Pages

Wednesday, December 9, 2015

ಟಿಪ್ಪುವಿನ ಮಲತಮ್ಮ, ಮಂಜೇರಿ ದಂಗೆ ಮತ್ತು ತ್ರಾವೆಂಕೂರ ಮಹಾಗೋಡೆ

       ಕಥೆ ಶುರುವಾಗೋದು ಸನ್ ೧೭೬೬ರಲ್ಲಿ. ಹೈದರ್ ಅಲಿಯ ಕಣ್ಣು ಬಹುಕಾಲದಿಂದ ಮಲಬಾರಿನ ಮೇಲೆ ನೆಟ್ಟಿತ್ತು. ಮುಸ್ಲಿಂ ರಾಜರ ಕಣ್ಣುಬಿದ್ದ ಮೇಲೆ ಹೇಳಬೇಕೇ ಮುಂದಿನ ಕತೆ? ದಾಳಿ ಮುಗಿಸಿ ವಾಪಸ್ ಬರುವಾಗ ಒಂದಿಷ್ಟು ಜನರನ್ನು ಬಂಧಿಸಿ ಯುದ್ಧಕೈದಿಗಳಾಗಿ, ಇನ್ನೊಂದಿಷ್ಟು ಗಂಡುಮಕ್ಕಳನ್ನು ಗುಲಾಮರಾಗಿ, ಮತ್ತೊಂದಿಷ್ಟು ಹೆಣ್ಣುಮಕ್ಕಳನ್ನು ಜನಾನಾಕ್ಕೆ ಸೇರಿಸಲು ಕರೆತಂದ. ಹಾಗೆ ಹಿಡಿದು ತಂದವರಲ್ಲಿ ಪರಪ್ಪನಾಡಿನ ರಾಜಮನೆತನವೂ ಸೇರಿತ್ತು. ಅವರ ಜೊತೆಗಿದ್ದವ ಕಣ್ಣೂರಿನ ಚಿರಕ್ಕಲ್ ಅರಸು ಮನೆತನಕ್ಕೆ ಸೇರಿದ ೧೦ ವರ್ಷದ ಚಿರಕ್ಕಲ್ ಕುಮಾರನ್ ನಂಬಿಯಾರ್. ಸುಂದರ, ಬುದ್ದಿವಂತ, ಚೂಟಿ ಬಾಲಕನತ್ತ ಹೈದರನ ದೃಷ್ಟಿ ಹರಿಯಲು ತಡವಾಗಲಿಲ್ಲ. ತನ್ನ ಖಾಸಾ ಬಳಗಕ್ಕೆ ಸೇರಿಸಿದವನೇ ಕುಮಾರನ್ ನಂಬಿಯಾರನನ್ನು ಇಸ್ಲಾಮಿಗೆ ಮತಾಂತರಿಸಿ ಮುಹಮ್ಮದ್ ಆಯಾಝ್ ಖಾನ್ ಎಂದು ಹೆಸರಿಟ್ಟ. ಟಿಪ್ಪೂ ಮತ್ತು ಕುಮಾರನ್ ಛೇ, ಅಲ್ಲಲ್ಲ... ಆಯಾಝ್ ಖಾನ್ ಇಬ್ಬರೂ ಒಂದೇ ವಯಸ್ಸಿನವರು. ದಡ್ಡ ಶಿಖಾಮಣಿ ಟಿಪ್ಪುವಿಗಿಂತ ಕುಶಾಗ್ರಮತಿ ಆಯಾಝ್ ಹೈದರನ ಅಚ್ಚುಮೆಚ್ಚಿನ ಬಂಟನಾಗಿ, ದತ್ತುಮಗನಾಗಿ ಬೆಳೆದ. ಮಾತ್ರವಲ್ಲ ಹೈದರನ ಕಷ್ಟಕಾಲದಲ್ಲೆಲ್ಲ ಬಲಗೈಯಾಗಿ ನಿಂತು ಕಾಪಾಡಿದವನು ಅವನೇ. ಒಮ್ಮೆ ಬ್ರಿಟಿಷ್ ಅಧಿಕಾರಿಗೆ ಟಿಪ್ಪು ಸಾರ್ವಜನಿಕವಾಗಿ ಸುನ್ನತ್ ಮಾಡಿಸಿ ಇಸ್ಲಾಮಿಗೆ ಮತಾಂತರಿಸುತ್ತಾನೆ. ಮೊದಲೇ ಟಿಪ್ಪುವಿನ ಹುಚ್ಚಾಟಗಳಿಂದ ರೋಸಿಹೋಗಿದ್ದ ಹೈದರ್ ಈ ಘಟನೆಯ ನಂತರವಂತೂ ಟಿಪ್ಪುವನ್ನು ದೂರವಿಡಲು ಪ್ರಾರಂಭಿಸಿದ. ಜೊತೆಗೆ ಟಿಪ್ಪುವಿಗೆ ಬಲವಂತದ ರಜೆ ಕೊಟ್ಟು ರಾಜಧಾನಿಯಿಂದ ಹೊರಗಿಟ್ಟ. ಹೈದರನಿಗೆ ಆಯಾಝನ ಮೇಲೆ ಪ್ರೀತಿ ಎಷ್ಟಿತ್ತೆಂದರೆ ’ನೀನೊಬ್ಬನಿಲ್ಲದಿದ್ದರೆ ಈ ರಾಜ್ಯಕ್ಕೆ ಆಯಾಝನನ್ನು ವಾರಸುದಾರನನ್ನಾಗಿಸುತ್ತಿದ್ದೆ’ ಎಂದು ಟಿಪ್ಪುವಿಗೆ ಆತ ಬಹಿರಂಗವಾಗಿಯೇ ಎಚ್ಚರಿಕೆ ಕೊಡುತ್ತಾನೆ. ಹಿಸ್ಟೋರಿಕಲ್ ಸ್ಕೆಚಸ್ ಆಫ್ ಇಂಡಿಯಾ - ಮಾರ್ಕ್ಸ್ ವಿಲ್ಕ್ಸ್, ಲೋಗನ್ನಿನ ಮಲಬಾರ್ ಮ್ಯಾನುಯೆಲ್‌ಗಳಲ್ಲಿ ಈ ಬಗ್ಗೆ ಅಧಿಕೃತ ದಾಖಲೆಗಳಿವೆ. ಒಳಗೊಳಗೇ ಆಯಾಝನನ್ನು ಕಂಡರೆ ಅಸಮಾಧಾನದಿಂದ ಕುದಿಯುತ್ತಿದ್ದ ಟಿಪ್ಪುವಿನ ಸಿಟ್ಟು ಇದರ ನಂತರವಂತೂ ದಾಯಾದಿ ದ್ವೇಷಕ್ಕೆ ತಿರುಗಿತು. ಮುಂದೆ ಹೈದರ್ ಆಯಾಝನನ್ನು ತಾನು ಹೊಸದಾಗಿ ಗೆದ್ದಿದ್ದ ಬಿದನೂರಿನ ನವಾಬನನ್ನಾಗಿ ನೇಮಿಸುತ್ತಾನೆ. ಶಿವಮೊಗ್ಗ ಜಿಲ್ಲೆಯ ಮಲೆನಾಡ ತಪ್ಪಲಿನ ಬಿದನೂರನ್ನು ಹೈದರ್ ಗೆದ್ದು ಹೈದರ್ ನಗರ್ ಎಂದು ಮರುನಾಮಕರಣ ಮಾಡಿದ್ದ. ಹಿಂದೊಮ್ಮೆ ಚಿತ್ರದುರ್ಗದ ಗವರ್ನರ್ ಪದವಿಯನ್ನು ತಿರಸ್ಕರಿಸಿದ್ದ ಆಯಾಝ್‌ನಿಗೆ ಬಿದನೂರು ತನ್ನ ತವರು ಚಿರಕ್ಕಲ್ಲಿನ ನೆನಪು ತಂದುಕೊಟ್ಟಿತಂತೆ. ಬಿದನೂರಿನಲ್ಲೇ ಆಯಾಝ್ ವಾಸ ಹೂಡಿದ. ಬ್ರಿಟಿಷ್ ಪ್ರವಾಸಿ ಕಮ್ ಅಧಿಕಾರಿ ಜೊತೆಗೆ ಕೆಲ ಕಾಲ ಹೈದರನ ಯುದ್ಧಕೈದಿಯೂ ಆಗಿದ್ದ ಡೋನಾಲ್ಡ್ ಕ್ಯಾಂಪ್‌ಬೆಲ್ ಆಯಾಝನ ಜೊತೆಗಿದ್ದು ಅವನ ಜೀವನದ ದಾಖಲೆಗಳನ್ನೆಲ್ಲ ತನ್ನ  ‘A narrative of the extraordinary adventure’ ಮತ್ತು ’The Life and Adventures of Donald Cambell' ಗ್ರಂಥಗಳಲ್ಲಿ ದಾಖಲಿಸಿದ್ದಾನೆ. ನಂತರ ಕ್ಯಾಂಪ್‌ಬೆಲ್ ಕಣ್ಣೂರಿನ ಚಿರಕ್ಕಲಿಗೆ ತೆರಳಿದ. ಹಿಂದಿರುಗಿ ಬರುವಾಗ ಕ್ಯಾಂಪ್‌ಬೆಲ್ಲನಿಗೆ ಹೈದರ ಸತ್ತ ಸುದ್ದಿ ಸಿಕ್ಕಿತು. ರಾಜ್ಯ ಕೈಜಾರಬಹುದೆಂಬ ಹೆದರಿಕೆಯಿಂದ ಹೈದರನ ಆಪ್ತವಲಯ ಹೊರಜಗತ್ತಿಗೆ ವಿಷಯ ತಿಳಿಸದೇ ಅವನ ಸಾವನ್ನು ಗುಟ್ಟಾಗಿಟ್ಟಿತು. ಒಂದೆಡೆ ಮೈಸೂರು ಒಡೆಯರು, ಇನ್ನೊಂದೆಡೆ ಬ್ರಿಟಿಷರ ಭಯದ ಟಿಪ್ಪುವಿಗೆ ಮಾತ್ರ ಸಂದೇಶ ಹೋಯಿತು. ಚಿತ್ತೂರನಲ್ಲಿ ಯುದ್ಧಕ್ಕೆ ಹೊರಟಿದ್ದ ಟಿಪ್ಪು ಸಿಂಹಾಸನ ತಪ್ಪಿದರೆ ಎಂಬ ಹೆದರಿಕೆಯಿಂದ ಓಡೋಡಿ ಬಂದು ಕುರ್ಚಿ ಹತ್ತಿ ಕೂತ. ಸರ್ ಅಯರ್ ಕೂಟ್ ನಿವೃತ್ತನಾಗಿ ಹೊಸ ಎಳೆನಿಂಬೆಕಾಯಿ ಬ್ರಿಟಿಷ್ ಅಧಿಕಾರಿ ಬಂದಿದ್ದರಿಂದ ಸಂದರ್ಭವನ್ನುಪಯೋಗಿಸಿಕೊಳ್ಳುವ ಅವಕಾಶ ಬ್ರಿಟಿಷರಿಗೂ ತಪ್ಪಿಹೋಯ್ತು. ಸಿಂಹಾಸನಕ್ಕೇರಿದ ಟಿಪ್ಪು ಮಾಡಿದ ಮೊದಲ ಕೆಲಸವೇ ಆಯಾಜನನ್ನು ಕೊಲ್ಲಲು ಆದೇಶಿಸಿದ್ದು. ಅದರೆ ಹೇಳಿ ಕೇಳಿ ಆಯಾಜ್ ಟಿಪ್ಪೂವಿಗಿಂತ ಬುದ್ಧಿವಂತ. ಇಂಥದ್ದನ್ನೆಲ್ಲ ಮೊದಲೇ ಊಹಿಸಿದ್ದ. ಟಿಪ್ಪುವಿನ ಪಡೆ ಬಿದನೂರು ತಲುಪುವುದರೊಳಗೆ ಬ್ರಿಟಿಷರ ಕ್ಯಾಪ್ಟನ್ ಮ್ಯಾಥ್ಯೂವಿನ ಜೊತೆ ಒಪ್ಪಂದ ಮಾಡಿಕೊಂಡು ಅರಮನೆಯಲ್ಲಿದ್ದ ಸಂಪತ್ತನ್ನೆಲ್ಲ ಬಾಚಿಕೊಂಡು ಬಾಂಬೆಗೆ ಪರಾರಿಯಾದ. ಬಿದನೂರಿನ ಪ್ರದೇಶ ಬ್ರಿಟಿಷರ ಕೈಸೇರಿತು. ಅಲ್ಲಿ ಬ್ರಿಟಿಷರಿಗೆ ಸಿಕ್ಕ ಹಣವೇ ೧೨ ಮಿಲಿಯನ್ ಸ್ಟೆರ್ಲಿಂಗುಗಳಷ್ಟಿತ್ತು. ವಿಷಯ ತಿಳಿದ ಟಿಪ್ಪು ಕೈಕೈ ಹಿಸುಕಿಕೊಂಡ. ಒಂದು ಕಡೆ ಪರಮ ಶತ್ರು ತಪ್ಪಿಸಿಕೊಂಡಿದ್ದರೆ ಇನ್ನೊಂದು ಕಡೆ ಬಿದನೂರಿನಂಥ ಶ್ರೀಮಂತ ಸಂಸ್ಥಾನ ಕೈತಪ್ಪಿತ್ತು. ಮಲಬಾರಿನ ಮಲಯಾಳಿ ಸೇವಕನ ವಿಶ್ವಾಸಘಾತತನ ಟಿಪ್ಪುವಿನ ಹೊಟ್ಟೆಯುರಿ ಹೆಚ್ಚಿಸಿತ್ತು. ಆತನನ್ನು ಹಿಡಿಯೋಣವೆಂದರೆ ಅವನ ಬೆನ್ನಿಗೆ ಬ್ರಿಟಿಷರು ನಿಂತಿದ್ದರು. ಆಯಾಝನನ್ನು ಹಿಡಿದುಕೊಟ್ಟರೆ ಭಾರೀ ಮೊತ್ತದ ಹಣ ಕೊಡುವುದಾಗಿ ಬ್ರಿಟಿಷರ ಜೊತೆಗೆ ಟಿಪ್ಪು ವ್ಯವಹಾರಕ್ಕಿಳಿದ. ಇವನ ನರಿ ಬುದ್ಧಿ ತಿಳಿದಿದ್ದ ಈಸ್ಟ್ ಇಂಡಿಯಾ ಕಂಪನಿ ಅದಕ್ಕೆಲ್ಲ ಸೊಪ್ಪು ಹಾಕಲಿಲ್ಲ. ಆಯಾಜನ ಒಡೆತನದಲ್ಲಿದ್ದ ಬಿದನೂರಿನಂಥ ಶ್ರೀಮಂತ ಸಂಸ್ಥಾನ, ಆತ ಬಿಟ್ಟುಹೋಗಿದ್ದ ಅಪಾರ ಸಂಪತ್ತುಗಳನ್ನು ಟಿಪ್ಪೂವಿನ ಮೂರುಕಾಸಿನಾಸೆಗೆ ಕಳೆದುಕೊಳ್ಳರು ಕಂಪನಿ ಸಿದ್ಧವಿರಲಿಲ್ಲ. ನಂಬಿಕೆ ದ್ರೋಹಿ ಆಯಾಝನ ಮೇಲಿನ ಟಿಪ್ಪುವಿನ ಸಿಟ್ಟು ಮಲಬಾರು ಮತ್ತು ಬಿದನೂರುಗಳ ವಿರುದ್ಧ ದ್ವೇಷಕ್ಕೆ ತಿರುಗುವಂತೆ ಮಾಡಿತು. ಮುಂದಿನದು ಗೊತ್ತಿರುವ ಕಥೆಯೇ.

      ಮುಂದೆ ಆಯಾಝ್ ಒಂದಿಲ್ಲೊಂದು ದಿನ ಬಿದನೂರನ್ನು ತಿರುಗಿ ಪಡೆವ ಆಸೆ ಹೊತ್ತು ಬಾಂಬೆಯಲ್ಲೇ ಬದುಕಿದ್ದ. ಜೊತೆಗೆ ಬ್ರಿಟಿಷರಿಂದ ತಿಂಗಳಿಗೆ ನಾಲ್ಕು ಸಾವಿರ ರಾಜಧನವೂ ಸಿಗುತ್ತಿತ್ತು. ದುರದೃಷ್ಟವಶಾತ್ ಟಿಪ್ಪು ಸತ್ತ ವರ್ಷವಾದ ೧೭೯೯ರಲ್ಲೇ ಆಯಾಝನೂ ಮೃತಪಟ್ಟಿದ್ದು. ತಿಪ್ಪೆ ಟಿಪ್ಪುವಾದಂತೆ ಆಯಾಝನ ಹೆಸರು ಬ್ರಿಟಿಷ್ ದಾಖಲೆಗಳಲ್ಲಿ ಅಪಭೃಂಶವಾಗಿ ಹಯಾತ್ ಎಂದಾಗಿದೆ. ಕಳೆದ ಟಿಪ್ಪುವಿನ ಲೇಖನದಲ್ಲಿ ಉಲ್ಲೇಖಿಸಿದ ’ಕಳತ್ತನಾಡಿನ ನೊಂಬರಂಗಳ್’ ಸೇರಿ ಕೆಲ ದಾಖಲೆಗಳಲ್ಲಿ ಇವನ ಮೂಲ ಹೆಸರು ಕಮ್ಮಾರನ್ ನಂಬಿಯಾರ್ ಎಂಬ ವಾದವೂ ಇದೆ. ಇವನ ಬಗೆಗಿನ ಹೆಚ್ಚಿನ ಮಾಹಿತಿಗೆ ಆಸಕ್ತರು ಫಿಶರಿನ Counterflows to colonialism ಮತ್ತು ಮಾರ್ಕ್ ವಿಲ್ಕ್ಸ್‌ನ Historical sketches ಪರಿಶೀಲಿಸಬಹುದು.
ಹಠಾತ್ತನೆ ಹೈದರ್ ಸಾಯದಿದ್ದರೆ ಟಿಪ್ಪುವಿನ ಬದಲು ಆಯಾತನಿಗೆ ಆ ಸಿಂಹಾಸನವೇರುವ ಅವಕಾಶ ಸಿಗುತ್ತಿತ್ತೇನೋ? ಹಾಗಾಗಿದ್ದೇ ಆದಲ್ಲಿ ಕೇರಳದ ಇತಿಹಾಸದ ಅತಿಕ್ರೂರ ಅಧ್ಯಾಯವೊಂದು ಇಲ್ಲವಾಗುತ್ತಿತ್ತು.
       ಹೈದರ್ ಮಲಬಾರಿನ ಮೇಲೆ ಆಕ್ರಮಣಮಾಡಿದ ಮೇಲೆ ಕೊಯಿಕ್ಕೋಡಿನ ಝಾಮೋರಿನ್ನನ ವಂಶಸ್ಥರು ಸೇರಿ ತುಂಡರಸರೆಲ್ಲ ತಿರುವಾಂಕೂರಿಗೆ ಆಶ್ರಯ ಅರಸಿ ಹೋದರು. ಮಗ್ಗುಲ ಮುಳ್ಳಾಗಿ ಕಾಡುತ್ತಿದ್ದ ಬ್ರಿಟಿಷರ ವಿರುದ್ಧ ಹೋರಾಡಲು ಹೈದರನಿಗೆ ತುರ್ತಾಗಿ ದೊಡ್ಡಮೊತ್ತದ ಹಣದ ಅಗತ್ಯವಿತ್ತು. ರಟ್ಟಿಹಳ್ಳಿಯ ಹತ್ತಿರ ನಡೆದ ಕದನದಲ್ಲಿ ಮರಾಠರಿಗೆ ಸೋತು ೩೫ ಲಕ್ಷ ಕಪ್ಪ ಕೊಡಬೇಕಾಗಿ ಬಂದುದರಿಂದ ಬೊಕ್ಕಸ ಬರಿದಾಗಿತ್ತು. ಪರಿಣಾಮವಾಗಿ ಅತಿಕ್ರೂರ ತೆರಿಗೆ ಪದ್ಧತಿಯನ್ನು ಮಲಬಾರಿನ ಹಿಂದೂಗಳ ಮೇಲೆ ಹೇರಲಾಯಿತು. ಪ್ರಾಯಶಃ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ, ಮಲಬಾರಿನ ಇತಿಹಾಸದಲ್ಲಿ ಮೊದಲ ಬಾರಿ ಅಧಿಕೃತ ಭೂಕಂದಾಯದ ವ್ಯವಸ್ಥೆ ಜಾರಿಯಾಗಿದ್ದು ಹೈದರನ ಕಾಲದಲ್ಲೇ. ಅಲ್ಲಿಯವರೆಗೂ ಕೇರಳ ಅದೆಷ್ಟು ಶ್ರೀಮಂತವಾಗಿತ್ತೆಂದರೆ ಅಲ್ಲಿನ ಸಾಂಬಾರ್ ಪದಾರ್ಥಗಳು, ಮಸ್ಲಿನ್ ಬಟ್ಟೆ, ತೇಗ, ದಂತಗಳಿಗೆ ದೊಡ್ಡ ಅಂತರಾಷ್ಟ್ರೀಯ ಮಾರುಕಟ್ಟೆಯಿತ್ತು. ಭಾರತಕ್ಕೆ ಜಲಮಾರ್ಗ ಕಂಡುಹಿಡಿದವನೆಂಬ ಕಿರೀಟ ತೊಟ್ಟಿರುವ ಭಾರಿ ದೊಡ್ಡ ಸಂಶೋಧಕ ವಾಸ್ಕೋಡಿಗಾಮನಿಗಿಂತ ಸಾವಿರ ವರ್ಷದ ಮೊದಲಿನಿಂದಲೂ ಇಲ್ಲಿನ ಬಂದರುಗಳಲ್ಲಿ ದೇಶವಿದೇಶಗಳ ಹಡಗುಗಳು ಬಿಡುವಿಲ್ಲದಂತೆ ಬಂದುಹೋಗುತ್ತಿದ್ದವು. ಹೇಳಿದ ಬೆಲೆಗೆ ಮರುಮಾತಿಲ್ಲದೇ ಇಲ್ಲಿನ ಸರಕುಗಳನ್ನು ಕೊಳ್ಳಲು ವಿದೇಶಿಗರು ಸಾಲು ಹಚ್ಚಿ ಕಾಯುತ್ತಿದ್ದರು. ಯುರೋಪಿಯನ್ನರಿಗಂತೂ ಕಾಳುಮೆಣಸಿನ ಹುಚ್ಚು ಎಷ್ಟಿತ್ತೆಂದರೆ ಬದಲು ಅಷ್ಟೇ ತೂಕದ ಚಿನ್ನ, ಬೆಳ್ಳಿ, ವಜ್ರ ಸೇರಿ ತಮ್ಮನ್ನು ಮಾರಿಕೊಳ್ಳಲೂ ತಯಾರಿದ್ದರು. ಅಂಥದ್ದರಲ್ಲಿ ಕೇರಳದಲ್ಲಿ ಜನಕ್ಕೆ ತೆರಿಗೆ ಕಟ್ಟುವ ಖರ್ಮವಿರಲಿಲ್ಲವೆಂಬುದು ಆಶ್ಚರ್ಯವಲ್ಲ. ತ್ರಾವೆಂಕೋರ್, ಕೊಚ್ಚಿನ್ ಸಂಸ್ಥಾನಗಳಲ್ಲೆಲ್ಲ ಅಲ್ಲಿನ ಜನ ಗೌರವಪೂರ್ವಕವಾಗಿ ರಾಜನಿಗೆ ಕೊಡುತ್ತಿದ್ದುದು ವರ್ಷಕ್ಕಿಂತಿಷ್ಟೆಂದು ರಕ್ಷಣಾ ನಿಧಿ ಮಾತ್ರ. ಇಂಥದ್ದರಲ್ಲಿ ಇದ್ದಕ್ಕಿದ್ದಂತೆ ಮಲಬಾರಿನಲ್ಲಿ ಭೂಕಂದಾಯ, ಆದಾಯ ತೆರಿಗೆಗಳೆಲ್ಲ ಜಾರಿಗೆ ಬಂದವು. ಮೊದಲು ಹಿಂದೂಗಳು ಆದಾಯದ ೫೦% ಕಂದಾಯ ಕಟ್ಟಬೇಕಾಗಿದ್ದರೆ ಮುಸ್ಲಿಮರಿಗೆ ತೆರಿಗೆ ಕಟ್ಟುವುದರಿಂದ ವಿನಾಯ್ತಿ ನೀಡಲಾಯಿತು. ಆದರೆ ಮಲಬಾರಿನ ಗವರ್ನರ್ ಆಗಿದ್ದ ಹೈದರನ ನಂಬಿಕಸ್ಥ ಅರ್ಷಾದ್ ಬೇಗ್ ಖಾನ್ ಎಂಬ ಅಧಿಕಾರಿಯ ಕೃಪೆಯಿಂದ ಇದು ೨೦%ಕ್ಕೆ ಇಳಿಯಿತು. ಸ್ವಲ್ಪ ಸಮಯದಲ್ಲೇ ಕ್ಯಾನ್ಸರಿನಿಂದ ನರಳಿ ಹೈದರ್ ಸತ್ತ. ಬಿದನೂರನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟ ಆಯಾಝ್ ಟಿಪ್ಪುವಿನ ಕಣ್ತಪ್ಪಿಸಿ ಬಾಂಬೇಗೆ ತೆರಳಿದ್ದ. ಅಧಿಕಾರಕ್ಕೇರಿದ ಟಿಪ್ಪುವಿನ ದ್ವೇಷ ತಿರುಗಿದ್ದು ಮಾತ್ರ ಮಲಬಾರಿನ ಕಡೆ. ಆರ್ಷಾದ್ ಖಾನನನ್ನು ಬರ್ಖಾಸ್ತುಗೊಳಿಸಿ ಮಲಬಾರಿಗೆ ಮೀರ್ ಇಬ್ರಾಹಿಂ ಎಂಬ ಅಧಿಕಾರಿಯನ್ನು ನೇಮಿಸಿದ. ಹೈದರನ ಕಾಲದ ಒಪ್ಪಂದಗಳೆಲ್ಲ ಮೂಲೆ ಸೇರಿದವು. ಮೊದಲು ದೇವಸ್ಥಾನಗಳಿಗಿದ್ದ ತೆರಿಗೆ ವಿನಾಯ್ತಿ ರದ್ದಾಯಿತು. ಆದಾಯದಲ್ಲಿ ಮುಕ್ಕಾಲು ಪಾಲು ಕಡ್ಡಾಯವಾಗಿ ತೆರಿಗೆ ಕಟ್ಟಬೇಕೆಂಬ ಕಟ್ಟಳೆಗಳು ಸಾಧುವೂ ಆಗಿರಲಿಲ್ಲ, ಸಾಧ್ಯವೂ ಆಗಿರಲಿಲ್ಲ. ಕರೆನ್ಸಿ ಮತ್ತು ಕಲ್ಚರ್ ಟಿಪ್ಪುವಿನ ಮುಖ್ಯ ಟಾರ್ಗೆಟ್‌ಗಳಾಗಿದ್ದವು. ಕಂಡಕಂಡವರನ್ನು ಸಿಕ್ಕಸಿಕ್ಕಲ್ಲಿ ಮತಾಂತರಿಸಲಾಯ್ತು. ಜೀವವನ್ನೂ, ಧರ್ಮವನ್ನೂ ಉಳಿಸಿಕೊಳ್ಳಲು ಹೆಚ್ಚಿನ ಶ್ರೀಮಂತ ನಂಬೂದಿರಿ, ನಾಯರುಗಳು ಮನೆಮಾರುಗಳನ್ನು ಬಿಟ್ಟು ತ್ರಾವೆಂಕೋರಿಗೆ ಓಡಿಹೋಗಿ ಧರ್ಮರಾಜ ರಾಜಾರಾಮವರ್ಮನ ಆಶ್ರಯ ಪಡೆದರು. ಜೀವವೊಂದು ಉಳಿದರೆ ಸಾಕೆಂದು ಕೆಲವರು ಮತಾಂತರಗೊಂಡು ಮಲಬಾರಿನಲ್ಲೇ ಉಳಿದರು. ಊರುಬಿಟ್ಟವರ ಭೂಮಿ ಸ್ಥಳೀಯ ಮಾಪಿಳ್ಳೆಗಳ ವಶವಾಯ್ತು. ಮುಸ್ಲೀಮರಿಗೆ ಹೇಗೂ ಹೈದರನ ಕಾಲದಿಂದಲೂ ತೆರಿಗೆ ಮನ್ನಾ ಮಾಡಲಾಗಿತ್ತಲ್ಲ. ಟಿಪ್ಪುವಿನ ಕಾಲದಲ್ಲಿ ಮಲಬಾರಿನಲ್ಲಿ ಮುಸ್ಲಿಮರ ಸಂಖ್ಯೆ ಜಾಸ್ತಿಯಾಗಿದ್ದು ಮಾತ್ರವಲ್ಲ ಅವರೇ ನಂಬೂದಿರಿ ಜಮೀನ್ದಾರರ ಹೆಚ್ಚಿನ ಭೂಮಿಗೆಲ್ಲ ಬೇನಾಮಿ ವಾರಸುದಾರರಾಗಿ ಸರ್ಕಾರಕ್ಕೆ ಬರುವ ತೆರಿಗೆ ನಿಂತುಹೋಯಿತು. ಮೊದಲೇ ಅವರಿವರ ಮೇಲೆ ತೋಳೇರಿಸಿಕೊಂಡು ಹೋಗಿ ನಷ್ಟದಲ್ಲಿದ್ದ ಟಿಪ್ಪುವಿಗೆ ಕೇರಳದಿಂದ ಬರುವ ಕಂದಾಯದ ಹಣವೂ ಕಡಿಮೆಯಾಗಿ ಖಜಾನೆ ದಿವಾಳಿಯಾಗುವ ಹಂತ ತಲುಪಿತು. ದುಡ್ಡಿನೆದುರು ಜಾತಿಮುಖ ನೋಡಲಾದೀತೇ? ಮಲಬಾರಿನ ಮುಸ್ಲೀಮರು ಇನ್ನುಮುಂದೆ ತೆರಿಗೆ ಕಟ್ಟಬೇಕೆಂದು ಆದೇಶ ಹೊರಡಿಸಿದ. ತೆರಿಗೆ ಕಲೆಕ್ಟರ್ ಮೀರ್ ಇಬ್ರಹಿಂನ ಉಪಟಳವೂ ಮಿತಿಮೀರಿತ್ತು. ಕಂದಾಯ ಕಟ್ಟಲು ಸಾಧ್ಯವಾಗದಿದ್ದವರನ್ನು ಕ್ರೂರವಾಗಿ ದಂಡಿಸಲಾಗುತ್ತಿತ್ತು. ಎಂಥ ನಿರ್ಬಲನಾದರೂ ಸಹಿಸಲಾಗದ ಕಷ್ಟ ಕೊಟ್ಟರೆ ತಿರುಗಿ ಬೀಳದೇ ಇರುತ್ತಾನೆಯೇ? ಅತ್ತನ್ ತಂಗಳ್ ಕುರಿಕ್ಕಳ್ ಎಂಬ ಮಂಜೇರಿಯ ಪ್ರತಿಷ್ಟಿತ ಮುಸ್ಲಿಂ ಮುಖಂಡನ ನೇತೃತ್ವದಲ್ಲಿ ಇಬ್ರಾಹಿಂನ ವಿರುದ್ಧ ಮಾಪಿಳ್ಳೆ ಜನ ಬಂಡೆದ್ದರು.(ಈ ತಂಗಳ್ ಎಂಬುದು ಮಲಬಾರಿನ ಮುಸ್ಲೀಮರಲ್ಲೇ ಕುಲೀನ ಜಾತಿಯ ಹೆಸರು. ಇವರು ಮಾಪಿಳ್ಳೆಗಳಲ್ಲದಿದ್ದರೂ ಇಂದಿಗೂ ಇವರಿಗೆ ಮಲಬಾರಿನ ಮುಸ್ಲಿಂ ಸಮಾಜದಲ್ಲೊಂದು ಗೌರವದ ಸ್ಥಾನಮಾನವಿದೆ. ಇವರ ಆಚಾರ, ವಿಚಾರ, ರೂಢಿಗಳೆಲ್ಲ ಬ್ರಾಹ್ಮಣರನ್ನು ಹೋಲುವುದರಿಂದ ಪ್ರಾಯಶಃ ಹೈದರನ ಕಾಲದಲ್ಲಿ ಇವರು ಮತಾಂತರಗೊಂಡಿದ್ದರೆಂದು ಊಹಿಸಲಾಗುತ್ತದೆ). ವಿಶೇಷವೆಂದರೆ ಹಾಗೆ ಬಂಡೆದ್ದವರಲ್ಲಿ ಹೆಚ್ಚಿನವರೆಲ್ಲ ಮಾಪಿಳ್ಳೆ ಮುಸ್ಲಿಮರೇ. ಕರನಿರಾಕರಣೆಯ ನೆಪದಲ್ಲಿ ಪ್ರತಿಭಟನೆ ತೀವ್ರವಾಗತೊಡಗಿತು. ಮಲಬಾರಿನಲ್ಲಿ ಟಿಪ್ಪುವಿನ ವಿರುದ್ಧ ಮೊದಲ ಬಾರಿಗೆ ದೊಡ್ಡಮಟ್ಟಿನ ದಂಗೆ ಶುರುವಾಗಿದ್ದು ಸ್ಥಳೀಯ ಮುಸ್ಲೀಮರಿಂದ ಎಂಬುದೇ ಆಶ್ಚರ್ಯದ ವಿಚಾರ. ಅದೇ ಸಮಯದ ಕಲ್ಲೀಕೋಟೆಯಲ್ಲಿ ಝಾಮೋರಿನ್ನಿನ ಸೋದರಳಿಯ ರವಿವರ್ಮ ಮೈಸೂರು ಪಡೆಯ ವಿರುದ್ಧ ಗೆರಿಲ್ಲಾ ಯುದ್ಧ ಶುರುಮಾಡಿದ. ಇನ್ನೇನು ಮಲಬಾರು ಟಿಪ್ಪುವಿನ ಕೈತಪ್ಪಿಹೋಗುವುದರಲ್ಲಿತ್ತು. ಹೈದರನ ಬಂಟನೆಂಬ ಕಾರಣಕ್ಕೆ ಯಾವ ಅರ್ಶಾದ್ ಖಾನ್‌ನನ್ನು ಟಿಪ್ಪು ಪದಚ್ಯುತಗೊಳಿಸಿದ್ದನೋ ಅದೇ ಅರ್ಷಾದ್ ಫೀಲ್ಡಿಗಿಳಿದ. ರವಿವರ್ಮನಿಗೆ ದೊಡ್ಡಮೊತ್ತದ ಜಹಗೀರು ನೀಡಿ ಮಾಪಿಳ್ಳೆಗಳಿಗೆ ಅವನ ಸಹಾಯ ಸಿಗದಂತೆ ನೋಡಿಕೊಂಡ. ಇಬ್ರಾಹಿಂನನ್ನು ಶಿಕ್ಷಿಸದಿದ್ದರೆ ಮಲಬಾರನ್ನು  ಶಾಶ್ವತವಾಗಿ ದೂರಮಾಡಿಕೊಳ್ಳಬೇಕಾದ ದಿನ ದೂರವಿಲ್ಲವೆಂದು ಪತ್ರ ಬರೆದು ಟಿಪ್ಪೂವಿಗೆ ಎಚ್ಚರಿಕೆ ಕೊಟ್ಟ. ತಂಗಳ್ ಮತ್ತವನ ಮಗನನ್ನು ಬಂಧಿಸಿ ಶ್ರೀರಂಗಪಟ್ಟಣದ ಜೈಲಲ್ಲಿಟ್ಟರೂ ಮಾಪಿಳ್ಳೆಗಳ ದಂಗೆಯೇನೂ ಕಡಿಮೆಯಾಗಲಿಲ್ಲ. ಆ ಹೋರಾಟದಲ್ಲಿ ೯೦ ಜನ ಮಾಪಿಳ್ಳೆಗಳು ಮೃತಪಟ್ಟರು. ತನ್ನ ರಾಜ್ಯದಲ್ಲಿ ಸ್ವಜಾತಿ ಬಾಂಧವರೇ ತಿರುಗಿ ಬಿದ್ದಿದ್ದು ಟಿಪ್ಪಿವಿನ ಸ್ವಾಭಿಮಾನಕ್ಕೆ ದೊಡ್ಡ ಏಟು ಬಿದ್ದಿತ್ತು. ಬೇರೆ ದಾರಿ ಕಾಣದೇ ಮಲಬಾರಿಗೆ ಓಡಿ ಬಂದ ಟಿಪ್ಪು ಇಬ್ರಾಹಿಂನನ್ನು ಜೈಲಿಗಟ್ಟಿದ. ಅರ್ಷದನನ್ನು ಮತ್ತೆ ಮಲಬಾರಿನ ಉಸ್ತುವಾರಿಯಾಗಿ ನೇಮಿಸಿದನಾದರೂ ಟಿಪ್ಪುವಿನ ಅಡಿ ಕೆಲಸ ಮಾಡಲು ಆತ ತಯಾರಿರಲಿಲ್ಲ. ಹಾಗಾಗಿ ಇವನ ಸಹವಾಸವೇ ಸಾಕೆಂದು ಮೆಕ್ಕಾಗೆ ತೆರಳಿದ. ಮಂಜೇರಿ ದಂಗೆಯನ್ನಡಗಿಸಲು ಯಾವ ಟಿಪ್ಪುವಿನ ಬೀಗಿತ್ತಿ ಅರಕ್ಕಲ್ ಬಿವಿ ಸಹಾಯ ಮಾಡಿದಳೋ ಅವಳೇ ೧೭೯೧ರಲ್ಲಿ ಬ್ರಿಟಿಷರ ಪಡೆ ಸೇರಿಕೊಂಡು ಟಿಪ್ಪುವಿಗೆ ಕೈಕೊಟ್ಟಳು.  ಅತ್ತ ಅತ್ತನ್ ತಂಗಳ್ ಜೈಲಿನಿಂದ ತಪ್ಪಿಸಿಕೊಂಡು ಮಲಬಾರಿಗೆ ತಿರುಗಿ ಬಂದು ಇನ್ನೊಂದು ಸುತ್ತಿನ ಹೋರಾಟಕ್ಕೆ ಸಿದ್ಧನಾದನಾದರೂ ಅಷ್ಟರೊಳಗೆ ಬ್ರಿಟಿಷರು ಟಿಪ್ಪೂವನ್ನು ಸೋಲಿಸಿ ಮಲಬಾರನ್ನು ಕೈವಶಮಾಡಿಕೊಂಡಿದ್ದರು. ತಂಗಳಿನ ಸಾಹಸವನ್ನು ಮೆಚ್ಚಿ ಆತನಿಗೆ ಪೋಲಿಸ್ ಸುಪರಿಂಡೆಂಟ್ ಪದವಿಯನ್ನು ಕಂಪನಿ ದಯಪಾಲಿಸಿತು. ಆದರೆ ತಂಗಳ್ ಕನಸು ಕಂಡಿದ್ದು ಸ್ವತಂತ್ರ ಮಲಬಾರನ್ನು. ಟಿಪ್ಪುವನ್ನೇ ಎದುರಿಸಿದವ ಪರದೇಶಿ ಬ್ರಿಟಿಷರ ಗುಲಾಮನಾಗಿ ಬದುಕುವನೇ? ಸ್ವರಾಜ್ಯಕ್ಕೋಸ್ಕರ ಹೋರಾಡಲು ಕಂಪನಿಯ ವಿರುದ್ಧ ಯುದ್ಧ ಘೋಷಿಸಿದ್ದ ಅಪ್ರತಿಮ ಸ್ವಾತಂತ್ರ್ಯವೀರ ಕೇರಳವರ್ಮ ಪಳಸ್ಸಿರಾಜನೊಡನೆ ಕೈಜೋಡಿಸಿ ಬ್ರಿಟಿಷರಿಗೂ ತಿರುಗಿ ಬಿದ್ದ. ಮೈಸೂರಿನವರು, ಅರಕ್ಕಲ್ ಸುಲ್ತಾನರು, ಕೊಡಗು, ಬ್ರಿಟಿಷ್ ಹೀಗೆ ನಾಲ್ಕೂ ಬದಿ ಬರೀ ಶತ್ರುಗಳನ್ನೇ ಇಟ್ಟುಕೊಂಡು ಕೊನೆಯುಸಿರಿನ ತನಕ ಯಾರಿಗೂ ತಲೆಬಾಗದೇ ಹೋರಾಡಿದ ಪಳಸ್ಸಿರಾಜನ ರೋಚಕ ಕಥೆಯನ್ನ ಮುಂದೊಮ್ಮೆ ನೋಡೋಣ.
ಇತಿಹಾಸದಲ್ಲಿ ಸ್ವಲ್ಪ ಹಿಂದೆ ಬರೋಣ. ೧೭೫೭ರ ಸುಮಾರಿಗಿರಬಹುದು. ಹೈದರ್‌‌ ಮೊದಲು ಮಲಬಾರಿನತ್ತ  ದೃಷ್ಟಿ ಹಾಯಿಸಿದ್ದು. ಅದೇ ಕಾಲದಲ್ಲಿ ಹಲವು ಘಟನೆಗಳು ಕೇರಳದ ರಾಜಕೀಯದಲ್ಲಿ ವಿಚಿತ್ರ ತಿರುವುಗಳನ್ನು ನೀಡಿದ್ದವು. ಹಲವು ಶತಮಾನಗಳ ಆಳ್ವಿಕೆಯ ನಂತರ ಝಾಮೋರಿನ್ನರು ಅಧಿಕಾರ ಕಳೆದುಕೊಂಡಿದ್ದರು. ಝಾಮೋರಿನ್ ಅರಸ ಆತ್ಮಹತ್ಯೆ ಮಾಡಿಕೊಂಡಿದ್ದರೆ ಪರಿವಾರದವರು ತಿರುವಾಂಕೂರು ರಾಜರ ಆಶ್ರಯ ಪಡೆದರು. ಕೊಚ್ಚಿ ರಾಜ ಡಚ್ಚರ ಜೊತೆ ಒಪ್ಪಂದ ಮಾಡಿಕೊಂಡಿದ್ದರಿಂದ ಸ್ವಲ್ಪ ಬಲಾಢ್ಯನಾಗಿಯೇ ಇದ್ದ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಪದ್ಮನಾಭನ ಕೃಪೆಯಿಂದ ತಿರುವಾಂಕೂರಿನಲ್ಲಿ ಶಾಂತಿ, ಸುಭಿಕ್ಷೆ ನೆಲೆಸಿತ್ತು. ಅದನ್ನು ಸಹಿಸದ ಡಚ್ಚರು ಆಗಾಗ ಕಾಲುಕೆರೆದು ತಿರುವಾಂಕೂರಿನ ಜೊತೆ  ಜಗಳ ಮಾಡಲು ಸಮಯ ಕಾಯುತ್ತಿದ್ದರು. ಕೊಟ್ಟಾರಕ್ಕರ ಅರಸನಿಗೆ ತಿರುವಾಂಕೂರಿನ ವಿರುದ್ಧ ದಂಗೆಯೇಳಲು ಒಳಗಿಂದೊಳಗೇ ಪ್ರೋಸಾಹಿಸಿದರೂ ಆತ ಪದ್ಮನಾಭದಾಸರನ್ನು ಎದುರು ಹಾಕಿಕೊಳ್ಳುವ ಧೈರ್ಯ ಮಾಡಲಿಲ್ಲ. ಕೊನೆಗೊಮ್ಮೆ ಧೈರ್ಯ ಮಾಡಿ ಡಚ್ಚರೇ ತಿರುವಾಂಕೂರಿನ ಮಾರ್ತಾಂಡವರ್ಮನ ವಿರುದ್ಧ ದಂಡೆತ್ತಿ ಹೋದರೂ ಸೋತು ಮುಖಭಂಗ ಅನುಭವಿಸಿದರು. ಇದರ ನಂತರ ಡಚ್ಚರ ಆರ್ಥಿಕ ಪರಿಸ್ಥಿತಿ ಸಾಕಷ್ಟು ಹದಗೆಟ್ಟಿತು. ಸೈನಿಕರಿಗೆ ಸರಿಯಾಗಿ ಸಂಬಳ ಸವಲತ್ತುಗಳಿರಲಿಲ್ಲ. ಉತ್ತರದಲ್ಲಿ ಬ್ರಿಟಿಷರು ಪ್ರಬಲರಾಗುತ್ತಿದ್ದುದರಿಂದ ಬೇರೆ ದಾರಿಕಾಣದೇ ಕ್ಯಾಪ್ಟನ್ ಡಿ ಲ್ಯಾನ್ನೋಯ್‌ನ ನೇತೃತ್ವದಲ್ಲಿ ಡಚ್ಚರ ದೊಡ್ಡದೊಂದು ತುಕಡಿ ತಿರುವಾಂಕೂರಿನೊಡನೆ ವಿಲೀನಗೊಂಡಿತು. ತಿರುವಾಂಕೂರಿನತ್ತ ಸ್ನೇಹಹಸ್ತ ಚಾಚಿಸ ಡಚರು ಕ್ರಾಂಗಾನೂರ್ ಮತ್ತು ಆಯಕ್ಕೊಟ್ಟ ಕೋಟೆಗಳನ್ನು ತಿರುವಾಂಕೂರಿಗೆ ಬಿಟ್ಟುಕೊಟ್ಟರು. ಕೊಚ್ಚಿಯ ರಾಜನೂ ಮಾರ್ತಾಂಡವರ್ಮನೊಡನೆ ಸಂಧಿ ಮಾಡಿಕೊಂಡು ತೆಪ್ಪಗಾದ. ಇಷ್ಟಾದರೂ ಉತ್ತರದಲ್ಲಿ ಶತ್ರುಗಳು ತಿರುವಾಂಕೂರಿನತ್ತ ಮುಗಿಬೀಳಲು ಹೊಂಚು ಹಾಕುತ್ತಿದ್ದರು. ಬ್ರಿಟಿಷರು, ಪೋರ್ಚುಗೀಸರು, ಡಚ್ಚರು ನಂತರ ಮಲಬಾರಿಗೆ ಮೈಸೂರಿನವರ ಆಗಮನವೂ ಆಗಿತ್ತು. ಝಾಮೋರಿನ್ನರು ತಿರುವಾಂಕೂರಿನ ವಿರುದ್ಧ ಕತ್ತಿಮಸೆದರೂ ಕೊನೆಗೆ ಮೈಸೂರಿನವರೆದುರು ಸೋತಾಗ ರಕ್ಷಣೆ ಪಡೆಯಲು ತಿರುವಾಂಕೂರೇ ಬೇಕಾಯಿತು. ೧೭೫೮ರಲ್ಲಿ ಮಾರ್ತಾಂಡವರ್ಮನ ನಂತರ ಪಟ್ಟಕ್ಕೆ ಬಂದ ರಾಜಾ ರಾಮವರ್ಮ ಕ್ಯಾಪ್ಟನ್ ಲ್ಯಾನ್ನೋಯನಿಗೆ ರಾಜ್ಯದ ಉತ್ತರದಲ್ಲೊಂದು ಚೀನಾದ ಮಹಾಗೋಡೆಯ ಮಾದರಿಯ ರಕ್ಷಣಾ ವ್ಯವಸ್ಥೆ ನಿರ್ಮಿಸಲು ಸೂಚಿಸಿದ. ೨೦ ಅಡಿ ಅಗಲ, ೫೦ ಅಡಿ ಎತ್ತರದ ಪಶ್ಚಿಮದಲ್ಲಿ ಪಳ್ಳಿಪುರಂ ಸಮುದ್ರತೀರದಿಂದ ಪೂರ್ವದ ಅಣ್ಣಾಮಲೈ ಪರ್ವತಶ್ರೇಣಿಗಳ ತನಕದ ೪೦ ಮೈಲುದ್ದದ ’ನೆಡುಂಕೊಟ್ಟ’ ಎಂದು ಕರೆಯಲ್ಪಡುವ ತಡೆಗೋಡೆಯೊಂದು ನಿರ್ಮಾಣವಾಯಿತು. ಇದು ಪ್ರತಿ ಕಿಲೋಮೀಟರಿಗೊಂದು ಮದ್ದುಗುಂಡುಗಳನ್ನು ತುಂಬಿಡಲು ಶಸ್ತ್ರಾಗಾರ, ಸೈನಿಕರ ವಾಸಕ್ಕೆ ತಂಗುದಾಣ, ಶತ್ರುಗಳ ಮೇಲೆ ದಾಳಿಮಾಡುವ ವೇಳೆ ಅಡಗಿ ಕೂರಲು ಅಗತ್ಯವಾದ ಬಂಕರ್‌ಗಳಂಥ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿತ್ತು. ಗೋಡೆಯ ಉತ್ತರ ಭಾಗದಲ್ಲಿ ೧೬ ಅಡಿ ಆಳದ ಹಳ್ಳ ತೋಡಿ ಮುಳ್ಳುಗಂಟಿಗಳು, ವಿಷಸರ್ಪಗಳು, ಚೂಪುಮೊನೆಯ ಆಯುಧಗಳನ್ನು ತುಂಬಿಸಲಾಯ್ತು. ದಕ್ಷಿಣದಲ್ಲಿ ಶಸ್ತ್ರಾಸ್ತ್ರ ಮತ್ತು ಸೈನಿಕರ ತಿರುಗಾಟಕ್ಕನುಕೂಲವಾಗುವಂತೆ ದೊಡ್ಡದೊಂದು ರಸ್ತೆ ನಿರ್ಮಿಸಲಾಯ್ತು. ಚೀನಾದ ಮಹಾಗೋಡೆಯಷ್ಟು ದೊಡ್ಡದಲ್ಲದಿದ್ದರೂ ಅದೇ ಮಾದರಿಯ ಅಭೇದ್ಯ ರಚನೆಯೊಂದು ನಮ್ಮಲ್ಲಿಯೂ ಇತ್ತು ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿಯದ ವಿಷಯ. ೧೭೭೪ರಲ್ಲಿ ಕಲ್ಲೀಕೋಟೆಯ ಝಾಮೋರಿನ್ ಸಾಮ್ರಾಜ್ಯ ಹೈದರನ ದಾಳಿಯಿಂದ ನಾಶವಾಗಿ ಮಧ್ಯ ಕೇರಳ ಬಲಹೀನಗೊಂಡಿತ್ತು. ಅತ್ತ ಸತತ ಯುದ್ಧಗಳಿಂದ ದಿವಾಳಿಯಾಗಿದ್ದ ಹೈದರಾಲಿ ತ್ರಾವೆಂಕೂರನ್ನು ವಶಪಡಿಸಿಕೊಳ್ಳಲು ನೋಡಿದ. ಅದಷ್ಟು ಸುಲಭದ ಕೆಲಸವಲ್ಲವೆಂದು ಅವನಿಗೂ ಗೊತ್ತು. ಹಾಗಾಗಿಯೇ ೧೫ ಲಕ್ಷ ರೂಪಾಯಿ, ೩೦ ಆನೆಗಳನ್ನು ತನಗೆ ಬಹುಮಾನವಾಗಿ ಕೊಡದಿದ್ದರೆ ಮಲಬಾರಿಗಾದ ಗತಿಯೇ ತಿರುವಾಂಕೂರಿಗೂ ಕಾದಿದೆ ಎಂದು ರಾಮವರ್ಮನಿಗೆ ಬೆದರಿಕೆ ಪತ್ರ ಬರೆದ. ಅದಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಿದ ರಾಮವರ್ಮ ಬಹುಮಾನ ಪಡೆಯಬೇಕೆಂದಿದ್ದರೆ ಮೊದಲು ಮಲಬಾರಿನ ಸ್ಥಳೀಯ ಆಡಳಿತಗಾರರನ್ನು ಪುನರ್ಸ್ಥಾಪಿಸಿ ಕೇರಳದಿಂದ ತೊಲಗುವಂತೆ ಎಚ್ಚರಿಕೆ ನೀಡಿದ. ಸಿಟ್ಟಿಗೆದ್ದ ಹೈದರ್ ವರ್ಷಗಳ ಕಾಲ ತಿಪ್ಪರಲಾಗ ಹೊಡೆದರೂ ನೆಡುಂಕೊಟ್ಟ ಗೋಡೆಯನ್ನು ದಾಟಿ ತಿರುವಾಂಕೂರನ್ನು ಪ್ರವೇಶಿಸಲಾಗಲಿಲ್ಲ. 
ನೆಡುಂಕೊಟ್ಟ ಗೋಡೆಯ ಅವಶೇಷಗಳು

