Pages

Friday, January 24, 2014

ಬೇಡನಾದ ಬ್ರಾಹ್ಮಣ..!


     ವಾಲ್ಮೀಕಿಗಿರಿಸಂಭೂತವಾಗಿ ರಾಮಸಾಗರವನ್ನು ಸೇರಿದ ರಾಮಾಯಣವೇ ಒಂದು ಮಹಾನದಿ. ಅದು ಸಾವಿರಾರು ಕವಿಗಳ ಪ್ರತಿಭೆಗೆ ಸ್ಫೂರ್ತಿದಾಯಿನಿಯಾಗಿ ಅನಂತಕಾಲದಿಂದಲೂ ಈ ಭೂಮಿಯನ್ನು ಪಾವನಗೊಳಿಸುತ್ತಿರುವ ಪುಣ್ಯಗಂಗೆ. ಅಂದಿನಿಂದ ಇಂದಿನವರೆಗೆ ರಾಮಾಯಣವು ಸಹಸ್ರ ಸಹಸ್ರ ಕವಿಗಳಿಂದ ಸಾವಿರ ಸಾವಿರ ಬಾರಿ ಪುನಃ ಪುನಃ ಬರೆಯಲ್ಪಟ್ಟಿದೆ. ’ತಿಣುಕಿದನು ಫಣಿರಾಯ ರಾಮಾಯಣದ ಕವಿಭಾರದಲಿ’ ಎಂಬಂತೆ ಅದೆಷ್ಟೇ ರಾಮಾಯಣಗಳಿದ್ದರೂ ಪುರ್ವೋತ್ತರದ ವಿಚಾರಮಾಡುವ ಕೆಲಸ ವಿದ್ವಾಂಸನಿಗೆ ಬಂದರೆ ಎಲ್ಲದಕ್ಕೂ ಮೂಲವಾಗುವುದು ವಾಲ್ಮೀಕಿ ರಾಮಾಯಣವೇ. ಪ್ರಚಲಿತ ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕೆಲವೊಂದು ಭಾಗಗಳು ಪ್ರಕ್ಷಿಪ್ತವಾದರೂ ರಾಮಾಯಣ ಮತ್ತು ವಾಲ್ಮೀಕಿಯ ವೃತ್ತಾಂತದ ಬಗ್ಗೆ ತಿಳಿಯಲು ಅವೇ ಮೂಲ ಆಧಾರ. ಅಗಸನ ಮಾತು ಕೇಳಿ ಕಾಡಿಗಟ್ಟಲ್ಪಟ್ಟ ಸೀತೆಗೆ ಆಶ್ರಯಕೊಟ್ಟು, ಲವಕುಶರನ್ನು ಸಾಕಿ ಅವರಿಗೆ ರಾಮಾಯಣವನ್ನು ಕಲಿಸಿ ಮತ್ತೆ ಸೀತೆಯು ರಾಮನನ್ನು ಯಾಗಮಂಟಪದಲ್ಲಿ ಸಂಧಿಸುವಂತೆ ಮಾಡಿದ ಕೀರ್ತಿ ವಾಲ್ಮೀಕಿಯದ್ದೆಂದು ಉತ್ತರ ರಾಮಾಯಣ ತಿಳಿಸುತ್ತದೆ. ಹೀಗೆ ವಾಲ್ಮೀಕಿಯು ರಾಮಾಯಣವನ್ನು ಬರೆದ ಕವಿಯಷ್ಟೇ ಅಲ್ಲ, ರಾಮಾಯಣದ ಪ್ರಮುಖ ಪಾತ್ರಧಾರಿಯೂ ಹೌದು. ಅಯೋಧ್ಯಾ ಕಾಂಡದ ಸರ್ಗವೊಂದರಲ್ಲಿ ರಾಮ, ಲಕ್ಷ್ಮಣ, ಸೀತೆಯರು  ಚಿತ್ರಕೂಟದ ಸಮೀಪ ವಾಲ್ಮೀಕಿಯನ್ನು ಕಂಡು ವಂದಿಸಿದರೆಂದಿದೆ. ಬಾಲಕಾಂಡದ ಕ್ರೌಂಚ ಪ್ರಸಂಗದಿಂದ ವಾಲ್ಮೀಕಿಯ ಆಶ್ರಮ ತಮಸಾನದಿ ತೀರದಲ್ಲಿತ್ತೆಂದು ತಿಳಿಯುತ್ತದೆ. ಈ ವಾಲ್ಮೀಕಿ ಬೇಡಕುಲದವನೆಂಬ ರೂಢಿ ನಮ್ಮಲ್ಲಿ ಬಹುಮಟ್ಟಿಗೆ ಪ್ರಚಾರದಲ್ಲಿದೆ. ನಮ್ಮ ಹಿಂದಿನ ’ಗನ’ ಸರ್ಕಾರವು ಸಿದ್ರಾಮಯ್ಯನವರಿಂದ ಕುರುಬರ ಓಟು ಕದಿಯಲು ’ಕನಕ’ಜಯಂತಿಯಂದೂ, ಶ್ರೀರಾಮುಲುವನ್ನು ಸಂತೈಸಲು ’ವಾಲ್ಮೀಕಿ’ ಜಯಂತಿಯಂದೂ ರಜೆ ಘೋಷಿಸಿದ್ದು ಎಲ್ಲರಿಗೂ ತಿಳಿದ ವಿಚಾರವೇ. ಇನ್ನು ಒಕ್ಕಲಿಗರಿಗಾಗಿ ಕೆಂಪೇಗೌಡ ಜಯಂತಿಯಂದೂ, ಮುಸ್ಲೀಮರಿಗಾಗಿ ಟಿಪ್ಪುಸುಲ್ತಾನ್ ಜಯಂತಿಗೂ ಹೀಗೆ ಜಾತಿಗೊಂದು ಜಯಂತಿಗಳಿಗೆ ರಜೆ ಘೋಷಿಸಿ ಸೆಕ್ಯುಲರಿಸಮ್ಮನ್ನು ಎತ್ತಿಹಿಡಿಯಲು ತುದಿಗಾಲಲ್ಲಿ ನಿಂತಿದೆ. ಪ್ರಚಲಿತವೂ, ಪ್ರಚಾರವೂ ಏನೇ ಇದ್ದರೂ ವಾಲ್ಮೀಕಿ ಬೇಡನಾಗಿದ್ದನೇ? ಎಂಬ ಸತ್ಯಾಸತ್ಯತೆಯನ್ನು ಸ್ವಲ್ಪ ವಿಚಾರಿಸೋಣ.
     ಈ ಕಥೆ ಮೊದಲು ದೊರಕುವುದು ಆಧ್ಯಾತ್ಮ ರಾಮಾಯಣದಲ್ಲಿ. ಚಿತ್ರಕೂಟದ ಸಮೀಪ ವಾಲ್ಮೀಕಿ ದರ್ಶನಕ್ಕೆ ಬಂದ ರಾಮನಿಗೆ ವಾಲ್ಮೀಕಿಯೇ ಹೇಳುವುದು:
ಅಹಂ ಪುರಾ ಕಿರಾತೇಷು ಕಿರಾತೈಃ ಸಹ ವರ್ಧಿತಃ |
ಜನ್ಮಮಾತ್ರದ್ವಿಜತ್ವಂ ಮೇ ಶೂದ್ರಾಚಾರರತಃ ಸದಾ ||

