Pages

Wednesday, July 20, 2016

ರಾಜಶೇಖರನ ಕಾವ್ಯಮೀಮಾಂಸೆಯೂ ಸಂಸ್ಕೃತ ಕಾವ್ಯಶೈಲಿಯೂ


       ಸಂಸ್ಕೃತ ಸಾಹಿತ್ಯದಲ್ಲಿ ಪ್ರೌಢಮಹಾಕವಿಗಳಲ್ಲಿ ಮೂರ್ಧನ್ಯನೂ, ಗಂಭೀರ ಸಾಹಿತ್ಯ ವಿದ್ವಾಂಸನೂ, ಅಲಂಕಾರಿಕರಲ್ಲಿ ಅಗ್ರಿಮನೂ ಆದವನು ರಾಜಶೇಖರ. ಬಾಲಭಾರತವೆಂಬ ನಾಟಕವನ್ನೂ, ವಿದ್ದಸಾಲಭಂಜಿಕಾ ಎಂಬ ನಾಟಿಕೆಯನ್ನೂ, ಕರ್ಪೂರಮಂಜರಿ ಎಂಬ ಪ್ರಾಕೃತ ಭಾಷೆಯಲ್ಲಿ ಸಟ್ಟಿಕೆಯನ್ನೂ ರಚಿಸಿದ ರಾಜಶೇಖರ ಪ್ರಖ್ಯಾತನಾಗಿರುವುದು ಹರವಿಲಾಸವೆಂಬ ಅನುಪಲಬ್ಧ ಮಹಾಕಾವ್ಯ ಮತ್ತು ಕಾವ್ಯಮೀಮಾಂಸೆಯೆಂಬ ಸಂಸ್ಕೃತದ ಅಪ್ರತಿಮ ಅಲಂಕಾರಿಕ ಶಾಸ್ತ್ರೀಯ ಗ್ರಂಥದಿಂದ.
       ಕಾವ್ಯಮೀಮಾಂಸೆಯ ಪ್ರಕಾರ ಪರಮೇಶ್ವರನು ಕಾವ್ಯವಿದ್ಯೆಯನ್ನು ಪ್ರಪ್ರಥಮವಾಗಿ ತನ್ನ ಮೊದಲ ಶಿಷ್ಯನಾದ ಸ್ವಯಂಭೂ ಬ್ರಹ್ಮನ ಮಾನಸಪುತ್ರನಾದ ಕಾವ್ಯಪುರುಷನಿಗೆ ಉಪದೇಶಿಸಿದನು. ಈ ಕಾವ್ಯಪುರುಷನನ್ನು ಕಾವ್ಯವಿದ್ಯೆಯ ಪ್ರವರ್ತಕನೆಂದು ಭಾವಿಸಲಾಗುತ್ತದೆ. ಕಾವ್ಯಪುರುಷನು ಕಾವ್ಯವಿದ್ಯೆಯನ್ನು ಸ್ವರ್ಗದಲ್ಲಿರುವ ತನ್ನ ಹದಿನೆಂಟು ಶಿಷ್ಯರಿಗೆ ಹದಿನೆಂಟು ಭಾಗವಾಗಿ ಉಪದೇಶಿಸಿದನು. ಈ ಶಿಷ್ಯರು ಹದಿನೆಂಟು ಭಾಗವುಳ್ಳ ಕಾವ್ಯವಿದ್ಯೆಯ ಒಂದೊಂದು ಭಾಗದಲ್ಲಿ ವಿಶೇಷಜ್ಞಾನವನ್ನು ಪಡೆದು ಪ್ರತ್ಯೇಕವಾದ ಗ್ರಂಥಗಳನ್ನು ರಚಿಸಿದರು. ಅವರಲ್ಲಿ ಸಹಸ್ರಾಕ್ಷನು ’ಕವಿರಹಸ್ಯ’ ಎಂಬ ಗ್ರಂಥವನ್ನೂ, ಉಕ್ತಿಗರ್ಭನು ’ಉಕ್ತಿವಿಚಾರ’ವನ್ನೂ, ಸುವರ್ಣನಾಭನು ’ರೀತಿನಿರ್ಣಯ’ವನ್ನೂ, ಪ್ರಚೇತನು ’ಅನುಪ್ರಾಸ’ವನ್ನೂ, ಚಿತ್ರಾಂಗನು ’ಯಮಕ ಮತ್ತು ಚಿತ್ರಕಾವ್ಯ’ವನ್ನೂ, ಆದಿಶೇಷನು ’ಶಬ್ದಶ್ಲೇಷ’ವನ್ನೂ, ಪುಲಸ್ತ್ಯನು ’ಸ್ವಭಾವೋಕ್ತಿ’ಯನ್ನೂ, ಔಪಕಾಯನನು ’ಉಪಮೆ’ಯನ್ನೂ, ಪಾರಾಶರನು ’ಅತಿಶಯೋಕ್ತಿ’ಯನ್ನೂ, ಉತಥ್ಯನು ’ಅರ್ಥಶ್ಲೇಷ’ವನ್ನೂ, ಕುಬೇರನು ’ಉಭಯಾಲಂಕಾರ’ವನ್ನೂ, ಕಾಮದೇವನು ’ವಿನೋದ ತತ್ತ್ವ’ವನ್ನೂ, ಭರತನು ’ನಾಟ್ಯಶಾಸ್ತ್ರ’ವನ್ನೂ, ನಂದಿಕೇಶ್ವರನು ’ರಸಸಿದ್ಧಾಂತ’ವನ್ನೂ, ಬೃಹಸ್ಪತಿಯು ’ದೋಷಪ್ರಕರಣ’ವನ್ನೂ, ಉಪಮನ್ಯುವು ’ಗುಣಸಿದ್ಧಾಂತ’ವನ್ನೂ, ಕುಚುಮಾರನು ’ರಹಸ್ಯತಂತ್ರ’ವನ್ನೂ ರಚಿಸಿದರು. ವಿಭಿನ್ನ ವಿಷಯಗಳನ್ನು ನಿರೂಪಿಸುವ ಗ್ರಂಥ ರಚನೆಗಳಿಂದ ಕಾವ್ಯವಿದ್ಯೆಯು ಅನೇಕ ವಿಭಾಗಗಳಲ್ಲಿ ವಿಭಕ್ತವಾಗಿರುವುದರಿಂದ ನಿರೂಪಣೆ ವಿಚ್ಛಿದ್ರವಾಯಿತು. ಆದ್ದರಿಂದ ಕಾವ್ಯಶಾಸ್ತ್ರದ ಎಲ್ಲಾ ವಿಚಾರಗಳನ್ನೂ ಸಂಕ್ಷೇಪಿಸಿ ಹದಿನೆಂಟು ಅಧಿಕರಣಗಳುಳ್ಳ ಕಾವ್ಯಮೀಮಾಂಸೆಯನ್ನು ರಚಿಸಿರುವುದಾಗಿ ರಾಜಶೇಖರ ಹೇಳಿಕೊಂಡಿದ್ದಾನೆ.
