Pages

Monday, April 11, 2016

ಕಲ್ಕತ್ತ ಡೈರಿ: ಬಂಗಾಳವನ್ನಾಳಿದ ಕನ್ನಡ ವಂಶ

       ಮೊದಲು ಕಲ್ಕತ್ತಾದಲ್ಲಿ ಹಾರ್ಟ್ ಸರ್ಜನ್ ಆಗಿದ್ದು ಈಗ ಗೋವಾದಲ್ಲಿ ಸೆಟಲ್ ಆಗಿರುವ ಆತ್ಮೀಯರಾದ ಡಾ. ಬ್ಯಾನರ್ಜಿ ತಲೆಯಲ್ಲೊಂದು ಹುಳ ಬಿಟ್ಟಿದ್ದರು. ಬಂಗಾಳವನ್ನಾಳಿದವರಲ್ಲಿ ಕನ್ನಡಿಗರೂ ಇದ್ದಾರೆ, ಸಾಧ್ಯವಾದರೆ ಅವರ ಸ್ಥಳ ಒಮ್ಮೆ ನೋಡಿ ಬಾ ಎಂದು. ಹೌದು, ಬಂಗಾಳವನ್ನಾಳಿದ ಕೊಟ್ಟಕೊನೆಯ ಹಿಂದೂ ರಾಜವಂಶವಾದ ಸೇನರು ಅಚ್ಚಕನ್ನಡಿಗರು. ಕರ್ನಾಟಕದಿಂದ ಬಂಗಾಳಕ್ಕೆ ವಲಸೆ ಬಂದು ಬಂಗಾಳವನ್ನಾಳುತ್ತಿದ್ದ ಪಾಲರನ್ನು ಸೋಲಿಸಿ ರಾಜ್ಯಸ್ಥಾಪನೆ ಮಾಡಿದ ಸೇನ ಅರಸರ ಧೈರ್ಯ ಮೆಚ್ಚಲೇಬೇಕು. ಇವರ ರಾಜಧಾನಿ ನದಿಯಾ ಆಗಿತ್ತಂತೆ. ಈ ನದಿಯಾ ಎಲ್ಲಿದೆಯೆಂದು ನನಗಂತೂ ತಿಳಿದಿರಲಿಲ್ಲ. ಸೇನ್‌ಗುಪ್ತಾನಿಗೆ ಕೇಳಿದೆ. ಅವನೂ ಅಡ್ಡಡ್ಡ ತಲೆ ಅಲ್ಲಾಡಿಸಿದ. ಮೂರ್ನಾಲ್ಕು ಜನರನ್ನು ಕೇಳಿದರೂ ಉತ್ತರ ಸಿಗಲಿಲ್ಲ. ತಿರುಗಿ ಬ್ಯಾನರ್ಜಿಗೆ ಫೋನಾಯಿಸಿದೆ. ಆ ಜನ ಓರಿಸ್ಸಾದ ಕಂಧಮಲ್ಲಿನ ಡಾರಿಂಗ್‌ಬಾಟಿಯ ಕಡೆ ಹೊರಟಿದ್ದರು. ಅದು ಭಾರತದಲ್ಲಿ ಹಿಮಾಲಯದ ಪ್ರದೇಶಗಳನ್ನು ಬಿಟ್ಟು ಹಿಮ ಬೀಳುವ ಏಕೈಕ ಪ್ರದೇಶವಂತೆ. ನದಿಯಾ ಎಂಬ ಜಿಲ್ಲೆಯೊಂದು ಬಂಗಾಳದಲ್ಲಿದೆ. ಆದರೆ ಇದು ಆ ನದಿಯಾ ಆಗಿರಲಿಕ್ಕಿಲ್ಲ, ಪ್ರಾಯಶಃ ನಬೋದ್ವೀಪ್ ನದಿಯಾ ಎಂದು ಕರೆಯಲ್ಪಡುತ್ತಿತ್ತೇನೋ, ಆರ್.ಸಿ ಮಂಜೂಂದಾರರ Ancient History of Bengal ನೋಡು ಎಂದರು. ಆ ಪುಸ್ತಕ ಕಲ್ಕತ್ತದಲ್ಲೆಲ್ಲೂ ಸಿಗಲಿಲ್ಲ. S.M.Deenರ A Brief History of Bengal for Diaspora Bangladeshis ಓದಿದ್ದೆನಾದರೂ ಸೇನರ ಕುರಿತು ಹೆಚ್ಚಿನದೇನೂ ಅದರಲ್ಲಿರಲಿಲ್ಲ. ನವದ್ವೀಪ್ ಎಂಬ ಊರು ಬಾಂಗ್ಲಾದ ನವಾಬ್‌ಗಂಜಿನಲ್ಲೂ ಒಂದಿದೆ. ಸೇನ್‌ಗುಪ್ತಾ ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಿಂದ ಪುಸ್ತಕವೊಂದು ತಂದುಕೊಟ್ಟ. ನಿತಿಶ್ ಸೇನಗುಪ್ತಾ ಬರೆದ Land of Two Rivers: A History of Bengal from the Mahabharata to Mujib. ಅದರಲ್ಲಿ ಸೇನರ ಬಗ್ಗೆ ಕೆಲ ಮಾಹಿತಿಯಿತ್ತು. ನಬೋದ್ವೀಪಿಗೆ ಹೋಗುವುದೇನೂ ಕಷ್ಟದ ಕೆಲಸವಲ್ಲ. ಆದರೆ ಹೋಗಿ ಮಾಡುವುದೇನು ಎಂಬುದು ಸ್ಪಷ್ಟವಾಗಿರಲಿಲ್ಲ. ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನವಾದ್ದರಿಂದ ಬೇರೇನೂ ಸಿಕ್ಕದಿದ್ದರೂ ಅಲ್ಲಿನ ಇಸ್ಕಾನ್ ಮಂದಿರ ಬಹಳ ಪ್ರಸಿದ್ಧವಾದುದು. ಅದನ್ನಾದರೂ ನೋಡಬಹುದು. ಏನೇ ಆಗಲಿ ಒಂದು ಕೈ ನೋಡಿಯೇ ಬಿಡೋಣ ಎಂದು ಗೂಗಲ್ ಮ್ಯಾಪ್ ಹರಡಿ ಕೂತೆ. ಬಾರಾಸಾತ್‌ನಿಂದ ರಾಣಾಘಾಟಿಗೆ ಸೀದಾ ಬಸ್ಸು ಮತ್ತು ರೈಲಿನ ಸೌಕರ್ಯವಿದೆ. ಅಲ್ಲಿಂದ ನವದ್ವೀಪ್ ತುಂಬ ದೂರವೇನಲ್ಲ. ಆ ವಾರಾಂತ್ಯ ನವದ್ವೀಪಕ್ಕೆ ಹೋಗುವುದೆಂದು ನಾನೂ, ಸೇನ್‌ಗುಪ್ತಾ ಇಬ್ಬರೂ ನಿರ್ಧರಿಸಿಯಾಗಿತ್ತು. ಶನಿವಾರ ಬೆಳಗ್ಗೆ ಬೆಳಗ್ಗೆ ಬಾರಾಸಾತಿನಿಂದ ಮೈತ್ರಿ ಎಕ್ಸ್‌ಪ್ರೆಸ್ ಟ್ರೇನು ಹತ್ತಿ ಸೀದಾ ರಾಣಾಘಾಟ್ ತಲುಪಿದೆವು. ಬೆಳಿಗ್ಗಿನ ತಿಂಡಿ ತಿನ್ನಲಿಲ್ಲವೆಂದು ನೆನಪಾಯ್ತು. ಬದ್ಧ ಬಿಪ್ಲವಕಾರಿ(ಕಮ್ಯುನಿಸ್ಟ್) ಸೇನ್‌ಗುಪ್ತಾನದ್ದೊಂದು ಪ್ರಿನ್ಸಿಪಲ್ ಆತ ಯಾವ ಊರಿನಲ್ಲಿದ್ದರೂ ಪಾಲಿಸಿಕೊಂಡು ಬಂದಿದ್ದಾನೆ. ಹತ್ತು ರೂಪಾಯಿಗೆ ಹೊಟ್ಟೆ ತುಂಬುವಾಗ ನೂರು ರೂಪಾಯಿ ಯಾಕೆ ಖರ್ಚು ಮಾಡಬೇಕೆಂದು. ಕಾಲಿಗೆ ಬಿದ್ದರೂ ಅರ್ಧ ಸ್ಟಾರಿನ ಹೋಟೆಲ್ಲನ್ನೂ ಆತ ಹೊಕ್ಕಲಾರ. ಚಿತ್ತರಂಜನದಾಸ್ ರೋಡಿನ ಕರ್ನಾಟಕದ ಒಂದು ರೆಸ್ಟಾರೆಂಟಿನಲ್ಲಿ ಅವನ ಕಾರಣದಿಂದಲೇ ನನಗಿನ್ನೂ ಒಂದು ಮಸಾಲೆದೋಸೆ ತಿನ್ನಲಾಗಲಿಲ್ಲ. ಹುಟ್ಟುಸಸ್ಯಾಹಾರಿ ನನಗೆ ಬಂಗಾಳದ ರಸ್ತೆ ಬದಿ ಅಂಗಡಿಗಳಲ್ಲಿ ಪೂರಿ-ತರ್ಕಾರಿ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಕೊಲ್ಕತ್ತಾಗೆ ಬಂದಾಗಿನಿಂದ ದಿನಾ ಬೆಳಗ್ಗೆದ್ದು ಪೂರಿ ತಿಂದೂತಿಂದೂ ನಾನು ಊದಿಕೊಳ್ಳುವುದೊಂದು ಬಾಕಿ. ಹತ್ತು ರೂಪಾಯಿ ಕೊಟ್ಟರೆ ನಾಲ್ಕು ದೊಡ್ಡ ಪೂರಿ ಜೊತೆಗೊಂದಿಷ್ಟು ದಾಲ್ ಅಥವಾ ಬಟಾಟೆಯ ಸಾಗು ಕೊಡುತ್ತಾರೆ. ಐದು ರೂಪಾಯಿಗೆ ಮಡಿಕೆಯಲ್ಲಿ ಚಹಾ. ಒಂದು ಹೊತ್ತಿಗೆ ಅದು ಬೇಕಾದಷ್ಟು. ಹದಿನೈದು ರೂಪಾಯಿಗೆ ಬೆಳಗಿನ ಉಪಹಾರ ಮುಗಿದಿತ್ತು. ಕಲ್ಕತ್ತಾದಲ್ಲಿನ್ನೂ ನಾಕಾಣೆ, ಎಂಟಾಣೆಗಳೂ ಚಲಾವಣೆಯಲ್ಲಿವೆ. ಟ್ರಾಮ್‌ಗಳಲ್ಲಿ ’ಹತ್ತು ರೂಪಾಯಿ ಕೊಟ್ಟರೆ ಚಿಲ್ಲರೆ ಸಿಗುವುದಿಲ್ಲ’ ಎಂಬ ಬ್ರಿಟಿಷರ ಜಮಾನಾದ ಬರಹ ಇನ್ನೂ ಕಾಣಸಿಗುವುದನ್ನು ನೋಡಿ ಮುಸಿಮುಸಿ ನಕ್ಕಿದ್ದಿದೆ. ಬೆಲೆಏರಿಕೆಯ ಬಿಸಿಯಲ್ಲಿರುವವರಿಗೆಲ್ಲ ಕಲ್ಕತ್ತ ಹೇಳಿ ಮಾಡಿಸಿದ ಜಾಗ. ರಾಣಾಘಾಟ್ ಪಂಟುವಾ ಎಂಬ ಸ್ವೀಟಿಗಾಗಿ ತುಂಬ ಪ್ರಸಿದ್ಧ. ಬೇರೆಡೆ ಅದು ಸಿಕ್ಕುವುದು ಕಡಿಮೆಯೇ. ಪೊಂಟುವಾ ಖಾಯೆಂಗೆ ಆಜಾ ಎಂದು ಸೇನ್‌ಗುಪ್ತಾನನ್ನೆಳೆದುಕೊಂಡು ಮಿಷ್ಟಿ ದುಖಾನ್ ಹೊಕ್ಕೆ.’ಪೇಟ್ ಭರ್ನೇಕೆ ಬಾದ್, ಆದ್ಮಿ ಜೋ ಭೀ ಖಾತಾ ಹೈ, ವೋ ಉಸ್ಕಾ ಖಾನಾ ನಹಿ ಹೈ’ ಎಂದ ಪಕ್ಕಾ ಕಮ್ಯುನಿಸ್ಟ್ ಸ್ಟೈಲಲ್ಲಿ. ನಾನು ಬಿಡಬೇಕಲ್ಲ. ಪಂಟುವಾ, ಶೋಂದೇಶ್, ಮಿಷ್ಟಿದೋಯ್ ಒಂದಿಷ್ಟು ಮೆದ್ದ ನಂತರವೇ ನಬೋದ್ವೋಪದ ಬಸ್ ಹತ್ತಿದ್ದು. ಒಂದು ಘಂಟೆಯಲ್ಲಿ ನವದ್ವೀಪ ತಲುಪಿಯಾಗಿತ್ತು. ಎದುರಿಗೆ ವಿಶಾಲವಾಗಿ ಹೂಗ್ಲಿ ನದಿ ಅಷ್ಟಾವಕ್ರಾಕೃತಿಯಲ್ಲಿ ಕೆಂಪು ಕೆಂಪಾಗಿ ಹರಿಯುತ್ತದೆ. ಗಂಗೆ ಇಲ್ಲಿ ಹಲವು ಬಾರಿ ಪಥಬದಲಾಯಿಸಿದ್ದಾಳೆ. ಹೊಸ ಹೊಸ ದ್ವೀಪಗಳು ದಿನಬೆಳಗಾಗುವುದರೊಳಗೆ ಹುಟ್ಟಿಕೊಳ್ಳುತ್ತವೆ. ಹಾಗಾಗಿ ಇದನ್ನು ನವ(ಹೊಸ) ದ್ವೀಪ ಎಂದು ಕರೆದಿರಬಹುದು. ಭಕ್ತಿ ಮಾರ್ಗದ ೯ ವಿಧಗಳನ್ನು ಸೂಚಿಸಲು ನವ ದ್ವೀಪ ಎಂಬ ಹೆಸರು ಕರೆಯಲಾಗಿದೆಯೆಂಬ ನರಹರಿ ಮತ್ತು ಭಕ್ತಿ ವಿನೋದ್ ಠಾಕೂರರ ವ್ಯಾಖ್ಯಾನಗಳೂ ಇವೆ.  ಬೆಂಗಳೂರಿನಲ್ಲಿ ಕೆಂಪೇಗೌಡರ ಕೋಟೆ ಹುಡುಕಿದಂತೆ ಸೇನರ ಅವಶೇಷಗಳ್ಯಾವವೂ ನವದ್ವೀಪ ಪಟ್ಟಣದಲ್ಲಿರುವ ಸುಳಿವಿರಲಿಲ್ಲ. ಹೇಗೂ ಬಂದಾಗಿದೆ. ಭಕ್ತಿ ಮಾರ್ಗದ ಪ್ರಮುಖ ಆಚಾರ್ಯರಲ್ಲೊಬ್ಬರಾದ ಚೈತನ್ಯ ಮಹಾಪ್ರಭುಗಳ ಊರದು. ಅಲ್ಲಿಗೆ ಬಂದು ಸುಮ್ಮನೇ ಹೋಗಲಾದೀತೇ! ಅದಿರುವುದು ಗಂಗೆ ಮತ್ತು ಜಾಲಂಗಿ ನದಿ ಸಂಗಮಿಸುವ ಮಾಯಾಪುರಿಯಲ್ಲಿ. ಇಸ್ಕಾನಿನ ಅಂತರಾಷ್ಟ್ರೀಯ ಮುಖ್ಯಾಲಯವಿರುವುದೂ ಮಾಯಾಪುರದಲ್ಲೇ. ನವದ್ವೀಪದಿಂದ ಮಾಯಾಪುರಕ್ಕೆ ಬೋಟಿನ ಸೌಲಭ್ಯವಿದೆಯೆಂದು ತಿಳಿಯಿತು. ಬಂಗಾಳದಲ್ಲಿ ನದಿಗಳು ಬಹಳವಾದ್ದರಿಂದ ಜಲಸಾರಿಗೆಗೇನೂ ಕೊರತೆಯಿಲ್ಲ. ಕೊಲ್ಕತ್ತದ ಟ್ರಾಫಿಕ್ಕಿನಲ್ಲಿ ಸಿಕ್ಕಿಬೀಳದೇ ಹೂಗ್ಲಿ ನದಿಯಲ್ಲಿ ದೋಣಿಯಲ್ಲಿ ಪ್ರಯಾಣಿಸುವ ಮಜವೇ ಬೇರೆ. ಒಂದು ಕಿಲೋಮೀಟರ್ ನಡೆದನಂತರ ನದಿಯ ದಟ ಸಿಕ್ಕಿತು. ಬೋಟಿನವ ನೊಬೋದ್ವೀಪ್ ನೊಬೋದ್ವೀಪ್ ಎಂದು ಕೂಗುತ್ತಿದ್ದ. ಗೌಡೀಯ ಮಟದ ಹತ್ತಿರ ದೋಣಿಯಿಂದಿಳಿದರೆ ಕಾಲ್ನಡಿಗೆಯಲ್ಲಿ ಮಾಯಾಪುರ ತಲುಪಬಹುದು. ಅಕ್ಕಪಕ್ಕ ಎಲ್ಲಿ ನೋಡಿದರೂ ಮಠಮಂದಿರಗಳೇ. ಹರೇರಾಮ ಹರೇಕೃಷ್ಣ ಭಜನೆ ನಿರಂತರವಾಗಿ ಅಲೆಯಲೆಯಾಗಿ ತೇಲಿ ಬರುತ್ತಿತ್ತು. ವೈಷ್ಣವ ಪಂಥದ ಅತಿದೊಡ್ಡ ಧಾಮವದು. ಪೂರ್ವ ಭಾರತದ ಅತಿದೊಡ್ಡ ವೈದಿಕ ಕೇಂದ್ರಗಳಲ್ಲೊಂದು. ಶತಮಾನಗಳ ಕಾಲ ಭಾರತದ ಆಕ್ಸ್‌ಫರ್ಡ್ ಎಂದು ಹೆಸರಾದ ಸ್ಥಳವದು.  ಗೌಡೀಯ ವೈಷ್ಣವ ಮತಪ್ರವರ್ತಕ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಾನ.