       ಆ ಗೋಡೆ ಈಗಿಲ್ಲ. ಮುಖ್ಯವಾಗಿ ಕೆಮ್ಮಣ್ಣು, ಕಲ್ಲು, ಸುಣ್ಣದಕಲ್ಲುಗಳನ್ನು ಬಳಸಿ ಕಟ್ಟಿದ ಇದು ಶತ್ರುಗಳಿಗಿಂತಲೂ ಮುಖ್ಯವಾಗಿ ಕಾಲನ ಹೊಡೆತಕ್ಕೆ ಸಿಕ್ಕು ಧರಾಶಾಹಿಯಾಗಿದೆ. ಅದರ ಅವಶೇಷಗಳು ಒಂದೆರಡು ಕಡೆ ಮಾತ್ರ ಈಗ ಕಾಣಸಿಗಬಹುದಷ್ಟೆ. ಕೊಚ್ಚೀನಿನ ದಕ್ಷಿಣಕ್ಕೆ ಮುರಿಂಗೂರ್ ಕೊಟ್ಟಮುರಿ ಎಂಬಲ್ಲಿ ನ್ಯಾಶನಲ್ ಹೈವೆಯ ಹತ್ತಿರದ ದಿಬ್ಬವು ನೆಡುಂಕೋಟದ ಭಾಗವಾಗಿತ್ತೆನ್ನಲಾಗಿದೆ. ಆದರೆ ಕೊಚ್ಚಿ ಮತ್ತು ತ್ರಿವೇಂಡ್ರಮ್ ಮಧ್ಯೆ ನೆಡುಂಕೋಟ ಹಾದು ಹೋದ ಪ್ರದೇಶಗಳೆಲ್ಲ ಅದೇ ಹೆಸರಿನಿಂದ ಇಂದಿಗೂ ಕರೆಯಲ್ಪಡುತ್ತವೆ. ಕೃಷ್ಣಂಕೋಟ(ಕೃಷ್ಣನ್‌ನ ಕೋಟೆ), ಕೊಟ್ಟಮುರಿ(ಕೋಟೆಭಾಗ), ಕೊಟ್ಟಮುಕ್ಕು(ಕೋಟೆಯಂಚು), ಕೊಟ್ಟವಳಿ(ಕೋಟೆದಾರಿ) ಈ ಊರುಗಳೆಲ್ಲ ಒಂದು ಕಾಲದಲ್ಲಿ ನೆಡುಂಕೊಟ್ಟದ ಭಾಗಗಳಾಗಿದ್ದವೇ.
       ೧೭೮೯ರಲ್ಲಿ ಅಪ್ಪ ಮಾಡಲಾಗದ್ದನ್ನು ತಾನು ಮಾಡಿಯೇ ತೀರುತ್ತೇನೆಂಬ ಹಠದಿಂದ ಟಿಪ್ಪು ಹೊರಟ. ತಿರುವಾಂಕೂರಿನ ಮೇಲೆ ಹಗೆ ಸಾಧಿಸಲು ಏಳೇಂಟು ವರ್ಷ ಕಷ್ಟಪಟ್ಟಿದ್ದ ಬೇರೆ. ೨೦೦೦೦ ಸೈನಿಕರ ಪ್ರಚಂಡ ಸೇನಾಬಲದೊಡನೆ ನೆಡುಂಕೊಟ್ಟವನ್ನು ಮುತ್ತಿದ. ಬರೀ ೬ ಫಿರಂಗಿಗಳು ಮತ್ತು ೫೦೦ ಜನರಿದ್ದ ತ್ರಾವೆಂಕೂರಿನ ಪರಯೂರು ಬೆಟಾಲಿಯನ್ನಿನ ಶೌರ್ಯದೆದುರು ಟಿಪ್ಪುವಿನ ಸೈನ್ಯ ನಿಲ್ಲದಾಯ್ತು. ಸೋತರೇನಂತೆ, ನರಿ ಬುದ್ಧಿ ಬಿಡಲಾದೀತೇ? ಟಿಪ್ಪು ಮಹಾನ್ ಚಾಲಾಕಿ.  ಓಡಿ ಹೋದಂತೆ ಮಾಡಿ ೨೮ ಡಿಸೆಂಬರ್ ೧೭೮೯ರ ರಾತ್ರೋರಾತ್ರಿ ರಕ್ಷಣಾವ್ಯವಸ್ಥೆ ಕಡಿಮೆಯಿದ್ದ ವಾಯುವ್ಯ ಭಾಗದಲ್ಲಿ ಈಗಿನ ಚಾಲಕ್ಕುಡಿಯ ಹತ್ತಿರದ ನೆಡುಂಕೊಟ್ಟವನ್ನು ಭೇದಿಸಿ ಒಳನುಗ್ಗಿದ. ಮುರಿಂಗೂರಿನಲ್ಲಿ ಮೈಸೂರು ಮತ್ತು ತಿರುವಾಂಕೂರು ಪಡೆಗಳು ಎದುರುಬದುರಾದವು. ಮೈಸೂರು ಪಡೆಗೆ ಟಿಪ್ಪುವೇ ಮುಂದಾಳತ್ವ ವಹಿಸಿದ್ದರೆ ತಿರುವಾಂಕೂರಿನ ಸೈನ್ಯವನ್ನು ದಿವಾನ್ ಕೇಶವದಾಸ ಪಿಳ್ಳೈ ಮುನ್ನಡೆಸಿದ್ದ. ಈ ಯುದ್ಧ ನೆಡುಂಕೊಟ್ಟ ಕದನವೆಂದೇ ಇತಿಹಾಸ ಪ್ರಸಿದ್ಧವಾಯ್ತು. ತಿರುವಾಂಕೂರಿನ ನಾಯರ್ ಸೈನಿಕರು ಮೈಸೂರಿನವರಿಗೆ ಸಾಯುವಂತೆ ಹಿಡಿದು ಬಡಿದ ಕಥೆ ನೀವು ಹಿಂದಿನ ಲೇಖನದಲ್ಲಿ ಓದಿಯೇ ಇದ್ದೀರಿ. ಸ್ವತಃ ಟಿಪ್ಪುವೇ ಕಾಲುಮುರಿದುಕೊಂಡು ಕುಂಟುನಾಯಿಯಂತೆ ಕುಯ್ಯೋಮರ್ರೋ ಎನ್ನುತ್ತಾ ತಿರುಗಿ ನೋಡದೆ ಮೈಸೂರಿಗೆ ಓಡಿಬಂದ.
       ತ್ರಾವೆಂಕೂರನ್ನು ಗೆದ್ದು ಈಡೀ ದಕ್ಷಿಣ ಭಾರತವನ್ನು ಇಸ್ಲಾಮಿಕ್ ಆಡಳಿತದ ಸುಲ್ತಾನ್-ಎ-ಖುದಾಬಾದ್ ಮಾಡುವ ಟಿಪ್ಪುವಿನ ಆಸೆ ಕೊನೆಗೂ ಈಡೇರಲಿಲ್ಲ. ಅವನಿಗೆ ದೆಹಲಿಯನ್ನೂ ಗೆಲ್ಲುವ ಆಸೆಯಿತ್ತಂತೆ. ಏನು ಮಾಡುವುದು? ಶ್ರೀರಂಗಪಟ್ಟಣದಲ್ಲಿ ಬಾಗಿಲು ಮುಚ್ಚಿ ಕೂತಿದ್ದವನನ್ನು ಬ್ರಿಟೀಷರಂತೂ ಬೋನಲ್ಲಿ ಬಿದ್ದ ಇಲಿಯನ್ನು ಬಡಿಯುವಂತೆ ಬಡಿದೆಸೆದರು. ಆದರೇನಂತೆ, ಇನ್ನೂರು ವರ್ಷಗಳ ನಂತರ ಟಿಪ್ಪುವಿನ ಪುನರುತ್ಥಾನವಾಗಿದೆ. ಔರಂಗಜೇಬ, ಮಹಮ್ಮದ್ ಘೋರಿ, ತೈಮೂರ, ನಾದಿರ್ ಷಾಗಳ ಆತ್ಮಗಳೂ ಗೋರಿಯಿಂದೆದ್ದು ಬಂದು ಸರ್ಕಾರಿ ಜಯಂತಿ ಆಚರಿಸಿಕೊಳ್ಳಲು ಹಪಪಿಸುತ್ತಿವೆ. ರೋಲ್ ಮಾಡೆಲ್ಲುಗಳ ಹುಡುಕಾಟದಲ್ಲಿರುವವರಿಗೆ, ನಾಟಕ ಬರೆಯುವವರಿಗೆ, ಪೀಠದ ಪಡೆಯಬಯಸುವವರಿಗೆ, “ಬಾಂಧವ”ರನ್ನು ತೃಪ್ತಿಪಡಿಸುವವರಿಗೆ ಸುಗ್ಗಿ ಕಾಲ.
ಜೈ ಕರ್ನಾಟಕ ಮಾತೆ, ವಂದೇಮಾತರಂ, ಟಿಪ್ಪೂ ಸುಲ್ತಾನ್.....
(ಹೆಚ್ಚಿನ ಮಾಹಿತಿಗಾಗಿ ಪರಿಶೀಲಿಸಿ: ಕೊಚ್ಚಿಯ ದಿವಾನನಾಗಿದ್ದ ಕೊಟ್ಟಾರತ್ತಿಲ ಶುಂಗೂನಿ ಮೆನನ್‌ನ ಐತಿಹ್ಯಮಾಲಾ, ತಿರುವಾಂಕೂರಿನ ದಿವಾನ್ ಬಹದ್ದೂರ್ ವಿ. ನಾಗಮಯ್ಯನ ತ್ರಾವೆಂಕೂರ್ ಸ್ಟೇಟ್ ಮಾನ್ಯುಯೆಲ್)

Monday, November 16, 2015

ಟಿಪ್ಪುವಿನ ಹೆಂಡತಿ

ಉನ್ನಿಯಾರ್ಚೆಯ ಪೇಂಟಿಂಗ್
   
     ಟಿಪ್ಪುವನ್ನು ಒಂದು ಕಾರಣಕ್ಕಾದರೂ ಮೆಚ್ಚಲೇಬೇಕು. ಸತ್ತ ಇನ್ನೂರು ಚಿಲ್ಲರೆ ವರ್ಷಗಳ ನಂತರವೂ ರಾಜ್ಯಕ್ಕೆ ರಾಜ್ಯವನ್ನೇ ಹೊತ್ತಿ ಉರಿಸುವ ಶಕ್ತಿ ಆ ಹೆಸರಿಗಿದೆಯೆಂದ ಮೇಲೆ ಸುಮ್ಮನೆಯೇ? ಇನ್ನು ಬದುಕಿದ್ದಾಗ ಆತ ಇನ್ನೇನೇನು ಉರಿಸಿರಬಹುದು!
         ಟಿಪ್ಪು ಕನ್ನಡ ಪರವೋ, ವಿರೋಧಿಯೋ? ಹಿಂದೂ ವಿರೋಧಿಯೋ, ಪ್ರೇಮಿಯೋ? ಆತ ಒಡೆದ ಮಂದಿರಗಳ ಸಂಖ್ಯೆ ಎಂಟು ಸಾವಿರವೋ, ಮೂವತ್ತು ಸಾವಿರವೋ ಎಂಬಿತ್ಯಾದಿ ಮುಗಿಯದ ಚರ್ಚೆಗಳು ಲೆಕ್ಕವಿಲ್ಲದಷ್ಟು ಬಾರಿ ನಮ್ಮಲ್ಲಿ ನಡೆದಿವೆ. ನಡೆಯುತ್ತಲೇ ಇವೆ. ಟಿಪ್ಪುವಿನ ಡೇಟ್ ಆಫ್ ಬರ್ತ್ ಕೂಡ ಗೊತ್ತಿಲ್ಲದವರು ಆತ ಶ್ರೀರಂಗಪಟ್ಟಣದ ಹುಣಸೆ ತೋಪಿನಲ್ಲಿ ಬರೋಬ್ಬರಿ ೭೦೦ ಮೇಲುಕೋಟೆ ಬ್ರಾಹ್ಮಣರನ್ನು ನೇತು ಹಾಕಿ ಕೊಂದ ನರಕ ಚತುರ್ದಶಿಯ ದಿನದಂದೇ ಬರ್ತಡೇ ಆಚರಿಸಿಬಿಟ್ಟರಲ್ಲಾ, ಛೇ....ಇಂಥವರೆಲ್ಲ ಆಳುತ್ತಿರುವಾಗ ಟಿಪ್ಪು ಮುಂದೊಂದು ದಿನ ರಾಷ್ಟ್ರೀಯ ಮಾತ್ರವಲ್ಲ ಅಂತರ್ರಾಷ್ಟ್ರೀಯ ನಾಯಕನಾದರೂ ಆಗಬಹುದು. ಆ ಚರ್ಚೆಗಳೆಲ್ಲ ಅತ್ಲಾಗಿರಲಿ. ನಿನ್ನೆಮೊನ್ನೆಯ ಟಿಪ್ಪುವಿನ ಗಲಾಟೆಯ ಮಧ್ಯೆದಲ್ಲಿ ಸಡನ್ನಾಗಿ ನೆನಪಾದವಳು ಅವಳು. ನಾನವಳನ್ನು ಓದಿ ಮರೆತು ಬಹಳ ಕಾಲವಾಗಿತ್ತು. ಆದರೆ ಕಳೆದ ಇನ್ನೂರೈವತ್ತು ವರ್ಷಗಳಲ್ಲಿ ಅವಳ ಹೆಸರು ಕೇಳದ ಮಲಯಾಳಿ ಹುಟ್ಟಿರಲಿಕ್ಕಿಲ್ಲ. ಅವಳ ಕತೆಯನ್ನಿಟ್ಟು ಮಾಡಿದ ಚಿತ್ರಗಳೆಲ್ಲ ಬಾಕ್ಸಾಫೀಸನ್ನು ಚಿಂದಿ ಉಡಾಯಿಸಿವೆ. ಅವಳ ಬಗ್ಗೆ ಬಂದ ಕಾದಂಬರಿಗಳನ್ನೆಲ್ಲ ಕೇರಳಿಗರು ಚಪ್ಪರಿಸಿ ಓದಿದ್ದಾರೆ. ಅವಳ ಕಳರಿಪಟ್ಟಿನ ಹೋರಾಟದ ಐತಿಹ್ಯಗಳು ಇಂದಿಗೂ ಮಲಯಾಳಿಗರ ಮೈರೋಮಾಂಚನಗೊಳಿಸುತ್ತವೆ. ಈಗ್ಗೆರಡು ವರ್ಷಗಳ ಹಿಂದೆ ಬಂದ ಅವಳ ಕುಟುಂಬದ ಆರನೇ ತಲೆಮಾರಿನ ಮಾನಂತೇರಿ ಭಾಸ್ಕರನ್ ಬರೆದ ’ಕಳತ್ತನಾಟನ್ ನೊಂಬರಂಗಳ್’ ಎಂಬ ಕಾದಂಬರಿ ಕೇರಳದಲ್ಲಿ ಮತ್ತೆ ಬಿಸಿಬಿಸಿ ಚರ್ಚೆ ಹುಟ್ಟುಹಾಕಿತ್ತು. ಮಳಯಾಳಿ ಪೆಣ್ಕುಟ್ಟಿಗಳ ಸಾರ್ವಕಾಲಿಕ ಮಹಿಳಾ ಐಕಾನ್ ಆಗಿ ನಿಂತವಳವಳು. ಖ್ಯಾತ ಮಲಯಾಳಿ ಲೇಖಕ MT ವಾಸುದೇವನ್ ನಾಯರ್ ಬರೆದ ಕಥೆಯನ್ನಾಧರಿಸಿ ತಯಾರಾದ ಮಮ್ಮುಟ್ಟಿಯ ಅವಿಸ್ಮರಣೀಯ ಅಭಿನಯದ ’ಒರು ವಡಕ್ಕನ್ ವೀರಗಥಾ’ ಚಿತ್ರ ನೋಡಿದವರಾಗಿದ್ದರೆ ಅವಳ ಪಾತ್ರಮಾಡಿದ ಮಾಧವಿಯನ್ನು ನೀವು ಮರೆಯಲು ಸಾಧ್ಯವೇ ಇಲ್ಲ. ಹೌದು, ಅವಳು ಉನ್ನಿಯಾರ್ಚ. ಚೆಕವರ ಮನೆತನದ ಈ ಶೂರ ವೀರ ಕತ್ತಿರಾಣಿಯ ಕಥೆ ತಲೆಮಾರಿಂದ ತಲೆಮಾರುಗಳಿಗೆ ಮುಂದುವರೆದು ಇಂದಿಗೂ ಅಜ್ಜಿಕಥೆಗಳಲ್ಲಿ, ವಡಕ್ಕನ್ ಪಾಟ್ಟುಗಳೆಂಬ ಹಾಡುಗಬ್ಬಗಳಲ್ಲಿ ಬಂದುಹೋಗುತ್ತವೆ. ಅದರಲ್ಲೆಷ್ಟು ಸತ್ಯ, ಎಷ್ಟು ಸುಳ್ಳೆಂದು ತಲೆಕೆಡಿಸಿಕೊಂಡವರಿಲ್ಲ. ಅಷ್ಟರಮಟ್ಟಿಗೆ ಉನ್ನಿಯಾರ್ಚಾ ಫೇಮಸ್. 
ಕಳತ್ತನಾಟನ್ ನೊಂಬರಂಗಳ್ ಕಾದಂಬರಿ
ಒರು ವಡಕ್ಕನ್ ವೀರಗಥಾ
ಮಲಯಾಳ ಚಿತ್ರರಂಗದ ಮರಯಲಾಗದ ಸ್ತ್ರೀಪಾತ್ರಗಳಲ್ಲೊಂದು, ಉನ್ನಿಯಾರ್ಚೆಯಾಗಿ ಮಾಧವಿ

