Pages

Saturday, October 6, 2018

ಟಿಪ್ಪು ಮತ್ತು ನನ್ನ ಕ್ಯಾಲಿಕಟ್ ಟ್ರಿಪ್ಪು - ೧

      
 ಕಲ್ಲಿಕೋಟೆ ಉರುಫ್ ಕ್ಯಾಲಿಕಟ್ ಉರುಫ್ ಕೊಝಿಕೋಡ್ ನನ್ನ ಮೆಚ್ಚಿನ ತಾಣಗಳಲ್ಲೊಂದು. ಕಳೆದ ವಾರ ಗೆಳತಿ ಹಿತಳ ಮದುವೆಗೆ ಕಲ್ಲೀಕೋಟೆಗೆ ಹೋಗಿ ಕೆಲ ದಿನ ಅಲ್ಲೇ ಉಳಿಯುವ ಪ್ರಸಂಗ ಬಂತು. ಪ್ರವಾಸಿ ತಾಣವೆನ್ನುವುದಕ್ಕಿಂತ ಕಲ್ಲೀಕೋಟೆ ಐತಿಹಾಸಿಕವಾಗಿ ನನಗೆ ಅಚ್ಚುಮೆಚ್ಚು. ವಾಸ್ಕೋಡಿಗಾಮನ ಕಥೆಯಂತೂ ಗೊತ್ತೇ ಇದೆ. ಅದಕ್ಕೂ ಮೊದಲು ಸಾವಿರಾರು ವರ್ಷಗಳ ಹಿಂದೆ ಕಲ್ಲಿಕೋಟೆಯ ಕಡಲುಂಡಿಯು ಸಂಗಂ ಸಾಹಿತ್ಯದ ಕಾಲದಲ್ಲಿ ತೊಂಡಿ ಎಂಬ ಚೇರರ ರಾಜಧಾನಿಯಾಗಿತ್ತು. ೧೨ನೇ ಶತಮಾನದಲ್ಲಿ ಚೇರರ ಅವಸಾನದ ನಂತರ ಪ್ರವರ್ಧಮಾನಕ್ಕೆ ಬಂದವರು ಸಾಮೂದಿರಿಗಳು(ಝಾಮೋರಿನ್ಗಳು).  ವಾಸ್ಕೋಡಗಾಮ ೧೪೯೮ರಲ್ಲಿ ಕಲ್ಲಿಕೋಟೆಗೆ ಬಂದಾಗ ಅದು ಏಷ್ಯಾದ ಅತಿ ದೊಡ್ಡ ಬಂದರಾಗಿ ಹೆಸರುವಾಸಿಯಾಗಿತ್ತು. ಅಲ್ಲಿಂದ ಮಧ್ಯಏಷ್ಯಾ, ಚೈನಾ, ಟರ್ಕಿ, ಇರಾಕ್, ಪರ್ಷಿಯಾ, ಅರಬ್ ಸೇರಿ ವಿಶ್ವದ ಬಹುಭಾಗಗಳೊಡನೆ ಅವ್ಯಾಹತವಾದ ವ್ಯಾಪಾರ ಸಂಪರ್ಕ ಶತಶತಮಾನಗಳಿಂದ ನಡೆಯುತ್ತಿತ್ತು. ಮಾರ್ಕೊ ಪೊಲೊ, ಇಬ್ನ್ ಬತೂತಾ, ವಾಂಗ್ ತ್ಯುವಾನ್ನಂಥ ಇತಿಹಾಸಕಾರರೆಲ್ಲ ಕಲ್ಲಿಕೋಟೆಗೆ ಭೇಟಿ ಕೊಟ್ಟು ತಮ್ಮ ಅನುಭವಗಳನ್ನು ವಿವರವಾಗಿ ದಾಖಲಿಸಿದ್ದಾರೆ. ಚೈನಾ ತನ್ನ ವಸಾಹತೊಂದನ್ನು ಆ ಕಾಲಕ್ಕೇ ಕಲ್ಲಿಕೋಟೆಯಲ್ಲಿ ಸ್ಥಾಪಿಸಿದ್ದು ವಿಶೇಷವೇ ಸೈ. ೧೪೩೩ರಲ್ಲಿ ಚೀನಾದ ರಾಜಕುಮಾರನೊಬ್ಬ ತನ್ನ ಏಳನೇ ಭೇಟಿಯಲ್ಲಿ ಇಲ್ಲೇ ಮೃತಪಟ್ಟ ದಾಖಲೆಗಳಿವೆ. ಇಂದಿಗೂ ಕಲ್ಲಿಕೋಟೆಯಲ್ಲಿ ಸಿಲ್ಕ್ ಸ್ಟ್ರೀಟ್, ಚೈನಾಕೊಟ್ಟಾ(ಕೋಟೆ), ಚೀನಂಚೇರಿ, ಚೀನಪಲ್ಲಿ(ಚೈನಾ ಮಸೀದಿ)ನಂಥ ಹಲವು ಕುರುಹುಗಳು ಚೈನಾ-ಕೇರಳದ ಮಧ್ಯದ ಸಂಬಂಧದ ಸಾಕ್ಷಿಯಾಗಿ ನಿಂತಿವೆ. ಮುಂದೆ ಗಾಮ ಕೇರಳಕ್ಕೆ ಬಂದಿಳಿಯುವುದರೊಂದಿಗೆ ಅರಬ್ ಹಾಗೂ ಮಧ್ಯಪ್ರಾಚ್ಯದ ವ್ಯಾಪಾರಿಗಳ ಕೈಲಿದ್ದ ಅರಬ್ಬಿ ಸಮುದ್ರದ ವ್ಯಾಪಾರ ಪೂರ್ತಿಯಾಗಿ  ಪೋರ್ಚುಗೀಸರ ಕೈಸೇರಿತು. ಪೋರ್ಚುಗೀಸರು ಕಟ್ಟಿಕೊಂಡ ಕಲ್ಲಿನ ಕೋಟೆಯಿಂದಲೇ ಆ ಊರಿಗೆ ಕಲ್ಲಿಕೋಟೆಯೆಂಬ ಹೆಸರು ಬಂತೆಂದೂ, ಅಲ್ಲಿಂದ ಕ್ಯಾಲಿಕೋ ಎಂಬ ಬಟ್ಟೆ ವಿಶ್ವದಾದ್ಯಂತ ರಫ್ತಾಗುತ್ತಿದ್ದುದರಿಂದ ಕ್ಯಾಲಿಕಟ್ ಎಂಬ ಹೆಸರು ಬಂತೆಂದೂ ಪ್ರತೀತಿಯಿದೆ. 
       ಅದು ಪೋರ್ಚುಗೀಸರು ಝಾಮೋರಿನ್ನನ ಆಳ್ವಿಕೆಯ ಮಲಬಾರಿನಲ್ಲಿ ನೆಲೆಯೂರಲು ಅವಕಾಶಕ್ಕಾಗಿ ಕಾಯುತ್ತಿದ್ದ ಸಮಯ. ಇಲ್ಲಿನ ಕಾಳುಮೆಣಸು, ಸಾಂಬಾರು ಪದಾರ್ಥಗಳು ಯುರೋಪಿಯನ್ನರಿಗೆ ಎಷ್ಟು ಹುಚ್ಚು ಹಿಡಿಸಿದ್ದವೆಂದರೆ ಅದನ್ನು ಹುಡುಕಿಕೊಂಡೇ ವಾಸ್ಕೋಡಿಗಾಮ ಬಾರಿ ಬಾರಿ ಕಲ್ಲಿಕೋಟೆಯ ಬಂದರಿಗೆ ಬಂದಿಳಿಯುತ್ತಿದ್ದ. ಮೂರನೇ ಬಾರಿ ಆತ ಬಂದಿಳಿದಾಗ ನಡೆದ ಯುದ್ಧದಲ್ಲಿ ಸ್ಥಳೀಯರೇ ಕೇಳು ನಾಯರ್ ಎಂಬ ಯುವಕನ ನೇತೃತ್ವದಲ್ಲಿ ಆತನನ್ನು ಬಡಿದು ಕೊಂದರೆಂಬುದು ಬೇರೆ ವಿಷಯ. ಇಷ್ಟಾದರೂ ಪೋರ್ಚುಗೀಸರಿಗೆ ಬುದ್ಧಿ ಬರಲಿಲ್ಲ. ಕೊಚ್ಚಿಯಲ್ಲಾಗಲೇ ಭದ್ರವಾದ ನೆಲೆ ಸ್ಥಾಪಿಸಿಕೊಂಡಿದ್ದ ಅವರು ಝಾಮೋರಿನ್ನನ ಕಲ್ಲಿಕೋಟೆಯೊಳಗೆ ಹೇಗಾದರೂ ಮಾಡಿ ನುಗ್ಗಲು ಶತಪ್ರಯತ್ನ ನಡೆಸುತ್ತಿದ್ದರು. ಅರಬ್ಬಿ ವರ್ತಕರಿಂದ ಎದುರಾಗುತ್ತಿದ್ದ ತೀವ್ರ ಸ್ಪರ್ಧೆ ಬೇರೆ. ಅದಕ್ಕಿಂತ ಹೆಚ್ಚಾಗಿ ಅವರಿಗಿದ್ದ ಭಯ ಮರಕ್ಕರ್ ವ್ಯಾಪಾರಿಗಳು. ಇವರ ಹಿಂದಿನ ತಲೆಮಾರು ಝಾಮೋರಿನ್ನನ ವಿಧೇಯ ಸೇವಕರಾಗಿದ್ದರಿಂದ ಅರಸನಿಗೆ ಇವರನ್ನು ಕಂಡರೆ ಭಾರೀ ಪ್ರೀತಿ. ಇದೇ ಕಾಲದಲ್ಲಿ ಈಜಿಪ್ಟಿನಲ್ಲಿ ಮಾಮ್ಲೂಕ್ ವಂಶವನ್ನು ಪದಚ್ಯುತಗೊಳಿಸಿ ಒಟ್ಟೋಮನ್ ಸಾಮ್ರಾಜ್ಯ ಪಟ್ಟಕ್ಕೇರಿತ್ತು. ಕೇರಳದಿಂದ ಕೆಂಪು ಸಮುದ್ರದ ಮೂಲಕ ಸಾಂಬಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ಇಜಿಪ್ಟ್ ನಂಬಿಕೊಂಡಿದ್ದು ಇದೇ ಮರಕ್ಕರ್ ವ್ಯಾಪಾರಿಗಳನ್ನು. ಝಾಮೋರಿನ್ನನ ರಾಜಾಶ್ರಯ, ಸಾಂಬಾರ್ ಪದಾರ್ಥಗಳಿಗೆ ಈಜಿಪ್ಟ್ ಮತ್ತು ಮಧ್ಯಪ್ರಾಚ್ಯದಲ್ಲಿದ್ದ ಭಾರೀ ಬೇಡಿಕೆ ಇದೆರಡೂ ಸೇರಿ ಮರಕ್ಕರ್ ವ್ಯಾಪಾರಿಗಳು ತಮ್ಮ ಸಾಮರ್ಥ್ಯ ಮೀರಿ ಬೆಳೆದರು. ಒಂದೆಡೆ ಪೋರ್ಚುಗೀಸರು, ಇನ್ನೊಂದೆಡೆ ಮರಕರ್ ವ್ಯಾಪಾರಿಗಳು, ಕೇರಳದ ಸಮುದ್ರ ವ್ಯಾಪಾರದ ಮೇಲೆ ಹತೋಟಿ ಸಾಧಿಸಲು ಎರಡು ಗುಂಪುಗಳು ಮುಖಾಮುಖಿಯಾಗುವ ಪರಿಸ್ಥಿತಿ ಸೃಷ್ಟಿಯಾಯಿತು. ಝಾಮೋರಿನ್ನನ ವೈರಿ ಕೊಲತ್ತಿರಿ ಅರಸನ ಜೊತೆ ಪೋರ್ಚುಗೀಸರು ಸಂಧಿ ಮಾಡಿಕೊಂಡು ಕಲ್ಲಿಕೋಟೆಯ ಹತ್ತಿರ ತಮ್ಮ ಕೋಟೆಯೊಂದನ್ನು ಕಟ್ಟಿಕೊಳ್ಳಲು ಪ್ರಾರಂಭಿಸಿದರು. ಇದಕ್ಕೆ ಬದಲಾಗಿ ಕೊಲತ್ತಿರಿ ರಾಜ್ಯಕ್ಕೆ ಝಾಮೋರಿನ್ನನ ವಿರುದ್ಧದ ಯುದ್ಧದಲ್ಲಿ ಪೋರ್ಚುಗೀಸರು ಸಹಾಯ ಮಾಡಬೇಕಿತ್ತು.  ಈ ಬೆಳವಣಿಗೆಯಿಂದ ಝಾಮೋರಿನ್ ಮತ್ತು ಪೋರ್ಚುಗೀಸರ ಮಧ್ಯೆ ಮೊದಲೇ ಹೊಗೆಯಾಡುತ್ತಿದ್ದ ದ್ವೇಷ ಹೊತ್ತಿ ಉರಿಯಲು ಕಾರಣವಾಯ್ತು. ಮೊದಮೊದಲು ಸಣ್ಣಪುಟ್ಟಗೆ ಗುದ್ದಾಡಿ ಬರುತ್ತಿದ್ದ ಸಾಮೂದಿರಿ ಲಂಕೆಯ ಭುವನೇಕ ವಿಜಯಭಾನುವಿನ ಜೊತೆ ಸೇರಿ ಪೋರ್ಚುಗೀಸರ ವಿರುದ್ಧ ಯುದ್ಧ ಘೋಷಿಸಿದ. ೧೫೩೪ರಲ್ಲಿ ನಾಗಪಟ್ಟಣಂನಲ್ಲಿ ನಡೆದ ಕದನದಲ್ಲಿ ಪೋರ್ಚುಗೀಸರು ಸಾಮೂದಿರಯ ಸೈನ್ಯದೆದುರು ಭಾರೀ ನಷ್ಟವನುಭವಿಸಿದರು. ಈ ಕಾರಣದಿಂದ ಝಾಮೋರಿನ್ನನನ್ನು ಕಂಡರಾಗದ ವೆಟ್ಟದನಾಡಿನ ರಾಜ ಪೋರ್ಚುಗೀಸರನ್ನು ಕರೆದು ಚಲಿಯಾ ನದಿದಡದ ಚಲಿಯಾಂನಲ್ಲಿ ಕೋಟೆ ಕಟ್ಟಿಕೊಳ್ಳಲು ಅನುಮತಿ ನೀಡಿದ. ಪೋರ್ಚುಗೀಸರು ತನೂರಿನ ಅರಸನನ್ನು ಕ್ರೈಸ್ತಮತಕ್ಕೆ ಮತಾಂತರಿಸಿ ಡೋಮ್ ಜಾವೋ ಎಂದು ಹೆಸರಿಟ್ಟರು. ಬೆನ್ನಿಗೇ ವೆಟ್ಟದ ನಾಡಿನವನೂ ಮತಾಂತರಗೊಂಡ. ಮಲಬಾರಿನ ವ್ಯಾಪಾರದ ಮೇಲೆ ಝಾಮೋರಿನ್ನನ ಹಿಡಿತ ಸಡಿಲವಾಗುತ್ತಿತ್ತು. ೧೫೩೭ರಲ್ಲಿ ಪೊನ್ನಾನಿಯಲ್ಲಿ ಪೋರ್ಚುಗೀಸರೊಡನೆ ನಡೆದ ಯುದ್ಧದಲ್ಲಿ ಝಾಮೋರಿನ್ನನ ಸೈನ್ಯ ಸೋತರೂ ಮುಂದೆ ಮೂರನೇ ಕುಂಜಾಳಿ ಮರಕ್ಕರಿನ ಸಹಾಯದಿಂದ ೧೫೭೧ರಲ್ಲಿ ನಡೆದ ಇತಿಹಾಸ ಪ್ರಸಿದ್ಧ ಚಲಿಯಾಂ ಯುದ್ಧದಲ್ಲೂ ಪೋರ್ಚುಗೀಸರನ್ನು ಬಗ್ಗುಬಡಿದ. ಮಲಬಾರಿನಲ್ಲಿ ಅಧಿಪತ್ಯ ಸಾಧಿಸುವ ಪೋರ್ಚುಗೀಸರ ಕನಸು ಮತ್ತೊಮ್ಮೆ ಭಗ್ನವಾಯಿತು. ಕೇರಳದ ಆಸೆ ಬಿಟ್ಟು ಗೋವದತ್ತ ಮುಖಮಾಡಲು ಈ ಯುದ್ಧ ಅವರಿಗೆ ಮುಖ್ಯ ಕಾರಣವಾಯಿತು. ಪೋರ್ಚುಗೀಸರು ಬಿಟ್ಟುಹೋದ ಕಲ್ಲಿಕೋಟೆಯ ಹತ್ತಿರದ ವೆಲಿಯಂಕಲ್ಲಿನಲ್ಲಿ ಝಾಮೋರಿನ್ ಕಟ್ಟಿದ ಕೋಟೆ ಚಲಿಯಾಂ ಯುದ್ಧದಲ್ಲಿ ಅವನಿಗೆ ಸಹಾಯ ಮಾಡಿದ ಕುಂಜಾಳಿಯ ಹೆಸರಿನಿಂದ ಇಂದೂ ಕರೆಯಲ್ಪಡುತ್ತಿದೆ. ಇದೇ ಕೋಟೆಯಿಂದ ಊರಿಗೆ ಕಲ್ಲಿಕೋಟೆಯೆಂದು ಹೆಸರು ಬಂತೆಂಬುದು ಒಂದು ಊಹೆ.
ಚಾಲಿಯಾಂ ಸೀವಾಕ್
