Pages

Saturday, September 12, 2015

ಕೊಲ್ಕತ್ತಾ ಡೈರಿ: ಪಠಾಣನ ಮಂದಿರ ಪ್ರೇಮ

       ಭಯಂಕರ ಇಂಟರೆಸ್ಟಿಂಗ್ ಪತ್ತೆದಾರಿ ಕಾದಂಬರಿ ಓದುವಾಗ ನಡುವಿನಲ್ಲಿ ಒಂದಿಷ್ಟು ಹಾಳೆಗಳೇ ನಾಪತ್ತೆಯಾದರೆ ಹೇಗಿರುತ್ತೋ ಅದೇ ಅನುಭವ ಇತಿಹಾಸಕಾರನೊಬ್ಬನಿಗೆ ಚಂದ್ರಕೇತುಘರದ ಕಳೆದುಹೋದ ಇತಿಹಾಸ ಕಟ್ಟಿಕೊಡುತ್ತದೆ. ಬೇಡಾಚಂಪಾದಿಂದ ಹಿಂದಿರುಗಿದ ಮೇಲೂ ಅನ್ನಿಸುತ್ತಿದ್ದುದು ಒಂದೇ ಪ್ರಶ್ನೆ. ನಮ್ಮ ಸಂಸ್ಕೃತಿ, ಇತಿಹಾಸ, ಕಲೆಗಳ ಬಗ್ಗೆ ನಮಗೇಕಿಂಥ ಅಸಡ್ಡೆ? ಪ್ರಪಂಚದ ಯಾವ ಮೂಲೆಗಾದರೂ ಹೋಗಿ ಅಲ್ಲಿನ ಜನರಿಗೆ ಹೇಳಿ, ನಿಮ್ಮ ಇತಿಹಾಸ ನೀವಂದುಕೊಂಡದ್ದಕ್ಕಿಂತ ಇಷ್ಟು ಹಳೆ ಹಳೆಯದು, ನಿಮ್ಮ ಪೂರ್ವಿಕರು ಇಷ್ಟು ಭವ್ಯವಾಗಿ ಬಾಳಿಬದುಕಿದ್ದರೆಂದು......ಖುಷಿಯಿಂದೆದ್ದು ಕುಣಿದಾದಿ ಅದನ್ನು ತಲೆಯ ಮೇಲೆತ್ತು ಮೆರೆಸುತ್ತಾರೆ. ಅದೇ ನಮ್ಮವರಿಗೆ ಹೇಳಿನೋಡಿ. ಸತ್ತರೂ ತಲೆಕೆಡಿಸಿಕೊಳ್ಳಲಿಕ್ಕಿಲ್ಲ. ಹಿಟ್ಲರ್ ಒಮ್ಮೆ ಹೇಳಿದ್ದ fight people and they fight back; destroy their culture and they cease to exist. ದೇಶವೊಂದನ್ನು ನಾಶಮಾಡುವುದೆಂದರೆ ಅಲ್ಲಿನ ಜನರೊಡನೆ ಬಡಿದಾಡುವುದಲ್ಲ. ಅವರು ಬಡಿದಷ್ಟೂ ಮತ್ತೆ ಮೇಲೆದ್ದು ಬರುತ್ತಾರೆ. ಬದಲಾಗಿ ಅವರ ಸಂಸ್ಕೃತಿಯನ್ನು ನಾಶಮಾಡಿ, ಆ ದೇಶ ಸ್ವಯಂ ನಾಶವಾಗುತ್ತದೆ. ಮೆಕಾಲೆ ಹೇಳಿದ್ದು, ಬ್ರಿಟಿಷರು ಮಾಡಿದ್ದೂ, ಈಗಿನ ನಮ್ಮದೇ ಸರಕಾರಗಳು ಅನುಸರಿಸುತ್ತಿರುವುದೂ ಅದನ್ನೇ. ಇಂಥ ಅಪವಸ್ಯಗಳ ಮಧ್ಯದಲ್ಲೂ ದಿಲೀಪ್ ಕುಮಾರ್ ಮೈತ್ರೆಯವರಂಥವರಿದ್ದಾರೆಂಬುದೇ ಸಮಾಧಾನದ ಸಂಗತಿ. ತಿರುಗಿ ಬಂದ ಮೇಲೂ ಯಾಕೋ ಚಂದ್ರಕೇತುಘರ್ ಕಾಡುವುದನ್ನು ಬಿಡಲಿಲ್ಲ. ಜೊತೆಜೊತೆಗೆ ಅಷ್ಟೇ ಗಾಢವಾಗಿ ನೆನಪಾದವನು ಆ ಪಠಾಣ.
       ಮುಂದಿನ ವೀಕೆಂಡ್ ಆಪ್ತಮಿತ್ರ ಸಂದೀಪ್ ಸೇನ್‌ಗುಪ್ತನೊಡನೆ ನಮ್ಮ ಸವಾರಿ ಹೊರಟಿದ್ದು ಮೇದಿನಿಪುರ ಅಥವಾ ಮಿಡ್ನಾಪುರದ ಸಮೀಪದ ಒಂದು ಚಿಕ್ಕ ಊರಿಗೆ. ಬಾಂಗಾಲಿ ಕಲೆ, ವಾಸ್ತುಶಿಲ್ಪ, ಪುರಾತತ್ವಗಳ ಸಂಶೋಧಕರಿಗೆ ಆ ಊರೊಂದು ಅಕ್ಷಯಪಾತ್ರೆ. ಆ ಅಕ್ಷಯಪಾತ್ರೆಯನ್ನು ನೋಡಬಹುದೆಂಬ ಕಾರಣ ಒಂದಾದರೆ ಅದರ ಆಪದ್ಭಾಂಧವ ಪಠಾಣ ಸಾಬಿ ಸಿಗಬಹುದೆಂಬುದು ಇನ್ನೊಂದು ಕಾರಣ. ಆ ಊರಿನ ಹೆಸರು ಪಾತ್ರಾ..... ಮಂದಿರ್ ಮೋಯ್ ಪಾತ್ರಾ. ಬಂಗಾಳದ ದೇವಾಲಯಗಳ ಊರದು. ಕಂಗ್ಸಾಬಾಟಿ ನದಿಯ ದಡದಲ್ಲಿರುವ ಈ ಹಳ್ಳಿಗೆ ಕಾಲಿಟ್ಟರೆ ಹೆಜ್ಜೆಗೊಂದು ದೇವಸ್ಥಾನಗಳೆದುರಾಗುತ್ತವೆ. ಬೆಂಗಳೂರಲ್ಲಿ ಒಗೆದ ಕಲ್ಲು ಹೋಗಿ ಬೀಳುವುದು ಇಂಜಿನಿಯರನ ತಲೆಯಮೇಲಾದರೆ ಇಲ್ಲಿ ಬೀಳುವುದು ಯಾವುದಾದರೊಂದು ಗುಡಿಯ ಮೇಲೆ. ಅದೂ ಇಂದುನಿನ್ನೆಯದವುಗಳಲ್ಲ. ಅಲ್ಲಿನ ಇತಿಹಾಸ ಕೆದುಕುತ್ತ ಹೋದರೆ ಹೋಗಿ ನಿಲ್ಲುವುದದು ಗುಪ್ತರ ಕಾಲಕ್ಕೆ. ಗುಪ್ತರ ಆಳ್ವಿಕೆಯೆಂಬುದು ಹೇಳಿಕೇಳಿ ಭಾರತದ ಸ್ವರ್ಣಯುಗ. ತಾಮ್ರಲಿಪ್ತವೆಂದು ಕರೆಯಲ್ಪಡುತ್ತಿದ್ದ ಈ ಸುತ್ತಲಿನ ಪ್ರದೇಶ ಮೌರ್ಯಕಾಲದಿಂದ ಹಿಡಿದು ಗುಪ್ತರವರೆಗೂ ದಕ್ಷಿಣಪೂರ್ವ ಏಶಿಯಾದ ಹೆಬ್ಬಾಗಿಲೆಂದೇ ವಿಶ್ವವಿಖ್ಯಾತವಾಗಿತ್ತು. ಚೀನ, ಗ್ರೀಕ್, ಮಧ್ಯಪ್ರಾಚ್ಯ, ಯುರೋಪ್, ಈಶಾನ್ಯ ಏಶಿಯಾ ಸೇರಿ ವಿಶ್ವದ ಹಲಭಾಗಗಳೊಡನೆ ಬಂಗಾಳದ ವ್ಯಾಪಾರ ವಹಿವಾಟುಗಳನ್ನು ಬೆಸೆದ ಮುಖ್ಯಕೊಂಡಿಯಾಗಿತ್ತಿದು. ಅದಕ್ಕೊಂದು ಕಾರಣವೆಂಬಂತೆ ಗುಪ್ತರ ಮೂಲ ಇಲ್ಲೇ ಪಕ್ಕದ ಮುರ್ಷಿದಾಬಾದ್ ಎಂದೂ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಮಹಾಭಾರತದ ಭೀಷ್ಮಪರ್ವದಲ್ಲಿ ತಾಮ್ರಲಿಪ್ತದ ಉಲ್ಲೇಖವಿದೆ. ಭೀಮ ಈ ಭಾಗವನ್ನು ಗೆದ್ದಿದ್ದನಂತೆ. ಈ ಪ್ರದೇಶವನ್ನಾಳುತ್ತಿದ್ದ ತಾಮ್ರಧ್ವಜನೆಂಬ ಅರಸನಿಂದ ಈ ಹೆಸರು ಬಂದಿತೆಂಬ ಪ್ರತೀತಿಯಿದೆ. ತಾಮ್ರದ ಅದಿರು ಹೇರಳವಾಗಿ ದೊರೆಯುವುದರಿಂದ ತಾಮ್ರಲಿಪ್ತವೆಂದು ಕರೆಯಲ್ಪಟ್ಟಿತೆಂಬ ಮಾತೂ ಇದೆ. ಪುರಾತನ ಸಿಲೋನಿನ ಬೌದ್ಧ ಕಾವ್ಯಗಳಲ್ಲಿ, ಗ್ರೀಕ್, ಚೈನಾದ ಪ್ರವಾಸಿಗರ ದಾಖಲೆಗಳಲ್ಲಿ ತಾಮ್ರಲಿಪ್ತದ ಹೆಸರಿದೆ. ಪ್ಟಾಲೆಮಿ ಇದನ್ನು ತಾಮಲಿಟಿಯೆಂದು ಕರೆದು ಇದನ್ನು ದಕ್ಷಿಣ ಏಷ್ಯಾದ ಅತಿದೊಡ್ಡ ಬಂದರು ಎನ್ನುತ್ತಾನೆ. ಅಶೋಕನ ಕಾಲದಲ್ಲಿ ಇಲ್ಲಿ ಬೌದ್ಧಮತವೂ ಪ್ರಚಾರಕ್ಕೆ ಬಂದಿತು. ಅಶೋಕನ ಇಬ್ಬರು ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರರು ಮತಪ್ರಚಾರಕ್ಕಾಗಿ ಸಿಲೋನಿಗೆ ತೆರಳಿದ್ದು ಇದೇ ಸ್ಥಳದಿಂದಂತೆ. ಅಲ್ಲಿಂದ ಕ್ರಿ.ಶ ೧೨ನೇ ಶತಮಾನದವರೆಗೂ ಹಿಂದೂ, ಜೈನ, ಬೌದ್ಧ ಮತಗಳ ಮುಖ್ಯಕೇಂದ್ರವಾಗಿ ತಾಮ್ರಲಿಪ್ತ ಹೆಸರುವಾಸಿಯಾಯಿತು. ೧೯೬೧ರಲ್ಲಿ ಇಲ್ಲಿ ಉತ್ಖನನ ನಡೆದಾಗ ಗುಪ್ತೋತ್ತರ ಕಾಲದ ವಿಷ್ಣು ಲೋಕೇಶ್ವರನ ಎಂಟಡಿ ಎತ್ತರದ ವಿಗ್ರಹವೊಂದು ಸಿಕ್
ಲೋಕೇಶ್ವರ(ಕಲ್ಕತ್ತದ ಇಂಡಿಯನ್ ಮ್ಯೂಸಿಯಂ)
ಕು ತಾಮ್ರಲಿಪ್ತದ ಹಳೆಯ ಇತಿಹಾಸದ ಪುಟಗಳನ್ನು ಮತ್ತೆ ಕೆದಕಿ ಮುನ್ನೆಲೆಗೆ ತಂದಿತ್ತು. ಹಿಂದೂಗಳ ವಿಷ್ಣು, ಬೌದ್ಧರ ಲೋಕೇಶ್ವರನ ಸ್ವರೂಪಗಳ ಸುಂದರ ಮಿಶ್ರಣದ ಈ ವಿಗ್ರಹ ಶತಶತಮಾನಗಳ ಹಿಂದೂ ಬೌದ್ಧ ಸಾಮರಸ್ಯದ ಕಥೆ ಹೇಳುತ್ತದೆ. ತಾಮ್ರಲಿಪ್ತದ ಶ್ರೀಮಂತ ವಾಸ್ತುವೈಭವದ ಕುರುಹುಗಳನ್ನು ನೋಡುವುದಿದ್ದರೆ ಕೋಲ್ಕತ್ತಾಕ್ಕೆ ಭೇಟಿ ನೀಡಿದವರು ಇಂಡಿಯನ್ ಮ್ಯೂಸಿಯಮ್ಮಿಗೆ ಹೋಗುವುದನ್ನು ಮರೆಯಬೇಡಿ. ಮಹಾಭಾರತದ ಸಮಯದಿಂದ ದಕ್ಷಿಣ ಏಷಿಯಾದ ಅತಿದೊಡ್ಡ ವ್ಯಾಪಾರ ಕೇಂದ್ರವಾಗಿದ್ದ ತಾಮ್ರಲಿಪ್ತದ ಪ್ರಸಿದ್ಧಿಯ ಕೊನೆಯ ಉಲ್ಲೇಖ ಸಿಗುವುದು ೯ನೇ ಶತಮಾನದ ಪಾಲರ ಉದಯಮಾನನ ದೂಧ್‌ಪಾನಿ ಶಿಲಾಶಾಸನದಲ್ಲಿ. ನಂತರ ಬಂಗಾಳವನ್ನಾಳಿದವರು ಅಚ್ಚಕನ್ನಡ ಮೂಲದ ಸೇನರು. ಸೇನ ವಂಶದ ಬಲ್ಲಾಳಸೇನ ಅಹಿಚ್ಛತ್ರದಿಂದ(?) ಐದು ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ಐದು ಗ್ರಾಮಗಳಲ್ಲಿ ನೆಲೆಗೊಳಿಸಿದನಂತೆ. ಮುಖೋಟಿ ಗ್ರಾಮದಲ್ಲಿ ನೆಲೆಸಿದವರು ಮುಖ್ಯೋಪಾಧ್ಯಾಯರಾದರು(ಮುಖರ್ಜಿ), ಚಟ್ಟ ಗ್ರಾಮದವರು ಚಟ್ಟೋಪಾಧ್ಯಾಯ(ಚಟರ್ಜಿ), ಗಂಗರಿದಯದವರು ಗಂಗೋಪಾಧ್ಯಾಯ(ಗಂಗೂಲಿ), ಬಂಡದವರು ಬಂಡೋಪಾಧ್ಯಾಯ(ಬ್ಯಾನರ್ಜಿ) ಎಂದು ಕರೆಯಲ್ಪಟ್ಟರು. ಐದನೇ ಮನೆತನದ ಅರ್ಚಕರಿಗೆ ಭಟ್ಟಾಚಾರ್ಯರೆಂಬ ಹೆಸರು ಬಂದಿತು. ಇವರ ಸಹಾಯಕ್ಕೆ ಬಂದ ಐದು ಕ್ಷತ್ರಿಯ ಕುಟುಂಬಗಳು ಕ್ರಮವಾಗಿ ಬಸು, ದತ್ತ, ಘೋಷ, ಮಿತ್ರ ಮತ್ತು ಪಾಲ್ ಎಂದು ಹೆಸರಾದವಂತೆ. ಬ್ರಾಹ್ಮಣರಿಗೆ ಸಮುದ್ರ ಪ್ರಯಾಣ ನಿಷಿದ್ಧವಾಗಿದ್ದರಿಂದ ಕಟ್ಟಾ ವೈದಿಕರಾಗಿದ್ದ ಸೇನ ಅರಸರ ಕಾಲದಲ್ಲಿ ಸಮುದ್ರವ್ಯಾಪಾರಗಳಿಗೆ ನಿರ್ಭಂಧ ಹೇರಲ್ಪಟ್ಟವು. ಸೇನರ ಕೊನೆಯ ಅರಸು ಲಕ್ಷ್ಮಣ ಸೇನನ ಕಾಲದಲ್ಲಂತೂ ಈ ಹುಚ್ಚಾಟ ಯಾವ ಮಟ್ಟಕ್ಕೆ ಮುಟ್ಟಿತೆಂದರೆ ಶ್ರವಣಮತಾವಲಂಬಿಗಳಾದ ಪಕ್ಕದರಾಜ್ಯಗಳು ಹಾಗೂ ವಿದೇಶಗಳೊಡಗಿನ ವ್ಯವಹಾರಗಳು ಕೂಡ ಬಂದಾದವು. ಹಿಂದಿನ ಪಾಲರ ಕಾಲದಲ್ಲಿ ಬಳಕೆಯಲ್ಲಿದ್ದ ಪಾಲಿ, ಪ್ರಾಕೃತ, ಬಂಗಾಳಿಗಳ ಬದಲಾಗಿ ಸಂಸ್ಕೃತ ಮತ್ತೆ ಪ್ರವರ್ಧಮಾನಕ್ಕೆ ಬಂತು. ಗೀತಗೋವಿಂದವೆಂಬ ಸರ್ವಕಾಲೀನ ಅಮರ ಕೃತಿಯನ್ನು ಬರೆದ ಜಯದೇವ ಇದೇ ಲಕ್ಷ್ಮಣಸೇನನ ಆಸ್ಥಾನದಲ್ಲಿದ್ದವ. ಕಲೆ, ಸಾಹಿತ್ಯ, ಸಂಗೀತಗಳು ಅದ್ಭುತವಾಗಿ ವಿಜೃಂಭಿಸಿದವು. ಆದರೇನು ಫಲ? ಹೊರರಾಜ್ಯಗಳೊಡನೆ ಸಂಪರ್ಕ ಕಡಿದುಕೊಂಡು ರಾಜ್ಯದೊಳಗೆ ಮೂಗು ಮುಚ್ಚಿ ಕೂತಿದ್ದೇ ಸೇನರಿಗೆ ಮುಳುವಾಯಿತು. ಬಿಹಾರವನ್ನು ಧ್ವಂಸಗೊಳಿಸಿದ ಭಕ್ತಿಯಾರ್ ಖಿಲ್ಜಿಯ ಕಣ್ಣು ಬಿದ್ದಿದ್ದು ಸಂಪದ್ಭರಿತ ಬಂಗಾಳದ ಮೇಲೆ. ಲಕ್ಷ್ಮಣ ಸೇನ ತೀರ್ಥಯಾತ್ರೆಗೆ ಹೋಗಿದ್ದ ಸಮಯವನ್ನೇ ನೋಡಿಕೊಂಡು ಖಿಲ್ಜಿ ಬಂಗಾಳದ  ಮೇಲೆ ದಾಳಿಯಿಟ್ಟಾಗ ಸಹಾಯಕ್ಕೆ ಬರುವವರಾರೂ ಇರಲಿಲ್ಲ. ಕಣ್ಮುಚ್ಚಿ ತೆರೆಯುವುದರೊಳಗೆ ಅರ್ಧ ಬಂಗಾಳ ಮುಸ್ಲೀಮರ ವಶವಾಗಿತ್ತು. ಗಂಗಾತೀರದಲ್ಲೆಲ್ಲೋ ತೀರ್ಥಯಾತ್ರೆಯಲ್ಲಿ ಮುಳುಗಿಹೋಗಿದ್ದ ಲಕ್ಷ್ಮಣಸೇನ ವಿಷಯ ತಿಳಿದವನೇ ಜೀವಭಯದಿಂದ ಸಮುದ್ರಮಾರ್ಗವಾಗಿ ಪೂರ್ವಬಂಗಾಳಕ್ಕೆ ಪಲಾಯನಗೈದನಂತೆ ಎಂಬುದು ಕಥೆಯಾದರೂ ವಿಪರ್ಯಾಸವೇ. ನನ್ನ ಗೆಳೆಯ ಸೇನ್‌ಗುಪ್ತಾ ಒಮ್ಮೆ ತಮಾಷೆ ಮಾಡಿದ್ದ. ಮುಸ್ಲೀಮರು ಅರಬ್ಬಿ ಕುದುರೆಗಳೊಂದಿಗೆ ಭಾರತದ ಮೇಲೆ ದಾಳಿ ಮಾಡಲು ತಮ್ಮ ಕತ್ತಿ ಮಸೆದುಕೊಳ್ಳುತ್ತಿರುವಾಗ ನಮ್ಮವರು ಅವರನ್ನೆದುರಿಸಲು ಶತ್ರುಸಂಹಾರ ಯಾಗಕ್ಕೆ ತಯಾರಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರಂತೆ. ಮುಂದೆ ಬಂದ ಇಸ್ಲಾಮಿಕ್ ಯುಗದಲ್ಲಿ ಸಾವಿರಾರು ವರ್ಷಗಳ ಕಾಲ ಕಾಪಾಡಿಕೊಂಡು ಬಂದಿದ್ದ ಉಚ್ಛ್ರಾಯ ಸಂಸ್ಕೃತಿಯೊಂದು ಪಾತಾಳದ ಬುಡ ಕಂಡಿತು. ಒಂದು ಕಾಲದಲ್ಲಿ ಕಲೆ, ವಾಸ್ತುಶಿಲ್ಪ, ವ್ಯಾಪಾರಗಳಲ್ಲಿ ವಿಶ್ವಪ್ರಸಿದ್ಧವಾಗಿದ್ದ ಬಂಗಾಳವನ್ನು ಖಿಲ್ಜಿಗಳು, ಘೋರಿಗಳು, ಲೋಧಿಗಳು ಮೊಘಲರು, ಬ್ರಿಟೀಷರೆಲ್ಲರೂ ಒಬ್ಬರಾದ ಮೇಲೊಬ್ಬರು ಕಿತ್ತು ತಿಂದರು. ತಾಮ್ರಲಿಪ್ತದ ಕತೆಯೂ ಇದಕ್ಕೇನು ಹೊರತಾಗಿರಲಿಲ್ಲ. ಇಲ್ಲಿನ ಇತಿಹಾಸಕ್ಕೊಂದು ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು ೧೭ನೇ ಶತಮಾನದಲ್ಲಿ. ಈ ಭಾಗವನ್ನಾಳುತ್ತಿದ್ದ ನವಾಬ ಅಲಿವರ್ದಿ ಖಾನ್ ರತ್ನಚೌಕ ಪರಗಣದ ಕಂದಾಯ ಇಲಾಖೆಯ ಕಲೆಕ್ಟರನ್ನಾಗಿ ಬಿದ್ಯಾನಂದ ಘೋಷ್ ಎಂಬ ಅಧಿಕಾರಿಯನ್ನು ನೇಮಿಸುತ್ತಾನೆ. ಆತನೋ ಮಹಾನ್ ದೈವಭಕ್ತ. ಒಂದಾದ ಹಿಂದೊಂದರಂತೆ ನೂರಾರು ದೇವಾಲಯಗಳನ್ನು ಬಿದ್ಯಾನಂದ ಈ ಪ್ರದೇಶದಲ್ಲಿ ಕಟ್ಟಿಸಿದ. ಸೇನರ ಕಾಲದ ಹಳೆಯ ದೇವಸ್ಥಾನಗಳನ್ನೆಲ್ಲ ದುರಸ್ಥಿ ಮಾಡಿ ಸುಸ್ಥಿತಿಗೆ ತಂದ. ತಾಮ್ರಲಿಪ್ತದ ಈ ಪ್ರದೇಶ ಹಳೆಯ ಕಳೆಯೆದ್ದು ಕುಣಿಯತೊಡಗಿತು. ತನ್ನ ಕೈಕೆಳಗೆ ಕೆಲಸಕ್ಕಿರುವ ಕಾಫೀರನೊಬ್ಬ ಹೀಗೆ ಪ್ರಸಿದ್ಧನಾಗುವುದನ್ನು ನೋಡಿ ಸಹಿಸಲು ನವಾಬನಿಗಾಗಲಿಲ್ಲ. ಬಿದ್ಯಾನಂದನನ್ನು ಸೆರೆಗೆ ತಳ್ಳಿ ಮರಣದಂಡನೆ ಶಿಕ್ಷೆ ವಿಧಿಸಲಾಯ್ತು. ಸ್ಥಳೀಯರ ಕತೆಯನ್ನೇ ನಂಬುವುದಾದರೆ ಇವನ ತಲೆಯನ್ನು ಮೆಟ್ಟಿ ಅಪ್ಪಚ್ಚಿ ಮಾಡಲು ಬಂದಿದ್ದ ಆನೆ ಯಾರೆಷ್ಟೇ ಸರ್ಕಸ್ ಮಾಡಿದರೂ ಕಾಲನ್ನು ಮೇಲೆತ್ತಲಿಲ್ಲವಂತೆ. ಬಿದ್ಯಾನಂದ ಬಚಾವಾದ. ಪಾ-ಉತ್ರಾ(ಕಾಲಿಂದ ಪಾರಾದ) ಆ ಸ್ಥಳದ ಹೆಸರು ಪೌತ್ರಾ ಎಂದಾಗಿ ಕಾಲಕ್ರಮೇಣ ಪಾತ್ರಾ ಎಂದು ಬಳಕೆಗೆ ಬಂತು. ಘೋಷ್ ಕುಟುಂಬ ಅದರ ನಂತರ ೧೮ನೇ ಶತಮಾನದ ಕೊನೆಯವರೆಗೂ ಮಂದಿರಗಳ ನಿರ್ಮಾಣ ಕಾರ್ಯವನ್ನು ಮುಂದುವರೆಸಿತು. ಇದರಿಂದ ಪ್ರಭಾವಿತವಾದ ಬಂಡೋಪಾಧ್ಯಾಯ ಎಂಬ ಶ್ರೀಮಂತ ವರ್ತಕರ ಕುಟುಂಬವೂ ಹಲವು ಮಂದಿರಗಳನ್ನು ಈ ಭಾಗದಲ್ಲಿ ನಿರ್ಮಿಸಿತು. ಈ ಪರಂಪರೆ ಅಂತ್ಯಕಂಡಿದ್ದು ಆ ಎರಡೂ ಕುಟುಂಬಗಳೂ ವ್ಯಾಪಾರಕ್ಕಾಗಿ ಕಲ್ಕತ್ತಕ್ಕೆ ತಮ್ಮ ನೆಲೆಯನ್ನು ಬದಲಾಯಿಸಿದಾಗಿನಿಂದ. ಮುಂದೆ ದೇವಸ್ಥಾನಗಳು ಪೋಷಕರಿಲ್ಲದೇ ಅನಾಥವಾದವು. ಮೂರ್ತಿಗಳು ಕಳುವಾಗತೊಡಗಿದವು. ನದಿಗೆ ನೆರೆಬಂದ ಕಾಲದಲ್ಲಿ ನದಿದಡದಲ್ಲಿದ್ದ ಒಂದೆರಡು ತೊಳೆದು ಹೋದವು. ಕಳ್ಳರ ನಿಧಿಯಾಸೆಗೆ ಬಲಿಯಾಗಿ ಕೆಲವು ನೆಲಸಮವಾದವು.  ಉದುರಿ ಬಿದ್ದ ಕಟ್ಟಡದ ಗೋಡೆಗಳ ಇಟ್ಟಿಗೆಗಳು ಅಕ್ಕಪಕ್ಕದವರ ಮನೆಕಟ್ಟಲು ಬಳಕೆಯಾದವು. ದೇವಾಲಯಗಳ ಬಗ್ಗೆಯೆಲ್ಲ ತಲೆಕೆಡಿಸಿಕೊಳ್ಳುವ ಜಾಯಮಾನವೆಲ್ಲ ಕಮ್ಯುನಿಸ್ಟ್ ಸರ್ಕಾರದ್ದಾಗಿರಲಿಲ್ಲ ಬಿಡಿ.




ಕಂಗ್ಸಾಬಾಟಿ ನದಿ
ಟೆರಾಕೋಟಾ ಮಾದರಿಗಳು

ದುರ್ಗಾದಲನ್ ಮಂದಿರ
        ಅಷ್ಟು ಯೋಚಿಸುತ್ತಿದ್ದಾಗ ಬರಿ ಹೊಂಡಗಳು ಮಾತ್ರವೇ ತುಂಬಿದ್ದ ಧೂಳು ರಸ್ತೆಯಲ್ಲಿ ದಡಬಡ ಸದ್ದು ಮಾಡುತ್ತ ಸಾಗಿದ್ದ ಲಟಾರಿ ಬಸ್ಸಿಗೆ ಗಕ್ಕನೆ ಬ್ರೇಕು ಬಿತ್ತು. ಬಂಗಾಳಿ ಬಸ್ಸುಗಳಿಗೆ ನಿಲ್ದಾಣಗಳೆಂಬುದಿಲ್ಲ. ಜೊತೆಗೆ ಎಷ್ಟು ಸಪೂರದ ದಾರಿಯಾದರೂ ಅವು ಹೋಗುವುದು ವಿಮಾನದ ಸ್ಪೀಡಿನಲ್ಲೇ. ಜನರ ಕೈ ಕಂಡಲ್ಲೆಲ್ಲ ರಪ್ಪನೆ ಬ್ರೇಕು ಹಾಕಿ ನಿಲ್ಲಿಸುವುದೊಂದೇ ಅಲ್ಲಿನ ಡ್ರೈವರುಗಳಿಗೆ ಗೊತ್ತಿರುವ ವಿದ್ಯೆ. ಅದು ಫ್ಲೈ ಓವರಿನ ಮೇಲಾಗಿರಬಹುದು, ಸಿಗ್ನಲ್ಲಿನ ನಟ್ಟ ನಡುವಾಗಿರಬಹುದು. ಅದಕ್ಕೆಲ್ಲ ಅವರು ಬಂಗಾಳಿಗಳು ಕೆಡಿಸಿಕೊಳ್ಳುವವರಲ್ಲ. ಯಾವುದೋ ಲಹರಿ ಲಹರಿ ಲಹರಿಯಲ್ಲಿದ್ದವ ಹಾಕಿದ ಬ್ರೇಕಿಗೆ ಮೂಗು ಜಜ್ಜಿಕೊಳ್ಳುವುದರಿಂದ ಬಚಾವಾಗಿದ್ದೆ. ಕಿಡಕಿಯಿಂದ ಹೊರನೋಡಿದರೆ ರಸ್ತೆ ಪಕ್ಕದಲ್ಲೇ ಅಲ್ಲಲ್ಲಿ ಸಣ್ಣ ಸಣ್ಣ ಮಂದಿರಗಳು ಕಣ್ಣಿಗೆ
ಬೀಳಲು ಶುರುವಾದವು. ಪಾತ್ರಾ ಹತ್ತಿರ ಬರುತ್ತಿದ್ದುದು ಖಾತ್ರಿಯಾಯ್ತು. ಕಲ್ಕತ್ತದಲ್ಲಿ ಪುಸ್ತಕದೊಳಗೆ ಮುಖ ಸಿಕ್ಕಿಸಿಕೊಂಡು ಕೂತಿದ್ದ ಸೇನ್‌ಗುಪ್ತಾ ಇನ್ನೂ ಮುಖ ಮೇಲೆತ್ತಿರಲಿಲ್ಲ. ಪಕ್ಕಾ orthodox ಬಂಗಾಳಿ ಆತ. TCSನಲ್ಲಿ ಉದ್ಯೋಗಿಯಾಗಿದ್ದರೂ ಶೇಕ್ಸ್‌ಪಿಯರಿನಿಂದ ಹಿಡಿದು ಪ್ರೇಮಚಂದ್ರರ ತನಕ ಒಬ್ಬರನ್ನೂ ಬಿಡದೇ ಓದಿಕೊಂಡಿದ್ದಾನೆ. ಸ್ವಂತ ಬಂಗಾಳಿ rock band ನಡೆಸುತ್ತಿದ್ದರೂ ರವೀಂದ್ರ ಸಂಗೀತದ ಕಟ್ಟಾಭಿಮಾನಿ. ತನ್ನದೇ ಸಂಗೀತದ ಒಂದೆರಡು ಆಲ್ಬಮ್ಮುಗಳನ್ನೂ ಹೊರತಂದಿದ್ದಾನೆ. triathlonನಲ್ಲಿ ರಾಷ್ಟ್ರಮಟ್ಟದ ಚಾಂಪಿಯನ್. ಅರ್ಧ ಭಾರತವನ್ನು ಬರಿ ಸೈಕಲ್ಲಿನಲ್ಲಿಯೇ ಸುತ್ತಿಮುಗಿಸಿದ್ದಾನೆ. ಜೊತೆಗೆ ಅದ್ಭುತ ಪೇಂಟರ್ ಕೂಡ. ರಪ್ಪನೆ ಪುಸ್ತಕದಿಂದ ತಲೆ ಹೊರಗೆ ಹಾಕಿದವನೇ ’ಅಬೇ, ವೋ ದೇಖ್ ಮಂದಿರ್, ಪಾತ್ರಾ ಆಗಯಾ, ಉತರೋ ಉತರೋ’ ಎಂದ. ಮುಂದಿನ ಸ್ಟಾಪಿನಲ್ಲಿ ಇಬ್ಬರೂ ಇಳಿದಾಯ್ತು. ಮೋಟು ಬೀಡಿ ಸೇದಿ ಮುಗಿಸಿದ ಕಂಡಕ್ಟರ್ ರೈಟ್ ಎಂದ. ಇದ್ದೂ ಇಲ್ಲದ ಬಸ್‌ ಸ್ಟಾಪಿನಿಂದ ಬಸ್ಸು ಹೊರಟು ಧೂಳೆಬ್ಬಿಸುತ್ತ ಮುಂದಿನ ತಿರುವಲ್ಲಿ ತಿರುಗುತ್ತಿದ್ದಂತೆ ರಸ್ತೆಯ ಕೆಳಗೆ ಹತ್ತಡಿ ದೂರದಲ್ಲಿ ಕಂಡೂ ಕಾಣದಷ್ಟು ಸಣ್ಣಗಿನ ಹಳದಿ ಪೇಂಟಿನ ಶೆಡ್ಡಿನಂಥ ಮನೆಯೊಂದು ಕಣ್ಣಿಗೆ ಬೀಳುತ್ತದೆ. ’ವಹೀ ಹೈ ದೇಖೋ ಉಸ್ಕಾ ಘರ್’ ಎಂದ ಸೇನ್‌ಗುಪ್ತಾ ಖುಷಿಯಿಂದ. ಹತ್ತಿರ ಹೋಗಿ ನೋಡಿದರೆ ಮನೆಗೆ ಬೀಗ ಹಾಕಿತ್ತು. ಪಕ್ಕದ ಗೂಡಂಗಡಿಯಲ್ಲಿ ಕೇಳಿದರೆ ಮಿಡ್ನಾಪುರದ ಆಸ್ಪತ್ರೆಗೆ ಹೋಗಿರಬಹುದೆಂಬ ಉತ್ತರ ಸಿಕ್ಕಿತು. ಆ ಮನೆಯ ಮಾಲೀಕನೇ ನಾವು ಹುಡುಕಿ ಬಂದ ಪಠಾಣ. ಪೂರ್ತಿ ಹೆಸರು ಮಹಮ್ಮದ್ ಯಾಸಿನ್ ಪಠಾಣ್.  ಹಾಗೆಂದು ಆತನ್ಯಾವ ಸೆಲೆಬ್ರಿಟಿಯೂ ಅಲ್ಲ, ಇತಿಹಾಸಕಾರನೂ ಅಲ್ಲ. ರಾಜಕಾರಣಿಯಾಗಲಿ, NGO ಕಟ್ಟಿ ಹೋರಾಡಿದವನಾಗಲೀ ಅಲ್ಲವೇ ಅಲ್ಲ. ಅರವತ್ತು ದಾಟಿದ ಐದುಕಾಲಡಿ ಮೀರದ ಸಣಕಲು ಕಡ್ಡಿ ದೇಹ, ಹಳೆಯ ಮಾಸಿದ ದೊಗಲೆ ಅಂಗಿ, ನಿರ್ಜೀವ ಮುಖಚರ್ಯೆಯ ಆತ ಮೊದಲ ನೋಟದಲ್ಲಿ ನಿಮ್ಮಲ್ಲೇನೂ ಇಂಟರೆಸ್ಟ್ ಮೂಡಿಸುವುದಿಲ್ಲ. ಮೂಲತಃ ಪಕ್ಕದ ಹಾತಿಹಲ್ಕಾ ಗ್ರಾಮದವನು. ಅಲ್ಲಿನ ಉರ್ದು ಹೈಸ್ಕೂಲೊಂದರಲ್ಲಿ ಪ್ಯೂನ್ ಆಗಿದ್ದು ರಿಟೈರಾದವ. ಸಿಗುವ ಮೂರೂವರೆ ಸಾವಿರ ಪೆನ್ಷನ್ನಿನಲ್ಲಿ ನಾಲ್ಕು ಮಕ್ಕಳ ಸಂಸಾರ ನಿಭಾಯಿಸುವ ಹೊಣೆ ಇವನ ಹೆಗಲ ಮೇಲಿದೆ. ಆದರೆ ಬಂಗಾಳಿ ಪುರಾತತ್ವ ಸಂಶೋಧಕರನ್ನು ರೋಮಾಂಚಿತಗೊಳಿಸುವ ಹೆಸರಿದು. He is a man with mission.
ಸುಮಾರು ಅರವತ್ತರ ದಶಕದ ಮದ್ಯಭಾಗ. ಡೇವಿಡ್ ಮೆಕ್‌ಟನ್ ಎಂಬ ಪ್ರಖ್ಯಾತ ಆಂಗ್ಲ ಇತಿಹಾಸಕಾರ ಪಾತ್ರಾದ ಭಾಗದಲ್ಲಿದ್ದ ಪುರಾತನ ದೇವಾಲಯ ಶಿಲ್ಪಗಳನ್ನು ಸಂದರ್ಶಿಸಿ ಪುಸ್ತಕವೊಂದನ್ನು ಬರೆಯಲು ಬಂದಿದ್ದ. ಬೆಂಗಾಳಿ ವಾಸ್ತುಶಿಲ್ಪದ ಪ್ರಸಿದ್ಧ ಕುರುಹಾದ ಸುಟ್ಟ ಇಟ್ಟಿಗೆಗಳ(ಟೆರಾಕೋಟಾ) ರಚನೆಗಳು ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದರ ಹಿಂದೆ ಬಂಗಾಳಿಗಳ ಪ್ರೀತಿಯ ಡೇವಿಡ್‌ಬಾಬುವಿನ ಶ್ರಮವಿದೆ.  ಆತನ  Late Medieval Temples of Bengal ಪುಸ್ತಕ ಮುಂದೆ ವಿಶ್ವಮಟ್ಟದಲ್ಲಿ ಬಂಗಾಳಿ ವಾಸ್ತುಶಿಲ್ಪವನ್ನು ಪರಿಚಯಿಸಿತ್ತು. ಹೀಗೆ ಬಂದಾಗ ಅವನ ಜೊತೆಗೆ ಸಹಾಯಕನಾಗಿ ಚೀಲ ಹೊರಲು ಬಂದ, ಆಚೆಯೂರಿನ ಮದರಸಾದಲ್ಲಿ ಪ್ಯೂನ್ ಕೆಲಸಕ್ಕಿದ್ದ ಇಪ್ಪತ್ತರ ಹರೆಯದ ಒಬ್ಬ ಗುಮಾಸ್ತನೇ ಈ ಪಠಾಣ. ೧೯೭೨ರಲ್ಲಿ ತನ್ನ ೪೨ನೇ ವರ್ಷದಲ್ಲಿ ಡೇವಿಡ್ ಮೆಕ್‌ಟನ್ ಮಲೇರಿಯಾದಿಂದ ಸಾಯದಿದ್ದರೆ ಈ ಪಠಾಣನ ಕೆಲಸವನ್ನು ನೋಡಿ ಎಷ್ಟು ಖುಷಿಪಡುತ್ತಿದ್ದನೋ ಏನೋ. ಮುಸ್ಲೀಮನಾದರೇನು? ಅವನಿಗೆ ತನ್ನ ನೆಲದ ಭವ್ಯ ಇತಿಹಾಸದ ಬಗ್ಗೆ ಅದಮ್ಯ ಹೆಮ್ಮೆಯಿತ್ತು. ಜೊತೆಗೆ ತಮ್ಮ ಜನರ ನಿರಭಿಮಾನದ ಕೊರಗೂ ಕೂಡ. ಪಾತ್ರಾದ ಸುಂದರ ಮಂದಿರಗಳು ಅವನಲ್ಲಿ ವಿಕ್ಷಿಪ್ತ ಪ್ರೀತಿಯೊಂದನ್ನು ಹುಟ್ಟುಹಾಕಿದವು.
ಯಾಸಿನ್ ಪಠಾಣ್(ಸೇನ್‌ಗುಪ್ತನ ಚಿತ್ರಗಳಿಂದ)
ಅನಾಥವಾಗಿ ಉರುಳಿ ಬಿದ್ದಿದ್ದ ರಾಶಿ ರಾಶಿ ಮಂದಿರಗಳು ಅವನಲ್ಲಿ ಎಂಥ ಪ್ರೇರಣೆಯನ್ನು ಹುಟ್ಟುಹಾಕಿದವೋ ಕಾಣೆ, ಏಕಾಂಗಿಯಾಗಿಯಾದರೂ ಸೈ ತನ್ನೂರಿನ ಪರಂಪರೆಯನ್ನು ರಕ್ಷಿಸುವ ಪಣತೊಟ್ಟ. ದೇವಸ್ಥಾನಗಳನ್ನು ಮರುನಿರ್ಮಿಸುವುದೆಂದರೇನು ಹುಡುಗಾಟದ ಮಾತೇ? ಕೈಯಲ್ಲಿ ಲೆಕ್ಕಹಾಕಿ ನಾಲ್ಕು ರೂಪಾಯಿಯೂ ಇರಲಿಲ್ಲ. ಊರಿನ ಮನೆಮನೆಯ ಬಾಗಿಲು ಬಡಿದು ತಮ್ಮೂರಿನ ಮಂದಿರಗಳನ್ನು ರಕ್ಷಿಸಲು ನೆರವಾಗುವಂತೆ ಅಂಗಲಾಚಿದ. ಕರಪತ್ರಗಳನ್ನು ಬರೆದು ಕಂಡವರಿಗೆಲ್ಲ ಹಂಚಿಬಂದ. ದೇವಸ್ಥಾನ ಕಟ್ಟಲು ದುಡ್ಡಿಗಾಗಿ ಸ್ಥಳೀಯ ಮುಖಂಡರ ಕೈಕಾಲು ಹಿಡಿದ. ಒಂದಿಷ್ಟು ಜನ ಹುಚ್ಚನ ಪಟ್ಟಕಟ್ಟಿದರು. ಹಿಂದೂಗಳ ದೇವಾಲಯದ ಉಸಾಬರಿ ಸಾಬಿಗ್ಯಾಕೆ ಬೇಕಿತ್ತು ಎಂದು ಇನ್ನೊಂದಿಷ್ಟು ಜನ ಮೂಗು ಮುರಿದರು. ಕಾಫಿರರ ಜೊತೆ ಸೇರಿ ತಮ್ಮಜಾತಿಯವ ಹಾಳಾಗಿ ಹೋದನೆಂದು ಸಂಬಂಧಿಕರು ಹಿಡಿಶಾಪ ಹಾಕಿದರು. ಶತಮಾನಗಳ ಹಿಂದೆ ಈ ದೇವಸ್ಥಾನಗಳನ್ನು ನಿರ್ಮಿಸಿದ್ದ ಬಂಡೋಪಾಧ್ಯಾಯ ಕುಟುಂಬವನ್ನು ಭೇಟಿಯಾಗಿ ಸಹಾಯ ಕೇಳಲು ಹೋದರೆ ಅವರು ಅವನನ್ನು ಮನೆಯೊಳಕ್ಕೂ ಬಿಟ್ಟುಕೊಳ್ಳಲಿಲ್ಲ. ಘೋಷ್ ಕುಟುಂಬದ ಬೆನ್ನು ಬಿದ್ದರೆ ತಮ್ಮ ಪೂರ್ವಿಕರ ಪೂಜಾಸ್ಥಳಗಳನ್ನೆಲ್ಲ ಮುಟ್ಟಿ ಅಪವಿತ್ರಗೊಳಿಸಬೇಡವೆಂದು ಬುದ್ಧಿವಾದ ಹೇಳಿ ಕಳಿಸಿಬಿಟ್ಟವು. ಪಠಾಣ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ಊರಿನ ಜನರನ್ನು ನಂಬಿದರೆ ಕೆಲಸವಾಗುವುದಿಲ್ಲವೆಂದು ಮಂತ್ರಿಗಳ ಬೆನ್ನು ಬಿದ್ದ. ಸರ್ಕಾರಿ ಕಛೇರಿಗೆ ತಿರುಗಿ ಚಪ್ಪಲಿ ಸವೆದದ್ದು ಬಿಟ್ಟರೆ ಮತ್ತೇನೂ ಉಪಯೋಗವಾಗಲಿಲ್ಲ. IIT ಖರಗ್‌ಪುರ್, ಇಂಡಿಯನ್ ಮ್ಯೂಸಿಯಮ್ ಕಲ್ಕತ್ತಾ, ಕೇಂದ್ರ ಸರ್ಕಾರದ ಅಧಿಕಾರಿಗಳು, ಮಂತ್ರಿಗಳು, ಪ್ರಧಾನಿ, ರಾಷ್ಟ್ರಪತಿ ಹೀಗೆ ಸಾಧ್ಯವಿದ್ದಲ್ಲೆಲ್ಲ ಸಾವಿರಾರು ಪತ್ರಗಳನ್ನು ಬರೆದು ಅವರ ಗಮನ ಸೆಳೆಯಲು ಯತ್ನಿಸಿದ. ಅಷ್ಟರಲ್ಲಾಗಲೇ ಮುಕ್ಕಾಲು ಪಾಲು ಮಂದಿರಗಳು ಊರಿಂದ ಮಾಯವಾಗಿದ್ದವು. ಪ್ರಭಾವಿಗಳು ಇರುವ ಹಳೆಯ ಕಟ್ಟಡಗಳನ್ನು ಕೆಡವಿ ಅಲ್ಲಿನ ಕೆಂಪುಕಲ್ಲು, ಇಟ್ಟಿಗೆಗಳನ್ನು ತಮ್ಮ ಮನೆಕಟ್ಟಲು ಸಾಗಿಸುವುದು ಸಾಮಾನ್ಯವಾಗಿ ಹೋಯಿತು. ೧೯೮೨ರಲ್ಲಿ ಹೀಗೆಯೇ ಸ್ಥಳೀಯ ಪುಢಾರಿಯೊಬ್ಬ ಹಳೆಯ ಹೆಸರಾಂತ ದುರ್ಗಾದಲನ್ ಮಂದಿರದ ಕಲ್ಲುಗಳನ್ನು ಸಾಗಿಸುತ್ತಿದ್ದ ವಿಷಯ ಗೊತ್ತಾದಕೂಡಲೇ ಪಠಾಣ ಅಲ್ಲೇ ಸತ್ಯಾಗ್ರಹಕ್ಕೆ ಕೂತ. ತಮ್ಮ ಧರ್ಮದ ವಿಷಯದಲ್ಲಿ ಮೂಗುತೂರಿಸುತ್ತಿದ್ದಾನೆಂಬ ಕೋಪದಲ್ಲಿ ಊರಿನ ಹಿಂದೂಗಳೆಲ್ಲ ಸೇರಿ ನಡುಬೀದಿಯಲ್ಲಿ ಸಾಯುವಂತೆ ಹಿಡಿದು ಬಡಿದರು. ೯೨ರಲ್ಲಿ ಅಯೋಧ್ಯೆಯ ಗಲಾಟೆ ತಾರಕಕ್ಕೇರಿದ ಸಂದರ್ಭದಲ್ಲಂತೂ ಪರಿಸ್ಥಿತಿ ಪೂರ್ತಿ ಬಿಗಡಾಯಿಸಿತ್ತು. ಹಿಂದೂಗಳ ಪರವೆಂಬ ಕಾರಣಕ್ಕೆ ಮುಸ್ಲೀಮರೂ ಜಾತಿಯಿಂದ ಬಹಿಷ್ಕಾರ ಹಾಕಿದರು. ಅಷ್ಟರಲ್ಲಾಗಲೇ ಬೇಡಿ ತಂದ ಹಣದಿಂದ ಸುಮಾರು ೩೪ ಸಣ್ಣಪುಟ್ಟ ಗುಡಿಗಳನ್ನು ರಿಪೇರಿ ಮಾಡಿಸಿದ್ದ. ಕೈಲಿದ್ದ ಹಣವೂ ಖರ್ಚಾಗಿ ದೊಡ್ಡ ಮೊತ್ತದ ಸಾಲ ತಲೆಯಮೇಲೇರಿತ್ತು. ಊರಲ್ಲಿರುವ ಹಿಂದೂ ಮುಸ್ಲೀಮರಿಬ್ಬರೂ ಹತ್ತಿರ ಸೇರಿಸುತ್ತಿರಲಿಲ್ಲ. ಕೊನೆಯ ಪ್ರಯತ್ನವೆಂಬಂತೆ ಗ್ರಾಮದಲ್ಲಿ ಹಿಂದೂ ಮುಸ್ಲೀಮರ ಸೌಹಾರ್ದತೆ ಸಾರಲು, ಇರುವ ಕೆಲವೇ ಕೆಲವು ಮಂದಿರಗಳನ್ನು ರಕ್ಷಿಸಲು ದುರ್ಗಾದಲನ್ ಮಂದಿರದಲ್ಲಿ ನವರಾತ್ರಿಯ ದುರ್ಗಾಪೂಜೆಯನ್ನು ಆಯೋಜಿಸಿದ.  ನನಗೆ ಗೊತ್ತಿರುವ ಮಟ್ಟಿಗೆ ಮುಸ್ಲೀಮರಿಂದ ಆಯೋಜಿಸಲ್ಪಡುವ ದುರ್ಗಾಪೂಜೆ ಬಂಗಾಳದಲ್ಲಿ ಸದ್ಯಕ್ಕೆ ಇದೊಂದೇ ಏನೋ. ದೇಶಕ್ಕೆ ದೇಶವೇ ಕೋಮುವಿದ್ವೇಶದಲ್ಲಿ ಹೊತ್ತಿ ಉರಿಯುತ್ತಿದ್ದಾಗ ಮುಸ್ಲೀಮನೊಬ್ಬ ದುರ್ಗಾಪೂಜೆಯನ್ನು ಆರಂಭಿಸಿದ್ದಾನೆಂಬ ಸುದ್ದಿ ಬಂಗಾಳದಲ್ಲಿ ಸಂಚಲನವನ್ನೇ ಮೂಡಿಸಿತು. ಮಾಧ್ಯಮಗಳೆಲ್ಲ ಪಾತ್ರಾದತ್ತ ಓಡಿಬಂದವು. ರಾತ್ರಿಕಳೆದು ಬೆಳಗಾಗುವುದರೊಳಗೆ ಊರವರ ಪಾಲಿಗೆ ವಿಲನ್ ಆಗಿದ್ದ ಪಠಾಣ ಬಂಗಾಳದ ಪಾಲಿಗೆ ಹೀರೋ ಆಗಿಹೋದ. IIT ಖರಗ್‌ಪುರ್ ಮೊದಲಿದ್ದ ಮಾದರಿಯಲ್ಲೇ ದೇವಾಲಯಗಳನ್ನು ಮರುನಿರ್ಮಿಸಲು ತಂತ್ರಜ್ಞಾನದ ನೆರವು ನೀಡುವುದಾಗಿ ಭರವಸೆ ನೀಡಿತು. ಆಷುತೋಷ್ ಮ್ಯೂಸಿಯಮ್ಮಿನ ನೆರವಿನಿಂದ ಇಲ್ಲಿನ ಸ್ಮಾರಕಗಳನ್ನು ರಕ್ಷಿಸಲು ‘Pathra Archaeological Preservation Committee’ ಎಂಬ NGO ಪ್ರಾರಂಭವಾಯ್ತು. ಕೇಂದ್ರದ ಸಂಸ್ಕೃತಿ ಸಚಿವಾಲಯದಿಂದ ೨೦ ಲಕ್ಷ ದೇಣಿಗೆಯೂ ದೊರಕಿತು. ೨೮ ದೇವಾಲಯಗಳನ್ನು ವಹಿಸಿಕೊಂಡ ಪುರಾತತ್ತ್ವ ಇಲಾಖೆ ಅವುಗಳಲ್ಲಿ ೧೪ನ್ನು ಭಾಗಶಃ ರಿಪೇರಿ ಮಾಡಿಸಿಟ್ಟಿದೆ. ಜೊತೆಗೆ ಈ ಎಲ್ಲ ದೇವಾಲಯಗಳೂ ರಾಷ್ಟ್ರೀಯ ಮಹತ್ವವುಳ್ಳ ಸ್ಮಾರಕಗಳೆಂದು ಘೋಷಿಸಲ್ಪಟ್ಟವು. ಇತ್ತೀಚೆಗಷ್ಟೇ ಸರ್ಕಾರದಿಂದ ಪಾತ್ರಾದ ಸ್ಮಾರಕಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ೪ ಕೋಟಿ ೬೦ ಲಕ್ಷಗಳ ನಿಧಿ ಮಂಜೂರಾಗಿದೆ. ಸ್ವತಃ ರಾಷ್ಟ್ರಪತಿಗಳೇ ಆತನನ್ನು ರಾಷ್ಟ್ರಪತಿ ಭವನಕ್ಕೆ ಕರೆಸಿಕೊಂಡು ಸನ್ಮಾನಿಸಿ ಬೆನ್ನುತಟ್ಟಿದರು. ರಾಷ್ಟ್ರೀಯ ಭಾವೈಕ್ಯತೆಗಾಗಿ ದುಡಿದವರಿಗೆ ನೀಡಲಾಗುವ ಕೇಂದ್ರ ಸರ್ಕಾರದ ಕಬೀರ್ ಪುರಸ್ಕಾರವೂ ಅರಸಿ ಬಂತು.
ಇಂದು ಪಾತ್ರಾ ಪ್ರವಾಸೋದ್ಯಮದಲ್ಲಿ, ವಾಸ್ತುಶಿಲ್ಪದಲ್ಲಿ ಮೊದಲಿನ ವೈಭವ ಪಡೆದಿದ್ದರೆ ಅವೆಲ್ಲವುಗಳ ಹಿಂದಿನ ಪ್ರೇರಕ ಶಕ್ತಿ ಅವನೊಬ್ಬ ಮತ್ತು ಅವನೊಬ್ಬ ಮಾತ್ರ. ಹಿಂದೂ ದೇವಾಲಯಗಳೆಡೆಗಿನ ಅವನ ಆ ನಿಸ್ವಾರ್ಥ ಪ್ರೀತಿ ನಾಲ್ಕೂವರೆ ದಶಕಗಳಾದರೂ ಇನ್ನೂ ಕರಗಿಲ್ಲ. ಆ ದಾರಿಯಲ್ಲಿ ಅವನನುಭವಿಸಿದ ಕಷ್ಟ, ನಷ್ಟ, ಹಲ್ಲೆ, ಅವಮಾನ, ಸಂಕಟಗಳಿಗೆ ಲೆಕ್ಕವಿಲ್ಲ. ಹೆಚ್ಚಿನ ದೇವಾಲಯಗಳೇನೋ ಇವನ ಕಾರಣದಿಂದ ಇಂದು ಒಂದು ಮಟ್ಟಿಗೆ ರಕ್ಷಿಸಲ್ಪಟ್ಟಿವೆ. ಆದರೆ ಆ ಕೆಲಸದಲ್ಲಿ ಯಾವ ಪ್ರತಿಫಲವೂ ಇಲ್ಲದೇ ದುಡಿದ ಪಠಾಣನ ಪರಿಸ್ಥಿತಿಯೇನೂ ಅಂದಿನ ಮಂದಿರಗಳಿಗಿಂತ ಭಿನ್ನವಾಗುಳಿದಿಲ್ಲ. ವಯಸ್ಸು ಅರವತ್ತು ದಾಟಿ ಸಾಗಿದೆ. ದುಡಿದ ದುಡ್ಡಿನ ಹೆಚ್ಚಿನಂಶವೆಲ್ಲ ಮಂದಿರ ನಿರ್ಮಾಣಕ್ಕೇ ಖಾಲಿಯಾಗಿದೆ. ರಸ್ತೆಯ ಕೆಳಗಿನ ನದಿಪಾತ್ರದ ಹತ್ತಿರದ ಸಣ್ಣ ತಗಡಿನ ಮಾಡಿನ ಮುರುಕಲು ಮನೆಯಲ್ಲೇ ಆತನ ವಾಸ. ವರ್ಷಂಪ್ರತಿ ನದಿ ಉಕ್ಕಿ ಬಂದಾಗಲೆಲ್ಲ ಮನೆಯೊಳಗೆ ನೀರು ನುಗ್ಗುತ್ತದೆ. ಕೆಲ ವರ್ಷಗಳ ಹಿಂದೆ ಇಡೀ ಮನೆಗೆ ಮನೆಯೇ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ದೇಶದ ಮೂಲೆಮೂಲೆಗಳಿಂದ ಅರಸಿ ಬಂದ ಪುರಸ್ಕಾರ, ಪ್ರಶಸ್ತಿ, ಸರ್ಟಿಫಿಕೇಟು, ಶಾಲುಗಳು ಸ್ವಂತಕ್ಕೆ ಐದು ಪೈಸೆಯ ಲಾಭವನ್ನೂ ತಂದುಕೊಡಲಿಲ್ಲ. ಜೊತೆಗೆ ಎರಡು  ಬಾರಿ ಹೃದಯಾಘಾತವೂ ಆಗಿದೆ. ಒಂದು ಕಿಡ್ನಿಯೂ ಕೈಕೊಟ್ಟಿದೆ. ಚಿಕಿತ್ಸೆಗೆ ಕೈಯಲ್ಲಿ ಕಾಸಿಲ್ಲದೇ ಮೂವತ್ತು ವರ್ಷಗಳಷ್ಟು ದೀರ್ಘಕಾಲ ಕಷ್ಟಪಟ್ಟು ಸಂಪಾದಿಸಿದ ಪಾತ್ರಾದ ಇತಿಹಾಸದ ಬಗೆಗಿನ ಡಾಕ್ಯುಮೆಂಟರಿಯ ಹಸ್ತಪ್ರತಿ ’ಮಂದಿರ್‌ಮೋಯ್ ಪಾತ್ರಾರ್ ಇತಿಬ್ರಿತಾ’ವನ್ನು ಪುಸ್ತಕವಾಗಿ ಪ್ರಕಟಿಸಲು ಪ್ರಕಾಶಕನೊಬ್ಬನಿಗೆ ಯಕಃಶ್ಚಿತ್ ಹದಿನೈದು ಸಾವಿರಕ್ಕೆ ಮಾರಿದನೆಂದರೆ ಅವನ ಪರಿಸ್ಥಿತಿ ಹೇಗಿರಬಹುದೆಂಬುದು ನಿಮ್ಮ ಊಹೆಗೆ ಬಿಟ್ಟದ್ದು.
ಏಳೆಂಟು ಮಂದಿರಗಳನ್ನು ನೋಡುತ್ತಿದ್ದಂತೆ ನಿಧಾನಕ್ಕೆ ಸಂಜೆಯಾಗಲು ಶುರುವಾಗಿತ್ತು. ಪಾತ್ರಾವನ್ನು ತಲುಪಿದ್ದೇ ತಡವಾದದ್ದರಿಂದ ಅಲ್ಲಿ ಹೆಚ್ಚಿನ ಸಮಯ ಕಳೆಯಲು ಅವಕಾಶವಾಗಲಿಲ್ಲ. ರಾತ್ರಿಯಾಗುವುದರೊಳಗೆ ಹಾವಡಾ ತಲುಪಿ ಅಲ್ಲಿಂದ ಬಾರಾಸಾತಿಗೆ ಸಿಟಿಬಸ್ಸು ಹಿಡಿಯಬೇಕಾಗಿತ್ತು. ಪಾತ್ರಾವನ್ನು ಸುಲಭಕ್ಕೆ ಬಿಟ್ಟುಬರಲು ಮನಸ್ಸಾಗಲಿಲ್ಲ. ಮನಸ್ಸೆಲ್ಲ ಬರೀ ಪಠಾಣನನ್ನೇ ತುಂಬಿಕೊಂಡು ಭಾರವಾಗಿತ್ತು. ಪಾತ್ರಾದ ಕಥೆ ಶುರುವಾಗುವುದು, ಮುಗಿಯುವುದು ಅವನಿಂದಲೇ. ಅವನನ್ನು ಭೇಟಿಯಾಗದೇ ಹಿಂದಿರುಗುವುದೆಂತು! ಮತ್ತೊಮ್ಮೆ ಬರಲು ಸಾಧ್ಯವಾಗುತ್ತೋ ಇಲ್ಲವೋ? ಹಾಗೊಂದು ವೇಳೆ ಬಂದರೂ ಅವನಿರುತ್ತಾನೋ? ಸಿಗುತ್ತಾನೋ?
ಸೂರ್ಯ ನಿಧಾನಕ್ಕೆ ಕೆಂಪಾಗತೊಡಗಿದ್ದ. ಸುಮಾರು ಹೊತ್ತು ಕಾದನಂತರ ದಡಬಡ ಸದ್ದು ಮಾಡುತ್ತ ಬಸ್ಸು ಸುಯ್ಯನೆ ಸುಂಟರಗಾಳಿಯಂತೆ ಬಂದು ನಿಂತಿತು. ಉಸಿರಾಡಲು ಸಾಧ್ಯವಿಲ್ಲದಷ್ಟು ರಶ್ ಇದ್ದರೂ ತೂರಿಕೊಂಡು ಮೆಟ್ಟಿಲಿನ ಮೇಲೆ ಜನರ ಮಧ್ಯೆ ಜಾಗಮಾಡಿಕೊಂಡು ನಿಂತೆ. ಸೇನ್‌ಗುಪ್ತಾ ಫುಟ್‌ಬೋರ್ಡ್ ಮೇಲೆ ನೇತಾಡುತ್ತಿದ್ದ. ಅವರಿವರು ಏನಾದರೂ ಅಂದುಕೊಂಡಾರು ಎಂದೆಲ್ಲಾ ತಲೆಕೆಡಿಸಿಕೊಳ್ಳುವ ಜಾಯಮಾನ ಅವನದಲ್ಲವೇ ಅಲ್ಲ. ಬಸ್ ಹೊರಟಿತ್ತಷ್ಟೆ. ’ಅಬೇ ತೇರಾ ದೋಸ್ತ್ ಇಸೀ ಬಸ್ ಸೆ ಉತ್ರಾ ಹೈ, ಜಲ್ದಿ ದೇಖ್, ಜಲ್ದೀ ದೇಖ್’ ಎಂದು ಕಿರುಚತೊಡಗಿದ. ಪಠಾಣ ಅದೇ ಬಸ್ಸಿನಿಂದ ಇಳಿದನಂತೆ. ಅವನೆಲ್ಲಿಯಾದರೂ ಕಾಣಬಹುದಾ ಎಂದು ಬಗ್ಗಿ ಬಗ್ಗಿ ನೋಡತೊಡಗಿದೆ. ಉಹೂಂ....... ಬಸ್ಸು ಹೊರಟಾಗಿತ್ತು. ’ಅಬೇ ಉತರ್ ಜಾಯೆಂಗೆ ಆಜಾ’ ಎಂದ.  ಏನಾಯಿತೋ ಏನೋ, ಬೇಡವೆಂದು ಕಣ್ಸನ್ನೆ ಮಾಡಿದೆ. ’ಇತ್ನಾ ದೂರ್ ಆಕೆ ಉಸೆ ಬಿನಾ ದೇಖೆ ಜಾಯೇಗಾ ಕ್ಯಾ’ ಎಂದು ಅಲ್ಲಿದ್ದವರ ಮುಂದೆಯೇ ಮಂತ್ರಪುಷ್ಪ ಉದುರಿಸಲು ಶುರುಮಾಡಿದ. ನನ್ನ ಮನಸ್ಸು ಹೇಳುತ್ತಿತ್ತು. ಮುಂದಿನ ಬಾರಿ ಪಾತ್ರಾಕ್ಕೆ ಬಂದಾಗ ಆತ ಖಂಡಿತ ಸಿಕ್ಕೇ ಸಿಗುತ್ತಾನೆ. ಅಂಥವರ ಸಂತತಿ ಸಾವಿರವಾಗಲಿ..

