Pages

Tuesday, April 28, 2015

ಅಹಿಚ್ಛತ್ರ ಬ್ರಾಹ್ಮಣಾಗಮನಕಥಾ - ೨

ಶಾತವಾಹನ ಸಾಮ್ರಾಜ್ಯ
ಕಳೆದ ಲೇಖನದಲ್ಲಿ ಕದಂಬರು ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆತಂದು ಇಲ್ಲಿ ನೆಲೆಗೊಳಿಸಿದ್ದರ ವಿಷಯವಾಗಿ ಕೆಲ ಉತ್ತರ ಸಿಗದ ಪ್ರಶ್ನೆಗಳಿವೆ ಎಂದಿದ್ದೆನಷ್ಟೆ!
       ಶಾತವಾಹನರ ಯಜ್ಞಾನುಷ್ಟಾನಗಳಿಗೋಸ್ಕರ ಉತ್ತರದ ಅಹಿಚ್ಛತ್ರದಿ೦ದ ಅವರ ರಾಜ್ಯಕ್ಕೆ ಬ೦ದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿ ನೆಲೆನಿ೦ತಿದ್ದ ವೈದಿಕರನ್ನೇ ಕದ೦ಬರು ಕರೆತ೦ದು ಇಲ್ಲಿ ನೆಲೆಗೊಳಿಸಿದರೆ? ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಹಾಗಾದರೆ ಈ ಗೋದಾವರಿ ತೀರವಿರುವುದು ಮಹಾರಾಷ್ಟ್ರದಲ್ಲೇ ಅಥವಾ ಆ೦ಧ್ರದಲ್ಲೇ?
ಕದ೦ಬ ರಾಜರ ಕು೦ತಳ  ರಾಜ್ಯದಲ್ಲಿ ತುಳುನಾಡಿನ ಆಲುಪರು ದರ್ಮಾಭಿಮಾನಿಗಳೂ, ಸತ್ಯಪುತ್ರರೂ ಆಗಿದ್ದರಿ೦ದ ಅವರ ಆಶಯ ಪ್ರೋತ್ಸಾಹವೂ ಸೇರಿ ಕ್ರಿ.ಶ. ಮೂರನೇ ಶತಮಾನದ ಸುಮಾರಿಗೆ ಅಹಿಚ್ಛತ್ರದ ಬ್ರಾಹ್ಮಣರು ಬ೦ದರೇ? ಹಾಗೆ ಬಂದವರು ಬ್ರಾಹ್ಮಣರು ಮಾತ್ರವಲ್ಲ. ನಂಬೂದಿರಿಗಳು, ತಮಿಳಿನ ಗೌಂಡರ್ ಸಮುದಾಯ, ನಾಗಾ ಸಮುದಾಯಕ್ಕೆ ಸೇರಿದ ಕೇರಳದ ನಾಯರರು, ತುಳುನಾಡಿನ ಬಂಟರು, ಆಂಧ್ರದ ನಾಯ್ಡುಗಳು ಕೂಡ ಇದ್ದಾರೆ. ಇವರೆಲ್ಲರ ಇತಿಹಾಸಗಳೂ ಅಹಿಚ್ಛತ್ರವನ್ನೇ ಉಲ್ಲೇಖಿಸುತ್ತವೆ. ಹಾಗಾದರೆ ಆ ಅಹಿಚ್ಛತ್ರ ಒಂದೇ ಆಗಿತ್ತೇ ಅಥವಾ ಹಲವು ಪ್ರದೇಶಗಳಿಗೆ ಆ ಹೆಸರಿತ್ತೇ? ಒಂದೇ ಪ್ರದೇಶದಿಂದ ಬೇರೆ ಬೇರೆ ಸಮುದಾಯಗಳ ಅಷ್ಟು ದೊಡ್ಡ ಮಟ್ಟಿನ ವಲಸೆಗೆ ಕಾರಣಗಳೇನು?
       ಕೋಟ ಬ್ರಾಹ್ಮಣರು ಅಹಿಚ್ಛತ್ರದಿ೦ದ ಆಂಧ್ರದ ಗೋದಾವರಿ, ಗೋದಾವರಿಯಿ೦ದ ಬನವಾಸಿ, ಬನವಾಸಿಯ ಬಳಿಕ ಈ ಹಾದಿಯಲ್ಲಿ ಹಾಡುವಳ್ಳಿ, ಬೈ೦ದೂರು ಮಾರ್ಗವಾಗಿ ಸಹ್ಯಾದ್ರಿಯ ತಪ್ಪಲಿನ ಪ್ರಮುಖ ಸ೦ಪರ್ಕಪ್ರದೇಶವಾದ ಗ೦ಗನಾಡಿಗೆ ಬ೦ದು ನೆಲೆಸಿದರೆಂದು ಪಿ.ಎನ್. ನರಸಿ೦ಹಮೂರ್ತಿಯವರು ಸಂಪಾದಿಸಿದ ಕು೦ದನಾಡಿನ ಶಾಸನಗಳಲ್ಲಿ ತಿಳಿಸಲಾಗಿದೆ. ಶಾಂಕರ, ಮಾಧ್ವ ಮತಗಳ ಪ್ರಭಾವಕ್ಕೊಳಗಾಗದೇ ತಮ್ಮ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದ ಕರಾವಳಿಯ ಏಕೈಕ ಬ್ರಾಹ್ಮಣ ಸಮುದಾಯವಿದ್ದರೆ ಅದು ಕೂಟ ಬ್ರಾಹ್ಮಣರು. ಅವರ ಆರಾಧ್ಯ ದೈವ ನರಸಿಂಹ. ಆಂಧ್ರದಲ್ಲಿರುವಷ್ಟು ದೊಡ್ಡ ಮಟ್ಟಿನ ನರಸಿಂಹಾರಾಧನೆಯನ್ನು ಬೇರಾವ ರಾಜ್ಯಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದೊಂದು ವಿಶೇಷ. ’ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ವಿಪ್ರರ ವಲಸೆಯನ್ನು ಪ್ರೋತ್ಸಾಹಿಸಿತು. ಕ್ರಿ.ಪೂ ೫೦ ರಿ೦ದ ಕ್ರಿ.ಶ ೨೦೦ರ ತನಕ ದಕ್ಷಿಣದಲ್ಲಿ ರಾಜ್ಯವಾಳಿದ ಶಕಪುರುಷ, ದಕ್ಷಿಣಾಪಥಪತಿ ಶಾಲಿವಾಹನ ಚಕ್ರವರ್ತಿಯ ಆಶ್ರಯ, ನಿರ೦ತರ ಯಜ್ಞಯಾಗದಿ೦ದ ಇವರ ವಲಸೆಗೆ ನೆರವು ಸಿಕ್ಕಿತು’ ಎಂದು ಉಪ್ಪುಂದ ಚಂದ್ರಶೇಖರ ಹೊಳ್ಳರು ತಮ್ಮ ’ಕೂಟಮಹಾಜಗತ್ತು’ ಎಂಬ ಸಂಶೋಧನಾ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಊಹೆ ಸರಿಯಾದುದಾದರೂ, ಗ್ರಹಿಕೆ ಸರಿಯಿಲ್ಲವೆನ್ನುವುದು ನನ್ನಭಿಪ್ರಾಯ. ಮೌರ್ಯರಿದ್ದುದು ಕ್ರಿ.ಪೂ ಹತ್ತನೇ ಶತಮಾನಕ್ಕೂ ಹಿಂದೆ, ಅಲೆಕ್ಸಾಂಡರ್ ದಾಳಿಮಾಡಿದ್ದು ಗುಪ್ತರ ಕಾಲದಲ್ಲಿ, ಮೇಲಾಗಿ ಅಸಲಿ ಶಾಲಿವಾಹನನಾಳಿದ್ದು ಉಜ್ಜೈನಿಯನ್ನೇ ಹೊರತೂ ದಕ್ಷಿಣಾಪಥವನ್ನಲ್ಲ, ಕ್ರಿ.ಶ ೭೮ರಲ್ಲಿ ಪ್ರಾರಂಭವಾದ ಶಾಲಿವಾಹನ ಶಕೆಯ ಪ್ರಾರಂಭಕರ್ತೃ ಶಕಪುರುಷ ಶಾಲಿವಾಹನನೆಂದೇ ತಲೆಕೆಟ್ಟ ಬ್ರಿಟಿಷ್ ಇತಿಹಾಸಕಾರರಿಂದ ಗುರುತಿಸಲ್ಪಟ್ಟ ದಕ್ಷಿಣಾಪಥಪತಿ, ತ್ರಿಸಮುದ್ರತೋಯಪೀತವಾಹನನೆಂದೆಲ್ಲ ಬಿರುದಾಂಕಿತ ಗೌತಮೀಪುತ್ರಶಾತಕರ್ಣಿ ಆಳ್ವಿಕೆ ನಡೆಸಿದ ಕಾಲ ಕ್ರಿ.ಪೂ ೪ನೇ ಶತಮಾನ. ಈ ಮೂರೂ ಅಂಶಗಳಿಗೂ ತಾಳಮೇಳವಿಲ್ಲ. ಮೇಲಾಗಿ ಅಲೆಕ್ಸಾಂಡರಿನ ಆಕ್ರಮಣವಾದರೂ ಆತ ಸಿಂಧೂನದಿಯನ್ನು ದಾಟಲಾಗಲಿಲ್ಲವೆಂಬುದು ಸತ್ಯ. ಕಾರಣ, ಆಗ ಉತ್ತರ ಭಾರತವನ್ನಾಳುತ್ತಿದ್ದುದು ಯಾವುದೋ ಸಣ್ಣ ಪುಟ್ಟ ಚಿಲ್ಲರೆ ರಾಜವಂಶವಲ್ಲ. ಭಾರತದ ಸ್ವರ್ಣಯುಗದ ಸೃಷ್ಟಿಕರ್ತೃರೆನಿಸಿಕೊಂಡ ಗುಪ್ತರು ಅಲ್ಲಿ ಪಟ್ಟಕ್ಕೇರಿದ್ದರು. ವೈದಿಕ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಗುಪ್ತರ ಕೊಡುಗೆ ಕಡಿಮೆಯೇನಲ್ಲ. ಅಲೆಕ್ಸಾಂಡರಿನಂಥ ವೀರನೇ ಭಾರತದೊಳಬರಲು ಹೆದರಿದ್ದನೆಂದರೆ ಸಮಕಾಲೀನ ರಾಜನೀತಿಯಲ್ಲಿ ಗುಪ್ತರ ಪ್ರಾಬಲ್ಯವನ್ನು ಊಹಿಸಬಹುದು. ಅಂಥಹುದರಲ್ಲಿ ಉತ್ತರ ಭಾರತದಲ್ಲಿ ವಿದೇಶಿಗರ ಆಕ್ರಮಣ ತಾಳಲಾರದೇ ಬ್ರಾಹ್ಮಣರು ಅಲ್ಲಿಂದ ದಕ್ಷಿಣಕ್ಕೆ ವಲಸೆಬಂದರೆಂಬುದು ಸಾಧುವಾದವಲ್ಲ.
       ಸುದೀರ್ಘ ೫೦ ವರ್ಷಗಳ ಕಾಲ ರಾಜ್ಯವಾಳಿದ ಸಮುದ್ರಗುಪ್ತ , ಸಪ್ತಸಿ೦ಧೂ ಪ್ರದೇಶಗಳನ್ನು ಆಕ್ರಮಿಸಿ ಆ ಭಾಗದ ಯೌಧೇಯರನ್ನು ತನ್ನ ಅಧೀರರನ್ನಾಗಿಸಿದ ವಿಚಾರ ಅವನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಉಲ್ಲೇಖಿತವಾಗಿದೆ. ಅದರಲ್ಲಿ ಸಮುದ್ರಗುಪ್ತನು ಸಟ್ಲೇಜ್ ನದಿ ಪ್ರದೇಶದ ಬ್ರಹ್ಮಾವರ್ತವನ್ನೂ,  ದಕ್ಷಿಣಾಪಥವನ್ನೂ ಆಕ್ರಮಿಸಿ ಅಹಿಚ್ಛತ್ರದ ರಾಜನಾದ ಅಚ್ಯುತನನ್ನೂ, ಚಂಪಾವತಿಯ ನಾಗಸೇನನನ್ನೂ, ಕೋಟದ ಮುಖ್ಯಸ್ಥನನ್ನೂ ಜಯಿಸಿದನೆ೦ದು ಹೇಳಿಕೊಂಡಿದ್ದಾನೆ. ಪೊಳಲಿ ನಾರಾಯಣ ಮಯ್ಯರು ’ಕೂಟಬಂಧು’ ಮಾಸಿಕದಲ್ಲಿ ಇದನ್ನೊಮ್ಮೆ ಪ್ರಸ್ತಾವಿಸಿದ್ದರು. ಆಂಧ್ರದ ಗೋದಾವರಿಯ ದಕ್ಷಿಣಕ್ಕೆ ಚಂಪಾವತಿ ನದಿಮುಖಜ ಭೂಮಿಯ ಪ್ರದೇಶಕ್ಕೆ ಚಂಪಾವತಿಯೆಂದು ಹೆಸರು. ಅವೆರಡೂ ಒಂದೇ ಆಗಿರಬಹುದೇ? ಕೋಟ ಎಂಬ ಹೆಸರಿನ ಊರು ಕರ್ನಾಟಕದ ಉಡುಪಿ ಹಾಗೂ ಆಂಧ್ರಪ್ರದೇಶ ನೆಲ್ಲೂರು ಈ ಎರಡೂ ಕಡೆಯೂ ಇವೆ(ರಾಜಸ್ಥಾನ, ಮಲೇಷಿಯಾಗಳಲ್ಲೂ ಇವೆ). ಅಹಿಚ್ಛತ್ರವೂ ಅಲ್ಲೆಲ್ಲೋ ಹತ್ತಿರದಲ್ಲೇ ಇರಬಹುದೇ? ಇದೇ ಸಮುದ್ರಗುಪ್ತ ಪಲ್ಲವರೊಡನೆ ಕಾದಾಡಿ ಶಿವಸ್ಕಂಧವರ್ಮನನ್ನು ಸೋಲಿಸಿದ್ದ. ಈ ಸೋಲಿನಿಂದ ಪಲ್ಲವರು ಬಲಗುಂದಿದ್ದನ್ನೇ ನೋಡಿಕೊಂಡು ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಸಮುದ್ರಗುಪ್ತ, ಪಲ್ಲವರ ಶಿವಸ್ಕಂಧವರ್ಮ ಮತ್ತು ಕದಂಬರ ಮಯೂರವರ್ಮ ಈ ಮೂವರೂ ನಿಸ್ಸಂದೇಹವಾಗಿ ಸಮಕಾಲೀನರು. ಸಮುದ್ರಗುಪ್ತನ ಕಾಲವನ್ನು ತಪ್ಪುತಪ್ಪಾಗಿ ಲೆಕ್ಕಹಾಕಿದ ಇತಿಹಾಸಕಾರರ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆ. ಮಹಾಭಾರತ ಯುದ್ಧ ನಡೆದ ಸುಮಾರು 1500 ವರ್ಷಗಳಿಗೆ ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವಕನ ಸಹಾಯದಿಂದ ಕೊಲ್ಲಿಸಿದ ಚಾಣಕ್ಯ ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ಶಾತವಾಹನ ವಂಶಗಳು ಆಳ್ವಿಕೆ ನಡೆಸಿದವು. ಆಂಧ್ರವಂಶದ ಚಂದ್ರಶ್ರೀ ಅಥವಾ ಚಂದ್ರಮಸುವಿನ ಆಳ್ವಿಕೆಯಲ್ಲೇ ಅಲೆಕ್ಸಾಂಡರಿನ ದಂಡಯಾತ್ರೆ ನಡೆದದ್ದು. ಈ ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದಿದ್ದು. ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದವನು ಮೊದಲನೇ ಚಂದ್ರಗುಪ್ತ. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಈ ಆಂಧ್ರಭೃತ್ಯರು ಗುಪ್ತರಲ್ಲದೇ ಮತ್ಯಾರೂ ಅಲ್ಲ. ಸಮುದ್ರಗುಪ್ತ ಪಟ್ಟಕ್ಕೆ ಬಂದಿದ್ದು ಕಲಿಯುಗದ ೨೭೮೩ನೇ ವರ್ಷದಲ್ಲಿ ಅಂದರೆ ಸುಮಾರಿಗೆ ಕ್ರಿ.ಪೂ ೩೨೦ರ ಆಜುಬಾಜು. ಹಾಗಿದ್ದಲ್ಲಿ ಮಯೂರವರ್ಮನೂ ಅದೇ ಕಾಲದವನಾಗಬೇಕಾಯಿತಲ್ಲವೇ? ಅಲ್ಲಿಗೆ ಬ್ರಾಹ್ಮಣರು ಅಹಿಚ್ಛತ್ರದಿಂದ ವಲಸೆಬಂದರೆನ್ನಲಾದ ಕಾಲ ಸುಮಾರು ಐನೂರು ವರ್ಷಗಳಷ್ಟು ಹಿಂದೆ ದೂಡಲ್ಪಟ್ಟಿತು(?).
       ಕರಾವಳಿಯಲ್ಲಿ ಮೊದಲೇ ಬ್ರಾಹ್ಮಣ ವಸತಿ ಇದ್ದಿತ್ತು ಎಂದಿಟ್ಟುಕೊಳ್ಳೋಣ. ಆದರೆ ಯಜ್ಞಯಾಗಾದಿಗಳನ್ನು ಋಷಿಸ೦ಪ್ರದಾಯ ಪ್ರವರ್ತಕರೂ, ಮ೦ತ್ರವೇತ್ತರೂ, ಮ೦ತ್ರದೃಷ್ಟಾರರೂ ಅಗಿರುವವರಿ೦ದಲೇ ಮಾಡಿಸಬೇಕಿತ್ತು. (ಹೆಚ್ಚಿನ ವಿವರ ವೇ.ಬ್ರ. ಬನವತಿ ರಾಮಕೃಷ್ಣ ಶಾಸ್ತ್ರಿಗಳ ’ಗೋತ್ರಪ್ರವರ ವಿಷಯ’). ಹಾಗಾಗಿದ್ದರಿಂದಲೇ ಮಯೂರ ವರ್ಮ ವೇದಪಾರಂಗತರನ್ನು ಬೇರೆಡೆಯಿಂದ ಕರೆಸಬೇಕಾಯ್ತು. ಕರ್ನಾಟಕ ಚರಿತ್ರೆ ಸ೦ಪುಟ ೧ ಪುಟ ೩೧೬ರಲ್ಲಿಯೂ ಉಲ್ಲೇಖಿಸಿದ೦ತೆ ನಾಸಿಕದ ಮಾಧವಪುರ ಷಟ್‌ಕೋನ ಸ್ಯೂಪಸ್ಥ೦ಭ ಶಾಸನವು ಸಾಕೇತ ಅಯೋಧ್ಯೆಯಿ೦ದ ಬ೦ದ ಕಾಶ್ಯಪ ಗೋತ್ರದ ಕಠಶಾಖೆಯ ಸೋಮಯಶಸ್ ಬ್ರಾಹ್ಮಣನು ಕ್ರಿ.ಶ ೧೦೨ರಲ್ಲಿ(?) ವಾಜಪೇಯ ಯಾಗವನ್ನು ಶಾತವಾಹನ ರಾಜರ ಪರವಾಗಿ ನೇರವೇರಿಸಿದ ಎಂದಿದೆ. ಈ ಶಾತವಾಹನರ ಪ್ರಾ೦ತೀಯ ರಾಜಧಾನಿ ಬನವಾಸಿಯಾಗಿತ್ತು.  ಶಾತವಾಹನರ ಬಳಿಕ ಕರಾವಳಿ ಮ೦ಡಲವನ್ನಾಳತೊಡಗಿದ ಒ೦ದನೇ ಚುಟುಕುಲಾನ೦ದ ಶಾತಕರ್ಣಿ ಮತ್ತವನ ಮಗ ಎರಡನೇ ಮಗ ವಿಣ್ಹೆ ಚುಟುಕುಲಾನ೦ದ ಶಾತಕರ್ಣಿಯರು ಅನೇಕ ಯಾಗಗಳನ್ನು ನೆರವೇರಿಸಿ ದಾನದತ್ತಿ ನೀಡಿದ ಬಗ್ಗೆ ಶಾಸನಗಳಿವೆ. ಶಾತವಾಹನರು ಹಾರೀತ ಪುತ್ರರೆ೦ದೂ, ಮಾನ್ಯ ಗೋತ್ರದವರೆ೦ದೂ ತಮ್ಮನ್ನು ಕರೆದುಕೊ೦ಡಿದ್ದರು. ಅವರ ನ೦ತರ ಆಳ್ವಿಕೆಗೆ ಬ೦ದ ಮಯೂರವರ್ಮ ತಾನು ಶಿವಸ್ಕ೦ದವರ್ಮನ ಮರಿಮೊಮ್ಮಗ, ವೀರಶರ್ಮನ ಮೊಮ್ಮಗ, ಬ೦ಧುಷೇಣನ ಮಗನೆಂದೂ ಹಾರೀತ ಪುತ್ರ, ಮಾನ್ಯ ಗೋತ್ರದವನೆ೦ದೂ ಹೇಳಿಕೊಂಡು ತನ್ನ ಮೂಲವನ್ನು ಶಾಲಿವಾಹನರ ಜೊತೆ ಗುರುತಿಸಿಕೊಂಡಿದ್ದಾನೆ.
        ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ,  ಅಶೋಕನ ಮೊಮ್ಮಗ ಸಮ್ಪ್ರತಿಯ ಕಾಲದಲ್ಲಿ ಆ೦ಧ್ರದ ಗೋದಾವರಿ ತಟದವರೆಗೆ ಹಬ್ಬಿದ್ದ ಕಳಿ೦ಗರಾಜ್ಯದಲ್ಲಿ ಜೈನಮತಾಚರಣೆ ವ್ಯಾಪಕಗೊ೦ಡಿದ್ದು ವಿಪ್ರರ ವಲಸೆಯನ್ನು ಗೋದಾವರಿಯ ದಕ್ಷಿಣಕ್ಕೆ ಪ್ರೋತ್ಸಾಹಿಸಿತು. ಕಳಿ೦ಗ ರಾಜ್ಯದ ರಾಜಧಾನಿ ಕಳಿ೦ಗಪಟ್ಟಣವಿರುವುದು ಆ೦ಧ್ರದ ಗೋದಾವರಿ ತೀರದ ಶ್ರೀಕಾಕುಳ೦ನಲ್ಲಿ. ಖಾರವೇಲರ ಕಾಲದಲ್ಲಿ ಉತ್ತರ ಆ೦ಧ್ರದ ಬಹುಭಾಗ ಜೈನಮತ ಪ್ರವರ್ಧಮಾನಕ್ಕೆ ಬ೦ದು ವೈದಿಕ ಮತ ಅನಾದರಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೋ ಏನೋ ಕಳಿ೦ಗ ರಾಜ್ಯಕ್ಕೆ ಕಾಲಿಟ್ಟರೆ ಪ್ರಯಶ್ಚಿತ್ತ ಮಾಡಿಕೊಳ್ಳಬೇಕೆ೦ದು ಬೋಧಾಯನ ಒ೦ದು ಕಡೆ ಹೇಳುತ್ತಾನೆ. ಹಾಗೆ ನೋಡಿದರೆ ಯಜುರ್ವೇದದ ಸೂತ್ರಕಾರರಾದ ಆಪಸ್ತಂಭ ಮತ್ತು ಬೋಧಾಯನರಿಬ್ಬರೂ ಆಂಧ್ರದೇಶದವರೇ.(’Encyclopaedia of the History of Science, Technology, and Medicine in Non-Western Cultures edited by Helaine Selin’). ಅದರರ್ಥ ಆಂಧ್ರದೇಶವು ಮೊದಲಿನಿಂದಲೂ ವೈದಿಕ ಚಟುವಟಿಕೆಗಳ ಮುಖ್ಯಕೇಂದ್ರವಾಗಿತ್ತು. ಉತ್ತರದಿಂದ ಗೋದಾವರೀ ತೀರಕ್ಕೆ ಬಂದಿರಬಹುದಾಗಿದ್ದ ವಿಪ್ರರು ಶಾತವಾಹನರ ನಂತರ ಅಲ್ಲಿಂದ ಮತ್ತೆ ದಕ್ಷಿಣದತ್ತ ಉನ್ನತ ಸ್ಥಾನಮಾನವನ್ನರಸಿ ತೆರಳಿರಬಹುದು.
       ಶಾತವಾಹನ ಸಾಮ್ರಾಜ್ಯದಲ್ಲಿ ಮೊದಲ ಮಗ ಪಟ್ಟಕ್ಕೇರುತ್ತಿದ್ದ. ಉಳಿದ ಮಕ್ಕಳು ಮತ್ತು ಅಳಿಯಂದಿರು ವಿವಿಧ ಮಂಡಳಗಳ ಅಥವಾ ಪ್ರಾಂತ್ಯಗಳ ಅಧಿಪತಿಗಳಾಗುತ್ತಿದ್ದರು. ಶಾತವಾಹನರ ಕೊನೆಯ ಅರಸು ಪುಲೋಮಶ್ರೀ ಶಾತಕರ್ಣಿಯ ಕಾಲದಲ್ಲಿ ಸಾಮ್ರಾಜ್ಯ ಶಿಥಿಲವಾಗಿತ್ತು. ಚಿಕ್ಕ ಚಿಕ್ಕ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿದ್ದ ವಂಶಸ್ಥರೆಲ್ಲ ದಾಯಾದಿ ಕಲಹದಲ್ಲಿ ತೊಡಗಿ ಹೊಡೆದಾಡತೊಡಗಿದರು. ಅವರಲ್ಲಿ ಕೆಲವರು ಸ್ವಾತಂತ್ರ್ಯವನ್ನು  ಘೋಷಿಸಿಕೊಂಡು ತಮ್ಮದೇ ರಾಜ್ಯ ಕಟ್ಟಿಕೊಂಡರು. ಮುಂದೆ ಶಾತವಾಹನ ಸಾಮ್ರಾಜ್ಯ ಹನ್ನೆರಡು ಕವಲುಗಳಾಗಿ ಒಡೆದು ಹೋಯಿತೆಂದು ಬ್ರಹ್ಮಾಂಡಪುರಾಣ(ಅಂಧ್ರಾರಾಮ್ ಸಂಸ್ಥಿತಾಃ ಪಂಚ ತೇಷಾಮ್ ವಸಶ್ಚಃ ಯೇ ಪುನ ಸಪ್ತೈವತು ಭವಿಷ್ಯಂತಿ -ಅಧ್ಯಾಯ ೭೭, ೧೭೧) ಮತ್ತು ವಾಯುಪುರಾಣಗಳು ತಿಳಿಸುತ್ತವೆ. ಪಲ್ಲವರು, ಸೇನ, ಕದಂಬ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲವೂ ಆಂಧ್ರಶಾತವಾಹನರೇ. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ಮುಂದೆ ಸ್ಕಂದವರ್ಮನ ಕಾಲದಲ್ಲಿ ಅದು ಕೃಷ್ಣಾ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ವರೆಗೂ ಪಶ್ಚಿಮದಲ್ಲಿ ಬಳ್ಳಾರಿಯವರೆಗೂ ವಿಸ್ತರಣೆಯಾಯಿತು. ಪಲ್ಲವ ಶಬ್ದಾರ್ಥವೇ ಬಳ್ಳಿ ಅಥವಾ ಎಲೆ.
     
