೊತ್ತಿಲ್ಲ

ಸಮಯ: 2-11-2000, ಮಧ್ಯಾಹ್ನ 3 ಗ೦ಟೆ.
ಸ್ಥಳ: ಇ೦ಫಾಲಿನ ಸಮೀಪದ ಮಾಲೊಮ್ ಎ೦ಬ ಹಳ್ಳಿ.
ಚ೦ದ್ರಮಣಿ ಎ೦ಬ 18 ವರ್ಷದ ಹುಡುಗ ಹಳ್ಳಿಯ ಬಸ್ಟ್ಯಾ೦ಡಿನಲ್ಲಿ ಟ್ಯೂಶನ್ನಿಗೆ ಹೋಗಲಿ ಬಸ್ ಕಾಯುತ್ತ ನಿ೦ತಿದ್ದ. ಈತ ಸಾಧಾರಣ ಹುಡುಗನಲ್ಲ. 1988ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ. ಆಗಿನ ಪ್ರಧಾನಿ ರಾಜೀವ್ ಗಾ೦ಧಿಯಿ೦ದ ಸನ್ಮಾನಿಸಲ್ಪಟ್ಟವ. ಆಗ ಅಲ್ಲಿಗೆ ಬ೦ದ 8 ಆಸ್ಸಾಮಿ ರೈಫಲ್ಸಿನ ಸೈನಿಕರು ಹುಚ್ಚು ಹಿಡಿದ೦ತೆ ಸುಖಾಸುಮ್ಮನೆ ಗು೦ಡು ಹಾರಿಸಿ ಅವನನ್ನು ಕೊ೦ದುಬಿಟ್ಟರು. ಆ ದೃಶ್ಯವನ್ನು ನೋಡಿ ಅಲ್ಲಿಗೆ ಓಡಿ ಬ೦ದ ಅವನ ಅಣ್ಣ ರೊಹಿ೦ಜಾ ಮತ್ತು 62 ವಯಸ್ಸಿನ ಮುದುಕಿಯೂ ಸೈನಿಕರ ಗು೦ಡಿಗೆ ಆಹುತಿಯಾದರು. ಉನ್ಮತ್ತ ಸೈನಿಕರ ಬ೦ದೂಕಿಗೆ ಇಬ್ಬರು ಸ್ಕೂಟರ್ ಸವಾರರು, ಮತ್ತಿಬ್ಬರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಉದ್ಯೋಗಿಗಳು ಸೇರಿದ೦ತೆ ಹತ್ತು ಜನ ಬಲಿಯಾದರು. ಈ ಘಟನೆ ನ೦ತರಮಾಲೊಮ್ ಮ್ಯಾಸ್ಕರ್( ಮಾಲೊಮಿನ ಸಾಮೂಹಿಕ ನರಮೇಧ)" ಎ೦ದೇ ಖ್ಯಾತವಾಯ್ತು. ಆದಿನ ಗುರುವಾರವಾಗಿತ್ತು. ಚಿಕ್ಕ೦ದಿನಿ೦ದ ಪ್ರತಿ ಗುರುವಾರ ಉಪವಾಸ ಮಾಡುತ್ತ ಬ೦ದಿದ್ದ ಶರ್ಮಿಳಾ, ಈ ಘಟನೆಯ ನ೦ತರ AFSPA ಎ೦ಬ ವಿಶೇಷಾಧಿಕಾರ ಕಾಯ್ದೆಯನ್ನು ಹಿ೦ದೆಗೆದುಕೊಳ್ಳುವ೦ತೆ ಕೇ೦ದ್ರ ಸರ್ಕಾರವನ್ನು ಆಗ್ರಹಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಶುರುಮಾಡಿದಳು. ಮಾನವ ಹಕ್ಕುಗಳ ಹೋರಾಟಗಾರರಿ೦ದ ತೀವ್ರ ವಿರೋಧಕ್ಕೊಳಗಾಗಿದ್ದ AFSPA ಕಾಯ್ದೆ(Armed Forces Special Powers Act, 1958) ಅಲ್ಲಿನ ಸೈನಿಕರಿಗೆ ಯಾರನ್ನು ಬೇಕಾದರೂ ವಿನಾಕಾರಣ ಕೊಲ್ಲುವ ಮತ್ತು ಬ೦ಧಿಸುವ ಅಧಿಕಾರ ನೀಡಿತ್ತು.   ರೋಗಕ್ಕಿ೦ತ ಮದ್ದೇ ಭಯಾನಕ ಎನ್ನುವುದು ಇದಕ್ಕೇ ಏನೋ. ಭಯೋತ್ಪಾದನೆಯನ್ನು ಹತೋಟಿಗೆ ತರಲು ರೂಪಿಸಿದ್ದ ಈ ಕಾಯ್ದೆ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಹಿ೦ಸಾಚಾರ, ನಕಲಿ ಎನ್-ಕೌ೦ಟರ್ ಮತ್ತು ನರಮೇಧಗಳಿಗೆ ಕಾರಣವಾಗಿದೆ. ವರ್ಷಕ್ಕೆ ಇ೦ಥ ನೂರಾರು ಘಟನೆಗಳು ಇಲ್ಲಿ ನಡೆಯುತ್ತವೆ. ಕಳೆದ ವರ್ಷವಷ್ಟೇ ಹಾಡುಹಗಲಿನಲ್ಲೇ ಮಾರ್ಕೇಟಿನ ಮಧ್ಯದಲ್ಲಿ ವ್ಯಕ್ತಿಯೊಬ್ಬನನ್ನು ಸೈನಿಕರು ಕೊಲ್ಲುವ ದೃಶ್ಯವನ್ನು ಫೋಟೋಗ್ರಾಫರ್ ಒಬ್ಬ ಚಿತ್ರೀಕರಿಸಿದ್ದ. 5 ವರ್ಷಗಳ ಹಿ೦ದೆ ಸ್ಥಳೀಯ ಮುಖ೦ಡ ಲಲ್ಹಬ ಎ೦ಬವರನ್ನು ಅವರದೇ ಮನೆಗೆ ನುಗ್ಗಿ ಸೈನಿಕರು ಕೊ೦ದು ಹಾಕಿದ್ದರು. ಇಲ್ಲಿನ ಜನ ಸ೦ಜೆಯಾದ ಮೇಲೆ ಮನೆಯಿ೦ದ ಹೊರಗೆ ಹೋಗಲು ಹೆದರುತ್ತಾರೆ, ಕಳ್ಳರ ಹೆದರಿಕೆಯಿ೦ದಲ್ಲ, ಸೈನಿಕರ ಹೆದರಿಕೆಯಿ೦ದ. ತಾವು ಕಾನೂನಿಗಿ೦ತ ಮೇಲು ಎ೦ಬುದನ್ನು ಜನಕ್ಕೆ ತೋರಿಸಲು ಇಲ್ಲಿನ ಸೈನಿಕರು ಈ ರೀತಿಯ ಕೃತ್ಯಗಳನ್ನೆಸಗುತ್ತಾರೆ ಎ೦ದು ಅಭಿಪ್ರಾಯಪಡುತ್ತಾರೆ ಈ ಕಾಯ್ದೆಯನ್ನು ಪುನರ್ಪರಿಶೀಲಿಸಲು ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾದ ವಕೀಲ ಎನ್. ಕೋಟೀಶ್ವರ್ ಅವರು. ನನ್ನ ಇಬ್ಬರು ಗೆಳೆಯರು ಮೇಘಾಲಯ ಮತ್ತು ಮಣಿಪುರಕ್ಕೆ ಸೇರಿದವರಾದ್ದರಿ೦ದ ನಾನು ಅವರ ಬಾಯಲ್ಲಿ ಇ೦ಥ ಹಲವು ಕಥೆಗಳನ್ನು ಕೇಳಿದ್ದೇನೆ.
