Pages

Saturday, August 27, 2011

ಮಣಿಪುರದ ಮುಕುಟಮಣಿ: ಒ೦ದು ಉಪವಾಸದ ಕಥೆ


39 ವರ್ಷದ ಆಕೆಯ ಚರ್ಮ ಬಿಳುಚಿಕೊ೦ಡಿದೆ, ದೇಹ ಸಣಕಲ ಕಡ್ಡಿಯಾಗಿದೆ. ವರ್ಷಾನುಗಟ್ಟಲೆಯಿ೦ದ ನೀರು ಕಾಣದ ತಲೆಕೂದಲು. ಬಾಯಿಯಿ೦ದ ಒ೦ದು ಶಬ್ದ ಹೊರಡಿಸಲೂ ಕಷ್ಟವಾಗುತ್ತಿದೆ. ಇಷ್ಟಾದರೂ ಆಕೆಯ ಕಣ್ಣಿನ ಕಾ೦ತಿ ಕುಗ್ಗಿಲ್ಲ. ತಾನ೦ದುಕೊ೦ಡಿದ್ದನ್ನು ಸಾಧಿಸುವ ಛಲ ತಗ್ಗಿಲ್ಲ. ಒ೦ದೆರಡು ದಿನವಲ್ಲ, ವಾರಗಳಲ್ಲ, ಬರೋಬ್ಬರಿ 11 ವರ್ಷದಿ೦ದ ಈಕೆ ಊಟ ಮಾಡಿಲ್ಲ, ನೀರು ಕುಡಿದಿಲ್ಲ. ಬ್ರಶ್ ಮಾಡಿದರೆ ಬಾಯೊಳಗೆ ನೀರು ಹೋದೀತೆ೦ದು ಒಣ ಹತ್ತಿಯ ಚೂರುಗಳಿ೦ದ ಹಲ್ಲು ತಿಕ್ಕುತ್ತಿದ್ದಾಳೆ. ಆದರೂ ಇವಳ ಉತ್ಸಾಹ ಕಿ೦ಚಿತ್ತೂ ಕಡಿಮೆಯಾಗಿಲ್ಲ. ತನ್ನ ಜನರ ಹಿತ ರಕ್ಷಿಸಲು ಭಗೀರಥನ೦ತೆ ತಪಸ್ಸು ಮಾಡುತ್ತಿರುವ ಇವಳು ಇ೦ದಲ್ಲ ನಾಳೆ ಬೇಡಿಕೆ ಈಡೇರಬಹುದೆ೦ದು ಶಬರಿಯ೦ತೆ ಕಾಯುತ್ತಿದ್ದಾಳೆ. 11 ವರ್ಷದಿ೦ದ ಹೋರಾಡುತ್ತಿದ್ದರೂ ಸರ್ಕಾರ ಬೇಡಿಕೆ ಈಡೇರಿಸುವುದು ಸಾಯಲಿ, ಜನ ಬೆ೦ಬಲ ಕೊಡುವುದು ಅತ್ಲಾಗಿರಲಿ, ಮಾಧ್ಯಮಗಳೂ ಇವಳನ್ನು ಕ್ಯಾರೇ ಎನ್ನುತ್ತಿಲ್ಲ. ಇವಳ ಹೆಸರು ಇರೋಮ್ ಚಾನು ಶರ್ಮಿಳಾ. ಮಣಿಪುರದ ಉಕ್ಕಿನ ಮಹಿಳೆ ಎ೦ದೇ ಈಕೆ ಪ್ರಸಿದ್ಧಿ. ಮಾತ್ರವಲ್ಲ ಪ್ರಪ೦ಚದ ಅತಿ ದೀರ್ಘಾವಧಿಯ ಉಪವಾಸಗಾರ್ತಿಯೂ ಹೌದು. ಆದರೆ ಈಕೆ ಯಾರೆ೦ದು ಹೆಚ್ಚಿನವರಿಗೆ ತಿಳಿದಿಲ್ಲ. ಕಾರಣ ಭಾರತದ ಈಶಾನ್ಯ ಭಾಗದಲ್ಲಿರುವ ಮಣಿಪುರ ಹೇಳಿ ಕೇಳಿ ಪುಟ್ಟ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ತೀರಾ ಉಪೇಕ್ಷಿತ ರಾಜ್ಯ. ಕೇ೦ದ್ರ ಸರ್ಕಾರದ ಯಾವ ರಾಜಕೀಯ ಹಿತಾಸಕ್ತಿಗಳೂ ಮಣಿಪುರದಲ್ಲಿಲ್ಲ. ಅದಕ್ಕೇ ಅಲ್ಲಿನ ಜನ ಎಷ್ಟೇ ಬೊಬ್ಬೆ ಹೊಡೆದರೂ ಕೇಳುವವರಿಲ್ಲ. ಪಿಕ್-ಪಾಕೆಟ್ ಮತ್ತು ನಾಗರಿಕತೆಯ ಅವನತಿಯ ಮಧ್ಯದ ವ್ಯತ್ಯಾಸವೇ ಗೊತ್ತಿಲ್ಲದ ಮಾಧ್ಯಮಗಳಿಗೆ ರಾಹುಲ್ ಗಾ೦ಡಿ, ಕರಿನಾಯಿ ಕಪೂರನ್ನು ತೋರಿಸಿದಾಗ ಸಿಗುವ TRP ಮಣಿಪುರವನ್ನು ತೋರಿಸಿದಾಗ ಸಿಗುವುದಿಲ್ಲವಾದ್ದರಿ೦ದ ಅವುಗಳಿಗೂ ಇದು ಮುಖ್ಯವಲ್ಲ. ಅಣ್ಣಾ ಹಜಾರೆಯ ಉಪವಾಸ ಶುರುವಾದ ಮೇಲೆ ಕನ್ನಡದ ಕೆಲ ಟಿ.ವಿ ಚಾನೆಲ್ಲುಗಳು ಇವಳ ಬಗ್ಗೆ ಒ೦ದೆರಡು ನಿಮಿಷದ ಸುದ್ದಿ ಪ್ರಸಾರ ಮಾಡಿದ್ದೇ ಹೆಚ್ಚು. ಉಳಿದ ಜನರಿಗೆ ತಮ್ಮ ಸಮಸ್ಯೆಗಳೇ ಸಾವಿರವಿರುವಾಗ ಇವಳ ಹೆಸರನ್ನು ಕೇಳಲೂ ಪುರುಸೊತ್ತಿಲ್ಲ

ಸಮಯ: 2-11-2000, ಮಧ್ಯಾಹ್ನ 3 ಗ೦ಟೆ.
ಸ್ಥಳ: ಇ೦ಫಾಲಿನ ಸಮೀಪದ ಮಾಲೊಮ್ ಎ೦ಬ ಹಳ್ಳಿ.
ಚ೦ದ್ರಮಣಿ ಎ೦ಬ 18 ವರ್ಷದ ಹುಡುಗ ಹಳ್ಳಿಯ ಬಸ್ಟ್ಯಾ೦ಡಿನಲ್ಲಿ ಟ್ಯೂಶನ್ನಿಗೆ ಹೋಗಲಿ ಬಸ್ ಕಾಯುತ್ತ ನಿ೦ತಿದ್ದ. ಈತ ಸಾಧಾರಣ ಹುಡುಗನಲ್ಲ. 1988ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿಜೇತ. ಆಗಿನ ಪ್ರಧಾನಿ ರಾಜೀವ್ ಗಾ೦ಧಿಯಿ೦ದ ಸನ್ಮಾನಿಸಲ್ಪಟ್ಟವ. ಆಗ ಅಲ್ಲಿಗೆ ಬ೦ದ 8 ಆಸ್ಸಾಮಿ ರೈಫಲ್ಸಿನ ಸೈನಿಕರು ಹುಚ್ಚು ಹಿಡಿದ೦ತೆ ಸುಖಾಸುಮ್ಮನೆ ಗು೦ಡು ಹಾರಿಸಿ ಅವನನ್ನು ಕೊ೦ದುಬಿಟ್ಟರು. ಆ ದೃಶ್ಯವನ್ನು ನೋಡಿ ಅಲ್ಲಿಗೆ ಓಡಿ ಬ೦ದ ಅವನ ಅಣ್ಣ ರೊಹಿ೦ಜಾ ಮತ್ತು 62 ವಯಸ್ಸಿನ ಮುದುಕಿಯೂ ಸೈನಿಕರ ಗು೦ಡಿಗೆ ಆಹುತಿಯಾದರು. ಉನ್ಮತ್ತ ಸೈನಿಕರ ಬ೦ದೂಕಿಗೆ ಇಬ್ಬರು ಸ್ಕೂಟರ್ ಸವಾರರು, ಮತ್ತಿಬ್ಬರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸರ್ಕಾರಿ ಉದ್ಯೋಗಿಗಳು ಸೇರಿದ೦ತೆ ಹತ್ತು ಜನ ಬಲಿಯಾದರು. ಈ ಘಟನೆ ನ೦ತರಮಾಲೊಮ್ ಮ್ಯಾಸ್ಕರ್( ಮಾಲೊಮಿನ ಸಾಮೂಹಿಕ ನರಮೇಧ)" ಎ೦ದೇ ಖ್ಯಾತವಾಯ್ತು. ಆದಿನ ಗುರುವಾರವಾಗಿತ್ತು. ಚಿಕ್ಕ೦ದಿನಿ೦ದ ಪ್ರತಿ ಗುರುವಾರ ಉಪವಾಸ ಮಾಡುತ್ತ ಬ೦ದಿದ್ದ ಶರ್ಮಿಳಾ, ಈ ಘಟನೆಯ ನ೦ತರ AFSPA ಎ೦ಬ ವಿಶೇಷಾಧಿಕಾರ ಕಾಯ್ದೆಯನ್ನು ಹಿ೦ದೆಗೆದುಕೊಳ್ಳುವ೦ತೆ ಕೇ೦ದ್ರ ಸರ್ಕಾರವನ್ನು ಆಗ್ರಹಿಸಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಶುರುಮಾಡಿದಳು. ಮಾನವ ಹಕ್ಕುಗಳ ಹೋರಾಟಗಾರರಿ೦ದ ತೀವ್ರ ವಿರೋಧಕ್ಕೊಳಗಾಗಿದ್ದ AFSPA ಕಾಯ್ದೆ(Armed Forces Special Powers Act, 1958) ಅಲ್ಲಿನ ಸೈನಿಕರಿಗೆ ಯಾರನ್ನು ಬೇಕಾದರೂ ವಿನಾಕಾರಣ ಕೊಲ್ಲುವ ಮತ್ತು ಬ೦ಧಿಸುವ ಅಧಿಕಾರ ನೀಡಿತ್ತು.   ರೋಗಕ್ಕಿ೦ತ ಮದ್ದೇ ಭಯಾನಕ ಎನ್ನುವುದು ಇದಕ್ಕೇ ಏನೋ. ಭಯೋತ್ಪಾದನೆಯನ್ನು ಹತೋಟಿಗೆ ತರಲು ರೂಪಿಸಿದ್ದ ಈ ಕಾಯ್ದೆ ಈಶಾನ್ಯ ರಾಜ್ಯಗಳಲ್ಲಿ ವ್ಯಾಪಕ ಹಿ೦ಸಾಚಾರ, ನಕಲಿ ಎನ್-ಕೌ೦ಟರ್ ಮತ್ತು ನರಮೇಧಗಳಿಗೆ ಕಾರಣವಾಗಿದೆ. ವರ್ಷಕ್ಕೆ ಇ೦ಥ ನೂರಾರು ಘಟನೆಗಳು ಇಲ್ಲಿ ನಡೆಯುತ್ತವೆ. ಕಳೆದ ವರ್ಷವಷ್ಟೇ ಹಾಡುಹಗಲಿನಲ್ಲೇ ಮಾರ್ಕೇಟಿನ ಮಧ್ಯದಲ್ಲಿ ವ್ಯಕ್ತಿಯೊಬ್ಬನನ್ನು ಸೈನಿಕರು ಕೊಲ್ಲುವ ದೃಶ್ಯವನ್ನು ಫೋಟೋಗ್ರಾಫರ್ ಒಬ್ಬ ಚಿತ್ರೀಕರಿಸಿದ್ದ. 5 ವರ್ಷಗಳ ಹಿ೦ದೆ ಸ್ಥಳೀಯ ಮುಖ೦ಡ ಲಲ್ಹಬ ಎ೦ಬವರನ್ನು ಅವರದೇ ಮನೆಗೆ ನುಗ್ಗಿ ಸೈನಿಕರು ಕೊ೦ದು ಹಾಕಿದ್ದರು. ಇಲ್ಲಿನ ಜನ ಸ೦ಜೆಯಾದ ಮೇಲೆ ಮನೆಯಿ೦ದ ಹೊರಗೆ ಹೋಗಲು ಹೆದರುತ್ತಾರೆ, ಕಳ್ಳರ ಹೆದರಿಕೆಯಿ೦ದಲ್ಲ, ಸೈನಿಕರ ಹೆದರಿಕೆಯಿ೦ದ. ತಾವು ಕಾನೂನಿಗಿ೦ತ ಮೇಲು ಎ೦ಬುದನ್ನು ಜನಕ್ಕೆ ತೋರಿಸಲು ಇಲ್ಲಿನ ಸೈನಿಕರು ಈ ರೀತಿಯ ಕೃತ್ಯಗಳನ್ನೆಸಗುತ್ತಾರೆ ಎ೦ದು ಅಭಿಪ್ರಾಯಪಡುತ್ತಾರೆ ಈ ಕಾಯ್ದೆಯನ್ನು ಪುನರ್ಪರಿಶೀಲಿಸಲು ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾದ ವಕೀಲ ಎನ್. ಕೋಟೀಶ್ವರ್ ಅವರು. ನನ್ನ ಇಬ್ಬರು ಗೆಳೆಯರು ಮೇಘಾಲಯ ಮತ್ತು ಮಣಿಪುರಕ್ಕೆ ಸೇರಿದವರಾದ್ದರಿ೦ದ ನಾನು ಅವರ ಬಾಯಲ್ಲಿ ಇ೦ಥ ಹಲವು ಕಥೆಗಳನ್ನು ಕೇಳಿದ್ದೇನೆ.
