Pages

Monday, July 13, 2015

ಕೋಲ್ಕತ್ತಾ ಡೈರಿ: ಕಾಳಿಯ ನಾಡಲ್ಲಿ


ಕಾಳಿ, ಅವಳು ಶಿವೆ, ಅವಳು ಶಕ್ತಿ. ಅವಳು ಲೋಕಮಾತೆ.  ಆ ಶಕ್ತಿಯೇ ಸತ್ವ – ರಜೋ – ತಮೋ ಎಂಬ ತ್ರಿಗುಣಗಳ ಮಾಯೆ. ಅವಳದ್ದು ಒಂದು ಸತ್ – ಚಿತ್ – ಆನಂದರೂಪವಾದರೆ ಇನ್ನೊಂದು ಗುಣತ್ರಯಗಳಿಂದ ಕೂಡಿದ ಮಾಯಾರೂಪ. ಅವಳು ಜಗತ್ತನ್ನು ಹೆತ್ತವಳು, ಹೊತ್ತವಳು, ಕೊನೆಗೆ ನಾಶಪಡಿಸುವವಳು ಕೂಡ. ಅಥರ್ವ ವೇದಕ್ಕೆ ಸೇರಿದ ಮುಂಡಕ ಉಪನಿಷತ್ತಿನ ಮಂತ್ರ ೧ -೨ – ೪ ರ ಪ್ರಕಾರ ಕಾಳಿ ಎಂದರೆ ಅಗ್ನಿಯ ಪ್ರಜ್ವಲಿಸುವ ೭ ನಾಲಗೆಗಳಲ್ಲಿ ಮೊದಲನೆಯದು.
 ಕಾಳೀಕರಾಳೀಚ ಮನೋಜವಾಚ |
ಸುಲೋಹಿತಾಯಾಚ ಸುಧೂಮ್ರವರ್ಣಾ |
ಸ್ಫುಲಿಂಗಿನೀ ವಿಶ್ವರುಚೀಚದೇವಿ
ಲೀಲಾಯ ಮಾನಾ ಇತಿಸಪ್ತ ಜಿಹ್ವಾ: ||
ಶಕ್ತಿಯೇ ಕಾಳಿ, ಕರಾಳಿ, ಮನೋಜವಾ, ಸುಲೋಹಿತಾ, ಸುಧೂಮ್ರವರ್ಣಾ, ಸ್ಫುಲಿಂಗಿನಿ ಮತ್ತು ವಿಶ್ವರುಚಿಯೆಂಬ ಅಗ್ನಿಯ ೭ ನಾಲಗೆಗಳಾದವಳು. ಯಜುರ್ವೇದದ ಶತಪಥ ಬ್ರಾಹ್ಮಣದ(೧-೭-೨ -೮) ಪ್ರಕಾರ ಶರ್ವ, ಭವ, ಪಶೂನಾಂಪತಿ, ರುದ್ರ ಎಂಬವು ಅಗ್ನಿಯ ಪರ್ಯಾಯ ನಾಮಗಳಾಗಿವೆ. ರುದ್ರನು ಅಗ್ನಿಯಾದರೆ ಕಾಳಿಯು ಅದರ ಧಗಧಗಿಸುವ ಜ್ವಾಲೆ. ರುದ್ರನ ಪತ್ನಿ ಕಾಳಿ ಎಂಬ ಪೌರಾಣಿಕ ಹಿನ್ನೆಲೆಗೆ ಅದೇ ಕಾರಣವೇನೋ.
ಯೋಗಿಗಳಿಗೆ ಇವಳಷ್ಟು ವಿಸ್ಮಯವನ್ನುಂಟುಮಾಡುವ ಮತ್ತೊಂದು ದೇವತೆ ಇರಲಾರದು. ಆಕೆ ಸತಿಯ ಹತ್ತು ರೂಪಗಳಾದ ದಶಮಹಾವಿದ್ಯೆಗಳಲ್ಲೊಬ್ಬಳಾಗಿ ಅದರ ಅಧಿಪತಿಯಾದವಳು. ರಕ್ತವೇ ಅವಳ ಆಹಾರ, ಮನುಷ್ಯ ಕಪಾಲಗಳೇ ಅವರ ಕಂಠಾಭರಣ, ಕೈಕಾಲುಗಳೇ ಅವಳ ಉಡಿದಾರ. ಅವಳು ಸ್ಮಶಾನವಾಸಿ, ಕ್ರಾಂತಿರೂಪಿ(ಸ್ತ್ರೀವಾದಿಗಳ ನೆಚ್ಚಿನವಳೂ ಆಗಿರಬಹುದು). ಕಾಳರಾತ್ರಿ. ಆಕೆಯ ಜಗತ್ತು ಕತ್ತಲೆಯದ್ದು, ವಿನಾಶದ್ದು, ಭಯದ್ದು, ಬೆರಗಿನದ್ದು. ಶಿವನ ಪತ್ನಿಯಾದರೂ ಶಿವನನ್ನೇ ಸೋಲಿಸಿ ಅವನೆದೆಯನ್ನು ಮೆಟ್ಟಿನಿಂತವಳು. ಅವಳ ರೂಪ ಸೌಮ್ಯವಲ್ಲ, ಕರುಣಾಮಯಿಯಲ್ಲ, ಮಾತೃಹೃದಯದ್ದಲ್ಲ. ಆದರೂ ಅವಳ ಪ್ರಸಿದ್ದಿಗೇನು ಕಡಿಮೆಯಿಲ್ಲ. ಷಣ್ಮತಗಳಲ್ಲಿ ವೀರಶೈವ ದರ್ಶನದಲ್ಲಿ ಶಿವೆಯಾಗಿ, ಶಾಕ್ತಪಂಥದಲ್ಲಿ ಶಕ್ತಿಯಾಗಿ, ಕಾಪಾಲಿಕರಿಂದ ಭದ್ರಕಾಳಿಯಾಗಿ ಪೂಜಿಸಲ್ಪಡುವವಳವಳು.
ಪೌರಾಣಿಕವಾಗಿ ಹೇಗಿದ್ದರೂ ಕಾಳಿ ಒಂದು ಥರದ ಸೊಫಿಸ್ಟಿಕೇಟೆಡ್ ಸಮಾಜದಲ್ಲಿ ಹೆಚ್ಚಾಗಿ ಕ್ಷುದ್ರದೇವತೆಯಾಗಿಯೇ ಪ್ರಚಲಿತದಲ್ಲಿರುವವಳು. ನಮ್ಮಲ್ಲಿ ಮಾರಮ್ಮ, ಚೌಡಮ್ಮರ ಹಾಗೆ. ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಹೆಚ್ಚೆಚ್ಚು ವೈದಿಕರಾದಂತೆ ಅವರು ಬಿಟ್ಟ ಸ್ಥಳವನ್ನು ಸಮಾಜದ ಕೆಳವರ್ಗಗಳಲ್ಲಿ ತುಂಬಿದ್ದು ಕಾಳಿಯೇ. ಸೋ ಕಾಲ್ಡ್ ನಾಗರೀಕತೆಯಿಂದ ದೂರವಿರುವ ಬುಡಕಟ್ಟಿನವರು, ಡಕಾಯಿತರು, ನಿಮ್ನ ವರ್ಗದ ಮಧ್ಯದಲ್ಲೇ ಅವಳು ಹೆಚ್ಚು ಪ್ರಸಿದ್ಧಿ. ಆಕೆಯ ರುದ್ರಭಯಂಕರ ರೂಪ ನೈಸರ್ಗಿಕ ಅಥವಾ ಮಾನುಷಿಕ ಪೀಡೆಗಳ, ವೈರಿಗಳ ಮೆಟ್ಟಿನಿಲ್ಲಲು ಸ್ಫೂರ್ತಿಯಾಗುತ್ತಿತ್ತೇನೋ. ದಟ್ಟಕಾಡುಗಳ ನಡುವೆ ಎದ್ದುನಿಂತ ಆಕೆಯ ಆರಾಧನಾಲಯಗಳು ಕಾಡುಕಡಿದು ನಾಡುಬೆಳೆದಂತೆ ನಾಗರಿಕತೆಯೊಡನೆ ಸೇರಿ ಪ್ರಸಿದ್ಧವಾಗಿರಬಹುದು.
