ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ ಎಂಬುದು ಕೆಲವರ ಹಾಡಾದರೆ, ಹೆಂಡತಿ ಪ್ರಾಣ ಹಿಂಡುತಿ ಎಂಬುದು ಕೆಲವರ ಹಳಿವು. ಮದುವೆಯಾಗದವರಿಗೆ ಹೆಂಡತಿಯ ಜಾತಕ ತಿಳಿಯಲು ಕುತೂಹಲವಿದ್ದರೆ ಮದುವೆಯಾದವರ ಜಾತಕ ಹೇಗೂ ಹೆಂಡತಿಯ ಕೈಯಲ್ಲೇ ಇರುತ್ತದೆ. ಹೆಂಡತಿಯ ಜಾತಕ ತಿಳಿಯಲು ಯಾರಿಗೆ ಇಷ್ಟವಿಲ್ಲ ಹೇಳೀ?
’ಸರಸೋದಾರಪದಾಸರಸ್ವತಿ’ಯೆಂದೇ ಬಿರುದಾಂಕಿತಳಾದ ವಿಜಯನಗರದ ಅರಸು ಕಂಪಣನ ರಾಜಮಹಿಷಿ ಗಂಗಾದೇವಿ ತನ್ನ ’ಮಧುರಾ ವಿಜಯ’ವೆಂಬ ಐತಿಹಾಸಿಕ ಕಾವ್ಯದಲ್ಲಿ ಹೀಗೆ ಬರೆದಿದ್ದಾಳೆ.
ನಿರ್ದೋಷಾಪ್ಯಗುಣಾ ವಾಣೀ ನ ವಿದ್ವಜ್ಜನರಂಜಿನೀ |
ಪತಿವ್ರತಾಪ್ಯರೂಪಾ ಸ್ತ್ರೀ ಪರಿಣೇತ್ರೇ ನ ರೋಚತೇ ||
ದೋಷರಹಿತವಾಗಿರುವ ಮಾತ್ರಕ್ಕೆ ಕಾವ್ಯವು ವಿದ್ವಾಂಸರ ಮನಸೆಳೆಯಲಾರದು. ವಿದ್ವಾಂಸರಿಗಿಷ್ಟವಾದರೂ ಒಳ್ಳೆಯ ಕಾವ್ಯ ಜನರಿಗಿಷ್ಟವಾಗಬೇಕಲ್ಲ?( ನನ್ನ ಕತೆಯೂ ಅದೇ. ಚೆನ್ನಾಗಿದೆ, ಆದ್ರೆ ಅರ್ಥ ಆಗ್ಲಿಲ್ಲ ಅನ್ನೋರೇ ಜಾಸ್ತಿ). ಪತಿವ್ರತೆಯಾಗಿದ್ದರೂ ಸುಂದರಳಲ್ಲದ ಪತ್ನಿಯನ್ನು ಯಾವ ಪತಿಯೂ ಇಷ್ಟಪಡುವುದಿಲ್ಲ. ಎಲ್ಲ ಗಂಡಂದಿರಿಗೂ ಹೆಂಡತಿ ಪತಿವ್ರತೆಯಲ್ಲದಿದ್ದರೂ ನೋಡಲು ಸುಂದರವಾಗಿದ್ದರೆ ಸಾಕು. ಸುಂದರಿ ಎಂದ ಕೂಡಲೇ ಸಂಸ್ಕೃತದ ಮತ್ತೊಂದು ಸುಭಾಷಿತ ’ಭಾರ್ಯಾ ರೂಪವತೀ ಶತೃ’ ನೆನಪಾಯ್ತು. ಸುಂದರವಾದ ಹೆಂಡತಿಯೇ ಗಂಡನ ಶತ್ರು ಎಂದು ಕೇಳಿದ ಪುಣ್ಯಾತ್ಮನೊಬ್ಬ ಮದುವೆಯ ರಾತ್ರಿ ತನ್ನ ಹೆಂಡತಿಯ ಮೂಗು ಕತ್ತರಿಸಿದ್ದನಂತೆ. ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಯಾರು ಕೂರುತ್ತಾರೆ ಎಂಬ ದೂರಾಲೋಚನೆಯಿರಬಹುದು.!!!