       MT ವಾಸುದೇವನ್ ನಾಯರ್ ಬರೆದ ಉನ್ನಿಯಾರ್ಚಾ ಮತ್ತವಳ ಪ್ರಿಯಕರ ಚಂದುವಿನ ಪಾತ್ರಗಳನ್ನಾಧರಿಸಿದ ಕಥೆಯಾದ ’ಒರು ವಡಕ್ಕನ್ ವೀರಗಥಾ’ ತುಂಬ ಹಿಂದೆಯೇ ನೋಡಿದ್ದೇನಾದರೂ ಉನ್ನಿಯಾರ್ಚೆಯ ಬಗ್ಗೆ ನನಗಷ್ಟು ಮಾಹಿತಿಯಿರಲಿಲ್ಲ. ಅವಳ ಬಗೆಗಿರುವ ಹಲವು ಹತ್ತು ಕಥೆಗಳಲ್ಲಿ ಅದೂ ಒಂದಷ್ಟೆ. ಕೆಲ ವರ್ಷಗಳ ಹಿಂದೆ ನಡಪುರಮ್ ಎಂಬ ಊರಿಗೆ ಹೋಗಿದ್ದಾಗ ಅಲ್ಲಿಂದ ಕಲ್ಲಾಚಿ ಎಂಬ ಸ್ಥಳಕ್ಕೆ ಹೋಗುವ ರಸ್ತೆಗೆ(ಕಲ್ಲಾಚಿ ಆವೋಲಮ್ ರಸ್ತೆ) ಮುಸ್ಲೀಮರು ಟಿಪ್ಪು ಸುಲ್ತಾನ್ ರಸ್ತೆ ಎಂದು ಕರೆದರೆ ಹಿಂದುಗಳು ಉನ್ನಿಯಾರ್ಚಾ ರಸ್ತೆ ಎಂದು ಕರೆಯುತ್ತಿದ್ದರು. ಅದೇನಪ್ಪಾ ಒಂದೇ ರಸ್ತೆಗೆ ಎರಡೆರಡು ಹೆಸರು ಎಂದುಕೊಂಡು ಊರವರನ್ನು ಕೇಳಿದರೆ ಆ ರಸ್ತೆಯನ್ನು ’ಪುತ್ತೂರಮ್’ ಮನೆತನದ ಮೇಲೆ ದಾಳಿಮಾಡಲು ನಿರ್ಮಿಸಿದವನು ಟಿಪ್ಪು ಸುಲ್ತಾನನಂತೆ. ಹಾಗಾಗಿ ಮುಸ್ಲೀಮರು ಅದಕ್ಕೆ ಟಿಪ್ಪುವಿನ ಹೆಸರಿಟ್ಟರು. ಅವನನ್ನೆದುರಿಸಿ ಹೋರಾಡಿದ ಉನ್ನಿಯಾರ್ಚೆಯ ನೆನಪಿಗೆ ಹಿಂದೂಗಳು ಆ ರಸ್ತೆಯನ್ನು ಅವಳ ಹೆಸರಿನಿಂದ ಕರೆದಳು. ಟಿಪ್ಪುವಿನ ಗಲಾಟೆಯ ಮಧ್ಯೆ ಅವಳು ನೆನಪಾದದ್ದೇಕೆಂದು ತಿಳಿಯಿತಲ್ಲ!
        ಹದಿನಾರನೇ ಶತಮಾನದಿಂದೀಚೆ ಮಲಬಾರಿನ ಚೆಕ್ಕನ್ ಅಥವಾ ಚೆಕವರ ಮನೆತನ ಯುದ್ಧಕಲೆಗಳಲ್ಲಿ ಬಹಳಷ್ಟು ಹೆಸರುವಾಸಿಯಾದುದಾಗಿತ್ತು. ಇದೇ ವೀರ ಮನೆತನದ ಪುತ್ತೂರಮ್ ವೀಡಿನ ಅಯ್ಯಪ್ಪ ಚೆಕವರನಿಗೆ ಅರೊಮಳ್ ಎಂಬ ಮಗ ಮತ್ತು ಉನ್ನಿಯಾರ್ಚ ಎಂಬ ಮಗಳು. ಆಕೆ ಹುಟ್ಟಿದ್ದು ೧೭೬೯ರಲ್ಲಿ ಮತ್ತು ಕುಞಿರಾಮನ್ನನನ್ನು ಮದುವೆಯಾದದ್ದು ೧೭೮೪ರಲ್ಲಿ ಎನ್ನಲಾಗುತ್ತದೆ. ಒಮ್ಮೆ ಅವರಿಬ್ಬರೂ ’ಅಲ್ಲಿಮಲರ್ ಕಾವು’ವಿನಲ್ಲಿ ನಡೆಯುತ್ತಿರುವ ಜಾತ್ರೆಯನ್ನು ನೋಡಲು ಹೋಗುತ್ತಿದ್ದರಂತೆ. ಆಗೆಲ್ಲ ಒಂದೂರಿಂದ ಇನ್ನೊಂದೂರಿಗೆ ತೆರಳಲು ಕಾಡುಹಾದಿಯನ್ನೇ ಹಿಡಿಯಬೇಕಿತ್ತು(ದ್ವಂದ್ವವೆಂದರೆ ಆ ಭಾಗದ ಮೊದಲ ರಸ್ತೆ ನಿರ್ಮಿಸಿದವನು ಟಿಪ್ಪು ಸುಲ್ತಾನ). ದಾರಿಮಧ್ಯದಲ್ಲಿ ಮೋಪ್ಳಾದ ಮಾಪಿಳ್ಳೆ ಡಕಾಯಿತರು ಎದುರಾದರು. ಪುಕ್ಕಲು ಕುಞಿರಾಮ ಹೆಂಡತಿಯೊಬ್ಬಳನ್ನೇ ಬಿಟ್ಟು ಕಾಲಿಗೆ ಬುದ್ಧಿ ಹೇಳಿದ್ದ. ಡಕಾಯಿತರ ವಿರುದ್ಧ ತಿರುಗಿ ಬಿದ್ದ ಉನ್ನಿಯಾರ್ಚ ತನ್ನೊಂದಿಗೆ ಯಾವಾಗಲೂ ಇಟ್ಟುಕೊಳ್ಳುತ್ತಿದ್ದ ಉರುಮಿಯಿಂದ ಒಬ್ಬನನ್ನೂ ಬಿಡದೇ ಸೆದೆಬಡಿದಳಂತೆ. ಆ ಘಟನೆಯ ನಂತರ ಇವಳಿಗೆ ಹೆದರಿ ಸುತ್ತಲಿನ ಊರುಗಳಿಗೆ ನುಗ್ಗಿ ಹಿಂಸಿಸುತ್ತಿದ್ದ ಡಕಾಯಿತರು ಅಲ್ಲಿಂದ ಕಾಲ್ಕಿತ್ತರು. ಜೊತೆಗೆ ಇದೇ ಘಟನೆಯಿಂದ ಮಲಬಾರಿನಲ್ಲೆಲ್ಲ ಅವಳ ಖ್ಯಾತಿ ಹರಡಿತು. ಕುಟ್ಟಿಪುರಂನ ದೇಗುಲದೆದುರು ಬ್ರಿಟಿಷರ ಜೊನಕಂಸ್‌ರ ಪಡೆಯನ್ನು(ಬ್ರಿಟಿಷರಿಗೆ ಶೂದ್ರ ಸ್ತ್ರೀಯರಲ್ಲಿ ಹುಟ್ಟಿದ ಮಕ್ಕಳು) ದೇವಸ್ಥಾನದ ಕೆರೆಯ ನೀರಿನಲ್ಲದ್ದಿದ ರುಮಾಲಿನಿಂದಲೇ ಹೊಡೆದಾಡಿ ಸೋಲಿಸಿದ ಘಟನೆಯನ್ನು ಆ ಊರಿನ ಜನ ಇಂದಿಗೂ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ.(ಆ ದೇವಸ್ಥಾನ ಟಿಪ್ಪುವಿನ ಕಾಲದಲ್ಲಿ ಮಸೀದಿಯಾಯ್ತು)
ಟಿಪ್ಪುವಿನ ಕಾಲದಲ್ಲಿ ಮಸೀದಿಯಾಗಿ ಪರಿವರ್ತನೆಗೊಂಡ ನಡಪ್ಪುರಮ್ ದೇವಸ್ಥಾನ
        ಅವಳ ಅಣ್ಣ ಆರೋಮಳ್ ಕೂಡ ಅವಳಷ್ಟೆ ದೊಡ್ಡ ವೀರ. ಒಟ್ಟೂ ೪೨ ಕಳರಿ ಶಾಲೆಗಳಲ್ಲಿ ಪುತ್ತೂರಮ್ ಮನೆತನದ ಅಧೀನದಲ್ಲಿ ನಾಲ್ಕು ಕಳರಿ ಶಾಲೆಗಳೂ, ಅರಿಂಗೊಡನ್ ಮನೆತನದಡಿ ೧೮ ಶಾಲೆಗಳೂ ಇದ್ದವು. ಒಮ್ಮೆ ಆರೋಮಳನಿಗೆ ಅರಿಂಗೊಡನ್‌ನ ಕಡೆಯಿಂದ ’ಅಂಕಂ’ ಪಂದ್ಯಕ್ಕೆ ಆಹ್ವಾನ ಹೋಯಿತು. ’ಅಂಕಂ’ ಎಂಬುದು ಎರಡು ಯುದ್ಧಮನೆತನಗಳ ವೀರರ ನಡುವೆ ನಡೆಯುವ ದ್ವಂದ್ವಯುದ್ಧ. ಆ ಯುದ್ಧ ಅವರಲ್ಲೊಬ್ಬ ಸಾಯುವವರೆಗೆ ಮುಂದುವರೆಯುತ್ತದೆ. ಉನ್ನಿಯಾರ್ಚೆಯನ್ನು ಪ್ರೀತಿಸುತ್ತಿದ್ದ ಚಂದು ಅವಳು ಸಿಗದ ಸಿಟ್ಟಿಗೆ ಸ್ನೇಹಿತ ಆರೋಮಳನಿಗೆ ದ್ರೋಹವೆಸಗುತ್ತಾನೆ. ಚಂದುವಿನ ಕುತಂತ್ರದಿಂದ ಅಂಕಂ ಯುದ್ಧದಲ್ಲಿ ಆರೋಮಳ್ ಸಾವನ್ನಪ್ಪುತ್ತಾನೆ. ತನ್ನಣ್ಣನ ಸಾವಿಗೆ ಚಂದುವೇ ಕಾರಣವೆಂದರಿತ ಉನ್ನಿಯಾರ್ಚ ಅವನ ಮೇಲೆ ಸೇಡುತೀರಿಸಿಕೊಳ್ಳುವ ಶಪಥ ಮಾಡಿ ಮುಂದೆ ತನ್ನ ಮಗ ಆರೋಮಳ್ ಉನ್ನಿಯ ಮೂಲಕವೇ ಚಂದುವನ್ನು ಅಂಕಂನಲ್ಲಿ ಕೊಲ್ಲಿಸುತ್ತಾಳೆ. ಇದೇ ಕಥೆಯ ಸ್ವಲ್ಪ ವಿಭಿನ್ನವಾದ version, ಚಂದುವನ್ನು ನಾಯಕನನ್ನಾಗಿಟ್ಟುಕೊಂಡ 'ಒರು ವಡಕ್ಕನ್ ವೀರಗಥಾ'ದಲ್ಲಿದೆ. ಆದರೆ ಉನ್ನಿಯಾರ್ಚೆಗೆ ಕುಞಿರಾಮನಿಂದ ಹುಟ್ಟಿದ ಮಗನೊಬ್ಬನಿರಲಿಲ್ಲ. ಹಾಗಾದರೆ ಈ ಆರೋಮಳ್ ಉನ್ನಿ ಯಾರು? ಆರೋಮಳನಿಂದ ಅವನ ಪ್ರೇಯಸಿ ತುಂಬೊಳಾರ್ಚೆಗೆ ಹುಟ್ಟಿದ ಮಗ ಆರೋಮಳ್ ಉನ್ನಿಯನ್ನೇ ಬೆಳೆಸಿ ಉನ್ನಿಯಾರ್ಚೆ ಸೇಡು ತೀರಿಸಿಕೊಂಡಳೆಂಬ ಕಥೆಯೂ ಇದೆ. ಹಾಡುಗಬ್ಬಗಳು ಬಾಯಿಂದ ಬಾಯಿಗೆ ಹರಡಿ ಒಂದೇ ಘಟನೆ ಹತ್ತಾರು ಮುಖಪಡೆದು ಅವತರಿಸಿದ್ದೂ ಇದಕ್ಕೆ ಕಾರಣವಿರಬಹುದು.
ಇವೆಲ್ಲವನ್ನು ಬಿಟ್ಟು ಉನ್ನಿಯಾರ್ಚೆಯ ಇನ್ನೊಂದು ಮುಖ್ಯ ಕತೆಯೂ ಪ್ರಚಲಿತದಲ್ಲಿದೆ.
       ಕೇರಳದ ಮಟ್ಟಿಗೆ ಹೇಳುವುದಾದರೆ ಹದಿನೆಂಟನೆಯ ಶತಮಾನದಲ್ಲಿ ಎರಡು ಹೊಸ ಘಟನೆಗಳು ನಡೆದವು. ಮಾರ್ತಾಂಡವರ್ಮನ ತಿರುವಾಂಕೂರು ರಾಜ್ಯವು ದಕ್ಷಿಣ ಕೇರಳದಲ್ಲಿ ಪ್ರಾಬಲ್ಯ ಪಡೆದು ಕೊಚ್ಚಿಯ ಗಡಿಯವರೆಗೂ ಉತ್ತರಕ್ಕೆ ವ್ಯಾಪಿಸಿತು. ನಾಡದೊರೆಗಳ ಹಳೆಯ ಪ್ರಭುತ್ವವಾಗಲೇ ಕಾಲದ ಗತಿಯಿಂದಾಗಿ ದುರ್ಬಲವಾಗಿ ಹೋಗಿತ್ತು. ಸಮುದ್ರ ವ್ಯಾಪಾರ, ಆಧುನಿಕ ಯುರೋಪಿಯನ್ ರೀತಿಯಲ್ಲಿ ಸೈನ್ಯ ವ್ಯವಸ್ಥೆ ಮೊದಲಾದವುಗಳ ಆವಿಷ್ಕಾರದ ಮೂಲಕ ತಿರುವಾಂಕೂರ್ ಒಂದು ಹೊಸ ತೆರನ ಏಕಾಧಿಪತ್ಯ ರಾಜ್ಯವಾಯಿತು. ಇದೇ ರೀತಿಯ ಬದಲಾವಣೆಗಳು ಶಕ್ತನ್ ತಂಬುರಾನನ ಕಾಲದಲ್ಲಿ ಕೊಚ್ಚಿಯಲ್ಲೂ ಉಂಟಾಯಿತು. ಆದರೆ ಚಾರಿತ್ರಿಕವಾದ ಕೆಲವು ಕಾರಣಗಳಿಂದಾಗಿ ಆ ರಾಜ್ಯ ತಿರುವಾಂಕೂರಿನಂತೆ ಹೊಸ ದಾರಿಯಲ್ಲಿ ಪ್ರವರ್ಧಮಾನಕ್ಕೆ ಬರಲಿಲ್ಲ. ಕೇರಳದಲ್ಲಿ ಹಲವು ಭಾಗಗಳಾಗಿ ಬೇರೆ ಬೇರೆ ಆಡಳಿತಗಾರರ ಆಳ್ವಿಕೆ ಕಂಡರೂ ಬಂದೂಕುಗಳು ಬರುವವರೆಗೆ ಅಲ್ಲಿನ ವೀರ ಸೇನಾನಿಗಳಾದ ನಾಯರರನ್ನೆದುರಿಸುವ ಧೈರ್ಯವನ್ನು ಯಾವ ಹೊರ ರಾಜ್ಯದವರೂ ಮಾಡಲಿಲ್ಲ. ಹಾಗಾಗಿ ಪೋರ್ಚುಗೀಸರು ಕಾಲಿಡುವವರೆಗೆ ಕೇರಳ ಅತಿ ಸಂಪದ್ಭರಿತ ನಾಡಾದರೂ ಅದರ ಮೇಲಾದ ಆಕ್ರಮಣ ಕಡಿಮೆಯೇ..
       ಅದೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಒಂದು ದೊಡ್ಡ ರಾಜಕೀಯ ದುರಂತವೆಂದರೆ ದಂಗೆಯ ಮೂಲಕ ಮೈಸೂರಿನಲ್ಲಿ ಅಧಿಕಾರಕ್ಕೇರಿದ್ದ ಹೈದರ್ ಅಲಿ ಸತ್ತು ಅವನ ಮಗ ಟಿಪ್ಪು ಸುಲ್ತಾನ್ ಪಟ್ಟಕ್ಕೆ ಬಂದಿದ್ದು. ಕೊಡಗನ್ನು ದಾಟಿ ಬಂದಿದ್ದ ಟಿಪ್ಪುವಿನ ಕಣ್ಣು ಭಾರತದ ಅತಿ ಶ್ರೀಮಂತ ರಾಜ್ಯವಾಗಿದ್ದ, ವ್ಯಾಪಾರ-ವ್ಯವಹಾರಗಳಲ್ಲಿ ದೇಶವಿದೇಶಗಳಲ್ಲೆಲ್ಲ ಹೆಸರು ಮಾಡಿದ್ದ ಕೇರಳದ ಮೇಲೆ ಬಿದ್ದಿದ್ದು ಸಹಜವೇ. ಶೃಂಗೇರಿ ಮಠಕ್ಕೆ ದಾನಕೊಟ್ಟವನೆಂಬ ಹೆಗ್ಗಳಿಕೆ ಹೊತ್ತವ ಕೇರಳದ ೮೦೦೦ ದೇವಸ್ಥಾನಗಳನ್ನು ನಾಶಮಾಡಿದ್ದು ಆಲ್ಲಿನ ಅಪಾರ ಸಂಪತ್ತಿನ ಆಸೆಗಾಗಿಯೇ. ತಿರುವನಂತಪುರ ಅನಂತಪದ್ಮನಾಭನಲ್ಲೇ ಕೆಲವು ಲಕ್ಷಕೋಟಿಯ ಸಂಪತ್ತಿರಬೇಕಾದರೆ ಆತ ನಾಶ ಮಾಡಿದ ೮ ಸಾವಿರ ಚಿಲ್ಲರೆ ದೇವಸ್ಥಾನಗಳಿಂದ ಇನ್ನೆಷ್ಟು ಸಂಪತ್ತು ಕೊಳ್ಳೆಹೊಡೆದಿರಬಹುದು. ಕಾಸರಗೋಡು, ಕಣ್ಣಾನೂರು ದಾರಿಯಾಗಿ ಸಾಮೂದಿರಿಯ(ಝಾಮೋರಿನ್) ಅಧಿಕಾರದಲ್ಲಿದ್ದ ಕೋಝಿಕೋಡನ್ನು ಆಕ್ರಮಣ ಮಾಡಿದ. ಮಾರ್ತಾಂಡವರ್ಮನಿಗಿದ್ದಂತೆ ಪಾಶ್ಚಾತ್ಯ ವಿರೋಧದ ಹಿನ್ನೆಲೆಯಲ್ಲಿನ ಸಾಮೂದಿರಿಗೆ ಯುರೋಪಿಯನ್ ತರಬೇತಿಯ ದೀರ್ಘಾಲೋಚನೆ ಇದ್ದಿರಲಿಲ್ಲ. ಮೈಸೂರಿನ ಮುಸಲ್ಮಾನ ಆಡಳಿತಾಧಿಕಾರಿಗಳು ಉಪಾಯದಿಂದ ಕಣ್ಣೂರಿನ ಅರಕ್ಕಲ್ ಅಲಿ ರಾಜ ನೊಂದಿಗೆ ಸ್ನೇಹ ಬೆಳೆಸಿದ್ದರಿಂದ ಸಾಮೂದಿರಿಗೆ ಮಾಪಿಳ್ಳೆಯರ ಸಹಾಯವೂ ನಿಂತು ಹೋಯಿತು. ಕೊನೆಗೆ ರಾಜನು ಸೋಲಿನ ಅಪಮಾನಕ್ಕೆ ಹೆದರಿ ಅರಮನೆಯ ಸಿಡಿಮದ್ದು ಭಂಡಾರಕ್ಕೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ಮೂಲಕ ಮಲಬಾರಿನಲ್ಲಿ ಮೈಸೂರಿನ ಸೈನಿಕ ಆಡಳಿತ ಸ್ಥಾಪಿತವಾಯಿತು. ಪಾಲ್ಘಾಟನ್ನು ಮಲಬಾರಿನ ಒಳಹೊಕ್ಕಲು ಹೆಬ್ಬಾಗಿಲಾಗಿ ಟಿಪ್ಪು ಬಳಸಿಕೊಂಡರೂ ಅಲ್ಲಿ ಅವನ ಕ್ರೌರ್ಯ ಕೊಡಗಿನಂತೆ ಹೆಚ್ಚು ಪ್ರದರ್ಶನವಾಗಲಿಲ್ಲ. ಅದಕ್ಕೆ ಮುಖ್ಯ ಕಾರಣವೆಂದರೆ ಪಾಲ್ಘಾಟಿನ ದೇವಾಲಯಗಳ ಬಡತನ ಮತ್ತು ಸ್ಥಳೀಯ ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಾಬಲ್ಯವೇ ಕಾರಣವಿರಬಹುದು. ಮಲಬಾರ್ ಸುಲಭದ ತುತ್ತಾಗಿದ್ದು ಆ ಭಾಗದ ಮಾಪಿಳ್ಳೆ ಮುಸ್ಲೀಮರು ಟಿಪ್ಪುವಿನ ಜೊತೆ ಕೈಜೋಡಿಸಿದ್ದರಿಂದಾಗಿಯೇ.
        ೧೭೯೯ರಲ್ಲಿ ಬ್ರಿಟಷ್ ಈಸ್ಟ್ ಇಂಡಿಯಾ ಕಂಪನಿಯವರು ಟಿಪ್ಪುವನ್ನು ಕೊಂದು ಮಲಬಾರನ್ನು ಅಧೀನಕ್ಕೊಳಪಡಿಸಿದ ಮೇಲೆಯೇ ಅಲ್ಲಿ ಶಾಂತಿ ಪುನಃ ಸ್ಥಾಪಿತವಾದದ್ದು. ಫ್ರೆಂಚ್ ಸಹಾಯವೂ ಕೊನೆಗೆ ಟಿಪ್ಪುವನ್ನು ರಕ್ಷಿಸಲಿಲ್ಲ. ಟಿಪ್ಪುವಿನ ಆಕ್ರಮಣಶೀಲ ಗುಣ, ಅಸಹಿಷ್ಣುತೆಗಳು ಚಿಕ್ಕ ಪುಟ್ಟ ರಾಜರುಗಳನ್ನೆಲ್ಲ ಬ್ರಿಟಿಷರೆಡೆಗೆ ಒಲವು ತೋರುವಂತೆ ಮಾಡಿತು. ಆತನಿಗೆ ಆದ ಸೋಲು ದಕ್ಷಿಣ ಭಾರತದಲ್ಲಿ ಬ್ರಿಟಿಷ್ ಅಧಿಪತ್ಯವನ್ನು ಸುಲಭವಾಗಿಸಿತು. ಇದರಿಂದ ಕೋಝಿಕೋಡ್ ನಾಶವಾದ್ದಷ್ಟೇ ಅಲ್ಲ ಮಲಬಾರಿನ ಪರಂಪರಾಗತ ಸಮಾಜ ಕುಸಿದು ಎರಡು ಶತಮಾನಗಳ ಕಾಲ ಆ ಪ್ರದೇಶ ಪ್ರಗತಿ ಹೊಂದದೇ ಉಳಿಯುವುದಕ್ಕೆ ಕಾರಣವಾಯಿತು. ಅಂದರೆ ಮಲಬಾರಿನ ರಾಜರುಗಳು, ನಾಡದೊರೆಗಳು, ಟಿಪ್ಪುವಿನ ಮತಾಂತರಕ್ಕೆ ಹೆದರಿ ಓಡಿದ ಅನೇಕ ಜನಸಾಮಾನ್ಯರು ಅಂದು ಅಭಯವನ್ನು ಆಶ್ರಯಿಸಿ ಸೇರಿದ್ದು ಕೊಚ್ಚಿ ಮತ್ತು ತಿರುವಾಂಕೂರಿನಲ್ಲಿ. ಮೈಸೂರಿನ ವಿರೋಧವೇ ಮಲಯಾಳಿಗರ ಸೌಹಾರ್ದವನ್ನು ಪ್ರಬಲಗೊಳಿಸಿತು. ೧೭೯೦ರಲ್ಲಿ ಮಲಬಾರನ್ನು ಗೆದ್ದ ಮೇಲೆ ಟಿಪ್ಪೂ ತಿರುವಾಂಕೂರನ್ನಾಕ್ರಮಿಸಲು ನೋಡಿದ. ನಿರಾಶ್ರಿತ ಮಲಬಾರಿಗಳ ರಕ್ಷಣೆ ಮಾಡಿ ಧರ್ಮರಾಜನೆಂದೇ ಹೆಸರಾಗಿದ್ದ ಅಲ್ಲಿನ ಅರಸು ಪದ್ಮನಾಭದಾಸ ರಾಜಾ ರಾಮವರ್ಮನನ್ನು ಗೆದ್ದು ಇಸ್ಲಾಮಿಗೆ ಮತಾಂತರಿಸುವುದಾಗಿ ಬದ್ರೂಸ್ ಸಮಾನ್ ಖಾನಿನ ಹತ್ತಿರ ಕೊಚ್ಚಿಕೊಂಡು ಹೊರಟ ಟಿಪ್ಪು ತಿರುವಾಂಕೂರಿನ ಮೇಲೆ ದಂಡೆತ್ತಿ ಹೋದ. ಅಲ್ಲಿನವರು ಸುಮ್ಮನೆ ಬಿಡುತ್ತಾರೆಯೇ? ಟಿಪ್ಪುವಿನ ಕಾಲುಮುರಿದು ಪಟ್ಟದ ಕತ್ತಿಯನ್ನು ಕಿತ್ತುಕೊಂಡು ಒದ್ದು ಕಳುಹಿಸಿದರು. ಅಲ್ಲಿಂದ ಮುಂದೆ ಟಿಪ್ಪುವಿನ ಒಂದು ಕಾಲು ಶಾಶ್ವತವಾಗಿ ಕುಂಟಾಯಿತು. ಖಡ್ಗ ವಿಜಯ ಮಲ್ಯನ ಕಾಲದಲ್ಲಿ ವಾಪಸ್ ಬಂದಿತು. ಟಿಪ್ಪು ಕನಸು ಮನಸಿನಲ್ಲೂ ಯೋಚಿಸದ ಘೋರ ಸೋಲದು. ಅವನ ಸೇನಾಬಲಕ್ಕೆ ಹೋಲಿಸಿದರೆ ತ್ರಾವೆಂಕೂರಿನ ಶಕ್ತಿ ಕಡಿಮೆಯೇ. ಟಿಪ್ಪು ತ್ರಾವೆಂಕೂರಿನತ್ತ ಬರುತ್ತಿದ್ದುದನ್ನು ತಿಳಿದ ಕೂಡಲೆ ಉಪಾಯ ಹೂಡಿದ ಸೇನಾಪತಿ ಕಳಿಕುಟ್ಟಿ ನಾಯರ್ ಆಲ್ವಾಯ್ ನದಿಗೆ ತಾತ್ಕಾಲಿಕ ಅಣೆಕಟ್ಟೊಂದು ನಿರ್ಮಿಸಿದ. ಮೈಸೂರಿನ ಸೈನ್ಯ ಅಲ್ವಾಯ್ ನದಿದಡದಲ್ಲಿ ಬೀಡುಬಿಟ್ಟಿತ್ತು. ಯುದ್ಧ ಶುರುವಾಗುತ್ತಿದ್ದಂತೆ ತ್ರಾವೆಂಕೋರಿನ ಸೈನಿಕರು ಅಣೆಕಟ್ಟಿನ ಒಡ್ಡನ್ನು ಒಡೆದುಬಿಟ್ಟರು. ಟಿಪ್ಪುವಿನ ಅರ್ಧ ಸೈನ್ಯ ನದಿಯ ಪ್ರವಾಹದಲ್ಲಿ ಕೊಚಿಹೋಗಿತ್ತು. ಗನ್‌ಪೌಡರ್, ಮಿಸೈಲುಗಳೆಲ್ಲ ಒದ್ದೆಯಾಗಿ ಕೆಲಸಕ್ಕೆ ಬಾರದವಾದವು. ಬೇಸಿಗೆಯಲ್ಲಿ ಇಂಥ ಪ್ರವಾಹ ಬಂದುದು ಹೇಗೆಂದು ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತಿದ್ದ ಮೈಸೂರಿನ ಸೇನೆಯನ್ನು ಪ್ರಧಾನಮಂತ್ರಿ ರಾಜಾ ಕೇಶವದಾಸ ಮತ್ತು ಸೇನಾನಿ ಕಳಿಕುಟ್ಟಿ ನಾಯರನ ನೇತೃತ್ವದಲ್ಲಿ ಮುಗಿಬಿದ್ದ ತ್ರಾವೆಂಕೂರು ಪಡೆ ಬಗ್ಗುಬಡಿದಿತ್ತು. ಜನವರಿ ೧, ೧೭೯೦ರಂದು ಒಂದು ಕಾಲು ಮುರಿದುಕೊಂಡು ಮೈಯೆಲ್ಲ ಗಾಯವಾಗಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಮೈಸೂರು ಹುಲಿ ಬೋನಿಗೆ ಬಿದ್ದ ಇಲಿಯಂತೆ ಸಿಕ್ಕಿಬಿದ್ದ. ಆ ಜಾಗದಲ್ಲಿ ಯಾರಾದರೂ ಮುಸ್ಲಿಂ ಅರಸರಿದ್ದರೆ ಟಿಪ್ಪುವಿನ ಕಥೆ ಅವತ್ತೇ ಮುಗಿದಿತ್ತು. ಆದರೆ ತಿರುವಾಂಕೂರು ಸಂಸ್ಥಾನದವರು ಕ್ಷಮಾ ಪರಮೋ ಧರ್ಮಃ ಎಂಬುದನ್ನೇ ನಂಬಿದ್ದವರು. ಅವರ ರಕ್ತದ ಕಣಕಣದಲ್ಲೂ ಹರಿಯುತ್ತಿದ್ದುದು ಸನಾತನ ಧರ್ಮದ ಗುಣಗಳು. ಪಟ್ಟದ ಕತ್ತಿ, ಪಟ್ಟದುಂಗುರ, ಡ್ಯಾಗರ್ ಮತ್ತಿತರ ಸಾಮಾನುಗಳನ್ನಿಟ್ಟುಕೊಂಡು ಎಚ್ಚರ ತಪ್ಪಿ ಬಿದ್ದಿದ್ದ ಟಿಪ್ಪುವನ್ನು ರಾತ್ರೋರಾತ್ರಿ ಮೈಸೂರಿನ ಕ್ಯಾಂಪಿಗೆ ಬಿಟ್ಟುಬಂದರು. ಮರುವರ್ಷ ಮೈಸೂರು ಸೈನ್ಯ ಎರಡನೇ ಬಾರಿ ದಾಳಿಮಾಡಲು ಪ್ರಯತ್ನಿಸಿ ಮತ್ತೊಮ್ಮೆ ಕೈಸುಟ್ಟುಕೊಂಡಿತು.
ಟಿಪ್ಪುವಿನ ಅಸಲಿ ಚಿತ್ರ!!!