ಕಲ್ಕತ್ತಾದ ನೆಲದಲ್ಲಿ, ಕಾಳಿಯ ಮಡಿಲಲ್ಲಿದ್ದಾಗ ಇಷ್ಟೆಲ್ಲ ಜಿಜ್ಞಾಸೆಗಳು ಮನದಲ್ಲಿ ಹಾದುಹೋದವು. ಅಲ್ಲಿನ ಮನೆಮನಗಳಲ್ಲಿ ಮಾತ್ರವಲ್ಲ ನೆಲದ ಕಣಕಣಗಳಲ್ಲಿ ಕಾಳಿಯಿದ್ದಾಳೆ. ಅದಕ್ಕೇ ಏನೋ ಬಂಗಾಳಿಗಳ ನೆಚ್ಚಿನ ಬಣ್ಣ ಕೆಂಪು. ಬಂಗಾಳದಲ್ಲಿ ಹತ್ತರಲ್ಲಿ ಒಂಭತ್ತು ಹೆಂಗಸರಾದರೂ ಕೆಂಪು ಸೀರೆಯುಟ್ಟು, ಕಾಸಗಲದ ಕೆಂಪು ಬೊಟ್ಟು, ಬೈತಲೆಗೆ ಇನ್ನೊಂದಿಷ್ಟು ಕುಂಕುಮ, ಪಾದಗಳಿಗೆ ಕಡುಗೆಂಪಿನ ಮೆಹಂದಿ ತೊಟ್ಟ ವೇಷದಲ್ಲೇ ಕಾಣಸಿಗುತ್ತಾರೆ. ಕೆಂಪು ಬಣ್ಣದ ಕಮ್ಯುನಿಸ್ಟರೂ ಬಂಗಾಳಿಗಳಿಗೆ ಪ್ರಿಯವಾದರೂ ಅದಕ್ಕೂ ಕಾಳಿಗೂ ಏನೂ ಸಂಬಂಧವಿರಲಿಕ್ಕಿಲ್ಲ ಬಿಡಿ. ಕಲ್ಕತ್ತ ಹೆಸರು ಪಡೆದಿದ್ದು, ಹೆಸರು ಮಾಡಿದ್ದೂ ಕಾಳಿಯಿಂದಲೇ. ಕಲ್ಕತ್ತಾ ಕೋಲ್ಕತ್ತವಾಗುವ ಸುಮಾರು ಇನ್ನೂರೈವತ್ತು ವರ್ಷ ಮೊದಲು ಅಂದರೆ ೧೭೫೬ರಲ್ಲಿ ನವಾಬ ಸಿರಾಜುದ್ದೌಲ ಕಾಲಿಕತ್ತವನ್ನು ಅಲಿನಗರ ಎಂದು ಮರುನಾಮಕರಣ ಮಾಡಿದ್ದ. ಅದು ಅಲ್ಲಿನ ಅಧಿದೇವತೆ ಭದ್ರಕಾಳಿಗೆ ಹಿಡಿಸಲಿಲ್ಲವೇನೋ? ಅವಳ ಸಿಟ್ಟಿನ ಪರಿಣಾಮವೋ ಏನೋ ಮರುವರ್ಷ ನಡೆದ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲ ನಾಮಾವಶೇಷವಾಗಿ ಹೋದ. ಮುಂದಿನದ್ದು ಇತಿಹಾಸ.
ಕಲ್ಕತ್ತಾದ ಹೆಸರಿನ ಮೂಲ ಮತ್ತು ವ್ಯುತ್ಪತ್ತಿಯ ಬಗ್ಗೆ ಸುಮಾರಿಷ್ಟು ವಾದಗಳಿವೆ. ಖಲ್ ಕಾತಾ- ದೊಡ್ಡದೊಂದು ನೀರಿನ ಕ್ಯಾನಲ್ ಅಥವಾ ತೋಡು ಅಗೆದ ಕಾರಣದಿಂದ ಹೆಸರು ಬಂದಿರಬಹುದು. ಅಥವಾ ಈ ಸ್ಥಳ ಸುಣ್ಣದ ಕಲ್ಲಿನ(ಕಲಿ) ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಹೆಸರು ಹಾಗೆಯೂ ಬಂದಿರಬಹುದು. ಬಂಗಾಳಿ ಶಬ್ದ ಕಿಲ್‌ಕಿಲಾ(ಸಪಾಟಾದ ಜಾಗ) ಎಂಬರ್ಥದಿಂದಲೂ ಕಲ್ಕತಾ ಆಗಿರಬಹುದು ಎಂಬ ಬಗೆಬಗೆಯ ವಾದವಿದ್ದರೂ ಹೆಚ್ಚಾಗಿ ಒಪ್ಪಲ್ಪಡುವ ಮೂಲ ಕಾಳಿಯಿಂದ ಬಂದದ್ದೆಂಬುದೇ. ಮುಂಬಾದೇವಿಯಿಂದ ಮುಂಬೈ, ಮಂಗಳಾದೇವಿಯಿಂದ ಮಂಗಳೂರು, ಅಥೇನಾಳಿಂದ ಅಥೇನ್ಸ್‌ನ ಹೆಸರಾದಂತೆ ಕಾಲಿಯಿಂದ ಕಾಲಿಕತ್ತಾ ಆಗಿ ಮುಂದೆ ಜನರ(ಬ್ರಿಟಿಷರ) ಬಾಯಲ್ಲಿ ಕ್ಯಾಲ್ಕತಾ, ಕಲ್ಕತ್ತಾ ಆಯಿತು. ಕಾಲಿ ಕೋತಾ ಅಂದರೆ ಕಾಲಿಯ ಮಂದಿರವೆಂಬರ್ಥವಂತೆ. ಇಲ್ಲಿನ ಕಾಳಿಘಾಟ್ ಕಾಲಿಮಂದಿರ ಹಿಂದೂಗಳ ೫೧ ಶಕ್ತಿಪೀಠಗಳಲ್ಲೊಂದು. ಕಲ್ಕತ್ತಾದ ಹೆಸರು ಬರಲು ಈ ಮಂದಿರವೇ ಕಾರಣವೆಂಬ ನಂಬಿಕೆಯಿದೆ. ಮೊದಲು ಗಂಗಾನದಿಯ ದಡದಲ್ಲಿನ ಘಾಟ್ ಒಂದರಲ್ಲಿ ಕಾಳಿಯ ಮಂದಿರವೊಂದಿತ್ತಂತೆ. ಇದರಲ್ಲಿದ್ದ ಮೂರ್ತಿಯನ್ನು ಕದ್ದೊಯ್ದ ಕಾಪಾಲಿಕರು ದಟ್ಟಕಾಡಿನಲ್ಲಿ ಪ್ರತಿಷ್ಟಾಪಿಸಿ ಪೂಜಿಸತೊಡಗಿದರು. ಮೂಲಜಾಗ ಬಂಗಾಲಿಯಲ್ಲಿ ಕಾಲಿಕಾ ಥಾ(ಕಾಲಿ ಇದ್ದ) ಎಂದು ಹೆಸರಾಯಿತು. ಇಲ್ಲಿನ ಘಾಟಿನಿಂದ ಮೂರ್ತಿಯನ್ನು ತೆಗೆದುಕೊಂಡು ಹೋದ ಕಾರಣ ಹೊಸ ಜಾಗವೂ ಕಾಲಿ-ಘಾಟ್ ಎಂದೇ ಹೆಸರಾಯ್ತು. ಇದರ ಪಕ್ಕ ಆದಿಗಂಗಾ ಎಂಬ ಸಣ್ಣದೊಂದು ತೊರೆಯಿದೆ. ಮೊದಲು ಹೂಗ್ಲಿ ನದಿ ಇಲ್ಲೇ ಹರಿಯುತ್ತಿತ್ತೆಂದೂ, ಮುಂದೆ ಪಥಬದಲಾಯಿಸಿ ಈಗಿನ ಜಾಗಕ್ಕೆ ಬಂದಿತೆಂದೂ ಅನಿಸಿಕೆಯಿದೆ. ಇದು ಕಲ್ಕತ್ತಾದ ವಿಶ್ವಪ್ರಸಿದ್ದ ಕಾಲಿಮಂದಿರ. 

