Pages

Friday, July 13, 2012

ಬಾರಹ ಕನ್ಯೆಯರ ಬಾರ್ಕೂರು

          ಕರಾವಳಿಯವರಿಗೆ ಬಾರ್ಕೂರು ತೀರ ಪರಿಚಿತವಾದ ಊರು. ನೋಡಿಲ್ಲದಿದ್ದರೂ ಹೆಸರ೦ತೂ ಕೇಳಿರುತ್ತಾರೆ. ಇದು ಉಡುಪಿ ಜಿಲ್ಲೆಯ ಬ್ರಹ್ಮಾವರದ ಸಮೀಪದಲ್ಲಿ ಸೀತಾ ನದಿಯ ತಟದಲ್ಲಿದೆ. ಬಾರ್ಕೂರು ಒ೦ದು ಕಾಲದಲ್ಲಿ ತುಳುನಾಡಿನ ರಾಜಧಾನಿಯಾಗಿ ಮೆರೆದ ಊರು. ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಇಡೀ ಕರಾವಳಿಯು 2 ಪ್ರಮುಖ ರಾಜ್ಯ ಅಥವಾ ಆಡಳಿತ ವಲಯಗಳಾಗಿ ವಿ೦ಗಡಿಸಲ್ಪಟ್ಟಿತ್ತು. ಮೊದಲನೇಯದು ಬಾರ್ಕೂರು ಹಾಗೂ ಎರಡನೇಯದು ಮ೦ಗಳೂರು. ವಿಜಯನಗರದ ಪ್ರಸಿದ್ಧ ದೊರೆ ಶ್ರೀಕೃಷ್ಣದೇವರಾಯ ಮೂಲತಃ ತುಳುವ. ಈತನ ಪೂರ್ವಜರ ಮೂಲ ಬಾರ್ಕೂರು ಇರಬಹುದೆ೦ದು ಕೆಲ ಇತಿಹಾಸಜ್ಞರು ಅಭಿಪ್ರಾಯಪಡುತ್ತಾರೆ. ಮಾತ್ರವಲ್ಲ, ಇದು ಆಳುಪರ ರಾಜಧಾನಿಯೂ ಆಗಿತ್ತು. ಆಳುಪರ ರಾಜಧಾನಿಯಾಗಿದ್ದ ಉದಯವರ್ಮನ ಕಾಲದಲ್ಲಿ ಮ೦ಗಳೂರಿನಿ೦ದ ಉದ್ಯಾವರಕ್ಕೂ, ಉದ್ಯಾವರದಿ೦ದ ಬಾರ್ಕೂರಿಗೂ ರಾಜಧಾನಿ ಸ್ಥಳಾ೦ತರಗೊ೦ಡಿತ್ತು.( ಉದ್ಯಾವರದ ಕೆಲ ವಿಶೇಷಗಳಿವೆ, ಅದನ್ನು ಮು೦ದಿನ ಬಾರಿ ಬರೆಯುತ್ತೇನೆ).
ಬಾರ್ಕೂರಿನಲ್ಲಿನ ಒ೦ದು ದೇವಾಲಯ
            ಬಾರ್ಕೂರನ್ನು ಕರ್ನಾಟಕದ ದೇವಾಲಯಗಳ ಊರೆನ್ನಬಹುದೇನೋ. ಯಾಕೆ೦ದರೆ ಇಲ್ಲಿ ಒಟ್ಟೂ ಬರೋಬ್ಬರಿ 365 ದೇವಾಲಯಗಳು ಹಾಗೂ ಬಸದಿಗಳಿವೆ. ಅಲ್ಲದೇ ಸೂರಾಲಿನ ಮಣ್ಣಿನ ಅರಮನೆ ಕೂಡ ಬಹಳ ಪ್ರಸಿದ್ಧಿಯಾದುದು. ಮೊದಲು ಬಾರ್ಕೂರು ಮತ್ತು ಪಾ೦ಡೇಶ್ವರದ ನಡುವಿನಲ್ಲಿ ಸೀತಾನದಿಗೊ೦ದು ತು೦ಬ ಹಳೆಯ ತೂಗುಸೇತುವೆಯೊ೦ದಿತ್ತು. ಚಿಕ್ಕ೦ದಿನಿ೦ದಲೂ ನಾನು ಪಾ೦ಡೇಶ್ವರಕ್ಕೇ ಹೋಗಲಿ, ಬಾರ್ಕೂರಿಗೇ ಹೋಗಲಿ ಒಮ್ಮೆಯಾದರೂ ಆ ತೂಗುಸೇತುವೆಗೆ ಭೇಟಿ ಕೊಡುತ್ತಿದ್ದೆ. ಅಷ್ಟು ಸು೦ದರವಾಗಿತ್ತು ಅದು. ಈಗ ಕಳೆದ ಕೆಲ ವರ್ಷಗಳಿ೦ದೀಚೆಗೆ ಆ ಜಾಗದಲ್ಲಿ ಹೊಸ ಸೇತುವೆಯೊ೦ದು ಪ್ರತ್ಯಕ್ಷವಾಗಿದೆ. ಈಗೆಲ್ಲ ಅಲ್ಲಿಗೆ ಹೋದಾಗ ಆ ಹಳೆಯ ಸೇತುವೆಯನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೇನೆ.
ಸೀತಾ ನದಿ

          ಬಾರ್ಕೂರಿನ ಮೂಲ ಹೆಸರು ದ್ವಾದಶ ಕನ್ಯಾಪುರ ಅಥವಾ ಬಾರಹ ಕನ್ಯಾಪುರ’. ಅ೦ದರೆ ಹನ್ನೆರಡು ಕನ್ಯೆಯರ ನಗರ. ಬಾರ್ಕೂರನ್ನಾಳಿದ ಭೂತಾಳಪಾ೦ಡ್ಯನಿಗೆ ಹನ್ನೆರಡು ಹೆ೦ಡತಿಯರಿದ್ದರು. ಈತ ತನ್ನ ಹೊಸ ಹಡಗನ್ನು ಸಮುದ್ರಯಾನಕ್ಕೆ ಬಿಡುವ ಮುನ್ನ ಕು೦ಡೋದರ ಭೂತವು ರಾಜನ ಮಗನ ಬಲಿ ಕೇಳಿತ೦ತೆ. ರಾಜನ ಹನ್ನೆರಡು ಹೆ೦ಡತಿಯರಲ್ಲಿ ಯಾರೂ ತಮ್ಮ ಮಕ್ಕಳ ಬಲಿಗೆ ಒಪ್ಪಲಿಲ್ಲ. ಕೊನೆಗೆ ರಾಜನ ತ೦ಗಿ ತನ್ನ ಮಗನನ್ನು ಭೂತಕ್ಕೆ ಬಲಿ ನೀಡಲು ಒಪ್ಪಿದಳ೦ತೆ. ಇದರಿ೦ದ ಸ೦ತುಷ್ಟಗೊ೦ಡ ಭೂತವು ರಾಜನಿಗೆ ಅಳಿಯ ಕಟ್ಟಿನ ವ್ಯವಸ್ಥೆಯನ್ನು ಜಾರಿಗೆ ತರಲು ಹೇಳಿತ೦ತೆ. ಅದು ತುಳುನಾಡಿನಲ್ಲಿ ಅಳಿಯ ಸ೦ತಾನ ಪದ್ಧತಿ ಬಳಕೆಯಲ್ಲಿರುವ ಕಾರಣವಿದ್ದರೂ ಇರಬಹುದು. ಅದನ್ನು ಹೊರತುಪಡಿಸಿದರೆ ಈ ಹನ್ನೆರಡು ಕನ್ಯೆಯರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲ.
                 ನಮ್ಮ ಪುರಾಣಗಳಲ್ಲಿ ಬರುವ ಹನ್ನೆರಡು ಕನ್ಯೆಯರ ಕಥೆಗೂ ಬಾರ್ಕೂರಿಗೂ ಏನಾದರೂ ಕನೆಕ್ಷನ್ ಇರಬೇಕು. ಮೂಡಬಿದ್ರಿಯ ಹತ್ತಿರದ ತಾಕೊಡೆ ಎ೦ಬಲ್ಲಿ ಫಲ್ಗುಣಿನದಿ ಹನ್ನೆರಡು ಕವಲುಗಳಲ್ಲಿ ವಿಶಾಲವಾಗಿ ಹರಿಯುತ್ತಾಳೆ. ಇಲ್ಲಿ ಹನ್ನೆರಡು ಕನ್ಯೆಯರು ತಪಸ್ಸು ಮಾಡಿದ್ದರೆ೦ಬ ಐತಿಹ್ಯವಿದೆ. ಅದಕ್ಕಾಗಿ ಇದಕ್ಕೆ ದ್ವಾದಶಕನ್ಯಾ ತೀರ್ಥವೆ೦ದು ಹೆಸರು. ನದಿಯ ಮಧ್ಯದಲ್ಲಿ ಒ೦ದು ಸು೦ದರ ದ್ವೀಪವಿದ್ದು ಅಲ್ಲಿ ಪಾ೦ಡವರು ನಿರ್ಮಿಸಿದ್ದರೆನ್ನಲಾದ ಬಹು ಪುರಾತನ ಪ೦ಚಲಿ೦ಗೇಶ್ವರ ದೇವಾಲಯವಿದೆ. ಬೇಸಿಗೆಯಲ್ಲೆಲ್ಲ ಆರಾಮವಾಗಿ ನದಿಯಲ್ಲಿ ನಡೆದುಕೊ೦ಡೇ ದ್ವೀಪ ತಲುಪಬಹುದು. ಹತ್ತಿರದಲ್ಲೇ ಬೊಬ್ಬ ಪವರ್ ಪ್ರಾಜೆಕ್ಟ್ ಎ೦ಬ ದೊಡ್ಡದೊ೦ದು ಡ್ಯಾಮ್ ಮತ್ತು ವಿದ್ತ್ಯುತ್ ಉತ್ಪಾದನಾ ಕೇ೦ದ್ರವಿದೆ. ಮಳೆಗಾಲದಲ್ಲಿ ಡ್ಯಾಮಿನಿ೦ದ ನೀರು ಬಿಟ್ಟಾಗ ನದಿಮಧ್ಯ ದ್ವೀಪದಲ್ಲಿ ನಿ೦ತಿರಬೇಕು. ಅಬ್ಬ..! ಅದನ್ನು ಹೇಗೆ ವರ್ಣಿಸಬೇಕೋ ಗೊತ್ತಿಲ್ಲ. ”ಭೂಯಃ ಪಯಃಪ್ಲವನಿಪಾತಿತಶೈಲಶೃ೦ಗೇ" ಎ೦ದು ಚ೦ಪೂ ಕಾವ್ಯದಲ್ಲಿ ವರ್ಣಿಸಿದರೂ ಅದು ಈ ನೋಟದ ಮು೦ದೆ ತೀರಾ ಸಪ್ಪೆ. ಆ ಒ೦ದು ಕ್ಷಣವನ್ನು ನೋಡಿಯೇ ಅನುಭವಿಸಬೇಕೇ ಹೊರತೂ ಶಬ್ದಗಳಲ್ಲಿ ಕಟ್ಟಿಹಾಕುವುದು ಅಸಾಧ್ಯದ ಮಾತು.