       ಪೋರ್ಚುಗೀಸರನ್ನು ಸೋಲಿಸಲು ಸಾಮೂದಿರಿಗೆ ತಾವೇ ಬೇಕು ಎಂಬ ಅಹಂಕಾರ ತಲೆಗೇರಿದ್ದೇ ಸೈ, ಸಾಮೂದಿರಿಯ ರಾಜ್ಯದಲ್ಲಿ ಕುಂಜಾಳಿ ಮರಕ್ಕರನ ನೇತೃತ್ವದಲ್ಲಿ ಮುಸ್ಲಿಮರ ಉಪಟಳ ಮೇರೆ ಮೀರಿತು. ಸಾಮೂದಿರಿ ಸಹಿಸುವಷ್ಟು ಸಹಿಸಿದ. ಸಾಮಾನ್ಯ ವರ್ತಕನಾಗಿ ಬಂದವ ಸ್ಥಳೀಯ ಮಾಪಿಳ್ಳೆಗಳ ಸಹಾಯದಿಂದ ಕೊಳತ್ತಿರಿಗಳನ್ನು ಪದಚ್ಯುತಗೊಳಿಸಿ ಕಣ್ಣೂರಿನಲ್ಲಿ ಸ್ವಂತ ಇಸ್ಲಾಮಿಕ್ ರಾಜ್ಯ ಸ್ಥಾಪನೆ ಮಾಡಿಕೊಂಡ ಅಲಿರಾಜನ ದೃಷ್ಟಾಂತ ಸಾಮೂದಿರಿಯ ಕಣ್ಣೆದುರೇ ಇತ್ತು. ಮೆಲ್ಲನೆ ಗೋವೆಯಲ್ಲಿದ್ದ ಪೋರ್ಚುಗೀಸರಿಗೆ ಒಂದು ಸಂದೇಶ ಕಳಿಸಿದ. ಪೊನ್ನಾನಿಯಲ್ಲಿ ಮಲಬಾರಿನ ಕ್ರಿಶ್ಚಿಯನ್ನರಿಗಾಗಿ ಒಂದು ಚರ್ಚ್ ಕಟ್ಟಿಕೊಡಿ ಎಂದು. ಆದರೆ ಉದ್ದೇಶವಿದ್ದುದು ಇನ್ನೊಂದು. ಇಬ್ಬರೂ ಕೈಜೋಡಿಸಿ ಮಾಪಿಳ್ಳೆಗಳನ್ನು ಕಂಡಕಂಡಲ್ಲಿ ಬಡಿಯತೊಡಗಿದರು. ೪೦೦ ಮಾಪಿಳ್ಳೆಗಳನ್ನು ಸೆರೆಹಿಡಿಯಲಾಯ್ತು. ಅವರ ನೇತೃತ್ವ ವಹಿಸಿದವರನ್ನು ಪೋರ್ಚುಗೀಸರು ಕೈಕಾಲು ಕತ್ತರಿಸಿ ಸಮುದ್ರಕ್ಕೆಸೆದರು. ಮಾಪಿಳ್ಳೆಗಳ ಉಪಟಳ ಒಂದು ಹಂತಕ್ಕೆ ಕಡಿಮೆಯಾಯ್ತು. ಎರಡನೇ ಶತ್ರುವನ್ನು ಮುಗಿಸಿದ ಸಾಮೂದಿರಿ ಮೊದಲನೇಯವರ ವಿರುದ್ಧವೂ ತಿರುಗಿಬಿದ್ದ. ನಿಧಾನವಾಗಿ ಡಚ್ಚರೊಂದಿಗೆ ಕೈಜೋಡಿಸಿ ಅವರನ್ನು ರಾಜ್ಯಕ್ಕೆ ಕರೆದ. ೧೬೦೪ರಲ್ಲಿ ಕಲ್ಲಿಕೋಟೆಯ ಜೊತೆ ಪೋರ್ಚುಗೀಸರನ್ನು ಓಡಿಸುವ ಒಪ್ಪಂದ ಮಾಡಿಕೊಂಡ ಡಚ್ಚರು ಅಲ್ಲೇ ತಮ್ಮ ವ್ಯಾಪಾರ ಪ್ರಾರಂಭಿಸಿದರು. ಪೋರ್ಚುಗೀಸರಿಗೂ ಡಚ್ಚರಿಗೂ ತಂದಿಟ್ಟ ಮೇಲೆ ಸಾಮೂದಿರಿ ಡಚ್ಚರಿಗೂ ಕೈಕೊಟ್ಟ. ೧೬೧೦ರಲ್ಲಿ ಬ್ರಿಟಿಷರತ್ತ ಕೈಚಾಚಿ ಅವರ ಸಹಾಯದಿಂದ ಇಬ್ಬರನ್ನೂ ಮಲಬಾರಿನಿಂದ ಓಡಿಸಿದ. ಆದರೆ ಸಾಮೂದಿರಿಗೆ ಇಂಗ್ಲಿಷರು ಡಚ್ಚರಷ್ಟು ನಂಬಿಕಸ್ಥರಲ್ಲ ಎನಿಸಿತೇನೋ. ಮತ್ತೆ ಡಚ್ಚರೊಡನೆ ಸ್ನೇಹ ಕುದುರಿಸಿಕೊಂಡ. ಆದರೆ ಈ ಆಟ ಹೆಚ್ಚು ಕಾಲ ನಡೆಯಲಿಲ್ಲ. ಮಲಬಾರಿನಲ್ಲಿ ಫ್ರೆಂಚರು ಪೈಪೋಟಿ ನೀಡಲಾರಂಭಿಸಿದಂತೆ ಡಚ್ಚರು ಇಂಗ್ಲೀಷರ ಜೊತೆ ಸೇರಿದರು.  ಸಾಮೂದಿರಿ ಏಕಾಂಗಿಯಾದ. 
       ೧೭೩೨ರಲ್ಲಿ ಪಾಲ್ಘಾಟ್ ಅಥವಾ ಪಾಲಕ್ಕಾಡಿನ ಆಳುಗರ ಆಹ್ವಾನದ ಮೇರೆ ಮೈಸೂರು ಪಡೆಗಳು ಮೊದಲ ಬಾರಿ ಕೇರಳದತ್ತ ದಂಡೆತ್ತಿ ಬಂದವು. ೧೭೩೫ ಹಾಗೂ ೧೭೩೭ರಲ್ಲಿ ಮತ್ತೆರಡು ಬಾರಿ ಸಾಮೂದಿರಿಗಳ ಕಲ್ಲಿಕೋಟೆ ಮೈಸೂರಿನ ದಾಳಿಗೊಳಗಾಯ್ತು. ೧೭೪೫ರಲ್ಲೊಮ್ಮೆ, ೧೭೫೬ರಲ್ಲಿ ಇನ್ನೊಮ್ಮೆ ಮೈಸೂರಿಗೂ ಕಲ್ಲಿಕೋಟೆಗೂ ಹೊಯ್ಕೈ ನಡೆಯಿತು. ಪದೇಪದೇ ನಡೆಯುತ್ತಿದ್ದ ದಾಳಿ ಹಾಗೂ ಲೂಟಿಯನ್ನು ತಡೆಯಲು ಸಾಮೂದಿರಿ ಮೈಸೂರಿನೊಂದಿಗೆ ಹನ್ನೆರಡು ಲಕ್ಷ ರೂಪಾಯಿಗಳ ಒಪ್ಪಂದ ಮಾಡಿಕೊಂಡ. ಆದರೆ ಕೊಡಲು ಅವನಲ್ಲಿ ಅಷ್ಟು ಹಣವಿರಬೇಕಿತ್ತಲ್ಲ! ಅದು ದಿಂಡಿಗಲ್ಲಿನ ಫೌಜದಾರ ಹೈದರ್ ಅಲಿ ಮೈಸೂರಿನ ಸಿಂಹಾಸನವನ್ನು ಆಕ್ರಮಿಸಿಕೊಂಡ ಕಾಲ. ಹೇಳಿಕೇಳಿ ಮಲಬಾರೆಂಬುದು ಆ ಕಾಲದ ಅಕ್ಷಯಭಂಡಾರ. ಇಡೀ ಭಾರತದ ಸಮುದ್ರವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ಕೇಂದ್ರ. ರಾಜ್ಯವಿಸ್ತಾರದ ತುರ್ತಿಗೆ ಬಿದ್ದ ಹೈದರಾಲಿ ಬಿಡಲಿಕ್ಕುಂಟೇ? ೧೭೬೬ರಲ್ಲಿ ತನ್ನ ಹನ್ನೆರಡು ಸಾವಿರ ಸೇನಾಬಲದೊಟ್ಟಿಗೆ ಮಂಗಳೂರಿನ ಕಡೆಯಿಂದ ಕಲ್ಲಿಕೋಟೆಯನ್ನು ಮುತ್ತಲು ಹೊರಟೇ ಬಿಟ್ಟ. ಕೇರಳದ ಏಕೈಕ ಮುಸ್ಲಿಂ ಅರಸು ಅರಸು ಕಣ್ಣೂರಿನ ಅಲಿರಾಜ ಹೈದರಾಲಿಯ ಸಹಾಯಕ್ಕೆ ಓಡೋಡಿ ಬಂದ. ಮುಸ್ಲಿಂ ಎಂಬ ಕಾರಣಕ್ಕೆ ಮಲಬಾರಿನ ಸಮಸ್ತ ಮುಸ್ಲಿಮರು ಮೈಸೂರಿನ ಸಹಾಯಕ್ಕೆ ಟೊಂಕಕಟ್ಟಿ ನಿಂತರು. ಹಿಂದೆ ಇವನ ಸ್ನೇಹ ಮಾಡಿ ಕೈಸುಟ್ಟುಕೊಂಡಿದ್ದ ಫ್ರೆಂಚು ಡಚ್ಚರು ಮತ್ತೆ ಕೈಜೋಡಿಸಲು ಹಿಂದೆಮುಂದೆ ನೋಡಿದರು. ಪರಿಣಾಮ ಇಡೀ ಉತ್ತರ ಮಲಬಾರ್ ಹೈದರನ ವಶವಾಗಿ ಮೈಸೂರಿನ ಸೈನ್ಯ ಕಲ್ಲೀಕೋಟೆಯನ್ನು ಪ್ರವೇಶಿಸಿತು. ತುರ್ಕನ ಕೈಲಿ ಸೋತ ಅವಮಾನ ತಾಳಲಾರದೇ ಸಾಮೂದಿರಿ ರಾಜ ತನ್ನ ಪರಿವಾರದವರನ್ನೆಲ್ಲ ಗುಟ್ಟಾಗಿ ತ್ರಾವೆಂಕೋರಿಗೆ ಕಳುಹಿಸಿ ಇತ್ತ ಮನಂಚಿರಾದಲ್ಲಿರುವ ತನ್ನ ಅರಮನೆಗೆ ಬೆಂಕಿಕೊಟ್ಟು ಅದರಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ. ಕೊಚ್ಚಿಯವರೆಗಿನ ಪೂರ್ತಿ ಮಲಬಾರು ಹೈದರನ ರಾಜ್ಯಕ್ಕೆ ಸೇರಿತು. 
       ಕ್ಯಾಲಿಕಟ್‌ನ ರೈಲ್ವೇ ಸ್ಟೇಷನ್ನಿನಲ್ಲಿ ಇಳಿದರೆ ಎಡಕ್ಕೊಂದು ಒಯೊಟ್ಟಿ ರೋಡ್ ಎಂಬ ರಸ್ತೆ ದೊರೆಯುತ್ತದೆ. ಅಲ್ಲೇ ಕಾಲು ಕಿಲೋಮೀಟರ್ ಮುಂದುವರೆದು ಬಲಕ್ಕೆ ತಿರುಗಿದರೆ ಸಿಗುವುದೇ ಕಲ್ಲಿಕೋಟೆಯ ಹೆಸರಾಂತ, ಇತಿಹಾಸ ಪ್ರಸಿದ್ಧ ಎಸ್.ಎಮ್.ಸ್ಟ್ರೀಟ್ ಅಥವಾ ಸ್ವೀಟ್ ಮೇಕರ್ಸ್ ಸ್ಟ್ರೀಟ್(ಮಿಠಾಯಿ ತಿರುವು). ಅದು ಶಾಪಿಂಗ್ ಮಾಡುವವರ ಪಾಲಿಗೆ ಭುವಿಗಿಳಿದು ಬಂದ ಸ್ವರ್ಗ. ಆ ರಸ್ತೆ ಶುರುವಾಗುವಲ್ಲಿ ಎಡಕ್ಕೆ ಕಂಚುಗಲ್ಲಿ. ಒಂದಿಡೀ ರಸ್ತೆಯಲ್ಲಿ ಬರೀ ಕಂಚು, ಹಿತ್ತಾಳೆ ಸಾಮಾನಿನ ಅಂಗಡಿಗಳೇ. ಚೂರು ಮುಂದುವರೆದರೆ ಕೋರ್ಟ್ ರೋಡ್. ಅಲ್ಲಿ ಬರೀ ಚಪ್ಪಲಿ, ಶೂಗಳ ಅಂಗಡಿಯದ್ದೇ ಕಾರುಬಾರು. ಒಂದೆಡೆ ಬಗೆಬಗೆಯ ಕ್ಯಾಲಿಕಟ್ ಹಲ್ವಾ, ಸಿಹಿತಿಂಡಿಗಳ ರಾಶಿರಾಶಿ ಅಂಗಡಿಗಳು.  ಕ್ಯಾಲಿಕಟ್ ಇಡೀ ದಕ್ಷಿಣ ಭಾರತದಲ್ಲಿ ಅತಿದೊಡ್ಡ ಚರ್ಮದ ವಸ್ತುಗಳು, ಚಪ್ಪಲಿ ಹಾಗೂ ಬಟ್ಟೆಗಳ ತಯಾರಕ. ಎರಡು ಸಾವಿರ ವರ್ಷಗಳ ಹಿಂದೇ ಕೇರಳದಲ್ಲಿ ಬಟ್ಟೆಗಳಿಂದ ಮಾಡಲಾಗುವ ಕಾಗದದ ಬಳಕೆಯಿತ್ತು. ಇದು ಇಲ್ಲಿಂದಲೇ ಹಲವು ದೇಶಗಳಿಗೆ ರಫ್ತಾಗುತ್ತಿತ್ತು. ಕ್ಯಾಲಿಕಟ್ನಲ್ಲಿ ತಯಾರಾಗುವ ಕಾರಣದಿಂದ ಅವುಗಳಿಗೆ ಕ್ಯಾಲಿಕೋ ಎಂಬ ಹೆಸರಾಯ್ತು. ಅಂದಮೇಲೆ ಬಟ್ಟೆಅಂಗಡಿಗಳಿಗೆ ಬರವುಂಟೇ! ಸುತ್ತಮುತ್ತ ಕಣ್ಣುಹಾಯಿಸಿದಷ್ಟು ದೂರಕ್ಕೆ ಕಾಣುವುದು ವಸ್ತ್ರದಂಗಡಿಗಳೇ. ಒಂದು ಕಡೆ ಅಂಜುಮನ್ ಬಾಗ್ ಎಂಬ ಪಾರ್ಸಿ ಸಮುದಾಯದ ಅಗ್ನಿ ದೇಗುಲ(fire temple). ಕೇರಳದಲ್ಲಿರುವ ಪಾರ್ಸಿಗಳ ಪೂಜಾಸ್ಥಳ ಇದೊಂದೇ. ಬೀಚ್ ರೋಡಿನಲ್ಲಿರುವ Auto Motto ಎಂಬ ಆಟೋಮೊಬೈಲ್ ಅಂಗಡಿಯ ಮಾಲೀಕ ದಾರಿಯುಸ್ ಮಾರ್ಶಲ್ ಎಂಬ ಪಾರ್ಸಿ ಈ ದೇಗುಲದ ಉಸ್ತುವಾರಿ ನೋಡಿಕೊಳ್ಳುತ್ತಾನೆ. ಸದ್ಯಕ್ಕೆ ಕ್ಯಾಲಿಕಟ್ಟಿನಲ್ಲಿರುವ ಪಾರ್ಸಿ ಕುಟುಂಬ ಇವರದ್ದು ಮಾತ್ರ. ಈ ದೇಗುಲದ ಸ್ವಲ್ಪ ದೂರದಲ್ಲೇ ಪಾರ್ಸಿಗಳ ಕಬ್ರಸ್ಥಾನವೂ ಇದೆ. ಮಂಗಳೂರಿನಿಂದ ತ್ರಿವೇಂದ್ರಮ್ಮಿನ ತನಕ ಯಾವ ಪಾರ್ಸಿ ಸತ್ತರೂ ಆತನನ್ನು ಹೂಳಲು ಎಸ್.ಎಮ್.ಸ್ಟ್ರೀಟಿನ ಈ ಸ್ಥಳಕ್ಕೇ ತರಬೇಕು. ೧೯೩೭ರಲ್ಲಿ ಸ್ಥಾಪನೆಯಾದ ಕೇರಳದ ಅತಿ ಹಳೆಯ ಚಿತ್ರಮಂದಿರ ರಾಧಾ ಥೇಟರ್ ಕೂಡ ಇದೇ ರಸ್ತೆಯಲ್ಲಿದೆ. ಎಸ್.ಎಮ್.ಸ್ಟ್ರೀಟ್ ಕೊನೆಗೊಳ್ಳುವ ಸ್ಥಳ ಮನಂಚಿರಾ ಸ್ಕ್ವೇರ್. ಶಾಪಿಂಗ್ ಮಾಡಲಿ ಬಿಡಲಿ. ಎಸ್.ಎಮ್.ಸ್ಟ್ರೀಟ್ನಲ್ಲಿ ಹಾಗೇ ಒಂದು ವಾಕ್ ಹೋಗುವ ಥ್ರಿಲ್ ಇದೆಯಲ್ಲ, ಅದನ್ನು ಕಟ್ಟಿಕೊಡಲು ಪದಗಳು ಬೇಡ. ಎದುರಿಗೆ ಪ್ರವಾಸಿಗಳು ಭೇಟಿನೀಡಲೇ ಬೇಕಾದ ಮನಂಚಿರಾ ಮೈದಾನ. ಕ್ರೌನ್ ಥಿಯೇಟರ್, ಓಪನ್ ಏರ್ ಥಿಯೇಟರ್, ಸಂಗೀತ ಕಾರಂಜಿ, ಪಾರ್ಕ್, ಲೈಬ್ರರಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ಅಲ್ಲಿ ಏನುಂಟು ಏನಿಲ್ಲ ಎಂಬ ಪ್ರಶ್ನೆಯೇ ಇಲ್ಲ. ಸಾಮೂದಿರಿ ತನ್ನ ಅರಮನೆಗೆ ಬೆಂಕಿಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಎಂದೆನಲ್ಲ. ಆ ಅರಮನೆಯಿದ್ದುದು ಇದೇ ಸ್ಥಳದಲ್ಲಂತೆ. ಆದರೆ ಅದರ ಯಾವ ಕುರುಹೂ ಈಗ ಲಭ್ಯವಿಲ್ಲ. ಮೈದಾನದ ಎಡಕ್ಕೆ ಮನಂಚಿರಾ ಕೆರೆ. ಹದಿನಾಲ್ಕನೇ ಶತಮಾನದಲ್ಲಿ ಮಾನದೇವನ್ ವಿಕ್ರಮ ಸಾಮೂದಿರಿ ಅರಮನೆಯನ್ನು ಕಟ್ಟಿಸುವಾಗ ಪಕ್ಕದಲ್ಲಿ ಸ್ನಾನಕ್ಕಾಗಿ ದೊಡ್ಡ ಕೆರಯೊಂದನ್ನೂ ನಿರ್ಮಿಸಿದ್ದ. ಕೆರೆಯನ್ನು ತೋಡಿದಾಗ ಸಿಕ್ಕ ಮಣ್ಣಿನಿಂದ ಪೂರ್ವಕ್ಕೆ ಹಾಗೂ ಪಶ್ಚಿಮಕ್ಕೆ ಎರಡು ಅರಮನೆಗಳನ್ನು ನಿರ್ಮಿಸಿದ್ದ ಎಂದೂ ಹೇಳುತ್ತಾರೆ. ಅರಮನೆ ನಾಶವಾದರೂ ಆ ಕೆರೆ ಇಂದೂ ಉಳಿದುಕೊಂಡಿದೆ. ಮಾನದೇವನ ಹೆಸರಿನಿಂದ ಈ ಕೆರೆ ಜೊತೆಗೆ ಸುತ್ತಲಿನ ಸ್ಥಳ ಮಾನನ್ ಚಿರ(ಕೆರೆ) ಅಥವಾ ಮನಂಚಿರಾ ಎಂದು ಕರೆಯಲ್ಪಟ್ಟಿತು. ಈಗ ಕ್ಯಾಲಿಕಟ್ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಾಗುವುದು ಇದೇ ಕೆರೆಯಿಂದ. 
ಮಿಠಾಯಿ ತಿರುವು

ಬಗೆಬಗೆಯ ಕ್ಯಾಲಿಕಟ್ ಹಲ್ವಾಗಳು
ಎಸ್ಸೆಮ್ ಸ್ಟ್ರೀಟಿನ ಸಂಜೆ ನೋಟ
ಮನಂಚಿರಾ ಸ್ಕ್ವೇರ್
ಮನಂಚಿರಾ ಕೆರೆ
       ೧೫೦೧ರಲ್ಲಿ ಕಲ್ಲಿಕೋಟೆಗೆ ಭೇಟಿನೀಡಿದ್ದ ಪೋರ್ಚುಗೀಸ್ ಪ್ರವಾಸಿಗನೊಬ್ಬ ಹೇಳುವಂತೆ ಕೋಟೆಗಳಿಲ್ಲದ ಈ ಅರಮನೆಯಲ್ಲಿ ಚಾಕರಿಗಿದ್ದವರು ಬರೋಬ್ಬರಿ ಏಳು ಸಾವಿರ ಜನರಂತೆ. ಅಂದರೆ ಆ ಅರಮನೆ ಅದೆಷ್ಟು ದೊಡ್ಡದಿರಬಹುದು?!?!?! ಹಿಂದೂಗಳು, ಮಹಮ್ಮದೀಯರು, ಕ್ರಿಸ್ತರು, ಯಹೂದಿಗಳು ಹೀಗೆ ನಾಲ್ಕೂ ಸಮುದಾಯದವರಿಗೆ ಪ್ರಾರ್ಥನೆ ನಡೆಸಲು ಅರಮನೆಯೊಳಗೆ ನಾಲ್ಕು ಹಜಾರಗಳನ್ನು ಬಿಟ್ಟುಕೊಡಲಾಗಿತ್ತಂತೆ. ಇನ್ನು ಅರಮನೆಯ ಗೋಡೆಗಳಿಗೆ ಚಿನ್ನದ ತಗಡುಗಳನ್ನು ಹೊಡೆಯಲಾಗಿತ್ತೆಂದು ಇತಿಹಾಸಕಾರರೆಲ್ಲ ಮೂಗಿನ ಮೇಲೆ ಬೆರಳಿಟ್ಟಿದ್ದು ದೊಡ್ಡ ವಿಷಯವೇನಲ್ಲ. ಯಾಕೆಂದರೆ ಅದು ಚಿನ್ನಕ್ಕಿಂತ ಸಾಂಬಾರಪದಾರ್ಥಗಳೇ ಹೆಚ್ಚು ಬೆಲೆಬಾಳುತ್ತಿದ್ದ ಕಾಲ. ಮುಂದೆ ಬಂದ ರಾಜರ್ಯಾರೂ ವಿಕ್ರಮಪುರಂ ಅರಮನೆಯನ್ನು ಮರುನಿರ್ಮಿಸುವ ಮನಸ್ಸು ಮಾಡಲಿಲ್ಲ. ದುಡ್ಡಿನ ಅಭಾವದಿಂದಲೋ ಅಥವಾ ಅಪಶಕುನವೆಂಬ ಕಾರಣಕ್ಕೋ! ಈ ಅರಮನೆ ನಾಶವಾದಮೇಲೆ ಮೀನ್ಚಂಡದಲ್ಲಿರುವ ತಿರುವಚ್ಚಿರ ಕೋವಿಲಕಂ ಸಾಮೂದಿರಿಗಳ ವಾಸಸ್ಥಳವಾಯ್ತು. 
       ತಿರುಗಿ ಹೈದರನ ಕಡೆ ಬರೋಣ.  ಕಣ್ಣೂರಿನ ಅಲಿರಾಜನ ಜೊತೆ ಸ್ನೇಹ ಸಾಧಿಸಿದ ಹೈದರ್ ಆತನನ್ನು ಸಾಮೂದಿರಿಯ ಬಳಿ ಕಳುಹಿಸಿದ. ಮುಸ್ಲಿಂ ಎಂಬ ಕಾರಣಕ್ಕೆ ಕಲ್ಲೀಕೊಟೆಯ ಶ್ರೀಮಂತ ಮುಸ್ಲಿಂ ವ್ಯಾಪಾರಿಗಳು, ಮಾಪಿಳ್ಳೆಗಳು ಹೈದರನ ಕಡೆ ವಾಲಿದರು. ಈಬಾರಿ ಹೈದರ್ ಬೇಡಿಕೆಯಿಟ್ಟಿದ್ದು ಒಂದು ಕೋಟಿ ಚಿನ್ನದ ನಾಣ್ಯಗಳಿಗೆ. ಅಷ್ಟು ಸೊತ್ತು ಸಾಮೂದಿರಿಯ ಹತ್ತಿರ ಇರಲೇಬೇಕೆಂದು ಹೈದರನ ನಂಬಿಕೆಯಾಗಿತ್ತು. ಸಾಮೂದಿರಿ ಕವಡೆ ಕಾಸು ಕೊಡಲೂ ನಿರಾಕರಿಸಿದ. ಕೋಟೆಗಳಿಲ್ಲದ ಬಯಲು ಪ್ರದೇಶದ ಅರಮನೆ ಶತ್ರುಗಳಿಗೆ ಸುಲಭದ ತುತ್ತಾಗಿತ್ತು. ಸಾಮೂದಿರಿ ತನ್ನ ಸಂಪತ್ತನ್ನೆಲ್ಲ ಪರಿವಾರದವರ ಜೊತೆ ತ್ರಾವೆಂಕೂರಿಗೆ ರವಾನಿಸಿದ. ಕೆ.ವಿ.ಕೃಷ್ಣ ಅಯ್ಯರ್ ಹೇಳುವಂತೆ ಹೀಗೆ ಕಲ್ಲೀಕೋಟೆಯಿಂದ ತ್ರಾವೆಂಕೂರಿಗೆ ಸಾಗಿಸಲ್ಪಟ್ಟ ಸಂಪತ್ತಿನ ಮೌಲ್ಯ ಹಲವು ಕೋಟಿ ರೂಪಾಯಿಗಳಾಗಿತ್ತು. ತಿರುವನಂತಪುರದ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಿಕ್ಕ ನಿಧಿಯಲ್ಲಿ ಕಲ್ಲಿಕೋಟೆಯ ಪಾಲೂ ಇರಬಹುದು.  The sword of Tipu Sultan ಪುಸ್ತಕವನ್ನು ಬರೆದ ಗಿಡ್ವಾಣಿ ಇನ್ನೂ ಒಂದು ಸ್ವಾರಸ್ಯಕರ ವಿಚಾರವನ್ನು ಹಂಚಿಕೊಂಡಿದ್ದಾರೆ. ಆಯಾಜ್ ಖಾನ್ ಎಂಬ ಹೈದರನ ಬಂಟನ ಕುರಿತು ಹಿಂದೊಮ್ಮೆ ಲೇಖನದಲ್ಲಿ ಬರೆದಿದ್ದೆ. ಈ ಆಯಾಜ್ ಖಾನ್ ಮೂಲತಃ ಕಲ್ಲಿಕೋಟೆಯವ. ಆಶಿಲಾ ಬಾನು ಎಂಬ ಆಸ್ಥಾನವೇಶ್ಯೆಯ ಮಗ. ಸಾಮೂದಿರಿಯ ಅರಮನೆಯ ರಕ್ಷಣಾದಳದ ಅಧಿಪತಿಯಾಗಿದ್ದವ. ಇವ ಸಾಮೂದಿರಿಯ ಮಗನೇ ಎಂದು ಗಿಡ್ವಾಣಿ ತಲೆಯ ಮೇಲೆ ಹೊಡೆದಂತೆ ಬರೆದಿದ್ದಾರಾದರೂ ಅದಕ್ಕೆ ಸಬೂತು ಒದಗಿಸುವ ಗೋಜಿಗೆ ಹೋಗಲಿಲ್ಲವೆನ್ನುವುದು ಬೇರೆ ಪ್ರಶ್ನೆ. ಈತ ರಾತ್ರೋರಾತ್ರಿ ಹೈದರನ ಪಕ್ಷ ಸೇರಿದ. ಅರಮನೆಯ ರಕ್ಷಣಾ ವ್ಯವಸ್ಥೆ ಕುಸಿದು ಬಿತ್ತು. ಹೈದರನ ಕೈಲಿ ಒತ್ತೆಯಾಳಾಗಿ ಸಿಗುವುದನ್ನು ಬಿಟ್ಟರೆ ಸಾಮೂದಿರಿಗೆ ಬೇರೆ ದಾರಿಯಿದ್ದದ್ದು ಆತ್ಮಹತ್ಯೆಯೊಂದೇ ಆಗಿತ್ತು. ೬೦೦ ವರ್ಷದ ಸಾಮೂದಿರಿಗಳ ಆಳ್ವಿಕೆ ಅಲ್ಲಿಗೆ ಕೊನೆಯಾಯ್ತು. ಹಾಗೆಂದು ಹೈದರನೇನು ಬಹುಕಾಲ ಬಾಳಲಿಲ್ಲ. ೧೭೮೨ರಲ್ಲಿ ಸ್ವಂತದೂರಿಂದ ದೂರದಲ್ಲಿ ಕ್ಯಾನ್ಸರಿನಿಂದ ನರಳಿ ನರಳಿ ಸತ್ತ. ಆರು ಶತಮಾನ ಮಲಬಾರಿನ  ಏಕಮೇವಾದ್ವಿತೀಯ ಅಧಿಪತಿಗಳಾಗಿದ್ದ ಸಾಮೂದಿರಿಗಳೆದುರು ಮೈಸೂರಿನ ಆಳ್ವಿಕೆ ಕೇರಳದಲ್ಲಿ ಮೂವತ್ತು ವರ್ಷಗಳನ್ನೂ ಕಾಣಲಿಲ್ಲ. ಆದರೆ ಆ ಮೂವತ್ತು ವರ್ಷಗಳಲ್ಲಿ ಕೇರಳದ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಇನ್ನು ರಿಪೇರಿಯಾಗದಷ್ಟು ಹದಗೆಟ್ಟವು ಎಂಬುದಂತೂ ಸತ್ಯ.  
ಕೊಟ್ಟಾರತ್ತಿಲ್ ಶುಂಗೂನಿ ಮೆನನ್ ಕೇರಳ ಕಂಡ ಹೆಸರಾಂತ ಕವಿ, ವಿದ್ವಾಂಸ ಹಾಗೂ ಇತಿಹಾಸಕಾರ. ಆತನ ’ಐತಿಹ್ಯಮಾಲಾ’ ಕೇರಳದ ಇತಿಹಾಸದ ಬಗ್ಗೆ ತಿಳಿಸುವ ವಿಶಿಷ್ಟ ಗ್ರಂಥ. ಹೆಸರೇ ಹೇಳುವಂತೆ ಇದೊಂದು ಕೇರಳದ ಬಗೆಗಿನ ಐತಿಹ್ಯಗಳನ್ನು ಕಟ್ಟಿಕೊಡುವ ಪ್ರಯತ್ನ. ಇತಿಹಾಸವೆನ್ನುವುದಕ್ಕಿಂತಲೂ ಇದು ಪುರಾಣಗಳಂತೆ ಐತಿಹಾಸಿಕ ಘಟನೆಗಳನ್ನು ಒಂದಕ್ಕಿಂತ ಒಂದು ರೋಚಕ ಫ್ಯಾಂಟಸಿ ಕಥೆಗಳಡಿಯಲ್ಲಿ ವ್ಯಾಖಾನಿಸುತ್ತ ಸಾಗುತ್ತದೆ. ಎಂಟು ಭಾಗಗಳು ಸುಮಾರು ನೂರಿಪ್ಪತ್ತು ಆಶ್ವಾಸಗಳಿರುವ ಇದು ನಿಜಕ್ಕೂ ಬ್ರಹದ್ಗ್ರಂಥವೇ ಸೈ.  ಇದನ್ನು ಬರೆದು ಮುಗಿಸಲು ಶುಂಗುನ್ನಿ ಸುಮಾರು ಇಪ್ಪತ್ತೈದು ವರ್ಷಗಳನ್ನು ತೆಗೆದುಕೊಂಡನಂತೆ. ಮುಂದೆ ’ಭಾಷಾಪೋಷಿಣಿ’ ಎಂಬ ಮಲಯಾಳಂ ಮಾಸಪತ್ರಿಕೆಯೊಂದು ಇದನ್ನು ಧಾರಾವಾಹಿಗಳ ರೂಪದಲ್ಲಿ ಹೊರತಂದಿತು. ಯಾವ ಹ್ಯಾರಿಪಾಟರಿಗೂ ಕಮ್ಮಿಯಿಲ್ಲದಂತೆ ಈ ಸರಣಿ ಕೇರಳದಲ್ಲಿ ಎಷ್ಟು ಪ್ರಸಿದ್ಧಿಗೊಂಡಿತ್ತೆಂದರೆ ೧೯೯೧ರಲ್ಲಿ ಇದು ಮತ್ತೊಮ್ಮೆ ಪುಸ್ತಕರೂಪದಲ್ಲಿ ಬಂದಾಗ ಸುಮಾರು ಒಂದೂವರೆ ಲಕ್ಷ ಪ್ರತಿಗಳು ಬಿಕರಿಗೊಂಡಿದ್ದವು. ಅದಾಗಿ ಇಪ್ಪತ್ತೆರಡು ಬಾರಿ ಮರುಮುದ್ರಣಗೊಂಡರೂ ಇದರ ಜನಪ್ರಿಯತೆ ಕೊಂಚವೂ ಮುಕ್ಕಾಗಿಲ್ಲ.  ಈ ಪುಸ್ತಕದಲ್ಲಿ ಬರುವ ಸಾಮೂದಿರಿಯ ಬಗೆಗಿನ ಹಲವು ಆಖ್ಯಾಯಿಕೆಗಳಲ್ಲಿ ಒಂದು ಕಥೆ ಹೀಗಿದೆ.
ಶುಂಗುನಿ ಮೆನನ್ 
ಐತಿಹ್ಯಮಾಲಾ