ಕಾಳಿಘಾಟ್


ಕಾಳಿಘಾಟ್ ಮಂದಿರ, London News, 1887(ಪಕ್ಕದ ಆದಿಗಂಗಾ ನದಿ ಇಂದು ಸಣ್ಣ ಕಾಲುವೆಯ ಮಟ್ಟಕ್ಕಿಳಿದಿದೆ)
ಕಾಳಿಘಾಟ್ ಕಾಳಿ
ಹಾಗೆಂದು ಕಲ್ಕತ್ತಾದಲ್ಲಿರುವುದು ಇದೊಂದೇ ಐತಿಹಾಸಿಕ ಕಾಲಿಮಂದಿರವಲ್ಲ. ಬ್ರಿಟೀಷರು ಬರುವ ಮೊದಲೇ ಗಂಗೆಯ ದಡದಲ್ಲಿ ಈಗಿನ ಬಾಗ್‌ಬಝಾರ್  ಮಾರ್ಕೇಟಿನ ಹತ್ತಿರ ಚಿತ್ರೇಶ್ವರೀ ಅಥವಾ ಚಿತ್ತೇಶ್ವರೀ ಎಂಬ ಇನ್ನೊಂದು ಹೆಸರಾಂತ ಕಾಲಿಮಂದಿರವಿತ್ತು. ಇದನ್ನು ಸ್ಥಾಪಿಸಿದವನು ಚಿತೆ ಎಂಬ ಡಕಾಯಿತನೆಂಬ ನಂಬಿಕೆಯಿದೆ. ಅವನ ನಂತರ ಖಾಲಿ ಬಿದ್ದಿದ್ದ ಈ ದೇವಸ್ಥಾನದಲ್ಲಿ ಮುಂದೆ ೧೫೮೬ ರಲ್ಲಿ ನೃಸಿಂಗ ಬ್ರಹ್ಮಚಾರಿ ಎಂಬ ತಾಂತ್ರಿಕ ಪೂಜೆಯನ್ನು ಪುನರಾರಂಭಿಸಿದ. ೧೬೧೦ರಲ್ಲಿ ಅಲ್ಲಿನ ಜಮೀನ್ದಾರ ಮನೋಹರ ಘೋಷ ಈಗ ಕಾಣುವ ದೇವಸ್ಥಾನದ ಕಟ್ಟಡವನ್ನು ನಿರ್ಮಿಸಿದವನು. ಚಿತ್ತೇಶ್ವರೀ ಮಂದಿರದ ಕಾರಣದಿಂದ ಈ ಸ್ಥಳ ಚಿತ್ಪುರ್ ಎಂದು ಕರೆಯಲ್ಪಡುತ್ತಿತ್ತು. ಆ ಕಾಲದಲ್ಲಿ ಇಲ್ಲಿದ್ದ ನಾಲ್ಕು ಗ್ರಾಮಗಳಲ್ಲಿ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕತಾದ ಜೊತೆಗೆ ಚಿತ್ಪುರ್ ಕೂಡ ಒಂದಾಗಿತ್ತು. ಚಿತ್ಪುರದ ಚಿತ್ತೇಶ್ವರಿಯಿಂದ ಕಾಳಿಘಾಟ್‌ ಮಂದಿರಕ್ಕೆ ತೆರಳಲು ನಿರ್ಮಿಸಿದ ಚಿತ್ಪುರ್ ರಸ್ತೆಗೆ ಕೋಲ್ಕತ್ತಾದ ಅತ್ಯಂತ ಹಳೆಯ ರಸ್ತೆಯೆಂಬ ಖ್ಯಾತಿಯಿದೆ. ಅಂದು ಈ ರಸ್ತೆಯಲ್ಲಿದ್ದ ಚೌರಂಗಿ ಕಾಡಲ್ಲಿ ಚೌರಂಗಗಿರಿಯೆಂಬ ತಾಂತ್ರಿಕ ನಿರ್ಮಿಸಿದ್ದ ಶಿವನ ದೇವಾಲಯವೂ ಇದೆ. ಇದೇ ತಾಂತ್ರಿಕ ಕಾಳಿಘಾಟಿನ ದೇವಸ್ಥಾನವನ್ನೂ ನಿರ್ಮಿಸಿದವನು. ಚಿತ್ಪುರದಲ್ಲೇ ಇರುವ ಚಿತ್ತೇಶ್ವರಿ ಶರ್ಬಮಂಗಲಾ ದೇವಸ್ಥಾನವೂ ಅತ್ಯಂತ ಹಳೆಯದೇ. ೧೪೯೫ರಲ್ಲಿ ಬಿಪ್ರದಾಸ ಪಿಲಪಾಯಿಯೆಂಬ ಕವಿ ರಚಿಸಿದ ಮಾನಸ ವಿಜಯದಲ್ಲೇ ಈ ದೇವಿಯ ಉಲ್ಲೇಖ ಕಾಣಸಿಗುತ್ತದೆ. ಬಂಗಾಳದ ರಾಬಿನ್ ಹುಡ್ ಎಂದೇ ಕರೆಯಲ್ಪಡುವ ರಘು ಡಕಾಯತ್ ಕೆರೆಯೊಂದರಲ್ಲಿ ಸಿಕ್ಕ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಿದ್ದನಂತೆ.
ಮೊಘಲರ ಕಾಲದಲ್ಲಿ ಲಕ್ಷ್ಮೀಕಾಂತ ರಾಯ್ ಚೌಧರಿ ಎಂಬ ಜಮೀನ್ದಾರ ಕಾಲಿಕಾತಾ ಸೇರಿ ಸುತ್ತಲಿನ ಎಂಟು ಗ್ರಾಮಗಳ ಒಡೆತನವನ್ನ ಅಕ್ಬರನಿಂದ ಪಡೆದ. ಇವನ ಮೊಮ್ಮಗ ಸಬರ್ನ ರಾಯ್ ಚೌಧರಿಯ ಕಾಲದಲ್ಲಿ ಬಂಗಾಲಕ್ಕೆ ಬಂದಿದ್ದ ಜಾಬ್ ಚರ್ನೋಕ್ ಎಂಬ ಈಸ್ಟ್ ಇಂಡಿಯಾ ಕಂಪನಿಯ ಏಜೆಂಟ್ ಅವುಗಳಲ್ಲಿ ಮೂರು ಗ್ರಾಮಗಳಾದ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕಾತಾವನ್ನು ನವೆಂಬರ್ ೧೦, ೧೬೯೮ರಂದು ರೂಪಾಯಿ ೧೩೦೦ಕ್ಕೆ ಖರೀದಿಸಿದ. ಅಲ್ಲಿಂದ ಬದಲಾಯ್ತು ಕಲ್ಕತ್ತದ ದೆಸೆ. ಇದಾಗಿ ಕೆಲವರ್ಷಗಳ ನಂತರ ೧೭೭೨ರಲ್ಲಿ ಬ್ರಿಟಿಷ್ ಇಂಡಿಯಾದ ರಾಜಧಾನಿಯಾಗಿ ಘೋಷಿಸಲ್ಪಟ್ಟಿತು. ಕಾಲಿಕಾತಾ ಬ್ರಿಟಿಷರ ಬಾಯಲ್ಲಿ ಕ್ಯಾಲ್ಕತಾ ಆಯಿತು. ಆದರೂ ’ಕಾಲಿ ಕಥಾ’ ಮುಗಿಯಲಿಲ್ಲ. ೧೭೦೩ರಲ್ಲಿ ಶಂಕರ ಘೋಷ್ ಎಂಬಾತ ಶಿದ್ಧೇಶ್ವರೀ ಕಾಲಿ ಮಂದಿರವನ್ನು ಕಟ್ಟಿಸಿದ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಈ ಕಾಲಿ ಮಂದಿಕ್ಕೆ ಯಾವಾಗಲೂ
ಶಿದ್ಧೇಶ್ವರೀ ಕಾಲಿ ಮಂದಿರ
