Pages

Friday, May 1, 2020

ಇಟಲಿ ಬ್ರಾಹ್ಮಣ

       ಇಲ್ಲ,ಇಲ್ಲ.....ಈ ಲೇಖನಕ್ಕೂ ಕೌಲ್ ದತ್ತಾತ್ರೇಯ ಗೋತ್ರದ ಬ್ರಾಹ್ಮಣ ರಾಹುಲ್ ಗಾಂಧಿಗೂ ಯಾವ ಸಂಬಂಧವೂ ಇಲ್ಲ. ತಲೆಬರಹ ನೋಡಿ ಹಾಗೆಂದುಕೊಂಡೇನಾದರೂ ಇದನ್ನು ಓದಿದರೆ ನಿಮಗೆ ನಿರಾಸೆ ಖಂಡಿತ.
       ನಾವೀಗ ಆರುನೂರು ವರ್ಷ ಹಿಂದೆ ಹೋಗೋಣ. ೧೪೯೮ನೇ ಇಸ್ವಿಯಲ್ಲಿ ವಾಸ್ಕೋಡಗಾಮನ ನೇತೃತ್ವದಲ್ಲಿ ಆಗಷ್ಟೆ ಕೇರಳದ ತೀರಕ್ಕಾಗಮಿಸಿದ್ದ ಪೋರ್ಚುಗೀಸರ ಪ್ರಭಾವ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿತ್ತು. ಪಶ್ಚಿಮ ಸಮುದ್ರದಿಂದ ನಡೆಯುತ್ತಿದ್ದ ಸಾಂಬಾರ್ ಪದಾರ್ಥಗಳ ವ್ಯಾಪಾರದಲ್ಲಿ ಏಕಸ್ವಾಮ್ಯ ಸಾಧಿಸುವುದು ಅವರ ಮುಂದಿದ್ದ ಏಕೈಕ ಧ್ಯೇಯ. ಇದಕ್ಕಾಗಿ ಕಲ್ಲೀಕೋಟೆಯ ಝಾಮೋರಿನ್ನನ ಸಂಗಡ ಆವಾಗಾವಾಗ ಯುದ್ಧಮೈತ್ರಿಗಳೆರಡೂ ಮಾಮೂಲಿ. ಇವೆರಡರ ಮಧ್ಯ ಸಮಯ ಸಿಕ್ಕಾಗೆಲ್ಲ ಸ್ಥಳೀಯರನ್ನು ಮತಾಂತರಿಸುತ್ತಿದ್ದರು. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಉಳಿದ ಭಾಗಗಳನ್ನೂ ತಮ್ಮ ಕೈವಶ ಮಾಡಿಕೊಳ್ಳಲು ಶತಪ್ರಯತ್ನ ನಡೆಸುತ್ತಿದ್ದರು. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ಮತ್ತು ಮಧ್ಯಪ್ರಾಚ್ಯ ನಂಬಿಕೊಂಡಿದ್ದು ಕೇರಳದ ಮುಸ್ಲಿಂ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಎಲ್ಲವೂ ಸೇರಿ ಮುಸ್ಲಿಂ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಇದರಿಂದ ಪೋರ್ಚುಗೀಸರಿಗಿಂತ ಹೆಚ್ಚು ತೊಂದರೆಯಾದದ್ದು ಪಾರವ ಎಂಬ ಮೀನುಗಾರ ಸಮುದಾಯಕ್ಕೆ. ತಮಿಳ್ನಾಡಿನ ರಾಮೇಶ್ವರದಿಂದ ಕೇರಳದ ಕಣ್ಣೂರಿನವರೆಗಿನ ಪಾರವ ಮೀನುಗಾರರು ತಲತಲಾಂತರದಿಂದ ಸಮುದ್ರದಲ್ಲಿ ಮುತ್ತು ತೆಗೆಯುವ ಕಸುಬು ಮಾಡಿಕೊಂಡವರು. ಕನ್ಯಾಕುಮಾರಿಯ ಆಸುಪಾಸು ಸಿಗುವ ಮುತ್ತುಗಳು ಪ್ರಪಂಚದಲ್ಲೇ ಶ್ರೇಷ್ಟವೆಂಬ ನಂಬಿಕೆಯಿತ್ತು. ಮುಸ್ಲೀಮರ ಪ್ರಾಬಲ್ಯ ಇವರನ್ನು ಅಕ್ಷರಶಃ ಗುಲಾಮರ ಸ್ಥಿತಿಗೆ ತಳ್ಳಿದ್ದಲ್ಲದೇ ಮುತ್ತಿನ ವ್ಯವಸಾಯ ಹದಿನಾರನೇ ಶತಮಾನದ ಆರಂಭದಲ್ಲಿ ಪೂರ್ತಿಯಾಗಿ ಇವರ ಕೈತಪ್ಪಿತ್ತು. ದಬ್ಬಾಳಿಕೆಯ ವಿರುದ್ಧ ಉಸಿರೆತ್ತಿದವರನ್ನು ಥೇಟ್ ತಮಿಳು ಸಿನೆಮಾ ಮಾದರಿಯಲ್ಲಿ ದಮನಿಸಿ ಕಿವಿ ಕತ್ತರಿಸಿ ಕಳಿಸಲಾಗುತ್ತಿತ್ತು. ೧೫೩೪ರಲ್ಲಿ ತೂತುಕುಡಿಯಲ್ಲಿ ಇದರ ವಿರುದ್ಧ ದೊಡ್ಡಮಟ್ಟಿನಲ್ಲಿ ಪಾರವರು ದಂಗೆಯೆದ್ದರೂ ಬಲಾಢ್ಯ ಮುಸ್ಲಿಮರ ಎದುರು ಇವರ ಆಟವೇನೂ ನಡೆಯಲಿಲ್ಲ. ಹಿಂದೂ ಅರಸರೆಲ್ಲ ಈ ಕೆಳಜಾತಿಯ ಮೀನುಗಾರರಿಗಾಗಿ ದುಡ್ಡಿದ್ದವರನ್ನು ಎದುರು ಹಾಕಿಕೊಳ್ಳಲು ತಯಾರಿರಲಿಲ್ಲ. ಆಗ ಪಾರವರ ಸಹಾಯಕ್ಕೆ ಬಂದಿದ್ದು ಇದೇ ಪೋರ್ಚುಗೀಸರು. ಪಾರವರ ಮುಖಂಡನೊಬ್ಬ ಗೋವಾಕ್ಕೆ ತೆರಳಿ ಪೋರ್ಚುಗೀಸರಲ್ಲಿ ಸಹಾಯಕ್ಕೆ ಮೊರೆಯಿಟ್ಟ. ಒಂದು ಷರತ್ತಿನ ಮೇಲೆ ಇಡೀ ಪಾರವ ಸಮುದಾಯದ ರಕ್ಷಣೆಯನ್ನು ವಹಿಸಿಕೊಳ್ಳುವುದಾಗಿ ಅವರು ಮಾತಿತ್ತರು. ಸಹಾಯವೇನೂ ದೊಡ್ಡದಲ್ಲ. ಕೊಟ್ಟ ಮಾತಿನಂತೆ ೮೦ ಪಾರವರು ಕೊಚ್ಚಿಯಲ್ಲಿ ಅಧಿಕೃತವಾಗಿ ಕ್ರಿಶ್ಚಿಯಾನಿಟಿಗೆ ಮತಾಂತರವಾದರು.  ಅರಬ್ಬರನ್ನು ಸಂಪೂರ್ಣ ಹಿಮ್ಮೆಟ್ಟಿಸಿ ಮುತ್ತಿನ ವ್ಯಾಪಾರವನ್ನು ಪುನಃ ಕೈಗಿತ್ತ ಪೋರ್ಚುಗೀಸ ಸಹಾಯಕ್ಕೆ ಪ್ರತಿಯಾಗಿ ೧೫೩೭ರಲ್ಲಿ ಇಡೀ ಪಾರವ ಜನಾಂಗ ತಮ್ಮನ್ನು ಕ್ರಿಶ್ಚಿಯನ್ನರೆಂದು ಘೋಷಿಸಿಕೊಂಡಿತು. ಅಲ್ಲಿಯವರೆಗೆ ಸಿಕ್ಕಸಿಕ್ಕವರನ್ನು ಕಂಡಕಂಡಲ್ಲಿ ಮತಾಂತರಿಸಿ ಇಡೀ ಕೇರಳದಲ್ಲಿ ಕುಖ್ಯಾತಿ ಪಡೆದಿದ್ದ ಪೋರ್ಚುಗೀಸರಿಗೆ ಮೊದಲ ಬಾರಿ ಮತಾಂತರವಾಗಲು ಜನ ಸಾಲುಗಟ್ಟಿ ನಿಂತಿದ್ದನ್ನು ನೋಡಿ ಆಶ್ಚರ್ಯವೋ ಆಶ್ಚರ್ಯ. 
ಜೆಸ್ಯುಟ್ಸ್ ಇನ್ ಮಲಬಾರ್ ಪುಸ್ತಕದ ಒಂದು ಅಧ್ಯಾಯ
        ಅಂಥ ಶೋಷಣೆಗೊಳಗಾದ ಇನ್ನೂ ಬೇಕಷ್ಟು ಜನಾಂಗಗಳು ಸಮಾಜದಲ್ಲಿದ್ದವು. ಅವರನ್ನೆಲ್ಲ ಪವಿತ್ರಾತ್ಮರನ್ನಾಗಿಸಲು ಸಂತ ಕ್ಸೇವಿಯರ್ ಕೇರಳಕ್ಕೆ ಓಡೋಡಿ ಬಂದ. ಮುಂದಿನ ಒಂದೂವರೆ ವರ್ಷದಲ್ಲಿ ಅಳಿದುಳಿದ ಪಾರವರೂ ಸೇರಿ ಕ್ಸೇವಿಯರ್ರನಿಂದ ಮತಾಂತರಗೊಂಡವರ ಸಂಖ್ಯೆ ಇಪ್ಪತ್ತು ಸಾವಿರ ದಾಟಿತ್ತು. ಬ್ಯಾಪ್ಟೈಸಿಗೊಳಪಟ್ಟ ಪಾರವರು ಫರ್ಡಿನೆಂಡೋ ಎಂದು ಕರೆಯಲ್ಪಟ್ಟರು. ಮುಂದೆ ೧೫೪೨ರವರೆಗೆ ದಕ್ಷಿಣ ಭಾರತದಲ್ಲಿ ಪೋರ್ಚುಗೀಸರಿಗೆ ಹುಲುಸು ಬೆಳೆ. ಮಧುರೈ, ರಾಮೇಶ್ವರ, ರಾಮನಾಥಪುರಂ, ಕನ್ಯಾಕುಮಾರಿಯ ಸುತ್ತಮುತ್ತ ದೊಡ್ಡ ಮಟ್ಟಿನಲ್ಲಿ ಕ್ಸೇವಿಯರನ ನೇತೃತ್ವದಲ್ಲಿ ಧರ್ಮ ಪ್ರಚಾರ ಆರಂಭವಾಯ್ತು. ಈತನ ತೂತುಕುಡಿಯ ಮೊದಲ ಭೇಟಿಯಲ್ಲೇ ಇಡೀ ಕೊಂಬುತುರೈ ಗ್ರಾಮ ಮತಾಂತರಗೊಂಡಿತು. ವೀರಪಾಂಡ್ಯಪಟ್ಟನಮ್, ಕಾಯಲ್ಪಟ್ಟನಮ್, ವಂಬರ್ ಸೇರಿ ಇಪ್ಪತ್ತೆರಡು ಊರುಗಳು ಕ್ರೈಸ್ತಮತ ಸ್ವೀಕರಿಸಿದವು. ೧೫೪೩ರಲ್ಲಿ ರಾಮೇಶ್ವರದ ಸಮೀಪ ಚಾಪೆಲ್ ಒಂದು ತಲೆಯೆತ್ತಿತು. ೧೫೫೧ರಲ್ಲಿ ಇವುಗಳ ಸಂಖ್ಯೆ ಮೂವತ್ತಕ್ಕೇರಿತು. ಸೊಸೈಟಿ ಆಫ್ ಜೀಸಸ್ ಭಾರತದಲ್ಲಿ ಶುಭಾರಂಭ ಮಾಡಿದ್ದು ಇಲ್ಲಿಂದಲೇ. ಕ್ರೈಸ್ತಮತ ಭಾರತದಲ್ಲಿ ಏಸು ಬದುಕಿರುವಾಗಲೇ ಬಂದಿದ್ದರೂ ಮಿಷನರಿಗಳ ಅಧಿಕೃತ ಮತಾಂತರ ಶುರುವಾಗಿತ್ತು ಸಾವಿರದೈನೂರರ ನಂತರವೇ. ಹಾಗೆ ಮತಾಂತರಗೊಂಡವರೆಲ್ಲ ಸಮಾಜದ ಕೆಳಸ್ತರದಿಂದ ಬಂದವರೇ. ಮೇಲ್ವರ್ಗದ ಶೋಷಣೆಯನ್ನು ತಾಳಲಾರದೇ ತಮ್ಮದೇ ಧರ್ಮದಿಂದ ಹೊರಬಿದ್ದುಹೋದವರೆಲ್ಲ ಸಿಕ್ಕಿದ್ದು ಪೋರ್ಚುಗೀಸರ ಕೈಗೆ. ಅದೊಂದು ತಮಾಷೆಯ ಮಾತಿದೆ. ಜಗತ್ತಿನ ಎಲ್ಲ ಮತಗಳೂ ತಾವೇ ಶ್ರೇಷ್ಟ, ಎಲ್ಲರೂ ತಮ್ಮಲ್ಲಿ ಬನ್ನಿ ಎಂದು ಕರೆದರೆ ವೈದಿಕ ಮತವೊಂದೇ(ಹಿಂದೂ ಎಂದು ಬೇಕಾದರೂ ಓದಿಕೊಳ್ಳಿ) ತಾವೇ ಶ್ರೇಷ್ಟ, ನಮ್ಮ ಹತ್ತಿರ ಯಾರೂ ಬರಬೇಡಿ ಎನ್ನುವುದು.
