Pages

Wednesday, April 15, 2020

ಮೂವರು ಗಂಡಂದಿರು ಮತ್ತು ಮೊದಲ ಸ್ವಾತಂತ್ರ್ಯ ಸಮರ : ಭಾಗ 1

      ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟಕ್ಕಿಂದು ಮೂರು ಶತಮಾನ
    ಭಾರತದಲ್ಲಿ ಬ್ರಿಟಿಷರ ವಿರುದ್ಧ ನಡೆದ ಮೊದಲ ಸ್ವಾತಂತ್ರ್ಯ ಹೋರಾಟ ಯಾವುದು? ಹೆಸರಿಗೆ 1857ರದ್ದು ಮೊದಲ ಸ್ವಾತಂತ್ರ್ಯ ಸಂಗ್ರಾಮವೇನೋ ಹೌದು. ಆದರೆ ಅದಕ್ಕೂ ಹಿಂದೆಯೇ ಬೇಕಷ್ಟು ಸ್ವಾತಂತ್ರ್ಯ ಹೋರಾಟಗಳು ಜರುಗಿವೆ.  1817ರಲ್ಲಿ ಓಡಿಸ್ಸಾದ ’ಪೈಕಾ ಬಿದ್ರೋಹ’ ಹಾಗೆ ನಡೆದ ಮೊದಲ ಹೋರಾಟ ಎಂದು ಬಹಳಷ್ಟು ಇತಿಹಾಸಕಾರರು ಭಾವಿಸುತ್ತಾರೆ. ಆದರೆ ಊಹೂಂ, ಅದೂ ಅಲ್ಲ. 1806ರ ವೆಲ್ಲೋರ್ ಸಿಪಾಯಿ ದಂಗೆ, 1799ರ ಟಿಪ್ಪೂ-ಬ್ರಿಟಿಷರ ಆಂಗ್ಲೋ-ಮೈಸೂರಿಯನ್ ಯುದ್ದ, 1793ರ ವಯನಾಡಿನ ಆದಿವಾಸಿಗಳ ಕೊಟ್ಟಯತ್ತು ಕದನ ಇವೆಲ್ಲ ಸ್ವಾತಂತ್ರ ಸಂಗ್ರಾಮಗಳೇ. ಆದರೆ ಇವೆಲ್ಲವುಗಳಿಗಿಂತ ಮೊದಲು 15 ಏಪ್ರಿಲ್, 1721ರಂದು ಸಂಭವಿಸಿ ಇತಿಹಾಸದಲ್ಲಿ ಮರೆಯಾಗಿಹೋದ ಅಟ್ಟಿಂಗಳ್ ಕ್ರಾಂತಿಯು ಭಾರತದಲ್ಲಿ ಬ್ರಿಟಿಷರ ವಿರುದ್ದ ದಾಖಲಾದ ಮೊತ್ತಮೊದಲ ಅಧಿಕೃತ ಸ್ವಾತಂತ್ರ್ಯ ಸಂಗ್ರಾಮ. ಇವತ್ತಿಗೆ ಬರೋಬ್ಬರಿ ಮೂರು ಶತಮಾನದ ಹಿಂದೆ ಕೇರಳದ ತಿರುವನಂತಪುರಂನಲ್ಲಿ ನಡೆದ ಸಾಮಾನ್ಯ ಜನರ ಹೋರಾಟವೊಂದು ಮೊದಲ ಬಾರಿ ಈಸ್ಟ್ ಇಂಡಿಯಾ ಕಂಪನಿಯನ್ನು ಬಗ್ಗುಬಡಿದಿತ್ತು. ಈ ಚಾರಿತ್ರಾರ್ಹ ಹೋರಾಟದ ಬಗ್ಗೆ ಹೇಳುವ ಮೊದಲು ಅದಕ್ಕೆ ಸಂಬಂಧಿಸಿದ ಇನ್ನೊಂದು ಆಸಕ್ತಿಕರ ವಿಚಾರವನ್ನು ಹೇಳುವುದಕ್ಕಿದೆ.  
       ಮಾರ್ಚ್ 9, 1709 ಈಸ್ಟ್ ಇಂಡಿಯಾ ಕಂಪನಿಯ ಸೈನಿಕರನ್ನು ಹೊತ್ತ ಲಾಯಲ್ ಬ್ಲಿಸ್ ಎಂಬ ನೌಕೆ ಇಂಗ್ಲೆಂಡಿನಿಂದ ಕಲ್ಕತ್ತದತ್ತ ಹೊರಟಿತ್ತು. ಅದರಲ್ಲಿದ್ದ ಪ್ರಯಾಣಿಕರಲ್ಲಿ ಕ್ಯಾಪ್ಟನ್ ಗೆರಾರ್ಡ್ ಕುಕ್‌, ಆತನ ಪತ್ನಿ, ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳೂ ಸೇರಿದ್ದರು. ಕ್ಯಾಪ್ಟನ್ ಕುಕ್ ಬಹುಕಾಲ ಕಂಪನಿಗಾಗಿ ಫೋರ್ಟ್ ವಿಲಿಯಮ್ಮಿನಲ್ಲಿ ಗನ್ನರ್ ಆಗಿ ಸೇವೆ ಸಲ್ಲಿಸಿದವ. ಕಂಪನಿಯ ಹಲವು ಮಹತ್ವಪೂರ್ಣ ಯುದ್ಧಗಳಲ್ಲಿ ಭಾಗವಹಿಸಿದವ. ಈತನ ಸೇವೆಯನ್ನು ಪರಿಗಣಿಸಿ ಕಂಪನಿ ಕ್ಯಾಪ್ಟನ್ ದರ್ಜೆಗೆ ಭಡ್ತಿ ನೀಡಿ ಬಂಗಾಲದಲ್ಲಿ ನಿಯೋಜಿಸಿತ್ತು. ಕುಟುಂಬದೊಟ್ಟಿಗೆ ಇಂಗ್ಲೆಂಡಿನಲ್ಲಿ ರಜಾದಿನಗಳನ್ನು ಕಳೆಯಲು ಬಂದಿದ್ದ ಕುಕ್ ತನ್ನ ಮತ್ತಿಬ್ಬರು ಹೆಣ್ಮಕ್ಕಳನ್ನು ಅಲ್ಲಿಯೇ ಬಿಟ್ಟು ಉಳಿದವರೊಡನೆ ಹೊಸ ಗಮ್ಯದತ್ತ ಹುಮ್ಮಸ್ಸಿನಿಂದ ಹೊರಟಿದ್ದ. ಹಡಗು ಕೇಪ್ ಆಫ್ ಗುಡ್‌ಹೋಪ್ ತಲುಪುವಾಗ ಜೋರು ಮಳೆಗಾಲ. ಚಂಡಿಹಿಡಿದ ಮಳೆಯಲ್ಲಿ ದಾರಿತಪ್ಪಿದ ಲಾಯಲ್ ಬ್ಲಿಸ್ ಕಲ್ಕತ್ತ ತಲುಪಲಾಗದೇ ಪಶ್ಚಿಮಕ್ಕೆ ತಿರುಗಬೇಕಾಯಿತು. ಬೇರೆ ದಾರಿಕಾಣದೇ ಅದು ಬಂದುತಲುಪಿದ್ದು ಕಾರವಾರದ ಕಡಲ ತೀರಕ್ಕೆ. ಅಂದು ಅಕ್ಟೋಬರ್ 7. ದಿಕ್ಕುತಪ್ಪಿ ಕಾರವಾರಕ್ಕೆ ಬಂದಿಳಿದ ಕ್ಯಾಪ್ಟನ್ನನಿಗೆ ಈಸ್ಟ್ ಇಂಡಿಯಾ ಕಂಪನಿ ಭವ್ಯ ಸ್ವಾಗತ ಕೋರಿತು. ಆಗ ಮರಾಠಾ ಸಾಮ್ರಾಜ್ಯದ ಒಂದು ಭಾಗವಾಗಿತ್ತು ಕಾರವಾರ. ಇಂಗ್ಲೀಷ್ ಕೋರ್ಟೀನ್ ಆಸೋಸಿಯೇಶನ್ನಿನವರು ಸಮೀಪದ ಕಡವಾಡದಲ್ಲಿ 1638ರಲ್ಲೇ ಒಂದು ಫ್ಯಾಕ್ಟರಿಯನ್ನು ತೆರೆದಿದ್ದರು. ಆ ಕಾಲದಲ್ಲಿ ಪಶ್ಚಿಮ ಕರಾವಳಿಯ ಸುಪ್ರಸಿದ್ದ ಬಂದರುಗಳಲ್ಲಿ ಒಂದಾದ ಕಾರವಾರದಿಂದ ದೂರದ ಅರಬ್ ಹಾಗೂ ಆಫ್ರಿಕಗಳಿಗೆ ಅವ್ಯಾಹತವಾದ ವ್ಯಾಪಾರ ಸಂಪರ್ಕವಿತ್ತು. ಮುಂದೆ 1649ರಲ್ಲಿ ಇದು ಕಂಪನಿಯೊಂದಿಗೆ ವಿಲೀನವಾದ ಮೇಲೆ ಯುದ್ಧನೌಕೆಗಳನ್ನು ತಯಾರಿಸುವ ಪ್ರಮುಖ
ಕಾರವಾರ
ಕೇಂದ್ರವಾಗಿಯೂ ಕಾರವಾರ ಬೆಳೆಯಿತು. ಕಾರವಾರದ ಈಸ್ಟ್ ಇಂಡಿಯಾ ಫ್ಯಾಕ್ಟರಿಯ ಮುಖ್ಯಸ್ಥ ಕ್ಯಾಪ್ಟನ್ ಜಾನ್ ಹಾರ್ವೇನ ಆತಿಥ್ಯದಲ್ಲಿ ಅವರೆಲ್ಲ ಕೆಲ ದಿನ ಅಲ್ಲಿಯೇ ತಂಗಿದರು. ಹಾಲಿವುಡ್ ಚಿತ್ರಗಳನ್ನು ನೋಡಿ ಅಭ್ಯಾಸವಿದ್ದವರಿಗೆ ಮುಂದಿನ ಕಥೆ ಊಹಿಸುವುದು ಕಷ್ಟದ ಕೆಲಸವಲ್ಲ. ಕುಕ್‌ನ ಮಗಳು ಕ್ಯಾಥರೀನಿಗೂ ಕ್ಯಾಪ್ಟನ್ ಹಾರ್ವೇಗೂ ಥಟ್ಟಂತ ಪ್ರೇಮಾಂಕುರವಾಯ್ತು. ಅಷ್ಟೇ ವೇಗದಲ್ಲಿ ಮದುವೆಯೂ ಆಗಿ ಹೋಯ್ತು. ಹಾರ್ವೇಗೆ ಈಗಾಗಲೇ ಅರ್ಧ ವಯಸ್ಸು ದಾಟಿದ್ದರೂ, ನಾಲ್ಕು ಹೆಣ್ಮಕ್ಕಳ ತಂದೆ ಕುಕ್‌ನಿಗೆ ಕಂಪನಿಯ ಕ್ಯಾಪ್ಟನ್ ತನ್ನ ಮಗಳ ಕೈಹಿಡಿಯುವುದು ಖುಷಿಯ ವಿಚಾರವೇ ತಾನೇ? ಆದರೆ ಆ ಸಂಭ್ರಮದಲ್ಲಿ ಬಹಳ ಕಾಲ ಪಾಲ್ಗೊಳ್ಳುವಷ್ಟು ಕುಕ್ಕನಿಗೆ ವ್ಯವಧಾನವಿರಲಿಲ್ಲ. ಮಾರ್ಚಿನಲ್ಲೇ ಇಂಗ್ಲೆಂಡ್ ಬಿಟ್ಟ ಕಾರಣ ಹೊಸ ಕೆಲಸಕ್ಕೆ ಸೇರಬೇಕಾದ ಸಮಯ ಮೀರಿಹೋಗಿತ್ತು. ತುರಾತುರಿಯಲ್ಲಿ ಮಗಳ ಮದುವೆ ಮಾಡಿ ಅಕ್ಟೋಬರ್ 22ರಂದು ಕಲ್ಕತ್ತಕ್ಕೆ ಹಡಗು