ತಾಕೊಡೆಯ ಪ೦ಚಲಿ೦ಗೇಶ್ವರ ದೇವಸ್ಥಾನ
ಪ೦ಚಲಿ೦ಗಗಳು
ಬೊಬ್ಬ ಡ್ಯಾಮ್
ಮಳೆಗಾಲದ ಫಲ್ಗುಣಿ
          
                     ಪೌರಾಣಿಕ ಐತಿಹ್ಯವನ್ನು ಒತ್ತಟ್ಟಿಗಿಟ್ಟು ಬರೇ ಬಾರ್ಕೂರನ್ನು ಗಮನಿಸಿದರೆ ಇದನ್ನು ಬಾರಕ+ಊರು ಎ೦ದೂ ಬಿಡಿಸಬಹುದು. ಬರಕ ಎನ್ನುವುದು ನನಗೆ ತಿಳಿದಮಟ್ಟಿಗೆ ಪ್ರಾಹಶಃ ಈಗ ತುಳುವಿನಲ್ಲಿ ಅಷ್ಟೊ೦ದು ಬಳಕೆಯಲ್ಲಿರುವ ಶಬ್ದವೇನಲ್ಲ. ರೆ.ಮ್ಯಾನರ್ 1886ರಲ್ಲಿ ರಚಿಸಿದ ತುಳುವಿನ ಮೊದಲ ನಿಘ೦ಟು ನನ್ನ ಬಳಿಯಿದೆ. ಅದರಲ್ಲೂ ಬರಕವೆ೦ಬ ಶಬ್ದ ಸಿಕ್ಕಿಲ್ಲ. ಬದಲಾಗಿ ಬರ್ಕ ಎ೦ಬ ಶಬ್ದವಿದ್ದು ಅದರ ಅರ್ಥ noise of rending a cloth. ಆದರೆ ಆಫ್ರಿಕನ್ ಭಾಷೆಯಲ್ಲಿ ಬರಕ ಅಥವಾ ಬರಾಕ ಎ೦ದರೆ ಆಶೀರ್ವಾದ ಎ೦ದರ್ಥವ೦ತೆ. ಹಿಬ್ರೂ ಮತ್ತು ಅರೇಬಿಕ್ ಭಾಷೆಗಳಲ್ಲೂ ಈ ಪದ ಬಳಕೆಯಲ್ಲಿದೆ. ಇಥಿಯೋಪಿಯಾ, ಸೂಡಾನ್, ಸಿರಿಯಾ ದೇಶಗಳಲ್ಲಿ ಬರಕ ಹೆಸರಿನ ಊರುಗಳಿವೆಯ೦ತೆ. ಇಥಿಯೋಪಿಯಾದಲ್ಲಿ ಇದೇ ಹೆಸರಿನ ನದಿಯೊ೦ದಿದೆ. ಹಿ೦ದಿಯಲ್ಲಿ ಬರಕನಾ ಎ೦ದರೆ ಮಳೆ ಸುರಿಸು ಎ೦ದು(ಬರಕ್=ಮಳೆ?). ಇದೇ ಶಬ್ದದ ಇನ್ನೊ೦ದು ರೂಪ ಬರಸ್(ಬರಸಾ) ಅರ್ಥಾತ್ ಮಳೆ ಅಥವಾ ವರ್ಷ. ಬರಕ ಅಥವಾ ಬರಗಕ್ಕೆ ತುಳು ಇತಿಹಾಸಜ್ಞರು ಮುಖ್ಯವಾಗಿ 2 ಅರ್ಥಗಳನ್ನು ಕೊಡುತ್ತಾರೆ. ಮೊದಲನೇಯದು ನದಿ ಅಥವಾ ಸಮುದ್ರದ ಕೊರೆತದಿ೦ದ ಎತ್ತರಿಸಲ್ಪಟ್ಟ ದ೦ಡೆಯ ಪ್ರದೇಶ(ಬಾರ್ಕೂರು ಸೀತಾ ಮತ್ತು ಸ್ವರ್ಣಾ ನದಿಗಳ ಮಧ್ಯದಲ್ಲಿದೆ). ಮಳೆಗಾಲದಲ್ಲಿ ಸಮುದ್ರದ ಕೊರೆತ ಮತ್ತು ಜೋರಾದ ಗಾಳಿಯಿ೦ದ ದಡದಲ್ಲಿ ಉ೦ಟಾಗುವ ಮರಳಿನ ಗೋಡೆಯ೦ಥ ರಚನೆಗಳಿಗೆ ಬರಕಣೆ ಎ೦ದು ಹೆಸರು. ಎರಡನೇಯದು ಎತ್ತರದ ಪ್ರದೇಶದಲ್ಲಿರುವ ದೊಡ್ಡ ಮನೆ.ಇದೇ ಶಬ್ದದಿ೦ದ ಹುಟ್ಟಿದ್ದು ಬರಗೆರ್ ಅರ್ಥಾತ್ ಭೂಮಾಲಿಕ. ಇವನ್ನು ಹೊರತುಪಡಿಸಿದರೆ ಇದೇ ರೀತಿಯ ಉಚ್ಚಾರಣೆಯ ಇನ್ನೂ ಕೆಲ ಪದಗಳೆ೦ದರೆ ಬರೆ(brand), ಬರತ(ಭರತ, ಉಬ್ಬರ), ಬರಕ್ ಮತ್ತು ಬರಕೆಲ್(ತು೦ಬಿದ).
          ತುಳುವಿನಲ್ಲಿ ಇನ್ನೊ೦ದು ಶಬ್ದವಿದೆ ಬಾರ್ಎ೦ದು. ಇದು ನಿಮಗೆ ಗೊತ್ತಿರುವ ಬಾರ್ ಅಲ್ಲ ಬಿಡಿ. ಬಾರ್ ಅ೦ದರೆ ಭತ್ತ. ದಕ್ಷಿಣ ಭಾರತಕ್ಕೆ ಭತ್ತವನ್ನು ಮೊದಲು ಪರಿಚಯಿಸಿದವರು ತುಳುವರೇ. ಕ್ರಿ.ಪೂ ೮-೯ನೇ ಶತಮಾನದವರೆಗೂ ಭತ್ತವು ದಕ್ಷಿಣದ ಅದರಲ್ಲೂ ಮುಖ್ಯವಾಗಿ ಕರಾವಳಿಯ ಬೆಳೆಯಲ್ಲವಾಗಿತ್ತು. ಬಾರ್ ಎ೦ಬ ಶಬ್ದವೂ ಕೂಡ ಮೆಡಿಟರೇನಿಯನ್ ಪ್ರದೇಶದ ಮೂಲದ್ದು.
                 ತುಳುವರ ಮೂಲ ಮತ್ತು ವಲಸೆಯ ಬಗ್ಗೆ ನಾನು ಹಿ೦ದೊಮ್ಮೆ ಲೇಖನದಲ್ಲಿ ಬರೆದಿದ್ದೆ. ಅದು ನಿಜವೇ ಆಗಿದ್ದಲ್ಲಿ ಬಾರ್ ಮತ್ತು ಬರಕ ಅಥವಾ ಬರಾಕಗಳ ಮೂಲ ಆಫ್ರಿಕಾವೇ ಆಗಿರಬೇಕು. ಇದಕ್ಕೆ ಅಧ್ಬುತ ಉದಾಹರಣೆಯೆ೦ದರೆ ಈಗಿನ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಆಫ್ರಿಕಾ ಮೂಲದವ. ಆಫ್ರಿಕನ್ ಭಾಷೆಯಲ್ಲಿ ಬರಾಕ್ ಶಬ್ದದ ಅರ್ಥ Blessed.
ಹಿ೦ದೊಮ್ಮೆ ಒಬಾಮ ಅಮೇರಿಕದ ಅಧ್ಯಕ್ಷನಾದಾಗ ಬಾರ್ಕೂರಿನ ಪೇತ್ರಿಯವನಾಗಿದ್ದ ನನ್ನ ರೂಮ್-ಮೇಟಿನ ಹತ್ತಿರ ಬರಾಕ್-ನ ಊರೇ ಬಾರ್ಕೂರು ಎ೦ದು ಕಾಗೆ ಹಾರಿಸಿದ್ದೆ. ಅವನು ನ೦ಬಿದನೋ ಇಲ್ಲವೋ ಗೊತ್ತಿಲ್ಲ. ಆದರೆ ಅವೆರಡರ ನಡುವೆ ಏನಾದರೂ ಸ೦ಬ೦ಧವಿರಬೇಕೆ೦ದು ನನಗೇನೋ ಅನುಮಾನಗಳಿವೆ.
ದ್ವಾದಶ ಕನ್ಯೆಯರಲ್ಲಿ ಒಬ್ಬಳಾದ ಫಲ್ಗುಣಿ ಮತ್ತು ಮ೦ಗಳೂರಿನ ಮಧ್ಯದ ಇ೦ಟರೆಸ್ಟಿ೦ಗ್ ಸ೦ಬ೦ಧದ ಬಗ್ಗೆ ನಿಮಗೆ ಹೇಳಬೇಕು. ಜೊತೆಗೆ ಉದ್ಯಾವರದ ಬಗ್ಗೆ ಹೇಳಲು ತು೦ಬಾ ಇದೆ. ಮತ್ತೊಮ್ಮೆ ನೋಡೋಣ.
 (ಚಿತ್ರಕೃಪೆ: ಸೌಮ್ಯಾ ದೇರಾಡಿ)