       ಆದರೆ ಕಾಲಕ್ರಮೇಣ ಪೋರ್ಚುಗೀಸರಿಗೆ ಒಂದು ಸಮಸ್ಯೆಯೂ ಎದುರಾಯಿತು. ಪೋರ್ಚುಗೀಸರು ಈ ನೆಲಕ್ಕೆ ಕಾಲಿಟ್ಟಾಗ ಇಲ್ಲಿನ ಜನ ಕೇಳಿದ ಮೊದಲ ಪ್ರಶ್ನೆಯೆಂದರೆ ನಿಮ್ಮ ಜಾತಿ ಯಾವುದು? ಅದಕ್ಕುತ್ತರ ಅವರಿಗೂ ಗೊತ್ತಿರಲಿಲ್ಲ. ಇದೆಂಥ ಮೂಢ, ಮೂರ್ಖ ಜನಾಂಗವಪ್ಪಾ? ತಾನ್ಯಾವ ಜಾತಿಗೆ ಸೇರಿದ್ದೇನೆ ಎಂಬುದೇ ತಿಳಿಯದಷ್ಟು! ಜಾತಿಭೃಷ್ಟನೋ, ಧರ್ಮಭೃಷ್ಟನೋ ಹೇಳುವ ಮಾತಿದು. ಜಾತಿ ಇಲ್ಲದ ಮೇಲೆ ಸಾಮಾಜಿಕ ಧಾರ್ಮಿಕ ಅಂತಸ್ತಿನ ಪ್ರಶ್ನೆ ಎಲ್ಲಿಂದ ಬಂತು. ತನ್ನ ಕುಲದ ಶ್ರೇಷ್ಟತೆಯಿರುವ ಧಾರ್ಮಿಕ ಹಿಂದೂವೊಬ್ಬ ಇಂಥದ್ದನ್ನು ಎಂದಿಗೂ ಸಹಿಸಲಾರ. ಅದೂ ಅಲ್ಲದೇ ಮಾಂಸ ತಿನ್ನುವ, ಮೂರುಹೊತ್ತೂ ಕುಡಿಯುವ, ಆವಾಗೀವಾಗ ಸ್ನಾನಮಾಡುವ, ಚರ್ಮದ ಚಪ್ಪಲಿ ಧರಿಸುವ, ಇನ್ನೂ ಏನೇನೋ ಧರ್ಮಬಾಹಿರ ಕೆಲಸಗಳನ್ನು ಮಾಡುವ ಇವರ ಜೊತೆ ವ್ಯವಹಾರವೊಂದನ್ನು ಬಿಟ್ಟು ಬೇರೆ ಯಾವ ರೀತಿಯ ಸಂಬಂಧವೂ ಇಟ್ಟುಕೊಳ್ಳದಂತೆ ಜನ ಎಚ್ಚರಿಕೆ ವಹಿಸತೊಡಗಿದರು.  ಹಾಗಾಗಿ ತೀರ ದಲಿತರನ್ನು ಬಿಟ್ಟು ಉಳಿದವರ ತಂಟೆಗೆ ಹೋಗುವುದೂ ಪರಂಗಿಗಳಿಗೆ ಕಷ್ಟವಾಯ್ತು. ನಿಮ್ನವರ್ಗದವರು ಎಷ್ಟು ಸಂಖ್ಯೆಯಲ್ಲಿ ಮತಾಂತರವಾದರೂ ಉಳಿದವರು ಅದರ ಬಗ್ಗೆ ಐದು ಪೈಸೆ ತಲೆಕೆಡಿಸಿಕೊಳ್ಳಲಿಲ್ಲ. ಅದಕ್ಕಿಂತ ದೊಡ್ಡ ಕಷ್ಟವೆಂದರೆ ಹಾಗೆ ಮತಾಂತರವಾದಮೇಲೂ ಅವರು ಕೆಳವರ್ಗವರಾಗಿಯೇ ಇರುತ್ತಿದ್ದರು. ಹಿಂದೂಧರ್ಮದಲ್ಲಿನ ತಾರತಮ್ಯದ ಲಾಭಪಡೆಯ ಹೊರಟ ಪೋರ್ಚುಗೀಸರಿಗೆ ಇದೊಂಥರಾ ಗಂಟಲಗಾಣ. ಇಷ್ಟು ದೊಡ್ಡ ದೇಶದಲ್ಲಿ ಅಕ್ಕಿಯಾಸೆ ತೋರಿಸಿ ಎಷ್ಟು ಜನರನ್ನೆಂದು ಮತಾಂತರಿಸುವುದು?
      ಹಾಗೆ ನೋಡಿದರೆ ನಮ್ಮಲ್ಲಿ ಮತಾಂತರ ಹಿಂದಿನಿಂದಲೂ ಇತ್ತು. ಆಗೆಲ್ಲ ಎರಡು ಮತಗಳ ಅನುಯಾಯಿಗಳ ಮಧ್ಯೆ ದಿನಗಟ್ಟಲೆ, ವಾರಗಟ್ಟಲೆ ಶಾಸ್ತ್ರಾರ್ಥ ನಡೆದು ಸೋತವರು ಗೆದ್ದವರ ಮತವನ್ನು ಅನುಸರಿಸುತ್ತಿದ್ದರು. ಶಂಕರಾಚಾರ್ಯ ಹಾಗೂ ಮಂಡನಮಿಶ್ರರ ವಾದವನ್ನೊಮ್ಮೆ ನೆನಪಿಸಿಕೊಳ್ಳಿ. ಪೂರ್ವಮೀಮಾಂಸೆಯ ಪ್ರಕಾಂಡ ಪಂಡಿತ ಮಂಡನರು ಶಂಕರರೆದುರು ವಾದದಲ್ಲಿ ಸೋತು ಸನ್ಯಾಸ ಸ್ವೀಕರಿಸಬೇಕಾಯಿತು. ಮಿಶನರಿಗಳೂ ಅದೇ ಕೆಲಸಕ್ಕಿಳಿದರೆ? ಈಗ ಅಂಥದ್ದೇ ಒಂದು ಪರಿಸ್ಥಿತಿಯನ್ನು ಊಹಿಸಿಕೊಳ್ಳಿ. ಪಕ್ಕಾ ಪರಂಗಿಯೊಬ್ಬ ಕಚ್ಚೆಯುಟ್ಟು, ಜುಟ್ಟುಬಿಗಿದು, ಗೋಪಿಚಂದನವನ್ನು ಮೈತುಂಬ ಬಳಿದುಕೊಂಡು, ಜನಿವಾರ ಧರಿಸಿ ದೊಡ್ಡ ದೊಡ್ಡ ಬ್ರಾಹ್ಮಣ ವಿದ್ವಾಂಸರೊಡನೆ ಹಿಂದೂ ಧರ್ಮಶಾಸ್ತ್ರದ ಕುರಿತು ಚರ್ಚೆನಡೆಸಿ, ಅವರನ್ನು ಸೋಲಿಸಿ ಕ್ರೈಸ್ತಮತಕ್ಕೆ ಮತಾಂತರಿಸಿದರೆ?
ನೋ ಚಾನ್ಸ್ ಅಂತೀರಾ? ಹಾಗಾದರೆ ಮುಂದೆ ಕೇಳಿ.
      ರಾಬರ್ಟ್ ಡಿ ನೊಬಿಲಿ. ಹುಟ್ಟಿದ್ದು ೧೫೭೭ರಂದು ಇಟಲಿಯ ಟಸ್ಕನಿ ಪ್ರಾಂತ್ಯದ ಶ್ರೀಮಂತ ಕುಟುಂಬವೊಂದರಲ್ಲಿ. ಮೂಲದಲ್ಲಿ ಈ ಕುಟುಂಬ ರೋಮನ್ ಅರಸೊತ್ತಿಗೆಗೆ ಹತ್ತಿರದ ಸಂಬಂಧವುಳ್ಳದ್ದು. ಯುರೋಪಿನ ಹಲವಾರು ಮತಪ್ರಚಾರಕರು, ಪಾದ್ರಿಗಳು ಮಾತ್ರವಲ್ಲ ಇಬ್ಬರು ಪೋಪರು ಸಹ ಈ ಕುಟುಂಬದಿಂದ ಆಗಿಹೋಗಿದ್ದರು. ಇಂಥ ಪಕ್ಕಾ ಧಾರ್ಮಿಕ ಹಿನ್ನೆಲೆಯಿಂದ ಬಂದ ನೊಬಿಲಿ ತನ್ನ ಹತ್ತೊಂಬ್ಬತ್ತನೇ ವಯಸ್ಸಿನಲ್ಲಿ ಮನೆಯನ್ನು ತೊರೆದು ಧರ್ಮಪ್ರಚಾರವೇ ತನ್ನ ಧ್ಯೇಯವೆಂದು ಘೋಷಿಸಿಕೊಂಡ. ನಾಲ್ಕೈದು ವರ್ಷ ಕ್ರೈಸ್ತಮತವನ್ನು ಗಾಢವಾಗಿ ಅಭ್ಯಸಿಸಿದ ನಂತರ ಭಾರತದಲ್ಲಿ ಕ್ರಿಸ್ತನ ಸಂದೇಶವನ್ನು ಪಸರಿಸಲು ಹೊರಟುನಿಂತ. ಭಾರತಕ್ಕೆ ಬಂದಾಗಲೇ ಆತನಿಗೆ ಇಲ್ಲಿಯ ಸಮಸ್ಯೆಯ ಅರಿವಾಗಿದ್ದು. ಕ್ಸೇವಿಯರಿನ ನಂತರ ದಕ್ಷಿಣದಲ್ಲಿ ಮತಾಂತರದ ಕಾರ್ಯ ಹೆಚ್ಚುಕಡಿಮೆ ನಿಂತೇ ಹೋಗಿತ್ತೆನ್ನಿ. ಮತಾಂತರಗೊಂಡ ಪಾರವರನ್ನು ಜನ ಪರಂಗಿ ಕ್ರಿಶ್ಚಿಯನ್ನರೆಂದು ಕರೆದು ಅವರನ್ನು ದೂರವೇ ಇಟ್ಟಿದ್ದರು. ಮತಾಂತರಗೊಂಡಮೇಲೂ ಅದೇ ಜಾತಿಯಲ್ಲಿ ಉಳಿದರೆ ಲಾಭವೇನೆಂದು ಕೆಲವರು ಹಿಂದಿನ ಆಚಾರವನ್ನೇ ಪಾಲಿಸಹತ್ತಿದರು.  ನೊಬಿಲಿಗೆ ನಿಧಾನವಾಗಿ ಇಲ್ಲಿಯ ಪರಿಸ್ಥಿತ ಅರಿವಾಯ್ತು. ಭಾರತೀಯ ಸಮಾಜ ಮತ್ತು ಸಂಸ್ಕೃತಿ ನಿಂತಿರುವುದೇ ಜಾತಿಪದ್ಧತಿಯ ಮೇಲೆ. ಹಿಂದೂವೊಬ್ಬನಿಗೆ ಸಮಾಜದಲ್ಲಿ ತನ್ನ ಅಸ್ತಿತ್ವವನ್ನು ತೋರಿಸುವ ಏಕೈಕ ಸಂಕೇತವೆಂದರೆ ಅವನ ಜಾತಿ. ಅದನ್ನೇ ಅವನಿಂದ ಕಿತ್ತುಕೊಳ್ಳುವುದು ಸಾಧ್ಯವಾದೀತೇ? ಹುಟ್ಟಿನಿಂದ ದೈವದತ್ತವಾಗಿ ಬಂದ ಬಳುವಳಿಯದು. ಅದನ್ನೆಲ್ಲಾದರೂ ಬಿಡಲಿಕ್ಕುಂಟೇ? ಇಂಥವರ ಮಧ್ಯ ಪರಂಗಿ ಕ್ರಿಶ್ಚಿಯಾನಿಟಿಯನ್ನು ಮುಂದಿಟ್ಟುಕೊಂಡು ಜನರಿಗೆ ಗಾಸ್ಪೆಲ್ ಬೋಧಿಸುವುದು ಸಾಧ್ಯವೇ ಇಲ್ಲವೆಂದು ಮನವರಿಕೆಯಾಗಿತ್ತು. ತನ್ನನ್ನು ಪರಂಗಿ ಎಂದು ಗುರುತಿಸಲು ಇರುವ ಗುರುತುಗಳನ್ನೆಲ್ಲ ಮೊದಲು ಕಳಚಿಕೊಳ್ಳಲು ನಿರ್ಧರಿಸಿದ.

   ಕೆಲ ಸಮಯ ಗೋವಾ, ಕೊಚ್ಚಿನುಗಳಲ್ಲಿ ಕಳೆದ ನೊಬಿಲಿ ಮಧುರೈಯನ್ನು ಕೇಂದ್ರವಾಗಿಟ್ಟುಕೊಂಡು ತನ್ನ ಬೋಧನೆಗಳನ್ನು ಪ್ರಾರಂಭಿಸಲು ತೀರ್ಮಾನಿಸಿದ. ಅದಕ್ಕೊಂದು ಕಾರಣವೂ ಇತ್ತು. ಮಧುರೈ ದಕ್ಷಿಣ ಭಾರತದ ಅತಿದೊಡ್ಡ ವೈದಿಕ ಕೇಂದ್ರವಾಗಿತ್ತಾಗ. ಇಲ್ಲಿ ಶಿವನು ತನ್ನ ಜಟಾಜೂಟದಿ೦ದ ಜೇನಿನ ಮಳೆ ಸುರಿಸಿದ್ದರಿ೦ದ ಮಧುರೆಯೆ೦ಬ ಹೆಸರು ಬ೦ದಿತೆ೦ಬ ಕಥೆಯಿದೆ. ಸಂಗಂನ ಉಚ್ಛ್ರಾಯಕಾಲದಲ್ಲೂ ವೈದಿಕ ಪ್ರಾಬಲ್ಯವನ್ನು ಸಶಕ್ತವಾಗಿ ಉಳಿಸಿಕೊಂಡು ಬಂದ ಸ್ಥಳ. ಕವಿಯೊಬ್ಬ ಚೋಳರ ರಾಜಧಾನಿಯಾದ ಉರೈಯೂರು ಮತ್ತು ಚೇರರ ರಾಜಧಾನಿಯಾಗಿದ್ದ ವ೦ಜಿಯ ಜನ ಕೋಳಿ ಕೂಗನ್ನು ಕೇಳುತ್ತ ಬೆಳಿಗ್ಗೆ ಎಚ್ಚರಗೊ೦ಡರೆ ಪಾ೦ಡ್ಯ ರಾಜಧಾನಿ ಮಧುರೈನ ಜನ ವೇದಘೋಷಗಳನ್ನಾಲಿಸುತ್ತ ನಿದ್ದೆಯಿ೦ದೇಳುತ್ತಿದ್ದರೆ೦ದದ್ದು ವೈಗೈ ಮತ್ತು ಮಧುರೆಗೆ ದೊರೆತ ಮಾನ್ಯತೆಯೇ ಸರಿ. ಇಂಥ ಸ್ಥಳದಲ್ಲಿ ನೆಲೆನಿಂತ ನೊಬಿಲಿ ಸಮಾಜದ ಮೇಲ್‌ಸ್ತರದಿಂದಲೇ ತನ್ನ ಕೆಲಸ ಶುರುಮಾಡಲು ನಿರ್ಧರಿಸಿದ. ಬ್ರಾಹ್ಮಣನಾಗದೇ ಅಂಥವರ ಮಧ್ಯ ಸೇರುವುದು ಹೇಗೆ? ಸರಿ, ಬ್ರಾಹ್ಮಣನಾಗಬೇಕೆಂದುಕೊಂಡವ  ಅದಕ್ಕಾಗಿ ಕೊಡಂಗಾಲೂರಿನ ಆರ್ಚ್‌ಬಿಷಪ್‌ನ ಅನುಮತಿಯನ್ನೂ ಪಡೆದುಕೊಂಡ. ವೇದೋಪನಿಷತ್ತುಗಳನ್ನೋದಲು ಸಂಸ್ಕೃತ ಬರಬೇಕಲ್ಲ! ತೂತುಕುಡಿಯಲ್ಲಿ ಒಬ್ಬ ಬ್ರಾಹ್ಮಣ ಗುರುವನ್ನು ಗೊತ್ತುಮಾಡಿ ಸಂಸ್ಕೃತ, ತೆಲುಗು ಹಾಗೂ ತಮಿಳಿನಲ್ಲಿ ಪ್ರಾವೀಣ್ಯತೆ ಸಾಧಿಸಿದ. ಈತ ಒಟ್ಟೂ ೩೨ ಭಾಷೆಗಳನ್ನು ಕಲಿತು ಮಾತಾಡಬಲ್ಲವನಾಗಿದ್ದನಂತೆ ಅಂದರೆ ಎಂಥಾ ಪ್ರತಿಭಾಸಂಪನ್ನನಿರಬಹುದು ಆಲೋಚಿಸಿ. ತನ್ನ ಕರಿಕೋಟು ಕಳಚಿಟ್ಟು ಕಾಷಾಯವುಟ್ಟ. ತಲೆಬೋಳಿಸಿಕೊಂಡು ಹಣೆಗೆ ಚಂದನವಿಟ್ಟು, ಚರ್ಮದ ಬೂಟುಗಳ ಬದಲು ಮರದ ಪಾದುಕೆ ತೊಟ್ಟ. ಶಿವಧರ್ಮ ಎಂಬ ಬ್ರಾಹ್ಮಣ ವಿದ್ವಾಂಸನೊಬ್ಬನ ಬಳಿ ವೇದಪಾಠವನ್ನೂ ಶುರುವಿಟ್ಟುಕೊಂಡ. ಪ್ರಾಯಶಃ ಹಿಂದೂಧರ್ಮಶಾಸ್ತ್ರವನ್ನು ಕಲಿತ ಅಥವಾ ಕಣ್ಣಲ್ಲಿ ಕಂಡ ಮೊದಲ ಐರೋಪ್ಯ ನೋಬಿಲಿಯೇ ಇರಬೇಕು. ಬರೀ ಮೂರು ವರ್ಷಗಳಲ್ಲಿ ವೇದ, ಉಪನಿಷತ್ತು, ಪುರಾಣ, ಸಂಸ್ಕೃತ ವ್ಯಾಕರಣಗಳನ್ನೆಲ್ಲ ಅರೆದು ಕುಡಿದ.  ಇದಿಷ್ಟೂ ವರ್ಷ ತುಂಬ ಬುದ್ಧಿವಂತಿಕೆಯಿಂದ ಸ್ಥಳೀಯ ಕ್ರೈಸ್ತ ಪಾದ್ರಿಗಳ, ಚರ್ಚಿನ, ಕೆಳವರ್ಗದ ಹಿಂದೂಗಳ ಹತ್ತಿರವೂ ಸುಳಿಯದಂತೆ ಎಚ್ಚರಿಕೆ ವಹಿಸಿದ. ಇದೇ ಸಮಯದಲ್ಲಿ ಡಯಲಾಗ್ ಆಫ್ ಎಟರ್ನಲ್ ಲೈಫ್ ಮತ್ತು ನ್‌ಕ್ವೈರಿ ಇಂಟು ಮೀನಿಂಗ್ ಆಫ್ ಲೈಫ್ ಎಂಬ ಎರಡು ಪುಸ್ತಕಗಳನ್ನು ಇಂಗ್ಲೀಷ್, ತಮಿಳುಗಳೆರಡರಲ್ಲೂ ಬರೆದ. ಧರ್ಮಶಾಸ್ತ್ರಗಳ ಪ್ರವಚನ ಶುರುಹಚ್ಚಿಕೊಂಡಿದ್ದಲ್ಲದೇ ಸ್ಥಳೀಯ ಬ್ರಾಹ್ಮಣರಲ್ಲಿ ಧಾರ್ಮಿಕ ಚರ್ಚೆಯನ್ನೂ ಪ್ರಾರಂಭಿಸಿದ. ಹೊಸ ಅವತಾರವೇನಾದರೂ ಕಂಡರೆ ನಮ್ಮ ಜನ ಸುಮ್ಮನಿರುತ್ತಾರೆಯೇ? ಗೌರವದಿಂದ ತತ್ತ್ವಬೋಧಾಚಾರ್ಯ ಸ್ವಾಮಿಗಳೇ ಎಂದು ಕರೆಯಹತ್ತಿದರು. ಟಿವಿಯಲ್ಲಿ ಬರುವ ಮೂರುಕಾಸಿನ ಜ್ಯೋತಿಷಿಗಳೆಲ್ಲ ಗುರೂಜಿಯಾಗಿರುವಾಗ ಇದೇನೂ ವಿಶೇಷವಲ್ಲ ಬಿಡಿ. ದೂರದೂರದಿಂದ ಫಾರಿನ್ ಸ್ವಾಮಿಯನ್ನು ನೋಡಲು ಜನ ಗುಂಪುಗೂಡಿ ಬರತೊಡಗಿದರು. ಹಾಗೆ ಬಂದರೂ ನೋಡಲು, ಮಾತಾಡಲು ಅವಕಾಶ ಸಿಗುತ್ತಿದ್ದುದು ಬ್ರಾಹ್ಮಣ ಹಾಗೂ ಮೇಲ್ವರ್ಗದ ಹಿಂದೂಗಳಿಗೆ ಮಾತ್ರವಾಗಿತ್ತು. ಸಣ್ಣದೊಂದು ಪ್ರಾರ್ಥನಾ ಮಂದಿರ ಅಲ್ಲಿ ತಲೆಯೆತ್ತಿತು. ಅದನ್ನಾತ ಕೋವಿಲ್ ಎಂದು ಕರೆದ. ಪ್ರತಿವಾರ ಮಾಸ್ ಅಲ್ಲಲ್ಲ ಪೂಜೆ ಏರ್ಪಡಿಸಿದ. ಬಂದವರಿಗೆ ಪ್ರಸಾದ ವಿತರಣೆ ನಡೆಯುತ್ತಿತ್ತು. ಅಲ್ಲಿ ಕ್ರೈಸ್ತನ ಭಜನೆಗಳನ್ನು ತಮಿಳಿನಲ್ಲಿ ರಚಿಸಿ ಕರ್ನಾಟಕ ಸಂಗೀತ ಶೈಲಿಯಲ್ಲಿ ಹಾಡಲಾಗುತ್ತಿತ್ತು. ಹಾಡಿನಲ್ಲಿ ಬರುವ
ಏಂಜಲ್ಲುಗಳು, ಸಂತರು, ಇತರ ಪಾತ್ರಗಳ ಹೆಸರೆಲ್ಲ ತಮಿಳಿಗೆ ಭಾಷಾಂತರಗೊಂಡವು. ಬ್ಯಾಪ್ಟಿಸಂ ಸಂಸ್ಕಾರವಾಯ್ತು. ನಾಮಕರಣ, ಮದುವೆ, ಪೊಂಗಲ್ಲುಗಳ ಆಚರಣೆ ಶುರುವಾಯ್ತು. ನೊಬಿಲಿ ತನ್ನ ನೋಡಬಂದವರನ್ನು ಹೇಗೆ ಮಂತ್ರಮುಗ್ಧಗೊಳಿಸುತ್ತಿದ್ದನೆಂದರೆ ಕೆಲವೇ ತಿಂಗಳುಗಳಲ್ಲಿ ಅಂಥ ೬೩ ಜನ ಮತಾಂತರಗೊಂಡರು. ಹಾಗೆ ಮತಾಂತರಗೊಂಡವರಲ್ಲಿ ಮೊದಲಿಗ ಇಷ್ಟು ವರ್ಷ ನೊಬಿಲಿಗೆ ವೇದಪಾಠಮಾಡಿದ ಸಾಕ್ಷಾತ್ ಅವನ ಗುರು ಶಿವಧರ್ಮ. ನೊಬಿಲಿಯ ಕ್ರಿಸ್ತಧರ್ಮವನ್ನು ಅನುಸರಿಸುವುದು ಅಷ್ಟೇನೂ ಕಷ್ಟವಾಗಿರಲಿಲ್ಲ. ಮೊದಲನೇಯದಾಗಿ ಅದು ಪಕ್ಕಾ ಬ್ರಾಹ್ಮಣ ಕ್ರೈಸ್ತಧರ್ಮ. ಅಲ್ಲಿ ಬ್ರಾಹ್ಮಣ ಹಾಗೂ ಮೇಲ್ವರ್ಗದವರಿಗೆ ಮಾತ್ರ ಪ್ರವೇಶ. ಹಾಗಾಗಿ ಜಾತಿ ಹಾಳಾಯ್ತೆನ್ನುವ ಪ್ರಶ್ನೆಯೇ ಇಲ್ಲ. ಎರಡನೇಯದಾಗಿ ಮತಾಂತರಗೊಂಡವರು ತಮ್ಮ ಜುಟ್ಟು, ಜನಿವಾರ ಸೇರಿ ಹಿಂದಿನ ಆಚಾರ-ಆಹಾರಗಳನ್ನೆಲ್ಲ ಹಾಗೇ ಉಳಿಸಿಕೊಳ್ಳಬಹುದಿತ್ತು. ಕೇವಲ ಹಿಂದೆ ಪೂಜಿಸಿದ ದೇವರನ್ನು ಬಿಟ್ಟು ಕ್ರಿಸ್ತನನ್ನು ಆರಾಧಿಸಿದರಾಗಿತ್ತಷ್ಟೆ. ನಾಲ್ಕು ವೇದಗಳ ಜೊತೆಗೆ ಬೈಬಲ್ಲನ್ನೊಂದು ಓದಿಕೊಂಡರಾಯ್ತು.