ಹತ್ತಿದ. ಇತ್ತ ಹಾರ್ವೇಗೂ ಹೊಸ ಹೆಂಡತಿಯೊಂದಿಗೆ ಕಾರವಾರದಲ್ಲಿ ಬಹಳ ಕಾಲ ನಿಲ್ಲಲು ಮನಸ್ಸಿರಲಿಲ್ಲ. ಬಂದರಿನಲ್ಲಿ ಸುಂಕ ತಪ್ಪಿಸಿ ಬರುವ ವಸ್ತುಗಳಿಗೆ ಕಮಿಷನ್ ಬಿಜಿನೆಸ್ ಮಾಡಿಕೊಂಡು ಅಷ್ಟಿಷ್ಟು ಕಾಸು ಕೂಡಿಟ್ಟುಕೊಂಡಿದ್ದ ಹಾರ್ವೆ ಒಂದು ದಿನ ಕಂಪನಿಗೆ ರಾಜಿನಾಮೆ ನೀಡಿ ಇಂಗ್ಲೆಂಡಿಗೆ ಹಿಂದಿರುಗಲು ನಿಶ್ಚಯಿಸಿದ. 1711ರ ಏಪ್ರಿಲ್ಲಿನಲ್ಲಿ ಅವರಿಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿ ತಲುಪಿದರು. ಅಲ್ಲಿ ಅವರಿಗೊಂದು ಸಮಸ್ಯೆ ಕಾಯುತ್ತಿತ್ತು. ಹಾರ್ವೇ ಕಾರವಾರದಲ್ಲಿದ್ದಾಗ ನಾನೂರು ಪಗೋಡಗಳಷ್ಟು ಹಣವನ್ನು ಮುಂಗಡವಾಗಿ ಕಂಪನಿಯಿಂದ ಪಡೆದುಕೊಂಡಿದ್ದ. ಅದನ್ನು ಚುಕ್ತಾ ಮಾಡದ ಹೊರತೂ ಅವನಿಗೆ ಭಾರತ ಬಿಡುವುದು ಸಾಧ್ಯವಿಲ್ಲ. ಆಗೆಲ್ಲ ಕಂಪನಿ ತನ್ನ ನೌಕರರಿಗೆ ಕೊಡುತ್ತಿದ್ದ ಪಗಾರ ಅಷ್ಟಕ್ಕಷ್ಟೆ. ಅದರ ನೌಕರರೆಲ್ಲ ಸಣ್ಣಪುಟ್ಟ ವ್ಯಾಪಾರ, ಕಳ್ಳಸಾಗಾಣಿಕೆಯ ದಾರಿ ಹಿಡಿದು ಒಂದಿಷ್ಟು ದುಡ್ಡು ಮಾಡಿಕೊಳ್ಳುತ್ತಿದ್ದರು. ಕಂಪನಿಯ ನಿಯಮಗಳಿಗೆ ಅಡ್ಡಿ ಬರದಿದ್ದರೆ ಅವರು ಮಾಡುವ ಕೆಲಸಗಳಿಗೆಲ್ಲ ಕಂಪನಿಯ ಮಾಫಿಯಿತ್ತೆನ್ನಿ.  ಮುಂಗಡ ಹಣವನ್ನು ಚುಕ್ತಾ ಮಾಡುವಂತೆ ಕಂಪನಿ ನಿರ್ದೇಶಿಸಿದ್ದರಿಂದ ಬೇರೆ ದಾರಿ ಕಾಣದೇ ಹಾರ್ವೇ ಕ್ಯಾಥರೀನರಿಬ್ಬರೂ ಇಂಗ್ಲೆಂಡಿನ ಆಸೆ ಬಿಟ್ಟು ತಿರುಗಿ ಕಾರವಾರಕ್ಕೆ ಬರಬೇಕಾಯ್ತು. ದುರದೃಷ್ಟಕ್ಕೆ ಕಾರವಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಹಾರ್ವೇ ಅಚಾನಕ್ಕಾಗಿ ಮೃತಪಟ್ಟ. ಹಾರ್ವೇಗೂ ಸವಣೂರಿನ ನವಾಬನಿಗೂ ಒಳ್ಳೆಯ ದೋಸ್ತಿ. ಅಪ್ಘನ್ ಮೂಲದ ಸವಣೂರಿನ ನವಾಬನ ಆಡಳಿತದಲ್ಲಿ ಹುಬ್ಬಳ್ಳಿ ದೊಡ್ಡ  ವ್ಯವಹಾರ ಕೇಂದ್ರವಾಗಿ ಬೆಳೆದಿತ್ತು. ನವಾಬ್ ಅಬ್ದುಲ್ ಮಜೀದ್ ಖಾನ್ ಹುಬ್ಬಳ್ಳಿಯಲ್ಲಿ ತನ್ನ ಹೆಸರಿನ ಮಜೀದ್‌ಪುರ್ ಎಂಬ ಹೊಸ ಊರೊಂದನ್ನೂ ಕಟ್ಟಿಕೊಂಡಿದ್ದ. ಯುದ್ದದ ಬದಲು ಬ್ರಿಟೀಷರೊಡನೆ  ವ್ಯಾವಹಾರಿಕ ಒಪ್ಪಂದ ಮಾಡಿಕೊಂಡ ಕಾರಣ ಸವಣೂರಿನ ಆರ್ಥಿಕ ಸ್ಥಿತಿ ಉತ್ತಮವಾಗೇ ಇತ್ತು.  ಅಲ್ಲಿನ ವ್ಯಾಪಾರವೆಲ್ಲ ಆಗುತ್ತಿದ್ದುದು ಕಾರವಾರ ಬಂದರಿನ ಮೂಲಕ. ಅದೂ ಹಾರ್ವೇಯ ಮೂಗಿನಡಿಯಲ್ಲಿ. ಗಂಡನ ಈ ವ್ಯವಹಾರಗಳನ್ನು ನೋಡಿಕೊಳ್ಳುತ್ತಾ ಕ್ಯಾಥರಿನ್ ಕಾರವಾರದಲ್ಲೇ ಉಳಿದಳು. 
