Pages

Thursday, March 21, 2019

ಯಾರೆಂದವರು ಹೋಳಿ ಬರಿ ಹಿಂದೂಗಳದ್ದೆಂದು?

 
 ತೀರ ಈಚೀಚೆಗೆ ದಕ್ಷಿಣದಲ್ಲಿ ಹಬ್ಬುತ್ತಿದೆಯೆಂಬುದನ್ನು ಬಿಟ್ಟರೆ ಹೋಳಿ ಮುಖ್ಯವಾಗಿ ಉತ್ತರ ಭಾರತದ ಹಬ್ಬವೇ. ನಾವೆಲ್ಲ ಚಿಕ್ಕಂದಿನಲ್ಲಿ ಹೋಳಿಯೆಂಬ ಹೆಸರು ಕೇಳಿದ್ದೇ ಅಪರೂಪ. ನಮ್ಮ ಉತ್ತರ ಕನ್ನಡದವರಿಗೆ ಅದು ಸುಗ್ಗಿ ಹಬ್ಬ. ಅದೂ ಕೂಡ ಹಾಲಕ್ಕಿ, ಕುಣುಬಿ ಮತ್ತು ಮರಾಠಿಗರಲ್ಲೇ ಆ ಭರಾಟೆ ಹೆಚ್ಚು. ಗುಮ್ಮಟೆ ಪಾಂಗ್ ನುಡಿಸುತ್ತ, ಧುಮ್ಸೋಲೆ ಎಂದು ಕೂಗುತ್ತಾ ಮನೆಮನೆಗೆ ಬರುವ ಸುಗ್ಗಿಕುಣಿತದ ತಂಡಗಳನ್ನು ನೋಡುವುದೇ ಒಂದು ಖುಷಿ. ಸಮೃದ್ಧಿಯ ಬೆಳೆ ಕೊಯ್ಲಿನ ಒಳಿತಿನ ಹಾಡುಗಳನ್ನು ಹಾಡುತ್ತ ಕಾಣಿಕೆಗಳನ್ನು ಪಡೆದುಕೊಂಡು ತಮ್ಮೂರಿಗೆ ಮರಳುತ್ತಾರೆ. ಕಾಮ ಎಂಬ ಆಕೃತಿಯನ್ನು ಸುಟ್ಟು ಹಾಕಿ ತಮ್ಮ ಮನದಲ್ಲಿರುವ ಕೆಟ್ಟ ಭಾವನೆಗಳನ್ನು ತೊರೆದುಕೊಳ್ಳುತ್ತಾರೆ. ನಂತರ ಎಲ್ಲರೂ ಗ್ರಾಮವೆಲ್ಲ ಮೆರವಣಿಗೆ ಹೊರಡುತ್ತಾರೆ, ಈ ಮೆರವಣಿಗೆಯಿಂದ ಗ್ರಾಮದಲ್ಲಿ ಒಳ್ಳೆಯ ಮಳೆ ಬೆಳೆ ಆಗುತ್ತದೆ, ಗ್ರಾಮಸ್ಥರು ರೋಗ ರುಜಿನಗಳಿಂದ ದೂರವಿರುತ್ತಾರೆ ಎಂಬುದು ನಂಬಿಕೆ. ಚಿಕ್ಕಂದಿನಲ್ಲಿ ಅದನ್ನು ಬಿಟ್ಟರೆ ಹೋಳಿಯ ದಿನ ಒಬ್ಬರಿಗೊಬ್ಬರು ಬಣ್ಣ ಎರಚುವುದನ್ನು ನಾವು ನೋಡಿದ್ದೇ ಟಿವಿಯಲ್ಲಿ. ಅಷ್ಟರಮಟ್ಟಿಗದು ಉತ್ತರದ ಸಂಪ್ರದಾಯವೇ. ಅಲ್ಲಿಯ ಹೋಳಿಯಾಚರಣೆಯ ಮಜವೇ ಬೇರೆ ಬಿಡಿ. ಇಡೀ ಊರಿಗೆ ಊರೇ ಬಣ್ಣದಲ್ಲಿ ಮುಳುಗೆದ್ದು ಒದ್ದೆಯಾಗುತ್ತದೆ. ಅದರಲ್ಲೂ ಮಥುರಾ, ಬೃಂದಾವನಗಳಂಥ ಸ್ಥಳಗಳಲ್ಲಂತೂ ಹೋಳಿಯ ಭಯಂಕರ ಸಂಭ್ರಮವನ್ನು ಅನುಭವಿಸಿಯೇ ತೀರಬೇಕು. ಎಷ್ಟೆಂದರೂ ಕೃಷ್ಣ ರಾಧೆಯರು ಹೋಳಿಯಾಡಿದ ಸ್ಥಳವದು.