       ಕಾವ್ಯಮೀಮಾಂಸೆಯ ಹದಿನೆಂಟು ಭಾಗಗಳಲ್ಲಿ ಮೊದಲನೇಯದಾದ ಕಾವ್ಯಪುರುಷೋತ್ಪತ್ತಿ ಪ್ರಕರಣದಲ್ಲಿ ಒಂದು ಕಥಾನಕವಿದೆ. ಬ್ರಹ್ಮನ ವರದಿಂದ ಸರಸ್ವತಿಯು ಕಾವ್ಯಪುರುಷನಿಗೆ ಜನ್ಮವಿತ್ತಳಂತೆ. ಹುಟ್ಟಿದ ಕೂಡಲೇ ಕಾವ್ಯಪುರುಷನು ಸರಸ್ವತಿಯ ಪಾದಗಳಿಗೆ ನಮಸ್ಕರಿಸಿ ಛಂದೋಬದ್ಧವಾದ ವಾಣಿಯಲ್ಲಿ ಹೀಗೆ ಹೇಳಿದನು.
ಯದೇತದ್ವಾಙ್ಮಯಂ ವಿಶ್ವಮರ್ಥಮೂರ್ತ್ಯಾ ವಿವರ್ತತೇ |
ಸೋಽಸ್ಮಿ ಕಾವ್ಯಪುಮಾನಂಬ ಪಾದೌ ವಂದೇಯ ತಾವಕೌ ||

- ಮಾತೇ, ಸಕಲ ವಾಞ್ಮಯ ಪ್ರಪಂಚವನ್ನು ಅರ್ಥರೂಪದಲ್ಲಿ ಪರಿಣಿತವನ್ನಾಗಿ ಮಾಡುವ ಕಾವ್ಯಪುರುಷನು ನಿನ್ನ ಚರಣಗಳಿಗೆ ವಂದಿಸುತ್ತಾನೆ.
       ಈ ರೀತಿಯ ಛಂದೋಬದ್ಧವಾದ ವಾಣಿಯು ಇಲ್ಲಿಯವರೆಗೆ ವೇದಗಳಲ್ಲಿ ಮಾತ್ರ ಉಪಲಬ್ಧವಿದ್ದರೂ, ಈಗ ಅದಕ್ಕೆ ಸಮಾನವಾಗಿ ಸಂಸ್ಕೃತದಲ್ಲಿ ಶ್ರುತವಾದುದಕ್ಕೆ ಸರಸ್ವತಿ ಹರ್ಷಗೊಂಡು ಕಾವ್ಯಪುರುಷನನ್ನು ಛಂದೋಬದ್ಧವಾಣಿಯ ಆದ್ಯಪ್ರವರ್ತಕನಾಗೆಂದು ಹರಸಿದಳು. ಹೀಗೆ ಸರಸ್ವತಿಯು ತನ್ನ ಪುತ್ರನಿಗೆ ಆಶೀರ್ವದಿಸಿ ಒಂದು ವೃಕ್ಷದ ಕೆಳಗೆ ಶಿಶುವನ್ನು ಮಲಗಿಸಿ ಆಕಾಶಗಂಗೆಯಲ್ಲಿ ಸ್ನಾನಕ್ಕೆ ತೆರಳಿದಳಂತೆ.(ಪಾರ್ವತಿಯ ಕಥೆಯೂ ಅದೇ. ಮಣ್ಣಿನಿಂದ ಬಾಲಕನನ್ನು ಸೃಷ್ಟಿಸಿ ಸೀದಾ ಮೀಯಲು ಹೋದಳು. ಪುರಾಣಕಾಲದ ಸ್ಕ್ರಿಪ್ಟ್ ರೈಟರುಗಳು ಬೇರೇನಾದರೂ ಬರೆಯಬೇಕಿತ್ತೆಂದು ನನಗಾಗಾಗ ಅನಿಸುವುದುಂಟು). ಆ ವೇಳೆಗೆ ನಿತ್ಯಕರ್ಮಾಚರಣೆಗಾಗಿ ಹೊರಟಿದ್ದ ಶುಕ್ರಾಚಾರ್ಯನು ಸೂರ್ಯತಾಪದಿಂದ ಬಳಲಿದ್ದ ಅನಾಥ ಶಿಶುವನ್ನು ಕಂಡು ತನ್ನ ಆಶ್ರಮಕ್ಕೆ ತೆಗೆದುಕೊಂಡು ಹೋದನು. ಕಾವ್ಯಪುರುಷನ ಪ್ರೇರಣೆಯಿಂದ ಶುಕ್ರನ ಹೃದಯದಿಂದ ಸ್ತುತಿಯೊಂದು ಹೊರಟಿತಂತೆ.
ಯಾ ದುಗ್ಧಾಪಿ ನ ದುಗ್ಧೇನ ಕವಿದೋಗ್ಧೃಭಿರನ್ವಹಮ್ |
ಹೃದಿ ನಃ ಸನ್ನಿಧತ್ತಾಂ ಸಾ ಸೂಕ್ತಿಧೇನುಃ ಸರಸ್ವತೀ ||

- ಪ್ರತಿನಿತ್ಯವೂ ಕವಿಗಳೆಂಬ ಗೋಪಾಲಕರು ಹಾಲು ಕರೆಯುವ ಸೂಕ್ತಿಗಳೆಂಬ ಕಾಮಧೇನುವಾದ ಸರಸ್ವತಿಯು ನಮ್ಮ ಹೃದಯದಲ್ಲಿ ವಾಸಿಸಲಿ.
       ಅದು ಆ ಕಡೆಯ ಕಥೆಯಾದರೆ, ಈಚೆ ಸರಸ್ವತಿಯು ಮಿಂದು ಬಂದಾಗ ತನ್ನ ಪುತ್ರನನ್ನು ಕಾಣದೇ ದುಃಖದಿಂದ ಪರಿತಪಿಸಿದಳು. ಆ ವೇಳೆಗೆ ಅಲ್ಲಿಗಾಗಮಿಸಿದ ವಾಲ್ಮೀಕಿಯು ನಡೆದ ವಿಷಯವನ್ನು ತಿಳಿಸಿ ಭಾರ್ಗವನ ಆಶ್ರಮದ ಮಾರ್ಗವನ್ನು ಸರಸ್ವತಿಗೆ ತಿಳಿಸಿದ. ತನ್ನ ಪುತ್ರನಿರುವ ಸ್ಥಾನವನ್ನು ಹೇಳಿರುವ ಕಾರಣದಿಂದ, ಸರಸ್ವತಿ ಕೃತಜ್ಞತಾಭಾವದಿಂದ ವಾಲ್ಮೀಕಿಗೆ ಛಂದೋಮಯ ವಾಣಿಯಲ್ಲಿ ಕಾವ್ಯರಚನೆ ಮಾಡಲು ವರವಿತ್ತಳು. ಸರಸ್ವತಿಯ ಆದೇಶವನ್ನು ಪಡೆದು ತನ್ನ ಆಶ್ರಮಕ್ಕೆ ಬರುತ್ತಿರುವಾಗ ಬೇಡನೊಬ್ಬನ ಬಾಣದಿಂದ ಹೆಣ್ಣು ಕ್ರೌಂಚ ಪಕ್ಷಿ ಹತವಾದದ್ದನ್ನೂ, ಅದನ್ನು ನೋಡಿ ದುಃಖದಿಂದ ಆಕ್ರಂದಿಸುವ ಗಂಡುಪಕ್ಷಿಯನ್ನು ಕಂಡು ಶೋಕತಪ್ತಗೊಂಡ ವಾಲ್ಮೀಕಿಯ ಮುಖದಿಂದ ಶೋಕಮಯ ವಾಣಿಯು ಹೊರಹೊಮ್ಮಿತು.