ನಾನು ಬೆಳೆದದ್ದೆಲ್ಲ ಕಿರಾತರ ನಡುವೆ, ಶೂದ್ರಾಚಾರದಲ್ಲೇ ನಾನಿದ್ದೆ. ಕೇವಲ ಜನ್ಮದಿಂದ ಮಾತ್ರ ನಾನು ದ್ವಿಜನಾಗಿದ್ದೆ.(ಗಮನಿಸಿ ಇಲ್ಲಿ ಕಿರಾತನೆಂದಿದೆಯೇ ಹೊರತೂ ಬೇಡನೆಂದಲ್ಲ)
ಅನಂತರ ಕಳ್ಳರ ಸಹವಾಸದಿಂದ ಕಳ್ಳನಾದೆ. ಒಮ್ಮೆ ಸಪ್ತರ್ಷಿಗಳ ವಸ್ತುಗಳನ್ನು ಅಪಹರಿಸಲು ಹೊರಟಾಗ ಅವರೆಂದರು "ನೀನು ಯಾವ ಹೆಂಡತಿ ಮಕ್ಕಳಿಗಾಗಿ ಇಷ್ಟು ಪಾಪಕಾರ್ಯಗಳನ್ನು ಮಾಡುತ್ತಿರುವೆಯೋ ಅದರಲ್ಲಿಯೂ ಅವರು ಭಾಗಿಗಳಾಗುವರೋ ಕೇಳಿಕೊಂಡು ಬಾ" ಎಂದು. ನಾನು ಹಾಗೆ ಕೇಳಿದಾಗ ಯಾರೂ ಭಾಗಿಗಳಾಗಲು ಒಪ್ಪಲಿಲ್ಲ. ಅದರಿಂದ ವೈರಾಗ್ಯವುಂಟಾಯಿತು. ಅವರು ಅಲ್ಲಿಯೇ ಜಪಮಾಡುವಂತೆ ’ಮರಾ’ ಎಂಬ ಮಂತ್ರೋಪದೇಶ ಮಾಡಿದರು.
’ಏಕಾಗ್ರಮನಸಾತ್ರೈವ ಮರೇತಿ ಜಪ ಸರ್ವದಾ’
ನಾನು ಹಾಗೆಯೇ ಮಾಡುತ್ತಿರಲು ನನ್ನಮೇಲೆ ಹುತ್ತ ಬೆಳೆಯಿತು. ವರ್ಷಗಳ ನಂತರ ಋಷಿಗಳು ಬಂದು ನನ್ನನ್ನು ಹೊರಬರುವಂತೆ ಕರೆದರು.
ವಲ್ಮೀಕಾನ್ನಿರ್ಗತಶ್ಚಾಹಂ ನೀಹಾರಾದಿವ ಭಾಸ್ಕರಃ |
ಮಾಮಪ್ಯಾಹುರ್ಮುನಿಗಣಾಃ ವಾಲ್ಮೀಕಿಸ್ತ್ವಂ ಮುನೀಶ್ವರಃ ||