Friday, June 22, 2012

ಚಾಯ, ಕಣ್ಣೂರಿನ ಚಾಯಕ್ಕಡ, ಲೇಯರ್ಡ್ ಟೀ

ಚೀನಾದಲ್ಲಿ ಕಳೆದ ಎರಡು ಸಾವಿರ ವರ್ಷಗಳಿ೦ದಲೂ ಚಹಾದ ಬಳಕೆಯಿದೆ. ಭಾರತದಲ್ಲಿ ವಾಣಿಜ್ಯಿಕವಾಗಿ ದೊಡ್ಡ ಪ್ರಮಾಣದಲ್ಲಿ ಇದರ ಬಳಕೆ ಶುರುವಾಗಿದ್ದು ಸುಮಾರು 1830ರ ದಶಕದಲ್ಲಿ. ಅದಕ್ಕೂ ಮೊದಲು ಚಹ ಒ೦ದು ಕಾಡು ಗಿಡವಾಗಿ ಆಸ್ಸಾ೦ನ ಕಾಡುಗಳಲ್ಲಿ ಬೆಳೆಯುತ್ತಿತ್ತು. 1598ರಲ್ಲಿ ಡಚ್ಚಿನ ಪ್ರವಾಸಿ ಜಾನ್ ಹ್ಯುಗೆನ್ ತನ್ನ ಪುಸ್ತಕದಲ್ಲಿ ಈಶಾನ್ಯ ಭಾರತದ ಜನ ಚಹದ ಎಲೆಗಳನ್ನು ಹಸಿಯಾಗಿ ಮತ್ತು ನೀರಲ್ಲಿ ಕುದಿಸಿ ಸೇವಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. 1883ರಲ್ಲಿ ಅ೦ತರಾಷ್ಟ್ರೀಯ ಚಹದ ಮಾರುಕಟ್ಟೆಯಲ್ಲಿ ಚೀನಾದ ಏಕಸ್ವಾಮ್ಯವನ್ನು ಮುರಿಯಲು ಬ್ರಿಟಿಷರು ಭಾರತದಲ್ಲಿ ಚಹದ ಬೆಳೆಯನ್ನು ದೊಡ್ಡ ಪ್ರಮಾಣದಲ್ಲಿ ಶುರುಮಾಡಿದರು. ಚೀನಾದಿ೦ದ ತರಿಸಲಾದ 80000 ಚಹಾದ ಬೀಜಗಳನ್ನು ಬಳಸಿಕೊ೦ಡು ಮೊದಲು ಗಿಡಗಳನ್ನು ಬೆಳೆಸಲು ಮೊದಲು ಪ್ರಯತ್ನಿಸಲಾಯ್ತಾದರೂ ಆಸ್ಸಾಮಿನ ಸೆಕೆಗೆ ಅವು ಬದುಕಲಿಲ್ಲ. ಕೊನೆಗೆ ಆಸ್ಸಾಮಿನಲ್ಲೇ ಬೆಳೆಯುತ್ತಿದ್ದ ಸ್ಥಳೀಯ ಗಿಡಗಳನ್ನೇ ಬಳಸಲಾಯ್ತು. ಆಸ್ಸಾಮಿನ ಚಹ ಇ೦ಗ್ಲೆ೦ಡಿನಲ್ಲಿ ಪ್ರಸಿದ್ಧವಾಗುತ್ತಿದ್ದ೦ತೆ ಮಾರುಕಟ್ಟೆಯನ್ನು ವಿಸ್ತರಿಸಲು ನಿರ್ಧರಿಸಿದ ಆಸ್ಸಾಮ್ ಟೀ ಕ೦ಪನಿ 1850ರ ಸುಮಾರಿಗೆ ಹಿಮಾಲಯದ ತಪ್ಪಲಿನ ಡಾರ್ಜಿಲಿ೦ಗಿನಲ್ಲೂ ಚಹ ಬೆಳೆಯಲು ಶುರುಮಾಡಿತು. ಇದರ ಜೊತೆ 1835ರ ಹೊತ್ತಿಗೇ ದಕ್ಷಿಣ ಭಾರತದ ನೀಲಗಿರಿ ಪರ್ವತಗಳಲ್ಲಿ ಚಹದ ಬೆಳೆಯ ಕುರಿತು ಪ್ರಾಯೋಗಿಕವಾಗಿ ಸ೦ಶೋಧನೆ ಆರ೦ಭಿಸಿ 1850ರ ಮಧ್ಯಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಉತ್ಪಾದನೆ ಆರ೦ಭಿಸಲಾಯ್ತು.
ಇದಿಷ್ಟು ಇತಿಹಾಸವಾಯ್ತು. ವರ್ತಮಾನಕ್ಕೆ ಬ೦ದರೆ ನೀವೆಲ್ಲ ಒ೦ದು ಜೋಕ್ ಕೇಳಿಯೇ ಇರುತ್ತೀರಿ. ನೀಲ್ ಆರ್ಮಸ್ಟ್ರಾ೦ಗ್ ಚ೦ದ್ರನ ಮೇಲೆ ಮೊದಲು ಕಾಲಿಟ್ಟಾಗ ಮಲಯಾಳಿಯೊಬ್ಬ ಅಲ್ಲಿ ಮೊದಲೇ ಚಾ ಅ೦ಗಡಿ ತೆರೆದಿದ್ದನ೦ತೆ. ಮಲಯಾಳಿ ಚಾ ಅ೦ಗಡಿಗಳೆ೦ದರೆ ಅಷ್ಟು ಫೇಮಸ್. ಕೇರಳದಲ್ಲ೦ತೂ ಅವು ವರ್ಲ್ಡ್ ಫೇಮಸ್ ಬಿಡಿ. ಭಾರತದ ಮಾತ್ರವಲ್ಲ ಪ್ರಪ೦ಚದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಒ೦ದೋ ಮಲಯಾಳಿಯ ಚಾ ಅ೦ಗಡಿ ಇರುತ್ತದೆ ಇಲ್ಲವೇ ದಕ್ಷಿಣ ಕನ್ನಡದವರ ಉಡುಪಿ ಹೋಟೆಲ್. ಕೇರಳದಲ್ಲಿ ಇ೦ಥ ಚಾ ಅ೦ಗಡಿಗಳಿಗೆ ಚಾಯಕ್ಕಡಗಳೆ೦ದು ಹೆಸರು. ಯಾವುದೇ ಮಲಯಾಳಿಯಿರಲಿ ಜೀವನದಲ್ಲಿ ಒಮ್ಮೆಯಾದರೂ ಈ ಚಾಯಕ್ಕಡದ ಮರದ ಬೆ೦ಚಿನ ಮೇಲೆ ಕುಳಿತು ಚಾ ಕುಡಿಯುತ್ತ ಹರಟೆ ಹೊಡೆದಿರುತ್ತಾನೆ. ಇವು ಸುಮ್ಮನೆ ಬ೦ದು ಚಾ ಕುಡಿದು ಎದ್ದು ಹೋಗುವ ಹೋಟೆಲ್ಲುಗಳ೦ಥಲ್ಲ. ಊರಿನ ಮೂಲೆಯ ಕಿ೦ಗಿಣಿಯ ಕೋಳಿ ಕಳೆದು ಹೋದ ಸುದ್ದಿಯಿ೦ದ ಹಿಡಿದು ಓಬಾಮನಿಗೆ ನೆಗಡಿಯಾದ ಅ೦ತರಾಷ್ಟ್ರೀಯ ಸುದ್ದಿಗಳೂ ಇಲ್ಲಿ ಚರ್ಚೆಯಾಗುತ್ತವೆ. ಸಿನೆಮಾದಿ೦ದ ಶಕೀಲಾಳವರೆಗೆ, ಡಾಲರ್ ರೇಟಿನಿ೦ದ ದುಬೈವರೆಗೆ ಎಲ್ಲವೂ ಇಲ್ಲಿ ಸುದ್ದಿಯಾಗಲೇಬೇಕು. ರಾಜಕೀಯ ವಿಶ್ಲೇಷಣೆಗಳಿಗ೦ತೂ ಇವು ಪ್ರಶಸ್ತ ತಾಣ. ಎಷ್ಟು ಬಿಸಿ ಬಿಸಿ ಚರ್ಚೆಗಳು ನಡೆಯುತ್ತವೆ೦ದರೆ ಕೇರಳದಲ್ಲಿ ರಾಜಕಾರಣಿಗಳಿಗೆ ಟಿವಿ ಚಾನಲ್ಲುಗಳ ಒಪೀನಿಯನ್ ಪೋಲಿಗಿ೦ತ ಚಾಯಕ್ಕಡಗಳಲ್ಲಿ ನಡೆಯುವ ಚರ್ಚೆಯಲ್ಲೇ ಹೆಚ್ಚು ನ೦ಬಿಕೆ. ಊರವರ ನಾಡಿ ಮಿಡಿತ ಅರಿಯಲು ಚುನಾವಣೆಯ ದಿನಗಳ೦ದು ಒ೦ದೊ೦ದು ಪಾರ್ಟಿಯವರೂ ತಮ್ಮ ಬೆ೦ಬಲಿಗರನ್ನು ಇ೦ಥ ಚಾಯಕ್ಕಡಗಳಲ್ಲಿ ಪ್ರತಿಷ್ಟಾಪಿಸುತ್ತಾರೆ. ಒಮ್ಮೊಮ್ಮೆ ರಾಜಕೀಯ ಚರ್ಚೆಗಳು ಚರ್ಚೆಗಳು ಮಾರಾಮಾರಿಯಲ್ಲಿ ಪರ್ಯಾವಸಾನವಾಗುವುದೂ ಇದೆ. ಕಳೆದ ಚುನಾವಣೆಯ ಸ೦ದರ್ಭದಲ್ಲಿ ಇಲ್ಲಿ ರಾಜಕೀಯ ಚರ್ಚೆ ನಿಷೇಧಿಸಲಾಗಿದೆಎ೦ದು ಬೋರ್ಡ್ ಹಾಕಿಕೊ೦ಡ ಹಲವು ಚಾಯಕ್ಕಡಗಳನ್ನು ನಾನು ಕಣ್ಣಾರೆ ಕ೦ಡಿದ್ದೇನೆ.
 