       ಮಾಯಾಪುರದ ಇಸ್ಕಾನ್ ನಿಜಕ್ಕೂ ಒಂದು ಮಾಯಾಲೋಕವೇ. ಮುಖ್ಯ ಕಟ್ಟಡದ ಎಡಗಡೆ ಶೀಲಪ್ರಭುಪಾದರ ಪ್ರತಿಮೆ. ಪ್ರಾಯಶಃ ಸಮಾಧಿಯಿರುವುದು ಅಲ್ಲೇ ಇರಬೇಕು. ಎಡಗಡೆ ರಾಧಾ ಮಾಧವ ಮಂದಿರ. ಸುತ್ತಲೂ ಅಷ್ಟಸಖಿಯರು. ರಾಧೆಯೊಟ್ಟಿಗೆ ಲಲಿತಾ, ಚಂಪಕಲತಾ, ಚಿತ್ರಾ, ತುಂಗವಿದ್ಯಾ, ವಿಶಾಖಾ, ಇಂದುಲೇಖಾ, ರಂಗದೇವಿ ಹಾಗೂ ಸುದೇವಿ. ನವದ್ವೀಪದ ಹೆಸರಿಗೆ ತಕ್ಕಂತೆ ಒಟ್ಟೂ ಒಂಭತ್ತಾಯ್ತು. ಪಕ್ಕದಲ್ಲಿ ಗೌರಾಂಗ ಮಹಾಪ್ರಭು ಮತ್ತು ಗಿರಿ ಗೋವರ್ಧನ. ಕಡುನೀಲಿ ಬಣ್ಣದ ಕೃಷ್ಣ ರಾಧೆಯರ ಅಲಂಕಾರ ನೋಡಲು ಎರಡು ಕಣ್ಣು ಸಾಲದು. ಫೋಟೋಗ್ರಾಫಿ ಪ್ರೊಹಿಬೀಟೆಡ್ ಎಂದು ಬೋರ್ಡ್ ಹಾಕಿದ್ದರಿಂದ ಕ್ಯಾಮರಾ ಹೊರತೆಗೆಯಲು ಧೈರ್ಯ ಬರಲಿಲ್ಲ. ಇಸ್ಕಾನಿನಲ್ಲಿ ತಾಂಡವವಾಡುವುದು ಆಡಂಬರವೇ ಆದರೂ ಅಲ್ಲಿನ ಎಲ್ಲವೂ larger than life size. ಅದೊಂದು ಉನ್ಮತ್ತ ಭಕ್ತಿ. ಮಂದಿರದ ಮುಖ್ಯ ಭಾಗದ ಪಕ್ಕದಲ್ಲಿ ಪಂಚತತ್ತ್ವ ಮಂದಿರ. ಚೈತನ್ಯ ಮಹಾಪ್ರಭು, ನಿತ್ಯಾನಂದ, ಅದ್ವೈತಾಚಾರ್ಯ, ಗಧಾಧರ ಮತ್ತು ಶ್ರೀವಸ ಠಾಕೂರ್‌ರ ಆಳೆತ್ತರದ ಮೂರ್ತಿಗಳು. ವಸ್ತ್ರಗಳಿಂದ ಹಿಡಿದು ಹೂವಿನ ತನಕ ತಿಳಿ ಹಳದಿ ಬಣ್ಣದ ಅಲಂಕಾರ. ರಾಜಮೌಳಿ, ಬನ್ಸಾಲಿಯ ಸೆಟ್‌ಗಳಿಗಿಂತ ವೈಭವೋಪೇತ. 
ಇಸ್ಕಾನ್ ಮಾಯಾಪುರ


       ನಾನು ನನ್ನನ್ನು ಮರೆತು ನೋಡುತ್ತ ಕೂತಿದ್ದೆ. ’ಅಬೇ ತುಮ್ಹೆ ಮಂದಿರ್ ದೇಖ್ನಾ ಹೇ ತೋ ಕಲ್ಕತ್ತಾಮೆ ನಹಿಂ ಥೆ ಕ್ಯಾ, ಪುಣ್ಯ್ ಸಂಪಾದನ್ ಕರ್ನೇಕೇಲಿಯೇ ಇತ್ನಾ ದೂರ್ ಆನಾಥಾ?’ ಎಂದು ಸೇನ್‌ಗುಪ್ತಾ ದೇವಸ್ಥಾನದೊಳಗೇ ಶುರುಹಚ್ಚಿಕೊಂಡ. ಬಂದ ಕೆಲಸವೇನೋ ಬೇರೆಯದೇ, ಈ ಉರಿಬಿಸಿಲಲ್ಲಿ ಹುಡುಕಿಕೊಂಡು ಹೋಗುವುದೆಲ್ಲಿ? ಸೇನರ ಹೆಸರು ಆ ದೇವಸ್ಥಾನದಲ್ಲಿದ್ದವರಲ್ಲಿ ಯಾರೂ ಕೇಳಿರಲಿಲ್ಲ. ವಾಪಸ್ ಹೋಗಲು ಇವನಂತೂ ಬಿಡುವುದಿಲ್ಲ. ನೊಬೋದ್ವೀಪದಲ್ಲಿದೆ, ಹೋಗಿ ನೋಡು ಎಂದ ಬ್ಯಾನರ್ಜಿಯ ಮೇಲೆ ಸಿಟ್ಟುಮಾಡಿಕೊಳ್ಳೋಣವೆಂದರೆ ಪಕ್ಕದಲ್ಲಿ ಅವರಿಲ್ಲ. ಕೊನೆಗೆ ದೇವಸ್ಥಾನದ ಅರ್ಚಕರನ್ನೇ ಕೇಳುವುದೆಂದು ನಿರ್ಧಾರವಾಯಿತು. ಪುಣ್ಯಕ್ಕೆ ಅವರು ಅದೇ ಊರಿನವರು. ಸೇನರ ಬಗ್ಗೆ ಅವರಿಗೆ ತಿಳಿದಿತ್ತಾದರೂ ಇಲ್ಯಾವುದೂ ಕೋಟೆ ಇದ್ದಂತಿಲ್ಲ, ಬೇಕಾದರೆ ಒಮ್ಮೆ ಹತ್ತಿರದ ಬಾಮನ್‌ಪುಕುರ್‌ಗೆ ಹೋಗಿ ನೋಡಿ ಎಂದರು. ಬ್ರಾಹ್ಮಣಪುರ ಅಲ್ಲಿಂದ ಸುಮಾರು ಎರಡ್ಮೂರು ಕಿಲೋಮೀಟರ್ ದೂರ. ಸೀಟಿಗೆ ಇಪ್ಪತ್ತು ರೂಪಾಯಿ ಕೊಟ್ಟರೆ ಮಾತ್ರ ಬರುವುದಾಗಿ ಸೈಕಲ್ ರಿಕ್ಷಾವಾಲಾನ ಕಂಡೀಶನ್. ಕಡು ಕೋಲ್ಕತ್ತಾವಾಲಾ ಸೇನ್‌ಗುಪ್ತಾ ಬಿಡಬೇಕಲ್ಲ. ಶರಂಪರ ಜಗಳವಾಡಿ ಹದಿನೈದು ರೂಪಾಯಿಗೆ ಒಪ್ಪಿಸಿದ. ಹೋಗಲಿ ಬಿಡು ಮಾರಾಯ, ಐದು ರೂಪಾಯಿಗ್ಯಾಕೆ ಜಗಳ ಎಂದೆ. ’ಬೀಸ್ ರುಪ್ಯಾ ಹೈತೋ ಕಲ್ಕತ್ತಾವಾಲೆ ಸಭೀ ರಿಕ್ಷಾಮೆ ಬೈಟ್‌ನಾ ಹೀ ಬಂದ್ ಕರ್ದೇಂಗೆ, ಕಲ್ಕತ್ತಾವಾಲಾ ತೋ ಕಲ್ಕತ್ತಾವಾಲಾ ಹೋತಾಹೈ’ ಎಂದು ಸೈಕಲ್ ರಿಕ್ಷಾಕ್ಕೆ ಹತ್ತಿ ಅಲ್ಲಲ್ಲ ಹಾರಿ ಕುಳಿತ. ಮೂರು ಚಕ್ರದ ಸೈಕಲ್ಲಿಗೆ ಹಿಂದೆ ಒಂದು ಮರದ ಹಲಗೆ. ಅದರ ಮೇಲೆ ನಾಲ್ಕು ಮೂಲೆಯಲ್ಲಿ ತಲಾ ಒಬ್ಬೊಬ್ಬರಂತೆ ಒಟ್ಟಿಗೆ ನಾಲ್ಕು ಜನ ಕೂರಬಹುದು. ಕಲ್ಕತ್ತ ಒಂದು ಥರದ ನಿಧಾನವಾಗಿ ಚಲಿಸುವ ನಗರ. ಬೆಂಗಳೂರು, ಮುಂಬೈಗಳಂತೆ ಅಲ್ಲಿನ ಜನಕ್ಕೆ ಗಡಿಬಿಡಿಯಿಲ್ಲ. ಸಂಗೀತ ಕೇಳುವುದರಿಂದ ಹಿಡಿದು ಊಟದವರೆಗೂ ಎಲ್ಲವನ್ನೂ ನಿಧಾನವಾಗಿ ಆಸ್ವಾದಿಸಿಯೇ ಮಾಡುವವರು. ಸೈಕಲ್ ರಿಕ್ಷಾ ಕಲ್ಕತ್ತದಲ್ಲಿ ಇಂದಿಗೂ ಬಹುಬೇಡಿಕೆಯ ವಾಹನವಾಗಿರುವುದಕ್ಕೆ ಅದೂ ಕಾರಣವೇನೋ. ಕೊಡೆ ಬಿಡಿಸಿಕೊಂಡು ಬಾಯಲ್ಲೊಂದು ಪಾನ್ ಹಾಕಿ ಮೆಲ್ಲುತ್ತ ಸೈಕಲ್ ರಿಕ್ಷಾದಲ್ಲಿ ಸ್ಲೋ ಮೋಶನ್ನಿನಲ್ಲಿ ಆಚೀಚೆ ನೋಡುತ್ತ ರಾಜಗಾಂಭೀರ್ಯದಲ್ಲಿ ಹೋಗುವುದೆಂದರೆ ಬಂಗಾಳಿಗಳಿಗೆ ದೊಡ್ಡ ಲಕ್ಸುರಿಯ ವಿಷಯ. ಹದಿನೈದು ನಿಮಿಷ ಹೋದರೂ ಕೋಳಿಗೂಡಿನಂಥ ಮನೆಗಳನ್ನು ಬಿಟ್ಟರೆ ಕೋಟೆಯೆಲ್ಲೂ ಕಾಣಲಿಲ್ಲ. ಮುಂದೆ ಸಣ್ಣದಾಗಿ ಬಲಾಳ ದಿಭಿ ಎಂಬ ಬೋರ್ಡ್ ಕಾಣಿಸಿತು. ಚೌಕಾಸಿ ಮಾಡಿದ ಸಿಟ್ಟಿಗಿರಬೇಕು. ಇಲ್ಲಿಂದ ಮುಂದೆ ಬರುವುದಿಲ್ಲ, ಕೋಟೆ ನೋಡಬೇಕಾದರೆ ಇದೇ ಸಣ್ಣ ದಾರಿಯಲ್ಲಿ ಎಡಕ್ಕೆ ಹೋಗಿ ಎಂದ ರಿಕ್ಷಾದವ.