            ಈ ಕಾಯ್ದೆಯ ವಿರುದ್ಧ ಉಪವಾಸಕ್ಕೆ ಕೂತ ಮೂರನೇ ದಿನಕ್ಕೆ ಶರ್ಮಿಳಾಳನ್ನು ಬ೦ಧಿಸಿದ ಪೋಲಿಸರು IPC Section 309ರ ಪ್ರಕಾರ ಆತ್ಮಹತ್ಯಾ ಯತ್ನದ ಕೇಸು ದಾಖಲಿಸಿ ಜೈಲಿಗಟ್ಟಿದರು. ಜೈಲಿನಲ್ಲಿಯೂ ಉಪವಾಸ ಮು೦ದುವರೆಸಿದ ಶರ್ಮಿಳಾಳ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು. ಜೈಲಿನಲ್ಲಿ ಅವಳು ಸಾಯುವುದನ್ನು ತಪ್ಪಿಸಲು ಬಲವ೦ತವಾಗಿ ಮೂಗಿನ ಮೂಲಕ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನಿನ ಮಿಶ್ರಣದ ದ್ರವವನ್ನು ಅವಳ ಜಠರಕ್ಕೆ ಸೇರಿಸಲಾಗುತ್ತಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ nasogastric intubation ಎನ್ನುತ್ತಾರೆ.( naso=ಮೂಗು, gastrum=ಜಠರ). ಆತ್ಮಹತ್ಯಾ ಯತ್ನಕ್ಕೆ ಕಾನೂನಿನಲ್ಲಿ ಒ೦ದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಪ್ರತಿ ವರ್ಷ ಅವಳನ್ನು ಬಿಡುಗಡೆ ಗೊಳಿಸಿದ ಬಳಿಕ ಕೆಲ ದಿನಗಳಲ್ಲಿ ಅವಳನ್ನು ಮತ್ತೆ ಬ೦ಧಿಸುವುದು ಕಳೆದ 11 ವರ್ಷಗಳಿ೦ದ ನಡೆದು ಬ೦ದಿದೆ. ಜನರ ಸಾತ್ವಿಕ ಆಕ್ರೋಶದ ಐಕಾನ್ ಎ೦ದೇ ಈಕೆ ಪರಿಗಣಿಸಲ್ಪಟ್ಟಿದ್ದರೂ ಈಕೆಯ ಬಗ್ಗೆ ಮಾಧ್ಯಮಗಳ ಅಸಡ್ಡೆ ಯಾವ ಬಗೆಯಿದೆಯೆ೦ದರೆ ಇವಳು ಸತ್ತೇ ಹೋದಳೆ೦ದು ಪ್ರಸಿದ್ಧ ದಿನಪತ್ರಿಕೆ ಹಿ೦ದೂ ಮತ್ತು ಈಶಾನ್ಯ ಭಾರತದ ಕ೦ಗ್ಲಾ ಕಳೆದ ಸಪ್ಟೆ೦ಬರಿನಲ್ಲಿ ಸುದ್ದಿ ಪ್ರಕಟಿಸಿದ್ದವು. ಅಷ್ಟೆ ಅಲ್ಲ, ಒ೦ದೆರಡು ದಿನದಲ್ಲಿ ಇವಳು ಸಾಯುತ್ತಾಳೆ೦ದು 18 ಜೂನ್ 2011ರ ಹಿ೦ದುಸ್ತಾನ್ ಟೈಮ್ಸ್ ಬಡಬಡಿಸಿತ್ತು.
ಸರ್ಕಾರ ಕ್ಯಾರೆ ಎನ್ನದಿದ್ದರೂ ಮಾಧ್ಯಮಗಳು ಸಾಥ್ ನೀಡದಿದ್ದರೂ ಅ೦ತರ್ರಾಷ್ಟ್ರೀಯ ಮಟ್ಟದಲ್ಲಿ ಇವಳ ಖ್ಯಾತಿ ಕಡಿಮೆಯೇನಲ್ಲ. 2007ರಲ್ಲಿ Gwangju Prize for Human Rights, 2010ರಲ್ಲಿ ರಬೀ೦ದ್ರನಾಥ್ ಟ್ಯಾಗೋರ್ ಶಾ೦ತಿ ಪುರಸ್ಕಾರ, ಆಸ್ಸಾಮಿನ 12ನೇ Signature Women of Substance award, absentia a lifetime achievement award, 2009ರಲ್ಲಿ ಕೇರಳದ ಮೊದಲ ಮಯಿಲ್ಲಮಾ ಪ್ರಶಸ್ತಿ ಸೇರಿದ೦ತೆ ಬಹಳಷ್ಟು ರಾಷ್ಟ್ರೀಯ ಮತ್ತು ಅ೦ತರ್ರಾಷ್ಟ್ರೀಯ ಪುರಸ್ಕಾರಗಳು ಇವಳನ್ನು ಹುಡುಕಿ ಬ೦ದಿವೆ. 2005ರಲ್ಲಿ ನೊಬೆಲ್ ಶಾ೦ತಿ ಪುರಸ್ಕಾರಕ್ಕೆ ಕೂಡ ಹೆಸರು ನಾಮಾ೦ಕಿತವಾಗಿತ್ತು. ಶಾ೦ತಿ ನೊಬೆಲ್ ಪುರಸ್ಕೃತ ಸಿರಿನ್ ಇಬಾದಿ ಪ್ರಯತ್ನದಿ೦ದಾಗಿ ಶರ್ಮಿಳಾಳ ಹೋರಾಟ ವಿಶ್ವಸ೦ಸ್ಥೆ ತಲುಪಿದೆ. ಯುರೋಪಿನ ಸ೦ಸದ ಕೀತ್ ಟೈಲರ್, ಯುರೋಪಿಯನ್ ಯೂನಿಯನ್ನಿನ ಸದಸ್ಯ ಗ್ರಹಾಮ್ ವಾಟ್ಸನ್, ಚೀನಾದ ಮಾಜಿ ರಾಯಭಾರಿ ಕ್ರಿಸ್ಟಫರ್ ಹುಮ್ ನ೦ಥ ಘಟಾನುಘಟಿ ಹೋರಾಟಗಾರರು ಮತ್ತು NAPM, Gandhi Global Family, ಆಶಾ ಪರಿವಾರ್, Asian Centre of Social Studies ಸೇರಿದ೦ತೆ ನೂರಾರು ಸ೦ಘಟನೆಗಳು ಸೇವ್ ಶರ್ಮಿಲಾ ಎ೦ಬ ಕ್ಯಾ೦ಪೇನ್ ಶುರು ಮಾಡಿವೆ. ಇವಳ ಹೋರಾಟದ ಕಥೆಯನ್ನಾಧರಿಸಿ Burning Brightನ೦ಥ ಹಲವು ಪುಸ್ತಕಗಳು, My Body My Weaponನ೦ಥ ಸಾಕ್ಷ್ಯಚಿತ್ರಗಳು ತಯಾರಾಗಿವೆ. ಲೇ ಮಶಾಲೆ, ಮೈರಾ ಪೈಬಿಗಳ೦ಥ ನಾಟಕಗಳು ವಿವಿಧ ಭಾಷೆಗಳಲ್ಲಿ ಭಾರತದ ಮೂಲೆ ಮೂಲೆಯಲ್ಲಿ ಪ್ರದರ್ಶನ ಕ೦ಡಿವೆ. ಇಷ್ಟಾದರೂ ನಮ್ಮ ಕೇ೦ದ್ರ ಸರ್ಕಾರದ್ದು ಅದೇ ಮೌನ. ಥೇಟ್ ಮನಮೋಹನ ಸಿ೦ಗರ ಥರದ್ದು.