       ಸಾಮೂದಿರಿ ರಾಜನಿಗೆ ಪಟ್ಟಕ್ಕೆ ಬಂದಾಗಿನಿಂದ ಬಲಭುಜದಲ್ಲಿ ನೋವು. ಅದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ ಸಾಗಿತೇ ವಿನಃ ಕಡಿಮೆಯಾಗುವ ಲಕ್ಷಣಗಳ್ಯಾವವೂ ಕಾಣಿಸಲಿಲ್ಲ. ಆಸ್ಥಾನ ವೈದ್ಯರಿಂದ ಅಳಲೆಕಾಯಿ ಪಂಡಿತರವರೆಗೆ, ತಾಂತ್ರಿಕರಿಂದ ಮಾಂತ್ರಿಕರವರೆಗೆ ಎಲ್ಲರೂ ತಮ್ಮತಮ್ಮ ವಿದ್ಯೆಯನ್ನು ಪ್ರಯೋಗಿಸಿ ನೋಡಿದರೂ ಯಾವುದೇ ಫಲಿತಾಂಶ ಮಾತ್ರ ಕಾಣಿಸುತ್ತಿರಲಿಲ್ಲ. ಇದೊಂದು ಗುಣಪಡಿಸಲಾಗದ ತೀರವ್ಯಾಧಿ ಎಂದು ಅಲ್ಲಿದ್ದ ವೈದ್ಯರೆಲ್ಲ ಘೋಷಿಸಿ ಕೈತೊಳೆದುಕೊಂಡರು. ಹೀಗಿಪ್ಪಾಗ ಒಂದು ದಿನ ಸಾಮೂದಿರಿಯ ಆಸ್ಥಾನದಲ್ಲಿ ಯುವಕನೊಬ್ಬ ಪ್ರತ್ಯಕ್ಷನಾಗಿ ಅರಸನ ನೋವನ್ನು ತಾನು ಗುಣಪಡಿಸುವುದಾಗಿ ಹೇಳಿಕೊಂಡ. ರಾಜವೈದ್ಯರೇ ಗುಣಪಡಿಸಲಾಗದ ಕಾಯಿಲೆಗೆ ಇವನ್ಯಾವ ಮದ್ದು ಹೇಳುತ್ತಾನೆಂದು ಕೇಳುವ ಕುತೂಹಲ ಆಸ್ಥಾನಿಕರಿಗೆ. ಕಾಯಿಲೆಯ ಪೂರ್ವಾಪರಗಳನ್ನೆಲ್ಲ ತಿಳಿದುಕೊಂಡವ ’ಅಯ್ಯೋ ಇಷ್ಟೇನಾ, ಇದಕ್ಕೊಂದು ತುಂಬಾ ಸರಳ ವಿಧಾನವಿದೆ. ಯಾವಾಗಲೂ ಬಲಭುಜದ ಮೇಲೆ ಒದ್ದೆ ವಸ್ತ್ರ ಹಾಕಿಕೊಂಡರಾಯ್ತು. ಅಷ್ಟೆ. ನೋವು ಗುಣವಾಗದಿದ್ರೆ ಹೇಳಿ!’ ಅಂದನಂತೆ. ಸಾಮೂದಿಗೆ ವಿಚಿತ್ರವೆನಿಸಿತು. ದೊಡ್ಡದೊಡ್ಡ ಚಿಕಿತ್ಸೆಗಳೇ ಪರಿಣಾಮ ಬೀರದಿರುವಾಗ ’ಹೆಗಲ ಮೇಲೆ ಟವಲ್’ ಅದೇನು ಮ್ಯಾಜಿಕ್ ಮಾಡತ್ತಪ್ಪಾ ಅಂತ. ಆದರೆ ಅವನಿಗೂ ಬೇರೆ ದಾರಿ ಇರಲಿಲ್ಲ. ನೋವು ಗುಣವಾಗುವುದಾದರೆ ಇದನ್ನೂ ಒಂದು ಮಾಡಿದರಾಯ್ತು ಎಂದುಕೊಂಡು ಹೆಗಲ ಮೇಲೆ ಒದ್ದೆ ಟವಲ್ ಹಾಕಿಕೊಂಡ್ರೆ ಏನಾಶ್ಚರ್ಯ ಅಂತೀರಿ, ದಿನದಿಂದ ದಿನಕ್ಕೆ ನೋವು ಕಡಿಮೆಯಾಗತೊಡಗಿತು. ಸಾಮೂದಿರಿ ಖುಷಿಯಿಂದ ಕುಣಿದಾಡತೊಡಗಿದ. ಇದಾಗಿ ಒಂದೆರಡು ದಿನಗಳಲ್ಲೇ ದೇಶಾಂತರ ಹೋಗಿದ್ದ ದೀವಾನ ತಿರುಗಿ ಬಂದನಂತೆ. ರಾಜ ದೀವಾನನಿಗೆ ನಡೆದ ಕಥೆಯನ್ನೆಲ್ಲ ಹೇಳಿ ಆ ಯುವಕನಿಗೆ ಸನ್ಮಾನ ಸಮಾರಂಭವನ್ನೇರ್ಪಡಿಸಲು ಸೂಚಿಸಿದ. ಸಾಮೂದಿರಿ ಹೇಳಿದ್ದೆಲ್ಲ ಕೇಳಿದ ದಿವಾನ ತಲೆತಲೆ ಚಚ್ಚಿಕೊಂಡ. ಏನೋ ನೆನಪಾದವನಂತೆ ಅಲ್ಲಿಂದ ಓಡಿದವ ಕಲ್ಲಿಕೋಟೆಯ ಮೂಲೆಮೂಲೆಗಳನ್ನೆಲ್ಲ ಹುಡುಕತೊಡಗಿದನಂತೆ. ಆತ ಏನು ಹುಡುಕುತ್ತಿದ್ದನೆಂದು ಯಾರಿಗೂ ಗೊತ್ತಾಗಲಿಲ್ಲ. ಸಂಜೆ ಕಪ್ಪೇರುತ್ತಿತ್ತು. ನಿರಾಸೆ ಹೊತ್ತ ಮುಖದೊಂದಿಗೆ ದಿವಾನ ಅರಮನೆಯ ದಾರಿ ಹಿಡಿದ. ದಾರಿ ಮಧ್ಯದಲ್ಲಿ ಕಲ್ಲೀಕೋಟೆಯ ಅಂಗಡಿ ಸ್ಥಳ ಅಥವಾ ಮಾರ್ಕೆಟ್ ಏರಿಯಾ. ದಿವಾನ ಎಲ್ಲರನ್ನೂ ಗಮನಿಸುತ್ತ ಸಾಗುತ್ತಿದ್ದ. ಒಂದು ಮೂಲೆಯಲ್ಲಿ ಹೆಂಗಸೊಬ್ಬಳು ಸುಮ್ಮನೇ ನಿಂತಿದ್ದು ಅವನ ಕಣ್ಣಿಗೆ ಬಿತ್ತು. ಅನುಮಾನವೇ ಇಲ್ಲ. ಇದು ಅವಳೇ! ಓಡೋಡಿ ಹೋದವನೇ ಅವಳಿಗೆ ಕೈಮುಗಿದು ’ತಾಯಿ, ನಿಮಗೇನೋ ತುಂಬ ಮುಖ್ಯವಾದ ವಿಷಯ ಹೇಳಲಿಕ್ಕಿದೆ,  ಮಾತಾಡಲು ಕೆಲ ಸಮಯ ಮೀಸಲಿಡಬಹುದೇ’ ಎಂದನಂತೆ. ಅರಮನೆಯ ದಿವಾನನ ಜೊತೆ ಮಾತಾಡಲು ಯಾರು ತಾನೇ ನಿರಾಕರಿಸುತ್ತಾರೆ? ಖಂಡಿತ ನಿಸ್ಸಂಕೋಚವಾಗಿ ಮಾತಾಡಿ ಎಂದಳವಳು. ಏನೋ ಹೇಳಲು ಹೊರಟವ ಸ್ವಲ್ಪ ತಡೆದ. ’ಅಯ್ಯೋ ನನ್ನ ರಾಜಮುದ್ರೆಯನ್ನು ಅರಮನೆಯಲ್ಲೇ ಬಿಟ್ಟು ಬಂದೆ. ಅದು ಯಾರ ಕೈಗಾದರೂ ಸಿಕ್ಕಿದರೆ ಗಂಡಾತರವಾಗುತ್ತದೆ. ಅದನ್ನು ಹೀಗೆ ಹೋಗಿ, ಹಾಗೆ ತಂದೆ. ಅಲ್ಲಿಯವರೆಗೂ ಕಾಯಬಹುದೇ. ನಾನು ನಿಮ್ಮೊಂದಿಗೆ ತುಂಬ ತುರ್ತಿನ ವಿಚಾರ ಮಾತಾಡಲಿಕ್ಕಿದೆ. ಇದು ರಾಜ್ಯದ ಅಳಿವು ಉಳಿವಿನ ಪ್ರಶ್ನೆ’ ಎಂದ. ಹೆಂಗಸು ಆಗಬಹುದೆಂದು ತಲೆಯಾಡಿಸಿದಳು. ದಿವಾನನಿಗ್ಯಾಕೋ ಸಮಾಧಾನವಾಗಲಿಲ್ಲ. ನಾನು ರಾಜಮುದ್ರೆಯನ್ನು ತೆಗೆದುಕೊಂಡು ಇಲ್ಲಿ ಬರುವವರೆಗೂ ಕಾಯುತ್ತ ನಿಲ್ಲುವುದಾಗಿ ಆಣೆ ಮಾಡಿ ಎಂದು ಗೋಗರೆದ. ನೀನು ಬರುವವರೆಗೂ ನಾನೆಲ್ಲೂ ಹೋಗದೇ ಇಲ್ಲೇ ಇರುತ್ತೇನೆ ಎಂದು ಹೆಂಗಸು ಭಾಷೆ ಕೊಟ್ಟಳು. ದಿವಾನ ಮತ್ತೆ ಅರಮನೆಯತ್ತ ಓಡಿದ. ದಿವಾನನ ಬರುವಿಕೆಯನ್ನೇ ಎದುರುನೋಡುತ್ತಿದ್ದ ಸಾಮೂದಿರಿಗೆ ವಿಚಿತ್ರವೆನಿಸಿತು. ಓಡಿ ಬಂದವನನ್ನು ತಡೆದು ನಿಲ್ಲಿಸಿ ಏನಾಯ್ತೆಂದು ಕೇಳಿದ. ಅಯ್ಯೋ ನೀವೆಂಥ ದೊಡ್ಡ ತಪ್ಪು ಮಾಡಿಬಿಟ್ಟಿರಿ ಎಂದು ಮಹಾಸ್ವಾಮಿ ಎಂದು ದಿವಾನ ಗೋಳಾಡತೊಡಗಿದ. ಸಾಮೂದಿರಿಗೊಂದೂ ಅರ್ಥವಾಗಲಿಲ್ಲ. ದಿವಾನ ಬಿಡಿಸಿ ಹೇಳತೊಡಗಿದ. ನಿಮ್ಮ ಬಲಭುಜದ ನೋವಿಗೆ ಕಾರಣವಾಗಿದ್ದು ಅಲ್ಲಿ ನೆಲೆನಿಂತ ಸಾಕ್ಷಾತ್ ಮಹಾಲಕ್ಷ್ಮಿಯ ಕಾರಣದಿಂದ. ಐಶ್ವರ್ಯದ ದೇವಿ ನಿಮ್ಮ ಭುಜದ ಮೇಲೆ ತಾಂಡವವಾಡುತ್ತಿರುವುದರಿಂದಲೇ ಈ ರಾಜ್ಯ ಇಷ್ಟೊಂದು ಸಂಪದ್ಭರಿತವೂ ಸುಭಿಕ್ಷವೂ ಆಗಿದೆ. ನಿಮ್ಮ ಸಂಪತ್ತು ಹೆಚ್ಚಿದಂತೆ ನಿಮ್ಮ ಭುಜದ ನೋವೂ ಹೆಚ್ಚಿದೆ. ಈಗ ಒದ್ದೆಬಟ್ಟೆಯನ್ನು ಧರಿಸಿದ್ದರಿಂದ ಅಪಶಕುನವಾಗಿ ಲಕ್ಷ್ಮಿ ಅರಮನೆಯನ್ನು ತೊರೆದು ಹೊರನಡೆದಿದ್ದಾಳೆ. ನಿಮ್ಮ ಕೈಯಾರೆ ದುರದೃಷ್ಟವನ್ನು ಆಹ್ವಾನಿಸಿಕೊಂಡಿದ್ದೀರೀ.  ಅವಳನ್ನು ಕಷ್ಟಪಟ್ಟು ತಡೆದು ನಿಲ್ಲಿಸಿದ್ದೇನೆ. ಅವಳು ರಾಜ್ಯ ಬಿಟ್ಟು ಹೋಗದಂತೆ ಮಾಡುವುದಕ್ಕೆ ಇನ್ನು ಇರುವುದು ಒಂದೇ ದಾರಿ ಎಂದವನೇ ಸಾಮೂದಿರಿಯ ಉತ್ತರಕ್ಕೂ ಕಾಯದೆ ತನ್ನ ಮನೆಕಡೆ ತೆರಳಿದ. ಸಾಮೂದಿರಿಗೆ ಅವನ ಮಾತುಗಳಿಂದ ಹೆಚ್ಚಿನದೇನೂ ಹೊಳೆಯದೇ ಹೋದ ದಾರಿಯನ್ನೇ ನೋಡುತ್ತ ನಿಂತ. ಇತ್ತ ದಿವಾನ ಸೀದಾ ತನ್ನ ಮನೆಗೆ ತೆರಳಿದವನೇ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ. ಅರಮನೆಯ ಪಂಡಿತರಿಗೆ ದಿವಾನನ ಕೃತ್ಯದ ಅರಿವಾಯ್ತು. ಲಕ್ಷ್ಮಿದೇವಿ ಕಲ್ಲೀಕೋಟೆಯನ್ನು ಬಿಟ್ಟು ತೆರಳದಂತೆ ಮಾಡಲು ಉಪಾಯ ಹೂಡಿದ ದಿವಾನ ತಾನು ಬರುವವರೆಗೂ ಸ್ಥಳಬಿಟ್ಟು ಕದಲದಂತೆ ಅವಳಿಂದ ಮಾತು ಪಡೆದಿದ್ದ.  ದಿವಾನ ಬರುವುದನ್ನು ಎದುರು ನೋಡಿ ಮಹಾಲಕ್ಷ್ಮೀ ಕಲ್ಲೀಕೋಟೆಯ ಬಜಾರಿನಲ್ಲಿ ಕಾಯುತ್ತ ನಿಂತಳು. ಆ ಸ್ಥಳವೇ ಈಗಿನ ಎಸ್.ಎಮ್.ಸ್ಟ್ರೀಟ್.  ಈ ಮಾರ್ಕೇಟಿನ ಮಧ್ಯದಲ್ಲಿ ಲಕ್ಷ್ಮಿ ನೆಲೆನಿಂತ ಸ್ಥಳದಲ್ಲಿ ಚಿಕ್ಕದೊಂದು ಭಗವತಿಯ ಮಂದಿರವಿದೆ. ದೇವಿಯ ಕೃಪೆಯಿರಬೇಕು. ಶತಶತಮಾನಗಳಿಂದ ಎಸ್ಸೆಂ ಗಲ್ಲಿಯ ಬಜಾರಿನ ವೈಭವಕ್ಕೆ ಭಂಗಬಂದಿಲ್ಲ. ಸಂಜೆಯ ಹೊತ್ತು ಆ ಸ್ಥಳದಲ್ಲಿ ಅಡ್ಡಾಡುವುದೇ ಕಣ್ಣಿಗೊಂದು ಹಬ್ಬ. ಅಲ್ಲಿ ಯಾವತ್ತೂ ಸಂಪತ್ತು, ಸಮೃದ್ಧಿ ತುಂಬಿತುಳುಕುತ್ತಿರುತ್ತದೆ. ಹೆಗಲ ಮೇಲೆ ಒದ್ದೆ ವಸ್ತ್ರ ಅಶುಭವೆಂದು ನಮ್ಮಲ್ಲಿನ ನಂಬಿಕೆ. ಅದೂ ಬಲಭುಜದ ಮೇಲೆ ಒದ್ದೆವಸ್ತ್ರ ಹೊದೆಯುವುದು, ಉಪವೀತವನ್ನು ಬಲಭಾಗದಲ್ಲಿ ಧರಿಸುವುದು ಅಪರಕರ್ಮಗಳಲ್ಲಿ ಮಾತ್ರ. ಇದಾಗಿ ಕೆಲ ತಿಂಗಳುಗಳು ಕಳೆಯುವುದರಲ್ಲಿ ಹೈದರನ ದಾಳಿಯಾಗಿತ್ತು. ಕಲ್ಲಿಕೋಟೆ ಸರ್ವನಾಶವಾಯಿತು. ವಿಜಯನಗರದ ಸಂಪತ್ತನ್ನು ಬಹಮನಿಯವರು ಲೂಟಿ ಹೊಡೆದಂತೆ ಕಲ್ಲಿಕೋಟೆಯನ್ನು ಮೈಸೂರಿನವರು ಸೂರೆಹೊಡೆದು ಸಂಪತ್ತನ್ನೆಲ್ಲ ಆನೆಗಳ ಮೇಲೆ ತುಂಬಿಕೊಂಡು ಹೋದರು. ವಿಜಯನಗರವೇನೋ ಹಾಳುಹಂಪೆಯಾಯಿತು, ಆದರೆ ಕಲ್ಲೀಕೋಟೆಯ ಖ್ಯಾತಿ ಶತಮಾನಗಳುರುಳಿದರೂ ಕೊಂಚವೂ ಮುಕ್ಕಾಗಲಿಲ್ಲ.