ಕಾರವಾರದ ಕೋಟೆ
       ಆ ಸಮಯಕ್ಕೆ ಚೋನ್ ಎಂಬ ಹೊಸ ಅಧಿಕಾರಿ ಕಾರವಾರದ ಕ್ಯಾಪ್ಟನ್ ಆಗಿ ನೇಮಕಗೊಂಡ. ಕಾರವಾರದಲ್ಲಿ ಹಾರ್ವೆಯ ಎಸ್ಟೇಟ್ ಒಂದಿತ್ತು. ಆದರೆ ಹಾರ್ವೇ ತನ್ನ ಹೆಸರಲ್ಲಿ ಯಾವ ವಿಲ್ ಕೂಡ ಬಿಟ್ಟು ಹೋಗಿರಲಿಲ್ಲ. ಎಸ್ಟೇಟ್‌ನ್ನು ತನ್ನ ಹೆಸರಿಗೆ ಮಾಡಿಕೊಳ್ಳುವ ಕ್ಯಾಥರೀನಳ ಪ್ರಯತ್ನ ಯಶಕಾಣಲಿಲ್ಲ. ಅದು ಕಂಪನಿಯ ವಶವಾದರೂ ಕ್ಯಾಪ್ಟನ್ ಚೋನ್ ಮುತುವರ್ಜಿ ವಹಿಸಿ ಕಂಪನಿಯಿಂದ ಕ್ಯಾಥರಿನ್ನಳಿಗೆ 13146 ರೂಪಾಯಿಗಳಷ್ಟು ಪರಿಹಾರ ಬರುವಂತೆ ನೋಡಿಕೊಂಡ. ಅಷ್ಟಾಗಿದ್ದರೆ ವಿಶೇಷವಿರಲಿಲ್ಲ. ಆಗ ಕ್ಯಾಥರೀನ್‌ಗೆ ಇನ್ನೂ ಹದಿನಾರರ ಪ್ರಾಯ. ಉಳಿದವರು ಮದುವೆಯೇ ಆಗದ ಕಾಲದಲ್ಲಿ ಈಕೆ ಗಂಡನನ್ನು ಕಳೆದುಕೊಂಡಿದ್ದಳು. ಆದರೇನಂತೆ!, ಹಾರ್ವೇ ತೀರಿಕೊಂಡ ಎರಡೇ ತಿಂಗಳಲ್ಲಿ ಕ್ಯಾಥರೀನ್ ಮತ್ತೊಂದು ಮದುವೆಯಾದಳು. ಇನ್ಯಾರನ್ನು?, ತನ್ನ ಮೊದಲ ಗಂಡನಿಗಿಂತ ಚಿಕ್ಕ ಪ್ರಾಯದ ಕ್ಯಾಪ್ಟನ್ ಚೋನನ್ನು. ಮದುವೆಯಾಗಿ ತಿಂಗಳಾಗುವುದರೊಳಗೆ ಇಬ್ಬರೂ ಕಾರವಾರವನ್ನು ಬಿಟ್ಟು ಬೊಂಬಾಯಿಯಲ್ಲಿ ನೆಲೆಸಲು ನಿರ್ಧರಿಸಿದರು. ನವಂಬರ್ 3, 1712ರಂದು ಎನ್ನೆ ಎಂಬ ಹಡಗಿನಲ್ಲಿ ಕಾಳುಮೆಣಸನ್ನು ತುಂಬಿಕೊಂಡು ಗವರ್ನರ್ ವಿಲಿಯಮ್ ಎಸ್ಲಾಬಿ ಮತ್ತವನ ಸೈನಿಕರ ಜೊತೆ ಇಬ್ಬರೂ ಬೊಂಬಾಯಿಯತ್ತ ಪ್ರಯಾಣ ಬೆಳೆಸಿದರು. ಅಲ್ಲಿಯೂ ದುರದೃಷ್ಟ ಕ್ಯಾಥರೀನಿನ ಬೆನ್ನುಬಿಡಲಿಲ್ಲ. ಅದೇ ರಾತ್ರಿ ಮರಾಠರ ನೌಕಾನಾಯಕ ಕನ್ಹೋಜಿ ಆಂಗ್ರೆಯ ನೇತೃತ್ವದ ಪಡೆಗಳು ಹಡಗಿನ ಮೇಲೆ ದಾಳಿ ಮಾಡಿದವು. ಬ್ರಿಟಿಷ್ ಸೈನಿಕರು ಹಾಗೂ ಮರಾಠರ ನಡುವೆ ನಡೆದ ಹೋರಾಟದಲ್ಲಿ ಬ್ರಿಟಿಷರು ನೆಲಕ್ಕಚ್ಚಬೇಕಾಯ್ತು. ಯುದ್ಧದಲ್ಲಿ ಗುಂಡು ತಾಗಿ ಕ್ಯಾಥರೀನಳ ಬಾಹುಗಳಲ್ಲೇ ಕ್ಯಾಪ್ಟನ್ ಚೋನ್ ಮಡಿದ. ಮೂರು ತಿಂಗಳ ಗರ್ಭಿಣಿಯಾಗಿದ್ದ ಹದಿನೆಂಟು ವರ್ಷದ ಕ್ಯಾಥರಿನ್ ಎರಡನೇ ಬಾರಿ ವಿಧವೆಯಾದಳು. ಅವಳನ್ನೂ ಸೇರಿ ಹಡಗಿನಲ್ಲಿ ಬದುಕುಳಿದ ಹದಿನೇಳು ಜನರನ್ನು ಕನ್ಹೋಜಿ ಬಂಧಿಸಿ ಕೊಲಾಬಾದ ಸೆರೆಮನೆಯಲ್ಲಿ ಯುದ್ಧಕೈದಿಗಳನಾಗಿ ಕೂಡಿಹಾಕಿದ. ಕಂಪನಿ ಕಂಗಾಲಾಗಿತ್ತು. ತನ್ನ ಜನರನ್ನು ಬಿಟ್ಟುಕೊಡುವಂತೆ ಕನ್ಹೋಜಿಗೆ ದಮ್ಮಯ್ಯ ಹಾಕಿ ಪತ್ರ ಬರೆಯಿತು. ಕೊನೆಗೂ ಒಂದು ತಿಂಗಳ ಚೌಕಾಶಿಯ ನಂತರ 30000 ರೂಪಾಯಿಗಳನ್ನು ತೆತ್ತು ತನ್ನ ಯುದ್ಧಕೈದಿಗಳನ್ನು ಬಿಡಿಸಿಕೊಂಡಿತು. ಯುದ್ಧದಲ್ಲಿ ಗಂಡನನ್ನು ಕಳೆದುಕೊಂಡ ಕ್ಯಾಥರೀನಿಗೆ ಕಂಪನಿ ಸಾವಿರ ರೂಪಾಯಿ ಪರಿಹಾರವನ್ನೂ ಪ್ರತಿ ತಿಂಗಳು ನೂರು ರೂಪಾಯಿಗಳ ಮಾಸಾಶನವನ್ನೂ ಮಂಜೂರು ಮಾಡಿತು.  