ಭೇಟಿ ಕೊಡುತ್ತಿದ್ದರಂತೆ. ಸಬರ್ನ ರಾಯ್ ಚೌಧರಿಯ ಮನೆತನದ ನಂದಲಾಲ್ ರಾಯ್ ಚೌಧರಿ ೧೭೬೦ರಲ್ಲಿ ಟೋಲಿಗಂಜ್ ಎಂಬಲ್ಲಿ ಮೃತಪಟ್ಟ ತನ್ನ ಮಗಳ ಸ್ಮರಣಾರ್ಥ ಹನ್ನೆರಡು ಶಿವಾಲಯಗಳೊಡನೆ ನವರತ್ನ ಕಾಳಿ ಮಂದಿರವನ್ನು ಕಟ್ಟಿಸಿದ್ದ. ಇಲ್ಲಿಂದ ಕೂಗಳತೆಯ ದೂರದಲ್ಲೇ ಗಂಗೆಯ ದಡದಲ್ಲಿ ಇನ್ನೊಂದು ಶಿದ್ದೇಶ್ವರೀ ಕಾಳಿಮಂದಿರವಿದೆ. ಬಾರಾನಗರದ ರತನ್ ಬಾಬು ಘಾಟಿನಲ್ಲಿ ಮುನ್ನೂರು ವರ್ಷಕ್ಕೂ ಹಳೆಯದಾದ ಮತ್ತೊಂದು ಶಿದ್ದೇಶ್ವರೀ ದೇವಸ್ಥಾನವೂ ಇದೆ. ಅದರೆದುರಿನ ಡಚ್ಚರ ಸ್ಮಶಾನಭೂಮಿಯಾದ ಕುಧಿಘಾಟಿನಲ್ಲಿ ಜಯಚಂದ್ರಮಿತ್ರ ನಿರ್ಮಿಸಿದ ದೊಡ್ಡದೊಂದು ನವರತ್ನ ಕಾಳಿಮಂದಿರ ಜೊತೆಗೆ ನಾಟ್ಯಮಂಟಪ ಹಾಗೂ ಹನ್ನೆರಡು ಶಿವಮಂದಿರವಿದೆ. ಇಲ್ಲಿ ಕಾಳಿ ಕೃಪಾಮಯೀ ಎಂದು ಕರೆಯಲ್ಪಡುತ್ತಾಳೆ. ಶಿವ ಮತ್ತು ಕಾಳಿಯರನ್ನು ಒಂದೇ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ. ಇದೇ ಮಂದಿರವನ್ನು ನೀಲನಕ್ಷೆಯನ್ನಾಗಿಟ್ಟುಕೊಂಡು ರಾಣಿ ರೊಶೋಮೋನಿ ದಕ್ಷಿಣೇಶ್ವರದ ಭವತಾರಿಣಿ ಕಾಲಿ ದೇವಾಲಯವನ್ನು ಕಟ್ಟಿಸಿದಳು. ಕಲ್ಕತ್ತಾದ ಅತಿ ಭವ್ಯ ಮತ್ತು ಅತಿ ದೊಡ್ಡ ಆಕರ್ಷಣೆಗಳಲ್ಲೊಂದು ದಕ್ಷಿಣೇಶ್ವರ ಕಾಳಿ(ಬಂಗಾಳಿಗಳ ಬಾಯಲ್ಲಿ ಅದು ದೊಕ್ಖಿನೇಶೋರ್, ದಕ್ಷಿಣೇಶ್ವರಕ್ಕೊಂದು ಟಿಕೇಟ್ ಕೊಡಿ ಎಂದಾಗ ಕಂಡಕ್ಟರ್ ಅದು ಯಾವ ಜಾಗವೆಂದು ಅರ್ಥವಾಗದೇ ನನ್ನ ಮುಖಮುಖ ನೋಡಿದ್ದ). ರತನ್ ಬಾಬು ಘಾಟಿನ ಶಿದ್ದೇಶ್ವರಿ, ಕುದಿ ಘಾಟಿನ ಕ್ರಿಪಾಮೋಯ್ ಮತ್ತು ದಕ್ಷಿಣೇಶ್ವರದ ಭವತಾರಿಣಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಒಬ್ಬನೇ ಎನ್ನುವಷ್ಟು ಸಾಮ್ಯತೆಯನ್ನು ಇವು ಹೊಂದಿವೆ. ಶಿವಪುರಾಣ, ದೇವಿ ಭಾಗವತ, ಕಾಳಿಕಾ ಪುರಾಣಗಳು ನಾಲ್ಕು ಪ್ರಮುಖ ಶಕ್ತಿ ಪೀಠಗಳನ್ನು ಉಲ್ಲೇಖಿಸುತ್ತವೆ. ಕಾಳಿಕಾ ಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಬಿದ್ದು ದಗ್ಧಳಾದ ಸತಿಯ ಶರೀರವನ್ನು ಹೊತ್ತು ಶಿವ ತಾಂಡವವಾಡತೊಡಗುತ್ತಾನೆ. ರುದ್ರತಾಂಡವದಿಂದ ಜಗತ್ತು ನಾಶವಾಗುವುದನ್ನು ತಪ್ಪಿಸಲು ವಿಷ್ಣು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸುತ್ತಾನೆ. ಸತಿಯ ದೇಹದ ಭಾಗಗಳು ಭೂಮಿಗೆ ಬಿದ್ದ ಸ್ಥಳಗಳೇ ಆದಿಶಕ್ತಿಪೀಠಗಳಾದವು. ಪೀಠನಿರ್ಣಯ ತಂತ್ರದಲ್ಲಿ ಸತಿಯ ದೇಹ ೫೨ ಭಾಗಗಳಾಗಿ ಬಿದ್ದವೆಂದೂ, ಅಲ್ಲೆಲ್ಲ ಶಕ್ತಿಪೀಠಗಳು ಉದಿಸಿದವೆಂದೂ ಇದೆ. ಶಿವಚರಿತ್ರ, ವಿಶುದ್ಧ ಸಿದ್ಧಾಂತ ಪಂಚಿಕಾಗಳಲ್ಲಿ ಇದರೊಟ್ಟಿಗೆ ಇನ್ನೂ ೨೬ ಉಪಪೀಠಗಳನ್ನೂ ಹೇಳಲಾಗಿದೆ.
ಅಷ್ಟಶಕ್ತಿ ಮತ್ತು ಕಾಲಿಕಾ ಪುರಾಣಗಳು ಹೇಳುವ ಆದಿಶಕ್ತಿಪೀಠಗಳ ವಿವರಣೆ ಬೃಹತ್ ಸಂಹಿತೆಯಲ್ಲಿಯೂ ಇದೆ
"ಬಿಮಲಾ ಪಾದ ಖಂಡಂಚ, ಸ್ತನ ಖಂಡಂಚ ತಾರಿಣಿ, ಕಾಮಾಖ್ಯಾ ಯೋನಿ ಖಂಡಂಚ, ಮುಖಖಂಡಂಚ ಕಾಲಿಕಾ"
ಸತಿ ದೇವಿಯ ಪಾದವು ಬಿದ್ದ ಓರಿಸ್ಸಾದ ಪುರಿಯಲ್ಲಿ(ಜಗನ್ನಾಥ ದೇಗುಲದ ಒಳಗೆ) ಬಿಮಲ ಎಂಬ ಹೆಸರಿನಿಂದಲೂ, ಸ್ತನಭಾಗವು ಬಿದ್ದ ಓರಿಸ್ಸಾದ ಬೆರ್ಹಂಪುರ್(ಬ್ರಹ್ಮಪುರ)ನ ಪುರಾಣಗಿರಿಯಲ್ಲಿ ತಾರಾ ತಾರಿಣಿ ಎಂಬ ಹೆಸರಲ್ಲೂ, ಯೋನಿಖಂಡವು ಆಸ್ಸಾಮಿನ ಗುವಾಹಟಿಯಲ್ಲಿ ಕಾಮಾಖ್ಯ ಎಂಬ ಹೆಸರಿನಲ್ಲೂ, ಮುಖವು ಬಿದ್ದ ಜಾಗವಾದ ಕಲ್ಕತ್ತಾದಲ್ಲಿ ದಕ್ಷಿಣಕಾಳಿಯೆಂಬ ಹೆಸರಿನಿಂದಲೂ ದೇವಿ ಪೂಜಿಸಲ್ಪಡುತ್ತಾಳೆ. ಈ ದಕ್ಷಿಣಕಾಳಿಯೇ ಭವತಾರಿಣಿಯೆಂಬ ಹೆಸರಿನಲ್ಲಿ ರಾಮಕೃಷ್ಣ ಪರಮಹಂಸರ ಆರಾಧ್ಯ ದೈವವಾದವಳು. 