ಹಾಲಕ್ಕಿಗಳ ಸುಗ್ಗಿ(ಚಿತ್ರಕೃಪೆ:ದಿನೇಶ್ ಮಾನೀರ್)

     ಭಾರತಕ್ಕೂ ಬಣ್ಣಗಳಿಗೂ ಬಿಡಿಸಲಾಗದ ಪುರಾನಾ ರಿಶ್ತಾ. ಭಿನ್ನ ಭಿನ್ನ ರಂಗುಗಳೆಲ್ಲ ಕಲೆತಲ್ಲವೇ ಭಾರತೀಯ ಸಂಸ್ಕೃತಿಯ ರಾಗಿಣಿಯಾಗಿದ್ದು. ಜಾತಿ, ಮತ, ಪಂಥಗಳಾಚೆ ಬೆಳೆದು ಭಾರತದ ನೈಜ ಶತರಂಗಿ ಬಣ್ಣಗಳನ್ನು ತೆರೆದಿಡುವ ಹಬ್ಬವದು ಹೋಳಿ. ಹಬ್ಬವೆಂಬುದು ಬರಿ ಆಚರಣೆಯಲ್ಲ, ಅದೊಂದು ಅನುಭವ. ಶಾಸ್ತ್ರವೊಂದೇ ಅಲ್ಲ, ಅದು ಸಂಪ್ರದಾಯ. ಅಲ್ಲಿ ಬರಿ ಸಂಸ್ಕೃತಿಯಿಲ್ಲ, ಫ್ಯಾಂಟಸಿಯೂ ಇದೆ. ಒಂದೊಂದು ಹಬ್ಬದ ಜೊತೆಗೂ ಸಾವಿರಾರು ಕತೆಗಳು ಹೆಣೆದುಕೊಂಡಿವೆ. ಹೋಳಿಹುಣ್ಣಿಮೆಯ ಅವೆಲ್ಲ ಕತೆಗಳನ್ನು ನೀವು ಕೇಳಿಯೇ ಇರುತ್ತೀರಿ.  ಹೋಳಿಯನ್ನು ಭಾರತದಲ್ಲಿ ನೂರಾರು ವರ್ಷಗಳಿಂದ ಆಚರಿಸಿಕೊಳ್ಳುತ್ತ ಬರಲಾಗಿದೆ. ಫಾಗುನ್, ಫಗ್, ಆಬ್-ಪಾಶಿ, ಈದ್-ಎ-ಗುಲಾಬಿ ಇನ್ನೂ ಎಷ್ಟೆಷ್ಟೋ ಹೆಸರುಗಳಿಂದ. ಧಮ್ಮಪದದಲ್ಲಿ ಬುದ್ಧ ಕೂಡ ಹೋಳಿಯಲ್ಲಿ ಪಾಲ್ಗೊಂಡ ಒಂದು ಘಟನೆಯ ಉಲ್ಲೇಖವಿದೆ. ಶುದ್ಧ ಜಾನಪದ ಹಿನ್ನೆಲೆಯ ಸುಗ್ಗಿಹಬ್ಬವಾದರೂ ಹೋಳಿಯು ಅವೈದಿಕವಲ್ಲವೆಂದು ನಿರೂಪಿಸುವ ಕೆಲಸವೂ ಮೀಮಾಂಸಾದರ್ಶನದ ಹೋಲಿಕಾ ಅಧಿಕರಣದಲ್ಲಿ ನಡೆದಿದೆ. ಸಂಸ್ಕೃತದ ಕವಿಗಳೆಲ್ಲ ಇದನ್ನು ನವಾನ್ನೇಷ್ಟಿ, ಪುಷ್ಪಪ್ರಚಾಯಿಕಾ, ವಸಂತೋತ್ಸವ, ಮದನೋತ್ಸವ, ಹೋಲಿಕೋತ್ಸವ, ಉದಕ್ಷ್ವೋಡಿಕಾ ಇತ್ಯಾದಿ ಇತ್ಯಾದಿ ವಿಭಿನ್ನ ಹೆಸರುಗಳಿಂದ ಕರೆದಿದ್ದಾರೆ. ಹೋಳಿಯೆಂಬುದು ಹರಾಮ್ ಎಂದು ಜಾಕೀರ್ ನಾಯ್ಕ್ ಎಷ್ಟು ಬಡಕೊಂಡರೂ, ಸರ್ಫ್ ಎಕ್ಸೆಲ್ ಜಾಹಿರಾತು ನೋಡಿ ಭಕ್ತಕೋಟಿ ಕುಂಯ್ಯೋ-ಮರ್ರೋ ಎಂದರೂ ಹಿಂದೂ-ಇಸ್ಲಾಮ್‌ಗಳೆರಡೂ ಇತಿಹಾಸದುದ್ದಕ್ಕೂ ಹೋಳಿಯ ಬಣ್ಣಗಳಲ್ಲಿ ಮಿಂದೆದ್ದಿವೆ. ಹಿಂದೂಗಳ ಕತೆಬಿಡಿ. ಇಸ್ಲಾಮಿನ ಸುಪ್ರಸಿದ್ಧ ಕವಿಗಳೆಲ್ಲ ಹೋಳಿಯ ಮೇಲೆ ಟನ್ನುಗಟ್ಟಲೆ ಕವಿತೆಗಳನ್ನು ರಚಿಸಿದ್ದಾರೆ. ಮುಘಲರ ಕಾಲದಲ್ಲಿ ಈದ್‌ಗಿಂತ ವಿಜೃಂಭಣೆಯಿಂದ ಹೋಳಿಯಾಡಲಾಗುತ್ತಿತ್ತು. ಹೋಳಿಗೆ ಈಪಾಟಿ ಪ್ರಸಿದ್ಧಿ ಬರಲು ಮುಕ್ಕಾಲಂಶ ಕೊಡುಗೆ ಮೊಘಲರದೇ.  ’ಆಜ್ ಹೋರೀ ರೇ ಮೋಹನ್ ಹೋರೀ, ಅಬ್ ಕ್ಯುಂ ದೂರ ಬೈಠೇ ನಿಕಸೋ ಕುಂಜ್ ಬಿಹಾರಿ’ ಎಂಬ ಅಕ್ಬರನ ಮಾತನ್ನು ಇಬ್ರಾಹಿಂ ರಸಖಾನ್ ತನ್ನ ಕವಿತೆಗಳಲ್ಲಿ ಹಲವು ಬಾರಿ ಸ್ಮರಿಸಿದ್ದಾನೆ. ’ಕ್ಯುಂ ಮೂಹ್ ಪೆ ಮಾರೆ ರಂಗ್ ಕಿ ಪಿಚಕಾರಿ, ದೇಖೋ ಕುಂವರ್ಜಿ ದೂಂಗಿ ಗಾರಿ’ ಎಂದು ಬಾದಷಾ ಬಹದೂರ್ ಷಾ ಜಾಫರ್ ಬರೆದ ಖ್ಯಾತ ಪದ್ಯವೊಂದಿದೆ. ಆತನ ಕಾಲದಲ್ಲಿ ಕಡುಬಡವನೂ ಅರಸನ ಹಣೆಗೆ ಗುಲಾಲು ಮೆತ್ತುವ ಅವಕಾಶ ಪಡೆಯುತ್ತಿದ್ದ. ಸ್ವತಃ ಷಹಜಹಾನ್ ಹೋಳಿಯನ್ನು ಈದ್-ಎ-ಗುಲಾಬಿ(ಗುಲಾಬಿ ಈದ್), ಆಬ್-ಎ-ಪಾಶಿ(ಬಣ್ಣದ ಹೂಮಳೆ)ಎಂದು ಕರೆದ. ಅವನಿಗಿಂತ ಮೊದಲು ತಜ್ಕ್-ಎ-ಜಹಾಂಗೀರಿಯಲ್ಲಿ ಜಹಾಂಗೀರ ಕೂಡ ಹೋಳಿ ಉತ್ಸವವನ್ನು ಉಲ್ಲೇಖಿಸಿದ್ದಾನೆ. ಗೋವರ್ಧನ ಹಾಗೂ ರಸಿಕರಂಥ ಮೊಘಲರ ಆಸ್ಥಾನಕವಿಗಳು ಜಹಾಂಗೀರ್ ತನ್ನ ಬೇಗಂ ನೂರ್‌ಜಹಾನಳೊಡನೆ ಹೋಳಿಯಾಡಿದ ಘಟನೆಗಳನ್ನು ಬಹುರಮ್ಯವಾಗಿ ಚಿತ್ರಿಸಿದ್ದಾರೆ. ಮುಘಲ್ ಬಾದಶಾಹ್ ಮಹಮ್ಮದ್ ಶಾ ರಂಗೀಲಾ ತನ್ನ ಜನಾನಾದವರೊಡನೆ ಹೋಳಿಯಾಡುವ ಪೇಂಟಿಂಗುಗಳಂತೂ ವಿಶ್ವಪ್ರಸಿದ್ಧಿ. ನಿಧಾಮಲ್ ಹಾಗೂ ಭೋಪಾಲ್ ಸಿಂಗ್ ಎಂಬಿಬ್ಬರು ಚಿತ್ರಕಾರರು ರಚಿಸಿದ ಮುಘಲರ ಕಾಲದ ಹೋಳಿ ಚಿತ್ರಗಳನ್ನು ಇವತ್ತಿಗೂ ನ್ಯೂಯಾರ್ಕಿನ ಏಶಿಯಾ ಸೊಸೈಟಿ ಮ್ಯೂಸಿಯಮ್ಮಿನಲ್ಲಿ ಕಾಣಬಹುದು. ಇದನ್ನು ನೋಡಿಯೇ ಉರ್ದುವಿನ ಸುಪ್ರಸಿದ್ಧ ಕವಿ ಮುನ್ಷಿ ಮೊಹಮ್ಮದ್ ಝಕೌಲ್ಲಾ ತನ್ನ ’ತಾರೀಕ್-ಎ-ಹಿಂದೂಸ್ತಾನಿ’ಯಲ್ಲಿ ಹೇಳಿರಬೇಕು ’ಯಾರಂದವರು ಹೋಳಿ ಹಿಂದುಗಳದ್ದೆಂದು?’