       ಹಾಗೆಂದು ನೊಬಿಲಿಯ ಬೋಧನೆಗಳು ಎಲ್ಲರಿಗೂ ಹಿಡಿಸಲಿಲ್ಲ. ಹೆಚ್ಚಿನ ಬ್ರಾಹ್ಮಣರು ಈತ ತಮ್ಮನ್ನು ಧರ್ಮಭೃಷ್ಟಗೊಳಿಸುತ್ತಿದ್ದಾನೆಂದು ಆಪಾದಿಸಿ ಪಂಚಾಯಿತಿ ಕರೆದರು. ನೊಬಿಲಿ ಕಿಲಾಡಿ ಆಸಾಮಿ. ತಾನು ರೋಮ್ ದೇಶದ ಬ್ರಾಹ್ಮಣನೆಂದು ಅಲ್ಲಿಂದ ತಂದ ಒಂದು ಸರ್ಟಿಫಿಕೇಟ್ ತೋರಿಸಿದ. ರೋಮಿನ ಬ್ರಾಹ್ಮಣರು ಭಾರತದ ಬ್ರಾಹ್ಮಣರಿಗಿಂತ ಮೊದಲೇ ಜನ್ಮತಳೆದವರೆಂದೂ, ಅವರೆಲ್ಲ ಸಾಕ್ಷಾತ್ ಬ್ರಹ್ಮನ ಮಾನಸಪುತ್ರರೆಂದೂ ನಂಬಿಸಿದ.  ತಾನು ಸಮಾಜದಲ್ಲಿ ಬ್ರಾಹ್ಮಣರ ಸ್ಥಾನಮಾನಗಳನ್ನು ಉತ್ತಮಪಡಿಸಲು ಬಂದಿದ್ದೇನೆಂದೂ, ಜಾತಿ ಪದ್ಧತಿಯ ಪ್ರಬಲ ಪ್ರತಿಪಾದಕನೆಂದೂ ಹೇಳಿಕೊಂಡ. ಮಾತ್ರವಲ್ಲ, ಇಷ್ಟುಕಾಲ ಲುಪ್ತವಾಗಿ ಹೋಗಿದ್ದ ಪಂಚಮವೇದವಾದ ಏಸುವೇದವನ್ನು ಪುನಃ ಪ್ರಚಾರಕ್ಕೆ ತಂದು ವೈದಿಕ ಮತವನ್ನು ಉದ್ಧಾರಗೊಳಿಸಲು ತನಗೆ ದೇವರಿಂದ ಆಜ್ಞೆಯಾಗಿದೆಯೆಂದೂ ನಂಬಿಸಿದ(ತಮಿಳು ಜನಪದದ ಪ್ರಕಾರ ಐದನೇ ವೇದ ನಷ್ಟವಾಗಿತ್ತಂತೆ). ಸಂಸ್ಕೃತ ಬಲ್ಲವರ ತಲೆಮೇಲೆ ಹೊಡೆದಷ್ಟು ಬುದ್ಧಿವಂತಿಕೆಯಿಂದ ಈತ ಬರೆದ ಯೇಸುವೇದವನ್ನು ನೋಡಿದರೆ ಯಾರೂ ಅಹುದಹುದೆನ್ನಬೇಕಿತ್ತು. ಇಷ್ಟರವರೆಗೆ ಇವನಿಂದ ಮತಾಂತರಗೊಂಡವರೆಲ್ಲ ಗಟ್ಟಿಯಾಗಿ ಇವನ ಬೆನ್ನಿಗೆ ನಿಂತಕಾರಣ ಉಳಿದವರು ಏನೂ ಮಾಡಲಾಗದೇ ಹಿಂದಿರುಗಬೇಕಾಯಿತು. ಮ್ಯಾಕ್ಸ್ ಮುಲ್ಲರಿನಂಥ ಮ್ಯಾಕ್ಸ್ ಮುಲ್ಲರನೇ ನೊಬಿಲಿಯನ್ನು - "ಸಂಸ್ಕೃತ ಬಲ್ಲವರಲ್ಲೂ ಕೆಲವರಿಗೆ ಮಾತ್ರ ತಿಳಿದಿರಬಹುದಾದ ಮನುಸ್ಮೃತಿಯನ್ನೂ, ಪುರಾಣಗಳನ್ನೂ, ಆಪಸ್ಥಂಭ ಸೂತ್ರವನ್ನೂ ಈತ ತನ್ನ ನೆನಪಿನಿಂದಲೇ ಉದ್ಧರಿಸುತ್ತಾನೆಂದರೆ ದೇವಭಾಷೆಯಲ್ಲೂ, ವೈದಿಕ ಸಾಹಿತ್ಯದಲ್ಲೂ ಇವನ ಪಾಂಡಿತ್ಯ ಅಸಮಾನವಾದದ್ದು" ಎಂದು ಬಾಯಿತುಂಬ ಹೊಗಳಿದ್ದಾನೆಂದರೆ ಅವನ ಹಿರಿಮೆ ಅಂಥದ್ದು.
       ಆತನ ಸಮಕಾಲೀನ ಇತಿಹಾಸಜ್ಞ ಈನಿಸ್ ಝುಪಾನೋವ್ ಹೇಳುವಂತೆ ನೊಬಿಲಿ ಒಬ್ಬ ಅದ್ಭುತ ವಾಗ್ಮಿ. ಅದಕ್ಕಿಂತ ಹೆಚ್ಚಾಗಿ ಒಬ್ಬ ಶ್ರೇಷ್ಟ ಬರಹಗಾರ. ಯೇಸುರ್ವೇದವನ್ನು ಎಷ್ಟು ಚಾಕಚಕ್ಯತೆಯಿಂದ ಬರೆದನೆಂದರೆ ಶುದ್ಧ ಬ್ರಾಹ್ಮಣರೂ ಅದನ್ನು ವೇದದ ಒಂದು ಅಂಗವೆಂದೇ ಭಾವಿಸತೊಡಗಿದರು. ಸೇಲಂನಲ್ಲಿ ಹೊಸ ಚರ್ಚೊಂದನ್ನು ಉದ್ಘಾಟಿಸಿದಾಗ ಬರೀ ಮೇಲ್ವರ್ಗದವರಿಗೆ ಮಾತ್ರ ಆಸನದ ವ್ಯವಸ್ಥೆ ಮಾಡಿ ಜಾತಿಕ್ರೈಸ್ತರೂ ಸೇರಿ ಉಳಿದವರನ್ನು ಬಾಗಿಲ ಹೊರಗೆ ನಿಲ್ಲುವಂತೆ ಮಾಡಿದ. ಇವನ ಹುಚ್ಚಾಟಕ್ಕೆ ಬೇಸತ್ತ ಈತನ ಮೇಲಧಿಕಾರಿ ಫಾದರ್ ಟ್ರ್ಯಾಂಕೋಸೋ ಪೋರ್ಚುಗೀಸರಿಗೆ ಇವನ ವಿರುದ್ಧ ದೂರಿತ್ತರೂ ನೊಬಿಲಿಯ ಸಾಮರ್ಥ್ಯವನ್ನು ತಿಳಿದಿದ್ದ ಅವರು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಹಿಂದೂಗಳನ್ನು ಪವಿತ್ರಾತ್ಮರನ್ನಾಗಿಸಲು ಹಾತೊರೆಯುತ್ತಿದ್ದ ಪ್ರತಿಸ್ಪರ್ಧಿಗಳು ಇವನ ಯಶಸ್ಸು ನೋಡಿ ಕೈಕೈ ಹಿಸುಕಿಕೊಳ್ಳಬೇಕಾಯಿತು. ಹಿಂದೂಗಳನ್ನು ಮತಾಂತರಗೊಳಿಸುವ ಬದಲು ಇವನೇ ಮತಾಂತರಗೊಂಡಿದ್ದಾನೆ ಎಂದು ಅವರೆಲ್ಲ ಸೇರಿ ಮೇಲಧಿಕಾರಿಗಳಿಗೆ ದೂರಿತ್ತರು. ೧೬೧೯ರಲ್ಲಿ ಗೋವಾದ ಚರ್ಚು ಇವನಿಗೆ ಸಮನ್ಸ್ ಜಾರಿ ಮಾಡಿತು. ಜನಿವಾರ ಧರಿಸಿ, ಜುಟ್ಟು ಬಿಟ್ಟು ನೀನು ಕ್ರೈಸ್ತಧರ್ಮಕ್ಕೆ ಅಪಚಾರವೆಸಗುತ್ತಿದ್ದೀಯ ಎಂದು ಆರೋಪಿಸಿತು. ಕ್ರಿಸ್ತಮತ ಹೇಗೆ ಗ್ರೀಸೋರೋಮನ್ನಿನ ಸಾಂಸ್ಕೃತಿಕ ನಡಾವಳಿಗಳನ್ನ, ಸಂಕೇತಗಳನ್ನ, ಧಾರ್ಮಿಕ ಚಿಹ್ನೆಗಳನ್ನ ಹೀರಿಕೊಂಡು ಬೆಳೆಯಿತೋ ಹಾಗೇ ಭಾರತದಲ್ಲೂ ಇಲ್ಲಿನ ಸಂಸ್ಕೃತಿಯ ಜೊತೆಜೊತೆಗೇ ಸಾಗಬೇಕೆಂದು ಸರ್ಚಿನೆದುರು ಬಲವಾಗಿ ಪ್ರತಿಪಾದಿಸಿದ. ಜೊತೆಗೆ ಸಂತ ತಿಮೋತಿಯ "Behold! this incident: he circumcises to destroy circumcision." ಎಂಬ ಮಾತನ್ನುಲ್ಲೇಖಿಸಿ ನಾನು ಹಾಗೆಲ್ಲ ಮಾಡುತ್ತಿರುವುದು ಹಿಂದೂಧರ್ಮದಲ್ಲಿರುವ ಜಾತಿಪದ್ಧತಿಯ ವಿನಾಶಕ್ಕೆ ಎಂಬ ಜಾಣ್ಮೆಯ ಉತ್ತರ ನೀಡಿ ಅವರ ಬಾಯಿ ಮುಚ್ಚಿಸಿದ. ಅಷ್ಟಾದರೆ ದೊಡ್ಡದಲ್ಲ. ನೀವೆಲ್ಲ ಜಾತಿಭೃಷ್ಟರಾದ ಕಾರಣ ಮೇಲ್ಜಾತಿಯ ಬ್ರಾಹ್ಮಣ ತಾನು ನಿಮ್ಮೊಡನೆ ಕೂತು ಊಟಮಾಡಲಾರೆ ಎಂದುಬಿಟ್ಟ ಮಹಾಶಯ.  ದೂರು ವ್ಯಾಟಿಕನ್ ತಲುಪಿತ್ತು. ಆಗಿನ ಪೋಪ್ ಹದಿನೈದನೇ ಗ್ರೆಗೋರಿ ಇವನ ಕಾರ್ಯವನ್ನು ವಿಮರ್ಶಿಸಲು ಸಮಿತಿಯೊಂದನ್ನು ನೇಮಿಸಿದರು. ಭಾರತದಲ್ಲಿ ಜನರು ಕ್ರಿಸ್ತನನ್ನು ಕಾಣಲು ಹಾತೊರೆಯುತ್ತಿದ್ದಾರೆ. ಒಂದು ವೇಳೆ ಅವರ ಸಂಸ್ಕೃತಿ ಮತ್ತು ಪರಂಪರೆಯನ್ನು ಹಾಗೇ ಉಳಿಸಲು ಅವಕಾಶ ಕೊಟ್ಟರೆ ಕಾಲಿಡಲು ಸಾಧ್ಯವಾಗದಷ್ಟು ಚರ್ಚುಗಳು ಕಿಕ್ಕಿರಿಯಲಿವೆ ಎಂದು ಸಮಿತಿಯೆದುರು ಬೂಸಿ ಬಿಟ್ಟ. ಹದಿನಾಲ್ಕು ವರ್ಷಗಳ ಕಾಲ ಆತನ ಕೆಲಸವನ್ನು ವಿಮರ್ಶಿಸಿದ ಸಮಿತಿ ಅವನ ವಿಧಾನಕ್ಕೆ ಅಧಿಕೃತ ಮುದ್ರೆಯೊತ್ತಿತು. ಸ್ವತಃ ಪೋಪ್ ಈತನ ಮಧುರೈ ಮಿಶನ್‌ನ್ನು ಸಮರ್ಥಿಸಿಕೊಂಡರು. ೧೬೨೩ರಲ್ಲಿ ಮಾರಮಂಗಲಂ ಅನ್ನು ಭೇಟಿಯಿತ್ತಾಗ ಅಲ್ಲಿನ ಅರಸ ರಾಮಚಂದ್ರ ನಾಯಕ ಮತ್ತವನ ಕುಟುಂಬ ಬ್ಯಾಪ್ಟೈಸಿಗೊಳಪಟ್ಟಿತು. ೧೬೨೬ರಲ್ಲಿ ಅಲ್ಲಿನ ಶಿವ ದೇವಸ್ಥಾನದ ಅರ್ಚಕರೊಬ್ಬರು ಸೇರಿ ನಲವತ್ತು ಜನ ಹೊಸದಾಗಿ ಕ್ರೈಸ್ತಧರ್ಮವನ್ನಪ್ಪಿದರು. ಸೇಲಂ ಪ್ರಾಂತ್ಯದಲ್ಲಿ ನೂರೈವತ್ತು ಜನರನ್ನು ಮತಾಂತರಿಸಲಾಯಿತು. ಎರಡು ಬ್ರಾಹ್ಮಣ ಚರ್ಚುಗಳು ತಲೆಯೆತ್ತಿದವು. ೧೬೨೭ರಲ್ಲಿ ತಿರುಚಿನಾಪಳ್ಳಿಗೆ ತೆರಳಿ ಕ್ರೈಸ್ತ ಮಿಶನ್ ಸೆಂಟರ್ ಒಂದನ್ನು ಸ್ಥಾಪಿಸಿದ. ಮುಂದೆ ತಮಿಳ್ನಾಡಿನಾದ್ಯಂತ ಅದರ ಶಾಖೆಗಳು ಹುಟ್ಟಿಕೊಂಡವು. ಈತನ ಕೆಲಸಗಳಿಂದ ದಕ್ಷಿಣ ಭಾರತದಲ್ಲಿ ಕ್ರೈಸ್ತರ ಸಂಖ್ಯೆ ಮೂವತ್ತು ಸಾವಿರದಿಂದ ಹಿಗ್ಗಿ ಒಂದು ಲಕ್ಷ ತಲುಪಿತ್ತು.  