ವಲ್ಮೀಕದಿಂದ ಹೊರಬಂದುದರಿಂದ ಮುಂದೆ ಈತ ವಾಲ್ಮೀಕಿಯೆಂದೇ ಹೆಸರಾದ. ಅಲ್ಲದೇ ವರುಣನು(ಪ್ರಚೇತ) ಮಳೆಯನ್ನು ಸುರಿಸಿ ಹುತ್ತವನ್ನು ಕರಿಗಿಸಿದ್ದರಿಂದ ಪ್ರಾಚೇತಸನೆಂಬ ಹೆಸರೂ ಬಂದಿತು. ಇದಕ್ಕೂ ಮೊದಲು ಆತನಿಗೆ ಯಾವ ಹೆಸರಿತ್ತೆಂಬುದು ರಾಮಾಯಣದಲ್ಲೆಲ್ಲೂ ಉಲ್ಲೇಖವಿಲ್ಲ.
     ಇದೇ ಕಥೆಯು ಮುಂದೆ ಆನಂದ ರಾಮಾಯಣದಲ್ಲೂ ಇದೆ. ಇದಕ್ಕೆ ಪುಷ್ಟಿಕೊಡುವ ವಿಚಾರ ಮಹಾಭಾರತದ ಅನುಶಾಸನ ಪರ್ವದಲ್ಲೂ ಕಂಡುಬರುತ್ತದೆ. ಅಲ್ಲಿ ಯುಧಿಷ್ಠಿರನಿಗೆ ವಾಲ್ಮೀಕಿಯು ಹೇಳುತ್ತಾನೆ.
ವಾಲ್ಮೀಕಿಶ್ಚಾಹ ಭಗವಾನ್ ಯುಧಿಷ್ಠಿರಮಿದಂ ವಚಃ |
ವಿವಾದೇ ಸಾಗ್ನಿಮುನಿಭಿರ್ಬ್ರಹ್ಮಘ್ನೋ ವೈ ಭವಾನಿತಿ
ಉಕ್ತಃ ಕ್ಷಣೇನ ಚಾವಿಷ್ಟಸ್ತೇನಾಧರ್ಮೇಣ ಭಾರತ |
ಸೋಽಹಮೀಶಾನಮನಘಂ ಅಮೋಘಂ ಶರಣಂ ಗತಃ ||
ಮುಕ್ತಶ್ಚಾಸ್ಮಿತತೋ ಪಾಪೈಃ