Monday, August 17, 2015

ಕಲ್ಕತ್ತಾ ಡೈರಿ: ಬಂಗಾಳದ ಇತಿಹಾಸದಲ್ಲೊಂದು ಕಳಚಿದ ಕೊಂಡಿ

     ಸಣ್ಣಗೆ ಮಳೆ ಜಿನುಗುತ್ತಿತ್ತು. ಹೀಗೇ ಇನ್ನೊಂದು ಗಂಟೆ ಮಳೆ ಸುರಿದರೆ ಈಡೀ ಕಲ್ಕತ್ತಾಕ್ಕೆ ಕಲ್ಕತ್ತವೇ ತೇಲಲು ಶುರುಮಾಡುತ್ತಿತ್ತೇನೋ. ಬಾರಾಸಾತ್ ಬಸ್ ಸ್ಟಾಪಿಗೆ ಬಂದು ನೋಡಿದರೆ ಅದು ಅಕ್ಷರಶಃ ಕಲಕಿಟ್ಟ ಕೊಚ್ಚೆಸಮುದ್ರ. ಹೊರಡಲು ರೆಡಿಯಾಗಿದ್ದ ೭೩ ನೇ ನಂಬ್ರದ ಮರದ ಪೆಟ್ಟಿಗೆಯಂಥಹ ಬಸ್ ಹಿಡಿದು ವಿಂಡೋ ಸೀಟಿನಲ್ಲಿ ಕೂತೆ. ಬಸ್ ಎಷ್ಟು ಹಳೆಯದೆಂದರೆ ಅದರ ಕಿಡಕಿ ಕೂಡ ಮರದ್ದೇ. ಶಕ್ತಿಯನ್ನೆಲ್ಲ ಪ್ರಯೋಗಿಸಿ ಎತ್ತಿ ಮೇಲಿನ ಕೊಕ್ಕೆಗೆ ಸಿಲುಕಿಸಿದರೆ ಒಳಗೆ ಬರುವ ನೀರು ಒಂದಿಷ್ಟು ಕಡಿಮೆಯಾಗುತ್ತದೆ.  ಹೊರಗಡೆ ಜುಲೈ ತಿಂಗಳ ಜೋರುಮಳೆಯಾದರೂ ಒಳಗೆ ಬೆವರು ಕಿತ್ತೆದ್ದು ಬರುತ್ತಿತ್ತು. ಡ್ರೈವರ್ ಕಂಡಕ್ಟರುಗಳಿಬ್ಬರೂ ಕಾಂಪಿಟೀಶನ್ನಿಗೆ ಬಿದ್ದವರಂತೆ ಬೀಡಿಯ ಮೇಲೊಂದು ಬೀಡಿ ಸೇದಿ ಬಿಸಾಕುತ್ತಿದ್ದರು. ಹೆಚ್ಚಿನ
ಕಲ್ಕತ್ತಾವಾಲಾಗಳು ಹೊಟ್ಟೆಗಿಲ್ಲದೇ ಬದುಕಿದರೂ, ಸಿಗರೇಟು ಸೇದದೇ ಬದುಕುವುದಿಲ್ಲವೆಂದು ನೆನಪಾಯ್ತು. ಹಳೆಯ ರಿಕಾರ್ಡರಿನಿಂದ ರಬೀಂದ್ರ ಸಂಗೀತ ಹಾಗೇ ಅಲೆಯಲೆಯಾಗಿ ತೇಲಿ ಬಸ್ಸೊಳಗಿನ ವಾತಾವರಣವನ್ನೆಲ್ಲ ಆಕ್ರಮಿಸಿಕೊಳ್ಳುತ್ತಿತ್ತು. ಲಟಾರಿ ಬಸ್ಸು ಬಾರಾಸಾತ್ ಜಂಕ್ಷನ್ನಿನಿಂದ ಎಡಕ್ಕೆ ತಿರುಗಿ ಸಪುರ ರೋಡಿನಲ್ಲಿ ಕಲ್ಕತ್ತದ ಹೊರವಲಯದತ್ತ ಸಾಗುತ್ತಿದ್ದಂತೆ ಬಂಗಾಳದ ಬಡತನ ಜೀವಂತವಾಗುತ್ತದೆ. ಮಾಡಿನ ಮೇಲೆಲ್ಲ ಹುಲ್ಲುಬೆಳೆದ ಧೂಳುಹಿಡಿದ ಅಂಗಡಿಗಳ ಸಾಲುಸಾಲು, ಮೀನಿನಂಗಡಿಯ ಪಕ್ಕದ ಸಣ್ಣ ಮಿಠಾಯಿ ದುಕಾನಿನಲ್ಲಿ ರೊಶೊಗುಲ್ಲಾ ಸವಿಯಲು ಸಾಲುಗಟ್ಟಿದ ಜನ, ಮೋರಿಗಳ ಪಕ್ಕ ಕೋಳಿ ಗೂಡುಗಳಂಥ ಮನೆಗಳು. ಇವೆಲ್ಲ ದಾಟಿ ಹಸಿರು ಶುರುವಾಗುತ್ತಿದ್ದಂತೆ ಗೋಚರಿಸುವುದು ವಿಶಾಲ ಭತ್ತದ ಗದ್ದೆಗಳು, ಥೇಟ್ ನಮ್ಮೂರನ್ನೇ ನೆನಪಿಸುವ ಹಳ್ಳಿಗಳು, ಮನೆ ಮುಂದೆ ತೆಂಗು, ಅಡಿಕೆ, ಹಲಸು. ಬಸ್ಸು ಹತ್ತಿದ ಇಪ್ಪತ್ತು ನಿಮಿಷಗಳೊಳಗೆ ಬೇಡಾಚಂಪಾದ ಬೋರ್ಡು ಕಾಣಿಸಿತು. ರಸ್ತೆಯ ಮಧ್ಯೆಯೊಂದು ಮಾರ್ಕೇಟಿದೆ ಎನ್ನುವುದು ಬಿಟ್ಟರೆ ಅದೇನು ಅಂಥ ದೊಡ್ಡ ಊರಲ್ಲ. ಹಾಗೆಂದು ಬಂಗಾಳಿಗಳೂರಲ್ಲಿ ಸದ್ದುಗದ್ದಲಗಳಿಗೇನು ಕಡಿಮೆಯಿಲ್ಲ. ಬಸ್ಸಿಳಿದವ ಎದುರಿನ ಸರ್ಕಲ್ಲಿನಲ್ಲಿದ್ದ ಕಾಳಿಮಂದಿರದ ಎಡಪಕ್ಕದ ಕಚ್ಚಾ ರಸ್ತೆ ಹಿಡಿದೆ. ಕೇರಿಗಳು ಕಳೆದು ದೂರದೂರದವರೆಗೆ ಸೆಣಬಿನ ಗದ್ದೆಗಳು ಕಾಣಲು ಶುರುವಾದವು. ಕಣ್ಣರಳಿಸಿ ಬೆರಗಿಂದ ಆಚೀಚೆ ನೋಡುತ್ತ ಮುಕ್ಕಾಲು ಕಿಲೋಮೀಟರ್ ನಡೆದಾದಮೇಲೆ ಕಂಡಿದ್ದು ಒಂದು ದೊಡ್ಡ ಕಂಪೌಂಡ್. ಒಂದು ಪಕ್ಕ ರಸ್ತೆ, ಅಲ್ಲಲ್ಲಿ ಸಣ್ಣ ಸಣ್ಣ ಗೂಡು ಮನೆಗಳ ರಾಶಿರಾಶಿ, ನಾಲ್ಕಾರು ಕೆರೆಗಳು, ಹಳ್ಳಿಗಳ ಬೇಣದಂಥ ಜಾಗ. ಇದು ಅದೇನಾ? ನಾನಿಷ್ಟು ದಿನಗಳ ಕಾಲ ಓದಿದ, ಕಲ್ಲತ್ತದಲ್ಲಿ ನೋಡಲೇಬೇಕೆಂದುಕೊಂಡ ಸ್ಥಳವಾ? ಇದೇನಾ ಅವಿಭಜಿತ ಬಂಗಾಳದ ಪುರಾತತ್ತ್ವ ವಿಭಾಗದ ಅತಿದೊಡ್ಡ ಸಂಶೋಧನೆಯೆನಿಸಿದ್ದು? ಇದೇಯಾ ಭಾರತದ ಅತಿಹಳೆಯ ನಗರಗಳಲ್ಲೊಂದೆಡು ಖ್ಯಾತಿಗೊಳಗಾಗಿದ್ದು? ಏನೋ ಹುಡುಕಿ ಬಂದವನಿಗೆ ಒಂದು ಥರಹದ ಶಾಕ್.
ರಸ್ತೆ ಪಕ್ಕ ಸುತ್ತಲಿನ ಸ್ಥಳವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟ ಪುರಾತತ್ತ್ವ ಇಲಾಖೆಯ ಸೈನ್ ಬೋರ್ಡೋಂದು ರಾರಾಜಿಸುತ್ತಿತ್ತು. ಒಂದು ಕಾಲು ಊನಗೊಂಡ ತುಕ್ಕುಹಿಡಿದ ಆ ಬೋರ್ಡ್ ಒಂದು ಸಾಕಿತ್ತು ಇಡೀ ಪ್ರದೇಶ ಎಷ್ಟು ಸಂರಕ್ಷಣೆಗೊಳಪಟ್ಟಿದೆಯೆಂದು ಹೇಳಲು. ಬೋರ್ಡಿನಲ್ಲಾದರೂ ಏನಾದರೂ ಹೊಸ ವಿಷಯ ಸಿಗಬಹುದೆಂದು ಹತ್ತಿರ ಹೋಗಿ ಓದಿದೆ. ಬರೆದಿತ್ತು. ಖನ ಮಿಹಿರೇರ್ ಧಿಪಿ ಅಥವಾ ಬರಾಹಮಿಹಿರೆರ್ ಧಿಪಿ........


ಇಲ್ಲೊಂದು ಗುಪ್ತರ ಕಾಲದ ನಕ್ಷತ್ರಾಕಾರದಲ್ಲಿದ್ದ ಇಟ್ಟಿಗೆಯಿಂದ ಕಟ್ಟಿದ ವಿಶಾಲ ದೇವಸ್ಥಾನದ ಅವಶೇಷವಿದೆ. ಐವತ್ತರ ದಶಕದ ಸುಮಾರಿಗೆ ಇಲ್ಲಿ ನಡೆದ ಉತ್ಖನನದಲ್ಲಿ ಸಿಕ್ಕ ಎಡಗೈನಲ್ಲಿ ಕನ್ನಡಿ ಹಿಡಿದ, ಕಾಲಡಿ ವಿಚಿತ್ರ ಪ್ರಾಣಿಯನ್ನು ವಾಹನವಾಗಿಸಿಕೊಂಡ ಗುಪ್ತಪೂರ್ವ ಯುಗದ ಕಂಚಿನ ಮೈತ್ರೇಯಿ ದೇವಿಯ ವಿಗ್ರಹ ತುಂಬ ಸುದ್ದಿಮಾಡಿತ್ತು. ಗೋಡೆಗಳು, ಛಾವಣಿ ನಾಶವಾಗಿದ್ದರೂ ನೆಲಗಟ್ಟು, ಎತ್ತರದ ಕಟ್ಟೆಗಳು, ಕೋಣೆಗಳು, ಪ್ರಾಕಾರ, ಇಪ್ಪತ್ತು ಮೆಟ್ಟಿಲುಗಳ ರಚನೆ ಗಟ್ಟಿಯಾಗಿ ಉಳಿದಿದೆ. ಅಮೃತಕುಂಡ ಮತ್ತು ಜೀವಿತ ಕುಂಡವೆಂದು ಕರೆಯಲ್ಪಡುವ ಎರಡು ಚಿಕ್ಕ ಕೆರೆಗಳೂ ಬದುಕುಳಿದಿವೆ. ಇದರ ಹೊರ ಪ್ರಾಕಾರದ ಗೋಡೆಯ ಅವಶೇಷವಿರುವುದು ಅಲ್ಲಿಂದ ಎರಡು ಕಿ.ಮೀ ಆಚೆ ಎಂದರೆ ಅದೆಷ್ಟು ವಿಸ್ತಾರವಾಗಿದ್ದಿರಬಹುದೆಂದು ಊಹಿಸಿ. ಮಧ್ಯದ ಜಾಗವೆಲ್ಲ ಜನವಸತಿಯಿಂದ ತುಂಬಿಹೋಗಿರುವಾಗ ಉತ್ಖನನ ಮಾಡುವುದಾದರೂ ಎಲ್ಲಿ? ಖನ-ಮಿಹಿರೆರ್ ಧಿಪಿಯ ಹೆಸರು ಬಂದಿರುವುದು ಖ್ಯಾತ ಜ್ಯೋತಿಷ್ಯಾಸ್ತ್ರಜ್ಞ ವರಾಹಮಿಹಿರ ಮತ್ತು ಅವನ ಪತ್ನಿಯೆನ್ನಲಾಗುವ ಖನಳಿಂದ. ವರಾಹಮಿಹಿರ ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದ ನವರತ್ನಗಳಲ್ಲೊಬ್ಬ. ಆತನ ಪತ್ನಿ ಖನಳೂ ದೊಡ್ಡ ಜ್ಯೋತಿಷಾಸ್ತ್ರಜ್ಞಳಾಗಿದ್ದಳಂತೆ. ಫಲಜ್ಯೋತಿಷ್ಯದ ನಿಖರ predictionsಗಳಿಂದ ಅವಳ ಖ್ಯಾತಿ ವರಾಹಮಿಹಿರನಿಗಿಂದ ಹೆಚ್ಚಾದಾಗ ಅಸೂಯೆಗೊಂಡ ಮಿಹಿರ ಅವಳ ನಾಲಿಗೆ ಕತ್ತರಿಸಿದನಂತೆ. ಈ ಖನಲನ್ನು ಬಂಗಾಳದ ಮೊದಲ ಕವಯಿತ್ರಿಯೆಂದು ಗುರುತಿಸಲಾಗುತ್ತದೆ. ಬಂಗಾಳಿ ಸಾಹಿತ್ಯದ ಮೊದಮೊದಲ ರಚನೆಗಳಲ್ಲೊಂದಾದ ಖನೆರ್ ಬಚನ್(ಖನಳ ವಚನ) ಬಂಗಾಳದಲ್ಲಿ ಮನೆಮಾತು, ಥೇಟ್ ನಮ್ಮ ಅಕ್ಕಮಹಾದೇವಿಯಂತೆ. ಐತಿಹಾಸಿಕವಾಗಿ ಅವಳು ೯ರಿಂದ ೧೨ನೇ ಶತಮಾನದ ಮಧ್ಯದಲ್ಲಿ ಜೀವಿಸಿರಬಹುದು. ಕ್ರಿ.ಶ ಮೊದಲ ಶತಮಾನದ ವರಾಹಮಿಹಿರನನ್ನು ಉಜ್ಜೈನಿಯವನೆಂದು ಗುರುತಿಸಲಾಗುತ್ತದೆ. ಹಾಗಾದರೆ ಆತನೊಂದಿಗಿನ ಖನಳ ಕಥೆ ಕಾಲ್ಪನಿಕವಿರಬಹುದೇ? ಅಥವಾ ಇದ್ಯಾವ ವರಾಹಮಿಹಿರನೋ!!
 ಮುಂದೇನು ಮಾಡುವುದೆಂದು ತಲೆಕೆರೆದುಕೊಂಡು ಆಚೀಚೆ ನೋಡಿದರೆ ಕಾಣಿಸಿದ್ದು ಎರಡು ಯುವ ಪ್ರೇಮಿಗಳ ಜೋಡಿ, ಮೂರ್ನಾಲ್ಕು ಸಿಗರೇಟ್ ಸೇದುತ್ತ ಕುಳಿತ ಪಡ್ಡೆ ಹೈಕಳು, ಇನ್ನೊಬ್ಬ ಕುರಿ ಮೇಯಿಸುತ್ತಿದ್ದವ. ’ಮೊಶಾಯ್, ಯಹಾಂ ಕಿಲಾ ದೇಖ್‌ನೇ ಕೇಲಿಯೆ ಕಹಾಂ ಮಿಲೇಗಾ?’ ಎಂದು ಅಲ್ಲಿ ಕುಳಿತಿದ್ದ ಹುಡುಗರ ಗುಂಪಿಗೆ ಕೇಳಿದೆ. ಪರಮ ಸುಖೀ ಪುರುಷನಂತೆ ಸುರುಳಿ ಸುರುಳಿಯಾಗಿ ಹೊಗೆ ಬಿಡುತ್ತದ್ದವನೊಬ್ಬ ನಿರ್ಲಿಪ್ತನಾಗಿ ಉತ್ತರಿಸಿದ ’ಉಸೀಪೇಹಿ ಆಪ್ ಖಡೇಹೋ, ದೇಖ್ಲೋ’.
ಕಾಲಕೆಳಗೆ ನೋಡಿಕೊಂಡೆ. ಇಲ್ಲ...ಇದು ಮಾಮೂಲಿನಂಥ ನೆಲವಲ್ಲ. ಸುತ್ತಣ ಹಚ್ಚಹಸುರಿನ ಮಧ್ಯೆ ಕಡುಕೆಂಪು ನೆಲದಿಂದ ಸುಟ್ಟ ಇಟ್ಟಿಗೆಯ ಚೂರುಗಳು ಹೊರಗಿಣುಕುವುದನ್ನು ಗಮನಿಸುವುದನ್ನೇ ಮರೆತುಬಿಟ್ಟಿದ್ದೆ. ಅದು ಬರಿ ಖನಮಿಹಿರೆರ್ ಧಿಪಿಯ ಕಂಪೌಂಡಿನೊಳಗೊಂದೇ ಅಲ್ಲ. ಹೊರ ಬಂದು ಪಕ್ಕದ ದಿಬ್ಬ ಹತ್ತಿಳಿದು ಆಚೆಯ ಕಾಲುಹಾದಿಗೆ ಬಂದು ನೋಡಿದರೆ ಅಲ್ಲಿನ ನೆಲವೂ ಥೇಟ್ ಅದೇ ರೀತಿ. ಮುಂದಕ್ಕೆ ಹೋಗಿ ಗದ್ದೆಯ ಅಂಚಿಲ್ಲಿ ನಿಂತು ನೋಡಿದರೆ ಇಲ್ಲಿನ ನೆಲವೂ ಅದೇ ಥರದ ಇಟ್ಟಿಗೆಯದ್ದು. ದೂರದಲ್ಲಿ ಗದ್ದೆಗಳ ಮಧ್ಯೆ ಕಲ್ಲು ಕ್ವಾರಿಗಳಂಥ ಸಣ್ಣ ಸಣ್ಣ ಹೊಂಡಗಳು. ಅಲ್ಲಿನ ನೆಲ, ಗೋಡೆಗಳೂ ಅಂಥದೇ. ಇಟ್ಟಿಗೆಯ ಫ್ಲೋರಿಂಗ್ ಅಂಥ ವಿಶೇಷವೇನಲ್ಲ. ಆದರಿದು ಅಂಥಿಂಥ ಇಟ್ಟಿಗೆಯದಲ್ಲ. ಈ ಇಟ್ಟಿಗೆಯ ಚೂರುಗಳು ಮೂರು ಸಾವಿರ ವರ್ಷಗಳ ಕಥೆ ಹೇಳುತ್ತವೆ. ಇಪ್ಪತ್ತೈದು-ಮೂವತ್ತು ಶತಮಾನಗಳ ಕಾಲ ಕಾಲನ ಹೊಡೆತ ತಾಳಿಕೊಂಡು ಊರವರ ದಿವ್ಯ ನಿರ್ಲಕ್ಷದ ಮಧ್ಯೆ ಇವು ಉಳಿದು ಬಂದಿರುವುದೇ ಒಂದು ಸೋಜಿಗ.
ಸುಟ್ಟ ಇಟ್ಟಿಗೆಯಂಥ ನೆಲ