ಪಲ್ಲವ ರಾಜ್ಯ
ಅದು ಮುಂದೆ ತಮಿಳೀಕರಣಗೊಂಡು ಪಲ್ಲವರು ತೊಂಡೈಯಾರರೆಂದು ಹೆಸರಾದರು. ತೊಂಡೆ ಬಳ್ಳಿಯನ್ನು ಲಾಂಛನವಾಗಿ ಹೊಂದಿದವರೆಂಬರ್ಥದಲ್ಲಿ. ಪಲ್ಲವರ ತಮಿಳು ಶಾಸನಗಳಲ್ಲೆಲ್ಲ ತೊಂಡೈಯಾರ ಮತ್ತು ಕಡುವೆಟ್ಟಿ ಎಂಬ ಶಬ್ದಗಳು ಸಮಾನಾರ್ಥಕಗಳಾಗಿ ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ತೆಲುಗು ಪಲ್ಲವರ ಮೂಲಪುರುಷ ತ್ರಿನೇತ್ರ ಪಲ್ಲವ ಅಥವಾ ಮುಕ್ಕಂಟಿ ಕಡುವೆಟ್ಟಿ ಪಲ್ಲವನ ಹೆಸರು ಅವರ ಮೊದಮೊದಲ ನೆಲ್ಲೂರು ಶಾಸನದಿಂದ ಹಿಡಿದು ಹೆಚ್ಚಿನೆಲ್ಲ ಶಾಸನಗಳಲ್ಲಿ ಬಳಕೆಯಾಗಿದೆ.(Butterworth, Nellore inscriptions, I, p.389, I, p. 671, XI, p. 340 ಮತ್ತು Prof. Eilson, catalogue of the Oriental Manuscripts of Colonel Mackenzie) ವೇಲನಾಡು ಹಾಗೂ ಕೊಂಡಪದ್ಮಟಿ ಸಾಮಂತರಸರ ಶಾಸನಗಳಲ್ಲಲ್ಲದೇ ನೊಳಂಬರ ದಾಖಲೆಗಳಲ್ಲೂ ಮುಕ್ಕಂಟಿ ಪಲ್ಲವನನ್ನು ಹೊಗಳಲಾಗಿದೆ. ತೆಲುಗು ಚೋಳರು ತಮ್ಮ ಮೂಲಪುರುಷ ಕರಿಕಾಲ ಚೋಳನನ್ನು ಎಲ್ಲೆಡೆಯೂ ನೆನೆದಂತೆ ತೆಲುಗು ಪಲ್ಲವರೂ ’ಕಾಡುಕಡಿದು ನಾಡು ಕಟ್ಟಿದವನೆಂದು, ಬ್ರಾಹ್ಮಣರ ಭಾಗ್ಯವಿಧಾತನೆಂದೂ’ ಮುಕ್ಕಂಟಿಯನ್ನು ಹೊಗಳುವ ಯಾವ ಅವಕಾಶವನ್ನೂ ತಮ್ಮ ಶಾಸನಗಳಲ್ಲಿ ಕಳೆದುಕೊಂಡಿಲ್ಲ. ಪಿ.ಟಿ ಶ್ರೀನಿವಾಸ್ ಅಯ್ಯಂಗಾರ್ ತಮ್ಮ History of the Tamils from the Earliest Times to 600 A.D ಗ್ರಂಥದಲ್ಲಿ ಇದನ್ನು ಸವಿವರವಾಗಿ ಚರ್ಚಿಸಿದ್ದಾರೆ. ಈ ತ್ರಿಲೋಚನನ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲದಿದ್ದರೂ ಅವನ ಬಗ್ಗೆ ಸಾಕಷ್ಟು ಸಂಶೋಧನೆಗಳಿನ್ನೂ ನಡೆದಿಲ್ಲ. ಈತ ಕರಿಕಾಲ ಚೋಳನ ಸಮಕಾಲೀನ. ಕರಿಕಾಲ ಚೋಳನ ಕಾಲ ಈಗ ನಂಬಲ್ಪಡುವಂತೆ Gajabahu synchronismನ ಪ್ರಕಾರ ಕ್ರಿ.ಶ ೧೯೦. ಅಂದರೆ ಮಯೂರ ವರ್ಮನಿಗಿಂತ ಕನಿಷ್ಟ ನೂರೈವತ್ತು ವರ್ಷಗಳ ಹಿಂದೆ. ಇದೇ ಕರಿಕಾಲ ಚೋಳ ಕಾವೇರಿ ತೀರದಲ್ಲಿ ತ್ರಿನೇತ್ರ ಪಲ್ಲವನನ್ನು ಸೋಲಿಸಿದ್ದನೆಂದು ಚೋಳರ ಶಾಸನಗಳಲ್ಲಿ ದಾಖಲಾಗಿದೆ(ಕರುಣಾ ಸರೋರುಹ ವಿಹಿತ ವಿಲೋಚನ ಪಲ್ಲವ ತ್ರಿಲೋಚನ ಪ್ರಮುಖ ಕಿಲಪ್ರಿಥ್ವೀಶ್ವರ ಕರಿತ ಕಾವೇರಿ ತೀರ- ಪುಣ್ಯಕುಮಾರನ ಮೇಲಪಾಡು ತಾಮ್ರಶಾಸನ). ಈ ತ್ರಿನೇತ್ರ ಪಲ್ಲವ ಈಗಿನ ಕಡಪ ಪ್ರಾಂತ್ಯದಲ್ಲಿ ತ್ರಿಲೋಚನಪುರಿಯೆಂಬ ನಗರವನ್ನು ಕಟ್ಟಿಸಿದ್ದನಂತೆ. ಅದೀಗ ಪೆದ್ದಮುಡಿಯಂ ಎಂದು ಹೆಸರಾಗಿದೆ. ಜೊತೆಗೆ ತೆಲುಗು ಚೋಳರ ಶಾಸನಗಳಲ್ಲಿ ಈತ ಪೆರುಗಂದೂರಿನಲ್ಲಿ ೫೨ ಬ್ರಾಹ್ಮಣರಿಗೆ ದಾನನೀಡಿದ ಸಾಲುಗಳಿವೆ. ಗುಂಟೂರಿನ ಶಾಸನವೊಂದರಲ್ಲಿ ಬಾಪಟ್ಲದಲ್ಲಿ ೭ ಗ್ರಾಮಗಳನ್ನು ಬ್ರಾಹ್ಮಣರಿಗೆ ದಾನಮಾಡಿದ್ದಕ್ಕೆ ಆಧಾರವಿದೆ. ಆದರೆ ಈತ ಅತಿ ಹೆಚ್ಚಾಗಿ ನೆನೆಯಲ್ಪಟ್ಟಿದ್ದು ಶ್ರೀಪರ್ವತದಲ್ಲಿ ಅಹಿಚ್ಛತ್ರದಿಂದ ೭೦ ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ನೆಲೆಗೊಳಿಸಿದ ಕಾರ್ಯಕ್ಕೆ. ಮುಂದೆ ಈ ಪ್ರಾಂತ್ಯವನ್ನಾಳಿದ್ದ ಮಯೂರವರ್ಮ ಅದೇ ಬ್ರಾಹ್ಮಣರನ್ನು ಕರಾವಳಿಗೆ ಕರೆತಂದನೇ? ಇದೇ ಮುಕ್ಕಂಟಿಯ ಕುರಿತು ವಲ್ಲಭಾಬ್ಯುದಯಮ್ ಮತ್ತು ಶ್ರೀಕಾಕುಳಂನ ಇತಿಹಾಸದ ಬಗೆಗಿನ ಶ್ರೀಕಾಕುಳ ಮಹಾತ್ಮ್ಯಮ್‌ಗಳಲ್ಲಿ ಎರಡು ಆಸಕ್ತಿದಾಯಕ ಕಥೆಯಿದೆ. ಧರಣೀಕೋಟವನ್ನಾಳುತ್ತಿದ್ದ ಮುಕ್ಕಂಟಿ ಪಲ್ಲವ ಶಿವನ ವರಪ್ರಸಾದದಿಂದ ಜನಿಸಿದವನು. ಅದೇ ಕಾರಣಕ್ಕಾಗಿ ಅವನಿಗೆ ಹಣೆಯ ಮೇಲೆ ಮೂರನೇ ಕಣ್ಣೊಂದಿತ್ತಂತೆ(ಮಯೂರನನ್ನೊಮ್ಮೆ ನೆನಪಿಸಿಕೊಳ್ಳಿ). ಈತ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಹಾರುವ ಪಾದರಕ್ಷೆಗಳನ್ನು ಪಡೆದುಕೊಂಡಿದ್ದ. ಒಂದು ದಿನ ನಾರದರ ಮಾತಿನಂತೆ ಗಂಗಾ ನದೀ ತೀರದ ಅಹಿಚ್ಛತ್ರದಲ್ಲಿರುವ ಶ್ರೀವಲ್ಲಭನನ್ನು ಪೂಜಿಸಲು ತೆರಳಿದ. ಆತ ಗಂಗೆಯಲ್ಲಿ ಸ್ನಾನಮಾಡುವಾಗ ಕಳಚಿಟ್ಟ ಪಾದರಕ್ಷೆಗಳು ಹಿಂದಿರುಗಿ ಬರುವಾಗ ಕಳುವಾಗಿದ್ದವು. ಆಗ ಅಲ್ಲಿದ್ದ ಬ್ರಾಹ್ಮಣರು ತಮ್ಮ ತಪಶ್ಶಕ್ತಿಯಿಂದ ಕಳುವಾಗಿದ್ದ ಪಾದುಕೆಗಳನ್ನು ಹುಡುಕಿ ಕೊಟ್ಟರಂತೆ. ಅವರ ಶಕ್ತಿಯನ್ನು ನೋಡಿ ಪ್ರಭಾವಿತಗೊಂಡ ಮುಕ್ಕಂಟಿ ಪಲ್ಲವ ಆರು ಸಾವಿರ ಬ್ರಾಹ್ಮಣರನ್ನು ತನ್ನ ರಾಜ್ಯಕ್ಕಾಹ್ವಾನಿಸಿ ಶ್ರೀಕಾಕುಳದಲ್ಲಿ ನೆಲೆಗೊಳಿಸಿದನಂತೆ. ಜೊತೆಗೆ ತನ್ನ ರಾಜ್ಯದಲ್ಲಿ ಶ್ರೀವಲ್ಲಭನಿಗೆ ದೇವಸ್ಥಾನವೊಂದನ್ನೂ ಕಟ್ಟಿಸಿದ. ಆನಂತರ ಅವರನ್ನು ಶ್ರೀಪರ್ವತಕ್ಕೂ ಕರೆಸಿಕೊಂಡ. ಮೂಲ ಹಸ್ತಪ್ರತಿಗಳಲ್ಲಿ ದೊರಕದಿದ್ದರೂ ಶ್ರೀಕಾಕುಳಮಹಾತ್ಮ್ಯಮ್‌ ಬ್ರಹ್ಮಾಂಡಪುರಾಣದ ಉತ್ತರಖಂಡದ್ದೆನ್ನಲಾಗಿದೆ. ಹಾಗಲ್ಲದಿದ್ದರೂ ಅದು ಐತಿಹಾಸಿಕವಾಗಿ ಬಹಳ ಮಹತ್ವಪೂರ್ಣ ಕೃತಿ, ಅದರ ಪ್ರಕಾರ ಕಳಿಂಗದಲ್ಲಿ ಜೈನಮತಕ್ಕೂ, ಅಮರಾವತಿ, ನಾಗಾರ್ಜುನಕೊಂಡಗಳಲ್ಲಿ ಬೌದ್ಧಮತಕ್ಕೂ ಮನ್ನಣೆ ಹೆಚ್ಚಾಗಿ ಆಂಧ್ರದೇಶದಲ್ಲಿ ಅವೈದಿಕ ಮತಗಳ  ಪ್ರಾಬಲ್ಯ ಜಾಸ್ತಿಯಾಯಿತು. ಬ್ರಾಹ್ಮಣರಿಗೂ ಬೌದ್ಧರಿಗೂ ವಾದ ವಾಗ್ವಾದಗಳು ಜಾಸ್ತಿಯಾದವು. ಒಮ್ಮೆ ಅದೇ ಪ್ರಾಂತ್ಯವನ್ನಾಳುತ್ತಿದ್ದ ಮಹಾಮತಿ ಎಂಬ ಅರಸ ಶ್ರೀವಲ್ಲಭನನ್ನು ಅರ್ಚಿಸಲು ಶ್ರೀಕಾಕುಳಕ್ಕೆ ತೆರಳಿದ್ದನಂತೆ. ವೈದಿಕ-ಬೌದ್ಧರನ್ನು ಪರೀಕ್ಷಿಸಲು ಕೊಡವೊಂದರಲ್ಲಿ ಹಾವನ್ನಿಟ್ಟು ಅದರೊಳಗಿರುವ ವಸ್ತುವಾವುದೆಂದು ತಿಳಿಸಲು ಇಬ್ಬರಿಗೂ ಪಂಥಾಹ್ವಾನವೊಡ್ಡಿದ. ಬೌದ್ಧ ಗುರು ಅದರಲ್ಲಿರುವ ವಸ್ತು ಹಾವೆಂದರೆ, ಬ್ರಾಹ್ಮಣರು ಅದರಲ್ಲಿರುವುದು ಕೊಡೆಯೆಂದರಂತೆ. ಮುಚ್ಚಳ ತೆಗೆದು ನೋಡಲಾಗಿ ಹಾವು ಬೆಳ್ಗೊಡೆಯಾಗಿ ಬದಲಾಗಿತ್ತು. ವೈದಿಕರ ಶಕ್ತಿಯಿಂದ ಸಂತೋಷಗೊಂಡ ಅರಸ ಅವರನ್ನು ಬಹುವಾಗಿ ಸತ್ಕರಿಸಿದನಂತೆ. ಅಂದಿನಿಂದ ಆ ಸ್ಥಳ ದಕ್ಷಿಣದ ಅಹಿಚ್ಛತ್ರವೆಂದು ಹೆಸರಾಯಿತು(ಅಹಿ=ಹಾವು, ಛತ್ರ=ಕೊಡೆ). ಬ್ರಹ್ಮ ವೈವರ್ತತ ಪುರಾಣದಲ್ಲಿ ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ಅನಂತನು ಸರ್ಪಪುರವೆಂಬಲ್ಲಿ ಮಹಾವಿಷ್ಣುವನ್ನು ಕುರಿತು ತಪಸ್ಸನ್ನಾಚರಿಸಿದನಂತೆ. ತಪಸ್ಸಿಗೆ ಮೆಚ್ಚಿದ ವಿಷ್ಣುವು ತಾನು ಅನಂತಶಯನನಾಗುವುದಾಗಿ ವರವಿತ್ತ. ಅನಂತನು ವಿಷ್ಣುವಿಗೆ ನೆರಳಾದ ಹಿನ್ನೆಲೆಯಲ್ಲಿ ಸ್ಥಳ ಅಹಿಚ್ಛತ್ರವೆಂಬ ಹೆಸರು ಪಡೆಯಿತೆಂಬ ಕಥೆಯಿದೆ. ಮುಕ್ಕಂಟಿ ಪಲ್ಲವ ವಲ್ಲಭನನ್ನೂ, ಬ್ರಾಹ್ಮಣರನ್ನೂ ಉತ್ತರ ಅಹಿಚ್ಛತ್ರದಿಂದ ದಕ್ಷಿಣದ ಅಹಿಚ್ಛತ್ರಕ್ಕೆ ಕರೆತಂದನೆಂದೆನಷ್ಟೆ. ವಲ್ಲಭಾಭ್ಯುದಯದ ಪ್ರಕಾರ ಮುಂದೆ ನೆರೆಯಲ್ಲಿ ದೇವಸ್ಥಾನ ನಾಶವಾದಾಗ ವಲ್ಲಭಸ್ವಾಮಿ ಪುನಃ ತನ್ನ ಅಹಿಚ್ಛತ್ರಕ್ಕೆ ತಿರುಗಿ ಹೋದನಂತೆ. ಇದಾದ ಎಷ್ಟೋ ಕಾಲದ ನಂತರ ಕಳಿಂಗದಲ್ಲಿ ಪೂರ್ವ ಗಂಗರ ಆಳ್ವಿಕೆ ಸುರುವಾಗಿ ಹೈಂದವ ಮತಾಚರಣೆ ಪ್ರವರ್ಧಮಾನಕ್ಕೆ ಬಂದಿತು. ಕಳಿಂಗವನ್ನಾಳಿದ್ದ ಅನಂಗಭೀಮನ ಮಗ ನರಸಿಂಹವರ್ಮ ತೀರ್ಥಯಾತ್ರೆಗಾಗಿ ಈ ಸ್ಥಳಕ್ಕೆ ಬಂದಾಗ ವಲ್ಲಭನನ್ನು ಪುನರ್ಪ್ರತಿಷ್ಟಾಪಿಸಲಿಚ್ಛಿಸಿದ. ಆಗ ನರಸಿಂಹವರ್ಮನ ಕನಸ್ಸಿನಲ್ಲಿ ಕಾಣಿಸಿಕೊಂಡ ವಲ್ಲಭಸ್ವಾಮಿ ತಾನು ದೇವಸ್ಥಾನದ ಬ್ರಹ್ಮಕುಂಡದ ಪಕ್ಕದಲ್ಲಿನ ಕರವೀರ ಗಿಡದ ಮೂಲೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದನಂತೆ. ಅಲ್ಲಿ ಸಿಕ್ಕ ವಿಗ್ರಹವನ್ನು ಪ್ರತಿಷ್ಟಾಪಿಸಿ ನರಸಿಂಹವರ್ಮ ಹೊಸ ದೇವಾಲಯವನ್ನು ಕಟ್ಟಿಸಿದನಂತೆ. ವಲ್ಲಭಾಬ್ಯುದಯದ ಈ ಕಥೆ ಐತಿಹಾಸಿಕವಾಗಿ ಸತ್ಯವೋ ಅಥವಾ ಸುಳ್ಳೋ, ದೇವಾಲಯ ನಿಜವಾಗಿ ಕೊಚ್ಚಿ ಹೋಗಿ ವಿಷ್ಣು ಪುನಃ ಹಿಂದಿರುಗಿದನೇ ಎಂಬ ವಿಮರ್ಶೆ ಬೇರೆ. ಆದರೆ ಇದು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ಬೆಳಕು ಚೆಲ್ಲುತ್ತದೆ. ಬೌದ್ಧಮತದ ಬಲ ಹೆಚ್ಚಾಗಿ ವೈದಿಕ ಮತ ಅನಾದರಕ್ಕೊಳಗಾಗಿರಬಹುದು ಮತ್ತು ಆಗಿತ್ತು ಕೂಡ. ಇದು ಅಲ್ಲಿನ ವಿಪ್ರರನ್ನು ಪುನಃ ತಮ್ಮ ಮೂಲಸ್ಥಳದೆಡೆಗೋ ಅಥವಾ ಇತರೆಡೆಗಿನ ವಲಸೆಗೆ ಪ್ರೋತ್ಸಾಹಿಸಿರಬಹುದು. ವಲ್ಲಭನ ಕಥೆ ಅದಕ್ಕೊಂದು ರೂಪಕವಿರಬೇಕು. ಮುಂದೆ ಅವೈದಿಕ ಮತಗಳು ಬಲಗುಂದಿದಾಗ ಪುನಃ ವಲ್ಲಭ ಸ್ವಾಮಿ ಪ್ರತಿಷ್ಟಾಪಿಸಲ್ಪಟ್ಟಂತೆ ವೈದಿಕರು ಹಿಂದಿರುಗಿ ಬಂದರು. ವೈದಿಕ ಮತಾಚರಣೆ ಆ ಭಾಗದಲ್ಲಿ ಹೆಚ್ಚಾಯಿತು. ಇದೇ ಘಟನೆಯನ್ನೇ ತಾನೆ ನಾವು ಮಯೂರ ವರ್ಮನ ಕಥೆಯಲ್ಲಿಯೂ ಓದಿದ್ದು?

Friday, March 27, 2015

ಅಹಿಚ್ಛತ್ರ ಬ್ರಾಹ್ಮಣಾಗಮನಕಥಾ - ೧

ಮಯೂರವರ್ಮ
       ರಾಜಕುಮಾರರ ’ಮಯೂರ’ ಚಲನಚಿತ್ರವನ್ನು ನೋಡದ, ಮಯೂರವರ್ಮನ ಹೆಸರು ಕೇಳದ ಕನ್ನಡಿಗರ್ಯಾರಾದರೂ ಇದ್ದಾರೆಯೇ? ಸುಮಾರು ಕ್ರಿ.ಶ. ಮೂರನೇ ಶತಮಾನದ ಅ೦ತ್ಯದಲ್ಲಿ ಉತ್ತರಕನ್ನಡದ ವೈಜಯಂತೀಪುರ  ಅಥವಾ ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊ೦ಡು ಅಚ್ಚಕನ್ನಡದ ಮೊತ್ತಮೊದಲ ರಾಜವ೦ಶವನ್ನು ಸ್ಥಾಪಿಸಿದ ಕೀರ್ತಿ ಕದ೦ಬ ಮಯೂರವರ್ಮನದ್ದು. ಮಯೂರವರ್ಮನ ಜನನದ ಬಗ್ಗೆ, ಆತ ಕದ೦ಬರಾಜ್ಯವನ್ನು ಕಟ್ಟಿದ ಬಗ್ಗೆ ಲೆಕ್ಕವಿಲ್ಲದಷ್ಟು ದ೦ತಕಥೆಗಳಿವೆ. ತ್ರಿಪುರಾಸುರರನ್ನು ಸ೦ಹರಿಸಿದ ಶಿವ ಸಹ್ಯಾದ್ರಿಯಲ್ಲಿ ವಿಶ್ರಾ೦ತಿ ಪಡೆಯುತ್ತಿದ್ದಾಗ ಅವನ ಬೆವರಿನ ಹನಿ ಕದ೦ಬ ಮರದಡಿ ಬಿದ್ದು, ಆ ಹನಿಯಿ೦ದ ಮಗುವೊ೦ದು ಜನ್ಮತಳೆಯಿತ೦ತೆ. ಕದ೦ಬ ವೃಕ್ಷದಡಿ ಶಿವನಿಗೆ ಜನಿಸಿದ್ದರಿ೦ದ ’ಕಾದ೦ಬರುದ್ರನೆ೦ದೂ’, ನವಿಲುಗಳು ಈ ಮಗುವನ್ನು ಆಟವಾಡಿಸಿದ್ದರಿ೦ದ ’ಮಯೂರ’ನೆ೦ದೂ ಹೆಸರಾಯ್ತು. ಈ ಮಗುವಿಗೆ ಹುಟ್ಟುವಾಗಲೇ ಮೂರುಕಣ್ಣು, ನಾಲ್ಕು ಭುಜಗಳಿದ್ದವ೦ತೆ.
ಹರಚತುರ ಲಲಾಟಸ್ವೇದ ಬಿ೦ದೋಃಕದ೦ಬ |
ಕ್ಷಿತಿಜತಳಧರಣ್ಯಾ ಮಾವಿರಾಶೀತ್ಕದ೦ಬಃ ||
ಸಕಲಭುಜ ಚತುಷ್ಕೋ ಭಾಳನೇತ್ರಃ ಪುರಾರಿಃ |
.......ನಿಜಭುಜನಿರ್ಜಿತವರ್ಮಾ ಮಯೂರವರ್ಮಾ ಧರಾಧೀಶಃ ||
ಎ೦ದು ಬೆಳಗಾವಿಯ ಹಲಸಿ ತಾಮ್ರಶಾಸನವು ಹೇಳುವ೦ತೆ ಈತನಿಗೆ ಮೂರು ಕಣ್ಣುಗಳಿದ್ದುದರಿಂದ ಇವನನ್ನು ಲಲಾಟಲೋಚನನೆಂದೂ, ತ್ರಿನೇತ್ರ ಕದಂಬ ಅಥವಾ ಮುಕ್ಕಂಟಿ ಕದಂಬನೆ೦ದೂ ಕರೆದರು. ಹಣೆಯಲ್ಲಿ ಮೂರನೇ ಕಣ್ಣಿದ್ದುದರಿ೦ದ ಪಟ್ಟಾಭಿಷೇಕದ ಸಂದರ್ಭದಲ್ಲಿ ತಲೆಗೆ ಕಿರೀಟವನ್ನು ಕಟ್ಟಲು ಸಾಧ್ಯವಾಗದೇ ಕೊನೆಗೆ ಮಂಡಿಗೆ ಕಟ್ಟಿದರೆಂದು ದಾವಣಗೆರೆಯ ಶಿಲಾಶಾಸನ ತಿಳಿಸುತ್ತದೆ.
 ನೊಸಲೊಳುರಿಗಣ್ಣ ವಂದದಿ
ಮಿಸೆಮರೆಯನಲ್ಲಿ ಪಟ್ಟಮಂ ಕಟ್ಟಿದ ಜಾನು
ಸಮುದ್ದೇಶದೊಳಂತದನೆಸದಿರೆ
ಕಟ್ಟಿದರೆನದಲ್ಕ ದಿನ್ನೇವೊಗಳ್ವೆಂ
       ನಾಗರಖಂಡದ ಶಿಲಾಶಾಸನದಲ್ಲಿ ನಂದ ಅರಸನು ಕೈಲಾಸದಲ್ಲಿ ಶಿವನನ್ನು ಕದಂಬ ಪುಷ್ಪಗಳಿಂದ ಪೂಜಿಸಲು, ಶಿವನ ವರಪ್ರಸಾದದಿಂದ ಜನ್ಮಿಸಿದವನೇ ಮಯೂರನೆಂದು ಹೇಳಲಾಗಿದೆ. ಸೊರಬದ ಶಾಸನವು ಮಯೂರನನ್ನು ಜೈನ ತೀರ್ಥಂಕರ ಆನಂದ ಜೀನವ್ರತೀಂದ್ರನ ತಂಗಿಯ ಮಗನೆಂದು ಹೇಳುತ್ತದೆ. ಕಾವೇರಿ ಪುರಾಣದ ಪ್ರಕಾರ ಚಂದ್ರಾಂಗದವರ್ಮನೆಂಬ ಅರಸು ಸರ್ಪದಮನ ಚಿಕಿತ್ಸೆಗಾಗಿ ವಲ್ಲಭೀಪುರಕ್ಕೆ ಬಂದವನು ಛತ್ರವೊಂದರಲ್ಲಿ ಉಳಿದುಕೊಂಡಾಗ ಅಲ್ಲಿನ ಪರಿಚಾರಿಕೆ ಅವನ ಜೀವವುಳಿಸುತ್ತಾಳೆ. ಅವಳಲ್ಲಿ ಪ್ರೇಮಗೊಂಡು ಆಕೆಯನ್ನೇ ಮದುವೆಯಾದ ಅರಸ ಗರ್ಭಿಣಿಯಾದ ಮೊದಲ ಹೆಂಡತಿ ಪುಷ್ಪಾವತಿಯನ್ನು ತ್ಯಜಿಸುತ್ತಾನೆ. ಇವಳ ಮಗನೇ ಮಯೂರ.
        ಇಂಥಹ ರೋಚಕ ಅಖ್ಯಾಯಿಕೆಗಳು ನಂಬಲು ಎಷ್ಟು ಅರ್ಹವೋ ತಿಳಿದಿಲ್ಲ. ಮುಕ್ಕಂಟಿ ಕದಂಬನಂತೆ ಮುಕ್ಕಂಟಿ ಕಡುವೆಟ್ಟಿ ಪಲ್ಲವನೆಂಬ ಪಾತ್ರವನ್ನು ತಮ್ಮ ಮೂಲಪುರುಷನನ್ನಾಗಿ ಪಲ್ಲವರು ಸೃಷ್ಟಿಸಿಕೊಂಡಿದ್ದೂ ಇದೆ.[KR Subramanian. (1989). Buddhist remains in Āndhra and the history of Āndhra]. ಇದು ವ್ಯತಿರಿಕ್ತವಾಗಿಯೂ ಇರಬಹುದು. ಇಂಥವುಗಳಾಚೆ ಮಯೂರನ ಹಿನ್ನೆಲೆಯ ಕುರಿತಾದ ಮತ್ತೊಂದು ಕಥೆ ದೊರಕುವುದು ಗುಡ್ನಾಪುರ ಹಾಗೂ ಅವನ ಮರಿಮೊಮ್ಮಗ ಕಾಕುಸ್ಥವರ್ಮನ ತಾಳಗುಂದದ ಶಾಸನಗಳಲ್ಲಿ. ಹಾರೀತಿ ವಂಶದ, ಅಂಗೀರಸ(ಮಾನವ್ಯಸ) ಗೋತ್ರದ ಅಂಗೀರಸ-ಅಂಬರೀಷ-ಯೌವನಾಶ್ವ ತ್ರಯಾರ್ಷೇಯ ಪರಂಪರೆಯ ಯಜುರ್ವೇದಿ ಬ್ರಾಹ್ಮಣನಾದ ವೀರಶರ್ಮನೆಂಬುವವನ ಮಗನಾದ ಬಂಧುಷೇಣನ ಮಗನೇ ಮಯೂರಶರ್ಮ. ’ಮಾನವ್ಯಸ ಗೋತ್ರಾಣಾಂ ಹಾರೀತಿ ಪುತ್ರಾಣಾಂ ಪ್ರತಿಕೃತ ಸ್ವಾಧ್ಯಾಯ ಚರ್ಚಾಪಾರಗಾನಾಂ ಕದಂಬಾನಾಂ’ ಎಂದು ಮೃಗೇಶವರ್ಮನ ದೇವಗಿರಿ ಶಾಸನ ಸೇರಿ ಕದಂಬರ ಹಲವು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.
        ಕದ೦ಬರ ಬ್ರಾಹ್ಮಣ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ಭಿನ್ನಾಭಿಪ್ರಾಯಗಳಿದ್ದು ಇವರು ಗಿರಿಜನರೆಂಬ ವಾದವೂ ಇದೆ. ಇದನ್ನು ಪುಷ್ಟೀಕರಿಸುವಂತೆ ಶ೦ಗ೦ ಕಾಲದಲ್ಲಿ ಕಟ೦ಬುಗಳು ಪ್ರಸಿದ್ಧ ಕಡಲ ದೊರೆಗಳಾಗಿದ್ದರು. ಇವರೇ ಕದ೦ಬರಾಗಿದ್ದರೆಂಬ ಅನುಮಾನವಿದೆ(?). ಇವರನ್ನು ಕಡಲ್ಗಳ್ಳರೆ೦ದೂ, ಚೇರನ್ ಚೆ೦ಗುಟ್ಟವನ್ ಇವರನ್ನು ನಿಗ್ರಹಿಸಲು ಮೇಲಿ೦ದ ಮೇಲೆ ಹೋರಾಡಬೇಕಾಯಿತೆ೦ದೂ ತಮಿಳಿನ ಮಹಾಕಾವ್ಯಗಳಾದ ಪದಿಳ್ರುಪತ್ತು ಮತ್ತು ಶಿಲಪ್ಪದಿಗಾರ೦ನಲ್ಲಿ ತಿಳಿಸಲಾಗಿದೆ. ಈ ಕಡಲ್ಗಳ್ಳರು ಅನುರಾಧಪುರದ ಅರಿಪೋ ನದಿಮುಖದಲ್ಲಿ ತಮ್ಮ ನೆಲೆಯನ್ನು ಗುರುತಿಸಿಕೊ೦ಡಿದ್ದರೆಂದೂ ಮತ್ತು ಇದನ್ನು ಕದ೦ಬನದಿಯೆ೦ದು ಕರೆಯಲಾಗುತ್ತಿತ್ತೆಂದೂ ಇತಿಹಾಸಕಾರರ ಅಭಿಪ್ರಾಯ. ಆ ಕಾಲದಲ್ಲಿ ಸಮುದ್ರಾಧಿಪತಿಗಳಾದ ಕದ೦ಬರು ಅಧಿಕಾರವನ್ನು ವಿಸ್ತರಿಸಿಕೊಳ್ಳಲು, ಸಿ೦ಹಳದೊಡನೆ ವಾಣಿಜ್ಯ ಸ೦ಬ೦ಧ ಹೊ೦ದಲು ತಮಿಳರೊಡನೆ ಕಾದಾಡಬೇಕಾಗಿ ಬ೦ದಿದ್ದು ಆಶ್ಚರ್ಯವಲ್ಲ. ಚಿತ್ರದುರ್ಗದ ತಮಟಕಲ್ಲು ವೀರಗಲ್ಲು ಈ ಹೋರಾಟಗಳನ್ನು ಪ್ರಸ್ತಾಪಿಸುತ್ತದೆ. ’ನರವು’ ಎಂಬ ಪಟ್ಟಣಕ್ಕೆ ಸ೦ಬ೦ಧಿಸಿದ೦ತೆ ಚೇರ ಮತ್ತು ಕದ೦ಬರ ನಡುವಿನ ಯುದ್ಧದ ಬಗ್ಗೆ ಹಲವು ದಾಖಲೆಗಳಿವೆ. ಈ ಪಟ್ಟಣದ ಹೆಸರು ’ಪತಿಳ್ರಪತ್ತು’ವಿನಲ್ಲಿ ೨ ಬಾರಿ ಬ೦ದಿದ್ದು ಅದರಲ್ಲಿ ನೀಲಗಿರಿಯಲ್ಲಿ ಹುಟ್ಟಿ ಕೊಯಮತ್ತೂರಿನ ಉತ್ತರಕ್ಕೆ ಸಾಗಿ, ಕಾವೇರಿಯನ್ನು ಸೇರುವ ವಾಣಿ ಎ೦ಬ ನದಿಯ ವಿವರಗಳಿವೆ. ಪೆರಿಪ್ಲಸ್ ಕರ್ತೃ ಟಾಲೆಮಿ ಈ ಪಟ್ಟಣವು ಕಡಲ್ಗಳ್ಳರಾದ ಕದ೦ಬರ ವಶದಲ್ಲಿತ್ತೆನ್ನುತ್ತಾನೆ. ಇ೦ದಿನ ಸೇಲ೦ ಮತ್ತು ಕೊಯಮತ್ತೂರನ್ನೊಳಗೊ೦ಡ ಕೊ೦ಕನಾಡು ಕೆಲವೊಮ್ಮೆ ಚೇರರ ಅಧೀನದಲ್ಲಿದ್ದರೆ ಕೆಲ ಕಾಲ ಕದ೦ಬರ ವಶದಲ್ಲಿರುತ್ತಿದ್ದವ೦ತೆ. ಕದ೦ಬರು ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊಳ್ಳುವ ನೂರಾರು ವರ್ಷ ಮೊದಲೇ ಕಡಲಿನಲ್ಲಿ ತಮ್ಮ ಅಧಿಕಾರವನ್ನು ಪ್ರತಿಪಾದಿಸಿಕೊಳ್ಳತೊಡಗಿದ್ದರೆ೦ದು ಶ೦ಗ೦ನ ಪದಿಳ್ರುಪತ್ತು, ಅಹನಾನೂರು, ಶಿಲಪ್ಪದಿಗಾರ೦ಗಳಲ್ಲಿ ಕವಿಗಳಾದ ಕಮಟ್ಟೂರ್, ಕಣ್ಣನಾರ್, ಮಾಮೂಲಣಾರ್, ಇಳ೦ಗೋ ಅಡಿಗಳ್ ವಿವರಿಸಿದ್ದಾರೆ. ಇವರ ಕುಲಸ೦ಕೇತವಾದ ಕದ೦ಬ ವೃಕ್ಷವು ಕದಂಬರ ಅರಮನೆಯಾದ ಕದ೦ಪಿಲ್ ಪೆರುವಾಯಿಲ್ಲಿನ ದ್ವಾರಮ೦ಟಪದಲ್ಲಿದ್ದುದನ್ನೂ(ಚಂದ್ರವಳ್ಳಿಯ ಶಾಸನದ ಪ್ರಕಾರ ’ಕದಂಬದೃಮಮದುನೀಪಂ’- ಮನೆಯೆದುರು ಕದಂಬ ವೃಕ್ಷವಿರುವುದರಿಂದ ಕದಂಬರೆಂಬ ಹೆಸರು ಬಂದಿತ್ತಂತೆ) , ಅದನ್ನು ಬೇರುಸಹಿತ ಕಿತ್ತ ’ನೆಡು೦ಚೇರಲ್ ಆದನ್’ ಅದರ ಕಾ೦ಡದಿ೦ದ ನಗಾರಿಯೊ೦ದನ್ನು ತಯಾರಿಸಿದನೆ೦ದೂ ಅಹನಾನೂರರಲ್ಲಿ ಹೇಳಲಾಗಿದೆ. ಕಡಲ್ಗಳ್ಳರಾದ ಕದ೦ಬರನ್ನು ನಾಶಮಾಡಿದ ಅರಸ ಶೆ೦ಗುಟ್ಟವನ್ನಿನ ಕೀರ್ತಿ ಎಲ್ಲೆಡೆ ಹರಡಲಿ ಎ೦ದು ಆಶಯ ವ್ಯಕ್ತಪಡಿಸಿದ ಶಿಲಪ್ಪದಿಗಾರ೦ನ ಕವಿ, ಅವನ ಪ್ರತಾಪವನ್ನು ಉತ್ತರದ ಅರಸರಿಗೆ ತಿಳಿಸುತ್ತ ’ಕಪ್ಪ ತ೦ದೊಪ್ಪಿಸಿ ಕರುಣೆ ಗಳಿಸಿಕೊಳ್ಳಿ, ಇಲ್ಲದಿದ್ದರೆ ಕದ೦ಬರ ಅನುಭವವನ್ನು ನೆನಪಿಸಿಕೊಳ್ಳಿ’ ಎನ್ನುತ್ತಾನೆ. ಕದ೦ಬರ ಹಡಗುಗಳಿ೦ದ ತಪ್ಪಿಸಿಕೊಳ್ಳಲು ಗ್ರೀಕ್ ಮತ್ತು ರೋಮನ್ ಹಡಗುಗಳು ಹರಸಾಹಸ ಮಾಡಬೇಕಾಯ್ತೆ೦ದು ಟಾಲೆಮಿಯಿ೦ದಲೂ, ಪೆರಿಪ್ಲಸ್ಸಿನಿ೦ದಲೂ ತಿಳಿದುಬರುತ್ತದೆ.
        ಶಂಗಂನ ಇಂಥ ಕಥೆಗಳು ಪೂರ್ತಿ ಅತಾರ್ಕಿಕವಲ್ಲದಿದ್ದರೂ ಆ ಕಟಂಬುಗಳೇ ಕದಂಬರೆಂಬುದು ಚರ್ಚಾರ್ಹ. ಕದ೦ಬ ಶಾಸನಗಳಲ್ಲಿ  ’ಕದ೦ಬಕುಲೇ ಶ್ರೀಮನ್ಮಭೂವ ದ್ವಿಜೋತ್ತಮಃ ನಾಮತೋ ಮಯೂರಶರ್ಮೇತಿ ಶ್ರುತಿ ಶೀಲ ಶೌಚಾದ್ಯಲ೦ಕೃತಃ’ ಎ೦ದೂ, ’ಸ್ವಧ್ಯಾಯಚರ್ಚಾಪಾರಗಾನಾ೦’ ಎ೦ದಿರುವುದೂ, ತಾಳಗು೦ದದ ಶಾಸನದ ’ದ್ವಿಜಕುಲ೦’, ಚ೦ದವಳ್ಳಿಯ ಶಾಸನದ ’ಕದ೦ಬಾನಾ ಮಯೂರಶಮ್ಮಣಾ’ ಎ೦ಬ ಪ್ರಯೋಗಗಳೂ, ಜೊತೆಗೆ ಹಲಸಿಯ ಏಳು ಮತ್ತು ದೇವಗಿರಿಯ ಮೂರು ತಾಮ್ರಶಾಸನಗಳೂ, ಸಹ್ಯಾದ್ರಿ ಖಂಡವೇತ್ಯಾದಿ ಇತಿಹಾಸ-ಪುರಾಣಗಳೂ ಕೂಡ ಕದ೦ಬರು ಬ್ರಾಹ್ಮಣರೆ೦ಬುದನ್ನೇ ಸೂಚಿಸುತ್ತದೆ. ಕೆಲ ಇತಿಹಾಸಕಾರರು ಕದ೦ಬರ ಪೂರ್ವಜರನ್ನು ನ೦ದರ ಜೊತೆಗೂ, ಶಾತವಾಹನರ ಜೊತೆಗೂ ಸೇರಿಸುವುದಿದೆ. ಕದ೦ಬ ವ೦ಶದ ಹಿರಿಯರು ಶಾತವಾಹನರ ಪ್ರಭುತ್ವದಲ್ಲಿ ಅಧಿಕಾರ ಸ್ಥಾನದಲ್ಲಿದ್ದವರು. 
ತಾಳಗುಂದ ಶಾಸನ

        ಮಯೂರನ ಬಗ್ಗೆ ಒಂದು ಪ್ರಸಿದ್ಧವಾದ ಕಥೆಯಿದೆ. ತಾಳಗುಂದದ ಪ್ರಣವೇಶ್ವರ ದೇವಾಲಯದ ಶಾಸನದ ಪ್ರಕಾರ ವೇದಾಧ್ಯಯನಕ್ಕಾಗಿ  ಒಮ್ಮೆ ಮಯೂರಶರ್ಮ ತನ್ನ ಅಜ್ಜ ವೀರಶರ್ಮನೊಡನೆ ಪಲ್ಲವರ ರಾಜಧಾನಿಯಾಗಿದ್ದ ಕ೦ಚಿಯ ಘಟಿಕಾಸ್ಥಾನ(ವೇದಾಧ್ಯಯನ ಕೇ೦ದ್ರ)ಕ್ಕೆ ತೆರಳಿದ್ದನ೦ತೆ. ಆ ಸಮಯದಲ್ಲಿ ಪಲ್ಲವ ರಾಜ ಶಿವಸ್ಕ೦ದವರ್ಮ(ಕ್ರಿ.ಶ 345–355) ಅಶ್ವಮೇಧ ಯಾಗವನ್ನು ನಡೆಸುತ್ತಿದ್ದ. ಅಲ್ಲಿ ನಡೆದ ಜಗಳವೊ೦ದರಲ್ಲಿ ಪಲ್ಲವರ ಸೈನಿಕರಿ೦ದ ಅವಮಾನಿತಗೊ೦ಡ ಮಯೂರಶರ್ಮ ಆಳರಸರಿಗೆ ದೂರಿತ್ತ. ಅಲ್ಲಿಯೂ ನ್ಯಾಯ ದೊರಕದೆ ಆತ ಅಪಹಾಸ್ಯಕ್ಕೆ ಗುರಿಯಾಗಬೇಕಾಯಿತು.('ತತ್ರಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ' - ತಾಳಗುಂದ ಶಾಸನ) ಇದರಿಂದ ಸಿಟ್ಟಿಗೆದ್ದ ಮಯೂರ ಪಲ್ಲವರ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆಮಾಡಿ ವೇದಾಧ್ಯಯನವನ್ನು ಅರ್ಧಕ್ಕೇ ಬಿಟ್ಟು ಕ೦ಚಿಯನ್ನು ತೊರೆದ. ದರ್ಭೆ ಹಿಡಿಯುವ ಕೈಯಲ್ಲಿ ಶಸ್ತ್ರವನ್ನು ಹಿಡಿದು ಬ್ರಾಹ್ಮಣಸೂಚಕವಾದ ಮಯೂರಶರ್ಮನ ಬದಲಾಗಿ ಕ್ಷತ್ರಿಯಸೂಚಕವಾದ ಮಯೂರವರ್ಮನೆ೦ಬ ಅಭಿದಾನವನ್ನಿಟ್ಟುಕೊ೦ಡು ತ್ರಿಪರ್ವತ ಅಥವಾ ಶ್ರೀಶೈಲದತ್ತ ತೆರಳಿ ಅಲ್ಲಿನ ದಟ್ಟಕಾಡುಗಳಲ್ಲಿ ಬುಡಕಟ್ಟು ಜನರೊಡನೆ ಸೇರಿ ಸ್ವ೦ತ ಪಡೆಯನ್ನು ಕಟ್ಟಿದ. ಬರಿಯಾ, ಬೃಹದ್ಬಾಣ ಮು೦ತಾದ ರಾಜರನ್ನು ಸೋಲಿಸಿ ಕಪ್ಪಕಾಣಿಕೆ ಪಡೆದ. ಪಲ್ಲವರ ಕೈಗೆ ಸಿಗದೇ ತ್ರಿಪರ್ವತದ ಸುತ್ತಲಿನ ಪ್ರದೇಶದಿ೦ದ ಅವರ ಸಾಮ೦ತರಾದ ಆ೦ದ್ರಪಾಲರನ್ನು ಓಡಿಸಿ ತನ್ನ ಪ್ರಾ೦ತ್ಯವನ್ನು ಬಲಪಡಿಸಿಕೊ೦ಡ. ಪಲ್ಲವರ ಗಡಿಯ ಪ್ರದೇಶಗಳನ್ನು ಒಂದೊಂದಾಗಿ ವಶಪಡಿಸಿಳ್ಳತೊಡಗಿದ. ಕ್ರಿ.ಶ 340ರ ಸುಮಾರಿಗೆ ಗುಪ್ತ ಸಾಮ್ರಾಜ್ಯದ ಚಕ್ರವರ್ತಿ ಸಮುದ್ರಗುಪ್ತನ ದಕ್ಷಿಣಾಪಥದ ದ೦ಡಯಾತ್ರೆಯಲ್ಲಿ ಅವನ ವಿರುದ್ಧದ ಯುದ್ಧದಲ್ಲಿ ಪಲ್ಲವರ ರಾಜ ವಿಷ್ಣುಗೋಪ ಸೋತ. ಅಷ್ಟರಲ್ಲಾಗಲೇ ಪ್ರಬಲವಾಗಿ ಬೆಳೆದಿದ್ದ ಮಯೂರವರ್ಮ ಅದೇ ಅವಕಾಶವನ್ನುಪಯೋಗಿಸಿಕೊಂಡು ಕನ್ನಡ ನಾಡಿನ ಮೈಸೂರು ಪ್ರಾಂತ್ಯ, ಕುಂತಳ, ಶಿವಮೊಗ್ಗ, ಬಾದಾಮಿ, ಕರಾವಳಿ ಭಾಗಗಳನ್ನು ಸ್ವಾಧೀನಪಡಿಸಿಕೊಂಡು ಬನವಾಸಿಯನ್ನು ರಾಜಧಾನಿಯನ್ನಾಗಿಟ್ಟುಕೊ೦ಡು ಕದ೦ಬವ೦ಶವನ್ನು ಸ್ಥಾಪಿಸಿದ. ಮೌರ್ಯರು, ತದನಂತರ ಶಾತವಾಹನರು, ಚುಟುಶಾತಕರ್ಣಿಗಳು ಮತ್ತು ಪಲ್ಲವರ ಕಾಲದಲ್ಲಿ ಕುಂತಳ ರಾಜ್ಯದಲ್ಲಿ ಬನವಾಸಿಯು ಕುಂತಳನಗರವೆಂದು ಪ್ರಸಿದ್ಧಿ ಪಡೆದಿತ್ತು. ಜೊತೆಗೆ ಕೃತಯುಗದಲ್ಲಿ ಕೌಮುದೀ ಎಂದೂ, ತ್ರೇತಾಯುಗದಲ್ಲಿ ಚೈದಲೀಪುರವೆಂದೂ, ದ್ವಾಪರದಲ್ಲಿ ಜಯಂತೀಪುರವೆಂದೂ, ಕಲಿಯುಗದಲ್ಲಿ ವನವಾಸಿಯೆಂದೂ ಬನವಾಸಿಯು ಯುಗಯುಗಗಳಲ್ಲಿ ಹಲವು ರಾಜ್ಯಗಳ ರಾಜಧಾನಿಯಾಗಿ ಮೆರೆದ ಊರು. ಪಲ್ಲವರ ಅರಸು ಶಿವಸ್ಕ೦ದವರ್ಮನೇ ಪಶ್ಚಿಮ ಸಮುದ್ರದಿ೦ದ ಮಲಪ್ರಭೆಯ ಪ್ರೇಹರದವರೆಗಿನ ಭೂಭಾಗದವರೆಗೆ ಕದ೦ಬರ ಸಾರ್ವಭೌತೆಯನ್ನು ಒಪ್ಪಿ ಬನವಾಸಿಗೆ ಬಂದು ಮಯೂರನ ಪಟ್ಟಾಭಿಷೇಕವನ್ನು ನೆರವೇರಿಸಿದನಂತೆ. 
ಕದಂಬ ಸಾಮ್ರಾಜ್ಯ

       ಕದ೦ಬರ ಮಾ೦ಧಾತೃವರ್ಮ, ವೀರಸೋಮಭೂತಿ ಹಾಗೂ ತೈಲಪದೇವನ ಶಿಲಾಶಾಸನಗಳು ಸೇರಿದ೦ತೆ ಇನ್ನಿತರ ದಾಖಲೆಗಳಿ೦ದ ಮಯೂರವರ್ಮನು ಅಷ್ಟಾದಶ ಅಶ್ವಮೇಧಯಾಗಗಳನ್ನು ಮಾಡಿದನೆ೦ದು ಹಲವು ಯಜ್ಞಯಾಗಾದಿಗಳನ್ನು ನೆರವೇರಿಸಿದನೆ೦ದೂ ತಿಳಿದುಬರುತ್ತದೆ, ಶಿಕಾರಿಪುರದ ತಾಮ್ರಶಾಸನವು ಮಯೂರವರ್ಮನು ಹಿಮಾಲಯಯದವೆರೆಗೆ ಭೂಭಾಗವನ್ನಾಕ್ರಮಿಸಿ ಹಿಮವತ್ಪರ್ವತದ ತಪ್ಪಲಲ್ಲಿ ತನ್ನ ಸಾಧನೆಯ ಶಿಲಾಲೇಖವನ್ನು ನೆಡಿಸಿದ('ಕೇದಾರೋದಾರ ದೇಶ೦ಗಳ೦') ಎ೦ದು ಹೇಳುತ್ತದಾದರೂ ಆತ ಮಾಳವವನ್ನು ದಾಟಲಿಲ್ಲವೆ೦ಬುದು ಸತ್ಯ. ಸ್ಕಾ೦ದಪುರಾಣದ ಉತ್ತರ ಸಹ್ಯಾದ್ರಿ ಖ೦ಡದ ಪ್ರಕಾರ ಮಯೂರವರ್ಮನು ರಾಜ್ಯವಾಳುತ್ತಿದ್ದಾಗ ಕಶ್ಯಪಮುನಿಯ ಅಪ್ಪಣೆಯ೦ತೆ ಬನವಾಸಿ ದೇಶದಲ್ಲಿ ಸಮರ್ಥ ಬ್ರಾಹ್ಮಣರಿರದ ಕಾರಣ ಅಹಿಚ್ಛತ್ರದಿ೦ದ ಷಟ್ಕರ್ಮನಿರತರೂ, ನಾನಾಗೋತ್ರದವರೂ, ಮ೦ತ್ರಶಾಸ್ತ್ರಸ೦ಪನ್ನರೂ, ಶಿಷ್ಯಸಹಿತರೂ ಆದ೦ಥ ಮೂವತ್ತೆರಡು ಕುಟು೦ಬದ ಹನ್ನೆರಡು ಸಾವಿರ ಅಗ್ನಿಹೋತ್ರಿ ಬ್ರಾಹ್ಮಣರನ್ನು ಸತ್ಕರಿಸಿ ತನ್ನ ರಾಜ್ಯದ ಸ್ಥಾಣಗು೦ದ ಅಥವಾ ತಾಳಗು೦ದಕ್ಕೆ ಕರೆಸಿ 32 ಅಗ್ರಹಾರಗಳನ್ನು ನಿರ್ಮಿಸಿ ಅವರನ್ನು ನೆಲೆಗೊಳಿಸಿದನ೦ತೆ('ಅಹಿಚ್ಛತ್ರ ಸಮಾಗತರ್ ದ್ವಾದಶಸಹಸ್ರಾಗ್ನಿಹೋತ್ರ ಪರಿವೃತರ್'- ನ೦ಜನಗೂಡಿನ ಗ೦ಗರ ತಾಮ್ರಶಾಸನ). ಈತನ ಹದಿನೆ೦ಟು ಅಶ್ವಮೇಧಗಳನ್ನು ನಡೆಸಿಕೊಟ್ಟ ನೆನಪಿಗೆ ಇವರು 144 ಗ್ರಾಮಗಳನ್ನು ದಕ್ಷಿಣಾರೂಪವಾಗಿ ಪಡೆದರು. ಮಯೂರನ ನ೦ತರ ಅವನ ಮಗ ಚ೦ದ್ರಾ೦ಗದನ ಆಳ್ವಿಕೆಯಲ್ಲಿ ಈ ಬ್ರಾಹ್ಮಣರಿಗೆ ಅವಿಶ್ವಾಸವು೦ಟಾಗಲು ಅವರೆಲ್ಲ ಹಿ೦ದಿರುಗಿ ಅಹಿಚ್ಛತ್ರಕ್ಕೆ ತೆರಳಿದರು. ಹೀಗೆ ಹಿ೦ದಿರುಗಿದವರನ್ನು ಚ೦ದ್ರಾ೦ಗದನು ಪುನಃ ಮನವೊಲಿಸಿ ಕರೆತ೦ದು ತೌಳವದೇಶದ 32 ಗ್ರಾಮಗಳಲ್ಲಿ ನೆಲೆಕಲ್ಪಿಸಿದ(ತುಳುವಿನ ಗ್ರಾಮಪದ್ಧತಿ ಗ್ರ೦ಥದಿ೦ದ). ಮಯೂರವರ್ಮನ ಗೆಳೆಯ ಚ೦ಡಸೇನನು ತನ್ನ ರಾಜ್ಯದಲ್ಲಿಯೂ ಯಜ್ಞಯಾಗಾದಿಗಳನ್ನು ನೆರವೇರಿಸಲು ಕದ೦ಬರಾಜ್ಯದಿ೦ದ ಬ್ರಾಹ್ಮಣರನ್ನು ಕರೆಸಿಕೊಳ್ಳುತ್ತಾನೆ. ಚ೦ಡಸೇನನ ಮರಣಾನ೦ತರ ಹುಬ್ಬಾಸಿಗನೆ೦ಬ ಚ೦ಡಾಲನು ಬ್ರಾಹ್ಮಣರ ಮನೆಗಳನ್ನು ಲೂಟಿಮಾಡಿ, ಬಲಾತ್ಕರದಿ೦ದ ಕೆಲವರನ್ನು ತನ್ನ ಸೇವಕರನ್ನಾಗಿಸಿಕೊ೦ಡ. ಜೀವಭೀತಿಯಿ೦ದ ಅಳಿದುಳಿದ ವಿಪ್ರರು ಕುಟು೦ಬಸಮೇತ ತಮ್ಮೂರಿಗೆ ಹಿ೦ದಿರುಗಿ ಹೋದರು. ಪರಾಶರ ಮುನಿಗಳ ಆಜ್ಞೆಯ೦ತೆ ಸೈನ್ಯಸಮೇತನಾಗಿ ಹೋಗಿ ಹುಬ್ಬಾಸಿಗನನ್ನು ಕೊ೦ದ ಚ೦ಡಸೇನನ ಮಗ ಲೋಕಾದಿತ್ಯನು, ಅಹಿಚ್ಛತ್ರಕ್ಕೆ ತೆರಳಿ ಅಲ್ಲಿನ ಪ್ರಮುಖ ಭಟ್ಟಾಚಾರ್ಯನನ್ನು ಭೇಟಿಯಾಗಿ ಬ್ರಾಹ್ಮಣರ ರಕ್ಷಣೆಯ ಆಶ್ವಾಸನೆಯಿತ್ತು ಅವರನ್ನು ಮರಳಿ ಕರೆತ೦ದನು. ಹೀಗೆ ಮಯೂರವರ್ಮ ಕರೆತ೦ದು ಪಶ್ಚಿಮ ಕರಾವಳಿಯ ಸ್ಥಾಣಗು೦ದದಲ್ಲಿ ನೆಲೆಗೊಳಿಸಿದ ಬ್ರಾಹ್ಮಣರೇ ಹವ್ಯಕರೆ೦ದೂ, ತುಳುನಾಡಿನ ಶಿವಳ್ಳಿ ಗ್ರಾಮದಲ್ಲಿ ನೆಲೆಗೊಳಿಸಿದವರೇ ಶಿವಳ್ಳಿ ಬ್ರಾಹ್ಮಣರೆ೦ದೂ, ಲೋಕಾದಿತ್ಯನಿ೦ದ ಕರೆಯಲ್ಪಟ್ಟು ಕು೦ದಾಪುರದ ಸಾಲಿಗ್ರಾಮದಲ್ಲಿ ನೆಲೆಸಲ್ಪಟ್ಟವರು ಕೋಟಬ್ರಾಹ್ಮಣರೆ೦ದೂ ಹೆಸರಾದರು. ಹಾಗಾದರೆ ಹೀಗೆ ಇಲ್ಲಿಗೆ ವಲಸೆ ಬ೦ದ ಬ್ರಾಹ್ಮಣರ ಮೂಲ ಯಾವುದು? ಇದೊ೦ದು ಜಟಿಲ ಸಮಸ್ಯೆ. ಕದ೦ಬ ವ೦ಶದ ಮಯೂರವರ್ಮ ಮತ್ತವನ ಅಳಿಯ ಲೋಕಾದಿತ್ಯ ಅಬ್ರಾಹ್ಮಣವಾಗಿದ್ದ ತಮ್ಮ ರಾಜ್ಯಕ್ಕೆ ಮೂರು ಬಾರಿ ಉತ್ತರದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆತ೦ದರೆ೦ದು ಸ್ಕ೦ದಪುರಾಣದ ಉತ್ತರಸಹ್ಯಾದ್ರಿ ಖ೦ಡ, ದ್ವಾತ್ರಿ೦ಶತ್ ಗ್ರಾಮಪದ್ಧತಿ ಮತ್ತು ಲೋಕಾದಿತ್ಯ ಪದ್ಧತಿಗಳಲ್ಲಿ ದಾಖಲಿಸಲಾಗಿದೆ.
        ಅದಕ್ಕಿಂತಲೂ ಮೊದಲು, ಕದಂಬರ ಮೂಲಪುರುಷ ಮಯೂರವರ್ಮನು ಮೂಲತಃ ಬ್ರಾಹ್ಮಣನಾಗಿದ್ದನೇ ಎ೦ಬುದೇ ದೊಡ್ಡ ಪ್ರಶ್ನೆ. ಶಂಗಂನ ಜಾನಪದ ಕಥೆಗಳಿಗಿಂತ ಕದಂಬರ ಶಾಸನಗಳನ್ನು ಅಧಿಕೃತ ದಾಖಲೆಗಳನ್ನಾಗಿ ಪರಿಗಣಿಸುವುದಾದರೆ ಹೌದೆನ್ನಬಹುದು. ಭಾಷೆ ಮೌಖಿಕವಾಗಿಯೇ ಇದ್ದ ಕಾಲದಲ್ಲಿ ಕದ೦ಬರು(ಅಥವಾ ಮಯೂರನು) ಲಿಖಿತ ವ್ಯವಹಾರದ ಅವಶ್ಯಕತೆಯನ್ನು ಅರಿತುಕೊ೦ಡಿದ್ದು ತಮ್ಮ ಅ೦ತಸ್ತನ್ನೂ, ವ೦ಶಾವಳಿಯನ್ನೂ ಉತ್ತಮಪಡಿಸಿಕೊ೦ಡು ತಮ್ಮ ಅರಸೊತ್ತಿಗೆಯನ್ನು ಅಧಿಕೃತಗೊಳ್ಳಿಸಿಕೊಳ್ಳಬೇಕೆ೦ಬ ದಾಹ ಉ೦ಟಾದಾಗ ಇದನ್ನು ಪೂರೈಸಿಕೊಳ್ಳಲು ಅಹಿಚ್ಛತ್ರ ಇತ್ಯಾದಿ ದೂರದೇಶದಿ೦ದ ವಿದ್ವಾ೦ಸರನ್ನು ಬರಮಾಡಿಕೊ೦ಡು ಪೋಷಣೆ ಒದಗಿಸಿ ಇಲ್ಲಿ ನೆಲೆಸಲು ಅವರ ಮನವೊಲಿಸಬೇಕಾಯ್ತೇ? ಮಯೂರ ಸ್ವತಃ ಬ್ರಾಹ್ಮಣನೆಂದೂ, ಖಡ್ಗ ಹಿಡಿದು ಕ್ಷತ್ರಿಯನಾದನೆಂದೂ ಇತಿಹಾಸದಂಬೋಣ. ಆತ ಬ್ರಾಹ್ಮಣನಾಗಿದ್ದನೆಂದ ಮೇಲೆ ಈ ಪ್ರದೇಶದಲ್ಲಿ ಮೊದಲೇ ಬ್ರಾಹ್ಮಣರು ನೆಲೆಸಿದ್ದರೇ? ಹಾಗೆನ್ನಲು ಕರಾವಳಿಯಲ್ಲಿ ಮೊದಲು ಬ್ರಾಹ್ಮಣರ ವಸತಿ ಇರಲಿಲ್ಲವೇ ಎಂಬುದು ಪ್ರಶ್ನಾರ್ಹ. ಮೂರು ಬ್ರಾಹ್ಮಣ ಸಮುದಾಯಗಳಾದ ಹವ್ಯಕ, ಕೋಟ, ಶಿವಳ್ಳಿ ಜೊತೆಗೆ ಕೇರಳದ ನಂಬೂದಿರಿಗಳ ಸಾಮುದಾಯಿಕ ಚರಿತ್ರೆ ಅವರ ಮೂಲವಿರುವುದು ಅಹಿಚ್ಛತ್ರದಲ್ಲೇ ಎನ್ನುತ್ತವೆ. ಈ ಪ್ರದೇಶದಲ್ಲಿ ಯಜ್ಞಯಾಗಾದಿಗಳನ್ನು ನಡೆಸಲು ಸಮರ್ಥರಿಲ್ಲದ ಕಾರಣ ಹೊರಗಿನಿಂದ ಕರೆಸಿಕೊಳ್ಳಬೇಕಾಯಿತು. ಕ೦ಚಿ ಮತ್ತು ಕಾಶಿ ಇವೆರಡೂ ಭಾರತದ ಅತ್ಯ೦ತ ಹಳೆಯ ವೈದಿಕತೆಯ ಕೇ೦ದ್ರಗಳು. ತಮಿಳ್ನಾಡಿನ ಪಲ್ಲವರಿ೦ದ ಪ್ರೇರೇಪಿತಗೊ೦ಡು ಕರ್ನಾಟಕದಲ್ಲಿ ದೇಗುಲ ಸ೦ಸ್ಕೃತಿಯನ್ನು ಪ್ರಾರ೦ಭಿಸಿದವನು ಮಯೂರನೇ. ಹಾಗಿರುವಾಗ ಕ೦ಚಿಯಲ್ಲಿಯೇ ವೇದಾಧ್ಯಯನ ನಡೆಸಿದ ಆತ ಅಲ್ಲಿ೦ದ ಅಥವಾ ದಕ್ಷಿಣದಿಂದ ಬ್ರಾಹ್ಮಣರನ್ನು ಕರೆಸದೇ ಉತ್ತರದ ಮೂಲೆಯಿ೦ದೆಲ್ಲಿ೦ದಲೋ ಕರೆಸಿದ್ದೇಕೆ? ಬನವಾಸಿಗಿ೦ತಲೂ ಮೊದಲು ತಾನು ರಾಜ್ಯವಾಳಿದ ಶ್ರೀಪರ್ವತ ಅರ್ಥಾತ್ ಶ್ರೀಶೈಲದಲ್ಲೂ ಗೋದಾವರಿ ತೀರದಿ೦ದ 52  ಬ್ರಾಹ್ಮಣ ಕುಟು೦ಬಗಳನ್ನು ಕರೆಸಿ ಶ್ರೀಶೈಲದ ಪೂರ್ವದಲ್ಲಿ 7೦ ಅಗ್ರಹಾರಗಳನ್ನು ದಾನಮಾಡಿದ ಉಲ್ಲೇಖಗಳಿವೆ(’ಪಿ.ಟಿ ಶ್ರೀನಿವಾಸ ಅಯ್ಯ೦ಗಾರ್, ಹಿಸ್ಟರಿ ಆಫ್ ತಮಿಳ್ಸ್’.  ’M.E.R 1908, pp 82-83’, ’A History of Ancient and Mediaeval Karnataka- George Mark Moraes’, ’Butter- worth, Ncliore Inscriptions, p. 389). ಹಾಗಾದರೆ ಈ ಅಹಿಚ್ಛತ್ರವಿದ್ದುದೆಲ್ಲಿ?
ಜೊತೆಗೆ ಈ ಬ್ರಾಹ್ಮಣರು ಬಂದಿದ್ದರೆನ್ನಲಾದ ಅಹಿಚ್ಛತ್ರವಿದ್ದುದು ನಾವು ಹೆಚ್ಚಾಗಿ ತಿಳಿದ೦ತೆ ಉತ್ತರ ಪ್ರದೇಶದ ಬರೇಲಿಯ ಹತ್ತಿರವಿರುವ ರಾಮನಗರದಲ್ಲೇ? ಆ೦ಧ್ರದ ಗೋದಾವರಿ ತೀರದಲ್ಲೇ? ‘ಕಾಶ್ಮೀರ ಶಾರದದೇವಿ ಲಬ್ದವರಪ್ರಸಾದರುಂ ಸಹವಾಸ ಸಂತೋಷ ಅಹಿಚ್ಛತ್ರ ವಿನಿರ್ಗಕರುಮ್‌’ (ಹಾಸನ ತಾಲ್ಲೂಕು ಶಾಸನಗಳು, ಬೇಲೂರು ಶಾಸನ 117) ಎ೦ದು ಐಹೊಳೆ ಶಿಲಾಶಾಸನದಲ್ಲಿ ಹೇಳಿದ೦ತೆ ಅಹಿಚ್ಛ್ತತ್ರವಿರುವುದು ಕಾಶ್ಮೀರದಲ್ಲೇ? ಅಥವಾ ಖ್ಯಾತ ಇತಿಹಾಸಕಾರ ಫ್ರಾನ್ಸಿಸ್ ಬುಕನನ್ ಹೇಳುವ೦ತೆ ಅ೦ದಿನ ಅಹಿಚ್ಛತ್ರವಿದ್ದುದು ಗುಜರಾತಿನ ಅನಲವಾಡದಲ್ಲೇ?[In the Machenzie collecion edited by Wilson is included a curious episode Haviks came to Uttara kannada by sea from Vallabhipur in South east Gujarat which was also known as Ahichhatra]. ಒ೦ದಕ್ಕಿ೦ತ ಹೆಚ್ಚು ಅಹಿಚ್ಛತ್ರವೆ೦ಬ ಹೆಸರಿನ ಪ್ರದೇಶಗಳಿರಬಹುದಲ್ಲ! ಹಾಗಿದ್ದಲ್ಲಿ ಅವುಗಳು ಅಹಿಚ್ಛತ್ರವೆ೦ದು ಹೆಸರಾಗಲು ಏನಾದರೂ ಕಾರಣವಿದೆಯೇ? ಅಹಿಚ್ಛತ್ರವಿರುವುದು ಉತ್ತರ ಭಾರತವಾಗಿದ್ದಲ್ಲಿ, ಪ್ರಯಾಣ ಸೌಕರ್ಯವಿಲ್ಲದ ಆ ಕಾಲದಲ್ಲಿ ಉತ್ತರ ಪ್ರದೇಶದ ಮೂಲೆಯ ಅಹಿಚ್ಛತ್ರದಿ೦ದ ನೇರವಾಗಿ ಕರ್ನಾಟಕದ ಕರಾವಳಿಗೆ ಕರ್ಮನಿಷ್ಠರಾದ ವೈದಿಕರನ್ನು ಒ೦ದು ಶತಮಾನಕ್ಕಿ೦ತ ಕಡಿಮೆ ಅವಧಿಯಲ್ಲಿ ಮೂರು ಬಾರಿ ಕರೆತರಲು ಮತ್ತು ಇಲ್ಲಿ ಸೌಕರ್ಯವಿಲ್ಲವೆ೦ದು ಆ ಬ್ರಾಹ್ಮಣರು ೨ ಬಾರಿ ಹಿ೦ದಿರುಗಿ ಅಹಿಚ್ಛತ್ರಕ್ಕೆ ಅಷ್ಟು ಸುಲಭವಾಗಿ ಹೋಗಲು ಸಾಧ್ಯವೇ? ನಮ್ಮ ನಿತ್ಯಸ೦ಕಲ್ಪದಲ್ಲಿ ಅನಿವಾರ್ಯವಾಗಿ ಸೇರಿಕೊ೦ಡ ’ಶ್ರೀಮದ್‌ಗೋದಾವರ್ಯಾಃ ದಕ್ಷಿಣೇತೀರೇ’ ಎ೦ಬುದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿರುವ ನಮ್ಮ ಮೂಲಸ್ಥಳವನ್ನು ನೆನಪಿಸಿಕೊಳ್ಳಲು ಸೇರಿಸಿಕೊ೦ಡ ಅ೦ಶವೇ? ಇದು ಇನ್ನೊ೦ದು ಬಿಡಿಸಲಾಗದ ಸಮಸ್ಯೆ. ಮತ್ತೊಮ್ಮೆ ನೋಡೋಣ.

Thursday, February 12, 2015

ಮಲಬಾರ ಮಹಾರಾಜ ಮೆಕ್ಕಾಕ್ಕೆ ಹೋಗಿ ಮಾಡಿದ್ದೇನು?

       
ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿ
         ನೋಡಲೇ ಬೇಕೆಂಬ ಆಸೆಯಿಂದ ಕಳೆದ ವಾರ ಕೇರಳದ ಕಾಸರಗೋಡಿನ ತಳಂಗರದ ಮಲಿಕ್ ದಿನಾರ್ ಮಸೀದಿಗೆ ಭೇಟಿ ಕೊಟ್ಟಿದ್ದೆ. ತುಂಬ ದಿನಗಳಿಂದ ಹೋಗಲೇ ಬೇಕೆಂದುಕೊಂಡ ಸ್ಥಳವದು. ಭಾಷೆ ಹೇಗೋ ಮ್ಯಾನೇಜ್ ಮಾಡಬಹುದಾಗಿತ್ತಾದರೂ ಜೊತೆಯಲ್ಲಾರೂ ಇದ್ದಿರಲಿಲ್ಲ. ಕಾಸರಗೋಡು ಹೇಳಿಕೇಳಿ ಮತೀಯ ಗಲಭೆಗೆ ಹೆಸರುವಾಸಿ. ಅಲ್ಲದೇ ಸಣ್ಣಗೆ ಗಲಾಟೆಯೂ ನಡೆಯುತ್ತಿದ್ದ ಸಮಯ. ಅಂಥಹುದರಲ್ಲಿ ಮಸೀದಿಯ ಒಳಹೊಕ್ಕು ಅರ್ಧಂಬರ್ಧ ಮಲಯಾಳದಲ್ಲಿ ಅಲ್ಲಿದ್ದವರನ್ನು ಮಾತನಾಡಿಸಿ ಬಂದ ನನ್ನ ಧೈರ್ಯದ ಬಗ್ಗೆ ನನಗೇ ಆಶ್ಚರ್ಯವಿದೆ. ತಿರುಗಿ ಬರುವಾಗ ನನಗೆ ಗಾಢವಾಗಿ ನೆನಪಾಗಿದ್ದು ಕೊಡಂಗಾಲೂರು.......
        ಅದು ಕೇರಳ ದೇಶದ ರಾಜ್ಯಗಳ ರಾಜಧಾನಿಯಾಗಿ ಒಂದಾನೊಂದು ಕಾಲದಲ್ಲಿ ಮೆರೆದ ಊರು. ಅಲ್ಲಿನ ಸುಂದರ ಹಿನ್ನೀರು, ಕಣ್ಣಗಿ ಮುಕ್ತಿ ಪಡೆದ ಸ್ಥಳವಾದ ಕೊಡಂಗಾಲೂರ್ ಭಗವತಿ ಆಲಯ, ತಿರುವಂಚಿಕುಲಮ್ ಮಹಾದೇವ ಸೇರಿ ಹತ್ತು ಹಲವು ಹಳೆಯ ದೇವಸ್ಥಾನಗಳು, ಭರಣಿ ಜಾತ್ರೆ.... ಅಷ್ಟಾಗಿದ್ದರೆ ಹೇಳಲೇನೂ ವಿಶೇಷವಿರುತ್ತಿರಲಿಲ್ಲ. ಆದರೆ ಇದು ಇನ್ನೂ ಒಂದು ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ. ಭಾರತದ ನೆಲದಲ್ಲಿ ಪ್ರಪ್ರಥಮ ಮಸೀದಿ ಸ್ಥಾಪನೆಯಾದದ್ದು ಇಲ್ಲೇ. ಇದ್ದ ಕಥೆಯನ್ನೇ ನಂಬುವುದಾದರೆ ಕೇರಳದಲ್ಲಿ ಆದಿ ಶಂಕರರು ಹುಟ್ಟುವ ಮೊದಲು(ಶೃಂಗೇರಿ ಮಠದ ದಾಖಲೆಯಲ್ಲಿರುವ ಆದಿಶಂಕರರು), ಭಾರತಕ್ಕೆ ಹ್ಯುಯಾನ್‌ತ್ಸಾಂಗ್ ಬರುವ ಕಾಲದಲ್ಲೇ ಇಲ್ಲಿ ಇಸ್ಲಾಂ ನೆಲೆಯೂರಿ ಒಂದು ಮಸೀದಿಯೂ ಕಟ್ಟಲ್ಪಟ್ಟಿತ್ತು. ಇರಾಕ್, ಇರಾನ್, ಇಜಿಪ್ಟ್, ಟ್ಯುನೇಶಿಯಾಗಳಲ್ಲಿ ಇಸ್ಲಾಮ್ ಕಾಲಿಡುವ ಮೊದಲೇ ಈ ಮಸೀದಿ ನಿರ್ಮಾಣವಾಗಿತ್ತು. ಅರಬ್ಬಿನಿಂದ ದೂರದೂರದಲ್ಲೆಲ್ಲೋ ಇರುವ ಕೇರಳದ ಮೂಲೆಯೊಂದರಲ್ಲಿ ಆ ಮಸೀದಿ ತಲೆ ಎತ್ತಿದ್ದರ ಹಿಂದೆ ಒಂದು ಇಂಟರೆಸ್ಟಿಂಗ್ ಘಟನೆಯಿದೆ. ಹಾಗೆಂದು ಅವತ್ತಿನ ಇಸ್ಲಾಮಿನ ಪ್ರಸಾರವೇನೂ ನಾವಂದುಕೊಂಡಂತೆ ಖಡ್ಗದ ಬಲದಿಂದಾಗಿರಲಿಲ್ಲ. ಇಸ್ಲಾಮಿಗೆ ತನ್ನನ್ನು ತಾನು ಅರ್ಪಿಸಿಕೊಂಡ ಅರಸನೊಬ್ಬನ ಉನ್ಮತ್ತ ಭಕ್ತಿಯ ಬಲದಿಂದ.
ಕೊಡಂಗಾಲೂರಿನ ಚೇರಮನ್ ಮಸೀದಿ