"ಅಗ್ನಿಪೂಜಕರಾದ ಮುನಿಗಳೊಡನೆ ನಾನು ವಿವಾದ ಮಾಡಿದ್ದರಿಂದ ನೀನು ಬ್ರಹ್ಮಘ್ನನೆಂದುಬಿಟ್ಟರು. ಕೂಡಲೇ ನಾನು ಅಧರ್ಮಿಷ್ಟನಾದೆ. ಕಡೆಗೆ ಈಶ್ವರನನ್ನು ಶರಣುಹೋಗಿ ಪಾಪಮುಕ್ತನಾದೆ."
ಅಶ್ವಘೋಷನ ಬುದ್ಧಚರಿತ್ರೆಯಲ್ಲೂ ವಾಲ್ಮೀಕಿಯ ವೃತ್ತಾಂತವಿದೆ. ಅಲ್ಲಿ ವಾಲ್ಮೀಕಿಯನ್ನು ಚ್ಯವನ ಮಹರ್ಷಿಯ ಮಗನೆಂದಿದೆ.
’ವಾಲ್ಮೀಕಿರಾದೌ ಚ ಸಸರ್ಜ ಪದ್ಯಂ ಜಗ್ರಂಥಯನ್ನ ಚ್ಯವನೋ ಮಹರ್ಷಿಃ ’
ಈ ಚ್ಯವನನು ಭೃಗುವಿನ ಮಗ.
’ಭೃಗೋಮಹರ್ಷೇಃ ಪುತ್ರೋಽಭೂತ್ ಚ್ಯವನೋ ನಾಮ ಭಾರ್ಗವಃ’
ಭಾರ್ಗವನಾದ ವಾಲ್ಮೀಕಿಯೇ ರಾಮಚರಿತೆಯನ್ನು ಬರೆದವನೆಂದು ಶಾಂತಿಪರ್ವದಲ್ಲಿ ಸ್ಪಷ್ಟ ಉಲ್ಲೇಖವಿದೆ.
ಶ್ಲೋಕಶ್ಚಾಯಂ ಪುರಾಗೀತೋ ಭಾರ್ಗವೇನ ಮಹಾತ್ಮನಾ |
ಆಖ್ಯಾತೇ ರಾಮಚರಿತೇ ನೃಪಂತಿ ಪ್ರತಿ ಭಾರತ ||

