Pages

Thursday, December 8, 2016

ಭಾರತದಲ್ಲಿ ಯಹೂದಿಗಳ ಹೆಜ್ಜೆಗುರುತು: ಒಂದು ಅಧ್ಯಯನ - 1


ಕ್ರಿ.ಪೂ ೬೮ರಲ್ಲಿ ಬಂದ ಯಹೂದಿಗಳನ್ನು ಬರಮಾಡಿಕೊಳ್ಳುತ್ತಿರುವ ಮಲಬಾರಿನ ರಾಜ(ಕೊಚ್ಚಿನ್ ಜೂದಪಳ್ಳಿಯ ಪೇಂಟಿಂಗ್)
       ಸುಮಾರು ಮೂರ್ನಾಲ್ಕು ವರ್ಷದ ಹಿಂದಿನ ಮಾತು. ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಮಯ. ಕಣ್ಣೂರು, ಕ್ಯಾಲಿಕಟ್ಟುಗಳೆಲ್ಲ ವೀಕೆಂಡ್ ಡೆಸ್ಟಿನೇಶನ್ನುಗಳಾಗಿದ್ದ ಕಾಲ. ಅಲ್ಲಿನ ಗಲ್ಲಿಗಲ್ಲಿಗಳೆಲ್ಲ ಚಿರಪರಿಚಿತವಾಗಿತ್ತು. ಹಾಗೆ ಗಲ್ಲಿ ಸುತ್ತುವಾಗ ಕಣ್ಣಿಗೆ ಬಿದ್ದ ಒಂದು ರಸ್ತೆಯ ಹೆಸರಿದ್ದುದು ’ಜೂದಾ ಬಜಾರ್’. ಆ ರಸ್ತೆಯಲ್ಲಿದ್ದದ್ದೇ ಒಂದು ಚಪ್ಪಲಿ ಅಂಗಡಿ. ಹಾಗಿದ್ದಾಗ ಅದನ್ಯಾಕೆ ಜೂತಾ ಬಜಾರ್ ಎನ್ನುತ್ತಾರೆಂದು ನನಗೆ ಕುತೂಹಲ. ಕ್ಯಾಲಿಕಟ್ಟಿನ ಮೂಲೆಮೂಲೆಯ ಪರಿಚಯವಿರುವ ಗೆಳತಿ ಹಿತಳಿಗೆ ಕೇಳಿದೆ. ಸುಮಾರಷ್ಟು ಸರ್ಕಸ್ ಮಾಡಿದವಳು ಕೊನೆಗೆ ಪ್ರಾಯಶಃ ಹಿಂದೆ ಜ್ಯೂಗಳು ವಾಸವಾಗಿದ್ದ ಜಾಗವಾದ್ದರಿಂದ ಜೂದಾ(ಮಲಯಾಳದಲ್ಲಿ ಜೂದ ಅಂದರೆ ಜ್ಯೂಗಳ) ಬಜಾರ್ ಎಂಬ ಹೆಸರು ಬಂದಿದ್ದಿರಬಹುದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಇಲ್ಲ ಎಂದಳು. ಕ್ಯಾಲಿಕಟ್ಟಿನಲ್ಲಿ ಜ್ಯೂಗಳು ಇದ್ದರೆಂದು ಸ್ಥಳೀಯ ಇತಿಹಾಸಕಾರರಿಗೆ ನಂಬಿಕೆಯಿಲ್ಲ. ನನಗೂ ಆ ವಿಷಯ ಹೊಸದು. ಭಾರತಕ್ಕೆ ಪಾರ್ಸಿಗಳು ಬಂದು ನೆಲೆಸಿದ್ದರೆಂಬುದು ಅರಿವಿತ್ತು. ಯಹೂದಿಗಳೂ ಇದ್ದಾರೆಂಬುದೇ ನನಗೆ ಆಶ್ಚರ್ಯವುಂಟುಮಾಡಿತ್ತಾಗ. ಇನ್ನೊಮ್ಮೆ ಹೋದಾಗ ಪ್ರಾಯಶಃ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಬಂದಿದ್ದ ಜೂದಾ ಬಜಾರಿನ ಬಗೆಗಿನ ಲೇಖನವೊಂದನ್ನು ತೋರಿಸಿದಳು. ಕ್ಯಾಲಿಕಟ್ ಹೆರಿಟೇಜ್ ಫೋರಂ ಎಂಬ ಸಂಸ್ಥೆ ಕ್ಯಾಲಿಕಟ್ಟಿನಲ್ಲಿ ಯಹೂದಿಗಳ ರಸ್ತೆಯೊಂದನ್ನು ಕಂಡುಹಿಡಿದುದಾಗಿ ಹೇಳಿಕೊಂಡಿತ್ತು.

ಕ್ಯಾಲಿಕಟ್ಟಿನ ಜೂದಬಜಾರಿನಲ್ಲಿ ಉಳಿದುಕೊಂಡಿರುವ ಯಹೂದಿ ಪೂಜಾಮಂದಿರ
      
 ಆಶ್ಚರ್ಯವೇನಿಲ್ಲ. ಕ್ಯಾಲಿಕಟ್ ನೂರಾರು ವರ್ಷಗಳ ಕಾಲ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತವಾಗಿದ್ದ ನಗರ ಹಾಗೂ ಬಂದರು. ಝಾಮೋರಿನ್ನನ ರಾಜಧಾನಿಯಾಗಿದ್ದ ಊರು. ವಾಸ್ಕೋಡಗಾಮ ಮೊದಲು ಬಂದಿಳಿದಿದ್ದು ಇಲ್ಲಿಗೇ.  ಅರಬ್ಬರು, ಡಚ್ಚರು, ಇಂಗ್ಲೀಷರು, ಪೋರ್ಚುಗೀಸರು, ಚೀನಿಯರು ಇನ್ನೂ ಪೂರ್ವದ ಎಷ್ಟೇಷ್ಟೋ ದೇಶಗಳ ಸ್ನೇಹದ,  ಯುದ್ಧದ, ವ್ಯಾಪಾರದ, ವಿಜಯದ ಮೈಲಿಗಲ್ಲುಗಳನ್ನು ಹೊತ್ತು ನೆಲದ ಚರಿತ್ರೆಯನ್ನು ಸಮೃದ್ಧಗೊಳಿಸಿದ ತಾಣವದು. ಮತ್ತೂ ಎಷ್ಟೆಷ್ಟು ನಿಗೊಢಗಳನ್ನು ತನ್ನೊಳಗೆ ಹೊತ್ತಿದೆಯೋ. ಹಾಗೆ ಹುದುಗಿ ಹೋಗಿದ್ದ ಚರಿತ್ರೆಯ ಪುಟವೊಂದು ಮೊನ್ನೆ ಮೊನ್ನೆ ತೆರೆದುಕೊಂಡಿದ್ದು ಇತಿಹಾಸಕಾರ ಫ್ರಾಂಕೋಯಿಸ್ ಪೈರಾಡ್‌ನ “The voyages of Francois Pyrard of Laval, to the east indies, the Maldives, the molucass and Brazil” ಎಂಬ ಮರೆತುಹೋಗಿದ್ದ ಕಥನವೊಂದರ ಪುನರ್ದಶನವಾದ ಮೇಲೆ. ಅದರ ನಂತರವೇ ಕ್ಯಾಲಿಕಟ್ಟಿನ ಬೀದಿಗಳಲ್ಲಿ ಯಹೂದಿಗಳು ಮೂಡಿಸಿದ ಹೆಜ್ಜೆಗುರುತನ್ನು ಕಂಡು ಅಲ್ಲಿನ ಸ್ಥಳೀಕರು ಮೂಗಿನ ಮೇಲೆ ಬೆರಳಿಟ್ಟಿದ್ದು. ಪೋರ್ಚುಗೀಸ್ ಪ್ರವಾಸಿಗಳು ಹದಿನೈದನೇ ಶತಮಾನದಲ್ಲೇ ಇಲ್ಲಿ ವಾಸಿಸುತ್ತಿದ್ದ ಯಹೂದಿಗಳ ಬಗ್ಗೆ ಬರೆದಿದ್ದಾರೆ. ಡಚ್ಚರ ’ಹೀಬ್ರೂ ಕ್ರೊನಿಕಲ್ಸ್ ಆಫ್ ಕೊಚಿನ್’ ಯಹೂದಿಗಳ ರಾಜಕುಮಾರನೊಬ್ಬನ ಸಮಾಧಿಯೂ ಕ್ಯಾಲಿಕಟ್ಟಿನಲ್ಲಿರುವುದಾಗಿ ಉಲ್ಲೇಖಿಸುತ್ತದೆ. ಶಾಲಿಯಾತ್ ಎಂದು ಅರಬ್ಬರಿಂದಲೂ, ಚಾಲೆ ಎಂದು ಪೋರ್ಚುಗೀಸರಿಂದಲೂ, ಚಲಿ ಎಂದು ಡಚ್ಚರಿಂದಲೂ ಕರೆಯಲ್ಪಟ್ಟ ಕ್ಯಾಲಿಕಟ್ಟಿನ ಸಮೀಪದ ಚಲಿಯಾಮ್ ಪಟ್ಟಣದಲ್ಲಿ ಆಗಾಗ ಕ್ರಿಶ್ಚಿಯನ್ನರು ಹಾಗೂ ಯಹೂದಿಗಳ ಮಧ್ಯದ ಆಂತರಿಕ ಘರ್ಷಣೆಗಳ ಮಾಹಿತಿ ಸಿಗುತ್ತದೆ. ವಾಸ್ಕೋಡಗಾಮನ ಯಹೂದಿ ನಾವಿಕ ಕಲ್ಲಿಕೋಟೆಯಲ್ಲಿ ಇರುವ ಹತ್ತು ಯಹೂದಿ ಪಂಗಡಗಳನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದನ್ನು ಅವನೊಡನೆ ಬಂದ ಪ್ರವಾಸಿಗ ಗಿರೋಲಾಮೋ ಸೆರ್ನಿಗಿ ಬರೆದಿಟ್ಟಿದ್ದಾನೆ. ಕೊಚ್ಚಿಯ ರಾಜ ಹಾಗೂ ಕ್ಯಾಲಿಕಟ್‌ನ ಝಾಮೋರಿನ್ ಇಬ್ಬರ ಸೈನ್ಯದಲ್ಲೂ ಜ್ಯೂ ಬೆಟಾಲಿಯನ್ ಇದ್ದ ಬಗ್ಗೆ ಕ್ರೊನಿಕಲ್ಸ್ ಆಫ್ ಕೊಚಿನ್ ತಿಳಿಸುತ್ತದೆ.
       ಹೇಳಿಕೇಳಿ ಕ್ಯಾಲಿಕಟ್ ಕೇರಳದ ಪ್ರಮುಖ ವ್ಯಾಪಾರೀ ಕೇಂದ್ರ. ವ್ಯಾಪಾರಕ್ಕಾಗಿ ಏನಾದರೂ ಬಂದಿರಬಹುದೇ ಎಂದು ಯಹೂದಿಗಳ ಹಿನ್ನೆಲೆ ಹುಡುಕಿದರೆ ಎದುರಾಗುವುದು ಆಶ್ಚರ್ಯಗಳ ಸರಮಾಲೆ. ಕೇರಳದ ಹೆಚ್ಚುಕಮ್ಮಿ ಎಲ್ಲ ನಗರಗಳಲ್ಲೂ ಯಹೂದಿಗಳ ರಸ್ತೆ, ಸಿನಗಾಗ್(ಯಹೂದಿಗಳ ಪೂಜಾಸ್ಥಳ, ಮಲಯಾಳದಲ್ಲಿ ಜೂದಪಳ್ಳಿ), ಸ್ಮಶಾನಗಳು ಕಾಣಸಿಗುತ್ತವೆ. ಕೇರಳದ ಮೂಲೆಮೂಲೆಯಲ್ಲಿ ಅವರ ಇರುವಿಕೆಯ ಕುರುಹುಗಳಿದೆ. ಎರ್ನಾಕುಲಂನಲ್ಲಿ ಜ್ಯೂ ಸ್ಟ್ರೀಟ್, ಜ್ಯೂ ಮಾರ್ಕೆಟ್, ಕೊಡಂಗಾಲೂರಿನ ಜೂದಕಂಬಲಂ, ಕೊಚ್ಚಿ, ಪೊನ್ನಾನಿ ಎಲ್ಲೆಡೆಯೂ ಯಹೂದಿಗಳ ಗಾಢ ಹೆಜ್ಜೆಗುರುತು ಕಾಣಸಿಗುತ್ತದೆ. ಐನೂರರಿಂದ ಸಾವಿರ ವರ್ಷಗಳಷ್ಟು ಪುರಾತನವಾದ ಏಳು ಜೂದಪಳ್ಳಿಗಳೂ, ಆರು ನಗರಗಳಲ್ಲಿ ಜೂಸ್ಟ್ರೀಟ್‌ಗಳು, ಸ್ಮಶಾನಗಳು, ಜ್ಯೂಯಿಶ್ ಚಿಲ್ಡ್ರನ್ ಪ್ಲೇ ಗ್ರೌಂಡ್‌ಗಳು, ಹತ್ತುಹಲವು ಸ್ಮಾರಕಗಳು ಕೇರಳದಲ್ಲಿವೆ.
       ಕ್ರಿಶ್ಚಿಯಾನಿಟಿ, ಇಸ್ಲಾಂ, ಜುದಾಯಿಸಂ ಮೂರೂ ಸೆಮೆಟಿಕ್ ಮತಗಳೂ ಪಶ್ಚಿಮವನ್ನು ಮುಟ್ಟುವ ಬಹುಮುಂಚೆಯೇ ಭಾರತವನ್ನು ತಲುಪಿದ್ದವು. ಮಜವೆಂದರೆ ಈ ಮೂರೂ ಮತಗಳಿಗೆ ಭಾರತಕ್ಕೆ ಸ್ವಾಗತಗೋಪುರವಾಗಿದ್ದು ಕೇರಳ. ಕ್ರಿ.ಶ ೫೨ರಲ್ಲಿ ಸಂತ ಥಾಮಸ್ ಏಸು ಕ್ರಿಸ್ತನ ಕಾಲದಲ್ಲೇ ಕೇರಳಕ್ಕೆ ಬಂದು ಏಳು ಚರ್ಚುಗಳನ್ನು ಕಟ್ಟಿ ಮತಾಂತರವನ್ನೂ ಶುರುಮಾಡಿದ್ದ. ಮಹಮ್ಮದ್ ಪೈಗಂಬರ್ ಬದುಕಿದ್ದಾಗಲೇ ಇಸ್ಲಾಮ್ ಕೇರಳಕ್ಕೆ ಬಂದು ಒಂಭತ್ತು ಮಸೀದಿಗಳು ನಿರ್ಮಾಣವಾಗಿದ್ದವು. ಅಂತೇ, ಅತಿ ಹಳೆಯ ಏಕದೇವೋಪಾಸಕ ಮತ ಜುದಾಯಿಸಂ ಕೂಡ ವಿಶ್ವದ ಬಹುಭಾಗವನ್ನು ವ್ಯಾಪಿಸುವುದರೊಳಗೆ ಭಾರತಕ್ಕೆ ಕಾಲಿಟ್ಟಾಗಿತ್ತು. ಇರುವ ದಾಖಲೆಗಳನ್ನೇ ನಂಬುವುದಾದರೆ ಸೊಲೋಮನ್ ರಾಜನಿದ್ದ ಕ್ರಿ.ಶ ೧ನೇ ಶತಮಾನದಲ್ಲೇ ಕೇರಳದಲ್ಲಿ ಯಹೂದಿಗಳ ಕಾಲನಿಯೊಂದು ನಿರ್ಮಾಣಗೊಂಡಿತ್ತು. ಇನ್ನೂ ಮಜವೆಂದರೆ ಇವು ಮೂರೂ ಕೇರಳದಲ್ಲಿ ಮೊದಲು ಕಾಲಿಟ್ಟಿದ್ದು ಮಲಬಾರಿಗೆ. ಇನ್ನೂ specific ಆಗಿ ಹೇಳುವುದಾದರೆ ಕೊಡಂಗಾಲೂರಿಗೆ. ಎರಡು ಸಾವಿರ ವರ್ಷಗಳ ಹಿಂದೆಯೇ ರೋಮನ್ನರು ಕೇರಳ ಕರಾವಳಿಯ ಮುಜರಿಸ್ ಬಂದರುಗಳಿಂದ ಕಾಳುಮೆಣಸನ್ನು ಅವ್ಯಾಹತವಾಗಿ ಕೊಂಡೊಯ್ಯುತ್ತಿದ್ದರೆಂದು ಪಾಶ್ಚಾತ್ಯ ಭೂಗೋಳಶಾಸ್ತ್ರಜ್ಞರಾದ ಸ್ಟ್ರಾಬೋ ಮತ್ತು ಪ್ಲೈನಿ ತಿಳಿಸಿದ್ದಾರೆ. ಈ ಮುಜಿರಿಸ್ ಬಂದರೇ ಕೊಡಂಗಾಲೂರು. ರಾಮಾಯಣದ ಅರಣ್ಯಕಾಂಡದಲ್ಲಿ ಉಲ್ಲೇಖಿತಗೊಂಡ ಮರೀಚ ಪಟ್ಟಣವೂ ಇದೇ. ವಾಲ್ಮೀಕಿ ರಾಮಾಯಣದಲ್ಲಿ ಖರದೂಷಣರನ್ನು ಕೊಂದ ವಿಷಯವನ್ನು ರಾವಣನಿಗೆ ತಿಳಿಸಲು ಶೂರ್ಪಣಖಿ ಲಂಕೆಗೆ ಓಡುವ ಪ್ರಕರಣವಿದೆ. ಶೂರ್ಪಣಖಿಗಾದ ಅವಮಾನದ ಸೇಡು ತೀರಿಸಿಕೊಳ್ಳಲು ರಾವಣ ಕತ್ತೆಗಳಿಂದ ಎಳೆಯಲ್ಪಟ್ಟ ರಥವನ್ನೇರಿ ಮಾರೀಚನ ಆಶ್ರಮವನ್ನು ತಲಪುತ್ತಾನೆ. ದಾರಿ ಮಧ್ಯದಲ್ಲಿ ಬರುವುದು ಮರೀಚಪಟ್ಟಣದ ಸಮುದ್ರತೀರದ ಸೂರ್ಯಾಸ್ತ, ಮರೀಚ(ಕಾಳುಮೆಣಸಿನ) ತೋಟಗಳು, ಶಂಖ ಮತ್ತು ಮುತ್ತಿನ ರಾಶಿಗಳು. ಇವೆಲ್ಲ ಪಕ್ಕಾ ಪಶ್ಚಿಮ ಸಮುದ್ರ ತೀರದ ವರ್ಣನೆಗಳು. ರಾಮಾಯಣದಲ್ಲಿ ದಕ್ಷಿಣ ಭಾರತದ ಹೆಚ್ಚಿನ ಯಾವ ಪ್ರದೇಶಗಳ ವರ್ಣನೆಯಿಲ್ಲದಿದ್ದರೂ ಮರೀಚಪಟ್ಟಣ ಒಂದಕ್ಕಿಂತ ಹೆಚ್ಚು ಬಾರಿ ಉಲ್ಲೇಖಿತವಾಗಲು ಕಾರಣ ಈ ಕೊಡಂಗಾಲೂರಿನ ವಿಶ್ವಪ್ರಸಿದ್ಧಿಯೇ. ಭಾರತದ ಅತಿ ಹಳೆಯ ಚರ್ಚ್ ಇರುವುದು ಕೊಡಂಗಾಲೂರಿನ ಸಮೀಪದ ಪಲಯೂರಿನಲ್ಲಿ. ಭಾರತದ ಅತಿ ಹಳೆಯ, ವಿಶ್ವದ ಎರಡನೇ ಪುರಾತನ ಮಸೀದಿಯಿರುವುದು ಕೊಡಂಗಾಲೂರಿನಲ್ಲಿ. ಸಂತ ಥಾಮಸ್ ಬರುವುದಕ್ಕಿಂತ ನೂರಾರು ವರ್ಷ ಮುಂಚೆಯೇ ಯಹೂದಿಗಳ ಸಿನಗಾಗ್(ಮಲಯಾಳದಲ್ಲಿ ’ಜೂದ ಪಳ್ಳಿ’) ನಿರ್ಮಾಣಗೊಂಡಿದ್ದೂ ಕೊಡಂಗಾಲೂರಿನಲ್ಲೇ.

ಭಾರತದ ಮೊದಲ ಚರ್ಚ್, ಸಂತ ಥಾಮಸ್ ಚರ್ಚ್, ಪಲಯೂರು
ಭಾರತದ ಮೊದಲ ಮಸೀದಿ, ಕೊಡಂಗಾಲೂರು
ಕೊಚ್ಚಿಯ ಜ್ಯೂಸ್ಟ್ರೀಟ್

ಜ್ಯೂಸ್ಟ್ರೀಟಿನ ಹಳೆಯ ಯಹೂದಿಗಳ ಮನೆ
ಇತಿಹಾಸಪ್ರಸಿದ್ಧ ಕೊಚ್ಚಿನ್ ಪರದೇಸಿ ಜೂದಪಳ್ಳಿ
       
ಪರದೇಸಿ ಜೂದಪಳ್ಳಿ

ಕೊಚ್ಚಿಯಲ್ಲಿ ಪತ್ತೆಯಾದ ಹಿಬ್ರೂ ಶಿಲಾಶಾಸನಗಳು
ಕೊಚ್ಚಿನ್ ಜೂದಪಳ್ಳಿಯ ನಾನೂರನೇ ವರ್ಷಾಚರಣೆಯ ನೆನಪಿನಲ್ಲಿ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಚೆಚೀಟಿ
ಮಟ್ಟಂಚೇರಿ ಜ್ಯೂಟೌನ್
       ಮಹೋದಯಪುರಂ, ಮುಜಿರಿಸ್, ಚಿಂಕಾಲಿ, ಕ್ರಾಂಗಾನೂರ್, ಬಾಲಕ್ರೀಡಪುರಮ್ ಎಂಬಿತ್ಯಾದಿ ಮೂವತ್ತಕ್ಕೂ ಹೆಚ್ಚು ಹೆಸರುಗಳಿಂದ ಇತಿಹಾಸದಲ್ಲಿ ಕರೆಯಲ್ಪಟ್ಟ ಕೊಡಂಗಾಲೂರು ರಾಮಾಯಣ, ಮಹಾಭಾರತ, ಸಂಗಂನ ಅಗನಾನೂರು, ಶಿಲಪ್ಪದಿಕಾರಂನಂಥ ಪೌರಾಣಿಕ ಕೃತಿಗಳಲ್ಲಿ ಬಾರಿ ಬಾರಿ ಹೆಸರಿಸಲ್ಪಟ್ಟಿದೆ. ಗ್ರೀಕರು, ರೋಮನ್ನರು, ಅರಬ್ಬರು ಬಂದಂತೆಯೇ ಬೇರೆ ಬೇರೆ ಕಾಲದಲ್ಲಿ ವ್ಯಾಪಾರಕ್ಕಾಗಿ ಇಲ್ಲಿ ಯಹೂದಿಗಳೂ ಬಂದರು. ಕ್ರಿ.ಪೂ ೯೩೧ರಿಂದ ೧೦೧೧ರವರೆಗೆ ಜೆರುಸಲೇಮನ್ನಾಳಿದ  ಸೋಲೋಮನ್ ಸಾಮ್ರಾಟನ ಕಾಲದಲ್ಲೇ ಇಲ್ಲಿನ ಬಂದರುಗಳಿಂದ ಈಗಿನ ಇಸ್ರೇಲಿನ ಪ್ರದೇಶಕ್ಕೆ ಸಾಂಬಾರು ಪದಾರ್ಥಗಳು, ಶ್ರೀಗಂಧ, ದಂತಗಳು ರಫ್ತಾಗುತ್ತಿದ್ದವು. ಆಗಿನ ಕಾಲದಲ್ಲೇ ಕೇರಳಕ್ಕೆ ಯಹೂದಿಗಳ ವಲಸೆ ಪ್ರಾರಂಭವಾಯಿತು. ಕ್ರಿ.ಶ ೭೦ರಲ್ಲಿ ಜೆರುಸಲೇಮಿನ ಪವಿತ್ರ ದೇವಾಲಯ ನಾಶಗೊಂಡ ಮೇಲೆ ಇನ್ನಷ್ಟು ಯಹೂದಿಗಳು ಕೇರಳದತ್ತ ಮುಖಮಾಡಿದರು. ಮತಪ್ರಚಾರಕ್ಕಾಗಿ ಮಲಬಾರಿಗೆ ಬಂದ ಸಂತ ಥಾಮಸ್ ಕೊಡಂಗಾಲೂರಿನಲ್ಲಿ ನಡೆಯುತ್ತಿದ್ದ ಕುಲೀನ ಮನೆತನದ ಮದುವೆಯೊಂದರಲ್ಲಿ ಪಾಲ್ಗೊಂಡನಂತೆ. ಆತ ಹಿಬ್ರೂವಿನಲ್ಲಿ ಮದುವೆಯ ಶುಭಾಶಯಗಳನ್ನು ತಿಳಿಸುವ ಹಾಡೊಂದನ್ನು ಹೇಳಿದ. ಒಬ್ಬಳು ಯಹೂದಿ ಹುಡುಗಿಯನ್ನು ಬಿಟ್ಟರೆ ಅಲ್ಲಿದ್ದವರ್ಯಾರಿಗೂ ಅವನ ಭಾಷೆ ಅರ್ಥವಾಗಲಿಲ್ಲ. ಮುಂದೆ ಥಾಮಸನಿಗೆ ದುಭಾಷಿಯಾಗಿ ಆ ಹುಡುಗಿಯೇ ಸಹಾಯ ಮಾಡಿದಳಂತೆ. ಈ ಐತಿಹ್ಯವನ್ನು ನೋಡಿದರೆ ಕ್ರಿ.ಪೂರ್ವಕ್ಕೂ ಸುಮಾರು ಮುಂಚೆಯೇ ಕೇರಳದಲ್ಲಿ ಯಹೂದಿಗಳು ನೆಲೆಸಿದ್ದ ದಾಖಲೆಗಳಿಗೆ ಇನ್ನಷ್ಟು ಪುಷ್ಟಿ ಸಿಗುತ್ತದೆ.
        ಭಾರತದಲ್ಲಿ ನೆಲೆಸಿರುವ ಯಹೂದಿಗಳಲ್ಲಿ ಮೂರು ಮುಖ್ಯ ಪಂಗಡಗಳಿವೆ. ಕೇರಳ ಜ್ಯೂಗಳೆಂದು ಪ್ರಸಿದ್ಧವಾಗಿರುವ ಕೊಚ್ಚಿ ಜೂಗಳು. ಇವರು ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬಂದು ಇಲ್ಲಿಯೇ ನೆಲೆಸಿದವರು. ಎರಡನೇಯದು ೨೧೦೦ ವರ್ಷಗಳ ಹಿಂದೆ ಆಗಮಿಸಿದ ’ಬೆನೆ ಇಸ್ರೇಲ್’ ಪಂಗಡ. ಭಾರತೀಯ ಯಹೂದಿಗಳಲ್ಲಿ ಅತಿ ದೊಡ್ಡ ಸಮುದಾಯವಿದು. ಕ್ರಿ.ಪೂ ೨ನೇ ಶತಮಾನಕ್ಕೂ ಹಿಂದೆ ಪಶ್ಚಿಮದ ಕೊಂಕಣ ಪಟ್ಟಿಗೆ ಇವರು ಆಗಮಿಸಿದರೆಂದು ಭಾವಿಸಲಾಗುತ್ತದೆ. ಸಮುದ್ರದಲ್ಲಿ ಬರುತ್ತಿರುವಾಗ ಹಡಗು ಒಡೆದು ನೀರುಪಾಲಾದವರಲ್ಲಿ ಏಳು ಪುರುಷರೂ, ಏಳು ಮಹಿಳೆಯರೂ ಹೇಗೋ ಬದುಕಿ ಉಳಿದರಂತೆ. ಅವರ ಸಹಯಾತ್ರಿಗಳು, ಸ್ವತ್ತುಗಳೊಡನೆ ಧರ್ಮಗ್ರಂಥಗಳೂ ನಾಶವಾಗಿದ್ದವು. ಶೇಮಾ ಪ್ರಾರ್ಥನೆಯನ್ನು ಮಾತ್ರ ನೆನಪಿಟ್ಟುಕೊಂಡ ಒಂದು ಕಾರಣದಿಂದ ತಮ್ಮ ನೆಲೆಯಿಂದ ಬಹುದೂರ ಬಂದಿದ್ದರೂ ಅವರು ಮೂಲವನ್ನು ಮರೆಯಲಿಲ್ಲವಂತೆ. ಹಾಗೆ ಉಳಿದುಕೊಂಡವರು ಕೊಂಕಣದಲ್ಲಿ ಎಣ್ಣೆ ತೆಗೆಯುವ ಕೆಲಸಕ್ಕೆ ಸೇರಿಕೊಂಡರು. ಯಹೂದಿಗಳ ಪವಿತ್ರ ದಿನ ಸಬ್ಬತ್ ಅಥವಾ ಶನಿವಾರದಂದು ರಜೆ ಹಾಕುತ್ತಿದ್ದರಿಂದ ಮಹಾರಾಷ್ಟ್ರದಲ್ಲಿ ಇವರಿಗೆ ಶನ್ವಾರ್ ತೇಲಿ ಎಂದೇ ಹೆಸರಾಗಿದೆ. ಈ ಸಮುದಾಯ ಸಾವಿರಾರು ವರ್ಷಗಳ ಕಾಲ ಹೊರಜಗತ್ತಿಗೆ ತೆರೆದುಕೊಳ್ಳದೇ ಮಹಾರಾಷ್ಟ್ರದ ಕೊಲಾಬಾ ಸುತ್ತಮುತ್ತ ಅಜ್ಞಾತವಾಗಿ ವಾಸಿಸುತ್ತಿತ್ತು. ಹದಿನೆಂಟನೇ ಶತಮಾನದ ಪೂರ್ವಾರ್ಧದಲ್ಲಿ ಡೇವಿಡ್ ರಹಾಬಿ ಎಂಬ ಮಲಯಾಳಿ ಯಹೂದಿ ವರ್ತಕ ಇಲ್ಲಿಗೆ ಬಂದಾಗ ಯಹೂದಿಗಳ ಜೊತೆಗಿನ ಇವರ ಸಾಮ್ಯವನ್ನು ಕಂಡು ಆಶ್ಚರ್ಯಗೊಂಡ. ಹಿಂದೂ ಹೆಸರುಗಳನ್ನಿಟ್ಟುಕೊಂಡು, ಹಿಂದೂ ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರೂ ಶೇಮಾ ಪ್ರಾರ್ಥನೆಯಂಥ ಅಲ್ಪಸ್ವಲ್ಪ ಯಹೂದಿ ಪರಂಪರೆ ಹಾಗೇ ಉಳಿದುಕೊಂಡಿತ್ತು. ಸ್ವತಃ ಅವರಿಗೂ ತಾವು ಯಹೂದಿಗಳೆಂದು ಅರಿವಾದದ್ದು ಆವಾಗಲೇ.
        ಸ್ಕಂದ ಪುರಾಣದ ಉತ್ತರ ಸಹ್ಯಾದ್ರಿ ಖಂಡದಲ್ಲೊಂದು ಕಥೆಯಿದೆ. ಭೂಮಂಡಲವನ್ನು ೨೧ ಬಾರಿ ಪ್ರದಕ್ಷಿಣೆಗೈದ ಪರಶುರಾಮ ಕ್ಷತ್ರಿಯ ವಂಶವನ್ನು ನಿರ್ಮೂಲಗೊಳಿಸಿದ. ಆ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪರಶುರಾಮ ಮಹೇಂದ್ರಪರ್ವತದಲ್ಲಿ ಯಾಗವೊಂದಕ್ಕೆ ಸಿದ್ಧತೆ ನಡೆಸಿದ. ಇಡೀ ಕ್ಷತ್ರಿಯಕುಲದ ರುಂಡಚಂಡಾಡಿದ ಪರಶುರಾಮನ ಕೋಪವೆಂದ ಮೇಲೆ ಕೇಳಬೇಕೇ! ಹೆದರಿಕೆಯಿಂದ ಬ್ರಾಹ್ಮಣರ್ಯಾರೂ ಆ ಯಾಗದ ಅಧ್ವರ್ಯ ವಹಿಸಲು ಮುಂದಾಗಲಿಲ್ಲ. ಅದೇ ಸಮಯಕ್ಕೆ ಪಶ್ಚಿಮ ಸಮುದ್ರದಲ್ಲಿ ಬರುತ್ತಿದ್ದ ಹಡಗೊಂದು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಪರಶುರಾಮ ನೀರುಪಾಲಾದ ಹದಿನಾಲ್ಕು ಶವಗಳನ್ನು ಚಿತೆಯಲ್ಲಿಟ್ಟು ಪಾವನಗೊಳಿಸಿ ಜೀವ ತುಂಬಿ ಬ್ರಾಹ್ಮಣ್ಯವನ್ನು ನೀಡಿದನಂತೆ. ಅವರಿಗೆ ಹದಿನಾಲ್ಕು ಗೋತ್ರಪ್ರವರಗಳನ್ನು ನೀಡಿ ತನ್ನ ಕಾರ್ಯವನ್ನು ಸಾಂಗಗೊಳಿಸಿಕೊಂಡನೆನ್ನುತ್ತದೆ ಕಥೆ. ಚಿತೆಯಲ್ಲಿ ಪಾವನರಾದ್ದರಿಂದ ಅವರ ಹೆಸರು ಚಿತ್ಪಾವನರೆಂದಾಯ್ತೆಂದು ವಾದವಿದೆ. ಮಹಾರಾಷ್ಟ್ರವನ್ನಾಳಿದ ಪೇಶ್ವೆಗಳು, ಸ್ವಾತಂತ್ರ್ಯ ಹೋರಾಟಗಾರರಾದ ಮಹದೇವ ಗೋವಿಂದ ರಾನಡೆ, ಬಾಲಗಂಗಾಧರ ತಿಲಕ, ವಿ.ಡಿ.ಸಾವರ್ಕರ್, ಗೋಪಾಲ ಕೃಷ್ಣ ಗೋಖಲೆ, ಭಾರತರತ್ನ ಧಂಡೋ ಕೇಶವ ಕರ್ವೆ, ವಿನೋಬಾ ಭಾವೆ, ನಾಥೂರಾಮ್ ಗೋಡ್ಸೆ, ದಾದಾಸಾಹೇಬ್ ಫಾಲ್ಕೆರಂಥ ಖ್ಯಾತನಾಮರೆಲ್ಲ ಚಿತ್ಪಾವನ ಬ್ರಾಹ್ಮಣ ಸಮುದಾಯದವರೇ. ಈ ಕಥೆ ಸತ್ಯವೋ ಸುಳ್ಳೋ ಗೊತ್ತಿಲ್ಲ. ಚಿತ್ಪಾವನ ಶಬ್ದದ ಉಗಮ ಮತ್ತವರ ಮೂಲದ ಬಗ್ಗೆ ಮುಂದಿನ ಲೇಖನದಲ್ಲಿ ನೋಡೋಣ. ಆದರೆ ಚಿತ್ಪಾವನ ಬ್ರಾಹ್ಮಣರ ಚರ್ಯೆ ಇತರ ಬ್ರಾಹ್ಮಣರಿಗಿಂತ ಸಂಪೂರ್ಣ ವಿಭಿನ್ನ. ಬಿಳಿಬಣ್ಣವೂ ನಾಚುವಷ್ಟು ಬಿಳುಚಿಕೊಂಡಿರುವ ಚರ್ಮ, ನೀಲಿ ಅಥವಾ ಹಸಿರು ಕಣ್ಣು, ಚೂಪು ಮೂಗು, ಕಂದು ಛಾಯೆಯ ತಲೆಗೂದಲು ಚಿತ್ಪಾವನರಲ್ಲಿರುವಂತೆ ಬೇರೆ ಯಾವ ಬ್ರಾಹ್ಮಣ ಪಂಗಡದಲ್ಲಿಯೂ ಕಂಡುಬರುವುದಿಲ್ಲ.  ಇಂಥದ್ದೇ ಕಥೆ ಬೇನೆ ಇಸ್ರೇಲಿನಲ್ಲಿಯೂ ಇದೆ. ಜೆರುಸಲೇಮಿನಿಂದ ಬರುತ್ತಿದ್ದ ಯಹೂದಿಗಳ ಹಡಗು ಒಡೆದು ಅದರಲ್ಲಿರುವವರೆಲ್ಲ ನೀರು ಪಾಲಾದರು. ಕೆಲವರು ಹೇಗೋ ಬದುಕಿ ಉಳಿದರೆ ಉಳಿದವರು ಮೃತಪಟ್ಟರು. ಪ್ರಾಯಶಃ ಬದುಕಿ ಉಳಿದವರಲ್ಲಿ ಕೆಲವರು ಸಮಾಜದಲ್ಲಿ ಕುಲೀನ ಸ್ಥಾನಮಾನ ಪಡೆದಿರಬೇಕು.
ಈ ಚಿತ್ಪಾವನ ಯಾರೆಂದು ಗೊತ್ತಿರಬೇಕು.!
         ಮೂರನೇಯದು ಸುಮಾರು ೨೫೦ ವರ್ಷಗಳ ಹಿಂದೆ ಬಂದ ’ಬಗ್ದಾದಿ ಜ್ಯೂ’ಗಳದ್ದು. ೧೭೩೦ರ ಸುಮಾರಿಗೆ ಇರಾಕಿನಿಂದ ಭಾರತಕ್ಕೆ ಬಂದ ಜೋಸೆಫ್ ಸೆಮಾ ಮತ್ತು ಶಾಲೋಮ್ ಕೊಹೆನ್ ಎಂಬ ವ್ಯಾಪಾರಿಗಳ ಸಹಾಯದಿಂದ ಇಲ್ಲಿ ನೆಲೆಸಿದ ಇವರ ಮುಖ್ಯಕೇಂದ್ರ ಕಲ್ಕತ್ತ. ಬ್ರಿಟಿಷರ ಕಾಲದಲ್ಲಿ ಇವರಿಂದ ನಡೆಸಲ್ಪಟ್ಟ ಶಾಲೆಗಳು, ಆಸ್ಪತ್ರೆ, ಸಂಘಸಂಸ್ಥೆಗಳು ಇಂದಿಗೂ ಹೆಸರುವಾಸಿಯಾಗಿವೆ. ಹಿಬ್ರೂ ಭಾಷೆಗೆ ಭಾಷಾಂತರಕ್ಕಾಗಿ ಇವರಿಂದ ಶುರುವಾದ ಒಂದು ಪ್ರಿಂಟಿಂಗ್ ಪ್ರೆಸ್ ಇವತ್ತಿಗೂ ಕಲ್ಕತ್ತದಲ್ಲಿದೆ. ಸ್ವಾತಂತ್ರ್ಯಪೂರ್ವ ಕನಿಷ್ಟ ನಾಲ್ಕೈದು ಪ್ರಿಂಟಿಂಗ್ ಪ್ರೆಸ್ಸುಗಳು ಕಲ್ಕತ್ತದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಮೇವಾಸ್ಸರ್, ಪೇರಾ, ಮಗ್ಗಿಡ್ ಮಯ್‌ಶಾರಿಮ್, ಶೋಶಾನ್ನಾಹ್ ಎಂಬ ನಾಲ್ಕು ಹಿಬ್ರೂ ವಾರಪತ್ರಿಕೆಗಳೂ ಕಲ್ಕತ್ತದಿಂದ ಹೊರಡುತ್ತಿದ್ದವು. ಭಾರತದ ಮೊದಲ ಮಿಸ್ ಇಂಡಿಯಾ, ಹಿಂದಿ ಚಿತ್ರರಂಗದ ಮೊದಲ ಮಹಿಳಾ ನಿರ್ಮಾಪಕಿ ಎಂಬ ಖ್ಯಾತಿಯ ಈಸ್ತರ್ ವಿಕ್ಟೋರಿಯಾ ಅಬ್ರಹಾಮ್ ಇದೇ ಕಲ್ಕತ್ತದ ಬಾಗ್ದಾದಿ ಯಹೂದಿ ಸಮುದಾಯಕ್ಕೆ ಸೇರಿದವಳು. ತೆರೆಯ ಮೇಲೆ ಪ್ರಮಿಳಾ ಎಂಬ ಹೆಸರಿನಿಂದ ಪ್ರಸಿದ್ಧಗೊಂಡ ಇವಳ ಮುಖಪರಿಚಯ ಹಳೆಯ ಬ್ಲ್ಯಾಕ್ ಎಂಡ್ ವೈಟ್ ಚಿತ್ರಪ್ರಿಯರಿಗೆ ಇರಲೇ ಬೇಕು. ಈಕೆಯ ಮಗಳು ನಕಿ ಜಹಾನ್ ಕೂಡ ೧೯೬೭ರಲ್ಲಿ ಮಿಸ್ ಇಂಡಿಯಾ ಆಗಿ ಆಯ್ಕೆಗೊಂಡಿದ್ದಳು. ಮಿಸ್ ಇಂಡಿಯಾ ಪಟ್ಟ ಪಡೆದ ಏಕೈಕ ತಾಯಿ-ಮಗಳ ಜೋಡಿ ಇದು. ಹಿಂದಿ ಚಿತ್ರನಟ, ಜೋಧಾ ಅಕ್ಬರದಂಥ ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ ಹೈದರ್ ಅಲಿ ಇವಳ ಮಗ. ಪಾಕಿಸ್ತಾನದ ಮೇಲೆ ದಾಳಿ ಮಾಡಿ ಬಾಂಗ್ಲಾ ವಿಮೋಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸೇನಾ ಪ್ರಮುಖ ಲೆಫ್ಟಿನೆಂಟ್ ಜನರಲ್ ಜಕ್ಕಾ ಜಾಕೋಬ್(ಇವರ ಬಗ್ಗೆ ಸಂತೋಷ ತಮ್ಮಯ್ಯ ಬರೆದ ಲೇಖನವೊಂದು ಇಲ್ಲಿದೆ https://santoshthammaiah.wordpress.com/2016/04/01/%E0%B2%87%E0%B2%B8%E0%B3%8D%E0%B2%B0%E0%B3%87%E0%B2%B2%E0%B3%8D-%E0%B2%86%E0%B2%B0%E0%B3%8D%E0%B2%AE%E0%B2%BF-%E0%B2%95%E0%B2%B0%E0%B3%86%E0%B2%A6%E0%B2%B0%E0%B3%82-%E0%B2%A8%E0%B2%A8%E0%B3%8D/), ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಸುಲೋಚನಾ ಉರುಫ್ ರೂಬಿ ಮೇಯರ್ಸ್ ಸೇರಿ ಹಲವು ಖ್ಯಾತನಾಮರು ಇದೇ ಬಗ್ದಾದಿ ಜೂಗಳು. ಈವರೆಗೆ ಮಿಸ್ ಇಂಡಿಯಾ ಪಟ್ಟವನ್ನು ಮುಡಿಗೇರಿಸಿಕೊಂಡವರಲ್ಲಿ ನಾಲ್ವರು ಈ ಸಮುದಾಯದವರೇ.
ಈಸ್ತರ್ ವಿಕ್ಟೋರಿಯಾ ಅಬ್ರಹಾಮ್