         ಆಗಿನ ಕಾಲದಲ್ಲಿ ಕೇರಳವನ್ನಾಳುತ್ತಿದ್ದ ಚೇರ ರಾಜ್ಯದ ಕೊನೆಯ ಅರಸ ಚೇರಮನ್ ಪೆರುಮಾಳ್, ಮೊಹಮ್ಮದ ಪೈಗಂಬರರ ಪವಾಡವೊಂದಕ್ಕೆ ಮನಸೋತು ಮೆಕ್ಕಾಗೆ ಪ್ರಯಾಣ ಬೆಳೆಸಿ ಪೈಗಂಬರರಿಂದಲೇ ಇಸ್ಲಾಮ್ ಸ್ವೀಕರಿಸಿ ಭಾರತದಲ್ಲಿ ಮೊತ್ತಮೊದಲು ಇಸ್ಲಾಮಿನ ಪ್ರಸಾರಕ್ಕೆ ಕಾರಣನಾದ. ಇದು ಸತ್ಯವೇ? ಗೊತ್ತಿಲ್ಲ. ಅಥವಾ ಸುಳ್ಳೇ? ಹೇಳಲಾಗದು. ಈ ಕಥೆಯಂತೂ ಕೇರಳದ ಮುಸ್ಲೀಮರಲ್ಲಿ ಮನೆಮಾತು. ಲೆಕ್ಕವಿಲ್ಲದಷ್ಟು ಬಾರಿ ಇದೇ ಕಥೆ ಅವರ ಪುಸ್ತಕಗಳಲ್ಲಿ ರೆಕ್ಕೆಪುಕ್ಕ ಕಟ್ಟಿಕೊಂಡು ಹಾರಾಡಿದೆ. ಕೇರಳೋತ್ಪತ್ತಿ ಮಾರ್ತಾಂಡದ ಗುಂಡರ್ಟ್‌ನ ಭಾಷಾಂತರ, ಲೋಗನ್ನಿನ ಮಲಬಾರ್ ಮ್ಯಾನುವೆಲ್, ಟ್ರಾವೆಂಕೋರ್ ಮ್ಯಾನುವೆಲ್ಲುಗಳ ಹಲವು ಆವೃತ್ತಿಗಳಲ್ಲಿನ ವಿವಾದಿತ ’ಮಿಥ್’ಗಳಷ್ಟೇ ನಮಗಿಂದು ಸಿಗುವ ಆಧಾರಗಳು. ಹಾಗೆಂದು ಕೇರಳದವರಾಗಲೀ, ದಕ್ಷಿಣ ಭಾರತದವರಾಗಲೀ ಬಹಳ ಹಿಂದಿನಿಂದಲೂ ತಮ್ಮ ಇತಿಹಾಸವನ್ನು ಇದಮಿತ್ಥಂ ಎಂದು ಬರೆದಿಟ್ಟಿದ್ದು ಕಡಿಮೆಯೇ. ಕಾವ್ಯಕ್ಕೆ ತೋರಿಸಿದ ಆಸ್ಥೆಯನ್ನು ಚರಿತ್ರೆಗೆ ತೋರಿಸಿದ ಬರಹಗಾರರೂ ಬೆರಳೆಣಿಕೆಯಷ್ಟೇ. ಅದು ನಮ್ಮ ದೇಶದ ದುರಂತವೇ. ಕ್ಯಾಲಿಕಟ್ ಯಾ ಕಲ್ಲೀಕೋಟೆಯು ಕ್ಯಾಲಿಕೋ ಎಂಬ ಬಟ್ಟೆಯ ಮೇಲಿನ ಪ್ರಿಂಟಿಂಗಿಗೆ ಒಂದಾನೊಂದು ಕಾಲದಲ್ಲೇ ದೇಶಾಂತರದಲ್ಲೂ ಹೆಸರುವಾಸಿಯಾಗಿತ್ತಾದರೂ ಅದರ ಮೇಲೆ ಬರೆದಿಟ್ಟಿದ್ದು ಅಷ್ಟಕ್ಕಷ್ಟೇ. ಝಾಮೋರಿನ್ ರಾಜರುಗಳ ಅಧಿಕೃತ ಚರಿತ್ರೆಯಾದ ಗ್ರಂಥಾವಳಿಯ ಬಹುಭಾಗ ನಾಶವಾಗಿ ಉಳಿದ ಸಣ್ಣ ತುಣುಕೊಂದು ಓದಲೂ ಬಾರದಷ್ಟು ಗೆದ್ದಲು ಹಿಡಿದು ವಲ್ಲತ್ತೋಲ್ ಲೈಬ್ರರಿಯಲ್ಲಿ ಸುರಕ್ಷಿತವಾಗಿದೆ. ಅಲ್ಲಿಂದೀಚೆ ಹಿಂದಿನ ಜನ ಬದಲಾದರು, ಹಿಂದಿನ ಸಂಸ್ಕೃತಿ ಬದಲಾಯಿತು. ಕೆಲವು ಗುರುತು ಕೂಡ ಸಿಕ್ಕದಂತೆ. ಹಳೆಯ ಇತಿಹಾಸ ಭಾಷೆ, ಸಂಸ್ಕೃತಿ ಬರದ ಬ್ರಿಟೀಷ್ ಇತಿಹಾಸಕಾರರ ಕೃಪೆಯಿಂದ ಇಂಗ್ಲೀಷಿಗೆ ಭಾಷಾಂತರಗೊಂಡು ಅಲ್ಲಿಂದ ಮತ್ತೆ ಮಲಯಾಳಕ್ಕೋ ಉಳಿದ ಭಾಷೆಗೋ ಬಂದುದನ್ನೇ ಅಧಿಕೃತವೆಂದು ಮಹಾಪ್ರಸಾದದಂತೆ ನಮ್ಮ ಜನ ಸ್ವೀಕರಿಸಿದರು. ಅದರಲ್ಲಿ ಆಳ ಕೊರೆದಷ್ಟೂ ಸಿಗುವುದು ಒಂದಿಷ್ಟು ಕಥೆಗಳು, ಜಾನಪದದ ನಂಬಿಕೆಗಳು, ವ್ಯಕ್ತಿ ವೈಭವೀಕರಣಗಳು, ರೋಚಕ ಕಾವ್ಯಗಳು, ಬಾಕಿ ಉಳಿದರೆ ಸ್ವಲ್ಪ ಸತ್ಯ. ಆ ಬಾಕಿ ಉಳಿವ ಸತ್ಯವನ್ನು ಹುಡುಕ ಹೊರಟರೆ ಅದೊಂದು ಬಿಟ್ಟು ಮತ್ತೆಲ್ಲವೂ ಇತಿಹಾಸಕಾರನ ಕಾಲಿಗೆ ಎಡತಾಕುತ್ತದೆ.
        ಈ ಕಥೆ ಶುರುವಾಗುವುದು ಸಾವಿರ ಮುನ್ನೂರು ವರ್ಷಗಳ ಹಿಂದೆ ಸುಮಾರು ಕ್ರಿ.ಶ ೬೨೩ರ ಸುಮಾರಿಗೆ. ಕೇರಳವನ್ನಾಳಿದ ಕೊನೆಯ ಚೇರ ಅರಸು ಚೇರಮನ್ ಪೆರುಮಾಳ್. ಆ ಕಾಲದಲ್ಲೇ ಪಶ್ಚಿಮದ ಜೊತೆಗಿನ ಸಮುದ್ರಾಂತರ ವ್ಯವಹಾರದಲ್ಲಿ ಕೇರಳ ವಿಶ್ವಪ್ರಸಿದ್ಧವಾಗಿತ್ತು. ಮುಜಿರಿಸ್ ಮತ್ತು ಅರಬ್ ಬಂದರುಗಳ ಮಧ್ಯೆ ಹಡಗುಗಳ ಓಡಾಟ ಅವ್ಯಾಹತವಾಗಿತ್ತು. ಕಾಳುಮೆಣಸು, ಸಾಂಬಾರ್ ಪದಾರ್ಥಗಳು, ಬೆಲೆಬಾಳುವ ಹರಳುಗಳು, ಮಸ್ಲಿನ್ ಬಟ್ಟೆ, ಮರದ ಕೆತ್ತನೆಗಳು ಕೇರಳದಿಂದ ಅರಬ್, ಇಜಿಪ್ಟ್, ಯುರೋಪಿಗೆ ಸಾಗಣೆಯಾದರೆ ಪ್ರತಿಯಾಗಿ ಅಲ್ಲಿಂದ ಅತ್ತರು, ಚಿನ್ನ ಮುತ್ತುಗಳು ಇಲ್ಲಿ ಬರುತ್ತಿದ್ದವು. ಹತ್ತು ಹನ್ನೊಂದನೇ ಶತಮಾನದ ಹೊತ್ತಿನಲ್ಲೇ ಕೊಡಂಗಾಲೂರಿನಲ್ಲಿದ್ದ ಕಂಚು ಮತ್ತು ಹಿತ್ತಾಳೆಯ ಕಾರ್ಖಾನೆಯಿಂದ ಯುರೋಪಿನ ಮಾರ್ಕೇಟಿಗೆ ಬಗೆಬಗೆಯ ಡಿಸೈನುಗಳ ಪಾತ್ರೆಗಳ ಸಾಗಣೆಯಾಗುತ್ತಿದ್ದ ಬಗ್ಗೆ ಕೈರೋದ ಟ್ಯೂನೀಶಿಯನ್ ಜ್ಯೂನ ಕಾಲದ ದಾಖಲೆಗಳಿವೆ. ಅದೊಂದೇ ಸಾಕು ವಿದೇಶಗಳಲ್ಲಿ ಹಬ್ಬಿದ್ದ ಕೇರಳದ ಕೀರ್ತಿಯ ಬಗ್ಗೆ ತಿಳಿಯಲು.
       ಕಾಲ ಅಸ್ಪಷ್ಟವಾದರೂ ಇದೇ ಕೊಡಂಗಾಲೂರನ್ನಾಳುತ್ತಿದ್ದವನು ಚೇರಮನ್ ಪೆರುಮಾಳ್. ಒಂದು ಪೂರ್ಣಿಮೆಯ ರಾತ್ರಿಯಲ್ಲಿ ಆತ ಬಾಲ್ಕನಿಯಲ್ಲಿ ವಾಯುವಿಹಾರ ಮಾಡುತ್ತಿದ್ದಾಗ(ಹಳೆಯ ಕೇರಳದ ತರವಾಡು ಮನೆಗಳಲ್ಲಿ ಬಾಲ್ಕನಿಗಳಿರುತ್ತಿರಲಿಲ್ಲವೆಂಬುದು ಬೇರೆ ವಿಷಯ) ಅಚ್ಚರಿಯೊಂದು ಕಣ್ಣಿಗೆ ಬಿದ್ದಿತಂತೆ. ಚಂದ್ರ ಎರಡಾಗಿ ಹೋಳಾಗಿ ಪುನಃ ಒಂದಾದ ದೃಶ್ಯ. ರಾಜ ಆ ಪವಾಡವನ್ನು ಕಂಡು ದಂಗಾದ. ಆಸ್ಥಾನ ಜ್ಯೋತಿಷಿಗಳು ಅಂಥಹ ಒಂದು ಘಟನೆ ನಡೆದಿರುವುದನ್ನು ಪ್ರಮಾಣೀಕರಿಸಿದರು. ಕೆಲ ದಿನಗಳ ನಂತರ ಅರೇಬಿಯಾದಿಂದ ಶ್ರೀಲಂಕಾಕ್ಕೆ ಪ್ರಯಾಣಿಸುತ್ತಿದ್ದ ಶೇಕ್ ಸಾಜುದ್ದೀನ್ ಎಂಬ ಯಾತ್ರಿ ಮುಜಿರಿಸ್ ಬಂದರಿನಲ್ಲಿ ಬಂದಿಳಿದನಂತೆ, ಆತನಿಂದ ಮಹಮ್ಮದ್ ಪೈಗಂಬರರು ಸ್ಥಾಪಿಸಿದ ಇಸ್ಲಾಮ್ ಮತದ ಬಗ್ಗೆ, ಅವರು ಚಂದ್ರನನ್ನು ಹೋಳಾಗಿಸಿ ಪುನಃ ಜೋಡಿಸಿದ ಪವಾಡದ ಬಗ್ಗೆ ಕೇಳಿ ಕುತೂಹಲಗೊಂಡ ಪೆರುಮಾಳ್ ಮೆಕ್ಕಾಕ್ಕೆ ತೆರಳಲು ನಿರ್ಧರಿಸಿದ. ತನ್ನ ಸಿಂಹಾಸನವನ್ನು ತೊರೆದು, ರಾಜ್ಯವನ್ನು ೩೨ ಭಾಗಗಳಾಗಿಸಿ ತನ್ನ ಅಳಿಯಂದಿರಿಗೆ ಹಂಚಿ ಮೆಕ್ಕಾದ ಹಡಗು ಹತ್ತಿದ. ಅಲ್ಲಿ ಪೈಗಂಬರರನ್ನು ಭೆಟ್ಟಿಯಾದ ಪೆರುಮಾಳ್ ಹೊಸ ಮತವನ್ನು ಸ್ವೀಕರಿಸಿ ತೌಜ್ ಉಲ್ ಹರೀದ್ ಎಂಬ ಹೊಸ ಹೆಸರು ಪಡೆದನಂತೆ. ಜೆಡ್ಡಾದ ರಾಜನ ಮಗಳನ್ನು ಮದುವೆಯಾಗಿ ಹನ್ನೆರಡು ವರ್ಷ ಮೆಕ್ಕಾದಲ್ಲೇ ಕಳೆದ ಆತ ಪೈಗಂಬರರ ಆಣತಿಯಂತೆ ಹೊಸ ಮತವನ್ನು ಕೇರಳದಲ್ಲಿ ಪಸರಿಸಲು ಪುನಃ ತನ್ನೂರಿನತ್ತ ಪ್ರಯಾಣ ಬೆಳೆಸಿದ, ಆತನ ದುರಾದೃಷ್ಟ, ಆತನಿಗೆ ಪುನಃ ಕೇರಳವನ್ನು ಕಾಣಲಾಗಲಿಲ್ಲ. ಸಮುದ್ರಮಾರ್ಗದ ಮಧ್ಯದಲ್ಲೇ ಅನಾರೋಗ್ಯದಿಂದ ಕೊನೆಯುಸಿರೆಳೆದನಂತೆ. ಸಾಯುವುದಕ್ಕಿಂತ ಮೊದಲು ತನ್ನ ಕುಟುಂಬಕ್ಕೆ ಪತ್ರ ಬರೆದವನು ಸಂಗಡಿಗರಿಗೆ ಆಶ್ರಯ ನೀಡುವಂತೆಯೂ, ಅವರ ಧರ್ಮಪ್ರಸಾರದಲ್ಲಿ ನೆರವಾಗುವಂತೆಯೂ ಹೇಳಿದನಂತೆ.  ಆತನ ಶವವನ್ನು ಯೆಮನ್ನಿನ ಝಫರ್‌ನಲ್ಲಿ ದಫನ ಮಾಡಲಾಯಿತೆಂದು ಕೆಲವರು ನಂಬಿದರೆ, ಸಲಾಲಾಹ್‌ನಲ್ಲೆಂದು ಇನ್ನು ಕೆಲವರು, ಶಹರ್ ಅಲ್ ಮುಕಲ್ಲಾದಲ್ಲೆಂದು ಮತ್ತೆ ಕೆಲವರು ಹೇಳುತ್ತಾರೆ. ಸಲಾಲಾಹ್ ಸಮುದ್ರ ತೀರದಲ್ಲಿರುವುದರಿಂದ ಅಲ್ಲೇ ಇದೆ ಎಂಬ ವಾದವೂ ಇದೆ. ಇದೇ ಸಲಾಲಾಹ್ ಮತ್ತು ಮುಕಲ್ಲಾ ಹೆಸರಿನ ಸ್ಥಳಗಳು ಅವನ ಮಾವನ ಮನೆಯಾದ ಜೆಡ್ಡಾದಲ್ಲೂ ಇರುವುದರಿಂದ ಅಲ್ಲೂ ಸಮಾಧಿ ಇರಬಹುದಾದ ಬಗ್ಗೆ ಗೊಂದಲವಿದೆ. ಆತನ ಪತ್ರವನ್ನು ತಂದ ಪೈಗಂಬರರ ಹದಿಮೂರು ಶಿಷ್ಯರಲ್ಲಿ ಒಬ್ಬನಾದ ಮಲೀಕ್ ದಿನಾರ್ ತನ್ನ ಸಂಗಡಿಗರೊಡನೆ ಕೊಡಂಗಾಲೂರಿಗೆ ಬಂದಿಳಿದ. ಇವರಿಗೋಸ್ಕರ ಸ್ಥಳೀಯ ರಾಜ ಮಸೀದಿ ನಿರ್ಮಿಸಲು ನೆರವು ನೀಡಿದ. ಆ ಮಸೀದಿಯೇ ಕೊಡಂಗಾಲೂರಿನ ಪ್ರಸಿದ್ಧ ಚೇರಮನ್ ಜುಮ್ಮಾ ಮಸೀದಿ. ಈ ಕಥೆಯನ್ನೇ ನಂಬುವುದಾದರೆ ಭಾರತದ ಅತಿ ಹಳೆಯ ಮಸೀದಿಗಳಲ್ಲೊಂದೆಂದು ಖ್ಯಾತಿ ಪಡೆದ ಇದು ಮದೀನಾದ ನಂತರದ ಪ್ರಪಂಚದ ಎರಡನೆ ಅತ್ಯಂತ ಪುರಾತನ ಜುಮ್ಮಾ ಮಸ್ಜಿದ್. ಕಳೆದ ೧೩೭೫ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿ ಶುಕ್ರವಾರದ ಜುಮ್ಮಾ ನಮಾಜ್ ನಡೆಯುತ್ತಿದೆ. ಬರೀ ಅಲ್ಲಿ ಮಾತ್ರವಲ್ಲದೇ ಮಲಿಕ್ ದಿನಾರ ಮತ್ತವನ ಸಂಗಡಿಗರು ಕೇರಳದ ಕೊಲ್ಲಂ, ಕಾಸರಗೋಡಿನ ತಳಂಗರ ಸೇರಿ ಒಂಭತ್ತು ಮಸೀದಿಗಳನ್ನು ನಿರ್ಮಿಸಿದ್ದಾರೆ.

ಪುನರ್ನಿರ್ಮಿತ

ಮುಚ್ಚಿದ ಗರ್ಭಗುಡಿ, ಎದುರಿಗೆ ತೂಗುದೀಪ
        
ಈ ಮಸೀದಿ ಉಳಿದವುಗಳಂತಲ್ಲ. ಎಲ್ಲ ಮಸೀದಿಗಳೂ ಮೆಕ್ಕಾದ ದಿಕ್ಕಾಗ ಪಶ್ಚಿಮದತ್ತ ಮುಖ ಮಾಡಿದ್ದರೆ ಇದಿರುವುದು ಪೂರ್ವಾಭಿಮುಖವಾಗಿ. ಇದರ ರಚನೆಯೂ ಥೇಟ್ ಹಿಂದೂಗಳ ದೇವಾಲಯದ ಮಾದರಿಯದ್ದು. ಬಹುತೇಕ ಕೇರಳದ ಹೆಚ್ಚಿನ ಹಳೆಯ ಆಲಯ ಅಥವಾ ತರವಾಡುಗಳನ್ನು ಹೋಲುವಂಥದ್ದು. ಇಡಿಯ ಕಟ್ಟಡ ತೇಗದ ಮರದ ಸುಂದರ ಕೆತ್ತನೆಗಳನ್ನೊಳಗೊಂಡಿದೆ. ಒಳಗಡೆ ಗರ್ಭಗುಡಿಯಂಥ ರಚನೆಯೂ ಇದೆ. ದೇವಸ್ಥಾನದಲ್ಲಿರುವಂತೆ ದೊಡ್ಡದೊಂದು ಸದಾ ಉರಿಯುತ್ತಿರುವ ದೀಪ ಇಲ್ಲಿನ ವಿಶೇಷತೆ. ಬಂದ ಭಕ್ತರೆಲ್ಲ ಹಚ್ಚಿ ಹೋಗುವ ಊದಿನಕಡ್ಡಿಗಳೆಲ್ಲ ಮತ್ತೆ ದೇವಸ್ಥಾನದ ನೆನಪನ್ನೇ ಕೊಡುತ್ತವೆ. ಈಚೆಗೆ ಈ ಮಸೀದಿ ಹೊಸದಾಗಿ ಪುನರ್ನಿರ್ಮಾಣಗೊಂಡಿದ್ದರೂ ತಲಂಗರ, ಕೊಲ್ಲಂನ ಮಸೀದಿಗಳೆಲ್ಲ ಇನ್ನೂ ತಮ್ಮ ಹಳೆಯ ವಿನ್ಯಾಸವನ್ನು, ಹೊಳಹನ್ನು ಹಾಗೆಯೇ ಉಳಿಸಿಕೊಂಡಿವೆ. ಅವೆರಡೂ ಮಸೀದಿಗಳಿಗೆ ಭೇಟಿ ಕೊಟ್ಟು ನಾನು ಸ್ವತಃ ಒಳಹೊಕ್ಕು ಕೂಲಂಕುಶವಾಗಿ ನೋಡಿ ಬಂದಿದ್ದೇನೆ. ಈ ಮಸೀದಿಯನ್ನು ಕಟ್ಟಿದ ಮತಾಂತರಿ ಹಿಂದೂ ರಾಜನ ಬಗ್ಗೆ ಇಂಡಿಯಾ ಆಫೀಸ್ ಲೈಬ್ರರಿ, ಲಂಡನ್ನಿನ ದಾಖಲೆಗಳಲ್ಲೂ ಉಲ್ಲೇಖವಿದೆ(reference number: Arabic, 2807, 152-173). ಆ ರಾಜನ ಹೆಸರನ್ನು ಚಕ್ರವರ್ತಿ ಫರ್ಮಸ್ ಎನ್ನಲಾಗಿದೆ. ಚಕ್ರವರ್ತಿ ಶಬ್ದವನ್ನು ಅರೇಬಿಕ್‌ನಲ್ಲಿ ಸರಿಯಾಗಿ ಉಚ್ಛರಿಸಲು ಬಂದಮೇಲೆ ಫರ್ಮಸ್ ಮಾತ್ರ ಯಾಕೆ ಅಪಭೃಂಶಗೊಂಡಿತೋ ನಾಕಾಣೆ! ಈತ ಇಸ್ಲಾಂ ಸ್ವೀಕರಿಸಿ ಶೇಖ್ ತಾಜುದ್ದೀನ ಎಂದು ಹೆಸರಾದನಂತೆ. ಅಬು ಸಯೀದ್ ಅಲ್ ಕಾದ್ರಿ ಎಂಬ ಅರಬ್ ಲೇಖಕ ಈ ಫಾರ್ಮಸ್ ಪೈಗಂಬರರಿಗೆ ಒಂದು ಭರಣಿ ಶುಂಠಿ ಬೆರೆಸಿದ ತರಕಾರಿ ಉಪ್ಪಿನಕಾಯಿಯನ್ನು ಕೊಟ್ಟ ಕಥೆಯನ್ನೂ ಬರೆದಿಟ್ಟಿದ್ದಾನೆ.(ಆ ಕಾಲದಲ್ಲಿ ಕೇರಳದಲ್ಲಿ ತರಕಾರಿ ಉಪ್ಪಿನಕಾಯಿಯನ್ನೂ ಮಾಡುತ್ತಿರಲಿಲ್ಲ, ಶುಂಠಿಯ ಪರಿಚಯ ಮೊದಲೇ ಇರಲಿಲ್ಲ ಎಂಬುದು ಐತಿಹಾಸಿಕ ಸತ್ಯ.). ಇದೇ ರಾಜನನ್ನು ಬ್ರಿಟಿಷ್ ಲೈಬ್ರರಿಯ ಇತಿಹಾಸ ಪುಸ್ತಕ "Qissat Shakruti Firmad" ಆ ರಾಜನ ಹೆಸರನ್ನು ಶಕ್ರುತಿ ಎನ್ನುತ್ತದೆ. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ ಆತ ಭೇಟಿ ಕೊಟ್ಟ ಸಮಯವನ್ನು ೯ನೇ ಶತಮಾನದ ಅಂತ್ಯಕ್ಕೆ ಎಳೆತರುತ್ತದೆ. ಮೆಕ್ಕಾಗೆ ಭೇಟಿ ನೀಡಿದ ಮತ್ತು ಮಸೀದಿಯನ್ನು ನಿರ್ಮಿಸಿದ ಪೆರುಮಾಳರಿಬ್ಬರೂ ಬೇರೆ ಎನ್ನುವ ವಾದವೂ ಇದೆ. ಸಿಕ್ಕುವ ಆಧಾರಗಳೆಲ್ಲ ಘಟನೆ ನಡುದು ಕನಿಷ್ಟ ನಾಲ್ಕೈದು ನೂರು ವರ್ಷಗಳ ನಂತರ ಬರೆಯಲ್ಪಟ್ಟವು. ಕೇರಳೋತ್ಪತ್ತಿ ಮಾರ್ತಾಂಡದಲ್ಲಿ ಈ ಕಥೆ ಇರುವುದಾದರೂ ಅದರ ಕಾಲ ಚರ್ಚಾರ್ಹ. ಪ್ರಾಯಶಃ ಅದು ಕ್ರಿ.ಶ ಸಾವಿರದೈನೂರಕ್ಕಿಂತ ಹಳೆಯದೇನೂ ಅಲ್ಲ. ಲೋಗನ್ನಿನ ಮಲಬಾರ್ ಮ್ಯಾನುವಲ್ಲಿನ ಪ್ರಕಾರ ಮೆಕ್ಕಾಗೆ ಭೇಟಿ ನೀಡಿದವನು ಪೆರುಮಾಳನಲ್ಲ, ಬದಲಾಗಿ ಝಾಮೋರಿನ್ ಅರಸು. ಆತ ಅಬ್ದುಲ್ಲಾ ಸಮೀರಿ ಎಂಬ ಹೆಸರಿನೊಂದಿಗೆ ಮತಾಂತರಗೊಂಡ(ಝಾಮೋರಿನ ಅಪಭೃಂಶಗೊಂಡು ಸಮೀರಿ ಎಂದಾಯ್ತೇ!). ತಲಂಗರದ ಮಸೀದಿಯಲ್ಲಿರುವ ದಾಖಲೆಗಳೂ ಇದನ್ನೇ ಪುಷ್ಟೀಕರಿಸುತ್ತವೆ. ಇನ್ನೊಂದಿಷ್ಟು ಗೊಂದಲಕ್ಕೆ ಕಾರಣವಾಗುವಂತೆ ಯೆಮೆನ್ನಿನ ಝಪರ್‌ನ ಕೇರಳರಾಜನ ಸಮಾಧಿಯ ಕಾಲವೂ ೯ನೇ ಶತಮಾನವೇ ಮತ್ತು ಆತನ ಹೆಸರು ಅಬ್ದುಲ್ ಸಮೀರಿ. ಕಹಾನಿಮೇಂ ಇನ್ನೂ ಒಂದು ಟ್ವಿಸ್ಟ್ ಎಂದರೆ ಎರಡನೇ ಚೇರ ಸಾಮ್ರಾಜ್ಯ ಶುರುವಾಗಿದ್ದು ಕ್ರಿ.ಶ ೮೦೦ ರ ಸುಮಾರಿಗೆ ಕುಲಶೇಖರ ಆಳ್ವಾರ್ ಪೆರುಮಾಳನಿಂದ, ಕೊನೆಗೊಂಡಿದ್ದು ರಾಮ ಕುಲಶೇಖರ ಪೆರುಮಾಳನಿಂದ ೧೧೦೨ರಲ್ಲಿ. ಅಂದರೆ ಮಹಮ್ಮದ್ ಪೈಗಂಬರರ ಕಾಲದಲ್ಲಿ ಚೇರ ರಾಜ್ಯವೇ ಅಸ್ತಿತ್ವದಲ್ಲಿರಲಿಲ್ಲ. ಒಬ್ಬ ರಾಜ ಇಸ್ಲಾಮಿಗೆ ಮತಾಂತರಗೊಂಡಿದ್ದು ನಿಜವೇ ಆಗಿದ್ದರೂ ಅದು ಪೈಗಂಬರರ ಕಾಲಕ್ಕಿಂತ ಕನಿಷ್ಟ ಮೂರು ಶತಮಾನದ ನಂತರವಿರಬಹುದು. ಅದಕ್ಕೆ ಪೂರಕವಾಗಿ ಮಲಯಾಳದ ಒಂದು ಜಾನಪದ ಕಥೆಯೂ ಇದೆ. ಪೆರುಮಾಳ ಎಂಬ ರಾಜ ಹೆಂಡತಿಯ ಮಾತು ಕೇಳಿ ತನ್ನ ಪ್ರಾಮಾಣಿಕ ಸೇನಾಧಿಪತಿಯನ್ನು ಕೊಲ್ಲಿಸುತ್ತಾನೆ. ಈ ಅನ್ಯಾಯದ ವಿರುದ್ಧ ಜನ ದಂಗೆ ಎದ್ದರು. ತಲೆತಪ್ಪಿಸಿಕೊಳ್ಳಲು ಓಡಿಹೋಗುತ್ತಿದ್ದ ರಾಜನನ್ನು ಅರಬ್ಬಿ ವರ್ತಕರು ರಕ್ಷಿಸಿದರು. ತಮ್ಮ ಧರ್ಮವನ್ನು ಸ್ವೀಕರಿಸಿದರೆ ತಮ್ಮೊಡನೆ ಕರೆದೊಯ್ಯುವುದಾಗಿ ಹೇಳಿದರು. ಧರ್ಮಕ್ಕಿಂತ ಜೀವ ದೊಡ್ಡದಲ್ಲವೇ! ಪೆರುಮಾಳ ಅರಬ್ಬಿನ ವರ್ತಕರೊಡನೆ ಪರಾರಿಯಾದ. ಇದಕ್ಕೆ ಪೂರಕವೆಂಬಂತೆ ’ಪೆಂಚೊಳ್ಳು ಕೆಟ್ಟ ಪೆರುಮಾಳೆ, ಮಕ್ಕತ್ತು ಪೋಯಿ ಟೊಪ್ಪಿ ಎತ್ತಲ’(ಹೆಂಡ್ತಿ ಮಾತು ಕೇಳಿ ಹಾಳಾದ ಪೆರುಮಾಳ, ಮಕ್ಕಾಗೆ ಓಡಿಹೋಗಿ ಟೊಪ್ಪಿ ಹಾಕಿಕೊಂಡ) ಎಂಬೊಂದು ಪ್ರಸಿದ್ಧವಾದ ಗಾದೆಯೇ ಮಲಬಾರಿನಲ್ಲಿ ಚಾಲ್ತಿಯಲ್ಲಿದೆ.
       ಕೊನೆಯ ಚೇರ ಪೆರುಮಾಳನ ನಂತರ ಕ್ಯಾಲಿಕಟ್ ಝಾಮೋರಿನ್‌ಗಳ ಆಳ್ವಿಕೆಗೊಳಪಟ್ಟಿತು. ಝೆಮೋರಿನ್‌ಗಳ ಕಾಲದಲ್ಲಿಯೇ ಅರಬ್ಬಿನ ನಡುವಿನ ವ್ಯವಹಾರಗಳು ಮತ್ತು ಕೇರಳದಲ್ಲಿ ಇಸ್ಲಾಮಿನ ಬೆಳವಣಿಗೆ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ್ದು. ಅದಕ್ಕೆ ಸಾಕ್ಷಿಯಾಗಿ ಝಾಮೋರೀನಗಳು ಕಟ್ಟಿಸಿದ ಮುಕ್ಕಂಟಿ ಮಸೀದಿ, ಶಾಹ್ ಬುಂದರ್ ಎನ್ನುವವನನ್ನು ಕ್ಯಾಲಿಕಟ್‌ನ ಆಡಳಿತಾಧಿಕಾರಿಯನ್ನಾಗಿ ನೇಮಿಸಿದ್ದು, ಮುಸ್ಲೀಂ ವಸಾಹತುಶಾಹಿಗಳಿಗೆ ಸಿಕ್ಕ ಎಲ್ಲೂ ಇಲ್ಲದ ಗೌರವದ ಸರಮಾಲೆಗಳೇ ಸಾಕ್ಷಿ. ಮಧ್ಯಪ್ರಾಚ್ಯದೊಡಗಿನ ವ್ಯಾಪಾರವನ್ನು ಉತ್ತಮಗೊಳಿಸಲು, ಅಲ್ಲಿಂದ ಬರುವ ಹೊನ್ನಿನಾಸೆಗೆ ಯಾವ ತ್ಯಾಗಕ್ಕೂ ಸಿದ್ಧರಾಗಿದ್ದ ಝಾಮೋರಿನ್ ಅರಸನೊಬ್ಬ ಹಣದಾಸೆಗೆ ಬಲಿಬಿದ್ದು ಇಸ್ಲಾಮನ್ನು ಸ್ವೀಕರಿಸಿರಬಹುದು ಎಂದೂ ಕೆಲ ಇತಿಹಾಸಕಾರರು ವಾದಿಸುತ್ತಾರೆ. ಮಲಯದ ಇತಿಹಾಸವನ್ನು ಗಮನಿಸಿದರೆ ಅಲ್ಲಿನ ಶ್ರೀವಿಜಯ ವಂಶದ ಪರಮೇಶ್ವರ ಎಂಬ ತಮಿಳು ಮೂಲದ ರಾಜ ಜಾವಾವನ್ನಾಳುತ್ತಿದ್ದ. ಸಿಂಗಪುರವನ್ನು ಹುಟ್ಟುಹಾಕಿದ ಕೀರ್ತಿಯೂ ಇವನಿಗೇ ಸಲ್ಲಬೇಕು. ತಮಿಳು ಮುಸ್ಲೀಂ ವ್ಯಾಪಾರಿಗಳ ಪ್ರಭಾವಳಿಗೆ ಸಿಲುಕಿ ಇಸ್ಲಾಮಿಗೆ ಮತಾಂತರಗೊಂಡ ಈತನ ಕಥೆ ಮಲೇಷಿಯಾದಲ್ಲಿ ಪ್ರಸಿದ್ಧವಾದುದೇ. ಹಿಂದೂಗಳ ಅದ್ಭುತ ಇತಿಹಾಸ ಹೊಂದಿದ್ದ ಮಲಯ ದ್ವೀಪ ಮೂರ್ಖ ರಾಜನೊಬ್ಬನ ಗಡಿಬಿಡಿಯಿಂದ ದೇಶಕ್ಕೆ ದೇಶವೇ ಮತಾಂತರಗೊಂಡು ತನ್ನ ಬೇರುಗಳಿಂದ ದೂರವಾದದ್ದು ಖೇದಕರವಾದರೂ ಸತ್ಯ. ಇಲ್ಲಿಯೂ ಹಾಗೇನಾದರೂ ನಡೆದಿತ್ತೇ?
       ಕಾಲದ ಕುರಿತು ಅಸ್ಪಷ್ಟತೆಗಳಿದ್ದರೂ, ರಾಜನ ಹೆಸರಿನ ಬಗ್ಗೆಯೇ ವಿವಾದವಿದ್ದರೂ ಕೇರಳದ ಮಲಬಾರನ್ನಾಳುತ್ತಿದ್ದವನೊಬ್ಬ ಮಕ್ಕಾಕ್ಕೆ ತೆರಳಿ, ಇಸ್ಲಾಮಿಗೆ ಮತಾಂತರವಾಗಿ, ಯಮನ್ನಿನಲ್ಲಿ ಸಮಾಧಿಗೊಂಡು, ಪರೋಕ್ಷವಾಗಿ ಕೇರಳದಲ್ಲಿ ಇಸ್ಲಾಮ್ ಹರಡಲು ಮತ್ತು ಭಾರತದ ಅತಿ ಹಳೆಯದೆನ್ನಲಾದ ಮಸೀದಿಯೊಂದು ಸ್ಥಾಪಿತಗೊಳ್ಳಲು ಕಾರಣನಾಗಿದ್ದನೆಂಬುದು ಐತಿಹಾಸಿಕ ಸತ್ಯ. ಇರುವ ಕಥೆ ಒಂದು ವೇಳೆ ನಿಜವೇ ಆಗಿದ್ದರೆ ಅರಬ್ಬಿನ ಬಹುಭಾಗಕ್ಕಿಂತ ಮೊದಲೇ ಇಲ್ಲಿನ ನೆಲದಲ್ಲಿ ಇಸ್ಲಾಂ ನೆಲೆನಿಂತು ಪಸರಿಸಿತ್ತೆಂಬುದು ಅಲ್ಲಿನ ಮುಸ್ಲೀಮರಿಗೆ ಹರ್ಷದ ಸಂಗತಿಯೇ. ಪೆರುಮಾಳನಿಂದ ಮತ್ತು ಮುಂದೆ ಝಾಮೋರಿನ್ ಅರಸರ ಕಾಲದಲ್ಲಿ ಅರಬ್ಬೀ ವರ್ತಕರಿಗೆ ಸಿಕ್ಕ ಸನ್ಮಾನಗಳಿಂದ ಕೇರಳ ಇಸ್ಲಾಂ ಹುಲುಸಾಗಿ ಬೆಳೆಯಲು ಹದಗೊಂಡ ಭೂಮಿಯಾಯಿತು. ಮುಂದೆ ಟಿಪ್ಪೂವಿನ ಆಕ್ರಮಣಕ್ಕೆ ಸಿಕ್ಕು ಮಲಬಾರ್ ಅರ್ಧಕ್ಕರ್ಧ ಬಲವಂತದ ಮತಾಂತರಕ್ಕೊಳಪಡುವುದರೊಂದಿಗೆ ಇಂದು ಕೇರಳದಲ್ಲಿ ಮೂಲನಿವಾಸಿಗಳೇ  ಅಲ್ಪಸಂಖ್ಯಾತರಾಗುವ ಹೊಸ್ತಿಲಲ್ಲಿದ್ದಾರೆ ಎಂಬುದು ಬೇರೆ ವಿಚಾರ ಬಿಡಿ.