ದಕ್ಷಿಣೇಶ್ವರ
ಭವತಾರಿಣಿ
ಗಾರ್‍ಡನ್ ರೀಚ್ ರೈಲ್ವೆಯ ಹತ್ತಿರದಲ್ಲೆಲ್ಲೊ ಚಿಕ್ಕದೊಂದು ಕಾಳಿಯ ಗುಡಿಯಿದೆಯಂತೆ. ಅದರಲ್ಲಿರುವ ಕಾಳಿಕೆ ಕೋಲ್ಕತ್ತದ ಕಾಳಿಯರಲ್ಲೇ ಅತ್ಯಂತ ಸುಂದರವಾದವಳೆಂದೂ, ಆಕೆ ಕಗ್ಗತ್ತಲ ರಾತ್ರಿಗಿಂತ ಕರ್ರಗಿನ ಬಣ್ಣದ, ಸೂರ್ಯಪ್ರಕಾಶಕ್ಕಿಂತ ಬೆಳ್ಳಗಿನ ತೇಜಸ್ಸಿನವಳೆಂದೂ, ೮೦೦ ವರ್ಷದಿಂದ ಪೂಜಿಸಲ್ಪಡುತ್ತಿದ್ದರೂ ಆಕೆಯ ಮರದ ಮೂರ್ತಿಯ ಕಳೆ ಸ್ವಲ್ಪವೂ ಮಾಸಿಲ್ಲವೆಂದೂ ಕೋಲ್ಕತ್ತದ ಪ್ರಸಿದ್ಧ ಹೃದಯ ತಜ್ಞರಾಗಿ ನಿವೃತ್ತರಾಗಿರುವ ಆತ್ಮೀಯರೂ ಆದ ಡಾ. ಬ್ಯಾನರ್ಜಿ ಹೇಳುತ್ತಿದ್ದರು. ಆದರಾಕೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಹಾಗೆ ಕೋಲ್ಕತ್ತದ ಹಳೆಯ ಕಾಳಿ ಮಂದಿರಗಳನ್ನು ಹುಡುಕುತ್ತಿದ್ದಾಗ ಸಿಕ್ಕು ವಿಚಿತ್ರ ಕುತೂಹಲ ಕೆರಳಿಸಿದ್ದು ಫಿರಂಗಿ ಕಾಳಿಬಾರಿ. ಇದನ್ನು ಹುಡುಕಲೆಂದೇ ಬೋವ್‌ಬಜಾರಿನ ಮಾರ್ಕೆಟ್ಟಿನ ಇಕ್ಕಟ್ಟಾದ ಗಲ್ಲಿಗಳಲ್ಲೆಲ್ಲ ಸುತ್ತಿದ್ದೇನೆ. ಕೊನೆಗೂ ಕಣ್ಣಿಗೆ ಬಿತ್ತು. ಇದಂಥ ಭಾರೀ ದೊಡ್ಡ ದೇವಸ್ಥಾನವೇನೂ ಅಲ್ಲ. ಆದರೆ ಇದರ ಹಿಂದೆ ತುಂಬ ಇಂಟರೆಸ್ಟಿಂಗ್ ಎನಿಸುವ ಕಥೆಯೊಂದಿದೆ.
ಐತಿಹ್ಯದ ಪ್ರಕಾರ ಶ್ರೀಮಂತ ದೋಮ್ ಎಂಬ ವೈದ್ಯ ಈ ಕಾಳಿಯನ್ನು ಪೂಜಿಸುತ್ತಿದ್ದನಂತೆ. ಕಲ್ಕತ್ತಕ್ಕೆ ಬರುವ ಹೊಸ ಯುರೋಪಿಯನ್ನರೆಲ್ಲ ಇವನಲ್ಲಿ ಚಿಕಿತ್ಸೆಗೆ ಬರುತ್ತಿದ್ದರು. ಹೀಗೆ ಬಂದವರಲ್ಲಿ ಕೆಲವರು ಈ ಕಾಳಿಯನ್ನು ಪ್ರಾರ್ಥಿಸಲಾರಂಭಿಸಿದರಂತೆ. ಹೀಗಾಗಿ ಇದು ಫಿರಂಗಿ(ವಿದೇಶಿ) ಕಾಳಿಬಾರಿ ಎಂದು ಹೆಸರಾಯ್ತು. ದೇವಸ್ಥಾದ ಹೊರಗಿರುವ ಚಿಕ್ಕ ತಾಮ್ರಪತ್ರದ ಪ್ರಕಾರ ಈ ಮಂದಿರ ಸ್ಥಾಪಿಸಲ್ಪಟ್ಟಿದ್ದು ಬಂಗಾಬ್ದ ೯೦೪ರಲ್ಲಿ(ಸುಮಾರು ೧೪೯೮). ಆಗ ಯಾವ ಯುರೋಪಿಯನ್ನರೂ ಭಾರತದಲ್ಲಿರಲಿಲ್ಲ. ಫೋಟೋ ತೆಗೆಯೋಣವೆಂದು ಅಲ್ಲಿನ ಅರ್ಚಕರನ್ನು ಮಾತನಾಡಿಸಿದೆ. ಒಂದೆರಡು ಫೋಟೊ ತೆಗೆಯಲು ಅನುಮತಿ ನೀಡಿದರು. ಅವರು ಹೇಳುವಂತೆ ಅದು ಮೂಲತಃ ಶಿವನ ಮಂದಿರವಾಗಿತ್ತಂತೆ. ಅಲ್ಲಿ ಕಾಳಿಮೂರ್ತಿಯನ್ನು ಸ್ಥಾಪಿಸಿದವನು ಆಂಟನಿ ಕಬಿಯಾಲ್. ಹಾಗಾಗಿ ಇಲ್ಲಿ ಮಧ್ಯಭಾಗದಲ್ಲಿ ಲಿಂಗವೊಂದಿದ್ದು ಕಾಳಿ ಮೂಲೆಯೊಂದರಲ್ಲಿ ಪೂಜಿಸಲ್ಪಡುತ್ತಾಳೆ. ಈ ಆಂಟನಿ ಕಬಿಯಾಲ್ ಮತ್ಯಾರು ಅಲ್ಲ, ಆಂಟನಿ ಫಿರಂಗಿ ಎಂದೇ ಬಂಗಾಳದಲ್ಲೆಲ್ಲ
ಫಿರಂಗಿ ಕಾಳಿಬಾರಿ
ಮನೆಮಾತಾಗಿರುವ ಹೆನ್ಸ್‌ಮನ್ ಆಂಟನಿ. ವಿದೇಶಿಗನಾಗಿದ್ದರೂ ಬಂಗಾಲಿ ಭಕ್ತಿಸಾಹಿತ್ಯವನ್ನು, ಕವಿಗಾನ ಪರಂಪರೆಯನ್ನು ಹೊಸ ಎತ್ತರಕ್ಕೇರಿಸಿದ ಮಹಾಕವಿಯೀತ. ಆದರೆ ಈತನ ಪೂರ್ತಿ ಜೀವನದ ಬಗ್ಗೆ ನಮಗೆ ಸಿಗುವ ಮಾಹಿತಿ ಅತ್ಯಲ್ಪ ಮಾತ್ರ. ಒಂದಿಷ್ಟು ಪತ್ರಗಳು, ತಾರೀಖುಗಳು, ಕವಿತೆಯ ಚೂರುಗಳು, ೧೮೩೬ರಲ್ಲಿನ ಮರಣ, ಉತ್ತಮ ಕುಮಾರನ ಬ್ಲ್ಯಾಕ್ ಎಂಡ್ ವೈಟ್ ಚಿತ್ರವೊಂದು, ದುರ್ಗಾಪೂಜೆಯ ಭಜನೆಗಳು, ಮನ್ನಾಡೇಯ ಕೆಲ ಹಾಡುಗಳಷ್ಟೇ ಆಂಟನಿಯ ಬಗೆಗಿನ ದಾಖಲೆಗಳು.