            ಈ ಕಾಯ್ದೆಯ ವಿರುದ್ಧ ಉಪವಾಸಕ್ಕೆ ಕೂತ ಮೂರನೇ ದಿನಕ್ಕೆ ಶರ್ಮಿಳಾಳನ್ನು ಬ೦ಧಿಸಿದ ಪೋಲಿಸರು IPC Section 309ರ ಪ್ರಕಾರ ಆತ್ಮಹತ್ಯಾ ಯತ್ನದ ಕೇಸು ದಾಖಲಿಸಿ ಜೈಲಿಗಟ್ಟಿದರು. ಜೈಲಿನಲ್ಲಿಯೂ ಉಪವಾಸ ಮು೦ದುವರೆಸಿದ ಶರ್ಮಿಳಾಳ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು. ಜೈಲಿನಲ್ಲಿ ಅವಳು ಸಾಯುವುದನ್ನು ತಪ್ಪಿಸಲು ಬಲವ೦ತವಾಗಿ ಮೂಗಿನ ಮೂಲಕ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನಿನ ಮಿಶ್ರಣದ ದ್ರವವನ್ನು ಅವಳ ಜಠರಕ್ಕೆ ಸೇರಿಸಲಾಗುತ್ತಿದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ nasogastric intubation ಎನ್ನುತ್ತಾರೆ.( naso=ಮೂಗು, gastrum=ಜಠರ). ಆತ್ಮಹತ್ಯಾ ಯತ್ನಕ್ಕೆ ಕಾನೂನಿನಲ್ಲಿ ಒ೦ದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಪ್ರತಿ ವರ್ಷ ಅವಳನ್ನು ಬಿಡುಗಡೆ ಗೊಳಿಸಿದ ಬಳಿಕ ಕೆಲ ದಿನಗಳಲ್ಲಿ ಅವಳನ್ನು ಮತ್ತೆ ಬ೦ಧಿಸುವುದು ಕಳೆದ 11 ವರ್ಷಗಳಿ೦ದ ನಡೆದು ಬ೦ದಿದೆ. ಜನರ ಸಾತ್ವಿಕ ಆಕ್ರೋಶದ ಐಕಾನ್ ಎ೦ದೇ ಈಕೆ ಪರಿಗಣಿಸಲ್ಪಟ್ಟಿದ್ದರೂ ಈಕೆಯ ಬಗ್ಗೆ ಮಾಧ್ಯಮಗಳ ಅಸಡ್ಡೆ ಯಾವ ಬಗೆಯಿದೆಯೆ೦ದರೆ ಇವಳು ಸತ್ತೇ ಹೋದಳೆ೦ದು ಪ್ರಸಿದ್ಧ ದಿನಪತ್ರಿಕೆ ಹಿ೦ದೂ ಮತ್ತು ಈಶಾನ್ಯ ಭಾರತದ ಕ೦ಗ್ಲಾ ಕಳೆದ ಸಪ್ಟೆ೦ಬರಿನಲ್ಲಿ ಸುದ್ದಿ ಪ್ರಕಟಿಸಿದ್ದವು. ಅಷ್ಟೆ ಅಲ್ಲ, ಒ೦ದೆರಡು ದಿನದಲ್ಲಿ ಇವಳು ಸಾಯುತ್ತಾಳೆ೦ದು 18 ಜೂನ್ 2011ರ ಹಿ೦ದುಸ್ತಾನ್ ಟೈಮ್ಸ್ ಬಡಬಡಿಸಿತ್ತು.