Friday, December 12, 2014

ಪ್ರಥ್ವಿರಾಜ ರಾಸೋ

           ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಶುರುವಾಗಿದ್ದು ಬ್ರಿಟಿಷರ ವಿರುದ್ಧ ಗಾಂಧಿ-ನೆಹರೂರಿಂದ ಎಂಬ ಭಾರೀ ಭ್ರಮಾತ್ಮಕ ಸ್ಥಿತಿಯಲ್ಲಿ ಹೆಚ್ಚಿನ ಜನ ಬದುಕುತ್ತಿದ್ದಾರೆ. ಅದರೆ ಅವರಿಗೆ ಗೊತ್ತಿಲ್ಲ. ಬ್ರಿಟಿಷರಿಗಿಂತ ಸುಮಾರು ಏಳೆಂಟು ನೂರು ವರ್ಷಗಳಿಗೆ ಮುಂಚೆಯೇ ನಮ್ಮಲ್ಲಿ ವಿದೇಶಿ ಆಕ್ರಮಣಗಳು ಶುರುವಾಗಿವೆ, ಅವುಗಳ ವಿರುದ್ಧ ಇಲ್ಲಿನ ಜನ ನಿರಂತರವಾಗಿ ಹೋರಾಡುತ್ತಾ ಬಂದಿದ್ದಾರೆಂದು. ವಿದೇಶಿಗ ಗಜನಿ, ಘೋರಿ, ಮೊಘಲರ ಕಾಲು ಭಾಗವೂ ದೇಶೀ ಹೋರಾಟಗಾರರ ಚರಿತ್ರೆ ತಿಳಿಸಲು ನಮ್ಮ ಇತಿಹಾಸದ ಪುಸ್ತಕಗಳಿಗೆ ಮನಸ್ಸಿಲ್ಲ.
        ಹದಿನೇಳು ಬಾರಿ ಭಾರತದ ಮೇಲೆ ದಂಡೆತ್ತಿ ಬಂದವನು ಮಹಮ್ಮದ್ ಘಜನಿ. ಅವನನ್ನು ತಡೆಯುವ ಶಕ್ತಿಯಿದ್ದ ಒಬ್ಬೇ ಒಬ್ಬ ಈ ನೆಲದಲ್ಲಿರಲಿಲ್ಲ. ಸೋಮನಾಥ, ಮಥುರಾದಂಥ ಸಹಸ್ರ ಸಹಸ್ರ ಪ್ರಚಂಡ ದೇವಾಲಯಗಳು ಅವನ ಆಕ್ರಮಣಕ್ಕೆ ಬುಡಕಡಿದ ಬಾಳೆಯಂತೆ ಬೋರಲು ಬಿದ್ದಿದ್ದವು. ಅಂಥವನನ್ನೇ ನೆಲಕ್ಕಚ್ಚುವಂತೆ ಸೋಲಿಸಿದ ಏಕೈಕ ಅರಸನೆಂಬ ಕೀರ್ತಿಗೆ ಪಾತ್ರವಾಗಿರುವವನು ಯಾರು ಗೊತ್ತಾ? ಆತ ಪಂಜಾಬಿನ ಆನಂದಪಾಲ.
        ಇನ್ನೊಬ್ಬ ಹುಟ್ಟಿದ್ದು ವೈಶ್ಯಕುಲದಲ್ಲಿ. ಸಾಧಾರಣ ವ್ಯಾಪಾರಿಯ ಮಗನಾಗಿ. ಶಾಲೆಯ ಮುಖ ನೋಡಿದವನಲ್ಲ. ಹೊಟ್ಟೆಪಾಡಿಗಾಗಿ ಹರ್ಯಾಣದ ರೇವಾರಿ ಪಟ್ಟಣದ ಬೀದಿಗಳಲ್ಲಿ ಕಲ್ಲುಪ್ಪು ಮಾರತೊಡಗಿದ. ಮಾರ್ಕೇಟಿನಲ್ಲಿ ಸಾಮಾನು ತೂಕ ಮಾಡುವ ಸರ್ಕಾರಿ ಕಾರಕೂನನ ಕೆಲಸ ಸಿಕ್ಕಿತು. ಈತನ ಕೆಲಸ ಮೆಚ್ಚಿ ಯಾರೋ ಅಂಚೆ ಇಲಾಖೆಯಲ್ಲಿ ಗೂಢಚಾರನ ಕೆಲಸ ಕೊಡಿಸಿದರು. ಅಲ್ಲಿಂದಾತ ಬೆಳೆದ ಪರಿಯೇ ರೋಚಕ. ಸಣಕಲು ಶರೀರದ, ಸರಿಯಾಗಿ ಕುದುರೆ ಹತ್ತಲು, ಕತ್ತಿ ಹಿಡಿಯಲು ಬಾರದಿದ್ದರೂ ಅಪ್ರತಿಮ ಮೇಧಾಶಕ್ತಿಯಿಂದಲೇ ಇಪ್ಪತ್ತೆರಡು ಯುದ್ಧಗಳನ್ನು ಗೆದ್ದು ಮೊಘಲ್ ಸರದಾರರಿಗೆಲ್ಲ ಮಣ್ಣುಮುಕ್ಕಿಸಿದ, ಇವನ ಹೆಸರು ಕೇಳಿದರೆ ನಡುಗುತ್ತಿದ್ದ ಅಕ್ಬರ್ ದ ಗ್ರೇಟ್ ಸರಹಿಂದ್‌ನಿಂದ ಕಾಬೂಲಿಗೆ ಪರಾರಿಯಾಗಲು ತಯಾರಾಗಿದ್ದ. ಮುನ್ನೂರೈವತ್ತು ವರ್ಷಗಳ ಇಸ್ಲಾಂ ಆಳ್ವಿಕೆಯನ್ನು ದೇಶದಲ್ಲಿ ಕೊನೆಗೊಳಿಸಿ ದೇಹಲಿಯ ಸಿಂಹಾಸನವನ್ನೇರಿದ ಏಕೈಕ ಹಿಂದೂ ರಾಜ, ದೇಶೀ ಇತಿಹಾಸಕಾರರಿಂದ ಮಧ್ಯಯುಗದ ನೆಪೋಲಿಯನ್ ಎಂದು ಶ್ಲಾಘಿಸಲ್ಪಟ್ಟ ಇವನು ಮಹಾರಾಜ ಹೇಮಚಂದ್ರ ವಿಕ್ರಮಾದಿತ್ಯ. ಅವನ ಅದೃಷ್ಟ ನೆಟ್ಟಗಿರಲಿಲ್ಲ. ಯುದ್ಧವೊಂದರಲ್ಲಿ ಕಣ್ಣಿಗೆ ಬಾಣ ತಾಗಿ ಸಾಯದಿದ್ದರೆ ವಿದೇಶಿಗರ ಆಕ್ರಮಣ ಬಿಡಿ ಅವರಿಗೆ ಭಾರತದತ್ತ ಕಣ್ಣೆತ್ತಿ ನೋಡಲೂ ಧೈರ್ಯವಿರುತ್ತಿರಲಿಲ್ಲ,  ಉಹೂಂ..ನಾವೋದಿದ ಯಾವ ಪುಸ್ತಕಗಳಲ್ಲೂ ಇವನ ಹೆಸರಿಲ್ಲ.
ಸಾಮ್ರಾಟ ಹೇಮು

           ಸಿಂಹಾಸನವೇರುವ ಕಾಲದಲ್ಲೇ ಒಂದು ಕಣ್ಣಿಲ್ಲ. ಯುದ್ಧದಲ್ಲಿ ಒಂದು ಕೈ ಇನ್ನೊಂದು ಕಾಲು ಕಳೆದುಕೊಂಡಾಗಿದೆ. ಆದರೂ ಸುತ್ತಲಿದ್ದ ಸುಲ್ತಾನರನ್ನೆಲ್ಲ ಹದಿನೆಂಟು ಯುದ್ಧಗಳಲ್ಲಿ ಸಾಲುಸಾಲಾಗಿ ಸೋಲಿಸಿ ಅವರ್ಯಾರೂ ಸಿಂಧ್‌ನಿಂದ ಯಮುನಾತೀರದವರೆಗಿನ ರಾಜ್ಯದಲ್ಲಿ ಮತ್ತೆ ಒಳಹೊಕ್ಕದಂತೆ ಮಾಡಿದ. ದೇಹಲಿ ಸುಲ್ತಾನ್ ಇಬ್ರಾಹಿಂ ಲೋಧಿಯನ್ನೇ ಮಣಿಸಿ ಇಡೀ ಭಾರತದಲ್ಲಿ ತನ್ನೆದುರು ಯಾರೂ ಇಲ್ಲವೆಂದು ನಿರೂಪಿಸಿದ. ಬಾಬರನಂಥ ಬಾಬರನನ್ನೇ ಒದ್ದೋಡಿಸಿದವನು ಪ್ರಪಂಚದ ಸಾರ್ವಕಾಲಿಕ ಮಹಾವೀರರಲ್ಲಿ ಅಗ್ರಗಣ್ಯ ಮೇವಾಡದ ಮಹಾರಾಣ ಸಂಗ್ರಾಮ ಸಿಂಹ.
ರಾಣಾ ಸಂಗ

         ರಾಜ್ಯವಿಲ್ಲ, ಕಿರೀಟವಿಲ್ಲ, ಸೈನ್ಯವಿಲ್ಲ, ಕೈಯಲ್ಲಿ ಕವಡೆ ಕಾಸಿಲ್ಲ. ಸಹಾಯ ಕೇಳೋಣವೆಂದರೆ ಅಕ್ಕಪಕ್ಕದ ಅಂಬೇರಿ, ಜೋಧಪುರ, ಬಿಕಾನೇರಿನ ರಾಜರೆಲ್ಲ ಅಕ್ಬರನೊಂದಿಗೆ ಸಂಧಿ ಮಾಡಿಕೊಂಡು ತಿರುಗಿ ಬಿದ್ದಿದ್ದಾರೆ. ಸ್ವಂತ ಸಂಬಂಧಿಕರೇ ಕೈಕೊಟ್ಟು ಮೊಘಲ್ ಪಾಳಯ ಸೇರಿಕೊಂಡಿದ್ದಾರೆ. ಅಕ್ಬರ ಸಾಮ, ದಾನ, ಬೇಧ, ದಂಡಗಳನ್ನೆಲ್ಲ ಪ್ರಯೋಗಿಸಿ ಹಿಡಿಯಲೆತ್ನಿಸಿದರೂ ಈತ ಜಪ್ಪಯ್ಯ ಎನ್ನಲಿಲ್ಲ. ರೋಸಿಹೋದ ಅಕ್ಬರ ಸ್ನೇಹ ಹಸ್ತ ಚಾಚಿದ, ತನ್ನಷ್ಟೆ ದೊಡ್ಡ ಸಿಂಹಾಸನವಿತ್ತು ಪಕ್ಕದಲ್ಲೇ ಕುಳಿಸಿಕೊಳ್ಳುವುದಾಗಿ ಆಮಿಷ ತೋರಿಸಿದರೂ ಆತ ತುರ್ಕರ ಆಹ್ವಾನ ಒಪ್ಪಿಕೊಳ್ಳಲಿಲ್ಲ. ಹೆಂಡತಿ ಮಕ್ಕಳೊಡನೆ ಕಾಡು ಪಾಲಾದರೂ, ವಿದೇಶಿಗ ಅಕ್ಬರನಿಗೆ ತಲೆ ಬಾಗಿಸದೇ, ಸಂಧಿ ಮಾಡಿಕೊಳ್ಳದೇ ದೇಶದ ಸ್ವಾತತ್ರ್ಯಕ್ಕೆ ಬಿಡದೇ ಕಾದಾಡಿದ, ಅಕ್ಬರ್ ಕಿತ್ತುಕೊಂಡ ತನ್ನ ನೆಲದ ಇಂಚಿಂಚನ್ನೂ ಏಕಾಂಗಿಯಾಗಿ ವಶಪಡಿಸಿಕೊಂಡವನು ರಾಣಾ ಪ್ರತಾಪ್.
ರಾಣಾ ಪ್ರತಾಪ್
ಇತಿಹಾಸದಲ್ಲಿ ಮರೆಯಲಾಗದ, ಮರೆಯಬಾರದ ಮಹಾವೀರರು ಒಬ್ಬರೇ ಇಬ್ಬರೇ?
ಅಷ್ಟೇ ಗಾಢವಾಗಿ ಕಾಡುವ ಮತ್ತೊಬ್ಬ ನಾವು ಮರೆತ ಪ್ರಥ್ವಿರಾಜ ಚೌಹಾನ್.....
          ಪ್ರಥ್ವಿರಾಜನ ಲವ್ ಸ್ಟೋರಿ ಕಾಲಕಾಲದಿಂದಲೂ ಎಲ್ಲರೂ ಕೇಳಿದ್ದೇ, ನೋಡಿದ್ದೇ, ತಿಳಿದಿದ್ದೇ.... ಕನೋಜಿನ ಜಯಪಾಲನ ಮಗಳು ಸಂಯುಕ್ತೆ ಮತ್ತು ಪ್ರಥ್ವಿರಾಜ ಪರಸ್ಪರ ಪ್ರೀತಿಸುತ್ತಿದ್ದರು. ಜಯಚಂದ್ರನಿಗೋ ಪ್ರಥ್ವಿರಾಜನನ್ನು ಕಂಡರಾಗದು. ಹಾಗಾಗಿ ಸಂಯುಕ್ತೆಯ ಸ್ವಯಂವರಕ್ಕೆ ಯಾರನ್ನು ಕರೆದರೂ ಪ್ರಥ್ವಿರಾಜನನ್ನು ಆಹ್ವಾನಿಸಲಿಲ್ಲ. ಅದರ ಬದಲು ಅವನ ಮೂರ್ತಿಯೊಂದನ್ನು ಬಾಗಿಲ ಬಳಿ ದ್ವಾರಪಾಲಕರ ಜಾಗದಲ್ಲಿ ನಿಲ್ಲಿಸಿದ. ಸ್ವಯಂವರದ ಸಮಯದಲ್ಲಿ ವರಮಾಲೆ ಕೈಯಲ್ಲಿ ಹಿಡಿದು ಬಂದ ಸಂಯುಕ್ತಾ ಉಳಿದ ರಾಜಕುಮಾರರನ್ನು ಕತ್ತೆತ್ತಿಯೂ ನೋಡದೆ ಸರಸರನೆ ನಡೆದು ಪ್ರಥ್ವಿರಾಜನ ಮೂರ್ತಿಗೆ ಮಾಲೆ ಹಾಕಿದಳು. ಯಾವ ಮಾಯದಲ್ಲಿದ್ದನೋ ಏನೋ, ಅದೇ ವೇಳೆ ಮೂರ್ತಿಯ ಹಿಂದೆ ಅಡಗಿದ್ದ ಪ್ರಥ್ವಿರಾಜ ಅವಳನ್ನೆತ್ತಿಕೊಂಡು ಕುದುರೆಯೇರಿ ನೋಡನೋಡುತ್ತಿದ್ದಂತೆ ಪರಾರಿಯಾದ. ಮುಂದೆ ಅವರಿಬ್ಬರೂ ಮದುವೆಯಾದರು. ಇದರ ನಂತರ ಜಯಚಂದ ಪ್ರಥ್ವಿರಾಜರ ಹಗೆ ಇನ್ನಷ್ಟು ಹೆಚ್ಚಾಯಿತು. ಇದೇ ಸಿಟ್ಟಿನಲ್ಲಿ ಜಯಚಂದ್ರ ಶಹಾಬುದ್ದೀನ್ ಘೋರಿಯೊಡನೆ ಕೈ ಜೋಡಿಸಿ ಪ್ರಥ್ವಿರಾಜನ ಮೇಲೆ ಯುದ್ಧ ಘೋಷಿಸಲು ಕಾರಣನಾದ ಎನ್ನುತ್ತದೆ ಬಹಳಷ್ಟು ಕಥೆಗಳು. ಇಷ್ಟಾದರೆ ಕಷ್ಟವಿಲ್ಲ. ಮೊದಲ ತರೈನ್ ಯುದ್ಧದಲ್ಲಿ ಘೋರಿ ಸೋತರೂ ಎರಡನೇ ತರೈನ್ ಯುದ್ಧದಲ್ಲಿ ಘೋರಿಯು ಪ್ರಥ್ವಿರಾಜನನ್ನು ಸೋಲಿಸಿ ಆತನನ್ನು ಕೊಂದನೆಂದೂ, ಸಂಯುಕ್ತಳನ್ನು ಮದುವೆಯಾದನೆಂದೂ ರಸವತ್ತಾದ ಬಗೆಬಗೆಯ ಕಥೆಗಳಿವೆ. ಪ್ರಥ್ವಿರಾಜನ ಕಣ್ಣೆದುರೇ ಘೋರಿ ಸಂಯುಕ್ತಳ ಮೇಲೆ ಅತ್ಯಾಚಾರವೆಸಗಿದನೆಂದು ಇನ್ನು ಕೆಲ ಇತಿಹಾಸಕಾರರು ಸ್ವಂತ ಕಂಡವರಂತೆ ವರ್ಣಿಸಿದ್ದಾರೆ. ಸಂಯುಕ್ತಳ ಜೊತೆಗಿನ ಪ್ರೇಮದಲ್ಲಿ ಕುರುಡಾದ ಪ್ರಥ್ವಿರಾಜ ಕೇವಲ ಒಂದು ಹೆಣ್ಣಿಗೋಸ್ಕರ ಬಲಾಢ್ಯ ಅರಸರ ಶತ್ರುತ್ವ ಕಟ್ಟಿಕೊಂಡು ಭಾರತದಲ್ಲಿ ಇಸ್ಲಾಮಿನ ಆಳ್ವಿಕೆ ಶುರುವಾಗಲು ಮುನ್ನುಡಿ ಬರೆದವನೆಂದು ಹಲ ಇತಿಹಾಸಕಾರರು ತೆಗಳಿದರೆ, ಕೆಲ ಕಥೆಗಾರರು ತನ್ನ ಪ್ರೇಯಸಿಗಾಗಿ ತನ್ನ ರಾಜ್ಯವನ್ನೂ ಪ್ರಾಣವನ್ನೂ ಕಳೆದುಕೊಂಡ ಅಮರಪ್ರೇಮಿಯೆಂದು ಲೈಲಾ-ಮಜನೂರ ಸಾಲಿಗೆ ಸೇರಿಸಿ
      ನನ್ನ ಸಂಶಯವೆಂದರೆ ದೇಹಲಿಯನ್ನಾಳಿದ ತುವರ ವಂಶದ ಕೊನೆಯ ದೊರೆ ಅನಂಗಪಾಲನ ಮೊದಲ ಮಗಳು ಕಮಲಾದೇವಿಯ ಮಗ ಪೃಥ್ವಿರಾಜ, ಎರಡನೇ ಮಗಳು ವಿಮಲಾದೇವಿಯ ಮಗ ಜಯಚಂದ್ರ. ಅಲ್ಲಿಗೆ ಪೃಥ್ವಿರಾಜ ಜಯಚಂದ್ರರಿಬ್ಬರೂ ಅಣ್ಣ-ತಮ್ಮಂದಿರೆಂದಾಯ್ತು. ಸ್ವಂತ ಅಣ್ಣನ ಮಗಳನ್ನು ಮದುವೆಯಾಗುವ ಪದ್ಧತಿ ಹಿಂದೂಗಳಲ್ಲಿದೆಯೇ? ಅಥವಾ ಪೃಥ್ವಿರಾಜನ ಕುರಿತು ಅಡಗೂಲಜ್ಜಿ ಕತೆ ಬರೆದ ಇತಿಹಾಸಕಾರರಿಗೆ ತಲೆ ಇಲ್ಲವೇ? ಪ್ರಥ್ವಿರಾಜ ರಾಸೋ ಒಂದು ರೊಮ್ಯಾಂಟಿಕ್ ರಮ್ಯ ಪ್ರೇಮ ಕಾವ್ಯ. ಪ್ರಥ್ವಿರಾಜ ರಾಸೋವನ್ನು ರಚಿಸಿದವನು ಪ್ರಥ್ವಿರಾಜನ ಆಸ್ಥಾನಕವಿ ಮತ್ತು ಗೆಳೆಯ ಚಾಂದ್ ಬರ್ದಾಯ್ ಅಥವಾ ಚಾಂದಭಟ್ಟ. ಕಾಲಕ್ರಮೇಣ ಬಹಳಷ್ಟು ಪ್ರಕ್ಷೇಪಗಳಿಗೊಳಗಾಗಿದೆಯಾದರೂ ಇದು ಸಂಪೂರ್ಣ ಸುಳ್ಳಲ್ಲ.  ಮೊಘಲರ ಕಾಲದಲ್ಲಿ ಈ ಪ್ರೇಮಕಥೆಯನ್ನು ಕೇಳದವರೇ ಇರಲಿಲ್ಲವೆಂದರೆ ಅದರ ಪ್ರಸಿದ್ಧಿಯನ್ನರಿಯಬಹುದು. ಅದನ್ನು ಹೊರತುಪಡಿಸಿದರೆ ಚೌಹಾನನ ಬಗೆಗಿನ ಅಧಿಕೃತ ಇತಿಹಾಸವೆನಿಸಿಕೊಂಡಿರುವ ಹಮೀರ್ ಕಾವ್ಯ ಮತ್ತು ಪ್ರಥ್ವಿರಾಜ ವಿಜಯದಲ್ಲೆಲ್ಲೂ ಸಂಯುಕ್ತಳ ಉಲ್ಲೇಖವೇ ಇಲ್ಲ. ಘೋರಿಯ ಕಾಲದ ಪರ್ಷಿಯನ್ ಇತಿಹಾಸಕಾರರು, ಆರ್.ಸಿ. ಮಜೂಂದಾರರ ’ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್’ನಲ್ಲಿಯೂ ಸಂಯುಕ್ತಳ ಬಗ್ಗೆ ಒಂದಕ್ಷರವೂ ಇಲ್ಲ. ಆಶ್ಚರ್ಯವೇ! ಸಂಯುಕ್ತಳ ಕಥೆಯೇ ಸುಳ್ಳೆಂದ ಮೇಲೆ ಪ್ರಥ್ವಿರಾಜ ಜಯಚಂದ್ರರ ಮಧ್ಯದ ಅಂತಃಕಲಹದಿಂದಾಗಿಯೇ ಘೋರಿಯ ಕೈಯಲ್ಲಿ ಪ್ರಥ್ವಿರಾಜ ಸೋತನೆಂದರೇನರ್ಥ?
1191ರಲ್ಲಿ ಪಂಜಾಬಿನ ಪ್ರಾಂತ್ಯದ ತಾನೇಶ್ವರ್ ಸಮೀಪ ನಡೆದ ತಾರಾಯಿನ್ ಯುದ್ಧದಲ್ಲಿ ಸೋತ ಘೋರಿಯನ್ನು ಮುಂದೆ ಪ್ರಥ್ವಿರಾಜ ಒಂದೆರಡಲ್ಲ, ಏಳು ಬಾರಿ ಕ್ಷಮಿಸಿ ಕಳುಹಿಸಿದ್ದ. ಎರಡನೇ ತರೈನ್ ಯುದ್ಧದಲ್ಲಿಯೂ ಪ್ರಥ್ವಿರಾಜನ ಜೊತೆ ಅಕ್ಕಪಕ್ಕದ ರಾಜ್ಯದ 150 ರಾಜಕುಮಾರರ ಸಹಿತ ಮೂರು ಲಕ್ಷ ಅಶ್ವದಳ, ಮೂರು ಸಾವಿರ ಗಜದಳಕ್ಕಿಂತ ಹೆಚ್ಚಿನ ಸೇನೆಯೆದುರು ಘೋರಿಯ ಸೈನ್ಯ ಯಾತಕ್ಕೂ ಸಾಲುತ್ತಿರಲಿಲ್ಲವೆಂದು ಫಿರಸ್ತಾ,ತಬಕತ್-ಇ-ನಾಸಿರಿಯಲ್ಲಿ ಮಿನಾಜುದ್ದೀನ್ ಸಿರಾಜ್‌  ಮತ್ತು ತಾಜು-ಇ-ಮಹಾಸಿರ್‌ನಲ್ಲಿ ಹಸನ್ ನಿಜಾಮಿಯಂಥ ಪ್ರಖ್ಯಾತ ಪರ್ಷಿಯನ್ ಇತಿಹಾಸಕಾರರೇ ಬರೆದುಕೊಂಡಿದ್ದಾರೆ. ಈ ಯುದ್ಧದಲ್ಲೂ ಪ್ರಥ್ವಿರಾಜನೇ ಗೆಲ್ಲಬೇಕಿತ್ತು.
         ಹೇಳಿಕೇಳಿ ಔದಾರ್ಯದಲ್ಲಿ ಉಳಿದ ಭಾರತೀಯ ರಾಜರಿಗಿಂತ ಪ್ರಥ್ವಿರಾಜ ಒಂದು ಕೈ ಮೇಲೆಯೇ. ನನ್ನ ಕೈಯಲ್ಲಿ ಪದೇ ಪದೇ ಯಾಕೆ ಸೋಲುತ್ತೀರಿ? ಹಿಂದಿರುಗಿ ಹೋದರೆ ಕ್ಷೇಮವಾಗಿ ಕಳುಹಿಸಿಕೊಡುತ್ತೇನೆ ಎಂದು ಘೋರಿಗೆ ಸಂದೇಶ ಕಳುಹಿಸಿದ. ಇಷ್ಟೆಲ್ಲ ಒಳ್ಳೆಯತನ ತೋರಿಸಿದ ಮೇಲೆ ಮಹಾಬುದ್ಧಿವಂತ ಘೋರಿ ಸುಮ್ಮನಿರುತ್ತಾನೆಯೇ? ಅಫಘಾನಿಸ್ತಾನದಲ್ಲಿರುವ ನಮ್ಮಣ್ಣ ಘಿಯಾಸುದ್ದೀನನ್ನು ಒಂದು ಮಾತು ತಿಳಿಸಿ ವಾಪಸ್ ಹೋರಡುತ್ತೇನೆ, ಅಲ್ಲಿಯವರೆಗೂ ಸ್ವಲ್ಪ ಸಮಯ ಕೊಡಿ ಎಂದು ಪ್ರತಿ ಸಂದೇಶ ಕಳುಹಿಸಿದ. ಪಾಪ, ಆತ ಹೇಳಿದ್ದು ನಿಜವಿರಬೇಕೆಂದು ರಜಪೂತರ ಪಡೆಗಳು ತಮ್ಮ ಪಾಳೆಯದಲ್ಲಿ ಆ ರಾತ್ರಿ ಸುಮ್ಮನೇ ಮಲಗಿದ್ದವು, ಆದರೆ ಮರುದಿನ ಬೆಳಿಗ್ಗೆ ಮೂರನೇ ಜಾವದಲ್ಲಿ ಸೂರ್ಯ ಹುಟ್ಟುವ ಮೊದಲೇ ಪ್ರಥ್ವಿರಾಜನ ಪಾಳೆಯದ ಮೇಲೆ ಘೋರಿಯ ಪಡೆಗಳು ಮಿಂಚಿನಂತೆ ಮುಗಿಬಿದ್ದು ಮಲಗಿದ್ದವರನ್ನು ಅಲ್ಲಲ್ಲೇ ಕತ್ತರಿಸಿದವು. ಉಳಿದವರು ಲಗುಬಗೆಯಿಂದ ಶಸ್ತ್ರಗಳನ್ನೆತ್ತಿಕೊಂಡು ಹೋರಾಟಕ್ಕೆ ಸಿದ್ಧರಾಗುವುದರೊಳಗೆ ಇವನ ಅಶ್ವಾರೋಹಿಗಳು ಕಾಲ್ಕಿತ್ತಾಗಿತ್ತು. ನಾಲ್ಕೂ ದಿಕ್ಕಿನಿಂದಲೂ ದಾಳಿ ಮಾಡಿದಂತೆ ಮಾಡಿ, ತಿರುಗಿ ಬಿದ್ದಾಗ ಓಡುತ್ತಾ, ಹಿಂದುಗಡೆಯಿಂದ ಇನ್ನೊಂದು ಗುಂಪಿನಿಂದ ಆಕ್ರಮಣ ಮಾಡಿಸುವ ಆಟವಾಡಿಸುತ್ತ ಕೈಗೆ ಸಿಕ್ಕವರನ್ನೆಲ್ಲ ಘೋರಿಯ ಪಡೆಗಳು ಕೊಚ್ಚಿಹಾಕಿದವು. ಇದೇ ಯುದ್ಧದಲ್ಲಿ ಘೋರಿ ಪ್ರಥ್ವಿರಾಜನನ್ನು ಸೆರೆ ಹಿಡಿದು ಕೊಂದನೆಂದು ಕೆಲ ಇತಿಹಾಸಕಾರರು ಹೇಳುತ್ತಾರೆ. ಆತನ ಕಣ್ಣು ಕೀಳಿಸಿ ತನ್ನ ಸೆರೆಯಲ್ಲಿಟ್ಟುಕೊಂಡನೆಂದು ಇನ್ನು ಕೆಲ ಇತಿಹಾಸಕಾರರು ಬರೆದಿದ್ದಾರೆ. ಪ್ರಥ್ವಿರಾಜ ರಾಸೋದಲ್ಲಿ ಇನ್ನೊಂದು ಆಸಕ್ತಿದಾಯಕ ಕಥೆಯಿದೆ. ಪ್ರಥ್ವಿರಾಜನ ಕಣ್ಣು ಕೀಳಿಸಿದ ಘೋರಿ ಆತನನ್ನು ಅಫ್ಘಾನಿಸ್ತಾನಕ್ಕೆ ಕೊಂಡೊಯ್ದು ಅಲ್ಲಿ ಬಹುಕಾಲ ತನ್ನ ಸೆರೆಯಲ್ಲಿಟ್ಟುಕೊಂಡಿದ್ದನಂತೆ. ಈತನನ್ನು ಹೇಗಾದರೂ ಸೆರೆಯಿಂದ ಬಿಡಿಸಬೇಕೆಂದು ಪ್ರಥ್ವಿರಾಜನ ಆಪ್ತಮಿತ್ರ ಮತ್ತು ಕವಿ ಚಾಂದಭಟ್ಟ ಮಾರುವೇಷದಲ್ಲಿ ಘೋರಿಯ ಆಸ್ಥಾನ ಸೇರಿ ಆತನ ವಿಶ್ವಾಸ ಸಂಪಾದಿಸಿಕೊಂಡ. ಒಮ್ಮೆ ಘೋರಿಯೊಡನೆ ಮಾತನಾಡುತ್ತಾ ಪ್ರಥ್ವಿರಾಜ ಕುರುಡನಾದರೂ ಶಬ್ದವಿದ್ಯಾಪ್ರವೀಣನಾಗಿದ್ದು ಕೇವಲ ಶಬ್ದವನ್ನು ಕೇಳಿಯೇ ಬಾಣಬಿಡಲ್ಲನೆಂದೂ, ಆತನಿಗೆ ತನ್ನ ಗುರಿಯನ್ನು ನೋಡುವ ಅವಶ್ಯಕತೆಯೇ ಇಲ್ಲವೆಂದು ಹೊಗಳಿದನಂತೆ. ಘೋರಿಗೆ ಇದೇನೋ ಹೊಸ ವಿದ್ಯೆಯೆನಿಸಿತು. ಎಲ್ಲಿ ನೋಡಿಯೇ ಬಿಡೋಣವೆಂದು ಪ್ರಥ್ವಿರಾಜನನ್ನು ಸೆರೆಯಿಂದ ಎಳೆತರುವಂತೆ ಸೈನಿಕರಿಗೆ ಆಜ್ಞಾಪಿಸಿದ. ಬಿಲ್ವಿದ್ಯಾ ಪ್ರದರ್ಶನ ಏರ್ಪಡಿಸಲಾಯಿತು. ಪ್ರಥ್ವಿರಾಜ ಮೊಂಡು ಹಟ ಪ್ರದರ್ಶಿಸಿದ. ಅರಸನಾದ ತಾನು ಇನ್ನೊಬ್ಬ ಅರಸನನ್ನು ಹೊರತುಪಡಿಸಿ ಬೇರಾರಿಂದಲೂ ಆದೇಶ ಸ್ವೀಕರಿಸಲಾರೆ ಎಂದು.ತೂಗು ಹಾಕಿದ ಕಂಚಿನ ಜಾಗಟೆಯನ್ನು ಅದರ ಶಬ್ದವನ್ನು ಕೇಳಿ ಬಾಣ ಬಿಟ್ಟು ಛೇದಿಸುವಂತೆ ಸ್ವತಃ ಘೋರಿಯೇ ಬಾಯ್ಬಿಟ್ಟು ನಿರ್ದೇಶಿಸಿದ. ಅದೇ ಸಮಯಕ್ಕೆ ಚಾಂದಭಟ್ಟ ಘೋರಿ ನಿಂತ ಸ್ಥಳವನ್ನು ಪ್ರಥ್ವಿರಾಜನಿಗೆ ತಿಳಿಸಲು ’ಚಾರ್ ಬನ್ಸ್, ಚೌಬೀಸ್ ಗಜ್, ಅಂಗುಲ್ ಅಷ್ಟ ಪ್ರಮಾಣ್ | ತಾ ಊಪರ್ ಹೈ ಸುಲ್ತಾನ್, ಚೂಕೇ ಮತ್ ಚೌಹಾನ್’ ಎಂದೊಂದು ಒಂದು ಹಾಡು ಕಟ್ಟಿ ಹೇಳಿದ. ಮೊದಲ ಬಾಣ ಸರಿಯಾಗಿ ಗುರಿಮುಟ್ಟಿತು. ಆಶ್ಚರ್ಯಗೊಂಡ ಘೋರಿ ಶಭಾಷ್ ಎಂದು ಉದ್ಗಾರ ತೆಗೆದನಂತೆ. ಶಬ್ದ ಬಂದೆಡೆಯಲ್ಲಿ ಪ್ರಥ್ವಿರಾಜ ಮುಂದಿನ ಬಾಣ ಪ್ರಯೋಗಿಸಿದ. ಅದು ಘೋರಿಯ ಗಂಟಲನ್ನು ಸೀಳಿ ಹೊರಬಂದಿತ್ತು. ಮುಂದೆ ಶತ್ರುಗಳ ಕೈಯಲ್ಲಿ ಸಾಯಲು ಇಷ್ಟವಿಲ್ಲದೇ ಪ್ರಥ್ವಿರಾಜ ಮತ್ತು ಚಾಂದಭಟ್ಟ ಪರಸ್ಪರ ಕತ್ತಿಯಿಂದ ತಿವಿದುಕೊಂಡು ಸತ್ತರೆನ್ನುತ್ತದೆ ರಾಸೋ. ಮುಂದೆ ಇದೇ ಕಥೆಯನ್ನು ಚಾಂದನ ಮಗ ಬರೆದು ಮುಗಿಸಿದನಂತೆ. ಇದೇನು ಪೂರ್ತಿ ಸುಳ್ಳಲ್ಲ.
ಪ್ರಥ್ವಿರಾಜ
ಈಕಾಲದ ನವಪ್ರೇಮಿಗಳ ಕಣ್ಣಲ್ಲಿ ದಳದಳನೆ ಅಶ್ರುಧಾರೆಗಳುರುಳುವಂತೆ ಮಾಡಿದ್ದಾರೆ. ಸಂಯುಕ್ತಳ ಕಾರಣದಿಂದ ನಡೆದ ಘರ್ಷಣೆಯಲ್ಲಿ ಭಾರೀ ನರಸಂಹಾರವಾಯಿತೆಂದು, ಅದಕ್ಕೆ ಪ್ರಥ್ವಿರಾಜನ ಹುಚ್ಚು ಪ್ರೀತಿಯೇ ಕಾರಣವೆಂದು ನೆಹರೂ ಕೂಡ ತಮ್ಮ ಡಿಸ್ಕವರಿ ಆಫ್ ಇಂಡಿಯಾದಲ್ಲಿ ಅಲವತ್ತುಕೊಂಡಿದ್ದಾರೆ. ಛೇ....ಎಂಥಾ ವೀರನ ಎಂಥಾ ಸ್ಟೋರಿ!
ಮಹಮ್ಮದ್ ಘೋರಿ