       ಅಲ್ಲಿಂದ ಮುಂದೆ ನಟರಾಜ ಸರ್ವೀಸ್. ಆಚೀಚೆ ಗದ್ದೆ, ಕಾಡು ಬಿಟ್ಟರೆ ವಿರಳವಾಗಿ ಅಲ್ಲೊಂದಿಲ್ಲೊಂದು ಮನೆಗಳು. ಕಾಳಿಯ ದೇವಸ್ಥಾನವೊಂದನ್ನು ದಾಟಿ ಮುಂದೆ ಹೋದರೆ ಒಂದು ದೊಡ್ಡ ದಿಬ್ಬ. ಹಾಗೊಂದೆರಡು ಕಿ.ಮೀ ಸುತ್ತಳತೆಗೆ ಕಮ್ಮಿಯಿಲ್ಲ. ತಕ್ಷಣ ಚಂದ್ರಕೇತುಘರ್ ನೆನಪಾಯ್ತು. ಸುಟ್ಟಮಣ್ಣಿನ ಟೆರಾಕೋಟಾ ಮಾದರಿಗಳಿಗೆ ಪ್ರಾಚೀನ ಬಂಗಾಳ ವಿಶ್ವದಲ್ಲೇ ಹೆಸರುವಾಯಾಗಿತ್ತು. ಅಲ್ಲಿನ ಹಳೆಯ ವಾಸ್ತುಶಿಲ್ಪಗಳೆಲ್ಲ ಅದೇ ಮಾದರಿಯಲ್ಲಿ ರಚಿತಗೊಂಡವು. ಈ ದಿಬ್ಬದ ಮೇಲೆಯೂ ಇಟ್ಟಿಗೆ ನೆಲಗಟ್ಟುಗಳದೇ ಸಾಲುಸಾಲು.
’ಯಹೀ ಹೋಗಾ ಬಲ್ಲಾಲ್ ದಿಭಿ’ ಎಂದ ಸೇನಗುಪ್ತಾ.
        ಅವಸ್ಥೆ ನೋಡಿದರೆ ಅನುಮಾನವಿರಲಿಲ್ಲ. ಬರೀ ಹೊಂಡಗಳು, ಸಂಪೂರ್ಣ ನಾಶವಾದ ಗೋಡೆಗಳ ಕುರುಹು, ಸ್ನಾನಗೃಹಗಳು, ಪಡಸಾಲೆ, ಕೋಣೆ, ಮಂದಿರಗಳು ಪಕ್ಕದಲ್ಲೊಂದು ದೊಡ್ಡ ಕೆರೆ. ಹೆಚ್ಚಿನ ರಚನೆಗಳೆಲ್ಲ ನೆಲೆಗಟ್ಟಿನ ಮೇಲೆ ಅರ್ಧ ಮೀಟರ್ ಹೆಚ್ಚಿಲ್ಲದಂತೆ ಉದುರಿ ಬಿದ್ದಿವೆ, ಇಲ್ಲವೇ ನಾಶವಾಗಿವೆ. ಆದರೆ ಎಲ್ಲವೂ ಇಟ್ಟಿಗೆಗಳಿಂದಲೇ ಮಾಡಿದ್ದು. ತಳಪಾಯ ಇನ್ನೂ ಗಟ್ಟಿಯಾಗಿ ಒಂದು ಥರದಲ್ಲಿ ಆಕರ್ಷಕವಾಗಿವೆ. ಬೆಟ್ಟ ಹತ್ತಲು ಸುಂದರವಾಗಿ ಇಟ್ಟಿಗೆಗಳನ್ನು ಹಾಸಿ ಮಾಡಿದ ಮೆಟ್ಟಿಲುಗಳು ಇಂದಿನ ಇಂಟರ್‌ಲಾಕ್‌ಗಳನ್ನು ನಾಚಿಸುವಂತಿವೆ. ಒಂಭೈನೂರು ವರ್ಷ ಹಿಂದಿನ ಇಟ್ಟಿಗೆಗಳ ರಸ್ತೆ ಚೂರೂ ಮುಕ್ಕಾಗದೇ ನಿಂತಿದ್ದು ಕಂಡು ನಮ್ಮಲ್ಲಿ ಮಾಡುವ ಮೊದಲೇ ಹೊಂಡ ಬೀಳುವ ರಸ್ತೆಗಳು ಯಾಕೋ ನೆನಪಾದವು. ಹತ್ತಿ ಗುಡ್ಡದ ಮೇಲೆ ಹೋದರೆ ಬಲಗಡೆ ದೊಡ್ಡದೊಂದು ಅರಮನೆಯಂಥ ರಚನೆ. ನೆಲದಿಂದ ಆರೇಳು ಅಡಿ ಎತ್ತರದವರೆಗೆ ಸೂರಿಲ್ಲದ ಗೋಡೆಗಳು ಗಟ್ಟಿಯಾಗಿ ನಿಂತಿವೆ. ಸೇನರ ಇತಿಹಾಸದಲ್ಲಿ ಉಲ್ಲೇಖಗೊಂಡ ವಿಜಯಪುರ ಅಥವಾ ಬಿಕ್ರಮಪುರ ನಗರ ಇದೇ ಆಗಿರಬೇಕು. ಹರಪ್ಪ, ಚಂದ್ರಕೇತುಘರ್‌ನಂಥ ಆಕಾಲದ ಐತಿಹಾಸಿಕ ನಗರಗಳ ಸಾಲಿಗೆ ನಿಸ್ಸಂಶಯವಾಗಿ ಸೇರಲ್ಪಡುವ ಅರ್ಹತೆಯಿದ್ದದ್ದು. ದಿಬ್ಬದ ಹಿಂದೊಂದು ಕಂದಕ. ಸ್ವಲ್ಪ ದೂರದಲ್ಲಿ ಹೂಗ್ಲಿ ನದಿ. ಕೋಟೆ ಕಟ್ಟಿಕೊಳ್ಳಲು ಪಕ್ಕಾ ಆಯಕಟ್ಟಿನ ಜಾಗ. ಅದನ್ನು ಬಿಟ್ಟರೆ ನೋಡಲು ಮತ್ತೇನೂ ಇರಲಿಲ್ಲ ಅಲ್ಲಿ.
’ಕ್ಯಾ ಹಾಲತ್ ಬನಾ ದಿಯಾ ಹೇ ಬೇ ಇಸ್ಕಾ’ ಸೇನಗುಪ್ತಾ ಮೂಗಿನ ಮೇಲೆ ಬೆರಳಿಟ್ಟ.
ಮಧ್ಯಾಹ್ನದ ಬಿಸಿಲಲ್ಲಿ ಇನ್ನು ನಿಲ್ಲುವುದು ಸಾಧ್ಯವಿರಲಿಲ್ಲ. ವಾಪಸ್ ಹೊರಡುವಾಗ ಛಕ್ಕನೆ ಏನೋ ನೆನಪಾಯಿತು. ಅದು ಇಲ್ಲೇ ಎಲ್ಲೋ ಗೋಡೆಯಲ್ಲಿರಬೇಕು. ಬಂಗಾಳ ಪ್ರಾಚ್ಯ ವಸ್ತು ಇಲಾಖೆ ನಡೆಸಿದ ಸಂಶೋಧನಾ ಕಾರ್ಯಗಳಲ್ಲಿ ದೊರಕಿದ ಕೆಲವೇ ಕೆಲ ವಿಗ್ರಹಗಳಲ್ಲೊಂದದು. ವರಾಹ ಸ್ವಾಮಿ ಮೂರ್ತಿಯ ಮುಖ. ಒಳಗೋಡೆಯೊಂದಕ್ಕೆ ಆನಿಸಿಟ್ಟಿದ್ದಾರೆ. ಸಾವಿರಾರು ವರ್ಷಗಳ ಕಾಲಗರ್ಭದಲ್ಲಿ ಅಡಗಿಹೋದ ಸೇನರ ರಾಜಧಾನಿಯಲ್ಲಿ ಸರಿಯಾಗಿ ಉಳಿದಿರುವುದು ಪ್ರಾಯಶಃ ಅದೊಂದೇ. ಎಂಭತ್ತರ ದಶಕದಲ್ಲಿ ಯಾವುದೋ ಕಾರಣಕ್ಕೆ ಅಚಾನಕ್ ಕಣ್ಣಿಗೆ ಬಿದ್ದ ನಂತರವೇ ಇಲ್ಲಿ ಪುರಾತತ್ವ ಇಲಾಖೆಯವರ ಹುಡುಕಾಟ ಶುರುವಾಗಿದ್ದು. ಇಂಥ ನಗರವೊಂದಿದೆ ಎಂದು ಹೊರಾಗತ್ತಿಗೆ ತಿಳಿದಿದ್ದೂ ಆಗಲೇ. ಬೆಟ್ಟದ ತುದಿಯಲ್ಲಿ ಒಂದು ಮಂದಿರವಿತ್ತು. ಅದರ ಪಳೆಯುಳಿಕೆಗಳು ಇನ್ನೂ ಗಟ್ಟಿಯಾಗಿ ನಿಂತಿವೆ. ಅಲ್ಲಿಂದ ನೀರು ಹೋಗುವ ಮೋರಿಯ ಪಕ್ಕ ವರಾಹನನ್ನು ಕೂರಿಸಿಟ್ಟಿದ್ದಾರೆ. ಬಲ್ಲಾಳದಿಭಿಯಲ್ಲಿ ಸಿಕ್ಕ ಸೇನರ ಕಾಲದ ವಿಗ್ರಹ

       ಬಂಗಾಳಕ್ಕೆ ಸಾವಿರಾರು ಮೈಲಿ ದೂರದ ಕರ್ನಾಟಕದಿಂದ ದಂಡೆತ್ತಿ ಬಂದು ಪಾಲರನ್ನು ಜಯಿಸಿ, ರಾಜ್ಯ ಸ್ಥಾಪಿಸಿ ೨೦೦ ವರ್ಷಗಳ ಕಾಲ ಆಳಿದ್ದು ಕಡಿಮೆ ಸಾಧನೆಯೇ?
’ಕರ್ಣಾಟ ಲಕ್ಷ್ಮಿಯನ್ನು ದೋಚಿದವರನ್ನು ಸಂಹಾರ ಮಾಡಿದ ಸಾಮಂತಸೇನ’ ಎಂದು ದೇವಪಾರಾ ಶಾಸನ ಸೇನರನ್ನು ವರ್ಣಿಸುತ್ತದೆ. ಈ ಸಾಮಂತಸೇನ ಸೇನರ ಮೊದಲ ಅರಸ. ಈತನೇ ಕರ್ನಾಟಕದಿಂದ ಬಂಗಾಳಕ್ಕೆ ದಂಡೆತ್ತಿ ಹೋಗಿ ರಾಜ್ಯಸ್ಥಾಪನೆ ಮಾಡಿರಬಹುದು. ಮಾಧೈ ನಗರ್, ಬ್ಯಾರಕ್‌ಪುರ್ ಶಾಸನಗಳಲ್ಲೂ ಸೇನರ ಕರ್ಣಾಟಕ ಮೂಲದ ಉಲ್ಲೇಖವಿದೆ. ನೈಹಟ್ಟಿ ತಾಮ್ರಶಾಸನ ’ಉತ್ತರ ಬಂಗಾಳ(ರಾಧ)ವನ್ನು ಆಳಿದ ಚಂದ್ರವಂಶದಲ್ಲಿ ಸಾಮಂತ ಸೇನನು ಜನಿಸಿದ’ ಎಂದಿರುವುದನ್ನು ನೋಡಿದರೆ ಸಾಮಂತ ಸೇನನಿಗಿಂತ ಮೊದಲೇ ಅವನ ಪೂರ್ವಜರು ಬಂಗಾಳದಲ್ಲಿ ನೆಲೆಸಿರಬಹುದು.
ಬ್ಯರಾಕ್‌ಪುರ್ ಮತ್ತು ಮಾಧೈ ನಗರದ ತಾಮ್ರಶಾಸನಗಳು ಸೇನರನ್ನು ’ಬ್ರಹ್ಮಕ್ಷತ್ರಿಯ’ರೆಂದೂ ’ಕರ್ನಾಟಕ ಕ್ಷತ್ರಿಯ’ರೆಂದೂ ಕರೆದು ಅವರ ಮೂಲ ಕರ್ನಾಟಕವೆನ್ನುವ ವಾದವನ್ನು ಎತ್ತಿಹಿಡಿದಿವೆ. ಸೇನರು ಹುಟ್ಟಿನಿಂದ ಬ್ರಾಹ್ಮಣರಾಗಿ, ಕಾರ್ಯದಲ್ಲಿ ಕ್ಷತ್ರಿಯರಾದ್ದರಿಂದ ’ಬ್ರಹ್ಮಕ್ಷತ್ರಿಯ’ರೆಂಬ ಬಿರುದು ಬಂದಿರಬಹುದು. ದೇವಪಾರಾ ಶಾಸನವೂ ಸಾಮಂತಸೇನನನ್ನು ’ಬ್ರಹ್ಮವಾದಿ’ ಎಂದು ಕರೆದು ಬ್ರಾಹ್ಮಣ ಮೂಲವನ್ನು ಒತ್ತಿಹೇಳಿದೆ. ಕದಂಬರ ಮಯೂರವರ್ಮನ ಕತೆಯೂ ಹಾಗೆಯೇ ಅಲ್ಲವೇ? ಬ್ರಾಹ್ಮಣ ಮೂಲವನ್ನೂ, ವರಾಹ ಲಾಂಛನವನ್ನೂ ನೋಡಿದರೆ ಕದಂಬರಿಗೂ, ಸೇನರಿಗೂ ಯಾವುದಾದರೂ ಸಂಬಂಧವಿರಬಹುದೇ?
’ಸೇನ್‌ಗುಪ್ತಾ ಸರ್‌ನೇಮ್ ಇರುವವರೆಲ್ಲ ಸೇನರ ಕಾಲದಲ್ಲಿ ದಕ್ಷಿಣದಿಂದ ಬಂದ ಬ್ರಾಹ್ಮಣರು. ಅವರು ವೇದ ಕಲಿತವರಾದ್ದರಿಂದ ವೈದ್ಯ ಎಂಬ ಉಪನಾಮವಿತ್ತು. ಸೇನರು ಮೂಲತಃ ವೈದ್ಯ ಕುಲದವರು ಗೊತ್ತಾ?’ ಪ್ರತಿಕ್ರಿಯೆ ಹೇಗಿರಬಹುದೆಂದು ಸೇನ್‌ಗುಪ್ತನ ಮುಖನೋಡಿದೆ.
’ಅಚ್ಛಾ, ಐಸಾ ಹೇ ಕ್ಯಾ! ಮಗರ್ ಮುಝೆ ಯೇ ಜಾತ್ ಪಾತ್ ಪರ್ ವಿಶ್ವಾಸ್ ನಹೀ ಹೈ’ ಎಂದ ಘನಗಂಭೀರವಾಗಿ.
ಇಂಥ ಹುಟ್ಟು ಕಮ್ಯುನಿಸ್ಟ್ ಬಂಗಾಳಿ ಬ್ರಾಹ್ಮಣರ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಆದರೆ ಮುಂದೆ ನಾನಂದುಕೊಂಡ ಪ್ರಶ್ನೆಯನ್ನೇ ಕೇಳಿದ. ’ಸೇನಾ ಲೋಗೋಂಕೋ ಕರ್ನಾಟಕ್‌ಸೆ ಯಹಾಂ ಆನೇಕಿ ಜರೂರತ್ ಕ್ಯಾ ಥಿ ಬತಾವೋ’?
ಕರ್ನಾಟಕದಿಂದ ಬಂಗಾಳಕ್ಕೆ ಹೋಗಿ ರಾಜ್ಯ ಕಟ್ಟುವ ಅವಶ್ಯಕತೆ ಅವರಿಗೇನಿತ್ತು ಎಂಬ ಪ್ರಶ್ನೆಗೆ ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ.
        ಬಂಗಾಳವನ್ನಾಳಿದ ಪಾಲರ ಆಡಳಿತ ಸ್ಥಾನಗಳಲ್ಲಿ ಬಹಳಷ್ಟು ಅನ್ಯದೇಶಿಕರಿದ್ದರು. ಅವರ ದಾಖಲೆಗಳಲ್ಲಿ ಗೌಡ-ಮಾಳವ-ಖಾಸಾ-ಹೂನ-ಕುಲಿಕಾ-ಕರ್ಣಾಟ-ಭಾಟ ಇತ್ಯಾದಿ ಹೆಸರುಗಳು ಬಹಳವಾಗಿ ಕಾಣಿಸುತ್ತವೆ. ಈ ಕರ್ನಾಟಕದ ಅಧಿಕಾರಿಗಳು ಪಾಲರ ಅವನತಿಯ ನಂತರ ಬಂಗಾಳ ಮತ್ತು ಬಿಹಾರ ಪ್ರದೇಶದಲ್ಲಿ ಸಣ್ಣ ಸಣ್ಣ ರಾಜ್ಯ ಕಟ್ಟಿಕೊಂಡು ಆಳತೊಡಗಿರಬಹುದು. ವಿಶೇಷವೆಂದರೆ ಬಿಹಾರ ಮತ್ತು ನೇಪಾಳದ ಮಿಥಿಲಾ ಭಾಗವನ್ನು ಕರ್ನಾಟಕ ಮೂಲದ ರಾಜವಂಶವೊಂದು ಸುಮಾರು ಅದೇ ಸಮಯದಲ್ಲಿ ಆಳಿದ್ದಕ್ಕೆ ಸಾಕ್ಷ್ಯಗಳಿವೆ.
       ಕ್ರಿ.ಶ ೧೦೬೮ರಲ್ಲಿ ಬಾದಾಮಿ ಚಾಲುಕ್ಯ ಚಕ್ರವರ್ತಿ ವಿಕ್ರಮಾದಿತ್ಯ ಉತ್ತರ ಭಾರತದ ಮೇಲೆ ದಾಳಿ ನಡೆಸಿ ಅಂಗ,ವಂಗ,ಕಳಿಂಗ, ಗುರ್ಜರ, ಮಾಳ್ವ, ಚೇರರನ್ನು ಜಯಿಸಿ ಸ್ವಾಮಿಯಾದನೆಂದು ಶಾಸನಗಳು ಸಾರಿವೆ. ಅದೇ ರೀತಿ ಗೌಡ, ಮಾಗಧ, ನೇಪಾಳವನ್ನೂ ಆಕ್ರಮಿಸಿ ಅಡಿಯಾಳಾಗಿಸಿಕೊಂಡಿದ್ದನಂತೆ. ಮುಂದೆ ಚಾಲುಕ್ಯ ಸೋಮೇಶ್ವರ ತನ್ನ ಕಾಲನ್ನು ಆಂಧ್ರ, ದ್ರಾವಿಡ, ಮಾಗಧ, ನೇಪಾಳ ಅರಸರ ತಲೆಯೆ ಮೇಲಿಟ್ಟಿದ್ದಾಗಿ ಕೊಚ್ಚಿಕೊಂಡಿದ್ದಾನೆ. ಬಿಜ್ಜಳ ಕೂಡ ಇದೇ ರೀತಿ ಉತ್ತರದ ಹಲವು ರಾಜ್ಯಗಳನ್ನು ಕೈವಶಮಾಡಿಕೊಂಡಿದ್ದನಂತೆ. ಅದು ಹೌದಾಗಿದ್ದರೆ ಸೇನರು ಚಾಲುಕ್ಯ ಕುಲದ ಒಂದು ಕವಲೇ ಆಗಿರಬೇಕು.