ಸ್ವತಃ ರಾಮಾಯಣ, ಮಹಾಭಾರತಗಳಲ್ಲೇ ವಾಲ್ಮೀಕಿಯು ಬ್ರಾಹ್ಮಣನೆಂದಿದೆಯೇ ಹೊರತೂ ಬೇಡನೆಂದಲ್ಲ. ಆದರೆ ಕೆಲವು ಕಾಲ ಶೂದ್ರಾಚಾರ ನಿರತನಾಗಿದ್ದರೂ ಇರಬಹುದು.
     ರಾಮಾಯಣದ ಹುಟ್ಟಿಗೆ ಕಾರಣವೆನಿಕೊಂಡ ’ಮಾನಿಷಾದ’ ಶ್ಲೋಕವನ್ನೇ ಗಮನಿಸಿ. ಇದು ಛಂದಸ್ಸಿನ ದೃಷ್ಟಿಯಿಂದ ನಿರ್ದುಷ್ಟವೆನಿಸಿದರೂ, ಅರ್ಥದ ದೃಷ್ಟಿಯಿಂದ ಅಪೂರ್ವ ಮಹತ್ವದ್ದೆಂದೇನೂ ಭಾಸವಾಗುವುದಿಲ್ಲ. ಕೆಲ ವ್ಯಾಖ್ಯಾನಕಾರರು ’ಮಾ’ ಎಂದರೆ ಲಕ್ಷ್ಮಿಯೆಂದೂ, ಮಾನಿಷಾದ ಎಂದರೆ ಲಕ್ಷ್ಮಿನಿವಾಸನಾದ ವಿಷ್ಣುವೆಂದೂ ಬಗೆಬಗೆಯ ಅರ್ಥಗಳನ್ನು ತೋರಿಸಿ ರಾಮಾಯಣಕ್ಕೆ ಮಂಗಳಶ್ಲೋಕವೆನಿಸುವ ಔಚಿತ್ಯ ಅದರಲ್ಲುಂಟೆಂದು ವಿವರಣೆ ನೀಡಿದ್ದಾರೆ. ಇದು ಪಂಡಿತರ ವ್ಯಾಖ್ಯಾನಕೌಶಲವೇ ಹೊರತೂ ಮತ್ತೇನೂ ಅಲ್ಲ. ಕ್ರೌಂಚ ಪಕ್ಷಿಯೊಂದನ್ನು ನಿಷಾದನೊಬ್ಬನು ಕೊಂದು ಕೆಡಹುತ್ತಾನೆ. ನೆಲಕ್ಕೆ ಬಿದ್ದು ಹೊರಳಾಡಿ ಸಾಯುತ್ತಿರುವ ಅದನ್ನು ಕಂಡ ವಾಲ್ಮೀಕಿಯ ಬಾಯಿಂದ ಹೊರಬಂದ ಶ್ಲೋಕವಿದು. ಪಕ್ಷಿಯನ್ನು ಕೊಂದದ್ದಕ್ಕಾಗಿ ವಾಲ್ಮೀಕಿ ನಿಷಾಧನನ್ನು ಶಪಿಸುತ್ತಾನೆ. ಬೇಟೆಯಾಡುವುದು ಬೇಡನ ಸಹಜ ಧರ್ಮ. ವಾಲ್ಮೀಕಿ ಮೂಲತಃ ಬೇಡನೇ ಆಗಿದ್ದಲ್ಲಿ ಹಕ್ಕಿಯನ್ನು ಕೊಂದವನೊಬ್ಬನನ್ನು ಹೀಗೆ ಶಪಿಸಲು ಸಾಧ್ಯವೇ ಇರುತ್ತಿರಲಿಲ್ಲ.
      ರಾಜಸ್ಥಾನ, ಪಂಜಾಬ್, ಗುಜರಾತಿನಲ್ಲಿ ಬಹುಸಂಖ್ಯೆಯಲ್ಲಿರುವ ಈಗಿನ ವಾಲ್ಮೀಕಿ ಸಮುದಾಯದವರಿಗೆ ಆ ಹೆಸರು ಬ್ರಿಟಿಷರ ಕಾಲದಲ್ಲಿ ಹೇಗೆ ಬಂತೆಂಬ ವಿವರಣೆಗೆ ಪಂಡಿತ ಅಮಿತ್‌ಚಂದ ಶರ್ಮಾರ ’’ಬಾಲ್ಮೀಕಿ ಪ್ರಕಾಶ್’ ಎಂಬ ಹಿಂದಿ ಹೊತ್ತಿಗೆಯನ್ನು ಗಮನಿಸಿ.

6 comments:

 1. ಓಹ್.. ಚೆನ್ನಾಗಿದೆ ಬರಹ. ಈ ವ್ಯಾಖ್ಯಾನಗಳು ತಪ್ಪೆಂದು ಹೇಳುವುದಕೆ ಇದು ಸಾಕೇ? ವಾಲ್ಮೀಕಿ ಶಪಿಸುವುದು ಅಷ್ಟೊಂದು ಸಮಂಜಸವಲ್ಲ ಎಂದೆನ್ನಿಸಿದ್ದು ಹೌದು.

  ReplyDelete
 2. ಅಲ್ಲವೆನ್ನಲು ಮೂಲರಾಮಾಯಣದಲ್ಲಿ ಇದಕ್ಕಿಂತ ಹೆಚ್ಚಿನ ಆಧಾರಗಳಿದ್ದರೆ ಒಪ್ಪಿಕೊಳ್ಳಬಹುದಿತ್ತು. ಆದರೆ ಹಾಗೆನ್ನಲು ಯಾವುದೂ ದಾಖಲೆ ಇಲ್ಲವಲ್ಲಾ?

  ReplyDelete
 3. excellent, scholarly, truth-seeking research and analysis. keep up the good work. our many thanks, praNaams and best wishes to namma budding great scholar shree sachin bhat aNNa ru.

  ReplyDelete
  Replies
  1. thank you, Dha-vaa & pranamas Thirumalarayanna..:)

   Delete
 4. ಚೆಂದಿದ್ದು ಸಚಿನಣ್ಣ..