         ಸುಮಾರು ಮೂವತ್ತು ನಲವತ್ತು ವರ್ಷಗಳೀಚೆಗೆ ಇನ್ನೆರಡು ಪಂಗಡಗಳು ತಮ್ಮ ಯಹೂದಿಮೂಲವನ್ನು ಗುರುತಿಸಿಕೊಂಡಿವೆ. ಅವುಗಳಲ್ಲಿ ಒಂದು ’ಬೆನೆ ಮೆನಾಶೆ’ ಅಥವಾ ಕಲ್ಕತ್ತಾ ಜೂಗಳು. ಕಲ್ಕತ್ತ ಹಾಗೂ ಪೂರ್ವಭಾರತದಲ್ಲಿ ಕಂಡುಬರುವ ಇರುವ ಇನ್ನೊಂದು ಯಹೂದಿಗಳ ಪಂಗಡವಿದು. ಮತ್ತೊಂದು ಆಂಧ್ರದಲ್ಲಿ ’ಬೆನೆ ಎಫ್ರೆಮ್’ ಅಥವಾ ತೆಲುಗು ಜೂಗಳು. ಹಿಟ್ಲರನ ಕಾಲದಲ್ಲಿ ಜರ್ಮನಿಯಿಂದ ಓಡಿಬಂದ ಕೆಲ ಯಹೂದಿಗಳೂ ಭಾರತದಲ್ಲಿದ್ದಾರೆ. ಆದರೆ ಹೆಮ್ಮೆಯ ವಿಷಯವೆಂದರೆ ಹಾಗೆ ಬಂದವರು ತಮ್ಮ ಮೂಲ ಗುರುತುಗಳನ್ನಿಟ್ಟುಕೊಂಡೇ ನಮ್ಮಲ್ಲಿ ಒಂದಾಗಿ ಹೋದರು. ಯಹೂದಿಗಳು ನೆಲೆಸಿರುವ ೧೪೮ ರಾಷ್ಟ್ರಗಳಲ್ಲಿ ಅವರ ಮೇಲೆ, ಅವರ ನಂಬಿಕೆಯ ಮೇಲೆ, ಅವರ ಶ್ರದ್ಧಾಕೇಂದ್ರಗಳ ಮೇಲೆ ದಾಳಿಯಾಗದ ಏಕೈಕ ದೇಶ ಭಾರತ ಮತ್ತು ಭಾರತವೊಂದೇ. ಅದಕ್ಕೂ ಮೀರಿದ ಪರಿಭಾಷೆ ಇಲ್ಲಿನ ಸೆಕ್ಯುಲರಿಸಮ್ಮಿಗೆ ಸಿಗುವುದು ಊಹೂಂ ಸಾಧ್ಯವೇ ಇಲ್ಲ.
        ಇಲ್ಲಿ ಬಂದ ಯಹೂದಿಗಳೆಲ್ಲ ಹಾಗೆ ನೋಡಿದರೆ ಒಟ್ಟಾಗಿ ಆಗಮಿಸಿದವರೇನು ಅಲ್ಲ. ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ಕಾರಣಗಳಿಂದ ಇಲ್ಲಿ ಬಂದು ನೆಲೆಸಿದವರು. ಕೇರಳದಲ್ಲೂ ಕೂಡ ಸೊಲೋಮನ್ ರಾಜನ ಕಾಲದಲ್ಲಿ ಬಂದವರು ’ಮೆಯೂಹಾಸ್ಸಿಮ್’ ಅಥವಾ ’ಮಲಬಾರಿ ಜೂ’ಗಳೆಂದು ಕರೆಯಲ್ಪಡುತ್ತಾರೆ. ಭಾರತಕ್ಕೆ ಬಂದ ಅತಿ ಹಳೆಯ ಯಹೂದಿ ಪಂಗಡವಿದು. ಕೇರಳದ ಯಹೂದಿಗಳಲ್ಲಿ ಸುಮಾರು ೮೦% ಈ ಮಲಬಾರಿ ಜ್ಯೂಗಳೇ. ಯುರೋಪ್, ಈಜಿಪ್ಟ್, ಸಿರಿಯಾದ ಸುತ್ತಲಿಂದ ವಲಸೆ ಬಂದ ಎರಡನೇ ಪಂಗಡಕ್ಕೆ ’ಪರದೇಸಿ ಜ್ಯೂ’ಗಳೆಂದು ಹೆಸರು. ’ಮೇಶುಹರಾರಿಮ್’ ಎಂಬ ಇನ್ನೊಂದು ಅತಿಸಣ್ಣ ಗುಂಪನ್ನು ಮೊದಲೆರಡು ಪಂಗಡಗಳು ಕರೆತಂದ ಗುಲಾಮರೆಂದು ಭಾವಿಸಲಾಗುತ್ತದೆ. ಇವರ ಚರ್ಮದ ಬಣ್ಣದ ಮೇಲೆ ಪರದೇಸಿಗಳನ್ನು ಬಿಳು ಜ್ಯೂಗಳೆಂದೂ, ಮಲಬಾರಿಗಳನ್ನು ಕರಿ ಜ್ಯೂಗಳೆಂದೂ, ಮೇಶುಹರಾರಿಮ್ಮರನ್ನು ಕಂದು ಜ್ಯೂಗಳೆಂದೂ ಕರೆಯಲಾಗುತ್ತದೆ. ಜಾತಿ ಆಧಾರದಲ್ಲಿ, ಚರ್ಮದ ಬಣ್ಣದ ಆಧಾರದಲ್ಲಿ ನಮ್ಮ ಜನರನ್ನು ಒಡೆದಾಳುವುದು ಬಹುಸುಲಭ. ತಮ್ಮ ಚರ್ಮದ ಬಣ್ಣ ಮತ್ತು ಐರೋಪ್ಯ ಮೂಲದ ಕಾರಣದಿಂದಲೇ ಪರದೇಸಿ ಜ್ಯೂಗಳು ನಂತರ ಬಂದವರಾದರೂ ಮಲಬಾರಿಗಳನ್ನು ಬದಿಗೆ ಸರಿಸಿ ಬ್ರಿಟಿಷ್ ಆಳ್ವಿಕೆಯಲ್ಲಿ ಅಚ್ಚರಿಪಡುವಷ್ಟು ಪ್ರವರ್ಧಮಾನಕ್ಕೆ ಬಂದರು. ಅದೇ ಕಾರಣಕ್ಕಿರಬೇಕು. ಪರದೇಸಿಗಳಿಗೆ ಸಿಕ್ಕ ಅಗತ್ಯಕ್ಕಿಂತ ಜಾಸ್ತಿ ಮನ್ನಣೆಯಿಂದ ಮಲಬಾರಿ ಜ್ಯೂಗಳು ಇಂದಿಗೂ ಅಜ್ಞಾತರಾಗಿಯೇ ಉಳಿದುಹೋಗಿದ್ದಾರೆ. ಭಾರತದಲ್ಲಿ ಪಾರ್ಸಿಗಳಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ನೈಜ ಅಲ್ಪಸಂಖ್ಯಾತ ಜನಾಂಗವಿದು. ಒಂದು ಕಾಲದಲ್ಲಿ ಕೇರಳವೊಂದರಲ್ಲೇ ಸಾವಿರ ಸಾವಿರ ಸಂಖ್ಯೆಯಲ್ಲಿದ್ದವರು ಇಂದು ಬೆರಳೆಣಿಕೆಯಷ್ಟು ಉಳಿದುಕೊಂಡಿದ್ದಾರೆ.
       ಎಲ್ಲ ಯಹೂದಿಗಳೂ ಜೆರುಸಲೇಮನ್ನು ಪವಿತ್ರ ಭೂಮಿಯೆಂದು ಭಾವಿಸುತ್ತಾರೆ. ಇಸ್ರೇಲಿನ ಹುಟ್ಟಿಗೂ ಅದೇ ಕಾರಣ. ಕೊಚ್ಚಿ ಅವರ ಪಾಲಿಗೆ ಪುಟ್ಟ ಜೆರುಸಲೇಮ್ ಆಗಿತ್ತು. ಹಾಗಿದ್ದರೂ ಇನ್ನೊಂದು ದೊಡ್ಡ ಜೆರುಸಲೇಮ್ ಅವರ ಬರುವಿಕೆಗೆ ಕಾಯುತ್ತಿತ್ತು. ಅದೂ ಅಲ್ಲದೇ ಮಲಬಾರಿ ಹಾಗೂ ಪರದೇಸಿ ಜ್ಯೂಗಳ ಮಧ್ಯದ ಅಸಮಾಧಾನ ತುಂಬ ಕಾಲದ ಹಿಂದಿನದ್ದು. ಕೇರಳದಂಥ ಸುಭಿಕ್ಷ ನಾಡಿಗೆ ಬ್ರಿಟಿಷರು ಬಂದನಂತರವಂತೂ ಸಾಮಾಜಿಕ, ಆರ್ಥಿಕ ಬದಲಾವಣೆಗಳು ಬಹಳ ವೇಗವಾಗಿ ಘಟಿಸಿದವು. ಇಂಗ್ಲೀಷ್ ಶಿಕ್ಷಣ ಎರಡೂ ಸಮುದಾಯಗಳ ಮಧ್ಯದ ಅಂತರವನ್ನು ಬಹಳಷ್ಟು ಕಡಿಮೆ ಮಾಡಿದ್ದು ಪರದೇಸಿ ಜ್ಯೂಗಳಿಗೆ ಹಿಡಿಸದಿದ್ದುದು ಮೊದಲ ಕಾರಣವಾದರೆ. ಡಚ್ಚರು ಬ್ರಿಟಿಷರ ಕೈಯಲ್ಲಿ ಸೋತ ನಂತರ ಡಚ್ಚರ ಜೊತೆ ಆಪ್ತಸಂಬಂಧ ಹೊಂದಿದ್ದ  ಪರದೇಸಿಗಳಿಗೆ ಸಮಸ್ಯೆ ತಂದೊಡ್ಡಿದ್ದು ಎರಡನೇ ಕಾರಣ. ಅದೂ ಅಲ್ಲದೇ ಹತ್ತೊಂಬತ್ತನೇ ಶತಮಾನದ ದ್ವಿತೀಯಾರ್ಧದ ನಂತರ ಕೊಚ್ಚಿಯಲ್ಲಿ ಕೇಂದ್ರಿತವಾಗಿದ್ದ ವ್ಯಾಪಾರದ ಪವರ್ ಸೆಂಟರ್ ಕಲ್ಕತ್ತ, ಬಾಂಬೆ, ಮದ್ರಾಸುಗಳಿಗೂ ವಿಕೇಂದ್ರೀಕರಣಗೊಂಡಿದ್ದರಿಂದ ವ್ಯಾಪಾರ ವ್ಯವಹಾರಗಳಲ್ಲಿ ಗುಜರಾತಿಗಳಿಗಿಂತ ಒಂದು ಕೈ ಜೋರಾಗಿದ್ದ ಯಹೂದಿಗಳು ಅಲ್ಲೆಲ್ಲ ಸ್ಥಳಾಂತರಗೊಂಡರು. ಇದು ಇನ್ನೊಂದು ಸಮಸ್ಯೆಯನ್ನು ಹುಟ್ಟುಹಾಕಿತು. ತಮ್ಮ ನೆಲೆಯನ್ನು ಬಿಟ್ಟು ಅಪರಿಚಿತ ಊರಿಗೆ ವ್ಯಾಪಾರಕ್ಕೆ ಹೋದವರು ವ್ಯಾಪಾರದಲ್ಲಿ ಅಲ್ಲಿನ ಮೂಲನಿವಾಸಿಗಳ ಪ್ರತಿರೋಧ ಎದುರಿಸಬೇಕಾಯ್ತು. ಡಚ್ಚರ ಪತನಾನಂತರ ಬ್ರಿಟಿಷರ ಸಹಾಯವೂ ಅವರಿಗೆ ಸಿಗಲಿಲ್ಲ. ಫ್ಯೂಡಲಿಸ್ಟಿಕ್ ವ್ಯವಸ್ಥೆ ಬಿದ್ದು ಹೋದ ನಂತರ ಆರ್ಥಿಕ ಅಡಚಣೆಗಳೂ ಜೋರಾದವು. ಕೇರಳದಲ್ಲಿ ಎದುರಾದ ಸಮಸ್ಯೆ ಇನ್ನೊಂದು ತೆರನದ್ದು. ಕೊಚ್ಚಿಯ ರಾಜಾಶ್ರಯದಲ್ಲಿ ಕೊಚಿನ್ ಎಲೆಕ್ಟ್ರಿಕ್ ಕಂಪನಿಯನ್ನು ಶುರುಮಾಡಿದ ಸ್ಯಾಮ್ಯುಯೆಲ್ ಕೋಡರ್ ಒಬ್ಬ ಯಹೂದಿ. ಮಟ್ಟಂಚೇರಿ ಹಾಗೂ ಕೊಚ್ಚಿ ನಗರಗಳಿಗೆ ಕರೆಂಟ್ ಉತ್ಪಾದಿಸುವ ವ್ಯವಸ್ಥೆ ಹೊಂದಿದ್ದ ಇದು ಮಲಬಾರಿನಲ್ಲಿ ಯಹೂದಿಗಳಿಗೆ ಉದ್ಯೋಗ ಜೊತೆಗೆ ಪ್ರತಿಷ್ಟೆಯನ್ನೂ ಒದಗಿಸಿಕೊಟ್ಟಿತ್ತು. ಇದಕ್ಕೆ ಪೆಟ್ಟು ಬಿದ್ದಿದ್ದು ಭಾರತ ಸರ್ಕಾರದ ಉದ್ಯಮಗಳ ರಾಷ್ಟ್ರೀಕರಣ ನೀತಿ. ಯಹೂದಿಗಳ ಕೈಯಲ್ಲೇ ಇದ್ದ ಕೊಚ್ಚಿನ್ ಬಂದರಿನ ಫೆರ್ರಿ ಏಕಸ್ವಾಮ್ಯವೂ ಕೈತಪ್ಪಿತು. ಕೇರಳದ ಭೂಸುಧಾರಣಾ ಕಾಯ್ದೆ ಯಹೂದಿಗಳ ಕೈಯಲ್ಲಿದ್ದ ಭೂಮಿಯನ್ನೂ ಕಿತ್ತುಕೊಂಡಿತು. ಕಡಿಮೆಯಾಗುತ್ತಿದ್ದ ಜನಸಂಖ್ಯೆಯಿಂದ ಸೃಷ್ಟಿಯಾದ ವಧುವರರ ಅಭಾವ, ತೆಕ್ಕುಂಬಾಗಂ ಜೂದಪಳ್ಳಿಯ ಶಾಪದ ಅಜ್ಜಿಕಥೆಗಳೆಲ್ಲ ಸೇರಿಕೊಂಡು ಕೇರಳದ ಯಹೂದಿಗಳಿಗೆ ಇಲ್ಲಿಯೇ ನೆಲೆಸುವ ಕುರಿತು ಪುನರಾಲೋಚನೆ ನಡೆಸುವಂತೆ ಮಾಡಿದವು. ಹಿಟ್ಲರಿನ ಹೊಲೋಕಾಸ್ಟಿನ ನಂತರ ವಿಶ್ವಾದ್ಯಂತ ಯಹೂದಿಗಳ ಪರವಾಗಿ ಎದ್ದ ಅನುಕಂಪದ ಅಲೆ, ಜೆರಸಲೇಮಿನತ್ತ ಯಹೂದಿಗಳಿಗಿದ್ದ ಧಾರ್ಮಿಕ ಬಾಂಧವ್ಯ, ಇಂಗ್ಲೆಂಡಿನ ಸಹಾಯ, ಪ್ರಪಂಚದ ಅತಿ ಬುದ್ಧಿವಂತ ಪಂಗಡವೆನಿಸಿಕೊಂಡ ಯಹೂದಿಗಳ ಅದಮ್ಯ ಇಚ್ಛಾಶಕ್ತಿ, ಅಮೇರಿಕದ ರಾಜಕೀಯ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅವರಿಗಿದ್ದ ಹಿಡಿತ ಇವೆಲ್ಲವೂ ಸೇರಿ ಇಸ್ರೇಲ್ ಎಂಬ ಹೊಸ ದೇಶದ ಉದಯಕ್ಕೆ ನಾಂದಿ ಹಾಡಿದವು. ಯಾವತ್ತು ಇಸ್ರೇಲ್ ಎಂಬ ಯಹೂದಿಗಳ ಸ್ವಂತ ದೇಶವೊಂದು ಜನ್ಮತಾಳಿತೋ, ಅಲ್ಲಿನ ಸರ್ಕಾರ ಪ್ರಪಂಚದ ಮೂಲೆಮೂಲೆಗಳಿಂದ ಯಹೂದಿಗಳನ್ನು ಕೈಬೀಸಿ ಕರೆಯಲಾರಂಭಿಸಿತು. ಕೈಬೀಸಿ ಕರೆಯುವುದೇನು, ಯಹೂದಿಯೊಬ್ಬ ಜಗತ್ತಿನ ಯಾವ ಭಾಗದಲ್ಲಿದ್ದರೂ ಹೆಕ್ಕಿಹೆಕ್ಕಿ ತನ್ನತ್ತ ಸೆಳೆದುಕೊಳ್ಳಲು ಉತ್ಸುಕವಾಗಿತ್ತು. ವಿಶ್ವಾದ್ಯಂತ ಯಹೂದಿಗಳೆಲ್ಲ ಇಸ್ರೇಲಿನತ್ತ ಮುಖ ಮಾಡಿದರು. ಮೂಲದೆಡೆಗಿನ ಅವರ ವಲಸೆ ’ಆಲಿಯಾಹ್’ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಶುರುವಾಯ್ತು. ಕೇರಳದ ಯಹೂದಿಗಳೂ ಇಸ್ರೇಲಿನ ಸೆಳೆತದಿಂದ ಹೊರತಾಗಲಿಲ್ಲ. ಡಾ. ಇಮ್ಯಾನುವೆಲ್ ಓಲ್ಸ್‌ವ್ಯಾಂಗರ್ ಎಂಬ ಇಸ್ರೇಲಿ ರಾಜತಾಂತ್ರಿಕ ಕೇರಳದ ವಿವಿಧ ಭಾಗಗಳಿಗೆ ಭೇಟಿ ನೀಡಿ ’ಝಿಯೋನಿಸಂ’ನ(ಯಹೂದಿಗಳ ಪ್ರತ್ಯೇಕ ದೇಶ, ರಕ್ಷಣೆ ಹಾಗೂ ಪುನರ್ಮಿಲನದ ಚಳುವಳಿ) ಬಗ್ಗೆ ವ್ಯಾಪಕ ಪ್ರಚಾರ ಕೈಗೊಂಡ.   ಕೇರಳದ ಜ್ಯೂಗಳ ಮುಖಂಡ, ಯಹೂದಿ ಗಾಂಧಿಯೆಂದು ಪ್ರಖ್ಯಾತರಾಗಿದ್ದ ಎ.ಬಿ.ಸಲೆಂ ಹಾಗೂ ಇಸ್ರೇಲಿ ಪ್ರಧಾನಿ ಬೆನ್ ಗುರಿಯನ್‌ರ ನಡುವೆ ನಡೆದ ಒಪ್ಪಂದದ ಪ್ರಕಾರ ಮೊದಲ ಹಂತದಲ್ಲಿ ಏಳು ಸಾವಿರ ಜನ ಇಸ್ರೇಲಿಗೆ ಹೊರಟು ನಿಂತರು (ಕೊಚ್ಚಿಯ ರಸ್ತೆಯೊಂದಕ್ಕೆ ಎ.ಬಿ.ಸಲೇಂರ ಹೆಸರಿಡಲಾಗಿದೆ. ದುರಂತವೆಂದರೆ ಅದು ಸ್ಥಳೀಯರ ಬಾಯಲ್ಲಿ ಇವತ್ತು ಆಗಿರುವುದ್ ಅಬು ಸಲೇಂ ರೋಡ್.). ಅದಾದ ನಂತರ ೫೦ರ ದಶಕದಿಂದ ೭೦ರ ದಶಕದವರೆಗೆ ನಡೆದ ’ಆಲಿಯಾಹ್’ದ ಪರಿಣಾಮವಾಗಿ ಕೇರಳದ ೯೦%ದಷ್ಟು ಯಹೂದಿಗಳು ಇಸ್ರೇಲಿನತ್ತ ಮುಖಮಾಡಿದರು. ಭಾರತದ ಬೇರೆ ಬೇರೆ ಕಡೆಗಳಲ್ಲಿರುವವರೂ ಇದರಿಂದ ಹೊರತಾಗಲಿಲ್ಲ. ಒಂದು ಕಾಲದಲ್ಲಿ ಲಕ್ಷದಷ್ಟಿದ್ದ ಯಹೂದಿಗಳ ಸಂಖ್ಯೆ ಇಂದು ಬರಿ ಮೂರು ಸಾವಿರಕ್ಕೆ ಕುಸಿದಿದೆ. ಕೇರಳದ ಜ್ಯೂಗಳ ಒಂದು ಕಾಲದ ಪ್ರಧಾನಕೇಂದ್ರ ಕೊಚ್ಚಿನಿನ ಮಟ್ಟಂಚೇರಿಯಲ್ಲಿ ಇಂದು ಉಳಿದುಕೊಂಡ ಯಹೂದಿಗಳ ಸಂಖ್ಯೆ ಕೇವಲ ಇಪ್ಪತ್ತೇಳು. ಜನಸಂಖ್ಯೆಯಲ್ಲಿ ಭಾರತದಲ್ಲಿ ಪಾರ್ಸಿಗಳಿಗಿಂತ ಕೆಳಗಿರುವವರಿವರು. ಏಳೆಂಟು ರಾಜ್ಯಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವವರೆಲ್ಲ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿ ಆರಾಮವಾಗಿರುವಾಗ ಮೂರುಸಾವಿರ ವೋಟುಗಳಿರುವ ಯಹೂದಿಗಳತ್ತ ನಮ್ಮ ಸರ್ಕಾರದ ಗಮನ ಹರಿಯಬಹುದೆಂದುಕೊಳ್ಳುವುದು ಭ್ರಮೆಯೇ ಸರಿ. ಅದೊಂದು ಪಂಗಡ ಭಾರತದಿಂದ ಕಣ್ಮರೆಯಾಗಿ ಹೋಗುವುದರೊಳಗೆ ಅವರ ಅವಶೇಷಗಳನ್ನು, ಸ್ಮಾರಕಗಳನ್ನು, ನೆನಪುಗಳನ್ನು ರಕ್ಷಿಸಿಡುವುದು ಮಾತ್ರ ಈಗ ತುರ್ತಾಗಿ ಆಗಬೇಕಿರುವ ಕೆಲಸ.

ಎ.ಬಿ.ಸಲೇಂ ರಸ್ತೆ, ಕೊಚ್ಚಿ

ಕೊನೆ ಹನಿ: ಧಾರವಾಡದ ಕೃಷಿ ವಿಶ್ವವಿದ್ಯಾನಿಲಯದ ಆವರಣ ಹತ್ತಿರ ಒಂದು ಸಣ್ಣ ಪಾಳು ಬಿದ್ಧ ಕಂಪೌಂಡಿನಲ್ಲಿ ಯಹೂದಿ ರುದ್ರಭೂಮಿಯಿದೆ. ಅಲ್ಲಿ ಭಗ್ನಾವಶೇಷಗಳಲ್ಲುಳಿದುಕೊಂಡ ೧೮೭೨ರಿಂದ ೧೯೫೭ರವರೆಗಿನ ಕನಿಷ್ಟ ೨೦ ಯಹೂದಿಗಳ ಸಮಾಧಿಗಳಿವೆ. ಹೆಚ್ಚಿನವೆಲ್ಲ ಕಾಲನ ಹೊಡೆತಕ್ಕೆ ಸಿಕ್ಕು ನಾಶವಾಗಿದ್ದರೂ ಮೂರ್ನಾಲ್ಕು ಇಂದಿಗೂ ಸುಸ್ಥಿತಿಯಲ್ಲಿವೆ. ಸುಬೇದಾರ್ ಮೇಜರ್ ಹುಸ್ಕೇಲ್ಜಿ ಬಾಪೂಜಿ ಬಹಾದೂರ್, ಶಾಲೋಮ್ ಎಲಿಜಾ ವಾಲ್ವಟ್ಕರ್ ಇತ್ಯಾದಿ ಹೆಸರುಗಳು, ಹಿಬ್ರೂವಿನಲ್ಲಿ ಕೆತ್ತಿದ ಸಂದೇಶಗಳನ್ನು ಅವುಗಳಲ್ಲಿ ಕಾಣಬಹುದು. ಒಂದೆರಡು ಉದಾಹರಣೆಗಳನ್ನು ಹೊರತುಪಡಿಸಿ ಕರ್ನಾಟಕದಲ್ಲಿ ಬೇರೆಲ್ಲೂ ಯಹೂದಿಗಳ ಕುರುಹು ಕಾಣಸಿಗುವುದು ಕಡಿಮೆ. ಧಾರವಾಡದಲ್ಲಿ ಒಂದು ಕಾಲಕ್ಕೆ ಯಹೂದಿಗಳು ತುಂಬ ಸಂಖ್ಯೆಯಲ್ಲಿದ್ದಿರಬಹುದೇ? ಯಾರಾದರೂ ಆಸಕ್ತರು ಹುಡುಕಿದರೆ ಇನ್ನಷ್ಟು ಮಾಹಿತಿ ಸಿಗಬಹುದೇನೋ!

Wednesday, September 7, 2016

ಮಾಪಿಳ್ಳೆಗಳ ದೇಶವಿರೋಧಿ ನೀತಿ ಇಂದುನಿನ್ನೆಯದಲ್ಲ...!!!

       
       
       ವಾರದ ಹಿಂದೆ ಪ್ರತಾಪ್ ಸಿಂಹ ಕಳೆದ ಮಲಬಾರಿ ಮಾಪಿಳ್ಳೆಗಳ ಬಗೆಗಿನ ಲೇಖನ ಕಲ್ಕತ್ತದ ಮಧ್ಯೆ ಹುದುಗಿ ಹೋಗಿದ್ದ ನನ್ನನ್ನು ಸುಮಾರು ಸಮಯದ ನಂತರ ಮತ್ತೆ  ಕೇರಳದ ಬಗ್ಗೆ ಚಿಂತಿಸುವಂತೆ ಮಾಡಿತು. ನನ್ನಲ್ಲಿ ಅದೆಷ್ಟೋ ಬೆರಗು, ಕುತೂಹಲಗಳನ್ನು ಹುಟ್ಟುಹಾಕಿದ ನಾಡದು. ಅದರ ಸೊಬಗು ನೈಸರ್ಗಿಕವಾಗಿ ಎಷ್ಟು ಅಪೂರ್ವವೋ ಅದರ ಸಾಂಸ್ಕೃತಿಕವಾಗಿ ಅಷ್ಟೇ ಅನೂಹ್ಯ. ಮತ್ತೆಲ್ಲೂ ಕಾಣದ ಕೌತುಕಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡು ಮೊಗೆದಷ್ಟೂ ಮಿಗಿಯುವ ಕುತೂಹಲಗಳನ್ನು ಅದು ಹುಟ್ಟು ಹಾಕುವ ರೀತಿಯೇ ಅಕಲ್ಪನೀಯ. ಶುದ್ಧ ಸಹಜ ಜಾತ್ಯತೀತತೆಯನ್ನೂ, ಜಾತ್ಯಂಧತೆಯನ್ನೂ, ಕೋಮು ಸಾಮರಸ್ಯವನ್ನೂ, ಸಂಘರ್ಷವನ್ನೂ ಒಟ್ಟೊಟ್ಟಿಗೆ ತನ್ನೊಳಗೆ ಕಾಪಾಡಿಕೊಂಡು ಬಂದ ಅದರ ರೀತಿಯೇ ವಿಚಿತ್ರ. ಬರೋಬ್ಬರಿ ಎರಡೂವರೆ ಸಾವಿರ ವರ್ಷಗಳ ಹಿಂದೆ ಕ್ರಿ.ಪೂ ೫೮೭ರಲ್ಲಿ ಹಳೆಯ ಜೆರುಸಲೇಮಿನಲ್ಲಿನ ಮೊದಲನೇ ಸೊಲೋಮನ್ನಿನ ಪವಿತ್ರ ದೇವಾಲಯ ಶತ್ರುಗಳಿಂದ ನಾಶವಾದಾಗ ಅಲ್ಲಿಂದ ಯಹೂದಿ(Jews)ಗಳ ಗುಂಪೊಂದು ಆಶ್ರಯವರಸಿ ಬಂದಿದ್ದು ಕೇರಳಕ್ಕೆ. ಕ್ರಿ.ಶ ೭೦ರಲ್ಲಿ ರೋಮನ್ನರ ದಾಳಿಗೆ ಅವರ ಎರಡನೇ ದೇವಾಲಯವೂ ನಾಶವಾದಾಗ ಇನ್ನೊಂದಿಷ್ಟು ಯಹೂದಿಗಳು ಕೇರಳದತ್ತ ಮುಖ ಮಾಡಿದರು. ಇವತ್ತು ಇಡೀ ಭೂಮಂಡಲದಲ್ಲಿ ಎಲ್ಲಿಯಾದರೂ ಯಹೂದಿಗಳ ಪೂಜಾಸ್ಥಳ ಒಡೆದಿಲ್ಲವಾದರೆ, ಎಲ್ಲಿಯಾದರೂ ಯಹೂದಿಗಳ ಮೇಲೆ ಆಕ್ರಮಣವಾಗಿಲ್ಲವಾದರೆ, ಎಲ್ಲಿಯಾದರೂ ಯಹೂದಿಗಳು ಬಾಳ್ವೆಗೆ ಭಂಗ ಬಾರದೇ ಹೋಗಿದ್ದರೆ ಅದು ಕೇರಳ ಮತ್ತು ಕೇರಳದಲ್ಲಿ ಮಾತ್ರ. ಇದಾದ ನಂತರ ಹದಿನೈದು ಹದಿನಾರನೇ ಶತಮಾನದಲ್ಲಿ ಸ್ಪೇನ್ ಮತ್ತು ಪೋರ್ಚುಗಲ್ಲಿನಿಂದ ಹೊರದಬ್ಬಲ್ಪಟ್ಟ ಯಹೂದಿಗಳೂ ಕೇರಳಕ್ಕೆ ಆಶ್ರಯವರಸಿ ಬಂದರು. ಕೇರಳದಲ್ಲಿ ಇವರಿಗೆ ಇಂದಿಗೂ ಪರದೇಸಿ ಜ್ಯೂಗಳು ಎಂದೇ ಹೆಸರು. ಇವರಿಗಿಂತ ಹಿಂದಿದ್ದ ಜ್ಯೂಗಳನ್ನು ಕರಿ ಜ್ಯೂಗಳು ಎಂದರೆ, ಹೊಸಬರನ್ನು ಬಿಳಿ ಜ್ಯೂಗಳು ಎಂದು ಗುರುತಿಸಲಾಗುತ್ತದೆ. ಕೊಚ್ಚಿ ಪ್ರಾಂತ್ಯದ ಪೆರೂರಿನ ಆಸುಪಾಸಿನ ಐದು ಗ್ರಾಮಗಳಲ್ಲಿ ನೆಲೆಸಿದ್ದರಿಂದ ಇಂದು ಸಾಧಾರಣವಾಗಿ ಎಲ್ಲರೂ ಕೊಚ್ಚಿನ್ ಜ್ಯೂಗಳು ಎಂದೇ ಕರೆಯಲ್ಪಡುತ್ತಾರೆ.(ಕೊಚ್ಚಿ ಜ್ಯೂಗಳಿಗೂ, ಕರ್ನಾಟಕದ ಒಂದು ಬುಡಕಟ್ಟಿಗೂ, ಮಹಾರಾಷ್ಟ್ರದ ಒಂದು ಸಮುದಾಯಕ್ಕೂ ಬಿಡಿಸಲಾಗದ ನಂಟಿದೆ. ಮುಂದಿನ ಲೇಖನದಲ್ಲಿ ನೋಡೋಣ). ಇಸ್ರೇಲ್ ಎಂಬ ಯಹೂದ್ಯರ ರಾಷ್ಟ್ರ ಸ್ಥಾಪನೆಯಾಗಿ ಅದು ಕೇರಳವೂ ಸೇರಿ ವಿಶ್ವದ ಯಹೂದ್ಯರನ್ನೆಲ್ಲ ತನ್ನತ್ತ ಸೆಳೆಯತೊಡಗಿದ ನಂತರ ಈಚೆಗೆ ಅವರ ಸಂಖ್ಯೆ ತುಂಬ ಕಡಿಮೆಯಾಗಿದೆ. ಹಾಗಿದ್ದಾಗ್ಯೂ ಭಾರತದಲ್ಲಿ ಯಹೂದಿಗಳ ಅತಿದೊಡ್ಡ ನೆಲೆಗಳಲ್ಲಿ ಕೇರಳವೂ ಒಂದು.
       ಭಾರತಕ್ಕೆ ಮೊತ್ತಮೊದಲು ಕ್ರಿಶ್ಚಿಯಾನಿಟಿ ಕಾಲಿಟ್ಟಿದ್ದೂ ಕೇರಳಕ್ಕೇ. ಕ್ರಿ.ಶ ೫೨ರಲ್ಲಿ ಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಸಂತ ಥಾಮಸ್ ಸಮುದ್ರಮಾರ್ಗವಾಗಿ ಮುಜಿರಿಸ್ ಬಂದರಿಗೆ ಧರ್ಮಪ್ರಚಾರಕ್ಕೆ ಬಂದಿಳಿದ. ಕೇರಳದ ನೆಲಕ್ಕೆ ಕಾಲಿಟ್ಟ ಆತ ಮಾಡಿದ ಮೊದಲ ಕೆಲಸ ೩೨ ಬ್ರಾಹ್ಮಣ ಕುಟುಂಬಗಳನ್ನು ಕ್ರಿಶ್ಚಿಯಾನಿಟಿಗೆ ಮತಾಂತರಿಸಿದ್ದು. ’ತೊಮ್ಮ ಪರ್ವಂ’ ಎಂಬ ಮಲಯಾಳದ ಹಳೆಯ ಸಂತ ಥಾಮಸ್ಸಿನ ಸ್ತುತಿಯ ಪ್ರಕಾರ ಆತ ಭಾರತದಲ್ಲಿ ಮೊದಲು ಕ್ರೈಸ್ತಮತವನ್ನು ಹರಡಿದವ. ನಿಶ್ಚಿತ ಆಧಾರವಿಲ್ಲದಿದ್ದರೂ ತಮಿಳ್ನಾಡಿನಲ್ಲಿ ಕೊಲ್ಲಲ್ಪಡುವಾಗ ಆತನಿಂದ ಮತಾಂತರಗೊಂಡ ಮಲಯಾಳಿಗಳ ಸಂಖ್ಯೆ ಬರೋಬ್ಬರಿ ೧೭೬೫೦ ಎನ್ನಲಾಗುತ್ತದೆ. ಅದರಲ್ಲಿ ಏಳು ಸಾವಿರ ಕೇವಲ ಬ್ರಾಹ್ಮಣರು. ಭಾರತದ ಬೇರೆ ರಾಜ್ಯದಲ್ಲೆಲ್ಲೂ ಇಲ್ಲದ ಸಿರಿಯನ್ ಕ್ರಿಶ್ಚಿಯನ್ನರ ಮೂಲಪುರುಷ ಇದೇ ಥಾಮಸ್. ತ್ರಿಶೂರಿನ ಸಮೀಪದ ಪಲಯೂರಿನಲ್ಲಿ ಥಾಮಸಿನಿಂದ ಮತಾಂತರಗೊಂಡ ಮೊದಲ ಆರು ಬ್ರಾಹ್ಮಣ ಮನೆತನಗಳಾದ ಶಂಕರಪುರಿ, ಮುಲ್ಲಮಂಗಲ, ಪಗಲುಮಟ್ಟಂ, ಪೋವಾದಿ, ಕಳ್ಳಿ ಮತ್ತು ಕಲಿಯಂಕಲ್ ಕ್ರೈಸ್ತರಾದರೂ ಇವತ್ತಿಗೂ ತಮ್ಮ ಬ್ರಾಹ್ಮಣಮೂಲವನ್ನು ಹೆಮ್ಮೆಯಿಂದ ಉಳಿಸಿಕೊಂಡು ಬಂದಿವೆ. ಭಾರತದ ಅತಿ ಪುರಾತನ ಚರ್ಚ್ ಇರುವುದು ಕೂಡ ಇಲ್ಲಿಯೇ. ಹೆಚ್ಚಿನ ಕುಲೀನ ಸಿರಿಯನ್ ಕ್ರಿಶ್ಚಿಯನ್ನರ ಎರಡು ಅದಮ್ಯ ನಂಬಿಕೆಗಳೆಂದರೆ ಅವರು ಮೂಲತಃ ನಂಬೂದಿರಿಗಳೆಂಬುದೊಂದು, ಇನ್ನೊಂದು ಅವರೆಲ್ಲರೂ ಥಾಮಸಿನಿಂದ ಮತಾಂತರಗೊಂಡವರೆಂಬುದು. ಕೇರಳದ ಕ್ರಿಶ್ಚಿಯನ್ ಸಮುದಾಯದಲ್ಲಿ ಈ ಕುಟುಂಬಗಳಿಗೆ ಅತ್ಯುನ್ನತ ಸ್ಥಾನವಿದೆ. ಸಾಂಸ್ಕೃತಿಕವಾಗಿ ಕೇರಳದಲ್ಲಿ ಇವರಿಗೆ ಬ್ರಾಹ್ಮಣ ಸಮುದಾಯಕ್ಕೆ ಸಿಕ್ಕ ಸ್ಥಾನಮಾನಗಳು ಇತಿಹಾಸದುದ್ದಕ್ಕೂ ಲಭಿಸಿವೆ.  ಅದು ಎಷ್ಟರ ಮಟ್ಟಿಗೆಂದರೆ ಸಿರಿಯನ್ ಕ್ರಿಶ್ಚಿಯನ್ನರು ತಮ್ಮ ಮಕ್ಕಳಿಗೂ ಉಪನಯನ ಮಾಡಿಸುವಷ್ಟು. ವಧುವಿಗೆ ತಾಳಿ ಕಟ್ಟುವುದು, ಜಾತಕ, ಸಗೋತ್ರ ವಿವಾಹ ನಿಷೇಧ, ಚರ್ಚುಗಳಲ್ಲಿ ನಂದಾದೀಪ ಬೆಳಗಿಸುವುದು, ಏಸುಯೋಗ, ಮರಿಯಮ್ಮನ ಜಾತ್ರೆ ಥೇಟ್ ಟು ಥೇಟ್ ಸಿರಿಯನ್ನರದ್ದು ಶುದ್ಧ ಹಿಂದೂ ಸಂಪ್ರದಾಯವೇ.
ಯಹೂದಿಗಳನ್ನು ಬರಮಾಡಿಕೊಳ್ಳುತ್ತಿರುವ ಕೇರಳದ ಅರಸ(ಕೊಚಿಯಲ್ಲಿರುವ ಹಳೆಯ ವರ್ಣಚಿತ್ರ)

