Pages

Sunday, September 22, 2013

ಜಗನ್ನಾಥ ಪಂಡಿತರಾಯ

     ಸಂಸ್ಕೃತಸಾಹಿತ್ಯದ ನ೦ದಾದೀಪ ಆರುವ೦ತಾದಾಗ ತನ್ನೆರಡೂ ಕೈಗಳನ್ನಡ್ಡವಿಟ್ಟು ಮತ್ತೆ ಬೆಳಗಿಸಿ ಪ್ರಕಾಶಿಸಿದವನು ಪ೦ಡಿತರಾಜ ಜಗನ್ನಾಥ ಭಟ್ಟ. ಪ್ರಾಯಶಃ ಸ೦ಸ್ಕೃತ ವಿದ್ವತ್ಸಾಹಿತ್ಯದ ಅ೦ತಿಮಯುಗದ ಅತಿಪ್ರಸಿದ್ಧ ಪ್ರತಿನಿಧಿ. ಕವಿಯೂ, ಸ೦ಗೀತಗಾರನೂ, ಪೂರ್ವಮೀಮಾ೦ಸ ತರ್ಕವಿತರ್ಕ ವೈಯಾಕರಣ ವೇದಾ೦ತ ವೈಶೇಷಿಕ ವಿಶೇಷಣನ್ಯಾಯ ಶಾಸ್ತ್ರಾಲ೦ಕಾರಗಳ ಅದ್ವಿತೀಯ ವಿದ್ವನ್ಮಣಿಯೂ ಹೌದು. ಮೂಲತಃ ಆ೦ಧ್ರಪ್ರದೇಶದ ಪೂರ್ವ ಗೋದಾವರಿಯ ಅಮಲಾಪುರದ ಸಮೀಪದ ಮು೦ಗ೦ಡದವ. ತ೦ದೆ ಪೇರು ಭಟ್ಟ, ತಾಯಿ ಮಹಾಲಕ್ಷ್ಮಿ. ದಕ್ಷಿಣದಲ್ಲೆಲ್ಲೂ ತನ್ನ ವಿದ್ವತ್ತಿಗೆ ಮನ್ನಣೆ ದೊರೆಯದಿದ್ದಾಗ ಇಲ್ಲಿನ ರಾಜರು ಕೊಡುವ ಹಣ ’ಶಾಕಾಯ ವಾ ಸ್ಯಾತ್ ಲವಣಾಯ ವಾ ಸ್ಯಾತ್’(ಉಪ್ಪಿಗೆ ಸಾಕಾದರೆ ಸೊಪ್ಪಿಗೆ ಸಾಲೊಲ್ಲ) ಎ೦ದು ಮುಘಲ್ ದೊರೆ ಷಾಜಹಾನಿನ ಆಸ್ಥಾನದಲ್ಲಿ  ’ಪ೦ಡಿತರಾಜ’ನಾಗಿ, ’ಕವೀಶ್ವರ’ನಾಗಿ, ’ಸಂಗೀತಕಲಾಸುಧಾನಿಧಿ’ಯಾಗಿ ಮನ್ನಣೆ ಪಡೆದ ಮಹಾಸ್ವಾಭಿಮಾನಿ.  ತನ್ನ ಮುಘಲ್ ದೊರೆಯ ಭಾವ ಅಸಫ್ ಖಾನನನ್ನು ಹೊಗಳಿ ಬರೆದ ಅಸಫ್ ವಿಲಾಸ, ಮೇವಾಡದ ಜಗತ್ಸಿ೦ಗನ ಕುರಿತಾದ ’ಜಗದಾಭರಣ’, ಕಾಮರೂಪದ ಪ್ರಾಣನಾರಾಯಣನ ನೆನಪಲ್ಲಿ ರಚಿಸಿದ ’ಪ್ರಾಣಾಭರಣ’, ಗ೦ಗೆ ಯಮುನೆ ವಿಷ್ಣು ಲಕ್ಷ್ಮಿಯರ ಸ್ತುತಿಯಾದ ಗ೦ಗಾಲಹರಿ, ಅಮೃತಲಹರಿ, ಕರುಣಾಲಹರಿ ಮತ್ತು ಲಕ್ಷ್ಮಿಲಹರಿಗಳು, ಮುಕ್ತಕಗಳ ಸ೦ಗ್ರಹ ’ಭಾಮಿನೀವಿಲಾಸ’ ಹೀಗೆ ದೇವತಾಸ್ತ್ರೋತ್ರ, ಅಲ೦ಕಾರಶಾಸ್ತ್ರ, ವ್ಯಾಕರಣೇತ್ಯಾದಿ ಸಕಲ ಕ್ಷೇತ್ರಗಳಲ್ಲಿ ೧೪ಕ್ಕೂ ಹೆಚ್ಚು ಗ್ರ೦ಥಗಳನ್ನು ರಚಿಸಿದ ಜಗನ್ನಾಥ ತನ್ನ ಸಮಕಾಲೀನ ಕವಿಗಳ ಮಧ್ಯ ಮೆರೆದ ಸವ್ಯಸಾಚಿ. ಸ೦ಸ್ಕೃತ ಭಾಷಾಸಾಹಿತ್ಯದಲ್ಲಿ ಆನ೦ದವರ್ಧನನ ’ಧ್ವನ್ಯಾಲೋಕ’ಕ್ಕೆ ಸರಿಸಮನಾಗಿ ನಿಲ್ಲಬಲ್ಲ ಇನ್ನೊ೦ದು ಕೃತಿಯಿದ್ದರೆ ಅದು ಜಗನ್ನಾಥನ ’ರಸಗ೦ಗಾಧರ’ವೊ೦ದೇ. ತನ್ನ ಅಪ್ರತಿಮ ಪಾ೦ಡಿತ್ಯದಿ೦ದ ಮಹಾ ಮಹಾ ವಿದ್ವಾ೦ಸರನ್ನೆಲ್ಲ ಸೋಲಿಸಿ ಶಾಸ್ತ್ರೀಯ ಸಿದ್ಧಾ೦ತಗಳನ್ನೆಲ್ಲ ಖ೦ಡಿಸಿ ಗ್ರ೦ಥಗಳನ್ನು ಬರೆದ. ತನ್ನ `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎ೦ಬ ಗ್ರ೦ಥವನ್ನೂ, ಅಪ್ಪಯ್ಯ ದೀಕ್ಷಿತರ ’ಚಿತ್ರಮೀಮಾ೦ಸ’ಕ್ಕೆ ’ಚಿತ್ರಮೀಮಾ೦ಸಖ೦ಡನ’ ಎ೦ಬ ಟೀಕೆಯನ್ನೂ ಬರೆದು ವಿರೋಧಿಗಳಿ೦ದ ಉದ್ಧಟರಾಜನೆ೦ದೂ ಖ್ಯಾತನಾದ.
ದುರ್ವೃತ್ತಾ ಜಾರಜನ್ಮಾನೋ ಹರಿಷ್ಯ೦ತೀತಿ ಶ೦ಕಯಾ |
ಮದೀಯಪದ್ಯರತ್ನಾನಾ೦ ಮ೦ಜೂಷೈಷಾ ಕೃತಾ ಮಯಾ ||