  ಆತ ಬ್ರಾಹ್ಮಣನಾಗಿದ್ದ ಹೇಳದಿಕ್ಕೆ ಕೊಟ್ಟಿರೋ ವಿವರಣೆಗಳು, ಪೂರಕ ಉದಾಹರಣೆಗಳು ಸಮಂಜಸವಾಗಿದ್ರೂ
  ವಾಲ್ಮೀಕಿ ಬೇಡನಾಗಿದ್ದ ಹೇಳದಕ್ಕೆ ಯಾವುದೇ ಆಧಾರ ಇಲ್ಲೆ ಹೇಳೋ ಕಾರಣ ಒಪ್ಪಿಕಳ್ಳದು ಸ್ವಲ್ಪ ಕಷ್ಟನೇ ಅನುಸ್ತು. ವಾಲ್ಮೀಕಿ ರಾಮಾಯಣ ಮೂಲ ರಾಮಾಯಣ, ಅದ್ರಿಂದನೇ ಎಲ್ಲಾ ಸ್ಪೂರ್ತಿ ಪಡೆದಿದ್ದು ಹೇಳದೆಲ್ಲಾ ಸರಿನೇ. ಆದ್ರೆ ನಮಗೆ ಸಿಕ್ಕಿರೋ ವಾಲ್ಮೀಕಿ ರಾಮಾಯಣ ಹೇಳದು ಮೂಲ ಪ್ರತಿನೆನಾ ಅಥವಾ ಅದನ್ನು ಕಾಲಾಂತರದಲ್ಲಿ ತಿರುತಿರುಚಿ ನಮಗೆ ಸಿಕ್ಕಿರೋ ಪ್ರತಿ ಎಷ್ಟೊ ಸಲ ಬದಲಾಗಿರಬಹುದಾದ ಆವೃತ್ತಿ ಆಗಿದ್ರೆ ?

  ಹಂಗೇನಾದ್ರೂ ಆಗಿದ್ರೆ ವಾಲ್ಮೀಕಿ ಬರೆಯದಿರದ ಅನೇಕ ಅಂಶಗಳನ್ನೂ ಬರದ್ದ ಅಂತ ಸೇರಿಸಿ, ಬರೆದಿದ್ದ ಅಂಶಗಳನ್ನ ಮಾರ್ಪಡಿಸೋ ಅನುಕೂಲ ಸಿಂಧುಗಳ ಕೈವಾಡ ಅಡಗಿರೋ ಸಾಧ್ಯತೆನೂ ಇರ್ತು. ಪಾಶ್ಚ್ಯಾತ್ಯರ ಧಾಳಿಯಲ್ಲಿ, ಬ್ರಿಟಿಷರ ದಬ್ಬಾಳಿಕೆಯಲ್ಲಿ ನಲಂದಾದಂತಹ ವಿಶ್ವವಿದ್ಯಾಲಯಗಳೇ ನಲುಗಿ ಹೋಗಿರಕಿದ್ರೆ ಇಂತಹ ಮಾರ್ಪಾಡಾಗಿರೋ ಸಾಧ್ಯತೆನೂ ಇರ್ತು. ದೇಶದಾದ್ಯಂತ ಇರೋ ಕೃತಿಗಳು ತಪ್ಪು ಅಂತ ಹೇಳ್ತಾ ಇಲ್ಲೆ. ನಮಗೆ ಸಿಕ್ಕಿರೋ ಕೃತಿ ಮೂಲ ಆಗಿರದೇ ಇದ್ರೆ ಅನ್ನೋ ಒಂದು ಸಣ್ಣ ಸಂದೇಹ ಅಷ್ಟೇ. ಅದೇ ಮೂಲ ಆಗಿದ್ರೆ, ಅದರಲ್ಲಿ ವಾಲ್ಮೀಕಿಯ ಜನ್ಮ ವೃತ್ತಾಂತದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯಿರ ಸಾಧ್ಯತೆನೂ ಇದ್ದು .