       ಹೀಗೆ ತಿರುವಾಂಕೂರನ್ನಾಕ್ರಮಿಸುವ ಪ್ರಯತ್ನ ಪ್ರತಿಬಾರಿಯೂ ಫಲಿಸದೇ ಹೋದಾಗಲೂ ಅವನ ಕೈಗೆ ಲೂಟಿ ಹೊಡೆಯಲು ಸಿಕ್ಕಿದ್ದು ಮಲಬಾರೇ. ಮಲಬಾರಿನಲ್ಲಿ ತಿರುವಾಂಕೂರು, ಕೊಚ್ಚಿಯಂತೆ ಸಮರ್ಥ ನಾಯಕರಾಗಲೀ, ಟಿಪ್ಪುವನ್ನೆದುರಿಸುವ ದೊಡ್ಡ ರಾಜರಾಗಲೀ ಇರಲಿಲ್ಲ. ಸಣ್ಣ ಸಣ್ಣ ಪಾಳೆಯಗಾರರಾಗಿದ್ದ ಅನೇಕ ನಾಯನ್ಮಾರರು ಮಾತ್ರ ಶೀತಲ ಸಮರವನ್ನು ಮುಂದುವರೆಸಿದ್ದರು. ಹಾಗೆ ಟಿಪ್ಪುವಿನ ಹೋರಾಡಿದವರಲ್ಲಿ ಪುತ್ತೂರಮ್ ಮನೆತನದವರೂ ಒಬ್ಬರು. ಉನ್ನಿಯಾರ್ಚೆಯ ವೀರಗಾಥೆ ಕೇಳಿದ್ದ ಟಿಪ್ಪು ಅಲ್ಲಿಯೂ ಮುತ್ತಿಗೆ ಹಾಕಿದ. ಆ ಸಣ್ಣ ಗುಂಪು ಟಿಪ್ಪುವಿನ ದೊಡ್ಡ ಸೈನ್ಯದೆದುರು ಎಷ್ಟು ಹೊತ್ತು ಹೋರಾಡೀತು? ಪಟ್ಟು ಬಿಡದ ಉನ್ನಿಯಾರ್ಚ ಸಂಗಡಿಗರೊಂದಿಗೆ ಗೆರಿಲ್ಲಾ ಯುದ್ಧ ಮುಂದುವರೆಸಿದಳು.  ಆದರೆ ಅಷ್ಟರಲ್ಲಿ ಅವಳ ಕುಟುಂಬ ಟಿಪ್ಪುವಿನ ಕೈಲಿ ಸಿಕ್ಕಿಬಿತ್ತು. ಶರಣಾಗದಿದ್ದರೆ ಅವಳ ಇಡೀ ಕುಟುಂಬವನ್ನು ಕತ್ತರಿಸಿ ಎಸೆಯುವುದಾಗಿ ಟಿಪ್ಪು ಬೆದರಿಕೆ ಹಾಕಿದ. ಉನ್ನಿಯಾರ್ಚೆಗೆ ಶರಣಾಗುವುದನ್ನು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಅವಳ ಅಪ್ರತಿಮ ಸೌಂದರ್ಯಕ್ಕೆ ಮನಸೋತಿದ್ದ ಟಿಪ್ಪು ಉನ್ನಿಯಾರ್ಚೆಯನ್ನು ಉಪಪತ್ನಿಯಾಗಿಸಿ ಶ್ರೀರಂಗಪಟ್ಟಣದ ತನ್ನ ಜನಾನಾ ಸೇರಿಸಿದ. ಸೆರೆಯಲ್ಲಿದ್ದರೂ ಉನ್ನಿ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಲೇ ಇದ್ದಳು. ಇದಾಗಿ ಒಂದೆರಡು ವರ್ಷದಲ್ಲೇ ಟಿಪ್ಪು ಸತ್ತ. ಮರಣಾನಂತರ ಆಕೆ ತಿರುಗಿ ತಲಶ್ಶೇರಿಗೆ ಮರಳಿದಳೆಂದು ಒಂದು ಕತೆ ಹೇಳಿದರೆ, ಆಕೆ ಸಾಯುವವರೆಗೂ ಕೃಷ್ಣರಾಜ ಒಡೆಯರ ಆಸ್ಥಾನದಲ್ಲೇ ಇದ್ದಳೆನ್ನುತ್ತದೆ ಇನ್ನೊಂದು ಕಥೆ(ಹೈದರಾಲಿಯ ಕಾಲದಿಂದಲೂ ಮಲಬಾರು ಪ್ರಾಂತ್ಯದ ವ್ಯವಹಾರ ನೋಡಿಕೊಳ್ಳುತ್ತಿದ್ದ ದಿವಾನ್ ಪೂರ್ಣಯ್ಯನವರ ಸಹಾಯದಿಂದಿರಬಹುದು!). ಟಿಪ್ಪೂವಿನ ಜನಾನಾದಲ್ಲಿ ಆರುನೂರಕ್ಕೂ ಹೆಚ್ಚು ಹೆಂಗಸರಿದ್ದರೆಂದು ದಾಖಲೆಗಳು ಹೇಳುತ್ತವೆ.(ಅಷ್ಟೆಲ್ಲ ಜನ ಯಾಕೆಂದು ನನಗಂತೂ ಗೊತ್ತಿಲ್ಲ!!) ಅವರಲ್ಲಿ ಹೆಚ್ಚಿನವರೆಲ್ಲ ಮೇಲ್ವರ್ಗದ ಹಿಂದೂಗಳು. ಯುದ್ಧದಲ್ಲಿ ಮೃತಪಟ್ಟ ಶತ್ರುಪಕ್ಷದ ಅರಸರ, ಸೈನಿಕರ ಹೆಂಡತಿಯರೆಲ್ಲ ಟಿಪ್ಪುವಿನ ಜನಾನಾಕ್ಕೆ ರವಾನೆಯಾಗುತ್ತಿದ್ದರು.  ಸುಲ್ತಾನನನ್ನು ಮೆಚ್ಚಿಸಲು ಹೆಣ್ಮಕ್ಕಳನ್ನು ಉಡುಗೊರೆಯಾಗಿ ಕೊಡುವ ಪದ್ಧತಿಯೂ ಆಗ ಇತ್ತೆನ್ನಿ. ಕರ್ನಾಟಕ, ಕೇರಳ ಮಾತ್ರವಲ್ಲ  ಪರ್ಷಿಯಾ, ಯುರೋಪ್, ಟರ್ಕಿ, ಆರ್ಕಾಟ್, ಹೈದ್ರಾಬಾದ್, ದೆಹಲಿಯ ಮಹಿಳೆಯರೂ ಟಿಪ್ಪುವಿನ ಜನಾನಾದಲ್ಲಿದ್ದರಂತೆ. ಉನ್ನಿಯಾರ್ಚೆಯೂ ಅವರಲ್ಲೊಬ್ಬಳಾಗಿದ್ದಳೇ? ಮನೋರಮಾ ಪತ್ರಿಕೆಯಲ್ಲಿ ಟಿಪ್ಪುವಿನ ಜನಾನಾದಲ್ಲಿದ್ದ ಉನ್ನಿಯಾರ್ಚೆಯ ಬಗ್ಗೆ ಲೇಖನವೊಂದು ಎರಡ್ಮೂರು ವರ್ಷಗಳ ಹಿಂದೆ ಬಂದ ನೆನಪಿದೆ. ಟಿಪ್ಪುವಿನ ಪ್ರಿಯಪತ್ನಿಯರಲ್ಲಿ ಅವಳೂ ಒಬ್ಬಳಾಗಿದ್ದಳೆಂದು ಅದರುಲ್ಲೇಖವಿತ್ತು.
       ಕೆ.ಕೆ.ಎನ್ ಕುರುಪ್‌ರ ’ನವಾಬ್ ಟಿಪ್ಪು ಸುಲ್ತಾನ್’, ಗಿಡ್ವಾಣಿಯ ’ಸ್ವಾರ್ಡ್ ಆಫ್ ಟಿಪ್ಪು ಸುಲ್ತಾನ್’ ಮುಂತಾದವುಗಳಲ್ಲಿ ಟಿಪ್ಪುವಿನ ನಾಲ್ಕೈದು ಪತ್ನಿಯರ ಹೆಸರು ಮಾತ್ರವಿದೆ. ರುಕಯ್ಯಾ ಬಾನು, ರೊಶಿನಿ ಬೇಗಮ್, ಖದೀಜಾ ಜಮಾನಾ, ಪಾದಶಾ ಬೇಗಮ್ ಮತ್ತು ಇನ್ನಿಬ್ಬಳು ದೆಹಲಿಯ ಬುರಂತಿ ಬೇಗಮ್. ಇವರೆಲ್ಲ ಮೂಲತಃ ಅಥವಾ ಮತಾಂತರಿ ಮುಸ್ಲೀಮರು. ಆ ಪಟ್ಟಿಯಲ್ಲಿ ಉನ್ನಿಯಾರ್ಚೆಯ ಹೆಸರಿಲ್ಲ. ಟಿಪ್ಪುವಿಗೆ ಹಿಂದೂ ಹೆಂಡತಿಯಿಂದ ಅಬ್ದುಲ್ ಖಾಲೀಕ್ ಎಂಬೊಬ್ಬ ಮಗನಿದ್ದನೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಈ ಅಬ್ದುಲ್ ಖಾಲೀಕ್ ಮತ್ತು ಫತೇ ಹೈದರ್ ಇಬ್ಬರೂ ಬ್ರಿಟಿಷರ ಒತ್ತೆಯಾಳಾಗಿದ್ದ ಟಿಪ್ಪುವಿನ ಮಕ್ಕಳು. ಅಬ್ದುಲ್ ಖಾಲೀಕ್ ಮುಂದೆ ಕಣ್ಣೂರಿನ ಅರಕ್ಕಲ್ ಬಿಬಿಯ ಮಗಳನ್ನು ಮದುವೆಯಾನಂತೆ. ಹಾಗಾದರೆ ಈ ಅಬ್ದುಲ್ ಖಾಲೀಕ್ ಅದೇ ಕಣ್ಣೂರು ಪ್ರದೇಶದ ಉನ್ನಿಯಾರ್ಚೆಗೆ ಹುಟ್ಟಿದ ಟಿಪ್ಪುವಿನ ಮಗನಾಗಿರಬಹುದೇ? ಟಿಪ್ಪು ಸತ್ತನಂತರ ಬ್ರಿಟಿಷರು ಅವನ ಉಪಪತ್ನಿಯರನ್ನು ಜನಾನಾದಿಂದ ಬಿಡುಗಡೆಗೊಳಿಸಿದರು. ಕೆಲವರು ತಮ್ಮ ಊರುಗಳಿಗೆ ಹಿಂದಿರುಗಿದರೆ ಇನ್ನು ಕೆಲವರನ್ನು ಬ್ರಿಟಿಷರು ವೆಲ್ಲೂರಿಗೆ ಸ್ಥಳಾಂತರಿಸಿದರು. ಹೀಗೆ ಬಿಡುಗಡೆಗೊಂಡವರಲ್ಲಿ ಒಬ್ಬಳು ಮಲಬಾರ್ ಪ್ರದೇಶದವಳಿದ್ದಳೆಂದು ಆ ಕೆಲಸದ ಉಸ್ತುವಾರಿ ವಹಿಸಿದ್ದ ಅರ್ಥರ್ ವೆಲ್ಲೆಸ್ಲಿ ಮತ್ತು ಕರ್ನಲ್ ಥಾಮಸ್ ಮಾರಿಯೋಟ್‌ನ ಬರಹಗಳು ತಿಳಿಸುತ್ತವೆ. ಆಕೆ ಉನ್ನಿಯಾರ್ಚೆಯಾಗಿದ್ದರೂ ಇರಬಹುದೇ? ಆ ನಂತರ ಅವಳು ಮೈಸೂರಿನಲ್ಲೇ ನೆಲೆಸಿದ್ದರೆ  ‘Annals of The Mysore Royal Family’ನಲ್ಲಿ ಆ ಬಗ್ಗೆ ಮಾಹಿತಿ ಸಿಗಬಹುದೇನೋ.
       ಇಡೀ ಕಥೆಯ ಅತಿದೊಡ್ಡ ಮಿಸ್ಸಿಂಗ್ ಲಿಂಕ್ ಎಂದರೆ ಅವಳ ಬಗ್ಗೆ ಇರುವ ಲೆಕ್ಕವಿಲ್ಲದಷ್ಟು ಹಾಡುಗಬ್ಬಗಳೇ. ಅವಳ ಮತ್ತು ಚಂದುವಿನ ಶತೃತ್ವದ ಕಥೆ ನಿಜವಾಗಿದ್ದರೆ ಆಕೆ ತನ್ನ ಮಗನನ್ನು ಬೆಳೆಸಲು ಮಲಬಾರಿನಲ್ಲೇ ಇರಬೇಕಾಯಿತು. ಇಲ್ಲಾ, ಆಕೆ ಟಿಪ್ಪೂವಿನ ಜನಾನಾದಲ್ಲಿದ್ದರೆ ಟಿಪ್ಪು ಸತ್ತ ನಂತರ ಎಲ್ಲಿ ಹೋದಳೆಂಬುದಕ್ಕೆ ಸರಿಯಾದ ಆಧಾರವಿಲ್ಲ. ಟಿಪ್ಪು ಸತ್ತ ನಂತರ ಅವನ ಹೆಂಡತಿ ಮಕ್ಕಳಿಗೆ ಬ್ರಿಟಿಷರ ಕಡೆಯಿಂದ ಪಿಂಚಣಿ ಸಂದಾಯವಾಗುತ್ತಿತ್ತು. ಆ ಹೆಂಡತಿಯರ ಲಿಸ್ಟಿನಲ್ಲಿ ಉನ್ನಿಯಾರ್ಚೆಯ ಹೆಸರಿಲ್ಲದಿರುವುದರಿಂದ ಆಕೆ ವೆಲ್ಲೂರಿಗೆ ಹೋಗಿರಲಿಕ್ಕಂತೂ ಸಾಧ್ಯವಿಲ್ಲ. ಆರೋಮಳ್ ಮತ್ತು ಉನ್ನಿಯಾರ್ಚೆಯ ಕಥೆ ಟಿಪ್ಪು ಮಲಬಾರಿನ ಮೇಲೆ ದಾಳಿ ಮಾಡುವುದಕ್ಕಿಂತ ಹಿಂದೆ ನಡೆದಿದ್ದಿರಬೇಕು. ಅದೊಂದು ನಿರಾಕರಿಸಲಾಗದ ಐತಿಹಾಸಿಕ ಘಟನೆ. ಜೊತೆಗೆ ಜನಪದವೆಂಬುದೂ ಶೂನ್ಯದಿಂದ ಸೃಷ್ಟಿಯಾಗುವುದಿಲ್ಲ. ಆದರೆ ಆಕೆಗೊಬ್ಬ ಮಗನಿದ್ದನೆಂಬ ವಿಷಯ ಪ್ರಶ್ನಾರ್ಹ. ಮುಂದೆ ಆಕೆ ಮಲಬಾರಿಗೆ ತಿರುಗಿ ಬಂದು ಆರೋಮಳನ ಮಗನನ್ನು ಬೆಳೆಸಿ ಚಂದುವಿನ ವಿರುದ್ಧ ಸೇಡು ತೀರಿಸಿಕೊಂಡಿರಬಹುದೇ? ತಿಳಿದುಕೊಳ್ಳುವ ಕುತೂಹಲ ನನಗೂ ಇದೆ.
ಎಲ್ಲೋ ಓದಿದ್ದು: ಹೈದರಾಲಿಗೆ ಬಹಳ ಕಾಲವಾದರೂ ಮಕ್ಕಳಾಗಲಿಲ್ಲವಂತೆ. ಕೊನೆಗೆ ಚಿತ್ರದುರ್ಗದ ನಾಯಕನ ಹಟ್ಟಿಯ ತಿಪ್ಪೇರುದ್ರಸ್ವಾಮಿಯೆಂಬ ಸಾಧುವಿನ ದರ್ಶನ ಮಾಡಿ ಆಶೀರ್ವಾದ ಪಡೆದನಂತೆ. ಇದಾಗಿ ಕೆಲ ಸಮಯದ ನಂತರ ಹೈದರನಿಗೆ ಮಗನೊಬ್ಬ ಹುಟ್ಟಿದ್. ಚಿತ್ರದುರ್ಗದ ಸುತ್ತಮುತ್ತ ಮತ್ತು ಆಂದ್ರದ ಗಡಿಭಾಗದಲ್ಲಿ ತಿಪ್ಪೆಸ್ವಾಮಿ, ತಿಪ್ಪೇಶ್, ತಿಪ್ಪೆರುದ್ರ ಎಂಬುದೆಲ್ಲ ಬಹಳ ಪ್ರಚಲಿತದಲ್ಲಿರುವ ಹೆಸರುಗಳು. ಹಾಗೆ ತಿಪ್ಪೆಸ್ವಾಮಿಯ ಆಶೀರ್ವಾದದಿಂದ ಹುಟ್ಟಿದ ಮಗನಿಗೆ ಹೈದರಾಲಿ ತಿಪ್ಪೆ ಸುಲ್ತಾನನೆಂದು ಹೆಸರಿಟ್ಟ. ಅದೇ ಮುಂದೆ ಬ್ರಿಟಿಷರ ಬಾಯಲ್ಲಿ ಟಿಪ್ಪು ಸುಲ್ತಾನನಾಯಿತು!!!!

Saturday, September 12, 2015

ಕೊಲ್ಕತ್ತಾ ಡೈರಿ: ಪಠಾಣನ ಮಂದಿರ ಪ್ರೇಮ

       ಭಯಂಕರ ಇಂಟರೆಸ್ಟಿಂಗ್ ಪತ್ತೆದಾರಿ ಕಾದಂಬರಿ ಓದುವಾಗ ನಡುವಿನಲ್ಲಿ ಒಂದಿಷ್ಟು ಹಾಳೆಗಳೇ ನಾಪತ್ತೆಯಾದರೆ ಹೇಗಿರುತ್ತೋ ಅದೇ ಅನುಭವ ಇತಿಹಾಸಕಾರನೊಬ್ಬನಿಗೆ ಚಂದ್ರಕೇತುಘರದ ಕಳೆದುಹೋದ ಇತಿಹಾಸ ಕಟ್ಟಿಕೊಡುತ್ತದೆ. ಬೇಡಾಚಂಪಾದಿಂದ ಹಿಂದಿರುಗಿದ ಮೇಲೂ ಅನ್ನಿಸುತ್ತಿದ್ದುದು ಒಂದೇ ಪ್ರಶ್ನೆ. ನಮ್ಮ ಸಂಸ್ಕೃತಿ, ಇತಿಹಾಸ, ಕಲೆಗಳ ಬಗ್ಗೆ ನಮಗೇಕಿಂಥ ಅಸಡ್ಡೆ? ಪ್ರಪಂಚದ ಯಾವ ಮೂಲೆಗಾದರೂ ಹೋಗಿ ಅಲ್ಲಿನ ಜನರಿಗೆ ಹೇಳಿ, ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಇಷ್ಟು ಹಳೆ ಹಳೆಯದು, ನಿಮ್ಮ ಪೂರ್ವಿಕರು ಇಷ್ಟು ಭವ್ಯವಾಗಿ ಬಾಳಿಬದುಕಿದ್ದರೆಂದು......ಖುಷಿಯಿಂದೆದ್ದು ಕುಣಿದಾದಿ ಅದನ್ನು ತಲೆಯ ಮೇಲೆತ್ತು ಮೆರೆಸುತ್ತಾರೆ. ಅದೇ ನಮ್ಮವರಿಗೆ ಹೇಳಿನೋಡಿ. ಸತ್ತರೂ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಹಿಟ್ಲರ್ ಒಮ್ಮೆ ಹೇಳಿದ್ದ fight people and they fight back; destroy their culture and they cease to exist. ದೇಶವೊಂದನ್ನು ನಾಶಮಾಡುವುದೆಂದರೆ ಅಲ್ಲಿನ ಜನರೊಡನೆ ಬಡಿದಾಡುವುದಲ್ಲ. ಅವರು ಬಡಿದಷ್ಟೂ ಮತ್ತೆ ಮೇಲೆದ್ದು ಬರುತ್ತಾರೆ. ಬದಲಾಗಿ ಅವರ ಸಂಸ್ಕೃತಿಯನ್ನು ನಾಶಮಾಡಿ, ಆ ದೇಶ ಸ್ವಯಂ ನಾಶವಾಗುತ್ತದೆ. ಮೆಕಾಲೆ ಹೇಳಿದ್ದು, ಬ್ರಿಟಿಷರು ಮಾಡಿದ್ದೂ, ಈಗಿನ ನಮ್ಮದೇ ಸರಕಾರಗಳು ಅನುಸರಿಸುತ್ತಿರುವುದೂ ಅದನ್ನೇ. ಇಂಥ ಅಪವಸ್ಯಗಳ ಮಧ್ಯದಲ್ಲೂ ದಿಲೀಪ್ ಕುಮಾರ್ ಮೈತ್ರೆಯವರಂಥವರಿದ್ದಾರೆಂಬುದೇ ಸಮಾಧಾನದ ಸಂಗತಿ. ತಿರುಗಿ ಬಂದ ಮೇಲೂ ಯಾಕೋ ಚಂದ್ರಕೇತುಘರ್ ಕಾಡುವುದನ್ನು ಬಿಡಲಿಲ್ಲ. ಜೊತೆಜೊತೆಗೆ ಅಷ್ಟೇ ಗಾಢವಾಗಿ ನೆನಪಾದವನು ಆ ಪಠಾಣ.
       ಮುಂದಿನ ವೀಕೆಂಡ್ ಆಪ್ತಮಿತ್ರ ಸಂದೀಪ್ ಸೇನ್‌ಗುಪ್ತನೊಡನೆ ನಮ್ಮ ಸವಾರಿ ಹೊರಟಿದ್ದು ಮೇದಿನಿಪುರ ಅಥವಾ ಮಿಡ್ನಾಪುರದ ಸಮೀಪದ ಒಂದು ಚಿಕ್ಕ ಊರಿಗೆ. ಬಾಂಗಾಲಿ ಕಲೆ, ವಾಸ್ತುಶಿಲ್ಪ, ಪುರಾತತ್ವಗಳ ಸಂಶೋಧಕರಿಗೆ ಆ ಊರೊಂದು ಅಕ್ಷಯಪಾತ್ರೆ. ಆ ಅಕ್ಷಯಪಾತ್ರೆಯನ್ನು ನೋಡಬಹುದೆಂಬ ಕಾರಣ ಒಂದಾದರೆ ಅದರ ಆಪದ್ಭಾಂಧವ ಪಠಾಣ ಸಾಬಿ ಸಿಗಬಹುದೆಂಬುದು ಇನ್ನೊಂದು ಕಾರಣ. ಆ ಊರಿನ ಹೆಸರು ಪಾತ್ರಾ..... ಮಂದಿರ್ ಮೋಯ್ ಪಾತ್ರಾ. ಬಂಗಾಳದ ದೇವಾಲಯಗಳ ಊರದು. ಕಂಗ್ಸಾಬಾಟಿ ನದಿಯ ದಡದಲ್ಲಿರುವ ಈ ಹಳ್ಳಿಗೆ ಕಾಲಿಟ್ಟರೆ ಹೆಜ್ಜೆಗೊಂದು ದೇವಸ್ಥಾನಗಳೆದುರಾಗುತ್ತವೆ. ಬೆಂಗಳೂರಲ್ಲಿ ಒಗೆದ ಕಲ್ಲು ಹೋಗಿ ಬೀಳುವುದು ಇಂಜಿನಿಯರನ ತಲೆಯಮೇಲಾದರೆ ಇಲ್ಲಿ ಬೀಳುವುದು ಯಾವುದಾದರೊಂದು ಗುಡಿಯ ಮೇಲೆ. ಅದೂ ಇಂದುನಿನ್ನೆಯದವುಗಳಲ್ಲ. ಅಲ್ಲಿನ ಇತಿಹಾಸ ಕೆದುಕುತ್ತ ಹೋದರೆ ಹೋಗಿ ನಿಲ್ಲುವುದದು ಗುಪ್ತರ ಕಾಲಕ್ಕೆ. ಗುಪ್ತರ ಆಳ್ವಿಕೆಯೆಂಬುದು ಹೇಳಿಕೇಳಿ ಭಾರತದ ಸ್ವರ್ಣಯುಗ. ತಾಮ್ರಲಿಪ್ತವೆಂದು ಕರೆಯಲ್ಪಡುತ್ತಿದ್ದ ಈ ಸುತ್ತಲಿನ ಪ್ರದೇಶ ಮೌರ್ಯಕಾಲದಿಂದ ಹಿಡಿದು ಗುಪ್ತರವರೆಗೂ ದಕ್ಷಿಣಪೂರ್ವ ಏಶಿಯಾದ ಹೆಬ್ಬಾಗಿಲೆಂದೇ ವಿಶ್ವವಿಖ್ಯಾತವಾಗಿತ್ತು. ಚೀನ, ಗ್ರೀಕ್, ಮಧ್ಯಪ್ರಾಚ್ಯ, ಯುರೋಪ್, ಈಶಾನ್ಯ ಏಶಿಯಾ ಸೇರಿ ವಿಶ್ವದ ಹಲಭಾಗಗಳೊಡನೆ ಬಂಗಾಳದ ವ್ಯಾಪಾರ ವಹಿವಾಟುಗಳನ್ನು ಬೆಸೆದ ಮುಖ್ಯಕೊಂಡಿಯಾಗಿತ್ತಿದು. ಅದಕ್ಕೊಂದು ಕಾರಣವೆಂಬಂತೆ ಗುಪ್ತರ ಮೂಲ ಇಲ್ಲೇ ಪಕ್ಕದ ಮುರ್ಷಿದಾಬಾದ್ ಎಂದೂ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ತಾಮ್ರಲಿಪ್ತದ ಉಲ್ಲೇಖವಿದೆ. ಭೀಮ ಈ ಭಾಗವನ್ನು ಗೆದ್ದಿದ್ದನಂತೆ. ಈ ಪ್ರದೇಶವನ್ನಾಳುತ್ತಿದ್ದ ತಾಮ್ರಧ್ವಜನೆಂಬ ಅರಸನಿಂದ ಈ ಹೆಸರು ಬಂದಿತೆಂಬ ಪ್ರತೀತಿಯಿದೆ. ತಾಮ್ರದ ಅದಿರು ಹೇರಳವಾಗಿ ದೊರೆಯುವುದರಿಂದ ತಾಮ್ರಲಿಪ್ತವೆಂದು ಕರೆಯಲ್ಪಟ್ಟಿತೆಂಬ ಮಾತೂ ಇದೆ. ಪುರಾತನ ಸಿಲೋನಿನ ಬೌದ್ಧ ಕಾವ್ಯಗಳಲ್ಲಿ, ಗ್ರೀಕ್, ಚೈನಾದ ಪ್ರವಾಸಿಗರ ದಾಖಲೆಗಳಲ್ಲಿ ತಾಮ್ರಲಿಪ್ತದ ಹೆಸರಿದೆ. ಪ್ಟಾಲೆಮಿ ಇದನ್ನು ತಾಮಲಿಟಿಯೆಂದು ಕರೆದು ಇದನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬಂದರು ಎನ್ನುತ್ತಾನೆ. ಅಶೋಕನ ಕಾಲದಲ್ಲಿ ಇಲ್ಲಿ ಬೌದ್ಧಮತವೂ ಪ್ರಚಾರಕ್ಕೆ ಬಂದಿತು. ಅಶೋಕನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರರು ಮತಪ್ರಚಾರಕ್ಕಾಗಿ ಸಿಲೋನಿಗೆ ತೆರಳಿದ್ದು ಇದೇ ಸ್ಥಳದಿಂದಂತೆ. ಅಲ್ಲಿಂದ ಕ್ರಿ.ಶ ೧೨ನೇ ಶತಮಾನದವರೆಗೂ ಹಿಂದೂ, ಜೈನ, ಬೌದ್ಧ ಮತಗಳ ಮುಖ್ಯಕೇಂದ್ರವಾಗಿ ತಾಮ್ರಲಿಪ್ತ ಹೆಸರುವಾಸಿಯಾಯಿತು. ೧೯೬೧ರಲ್ಲಿ ಇಲ್ಲಿ ಉತ್ಖನನ ನಡೆದಾಗ ಗುಪ್ತೋತ್ತರ ಕಾಲದ ವಿಷ್ಣು ಲೋಕೇಶ್ವರನ ಎಂಟಡಿ ಎತ್ತರದ ವಿಗ್ರಹವೊಂದು ಸಿಕ್
ಲೋಕೇಶ್ವರ(ಕಲ್ಕತ್ತದ ಇಂಡಿಯನ್ ಮ್ಯೂಸಿಯಂ)
ಕು ತಾಮ್ರಲಿಪ್ತದ ಹಳೆಯ ಇತಿಹಾಸದ ಪುಟಗಳನ್ನು ಮತ್ತೆ ಕೆದಕಿ ಮುನ್ನೆಲೆಗೆ ತಂದಿತ್ತು. ಹಿಂದೂಗಳ ವಿಷ್ಣು, ಬೌದ್ಧರ ಲೋಕೇಶ್ವರನ ಸ್ವರೂಪಗಳ ಸುಂದರ ಮಿಶ್ರಣದ ಈ ವಿಗ್ರಹ ಶತಶತಮಾನಗಳ ಹಿಂದೂ ಬೌದ್ಧ ಸಾಮರಸ್ಯದ ಕಥೆ ಹೇಳುತ್ತದೆ. ತಾಮ್ರಲಿಪ್ತದ ಶ್ರೀಮಂತ ವಾಸ್ತುವೈಭವದ ಕುರುಹುಗಳನ್ನು ನೋಡುವುದಿದ್ದರೆ ಕೋಲ್ಕತ್ತಾಕ್ಕೆ ಭೇಟಿ ನೀಡಿದವರು ಇಂಡಿಯನ್ ಮ್ಯೂಸಿಯಮ್ಮಿಗೆ ಹೋಗುವುದನ್ನು ಮರೆಯಬೇಡಿ. ಮಹಾಭಾರತದ ಸಮಯದಿಂದ ದಕ್ಷಿಣ ಏಷಿಯಾದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ತಾಮ್ರಲಿಪ್ತದ ಪ್ರಸಿದ್ಧಿಯ ಕೊನೆಯ ಉಲ್ಲೇಖ ಸಿಗುವುದು ೯ನೇ ಶತಮಾನದ ಪಾಲರ ಉದಯಮಾನನ ದೂಧ್‌ಪಾನಿ ಶಿಲಾಶಾಸನದಲ್ಲಿ. ನಂತರ ಬಂಗಾಳವನ್ನಾಳಿದವರು ಅಚ್ಚಕನ್ನಡ ಮೂಲದ ಸೇನರು. ಸೇನ ವಂಶದ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ. ಬ್ರಾಹ್ಮಣರಿಗೆ ಸಮುದ್ರ ಪ್ರಯಾಣ ನಿಷಿದ್ಧವಾಗಿದ್ದರಿಂದ ಕಟ್ಟಾ ವೈದಿಕರಾಗಿದ್ದ ಸೇನ ಅರಸರ ಕಾಲದಲ್ಲಿ ಸಮುದ್ರವ್ಯಾಪಾರಗಳಿಗೆ ನಿರ್ಭಂಧ ಹೇರಲ್ಪಟ್ಟವು. ಸೇನರ ಕೊನೆಯ ಅರಸು ಲಕ್ಷ್ಮಣ ಸೇನನ ಕಾಲದಲ್ಲಂತೂ ಈ ಹುಚ್ಚಾಟ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಶ್ರವಣಮತಾವಲಂಬಿಗಳಾದ ಪಕ್ಕದರಾಜ್ಯಗಳು ಹಾಗೂ ವಿದೇಶಗಳೊಡಗಿನ ವ್ಯವಹಾರಗಳು ಕೂಡ ಬಂದಾದವು. ಹಿಂದಿನ ಪಾಲರ ಕಾಲದಲ್ಲಿ ಬಳಕೆಯಲ್ಲಿದ್ದ ಪಾಲಿ, ಪ್ರಾಕೃತ, ಬಂಗಾಳಿಗಳ ಬದಲಾಗಿ ಸಂಸ್ಕೃತ ಮತ್ತೆ ಪ್ರವರ್ಧಮಾನಕ್ಕೆ ಬಂತು. ಗೀತಗೋವಿಂದವೆಂಬ ಸರ್ವಕಾಲೀನ ಅಮರ ಕೃತಿಯನ್ನು ಬರೆದ ಜಯದೇವ ಇದೇ ಲಕ್ಷ್ಮಣಸೇನನ ಆಸ್ಥಾನದಲ್ಲಿದ್ದವ. ಕಲೆ, ಸಾಹಿತ್ಯ, ಸಂಗೀತಗಳು ಅದ್ಭುತವಾಗಿ ವಿಜೃಂಭಿಸಿದವು. ಆದರೇನು ಫಲ? ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದೇ ಸೇನರಿಗೆ ಮುಳುವಾಯಿತು. ಬಿಹಾರವನ್ನು ಧ್ವಂಸಗೊಳಿಸಿದ ಭಕ್ತಿಯಾರ್ ಖಿಲ್ಜಿಯ ಕಣ್ಣು ಬಿದ್ದಿದ್ದು ಸಂಪದ್ಭರಿತ ಬಂಗಾಳದ ಮೇಲೆ. ಲಕ್ಷ್ಮಣ ಸೇನ ತೀರ್ಥಯಾತ್ರೆಗೆ ಹೋಗಿದ್ದ ಸಮಯವನ್ನೇ ನೋಡಿಕೊಂಡು ಖಿಲ್ಜಿ ಬಂಗಾಳದ  ಮೇಲೆ ದಾಳಿಯಿಟ್ಟಾಗ ಸಹಾಯಕ್ಕೆ ಬರುವವರಾರೂ ಇರಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ಅರ್ಧ ಬಂಗಾಳ ಮುಸ್ಲೀಮರ ವಶವಾಗಿತ್ತು. ಗಂಗಾತೀರದಲ್ಲೆಲ್ಲೋ ತೀರ್ಥಯಾತ್ರೆಯಲ್ಲಿ ಮುಳುಗಿಹೋಗಿದ್ದ ಲಕ್ಷ್ಮಣಸೇನ ವಿಷಯ ತಿಳಿದವನೇ ಜೀವಭಯದಿಂದ ಸಮುದ್ರಮಾರ್ಗವಾಗಿ ಪೂರ್ವಬಂಗಾಳಕ್ಕೆ ಪಲಾಯನಗೈದನಂತೆ ಎಂಬುದು ಕಥೆಯಾದರೂ ವಿಪರ್ಯಾಸವೇ. ನನ್ನ ಗೆಳೆಯ ಸೇನ್‌ಗುಪ್ತಾ ಒಮ್ಮೆ ತಮಾಷೆ ಮಾಡಿದ್ದ. ಮುಸ್ಲೀಮರು ಅರಬ್ಬಿ ಕುದುರೆಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಲು ತಮ್ಮ ಕತ್ತಿ ಮಸೆದುಕೊಳ್ಳುತ್ತಿರುವಾಗ ನಮ್ಮವರು ಅವರನ್ನೆದುರಿಸಲು ಶತ್ರುಸಂಹಾರ ಯಾಗಕ್ಕೆ ತಯಾರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರಂತೆ. ಮುಂದೆ ಬಂದ ಇಸ್ಲಾಮಿಕ್ ಯುಗದಲ್ಲಿ ಸಾವಿರಾರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ಉಚ್ಛ್ರಾಯ ಸಂಸ್ಕೃತಿಯೊಂದು ಪಾತಾಳದ ಬುಡ ಕಂಡಿತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ತಾಮ್ರಲಿಪ್ತದ ಕತೆಯೂ ಇದಕ್ಕೇನು ಹೊರತಾಗಿರಲಿಲ್ಲ. ಇಲ್ಲಿನ ಇತಿಹಾಸಕ್ಕೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ಈ ಭಾಗವನ್ನಾಳುತ್ತಿದ್ದ ನವಾಬ ಅಲಿವರ್ದಿ ಖಾನ್ ರತ್ನಚೌಕ ಪರಗಣದ ಕಂದಾಯ ಇಲಾಖೆಯ ಕಲೆಕ್ಟರನ್ನಾಗಿ ಬಿದ್ಯಾನಂದ ಘೋಷ್ ಎಂಬ ಅಧಿಕಾರಿಯನ್ನು ನೇಮಿಸುತ್ತಾನೆ. ಆತನೋ ಮಹಾನ್ ದೈವಭಕ್ತ. ಒಂದಾದ ಹಿಂದೊಂದರಂತೆ ನೂರಾರು ದೇವಾಲಯಗಳನ್ನು ಬಿದ್ಯಾನಂದ ಈ ಪ್ರದೇಶದಲ್ಲಿ ಕಟ್ಟಿಸಿದ. ಸೇನರ ಕಾಲದ ಹಳೆಯ ದೇವಸ್ಥಾನಗಳನ್ನೆಲ್ಲ ದುರಸ್ಥಿ ಮಾಡಿ ಸುಸ್ಥಿತಿಗೆ ತಂದ. ತಾಮ್ರಲಿಪ್ತದ ಈ ಪ್ರದೇಶ ಹಳೆಯ ಕಳೆಯೆದ್ದು ಕುಣಿಯತೊಡಗಿತು. ತನ್ನ ಕೈಕೆಳಗೆ ಕೆಲಸಕ್ಕಿರುವ ಕಾಫೀರನೊಬ್ಬ ಹೀಗೆ ಪ್ರಸಿದ್ಧನಾಗುವುದನ್ನು ನೋಡಿ ಸಹಿಸಲು ನವಾಬನಿಗಾಗಲಿಲ್ಲ. ಬಿದ್ಯಾನಂದನನ್ನು ಸೆರೆಗೆ ತಳ್ಳಿ ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಸ್ಥಳೀಯರ ಕತೆಯನ್ನೇ ನಂಬುವುದಾದರೆ ಇವನ ತಲೆಯನ್ನು ಮೆಟ್ಟಿ ಅಪ್ಪಚ್ಚಿ ಮಾಡಲು ಬಂದಿದ್ದ ಆನೆ ಯಾರೆಷ್ಟೇ ಸರ್ಕಸ್ ಮಾಡಿದರೂ ಕಾಲನ್ನು ಮೇಲೆತ್ತಲಿಲ್ಲವಂತೆ. ಬಿದ್ಯಾನಂದ ಬಚಾವಾದ. ಪಾ-ಉತ್ರಾ(ಕಾಲಿಂದ ಪಾರಾದ) ಆ ಸ್ಥಳದ ಹೆಸರು ಪೌತ್ರಾ ಎಂದಾಗಿ ಕಾಲಕ್ರಮೇಣ ಪಾತ್ರಾ ಎಂದು ಬಳಕೆಗೆ ಬಂತು. ಘೋಷ್ ಕುಟುಂಬ ಅದರ ನಂತರ ೧೮ನೇ ಶತಮಾನದ ಕೊನೆಯವರೆಗೂ ಮಂದಿರಗಳ ನಿರ್ಮಾಣ ಕಾರ್ಯವನ್ನು ಮುಂದುವರೆಸಿತು. ಇದರಿಂದ ಪ್ರಭಾವಿತವಾದ ಬಂಡೋಪಾಧ್ಯಾಯ ಎಂಬ ಶ್ರೀಮಂತ ವರ್ತಕರ ಕುಟುಂಬವೂ ಹಲವು ಮಂದಿರಗಳನ್ನು ಈ ಭಾಗದಲ್ಲಿ ನಿರ್ಮಿಸಿತು. ಈ ಪರಂಪರೆ ಅಂತ್ಯಕಂಡಿದ್ದು ಆ ಎರಡೂ ಕುಟುಂಬಗಳೂ ವ್ಯಾಪಾರಕ್ಕಾಗಿ ಕಲ್ಕತ್ತಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದಾಗಿನಿಂದ. ಮುಂದೆ ದೇವಸ್ಥಾನಗಳು ಪೋಷಕರಿಲ್ಲದೇ ಅನಾಥವಾದವು. ಮೂರ್ತಿಗಳು ಕಳುವಾಗತೊಡಗಿದವು. ನದಿಗೆ ನೆರೆಬಂದ ಕಾಲದಲ್ಲಿ ನದಿದಡದಲ್ಲಿದ್ದ ಒಂದೆರಡು ತೊಳೆದು ಹೋದವು. ಕಳ್ಳರ ನಿಧಿಯಾಸೆಗೆ ಬಲಿಯಾಗಿ ಕೆಲವು ನೆಲಸಮವಾದವು.  ಉದುರಿ ಬಿದ್ದ ಕಟ್ಟಡದ ಗೋಡೆಗಳ ಇಟ್ಟಿಗೆಗಳು ಅಕ್ಕಪಕ್ಕದವರ ಮನೆಕಟ್ಟಲು ಬಳಕೆಯಾದವು. ದೇವಾಲಯಗಳ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನವೆಲ್ಲ ಕಮ್ಯುನಿಸ್ಟ್ ಸರ್ಕಾರದ್ದಾಗಿರಲಿಲ್ಲ ಬಿಡಿ.
ಕಂಗ್ಸಾಬಾಟಿ ನದಿ
ಟೆರಾಕೋಟಾ ಮಾದರಿಗಳು