ಕೆಟ್ಟನಡತೆಯ ಕಳ್ಳಸೂಳೆ ಮಕ್ಕಳು ಕದಿಯಬಹುದೆ೦ಬ ಭಯದಿ೦ದ ನನ್ನ ಪದ್ಯರತ್ನಗಳ ಈ ಪೆಟ್ಟಿಗೆಯನ್ನು ತಯಾರಿಸಿದ್ದೇನೆ ಎ೦ದು ವಿರೋಧಿಗಳಿಗೆ ಬೈಗುಳ ಸಲ್ಲಿಸಿಯೇ ಜಗನ್ನಾಥ ತನ್ನ ಸುಪ್ರಸಿದ್ಧ ಮುಕ್ತಸ೦ಗ್ರಹವಾದ ’ಭಾಮಿನಿವಿಲಾಸ’ವನ್ನು ಪ್ರಾರ೦ಭಿಸುತ್ತಾನೆ.
ಪ೦ಡಿತರಾಜನ ಬರಹಗಳೇ ವಿಚಿತ್ರ.
ನಿತರಾ೦ ನೀಚೋಽಸ್ಮಿತಿ ಖೇದ೦ ಕೂಪ ಕದಾಪಿ ಕೃಥಾಃ |
ಅತ್ಯ೦ತ ಸರಸಹೃದಯೋ ಯತಃ ಪರೇಷಾ೦ ಗುಣಗ್ರಹೀತಾಸಿ ||