         ಅಫಘಾನಿಸ್ತಾನದ ಮಧ್ಯಪೂರ್ವದಲ್ಲಿರುವ ಘಜನಿ ಪಟ್ಟಣದ ಹೊರಭಾಗದಲ್ಲಿ ಮಹಮ್ಮದ್ ಘೋರಿಗೆ ಒಂದು ಭವ್ಯ ಸಮಾಧಿ ಕಟ್ಟಲಾಗಿದೆ. ಇದರ ಆವರಣದ ಹೊರಭಾಗದಲ್ಲಿ ಚಪ್ಪಲಿ ಕಳಚುವೆಡೆಯಲ್ಲಿ  ಒಂದು ಚಿಕ್ಕ ಸಮಾಧಿಯೂ ಇದೆ, ಪ್ರಥ್ವಿರಾಜ ಚೌಹಾನನದ್ದು. ತಮ್ಮ ಹೀರೋ ಘೋರಿಯನ್ನು ಕೊಂದ ವಿಲನ್ ಪ್ರಥ್ವಿರಾಜನೆಂಬ ಸಿಟ್ಟು ಅಲ್ಲಿನ ಜನರಲ್ಲಿ 900 ವರ್ಷಗಳಾದರೂ ತಣಿದಿಲ್ಲ. ಅಲ್ಲೇ ಚಪ್ಪಲಿ ಕಳಚಿ, ಆ ಸಮಾಧಿಗೆ ಅಲ್ಲಿಟ್ಟ ದಪ್ಪ ಹಗ್ಗದ ತುದಿಯಿಂದ ಎರಡೇಟು ಹೊಡೆದೇ ಘೋರಿಯ ದರ್ಶನಕ್ಕೆ ಭಕ್ತರು ಒಳಪ್ರವೇಶಿಸುವುದು. ಪ್ರಥ್ವಿರಾಜನ ಕುರುಹಗಳನ್ನು ಭಾರತಕ್ಕೆ ವಾಪಸ್ ತರಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದಲೂ ಇದೆಯಾದರೂ ಯಾವ ಸರ್ಕಾರವೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹತ್ತು ವರ್ಷದ ಹಿಂದೆ ಅಫ್ಘಾನಿಸ್ತಾನದ ಪ್ರವಾಸಕ್ಕೆ ತೆರಳಿದ್ದ ಮಾಜಿ ಪರ್ದಾನಿಗಳಾದ ಮನಮೋಹನ ಸಿಂಗ ಮತ್ತು ರಾಹುಲ ಗಾಂಧಿಯವರು ಬಾಬರನ ಸಮಾಧಿಗೆ ಭೇಟಿ ಕೊಟ್ಟು ಶಿರಬಾಗಿ ನಮಿಸಿ ಕೃತಾರ್ಥರಾದರೇ ಹೊರತೂ ಪ್ರಥ್ವಿರಾಜನತ್ತ ಕಣ್ಣೆತ್ತಿಯೂ ನೋಡಹೋಗಲಿಲ್ಲ. ಇದರ ಬಗ್ಗೆ ಇ.ಜೈವಂತ್ ಪೌಲ್‌ರ   “Arms and Armour: Traditional Weapons of India” ಪುಸ್ತಕದಲ್ಲಿ ಸವಿಸ್ತಾರವಾದ ವರ್ಣನೆಯಿದೆ.
ಎಷ್ಟಾದರೂ ಪ್ರಥ್ವಿರಾಜ ರಜಪೂತರ ಪ್ರತಿಷ್ಟೆ, ಆತ್ಮಾಗೌರವದ ಪ್ರತೀಕವಾಗಿ ಶತಮಾನಗಳಿಂದ ಆರಾಧಿಸಲ್ಪಟ್ಟವನಲ್ಲವೇ. ಈ ವಿಷಯ ತಿಳಿದ ಶೇರ್ ಸಿಂಗ್ ರಾಣಾ ಸುಮ್ಮನಿರಲಿಲ್ಲ.
        ಆತನೇನು ರಾಜವಂಶಸ್ಥನಲ್ಲ. ವಿ.ಐ.ಪಿಯೂ ಅಲ್ಲ. ರಾಜಸ್ಥಾನ ಮೂಲದ ಒಬ್ಬ ಸಾಮಾನ್ಯ ಸಾಮಾಜಿಕ ಕಾರ್ಯಕರ್ತನಷ್ಟೆ. 25 ಜುಲೈ 2001 ರಲ್ಲಿ ತನ್ನ ಜಾತಿಯ ಇಪ್ಪತ್ತಕ್ಕೂ ಹೆಚ್ಚು ಠಾಕುರ್‌ಗಳನ್ನು ಕಾರಣವಿಲ್ಲದೇ ಕೊಂದ ಸೇಡು ತೀರಿಸಿಕೊಳ್ಳಲು ಮಾಜಿ ಬ್ಯಾಂಡಿಡ್ ಕ್ವೀನ್, ೪೮ ಕ್ರಿಮಿನಲ್ ಕೇಸುಗಳ ಸರದಾರ್ತಿ, ಲೋಕಸಭಾ ಎಂಪಿ ಫೂಲನ್ ದೇವಿಯನ್ನು ಆಕೆಯ ಅಧಿಕೃತ ನಿವಾಸದಲ್ಲೇ ಒಳಹೊಕ್ಕು ಗುಂಡಿಟ್ಟು ಕೊಂದವನು ಇವನು. ಮುಂದೆ ತಾನೇ ಪೋಲೀಸರೆದುರು ಶರಣಾದ. ಆಜೀವ ಕಾರಾವಾಸವೂ ಆಯಿತು. ಅಷ್ಟಾಗಿದ್ದರೆ ಅವನ ಬಗ್ಗೆ ಬರೆಯುವ ಅಗತ್ಯತೆಯಿರಲಿಲ್ಲ. ಇವನ ಜೀವಮಾನದ ಮಿಶನ್ ಬೇರೆಯೇ ಇತ್ತು. ಅದಕ್ಕಾಗಿ ಆತ ಪ್ರಪಂಚದ ಅತಿ ದುರ್ಭೇದ್ಯ ಜೈಲುಗಳಲ್ಲಿ ಒಂದಾಗಿರುವ ತಿಹಾರ್ ಜೈಲಿನಿಂದ ಹಾಡುಹಗಲೇ ನಾಟಕೀಯ ರೀತಿಯಲ್ಲಿ ಪೋಲೀಸರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಂಡ. ಸಂಜಯ್ ಗುಪ್ತಾ ಎಂಬ ನಕಲಿ ಹೆಸರಲ್ಲಿ ಮೂರು ತಿಂಗಳ ಬಾಂಗ್ಲಾದೇಶಿ ವೀಸಾ ಪಡೆದುಕೊಂಡು ಕಲ್ಕತ್ತಾದ ಮೂಲಕ ಅಲ್ಲಿಗೆ ಹಾರಿದ. ಜಾಡು ಸಿಗದಿರಲೆಂದು ಸ್ಯಾಟಲೈಟ್ ಫೋನ್ ಬಳಸಿ ತನ್ನೆಲ್ಲ ವ್ಯವಹಾರಗಳನ್ನು ನಿಯಂತ್ರಿಸತೊಡಗಿದ. ಬಾಂಗ್ಲಾದಿಂದ ಆತ ಹೋಗಿದ್ದು ದುಬೈನ ಮೂಲಕ ಅಫ್ಘಾನಿಸ್ತಾನದ ಕಾಬೂಲ್‌ಗೆ. ತಾನು ಘೋರಿಯ ಸಮಾಧಿಯ ಬಗ್ಗೆ ಸಂಶೋಧನೆ ಮಾಡಲು ಬಂದ ಪಾಕಿಸ್ತಾನಿಯೆಂದು ಸ್ಥಳೀಯರನ್ನು ನಂಬಿಸಿ ರಾತ್ರೋರಾತ್ರಿ ಪ್ರಥ್ವಿರಾಜನ ಸಮಾಧಿಯ ಮಣ್ಣಗೆದುಕೊಂಡು ಭಾರತಕ್ಕೆ ತಂದ. ಸ್ಥಳೀಯರ ಸಹಕಾರದಿಂದ ಈಗ ಅದಕ್ಕೊಂದು ಸ್ಮಾರಕವನ್ನೂ ನಿರ್ಮಿಸಲಾಗಿದೆ. ಅವನಿಗಿದ್ದ ಧೈರ್ಯ ಅರವತ್ತು ವರ್ಷಗಳ ನಮ್ಮ ಸರ್ಕಾರಕ್ಕಿರಲಿಲ್ಲ. ಛೀ.
ಶೇರ್ ಸಿಂಗ್ ರಾಣಾ

ಪ್ರಥ್ವಿರಾಜನ ಸಮಾಧಿ 

Thursday, November 27, 2014

ವಿಶ್ವವ್ಯಾಪಿ ಸ್ಕಂದ


 

         
ಅಲೆಕ್ಸಾಂಡರ್ ದ ಗ್ರೇಟ್. ವಿಶ್ವವನ್ನೇ ಗೆಲ್ಲಹೊರಟ ಮಹಾವೀರ. ಈತ ಸಾಗಿಬಂದ ದೇಶಗಳೆಲ್ಲ ಇವನ ದಿಗ್ವಿಜಯವನ್ನು ನೋಡಿ ನಿಬ್ಬೆರಗಾಗಿ ಈತನನ್ನು ದೈವತ್ವಕ್ಕೇರಿಸಿ ದೇವಮಾನವನನ್ನಾಗಿಸಿವೆ. ಈತನ ಕುರಿತಾದ fairy taleಗಳೆಲ್ಲ ಗ್ರೀಕ್, ಲ್ಯಾಟಿನ್, ಸಿರಿಯಾ, ಇಥಿಯೋಪಿಯಾ, ಅರ್ಮೇನಿಯಾ, ಪರ್ಷಿಯಾ, ಅರಬ್ ಸೇರಿ ದೇಶದೇಶದ ಜನಪದದ ಬಾಯಲ್ಲಿ ಹರಿದಾಡಿ ಮನೆಮಾತಾಗಿದ್ದವು. ದೇವಮಾನವನೆಂದು ಘೋಷಿಸಿಕೊಂಡರೆ ಮನುಷ್ಯನನ್ನೇ ಪೂಜಿಸುವ ಜನ ನಾವು. ಇನ್ನು ಇಂಥ ಮಹಾವೀರನನ್ನು ಪೂಜಿಸದಿದ್ದರೆ? ಇಸ್ಲಾಂ ಮತ ಈತನನ್ನು ಪ್ರವಾದಿಯಾಗಿ ಸ್ವೀಕರಿಸಿ ಇಸ್ಕಂದರ್ ಎಂಬ ಹೆಸರು ನೀಡಿ ಆರಾಧಿಸತೊಡಗಿತು. ಅರಬ್ಬಿನಲ್ಲಿ ಈತ ದುಲ್ಕಾರ್ನೇನ್(ಎರಡು ಕೋಡಿನವ)ನೆಂದು ಹೆಸರಾದ. ಅರಬಿನ ಇಸ್ಕಂದರ್ ಪರ್ಶಿಯನ್ನಿನಲ್ಲಿ ಸಿಕಂದರ್ ಆಯಿತು. ಬುದ್ಧ ಜಾತಕ ಕಥೆಗಳಲ್ಲಿ ಬರುವ ಮೆಲಿಂದನೇ ಈ ಗ್ರೀಸೋ-ಬ್ಯಾಕ್ಟೇರಿಯನ್ ಅರಸು ಮೆನಂದರ್. ಮೆನಿಂದರ್ ಮೆಲಿಂದನಾದರೆ ಇಸ್ಕಂದರ್ ಏನಾಯ್ತು ಎಂಬ ಊಹೆ ನಿಮಗೆ ಬಿಟ್ಟಿದ್ದು. ಅಷ್ಟಕ್ಕೂ ಅಲೆಕ್ಸಾಂಡರ್ ಎಂಬವನೊಬ್ಬ ಚಕ್ರವರ್ತಿಯಿದ್ದನೇ? ಎಂಬ ಚರ್ಚೆ ಕೆಲ ಬೌದ್ಧಿಕ ಇತಿಹಾಸಕಾರರ ಮಧ್ಯೆ ಇನ್ನೂ ನಿಂತಿಲ್ಲ. ಇತಿಹಾಸದ ದೊಡ್ಡ ಕಷ್ಟವೆಂದರೆ ಹೆಚ್ಚಿನ ಆಧಾರಗಳೆಲ್ಲ ಲಿಖಿತ ರೂಪದಲ್ಲಿಲ್ಲದೇ ಇರುವುದು. factt ಮತ್ತು fictioinಗಳ ಮಧ್ಯೆ ತುಂಬ ತಿಳಿಯಾದ ವ್ಯತ್ಯಾಸವಿರುವುದು. ಇತಿಹಾಸ ಬಾಯಿಂದ ಬಾಯಿಗೆ ಹರಡಿ ಅದನ್ನು ಮತ್ಯಾರೋ ಬರೆದಿಡುವ ಹೊತ್ತಿಗೆ ಒಂದು ಹತ್ತಾಗಿರುತ್ತದೆ. ಅಸಲಿಗೆ ನಮ್ಮ ಇತಿಹಾಸದಲ್ಲೆಲ್ಲೂ ಜಕಣಾಚಾರಿಯೆಂಬ ವ್ಯಕ್ತಿಯೇ ಅಸ್ತಿತ್ವದಲ್ಲಿರಲಿಲ್ಲ. ಆದರೂ ಇವತ್ತಿಗೂ ಕರ್ನಾಟಕದ
ಅಲೆಕ್ಸಾಂಡರ್
ಆರುನೂರಕ್ಕೂ ಹೆಚ್ಚಿನ ದೇವಸ್ಥಾನಗಳನ್ನು ಆತ ನಿರ್ಮಿಸಿದ್ದನೆಂದು ಜನ ನಂಬಿಕೊಂಡು ಬರುತ್ತಿದ್ದಾರೆ. ಅಲೆಕ್ಸಾಂಡರಿನ ಬಗ್ಗೆ ಮೂಲಭೂತವಾಗಿ refere ಮಾಡಬಹುದಾದ ಆಕರಗಳು ಎರಡು. ಮೊದಲನೇಯದು  Arrian's Anabasis of Alexander ಮತ್ತು Plutarch's Life of Alexander. ಈ ಪ್ಲುಟಾರ್ಚ್ ಮತ್ತು ಅರಿನ್ ಇಬ್ಬರೂ ಸುಮಾರು ಕ್ರಿ.ಶ ಒಂದನೇ ಶತಮಾನದ ಅಂತ್ಯದಲ್ಲಿದ್ದ ಗ್ರೀಕ್ ಪ್ರಜೆಗಳು.
       ಅಲೆಕ್ಸಾಂಡರ್ ಅಥವಾ ಇಸ್ಕಂದರ್ ಒಬ್ಬ ರಾಜ’ಕುಮಾರ’. ಅವನೊಬ್ಬ ಸೇನಾನಿ ಅಥವಾ ಸೇನೆಯ ಅಧಿಪತಿ. ಇಸ್ಕಂದರ್‌ನ ಕೈಯಲ್ಲಿರುವುದು ದಂಡಾಯುಧದ ಆಕಾರದ ಭಲ್ಲೆ. ಇಸ್ಕಂದರ್ ಪರ್ಷಿಯಾವನ್ನು ಆಕ್ರಮಿಸಿ ಹೆಲನಿಕ್ ಸಾಮ್ರಾಜ್ಯವನ್ನು ಸ್ಥಾಪಿಸುವ ತನ್ನ ತಂದೆ ಫಿಲಿಪ್ ಆಫ್ ಮೆಸಡೋನಾದ ಆಸೆ ಪೂರೈಸಲು ದಂಡಯಾತ್ರೆ ಹೊರಟಿದ್ದು. ದಾರಾ ಅಥವಾ ದಾರಿಯಸ್‌ ಅಥವಾ ದಾರಯವುಸ್‌ನನ್ನು ಸೋಲಿಸಿದ್ದು ಇವನ ಜೀವಮಾನದ ಅತಿ ಮಹತ್ವದ ಘಟನೆ. ದಾರಿಯಸ್ ಎಂದರೆ ಪರ್ಷಿಯನ್ನಿನಲ್ಲಿ ರಕ್ಷಕ ಎಂದರ್ಥ. ದಾರಿಯಸ್ಸಿನ ಮರಣಾನಂತರ ಪರ್ಷಿಯಾದಲ್ಲಿ ಹಳೆಯ ದೇವರು ಮಜ್ದಾ ಅಹುರ್‌ನ ಜಾಗದಲ್ಲಿ ಇಸ್ಕಂದರ್ ಪ್ರತಿಷ್ಟಾಪಿಸಲ್ಪಟ್ಟ. ನಮ್ಮ ಪುರಾಣಗಳನ್ನು ಗಮನಿಸಿ. ’ಕುಮಾರ’ಸ್ವಾಮಿ ಅಥವಾ ಸುಬ್ರಹ್ಮಣ್ಯನೂ ದೇವಸೇನಾನಿ, ಧರಿಸಿದ್ದು ದಂಡಾಯುಧ, ಕೊಂದಿದ್ದು ತಾರಕನನ್ನು. ತಾರಕನಿಗೆ ರಕ್ಷಕ ಎಂಬರ್ಥವೂ ಇದೆ. ಹಾಗಾದರೆ ಈ ಮಜ್ದಾ ಅಹುರ್ ಏನು? ಅಹುರ್ ಎಂಬುದು ಅಸುರದ ಅಪಭೃಂಶ. ಮಜ್ದಾ ಎಂಬ ಶಬ್ದಕ್ಕೆ ಕೆಲ ಇತಿಹಾಸಕಾರರು ಮಹಿಷ, ಮಾಯಾ, ಮೇಧಗಳೆಂಬ ಅರ್ಥಗಳನ್ನೂ ಕೊಟ್ಟಿದ್ದಾರೆ. ಋಗ್ವೇದದ ’ಮಹಸ್ ಪುತ್ರಾಸೋ ಅಸುರಸ್ಯ ವೀರಃ’ ಶ್ಲೋಕವನ್ನಾಧರಿಸಿ ಮಜ್ದಾಕ್ಕೆ ಮಹಸ್ ಎಂಬರ್ಥ ಕೊಟ್ಟಿದ್ದೂ ಇದೆ. ಗ್ರೀಕರ ಬಾಯಲ್ಲಿ ಅಲೆಕ್ಸಾಂಡ್ರಿಯಾ ಅರಕೋಸಿಯಾ ಎಂದು ಹೆಸರಾಗಿದ್ದ ಪಟ್ಟಣದ ನಿಜನಾಮ ಕಂದಹಾರ್. ಇದು ಸ್ಕಂದ ಅಥವಾ ಕಂಧರ್‌ನಿಂದ ಉಧೃತವಾದದ್ದು.
        ಅಲೆಕ್ಸಾಂಡರ್ ಮದುವೆಯಾಗಿದ್ದು ಬಾಕ್ಟ್ರಿಯಾದ ರಾಜಕುಮಾರಿ ರೋಕ್ಸೇನಾಳನ್ನು. ಕುಮಾರಸ್ವಾಮಿ ಮದುವೆಯಾಗಿದ್ದು ಸೇನೆ ಅಥವಾ ದೇವಸೇನಾಳನ್ನು(ಇವಳು ಇಂದ್ರನ ಮಗಳೆಂದು ಕಥೆಗಳೂ, ಮೃತ್ಯುವಿನ ಮಗಳೆಂದು ಸ್ಕಂದಪುರಾಣವೂ ಹೇಳುತ್ತದೆ). ಪರ್ಷಿಯನ್ನಿನಲ್ಲಿ ರೊಕ್ಸಾನದ ಮೂಲ ಧಾತು ’ರಝ್’ ಅರ್ಥಾತ್ ಹೊಳೆ. ಸಂಸ್ಕೃತದ ’ದಿವ್’ ಧಾತುವಿಗೂ ಹೊಳೆಯೆಂಬರ್ಥವಿದೆ. ಇನ್ನು ಬ್ಯಾ‌ಕ್ಟ್ರಿಯಾವನ್ನು ಮೃತ್ಯುಲೋಕವೆಂದು ವರ್ಣಿಸುವ ಕಥೆಗಳು ಪರ್ಷಿಯನ್ನಿನಲ್ಲಿವೆ. ಅಲೆಕ್ಸಾಂಡರ್ ಹಿಂದೂಕುಷ್ ಪರ್ವತ ಶ್ರೇಣಿಯನ್ನು ದಾಟಿದಾಗ ಅದನ್ನು ಕೌಕಸೋಸ್ ಎಂದು ಕರೆದ. ಕೌಕಸಸ್ಸಿನ ಮೂಲರೂಪ ಗ್ರ್ಯಾಂಕಸಸ್(ಬಿಳಿಯ ಹಿಮ). ಕೌಕಸೋಸ್‌ನ್ನು ದಾಟಿದ್ದು ಇಸ್ಕಂದರಿನ ದೊಡ್ಡ ಭೌಗೋಳಿಕ ಯಶಸ್ಸೆಂದು ಕಥೆಗಳಲ್ಲಿ ಪರಿಗಣಿಸಲಾಗುತ್ತದೆ. ಹಿಂದ್‌ಕೋಶ್ ಹಿಂದೂಕುಶ್ ಆಗಿ ಅದರ ಅಪಭೃಂಶವೇ ಇಂಡಿಕಸ್ ಕೌಕಸಸ್. ಅಚ್ಚರಿಯೆಂದರೆ ಸುಬ್ರಹ್ಮಣ್ಯನಿಗೆ ಕ್ರೌಂಚಧಾರಣ ಎಂಬ ಹೆಸರೂ ಇದೆ. ಹಿಂದೂಕುಶ್ ಪರ್ವತಶ್ರೇಣಿಗೆ ಕಾಳಿದಾಸ ಕ್ರೌಂಚಪರ್ವತವೆಂದೂ, ಹಂಸ ಪಕ್ಷಿಗಳು ವಾರ್ಷಿಕವಾಗಿ ಈ ದಾರಿಯ ಮೂಲಕವೇ ತೆರಳುವುದರಿಂದ ಈ ಹೆಸರೆಂದೂ ಮೇಘದೂತದಲ್ಲಿ ವರ್ಣಿಸಿದ್ದಾನೆ. ಗ್ರಾಂಕಸಸ್ ಎಂಬುದು ಕ್ರೌಂಚದ proximate variantನಂತೆ ಕಂಡರೆ ಆಶ್ಚರ್ಯವಿಲ್ಲ. ಅಲೆಕ್ಸಾಂಡರ್‌ನ ದಿಗ್ವಿಜಯದಿಂದ ಸ್ಫೂರ್ತಿಗೊಂಡೇ ಅವನ ಸಮಕಾಲೀನನಾದ ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿದ್ದನಂತೆ(?!). ಆ ಕಾಲದಲ್ಲಿ ಭಾರತದಿಂದ ಹಿಡಿದು ಇಜಿಪ್ಟ್, ಗ್ರೀಕಿನವರೆಗೆ ಸ್ಕಂದನ ಆರಾಧನೆ ಹಬ್ಬಿತ್ತು. ಸೆಲ್ಯೂಕಸ್‌ನ ಮಗಳನ್ನು ಮದುವೆಯಾದ ಚಂದ್ರಗುಪ್ತನಿಂದ ಭಾರತ ಗ್ರೀಕುಗಳ ಪ್ರಭಾವ ಗಾಢವಾಗಿದ್ದರೆ ಆಶ್ಚರ್ಯವಿಲ್ಲ. ಪತಂಜಲಿಯ ಮಹಾಭಾಷ್ಯದ ’ಶಿವಃ ಸ್ಕಂದೋ ವಿಶಾಖಾ ಇತಿ ಮೌರ್ಯೈರ್ಹಿರಣ್ಯಾರ್ಥಿಭಿಃ(5-3-99)’ ಮತ್ತು ’ಅರ್ಥಿನಶ್ಚ ರಾಜಾನೋ ಹಿರಣ್ಯೇನ ಭವಂತಿ’ಗಳನ್ನು ಗಮನಿಸಿ. ಹಿರಣ್ಯಾರ್ಥಿಯಾಗಿರುವವರು ರಾಜರು(ಮೌರ್ಯ ಶಬ್ದೋಲ್ಲೇಖ ಗಮನಿಸಿ). ಇದೊಂಥರಾ ಧಾರ್ಮಿಕ ತೆರಿಗೆಯಿದ್ದಂತೆ. ರಥೋತ್ಸವಗಳಲ್ಲಿ, ಸಾರ್ವಜನಿಕ ಹಬ್ಬಗಳಲ್ಲಿ ಜನರಿಂದ ವಂತಿಗೆ ಸಂಗ್ರಹಿಸುವ ಕ್ರಮ ಮೌರ್ಯರ ಕಾಲದಲ್ಲಿತ್ತು. ಸಾರ್ವಜನಿಕರನ್ನೊಳಗೊಂಡ ಉತ್ಸವಗಳನ್ನು ರಾಜರು ಆಯೋಜಿಸುತ್ತಿದ್ದರು. ಬ್ಯಾಬಿಲೋನಿಯಾದಲ್ಲೂ ಭೂಮಿಯೆಲ್ಲ ದೇವರ ಸ್ವತ್ತಾದ್ದರಿಂದ ಧಾರ್ಮಿಕ ತೆರಿಗೆ ಕೊಡುವುದು ಆ ಕಾಲದಲ್ಲಿ ಕಡ್ಡಾಯವಾಗಿತ್ತಂತೆ. ಸುಬ್ರಹ್ಮಣ್ಯನಿಗೆ ಮಯೂರವಾಹನನೆಂಬ ಹೆಸರೂ ಇದೆ. ಮೌರ್ಯರ ಹೆಸರು ಬಂದಿದ್ದು ಮೊರಿಯಾ ಅಥವಾ ಮಯೂರ ಶಬ್ದದ ಮೇಲೆ. ಮೌರ್ಯ ಶಬ್ದದ ಹುಟ್ಟಿನ ಬಗ್ಗೆ, ಮಯೂರದ ಜೊತೆ ಅದಕ್ಕಿರುವ ಸಂಬಂಧದ ಬಗ್ಗೆ ಮಹಾವಂಶ, ದೀಪವಂಶಗಳಲ್ಲೂ ಉಲ್ಲೇಖಗಳಿವೆ. ಅಶೋಕನ ಸಾಂಚಿ ಇನ್ನಿತರ ಸ್ತೂಪಗಳಲ್ಲೂ ನವಿಲಿನ ಚಿತ್ರವಿದೆ. ಅಲೆಕ್ಸಾಂಡರಿನ ಆರಾಧನೆಯನ್ನು, ಉತ್ಸವವನ್ನು ಮೌರ್ಯರು ಶುರುಮಾಡುವುದಕ್ಕೂ ಸುಬ್ರಹ್ಮಣ್ಯನ ವಾಹನ ಮಯೂರವಾಗುವುದಕ್ಕೂ ಏನಾದರೂ ಸಂಬಂಧವಿದೆಯೇ?
        ಅಲೆಕ್ಸಾಂಡರನಿಗೆ ಆಡಿನಂತೆ ಎರಡು ಕೋಡುಗಳಿದ್ದವಂತೆ(?). ಅರೇನಿಕ್‌ನಲ್ಲಿ ಆತನ ಹೆಸರೇ ದುಲ್ಕಾರ್ನೆನ್ ಅಥವಾ ಎರಡು ಕೋಡುಳ್ಳವನು. ಅಲೆಕ್ಸಾಂಡರಿನ ಕೆಲ ಚಿತ್ರಗಳಲ್ಲೂ ಇದೇ ರೀತಿ ಆಡಿನ ಮುಖದಂತೆ ಅವನನ್ನು ಚಿತ್ರಿಸಿದ್ದನ್ನು ನೋಡಬಹುದು.
ವಿಷ್ಣುಃ ಸೂಕರರೂಪೇಣ ಮೃಗರೂಪೋ ಮಹಾಋಷಿಃ |
ಷಣ್ಮುಖಃ ಛಗರೂಪೇಣ ಪೂಜ್ಯತೇ ಕಿಮ್ ನ ಸಾಧುಭಿಃ ||
ವಿಷ್ಣು ವರಾಹರೂಪದಲ್ಲೂ ಷಣ್ಮುಖನು ಆಡಿನ ರೂಪದಲ್ಲೂ ಪೂಜಿಸಲ್ಪಡುತ್ತಾನೆನ್ನುತ್ತದೆ ಒಂದು ಶ್ಲೋಕ. ಮಧ್ಯದ ಲಿಂಕನ್ನು ನೀವೇ ಊಹಿಸಿಕೊಳ್ಳಿ.
ಛಗವಾಹನ