೧೯೦೭ರಲ್ಲಿ ರಾಖಲ್ ದಾಸ್ ಬಂಡೋಪಾಧ್ಯಾಯ ಎಂಬ ಒಬ್ಬ ಯುವ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ಈ ಬೇಡಾಚಂಪಾದ ಪ್ರದೇಶದಲ್ಲಿ ವ್ಯಾಪಕ ಅಧ್ಯಯನ ಕೈಗೊಂಡ. ಸುತ್ತಲಿನ ಸ್ಥಳಗಳಲ್ಲಿ ಅಗೆದಲ್ಲೆಲ್ಲ ಸಿಕ್ಕುತ್ತಿದ್ದ ಸುಟ್ಟ ಮಣ್ಣಿನ ಇಟ್ಟಿಗೆಗಳು, ಟೆರಾಕೋಟಾದ ಮಾದರಿಗಳು ಅವನಲ್ಲಿ ಭಾರೀ ಆಸಕ್ತಿ ಕೆರಳಿಸಿದ್ದವು. ಇದರ ಐತಿಹಾಸಿಕತೆಯ ಬಗ್ಗೆ ಬಸುಮತಿ ಎಂಬ ಬಂಗಾಳಿ ಮಾಸಿಕದಲ್ಲೂ ಆತ ಸರಣಿ ಲೇಖನಗಳನ್ನು ಪ್ರಕಟಿಸಿದ್ದಲ್ಲದೇ ತನ್ನ ಅಧ್ಯಯನದ ವಿಸ್ತೃತ ವರದಿಯೊಂದನ್ನ ASIಗೂ ಕಳಿಸಿಕೊಟ್ಟ. ಪ್ರಾಚ್ಯವಸ್ತು ಇಲಾಖೆ ಆತನ ಸಂಶೋಧನೆಯನ್ನು ಕೆಲಸಕ್ಕೆ ಬಾರದ್ದೆಂದು ಮೂಲೆಗೆಸೆಯಿತು. ಇದೇ ಬಂಡೋಪಾಧ್ಯಾಯನ ಸಂಶೋಧನೆಯಿಂದ ಹದಿನೈದು ವರ್ಷಗಳ ನಂತರ ಯಾವತ್ತು ಮೆಹಂಜೋದಾರೋ ವಿಶ್ವವಿಖ್ಯಾತಿಗಳಿಸಿತೋ ಬಂಗಾಳದ ಸರ್ಕಾರ ದೀರ್ಘ ಆಕಳಿಕೆ ಮುಗಿಸಿ ಎದ್ದು ಕೂತಿತು. ಅತ್ತ ರಾಖಲ್ ದಾಸ್‌ ಹರಪ್ಪಾದಲ್ಲಿ ಹೊಸ ಇತಿಹಾಸ ನಿರ್ಮಿಸುತ್ತಿದ್ದಂತೆ ಹದಿನೈದಿಪ್ಪತ್ತು ವರ್ಷಗಳಿಂದ ಮೂಲೆಯಲ್ಲಿ ಧೂಳುತಿನ್ನುತ್ತಿದ್ದ  ವರದಿಗೆ ಎಲ್ಲಿಲ್ಲದ ಮಹತ್ವ ಬಂತು. ಆಶುತೋಷ್ ಮ್ಯೂಸಿಯಂ ಆಫ್ ಇಂಡಿಯನ್ ಆರ್ಟ್‌ನ ಸಹಾಯದಿಂದ ಇಲ್ಲಿನ ಕೆಲ ಸ್ಥಳಗಳಲ್ಲಿ ಉತ್ಖನನ ನಡೆದಾಗ ನಾಲ್ಕು ಮಡಿಕೆಯ ಚೂರು, ಒಂದಿಷ್ಟು ಹಳೆಯ ನಾಣ್ಯಗಳು ಸಿಕ್ಕರೆ ದೊಡ್ಡದೆಂಬ ಭಾವನೆಯಿದ್ದ ಇತಿಹಾಸಕಾರರೆಲ್ಲ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟರು. ಅದುವರೆಗೂ ಕಂಡುಕೇಳರಿಯದಿದ್ದ ಮೂರು ಸಾವಿರ ವರ್ಷಗಳ ಹಳೆಯ ಭವ್ಯ ನಗರವೊಂದು ಧಿಗ್ಗನೆದ್ದು ಜಗತ್ತಿನೆದುರು ತೆರೆದುಕೊಂಡಿತು. ಇಷ್ಟಾಗಿದ್ದೇ ತಡ, ಒಂದಿಷ್ಟು ಜಾಗಕ್ಕೆ ಕಂಪೌಂಡ್ ಗೋಡೆಕಟ್ಟಿ ಮೂರ್ನಾಲ್ಕು ಬೋರ್ಡು ತೂಗುಹಾಕಿ ಸುತ್ತಲಿನ ಸ್ಥಳವನ್ನು ಸಂರಕ್ಷಿತ ವಲಯವೆಂದು ಘೋಷಿಸಿ ಸರ್ಕಾರ ಕೈತೊಳೆದುಕೊಂಡಿತು. ಮುಂದೆ ಖ್ಯಾತ ಬಂಗಾಳಿ ಲೇಖಕ ಕಾಲಿದಾಸ ದತ್, ಕಲ್ಯಾಣ ಕುಮಾರ್ ಗಂಗೂಲಿ, ಕುಂಜಗೋಬಿಂದ ಗೋಸ್ವಾಮಿ, ದೇವಿಪ್ರಸಾದ್ ಘೋಷರಂಥವರ ಪರಿಶ್ರಮದಿಂದ ಆಶುತೋಷ್ ಮ್ಯೂಸಿಯಂ ಇನ್ನೂ ಕೆಲವೆಡೆ ಉತ್ಖನನ ಕೈಗೊಂಡಿತು. ಅಗೆದಲ್ಲೆಲ್ಲ ತೆರೆದುಕೊಳ್ಳುತ್ತಿದ್ದ ಆ ನಾಗರಿಕತೆಯ ಹೊಸ ಕುರುಹುಗಳು ಪ್ರಾಚ್ಯವಸ್ತು ಸಂಶೋಧಕರನ್ನು ಬೆಚ್ಚಿಬೀಳಿಸಿದ್ದವು. ನಿನ್ನೆಮೊನ್ನೆಯಷ್ಟೆ ಖನ ಮಿಹಿರೆರ್ ಧಿಪಿಯ ಪಕ್ಕ ವೊಡಾಫೋನ್ ಕಂಪನಿ ಮೊಬೈಲ್ ಟವರಿಗಾಗಿ ನೆಲವಗೆಯುತ್ತಿದ್ದಾಗ ಸಿಕ್ಕ ಕೆಲ ಬೆಲೆಬಾಳುವ ಮೂರ್ತಿಗಳು ಬೇಡಾಚಂಪಾವನ್ನು ಮತ್ತೆ ಸುದ್ದಿಗೆ ತಂದಿದ್ದವು. ಚೌಕಾಶಿ ನಡೆಸಿದರೆ ಇಲ್ಲಿ ಸಿಕ್ಕ ಚಿಕ್ಕಪುಟ್ಟ ಐತಿಹಾಸಿಕ ಮಹತ್ವದ ವಸ್ತುಗಳನ್ನು ಸಾವಿರ ಎರಡು ಸಾವಿರಕ್ಕೆ ಮಾರುವವರೂ ಇದ್ದಾರೆ. ಇಲ್ಲಿ ಸಿಗುವ ಟೆರಾಕೋಟಾದ ಮಾದರಿಗಳಿಗೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ಬೆಲೆಯಿದೆ. ಮಣ್ಣಿನ ಕಲಾಕೃತಿಗಳಿಗೆ ಹೆಸರಾದ ಬಿಶ್ನುಪುರದ ಕಲಾವಿದರಿಂದ ನಕಲಿ ಟೆರಾಕೋಟಾದ ಮೂರ್ತಿಗಳನ್ನು ಮಾಡಿ, ಅದರ ಮೇಲೆ ಖರೋಷ್ಟಿ ಲಿಪಿಯಲ್ಲಿ ಅಚ್ಚು ಕೆತ್ತಿಸಿ ಥೇಟ್ ಅಸಲಿಯೆಂದು ನಂಬಿಸಿ ಮಾರುವ ದಂಧೆಯೂ ಶುರುವಾಗಿದೆ.
ಅದು ಚಂದ್ರಕೇತುಘರ್....
ಜಗತ್ತಿನ ಇತಿಹಾಸಕಾರರನ್ನೆಲ್ಲ ಒಂದು ಕಾಲದಲ್ಲಿ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಈ ಸ್ಥಳ ನಿಜಕ್ಕೂ ಬಂಗಾಳದ ಇತಿಹಾಸದ ಒಂದು ಕಳೆದುಹೋದ ಕೊಂಡಿ. ಅದೆಷ್ಟು ರೋಚಕತೆಯನ್ನು ಹುಟ್ಟುಹಾಕಿದೆಯೋ ಅಷ್ಟೇ ನಿಗೂಢತೆಗಳನ್ನೂ ತನ್ನೊಡಲೊಳಗದು ಬಚ್ಚಿಟ್ಟುಕೊಂಡಿದೆ. ಇದರ ಒಗಟನ್ನು ಬಿಡಿಸಲಾಗದೇ ಕೈಚೆಲ್ಲಿದ ಪುರಾತತ್ವ ಸಂಶೋಧಕರೇ ಹೆಚ್ಚು. ಹೆಚ್ಚೆಚ್ಚು ಬಿಡಿಸಿಕೊಂಡಂತೆ ಅಷ್ಟಷ್ಟೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆಗಳನ್ನು ನಮ್ಮ ಮುಂದದು ಹರಡುತ್ತ ಹೋಗುತ್ತದೆ. ಅದೇ ಕಾರಣಕ್ಕೇನೋ ಭಾರತದ ಅತಿ ಹಳೆಯ ನಗರಗಳಲ್ಲೊಂದೆಂಬ ಖ್ಯಾತಿ ಇದಕ್ಕಿದ್ದರೂ, ಹರಪ್ಪ, ಮೆಹಂಜೋದಾರೋಗಳ ಸಾಲಿನಲ್ಲಿ ನಿಲ್ಲುವ ತಾಕತ್ತಿದ್ದರೂ ಇದಕ್ಕಿನ್ನೂ ಅವುಗಳ ಮಟ್ಟಿಗೆ ಪ್ರಸಿದ್ಧಿ ದಕ್ಕದಿರುವುದು. ಕ್ರಿ.ಶ ಒಂದನೇ ಶತಮಾನದಲ್ಲೇ ಪ್ಟಾಲೆಮಿ ತನ್ನ ಜಿಯೋಗ್ರಾಫಿಯಾದಲ್ಲಿ ಗಂಗಾತೀರದಲ್ಲಿದ್ದ ದಕ್ಷಿಣ ಬಂಗಾಳದ ಈ ನಗರವನ್ನು ಗಂಗೆ ಎಂದು ಕರೆದಿದ್ದಾನೆ. ಅವನಿಗಿಂತ ಹಿಂದಿನ ಗ್ರೀಕ್ ಇತಿಹಾಸಕಾರ ಪ್ಲುಟಾರ್ಚ್ ಗಂಗಾರಿದಯ್ ಎಂಬ ಶಕ್ತಿಶಾಲಿ ಬುಡಕಟ್ಟೊಂದು ಈ ಸ್ಥಳದಲ್ಲಿ ವಾಸಿಸುತ್ತಿದ್ದ ಬಗ್ಗೆ ಉಲ್ಲೇಖಿಸುತ್ತಾನೆ. ಕ್ರಿ.ಪೂ ಒಂದನೇ ಶತಮಾನದ ಅನಾಮಧೇಯ ಇತಿಹಾಸಕಾರನೊಬ್ಬನ Periplus of the Erythraean Seaಗಳಲ್ಲಿ ಗಂಗಾತೀರದ ಈ ನಗರದದಿಂದ ರೋಮಿಗೆ ಬೆಲೆಬಾಳುವ ವಸ್ತುಗಳು, ಮಸ್ಲಿನ್ ಬಟ್ಟೆ ರಫ್ತಾಗುತ್ತಿದ್ದ ಬಗ್ಗೆ ದಾಖಲೆಗಳು ಸಿಗುತ್ತವೆ. ಡಿಯೋಡ್ರಸ್ ಸಿಕಲಸ್, ಮೆಗಸ್ತನೀಸ್‌‌ರ ಪ್ರಕಾರ ಅಲೆಗ್ಸಾಂಡರ್ ಭಾರತದಿಂದ ತಿರುಗಿ ಓಡಿಹೋಗಲು ಅವನಿಗಿದ್ದ ನಂದ ಮತ್ತು ಗಂಗರಿದಯ್ ರಾಜ್ಯಗಳ ಒಕ್ಕೂಟದ ಸೈನ್ಯಬಲದ ಹೆದರಿಕೆಯೇ ಕಾರಣವಂತೆ. ನಂದರು ಆಳಿದ್ದು ಈಗಿನ ಬಿಹಾರವನ್ನು. ಆ ಗಂಗರಿದಯ್ ಸಾಮ್ರಾಜ್ಯವೇ ಈ ಇತಿಹಾಸ ಪ್ರಸಿದ್ಧ ಚಂದ್ರಕೇತುಘರ್. 
ರೋಮಿನಿಂದ ಜಲಮಾರ್ಗ

ಅಲೆಕ್ಸಾಂಡರಿನ ಕಾಲದ ಸಾಮ್ರಾಜ್ಯಗಳು
ಹಾಗಾದರೆ ಇದಕ್ಕೆ ಚಂದ್ರಕೇತುಘರ್ ಎಂಬ ಹೆಸರು ಬರಲು ಕಾರಣವೇನು?
ಚಂದ್ರಕೇತು ಬಂಗಾಳದ ಜನಪದ ಇತಿಹಾಸದ ಅತಿ ಖ್ಯಾತ ಅರಸರಲ್ಲೊಬ್ಬ. ಆ ಹೆಸರಿನ ಅರಸನೊಬ್ಬನಿದ್ದ ಎಂಬ ಬಗ್ಗೆ ಇತಿಹಾಸಕಾರರಲ್ಲೇ ಒಮ್ಮತಾಭಿಪ್ರಾಯವಿಲ್ಲ. ಆದರೂ ಬಂಗಾಳದ ಜನಪದದಲ್ಲಿ ಇವನ ಕುರಿತಾದ ನೂರಾರು ಕಥೆಗಳಿವೆ. ಬಂಗಾಳಕ್ಕೆ ಇಸ್ಲಾಂನ್ನು ಮೊದಲು ಪ್ರಸಾರ ಮಾಡಲು ಬಂದಿದ್ದ ಹಜರತ್ ಸಯ್ಯದ್ ಅಬ್ಬಾಸ್ ಅಲಿ ಅಲಿಯಾಸ್ ಪೀರ್ ಗೋರಾಚಂದನನ್ನು ತಡೆದ ಆತನ ಕಥೆಗಳು ಬಂಗಾಳದಲ್ಲಿ ಮನೆಮಾತಾಗಿವೆ. ತನ್ನ ಅತಿಮಾನುಷ ಶಕ್ತಿಗಳಿಗೆ ಹೆಸರಾಗಿದ್ದ ಚಂದ್ರಕೇತು ತನ್ನನ್ನು ಇಸ್ಲಾಂಗೆ ಮತಾಂತರಿಸಲು ಬಂದಿದ್ದ ಪೀರ್ ಗೋರಾಚಂದನ ಸವಾಲು ಸ್ವೀಕರಿಸಿ ಒಣಗಿದ ಬೇಲಿಗುಟ್ಟದಲ್ಲಿ ಸಂಪಿಗೆಯ ಹೂವರಳುವಂತೆ ಮಾಡಿದನಂತೆ. ಹಾಗಾಗಿ ಈ ಸ್ಥಳ ಬೇಡಾ(ಬೇಲಿ)ಚಂಪಾ(ಸಂಪಿಗೆ) ಎಂದು ಹೆಸರಾಯಿತಂತೆ. ಚಂದ್ರಕೇತುಘರದ ಸುತ್ತಲಿನ ೧೧ ಊರುಗಳ ಹೆಸರುಗಳ ಹುಟ್ಟಿಗೂ ಇಂಥದ್ದೇ ಕಥೆಗಳಿವೆ. ಚಂದ್ರಕೇತು-ಗೋರಾಚಂದನ ನಡುವೆ ಯುದ್ಧ ನಡೆದ ಸ್ಥಳ ರಣ್(ಯುದ್ಧ)ಖೋಲಾ, ಗೋರಾಚಂದ ಸತ್ತ ಸ್ಥಳ ಗೋರಾಪೋಟಾ ಜೊತೆಗೆ ರಾಜನ ಧನಾಗಾರವಿದ್ದ ಸ್ಥಳ ಧನಪೋಟಾ, ಅರಮನೆಯ ಸಿಂಹದ್ವಾರ ಶಿಂಗೇರ್ ಆಟಿ, ಸ್ನಾನ ಮಾಡುವ ಸ್ಥಳ ಶಾನ್ ಪುಕುರ್ ಹೀಗೆ ಸುತ್ತಮುತ್ತಲಿನ ಹಳ್ಳಿಗಳೆಲ್ಲ ಒಂದಿಲ್ಲೊಂದು ಥರದಲ್ಲಿ ಚಂದ್ರಕೇತುವಿನೊಡನೆ ತಳುಕು ಹಾಕಿಕೊಳ್ಳುತ್ತವೆ.
ಚಂದ್ರಕೇತುಘರದ ಸ್ವಲ್ಪ ದೂರದಲ್ಲೇ ಬಿದ್ಯಾಧರಿ ನದಿ ಹರಿಯುತ್ತದೆ. ಮೊದಲೊಂದು ಕಾಲದಲ್ಲಿ ಇಲ್ಲಿ ಗಂಗಾನದಿ ಹರಿದಿದ್ದ, ಬಂದರುಗಳಿದ್ದ ಕುರುಹುಗಳಿವೆ. ಹಡಗುಗಳ ಅವಶೇಷಗಳೂ ಸಿಕ್ಕಿವೆ. ಗಂಗೆ ನಂತರ ತನ್ನ ಪಥ ಬದಲಿಸಿ ಇಲ್ಲಿಂದ ೨೦ ಕಿ.ಮೀ ದೂರದಲ್ಲಿ ಕಲ್ಕತ್ತದಲ್ಲಿ ಹರಿಯಲಾರಂಭಿಸಿತು. ಇದರ ಹಿಂದೆ ಒಂದು ಕಥೆಯೂ ಇದೆಯಂತೆ. ಚಂದ್ರಕೇತು ತನ್ನ ಮಗನ ನಾಮಕರಣಕ್ಕೆ ಗಂಗಾದೇವಿಯನ್ನು ಆಹ್ವಾನಿಸಿದ್ದ. ಆದರೆ ಪೀರ್ ಗೋರಾಚಂದ ಗಂಗೆಗೆ ಚಾಡಿಹೇಳಿ ನಾಮಕರಣಕ್ಕೆ
ಹಿಂದೊಮ್ಮೆ ನದಿ ಹರಿದಿದ್ದಿರಬಹುದಾದ ಕುರುಹಾಗಿ ಅಗೆದಲ್ಲೆಲ್ಲ ಸಿಗುವ ಉಸುಕು
ಹೋಗದಂತೆ ತಡೆಯಲು ಯಶಸ್ವಿಯಾದ. ಗೋರಾಚಂದನ ಚಾಡಿಮಾತು ಕೇಳಿ ಅರಸನ ಮೇಲೆ ಕೋಪಗೊಂಡ ಗಂಗೆ ಚಂದ್ರಕೇತುಘರವನ್ನು ಬಿಟ್ಟು ದೂರ ಸರಿದಳು. ಗಂಗೆ ದೂರಸರಿದಿದ್ದ ಈ ಇಡೀ ಸ್ಥಳ ದೂರಸರಿದ ಗಂಗೆ ಅಥವಾ ದೇಗಂಗಾ ಎಂದು ಕರೆಯಲ್ಪಡುತ್ತದೆ. ವಿಚಿತ್ರವೆಂದರೆ ಆ ಹೆಸರಿನ ಅರಸನೊಬ್ಬ ಈ ಸ್ಥಳವನ್ನು ಆಳಿದ್ದನೆಂಬ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಮೌರ್ಯಯುಗದ ಹಿಂದಿನಿಂದಲೂ ಸುಮಾರು ಕ್ರಿ.ಪೂ ೧೦೦೦ದಿಂದಲೂ ಬೇಡಾಚಂಪಾ ಮತ್ತು ಸುತ್ತಲಿನ ಪ್ರದೇಶ ಬಹುದೊಡ್ಡ ನಾಗರಿಕತೆಯ ಕೇಂದ್ರವಾಗಿತ್ತು. ನಂತರ ಶುಂಗರು, ಕುಶಾನರು, ಗುಪ್ತರಿಂದ ಹಿಡಿದು ಪಾಲರು ಹಾಗೂ ಸೇನರ ತನಕ ಕ್ರಿ.ಶ ೧೩೦೦ರವರೆಗೂ ಇದನ್ನು ಬೇರೆ ಬೇರೆ ರಾಜಮನೆತನಗಳು ಆಳಿವೆ. ಆದರೆ ಅವುಗಳಲ್ಯಾರೂ ಚಂದ್ರಕೇತು ಎಂಬ ಹೆಸರಿನವರಿಲ್ಲ. ಅಲ್ಲಿ ಆಳಿದವರ್ಯಾರೂ ಪ್ರಸಿದ್ಧರಾಗದೇ ಚಂದ್ರಕೇತುವೆಂಬ ಕಾಲ್ಪನಿಕ ಅರಸು ಅಷ್ಟು ಹೆಸರುವಾಸಿಯಾದನೆಂದರೆ, ಇಲ್ಲದೇ ಇರುವ ವ್ಯಕ್ತಿಯೊಬ್ಬನ ಬಗ್ಗೆ ನೂರಾರು ರೋಚಕ ಕಥಗಳೂ, ಅವನದೇ ಹೆಸರಿನಿಂದ ಇಡೀ ನಗರವೂ ಬೆಳೆದು ಬಂದಿತೆಂಬುದು ಆಶ್ಚರ್ಯ ಮಾತ್ರವಲ್ಲ, ಇಡೀ ಇತಿಹಾಸವನ್ನು ಇನ್ನಷ್ಟು ನಿಗೂಢತೆಗೆ ತಳ್ಳುವ ಸಂಗತಿಯೇ ಸೈ. ಗ್ರೀಕರ, ಮೆಗಸ್ತನೀಸನ ದಾಖಲೆಗಳಲ್ಲಿ ಸೆಲ್ಯುಕಸ್‌ನನ್ನು ಸೋಲಿಸಿದ ಸ್ಯಾಂಡ್ರೋಕುಟಸ್ ಎಂಬ ರಾಜನ ಉಲ್ಲೇಖವಿದೆ. ಅದು ಚಂದ್ರಗುಪ್ತನ ಗ್ರೀಕ್ ಅಪಭೃಂಶವಾಗಿರಬಹುದೆಂಬ ಅನುಮಾನಗಳಿವೆ. ಈ ಸಂಡ್ರೋಕುಟಸ್ ಜನರ ಬಾಯಲ್ಲಿ ಚಂದ್ರಕೇತುವಾಗಿರಬಹುದೇ ಎಂಬುದು ನನ್ನ ಸಪ್ರಶ್ನ ಸಂಶಯ.!
ಆದರೆ ಇನ್ನೊಂದು ಸಮಸ್ಯೆ, ಚಂದ್ರಕೇತುವಿನ ಸಮಕಾಲೀನನೆನ್ನಲಾದ ಪೀರ ಗೋರಾಚಂದ ಅಥವಾ ಹಜರತ್ ಸಯ್ಯದ್ ಅಬ್ಬಾಸ್ ಅಲಿಯ ಕೆಲವಷ್ಟು ದರ್ಗಾಗಳು ಬಂಗಾಳದಲ್ಲಿವೆ. ಗೋರಾಚಂದ್ ರೋಡ್ ಎಂಬ ಹೆಸರಿನ ರಸ್ತೆಯೂ ಕಲ್ಕತ್ತಾದಲ್ಲಿದೆ. ಹನ್ನೆರಡನೇ ಶತಮಾನದಲ್ಲಿ ಭಕ್ತಿಯಾರ್ ಖಿಲ್ಜಿಯ ದಾಳಿಯ ನಂತರ ಬಂಗಾಳದಲ್ಲಿ ಸೇನ ಸಾಮ್ರಾಜ್ಯದ ಅವಸಾನ ಶುರುವಾಯಿತು. ಇದೇ ಸಮಯದಲ್ಲಿ ಮುಸ್ಲಿಂ ಮತಪ್ರಚಾರಕರ, ದಾಳಿಕಾರರ ಪ್ರಭಾವದಿಂದ ಈ ಭಾಗದಲ್ಲಿ ಇಸ್ಲಾಂ ವ್ಯಾಪಕವಾಗಿ ಹರಡಲು ಪ್ರಾರಂಭವಾಯ್ತು. ಸರಿಸುಮಾರು ಇದೇ ಸಮಯದಲ್ಲಿ ಮತಪ್ರಚಾರಕ್ಕಾಗಿ ಗೋರಾಚಂದ ಮೆಕ್ಕಾದಿಂದ ಬಂಗಾಳಕ್ಕೆ ಬಂದನೆಂಬ ನಂಬಿಕೆಯಿದೆ. ಬೇಡಾಚಂಪಾದಿಂದ ೬ ಕಿ.ಮೀ ದೂರದ ಹಾರ(ಡ)ವಾದಲ್ಲಿ ಚಂದ್ರಕೇತುವಿನ ಅನುಮತಿಯಿಲ್ಲದೇ ಗೋರಾಚಂದ ಮಸೀದಿಯೊಂದನ್ನು ನಿರ್ಮಿಸಲು ಶುರುಮಾಡಿದ. ವಿಷಯ ತಿಳಿದ ಚಂದ್ರಕೇತು ಗೋರಾಚಂದನ ಮೇಲೆ ದಂಡೆತ್ತಿ ಹೋದನಂತೆ. ಇಬ್ಬರಿಗೂ ವಿಶೇಷ ಮಾಂತ್ರಿಕ ಶಕ್ತಿಗಳಿದ್ದವು. ಘನಘೋರ ಯುದ್ಧ ನಡೆದು ಕೊನೆಗೆ ಗೋರಾಚಂದ ಮೃತಪಟ್ಟ. ಅವನ ದೇಹವನ್ನು ಆತ ನಿರ್ಮಿಸಲು ಹೊರಟಿದ್ದ ಮಸೀದಿಯ ಪಕ್ಕದಲ್ಲೇ ಸಮಾಧಿ ಮಾಡಿಲಾಯ್ತು. ಕೆಂಪು ಕಲ್ಲಿನ ಈ ಮಸೀದಿ ಸ್ಥಳೀಯವಾಗಿ ಲಾಲ್ ಮಸ್ಜಿದ್ ಎಂದೇ ಹೆಸರಾಗಿದೆ. ಇದರ ಅವಶೇಷಗಳನ್ನು ಇನ್ನೂ ನೋಡಬಹುದು. ಮಸೀದಿಯ ಹೆಚ್ಚಿನಂಶ ನಾಶವಾಗಿದ್ದರೂ, ಇದರ ಒಂದು ಭಾಗದ ಗೋಡೆ ಇನ್ನೂ ಮೂಲರೂಪದಲ್ಲಿಯೇ ನಿಂತಿದೆ. ಆದರಿದು ಮಸೀದಿಯಲ್ಲವೆಂದೂ, ಪಾಲ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಲ್ಪಟ್ಟ ಬೌದ್ಧ ಸ್ತೂಪವೊಂದರ ಅವಶೇಷವೆಂದೂ ರಾಖಲದಾಸ್ ಬಂಡೋಪಾಧ್ಯಾಯ ಸೇರಿ ಹಲ ಇತಿಹಾಸಕಾರರು ವಾದಿಸಿದ್ದಾರೆ. ಗೋರಾಚಂದನ ಅನುಯಾಯಿಗಳು ಅವನ ಸಮಾಧಿಯಿಂದ ಅಸ್ತಿಪಂಜರವನ್ನು ತೆಗೆದು ಪಕ್ಕದ ಮಸೀದಿಯಲ್ಲಿ ಸಂರಕ್ಷಿಸಿಟ್ಟರಂತೆ. ಹಾಗಾಗಿ ಆ ಸ್ಥಳ ಹಾರವಾ(ಹಾರೋ=ಮೂಳೆ) ಎಂದು ಹೆಸರಾಯ್ತು. ಸಮಾಧಿಯಿದ್ದ ಜಾಗ ಇಂದು ದೊಡ್ಡ ದರ್ಗಾ ಆಗಿ ಬದಲಾಗಿದೆ. ಪ್ರತಿವರ್ಷ ಬಂಗಾಳ ಸಾವಿರಾರು ಜನ ಇಲ್ಲಿ ಭೇಟಿಕೊಡುತ್ತಾರೆ. ಪಕ್ಕದಲ್ಲೇ ಇರುವ ಲಾಲ್ ಮಸ್ಜಿದ್, ಚಂದ್ರಕೇತುಘರ್ ಕೇಳುವವರಿಲ್ಲದೇ ಹಾಳು ಬಿದ್ದಿದೆ. ASI ಎರಡು ಕಡೆ ಹೊಂಡ ತೋಡಿ, ಇನ್ನೆರಡು ಕಂಪೌಂಡ್ ಹಾಕಿ, ಬೋರ್ಡ್ ನೆಟ್ಟಿದ್ದು ಬಿಟ್ಟರೆ ಹೆಚ್ಚಿನದೇನೂ ಮಾಡಿಲ್ಲ. ಎರಡು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಸರ್ಕಾರ ಇದನ್ನು ಹೆರಿಟೇಜ್ ವಿಲೇಜ್ ಎಂದು ಘೋಷಿಸಿದೆಯೆಂಬುದು ಬಿಟ್ಟರೆ ಮತ್ತೇನೂ ಕೆಲಸವಾಗಿಲ್ಲ. ಕಲ್ಕತ್ತಾ ವಿಶ್ವವಿದ್ಯಾಲಯದ ಆಶುತೋಷ್ ಮ್ಯೂಸಿಯಮ್ಮಿನ ಕೆಲಸಗಳಿಂದ ಕೆಲಮಟ್ಟಿನ ಉತ್ಖನನ ನಡೆದು ಇತಿಹಾಸದ ಮೇಲೆ ಬೆಳಕು ಬೀರುವ ಪ್ರಯತ್ನಗಳು ನಡೆದಿವೆ. ಅದನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಹೆಸರು ಸ್ವಲ್ಪವಾದರೂ ಉಳಿದುಕೊಂಡು ಬಂದಿದ್ದರೆ ಅದಕ್ಕೆ ಕಾರಣ ದಿಲೀಪ್ ಕುಮಾರ್ ಮೈತ್ರೆ ಎಂಬ ಒಬ್ಬ ಸಾಧಾರಣ ಮನುಷ್ಯನಿಂದ. ಚಂದ್ರಕೇತುಘರ್ ಸುತ್ತಮುತ್ತಲಿನ ಇತಿಹಾಸದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಏಕೈಕ ವ್ಯಕ್ತಿ ಅವರು. ಮಾತ್ರವಲ್ಲ ಈ ಪರಿಸರದಲ್ಲಿ ಪ್ರಾಚ್ಯವಸ್ತುಗಳನ್ನು ಉತ್ಖನನ ಮಾಡಿ, ಸಂಗ್ರಹಿಸಲು ಸರ್ಕಾರದಿಂದ ಅನುಮತಿ ಪಡೆದ ಖಾಸಗಿ ವ್ಯಕ್ತಿಯೂ ಇವರೊಬ್ಬರೆ. ರಾಖಲದಾಸ ಬಂಡೋಪಾಧ್ಯಾಯರ ಸಂಶೋಧನಾ ವರದಿಯನ್ನು ಹೊರತುಪಡಿಸಿದರೆ ಚಂದ್ರಕೇತುಘರದ ಇತಿಹಾಸದ ಬಗ್ಗೆ ಅರಿಯಲು ಇಂದು ಮೈತ್ರೆ ಬರೆದ ’ಚಂದ್ರಕೇತುಘರ್’, ’ಅತೀತ್ ಅಲೋಕೆ ಚಂದ್ರಕೇತುಘರ್’, ’ಘರ್ ಚಂದ್ರಕೇತುರ್ ಕಥಾ’, ’ಇತಿಹಾಸೇರ್ ದೇಗಂಗಾ’ ಎಂಬ ನಾಲ್ಕು ಪುಸ್ತಕಗಳೇ ಅಧಿಕೃತ ಆಧಾರ. ಬೇಡಾಚಂಪಾದ ಬಸ್‌ಸ್ಟ್ಯಾಂಡ್ ಪಕ್ಕದಲ್ಲೇ ಇರುವ ಇವರ ಮನೆಯಲ್ಲಿ ಇಲ್ಲಿ ಸಿಕ್ಕ ಲಕ್ಷಾಂತರ ಪ್ರಾಚ್ಯವಸ್ತುಗಳ ಸಂಗ್ರಹವಿದೆ.  ಕಳೆದ ೫೦ ವರ್ಷಗಳಿಂದ ಇಲ್ಲಿನ ಐತಿಹಾಸಿಕ ಸ್ಥಳಗಳ, ವಸ್ತುಗಳ ರಕ್ಷಣೆಯನ್ನು ಮೈತ್ರೆ ಒಂದು ತಪಸ್ಸಿನಂತೆ ಮಾಡಿಕೊಂಡು ಬಂದಿದ್ದಾರೆ. ಒಂದು ವಿಶ್ವಪ್ರಸಿದ್ಧ ನಾಗರಿಕತೆಯ ಅವಶೇಷಗಳನ್ನು ಪುನರುಜ್ಜೀವನಗೊಳಿಸುವ, ನಮ್ಮ ಸಂಸ್ಕೃತಿಯ ಭಾಗವೊಂದನ್ನುಳಿಸುವ ಕಾರ್ಯದಲ್ಲಿ ೮೫ರ ಹರೆಯದ ಮೈತ್ರೆ ಇನ್ನೂ ವಿಶ್ರಮಿಸಿಲ್ಲ. ಒಂದೀಡೀ ಸರ್ಕಾರ ಮಾಡಬೇಕಾಗಿದ್ದ ಕೆಲಸವದು. ಅವರಿಗೆ ನನ್ನದೊಂದು ಹ್ಯಾಟ್ಸಾಫ್.
ಹಾಳು ಹಂಪೆ ನಮ್ಮಲ್ಲಿನ ಪ್ರತಿ ಊರುಗಳಲ್ಲೂ ಇದೆ.
ಕಲ್ಕತ್ತಾದ ಇಂಡಿಯನ್ ಮ್ಯೂಸಿಯಮ್ಮಿನಲ್ಲಿರುವ ಚಂದ್ರಕೇತುಘರದ ಒಂದು ಶಿಲ್ಪ 
ದಿಲೀಪ್ ಕುಮಾರ್ ಮೈತ್ರೆ 
ವಸ್ತುಸಂಗ್ರಹಾಲಯವಾಗಿರುವ ಮೈತ್ರೆಯವರ ಮನೆ