ಮಧುರೈ ಮಿಶನ್ನಿನ ದಾಖಲೆಗಳ ಪ್ರಕಾರ ಮುಂದೆ ಇವನನ್ನು ಅನುಕರಿಸಿ ೧೨೨ ಜೀಸ್ಯುಟ್ ಮಿಶನರಿಗಳು ಆಗಿಹೋದರು. ೧೭೭೩ರಲ್ಲಿ ಮಿಶನ್ ತನ್ನ ಕಾರ್ಯಚಟುವಟಿಕೆಯನ್ನು ನಿಲ್ಲಿಸುವವರೆಗೆ ಅವರೆಲ್ಲ ಹಿಂದೂ ಸನ್ಯಾಸಿಗಳ ದಿರಿಸಿನಲ್ಲಿ ನೊಬಿಲಿ ಹೇಳಿದಂತೆ ಬಾಳಿದರು. 
ದಕ್ಷಿಣ ಭಾರತದ ಹೆಸರಾಂತ ಯೋಗಿಗಳಲ್ಲೊಬ್ಬರೆನಿಸಿದ ಬೇಡ್ ಗ್ರಿಫಿತ್ಸ್ ಉರುಫ್ ಸ್ವಾಮಿ ದಯಾನಂದ
      ಯಾರೇನೇ ಹೇಳಿದರೂ, ಭಾರತ ಕಂಡ ಅತ್ಯುತ್ತಮ ಧರ್ಮಪ್ರಚಾರಕರಲ್ಲಿ ನೊಬಿಲಿಗೆ ಇವತ್ತಿಗೂ ಒಂದು ಮಹತ್ವದ ಸ್ಥಾನವಿದೆ. ಅದಕ್ಕಾಗಿ ತನ್ನ ಜೀವಿತಾವಧಿಯಲ್ಲಿ ಹಿಂದೂಗಳ ಹಾಗೂ ಕ್ರೈಸ್ತರಿಬ್ಬರ ವಿರೋಧವನ್ನೂ ಕಟ್ಟಿಕೊಳ್ಳಬೇಕಾಯಿತು. ಆತನ ಕಾಲದ ಹೆಚ್ಚಿನ ಕ್ರೈಸ್ತ ಲೇಖಕರೆಲ್ಲ ಇವನನ್ನು ಒಬ್ಬ ಮೋಸಗಾರನೆಂದೂ, ಗಾಸ್ಪೆಲ್ಲಿನ ಬೋಧನೆಗಳನ್ನು ಕಲುಷಿತಗೊಳಿಸಿದವನೆಂದೂ, ಕ್ರಿಶ್ಚಿಯಾನಿಟಿಗೆ ಕಳಂಕ ತಂದವನೆಂದೂ ಜರಿದರು. ಆದರೆ ನೊಬಿಲಿ ಮಾತ್ರ ಭಾರತದಲ್ಲಿ ಧಾರ್ಮಿಕ ಮತಾಂತರ ಸಾಧ್ಯವೇ ಹೊರತೂ ಸಾಂಸ್ಕೃತಿಕ ಮತಾಂತರ ಯಾವತ್ತಿಗೂ ಸಾಧ್ಯವಿಲ್ಲ ಎಂದು ಬಲವಾಗಿ ನಂಬಿದ್ದ. ಅತ ನಿಧನಹೊಂದಿದ ಮೂರು ವರ್ಷಗಳ ತರುವಾಯ Sacred Congregation for the Propagation of the Faith ಸಂಸ್ಥೆ ಒಂದು ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿತು. ಐರೋಪ್ಯ ಮಿಶನರಿಗಳು ತಮ್ಮೊಂದಿಗೆ ಫ್ರಾನ್ಸ್, ಸ್ಪೇನ್, ಇಟಲಿ ಅಥವಾ ಯುರೋಪಿಯ ಯಾವುದೇ ಭಾಗದ ಕ್ರಿಶ್ಚಿಯಾನಿಟಿಯನ್ನು ಭಾರತಕ್ಕೆ ತರಬೇಕಾಗಿಲ್ಲ. ಇಲ್ಲಿನ ಜನರ ಸಾಂಪ್ರದಾಯಿಕ ನಂಬಿಕೆ ಮತ್ತು ಆಚಾರಗಳಿಗೆ ಧಕ್ಕೆ ತರದ  ರೀತಿಯಲ್ಲಿ ಮತಪ್ರಾಚಾರಕ್ಕೆ ಒತ್ತುನೀಡಬೇಕೆಂದು ಆಗ್ರಹಿಸಿತು. ನೊಬಿಲಿಯ ಪ್ರವಿರೋಧಗಳೇನೂ ಇರಬಹುದು. ಆದರೆ ನೊಬಿಲಿ ಮಾತ್ರ ತಾನಂದುಕೊಂಡಿದ್ದನ್ನು ಸತತ ಐವತ್ತು ವರ್ಷ ಒಂದು ತಪಸ್ಸಿನಂತೆ ಸಾಧಿಸಿಕೊಂಡು ಬಂದ. ಅದಕ್ಕಾದರೂ ಅವನಿಗೊಂದು ಹ್ಯಾಟ್ಸಾಫ್ ಹೇಳಲೇಬೇಕು.
       ಆ ಕಾಲದ ಬಹುಪಾಲು ಕ್ರಿಶ್ಚಿಯನ್ ಲೇಖಕರು ನೊಬಿಲಿಯ ವಿರೋಧಿಗಳಾಗಿದ್ದರು. ಹಾಗಾಗಿ ಅವನ ಬಗ್ಗೆ ಇದಮಿತ್ಥಂ ಎಂಬಂಥ ದಾಖಲೆ ಸಿಕ್ಕುವುದು ಸ್ವಲ್ಪ ಕಷ್ಟವೇ. ಮೇಲಿರುವ ಅಂಕೆಸಂಖ್ಯೆಗಳೂ ಪರಮಸತ್ಯವೇನೂ ಅಲ್ಲ. ಇದ್ದುದರಲ್ಲಿ ಸ್ಟೀಫನ್ ನೀಲ್‌ನ ’ಎ ಹಿಸ್ಟರಿ ಆಫ್ ಕ್ರಿಶ್ಚಿಯಾನಿಟಿ ಇನ್ ಇಂಡಿಯಾ: ದ ಬಿಗಿನಿಂಗ್ ಟು ೧೭೦೭’ ಪರವಾಗಿಲ್ಲ. Religion as Culture: Anthropological Critique of de Nobili’s Approach to Religion and Culture by Dr.C. Joe Arun SJ ಎಂಬೊಂದು ಪುಸ್ತಕವೂ ಇದೆ. ಅದನ್ನು ಬಿಟ್ಟರೆ ಇಂಡಿಯನ್ ಚರ್ಚ್ ಹಿಸ್ಟರಿ ರಿವ್ಯೂ ಜರ್ನಲ್ಲಿನಲ್ಲಿ ನೊಬಿಲಿಯ ಬಗ್ಗೆ ಒಂದೆರಡು ಸಂಶೋಧನಾತ್ಮಕ ಲೇಖನಗಳಿವೆ. 

Wednesday, April 15, 2020

ಮೂವರು ಗಂಡಂದಿರು ಮತ್ತು ಮೊದಲ ಸ್ವಾತಂತ್ರ್ಯ ಸಮರ : ಭಾಗ 1

      ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟಕ್ಕಿಂದು ಮೂರು ಶತಮಾನ
    ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟ ಯಾವುದು? ಹೆಸರಿಗೆ 1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮವೇನೋ ಹೌದು. ಆದರೆ ಅದಕ್ಕೂ ಹಿಂದೆಯೇ ಬೇಕಷ್ಟು ಸ್ವಾತಂತ್ರ್ಯ ಹೋರಾಟಗಳು ಜರುಗಿವೆ.  1817ರಲ್ಲಿ ಓಡಿಸ್ಸಾದ ’ಪೈಕಾ ಬಿದ್ರೋಹ’ ಹಾಗೆ ನಡೆದ ಮೊದಲ ಹೋರಾಟ ಎಂದು ಬಹಳಷ್ಟು ಇತಿಹಾಸಕಾರರು ಭಾವಿಸುತ್ತಾರೆ. ಆದರೆ ಊಹೂಂ, ಅದೂ ಅಲ್ಲ. 1806ರ ವೆಲ್ಲೋರ್ ಸಿಪಾಯಿ ದಂಗೆ, 1799ರ ಟಿಪ್ಪೂ-ಬ್ರಿಟಿಷರ ಆಂಗ್ಲೋ-ಮೈಸೂರಿಯನ್ ಯುದ್ದ, 1793ರ ವಯನಾಡಿನ ಆದಿವಾಸಿಗಳ ಕೊಟ್ಟಯತ್ತು ಕದನ ಇವೆಲ್ಲ ಸ್ವಾತಂತ್ರ ಸಂಗ್ರಾಮಗಳೇ. ಆದರೆ ಇವೆಲ್ಲವುಗಳಿಗಿಂತ ಮೊದಲು 15 ಏಪ್ರಿಲ್, 1721ರಂದು ಸಂಭವಿಸಿ ಇತಿಹಾಸದಲ್ಲಿ ಮರೆಯಾಗಿಹೋದ ಅಟ್ಟಿಂಗಳ್ ಕ್ರಾಂತಿಯು ಭಾರತದಲ್ಲಿ ಬ್ರಿಟಿಷರ ವಿರುದ್ದ ದಾಖಲಾದ ಮೊತ್ತಮೊದಲ ಅಧಿಕೃತ ಸ್ವಾತಂತ್ರ್ಯ ಸಂಗ್ರಾಮ. ಇವತ್ತಿಗೆ ಬರೋಬ್ಬರಿ ಮೂರು ಶತಮಾನದ ಹಿಂದೆ ಕೇರಳದ ತಿರುವನಂತಪುರಂನಲ್ಲಿ ನಡೆದ ಸಾಮಾನ್ಯ ಜನರ ಹೋರಾಟವೊಂದು ಮೊದಲ ಬಾರಿ ಈಸ್ಟ್ ಇಂಡಿಯಾ ಕಂಪನಿಯನ್ನು ಬಗ್ಗುಬಡಿದಿತ್ತು. ಈ ಚಾರಿತ್ರಾರ್ಹ ಹೋರಾಟದ ಬಗ್ಗೆ ಹೇಳುವ ಮೊದಲು ಅದಕ್ಕೆ ಸಂಬಂಧಿಸಿದ ಇನ್ನೊಂದು ಆಸಕ್ತಿಕರ ವಿಚಾರವನ್ನು ಹೇಳುವುದಕ್ಕಿದೆ.  