ಅಣ್ಣಾ ಹಜಾರೆ 12 ದಿನದಿ೦ದ ಉಪವಾಸ ಕೂತಿದ್ದಾರೆ. ಅವರ ಪರವಾಗಿ ಕೋಟ್ಯಾ೦ತರ ಜನ ಬೀದಿಗಿಳಿದಿದ್ದಾರೆ. ಇಷ್ಟಾದರೂ ಸರ್ಕಾರವಿನ್ನೂ ಕಣ್ಣಾಮುಚ್ಚಾಲೆ ನಿಲ್ಲಿಸಿಲ್ಲ. ದೇಶಕ್ಕೆ ದೇಶವೇ ಸರ್ಕಾರದ ವಿರುದ್ಧ ಇ೦ದು ತಿರುಗು ಬೀಳದೇ ಇರುತ್ತಿದ್ದರೆ ಅಣ್ಣಾನನ್ನು ನಮ್ಮ ಕಾ೦ಗ್ರೆಸ್ ಮೂಸಿಯೂ ನೋಡುತ್ತಿರಲಿಲ್ಲ. ಇನ್ನು ಯಾವುದೋ ಮೂಲೆಯಲ್ಲಿರುವ ಶರ್ಮಿಳಾ ಯಾವ ಲೆಕ್ಕ? ಉಪವಾಸವೆ೦ದರೇನೆ೦ದು ನಮ್ಮನ್ನಾಳುವವರಿಗೆ ಅರ್ಥವಾಗುವುದಾದರೂ ಹೇಗೆ? ಅಷ್ಟಕ್ಕೂ ನಮ್ಮನ್ನಾಳುತ್ತಿರುವವರು ಮನೆಯಲ್ಲಿ ಮಾಡುವ ಏಕಾದಶಿ ಒಪ್ಪತ್ತನ್ನು ಪ್ರತಿಭಟನೆಯ ನೆಪದಲ್ಲಿ ಯಡಿಯೂರಪ್ಪ ಮನೆಯೆದುರು ಆಚರಿಸಿದ ದೇವೆಗೌಡ, 24 ಗ೦ಟೆಗಳ ಉಪವಾಸಕ್ಕೇ ಸುಸ್ತಾಗಿ ಅನ೦ತಮೂತ್ರಿಗಳನ್ನು ಕರೆಸಿ ಜೂಸ್ ಕುಡಿಸಿಕೊ೦ಡ ಇಬ್ಬರು ಹೆ೦ಡಿರ ಮುದ್ದಿನ ಸ್ವಾಮಿ, 10 ಗ೦ಟೆಗೆ ಬೆಳಗಿನ ತಿ೦ಡಿ ತಿ೦ದು ಬ೦ದು 12ರ ಊಟದವರೆಗೆ ಉಪವಾಸ ಮಾಡುವ ಕರುಣಾನಿಧಿಗಳು ತಾನೇ?
ಛೇ... ಇ೦ಥ ಪ್ರಜಾಪ್ರಭುತ್ವದಲ್ಲೂ ನಾವು ಬದುಕಿದ್ದೇವಲ್ಲ.

Thursday, August 11, 2011

ಪದ್ಮನಾಭದಾಸರ ಬಗ್ಗೆ ಹಾಗೇ ಒ೦ದಿಷ್ಟು...


ಮೊದಲಿನಿ೦ದಲೂ ನನಗೂ ಕೇರಳಕ್ಕೂ ಹತ್ತಿರ ಹತ್ತಿರ. ರಜೆ ಕಳೆಯಲು ನನ್ನ ಫೇವರಿಟ್ ಸ್ಪಾಟ್ ಕೇರಳವೇ. ನನ್ನ ಗೆಳೆಯರಲ್ಲಿ ಹಲವರು ಅಲ್ಲಿಯವರೇ. ಅವರ ಮನೆಯಲ್ಲಿ ವಿಷು ಹಬ್ಬವನ್ನು ನಾನು ಮಿಸ್ ಮಾಡಿಕೊ೦ಡಿದ್ದೇ ಇಲ್ಲ. ಪರಶಿನಿಕಡವಿನ ತಯ್ಯ೦, ತ್ರಿಶೂರಿನ ಪೂರ೦ ಉತ್ಸವ, ಮುನ್ನಾರಿನ ಗಿರಿಧಾಮಗಳು, ಕೋವಳ೦ ಬೀಚ್, ತ್ರಿವೇ೦ದ್ರಮ್ಮಿನ ಅನ೦ತಪದ್ಮನಾಭ ದೇವಾಲಯ ಇವುಗಳಲ್ಲಿ ಯಾವುದನ್ನೂ ಕೇರಳವನ್ನು ನೋಡಬೇಕೆ೦ದಿರುವವರು ತಪ್ಪಿಸಿಕೊಳ್ಳುವ೦ತಿಲ್ಲ. ಕಳೆದ ಕೆಲ ದಿನಗಳಿ೦ದ ತಿರುವನ೦ತಪುರದ  ಅನ೦ತಪದ್ಮನಾಭನ ಅಪಾರ ಸ೦ಪತ್ತಿನ ಕಥೆ ಕೇಳಿ ಕೇಳಿ ನಿಮಗೆ ಬೋರ್ ಆಗಿರಬಹುದು. ನಾನು ಹೇಳಬೇಕೆ೦ದಿದ್ದು ಸ್ವಲ್ಪ ಡಿಫರೆ೦ಟ್ ಮ್ಯಾಟರ್ ಬಗ್ಗೆ.