ಈತ ಹುಟ್ಟಿದ್ದು ೧೭೮೬ರಂದು ಪೋರ್ಚುಗಲ್‌ನಲ್ಲಿ. ಉಪ್ಪಿನ ವ್ಯಾಪಾರಿ ಹೆನ್ಸ್‌ಮೆನ್‌ನ ಮಗನಾಗಿ. ಅದೇ ವರ್ಷ ಲಾರ್ಡ್ ಕಾರ್ನವಾಲೀಸನ ಜೊತೆ ಇವನ ಕುಟುಂಬ ಬಂಗಾಲದ ಚಂದ್ರನಗರಕ್ಕೆ ಬಂದಿತು. ಚಿಕ್ಕಂದಿನಿಂದಲೇ ಭಾರತೀಯ ಸಂಸ್ಕೃತಿ ಸಂಪ್ರದಾಯಗಳ ಅಪಾರ ಒಲವಿದ್ದ ಆಂಟನಿ ಬಂಗಾಳಿ ಮತ್ತು ಸಂಸ್ಕೃತವನ್ನು ಕಲಿತ. ಎಲ್ಲ ಬಂಗಾಳಿಗಳಂತೆ ಕಾಳಿ ಅವನ ನೆಚ್ಚಿನ ದೈವವಾದಳು. ಜೊತೆಗೆ ಸಂಗೀತದ ಕಡೆಗೂ ಆತನಿಗೆ ಅಗಾಧ ಅಕರ್ಷಣೆಯಿತ್ತು. ಬಂಗಾಳದ ಜಾನಪದ ಕಲೆಗಳಾದ ಝುಮುರ್, ಪಾಂಚಾಲಿ, ಮುರ್ಶಿದಿ, ಭಾವೈಯಾಗಳನ್ನು ನೋಡುತ್ತ, ಕೇಳುತ್ತ ಬಂಗಾಳಿಗಳ ಮಧ್ಯ ಬೆಳೆದ. ಆ ಕಾಲದಲ್ಲಿ ಬಂಗಾಲದಲ್ಲಿ ಕವಿಗಾನವೆಂಬ ಕಲಾಪ್ರಕಾರ ತುಂಬ ಪ್ರಸಿದ್ಧವಾಗಿತ್ತು. ಇದು ಬಂಗಾಲದ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಜನಿತವಾಗಿದ್ದ ತಾರ್ಜಾ, ಖೆಉರ್, ಆಖ್ರಾಇ, ದರ್ನಾ, ಟಪ್ಪಾ, ಕೃಷ್ಣಜಾತ್ರಾದಂಥ ವಿವಿಧ ಪ್ರಕಾರಗಳ ಸಂಮಿಶ್ರಣವಾಗಿ ಬೆಳೆದ ಕಲೆ. ೧೭ನೇ ಶತಮಾನದಲ್ಲೇ ಇದರ ಹುಟ್ಟನ್ನು ಗಮನಿಸಬಹುದಾದರೂ ೧೭೬೦ರಿಂದ ೧೮೩೦ರ ಕಾಲವನ್ನು ಬಂಗಾಲಿ ಇತಿಹಾಸದಲ್ಲಿ ಕವಿಗಾನದ ಸ್ವರ್ಣಯುಗವೆಂದೇ ಪರಿಗಣಿಸಲಾಗುತ್ತದೆ. ವೈಷ್ಣವ ಪಂಥದ ಜನಪ್ರಿಯತೆಯನ್ನೂ ಅದು ಆ ಕಾಲದಲ್ಲಿ ಮುರಿದಿತ್ತೆಂದರೆ ಅದರ ಪ್ರಸಿದ್ದಿ ಎಷ್ಟಿರಬಹುದೆಂದು ಊಹಿಸಿ. ಕಲ್ಕತ್ತಾದ ಭಾಗದಲ್ಲಂತೂ ಕವಿಗಾನದ ಸಾಹಿತ್ಯವಲ್ಲದೇ ಮತ್ತೊಂದು ಸಾಹಿತ್ಯ ಆ ಕಾಲದಲ್ಲಿ ರಚನೆಯೇ ಆಗುತ್ತಿರಲಿಲ್ಲವಂತೆ. ಕವಿಗಾನವೆಂದರೆ ಎರಡು ಗುಂಪುಗಳ ಮಧ್ಯೆ ನಡೆಯುವ ಅವಧಾನದ ಆಶುಕವಿತ್ವದ ಸ್ಪರ್ಧೆಯಿದ್ದಂತೆ. ಪ್ರತಿ ಗುಂಪಿನ ಮುಖಂಡನನ್ನು ಕಬಿಯಾಲ್ ಎನ್ನುತ್ತಿದ್ದರು. ಬಂಧನ್ ಅಥವಾ ಭವಾನಿ ಭಶೊಕ್, ಸಖಿ ಸಂಬಂಧ್, ಬಿರಹೊ, ಲಹರ್ ಮತ್ತು ಖೆಉರ್ ಎಂಬ ಐದು ಸುತ್ತುಗಳಲ್ಲಿ ಎದುರಾಳಿಯ ಸವಾಲುಗಳಿಗೆ ಆಯಾ ದೇವರುಗಳ ಬಗೆಗಿನ, ಅಥವಾ ವಿಷಯದ ಮೇಲಿನ ಆಶುಕವಿತೆಗಳನ್ನು ರಚಿಸಿ, ಹಾಡಿ, ಅಭಿನಯಿಸಲಾಗುತ್ತಿತ್ತು. ೧೮-೧೯ನೇ ಶತಮಾನದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕಬಿಯಾಲ್‌ಗಳಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ಹೋರಾ ಠಾಕೂರ್, ನಿತಾಯ್ ಬೈರಾಗಿ, ಕೇಷ್ಟಾ ಮುಚಿ, ರಾಮ್ ಬಸು, ಠಾಕುರ್ ಶಿಂಗಾ ಇವರೆಲ್ಲ ಆ ಕಾಲದ ಕವಿಗಾನ ಪರಂಪರೆಯ ದಿಗ್ಗಜರೆಂದೇ ಪರಿಗಣಿಸಲ್ಪಡುತ್ತಾರೆ. ಸುಪ್ರಸಿದ್ಧ ಕವಿಗಾನದ ಕವಿ ಹೋರಾ ಠಾಕೂರನ ಇಬ್ಬರು ಶಿಷ್ಯರಾದ ನೀಲು ಠಾಕುರ್ ಮತ್ತು ಭೋಲಾ ಮೋಯ್ರಾರ ನಡುವೆ ಠಾಕುರ್ತಲಾದ ರಾಜಾ ಗೋಪಿ ಮೋಹನಚಂದನ ಆಸ್ಥಾನದಲ್ಲಿ ನಡೆದ ಕವಿಗಾನವೊಂದನ್ನು ನೋಡಿದ ಆಂಟನಿ ಅದರಿಂದ ಪ್ರಭಾವಿತಗೊಳ್ಳುತ್ತಾನೆ. ಶಿರಾಜ್ ಷಾನೆಂಬ ಸಂತನನ್ನು ಹಿಡಿದು ಕವಿಗಾನದ ಪಟ್ಟುಗಳನ್ನೆಲ್ಲ ಕಲಿಯುತ್ತಾನೆ.