       ಈ ಕನ್ಹೋಜಿ ಆಂಗ್ರೆ ಸಾಮಾನ್ಯ ಆಸಾಮಿಯಲ್ಲ. ಬ್ರಿಟಿಷರ ಪಾಲಿಗೆ ಆತನೊಬ್ಬ ಪಕ್ಕಾ ಪೈರೆಟ್ ಉರುಫ್ ಕಡಲ್ಗಳ್ಳ. ಯುರೋಪಿನ ಹಡಗುಗಳಿಗೆ ಗಂಟಲಗಾಣ. ಆದರೆ ಮರಾಠಿಗರಿಗೆ ಆತ ಭಾರತದ ನೌಕಾದಳದ ಪಿತಾಮಹ. ತನ್ನ ಜೀವಮಾನದಲ್ಲೇ ಸೋಲೆಂಬುದೇನೆಂದು ಕಾಣದ ಮಹಾನ್ ಸಮರವೀರ. ಹದಿನೇಳನೇ ಶತಮಾನ ಮುಗಿದು ಹದಿನೆಂಟು ಶುರುವಾಗಿತ್ತಷ್ಟೆ. ತಿರುವಾಂಕೂರಿನ ಧರ್ಮರಾಜರೆದುರು ಡಚ್ಚರು ಧೂಳು ಮುಕ್ಕಿದ್ದರು. ಇಂಗ್ಲೀಷ್ ಹಾಗೂ ಪೋರ್ಚುಗೀಸರೆದುರು ಹೊಸದೊಂದು ಅಪಾಯ ಅವತಾರವೆತ್ತಿತ್ತು. 1707ರಲ್ಲಿ ಔರಂಗಜೇಬನ ನಿಧನದೊಂದಿಗೆ ಮುಘಲ್ ಸಾಮ್ರಾಜ್ಯ ಕುಸಿದು ಬಿತ್ತು. ಅಷ್ಟೇ ವೇಗವಾಗಿ ಮಧ್ಯಪೂರ್ವ ಭಾರತದ ಬಹುಭಾಗ ಮುಘಲರ ಕೈಯಿಂದ ಮರಾಠರ ವಶವಾಯ್ತು. ಗೆರಿಲ್ಲಾ ತಂತ್ರಜ್ಞರಾಗಿ ಹೆಸರಾಗಿದ್ದ ಮರಾಠರು ನಿಧಾನವಾಗಿ ಬೇರೆ ಬೇರೆ ಯುದ್ಧಕಲೆಗಳಲ್ಲಿಯೂ ಕ್ಷಿಪ್ರವಾಗಿ ಪಳಗಿದರು. ಆಗ ಪ್ರವರ್ಧಮಾನಕ್ಕೆ ಬಂದವನೇ ಈ ಕನ್ಹೋಜಿ ಆಂಗ್ರೆ. ಈತನ ತಂದೆ ತುಕೋಜಿಯು ಶಿವಾಜಿಯ ಕಾಲದಲ್ಲಿ ಸಾವನದುರ್ಗ ಕೋಟೆಯ ಸುಬೇದಾರನಾಗಿದ್ದ. ಕಂಪನಿಯ ಸಣ್ಣಪುಟ್ಟ ಸರಕು ಸಾಗಾಣಿಕಾ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತ ತನ್ನ ವೃತ್ತಿಜೀವನ ಶುರುಮಾಡಿದ್ದ ಕನ್ಹೋಜಿ 1702ರಲ್ಲಿ ಕ್ಯಾಲಿಕಟ್ ಬಂದರನ್ನು ಆಕ್ರಮಿಸಿ ಅಲ್ಲಿದ್ದ ಸಂಪತ್ತನ್ನು ದೋಚಿ ಬ್ರಿಟಿಷರಿಗೆ ಮೊದಲ ಬಾರಿ ಚುರುಕು ಮುಟ್ಟಿಸಿದ್ದ. ಮುಂದೆ
ಕನೋಜಿ ಆಂಗ್ರೆ
1707ರಲ್ಲಿ ಬಾಂಬೆ ಬಂದರಲ್ಲೂ ತನ್ನ ಕೈಚಳಕ ತೋರಿಸಿ ಬ್ರಿಟಿಷರಿಗೆ ಭಾರೀ ನಷ್ಟ ಉಂಟುಮಾಡಿದ. ಅದೇ ವರ್ಷ ಮರಾಠರ ಅಧಿಪತ್ಯ ಛತ್ರಪತಿ ಸಾಹು ಮಹಾರಾಜನ ಕೈಗೆ ಬಂದಿತ್ತು. ಬಾಲಾಜಿ ವಿಷ್ವನಾಥ ಭಟ್ಟ ಮರಾಠರ ಸೇನಾಧಿಪತಿಯಾಗಿ ನೇಮಿಸಲ್ಪಟ್ಟ. ಈ ವಿಶ್ವನಾಥ ಭಟ್ಟನಿಗೂ ಕನ್ಹೋಜಿಗೂ ಮೊದಲಿಂದಲೂ ಅಷ್ಟಕ್ಕಷ್ಟೆ. ಬಾಲಾಜಿ ವಿಶ್ವನಾಥ ಸಾಹು ಮಹರಾಜನನ್ನು ಪಟ್ಟಕ್ಕೇರಿಸಲು ಪ್ರಯತ್ನಪಟ್ಟರೆ, ಕನ್ಹೋಜಿ ತಾರಾಬಾಯಿಯ ಪರವಾಗಿದ್ದ. ಆದರೆ ಕನ್ಹೋಜಿಯ ಪ್ರತಾಪವನ್ನರಿತಿದ್ದ ಸಾಹು ಮಹಾರಾಜ ಅವರಿಬ್ಬರಿಗೂ ಸಂಧಾನ ಮಾಡಿಸಿ 1712ರಲ್ಲಿ ಮರಾಠರ ನೌಕಾದಳದ ಪ್ರಥಮ ಮಹಾದಂಡನಾಯಕನನ್ನಾಗಿ ನೇಮಿಸಿದ. ಯುರೋಪಿನ ಎಲ್ಲ ಇತಿಹಾಸಕಾರರಿಂದ ಕಡಲ್ಗಳ್ಳನೆಂದು ತೆಗಳಲ್ಪಟ್ಟ ಕನ್ಹೋಜಿ ಕೊಂಕಣದ ಸಮುದ್ರಮಾರ್ಗದ ಏಕಮೇವಾದ್ವಿತೀಯ ಸರದಾರನಾದವ. ಬ್ರಿಟಿಷ್ ಹಾಗೂ ಪೋರ್ಚುಗೀಸರ ಹಡಗುಗಳನ್ನು ಲೂಟಿ ಹೊಡೆದು, ವಶದಲ್ಲಿಟ್ಟುಕೊಂಡು ಬಗೆಬಗೆಯಾಗಿ ಕಾಡಿದವ. ಮರಾಠರ ನೌಕಾಪಡೆ ಯುರೋಪಿಯನ್ನರಿಗಿಂತ ಹಲವು ಪಟ್ಟು ಮುಂದಿದ್ದುದರಿಂದ ಕಣ್ಕಣ್ಣು ಬಾಯ್ಬಾಯಿ ಬಿಟ್ಟು ನೋಡುವುದನ್ನು ಹೊರತುಪಡಿಸಿದರೆ ಬೇರೇನೂ ಮಾಡುವಂತಿರಲಿಲ್ಲ. ಕೊಂಕಣ ಸಮುದ್ರದಲ್ಲಿ ಅವನಿಗೆ ಸುಂಕ ನೀಡದೇ ಯಾವ ಹಡಗೂ ಚಲಿಸುವಂತಿರಲಿಲ್ಲ. ಬ್ರಿಟೀಷರಿಗೆ ಇದು ದೊಡ್ಡ ತಲೆನೋವಾಗಿತ್ತು. ಇವನಿಗೊಂದು ಗತಿ ಕಾಣಿಸಲು ನಿರ್ಧರಿಸಿ ಬೊಂಬಾಯಿಯಲ್ಲಿದ್ದ ಕಂಪನಿ ದೊಡ್ಡದೊಂದು ದಾಳಿಗೆ ಸಿದ್ಧವಾಯ್ತು. 1718ರಲ್ಲಿ ಕನ್ಹೋಜಿಯ ವಿಜಯದುರ್ಗ ಕೋಟೆಯನ್ನು ಮುತ್ತಿದ ಬ್ರಿಟಿಷರು ಕೇವಲ ನಾಲ್ಕೇ ದಿನಗಳಲ್ಲಿ ಹಿಮ್ಮೆಟ್ಟಬೇಕಾಯಿತು. ಬ್ರಿಟಿಷರು ಹಾಗೂ ಪೋರ್ಚುಗೀಸರು ವಿಜಯದುರ್ಗವನ್ನು ವಶಪಡಿಸಿಕೊಳ್ಳಲು ಬಾರಿ ಬಾರಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಉಳಿದ ಯುರೋಪಿಯನ್ನರು ಕನ್ಹೋಜಿಯ ಜೊತೆ ಮೈತ್ರಿ ಮಾಡಿಕೊಂಡು ತೆಪ್ಪಗೆ ಕುಳಿತರೆ ಬ್ರಿಟಿಷರು ಮಾತ್ರ 1722ರಲ್ಲಿ ಇಂಗ್ಲೆಂಡಿನ ರಾಯಲ್ ನೇವಿಯ ಸಹಾಯದಿಂದ ದೊಡ್ಡದೊಂದು ಸೈನ್ಯದೊಂದಿಗೆ ಮತ್ತೊಮ್ಮೆ ವಿಜಯದುರ್ಗವನ್ನು ಮುತ್ತಿದರು. ಆಗಲೂ ಅವರಿಗೆ ಕಾದಿದ್ದು ಸೋಲೇ. ಸೋಲಿಲ್ಲದ ಸರದಾರ ಕನ್ಹೋಜಿ ಆಂಗ್ರೆ 1729ರಲ್ಲಿ ಮೃತಪಟ್ಟ. ಅವನ ಉತ್ತರಾಧಿಕಾರಿಯಾಗಿ ಬಂದ ತುಳಜಿ ಆಂಗ್ರೆಯ ನೇತೃತ್ವದಲ್ಲಿ ಮರಾಠರು ಮತ್ತೆ ಎರಡು ದಶಕಗಳ ಕಾಲ ಬ್ರಿಟಿಷರನ್ನು ಇನ್ನಿಲ್ಲದಂತೆ ಆಟವಾಡಿಸಿದರು. ಅದು ಕೊನೆಗೊಂಡಿದ್ದು 1756ರ ಸುಮಾರಿಗೆ. ಈ ಬಾರಿ ಬ್ರಿಟಿಷರಿಗೆ ನೆರವಾದದ್ದು ಮರಾಠರ ಆಂತರಿಕ ಕದನ. ಭಾರತದಲ್ಲಿ ಮೀರ್‌ಸಾದಿಕ್‌ಗಳಿಗೇನು ಕಡಿಮೆ! ತುಳಜಿ ಆಂಗ್ರೆಗೂ ಬಾಲಾಜಿ ಬಾಜಿರಾವ್ ಪೆಶ್ವೆಗೂ ಇದ್ದ ವೈಮನಸ್ಯ ಹಳೆಯದೇ. ಅದನ್ನೇ ದಾಳವಾಗಿ ಬಳಸಿಕೊಂಡ ಬ್ರಿಟಿಷರು ಮಸಲತ್ತು ರೂಪಿಸಿದರು. ಏಕಕಾಲದಲ್ಲಿ ಬ್ರಿಟಿಷರು ಸಮುದ್ರಮಾರ್ಗದಿಂದಲೂ, ಪೇಶ್ವೆಗಳು ಭೂಮಾರ್ಗದಿಂದಲೂ ವಿಜಯದುರ್ಗವನ್ನು ಮುತ್ತಿದರು. ಅರ್ಧಶತಮಾನಗಳ ಕಾಲ ಬ್ರಿಟಿಷರಿಂದ ಕೂದಲು ಕೊಂಕಿಸಲೂ ಸಾಧ್ಯವಾಗದಷ್ಟು ಅಭೇದ್ಯವಾಗಿದ್ದ ಕೋಟೆ ಮರಾಠರ ಒಳಜಗಳದಲ್ಲಿ ನಾಶವಾಯ್ತು. ಮಹಾರಾಷ್ಟ್ರದಲ್ಲಿ ಪೆಶ್ವೆಗಳ ಪ್ರಾಬಲ್ಯ ಬಹುಕಾಲ ಮುಂದುವರೆದರೂ ಸಮುದ್ರದ ಮೇಲಿನ ಅವರ ಹಿಡಿತ ಆಂಗ್ರೆಯೊಟ್ಟಿಗೇ ಕೊನೆಗೊಂಡಿತು.
       ಅತ್ತ ಕ್ಯಾಥರೀನಳಕಥೆ ಮುಗಿದಿಲ್ಲ. ಕಂಪನಿ ಹಾಗೂ ಕನ್ಹೋಜಿಯ ನಡುವೆ ನಡೆದ ಒಪ್ಪಂದದಂತೆ ಫ಼ೆಬ್ರವರಿ 22, 1713ರಂದು ಕ್ಯಾಥರೀನಳ ಬಿಡುಗಡೆಯಾಯ್ತು. ಈ ಮಾತುಕಥೆಯಲ್ಲಿ ಪ್ರಮುಖ ಪಾತ್ರವಹಿಸಿದವರು ಲೆಫ್ಟಿನೆಂಟ್ ಮ್ಯಾಕಿಂತಸ್ ಹಾಗೂ ಒಂದಾನೊಂದು ಕಾಲದಲ್ಲಿ ಕಾರವಾರದಲ್ಲಿ ಸೇನಾನಾಯಕನಾಗಿದ್ದ ಗೈಫರ್ಡ್.  ಗೈಫರ್ಡನಿಗಿನ್ನೂಇಪ್ಪತ್ತೈದು, ಕ್ಯಾಥರಿನ್ನಳಿಗೆ ಇಪ್ಪತ್ತಷ್ಟೆ. ಸ್ವಲ್ಪ ಸಮಯದಲ್ಲೇ ಕ್ಯಾಥರೀನ್ ಗೈಫರ್ಡನನ್ನು ಮದುವೆಯಾದಳು. ಗವರ್ನರಿನ ಖಾಸಾ ಮನುಷ್ಯ ಗೈಫರ್ಡ್ ಬಾಂಬೆ ಮಾರ್ಕೇಟಿನ ಮುಖ್ಯಸ್ಥನಾಗಿ ನೇಮಿಸಲ್ಪಟ್ಟ. ಇದಾಗಿ ಎರಡು ವರ್ಷಗಳಲ್ಲಿ ತಿರುವನಂತಪುರದ ಸಮೀಪದ ಅಂಜುತೆಂಗು ಎಂಬ ಸುಪ್ರಸಿದ್ಧ ಬಂದರು ಹಾಗೂ ಕೋಟೆಯ ಮುಖ್ಯಸ್ಥನೂ ಆದ. ಅಂಚುತೆಂಗು ಕೇರಳದಲ್ಲಿ ಬ್ರಿಟಿಷರ ಬಹುಮುಖ್ಯ ಫ್ಯಾಕ್ಟರಿಗಳಲ್ಲಿ ಒಂದಾಗಿತ್ತು. ಮೊದಲು ಪೋರ್ಚುಗೀಸರು, ನಂತರ ಡಚ್ಚರ ಕೈಲಿದ್ದ ಇದನ್ನು ಅಟ್ಟಿಂಗಲ್ಲಿನ ರಾಣಿಯ ಅಶ್ವಥಿ ತಿರುನಾಳ್ ಉಮಯಮ್ಮಾ 1696ರಲ್ಲಿ ಬ್ರಿಟಿಷರಿಗೆ ಹಸ್ತಾಂತರಿಸಿದ್ದಳು. ಇಲ್ಲಿ ಬ್ರಿಟಿಷರು ತಮ್ಮ ವ್ಯವಹಾರದ ಅನುಕೂಲತೆಗೆ ಅಂಜೆಂಗೋ ಎಂಬ ಕೋಟೆಯೊಂದನ್ನು ಕಟ್ಟಿಕೊಂಡು ವ್ಯಾಪಾರ ಶುರುವಿಟ್ಟುಕೊಂಡರು. ಈ ಬೆಳವಣಿಗೆ ಡಚ್ಚರಿಗೆ ಸಹಿಸಲಾಗಲಿಲ್ಲ. ಅವರ ಚಿತಾವಣೆಯಿಂದ ರಾಣಿಗೂ ಬ್ರಿಟಿಷರಿಗೂ ವೈಮನಸ್ಯ ಶುರುವಾಯ್ತು. ಕಟ್ಟುತ್ತಿರುವ ಕೋಟೆಯನ್ನು ಅರ್ಧಕ್ಕೇ ನಿಲ್ಲಿಸುವಂತೆ ರಾಜಾಜ್ಞೆ ಹೊರಬಿತ್ತು. ಬ್ರಿಟಿಷರು ಕಿವಿಗೊಡಲಿಲ್ಲ. ಅದೇ ಸಮಯಕ್ಕೆ, ಅಂದರೆ 1717ರ ಮಳೆಗಾಲದಲ್ಲಿ ಕ್ಯಾಥರೀನ್ ತನ್ನ ಮೂರನೇ ಗಂಡನೊಡನೆ ಅಂಜುತೆಂಗಿಗೆ ಬಂದಿಳಿದಳು. 