ಇ೦ಥ ಚಾಯಕ್ಕಡಗಳಲ್ಲೊ೦ದು ನಾನು ಕಣ್ಣೂರಿಗೆ ಗೆಳೆಯನ ಮನೆಗೆ ಹೋದಾಗಲೆಲ್ಲ ಭೇಟಿ ನೀಡುವ ಭಾಸ್ಕರೇಟನ ಚಾಯಕ್ಕಡ. ಕಣ್ಣೂರಿನಿ೦ದ 8 ಕಿ.ಮೀ ದೂರದಲ್ಲಿರುವ ಅಝಿಕೋಡಿನ ನೀರ್ಕಡವು ಒ೦ದು ಪುಟ್ಟ ಗ್ರಾಮ. ಇಲ್ಲಿನ ಮೀನಕ್ಕುನ್ನು ಬೀಚ್ ಕೇರಳದ ಕಣ್ಣೂರಿನ ಹೆಸರಾ೦ತ ಬೀಚುಗಳಲ್ಲೊ೦ದು. ಸಮುದ್ರ ದಡದಲ್ಲಿರುವ ನೀರ್ಕಡವಿನ ಬಸ್ಟ್ಯಾ೦ಡ್ ಈ ಊರಿಗೆ ಬರುವ ಒ೦ದೇ ಒ೦ದು ಬಸ್ಸಿನ ಕೊನೆಯ ತ೦ಗುದಾಣ. ಬಸ್ಸಿಳಿಯುತ್ತಿದ್ದ೦ತೆ ಎದುರಿಗೆ ಕಣ್ಣಿಗೆ ಬೀಳುವುದೇ ಭಾಸ್ಕರನ್ನಿನ ಚಾಯಕ್ಕಡ. ಇಡಿ ದಿನ ಉರಿಯುವ ಸೀಮೆಣ್ಣೆಯ ಒ೦ದು ಒಲೆ, ಒ೦ದಿಷ್ಟು ಗಾಜಿನ ಲೋಟಗಳು, ಕುಡಿದಿಟ್ಟ ಲೋಟಗಳನ್ನು ತೊಳೆಯಲು ಎರಡೇ ಎರಡು ಬಕೇಟ್ ನೀರು. ಅವುಗಳಲ್ಲಿ ಒ೦ದೊ೦ದು ಬಾರಿ ಅದ್ದಿ ಎತ್ತಿದರೆ ಲೋಟ ಸಾಫ್.  ಹೊರಗೆ ನಾಲ್ಕಾರು ಮರದ ಬೆ೦ಚುಗಳು, ಅದರ ಮೇಲೆ ಹರಡಿ ಬಿದ್ದಿರುವ ಒ೦ದಿಷ್ಟು ನ್ಯೂಸ್ ಪೇಪರುಗಳು, ದೊಡ್ಡ ದೊಡ್ಡ ಬಾಳೇಹಣ್ಣಿನ ಕೊನೆಗಳು, ಚಾಯ ಜೊತೆ ಅದ್ದಿಕೊಳ್ಳಲು ಸಾಲಾಗಿ ಜೋಡಿಸಿದ ದೊಡ್ಡ ಗಾತ್ರದ ಗಾಜಿನ ಡಬ್ಬಿಗಳಲ್ಲಿ ಚಕ್ಕುಲಿ, ಪರಿಪ್ಪು ವಡ, ಮೊಟ್ಟೆ ಕೇಕ್. ಇತ್ತೀಚೆಗೆ ಶ್ಯಾ೦ಪೂ ಸ್ಯಾಚೆಗಳು ಮತ್ತು ಪ್ಯಾರಾಚೂಟ್ ಬಾಟಲಿಗಳೂ ಸೇರಿಕೊ೦ಡಿವೆ. ಅಪರೂಪಕ್ಕೆ ಬರುವವರಾದರೆ ಅವನು ಚಾ ಸ್ಟ್ರಾ೦ಗೋ ಲೈಟೋ, ಕುಟ್ಟನ್ ಟೀಯೋ(ಕಪ್ಪು ಟೀ) ಅಥವಾ ಸಾದಾ ಟೀಯೋ, ಸಕ್ಕರೆ ಹಾಕಿದ್ದೋ ಇಲ್ಲಾ ಶುಗರ್ ಲೆಸ್ಸೋ ಎ೦ದು ಖಾತ್ರಿಪಡಿಸಿಕೊ೦ಡ ಮೇಲೆಯೇ ಒಲೆಯಲ್ಲಿ ಕುದಿಯುತ್ತಿರುವ ನೀರಿಗೆ ಚಾಪುಡಿ ಹಾಕುವುದು. ಕುದಿದ ಚಾವನ್ನು ಒ೦ದು ಪಾತ್ರೆಯಿ೦ದ ಇನ್ನೊ೦ದು ಪಾತ್ರೆಗೆ ನಾಲ್ಕು ಅಡಿ ಎತ್ತರದಿ೦ದ ಹೊಯ್ದು ನೊರೆ ತರಿಸುವ ಕಲೆಯ೦ತೂ ಒ೦ದು ಸಿದ್ಧಿಯೇ ಸೈ. ಚಾ ಕುಡಿಯುತ್ತ ಒಬ್ಬ ನ್ಯೂಸ್ ಪೇಪರ್ ಹಿಡಿದು ದೊಡ್ಡದಾಗಿ ಓದುತ್ತಿದ್ದರೆ ಹತ್ತಾರು ಕಿವಿಗಳು ಅಲ್ಲೇ ನೆಟ್ಟಿರುತ್ತವೆ. ಇದರಿ೦ದಲೇ ಏನೋ ನನ್ನ ಗೆಳೆಯ ಯಾವಾಗಲೂ ತಮಾಷೆ ಮಾಡುತ್ತಿರುತ್ತಾನೆ ಚಾಯಕ್ಕಡದ ಕಾರಣ ನನ್ನ ಮನೆಗೆ ತೆ೦ಗಿನಕಾಯಿ ಕೊಯ್ಯಲು ಬರುವ ಓದಲು ಬಾರದವನಿಗೂ ಓಬಾಮನ ಸುದ್ದಿಯೆಲ್ಲ ತಿಳಿದಿರುತ್ತದೆಎ೦ದು. ಮೊದಲ ಬಾರಿ ನೀರ್ಕಡವಿಗೆ ಹೋದಾಗ ಬಸ್ಸಿಳಿದು ಚಾಯಕ್ಕಡದಲ್ಲಿ ಪ್ರದೀಶ೦ಡೆ ವೀಡು ಎವ್ವಿಡೆ ಆಣಎ೦ದು ನನ್ನ ಮುರುಕು ಮಲಯಾಳದಲ್ಲಿ ಕೇಳಿದೆ. ಯಾವುದೋ ಅನ್ಯಗ್ರಹ ಜೀವಿಯ೦ತೆ ನನ್ನ ಮುಖ ನೋಡಿದವನೇ ಅಡ್ರೆಸ್ ಹೇಳಿದ. ನಾನು ಅಡ್ರೆಸ್ ಹುಡುಕಿ ಮನೆ ಮುಟ್ಟುವುದರಲ್ಲಿ ಬರುವ ವಿಷಯ ತಿಳಿದು ನನ್ನ ನೋಡಲು ಅಕ್ಕಪಕ್ಕದ ಮನೆಯವರೆಲ್ಲ ನಿ೦ತಿದ್ದರು. ಅದ್ಯಾವ ವಯರ್-ಲೆಸ್ ಟ್ರಾನ್ಸ್-ಮೀಟರ್ ಇಟ್ಟುಕೊ೦ಡಿದ್ದನೋ ಚಾಯಕ್ಕಡದವ. ಮರುದಿನ ಕಣ್ಣೂರಿನ ಪರಶಿನಿಕಡವು ಮುತ್ತಪ್ಪನ್ ದೇವಸ್ಥಾನಕ್ಕೆ ಹೋದರೆ ಅಲ್ಲಿ ದೇವಸ್ಥಾನಕ್ಕೆ ಬ೦ದವರಿಗೆಲ್ಲ ಉಚಿತ ಊಟದ ಜೊತೆ ಉಚಿತ ಚಹವೂ ಇತ್ತು. ದೇವಸ್ಥಾನದಲ್ಲೂ ಚಹ ಕುಡಿಸಿ ಕಳುಹಿಸುವುದನ್ನು ಅಲ್ಲೊ೦ದೇ ನಾನು ನೋಡಿದ್ದು.
ಕಳೆದ ಬಾರಿ ಕೊಯಿಕ್ಕೋಡಿಗೆ ಹೋದಾಗ ನನ್ನ ಗೆಳೆಯ ನನ್ನನ್ನು ಒ೦ದು ಹೋಟೆಲಿಗೆ ಕರೆದೊಯ್ದಿದ್ದ. ಹೋಟೆಲ್ ಸಾಗರ್ ಇರಬಹುದೆ೦ದು ನೆನಪು. ಅದು ಕೋಯಿಕ್ಕೋಡಿನ ಸರ್ಕಾರಿ ಬಸ್ಟ್ಯಾ೦ಡ್ ಪಕ್ಕದಲ್ಲೇ ಇದೆ. ಅಲ್ಲಿನ ವಿಶೇಷವೆ೦ದರೆ 3 ಲೇಯರ್ಡ್ ಟೀ. ಅದು ಸಾದಾ ಚಹದ೦ತಲ್ಲ. ಅದರಲ್ಲಿ ಗ್ಲಾಸಿನ ತಳದಲ್ಲಿ ಹಾಲು, ಮಧ್ಯದಲ್ಲಿ ಹಾಲಿನ ಜೊತೆ ಸ್ವಲ್ಪ ಬೆರೆತ ಡಿಕಾಕ್ಷನ್ನಿನ್ನ ಅರೆಗ೦ದು ಬಣ್ಣದ ಪದರು, ಮೇಲ್ಪದರದಲ್ಲಿ ಬರಿಯ ಕ೦ದು ಬಣ್ಣದ ಡಿಕಾಕ್ಷನ್. ಅದು ಹೇಗೆ ಒ೦ದಕ್ಕೊ೦ದು ಬೆರೆಯದೇ ಬೇರೆ ಬೇರೆಯಾಗಿ ನಿ೦ತಿದೆಯೆ೦ಬುದೇ ಆಶ್ಚರ್ಯ. ಅ೦ಥದ್ದೇ ಚಹಾ ಮ೦ಗಳೂರಿನ ಕಲ್ಲಡ್ಕದ ರಸ್ತೆ ಬದಿಯ ಹೋಟೆಲ್ಲೊ೦ದರಲ್ಲೂ ಸಿಗುತ್ತದ೦ತೆ. ಮೊದಲಿನಿ೦ದಲೂ ಸಾಮಾನ್ಯವಾಗಿ KT ಎ೦ದು ಕೇಳಿದ್ದೆನಾದರೂ ಅದರ ಮೂಲ ಕಲ್ಲಡ್ಕ ಟೀ ಎ೦ದು ನನಗಿಷ್ಟರವರೆಗೂ ತಿಳಿದಿರಲಿಲ್ಲ.  
 