  ಇನ್ನು ಬೌದ್ದರ ಪುರಾಣದಲ್ಲಿನ ಉಲ್ಲೇಖಗಳ ಬಗ್ಗೆ. ಹಿಂದೊಮ್ಮೆ ಅಶೋಕನ ಬಗ್ಗೆ ಬರೀತಾ ಹಿಂದು ದೇವತೆಗಳನ್ನೆಲ್ಲಾ ಬೌದ್ದ ದೇವರನ್ನಾಗಿ ಹೈಜಾಕ್ ಮಾಡಿದ ಅವರ ಬಗ್ಗೆ ನೀನೇ ಬರದ್ದೆ. ಆ ತರ ನಾನೂ ನೋಡಿದ್ದೆ. ಅಬಿಂಕಾ ದೇವಿ, ಗಣೇಶನನ್ನ ಪಾರ್ಶ್ವ ಯಕ್ಷ, ವಿಷ್ಣುವನ್ನ ಮತ್ತೊಂದು.. ಹಿಂಗೆ ಸುಮಾರನ್ನು ಯಥಾವತ್ ತಗಂಡಿಕ್ಕು ಅಥವಾ ಇನ್ನೊಂದೇನಾರೂ ಹೆಸರಿಟ್ಟಿಕ್ಕು. ಅದೇ ತರ ಹಿಂದೂ ಪುರಾಣದಲ್ಲಿದ್ದ ವಾಲ್ಮೀಕಿಗೂ ಒಂದು ಬೌದ್ದನ ತರದ ಹೆಸರು ಕೊಟ್ಟು ಒಂದು ಜನ್ಮ ವೃತ್ತಾಂತ ಬರೆದಿರ್ಲಾಗ ಅಂತ ಏನೂ ಇಲ್ಲೆ ಅಂತ ಅಂದ್ಕತ್ತಿ.