ಮಾ ನಿಷಾದ ಪ್ರತಿಷ್ಠಾಂ ತ್ವಮಾಗಮಃ ಶಾಶ್ವತೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಮವಧಿಃಕಾಮಮೋಹಿತಮ್ ||

      ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಗೋವಿಂದರಾಜನೇ ಇತ್ಯಾದಿ ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಅದೇನೇ ಇದ್ದರೂ ಹೀಗೆ ಸ್ವಾಭಾವಿಕ ವಾಣಿಯು ಹೊರಹೊಮ್ಮಿದ ನಂತರ ವಾಲ್ಮೀಕಿ ಭೂಲೋಕದಲ್ಲಿ ಕಾವ್ಯಪರಂಪರೆಯ ಪ್ರಥಮ ಪ್ರವರ್ತಕನೆಂದು ಹೆಸರಾಗಿ ಆದಿಕವಿಯೆಂದು ಪ್ರಸಿದ್ಧನಾದನು.
       ಇದೇ ವೇಳೆ ಅತ್ತ ಬ್ರಹ್ಮಲೋಕದಲ್ಲಿ ಋಷಿಗಳಿಗೂ ದೇವತೆಗಳಿಗೂ ಯಾವುದೋ ವಿಷಯದಲ್ಲಿ ವಿವಾದವುಂಟಾಯಿತಂತೆ. ಆಗ ಬ್ರಹ್ಮನು ಸರಸ್ವತಿಯನ್ನು ವಿವಾದ ನಿರ್ಣಾಯಕಳಾಗಿ ನೇಮಿಸಲುದ್ದೇಶಿಸಿದ. ಕಾರಣ, ಸರಸ್ವತಿಯು ಕಾವ್ಯಪುರುಷನನ್ನು ಭೂಲೋಕದಲ್ಲಿಯೇ ಬಿಟ್ಟು ಬ್ರಹ್ಮಲೋಕಕ್ಕೆ ಹೊರಟಳು. ತನ್ನನ್ನು ಒಬ್ಬಂಟಿಯಾಗಿ ಬಿಟ್ಟುಹೋದುದರಿಂದ ಸಿಟ್ಟಿಗೆದ್ದ ಕಾವ್ಯಪುರುಷ ತನ್ನ ಸ್ಥಾನವನ್ನು ಬಿಟ್ಟು ಹೊರಟು ಹೋದನಂತೆ.
       ಕಾವ್ಯಪುರುಷ ಮರ್ತ್ಯಲೋಕವನ್ನು ತೊರೆದು ಹೋಗುತ್ತಿರುವುದನ್ನು ಕಂಡ ಪಾರ್ವತಿ ಅವನನ್ನು ವಶಪಡಿಸಿಕೊಳ್ಳಲು ಸಾಹಿತ್ಯವಧುವೆಂಬ ಸ್ತ್ರೀಯನ್ನು ಸೃಷ್ಟಿಸಿ ಕಾವ್ಯಪುರುಷನನ್ನು ಮರಳಿ ತಿರುಗಿ ಬರುವಂತೆ ಮಾಡೆಂದು ಆದೇಶಿಸಿದಳು. ಇನ್ನೊಂದೆಡೆ ಮುನಿಗಳನ್ನು ಕುರಿತು ಕಾವ್ಯಪುರುಷನನ್ನು ತೃಪ್ತಗೊಳಿಸಲು ಅವನನ್ನು ಹಿಂಬಾಲಿಸಿ ಸ್ತುತಿಸುವಂತೆ ಹೇಳಿದಳು.
ಸಾಹಿತ್ಯವಧುವಿನಿಂದ ಹಿಂಬಾಲಿಸಲ್ಪಟ್ಟ ಕಾವ್ಯಪುರುಷನು ಪೂರ್ವ ದಿಕ್ಕಿಗೆ ಸಂಚರಿಸಿದನು. ಅಂಗ, ವಂಗ, ಬ್ರಹ್ಮ, ಪುಂಡ್ರ ಮೊದಲಾದ ಜನಪದಗಳು ಈ ದಿಕ್ಕಿನಲ್ಲಿದ್ದವು. ಕಾವ್ಯಪುರುಷನನ್ನು ಪ್ರಸನ್ನಗೊಳಿಸಲು ಸಾಹಿತ್ಯವಧುವು ಆಯಾ ಜನಪದಗಳ ವೇಷವನ್ನು ಧರಿಸಿದಳು. ಈ ಪ್ರಾಂತ್ಯದ ರಚನಾ ಪ್ರವೃತ್ತಿ ’ಓಢ್ರಮಾಗಧಿ’ ಎಂದು ಹೆಸರು ಪಡೆಯಿತು. ಸಾಹಿತ್ಯ ವಧುವು ಈ ದೇಶದಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳು ’ಭಾರತೀ ವೃತ್ತಿ’ ಎಂದು ಹೆಸರಾದವು. ಪೂರ್ವದೇಶದಲ್ಲಿ ಸಾಹಿತ್ಯವಧುವು ವೇಷರಚನಾದಿಗಳ ಮೂಲಕ ಎಷ್ಟೇ ಪ್ರಯತ್ನಪಟ್ಟರೂ ಕಾವ್ಯಪುರುಷ ಅವಳೆಡೆ ಆಕರ್ಷಿತನಾಗಲಿಲ್ಲ. ಆಗ ಅವಳು ದೀರ್ಘಸಮಾಸ, ಅನುಪ್ರಾಸ, ಯೋಗವೃತ್ತಿಗಳಿಂದ ಹೇಳಿದ ವಚನವು ’ಗೌಡೀ’ ಶೈಲಿಯೆಂದು ಪ್ರಸಿದ್ಧವಾಯಿತು. ಆಯಾ ದೇಶದ ವೇಷವಿನ್ಯಾಸ ಕ್ರಮವನ್ನು ’ಪ್ರವೃತ್ತಿ’ ಎಂದೂ, ನೃತ್ಯಗಾನಾದಿ ವಿನ್ಯಾಸಗಳನ್ನು ’ವೃತ್ತಿ’ ಎಂದೂ, ಕಾವ್ಯರಚನಾವಿನ್ಯಾಸವನ್ನು ’ರೀತಿ ಅಥವಾ ಶೈಲಿ’ ಎಂದೂ ಅಲಂಕಾರಿಕರು ಕರೆದಿದ್ದಾರೆ.