ಗುಪ್ತಪೂರ್ವ ಯುಗದ ಟೆರಾಕೋಟಾ ಮಾದರಿಗಳು


Monday, July 13, 2015

ಕೋಲ್ಕತ್ತಾ ಡೈರಿ: ಕಾಳಿಯ ನಾಡಲ್ಲಿ


ಕಾಳಿ, ಅವಳು ಶಿವೆ, ಅವಳು ಶಕ್ತಿ. ಅವಳು ಲೋಕಮಾತೆ.  ಆ ಶಕ್ತಿಯೇ ಸತ್ವ – ರಜೋ – ತಮೋ ಎಂಬ ತ್ರಿಗುಣಗಳ ಮಾಯೆ. ಅವಳದ್ದು ಒಂದು ಸತ್ – ಚಿತ್ – ಆನಂದರೂಪವಾದರೆ ಇನ್ನೊಂದು ಗುಣತ್ರಯಗಳಿಂದ ಕೂಡಿದ ಮಾಯಾರೂಪ. ಅವಳು ಜಗತ್ತನ್ನು ಹೆತ್ತವಳು, ಹೊತ್ತವಳು, ಕೊನೆಗೆ ನಾಶಪಡಿಸುವವಳು ಕೂಡ. ಅಥರ್ವ ವೇದಕ್ಕೆ ಸೇರಿದ ಮುಂಡಕ ಉಪನಿಷತ್ತಿನ ಮಂತ್ರ ೧ -೨ – ೪ ರ ಪ್ರಕಾರ ಕಾಳಿ ಎಂದರೆ ಅಗ್ನಿಯ ಪ್ರಜ್ವಲಿಸುವ ೭ ನಾಲಗೆಗಳಲ್ಲಿ ಮೊದಲನೆಯದು.
 ಕಾಳೀಕರಾಳೀಚ ಮನೋಜವಾಚ |
ಸುಲೋಹಿತಾಯಾಚ ಸುಧೂಮ್ರವರ್ಣಾ |
ಸ್ಫುಲಿಂಗಿನೀ ವಿಶ್ವರುಚೀಚದೇವಿ
ಲೀಲಾಯ ಮಾನಾ ಇತಿಸಪ್ತ ಜಿಹ್ವಾ: ||
ಶಕ್ತಿಯೇ ಕಾಳಿ, ಕರಾಳಿ, ಮನೋಜವಾ, ಸುಲೋಹಿತಾ, ಸುಧೂಮ್ರವರ್ಣಾ, ಸ್ಫುಲಿಂಗಿನಿ ಮತ್ತು ವಿಶ್ವರುಚಿಯೆಂಬ ಅಗ್ನಿಯ ೭ ನಾಲಗೆಗಳಾದವಳು. ಯಜುರ್ವೇದದ ಶತಪಥ ಬ್ರಾಹ್ಮಣದ(೧-೭-೨ -೮) ಪ್ರಕಾರ ಶರ್ವ, ಭವ, ಪಶೂನಾಂಪತಿ, ರುದ್ರ ಎಂಬವು ಅಗ್ನಿಯ ಪರ್ಯಾಯ ನಾಮಗಳಾಗಿವೆ. ರುದ್ರನು ಅಗ್ನಿಯಾದರೆ ಕಾಳಿಯು ಅದರ ಧಗಧಗಿಸುವ ಜ್ವಾಲೆ. ರುದ್ರನ ಪತ್ನಿ ಕಾಳಿ ಎಂಬ ಪೌರಾಣಿಕ ಹಿನ್ನೆಲೆಗೆ ಅದೇ ಕಾರಣವೇನೋ.
ಯೋಗಿಗಳಿಗೆ ಇವಳಷ್ಟು ವಿಸ್ಮಯವನ್ನುಂಟುಮಾಡುವ ಮತ್ತೊಂದು ದೇವತೆ ಇರಲಾರದು. ಆಕೆ ಸತಿಯ ಹತ್ತು ರೂಪಗಳಾದ ದಶಮಹಾವಿದ್ಯೆಗಳಲ್ಲೊಬ್ಬಳಾಗಿ ಅದರ ಅಧಿಪತಿಯಾದವಳು. ರಕ್ತವೇ ಅವಳ ಆಹಾರ, ಮನುಷ್ಯ ಕಪಾಲಗಳೇ ಅವರ ಕಂಠಾಭರಣ, ಕೈಕಾಲುಗಳೇ ಅವಳ ಉಡಿದಾರ. ಅವಳು ಸ್ಮಶಾನವಾಸಿ, ಕ್ರಾಂತಿರೂಪಿ(ಸ್ತ್ರೀವಾದಿಗಳ ನೆಚ್ಚಿನವಳೂ ಆಗಿರಬಹುದು). ಕಾಳರಾತ್ರಿ. ಆಕೆಯ ಜಗತ್ತು ಕತ್ತಲೆಯದ್ದು, ವಿನಾಶದ್ದು, ಭಯದ್ದು, ಬೆರಗಿನದ್ದು. ಶಿವನ ಪತ್ನಿಯಾದರೂ ಶಿವನನ್ನೇ ಸೋಲಿಸಿ ಅವನೆದೆಯನ್ನು ಮೆಟ್ಟಿನಿಂತವಳು. ಅವಳ ರೂಪ ಸೌಮ್ಯವಲ್ಲ, ಕರುಣಾಮಯಿಯಲ್ಲ, ಮಾತೃಹೃದಯದ್ದಲ್ಲ. ಆದರೂ ಅವಳ ಪ್ರಸಿದ್ದಿಗೇನು ಕಡಿಮೆಯಿಲ್ಲ. ಷಣ್ಮತಗಳಲ್ಲಿ ವೀರಶೈವ ದರ್ಶನದಲ್ಲಿ ಶಿವೆಯಾಗಿ, ಶಾಕ್ತಪಂಥದಲ್ಲಿ ಶಕ್ತಿಯಾಗಿ, ಕಾಪಾಲಿಕರಿಂದ ಭದ್ರಕಾಳಿಯಾಗಿ ಪೂಜಿಸಲ್ಪಡುವವಳವಳು.
ಪೌರಾಣಿಕವಾಗಿ ಹೇಗಿದ್ದರೂ ಕಾಳಿ ಒಂದು ಥರದ ಸೊಫಿಸ್ಟಿಕೇಟೆಡ್ ಸಮಾಜದಲ್ಲಿ ಹೆಚ್ಚಾಗಿ ಕ್ಷುದ್ರದೇವತೆಯಾಗಿಯೇ ಪ್ರಚಲಿತದಲ್ಲಿರುವವಳು. ನಮ್ಮಲ್ಲಿ ಮಾರಮ್ಮ, ಚೌಡಮ್ಮರ ಹಾಗೆ. ಸರಸ್ವತಿ, ಲಕ್ಷ್ಮಿ, ಪಾರ್ವತಿಯರು ಹೆಚ್ಚೆಚ್ಚು ವೈದಿಕರಾದಂತೆ ಅವರು ಬಿಟ್ಟ ಸ್ಥಳವನ್ನು ಸಮಾಜದ ಕೆಳವರ್ಗಗಳಲ್ಲಿ ತುಂಬಿದ್ದು ಕಾಳಿಯೇ. ಸೋ ಕಾಲ್ಡ್ ನಾಗರೀಕತೆಯಿಂದ ದೂರವಿರುವ ಬುಡಕಟ್ಟಿನವರು, ಡಕಾಯಿತರು, ನಿಮ್ನ ವರ್ಗದ ಮಧ್ಯದಲ್ಲೇ ಅವಳು ಹೆಚ್ಚು ಪ್ರಸಿದ್ಧಿ. ಆಕೆಯ ರುದ್ರಭಯಂಕರ ರೂಪ ನೈಸರ್ಗಿಕ ಅಥವಾ ಮಾನುಷಿಕ ಪೀಡೆಗಳ, ವೈರಿಗಳ ಮೆಟ್ಟಿನಿಲ್ಲಲು ಸ್ಫೂರ್ತಿಯಾಗುತ್ತಿತ್ತೇನೋ. ದಟ್ಟಕಾಡುಗಳ ನಡುವೆ ಎದ್ದುನಿಂತ ಆಕೆಯ ಆರಾಧನಾಲಯಗಳು ಕಾಡುಕಡಿದು ನಾಡುಬೆಳೆದಂತೆ ನಾಗರಿಕತೆಯೊಡನೆ ಸೇರಿ ಪ್ರಸಿದ್ಧವಾಗಿರಬಹುದು.
ಕಲ್ಕತ್ತಾದ ನೆಲದಲ್ಲಿ, ಕಾಳಿಯ ಮಡಿಲಲ್ಲಿದ್ದಾಗ ಇಷ್ಟೆಲ್ಲ ಜಿಜ್ಞಾಸೆಗಳು ಮನದಲ್ಲಿ ಹಾದುಹೋದವು. ಅಲ್ಲಿನ ಮನೆಮನಗಳಲ್ಲಿ ಮಾತ್ರವಲ್ಲ ನೆಲದ ಕಣಕಣಗಳಲ್ಲಿ ಕಾಳಿಯಿದ್ದಾಳೆ. ಅದಕ್ಕೇ ಏನೋ ಬಂಗಾಳಿಗಳ ನೆಚ್ಚಿನ ಬಣ್ಣ ಕೆಂಪು. ಬಂಗಾಳದಲ್ಲಿ ಹತ್ತರಲ್ಲಿ ಒಂಭತ್ತು ಹೆಂಗಸರಾದರೂ ಕೆಂಪು ಸೀರೆಯುಟ್ಟು, ಕಾಸಗಲದ ಕೆಂಪು ಬೊಟ್ಟು, ಬೈತಲೆಗೆ ಇನ್ನೊಂದಿಷ್ಟು ಕುಂಕುಮ, ಪಾದಗಳಿಗೆ ಕಡುಗೆಂಪಿನ ಮೆಹಂದಿ ತೊಟ್ಟ ವೇಷದಲ್ಲೇ ಕಾಣಸಿಗುತ್ತಾರೆ. ಕೆಂಪು ಬಣ್ಣದ ಕಮ್ಯುನಿಸ್ಟರೂ ಬಂಗಾಳಿಗಳಿಗೆ ಪ್ರಿಯವಾದರೂ ಅದಕ್ಕೂ ಕಾಳಿಗೂ ಏನೂ ಸಂಬಂಧವಿರಲಿಕ್ಕಿಲ್ಲ ಬಿಡಿ. ಕಲ್ಕತ್ತ ಹೆಸರು ಪಡೆದಿದ್ದು, ಹೆಸರು ಮಾಡಿದ್ದೂ ಕಾಳಿಯಿಂದಲೇ. ಕಲ್ಕತ್ತಾ ಕೋಲ್ಕತ್ತವಾಗುವ ಸುಮಾರು ಇನ್ನೂರೈವತ್ತು ವರ್ಷ ಮೊದಲು ಅಂದರೆ ೧೭೫೬ರಲ್ಲಿ ನವಾಬ ಸಿರಾಜುದ್ದೌಲ ಕಾಲಿಕತ್ತವನ್ನು ಅಲಿನಗರ ಎಂದು ಮರುನಾಮಕರಣ ಮಾಡಿದ್ದ. ಅದು ಅಲ್ಲಿನ ಅಧಿದೇವತೆ ಭದ್ರಕಾಳಿಗೆ ಹಿಡಿಸಲಿಲ್ಲವೇನೋ? ಅವಳ ಸಿಟ್ಟಿನ ಪರಿಣಾಮವೋ ಏನೋ ಮರುವರ್ಷ ನಡೆದ ಪ್ಲಾಸಿ ಕದನದಲ್ಲಿ ಸಿರಾಜುದ್ದೌಲ ನಾಮಾವಶೇಷವಾಗಿ ಹೋದ. ಮುಂದಿನದ್ದು ಇತಿಹಾಸ.
ಕಲ್ಕತ್ತಾದ ಹೆಸರಿನ ಮೂಲ ಮತ್ತು ವ್ಯುತ್ಪತ್ತಿಯ ಬಗ್ಗೆ ಸುಮಾರಿಷ್ಟು ವಾದಗಳಿವೆ. ಖಲ್ ಕಾತಾ- ದೊಡ್ಡದೊಂದು ನೀರಿನ ಕ್ಯಾನಲ್ ಅಥವಾ ತೋಡು ಅಗೆದ ಕಾರಣದಿಂದ ಹೆಸರು ಬಂದಿರಬಹುದು. ಅಥವಾ ಈ ಸ್ಥಳ ಸುಣ್ಣದ ಕಲ್ಲಿನ(ಕಲಿ) ಉತ್ಪಾದನೆಗೆ ಪ್ರಸಿದ್ಧವಾಗಿದ್ದರಿಂದ ಹೆಸರು ಹಾಗೆಯೂ ಬಂದಿರಬಹುದು. ಬಂಗಾಳಿ ಶಬ್ದ ಕಿಲ್‌ಕಿಲಾ(ಸಪಾಟಾದ ಜಾಗ) ಎಂಬರ್ಥದಿಂದಲೂ ಕಲ್ಕತಾ ಆಗಿರಬಹುದು ಎಂಬ ಬಗೆಬಗೆಯ ವಾದವಿದ್ದರೂ ಹೆಚ್ಚಾಗಿ ಒಪ್ಪಲ್ಪಡುವ ಮೂಲ ಕಾಳಿಯಿಂದ ಬಂದದ್ದೆಂಬುದೇ. ಮುಂಬಾದೇವಿಯಿಂದ ಮುಂಬೈ, ಮಂಗಳಾದೇವಿಯಿಂದ ಮಂಗಳೂರು, ಅಥೇನಾಳಿಂದ ಅಥೇನ್ಸ್‌ನ ಹೆಸರಾದಂತೆ ಕಾಲಿಯಿಂದ ಕಾಲಿಕತ್ತಾ ಆಗಿ ಮುಂದೆ ಜನರ(ಬ್ರಿಟಿಷರ) ಬಾಯಲ್ಲಿ ಕ್ಯಾಲ್ಕತಾ, ಕಲ್ಕತ್ತಾ ಆಯಿತು. ಕಾಲಿ ಕೋತಾ ಅಂದರೆ ಕಾಲಿಯ ಮಂದಿರವೆಂಬರ್ಥವಂತೆ. ಇಲ್ಲಿನ ಕಾಳಿಘಾಟ್ ಕಾಲಿಮಂದಿರ ಹಿಂದೂಗಳ ೫೧ ಶಕ್ತಿಪೀಠಗಳಲ್ಲೊಂದು. ಕಲ್ಕತ್ತಾದ ಹೆಸರು ಬರಲು ಈ ಮಂದಿರವೇ ಕಾರಣವೆಂಬ ನಂಬಿಕೆಯಿದೆ. ಮೊದಲು ಗಂಗಾನದಿಯ ದಡದಲ್ಲಿನ ಘಾಟ್ ಒಂದರಲ್ಲಿ ಕಾಳಿಯ ಮಂದಿರವೊಂದಿತ್ತಂತೆ. ಇದರಲ್ಲಿದ್ದ ಮೂರ್ತಿಯನ್ನು ಕದ್ದೊಯ್ದ ಕಾಪಾಲಿಕರು ದಟ್ಟಕಾಡಿನಲ್ಲಿ ಪ್ರತಿಷ್ಟಾಪಿಸಿ ಪೂಜಿಸತೊಡಗಿದರು. ಮೂಲಜಾಗ ಬಂಗಾಲಿಯಲ್ಲಿ ಕಾಲಿಕಾ ಥಾ(ಕಾಲಿ ಇದ್ದ) ಎಂದು ಹೆಸರಾಯಿತು. ಇಲ್ಲಿನ ಘಾಟಿನಿಂದ ಮೂರ್ತಿಯನ್ನು ತೆಗೆದುಕೊಂಡು ಹೋದ ಕಾರಣ ಹೊಸ ಜಾಗವೂ ಕಾಲಿ-ಘಾಟ್ ಎಂದೇ ಹೆಸರಾಯ್ತು. ಇದರ ಪಕ್ಕ ಆದಿಗಂಗಾ ಎಂಬ ಸಣ್ಣದೊಂದು ತೊರೆಯಿದೆ. ಮೊದಲು ಹೂಗ್ಲಿ ನದಿ ಇಲ್ಲೇ ಹರಿಯುತ್ತಿತ್ತೆಂದೂ, ಮುಂದೆ ಪಥಬದಲಾಯಿಸಿ ಈಗಿನ ಜಾಗಕ್ಕೆ ಬಂದಿತೆಂದೂ ಅನಿಸಿಕೆಯಿದೆ. ಇದು ಕಲ್ಕತ್ತಾದ ವಿಶ್ವಪ್ರಸಿದ್ದ ಕಾಲಿಮಂದಿರ. 