        ಕರ್ಣಾಟ ಸೇನರ ಮೊದಲ ದೊರೆ ಸಾಮಂತಸೇನನ ಮಗ ಹೇಮಂತಸೇನ. ಇವನನ್ನು ಮಹಾರಾಜಾಧಿರಾಜ ಎಂದು ಬ್ಯಾರಕಪುರ ಶಾಸನ ಬಣ್ಣಿಸಿದ್ದರೂ ಇವನ ಬಗ್ಗೆ ಪೂರ್ಣ ಮಾಹಿತಿ ಅಲಭ್ಯ. ಇವನ ಮಗ ವಿಜಯಸೇನ ಸೇನರ ಆಳ್ವಿಕೆಯ ವಿಜೃಂಭಣೆಯನ್ನು ದೇಶಕ್ಕೆ ಸಾರಿದ ಮಹಾಪುರುಷ. ಇಡಿಯ ಬಂಗಾಳವನ್ನೂ, ರಾಘವ, ವರ್ಧನ, ಗೌಡ, ಕಾಮರೂಪ ಮತ್ತು ಕಳಿಂಗ ರಾಜರನ್ನು ಹಿಮ್ಮೆಟ್ಟಿಸಿ ಅವರ ರಾಜ್ಯವನ್ನು ಕಬಳಿಸಿದ ವೀರನೆಂದು ದೇವಪಾರ ಶಾಸನ ಸಾರಿದೆ. ಈತ ಮಿಥಿಲೆಯ ಕರ್ಣಾಟ ವಂಶದ ನಾನ್ಯದೇವನ ಸಮಕಾಲೀನ. ನಾನ್ಯದೇವನನ್ನೂ ಸೋಲಿಸಿ ವಿಜಯಸೇನ ಸೆರೆಹಿಡಿದನೆಂದು ಹೇಳುತ್ತಾರಾದರೂ ಈ ಎರಡು ಕರ್ಣಾಟ ವಂಶಗಳು ಒಟ್ಟಾಗಿ ಬಂಗಾಳವನ್ನಾಕ್ರಮಿಸಿ ವಶಪಡಿಸಿಕೊಂಡು ಹಂಚಿಕೊಳ್ಳುವಾಗ ಭಿನ್ನಾಭಿಪ್ರಾಯ ಉಂಟಾಗಿ ಈ ಕಲಹದಲ್ಲಿ ನಾನ್ಯದೇವ ಸೋತು ಹಿಮ್ಮೆಟ್ಟಿದನೆಂದು ಹೆಚ್ಚಿನ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಇದಕ್ಕೆ ಪೂರಕವಾಗಿ ವಿಜಯಸೇನ ಮತ್ತು ಮತ್ತವನ ಮಗ ಬಲ್ಲಾಳಸೇನರು ಮಿಥಿಲೆಯ ಮೇಲೆ ದಂಡಯಾತ್ರೆ ಮಾಡಿದಾಗ ಬಲ್ಲಾಳಸೇನನಿಗೆ ಮಗ ಲಕ್ಷ್ಮಣಸೇನನ ಜನನದ ಸುದ್ದಿ ಸಿಕ್ಕಿತು. ಈಗಲೂ ಮಿಥಿಲೆಯಲ್ಲಿ ಪಾಲಿಸುತ್ತಿರುವ ಲಕ್ಷ್ಮಣ ಸಂವತ್ಸರ ಈ ರಾಜನ ಹೆಸರಿನಿಂದಲೇ ಪ್ರಾರಂಭವಾದದ್ದು.
ಗೌಡ ದೇಶದ ರಾಜನಾದ ಮದನಪಾಲ, ವಿಜಯಸೇನನ ಆಕ್ರಮಣದಿಂದ ಸೋಲನ್ನನುಭವಿಸಿ ಓಡಿಹೋದ. ಈ ಜಯದ ಚಿಹ್ನೆಯಾಗಿ ವಿಜಯಸೇನ ಈಗಿನ ಬಾಂಗ್ಲಾದ ದೇವಪಾರದ ಬಳಿ ಪದುಮ್ ಶಹರ್‌ನಲ್ಲಿ ಕಟ್ಟಿಸಿದ ಪ್ರದ್ಯುಮ್ನೇಶ್ವರ ದೇವಾಲಯದ ಅವಶೇಷಗಳು ಇನ್ನೂ ಉಳಿದುಕೊಂಡಿವೆ. ಜೊತೆಗೆ ವಿಜಯಸೇನನ ವಂಶಸ್ಥರೆಲ್ಲ ಗೌಡೇಶ್ವರರೆಂದು ತಮ್ಮನ್ನು ಕರೆದುಕೊಂಡಿರುವುದರಿಂದ ಇಡೀ ಗೌಡದೇಶ ಆತನ ಕಾಲದಲ್ಲಿ ಸೇನರ ವಶವಾಗಿತ್ತೆನ್ನಬಹುದು. ಜೊತೆಗೆ ಗಂಗಾ ನದಿಯ ಮೇಲೆ ನೌಕಾಯಾತ್ರೆ ಹೂಡಿ, ಪಶ್ಚಿಮ ದೇಶಗಳ ಮೇಲೆ ದಂಡಯಾತ್ರೆ ಮಾಡಿದ್ದಾಗಿ ಕೆಲ ಶಾಸನಗಳು ಹೇಳಿದರೂ ರಾಜ್ಯಗಳ ಮತ್ತು ರಾಜರ ವಿವರ ಕೊಡದೇ ಇರುವುದರಿಂದ ಅದು ಚರ್ಚಾರ್ಹ. ಆದರೂ ಪಾಲರ ನಂತರ ಚದುರಿಹೋಗಿದ್ದ ಬಂಗಾಳವನ್ನು ಒಂದುಗೂಡಿಸಿ, ಒಳಜಗಳಗಳನ್ನು ಹತೋಟಿಗೆ ತಂದು ಅದನ್ನು ಕೊನೆಗೊಳಿಸಿ, ತನ್ನ ವಜ್ರಮುಷ್ಟಿಯಿಂದ ರಾಜ್ಯಭಾರ ಮಾಡಿದ ಯುದ್ಧಕುಶಲಿಯೆಂದೂ ಪರಮ ಭಟ್ಟಾರಕ,  ಮಹಾರಾಜಾಧಿರಾಜ,ಅರಿರಾಜ, ವೃಷಭ ಶಂಕರೇತ್ಯಾದಿ ಬಿರುದುಗಳನ್ನೂ ನೀಡಿ ಇತಿಹಾಸಕಾರರು ಹಾಡಿ ಹೊಗಳಿದ್ದಾರೆ.