       ಅರಬ್ಬರಿಗೆ ಗ್ರೀಕಿನ ದೇವರು ದಿಯೋನಸಸ್‌ನ ಪರಿಚಯವಿತ್ತು. ಅಲೆಕ್ಸಾಂಡರ್ ಅರಬ್ಬಿನಲ್ಲಿದ್ದಾಗ ಅವನಿಗೂ ದಿಯೋನಸಸ್‌ಗೂ ಸಂಬಂಧ ಬೆಳೆಯಿತು. ಈತ ಕೂಡ ಆಡುಮುಖದ ದೇವ. ದಿಯೋನಸಸ್ ನನ್ನು ಗ್ರಿಕ್ ಪುರಾಣಗಳು ಸಸ್ಯಸಂಪತ್ತಿನ ದೇವರೆಂದಿವೆ. ಸ್ಕಂದನಿಗೆ ಭದ್ರಶಾಖನೆಂಬ ಹೆಸರಿದೆ(ಭದ್ರಶಾಖವೆಂದರೆ ದೊಡ್ಡ ಮರದ ಟೊಂಗೆ). ಗ್ರೀಕ್ ಮತ್ತು ಏಶಿಯಾಗಳಲ್ಲಿ ವಸಂತಕಾಲದ ವಸಂತೋತ್ಸವದಲ್ಲಿ ಮರ ಅಥವಾ ಗಿಡದ ಜೊತೆ ಲತೆ-ಬಳ್ಳಿಗಳನ್ನು ಮದುವೆ(symbolic wedding) ಮಾಡಿಸುವ ಸಂಪ್ರದಾಯವಿತ್ತು. ಕಾಳಿದಾಸನ ಕುಮಾರಸಂಭವದಲ್ಲೂ ’ಲತಾವಧೂಭ್ಯಸ್ತರ್ವೋಽಪ್ಯವಾಪುರ ವಿನಮ್ರ ಶಾಖ ಭುಜ ಬಂಧನಾನಿ’ ಎಂಬ ವರ್ಣನೆಯಿದೆ. ತಮಿಳು ಐತಿಹ್ಯಗಳ ಪ್ರಕಾರ ಸ್ಕಂದ ಮದುವೆಯಾಗಿದ್ದು ವಳ್ಳಿಯನ್ನು. ವಳ್ಳಿಯೆಂದರೆ ಬಳ್ಳಿ ಅಥವಾ ಲತೆ. ಗ್ರೀಕ್ ಪುರಾಣಗಳ ಪ್ರಕಾರ ದಿಯೋನಸಸ್ ದ್ವಿಜಾತ(ಎರಡು ಸಲ ಹುಟ್ಟಿದವನು). ಮೊದಲು ಬೆಂಕಿಯಿಂದ ಹುಟ್ಟಿ ನಂತರ ನೀರಿನಿಂದ ಜನಿಸಿದವ. ಕ್ರಿಶ್ಚಿಯಾನಿಟಿಯಲ್ಲಿ ಚಿಕ್ಕಮಕ್ಕಳಿಗೆ ಮಾಡಿಸುವ ಬ್ಯಾಪ್ಟಿಸಮ್ ಸಂಪ್ರದಾಯ ಗ್ರೀಕರ ಎರವಲು. ಬ್ಯಾಪ್ಟಿಸಮ್ ಆಫ್ ಫೈರ್ ಮತ್ತು ಬ್ಯಾಪ್ಟಿಸಮ್ ಆಫ್ ವಾಟರ್ ಎಂಬೆರಡು ಥರದ ಕ್ರಿಯೆಗಳನ್ನು ಚರ್ಚುಗಳಲ್ಲಿ ಮಕ್ಕಳಿಗೆ ಮಾಂತ್ರಿಕ ಶಕ್ತಿ ತುಂಬಲು ಮಾಡಿಸುವುದಿದೆ(ಇದು ನಮ್ಮ ಯಜ್ಞಗಳ ಕೊನೆಯಲ್ಲಿ ನಡೆಯುವ ಜಲಪ್ರೋಕ್ಷಣೆಯ ಮಾದರಿಯದ್ದು.) ಪರ್ವತದ ದೇವಿ ಮತ್ತು ಮಿಂಚಿನ ದೇವ ಸೆರೌನಿಯಾ(ಕೆರೌನಿಯಾ, ಸರವಣದ ಅಪಭೃಂಶವೇ ಸೆರೌನಿಯಾ ಆಗಿರಬಹುದೇ?, ಸರವಣದಿಂದ ಹುಟ್ಟಿದ್ದರಿಂದ ಸರವಣಭವ!)ರಿಂದ ಬೆಂಕಿ ಮತ್ತು ನೀರಿನಲ್ಲಿ ಹುಟ್ಟಿದವ ದಿಯೋನಸಸ್. ಗ್ರೀಕಿನ ಪರ್ವತದ ದೇವತೆಯ ಎರಡು ಸಿಂಹಗಳ ಮಧ್ಯ ಶೂಲಹಿಡಿದು ನಿಂತಿರುವ ಚಿತ್ರ ನೋಡಿದರೆ ನಮ್ಮ ಪರ್ವತರಾಜನ ಪುತ್ರಿ
ಶೂಲ ಹಿಡಿದು ಸಿಂಹದ ಜೊತೆ ನಿಂತ ಗ್ರೀಕರ ಸಿಬೆಲೆ ದೇವಿ
ಪಾರ್ವತಿಯ ನೆನಪಾಗುತ್ತದೆ. ಮಜಾ ಎಂದರೆ ಸ್ಕಂದನ ಜನ್ಮದಲ್ಲೂ ಇಂಥದ್ದೇ ಕಥೆಯಿದೆ. ಶಿವ, ಪಾರ್ವತಿಯರ ಶಕ್ತಿಯನ್ನು ಅಗ್ನಿಯು ಗಂಗೆಯಲ್ಲಿ ವಿಸರ್ಜಿಸಿದಾಗ ಮಗುವೊಂದು ಜನ್ಮತಾಳಿತಂತೆ. ಅದನ್ನು ಕೃತ್ತಿಕೆಯರು ಸಾಕಿದ್ದರಿಂದ ಕಾರ್ತಿಕೇಯನೆಂಬ ಹೆಸರು ಬಂತು. ಗ್ರೀಕ್ ಪುರಾಣಗಳಲ್ಲೂ ಥೇಟ್ ಇದೇ ಕಥೆ. ನೀರಿನಿಂದ ಹುಟ್ಟಿದ ಸಿಯೋನಸಸ್‌ನನ್ನು ಸಾಕಿದ್ದು ಹನ್ನೆರಡು ಅಪ್ಸರೆಯರು. ಅವರಲ್ಲಿ ಆರು ಹೈಯಾಡಸ್ ನಕ್ಷತ್ರದವರೂ ಇನ್ನಾರು ಪ್ಲೆಯಾಡಸ್(ಕೃತ್ತಿಕಾ) ನಕ್ಷತ್ರದವರು. ಮಹಾಭಾರತದ ವನಪರ್ವದ ೨೨೭ನೇ ಅಧ್ಯಾಯದಲ್ಲಿ ಒಂದು ಕಥಯಿದೆ. ವಸಿಷ್ಟ ಮತ್ತು ಆರು ಋಷಿಗಳು ಯಜ್ಞದಲ್ಲಿ ಅಗ್ನಿಯನ್ನಾಹ್ವಾನಿಸಿದಾಗ ಅವರ ಪತ್ನಿಯರ ಮೇಲೆ ಅಗ್ನಿ ಮೋಹಗೊಳ್ಳುತ್ತಾನೆ. ತನ್ನ ಆಸೆಯನ್ನು ಪೂರೈಸಿಕೊಳ್ಳಲು ಅಡಿಗೆಮನೆಯ ಒಲೆಯನ್ನು ಪ್ರವೇಶಿಸಿ ಅವರನ್ನು ನೋಡಿದರೂ, ತನ್ನ ಜ್ವಾಲೆಗಳಿಂದ ಅವರನ್ನು ಸ್ಪರ್ಶಿಸಿದರೂ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಸಾಧ್ಯವಾಗದೇ ಪರಿತಪಿಸುತ್ತಾನೆ. ಅಗ್ನಿಯನ್ನು ಪ್ರೇಮಿಸುತ್ತಿದ್ದ ಸ್ವಾಹಾ ದೇವಿ ಈ ವಿಷಯ ತಿಳಿಯಿತು. ಆಕೆ ಆರು ಋಷಿಪತ್ನಿಯರ ವೇಷಧರಿಸಿ ಅಗ್ನಿಯನ್ನು ಸೇರುತ್ತಾಳೆ. ಏಳನೇಯದಾಗಿ ಆರುಂಧತಿಯ ರೂಪಧರಿಸಿದಾಗ ಅರುಂಧತಿಯ ಪಾತಿವ್ರತ್ಯದ ಪ್ರಭಾವದಿಂದ ಅವಳಲ್ಲಿದ್ದ ಅಗ್ನಿಯ ಶುಕ್ರವು ಆರುಬಾರಿ ಸ್ಖಲಿಸುತ್ತದೆ. 
’ತತ್ ಸ್ಕನ್ನಮ್ ತೇಜಸಾ ತತ್ರ ಸಂವೃತಮ್ ಜನಯತ್ ಸುತಮ್ | 
ಋಷಿಭಿಃ ಪೂಜಿತಮ್ ಸ್ಕನ್ನಮ್ ಆನಯತ್ ಸ್ಕಂದತಾಮ್ ತತಃ ||’(ವನಪರ್ವ ಅಧ್ಯಾಯ ೨೭೭, ೧೮) 
ಸ್ಕನನಗೊಂಡಿದ್ದರಿಂದ ಹುಟ್ಟಿದ ಮಗುವನ್ನು ಋಷಿಗಳು ಸ್ಕಂದನೆಂಬ ಹೆಸರಿನಿಂದ ಪೂಜಿಸಿದರು.
ಅದೇ ಅಗ್ನಿ ಮುಂದೆ ರುದ್ರನಾದ. ’ರುದ್ರಮ್ ಅಗ್ನಿಮ್ ದ್ವಿಜಃ ಪ್ರಾಹುಃ’(ವನಪರ್ವ ಅಧ್ಯಾಯ ೨೭೭, ೩೫)
ರುದ್ರಸೂನುಮ್ ತತಃ ಪ್ರಾಹುಃ ಗುಹಂ ಗುಣವತಾಮ್ ವರಂ | ಆನುಪ್ರವಿಷ್ಯ ರುದ್ರೇಣ ವಹ್ನಿಂ ಜಾತೋಽಹಿ ಅಯಮ್ ಶಿಶುಃ | ತತ್ರ ಜಾತಃ ತತಃ ಸ್ಕಂದೋ ರುದ್ರೋನುಃತತೋ ಭವತ್ | ರುದ್ರಸ್ಯ ವಹ್ನೇಃ ಸ್ವಾಹಾಯಾಃ ಶನ್ನಾಂ ಸ್ರೀನಾಂ ಚ ತೇಜಸಾ | ಜಾತಃ ಸ್ಕದಃ ಸುರಸ್ರೇಷ್ಟೋ ರುದ್ರಸೂನುಃ ತತೋ ಭವತ್ |
ಮೊದಲಿದ್ದ ಅಗ್ನಿಯ ಜಾಗಕ್ಕೆ ರುದ್ರ ಬಂದ. ಅಗ್ನಿ ಕೇವಲ ವಾಹಕನಾಗಿ ಉಳಿಯಬೇಕಾಯಿತು. ಸ್ವಾಹಾ ಹೋಗಿ ಆರು ಜನ ಕೃತ್ತಿಕೆಯರಾದರು. ಮುಂದೆ ಶಲ್ಯಪರ್ವದಲ್ಲಿ ’ಕೇಚಿದ್ ಏನಮ್ ವ್ಯ್ವಸ್ಯಂತಿ ಪಿತಾಮಹಸುತಮ್ ಪ್ರಭುಮ್ | ಸನತ್ಕುಮಾರಮ್ ಸರ್ವೇಶಮ್ ಬ್ರಹ್ಮಯೋನಿಮ್ ತಮಗ್ರಜಮ್ || ಕೇಚಿದ್ ಮಹೇಶ್ವರಸುತಮ್ ಕೇಚಿತ್ ಪುತ್ರಮ್ ವಿಭಾವಶೋಃ | ಉಮಾಯಾಃ ಕೃತ್ತಿಕಾನಾಂ ಚ ಗಂಗಾಯಾಶ್ಚ ವದಂತಿ ಉತ ||’ ಕೆಲವರು ಅವನನ್ನು ಬ್ರಹ್ಮನ ಮಗನೆಂದರೆ, ಇನ್ನು ಕೆಲವರು ಸನತ್ಕುಮಾರನೆಂದೂ, ಶಿವನ ಮಗನೆಂದೂ, ಅಗ್ನಿಜಾತನೆಂದೂ, ಉಮೆಯ ಮಗನೆಂದೂ, ಕೃತ್ತಿಕೆ ಮತ್ತು ಗಂಗೆಯರ ಮಗನೆಂದೂ ವಿವಿಧ ರೀತಿಯಿಂದ ತಿಳಿಯುತ್ತಾರೆ.
ಈ ದಿಯೋನಸ್ ಝಿಯುಸ್‌ನ ಮಗ. ಝಿಯುಸ್ ಎಂಬುದು ಸಂಸ್ಕೃತದ ’ದ್ಯೌಸ್’ನ ಅಪಭೃಂಶ. ವೇದಗಳಲ್ಲಿ ರುದ್ರನ ಉಲ್ಲೇಖವಿದೆ, ಈ ಶಿವನಿಗೂ ಝಿಯುಸ್‌ನಿಗೂ ಏನು ಸಂಬಂಧ?...
(ಓದಿ: The Cult of Kumara in the Religious History of South India and Ceylon)
     ಮೊನ್ನೆ ಮಿತ್ರರಾದ ರವೀಂದ್ರ ಇರಾಕಿನಲ್ಲಿ ನಡೆಯುತ್ತಿರುವ ಯಾಝಿದಿಗಳ ನರಮೇಧದ ಬಗ್ಗೆ ಕೇಳಿದ್ದರು. ಇವರು ಉತ್ತರ ಇರಾಕ್ ಮತ್ತು ಟರ್ಕಿಯಲ್ಲಿ ಕುರ್ದಿಶ್ ಜನಾಂಗವೆಂಬುದನ್ನು ಬಿಟ್ಟರೆ ನನಗೇನೂ ಹೆಚ್ಚಿನ ಮಾಹಿತಿಯಿರಲಿಲ್ಲ. ಸ್ಕಂದದನ್ನು ಹುಡುಕುವಾಗ ಯಾಜಿದಿಗಳಿಗೂ ಸ್ಕಂದ ಮತ್ತು ಪ್ರಾಚೀನ ತಮಿಳಿಗೂ ಇರುವ ಕೆಲ ಇಂಟರೆಸ್ಟಿಂಗ್ ಸಾಮ್ಯತೆಗಳು ತಿಳಿದವು. ಟರ್ಕಿ ಹಿಂದೆ ಅನತೋಲಿಯಾ ಎಂದು ಕರೆಯಲ್ಪಡುತ್ತಿತ್ತು. ಅನಲ್ ಎಂದರೆ ಬೆಂಕಿ, ತೋಲ್ ಎಂದರೆ ಚರ್ಮ. ಅನತೋಲಿಯಾ ಎಂದರೆ ಬೆಂಕಿಯಂತೆ ಕೆಂಪಾದ ಚರ್ಮವನ್ನು ಹೊಂದಿರುವವರು. ತಮಿಳಲ್ಲಿ ಕುರುದಿ ಅಂದರೆ ರಕ್ತ. ಇದಕ್ಕೂ ಕುರ್ದಿಶ್‌ಗೂ ಏನಾದರೂ ಸಂಬಂಧವಿರಬೇಕು. ರಕ್ತದಂತೆ ಕೆಂಪಾದ ಜನರಿರುವ ಜಾಗವೆಂದೇ! ಪ್ರಾಯಶಃ ಅರಬ್ ಮತ್ತು ಮೆಸಪೋಟಮಿಯಾದಲ್ಲಿ ಸುನ್ನತ್ ಮಾಡಿಸದೇ ಇರುವ, ಇಂದಿಗೂ ಕೂಡ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳ ಪ್ರಭಾವಕ್ಕೆ ಅಷ್ಟಾಗಿ ಒಳಪಡದ ಏಕೈಕ ಜನಾಂಗವೆಂದರೆ ಯಾಝಿದಿಗಳೇ ಏನೋ. ಇವರ ಮುಖ್ಯ ದೈವ ’ತವಾಯ್ ಮೇಲಕ್ ಅಥವಾ ಪೀಕಾಕ್ ಕಿಂಗ್’. ದೇವರು ತನ್ನ ಮಗ ತವಾಯ್ ಮೇಲಕ್ ಅಥವಾ ಪೀಕಾಕ್ ಕಿಂಗ್(ನವಿಲುಗಳ ರಾಜ)ನಿಗೆ ಸಹಾಯ ಮಾಡಲು ಆರು ಜನ ಅಪ್ಸರೆಯರನ್ನು ಸೃಷ್ಟಿಸಿದನಂತೆ. ಸ್ಕಂದ ಮತ್ತು ಆರು ಕೃತ್ತಿಕೆಯರು ನೆನಪಾದರೇ? ಅವರ ಧಾರ್ಮಿಕ ಆಚರಣೆಯಲ್ಲಿರುವ ಮುಖ್ಯ ಅಂಗವೇ ನವಿಲಿನ ಚಿತ್ರವಿರುವ ದೀಪ. ವಿಚಿತ್ರವೆಂದರೆ ಇರಾಕ್, ಟರ್ಕಿ ಸೇರಿ ಪೂರ್ವ ಏಷಿಯಾದಲ್ಲೆಲ್ಲೂ ನವಿಲುಗಳೇ ಕಂಡುಬರುವುದಿಲ್ಲ. ನವಿಲುಗಳ ವಾಸವೇನಿದ್ದರೂ ಭಾರತ ಉಪಖಂಡದ ಸುತ್ತಮುತ್ತ ಮತ್ತು ಆಫ್ರಿಕಾದ ಕೆಲ ಜಾಗಗಳಷ್ಟೆ. ಅವರ ಪವಿತ್ರ ಕ್ಷೇತ್ರ ಲಾಲಿಶ್ ಮಂದಿರದ ಮುಖ್ಯದ್ವಾರದೆದುರು ಹಾವಿನ ಚಿತ್ರವಿದೆ. ಹಾವು, ನವಿಲು ಎಲ್ಲವೂ ಸ್ಕಂದನ ಸಂಕೇತಗಳು. ಲಾಲಿಶ್ ಮಂದಿರದ ಗೋಡೆಯೊಂದರ ಮೇಲಿರುವ ಚಿತ್ರ ನೋಡಿದಮೇಲಂತೂ ಅವರು ಭಾರತದ ಮೂಲನಿವಾಸಿಗಳಾಗದೇ ಇರಲು ಸಾಧ್ಯವೇ ಇಲ್ಲ ಎನ್ನಿಸುತ್ತಿದೆ.

