Pages

Thursday, December 1, 2011

ಗ್ಲೋಬಲೈಸೇಶನ್ನೂ, ರಿಸೇಶನ್ನೂ -2

ಉದಾರೀಕರಣವನ್ನು ಜಾರಿಗೆ ತರಬೇಕಾದರೆ ಮೊದಲು ವಿಶ್ವ ಬ್ಯಾಂಕಿನ ಸುಧಾರಣಾ ನೀತಿಗಳನ್ನು ಜಾರಿಗೆ ತರಬೇಕು ಎಂದು ಹಿಂದೊಮ್ಮೆ ಲೇಖನದಲ್ಲಿ ಹೇಳಿದ್ದೇನಷ್ಟೆ. 90ರ ದಶಕದಲ್ಲಿ ವಿಶ್ವ ಬ್ಯಾಂಕಿನ ಸುಧಾರಣೆಗಳನ್ನು ಅತ್ಯಂತ ವೇಗವಾಗಿ ಜಾರಿಗೆ ತಂದಿದ್ದು ದ.ಕೋರಿಯ. ವಿಶ್ವ ಬ್ಯಾಂಕ್, IMF ಅಂದಂತೆ ತನ್ನ ಮಾರುಕಟ್ಟೆಯನ್ನು ಅಮೇರಿಕನ್ ಮತ್ತು ಯುರೋಪಿಯನ್ ಕಂಪನಿಗಳಿಗೆ ಸಂಪೂರ್ಣವಾಗಿ ತೆರೆಯಿತು. ಮಾತ್ರವಲ್ಲ ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನೂ ಕೂಡ ಖಾಸಗೀಕರಣ ಮಾಡಿತು. ಸ್ಪರ್ಧೆಯನ್ನು ಹೆಚ್ಚಿಸಲು ತನ್ನ ದೇಶೀಯ ಕೈಗಾರಿಕೆಗಳಿಗೆ ನೀಡಲಾಗುವ ರಕ್ಷಣೆಯನ್ನು ಕಡಿಮೆ ಮಾಡಿತು. ಅಷ್ಟೇ ಅಲ್ಲದೇ ಸಿಯೋಲಿನ ಸ್ಟಾಕ್ ಎಕ್ಸ್-ಚೇಂಜನ್ನು ಸಂಪೂರ್ಣವಾಗಿ ಅಮೇರಿಕದ ಕೈಗೊಪ್ಪಿಸಿತು. ಕೋರಿಯದ ಈ ಸುಧಾರಣೆಗಳಿಂದ ಉಬ್ಬಿ ಹೋದ ಆಗಿನ ಭಾರತದ ಅರ್ಥಮಂತ್ರಿ ಮನಮೋಹನಸಿಂಗ್ ಪಾರ್ಲಿಮೆಂಟಿನಲ್ಲಿ ಕೊರಿಯಾವನ್ನು ಯದ್ವಾತದ್ವಾ ಹೊಗಳಿದ್ದಲ್ಲದೇ ಕೊರಿಯಾಕ್ಕೆಏಶಿಯನ್ ಟೈಗರ್ಎಂಬ ಬಿರುದನ್ನೂ ದಯಪಾಲಿಸಿದರು. ನಂತರ ನಡೆದಿದ್ದೇನು?.... ಇದಾಗಿ ಕೇವಲ ಎಂಟೇ ವರ್ಷಗಳಲ್ಲಿ ವಿಶ್ವ ಬ್ಯಾಂಕಿನ ನೀತಿಗಳಿಂದ ತಾವು ಸಂಪೂರ್ಣ ದೀವಾಳಿಯಾಗಿರುವುದಾಗಿ ಕೊರಿಯಾದ ಪ್ರಧಾನಿ ಕಿಮ್ ಇಲ್ ಸೂನ್ ಅಲ್ಲಿನ ಪಾರ್ಲಿಮೆಂಟಿನಲ್ಲಿ ಘೋಷಿಸಿ, World Economic Forumನ ಸಭೆಯಲ್ಲಿ ತಮ್ಮ ದೇಶದ ಎಲ್ಲಾ ಸಾಲಗಳನ್ನು ಮನ್ನಿಸಬೇಕಾಗಿ ಅಲ್ಲಿನ ವಿತ್ತೀಯ ಸಂಸ್ಥೆಗಳನ್ನು ಕೇಳಿಕೊಳ್ಳಬೇಕಾಯ್ತು. ಇದಾದ ಕೆಲ ವರ್ಷಗಳಲ್ಲೇ ಸಾರ್ವಜನಿಕ ಸಹಭಾಗಿತ್ವದ ಬಹುತೇಕ ಕಂಪನಿಗಳು ಅಮೇರಿಕದ ವಶವಾದವು. ಇದಕ್ಕೆ ಅತ್ಯುತ್ತಮ ಉದಾಹರಣೆಯೆಂದರೆ ಹುಂಡೈ. ಕೊರಿಯಾದ ಹೆಮ್ಮೆಯ ಕಂಪನಿಯಾದ ಇದು ಈಗ ಅಮೇರಿಕದ ಜನರಲ್ ಮೋಟಾರ್ಸ್-ನ ಕೈಯಲ್ಲಿದೆ.