         ವಿಜಯಸೇನನ ನಂತರ ಕ್ರಿ.ಶ ೧೧೫೯ರಲ್ಲಿ ಪಟ್ಟಕ್ಕೇರಿದವನು ಅವನ ಮಗ ಬಲ್ಲಾಳಸೇನ. ಬಲ್ಲಾಳ ಚಾಲುಕ್ಯ ರಾಜ ಎರಡನೇ ಜಗದೇಕಮಲ್ಲನ ಮಗಳು ರಮಾದೇವಿಯನ್ನು ಮದುವೆಯಾಗಿದ್ದ. ಬಂಗಾಳದ ಕರ್ಣಾಟ ಸೇನರು ಮೊದಲಿನಿಂದಲೂ ತಮ್ಮ ತಾಯ್ನಾಡಿನ ಜೊತೆ ಸಂಪರ್ಕವಿಟ್ಟುಕೊಂಡಿರಬೇಕು. ವೈದಿಕ ಸಂಸ್ಕೃತಿ ಬಂಗಾಳದಲ್ಲಿ ಪುನಃ ಪ್ರಭಾವಶಾಲಿಯಾಗಿ ಬೆಳೆದಿದ್ದು ಇವನ ಕಾಲದಲ್ಲೇ. ವಿಜಯಸೇನ ಹಾಗೂ ಬಲ್ಲಾಳಸೇನರ ದೀರ್ಘ ಆಳ್ವಿಕೆಗಳು ಬಂಗಾಳದ ಇತಿಹಾಸದಲ್ಲಿ ಚಿರಸ್ಮರಣೀಯ ಪುಟಗಳು. ಗೌಡದೇಶವೆಲ್ಲ ಏಕಾಚಕ್ರಾಧಿಪತ್ಯಕ್ಕೊಳಪಟ್ಟು ಶಾಂತಿ ನೆಲೆಸಿದ್ದ ಸುಭಿಕ್ಷಕಾಲ. ಕರ್ಣಾಟಕ ರಾಜ್ಯದ ಮೇಲೆ ಬಂಗಾಳಿಗಳ ಪ್ರೀತಿವಿಶ್ವಾಸದ ಕಾಣಿಕೆಯೇ ಕವಿ ಉಮಾಪತಿಧರನ ದೇವಪಾರ ಶಾಸನ ಮತ್ತು ಆನಂದಭಟ್ಟನ ಬಲ್ಲಾಳಚರಿತವೆಂಬ ಅಪೂರ್ವ ಕಲಾಕೃತಿಗಳು. ದೇವಪಾರ ಶಾಸನ ಅಂದಿನ ಸಂಗೀತ, ಸಾಹಿತ್ಯ, ಸಂಪ್ರದಾಯ, ಪರಂಪರೆಗಳ ಬಗ್ಗೆ ಮಹತ್ವದ ಬೆಳಕು ಚೆಲ್ಲಿದರೆ ಬಲ್ಲಾಳ ಚರಿತ ಸೇನರ ವಂಶಾವಳಿ, ಪಾಲರ ಜೊತೆಗಿನ ಯುದ್ಧ, ಮಿಥಿಲೆಯ ದಂಡಯಾತ್ರೆ, ಬಲ್ಲಾಳಸೇನನ ಆಳ್ವಿಕೆಗಳು ಮುಖ್ಯವಾದ ಅಂಶವಾಗಿವೆ. ಅದೆಷ್ಟು ದಿಟವೋ ಸುಳ್ಳೋ ಗೊತ್ತಿಲ್ಲ. ಆದರೆ ಬಲ್ಲಾಳ ಚರಿತೆಯಲ್ಲೊಂದು ವಿಚಿತ್ರ ಕಥೆಯಿದೆ. ಒಮ್ಮೆ ಬಲ್ಲಾಳ ಸೇನ ಉದಾಂತಪುರದ ರಾಜನನ್ನು ಸೋಲಿಸಿ ತನ್ನ ರಾಜ್ಯವಿಸ್ತರಣೆಗಾಗಿ ರಾಜ್ಯದ ಅತ್ಯಂತ ಧನಿಕ ವರ್ತಕ ವಲ್ಲಭಾನಂದನಿಂದ ಒಂದು ಕೋಟಿ ರೂಪಾಯಿಗಳ ಸಾಲ ಪಡೆದ. ಆದರೆ ಮಣಿಪುರ ಸಮೀಪದಲ್ಲಿ ಇನ್ನೊಂದು ಯುದ್ಧದ ಸಿದ್ಧತೆ ಮಾಡಿಕೊಳ್ಳಬೇಕಾದ್ದರಿಂದ ವಲ್ಲಭನ ಬಳಿ ಮತ್ತೊಮ್ಮೆ ಸಾಲವನ್ನಪೇಕ್ಷಿಸುತ್ತಾನೆ. ಹರಿಕೇರಿ ಎಂಬ ಪ್ರದೇಶದ ಆದಾಯವನ್ನು ಬಿಟ್ಟುಕೊಟ್ಟರೆ ಸಾಲಕೊಡುವುದಾಗಿ ವಲ್ಲಭ ಶರತ್ತು ವಿಧಿಸುತ್ತಾನೆ. ಇದರಿಂದ ಕೋಪಗೊಂಡ ಬಲ್ಲಾಳಸೇನ ವಣಿಕರ ಸೊತ್ತುಗಳನ್ನೆಲ್ಲ ಬಲವಂತವಾಗಿ ವಶಕ್ಕೆ ಪಡೆಯುತ್ತಾನೆ. ಅನಂತರ ಅರಮನೆಯಲ್ಲಿ ಜರುಗಿದ ಭೋಜನಕೂಟದಲ್ಲಿ ವಣಿಕರನ್ನು ಶೂದ್ರರ ಜೊತೆ ಕೂರಿಸಿ ಅವಮಾನಿಸುತ್ತಾನೆ. ಸಿಟ್ಟಿಗೆದ್ದ ವಣಿಕರು ರಾಜನ ಭೋಜನಕೂಟವನ್ನು ಧಿಕ್ಕರಿಸುತ್ತಾರೆ. ವರ್ತಕ ಮುಖಂಡ ವಲ್ಲಭ ಮಗಧರಾಜ ಪಾಲನ ಅಳಿಯನಾದ್ದರಿಂದ ಸೇನರ ವಿರುದ್ಧ ಮಗಧರನ್ನು ಎತ್ತಿಕಟ್ಟಲು ಪ್ರಾರಂಭಿಸುತ್ತಾನೆ. ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂದು ಕೆಂಡಾಮಂಡಲಗೊಂಡ ಬಲ್ಲಾಳ ’ಇನ್ನು ಮುಂದೆ ಸವರ್ಣ ವಣಿಕರನ್ನೆಲ್ಲ ಶೂದ್ರರಾಗಿ ಪರಿಗಣಿಸಬೇಕು’ ಎಂದು ರಾಜಾಜ್ಞೆ ಹೊರಡಿಸುತ್ತಾನೆ. ಇದಕ್ಕೆ ಮುಯ್ಯಿ ತೀರಿಸುವ ನೆಪದಲ್ಲಿ ವಣಿಕರು ಎಲ್ಲಾ ಸೇವಕ ಮತ್ತು ಗುಲಾಮರನ್ನು ಒಂದಕ್ಕೆರಡು ಹಣಕೊಟ್ಟು ಖರೀದಿಸಿ ಅವರ ಸೇವೆ ಬೇರೆಯವರಿಗೆ ದೊರೆಯದಂತೆ ಮಾಡುತ್ತಾರೆ. ಬಲ್ಲಾಳ ಸುಮ್ಮನಿರಬೇಕಲ್ಲ. ಕೈವರ್ತರೆಂಬ ಶೂದ್ರಕುಲದವರನ್ನು ಕುಲೀನ ಕುಲದವರೆಂದು ಸಾರಿ ಅವರ ಮುಖಂಡನಿಗೆ ಮಹಾಮಾಂಡಲೀಕ ಬಿರುದು ದಯಪಾಲಿಸುತ್ತಾನೆ. ಜೊತೆಗೆ ಕಮ್ಮಾರರು, ಕುಂಭಾರರು ಇತ್ಯಾದಿ ಜಾತಿಯವರನ್ನು ಸತ್‌ಶೂದ್ರ(!) ಪದವಿಗೇರಿಸುತ್ತಾನೆ. ಇವನ ಕಾಟಕ್ಕೆ ಬೇಸತ್ತ ಹೆಚ್ಚಿನ ವರ್ತಕರು ರಾಜ್ಯ ತ್ಯಜಿಸಿ ವಲಸೆ ಹೋಗುತ್ತಾರೆ. ಇದೇ ಸಂದರ್ಭ ಕೆಲವರಿಗೆ ಜಾತಿಯಲ್ಲಿ ಪ್ರಮೋಶನ್ ಕೊಟ್ಟಂತೆ ಬ್ರಾಹ್ಮಣ ಮತ್ತು ಕ್ಷತ್ರಿಯಕುಲಗಳ ಶುದ್ಧೀಕರಣ ಮಾಡಲು ಕೆಲ ಉಚ್ಚಕುಲದವರಿಗೆ ಡಿಮೋಶನ್ ಕೂಡ ನೀಡಿದ್ದನೆನ್ನುತ್ತದೆ ಬಲ್ಲಾಳ ಚರಿತ.
       ಈ ಬಂಗಾಳಿ ಕಮ್ಯುನಿಸ್ಟರ anti capitalist ನೀತಿಗಳಿಗೆಲ್ಲ ಬಲ್ಲಾಳಸೇನನೇ ಮೂಲ ಆದರ್ಶಪುರುಷನಾಗಿರಬೇಕು. ಬಸು, ಭಟ್ಟಾಚಾರ್ಯರದ್ದೇ ಆಗಲೀ, ಈಗ ಬ್ಯಾನರ್ಜಿಯದ್ದೇ ಆಗಲೀ, ಈ ಬಂಡವಾಳವಿರೋಧಿ ನೀತಿಯನ್ನು ಅಲ್ಲಿನ ಸರ್ಕಾರಗಳೆಲ್ಲ ಚಾಚೂ ತಪ್ಪದೇ ಪಾಲಿಸಿಕೊಂಡು ಬಂದಿವೆ. ಕಥೆಗೆ ಕಾಲಿಲ್ಲವೆಂದುಕೊಂಡರೂ ಸೇನರು ಮೂಲತಃ ಬ್ರಾಹ್ಮಣರು. ರಾಜ್ಯವಾಳಲು ಶುರುಮಾಡಿದ ನಂತರ ಕ್ಷತ್ರಿಯರಾದರು. ಅದೇ ರೀತಿ ರಾಜರಿಗೆ ಆ ಕಾಲದಲ್ಲಿ ಜಾತಿಪದ್ಧತಿಯಲ್ಲಿದ್ದ ಕಟ್ಟುಪಾಡುಗಳನ್ನು ಬದಲಿಸುವ ಹಕ್ಕು ಇದ್ದುದು, ವೈದಿಕಾಚಾರದ ನಿಯಮಗಳನ್ನೆಲ್ಲ ತನ್ನ ಇಷ್ಟಾನುಸಾರ ಆಚರಿಸತೊಡಗಿದ್ದು ಆಶ್ಚರ್ಯದ ವಿಚಾರವೇ. ಇದೇ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ.  