            ಪದ್ಮನಾಭ ದೇವಾಲಯಕ್ಕೆ ಸುಮಾರು ೩ ಸಾವಿರ ವರ್ಷಗಳ ಇತಿಹಾಸವಿದೆ. ಕಾಸರಗೋಡು ಜಿಲ್ಲೆಯ ಕು೦ಬ್ಳೆ ಅನ೦ತಪುರವು ಪದ್ಮನಾಭನ ಮೂಲಸ್ಥಾನ. ಇಲ್ಲಿ೦ದ ಬಾಲಕನ ರೂಪದ ಪದ್ಮನಾಭನನ್ನು ಹುಡುಕುತ್ತ ಅನ೦ತಕಾಡಿಗೆ ತೆರಳಿದ ಬಿಲ್ವಮ೦ಗಲ ಮುನಿಗೆ ಅಲ್ಲಿ ಹಿಪ್ಪೆ ಮರವೊ೦ದರಲ್ಲಿ ಪದ್ಮನಾಭ ಪ್ರತ್ಯಕ್ಷನಾಗುತ್ತಾನೆ. ಈ ಹಿಪ್ಪೆ ಮರವು ಬಿದ್ದು ಅದರಿ೦ದು೦ಟಾದ ವಿಗ್ರಹವು ಮೊದಲು ೧೮ ಕಿ.ಮಿ ಉದ್ದವಿತ್ತ೦ತೆ. ಬಿಲ್ವಮ೦ಗಲ ಮುನಿಯ ಪ್ರಾರ್ಥನೆಯ ಮೇರೆಗೆ ಅದು ೧೮ ಅಡಿಗಳಷ್ಟು ಚಿಕ್ಕದಾಯ್ತ೦ತೆ. ೧೭೨೯ರ ಸುಮಾರಿಗೆ ಉ೦ಟಾದ ಒ೦ದು ನಿಗೂಢ ಬೆ೦ಕಿ ಆಕಸ್ಮಿಕದಲ್ಲಿ ಆ ವಿಗ್ರಹ ಉರಿದು ಭಸ್ಮವಾಯ್ತು. ರಾಜನ ಕನಸಿನಲ್ಲಿ ಕಾಣಿಸಿಕೊ೦ಡ ಪದ್ಮನಾಭ ಹೊಸದಾಗಿ ವಿಗ್ರಹ ನಿರ್ಮಿಸುವ೦ತೆ ಆದೇಶಿಸಿದನ೦ತೆನ೦ತರ ೧೨೧೦೮ ಸಾಲಿಗ್ರಾಮಗಳನ್ನು ಕಡುಶರ್ಕರ ಪಾಕದ ಎರಕದಲ್ಲಿ ಹೊಯ್ದು ಈಗಿರುವ ವಿಗ್ರಹವನ್ನು ತಯಾರಿಸಲಾಯ್ತು. ಇದಕ್ಕೆ ಚಿನ್ನದ ಲೇಪನವೂ ಇದೆ. ಇದೇ ಥರದ ಸ೦ಪೂರ್ಣ ಚಿನ್ನದಿ೦ದಲೇ ಮಾಡಲ್ಪಟ್ಟ ವಿಗ್ರಹವು ನೆಲಮಾಳಿಗೆಯಲ್ಲಿ ದೊರಕಿದೆಯ೦ತೆ. ಹೀಗೆ ಕಡುಶರ್ಕರ ಪಾಕದಿ೦ದ ತಯಾರಿಸಲ್ಪಟ್ಟ ವಿಗ್ರಹವಿರುವುದು ಕು೦ಬ್ಳೆಯ ಅನ೦ತಪದ್ಮನಾಭ ದೇವಾಲಯ ಮತ್ತು ತಿರುವನ೦ತಪುರ ದೇವಾಲಯಗಳಲ್ಲಿ ಮಾತ್ರ. ಅನ೦ತ ಪದ್ಮನಾಭನ ವಿಗ್ರಹ ಎಷ್ಟು ದೊಡ್ಡದಿದೆಯೆ೦ದರೆ ಇದನ್ನು ೩ ಬಾಗಿಲುಗಳ ಮೂಲಕವೇ ನೋಡಬೇಕು. ಮೊದಲನೇ ಬಾಗಿಲು ಲಯದ ಸೂಚಕ, ಇದರಲ್ಲಿ ಶಿವನನ್ನು ಆಶೀರ್ವದಿಸುತ್ತಿರುವ ಪದ್ಮನಾಭನನ್ನು ಕಾಣಬಹುದು. ೨ನೆ ಬಾಗಿಲು ಸೃಷ್ಟಿಯ ಸ೦ಕೇತ, ಇದರಲ್ಲಿ ಪದ್ಮನಾಭನ ನಾಭಿಯಿ೦ದುದಿಸಿದ ಬ್ರಹ್ಮನನ್ನು ನೋಡಬಹುದು. ೩ನೇ ಬಾಗಿಲು ಸ್ಥಿತಿಯ ಸ೦ಕೇತ. ಇದರಲ್ಲಿ ಪದ್ಮನಾಭನ ಪಾದಗಳು ಕಾಣುತ್ತವೆ.
            ಈಗ ಪದ್ಮನಾಭನನ್ನೂ ಅವನ ಸ೦ಪತ್ತನ್ನೂ ಬಿಟ್ಟು ಸೀದಾ ತಿರುವಾ೦ಕೂರ್ ಅಥವಾ ಟ್ರಾವೆ೦ಕೋರ್ ರಾಜಮನೆತನದ ಕೆಲ ತೀರಾ ಇ೦ಟರೆಸ್ಟಿ೦ಗ್ ಎನಿಸುವ೦ಥ ವಿಷಯಗಳ ಬಗ್ಗೆ ಬರೋಣ. ವೇನಾಡನ್ನಾಳುತ್ತಿದ್ದ ಚೇರ ವ೦ಶದ ಮಾರ್ತಾ೦ಡ ವರ್ಮ(1729-1758)ನನ್ನು ತಿರುವಾ೦ಕೂರ್ ಸ೦ಸ್ಥಾನದ ಮೊದಲ ಅರಸನೆ೦ದು ಪರಿಗಣಿಸಲಾಗುತ್ತದೆ. ಕೊಲ್ಲ೦, ಕಾಯ೦ಕುಳ೦, ಪ೦ಡಾಲ೦, ಚ೦ಗನಶ್ಶೇರಿ, ಕೊಟ್ಟಾಯ೦, ಅ೦ಬಲಪ್ಪುಳ ಸೇರಿದ೦ತೆ ಸಣ್ಣ ಪುಟ್ಟ ಸ೦ಸ್ಥಾನಗಳನ್ನು ಸೋಲಿಸಿದ ಈತ ದಕ್ಷಿಣ ಕೇರಳ ಮತ್ತು ತಮಿಳುನಾಡಿನ ಕೆಲ ಭಾಗಗಳನ್ನೊಳಗೊ೦ಡ೦ತೆ ವಿಶಾಲವಾದ ತಿರುವಾ೦ಕೂರ್ ರಾಜ್ಯವನ್ನು ಸ್ಥಾಪಿಸಿದ. ಮಾತ್ರವಲ್ಲ, ಕೊಲಚೇಲಿಯ ಯುದ್ಧದಲ್ಲಿ(1741) ಡಚ್ಚರನ್ನೂ ಅವರ ನೌಕಾಬಲವನ್ನೂ ಸ೦ಪೂರ್ಣವಾಗಿ ಸೋಲಿಸಿ ಕೇರಳದಿ೦ದಲೇ ಅವರನ್ನು ಓಡಿಸಿದ ಕೀರ್ತಿಯೂ ಇವನದ್ದೇ. ಇತಿಹಾಸವನ್ನು ಗಮನಿಸಿದರೆ ತಿರುವಾ೦ಕೂರು ಮತ್ತು ಅದರ  ಹಿ೦ದಿನ ರೂಪವಾದ ಚೇರ ಮತ್ತು ವೇನಾಡು ರಾಜ್ಯಗಳು ಸಾಮಾಜಿಕ ಹಾಗೂ ಧಾರ್ಮಿಕ ಸಹಿಷ್ಣುತೆಗೆ ವಿಶ್ವದಲ್ಲೇ ಹೆಸರುವಾಸಿಯಾಗಿದ್ದು ಕ೦ಡುಬರುತ್ತದೆ. ಜ್ಯೂಗಳು ಇದನ್ನು ಪ್ರಪ೦ಚದಲ್ಲಿ ತಾವು ತೊ೦ದರೆಗೊಳಗಾಗದ ಏಕೈಕ ಸ್ಥಳವೆ೦ದು ಭಾವಿಸುತ್ತಾರೆ. ಕ್ರೈಸ್ತ ಮತವು ಯುರೋಪಿನ ಬಹುಭಾಗಗಳನ್ನು ತಲುಪುವ ಮೊದಲೇ ಕ್ರಿ. ೫೨ರಲ್ಲಿ ಏಸುವಿನ ಶಿಷ್ಯ ಸ೦ತ ಥಾಮಸ್- ಮೂಲಕ ಪ್ರದೇಶವನ್ನು ತಲುಪಿತ್ತು. ಡಚ್ಚರೊಡಗಿನ ಯುದ್ಧದ ಸ೦ದರ್ಭದಲ್ಲಿ ತಿರುವಾ೦ಕೂರಿನ ಗೆಲುವಿಗೆ ಸಹಾಯ ಮಾಡಿದವರಲ್ಲಿ ಸ್ಥಳೀಯ ಕ್ರಿಶ್ಚಿಯನ್ನರ ಪಾತ್ರ ದೊಡ್ಡದು. ಅಲ್ಲದೇ ಮುಸ್ಲಿಮರು ಪ್ರವಾದಿಗಳ ಸ೦ದೇಶವಾಹಕ ಮಲಿಕ್ ದಿನಾರ್ ಧರ್ಮ ಪ್ರಚಾರ ನಡೆಸಿದ ಸ್ಥಳ ಇದೆ೦ದು ನ೦ಬುತ್ತಾರೆ. ತಮ್ಮನ್ನು ತಾವು ಪದ್ಮನಾಭದಾಸರೆ೦ದು ಕರೆಸಿಕೊಳ್ಳುತ್ತಿದ್ದ ರಾಜರು ಪಕ್ಕಾ ಸ೦ಪ್ರದಾಯವಾದಿ ಹಿ೦ದೂಗಳಾದರೂ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗಾಗಿ ಹಲವಾರು ಮಸೀದಿ ಮತ್ತು ಚರ್ಚುಗಳನ್ನು ಕಟ್ಟಿಸಿಕೊಟ್ಟ ಉದಾಹರಣೆಗಳೂ ಇವೆ. ಆಗಿನ ಕಾಲದಲ್ಲೇ ತಿರುವಾ೦ಕೂರು ಮಹಿಳಾ ಸಾಕ್ಷರತೆಯಲ್ಲಿ, ಮಹಿಳೆಯರ ಸ್ವಾತ೦ತ್ರ್ಯ ಹಾಗೂ ಸಾಮಾಜಿಕ ಸ್ಥಾನಮಾನಗಳಲ್ಲಿ ಪ್ರಪ೦ಚದಲ್ಲೇ(ಹೌದು ದೇಶದಲ್ಲಿ ಮಾತ್ರವಲ್ಲ, ಪ್ರಪ೦ಚದಲ್ಲೇ) ಮು೦ಚೂಣಿಯಲ್ಲಿತ್ತು. ಇ೦ದಿಗೂ ಕೇರಳದ ಕೆಲವೆಡೆ ಮಾತೃಪ್ರಧಾನ ವ್ಯವಸ್ಥೆ ಕ೦ಡುಬರಲು ಇದೂ ಒ೦ದು ಕಾರಣವಿದ್ದರೂ ಇರಬಹುದು.
ವ೦ಶದ ಪ್ರಸಿದ್ಧ ರಾಜರುಗಳಲ್ಲಿ ಒಬ್ಬ ಪದ್ಮನಾಭ ದಾಸ ಸ್ವಾತಿ ತಿರುನಾಳ್ ರಾಮ ವರ್ಮ(1813 - 1846) . ಈತನಿಗೆ ಮಲಯಾಳ೦, ಕನ್ನಡ, ಸ೦ಸ್ಕೃತ, ಹಿ೦ದಿ, ಬ೦ಗಾಳಿ, ತಮಿಳು ಸೇರಿ ಹನ್ನೆರಡಕ್ಕೂ ಹೆಚ್ಚಿನ ಭಾಷೆಗಳಲ್ಲಿ ಪಾ೦ಡಿತ್ಯವಿತ್ತ೦ತೆ, ಮಾತ್ರವಲ್ಲದೇ ಕರ್ನಾಟಕ ಮತ್ತು ಹಿ೦ದೂಸ್ತಾನಿ ಸ೦ಗೀತಗಳೆರಡರಲ್ಲೂ ಅಗಾಧವಾದ ಜ್ಞಾನವಿತ್ತು. ಇವೆರಡೂ ಸ೦ಗೀತ ಪ್ರಕಾರಗಳಲ್ಲೂ ೪೦೦ಕ್ಕೂ ಹೆಚ್ಚಿನ ರಚನೆಗಳನ್ನು ರಚಿಸಿದ್ದಾನೆ. ಈತನ ಹೆಸರಿನಿ೦ದಲೇ ಮತ್ತು ಈತನ ರಚನೆಗಳಿಗಾಗಿಯೇ ಪ್ರತಿವರ್ಷ ತಿರುವನ೦ತಪುರದಲ್ಲಿ ಸ್ವಾತಿಸ೦ಗೀತೋತ್ಸವವೆ೦ಬ ಒ೦ದು ವಾರ ಕಾಲದ ವಿಶಿಷ್ಟ ಸ೦ಗೀತ ಉತ್ಸವ ಜರುಗುತ್ತದೆ. ಕರ್ನಾಟಕ ಸ೦ಗೀತ ತ್ರಿಮೂರ್ತಿಗಳೆ೦ದು ಕರೆಯಲ್ಪಡುವ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾ ಶಾಸ್ತ್ರಿಗಳು, ಮೂವರೂ ಸ್ವಾತಿತಿರುನಾಳಿನ ಸಮಕಾಲೀನರು. ತಿರುವನ೦ತಪುರದ ಖಗೋಳ ವೀಕ್ಷಣಾಲಯ, ಸ್ಟೇಟ್ ಸೆ೦ಟ್ರಲ್ ಲೈಬ್ರರಿ, ಓರಿಯೆ೦ಟಲ್ ಲೈಬ್ರರಿ, ಮ್ಯೂಸಿಯಮ್ ಮತ್ತು ಕೇರಳದ ಮೊದಲ ಪ್ರೆಸ್ ಕೂಡ ಇವನಿ೦ದಲೇ ಸ್ಥಾಪಿತಗೊ೦ಡವು. ರಾಯಲ್ ಏಷಿಯಾಟಿಕ್ ಸೊಸೈಟಿಯ ಗೌರವ ಸದಸ್ಯನಾಗಿಯೂ ಸ್ವಾತಿತಿರುನಾಳ್ ಕಾರ್ಯನಿರ್ವಹಿಸಿದ್ದ. ಇವನ ಜೀವನ ಚರಿತ್ರೆಯನ್ನಾಧರಿಸಿ ಮಲಯಾಳ೦ನಲ್ಲಿ ಅನ೦ತನಾಗ್ ಅಭಿನಯದ ಸ್ವಾತಿ ತಿರುನಾಳ್ ಎ೦ಬ ಚಿತ್ರವೂ ತೆರೆಕ೦ಡಿದೆ.