ಕೊಚ್ಚಿನ್ ಜ್ಯೂ ಕುಟುಂಬ

ಪ್ರಧಾನಿ ಅಭ್ಯರ್ಥಿ ಮೋದಿಯ ಮೊದಲ ಕೇರಳ ಭೇಟಿ ನೆನಪಿರಬೇಕಲ್ಲ

ಸಿರಿಯನ್ ಕ್ರಿಶ್ಚಿಯನ್ನರ ವಿವಾಹ
       ಇನ್ನು ಕೇರಳಕ್ಕೆ ಇಸ್ಲಾಂ ಕಾಲಿಟ್ಟಿದ್ದು ಅದಕ್ಕೂ ದೊಡ್ಡ ಕುತೂಹಲದ ಕಥೆ. ಅದು ಶುರುವಾಗುವುದು ಸಾವಿರದ ಮುನ್ನೂರು ವರ್ಷಗಳ ಹಿಂದೆ ಸುಮಾರು ಕ್ರಿ.ಶ ೬೨೩ರ ಸುಮಾರಿಗೆ. ಕೇರಳವನ್ನಾಳಿದ ಕೊನೆಯ ಚೇರ ಅರಸು ಚೇರಮನ್ ಪೆರುಮಾಳ್ ಅರಬ್ಬಿ ಯಾತ್ರಿಕನೊಬ್ಬನಿಂದ ಮಹಮ್ಮದ್ ಪೈಗಂಬರರ ಬಗ್ಗೆ ಕೇಳಿ ತನ್ನ ರಾಜ್ಯವನ್ನು ಮಕ್ಕಳಿಗೆ ಹಂಚಿ ಮೆಕ್ಕಾದ ಹಡಗು ಹತ್ತಿದ. ಪೈಗಂಬರರನ್ನು ಭೇಟಿಯಾಗಿ ತೌಜ್ ಉಲ್ ಹರೀದ್ ಎಂಬ ಹೊಸ ಹೆಸರಿನೊಂದಿಗೆ ಇಸ್ಲಾಮನ್ನು ಕೇರಳದಲ್ಲಿ ಪಸರಿಸಲು ಪುನಃ ತನ್ನೂರಿನತ್ತ ಪ್ರಯಾಣ ಬೆಳೆಸಿದ, ದಾರಿಮಧ್ಯದಲ್ಲೇ ಆತ ಸತ್ತರೂ, ಅವನ ಸಂದೇಶ ಹೊತ್ತು ಕೇರಳಕ್ಕೆ ಬಂದವ ಪೈಗಂಬರರ ಶಿಷ್ಯ ಮಲಿಕ್ ದಿನಾರ್. ಮುಂದಿನ ಕಥೆ ಹಿಂದೆ ಓದಿದ್ದೇ. ಅರಬ್ಬಿನ ಬಹುಭಾಗಕ್ಕಿಂತ ಮೊದಲೇ ಕೇರಳದ ನೆಲದಲ್ಲಿ ಇಸ್ಲಾಂ ನೆಲೆನಿಂತು ಪಸರಿಸಿತ್ತೆಂಬುದು ಅಲ್ಲಿನ ಮುಸ್ಲೀಮರಿಗೆ ಹರ್ಷದ ಸಂಗತಿಯೇ. ಆದೂಕೂಡ ಪೆರುಮಾಳ ಮತ್ತು ಮುಂದೆ ಝಾಮೋರಿನ್ ಎಂಬ ಇಬ್ಬರು ಹಿಂದೂ ಅರಸರ ಕಾಲದಲ್ಲಿ ಅರಬ್ಬೀ ವರ್ತಕರಿಗೆ ಸಿಕ್ಕ ಸನ್ಮಾನಗಳಿಂದ ಕೇರಳ ಇಸ್ಲಾಂ ಹುಲುಸಾಗಿ ಬೆಳೆಯಲು ಹದಗೊಂಡ ಭೂಮಿಯಾಯಿತು.
       ಕೇರಳ ಯಾವತ್ತೂ ನೇರವಾಗಿ ಇಸ್ಲಾಮಿನ ಆಳ್ವಿಕೆಗೊಳಪಟ್ಟಿದ್ದಿಲ್ಲ. ಕಣ್ಣೂರಿನ ’ಧರ್ಮದಂ’ನನ್ನಾಳಿದ ಸಣ್ಣ ಪಾಳೆಗಾರರಾದ ಅಲಿ ವಂಶದವರು ಮಾತ್ರ ಕೇರಳದ ಇತಿಹಾಸದಲ್ಲಿ ಏಕೈಕ ಮುಸ್ಲಿಂ ಅರಸುಮನೆತನದವರು. ಯಹೂದಿಗಳನ್ನು, ಕ್ರೈಸ್ತರನ್ನೂ ಒಡಲಲ್ಲಿಟ್ಟು ಪೋಷಿಸಿದ ಕೇರಳಿಗರಿಗೆ ಇಸ್ಲಾಂ ದೊಡ್ಡ ಹೊರೆಯೇನೂ ಆಗಿರಲಿಲ್ಲ. ಅವರಿಬ್ಬರಂತೆ ಬಾಂಧವರು ಕೂಡ ಆಗುವರೆಂದು ಅಲ್ಲಿನ ಹಿಂದುಗಳು ನಂಬಿದ್ದರೇನೋ. ಆದರೆ ಹಾಗೆ ನಂಬಿದ ಹಿಂದೂಗಳ ಮೂರ್ಖತನದ ಕಾರಣದಿಂದ ಇಂದು ಕೇರಳದಲ್ಲಿ ಅವರ ಜನಸಂಖ್ಯೆ ೩೦% ದಾಟಿದೆ. ಹಿಂದೂಗಳ ಮೂರ್ಖತನವೆಂದು ಯಾಕೆ ಒತ್ತಿ ಹೇಳುತ್ತಿದ್ದೇನೆಂದರೆ ಕೇರಳವನ್ನಾಳಿದ ಝಾಮೋರಿನ್ ಎಂಬ ಅರಸನಿಗೆ ಕುಂಜಾಳಿ ಮರಕ್ಕರ್ ಎಂಬ ಮೀನುಗಾರ ಸಮುದಾಯದ ಮುಸ್ಲಿಂ ಬಂಟನಿದ್ದ. ಆತ ಪೋರ್ಚುಗೀಸರ ವಿರುದ್ಧ ಜಯಗಳಿಸಿದ್ದನ್ನು ಕಂಡು ಖುಷಿಯಾಗಿ ಜ಼ಾಮೋರಿನ್(ಸಾಮೂದಿರಿ) ರಾಜಾಜ್ಞೆ ಹೊರಡಿಸಿದ್ದನಂತೆ. ಇನ್ನುಮುಂದೆ ರಾಜ್ಯದಲ್ಲಿ ಮೀನುಗಾರ ಸಮುದಾಯ ಪ್ರತಿ ಕುಟುಂಬದಲ್ಲೂ ಒಬ್ಬ ಮಗನನ್ನು ಮುಸ್ಲಿಂ ಆಗಿ ಬೆಳೆಸಬೇಕೆಂದು. ಇದೇ ಹುಚ್ಚ ಜಾಮೋರಿನ್ ಅರಬ್ಬಿ ವ್ಯಾಪಾರಿಗಳ ಅನುಕೂಲಕ್ಕೆ ಸಮುದ್ರ ತೀರದಲ್ಲಿದ್ದ ಹಿಂದೂಗಳ ದೇವಾಲಯವೊಂದನ್ನು ಮಸೀದಿಯಾಗಿ ಪರಿವರ್ತಿಸಿ ಬಾಂಧವರಿಗೆ ದಾನ ಮಾಡಿದ್ದ. ಪೋರ್ಚುಗೀಸರು ಶುಕ್ರವಾರ ಮಧ್ಯಾಹ್ನ ಈ ಜುಮಾ ಮಸೀದಿಯ ಮೇಲೆ ದಾಳಿ ಮಾಡಿದರು. ಬಾಂಧವರೆಲ್ಲ ನಮಾಜಿನಲ್ಲಿ ತೊಡಗಿದ್ದ ವೇಳೆಯದು. ಅವರನ್ನು ರಕ್ಷಿಸಲು ಝಾಮೋರಿನ್ ಟೊಂಕ ಕಟ್ಟಿ ನಿಂತ. ತನ್ನ ಹಿಂದೂ ಅಂಗರಕ್ಷಕರನ್ನೆಲ್ಲ  ಈ ದಾಳಿಯನ್ನು ತಡೆಯಲು ಅಟ್ಟಿದ. ಅರಬ್ಬಿ ವರ್ತಕರನ್ನು ರಕ್ಷಿಸಹೋಗಿ ಮುನ್ನೂರಕ್ಕೂ ಅಧಿಕ ವೀರ್ ನಾಯರ್ ಯೋಧರು ಪೋರ್ಚುಗೀಸರ ಕೈಯಲ್ಲಿ ಬಲಿಯಾದರು. ಇದೇ ಮಾಪಿಳ್ಳೆಗಳು ಝಾಮೋರಿನ್ನನ ವಿರುದ್ಧ ತಿರುಗಿ ಬಿದ್ದಾಗ ಆತನ ಸಹಾಯಕ್ಕೆ ಪೋರ್ಚುಗೀಸರೇ ಬರಬೇಕಾಯಿತು ಎಂಬುದು ಮುಂದಿನ ಕಥೆ.
        ಈ ಮಾಪಿಳ್ಳೆ ಎಂದರೆ ಕೇವಲ ಮಲಯಾಳಿ ಮುಸ್ಲೀಮರಲ್ಲ. ಕೇರಳದಲ್ಲಿ ಕ್ರೈಸ್ತರಿಗೂ, ಯಹೂದಿಗಳಿಗೂ ಅದೇ ಹೆಸರಿದೆ. ವಲಸೆ ಬಂದವರು ಅಥವಾ ವ್ಯವಹಾರಕ್ಕೆ ಬಂದ ಹೊರಗಿನವರಿಗೆ ಸ್ಥಳೀಯ ಸ್ತ್ರೀಯರಲ್ಲಿ ಹುಟ್ಟಿದ ಮಕ್ಕಳನ್ನು ಮಾಪಿಳ್ಳೆ ಎಂದು ಕರೆಯಲಾಗುತ್ತದೆ. ಆ ಶಬ್ದದ ಅರ್ಥವೇ ಅಮ್ಮನ ಮಕ್ಕಳು ಎಂದು(ಮಾ-ಅಮ್ಮ, ಪಿಳ್ಳೆ-ಮಗು, ಕೇರಳ ಸ್ತ್ರೀಪ್ರಧಾನ ದೇಶವಾದ್ದರಿಂದಲೋ ಅಥವಾ ವಿದೇಶಿ ವರ್ತಕರು ಕೆಲ ಕಾಲ ಇಲ್ಲಿದ್ದು ಮತ್ತೆ ತಮ್ಮ ಸ್ವಸ್ಥಾನಕ್ಕೆ ಮರಳುತ್ತಿದ್ದರಿಂದ ಮಕ್ಕಳು ಅವರ ಅಮ್ಮನ ಬಳಿಯೇ ಬೆಳೆದುದರಿಂದ ಈ ಹೆಸರೋ ಎಂಬುದು ನನಗೂ ನಿಗೂಢ). ಮಲಯಾಳಿ ಮುಸ್ಲೀಮರಿಗೆ ಜೋನಕ ಮಾಪಿಳ್ಳೆ(ಯವನಿಕದ ಅಪಭೃಂಶ)ಗಳೆಂದೂ, ಕ್ರೈಸ್ತರಿಗೆ ನಾಸ್ರಾಣಿ ಮಾಪಿಳ್ಳೆಗಳೆಂದೂ, ಯಹೂದಿ(ಜ್ಯೂ)ಗಳಿಗೆ ಜ್ಯೂದ ಮಾಪಿಳ್ಳೆಗಳೆಂದೂ ಹೆಸರು. ಈ ಮುಸ್ಲಿಂ ಮಾಪಿಳ್ಳೆಗಳಲ್ಲಿ ಒಂದು ಸಮುದಾಯದ ಹೆಸರು ಮರಕ್ಕರ್. ಮಲಯಾಳದಲ್ಲಿ ಮರಕ್ಕಂ ಎಂದರೆ ಮರದ ಹಡಗು. ಮರಕ್ಕಂ ರಾಯರ್ - ಹಡಗಿನ ಒಡೆಯರು ಎಂಬುದರಿಂದ ಮರಕ್ಕರ್ ಎಂಬ ಹೆಸರು ಹುಟ್ಟಿದ್ದು. ಇವರು ಝಾಮೋರಿನ್ನನ ಕಾಲದಲ್ಲಿ ಸಮುದ್ರವನ್ನು ಕಾಯಲು ಇದ್ದ ಸೈನಿಕರು ಎಂಬ ಐತಿಹ್ಯ ಒಂದೆಡೆಯಾದರೆ ಮೂಲತಃ ಇವರು ಕಡಲ್ಗಳ್ಳರು ಎಂಬ ಅಂಬೋಣ ಮತ್ತೊಂದೆಡೆ. ಅದೇನೇ ಇರಲಿ. ಕಲ್ಲಿಕೋಟೇಯ ಅರಸರ ಕಾಲದಲ್ಲಿ ರಾಜಾಶ್ರಯ ಹೊಂದಿದ್ದ ಸಮುದ್ರ ವ್ಯಾಪಾರದಲ್ಲಿ ನಿರತವಾದ ಮಾಪಿಳ್ಳೆಗಳ ಒಂದು ಗುಂಪಿದು. ಇವರ ಐತಿಹಾಸಿಕ ವೀರಯೋಧನ ಹೆಸರು ಕುಂಜಾಳಿ ಮರಕ್ಕರ್. ಹಾಗೆಂದು ಆತ ಒಬ್ಬನಲ್ಲ. ಅದೇ ಹೆಸರಿನ ನಾಲ್ವರು ಸಾಮೂದಿರಿಯ ಸೇನೆಯಲ್ಲಿ ಬಂಟರಾಗಿದ್ದವರು. ಅವರ ಕಥೆ ಶುರುವಾಗುವುದು ಕ್ರಿ.ಶ ೧೫೨೪ರ ಸುಮಾರಿಗೆ.
       ಪೋರ್ಚುಗೀಸರು ಝಾಮೋರಿನ್ನನ ಆಳ್ವಿಕೆಯ ಮಲಬಾರಿನಲ್ಲಿ ನೆಲೆಯೂರಲು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಯ. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಮೂರನೇ ಬಾರಿ ಆತ ಬಂದಿಳಿದಾಗ ನಡೆದ ಯುದ್ಧದಲ್ಲಿ ಸ್ಥಳೀಯರೇ ಕೇಳು ನಾಯರ್ ಎಂಬ ಯುವಕನ ನೇತೃತ್ವದಲ್ಲಿ ಆತನನ್ನು ಬಡಿದು ಕೊಂದರೆಂಬುದು ಬೇರೆ ವಿಷಯ. ಇಷ್ಟಾದರೂ ಪೋರ್ಚುಗೀಸರಿಗೆ ಬುದ್ಧಿ ಬರಲಿಲ್ಲ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಝಾಮೋರಿನ್ನನ ಕಲ್ಲಿಕೋಟೆಯೊಳಗೆ ಹೇಗಾದರೂ ಮಾಡಿ ನುಗ್ಗಲು ಶತಪ್ರಯತ್ನ ನಡೆಸುತ್ತಿದ್ದರು. ಅರಬ್ಬಿ ವರ್ತಕರಿಂದ ಎದುರಾಗುತ್ತಿದ್ದ ತೀವ್ರ ಸ್ಪರ್ಧೆ ಬೇರೆ. ಅದಕ್ಕಿಂತ ಹೆಚ್ಚಾಗಿ ಅವರಿಗಿದ್ದ ಭಯ ಮರಕ್ಕರ್ ವ್ಯಾಪಾರಿಗಳು. ಇವರ ಹಿಂದಿನ ತಲೆಮಾರು ಝಾಮೋರಿನ್ನನ ವಿಧೇಯ ಸೇವಕರಾಗಿದ್ದರಿಂದ ಅರಸನಿಗೆ ಇವರನ್ನು ಕಂಡರೆ ಭಾರೀ ಪ್ರೀತಿ. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ನಂಬಿಕೊಂಡಿದ್ದು ಇದೇ ಮರಕ್ಕರ್ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಇದೆರಡೂ ಸೇರಿ ಮರಕ್ಕರ್‌ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಒಂದೆಡೆ ಪೋರ್ಚುಗೀಸರು, ಇನ್ನೊಂದೆಡೆ ಮರಕರ್ ವ್ಯಾಪಾರಿಗಳು, ಕೇರಳದ ಸಮುದ್ರ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಎರಡು ಗುಂಪುಗಳು ಮುಖಾಮುಖಿಯಾಗುವ ಪರಿಸ್ಥಿತಿ ಸೃಷ್ಟಿಯಾಯಿತು. ಝಾಮೋರಿನ್ನನ ವೈರಿ ಕೊಲತ್ತಿರಿ ಅರಸನ ಜೊತೆ ಪೋರ್ಚುಗೀಸರು ಸಂಧಿ ಮಾಡಿಕೊಂಡು ಕಲ್ಲಿಕೋಟೆಯಲ್ಲಿ ತಮ್ಮ ಕೋಟೆಯೊಂದನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಇದಕ್ಕೆ ಬದಲಾಗಿ ಕೊಲತ್ತಿರಿ ರಾಜ್ಯಕ್ಕೆ ಝಾಮೋರಿನ್ನನ ವಿರುದ್ಧದ ಯುದ್ಧದಲ್ಲಿ ಪೋರ್ಚುಗೀಸರು ಸಹಾಯ ಮಾಡಬೇಕಿತ್ತು. (ಪೋರ್ಚುಗೀಸರು ಕಟ್ಟಿಕೊಂಡ ಕಲ್ಲಿನ ಕೋಟೆಯಿಂದಲೇ ಆ ಊರಿಗೆ ಕಲ್ಲಿಕೋಟೆಯೆಂಬ ಹೆಸರು ಬಂತೆಂದೂ, ಅಲ್ಲಿಂದ ಕ್ಯಾಲಿಕೋ ಎಂಬ ಬಟ್ಟೆ ವಿಶ್ವದಾದ್ಯಂತ ರಫ್ತಾಗುತ್ತಿದ್ದುದರಿಂದ ಕ್ಯಾಲಿಕಟ್ ಎಂಬ ಹೆಸರು ಬಂತೆಂದೂ ಪ್ರತೀತಿಯಿದೆ.)
        ಈ ಬೆಳವಣಿಗೆಯಿಂದ ಝಾಮೋರಿನ್ ಮತ್ತು ಪೋರ್ಚುಗೀಸರ ಮಧ್ಯೆ ಮೊದಲೇ ಹೊಗೆಯಾಡುತ್ತಿದ್ದ ದ್ವೇಷ ಹೊತ್ತಿ ಉರಿಯಲು ಕಾರಣವಾಯ್ತು, ಮಾತ್ರವಲ್ಲ ಮರಕ್ಕರ್ ವ್ಯಾಪಾರಿಗಳು ಸಾಮೂದಿರಿಗೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿತು. ಆ ಮಧ್ಯೆ ಝಾಮೋರಿನ್ನನ ನೆಚ್ಚಿನ ಬಂಟನಾಗಿ ಬೆಳೆದವನೇ ಮೊದಲನೇ ಕುಂಜಾಳಿ ಮರಕ್ಕರ್. ಇವನ ಮೂಲ ಹೆಸರು ಮಹಮ್ಮದ್. ಝಾಮೋರಿನ್ ಇವನನ್ನು ಪ್ರೀತಿಯಿಂದ ಕುಂಜಾಳಿ ಎಂದು ಕರೆಯುತ್ತಿದ್ದರಿಂದ ಇವನ ಸಂತತಿಗೆಲ್ಲ ಅದೇ ಹೆಸರೇ ಖಾಯಮ್ಮಾಯ್ತು(ಕುಂಞು-ಪಾಪು, ಅಳಿ-ಸಮುದ್ರ). ಕೇರಳದಲ್ಲಿ ಪೋರ್ಚುಗೀಸರಿಗೂ ಸ್ಥಳೀಯ ಆಡಳಿತಗಾರರಿಗೂ ಸಾಕಷ್ಟು ಜಟಾಪಟಿ ನಡೆದಿದ್ದರೂ ಮೊದಲ ಬಾರಿ ಅವರನ್ನು ಸಮುದ್ರದಲ್ಲೇ ನೌಕಾಬಲದ ಸಹಾಯದಿಂದ ಎದುರಿಸಿದ ಶ್ರೇಯಸ್ಸು ಕುಂಜಾಳಿಗೆ ಸಲ್ಲಬೇಕು. ತನ್ನ ಜನರನ್ನು ಸಣ್ಣಸಣ್ಣ ಗುಂಪುಗಳಾಗಿ ವಿಭಜಿಸಿ ಚಿಕ್ಕ ದೋಣಿಗಳ ಮೂಲಕ ಪೋರ್ಚುಗೀಸರ ದೊಡ್ಡ ಯುದ್ಧ ನೌಕೆಯನ್ನು ನಾಲ್ಕೂ ದಿಕ್ಕಿನಿಂದ ಆಕ್ರಮಿಸುವ ಈತನ ಹಿಟ್ ಎಂಡ್ ರನ್ ಪಾಲಿಸಿ ಫಲಕೊಟ್ಟಿತ್ತು. ಪೋರ್ಚುಗೀಸರಿಗೆ ಅಂಥ ತಂತ್ರ ಹೊಸದು. ಶತ್ರು ಈ ಕಡೆಯಿಂದ ಬರಬಹುದು ಎಂದು ಊಹಿಸುವುದರೊಳಗೆ ಇನ್ನೊಂದು ಕಡೆಯಿಂದ ಆಕ್ರಮಣ ಶುರುವಾಗುತ್ತಿತ್ತು. ಪೋರ್ಚುಗೀಸರು ಕುಂಜಾಳಿಯ ಎದುರು ದಾರುಣವಾಗಿ ಸೋತರು. ತಮ್ಮ ಮುಂದಿನ ನಡೆಯ ಬಗ್ಗೆ ಚಿಂತಿಸಲು ಪೋರ್ಚುಗೀಸರಿಗೂ ಸಮಯ ಬೇಕಾಗಿತ್ತು. ಹಾಗಾಗಿ ಕೆಲ ಕಾಲ ಅವರು ಝಾಮೋರಿನ್ನನ ತಂಟೆಗೆ ಬರಲಿಲ್ಲ.  ಇತ್ತ ಕುಂಜಾಳಿಗೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂದ. ಮಾಪಿಳ್ಳೆಗಳ ಸಹಾಯದಿಂದ ಸಿಲೋನ್ ಮತ್ತು ಮಾಲ್ಡೀವ್ಸಿನ ಮೇಲೆ ತನ್ನ ರಫ್ತು ವ್ಯಾಪಾರವನ್ನು ವಿಸ್ತರಿಸಿ ಸಶಸ್ತ್ರವಾದ ಸ್ವಂತ ಪಡೆಯೊಂದನ್ನು ಕಟ್ಟಿಕೊಂಡ. ಈಜಿಪ್ಟಿನ ಒಟ್ಟೋಮನ್ನಿನೊಡನೆ ಸ್ನೇಹ ಸಾಧಿಸಲು ಮಾಲ್ಡೀವ್ಸ್ ಆಯಕಟ್ಟಿನ ಸ್ಥಳವಾಗಿತ್ತು. ಶತ್ರುವಿನ ಶತ್ರು ಮಿತ್ರನಂತೆ. ಸಿಲೋನಿನಲ್ಲಿ ಆಗಿನ ರಾಜ ಭುವನೇಕ ವಿಜಯಭಾನುವಿನ ವಿರುದ್ಧ ಅವನ ಸೋದರ ದಂಗೆಯೆದ್ದಾಗ ಸಮಯ ನೋಡಿ ಕುಂಜಾಳಿ ಆತನ ಪಕ್ಷ ಸೇರಿಕೊಂಡ. ಹೇಳಿಕೇಳಿ ಮಯದನ್ನೆ ಪೋರ್ಚುಗೀಸರ ಬದ್ಧವೈರಿ. ಇಬ್ಬರೂ ಸೇರಿ ಪೋರ್ಚುಗೀಸರ ವಿರುದ್ಧ ಯುದ್ಧ ಘೋಷಿಸಿದರು. ೧೫೩೪ರಲ್ಲಿ ನಾಗಪಟ್ಟಣಂನಲ್ಲಿ ನಡೆದ ಕದನದಲ್ಲಿ ಪೋರ್ಚುಗೀಸರು ಮರಕ್ಕರರ ಎದುರು ೫೦ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ಕಳೆದುಕೊಂಡರಾದರೂ ಮೊದಲನೇ ಕುಂಜಾಳಿ ಸೆರೆಸಿಸಿಕ್ಕು ಸತ್ತ.
ಪೋರ್ಚುಗೀಸರಿಗೆ ಮಲಬಾರಿನಲ್ಲಿ ಸ್ವಲ್ಪ ಮಟ್ಟಿಗೆ ಉಸಿರಾಡಲು ಆ ಘಟನೆ ಸಹಾಯಕವಾಯ್ತು,
       ಅತ್ತ ಝಾಮೋರಿನ್ನನನ್ನು ಕಂಡರಾಗದ ವೆಟ್ಟದನಾಡಿನ ರಾಜ ಪೋರ್ಚುಗೀಸರನ್ನು ಕರೆದು ಚಲಿಯಾ ನದಿದಡದ ಚಲಿಯಾಂನಲ್ಲಿ ಕೋಟೆ ಕಟ್ಟಿಕೊಳ್ಳಲು ಅನುಮತಿ ನೀಡಿದ. ಪೋರ್ಚುಗೀಸರು ತನೂರಿನ ಅರಸನನ್ನು ಕ್ರೈಸ್ತಮತಕ್ಕೆ ಮತಾಂತರಿಸಿ ಡೋಮ್ ಜಾವೋ ಎಂದು ಹೆಸರಿಟ್ಟರು. ಬೆನ್ನಿಗೇ ವೆಟ್ಟದ ನಾಡಿನವನೂ ಮತಾಂತರಗೊಂಡ. ಮಲಬಾರಿನ ವ್ಯಾಪಾರದ ಮೇಲೆ ಝಾಮೋರಿನ್ನನ ಹಿಡಿತ ಸಡಿಲವಾಗುತ್ತಿತ್ತು. ಮರಕ್ಕರಿನ ಹೆಚ್ಚಿನ ಪಡೆ ಸಿಲೋನಿನಲ್ಲಿ ಬೀಡುಬಿಟ್ಟಿತ್ತು. ಒಟ್ಟೋಮನ್ನಿನ ಸಹಾಯವೂ ಕುಂಜಾಳಿಗೆ ಸಮಯಕ್ಕೆ ಸರಿಯಾಗಿ ಸಿಗಲಿಲ್ಲ. ಕೊನೆಗಳಿಗೆಯಲ್ಲಿ ಮೊದಲ ಕುಂಜಾಳಿಯ ಮಗನನ್ನು ಉತ್ತರಾಧಿಕಾರಿ ಎಂದು ಘೋಷಿಸಿದ ಝಾಮೋರಿನ್‌ನ ತಂತ್ರವೂ ಕೆಲಸಕ್ಕೆ ಬಾರಲಿಲ್ಲ. ೧೫೩೭ರಲ್ಲಿ ಪೊನ್ನಾನಿಯಲ್ಲಿ ಪೋರ್ಚುಗೀಸರೊಡನೆ ನಡೆದ ಯುದ್ಧದಲ್ಲಿ ಝಾಮೋರಿನ್ನನ ಸೈನ್ಯ ಸೋಲಬೇಕಾಯಿತು. ಪೋರ್ಚುಗೀಸರ ವಿರುದ್ಧ ಎರಡನೇ ಕುಂಜಾಳಿ ಸಣ್ಣ ಪುಟ್ಟ ಹಿಟ್ ಎಂಡ್ ರನ್ ದಾಳಿಗಳನ್ನು ಸಂಘಟಿಸುತ್ತಿದ್ದನಾದರೂ ಮಲಬಾರಿನಲ್ಲಿ ಅವರು ಬಲಗೊಳ್ಳುವುದನ್ನು ತಡೆಯಲಾಗಲಿಲ್ಲ. ೧೫೬೯ರಲ್ಲಿ ಎರಡನೇ ಕುಂಜಾಳಿಯ ನಿಧನಾನಂತರ ಅವನ ಸಹಾಯಕ ಪಟ್ಟು ಮರಕ್ಕರ್ ಮೂರನೇ ಕುಂಜಾಳಿಯೆಂಬ ಹೆಸರಿನೊಂದಿಗೆ ಮರಕ್ಕರರ ನೇತೃತ್ವ ವಹಿಸಿಕೊಳ್ಳುವುದರೊಂದಿಗೆ ಝಾಮೋರಿನ್ನನ ಸೈನ್ಯಕ್ಕೊಂದು ಹೊಸ ಶಕ್ತಿ ಬಂದಿತ್ತು. ಹೊರಗಿನವರ ಸಹಾಯಕ್ಕೆ ಕಾದುಕೂರದೇ ತಮ್ಮದೇ ಆತ ನೌಕಾಬಲವನ್ನು ಬಲಗೊಳಿಸುವತ್ತ ಝಾಮೋರಿನ್ ಗಮನವಹಿಸಿದ. ಕಲ್ಲಿಕೋಟೆಯ ಬಂದರಿನ ಒಡೆತನವನ್ನು ಪಡೆಯುವಲ್ಲಿ ಸಫಲನಾದ ನಂತರ ಮೂರನೇ ಕುಂಜಾಳಿ ಮರಕ್ಕರಿನ ಸಹಾಯದಿಂದ ೧೫೭೧ರಲ್ಲಿ ನಡೆದ ಇತಿಹಾಸ ಪ್ರಸಿದ್ಧ ಚಲಿಯಾಂ ಯುದ್ಧದಲ್ಲಿ ಪೋರ್ಚುಗೀಸರನ್ನು ಬಗ್ಗುಬಡಿದ. ಮಲಬಾರಿನಲ್ಲಿ ಅಧಿಪತ್ಯ ಸಾಧಿಸುವ ಪೋರ್ಚುಗೀಸರ ಕನಸು ಮತ್ತೊಮ್ಮೆ ಭಗ್ನವಾಯಿತು. ಕೇರಳದ ಆಸೆ ಬಿಟ್ಟು ಗೋವದತ್ತ ಮುಖಮಾಡಲು ಈ ಯುದ್ಧ ಅವರಿಗೆ ಮುಖ್ಯ ಕಾರಣವಾಯಿತು. ಪೋರ್ಚುಗೀಸರು ಬಿಟ್ಟುಹೋದ ಕಲ್ಲಿಕೋಟೆಯ ಹತ್ತಿರದ ವೆಲಿಯಂಕಲ್ಲಿನಲ್ಲಿ ಝಾಮೋರಿನ್ ಕಟ್ಟಿದ ಕೋಟೆ ಕುಂಜಾಳಿ ಕೋಟೆಯೆಂದೇ ಇಂದೂ ಕರೆಯಲ್ಪಡುತ್ತಿದೆ. ಈ ಕೋಟೆ ಕಟ್ಟುವ ಸಮಯದಲ್ಲೇ ಮೂರನೇ ಕುಂಜಾಳಿಯೂ ಮೃತಪಟ್ಟ.
       ಅವನ ಅಣ್ಣನ ಮಗ ಮಹಮ್ಮದ್ ಮರಕ್ಕರ್ ನಾಲ್ಕನೇ ಕುಂಜಾಳಿಯೆಂಬ ಹೆಸರಿನೊಂದಿಗೆ ಮಾಪಿಳ್ಳೆಗಳ ನೇತೃತ್ವ ವಹಿಸಿಕೊಂಡ. ಕುಂಜಾಳಿ ಮರಕ್ಕರರಲ್ಲಿ ಇವನೇ ಮೋಸ್ಟ್ ಫೇಮಸ್. ಅದೇ ಕಾಲಕ್ಕೆ ಹೊಸ ಝಾಮೋರಿನ್ ಕೂಡ ಪಟ್ಟಕ್ಕೇರಿದ್ದ. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆಗ ಶುರುವಾಯ್ತು ಅಸಲಿ ಕಥೆ. ಮರಕ್ಕರ್ ಮಾಪಿಳ್ಳೆಗಳು ಮಲಬಾರಿನ ಸಮುದ್ರ ವ್ಯವಹಾರವನ್ನೆಲ್ಲ ತಮ್ಮಡಿಗೆ ಬರುವಂತೆ ನೋಡಿಕೊಂಡಿದ್ದರಿಂದ ಉಳಿದವರಿಗೆ ಅವರನ್ನು ನೋಡಿದರೆ ಅಷ್ಟಕ್ಕಷ್ಟೆ ಎಂಬ ಪರಿಸ್ಥಿತಿ. ಕಲ್ಲಿಕೋಟೆಯಲ್ಲಿ ವಿದೇಶಿ ವರ್ತಕರೆಲ್ಲ ಇವರಿಗೆ ಇಂತಿಷ್ಟು ಎಂಬ ಹಫ್ತಾ ಕೊಟ್ಟೇ ತಮ್ಮ ಕೆಲಸ ಮಾಡಿಸಿಕೊಳ್ಳಬೇಕಿತ್ತು. ಹೊಸ ಕುಂಜಾಳಿ ಬಂದಮೇಲಂತೂ ಸ್ಥಳೀಯ ಹಿಂದೂ ಹಾಗೂ ಕ್ರಿಶ್ಚಿಯನ್ ವರ್ತಕರಿಗೆ ಮರಕ್ಕರರ ಉಪಟಳ ಮೇರೆಮೀರಿತ್ತು. ಇದೇ ಸಮಯದಲ್ಲಿ ನಡೆದ ಒಂದೆರಡು ಘಟನೆಗಳು ಹೊಸ ಝಾಮೋರಿನ್ ಹಾಗೂ ಕುಂಜಾಳಿಯ ಮಧ್ಯದ ವೈಮನಸ್ಸಿಗೆ ಕಾರಣವಾದವು. ಇರಿಂಗಳದ ನಾಯರ್ ಹುಡುಗಿಯೊಬ್ಬಳನ್ನು ಕುಂಜಾಳಿಯ ಸೈನಿಕರು ಕೆಡಿಸಿದ್ದು ಸ್ಥಳೀಯ ಹಿಂದೂಗಳಲ್ಲಿ ಆಕ್ರೋಶ ಮೂಡಿಸಿತ್ತು. ಸಾಲದೆಂಬಂತೆ ಇದನ್ನು ಪ್ರಶ್ನಿಸ ಹೋದ ಇಬ್ಬರನ್ನು ತಲೆ ಬೋಳಿಸಿ ಕಳುಹಿಸಿದ ಕುಂಜಾಳಿ. ನಾಯರ್, ನಂಬೂದಿರಿಗಳಂಥ ಮೇಲ್ವರ್ಗದ ಹಿಂದೂಗಳ ಸಹಾಯವಿಲ್ಲದೇ ಪಟ್ಟದಲ್ಲುಳಿಯುವುದು ಹೊಸ ಝಾಮೋರಿನ್ನನಿಗೆ ಅಸಾಧ್ಯದ ಮಾತು. ಇಂಥದ್ದೇ ಒಂದಿಷ್ಟು ವೈಮನಸ್ಸಿನ ಘಟನೆಗಳ ಮಧ್ಯದಲ್ಲೇ ಕುಂಜಾಳಿ ತನ್ನನ್ನು ತಾನು ಇಸ್ಲಾಮಿನ ರಕ್ಷಕನೆಂದೂ, ಸಮುದ್ರಾಧಿಪಯೆಂದೂ ಘೋಷಿಸಿಕೊಂಡ. ಹೀಗೆ ಮುಂದುವರೆದರೆ ಮುಂದೊಮ್ಮೆ ಈ ಮಾಪಿಳ್ಳೆಗಳು ತನ್ನ ಬುಡಕ್ಕೂ ಬತ್ತಿ ಇಡಬಹುದು ಝಾಮೋರಿನ್ನನಿಗೆ ಖಚಿತವಾಗಿಹೋಯಿತು. ಅತ ಪೋರ್ಚುಗೀಸರಿಗೆ ಸದ್ದಿಲ್ಲದೇ ಸಂದೇಶ ಕಳುಹಿಸಿದ. ಅದೇ ಸುಸಂದರ್ಭವನ್ನುಪಯೋಗಿಸಿಕೊಂಡು ಝಾಮೋರಿನ್ನನೊಂದಿಗೆ ಕ್ಯಾಲಿಕಟ್‌ನಲ್ಲಿ ಸಂಧಿ ಮಾಡಿಕೊಂಡ ಪೋರ್ಚುಗೀಸರು ಪೊನ್ನಾನಿಯಲ್ಲಿ ಹೊಸ ಕೋಟೆ ಕಟ್ಟಿಕೊಳ್ಳಲು ಜಾಗ ಪಡೆದರು.
       ಝಾಮೋರಿನ್ನನ ಪಟ್ಟುಗಳಿಗೆ ಪ್ರತಿತಂತ್ರ ಹೆಣೆಯಲು ಕುಂಜಾಳಿ ಮೆಕ್ಕಾ, ಮೊಘಲ್ ಸೇರಿ ಬೇರೆ ಬೇರೆ ಮುಸ್ಲಿಂ ಅರಸರ ಆಸ್ಥಾನಗಳಿಗೆ ಕೇರಳದಲ್ಲಿ ಒಂದು ಇಸ್ಲಾಮಿಕ್ ದೇಶ ಸ್ಥಾಪನೆಗೆ ಸಹಕಾರ ನೀಡುವಂತೆ ದೂತರನ್ನು ಕಳಿಸಿಕೊಟ್ಟ. ಅತ್ತ ಗುಜರಾತಿನ ಸುಲ್ತಾನನಿಗೆ ದೇಶದ ಹಿಂದೂ ರಾಜ್ಯಗಳನ್ನೆಲ್ಲ ಪ್ಯಾನ್ ಇಸ್ಲಾಮಿಕ್ ಆಡಳಿತದಡಿ ಒಟ್ಟೋಮನ್ ಸಾಮ್ರಾಜ್ಯದ ಖಲೀಫನ ಅಡಿ ತರುವ ಆಸೆಯಿತ್ತು. ಮಾಪಿಳ್ಳೆಗಳು ಅವನ ಬೆಂಬಲಕ್ಕೂ ಮೊರೆಯಿಟ್ಟರು. ಟರ್ಕಿಯ ಖಲೀಫ ಒಟ್ಟೋಮನ್ ತನ್ನ ಉಚ್ಛ್ರಾಯದ ಸ್ಥಿತಿಯಲ್ಲಿದ್ದ ಕಾಲವದು. ಪರ್ಷಿಯಾ, ಅರೇಬಿಯಾಗಳ ಆಚೆ ಯುರೋಪ್ ಮತ್ತು ಏಷಿಯಾಗಳಲ್ಲಿ  ದಂಗುಬಡಿಸುವ ರೀತಿಯಲ್ಲಿ ಇಸ್ಲಾಮಿನ ಸಾಮ್ರಾಜ್ಯ ಬೆಳೆಯುತ್ತಿತ್ತು. ಟರ್ಕಿ ಮತ್ತು ಇಜಿಪ್ಟಿನ ಮಾಮ್ಲುಕ್ ಅರಸರಿಗೆ ಸಂದೇಶ ಕಳುಹಿಸಿದ ಗುಜರಾತಿನ ಸುಲ್ತಾನ ಝಾಮೋರಿನ್ನನ ವಿರುದ್ಧ ಯುದ್ಧ ಘೋಷಿಸಿದರೆ ಬೇಕಾದ ಎಲ್ಲ ಸೇನಾಬಲವನ್ನೂ ಒದಗಿಸುವುದಾಗಿ ಭರವಸೆಯಿತ್ತ. ಜಗತ್ತಿನ ಮೂಲೆಮೂಲೆಯ ವರ್ತಕರೆಲ್ಲ, ಡಚ್, ಪೋರ್ಚುಗೀಸ್, ಫ್ರೆಂಚ್, ಬ್ರಿಟಿಷರೆಲ್ಲ ಭಾರತಕ್ಕೆ ಕೇರಳವನ್ನು ಹುಡುಕಿ ಬಂದವರೇ. ಕೇರಳದಂಥ ಜಗತ್ತಿನ ಅತೀ ಸಿರಿವಂತ, ಸಂಪದ್ಭರಿತ ರಾಷ್ಟ್ರ ತಾನಾಗಿ ಕೈವಶವಾಗುವುದರಲ್ಲಿರುವಾಗ ಅದನ್ನು ಬಿಡುವಷ್ಟು ಮೂರ್ಖ ಪ್ರಪಂಚದಲ್ಲಿ ಯಾರೂ ಇರಲಿಕ್ಕಿಲ್ಲ. ಖಲೀಫ ದೊಡ್ಡದೊಂದು ಮಾಸ್ಟರ್‌ಪ್ಲ್ಯಾನ್ ರೂಪಿಸಿದ. ಝಾಮೋರಿನ ಹಾಗೂ ಪೋರ್ಚುಗೀಸರನ್ನು ಸೋಲಿಸಿದರೆ ಮರಕ್ಕರ್, ಗುಜರಾತ್ ಇವೆರಡೂ ಖಲೀಫನ ಆಳ್ವಿಕೆಯಡಿ ಸೇರಿ ಭಾರತದಲ್ಲಿ ಹೊಸ ಇಸ್ಲಾಮಿಕ್ ಶಕ್ತಿಯನ್ನು ಹುಟ್ಟುಹಾಕುವ ಆಲೋಚನೆ ಅದರ ಹಿಂದಿತ್ತು. ಜಗತ್ತಿನ ಮುಸ್ಲಿಮರೆಲ್ಲ ಖಲೀಫನ ನೇತೃತ್ವದಡಿ ಒಂದೇ ಸೂರಿನಲ್ಲಿ ಬರಬೇಕೆನ್ನುವ ಧೋರಣೆಯ ಇಸ್ಲಾಂ ಜಗತ್ತು ಭಾರತದಲ್ಲಿಯೂ ಹುಟ್ಟಿಕೊಂಡಿತು. ಎಲ್ಲಿಯ ಗೋಕುಲಾಷ್ಟಮಿ, ಯಾವೂರ ಇಮಾಮ್ ಸಾಬ? ಮಾಪಿಳ್ಳೆ ಬಾಂಧವರಿಗೆ ಆಳಿಸಿಕೊಳ್ಳಲು ಒಬ್ಬ ದೇಶಿ ರಾಜ ಗತಿಯಿರದೇ ಟರ್ಕಿ ಸುಲ್ತಾನನಿಗೆ ಉಧೋ ಉಧೋ ಎಂದರು. ಅದೂ ತಲೆಮಾರುಗಳ ಕಾಲ ತಮಗೇ ಅನ್ನವಿಕ್ಕಿದವನ ವಿರುದ್ಧ. ಇದು ಅಕ್ಷರಶಃ ಝಾಮೋರಿನ್ನನ ನಿದ್ದೆಗೆಡಿಸಿತು. ಸಾಮಾನ್ಯ ವರ್ತಕನಾಗಿ ಬಂದವ ಸ್ಥಳೀಯ ಮಾಪಿಳ್ಳೆಗಳ ಸಹಾಯದಿಂದ ಕೊಳತ್ತಿರಿಗಳನ್ನು ಪದಚ್ಯುತಗೊಳಿಸಿ ಕಣ್ಣೂರಿನಲ್ಲಿ ಸ್ವಂತ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡಿಕೊಂಡ ಅಲಿರಾಜನ ದೃಷ್ಟಾಂತ ಕಣ್ಣ ಮುಂದೆಯೇ ಇತ್ತು. ತನ್ನದೇ ಆಶ್ರಯದಲ್ಲಿ ಬದುಕಿದ್ದವರು ಈಗ ತನ್ನ ವಿರುದ್ಧವೇ ಹೀಗೆ ತಿರುಗಿಬಿದ್ದದ್ದನ್ನು ನೋಡಿಕೊಂಡೂ ಸುಮ್ಮನೇ ಕೂರಲಾದೀತೇ! ಶತ್ರುವಿನ ಶತ್ರು ಮಿತ್ರನಂತೆ. ಗೋವೆಯಲ್ಲಿದ್ದ ಪೋರ್ಚುಗೀಸರಿಗೆ ಒಂದು ಸಂದೇಶ ನೀಡಿದ. ಪೊನ್ನಾನಿಯಲ್ಲಿ ಮಲಬಾರಿನ ಕ್ರಿಶ್ಚಿಯನ್ನರಿಗಾಗಿ ಒಂದು ಚರ್ಚ್ ಕಟ್ಟಿಕೊಡಿ ಎಂದು. ಆದರೆ ಉದ್ದೇಶವಿದ್ದುದು ಇನ್ನೊಂದು. ಚರ್ಚ್ ಕಟ್ಟುವ ನೆಪದಲ್ಲಿ ಬಂದ ಪೋರ್ಚುಗೀಸರ ನೌಕಾಪಡೆ ಕೋಟೆಯನ್ನು ಮುತ್ತಿತ್ತು. ಮಾಪಿಳ್ಳೆಗಳ ಸೈನ್ಯ ಸಮುದ್ರಕ್ಕಿಳಿಯುತ್ತಿದ್ದಂತೆ ಹಿಂದಿನಿಂದ ಝಾಮೋರಿನ್ನನ ಪಡೆ ಬಂದೆರಗಿತು. ತನ್ನ ಸಮುದ್ರ ತಡಿಯ ಕೋಟೆಯಲ್ಲಿ ಖಲಿಫನ ಪಡೆಗಳ ಬರುವಿಕೆ ಕಾಯುತ್ತ ಕೂತಿದ್ದ ಕುಂಜಾಳಿಯನ್ನು ಬಿಲದಲ್ಲಿದ್ದ ಹೆಗ್ಗಣ ಬಡಿಯುವಂತೆ ಝಾಮೋರಿನ್ನನ ಕಡೆಯವರು ಬಡಿದುಬಿಟ್ಟರು. ೪೦೦ ಮಾಪಿಳ್ಳೆಗಳನ್ನು ಯುದ್ಧಕೈದಿಗಳಾಗಿ ಸೆರೆಹಿಡಿದರು. ಕೋಟೆಯ ಒಂದು ಕಲ್ಲನ್ನೂ ಬಿಡದೇ ಪುಡಿಗಟ್ಟಲಾಯ್ತು. ಕುಂಜಾಳಿಯನ್ನು  ಪಣಜಿಗೆ ಕರೆದೊಯ್ದು ಪೋರ್ಚುಗೀಸರು ಹಿಂದೆ ಮುಂದೆ ನೋಡದೇ ಅವನ ಕೈಕಾಲು ಕತ್ತರಿಸಿ ಸಮುದ್ರಕ್ಕೆಸೆದುಬಿಟ್ಟರು.
ಅಳುದುಳಿದ ಮಾಪಿಳ್ಳೆಗಳು ಅಂಬೋ ಎನ್ನುತ್ತ ಮತ್ತೆ ಹಳೆ ಗಂಡ ಝಾಮೋರಿನ್ನನ ಶರಣು ಬಂದರು. ಕುಂಜಾಳಿಯ ವಿರುದ್ಧ ಝಾಮೋರಿನ್ನನ ದ್ವೇಷ ವೈಯಕ್ತಿಕ. ಇನ್ನೂ ದುಷ್ಮನಿ ಸಾಧಿಸಲು ಅಲ್ಲೇನೂ ಉಳಿದಿರಲಿಲ್ಲ. ಅದರಲ್ಲೂ ಹೇಳಿಕೇಳಿ ಕೇರಳದ ಅತಿದೊಡ್ಡ ಸೆಕ್ಯುಲರ್ ಆತ. ಈಗಿನ ಚಾಂಡಿ, ಪಿನರಾಯಿನಗಳೂ ಅವನ ಸೆಕ್ಕುಲರಿಜಮ್ಮಿನ ಮುಂದೆ ಲೆಕ್ಕಕ್ಕಿಲ್ಲ. ಕುಂಜಾಳಿಯ ಬಂಧುವಿನ ಮಗನೊಬ್ಬ ಹೊಸ ಕುಂಜಾಳಿ ಮರಕ್ಕರನಾಗಿ ನೇಮಿಸಲ್ಪಟ್ಟ. ಯುದ್ಧ ಗೆದ್ದುಕೊಟ್ಟದ್ದಕ್ಕಾಗಿ ಪೋರ್ಚುಗೀಸ್ ಕಮಾಂಡರ್ ಫೋರ್ಟುಗೋನಿಗೆ ಝಾಮೋರಿನ್ನನ ವತಿಯಿಂದ ದಂಡಿಯಾಗಿ ಕಾಣಿಕೆಗಳು ಸಲ್ಲಲ್ಪಟ್ಟವು. ಇಬ್ಬರ ದೋಸ್ತಿ ಖತಂ. ತನ್ನ ಎರಡನೇ ಶತ್ರುವನ್ನು ಮುಗಿಸಿದವನೇ ಝಾಮೋರಿನ್ ಮೊದಲ ಶತ್ರುವಿನ ವಿರುದ್ಧವೂ ತಿರುಗಿ ಬಿದ್ದ. ಕಥೆ ಮುಂದುವರೆಯಿತು........
       ಟರ್ಕಿಯ ಸುಲ್ತಾನನನ್ನು ಇಳಿಸಿದರೆಂಬ ಸಿಟ್ಟಿಗೆ ಬಾಂಧವರು ಕೇರಳದಲ್ಲಿ ಮೋಪ್ಳಾ ದಂಗೆ ಶುರುಮಾಡಿದ್ದು ಅಚಾನಕ್ ಏನೂ ಅಲ್ಲ. ಖಲೀಫನ ಮೇಲಿನ ಅವರ ಪ್ರೀತಿ ರಾತ್ರಿಬೆಳಗಾಗುವುದರೊಳಗೆ ಶುರುವಾಗಿದ್ದೂ ಅಲ್ಲ.  ಖಿಲಾಫತ್ ಶುರುವಾಗುವ ಮುನ್ನೂರು ವರ್ಷಗಳ ಹಿಂದೆಯೇ ಕುಂಜಾಳಿ ಅದಕ್ಕೊಂದು ಭದ್ರ ಬುನಾದಿ ಹಾಕಿಹೋಕಿದ್ದ. ಆತ ಹಾಕಿಟ್ಟ ಮೇಲ್ಪಂಕ್ತಿಯನ್ನು ಬಾಂಧವರು ಚಾಚೂ ತಪ್ಪದೇ ಪಾಲಿಸಿದರಷ್ಟೆ. ಕುಂಜಾಳಿ ವೀರಯೋಧನೆಂಬುದೇನೋ ಹೌದು. ಹದ್ದು ಎಷ್ಟು ಎತ್ತರಕ್ಕೆ ಹಾರಿದರೂ ಅದರ ಕಣ್ಣು ನೆಲದ ಮೇಲಿನ ಹೆಣದ ಮೇಲೆಯೇ ಇರುತ್ತದಂತೆ. ಕುಂಜಾಳಿಯ ಕಥೆಯಲ್ಲಾದದ್ದೂ ಅದೇ. ಅಂದು ಭಾರತೀಯರೆಲ್ಲ ಸ್ವಾತಂತ್ರ್ಯಗಳಿಸುವುದಕ್ಕೋಸ್ಕರ ಬ್ರಿಟಿಷರ ವಿರುದ್ಧ ಒಗ್ಗೂಡಿ ಹೋರಾಡಿದರು. ಟಿಪ್ಪು, ಮುಘಲರು, ಸುಲ್ತಾನರೂ ಹೋರಾಡಿದರು. ಆದರೆ ತಾಯ್ನಾಡಿನ ಮೇಲಿನ ಪ್ರೀತಿಯಂದಲೂ ಅಲ್ಲ, ದೇಶದ ಮೇಲಿನ ಗೌರವದಿಂದಲೂ ಅಲ್ಲ. ಶತಮಾನಗಳ ತಮ್ಮ ದುರಾಡಳಿತ ಅಂತ್ಯವಾದರೆ ಎಂಬ ಭಯದಿಂದ. ಒಂದು ವೇಳೆ ಪೋರ್ಚುಗೀಸರೋ, ಬ್ರಿಟಿಷರೋ ಬರದಿದ್ದರೆ ಪಾಕಿಸ್ತಾನ, ಬಾಂಗ್ಲಾಗಳು ನಮ್ಮ ಊರೂರುಗಳಲ್ಲೂ ಸೃಷ್ಟಿಯಾಗಿ ನಾವೆಲ್ಲ ಖಲೀಫನಿಗೆ ಜೀ ಹುಜೂರ್ ಎನ್ನುತ್ತ ಸಲಾಮ್ ಹೊಡೆದುಕೊಂಡಿರಬೇಕಾಗಿತ್ತು. 
ಕುಂಜಾಳಿಯ ಸ್ಮರಣಾರ್ಥ ಅಂಚೆಚೀಟಿ