ಇದೇನಪ್ಪ, ಇವನಿಗೆ ಮದುವೆಯಾಗದಿದ್ದರೂ(ಮದುವೆಯಾಗಿಲ್ಲ ಅಷ್ಟೆ ಹೊರತೂ ಬ್ರಹ್ಮಚಾರಿಯಲ್ಲ!!!) ಹೆಂಡತಿಯ ಬಗ್ಗೆ ಇಷ್ಟೆಲ್ಲ ಬರೆಯುತ್ತಿದ್ದಾನೆಂದು ಆಶ್ಚರ್ಯಪಡಬೇಡಿ. ಮದುವೆಯಾಗದೇ ಹೆಂಡತಿಯ ಬಗ್ಗೆ ಕಮೆಂಟ್ ಮಾಡಿದರೆ ಹುಷಾರ್, ಪ್ರತಿಭಟನೆ ಎದುರಿಸಬೇಕಾದೀತು ಎಂದು ನನ್ನ ಗೆಳತಿಯೊಬ್ಬಳು ಈಗಾಗಲೇ ಬೆದರಿಕೆ ಹಾಕಿದ್ದಾಳೆ. ಕೋಳಿಯಂತೆ ಮೊಟ್ಟೆಯಿಡದಿದ್ದರೂ ಆಮ್ಲೆಟ್ ಬಗ್ಗೆ ಕೋಳಿಗಿಂತ ಜಾಸ್ತಿಯೇ ಗೊತ್ತು ನನಗೆ. ಅಷ್ಟಕ್ಕೂ ಹೆಂಡತಿಯನ್ನು ಕಟ್ಟಿಕೊಂಡು ನನಗೇನೂ ಆಗಬೇಕಾಗಿಲ್ಲ(ಸದ್ಯಕ್ಕೆ). ಆದರೂ ನಾನು ಕಲಿತ ಡಿಜಿಟಲ್ ಎಲೆಕ್ಟ್ರಾನಿಕ್ಸಿಗಿಂತ ಭಾಷಾಶಾಸ್ತ್ರದ ಬಗ್ಗೆ ಹುಚ್ಚು ಹೆಚ್ಚಿರುವುದರಿಂದ ಹೆಂಡತಿಯೆಂಬ ಶಬ್ದ ಮತ್ತು ಅದರ ವ್ಯುತ್ಪತ್ತಿಯ ಬಗ್ಗೆಯೇ ಇಲ್ಲಿ ಬರೆಯುತ್ತಿದ್ದೇನೆ.
’ಹೆಂಡತಿ’ ಶಬ್ದದ ಮೂಲ ಕನ್ನಡ ರೂಪ ’ಪೆಂಡಿತಿ’. ಇದರ ಬಹುವಚನ ಪ್ರಯೋಗ ’ಪೆಂಡಿರ್’. ಹೆಂಡತಿಗೆ ಬಹುವಚನ ಯಾರು ಕೊಡುತ್ತಾರೆ ಎನ್ನಬೇಡಿ. ಇದು ಕಲಿ ಪ್ರಭಾವವೇನೂ ಅಲ್ಲ. ಸಂಸ್ಕೃತದಲ್ಲಿ ’ದಾರಾ’ ಅರ್ಥಾತ್ ಹೆಂಡತಿ ’ಪುಲ್ಲಿಂಗ ಬಹುವಚನ’, ಗಂಡನದ್ದು ಬರಿ ಏಕವಚನ. ಸಂಸ್ಕೃತದ ’ಸ್ತ್ರೀ’ ಶಬ್ದ ಪ್ರಾಕ್ರತದಲ್ಲಿ ’ಇತ್ಥೀ’ ಆಗಿ ತನ್ಮೂಲಕ ಕನ್ನಡದಲ್ಲಿ ’ಇತ್ತಿ, ಇತಿ, ತಿ ಮತ್ತು ಇ’ ಪ್ರತ್ಯಯಗಳಾಯ್ತು. ಪ್ರತ್ಯಯವಾದ ಇದು ಪುಲ್ಲಿಂಗ ನಾಮಪದಗಳ ಅಂತ್ಯದಲ್ಲಿ ಸೇರಿಕೊಂಡು ಸ್ತ್ರೀಲಿಂಗವಾಚಕವಾಗುತ್ತದೆ. ಉದಾಹರಣೆಗೆ ’ಹೂವಾಡಿಗ’ ಎಂಬ ಪುಲ್ಲಿಂಗ ಶಬ್ದದ ಅಂತ್ಯದಲ್ಲಿ ’ಇತ್ತಿ’ ಪ್ರತ್ಯಯ ಸೇರಿ ’ಹೂವಾಡಿಗಿತ್ತಿ(ಹೂವಾಡಗಿತ್ತಿ)’ ಆಗುತ್ತದೆ. ’ಇತಿ’ ಪ್ರತ್ಯಯವು ’ಕುಂಬಾರ’ ಶಬ್ದದ ಅಂತ್ಯದಲ್ಲಿ ಸೇರಿ ’ಕುಂಬಾರಿತಿ’ ಆಗುತ್ತದೆ. ಅದೇ ರೀತಿ ’ತಿ’ ಪ್ರತ್ಯಯವು ’ಗೆಳೆಯ’ ಶಬ್ದದ ಜೊತೆ ಸೇರಿ ’ಗೆಳತಿ’ಯಾಯ್ತು. ಅರಸ ಶಬ್ದಕ್ಕೆ ’ಇ’ ಪ್ರತ್ಯಯ ಸೇರಿ ಅರಸಿಯಾಯ್ತು. ಇದೇ ರೀತಿ ಪೆಣ್ ಶಬ್ದಕ್ಕೆ ’ತಿ’ ಪ್ರತ್ಯಯ ಸೇರಿ ’ಪೆಣ್ತಿ’ಯಾಗಿರಬಹುದೇ? ಆದರೆ ಹಳೆಗನ್ನಡದಲ್ಲಿ ಈ ಪದಪ್ರಯೋಗವಿದೆಯೋ ಇಲ್ಲವೋ ತಿಳಿದಿಲ್ಲ. ಹಳೆಗನ್ನಡದಲ್ಲಿ ’ಪಕಾರ’ವಿರುವ ಕೆಲ ಶಬ್ದಗಳು ಹೊಸಗನ್ನಡದಲ್ಲಿ ’ಹಕಾರ’ವಾಗುತ್ತವೆ. ಉದಾಹರಣೆಗೆ ಪುಲಿ-ಹುಲಿ, ಪೆಣ್ಣು-ಹೆಣ್ಣು, ಪೋಗು-ಹೋಗು ಇತ್ಯಾದಿ. ಅದೇ ರೀತಿ ’ಹೆಣ್ತಿ’ ಎಂಬ ಶಬ್ದಕ್ಕೂ ಹಳೆಯ ಒಂದು ರೂಪವಿದ್ದಿರಬೇಕು. ಸಂಸ್ಕೃತದ ಅಂತಃಪುರಕ್ಕೆ ಹಳೆಗನ್ನಡದಲ್ಲಿ ’ಪೆಂಡವಾಸ’ ಎಂಬೊಂದು ಶಬ್ದವಿದೆ. ಇದರ ಅರ್ಥ ಪೆಂಡಿರ+ವಾಸ(ಹೆಂಡತಿಯರ ವಾಸ). ಹೆಂಡತಿಯನ್ನು ಸಂಬೋಧಿಸಲು ಸಂಸ್ಕೃತದಲ್ಲಿ ’ಶ್ರೀಮತಿ’ ಎಂಬ ಪದವನ್ನು ಬಳಸುತ್ತಾರೆ. ಆಹ್ವಾನ ಪತ್ರಿಕೆಗಳಲ್ಲಿ ಶ್ರೀ ಮತ್ತು ಶ್ರೀಮತಿ ಎಂದಿರುತ್ತದೆ. ಅದ್ಯಾವ ಲೆಕ್ಕದಲ್ಲಿ ಇವೆರಡು ಶಬ್ದಗಳನ್ನು ಬಳಸುತ್ತಾರೋ ಗೊತ್ತಿಲ್ಲ. ಯಾಕೆಂದರೆ ಎರಡೂ ಸ್ತ್ರೀಲಿಂಗ ಶಬ್ದಗಳೇ. ಶ್ರೀಮತಿಯ ಸರಿಯಾದ ರೂಪ ಈಕಾರಾಂತ ಸ್ತ್ರೀಲಿಂಗವಾದ ’ಶ್ರೀಮತೀ’. ಅಂಗ್ರೇಜಿಯಲ್ಲಿ ’madam' ಎಂಬ ಪದ ನಿಮಗೆ ತಿಳಿದಿದೆ. ಮಹಿಳೆಯರಿಗೆ ಗೌರವಸೂಚಕವಾಗಿ ಇದನ್ನು ಉಪಯೋಗಿಸುತ್ತಾರಾದರೂ ಪ್ರತಿಬಾರಿ ಮೇಡಮ್ ಎಂದು ಕರೆಯುವಾಗಲೂ ನನಗೆ ತೀರಾ ಮುಜುಗರವಾಗುತ್ತದೆ. ಕಾರಣ ಮೇಡಂನ ಮೂಲ ಫ್ರೆಂಚಿನ ’madame’ ಪದ. ಇದರರ್ಥ ’ನನ್ನ ಹೆಂಗಸು’. ಇದರ ಮೂಲ ವ್ಯುತ್ಪತ್ತಿ ಲ್ಯಾಟಿನ ಭಾಷೆಯ 'mea domina'. ಲ್ಯಾಟಿನ್ನಿನಲ್ಲಿ ಹೀಗೆಂದರೆ ’ನನ್ನ ಹೆಂಡತಿ’. ಪ್ರತಿಬಾರಿ ಮಹಿಳೆಯರನ್ನೆಲ್ಲ ಮಾತು ಮಾತಿಗೆ ಮೇಡಂ ಮೇಡಂ( ನನ್ನ ಹೆಂಡತಿ, ನನ್ನ ಹೆಂಡತಿ) ಎನ್ನುವ ಮೊದಲು ಸ್ವಲ್ಪ ಅರ್ಥ ತಿಳಿದುಕೊಳ್ಳಿ. ಭಾಷಾಶಾಸ್ತ್ರವನ್ನು ಕಟ್ಟಿಕೊಂಡು ಯಾರಿಗೇನಾಗಬೇಕು ಎಂದು ಉಡಾಫೆ ಹಾರಿಸುವವರೆಲ್ಲ ಮಾತಾಡುವ ಮೊದಲು ತಾವು ಉಪಯೋಗಿಸುವ ಪದಗಳ ಅರ್ಥ ತಿಳಿದಿದ್ದರೆ ಒಳಿತು ಅಲ್ಲವೇ? ಅಂಗ್ರೇಜಿಯಲ್ಲಿ ಹೆಂಡತಿಯಗೆ ’Mistress' ಎಂದೂ ಕರೆಯುತ್ತಾರೆ. ಯಾರನ್ನಾದರೂ ಪರಿಚಯಿಸುವಾಗ "she is my Mistress" ಎನ್ನುತ್ತಾರೆ. ಕೂಡಲೇ ನಾನು ಕೇಳುತ್ತೇನೆ ''Really? are you sure?''