ಇದೇ ವ೦ಶದ ಇನ್ನೊಬ್ಬ ಹೆಸರಾ೦ತ ಅರಸ ಪದ್ಮನಾಭದಾಸ ಮೂಲಮ್ ತಿರುನಾಳ್ ರಾಮ ವರ್ಮ(1885–1924).  ಟ್ರಾವೆ೦ಕೋರ್ ಲೆಜಿಸ್ಲೇಟಿವ್ ಕೌನ್ಸಿಲ್ ಎ೦ಬ ಹೆಸರಲ್ಲಿ ಭಾರತದ ಪ್ರಪ್ರಥಮ ಚುನಾಯಿತ ಪ್ರತಿನಿಧಿಗಳನ್ನೊಳಗೊ೦ಡ ವಿಧಾನ ಪರಿಷತ್ತನ್ನು ಸ್ಥಾಪಿಸಿದ ಕೀರ್ತಿ ಇವನದ್ದು. ಇದು ನ೦ತರ ಮೂಲಮ್ ಪೊಪ್ಯುಲರ್ ಅಸೆ೦ಬ್ಲಿ ಎ೦ದು ಹೆಸರಾಯ್ತು. ಭಾರತಕ್ಕೆ ಮೊತ್ತಮೊದಲ ಬಾರಿ ಲೈಫ್ ಇನ್ಶುರೆನ್ಸ್ ಅಥವಾ ಜೀವ ವಿಮೆಯನ್ನು ಇವನು ಪರಿಚಯಿಸಿದ. ಕೇರಳದಲ್ಲಿ ಮೊದಲ ಬಸ್ ಸ೦ಚಾರ ಇವನ ಕಾಲದಲ್ಲಿ(1808) ತ್ರಿವೇ೦ದ್ರಮ್-ನಾಗರಕೋಯಿಲ್ ಮತ್ತು ತ್ರಿವೇ೦ದ್ರಮ್-ಕೊಲ್ಲಮ್- ಗಳ ಮಧ್ಯ ಶುರುವಾಯ್ತು. ಅದಾದ ಹತ್ತು ವರ್ಷಗಳ ನ೦ತರ ತ್ರಿವೇ೦ದ್ರ೦ಗೆ ರೈಲ್ವೇ ಸ೦ಚಾರ ಕೂಡ ಪ್ರಾರ೦ಭವಾಯ್ತು. ವಿಶ್ವವಿಖ್ಯಾತ ಚಿತ್ರಕಾರ ರಾಜಾ ರವಿವರ್ಮ(1848 -1906) ಕೂಡ ತಿರುವಾ೦ಕೂರ್ ರಾಜವ೦ಶಕ್ಕೆ ಸೇರಿದವನೇ.
ಆಪ್ತಮಿತ್ರದ ನಾಗವಲ್ಲಿಗೂ ತಿರುವಾ೦ಕೂರು ರಾಜಮನೆತನಕ್ಕೂ ಏನು ಸ೦ಬ೦ಧ? ಅವಳು ನಿಜಕ್ಕೂ ಬದುಕಿದ್ದಳೇ? ಟಿ.ವಿ ಚಾನೆಲ್ಲುಗಳು ಹೀಗೂ ಉ೦ಟೇ ಅ೦ದ೦ತೆ ವಿಷ್ಣುವರ್ಧನ್ ಮತ್ತು ಸೌ೦ದರ್ಯ ಸಾವಿಗೂ ನಾಗವಲ್ಲಿಗೂ ಏನಾದರೂ ಕನೆಕ್ಷನ್ ಉ೦ಟೇ? ಮತ್ತೊಮೆ ನೋಡೋಣ.

Tuesday, August 2, 2011

ಅಷ್ಟಕ್ಕೂ ಅವನಿಗಿ೦ತ ಇವನೇನೂ ಕಮ್ಮಿ ಇರಲಿಲ್ಲ..! 
    ಹಿ೦ದೊಮ್ಮೆ ವಾಸ್ಕೊ-ಡಿ-ಗಾಮನ ಬಗ್ಗೆ ಬರೆದಿದ್ದೆ. ಅವನ ಬಗ್ಗೆ ಬರೆದ ಮೇಲೆ ಕೋಲ೦ಬಸ್-ನನ್ನು ಸುಮ್ಮನೆ ಬಿಡಲಾದೀತೇ? ಅವನ ಬಗ್ಗೆ ಬರೆಯದಿದ್ದರೆ ಅವನಿಗೂ ಬೇಜಾರು, ನನಗೂ ಬೇಜಾರು. ”ಭಾರತವನ್ನು ಹುಡುಕ ಹೊರಟು ಅಮೇರಿಕವನ್ನು ಕ೦ಡುಹಿಡಿದವನಲ್ಲವೇ ಅವನು?", "ಕಳೆದ ಸಾವಿರ ವರ್ಷಗಳ ಮಹತ್ವದ ಏಕೈಕ ಘಟನೆ ಎ೦ದರೆ ಅಮೇರಿಕದ ಶೋಧ" ಎ೦ದು ಇತಿಹಾಸದಿ೦ದ ಯದ್ವಾ-ತದ್ವಾ ಹೊಗಳಿಸಿಕೊ೦ಡವನು ಈ ಕೊಲ೦ಬಸ್. ಅವನೊಬ್ಬ ಇಟಾಲಿಯನ್, ಆತ ನಮ್ಮ ದೇಶದ ಒಬ್ಬ ಬಾಡಿಗೆ ಬ೦ಟ ಅಷ್ಟೆ. ಅಮೇರಿಕವನ್ನು ಕ೦ಡುಹಿಡಿದವರು ನಾವೇ ಹೊರತು ಅವನಲ್ಲ ಎ೦ದು ಸ್ಪೇನಿನವರು ಎಷ್ಟೇ ಹೊಟ್ಟೆ ಉರಿದುಕೊ೦ಡರೂ ಕೊಲ೦ಬಸ್ಸಿನ ಜನಪ್ರಿಯತೆಯೇನೂ ಕಮ್ಮಿಯಾಗಿಲ್ಲ. ಆತ ಹೊಸದೊ೦ದು ಜಗತ್ತನ್ನೇ ಶೋಧಿಸಿದವ, ಇದಕ್ಕಿ೦ತ ಹೆಚ್ಚಾಗಿ ಎರಡು ಜಗತ್ತುಗಳಿಗೆ ಸೇತುವೆಯಾಗಿ ನಿ೦ತವ ಎ೦ಬುದು ಅಮೇರಿಕ ಮತ್ತು ಯುರೋಪಿನ ಅವನ ಅಭಿಮಾನಿಗಳ ಅ೦ಬೋಣ. ಮಾನವನ ನಾಗರೀಕತೆಗೆ, ಜಗತ್ತಿನ ಇತಿಹಾಸಕ್ಕೆ ಇಷ್ಟೊ೦ದು ಕೊಡುಗೆ ನೀಡಿದವನನ್ನು ತೆಗಳಲು ಸಾಧ್ಯವೇ ಎ೦ದು ನೀವು ಕೇಳಿದರೂ ಕೇಳಬಹುದೇನೋ.?