       ಮಾರ್ಚ್ 9, 1709 ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಹೊತ್ತ ಲಾಯಲ್ ಬ್ಲಿಸ್ ಎಂಬ ನೌಕೆ ಇಂಗ್ಲೆಂಡಿನಿಂದ ಕಲ್ಕತ್ತದತ್ತ ಹೊರಟಿತ್ತು. ಅದರಲ್ಲಿದ್ದ ಪ್ರಯಾಣಿಕರಲ್ಲಿ ಕ್ಯಾಪ್ಟನ್ ಗೆರಾರ್ಡ್ ಕುಕ್‌, ಆತನ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೂ ಸೇರಿದ್ದರು. ಕ್ಯಾಪ್ಟನ್ ಕುಕ್ ಬಹುಕಾಲ ಕಂಪನಿಗಾಗಿ ಫೋರ್ಟ್ ವಿಲಿಯಮ್ಮಿನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸಿದವ. ಕಂಪನಿಯ ಹಲವು ಮಹತ್ವಪೂರ್ಣ ಯುದ್ಧಗಳಲ್ಲಿ ಭಾಗವಹಿಸಿದವ. ಈತನ ಸೇವೆಯನ್ನು ಪರಿಗಣಿಸಿ ಕಂಪನಿ ಕ್ಯಾಪ್ಟನ್ ದರ್ಜೆಗೆ ಭಡ್ತಿ ನೀಡಿ ಬಂಗಾಲದಲ್ಲಿ ನಿಯೋಜಿಸಿತ್ತು. ಕುಟುಂಬದೊಟ್ಟಿಗೆ ಇಂಗ್ಲೆಂಡಿನಲ್ಲಿ ರಜಾದಿನಗಳನ್ನು ಕಳೆಯಲು ಬಂದಿದ್ದ ಕುಕ್ ತನ್ನ ಮತ್ತಿಬ್ಬರು ಹೆಣ್ಮಕ್ಕಳನ್ನು ಅಲ್ಲಿಯೇ ಬಿಟ್ಟು ಉಳಿದವರೊಡನೆ ಹೊಸ ಗಮ್ಯದತ್ತ ಹುಮ್ಮಸ್ಸಿನಿಂದ ಹೊರಟಿದ್ದ. ಹಡಗು ಕೇಪ್ ಆಫ್ ಗುಡ್‌ಹೋಪ್ ತಲುಪುವಾಗ ಜೋರು ಮಳೆಗಾಲ. ಚಂಡಿಹಿಡಿದ ಮಳೆಯಲ್ಲಿ ದಾರಿತಪ್ಪಿದ ಲಾಯಲ್ ಬ್ಲಿಸ್ ಕಲ್ಕತ್ತ ತಲುಪಲಾಗದೇ ಪಶ್ಚಿಮಕ್ಕೆ ತಿರುಗಬೇಕಾಯಿತು. ಬೇರೆ ದಾರಿಕಾಣದೇ ಅದು ಬಂದುತಲುಪಿದ್ದು ಕಾರವಾರದ ಕಡಲ ತೀರಕ್ಕೆ. ಅಂದು ಅಕ್ಟೋಬರ್ 7. ದಿಕ್ಕುತಪ್ಪಿ ಕಾರವಾರಕ್ಕೆ ಬಂದಿಳಿದ ಕ್ಯಾಪ್ಟನ್ನನಿಗೆ ಈಸ್ಟ್ ಇಂಡಿಯಾ ಕಂಪನಿ ಭವ್ಯ ಸ್ವಾಗತ ಕೋರಿತು. ಆಗ ಮರಾಠಾ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಕಾರವಾರ. ಇಂಗ್ಲೀಷ್ ಕೋರ್ಟೀನ್ ಆಸೋಸಿಯೇಶನ್ನಿನವರು ಸಮೀಪದ ಕಡವಾಡದಲ್ಲಿ 1638ರಲ್ಲೇ ಒಂದು ಫ್ಯಾಕ್ಟರಿಯನ್ನು ತೆರೆದಿದ್ದರು. ಆ ಕಾಲದಲ್ಲಿ ಪಶ್ಚಿಮ ಕರಾವಳಿಯ ಸುಪ್ರಸಿದ್ದ ಬಂದರುಗಳಲ್ಲಿ ಒಂದಾದ ಕಾರವಾರದಿಂದ ದೂರದ ಅರಬ್ ಹಾಗೂ ಆಫ್ರಿಕಗಳಿಗೆ ಅವ್ಯಾಹತವಾದ ವ್ಯಾಪಾರ ಸಂಪರ್ಕವಿತ್ತು. ಮುಂದೆ 1649ರಲ್ಲಿ ಇದು ಕಂಪನಿಯೊಂದಿಗೆ ವಿಲೀನವಾದ ಮೇಲೆ ಯುದ್ಧನೌಕೆಗಳನ್ನು ತಯಾರಿಸುವ ಪ್ರಮುಖ
ಕಾರವಾರ
ಕೇಂದ್ರವಾಗಿಯೂ ಕಾರವಾರ ಬೆಳೆಯಿತು. ಕಾರವಾರದ ಈಸ್ಟ್ ಇಂಡಿಯಾ ಫ್ಯಾಕ್ಟರಿಯ ಮುಖ್ಯಸ್ಥ ಕ್ಯಾಪ್ಟನ್ ಜಾನ್ ಹಾರ್ವೇನ ಆತಿಥ್ಯದಲ್ಲಿ ಅವರೆಲ್ಲ ಕೆಲ ದಿನ ಅಲ್ಲಿಯೇ ತಂಗಿದರು. ಹಾಲಿವುಡ್ ಚಿತ್ರಗಳನ್ನು ನೋಡಿ ಅಭ್ಯಾಸವಿದ್ದವರಿಗೆ ಮುಂದಿನ ಕಥೆ ಊಹಿಸುವುದು ಕಷ್ಟದ ಕೆಲಸವಲ್ಲ. ಕುಕ್‌ನ ಮಗಳು ಕ್ಯಾಥರೀನಿಗೂ ಕ್ಯಾಪ್ಟನ್ ಹಾರ್ವೇಗೂ ಥಟ್ಟಂತ ಪ್ರೇಮಾಂಕುರವಾಯ್ತು. ಅಷ್ಟೇ ವೇಗದಲ್ಲಿ ಮದುವೆಯೂ ಆಗಿ ಹೋಯ್ತು. ಹಾರ್ವೇಗೆ ಈಗಾಗಲೇ ಅರ್ಧ ವಯಸ್ಸು ದಾಟಿದ್ದರೂ, ನಾಲ್ಕು ಹೆಣ್ಮಕ್ಕಳ ತಂದೆ ಕುಕ್‌ನಿಗೆ ಕಂಪನಿಯ ಕ್ಯಾಪ್ಟನ್ ತನ್ನ ಮಗಳ ಕೈಹಿಡಿಯುವುದು ಖುಷಿಯ ವಿಚಾರವೇ ತಾನೇ? ಆದರೆ ಆ ಸಂಭ್ರಮದಲ್ಲಿ ಬಹಳ ಕಾಲ ಪಾಲ್ಗೊಳ್ಳುವಷ್ಟು ಕುಕ್ಕನಿಗೆ ವ್ಯವಧಾನವಿರಲಿಲ್ಲ. ಮಾರ್ಚಿನಲ್ಲೇ ಇಂಗ್ಲೆಂಡ್ ಬಿಟ್ಟ ಕಾರಣ ಹೊಸ ಕೆಲಸಕ್ಕೆ ಸೇರಬೇಕಾದ ಸಮಯ ಮೀರಿಹೋಗಿತ್ತು. ತುರಾತುರಿಯಲ್ಲಿ ಮಗಳ ಮದುವೆ ಮಾಡಿ ಅಕ್ಟೋಬರ್ 22ರಂದು ಕಲ್ಕತ್ತಕ್ಕೆ ಹಡಗು ಹತ್ತಿದ. ಇತ್ತ ಹಾರ್ವೇಗೂ ಹೊಸ ಹೆಂಡತಿಯೊಂದಿಗೆ ಕಾರವಾರದಲ್ಲಿ ಬಹಳ ಕಾಲ ನಿಲ್ಲಲು ಮನಸ್ಸಿರಲಿಲ್ಲ. ಬಂದರಿನಲ್ಲಿ ಸುಂಕ ತಪ್ಪಿಸಿ ಬರುವ ವಸ್ತುಗಳಿಗೆ ಕಮಿಷನ್ ಬಿಜಿನೆಸ್ ಮಾಡಿಕೊಂಡು ಅಷ್ಟಿಷ್ಟು ಕಾಸು ಕೂಡಿಟ್ಟುಕೊಂಡಿದ್ದ ಹಾರ್ವೆ ಒಂದು ದಿನ ಕಂಪನಿಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಹಿಂದಿರುಗಲು ನಿಶ್ಚಯಿಸಿದ. 1711ರ ಏಪ್ರಿಲ್ಲಿನಲ್ಲಿ ಅವರಿಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿ ತಲುಪಿದರು. ಅಲ್ಲಿ ಅವರಿಗೊಂದು ಸಮಸ್ಯೆ ಕಾಯುತ್ತಿತ್ತು. ಹಾರ್ವೇ ಕಾರವಾರದಲ್ಲಿದ್ದಾಗ ನಾನೂರು ಪಗೋಡಗಳಷ್ಟು ಹಣವನ್ನು ಮುಂಗಡವಾಗಿ ಕಂಪನಿಯಿಂದ ಪಡೆದುಕೊಂಡಿದ್ದ. ಅದನ್ನು ಚುಕ್ತಾ ಮಾಡದ ಹೊರತೂ ಅವನಿಗೆ ಭಾರತ ಬಿಡುವುದು ಸಾಧ್ಯವಿಲ್ಲ. ಆಗೆಲ್ಲ ಕಂಪನಿ ತನ್ನ ನೌಕರರಿಗೆ ಕೊಡುತ್ತಿದ್ದ ಪಗಾರ ಅಷ್ಟಕ್ಕಷ್ಟೆ. ಅದರ ನೌಕರರೆಲ್ಲ ಸಣ್ಣಪುಟ್ಟ ವ್ಯಾಪಾರ, ಕಳ್ಳಸಾಗಾಣಿಕೆಯ ದಾರಿ ಹಿಡಿದು ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಕಂಪನಿಯ ನಿಯಮಗಳಿಗೆ ಅಡ್ಡಿ ಬರದಿದ್ದರೆ ಅವರು ಮಾಡುವ ಕೆಲಸಗಳಿಗೆಲ್ಲ ಕಂಪನಿಯ ಮಾಫಿಯಿತ್ತೆನ್ನಿ.  ಮುಂಗಡ ಹಣವನ್ನು ಚುಕ್ತಾ ಮಾಡುವಂತೆ ಕಂಪನಿ ನಿರ್ದೇಶಿಸಿದ್ದರಿಂದ ಬೇರೆ ದಾರಿ ಕಾಣದೇ ಹಾರ್ವೇ ಕ್ಯಾಥರೀನರಿಬ್ಬರೂ ಇಂಗ್ಲೆಂಡಿನ ಆಸೆ ಬಿಟ್ಟು ತಿರುಗಿ ಕಾರವಾರಕ್ಕೆ ಬರಬೇಕಾಯ್ತು. ದುರದೃಷ್ಟಕ್ಕೆ ಕಾರವಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಹಾರ್ವೇ ಅಚಾನಕ್ಕಾಗಿ ಮೃತಪಟ್ಟ. ಹಾರ್ವೇಗೂ ಸವಣೂರಿನ ನವಾಬನಿಗೂ ಒಳ್ಳೆಯ ದೋಸ್ತಿ. ಅಪ್ಘನ್ ಮೂಲದ ಸವಣೂರಿನ ನವಾಬನ ಆಡಳಿತದಲ್ಲಿ ಹುಬ್ಬಳ್ಳಿ ದೊಡ್ಡ  ವ್ಯವಹಾರ ಕೇಂದ್ರವಾಗಿ ಬೆಳೆದಿತ್ತು. ನವಾಬ್ ಅಬ್ದುಲ್ ಮಜೀದ್ ಖಾನ್ ಹುಬ್ಬಳ್ಳಿಯಲ್ಲಿ ತನ್ನ ಹೆಸರಿನ ಮಜೀದ್‌ಪುರ್ ಎಂಬ ಹೊಸ ಊರೊಂದನ್ನೂ ಕಟ್ಟಿಕೊಂಡಿದ್ದ. ಯುದ್ದದ ಬದಲು ಬ್ರಿಟೀಷರೊಡನೆ  ವ್ಯಾವಹಾರಿಕ ಒಪ್ಪಂದ ಮಾಡಿಕೊಂಡ ಕಾರಣ ಸವಣೂರಿನ ಆರ್ಥಿಕ ಸ್ಥಿತಿ ಉತ್ತಮವಾಗೇ ಇತ್ತು.  ಅಲ್ಲಿನ ವ್ಯಾಪಾರವೆಲ್ಲ ಆಗುತ್ತಿದ್ದುದು ಕಾರವಾರ ಬಂದರಿನ ಮೂಲಕ. ಅದೂ ಹಾರ್ವೇಯ ಮೂಗಿನಡಿಯಲ್ಲಿ. ಗಂಡನ ಈ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಕ್ಯಾಥರಿನ್ ಕಾರವಾರದಲ್ಲೇ ಉಳಿದಳು. 