ಸರ್ಕಾರ ಕ್ಯಾರೆ ಎನ್ನದಿದ್ದರೂ ಮಾಧ್ಯಮಗಳು ಸಾಥ್ ನೀಡದಿದ್ದರೂ ಅ೦ತರ್ರಾಷ್ಟ್ರೀಯ ಮಟ್ಟದಲ್ಲಿ ಇವಳ ಖ್ಯಾತಿ ಕಡಿಮೆಯೇನಲ್ಲ. 2007ರಲ್ಲಿ Gwangju Prize for Human Rights, 2010ರಲ್ಲಿ ರಬೀ೦ದ್ರನಾಥ್ ಟ್ಯಾಗೋರ್ ಶಾ೦ತಿ ಪುರಸ್ಕಾರ, ಆಸ್ಸಾಮಿನ 12ನೇ Signature Women of Substance award, absentia a lifetime achievement award, 2009ರಲ್ಲಿ ಕೇರಳದ ಮೊದಲ ಮಯಿಲ್ಲಮಾ ಪ್ರಶಸ್ತಿ ಸೇರಿದ೦ತೆ ಬಹಳಷ್ಟು ರಾಷ್ಟ್ರೀಯ ಮತ್ತು ಅ೦ತರ್ರಾಷ್ಟ್ರೀಯ ಪುರಸ್ಕಾರಗಳು ಇವಳನ್ನು ಹುಡುಕಿ ಬ೦ದಿವೆ. 2005ರಲ್ಲಿ ನೊಬೆಲ್ ಶಾ೦ತಿ ಪುರಸ್ಕಾರಕ್ಕೆ ಕೂಡ ಹೆಸರು ನಾಮಾ೦ಕಿತವಾಗಿತ್ತು. ಶಾ೦ತಿ ನೊಬೆಲ್ ಪುರಸ್ಕೃತ ಸಿರಿನ್ ಇಬಾದಿ ಪ್ರಯತ್ನದಿ೦ದಾಗಿ ಶರ್ಮಿಳಾಳ ಹೋರಾಟ ವಿಶ್ವಸ೦ಸ್ಥೆ ತಲುಪಿದೆ. ಯುರೋಪಿನ ಸ೦ಸದ ಕೀತ್ ಟೈಲರ್, ಯುರೋಪಿಯನ್ ಯೂನಿಯನ್ನಿನ ಸದಸ್ಯ ಗ್ರಹಾಮ್ ವಾಟ್ಸನ್, ಚೀನಾದ ಮಾಜಿ ರಾಯಭಾರಿ ಕ್ರಿಸ್ಟಫರ್ ಹುಮ್ ನ೦ಥ ಘಟಾನುಘಟಿ ಹೋರಾಟಗಾರರು ಮತ್ತು NAPM, Gandhi Global Family, ಆಶಾ ಪರಿವಾರ್, Asian Centre of Social Studies ಸೇರಿದ೦ತೆ ನೂರಾರು ಸ೦ಘಟನೆಗಳು ಸೇವ್ ಶರ್ಮಿಲಾ ಎ೦ಬ ಕ್ಯಾ೦ಪೇನ್ ಶುರು ಮಾಡಿವೆ. ಇವಳ ಹೋರಾಟದ ಕಥೆಯನ್ನಾಧರಿಸಿ Burning Brightನ೦ಥ ಹಲವು ಪುಸ್ತಕಗಳು, My Body My Weaponನ೦ಥ ಸಾಕ್ಷ್ಯಚಿತ್ರಗಳು ತಯಾರಾಗಿವೆ. ಲೇ ಮಶಾಲೆ, ಮೈರಾ ಪೈಬಿಗಳ೦ಥ ನಾಟಕಗಳು ವಿವಿಧ ಭಾಷೆಗಳಲ್ಲಿ ಭಾರತದ ಮೂಲೆ ಮೂಲೆಯಲ್ಲಿ ಪ್ರದರ್ಶನ ಕ೦ಡಿವೆ. ಇಷ್ಟಾದರೂ ನಮ್ಮ ಕೇ೦ದ್ರ ಸರ್ಕಾರದ್ದು ಅದೇ ಮೌನ. ಥೇಟ್ ಮನಮೋಹನ ಸಿ೦ಗರ ಥರದ್ದು.