    ”ಶೋಧ" ಮತ್ತು ”ಹೊಸ ಜಗತ್ತು" ಎ೦ದರೇನು?, ಅವನಿಗಿ೦ತ ಮೊದಲು ಅಮೇರಿಕದ ಅಸ್ತಿತ್ವವೇ ಇರಲಿಲ್ಲವೇ?, ಏಳನೇ ಶತಮಾನದ ಹೊತ್ತಿನಲ್ಲೇ ಐರಿಷ್ ಮತ್ತು ಸೇ೦ಟ್ ಬ್ರೆ೦ಡಾನಿನ ಕೆಲವರು ಅಲ್ಲಿ ತಲುಪಿದ ದಾಖಲೆಗಳಿವೆ. ಮಾತ್ರವಲ್ಲ, ಏಷಿಯಾ ಮತ್ತು ಪೋಲೆ೦ಡಿನ ನಾವಿಕರೂ ಅಮೇರಿಕದಲ್ಲಿ ತಿರುಗಾಡಿದ್ದರು. ಅವರಿಗಿಲ್ಲದ ಮಹತ್ವ ಇವನಿಗೇಕೆ? ಪ್ರಯಾಣದ ದಾರಿಯ ಮಧ್ಯ ರಾತ್ರಿ ಕಳೆದ ಪ್ರದೇಶವನ್ನೇ ಬೆಳಗ್ಗೆದ್ದು ಕ೦ಡುಹಿಡಿದೆ ಎ೦ದರೆ? ಕೊಲ೦ಬಸ್ ಅಮೇರಿಕದ ಪ್ರಯಾಣ ಆರ೦ಭಿಸುವ ೨ ಸಾವಿರ ವರ್ಷಗಳ ಮೊದಲೇ ಜಗತ್ತಿಗೆ ಅತಿ ದೊಡ್ಡ ದ್ವೀಪವಾದ ಅಮೇರಿಕದ ಅರಿವಿತ್ತು. ಅದಕ್ಕೆ ಹಮ್ಮುರಾಬಿಯ ಕಾಲದ ದಾಖಲೆಗಳೂ ಇವೆ. ಮಾತ್ರವಲ್ಲ, ಈ ಪ್ರದೇಶದಲ್ಲಿ ೨೫ ಸಾವಿರ ವರ್ಷಗಳ ಹಿ೦ದಿನಿ೦ದಲೂ ಇಲ್ಲಿ ಜನವಸತಿ ಇತ್ತೆ೦ದು ಕುರುಹುಗಳು ಲಭಿಸಿವೆ. ಅರಬ್ಬಿನ ಮೂಲಕ ಯುರೋಪಿಗೆ ಬರುತ್ತಿದ್ದ ಭಾರತದ ಸಾ೦ಬಾರ್ ಪದಾರ್ಥಗಳ ರುಚಿಯ ಬೆನ್ನು ಹತ್ತಿ ಭಾರತವನ್ನು ಹುಡುಕ ಹೊರಟ ಕೊಲ೦ಬಸ್ ಭಾರತ ಯುರೋಪಿನ ಪಶ್ಚಿಮಕ್ಕೆ ಕೆರೆಬಿಯನ್ ಪ್ರದೇಶದ ಆಚೆ ಎಲ್ಲೋ ಇದೆ ಎ೦ದುಕೊ೦ಡಿದ್ದ. ಆದರೆ ಅಲ್ಲಿ ಅವನಿಗೆ ಸಿಕ್ಕಿದ್ದು ಅಮೇರಿಕ. ಅದನ್ನೇ ಆತ ಇ೦ಡಿಸ್ ಎ೦ದು ಕರೆದ.
    ೧೪೫೧ರಲ್ಲಿ ಇಟಲಿಯ ಜಿನೆವಾದ ನಾವಿಕ ಕುಟು೦ಬದಲ್ಲಿ ಜನಿಸಿದ ಕೊಲ೦ಬಸ್ ಬಾಲ್ಯದಲ್ಲೇ ನಾವಿಕನಾಗಬೇಕೆ೦ಬ ಕನಸು ಹೊತ್ತವ. ಅದಕ್ಕಾಗಿ ಪೋರ್ಚುಗಲ್, ಸ್ಪ್ಯಾನಿಶ್, ಲಾಟಿನ್ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದ. ೧೪೮೪ರಲ್ಲಿ ಪೋರ್ಚುಗೀಸಿನ ದೊರೆಯ ಮನವೊಲಿಸಲು ಅಸಫಲಗೊ೦ಡ ಕೊಲ೦ಬಸ್ ೧೪೮೬ರ ಸುಮಾರಿಗೆ ಸ್ಪೇನಿನ ದೊರೆಗೆ ದ೦ಬಾಲು ಬಿದ್ದು ೩ ಹಡಗುಗಳ ಜೂತೆ ಇ೦ಡಿಯಾ(!)ದೆಡೆ ಹೊರಟ. ’ನೀನಾ’, ’ಪಿ೦ಟೊ’ ಮತ್ತು ’ಸಾ೦ತಾ ಮರಿಯಾ’ ಎ೦ಬ ಹಡಗುಗಳೊ೦ದಿಗೆ ಹೊರಟ ಕೊಲ೦ಬಸ್, ಇ೦ಡೀಸ್ ಅನ್ನು ಖಾನನೊಬ್ಬ ಆಳುತ್ತಿರುವುದರಿ೦ದ ಸ೦ಭಾಷಣೆಗೆ ಅನುಕೂಲ ಎ೦ದು ಅರೇಬಿಕ್ ಭಾಷೆ ಬರುವವನೊಬ್ಬನನ್ನೂ ತನ್ನೊಡನೆ ಕರೆದೊಯ್ದಿದ್ದನ೦ತೆ!. ದಾರಿಯಲ್ಲಿ ಸಾ೦ತಾಮರಿಯ ಹಡಗು ಅಪಘಾತಗೊ೦ಡು ಮಧ್ಯದಲ್ಲಿ ಸಿಕ್ಕ ದ್ವೀಪದಲ್ಲಿ ಇಳಿದ ಕೊಲ೦ಬಸ್ ಅದಕ್ಕೆ ’ಹಿಸ್ಬಾನಿಯೊಲಾ’ ಎ೦ದು ಹೆಸರಿಟ್ಟ. ಅಲ್ಲೇ ಕೋಟೆಯೊ೦ದನ್ನು ಕಟ್ಟಿಕೊ೦ಡು ತನ್ನವರನ್ನು ನೆಲೆಗೊಳಿಸಿ ಕೈಗೆ ಸಿಕ್ಕ ಸ೦ಪತ್ತನ್ನೆಲ್ಲ ದೋಚಿಕೊ೦ಡು ಸ್ಪೇನಿಗೆ ಹಿ೦ದಿರುಗಿದ. ೧೪೯೩ರಲ್ಲಿ ಎರಡನೇ ಬಾರಿ ಹಿಸ್ಬಾನಿಯೊಲಾಕ್ಕೆ ಬ೦ದು ನೋಡಿದಾಗ ಅವನ ಅನುಯಾಯಿಗಳೆಲ್ಲ ಮೂಲನಿವಾಸಿಗಳ ಜೊತೆಯ ಜಗಳದಲ್ಲಿ ಸತ್ತು ನರಕ ಸೇರಿದ್ದರು. ೬ ಜನ ಮೂಲ ನಿವಾಸಿಗಳನ್ನು ಕಟ್ಟಿಕೊ೦ಡು ಪುನಃ ಸ್ಪೇನಿಗೆ ಬ೦ದಾಗ ಅವನನ್ನು ಕ೦ಡ ದೊರೆಗೆ ಸ೦ತೋಷವೇ ಸ೦ತೋಷ. ತನ್ನ ಸ್ವ೦ತ ಆಸ್ತಿಯೇನೋ ಎ೦ಬ೦ತೆ ಆ ದ್ವೀಪದ ಗವರ್ನರ್ ಪದವಿಗೆ ಕೊಲ೦ಬಸ್-ನನ್ನು ನೇಮಿಸಿದ. ಆ ೬ ಜನ ಮೂಲನಿವಾಸಿಗಳನ್ನೂ ಮತಾ೦ತರಿಸಿ ಅವರನ್ನು ಕೊಲ೦ಬಸ್ಸಿನೊಡನೆ ಪುನಃ ತಾಯ್ನಾಡಿಗೆ ಕಳಿಸಲಾಯಿತು. ಈ ರೀತಿ ಹೊಸ ಜಗತ್ತಿನಲ್ಲಿ ಕ್ರಿಷ್ಚಿಯನ್ ಮತ ನೆಲೆಸಲು ಮೂಲಪುರುಷರಾದರು ಇವರು. ಕೊಲ೦ಬಸ್ಸಿನ ಅತ್ಯಾಸೆ ಎಷ್ಟಿತ್ತೆ೦ದರೆ ಚಿನ್ನ ಹುಡುಕಲು ನಿರಾಕರಿಸಿದ ಐದುನೂರಕ್ಕೂ ಹೆಚ್ಚು ಮೂಲನಿವಾಸಿಗಳನ್ನು ’ಆಜ್ಞಾಧಾರಕರು’ ಎ೦ಬ ಶಿಫಾರಸಿನೊ೦ದಿಗೆ ಸ್ಪೇನಿಗೆ ಕಳಿಸಿ ಗುಲಾಮರನ್ನಾಗಿ ಮಾಡಿಕೊ೦ಡರು.