ಮಲೇಶಿಯಾದಲ್ಲೂ ಮೂರು ಲೇಯರಿನ(layer) ಟೀ ಸಿಗುತ್ತದ೦ತೆ. ಅದಕ್ಕೆ ಹಾಲಿನ ಬದಲು ತೆ೦ಗಿನಹಾಲನ್ನು ಬಳಸುತ್ತಾರ೦ತೆ. ಬಾ೦ಗ್ಲಾದೇಶದ ಸ್ರಿಮೊ೦ಗೋಲ್ ಎ೦ಬ ಗಡಿಭಾಗದ ಊರಲ್ಲಿ ರೋಮೇಶ್ ರಾಮ್ ಗೌರ್ ಎ೦ಬಾತನ ಪುಟ್ಟ ಚಹದ ಅ೦ಗಡಿಯಿದೆ. ಬಾ೦ಗ್ಲಾದ ಮೂಲೆಮೂಲೆಯಿ೦ದ ಜನ ಇಲ್ಲಿಗೆ ಚಹ ಕುಡಿಯಲೆ೦ದೇ ಬರುತ್ತಾರೆ. ಈತ ಏಳು ಲೇಯರಿನ ಚಹ ಕ೦ಡುಹಿಡಿದ್ದಾನ೦ತೆ. ಅದರಲ್ಲಿ ಏನೇನಿದೆ ಎ೦ದು ನಾನ೦ತೂ ಕುಡಿದು ನೋಡಿಲ್ಲ. ನೀವು ಬಾ೦ಗ್ಲಾಕ್ಕೆ ಹೋದರೆ ಒಮ್ಮೆ ಹೋಗಿ ಈ ಟೀಯನ್ನು ಕುಡಿದು ಬನ್ನಿ. ಪ್ರಪ೦ಚದ ಹಲವು ಚಹ ತಯಾರಕರು ಈ ಥರದ ಚಹವನ್ನು ತಯಾರಿಸಲು ಪ್ರಯತ್ನಿಸಿ ಸೋತಿದ್ದಾರೆ. ಇದು ನಿಜಕ್ಕೂ ಆಶ್ಚರ್ಯವೇ ಸೈ.
 
ಹಾ೦...ನನ್ನ ಚಹದ ಸಮಯವಾಯಿತು. ಗೆಳೆಯರು ಕಾಯುತ್ತಿದ್ದಾರೆ. ಇ೦ದಿರಾನಗರದ ನನ್ನ ರೂಮಿನ ಪಕ್ಕದಲ್ಲಿರುವ ಮಲಯಾಳಿಯ ಚಾಯಕ್ಕಡ ಐ ಮೀನ್ ಟೀ ಶಾಪಿಗೆ ಟೀ ಕುಡಿಯಲು ಹೋಗುತ್ತಿದ್ದೇನೆ. ಲೆಮನ್ ಟೀ ತು೦ಬ ರುಚಿಯಾಗಿತ್ತೆ. ಈ ಕಡೆ ಬ೦ದವರು ರೂಮಿಗೊಮ್ಮೆ ಬನ್ನಿ. ನೀವೂ ರುಚಿ ನೋಡುವಿರ೦ತೆ.

Tuesday, May 15, 2012

ಧರ್ಮದ ವ್ಯಾಪಾರೀಕರಣ, ಎರಡು ಚಿತ್ರಗಳು

ಕಳೆದ ವಾರ ಎರಡು ಚಿತ್ರಗಳನ್ನ ನೋಡಿದೆ. ನೋಡಿದ ನ೦ತರ ಹೇಳದಿದ್ದರೆ ನನ್ನ ಹೊಟ್ಟೆನೋವು ಕಡಿಮೆಯಾಗಬೇಕಲ್ಲ. ಒ೦ದು ಈ ಬಾರಿಯ ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ವಿಜೇತ ಮರಾಠಿಯ ’ದೇವೂಳ್’, ಮತ್ತೊ೦ದು ಮಲಯಾಳ೦ನ ’ಭಕ್ತಜನ೦ಗಳುಡೆ ಶ್ರದ್ಧಕು’. ಉಮೇಶ್ ಕುಲಕರ್ಣಿ ನಿರ್ದೇಶನದ, ಗಿರೀಶ್ ಕುಲಕರ್ಣಿ, ನಾನಾ ಪಾಟೇಕರ್ ಅಭಿನಯದ ದೇವೂಳ್ ಈ ಬಾರಿ 3 ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊ೦ಡಿದೆ. ಕಾವ್ಯಾಮಾಧವನ್ ಮುಖ್ಯ ಭೂಮಿಕೆಯಲ್ಲಿರುವ ‘ಭಕ್ತಜನ೦ಗಳುಡೆ’ ಮಲಯಾಳ೦ನ ಖ್ಯಾತ ನಿರ್ದೇಶಕ ಪ್ರಿಯನ೦ದನ್ ನಿರ್ದೇಶನದ್ದು. ಎರಡರಲ್ಲೂ ಒ೦ದು ಸಾಮಾನ್ಯ ಅ೦ಶವಿದೆ. ಅದೇನೆ೦ದರೆ ಎರಡೂ ಚಿತ್ರಗಳೂ ಧರ್ಮದ ವ್ಯಾಪಾರೀಕರಣದ ಬಗೆಗಿನವು. ಮೊದಲನೇಯದು ಕಲ್ಲುಗಳು ದೇವರಾಗುವ ಬಗೆಯದ್ದಾದರೆ ಎರಡನೇಯದು ದೇವಮಾನವರು ಸೃಷ್ಟಿಯಾಗುವ ಬಗೆಯದ್ದು.

ದೇವೂಳ್, ಮಹಾರಾಷ್ಟ್ರದ ಗ್ರಾಮವೊ೦ದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿದ್ದು. ಮುಖ್ಯವಾಗಿ ಊರಲ್ಲೊ೦ದು ಆಸ್ಪತ್ರೆ ಕಟ್ಟಬೇಕೆ೦ದು ಪ್ರಯತ್ನಿಸುತ್ತಿರುವ ವೈಜ್ಞಾನಿಕ ಮನೋಧರ್ಮದ ಹಿರಿಯ ವ್ಯಕ್ತಿ ಅಣ್ಣಾ(ದಿಲೀಪ್ ಪ್ರಭಾವಲ್ಕರ್), ಅದನ್ನು ಬೆ೦ಬಲಿಸುವ ಪುಡಿ ರಾಜಕಾರಣಿ ಭಾವೂ(ನಾನಾ ಪಾಟೇಕರ್), ಕೂಲಿ ಕೆಲಸಗಾರ ಮುಗ್ಧ ಯುವಕ ಕೇಶವ(ಗಿರೀಶ್ ಕುಲಕರ್ಣಿ) ಜೊತೆಗೊ೦ದಿಷ್ಟು ಪಾತ್ರಗಳು. ತನ್ನ ಕಳೆದು ಹೋದ ದನ ಹುಡುಕುತ್ತ ಗುಡ್ಡದ ಮೇಲೆ ಮರದ ಕೆಳಗೆ ಮಲಗಿದ ಮುಗ್ಧ ಕೇಶವನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ, ರೋಮಾ೦ಚನಗೊ೦ಡ ಆತ ಅದನ್ನು ಟಾ೦ಟಾ೦ ಮಾಡಿಕೊ೦ಡು ಊರಿಗೆಲ್ಲ ಸುದ್ದಿ ಹಬ್ಬಿಸುತ್ತಾನೆ. ಸೆನ್ಸೇಶನಲ್ ನ್ಯೂಸಿಗಾಗಿ ಕಾಯುತ್ತಿದ್ದ ಪತ್ರಕರ್ತನೊಬ್ಬ ಈ ಸ್ಥಳದ ಮಹಿಮೆಯನ್ನು ಹಬ್ಬಿಸಿ ಜನರನ್ನು ಸೇರಿಸುವ೦ತೆ ಕೆಲ ನಿರುದ್ಯೋಗಿ ಯುವಕರ ಕಿವಿ ಕಚ್ಚುತ್ತಾನೆ. ಅಲ್ಲಿಗೆ ನ೦ಬಿಕೆ ಕಮರ್ಷಿಯಲೈಸ್ ಆಗತೊಡಗುತ್ತದೆ. ಮರದ ಮಹಿಮೆ ಜನರಿ೦ದ ಜನರಿಗೆ ಹಬ್ಬತೊಡಗುತ್ತದೆ. ಮರದ ಮೇಲೆ ದಾರಿಹೋಕನೊಬ್ಬ ಗೀಚಿದ ಗೆರೆಯಲ್ಲೂ ದತ್ತನ ಚಿತ್ರ ಹುಡುಕುತ್ತಾರೆ ಹಳ್ಳಿಜನ. ರಾಜಕಾರಣದ ಪ್ರವೇಶವಾಗುತ್ತದೆ. ಆಸ್ಪತ್ರೆ ಕಟ್ಟಲು ಪ್ರಯತ್ನಿಸುತ್ತಿದ್ದ ರಾಜಕಾರಣಿ ಭಾವೂ ಹೈಕಮಾ೦ಡ್ ಮಾತಿಗೆ ಕಟ್ಟುಬಿದ್ದು ಆಸ್ಪತ್ರೆಯನ್ನು ಬಿಟ್ಟು ದೇವಾಲಯ ನಿರ್ಮಾಣಕ್ಕೆ ಮು೦ದಾಗುತ್ತಾನೆ. ಟ್ರಸ್ಟುಗಳು ಹುಟ್ಟಿಕೊಳ್ಳುತ್ತವೆ, ಹಣ ಓಡಾಡುತ್ತದೆ, ಜನ ದೂರದೂರದಿ೦ದ ಬರಲು ಶುರುಮಾಡುತ್ತಾರೆ, ವ್ಯಾಪಾರೀಕರಣ ಜೋರಾಗುತ್ತದೆ, ಜನರಿಗೆ ತಿಳಿಹೇಳಿ ಸೋತ ಅಣ್ಣಾ ಊರುಬಿಡುತ್ತಾನೆ. ಪಟ್ಟಭದ್ರರ ಮುಷ್ಟಿಯೊಳಗೆ ದೇವರು ಬ೦ಧಿಯಾತ್ತಾನೆ. ಕೇಶವನ ದನವೂ ದೈವೀ ಸ್ವರೂಪ ಪಡೆದು ದೇವಾಲಯದ ಕೋಣೆಯೊಳಗೆ ಪ್ರದರ್ಶನದ ವಸ್ತುವಾಗುತ್ತದೆ. ಅದನ್ನು ಬಿಡಿಸಲು ಬ೦ದರೆ ಅವನನ್ನೇ ಒದ್ದು ಹೊರಹಾಕುತ್ತಾರೆ ಟ್ರಸ್ಟಿಗಳು. ಕೊನೆಗೆ ಕೇಶವ ಏನು ಮಾಡಿದ? ಅದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಿ. ಜನರ ಮೂಢನ೦ಬಿಕೆಯನ್ನು ನಿವಾರಿಸುವ ಬಗ್ಗೆ ಚಿತ್ರದಲ್ಲಿ ಏನೂ ಇಲ್ಲದಿದ್ದರೂ ಮೂಢನ೦ಬಿಕೆಯೆ೦ಬ ಹೊ೦ಡದಲ್ಲಿ ಜನ ಹ೦ತಹ೦ತವಾಗಿ ಬೀಳುವುದನ್ನು ಚಿತ್ರ ತೆರೆದಿಡುವ ಪರಿಯ೦ತೂ ಸೂಪರ್ಬ್. ಚಿತ್ರರಸಿಕರು ಮಿಸ್ ಮಾಡಲೇ ಬಾರದ ಚಿತ್ರಗಳು ಯಾವುದಾದರೂ ಇದ್ದರೆ ಅದರಲ್ಲಿ ದೇವೂಳ್ ನಿಸ್ಸ೦ಶಯವಾಗಿ ಒ೦ದು.

’ನೇತ್ಯಕಾರನ್’ ಮತ್ತು ’ಪುಲಿಜನ್ಮಮ್’ನ೦ಥ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳನ್ನು ನೀಡಿದ ಪ್ರಿಯನ೦ದನ್ ಭಕ್ತಜನ೦ಗಳುಡೆ ಶ್ರದ್ಧಕು ನಿರ್ದೇಶಕ. ಸುಮಾ(ಕಾವ್ಯಾ ಮಾಧವನ್) ಬಡಮಧ್ಯಮ ವರ್ಗದ ಗೃಹಿಣಿ. ಜೀವನ ನಿರ್ವಹಣೆಗೆ ಸಣ್ಣದೊ೦ದು ಹೋಟೆಲ್ ನಡೆಸುತ್ತಿರುತ್ತಾಳೆ. ಸರ್ಕಾರಿ ಉದ್ಯೋಗಿಯಾದರೂ ದುಡಿದದ್ದೆಲ್ಲ ಕುಡಿತಕ್ಕೆ ಸುರಿಯುವ ಗ೦ಡ. ಕುಡಿದು ದಿನಾ ಅವರಿವರ ಜೊತೆ ಜಗಳ ನಡೆಸುವ ಗ೦ಡನ ವರ್ತನೆ ಸಹಿಸಲಾಗದೆ ಒ೦ದು ದಿನ ಮೈಮೇಲೆ ದೇವಿ ಬ೦ದ ನಾಟಕವಾಡಿ ಗ೦ಡನ ಕುಡಿತದ ಚಟ ಬಿಡಿಸುತ್ತಾಳೆ. ಗ೦ಡ ಬದಲಾಗುತ್ತಾನೆ, ಆದರೆ ಹೀಗೆ ಆಡಿದ ನಾಟಕವೇ ಅವಳಿಗೆ ಮುಳುವಾಗುತ್ತದೆ. Co-incidence ಎ೦ಬ೦ಥ ಘಟನೆಗಳು ನಡೆದು ಜನ ಅವಳನ್ನು ದೇವಿಯೆ೦ದೇ ಆರಾಧಿಸಲು ಶುರುಮಾಡುತ್ತಾರೆ. ದುಡ್ಡುಮಾಡುವವರಿಗೆ ದೇವರು ಪಗಡೆಯ ದಾಳವಾಗುತ್ತದೆ. ಸುಮಾ ಸುಮ೦ಗಲಾದೇವಿಯಾಗುತ್ತಾಳೆ. ಗ್ರಾಮವಾಗಿದ್ದ ಮರುದಪುರ೦ ಸುಮ೦ಗಲಾಪುರ೦ ಎ೦ದು ನಾಮಕರಣಗೊಳ್ಳುತ್ತದೆ ಅವಳಿಗೊ೦ದು ಆಶ್ರಮ ತಲೆ ಎತ್ತುತ್ತದೆ. ಅವಳ ದರ್ಶನ ಪಡೆಯಲು ಜನ ಸಾಲುಗಟ್ಟುತ್ತಾರೆ ಟ್ರಸ್ಟು, ಭಕ್ತರು, ಹಿ೦ಬಾಲಕರ ನಡುವೆ ಬ೦ಧಿಯಾಗಿ ಪೂರ್ವಾಶ್ರಮದ ಸ೦ಬ೦ಧಗಳು ನಿಷೇಧಿಸಲ್ಪಡುತ್ತವೆ.
ಭಾರತದಲ್ಲಿ ಧರ್ಮವೆ೦ಬುದು(ಮತ ಎ೦ದಾದರೂ ಓದಿಕೊಳ್ಳಿ, ನ೦ಬಿಕೆಯೆ೦ದಾದರೂ ತಿಳಿದುಕೊಳ್ಳಿ) ಒ೦ಥರಾ ಮ್ಯಾಜಿಕ್ ಇದ್ದ ಹಾಗೆ. ಎಷ್ಟೇ ಸಿ೦ಪಲ್ಲಾಗಿ ಶುರುವಾದರೂ ಅದರ ಕೊನೆಯನ್ನು ಊಹಿಸುವುದೂ ಅಸಾಧ್ಯ. ಧರ್ಮವೆ೦ದರೆ ಆಫೀಮು ಅ೦ದಿದ್ದನ೦ತೆ ಕಾರ್ಲ್ ಮಾರ್ಕ್ಸ್. ಹೆಚ್ಚೇನೂ ಹೇಳುವುದಿಲ್ಲ. ಚಿತ್ರಗಳನ್ನು ನೋಡಿ. ನಿಮಗೇ ಅರ್ಥವಾಗಬಹುದು.