Sunday, July 22, 2018

ಬೆಳಗೊಳಕ್ಕೆ ಬಂದ ಚಂದ್ರಗುಪ್ತ

       ಭದ್ರಬಾಹು ಮುನಿಗಳು ತಮ್ಮ ಶಿಷ್ಯ ಚಂದ್ರಗುಪ್ತನೊಡನೆ ಶ್ರವಣಬೆಳಗೊಳಕ್ಕೆ ಬಂದು ನೆಲೆಸಿ ತಪಸ್ಸನ್ನಾಚರಿಸಿದ್ದು ಕರ್ನಾಟಕದ ಇತಿಹಾಸದಲ್ಲೇ ಮಹತ್ವಪೂರ್ಣ ಘಟನೆ. ಈ ಮೂಲಕ ಜೈನ ಧರ್ಮವು ಕರ್ನಾಟಕಕ್ಕೆ ಬಂದ ಧರ್ಮಗಳಲ್ಲಿಯೇ ಅತಿ ಪ್ರಾಚೀನವಾದುದು ಎಂಬುದು ಮಾತ್ರವಲ್ಲ, ದಕ್ಷಿಣ ಭಾರತದಲ್ಲಿ ಮೊದಲ ಬಾರಿ ಜೈನ ಧರ್ಮ ಕಾಲಿಟ್ಟಿದ್ದು, ಪ್ರಸಾರಗೊಂಡಿದ್ದು ಶ್ರವಣಬೆಳಗೊಳದ ನೆಲದಲ್ಲಿ ಎಂಬುದು ವಿಶೇಷ. ಈ ಘಟನೆ ನಡೆದಿದ್ದು ಕ್ರಿ.ಪೂ ೨೯೮ರಲ್ಲೆಂದು ಹಾಸನ ಜಿಲ್ಲಾ ಗೆಜೆಟಿಯರ್ ತಿಳಿಸುತ್ತದೆ. ಜೈನರ ಪರಂಪರೆ, ಸಾಹಿತ್ಯ ಹಾಗೂ ಶಾಸನಗಳು ತಿಳಿಸುವಂತೆ ಶ್ರುತಕೇವಲಿಗಳಲ್ಲಿ ಕೊನೆಯವರಾದ ಭದ್ರಬಾಹು ಮುನಿಗಳು ತಮ್ಮ ತ್ರಿಕಾಲಜ್ಞಾನದಿಂದ ಮುಂದೆ ಉತ್ತರ ಭಾರತದಲ್ಲಿ ಬರಬಹುದಾದ ಹನ್ನೆರಡು ವರ್ಷಗಳ ಮಹಾಕ್ಷಾಮದ ಬಗ್ಗೆ ತಿಳಿದುಕೊಂಡು ಉತ್ತರಭಾರತದ ಬೇರೆಬೇರೆ ಭಾಗಗಳ ಜೈನಾನುಯಾಯಿಗಳೊಂದಿಗೆ ಉಜ್ಜಯಿನಿಯನ್ನು ಬಿಟ್ಟು ಕರ್ನಾಟಕದ ಹಾಸನ ಜಿಲ್ಲೆಯ ಕಟವಪ್ರ(ಕಳ್ವಪ್ಪು) ಎಂಬ ಸ್ಥಾನಕ್ಕೆ ಬಂದು ನಿಂತರು.  
       ತೀರ್ಥಂಕರರ ಬೋಧನೆಯನ್ನು ಕಿವಿಯಾರೆ ನೇರವಾಗಿ ಕೇಳಿದವರನ್ನು ಶ್ರುತಕೇವಲಿ  ಎನ್ನುತ್ತಾರೆ.  ದಿಗಂಬರ ಜೈನರ ಐತಿಹ್ಯದ ಪ್ರಕಾರ ಗೋವರ್ಧನ ಮಹಾಮುನಿ, ಆಚಾರ್ಯ ವಿಷ್ಣು, ನಂದಿಮಿತ್ರ, ಅಪರಾಜಿತ ಹಾಗೂ ಭದ್ರಬಾಹುಗಳು ಪಂಚಶ್ರುತಕೇವಲಿಗಳು. ಅಲ್ಲದೇ ಭದ್ರಬಾಹುಗಳು ಅವಿಭಜಿತ ಜೈನಸಂಘದ ಕೊನೆಯ ಆಚಾರ್ಯರು ಕೂಡ. ಈಗಿನ ಬಾಂಗ್ಲಾದೇಶದ ಪುಂಡ್ರವರ್ಧನ ಎಂಬಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಇವರ ಜನನವಾಯ್ತು. ಚಿಕ್ಕಂದಿನಲ್ಲೇ ತಾವು ಶ್ರುತಕೇವಲಿಗಳಾಗುವುದನ್ನು ಅರಿತಿದ್ದ ಭದ್ರಬಾಹುಗಳು ಸಂನ್ಯಾಸ ಸ್ವೀಕರಿಸಿ ಆಚಾರ್ಯ ಪದವಿಯನ್ನು ಹೊಂದಿದರಂತೆ. ಒಮ್ಮೆ ಕಾರ್ತಿಕ ಪೌರ್ಣಿಮೆಯಂದು ಚಂದ್ರಗುಪ್ತನಿಗೆ ಸೂರ್ಯಾಸ್ತಮಾನ, ತೆಂಗಿನ ಮರ ಮುರಿದು ಬೀಳುವುದು, ಕಪ್ಪಾನೆಗಳ ಹೊಡೆದಾಟ, ಸಿಂಹಾಸನದ ಮೇಲೆ ಕೂತ ಮಂಗ, ತುಂಡಾದ ಚಂದ್ರ, ಒಣಗಿದ ಕೆರೆ, ಸ್ವರ್ಣಪಾತ್ರೆಯಲ್ಲಿನ ಪಾಯಸ ತಿನ್ನುತ್ತಿರುವ ನಾಯಿ, ಕತ್ತೆಯ ಮೇಲೆ ಕೂತ ಕ್ಷತ್ರಿಯ ಯೋಧ, ಆಕಾಶದಿಂದಿಳಿದು ಬಂದ ರಥ, ಹುಣ್ಣಿಮೆಯ ರಾತ್ರಿಯಲ್ಲಿ ಮಿಂಚುಹುಳಗಳು, ಊರನ್ನಾವರಿಸಿದ ಹೊಗೆ,  ಗದ್ದೆಯೂಳುತ್ತಿರುವ ಎತ್ತುಗಳು, ಹಂಸಗಳನ್ನು ಸರೋವರದಿಂದ ಓಡಿಸುತ್ತಿರುವ ಕಪಿಗಳು, ಸಮುದ್ರಕ್ಕೆ ಬೀಳುತ್ತಿರುವ ಕರು, ಮುದಿ ಎತ್ತಿನ ಮೇಲೆ ಕೂತ ನರಿ , ಹನ್ನೆರಡು ಹೆಡೆಯ ಸರ್ಪ ಹೀಗೆ ಹದಿನಾರು ಬಗೆಯ ಸ್ವಪ್ನಗಳುಂಟಾದವಂತೆ. ಗಾಬರಿಗೊಂಡ ಚಂದ್ರಗುಪ್ತ ಈ ಕನಸುಗಳ ಮರ್ಮವೇನೆಂದು ತಿಳಿಸಲು ಆಚಾರ್ಯರಾದ ಭದ್ರಬಾಹುಗಳನ್ನು ಕೇಳಿಕೊಂಡ. ರಾಜ್ಯದಲ್ಲಿ ಹನ್ನೆರಡು ವರ್ಷಗಳ ಭೀಕರ ಕ್ಷಾಮ ಬರುವುದಾಗಿಯೂ, ಧರ್ಮ ಹಾಗು ಸತ್ತೆ ಅಪಾಯಕ್ಕೆ ಸಿಲುಕುವುದಾಗಿಯೂ ಅರಿತ ಭದ್ರಬಾಹುಗಳು ತಮ್ಮೆಲ್ಲ ಅನುಯಾಯಿಗಳನ್ನು ಕೂಡಿಕೊಂಡು ಉತ್ತರವನ್ನು ತೊರೆದು ದಕ್ಷಿಣದ ಕಟವಪ್ರದತ್ತ ಪ್ರಯಾಣ ಬೆಳೆಸಿದರಂತೆ.ಚಂದ್ರರಾಜಾಕಥಾವಳಿಯ ಪ್ರಕಾರ ಈರೀತಿ ಭದ್ರಬಾಹುಮುನಿಗಳ ಸಂಗಡ ಬೆಳಗೊಳಕ್ಕೆ ಬಂದ ಅನುಯಾಯಿಗಳ ಸಂಖ್ಯೆ ಬರೋಬ್ಬರಿ ಹನ್ನೆರಡು ಸಾವಿರ.  ಕಟವಪ್ರ ಅಥವಾ ಕಳ್ವಪ್ಪುವಿಗೆ ಕಪ್ಪಾದ ಗುಡ್ಡ, ಸಮಾಧಿಬೆಟ್ಟವೆಂಬೆಲ್ಲ ವಿವರಣೆಗಳಿವೆ. ಶಾಸನಗಳಲ್ಲಿ ಕಟಪ, ಕಟವಪ್ರ, ವೆಳ್ಗೊಳವೇತ್ಯಾದಿಯಾಗಿ ಕರೆಯಲ್ಪಟ್ಟ ಪ್ರದೇಶ ಸುಮಾರು ೧೯ನೇ ಶತಮಾನದಲ್ಲಿ ಶ್ರವಣಬೆಳಗೊಳವೆಂದು ಹೆಸರಾಯ್ತು. ಚಾವುಂಡರಾಯ ಮಸ್ತಕಾಭಿಷೇಕ ನೆರವೇರಿಸುವ ಸಂದರ್ಭದಲ್ಲಿ ಗುಳ್ಳೇಕಾಯಿ ಅಜ್ಜಿ ತನ್ನ ಸೋರೆಬುರುಡೆಯಿಂದ ಅಭಿಷೇಕ ಮಾಡಿದ ಹಾಲು ಬಾಹುಬಲಿಯನ್ನು ತೋಯಿಸಿ ದೊಡ್ಡಬೆಟ್ಟದಿಂದ ಕೆಳಗಿಳಿದು ಬಂದು ಬೆಳ್ಳಗಿನ ಪುಷ್ಕರಣಿಯಾಯ್ತೆಂದೂ ಅದರಿಂದಾಗಿಯೇ ಈ ಊರಿಗೆ ಬೆಳಗೊಳವೆಂಬ ಹೆಸರು ಬಂತೆಂದೂ ಇರುವ ಕತೆಯನ್ನು ನೀವು ಕೇಳಿಯೇ ಇರುತ್ತೀರಿ. ಆದರೆ ಬೆಳಗೊಳದ ಇತಿಹಾಸದುದ್ದಕ್ಕೂ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು ಎದುರಿಗಿನ ಚಿಕ್ಕಬೆಟ್ಟವೇ. ಕಟವಪ್ರ, ಕಳ್ವಪ್ಪುಗಳೇ ಮುಂತಾಗಿ ಹೆಸರು ಬರಲೂ ಈ ಬೆಟ್ಟವೇ ಕಾರಣ. ಇಲ್ಲಿರುವ ಎರಡು ಬೆಟ್ಟಗಳಲ್ಲಿ ಬಾಹುಬಲಿ ಇರುವುದನ್ನು ದೂಡ್ಡಬೆಟ್ಟ ಅಥವಾ ಇಂದ್ರಗಿರಿಯೆಂದೂ, ಎದುರಿಗಿದ್ದುದನ್ನು ಚಿಕ್ಕಬೆಟ್ಟ ಅಥವಾ ಚಂದ್ರಗಿರಿಯೆಂದೂ ಕರೆಯುತ್ತಾರೆ. ಈ ಬೆಟ್ಟಕ್ಕೆ ಚಂದ್ರಗಿರಿ ಎಂದು ಹೆಸರು ಬಂದಿದ್ದು ಚಂದ್ರಗುಪ್ತನಿಂದ. ಆತ ತಪಸ್ಸಿನಿಂದ ದೇಹತ್ಯಾಗ ಮಾಡಿದ ಸ್ಥಳದಲ್ಲಿ ನಿರ್ಮಿಸಿದ ಚಂದ್ರಗುಪ್ತ ಬಸದಿ, ಇಲ್ಲಿ ಕಂಡುಬರುವ ಭದ್ರಬಾಹುಮುನಿಗಳ ಪಾದಚಿಹ್ನೆ ಹಾಗೂ ತಪಸ್ಸು ಮಾಡಿದ ಗುಹೆ ಪ್ರಚಲಿತದಲ್ಲಿರುವ ವಾದಕ್ಕೆ ಪ್ರತ್ಯಕ್ಷಸಾಕ್ಷಿಗಳಾಗಿವೆ. ಭದ್ರಬಾಹುಗಳು ತಮ್ಮ ಅವಸಾನಕಾಲವನ್ನು ತಿಳಿದು ತಮ್ಮ ಇಬ್ಬರು ಶಿಷ್ಯರಾದ ಪ್ರಭಾಚಂದ್ರ ಹಾಗೂ ಚಂದ್ರಗುಪ್ತರನ್ನು ತಮ್ಮ ಬಳಿ ಇರಿಸಿಕೊಂಡು ಉಳಿದವರನ್ನು ರಾಮಿಲಾಚಾರ್ಯ ಮತ್ತು ವಿಶಾಖಾಚಾರ್ಯರ ನೇತೃತ್ವದಲ್ಲಿ ತಮಿಳ್ನಾಡಿನ ಚೋಳ ಮತ್ತು ಪಾಂಡ್ಯ ರಾಜ್ಯಗಳಿಗೆ ಕಳಿಸಿಕೊಟ್ಟರು. ಹೀಗೆ ಭದ್ರಬಾಹುಗಳ ಮೂಲಕವೇ ಜೈನಧರ್ಮ ತಮಿಳುನಾಡನ್ನೂ ಪ್ರವೇಶಿಸಿತು. ಇಂಥ ಐತಿಹಾಸಿಕ ಮಹತ್ವವುಳ್ಳ ಘಟನೆಗೆ ಸಾವಿರಾರು ಜೈನ ಕಥನಗಳು, ಶಾಸನಗಳು ಹಾಗೂ ದಂತಕಥೆಗಳು ಬೆಳಕು ಚೆಲ್ಲುತ್ತವೆ. ಇಷ್ಟಾದರೂ ಬೆಳಗೊಳಕ್ಕೆ ಆಗಮಿಸಿದ ಚಂದ್ರಗುಪ್ತ ಮತ್ತು ಶ್ರುತಕೇವಲಿ ಭದ್ರಬಾಹುಮುನಿಗಳು ಯಾರು ಎಂಬ ವಿಷಯದ ಕುರಿತು ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ.  
ಚಂದ್ರಗುಪ್ತ ಬಸದಿ