ಕಾರವಾರದ ಕೋಟೆ
       ಆ ಸಮಯಕ್ಕೆ ಚೋನ್ ಎಂಬ ಹೊಸ ಅಧಿಕಾರಿ ಕಾರವಾರದ ಕ್ಯಾಪ್ಟನ್ ಆಗಿ ನೇಮಕಗೊಂಡ. ಕಾರವಾರದಲ್ಲಿ ಹಾರ್ವೆಯ ಎಸ್ಟೇಟ್ ಒಂದಿತ್ತು. ಆದರೆ ಹಾರ್ವೇ ತನ್ನ ಹೆಸರಲ್ಲಿ ಯಾವ ವಿಲ್ ಕೂಡ ಬಿಟ್ಟು ಹೋಗಿರಲಿಲ್ಲ. ಎಸ್ಟೇಟ್‌ನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಕ್ಯಾಥರೀನಳ ಪ್ರಯತ್ನ ಯಶಕಾಣಲಿಲ್ಲ. ಅದು ಕಂಪನಿಯ ವಶವಾದರೂ ಕ್ಯಾಪ್ಟನ್ ಚೋನ್ ಮುತುವರ್ಜಿ ವಹಿಸಿ ಕಂಪನಿಯಿಂದ ಕ್ಯಾಥರಿನ್ನಳಿಗೆ 13146 ರೂಪಾಯಿಗಳಷ್ಟು ಪರಿಹಾರ ಬರುವಂತೆ ನೋಡಿಕೊಂಡ. ಅಷ್ಟಾಗಿದ್ದರೆ ವಿಶೇಷವಿರಲಿಲ್ಲ. ಆಗ ಕ್ಯಾಥರೀನ್‌ಗೆ ಇನ್ನೂ ಹದಿನಾರರ ಪ್ರಾಯ. ಉಳಿದವರು ಮದುವೆಯೇ ಆಗದ ಕಾಲದಲ್ಲಿ ಈಕೆ ಗಂಡನನ್ನು ಕಳೆದುಕೊಂಡಿದ್ದಳು. ಆದರೇನಂತೆ!, ಹಾರ್ವೇ ತೀರಿಕೊಂಡ ಎರಡೇ ತಿಂಗಳಲ್ಲಿ ಕ್ಯಾಥರೀನ್ ಮತ್ತೊಂದು ಮದುವೆಯಾದಳು. ಇನ್ಯಾರನ್ನು?, ತನ್ನ ಮೊದಲ ಗಂಡನಿಗಿಂತ ಚಿಕ್ಕ ಪ್ರಾಯದ ಕ್ಯಾಪ್ಟನ್ ಚೋನನ್ನು. ಮದುವೆಯಾಗಿ ತಿಂಗಳಾಗುವುದರೊಳಗೆ ಇಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿಯಲ್ಲಿ ನೆಲೆಸಲು ನಿರ್ಧರಿಸಿದರು. ನವಂಬರ್ 3, 1712ರಂದು ಎನ್ನೆ ಎಂಬ ಹಡಗಿನಲ್ಲಿ ಕಾಳುಮೆಣಸನ್ನು ತುಂಬಿಕೊಂಡು ಗವರ್ನರ್ ವಿಲಿಯಮ್ ಎಸ್ಲಾಬಿ ಮತ್ತವನ ಸೈನಿಕರ ಜೊತೆ ಇಬ್ಬರೂ ಬೊಂಬಾಯಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಯೂ ದುರದೃಷ್ಟ ಕ್ಯಾಥರೀನಿನ ಬೆನ್ನುಬಿಡಲಿಲ್ಲ. ಅದೇ ರಾತ್ರಿ ಮರಾಠರ ನೌಕಾನಾಯಕ ಕನ್ಹೋಜಿ ಆಂಗ್ರೆಯ ನೇತೃತ್ವದ ಪಡೆಗಳು ಹಡಗಿನ ಮೇಲೆ ದಾಳಿ ಮಾಡಿದವು. ಬ್ರಿಟಿಷ್ ಸೈನಿಕರು ಹಾಗೂ ಮರಾಠರ ನಡುವೆ ನಡೆದ ಹೋರಾಟದಲ್ಲಿ ಬ್ರಿಟಿಷರು ನೆಲಕ್ಕಚ್ಚಬೇಕಾಯ್ತು. ಯುದ್ಧದಲ್ಲಿ ಗುಂಡು ತಾಗಿ ಕ್ಯಾಥರೀನಳ ಬಾಹುಗಳಲ್ಲೇ ಕ್ಯಾಪ್ಟನ್ ಚೋನ್ ಮಡಿದ. ಮೂರು ತಿಂಗಳ ಗರ್ಭಿಣಿಯಾಗಿದ್ದ ಹದಿನೆಂಟು ವರ್ಷದ ಕ್ಯಾಥರಿನ್ ಎರಡನೇ ಬಾರಿ ವಿಧವೆಯಾದಳು. ಅವಳನ್ನೂ ಸೇರಿ ಹಡಗಿನಲ್ಲಿ ಬದುಕುಳಿದ ಹದಿನೇಳು ಜನರನ್ನು ಕನ್ಹೋಜಿ ಬಂಧಿಸಿ ಕೊಲಾಬಾದ ಸೆರೆಮನೆಯಲ್ಲಿ ಯುದ್ಧಕೈದಿಗಳನಾಗಿ ಕೂಡಿಹಾಕಿದ. ಕಂಪನಿ ಕಂಗಾಲಾಗಿತ್ತು. ತನ್ನ ಜನರನ್ನು ಬಿಟ್ಟುಕೊಡುವಂತೆ ಕನ್ಹೋಜಿಗೆ ದಮ್ಮಯ್ಯ ಹಾಕಿ ಪತ್ರ ಬರೆಯಿತು. ಕೊನೆಗೂ ಒಂದು ತಿಂಗಳ ಚೌಕಾಶಿಯ ನಂತರ 30000 ರೂಪಾಯಿಗಳನ್ನು ತೆತ್ತು ತನ್ನ ಯುದ್ಧಕೈದಿಗಳನ್ನು ಬಿಡಿಸಿಕೊಂಡಿತು. ಯುದ್ಧದಲ್ಲಿ ಗಂಡನನ್ನು ಕಳೆದುಕೊಂಡ ಕ್ಯಾಥರೀನಿಗೆ ಕಂಪನಿ ಸಾವಿರ ರೂಪಾಯಿ ಪರಿಹಾರವನ್ನೂ ಪ್ರತಿ ತಿಂಗಳು ನೂರು ರೂಪಾಯಿಗಳ ಮಾಸಾಶನವನ್ನೂ ಮಂಜೂರು ಮಾಡಿತು.  
       ಈ ಕನ್ಹೋಜಿ ಆಂಗ್ರೆ ಸಾಮಾನ್ಯ ಆಸಾಮಿಯಲ್ಲ. ಬ್ರಿಟಿಷರ ಪಾಲಿಗೆ ಆತನೊಬ್ಬ ಪಕ್ಕಾ ಪೈರೆಟ್ ಉರುಫ್ ಕಡಲ್ಗಳ್ಳ. ಯುರೋಪಿನ ಹಡಗುಗಳಿಗೆ ಗಂಟಲಗಾಣ. ಆದರೆ ಮರಾಠಿಗರಿಗೆ ಆತ ಭಾರತದ ನೌಕಾದಳದ ಪಿತಾಮಹ. ತನ್ನ ಜೀವಮಾನದಲ್ಲೇ ಸೋಲೆಂಬುದೇನೆಂದು ಕಾಣದ ಮಹಾನ್ ಸಮರವೀರ. ಹದಿನೇಳನೇ ಶತಮಾನ ಮುಗಿದು ಹದಿನೆಂಟು ಶುರುವಾಗಿತ್ತಷ್ಟೆ. ತಿರುವಾಂಕೂರಿನ ಧರ್ಮರಾಜರೆದುರು ಡಚ್ಚರು ಧೂಳು ಮುಕ್ಕಿದ್ದರು. ಇಂಗ್ಲೀಷ್ ಹಾಗೂ ಪೋರ್ಚುಗೀಸರೆದುರು ಹೊಸದೊಂದು ಅಪಾಯ ಅವತಾರವೆತ್ತಿತ್ತು. 1707ರಲ್ಲಿ ಔರಂಗಜೇಬನ ನಿಧನದೊಂದಿಗೆ ಮುಘಲ್ ಸಾಮ್ರಾಜ್ಯ ಕುಸಿದು ಬಿತ್ತು. ಅಷ್ಟೇ ವೇಗವಾಗಿ ಮಧ್ಯಪೂರ್ವ ಭಾರತದ ಬಹುಭಾಗ ಮುಘಲರ ಕೈಯಿಂದ ಮರಾಠರ ವಶವಾಯ್ತು. ಗೆರಿಲ್ಲಾ ತಂತ್ರಜ್ಞರಾಗಿ ಹೆಸರಾಗಿದ್ದ ಮರಾಠರು ನಿಧಾನವಾಗಿ ಬೇರೆ ಬೇರೆ ಯುದ್ಧಕಲೆಗಳಲ್ಲಿಯೂ ಕ್ಷಿಪ್ರವಾಗಿ ಪಳಗಿದರು. ಆಗ ಪ್ರವರ್ಧಮಾನಕ್ಕೆ ಬಂದವನೇ ಈ ಕನ್ಹೋಜಿ ಆಂಗ್ರೆ. ಈತನ ತಂದೆ ತುಕೋಜಿಯು ಶಿವಾಜಿಯ ಕಾಲದಲ್ಲಿ ಸಾವನದುರ್ಗ ಕೋಟೆಯ ಸುಬೇದಾರನಾಗಿದ್ದ. ಕಂಪನಿಯ ಸಣ್ಣಪುಟ್ಟ ಸರಕು ಸಾಗಾಣಿಕಾ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತ ತನ್ನ ವೃತ್ತಿಜೀವನ ಶುರುಮಾಡಿದ್ದ ಕನ್ಹೋಜಿ 1702ರಲ್ಲಿ ಕ್ಯಾಲಿಕಟ್ ಬಂದರನ್ನು ಆಕ್ರಮಿಸಿ ಅಲ್ಲಿದ್ದ ಸಂಪತ್ತನ್ನು ದೋಚಿ ಬ್ರಿಟಿಷರಿಗೆ ಮೊದಲ ಬಾರಿ ಚುರುಕು ಮುಟ್ಟಿಸಿದ್ದ. ಮುಂದೆ
ಕನೋಜಿ ಆಂಗ್ರೆ