ಪೋರ್ಚುಗಲ್ಲಿನ ವರ್ತಕರೊಡನೆ ಝಾಮೋರಿನ್

ಕುಂಜಾಳಿ ಮರಕ್ಕರಿನ ಮ್ಯೂಸಿಯಂ

ಕೇರಳದ ಮೊದಲ ಚರ್ಚ್, ಪರಯೂರು

ಝಾಮೋರಿನ್ನನ ಆಸ್ಥಾನದಲ್ಲಿ ವಾಸ್ಕೋ-ಡ-ಗಾಮ

Tuesday, August 16, 2016

ಶ್ರೀಮಚ್ಛಂಕರಭಗವತ್ಪಾದಚರಿತ್ರ: ಶಾರದಾ ಪೀಠ ಪ್ರಕರಣ

   

    ಶಿವನು ಆಚಾರ್ಯ ಶಂಕರರಿಗೆ ಕಾಶಿಯಲ್ಲಿ ಚಂಡಾಲನ ವೇಷದಲ್ಲಿ ದರ್ಶನವಿತ್ತ ಕಥೆ ಹೆಚ್ಚಿನೆಲ್ಲರೂ ಕೇಳಿದ್ದೇ. ಶಂಕರರ ದಾರಿಗೆ ಚಂಡಾಲನೊಬ್ಬ ಅಡ್ಡಬಂದ. ಅಪಸರ, ಆಚೆ ಹೋಗು ಎಂದರು ಶಂಕರರು. ಅಪಸರತು ಕಃ? ದೇಹಃ ಅಹೋ ಆತ್ಮಾ? ಕಸ್ತಾವದಪಸರತು? ದೂರ ಹೋಗಬೇಕಾದುದು ಒಂದು ಅನ್ನಮಯ ದೇಹದಿಂದ ಇನ್ನೊಂದು ಅನ್ನಮಯ ದೇಹವೋ ಅಥವಾ ಕೇವಲ ಸಾಕ್ಷಿಯಾದ ಒಂದು ಆತ್ಮದಿಂದ ಇನ್ನೊಂದು ಆತ್ಮವೋ? ಎಂದು ಕೇಳಿದ ಚಂಡಾಲ. ಇದು ಮಾಧವೀಯ ಶಂಕರ ವಿಜಯದಲ್ಲಿ ಬರುವ ಸಂಗತಿ. ಶಂಕರಾಚಾರ್ಯರದ್ದು ಎನ್ನುವ ’ಮನೀಷಾ ಪಂಚಕ’ದಲ್ಲೂ ಸರಿಸುಮಾರು ಇಂಥದೇ ಅವತರಣಿಕೆಯಿದೆ('ಚಾಂಡಾಲೋಸ್ತು ಸ ತು ದ್ವಿಜೋಸ್ತು ಗುರುರಿತ್ಯೇಷಾ ಮನೀಷಾ ಮಮ'). ಇದರ ಪ್ರಕಾರ ಚಂಡಾಲನ ಮಾತಿಗೆ ಜ್ಞಾನೋದಯಗೊಂಡ ಆಚಾರ್ಯರು ಆತನನ್ನು ಗುರುವೆಂದು ಒಪ್ಪಿ ನಮಸ್ಕರಿಸಿದರು. ಆಗ ಚಂಡಾಲನ ಜಾಗದಲ್ಲಿ ಸಾಕ್ಷಾತ್ ಶಿವನೇ ಪ್ರತ್ಯಕ್ಷನಾದ. ಆಚಾರ್ಯರು ಭಕ್ತಿಯಿಂದ ಶಿವನನ್ನು ಸ್ತುತಿಸಿದರು. ಶಿವನು ಪ್ರಸನ್ನನಾಗಿ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿ ದುರ್ಮತಗಳನ್ನು ಖಂಡಿಸಿದಂತೆ ನೀನು ವೇದಗಳು, ಬ್ರಹ್ಮಸೂತ್ರಾದಿಗಳಿಗೆ ಭಾಷ್ಯವನ್ನು ರಚಿಸಿ, ಕುತ್ಸಿತ ತತ್ತ್ವಗಳನ್ನು ಪ್ರಚಾರ ಮಾಡುತ್ತಿರುವ ಭಾಸ್ಕರ, ನೀಲಕಂಠ, ಅಭಿನವಗುಪ್ತ, ಮಂಡನರನ್ನು ಜಯಿಸಿ, ಅದ್ವೈತ ತತ್ತ್ವವನ್ನು ಖ್ಯಾತಿಗೊಳಿಸಿ ಜನರ ಅಜ್ಞಾನವನ್ನು ತೊಲಗಿಸು ಎಂದು ಆಶೀರ್ವದಿಸಿದ. ಬೇರೆ ಶಂಕರವಿಜಯಗಳಲ್ಲಿ ಈ ಕಥೆಯಿಲ್ಲ. ಭಾಸ್ಕರಾದಿಗಳು ಐತಿಹಾಸಿಕವಾಗಿ ಆಚಾರ್ಯರಿಗಿಂತ ಈಚಿನವರೆಂದು ಮಾಧವೀಯದ ಕವಿಗೆ ಗೊತ್ತಿಲ್ಲವೇನೋ! ಚಂಡಾಲನನ್ನೂ ಗುರುವೆಂದು ಒಪ್ಪಿಕೊಂಡ  ಆಚಾರ್ಯರು ಪರಮ ಸೆಕ್ಯುಲರ್ ಎಂದು ಪ್ರಚುರಪಡಿಸಲೋ ಈ ಕಥೆ ಹುಟ್ಟಿದ್ದೋ ಅಥವಾ ಆಚಾರ್ಯರು ಚಂಡಾಲನನ್ನು ಗುರು ಎಂದರೆ ಅವರಿಗೇ ಅವಮಾನ ಎಂಬ ಭ್ರಾಂತಿಯಿಂದ ಆ ಚಂಡಾಲ ಶಿವನೇ ಎಂದು ಈ ಕಥೆ ಹುಟ್ಟಿತೋ ನಾಕಾಣೆ. ಅದೇನೇ ಇರಲಿ. ತತ್ತ್ವಜ್ಞಾನಿಯೊಬ್ಬ ಜನ್ಮದಿಂದ ಯಾವ ವರ್ಣದವನಾದರೂ ಸದ್ಗುರುವಿನಂತೆ ಗೌರವಕ್ಕೆ ಅರ್ಹನೆಂಬ ಆಸ್ತಿಕ ಅದ್ವೈತಿಗಳ ನಂಬಿಕೆಗೊಂದು ನಮಸ್ಕಾರ.
       ಚಿದ್ವಿಲಾಸೀಯದಂತೆ ಆಚಾರ್ಯರು ಕಾಶಿವಿಶ್ವೇಶನನ್ನು ಪೂಜಿಸಿ ’ಅದ್ವೈತವು ಸತ್ಯವೋ, ದ್ವೈತವು ಸತ್ಯವೋ ಎಂಬ ಸಂಶಯವನ್ನು ತೊಲಗಿಸು’ ಎಂದು ಬೇಡಿಕೊಂಡಾಗ ಲಿಂಗದಿಂದ ಪ್ರತ್ಯಕ್ಷನಾದ ಶಿವನು ಅದ್ವೈತವೇ ಶುದ್ಧಸತ್ಯವೆಂದು ಮೂರು ಬಾರಿ ಕೈಯೆತ್ತಿ ಸಾರಿ, ವೇದಾದಿಗಳಿಗೆ ಅದ್ವೈತಪರ ಭಾಷ್ಯವನ್ನು ಬರೆಯುವಂತೆ ಹೇಳಿದನಂತೆ. ಶಂಕರರು ಸೂತ್ರಭಾಷ್ಯವನ್ನು ರಚಿಸಿದ್ದು ಅವರ ಹನ್ನೆರಡನೇ ವಯಸ್ಸಿನಲ್ಲಿ ಎನ್ನಲಾಗುತ್ತದೆ. ಆಮೇಲೆ ಭಗವದ್ಗೀತೆ ಹಾಗೂ ವೇದಾಂತಗಳಿಗೆ ಭಾಷ್ಯವನ್ನೂ ರಚಿಸಿದರು. ಈ ಭಾಷ್ಯಗಳಿಗೆ ಆಕಾಲದ ಸುಪ್ರಸಿದ್ಧ ವಿದ್ವಾಂಸರಾದ ಕುಮಾರಿಲಭಟ್ಟರಿಂದ ವಾರ್ತಿಕೆಯನ್ನು ಬರೆಯಿಸಬೇಕೆಂದು ಶಂಕರರಿಗೆ ಅಭಿಲಾಷೆಯುಂಟಾಯಿತು. ಭರತಖಂಡದಲ್ಲೆಲ್ಲ ಅವೈದಿಕರು ತಲ್ಲಣಗೊಳ್ಳುವ ಹೆಸರದು. ಕುಮಾರಿಲ ಭಟ್ಟರು ವಾದಕ್ಕೆ ಕರೆದರೆಂದರೆ ಮಹಾಮಹಾ ಬೌದ್ಧ ವಿದ್ವಾಂಸರ ಬಾಯಿಪಸೆ ಒಣಗಿಹೋಗುತ್ತಿತ್ತು. ಆ ಪಾಖಂಡಿಯ ಜೊತೆ ವಾದಕ್ಕೆ ಕೂರುವುದು ತಮ್ಮ ಧರ್ಮಕ್ಕೆ ಮಾಡುವ ಅವಮಾನವೆಂದು ಹೆಚ್ಚಿನವರೆಲ್ಲ ಭಟ್ಟರೆದುರು ಕೂರುವುದನ್ನು ತಪ್ಪಿಸಿಕೊಳ್ಳುತ್ತಿದ್ದರು. ಮಾಧ್ಯಮಿಕರ ನಿರಾಲಂಬವಾದವನ್ನೂ, ಬೌದ್ಧರ ಶೂನ್ಯವಾದವನ್ನೂ ಖಂಡಿಸಿ ವೇದಪ್ರಾಮಣ್ಯವನ್ನು ಸಿದ್ಧಪಡಿಸಿದ ಮಹಾಪುರುಷರಿವರು. ’ವ್ಯವಹಾರೇ ಭಾಟ್ಟನಯಃ’ ಎಂದು ವಿರೋಧಿಗಳಾದ ಅದ್ವೈತಿಗಳೂ ಇವರ ವಾದಕ್ಕೆ ತಲೆದೂಗಿದ್ದರು. ಋಗ್ವೇದಕ್ಕೆ ಭಾಷ್ಯ ಬರೆದ ಸ್ಕಂದಸ್ವಾಮಿಗೂ, ಶತಪಥ ಬ್ರಾಹ್ಮಣದ ಮೇಲೆ ಭಾಷ್ಯ ಬರೆದ ಹರಿಸ್ವಾಮಿಗೂ, ನಿರುಕ್ತದ ಮೇಲೆ ಭಾಷ್ಯವನ್ನು ಬರೆದ ಮಹೇಶ್ವರಾಚಾರ್ಯನಿಗೂ ಕುಮಾರಿಲರ ಅಭಿಪ್ರಾಯಗಳೇ ಆಧಾರ. ಶ್ಲೋಕವಾರ್ತಿಕ, ತಂತ್ರವಾರ್ತಿಕ, ಟುಪ್‍ಟೀಕಾಗಳ ಮೂಲಕ ಶಬರಸ್ವಾಮಿಗಳ ಭಾಷ್ಯಕ್ಕೆ ವಾರ್ತಿಕೆಯನ್ನು ಬರೆದು ಪೂರ್ವಮೀಮಾಂಸಾ ದರ್ಶನವನ್ನು ಜಗದ್ವಿಖ್ಯಾತಗೊಳಿಸಿದ ಕೀರ್ತಿ ಕುಮಾರಿಲರದ್ದು. ಅದ್ವೈತಿಗಳು ಬ್ರಹ್ಮಸತ್ಯವೆಂದರೆ ಮೀಮಾಂಸಕರು ದೇವರ ಬಗ್ಗೆಲ್ಲ ತಲೆಕೆಡಿಸಿಕೊಳ್ಳುವವರಲ್ಲ. ಅವರಿಗೆ ದೇವರಿರಲೀ, ಇಲ್ಲದಿರಲೀ ಎರಡೂ ಒಂದೇ. ಆದರೆ ವೇದಗಳು ಮಾತ್ರ ಸ್ವತಃ ಪ್ರಮಾಣವೆಂದು ಮೀಮಾಂಸಕರ ಅಭಿಮತ. ವೈದಿಕ ದರ್ಶನದ ಮಜವೇ ಅದು. ಷಡ್ದರ್ಶನಗಳಲ್ಲಿ ನ್ಯಾಯ ಮತ್ತು ವೈಶೇಷಿಕ ದರ್ಶನಗಳು ಮೂಲವಾಗಿ ನಿರೀಶ್ವರ ದರ್ಶನಗಳು. ಸಾಂಖ್ಯರೂ ದೇವರನ್ನು ಒಪ್ಪುವುದಿಲ್ಲ. ಯೌಗಿಕರೂ ಸಾಂಖ್ಯರಂತೆಯೇ. ಯೋಗ ಸಾಂಖ್ಯಗಳೆರಡೂ ಮುಂದೆ ಒಂದಾಗಿ ಕಲೆತುಹೋದವು. ಮೀಮಾಂಸಕರು ದೇವರಿಗೆ ತುಂಬ ಸೀಮಿತ ಅಧಿಕಾರವನ್ನು ನೀಡುತ್ತಾರೆ. ಹಾಗಿದ್ದರೂ ಇವೆಲ್ಲ ಅಪ್ಪಟ ಆಸ್ತಿಕ ವೈದಿಕ ದರ್ಶನಗಳು(ವೇದಗಳನ್ನು ಒಪ್ಪಿಕೊಳ್ಳದಿದ್ದವರನ್ನು ನಾಸ್ತಿಕರೆಂದು ಕರೆದರೇ ವಿನಹ ದೇವರನ್ನು ಒಪ್ಪಿಕೊಳ್ಳದಿದ್ದವರನ್ನಲ್ಲ ಎಂಬುದನ್ನು ಗಮನಿಸಬೇಕು). ಪೂರ್ಣಪ್ರಮಾಣದಲ್ಲಿ ದೇವರನ್ನೊಪ್ಪುವವರು ವೈದಿಕ ದರ್ಶನದ ಆರನೇ ಶಾಖೆಯಾದ ವೇದಾಂತಿಗಳೇ. ಪೂರ್ವ ಮೀಮಾಂಸದ ಪದ್ಧತಿಯನ್ನು ಅಳವಡಿಸಿಕೊಂಡು ಉಪನಿಷತ್ತುಗಳು, ಬ್ರಹ್ಮಸೂತ್ರಗಳು ಮತ್ತು ಗೀತೆಯಲ್ಲಿರುವ ಸತ್ಯಗಳನ್ನು ಸಮನ್ವಯಗೊಳಿಸಲು ಪ್ರಯತ್ನಿಸಿದ್ದರಿಂದ ವೇಂದಾತ ದರ್ಶನಕ್ಕೆ ಉತ್ತರ ಮೀಮಾಂಸೆಯೆಂಬ ಹೆಸರೂ ಇದೆ. ನಮ್ಮ ಈಗಿನ ದೇವರುಗಳೆಲ್ಲ ವೇದಾಂತದ ದ್ವೈತಾದ್ವೈತ, ವಿಶಿಷ್ಟಾದ್ವೈತ, ಅಚಿಂತ್ಯ ಅಬೇಧವೇತ್ಯಾದಿ ಶಾಖೋಪಶಾಖೆಗಳಲ್ಲಿ ಸೃಷ್ಟಿಯಾದವೇ. ಅದು ಬೇರೆಯೇ ವಿಚಾರ ಬಿಡಿ. ಬೌದ್ಧಮತದ ಒಳರಹಸ್ಯವನ್ನೆಲ್ಲ ತಿಳಿಯಲು ನಾಲಂದದ ಮುಖ್ಯಸ್ಥ ಧರ್ಮಪಾಲಯಲ್ಲಿ ಶಿಷ್ಯನಾಗಿ ಕುಮಾರಿಲರು ಸೇರಿಕೊಂಡರು. ವೈದಿಕ ಮತವನ್ನು ಖಂಡಿಸಿ ಗುರುಗಳು ಪಾಠಮಾಡಿದಾಗಲೆಲ್ಲ ಕುಮಾರಿಲರ ಕಣ್ಣಂಚು ಒದ್ದೆಯಾಗುತ್ತಿತ್ತು. ಸುತ್ತಲಿದ್ದ ಸಹಪಾಠಿಗಳು, ಗುರುಗಳು ಇದನ್ನು ಗಮನಿಸಿದರು. ಪ್ರಚ್ಛನ್ನ ಬೌದ್ಧನ ವೇಷದಲ್ಲಿ ಸೇರಿಕೊಂಡವನ ನಿಜರೂಪ ತಿಳಿಯಲು ಅವರಿಗೆ ತುಂಬ ಹೊತ್ತೇನೂ ಬೇಕಾಗಲಿಲ್ಲ. ಆದರೆ ಹಾಗೆ ಬಂದವ ಕುಮಾರಿಲಭಟ್ಟರೆಂಬುದು ಗೊತ್ತಾದಾಗ ಮಾತ್ರ ನಾಲಂದದ ಬೌದ್ಧ ಭಿಕ್ಕುಗಳಿಗೆ ಕಾಲಡಿಯ ನೆಲ ಬಿರಿದ ಅನುಭವ. ಎದುರಿಗಿರುವ ಆಸಾಮಿ ಅಂಥಿಂಥವನಲ್ಲ. ವೈದಿಕ ಧರ್ಮದ ವಿರೋದಿಗಳೇ ಪ್ರಬಲರಾಗಿದ್ದ ಕಾಲದಲ್ಲಿ ಬೌದ್ಧಮತವನ್ನು ಖಂಡತುಂಡವಾಗಿ ಖಂಡಿಸಿ ಚೆಂಡಾಡಿ ವೈದಿಕ ಧರ್ಮದ ಪಕ್ಷವನ್ನು ಹಿಡಿದು ಅದನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಮಹಾಮೀಮಾಂಸಕ. ಆದರೆ ಒಬ್ಬನೇ ಸಿಕ್ಕಿದಾಗ ಬಿಡುತ್ತಾರೆಯೇ? ಸಮಯ ಸಾಧಿಸಿ ತಲೆಗೊಂದರಂತೆ ಏಟು ಹಾಕಿ ಬೆಟ್ಟದ ತುದಿಯಿಂದ ಕುಮಾರಿಲರನ್ನು ಕೆಳಗೆ ತಳ್ಳಿದರು. ’ವೇದಗಳು ಪ್ರಮಾಣವಾದರೆ ನನಗೆ ಯಾವ ಅಪಾಯವೂ ಆಗದಿರಲಿ’ ಎಂದು ಭಟ್ಟರು ಕೂಗಿಕೊಂಡರಂತೆ. ಬೆಟ್ಟದಿಂದ ಕಂದಕಕ್ಕೆ ಬಿದ್ದರೂ ಕುಮಾರಿಲರಿಗೆ ಏನೂ ಆಗಲಿಲ್ಲ. ಆದರೆ ಸಣ್ಣ ಕಲ್ಲೊಂದು ತಾಗಿ ಕಣ್ಣಿಗೆ ಗಾಯವಾಯಿತಂತೆ. ಮೀಮಾಂಸಕ ಮತದಲ್ಲಿ ವೇದಗಳು ಸ್ವತಃ ಪ್ರಮಾಣವಾದವು. ಅಂಥದ್ದರಲ್ಲಿ ’ಪ್ರಮಾಣವಾದರೆ’ ಎಂಬ ಸಂಶಯವನ್ನು ಸೂಚಿಸಿದ್ದರಿಂದಲೂ ಪ್ರಚ್ಛನ್ನವೇಷದಲ್ಲಿ ಶಾಸ್ತ್ರಶ್ರವಣ ಮಾಡಿದ್ದರಿಂದಲೂ ಒಂದು ಕಣ್ಣಿಗೆ ಗಾಯವಾಯಿತೆಂದು ಕಥೆ. ವೇದ ಮಹಾತ್ಮ್ಯವನ್ನರಿಯದೇ ವೇಷಾಂತರಿಯಾಗಿ ವಿರೋಧಿಯ ರಹಸ್ಯವನ್ನರಿತು ಸೋಲಿಸುವ ಲೌಕಿಕ ಕುತಂತ್ರವನ್ನು ಮಾಡಿದ್ದರಿಂದ, ಶಿಷ್ಯನೆಂದು ನಂಬಿದ ಗುರುವಿಗೆ ವಂಚನೆ ಮಾಡುವಂಥದ ವೇದವಿರೋಧಿ ಕರ್ಮದಲ್ಲಿ ತೊಡಗಿದ್ದರಿಂದ ಕುಮಾರಿಲರು ದೇಹತ್ಯಾಗಕ್ಕೆ ನಿರ್ಧರಿಸಿದರು.
       ಆ ಕಾಲದಲ್ಲಿ ವೈದಿಕರೂ ಬೌದ್ಧರೂ ಒಬ್ಬರ ಶಾಸ್ತ್ರವನ್ನು ಇನ್ನೊಬ್ಬರು ಕಲಿತು ಪರಸ್ಪರ ಖಂಡನೆ ಮಂಡನೆಗಳನ್ನು ಮಾಡುತ್ತಿದ್ದರೆಂಬುದು ಕುಮಾರಿಲರ ಕಥೆಯಿಂದ ಸ್ಪಷ್ಟ. ಆದರೆ ಕುಮಾರಿಲರನ್ನು ಗುಡ್ಡದ ತುದಿಯಿಂದ ತಳ್ಳಿದ, ಪ್ರಾಯಶ್ಚಿತ್ತಕ್ಕೆಣಿಸಿದ ಕಥೆಗಳು ಒಂದೊಂದು ಶಂಕರವಿಜಯದಲ್ಲಿ ಒಂದೊಂದು ತೆರನಾಗಿದೆ. ಬ್ರಾಹ್ಮಣನೆಂದು ತಿಳಿದು ಬೌದ್ಧರು ಕುಮಾರಿಲರನ್ನು ಹೊರಹಾಕಿದಾಗ ಅವರನ್ನೆಲ್ಲ ವಾದದಲ್ಲಿ ಜಯಿಸಿ ಸುಧನ್ವ ರಾಜನ ಸಹಾಯದಿಂದ ಅವರ ತಲೆಕಡಿಸಿದರೆನ್ನುತ್ತದೆ ಚಿದ್ವಿಲಾಸೀಯ. ಅನಂತಾನಂದಗಿರೀಯದ ಒಂದು ಕಥೆಯ ಪ್ರಕಾರ ರಾಜನು ಗಡಿಗೆಯಲ್ಲಿ ಸರ್ಪವನ್ನಿಟ್ಟು ಇದೇನೆಂಬ ಪ್ರಶ್ನೆ ಹಾಕಿದನಂತೆ. ಬೌದ್ಧ ವಿದ್ವಾಂಸರು ’ಇದರಲ್ಲಿ ಹಾವಿದೆ’ ಎಂದರು. ಕುಮಾರಿಲರು ’ಅದರಲ್ಲಿ ಶೇಷಶಾಯಿಯಾದ ವಿಷ್ಣುವಿದ್ದಾನೆ’ ಎಂದರು. ರಾಜನು ಗಡಿಗೆಯನ್ನು ತೆಗೆದು ನೋಡಲಾಗಿ ಸರ್ಪವು ವಿಷ್ಣುವಿನ ವಿಗ್ರಹವಾಗಿ ಬದಲಾಗಿತ್ತು, ರಾಜ ಕುಮಾರಿಲರ ಶಿಷ್ಯನಾಗಿ ಬೌದ್ಧರ ತಲೆಕಡಿಸಿ ಕಾಳ್ಗಿಚ್ಚಿಗಿಟ್ಟ. ಬೆಟ್ಟದಿಂದ ಬಿದ್ದರೂ ಎದ್ದು ಬಂದ ಪವಾಡ ಬೇರೆ. ಬುದ್ಧನ ಪವಾಡಗಳನ್ನು ಶ್ಲೋಕವಾರ್ತಿಕದ ಚೋದನಾಸೂತ್ರದಲ್ಲಿ ಹಾಸ್ಯಮಾಡಿದ ಭಟ್ಟರು ಇಂಥ ಅದ್ಭುತದರ್ಶನಗಳಿಗೆಲ್ಲ ಬೆಲೆಕೊಡುತ್ತಾರೆಂಬುದಕ್ಕೆ ಯಾವ ಆಧಾರವೂ ಇಲ್ಲ. ಇದೆಲ್ಲ ಶಂಕರವಿಜಯಕಾರರ ಕಲ್ಪನಾ ಸಾಮ್ರಾಜ್ಯ ಮಾತ್ರ.
ದ್ವಾರಕಾಮಠದಲ್ಲಿರುವ ಕುಮಾರಿಲ ಶಂಕರ ಸಮಾಗಮದ ಉಬ್ಬುಶಿಲ್ಪ
       ಅದೇನೇ ಆದರೂ ಕುಮಾರಿಲರು ತುಷಾಗ್ನಿ ಪ್ರವೇಶ ಮಾಡಿದ್ದೂ ಹಾಗೂ ಆ ಸಮಯದಲ್ಲಿ ಅವರನ್ನು ಶಂಕರರು ಭೇಟಿಯಾದ ಬಗ್ಗೆ ಎಲ್ಲ ಶಂಕರ ವಿಜಯಗಳಲ್ಲೂ ಸಹಮತವಿದೆ. ವ್ಯಾಸಾಚಲೀಯದ ಪ್ರಕಾರ ಆಚಾರ್ಯರು ತಮ್ಮ ಸೂತ್ರಗಳಿಗೆ ವಾರ್ತಿಕೆಯನ್ನು ಬರೆಸಲು ಕುಮಾರಿಲರನ್ನು ಹುಡುಕಿಕೊಂಡು ಪ್ರಯಾಗಕ್ಕೆ ಬಂದಾಗ ಹೊಟ್ಟಿನ ಮಧ್ಯೆ ಬೇಯುತ್ತಿದ್ದ ಭಟ್ಟಪಾದರನ್ನು ಕಂಡರು. ಅನಂತಾನಂದಗಿರೀಯ, ಚಿದ್ವಿಲಾಸೀಯ ಮತ್ತು ಆನಂದಗಿರೀಯದಂತೆ ಆಚಾರ್ಯರು ಕಾಶಿಯಲ್ಲಿದ್ದಾಗ ಕುಮಾರಿಲರ ಮಹಿಮೆಯನ್ನು ತಿಳಿದು ಅವರನ್ನು ಹುಡುಕಿಕೊಂಡು ದಕ್ಷಿಣದ ರುದ್ಧಪುರಿಗೆ ಬಂದರು. ಈ ರುದ್ದಪುರಿ ಈಗಿನ ಆಂಧ್ರದ ಅನಂತಪುರ ಜಿಲ್ಲೆಯ ರೊದ್ದಂ ಆಗಿರಬೇಕು. ಕುಮಾರಿಲರ ತಂತ್ರವಾರ್ತಿಕದಲ್ಲಿ ಬರುವ ದ್ರಾವಿಡಪದಗಳ ಹೇರಳ ಪ್ರಯೋಗವೂ ಅವರನ್ನು ದಾಕ್ಷಿಣಾತ್ಯನೆಂದೇ ಸೂಚಿಸುತ್ತದೆ. ಶಂಕರರು ಕುಮಾರಿಲರನ್ನು ಭೇಟಿಯಾದದ್ದೂ ಕೂಡ ಇಲ್ಲಿಯೇ .
       ತುಷಾಗ್ನಿಯ ಮಧ್ಯದಲ್ಲಿದ್ದಾಗೆ ಆಚಾರ್ಯರನ್ನು ಭೇಟಿಯಾದ ಭಟ್ಟರು ಮಗಧದಲ್ಲಿ ಮಹಾವೈದಿಕನಾದ ವಿಶ್ವರೂಪನೆಂಬ ತಮ್ಮೊಬ್ಬ ಶಿಷ್ಯನನ್ನು ಜಯಿಸುವಂತೆ ಶಂಕರರಿಗೆ ಸೂಚಿಸುತ್ತಾರೆ(’ಸ ವಿಶ್ವರೂಪಃ ಪ್ರಥಿತೋ ಮಹೀತಲೇ’). ಮಾಧವೀಯದಲ್ಲೂ ಸರಿಸುಮಾರು ಇದೇ ವೃತ್ತಾಂತವಿದೆ. ’ಶಬರಭಾಷ್ಯಕ್ಕೆ ವಾರ್ತಿಕವನ್ನು ಬರೆದಂತೆ ತಮ್ಮ ಭಾಷ್ಯಕ್ಕೂ ಬರೆಯುವ ಭಾಗ್ಯವಿಲ್ಲದೇ ಹೋಯಿತು. ಪ್ರಾಯಶ್ಚಿತ್ತವನ್ನು ಕೈಗೊಳ್ಳದೇ ಇದ್ದಿದ್ದರೆ ತಮ್ಮ ಮೊದಲನೇಯ ಅಧ್ಯಾಸಭಾಷ್ಯಕ್ಕೇ ಎಂಟು ಸಾವಿರ ವಾರ್ತಿಕೆಗಳನ್ನು ಬರೆಯಬಹುದಿತ್ತು. ಮಾಹಿಷ್ಮತಿಯಲ್ಲಿ ವಿಶ್ವರೂಪನೆಂಬ ನನ್ನ ಶಿಷ್ಯನಿದ್ದಾನೆ. ದೂರ್ವಾಸನ ಶಾಪದಿಂದ ಪ್ರಭಾವದಿಂದ ಭುವಿಯ ಮೇಲೆ ಜನಿಸಿದ ಸ್ವತಃ ಸರಸ್ವತಿಯೇ ಉಭಯಭಾರತಿಯೆಂಬ ಹೆಸರಿನಿಂದ ಅವನ ಹೆಂಡತಿಯಾಗಿದ್ದಾಳೆ. ತಮ್ಮ ಸೂತ್ರಭಾಷ್ಯಕ್ಕೆ ವ್ಯಾಖ್ಯಾನವನ್ನು ಬರೆಯಲು ಅವನೇ ಸರಿಯಾದ ವ್ಯಕ್ತಿ’ ಎನ್ನುತ್ತಾರೆ ಕುಮಾರಿಲರು. ಚಿದ್ವಿಲಾಸೀಯದ ಪ್ರಕಾರ ಮಂಡನಮಿಶ್ರರೆಂಬ ಭಟ್ಟಪಾದರ ಶಿಷ್ಯನಿದ್ದುದು ಕಾಶ್ಮೀರದಲ್ಲಿ. ಆತ ಸ್ವತಃ ಬ್ರಹ್ಮನ ಅಂಶದಿಂದ ಹುಟ್ಟಿದವನು. ದೂರ್ವಾಸರ ಸ್ವರಸ್ಖಾಲಿತ್ಯವನ್ನು ಕೇಳಿ ನಕ್ಕ ತಪ್ಪಿಗಾಗಿ ಶಾಪದಿಂದ ಸರಸ್ವತಿಯು ಭಾರತಿಯಾಗಿ ಜನಿಸಿ ಅವನ ಪತ್ನಿಯಾದಳಂತೆ. ಮನುಷ್ಯರೂಪನಾದ ಶಿವನನ್ನು ಕಂಡಕೂಡಲೇ ಅವಳಿಗೆ ಶಾಪಮೋಕ್ಷವೆಂದು ವಿಮೋಚನೆಯ ದಾರಿಯನ್ನೂ ಚಿದ್ವಿಲಾಸಕಾರನೇ ಸೂಚಿಸಿದ್ದಾನೆ. ಆನಂದಗಿರೀಯದಂತೆ ಮಂಡನ ಕುಮಾರಿಲರ ತಂಗಿಯ ಗಂಡ. ಮಾಧವೀಯದಂತೆ ಕುಮಾರಿಲರಿಗೆ ಮಂಡನ ಮತ್ತು ಪ್ರಭಾಕರರೆಂಬ ಇಬ್ಬರು ಶಿಷ್ಯರು. ಈ ಪ್ರಭಾಕರನು ಪೂರ್ವಮೀಮಾಂಸೆಯ ಮಹಾ ಪಂಡಿತ ಪ್ರಾಭಾಕರ ಮತದ ಪ್ರಭಾಕರನೇ ಅಲ್ಲವೇ ಎಂಬುದು ಪ್ರಶ್ನಾರ್ಹ ವಿಚಾರ.
(ಒಂದು ಕೃತಿಯನ್ನು ವಿವರಿಸಿ ಬರೆಯುವುದನ್ನೇ ಭಾಷ್ಯವೆಂದೂ, ಟೀಕಿಸಿ ಬರೆಯುವುದನ್ನೇ ಟೀಕೆಯೆಂದೂ ಹೆಚ್ಚಿನವರು ತಿಳಿದಿದ್ದಾರೆ. ರಾಜಶೇಖರನ ಕಾವ್ಯಮೀಮಾಂಸೆಯನ್ನು ನೋಡಿದರೆ ಅವುಗಳ ವ್ಯತ್ಯಾಸ ಸುಲಭಗ್ರಾಹ್ಯ. "ಸೂತ್ರಾಣಾಂ ಸಕಲಸಾರವಿವರಣಂ ವೃತ್ತಿಃ | ಸೂತ್ರವೃತ್ತಿವಿವೇಚನಂ ಪದ್ಧತಿಃ | ಆಕ್ಷಿಪ್ಯ ಭಾಷಣಾದ್ ಭಾಷ್ಯಮ್ | ಅಂತರ್ಭಾಷ್ಯಂ ಸಮೀಕ್ಷಾ | ಅವಾಂತರಾರ್ಥವಿಚ್ಛೇದಶ್ಚ ಸಾ | ಯಥಾಸಂಭವಮರ್ಥಸ್ಯ ಟೀಕನಂ ಟೀಕಾ | ವಿಷಮಪದಭಂಜಿಕಾ ಪಂಜಿಕಾ | ಅರ್ಥಪ್ರದರ್ಶನಕಾರಿಕಾ ಕಾರಿಕಾ | ಉಕ್ತಾನುಕ್ತದುರುಕ್ತಚಿಂತಾ ವಾರ್ತಿಕಮಿತಿ ಶಾಸ್ತ್ರಭೇದಾಃ |" - ಸೂತ್ರಗಳ ತಾತ್ಪರ್ಯವನ್ನು ವಿವರಿಸುವ ವ್ಯಾಖ್ಯಾನಕ್ಕೆ ವೃತ್ತಿಯೆಂದು ಹೆಸರು. ಇಂತಹ ಸೂತ್ರವೃತ್ತಿಗಳ ವಿವೇಚನೆಯೇ ಪದ್ಧತಿ. ಅನೇಕ ಆಕ್ಷೇಪಗಳನ್ನೆತ್ತಿ ಅದಕ್ಕೆ ಸಮುಚಿತವಾದ ಉತ್ತರವನ್ನು ರೂಪಿಸುವ ಸಿದ್ಧಾಂತವನ್ನು ನಿರ್ಣಯಿಸುವುದೇ ಭಾಷ್ಯ. ಭಾಷ್ಯದ ಅವಾಂತರ ಮತ್ತು ಗರ್ಭಿತ ಅರ್ಥಗಳ ಸ್ಪಷ್ಟೀಕರಣವೇ ಸಮೀಕ್ಷಾ. ಉಚಿತ ಅರ್ಥಗಳ ಪ್ರತಿಪಾದನೆಯೇ ಟೀಕಾ. ಕಠಿಣ ಶಬ್ದಗಳ ಅರ್ಥವನ್ನು ಸರಳ ಶಬ್ದಗಳಿಂದ ವಿವರಿಸುವುದೇ ಪಂಜಿಕಾ. ಸೂತ್ರಾರ್ಥವನ್ನು ಸರಳವಾಗಿ ಪ್ರದರ್ಶಿಸುವುದೇ ಕಾರಿಕಾ. ಸೂತ್ರಗಳಲ್ಲಿ ಹೇಳಿದ, ಹೇಳದ, ಕಠಿಣವಾಗಿ ಹೇಳಿದ ವಿಷಯಗಳ ವಿವೇಅನೆಯೇ ವಾರ್ತಿಕಾ. ಇದು ಶಾಸ್ತ್ರಗಳ ವಿಭಾಗ ಕ್ರಮ.)
ಮಂಡನ ಮಿಶ್ರರೊಡನೆ ಶಂಕರರ ವಾದ
       ಈ ಮಂಡನಮಿಶ್ರ ಅಥವಾ ವಿಶ್ವರೂಪರೇ ಮುಂದೆ ಶಂಕರರಿಂದ ವಾದದಲ್ಲಿ ಸೋತು ಸಂನ್ಯಾಸ ಸ್ವೀಕರಿಸಿ ಸುರೇಶ್ವರರೆಂಬ ಅಭಿದಾನದಿಂದ ವಿಖ್ಯಾತರಾದರು. ಶೃಂಗೇರಿ, ಕಂಚಿ, ದ್ವಾರಕಾಪೀಠಗಳಿಗೆ ಸಾವಿರ ವರ್ಷಗಳಿಗೂ ಮಿಕ್ಕಿ ಕಾಲವ್ಯತ್ಯಾಸದಲ್ಲಿ ಸುರೇಶ್ವರರು ಮೊದಲ ಪೀಠಾಧಿಪತಿಗಳಾಗಿದ್ದ ಆಶ್ಚರ್ಯವನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ. ಆದರೆ ಈ ಮಂಡನಮಿಶ್ರ ಮತ್ತು ಕೆಲ ಶಂಕರವಿಜಯಗಳಲ್ಲಿ ಹೇಳಲಾಗಿರುವ ವಿಶ್ವರೂಪ ಇವರಿಬ್ಬರೂ ಒಬ್ಬರೇ ಅಥವಾ ಬೇರೆಬೇರೆಯೇ? ಮಾಧವೀಯದಲ್ಲೇ ಐದನೇ ಸರ್ಗದಲ್ಲಿ ಮಂಡನನಿಗೆ ಬ್ರಹ್ಮವಾದವನ್ನು ಉಪದೇಶಿಸಿದ ವೃತ್ತಾಂತವಿದ್ದರೆ(’ತ್ಯಕ್ತ್ವಾ ಮಂಡನಭೇದಗೋಚರಧಿಯಂ ಮಿಥ್ಯಾಭಿಮಾನಾತ್ಮಿಕಾ’), ಎಂಟನೇ ಅಧ್ಯಾಯದಲ್ಲಿ ’ಅಥ ಪ್ರತಸ್ಥೇ ಭಗವಾನ್ ಪ್ರಯಾಗಾತ್, ದಿದೃಕ್ಷಮಾಣೋ ಗೃಹಿವಿಶ್ವರೂಪಮ್’ ಎಂದು ಗೃಹಸ್ಥನಾದ ವಿಶ್ವರೂಪನನ್ನು ನೋಡಲು ಆಚಾರ್ಯರು ಯೋಗಬಲದಿಂದ ಅವನ ಮನೆಯಂಗಳದಲ್ಲಿ ಇಳಿಯುತ್ತಾರೆ!. ಗುರುವಂಶಕಾವ್ಯ, ವ್ಯಾಸಾಚಲೀಯದಲ್ಲೂ ಮಂಡನ ವಿಶ್ವರೂಪರನ್ನು ಬೇರೆಬೇರೆಯಾಗಿಯೇ ಉಲ್ಲೇಖಿಸಲಾಗಿದೆ. ಯಾಜ್ಞವಲ್ಕ್ಯಸ್ಮೃತಿಗೆ ಬಾಲಕ್ರೀಡಾ ವ್ಯಾಖ್ಯಾನವನ್ನು ಬರೆದವರು ವಿಶ್ವರೂಪರೆಂದು ಪ್ರಸಿದ್ಧಿ. ಶಂಕರರ ದಕ್ಷಿಣಾಮೂರ್ತಿ ಸ್ತೋತ್ರಕ್ಕೆ ಮಾನಸೋಲ್ಲಾಸ ವ್ಯಾಖ್ಯಾನವನ್ನು ಬರೆದವರೂ ವಿಶ್ವರೂಪರೆಂದು ಅದರ ವ್ಯಾಖ್ಯಾನಕಾರರು ಹೇಳುತ್ತಾರೆ. ಶಾಂಕರಪರಂಪರೆಯಲ್ಲಿ ಸಂನ್ಯಾಸಿಗಳು ಪೂಜಿಸುವ ’ಆಚಾರ್ಯ ಪಂಚಕ’ದಲ್ಲಿ ಸುರೇಶ್ವರರ ಹೆಸರಿಲ್ಲ. ಆದರೆ ಧರ್ಮಸಿಂಧುವೇತ್ಯಾದಿಗಳು ವಿಶ್ವರೂಪಾಚಾರ್ಯರನ್ನೇ ಹೆಸರಿಸಿವೆ. ಗೃಹಸ್ಥನಾಗಿದ್ದ ವಿಶ್ವರೂಪನನ್ನು ಶಾಂಕರ ಪರಂಪರೆಯಲ್ಲಿ ಮಠಾಧಿಪತಿಯ ಪದವಿಯಲ್ಲಿಟ್ಟದ್ದು ಹೇಗೆ ಸರಿಯಾದೀತು?
       ಇನ್ನು ಶಂಕರರು ಮಂಡನಮಿಶ್ರರನ್ನು ಎಲ್ಲಿ ಜಯಿಸಿದರೆಂಬುದೂ ಚರ್ಚಾರ್ಹವೇ. ಮಾಧವೀಯದಲ್ಲಿ ಪ್ರಯಾಗವೆಂದಿದ್ದರೆ, ವ್ಯಾಸಾಚಲೀಯದಲ್ಲಿ ಮಾಹಿಷ್ಮತಿಯೆಂದಿದೆ. ಪ್ರಾಚೀನ ಹಾಗೂ ಬೃಹಚ್ಛಂಕರ ವಿಜಯಗಳಲ್ಲಿ ಮತ್ತು ಗುರುರತ್ನಮಾಲಿಕೆಯಲ್ಲಿರುವಂತೆ ’ಪಟುಮಂಡನಮಿಶ್ರಖಂಡನಾರ್ಥಂ ಪ್ರವಿಶನ್ಪದ್ಮವನಂ ನವಂ ಜಯಾರ್ಥಮ್’ ಮಂಡನಮಿಶ್ರರನ್ನು ಜಯಿಸಿದ್ದು ಪದ್ಮವನವೆಂಬ ಅಗ್ರಹಾರದಲ್ಲಿ. ಅದೇನೆ ಆದರೂ ಮಂಡನರೊಡಗಿನ ಆಚಾರ್ಯರ ವಾದ ವಿವಾದಾತೀತ. ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರಿಬ್ಬರ ವಾದಗಳ ಸೊಬಗನ್ನು ಭೈರಪ್ಪನವರ ’ಸಾರ್ಥ’ದಲ್ಲಿ ಓದಿ ಆಸ್ವಾದಿಸುವ ಸೊಗಸೇ ಬೇರೆ!. ಮಂಡನರ ಸೋಲು ಅರಿತ ಪತ್ನಿ ಉಭಯಭಾರತಿ ಬಾಲಸನ್ಯಾಸಿ ಆಚಾರ್ಯರಿಗೆ ಕಾಮಶಾಸ್ತ್ರದ ಮೇಲಿನ ಪ್ರಶ್ನೆಯನ್ನು ಹಾಕುತ್ತಾಳೆ. ಒಂದು ತಿಂಗಳ ಸಮಯಾವಕಾಶ ಕೋರಿದ ಶಂಕರರು ಅಮರುಕ ರಾಜನ ಶರೀರದೊಳಗೆ ಪರಕಾಶಪ್ರವೇಶ ಮಾಡಿಬಂದು ಈ ಪ್ರಶ್ನೆಗೆ ಉತ್ತರಿಸಿದರೆಂದು ಮಾಧವೀಯ ಮೂಲದ ಪ್ರಸಿದ್ಧ ಪ್ರತೀತಿ.(ಹೀಗೆ ಪರಕಾಯ ಪ್ರವೇಶದ ಸಂದರ್ಭದಲ್ಲಿಯೇ ಅಮರುಕ ಸಂಸ್ಕೃತದ ಸಾರ್ವಕಾಲಿಕ ಶ್ರೇಷ್ಟ ಶೃಂಗಾರ ಕೃತಿ ಅಮರುಶತಕವನ್ನು ಬರೆದನೆಂದು ಹೇಳಲಾಗುವುದಾದರೂ ಅದಕ್ಕೆ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ). ಇದೇ ಕಥೆ ವ್ಯಾಸಾಚಲೀಯದಲ್ಲಿ ಸ್ವಲ್ಪ ಭಿನ್ನವಾಗಿದೆ. ಒಮ್ಮೆ ಶಂಕರರು ಗಂಗೆಯಲ್ಲಿ ನಿತ್ಯಾನುಷ್ಟಾನದಲ್ಲಿದ್ದಾಗ ಅವರಿಗೆ ಕಾಶ್ಮೀರದ ಶಾರದಾಪೀಠದ ಮಾಹಿತಿ ಕಿವಿಗೆ ಬಿತ್ತು. ಕಾಶ್ಮೀರದಲ್ಲಿ ಶಾರದಾದೇವಿಯ ಒಂದು ಪೀಠವಿದೆ. ಅದಿರುವ ಆಲಯಕ್ಕೆ ನಾಲ್ಕು ಬಾಗಿಲುಗಳು. ಸರ್ವಜ್ಞನಾದವನು ಮಾತ್ರ ಅದನ್ನೇರಬಹುದಾದುದರಿಂದ ಅದನ್ನು ಸರ್ವಜ್ಞ ಪೀಠವೆಂದೂ ಕರೆಯುತ್ತಾರೆ. ಈಗಾಗಲೇ ಪೂರ್ವ,ಪಶ್ಚಿಮ, ಉತ್ತರ ದೇಶದ ವಿದ್ವಾಂಸರು ಆ ಮೂರು ಬಾಗಿಲುಗಳನ್ನು ತೆರೆಸಿದ್ದಾರೂ, ದಕ್ಷಿಣದ ಬಾಗಿಲನ್ನು ದಕ್ಷಿಣದವರ್ಯಾರೂ ತೆರೆಸಲು ಸಾಧ್ಯವಾಗಿಲ್ಲ. ಇದನ್ನು ಕೇಳಿದ ಆಚಾರ್ಯರು ಆ ಬಾಗಿಲನ್ನು ತೆರೆಸಬೇಕೆಂದು ಶಾರದಾಲಯದ ದಕ್ಷಿಣ ದ್ವಾರಕ್ಕೆ ಬಂದರು. ಎದುರು ಬಂದ ಕಣಾದ, ನೈಯಾಯಿಕ, ಸಾಂಖ್ಯ, ಜೈಮಿನೀಯ, ಬೌದ್ಧ, ಜೈನ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿ ಸರ್ವಜ್ಞಪೀಠವನ್ನು ಹತ್ತಲು ಪ್ರಾರಂಭಿಸಿದಾಗ ಸ್ವತಃ ಶಾರದೆಯೇ ಆಚಾರ್ಯರೊಡನೆ ವಾದಕ್ಕೆ ಬಂದಳು. ಆಕೆ ಕೇಳಿದ ವಾತ್ಸಾಯನಯಂತ್ರದ ಪ್ರಶ್ನೆಗೆ ಉತ್ತರಿಸಲಾಗದೇ ಶಂಕರರು ಏಳು ದಿನಗಳ ಗಡುವು ಕೇಳಿ ಪರಕಾಯಪ್ರವೇಶಗೈದು ಎಂಟನೇ ದಿನ ತಿರುಗಿ ಬಂದು ಪ್ರಶ್ನೆಗಳಿಗೆಲ್ಲ ಉತ್ತರ ನೀಡಿದರಂತೆ. ಸ್ತ್ರೀಸಂಗವನ್ನು ಮಾಡಿ ಕಲಾರಾಸ್ಯವನ್ನು ಅರಿತುಕೊಂಡೆಯಾದ್ದರಿಂದ ನೀನು ಪರಿಶುದ್ಧನೇ ಎಂದು ಶಾರದೆ ತಿರುಗಿ ಪ್ರಶ್ನಿಸಿದಳಂತೆ. ಆಗ ಶಂಕರರು ಅನ್ಯದೇಹದಿಂದುಂಟಾದ ಕರ್ಮದಿಂದ ದೇಹಾಂತರಕ್ಕೆ ಪಾಪಲೇಪವಿಲ್ಲವೆಂದು ಹೇಳಿ ಆಕೆಯನ್ನು ನಿರುತ್ತರಳನ್ನಾಗಿಸಿ ಸರ್ವಜ್ಞಪೀಠವನ್ನು ಏರಿದರು. ಈ ಸಂಭಾಷಣೆ ಮಾಧವೀಯದಲ್ಲಿ ಹಾಗೂ ಸಾರ್ಥದಲ್ಲಿ ಉಭಯಭಾರತಿಯೊಡಗಿನ ವಾದದಲ್ಲಿ ಮೂಡಿಬಂದಿದೆ. ಕರ್ಮ ಫಲವು ಜನ್ಮಾಂತರದಲ್ಲಿಯೂ ಲೋಕಾಂತರದಲ್ಲಿಯೂ ಆಗುವುದೆಂದು ಶಾಸ್ತ್ರಾಧಾರವಿರುವಾಗ ಒಂದೇ ಜನ್ಮದಲ್ಲಿ ಒಂದು ದೇಹದಲ್ಲಿ ಮಾಡಿದ ಕರ್ಮವು ಇನ್ನೊಂದು ದೇಹದಲ್ಲಿರುವಾಗ ಅಂಟುವುದಿಲ್ಲವೆಂದು ಆಚಾರ್ಯರು ವಾದಿಸಿದರೆಂದು ಹೇಳುವುದು ಮಾತ್ರ ವಿಚಿತ್ರವಾಗಿದೆ. ಜೊತೆಗೆ ಸರ್ವಜ್ಞಪೀಠದ ಮೂರು ದಿಗ್ಭಾಗಗಳ ಬಾಗಿಲು ತೆರೆಯಿಸಲು ಕಾಶ್ಮೀರದ  ಪೂರ್ವೋತ್ತರ ಪಶ್ಚಿಮಗಳಲ್ಲಿ ಎಷ್ಟರ ಮಟ್ಟಿಗೆ ವೈದಿಕಮತ ವ್ಯಾಪಿಸಿತ್ತು? ವೈದಿಕ ಧರ್ಮದ ಮಹಾನ್ ಆಚಾರ್ಯರು, ವಿದ್ವಾಂಸರೆಲ್ಲ ಜನ್ಮತಳೆದಿದ್ದು ತೆರೆಯದೇ ಉಳಿದ ದಕ್ಷಿಣ ಭಾಗದಲ್ಲೇ ಅಲ್ಲವೇ! ಹಾಗೆಂದು ಈ ಕಥೆ ಪೂರ್ತಿ ಅತಾರ್ಕಿಕವಲ್ಲ. ಕಾಶ್ಮೀರದ ಶಾರದಾಮಂದಿರ ಬರಿಯ ಕವಿಕಲ್ಪನೆಯೂ ಅಲ್ಲ. ಶ್ರೀನಗರದಿಂದ ೧೩೦ ಕಿ.ಮೀ ದೂರದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರ್‌ಬಾದ್‌ ಪ್ರದೇಶದಲ್ಲಿ LOCಯಿಂದ ಕೆಲವೇ ಕಿಲೋಮೀಟರ್‌ಗಳಷ್ಟು ಸಮೀಪದ ಕಿಷನ್‌ಗಂಗಾ ಮೇಲ್ಭಾಗದ ನೀಲಂಕೊಲ್ಲಿ ಎಂಬಲ್ಲಿ ಶಾರದಿ ಎಂಬ ಗ್ರಾಮವಿದೆ. ಇದು ಸರಸ್ವತಿ ಅಥವಾ ಕಲ್ನೋತ್ರಿ ಹಾಗೂ ಮಧುಮತಿ ನದಿಗಳ ಸಂಗಮಸ್ಥಾನ. ಲೋಲಬ್‌ವ್ಯಾಲಿಯ ಉತ್ತರ ಮತ್ತು ಉಲಾರ್ ಸರೋವರದ ವಾಯುವ್ಯಕ್ಕೆ ಈ ಗ್ರಾಮವಿದೆ. ಝೀಲಂ ಅನ್ನು ಸೇರುವ ಬಳಿ ಕಿಷನ್‌ಗಂಗಾ ನದಿಯನ್ನು ದಾಟಿ ಹೋದರೆ ಈ ಸ್ಥಳ ಸಿಗುತ್ತದೆ. ೧೨ನೇ ಶತಮಾದಲ್ಲಿ ಕಲ್ಹಣ ಸರ್ಹಸಿಲ ಕೋಟೆಯ ವಿವರಣೆ ನೀಡುವಾಗ ಸಮೀಪದ ಶಾರದಾ ಮಂದಿರವನ್ನು ಕವಿಗಳು ಹಾಡಿಹೊಗಳುವ ಪುಣ್ಯಸ್ಥಾನವೆಂದು ಬಣ್ಣಿಸುತ್ತಾನೆ. ಮಾತ್ರವಲ್ಲ ರಾಜತರಂಗಿಣಿಯ ಪ್ರಕಾರ ಗೌಡ ದೇಶದ ರಾಜ ಲಲಿತಾದಿತ್ಯ ಬಂಗಾಳದಿಂದ ಕಾಶ್ಮೀರಕ್ಕೆ ಬಂದು ಈ ಮಂದಿರವನ್ನು ಸಂದರ್ಶಿಸಿದ್ದನಂತೆ. ಬಿಲ್ಹಣನ ವಿಕ್ರಮಾಂಕದೇವಚರಿತದಲ್ಲಿ ಶಾರದಾ ಮಂದಿರ ಮತ್ತು ಶಾರದಾ ತೀರ್ಥಗಳ ಪ್ರಸ್ತಾಪವಿದೆ. ಅವರಿಗಿಂತ ಹಿಂದಿನ ಅಲ್ಬೆರುನಿ ಲಢಾಕ್ ಮತ್ತು ಗಿಲ್ಗಿಟ್‌ನ ನಡುಮಧ್ಯದಲ್ಲಿರುವ ಶಾರದಾಸ್ಥಾನ ಹಿಂದೂಗಳಿಗೆ ಸೋಮನಾಥದಷ್ಟೇ ಪವಿತ್ರಸ್ಥಳವೆಂದು ಹೊಗಳಿದ್ದಾನೆ. ೧೧ನೇ ಶತಮಾನದಲ್ಲಿ ಗುಜರಾತಿನ ಜಯಸಿಂಗನ ಆಸ್ಥಾನದಲ್ಲಿದ್ದ ಹೆಸರಾಂತ ವಯ್ಯಾಕರಣಿ ಹೇಮಚಂದ್ರಸೂರಿಯು ’ಸಿದ್ಧಹೇಮಖಂಡ’ವೆಂಬ ಸುಪ್ರಸಿದ್ಧ ವ್ಯಾಕರಣ ಗ್ರಂಥವೊಂದನ್ನು ಬರೆಯಲುದ್ದೇಶಿಸಿದಾಗ ಅದರ ನೆರವಿಗೆ ಜಯಸಿಂಗ ಶಾರದಾಮಂದಿರದ ಗ್ರಂಥಾಲಯದಿಂದ ಭಾರತದ ಎಂಟು ಹೆಸರಾಂತ ವ್ಯಾಕರಣಶಾಸ್ತ್ರದ ಉದ್ಗ್ರಂಥಗಳನ್ನು ತರಿಸಿಕೊಟ್ಟಿದ್ದನಂತೆ. ಅಕ್ಬರನ ಆಸ್ಥಾನ ಕವಿ ಅಬುಲ್ ಫಜಲ್ ತನ್ನ ಐನ್-ಎ-ಅಕ್ಬರಿಯಲ್ಲಿ ಹೀಗೆ ದಾಖಲಿಸುತ್ತಾನೆ. ’ಆಯಾ ಹೋಂನಿಂದ ಎರಡು ದಿನಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿದ ಮೇಲೆ ದುರ್ದೇಶ ಪ್ರದೇಶದಲ್ಲಿ ಹರಿಯುವ ಮಧುಮತಿ ಎಂಬ  ನದಿ ಸಿಗುತ್ತದೆ. ಈ ನದಿಯ ದಡದ ಮೇಲೆ ಶಾರದೆಯ ಒಂದು ವಿಶ್ವವಿಖ್ಯಾತ ಮಂದಿರವಿದೆ. ಪ್ರತಿ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದು ಇಲ್ಲಿ ಜರುಗುವ ಅದ್ಭುತ ಪವಾಡಗಳನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಸಾವಿರಾರು ಜನ ಇಲ್ಲಿ ಬಂದು ಸೇರುತ್ತಾರೆ’. ವಸಿಷ್ಟನ ಮಗ ಶಾಂಡಿಲ್ಯ ಬ್ರಾಹ್ಮಣರಿಂದ ಬಹಿಷ್ಕೃತನಾಗಲು ಕಾಶ್ಮೀರಕ್ಕೆ ಬಂದು ಇದೇ ಸ್ಥಳದಲ್ಲಿ ಶಾರದೆಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡನಂತೆ. ಈತ ರಚಿಸಿದ ಶಾರದಾ ಮಹಾತ್ಮ್ಯಮ್‌ನಲ್ಲಿ ಶಾರದಾಪೀಠ ವಿಸ್ತೃತ ಮಾಹಿತಿಯಿದೆ. ಈಗಲೂ ಕಾಶ್ಮೀರಿ ಪಂಡಿತರಲ್ಲಿ ಶಾಂಡಿಲ್ಯ ಗೋತ್ರದವರೇ ಅಧಿಕ. ಕಾಶ್ಮೀರಿ ಮತ್ತು ಪಂಜಾಬಿನ ಗುರುಮುಖಿ ಲಿಪಿಗಳ ತಾಯಿಯಾದ ಶಾರದಾ ಲಿಪಿ ಹುಟ್ಟಿದ್ದು ಇಲ್ಲಿಂದಲೇ. ಹದಿನಾಲ್ಕು-ಹದಿನೈದನೇ ಶತಮಾನದಲ್ಲಿದ್ದ ಕಾಶ್ಮೀರದ ಸುಲ್ತಾನ ಜೈ-ಉಲ್-ಅಬಿದ್ದೀನ್ ಈ ಶಾರದೆಯ ಕಟ್ಟಾ ಭಕ್ತನಾಗಿದ್ದನಂತೆ. ಮಾತ್ರವಲ್ಲ ಪ್ರತಿವರ್ಷ ಕಾಲ್ನಡಿಗೆಯಲ್ಲಿ ಶಾರದಾ ಮಂದಿರಕ್ಕೆ ತಪ್ಪದೇ ಭೇಟಿಕೊಡುತ್ತಿದ್ದ. ಲಕ್ಷಾಂತರ ಯಾತ್ರಿಕರು ಸಹಸ್ರಾರು ವರ್ಷಗಳಿಂದ ಭಾರತ ಮತ್ತು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ಬಂದು ಹೋದ ದಾಖಲೆಗಳಿವೆ. ಶತಮಾನಗಳ ಕಾಲ ವೈದಿಕ ಸಂಸ್ಕೃತಿಯ ಅತ್ಯುಚ್ಚ ಕೇಂದ್ರವಾಗಿ ಬೆಳೆದ ಶಾರದಾ ಪೀಠಕ್ಕೆ ಮೊದಲ ಹೊಡೆತ ಬಿದ್ದಿದ್ದು ಹದಿನೈದನೇ ಶತಮಾನದಲ್ಲಿ ಕಾಶ್ಮೀರದ ಮೇಲಾದ ಅಫ್ಘನ್ನರ ದಾಳಿಯಿಂದ. ಸತತ ಮೂರು ಶತಮಾನ ಇಸ್ಲಾಮಿನ ದಾಳಿಗೆ ತತ್ತರಿಸಿದ ಇದು ಪುನಃ ವೈಭವದಿಂದ ತಲೆಯೆತ್ತಿದ್ದು ೧೮೪೬ರಲ್ಲಿ ಪಂಜಾಬಿನ ಮಹಾರಾಜ ಗುಲಾಬ್ ಸಿಂಗ್‌ನ ಕಾಲದಲ್ಲಿ. ಆದರೇನು ಫಲ? ೧೯೪೭ರಲ್ಲಿ ಈ ಪ್ರದೇಶ ಪಾಕಿಸ್ತಾನದ ವಶವಾಯ್ತು. ಪಾಕಿನ ಹಿಂದೂಗಳ ಪಾಲಿಗೆ ಪರಮ ಶ್ರದ್ಧಾಕೇಂದ್ರವಾಗಿಯೇ ಕೆಲಕಾಲ ಇದು ಮುಂದುವರೆಯಿತಾದರೂ ಇತ್ತೀಚೆಗೆ ಈ ಸ್ಥಳ ಹೆಚ್ಚುಕಡಿಮೆ ಹೊರಜಗತ್ತಿಗೆ ಮುಚ್ಚಿದ ಸ್ಥಿತಿಯಲ್ಲಿಯೇ ಇದೆ. ಮುಂದೆ ಅಕ್ಟೋಬರ್ ೨೦೦೫ರಲ್ಲಿ ನಡೆದ ಭೀಕರ ಭೂಕಂಪದಲ್ಲಿ ಈ ಮಂದಿರ ಸಂಪೂರ್ಣವಾಗಿ ಭಗ್ನಗೊಂಡಿತಂತೆ. ಭಾರತದ ಅಜ್ಮೇರ್ ದರ್ಗಾಕ್ಕೆ ಬರಲು ಪಾಕಿಸ್ತಾನಿಯರಿಗೂ, ಲಹೋರಿನ ನಾನಕಾನಾ ಸಾಹೇಬ್ ಗುರುದ್ವಾರಕ್ಕೆ ಹೋಗಲು ಭಾರತೀಯ ಸಿಖ್ಖರಿಗೂ ಉಭಯ ದೇಶಗಳು ಅವಕಾಶ ಕಲ್ಪಿಸಿದಂತೆ ಕಾಶ್ಮೀರದ ಹಿಂದೂಗಳಿಗೆ ಇಲ್ಲಿ ಭೇಟಿನೀಡಲು ಅವಕಾಶ ಮಾಡಿಕೊಡಬೇಕೆಂಬ ಕಳೆದ ಎಪ್ಪತ್ತು ಚಿಲ್ಲರೆ ವರ್ಷಗಳ ಕೂಗು ಇನ್ನೂ ನಮ್ಮ ಸರ್ಕಾರಗಳ ಕಿವಿ ತಲುಪಿಲ್ಲ. ಪಾಕಿಸ್ತಾನ ಸರ್ಕಾರ ಇಲ್ಲಿಗೆ ಭೇಟಿ ಕೊಡಲು ಭಕ್ತಾದಿಗಳನ್ನು ಪದೇ ಪದೇ ನಿಷೇಧಿಸುತ್ತ ಬಂದಿರುವುದಕ್ಕೂ ಒಂದು ಕಾರಣವಿದೆ. ಝೀಲಂ ವ್ಯಾಲಿ ಕಾಶ್ಮೀರದ ಅತಿಸೂಕ್ಷ್ಮ ಪ್ರದೇಶಗಳಲ್ಲೊಂದು. ಜೊತೆಗೆ ಭಾರತದ ಕುಪ್ವಾರಾ ಪ್ರದೇಶಕ್ಕೆ ಪಾಕಿಸ್ತಾನಿ ಭಯೋತ್ಪಾದಕರು ಒಳನುಗ್ಗುವುದು ಇದೇ ಕಡೆಯಿಂದ ಎಂಬ ಕುಖ್ಯಾತಿಯೂ ಇದೆ. ಆಯಕಟ್ಟಿನ ಜಾಗವೊಂದರ ಒಳಗೆ ಶತ್ರು ದೇಶದವರನ್ನು ಬಿಟ್ಟುಕೊಳ್ಳವಷ್ಟು ಉದಾರ ಮನಸ್ಸು ಪಾಕಿಸ್ತಾನಕ್ಕೂ ಇದ್ದಂತಿಲ್ಲ. ಇಷ್ಟಾದರೂ ಇತ್ತೀಚೆಗೆ ಮುಜಫರಾಬಾದ್ ವಿಶ್ವವಿದ್ಯಾಲಯದ ಕುಕ್ಷಾನಾ ಖಾನ್‌ರಂಥ ಕೆಲ ಸಂಶೋಧಕರ ನೆರವಿನಿಂದ ಅಲ್ಪಸ್ವಲ್ಪ ಪ್ರಮಾಣದಲ್ಲಿ ಶಾರದಾ ಸಂಸ್ಕೃತಿಯನ್ನು ಹರಡುವ ಕಾರ್ಯ ಶುರುವಾಗಿದೆ. ಕಟ್ಟಡಗಳನ್ನು ಎಷ್ಟೇ ಮರುನಿರ್ಮಿಸಿದರೂ ಅದು ಶ್ರದ್ಧಾಳುಗಳ ಶ್ರದ್ಧೆಗೆ. ಭಾವನೆಗಳಿಗೆ ಸರಿಸಾಟಿಯಲ್ಲವೇ ಅಲ್ಲ. ವರ್ಷಕ್ಕೆ ಕೆಲವೇ ಕೆಲ ಕಾಶ್ಮೀರಿ ಹಿಂದೂಗಳಿಗಾದರೂ ಶಾರದಾ ಪೀಠದ ದರ್ಶನಕ್ಕೆ ಪಾಕಿಸ್ತಾನ ಅವಕಾಶ ಕಲ್ಪಿಸಿದರೆ, ಭಾರತ ಸರ್ಕಾರ ಆ ದಿಶೆಯಲ್ಲಿ ಪ್ರಯತ್ನಿಸಿದರೆ ಅದಕ್ಕಿಂತ ದೊಡ್ಡ ಖುಶಿಯ ಮಾತೇನಿದೆ ಹೇಳಿ?
       ಹಾಗೆಂದು ಶಂಕರವಿಜಯಕಾರರ ಸರ್ವಜ್ಞಪೀಠದೆಡೆಗಿನ ಗೊಂದಲ ಪೂರ್ತಿ ಬಗೆಹರಿದಿಲ್ಲ. ಚಿದ್ವಿಲಾಸೀಯದಲ್ಲಿ, ಪ್ರಾಚೀನಶಂಕರ ವಿಜಯದಲ್ಲಿ ಸರ್ವಜ್ಞಪೀಠವಿರುವುದು ಕಾಂಚಿಯಲ್ಲಿ ಎನ್ನಲಾಗಿದೆ. ಶೃಂಗೇರಿ ಸಂಪ್ರದಾಯದ ಆತ್ಮಬೋಧರ ಗುರುರತ್ನಮಾಲಿಕೆಯೂ ಸರ್ವಜ್ಞಪೀಠವಿರುವುದು ಕಂಚಿ ಎಂದೇ ಹೇಳುತ್ತದೆ. ಅಲ್ಲಿಗೆ ಶಂಕರವಿಜಯಕಾರರಲ್ಲೇ ಕಾಶ್ಮೀರಸರ್ವಜ್ಞಪೀಠವಾದಿಗಳು ಹಾಗೂ ಕಾಂಚೀಸರ್ವಜ್ಞಪೀಠವಾದಿಗಳು ಎಂಬ ಎರಡು ಪಂಗಡಗಳಿವೆ ಎಂದಾಯ್ತು. ಕಾಶ್ಮೀರವು ಶಾರದಾಸ್ಥಾನವೆಂಬ ಪ್ರಸಿದ್ಧಿಯ ಮೇಲೆ ಮೊದಲನೇಯವರೂ, ಸರ್ವಜ್ಞಾತ್ಮರು ಕಂಚಿಯ ಮೊದಲನೇ ಪೀಠಾಧಿಪತಿಗಳಾಗಿದ್ದರೆಂಬ ಆಧಾರದಲ್ಲಿ ಎರಡನೇಯವರೂ ಸರ್ವಜ್ಞಪೀಠವನ್ನು ತಮ್ಮತಮ್ಮಲ್ಲಿ ಕಲ್ಪಿಸಿಕೊಂಡಿರಬಹುದೇ!!!

ಕೊನೆಹನಿ:
ಆಚಾರ್ಯರು ಗೋಕರ್ಣದಿಂದ ಕೊಲ್ಲೂರಿಗೆ ತೆರಳುತ್ತಿದ್ದಾಗ ಶ್ರೀವಲ್ಲಿ ಎಂಬ ಅಗ್ರಹಾರಕ್ಕೆ ಬಂದರು. ಅಲ್ಲಿ ಎರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರಿದ್ದರು. ಅವರಲ್ಲಿ ಪ್ರಭಾಕರನೆಂಬವನೊಬ್ಬ. ಇರುವ ಒಬ್ಬನೇ ಮಗ ಹುಟ್ಟಿದಾಗಿನಿಂದ ಮೂಕನಾಗಿದ್ದರಿಂದ ತಂದೆತಾಯಂದಿರು ಚಿಂತಿತರಾಗಿದ್ದರು. ಶಂಕರರಲ್ಲಿ ಕರೆತಂದು ಮಗನ ಸ್ಥಿತಿಯನ್ನು ವಿವರಿಸಿದರು. ಶಂಕರರು ಕರುಣೆಯಿಂದ ’ಯಾರಪ್ಪಾ ನೀನು? ಏಕೆ ಮಾತಾಡದೇ ಜಡನಂತಿರುವೆ?’ ಎಂದು ಕೇಳಿದರು. ಕೂಡಲೇ ಬಾಲಕ
ನಿಮಿತ್ತಂ ಮನಶ್ಚಕ್ಷುರಾದಿಪ್ರವೃತ್ತೌ
ನಿರಸ್ತಾಖಿಲೋಪಾಧಿರಾಕಾಶಕಲ್ಪಃ |
ರವಿರ್ಲೋಕಚೇಷ್ಟಾನಿಮಿತ್ತಂ ಯಥಾ ಯಃ
ಸ ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ ||
- ’ಸೂರ್ಯನು ಲೋಕದ ವ್ಯವಹಾರಕ್ಕೆ ನಿಮಿತ್ತನಾಗಿರುವಂತೆ ಯಾವ ಉಪಾಧಿಯೂ ಇಲ್ಲದ ಯಾವನು ಮನಸ್ಚಕ್ಷೆರೇತ್ಯಾದಿಗಳ ಪ್ರವೃತ್ತಿಗೆ ನಿಮಿತ್ತನಾಗಿರುವನೋ ಆ ನಿತ್ಯಸ್ವರೂಪನಾದ ಆತ್ಮನೇ ನಾನು’ ಎಂದು ನುಡಿದನಂತೆ. ಪರತತ್ತ್ವವನ್ನು ಅಂಗೈನ ನೆಲ್ಲಿಕಾಯಿಯಂತೆ ಹೇಳಿದ ಬಾಲಕನಿಗೆ ಆಚಾರ್ಯರು ಹಸ್ತಾಮಲಕನೆಂದು(ಹಸ್ತ- ಅಂಗೈ, ಆಮಲಕ - ನೆಲ್ಲಿ) ನಾಮಕರಣ ಮಾಡಿ ಶಿಷ್ಯನನ್ನಾಗಿ ಸ್ವೀಕರಿಸಿದರು. ’ನಿತ್ಯೋಪಲಬ್ಧಿ ಸ್ವರೂಪೋಹಮಾತ್ಮಾ’ ಎಂಬ ಪಲ್ಲವಿಯುಳ್ಳ ಹನ್ನೆರಡು ಶ್ಲೋಕಗಳು ’ಹಸ್ತಾಮಲಕೀಯ’ ಪ್ರಕರಣವೆಂದು ಪ್ರಸಿದ್ಧವಾದವು. ’ಅಗ್ರಹಾರಕಂ ಶ್ರೀವಲಿಸಂಜ್ಞಮ್’ ಎಂದು ಮಾಧವೀಯದಲ್ಲೂ, ವ್ಯಾಸಾಚಲೀಯದಲ್ಲೂ ಈ ಘಟನೆಯ ಉಲ್ಲೇಖವಿದೆ. ಶ್ರೀವಲಿ ಅಗ್ರಹಾರವೆಂದು ಪುರಾಣಪ್ರಸಿದ್ಧ ಈ ಸ್ಥಳ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ. ಸಾರಸ್ವತ ಬ್ರಾಹ್ಮಣ ಸಮಾಜದ ಶಾಂಕರ ಪರಂಪರೆಯ ಚಿತ್ರಾಪುರ ಮಠವೂ ಇದೇ ಊರಿನಲ್ಲಿದೆ. ಜೊತೆಗೆ ಇದು ನನ್ನ ಊರೂ ಹೌದು.
ಧನ್ಯೋಸ್ಮಿ ಶ್ರೀಶಂಕರಭಗವತ್ಪಾದಪ್ರಭೋಶಾರದಾಪೀಠದ ಪಳೆಯುಳಿಕೆಗಳು