. ನಾನೇನೋ ತಮಾಷೆ ಮಾಡುತ್ತಿದ್ದೇನೆಂದು ಅವರ ಲೆಕ್ಕ. ಆದರೆ ಮೊದಲು ಇಂಗ್ಲೆಂಡಿನಲ್ಲಿ ಪತ್ನಿಯಲ್ಲದ ಆದರೆ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಹೊಂದಿರುವ ಹೆಂಗಸನ್ನು ಆತನ ಮಿಸೆಸ್ ಎನ್ನುತ್ತಿದ್ದರು. ನಿಘಂಟಿನಲ್ಲೂ ಕೂಡ ಇದೇ ಅರ್ಥವಿದೆ. ಬೇಕಾದರೆ Cambridge ಅಥವಾ ಇನ್ನಾವುದೇ ನಿಘಂಟನ್ನು ತೆಗೆದು ನೋಡಿ. ಇನ್ನು ಮುಂದಾದರೂ ನಿಮ್ಮ ಹೆಂಡತಿಯನ್ನು ಯಾರಿಗಾದರೂ(ಕನಿಷ್ಟ ಪಕ್ಷ ನನ್ನಂಥವರಿಗೆ) ಪರಿಚಯಿಸುವಾಗ ಇವಳು ನನ್ನ ಮಿಸೆಸ್ ಎನ್ನಬೇಡಿ. ನೀವು ಒಳ್ಳೆಯವರಾದರೂ ನನ್ನಂಥವರು ಅನುಮಾನ ಪಡುತ್ತಾರೆ.
ತಿರುಗಿ ಹಳೆಗನ್ನಡಕ್ಕೆ ಬರುವುದಾದರೆ ’ಪೆಣ್(ಹೆಣ್)’ ಶಬ್ದಕ್ಕೆ ’ಇತಿ’ ಎಂಬ ಪ್ರತ್ಯಯ ಸೇರಿ ಪೆಣ್ಣಿತಿ, ಪೆಣ್ತಿ ಅಥವಾ ಹೆಣ್ತಿಯಾಗಿದೆ. ಆದರೆ ಹೆಂಡತಿಯಾಗಬೇಕಾದರೆ ’ಹೆಂಡ’ಕ್ಕೆ ಇತಿ ಪ್ರತ್ಯಯ ಸೇರಬೇಕಾಗುತ್ತದೆ. ಹಾಗಾದರೆ ಹೆಂಡಕ್ಕೂ ಹೆಂಡತಿಗೂ ಏನಾದರೂ ಸಂಬಂಧವಿದೆಯೇ? ’ಗಂಡ’ನಲ್ಲಿರುವ ’ಡ’ಕಾರ ರೂಪ ಸಾಮ್ಯದಿಂದ ಹೆಣ್ತಿಯ ಮಧ್ಯ ’ಡ’ಕಾರ ಆದೇಶವಾಗಿ ಸೇರಿ ಹೆಂಡತಿಯಾಗಿರಬಹುದಾದ ಸಾಧ್ಯತೆಗಳಿವೆ. ಆದ್ದರಿಂದ ’ಪೆಣ್ಣಿತಿ’ಯು ಪೆಂಡಿತಿ-ಪೆಂಡತಿ-ಹೆಂಡತಿಯಾಗಿದೆ.
ಇತಿ ಪೆಂಡತಿ ಪುರಾಣಂ ಸಂಪೂರ್ಣಂ. ಬರಿ ಮದುವೆ ಆದರೆ ಸಾಲದು. ಹೆಂಡ್ತಿ ಜಾತಕಾನೂ ಸ್ವಲ್ಪ ತಿಳಿದಿಟ್ಕೊಳ್ಳಿ ನನ್ನ ಥರಾ.
ವಿ.ಸೂ: ಗಂಡನ ಜಾತಕವನ್ನು ಪ್ರತಿ ಹೆಂಡತಿಯೂ ಬರೆಯುವುದರಿಂದ ಅದನ್ನಿಲ್ಲಿ ಪ್ರತ್ಯೇಕವಾಗಿ ಬರೆಯುತ್ತಿಲ್ಲ. ನಿಮಗೆ ಬೇಕಾದರೆ ಹೆಂಡತಿಯನ್ನೇ ಕೇಳಿಕೊಳ್ಳಿ(ನಿಮ್ಮದೇ ಹೆಂಡತಿಯನ್ನು).