. ಇನ್ನೂ ಮುಂದುವರೆದು ’ಮೆರೆ ಹಜರತ್ ನೆ ಮದೀನಾ ಮೆಂ ಮನಾಯಿ ಹೋಲಿ’, ನನ್ನ ದೇವರು ಮದೀನಾದಲ್ಲೂ ಹೋಳಿಯಾಡುತ್ತಾನೆ ಎಂದುಬಿಟ್ಟಿದ್ದ ಆತ. ನಜೀರ್ ಅಕ್ಬರ್ ಬಂದಿ, ಮೆಹಜೂರು ಲಖನವಿ, ಶಾಹ್ ನಿಯಾಜ್, ಮೀರ್ ತಾಕಿ ಮೀರ್‌ರಂಥ ಮುಘಲ ಜಮಾನಾದ ಕವಿಸಾಮ್ರಾಟರೆಲ್ಲ ಹೋಳಿಯ ಬಗ್ಗೆ ಹಾಡು ಹಾಡಿ ಕುಣಿದಿದ್ದಾರೆ. ಮೊಘಲರ ಕಾಲದಿಂದ ಹೋಳಿ ಅಷ್ಟು ವಿಸ್ತೃತ ಸ್ವರೂಪ ಪಡೆದಿತ್ತು. ಆಗ ಅದೊಂದು ಹಬ್ಬವೆನ್ನುವುದಕ್ಕಿಂತ ಅದೊಂದು ಭಾವೈಕ್ಯತೆಯ ಪರ್ವವಾಗಿತ್ತು. ಔರಂಗಜೇಬನ ಮಗ ಷಾ ಆಲಂ ಹೋಳಿಯ ಬಗ್ಗೆ ’ನಾದಿರಾತ್-ಎ-ಶಾಹಿ’ ಎಂಬ ಅಪರೂಪದ ಕೃತಿಯೊಂದನ್ನು ರಚಿಸಿದ್ದಾನೆ. ಇದು ಬಹಳಷ್ಟು ಕಾರಣಗಳಿಗೆ ವೈಶಿಷ್ಟ್ಯಪೂರ್ಣ. ಈ ಉರ್ದು ಕೃತಿ ದೇವನಾಗರಿ ಲಿಪಿಯಲ್ಲಿ ರಚಿಸಲ್ಪಟ್ಟಿದೆ ಎನ್ನುವುದೂ ಅದರಲ್ಲೊಂದು.  ಅದರ ಒಂದು ಸಾಲು - 
ಲೇ ಪಿಚಕಾರಿ ಚಲಾಯೇ ಲಲಾ, ತಬ್ ಚಂಚಲ್ ಚೋಟ್ ಬಚಾಏ ಗಯೀ ಹೈ | 
ಅಪನೀ ನಾಕ್ ಸು ಖೇಳತ್ ಹೈ, ಕಹಾ ಚಾತುರ ನಾರ ಖಿಲಾರ್ ನಯೀ ಹೈ ||
ನಿಧಾಮಲ್ ಬಿಡೀಸಿದ ಮಹಮ್ಮದ್ ಷಾ ರಂಗೀಲಾ(೧೭೦೨-೧೭೪೮)ನ ಚಿತ್ರಪಟ

ಹೋಳಿಯಾಡುತ್ತಿರುವ ಜಹಾಂಗೀರ್(೧೬೩೫)

ಜಹಾಂಗೀರನದೇ ಇನ್ನೊಂದು ಚಿತ್ರಪಟ

ಭೂಪಾಲ್ ಸಿಂಗ್ ರಚಿಸಿದ ಮಹಮ್ಮದ್ ಷಾನ ಹೋಳಿ ಆಚರಣೆ(೧೭೩೫)

ಮೀರ್ ಕಲನ್ನಿನ ಚಿತ್ರಪಟ, ಮುಘಲರ ಜಮಾನಾದ ಹೋಳಿ

ಗೋಲ್ಕೋಂಡಾದ ನವಾಬನೂ ಹೋಳಿಯಾಡುತ್ತಿದ್ದ, ೧೮೦೦, ನ್ಯಾಶನಲ್ ಮ್ಯೂಸಿಯಂ, ದೆಲ್ಲಿ
 ನಾಥ ಸಂಪ್ರದಾಯದ ಸಾರ್ವಕಾಲಿಕ ಶ್ರೇಷ್ಟ ಸೂಫಿ ಸಂತನಾದ ಬುಲ್ಲೇ ಷಾನ ಪ್ರಸಿದ್ಧ ಪಂಜಾಬಿ ಗೀತೆಯೊಂದಿದೆ ಹೋಲಿಯ ಬಗ್ಗೆ. 