ದುರ್ಗಾದಲನ್ ಮಂದಿರ
        ಅಷ್ಟು ಯೋಚಿಸುತ್ತಿದ್ದಾಗ ಬರಿ ಹೊಂಡಗಳು ಮಾತ್ರವೇ ತುಂಬಿದ್ದ ಧೂಳು ರಸ್ತೆಯಲ್ಲಿ ದಡಬಡ ಸದ್ದು ಮಾಡುತ್ತ ಸಾಗಿದ್ದ ಲಟಾರಿ ಬಸ್ಸಿಗೆ ಗಕ್ಕನೆ ಬ್ರೇಕು ಬಿತ್ತು. ಬಂಗಾಳಿ ಬಸ್ಸುಗಳಿಗೆ ನಿಲ್ದಾಣಗಳೆಂಬುದಿಲ್ಲ. ಜೊತೆಗೆ ಎಷ್ಟು ಸಪೂರದ ದಾರಿಯಾದರೂ ಅವು ಹೋಗುವುದು ವಿಮಾನದ ಸ್ಪೀಡಿನಲ್ಲೇ. ಜನರ ಕೈ ಕಂಡಲ್ಲೆಲ್ಲ ರಪ್ಪನೆ ಬ್ರೇಕು ಹಾಕಿ ನಿಲ್ಲಿಸುವುದೊಂದೇ ಅಲ್ಲಿನ ಡ್ರೈವರುಗಳಿಗೆ ಗೊತ್ತಿರುವ ವಿದ್ಯೆ. ಅದು ಫ್ಲೈ ಓವರಿನ ಮೇಲಾಗಿರಬಹುದು, ಸಿಗ್ನಲ್ಲಿನ ನಟ್ಟ ನಡುವಾಗಿರಬಹುದು. ಅದಕ್ಕೆಲ್ಲ ಅವರು ಬಂಗಾಳಿಗಳು ಕೆಡಿಸಿಕೊಳ್ಳುವವರಲ್ಲ. ಯಾವುದೋ ಲಹರಿ ಲಹರಿ ಲಹರಿಯಲ್ಲಿದ್ದವ ಹಾಕಿದ ಬ್ರೇಕಿಗೆ ಮೂಗು ಜಜ್ಜಿಕೊಳ್ಳುವುದರಿಂದ ಬಚಾವಾಗಿದ್ದೆ. ಕಿಡಕಿಯಿಂದ ಹೊರನೋಡಿದರೆ ರಸ್ತೆ ಪಕ್ಕದಲ್ಲೇ ಅಲ್ಲಲ್ಲಿ ಸಣ್ಣ ಸಣ್ಣ ಮಂದಿರಗಳು ಕಣ್ಣಿಗೆ
ಬೀಳಲು ಶುರುವಾದವು. ಪಾತ್ರಾ ಹತ್ತಿರ ಬರುತ್ತಿದ್ದುದು ಖಾತ್ರಿಯಾಯ್ತು. ಕಲ್ಕತ್ತದಲ್ಲಿ ಪುಸ್ತಕದೊಳಗೆ ಮುಖ ಸಿಕ್ಕಿಸಿಕೊಂಡು ಕೂತಿದ್ದ ಸೇನ್‌ಗುಪ್ತಾ ಇನ್ನೂ ಮುಖ ಮೇಲೆತ್ತಿರಲಿಲ್ಲ. ಪಕ್ಕಾ orthodox ಬಂಗಾಳಿ ಆತ. TCSನಲ್ಲಿ ಉದ್ಯೋಗಿಯಾಗಿದ್ದರೂ ಶೇಕ್ಸ್‌ಪಿಯರಿನಿಂದ ಹಿಡಿದು ಪ್ರೇಮಚಂದ್ರರ ತನಕ ಒಬ್ಬರನ್ನೂ ಬಿಡದೇ ಓದಿಕೊಂಡಿದ್ದಾನೆ. ಸ್ವಂತ ಬಂಗಾಳಿ rock band ನಡೆಸುತ್ತಿದ್ದರೂ ರವೀಂದ್ರ ಸಂಗೀತದ ಕಟ್ಟಾಭಿಮಾನಿ. ತನ್ನದೇ ಸಂಗೀತದ ಒಂದೆರಡು ಆಲ್ಬಮ್ಮುಗಳನ್ನೂ ಹೊರತಂದಿದ್ದಾನೆ. triathlonನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್. ಅರ್ಧ ಭಾರತವನ್ನು ಬರಿ ಸೈಕಲ್ಲಿನಲ್ಲಿಯೇ ಸುತ್ತಿಮುಗಿಸಿದ್ದಾನೆ. ಜೊತೆಗೆ ಅದ್ಭುತ ಪೇಂಟರ್ ಕೂಡ. ರಪ್ಪನೆ ಪುಸ್ತಕದಿಂದ ತಲೆ ಹೊರಗೆ ಹಾಕಿದವನೇ ’ಅಬೇ, ವೋ ದೇಖ್ ಮಂದಿರ್, ಪಾತ್ರಾ ಆಗಯಾ, ಉತರೋ ಉತರೋ’ ಎಂದ. ಮುಂದಿನ ಸ್ಟಾಪಿನಲ್ಲಿ ಇಬ್ಬರೂ ಇಳಿದಾಯ್ತು. ಮೋಟು ಬೀಡಿ ಸೇದಿ ಮುಗಿಸಿದ ಕಂಡಕ್ಟರ್ ರೈಟ್ ಎಂದ. ಇದ್ದೂ ಇಲ್ಲದ ಬಸ್‌ ಸ್ಟಾಪಿನಿಂದ ಬಸ್ಸು ಹೊರಟು ಧೂಳೆಬ್ಬಿಸುತ್ತ ಮುಂದಿನ ತಿರುವಲ್ಲಿ ತಿರುಗುತ್ತಿದ್ದಂತೆ ರಸ್ತೆಯ ಕೆಳಗೆ ಹತ್ತಡಿ ದೂರದಲ್ಲಿ ಕಂಡೂ ಕಾಣದಷ್ಟು ಸಣ್ಣಗಿನ ಹಳದಿ ಪೇಂಟಿನ ಶೆಡ್ಡಿನಂಥ ಮನೆಯೊಂದು ಕಣ್ಣಿಗೆ ಬೀಳುತ್ತದೆ. ’ವಹೀ ಹೈ ದೇಖೋ ಉಸ್ಕಾ ಘರ್’ ಎಂದ ಸೇನ್‌ಗುಪ್ತಾ ಖುಷಿಯಿಂದ. ಹತ್ತಿರ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಪಕ್ಕದ ಗೂಡಂಗಡಿಯಲ್ಲಿ ಕೇಳಿದರೆ ಮಿಡ್ನಾಪುರದ ಆಸ್ಪತ್ರೆಗೆ ಹೋಗಿರಬಹುದೆಂಬ ಉತ್ತರ ಸಿಕ್ಕಿತು. ಆ ಮನೆಯ ಮಾಲೀಕನೇ ನಾವು ಹುಡುಕಿ ಬಂದ ಪಠಾಣ. ಪೂರ್ತಿ ಹೆಸರು ಮಹಮ್ಮದ್ ಯಾಸಿನ್ ಪಠಾಣ್.  ಹಾಗೆಂದು ಆತನ್ಯಾವ ಸೆಲೆಬ್ರಿಟಿಯೂ ಅಲ್ಲ, ಇತಿಹಾಸಕಾರನೂ ಅಲ್ಲ. ರಾಜಕಾರಣಿಯಾಗಲಿ, NGO ಕಟ್ಟಿ ಹೋರಾಡಿದವನಾಗಲೀ ಅಲ್ಲವೇ ಅಲ್ಲ. ಅರವತ್ತು ದಾಟಿದ ಐದುಕಾಲಡಿ ಮೀರದ ಸಣಕಲು ಕಡ್ಡಿ ದೇಹ, ಹಳೆಯ ಮಾಸಿದ ದೊಗಲೆ ಅಂಗಿ, ನಿರ್ಜೀವ ಮುಖಚರ್ಯೆಯ ಆತ ಮೊದಲ ನೋಟದಲ್ಲಿ ನಿಮ್ಮಲ್ಲೇನೂ ಇಂಟರೆಸ್ಟ್ ಮೂಡಿಸುವುದಿಲ್ಲ. ಮೂಲತಃ ಪಕ್ಕದ ಹಾತಿಹಲ್ಕಾ ಗ್ರಾಮದವನು. ಅಲ್ಲಿನ ಉರ್ದು ಹೈಸ್ಕೂಲೊಂದರಲ್ಲಿ ಪ್ಯೂನ್ ಆಗಿದ್ದು ರಿಟೈರಾದವ. ಸಿಗುವ ಮೂರೂವರೆ ಸಾವಿರ ಪೆನ್ಷನ್ನಿನಲ್ಲಿ ನಾಲ್ಕು ಮಕ್ಕಳ ಸಂಸಾರ ನಿಭಾಯಿಸುವ ಹೊಣೆ ಇವನ ಹೆಗಲ ಮೇಲಿದೆ. ಆದರೆ ಬಂಗಾಳಿ ಪುರಾತತ್ವ ಸಂಶೋಧಕರನ್ನು ರೋಮಾಂಚಿತಗೊಳಿಸುವ ಹೆಸರಿದು. He is a man with mission.
ಸುಮಾರು ಅರವತ್ತರ ದಶಕದ ಮದ್ಯಭಾಗ. ಡೇವಿಡ್ ಮೆಕ್‌ಟನ್ ಎಂಬ ಪ್ರಖ್ಯಾತ ಆಂಗ್ಲ ಇತಿಹಾಸಕಾರ ಪಾತ್ರಾದ ಭಾಗದಲ್ಲಿದ್ದ ಪುರಾತನ ದೇವಾಲಯ ಶಿಲ್ಪಗಳನ್ನು ಸಂದರ್ಶಿಸಿ ಪುಸ್ತಕವೊಂದನ್ನು ಬರೆಯಲು ಬಂದಿದ್ದ. ಬೆಂಗಾಳಿ ವಾಸ್ತುಶಿಲ್ಪದ ಪ್ರಸಿದ್ಧ ಕುರುಹಾದ ಸುಟ್ಟ ಇಟ್ಟಿಗೆಗಳ(ಟೆರಾಕೋಟಾ) ರಚನೆಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರ ಹಿಂದೆ ಬಂಗಾಳಿಗಳ ಪ್ರೀತಿಯ ಡೇವಿಡ್‌ಬಾಬುವಿನ ಶ್ರಮವಿದೆ.  ಆತನ  Late Medieval Temples of Bengal ಪುಸ್ತಕ ಮುಂದೆ ವಿಶ್ವಮಟ್ಟದಲ್ಲಿ ಬಂಗಾಳಿ ವಾಸ್ತುಶಿಲ್ಪವನ್ನು ಪರಿಚಯಿಸಿತ್ತು. ಹೀಗೆ ಬಂದಾಗ ಅವನ ಜೊತೆಗೆ ಸಹಾಯಕನಾಗಿ ಚೀಲ ಹೊರಲು ಬಂದ, ಆಚೆಯೂರಿನ ಮದರಸಾದಲ್ಲಿ ಪ್ಯೂನ್ ಕೆಲಸಕ್ಕಿದ್ದ ಇಪ್ಪತ್ತರ ಹರೆಯದ ಒಬ್ಬ ಗುಮಾಸ್ತನೇ ಈ ಪಠಾಣ. ೧೯೭೨ರಲ್ಲಿ ತನ್ನ ೪೨ನೇ ವರ್ಷದಲ್ಲಿ ಡೇವಿಡ್ ಮೆಕ್‌ಟನ್ ಮಲೇರಿಯಾದಿಂದ ಸಾಯದಿದ್ದರೆ ಈ ಪಠಾಣನ ಕೆಲಸವನ್ನು ನೋಡಿ ಎಷ್ಟು ಖುಷಿಪಡುತ್ತಿದ್ದನೋ ಏನೋ. ಮುಸ್ಲೀಮನಾದರೇನು? ಅವನಿಗೆ ತನ್ನ ನೆಲದ ಭವ್ಯ ಇತಿಹಾಸದ ಬಗ್ಗೆ ಅದಮ್ಯ ಹೆಮ್ಮೆಯಿತ್ತು. ಜೊತೆಗೆ ತಮ್ಮ ಜನರ ನಿರಭಿಮಾನದ ಕೊರಗೂ ಕೂಡ. ಪಾತ್ರಾದ ಸುಂದರ ಮಂದಿರಗಳು ಅವನಲ್ಲಿ ವಿಕ್ಷಿಪ್ತ ಪ್ರೀತಿಯೊಂದನ್ನು ಹುಟ್ಟುಹಾಕಿದವು.
ಯಾಸಿನ್ ಪಠಾಣ್(ಸೇನ್‌ಗುಪ್ತನ ಚಿತ್ರಗಳಿಂದ)
ಅನಾಥವಾಗಿ ಉರುಳಿ ಬಿದ್ದಿದ್ದ ರಾಶಿ ರಾಶಿ ಮಂದಿರಗಳು ಅವನಲ್ಲಿ ಎಂಥ ಪ್ರೇರಣೆಯನ್ನು ಹುಟ್ಟುಹಾಕಿದವೋ ಕಾಣೆ, ಏಕಾಂಗಿಯಾಗಿಯಾದರೂ ಸೈ ತನ್ನೂರಿನ ಪರಂಪರೆಯನ್ನು ರಕ್ಷಿಸುವ ಪಣತೊಟ್ಟ. ದೇವಸ್ಥಾನಗಳನ್ನು ಮರುನಿರ್ಮಿಸುವುದೆಂದರೇನು ಹುಡುಗಾಟದ ಮಾತೇ? ಕೈಯಲ್ಲಿ ಲೆಕ್ಕಹಾಕಿ ನಾಲ್ಕು ರೂಪಾಯಿಯೂ ಇರಲಿಲ್ಲ. ಊರಿನ ಮನೆಮನೆಯ ಬಾಗಿಲು ಬಡಿದು ತಮ್ಮೂರಿನ ಮಂದಿರಗಳನ್ನು ರಕ್ಷಿಸಲು ನೆರವಾಗುವಂತೆ ಅಂಗಲಾಚಿದ. ಕರಪತ್ರಗಳನ್ನು ಬರೆದು ಕಂಡವರಿಗೆಲ್ಲ ಹಂಚಿಬಂದ. ದೇವಸ್ಥಾನ ಕಟ್ಟಲು ದುಡ್ಡಿಗಾಗಿ ಸ್ಥಳೀಯ ಮುಖಂಡರ ಕೈಕಾಲು ಹಿಡಿದ. ಒಂದಿಷ್ಟು ಜನ ಹುಚ್ಚನ ಪಟ್ಟಕಟ್ಟಿದರು. ಹಿಂದೂಗಳ ದೇವಾಲಯದ ಉಸಾಬರಿ ಸಾಬಿಗ್ಯಾಕೆ ಬೇಕಿತ್ತು ಎಂದು ಇನ್ನೊಂದಿಷ್ಟು ಜನ ಮೂಗು ಮುರಿದರು. ಕಾಫಿರರ ಜೊತೆ ಸೇರಿ ತಮ್ಮಜಾತಿಯವ ಹಾಳಾಗಿ ಹೋದನೆಂದು ಸಂಬಂಧಿಕರು ಹಿಡಿಶಾಪ ಹಾಕಿದರು. ಶತಮಾನಗಳ ಹಿಂದೆ ಈ ದೇವಸ್ಥಾನಗಳನ್ನು ನಿರ್ಮಿಸಿದ್ದ ಬಂಡೋಪಾಧ್ಯಾಯ ಕುಟುಂಬವನ್ನು ಭೇಟಿಯಾಗಿ ಸಹಾಯ ಕೇಳಲು ಹೋದರೆ ಅವರು ಅವನನ್ನು ಮನೆಯೊಳಕ್ಕೂ ಬಿಟ್ಟುಕೊಳ್ಳಲಿಲ್ಲ. ಘೋಷ್ ಕುಟುಂಬದ ಬೆನ್ನು ಬಿದ್ದರೆ ತಮ್ಮ ಪೂರ್ವಿಕರ ಪೂಜಾಸ್ಥಳಗಳನ್ನೆಲ್ಲ ಮುಟ್ಟಿ ಅಪವಿತ್ರಗೊಳಿಸಬೇಡವೆಂದು ಬುದ್ಧಿವಾದ ಹೇಳಿ ಕಳಿಸಿಬಿಟ್ಟವು. ಪಠಾಣ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಊರಿನ ಜನರನ್ನು ನಂಬಿದರೆ ಕೆಲಸವಾಗುವುದಿಲ್ಲವೆಂದು ಮಂತ್ರಿಗಳ ಬೆನ್ನು ಬಿದ್ದ. ಸರ್ಕಾರಿ ಕಛೇರಿಗೆ ತಿರುಗಿ ಚಪ್ಪಲಿ ಸವೆದದ್ದು ಬಿಟ್ಟರೆ ಮತ್ತೇನೂ ಉಪಯೋಗವಾಗಲಿಲ್ಲ. IIT ಖರಗ್‌ಪುರ್, ಇಂಡಿಯನ್ ಮ್ಯೂಸಿಯಮ್ ಕಲ್ಕತ್ತಾ, ಕೇಂದ್ರ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಪ್ರಧಾನಿ, ರಾಷ್ಟ್ರಪತಿ ಹೀಗೆ ಸಾಧ್ಯವಿದ್ದಲ್ಲೆಲ್ಲ ಸಾವಿರಾರು ಪತ್ರಗಳನ್ನು ಬರೆದು ಅವರ ಗಮನ ಸೆಳೆಯಲು ಯತ್ನಿಸಿದ. ಅಷ್ಟರಲ್ಲಾಗಲೇ ಮುಕ್ಕಾಲು ಪಾಲು ಮಂದಿರಗಳು ಊರಿಂದ ಮಾಯವಾಗಿದ್ದವು. ಪ್ರಭಾವಿಗಳು ಇರುವ ಹಳೆಯ ಕಟ್ಟಡಗಳನ್ನು ಕೆಡವಿ ಅಲ್ಲಿನ ಕೆಂಪುಕಲ್ಲು, ಇಟ್ಟಿಗೆಗಳನ್ನು ತಮ್ಮ ಮನೆಕಟ್ಟಲು ಸಾಗಿಸುವುದು ಸಾಮಾನ್ಯವಾಗಿ ಹೋಯಿತು. ೧೯೮೨ರಲ್ಲಿ ಹೀಗೆಯೇ ಸ್ಥಳೀಯ ಪುಢಾರಿಯೊಬ್ಬ ಹಳೆಯ ಹೆಸರಾಂತ ದುರ್ಗಾದಲನ್ ಮಂದಿರದ ಕಲ್ಲುಗಳನ್ನು ಸಾಗಿಸುತ್ತಿದ್ದ ವಿಷಯ ಗೊತ್ತಾದಕೂಡಲೇ ಪಠಾಣ ಅಲ್ಲೇ ಸತ್ಯಾಗ್ರಹಕ್ಕೆ ಕೂತ. ತಮ್ಮ ಧರ್ಮದ ವಿಷಯದಲ್ಲಿ ಮೂಗುತೂರಿಸುತ್ತಿದ್ದಾನೆಂಬ ಕೋಪದಲ್ಲಿ ಊರಿನ ಹಿಂದೂಗಳೆಲ್ಲ ಸೇರಿ ನಡುಬೀದಿಯಲ್ಲಿ ಸಾಯುವಂತೆ ಹಿಡಿದು ಬಡಿದರು. ೯೨ರಲ್ಲಿ ಅಯೋಧ್ಯೆಯ ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಂತೂ ಪರಿಸ್ಥಿತಿ ಪೂರ್ತಿ ಬಿಗಡಾಯಿಸಿತ್ತು. ಹಿಂದೂಗಳ ಪರವೆಂಬ ಕಾರಣಕ್ಕೆ ಮುಸ್ಲೀಮರೂ ಜಾತಿಯಿಂದ ಬಹಿಷ್ಕಾರ ಹಾಕಿದರು. ಅಷ್ಟರಲ್ಲಾಗಲೇ ಬೇಡಿ ತಂದ ಹಣದಿಂದ ಸುಮಾರು ೩೪ ಸಣ್ಣಪುಟ್ಟ ಗುಡಿಗಳನ್ನು ರಿಪೇರಿ ಮಾಡಿಸಿದ್ದ. ಕೈಲಿದ್ದ ಹಣವೂ ಖರ್ಚಾಗಿ ದೊಡ್ಡ ಮೊತ್ತದ ಸಾಲ ತಲೆಯಮೇಲೇರಿತ್ತು. ಊರಲ್ಲಿರುವ ಹಿಂದೂ ಮುಸ್ಲೀಮರಿಬ್ಬರೂ ಹತ್ತಿರ ಸೇರಿಸುತ್ತಿರಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಗ್ರಾಮದಲ್ಲಿ ಹಿಂದೂ ಮುಸ್ಲೀಮರ ಸೌಹಾರ್ದತೆ ಸಾರಲು, ಇರುವ ಕೆಲವೇ ಕೆಲವು ಮಂದಿರಗಳನ್ನು ರಕ್ಷಿಸಲು ದುರ್ಗಾದಲನ್ ಮಂದಿರದಲ್ಲಿ ನವರಾತ್ರಿಯ ದುರ್ಗಾಪೂಜೆಯನ್ನು ಆಯೋಜಿಸಿದ.  ನನಗೆ ಗೊತ್ತಿರುವ ಮಟ್ಟಿಗೆ ಮುಸ್ಲೀಮರಿಂದ ಆಯೋಜಿಸಲ್ಪಡುವ ದುರ್ಗಾಪೂಜೆ ಬಂಗಾಳದಲ್ಲಿ ಸದ್ಯಕ್ಕೆ ಇದೊಂದೇ ಏನೋ. ದೇಶಕ್ಕೆ ದೇಶವೇ ಕೋಮುವಿದ್ವೇಶದಲ್ಲಿ ಹೊತ್ತಿ ಉರಿಯುತ್ತಿದ್ದಾಗ ಮುಸ್ಲೀಮನೊಬ್ಬ ದುರ್ಗಾಪೂಜೆಯನ್ನು ಆರಂಭಿಸಿದ್ದಾನೆಂಬ ಸುದ್ದಿ ಬಂಗಾಳದಲ್ಲಿ ಸಂಚಲನವನ್ನೇ ಮೂಡಿಸಿತು. ಮಾಧ್ಯಮಗಳೆಲ್ಲ ಪಾತ್ರಾದತ್ತ ಓಡಿಬಂದವು. ರಾತ್ರಿಕಳೆದು ಬೆಳಗಾಗುವುದರೊಳಗೆ ಊರವರ ಪಾಲಿಗೆ ವಿಲನ್ ಆಗಿದ್ದ ಪಠಾಣ ಬಂಗಾಳದ ಪಾಲಿಗೆ ಹೀರೋ ಆಗಿಹೋದ. IIT ಖರಗ್‌ಪುರ್ ಮೊದಲಿದ್ದ ಮಾದರಿಯಲ್ಲೇ ದೇವಾಲಯಗಳನ್ನು ಮರುನಿರ್ಮಿಸಲು ತಂತ್ರಜ್ಞಾನದ ನೆರವು ನೀಡುವುದಾಗಿ ಭರವಸೆ ನೀಡಿತು. ಆಷುತೋಷ್ ಮ್ಯೂಸಿಯಮ್ಮಿನ ನೆರವಿನಿಂದ ಇಲ್ಲಿನ ಸ್ಮಾರಕಗಳನ್ನು ರಕ್ಷಿಸಲು ‘Pathra Archaeological Preservation Committee’ ಎಂಬ NGO ಪ್ರಾರಂಭವಾಯ್ತು. ಕೇಂದ್ರದ ಸಂಸ್ಕೃತಿ ಸಚಿವಾಲಯದಿಂದ ೨೦ ಲಕ್ಷ ದೇಣಿಗೆಯೂ ದೊರಕಿತು. ೨೮ ದೇವಾಲಯಗಳನ್ನು ವಹಿಸಿಕೊಂಡ ಪುರಾತತ್ತ್ವ ಇಲಾಖೆ ಅವುಗಳಲ್ಲಿ ೧೪ನ್ನು ಭಾಗಶಃ ರಿಪೇರಿ ಮಾಡಿಸಿಟ್ಟಿದೆ. ಜೊತೆಗೆ ಈ ಎಲ್ಲ ದೇವಾಲಯಗಳೂ ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳೆಂದು ಘೋಷಿಸಲ್ಪಟ್ಟವು. ಇತ್ತೀಚೆಗಷ್ಟೇ ಸರ್ಕಾರದಿಂದ ಪಾತ್ರಾದ ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ೪ ಕೋಟಿ ೬೦ ಲಕ್ಷಗಳ ನಿಧಿ ಮಂಜೂರಾಗಿದೆ. ಸ್ವತಃ ರಾಷ್ಟ್ರಪತಿಗಳೇ ಆತನನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡು ಸನ್ಮಾನಿಸಿ ಬೆನ್ನುತಟ್ಟಿದರು. ರಾಷ್ಟ್ರೀಯ ಭಾವೈಕ್ಯತೆಗಾಗಿ ದುಡಿದವರಿಗೆ ನೀಡಲಾಗುವ ಕೇಂದ್ರ ಸರ್ಕಾರದ ಕಬೀರ್ ಪುರಸ್ಕಾರವೂ ಅರಸಿ ಬಂತು.
ಇಂದು ಪಾತ್ರಾ ಪ್ರವಾಸೋದ್ಯಮದಲ್ಲಿ, ವಾಸ್ತುಶಿಲ್ಪದಲ್ಲಿ ಮೊದಲಿನ ವೈಭವ ಪಡೆದಿದ್ದರೆ ಅವೆಲ್ಲವುಗಳ ಹಿಂದಿನ ಪ್ರೇರಕ ಶಕ್ತಿ ಅವನೊಬ್ಬ ಮತ್ತು ಅವನೊಬ್ಬ ಮಾತ್ರ. ಹಿಂದೂ ದೇವಾಲಯಗಳೆಡೆಗಿನ ಅವನ ಆ ನಿಸ್ವಾರ್ಥ ಪ್ರೀತಿ ನಾಲ್ಕೂವರೆ ದಶಕಗಳಾದರೂ ಇನ್ನೂ ಕರಗಿಲ್ಲ. ಆ ದಾರಿಯಲ್ಲಿ ಅವನನುಭವಿಸಿದ ಕಷ್ಟ, ನಷ್ಟ, ಹಲ್ಲೆ, ಅವಮಾನ, ಸಂಕಟಗಳಿಗೆ ಲೆಕ್ಕವಿಲ್ಲ. ಹೆಚ್ಚಿನ ದೇವಾಲಯಗಳೇನೋ ಇವನ ಕಾರಣದಿಂದ ಇಂದು ಒಂದು ಮಟ್ಟಿಗೆ ರಕ್ಷಿಸಲ್ಪಟ್ಟಿವೆ. ಆದರೆ ಆ ಕೆಲಸದಲ್ಲಿ ಯಾವ ಪ್ರತಿಫಲವೂ ಇಲ್ಲದೇ ದುಡಿದ ಪಠಾಣನ ಪರಿಸ್ಥಿತಿಯೇನೂ ಅಂದಿನ ಮಂದಿರಗಳಿಗಿಂತ ಭಿನ್ನವಾಗುಳಿದಿಲ್ಲ. ವಯಸ್ಸು ಅರವತ್ತು ದಾಟಿ ಸಾಗಿದೆ. ದುಡಿದ ದುಡ್ಡಿನ ಹೆಚ್ಚಿನಂಶವೆಲ್ಲ ಮಂದಿರ ನಿರ್ಮಾಣಕ್ಕೇ ಖಾಲಿಯಾಗಿದೆ. ರಸ್ತೆಯ ಕೆಳಗಿನ ನದಿಪಾತ್ರದ ಹತ್ತಿರದ ಸಣ್ಣ ತಗಡಿನ ಮಾಡಿನ ಮುರುಕಲು ಮನೆಯಲ್ಲೇ ಆತನ ವಾಸ. ವರ್ಷಂಪ್ರತಿ ನದಿ ಉಕ್ಕಿ ಬಂದಾಗಲೆಲ್ಲ ಮನೆಯೊಳಗೆ ನೀರು ನುಗ್ಗುತ್ತದೆ. ಕೆಲ ವರ್ಷಗಳ ಹಿಂದೆ ಇಡೀ ಮನೆಗೆ ಮನೆಯೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ದೇಶದ ಮೂಲೆಮೂಲೆಗಳಿಂದ ಅರಸಿ ಬಂದ ಪುರಸ್ಕಾರ, ಪ್ರಶಸ್ತಿ, ಸರ್ಟಿಫಿಕೇಟು, ಶಾಲುಗಳು ಸ್ವಂತಕ್ಕೆ ಐದು ಪೈಸೆಯ ಲಾಭವನ್ನೂ ತಂದುಕೊಡಲಿಲ್ಲ. ಜೊತೆಗೆ ಎರಡು  ಬಾರಿ ಹೃದಯಾಘಾತವೂ ಆಗಿದೆ. ಒಂದು ಕಿಡ್ನಿಯೂ ಕೈಕೊಟ್ಟಿದೆ. ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲದೇ ಮೂವತ್ತು ವರ್ಷಗಳಷ್ಟು ದೀರ್ಘಕಾಲ ಕಷ್ಟಪಟ್ಟು ಸಂಪಾದಿಸಿದ ಪಾತ್ರಾದ ಇತಿಹಾಸದ ಬಗೆಗಿನ ಡಾಕ್ಯುಮೆಂಟರಿಯ ಹಸ್ತಪ್ರತಿ ’ಮಂದಿರ್‌ಮೋಯ್ ಪಾತ್ರಾರ್ ಇತಿಬ್ರಿತಾ’ವನ್ನು ಪುಸ್ತಕವಾಗಿ ಪ್ರಕಟಿಸಲು ಪ್ರಕಾಶಕನೊಬ್ಬನಿಗೆ ಯಕಃಶ್ಚಿತ್ ಹದಿನೈದು ಸಾವಿರಕ್ಕೆ ಮಾರಿದನೆಂದರೆ ಅವನ ಪರಿಸ್ಥಿತಿ ಹೇಗಿರಬಹುದೆಂಬುದು ನಿಮ್ಮ ಊಹೆಗೆ ಬಿಟ್ಟದ್ದು.
ಏಳೆಂಟು ಮಂದಿರಗಳನ್ನು ನೋಡುತ್ತಿದ್ದಂತೆ ನಿಧಾನಕ್ಕೆ ಸಂಜೆಯಾಗಲು ಶುರುವಾಗಿತ್ತು. ಪಾತ್ರಾವನ್ನು ತಲುಪಿದ್ದೇ ತಡವಾದದ್ದರಿಂದ ಅಲ್ಲಿ ಹೆಚ್ಚಿನ ಸಮಯ ಕಳೆಯಲು ಅವಕಾಶವಾಗಲಿಲ್ಲ. ರಾತ್ರಿಯಾಗುವುದರೊಳಗೆ ಹಾವಡಾ ತಲುಪಿ ಅಲ್ಲಿಂದ ಬಾರಾಸಾತಿಗೆ ಸಿಟಿಬಸ್ಸು ಹಿಡಿಯಬೇಕಾಗಿತ್ತು. ಪಾತ್ರಾವನ್ನು ಸುಲಭಕ್ಕೆ ಬಿಟ್ಟುಬರಲು ಮನಸ್ಸಾಗಲಿಲ್ಲ. ಮನಸ್ಸೆಲ್ಲ ಬರೀ ಪಠಾಣನನ್ನೇ ತುಂಬಿಕೊಂಡು ಭಾರವಾಗಿತ್ತು. ಪಾತ್ರಾದ ಕಥೆ ಶುರುವಾಗುವುದು, ಮುಗಿಯುವುದು ಅವನಿಂದಲೇ. ಅವನನ್ನು ಭೇಟಿಯಾಗದೇ ಹಿಂದಿರುಗುವುದೆಂತು! ಮತ್ತೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ? ಹಾಗೊಂದು ವೇಳೆ ಬಂದರೂ ಅವನಿರುತ್ತಾನೋ? ಸಿಗುತ್ತಾನೋ?
ಸೂರ್ಯ ನಿಧಾನಕ್ಕೆ ಕೆಂಪಾಗತೊಡಗಿದ್ದ. ಸುಮಾರು ಹೊತ್ತು ಕಾದನಂತರ ದಡಬಡ ಸದ್ದು ಮಾಡುತ್ತ ಬಸ್ಸು ಸುಯ್ಯನೆ ಸುಂಟರಗಾಳಿಯಂತೆ ಬಂದು ನಿಂತಿತು. ಉಸಿರಾಡಲು ಸಾಧ್ಯವಿಲ್ಲದಷ್ಟು ರಶ್ ಇದ್ದರೂ ತೂರಿಕೊಂಡು ಮೆಟ್ಟಿಲಿನ ಮೇಲೆ ಜನರ ಮಧ್ಯೆ ಜಾಗಮಾಡಿಕೊಂಡು ನಿಂತೆ. ಸೇನ್‌ಗುಪ್ತಾ ಫುಟ್‌ಬೋರ್ಡ್ ಮೇಲೆ ನೇತಾಡುತ್ತಿದ್ದ. ಅವರಿವರು ಏನಾದರೂ ಅಂದುಕೊಂಡಾರು ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನ ಅವನದಲ್ಲವೇ ಅಲ್ಲ. ಬಸ್ ಹೊರಟಿತ್ತಷ್ಟೆ. ’ಅಬೇ ತೇರಾ ದೋಸ್ತ್ ಇಸೀ ಬಸ್ ಸೆ ಉತ್ರಾ ಹೈ, ಜಲ್ದಿ ದೇಖ್, ಜಲ್ದೀ ದೇಖ್’ ಎಂದು ಕಿರುಚತೊಡಗಿದ. ಪಠಾಣ ಅದೇ ಬಸ್ಸಿನಿಂದ ಇಳಿದನಂತೆ. ಅವನೆಲ್ಲಿಯಾದರೂ ಕಾಣಬಹುದಾ ಎಂದು ಬಗ್ಗಿ ಬಗ್ಗಿ ನೋಡತೊಡಗಿದೆ. ಉಹೂಂ....... ಬಸ್ಸು ಹೊರಟಾಗಿತ್ತು. ’ಅಬೇ ಉತರ್ ಜಾಯೆಂಗೆ ಆಜಾ’ ಎಂದ.  ಏನಾಯಿತೋ ಏನೋ, ಬೇಡವೆಂದು ಕಣ್ಸನ್ನೆ ಮಾಡಿದೆ. ’ಇತ್ನಾ ದೂರ್ ಆಕೆ ಉಸೆ ಬಿನಾ ದೇಖೆ ಜಾಯೇಗಾ ಕ್ಯಾ’ ಎಂದು ಅಲ್ಲಿದ್ದವರ ಮುಂದೆಯೇ ಮಂತ್ರಪುಷ್ಪ ಉದುರಿಸಲು ಶುರುಮಾಡಿದ. ನನ್ನ ಮನಸ್ಸು ಹೇಳುತ್ತಿತ್ತು. ಮುಂದಿನ ಬಾರಿ ಪಾತ್ರಾಕ್ಕೆ ಬಂದಾಗ ಆತ ಖಂಡಿತ ಸಿಕ್ಕೇ ಸಿಗುತ್ತಾನೆ. ಅಂಥವರ ಸಂತತಿ ಸಾವಿರವಾಗಲಿ..

Monday, August 17, 2015

ಕಲ್ಕತ್ತಾ ಡೈರಿ: ಬಂಗಾಳದ ಇತಿಹಾಸದಲ್ಲೊಂದು ಕಳಚಿದ ಕೊಂಡಿ

     ಸಣ್ಣಗೆ ಮಳೆ ಜಿನುಗುತ್ತಿತ್ತು. ಹೀಗೇ ಇನ್ನೊಂದು ಗಂಟೆ ಮಳೆ ಸುರಿದರೆ ಈಡೀ ಕಲ್ಕತ್ತಾಕ್ಕೆ ಕಲ್ಕತ್ತವೇ ತೇಲಲು ಶುರುಮಾಡುತ್ತಿತ್ತೇನೋ. ಬಾರಾಸಾತ್ ಬಸ್ ಸ್ಟಾಪಿಗೆ ಬಂದು ನೋಡಿದರೆ ಅದು ಅಕ್ಷರಶಃ ಕಲಕಿಟ್ಟ ಕೊಚ್ಚೆಸಮುದ್ರ. ಹೊರಡಲು ರೆಡಿಯಾಗಿದ್ದ ೭೩ ನೇ ನಂಬ್ರದ ಮರದ ಪೆಟ್ಟಿಗೆಯಂಥಹ ಬಸ್ ಹಿಡಿದು ವಿಂಡೋ ಸೀಟಿನಲ್ಲಿ ಕೂತೆ. ಬಸ್ ಎಷ್ಟು ಹಳೆಯದೆಂದರೆ ಅದರ ಕಿಡಕಿ ಕೂಡ ಮರದ್ದೇ. ಶಕ್ತಿಯನ್ನೆಲ್ಲ ಪ್ರಯೋಗಿಸಿ ಎತ್ತಿ ಮೇಲಿನ ಕೊಕ್ಕೆಗೆ ಸಿಲುಕಿಸಿದರೆ ಒಳಗೆ ಬರುವ ನೀರು ಒಂದಿಷ್ಟು ಕಡಿಮೆಯಾಗುತ್ತದೆ.  ಹೊರಗಡೆ ಜುಲೈ ತಿಂಗಳ ಜೋರುಮಳೆಯಾದರೂ ಒಳಗೆ ಬೆವರು ಕಿತ್ತೆದ್ದು ಬರುತ್ತಿತ್ತು. ಡ್ರೈವರ್ ಕಂಡಕ್ಟರುಗಳಿಬ್ಬರೂ ಕಾಂಪಿಟೀಶನ್ನಿಗೆ ಬಿದ್ದವರಂತೆ ಬೀಡಿಯ ಮೇಲೊಂದು ಬೀಡಿ ಸೇದಿ ಬಿಸಾಕುತ್ತಿದ್ದರು. ಹೆಚ್ಚಿನ
ಕಲ್ಕತ್ತಾವಾಲಾಗಳು ಹೊಟ್ಟೆಗಿಲ್ಲದೇ ಬದುಕಿದರೂ, ಸಿಗರೇಟು ಸೇದದೇ ಬದುಕುವುದಿಲ್ಲವೆಂದು ನೆನಪಾಯ್ತು. ಹಳೆಯ ರಿಕಾರ್ಡರಿನಿಂದ ರಬೀಂದ್ರ ಸಂಗೀತ ಹಾಗೇ ಅಲೆಯಲೆಯಾಗಿ ತೇಲಿ ಬಸ್ಸೊಳಗಿನ ವಾತಾವರಣವನ್ನೆಲ್ಲ ಆಕ್ರಮಿಸಿಕೊಳ್ಳುತ್ತಿತ್ತು. ಲಟಾರಿ ಬಸ್ಸು ಬಾರಾಸಾತ್ ಜಂಕ್ಷನ್ನಿನಿಂದ ಎಡಕ್ಕೆ ತಿರುಗಿ ಸಪುರ ರೋಡಿನಲ್ಲಿ ಕಲ್ಕತ್ತದ ಹೊರವಲಯದತ್ತ ಸಾಗುತ್ತಿದ್ದಂತೆ ಬಂಗಾಳದ ಬಡತನ ಜೀವಂತವಾಗುತ್ತದೆ. ಮಾಡಿನ ಮೇಲೆಲ್ಲ ಹುಲ್ಲುಬೆಳೆದ ಧೂಳುಹಿಡಿದ ಅಂಗಡಿಗಳ ಸಾಲುಸಾಲು, ಮೀನಿನಂಗಡಿಯ ಪಕ್ಕದ ಸಣ್ಣ ಮಿಠಾಯಿ ದುಕಾನಿನಲ್ಲಿ ರೊಶೊಗುಲ್ಲಾ ಸವಿಯಲು ಸಾಲುಗಟ್ಟಿದ ಜನ, ಮೋರಿಗಳ ಪಕ್ಕ ಕೋಳಿ ಗೂಡುಗಳಂಥ ಮನೆಗಳು. ಇವೆಲ್ಲ ದಾಟಿ ಹಸಿರು ಶುರುವಾಗುತ್ತಿದ್ದಂತೆ ಗೋಚರಿಸುವುದು ವಿಶಾಲ ಭತ್ತದ ಗದ್ದೆಗಳು, ಥೇಟ್ ನಮ್ಮೂರನ್ನೇ ನೆನಪಿಸುವ ಹಳ್ಳಿಗಳು, ಮನೆ ಮುಂದೆ ತೆಂಗು, ಅಡಿಕೆ, ಹಲಸು. ಬಸ್ಸು ಹತ್ತಿದ ಇಪ್ಪತ್ತು ನಿಮಿಷಗಳೊಳಗೆ ಬೇಡಾಚಂಪಾದ ಬೋರ್ಡು ಕಾಣಿಸಿತು. ರಸ್ತೆಯ ಮಧ್ಯೆಯೊಂದು ಮಾರ್ಕೇಟಿದೆ ಎನ್ನುವುದು ಬಿಟ್ಟರೆ ಅದೇನು ಅಂಥ ದೊಡ್ಡ ಊರಲ್ಲ. ಹಾಗೆಂದು ಬಂಗಾಳಿಗಳೂರಲ್ಲಿ ಸದ್ದುಗದ್ದಲಗಳಿಗೇನು ಕಡಿಮೆಯಿಲ್ಲ. ಬಸ್ಸಿಳಿದವ ಎದುರಿನ ಸರ್ಕಲ್ಲಿನಲ್ಲಿದ್ದ ಕಾಳಿಮಂದಿರದ ಎಡಪಕ್ಕದ ಕಚ್ಚಾ ರಸ್ತೆ ಹಿಡಿದೆ. ಕೇರಿಗಳು ಕಳೆದು ದೂರದೂರದವರೆಗೆ ಸೆಣಬಿನ ಗದ್ದೆಗಳು ಕಾಣಲು ಶುರುವಾದವು. ಕಣ್ಣರಳಿಸಿ ಬೆರಗಿಂದ ಆಚೀಚೆ ನೋಡುತ್ತ ಮುಕ್ಕಾಲು ಕಿಲೋಮೀಟರ್ ನಡೆದಾದಮೇಲೆ ಕಂಡಿದ್ದು ಒಂದು ದೊಡ್ಡ ಕಂಪೌಂಡ್. ಒಂದು ಪಕ್ಕ ರಸ್ತೆ, ಅಲ್ಲಲ್ಲಿ ಸಣ್ಣ ಸಣ್ಣ ಗೂಡು ಮನೆಗಳ ರಾಶಿರಾಶಿ, ನಾಲ್ಕಾರು ಕೆರೆಗಳು, ಹಳ್ಳಿಗಳ ಬೇಣದಂಥ ಜಾಗ. ಇದು ಅದೇನಾ? ನಾನಿಷ್ಟು ದಿನಗಳ ಕಾಲ ಓದಿದ, ಕಲ್ಲತ್ತದಲ್ಲಿ ನೋಡಲೇಬೇಕೆಂದುಕೊಂಡ ಸ್ಥಳವಾ? ಇದೇನಾ ಅವಿಭಜಿತ ಬಂಗಾಳದ ಪುರಾತತ್ತ್ವ ವಿಭಾಗದ ಅತಿದೊಡ್ಡ ಸಂಶೋಧನೆಯೆನಿಸಿದ್ದು? ಇದೇಯಾ ಭಾರತದ ಅತಿಹಳೆಯ ನಗರಗಳಲ್ಲೊಂದೆಡು ಖ್ಯಾತಿಗೊಳಗಾಗಿದ್ದು? ಏನೋ ಹುಡುಕಿ ಬಂದವನಿಗೆ ಒಂದು ಥರಹದ ಶಾಕ್.
ರಸ್ತೆ ಪಕ್ಕ ಸುತ್ತಲಿನ ಸ್ಥಳವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟ ಪುರಾತತ್ತ್ವ ಇಲಾಖೆಯ ಸೈನ್ ಬೋರ್ಡೋಂದು ರಾರಾಜಿಸುತ್ತಿತ್ತು. ಒಂದು ಕಾಲು ಊನಗೊಂಡ ತುಕ್ಕುಹಿಡಿದ ಆ ಬೋರ್ಡ್ ಒಂದು ಸಾಕಿತ್ತು ಇಡೀ ಪ್ರದೇಶ ಎಷ್ಟು ಸಂರಕ್ಷಣೆಗೊಳಪಟ್ಟಿದೆಯೆಂದು ಹೇಳಲು. ಬೋರ್ಡಿನಲ್ಲಾದರೂ ಏನಾದರೂ ಹೊಸ ವಿಷಯ ಸಿಗಬಹುದೆಂದು ಹತ್ತಿರ ಹೋಗಿ ಓದಿದೆ. ಬರೆದಿತ್ತು. ಖನ ಮಿಹಿರೇರ್ ಧಿಪಿ ಅಥವಾ ಬರಾಹಮಿಹಿರೆರ್ ಧಿಪಿ........