       ಅನಂತರ ಕಾವ್ಯಪುರುಷನು ಪಾಂಚಾಲ ದೇಶದೆಡೆ ಹೊರಟ. ಇಲ್ಲಿ ಪಾಂಚಾಲ, ಶೌರಸೇನ, ಕಾಶ್ಮೀರ, ಬಾಹ್ಲೀಕ ಮುಂತಾದ ಜನಪದಗಳಿದ್ದವು. ಅವನನ್ನು ಹಿಂಬಾಲಿಸಿ ಬಂದ ಸಾಹಿತ್ಯವಧುವು ಅನುಸರಿಸಿದ ವೇಷವು ’ಪಾಂಚಾಲಮಧ್ಯಮಾ’ ಪ್ರವೃತ್ತಿಯೆಂದು, ಪ್ರದರ್ಶಿಸಿದ ನೃತ್ಯಗೀತಾದಿಗಳನ್ನು ’ಸಾತ್ವತೀ’ವೃತ್ತಿಯೆಂದು ಪ್ರಸಿದ್ಧವಾದವು. ಈ ದೇಶಕ್ಕಾಗಮಿಸಿದ ನಂತರ ಕಾವ್ಯಪುರುಷನ ಮನಸ್ಸು ಸಾಹಿತ್ಯವಧುವಿನೆಡೆಗೆ ಅಲ್ಪಸ್ವಲ್ಪ ಆಕರ್ಷಿತವಾಯಿತು. ಕಾವ್ಯಪುರುಷನು ಸರಸಹೃದಯಿಯಾಗಿ ಲಘುಸಮಾಸ ಮತ್ತು ಅಲ್ಪ ಅನುಪ್ರಾಸಗಳಿಂದ ಯುಕ್ತವಾದ ಲಾಕ್ಷಣಿಕ ವಾಕ್ಯಗಳನ್ನು ಪ್ರಯೋಗಿಸಿದ. ಇದೇ ’ಪಾಂಚಾಲೀ’ಶೈಲಿಯೆಂದು ಹೆಸರಾಯಿತು.
       ನಂತರ ಕಾವ್ಯಪುರುಷ ಆವಂತೀ ದೇಶಕ್ಕೆ ಹೋದನು. ಅಲ್ಲಿ ಆವಂತೀ, ವೈದಿಶ, ಸೌರಾಷ್ಟ್ರ, ಮಾಲವ, ಭೃಗುಕಚ್ಛ ಮೊದಲಾದ ಜನಪದಗಳಿದ್ದವು. ಅಲ್ಲಿ ಸಾಹಿತ್ಯವಧುವು ಅನುಕರಿಸಿದ ವೇಷವನ್ನು ’ಆವಂತೀ’ ಪ್ರವೃತ್ತಿಯೆಂದು ಮುನಿಗಳು ಕರೆದರು. ಇದು ಪಾಂಚಾಲಮಾಧ್ಯಮ ಮತ್ತು ದಾಕ್ಷಿಣಾತ್ಯದ ನಡುವಿನ ಪ್ರವೃತ್ತಿಯಾಗಿದೆ, ಆದ್ದರಿಂದ ಪಾಂಚಾಲದ ’ಸಾತ್ವತೀ’ ಹಾಗೂ ದಾಕ್ಷಿಣಾತ್ಯದ ’ಕೈಶಿಕೀ’ ಇವೆರಡೂ ಆವಂತಿಯ ವೃತ್ತಿಗಳೆನಿಸಿದವು. ಪಾಂಚಾಲ ಮತ್ತು ದಕ್ಷಿಣ ದೇಶದ ವೇಷ, ಭೂಷಣ, ವ್ಯವಹಾರಾದಿಗಳ ಸಮ್ಮಿಶ್ರಣವು ಆವಂತೀದೇಶದಲ್ಲಿ ಕಂಡುಬರುವುದಂತೆ.
       ಅನಂತರ, ಕಾವ್ಯಪುರುಷನು ದಕ್ಷಿಣ ದೇಶಕ್ಕೆ ತೆರಳಿದನು. ಅಲ್ಲಿ ಮಲಯ, ಮೇಖಲ, ಕೇರಳ, ಮಂಜರಾದಿ ದೇಶಗಳಿದ್ದವು. ಈ ದಕ್ಷಿಣ ದೇಶಕ್ಕೆ ಬರುವವರೆಗೆ ಕಾವ್ಯಪುರುಷನು ಸಾಹಿತ್ಯವಧುವಲ್ಲಿ ಪೂರ್ಣವಾಗಿ ಅನುರಕ್ತನಾದನು. ಅನುರಾಗವಶನಾಗಿ ಕಾವ್ಯಪುರುಷನು ಧರಿಸಿದ ವೇಷವನ್ನು ಅಲ್ಲಿಯ ಜನ ಅನುಕರಿಸಿದರು. ಇದು ’ದಾಕ್ಷಿಣಾತ್ಯ’ ಪ್ರವೃತ್ತಿಯೆಂದು ಕರೆಯಲ್ಪಟ್ಟಿತು. ಅದರಂತೆ ಸಾಹಿತ್ಯವಧುವು ಅಲ್ಲಿ ಪ್ರದರ್ಶಿಸಿದ ನೃತ್ಯಗಾನಾದಿಗಳನ್ನು ’ಕೈಶಿಕೀ’ ವೃತ್ತಿಯೆಂದು ಮುನಿಗಳು ಕರೆದರು. ಕಾವ್ಯಪುರುಷನು ಪ್ರಸನ್ನಚಿತ್ತನಾಗಿ ಅನುಪ್ರಾಸಯುಕ್ತವಾದ, ಸಮಾಸರಹಿತವಾದ, ಅಭಿದಾವೃತ್ತಿಪೂರ್ಣವಾದ ಮಾತುಗಳನ್ನಾಡಿದನು. ಇದನ್ನು ’ವೈದರ್ಭೀ’ ರೀತಿ ಎಂದು ಕರೆಯಲಾಯಿತು. ಕಾವ್ಯಪುರುಷನು ಪೂರ್ಣವಾಗಿ ಸಾಹಿತ್ಯವಧುವಿನಲ್ಲಿ ಅನುರಕ್ತನಾದಾಗ ನುಡಿದ ವೈದರ್ಭೀ ಶೈಲಿಯನ್ನು ಕಾವ್ಯಾರಚನೆಯಲ್ಲಿ ಸರ್ವೋತ್ಕೃಷ್ಟ ಶೈಲಿಯೆಂದು ಪರಿಗಣಿಸಲಾಗಿದೆ. ಇದರ ತಾತ್ಪರ್ಯವೆಂದರೆ ಭಾರತದ ಪೂರ್ವಭಾಗದ ಕಾವ್ಯರಚನೆಯಲ್ಲಿ ಔಢ್ರಮಾಗಧಿ ಪ್ರವೃತ್ತಿ, ಭಾರತೀ ವೃತ್ತಿ, ಗೌಡೀಯ ಶೈಲಿಗಳು ಕಂಡುಬರುತ್ತವೆ. ಪಶ್ಚಿಮೋತ್ತರೀಯ ಭಾಗದಲ್ಲಿ ಪಾಂಚಾಲಮಾಧ್ಯಮಾ ಪ್ರವೃತ್ತಿ, ಸಾತ್ವತೀ ವೃತ್ತಿ ಮತ್ತು ಪಾಂಚಾಲಿ ಶೈಲಿಗಳು ಕಂಡುಬರುತ್ತವೆ. ದಕ್ಷಿಣ ಭಾಗದಲ್ಲಿ ದಾಕ್ಷಿಣಾತ್ಯ ಪ್ರವೃತ್ತಿಯೂ, ಕೈಶಿಕೀ ವೃತ್ತಿಯೂ, ವೈದರ್ಭೀ ಶೈಲಿಯೂ ಕಾಣಸಿಗುತ್ತದೆ.