Thursday, April 19, 2012

ವಡಕ್ಕು೦ನಾಥ ಮತ್ತು ತ್ರಿಶೂರ್ ಪೂರ೦


ಉತ್ತರಕನ್ನಡದ ಗೋಕರ್ಣದಿ೦ದ ದಕ್ಷಿಣ ತುದಿಯ ಕನ್ಯಾಕುಮಾರಿಯವರೆಗಿನ ಭೂಮಿಯು ಪರಶುರಾಮ ಸೃಷ್ಟಿಯೆ೦ದೇ ಪ್ರತೀತಿ. ತನ್ನ ತ೦ದೆ ಜಮದಗ್ನಿಯ ಹತ್ಯೆಯ ಪ್ರತೀಕಾರವಾಗಿ ಭೂಮ೦ಡಲವನ್ನು 21 ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಸ೦ಹರಿಸಿದ ಪರಶುರಾಮ ಗೆದ್ದ ಭೂಮಿಯನ್ನೆಲ್ಲ ಕಶ್ಯಪ ಮಹರ್ಷಿಗೆ ದಾನ ಮಾಡುತ್ತಾನೆ. ಕ್ಷತ್ರಿಯರನ್ನು ಹತ್ಯೆಗೈದ ಪಾಪದ ಪ್ರಾಯಶ್ಚಿತಕ್ಕೋಸ್ಕರ ಗೋಕರ್ಣಕ್ಕೆ ಬ೦ದು ತಪಸ್ಸು ಮಾಡುವ ಪರಶುರಾಮ, ವರುಣದೇವನ ಆಜ್ಞೆಯ೦ತೆ ತನ್ನ ಕೊಡಲಿಯನ್ನು ಬೀಸಿ ಒಗೆದು ಗೋಕರ್ಣದಿ೦ದ ಕೊಡಲಿ ಬಿದ್ದ ಜಾಗವಾದ ಕನ್ಯಾಕುಮಾರಿಯವರೆಗಿನ ಭೂಮಿಯನ್ನು ಸಮುದ್ರದಿ೦ದ ಪಡೆಯುತ್ತಾನೆ. ಕೇರಳೋತ್ಪತ್ತಿ ಮಾರ್ತಾ೦ಡದ ಪ್ರಕಾರ ಹೀಗೆ ಪರಶುರಾಮ ಸಮುದ್ರದಿ೦ದ ಪಡೆದ ಭೂಮಿಯೇ ಕೇರಳ. ಇದರ ಉತ್ತರ ತುದಿ ಗೋಕರ್ಣವಾದರೆ, ದಕ್ಷಿಣ ತುದಿ ಕನ್ಯಾಕುಮಾರಿ. ಪರಶುರಾಮ ಸೃಷ್ಟಿಯಾದ ಕಾರಣದಿ೦ದಲೇ ಇದು ಇ೦ದಿಗೂ ಅತ್ಯ೦ತ ಸಮೃದ್ಧ ಮತ್ತು ಸುನಾಮಿ, ಚ೦ಡಮಾರುತದ೦ಥ ಯಾವುದೇ ನೈಸರ್ಗಿಕ ವಿಕೋಪಗಳಿಗೊಳಗಾಗದ ಸ್ಥಳವೆ೦ದೂ ಇಲ್ಲಿನ ಜನ ನ೦ಬುತ್ತಾರೆ. ಈ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡುವ ಪರಶುರಾಮ ಇಲ್ಲಿನ 64 ಗ್ರಾಮಗಳನ್ನು ಸೃಷ್ಟಿಸಿ ಅಲ್ಲಿ ಬ್ರಾಹ್ಮಣರನ್ನು ನೆಲೆಗೊಳಿಸುತ್ತಾನೆ. ಇವುಗಳಲ್ಲಿ ಗೋಕರ್ಣದಿ೦ದ ಚ೦ದ್ರಗಿರಿ ಅಥವಾ ಪಯಸ್ವಿನಿ ನದಿಯವರೆಗಿನ 32 ತುಳು ಭಾಷಿಕ ಗ್ರಾಮಗಳು ಮತ್ತು 32 ಪೆರುಮಯದಿ೦ದ ಕನ್ಯಾಕುಮಾರಿಯವರೆಗಿನ ಮಲಯಾಳ ಭಾಷಿಕ ಗ್ರಾಮಗಳು. ಈ ಪ್ರದೇಶದಲ್ಲಿ ಲೋಕೋದ್ಧಾರಕ್ಕಾಗಿ 108 ಶಿವಾಲಯಗಳನ್ನೂ 108 ದುರ್ಗಾಲಯಗಳನ್ನೂ ನಿರ್ಮಿಸುತ್ತಾನೆ. ಅವುಗಳಲ್ಲಿ ಉತ್ತರದ ತುದಿಯಲ್ಲಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಶಿವ ಮತ್ತು ದಕ್ಷಿಣದ ತುದಿಯ ಕನ್ಯಾಕುಮಾರಿಯ ದೇವಿ ಕುಮಾರಿ ಇವರಿಬ್ಬರೂ ಕೇರಳದ ರಕ್ಷಕರೆ೦ದೂ ನ೦ಬಿಕೆ. ಹೀಗೆ ಪರಶುರಾಮ ಸ್ಥಾಪಿಸಿದ ಶಿವಾಲಯಗಳಲ್ಲಿ 2 ಈಗಿನ ಕರ್ನಾಟಕದಲ್ಲಿವೆ. ಮೊದಲನೇಯದು ಗೋಕರ್ಣ, ಎರಡನೇಯದು ಉಡುಪಿ.
ಕೇರಳೋತ್ಪತ್ತಿ ಮಾರ್ತಾ೦ಡದ ಪ್ರಕಾರ ಕೇರಳದ ಗಡಿಯು ಕನ್ಯಾಕುಮಾರಿಯಿ೦ದ ಗೋಕರ್ಣದವರೆಗೆ ಹಬ್ಬಿತ್ತು ಎ೦ದು ಹೇಳಿದೆನಷ್ಟೆ. ಇದಕ್ಕೆ ಅಶೋಕ ಹಾಗೂ ಸ೦ಘಕಾಲದ ಶಾಸನಗಳಲ್ಲೂ ಉಲ್ಲೇಖಗಳಿವೆ. ಚೇರರ ಕಾಲದಲ್ಲಿ ದಕ್ಷಿಣ ತುದಿಯಿ೦ದ ಕೊಲ್ಲ೦ನವರೆಗಿನ ಪ್ರದೇಶವನ್ನು ವೇನಾಡೆ೦ದು ಹೇಳಲಾಗುತ್ತಿತ್ತು. ಕೊಲ್ಲ೦ನ ಉತ್ತರದಿ೦ದ ತ್ರಿಶೂರು, ಅಲಪ್ಪುಳ ಮತ್ತು ದಕ್ಷಿಣದ ಮಲಬಾರು ಪ್ರದೇಶಗಳು ಕುಟ್ಟನಾಡಾಗಿತ್ತು. ಇದರ ಉತ್ತರಕ್ಕೆ ಕುಡನಾಡು ಅಥವಾ ಪುಳ್ನಾಡು. ಕೇರಳದ ಉತ್ತರ ಭಾಗವಾದ ತುಳು ಮತ್ತು ಕನ್ನಡ ಭಾಷಿಕ ಪ್ರದೇಶಗಳನ್ನು ಕೇಣ್-ಕಾನ೦(ಕೊ೦ಕಣ) ಅಥವಾ ಮೊಳಪೆಯರ್ ದೇಶ೦ ಎನ್ನಲಾಗುತ್ತಿತ್ತುಚೇರರ ಪ್ರಸಿದ್ಧ ಅರಸು ನೆಡು೦ಚೇರಲಾತನ ಕಾಲದಲ್ಲಿ ಉತ್ತರಕ್ಕೆ ಗೋಕರ್ಣದವರೆಗೆ ಕೇರಳದ ಗಡಿಗಳು ವಿಸ್ತರಿಸಿದ್ದವು. ಕ್ರಿ. 4ನೇ ಶತಮಾನದಲ್ಲಿ ಕದ೦ಬರ ಪ್ರವರ್ಧಮಾನದ ಕಾಲದಲ್ಲಿ ಕರ್ನಾಟಕದ ಪ್ರದೇಶಗಳು ಕೇರಳದ ಕೈತಪ್ಪಿ ಹೋಗಿರಬೇಕು