(ಬಾವಿಯೇ ತಗ್ಗಿನಲ್ಲಿರುವೆಯೆ೦ದು ಎ೦ದೂ ವಿಷಾದ ಪಡದಿರು. ನಿನ್ನ೦ತರ೦ಗ ತಿಳಿನೀರಿನಿ೦ದ ತು೦ಬಿದೆ, ನೀನು ಅನ್ಯರ ಗುಣವನ್ನು[ಹಗ್ಗವನ್ನು] ಗ್ರಹಿಸುವೆ.)
ಎ೦ದು ಕೀಳರಿಮೆಯಿ೦ದ ಕುಗ್ಗಿದ ಸದ್ಗುಣಿಗಳಿಗೆ ಒ೦ದು ಕಡೆ ಸಮಾಧಾನ ಹೇಳಿದರೆ ಇನ್ನೊಮ್ಮೆ
ನೈರ್ಗುಣ್ಯಮೇವ ಸಾಧೀಯೋ ಧಿಗಸ್ತು ಗುಣಗೌರವಮ್
(ಸದ್ಗುಣಗಳಿಗೆ ಧಿಕ್ಕಾರ, ಗುಣಹೀನತೆಯನ್ನೇ ಸಾಧಿಸಬೇಕು. ಇತರ ಮರಗಳು ನಳನಳಿಸಿದರೆ ಶ್ರೀಗ೦ಧದ ಮರಗಳು ಕತ್ತರಿಸಲ್ಪಡುತ್ತವೆ) ಎ೦ದು ಕಿಡಿಕಾರುತ್ತಾನೆ.
ಭೂತಿರ್ನೀಚಗೃಹೇಷು ವಿಪ್ರಸದನೇ ದಾರಿದ್ರ್ಯ ಕೋಲಾಹಲೇ
ನಾಶೋ ಹ೦ತ ಸತಾಮಸತ್ಪಥಜುಷಾಮಾಯುಃ ಶತಾನಾ೦ ಶತಮ್ |
ದುರ್ನೀತಿ೦ ತವ ವೀಕ್ಷ್ಯ ಕೋಪದಹನಜ್ವಾಲಾಜಟಾಲೋಽಪಿ ಸನ್
ಕಿ೦ ಕುರ್ವೇ ಜಗದೀಶ ಯತ್ಪುನರಹ೦ ದೀನೋ ಭವಾನ್ ಈಶ್ವರಃ ||

(ನೀಚರ ಮನೆಯಲ್ಲಿ ಸಮೃದ್ಧಿ, ಜ್ಞಾನಿಗಳ ಮನೆಯಲ್ಲಿ ದಾರಿದ್ರ್ಯ ಕೋಲಾಹಲ; ಸತ್ಪುರುಷರು ಅಲ್ಪಾಯುಗಳು, ದುಷ್ಟರಿಗೆ ನೂರಾರು ವರ್ಷದ ಆಯುಷ್ಯ; ನಿನ್ನ ದುರ್ನೀತಿಯನ್ನು ಕ೦ಡು ಸಿಟ್ಟು ನೆತ್ತಿಗೇರುತ್ತಿದೆ. ಏನು ಮಾಡಲಿ? ನಾನು ದೀನ, ನೀನು ಜಗದೀಶ) ಎ೦ದು ಒ೦ದೆಡೆ ಜಗದೀಶ್ವರನನ್ನೇ ತರಾಟೆಗೆ ತೆಗೆದುಕೊ೦ಡರೆ ಮತ್ತೊ೦ದೆಡೆ
ಕಲಿ೦ದಗಿರಿನ೦ದಿನೀತಟಸುರದ್ರುಮಾಲ೦ಬಿನೀ |
ಮದೀಯಮತಿಚು೦ಬಿನೀ ಭವತು ಕಾಽಪಿ ಕಾದ೦ಬಿನೀ ||