ಕೊರಿಯಾದ ಕತೆ ಹೀಗಾದರೆ ಇಂಡೋನೇಶಿಯಾದ್ದು ಮತ್ತೊಂದು ಕತೆ. 3೦ ವರ್ಷಗಳಿಗಿಂತ ಹೆಚ್ಚು ಕಾಲ ಇಂಡೋನೇಶಿಯಾದ ಪ್ರಧಾನಿಯಾಗಿದ್ದವನು ಸುಹೃತ್ ಸುಕರ್ಣ. 9೦ರ ದಶಕದಲ್ಲಿ ಉದಾರಿಕರಣದ ಮುನ್ನ ಇಂಡೋನೇಶಿಯಾದ 40 ರುಪಯ್ಯ 1 ಡಾಲರಿಗೆ ಸಮನಾಗಿತ್ತು. ವಿಶ್ವಬ್ಯಾಂಕಿನ ನೀತಿಗಳಿಗೆ ತಲೆದೂಗಿ ತನ್ನ ಕರೆನ್ಸಿಯನ್ನು ಅಪಮೌಲ್ಯೀಕರಣಗೊಳಿಸಿದ ನಂತರ 1 ಡಾಲರಿನ ಮೌಲ್ಯ 17000 ರುಪಯ್ಯಗಳಿಗೇರಿತು. ಥೈಲ್ಯಾಂಡಿನಂಥ ನಗರ ಕೇಂದ್ರೀಕೃತ ಪುಟ್ಟ ದೇಶದ ಕಥೆಯೂ ತೀರ ಭಿನ್ನವೇನಲ್ಲ. ವಿದೇಶಿ ಸಾಲ ವಿಪರೀತವಾಗಿ ಬೆಳೆದಿತ್ತು. ಅದನ್ನು ತೀರಿಸುವಷ್ಟು ದೇಶದ income ಬೆಳೆದಿರಲಿಲ್ಲ. ಹಣ ಬರುವ ಯಾವ ಹೊಸ ಮಾರ್ಗಗಳೂ ಇರಲಿಲ್ಲ. ಅದಕ್ಕೆ ಅಲ್ಲಿನ ಪ್ರಧಾನಿ ಕಂಡುಕೊಂಡ ಅದ್ಭುತ ಐಡಿಯಾವೆಂದರೆ ವೈಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿ ತೆರಿಗೆ ವಿಧಿಸಿದ್ದು. ಆ ತೆರಿಗೆಯಿಂದ ಸಂಗ್ರಹಿಸಿದ್ದ ಮೊತ್ತದಿಂದ ಸಾಲದ ಬಡ್ಡಿಗೆ ಹಣ ಹೊಂದಿಸಿದ್ದು.
ಭಾರತದಲ್ಲೇ ನೋಡೀ. ಕಳೆದ ವರ್ಷ 1 ಡಾಲರ್ ಗಳಿಸಲು 45 ರೂ.ಗಳ ವಸ್ತುಗಳನ್ನು ರಫ್ತು ಮಾಡಬೇಕಿತ್ತು. ಈಗ ಅದೇ 1 ಡಾಲರ್ ಗಳಿಸಲು 53 ರೂಪಾಯಿ ಬೇಕು. ಪರಿಣಾಮವಾಗಿ ರಫ್ತಿನ ಪ್ರಮಾಣ ಹೆಚ್ಚುತ್ತದೆಯೇ ಹೊರತು ಮೌಲ್ಯವಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ 8 ರೂ ಹೆಚ್ಚಾಗಿ ಖರ್ಚಾಗುತ್ತಿದೆ.. ಜೊತೆಗೆ ಆಮದಿನ ಶುಲ್ಕ ಜಾಸ್ತಿಯಾಯ್ತು. Trade deficit ( ರಫ್ತಿನ ಮೌಲ್ಯಕ್ಕಿಂತ ಆಮದಿನ ಮೌಲ್ಯ ಹೆಚ್ಚಾಗುವ ಸ್ಥಿತಿ) ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಜಾಗತೀಕರಣಕ್ಕೂ ಮುಂಚೆ 1991ರಲ್ಲಿ ಭಾರತದ Trade deficit 2 ಸಾವಿರ ಕೋಟಿ ಆಗಿತ್ತು. ಈಗ ಅದು 25 ಸಾವಿರ ಕೋಟಿಯನ್ನು ಮೀರಿದೆ. ಇದರೊಂದಿಗೆ Wall-martನಂಥ ಹೈಪರ್-ಮಾರ್ಕೆಟುಗಳಿಗೆ ಭಾರತೀಯ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶೀ ಬಂಡವಾಳ ಹೂಡಲು ಕೇಂದ್ರ ಸರ್ಕಾರ ಸಮ್ಮತಿಸಿ ಬರೋಬ್ಬರಿ 5 ಕೋಟಿ ಚಿಲ್ಲರೆ ಮಾರಾಟಗಾರರನ್ನು ಬೀದಿ ಪಾಲಾಗಿಸಲು ಸ್ಕೆಚ್ ಹಾಕಿದೆ. ಅಷ್ಟಕ್ಕೂ ವಾಲ್-ಮಾರ್ಟ್ ಭಾರತಕ್ಕೆ ಬಂದ್ರೆ ಏನಾಗತ್ತೆ ಗೊತ್ತಾ....?

2 comments:

  1. ಅಬ್ಬಾ !!!
    ಉತ್ತಮ ಮಾಹಿತಿ :-)

    ReplyDelete
  2. Thank you prashasti...
    ಎಲ್ಲ ok, ಅಬ್ಬಾ ಯಾಕೆ?

    ReplyDelete