    
ಎದುರಿಗೆ ಕಾಣುವ ಇಂದ್ರಗಿರಿ


ಹೋದಲ್ಲೆಲ್ಲ ಇದೇ ಕೆಲಸ

ಚಂದ್ರಗಿರಿಯ ಬಸದಿಯೊಂದರಲ್ಲಿ

ಚಂದ್ರಗಿರಿಯ ಸೂರ್ಯಾಸ್ತ

ಭದ್ರಬಾಹು ಶಾಸನ
  ಶ್ರವಣಬೆಳಗೊಳದಲ್ಲಿ ಸಿಕ್ಕ ಮುಖ್ಯ ಶಾಸನಗಳ ಸಂಖ್ಯೆ ಬರೋಬ್ಬರಿ ೭೫೩. ಜೈನಕಾಶಿಯೊಟ್ಟಿಗೆ ಅದನ್ನು ಭಾರತದ ಶಾಸನಕಾಶಿಯೆಂದು ಕರೆದರೂ ಅದು ಅತಿಶಯದ ಮಾತಲ್ಲ. ಶ್ರವಣಬೆಳಗೊಳದ ಶಾಸನ ಸಂಖ್ಯೆ ೧(ಕ್ರಿ.ಶ ೬೦೦), ೩೧(ಕ್ರಿ.ಶ ೬೫೦), ೬೪(ಕ್ರಿ.ಶ ೧೧೬೩), ೬೭(ಕ್ರಿ.ಶ  ೧೧೨೯), ೨೫೮(ಕ್ರಿ.ಶ ೧೪೨೧) ಮತ್ತು ಶ್ರೀರಂಗಪಟ್ಟಣದ ಎರಡು ಶಾಸನಗಳು ಭದ್ರಬಾಹು-ಚಂದ್ರಗುಪ್ತರು ಈ ಸ್ಥಳಕ್ಕೆ ಬಂದ ವಿಷಯವನ್ನು ತಿಳಿಸುತ್ತವೆ. ಆದರೆ ಯಾವ ಶಾಸನಗಳೂ ಇವರಿಬ್ಬರು ಯಾರು ಎನ್ನುವುದನ್ನು ಅರಹುವುದಿಲ್ಲ. ಹರಿಸೇನನ ಬೃಹತ್ಕಥಾಕೋಶದ ಪ್ರಕಾರ ೧೨ ವರ್ಷಗಳ ಕ್ಷಾಮದ ಕಾರಣದಿಂದ ತನ್ನ ಶಿಷ್ಯರಿಗೆ ದಕ್ಷಿಣಕ್ಕೆ ತೆರಳುವಂತೆ ಭದ್ರಬಾಹು ಆಜ್ಞಾಪಿಸುತ್ತಾನೆ. ಅರಸು ಚಂದ್ರಗುಪ್ತ ಜೈನದೀಕ್ಷೆ ಪಡೆದು ವಿಶಾಖಾಚಾರಿ ಎಂಬ ಹೆಸರು ಪಡೆದು ಕರ್ನಾಟಕಕ್ಕೆ ತೆರಳಿ ೧೨ ವರ್ಷಗಳ ನಂತರ ಪುನಃ ತನ್ನ ದೇಶಕ್ಕೆ ಸೇರಿದ. ರತ್ನನಂದಿಯ ಭದ್ರಬಾಹುಚರಿತೆಯಲ್ಲೂ ಅಜಮಾಸು ಇದೇ ಕಥೆಯಿದೆ.  ಚಿದಾನಂದನ ಮುನಿವಂಶಾಭ್ಯುದಯದ ಪ್ರಕಾರ ಕಳ್ವಪ್ಪುವಿನಲ್ಲಿ ನೆಲೆಸಿದ ಭದ್ರಬಾಹು ಹುಲಿಯ ಬಾಯಿಗೆ ತುತ್ತಾದ. ಆಗ ಅಲ್ಲಿಗೆ ಬಂದ ಚಂದ್ರಗುಪ್ತ ಜೈನದೀಕ್ಷೆ ಪಡೆದು ಭದ್ರಬಾಹುವಿನ ಪಾದಗಳನ್ನು ಪೂಜಿಸತೊಡಗಿದ. ಇನ್ನು ದೇವಚಂದ್ರನ ರಾಜಾವಳಿ ಈ ಕುರಿತಾಗಿ ಹೇಳುವ ಇತ್ತೀಚಿನ ಕಾವ್ಯ. ದಕ್ಷಿಣಾಪಥಕ್ಕೆ ಹೊರಟಿದ್ದ ಭದ್ರಬಾಹುವಿನ ಸಂಗಡ ಪಾಟಲೀಪುತ್ರದ ರಾಜ ಚಂದ್ರಗುಪ್ತನೂ ಕೂಡಿಕೊಂಡು ಕಳ್ವಪ್ಪುವನ್ನು ತಲುಪಿದ. ಅವನ ಮೊಮ್ಮಗ ಇಲ್ಲಿಗೆ ಬಂದು ಚಂದ್ರಗುಪ್ತನ ಸ್ಮರಣಾರ್ಥ ಕೆಲ ಬಸದಿಗಳನ್ನೂ, ಬೆಳಗೊಳ ಎಂಬ ಪಟ್ಟಣವನ್ನೂ ಕಟ್ಟಿಸಿದ.  ಪಾಟಲೀಪುತ್ರದ ಅರಸ ಎಂಬ ಈ ರಾಜಾವಳಿಯ ಕಥೆಯನ್ನು ಆಧಾರವಾಗಿಟ್ಟುಕೊಂಡೇ ಈ ಚಂದ್ರಗುಪ್ತನು ಮೌರ್ಯರ ಚಂದ್ರಗುಪ್ತನೇ ಆಗಿರಬೇಕೆಂಬ ಊಹೆ ಬೆಳೆಯಲು ಕಾರಣವಾಯಿತು. 
       ಜೈನಸಂಪ್ರದಾಯದ ದಿಗಂಬರ ಐತಿಹ್ಯದ ಪ್ರಕಾರ ಮಹಾವೀರನ ನಿರ್ವಾಣದ ೧೬೨ನೇ ವರ್ಷದಲ್ಲಿ ಅಂದರೆ ಕ್ರಿ.ಪೂ ೩೬೫ರಲ್ಲಿ ಪಂಚಮಶೃತಕೇವಲಿ ಭದ್ರಬಾಹು ಜಿನೈಕ್ಯಗೊಂಡ. ಶ್ವೇತಾಂಬರ ಐತಿಹ್ಯದ ಪ್ರಕಾರ ೧೭೦ನೇ ವರ್ಷದಲ್ಲಿ ಕಾಲವಾದ. ಮಹಾವಂಶವು ಮಹಾವೀರನ ನಿರ್ವಾಣದ ೧೫೫ನೇ ವರ್ಷದಲ್ಲಿ ಚಂದ್ರಗುಪ್ತ ಪಟ್ಟಾಭಿಷಕ್ತನಾದನೆಂದು ತಿಳಿಸುತ್ತದೆ. ಮೌರ್ಯರ ಚಂದ್ರಗುಪ್ತನ ಆಳ್ವಿಕೆಯ ಕ್ರಿ.ಪೂ ೩೦೦ರ ಆಚೀಚೆಗೂ ಭದ್ರಬಾಹುವಿನ ಕೊನೆಗಾಲಕ್ಕೂ ಸುಮಾರು ೬೦ ವರ್ಷಗಳ ವ್ಯತ್ಯಾಸವಿರುವುದರಿಂದ ಭದ್ರಬಾಹುವಿನ ಶಿಷ್ಯನಾದ ಚಂದ್ರಗುಪ್ತ ಮೌರ್ಯಚಂದ್ರಗುಪ್ತನಲ್ಲ. ಬದಲಾಗಿ ಉಜ್ಜೈನಿಯ ಚಂದ್ರಗುಪ್ತ. ಜೊತೆಗೆ ಮೌರ್ಯ ಚಂದ್ರಗುಪ್ತನ ಆಳ್ವಿಕೆಯಲ್ಲಿ ಸಾಮ್ರಾಜ್ಯದಲ್ಲಿ ಕ್ಷಾಮ ತಲೆದೋರಿದ ಪ್ರಸ್ತಾಪವಿಲ್ಲವೆಂದೂ, ಮೆಗಸ್ತನಿಸನ ಬರವಣಿಗೆಗಳಲ್ಲಿ ಚಂದ್ರಗುಪ್ತ ಶ್ರಮಣನಾದ ಉಲ್ಲೇಖವಿಲ್ಲದಿರುವುದರಿಂದ ಮೌರ್ಯ ಚಂದ್ರಗುಪ್ತ ಭದ್ರಬಾಹುವಿನ ಶಿಷ್ಯನಲ್ಲವೆಂದು ಎಂ.ಗೋವಿಂದ ಪೈಗಳು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಬೌದ್ಧರ ಆರ್ಯಮಂಜುಶ್ರೀ ಮೂಲಕಲ್ಪದಲ್ಲಿ ಬರುವ ಮೌರ್ಯವಂಶಾವಳಿಯ ವಿವರಣೆಯಲ್ಲಿ ಚಂದ್ರಗುಪ್ತ ಸಿಡುಬು ಕಾಯಿಲೆಯಿಂದ ಮೃತಪಟ್ಟ ಕಥೆಯಿರುವುದರಿಂದ ಶ್ರವಣಬೆಳಗೊಳಕ್ಕೆ ಬಂದಿದ್ದು ಮೌರ್ಯವಂಶಸ್ಥಾಪಕನಲ್ಲವೆನ್ನುವುದು ನಿಸ್ಸಂದೇಹ. ಆದರೆ ಆತ ಮೌರ್ಯ ಚಂದ್ರಗುಪ್ತನೇ ಎಂದು ಬಿ.ಎಲ್.ರೈಸ್, ವಿ.ಎ.ಸ್ಮಿತ್‌ರಂಥ ವಿದೇಶಿ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನಾರಾಯಣಾಚಾರ್ಯರ ಚಾಣಕ್ಯ ಕಾದಂಬರಿಯಲ್ಲಿಯೂ ಮೌರ್ಯ ಅರಸು ಬೆಳಗೊಳಕ್ಕೆ ಬಂದ ಕಥನವಿದೆ. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ಚಾಣಕ್ಯ-ಚಂದ್ರಗುಪ್ತರೇ ಮುಂದೆ ಏಳನೇಯ ಜನ್ಮದಲ್ಲಿ ವಿಷ್ಣುವರ್ಧನ-ರಾಮಾನುಜಾಚಾರ್ಯರಾಗಿ ಹುಟ್ಟುವರೆಂದು ತಮ್ಮ ಮತಕ್ಕೆ ತಕ್ಕಂತೆ ಹೊಸಕಥೆಯೊಂದನ್ನು ಸೃಜಿಸಿಕೊಂಡು ವೈಷ್ಣವಭಕ್ತಿಯನ್ನು ಮೆರೆದಿದ್ದಾರೆ.  ಡಾ. ಶಾಮಾಶಾಸ್ತ್ರಿ, ಹುಲ್ಲೂರು ಶ್ರೀನಿವಾಸಜೋಯಿಸರಂಥವರ ಪ್ರಕಾರ ಬೆಳಗೊಳಕ್ಕೆ ಬಂದವನು ಗುಪ್ತರ ಎರಡನೇ ಚಂದ್ರಗುಪ್ತ. ಕದಂಬರಿಗೂ ಗುಪ್ತರಿಗೂ ವೈವಾಹಿಕ ಸಬಂಧವಿತ್ತು. (ಕಾಕುಸ್ಥವರ್ಮನ ಮಗಳ ವಿವಾಹ ಚಂದ್ರಗುಪ್ತ ವಿಕ್ರಮಾದಿತ್ಯನ ಜೊತೆ ಜರುಗಿತ್ತು. ಕಾಕುಸ್ಥವರ್ಮನು ತನ್ನ ನಾಲ್ಕು ಹೆಣ್ಣುಮಕ್ಕಳನ್ನು ಆಗಿನ ಸುಪ್ರಸಿದ್ಧ ರಾಜವಂಶಗಳಾದ ಗಂಗರ ಇಮ್ಮಡಿ ಮಾಧವ, ಗುಪ್ತರ ಎರಡನೇ ಚಂದ್ರಗುಪ್ತ, ವಾಕಾಟಕರ ನರೇಂದ್ರಸೇನ, ಆಳುಪರ ಪಶುಪತಿಗೆ ಮದುವೆಮಾಡಿಕೊಟ್ಟಿದ್ದ). ಆದ್ದರಿಂದ ಗುಪ್ತರ ಎರಡನೇ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂದು ಎಂಬುದು ಅವರ ಅಂಬೋಣ. ಆದರೆ ಶೃತಕೇವಲಿ ಭದ್ರಬಾಹುವಿಗೂ ವಿಕ್ರಮಾದಿತ್ಯನಿಗೂ ಐನೂರು ವರ್ಷಕ್ಕೂ ಮಿಕ್ಕಿ ಅಂತರವಿರುವುದರಿಂದ ಅವರಿಬ್ಬರೂ ಸಮಕಾಲೀನರಾಗಿರಲು ಸಾಧ್ಯವೇ ಇಲ್ಲ.
       ಇನ್ನು ಬೆಳಗೊಳಕ್ಕೆ ಬಂದವನು ಅಶೋಕನ ಮೊಮ್ಮಗ ಸಂಪ್ರತಿ ಚಂದ್ರಗುಪ್ತನೆಂಬ ವಾದವೂ ಇದೆ. ಶತಾವಧಾನಿ ಆರ್. ಗಣೇಶರೂ ಇದನ್ನು ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಇದಕ್ಕೂ ಯಾವುದೇ ಆಧಾರಗಳಿಲ್ಲ. ಅಶೋಕನ ನಂತರ ಸಂಪ್ರತಿ ಎಂಬ ರಾಜ ಮೌರ್ಯ ಕುಲದಲ್ಲಿ ಇದ್ದಿರಬಹುದಾದರೂ ಆತ ಸಂಪ್ರತಿ ಚಂದ್ರಗುಪ್ತನೆಂದು ಕರೆಯಲ್ಪಟ್ಟ ಬಗ್ಗೆ ಯಾವುದೇ ಪುರಾಣಗಳಲ್ಲಿ ಹೇಳಲ್ಪಟ್ಟಿಲ್ಲ. ಚಂದ್ರಗುಪ್ತನ ಮೌರ್ಯನ ಐತಿಹ್ಯವೇ ಸಂಪ್ರತಿಯ ಐತಿಹ್ಯವಾಗಿ ಪರಿವರ್ತನೆಗೊಂಡು ದಿವ್ಯಾವದಾನ, ಪರಿಶಿಷ್ಟ ಪರ್ವ, ವಡ್ಡಾರಾಧನೆಯಂಥ ಕೃತಿಗಳಲ್ಲಿ ಕಾಣಿಸಿಕೊಂಡಿರಬಹುದು. ಮೇಲಾಗಿ ಚಂದ್ರಗುಪ್ತನಿಗೂ ಅಶೋಕನ ಮೊಮ್ಮಗನಿಗೂ ಸರಿಸುಮಾರು ೧೦೦ ವರ್ಷಗಳಿಗೂ ಮಿಕ್ಕಿ ಅಂತರವಿರುವುದರಿಂದ ಅವನ ಕಾಲಮಾನ ಭದ್ರಬಾಹುವಿನ ಜೀವಿತಾವಧಿಯ ಜೊತೆ ತಾಳೆಯಾಗುವುದಿಲ್ಲ. ಅದೂ ಅಲ್ಲದೇ ಅಶೋಕನ ಮೊಮ್ಮಗ ಬೌದ್ಧಧರ್ಮವನ್ನು ಬಿಟ್ಟು ಜೈನಧರ್ಮವನ್ನು ಯಾಕಾಗಿ ಸ್ವೀಕರಿಸಿದನೆಂಬುದಕ್ಕೆ ಉತ್ತರ ಹುಡುಕುವುದು ಕಷ್ಟ.
       ಹಾಗಾಗಿ ಚಂದ್ರಗುಪ್ತ ಮೌರ್ಯ, ಎರಡನೇ ಚಂದ್ರಗುಪ್ತ ಅಥವಾ ಸಂಪ್ರತಿ ಚಂದ್ರಗುಪ್ತ ಇವರಲ್ಲಿ ಯಾರೊಬ್ಬರೂ ಬೆಳಗೊಳಕ್ಕೆ ಬಂದಿರಲು ಸಾಧ್ಯವಿಲ್ಲವೆನ್ನುವುದು ದಿಟ. ಇತಿಹಾಸದಲ್ಲಿ ಇನ್ನುಳಿದವನು ಒಬ್ಬನೇ ಒಬ್ಬ. ಆತ ನಂದ ಚಂದ್ರಗುಪ್ತ. ನಂದ ವಂಶದ ಐದನೇ ಅರಸನಾದ ಈತ ಪಟ್ಟಕ್ಕೇರಿದ್ದು ಕ್ರಿ.ಪೂ ೩೭೨ರಲ್ಲಿ. ಪ್ರದ್ಯೋತನಿಂದ ೧೭ನೇಯವನಾದ ಈತ ಒಟ್ಟೂ ಐದು ವರ್ಷಗಳ ಕಾಲ ರಾಜ್ಯವಾಳಿದ್ದ. ನಂತರ ತನ್ನ ಮಗ ಸಿಂಹಸೇನನಿಗೆ ರಾಜ್ಯವನ್ನು ವಹಿಸಿಕೊಟ್ಟು ಹೊರಟುಹೋದನೆಂದು ವಡ್ಡಾರಾಧನೆ ಪ್ರಸ್ತಾಪಿಸುತ್ತದೆ. ಈ ಚಂದ್ರಗುಪ್ತನೇ ಜೈನದೀಕ್ಷೆಯನ್ನು ಸ್ವೀಕರಿಸಿದನೆಂಬುದಕ್ಕೆ ಬೇಕಾದಷ್ಟು ಆಧಾರಗಳು ದೊರಕುತ್ತವೆ. 
ಯಾವುದೋ ಸಂದರ್ಭದಲ್ಲುಂಟಾದ ತಪ್ಪುಗ್ರಹಿಕೆಯಿಂದ ಬೆಳಗೊಳಕ್ಕೆ ಭ್ರದ್ರಬಾಹುವೊಡನೆ ಬಂದವನು ಚಂದ್ರಗುಪ್ತಮೌರ್ಯನೆಂಬ ಗ್ರಹಿಕೆ ಉಂಟಾಯಿತು. ಗೋವಿಂದ ಪೈಗಳು ತಮ್ಮ ನಂತರದ ಎರಡು ಲೇಖನಗಳಲ್ಲಿ ಸಂಪ್ರತಿ ಚಂದ್ರಗುಪ್ತನೇ ಬೆಳಗೊಳಕ್ಕೆ ಬಂದಿರಬಹುದೆಂಬ ನಿಲುವನ್ನು ತಳೆದಿದ್ದಾರೆ. ಈ ವಿಷಯದ ಕುರಿತು ದೀರ್ಘಕಾಲದ ಸಂಶೋಧನೆ ನಡೆಸಿದ ಪ್ರೊ.ವಸಂತರಾಜ್, ಎಂ.ವಿ.ಶ್ರೀನಿವಾಸರಂಥವರು ಚಂದ್ರಗುಪ್ತ ಮೌರ್ಯನಾಗಲೀ, ಸಂಪ್ರತಿಯಾಗಲೀ ಭದ್ರಬಾಹುಗಳೊಡನೆ ಬಂದಿರಲು ಸಾಧ್ಯವಿಲ್ಲವೆಂದು ಬಹುಸಮರ್ಪಕವಾಗಿ ನಿರೂಪಿಸಿದ್ದಾರೆ. 
       ಜೈನಧರ್ಮದ ಇತಿಹಾಸದಲ್ಲೇ ಇದೊಂದು ಅತಿಮಹತ್ವದ ಸಂಗತಿ. ಕರ್ನಾಟಕದಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೇ ಜೈನ ಧರ್ಮದ ಪ್ರಾಚೀನತೆಯನು ನಿರ್ಧರಿಸಲು ಇರುವ ಆಧಾರ ಇದೊಂದೇ. ಹಾಗಾಗಿಯೇ ಇಲ್ಲಿಗೆ ಬಂದ ಚಂದ್ರಗುಪ್ತ ಯಾರೆಂಬುದು ಮಹತ್ವ ಪಡೆದುಕೊಳ್ಳುವ ಸಂಗತಿ. ಭದ್ರಬಾಹುವಿನೊಡನೆ ಬಂದವನು ನಂದಚಂದ್ರಗುಪ್ತನೇ ಎಂದಾದರೆ ಕರ್ನಾಟಕಕ್ಕೆ ಜೈನಧರ್ಮವು ಆಗಮಿಸಿದ ಕಾಲಮಾನವನ್ನು ಸುಮಾರು ನೂರು ವರ್ಷಗಳಿಗೂ ಮಿಕ್ಕಿ ಹಿಂದೆ ತಳ್ಳಬೇಕಾದ ಅಗತ್ಯತೆಯಿದೆ.