ಎ೦ದು ಮಧುರಕೋಮಲಕಾ೦ತ ಮ೦ಜುಲ ಕವಿತಾಪಾಟಗಳಿ೦ದ ತನ್ನ ಆರಾಧ್ಯ ದೈವವನ್ನು ಭಕ್ತಿಪೂರ್ವಕವಾಗಿ ನೆನೆಯುತ್ತಾನೆ.
ಇ೦ತಿಪ್ಪ ಈತನ ಜೊತೆ ಚರ್ಚಿಸಲು ಆಗಿನ ಕಾಲದ ಮಹಾಮಹಾಮೇಧಾವಿಗಳೂ ಹೆದರುತ್ತಿದ್ದರ೦ತೆ. ಪ೦ಡಿತಕುಲವನ್ನೆಲ್ಲ ಚೆ೦ಡಾಡಿದ ಮೇಲೂ ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಸಿ೦ಹವು ಮಾ೦ಸವನ್ನು ಸಿಗಿಯುವ೦ತೆ ಎದುರಾಳಿಗಳನ್ನು ಸಿಗಿಯುವ ತನ್ನ ಪಾ೦ಡಿತ್ಯಕ್ಕೆ ಬಲಿಯೇ ಸಿಗುತ್ತಿಲ್ಲವಲ್ಲ ಎ೦ದು ಒ೦ದು ಕಡೆ ಹಾಸ್ಯಮಾಡುತ್ತಾನೆ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಅವನ ಜೊತೆ ವಾದಕ್ಕೆ ಯಾರೂ ಮು೦ದಾಗದಿದ್ದಾಗ ಜಗನ್ನಾಥನು ಅರೇಬಿಕ್ನಲ್ಲಿಯೇ ಕುರಾನನ್ನು ಅಭ್ಯಾಸ ಮಾಡಿ ಆ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದೇಶಾದ್ಯ೦ತ ಹರಡಿತ೦ತೆ.
ಈ ಘಟನೆಯ ನ೦ತರ ಜಗನ್ನಾಥ ಮತ್ತು ಮುಘಲ್ ದೊರೆ ಶಹಜಹಾನ್ ಇಬ್ಬರೂ ಆಪ್ತಮಿತ್ರರಾದರು.
ಜಗನ್ನಾಥ ಮತ್ತು ಷಾಜಹಾನ ಒಮ್ಮೆ ಚದುರ೦ಗವಾಡುತ್ತಿದ್ದಾಗ ಷಾಜಹಾನನ ಸಾಕುಮಗಳು ಲವ೦ಗಿ ತ೦ದೆಗಾಗಿ ಚಿನ್ನದ ಹೂಜಿಯಲ್ಲಿ ನೀರು ತ೦ದಳ೦ತೆ. ಅವಳನ್ನು ನೋಡಿದಕೂಡಲೇ ಜಗನ್ನಾಥ ನುಡಿದನ೦ತೆ
ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ |
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ ||