ಕಾಳಿಘಾಟ್


ಕಾಳಿಘಾಟ್ ಮಂದಿರ, London News, 1887(ಪಕ್ಕದ ಆದಿಗಂಗಾ ನದಿ ಇಂದು ಸಣ್ಣ ಕಾಲುವೆಯ ಮಟ್ಟಕ್ಕಿಳಿದಿದೆ)
ಕಾಳಿಘಾಟ್ ಕಾಳಿ
ಹಾಗೆಂದು ಕಲ್ಕತ್ತಾದಲ್ಲಿರುವುದು ಇದೊಂದೇ ಐತಿಹಾಸಿಕ ಕಾಲಿಮಂದಿರವಲ್ಲ. ಬ್ರಿಟೀಷರು ಬರುವ ಮೊದಲೇ ಗಂಗೆಯ ದಡದಲ್ಲಿ ಈಗಿನ ಬಾಗ್‌ಬಝಾರ್  ಮಾರ್ಕೇಟಿನ ಹತ್ತಿರ ಚಿತ್ರೇಶ್ವರೀ ಅಥವಾ ಚಿತ್ತೇಶ್ವರೀ ಎಂಬ ಇನ್ನೊಂದು ಹೆಸರಾಂತ ಕಾಲಿಮಂದಿರವಿತ್ತು. ಇದನ್ನು ಸ್ಥಾಪಿಸಿದವನು ಚಿತೆ ಎಂಬ ಡಕಾಯಿತನೆಂಬ ನಂಬಿಕೆಯಿದೆ. ಅವನ ನಂತರ ಖಾಲಿ ಬಿದ್ದಿದ್ದ ಈ ದೇವಸ್ಥಾನದಲ್ಲಿ ಮುಂದೆ ೧೫೮೬ ರಲ್ಲಿ ನೃಸಿಂಗ ಬ್ರಹ್ಮಚಾರಿ ಎಂಬ ತಾಂತ್ರಿಕ ಪೂಜೆಯನ್ನು ಪುನರಾರಂಭಿಸಿದ. ೧೬೧೦ರಲ್ಲಿ ಅಲ್ಲಿನ ಜಮೀನ್ದಾರ ಮನೋಹರ ಘೋಷ ಈಗ ಕಾಣುವ ದೇವಸ್ಥಾನದ ಕಟ್ಟಡವನ್ನು ನಿರ್ಮಿಸಿದವನು. ಚಿತ್ತೇಶ್ವರೀ ಮಂದಿರದ ಕಾರಣದಿಂದ ಈ ಸ್ಥಳ ಚಿತ್ಪುರ್ ಎಂದು ಕರೆಯಲ್ಪಡುತ್ತಿತ್ತು. ಆ ಕಾಲದಲ್ಲಿ ಇಲ್ಲಿದ್ದ ನಾಲ್ಕು ಗ್ರಾಮಗಳಲ್ಲಿ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕತಾದ ಜೊತೆಗೆ ಚಿತ್ಪುರ್ ಕೂಡ ಒಂದಾಗಿತ್ತು. ಚಿತ್ಪುರದ ಚಿತ್ತೇಶ್ವರಿಯಿಂದ ಕಾಳಿಘಾಟ್‌ ಮಂದಿರಕ್ಕೆ ತೆರಳಲು ನಿರ್ಮಿಸಿದ ಚಿತ್ಪುರ್ ರಸ್ತೆಗೆ ಕೋಲ್ಕತ್ತಾದ ಅತ್ಯಂತ ಹಳೆಯ ರಸ್ತೆಯೆಂಬ ಖ್ಯಾತಿಯಿದೆ. ಅಂದು ಈ ರಸ್ತೆಯಲ್ಲಿದ್ದ ಚೌರಂಗಿ ಕಾಡಲ್ಲಿ ಚೌರಂಗಗಿರಿಯೆಂಬ ತಾಂತ್ರಿಕ ನಿರ್ಮಿಸಿದ್ದ ಶಿವನ ದೇವಾಲಯವೂ ಇದೆ. ಇದೇ ತಾಂತ್ರಿಕ ಕಾಳಿಘಾಟಿನ ದೇವಸ್ಥಾನವನ್ನೂ ನಿರ್ಮಿಸಿದವನು. ಚಿತ್ಪುರದಲ್ಲೇ ಇರುವ ಚಿತ್ತೇಶ್ವರಿ ಶರ್ಬಮಂಗಲಾ ದೇವಸ್ಥಾನವೂ ಅತ್ಯಂತ ಹಳೆಯದೇ. ೧೪೯೫ರಲ್ಲಿ ಬಿಪ್ರದಾಸ ಪಿಲಪಾಯಿಯೆಂಬ ಕವಿ ರಚಿಸಿದ ಮಾನಸ ವಿಜಯದಲ್ಲೇ ಈ ದೇವಿಯ ಉಲ್ಲೇಖ ಕಾಣಸಿಗುತ್ತದೆ. ಬಂಗಾಳದ ರಾಬಿನ್ ಹುಡ್ ಎಂದೇ ಕರೆಯಲ್ಪಡುವ ರಘು ಡಕಾಯತ್ ಕೆರೆಯೊಂದರಲ್ಲಿ ಸಿಕ್ಕ ವಿಗ್ರಹವನ್ನು ಇಲ್ಲಿ ಪ್ರತಿಷ್ಟಾಪಿಸಿದ್ದನಂತೆ.
ಮೊಘಲರ ಕಾಲದಲ್ಲಿ ಲಕ್ಷ್ಮೀಕಾಂತ ರಾಯ್ ಚೌಧರಿ ಎಂಬ ಜಮೀನ್ದಾರ ಕಾಲಿಕಾತಾ ಸೇರಿ ಸುತ್ತಲಿನ ಎಂಟು ಗ್ರಾಮಗಳ ಒಡೆತನವನ್ನ ಅಕ್ಬರನಿಂದ ಪಡೆದ. ಇವನ ಮೊಮ್ಮಗ ಸಬರ್ನ ರಾಯ್ ಚೌಧರಿಯ ಕಾಲದಲ್ಲಿ ಬಂಗಾಲಕ್ಕೆ ಬಂದಿದ್ದ ಜಾಬ್ ಚರ್ನೋಕ್ ಎಂಬ ಈಸ್ಟ್ ಇಂಡಿಯಾ ಕಂಪನಿಯ ಏಜೆಂಟ್ ಅವುಗಳಲ್ಲಿ ಮೂರು ಗ್ರಾಮಗಳಾದ ಸುತಾನುತಿ, ಗೋಬಿಂದಪುರ್ ಮತ್ತು ಕಾಲಿಕಾತಾವನ್ನು ನವೆಂಬರ್ ೧೦, ೧೬೯೮ರಂದು ರೂಪಾಯಿ ೧೩೦೦ಕ್ಕೆ ಖರೀದಿಸಿದ. ಅಲ್ಲಿಂದ ಬದಲಾಯ್ತು ಕಲ್ಕತ್ತದ ದೆಸೆ. ಇದಾಗಿ ಕೆಲವರ್ಷಗಳ ನಂತರ ೧೭೭೨ರಲ್ಲಿ ಬ್ರಿಟಿಷ್ ಇಂಡಿಯಾದ ರಾಜಧಾನಿಯಾಗಿ ಘೋಷಿಸಲ್ಪಟ್ಟಿತು. ಕಾಲಿಕಾತಾ ಬ್ರಿಟಿಷರ ಬಾಯಲ್ಲಿ ಕ್ಯಾಲ್ಕತಾ ಆಯಿತು. ಆದರೂ ’ಕಾಲಿ ಕಥಾ’ ಮುಗಿಯಲಿಲ್ಲ. ೧೭೦೩ರಲ್ಲಿ ಶಂಕರ ಘೋಷ್ ಎಂಬಾತ ಶಿದ್ಧೇಶ್ವರೀ ಕಾಲಿ ಮಂದಿರವನ್ನು ಕಟ್ಟಿಸಿದ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಈ ಕಾಲಿ ಮಂದಿಕ್ಕೆ ಯಾವಾಗಲೂ
ಶಿದ್ಧೇಶ್ವರೀ ಕಾಲಿ ಮಂದಿರ
ಭೇಟಿ ಕೊಡುತ್ತಿದ್ದರಂತೆ. ಸಬರ್ನ ರಾಯ್ ಚೌಧರಿಯ ಮನೆತನದ ನಂದಲಾಲ್ ರಾಯ್ ಚೌಧರಿ ೧೭೬೦ರಲ್ಲಿ ಟೋಲಿಗಂಜ್ ಎಂಬಲ್ಲಿ ಮೃತಪಟ್ಟ ತನ್ನ ಮಗಳ ಸ್ಮರಣಾರ್ಥ ಹನ್ನೆರಡು ಶಿವಾಲಯಗಳೊಡನೆ ನವರತ್ನ ಕಾಳಿ ಮಂದಿರವನ್ನು ಕಟ್ಟಿಸಿದ್ದ. ಇಲ್ಲಿಂದ ಕೂಗಳತೆಯ ದೂರದಲ್ಲೇ ಗಂಗೆಯ ದಡದಲ್ಲಿ ಇನ್ನೊಂದು ಶಿದ್ದೇಶ್ವರೀ ಕಾಳಿಮಂದಿರವಿದೆ. ಬಾರಾನಗರದ ರತನ್ ಬಾಬು ಘಾಟಿನಲ್ಲಿ ಮುನ್ನೂರು ವರ್ಷಕ್ಕೂ ಹಳೆಯದಾದ ಮತ್ತೊಂದು ಶಿದ್ದೇಶ್ವರೀ ದೇವಸ್ಥಾನವೂ ಇದೆ. ಅದರೆದುರಿನ ಡಚ್ಚರ ಸ್ಮಶಾನಭೂಮಿಯಾದ ಕುಧಿಘಾಟಿನಲ್ಲಿ ಜಯಚಂದ್ರಮಿತ್ರ ನಿರ್ಮಿಸಿದ ದೊಡ್ಡದೊಂದು ನವರತ್ನ ಕಾಳಿಮಂದಿರ ಜೊತೆಗೆ ನಾಟ್ಯಮಂಟಪ ಹಾಗೂ ಹನ್ನೆರಡು ಶಿವಮಂದಿರವಿದೆ. ಇಲ್ಲಿ ಕಾಳಿ ಕೃಪಾಮಯೀ ಎಂದು ಕರೆಯಲ್ಪಡುತ್ತಾಳೆ. ಶಿವ ಮತ್ತು ಕಾಳಿಯರನ್ನು ಒಂದೇ ಕಲ್ಲಿನಲ್ಲಿ ಆಕರ್ಷಕವಾಗಿ ಕೆತ್ತಲಾಗಿದೆ. ಇದೇ ಮಂದಿರವನ್ನು ನೀಲನಕ್ಷೆಯನ್ನಾಗಿಟ್ಟುಕೊಂಡು ರಾಣಿ ರೊಶೋಮೋನಿ ದಕ್ಷಿಣೇಶ್ವರದ ಭವತಾರಿಣಿ ಕಾಲಿ ದೇವಾಲಯವನ್ನು ಕಟ್ಟಿಸಿದಳು. ಕಲ್ಕತ್ತಾದ ಅತಿ ಭವ್ಯ ಮತ್ತು ಅತಿ ದೊಡ್ಡ ಆಕರ್ಷಣೆಗಳಲ್ಲೊಂದು ದಕ್ಷಿಣೇಶ್ವರ ಕಾಳಿ(ಬಂಗಾಳಿಗಳ ಬಾಯಲ್ಲಿ ಅದು ದೊಕ್ಖಿನೇಶೋರ್, ದಕ್ಷಿಣೇಶ್ವರಕ್ಕೊಂದು ಟಿಕೇಟ್ ಕೊಡಿ ಎಂದಾಗ ಕಂಡಕ್ಟರ್ ಅದು ಯಾವ ಜಾಗವೆಂದು ಅರ್ಥವಾಗದೇ ನನ್ನ ಮುಖಮುಖ ನೋಡಿದ್ದ). ರತನ್ ಬಾಬು ಘಾಟಿನ ಶಿದ್ದೇಶ್ವರಿ, ಕುದಿ ಘಾಟಿನ ಕ್ರಿಪಾಮೋಯ್ ಮತ್ತು ದಕ್ಷಿಣೇಶ್ವರದ ಭವತಾರಿಣಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಒಬ್ಬನೇ ಎನ್ನುವಷ್ಟು ಸಾಮ್ಯತೆಯನ್ನು ಇವು ಹೊಂದಿವೆ. ಶಿವಪುರಾಣ, ದೇವಿ ಭಾಗವತ, ಕಾಳಿಕಾ ಪುರಾಣಗಳು ನಾಲ್ಕು ಪ್ರಮುಖ ಶಕ್ತಿ ಪೀಠಗಳನ್ನು ಉಲ್ಲೇಖಿಸುತ್ತವೆ. ಕಾಳಿಕಾ ಪುರಾಣದ ಪ್ರಕಾರ ದಕ್ಷಯಜ್ಞದಲ್ಲಿ ಬಿದ್ದು ದಗ್ಧಳಾದ ಸತಿಯ ಶರೀರವನ್ನು ಹೊತ್ತು ಶಿವ ತಾಂಡವವಾಡತೊಡಗುತ್ತಾನೆ. ರುದ್ರತಾಂಡವದಿಂದ ಜಗತ್ತು ನಾಶವಾಗುವುದನ್ನು ತಪ್ಪಿಸಲು ವಿಷ್ಣು ಸುದರ್ಶನ ಚಕ್ರದಿಂದ ಸತಿಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸುತ್ತಾನೆ. ಸತಿಯ ದೇಹದ ಭಾಗಗಳು ಭೂಮಿಗೆ ಬಿದ್ದ ಸ್ಥಳಗಳೇ ಆದಿಶಕ್ತಿಪೀಠಗಳಾದವು. ಪೀಠನಿರ್ಣಯ ತಂತ್ರದಲ್ಲಿ ಸತಿಯ ದೇಹ ೫೨ ಭಾಗಗಳಾಗಿ ಬಿದ್ದವೆಂದೂ, ಅಲ್ಲೆಲ್ಲ ಶಕ್ತಿಪೀಠಗಳು ಉದಿಸಿದವೆಂದೂ ಇದೆ. ಶಿವಚರಿತ್ರ, ವಿಶುದ್ಧ ಸಿದ್ಧಾಂತ ಪಂಚಿಕಾಗಳಲ್ಲಿ ಇದರೊಟ್ಟಿಗೆ ಇನ್ನೂ ೨೬ ಉಪಪೀಠಗಳನ್ನೂ ಹೇಳಲಾಗಿದೆ.
ಅಷ್ಟಶಕ್ತಿ ಮತ್ತು ಕಾಲಿಕಾ ಪುರಾಣಗಳು ಹೇಳುವ ಆದಿಶಕ್ತಿಪೀಠಗಳ ವಿವರಣೆ ಬೃಹತ್ ಸಂಹಿತೆಯಲ್ಲಿಯೂ ಇದೆ
"ಬಿಮಲಾ ಪಾದ ಖಂಡಂಚ, ಸ್ತನ ಖಂಡಂಚ ತಾರಿಣಿ, ಕಾಮಾಖ್ಯಾ ಯೋನಿ ಖಂಡಂಚ, ಮುಖಖಂಡಂಚ ಕಾಲಿಕಾ"
ಸತಿ ದೇವಿಯ ಪಾದವು ಬಿದ್ದ ಓರಿಸ್ಸಾದ ಪುರಿಯಲ್ಲಿ(ಜಗನ್ನಾಥ ದೇಗುಲದ ಒಳಗೆ) ಬಿಮಲ ಎಂಬ ಹೆಸರಿನಿಂದಲೂ, ಸ್ತನಭಾಗವು ಬಿದ್ದ ಓರಿಸ್ಸಾದ ಬೆರ್ಹಂಪುರ್(ಬ್ರಹ್ಮಪುರ)ನ ಪುರಾಣಗಿರಿಯಲ್ಲಿ ತಾರಾ ತಾರಿಣಿ ಎಂಬ ಹೆಸರಲ್ಲೂ, ಯೋನಿಖಂಡವು ಆಸ್ಸಾಮಿನ ಗುವಾಹಟಿಯಲ್ಲಿ ಕಾಮಾಖ್ಯ ಎಂಬ ಹೆಸರಿನಲ್ಲೂ, ಮುಖವು ಬಿದ್ದ ಜಾಗವಾದ ಕಲ್ಕತ್ತಾದಲ್ಲಿ ದಕ್ಷಿಣಕಾಳಿಯೆಂಬ ಹೆಸರಿನಿಂದಲೂ ದೇವಿ ಪೂಜಿಸಲ್ಪಡುತ್ತಾಳೆ. ಈ ದಕ್ಷಿಣಕಾಳಿಯೇ ಭವತಾರಿಣಿಯೆಂಬ ಹೆಸರಿನಲ್ಲಿ ರಾಮಕೃಷ್ಣ ಪರಮಹಂಸರ ಆರಾಧ್ಯ ದೈವವಾದವಳು. 
ದಕ್ಷಿಣೇಶ್ವರ
ಭವತಾರಿಣಿ
ಗಾರ್‍ಡನ್ ರೀಚ್ ರೈಲ್ವೆಯ ಹತ್ತಿರದಲ್ಲೆಲ್ಲೊ ಚಿಕ್ಕದೊಂದು ಕಾಳಿಯ ಗುಡಿಯಿದೆಯಂತೆ. ಅದರಲ್ಲಿರುವ ಕಾಳಿಕೆ ಕೋಲ್ಕತ್ತದ ಕಾಳಿಯರಲ್ಲೇ ಅತ್ಯಂತ ಸುಂದರವಾದವಳೆಂದೂ, ಆಕೆ ಕಗ್ಗತ್ತಲ ರಾತ್ರಿಗಿಂತ ಕರ್ರಗಿನ ಬಣ್ಣದ, ಸೂರ್ಯಪ್ರಕಾಶಕ್ಕಿಂತ ಬೆಳ್ಳಗಿನ ತೇಜಸ್ಸಿನವಳೆಂದೂ, ೮೦೦ ವರ್ಷದಿಂದ ಪೂಜಿಸಲ್ಪಡುತ್ತಿದ್ದರೂ ಆಕೆಯ ಮರದ ಮೂರ್ತಿಯ ಕಳೆ ಸ್ವಲ್ಪವೂ ಮಾಸಿಲ್ಲವೆಂದೂ ಕೋಲ್ಕತ್ತದ ಪ್ರಸಿದ್ಧ ಹೃದಯ ತಜ್ಞರಾಗಿ ನಿವೃತ್ತರಾಗಿರುವ ಆತ್ಮೀಯರೂ ಆದ ಡಾ. ಬ್ಯಾನರ್ಜಿ ಹೇಳುತ್ತಿದ್ದರು. ಆದರಾಕೆ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಹಾಗೆ ಕೋಲ್ಕತ್ತದ ಹಳೆಯ ಕಾಳಿ ಮಂದಿರಗಳನ್ನು ಹುಡುಕುತ್ತಿದ್ದಾಗ ಸಿಕ್ಕು ವಿಚಿತ್ರ ಕುತೂಹಲ ಕೆರಳಿಸಿದ್ದು ಫಿರಂಗಿ ಕಾಳಿಬಾರಿ. ಇದನ್ನು ಹುಡುಕಲೆಂದೇ ಬೋವ್‌ಬಜಾರಿನ ಮಾರ್ಕೆಟ್ಟಿನ ಇಕ್ಕಟ್ಟಾದ ಗಲ್ಲಿಗಳಲ್ಲೆಲ್ಲ ಸುತ್ತಿದ್ದೇನೆ. ಕೊನೆಗೂ ಕಣ್ಣಿಗೆ ಬಿತ್ತು. ಇದಂಥ ಭಾರೀ ದೊಡ್ಡ ದೇವಸ್ಥಾನವೇನೂ ಅಲ್ಲ. ಆದರೆ ಇದರ ಹಿಂದೆ ತುಂಬ ಇಂಟರೆಸ್ಟಿಂಗ್ ಎನಿಸುವ ಕಥೆಯೊಂದಿದೆ.
ಐತಿಹ್ಯದ ಪ್ರಕಾರ ಶ್ರೀಮಂತ ದೋಮ್ ಎಂಬ ವೈದ್ಯ ಈ ಕಾಳಿಯನ್ನು ಪೂಜಿಸುತ್ತಿದ್ದನಂತೆ. ಕಲ್ಕತ್ತಕ್ಕೆ ಬರುವ ಹೊಸ ಯುರೋಪಿಯನ್ನರೆಲ್ಲ ಇವನಲ್ಲಿ ಚಿಕಿತ್ಸೆಗೆ ಬರುತ್ತಿದ್ದರು. ಹೀಗೆ ಬಂದವರಲ್ಲಿ ಕೆಲವರು ಈ ಕಾಳಿಯನ್ನು ಪ್ರಾರ್ಥಿಸಲಾರಂಭಿಸಿದರಂತೆ. ಹೀಗಾಗಿ ಇದು ಫಿರಂಗಿ(ವಿದೇಶಿ) ಕಾಳಿಬಾರಿ ಎಂದು ಹೆಸರಾಯ್ತು. ದೇವಸ್ಥಾದ ಹೊರಗಿರುವ ಚಿಕ್ಕ ತಾಮ್ರಪತ್ರದ ಪ್ರಕಾರ ಈ ಮಂದಿರ ಸ್ಥಾಪಿಸಲ್ಪಟ್ಟಿದ್ದು ಬಂಗಾಬ್ದ ೯೦೪ರಲ್ಲಿ(ಸುಮಾರು ೧೪೯೮). ಆಗ ಯಾವ ಯುರೋಪಿಯನ್ನರೂ ಭಾರತದಲ್ಲಿರಲಿಲ್ಲ. ಫೋಟೋ ತೆಗೆಯೋಣವೆಂದು ಅಲ್ಲಿನ ಅರ್ಚಕರನ್ನು ಮಾತನಾಡಿಸಿದೆ. ಒಂದೆರಡು ಫೋಟೊ ತೆಗೆಯಲು ಅನುಮತಿ ನೀಡಿದರು. ಅವರು ಹೇಳುವಂತೆ ಅದು ಮೂಲತಃ ಶಿವನ ಮಂದಿರವಾಗಿತ್ತಂತೆ. ಅಲ್ಲಿ ಕಾಳಿಮೂರ್ತಿಯನ್ನು ಸ್ಥಾಪಿಸಿದವನು ಆಂಟನಿ ಕಬಿಯಾಲ್. ಹಾಗಾಗಿ ಇಲ್ಲಿ ಮಧ್ಯಭಾಗದಲ್ಲಿ ಲಿಂಗವೊಂದಿದ್ದು ಕಾಳಿ ಮೂಲೆಯೊಂದರಲ್ಲಿ ಪೂಜಿಸಲ್ಪಡುತ್ತಾಳೆ. ಈ ಆಂಟನಿ ಕಬಿಯಾಲ್ ಮತ್ಯಾರು ಅಲ್ಲ, ಆಂಟನಿ ಫಿರಂಗಿ ಎಂದೇ ಬಂಗಾಳದಲ್ಲೆಲ್ಲ
ಫಿರಂಗಿ ಕಾಳಿಬಾರಿ