ಇಲ್ಲೊಂದು ಗುಪ್ತರ ಕಾಲದ ನಕ್ಷತ್ರಾಕಾರದಲ್ಲಿದ್ದ ಇಟ್ಟಿಗೆಯಿಂದ ಕಟ್ಟಿದ ವಿಶಾಲ ದೇವಸ್ಥಾನದ ಅವಶೇಷವಿದೆ. ಐವತ್ತರ ದಶಕದ ಸುಮಾರಿಗೆ ಇಲ್ಲಿ ನಡೆದ ಉತ್ಖನನದಲ್ಲಿ ಸಿಕ್ಕ ಎಡಗೈನಲ್ಲಿ ಕನ್ನಡಿ ಹಿಡಿದ, ಕಾಲಡಿ ವಿಚಿತ್ರ ಪ್ರಾಣಿಯನ್ನು ವಾಹನವಾಗಿಸಿಕೊಂಡ ಗುಪ್ತಪೂರ್ವ ಯುಗದ ಕಂಚಿನ ಮೈತ್ರೇಯಿ ದೇವಿಯ ವಿಗ್ರಹ ತುಂಬ ಸುದ್ದಿಮಾಡಿತ್ತು. ಗೋಡೆಗಳು, ಛಾವಣಿ ನಾಶವಾಗಿದ್ದರೂ ನೆಲಗಟ್ಟು, ಎತ್ತರದ ಕಟ್ಟೆಗಳು, ಕೋಣೆಗಳು, ಪ್ರಾಕಾರ, ಇಪ್ಪತ್ತು ಮೆಟ್ಟಿಲುಗಳ ರಚನೆ ಗಟ್ಟಿಯಾಗಿ ಉಳಿದಿದೆ. ಅಮೃತಕುಂಡ ಮತ್ತು ಜೀವಿತ ಕುಂಡವೆಂದು ಕರೆಯಲ್ಪಡುವ ಎರಡು ಚಿಕ್ಕ ಕೆರೆಗಳೂ ಬದುಕುಳಿದಿವೆ. ಇದರ ಹೊರ ಪ್ರಾಕಾರದ ಗೋಡೆಯ ಅವಶೇಷವಿರುವುದು ಅಲ್ಲಿಂದ ಎರಡು ಕಿ.ಮೀ ಆಚೆ ಎಂದರೆ ಅದೆಷ್ಟು ವಿಸ್ತಾರವಾಗಿದ್ದಿರಬಹುದೆಂದು ಊಹಿಸಿ. ಮಧ್ಯದ ಜಾಗವೆಲ್ಲ ಜನವಸತಿಯಿಂದ ತುಂಬಿಹೋಗಿರುವಾಗ ಉತ್ಖನನ ಮಾಡುವುದಾದರೂ ಎಲ್ಲಿ? ಖನ-ಮಿಹಿರೆರ್ ಧಿಪಿಯ ಹೆಸರು ಬಂದಿರುವುದು ಖ್ಯಾತ ಜ್ಯೋತಿಷ್ಯಾಸ್ತ್ರಜ್ಞ ವರಾಹಮಿಹಿರ ಮತ್ತು ಅವನ ಪತ್ನಿಯೆನ್ನಲಾಗುವ ಖನಳಿಂದ. ವರಾಹಮಿಹಿರ ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಬ್ಬ. ಆತನ ಪತ್ನಿ ಖನಳೂ ದೊಡ್ಡ ಜ್ಯೋತಿಷಾಸ್ತ್ರಜ್ಞಳಾಗಿದ್ದಳಂತೆ. ಫಲಜ್ಯೋತಿಷ್ಯದ ನಿಖರ predictionsಗಳಿಂದ ಅವಳ ಖ್ಯಾತಿ ವರಾಹಮಿಹಿರನಿಗಿಂದ ಹೆಚ್ಚಾದಾಗ ಅಸೂಯೆಗೊಂಡ ಮಿಹಿರ ಅವಳ ನಾಲಿಗೆ ಕತ್ತರಿಸಿದನಂತೆ. ಈ ಖನಲನ್ನು ಬಂಗಾಳದ ಮೊದಲ ಕವಯಿತ್ರಿಯೆಂದು ಗುರುತಿಸಲಾಗುತ್ತದೆ. ಬಂಗಾಳಿ ಸಾಹಿತ್ಯದ ಮೊದಮೊದಲ ರಚನೆಗಳಲ್ಲೊಂದಾದ ಖನೆರ್ ಬಚನ್(ಖನಳ ವಚನ) ಬಂಗಾಳದಲ್ಲಿ ಮನೆಮಾತು, ಥೇಟ್ ನಮ್ಮ ಅಕ್ಕಮಹಾದೇವಿಯಂತೆ. ಐತಿಹಾಸಿಕವಾಗಿ ಅವಳು ೯ರಿಂದ ೧೨ನೇ ಶತಮಾನದ ಮಧ್ಯದಲ್ಲಿ ಜೀವಿಸಿರಬಹುದು. ಕ್ರಿ.ಶ ಮೊದಲ ಶತಮಾನದ ವರಾಹಮಿಹಿರನನ್ನು ಉಜ್ಜೈನಿಯವನೆಂದು ಗುರುತಿಸಲಾಗುತ್ತದೆ. ಹಾಗಾದರೆ ಆತನೊಂದಿಗಿನ ಖನಳ ಕಥೆ ಕಾಲ್ಪನಿಕವಿರಬಹುದೇ? ಅಥವಾ ಇದ್ಯಾವ ವರಾಹಮಿಹಿರನೋ!!
 ಮುಂದೇನು ಮಾಡುವುದೆಂದು ತಲೆಕೆರೆದುಕೊಂಡು ಆಚೀಚೆ ನೋಡಿದರೆ ಕಾಣಿಸಿದ್ದು ಎರಡು ಯುವ ಪ್ರೇಮಿಗಳ ಜೋಡಿ, ಮೂರ್ನಾಲ್ಕು ಸಿಗರೇಟ್ ಸೇದುತ್ತ ಕುಳಿತ ಪಡ್ಡೆ ಹೈಕಳು, ಇನ್ನೊಬ್ಬ ಕುರಿ ಮೇಯಿಸುತ್ತಿದ್ದವ. ’ಮೊಶಾಯ್, ಯಹಾಂ ಕಿಲಾ ದೇಖ್‌ನೇ ಕೇಲಿಯೆ ಕಹಾಂ ಮಿಲೇಗಾ?’ ಎಂದು ಅಲ್ಲಿ ಕುಳಿತಿದ್ದ ಹುಡುಗರ ಗುಂಪಿಗೆ ಕೇಳಿದೆ. ಪರಮ ಸುಖೀ ಪುರುಷನಂತೆ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತದ್ದವನೊಬ್ಬ ನಿರ್ಲಿಪ್ತನಾಗಿ ಉತ್ತರಿಸಿದ ’ಉಸೀಪೇಹಿ ಆಪ್ ಖಡೇಹೋ, ದೇಖ್ಲೋ’.
ಕಾಲಕೆಳಗೆ ನೋಡಿಕೊಂಡೆ. ಇಲ್ಲ...ಇದು ಮಾಮೂಲಿನಂಥ ನೆಲವಲ್ಲ. ಸುತ್ತಣ ಹಚ್ಚಹಸುರಿನ ಮಧ್ಯೆ ಕಡುಕೆಂಪು ನೆಲದಿಂದ ಸುಟ್ಟ ಇಟ್ಟಿಗೆಯ ಚೂರುಗಳು ಹೊರಗಿಣುಕುವುದನ್ನು ಗಮನಿಸುವುದನ್ನೇ ಮರೆತುಬಿಟ್ಟಿದ್ದೆ. ಅದು ಬರಿ ಖನಮಿಹಿರೆರ್ ಧಿಪಿಯ ಕಂಪೌಂಡಿನೊಳಗೊಂದೇ ಅಲ್ಲ. ಹೊರ ಬಂದು ಪಕ್ಕದ ದಿಬ್ಬ ಹತ್ತಿಳಿದು ಆಚೆಯ ಕಾಲುಹಾದಿಗೆ ಬಂದು ನೋಡಿದರೆ ಅಲ್ಲಿನ ನೆಲವೂ ಥೇಟ್ ಅದೇ ರೀತಿ. ಮುಂದಕ್ಕೆ ಹೋಗಿ ಗದ್ದೆಯ ಅಂಚಿಲ್ಲಿ ನಿಂತು ನೋಡಿದರೆ ಇಲ್ಲಿನ ನೆಲವೂ ಅದೇ ಥರದ ಇಟ್ಟಿಗೆಯದ್ದು. ದೂರದಲ್ಲಿ ಗದ್ದೆಗಳ ಮಧ್ಯೆ ಕಲ್ಲು ಕ್ವಾರಿಗಳಂಥ ಸಣ್ಣ ಸಣ್ಣ ಹೊಂಡಗಳು. ಅಲ್ಲಿನ ನೆಲ, ಗೋಡೆಗಳೂ ಅಂಥದೇ. ಇಟ್ಟಿಗೆಯ ಫ್ಲೋರಿಂಗ್ ಅಂಥ ವಿಶೇಷವೇನಲ್ಲ. ಆದರಿದು ಅಂಥಿಂಥ ಇಟ್ಟಿಗೆಯದಲ್ಲ. ಈ ಇಟ್ಟಿಗೆಯ ಚೂರುಗಳು ಮೂರು ಸಾವಿರ ವರ್ಷಗಳ ಕಥೆ ಹೇಳುತ್ತವೆ. ಇಪ್ಪತ್ತೈದು-ಮೂವತ್ತು ಶತಮಾನಗಳ ಕಾಲ ಕಾಲನ ಹೊಡೆತ ತಾಳಿಕೊಂಡು ಊರವರ ದಿವ್ಯ ನಿರ್ಲಕ್ಷದ ಮಧ್ಯೆ ಇವು ಉಳಿದು ಬಂದಿರುವುದೇ ಒಂದು ಸೋಜಿಗ.
ಸುಟ್ಟ ಇಟ್ಟಿಗೆಯಂಥ ನೆಲ


೧೯೦೭ರಲ್ಲಿ ರಾಖಲ್ ದಾಸ್ ಬಂಡೋಪಾಧ್ಯಾಯ ಎಂಬ ಒಬ್ಬ ಯುವ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ಈ ಬೇಡಾಚಂಪಾದ ಪ್ರದೇಶದಲ್ಲಿ ವ್ಯಾಪಕ ಅಧ್ಯಯನ ಕೈಗೊಂಡ. ಸುತ್ತಲಿನ ಸ್ಥಳಗಳಲ್ಲಿ ಅಗೆದಲ್ಲೆಲ್ಲ ಸಿಕ್ಕುತ್ತಿದ್ದ ಸುಟ್ಟ ಮಣ್ಣಿನ ಇಟ್ಟಿಗೆಗಳು, ಟೆರಾಕೋಟಾದ ಮಾದರಿಗಳು ಅವನಲ್ಲಿ ಭಾರೀ ಆಸಕ್ತಿ ಕೆರಳಿಸಿದ್ದವು. ಇದರ ಐತಿಹಾಸಿಕತೆಯ ಬಗ್ಗೆ ಬಸುಮತಿ ಎಂಬ ಬಂಗಾಳಿ ಮಾಸಿಕದಲ್ಲೂ ಆತ ಸರಣಿ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ ತನ್ನ ಅಧ್ಯಯನದ ವಿಸ್ತೃತ ವರದಿಯೊಂದನ್ನ ASIಗೂ ಕಳಿಸಿಕೊಟ್ಟ. ಪ್ರಾಚ್ಯವಸ್ತು ಇಲಾಖೆ ಆತನ ಸಂಶೋಧನೆಯನ್ನು ಕೆಲಸಕ್ಕೆ ಬಾರದ್ದೆಂದು ಮೂಲೆಗೆಸೆಯಿತು. ಇದೇ ಬಂಡೋಪಾಧ್ಯಾಯನ ಸಂಶೋಧನೆಯಿಂದ ಹದಿನೈದು ವರ್ಷಗಳ ನಂತರ ಯಾವತ್ತು ಮೆಹಂಜೋದಾರೋ ವಿಶ್ವವಿಖ್ಯಾತಿಗಳಿಸಿತೋ ಬಂಗಾಳದ ಸರ್ಕಾರ ದೀರ್ಘ ಆಕಳಿಕೆ ಮುಗಿಸಿ ಎದ್ದು ಕೂತಿತು. ಅತ್ತ ರಾಖಲ್ ದಾಸ್‌ ಹರಪ್ಪಾದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಿದ್ದಂತೆ ಹದಿನೈದಿಪ್ಪತ್ತು ವರ್ಷಗಳಿಂದ ಮೂಲೆಯಲ್ಲಿ ಧೂಳುತಿನ್ನುತ್ತಿದ್ದ  ವರದಿಗೆ ಎಲ್ಲಿಲ್ಲದ ಮಹತ್ವ ಬಂತು. ಆಶುತೋಷ್ ಮ್ಯೂಸಿಯಂ ಆಫ್ ಇಂಡಿಯನ್ ಆರ್ಟ್‌ನ ಸಹಾಯದಿಂದ ಇಲ್ಲಿನ ಕೆಲ ಸ್ಥಳಗಳಲ್ಲಿ ಉತ್ಖನನ ನಡೆದಾಗ ನಾಲ್ಕು ಮಡಿಕೆಯ ಚೂರು, ಒಂದಿಷ್ಟು ಹಳೆಯ ನಾಣ್ಯಗಳು ಸಿಕ್ಕರೆ ದೊಡ್ಡದೆಂಬ ಭಾವನೆಯಿದ್ದ ಇತಿಹಾಸಕಾರರೆಲ್ಲ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟರು. ಅದುವರೆಗೂ ಕಂಡುಕೇಳರಿಯದಿದ್ದ ಮೂರು ಸಾವಿರ ವರ್ಷಗಳ ಹಳೆಯ ಭವ್ಯ ನಗರವೊಂದು ಧಿಗ್ಗನೆದ್ದು ಜಗತ್ತಿನೆದುರು ತೆರೆದುಕೊಂಡಿತು. ಇಷ್ಟಾಗಿದ್ದೇ ತಡ, ಒಂದಿಷ್ಟು ಜಾಗಕ್ಕೆ ಕಂಪೌಂಡ್ ಗೋಡೆಕಟ್ಟಿ ಮೂರ್ನಾಲ್ಕು ಬೋರ್ಡು ತೂಗುಹಾಕಿ ಸುತ್ತಲಿನ ಸ್ಥಳವನ್ನು ಸಂರಕ್ಷಿತ ವಲಯವೆಂದು ಘೋಷಿಸಿ ಸರ್ಕಾರ ಕೈತೊಳೆದುಕೊಂಡಿತು. ಮುಂದೆ ಖ್ಯಾತ ಬಂಗಾಳಿ ಲೇಖಕ ಕಾಲಿದಾಸ ದತ್, ಕಲ್ಯಾಣ ಕುಮಾರ್ ಗಂಗೂಲಿ, ಕುಂಜಗೋಬಿಂದ ಗೋಸ್ವಾಮಿ, ದೇವಿಪ್ರಸಾದ್ ಘೋಷರಂಥವರ ಪರಿಶ್ರಮದಿಂದ ಆಶುತೋಷ್ ಮ್ಯೂಸಿಯಂ ಇನ್ನೂ ಕೆಲವೆಡೆ ಉತ್ಖನನ ಕೈಗೊಂಡಿತು. ಅಗೆದಲ್ಲೆಲ್ಲ ತೆರೆದುಕೊಳ್ಳುತ್ತಿದ್ದ ಆ ನಾಗರಿಕತೆಯ ಹೊಸ ಕುರುಹುಗಳು ಪ್ರಾಚ್ಯವಸ್ತು ಸಂಶೋಧಕರನ್ನು ಬೆಚ್ಚಿಬೀಳಿಸಿದ್ದವು. ನಿನ್ನೆಮೊನ್ನೆಯಷ್ಟೆ ಖನ ಮಿಹಿರೆರ್ ಧಿಪಿಯ ಪಕ್ಕ ವೊಡಾಫೋನ್ ಕಂಪನಿ ಮೊಬೈಲ್ ಟವರಿಗಾಗಿ ನೆಲವಗೆಯುತ್ತಿದ್ದಾಗ ಸಿಕ್ಕ ಕೆಲ ಬೆಲೆಬಾಳುವ ಮೂರ್ತಿಗಳು ಬೇಡಾಚಂಪಾವನ್ನು ಮತ್ತೆ ಸುದ್ದಿಗೆ ತಂದಿದ್ದವು. ಚೌಕಾಶಿ ನಡೆಸಿದರೆ ಇಲ್ಲಿ ಸಿಕ್ಕ ಚಿಕ್ಕಪುಟ್ಟ ಐತಿಹಾಸಿಕ ಮಹತ್ವದ ವಸ್ತುಗಳನ್ನು ಸಾವಿರ ಎರಡು ಸಾವಿರಕ್ಕೆ ಮಾರುವವರೂ ಇದ್ದಾರೆ. ಇಲ್ಲಿ ಸಿಗುವ ಟೆರಾಕೋಟಾದ ಮಾದರಿಗಳಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆಯಿದೆ. ಮಣ್ಣಿನ ಕಲಾಕೃತಿಗಳಿಗೆ ಹೆಸರಾದ ಬಿಶ್ನುಪುರದ ಕಲಾವಿದರಿಂದ ನಕಲಿ ಟೆರಾಕೋಟಾದ ಮೂರ್ತಿಗಳನ್ನು ಮಾಡಿ, ಅದರ ಮೇಲೆ ಖರೋಷ್ಟಿ ಲಿಪಿಯಲ್ಲಿ ಅಚ್ಚು ಕೆತ್ತಿಸಿ ಥೇಟ್ ಅಸಲಿಯೆಂದು ನಂಬಿಸಿ ಮಾರುವ ದಂಧೆಯೂ ಶುರುವಾಗಿದೆ.
ಅದು ಚಂದ್ರಕೇತುಘರ್....
ಜಗತ್ತಿನ ಇತಿಹಾಸಕಾರರನ್ನೆಲ್ಲ ಒಂದು ಕಾಲದಲ್ಲಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಈ ಸ್ಥಳ ನಿಜಕ್ಕೂ ಬಂಗಾಳದ ಇತಿಹಾಸದ ಒಂದು ಕಳೆದುಹೋದ ಕೊಂಡಿ. ಅದೆಷ್ಟು ರೋಚಕತೆಯನ್ನು ಹುಟ್ಟುಹಾಕಿದೆಯೋ ಅಷ್ಟೇ ನಿಗೂಢತೆಗಳನ್ನೂ ತನ್ನೊಡಲೊಳಗದು ಬಚ್ಚಿಟ್ಟುಕೊಂಡಿದೆ. ಇದರ ಒಗಟನ್ನು ಬಿಡಿಸಲಾಗದೇ ಕೈಚೆಲ್ಲಿದ ಪುರಾತತ್ವ ಸಂಶೋಧಕರೇ ಹೆಚ್ಚು. ಹೆಚ್ಚೆಚ್ಚು ಬಿಡಿಸಿಕೊಂಡಂತೆ ಅಷ್ಟಷ್ಟೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗಳನ್ನು ನಮ್ಮ ಮುಂದದು ಹರಡುತ್ತ ಹೋಗುತ್ತದೆ. ಅದೇ ಕಾರಣಕ್ಕೇನೋ ಭಾರತದ ಅತಿ ಹಳೆಯ ನಗರಗಳಲ್ಲೊಂದೆಂಬ ಖ್ಯಾತಿ ಇದಕ್ಕಿದ್ದರೂ, ಹರಪ್ಪ, ಮೆಹಂಜೋದಾರೋಗಳ ಸಾಲಿನಲ್ಲಿ ನಿಲ್ಲುವ ತಾಕತ್ತಿದ್ದರೂ ಇದಕ್ಕಿನ್ನೂ ಅವುಗಳ ಮಟ್ಟಿಗೆ ಪ್ರಸಿದ್ಧಿ ದಕ್ಕದಿರುವುದು. ಕ್ರಿ.ಶ ಒಂದನೇ ಶತಮಾನದಲ್ಲೇ ಪ್ಟಾಲೆಮಿ ತನ್ನ ಜಿಯೋಗ್ರಾಫಿಯಾದಲ್ಲಿ ಗಂಗಾತೀರದಲ್ಲಿದ್ದ ದಕ್ಷಿಣ ಬಂಗಾಳದ ಈ ನಗರವನ್ನು ಗಂಗೆ ಎಂದು ಕರೆದಿದ್ದಾನೆ. ಅವನಿಗಿಂತ ಹಿಂದಿನ ಗ್ರೀಕ್ ಇತಿಹಾಸಕಾರ ಪ್ಲುಟಾರ್ಚ್ ಗಂಗಾರಿದಯ್ ಎಂಬ ಶಕ್ತಿಶಾಲಿ ಬುಡಕಟ್ಟೊಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. ಕ್ರಿ.ಪೂ ಒಂದನೇ ಶತಮಾನದ ಅನಾಮಧೇಯ ಇತಿಹಾಸಕಾರನೊಬ್ಬನ Periplus of the Erythraean Seaಗಳಲ್ಲಿ ಗಂಗಾತೀರದ ಈ ನಗರದದಿಂದ ರೋಮಿಗೆ ಬೆಲೆಬಾಳುವ ವಸ್ತುಗಳು, ಮಸ್ಲಿನ್ ಬಟ್ಟೆ ರಫ್ತಾಗುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಡಿಯೋಡ್ರಸ್ ಸಿಕಲಸ್, ಮೆಗಸ್ತನೀಸ್‌‌ರ ಪ್ರಕಾರ ಅಲೆಗ್ಸಾಂಡರ್ ಭಾರತದಿಂದ ತಿರುಗಿ ಓಡಿಹೋಗಲು ಅವನಿಗಿದ್ದ ನಂದ ಮತ್ತು ಗಂಗರಿದಯ್ ರಾಜ್ಯಗಳ ಒಕ್ಕೂಟದ ಸೈನ್ಯಬಲದ ಹೆದರಿಕೆಯೇ ಕಾರಣವಂತೆ. ನಂದರು ಆಳಿದ್ದು ಈಗಿನ ಬಿಹಾರವನ್ನು. ಆ ಗಂಗರಿದಯ್ ಸಾಮ್ರಾಜ್ಯವೇ ಈ ಇತಿಹಾಸ ಪ್ರಸಿದ್ಧ ಚಂದ್ರಕೇತುಘರ್. 
ರೋಮಿನಿಂದ ಜಲಮಾರ್ಗ