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ ಈಕೆ ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)
     ಮು೦ದೆ ಲವ೦ಗಿಯನ್ನು ಮದುವೆಯಾದ ಜಗನ್ನಾಥ ಷಾಜಹಾನಿನ ಅಳಿಯನಾದ. ಆದರೆ ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಬಹಿಷ್ಕಾರ ಹಾಕಲಾಯ್ತು. ಷಹಜಹಾನಿನ ಮಗ ದಾರಾಶೂಕೋವಿಗೆ ವೇದಾ೦ತವನ್ನು ಕಲಿಸಿ ನಮ್ಮ ದರ್ಶನಗಳು ಪರ್ಷಿಯನ್ನಿಗೂ ಅಲ್ಲಿ೦ದ ಕಾಲಾನುಕ್ರಮದಲ್ಲಿ ಇ೦ಗ್ಲೀಷಿಗೂ ಭಾಷಾ೦ತರಣಗೊ೦ಡು ವಿಶ್ವವಿಖ್ಯಾತಗೊಳ್ಳಲು ಮೂಲ ಕಾರಣನಾದವನು ಕೂಡ ಇವನೇ.  ಔರ೦ಗಾಜೇಬ ಪಟ್ಟಕ್ಕೆ ಬ೦ದ ಕೂಡಲೇ ತ೦ದೆ ಶಹಜಹಾನನ್ನು ಬ೦ಧಿಸಿ ಜೈಲಲ್ಲಿಟ್ಟ, ದಾರಾಶುಕೋ ಕೊಲ್ಲಲ್ಪಟ್ಟ. ಬೇರೆ ದಾರಿಕಾಣದ ಜಗನ್ನಾಥ ಪತ್ನಿಯೊಡನೆ ಕಾಮರೂಪಕ್ಕೆ ತೆರಳಿ ರಾಜ ಪ್ರಾಣನಾರಾಯಣನ ಆಶ್ರಯ ಪಡೆದ. ಔರ೦ಗಾಜೇಬ ಕಾಮರೂಪವನ್ನ ಮುತ್ತಿಗೆ ಹಾಕಿದಾಗ ಅಲ್ಲಿ೦ದಲೂ ಹೊರಟು ದೇಶಸ೦ಚಾರ ಮಾಡಿ ಕೊನೆಗೆ ಕಾಶಿಗೆ ಬ೦ದ. ಅಷ್ಟರಲ್ಲಾಗಲೇ ಅವನಿಗೆ ತೀರಾ ವಯಸ್ಸಾಗಿತ್ತು. ಧರ್ಮಭೃಷ್ಟನಿಗೆ ಆಶ್ರಯ ನೀಡಲು ಕಾಶಿಯ ಜನ ಸಿದ್ಧರಿರಲಿಲ್ಲ. ಒ೦ದು ದಿನ ಬೆಳ್ಳ೦ಬೆಳ್ಳಗೆ ಪಂಡಿತರಾಜ ಕಾಶಿಯ ಗ೦ಗೆಯ ಘಾಟಿನ ಮೇಲೆ ದಾರಿಗಡ್ಡವಾಗಿ ಮಲಗಿದ್ದ. ಜನರೆಲ್ಲ ಗ೦ಗಾಸ್ನಾನಕ್ಕಾಗಿ ಬರುತ್ತಿದ್ದರು. ಅದೇ ದಾರಿಯಲ್ಲಿ ಸ್ನಾನಕ್ಕೆ ಬ೦ದಿದ್ದ ಜಗನ್ನಾಥನ ಪರಮವಿರೋಧಿ ಅಪ್ಪಯ್ಯ ದೀಕ್ಷಿತರು(ಅಪ್ಪಯ್ಯ ದೀಕ್ಷಿತರು ಪ೦ಡಿತರಾಜನ ಪೂರ್ವಕಾಲೀನರೆ೦ಬ ವಾದವಿರುವುದರಿ೦ದ ಇದು ಯಾವ ಅಪ್ಪಯ್ಯ ದೀಕ್ಷಿತರೋ!) ದಾರಿಮಧ್ಯ ಯಾರೋ ಮಲಗಿದ್ದು ನೋಡಿ ತಾತ್ಸಾರದಿ೦ದ ಬೈದರು
ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ
(ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ಇಲ್ಲಿ ಬಂದು ಹೀಗೆ ಮಲಗಿರುವಿರಲ್ಲ?) 
ಜಗನ್ನಾಥ ಪ೦ಡಿತ ಮುಸುಕು ಸರಿಸಿ ನಿಧಾನಕ್ಕೆ ನಿದ್ದೆಯಿ೦ದೆದ್ದು ಮೇಲೆ ನೋಡಿದ..
ಅಪ್ಪಯ್ಯ ದೀಕ್ಷಿತರು ತಮ್ಮ ಸಿದ್ಧಾ೦ತವನ್ನೆಲ್ಲ ಖ೦ಡಿಸಿ ಒಗೆದಿದ್ದ ಖ೦ಡಿತರಾಜನನ್ನು ನೋಡಿ ಬೆವರಲಾರ೦ಭಿಸಿದರು. ನಾಲಿಗೆಯ ಪಸೆ ಒಣಗಿಹೋಗಿತ್ತು. ತೊದಲುತ್ತ ವಿನೀತರಾಗಿ ಹೇಳಿದರು
ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.
(  ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)
ಈ ಮಾತು ಕೇಳಿ ಜಗನ್ನಾಥನಿಗೆ ಜ್ಞಾನೋದಯವಾಯಿತು. ತನ್ನ ಪಾಪವನ್ನು ತೊಳೆಯಲು ಗ೦ಗೆಗಿ೦ತ ಉತ್ತಮರು ಇನ್ಯಾರಿದ್ದಾರೆ೦ದು ಭಾವಿಸಿ ಪತ್ನಿಯೊಡನೆ ಜಲಸಮಾಧಿಗೆ ಸಿದ್ಧನಾದ. ಹೇಳಿಕೇಳಿ ಈತ ಧರ್ಮಭೃಷ್ಟ. ಈತ ಗ೦ಗೆಯಲ್ಲಿ ಸಮಾಧಿಯಾಗುವುದಕ್ಕೆ ಹೋದದ್ದನ್ನು ನೋಡಿ ಧರ್ಮನಿಷ್ಠರು ಗ೦ಗೆಯನ್ನು ಮುಟ್ಟದ೦ತೆ ವಿರೋಧಿಸಿದರು. ಹತಾಶನಾದ ಜಗನ್ನಾಥ ಪ೦ಡಿತ ದಡದಲ್ಲೇ ನಿ೦ತು ಭಕ್ತಿಯಿ೦ದ ಗ೦ಗೆಯನ್ನು ’ಗ೦ಗಾಲಹರಿ’ಯ ಮೂಲಕ ಪ್ರಾರ್ಥಿಸತೊಡಗಿದ.
ವಿಭೂಷಿತಾ೦ಗರಿಪೂತ್ತಮಾ೦ಗಾ ಸಧ್ಯಃ ಕೃತಾನೇಕಜನಾರ್ತಿಭ೦ಗಾ |
ಮನೋಹರೋತ್ತು೦ಗಚಲತ್ತರ೦ಗಾ ಗ೦ಗಾ ಮಮಾ೦ಗಾನ್ಯಮಲೀಕರೋತು ||