ಹೋಲಿ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ನಾಮ್ ನಬಿ ಕಿ ರತನ್ ಚಡಿ, ಬೂಂದ್ ಪಡಿ ಅಲ್ಲಾಹ್ ಅಲ್ಲಾಹ್
ರಂಗ್ ರಂಗೀಲೀ ಓಹಿ ಖಿಲಾವೆ, ಜಿಸ್ ಸೀಖೀ ಹೋ ಫನಾ ಫಿ ಅಲ್ಲಾಹ್
’ಅಲಸ್ತು ಬಿ ರಬ್ಬಿಕುಮ್’ ಪ್ರಿತಮ್ ಬೋಲೇ, ಸಬ್ ಸಖಿಯಾಂ ನೆ ಘೂಂಗಟ್ ಖೋಲೆ
’ಕಲೂ ಬಲಾ’ ಯೂಂ ಹಿ ಕರ್ ಬೋಲೇ, ’ಲಾ ಇಲಾಹ್ ಇಲ್ಲಲ್ಲಾಹ್’
ಹೋಲೀ ಖೇಲೂಂಗಿ, ಕೆಹ್ ಬಿಸ್ಮಿಲ್ಲಾಹ್
ಪ್ರಪಂಚದ ದೇಶಗಳೆಲ್ಲ ದ್ವೇಷ, ಅಸಹನೆ, ಧಾರ್ಮಿಕ ಮೂಲಭೂತವಾದದ ಬೆಂಕಿಯಲ್ಲಿ ಬೇಯುತ್ತಿರುವಾಗ ಇಂಥೊಬ್ಬ ಪಂಥಗಳನ್ನು ಮೀರಿದ ಅದ್ಭುತ ದಾರ್ಶನಿಕನೊಬ್ಬನಿದ್ದನೆಂದು ಜಗತ್ತಿಗೆ ತೋರಿಸುವುದಕ್ಕಿಂತ ಹೆಚ್ಚಿನ ಮದ್ದೇನಿದೆ? ಮುನ್ನೂರು ವರ್ಷಗಳ ಹಿಂದೆಯೂ ಇದೇ ಸ್ಥಿತಿಯಿತ್ತು. ಅದೂ ಔರಂಗಜೇಬನ ಕಾಲದಲ್ಲಿ. ಈಗ ಸರ್ಕಾರವನ್ನು ಟೀಕಿಸುವುದೇ ದೇಶದ್ರೋಹವೆನಿಸಿಕೊಂಡಂತೆ ಆಗ ರಾಜನ ವಿರುದ್ಧ ಉಸಿರೆತ್ತುವುದು ಧರ್ಮದ್ರೋಹವೆನಿಸಿತ್ತು. ಸಂಗೀತ, ನಾಟ್ಯಗಳನ್ನೆಲ್ಲ ಹರಾಮ್ ಎಂದು ಘೋಷಿಸಲಾಗಿತ್ತು. ಬುಲ್ಲೇ ಷಾ ಮೊಘಲರ ವಿರುದ್ಧ ತಿರುಗಿ ಬಿದ್ದ. ಗುರುಗೋವಿಂದ ಸಿಂಗರು ಔರಂಗಜೇಬನ ವಿರುದ್ಧ ಕತ್ತಿ ಎತ್ತಿದರೆ, ಬುಲ್ಲೆ ಷಾ ಎಕ್‌ತಾರಾ ಹಿಡಿದು ಪಂಜಾಬಿನ ಹಳ್ಳಿಗಳಿಗೆ ತೆರಳಿ ಜನರನ್ನು ಜಾಗರೂಕರನ್ನಾಗಿಸಿದ. ಔರಂಗಜೇಬ ಬರಿ ಹಿಂದೂದ್ವೇಷಿಯಲ್ಲ. ಷಿಯಾ ಸಂಪ್ರದಾಯ ಪಾಲಿಸುತ್ತಿದ್ದ ಕಾರಣಕ್ಕೆ ತನ್ನ ತಮ್ಮನನ್ನೇ ಕೊಂದ ಮನುಷ್ಯದ್ವೇಷಿ. ಅಂಥ ಕಾಲದಲ್ಲೇ ಬುಲ್ಲೇ ಷಾ ಹಿಂದೂ-ಇಸ್ಲಾಮುಗಳೆರಡನ್ನೂ ತಿರಸ್ಕರಿಸಿ ಮೊದಲು ಮನುಶ್ಯರಾಗಲು ಕರೆಕೊಟ್ಟ.