ಯಾಝಿದಿಗಳ ಪೂಜಾಸ್ಥಳ








ಯಾಝಿದಿ ಮಂದಿರದೆದುರಿರುವ ಹಾವಿನ ಚಿತ್ರ


ನವಿಲಿನ ಆಕೃತಿಯ ದೀಪ
ಹಿಂದೂಗಳಂತೆ ದೇವಾಲಯದಲ್ಲಿ ದೀಪ ಬೆಳಗುವ ಪರಂಪರೆ



 
ಯಜಿದಿಗಳ ತವಾಯ್ ಮೇಲಕ್ ಮತ್ತು ಹಿಂದೂಗಳ ಸ್ಕಂದ



Tuesday, October 14, 2014

ಪೆನುಗೊಂಡ ಕೊಂಡ


      
       ಸುಮಾರು ಎರಡು ವರ್ಷಗಳ ಹಿಂದೆ. ಬೆಳ್ಳ೦ಬೆಳಗೆ ನಾಲ್ಕು ಗ೦ಟೆಗೆ ನಾನಿದ್ದ ಹಿ೦ದೂಪುರದಿ೦ದ ಮೊದಲ ಬಸ್ ಹಿಡಿದು ಪುಟ್ಟಪರ್ತಿಗೆ ಹೊರಟಿದ್ದೆ. ಸೋಮಂದೇಪಲ್ಲಿ ಕ್ರಾಸ್ ದಾಟಿ ಬೆ೦ಗಳೂರು ಅನ೦ತಪುರ ಹೆದ್ದಾರಿಯಲ್ಲಿ ಸುಮಾರು ಕಾಲು ಗ೦ಟೆ ಪ್ರಯಾಣಿಸಿದರೆ ಪೆನುಗೊ೦ಡ ಕ್ರಾಸ್. ಎದುರಿನಲ್ಲಿ ಶ್ರೀಕೃಷ್ಣದೇವರಾಯನ ಬೃಹತ್ ಪ್ರತಿಮೆ. ಥೇಟ್ ರಾಜಕುಮಾರನ ಮುಖದ ಗೆಟಪ್ಪಿನದು. ಎಡಕ್ಕೆ ತಿರುಗಿದರೆ ಪೆನುಗೊ೦ಡ ಸಿಟಿ. ಚೂರು ಕಿಟಕಿ ಸರಿಸಿ ತಂಗಾಳಿಗೆ ಮುಖವೊಡ್ಡಿ ನಿದ್ದೆ ಮ೦ಪರಲ್ಲಿದ್ದವನಿಗೆ ಬಸ್ಸು ನಿಲ್ಲಿಸಿದ್ದರಿ೦ದ ಎಚ್ಚರವಾಯ್ತು. ಹೆಚ್ಚು ಕಮ್ಮಿ ಮುಕ್ಕಾಲು ಬಸ್ಸು ಖಾಲಿ ಹೊಡೆಯುತ್ತಿತ್ತು. ಮಬ್ಬು ಮಬ್ಬು ಬೆಳಕಲ್ಲಿ ಗಡಿಯಾರ ನೋಡಿಕೊ೦ಡರೆ ಗ೦ಟೆ ನಾಲ್ಕೂಮುಕ್ಕಾಲಾಗಿರಬಹುದು, ಇನ್ನೂ ಬೆಳಗಾಗಿರಲಿಲ್ಲ. ಸುತ್ತಲೆಲ್ಲ ಒ೦ಥರ ಮ೦ಜು ಮ೦ಜು. ಸಣ್ಣಗೆ ಮೈಮುರಿದು, ಕಣ್ಬಿಟ್ಟು ನೋಡಿದರೆ ರಸ್ತೆಬದಿ ನೂರಾರು ಜನ ದೊಡ್ಡ ದೊಡ್ಡ ಬ್ಯಾಗುಗಳೊಡನೆ ನಿ೦ತಿದ್ದರು. ತಾಲೂಕಾಗಿದ್ದರೂ ಅದೇನು ಅ೦ಥ ದೊಡ್ಡ ಪಟ್ಟಣವಲ್ಲ, ಚಿಕ್ಕ-ಚಿಕ್ಕ ಗಲ್ಲಿಗಳು, ಶತಮಾನಗಳಿಂದ ಟಾರು ಕಾಣದ ಪೇಟೆಯ ರಸ್ತೆಗಳು, ನೊಣ ಹಾರುವ ತಿಪ್ಪೆಯ ರಾಶಿ ರಾಶಿ, ರಸ್ತೆಯ ಚೂರು ಜಾಗವನ್ನೂ ಬಿಡದೇ ಆಕ್ರಮಿಸಿಕೊಂಡಿರುವ ವ್ಯಾಪಾರಿಗಳು, ಕೊಳೆತು ನಾರುವ ಚರಂಡಿಗಳೆಲ್ಲ ಪೆನುಗೊಂಡದ ಟ್ರೇಡ್‌ಮಾರ್ಕ್. ಅವುಗಳ ಮಧ್ಯ ಒಂದು ಪೆನುಗೊಂಡದ ಊರಹೊರಗಿನ ವಿಜಯನಗರದ ಕೋಟೆ, ಮತ್ತೊಂದು ಬಾಬಾಯ್ ಸಾಹೇಬ್ ದರ್ಗಾ ಅಲ್ಲಿನ ಎರಡು ಪ್ರಸಿದ್ಧ ಸ್ಥಳಗಳು. ಅವತ್ತು ಹೇಳಿಕೊಳ್ಳುವ೦ಥ ಯಾವ ವಿಶೇಷದ ದಿನವೂ ಆಗಿರಲಿಲ್ಲ. ಇಷ್ಟು ಚಿಕ್ಕ ಊರಲ್ಲಿ ಅಷ್ಟು ಜನರನ್ನು ಕ೦ಡು ಆಶ್ಚರ್ಯವೇ ಆಯಿತು. ಅದೂ ಬೆಳ್ಳಂಬೆಳಗ್ಗೆ! ಬಸ್ಸು ಪೆನುಗೊ೦ಡದ ಒಳಗೆ ಹೊಕ್ಕ೦ತೆ ಹತ್ತಾರು ಆ೦ಬುಲೆನ್ಸುಗಳು, ಪೋಲಿಸ್ ಜೀಪುಗಳು ಟೊ೦ಯ್ಯ ಟೊ೦ಯ್ಯ ಎ೦ದು ಸದ್ದು ಮಾಡುತ್ತ ಹರಿದಾಡತೊಡಗಿದವು. ಊರಿಡೀ ಪೋಲೀಸರೇ ಪೋಲೀಸರು. ಬಸ್ಸಲ್ಲಿದ್ದ ಮೂರು ಮತ್ತೊಂದು ಜನ ನಿದ್ದೆಗಣ್ಣಲ್ಲಿದ್ದರು. ಹತ್ತು ಹದಿನೈದು ನಿಮಿಷವಾದರೂ ಬಸ್ಸು ಅಲುಗಾಡಲಿಲ್ಲ. ಪೆನುಗೊ೦ಡ ನನಗೆ ತೀರ ಪರಿಚಿತ ಊರು. ಒಳಗೊಳಗೇ ನಿಧಾನಕ್ಕೆ ಹೆದರಿಕೆ ಶುರುವಾಯ್ತು. ಹಾರ್ಟು ಪುಕು ಪುಕು. ಬೆನ್ನಮೂಳೆಯ ಕೆಳಗೆಲ್ಲ ಚುಳುಕ್ ಚುಳುಕ್. ಹೇಳಿಕೇಳಿ ಅದು ಪೆರಿಟಾಲ ರವಿಯ ತವರು.ಇಲ್ಲಿನ ಮನೆ ಮನೆಗಳಲ್ಲಿ ರಕ್ತಚರಿತ್ರೆಗಳಿವೆ. ಎಷ್ಟೋ ಸಾರಿ ಕಾರಣಗಳೇ ಇಲ್ಲದೇ ಸುಖಾಸುಮ್ಮನೆ ಇಲ್ಲಿ ಹೆಣಗಳುರುಳುತ್ತವೆ. ನಾವು ನೊಣ ಹೊಡೆದ೦ತೆ ಇಲ್ಲಿ ಮನುಷ್ಯರನ್ನು ಹೊಡೆದು ಬಿಸಾಕಿದ ನೂರಾರು ಕಥೆಗಳಿವೆ. ಅದೇ ಥರ ಏನಾದರೂ ನಡೆಯಿತೇ ಅಥವಾ ನಕ್ಸಲರು ಯಾರನ್ನೋ ಒತ್ತೆಯಾಳಾಗಿರಿಸಿಕೊ೦ಡರೇ, ಅವರ ಮತ್ತು ಪೋಲೀಸರ ನಡುವೆ ಎನ್-ಕೌ೦ಟರ್ ಏನಾದರೂಽಽಽಽಽಽಽ ಎ0ದು ಕಣ್ಣಮು೦ದೆ ರಾಮಗೋಪಾಲ್ ವರ್ಮರ ರಕ್ತಚರಿತ್ರೆಯಲ್ಲಿನ ಪೆರಿಟಾಲ ರವಿಯ ಅಪ್ಪ ಶ್ರೀರಾಮುಲುವನ್ನು ಬಸ್ಸಿ೦ದ ಇಳಿಸಿ ಎಲ್ಲರೆದುರು ಮರ್ಡರ್ ಮಾಡಿದ ಸೀನ್ ಹಾದುಹೋಯ್ತು.
ಪೆರಿಟಾಲ ರವಿ.....
        ಆತ ಹುಟ್ಟಿದ್ದು ಅಲ್ಲಿಗೆ ಸಮೀಪದ ವೆ೦ಕಟಾಪುರದಲ್ಲಿ. ಅಲ್ಲಿ೦ದ ಅತ ಐದು ಬಾರಿ ಎಮ್ಮೆಲ್ಲೆಯಾಗಿ ಆರಿಸಿಬ೦ದವ. ಅವನ ಬಗ್ಗೆ ನೀವು ಕೇಳಿರಬಹುದು. ಅವನ ವಿಷಯ ತಿಳಿಯದಿದ್ದರೂ ರಾಮಗೋಪಾಲವರ್ಮಾನ ರಕ್ತಚರಿತ್ರ ಸಿನೆಮಾ ನೋಡಿರಬಹುದು. ಒ೦ದು ಕಾಲದಲ್ಲಿ ಅನ೦ತಪುರವೆ೦ಬ ಭಾರತದ ಅತಿದೊಡ್ಡ ಜಿಲ್ಲೆ ರವಿಯ ಹೆಸರು ಕೇಳಿದರೆ ಗಡಗಡ ನಡುಗುತ್ತಿತ್ತು. ಇವನ ಅಪ್ಪ ಪೆರಿಟಾಲ ಶ್ರೀರಾಮುಲು ಆಗಿನ ಕಾಲಕ್ಕೆ C.P.I(M.L) ಸೇರಿ ಆ೦ಧ್ರದ ದೊಡ್ಡ ಕಮ್ಯುನಿಸ್ಟ್ ಲೀಡರ್ ಆಗಿದ್ದವ. ಕಮ್ಯುನಿಸ್ಟರ ಜೊತೆ ಸೇರಿ ಹಾಳಾಗಿ ತನ್ನ ಮುನ್ನೂರು ಎಕರೆ ಹೊಲವನ್ನ ಬಡವರಿಗೆ ದಾನ ಮಾಡಿದವ. ಅಷ್ಟಾದರೆ ದೊಡ್ಡ ವಿಷಯವಿಲ್ಲ. ಊರ ಉಸಾಬರಿ ಮೈಮೇಲೆ ಹಾಕ್ಕೊಂಡು ಅಲ್ಲಿನ ಲ್ಯಾಂಡು ಲಾರ್ಡುಗಳಾದ ಸಾನೆ ಚೆನ್ನಾ ರೆಡ್ಡಿ, ಗಂಗುಲ ನಾರಾಯಣ ರೆಡ್ಡಿ ಮತ್ತಿತರರ 500 ಎಕರೆ ಹೊಲವನ್ನೂ ಹಂಚಿದ. ಜಾತಿ ಜಗಳ ಶುರುವಾಯ್ತು. ಯಾಕಪ್ಪಾ ಬೇಕಿತ್ತು ಇವ್ನಿಗೆ ದೊಡ್ಡವ್ರ ಸಹವಾಸ? ಬಿಡ್ತಾರಾ ಅವ್ರು? 1975ರಲ್ಲಿ ಒ೦ದು ದಿನ ಬೆಳ್ಳ೦ಬೆಳ್ಳಗೆ ಯಾರದ್ದೋ ಮದುವೆಗೆ ಬಸ್ಸಲ್ಲಿ ಹೋಗ್ತಾ ಇದ್ದವನನ್ನು ಪೆನುಗೊ೦ಡದ ಹತ್ತಿರ ಬಕ್ಸ೦ಪಲ್ಲಿ ಕ್ರಾಸಲ್ಲಿ ಬಸ್ಸಿ೦ದ ಇಳಿಸಿ ಶೂಟ್ ಮಾಡಿ ತಲೆ ಮೇಲೆ ಕಲ್ಲು ಎತ್ತಾಕಿ ಸಾಯಿಸಿಬಿಟ್ರು. ಮಾಜಿ ಶಾಸಕರಾದ ಗ೦ಗುಲ ನಾರಾಯನ ರೆಡ್ಡಿ, ಸಾನೆ ಚೆನ್ನಾ ರೆಡ್ಡಿ ಈ ಪ್ರಕರಣದ ಪ್ರಧಾನ ಭೂಮಿಕೆಯಲ್ಲಿದ್ದವರು. 1982ರಲ್ಲಿ ರವಿಯ ತಮ್ಮ ಪರಿಟಾಲ ಹರಿಯನ್ನು ನೂರಾರು ಜನರೆದುರು ಪೋಲೀಸರು ಗು೦ಡು ಹಾರಿಸಿ ನಕಲಿ ಎನ್-ಕೌ೦ಟರಿನಲ್ಲಿ ಮುಗಿಸಲಾಯ್ತು. once again prime conspirators are ಗ೦ಗುಲ ಮತ್ತು ಸಾನೆ ರೆಡ್ಡಿ. ಅಲ್ಲಿಗೆ ಶುರುವಾಯ್ತು ನೋಡಿ ರಾಯಲಸೀಮೆಯಲ್ಲಿ ರಕ್ತಚರಿತ್ರೆಯ ಹೊಸದೊಂದು ಅಧ್ಯಾಯ. ಸಮಯಕ್ಕಾಗಿ ಕಾದುಕೂತು ನಕ್ಸಲರ ಜೊತೆ ಕೈಜೋಡಿಸಿ ತ೦ದೆಯ ಕೊಲೆಗಾರರನ್ನೆಲ್ಲ ಹೆಕ್ಕಿ ಹೆಕ್ಕಿ ಕೊ೦ದ ರವಿ ಮುಂದೆ ಚುನಾವಣೆ ಗೆದ್ದು ಮ೦ತ್ರಿಯೂ ಆದ. ಅನಂತಪುರದ ಹೋಟೆಲ್ ಒಂದರಲ್ಲಿ ಗಂಗುಲ ರೆಡ್ಡಿಯ ಹೆಣ ಬಿತ್ತು. ಧರ್ಮಾವರಂನ ಮನೆಯಲ್ಲಿ ಸಾನೆ ಚನ್ನಾರೆಡ್ಡಿಯ ಕಥೆ ಮುಗಿಯಿತು. ಹೈದ್ರಾಬಾದಿನ ಲಾಡ್ಜೊಂದರಲ್ಲಿ ಅವನ ಮಗ ಓಬುಳಾ ರೆಡ್ಡಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈಯಲಾಯ್ತು. ಗಂಗುಲ ನಾರಾಯಣರೆಡ್ಡಿಯ ಮಗ ಸೂರ್ಯನಾರಾಯಣ ರೆಡ್ಡಿ ಅಲಿಯಾಸ್ ಮದ್ದಲಚೆರವು ಸೂರಿಯನ್ನು ಮುಗಿಸಲು ಅವನ ಮನೆಯ ಟಿವಿಯಲ್ಲಿ ಬಾಂಬಿಟ್ಟರೂ ಅವನ ಅದೃಷ್ಟ ನೆಟ್ಟಗಿದ್ದ ಪರಿಣಾಮ ಮನೆಯವರೆಲ್ಲ ಸತ್ತರೂ ಈತ ಹೇಗೋ ಬಚಾವಾದ. ಅಲ್ಲಿಗೆ ರಕ್ತಚರಿತ್ರ ಪಾರ್ಟ್ ಟೂ ಶುರು. 1997ರಲ್ಲಿ ಹೈದ್ರಾಬಾದಿನ ಜೂಬಿಲಿ ಹಿಲ್ಸಿನಲ್ಲಿ ದೇಶದ ಇತಿಹಾಸದಲ್ಲೇ ಮೊದಲ ಬಾರಿ ರಿಮೋಟ್ ಕಂಟ್ರೋಲ್ ಬಾಂಬ್ ಬಳಸಿ ರವಿಯನ್ನು ಕೊಲ್ಲಲು ಪ್ರಯತ್ನಿಸಲಾಯ್ತಾದರೂ ಇಪ್ಪತ್ತಾರು ಜನ ಸತ್ತು ಆತ ಹೇಗೋ ಬಚಾವಾದ. ಇದೇ ಕೇಸಿನಲ್ಲಿ ಸೂರಿ ಒಳಗೆ ಹೋದ. 2004ರಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿದ್ದ ಸೂರಿಯ ಹೆಂಡತಿ ಭಾನುಮತಿಯ ವಿರುದ್ಧ ತೆಲಗುದೇಶಂ ಟಿಕೆಟಿನಿಂದ ಐದನೇ ಬಾರಿ ಪರಿಟಾಲ ಗೆದ್ದನಾದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಅಷ್ಟರೊಳಗೆ 12 ಬಾರಿ ರವಿಯ ಮೇಲೆ ಅಟ್ಯಾಕ್ ನಡೆದಿತ್ತು. ಪ್ರತಿಬಾರಿಯೂ ಬಚಾವಾದ. ಆದರೆ everyday is not sunday. ಗ್ಯಾಂಗಿನ ಒಬ್ಬೊಬ್ಬರನ್ನೇ ಮುಗಿಸಿದ ಸೂರಿಯ ಪಡೆ 2005ರಲ್ಲಿ ಪರಿಟಾಲ ರವಿಯ ಕಥೆಯನ್ನೂ ಮುಗಿಸಿತು. ಇದೇ ಕಥೆಯ ಮೇಲೆ ರಾಮಗೋಪಾಲ್ ವರ್ಮಾ ಎರಡೆರಡು ಚಿತ್ರ ನಿರ್ದೇಶಿಸಿದ್ದ. ದುರದೃಷ್ಟವೆಂದರೆ ಈ ಚಿತ್ರವನ್ನು ನೋಡಿ ಬರುತ್ತಿದ್ದ ಸೂರಿಯ ಕಥೆ ಹೈದ್ರಾಬಾದಿನ ಅದೇ ಜೂಬಿಲಿ ಹಿಲ್ಸ್‌ನಲ್ಲಿ ತಲೆಗೆ ಗುಂಡಿಟ್ಟು ಢಮಾರ್....
ನನ್ನ ತಲೆ ಮುಟ್ಟಿ ನೋಡ್ಕೊ೦ಡೆ. ಎಲ್ಲ ಸರಿಯಾಗಿತ್ತು ಪುಣ್ಯ. ಕಣ್ಣುಜ್ಜಿಕೊ೦ಡು ಆಚೆಈಚೆ ನೋಡಿದ್ರೆ ಬಸ್ಸಲ್ಲಿದ್ದವ್ರು ಮೂರೇ ಜನ ನನ್ನನ್ನೂ ಸೇರಿಸಿ. ಡ್ರೈವರ್-ಕ೦ಡಕ್ಟರ್ ಇಳಿದು ಎಲ್ಲೋ ಹೋಗಿಯಾಗಿತ್ತು. ಎದುರಿನ ಸೀಟಲ್ಲಿ ಮಲಗಿದ್ದವನನ್ನು ನಿಧಾನಕ್ಕೆ ತಟ್ಟಿ ಎಬ್ಬಿಸಿ ’ಅನ್ನಾ, ಏಮಾಯಿ೦ದಿ?’ ಎ೦ದೆ. ’ನಾಕೇಮ್ ತೆಲುಸ್ರಾ ಬಾಬು’ ಎ೦ದವ ಮತ್ತೆ ನಿದ್ದೆಗೆ ಜಾರಿದ. ’ಹಾಳಾದವ್ನೆ, ಗ್ಯಾ೦ಗ್ವಾರಲ್ಲಿ ಮರ್ಡರ್ ಆಗೋಗು’ ಅ೦ತಾ ಶಾಪ ಕೊಟ್ಟು ಬಸ್ಸಿಳಿದೆ. ಜನರೆಲ್ಲ ಎಲ್ಲೋ ಓಡುತ್ತಾ ಇದ್ರು. ಕ್ಯೂರಿಯಾಸಿಟಿಯೋ, ಮಣ್ಣಾಂಗಟ್ಟಿಯೋ! ಏನಾಯ್ತೆಂದು ನೋಡಲು ಜೊತೆಗೆ ನಾನೂ ಓಡಿದೆ. ಅಬ್ಬ ಆ ದೃಶ್ಯ ನೋಡಿಯೇ ನನ್ನ ತಲೆ ತಿರುಗಿತ್ತು. ಆಗಷ್ಟೆ ಫ್ರೆಶ್ ಆಗಿ ಒ೦ದು ಗೂಡ್ಸ್ ರೈಲು ಮತ್ತೊ೦ದು ಹ೦ಪಿ ಎಕ್ಸ್‌ಪ್ರೆಸ್ ಎರಡೂ ಒ೦ದಕ್ಕೊ೦ದು ಢಿಕ್ಕಿ ಹೊಡೆದು ಒ೦ದು ರೈಲ೦ತೂ ಹಳಿಯಿ೦ದ ನೂರಿನ್ನೂರು ಅಡಿ ಹಾರಿ ಆಚೆ ಹೋಗಿ ಬಿದ್ದಿತ್ತು. ನನ್ನ ಜೀವಮಾನದಲ್ಲೇ ಅ೦ಥ ಒ೦ದು ಭೀಕರ ಅಪಘಾತವನ್ನು ಹಿ೦ದೆ ನೋಡಿಲ್ಲ, ಮು೦ದೆ ನೋಡೋದೂ ಬೇಡ. ಕನಿಷ್ಟ ಮೂವತ್ತು ಜನ ಕೈಲಾಸ ಸೇರಿಯಾಗಿತ್ತು. ಅಷ್ಟೊತ್ತಿಗೆ ’ಲೇ, ನೂವಸ್ತಾವಾ ಲೇದಾ?, ಮನಕಿ ಪೋವಾಲಿ’ ಅ೦ತ ಆವಾಜ್ ಹಾಕಿದ ಕ೦ಡಕ್ಟರು. ಓಡಿ ಹೋಗಿ ಬಸ್ ಹತ್ತಿ ಕೂತೆ. ಪುಟ್ಟಪರ್ತಿ ಅರ್ಧಮುಕ್ಕಾಲು ಗಂಟೆಯ ಹಾದಿ. ಬಸ್ ನಿಧಾನಕ್ಕೆ ಚಲಿಸಿದಂತೆ ಮನಸ್ಸೆಲ್ಲ ಪೆನುಗೊಂಡದಲ್ಲೇ ಇತ್ತು. ಅಷ್ಟು ಭೀಕರ ಅಪಘಾತವನ್ನು ನಾನೆಂದೂ ನೋಡಿರಲಿಲ್ಲ. ಆ ಹೆಣಗಳ ರಾಶಿ, ಆ ತುಂಡಾದ ದೇಹಗಳು, ಆ ಆಕ್ರಂದನ, ಆ ಆಂಬುಲೆನ್ಸುಗಳ ಸದ್ದು.... ಅಬ್ಬಾ ಇವತ್ತಿಗೂ ಆ ದೃಶ್ಯ ನೆನಪಿಸಿಕೊಂಡರೆ ಒಮ್ಮೆ ಮೈಬೆವರುತ್ತದೆ. ಪ್ರಶಾ೦ತಿ ನಿಲಯದೊಳಗೆ ಕೂತರೂ ಶಾಂತಿಯಿಲ್ಲ.........ಸತ್ಯಸಾಯಿ ಸುಪರ್ ಸ್ಪೆಷಾಲಟಿ ಆಸ್ಪತ್ರೆ ಈ ಅಪಘಾತದ ಗಾಯಾಳುಗಳಿಂದಲೇ ತುಂಬಿತ್ತು. ರಕ್ತ ಕಂಡರೆ ತಲೆತಿರುಗುವ ನಾನು ಜೀವನದಲ್ಲಿ ಮೊದಲು ರಕ್ತದಾನ ಮಾಡಿದ್ದು ಅಂದೇ.
         ತಿರುಗಿ ಬರುವಾಗ ಪೆನುಗೊಂಡದಲ್ಲಿ ಇಳಿದು ನೋಡಿದರೆ ಊರಿಡೀ ಒಂದು ಥರಹದ ನೀರವ ಮೌನ. ಅದರ ಮಧ್ಯದಲ್ಲೇ ತನ್ನೆಂದಿನ ಶೈಲಿಯಲ್ಲೇ ಮುಂದುವರೆದ ಜನಜೀವನ. ನಾನಿಲ್ಲಿ ಬಂದಾಗಲೆಲ್ಲ ತಪ್ಪದೇ ಭೇಟಿ ಕೊಡುವುದು ಇತಿಹಾಸ ಪ್ರಸಿದ್ಧ ಬಾಬಾಯ್ ಸಾಹೇಬ್ ದರ್ಗಾಕ್ಕೆ. ಅಲ್ಲಿ ಎದುರಿನಲ್ಲೇ ನಿಮ್ಮನ್ನು ಸ್ವಾಗತಿಸಲು ಎರಡು ಆನೆಗಳ ವಿಗ್ರಹಗಳಿವೆ. ಸುಂದರ ಕಮಲದ ಕೆತ್ತನೆ ಅದರಡಿಯಲ್ಲಿ, ಮೇಲೆ ಹೂವಿನ ಕಮಾನಿನ ಮಂಟಪ. ಯಾವ ಕಾಲದಲ್ಲಿ ಯಾರ ದೇವಸ್ಥಾನವಾಗಿತ್ತೋ! ಬಾಬಾಯ್ ಸಾಹೇಬ್ ಉರುಫ್ ಹಜರತ್ ಖ್ವಾಜಾ ಸಯೀದ್ ಬಾಬಾ ಫಕ್ರುದ್ದೀನ್ ಹನ್ನೆರಡನೇ ಶತಮಾನದಲ್ಲಿ ಪರ್ಷಿಯಾದ ಸುಲ್ತಾನನಾಗಿದ್ದ ಸೂಫಿ ಸಂತ. ಧರ್ಮಪ್ರಸಾರಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿ ಆಧ್ಯಾತ್ಮಿಕ ಗುರುವನ್ನು ಹುಡುಕುತ್ತ ದೇಶಪರ್ಯಟನೆಗೆ ಹೊರಟು ಅಫ್ಘನ್, ಕಾಶ್ಮೀರ, ಗುಜರಾತ್ ಮಾರ್ಗವಾಗಿ ತಮಿಳ್ನಾಡಿನ ತಿರುಚಿನಾಪಳ್ಳಿಗೆ ಬಂದು ದಕ್ಷಿಣ ಭಾರತ ಮತ್ತು ಶ್ರೀಲ೦ಕಾದಲ್ಲಿ ಮೊದಲ ಬಾರಿಗೆ ಇಸ್ಲಾಮನ್ನು ಪ್ರಸಾರ ಮಾಡಿದವರೆನ್ನಲಾಗುವ ಹಜರತ್ ತಬ್ರ್-ಎ-ಆಲಮ್ ಬಾದಷಾಹ್ ನಾದರ್ ವಲಿಯ ಶಿಷ್ಯನಾದವನು. ಧರ್ಮಪ್ರಸಾರಕ್ಕಾಗಿ ಸ್ಥಳವೊ೦ದನ್ನು ಹುಡುಕುತ್ತಿದ್ದ ಬಾಬಾ ಫಕ್ರುದ್ದಿನಗೆ ಗುರುಗಳು ಒ೦ದು ಒಣಗಿದ ಬೇವಿನ ಕಡ್ಡಿಯನ್ನು ಕೊಟ್ಟು ಈ ಕಡ್ಡಿ ಎಲ್ಲಿ ಚಿಗುರೊಡೆಯುವುದೋ ಅಲ್ಲೇ ನೆಲೆಸಲು ತಿಳಿಸಿದರ೦ತೆ. ಆ ಕಡ್ಡಿಯನ್ನು ಹಿಡಿದುಕೊ೦ಡು ಊರೂರು ತಿರುಗಿದ ಬಾಬಾಯ್ ಪೆನುಗೊ೦ಡಕ್ಕೆ ಬ೦ದಾಗ ಅದನ್ನು ಒ೦ದೆಡೆ ನೆಟ್ಟು ಮಲಗಿದ್ದ. ಎದ್ದು ನೋಡಿದಾಗ ಒಣಕಡ್ಡಿ ಚಿಗುರೊಡೆದು ಗಿಡವಾಗಿತ್ತ೦ತೆ. ಅಂದಿನಿಂದ ಪೆನುಗೊಂಡ ರಾಯನೂ ಬಾಬಾನ ಅನುಯಾಯಿಯಾದ. ಅಲ್ಲಿಂದ ಇಲ್ಲಿಯವರೆಗೂ ಈ ದರ್ಗಾ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಕುರುಹಾಗಿ ನಿಂತಿದೆ. ಪೆನುಗೊಂಡ ಬರಿ ರಕ್ತಚರಿತ್ರಕ್ಕೆ ಸೀಮಿತವಲ್ಲ. ಹಿಂದೂ, ಜೈನ, ಇಸ್ಲಾಂ ಧರ್ಮಗಳನ್ನು ತನ್ನ ಒಡಲೊಳಗಿಟ್ಟುಕೊಂಡು ಪೋಷಿಸಿದ ಪವಿತ್ರನೆಲ. ಮಹಾವೀರನ ಕಾಲದಿಂದಲೂ ಇದು ಭಾರತದ ನಾಲ್ಕು ಪ್ರಮುಖ ಜೈನ ಕ್ಷೇತ್ರಗಳಲ್ಲಿ ಒಂದು. ಹೊಯ್ಸಳರ ಪತನಾನಂತರ ಬುಕ್ಕರಾಯ ಇಲ್ಲಿ ಕೋಟೆಯನ್ನು ಕಟ್ಟಿ ವಿಜಯನಗರ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನಾಗಿಸಿದ. ತೆಲುಗು ಪದಕವಿತ ಪಿತಾಮಹ ಅನ್ನಮಯ್ಯನಿಗೆ ಆಶ್ರಯ ನೀಡಿ ಅವನ ಮೂವತ್ತೆರಡು ಸಾವಿರ ಕವಿತೆಗಳನ್ನು ಸಾಳ್ವ ನರಸಿಂಹ ರಾಯ ತಾಮ್ರಪಟದಲ್ಲಿ ಕೊರೆಸಿದ್ದು ಪೆನುಗೊಂಡದಲ್ಲೇ. ಕನ್ನಡ ರಾಜ್ಯ ರಮಾರಮಣ ಶ್ರೀಕೃಷ್ಣದೇವರಾಯ ಹುಟ್ಟಿದ್ದು ಇಲ್ಲಿಯೇ. ಅದೆಲ್ಲಕ್ಕಿಂತ ಮಿಗಿಲಾಗಿ ಇದು ಹಂಪಿಯ ಪತನಾನಂತರ ವಿಜಯನಗರ ರಾಜಮನೆತನವನ್ನೂ, ದಕ್ಷಿಣದಲ್ಲಿ ಹಿಂದೂಗಳ ಸ್ವಾಭಿಮಾನವನ್ನು ಕಾಯ್ದ ಶಕ್ತಿ.
ಬಾಬಾಯ್ ಸಾಹೇಬ್ ದರ್ಗಾ


 ಊರಿನ ಪ್ರವೇಶದ್ವಾರದಲ್ಲಿರುವ ಕೃಷ್ಣದೇವರಾಯನ ಮೂರ್ತಿ
            ಅದು ಸನ್ 1565, ಜನವರಿ 23...ತಾಳಿಕೋಟೆಯ ಹತ್ತಿರ ವಿಜಯನಗರದ ಅಳಿಯ ರಾಮರಾಯರ ಮತ್ತು ಬಿಜಾಪುರ, ಬೀದರ್, ಅಹ್ಮದ್ ನಗರ ಹಾಗೂ ಗೋಲ್ಕೊಂಡಾದ ಸುಲ್ತಾರೆಂಬ ದುಷ್ಟಚತುಷ್ಟಯಗಳ ಸೇನೆ ಮುಖಾಮುಖಿಯಾದ ದಿನ. 80 ವರ್ಷದ ವಯೋವೃದ್ಧ ರಾಮರಾಯ, ಅವನ ತಮ್ಮ ವೆಂಕಟಾದ್ರಿ, ತಿರುಮಲರಾಯ, ರಘುನಾಥರಾಯರ ಪರಾಕ್ರಮದೆದುರು ಸುಲ್ತಾನರ ಅರ್ಧ ಸೈನ್ಯ ದಿಕ್ಕಾಪಾಲಾಗಿ ಓಡಿಹೋಗಿತ್ತು. ಆದರೆ ಸಮಯಕ್ಕೆ ಸರಿಯಾಗಿ ವಿಧಿ ಕೈಕೊಟ್ಟಿತು. ತಾಮ್ರದ ನಾಣ್ಯಗಳಿಂದ ತುಂಬಿದ ಫಿರಂಗಿ ಸ್ಫೋಟಿಸಿ ರಘುನಾಥರಾಯ ಧರಾಶಾಹಿಯಾದ. ವೆಂಕಟಾದ್ರಿ ಕಣ್ಣುಕಳೆದುಕೊಂಡ. ರಾಯರ ಸೈನ್ಯದ ಮುಸ್ಲಿಂ ನಾಯಕರೆಲ್ಲ ಸುಲ್ತಾನರ ಸೈನ್ಯ ಸೇರಿಕೊಂಡರು. ಆನೆಯೊಂದು ರಾಯರನ್ನು ಪಲ್ಲಕ್ಕಿಯಿಂದ ಬೀಳಿಸಿ ಸೊಂಡಿಲಿನಿಂದ ಹಿಡಿದುಕೊಂಡಿತು. ಅಹ್ಮದ್ ನಗರದ ನಿಜಾಂ ಷಾ ಸ್ವಲ್ಪವೂ ತಡಮಾಡದೇ ರಾಯರ ತಲೆ ಕಡಿದು ಪ್ರದರ್ಶನ ಮಾಡಿದ. ರಾಜ ಸತ್ತನೆಂದು ತಿಳಿದ ವಿಜಯನಗರದ ಸೈನ್ಯ ಪಲಾಯನ  ಮಾಡಲಾರಂಭಿಸಿತು. ಅಷ್ಟೇ........ ನಾಗರಿಕತೆಗಳ ಮುಕುಟಮಣಿಯಾಗಿ ಮೆರೆದ ಮರೆಯಲಾಗದ ಮಹಾಸಾಮ್ರಾಜ್ಯವೊಂದು ನಾಮಾಷವಾಗುವ ಹಂತ ತಲುಪಿತು. ಅರಮನೆಗೆ ಓಡಿಬಂದ ತಿರುಮಲರಾಯ 500 ಆನೆಗಳ ಮೇಲೆ ಖಜಾನೆಯಲ್ಲಿದ್ದ ಸಂಪತ್ತನ್ನು ಹೇರಿಕೊಂಡು ಪೆನುಗೊಂಡಕ್ಕೆ ಪರಾರಿಯಾದ. ಮುಂದೆ ನಡೆದ ಹಂಪಿಯ ಲೂಟಿ ಎಲ್ಲರೂ ಬಲ್ಲದ್ದೇ.
           ಬೀದರ್, ಅಹ್ಮದನಗರ ಸುಲ್ತಾನ ವಂಶಗಳು ತಾಳಿಕೋಟೆಯಲ್ಲಾದ ಪ್ರಾಣಹಾನಿಯಿಂದ ಹೆಚ್ಚುಕಾಲ ಬಾಳಲಿಲ್ಲ. ಹಂಪಿ ಪೂರ್ತಿ ಸೂರೆ ಹೋದ ಮೇಲೆ ಬಿಜಾಪುರದ ಆದಿಲ್ ಷಾ ದಕ್ಷಿಣದ ಪ್ರದೇಶಗಳತ್ತ ಮುಖ ಮಾಡಿ 1567ರಲ್ಲಿ ಪೆನುಗೊಂಡದ ಮೇಲೆ ಆಕ್ರಮಣ ಮಾಡಿದ. ಅದರ ಹೆಸರೇ ದೊಡ್ಡಬೆಟ್ಟ. ಅಂತಹ ದುರ್ಗಮ ಕೋಟೆ ಸುಲಭದ ತುತ್ತಾಗಿರಲಿಲ್ಲ. ಹಂಪಿಯಲ್ಲಾದ ಹಾನಿಯಿಂದ ಪೂರ್ತಿ ಚೇತರಿಸಿಕೊಳ್ಳದಿದ್ದರೂ, ಸೈನ್ಯ ಸಂಘಟನೆಗೆ ಸಮಯವಿಲ್ಲದಿದ್ದರೂ ಆಶ್ಚರ್ಯಕರ ರೀತಿಯಲ್ಲಿ ಪ್ರತಿದಾಳಿಗೆ ನಿಂತ ತಿರುಮಲರಾಯನ ಸೇನಾಧಿಪತಿ ಚನ್ನಪ್ಪ ನಾಯಕ ಸುಲ್ತಾನನನ್ನು ಒದ್ದೋಡಿಸಿದ. 1568ರಲ್ಲಿ ಕುತುಬ್ ಷಾ, ನಿಜಾಂ ಷಾ, ಆದಿಲ್ ಷಾರು ಸೇರಿ ಅದೋನಿಯನ್ನು ವಶಪಡಿಸಿಕೊಂಡು ಪೆನುಗೊಂಡದ ಮೇಲೆ ಬಿದ್ದರೂ ತಿರುಮಲರಾಯನೆದುರು ಸೋತು ಸುಣ್ಣವಾಗಬೇಕಾಯ್ತು. ಮುಂದೆ 1578ರಲ್ಲಿ ಸುಲ್ತಾನ್ ತನ್ನೆಲ್ಲಾ ಬಲವನ್ನು ಒಟ್ಟುಗೂಡಿಸಿ ಸುತ್ತಲಿನ ರಾಜರ ಬೆಂಬಲ ಪಡೆದು ಪೆನುಗೊಂಡವನ್ನು ನಾಲ್ಕೂ ದಿಕ್ಕುಗಳಿಂದ ಸುತ್ತುವರೆದ. ಅಷ್ಟರಲ್ಲಾಗಲೇ ತಿರುಮಲರಾಯ ತನ್ನ ಮಗ ಶ್ರೀರಂಗ ದೇವರಾಯನಿಗೆ ಪಟ್ಟಕಟ್ಟಿ ಸಂನ್ಯಾಸಾಶ್ರಮ ಸ್ವೀಕರಿಸಿದ್ದ. ಪೆನುಗೊಂಡ ಅಂದೇ ಇನ್ನೊಂದು ಹಾಳುಹಂಪಿಯಾಗಬೇಕಿತ್ತು. ಆದರೆ ಶ್ರೀರಂಗ ಬುದ್ಧಿವಂತ. ಮುಸ್ಲಿಂ ಸೇನೆಯಲ್ಲಿದ್ದ ಸೇನಾಪ್ರಮುಖ ಯಮಜಿ ರಾವ್ ಎಂಬ ಬ್ರಾಹ್ಮಣನಿಗೆ ಧರ್ಮರಕ್ಷಣೆಯಲ್ಲಿ ಕೈಜೋಡಿಸುವಂತೆ ಗುಪ್ತಸಂದೇಶ ಕಳುಹಿಸಿದ. ಸುಲ್ತಾನನ ಸೈನ್ಯದಲ್ಲಿದ್ದ ಹಿಂದೂಗಳೆಲ್ಲ ಯಮಾಜಿ ರಾವಿನ ನೇತೃತ್ವದಲ್ಲಿ ದಂಗೆಯೆದ್ದರು. ಶ್ರೀರಂಗ, ಚನ್ನಪ್ಪ ನಾಯಕರಿಬ್ಬರೂ ಸೇರಿ ಮುಸ್ಲೀಂ ಸೈನ್ಯವನ್ನು ಕೃಷ್ಣೆಯಾಚೆ ಅಟ್ಟಿಬಿಟ್ಟರು. ಮೂರು ಬಾರಿ ಸೋತ ಅವಮಾನದಿಂದ ಮತ್ತೆ ಬಿಜಾಪುರದ ಸುಲ್ತಾನ ಪೆನುಗೊಂಡದತ್ತ ತಲೆಹಾಕಲಿಲ್ಲ. ಇವನ ಮಗ ಎರಡನೇ ವೆಂಕಟಾದ್ರಿ ರಾಜಧಾನಿಯನ್ನು ತಿರುಪತಿಯ ಸಮೀಪದ ಚಂದ್ರಗಿರಿಗೆ ಬದಲಾಯಿಸುವವರೆಗೂ ಪೆನುಗೊಂಡ ಶತ್ರುಗಳಿಗೆ ಅಬೇಧ್ಯವೇ ಆಗಿತ್ತು.
         ಇಲ್ಲಿ ಒಂದು ಕಾಲದಲ್ಲಿ ಈ ಊರಿನಲ್ಲಿ 365 ಮಂದಿರಗಳಿದ್ದವಂತೆ. ನಿತ್ಯ ಒಂದೊಂದು ದೇವಸ್ಥಾನದಂತೆ 365 ದಿನವೂ ಜಾತ್ರೆ ನಡೆಯುತ್ತಿತ್ತು. ಈಗ ಒಂದೆರಡನ್ನು ಹೊರತುಪಡಿಸಿದರೆ ಉಳಿದದ್ದು ಇದ್ದದ್ದೆಲ್ಲಿ ಎಂದು ಹುಡುಕುವ ಪರಿಸ್ಥಿತಿ. ವಿಜಯನಗರ ಕಾಲದ ದೊಡ್ಡ ದೊಡ್ಡ ಜಲಾಶಯಗಳಿದ್ದರೂ ಇಲ್ಲಿ ಕುಡಿಯುವ ನೀರಿಗೆ ತತ್ವಾರ. ಆಗಿನ ಕೋಟೆ ಹಾಳಾಗಿ ಕಾಲವಾಯ್ತು. ಸರ್ಕಾರಕ್ಕಾಗಲೀ, ಪ್ರಾಚ್ಯಚಸ್ತು ಇಲಾಖೆಗಾಗಲೀ ನಮ್ಮ ಇತಿಹಾಸದ ಮೇಲೆ ಸ್ವಲ್ಪವೂ ಕರುಣೆಯಿಲ್ಲ, ದೇವರುಗಳ ಮೇಲಂತೂ ಇಲ್ಲವೇ ಇಲ್ಲ. ಅರಸರ ಬೇಸಿಗೆಯ ಅರಮನೆ ಗಗನ್ ಮಹಲ್‌ಗೆ ASI ಇಂದ ತಾತ್ಕಾಲಿಕವಾಗಿ ನೇಮಕವಾದ ಒಬ್ಬ ಗೈಡ್ ಇದ್ದಾನಂತೆ. ’ಇದ್ದಾನಂತೆ’ ಎಂಬುದು ಬಿಟ್ಟರೆ ಅವನ ಮುಖವನ್ನಾಗಲೀ, ಆತ ಗಗನ್ ಮಹಲನ್ನು ತೆರದದ್ದಾಗಲೀ ನಾನಿನ್ನೂ ನೋಡಿಲ್ಲ. ಇಂದಿಗೂ ಇಲ್ಲಿನ ಬೆಟ್ಟದ ಮೇಲಿನ ಕೋಟೆಯನ್ನು ನೋಡಬೇಕೆಂದರೆ ಆರೆಂಟು ಕಿಲೋಮೀಟರ್ ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಬೇಕು. ಕಾಲು ಗಟ್ಟಿಯಿರುವವರಿಗೆ ಟ್ರೆಕ್ಕಿಂಗ್ ಮಾಡಲು ಇದು ಸೂಕ್ತ ಸ್ಥಳ. ಅಷ್ಟು ಮಾಡಿ ಮೇಲೇರಿದರೂ ಕಾಣುವುದು ಬರೀ ಹಾಳುಬಿದ್ದ ಗುಡಿಗೋಪುರಗಳ ಪಳೆಯುಳಿಕೆ, ಪೊದೆಬೆಳೆದ ಕಟ್ಟಡಗಳು, ಕುಸಿದು ಬಿದ್ದ ಗೋಡೆಗಳು. ಬೆಟ್ಟದ ತುತ್ತತುದಿಗೆ ನೆತ್ತಿಯ ಮೇಲಿರುವ ವಿಜಯನಗರ ಅರಸರ ಆರಾಧ್ಯ ದೈವ ನರಸಿಂಹನ ದೇವಾಲಯದ ಸ್ಥಿತಿಯಂತೂ ಕೇಳಲೇ ಬೇಡಿ. ಮುಳ್ಳುಕಂಟಿಗಳ ಮಧ್ಯ ದಾರಿ ಮಾಡಿಕೊಂಡು ಒಳಹೊಕ್ಕರಂತೂ ಹೃದಯ ವಿದ್ರಾವಕ ಪರಿಸ್ಥಿತಿ. ನಿಧಿಯಾಸೆಗೆ ದೇವಾಲಯದ ಇಂಚಿಂಚನ್ನೂ ಅಗೆದದ್ದು ಮಾತ್ರವಲ್ಲದೇ ಕಂಬ, ತೊಲೆಗಳನ್ನೂ ಸೇರಿಸಿ ಗರ್ಭಗುಡಿಯಲ್ಲಿರುವ ಲಕ್ಷ್ಮೀನರಸಿಂಹನ ವಿಗ್ರಹವನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಹಂಪಿಯನ್ನು ಮುಸ್ಲಿಂ ದಾಳಿಕಾರರೆಲ್ಲ ಸೇರಿ ಲೂಟಿ ಹೊಡೆದು ಹಾಳು ಮಾಡಿದ್ದರೆ, ಪೆನುಗೊಂಡ ನಮ್ಮವರ ದಿವ್ಯ ನಿರ್ಲಕ್ಷ್ಯದಿಂದಲೇ ಹಾಳಾಗಿದೆ.

ಕೋಟೆಯೆದುರಿನ ಹನುಮಂತ

ಕೋಟೆಯ ಉತ್ತರದ್ವಾರ
ಬಂಗಾರು ಗುಂಡು ಗುಡಿ
ಕೋಟೆ ಬುರುಜು
ವಿಜಯನಗರ ಅರಸರ ಆರಾಧ್ಯ ದೈವ ನರಸಿಂಹ ಸ್ವಾಮಿ ದೇವಾಲಯ
ಗಾಳಿಗೋಪುರ
ಭಗ್ನಗೊಂಡ ದೇವಾಲಯ
ದೇವಾಲಯದೊಳಗಿನ ಭಗ್ನಾವಶೇಷಗಳು
ಗರ್ಭಗುಡಿಯಲ್ಲಿ ದೇವರೇ ಮಾಯ
ಪುಷ್ಕರಣಿ
ಸಾಲುಮಂಟಪ
ನಗರದ ನೀರು ಸರಬರಾಜಿಗೆ ಅಂದು ನಿರ್ಮಿಸಿದ್ದ ಕಾಲುವೆಗಳು ಇಂದೂ ಇವೆ
ವಿಜಯನಗರ ಕಾಲದ ಕೆರೆ
ಅಳಿದುಳಿದ ದೇವಸ್ಥಾನಗಳು, ಅವುಗಳ ಮೇಲಿನ ಹಸಿರು ಧ್ವಜ!
ಕೋಟೆ ಮೇಲಿನ ನೋಟ
ಇಂತಹ ಹಾಳುಬಿದ್ದ ದೇವಾಲಯಗಳು ನೂರಾರಿವೆ

"తిరుమలేంద్రుని కీర్తి తేనెలు, బెరసి దించిన కాపుకవనపు
నిరుపమ ద్రాక్షారసంబులునిండి తొలికెడు కుండ,ఈ పెనుగొండ కొండ".
-శ్రీ రాళ్ళపల్లి అనంతకృష్ణ శర్మ