       ಸಂಸ್ಕೃತ ಕಾವ್ಯಶೈಲಿಗಳ ಆದ್ಯ ಪ್ರವರ್ತಕ ವಾಮನ. ಇವನಿಗಿಂತ ಮುಂಚೆ ವೈದರ್ಭೀ, ಗೌಡೀ ಎಂಬ ಮಾರ್ಗಭೇದಗಳನ್ನು ದಂಡಿ ಒಪ್ಪಿದ್ದರೂ ಭಾಮಹನು ಅವುಗಳ ಭೇದ ಅಸ್ಪಷ್ಟವೆಂದು ಕಡೆಗಣಿಸಿದ್ದಾನೆ. ಈ ಎರಡಕ್ಕೆ ಪಾಂಚಾಲಿಯೆಂಬ ಮೂರನೇಯದನ್ನು ಕೂಡಿಸಿ ಮೂರೂ ರೀತಿಗಳಿಗೂ ಸ್ಪಷ್ಟವಾದ ಗುಣವೈಶಿಷ್ಟ್ಯವನ್ನು ಎತ್ತಿ ತೋರಿಸಿ ಶೈಲಿ ಅಥವಾ ರೀತಿಯೇ ಕಾವ್ಯದ ಆತ್ಮವೆಂದು ವಾಮನ ತೀರ್ಮಾನಿಸಿದ್ದಾನೆ. ವಾಮನನ ನಂತರ ಬಂದ ರುದ್ರಟ ತನ್ನ ಕಾವ್ಯಾಲಂಕಾರದಲ್ಲಿ ಆವಂತಿಯ ಶೈಲಿಯನ್ನು ಬೇರ್ಪಡಿಸಿ ಲಾಟೀಯ ಎಂಬ ನಾಲ್ಕನೇ ರೀತಿಯನ್ನು ಹೇಳುತ್ತಾನೆ. ಆದರೆ ರಾಜಶೇಖರ ಸಂಪೂರ್ಣವಾಗಿ ’ರೀತಿರಾತ್ಮಾ ಕಾವ್ಯಸ್ಯ’ ಎಂದ ವಾಮನನ ಸಿದ್ಧಾಂತವನ್ನೇ ಅಂಗೀಕರಿಸಿದ್ದಾನೆ. ಅಲಂಕಾರ, ಗುಣ, ರಸ ಇವುಗಳ ಪ್ರಾಧ್ಯಾನ್ಯವನ್ನು ಹೇಳಿದ ರಾಜಶೇಖರನೇ ಭಾಷೆಯ ದೃಷ್ಟಿಯಿಂದ ’ರೀತಿ’ಗೆ ಪರಮಪ್ರಾಶಸ್ತ್ಯವನ್ನು ಕೊಟ್ಟಿರುವುದನ್ನು ನಮ್ಮ ಈ ಕಾಲದ ಹೆಚ್ಚಿನ ಕವಿಪುಂಗವರೆಲ್ಲ ಮೆರತಂತಿದೆ. ಅರ್ಥಬೋಧಕತ್ವವಿದ್ದರೆ ಅದು ಲೌಕಿಕ ಭಾಷೆಯಾಗುತ್ತದೆಯೇ ಹೊರತೂ ಕಾವ್ಯಭಾಷೆಯಾಗುವುದಿಲ್ಲ. ಕಾವ್ಯಭಾಷೆಯೆನಿಸಿಕೊಳ್ಳಲು ಶಬ್ದಾರ್ಥಗಳಲ್ಲಿ ರಸಿಕವೇದ್ಯವಾದ ಕೆಲ ಗುಣಗಳಿರಬೇಕು. ಶಬ್ದಾಡಂಬರ, ಪಾಂಡಿತ್ಯಪ್ರದರ್ಶನ, ಕೃತಿಮಾಲಂಕಾರಗಳು ಒಂದು ರೀತಿಯಾದರೆ, ಲಲಿತ-ಪ್ರಸನ್ನ-ಮಧುರವಾದ ಸಹಜಾಭಿವ್ಯಕ್ತಿಯ ಕಾವ್ಯಗಳದ್ದು ಎರಡನೇಯ ರೀತಿ, ಇವೆರಡರ ಸಮ್ಮಿಶ್ರಣವೇ ಮೂರನೇಯದು. ಸಂಸ್ಕೃತ ಕಾವ್ಯಭಾಷೆಯನ್ನು ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಂದು ವಾಮನನ ಅಭಿಪ್ರಾಯ. ಹೀಗೆ ಕಾವ್ಯಭಾಷೆಯ ಸೌಂದರ್ಯ ವ್ಯಕ್ತವಾಗುವ ಮೂರು ವಿಧಗಳೇ ಗೌಡೀ, ಪಾಂಚಾಲೀ, ವೈದರ್ಭೀ ಎಂಬ ಮೂರು ರೀತಿಗಳು.