ಮುಂದಿನ ಕತೆ ಇನ್ನೊಂದು ಭಾಗದಲ್ಲಿ.
ಅಂಜೆಂಗೋ ಕೋಟೆ

4 comments:

 1. ನಿಮ್ಮ ಸಂಶೋಧನಾ ಪರಿಶ್ರಮಕ್ಕೆ ಶರಣು. ಅದ್ಭುತ ಕಾದಂಬರಿಯಂತೆ ಮನಸ್ಸನ್ನು ಹಿಡಿದಿಡುವ ನಿಮ್ಮ ಶೈಲಿಗೂ ಶರಣು. ಮುಂದಿನ ಭಾಗಕ್ಕಾಗಿ ಕಾಯುತ್ತಿರುವೆ.

  ReplyDelete
  Replies
  1. ಧನ್ಯವಾದಗಳು ಸುನಾಥ್ ಕಾಕ

   Delete
 2. ಆತ್ಮೀಯರಾದ ಸಚ್ಚಿನ್
  ನಿಮ್ಮ ಎಲ್ಲಾ ಬರಹಗಳು ಸ೦ಶೋಧಾನತ್ಮಕ ವಿಶಯದಿ೦ದ ಕೂಡಿದೆ ನಿಮ್ಮ ಎಲ್ಲಾ ಬರಹಗಳೂ
  ಚಿಕ್ಕ ಚೊಕ್ಕ ಬಂಗಾರಗಳು ,ಎಲ್ಲವನ್ನು ಕಂಪ್ಯೂಟರ್ ಪ್ರಿಂಟ್ ಮಾಡಿಸಿ ಸ್ಪೈರಲ್ ಬೈಂಡಿಂಗ್ ಮಾಡಿಸಿ ಇಟ್ಟಿದ್ದೇನೆ ಆಸಕ್ತಿಯಿದ್ದವರಿಗೆ ಓದಲು ಕೊಡುತ್ತಿದ್ದೇನೆ , ನನ್ನ ಅಪೇಕ್ಷೆ ನೀವು ಪುರಾತತ್ವ ಸಾಕ್ಷಿಗಳನ್ನು ಬಳಸಿ
  ರಾಮಾಯಣ ಮಹಾಭಾರತದ ಬಗ್ಗೆ ಬರೆಯಿರಿ
  ಪುರಾತತ್ವ ಸಾಕ್ಷಿಗಳು ೧) ಸಾಹಿತ್ಯಗಳು ,ಶಿಲಾಶಾಸನ ,ತಾಮ್ರಪಟಗಳು ,ತಾಳೆಗರಿಗಳು,
  ನಾಣ್ಯಗಳು ,ಜನಜೀವನ ಸಾಮಗ್ರಿಗಳು ,ಕಟ್ಟಡಗಳು ,ಕಳೆಬರಗಳು ,(ಆರ್ಟಿ ಫ್ಯಾಕ್ಟ್ಸ್ )
  ೨)ಆಸ್ಟ್ರೋಸೈನ್ಸ್ - ಖಗೋಳಶಾಸ್ತ್ರ ,ನಾಸಾ ಅಭಿವೃದಿಪಡಿಸಿದ ಹೊಸ ಸಾಫ್ಟವೇರ್
  ಮತ್ತು ಪಿ.ವಿ ವರ್ತಕ್ ಎಲ್ಲಾ ಲೇಖನಗಳು ,೩)ಜಿಯಾಗ್ರಫಿಕಲ್ ಪ್ಲೇಸಸ್ಸ್ಸ್ -ಭೌಗೋಳಿಕ ಜಾಗಗಳು ಜಾಗಗಳು( ಫೋಟೋಸ್) ,
  ನಿಮ್ಮ ಹಿ೦ದಿನ - ಲಂಕೆ ಇದ್ದುದೆಲ್ಲಿ , ಓದಿದ್ದೇನೆ , ದಯವಿಟ್ಟು ಇಮೇಲ್ ವಿಳಾಸ ಕೊಡಿ
  ಇ೦ತಿ ನಿಮ್ಮ ಅಭಿಮಾನಿ
  ಕಲ್ಲೇಶ ಡಿಪ್ಲೋಮ ಲೋಹಶಾಸ್ತ್ರ
  ಮೈಸೂರು -೯೮೯೨೬೪೩೯,ನಿಮ್ಮ ಹಿ೦ದಿನ - ಲಂಕೆ ಇದ್ದುದೆಲ್ಲಿ , ಓದಿದ್ದೇನೆ ,
  ಇ೦ತಿ ನಿಮ್ಮ ಅಭಿಮಾನಿ
  ಕಲ್ಲೇಶ ಡಿಪ್ಲೋಮ ಲೋಹಶಾಸ್ತ್ರ
  ಮೈಸೂರು 93926439.
  ವ೦ದನೆಗಳು

  ReplyDelete
  Replies
  1. ಪ್ರೀತಿಯ ಕಲ್ಲೇಶ್
   ನಿಮ್ಮ ಅಭಿಮಾನಕ್ಕೆ ಆಭಾರಿ.
   ನನ್ನ ಮೇಲ್‌ಐಡಿ sachinbhat88@gmail.com

   Delete