ಮಕ್ಕಾ ಗಯಾಂ, ಗಲ್ ಮುಕ್ತೀ ನಹೀಂ
ಪಾವೇಂ ಸೊ ಸೊ ಜುಮ್ಮೇ ಪಾರ್ ಆಯೀ |
ಗಂಗಾ ಗಯಾ, ಗಲ್ ಮುಕ್ತೀ ನಹೀಂ
ಪಾವೇಂ ಸೋ ಸೋ ಗೋಟೇ ಖಾಯೀಂ|
ಬುಲ್ಲೇ ಷಾ ಗಲ್ ತಂಯೋ ಮುಕ್ತೀ
ಜದೋಂ ಮೇಂ ನು ದಿಲ್ಲೋಂ ಗವಾಯಿ ||
ಬುಲ್ಲೇ ಷಾ
ಉರ್ದು ಸಾಹಿತ್ಯದಲ್ಲಿ ಹೋಳಿಗೆ ಮೀಸಲಾದ ರಚನೆಗಳೆಷ್ಟೆಂದು ಲೆಕ್ಕವಿಟ್ಟವರಿಲ್ಲ. ಅವುಗಳಲ್ಲಿ ಮಹಮ್ಮದ್ ಕತೀಲನ ’ಹಫ್ತ್ ತಮಾಶಾ’ ಎಂಬ ಪರ್ಷಿಯನ್ ಕೃತಿ ಹೋಳಿಯ ಬಗ್ಗಿನ ಕೃತಿಗಳಲ್ಲೇ ಅತ್ಯುತ್ತಮವೆಂದು ವಿಮರ್ಶಕರು ಪರಿಗಣಿಸುತ್ತಾರೆ. ಬೃಜ್ ಮತ್ತು ಬುಂದೇಲಖಂಡದ ರಂಗಿನಾಚರಣೆಯ ಬಗ್ಗೆ ಕುಲಿ ಕುತುಬ್ ಷಾ ಹೈದ್ರಾಬಾದಿ ಉರ್ದುವಿನಲ್ಲಿ ಬರೆದ ಪದ್ಯಗಳೂ ಇಲ್ಲಿ ಸ್ಮರಣಾರ್ಹ. ವಾಜಿದ್ ಸೆಹ್ರಿ, ಫಯಾಜ್ ದೆಹಲವಿ, ನಾಜಿರ್ ಅಕ್ಬರಾಬಾದಿಗಳ ಹೋಳಿಯ ಕವಿತೆಗಳು ಸಾಟಿಯಿಲ್ಲದವು.  ನವಾಬ್ ಅಸಫ್-ಉದ್ದೌಲನ ಆಸ್ಥಾನದಲ್ಲಿದ್ದ ಮೀರ್ ತಾಕಿ ಮೀರನ ಜಶ್ನೆ-ಹೋಲಿ ಇಂದಿಗೂ ಹಾಡಲ್ಪಡುತ್ತದೆ.   
ಅವುಗಳೆಲ್ಲವುಗಳಿಗೆ ಕಳಸವಿಟ್ಟಂತಿರುವುದು ಅಮೀರ್ ಖುಸ್ರೋನ ರಚನೆ. ಖುಸ್ರೋ ಒಂದು ಕಡೆ ಹೇಳುತ್ತಾನೆ:
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ
ಮೊರೇ ಮೆಹಬೂಬ್ ಕಾ ಘರ್ ರಂಗ್ ಹೈ
ಸಜನ್ ಮಿಲಾವರಾ, ಸಜನ್ ಮಿಲಾವರಾ ಮೊರೆ ಆಂಗನ್ ಕೊ
ಮೊಹೆ ಪೀರ್ ಪಾಯೋ ನಿಜಾಮುದೀನ್ ಔಲಿಯಾ.
ದೇಸ್ ಬಿದೇಸ್ ಮೇಂ ಢೂಂಡ್ ಫಿರೇ ಹೋ
ತೊರಾ ರಂಗ್ ಮನ ಭಾಯೋ ರಿ
ಜಗ್ ಉಜಿಯಾರೋ, ಜಗತ್ ಉಜಿಯಾರೋ
ಮೆಂ ತೋ ಐಸೋ ರಂಗ್ ಔರ್ ನಹಿಂ ದೆಖಿ ರೇ
ಮಂ ತೋ ಜಬ್ ದೇಖೂಂ ಮೊರೆ ಸಂಗ್ ಹೈ
ಆಜ್ ರಂಗ್ ಹೈ ಹೇ ಮಾನ್ ರಂಗ್ ಹೈ ರಿ
ಪ್ರಾಯಶಃ ಉರ್ದುವಿನಲ್ಲಿ ಹೋಳೀಗೆ ರಂಗುತುಂಬಿದ ಮೊದಮೊದಲ ರಚನೆಯಿದು. ಆಮೇಲೆ ಬಂದ ಎಲ್ಲ ಸೂಫಿಗಳೂ ಇದೇ ರಂಗಿನಲ್ಲಿ ಹೋಳಿಯಾಡಿದವರು. ಆ ಸಮಯದಲ್ಲಿ ಹಿಂದೂಮುಸ್ಲೀಮರಿಬ್ಬರಿಗೂ ನಿಧಾನವಾಗಿ ಒಬ್ಬರ ರಂಗು ಇನ್ನೊಬ್ಬರು ತುಂಬಿಕೊಳ್ಳತೊಡಗಿದ್ದರು. ಆ ರಂಗು ’ಗಗನಮಂಡಲ ಬೀಚ್ ಹೋಲೀ ಮಚೀ ಹೈ, ಕೊಯಿ ಗುರು ಗಮ್ ತೇ ಲಖಿ ಪಾಯೀ’ ಎಂದ ಕಬೀರನ ದೋಹೆಗಳಲ್ಲೂ ಕಾಣಬಹುದು. 
ಫಗುವಾ ನಾಮ ದಿಯೋ ಮೊಹಿ ಸತಗುರು, ತನ ಕೀ ತಪನ ಬುಝಾಯೀ’ ಎಂದ ಕಬೀರ ಸ್ವತಃ ಫಗುವಾ ಆಗಿಬಿಟ್ಟ. ಕಬೀರನಿಗೇ ಹೋಳಿ ಇಷ್ಟು ಹುಚ್ಚು ಹಿಡಿಸಿದ್ದರೆ ಸಾಮಾನ್ಯರ ಪಾಡೇನು? 