ಶ್ರೀಮಚ್ಛಂಕರಭಗವತ್ಪಾದಚರಿತ್ರದ ಹಿಂದಿನ ಭಾಗಗಳು

ಭಾಗ ೩- ಜನ್ಮ ಪ್ರಕರಣ

ಭಾಗ ೨- ಕಾಲಪ್ರಕರಣ 

ಭಾಗ ೧ - ಶಂಕರವಿಜಯ ಪ್ರಕರಣ


Wednesday, July 20, 2016

ರಾಜಶೇಖರನ ಕಾವ್ಯಮೀಮಾಂಸೆಯೂ ಸಂಸ್ಕೃತ ಕಾವ್ಯಶೈಲಿಯೂ


       ಸಂಸ್ಕೃತ ಸಾಹಿತ್ಯದಲ್ಲಿ ಪ್ರೌಢಮಹಾಕವಿಗಳಲ್ಲಿ ಮೂರ್ಧನ್ಯನೂ, ಗಂಭೀರ ಸಾಹಿತ್ಯ ವಿದ್ವಾಂಸನೂ, ಅಲಂಕಾರಿಕರಲ್ಲಿ ಅಗ್ರಿಮನೂ ಆದವನು ರಾಜಶೇಖರ. ಬಾಲಭಾರತವೆಂಬ ನಾಟಕವನ್ನೂ, ವಿದ್ದಸಾಲಭಂಜಿಕಾ ಎಂಬ ನಾಟಿಕೆಯನ್ನೂ, ಕರ್ಪೂರಮಂಜರಿ ಎಂಬ ಪ್ರಾಕೃತ ಭಾಷೆಯಲ್ಲಿ ಸಟ್ಟಿಕೆಯನ್ನೂ ರಚಿಸಿದ ರಾಜಶೇಖರ ಪ್ರಖ್ಯಾತನಾಗಿರುವುದು ಹರವಿಲಾಸವೆಂಬ ಅನುಪಲಬ್ಧ ಮಹಾಕಾವ್ಯ ಮತ್ತು ಕಾವ್ಯಮೀಮಾಂಸೆಯೆಂಬ ಸಂಸ್ಕೃತದ ಅಪ್ರತಿಮ ಅಲಂಕಾರಿಕ ಶಾಸ್ತ್ರೀಯ ಗ್ರಂಥದಿಂದ.
       ಕಾವ್ಯಮೀಮಾಂಸೆಯ ಪ್ರಕಾರ ಪರಮೇಶ್ವರನು ಕಾವ್ಯವಿದ್ಯೆಯನ್ನು ಪ್ರಪ್ರಥಮವಾಗಿ ತನ್ನ ಮೊದಲ ಶಿಷ್ಯನಾದ ಸ್ವಯಂಭೂ ಬ್ರಹ್ಮನ ಮಾನಸಪುತ್ರನಾದ ಕಾವ್ಯಪುರುಷನಿಗೆ ಉಪದೇಶಿಸಿದನು. ಈ ಕಾವ್ಯಪುರುಷನನ್ನು ಕಾವ್ಯವಿದ್ಯೆಯ ಪ್ರವರ್ತಕನೆಂದು ಭಾವಿಸಲಾಗುತ್ತದೆ. ಕಾವ್ಯಪುರುಷನು ಕಾವ್ಯವಿದ್ಯೆಯನ್ನು ಸ್ವರ್ಗದಲ್ಲಿರುವ ತನ್ನ ಹದಿನೆಂಟು ಶಿಷ್ಯರಿಗೆ ಹದಿನೆಂಟು ಭಾಗವಾಗಿ ಉಪದೇಶಿಸಿದನು. ಈ ಶಿಷ್ಯರು ಹದಿನೆಂಟು ಭಾಗವುಳ್ಳ ಕಾವ್ಯವಿದ್ಯೆಯ ಒಂದೊಂದು ಭಾಗದಲ್ಲಿ ವಿಶೇಷಜ್ಞಾನವನ್ನು ಪಡೆದು ಪ್ರತ್ಯೇಕವಾದ ಗ್ರಂಥಗಳನ್ನು ರಚಿಸಿದರು. ಅವರಲ್ಲಿ ಸಹಸ್ರಾಕ್ಷನು ’ಕವಿರಹಸ್ಯ’ ಎಂಬ ಗ್ರಂಥವನ್ನೂ, ಉಕ್ತಿಗರ್ಭನು ’ಉಕ್ತಿವಿಚಾರ’ವನ್ನೂ, ಸುವರ್ಣನಾಭನು ’ರೀತಿನಿರ್ಣಯ’ವನ್ನೂ, ಪ್ರಚೇತನು ’ಅನುಪ್ರಾಸ’ವನ್ನೂ, ಚಿತ್ರಾಂಗನು ’ಯಮಕ ಮತ್ತು ಚಿತ್ರಕಾವ್ಯ’ವನ್ನೂ, ಆದಿಶೇಷನು ’ಶಬ್ದಶ್ಲೇಷ’ವನ್ನೂ, ಪುಲಸ್ತ್ಯನು ’ಸ್ವಭಾವೋಕ್ತಿ’ಯನ್ನೂ, ಔಪಕಾಯನನು ’ಉಪಮೆ’ಯನ್ನೂ, ಪಾರಾಶರನು ’ಅತಿಶಯೋಕ್ತಿ’ಯನ್ನೂ, ಉತಥ್ಯನು ’ಅರ್ಥಶ್ಲೇಷ’ವನ್ನೂ, ಕುಬೇರನು ’ಉಭಯಾಲಂಕಾರ’ವನ್ನೂ, ಕಾಮದೇವನು ’ವಿನೋದ ತತ್ತ್ವ’ವನ್ನೂ, ಭರತನು ’ನಾಟ್ಯಶಾಸ್ತ್ರ’ವನ್ನೂ, ನಂದಿಕೇಶ್ವರನು ’ರಸಸಿದ್ಧಾಂತ’ವನ್ನೂ, ಬೃಹಸ್ಪತಿಯು ’ದೋಷಪ್ರಕರಣ’ವನ್ನೂ, ಉಪಮನ್ಯುವು ’ಗುಣಸಿದ್ಧಾಂತ’ವನ್ನೂ, ಕುಚುಮಾರನು ’ರಹಸ್ಯತಂತ್ರ’ವನ್ನೂ ರಚಿಸಿದರು. ವಿಭಿನ್ನ ವಿಷಯಗಳನ್ನು ನಿರೂಪಿಸುವ ಗ್ರಂಥ ರಚನೆಗಳಿಂದ ಕಾವ್ಯವಿದ್ಯೆಯು ಅನೇಕ ವಿಭಾಗಗಳಲ್ಲಿ ವಿಭಕ್ತವಾಗಿರುವುದರಿಂದ ನಿರೂಪಣೆ ವಿಚ್ಛಿದ್ರವಾಯಿತು. ಆದ್ದರಿಂದ ಕಾವ್ಯಶಾಸ್ತ್ರದ ಎಲ್ಲಾ ವಿಚಾರಗಳನ್ನೂ ಸಂಕ್ಷೇಪಿಸಿ ಹದಿನೆಂಟು ಅಧಿಕರಣಗಳುಳ್ಳ ಕಾವ್ಯಮೀಮಾಂಸೆಯನ್ನು ರಚಿಸಿರುವುದಾಗಿ ರಾಜಶೇಖರ ಹೇಳಿಕೊಂಡಿದ್ದಾನೆ.
       ಕಾವ್ಯಮೀಮಾಂಸೆಯ ಹದಿನೆಂಟು ಭಾಗಗಳಲ್ಲಿ ಮೊದಲನೇಯದಾದ ಕಾವ್ಯಪುರುಷೋತ್ಪತ್ತಿ ಪ್ರಕರಣದಲ್ಲಿ ಒಂದು ಕಥಾನಕವಿದೆ. ಬ್ರಹ್ಮನ ವರದಿಂದ ಸರಸ್ವತಿಯು ಕಾವ್ಯಪುರುಷನಿಗೆ ಜನ್ಮವಿತ್ತಳಂತೆ. ಹುಟ್ಟಿದ ಕೂಡಲೇ ಕಾವ್ಯಪುರುಷನು ಸರಸ್ವತಿಯ ಪಾದಗಳಿಗೆ ನಮಸ್ಕರಿಸಿ ಛಂದೋಬದ್ಧವಾದ ವಾಣಿಯಲ್ಲಿ ಹೀಗೆ ಹೇಳಿದನು.
ಯದೇತದ್ವಾಙ್ಮಯಂ ವಿಶ್ವಮರ್ಥಮೂರ್ತ್ಯಾ ವಿವರ್ತತೇ |
ಸೋಽಸ್ಮಿ ಕಾವ್ಯಪುಮಾನಂಬ ಪಾದೌ ವಂದೇಯ ತಾವಕೌ ||

- ಮಾತೇ, ಸಕಲ ವಾಞ್ಮಯ ಪ್ರಪಂಚವನ್ನು ಅರ್ಥರೂಪದಲ್ಲಿ ಪರಿಣಿತವನ್ನಾಗಿ ಮಾಡುವ ಕಾವ್ಯಪುರುಷನು ನಿನ್ನ ಚರಣಗಳಿಗೆ ವಂದಿಸುತ್ತಾನೆ.
       ಈ ರೀತಿಯ ಛಂದೋಬದ್ಧವಾದ ವಾಣಿಯು ಇಲ್ಲಿಯವರೆಗೆ ವೇದಗಳಲ್ಲಿ ಮಾತ್ರ ಉಪಲಬ್ಧವಿದ್ದರೂ, ಈಗ ಅದಕ್ಕೆ ಸಮಾನವಾಗಿ ಸಂಸ್ಕೃತದಲ್ಲಿ ಶ್ರುತವಾದುದಕ್ಕೆ ಸರಸ್ವತಿ ಹರ್ಷಗೊಂಡು ಕಾವ್ಯಪುರುಷನನ್ನು ಛಂದೋಬದ್ಧವಾಣಿಯ ಆದ್ಯಪ್ರವರ್ತಕನಾಗೆಂದು ಹರಸಿದಳು. ಹೀಗೆ ಸರಸ್ವತಿಯು ತನ್ನ ಪುತ್ರನಿಗೆ ಆಶೀರ್ವದಿಸಿ ಒಂದು ವೃಕ್ಷದ ಕೆಳಗೆ ಶಿಶುವನ್ನು ಮಲಗಿಸಿ ಆಕಾಶಗಂಗೆಯಲ್ಲಿ ಸ್ನಾನಕ್ಕೆ ತೆರಳಿದಳಂತೆ.(ಪಾರ್ವತಿಯ ಕಥೆಯೂ ಅದೇ. ಮಣ್ಣಿನಿಂದ ಬಾಲಕನನ್ನು ಸೃಷ್ಟಿಸಿ ಸೀದಾ ಮೀಯಲು ಹೋದಳು. ಪುರಾಣಕಾಲದ ಸ್ಕ್ರಿಪ್ಟ್ ರೈಟರುಗಳು ಬೇರೇನಾದರೂ ಬರೆಯಬೇಕಿತ್ತೆಂದು ನನಗಾಗಾಗ ಅನಿಸುವುದುಂಟು). ಆ ವೇಳೆಗೆ ನಿತ್ಯಕರ್ಮಾಚರಣೆಗಾಗಿ ಹೊರಟಿದ್ದ ಶುಕ್ರಾಚಾರ್ಯನು ಸೂರ್ಯತಾಪದಿಂದ ಬಳಲಿದ್ದ ಅನಾಥ ಶಿಶುವನ್ನು ಕಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು. ಕಾವ್ಯಪುರುಷನ ಪ್ರೇರಣೆಯಿಂದ ಶುಕ್ರನ ಹೃದಯದಿಂದ ಸ್ತುತಿಯೊಂದು ಹೊರಟಿತಂತೆ.
ಯಾ ದುಗ್ಧಾಪಿ ನ ದುಗ್ಧೇನ ಕವಿದೋಗ್ಧೃಭಿರನ್ವಹಮ್ |
ಹೃದಿ ನಃ ಸನ್ನಿಧತ್ತಾಂ ಸಾ ಸೂಕ್ತಿಧೇನುಃ ಸರಸ್ವತೀ ||

- ಪ್ರತಿನಿತ್ಯವೂ ಕವಿಗಳೆಂಬ ಗೋಪಾಲಕರು ಹಾಲು ಕರೆಯುವ ಸೂಕ್ತಿಗಳೆಂಬ ಕಾಮಧೇನುವಾದ ಸರಸ್ವತಿಯು ನಮ್ಮ ಹೃದಯದಲ್ಲಿ ವಾಸಿಸಲಿ.
       ಅದು ಆ ಕಡೆಯ ಕಥೆಯಾದರೆ, ಈಚೆ ಸರಸ್ವತಿಯು ಮಿಂದು ಬಂದಾಗ ತನ್ನ ಪುತ್ರನನ್ನು ಕಾಣದೇ ದುಃಖದಿಂದ ಪರಿತಪಿಸಿದಳು. ಆ ವೇಳೆಗೆ ಅಲ್ಲಿಗಾಗಮಿಸಿದ ವಾಲ್ಮೀಕಿಯು ನಡೆದ ವಿಷಯವನ್ನು ತಿಳಿಸಿ ಭಾರ್ಗವನ ಆಶ್ರಮದ ಮಾರ್ಗವನ್ನು ಸರಸ್ವತಿಗೆ ತಿಳಿಸಿದ. ತನ್ನ ಪುತ್ರನಿರುವ ಸ್ಥಾನವನ್ನು ಹೇಳಿರುವ ಕಾರಣದಿಂದ, ಸರಸ್ವತಿ ಕೃತಜ್ಞತಾಭಾವದಿಂದ ವಾಲ್ಮೀಕಿಗೆ ಛಂದೋಮಯ ವಾಣಿಯಲ್ಲಿ ಕಾವ್ಯರಚನೆ ಮಾಡಲು ವರವಿತ್ತಳು. ಸರಸ್ವತಿಯ ಆದೇಶವನ್ನು ಪಡೆದು ತನ್ನ ಆಶ್ರಮಕ್ಕೆ ಬರುತ್ತಿರುವಾಗ ಬೇಡನೊಬ್ಬನ ಬಾಣದಿಂದ ಹೆಣ್ಣು ಕ್ರೌಂಚ ಪಕ್ಷಿ ಹತವಾದದ್ದನ್ನೂ, ಅದನ್ನು ನೋಡಿ ದುಃಖದಿಂದ ಆಕ್ರಂದಿಸುವ ಗಂಡುಪಕ್ಷಿಯನ್ನು ಕಂಡು ಶೋಕತಪ್ತಗೊಂಡ ವಾಲ್ಮೀಕಿಯ ಮುಖದಿಂದ ಶೋಕಮಯ ವಾಣಿಯು ಹೊರಹೊಮ್ಮಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಾಗಮಃ ಶಾಶ್ವತೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧಿಃಕಾಮಮೋಹಿತಮ್ ||

      ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಗೋವಿಂದರಾಜನೇ ಇತ್ಯಾದಿ ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಅದೇನೇ ಇದ್ದರೂ ಹೀಗೆ ಸ್ವಾಭಾವಿಕ ವಾಣಿಯು ಹೊರಹೊಮ್ಮಿದ ನಂತರ ವಾಲ್ಮೀಕಿ ಭೂಲೋಕದಲ್ಲಿ ಕಾವ್ಯಪರಂಪರೆಯ ಪ್ರಥಮ ಪ್ರವರ್ತಕನೆಂದು ಹೆಸರಾಗಿ ಆದಿಕವಿಯೆಂದು ಪ್ರಸಿದ್ಧನಾದನು.
       ಇದೇ ವೇಳೆ ಅತ್ತ ಬ್ರಹ್ಮಲೋಕದಲ್ಲಿ ಋಷಿಗಳಿಗೂ ದೇವತೆಗಳಿಗೂ ಯಾವುದೋ ವಿಷಯದಲ್ಲಿ ವಿವಾದವುಂಟಾಯಿತಂತೆ. ಆಗ ಬ್ರಹ್ಮನು ಸರಸ್ವತಿಯನ್ನು ವಿವಾದ ನಿರ್ಣಾಯಕಳಾಗಿ ನೇಮಿಸಲುದ್ದೇಶಿಸಿದ. ಕಾರಣ, ಸರಸ್ವತಿಯು ಕಾವ್ಯಪುರುಷನನ್ನು ಭೂಲೋಕದಲ್ಲಿಯೇ ಬಿಟ್ಟು ಬ್ರಹ್ಮಲೋಕಕ್ಕೆ ಹೊರಟಳು. ತನ್ನನ್ನು ಒಬ್ಬಂಟಿಯಾಗಿ ಬಿಟ್ಟುಹೋದುದರಿಂದ ಸಿಟ್ಟಿಗೆದ್ದ ಕಾವ್ಯಪುರುಷ ತನ್ನ ಸ್ಥಾನವನ್ನು ಬಿಟ್ಟು ಹೊರಟು ಹೋದನಂತೆ.
       ಕಾವ್ಯಪುರುಷ ಮರ್ತ್ಯಲೋಕವನ್ನು ತೊರೆದು ಹೋಗುತ್ತಿರುವುದನ್ನು ಕಂಡ ಪಾರ್ವತಿ ಅವನನ್ನು ವಶಪಡಿಸಿಕೊಳ್ಳಲು ಸಾಹಿತ್ಯವಧುವೆಂಬ ಸ್ತ್ರೀಯನ್ನು ಸೃಷ್ಟಿಸಿ ಕಾವ್ಯಪುರುಷನನ್ನು ಮರಳಿ ತಿರುಗಿ ಬರುವಂತೆ ಮಾಡೆಂದು ಆದೇಶಿಸಿದಳು. ಇನ್ನೊಂದೆಡೆ ಮುನಿಗಳನ್ನು ಕುರಿತು ಕಾವ್ಯಪುರುಷನನ್ನು ತೃಪ್ತಗೊಳಿಸಲು ಅವನನ್ನು ಹಿಂಬಾಲಿಸಿ ಸ್ತುತಿಸುವಂತೆ ಹೇಳಿದಳು.
ಸಾಹಿತ್ಯವಧುವಿನಿಂದ ಹಿಂಬಾಲಿಸಲ್ಪಟ್ಟ ಕಾವ್ಯಪುರುಷನು ಪೂರ್ವ ದಿಕ್ಕಿಗೆ ಸಂಚರಿಸಿದನು. ಅಂಗ, ವಂಗ, ಬ್ರಹ್ಮ, ಪುಂಡ್ರ ಮೊದಲಾದ ಜನಪದಗಳು ಈ ದಿಕ್ಕಿನಲ್ಲಿದ್ದವು. ಕಾವ್ಯಪುರುಷನನ್ನು ಪ್ರಸನ್ನಗೊಳಿಸಲು ಸಾಹಿತ್ಯವಧುವು ಆಯಾ ಜನಪದಗಳ ವೇಷವನ್ನು ಧರಿಸಿದಳು. ಈ ಪ್ರಾಂತ್ಯದ ರಚನಾ ಪ್ರವೃತ್ತಿ ’ಓಢ್ರಮಾಗಧಿ’ ಎಂದು ಹೆಸರು ಪಡೆಯಿತು. ಸಾಹಿತ್ಯ ವಧುವು ಈ ದೇಶದಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳು ’ಭಾರತೀ ವೃತ್ತಿ’ ಎಂದು ಹೆಸರಾದವು. ಪೂರ್ವದೇಶದಲ್ಲಿ ಸಾಹಿತ್ಯವಧುವು ವೇಷರಚನಾದಿಗಳ ಮೂಲಕ ಎಷ್ಟೇ ಪ್ರಯತ್ನಪಟ್ಟರೂ ಕಾವ್ಯಪುರುಷ ಅವಳೆಡೆ ಆಕರ್ಷಿತನಾಗಲಿಲ್ಲ. ಆಗ ಅವಳು ದೀರ್ಘಸಮಾಸ, ಅನುಪ್ರಾಸ, ಯೋಗವೃತ್ತಿಗಳಿಂದ ಹೇಳಿದ ವಚನವು ’ಗೌಡೀ’ ಶೈಲಿಯೆಂದು ಪ್ರಸಿದ್ಧವಾಯಿತು. ಆಯಾ ದೇಶದ ವೇಷವಿನ್ಯಾಸ ಕ್ರಮವನ್ನು ’ಪ್ರವೃತ್ತಿ’ ಎಂದೂ, ನೃತ್ಯಗಾನಾದಿ ವಿನ್ಯಾಸಗಳನ್ನು ’ವೃತ್ತಿ’ ಎಂದೂ, ಕಾವ್ಯರಚನಾವಿನ್ಯಾಸವನ್ನು ’ರೀತಿ ಅಥವಾ ಶೈಲಿ’ ಎಂದೂ ಅಲಂಕಾರಿಕರು ಕರೆದಿದ್ದಾರೆ.
       ಅನಂತರ ಕಾವ್ಯಪುರುಷನು ಪಾಂಚಾಲ ದೇಶದೆಡೆ ಹೊರಟ. ಇಲ್ಲಿ ಪಾಂಚಾಲ, ಶೌರಸೇನ, ಕಾಶ್ಮೀರ, ಬಾಹ್ಲೀಕ ಮುಂತಾದ ಜನಪದಗಳಿದ್ದವು. ಅವನನ್ನು ಹಿಂಬಾಲಿಸಿ ಬಂದ ಸಾಹಿತ್ಯವಧುವು ಅನುಸರಿಸಿದ ವೇಷವು ’ಪಾಂಚಾಲಮಧ್ಯಮಾ’ ಪ್ರವೃತ್ತಿಯೆಂದು, ಪ್ರದರ್ಶಿಸಿದ ನೃತ್ಯಗೀತಾದಿಗಳನ್ನು ’ಸಾತ್ವತೀ’ವೃತ್ತಿಯೆಂದು ಪ್ರಸಿದ್ಧವಾದವು. ಈ ದೇಶಕ್ಕಾಗಮಿಸಿದ ನಂತರ ಕಾವ್ಯಪುರುಷನ ಮನಸ್ಸು ಸಾಹಿತ್ಯವಧುವಿನೆಡೆಗೆ ಅಲ್ಪಸ್ವಲ್ಪ ಆಕರ್ಷಿತವಾಯಿತು. ಕಾವ್ಯಪುರುಷನು ಸರಸಹೃದಯಿಯಾಗಿ ಲಘುಸಮಾಸ ಮತ್ತು ಅಲ್ಪ ಅನುಪ್ರಾಸಗಳಿಂದ ಯುಕ್ತವಾದ ಲಾಕ್ಷಣಿಕ ವಾಕ್ಯಗಳನ್ನು ಪ್ರಯೋಗಿಸಿದ. ಇದೇ ’ಪಾಂಚಾಲೀ’ಶೈಲಿಯೆಂದು ಹೆಸರಾಯಿತು.
       ನಂತರ ಕಾವ್ಯಪುರುಷ ಆವಂತೀ ದೇಶಕ್ಕೆ ಹೋದನು. ಅಲ್ಲಿ ಆವಂತೀ, ವೈದಿಶ, ಸೌರಾಷ್ಟ್ರ, ಮಾಲವ, ಭೃಗುಕಚ್ಛ ಮೊದಲಾದ ಜನಪದಗಳಿದ್ದವು. ಅಲ್ಲಿ ಸಾಹಿತ್ಯವಧುವು ಅನುಕರಿಸಿದ ವೇಷವನ್ನು ’ಆವಂತೀ’ ಪ್ರವೃತ್ತಿಯೆಂದು ಮುನಿಗಳು ಕರೆದರು. ಇದು ಪಾಂಚಾಲಮಾಧ್ಯಮ ಮತ್ತು ದಾಕ್ಷಿಣಾತ್ಯದ ನಡುವಿನ ಪ್ರವೃತ್ತಿಯಾಗಿದೆ, ಆದ್ದರಿಂದ ಪಾಂಚಾಲದ ’ಸಾತ್ವತೀ’ ಹಾಗೂ ದಾಕ್ಷಿಣಾತ್ಯದ ’ಕೈಶಿಕೀ’ ಇವೆರಡೂ ಆವಂತಿಯ ವೃತ್ತಿಗಳೆನಿಸಿದವು. ಪಾಂಚಾಲ ಮತ್ತು ದಕ್ಷಿಣ ದೇಶದ ವೇಷ, ಭೂಷಣ, ವ್ಯವಹಾರಾದಿಗಳ ಸಮ್ಮಿಶ್ರಣವು ಆವಂತೀದೇಶದಲ್ಲಿ ಕಂಡುಬರುವುದಂತೆ.
       ಅನಂತರ, ಕಾವ್ಯಪುರುಷನು ದಕ್ಷಿಣ ದೇಶಕ್ಕೆ ತೆರಳಿದನು. ಅಲ್ಲಿ ಮಲಯ, ಮೇಖಲ, ಕೇರಳ, ಮಂಜರಾದಿ ದೇಶಗಳಿದ್ದವು. ಈ ದಕ್ಷಿಣ ದೇಶಕ್ಕೆ ಬರುವವರೆಗೆ ಕಾವ್ಯಪುರುಷನು ಸಾಹಿತ್ಯವಧುವಲ್ಲಿ ಪೂರ್ಣವಾಗಿ ಅನುರಕ್ತನಾದನು. ಅನುರಾಗವಶನಾಗಿ ಕಾವ್ಯಪುರುಷನು ಧರಿಸಿದ ವೇಷವನ್ನು ಅಲ್ಲಿಯ ಜನ ಅನುಕರಿಸಿದರು. ಇದು ’ದಾಕ್ಷಿಣಾತ್ಯ’ ಪ್ರವೃತ್ತಿಯೆಂದು ಕರೆಯಲ್ಪಟ್ಟಿತು. ಅದರಂತೆ ಸಾಹಿತ್ಯವಧುವು ಅಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳನ್ನು ’ಕೈಶಿಕೀ’ ವೃತ್ತಿಯೆಂದು ಮುನಿಗಳು ಕರೆದರು. ಕಾವ್ಯಪುರುಷನು ಪ್ರಸನ್ನಚಿತ್ತನಾಗಿ ಅನುಪ್ರಾಸಯುಕ್ತವಾದ, ಸಮಾಸರಹಿತವಾದ, ಅಭಿದಾವೃತ್ತಿಪೂರ್ಣವಾದ ಮಾತುಗಳನ್ನಾಡಿದನು. ಇದನ್ನು ’ವೈದರ್ಭೀ’ ರೀತಿ ಎಂದು ಕರೆಯಲಾಯಿತು. ಕಾವ್ಯಪುರುಷನು ಪೂರ್ಣವಾಗಿ ಸಾಹಿತ್ಯವಧುವಿನಲ್ಲಿ ಅನುರಕ್ತನಾದಾಗ ನುಡಿದ ವೈದರ್ಭೀ ಶೈಲಿಯನ್ನು ಕಾವ್ಯಾರಚನೆಯಲ್ಲಿ ಸರ್ವೋತ್ಕೃಷ್ಟ ಶೈಲಿಯೆಂದು ಪರಿಗಣಿಸಲಾಗಿದೆ. ಇದರ ತಾತ್ಪರ್ಯವೆಂದರೆ ಭಾರತದ ಪೂರ್ವಭಾಗದ ಕಾವ್ಯರಚನೆಯಲ್ಲಿ ಔಢ್ರಮಾಗಧಿ ಪ್ರವೃತ್ತಿ, ಭಾರತೀ ವೃತ್ತಿ, ಗೌಡೀಯ ಶೈಲಿಗಳು ಕಂಡುಬರುತ್ತವೆ. ಪಶ್ಚಿಮೋತ್ತರೀಯ ಭಾಗದಲ್ಲಿ ಪಾಂಚಾಲಮಾಧ್ಯಮಾ ಪ್ರವೃತ್ತಿ, ಸಾತ್ವತೀ ವೃತ್ತಿ ಮತ್ತು ಪಾಂಚಾಲಿ ಶೈಲಿಗಳು ಕಂಡುಬರುತ್ತವೆ. ದಕ್ಷಿಣ ಭಾಗದಲ್ಲಿ ದಾಕ್ಷಿಣಾತ್ಯ ಪ್ರವೃತ್ತಿಯೂ, ಕೈಶಿಕೀ ವೃತ್ತಿಯೂ, ವೈದರ್ಭೀ ಶೈಲಿಯೂ ಕಾಣಸಿಗುತ್ತದೆ.
       ಸಂಸ್ಕೃತ ಕಾವ್ಯಶೈಲಿಗಳ ಆದ್ಯ ಪ್ರವರ್ತಕ ವಾಮನ. ಇವನಿಗಿಂತ ಮುಂಚೆ ವೈದರ್ಭೀ, ಗೌಡೀ ಎಂಬ ಮಾರ್ಗಭೇದಗಳನ್ನು ದಂಡಿ ಒಪ್ಪಿದ್ದರೂ ಭಾಮಹನು ಅವುಗಳ ಭೇದ ಅಸ್ಪಷ್ಟವೆಂದು ಕಡೆಗಣಿಸಿದ್ದಾನೆ. ಈ ಎರಡಕ್ಕೆ ಪಾಂಚಾಲಿಯೆಂಬ ಮೂರನೇಯದನ್ನು ಕೂಡಿಸಿ ಮೂರೂ ರೀತಿಗಳಿಗೂ ಸ್ಪಷ್ಟವಾದ ಗುಣವೈಶಿಷ್ಟ್ಯವನ್ನು ಎತ್ತಿ ತೋರಿಸಿ ಶೈಲಿ ಅಥವಾ ರೀತಿಯೇ ಕಾವ್ಯದ ಆತ್ಮವೆಂದು ವಾಮನ ತೀರ್ಮಾನಿಸಿದ್ದಾನೆ. ವಾಮನನ ನಂತರ ಬಂದ ರುದ್ರಟ ತನ್ನ ಕಾವ್ಯಾಲಂಕಾರದಲ್ಲಿ ಆವಂತಿಯ ಶೈಲಿಯನ್ನು ಬೇರ್ಪಡಿಸಿ ಲಾಟೀಯ ಎಂಬ ನಾಲ್ಕನೇ ರೀತಿಯನ್ನು ಹೇಳುತ್ತಾನೆ. ಆದರೆ ರಾಜಶೇಖರ ಸಂಪೂರ್ಣವಾಗಿ ’ರೀತಿರಾತ್ಮಾ ಕಾವ್ಯಸ್ಯ’ ಎಂದ ವಾಮನನ ಸಿದ್ಧಾಂತವನ್ನೇ ಅಂಗೀಕರಿಸಿದ್ದಾನೆ. ಅಲಂಕಾರ, ಗುಣ, ರಸ ಇವುಗಳ ಪ್ರಾಧ್ಯಾನ್ಯವನ್ನು ಹೇಳಿದ ರಾಜಶೇಖರನೇ ಭಾಷೆಯ ದೃಷ್ಟಿಯಿಂದ ’ರೀತಿ’ಗೆ ಪರಮಪ್ರಾಶಸ್ತ್ಯವನ್ನು ಕೊಟ್ಟಿರುವುದನ್ನು ನಮ್ಮ ಈ ಕಾಲದ ಹೆಚ್ಚಿನ ಕವಿಪುಂಗವರೆಲ್ಲ ಮೆರತಂತಿದೆ. ಅರ್ಥಬೋಧಕತ್ವವಿದ್ದರೆ ಅದು ಲೌಕಿಕ ಭಾಷೆಯಾಗುತ್ತದೆಯೇ ಹೊರತೂ ಕಾವ್ಯಭಾಷೆಯಾಗುವುದಿಲ್ಲ. ಕಾವ್ಯಭಾಷೆಯೆನಿಸಿಕೊಳ್ಳಲು ಶಬ್ದಾರ್ಥಗಳಲ್ಲಿ ರಸಿಕವೇದ್ಯವಾದ ಕೆಲ ಗುಣಗಳಿರಬೇಕು. ಶಬ್ದಾಡಂಬರ, ಪಾಂಡಿತ್ಯಪ್ರದರ್ಶನ, ಕೃತಿಮಾಲಂಕಾರಗಳು ಒಂದು ರೀತಿಯಾದರೆ, ಲಲಿತ-ಪ್ರಸನ್ನ-ಮಧುರವಾದ ಸಹಜಾಭಿವ್ಯಕ್ತಿಯ ಕಾವ್ಯಗಳದ್ದು ಎರಡನೇಯ ರೀತಿ, ಇವೆರಡರ ಸಮ್ಮಿಶ್ರಣವೇ ಮೂರನೇಯದು. ಸಂಸ್ಕೃತ ಕಾವ್ಯಭಾಷೆಯನ್ನು ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಂದು ವಾಮನನ ಅಭಿಪ್ರಾಯ. ಹೀಗೆ ಕಾವ್ಯಭಾಷೆಯ ಸೌಂದರ್ಯ ವ್ಯಕ್ತವಾಗುವ ಮೂರು ವಿಧಗಳೇ ಗೌಡೀ, ಪಾಂಚಾಲೀ, ವೈದರ್ಭೀ ಎಂಬ ಮೂರು ರೀತಿಗಳು.
       ಸರಳ ಉದಾಹರಣೆಯೆಂದರೆ ಕಾಳಿದಾಸನ ಕಾವ್ಯಗಳದ್ದು ವೈದರ್ಭೀ ಶೈಲಿ. ಅವನು ಸುಕುಮಾರಗಂಭೀರ. ಸ್ನಿಗ್ಧಪ್ರಶಾಂತ. ಶಾಂತದಲ್ಲಿ ಪರ್ಯವಸಿಸುವ ಶೃಂಗಾರ ಅವನ ಪ್ರಿಯವಾದ ರಸ. ಪಾತ್ರಗಳ ಸ್ವಭಾವೋನ್ನತಿ, ರಸಾವಿಷ್ಕಾರಗಳ ಚರಮಸೀಮೆಯನ್ನು ಕಾಳಿದಾಸನ ಕಾಲದಲ್ಲಾಗಲೇ ಸಂಸ್ಕೃತ ಸಾಹಿತ್ಯ ತಲುಪಿದ್ದರಿಂದ ಅನಂತರದ ಕವಿಗಳಿಗೆ ತಮ್ಮ ಅನನ್ಯತೆಯನ್ನು ಸ್ಥಾಪಿಸಲು ನೂತನ ಮಾರ್ಗಗಳನ್ನು ಆವಿಷ್ಕರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಮಜದ ವಿಷಯವೆಂದರೆ ಕಾಳಿದಾಸೋತ್ತರ ಕಾಲದಲ್ಲಿ ಅಂಥ ಯಾವ ಕವಿಗಳೂ ನೂತನ ಕಥಾವಸ್ತುವಿನ ಆವಿಷ್ಕಾರ ಮಾಡದೇ ಪಾರಂಪರಿಕವಾಗಿ ಉಪಲಬ್ಧವಿರುವ ವಸ್ತುವಿನಲ್ಲೇ ಕಾವ್ಯರಚಿಸಿಕೊಂಡು ಹೋದರು. ರಾಮಾಯಣಾದಿಗಳೂ, ಪುರಾಣ ಕತೆಗಳೂ ಜನರಿಗೇನು ಹೊಸದಾಗಿರಲಿಲ್ಲ. ಕಾಳಿದಾಸನಂಥವರೇ ಬರೆದಿಟ್ಟ ಮೇಲೆ ಅದನ್ನು ಮೀರಿಸಿ ಬರೆಯುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಕವಿಗಳು ತಮ್ಮ ಕಾವ್ಯದಲ್ಲಿ ಅವಕಾಶವಿರುವೆಡೆಯಲ್ಲೆಲ್ಲ ತಮ್ಮ ಪಾಂಡಿತ್ಯವನ್ನೂ ಅತಿಕ್ಲಿಷ್ಟ ಶೈಲಿಯನ್ನೂ ಪ್ರಕಟಿಸತೊಡಗಿದ್ದರಿಂದ ಸಂಸ್ಕೃತ ಕಾವ್ಯಸ್ವರೂಪ ಪೂರ್ತಿ ಭಿನ್ನವಾದ ಆಯಾಮವನ್ನು ಪಡೆದುಕೊಂಡಿತು. ಸಹಜಾಭಿವ್ಯಕ್ತಿ ಮೂಲೆಗುಂಪಾಗಿ ಪಾಂಡಿತ್ಯಪ್ರದರ್ಶನವೇ ಪ್ರಧಾನವಾಯಿತು.(ಕನ್ನಡದ ರಿಮೇಕ್ ಶೂರ ನಿರ್ದೇಶಕರು ಹೇಳುವಂತೆ ಈ ಚಿತ್ರವು ಆ ಚಿತ್ರದ ರಿಮೇಕ್ ಆದರೂ ಕಥೆಯನ್ನು ನೇಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಮೂರು ಹಾಡುಗಳನ್ನು ಸ್ವಿಜರ್ಲೆಂಡಿನಲ್ಲೂ, ಎರಡು ಹಾಡುಗಳನ್ನು ಅಂಟಾರ್ಟಿಕಾದಲ್ಲೂ ಶೂಟಿಂಗ್ ಮಾಡಲಾಗಿದೆ. ಮೂಲ ಚಿತ್ರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಸುರಿಯಲಾಗಿದೆ. ಎರಡು ಹೊಸ ಹೊಡೆದಾಟದ ದೃಶ್ಯಗಳಿವೆ ವಗೈರೆ ವಗೈರೆ!!!)  ಕಾಳಿದಾಸನಂಥ ದರ್ಶನ ಮರೆಯಾಗಿ ಯಮಕ, ಮುರಜ-ಖಡ್ಗ-ಗೋಮೂತ್ರಿಕಾದಿ ಬಂಧಗಳು, ಏಕಾಕ್ಷರಿ-ದ್ವೈಕ್ಷರಿಗಳಂಥ ಶಬ್ದಚಮತ್ಕಾರಗಳು ತುಂಬಿದ ಮಹಾಕಾವ್ಯಗಳು, ದ್ವಿಸಂಧಾನ-ತ್ರಿಸಂಧಾನಾದಿ ಕಾವ್ಯಗಳು ಒಡಮೂಡತೊಡಗಿದವು. ಕಾಳಿದಾಸನ ಕಾವ್ಯಗಳ ವಿರಕ್ತಿಪೂರ್ಣ ಜೀವನಶ್ರದ್ಧೆ, ಅಂತರ್ಮುಖಿ ಒಳನೋಟಗಳ ಬದಲು ಕಾವ್ಯದ ಪಾತ್ರಗಳು ಬಹಿರ್ಮುಖವಾಗಿ ರಾಜನೀತಿ, ಶೃಂಗಾರ, ವಿಲಾಸ ಮುಂತಾದ ಐಹಿಕಮೌಲ್ಯಗಳಿಗೆ ಪ್ರಾಶಸ್ತ್ಯ ಹೆಚ್ಚುತ್ತ ಹೋಯಿತು. ಸಹಜತೆ ಕ್ಷೀಣವಾಗಿ ಕೃತ್ರಿಮತೆ ಪ್ರಧಾನವಾಯಿತು. ಇಷ್ಟಾದರೂ ಸಂಸ್ಕೃತ ಭಾಷೆಯ ಅನಂತಸಾಧ್ಯತೆಗಳ ಭಾಂಡಾರವನ್ನು ಜಗದೆದುರು ತೆರೆದಿಟ್ಟ ಕೀರ್ತಿ ಕಾಳಿದಾಸೋತ್ತರ ಕಾಲದಲ್ಲಿ ಮಾಘ, ಭಾರವಿಯೇ ಇತ್ಯಾದಿ ಕವಿಗಳಿಗೆ ಸಲ್ಲಲೇಬೇಕು. ಅದಾಗಿಯೂ ವಿದ್ವತ್ಕಾವ್ಯದ ಪಾಂಡಿತ್ಯ ಪ್ರದರ್ಶನವನ್ನು ತ್ಯಜಿಸಿ ಸಹಜ ಪ್ರಸನ್ನ ಶೈಲಿಯಲ್ಲಿ ಕಾವ್ಯವನ್ನು ರಚಿಸುವುದರ ಮೂಲಕ ಕಾಳಿದಾಸನ ವೈದರ್ಭೀ ರೀತಿಯನ್ನು ಪುನರುಜ್ಜೀವಿಸುವಂತೆ ಮಾಡಿದವರಲ್ಲಿ ಜಾನಕೀಹರಣವನ್ನು ಬರೆದ ಕುಮಾರದಾಸ, ನವಸಾಹಸಾಂಕದ ಪದ್ಮಗುಪ್ತ, ಚಂಪೂರಾಮಾಯಣದ ಮೂಲಕ ವಾಲ್ಮೀಕಿರಾಮಾಯಣವನ್ನು ಪುನರ್ನಿರ್ಮಿಸಿದ ಭೋಜರಾಜ ಮುಂತಾದವರು ಪ್ರಮುಖರು.
      ಇನ್ನು ಸಮಾಸಭೂಯಿಷ್ಠವಾದ, ಆಂಡಬರದ ಪದಸಮೂಹಗಳಿಂದ ಕೂಡಿದ ಜಟಿಲವಾದ ಗೌಡೀಶೈಲಿಯಲ್ಲಿ ಪ್ರಮುಖವಾಗಿ ನೆನಪಾಗುವವರಲ್ಲಿ ಒಬ್ಬ ವಾಸವದತ್ತಾದ ಸುಬಂಧು. ’ಪ್ರತ್ಯಕ್ಷರಶ್ಲೇಷಮಯಪ್ರಬಂಧವಿನ್ಯಾಸವೈದಗ್ಧನಿಧಿ’ಯೆಂದು ತನ್ನ ವಿಶಿಷ್ಟತೆಯನ್ನೂ ಉದ್ದಕ್ಕೆ ಲೇಖಿಸಿದವನವನು. ಶ್ಲೇಷಮೂಲವಾದ ಉಪಮೆ, ಉತ್ಪ್ರೇಕ್ಷೆ, ವಿರೋಧಾಭಾಸ, ಅನುಪ್ರಾಸಮಿಶ್ರಿತ  ಸಮಾಸಬಂಧಗಳ ವರ್ಣನೆಯಲ್ಲಿ ಗದ್ಯಸಾಹಿತ್ಯದಲ್ಲಿ ಸುಬಂಧುವನ್ನು ಸರಿಗಟ್ಟುವವರು ಕಡಿಮೆ. ಆತ ವಾಸವದತ್ತಾದಲ್ಲಿ ರೇವಾ ನದಿಯನ್ನು ವರ್ಣಿಸುವ ಒಂದು ಸಾಲನ್ನು ನೋಡಿದರೆ ಸಾಕು, ಅವನಿಗೂ ವೈದರ್ಭೀ ಶೈಲಿಯ ಕಾಳಿದಾಸನಿಗೂ ಇರುವ ವ್ಯತ್ಯಾಸ ಸುಲಭಗ್ರಾಹ್ಯ.
'ಮದಕಲಕಲಹಂಸಸಾರಸರಸಿತೋದ್ಭ್ರಾಂತಭಾಃಕೂಟವಿಕಟಪುಚ್ಛಛಟಾವ್ಯಾಧೂತವಿಕಟಕಮಲಖಂಡವಿಗಲಿತಮಕರಂದಬಿಂದುಸಂದೋಹಸುರಭಿತಸಲಿಲಯಾ.....'
      ಸುಬಂಧುವಿನಂತೆ ಕಾವ್ಯಕಲೆಯ ಪರಮ ಸೌಂದರ್ಯವನ್ನು ಗದ್ಯದಲ್ಲಿ ಅನರ್ಘ್ಯವಾಗಿ ಕಟ್ಟಿಕೊಟ್ಟವ ಬಾಣ. ಅವನದ್ದು ಪಾಂಚಾಲೀ ಶೈಲಿ. ಅವನ ವಾಕ್ಯವಿನ್ಯಾಸ ಮೊದಲು ದೀರ್ಘ, ಬಳಿಕ ಮಧ್ಯಮ, ಆಮೇಲೆ ಹೃಸ್ವ, ಮತ್ತೆ ಮಧ್ಯಮ, ಕೊನೆಗೆ ದೀರ್ಘ ಹೀಗೆ ಆರೋಹಣ-ಅವರೋಹಣ ಕ್ರಮದಲ್ಲಿ ಚಲಿಸುತ್ತ ಭಾಷೆಯ ಸಕಲಸಾಧ್ಯತೆಗಳನ್ನು ತೆರೆದಿಡುತ್ತ ಹೋಗುವುದು ಬಾಣನ ಜಾಯಮಾನ. ’ಉದ್ದಾಮದರ್ಪಭಟಸಹಸ್ರೋಲ್ಲಾಸಿತಾಸಿಲತಾಪಂಜರವಿಧೃತಾಪ್ಯಪಕ್ರಾಮತಿ’ ಎಂದು ಗೌಡೀ ಶೈಲಿಯಲ್ಲಿ ಆಡಂಬರಪೂರ್ಣವಾಗಿ ಬರೆದಷ್ಟೇ ಸಲೀಸಾಗಿ 'ಕಿಂ ಮೇ ಗೃಹೇಣ? ಕಿಮಂಬಯಾ? ಕಿಂ ವಾ ತಾತೇನ?’ ಎಂದು ಸಣ್ಣ ಸಣ್ಣ ವಾಕ್ಯಗಳಲ್ಲಿ ಮನಕರಗುವಂತೆಯೂ ಬರೆಯಬಲ್ಲ.
       ಇಡಿಯ ಜಗತ್ಪ್ರಕೃತಿಯನ್ನೇ ಸತ್ವ, ರಜ, ತಮಗಳೆಂಬ ಮೂರು ಗುಣಗಳಿಂದ ವಿವರಿಸುವಂತೆ ಸಂಸ್ಕೃತ ಕಾವ್ಯಭಾಷೆಯನ್ನು ಕೂಡ ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಯೆಂದು ವಾಮನ ಅಭಿಪ್ರಾಯ. ಒಂದೊಂದು ರೀತಿಯ ಉದಯಕ್ಕೆ ವಿಶಿಷ್ಟವಾದ ಗುಣ, ಕಾರಣಗಳಿವೆ. ಕಾವ್ಯಭಾಷೆಯ ಸಹಜ ಸೌಂದರ್ಯಾಂಶವನ್ನು ರೀತಿ ಪ್ರತಿಪಾದಿಸಿದರೆ, ರೀತಿಸಿದ್ಧ ಸೌಂದರ್ಯಕ್ಕೆ ಅತಿಶಯವನ್ನು ತರಬಲ್ಲ ವಾಕ್ಯವಿನ್ಯಾಸ ವಿಶೇಷಗಳನ್ನು ಅಲಂಕಾರಗಳೆನ್ನಬಹುದು. ಕಾವ್ಯದಲ್ಲಿ ಇವೆರಡರ ಪರಿಣಾಮವಾಗಿ ರಸಿಕರಲ್ಲಿ ಉಂಟಗುವ ಆನಂದವೇ ರಸ. ಹೀಗೆ ರೀತಿ, ರಸಗಳೆರಡೂ ಕಾವ್ಯದಲ್ಲಿ ಕೂಡಿ ನಡೆಯುತ್ತವೆ. ವಾಗರ್ಥದಂತೆ, ಪಾರ್ವತೀ ಪರಮೇಶ್ವರರಂತೆ.
       ಸೌ೦ದರ್ಯವನ್ನನ್ವೇಷಿಸುವ, ಕಾಣುವ ಮತ್ತು ಪ್ರಕಟಿಸುವ ಶಕ್ತಿಸ೦ಪನ್ನನನ್ನು ಕವಿಯೆ೦ದೂ, ಅದರಿ೦ದ ಆಸ್ವಾದವನ್ನು ಹೊ೦ದುವವನನ್ನು ಸಹೃದಯನೆ೦ದೂ ನಮ್ಮ ಪರ೦ಪರೆ ಕರೆದಿದೆ. ನಮ್ಮೊಳಗೆ ಜಾಗೃತವಾಗಿದ್ದರೂ ನಮ್ಮದಾಗಿರದ ಭಾವದ ಸ್ಥಿತಿಗೆ ರಸವೆ೦ದು ಹೆಸರು. ರಸಾನುಭೂತಿಯನ್ನು ಉ೦ಟುಮಾಡುವ ಕಾವ್ಯ ಉತ್ತಮಕಾವ್ಯ. ಸಹೃದಯನ ಚಿತ್ತ ಶಬ್ದಸೌ೦ದರ್ಯದಲ್ಲಿ ಅಥವಾ ವಾಚ್ಯಾರ್ಥ ಸೌ೦ದರ್ಯದಲ್ಲಿ ವಿಶ್ರಾ೦ತವಾದರೆ ಅದು ಮಧ್ಯಮ ಕಾವ್ಯ. ಅದೆರಡೂ ಅಲ್ಲದ್ದು ಇತ್ತೀಚೆಗೆ ಬರುತ್ತಿರುವ ಮೂರನೇ ದರ್ಜೆಯ ಕಾವ್ಯಗಳು. ಕಾವ್ಯವೆ೦ದರೇನೆ೦ದರಿಯದವರೂ ಕವಿಗಳಾಗುತ್ತಿರುವುದು ಸ೦ಖ್ಯೆ ಜಾಸ್ತಿಯಾಗುತ್ತಿರುವುದರಿ೦ದ ಸಹೃದಯರ ಸ೦ಖ್ಯೆ ಕಡಿಮೆಯಾಗಿದೆಯಷ್ಟೇ. ನಿಸ್ಸ೦ಗದ ಸ್ಥಿತಿಯಲ್ಲಿ ಪ್ರಪ೦ಚವನ್ನು ಪರಿಭಾವಿಸುವ ಕವಿಗೆ ಪ್ರಪ೦ಚದ ವಸ್ತುವೈವಿಧ್ಯದ ಅ೦ತರ೦ಗದಲ್ಲಿ ನಿಹಿತವಾದ ಏಕತೆ ಗೋಚರವಾದೀತು. ಅಥವಾ ಬಾಹ್ಯ ಪ್ರಪ೦ಚ ತನ್ನ ಅ೦ತರ೦ಗದ ಭಾವಕ್ಕೆ ಸ೦ವಾದಿಯಾಗಿರುವುದು ಕ೦ಡೀತು. ಆ ಹೊಳಹನ್ನೇ ಪ್ರತಿಭೆಯೆನ್ನುವುದು. ಪ್ರತಿಭಾನೇತ್ರದಿ೦ದ ಅವರೇನನ್ನು ಕಾಣುವರೋ ಅದು ದರ್ಶನ. ಸ೦ಸ್ಕೃತದಲ್ಲಿ ದಾರ್ಶನಿಕತೆಯನ್ನು ಕವಿತ್ವದ ಅನಿವಾರ್ಯ ಮತ್ತು ಅವಿಭಾಜ್ಯ ಅ೦ಗವೆ೦ದೇ ಪರಿಗಣಿಸಲಾಗಿದೆ. ಪ್ರತಿಭೆಯಿ೦ದ ಕ೦ಡ ದರ್ಶನವನ್ನು ಸಮುಚಿತವಾಗಿ ಪ್ರಕಟಿಸಲು ಕವಿಗೆ ಶಬ್ದಸ೦ಪತ್ತು, ಶಾಸ್ತ್ರಜ್ಞಾನ, ಇತಿಹಾಸದ ಅಧ್ಯಯನವೆಲ್ಲ ತು೦ಬ ಅಗತ್ಯ. ದರ್ಶನದಿ೦ದ ಪ್ರಕಟಗೊ೦ಡಿದ್ದು ವರ್ಣನ. ಪ್ರತಿಭೆ, ಲೋಕಶಾಸ್ತ್ರಾದಿ ಕಾವ್ಯಗಳ ಅಧ್ಯಯನ, ಮತ್ತು ಅಭ್ಯಾಸ ಈ ಮೂರೂ ಹದವಾಗಿ ಪಾಕವಾಗಿ ಸೇರಿ ದರ್ಶನ-ವರ್ಣನಗಳು೦ಟಾಗುವುದರಿ೦ದ ಕವಿತ್ವ ಎ೦ಬುದು ತು೦ಬ ಹೊಣೆಗಾರಿಕೆಯ ಸಾಧನೆಯ ಪದವಿ.
ಪುರಾ ಕವೀನಾಂ ಗಣನಾಪ್ರಸಂಗೇ
ಕನಿಷ್ಠಿಕಾಧಿಷ್ಠಿತಕಾಲಿದಾಸಃ |
ಅದ್ಯಾಪಿ ತತ್ತುಲ್ಯಕವೇರಭಾವಾದ್
ಅನಾಮಿಕಾ ಸಾರ್ಥವತೀ ಬಭೂವ ||