ಅವನ ಪ್ರಥಮ ಕವಿಗಾನ ನಡೆದದ್ದು ಕಬಿಯಾಲಿ ಜೋಗೇಶ್ಶೋರಿಯೆದುರು. ಅವಳನ್ನು ಕವಿಗಾನದಲ್ಲಿ ಸೋಲಿಸಿದ ನಂತರ ಆಂಟನಿ ಹಿಂದಿರುಗಿ ನೋಡಿದ್ದೇ ಇಲ್ಲ. ರಾಮ್ ಬಸು, ಕೇಷ್ಟಾ ಮುಚಿ, ಜೋಗೇಶರ್ ಧೋಪಾ, ಠಾಕುರ್ ಶಿಂಗಾರಂಥ ಪ್ರಗಲ್ಭರೆಲ್ಲ ಆಂಟನಿಯೆದುರು ಸೋಲೊಪ್ಪಿಕೊಂಡರು.(ಕಬಿಯಾಲರ ಹೆಸರಿನ ಉತ್ತರಪದದಲ್ಲಿರುವ ವಿಶೇಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೇಷ್ಟಾ ಮುಚಿ(ಮೋಚಿ), ಜೋಗೇಶರ್ ಧೋಪಾ(ಧೋಬಿ), ನಿತಾಯ್ ಬೈರಾಗಿ(ಸಂನ್ಯಾಸಿ), ಭೋಲಾ ಮೊಯ್ರಾ(ಸಿಹಿತಿಂಡಿ ತಯಾರಿಸುವವ), ಆಂಟನಿ ಫಿರಂಗಿ(ವಿದೇಶಿ) ಇವೆಲ್ಲ ವಚನ ಸಾಹಿತ್ಯದಲ್ಲಿ ಬರುವ ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಯ್ಯ, ಚಮಗಾರ ಹರಳಯ್ಯರಂತೆ ಕಸುಬಿನ ಕಾರಣದಿಂದಲೇ ಹೆಸರಾದವರು). ಆಂಟನಿ ಕವಿಗಾನದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದಂತೆ ಅವನ ಶತ್ರುಗಳ ಸಂಖ್ಯೆಯೂ ಬೆಳೆಯಿತು. ಯಾವನೋ ಪರದೇಶಿ ನಮ್ಮ ದೇವರ ಹಾಡುಕಟ್ಟಿ ಹಾಡುವುದೇನು ಎಂದು ಮೂಗು ಮುರಿದವರೇ ಹೆಚ್ಚು. ಇದರ ಮಧ್ಯೆ ಸತ್ತ ಗಂಡನ ಜೊತೆ ಹೆಂಡತಿಯನ್ನು ಚಿತೆಗೇರಿಸಲು ಪ್ರಯತ್ನಿಸುತ್ತಿದ್ದ ಜನರನ್ನು ತಡೆದು ಸೌದಾಮಿನಿ ಎಂಬ ಬ್ರಾಹ್ಮಣ ಹೆಂಗಸನ್ನು ಮದುವೆಯಾಗಿ ಊರವರಲ್ಲಿಯೂ ದ್ವೇಷ ಕಟ್ಟಿಕೊಂಡ. ಕ್ರಿಸ್ತೆ ಔರ್ ಕ್ರಿಷ್ಣೆ ಕಿಜೊ ಪ್ರೊಥಕ್ ನಹಿ ರೆ ಭಾಯ್(ಕ್ರಿಸ್ತ ಹಾಗೂ ಕೃಷ್ಣರಲ್ಲಿ ಭೇದವಿಲ್ಲವಣ್ಣ) ಎಂದು ಹಾಡುಕಟ್ಟಿ ಸರ್ವಧರ್ಮ ಸಮಭಾವವನ್ನು ಬೋಧಿಸಿ ವಿದ್ವಾಂಸರ ವಾಹ್ ವಾಹಿಯನ್ನು ಗಳಿಸಿದರೂ ಸಮಾಜದ ಒಂದು ವರ್ಗವಿನ್ನೂ ಅವನನ್ನೊಪ್ಪಿಕೊಳ್ಳಲು ತಯಾರಿರಲಿಲ್ಲ.  ಯಾವಾಗ ಆಂಟನಿ ಕಾಳಿಯ ದೇವಸ್ಥಾನ ಸ್ಥಾಪಿಸಿದನೋ ಊರವರ ಕಣ್ಣು ಕೆಂಪಗಾಯಿತು. ವಿದೇಶಿಗನೊಬ್ಬ ನಮ್ಮ ರೀತಿ-ರಿವಾಜು, ಪೂಜೆ ಪುನಸ್ಕಾರಗಳಲ್ಲೂ ಮೂಗು ತೂರಿಸುತ್ತಿದ್ದಾನೆಂದು ಗ್ರಾಮದಲ್ಲಿದ್ದ ಕೆಲವರು ಆಂಟನಿಯ ವಿರುದ್ಧ ತಿರುಗಿ ಬಿದ್ದರು. ಆಂಟನಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ನವರಾತ್ರಿಯಂದು ಅದೇ ದೇವಾಲಯದಲ್ಲಿ ವಿಜೃಂಭಣೆಯಿಂದ ದುರ್ಗಾಪೂಜೆಯನ್ನಾರಂಭಿಸಿದ. ಗೋಪಿ ಮೋಹನ ಚಂದನ ಆಸ್ಥಾನದಲ್ಲಿ ನಡೆದ ನವರಾತ್ರಿ ಕವಿಗಾನದಲ್ಲಿ ಆಗಿನ ಕಾಲದ ನಂ.೧ ಕಬಿಯಾಲ್ ಭೋಲಾ ಮೊಯ್ರಾನನ್ನು ಸೋಲಿಸಿದ ಆಂಟನಿಗೆ ಅದೇ ತನ್ನ ಕೊನೆಯ ಕವಿಗಾನವಾಗಬಹುದೆಂಬ ಕಲ್ಪನೆ ಇರಲಿಲ್ಲ. ಮರುದಿನ ಮನೆಗೆ ಹಿಂದಿರುಗಿ ನೋಡುತ್ತಾನೆ. ಇವನ ಮೇಲಿನ ಸಿಟ್ಟಿಗೆ ಊರವರು ಹಿಂದಿನ ರಾತ್ರಿಯೇ ಮನೆಗೆ ಬೆಂಕಿಯಿಟ್ಟಿದ್ದರು. ಮನೆಯೊಟ್ಟಿಗೆ ಪ್ರೀತಿಯ ಪತ್ನಿ ಸೌದಾಮಿನಿಯೂ ಸುಟ್ಟು ಕರಕಲಾಗಿದ್ದಳು. ಯಾರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದನೋ, ಯಾರಿಗೋಸ್ಕರ ಸಮಾಜವನ್ನೇ ಎದುರುಹಾಕಿಕೊಂಡು ಬಾಳಿದ್ದನೋ ಅವಳೇ ಇಲ್ಲದ ಮೇಲೆ? ಹೆಂಡತಿಯನ್ನು ಮಣ್ಣುಮಾಡಿ ಆ ಸಮಾಧಿಯ ಪಕ್ಕದಲ್ಲೇ ಆಂಟನಿ ಪ್ರಾಣಬಿಟ್ಟ. ದೇವಿ ದುರ್ಗೆಯ ಕುರಿತಾದ ರಚನೆಯಾದ, ದುರ್ಗಾಪೂಜೆಯ ಅವಿಭಾಜ್ಯ ಅಂಗವಾದ ಅಗೊಮನಿ ಗಾನಪ್ರಕಾರದಲ್ಲಿ ಆಂಟನಿ ಫಿರಂಗಿಗೆ ಬಂಗಾಳದ ಸರ್ವೋತ್ಕೃಷ್ಟ ಕವಿಗಳಲ್ಲೊಬ್ಬನೆಂಬ ಹೆಗ್ಗಳಿಕೆಯಿದೆ. ಇವನ ನೂರಾರು ರಚನೆಗಳು, ಭಕ್ತಿಗೀತೆಗಳು ಬಂಗಾಲದ ಸಾಹಿತ್ಯವನ್ನು, ಭಕ್ತಿಪಂಥವನ್ನು ಸಮೃದ್ಧಗೊಳಿಸಿವೆ. ವಿದೇಶದಲ್ಲೆಲ್ಲೋ ಹುಟ್ಟಿ ಭಾರತಕ್ಕೆ ಬಂದು ಭಾರತೀಯನೇ ಆಗಿ ಇಲ್ಲಿನ
ಫಿರಂಗಿ ಕಾಳಿ
ಸಂಸ್ಕೃತಿ, ಸಂಪ್ರದಾಯ, ಭಾಷೆಗಳನ್ನು ಕಲಿತು, ಸಾಹಿತ್ಯ ರಚನೆಮಾಡಿ, ಮತಸೌಹಾರ್ದತೆಯನ್ನು ಸಾರಿ, ಭಕ್ತಿಪಂಥವನ್ನು ಉತ್ತುಂಗಕ್ಕೇರಿಸಿ, ಕವಿಗಾನದಂಥ ಪರಂಪರೆಯಲ್ಲಿ ಹೆಗಲೆಣೆಯಿಲ್ಲದವನೆಂದು ಹೆಸರಾದವನವನು. ತನ್ನ ಇಷ್ಟದೈವದ ಮೇಲಿನ ಅನನ್ಯ ಭಕ್ತಿಯಿಂದ ಆತ ನಿರ್ಮಿಸಿದ್ದ ಕಾಳಿಮಂದಿರವಿನ್ನೂ ಬಂಗಾಳದ ಬೋವ್‌ಬಜಾರಿನ ಗಲ್ಲಿಯೊಂದರಲ್ಲಿದೆ. ಹಿಂದೂದೇವಿಯ ಮೇಲೆ ಫಿರಂಗಿಯೊಬ್ಬನ ಭಕ್ತಿ ಚಿರಸ್ಥಾಯಿಯಾಗಿ ಉಳಿದುದು ಬಂಗಾಳ ಮಾತ್ರವಲ್ಲ ಭಾರತದ ಮಣ್ಣಿನ ಹಿರಿಮೆಯಿಂದ.