ಇವನ ಒ೦ದೊ೦ದು ಶ್ಲೋಕಕ್ಕೂ ಒ೦ದೊ೦ದು ಮೆಟ್ಟಿಲೇರಿ ಬ೦ದ ಗ೦ಗೆ ಐವತ್ತೆರಡನೇ ಶ್ಲೋಕಕ್ಕೆ ಉಕ್ಕಿ ಹರಿದು ಲವ೦ಗಿ ಸಹಿತನಾದ ಜಗನ್ನಾಥನನ್ನು ತನ್ನಲ್ಲಿ ಸೆಳೆದು ಐಕ್ಯಗೊಳಿಸಿಕೊ೦ಡಳು.
ಅಬ್ಬ.....ಜೀವನದುದ್ದಕ್ಕೂ ಧರ್ಮನಿಷ್ಟರನ್ನು ವಿರೋಧಿಸಿಕೊ೦ಡೇ ಬ೦ದ, ಮಹಾ ಮಹಾ ಶಾಸ್ತ್ರೀಯ ಸಿದ್ಧಾ೦ತಗಳನ್ನು ಟೀಕಿಸಿದ ಒಗೆದ, ಯಮುನಾ ನದೀ ತೀರ, ಯುವಕನ್ಯೆಯ ಜೊತೆ ಮದ್ಯವೊ೦ದಿದ್ದರೆ ಜೀವನವೇ ಪಾವನ ಎ೦ದವನ ಭಕ್ತಿ ಎಷ್ಟು ದೊಡ್ಡದಲ್ಲವೇ.
ಪ೦ಡಿತರಾಜ ಜಗನ್ನಾಥನ ಒ೦ದು ಪ್ರಸಿದ್ಧ ಶ್ಲೋಕ.
ನೀಲೋದ್ಫಲಸ್ಯ ಪದ್ಮಸ್ಯ ಮತ್ಸಸ್ಯ ಕುಮುದಸ್ಯ ಚ |
ಏಕೈವನಿ ಪ್ರಸೂತಾನಾಮ್ ಪೇಶಾಂ ಗಂಧ: ಪ್ರುಥಕ್ ಪ್ರುಥಕ್ |
|

ಕಮಲಗಳು, ಕಣ್ಣೈದಿಲೆ, ಮೀನು - ಇವೆಲ್ಲ ಒಂದೇ ನೀರಿನಲ್ಲಿ ಹುಟ್ಟಿದ್ದರೂ, ಇವು ಬೀರುವ ಪರಿಮಳ ಬೇರೆ ಬೇರೆ.
ಒಂದು ಮನೆ, ಒಂದು ಜಾತಿ, ಒಂದು ಮತ, ಒಂದು ಊರು, ಒಂದು ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಯಾರೊಬ್ಬನೂ ಕೂಡ ಮೇಲು ಅಥವ ಕೀಳು ಆಗುವುದಿಲ್ಲ. ಮೂಲವು ಒಂದೇ ಆದರೂ, ಒಬ್ಬೊಬ್ಬರ ಗುಣ ಓಂದೊಂದು ರೀತಿ.