- ನಮ್ಮ ದೇಶದಲ್ಲಿ ಎಷ್ಟು ಕವಿಗಳಿದ್ದಾರೆಂಬ ಎಣಿಕೆ ಕಿರುಬೆರಳಿನಿಂದ ಶುರುವಾಯ್ತಂತೆ. ಮೊದಲು ಕಾಳಿದಾಸ ಎಂದು ಕಿರುಬೆರಳನ್ನು ಮಡಿಸಲಾಯ್ತು. ಆಮೇಲೆ ಅವನಿಗೆ ಸಮಾನನಾದ ಇನ್ನೊಬ್ಬ ಕವಿ ಸಿಗದುದರಿಂದ ಎರಡನೇ ಬೆರಳು ’ಅನಾಮಿಕಾ’(ಹೆಸರಿಲ್ಲದ್ದು) ಎಂದೇ ಸಾರ್ಥಕವಾಯ್ತು. ಕಾಳಿದಾಸ ಮಹಾಕವಿಯ ಪದವಿಗೇರಿದ್ದು ಸುಮ್ಮನೆಯೇ! ಇಂದು ನೋಡಿ. ಟಾಮ್, ಡಿಕ್ ಎಂಡ್ ಮೊಯ್ಲಿ ಎಲ್ಲರೂ ಕವಿಗಳೇ.

Sunday, June 5, 2016

ಆಂಧ್ರಕಾವ್ಯ ಪರಂಪರೆ ಹಾಗೂ ಕವಿಸಾರ್ವಭೌಮ ಶ್ರೀನಾಥ


आन्ध्रत्वमान्ध्रभाषा च प्राभाकरपरिश्रम: |
तत्रापि याजुषी शाखा नाಽल्पस्य तपस: फलम् ||
      ಆ೦ಧ್ರದಲ್ಲಿ ಜನಿಸುವುದು, ಆಂಧ್ರಭಾಷೆಯನ್ನು ಮಾತನಾಡುವುದು, ಜೊತೆಗೆ ಯಜುರ್ವೇದ ಶಾಖೆಗೆ ಸೇರಿದವನಾಗುವುದು ಇವೆಲ್ಲ ಸಣ್ಣಪುಟ್ಟ ತಪಸ್ಸಿಗೆಲ್ಲ ಒಲಿಯುವ ಫಲವಲ್ಲವೆಂದಿದ್ದಾರೆ ಖ್ಯಾತ ಕವಿ, ತತ್ತ್ವಜ್ಞಾನಿ ಅಪ್ಪಯ್ಯದೀಕ್ಷಿತರು. ’ತ್ರಿಮೂರ್ತಿಶಾಂ ಸ೦ಸ್ಕೃತಾ೦ಧ್ರ ಪ್ರಾಕ್ರತ ಪ್ರಿಯ೦ಕರಾ: ’ ತ್ರಿಮೂರ್ತಿಗಳಲ್ಲಿ ಬ್ರಹ್ಮನಿಗೆ ಸಂಸ್ಕೃತವೂ, ವಿಷ್ಣುವಿಗೆ ತೆಲುಗೂ, ಶಿವನಿಗೆ ಪ್ರಾಕೃತವು ಪ್ರಿಯವಾದ ಭಾಷೆಗಳೆಂದು ತೆಲುಗರ ಆರಾಧ್ಯದೈವ ಶ್ರೀಕಾಕುಳಾಂಧ್ರ ಮಹಾವಿಷ್ಣು ಹೇಳಿದ್ದಾನಂತೆ.
ಆ೦ಧ್ರಕ್ಕೆ ಹಿಂದೆ ತ್ರಿಲಿ೦ಗ ಕ್ಷೇತ್ರವೆ೦ಬ ಹೆಸರೂ ಇತ್ತು. ದ್ರಾಕ್ಷಾರಾಮ, ಶ್ರೀಶೈಲ, ಕಳೇಶ್ವರಗಳೆ೦ಬ ಮೂರು ಪ್ರಸಿದ್ಧ ಶಿವಕ್ಷೇತ್ರಗಳಿ೦ದ ಈ ಹೆಸರು ಬ೦ದಿದ್ದು. ಈ ತ್ರಿಲಿಂಗವೇ ತೆನುಂಗುವಾಗಿ ಕೊನೆಗೆ ತೆಲುಗು ಆಯಿತಂತೆ. ಪುರಾಣಕಾಲದ ಛಪ್ಪನ್ನೈವತ್ತಾರು ದೇಶಗಳಲ್ಲಿ ಆಂಧ್ರವೂ ಒಂದು. ರಾಮಾಯಣ, ಮಹಾಭಾರತ, ಐತರೇಯ ಬ್ರಾಹ್ಮಣ, ಸ್ಕಾಂದಪುರಾಣ ಸೇರಿ ಆಂಧ್ರದ ಉಲ್ಲೇಖವಿಲ್ಲದ ಪುರಾಣ ಗ್ರಂಥಗಳಿಲ್ಲ. ಕಾವೇರಿಯಿ೦ದ ಮಾ ಗೋದಾವರಿಪರ್ಯ೦ತವೆ೦ಬ ಕನ್ನಡನಾಡಿನ ಸೀಮೆಯ ಬಗೆಗೆ ಮಾರ್ಗಕಾರನು ಹೇಳಿದ೦ತೆ ಆ೦ಧ್ರದ ಸೀಮೆಯನ್ನು ಕಾಕತೀಯರ ಪ್ರತಾಪರುದ್ರನ ಆಸ್ಥಾನಕವಿಯಾಗಿದ್ದ ವಿದ್ಯಾನ೦ದ ಹೀಗೆ ವಿವರಿಸುತ್ತಾನೆ.
पश्चात्पुरस्तादपि यस्य देशौ
ख्यातौ महाराष्ट्रकळिंगदेशौ |
अवागुदक्पाण्ड्यककन्यकुब्जौ
देशस्स तत्रास्ति त्रिलिंगनामा || 
       ಆಗಿನ ಆ೦ಧ್ರ ಪಶ್ಚಿಮದಲ್ಲಿ ಮಹಾರಾಷ್ಟ್ರವನ್ನೂ, ಪೂರ್ವದಲ್ಲಿ ಕಳಿ೦ಗವನ್ನೂ, ದಕ್ಷಿಣದಲ್ಲಿ ಪಾ೦ಡ್ಯವನ್ನ್ಪೂ ಉತ್ತರದಲ್ಲಿ ಕನ್ಯಕುಬ್ಜವನ್ನೂ ಒಳಗೊ೦ಡಿತ್ತ೦ತೆ. ಗೋದಾವರಿ ಕೃಷ್ಣೆಯರ ಮಧ್ಯದ ಅಚ್ಚತೆಲುಗಿನ ಆಂಧ್ರನೆಲ ಹಿಂದೆ ವೆಂಗಿನಾಡೆಂದು ಹೆಸರಾಗಿತ್ತು, ವೆಂಗಿ ಅಥವಾ ರಾಜಮಹೇಂದ್ರಪುರ(ಈಗಿನ ರಾಜಮಂಡ್ರಿ) ಅದರ ರಾಜಧಾನಿ.  ಕಡಪದಿಂದ ನಂದಿಬೆಟ್ಟದವರೆಗಿನ ಪೊಟ್ಟಿಪಿನಾಡು, ಕರ್ನೂಲಿನಿಂದ ಬಳ್ಳಾರಿಯವರೆಗಿನ ರೇನಾಡು, ಗುಂಟೂರು-ಪ್ರಕಾಶಂಗಳ ಪಾಲ್ನಾಡು, ಮದ್ರಾಸಿನಿಂದ ಕೃಷ್ಣೆಯವರೆಗಿನ ಪಾಕನಾಡು, ಗುಂಟೂರಿನ ಪೂರ್ವೋತ್ತರದ ಕಮ್ಮನಾಡುಗಳೆಲ್ಲ ಆಗಿನ ಆಂಧ್ರನಾಡಿನ ವಿವಿಧ ಭಾಗಗಳು.
       ರಾವಣ ಬರೆದ ’ರಾವಣೀಯಂ’ ತೆಲುಗಿನ ಮೊದಲ ವ್ಯಾಕರಣ ಗ್ರಂಥವೆಂದೇ ಪ್ರಸಿದ್ಧಿ. ಪೈಥಾಗೋರಸ್ಸಿನ ಪ್ರಮೇಯದ ಮೂಲರೂಪವಾದ ಶುಲ್ಬಸೂತ್ರಗಳನ್ನು ರಚಿಸಿದ ಬೋಧಾಯನ, ಆಪಸ್ಥ೦ಭ ಸೂತ್ರವೆ೦ದೇ ಪ್ರಸಿದ್ಧವಾದ ಗೃಹ್ಯಸೂತ್ರಗಳನ್ನು ರಚಿಸಿದ ಆಪಸ್ಥ೦ಭ ಇವರಿಬ್ಬರೂ ಆ೦ಧ್ರದವರೇ. ಅಲ್ಲಿ೦ದ ಶುರುವಾದ ಆ೦ಧ್ರದ ಕಾವ್ಯಪರ೦ಪರೆ ಮು೦ದುವರೆದದ್ದು ಪ್ರತಾಪರುದ್ರೀಯವನ್ನು ಬರೆದ ಖ್ಯಾತ ಅಲ೦ಕಾರಶಾಸ್ತ್ರಜ್ಞ ವಿದ್ಯಾನಾಥನಿ೦ದ. ಸಾಯಣರ ಭಾಷ್ಯವಿಲ್ಲದೇ ವೇದಗಳ ಅಧ್ಯಯನ ಪೂರ್ತಿಗೊಳ್ಳುವುದೆ೦ತು? ಪ೦ಚಾದಶಿ, ಜೀವನ್ಮುಕ್ತಿವಿವೇಕಗಳಿಲ್ಲದ ಅದ್ವೈತ ವೇದಾ೦ತವೆಲ್ಲಿ? ಅನ್ನಮಭಟ್ಟನ ತರ್ಕಸ೦ಗ್ರಹದೀಪಿಕೆಯಿಲ್ಲದೆ ತರ್ಕಶಾಸ್ತ್ರವನ್ನು ಪ್ರಾರ೦ಭಿಸುವುದೆ೦ತು? ಪ೦ಡಿತರಾಜ ಜಗನ್ನಾಥ ಕೈಯಾಡಿಸದೇ ಬಿಟ್ಟ ಕಾವ್ಯಕ್ಷೇತ್ರವಾವುದು? ವ್ಯಾಖ್ಯಾನರ೦ಗದ ಚಕ್ರವರ್ತಿ ಮಲ್ಲಿನಾಥನ ವ್ಯಾಖ್ಯಾವಿಲ್ಲದೇ ಪ೦ಚಮಹಾಕಾವ್ಯಗಳೆಲ್ಲಿ?
ವೇದಾ೦ತದರ್ಶನ ಪರ೦ಪರೆಯ ಎಲ್ಲ ದಾರ್ಶನಿಕರೂ, ಅಚಾರ್ಯರೂ ಹುಟ್ಟಿದ್ದು ದಕ್ಷಿಣದಲ್ಲೇ. ಅದು ಶ೦ಕರರಿರಬಹುದು, ರಾಮಾನುಜರಿರಬಹುದು, ಮಧ್ವ, ನಿ೦ಬಾರ್ಕ, ಶ್ರೀಕ೦ಠ ಅಥವಾ ವಲ್ಲಭರಿರಬಹುದು. ಬ್ರಹ್ಮಸೂತ್ರಗಳಿಗೆ ಭಾಷ್ಯವಾದ ವೇದಾ೦ತಪಾರಿಜಾತಸೌರಭವನ್ನು ಬರೆದ ನಿ೦ಬಾರ್ಕಾಚರ್ಯರು ಆ೦ಧ್ರ-ಬಳ್ಳಾರಿ ಗಡಿಯ ನಿ೦ಬಪುರದವರು. ರಾಮಾನುಜರ ಮನೆತನದ ಹೆಸರಾದ ’ಆಸುರಿ’ ಮೂಲತಃ ಆ೦ಧ್ರದ್ದು. ಮನೆತನದ ಹೆಸರಿನಿ೦ದ ಗುರುತಿಸಿಕೊಳ್ಳುವುದು ಆ೦ಧ್ರಬ್ರಾಹ್ಮಣರಲ್ಲಿ ಸಾಮಾನ್ಯ ಸ೦ಗತಿ. ತೆಲುಗಿನ ನಡುಮಿ೦ಟಿಯ ತುಳು ರೂಪವೇ ಮಧ್ವಾಚಾರ್ಯರ ಮನೆತನದ ಹೆಸರಾದ ನಡಿಲ್ಲಾಯ. ಕನ್ನಡ ಕರಾವಳಿಯ ಹವ್ಯಕ, ಶಿವಳ್ಳಿ, ಕೇರಳದ ನಂಬೂದಿರಿಗಳೆಲ್ಲ ಮಯೂರವರ್ಮನ ಕಾಲದಲ್ಲಿ ವಲಸೆ ಬಂದ ಗೋದಾವರಿ ಸೀಮೆಯ ಅಹಿಚ್ಛತ್ರದವರು. ಅಚ್ಚಕನ್ನಡದ ಮೊದಲ ರಾಜವಂಶ ಕದಂಬರ ಸ್ಥಾಪಕ ಮಯೂರನ ಮೊದಲ ರಾಜಧಾನಿಯಾಗಿದ್ದುದು ಆಂಧ್ರದ ಶ್ರೀಶೈಲ. ಕದಂಬರು, ಪಲ್ಲವರು, ಸೇನ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲ ಆಂಧ್ರಶಾತವಾಹನರು. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಹೊಗಳಿದ ಭಾರತದ ಸ್ವರ್ಣಯುಗದ ನಿರ್ಮಾತೃರಾದ ಗುಪ್ತರು ಮೂಲತಃ ಆಂಧ್ರಭೃತ್ಯರೆಂದೇ ಹೆಸರಾದವರು. ಅದ್ವೈತ ದರ್ಶನದ ಪರ೦ಪರೆಯಲ್ಲ೦ತೂ ಆ೦ಧ್ರದ ಕೊಡುಗೆ ಕೊನೆಯಿಲ್ಲದ್ದು. ಕಾಕತೀಯರ ಕಾಲದ ಖ್ಯಾತ ಕವಿ ಅಚಿ೦ತೇ೦ದ್ರದೇವನು ಅದ್ವೈತಾಮೃತಯತಿಗಳ ಶಿಷ್ಯ. ಅದ್ವೈತಾಚಾರ್ಯತಿರುಮಲನೆ೦ದು ಪ್ರಾಖ್ಯಾತಿಗಳಿಸಿದವ ಅನ್ನಮಭಟ್ಟನ ತ೦ದೆ ಮೇಲಿಗಿರಿ ಮಲ್ಲಿನಾಥ. ಅದ್ವೈತ ದರ್ಶನದ ಮೇಲಿನ ’ತತ್ತ್ವಪ್ರದೀಪಿಕ’ದ ಕರ್ತೃ ಚಿತ್ಸುಖಾಚಾರ್ಯರು, ಅದ್ವೈತದ ಅತಿಕ್ಲಿಷ್ಟ ಭಾಷ್ಯಗಳಲ್ಲೊ೦ದಾದ ಶ್ರೀಹರ್ಶನ ’ಖ೦ಡನಖ೦ಡಖಾದ್ಯ’ದ ಮೇಲಿನ ಟೀಕೆಯನ್ನು ರಚಿಸಿದ ಗು೦ಡಯ್ಯಭಟ್ಟರು ಪುನಃ ಆ೦ಧ್ರದೇಶದವರೇ. 
       ಅಬ್ಬ, ಆಂಧ್ರವನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆಂದು ತೆಗಳಬೇಡಿ. ಇಷ್ಟೆಲ್ಲ ಪೀಠಿಕೆ ನನ್ನ ಮೂಲ ಗೋದಾವರಿ ಸೀಮೆಯ ಅಹಿಚ್ಛತ್ರದ ಆಂಧ್ರನಾಡಿನ ಮೇಗಣ ಅಭಿಮಾನವಷ್ಟೇ. 
       ತೆಲುಗಿನ ಮೊತ್ತಮೊದಲ ಕಾವ್ಯವೆಂದು ಪರಿಗಣಿತವಾಗಿರುವುದು ಸುಮಾರು ಕ್ರಿ.ಶ ೧೦೨೦ರಲ್ಲಿ ಚಂಪೂಶೈಲಿಯಲ್ಲಿ ರಚಿತವಾದ ನನ್ನಯನ ಮಹಾಭಾರತ. ತೆಲುಗಿನಲ್ಲಿ ಮಾರ್ಗೀ ಶೈಲಿಯ ಪ್ರವರ್ತಕನೆಂಬ, ಆದಿಕವಿಯೆಂಬ ಹೆಗ್ಗಳಿಕೆ ನನ್ನಯ ಭಟ್ಟಾರಕನಿಗಿದೆ. ತೆಲುಗಿನ ಮೊದಲ ವ್ಯಾಕರಣ ಗ್ರಂಥ ಆಂಧ್ರಶಬ್ದಚಿಂತಾಮಣಿಯನ್ನು ಸಂಸ್ಕೃತದಲ್ಲಿ ರಚಿಸಿದವನೂ ಇವನೇ. ನನ್ನಯ ಭಾರತದ ಅತ್ಯುತ್ಕೃಷ್ಟ ಮತ್ತು ಸುವ್ಯವಸ್ಥಿತ ಶೈಲಿಯನ್ನು ಗಮನಿಸಿದರೆ ಅವನಿಗಿಂತ ಮೊದಲೇ ತೆಲುಗು ಸಾಹಿತ್ಯ ಸಮೃದ್ಧವಾಗಿಯೇ ಬೆಳೆದಿರಬೇಕು. ದುರದೃಷ್ಟವೆಂದರೆ ನನ್ನಯನ ಹಿಂದೆ ತೆಲುಗಿನಲ್ಲಿ ರಚಿತವಾದ ಯಾವ ಕೃತಿಯೂ ಲಭ್ಯವಿಲ್ಲ. ಈತನದೇ ಆದ ’ವಾಗಾನುಶಾಸನ’ದಲ್ಲಿಯೂ ಪೂರ್ವಸೂರಿಗಳ ಸ್ಮೃತಿಯಿಲ್ಲ. ವಿಜಯವಾಡದ ’ಯುದ್ಧಮಲ್ಲ ಶಾಸನಮು’ ಮತ್ತು ಮೋಪೂರ್ ಶಾಸನವೇತ್ಯಾದಿ ನನ್ನಯನ ಪೂರ್ವದ ಶಾಸನಗಳು ದೊರೆತಿದ್ದರೂ ತೆಲುಗು ಸಾಹಿತ್ಯದ ಗತದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಲಾಗಿಲ್ಲ. ನನ್ನಯನಿಂದ ಶುರುವಾಗಿತ್ತೆನ್ನಬಹುದಾದ ಆಂಧ್ರಸಾಹಿತ್ಯ ಪರಂಪರೆ ಮುಂದುವರೆದದ್ದು ಹದಿಮೂರನೇ ಶತಮಾನದಲ್ಲಿ ತಿಕ್ಕನ ಹಾಗೂ ಯರ್ರನರಿಂದ. ನನ್ನಯ ಮಹಾಭಾರತದ ಆದಿ, ಸಭಾ ಮತ್ತು ವನಪರ್ವದ ೧೪೨ ಶ್ಲೋಕಗಳನ್ನು ರಚಿಸಿದ್ದ. ನನ್ನಯ ಬಿಟ್ಟ ಉಳಿದ ಪರ್ವಗಳನ್ನು ಮುಗಿಸಿದವನು ಕವಿಬ್ರಹ್ಮ ತಿಕ್ಕನ ಸೋಮಯಾಜಿ. ತಿಕ್ಕನನ ರಚನೆಯ ಐವತ್ತು ವರ್ಷಗಳ ತರುವಾಯ ಆತ ಅರ್ಧ ಬರೆದು ಬಿಟ್ಟ ವನಪರ್ವವನ್ನು ಸಂಪೂರ್ಣಗೊಳಿಸಿದವನು ಯೆರ್ರನ. ಅದಲ್ಲದೇ ತೆಲುಗಿನಲ್ಲಿ ಮೊದಲ ಬಾರಿ ಪ್ರಬಂಧ ಶೈಲಿಯಲ್ಲಿ ತನ್ನದೇ ಸ್ವತಂತ್ರ ಮಹಾಭಾರತವನ್ನು ಹರಿವಂಶವೆಂಬ ಹೆಸರಲ್ಲಿ ರಚಿಸಿ ಪ್ರಬಂಧ ಪರಮೇಶ್ವರನೆಂದು ಹೆಸರಾದವನಿವನು. ಮೊದಲ ಮಹಾಭಾರತವನ್ನು ತೆಲುಗಿನಲ್ಲಿ ರಚಿಸಿದ ಈ ಮೂವರೂ ಆಂಧ್ರದ ಕವಿತ್ರಯರೆಂದೇ ಹೆಸರಾದವರು. ಹನ್ನೊಂದು ಹನ್ನೆರಡನೇಯ ಶತಮಾನದ ನಂತರ ತೆಲುಗಿನಲ್ಲಿ ಅಸಂಖ್ಯ ಸಂಖ್ಯೆಯ ಮಹಾಕವಿಗಳುದಿಸಿದರು. ಆಂಧ್ರದ ದಕ್ಷಿಣದಲ್ಲಿ ರಾಮಾನುಜರಿಂದ ಬೆಳೆಯುತ್ತಿದ್ದ ವೈಷ್ಣವಮತ, ಕರ್ನಾಟಕದ ಬಸವಪಂಥದ ಪ್ರಭಾವ, ಕೃಷ್ಣೆ-ಗೋದಾವರಿಯ ಮಧ್ಯದ ಅಚ್ಚವೈದಿಕ ಧರ್ಮಗಳು ತೆಲುಗಿನಲ್ಲಿ ವಿವಿಧ ಮಾದರಿಯ ಕೃತಿಗಳ ಹುಟ್ಟಿಗೆ ಕಾರಣವಾದವು. ತೆಲುಗು ಮತ್ತು ಸಂಸ್ಕೃತದಲ್ಲಿ ’ನೀತಿಸೂತ್ರ’ವನ್ನು ರಚಿಸಿದ ಮೊದಲನೇ ಪ್ರತಾಪರುದ್ರ, ’ಪಂಡಿತಾರಾಧ್ಯ ಚರಿತ’, ’ಬಸವ ಪುರಾಣ’ಗಳ ಪಾಲ್ಕುರಿಕೆ ಸೋಮನಾಥ, ’ಕುಮಾರಸಂಭವ’ದ ತೆಂಕಣಾಮಾತ್ಯರ ಮೇಲೆ ವೀರಶೈವ ಮತದ ಗಾಢ ಪ್ರಭಾವವನ್ನು ಕಾಣಬಹುದು. ಕವಿತ್ರಯರಿಂದ ಮೂರು ಶತಮಾನದಲ್ಲಿ ಪೂರ್ಣಗೊಂಡ ಮಹಾಭಾರತ, ರಾಮಾನುಜರ ಭಕ್ತಿಪಂಥದ ಪ್ರಭಾವ, ತೆಲುಗಿನಲ್ಲಿ ಇನ್ನೂ ರಚನೆಯಾಗದ ರಾಮಾಯಣ ಹದಿಮೂರನೇ ಶತಮಾನದಲ್ಲಿ ರಂಗನಾಥಕವಿಯನ್ನು ತೆಲುಗು ರಾಮಾಯಣವನ್ನು ರಚಿಸುವಂತೆ ಪ್ರೇರೇಪಿಸಿದವು(ಯರ್ರನ ಚಂಪೂರಾಮಾಯಣವನ್ನು ಬರೆದಿದ್ದನೆನ್ನಲಾಗುವುದಾದರೂ ಅದಿಂದು ಲಭ್ಯವಿಲ್ಲ). ರಂಗನಾಥ ರಾಮಾಯಣದಿಂದ ನಿನ್ನೆಮೊನ್ನೆಯ ಮಲ್ಲೆಮಾಲಾ ರಾಮಾಯಣದವರೆಗೆ ತೆಲುಗಿನಲ್ಲಿ ಪ್ರತಿ ಶತಮಾನವೂ ರಚನೆಯಾದ ರಾಮಾಯಣದ ಸಂಖ್ಯೆ ಲೆಕ್ಕವಿಟ್ಟವರಿಲ್ಲ. ರಾಮಾಯಣ ಕವಿಭಾರದಲಿ ಫಣಿರಾಯ ಇನ್ನಷ್ಟು ತಿಣುಕಿರಬಹುದು. ನನ್ನಯನ ನಂತರ ಎರಡನೇ ತೆಲುಗು ವ್ಯಾಕರಣ ಗ್ರಂಥ ತ್ರಿಲಿಂಗ ಶಬ್ದಾನುಶಾಸನದ ಕರ್ತೃ ಅಥರ್ವಣ. ನನ್ನಯ ಬರೆಯದೇ ಬಿಟ್ಟ ಮಹಾಭಾರತದ ವಿರಾಟ, ಉದ್ಯೋಗ, ಭೀಶ್ಮ ಪರ್ವಗಳನ್ನು ಅಥರ್ವಣ ಪೂರ್ತಿಗೊಳಿಸಿದ್ದನಂತೆ. ಅಪ್ಪಾಕವಿ ತನ್ನ ಕೃತಿಯಲ್ಲಿ ಉದ್ಧರಿಸಿದ ಅಥರ್ವಣನ ಭಾರತದ ಕೆಲ ಶ್ಲೋಕಗಳನ್ನು ಬಿಟ್ಟರೆ ಆ ಗ್ರಂಥ ಸಿಕ್ಕಿಲ್ಲ. ಪ್ರಾಯಃ ಪ್ರಥಮಾಚಾರ್ಯ ಆದಿಕವಿ ನನ್ನಯನ ನಂತರ ತೆಲುಗು ವ್ಯಾಕರಣವನ್ನೂ, ಭಾರತವನ್ನೂ ಮುಂದುವರೆಸಿದವನೆಂಬ ಕಾರಣಕ್ಕಾಗಿ ಅಥರ್ವಣನಿಗೆ ದ್ವಿತೀಯಾಚಾರ್ಯನೆಂಬ ವಿಶೇಷಣವೂ ಇದೆ. ತೆಲುಗಿನಲ್ಲಿ ದಶಕುಮಾರಚರಿತೆಯನ್ನು ಬರೆದ ಕೇತನ, ನೀತಿಶಾಸ್ತ್ರವನ್ನು ಬರೆದ ಬೆದ್ದನ, ಮಾರ್ಕಂಡೇಯ ಪುರಾಣದ ಮಾರನ್ನ, ಕೇಯೂರಬಾಹುಚರಿತದ ಮಂಚನ್ನ, ಚಂಪೂರಾಮಾಯಣದ ಹುಲ್ಲಂಕಿ ಭಾಸ್ಕರರೆಲ್ಲ ಹದಿಮೂರು ಹದಿನಾಲ್ಕನೇ ಶತಮಾನದಲ್ಲಿ ಆಂಧ್ರದ ಕವ್ಯಾಗಸವನ್ನು ಬೆಳಗಿದವರೇ.(ಕನ್ನಡದ ರನ್ನ-ಜನ್ನ-ಪೊನ್ನ, ಕಾಶ್ಮೀರದ ಕಲ್ಹಣ-ಜಲ್ಹಣ-ಮಲ್ಹಣ-ಶಿಲ್ಹಣರು, ಭಲ್ಹಟ-ಉದ್ಭಟ-ಮಮ್ಮಟರು, ತೆಲುಗಿನ ತಿಕ್ಕನ-ಯರ್ರನ-ಪೋತನ-ಕೇತನರ ಹೆಸರಿನ ಪ್ರಾಸವೇ ವಿಚಿತ್ರ.). ಇವರ ನಂತರ ಬಂದವನು ಆಂಧ್ರ ಸಾಹಿತ್ಯದ ಸ್ವರ್ಣಯುಗದ ನಿರ್ಮಾತೃ, ಕವಿಸಾರ್ವಭೌಮ ಶ್ರೀನಾಥ ಭಟ್ಟ. ಹದಿನಾಲ್ಕನೇ ಶತಮಾನದ ಅಂತ್ಯ, ಹದಿನೈದನೇ ಶತಮಾನದ ಆರಂಭಕಾಲದಲ್ಲಿ ಕೊಂಡವೀಡು ರೆಡ್ಡಿ ವಂಶವೆಂಬ ಚಿಕ್ಕ ಸಾಮ್ರಾಜ್ಯದಲ್ಲಿ ಪದಕೋಮಟಿ ವೇಮಭೂಪಾಲ ರೆಡ್ಡಿಯ ಅಸ್ಥಾನಕವಿಯಾಗಿದ್ದ ಶ್ರೀನಾಥನಿಗೆ ತೆಲುಗು ಕವಿವರ್ಯರಲ್ಲೇ ಅಪ್ರತಿಮನೂ, ಅಸಮನಾನೂ ಎಂಬ ಕೀರ್ತಿಯಿದೆ. ’ದೇಶಭಾಷಲಂದು ತೆಲುಗು ಲೆಸ್ಸ’ ಎಂದು ಕನ್ನಡರಾಜ್ಯರಮಾರಮಣ ಶ್ರೀಕೃಷ್ಣದೇವರಾಯ ಉದ್ಘೋಷಿಸುವ ಶತಮಾನಕಾಲ ಮುನ್ನವೇ ಕರ್ನಾಟಕ ರಾಜ್ಯಸಭೆಯಲ್ಲಿ ತೆಲುಗು ಝಂಡಾ ರಾರಾಜಿಸುವಂತೆ ಮಾಡಿದವ ಈ ಕವಿಚಕ್ರವರ್ತಿ. ಕನ್ಯೆಮೈಯ ಪರಿಮಳದಿಂದ ಕರಿಬೇವಿನೆಲೆಯೆ ಸುವಾಸನೆಯವರೆಗೆ ಆತ ರಚಿಸದ ಪದ್ಯಗಳಿಲ್ಲ, ಶೃಂಗಾರದಿಂದ ವೈರಾಗ್ಯದವರೆಗೆ ಆತ ಬಣ್ಣಿಸದ ರಸಗಳಿಲ್ಲ, ಪುರಾಣದಿಂದ ವ್ಯಾಕರಣದವರೆಗೆ, ಚಂಪುವಿನಿಂದ ಚಾಟುವಿನವರೆಗೆ ಆತ ಕೈಯಾಡಿಸದ ಕ್ಷೇತ್ರಗಳಿಲ್ಲ. ತೆಲುಗಿನಲ್ಲಿ ಶಾಲಿವಾಹನ ಸಪ್ತಶತಿ, ಪಂಡಿತಾರಾಧ್ಯಚರಿತ, ಶಿವರಾತ್ರಿ ಮಾಹಾತ್ಯ್ಮಂ, ಮಾನಸೋಲ್ಲಾಸ, ಹರಿವಿಲಾಸ, ಭೀಮಖಂಡಂ, ಕಾಶಿಕಾಖಂಡಂ, ಪಾಲಾಂಟಿ ವೀರಚರಿತ್ರ, ಧನಂಜಯ ವಿಜಯ, ಶೃಂಗಾರದೀಪಿಕಾ, ಕೃತಾಭಿರಾಮಂ, ಶೃಂಗಾರ ನೈಷಧಂ, ವಲ್ಲಭಾಭ್ಯುದಯ, ವಿಧಿನಾಟಕ ಹೀಗೆ ಶ್ರೀನಾಥನ ಕೃತಿಗಳು ಅವೆಷ್ಟೋ. ಶ್ರೀಹರ್ಷನ ನೈಷಧದ ತೆಲುಗು ಅವತರಣಿಕೆ ಶೃಂಗಾರ ನೈಷಧಕ್ಕಂತೂ ಕಾವ್ಯಸೌಂದರ್ಯದಲ್ಲಿ ಮೂಲವನ್ನು ಮೀರಿಸಿದ ಖ್ಯಾತಿಯಿದೆ. ತನ್ನ ಅಪಾರ ವಿದ್ವತ್ತಿನಿಂದ ಸಮಕಾಲೀನ, ಪ್ರಾಚೀನ ಕವಿಗಳನ್ನೂ ಮೀರಿಬೆಳೆದವನೆಂಬ ಕೀರ್ತಿ ಈತನದು. 
       ಕೊಂಡವೀಡಿನ ರೆಡ್ಡಿಗಳಲ್ಲಿ, ರಾಚಕೊಂಡದ ವೇಲಮರಲ್ಲಿ, ವಿಜಯನಗರ ಸಾಮ್ರಾಜ್ಯದಲ್ಲಿ ತನ್ನ ಕವಿತ್ವಕ್ಕಾಗಿ ಬಹುಪರಾಕು ಹೇಳಿಸಿಕೊಂಡವನು. ಕೊಂಡವೀಡಿನ ಕುಲದೈವ ಪೋತರಾಜು ಕಟಾರಿಯನ್ನು ದೇವರಕಂಡ ಪಾಳೇಗರರು ಹೊತ್ತೊಯ್ದಾದ ತನ್ನ ವಿದ್ವದ್ಬಲದಿಂದ ಅವರನ್ನು ಗೆದ್ದು ಕಟಾರಿಯನ್ನು ವಾಪಸ್ ತಂದವನು. ವಿಜಯನಗರದ ಗೌಡಡಿಂಡಿಮ ಕವಿಯನ್ನು ಸೋಲಿಸಿ ಎರಡನೇ ದೇವರಾಯನಿಂದ ಕನಕಾಭಿಷೇಕ ಮಾಡಿಸಿಕೊಂಡವನು. ಹೀಗಿಪ್ಪ ಶ್ರೀನಾಥ ಕವಿ ಮಹಾ ರಸಿಕ. ಭಾರೀ ಸುಖಜೀವಿ. ಸಂಸ್ಕೃತದ ಜಗನ್ನಾಥ ಪಂಡಿತನಂತೆ ಅಹಂಕಾರಿಯೆಂದೂ, ಕಾಲಕಾಲಕ್ಕೆ ರಾಜರುಗಳನ್ನು ಹೊಗಳಿ ಕಪ್ಪಕಾಣಿಕೆ ಪಡೆದು ರಾಜವೈಭೋಗ ನಡೆಸಿದನೆಂಬ  ಪುಕಾರು ಶ್ರೀನಾಥನ ಬಗೆಗಿರುವುದಾದರೂ ಕವಿತ್ವದಲ್ಲಿ, ಭಾಷಾಪ್ರೌಢಿಮೆಯಲ್ಲಿ ತೆಲುಗು ನಾಡಿನಲ್ಲೇ ಅವನನ್ನು ಸರಿಗಟ್ಟುವ ಇನ್ನೊಬ್ಬ ಕವಿ ಬರಲಿಲ್ಲವೆಂಬುದೇ ಅವನ ಅಗ್ಗಳಿಕೆಗೆ ಸಾಕ್ಷಿ. ತೆಲುಗಿನಲ್ಲಿ ಚಾಟುಪದ್ಯಗಳ, ಆಶುಕವಿತೆಗಳ ಪರಂಪರೆಯನ್ನೇ ಶುರುಮಾಡಿದವನೂ ಇವನೇ. ಕೂತಲ್ಲಿ ನಿಂತಲ್ಲಿ ಪದ್ಯಹೇಳುವ ಈ ಕವಿಗೆ ಸ್ವತಃ ವಿದ್ವಾಂಸರಾಗಿದ್ದ ಕಾವ್ಯಪ್ರಿಯ ಕೊಂಡವೀಡು ರೆಡ್ಡಿಗಳು ವಿಶೇಷ ಗೌರವ ಕೊಡುತ್ತಿದ್ದರಲ್ಲಿ ಆಶ್ಚರ್ಯವಿಲ್ಲ.
ಎಷ್ಟೆಂದರೂ ಶೄಂಗಾರ ನೈಷದದ ಕರ್ತೃವಲ್ಲವೇ! ಶ್ರೀನಾಥ ರಸಿಕ ಶಿಖಾಮಣಿ. ರಾಜಮಂಡ್ರಿಯ ಬೀದಿಗಳಲ್ಲಿ ತಾನು ಭೇಟಿಯಾದ ಹೆಣ್ಮಕ್ಕಳ ಸೌಂದರ್ಯವನ್ನೆಲ್ಲ ತನ್ನ ವಿಧಿನಾಟಕದಲ್ಲಿ ಬಾಯ್ತುಂಬ ಹೊಗಳಿದ್ದಾನೆ. ರಾಜನರ್ತಕಿಯರಿಂದ ಹಿಡಿದು ಬೀದಿಯಲ್ಲಿ ಹೂಮಾರುವವಳು, ನೀರು ತರಲು ಬಂದವಳು, ಹೊಲಕ್ಕೆ ಬುತ್ತಿ ಒಯ್ಯುವವಳು ಈಗೆ ಒಬ್ಬರನ್ನೂ ಶ್ರೀನಾಥ ತನ್ನ ಕಾವ್ಯದಲ್ಲಿ ಬಿಟ್ಟಿಲ್ಲ.  
ಸೊಗಸು ಕೀಲ್ಜಡ ದಾನ ಸೋಗ ಕನ್ನುಲ ದಾನ
ವಜ್ರಾಲ ವಂಟಿ ಪಲ್ಚರುಸ ದಾನ.............
ತಿರಿಗಿಚೂಡವೇ ಮುತ್ಯಾಲ ಸರುಲ ದಾನ
ಚೇರಿ ಮಾಟಾಡು ಚಂಗಾವಿ ಚೀರದಾನ |
- ಸೊಗಸು ನೀಽಳ್ಜಡೆಯವಳೆ, ಕೋಲ್ಮಿಂಚು ಕಣ್ಣವಳೆ
ಬೆಳ್ ಹಾಲನೊರೆಯ ನಗುವಿನೆಳೆಯವಳೆಽಽಽಽ
ತಿರುಗಿ ನೋಡೆಲೇ, ನೋಡೆಲೇ.....ಮುತ್ತ ಮಣಿ ಮಾಲೆಯವಳೆ
ಸೇರಿ ಮಾತಾಡಲು ಬಾ ಕೆಂಪು ಸೀರೆಯವಳೇಽಽಽಽ
ಎಂದು ಶ್ರೀನಾಥನಿಂದ ಹೊಗಳಿಸಿಕೊಳ್ಳದ ಸುಂದರಿ ಕೊಂಡವೀಡಿನಲ್ಲಿರಲಿಲ್ಲ.