ಬರಹ ಚೆನ್ನಾಗಿದೆ ಸಚಿನ್ ಸರ್ :))
ReplyDeleteThank you Ishwara Sir......:-)
ReplyDelete"ಎಲ್ಲ ಗಂಡಂದಿರಿಗೂ ಹೆಂಡತಿ ಪತಿವ್ರತೆಯಲ್ಲದಿದ್ದರೂ ನೋಡಲು ಸುಂದರವಾಗಿದ್ದರೆ ಸಾಕು." idu nimma anisikeye?
ReplyDeleteಅಲ್ಲ ಗುರುಗಳೇ. ಅದು ಗ೦ಗಾದೇವಿಯ ಅನಿಸಿಕೆ. ಅದರ ಬಗ್ಗೆ ನೀವು ಅವಳ ಹತ್ತಿರವೇ explanation ಕೇಳಿಕೊಳ್ಳಿ. ಆದ್ರೆ ಏನ್ಮಾಡೋದು, ಅವ್ಳು ಈಗ ಇಲ್ವೇ!!!.
ReplyDeleteಎಲ್ಲಾ ಹೌದು ವೀರಭದ್ರ ಹೆಗಡೆಯವರೇ, ನಿ೦ಗ ಈ ವಿಷಯದ ಬಗ್ಗೆ ಎ೦ತಕ್ ಇಷ್ಟ್ ತಲೆ ಕೆಡಿಸ್ಕ೦ಡಿದ್ರಿ ಅ೦ತ ಗೊತ್ತಾಯಿಲ್ಲ.
ReplyDeletevittandavaada beda. Nannadu kevala prashne ashte.Tale kedisukollalu arhavvada vishya alla bidi. Summane nimma jaanatana gangaadevi yannu toriside.Heegella pennannu yadva tadva odisiddu modalane baari ansalva?Antu bere avra oppalaarada vicharakke dani goodisidiri anni :)
ReplyDeleteಹೆಹ್ಹೆ. ಯಾಕೆ ಟೆನ್ಸ್ ಆಗ್ತಿರಾ? ನಾನು ಸುಮ್ನೆ ತಮಾಷೆ ಮಾಡಿದ್ದು. ಅನ೦ತಮೂರ್ತಿ ಸ್ಟೈಲಲ್ಲಿ ಬರೆದಿರೋ ಕೊನೆ ಎರಡು ವಾಕ್ಯ ಅರ್ಥ ಆಗ್ಲಿಲ್ಲ. ಮೊದಲ ಬಾರಿ ಪೆನ್ನನ್ನು ಎಲ್ಲಿ ಯದ್ವಾ ತದ್ವಾ ಓಡಿಸಿದೇ ಅನ್ನೋದೂ ಗೊತ್ತಾಗಿಲ್ಲ. ವಿಚಾರಗಳನ್ನೊಪ್ಪುವುದೂ ಬಿಡುವುದು ಬೇರೆ ವಿಚಾರ. ಆದರೆ ವಿಚಾರಗಳು ಯಾರದ್ದೇ ಆದರೂ ಅವು ವಿಚಾರಗಳೇ. ಅವುಗಳಿಗೆ respect ಕೊಡಬೇಕು ಅಷ್ಟೆ. ಅಷ್ಟಕ್ಕೂ ಒಪ್ಪಲಾರದ ವಿಚಾರಗಳು ಯಾವವು ಅ೦ತ specify ಮಾಡಿದ್ರೆ ಅನುಕೂಲವಾಗಿತ್ತು. ಗ೦ಗಾ೦ಬಿಕೆ ಹಾಗೆ ಹೇಳಿದ್ದಕ್ಕೆ ನಾನು ಜವಾಬ್ದಾರನಲ್ಲ. ಅವಳ ಮಾತನ್ನು ನಾನು quote ಮಾಡಿದೆ ಅಷ್ಟೆ.
ReplyDelete