Tuesday, June 26, 2018

ಹೊಯ್ಸಳ ಲಾಂಛನದಲ್ಲಿ ಹುಲಿಯನ್ನು ಕೊಲ್ಲುತ್ತಿರುವ ಸಳ: ಒಂದು ವಿಮರ್ಶೆ

     
  ಆರೇಳು ತಿಂಗಳ ಹಿಂದೆ ಗೆಳತಿ ಅನಘಾ ನಾಗಭೂಷಣ ಒಂದು ಪ್ರಶ್ನೆ ಕೇಳಿದ್ದರು.  ಆದರೆ ನಾವೆಲ್ಲ ಕೇಳಿದ ಕಥೆಯ ಪ್ರಕಾರ ಸುದತ್ತಾಚಾರ್ಯರ ಶಿಷ್ಯ ಸಳ ಗುರುಗಳ ಆಜ್ಞೆಯಂತೆ ’ಹುಲಿ’ಯನ್ನು ಸಂಹರಿಸುತ್ತಾನೆ. ಹೊಯ್ಸಳರ ಲಾಂಛನದಲ್ಲಿ ಸಳ ಸಂಹರಿಸುತ್ತಿರುವುದು ಸಿಂಹವನ್ನಲ್ಲವೇ? ಹಾಗೇಕೆ? ಎಂದು. ಅಲ್ಲಿಯವರೆಗೂ ನಾನೊಮ್ಮೆಯೂ ಆಬಗ್ಗೆ ಯೋಚಿಸಿರಲಿಲ್ಲ. ಅದು ಹೊಳೆದಿರಲೂಇಲ್ಲ.
       ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಎದ್ದು ಕಾಣುವ ಗುರುತು ಹುಲಿಯನ್ನು ಕೊಲ್ಲುತ್ತಿರುವ ಮನುಷ್ಯ. ಇದು ಹೊಯ್ಸಳರ ದೇವಸ್ಥಾನಗಳ ಮೇಲಿನ ಶುಕನಾಸಿಗಳಲ್ಲಿ ಇಲ್ಲವೇ ಬೇಲೂರಲ್ಲಿದ್ದಂತೆ ಪ್ರವೇಶದ್ವಾರದಲ್ಲಿ ಇದ್ದೇ ಇರುವ ಶಿಲ್ಪ. ಇದು ಹೊಯ್ಸಳರ ರಾಜಲಾಂಛನವಾಗಿತ್ತೆಂದೂ, ಆ ಶಿಲ್ಪದಲ್ಲಿರುವುದು ಹುಲಿಯನ್ನು ಕೊಲ್ಲುತ್ತಿರುವ ಸಳನೆಂದೂ ಹೆಚ್ಚಿನೆಲ್ಲಾ ಇತಿಹಾಸಕಾರರ ಅಭಿಪ್ರಾಯ. ಆದರೆ ವಿಚಿತ್ರವೆಂದರೆ ಆ ಶಿಲ್ಪದಲ್ಲಿರುವುದು ಹುಲಿಯಲ್ಲ ಸಿಂಹ. ಹುಲಿಗೆ ಕೇಸರಗಳಿರುವುದಿಲ್ಲ ಬದಲಾಗಿ ಸಿಂಹಕ್ಕಿರುತ್ತವೆ. ಶಿಲ್ಪದಲ್ಲಿರುವ ಪ್ರಾಣಿಗೆ ಕೇಸರಗಳಿವೆಯೇ ಹೊರತೂ ಹುಲಿಗಿದ್ದಂತೆ ಪಟ್ಟೆಗಳಿಲ್ಲ. ಕೊಂಡಜ್ಜಿಯ ರವಳನಾಥನ ಪಂಚೆಯ ನೆರಿಗೆಗಳನ್ನು, ಹಳೆಬೀಡಿನಲ್ಲಿ ಅಂಗುಷ್ಟದುದ್ದದ ತಲೆಬುರುಡೆಗಳಲ್ಲಿ ಒಳಗಿನ ಟೊಳ್ಳನ್ನೂ, ಆಭರಣಗಳ ಸೂಕ್ಷ್ಮ ಕೆತ್ತನೆಯನ್ನೂ ಕೆತ್ತಿದ ಹೊಯ್ಸಳ ಶಿಲ್ಪಿಗಳಿಗೆ ಹುಲಿಯ ಮೇಲೆ ನೆರಿಗೆಗಳನ್ನು ಬಿಡಿಸುವುದು ಕಷ್ಟದ ಕೆಲಸವೇನಾಗಿರಲಿಲ್ಲ. ಹಾಗಾದರೆ ಅವರು ಹುಲಿಯ ಬದಲು ಸಿಂಹವನ್ನು ಕೆತ್ತಿದ್ಯಾಕೆ? ಅದರ ಅಂಗಸೌಷ್ಟವವೇ ಇತ್ಯಾದಿ ಕಾರಣದಿಂದ ಸಿಂಹದ ಶಿಲ್ಪದ ಕೆತ್ತುಗೆ ಸುಲಭ. ಹುಲಿಗೆ ಸಿಂಹಕ್ಕಿದ್ದಂತೆ ಪ್ರಮಾಣಲಕ್ಷಣಗಳಿಲ್ಲ. ಆದುದರಿಂದ ಹುಲಿಯದ್ದು ಅಷ್ಟು ಸುಲಭವಲ್ಲ ಎಂಬ ಮಾತಿದೆ. ಹೀಗಿದ್ಯಾಗ್ಯೂ ಹುಲಿ ಕರ್ನಾಟಕದಲ್ಲಿ ಸಾಧಾರಣವಾಗಿ ಎಲ್ಲ ಕಡೆಯೂ ಕಂಡುಬರುವ ಪ್ರಾಣಿ. ಆದರೆ ಸಿಂಹ ಭಾರತದಲ್ಲಿ ಹೆಚ್ಚಾಗಿ ಕಂಡುಬರುವುದು ಗುಜರಾತ್ ಹಾಗೂ ಬಂಗಾಳದ ಪ್ರದೇಶದಲ್ಲಿ. ಹಾಗಾಗಿ ಶಿಲ್ಪಿಗಳಿಗೆ ಸಿಂಹಕ್ಕಿಂತ ಹುಲಿಯೇ ಹೆಚ್ಚು ಪರಿಚಿತ. ಅಷ್ಟಿದ್ದೂ ಎಲ್ಲ ಕಡೆಗಳಲ್ಲೂ ಸಿಂಹವನ್ನು ಕೆತ್ತಿದ್ದಕ್ಕೆ ಬಲವಾದ ಕಾರಣಗಳಿರಲೇ ಬೇಕು.
       ಮೊದಲನೇಯದಾಗಿ ಆ ಶಿಲ್ಪ ಹುಲಿಯನ್ನು ಕೊಲ್ಲುತ್ತಿರುವ ಸಳನದ್ದೆನ್ನುವುದು ತಪ್ಪುಕಲ್ಪನೆ. ಜೊತೆಗೆ ಸಿಂಹವನ್ನು ಒಂದೇ ಪ್ರಕಾರವಾಗಿ ಕೆತ್ತಿದ್ದರೂ ಅದರ ಜೊತೆ ಇರುವ ಮನುಷ್ಯ ಚರ್ಯೆ ಮತ್ತು ಲಕ್ಷಣಗಳು ಶಿಲ್ಪದಿಂದ ಶಿಲ್ಪಕ್ಕೆ ಬೇರೆಯಾಗಿವೆ. ಬೇಲೂರಿನಲ್ಲಿರುವ ಎರಡು ಶಿಲ್ಪಗಳಲ್ಲಿ ಆ ಮನುಷ್ಯನಿಗೆ ಕೊಂಬುಗಳಿದ್ದರೆ ಸಾಗರದ ನಾಡಕಲಸಿ, ಹಾಸನ ಸಮೀಪದ ದೇವರಗದ್ದವಳ್ಳಿ, ಮೊಸಳೆ ಹಾಗೂ ಶಿವಮೊಗ್ಗದ ಶಿರಾಳಕೊಪ್ಪದ ಸಮೀಪದ ಬಳ್ಳಿಗಾವೆಗಳಲ್ಲಿ ಕೋರೆಹಲ್ಲುಗಳೂ ಇವೆ. ಬೇಲೂರಿನಲ್ಲಿ ಮುಖ್ಯ ದ್ವಾರದ ಬಳಿಯ ಎರಡು ಶಿಲ್ಪಗಳಲ್ಲಿ ಒಂದರ ಮನುಷ್ಯನ ಕೈಲಿ ಕತ್ತಿಯಿದ್ದರೆ ಇನ್ನೊಬ್ಬ ಬರಿಗೈಲಿದ್ದಾನೆ. ಬರಿಗೈಯಲ್ಲಿರುವವನ ಮುಖದಲ್ಲಿ ಭಯದ ಚಹರೆಯನ್ನು ಸ್ಪಷ್ಟವಾಗಿ ಗುರುತಿಸಬಹುದು. ಮೊದಲನೇಯವನ ತಲೆಕೂದಲು ನೇರವಾಗಿದ್ದರೆ ಎರಡನೇಯವನದ್ದು ಗುಂಗುರಾಗಿದೆ. ಅದೇ ಇನ್ನೊಂದು ಬಾಗಿಲಲ್ಲಿರುವ ಶಿಲ್ಪದಲ್ಲಿರುವ ವ್ಯಕ್ತಿ ತಲೆಯನ್ನು ಆಚೆ ತಿರುಗಿಸಿ ಓಡಲು ಸಿದ್ಧವಾಗಿರುವಂತಿದೆ. ಬೇಲೂರಿನ ಇಂಥ ಆರು ಶಿಲ್ಪಗಳಲ್ಲಿರುವ ಮನುಷ್ಯನ ಕೇಶವಿನ್ಯಾಸ, ಕರ್ಣಕುಂಡಲ, ಆಭರಣ ಇವ್ಯಾವವೂ ಒಂದಿದ್ದಂತೆ ಇನ್ನೊಂದರಲ್ಲಿಲ್ಲ. ನಾಡಕಲಸಿ, ದೇವರಗದ್ದವಳ್ಳಿ, ಹಳೆಬೀಡಿನ ಶಿಲ್ಪಗಳಲ್ಲಿ ರಾಕ್ಷಸ ಕಳೆ ಢಾಳಾಗಿದೆ. ಇದನ್ನು ಗಮನಿಸಿದರೆ ಸಿಂಹದ ಜೊತೆ ಹೋರಾಡುತ್ತಿರುವ ಸಳನ ಶಿಲ್ಪವಿದಾಗಿರದೇ ಸಿಂಹವೊಂದು ರಾಕ್ಷಸನ ಮೇಲೆ ದಾಳಿಮಾಡುತ್ತಿರುವಂತೆ ಈ ಶಿಲ್ಪಗಳನ್ನು ಕೆತ್ತಲಾಗಿದೆ. 