ಮನೆಮಾತಾಗಿರುವ ಹೆನ್ಸ್‌ಮನ್ ಆಂಟನಿ. ವಿದೇಶಿಗನಾಗಿದ್ದರೂ ಬಂಗಾಲಿ ಭಕ್ತಿಸಾಹಿತ್ಯವನ್ನು, ಕವಿಗಾನ ಪರಂಪರೆಯನ್ನು ಹೊಸ ಎತ್ತರಕ್ಕೇರಿಸಿದ ಮಹಾಕವಿಯೀತ. ಆದರೆ ಈತನ ಪೂರ್ತಿ ಜೀವನದ ಬಗ್ಗೆ ನಮಗೆ ಸಿಗುವ ಮಾಹಿತಿ ಅತ್ಯಲ್ಪ ಮಾತ್ರ. ಒಂದಿಷ್ಟು ಪತ್ರಗಳು, ತಾರೀಖುಗಳು, ಕವಿತೆಯ ಚೂರುಗಳು, ೧೮೩೬ರಲ್ಲಿನ ಮರಣ, ಉತ್ತಮ ಕುಮಾರನ ಬ್ಲ್ಯಾಕ್ ಎಂಡ್ ವೈಟ್ ಚಿತ್ರವೊಂದು, ದುರ್ಗಾಪೂಜೆಯ ಭಜನೆಗಳು, ಮನ್ನಾಡೇಯ ಕೆಲ ಹಾಡುಗಳಷ್ಟೇ ಆಂಟನಿಯ ಬಗೆಗಿನ ದಾಖಲೆಗಳು.
ಈತ ಹುಟ್ಟಿದ್ದು ೧೭೮೬ರಂದು ಪೋರ್ಚುಗಲ್‌ನಲ್ಲಿ. ಉಪ್ಪಿನ ವ್ಯಾಪಾರಿ ಹೆನ್ಸ್‌ಮೆನ್‌ನ ಮಗನಾಗಿ. ಅದೇ ವರ್ಷ ಲಾರ್ಡ್ ಕಾರ್ನವಾಲೀಸನ ಜೊತೆ ಇವನ ಕುಟುಂಬ ಬಂಗಾಲದ ಚಂದ್ರನಗರಕ್ಕೆ ಬಂದಿತು. ಚಿಕ್ಕಂದಿನಿಂದಲೇ ಭಾರತೀಯ ಸಂಸ್ಕೃತಿ ಸಂಪ್ರದಾಯಗಳ ಅಪಾರ ಒಲವಿದ್ದ ಆಂಟನಿ ಬಂಗಾಳಿ ಮತ್ತು ಸಂಸ್ಕೃತವನ್ನು ಕಲಿತ. ಎಲ್ಲ ಬಂಗಾಳಿಗಳಂತೆ ಕಾಳಿ ಅವನ ನೆಚ್ಚಿನ ದೈವವಾದಳು. ಜೊತೆಗೆ ಸಂಗೀತದ ಕಡೆಗೂ ಆತನಿಗೆ ಅಗಾಧ ಅಕರ್ಷಣೆಯಿತ್ತು. ಬಂಗಾಳದ ಜಾನಪದ ಕಲೆಗಳಾದ ಝುಮುರ್, ಪಾಂಚಾಲಿ, ಮುರ್ಶಿದಿ, ಭಾವೈಯಾಗಳನ್ನು ನೋಡುತ್ತ, ಕೇಳುತ್ತ ಬಂಗಾಳಿಗಳ ಮಧ್ಯ ಬೆಳೆದ. ಆ ಕಾಲದಲ್ಲಿ ಬಂಗಾಲದಲ್ಲಿ ಕವಿಗಾನವೆಂಬ ಕಲಾಪ್ರಕಾರ ತುಂಬ ಪ್ರಸಿದ್ಧವಾಗಿತ್ತು. ಇದು ಬಂಗಾಲದ ಬೇರೆ ಬೇರೆ ಭಾಗಗಳಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಜನಿತವಾಗಿದ್ದ ತಾರ್ಜಾ, ಖೆಉರ್, ಆಖ್ರಾಇ, ದರ್ನಾ, ಟಪ್ಪಾ, ಕೃಷ್ಣಜಾತ್ರಾದಂಥ ವಿವಿಧ ಪ್ರಕಾರಗಳ ಸಂಮಿಶ್ರಣವಾಗಿ ಬೆಳೆದ ಕಲೆ. ೧೭ನೇ ಶತಮಾನದಲ್ಲೇ ಇದರ ಹುಟ್ಟನ್ನು ಗಮನಿಸಬಹುದಾದರೂ ೧೭೬೦ರಿಂದ ೧೮೩೦ರ ಕಾಲವನ್ನು ಬಂಗಾಲಿ ಇತಿಹಾಸದಲ್ಲಿ ಕವಿಗಾನದ ಸ್ವರ್ಣಯುಗವೆಂದೇ ಪರಿಗಣಿಸಲಾಗುತ್ತದೆ. ವೈಷ್ಣವ ಪಂಥದ ಜನಪ್ರಿಯತೆಯನ್ನೂ ಅದು ಆ ಕಾಲದಲ್ಲಿ ಮುರಿದಿತ್ತೆಂದರೆ ಅದರ ಪ್ರಸಿದ್ದಿ ಎಷ್ಟಿರಬಹುದೆಂದು ಊಹಿಸಿ. ಕಲ್ಕತ್ತಾದ ಭಾಗದಲ್ಲಂತೂ ಕವಿಗಾನದ ಸಾಹಿತ್ಯವಲ್ಲದೇ ಮತ್ತೊಂದು ಸಾಹಿತ್ಯ ಆ ಕಾಲದಲ್ಲಿ ರಚನೆಯೇ ಆಗುತ್ತಿರಲಿಲ್ಲವಂತೆ. ಕವಿಗಾನವೆಂದರೆ ಎರಡು ಗುಂಪುಗಳ ಮಧ್ಯೆ ನಡೆಯುವ ಅವಧಾನದ ಆಶುಕವಿತ್ವದ ಸ್ಪರ್ಧೆಯಿದ್ದಂತೆ. ಪ್ರತಿ ಗುಂಪಿನ ಮುಖಂಡನನ್ನು ಕಬಿಯಾಲ್ ಎನ್ನುತ್ತಿದ್ದರು. ಬಂಧನ್ ಅಥವಾ ಭವಾನಿ ಭಶೊಕ್, ಸಖಿ ಸಂಬಂಧ್, ಬಿರಹೊ, ಲಹರ್ ಮತ್ತು ಖೆಉರ್ ಎಂಬ ಐದು ಸುತ್ತುಗಳಲ್ಲಿ ಎದುರಾಳಿಯ ಸವಾಲುಗಳಿಗೆ ಆಯಾ ದೇವರುಗಳ ಬಗೆಗಿನ, ಅಥವಾ ವಿಷಯದ ಮೇಲಿನ ಆಶುಕವಿತೆಗಳನ್ನು ರಚಿಸಿ, ಹಾಡಿ, ಅಭಿನಯಿಸಲಾಗುತ್ತಿತ್ತು. ೧೮-೧೯ನೇ ಶತಮಾನದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚು ಕಬಿಯಾಲ್‌ಗಳಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ.  ಹೋರಾ ಠಾಕೂರ್, ನಿತಾಯ್ ಬೈರಾಗಿ, ಕೇಷ್ಟಾ ಮುಚಿ, ರಾಮ್ ಬಸು, ಠಾಕುರ್ ಶಿಂಗಾ ಇವರೆಲ್ಲ ಆ ಕಾಲದ ಕವಿಗಾನ ಪರಂಪರೆಯ ದಿಗ್ಗಜರೆಂದೇ ಪರಿಗಣಿಸಲ್ಪಡುತ್ತಾರೆ. ಸುಪ್ರಸಿದ್ಧ ಕವಿಗಾನದ ಕವಿ ಹೋರಾ ಠಾಕೂರನ ಇಬ್ಬರು ಶಿಷ್ಯರಾದ ನೀಲು ಠಾಕುರ್ ಮತ್ತು ಭೋಲಾ ಮೋಯ್ರಾರ ನಡುವೆ ಠಾಕುರ್ತಲಾದ ರಾಜಾ ಗೋಪಿ ಮೋಹನಚಂದನ ಆಸ್ಥಾನದಲ್ಲಿ ನಡೆದ ಕವಿಗಾನವೊಂದನ್ನು ನೋಡಿದ ಆಂಟನಿ ಅದರಿಂದ ಪ್ರಭಾವಿತಗೊಳ್ಳುತ್ತಾನೆ. ಶಿರಾಜ್ ಷಾನೆಂಬ ಸಂತನನ್ನು ಹಿಡಿದು ಕವಿಗಾನದ ಪಟ್ಟುಗಳನ್ನೆಲ್ಲ ಕಲಿಯುತ್ತಾನೆ.
ಅವನ ಪ್ರಥಮ ಕವಿಗಾನ ನಡೆದದ್ದು ಕಬಿಯಾಲಿ ಜೋಗೇಶ್ಶೋರಿಯೆದುರು. ಅವಳನ್ನು ಕವಿಗಾನದಲ್ಲಿ ಸೋಲಿಸಿದ ನಂತರ ಆಂಟನಿ ಹಿಂದಿರುಗಿ ನೋಡಿದ್ದೇ ಇಲ್ಲ. ರಾಮ್ ಬಸು, ಕೇಷ್ಟಾ ಮುಚಿ, ಜೋಗೇಶರ್ ಧೋಪಾ, ಠಾಕುರ್ ಶಿಂಗಾರಂಥ ಪ್ರಗಲ್ಭರೆಲ್ಲ ಆಂಟನಿಯೆದುರು ಸೋಲೊಪ್ಪಿಕೊಂಡರು.(ಕಬಿಯಾಲರ ಹೆಸರಿನ ಉತ್ತರಪದದಲ್ಲಿರುವ ವಿಶೇಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ. ಕೇಷ್ಟಾ ಮುಚಿ(ಮೋಚಿ), ಜೋಗೇಶರ್ ಧೋಪಾ(ಧೋಬಿ), ನಿತಾಯ್ ಬೈರಾಗಿ(ಸಂನ್ಯಾಸಿ), ಭೋಲಾ ಮೊಯ್ರಾ(ಸಿಹಿತಿಂಡಿ ತಯಾರಿಸುವವ), ಆಂಟನಿ ಫಿರಂಗಿ(ವಿದೇಶಿ) ಇವೆಲ್ಲ ವಚನ ಸಾಹಿತ್ಯದಲ್ಲಿ ಬರುವ ಮಡಿವಾಳ ಮಾಚಯ್ಯ, ಆಯ್ದಕ್ಕಿ ಲಕ್ಕಯ್ಯ, ಚಮಗಾರ ಹರಳಯ್ಯರಂತೆ ಕಸುಬಿನ ಕಾರಣದಿಂದಲೇ ಹೆಸರಾದವರು). ಆಂಟನಿ ಕವಿಗಾನದಲ್ಲಿ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದಂತೆ ಅವನ ಶತ್ರುಗಳ ಸಂಖ್ಯೆಯೂ ಬೆಳೆಯಿತು. ಯಾವನೋ ಪರದೇಶಿ ನಮ್ಮ ದೇವರ ಹಾಡುಕಟ್ಟಿ ಹಾಡುವುದೇನು ಎಂದು ಮೂಗು ಮುರಿದವರೇ ಹೆಚ್ಚು. ಇದರ ಮಧ್ಯೆ ಸತ್ತ ಗಂಡನ ಜೊತೆ ಹೆಂಡತಿಯನ್ನು ಚಿತೆಗೇರಿಸಲು ಪ್ರಯತ್ನಿಸುತ್ತಿದ್ದ ಜನರನ್ನು ತಡೆದು ಸೌದಾಮಿನಿ ಎಂಬ ಬ್ರಾಹ್ಮಣ ಹೆಂಗಸನ್ನು ಮದುವೆಯಾಗಿ ಊರವರಲ್ಲಿಯೂ ದ್ವೇಷ ಕಟ್ಟಿಕೊಂಡ. ಕ್ರಿಸ್ತೆ ಔರ್ ಕ್ರಿಷ್ಣೆ ಕಿಜೊ ಪ್ರೊಥಕ್ ನಹಿ ರೆ ಭಾಯ್(ಕ್ರಿಸ್ತ ಹಾಗೂ ಕೃಷ್ಣರಲ್ಲಿ ಭೇದವಿಲ್ಲವಣ್ಣ) ಎಂದು ಹಾಡುಕಟ್ಟಿ ಸರ್ವಧರ್ಮ ಸಮಭಾವವನ್ನು ಬೋಧಿಸಿ ವಿದ್ವಾಂಸರ ವಾಹ್ ವಾಹಿಯನ್ನು ಗಳಿಸಿದರೂ ಸಮಾಜದ ಒಂದು ವರ್ಗವಿನ್ನೂ ಅವನನ್ನೊಪ್ಪಿಕೊಳ್ಳಲು ತಯಾರಿರಲಿಲ್ಲ.  ಯಾವಾಗ ಆಂಟನಿ ಕಾಳಿಯ ದೇವಸ್ಥಾನ ಸ್ಥಾಪಿಸಿದನೋ ಊರವರ ಕಣ್ಣು ಕೆಂಪಗಾಯಿತು. ವಿದೇಶಿಗನೊಬ್ಬ ನಮ್ಮ ರೀತಿ-ರಿವಾಜು, ಪೂಜೆ ಪುನಸ್ಕಾರಗಳಲ್ಲೂ ಮೂಗು ತೂರಿಸುತ್ತಿದ್ದಾನೆಂದು ಗ್ರಾಮದಲ್ಲಿದ್ದ ಕೆಲವರು ಆಂಟನಿಯ ವಿರುದ್ಧ ತಿರುಗಿ ಬಿದ್ದರು. ಆಂಟನಿ ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ನವರಾತ್ರಿಯಂದು ಅದೇ ದೇವಾಲಯದಲ್ಲಿ ವಿಜೃಂಭಣೆಯಿಂದ ದುರ್ಗಾಪೂಜೆಯನ್ನಾರಂಭಿಸಿದ. ಗೋಪಿ ಮೋಹನ ಚಂದನ ಆಸ್ಥಾನದಲ್ಲಿ ನಡೆದ ನವರಾತ್ರಿ ಕವಿಗಾನದಲ್ಲಿ ಆಗಿನ ಕಾಲದ ನಂ.೧ ಕಬಿಯಾಲ್ ಭೋಲಾ ಮೊಯ್ರಾನನ್ನು ಸೋಲಿಸಿದ ಆಂಟನಿಗೆ ಅದೇ ತನ್ನ ಕೊನೆಯ ಕವಿಗಾನವಾಗಬಹುದೆಂಬ ಕಲ್ಪನೆ ಇರಲಿಲ್ಲ. ಮರುದಿನ ಮನೆಗೆ ಹಿಂದಿರುಗಿ ನೋಡುತ್ತಾನೆ. ಇವನ ಮೇಲಿನ ಸಿಟ್ಟಿಗೆ ಊರವರು ಹಿಂದಿನ ರಾತ್ರಿಯೇ ಮನೆಗೆ ಬೆಂಕಿಯಿಟ್ಟಿದ್ದರು. ಮನೆಯೊಟ್ಟಿಗೆ ಪ್ರೀತಿಯ ಪತ್ನಿ ಸೌದಾಮಿನಿಯೂ ಸುಟ್ಟು ಕರಕಲಾಗಿದ್ದಳು. ಯಾರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದನೋ, ಯಾರಿಗೋಸ್ಕರ ಸಮಾಜವನ್ನೇ ಎದುರುಹಾಕಿಕೊಂಡು ಬಾಳಿದ್ದನೋ ಅವಳೇ ಇಲ್ಲದ ಮೇಲೆ? ಹೆಂಡತಿಯನ್ನು ಮಣ್ಣುಮಾಡಿ ಆ ಸಮಾಧಿಯ ಪಕ್ಕದಲ್ಲೇ ಆಂಟನಿ ಪ್ರಾಣಬಿಟ್ಟ. ದೇವಿ ದುರ್ಗೆಯ ಕುರಿತಾದ ರಚನೆಯಾದ, ದುರ್ಗಾಪೂಜೆಯ ಅವಿಭಾಜ್ಯ ಅಂಗವಾದ ಅಗೊಮನಿ ಗಾನಪ್ರಕಾರದಲ್ಲಿ ಆಂಟನಿ ಫಿರಂಗಿಗೆ ಬಂಗಾಳದ ಸರ್ವೋತ್ಕೃಷ್ಟ ಕವಿಗಳಲ್ಲೊಬ್ಬನೆಂಬ ಹೆಗ್ಗಳಿಕೆಯಿದೆ. ಇವನ ನೂರಾರು ರಚನೆಗಳು, ಭಕ್ತಿಗೀತೆಗಳು ಬಂಗಾಲದ ಸಾಹಿತ್ಯವನ್ನು, ಭಕ್ತಿಪಂಥವನ್ನು ಸಮೃದ್ಧಗೊಳಿಸಿವೆ. ವಿದೇಶದಲ್ಲೆಲ್ಲೋ ಹುಟ್ಟಿ ಭಾರತಕ್ಕೆ ಬಂದು ಭಾರತೀಯನೇ ಆಗಿ ಇಲ್ಲಿನ
ಫಿರಂಗಿ ಕಾಳಿ
ಸಂಸ್ಕೃತಿ, ಸಂಪ್ರದಾಯ, ಭಾಷೆಗಳನ್ನು ಕಲಿತು, ಸಾಹಿತ್ಯ ರಚನೆಮಾಡಿ, ಮತಸೌಹಾರ್ದತೆಯನ್ನು ಸಾರಿ, ಭಕ್ತಿಪಂಥವನ್ನು ಉತ್ತುಂಗಕ್ಕೇರಿಸಿ, ಕವಿಗಾನದಂಥ ಪರಂಪರೆಯಲ್ಲಿ ಹೆಗಲೆಣೆಯಿಲ್ಲದವನೆಂದು ಹೆಸರಾದವನವನು. ತನ್ನ ಇಷ್ಟದೈವದ ಮೇಲಿನ ಅನನ್ಯ ಭಕ್ತಿಯಿಂದ ಆತ ನಿರ್ಮಿಸಿದ್ದ ಕಾಳಿಮಂದಿರವಿನ್ನೂ ಬಂಗಾಳದ ಬೋವ್‌ಬಜಾರಿನ ಗಲ್ಲಿಯೊಂದರಲ್ಲಿದೆ. ಹಿಂದೂದೇವಿಯ ಮೇಲೆ ಫಿರಂಗಿಯೊಬ್ಬನ ಭಕ್ತಿ ಚಿರಸ್ಥಾಯಿಯಾಗಿ ಉಳಿದುದು ಬಂಗಾಳ ಮಾತ್ರವಲ್ಲ ಭಾರತದ ಮಣ್ಣಿನ ಹಿರಿಮೆಯಿಂದ.
ಜಾತಿಮತ ಪಂಥಗಳನ್ನು ಮೀರಿ ಕಾಳಿ ಕೋಲ್ಕತ್ತದ ಕಣಕಣಗಳಲ್ಲಿ ಕಲೆತು ಹೋಗಿದ್ದಾಳೆ. ಆಕೆಯಿಲ್ಲದ ಜಾಗವಿಲ್ಲ. ಚೈನಾಟೌನ್ ಎಂಬ ಚೀನಿಯರೇ ಇರುವ ಪ್ರದೇಶದಲ್ಲೂ(ಮೊದಲು ಇಲ್ಲಿ ೨೦೦೦೦ ಚೈನಿಯರಿದ್ದರು, ಈಗ ಆ ಸಂಖ್ಯೆ ಸುಮಾರು ಎರಡು ಸಾವಿರಕ್ಕಿಳಿದಿದೆ) ಒಂದು ಕಾಳಿಮಂದಿರವಿದೆ. ಅದಕ್ಕವರು ನ್ಯೂಡಲ್ಸ್, ಪಾಸ್ತಾಗಳನ್ನೇ ನೈವೇದ್ಯವಾಗಿಡುವುದು.  ನಗರದ ಪ್ರತಿರಸ್ತೆಯ ಪ್ರತಿಮೂಲೆಯಲ್ಲೂ ಒಂದೊಂದು ಕಾಳಿಯ ಗುಡಿಯಿದ್ದೇ ಇರುತ್ತದೆ. ಬಸ್ಸಿನಲ್ಲಿ ಹೋಗುವಾಗ ಕಿಲೋಮೀಟರಿಗೆ ನಾಲ್ಕು ಸರ್ತಿಯಾದರೂ ರಸ್ತೆಪಕ್ಕ ನೋಡಿ ಎರಡೂ ಕೈಯೆತ್ತಿ ಮುಗಿಯದ ಬಂಗಾಳಿಯನ್ನು ಕಾಣುವುದೇ ಅಪರೂಪ. ಪಕ್ಕಾ ನಾಸ್ತಿಕ ಕಮ್ಯುನಿಸ್ಟರೂ ದುರ್ಗಾಪೂಜೆಯನ್ನು ತಪ್ಪಿಸಿಕೊಳ್ಳುವುದಿಲ್ಲ. ಕೋಲ್ಕತ್ತಾವನ್ನು ನೋಡಿದ ಬಹಳಷ್ಟು ಜನಕ್ಕೆ ಆ ನಗರವೆಂದರೆ ಇಕ್ಕಟ್ಟಾದ ರಸ್ತೆಗಳು, ಕಸದ ರಾಶಿ, ಗಲಾಟೆ, ಒಂದಿಷ್ಟು ಬುದ್ಧಿಜೀವಿಗಳು, ಎಡಪಂಥೀಯ ಕ್ರಾಂತಿ, ಹುಚ್ಚುತನ, ರಕ್ತದಾಹದ ರಾಜಕೀಯ. ಬೆಂಗಳೂರು, ಮುಂಬೈ ನೋಡಿದವರಿಗೆ ಕೋಲ್ಕತ್ತ ಇಷ್ಟವಾಗುವ ಸ್ಥಳವೇನಲ್ಲ. ಥೇಟ್ ಕಾಳಿಯಂತೆ. ಅವಳು ಕಗ್ಗತ್ತಲ ರಾತ್ರಿಯಂತೆ ಕರಾಳ, ಆದರಷ್ಟೆ ಸುಂದರ. ಭೀಭತ್ಸ,ರೌದ್ರ, ಭಯಾನಕ, ಆದರಷ್ಟೇ ಮೋಹಕ. ಅವಳು ವಿನಾಶಕಾರಿ, ಆದರೆ ಪ್ರಳಯರುದ್ರನ ಎದೆಯ ಮೇಲೆಯೇ ಕಾಲಿಟ್ಟು ನಿಂತ ರಕ್ಷಕಿ. ಅವಳ ಘೋರರೂಪ ಸಂಹಾರಕ್ಕಾಗಿ, ಸಂಹಾರವೆಂಬುದು ಹೊಸ ಸೃಷ್ಟಿಗಾಗಿ, ಅವಳೆಂದರೆ ಶಕ್ತಿ, ಶ್ರದ್ಧೆ, ಸ್ಫೂರ್ತಿ. ಬೇರಾವ ನಗರವೂ ಅಷ್ಟು ಚೆನ್ನಾಗಿ ಕಾಳಿಯ ರೂಪಕವಾಗಲಾರದು, ಬೇರಾವ ದೈವವೂ ಕೋಲ್ಕತ್ತವನ್ನಾಳಲು ಸಾಧ್ಯವಾಗಲಾರದು. ಕೋಲ್ಕತ್ತವೆಂದರೆ ಕಾಳಿ, ಕಾಳಿಯೆಂದರೆ ಕೋಲ್ಕತ್ತಾ. ಅಂಥ ಅಬೇಧವದು. ಅದ್ವೈತವದು.