ಬಂಗಾಳ ಸಾಹಿತ್ಯ ಲೋಕದಲ್ಲಿ ಈತನ ಎರಡು ಕೃತಿಗಳಾದ ಅಭೂತಸಾಗರ ಮತ್ತು ದಾನಸಾಗರಕ್ಕೆ ದೊಡ್ಡ ಹೆಸರಿದೆ. ಅಭೂತಸಾಗರದ ಪ್ರಕಾರ ೧೧೭೮ರಲ್ಲಿ ಬಲ್ಲಾಳಸೇನ ತನ್ನ ಮಗ ಲಕ್ಷ್ಮಣಸೇನನಿಗೆ ರಾಜ್ಯವನ್ನು ಬಿಟ್ಟುಕೊಟ್ಟು ಗಂಗಾ-ಯಮುನಾ ಸಂಗಮಸ್ಥಳವಾದ ನಿರ್ಜರಪುರಕ್ಕೆ ತಪಸ್ಸಾಚರಿಸಲು ತೆರಳಿದನಂತೆ. ಲಕ್ಷ್ಮಣಸೇನ ಪಟ್ಟಕ್ಕೇರುವಾಗ ಅವನಿಗೆ ೬೦ ವರ್ಷ ವಯಸ್ಸು. ಗೋವಿಂದಪುರ, ತಾರಪನ್ ಡಿಘೆ, ಬಾಕುಲತಲಾ, ಅನುಲಿಯಾ, ಶಕ್ತಿಪುರ್, ಭೋವಾಲ್, ಮಾಧೈನಗರ್ ಮತ್ತು ಢಾಖಾ ಶಾಸನಗಳಲ್ಲಿ ಲಕ್ಷ್ಮಣಸೇನನ ವಿವರವಾದ ಉಲ್ಲೇಖಗಳಿವೆ. ಬಂಗಾಳವನ್ನು ಏಕಚಕ್ರಾಧಿಪತ್ಯದಡಿ ಆಳಿದ ಕಟ್ಟಕೊನೆಯ ಹಿಂದೂ ರಾಜನೀತ. ಗೌಡ, ಕಾಮರೂಪ, ಕಳಿಂಗ, ಗಹಡವಾಲ, ಮಗಧ, ಪ್ರಯಾಗಗಳನ್ನು ಗೆದ್ದು ಕೀರ್ತಿಸ್ತಂಭಗಳನ್ನು ನೆಟ್ಟದ್ದಾಗಿ ಶಾಸನಗಳು ಹೇಳಿವೆ. ಕಾಶಿಯವರೆಗೆ ರಾಜ್ಯವಿಸ್ತರಿಸಿ, ಗಯಾದಲ್ಲಿ ಸೇನರ ಧ್ವಜಹಾರಿಸಿದ್ದಾಗಿ ಗಯೆಯ ಅಶೋಕಚಲ್ಲಾನ ಶಾಸನ ಹಾಡಿಹೊಗಳಿದೆ. ಉತ್ತರ ಭಾರತದ ಎಲ್ಲೆಲ್ಲೂ ಮುಸ್ಲೀಮರ ಹಸಿರು ಪತಾಕೆಗಳು ಹಾರಾಡುತ್ತಿದ್ದಾಗ ಏಕೈಕ ಹಿಂದೂರಾಜ್ಯವಾಗಿ ಉಳಿದಿತ್ತು ಲಕ್ಷ್ಮಣಸೇನನ ಬಂಗಾಳ. ಆದರೆ ಮುಸ್ಲಿಮ ಆಕ್ರಮಣಕಾರಿಗಳ ಕಣ್ಣು ಬಂಗಾಳದತ್ತ ಬೀಳಲು ಬಹಳಷ್ಟು ಸಮಯ ಬೇಕಾಗಲಿಲ್ಲ. ವರ್ತಕರನ್ನು ಎದುರು ಹಾಕಿಕೊಂಡು ವ್ಯಾಪಾರ ವ್ಯವಹಾರಗಳನ್ನು ನಿರ್ಲಕ್ಷಿಸಿದ್ದು, ಸಂಪ್ರದಾಯದ ಹೆಸರಲ್ಲಿ ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದು, ಕೇವಲ ಕಲೆ-ಸಂಗೀತ-ವಾಸ್ತುಶಿಲ್ಪಗಳೆಡೆಗೇ ಅತಿಯಾದ ಆಸಕ್ತಿ ವಹಿಸಿ ಮೈಮರೆತದ್ದು ಇಸ್ಲಾಂ ಬಂಗಾಳದೆಡೆ ಮುಗಿಬೀಳಲು ಅವಕಾಶ ಮಾಡಿಕೊಟ್ಟಂತಾಯಿತು. ಅಷ್ಟಾಗಿಯೂ ಲಕ್ಷ್ಮಣಸೇನನ ಆಳ್ವಿಕೆ ಇಡೀ ಭಾರತದ ಸಾಹಿತ್ಯಲೋಕದಲ್ಲೊಂದು ಸ್ವರ್ಣಯುಗ. ಗುಪ್ತರ ನಂತರ ಹಿಂದೆಂದೂ ಕಂಡುಕೇಳರಿಯದಷ್ಟು ಸಂಸ್ಕೃತ ಸಾಹಿತ್ಯ ರಚನೆಯಾಗಿದ್ದು ಸೇನರ ಕಾಲದಲ್ಲೇ. ಧೋಯೀ ಕವಿ, ಶರಣ, ಗೋವರ್ಧನ, ಉಮಾಪತಿಧರರಂಥ ಉದ್ದಾಮ ಪಂಡಿತರೆಲ್ಲ ಲಕ್ಷ್ಮಣಸೇನನ ಆಸ್ಥಾನವನ್ನಲಂಕರಿಸಿದ್ದರು. ಹಲಾಯುಧ ಇವನ ಆಸ್ಥಾನದಲ್ಲೇ ಮುಖ್ಯನ್ಯಾಯಾಧೀಶನಾಗಿದ್ದವ. ಹಳೆಯ ತಲೆಮಾರಿನ ಕೊನೆಯ ಯುಗಸ೦ಧಿಯ ಕಾಲದಲ್ಲಿ ಬಂದ ಮಹಾಕವಿ ಗೀತಗೋವಿಂದದ ಜಯದೇವ ಇವನ ಆಸ್ಥಾನದವನೇ. ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಶಿಲ್ಪ, ಚಿತ್ರ, ನಾಟ್ಯ, ಅಭಿನಯ ಕ್ಷೇತ್ರಗಳನ್ನು ರಾಮಾಯಣ, ಮಹಾಭಾರತ, ಕಾಳಿದಾಸನನ್ನು ಬಿಟ್ಟರೆ ಗೀತಗೋವಿಂದದಷ್ಟು ಉತ್ಕಟವಾಗಿ ಪ್ರಭಾವಿಸಿದ ಇನ್ನೊಂದು ಕೃತಿಯಿಲ್ಲ. ಲಕ್ಷ್ಮಣ ಸೇನನ ಆಸ್ಥಾನದಲ್ಲಿದ್ದ ಇನ್ನೊಬ್ಬ ಪ್ರಸಿದ್ಧ ಕವಿ ಸದುಕ್ತಿ ಕರ್ಣಾಮೃತವನ್ನು ರಚಿಸಿದ ಶ್ರೀಧರದಾಸ. ಇದರಲ್ಲಿ ಜಯದೇವ ಲಕ್ಷ್ಮಣಸೇನನ ಕುರಿತು ರಚಿಸಿದ ಕೃತಿಯೊಂದರ ೩೧ ಶ್ಲೋಕಗಳ ಉಲ್ಲೇಖವಿದೆ. ಗೀತಗೋವಿಂದದಂಥ ಇನ್ನೊಂದು ಸಾರ್ವಕಾಲಿಕ ಶ್ರೇಷ್ಟವಾಗುವ ಅರ್ಹತೆಯಿದ್ದ ಆ ಕೃತಿಯಿನ್ನೂ ದೊರಕಿಲ್ಲ. ಜೊತೆಗೆ ಅತ್ಯಂತ ಬೇಸರದ ವಿಚಾರವೆಂದರೆ ಸದುಕ್ತಿ ಕರ್ಣಾಮೃತ ಮತ್ತು ವಿದ್ಯಾಕರನ ಸುಭಾಶಿತರತ್ನಕೋಶದಲ್ಲಿ ಉದ್ಧರಿಸಲ್ಪಟ್ಟ, ಉದಾಹರಿಸಲ್ಪಟ್ಟ, ಉಲ್ಲೇಖಿಸಲ್ಪಟ್ಟ ಐದುನೂರಕ್ಕೂ ಹೆಚ್ಚು ಬಂಗಾಳಿ ಕವಿಗಳ ಸಾವಿರಾರು ಕೃತಿಗಳಲ್ಲಿ ಒಂದೂ ಇಂದು ಲಭ್ಯವಿಲ್ಲ. ಬಂಗಾಳದ ಮೇಲೆ ದಾಳಿ ಮಾಡಿದ ಇಸ್ಲಾಂ ಅವುಗಳನ್ನು ಬರ್ಬರವಾಗಿ ನಾಶಮಾಡಿತು. ಮುಂದೆ ಲಕ್ಷ್ಮಣಸೇನನ ಮಗ ವಿಶ್ವರೂಪ ಮುಸ್ಲಿಂ ಸೇನೆಯ ಬಹುಪಾಲನ್ನು ಪೂರ್ವಬಂಗಾಳದಿಂದ ಹೊರಗಟ್ಟುವಲ್ಲಿ ಸಫಲನಾದರೂ ಸಾಮ್ರಾಜ್ಯ ವಿನಾಶದ ಅಂಚಿನಲ್ಲಿತ್ತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ಬಂಗಾಳ ಮತ್ತೆ ಮೇಲೇಳಲಿಲ್ಲ. ಅವಿಭಜಿತ ಬಂಗಾಳದ ಕೊನೆಯ ಹಿಂದೂ ಸರದಾರರೆಂಬ ಹೆಮ್ಮೆ ಸೇನರಿಗಿದೆ. ದೂರದ ಕರ್ಣಾಟಕದಿಂದ ವಲಸೆ ಬಂದು ತಮ್ಮ ಭುಜಬಲದಿಂದ ಬಂಗಾಳದಲ್ಲಿ ರಾಜ್ಯ ಕಟ್ಟಿ ಎರಡು ಶತಮಾನಗಳ ಕಾಲ ಆಳಿದ ಈ ಕರ್ಣಾಟ ವಂಶ  ಭಾರತದ ಚರಿತ್ರೆಯಲ್ಲೇ ಅಭೂತಪೂರ್ವವಾದದ್ದು ಮತ್ತು ಕರ್ನಾಟಕದ ಚರಿತ್ರೆಯಲ್ಲಿ ಚಿರಸ್ಥಾಯಿಯಾದದ್ದು.