ಝೂಲತ್ ರಾಧಾ ಸಂಗ್, ಗಿರಿಧರ್ ಝೂಲತ್ ರಾಧಾ ಸಂಗ್ | 
ಅಬೀರ್ ಗುಲಾಲ್ ಕೀ ಧೂಮ್ ಮಚಾಯೀ, ಡಾರತ್ ಪಿಚಕಾರೀ ರಂಗ್ || 
ಎಂದಸಂತ  ಮೀರಾಳೂ ಇದೇ ರಂಗಿನಲ್ಲಿ ಮಿಂದೆದ್ದವಳು. ಮೀರಾಳಂತೆ ಕೃಷ್ಣನೊಂದಿಗೆ ಹೋಳಿಯಾಡಿದವರಲ್ಲಿ ’ಸೋಹೀ ಚೂನರಯಾ ರಂಗ್ ದೇ ಮೋಕಾ, ಓ ರಂಗರೇಜ್ ರಂಗೀಲೇ ಯಾರ್’ ಎಂದ ಶಾಹ್ ತುರಾಬ್ ಅಲಿ ಕಲಂದರನೂ ಒಬ್ಬ. ಕಟ್ಟಾ ಮುಸ್ಲೀಮನಾದರೂ
 ’ಶಾಮ್ ಬಿಹಾರಿ ಚತುರ್ ಖಿಲಾರೀ, ಖೇಲ್ ರಹಾ ಹೋರೀ ಸಖಿಯನ್ ಮಾ | 
ಅಬ್ ಕೀ ಹೋರೀ ಕಾ ರಂಗ್ ನ ಪೂಛೋ, ಧೂಮ್ ಮಚೀ ಹೈ ಬೃಂದಾವನ್ ಮಾ|
ಹಾತ್ ಲಿಯೆ ಪಿಚಕಾರೀ ಫಿರತ್ ಹೈ, ಅಬೀರ ಗುಲಾಲ್ ಭರೇ ದಾವನ ಮಾ |
ಕೈಸೆ ಸಖೀ ಕೋವೂ ನಿಕಸೆ ಮಂದಿರ, ಠಾಡೋ ಹೈ ಡೀಠ್ ಲಂಗರ್ ಆಂಗನ ಮಾ |
ಮೋ ಕಾ ಕಹಾಂ ವಹ ಢೂಂಢ್ ಪಾವೈ, ಮೇಂ ತೋ ಛುಪೀ ಹೂಂ ತುರಾಬ ಕೆ ಮನ ಮಾ||’ ಎಂದ ಕಲಂದರ ಯಾವ ಮೀರಳಿಗೆ ಕಮ್ಮಿ?
ಹದಿನೆಂಟನೇ ಶತಮಾನದಲ್ಲಿ ನಡೆದ ಭಕ್ತಿ ಚಳುವಳಿಯಲ್ಲಿ ಹಲವಾರು ನಿರ್ಗುಣ ಸಂತರು ಆಗಿಹೋದರು. ಅವರಲ್ಲಿ ಎರಡು ಪ್ರಮುಖ ಹೆಸರುಗಳು ಗುಲಾಲ್ ಸಾಹೇಬ್ ಹಾಗೂ ಬೀಖಾ ಸಾಹೇಬ್. ಇಬ್ಬರ ರಚನೆಗಳಲ್ಲೂ ಹೋಳಿ ಹಲವಷ್ಟು ಸಲ ಇಣುಕಿದೆ.