  ReplyDelete
  Replies

  1. ಹಾಂ ಒಳ್ಳೆಯ ಪ್ರಶ್ನೆ ಪ್ರಶಸ್ತಿ. ಇದಕ್ಕೆ ಸ್ವಲ್ಪ ವಿಸ್ತ್ರತ ವಿವರಣೆ ಬೇಕು. ಅದಿನ್ನೊಂದು ಲೇಖನದಷ್ಟು ಉದ್ದವಾಗಬಹುದು. ಚಿಕ್ಕದಾಗಿ ಹೇಳುವುದಾದರೆ ಇದುವರೆಗಿನ ದೊರಕಿದ ರಾಮಾಯಣದ ಹಸ್ತಪ್ರತಿಗಳನ್ನು ಪರಿಶೀಲಿಸಿ ವಿದ್ವಾಂಸರು ಮುಖ್ಯವಾಗಿ ೩ ಕ್ರಮಗಳನ್ನು ನಿರ್ದೇಶಿಸಿದ್ದಾರೆ. ಮೊದಲನೇಯದು ದಾಕ್ಷಿಣಾತ್ಯ, ಎರಡು ಮತ್ತು ಮೂರನೇಯದು ಗೌಡೀಯ ಮತ್ತು ಪಾಶ್ಚಿಮೋತ್ತರೀಯ. ಮೊದಲು ಉದೀಚ್ಯವಾಗಿದ್ದುದು ಕೊನೆಗೆ ಗೌಡೀಯ ಮತ್ತು ಪಾಶ್ಚಿಮೋತ್ತರೀಯವೆಂಬ ಭೇದದ್ವಯಗಳಾದವೆಂದು ಭಾವನೆ. ಈ ಮೂರನ್ನೂ ಹೋಲಿಸಿದಾಗ ಉತ್ತರಕಾಂಡದಲ್ಲಿ ವ್ಯತ್ಯಾಸಗಳು ಬಂದಿದ್ದು ಕಡಿಮೆ. ಗೌಡೀಯ ಮತ್ತು ಪಾಶ್ಚಿಮೋತ್ತರೀಯಗಳೆರಡೂ ಹೆಚ್ಚುಕಡಿಮೆ ಒಂದೇ ರೀತಿಯಾಗಿವೆ. ದಾಕ್ಷಿಣಾತ್ಯದಲ್ಲಿ ಮಾತ್ರ ಕೆಲ ಕಡೆ ಆರ್ಷಪ್ರಯೋಗಗಳನ್ನು ತಿದ್ದಿಬರೆದಂತಿದೆ. ಆದ್ದರಿಂದ ಮೂರೂ ಪಾಠಗಳಲ್ಲಿ ಯಾವಶ್ಲೋಕಗಳು ಒಂದೇ ಥರ ಅಥವಾ common ಆಗಿವೆಯೋ ಅವೇ ಪ್ರಾಚೀನವೆಂದೂ ವಿದ್ವಜ್ಜನರೆಲ್ಲರ ಒಮ್ಮತಾಭಿಪ್ರಾಯ. ಉದೀಚ್ಯಕ್ರಮದಲ್ಲಿರುವ ಭರತನ ರಾಜಗೃಹವಾಸ, ಸೀತೆಯು ಮೇನಕೆ, ಜನಕರ ಮಾನಸಪುತ್ರಿಯೆಂಬ ಕಲ್ಪನೆ, ಹನುಮಜ್ಜನ್ಮ, ನಿಕಷೆಯ ವೃತ್ತಾಂತ, ಕೈಕೆಯಿಗೆ ಬ್ರಾಹ್ಮಣನ ಶಾಪ, ಕಾಲನೇಮಿ ವೃತ್ತಾಂತ ಕಥೆಗಳು ಪ್ರಾಯಶಃ ನಂತರ ಪ್ರಕ್ಷೇಪಗೊಂಡವು. ಅದೇ ರೀತಿ ದಕ್ಷಿಣಾತ್ಯದಲಿರುವ ಬಾಲಕಾಂಡದಲ್ಲಿರುವ ಅವತಾರಕಲ್ಪನೆಗಳು, ಅಯೋಮುಖಿಯೆಂಬ ರಾಕ್ಷಸಿಯ ಕಥೆ, ಹನುಮಂತ ಮತ್ತು ಲಂಕೆಯ ಅಭಿಮಾನಿ ದೇವತೆಗಳ ಯುದ್ಧ, ಸುಗ್ರೀವ-ರಾವಣರ ಯುದ್ಧ ಇವೆಲ್ಲ ಪ್ರಕ್ಷೇಪಗಳು. ಇದಲ್ಲದೇ ಮೂಲರಾಮಾಯಣವು ರಾಮಪಟ್ಟಾಭಿಷೇಕದಲ್ಲೇ ಮುಕ್ತಾಯವಾಗುವುದರಿಂದ ಉತ್ತರಕಾಂಡವು ವಾಲ್ಮೀಕಿ ರಚಿತವಲ್ಲ ಎಂಬ ಅಭಿಪ್ರಾಯವಿದೆ. ಬರೋಡೆಯ ವಿಶ್ವವಿದ್ಯಾಲಯದವರು ವರ್ಷಾನುಗಟ್ಟಲೆ ವಿದ್ವಾಂಸರುಗಳಿಂದ ಪರೀಕ್ಷೆಗೊಳಪಡಿಸಿ ಪ್ರಕ್ಷೇಪಗೊಂಡಿರುವ, ಮತ್ತೆಸೇರಿಸಿದ್ದಿರಬಹುದು ಎಂಬ ಅನುಮಾನವುಳ್ಳ ಪ್ರತಿ ಶ್ಲೋಕಕ್ಕೂ ವಿವರಣೆ ನೀಡಿದ್ದಾರೆ. ವಾಲ್ಮೀಕಿಯ ಭಾಗ ಪ್ರಕ್ಷೇಪಗೊಂಡಿದ್ದೆನ್ನಲು ಯಾವ ಆಧಾರವೂ ಇಲ್ಲ. ಜೊತೆಗೆ ವಾಲ್ಮೀಕಿಯ ಕಥೆಗಳು ಆಧ್ಯಾತ್ಮ ರಾಮಾಯಣ, ಆನಂದ ರಾಮಾಯಣ, ಮಹಾಭಾರತಗಳಲ್ಲೂ ಮೂಲರಾಮಾಯನದಲ್ಲಿರುವಂತೆಯೇ ಬಂದಿರುವುದರಿಂದ ಇಲ್ಲಿ ಅನುಮಾನಕ್ಕವಕಾಶವಿಲ್ಲ. ಇನ್ನೊಂದು ಮಜಾ ವಿಷಯ ಹೇಳುತ್ತೇನೆ ಕೇಳು, ರಾಮಾಯಣದಲ್ಲಿ ರಾಮನನ್ನು ’ವಿಷ್ಣುನಾ ಸದೃಶೋ ವೀರ್ಯೇ’, ’ವಿಷ್ಣುತುಲ್ಯಪರಾಕ್ರಮಃ’ ’ದೇವವರಃ’ ಎಂದಿದೆಯೇ ಹೊರತೂ ಅವತಾರಗಳ ಕಲ್ಪನೆಯೇ ರಾಮಾಯಣದಲ್ಲಿಲ್ಲ

   Delete