       ಸರಳ ಉದಾಹರಣೆಯೆಂದರೆ ಕಾಳಿದಾಸನ ಕಾವ್ಯಗಳದ್ದು ವೈದರ್ಭೀ ಶೈಲಿ. ಅವನು ಸುಕುಮಾರಗಂಭೀರ. ಸ್ನಿಗ್ಧಪ್ರಶಾಂತ. ಶಾಂತದಲ್ಲಿ ಪರ್ಯವಸಿಸುವ ಶೃಂಗಾರ ಅವನ ಪ್ರಿಯವಾದ ರಸ. ಪಾತ್ರಗಳ ಸ್ವಭಾವೋನ್ನತಿ, ರಸಾವಿಷ್ಕಾರಗಳ ಚರಮಸೀಮೆಯನ್ನು ಕಾಳಿದಾಸನ ಕಾಲದಲ್ಲಾಗಲೇ ಸಂಸ್ಕೃತ ಸಾಹಿತ್ಯ ತಲುಪಿದ್ದರಿಂದ ಅನಂತರದ ಕವಿಗಳಿಗೆ ತಮ್ಮ ಅನನ್ಯತೆಯನ್ನು ಸ್ಥಾಪಿಸಲು ನೂತನ ಮಾರ್ಗಗಳನ್ನು ಆವಿಷ್ಕರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಮಜದ ವಿಷಯವೆಂದರೆ ಕಾಳಿದಾಸೋತ್ತರ ಕಾಲದಲ್ಲಿ ಅಂಥ ಯಾವ ಕವಿಗಳೂ ನೂತನ ಕಥಾವಸ್ತುವಿನ ಆವಿಷ್ಕಾರ ಮಾಡದೇ ಪಾರಂಪರಿಕವಾಗಿ ಉಪಲಬ್ಧವಿರುವ ವಸ್ತುವಿನಲ್ಲೇ ಕಾವ್ಯರಚಿಸಿಕೊಂಡು ಹೋದರು. ರಾಮಾಯಣಾದಿಗಳೂ, ಪುರಾಣ ಕತೆಗಳೂ ಜನರಿಗೇನು ಹೊಸದಾಗಿರಲಿಲ್ಲ. ಕಾಳಿದಾಸನಂಥವರೇ ಬರೆದಿಟ್ಟ ಮೇಲೆ ಅದನ್ನು ಮೀರಿಸಿ ಬರೆಯುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಕವಿಗಳು ತಮ್ಮ ಕಾವ್ಯದಲ್ಲಿ ಅವಕಾಶವಿರುವೆಡೆಯಲ್ಲೆಲ್ಲ ತಮ್ಮ ಪಾಂಡಿತ್ಯವನ್ನೂ ಅತಿಕ್ಲಿಷ್ಟ ಶೈಲಿಯನ್ನೂ ಪ್ರಕಟಿಸತೊಡಗಿದ್ದರಿಂದ ಸಂಸ್ಕೃತ ಕಾವ್ಯಸ್ವರೂಪ ಪೂರ್ತಿ ಭಿನ್ನವಾದ ಆಯಾಮವನ್ನು ಪಡೆದುಕೊಂಡಿತು. ಸಹಜಾಭಿವ್ಯಕ್ತಿ ಮೂಲೆಗುಂಪಾಗಿ ಪಾಂಡಿತ್ಯಪ್ರದರ್ಶನವೇ ಪ್ರಧಾನವಾಯಿತು.(ಕನ್ನಡದ ರಿಮೇಕ್ ಶೂರ ನಿರ್ದೇಶಕರು ಹೇಳುವಂತೆ ಈ ಚಿತ್ರವು ಆ ಚಿತ್ರದ ರಿಮೇಕ್ ಆದರೂ ಕಥೆಯನ್ನು ನೇಟಿವಿಟಿಗೆ ತಕ್ಕಂತೆ ಬದಲಾಯಿಸಲಾಗಿದೆ. ಮೂರು ಹಾಡುಗಳನ್ನು ಸ್ವಿಜರ್ಲೆಂಡಿನಲ್ಲೂ, ಎರಡು ಹಾಡುಗಳನ್ನು ಅಂಟಾರ್ಟಿಕಾದಲ್ಲೂ ಶೂಟಿಂಗ್ ಮಾಡಲಾಗಿದೆ. ಮೂಲ ಚಿತ್ರಕ್ಕಿಂತ ಮೂರು ಪಟ್ಟು ಹೆಚ್ಚು ಹಣ ಸುರಿಯಲಾಗಿದೆ. ಎರಡು ಹೊಸ ಹೊಡೆದಾಟದ ದೃಶ್ಯಗಳಿವೆ ವಗೈರೆ ವಗೈರೆ!!!)  ಕಾಳಿದಾಸನಂಥ ದರ್ಶನ ಮರೆಯಾಗಿ ಯಮಕ, ಮುರಜ-ಖಡ್ಗ-ಗೋಮೂತ್ರಿಕಾದಿ ಬಂಧಗಳು, ಏಕಾಕ್ಷರಿ-ದ್ವೈಕ್ಷರಿಗಳಂಥ ಶಬ್ದಚಮತ್ಕಾರಗಳು ತುಂಬಿದ ಮಹಾಕಾವ್ಯಗಳು, ದ್ವಿಸಂಧಾನ-ತ್ರಿಸಂಧಾನಾದಿ ಕಾವ್ಯಗಳು ಒಡಮೂಡತೊಡಗಿದವು. ಕಾಳಿದಾಸನ ಕಾವ್ಯಗಳ ವಿರಕ್ತಿಪೂರ್ಣ ಜೀವನಶ್ರದ್ಧೆ, ಅಂತರ್ಮುಖಿ ಒಳನೋಟಗಳ ಬದಲು ಕಾವ್ಯದ ಪಾತ್ರಗಳು ಬಹಿರ್ಮುಖವಾಗಿ ರಾಜನೀತಿ, ಶೃಂಗಾರ, ವಿಲಾಸ ಮುಂತಾದ ಐಹಿಕಮೌಲ್ಯಗಳಿಗೆ ಪ್ರಾಶಸ್ತ್ಯ ಹೆಚ್ಚುತ್ತ ಹೋಯಿತು. ಸಹಜತೆ ಕ್ಷೀಣವಾಗಿ ಕೃತ್ರಿಮತೆ ಪ್ರಧಾನವಾಯಿತು. ಇಷ್ಟಾದರೂ ಸಂಸ್ಕೃತ ಭಾಷೆಯ ಅನಂತಸಾಧ್ಯತೆಗಳ ಭಾಂಡಾರವನ್ನು ಜಗದೆದುರು ತೆರೆದಿಟ್ಟ ಕೀರ್ತಿ ಕಾಳಿದಾಸೋತ್ತರ ಕಾಲದಲ್ಲಿ ಮಾಘ, ಭಾರವಿಯೇ ಇತ್ಯಾದಿ ಕವಿಗಳಿಗೆ ಸಲ್ಲಲೇಬೇಕು. ಅದಾಗಿಯೂ ವಿದ್ವತ್ಕಾವ್ಯದ ಪಾಂಡಿತ್ಯ ಪ್ರದರ್ಶನವನ್ನು ತ್ಯಜಿಸಿ ಸಹಜ ಪ್ರಸನ್ನ ಶೈಲಿಯಲ್ಲಿ ಕಾವ್ಯವನ್ನು ರಚಿಸುವುದರ ಮೂಲಕ ಕಾಳಿದಾಸನ ವೈದರ್ಭೀ ರೀತಿಯನ್ನು ಪುನರುಜ್ಜೀವಿಸುವಂತೆ ಮಾಡಿದವರಲ್ಲಿ ಜಾನಕೀಹರಣವನ್ನು ಬರೆದ ಕುಮಾರದಾಸ, ನವಸಾಹಸಾಂಕದ ಪದ್ಮಗುಪ್ತ, ಚಂಪೂರಾಮಾಯಣದ ಮೂಲಕ ವಾಲ್ಮೀಕಿರಾಮಾಯಣವನ್ನು ಪುನರ್ನಿರ್ಮಿಸಿದ ಭೋಜರಾಜ ಮುಂತಾದವರು ಪ್ರಮುಖರು.