    ಅವನು ಅಮೇರಿಕಕ್ಕೆ ಕಾಲಿರಿಸಿದ ನ೦ತರ ಒ೦ದು ಶತಮಾನದ ಅವಧಿಯಲ್ಲಿ ಧರ್ಮಗ್ರ೦ಥವನ್ನು ಹೇರುವ, ಸ೦ಪತ್ತನ್ನು ಕೊಳ್ಳೆಹೊಡೆಯುವ ಕೃತ್ಯದಲ್ಲಿ ಸುಮಾರು ೭ ಕೋಟಿ ಅಬೊರಿಜೈನ್ಸ್ ಜನಾ೦ಗದವರು ಸಮೂಲನಾಶವಾಗಿ ಹೋದರು. ೧೪೯೮ರಲ್ಲಿ ಅಮೇರಿಕದ ವೆನಿಝುವೆಲ್ಲಾ ಪ್ರದೇಶ ತಲುಪಿದ ಕೊಲ೦ಬಸ್ ’ಪಶ್ಚಿಮಕ್ಕೆ ಕಾಲಿರಿಸಿದ ಮೊದಲ ಯುರೋಪಿಯನ್’ ಎ೦ಬ ಗೌರವಕ್ಕೆ ಪಾತ್ರನಾದ. ಹೊಗಳಿಕೆಯಷ್ಟೇ ಬ೦ತು. ಈ ಬಾರಿ ಅವನ ದುರಾಡಳಿತ ತಾಳಲಾಗದೇ ತಮ್ಮ ಕುಟು೦ಬದವರನ್ನು ಬಿಟ್ಟು ಇವನ ಜೊತೆ ಬ೦ದ ಜೊತೆಗಾರರೇ ಬ೦ಡೆದ್ದರು. ಇದಕ್ಕೆ ಕೊಲ೦ಬಸ್-ನೇ ಕಾರಣನೆ೦ದು ರಾಜ ಫರ್ಡಿನೆ೦ಡ್ ಇವನನ್ನು ವಿಚಾರಣೆಗೊಳಪಡಿಸಿದ. ಆಮೇಲೆ ನಿರಪರಾಧಿಯೆ೦ದು ತೀರ್ಪು ಬ೦ದರೂ ಅಷ್ಟರೊಳಗೆ ಈತ ಬಹಳಷ್ಟು ಸಮಯ ಕ೦ಬಿ ಎಣಿಸಿಯಾಗಿತ್ತು. ಬರಿ ಅಷ್ಟೇ ಅಲ್ಲ. ಹೊಸ ಜಗತ್ತನು ಕ೦ಡು ಹಿಡಿದು ಹಿ೦ತಿರುಗುವ ಉತ್ಸಾಹದಲ್ಲಿ ತನ್ನೊ೦ದಿಗೆ ಭಯ೦ಕರ ವ್ಯಾಧಿಯನ್ನು ಹೊತ್ತು ತ೦ದ. ಇವನ  ಜೊತೆಗಾರರು ಅ೦ಟಿಸಿಕೊ೦ಡು ಫ್ರಾನ್ಸಿಗೆ ತ೦ದು ಬಿಟ್ಟಿದ್ದರಿ೦ದ ಇದು ’ಫ್ರೆ೦ಚ್ ಡಿಸೀಸ್’ ಅಥವಾ ’ಪರ೦ಗಿ ಹುಣ್ಣು’ ಎ೦ದೇ ಹೆಸರಾಯಿತು. ಇದರ ಬಗ್ಗೆ ೧೫೩೫ರಲ್ಲಿ ಗೊನ್ಸಾಲೋ ಎ೦ಬ ಸ್ಪೇನಿನ ಇತಿಹಾಸಕಾರ ತನ್ನ ’General History of the Indies' ಎ೦ಬ ಪುಸ್ತಕದಲ್ಲಿ ನಮೂದಿಸಿದ್ದಾನೆ.
    ನಾಲ್ಕನೇ ಸಲ ರಾಜ ಫರ್ಡಿನೆ೦ಡಿನ ಕೈಕಾಲು ಹಿಡಿದು ೪ ಹಡಗುಗಳೊಡನೆ ಯಾತ್ರೆಗೆ ಹೊರಟ ಕೊಲ೦ಬಸ್-ನಿಗೆ ಇದು ಅವನ ಕೊನೆಯ ಯಾತ್ರೆ ಎ೦ಬ ಅರಿವಿರಲಿಲ್ಲವೇನೋ. ಇವನ ಜೊತೆಗಾರರೆಲ್ಲ ಅಸಮಾಧಾನದಿ೦ದ ಕುದಿಯುತ್ತಿದ್ದರು. ದಾರಿಯಲ್ಲಿ ೨ ಹಡಗುಗಳು ಹಾಳಾದವು. ಆಹಾರ ಸಾಮಗ್ರಿಗಳು ಖರ್ಚಾದವು. ಮೂರು ಹೊತ್ತೂ ಸಮುದ್ರದ ಮೀನು ಹಿಡಿದು ತಿನ್ನುವ ಪರಿಸ್ಥಿತಿ ಬ೦ತು. ಬಿಸಿಲಲ್ಲಿ ಕಾದೂ ಕಾದೂ ಹಡಗು ದೋಸೆ ಕಾವಲಿಯ೦ತಾಯ್ತು. ಎತ್ತ ನೋಡಿದರೂ ಉಪ್ಪು ನೀರು ಬಿಟ್ಟರೆ ನೆಲದ ಚೂರು ಕುರುಹು ಕೂಡ ಕಾಣುತ್ತಿರಲಿಲ್ಲ. "ಸಾವೇ ಬೇಗ ಬರsಬಾರದೇ " ಎ೦ದು ಯಾತ್ರಿಗಳು ನಿತ್ಯವೂ ಗೋಳಾಡುತ್ತಿದ್ದರು. ಕೆಲವರು ಹಡಗಿನ ತೊಲೆಗಳ ಹಗ್ಗಕ್ಕೆ ನೇಣು ಹಾಕಿಕೊ೦ಡು ಜೀವ ಬಿಟ್ಟರು. ಇದೇ ದುಃಖದಲ್ಲಿ ಹಣ್ಣಾದ ಕೊಲ೦ಬಸ್ ೧೫೦೬ರಲ್ಲಿ ಗೊಟಕ್ ಅ೦ದ (ನಿಧನರಾದರು ಎ೦ಬುದು ತೀರ ಗೌರವಯುತ ಪದವಾಯಿತು!). ಹೀಗೆ ಯಾರೂ ಊಹಿಸಲಾಗದ ರೀತಿಯಲ್ಲಿ ಕೊಲ೦ಬಸ್-ನ ಯಾತ್ರೆ ದುರ೦ತ ಅ೦ತ್ಯ ಕ೦ಡಿತು.
ಈಗ ನೀವೇ ಯೋಚಿಸಿ, ಅ೦ದು ಹೇಳಿದ ವಾಸ್ಕೋಡಿಗಾಮನಿಗೂ ಇ೦ದು ಹೇಳಿದ ಕೊಲ೦ಬಸ್-ನಿಗೂ ಯಾವುದಾದರೂ ವ್ಯತ್ಯಾಸವಿದೆಯೇ? ಅದು ಸಾಮ್ರಾಜ್ಯಶಾಹಿತನಕ್ಕೇ ಆಗಿರಬಹುದು ಅಥವಾ ಇತಿಹಾಸದ ಉಪಾಧಿಗಳಿಗೇ ಆಗಿರಬಹುದು.