ರಾಕ್ಷಸ ಛಾಯೆಯನ್ನು ಗಮನಿಸಿ

ಬೇಲೂರಿನ ಬಾಗಿಲಲ್ಲಿರುವ ಒಂದು ಶಿಲ್ಪದಲ್ಲಿ ಮನುಷ್ಯನ ಮೇಲೆ ಸಿಂಹ ಆಕ್ರಮಣ ಮಾಡುವಂತಿದೆ


       ಎರಡನೇಯದಾಗಿ ಈ ಮೂರ್ತಿ ಎಲ್ಲ ಹೊಯ್ಸಳ ದೇವಾಲಯಗಳಲ್ಲಿದ್ದರೂ ಇದು ಅವರ ರಾಜಲಾಂಛನವಲ್ಲ. ಹೊಯ್ಸಳರ ಅಧಿಕೃತ ಲಾಂಛನ ಸೆಳೆ(ಬೆತ್ತ)ಯೊಂದಿಗೆ ಇರುವ ಹುಲಿ. ಹೆರದು, ಶಾಂತಿಗ್ರಾಮ ಸೇರಿ ಹೊಯ್ಸಳರ ಹಲವಾರು ಶಾಸನಗಳಲ್ಲಿ ’ಪುಲಿಯ ಲಾಂಛನ’, ’ಶಾರ್ದೂಲ ಲಾಂಛನ’ ಹಾಗೂ ’ವ್ಯಾಘ್ರ ಕೇತನ’ಗಳೆಂಬ ಪ್ರಸ್ತಾವನೆ ಸಿಗುತ್ತದೆ. ಬೇಲೂರಿನ ಕುವರಲಕ್ಷ್ಮನ ಶಾಸನದಲ್ಲಿ ’ಜಿನಮುನಿಪೋತ್ತಮಂ ಬೆತ್ತದ ಸೆಳೆಯಿನೀ ಪುಲಿಯಂ ಪೊಯ್ಸಳೆಂದೊಡಾ ಸಳ ನೃಪಂಗೆ ಪೊಯ್ಸಳಾಭಿದಾನಮಾದುದಾ ಶಾರ್ದೂಲಂ ಪತಾಕಾ ಪ್ರವಿರಾಜಿತ ಚಿತ್ರ ಚಿಹ್ನಮಾದುದು’ ಎಂಬ ಒಕ್ಕಣೆಯಿದೆ. ’ಶಾರ್ದೂಳದೊಳುಕೂಡಿದ ಸೆಳೆ ಪಿರಿದುಂ ಚಿಹ್ನಮ’ ಎಂದು ಅರಸಿಕೆರೆ ಶಾಸನವೂ, ’ಧ್ವಜಪಟದೊಳು ಹೊನ್ನೊಳೊತ್ತಿ ಪುಲಿಯುಂ ಸೆಳೆಯುಂ ನಿಜಲಾಂಛನಮಾದುದು’ ಎಂದು ಚನ್ನರಾಯಪಟ್ಟಣದ ಬಳಗಟ್ಟೆ ಶಾಸನವೂ. ’ಪೊಯ್ಸಳ ನೀನೀಸೀಯಿಂದನೆ ಮುನೀಂದ್ರನ್ ಅವನು ಆ ಪುಲಿಯಂ ಪೋಸೆಳೆದು ಸೆಳೆಯನ್ ಆ ಪುಲಿಯ ಸೆಳೆಯುಂಡಿಗೆಯದಾಯ್ತು ಪೊಯ್ಸಳ ವಂಶಂ’ ಎಂದು ಚಿಕ್ಕಮಗಳೂರಿನ ಖಾಂಡ್ಯ ಶಾಸನವೂ, ’ಸಳನಿಂದ ಹುಲಿಯ ಸೆಳೆಯುಂಡಿಗೆಯಾದುದು ಚಿಹ್ನಂ’ ಎಂದು ಕಳಸಾಪುರ ಶಾಸನವೂ ಉಲ್ಲೇಖಿಸುತ್ತದೆ. ಇದೆಲ್ಲವುಗಳಿಂದ ಸೆಳೆಯೊಡನೆ ಇರುವ ಹುಲಿ ಹೊಯ್ಸಳರ ಲಾಂಛನವಾಗಿತ್ತಲ್ಲದೇ ಸಿಂಹದೊಂದಿಗಿರುವ ಮನುಷ್ಯ ಅಲ್ಲವೆಂದು ಸ್ಪಷ್ಟವಾಗುತ್ತದೆ. ಸಳನು ಬೆತ್ತದ ಸೆಳೆಯಿಂದ ಹುಲಿಯನ್ನು ಕೊಂದ ಸ್ಮರಣಾರ್ಥ ಹೊಯ್ಸಳರು ಅದನ್ನೇ ರಾಜಲಾಂಛನವಾಗಿಟ್ಟುಕೊಂಡರೆಂಬುದೇ ಸರಿ. ಜೊತೆಗೆ ಹೊಯ್ಸಳರ ಕಾಲದ ಎಲ್ಲ ತಾಮ್ರಶಾಸನಗಳಲ್ಲಿ ರಾಜಮುದ್ರೆಯ ಭಾಗದಲ್ಲಿ ಹುಲಿಯ ಮುದ್ರೆಯಿರುತ್ತದೆ. 
ಹೀಗಿದ್ದಾಗ್ಯೂ ದೇವಾಲಯಗಳ ಆವರಣದಲ್ಲಿ ಸಿಂಹದೊಂದಿಗಿನ ಮನುಷ್ಯ ಶಿಲ್ಪ ಕಂಡುಬರಲು ಕಾರಣವೇನು?
       ನನಗನ್ನಿಸಿದಂತೆ ಹೊಯ್ಸಳರ ಶಿಲ್ಪಶೈಲಿ ಪ್ರಭಾವಿತಗೊಂಡಿದ್ದು ಚಾಲುಕ್ಯರಿಂದ. ಚಾಲುಕ್ಯರ ಶೈಲಿಯೇ ತುಂಗಭದ್ರೆಯ ದಕ್ಷಿಣಕ್ಕೆ ಮುಂದೆ ಸ್ವತಂತ್ರವಾಗಿ ಬೆಳೆದು ಹೊಯ್ಸಳ ಶೈಲಿಯೆಂದೆನಿಸಿತು. ಚಾಲುಕ್ಯ-ಹೊಯ್ಸಳ ದೇವಾಲಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಹೋಲಿಕೆ ಸ್ವವೇದ್ಯ. ಹೊಯ್ಸಳರ ಶೈಲಿ ದಕ್ಷಿಣಾಚಾರ್ಯ ಪಂಥವೆನೆಸಿದ್ದರಿಂದ ಇದರ ಶಿಲ್ಪಿಗಳಿಗೆ ದಕ್ಷಿಣಾಚಾರಿ ಅಥವಾ ತದ್ಭವದಲ್ಲಿ ಜಕ್ಕಣಾಚಾರಿ ಎಂಬ ಅಭಿದಾನ ಬಂದಿರಲೂ ಸಾಕೇ ಹೊರತೂ ಜಕ್ಕಣಾಚಾರಿ ಎಂಬ ಯಾವೊಬ್ಬ ಶಿಲ್ಪಿಯೂ ಇತಿಹಾಸದಲ್ಲಿ ಇದ್ದ ಯಾವ ದಾಖಲೆಯೂ ಇಲ್ಲ. ಚಾಲುಕ್ಯರ ಗುಲ್ಬರ್ಗ, ಏವೂರಿನಂಥ ಕೆಲ ದೇವಾಲಯಗಳಲ್ಲಿ ಇದೇ ಶಿಲ್ಪವಿದೆ.  ಹೊಯ್ಸಳರು ನರ’ಸಿಂಹ’ನ ಆರಾಧಕರು. ಹಾಸನದ ಎಂಟು ದಿಕ್ಕುಗಳಲ್ಲೂ ಹೊಯ್ಸಳರ ಎಂಟು ನರಸಿಂಹ ದೇವಸ್ಥಾನಗಳೇ ಅದಕ್ಕೆ ಸಾಕ್ಷಿ. ಬೇಲೂರು, ಹಳೆಬೀಡು ಸೇರಿ ಹೆಚ್ಚಿನೆಲ್ಲ ಕಡೆ ಪ್ರಾಂಗಣದಲ್ಲಿ, ಮುಖ್ಯದ್ವಾರದ ಮೇಲೆ ನರಸಿಂಹನ ಉಬ್ಬುಶಿಲ್ಪಗಳಿವೆ. ಜೊತೆಗೆ ಚಾಲುಕ್ಯರಂತೆ ಹೊಯ್ಸಳರೂ ಚಾಮುಂಡೇಶ್ವರಿಯ ಆರಾಧಕರು. ಆದ್ದರಿಂದ  ಚಾಮುಂಡಿಯ ವಾಹನವಾದ ಸಿಂಹ ರಾಕ್ಷಸರ ಮೇಲೆ ದಾಳಿ ಮಾಡುತ್ತಿದ್ದಂಥ ಶಿಲ್ಪವನ್ನು ಅವರು ತಮ್ಮ ದೇವಾಲಯಗಳಲ್ಲಿ ಕಡೆದಿರಬಹುದು. ಯಾಕೆಂದರೆ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲಿ ಚಾಮುಂಡೇಶ್ವರಿಯ ಶಿಲ್ಪಗಳಿವೆ. ಅವರ ನಾಣ್ಯಗಳ ಮೇಲೆ ಸಿಂಹ ಅಥವಾ ಸಿಂಹವಾಹನೆ ದುರ್ಗೆಯ ಚಿತ್ರಗಳನ್ನು ಕಾಣಬಹುದು. ವಿಷ್ಣುವರ್ಧನನ ನಾಣ್ಯಗಳಲ್ಲಿ ಒಂದು ಕಡೆ ಸಿಂಹದ ಚಿತ್ರವೂ ಇನ್ನೊಂದೆಡೆ ತಳಕಾಡುಗೊಂಡ ವಂಬ ಬರಹವಿದೆ. ಇನ್ನೊಂದು ನಾಣ್ಯದಲ್ಲಿ ಒಂದೆಡೆ ಹುಲಿಯೂ ಇನ್ನೊಂದೆಡೆ ನೊಳಂಬವಾಡಿಗೊಂಡ ಎಂಬ ಬರಹವೂ ಮೂರನೇ ಥರದ ನಾಣ್ಯದಲ್ಲಿ ಮಲಪೆರುಳ್ಗೊಂಡ ಎಂಬ ಬರಹವೂ ಇದೆ. ಇನ್ನು ಒಂದನೇ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ದುರ್ಗೆಯ ಚಿತ್ರ ಇನ್ನೊಂದೆಡೆ ಶ್ರೀಪತಾಪನಾರಸಿಂಹ ಎಂಬ ಬರಹವಿದ್ದರೆ ಇಮ್ಮಡಿ ನರಸಿಂಹನ ಕಾಲದ ನಾಣ್ಯಗಳಲ್ಲಿ ಒಂದೆಡೆ ಸಿಂಹ ಇನ್ನೊಂದೆಡೆ ನರಸಿಂಹನ ಚಿತ್ರವಿದೆ. ಹಾಗಾಗಿ ದುರ್ಗೆಯ ವಾಹನ ಸಿಂಹ ಹಾಗೂ ನರ’ಸಿಂಹ’ನ ಕಾರಣದಿಂದಲೇ ಹೊಯ್ಸಳರ ಎಲ್ಲಾ ದೇವಾಲಯಗಳಲ್ಲೂ ಆ ಶಿಲ್ಪವಿದೆಯೇ ಹೊರತೂ ಅದು ಸಳ ಹುಲಿ(ಸಿಂಹ)ಯನ್ನು ಕೊಲ್ಲುವ ಶಿಲ್ಪವಾಗಿರಲು ಸಾಧ್ಯವಿಲ್ಲ.
ವಿಷ್ಣುವರ್ಧನನ ನಾಣ್ಯ(ಒಂದೆಡೆ ಹುಲಿ)

ವಿಷ್ಣುವರ್ಧನನ ನಾಣ್ಯ(ಇನ್ನೊಂದೆಡೆ ಮಲಪೆರುಳ್ಗೊಂಡ ಎಂಬ ಬರಹ )


ಶಾರ್ದೂಲದ ಚಿತ್ರವಿರುವ ಇನ್ನೊಂದು ನಾಣ್ಯ