      ಇನ್ನು ಸಮಾಸಭೂಯಿಷ್ಠವಾದ, ಆಂಡಬರದ ಪದಸಮೂಹಗಳಿಂದ ಕೂಡಿದ ಜಟಿಲವಾದ ಗೌಡೀಶೈಲಿಯಲ್ಲಿ ಪ್ರಮುಖವಾಗಿ ನೆನಪಾಗುವವರಲ್ಲಿ ಒಬ್ಬ ವಾಸವದತ್ತಾದ ಸುಬಂಧು. ’ಪ್ರತ್ಯಕ್ಷರಶ್ಲೇಷಮಯಪ್ರಬಂಧವಿನ್ಯಾಸವೈದಗ್ಧನಿಧಿ’ಯೆಂದು ತನ್ನ ವಿಶಿಷ್ಟತೆಯನ್ನೂ ಉದ್ದಕ್ಕೆ ಲೇಖಿಸಿದವನವನು. ಶ್ಲೇಷಮೂಲವಾದ ಉಪಮೆ, ಉತ್ಪ್ರೇಕ್ಷೆ, ವಿರೋಧಾಭಾಸ, ಅನುಪ್ರಾಸಮಿಶ್ರಿತ  ಸಮಾಸಬಂಧಗಳ ವರ್ಣನೆಯಲ್ಲಿ ಗದ್ಯಸಾಹಿತ್ಯದಲ್ಲಿ ಸುಬಂಧುವನ್ನು ಸರಿಗಟ್ಟುವವರು ಕಡಿಮೆ. ಆತ ವಾಸವದತ್ತಾದಲ್ಲಿ ರೇವಾ ನದಿಯನ್ನು ವರ್ಣಿಸುವ ಒಂದು ಸಾಲನ್ನು ನೋಡಿದರೆ ಸಾಕು, ಅವನಿಗೂ ವೈದರ್ಭೀ ಶೈಲಿಯ ಕಾಳಿದಾಸನಿಗೂ ಇರುವ ವ್ಯತ್ಯಾಸ ಸುಲಭಗ್ರಾಹ್ಯ.
'ಮದಕಲಕಲಹಂಸಸಾರಸರಸಿತೋದ್ಭ್ರಾಂತಭಾಃಕೂಟವಿಕಟಪುಚ್ಛಛಟಾವ್ಯಾಧೂತವಿಕಟಕಮಲಖಂಡವಿಗಲಿತಮಕರಂದಬಿಂದುಸಂದೋಹಸುರಭಿತಸಲಿಲಯಾ.....'
      ಸುಬಂಧುವಿನಂತೆ ಕಾವ್ಯಕಲೆಯ ಪರಮ ಸೌಂದರ್ಯವನ್ನು ಗದ್ಯದಲ್ಲಿ ಅನರ್ಘ್ಯವಾಗಿ ಕಟ್ಟಿಕೊಟ್ಟವ ಬಾಣ. ಅವನದ್ದು ಪಾಂಚಾಲೀ ಶೈಲಿ. ಅವನ ವಾಕ್ಯವಿನ್ಯಾಸ ಮೊದಲು ದೀರ್ಘ, ಬಳಿಕ ಮಧ್ಯಮ, ಆಮೇಲೆ ಹೃಸ್ವ, ಮತ್ತೆ ಮಧ್ಯಮ, ಕೊನೆಗೆ ದೀರ್ಘ ಹೀಗೆ ಆರೋಹಣ-ಅವರೋಹಣ ಕ್ರಮದಲ್ಲಿ ಚಲಿಸುತ್ತ ಭಾಷೆಯ ಸಕಲಸಾಧ್ಯತೆಗಳನ್ನು ತೆರೆದಿಡುತ್ತ ಹೋಗುವುದು ಬಾಣನ ಜಾಯಮಾನ. ’ಉದ್ದಾಮದರ್ಪಭಟಸಹಸ್ರೋಲ್ಲಾಸಿತಾಸಿಲತಾಪಂಜರವಿಧೃತಾಪ್ಯಪಕ್ರಾಮತಿ’ ಎಂದು ಗೌಡೀ ಶೈಲಿಯಲ್ಲಿ ಆಡಂಬರಪೂರ್ಣವಾಗಿ ಬರೆದಷ್ಟೇ ಸಲೀಸಾಗಿ 'ಕಿಂ ಮೇ ಗೃಹೇಣ? ಕಿಮಂಬಯಾ? ಕಿಂ ವಾ ತಾತೇನ?’ ಎಂದು ಸಣ್ಣ ಸಣ್ಣ ವಾಕ್ಯಗಳಲ್ಲಿ ಮನಕರಗುವಂತೆಯೂ ಬರೆಯಬಲ್ಲ.
       ಇಡಿಯ ಜಗತ್ಪ್ರಕೃತಿಯನ್ನೇ ಸತ್ವ, ರಜ, ತಮಗಳೆಂಬ ಮೂರು ಗುಣಗಳಿಂದ ವಿವರಿಸುವಂತೆ ಸಂಸ್ಕೃತ ಕಾವ್ಯಭಾಷೆಯನ್ನು ಕೂಡ ಸಮಗ್ರವಾಗಿ ಮೂರು ರೀತಿಗಳಿಂದ ವಿವರಿಸಲು ಬರುತ್ತದೆಯೆಂದು ವಾಮನ ಅಭಿಪ್ರಾಯ. ಒಂದೊಂದು ರೀತಿಯ ಉದಯಕ್ಕೆ ವಿಶಿಷ್ಟವಾದ ಗುಣ, ಕಾರಣಗಳಿವೆ. ಕಾವ್ಯಭಾಷೆಯ ಸಹಜ ಸೌಂದರ್ಯಾಂಶವನ್ನು ರೀತಿ ಪ್ರತಿಪಾದಿಸಿದರೆ, ರೀತಿಸಿದ್ಧ ಸೌಂದರ್ಯಕ್ಕೆ ಅತಿಶಯವನ್ನು ತರಬಲ್ಲ ವಾಕ್ಯವಿನ್ಯಾಸ ವಿಶೇಷಗಳನ್ನು ಅಲಂಕಾರಗಳೆನ್ನಬಹುದು. ಕಾವ್ಯದಲ್ಲಿ ಇವೆರಡರ ಪರಿಣಾಮವಾಗಿ ರಸಿಕರಲ್ಲಿ ಉಂಟಗುವ ಆನಂದವೇ ರಸ. ಹೀಗೆ ರೀತಿ, ರಸಗಳೆರಡೂ ಕಾವ್ಯದಲ್ಲಿ ಕೂಡಿ ನಡೆಯುತ್ತವೆ. ವಾಗರ್ಥದಂತೆ, ಪಾರ್ವತೀ ಪರಮೇಶ್ವರರಂತೆ.