ಅಲೆಕ್ಸಾಂಡರಿನ ಕಾಲದ ಸಾಮ್ರಾಜ್ಯಗಳು
ಹಾಗಾದರೆ ಇದಕ್ಕೆ ಚಂದ್ರಕೇತುಘರ್ ಎಂಬ ಹೆಸರು ಬರಲು ಕಾರಣವೇನು?
ಚಂದ್ರಕೇತು ಬಂಗಾಳದ ಜನಪದ ಇತಿಹಾಸದ ಅತಿ ಖ್ಯಾತ ಅರಸರಲ್ಲೊಬ್ಬ. ಆ ಹೆಸರಿನ ಅರಸನೊಬ್ಬನಿದ್ದ ಎಂಬ ಬಗ್ಗೆ ಇತಿಹಾಸಕಾರರಲ್ಲೇ ಒಮ್ಮತಾಭಿಪ್ರಾಯವಿಲ್ಲ. ಆದರೂ ಬಂಗಾಳದ ಜನಪದದಲ್ಲಿ ಇವನ ಕುರಿತಾದ ನೂರಾರು ಕಥೆಗಳಿವೆ. ಬಂಗಾಳಕ್ಕೆ ಇಸ್ಲಾಂನ್ನು ಮೊದಲು ಪ್ರಸಾರ ಮಾಡಲು ಬಂದಿದ್ದ ಹಜರತ್ ಸಯ್ಯದ್ ಅಬ್ಬಾಸ್ ಅಲಿ ಅಲಿಯಾಸ್ ಪೀರ್ ಗೋರಾಚಂದನನ್ನು ತಡೆದ ಆತನ ಕಥೆಗಳು ಬಂಗಾಳದಲ್ಲಿ ಮನೆಮಾತಾಗಿವೆ. ತನ್ನ ಅತಿಮಾನುಷ ಶಕ್ತಿಗಳಿಗೆ ಹೆಸರಾಗಿದ್ದ ಚಂದ್ರಕೇತು ತನ್ನನ್ನು ಇಸ್ಲಾಂಗೆ ಮತಾಂತರಿಸಲು ಬಂದಿದ್ದ ಪೀರ್ ಗೋರಾಚಂದನ ಸವಾಲು ಸ್ವೀಕರಿಸಿ ಒಣಗಿದ ಬೇಲಿಗುಟ್ಟದಲ್ಲಿ ಸಂಪಿಗೆಯ ಹೂವರಳುವಂತೆ ಮಾಡಿದನಂತೆ. ಹಾಗಾಗಿ ಈ ಸ್ಥಳ ಬೇಡಾ(ಬೇಲಿ)ಚಂಪಾ(ಸಂಪಿಗೆ) ಎಂದು ಹೆಸರಾಯಿತಂತೆ. ಚಂದ್ರಕೇತುಘರದ ಸುತ್ತಲಿನ ೧೧ ಊರುಗಳ ಹೆಸರುಗಳ ಹುಟ್ಟಿಗೂ ಇಂಥದ್ದೇ ಕಥೆಗಳಿವೆ. ಚಂದ್ರಕೇತು-ಗೋರಾಚಂದನ ನಡುವೆ ಯುದ್ಧ ನಡೆದ ಸ್ಥಳ ರಣ್(ಯುದ್ಧ)ಖೋಲಾ, ಗೋರಾಚಂದ ಸತ್ತ ಸ್ಥಳ ಗೋರಾಪೋಟಾ ಜೊತೆಗೆ ರಾಜನ ಧನಾಗಾರವಿದ್ದ ಸ್ಥಳ ಧನಪೋಟಾ, ಅರಮನೆಯ ಸಿಂಹದ್ವಾರ ಶಿಂಗೇರ್ ಆಟಿ, ಸ್ನಾನ ಮಾಡುವ ಸ್ಥಳ ಶಾನ್ ಪುಕುರ್ ಹೀಗೆ ಸುತ್ತಮುತ್ತಲಿನ ಹಳ್ಳಿಗಳೆಲ್ಲ ಒಂದಿಲ್ಲೊಂದು ಥರದಲ್ಲಿ ಚಂದ್ರಕೇತುವಿನೊಡನೆ ತಳುಕು ಹಾಕಿಕೊಳ್ಳುತ್ತವೆ.
ಚಂದ್ರಕೇತುಘರದ ಸ್ವಲ್ಪ ದೂರದಲ್ಲೇ ಬಿದ್ಯಾಧರಿ ನದಿ ಹರಿಯುತ್ತದೆ. ಮೊದಲೊಂದು ಕಾಲದಲ್ಲಿ ಇಲ್ಲಿ ಗಂಗಾನದಿ ಹರಿದಿದ್ದ, ಬಂದರುಗಳಿದ್ದ ಕುರುಹುಗಳಿವೆ. ಹಡಗುಗಳ ಅವಶೇಷಗಳೂ ಸಿಕ್ಕಿವೆ. ಗಂಗೆ ನಂತರ ತನ್ನ ಪಥ ಬದಲಿಸಿ ಇಲ್ಲಿಂದ ೨೦ ಕಿ.ಮೀ ದೂರದಲ್ಲಿ ಕಲ್ಕತ್ತದಲ್ಲಿ ಹರಿಯಲಾರಂಭಿಸಿತು. ಇದರ ಹಿಂದೆ ಒಂದು ಕಥೆಯೂ ಇದೆಯಂತೆ. ಚಂದ್ರಕೇತು ತನ್ನ ಮಗನ ನಾಮಕರಣಕ್ಕೆ ಗಂಗಾದೇವಿಯನ್ನು ಆಹ್ವಾನಿಸಿದ್ದ. ಆದರೆ ಪೀರ್ ಗೋರಾಚಂದ ಗಂಗೆಗೆ ಚಾಡಿಹೇಳಿ ನಾಮಕರಣಕ್ಕೆ
ಹಿಂದೊಮ್ಮೆ ನದಿ ಹರಿದಿದ್ದಿರಬಹುದಾದ ಕುರುಹಾಗಿ ಅಗೆದಲ್ಲೆಲ್ಲ ಸಿಗುವ ಉಸುಕು
ಹೋಗದಂತೆ ತಡೆಯಲು ಯಶಸ್ವಿಯಾದ. ಗೋರಾಚಂದನ ಚಾಡಿಮಾತು ಕೇಳಿ ಅರಸನ ಮೇಲೆ ಕೋಪಗೊಂಡ ಗಂಗೆ ಚಂದ್ರಕೇತುಘರವನ್ನು ಬಿಟ್ಟು ದೂರ ಸರಿದಳು. ಗಂಗೆ ದೂರಸರಿದಿದ್ದ ಈ ಇಡೀ ಸ್ಥಳ ದೂರಸರಿದ ಗಂಗೆ ಅಥವಾ ದೇಗಂಗಾ ಎಂದು ಕರೆಯಲ್ಪಡುತ್ತದೆ. ವಿಚಿತ್ರವೆಂದರೆ ಆ ಹೆಸರಿನ ಅರಸನೊಬ್ಬ ಈ ಸ್ಥಳವನ್ನು ಆಳಿದ್ದನೆಂಬ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಮೌರ್ಯಯುಗದ ಹಿಂದಿನಿಂದಲೂ ಸುಮಾರು ಕ್ರಿ.ಪೂ ೧೦೦೦ದಿಂದಲೂ ಬೇಡಾಚಂಪಾ ಮತ್ತು ಸುತ್ತಲಿನ ಪ್ರದೇಶ ಬಹುದೊಡ್ಡ ನಾಗರಿಕತೆಯ ಕೇಂದ್ರವಾಗಿತ್ತು. ನಂತರ ಶುಂಗರು, ಕುಶಾನರು, ಗುಪ್ತರಿಂದ ಹಿಡಿದು ಪಾಲರು ಹಾಗೂ ಸೇನರ ತನಕ ಕ್ರಿ.ಶ ೧೩೦೦ರವರೆಗೂ ಇದನ್ನು ಬೇರೆ ಬೇರೆ ರಾಜಮನೆತನಗಳು ಆಳಿವೆ. ಆದರೆ ಅವುಗಳಲ್ಯಾರೂ ಚಂದ್ರಕೇತು ಎಂಬ ಹೆಸರಿನವರಿಲ್ಲ. ಅಲ್ಲಿ ಆಳಿದವರ್ಯಾರೂ ಪ್ರಸಿದ್ಧರಾಗದೇ ಚಂದ್ರಕೇತುವೆಂಬ ಕಾಲ್ಪನಿಕ ಅರಸು ಅಷ್ಟು ಹೆಸರುವಾಸಿಯಾದನೆಂದರೆ, ಇಲ್ಲದೇ ಇರುವ ವ್ಯಕ್ತಿಯೊಬ್ಬನ ಬಗ್ಗೆ ನೂರಾರು ರೋಚಕ ಕಥಗಳೂ, ಅವನದೇ ಹೆಸರಿನಿಂದ ಇಡೀ ನಗರವೂ ಬೆಳೆದು ಬಂದಿತೆಂಬುದು ಆಶ್ಚರ್ಯ ಮಾತ್ರವಲ್ಲ, ಇಡೀ ಇತಿಹಾಸವನ್ನು ಇನ್ನಷ್ಟು ನಿಗೂಢತೆಗೆ ತಳ್ಳುವ ಸಂಗತಿಯೇ ಸೈ. ಗ್ರೀಕರ, ಮೆಗಸ್ತನೀಸನ ದಾಖಲೆಗಳಲ್ಲಿ ಸೆಲ್ಯುಕಸ್‌ನನ್ನು ಸೋಲಿಸಿದ ಸ್ಯಾಂಡ್ರೋಕುಟಸ್ ಎಂಬ ರಾಜನ ಉಲ್ಲೇಖವಿದೆ. ಅದು ಚಂದ್ರಗುಪ್ತನ ಗ್ರೀಕ್ ಅಪಭೃಂಶವಾಗಿರಬಹುದೆಂಬ ಅನುಮಾನಗಳಿವೆ. ಈ ಸಂಡ್ರೋಕುಟಸ್ ಜನರ ಬಾಯಲ್ಲಿ ಚಂದ್ರಕೇತುವಾಗಿರಬಹುದೇ ಎಂಬುದು ನನ್ನ ಸಪ್ರಶ್ನ ಸಂಶಯ.!
ಆದರೆ ಇನ್ನೊಂದು ಸಮಸ್ಯೆ, ಚಂದ್ರಕೇತುವಿನ ಸಮಕಾಲೀನನೆನ್ನಲಾದ ಪೀರ ಗೋರಾಚಂದ ಅಥವಾ ಹಜರತ್ ಸಯ್ಯದ್ ಅಬ್ಬಾಸ್ ಅಲಿಯ ಕೆಲವಷ್ಟು ದರ್ಗಾಗಳು ಬಂಗಾಳದಲ್ಲಿವೆ. ಗೋರಾಚಂದ್ ರೋಡ್ ಎಂಬ ಹೆಸರಿನ ರಸ್ತೆಯೂ ಕಲ್ಕತ್ತಾದಲ್ಲಿದೆ. ಹನ್ನೆರಡನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿಯ ದಾಳಿಯ ನಂತರ ಬಂಗಾಳದಲ್ಲಿ ಸೇನ ಸಾಮ್ರಾಜ್ಯದ ಅವಸಾನ ಶುರುವಾಯಿತು. ಇದೇ ಸಮಯದಲ್ಲಿ ಮುಸ್ಲಿಂ ಮತಪ್ರಚಾರಕರ, ದಾಳಿಕಾರರ ಪ್ರಭಾವದಿಂದ ಈ ಭಾಗದಲ್ಲಿ ಇಸ್ಲಾಂ ವ್ಯಾಪಕವಾಗಿ ಹರಡಲು ಪ್ರಾರಂಭವಾಯ್ತು. ಸರಿಸುಮಾರು ಇದೇ ಸಮಯದಲ್ಲಿ ಮತಪ್ರಚಾರಕ್ಕಾಗಿ ಗೋರಾಚಂದ ಮೆಕ್ಕಾದಿಂದ ಬಂಗಾಳಕ್ಕೆ ಬಂದನೆಂಬ ನಂಬಿಕೆಯಿದೆ. ಬೇಡಾಚಂಪಾದಿಂದ ೬ ಕಿ.ಮೀ ದೂರದ ಹಾರ(ಡ)ವಾದಲ್ಲಿ ಚಂದ್ರಕೇತುವಿನ ಅನುಮತಿಯಿಲ್ಲದೇ ಗೋರಾಚಂದ ಮಸೀದಿಯೊಂದನ್ನು ನಿರ್ಮಿಸಲು ಶುರುಮಾಡಿದ. ವಿಷಯ ತಿಳಿದ ಚಂದ್ರಕೇತು ಗೋರಾಚಂದನ ಮೇಲೆ ದಂಡೆತ್ತಿ ಹೋದನಂತೆ. ಇಬ್ಬರಿಗೂ ವಿಶೇಷ ಮಾಂತ್ರಿಕ ಶಕ್ತಿಗಳಿದ್ದವು. ಘನಘೋರ ಯುದ್ಧ ನಡೆದು ಕೊನೆಗೆ ಗೋರಾಚಂದ ಮೃತಪಟ್ಟ. ಅವನ ದೇಹವನ್ನು ಆತ ನಿರ್ಮಿಸಲು ಹೊರಟಿದ್ದ ಮಸೀದಿಯ ಪಕ್ಕದಲ್ಲೇ ಸಮಾಧಿ ಮಾಡಿಲಾಯ್ತು. ಕೆಂಪು ಕಲ್ಲಿನ ಈ ಮಸೀದಿ ಸ್ಥಳೀಯವಾಗಿ ಲಾಲ್ ಮಸ್ಜಿದ್ ಎಂದೇ ಹೆಸರಾಗಿದೆ. ಇದರ ಅವಶೇಷಗಳನ್ನು ಇನ್ನೂ ನೋಡಬಹುದು. ಮಸೀದಿಯ ಹೆಚ್ಚಿನಂಶ ನಾಶವಾಗಿದ್ದರೂ, ಇದರ ಒಂದು ಭಾಗದ ಗೋಡೆ ಇನ್ನೂ ಮೂಲರೂಪದಲ್ಲಿಯೇ ನಿಂತಿದೆ. ಆದರಿದು ಮಸೀದಿಯಲ್ಲವೆಂದೂ, ಪಾಲ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲ್ಪಟ್ಟ ಬೌದ್ಧ ಸ್ತೂಪವೊಂದರ ಅವಶೇಷವೆಂದೂ ರಾಖಲದಾಸ್ ಬಂಡೋಪಾಧ್ಯಾಯ ಸೇರಿ ಹಲ ಇತಿಹಾಸಕಾರರು ವಾದಿಸಿದ್ದಾರೆ. ಗೋರಾಚಂದನ ಅನುಯಾಯಿಗಳು ಅವನ ಸಮಾಧಿಯಿಂದ ಅಸ್ತಿಪಂಜರವನ್ನು ತೆಗೆದು ಪಕ್ಕದ ಮಸೀದಿಯಲ್ಲಿ ಸಂರಕ್ಷಿಸಿಟ್ಟರಂತೆ. ಹಾಗಾಗಿ ಆ ಸ್ಥಳ ಹಾರವಾ(ಹಾರೋ=ಮೂಳೆ) ಎಂದು ಹೆಸರಾಯ್ತು. ಸಮಾಧಿಯಿದ್ದ ಜಾಗ ಇಂದು ದೊಡ್ಡ ದರ್ಗಾ ಆಗಿ ಬದಲಾಗಿದೆ. ಪ್ರತಿವರ್ಷ ಬಂಗಾಳ ಸಾವಿರಾರು ಜನ ಇಲ್ಲಿ ಭೇಟಿಕೊಡುತ್ತಾರೆ. ಪಕ್ಕದಲ್ಲೇ ಇರುವ ಲಾಲ್ ಮಸ್ಜಿದ್, ಚಂದ್ರಕೇತುಘರ್ ಕೇಳುವವರಿಲ್ಲದೇ ಹಾಳು ಬಿದ್ದಿದೆ. ASI ಎರಡು ಕಡೆ ಹೊಂಡ ತೋಡಿ, ಇನ್ನೆರಡು ಕಂಪೌಂಡ್ ಹಾಕಿ, ಬೋರ್ಡ್ ನೆಟ್ಟಿದ್ದು ಬಿಟ್ಟರೆ ಹೆಚ್ಚಿನದೇನೂ ಮಾಡಿಲ್ಲ. ಎರಡು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ಇದನ್ನು ಹೆರಿಟೇಜ್ ವಿಲೇಜ್ ಎಂದು ಘೋಷಿಸಿದೆಯೆಂಬುದು ಬಿಟ್ಟರೆ ಮತ್ತೇನೂ ಕೆಲಸವಾಗಿಲ್ಲ. ಕಲ್ಕತ್ತಾ ವಿಶ್ವವಿದ್ಯಾಲಯದ ಆಶುತೋಷ್ ಮ್ಯೂಸಿಯಮ್ಮಿನ ಕೆಲಸಗಳಿಂದ ಕೆಲಮಟ್ಟಿನ ಉತ್ಖನನ ನಡೆದು ಇತಿಹಾಸದ ಮೇಲೆ ಬೆಳಕು ಬೀರುವ ಪ್ರಯತ್ನಗಳು ನಡೆದಿವೆ. ಅದನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಹೆಸರು ಸ್ವಲ್ಪವಾದರೂ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಕಾರಣ ದಿಲೀಪ್ ಕುಮಾರ್ ಮೈತ್ರೆ ಎಂಬ ಒಬ್ಬ ಸಾಧಾರಣ ಮನುಷ್ಯನಿಂದ. ಚಂದ್ರಕೇತುಘರ್ ಸುತ್ತಮುತ್ತಲಿನ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಏಕೈಕ ವ್ಯಕ್ತಿ ಅವರು. ಮಾತ್ರವಲ್ಲ ಈ ಪರಿಸರದಲ್ಲಿ ಪ್ರಾಚ್ಯವಸ್ತುಗಳನ್ನು ಉತ್ಖನನ ಮಾಡಿ, ಸಂಗ್ರಹಿಸಲು ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ವ್ಯಕ್ತಿಯೂ ಇವರೊಬ್ಬರೆ. ರಾಖಲದಾಸ ಬಂಡೋಪಾಧ್ಯಾಯರ ಸಂಶೋಧನಾ ವರದಿಯನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಇತಿಹಾಸದ ಬಗ್ಗೆ ಅರಿಯಲು ಇಂದು ಮೈತ್ರೆ ಬರೆದ ’ಚಂದ್ರಕೇತುಘರ್’, ’ಅತೀತ್ ಅಲೋಕೆ ಚಂದ್ರಕೇತುಘರ್’, ’ಘರ್ ಚಂದ್ರಕೇತುರ್ ಕಥಾ’, ’ಇತಿಹಾಸೇರ್ ದೇಗಂಗಾ’ ಎಂಬ ನಾಲ್ಕು ಪುಸ್ತಕಗಳೇ ಅಧಿಕೃತ ಆಧಾರ. ಬೇಡಾಚಂಪಾದ ಬಸ್‌ಸ್ಟ್ಯಾಂಡ್ ಪಕ್ಕದಲ್ಲೇ ಇರುವ ಇವರ ಮನೆಯಲ್ಲಿ ಇಲ್ಲಿ ಸಿಕ್ಕ ಲಕ್ಷಾಂತರ ಪ್ರಾಚ್ಯವಸ್ತುಗಳ ಸಂಗ್ರಹವಿದೆ.  ಕಳೆದ ೫೦ ವರ್ಷಗಳಿಂದ ಇಲ್ಲಿನ ಐತಿಹಾಸಿಕ ಸ್ಥಳಗಳ, ವಸ್ತುಗಳ ರಕ್ಷಣೆಯನ್ನು ಮೈತ್ರೆ ಒಂದು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದಾರೆ. ಒಂದು ವಿಶ್ವಪ್ರಸಿದ್ಧ ನಾಗರಿಕತೆಯ ಅವಶೇಷಗಳನ್ನು ಪುನರುಜ್ಜೀವನಗೊಳಿಸುವ, ನಮ್ಮ ಸಂಸ್ಕೃತಿಯ ಭಾಗವೊಂದನ್ನುಳಿಸುವ ಕಾರ್ಯದಲ್ಲಿ ೮೫ರ ಹರೆಯದ ಮೈತ್ರೆ ಇನ್ನೂ ವಿಶ್ರಮಿಸಿಲ್ಲ. ಒಂದೀಡೀ ಸರ್ಕಾರ ಮಾಡಬೇಕಾಗಿದ್ದ ಕೆಲಸವದು. ಅವರಿಗೆ ನನ್ನದೊಂದು ಹ್ಯಾಟ್ಸಾಫ್.
ಹಾಳು ಹಂಪೆ ನಮ್ಮಲ್ಲಿನ ಪ್ರತಿ ಊರುಗಳಲ್ಲೂ ಇದೆ.
ಕಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ಮಿನಲ್ಲಿರುವ ಚಂದ್ರಕೇತುಘರದ ಒಂದು ಶಿಲ್ಪ 
ದಿಲೀಪ್ ಕುಮಾರ್ ಮೈತ್ರೆ 
ವಸ್ತುಸಂಗ್ರಹಾಲಯವಾಗಿರುವ ಮೈತ್ರೆಯವರ ಮನೆ

ಗುಪ್ತಪೂರ್ವ ಯುಗದ ಟೆರಾಕೋಟಾ ಮಾದರಿಗಳು


Monday, July 13, 2015

ಕೋಲ್ಕತ್ತಾ ಡೈರಿ: ಕಾಳಿಯ ನಾಡಲ್ಲಿ


ಕಾಳಿ, ಅವಳು ಶಿವೆ, ಅವಳು ಶಕ್ತಿ. ಅವಳು ಲೋಕಮಾತೆ.  ಆ ಶಕ್ತಿಯೇ ಸತ್ವ – ರಜೋ – ತಮೋ ಎಂಬ ತ್ರಿಗುಣಗಳ ಮಾಯೆ. ಅವಳದ್ದು ಒಂದು ಸತ್ – ಚಿತ್ – ಆನಂದರೂಪವಾದರೆ ಇನ್ನೊಂದು ಗುಣತ್ರಯಗಳಿಂದ ಕೂಡಿದ ಮಾಯಾರೂಪ. ಅವಳು ಜಗತ್ತನ್ನು ಹೆತ್ತವಳು, ಹೊತ್ತವಳು, ಕೊನೆಗೆ ನಾಶಪಡಿಸುವವಳು ಕೂಡ. ಅಥರ್ವ ವೇದಕ್ಕೆ ಸೇರಿದ ಮುಂಡಕ ಉಪನಿಷತ್ತಿನ ಮಂತ್ರ ೧ -೨ – ೪ ರ ಪ್ರಕಾರ ಕಾಳಿ ಎಂದರೆ ಅಗ್ನಿಯ ಪ್ರಜ್ವಲಿಸುವ ೭ ನಾಲಗೆಗಳಲ್ಲಿ ಮೊದಲನೆಯದು.
 ಕಾಳೀಕರಾಳೀಚ ಮನೋಜವಾಚ |
ಸುಲೋಹಿತಾಯಾಚ ಸುಧೂಮ್ರವರ್ಣಾ |
ಸ್ಫುಲಿಂಗಿನೀ ವಿಶ್ವರುಚೀಚದೇವಿ
ಲೀಲಾಯ ಮಾನಾ ಇತಿಸಪ್ತ ಜಿಹ್ವಾ: ||
ಶಕ್ತಿಯೇ ಕಾಳಿ, ಕರಾಳಿ, ಮನೋಜವಾ, ಸುಲೋಹಿತಾ, ಸುಧೂಮ್ರವರ್ಣಾ, ಸ್ಫುಲಿಂಗಿನಿ ಮತ್ತು ವಿಶ್ವರುಚಿಯೆಂಬ ಅಗ್ನಿಯ ೭ ನಾಲಗೆಗಳಾದವಳು. ಯಜುರ್ವೇದದ ಶತಪಥ ಬ್ರಾಹ್ಮಣದ(೧-೭-೨ -೮) ಪ್ರಕಾರ ಶರ್ವ, ಭವ, ಪಶೂನಾಂಪತಿ, ರುದ್ರ ಎಂಬವು ಅಗ್ನಿಯ ಪರ್ಯಾಯ ನಾಮಗಳಾಗಿವೆ. ರುದ್ರನು ಅಗ್ನಿಯಾದರೆ ಕಾಳಿಯು ಅದರ ಧಗಧಗಿಸುವ ಜ್ವಾಲೆ. ರುದ್ರನ ಪತ್ನಿ ಕಾಳಿ ಎಂಬ ಪೌರಾಣಿಕ ಹಿನ್ನೆಲೆಗೆ ಅದೇ ಕಾರಣವೇನೋ.
ಯೋಗಿಗಳಿಗೆ ಇವಳಷ್ಟು ವಿಸ್ಮಯವನ್ನುಂಟುಮಾಡುವ ಮತ್ತೊಂದು ದೇವತೆ ಇರಲಾರದು. ಆಕೆ ಸತಿಯ ಹತ್ತು ರೂಪಗಳಾದ ದಶಮಹಾವಿದ್ಯೆಗಳಲ್ಲೊಬ್ಬಳಾಗಿ ಅದರ ಅಧಿಪತಿಯಾದವಳು. ರಕ್ತವೇ ಅವಳ ಆಹಾರ, ಮನುಷ್ಯ ಕಪಾಲಗಳೇ ಅವರ ಕಂಠಾಭರಣ, ಕೈಕಾಲುಗಳೇ ಅವಳ ಉಡಿದಾರ. ಅವಳು ಸ್ಮಶಾನವಾಸಿ, ಕ್ರಾಂತಿರೂಪಿ(ಸ್ತ್ರೀವಾದಿಗಳ ನೆಚ್ಚಿನವಳೂ ಆಗಿರಬಹುದು). ಕಾಳರಾತ್ರಿ. ಆಕೆಯ ಜಗತ್ತು ಕತ್ತಲೆಯದ್ದು, ವಿನಾಶದ್ದು, ಭಯದ್ದು, ಬೆರಗಿನದ್ದು. ಶಿವನ ಪತ್ನಿಯಾದರೂ ಶಿವನನ್ನೇ ಸೋಲಿಸಿ ಅವನೆದೆಯನ್ನು ಮೆಟ್ಟಿನಿಂತವಳು. ಅವಳ ರೂಪ ಸೌಮ್ಯವಲ್ಲ, ಕರುಣಾಮಯಿಯಲ್ಲ, ಮಾತೃಹೃದಯದ್ದಲ್ಲ. ಆದರೂ ಅವಳ ಪ್ರಸಿದ್ದಿಗೇನು ಕಡಿಮೆಯಿಲ್ಲ. ಷಣ್ಮತಗಳಲ್ಲಿ ವೀರಶೈವ ದರ್ಶನದಲ್ಲಿ ಶಿವೆಯಾಗಿ, ಶಾಕ್ತಪಂಥದಲ್ಲಿ ಶಕ್ತಿಯಾಗಿ, ಕಾಪಾಲಿಕರಿಂದ ಭದ್ರಕಾಳಿಯಾಗಿ ಪೂಜಿಸಲ್ಪಡುವವಳವಳು.
ಪೌರಾಣಿಕವಾಗಿ ಹೇಗಿದ್ದರೂ ಕಾಳಿ ಒಂದು ಥರದ ಸೊಫಿಸ್ಟಿಕೇಟೆಡ್ ಸಮಾಜದಲ್ಲಿ ಹೆಚ್ಚಾಗಿ ಕ್ಷುದ್ರದೇವತೆಯಾಗಿಯೇ ಪ್ರಚಲಿತದಲ್ಲಿರುವವಳು. ನಮ್ಮಲ್ಲಿ ಮಾರಮ್ಮ, ಚೌಡಮ್ಮರ ಹಾಗೆ. ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಹೆಚ್ಚೆಚ್ಚು ವೈದಿಕರಾದಂತೆ ಅವರು ಬಿಟ್ಟ ಸ್ಥಳವನ್ನು ಸಮಾಜದ ಕೆಳವರ್ಗಗಳಲ್ಲಿ ತುಂಬಿದ್ದು ಕಾಳಿಯೇ. ಸೋ ಕಾಲ್ಡ್ ನಾಗರೀಕತೆಯಿಂದ ದೂರವಿರುವ ಬುಡಕಟ್ಟಿನವರು, ಡಕಾಯಿತರು, ನಿಮ್ನ ವರ್ಗದ ಮಧ್ಯದಲ್ಲೇ ಅವಳು ಹೆಚ್ಚು ಪ್ರಸಿದ್ಧಿ. ಆಕೆಯ ರುದ್ರಭಯಂಕರ ರೂಪ ನೈಸರ್ಗಿಕ ಅಥವಾ ಮಾನುಷಿಕ ಪೀಡೆಗಳ, ವೈರಿಗಳ ಮೆಟ್ಟಿನಿಲ್ಲಲು ಸ್ಫೂರ್ತಿಯಾಗುತ್ತಿತ್ತೇನೋ. ದಟ್ಟಕಾಡುಗಳ ನಡುವೆ ಎದ್ದುನಿಂತ ಆಕೆಯ ಆರಾಧನಾಲಯಗಳು ಕಾಡುಕಡಿದು ನಾಡುಬೆಳೆದಂತೆ ನಾಗರಿಕತೆಯೊಡನೆ ಸೇರಿ ಪ್ರಸಿದ್ಧವಾಗಿರಬಹುದು.
ಕಲ್ಕತ್ತಾದ ನೆಲದಲ್ಲಿ, ಕಾಳಿಯ ಮಡಿಲಲ್ಲಿದ್ದಾಗ ಇಷ್ಟೆಲ್ಲ ಜಿಜ್ಞಾಸೆಗಳು ಮನದಲ್ಲಿ ಹಾದುಹೋದವು. ಅಲ್ಲಿನ ಮನೆಮನಗಳಲ್ಲಿ ಮಾತ್ರವಲ್ಲ ನೆಲದ ಕಣಕಣಗಳಲ್ಲಿ ಕಾಳಿಯಿದ್ದಾಳೆ. ಅದಕ್ಕೇ ಏನೋ ಬಂಗಾಳಿಗಳ ನೆಚ್ಚಿನ ಬಣ್ಣ ಕೆಂಪು. ಬಂಗಾಳದಲ್ಲಿ ಹತ್ತರಲ್ಲಿ ಒಂಭತ್ತು ಹೆಂಗಸರಾದರೂ ಕೆಂಪು ಸೀರೆಯುಟ್ಟು, ಕಾಸಗಲದ ಕೆಂಪು ಬೊಟ್ಟು, ಬೈತಲೆಗೆ ಇನ್ನೊಂದಿಷ್ಟು ಕುಂಕುಮ, ಪಾದಗಳಿಗೆ ಕಡುಗೆಂಪಿನ ಮೆಹಂದಿ ತೊಟ್ಟ ವೇಷದಲ್ಲೇ ಕಾಣಸಿಗುತ್ತಾರೆ. ಕೆಂಪು ಬಣ್ಣದ ಕಮ್ಯುನಿಸ್ಟರೂ ಬಂಗಾಳಿಗಳಿಗೆ ಪ್ರಿಯವಾದರೂ ಅದಕ್ಕೂ ಕಾಳಿಗೂ ಏನೂ ಸಂಬಂಧವಿರಲಿಕ್ಕಿಲ್ಲ ಬಿಡಿ. ಕಲ್ಕತ್ತ ಹೆಸರು ಪಡೆದಿದ್ದು, ಹೆಸರು ಮಾಡಿದ್ದೂ ಕಾಳಿಯಿಂದಲೇ. ಕಲ್ಕತ್ತಾ ಕೋಲ್ಕತ್ತವಾಗುವ ಸುಮಾರು ಇನ್ನೂರೈವತ್ತು ವರ್ಷ ಮೊದಲು ಅಂದರೆ ೧೭೫೬ರಲ್ಲಿ ನವಾಬ ಸಿರಾಜುದ್ದೌಲ ಕಾಲಿಕತ್ತವನ್ನು ಅಲಿನಗರ ಎಂದು ಮರುನಾಮಕರಣ ಮಾಡಿದ್ದ. ಅದು ಅಲ್ಲಿನ ಅಧಿದೇವತೆ ಭದ್ರಕಾಳಿಗೆ ಹಿಡಿಸಲಿಲ್ಲವೇನೋ? ಅವಳ ಸಿಟ್ಟಿನ ಪರಿಣಾಮವೋ ಏನೋ ಮರುವರ್ಷ ನಡೆದ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲ ನಾಮಾವಶೇಷವಾಗಿ ಹೋದ. ಮುಂದಿನದ್ದು ಇತಿಹಾಸ.
ಕಲ್ಕತ್ತಾದ ಹೆಸರಿನ ಮೂಲ ಮತ್ತು ವ್ಯುತ್ಪತ್ತಿಯ ಬಗ್ಗೆ ಸುಮಾರಿಷ್ಟು ವಾದಗಳಿವೆ. ಖಲ್ ಕಾತಾ- ದೊಡ್ಡದೊಂದು ನೀರಿನ ಕ್ಯಾನಲ್ ಅಥವಾ ತೋಡು ಅಗೆದ ಕಾರಣದಿಂದ ಹೆಸರು ಬಂದಿರಬಹುದು. ಅಥವಾ ಈ ಸ್ಥಳ ಸುಣ್ಣದ ಕಲ್ಲಿನ(ಕಲಿ) ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಹೆಸರು ಹಾಗೆಯೂ ಬಂದಿರಬಹುದು. ಬಂಗಾಳಿ ಶಬ್ದ ಕಿಲ್‌ಕಿಲಾ(ಸಪಾಟಾದ ಜಾಗ) ಎಂಬರ್ಥದಿಂದಲೂ ಕಲ್ಕತಾ ಆಗಿರಬಹುದು ಎಂಬ ಬಗೆಬಗೆಯ ವಾದವಿದ್ದರೂ ಹೆಚ್ಚಾಗಿ ಒಪ್ಪಲ್ಪಡುವ ಮೂಲ ಕಾಳಿಯಿಂದ ಬಂದದ್ದೆಂಬುದೇ. ಮುಂಬಾದೇವಿಯಿಂದ ಮುಂಬೈ, ಮಂಗಳಾದೇವಿಯಿಂದ ಮಂಗಳೂರು, ಅಥೇನಾಳಿಂದ ಅಥೇನ್ಸ್‌ನ ಹೆಸರಾದಂತೆ ಕಾಲಿಯಿಂದ ಕಾಲಿಕತ್ತಾ ಆಗಿ ಮುಂದೆ ಜನರ(ಬ್ರಿಟಿಷರ) ಬಾಯಲ್ಲಿ ಕ್ಯಾಲ್ಕತಾ, ಕಲ್ಕತ್ತಾ ಆಯಿತು. ಕಾಲಿ ಕೋತಾ ಅಂದರೆ ಕಾಲಿಯ ಮಂದಿರವೆಂಬರ್ಥವಂತೆ. ಇಲ್ಲಿನ ಕಾಳಿಘಾಟ್ ಕಾಲಿಮಂದಿರ ಹಿಂದೂಗಳ ೫೧ ಶಕ್ತಿಪೀಠಗಳಲ್ಲೊಂದು. ಕಲ್ಕತ್ತಾದ ಹೆಸರು ಬರಲು ಈ ಮಂದಿರವೇ ಕಾರಣವೆಂಬ ನಂಬಿಕೆಯಿದೆ. ಮೊದಲು ಗಂಗಾನದಿಯ ದಡದಲ್ಲಿನ ಘಾಟ್ ಒಂದರಲ್ಲಿ ಕಾಳಿಯ ಮಂದಿರವೊಂದಿತ್ತಂತೆ. ಇದರಲ್ಲಿದ್ದ ಮೂರ್ತಿಯನ್ನು ಕದ್ದೊಯ್ದ ಕಾಪಾಲಿಕರು ದಟ್ಟಕಾಡಿನಲ್ಲಿ ಪ್ರತಿಷ್ಟಾಪಿಸಿ ಪೂಜಿಸತೊಡಗಿದರು. ಮೂಲಜಾಗ ಬಂಗಾಲಿಯಲ್ಲಿ ಕಾಲಿಕಾ ಥಾ(ಕಾಲಿ ಇದ್ದ) ಎಂದು ಹೆಸರಾಯಿತು. ಇಲ್ಲಿನ ಘಾಟಿನಿಂದ ಮೂರ್ತಿಯನ್ನು ತೆಗೆದುಕೊಂಡು ಹೋದ ಕಾರಣ ಹೊಸ ಜಾಗವೂ ಕಾಲಿ-ಘಾಟ್ ಎಂದೇ ಹೆಸರಾಯ್ತು. ಇದರ ಪಕ್ಕ ಆದಿಗಂಗಾ ಎಂಬ ಸಣ್ಣದೊಂದು ತೊರೆಯಿದೆ. ಮೊದಲು ಹೂಗ್ಲಿ ನದಿ ಇಲ್ಲೇ ಹರಿಯುತ್ತಿತ್ತೆಂದೂ, ಮುಂದೆ ಪಥಬದಲಾಯಿಸಿ ಈಗಿನ ಜಾಗಕ್ಕೆ ಬಂದಿತೆಂದೂ ಅನಿಸಿಕೆಯಿದೆ. ಇದು ಕಲ್ಕತ್ತಾದ ವಿಶ್ವಪ್ರಸಿದ್ದ ಕಾಲಿಮಂದಿರ. 