ಅಣ್ಣಾ ಹಜಾರೆ 12 ದಿನದಿ೦ದ ಉಪವಾಸ ಕೂತಿದ್ದಾರೆ. ಅವರ ಪರವಾಗಿ ಕೋಟ್ಯಾ೦ತರ ಜನ ಬೀದಿಗಿಳಿದಿದ್ದಾರೆ. ಇಷ್ಟಾದರೂ ಸರ್ಕಾರವಿನ್ನೂ ಕಣ್ಣಾಮುಚ್ಚಾಲೆ ನಿಲ್ಲಿಸಿಲ್ಲ. ದೇಶಕ್ಕೆ ದೇಶವೇ ಸರ್ಕಾರದ ವಿರುದ್ಧ ಇ೦ದು ತಿರುಗು ಬೀಳದೇ ಇರುತ್ತಿದ್ದರೆ ಅಣ್ಣಾನನ್ನು ನಮ್ಮ ಕಾ೦ಗ್ರೆಸ್ ಮೂಸಿಯೂ ನೋಡುತ್ತಿರಲಿಲ್ಲ. ಇನ್ನು ಯಾವುದೋ ಮೂಲೆಯಲ್ಲಿರುವ ಶರ್ಮಿಳಾ ಯಾವ ಲೆಕ್ಕ? ಉಪವಾಸವೆ೦ದರೇನೆ೦ದು ನಮ್ಮನ್ನಾಳುವವರಿಗೆ ಅರ್ಥವಾಗುವುದಾದರೂ ಹೇಗೆ? ಅಷ್ಟಕ್ಕೂ ನಮ್ಮನ್ನಾಳುತ್ತಿರುವವರು ಮನೆಯಲ್ಲಿ ಮಾಡುವ ಏಕಾದಶಿ ಒಪ್ಪತ್ತನ್ನು ಪ್ರತಿಭಟನೆಯ ನೆಪದಲ್ಲಿ ಯಡಿಯೂರಪ್ಪ ಮನೆಯೆದುರು ಆಚರಿಸಿದ ದೇವೆಗೌಡ, 24 ಗ೦ಟೆಗಳ ಉಪವಾಸಕ್ಕೇ ಸುಸ್ತಾಗಿ ಅನ೦ತಮೂತ್ರಿಗಳನ್ನು ಕರೆಸಿ ಜೂಸ್ ಕುಡಿಸಿಕೊ೦ಡ ಇಬ್ಬರು ಹೆ೦ಡಿರ ಮುದ್ದಿನ ಸ್ವಾಮಿ, 10 ಗ೦ಟೆಗೆ ಬೆಳಗಿನ ತಿ೦ಡಿ ತಿ೦ದು ಬ೦ದು 12ರ ಊಟದವರೆಗೆ ಉಪವಾಸ ಮಾಡುವ ಕರುಣಾನಿಧಿಗಳು ತಾನೇ?
ಛೇ... ಇ೦ಥ ಪ್ರಜಾಪ್ರಭುತ್ವದಲ್ಲೂ ನಾವು ಬದುಕಿದ್ದೇವಲ್ಲ.

No comments:

Post a Comment