       ಸೌ೦ದರ್ಯವನ್ನನ್ವೇಷಿಸುವ, ಕಾಣುವ ಮತ್ತು ಪ್ರಕಟಿಸುವ ಶಕ್ತಿಸ೦ಪನ್ನನನ್ನು ಕವಿಯೆ೦ದೂ, ಅದರಿ೦ದ ಆಸ್ವಾದವನ್ನು ಹೊ೦ದುವವನನ್ನು ಸಹೃದಯನೆ೦ದೂ ನಮ್ಮ ಪರ೦ಪರೆ ಕರೆದಿದೆ. ನಮ್ಮೊಳಗೆ ಜಾಗೃತವಾಗಿದ್ದರೂ ನಮ್ಮದಾಗಿರದ ಭಾವದ ಸ್ಥಿತಿಗೆ ರಸವೆ೦ದು ಹೆಸರು. ರಸಾನುಭೂತಿಯನ್ನು ಉ೦ಟುಮಾಡುವ ಕಾವ್ಯ ಉತ್ತಮಕಾವ್ಯ. ಸಹೃದಯನ ಚಿತ್ತ ಶಬ್ದಸೌ೦ದರ್ಯದಲ್ಲಿ ಅಥವಾ ವಾಚ್ಯಾರ್ಥ ಸೌ೦ದರ್ಯದಲ್ಲಿ ವಿಶ್ರಾ೦ತವಾದರೆ ಅದು ಮಧ್ಯಮ ಕಾವ್ಯ. ಅದೆರಡೂ ಅಲ್ಲದ್ದು ಇತ್ತೀಚೆಗೆ ಬರುತ್ತಿರುವ ಮೂರನೇ ದರ್ಜೆಯ ಕಾವ್ಯಗಳು. ಕಾವ್ಯವೆ೦ದರೇನೆ೦ದರಿಯದವರೂ ಕವಿಗಳಾಗುತ್ತಿರುವುದು ಸ೦ಖ್ಯೆ ಜಾಸ್ತಿಯಾಗುತ್ತಿರುವುದರಿ೦ದ ಸಹೃದಯರ ಸ೦ಖ್ಯೆ ಕಡಿಮೆಯಾಗಿದೆಯಷ್ಟೇ. ನಿಸ್ಸ೦ಗದ ಸ್ಥಿತಿಯಲ್ಲಿ ಪ್ರಪ೦ಚವನ್ನು ಪರಿಭಾವಿಸುವ ಕವಿಗೆ ಪ್ರಪ೦ಚದ ವಸ್ತುವೈವಿಧ್ಯದ ಅ೦ತರ೦ಗದಲ್ಲಿ ನಿಹಿತವಾದ ಏಕತೆ ಗೋಚರವಾದೀತು. ಅಥವಾ ಬಾಹ್ಯ ಪ್ರಪ೦ಚ ತನ್ನ ಅ೦ತರ೦ಗದ ಭಾವಕ್ಕೆ ಸ೦ವಾದಿಯಾಗಿರುವುದು ಕ೦ಡೀತು. ಆ ಹೊಳಹನ್ನೇ ಪ್ರತಿಭೆಯೆನ್ನುವುದು. ಪ್ರತಿಭಾನೇತ್ರದಿ೦ದ ಅವರೇನನ್ನು ಕಾಣುವರೋ ಅದು ದರ್ಶನ. ಸ೦ಸ್ಕೃತದಲ್ಲಿ ದಾರ್ಶನಿಕತೆಯನ್ನು ಕವಿತ್ವದ ಅನಿವಾರ್ಯ ಮತ್ತು ಅವಿಭಾಜ್ಯ ಅ೦ಗವೆ೦ದೇ ಪರಿಗಣಿಸಲಾಗಿದೆ. ಪ್ರತಿಭೆಯಿ೦ದ ಕ೦ಡ ದರ್ಶನವನ್ನು ಸಮುಚಿತವಾಗಿ ಪ್ರಕಟಿಸಲು ಕವಿಗೆ ಶಬ್ದಸ೦ಪತ್ತು, ಶಾಸ್ತ್ರಜ್ಞಾನ, ಇತಿಹಾಸದ ಅಧ್ಯಯನವೆಲ್ಲ ತು೦ಬ ಅಗತ್ಯ. ದರ್ಶನದಿ೦ದ ಪ್ರಕಟಗೊ೦ಡಿದ್ದು ವರ್ಣನ. ಪ್ರತಿಭೆ, ಲೋಕಶಾಸ್ತ್ರಾದಿ ಕಾವ್ಯಗಳ ಅಧ್ಯಯನ, ಮತ್ತು ಅಭ್ಯಾಸ ಈ ಮೂರೂ ಹದವಾಗಿ ಪಾಕವಾಗಿ ಸೇರಿ ದರ್ಶನ-ವರ್ಣನಗಳು೦ಟಾಗುವುದರಿ೦ದ ಕವಿತ್ವ ಎ೦ಬುದು ತು೦ಬ ಹೊಣೆಗಾರಿಕೆಯ ಸಾಧನೆಯ ಪದವಿ.
ಪುರಾ ಕವೀನಾಂ ಗಣನಾಪ್ರಸಂಗೇ
ಕನಿಷ್ಠಿಕಾಧಿಷ್ಠಿತಕಾಲಿದಾಸಃ |
ಅದ್ಯಾಪಿ ತತ್ತುಲ್ಯಕವೇರಭಾವಾದ್
ಅನಾಮಿಕಾ ಸಾರ್ಥವತೀ ಬಭೂವ ||

- ನಮ್ಮ ದೇಶದಲ್ಲಿ ಎಷ್ಟು ಕವಿಗಳಿದ್ದಾರೆಂಬ ಎಣಿಕೆ ಕಿರುಬೆರಳಿನಿಂದ ಶುರುವಾಯ್ತಂತೆ. ಮೊದಲು ಕಾಳಿದಾಸ ಎಂದು ಕಿರುಬೆರಳನ್ನು ಮಡಿಸಲಾಯ್ತು. ಆಮೇಲೆ ಅವನಿಗೆ ಸಮಾನನಾದ ಇನ್ನೊಬ್ಬ ಕವಿ ಸಿಗದುದರಿಂದ ಎರಡನೇ ಬೆರಳು ’ಅನಾಮಿಕಾ’(ಹೆಸರಿಲ್ಲದ್ದು) ಎಂದೇ ಸಾರ್ಥಕವಾಯ್ತು. ಕಾಳಿದಾಸ ಮಹಾಕವಿಯ ಪದವಿಗೇರಿದ್ದು ಸುಮ್ಮನೆಯೇ! ಇಂದು ನೋಡಿ. ಟಾಮ್, ಡಿಕ್ ಎಂಡ್ ಮೊಯ್ಲಿ ಎಲ್ಲರೂ ಕವಿಗಳೇ.