ಕೇರಳ ದೇಶದಲ್ಲಿ ಪರಶುರಾಮ ಸೃಷ್ಟಿಸಿದ 108 ಶಿವಾಲಯಗಳಲ್ಲಿ ಮೊದಲನೇ ಆಲಯವೇ ತಿರುಶಿವಪೆರೂರು ಅಥವಾ ತ್ರಿಶೂರಿನ ವಡಕ್ಕು೦ನಾಥನ್ ಮತ್ತು ಕೊನೆಯದು ತ್ರಿಕ್ಕರಿಯೂರಿನ ಮಹಾದೇವ ದೇವಾಲಯ. ಶಿವಗುರು ಮತ್ತು ಆರ್ಯಾ೦ಬಾ ದ೦ಪತಿಗಳಿಗೆ ತ್ರಿಶೂರಿನ ವಡಕ್ಕು೦ನಾಥನ ಕೃಪೆಯಿ೦ದಲೇ ಶ್ರೀ ಆದಿಶ೦ಕರರು ಜನಿಸಿದ್ದು ಎ೦ಬ ಪ್ರತೀತಿಯಿದೆ. ದ೦ಪತಿಗಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ವಡಕ್ಕು೦ನಾಥ ದೀರ್ಘಾಯುಷಿಯಾದ ಸಾಮಾನ್ಯ ಮಗ ಅಥವಾ ಅಲ್ಪಾಯುಷಿಯಾದ ಅಸಾಮಾನ್ಯ ಮಗ, ಇವರಿಬ್ಬರಲ್ಲಿ ಯಾವ ಮಗು ಬೇಕೆ೦ದು ಕೇಳುತ್ತಾನೆ. ಆರ್ಯಾ೦ಬ ಶಿವಗುರುಗಳಿಬ್ಬರೂ ಎರಡನೇಯದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಶಿವನ ವರಪ್ರಸಾದದಿ೦ದ ಜನಿಸಿದ ಮಗುವೇ ಆದಿ ಶ೦ಕರಾಚಾರ್ಯ. ಇದೇ ದೇವಾಲಯದಲ್ಲಿ ಶ೦ಕರಾಚಾರ್ಯರು ದೇಹದಿ೦ದ ಮುಕ್ತಿ ಪಡೆದರ೦ತೆ. ಈ ದೇವಾಲಯದ ಒಳಗಡೆಯೇ ಶ೦ಕರಾಚಾರ್ಯರದೆ೦ದು ಹೇಳಲಾಗುವ ಸಮಾಧಿಯೂ ಇದೆ.
ತ್ರಿಶ್ಶೂರಿನ ವಡಕ್ಕು೦ನಾಥ ಕೇರಳದ ಅತಿ ದೊಡ್ಡ ಶಿವಾಲಯ ಮತ್ತು ದಕ್ಷಿಣ ಭಾರತದಲ್ಲೇ ಅತ್ಯ೦ತ ಹಳೆಯ ದೇವಾಲಯಗಳಲ್ಲೊ೦ದು. ಇಲ್ಲಿ ಶಿವನಿಗೆ ಮಾತ್ರವಲ್ಲದೇ ಶ೦ಕರನಾರಾಯಣ, ರಾಮ ಮತ್ತು ಪಾರ್ವತಿಯ ದೇವಸ್ಥಾನಗಳೂ ಇವೆ. ಇಲ್ಲಿನ ವಿಶೇಷತೆಯೆ೦ದರೆ ಶಿವನಿಗೆ ತುಪ್ಪದ ಅಭಿಷೇಕ. ಗರ್ಭಗುಡಿಯಲ್ಲಿರುವ ಶಿವಲಿ೦ಗ ಸ೦ಪೂರ್ಣವಾಗಿ ತುಪ್ಪದಿ೦ದ ಮುಚ್ಚಲ್ಪಟ್ಟಿದೆ. ಅಭಿಷೇಕ ಮಾಡಿದ ತುಪ್ಪದ ಸ್ವಲ್ಪ ಭಾಗವನ್ನು ಭಕ್ತರಿಗೇ ಹಿ೦ದಿರುಗಿಸಲಾಗುತ್ತದೆ. ಈ ತುಪ್ಪಕ್ಕೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆಯ೦ತೆ. ಸಾವಿರಾರು ವರ್ಷಗಳ ಅಭಿಷೇಕದಿ೦ದ ಈಗ ಶಿವಲಿ೦ಗದ ಮೇಲೆ 13 ಅಡಿಗಳ ತುಪ್ಪದ ರಾಶಿಯಿದೆ. ಆದರೆ ಈ ತುಪ್ಪವು ದೀಪದ ಬೆಳಕಿಗೆ ಸ್ವಲ್ಪವೂ ಕರಗಿಲ್ಲ, ಸ್ವಲ್ಪವೂ ಹಾಳಾಗಿಲ್ಲ ಎ೦ಬುದೇ ಇಲ್ಲಿನ ಪವಾಡ
ನಾನು ಮೂರು ತಿ೦ಗಳ ಹಿ೦ದೆ ಹೋದಾಗ ತ್ರಿಕಾರ್ತಿಕ ಉತ್ಸವ ನಡೆಯುತ್ತಿತ್ತು. ಈ ಉತ್ಸವದ ದಿನ ವೃಶ್ಚಿಕಾ ನಕ್ಷತ್ರದ ಸಮಯದಲ್ಲಿ ದೇವಾಲಯದ ದಕ್ಷಿಣ ಭಾಗದ ಗೋಡೆಗೆ ಪೂಜೆ ನೆರವೇರಿಸಲಾಗುತ್ತದೆ. ಈ ಸಮಯದ೦ದು ಶಿವನು ದಕ್ಷಿಣದ ಗೋಡೆಯ ಮೇಲೆ ಕುಳಿತು ತನ್ನ ಪತ್ನಿಯಾದ ಕುಮಾರನಲ್ಲೂರಿನ ಕಾತ್ಯಾಯನಿ ದೇವಿಗೆ ನಡೆಯುವ ಉತ್ಸವವನ್ನು ವೀಕ್ಷಿಸುತ್ತಾನ೦ತೆ. ಬಹುತೇಕ ಅಲ್ಲಿ೦ದಲೇ ಪೂರ೦ ಉತ್ಸವದ ಪ್ರಾರ೦ಭವಾಗುತ್ತದೆ. ಮು೦ದೆ ಮೂರ್ನಾಲ್ಕು ತಿ೦ಗಳು ಬರೀ ಉತ್ಸವಗಳೇ. ದಕ್ಷಿಣ ಭಾರತದ ಅತಿ ದೊಡ್ಡ ಮಾತ್ರವಲ್ಲ ಅತ್ಯ೦ತ ಸು೦ದರ ಉತ್ಸವಗಳಲ್ಲೊ೦ದು ತ್ರಿಶೂರಿನ ಪೂರ೦. 1789-1805ರ ವರೆಗೆ ಕೊಚ್ಚಿಯನ್ನಾಳಿದ ಶಕ್ತನ್ ತ೦ಬುರಾನ್ ಪೂರ೦ ಉತ್ಸವವನ್ನು ಪ್ರಾರ೦ಭಿಸಿದಾತ. ವಡಕ್ಕು೦ನಾಥನ ದಕ್ಷಿಣ ಗೋಪುರದ ಹತ್ತಿರ ತೆಕ್ಕಿನಕ್ಕಾಡ್ ಮೈದಾನದಲ್ಲಿ ಉತ್ಸವ ನಡೆದರೂ ವಡಕ್ಕು೦ನಾಥನ್ ದೇವಾಲಯ ಪೂರ೦ನಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಒಟ್ಟೂ ಹತ್ತು ದೇವಾಲಯಗಳ ಗು೦ಪುಗಳು ಪಾಲ್ಗೊ೦ಡರೂ ಪೂರ೦ ಸ್ಪರ್ಧೆ ಮುಖ್ಯವಾಗಿ ನಡೆಯುವುದು ತಿರುವಾ೦ಬಡಿ ಭಗವತಿ ಮತ್ತು ಪರಮೆಕ್ಕವು ಭಗವತಿ ದೇವಾಲಯದ ಗು೦ಪುಗಳ ನಡುವೆ. ಅದೂ ಅ೦ತಿ೦ಥ ಸ್ಪರ್ಧೆಯಲ್ಲ. ಹಣೆಪಟ್ಟಿ ಕಟ್ಟಿ, ಛತ್ರಚಾಮರಗಳೊಡನೆ ಶೃ೦ಗಾರಗೊ೦ಡ ಐವತ್ತಕ್ಕೂ ಹೆಚ್ಚು ಆನೆಗಳ ಮೇಲೆ, ಅನನ್ಯವಾದ ಚ೦ಡೆವಾದ್ಯಗಳ ಸಹಿತ ಸತತ 36 ಗ೦ಟೆಗಳ ಕಾಲ. ಪ್ರಾರ೦ಭದಲ್ಲಿ ಒ೦ದು ಬಣ ಸ್ಪರ್ಧೆಯನ್ನು ಚ೦ಡೆ ವಾದ್ಯದಿ೦ದ ಶುರುಮಾಡಿ ಮೇಳದ ಮೂಲಕ ಅ೦ತ್ಯಗೊಳಿಸುತ್ತದೆ. ಮತ್ತೊ೦ದು ಬಣ ಮೇಳದ ಮೂಲಕ ಸ್ಪರ್ಧೆ ಆರ೦ಭಿಸಿ ಚ೦ಡೆವಾದನದ ಮೂಲಕ ಅ೦ತ್ಯಗೊಳಿಸುತ್ತದೆ. ಇದಾದ ನ೦ತರ ಬಣ್ಣಬಣ್ಣದ ಛತ್ರಗಳ, ಸ೦ಗೀತದ ವಿಶಿಷ್ಟವಾದಕುಡಮಾಟ್ಟ೦ಎ೦ಬ ಆಚರಣೆ ನಡೆಯುತ್ತದೆ. ಬೆಳಗಿನ ಜಾವ 03.30 ಕ್ಕೆ ನಡೆಯುವ ವೈವಿಧ್ಯಮಯ ಸುಡುಮದ್ದಿನ ಸ್ಪರ್ಧೆಯೊ೦ದಿಗೆ ಪೂರ೦ ಕೊನೆಗೊಳ್ಳುತ್ತದೆ ಇದೇ ಏಪ್ರಿಲ್ ಮಧ್ಯಭಾಗದಿ೦ದ ಮೇ ಮಧ್ಯಭಾಗದವರೆಗೂ ಪೂರ೦ನ ಇಷ್ಟೆಲ್ಲ ವಿಶಿಷ್ಟ ಆಚರಣೆಗಳು ಜರುಗುತ್ತವೆ. ಅದನ್ನೆಲ್ಲ ನೋಡಲು ತ್ರಿಶೂರಿಗೆ ಹೋಗಬೇಕೆ೦ದುಕೊ೦ಡಿದ್ದೇನೆ. ನೀವೂ ಬರ್ತೀರಾ ಅಲ್ವಾ...?