ವಿಧಿನಾಟಕದಲ್ಲಿ ಬರುವ ಆತನ ಒಂದು ಚಾಟುಪದ್ಯವನ್ನು ನೋಡಿ.
ಪೂಜಾರಿವಾರಿ ಕೋಡಲು ತಾಜಾರಗ
ಬಿಂದೆ ಜಾರಿ ಡಬ್ಬುನ ಬಡಿಯನ್
ಮೈಜಾರಿಕೊಂಬು ತಡಿಸಿನ ಬಾಜಾರೆ
ತಿರುಗಿ ಚೂಚಿ ಪಕ್ಕನ ನವ್ವುನ್
-ಪೂಜಾರಿಯಾ ಮಗಳು ತಾಜಾರಲು
ಬಿಂದಿ ಜಾರಿ ಡಬ್ಬನೆ ಬಡಿಯಲ್
ಮೈಜಾರಿಕೊಂಡರು ಸಾವರಿಸಿ ಬಾಜಾರಿ 
ತಿರುಗಿ ನೋಡಿ, ಪಕ್ಕುನೆ ನಕ್ಕಳ್

ರಾಮಾಯಣ, ಮಹಾಭಾರತ, ಸಂಸ್ಕೃತ ಕಾವ್ಯಗಳ ಪ್ರಭಾವದಾಚೆ ತಾನು ದಿನನಿತ್ಯ ನೋಡುವ ವಸ್ತುವನ್ನಿಟ್ಟುಕೊಂಡು ಕಾವ್ಯಗಳ ರಚನೆ ಮಾಡಿದ್ದು ಶ್ರೀನಾಥನ ವೈಶಿಷ್ಟ್ಯ.
       ತೆಲುಗಿನಲ್ಲಿ ಭಾಗವತವನ್ನು ಬರೆದ ಮಹಾಕವಿ ಬಮ್ಮೆರ ಪೋತನ ಶ್ರೀನಾಥನ ಭಾವ. ಆತ ಶ್ರೀಮಂತನಲ್ಲ. ಹೊಟ್ಟೆಪಾಡಿಗಾಗಿ ವ್ಯವಸಾಯ ಮಾಡುತ್ತಿದ್ದವನು. ಶ್ರೀನಾಥನಿಗೆ ಬಡವನಾದ ಪೋತನನ್ನು ಕಂಡರೆ ಹಾಸ್ಯ. ಒಂದು ದಿನ ಶ್ರೀನಾಥ ಪಲ್ಲಕ್ಕಿಯಲ್ಲಿ ಕುಳಿತು ಬರುತ್ತಿದ್ದಾಗ ಉಳುತ್ತಿದ್ದ ಪೋತನನನ್ನು ಕಂಡು ’ಹಾಲಿಕರು ಸುಖವಾಗಿದ್ದೀರಾ?’ ಎಂದು ತಮಾಶೆ ಮಾಡಿದನಂತೆ. ಅದಕ್ಕೆ ಪೋತನರಾಜು ಕೊಟ್ಟ ಉತ್ತರ ಹೀಗಿದೆ.
ಬಾಲರಸಾಲನವಪಲ್ಲವ ಕೋಮಲ ಕಾವ್ಯಕನ್ನಿಕನ್
ಗೂಳುಲಕಿಚ್ಚಿ ಯಪ್ಪುಡುಪುಕೂಡು ಭುಜಿಂಚುಟಕಂಟಿ ಸತ್ಕವುಲ್ |
ಹಾಲಿಕಲೈನನೇಮಿ ಗಹನಾಂತರಸೀಮಲ ಕಂದಮೂಲಿಕೌ
ದ್ದಾಲಿಕು ಲೈನ ನೇಮಿ ನಿಜದಾರಸುತೋದರ ಪೋಷಣಾರ್ಥಮೈ ||
- ಎಳೆಮಾವಿನಾ ಚಿಗುರಂಥ ಕೋಮಲ ಕಾವ್ಯಕನ್ನಿಕೆಯನ್ನು,
ಖೂಳರಿಗೆ ಕೊಟ್ಟು ನೀಚ ಕೂಳ ತಿನ್ನುವುದಕಿಂತ 
ಸತ್ಕವಿಗಳು ತಮ್ಮ ಹೆಂಡತಿ ಮಕ್ಕಳ ಪೋಷಣೆಗಾಗಿ 
ಹಾಲಿಕರಾದರೂ ಸರಿಯೆ, ಕಂದಮೂಲಗಳ ಕಿತ್ತು ತಿಂದರೂ ಸರಿಯೆ.

       ಇನ್ನೊಮ್ಮೆ ಶ್ರೀನಾಥನು ಬಡತನದಲ್ಲಿ ಬೇಯುವುದಕ್ಕಿಂತ ಭಾಗವತಕಾವ್ಯವನ್ನು ಯಾವನಾದರೂ ಅರಸನಿಗೆ ಅಂಕಿತಕೊಟ್ಟರೆ ಬೇಕಾದ ಭಾಗ್ಯ ಲಭಿಸುವುದೆಂದು ಹೇಳಿ ಪೋತನನನ್ನು ರಾಜಾಸ್ಥಾನಕ್ಕೆ ಕರೆದುಕೊಂಡು ಹೋಗಲೆತ್ನಿಸಿದನಂತೆ. ಶ್ರೀನಾಥ ಹೇಳಿದ ಮಾತುಗಳು ಪೋತನನಿಗೆ ಚಿಂತೆಯನ್ನು ಉಂಟುಮಾಡಿದವು. ತನ್ನ ಬಡತನದ ಬಗ್ಗೆ ಚಿಂತಿಸುತ್ತ ಮಲಗಿದ್ದ ಪೋತನನನಿಗೆ ಆ ರಾತ್ರಿ ಬಿಳಿಯ ಉಡುಪನ್ನು ಧರಿಸಿದ, ಹೊಳೆಯುವ ಕಿರೀಟವನ್ನು ಹಾಕಿಕೊಂಡ, ತೇಜೋಮೂರ್ತಿಯಾದ ದೇವಿಯೊಬ್ಬಳನ್ನು ಕಂಡಂತೆ ಆಯಿತು. ಸ್ವಲ್ಪ ಗಮನವಿಟ್ಟು ನೋಡಿದಾಗ ಅವಳು ಸರಸ್ವತಿ ಎಂದು ಗುರುತಿಸಿದ. ಆದರೆ ಸರಸ್ವತಿ ಅಳುತ್ತಿದ್ದಾಳೆ! ಪೋತನನಿಗೆ ಆಶ್ಚರ್ಯವಾಯಿತು. ಇದೇನು ಬ್ರಹ್ಮನ ರಾಣಿ, ವಿದ್ಯಾಭಿಮಾನಿ ದೇವತೆಯ ಕಣ್ಣುಗಳಲ್ಲಿ ನೀರು! ಇದಕ್ಕೆ ಕಾರಣವೇನು? ತಾನು ಎಲ್ಲಿ ಭಾಗವತವನ್ನು ರಾಜನಿಗೆ ಅಂಕಿತ ಮಾಡಿಬಿಡುತ್ತೇನೆಯೋ ಎಂದು ಸರಸ್ವತಿ ಅಳುತ್ತಿದ್ದಾಳೆ ಎನ್ನಿಸಿತು. ಆಗ ಪೋತನ ಅವಳಿಗೆ ಹೇಳಿದ:
ಕಾಟುಕಕಂಟಿನೀರು ಚನುಕಟ್ಟುಪಯಿ ಬಡ ನೇಲ ಯೇಡ್ಚೆದೋ
ಕೈಟಭದೈತ್ಯಮರ್ದನುನಿ ಗಾದಿಲಿಕೋಡಲ! ಯೋಮದಂಬ! ಯೋ 
ಹಾಟಕುಗರ್ಭುರಾಣಿ! ನಿನು ನಾಕಟಿಕಿಂಗೊನಿಪೋಯಿ ಯಲ್ಲ ಕ
ರ್ಣಾಟ ಕಿರಾಟ ಕೀಚಕುಲ ಕಮ್ಮಿ ದ್ರಿಶುದ್ಧಿಗೆ ನಮ್ಮು ಭಾರತೀ ||
ತಾಯೇ, ರಾಕ್ಷಸರನ್ನು ಕೊಂದ ವಿಷ್ಣುವಿನ ಸೊಸೆ ಭಾರತೀಯೆ,, ಕಣ್ಣಿಗೆ ಹಚ್ಚಿದ ಕಾಡಿಗೆ ಕರಗುವಂತೆ ಏಕೆ ಕಣ್ಣೀರು ಹರಿಸುತ್ತಿರುವೆ? ಹಸಿವನ್ನು ಕಳೆದುಕೊಳ್ಳುವುದಕ್ಕಾಗಿ ನಾನು ನಿನ್ನನ್ನು ದುಷ್ಟರಾದ ರಾಜರಿಗೆ ಮಾರುವುದಿಲ್ಲ. ನನ್ನ ಮಾತುಗಳನ್ನು ನಂಬು.

       ಒಮ್ಮೆ ಶ್ರೀನಾಥ ವಿಜಯನಗರದ ಆಹ್ವಾನದ ಮೇರೆಗೆ ಪ್ರೌಢದೇವರಾಯನನ್ನು ನೋಡಬಯಸಿ ಕನ್ನಡ ರಾಜ್ಯಕ್ಕೆ ಬಂದನಂತೆ. ಆದರೆ ಎಷ್ಟು ದಿನ ಕಾದರೂ ರಾಜನ ದರ್ಶನ ಲಭಿಸಲಿಲ್ಲ. ಆಗ ಆತನು ಬೇಸರಗೊಂಡು ಹೇಳಿದ ಪದ್ಯವಿದು.
ಕುಲ್ಲಾಯುಂಚಿತಿ ಗೋಕಸುಟ್ಟಿತಿ ಮಹಾಕೂರ್ಪಾಸಮುನ್ದೊಡಗಿತಿನ್
ವೆಲ್ಲುಲ್ಲಿನ್ ತಿಲಪಿಷ್ಟಮುನ್ ಪಿಸಿಕಿತಿನ್ ವಿಶ್ವಸ್ತ ವಡ್ಡಿಂಪಗಾ
ಸಲ್ಲಾನಂಬಲಿ ದ್ರಾವಿತಿನನ್ ರುಚುಲು ದೋಸಂಬಂಚು ಬೋನಾಡಿತಿನ್
ತಲ್ಲೀ ಕನ್ನಡರಾಜ್ಯಲಕ್ಷ್ಮೀ ದಯಲೇದಾ ನೇನು ಶ್ರೀನಾಥುಡನ್ !
ಕುಲಾವಿಯನ್ನಿಟ್ಟುಕೊಂಡೆ. ರುಮಾಲನ್ನು ತಲೆಗೆ ಸುತ್ತಿದೆ. ನಿಲುವಂಗಿಯನ್ನು ತೊಟ್ಟುಕೊಂಡೆ. ಬೆಳ್ಳುಳ್ಳಿ-ಎಳ್ಳುಗಳ ಚಟ್ಣಿಯನ್ನು ತಿನ್ನಲಾಗದೇ ಹಿಸುಕಿ ಬಿಸಾಟೆ. ಗಂಜಿಯನ್ನು ಕುಡಿದೆ. ರುಚಿಗಳು ದೋಷವೆಂದು ಬಿಟ್ಟುಬಿಟ್ಟೆ. ತಾಯೀ, ಕನ್ನಡ ರಾಜ್ಯಲಕ್ಷ್ಮೀ, ಇಷ್ಟಾದರೂ ನಿನಗೆ ದಯೆ ಬರಲಿಲ್ಲವೇ! ನಾನು ಶ್ರೀ’ನಾಥ’.
ಇದನ್ನು ಕೇಳಿಸಿಕೊಂಡ ದೇವರಾಯ ಮುಜುಗರಪಟ್ಟುಕೊಂಡು ರಾಜಸಂದರ್ಶನ ನೀಡಿದ್ದಲ್ಲದೇ ಕನಕಾಭಿಷೇಕವನ್ನೂ ನೆರವೇರಿಸಿದನಂತೆ.
ಕನಕಾಭಿಷೇಕ ಮಾಡಿಸಿಕೊಂಡ ಮೇಲೆ ಶ್ರೀನಾಥ ’ನಾ ಕವಿತ್ವಂಬು ನಿಜಮು ಕರ್ನಾಟ ಭಾಷಾ’ ಕವಿತ್ವದ ನಿಜಭಾಷೆಯೆಂದರೆ ಕನ್ನಡಭಾಷೆಯೇ ಎಂದು ಕನ್ನಡವನ್ನು ಹೊಗಳದೇ ಇರಲಿಲ್ಲ.

       ವಿಜಯನಗರದ ವಿದ್ವಾಂಸರನ್ನೆಲ್ಲ ವಾದದಲ್ಲಿ ಸೋಲಿಸಿದ ಶ್ರೀನಾಥ ಕನ್ನಡರಾಜ್ಯದಲ್ಲಿ ವಿಜಯೋತ್ಸವವನ್ನಾಚರಿಸಿ ತನ್ನ ನಾಡಿದೆ ಹಿಂದಿರುಗುವಷ್ಟರಲ್ಲಿ ಕೊಂಡವೀಡನ್ನು ಮೋಸದಿಂದ ಆಕ್ರಮಿಸಿದ ರಾಚಕೊಂಡದ ರಾವುಸಿಂಗಭೂಪಲನು ಕೊಂಡವೀಡಿನ ವೇಮರೆಡ್ಡಿಯನ್ನು ಕೊಂದು ಕುಲದೈವ ಪುತರಾಜು ಕಟಾರಿಯನ್ನು ಕದ್ದೊಯ್ದನಂತೆ. ಶ್ರೀನಾಥ ತನ್ನ ಅಪ್ರತಿಮ ವಿದ್ವದ್ಬಲದಿಂದ ರಾಜಕೊಂಡ ಅರಸನ ಮನಗೆದ್ದು ಕೊಂಡವೀಡಿನ ಕುಲದೈವವನ್ನು ರಾಜ್ಯಕ್ಕೆ ತಂದು ಪುನರ್ಪ್ರತಿಷ್ಟಾಪಿಸಿದನೆಂದು ಐತಿಹ್ಯವಿದೆ. ಮುಂದೆ ತನ್ನ ಪ್ರಭು ವೇಮನಾಥನಿಲ್ಲದ ರಾಜ್ಯದಲ್ಲಿರಲಾಗದೇ ಶ್ರೀನಾಥ ಕೊಂಡವೀಡನ್ನು ತೊರೆದ. ಅವಕಾಶಕ್ಕಾಗಿ ಕಾಯುತ್ತಿದ್ದ ಗಜಪತಿ ರಾಜರು ಕೊಂಡವೀಡನ್ನಾಕ್ರಮಿಸಿದರು.
ಬಹುರಾಜ ಸಮ್ಮಾನಿತನಾಗಿ ವೈಭವದ ಜೀವನವನ್ನು ನಡೆಸಿದ್ದ ಶ್ರೀನಾಥ ತನ್ನ ಕೊನೆಯ ಕಾಲಕ್ಕೆ ಬಹಳ ಕಷ್ಟಕ್ಕೀಡಾದ. ರಾಜಾಶ್ರಯ ತಪ್ಪಿಹೋಗಿತ್ತು. ಕೊಂಡವೀಡಿನಲ್ಲಿರಲಾರದೇ ಗುಂಟೂರು ಪ್ರಾಂತ್ಯದ ಪಾಲ್ನಾಡಿಗೆ ವಲಸೆ ಹೋದ. ’ಚಿನ್ನ ಚಿನ್ನ ಗುಳ್ಳು, ಚಿಲ್ಲರೆ ದೇವುಳ್ಳು, ನಾಕು ಲೇನಿ ನೀಳ್ಳು, ಸಜ್ಜ ಜೊನ್ನ ಕೂಳ್ಳು’(ಸಣ್ಣ ಸಣ್ಣ ಗುಡಿಗಳು, ಚಿಲ್ಲರೆ ದೇವರುಗಳು, ನೀರಿಲ್ಲದ ಊರುಗಳು, ಸಜ್ಜೆ ಜೋಳದೂಟಗಳು) ಎಂದು ಪಾಲ್ನಾಡನ್ನು ತಾತ್ಸಾರ ಮಾಡುತ್ತಿದ್ದವ ಕೊನೆಗೆ ಅಲ್ಲಿಯೇ ಇರಬೇಕಾಯಿತು.
ಭೋಜನಪ್ರಿಯ ಶ್ರೀನಾಥ ಪಾಲ್ನಾಡಿಗೆ ಹೋದಾಗ ಹೇಳಿದ ಪದ್ಯವಿದು.
ಗರಳಮು ಮ್ರಿಂಗಿತಿ ನಂಚುಂ
ಮುರಹರ! ಗರ್ವಿಂಚಬೋಕು ಪೋಪೋ ನೀ
ಬಿರುದಿಂಕ ಗಾನವಚ್ಚೆಡಿ 
ಮೆರೆಸೆಡಿ ರೇನಾಟಿಜೊನ್ನಮೆದುಕುಲು ತಿನುಮೀ
ಗರಲವ ನುಂಗಿದೆನೆಂದು ಗರ್ವಿಸಬೇಡವೋ 
ಮುರಹರ! ಆ ಬಿರುದಿನ್ನು ಅಳಿಸು 
ರೇನಾಡಿನ ಜೋಳದಗುಳನ್ನು ತಿಂದು ನೋಡೆಲೋ
ಆಮೇಲೆ ನಿನ್ನ ಮಹಿಮೆಯನು ತಿಳಿಸು

ಪಲ್ನಾಡಿನಲ್ಲಿ ಭಾರೀ ಜಲಕ್ಷಾಮ. ಜೊತೆಗೆ ಬಡತನ. ಅಲ್ಲಿನ ದುರವಸ್ಥೆಯನ್ನು ಎಷ್ಟು ಹೇಳಿದರೂ ಶ್ರೀನಾಥನಿಗೆ ತೃಪ್ತಿಯಿಲ್ಲ.
ರಸಿಕುಡು ಪೋವಡು ಪಲ್ನಾಡು 
ಎಸಗಂಗಾ ರಂಭಯೈನ ನೇಕುಲೆವಡುಕುನ್
ವಸುಧೇಶುಡೈನ ದುನ್ನುನು 
ಕುಸುಮಾಸ್ತ್ರುಂಡೈನ ಜೊನ್ನಕೂಡೇ ಕುಡುಚುನ್ |
- ರಸಿಕನಾದವನು ಪಲ್ನಾಡಿಗೆ ಹೋಗಬಾರದು. ಅಲ್ಲಿ ರಂಭೆಯಾದರೂ ಹತ್ತಿ ನೂಲಬೇಕು. ರಾಜನಾದರೂ ಉಳಬೇಕು. ಸಾಕ್ಷಾತ್ ಮನ್ಮಥನಾದರೂ ಜೋಳದ ಕೂಳನ್ನೇ ತಿನ್ನಬೇಕು.

ಒಮ್ಮೆ ಪಾಲ್ನಾಡಿನಲ್ಲಿ ದಾಹ ತಾಳಲಾರದೇ ಶ್ರೀನಾಥ ತನ್ನ ಇಷ್ಟದೈವ ಶಿವನನ್ನು ಕುರಿತು ಹೀಗೆ ನುಡಿದನಂತೆ.
ಸಿರಿಗಲವಾನಿಕಿ ಜೆಲ್ಲುನು 
ತರುಣುಲ ಬದಿಯಾರುವೇಲ ತಗ ಪೆಂಡ್ಲಾಡನ್ 
ತಿರಿಪೆಮುನಕಿದ್ದರಾಂಡ್ರಾ ಪರಮೇಶಾ ! 
ಗಂಗ ವಿಡುಮು ಪಾರ್ವತಿ ಚಾಲು
- ಸಿರಿತನದಲ್ಲಿ ಮುಳುಗೆದ್ದ ಶ್ರೀಕೃಷ್ಣನಂಥವರು ಹದಿನಾರು ಸಾವಿರ ಮದುವೆಯಾದರೂ ನಡೆದೀತು. ನಿನ್ನಂಥ ತಿರುಪೆಯವನಿಗೇಕಯ್ಯ ಎರಡು ಹೆಂಡತಿಯರು ಪರಮೇಶಾ! ಗಂಗೆಯನ್ನು ಬಿಟ್ಟುಕೊಡಯ್ಯ. ಪಾರ್ವತಿ ಸಾಕು. (ಈ ಶ್ಲೋಕವನ್ನು ಕೇಳಿದ ಶಿವ ಶ್ರೀನಾಥನೂರಿನಲ್ಲಿ ಮಳೆಯನ್ನೇ ಸುರಿಸಿದನಂತೆ ಎಂಬುದು ಕಥೆಯಷ್ಟೆ) 

       ರಾಜಾಶ್ರಯವಿಲ್ಲದೇ ಹೋದಾಗ ಶ್ರೀನಾಥ ಕೃಷ್ಣಾ ತೀರದ ಬೊಡ್ಡುಪಲ್ಲಿಯೆಂಬ ಗ್ರಾಮವನ್ನು ಗುತ್ತಿಗೆಗೆ ತೆಗೆದುಕೊಂಡ. ದುರ್ದೈವದಿಂದ ಮೂರು ವರ್ಷ ಪ್ರವಾಹ ಬಂದು ಬೆಳೆಯೆಲ್ಲ ನಾಶವಾಯಿತು. ಗುತ್ತಿಗೆ ಕಾಸು ಹೊರಡುವುದೇ ಅಸಾಧ್ಯವಾಯಿತು. ಶ್ರೀನಾಥನನ್ನು ಕಂಡರಾಗದವರು ಗಜಪತಿ ರಾಜನಿಗೆ ದೂರಿತ್ತರು. ಜಮೀನ್ದಾರ ಕವಿರಾಜನಿಗೆ ಕೋಳ ತೊಡಿಸಿ, ಕಲ್ಗುಂಡು ಹೊರಿಸಿ ಮೆರವಣಿಗೆ ಮಾಡಿ ಅವಮಾನಪಡಿಸಿದನಂತೆ. ಕನ್ನಡರಾಯನ ಮುತ್ತಿನ ಸಾಲೆಯಲ್ಲಿ ಕನಕಸ್ನಾನ ಮಾಡಿದ ಕವಿ ತನ್ನ ಪೂರ್ವವೈಭವವನ್ನು ನೆನೆಸಿಕೊಂಡು ಪ್ರಲಾಪಿಸುತ್ತಾನೆ.
ಕವಿರಾಉಕಂಠಂಬು ಕೌಗಿಲಿಂಚೆನು ಗದಾ
ಪುರವೀಧಿನೆದುರೇಗ ಬೊಗಡದಂಡ
ಸಾರ್ವಭೌಮುನಿ ಭುಜಾಸ್ತಂಭಮೆಕ್ಕೆನುಗದಾ
ನಗರಿವಾಕಿಟಿನುಂಡು ನಲ್ಲಗುಂಡು ||
ವೀರಭದ್ರಾರೆಡ್ಡಿ ವಿದ್ವಾಂಸು ಮುಂಜೇತ
ವಿಯ್ಯಮಂದೆನುಗದಾ ವೆದುರುಗೊಡಿಯ
ಆಂಧ್ರನೈಷಧಕರ್ತ ಯಂಘ್ರಿಯುಗ್ಮಂಬುನ
ದಗಿಲಿಯುಂಡೆನುಗದಾ ನಿಗಳಯುಗಮು ||
ಕೃಷ್ಣವೇಣಮ್ಮ ಗೊನಿಪೋಯೆನಿಂತ ಫಲಮು
ವಿಲವಿಲಾಕ್ಷುಲು ದಿನಿಪೋಯೆ ತಿಲಲುಪೆಸಲು
ಬೊಡ್ಡುಪಲ್ಲೆನು ಗೊಡ್ಡೇರಿ ಮೋಸಪೋತಿ
ನೆಟ್ಟು ಚೆಲ್ಲಿಂತು ಡಂಕಂಬುಲೇಡುನೂರ್ಲು ?
- ಕವಿರಾಜನ ಕೊರಳಿಗೂ  ಅಪಮಾನಕರ ದಂಡೆ ಬಿತ್ತಲ್ಲವೇ? ಕವಿಸಾರ್ವಭೌಮನ ಭುಜದಿಂದ ಊರ ಬಾಗಿಲ ಕರಿಗುಂಡನ್ನು ಎತ್ತಿಸಿದರಲ್ಲವೇ? ವೀರಭದ್ರಾರೆಡ್ಡಿಯ ಆಸ್ಥಾನ ವಿದ್ವಾಂಸನ ಮುಂಗೈಗೆ ಬಿದಿರ ಕೋಳವನ್ನು ಹಾಕಿದರೇ? ಆಂಧ್ರನೈಷಧಕರ್ತನ ಅಂಘ್ರಿಯುಗ್ಮಕ್ಕೆ ಸಂಕೋಲೆ ತೊಡಿಸಿದರೆ! ಕೃಷ್ಣಮ್ಮ ಫಲವನೆಲ್ಲ ಕೊಂಡುಹೋದಳು. ಬೊಡ್ಡುಪಲ್ಲಿಯ ಕುಗ್ರಾಮಕ್ಕೆ ಬಂದು ಮೋಸಹೋದೆ. ಏಳುನೂರು ಟಂಕಗಳ ಕಂದಾಯವನ್ನೆಂತು ಸಲ್ಲಿಸಲಿ?

       ಶ್ರೀನಾಥನ ಕಷ್ಟವನ್ನು ನೋಡಲಾಗದೇ ದುಃಖಪಟ್ಟ ಊರಜನ ತಾವೇ ಒಂದಕ್ಕೆರಡು ಕಂದಾಯಕೊಟ್ಟು ಅವನನ್ನು ಸೆರೆಯಿಂದ ಬಿಡಿಸಿದರಂತೆ. ಸಂಸ್ಕೃತದ ಜಗನ್ನಾಥ ಪಂಡಿತನಿಗೂ, ಈ ಶ್ರೀನಾಥನಿಗೂ ಎಷ್ಟೆಲ್ಲ ಸಾಮ್ಯಗಳಿವೆ. ಇಬ್ಬರೂ ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಗಳು. ಒಬ್ಬ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿಯಾದರೆ ಇನೊಬ್ಬ ಆಂಧ್ರಭಾಷೆಯ ಕವಿತ್ವವನ್ನು ಮುಗಿಲೆತ್ತರಕ್ಕೆ ಬೆಳೆಸಿದ ಮೊದಲಿಗ. ಇಬ್ಬರೂ ಪರಮ ರಸಿಕ ಶಿಖಾಮಣಿಗಳು. ರಾಜಾಧಿರಾಜರುಗಳನ್ನು ಹೊಗಳಿ ಜೀವನಪೂರ್ತಿ ವೈಭವದ ಸುಪ್ಪತ್ತಿಗೆಯಲ್ಲಿ ಬದುಕಿದವರೇ. ಪಂಡಿತಕುಲವನ್ನೆಲ್ಲ ಚೆಂಡಾಡಿ ಪಾಖಂಡಿಗಳೆನಿಸಿದರೂ ಒಬ್ಬ ಪರಮ ವೈಷ್ಣವ, ಇನ್ನೊಬ್ಬ ಮಹಾ ಶಿವಭಕ್ತ. ಆದರೆ ಕೊನೆಗಾಲದಲ್ಲಿ ಇಬ್ಬರೂ ಪಡಬಾರದ ಕಷ್ಟಪಡಬೇಕಾಯಿತು. ಜಗನ್ನಾಥ ಗಂಗೆಯಲ್ಲಿ ಐಕ್ಯಗೊಂಡರೆ ಶ್ರೀನಾಥ ಕೃಷ್ಣಾನದಿಯನ್ನು ಪ್ರವೇಶಿಸಿ ಪ್ರಾಣತ್ಯಾಗಕ್ಕೆ ಮುಂದಾದ. ಆ ಅವಸಾನಕಾಲದಲ್ಲೂ ಸಹ ಆತ ತನ್ನ ಆತ್ಮಪ್ರತ್ಯಯವನ್ನು ಬಿಡಲಿಲ್ಲ.
ಕಾಶಿಕಾವಿಶ್ವೇಷು ಗಲಿಸೆ ವೀರಾರೆಡ್ಡಿ
ರತ್ನಾಂಬರಂಬು ಲೇರಾಯಡಿಚ್ಚು
ರಂಭಗೂಡೆ ತೆನುಂಗುರಾಯರಾಹತ್ತುಂಡು
ಕಸ್ತೂರಿ ಕೇರಾಜು ಪ್ರಸ್ತುತಿಂತು |
ಸ್ವರ್ಗಸ್ಥುಡಯ್ಯೆ ವಿಸನಮಂತ್ರಿ ಮರಿ ಹೇಮ
ಪಾತ್ರಾನ್ನ ಮೆವ್ವನಿಪಂಕ್ತಿ ಗಲದು
ಕೈಲಾಸಗಿರಿ ಬಂದೆ ಮೈಲಾರುವಿಭುಡೇಗಿ
ದಿನವೆಚ್ಚ ಮೇರಾಜು ತೀರ್ಪಗಲಡು |
ಭಾಸ್ಕರುಡು ಮುನ್ನೆ ದೇವುನಿಪಾಲಿ ಕರಿಗೆ
ಗಲಿಯುಗಂಬುನ ನಿಕನುಂಡ ಗಷ್ಟಮನುಚು
ದಿವಿಜಕವಿವರು ಗುಂಡಿಯಲ್ ದಿಗ್ಗುರನಗ
ನರುಗುಚುನ್ನಾಡು ಶ್ರೀನಾಥುಡಮರಪುರಿಕಿ |
- ವೀರಾರೆಡ್ಡಿ ಕಾಶಿ ವಿಶ್ವೇಶ್ವರನನ್ನು ಸೇರಿಬಿಟ್ಟ. ಇನ್ನು ರತ್ರಾಂಬರಗಳನ್ನು ಯಾವ ರಾಯ ಕೊಡುತ್ತಾನೆ? ತೆಲುಗುರಾಯ ರಂಭೆಯನ್ನು ಕೂಡಿದ. ಕಸ್ತೂರಿಗಾಗಿ ಇನ್ಯಾರನ್ನು ಹೊಗಳಲಿ? ವಿಸನ ಮಂತ್ರಿ ಸ್ವರ್ಗಸ್ಥನಾದ. ಹೇಮಪಾತ್ರಾನ್ನವಿನ್ನು ಯಾರ ಪಂಕ್ತಿಯಲ್ಲಿ ಲಭಿಸೀತು? ಮೈಲಾರ ವಿಭುವು ಕೈಲಾಸಗಿರಿಯನ್ನು ಹತ್ತಿದ. ಇನ್ನು ನನ್ನ ದಿನದ ವೆಚ್ಚವನ್ನು ಯಾವ ರಾಜ ತೀರಿಸುತ್ತಾನೆ? ಭಾಸ್ಕರನು ಮೊದಲೇ ದೇವರ ಬಳಿ ಸೇರಿದ. ಇನ್ನು ಕಲಿಯುಗದಲ್ಲಿರುವುದು ಕಷ್ಟವೆಂದು ಯೋಚಿಸಿ ಶ್ರೀನಾಥನೂ ಅಮರಪುರಿಗೆ ಹೋಗುತ್ತಿದ್ದಾನೆ. ಅಯ್ಯೋ ಶ್ರೀನಾಥ ಸ್ವರ್ಗಕ್ಕೆ ಬಂದರೆ ನನ್ನ ಸ್ಥಾನಕ್ಕೆ ಸಂಚಕಾರವೆಂದು ದೇವಕವಿ ಶುಕ್ರನ ಎದೆ ದಿಗ್ಗೆಂದು ಹೊಡೆದುಕೊಳ್ಳುತ್ತಿದೆ.

       ಶ್ರೀನಾಥನ ಕಾವ್ಯವೈದೂಷ್ಯಕ್ಕೆ ಆತನ ಮಾನಸೋಲ್ಲಾಸವೊಂದು ಅದ್ಭುತ ಉದಾಹರಣೆ. ಈ ಚತುಷ್ಪಾದ ಯಮಕಚಿತ್ರಕವಿತೆಯನ್ನು ನೋಡಿ. ಇದು ಶುರುವಾಗುವುದು ಈ ಸೀಸಪದ್ಯ ಮತ್ತದರ ತೇಟಗೀತದಿಂದ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ |
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ
ರಾಜನಂದನರಾಜ ರಾಜಾತ್ಮಜುಲು ಸಾಟಿ ತಲಪನಲ್ಲಯವೇಮ ಧರಣಿಪತಿಕಿ ||
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು |
ಭಾವಭವಭೋಗ ಸತ್ಕಳಾ ಭಾವಮುಲನು
ಭಾವಭವಭೋಗ ಸತ್ಕಳಾ ಭಾವಮುಲನು ||
ಸೀಸಗೀತದ ಮತ್ತು ತೇಟಗೀತೆಯ ಮೊಲನೇ ಸಾಲಿನ ಅರ್ಥ ರಾಜ=ಚಂದ್ರನಿಗೆ, ನಂದನ=ಮಗನಾದ ಬುಧನು, ರಾಜ, ರ=ಸಮರ್ಥನಾದ, ಅಜ=ಈಶ್ವರನು, ರಾಜ=ದೇವೇಂದ್ರನು, ಆತ್ಮಜ=ಬ್ರಹ್ಮ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಬುದ್ಧಿಯಲ್ಲಿ, ಭವ= ಐಶ್ವರ್ಯದಲ್ಲಿ, ಭೋಗ=ವೈಭವದಲ್ಲಿ, ಸತ್ಕಳಾ= ಶ್ರೇಷ್ಠವಾದ ವಿದ್ಯೆಗಳ, ಭಾವ=ಅತಿಶಯದಲ್ಲಿ.
ಅದೇ ಎರಡನೆಯಪಾದದಲ್ಲಿ
ರಾಜನಂದನ, ರ=ಮನೋಹರವಾದ, ಅಜ=ಶಿವನಿಗೆ, ನಂದನ=ಮಗನಾದ ಕುಮಾರಸ್ವಾಮಿ, ರಾಜ=ಕುಬೇರ, ರಾಜ ರ=ಶ್ರೇಷ್ಠನಾದ ಅಜ= ರಘುಕುಮಾರನಾದ ಅಜ, ಆತ್ಮಜ = ಚಂದ್ರ, ಇವರು ಸಾಟಿ. ಯಾವುದರಲ್ಲಿ ಎಂದರೆ, ಭಾವ=ಕ್ರಿಯೆಯಲ್ಲಿ, ಭವ=ಧನದಲ್ಲಿ, ಭೋಗ=ಪಾಲನೆಯಲ್ಲಿ, ಸತ್ಕಳಾ, ಸತ್=ಯೋಗ್ಯವಾದ, ಕಳಾ=ಕಾಂತಿಯ, ಭಾವ=ಬೃಂದದಲ್ಲಿ.
ಅದೇ ಮೂರನೆಯಪಾದ
ರಾಜನಂದನ, ರ= ಚಿನ್ನದಂಥ ದೀಪ್ತಿಯುಳ್ಳ, ಅಜ=ಬ್ರಹ್ಮನಿಗೆ, ನಂದನ=ಪುತ್ರನಾದ ಸನತ್ಕುಮಾರನೂ, ರಾಜ= ಕ್ಷತ್ರಿಯನು, ರಾಜ ರ=ಶ್ರೇಷ್ಠನಾದ ಅ=ಬ್ರಹ್ಮನ ಜ=ಮಗ ವಸಿಷ್ಠನೂ, ಆತ್ಮ= ಬೃಹಸ್ಪತಿಯಲ್ಲಿ ಜ=ಹುಟ್ಟಿದ ಕಚನೂ ಸಾಟಿ. ಯಾವವಿಷಯಗಳಲ್ಲಿ ಎಂದರೆ, ಭಾವ=ಆತ್ಮಜ್ಞಾನದಲ್ಲಿ, ಭವ=ಜನನದಲ್ಲಿ, ಭೋಗ=ಅನುಭವದಲ್ಲಿ, ಸತ್ಕಳಾ=ಅಭಿವೃದ್ಧಿಹೊಂದುವ, ಭಾವ=ಪದ್ಧತಿಯಲ್ಲಿ. 
ನಾಲ್ಕನೆಯಪಾದದಲ್ಲಿ
ರಾಜನಂದನ, ರ=ಗೌರವಯುಕ್ತನಾದ ಅಜ=ಮನ್ಮಥನಿಗೆ ನಂದನ=ಕುಮಾರನಾದ ಅನಿರುದ್ಧನು, ರಾಜ, ರ= ಎಲ್ಲೆಡೆ ವ್ಯಾಪಿಸಿರುವ ಅಜ= ವಿಷ್ಣು, ರಾಜ=ಯಕ್ಷ, ಆತ್ಮಜ=ಮನ್ಮಥ, ಇವರು ಸಾಟಿ. ಯಾವುದರಲ್ಲೆಂದರೆ, ಭಾವ=ಆಕಾರದಲ್ಲಿ, ಭವ=ಸಂಸಾರದಲ್ಲಿ, ಭೋಗ= ಸಂಭೋಗದಲ್ಲಿ, ಸತ್ಕಳಾ= ಸೌಂದರ್ಯದ ಒಂದು ಭಾವ=ರೀತಿಯಲ್ಲಿ.
ಶ್ರೀನಾಥ ಕಾವ್ಯಪ್ರೌಢಿಮೆಗೆ ಬೇರೆ ಉದಾಹರಣೆ ಬೇಕೇ?