ಕಾಳಿಘಾಟ್


ಕಾಳಿಘಾಟ್ ಮಂದಿರ, London News, 1887(ಪಕ್ಕದ ಆದಿಗಂಗಾ ನದಿ ಇಂದು ಸಣ್ಣ ಕಾಲುವೆಯ ಮಟ್ಟಕ್ಕಿಳಿದಿದೆ)
ಕಾಳಿಘಾಟ್ ಕಾಳಿ
ಹಾಗೆಂದು ಕಲ್ಕತ್ತಾದಲ್ಲಿರುವುದು ಇದೊಂದೇ ಐತಿಹಾಸಿಕ ಕಾಲಿಮಂದಿರವಲ್ಲ. ಬ್ರಿಟೀಷರು ಬರುವ ಮೊದಲೇ ಗಂಗೆಯ ದಡದಲ್ಲಿ ಈಗಿನ ಬಾಗ್‌ಬಝಾರ್  ಮಾರ್ಕೇಟಿನ ಹತ್ತಿರ ಚಿತ್ರೇಶ್ವರೀ ಅಥವಾ ಚಿತ್ತೇಶ್ವರೀ ಎಂಬ ಇನ್ನೊಂದು ಹೆಸರಾಂತ ಕಾಲಿಮಂದಿರವಿತ್ತು. ಇದನ್ನು ಸ್ಥಾಪಿಸಿದವನು ಚಿತೆ ಎಂಬ ಡಕಾಯಿತನೆಂಬ ನಂಬಿಕೆಯಿದೆ. ಅವನ ನಂತರ ಖಾಲಿ ಬಿದ್ದಿದ್ದ ಈ ದೇವಸ್ಥಾನದಲ್ಲಿ ಮುಂದೆ ೧೫೮೬ ರಲ್ಲಿ ನೃಸಿಂಗ ಬ್ರಹ್ಮಚಾರಿ ಎಂಬ ತಾಂತ್ರಿಕ ಪೂಜೆಯನ್ನು ಪುನರಾರಂಭಿಸಿದ. ೧೬೧೦ರಲ್ಲಿ ಅಲ್ಲಿನ ಜಮೀನ್ದಾರ ಮನೋಹರ ಘೋಷ ಈಗ ಕಾಣುವ ದೇವಸ್ಥಾನದ ಕಟ್ಟಡವನ್ನು ನಿರ್ಮಿಸಿದವನು. ಚಿತ್ತೇಶ್ವರೀ ಮಂದಿರದ ಕಾರಣದಿಂದ ಈ ಸ್ಥಳ ಚಿತ್ಪುರ್ ಎಂದು ಕರೆಯಲ್ಪಡುತ್ತಿತ್ತು. ಆ ಕಾಲದಲ್ಲಿ ಇಲ್ಲಿದ್ದ ನಾಲ್ಕು ಗ್ರಾಮಗಳಲ್ಲಿ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕತಾದ ಜೊತೆಗೆ ಚಿತ್ಪುರ್ ಕೂಡ ಒಂದಾಗಿತ್ತು. ಚಿತ್ಪುರದ ಚಿತ್ತೇಶ್ವರಿಯಿಂದ ಕಾಳಿಘಾಟ್‌ ಮಂದಿರಕ್ಕೆ ತೆರಳಲು ನಿರ್ಮಿಸಿದ ಚಿತ್ಪುರ್ ರಸ್ತೆಗೆ ಕೋಲ್ಕತ್ತಾದ ಅತ್ಯಂತ ಹಳೆಯ ರಸ್ತೆಯೆಂಬ ಖ್ಯಾತಿಯಿದೆ. ಅಂದು ಈ ರಸ್ತೆಯಲ್ಲಿದ್ದ ಚೌರಂಗಿ ಕಾಡಲ್ಲಿ ಚೌರಂಗಗಿರಿಯೆಂಬ ತಾಂತ್ರಿಕ ನಿರ್ಮಿಸಿದ್ದ ಶಿವನ ದೇವಾಲಯವೂ ಇದೆ. ಇದೇ ತಾಂತ್ರಿಕ ಕಾಳಿಘಾಟಿನ ದೇವಸ್ಥಾನವನ್ನೂ ನಿರ್ಮಿಸಿದವನು. ಚಿತ್ಪುರದಲ್ಲೇ ಇರುವ ಚಿತ್ತೇಶ್ವರಿ ಶರ್ಬಮಂಗಲಾ ದೇವಸ್ಥಾನವೂ ಅತ್ಯಂತ ಹಳೆಯದೇ. ೧೪೯೫ರಲ್ಲಿ ಬಿಪ್ರದಾಸ ಪಿಲಪಾಯಿಯೆಂಬ ಕವಿ ರಚಿಸಿದ ಮಾನಸ ವಿಜಯದಲ್ಲೇ ಈ ದೇವಿಯ ಉಲ್ಲೇಖ ಕಾಣಸಿಗುತ್ತದೆ. ಬಂಗಾಳದ ರಾಬಿನ್ ಹುಡ್ ಎಂದೇ ಕರೆಯಲ್ಪಡುವ ರಘು ಡಕಾಯತ್ ಕೆರೆಯೊಂದರಲ್ಲಿ ಸಿಕ್ಕ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಿದ್ದನಂತೆ.
ಮೊಘಲರ ಕಾಲದಲ್ಲಿ ಲಕ್ಷ್ಮೀಕಾಂತ ರಾಯ್ ಚೌಧರಿ ಎಂಬ ಜಮೀನ್ದಾರ ಕಾಲಿಕಾತಾ ಸೇರಿ ಸುತ್ತಲಿನ ಎಂಟು ಗ್ರಾಮಗಳ ಒಡೆತನವನ್ನ ಅಕ್ಬರನಿಂದ ಪಡೆದ. ಇವನ ಮೊಮ್ಮಗ ಸಬರ್ನ ರಾಯ್ ಚೌಧರಿಯ ಕಾಲದಲ್ಲಿ ಬಂಗಾಲಕ್ಕೆ ಬಂದಿದ್ದ ಜಾಬ್ ಚರ್ನೋಕ್ ಎಂಬ ಈಸ್ಟ್ ಇಂಡಿಯಾ ಕಂಪನಿಯ ಏಜೆಂಟ್ ಅವುಗಳಲ್ಲಿ ಮೂರು ಗ್ರಾಮಗಳಾದ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕಾತಾವನ್ನು ನವೆಂಬರ್ ೧೦, ೧೬೯೮ರಂದು ರೂಪಾಯಿ ೧೩೦೦ಕ್ಕೆ ಖರೀದಿಸಿದ. ಅಲ್ಲಿಂದ ಬದಲಾಯ್ತು ಕಲ್ಕತ್ತದ ದೆಸೆ. ಇದಾಗಿ ಕೆಲವರ್ಷಗಳ ನಂತರ ೧೭೭೨ರಲ್ಲಿ ಬ್ರಿಟಿಷ್ ಇಂಡಿಯಾದ ರಾಜಧಾನಿಯಾಗಿ ಘೋಷಿಸಲ್ಪಟ್ಟಿತು. ಕಾಲಿಕಾತಾ ಬ್ರಿಟಿಷರ ಬಾಯಲ್ಲಿ ಕ್ಯಾಲ್ಕತಾ ಆಯಿತು. ಆದರೂ ’ಕಾಲಿ ಕಥಾ’ ಮುಗಿಯಲಿಲ್ಲ. ೧೭೦೩ರಲ್ಲಿ ಶಂಕರ ಘೋಷ್ ಎಂಬಾತ ಶಿದ್ಧೇಶ್ವರೀ ಕಾಲಿ ಮಂದಿರವನ್ನು ಕಟ್ಟಿಸಿದ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಈ ಕಾಲಿ ಮಂದಿಕ್ಕೆ ಯಾವಾಗಲೂ
ಶಿದ್ಧೇಶ್ವರೀ ಕಾಲಿ ಮಂದಿರ
ಭೇಟಿ ಕೊಡುತ್ತಿದ್ದರಂತೆ. ಸಬರ್ನ ರಾಯ್ ಚೌಧರಿಯ ಮನೆತನದ ನಂದಲಾಲ್ ರಾಯ್ ಚೌಧರಿ ೧೭೬೦ರಲ್ಲಿ ಟೋಲಿಗಂಜ್ ಎಂಬಲ್ಲಿ ಮೃತಪಟ್ಟ ತನ್ನ ಮಗಳ ಸ್ಮರಣಾರ್ಥ ಹನ್ನೆರಡು ಶಿವಾಲಯಗಳೊಡನೆ ನವರತ್ನ ಕಾಳಿ ಮಂದಿರವನ್ನು ಕಟ್ಟಿಸಿದ್ದ. ಇಲ್ಲಿಂದ ಕೂಗಳತೆಯ ದೂರದಲ್ಲೇ ಗಂಗೆಯ ದಡದಲ್ಲಿ ಇನ್ನೊಂದು ಶಿದ್ದೇಶ್ವರೀ ಕಾಳಿಮಂದಿರವಿದೆ. ಬಾರಾನಗರದ ರತನ್ ಬಾಬು ಘಾಟಿನಲ್ಲಿ ಮುನ್ನೂರು ವರ್ಷಕ್ಕೂ ಹಳೆಯದಾದ ಮತ್ತೊಂದು ಶಿದ್ದೇಶ್ವರೀ ದೇವಸ್ಥಾನವೂ ಇದೆ. ಅದರೆದುರಿನ ಡಚ್ಚರ ಸ್ಮಶಾನಭೂಮಿಯಾದ ಕುಧಿಘಾಟಿನಲ್ಲಿ ಜಯಚಂದ್ರಮಿತ್ರ ನಿರ್ಮಿಸಿದ ದೊಡ್ಡದೊಂದು ನವರತ್ನ ಕಾಳಿಮಂದಿರ ಜೊತೆಗೆ ನಾಟ್ಯಮಂಟಪ ಹಾಗೂ ಹನ್ನೆರಡು ಶಿವಮಂದಿರವಿದೆ. ಇಲ್ಲಿ ಕಾಳಿ ಕೃಪಾಮಯೀ ಎಂದು ಕರೆಯಲ್ಪಡುತ್ತಾಳೆ. ಶಿವ ಮತ್ತು ಕಾಳಿಯರನ್ನು ಒಂದೇ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ. ಇದೇ ಮಂದಿರವನ್ನು ನೀಲನಕ್ಷೆಯನ್ನಾಗಿಟ್ಟುಕೊಂಡು ರಾಣಿ ರೊಶೋಮೋನಿ ದಕ್ಷಿಣೇಶ್ವರದ ಭವತಾರಿಣಿ ಕಾಲಿ ದೇವಾಲಯವನ್ನು ಕಟ್ಟಿಸಿದಳು. ಕಲ್ಕತ್ತಾದ ಅತಿ ಭವ್ಯ ಮತ್ತು ಅತಿ ದೊಡ್ಡ ಆಕರ್ಷಣೆಗಳಲ್ಲೊಂದು ದಕ್ಷಿಣೇಶ್ವರ ಕಾಳಿ(ಬಂಗಾಳಿಗಳ ಬಾಯಲ್ಲಿ ಅದು ದೊಕ್ಖಿನೇಶೋರ್, ದಕ್ಷಿಣೇಶ್ವರಕ್ಕೊಂದು ಟಿಕೇಟ್ ಕೊಡಿ ಎಂದಾಗ ಕಂಡಕ್ಟರ್ ಅದು ಯಾವ ಜಾಗವೆಂದು ಅರ್ಥವಾಗದೇ ನನ್ನ ಮುಖಮುಖ ನೋಡಿದ್ದ). ರತನ್ ಬಾಬು ಘಾಟಿನ ಶಿದ್ದೇಶ್ವರಿ, ಕುದಿ ಘಾಟಿನ ಕ್ರಿಪಾಮೋಯ್ ಮತ್ತು ದಕ್ಷಿಣೇಶ್ವರದ ಭವತಾರಿಣಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಒಬ್ಬನೇ ಎನ್ನುವಷ್ಟು ಸಾಮ್ಯತೆಯನ್ನು ಇವು ಹೊಂದಿವೆ. ಶಿವಪುರಾಣ, ದೇವಿ ಭಾಗವತ, ಕಾಳಿಕಾ ಪುರಾಣಗಳು ನಾಲ್ಕು ಪ್ರಮುಖ ಶಕ್ತಿ ಪೀಠಗಳನ್ನು ಉಲ್ಲೇಖಿಸುತ್ತವೆ. ಕಾಳಿಕಾ ಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಬಿದ್ದು ದಗ್ಧಳಾದ ಸತಿಯ ಶರೀರವನ್ನು ಹೊತ್ತು ಶಿವ ತಾಂಡವವಾಡತೊಡಗುತ್ತಾನೆ. ರುದ್ರತಾಂಡವದಿಂದ ಜಗತ್ತು ನಾಶವಾಗುವುದನ್ನು ತಪ್ಪಿಸಲು ವಿಷ್ಣು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸುತ್ತಾನೆ. ಸತಿಯ ದೇಹದ ಭಾಗಗಳು ಭೂಮಿಗೆ ಬಿದ್ದ ಸ್ಥಳಗಳೇ ಆದಿಶಕ್ತಿಪೀಠಗಳಾದವು. ಪೀಠನಿರ್ಣಯ ತಂತ್ರದಲ್ಲಿ ಸತಿಯ ದೇಹ ೫೨ ಭಾಗಗಳಾಗಿ ಬಿದ್ದವೆಂದೂ, ಅಲ್ಲೆಲ್ಲ ಶಕ್ತಿಪೀಠಗಳು ಉದಿಸಿದವೆಂದೂ ಇದೆ. ಶಿವಚರಿತ್ರ, ವಿಶುದ್ಧ ಸಿದ್ಧಾಂತ ಪಂಚಿಕಾಗಳಲ್ಲಿ ಇದರೊಟ್ಟಿಗೆ ಇನ್ನೂ ೨೬ ಉಪಪೀಠಗಳನ್ನೂ ಹೇಳಲಾಗಿದೆ.
ಅಷ್ಟಶಕ್ತಿ ಮತ್ತು ಕಾಲಿಕಾ ಪುರಾಣಗಳು ಹೇಳುವ ಆದಿಶಕ್ತಿಪೀಠಗಳ ವಿವರಣೆ ಬೃಹತ್ ಸಂಹಿತೆಯಲ್ಲಿಯೂ ಇದೆ
"ಬಿಮಲಾ ಪಾದ ಖಂಡಂಚ, ಸ್ತನ ಖಂಡಂಚ ತಾರಿಣಿ, ಕಾಮಾಖ್ಯಾ ಯೋನಿ ಖಂಡಂಚ, ಮುಖಖಂಡಂಚ ಕಾಲಿಕಾ"
ಸತಿ ದೇವಿಯ ಪಾದವು ಬಿದ್ದ ಓರಿಸ್ಸಾದ ಪುರಿಯಲ್ಲಿ(ಜಗನ್ನಾಥ ದೇಗುಲದ ಒಳಗೆ) ಬಿಮಲ ಎಂಬ ಹೆಸರಿನಿಂದಲೂ, ಸ್ತನಭಾಗವು ಬಿದ್ದ ಓರಿಸ್ಸಾದ ಬೆರ್ಹಂಪುರ್(ಬ್ರಹ್ಮಪುರ)ನ ಪುರಾಣಗಿರಿಯಲ್ಲಿ ತಾರಾ ತಾರಿಣಿ ಎಂಬ ಹೆಸರಲ್ಲೂ, ಯೋನಿಖಂಡವು ಆಸ್ಸಾಮಿನ ಗುವಾಹಟಿಯಲ್ಲಿ ಕಾಮಾಖ್ಯ ಎಂಬ ಹೆಸರಿನಲ್ಲೂ, ಮುಖವು ಬಿದ್ದ ಜಾಗವಾದ ಕಲ್ಕತ್ತಾದಲ್ಲಿ ದಕ್ಷಿಣಕಾಳಿಯೆಂಬ ಹೆಸರಿನಿಂದಲೂ ದೇವಿ ಪೂಜಿಸಲ್ಪಡುತ್ತಾಳೆ. ಈ ದಕ್ಷಿಣಕಾಳಿಯೇ ಭವತಾರಿಣಿಯೆಂಬ ಹೆಸರಿನಲ್ಲಿ ರಾಮಕೃಷ್ಣ ಪರಮಹಂಸರ ಆರಾಧ್ಯ ದೈವವಾದವಳು. 
ದಕ್ಷಿಣೇಶ್ವರ
ಭವತಾರಿಣಿ
ಗಾರ್‍ಡನ್ ರೀಚ್ ರೈಲ್ವೆಯ ಹತ್ತಿರದಲ್ಲೆಲ್ಲೊ ಚಿಕ್ಕದೊಂದು ಕಾಳಿಯ ಗುಡಿಯಿದೆಯಂತೆ. ಅದರಲ್ಲಿರುವ ಕಾಳಿಕೆ ಕೋಲ್ಕತ್ತದ ಕಾಳಿಯರಲ್ಲೇ ಅತ್ಯಂತ ಸುಂದರವಾದವಳೆಂದೂ, ಆಕೆ ಕಗ್ಗತ್ತಲ ರಾತ್ರಿಗಿಂತ ಕರ್ರಗಿನ ಬಣ್ಣದ, ಸೂರ್ಯಪ್ರಕಾಶಕ್ಕಿಂತ ಬೆಳ್ಳಗಿನ ತೇಜಸ್ಸಿನವಳೆಂದೂ, ೮೦೦ ವರ್ಷದಿಂದ ಪೂಜಿಸಲ್ಪಡುತ್ತಿದ್ದರೂ ಆಕೆಯ ಮರದ ಮೂರ್ತಿಯ ಕಳೆ ಸ್ವಲ್ಪವೂ ಮಾಸಿಲ್ಲವೆಂದೂ ಕೋಲ್ಕತ್ತದ ಪ್ರಸಿದ್ಧ ಹೃದಯ ತಜ್ಞರಾಗಿ ನಿವೃತ್ತರಾಗಿರುವ ಆತ್ಮೀಯರೂ ಆದ ಡಾ. ಬ್ಯಾನರ್ಜಿ ಹೇಳುತ್ತಿದ್ದರು. ಆದರಾಕೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಹಾಗೆ ಕೋಲ್ಕತ್ತದ ಹಳೆಯ ಕಾಳಿ ಮಂದಿರಗಳನ್ನು ಹುಡುಕುತ್ತಿದ್ದಾಗ ಸಿಕ್ಕು ವಿಚಿತ್ರ ಕುತೂಹಲ ಕೆರಳಿಸಿದ್ದು ಫಿರಂಗಿ ಕಾಳಿಬಾರಿ. ಇದನ್ನು ಹುಡುಕಲೆಂದೇ ಬೋವ್‌ಬಜಾರಿನ ಮಾರ್ಕೆಟ್ಟಿನ ಇಕ್ಕಟ್ಟಾದ ಗಲ್ಲಿಗಳಲ್ಲೆಲ್ಲ ಸುತ್ತಿದ್ದೇನೆ. ಕೊನೆಗೂ ಕಣ್ಣಿಗೆ ಬಿತ್ತು. ಇದಂಥ ಭಾರೀ ದೊಡ್ಡ ದೇವಸ್ಥಾನವೇನೂ ಅಲ್ಲ. ಆದರೆ ಇದರ ಹಿಂದೆ ತುಂಬ ಇಂಟರೆಸ್ಟಿಂಗ್ ಎನಿಸುವ ಕಥೆಯೊಂದಿದೆ.
ಐತಿಹ್ಯದ ಪ್ರಕಾರ ಶ್ರೀಮಂತ ದೋಮ್ ಎಂಬ ವೈದ್ಯ ಈ ಕಾಳಿಯನ್ನು ಪೂಜಿಸುತ್ತಿದ್ದನಂತೆ. ಕಲ್ಕತ್ತಕ್ಕೆ ಬರುವ ಹೊಸ ಯುರೋಪಿಯನ್ನರೆಲ್ಲ ಇವನಲ್ಲಿ ಚಿಕಿತ್ಸೆಗೆ ಬರುತ್ತಿದ್ದರು. ಹೀಗೆ ಬಂದವರಲ್ಲಿ ಕೆಲವರು ಈ ಕಾಳಿಯನ್ನು ಪ್ರಾರ್ಥಿಸಲಾರಂಭಿಸಿದರಂತೆ. ಹೀಗಾಗಿ ಇದು ಫಿರಂಗಿ(ವಿದೇಶಿ) ಕಾಳಿಬಾರಿ ಎಂದು ಹೆಸರಾಯ್ತು. ದೇವಸ್ಥಾದ ಹೊರಗಿರುವ ಚಿಕ್ಕ ತಾಮ್ರಪತ್ರದ ಪ್ರಕಾರ ಈ ಮಂದಿರ ಸ್ಥಾಪಿಸಲ್ಪಟ್ಟಿದ್ದು ಬಂಗಾಬ್ದ ೯೦೪ರಲ್ಲಿ(ಸುಮಾರು ೧೪೯೮). ಆಗ ಯಾವ ಯುರೋಪಿಯನ್ನರೂ ಭಾರತದಲ್ಲಿರಲಿಲ್ಲ. ಫೋಟೋ ತೆಗೆಯೋಣವೆಂದು ಅಲ್ಲಿನ ಅರ್ಚಕರನ್ನು ಮಾತನಾಡಿಸಿದೆ. ಒಂದೆರಡು ಫೋಟೊ ತೆಗೆಯಲು ಅನುಮತಿ ನೀಡಿದರು. ಅವರು ಹೇಳುವಂತೆ ಅದು ಮೂಲತಃ ಶಿವನ ಮಂದಿರವಾಗಿತ್ತಂತೆ. ಅಲ್ಲಿ ಕಾಳಿಮೂರ್ತಿಯನ್ನು ಸ್ಥಾಪಿಸಿದವನು ಆಂಟನಿ ಕಬಿಯಾಲ್. ಹಾಗಾಗಿ ಇಲ್ಲಿ ಮಧ್ಯಭಾಗದಲ್ಲಿ ಲಿಂಗವೊಂದಿದ್ದು ಕಾಳಿ ಮೂಲೆಯೊಂದರಲ್ಲಿ ಪೂಜಿಸಲ್ಪಡುತ್ತಾಳೆ. ಈ ಆಂಟನಿ ಕಬಿಯಾಲ್ ಮತ್ಯಾರು ಅಲ್ಲ, ಆಂಟನಿ ಫಿರಂಗಿ ಎಂದೇ ಬಂಗಾಳದಲ್ಲೆಲ್ಲ
ಫಿರಂಗಿ ಕಾಳಿಬಾರಿ
ಮನೆಮಾತಾಗಿರುವ ಹೆನ್ಸ್‌ಮನ್ ಆಂಟನಿ. ವಿದೇಶಿಗನಾಗಿದ್ದರೂ ಬಂಗಾಲಿ ಭಕ್ತಿಸಾಹಿತ್ಯವನ್ನು, ಕವಿಗಾನ ಪರಂಪರೆಯನ್ನು ಹೊಸ ಎತ್ತರಕ್ಕೇರಿಸಿದ ಮಹಾಕವಿಯೀತ. ಆದರೆ ಈತನ ಪೂರ್ತಿ ಜೀವನದ ಬಗ್ಗೆ ನಮಗೆ ಸಿಗುವ ಮಾಹಿತಿ ಅತ್ಯಲ್ಪ ಮಾತ್ರ. ಒಂದಿಷ್ಟು ಪತ್ರಗಳು, ತಾರೀಖುಗಳು, ಕವಿತೆಯ ಚೂರುಗಳು, ೧೮೩೬ರಲ್ಲಿನ ಮರಣ, ಉತ್ತಮ ಕುಮಾರನ ಬ್ಲ್ಯಾಕ್ ಎಂಡ್ ವೈಟ್ ಚಿತ್ರವೊಂದು, ದುರ್ಗಾಪೂಜೆಯ ಭಜನೆಗಳು, ಮನ್ನಾಡೇಯ ಕೆಲ ಹಾಡುಗಳಷ್ಟೇ ಆಂಟನಿಯ ಬಗೆಗಿನ ದಾಖಲೆಗಳು.
ಈತ ಹುಟ್ಟಿದ್ದು ೧೭೮೬ರಂದು ಪೋರ್ಚುಗಲ್‌ನಲ್ಲಿ. ಉಪ್ಪಿನ ವ್ಯಾಪಾರಿ ಹೆನ್ಸ್‌ಮೆನ್‌ನ ಮಗನಾಗಿ. ಅದೇ ವರ್ಷ ಲಾರ್ಡ್ ಕಾರ್ನವಾಲೀಸನ ಜೊತೆ ಇವನ ಕುಟುಂಬ ಬಂಗಾಲದ ಚಂದ್ರನಗರಕ್ಕೆ ಬಂದಿತು. ಚಿಕ್ಕಂದಿನಿಂದಲೇ ಭಾರತೀಯ ಸಂಸ್ಕೃತಿ ಸಂಪ್ರದಾಯಗಳ ಅಪಾರ ಒಲವಿದ್ದ ಆಂಟನಿ ಬಂಗಾಳಿ ಮತ್ತು ಸಂಸ್ಕೃತವನ್ನು ಕಲಿತ. ಎಲ್ಲ ಬಂಗಾಳಿಗಳಂತೆ ಕಾಳಿ ಅವನ ನೆಚ್ಚಿನ ದೈವವಾದಳು. ಜೊತೆಗೆ ಸಂಗೀತದ ಕಡೆಗೂ ಆತನಿಗೆ ಅಗಾಧ ಅಕರ್ಷಣೆಯಿತ್ತು. ಬಂಗಾಳದ ಜಾನಪದ ಕಲೆಗಳಾದ ಝುಮುರ್, ಪಾಂಚಾಲಿ, ಮುರ್ಶಿದಿ, ಭಾವೈಯಾಗಳನ್ನು ನೋಡುತ್ತ, ಕೇಳುತ್ತ ಬಂಗಾಳಿಗಳ ಮಧ್ಯ ಬೆಳೆದ. ಆ ಕಾಲದಲ್ಲಿ ಬಂಗಾಲದಲ್ಲಿ ಕವಿಗಾನವೆಂಬ ಕಲಾಪ್ರಕಾರ ತುಂಬ ಪ್ರಸಿದ್ಧವಾಗಿತ್ತು. ಇದು ಬಂಗಾಲದ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಜನಿತವಾಗಿದ್ದ ತಾರ್ಜಾ, ಖೆಉರ್, ಆಖ್ರಾಇ, ದರ್ನಾ, ಟಪ್ಪಾ, ಕೃಷ್ಣಜಾತ್ರಾದಂಥ ವಿವಿಧ ಪ್ರಕಾರಗಳ ಸಂಮಿಶ್ರಣವಾಗಿ ಬೆಳೆದ ಕಲೆ. ೧೭ನೇ ಶತಮಾನದಲ್ಲೇ ಇದರ ಹುಟ್ಟನ್ನು ಗಮನಿಸಬಹುದಾದರೂ ೧೭೬೦ರಿಂದ ೧೮೩೦ರ ಕಾಲವನ್ನು ಬಂಗಾಲಿ ಇತಿಹಾಸದಲ್ಲಿ ಕವಿಗಾನದ ಸ್ವರ್ಣಯುಗವೆಂದೇ ಪರಿಗಣಿಸಲಾಗುತ್ತದೆ. ವೈಷ್ಣವ ಪಂಥದ ಜನಪ್ರಿಯತೆಯನ್ನೂ ಅದು ಆ ಕಾಲದಲ್ಲಿ ಮುರಿದಿತ್ತೆಂದರೆ ಅದರ ಪ್ರಸಿದ್ದಿ ಎಷ್ಟಿರಬಹುದೆಂದು ಊಹಿಸಿ. ಕಲ್ಕತ್ತಾದ ಭಾಗದಲ್ಲಂತೂ ಕವಿಗಾನದ ಸಾಹಿತ್ಯವಲ್ಲದೇ ಮತ್ತೊಂದು ಸಾಹಿತ್ಯ ಆ ಕಾಲದಲ್ಲಿ ರಚನೆಯೇ ಆಗುತ್ತಿರಲಿಲ್ಲವಂತೆ. ಕವಿಗಾನವೆಂದರೆ ಎರಡು ಗುಂಪುಗಳ ಮಧ್ಯೆ ನಡೆಯುವ ಅವಧಾನದ ಆಶುಕವಿತ್ವದ ಸ್ಪರ್ಧೆಯಿದ್ದಂತೆ. ಪ್ರತಿ ಗುಂಪಿನ ಮುಖಂಡನನ್ನು ಕಬಿಯಾಲ್ ಎನ್ನುತ್ತಿದ್ದರು. ಬಂಧನ್ ಅಥವಾ ಭವಾನಿ ಭಶೊಕ್, ಸಖಿ ಸಂಬಂಧ್, ಬಿರಹೊ, ಲಹರ್ ಮತ್ತು ಖೆಉರ್ ಎಂಬ ಐದು ಸುತ್ತುಗಳಲ್ಲಿ ಎದುರಾಳಿಯ ಸವಾಲುಗಳಿಗೆ ಆಯಾ ದೇವರುಗಳ ಬಗೆಗಿನ, ಅಥವಾ ವಿಷಯದ ಮೇಲಿನ ಆಶುಕವಿತೆಗಳನ್ನು ರಚಿಸಿ, ಹಾಡಿ, ಅಭಿನಯಿಸಲಾಗುತ್ತಿತ್ತು. ೧೮-೧೯ನೇ ಶತಮಾನದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕಬಿಯಾಲ್‌ಗಳಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ಹೋರಾ ಠಾಕೂರ್, ನಿತಾಯ್ ಬೈರಾಗಿ, ಕೇಷ್ಟಾ ಮುಚಿ, ರಾಮ್ ಬಸು, ಠಾಕುರ್ ಶಿಂಗಾ ಇವರೆಲ್ಲ ಆ ಕಾಲದ ಕವಿಗಾನ ಪರಂಪರೆಯ ದಿಗ್ಗಜರೆಂದೇ ಪರಿಗಣಿಸಲ್ಪಡುತ್ತಾರೆ. ಸುಪ್ರಸಿದ್ಧ ಕವಿಗಾನದ ಕವಿ ಹೋರಾ ಠಾಕೂರನ ಇಬ್ಬರು ಶಿಷ್ಯರಾದ ನೀಲು ಠಾಕುರ್ ಮತ್ತು ಭೋಲಾ ಮೋಯ್ರಾರ ನಡುವೆ ಠಾಕುರ್ತಲಾದ ರಾಜಾ ಗೋಪಿ ಮೋಹನಚಂದನ ಆಸ್ಥಾನದಲ್ಲಿ ನಡೆದ ಕವಿಗಾನವೊಂದನ್ನು ನೋಡಿದ ಆಂಟನಿ ಅದರಿಂದ ಪ್ರಭಾವಿತಗೊಳ್ಳುತ್ತಾನೆ. ಶಿರಾಜ್ ಷಾನೆಂಬ ಸಂತನನ್ನು ಹಿಡಿದು ಕವಿಗಾನದ ಪಟ್ಟುಗಳನ್ನೆಲ್ಲ ಕಲಿಯುತ್ತಾನೆ.
ಅವನ ಪ್ರಥಮ ಕವಿಗಾನ ನಡೆದದ್ದು ಕಬಿಯಾಲಿ ಜೋಗೇಶ್ಶೋರಿಯೆದುರು. ಅವಳನ್ನು ಕವಿಗಾನದಲ್ಲಿ ಸೋಲಿಸಿದ ನಂತರ ಆಂಟನಿ ಹಿಂದಿರುಗಿ ನೋಡಿದ್ದೇ ಇಲ್ಲ. ರಾಮ್ ಬಸು, ಕೇಷ್ಟಾ ಮುಚಿ, ಜೋಗೇಶರ್ ಧೋಪಾ, ಠಾಕುರ್ ಶಿಂಗಾರಂಥ ಪ್ರಗಲ್ಭರೆಲ್ಲ ಆಂಟನಿಯೆದುರು ಸೋಲೊಪ್ಪಿಕೊಂಡರು.(ಕಬಿಯಾಲರ ಹೆಸರಿನ ಉತ್ತರಪದದಲ್ಲಿರುವ ವಿಶೇಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೇಷ್ಟಾ ಮುಚಿ(ಮೋಚಿ), ಜೋಗೇಶರ್ ಧೋಪಾ(ಧೋಬಿ), ನಿತಾಯ್ ಬೈರಾಗಿ(ಸಂನ್ಯಾಸಿ), ಭೋಲಾ ಮೊಯ್ರಾ(ಸಿಹಿತಿಂಡಿ ತಯಾರಿಸುವವ), ಆಂಟನಿ ಫಿರಂಗಿ(ವಿದೇಶಿ) ಇವೆಲ್ಲ ವಚನ ಸಾಹಿತ್ಯದಲ್ಲಿ ಬರುವ ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಯ್ಯ, ಚಮಗಾರ ಹರಳಯ್ಯರಂತೆ ಕಸುಬಿನ ಕಾರಣದಿಂದಲೇ ಹೆಸರಾದವರು). ಆಂಟನಿ ಕವಿಗಾನದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದಂತೆ ಅವನ ಶತ್ರುಗಳ ಸಂಖ್ಯೆಯೂ ಬೆಳೆಯಿತು. ಯಾವನೋ ಪರದೇಶಿ ನಮ್ಮ ದೇವರ ಹಾಡುಕಟ್ಟಿ ಹಾಡುವುದೇನು ಎಂದು ಮೂಗು ಮುರಿದವರೇ ಹೆಚ್ಚು. ಇದರ ಮಧ್ಯೆ ಸತ್ತ ಗಂಡನ ಜೊತೆ ಹೆಂಡತಿಯನ್ನು ಚಿತೆಗೇರಿಸಲು ಪ್ರಯತ್ನಿಸುತ್ತಿದ್ದ ಜನರನ್ನು ತಡೆದು ಸೌದಾಮಿನಿ ಎಂಬ ಬ್ರಾಹ್ಮಣ ಹೆಂಗಸನ್ನು ಮದುವೆಯಾಗಿ ಊರವರಲ್ಲಿಯೂ ದ್ವೇಷ ಕಟ್ಟಿಕೊಂಡ. ಕ್ರಿಸ್ತೆ ಔರ್ ಕ್ರಿಷ್ಣೆ ಕಿಜೊ ಪ್ರೊಥಕ್ ನಹಿ ರೆ ಭಾಯ್(ಕ್ರಿಸ್ತ ಹಾಗೂ ಕೃಷ್ಣರಲ್ಲಿ ಭೇದವಿಲ್ಲವಣ್ಣ) ಎಂದು ಹಾಡುಕಟ್ಟಿ ಸರ್ವಧರ್ಮ ಸಮಭಾವವನ್ನು ಬೋಧಿಸಿ ವಿದ್ವಾಂಸರ ವಾಹ್ ವಾಹಿಯನ್ನು ಗಳಿಸಿದರೂ ಸಮಾಜದ ಒಂದು ವರ್ಗವಿನ್ನೂ ಅವನನ್ನೊಪ್ಪಿಕೊಳ್ಳಲು ತಯಾರಿರಲಿಲ್ಲ.  ಯಾವಾಗ ಆಂಟನಿ ಕಾಳಿಯ ದೇವಸ್ಥಾನ ಸ್ಥಾಪಿಸಿದನೋ ಊರವರ ಕಣ್ಣು ಕೆಂಪಗಾಯಿತು. ವಿದೇಶಿಗನೊಬ್ಬ ನಮ್ಮ ರೀತಿ-ರಿವಾಜು, ಪೂಜೆ ಪುನಸ್ಕಾರಗಳಲ್ಲೂ ಮೂಗು ತೂರಿಸುತ್ತಿದ್ದಾನೆಂದು ಗ್ರಾಮದಲ್ಲಿದ್ದ ಕೆಲವರು ಆಂಟನಿಯ ವಿರುದ್ಧ ತಿರುಗಿ ಬಿದ್ದರು. ಆಂಟನಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ನವರಾತ್ರಿಯಂದು ಅದೇ ದೇವಾಲಯದಲ್ಲಿ ವಿಜೃಂಭಣೆಯಿಂದ ದುರ್ಗಾಪೂಜೆಯನ್ನಾರಂಭಿಸಿದ. ಗೋಪಿ ಮೋಹನ ಚಂದನ ಆಸ್ಥಾನದಲ್ಲಿ ನಡೆದ ನವರಾತ್ರಿ ಕವಿಗಾನದಲ್ಲಿ ಆಗಿನ ಕಾಲದ ನಂ.೧ ಕಬಿಯಾಲ್ ಭೋಲಾ ಮೊಯ್ರಾನನ್ನು ಸೋಲಿಸಿದ ಆಂಟನಿಗೆ ಅದೇ ತನ್ನ ಕೊನೆಯ ಕವಿಗಾನವಾಗಬಹುದೆಂಬ ಕಲ್ಪನೆ ಇರಲಿಲ್ಲ. ಮರುದಿನ ಮನೆಗೆ ಹಿಂದಿರುಗಿ ನೋಡುತ್ತಾನೆ. ಇವನ ಮೇಲಿನ ಸಿಟ್ಟಿಗೆ ಊರವರು ಹಿಂದಿನ ರಾತ್ರಿಯೇ ಮನೆಗೆ ಬೆಂಕಿಯಿಟ್ಟಿದ್ದರು. ಮನೆಯೊಟ್ಟಿಗೆ ಪ್ರೀತಿಯ ಪತ್ನಿ ಸೌದಾಮಿನಿಯೂ ಸುಟ್ಟು ಕರಕಲಾಗಿದ್ದಳು. ಯಾರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದನೋ, ಯಾರಿಗೋಸ್ಕರ ಸಮಾಜವನ್ನೇ ಎದುರುಹಾಕಿಕೊಂಡು ಬಾಳಿದ್ದನೋ ಅವಳೇ ಇಲ್ಲದ ಮೇಲೆ? ಹೆಂಡತಿಯನ್ನು ಮಣ್ಣುಮಾಡಿ ಆ ಸಮಾಧಿಯ ಪಕ್ಕದಲ್ಲೇ ಆಂಟನಿ ಪ್ರಾಣಬಿಟ್ಟ. ದೇವಿ ದುರ್ಗೆಯ ಕುರಿತಾದ ರಚನೆಯಾದ, ದುರ್ಗಾಪೂಜೆಯ ಅವಿಭಾಜ್ಯ ಅಂಗವಾದ ಅಗೊಮನಿ ಗಾನಪ್ರಕಾರದಲ್ಲಿ ಆಂಟನಿ ಫಿರಂಗಿಗೆ ಬಂಗಾಳದ ಸರ್ವೋತ್ಕೃಷ್ಟ ಕವಿಗಳಲ್ಲೊಬ್ಬನೆಂಬ ಹೆಗ್ಗಳಿಕೆಯಿದೆ. ಇವನ ನೂರಾರು ರಚನೆಗಳು, ಭಕ್ತಿಗೀತೆಗಳು ಬಂಗಾಲದ ಸಾಹಿತ್ಯವನ್ನು, ಭಕ್ತಿಪಂಥವನ್ನು ಸಮೃದ್ಧಗೊಳಿಸಿವೆ. ವಿದೇಶದಲ್ಲೆಲ್ಲೋ ಹುಟ್ಟಿ ಭಾರತಕ್ಕೆ ಬಂದು ಭಾರತೀಯನೇ ಆಗಿ ಇಲ್ಲಿನ
ಫಿರಂಗಿ ಕಾಳಿ
ಸಂಸ್ಕೃತಿ, ಸಂಪ್ರದಾಯ, ಭಾಷೆಗಳನ್ನು ಕಲಿತು, ಸಾಹಿತ್ಯ ರಚನೆಮಾಡಿ, ಮತಸೌಹಾರ್ದತೆಯನ್ನು ಸಾರಿ, ಭಕ್ತಿಪಂಥವನ್ನು ಉತ್ತುಂಗಕ್ಕೇರಿಸಿ, ಕವಿಗಾನದಂಥ ಪರಂಪರೆಯಲ್ಲಿ ಹೆಗಲೆಣೆಯಿಲ್ಲದವನೆಂದು ಹೆಸರಾದವನವನು. ತನ್ನ ಇಷ್ಟದೈವದ ಮೇಲಿನ ಅನನ್ಯ ಭಕ್ತಿಯಿಂದ ಆತ ನಿರ್ಮಿಸಿದ್ದ ಕಾಳಿಮಂದಿರವಿನ್ನೂ ಬಂಗಾಳದ ಬೋವ್‌ಬಜಾರಿನ ಗಲ್ಲಿಯೊಂದರಲ್ಲಿದೆ. ಹಿಂದೂದೇವಿಯ ಮೇಲೆ ಫಿರಂಗಿಯೊಬ್ಬನ ಭಕ್ತಿ ಚಿರಸ್ಥಾಯಿಯಾಗಿ ಉಳಿದುದು ಬಂಗಾಳ ಮಾತ್ರವಲ್ಲ ಭಾರತದ ಮಣ್ಣಿನ ಹಿರಿಮೆಯಿಂದ.
ಜಾತಿಮತ ಪಂಥಗಳನ್ನು ಮೀರಿ ಕಾಳಿ ಕೋಲ್ಕತ್ತದ ಕಣಕಣಗಳಲ್ಲಿ ಕಲೆತು ಹೋಗಿದ್ದಾಳೆ. ಆಕೆಯಿಲ್ಲದ ಜಾಗವಿಲ್ಲ. ಚೈನಾಟೌನ್ ಎಂಬ ಚೀನಿಯರೇ ಇರುವ ಪ್ರದೇಶದಲ್ಲೂ(ಮೊದಲು ಇಲ್ಲಿ ೨೦೦೦೦ ಚೈನಿಯರಿದ್ದರು, ಈಗ ಆ ಸಂಖ್ಯೆ ಸುಮಾರು ಎರಡು ಸಾವಿರಕ್ಕಿಳಿದಿದೆ) ಒಂದು ಕಾಳಿಮಂದಿರವಿದೆ. ಅದಕ್ಕವರು ನ್ಯೂಡಲ್ಸ್, ಪಾಸ್ತಾಗಳನ್ನೇ ನೈವೇದ್ಯವಾಗಿಡುವುದು.  ನಗರದ ಪ್ರತಿರಸ್ತೆಯ ಪ್ರತಿಮೂಲೆಯಲ್ಲೂ ಒಂದೊಂದು ಕಾಳಿಯ ಗುಡಿಯಿದ್ದೇ ಇರುತ್ತದೆ. ಬಸ್ಸಿನಲ್ಲಿ ಹೋಗುವಾಗ ಕಿಲೋಮೀಟರಿಗೆ ನಾಲ್ಕು ಸರ್ತಿಯಾದರೂ ರಸ್ತೆಪಕ್ಕ ನೋಡಿ ಎರಡೂ ಕೈಯೆತ್ತಿ ಮುಗಿಯದ ಬಂಗಾಳಿಯನ್ನು ಕಾಣುವುದೇ ಅಪರೂಪ. ಪಕ್ಕಾ ನಾಸ್ತಿಕ ಕಮ್ಯುನಿಸ್ಟರೂ ದುರ್ಗಾಪೂಜೆಯನ್ನು ತಪ್ಪಿಸಿಕೊಳ್ಳುವುದಿಲ್ಲ. ಕೋಲ್ಕತ್ತಾವನ್ನು ನೋಡಿದ ಬಹಳಷ್ಟು ಜನಕ್ಕೆ ಆ ನಗರವೆಂದರೆ ಇಕ್ಕಟ್ಟಾದ ರಸ್ತೆಗಳು, ಕಸದ ರಾಶಿ, ಗಲಾಟೆ, ಒಂದಿಷ್ಟು ಬುದ್ಧಿಜೀವಿಗಳು, ಎಡಪಂಥೀಯ ಕ್ರಾಂತಿ, ಹುಚ್ಚುತನ, ರಕ್ತದಾಹದ ರಾಜಕೀಯ. ಬೆಂಗಳೂರು, ಮುಂಬೈ ನೋಡಿದವರಿಗೆ ಕೋಲ್ಕತ್ತ ಇಷ್ಟವಾಗುವ ಸ್ಥಳವೇನಲ್ಲ. ಥೇಟ್ ಕಾಳಿಯಂತೆ. ಅವಳು ಕಗ್ಗತ್ತಲ ರಾತ್ರಿಯಂತೆ ಕರಾಳ, ಆದರಷ್ಟೆ ಸುಂದರ. ಭೀಭತ್ಸ,ರೌದ್ರ, ಭಯಾನಕ, ಆದರಷ್ಟೇ ಮೋಹಕ. ಅವಳು ವಿನಾಶಕಾರಿ, ಆದರೆ ಪ್ರಳಯರುದ್ರನ ಎದೆಯ ಮೇಲೆಯೇ ಕಾಲಿಟ್ಟು ನಿಂತ ರಕ್ಷಕಿ. ಅವಳ ಘೋರರೂಪ ಸಂಹಾರಕ್ಕಾಗಿ, ಸಂಹಾರವೆಂಬುದು ಹೊಸ ಸೃಷ್ಟಿಗಾಗಿ, ಅವಳೆಂದರೆ ಶಕ್ತಿ, ಶ್ರದ್ಧೆ, ಸ್ಫೂರ್ತಿ. ಬೇರಾವ ನಗರವೂ ಅಷ್ಟು ಚೆನ್ನಾಗಿ ಕಾಳಿಯ ರೂಪಕವಾಗಲಾರದು, ಬೇರಾವ ದೈವವೂ ಕೋಲ್ಕತ್ತವನ್ನಾಳಲು ಸಾಧ್ಯವಾಗಲಾರದು. ಕೋಲ್ಕತ್ತವೆಂದರೆ ಕಾಳಿ, ಕಾಳಿಯೆಂದರೆ ಕೋಲ್ಕತ್ತಾ. ಅಂಥ ಅಬೇಧವದು. ಅದ್ವೈತವದು.