ಗ್ರ೦ಥಋಣ: ಮಹೇಶ ಅಡ್ಕೋಳಿಯವರ ಸ೦ಸ್ಕೃತ ಕಾವ್ಯ, 
ಸಿಸ್ತಾ ಆ೦ಜನೇಯಶಾಸ್ತ್ರಿಯವರ ಪ೦ಡಿತರಾಯುಲು: ರಾಜಭಾಮಿನಿ, 
ಸಲ್ಲಾಪ


14 comments:

 1. Vivarane, Tumbaa Chennagide, Sachin..Prayathnakkagi, Dhanyavadagalu.

  ReplyDelete
  Replies
  1. ಓದಿ ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆಗಳು ಉಪ್ಪ೦ಗಳಣ್ಣ

   Delete
 2. ಸಚಿನ್, ನಿಮ್ಮಿ೦ದಾಗಿ ಒಳ್ಳೆ ವಿಶಯ ತಿಳಿದ೦ತಾಯಿತು.ಬಿಡುವಾಗಿದ್ದಾಗೆಲ್ಲ ನಿಮ್ಮ ಜ್ನಾನ ನಿಧಿಯನ್ನು ಸ್ವಲ್ಪ ಸ್ವಲ್ಪವೇ ಹೀಗೆ ಅನಾವರಣಗೊಳಿಸಿ ನಮ್ಮ೦ತವರಿಗೆ ಅನುಕೂಲ ಮಾಡಿ.

  ReplyDelete
 3. ಮೆಧಾನ್ ಮೇಧ ದವಾ ದವಾ ದವ ದವಾ ದಾವಾ ದವಾ ಮಾಧವಾ.
  ನಾನಾ ರತ್ನ ನರೆಕ್ಷಣ್ಂ ನರಹರಿಂ,ನಾರಾಪಿ ನಾರಾಯಣ.
  ಧ.ವಾ ನಾಣಣ್ಣೋ...:)

  ReplyDelete
 4. Is it that this jaganath bhat has taken a rebirth?

  ReplyDelete

 5. ದೊಡ್ಡವರ ಬಾಯಲ್ಲಿ ದೊಡ್ಡ ಮಾತೇ ಬರುವುದು ಅಲ್ವೇ ಶಾ೦ತಣ್ಣ. ಇಬ್ಬರೂ ಆ೦ಧ್ರದವರೆ೦ಬುದೊ೦ದೇ ಸಾಮ್ಯತೆ.
  ಹಾ೦ ಮರೆತಿದ್ದೆ....
  ವಿದ್ವತ್ವ೦ಚ ನೃಪತ್ವ೦ಚ ನೈವ ತುಲ್ಯ೦ ಕದಾಚನಾ
  ಸ್ವದೇಶೇ ಪೂಜ್ಯತೇ ರಾಜಾ, ವಿದ್ವಾನ್ ಸರ್ವತ್ರ ಪೂಜ್ಯತೇ
  ಇದೂ ಜಗನ್ನಾಥ ಉವಾಚವೇ

  ReplyDelete
 6. ಅತ್ಯುತ್ತಮ ಲೇಖನ.. ಯಾವತ್ತೂ ಹೇಳುವಂತೆ.

  ಇನ್ನೂ ಒಂಚೂರು ಮುಂದುವರೆಸು ಮಹರಾಯ :)

  ReplyDelete
  Replies
  1. ಕ್ಲೈಮ್ಯಾಕ್ಸ್ ಸೀನ್ ಆಗೋತಲಾ ಕಿಣ್ಣ. ಹೊಸತು ಶುರುಮಾಡವು.

   Delete
 7. super........ but yenu arta aglila...........

  ReplyDelete
 8. काव्यशास्त्रजगद्राजराजशॆखरभूपतेः ।
  सम्यग् लिलेख वृत्तान्तं सचिन् नामक-पण्डितः ॥

  ReplyDelete
  Replies
  1. ಅಲಾ ಬೈದ್ರೋ ಎ೦ತೋ ಹೇಳ್ ಗುತ್ತಾಜಿಲ್ಲೆ. ಧ.ವಾ ಗುರುಗಳೇ...:)

   Delete