1707ರಲ್ಲಿ ಬಾಂಬೆ ಬಂದರಲ್ಲೂ ತನ್ನ ಕೈಚಳಕ ತೋರಿಸಿ ಬ್ರಿಟಿಷರಿಗೆ ಭಾರೀ ನಷ್ಟ ಉಂಟುಮಾಡಿದ. ಅದೇ ವರ್ಷ ಮರಾಠರ ಅಧಿಪತ್ಯ ಛತ್ರಪತಿ ಸಾಹು ಮಹಾರಾಜನ ಕೈಗೆ ಬಂದಿತ್ತು. ಬಾಲಾಜಿ ವಿಷ್ವನಾಥ ಭಟ್ಟ ಮರಾಠರ ಸೇನಾಧಿಪತಿಯಾಗಿ ನೇಮಿಸಲ್ಪಟ್ಟ. ಈ ವಿಶ್ವನಾಥ ಭಟ್ಟನಿಗೂ ಕನ್ಹೋಜಿಗೂ ಮೊದಲಿಂದಲೂ ಅಷ್ಟಕ್ಕಷ್ಟೆ. ಬಾಲಾಜಿ ವಿಶ್ವನಾಥ ಸಾಹು ಮಹರಾಜನನ್ನು ಪಟ್ಟಕ್ಕೇರಿಸಲು ಪ್ರಯತ್ನಪಟ್ಟರೆ, ಕನ್ಹೋಜಿ ತಾರಾಬಾಯಿಯ ಪರವಾಗಿದ್ದ. ಆದರೆ ಕನ್ಹೋಜಿಯ ಪ್ರತಾಪವನ್ನರಿತಿದ್ದ ಸಾಹು ಮಹಾರಾಜ ಅವರಿಬ್ಬರಿಗೂ ಸಂಧಾನ ಮಾಡಿಸಿ 1712ರಲ್ಲಿ ಮರಾಠರ ನೌಕಾದಳದ ಪ್ರಥಮ ಮಹಾದಂಡನಾಯಕನನ್ನಾಗಿ ನೇಮಿಸಿದ. ಯುರೋಪಿನ ಎಲ್ಲ ಇತಿಹಾಸಕಾರರಿಂದ ಕಡಲ್ಗಳ್ಳನೆಂದು ತೆಗಳಲ್ಪಟ್ಟ ಕನ್ಹೋಜಿ ಕೊಂಕಣದ ಸಮುದ್ರಮಾರ್ಗದ ಏಕಮೇವಾದ್ವಿತೀಯ ಸರದಾರನಾದವ. ಬ್ರಿಟಿಷ್ ಹಾಗೂ ಪೋರ್ಚುಗೀಸರ ಹಡಗುಗಳನ್ನು ಲೂಟಿ ಹೊಡೆದು, ವಶದಲ್ಲಿಟ್ಟುಕೊಂಡು ಬಗೆಬಗೆಯಾಗಿ ಕಾಡಿದವ. ಮರಾಠರ ನೌಕಾಪಡೆ ಯುರೋಪಿಯನ್ನರಿಗಿಂತ ಹಲವು ಪಟ್ಟು ಮುಂದಿದ್ದುದರಿಂದ ಕಣ್ಕಣ್ಣು ಬಾಯ್ಬಾಯಿ ಬಿಟ್ಟು ನೋಡುವುದನ್ನು ಹೊರತುಪಡಿಸಿದರೆ ಬೇರೇನೂ ಮಾಡುವಂತಿರಲಿಲ್ಲ. ಕೊಂಕಣ ಸಮುದ್ರದಲ್ಲಿ ಅವನಿಗೆ ಸುಂಕ ನೀಡದೇ ಯಾವ ಹಡಗೂ ಚಲಿಸುವಂತಿರಲಿಲ್ಲ. ಬ್ರಿಟೀಷರಿಗೆ ಇದು ದೊಡ್ಡ ತಲೆನೋವಾಗಿತ್ತು. ಇವನಿಗೊಂದು ಗತಿ ಕಾಣಿಸಲು ನಿರ್ಧರಿಸಿ ಬೊಂಬಾಯಿಯಲ್ಲಿದ್ದ ಕಂಪನಿ ದೊಡ್ಡದೊಂದು ದಾಳಿಗೆ ಸಿದ್ಧವಾಯ್ತು. 1718ರಲ್ಲಿ ಕನ್ಹೋಜಿಯ ವಿಜಯದುರ್ಗ ಕೋಟೆಯನ್ನು ಮುತ್ತಿದ ಬ್ರಿಟಿಷರು ಕೇವಲ ನಾಲ್ಕೇ ದಿನಗಳಲ್ಲಿ ಹಿಮ್ಮೆಟ್ಟಬೇಕಾಯಿತು. ಬ್ರಿಟಿಷರು ಹಾಗೂ ಪೋರ್ಚುಗೀಸರು ವಿಜಯದುರ್ಗವನ್ನು ವಶಪಡಿಸಿಕೊಳ್ಳಲು ಬಾರಿ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಉಳಿದ ಯುರೋಪಿಯನ್ನರು ಕನ್ಹೋಜಿಯ ಜೊತೆ ಮೈತ್ರಿ ಮಾಡಿಕೊಂಡು ತೆಪ್ಪಗೆ ಕುಳಿತರೆ ಬ್ರಿಟಿಷರು ಮಾತ್ರ 1722ರಲ್ಲಿ ಇಂಗ್ಲೆಂಡಿನ ರಾಯಲ್ ನೇವಿಯ ಸಹಾಯದಿಂದ ದೊಡ್ಡದೊಂದು ಸೈನ್ಯದೊಂದಿಗೆ ಮತ್ತೊಮ್ಮೆ ವಿಜಯದುರ್ಗವನ್ನು ಮುತ್ತಿದರು. ಆಗಲೂ ಅವರಿಗೆ ಕಾದಿದ್ದು ಸೋಲೇ. ಸೋಲಿಲ್ಲದ ಸರದಾರ ಕನ್ಹೋಜಿ ಆಂಗ್ರೆ 1729ರಲ್ಲಿ ಮೃತಪಟ್ಟ. ಅವನ ಉತ್ತರಾಧಿಕಾರಿಯಾಗಿ ಬಂದ ತುಳಜಿ ಆಂಗ್ರೆಯ ನೇತೃತ್ವದಲ್ಲಿ ಮರಾಠರು ಮತ್ತೆ ಎರಡು ದಶಕಗಳ ಕಾಲ ಬ್ರಿಟಿಷರನ್ನು ಇನ್ನಿಲ್ಲದಂತೆ ಆಟವಾಡಿಸಿದರು. ಅದು ಕೊನೆಗೊಂಡಿದ್ದು 1756ರ ಸುಮಾರಿಗೆ. ಈ ಬಾರಿ ಬ್ರಿಟಿಷರಿಗೆ ನೆರವಾದದ್ದು ಮರಾಠರ ಆಂತರಿಕ ಕದನ. ಭಾರತದಲ್ಲಿ ಮೀರ್‌ಸಾದಿಕ್‌ಗಳಿಗೇನು ಕಡಿಮೆ! ತುಳಜಿ ಆಂಗ್ರೆಗೂ ಬಾಲಾಜಿ ಬಾಜಿರಾವ್ ಪೆಶ್ವೆಗೂ ಇದ್ದ ವೈಮನಸ್ಯ ಹಳೆಯದೇ. ಅದನ್ನೇ ದಾಳವಾಗಿ ಬಳಸಿಕೊಂಡ ಬ್ರಿಟಿಷರು ಮಸಲತ್ತು ರೂಪಿಸಿದರು. ಏಕಕಾಲದಲ್ಲಿ ಬ್ರಿಟಿಷರು ಸಮುದ್ರಮಾರ್ಗದಿಂದಲೂ, ಪೇಶ್ವೆಗಳು ಭೂಮಾರ್ಗದಿಂದಲೂ ವಿಜಯದುರ್ಗವನ್ನು ಮುತ್ತಿದರು. ಅರ್ಧಶತಮಾನಗಳ ಕಾಲ ಬ್ರಿಟಿಷರಿಂದ ಕೂದಲು ಕೊಂಕಿಸಲೂ ಸಾಧ್ಯವಾಗದಷ್ಟು ಅಭೇದ್ಯವಾಗಿದ್ದ ಕೋಟೆ ಮರಾಠರ ಒಳಜಗಳದಲ್ಲಿ ನಾಶವಾಯ್ತು. ಮಹಾರಾಷ್ಟ್ರದಲ್ಲಿ ಪೆಶ್ವೆಗಳ ಪ್ರಾಬಲ್ಯ ಬಹುಕಾಲ ಮುಂದುವರೆದರೂ ಸಮುದ್ರದ ಮೇಲಿನ ಅವರ ಹಿಡಿತ ಆಂಗ್ರೆಯೊಟ್ಟಿಗೇ ಕೊನೆಗೊಂಡಿತು.
       ಅತ್ತ ಕ್ಯಾಥರೀನಳಕಥೆ ಮುಗಿದಿಲ್ಲ. ಕಂಪನಿ ಹಾಗೂ ಕನ್ಹೋಜಿಯ ನಡುವೆ ನಡೆದ ಒಪ್ಪಂದದಂತೆ ಫ಼ೆಬ್ರವರಿ 22, 1713ರಂದು ಕ್ಯಾಥರೀನಳ ಬಿಡುಗಡೆಯಾಯ್ತು. ಈ ಮಾತುಕಥೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಲೆಫ್ಟಿನೆಂಟ್ ಮ್ಯಾಕಿಂತಸ್ ಹಾಗೂ ಒಂದಾನೊಂದು ಕಾಲದಲ್ಲಿ ಕಾರವಾರದಲ್ಲಿ ಸೇನಾನಾಯಕನಾಗಿದ್ದ ಗೈಫರ್ಡ್.  ಗೈಫರ್ಡನಿಗಿನ್ನೂಇಪ್ಪತ್ತೈದು, ಕ್ಯಾಥರಿನ್ನಳಿಗೆ ಇಪ್ಪತ್ತಷ್ಟೆ. ಸ್ವಲ್ಪ ಸಮಯದಲ್ಲೇ ಕ್ಯಾಥರೀನ್ ಗೈಫರ್ಡನನ್ನು ಮದುವೆಯಾದಳು. ಗವರ್ನರಿನ ಖಾಸಾ ಮನುಷ್ಯ ಗೈಫರ್ಡ್ ಬಾಂಬೆ ಮಾರ್ಕೇಟಿನ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ. ಇದಾಗಿ ಎರಡು ವರ್ಷಗಳಲ್ಲಿ ತಿರುವನಂತಪುರದ ಸಮೀಪದ ಅಂಜುತೆಂಗು ಎಂಬ ಸುಪ್ರಸಿದ್ಧ ಬಂದರು ಹಾಗೂ ಕೋಟೆಯ ಮುಖ್ಯಸ್ಥನೂ ಆದ. ಅಂಚುತೆಂಗು ಕೇರಳದಲ್ಲಿ ಬ್ರಿಟಿಷರ ಬಹುಮುಖ್ಯ ಫ್ಯಾಕ್ಟರಿಗಳಲ್ಲಿ ಒಂದಾಗಿತ್ತು. ಮೊದಲು ಪೋರ್ಚುಗೀಸರು, ನಂತರ ಡಚ್ಚರ ಕೈಲಿದ್ದ ಇದನ್ನು ಅಟ್ಟಿಂಗಲ್ಲಿನ ರಾಣಿಯ ಅಶ್ವಥಿ ತಿರುನಾಳ್ ಉಮಯಮ್ಮಾ 1696ರಲ್ಲಿ ಬ್ರಿಟಿಷರಿಗೆ ಹಸ್ತಾಂತರಿಸಿದ್ದಳು. ಇಲ್ಲಿ ಬ್ರಿಟಿಷರು ತಮ್ಮ ವ್ಯವಹಾರದ ಅನುಕೂಲತೆಗೆ ಅಂಜೆಂಗೋ ಎಂಬ ಕೋಟೆಯೊಂದನ್ನು ಕಟ್ಟಿಕೊಂಡು ವ್ಯಾಪಾರ ಶುರುವಿಟ್ಟುಕೊಂಡರು. ಈ ಬೆಳವಣಿಗೆ ಡಚ್ಚರಿಗೆ ಸಹಿಸಲಾಗಲಿಲ್ಲ. ಅವರ ಚಿತಾವಣೆಯಿಂದ ರಾಣಿಗೂ ಬ್ರಿಟಿಷರಿಗೂ ವೈಮನಸ್ಯ ಶುರುವಾಯ್ತು. ಕಟ್ಟುತ್ತಿರುವ ಕೋಟೆಯನ್ನು ಅರ್ಧಕ್ಕೇ ನಿಲ್ಲಿಸುವಂತೆ ರಾಜಾಜ್ಞೆ ಹೊರಬಿತ್ತು. ಬ್ರಿಟಿಷರು ಕಿವಿಗೊಡಲಿಲ್ಲ. ಅದೇ ಸಮಯಕ್ಕೆ, ಅಂದರೆ 1717ರ ಮಳೆಗಾಲದಲ್ಲಿ ಕ್ಯಾಥರೀನ್ ತನ್ನ ಮೂರನೇ ಗಂಡನೊಡನೆ ಅಂಜುತೆಂಗಿಗೆ ಬಂದಿಳಿದಳು. 
ಮುಂದಿನ ಕತೆ ಇನ್ನೊಂದು ಭಾಗದಲ್ಲಿ.
ಅಂಜೆಂಗೋ ಕೋಟೆ