ಕೋಊ ಗಗನ ಮೇಂ ಹೋರೀ ಖೇಲೈ
ಪಾಂಚ್ ಪಚೀಸೋ ಸಖಿಯಾಂ ಗಾವಂಹೀ ಬಾನಿ ದಸೌ ದಿಸಿ ಮೆಲೈ
- ಗುಲಾಲ್ ಸಾಹೇಬ್
ಮನ ಮೇಂ ಆನಂದ್ ಫಾಗ್ ಉಠೋ ರೀ
ಇಂಗಲಾ ಪಿಂಗಲಾ ತಾರೀ ದೇವೈ ಸುಖಮನ್ ಗಾವತ್ ಹೋರಿ
- ಭೀಖಾ ಸಾಹೆಬ್
ದೇವಾ ಶರೀಫ್‌ನ ಉಲ್ಲೇಖವಿಲ್ಲದೇ ಭಾರತದಲ್ಲಿ ಹೋಳಿಯ ಆಚರಣೆಯ ಬಗ್ಗೆ ಹೇಳಿದರೆ ಅದು ಪೂರ್ತಿಯಾದಂತೆನಿಸುವುದಿಲ್ಲ. ಬಾರಾಬಂಕಿಯಲ್ಲಿ ಹಜರತ್ ವಾರಿಸ್-ಎ-ಪಾಕ್ ಎಂಬ ದರ್ಗಾವಿದೆ. ಹಜರತರ ಕಾಲದಿಂದಲೂ ಈ ಸ್ಥಳ ಹೋಳಿಹಬ್ಬಕ್ಕೆ ಹೆಸರುವಾಸಿ. ವಾರಿಸ್ ಅಂದೇ ಕರೆಕೊಟ್ಟಿದ್ದ ’ಧರ್ತಿ ಅಂಬರ್ ಝೂಮ್ ರಹೇ ಹೈಂ ಬರಸ್ ರಹಾ ಹೈ ರಣ್ಗ್, ಆವೋ ವರ್ಸಿಯಾಂ ಹೋಲಿ ಖೇಲೇಂ ವಾರಿಸ್ ಪಿಯಾ ಕೆ ಸಂಗ್’. ಇದು ಹೋಳೀಯಾಚರಿಸುವ ದೇಶದ ಏಕೈಕ ದರ್ಗಾ. ಅಂದು ಗುಲಾಲನ್ನೆರೆಚಲು ದೇಶದ ಮೂಲೆಮೂಲೆಯಿಂದ ಜನ ಇಲ್ಲಿಗಾಗಮಿಸುತ್ತಾರೆ. ಮಾತ್ರವಲ್ಲ, ಇಲ್ಲಿ ವರ್ಷಂಪ್ರತಿ ಎರಡು ಬಾರಿ ಉರುಸ್ ನಡೆಯುತ್ತದೆ. ಒಮ್ಮೆ ಸಫರ್ ತಿಂಗಳಲ್ಲಿ ಮುಸ್ಲೀಮರು ನಡೆಸಿಕೊಟ್ಟರೆ, ಇನ್ನೊಮ್ಮೆ ಕಾರ್ತಿಕ ಪೌರ್ಣಿಮೆಯಂದು ಹಿಂದೂಗಳು ನಡೆಸಿಕೊಡುವುದು. 
ಹಿಂದೂಸ್ತಾನದ ಮಣ್ಣಿನ ಗುಣವೇ ಅದಲ್ಲವೇ? ಇಲ್ಲಿ ಕೇಸರಿ ಬಣ್ಣವೂ ಇದೆ, ಹಸಿರೂ ಇದೆ, ಬಿಳಿಯೂ ಇದೆ. ಅವೆಲ್ಲವೂ ಸೇರಿಯೇ ಭಾರತವೆಂಬ ರಂಗೋಲಿಯಾಗಿದ್ದು. ಅನಾಮಿಕ ಸೂಫಿ ಕವಿಯೊಬ್ಬ ಹೇಳಿದಂತೆ
ರಂಗ್ ಹೋ, ಗುಲಾಲ್ ಹೋ, ವಿಶಾಲ್ ಹೀ ವಿಶಾಲ್ ಹೋ | ಯಾರ್ ಸಂಗ್ ಮಯ ಪಿಯೋ, ಯಾರ್ ಹೀ ಹಲಾಲ್ ಹೋ ||
ಹಾಜಿ ವಾರಿಸ್ ಅಲಿ ಷಾಹ್ ದರ್ಗಾದಲ್ಲಿ ವರ್ಷಂಪ್ರತಿ ಆಚರಿಸಲ್ಪಡುವ ಹೋಳಿ
ಹೌದು. ಬಣ್ಣಗಳಿಗೆ ಧರ್ಮವಿಲ್ಲ. ಬಣ್ಣಗಳಿಲ್ಲದೇ ಬದುಕಿಲ್ಲ. ಬದುಕು ಬಣ್ಣಗಳಂತೆ ರಂಜನೀಯವಾಗಿರಬೇಕೆಂದು ಬಯಸುವುದು ಸಹಜ ಧರ್ಮ. 
ಬದುಕು ಬಣ್ಣವಾಗಲಿ. ಬಣ್ಣಗಳಂತೆ ವಿಶಾಲವಾಗಲಿ. ಪವಿತ್ರವಾಗಲಿ.
ಕಹಿಂ ಅಬೀರ್ ಕೀ ಖುಷಬೂ, ಕಹಿಂ ಗುಲಾಲ್ ಕೆ ರಂಗ್
ಕಹಿಂ ಪರ್ ಶರ್ಮ್ ಸೆ ಲಿಪಟೆ ಹುಯೆ ಜಮಾಲ್ ಕಾ ರಂಗ್
ಚಲೆ ಭೀ ಆಓ ಭುಲಾಕರ್ ಕೆ ಸಬ್ ಗಿಲೆ ಶಿಕವೇ
ಬರಸನಾ ಚಾಹಿಯೇ ಹೋಲಿ ಕೆ ದಿನ್ ವಿಸಾಲ್ ಕಾ ರಂಗ್

ಹೋಲಿ ಮುಬಾರಕ್. ಸರ್ಫ್ ಎಕ್ಸೆಲ್ ಜಾಹಿರಾತಿನಿಂದ ಹಿಂದೂ ಧರ್ಮಕ್ಕೆ ಅವಮಾನವಾಯ್ತೆಂದುಕೊಂಡ ಎಲ್ಲರ ಆತ್ಮಕ್ಕೂ ಶಾಂತಿ ಸಿಗಲಿ.