ಜಾತಿಮತ ಪಂಥಗಳನ್ನು ಮೀರಿ ಕಾಳಿ ಕೋಲ್ಕತ್ತದ ಕಣಕಣಗಳಲ್ಲಿ ಕಲೆತು ಹೋಗಿದ್ದಾಳೆ. ಆಕೆಯಿಲ್ಲದ ಜಾಗವಿಲ್ಲ. ಚೈನಾಟೌನ್ ಎಂಬ ಚೀನಿಯರೇ ಇರುವ ಪ್ರದೇಶದಲ್ಲೂ(ಮೊದಲು ಇಲ್ಲಿ ೨೦೦೦೦ ಚೈನಿಯರಿದ್ದರು, ಈಗ ಆ ಸಂಖ್ಯೆ ಸುಮಾರು ಎರಡು ಸಾವಿರಕ್ಕಿಳಿದಿದೆ) ಒಂದು ಕಾಳಿಮಂದಿರವಿದೆ. ಅದಕ್ಕವರು ನ್ಯೂಡಲ್ಸ್, ಪಾಸ್ತಾಗಳನ್ನೇ ನೈವೇದ್ಯವಾಗಿಡುವುದು.  ನಗರದ ಪ್ರತಿರಸ್ತೆಯ ಪ್ರತಿಮೂಲೆಯಲ್ಲೂ ಒಂದೊಂದು ಕಾಳಿಯ ಗುಡಿಯಿದ್ದೇ ಇರುತ್ತದೆ. ಬಸ್ಸಿನಲ್ಲಿ ಹೋಗುವಾಗ ಕಿಲೋಮೀಟರಿಗೆ ನಾಲ್ಕು ಸರ್ತಿಯಾದರೂ ರಸ್ತೆಪಕ್ಕ ನೋಡಿ ಎರಡೂ ಕೈಯೆತ್ತಿ ಮುಗಿಯದ ಬಂಗಾಳಿಯನ್ನು ಕಾಣುವುದೇ ಅಪರೂಪ. ಪಕ್ಕಾ ನಾಸ್ತಿಕ ಕಮ್ಯುನಿಸ್ಟರೂ ದುರ್ಗಾಪೂಜೆಯನ್ನು ತಪ್ಪಿಸಿಕೊಳ್ಳುವುದಿಲ್ಲ. ಕೋಲ್ಕತ್ತಾವನ್ನು ನೋಡಿದ ಬಹಳಷ್ಟು ಜನಕ್ಕೆ ಆ ನಗರವೆಂದರೆ ಇಕ್ಕಟ್ಟಾದ ರಸ್ತೆಗಳು, ಕಸದ ರಾಶಿ, ಗಲಾಟೆ, ಒಂದಿಷ್ಟು ಬುದ್ಧಿಜೀವಿಗಳು, ಎಡಪಂಥೀಯ ಕ್ರಾಂತಿ, ಹುಚ್ಚುತನ, ರಕ್ತದಾಹದ ರಾಜಕೀಯ. ಬೆಂಗಳೂರು, ಮುಂಬೈ ನೋಡಿದವರಿಗೆ ಕೋಲ್ಕತ್ತ ಇಷ್ಟವಾಗುವ ಸ್ಥಳವೇನಲ್ಲ. ಥೇಟ್ ಕಾಳಿಯಂತೆ. ಅವಳು ಕಗ್ಗತ್ತಲ ರಾತ್ರಿಯಂತೆ ಕರಾಳ, ಆದರಷ್ಟೆ ಸುಂದರ. ಭೀಭತ್ಸ,ರೌದ್ರ, ಭಯಾನಕ, ಆದರಷ್ಟೇ ಮೋಹಕ. ಅವಳು ವಿನಾಶಕಾರಿ, ಆದರೆ ಪ್ರಳಯರುದ್ರನ ಎದೆಯ ಮೇಲೆಯೇ ಕಾಲಿಟ್ಟು ನಿಂತ ರಕ್ಷಕಿ. ಅವಳ ಘೋರರೂಪ ಸಂಹಾರಕ್ಕಾಗಿ, ಸಂಹಾರವೆಂಬುದು ಹೊಸ ಸೃಷ್ಟಿಗಾಗಿ, ಅವಳೆಂದರೆ ಶಕ್ತಿ, ಶ್ರದ್ಧೆ, ಸ್ಫೂರ್ತಿ. ಬೇರಾವ ನಗರವೂ ಅಷ್ಟು ಚೆನ್ನಾಗಿ ಕಾಳಿಯ ರೂಪಕವಾಗಲಾರದು, ಬೇರಾವ ದೈವವೂ ಕೋಲ್ಕತ್ತವನ್ನಾಳಲು ಸಾಧ್ಯವಾಗಲಾರದು. ಕೋಲ್ಕತ್ತವೆಂದರೆ ಕಾಳಿ, ಕಾಳಿಯೆಂದರೆ ಕೋಲ್ಕತ್ತಾ. ಅಂಥ ಅಬೇಧವದು. ಅದ್ವೈತವದು.

2 comments:

  1. ಸ್ವಲ್ಪವೇ ಸಮಯದಲ್ಲಿ ಬಹಳಷ್ಟು ಮಾಹಿತಿಯನ್ನು ಕಲೆಹಾಕಿದ್ದೀರಿ (ಎಂದಿನಂತೆ!!).

    ReplyDelete
  2. ನಿಮ್ಮ ಬ್ಲಾಗ್ ನಿಜಕ್ಕೂ ಅದ್ಭುತ.. ಎಷ್ಟೆಲ್ಲಾ ಮಾಹಿತಿಗಳ ಆಗರ. ಭಾರತದ ಅತ್ಯದ್ಭುತ ಇತಿಹಾಸದ ಮಾಹಿತಿಗೆ ಅನಂತ ಧನ್ಯವಾದ.

    ReplyDelete