Monday, May 25, 2015

ನಮ್ಮ ದೇವಾಲಯಗಳು: ಮತ್ಸ್ಯ, ಕೂರ್ಮ ವರಾಹಶ್ಚ

       ವೈದಿಕ ವಾಙ್ಮಯಗಳನ್ನಾಗಲೀ, ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನಾಗಲೀ ಸೂಕ್ಷ್ಮವಾಗಿ ಗಮನಿಸಿ. ಅವುಗಳಲ್ಲಿ ಅಲ್ಲಿಲ್ಲಿ ಪ್ರಾಣಿಗಳ ಹೆಸರುಗಳು ಬಹಳ ಮುಕ್ತವಾಗಿ ಬಳಸಲ್ಪಟ್ಟಿವೆ. ಮನುಷ್ಯರನ್ನು ಪ್ರಾಣಿಗಳ ಹೆಸರು ಬಳಸಿ ಕರೆದಿದ್ದೂ ಇದೆ. ಸಾಹಿತ್ಯಕ್ಕೆ ಪ್ರಾಣಿಗಳ ಹೆಸರಿಡಲಾಗಿದೆ, ದೇವರನ್ನು ಪ್ರಾಣಿರೂಪದಲ್ಲಿ ಪೂಜಿಸಲಾಗಿದೆ. ಹಾಗೆಂದ ಮಾತ್ರಕ್ಕೆ ಅದು ವಿಡಂಬನೆಯೆಂದು ಕರೆಸಿಕೊಂಡವರಾಗಲೀ ಓದುಗರಾಗಲೀ ಭಾವಿಸಿಕೊಳ್ಳುತ್ತಿರಲಿಲ್ಲ. ವೈದಿಕ ಸಾಹಿತ್ಯದಲ್ಲಿ ಇಂಥ ಹತ್ತುಹಲ ಉದಾಹರಣೆಗಳಿವೆ. ಋಗ್ವೇದದಲ್ಲಿ 24 ಶಾಖೆಗಳೂ, ಯಜುರ್ವೇದಲ್ಲಿ 101 ಶಾಖೆಗಳೂ, ಸಾಮವೇದಲ್ಲಿ 1000 ಶಾಖೆಗಳೂ, ಅಥರ್ವವೇದಲ್ಲಿ 12 ಶಾಖೆಗಳೂ ಇದ್ದವಂತೆ. ಹೀಗೆ ಒಟ್ಟೂ ನಾಲ್ಕು ವೇದಗಳಿಗೆ 1137 ಸಂಹಿತೆಗಳು. ಅವೆಲ್ಲವೂ ಇಂದು ದೊರಕಿಲ್ಲ. ಕೆಲವಂತೂ ಹೆಸರುಗಳಷ್ಟೇ ಉಳಿದುಕೊಂಡಿವೆ. ಹಾಗೆ ಉಳಿದ ಹೆಚ್ಚಿನವುಗಳನ್ನು ನೋಡಿದರೆ ಸಾಮಾನ್ಯವಾಗಿ ಅವು ಪ್ರಾಣಿಗಳ ಅಥವಾ ಸಸ್ಯಗಳ ಹೆಸರುಗಳಿಂದ ಪ್ರಾದುರ್ಭಾವಿಸಿರುವಂಥವು. ಋಗ್ವೇದದ ಶಾಕಲ ಶಾಖೆಯ ಸಂಹಿತೆ ನಮಗೆ ದೊರಕಿರುವುದು. ಅದು ಹಾವಿನ ಸಂತತಿಯದು. ಪ್ರಾತಿಶಾಖ್ಯೆಯಲ್ಲಿ ಇದಲ್ಲದೇ ನಾಲ್ಕು ಇನ್ನಿತರ ಶಾಖೆಗಳನ್ನು ಹೆಸರಿಸಲಾಗಿದೆ. ಅಶ್ವಲಾಯಯನ, ಬಾಷ್ಕಲ, ಸಾಂಖ್ಯಾಯನ ಮತ್ತು ಮಾಂಡೋಕೇಯ. ಅಶ್ವಲಾಯನ ಕುದುರೆಗೆ ಸಂಬಂಧಿಸಿದ್ದು. ಕಡೆಯದು ಕಪ್ಪೆಯಿಂದ ಹೆಸರು ಪಡೆದಿದ್ದು. ಉಳಿದ ಎರಡೂ ಕೂಡ ಯಾವುದೋ ಪ್ರಾಣಿಗೋ ಅಥವಾ ಸಸ್ಯಕ್ಕೋ ಸಂಬಂಧಿಸಿದೆಯೋ?
       ಸಾಮವೇದಕ್ಕೆ ಸಾವಿರ ಶಾಖೆಗಳು. ಇವನ್ನು ಇಂದ್ರ ಹಾಳುಗೆಡವಿದನಂತೆ. ಹಾಗಿದ್ದರೂ ಏಳು ಶಾಖೆಗಳು ಉಳಿದುಕೊಂಡಿವೆ. ಅವುಗಳ ಹೆಸರೂ ಅಶ್ಚರ್ಯಕರವೇ. ಕೌಥುಮ, ಸತ್ಯಮುಗ್ರ, ರಾಣ್ಯಾಯನೀಯ, ಕಪೋಲ, ಮಹಾಕಪೋಲ, ಲಾಂಗುಲೀಕ ಮತ್ತು ಶಾರ್ದೂಲಿಯ. ಕಡೆಯದು ಹುಲಿಗೆ ಸಂಬಂಧಪಟ್ಟಿದ್ದು. ಲಾಂಗೋಲವೆಂದರೆ ಬಾಲ. ಯಾವುದರದ್ದೋ?! ಕೃಷ್ಣಯಜುರ್ವೇದದ ಶಾಖೆಗಳಲ್ಲಿ ಒಂದು ತೈತ್ತರೀಯ ಸಂಹಿತೆ. ಅದು ತಿತ್ತರೀ ಪಕ್ಷಿಗೆ ಸಂಬಂಧಿಸಿದ್ದು. ಅದಕ್ಕೊಂದು ಕುತೂಹಲದ ಕಥೆಯಿದೆ. ಯಾಜ್ನವಲ್ಕ್ಯರಿಗೂ ಅವರ ಗುರುಗಳಿಗೂ ಯಾವುದೋ ವಿಷಯದಲ್ಲಿ ಮನಸ್ತಾಪವಾಯಿತಂತೆ. ಗುರುಗಳಾದ ವೈಶಂಪಾಯನರು ಕಲಿತ ವೇದವನ್ನೆಲ್ಲ ಹಿಂದಿರುಗಿಸುವಂತೆ ಆದೇಶಿಸಿದರು. ಯಾಜ್ನವಲ್ಕ್ಯರು ಕಲಿತದ್ದನ್ನೆಲ್ಲ ವಾಂತಿ ಮಾಡಿಬಿಟ್ಟರು. ವೈಶಂಪಾಯನರ ಶಿಷ್ಯರು ತಿತ್ತರಿ ಹಕ್ಕಿಗಳ ರೂಪತಾಳಿ ಆ ವಾಂತಿಯನ್ನು ತಿಂದುಬಿಟ್ಟರಂತೆ. ಹಾಗಾಗಿ ಆ ಶಾಖೆ ತೈತ್ತರೀಯವೆಂದು ಹೆಸರಾಯ್ತು. ಮುಂದೆ ಯಾಜ್ನವಲ್ಕ್ಯರು ಸೂರ್ಯನನ್ನು ಕುರಿತು ತಪಸ್ಸು ಮಾಡಿದಾಗ ಸೂರ್ಯದೇವ ಕುದುರೆಯ ರೂಪತಾಳಿ ಯಜುರ್ವೇದವನ್ನು ಅವರಿಗೆ ಉಪದೇಶಿಸಿದನಂತೆ. ಸೂರ್ಯ ಉಪದೇಶಿಸಿದ್ದರಿಂದ ಅದು ಶುಕ್ಲಯಜುರ್ವೇದವೆಂದಾಯ್ತು. ಇವೆರಡೂ ಶಾಖೆಗಳ ಕೆಲ ಉಪಶಾಖೆಗಳಾದ ಮಾನವ, ವರಾಹ, ಛಾಗಲೇಯ, ಹರದ್ರವೀಯ, ದುಂದುಭ ಮತ್ತು ಶ್ಯಾಮಾಯನೀಯಗಳಲ್ಲಿ ಮೊದಲ ಮೂರು ಮನುಷ್ಯ, ಹಂದಿ ಮತ್ತು ಮೇಕೆಗೆ ಸಂಬಂಧಿಸಿದ್ದು. ಇನ್ನು ಅಥರ್ವವೇದದಲ್ಲಿ ಪಿಪ್ಪಲಾದ, ಬ್ರಹ್ಮಪಲಾಶ, ಶೌನಕ ಎಂಬ ಉಪಶಾಖೆಗಳಿವೆ. ಮೊದಲನೆಯದು ಪಿಪ್ಪಲಾದ ಪಕ್ಷಿಗೂ, ಕೊನೆಯದು ನಾಯಿಗೂ ಸಂಬಂಧಪಟ್ಟದ್ದು. ಇದೇನು ವಿಡಂಬನೆಯೇ ಎನ್ನಲು ಅಲ್ಲೆಲ್ಲೂ ವಿಡಂಬನೆ ಅಥವಾ ವ್ಯಂಗ್ಯಕ್ಕೆ ಸಂಬಂಧಿಸಿದ ವಿಷಯಗಳೇ ಇಲ್ಲ. ಕೆಲ ಹೆಸರುಗಳು ಯಾವುದನ್ನೂ ಸ್ಪಷ್ಟವಾಗಿ ಸೂಚಿಸುವುದಿಲ್ಲ. ಹಾಗೆಂದು ಸ್ಪಷ್ಟವಾಗಿರುವವನ್ನು ತಳ್ಳಿಹಾಕಲಾಗದು. ವೈದಿಕ ಋಷಿಗಳು ತಮ್ಮ ಸಾಹಿತ್ಯಕ್ಕೆ ಪ್ರಾಣಿಗಳ ಹೆಸರಿಡುತ್ತಿದ್ದರು. ಆಯಾ ಪ್ರಾಣಿಯ ಹೆಸರಿನವರದ್ದು ಆಯಾ ಪ್ರಾಣಿಯ ಹೆಸರಿರುವ ಶಾಖೆಗಳು ಎಂದು ತೀರ್ಮಾನಿಸಲಡ್ಡಿಯಿಲ್ಲ. ಮುಂದೆ ಉಪನಿಷತ್ತುಗಳನ್ನೇ ಗಮನಿಸಿ. ಶ್ವೇತಾಶ್ವರವು ಬಿಳಿಕುದುರೆಗೂ, ಮಾಂಡೂಕ್ಯವು ಕಪ್ಪೆಗೂ, ಕೌಷಿತಕಿಯವು ಗೂಬೆಗೂ, ತೈತ್ತರೀಯವು ಪಕ್ಷಿಗೂ ಸೇರಿದ್ದು. ಹಾಗೆಂದು ವೈದಿಕ ಸಾಹಿತ್ಯದಲ್ಲಿ ಪ್ರಾಣಿಗಳ ಹೆಸರೆಲ್ಲ ಪ್ರಾಣಿಗಳಿಗೆ ಸಂಬಂಧಿಸಿದ್ದು ಎನ್ನಲು ಬರುವುದಿಲ್ಲ. ಮತ್ತು ಆ ಹೆಸರುಗಳು ಮನುಷ್ಯರಿಗೆ ಸೇರಿದ್ದಾದರೂ ಅಲ್ಲಿ ವಿಡಂಬನೆಯೂ ಇಲ್ಲ. ಜೊತೆಗೆ ಮಾನವರ ಗುಂಪನ್ನು ಪ್ರಾಣಿಗಳ ಹೆಸರುಗಳಿಂದ ಗುರುತಿಸುವುದೂ ಹಿಂದಿನಿಂದ ನಡೆದು ಬಂದಿದೆ. ಋಗ್ವೇದದಲ್ಲಿ ಅಜರು ಅಥವಾ ಆಡುಗಳು ಎಂಬ ಜನಾಂಗವಿದೆ. ಜೊತೆಗೆ ಸಿಗ್ರುಗಳಿದ್ದಾರೆ(ಮೂಲಂಗಿ??). ಮತ್ಸ್ಯರಿದ್ದಾರೆ. ಐತರೇಯ ಬ್ರಾಹ್ಮಣ, ಅಥರ್ವವೇದದಲ್ಲಿ ಬರುವ ಕಾಶ್ಯಪರು ಆಮೆಯ ಸಂಬಂಧಿಗಳು. ಅದೇ ಹೆಸರಿನ ಒಬ್ಬ ಋಷಿಯೂ ಇದ್ದಾನೆ. ಕೌಶಿಕ-ಗೂಬೆ, ಮಾಂಡೂಕೇಯ -ಕಪ್ಪೆ, ಗೋತಮ-ಎತ್ತು, ವತ್ಸ-ಕರು, ಶುನಕ-ನಾಯಿ, ಕಾಪೇಯ-ಮಂಗ. ಛಾಂದೋಗ್ಯೋಪನಿಷತ್ತಿನ ಮೊದಲ ಅಧ್ಯಾಯದ ಹನ್ನೆರಡನೇಯ ಖಂಡದ ಪ್ರಸಿದ್ಧ ನಾಯಿಗಳ ಸಾಮಗಾನದ ಕಥೆಯಲ್ಲಿ ಬರುವ ನಾಯಿಗಳು ಮನುಷ್ಯರೇ ಆಗಿರಬೇಕು. ಮಹಾಭಾರತದಲ್ಲಿ, ವಿಷ್ಣುಪುರಾಣದಲ್ಲಿ ಕುಕ್ಕುರುರು ಅಥವಾ ನಾಯಿಗಳು ಎಂಬ ಋಷಿ ಹಾಗೂ ಜನರ ಹೆಸರಿದೆ. ಐತರೇಯ ಬ್ರಾಹ್ಮಣದ ಹರೀಶ್ಚಂದ್ರೋಪಾಖ್ಯಾನದಲ್ಲಿ ಉಲ್ಲೇಖಿಸಲ್ಪಟ್ಟ ಅಜೀಗರ್ತನಿಗೆ ಮೂವರು ಮಕ್ಕಳು. ಶುನಃಪುಛ್ಛ, ಶುನಃಶೇಫ, ಶುನಃಲಾಂಗೂಲ. ಮೂರರ ಅರ್ಥವೂ ನಾಯಿಬಾಲವೆಂದೇ! ಯೂಪಸ್ಥಂಭಕ್ಕೆ ಕಟ್ಟಲ್ಪಟ್ಟ ಶುನಃಶೇಫನನ್ನು ಕರೆತಂದ ವಿಶ್ವಾಮಿತ್ರ "ಈತ ಶುನಶ್ಯೇಪ, ಈತನನ್ನು ನನ್ನ ಹಿರಿಯ ಮಗನಾಗಿ ದತ್ತು ತೆಗೆದುಕೊಂಡು ದೇವರಾತನೆಂದು ಹೆಸರಿಟ್ಟಿದ್ದೇನೆ, ಇನ್ನು ಮು೦ದೆ ನೀವೆಲ್ಲರೂ ಇವನ ಸಹೋದರರೆಂದು ಲೋಕಕ್ಕೆ ಪರಿಚಿತರಾಗುವಿರಿ. ಹಿರಿಯ ಸೋದರನಾಗಿ ಭಾವಿಸಿ ಇವನ ಆಜ್ಞೆಯನ್ನು ನೀವೆಲ್ಲ ಶಿರಸಾ ವಹಿಸಿ ಪಾಲಿಸಬೇಕು" ಎಂದು ತನ್ನ ಮಕ್ಕಳಿಗೆ ಹೇಳುತ್ತಾನೆ. ಈ ಬೆಳವಣಿಗೆಯಿಂದ ಹಿರಿಯನಾದ ಅಷ್ಟಕನಿಗೆ ಮತ್ತಿತರರಿಗೆ ಆಶ್ಚರ್ಯವಾಗುತ್ತದೆ. ಇರುವ ನೂರು ಮಕ್ಕಳು ಸಾಲವೆಂದು ಇನ್ನೊಬ್ಬನನ್ನ ಕರೆತಂದು ಅವನನ್ನೇ ಹಿರಿಯನನ್ನಾಗಿ ಮಾಡಿದರೆ ನಮ್ಮ ಗತಿಯೇನೆಂದು. ಅವರಲ್ಲಿ ಐವತ್ತು ಮಕ್ಕಳು ತಂದೆಗೆ ಎದುರು ಬಿದ್ದರು. ಉಳಿದ ಐವತ್ತು ಜನ ಅಪ್ಪನಿಗೆ ಜೀ ಹುಜೂರ್ ಎಂದರು. ಎಷ್ಟಾದರೂ ಅವನು ವಿಶ್ವಾಮಿತ್ರ. ಸೃಷ್ಟಿಗೆ ಪ್ರತಿಸೃಷ್ಟಿಯನ್ನು ನಿರ್ಮಿಸಹೋಗಿ ವಿಶ್ವಕ್ಕೆ ಅಮಿತ್ರನೆಂದು ಕರೆಯಲ್ಪಟ್ಟವ. ಅಪ್ಪನ ಮಾತು ಕೇಳದಿದ್ದಕ್ಕೆ ನೀವೆಲ್ಲ ಕುಲಭೃಷ್ಟರಾಗಿ ಸಮಾಜದಿಂದ ಬಹಿಷ್ಕರಿಸಲ್ಪಡಿ ಎಂದು ಶಾಪಕೊಟ್ಟ. ಹೀಗೆ ಶಾಪದಿಂದ ಭೃಷ್ಟರಾದ ಐವತ್ತು ಸೋದರರೇ ಆಂಧ್ರ, ಪುಂಢ್ರ ಮತ್ತು ಶಬರರಾದರು ಎಂದು ಐತ್ತರೇಯ ಬ್ರಾಹ್ಮಣ ಹೇಳುತ್ತದೆ.
       ಮನುಷ್ಯರಿಗೆ ಇಂಥ ಪ್ರಾಣಿನಾಮಗಳು ಬರಲು ಕಾರಣವೇನು? ವೈದಿಕ ಸಾಹಿತ್ಯದ ಋಷಿಗಳು ಮಾತ್ರವಲ್ಲ ಸಾಹಿತ್ಯವೂ ಪ್ರಾಣಿಗಳ ಹೆಸರಿನಿಂದ ಕರೆಯಲ್ಪಟ್ಟಿವೆ. ಹಾಗೆಂದು ಅದು ಅಡ್ಡಹೆಸರಾಗಲೀ, ತಮಾಷೆಗೆ ಕರೆದಿರುವುದಾಗಲೀ ಅಲ್ಲ. ಅವೆಲ್ಲವೂ ಗೌರವಪೂರಕವಾಗಿಯೇ ಪ್ರಕಟವಾಗಿವೆ. ಮನುಷ್ಯರನ್ನು ಬಿಡಿ. ದೇವರನ್ನು ನೋಡಿದರೂ ಪ್ರಾಣಿರೂಪಗಳಿವೆ ಇಲ್ಲಾ ಪ್ರಾಣಿವಾಹನಗಳಿವೆ. ಗಣೇಶ ಆನೆಯ ಮುಖದವ, ಹನುಮಂತ ಮಂಗ, ಹಯಗ್ರೀವನಿಗೆ ಕುದುರೆಯ ತಲೆ. ಅಷ್ಟೇಕೆ ಮಹಾವಿಷ್ಣುವಿನ ದಶಾವತಾರಗಳಲ್ಲಿ ಮೊದಲ ನಾಲ್ಕು ಮತ್ಸ್ಯ, ಕೂರ್ಮ, ವರಾಹ, ನರಸಿಂಹ ಅವತಾರಗಳು ಪ್ರಾಣಿರೂಪಗಳೇ. ಆದರೆ ಅಂಥ ಹೆಸರುಗಳು ಬಂದಿದ್ದು ಹೇಗೆ ಎಂಬುದನ್ನು ವ್ಯಾಖ್ಯಾನಿಸುವುದು ಪಾಷಾಣ ಪಾಕ ಪ್ರತಿಕಾಶವೇ. ಡಾರ್ವಿನ್ನಿನ ವಿಕಾಸವಾದಕ್ಕೂ ವಿಷ್ಣುವಿನ ದಶಾವತಾರಕ್ಕೂ ಹತ್ತಿರದ ಸಂಬಂಧವಿದೆಯೆಂದು ತಾಳೆ ಹಾಕಬಹುದು. ವಿಕಾಸವಾದದ ಪ್ರಕಾರ ಮೊದಲು ಕಾಣಿಸಿಕೊಂಡಿದ್ದು ಜಲಚರಗಳು, ನಂತರ ಉಭಯವಾಸಿಗಳು ಸೃಷ್ಟಿಯಾದವು. ನಂತರ ಕ್ರಮೇಣ ಪ್ರಾಣಿಗಳೂ ಮನುಷ್ಯರೂ ವಿಕಾಸಗೊಂಡರು. ವಿಕಾಸದ ಹಾದಿಯಲ್ಲಿ ಮೊದಲು ಜಲಚರಗಳು ಕಾಣಿಸಿಕೊಂಡಿದ್ದು ಎಂಬುದನ್ನು ಮತ್ಸ್ಯಾವತಾರ ಸೂಚಿಸುತ್ತದೆ. ಉಭಯವಾಸಿ ಕೂರ್ಮವಾಗಿ ಎರಡನೇಯ ಅವತಾರ. ಅಲ್ಲಿಂದ ಸಸ್ತನಿಗಳ ರೂಪದಲ್ಲಿ ಮೂರನೇಯ ವರಾಹಾವತಾರ. ಪ್ರಾಣಿ ಸ್ಥಿತಿಯಿಂದ ಮಾನವ ವಿಕಾಸಗೊಂಡಿದ್ದನ್ನು ಅರ್ಧಪ್ರಾಣಿ, ಅರ್ಧ ಮನುಷ್ಯನ ನರಸಿಂಹಾವತಾರ ತಿಳಿಸುತ್ತದೆ. ಆರಂಭ ಕಾಲದ ಕುಬ್ಜ ಮಾನವ, ವಿಕಾಸಗೊಂಡ ಆದರ್ಶವಾದಿ ಮಾನವ ಹೀಗೆ ವಾಮನ, ರಾಮ, ಕೃಷ್ಣಾವತಾರಗಳು ಸಾಗುತ್ತವೆ. ವಿಷ್ಣುವಿನ ದಶಾವತಾರಗಳಲ್ಲಿ ಮೊದಲ ಮೂರು ಅವತಾರಗಳಾದ ಮತ್ಸ್ಯ, ಕೂರ್ಮ ಮತ್ತು ವರಾಹಾವತಾರಗಳು ಪೂರ್ಣವಾಗಿ ಪ್ರಾಣಿರೂಪದವು. ಇವುಗಳನ್ನು ಸಾಂಕೇತಿಕ ಅಥವಾ ಅಂಶಾವತಾರಗಳೆಂದೂ ಕರೆಯುತ್ತಾರೆ. ಡಾರ್ವಿನ್ನಿನ ವಾದದೊಡಗಿನ ಹೋಲಿಕೆ ಒತ್ತಟ್ಟಿಗಿದ್ದರೂ ದೇವರು ಪ್ರಾಣಿರೂಪದಲ್ಲಿ ಅವತಾರವೆತ್ತುವ ಕಥೆ ನಮಗೆ ಸ್ವಲ್ಪ ಸೋಜಿಗವೇ. ಅವು ನಿಜವಾಗಿ ಪ್ರಾಣಿ ರೂಪಗಳೇ ಅಥವಾ ಅದರ ಹಿಂದೆ ಇನ್ನೇನಾದರೂ ನಿಗೂಢ ಅರ್ಥವಿದೆಯೋ? ಹಾಗಿದ್ದರೂ ನಮ್ಮಲ್ಲಿ ಈ ಪ್ರಾಣಿರೂಪದ ಅವತಾರಗಳನ್ನು ಪೂಜಿಸುವ ಪರಂಪರೆ ಕಡಿಮೆ. ಉಳಿದ ಅವತಾರಗಳಾದ ರಾಮ, ಕೃಷ್ಣರಿಗಿದ್ದಷ್ಟು ಪೂಜಾಲಯಗಳು ಮೊದಲ ಮೂರು ಅವತಾರಗಳಿಗಿಲ್ಲ. ಕೇರಳದಲ್ಲಿ ವಾಮನಾವತಾರಕ್ಕೆ ಸಂಬಂಧಿಸಿದ ಹಲವು ದೇವಸ್ಥಾನಗಳಿವೆ. ತಮಿಳುನಾಡು ಮುರುಗನ ಆರಾಧನೆಗೂ, ಕೇರಳ ಶಾಸ್ತನ ಆರಾಧನೆಗೂ ಹೆಸರಾದಂತೆ ಆಂಧ್ರ ಪ್ರದೇಶದಲ್ಲಿ ನರಸಿಂಹಾರಾಧನೆ ತುಂಬ ಪ್ರಸಿದ್ಧಿ. ಅಹೋಬಿಲಂ, ಯಾದಗಿರಿಗುಟ್ಟ, ಹರಿವಾಡಂ. ಮಲಯಾದ್ರಿ, ಮಂಗಳಗಿರಿ, ವೇದಾದ್ರಿ, ಸಿಂಹಾಚಲ, ಪನಕಾಲ ಸೇರಿ ನೂರಾರು ಇತಿಹಾಸ ಪ್ರಸಿದ್ಧ ನರಸಿಂಹಸ್ಥಾನಗಳು ಆಂಧ್ರದಲ್ಲಿವೆ. ಹಾಗೆಂದು ಮತ್ಸ್ಯ, ಕೂರ್ಮ, ವರಾಹ ಅವತಾರಗಳಿಗೆ ಮೀಸಲಾದ ದೇವಾಲಯಗಳು ನಮ್ಮಲ್ಲಿವೆಯೇ ಎಂಬುದು ಪ್ರಶ್ನೆ? ಇಷ್ಟೆಲ್ಲ ಪೀಠಿಕೆಯ ನಂತರ ಇಂದಿನ ಲೇಖನದ ಮುಖ್ಯಾಂಶ ಇದೇ.
ನಮ್ಮಲ್ಲಿವೆಯೇ? ಇಲ್ಲವೇ ಇಲ್ಲವೆಂದಲ್ಲ. ಇವೆ. ಎಲ್ಲಿವೆ, ವಿಶೇಷಗಳೇನು ಗೊತ್ತೆ?
ಮತ್ಸ್ಯಾವತಾರ:
ಮತ್ಸ್ಯಾವತಾರದ ಕಲಂಕಾರಿ ಚಿತ್ರಕಲೆ
       ಒಂದೊಂದು ಮನ್ವಂತರ ಮುಗಿದಾಗಲೂ ಒಂದು ಚಿಕ್ಕ ಪ್ರಳಯವಾಗುತ್ತದೆ. ಆ ಪ್ರಳಯವನ್ನು ಪುರಾಣಗಳು ಅವಾಂತರ ಪ್ರಳಯವೆಂದು ಕರೆದಿವೆ. ಅದು ಬ್ರಹ್ಮನ ಒಂದು ದಿನಕಳೆದು ರಾತ್ರಿಯಾದಾಗ ಆಗುವಂಥದ್ದು ಹಾಗೆಯೇ ಬ್ರಹ್ಮನ ನೂರು ವರ್ಷಕಾಲದ ನಂತರ ಅವನ ಅವಸಾನಕಾಲದಲ್ಲಿ ಬರುವುದು ಮಹಾಪ್ರಳಯ. ಅವಾಂತರ ಪ್ರಳಯಕಾಲದಲ್ಲಿ ಭೂಮಿಯ ಮೇಲಿನ ಬಹುತೇಕ ನಾಗರಿಕತೆ ನಾಶವಾಗುತ್ತದೆ. ಈ ಕಾಲದಲ್ಲಿ ಬದುಕುಳಿದ ಜನಾಂಗದಿಂದ ಮತ್ತೆ ಮರಳಿ ನಾಗರಿಕತೆ ಬೆಳೆಯುತ್ತದೆ. ಭಾಗವತದ ಪ್ರಕಾರ ಹೀಗೆ ಚಾಕ್ಷುಷ ಮತ್ತು ವೈವಸ್ವತ ಮನ್ವಂತರದ ಸಂಧಿಕಾಲದಲ್ಲಿ ಪ್ರಳಯವಾದಾಗ ಸತ್ಯವ್ರತ ಮನುವನ್ನು ರಕ್ಷಿಸುವುದಕ್ಕೋಸ್ಕರ ಮೀನಿನ ರೂಪದಲ್ಲಿ ಭಗವಂತ ಅವತರಿಸಿದ. ಇನ್ನೊಂದು ಕತೆಯ ಪ್ರಕಾರ ಬ್ರಹ್ಮ ನಿದ್ರಿಸಿದಾಗ ಸೋಮಕನೆಂಬ ಅಸುರ ವೇದಗಳನ್ನು ಕದ್ದೊಯ್ದು ಸಮುದ್ರದಲ್ಲಿ ಅಡಗಿಸಿಟ್ಟನಂತೆ. ಇನ್ನೇನು ಪ್ರಳಯಕಾಲ ಸಮೀಪಿಸಿದ್ದರಿಂದ ಬ್ರಹ್ಮನಿಗೆ ಹೊಸ ಸೃಷ್ಟಿ ಮಾಡಲು ವೇದಜ್ಞಾನದ ಅಗತ್ಯತೆಯಿತ್ತು. ಆಗ ದೇವತೆಗಳೆಲ್ಲ ಶ್ರೀಹರಿಯನ್ನು ಪ್ರಾರ್ಥಿಸಲು ಹರಿಯು ಮತ್ಸ್ಯಾವತಾರವನ್ನೆತ್ತಿ ಸೋಮಕನನ್ನು ಸಂಹರಿಸಿ ವೇದಗಳನ್ನು ಉದ್ಧರಿಸಿದನಂತೆ. ಮತ್ಸ್ಯ ಪುರಾಣದಲ್ಲಿಯೂ ಈ ಕತೆಯಿದೆ. ಸೂರ್ಯಪುತ್ರನಾದ ಸತ್ಯವ್ರತ ಮನುವೆಂಬ ರಾಜ ಹತ್ತುಲಕ್ಷ ವರ್ಷಗಳ ಕಾಲ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಪ್ರಳಯಕಾಲದಲ್ಲಿ ಸಮಸ್ತ ಜೀವವರ್ಗಗಳ ರಕ್ಷಣೆಗೆ ಶಕ್ತನಾಗುವ ವರ ಪಡೆದ. ಈ ಸತ್ಯವ್ರತ ಮನು ಆಶ್ರಮದಲ್ಲೊಮ್ಮೆ ಪಿತೃತರ್ಪಣ ನೀಡುತ್ತಿರಲು ನೀರಿನೊಡನೆ ಅವನ ಬೊಗಸೆಯಲ್ಲಿ ಚಿಕ್ಕ ಮೀನೊಂದು ಕೈಸೇರಿತು. ದಯಾಳುವಾದ ರಾಜ ಆ ಮೀನನ್ನು ಕಂಡು ತನ್ನ ಕಮಂಡಲದಲ್ಲಿಟ್ಟು ರಕ್ಷಿಸಲು ಯತ್ನಿಸಿದ. ರಾತ್ರಿ ಕಳೆಯುವುದರೊಳಗೆ ಆ ಮೀನು ಕಮಂಡಲದಲ್ಲಿ ಹಿಡಿಯಲಾಗದಷ್ಟು ದೊಡ್ಡದಾಗಿ ಬೆಳೆದಿತ್ತು. ಅವನು ಅದನ್ನೆತ್ತಿ ಹಂಡೆಯಲ್ಲಿರಿಸಿದ. ಅಲ್ಲೂ ಅದು ಮೂರು ಮೊಳದುದ್ದ ಬೆಳೆದು ರಕ್ಷಿಸುವಂತೆ ಕೇಳಿತು. ರಾಜ ಅದನ್ನು ಕೆರಯಲ್ಲಿ ಬಿಟ್ಟರೆ ಅದು ಕೆರೆ ಮುಚ್ಚುವಷ್ಟು ಬೆಳೆಯಿತು. ಕೊನೆಗೆ ದಾರಿ ಕಾಣದೆ ಆ ಮೀನನ್ನು ಸಮುದ್ರದಲ್ಲಿ ಬಿಟ್ಟನಂತೆ. ಆಗ ಸಮುದ್ರಜಲವನ್ನೆಲ್ಲ ವ್ಯಾಪಿಸುವಷ್ಟು ವಿಸ್ತಾರವಾಗಿ ಮೀನು ಬೆಳೆದಾಗ ಮನುವು ಹೆದರಿ ತನ್ನ ನಿಜರೂಪವನ್ನು ತೋರುವಂತೆ ಪ್ರಾರ್ಥಿಸಿದ. ಮತ್ಸ್ಯರೂಪಿ ಮಹಾವಿಷ್ಣು ಪ್ರತ್ಯಕ್ಷನಾಗಿ ಇನ್ನು ಕೆಲ ಕಾಲದಲ್ಲಿ ಪ್ರಳಯ ಸಂಭವಿಸಿ ಭೂಮಿಯು ನೀರಿನಲ್ಲಿ ಮುಳುಗಿ ಹೋಗುವುದು, ಆ ಸಮಯದಲ್ಲಿ ಬೆವರಿನಿಂದ ಹುಟ್ಟಿದ ಹೇನು ಮುಂತಾದವು, ಮೊಟ್ಟೆಯಿಂದ ಬಂದ ಪಕ್ಷಿಗಳು, ನೆಲವನ್ನು ಸೀಳಿ ಮೆಲಕ್ಕೆದ್ದ ಪಕ್ಷಿಗಳು, ಗರ್ಭದಿಂದ ಹುಟ್ಟಿದ ಪ್ರಾಣಿಗಳು ಹೀಗೆ ನಾಲ್ಕು ಬಗೆಯ ಜೀವರಾಶಿಗಳ ಜೊತೆ ತಾನು ಕಳಿಸಿದ ವೇದಮಯವಾದ ದೋಣಿಯೇರುವಂತೆ ಸೂಚಿಸಿದನಂತೆ. ಜಲಪ್ರಳಯ ಪ್ರಾರಂಭವಾಯಿತು. ಮಹಾವಿಷ್ಣು  ಕೊಂಬುಳ್ಳ ಮೀನಿನ ರೂಪದಲ್ಲಿ ವಾಸುಕಿಯನ್ನು ಹಗ್ಗವಾಗಿ ಕಟ್ಟಿ ದೋಣಿಯನ್ನು ಎಳೆದು ತಂದ. ಸತ್ಯವ್ರತನ ಜೊತೆ ಎಲ್ಲ ಬಗೆಯ ಜೀವರಾಶಿಗಳೂ ವೇದಪುರಾಣಗಳಿಂದಾವೃತ ಜ್ಞಾನರಾಶಿಯೂ ಸಪ್ತರ್ಷಿಗಳೇದ್ಯಾತಿಗಳು ದೋಣಿಯನ್ನೇರಿದವು. ಪ್ರಳಯಕಾಲದುದ್ದಕ್ಕೂ ಮೀನಿನಿಂದ ಹಿಡಿಯಲ್ಪಟ್ಟಿದ್ದ ದೋಣಿ ನೀರಿನಲ್ಲಿ ತೇಲುತ್ತಿದ್ದ ಕಾರಣ ದೋಣಿಯಲ್ಲಿದ್ದವರೆಲ್ಲ ರಕ್ಷಿಸಲ್ಪಟ್ಟರು. ಈ ಕಾಲದಲ್ಲಿ ಮಹಾವಿಷ್ಣುವು ಸತ್ಯವ್ರತನಿಗೆ ಉಪದೇಶಿಸಿದ್ದೇ ಮತ್ಸ್ಯಪುರಾಣವೆಂದು ಪ್ರಸಿದ್ಧವಾಯ್ತು. ಅದೊಂದು ಅದ್ಭುತವಾದ ಸಂಕೇತ. ಇಂಥದ್ದೇ ಕಥೆ ಬೈಬಲ್ಲಿಂದ ಮೊದಲ್ಗೊಂಡು ಗ್ರೀಕರಲ್ಲೂ, ರೋಮನ್ನರಲ್ಲೂ ಕಾಣಬಹುದು. ಆದರೆ ವ್ಯತ್ಯಾಸವಿಷ್ಟೇ. ಅಲ್ಲಿ ನೋಹಾ ಎಂಬುವವ ತನ್ನ ಹೆಂಡತಿ, ಮೂರು ಮಕ್ಕಳು ಮತ್ತು ಮೂವರು ಸೊಸೆಯರೊಂದಿಗೆ ನೌಕೆಯನ್ನು ನಿರ್ಮಾಣ ಮಾಡಿ ಪ್ರಳಯಕಾಲದಲ್ಲಿ ಬಚಾವಾದರಂತೆ. ನಮ್ಮ ಪುರಾಣಗಳು ಹಾಗಲ್ಲ. ಇಲ್ಲಿ ಮನುವಿನ ಜೊತೆ ಅವನ ಹೆಂಡತಿ ಮನಾವಿ, ಭೌತಿಕ ಜಗತ್ತಿನ ಪ್ರತಿನಿಧಿಗಳಾದ ಎಲ್ಲ ಜೀವರಾಶಿಗಳೂ, ಆಧ್ಯಾತ್ಮ ಜಗತ್ತಿನ ಪ್ರತಿನಿಧಿಗಳಾದ ಸಪ್ತರ್ಷಿಗಳೂ, ವೇದರಾಶಿಗಳೂ ಇದ್ದಾರೆ. ಮನುಷ್ಯ ತಾನು ಉಳಿಯಬೇಕಾದರೆ ಇಡೀ ಪ್ರಪಂಚವನ್ನುಳಿಸಿಕೊಳ್ಳಬೇಕು. ಪ್ರಪಂಚ ಮುಳುಗುವಾಗ ಮುಂದಿನ ಜಗದ್ಬೀಜವಾಗಿ ಈ ಎಲ್ಲ ರೀತಿಯ ಜೀವಿಗಳುಳಿಯಬೇಕು. ಅಷ್ಟೇ ಅಲ್ಲ ಮಾನವ ಸಂಸ್ಕೃತಿಯ ದೀಪಧಾರಿಗಳಾದ ಜ್ಞಾನರಾಶಿಯೂ ಉಳಿಯಬೇಕು.
ಭಾರತದಲ್ಲಿ ಮಹಾವಿಷ್ಣುವು ಮತ್ಸ್ಯಾವತಾರದಲ್ಲಿ ಕೇವಲ ಎರಡು ಕಡೆಗಳಲ್ಲಿ ಪೂಜಿಸಲ್ಪಡುತ್ತಾನೆ. ಅದರಲ್ಲಿ ವಿಖ್ಯಾತವಾದದ್ದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾಗಲಾಪುರ. ಈ ಪಟ್ಟಣವನ್ನು ಶ್ರೀಕೃಷ್ಣದೇವರಾಯ ತನ್ನ ತಾಯಿ ನಾಗಲಾದೇವಿಯ ನೆನಪಿಗಾಗಿ ಕಟ್ಟಿಸಿದ್ದನಂತೆ. ಇದು ತಿರುಪತಿಯಿಂದ ದಕ್ಷಿಣದಲ್ಲಿ ೭೦ ಕಿ.ಮೀ , ಚೆನ್ನೈನಿಂದ ಉತ್ತರದಲ್ಲಿ ೯೦ ಕಿ.ಮೀ ದೂರದಲ್ಲಿದೆ. ಇದೇ ಊರಿನಲ್ಲಿ ಕೃಷ್ಣದೇವರಾಯನಿಂದ ನಿರ್ಮಿಸಲ್ಪಟ್ಟ ವೇದನಾರಾಯಣ ಸ್ವಾಮಿಯ ಮಂದಿರವಿದೆ. ವೇದಗಳನ್ನುದ್ಧರಿಸಿದ ವಿಷ್ಣು ಶ್ರೀದೇವಿ, ಭೂದೇವಿ ಸಮೇತನಾಗಿ ಇಲ್ಲಿ ಮತ್ಸ್ಯಾವತಾರಿಯಾಗಿ ಪೂಜಿಸಲ್ಪಡುತ್ತಾನೆ. ಪ್ರತಿವರ್ಷ ವೈಶಾಖ ಮಾಸದ ದ್ವಾದಶಿಯಿಂದಾರಂಭಿಸಿ ಮೂರು ದಿನಗಳ ಕಾಲ ಸೂರ್ಯಾಸ್ತದ ಸಮಯ ಸೂರ್ಯನ ಕಿರಣಗಳು ಗರ್ಭಗುಡಿಯ ವಿಗ್ರಹದ ಪಾದ, ಹೊಕ್ಕಳು, ಹಣೆಯ ಮೇಲೆ ಬೀಳುವ ಪವಾಡವನ್ನು ನೋಡಲು ದೇಶದ ಮೂಲೆಮೂಲೆಯಿಂದ ಜನರಾಗಮಿಸುತ್ತಾರೆ. ಇದನ್ನು ಬಿಟ್ಟರೆ ತಮಿಳ್ನಾಡಿನ ತುವರಿಮನ್ ಅಗ್ರಹಾರದಲ್ಲೂ ಒಂದು ಮತ್ಸ ದೇವಸ್ಥಾನವಿದೆ.
ನಾಗಲಾಪುರಮ್ ವೇದನಾರಾಯಣ
ವೈಶಾಖ ದ್ವಾದಶಿಯಂದು ಗರ್ಭಗುಡಿಯ ವಿಗ್ರಹದ ಮೇಲೆ ಬೀಳುವ ಸೂರ್ಯರಶ್ಮಿ

ಕೂರ್ಮಾವತಾರ:

       ದೇವದಾನವರಿಬ್ಬರೂ ಸಮುದ್ರ ಮಥನಕ್ಕಾಗಿ ಕೈಜೋಡಿಸಿದಾಗ ಕಡುಗೋಲಿನಂತಿದ್ದ ಮಂದರ ಪರ್ವತ ಮುಳುಗಿ ಹೋಗದಂತೆ ಮಹಾವಿಷ್ಣು ಕೂರ್ಮಾವತಾರಿಯಾಗಿ ತನ್ನ ಬೆನ್ನ ಮೇಲೆ ಹೊತ್ತು ಸ್ಥಿರವಾಗಿ ನಿಲ್ಲಿಸಿದನಂತೆ. ಇಡೀ ಪ್ರಪಂಚದಲ್ಲಿ ಒಂದೇ ಒಂದು ಕಡೆ ವಿಷ್ಣುವು ಕೂರ್ಮಾವತಾರಿಯಾಗಿ ಪೂಜಿಸಲ್ಪಡುತ್ತಾನೆ. ಅದು ಆಂಧ್ರದ ಶ್ರೀಕಾಕುಳಂನ ಸಮೀಪ ಬಂಗಾಳ ಕೊಲ್ಲಿಯ ದಡದಲ್ಲಿರುವ ಶ್ರೀಕೂರ್ಮಂನಲ್ಲಿ. ೨೮ನೇ ಕೃತಯುಗದ ವೈವಸ್ವತ ಮನ್ವಂತರದಲ್ಲಿ ಶ್ವೇತ ಮಹಾರಾಜನ ತಪಸ್ಸಿಗೆ ಮೆಚ್ಚಿ ವಿಷ್ಣು ಇಲ್ಲಿ ಸ್ವಯಂಭೂ ಕೂರ್ಮರೂಪಿಯಾಗಿ ನೆಲೆನಿಂತನೆಂದು ವಿಷ್ಣು, ಪದ್ಮ ಮತ್ತು ಬ್ರಹ್ಮಾಂಡಪುರಾಣಗಳಲ್ಲಿ ಉಲ್ಲೇಖವಿದೆ. ಇದು ಮೂಲತಃ ಬ್ರಹ್ಮನಿಂದ ಪ್ರತಿಷ್ಟಾಪಿಸಲ್ಪಟ್ಟು ಹತ್ತುಸಾವಿರ ವರ್ಷಗಳಿಗಿಂತಲೂ ಹಿಂದಿನಿಂದ ಪೂಜಾಸ್ಥಳವಾಗಿ ಪ್ರಸಿದ್ಧಿಯಾಗಿತ್ತೆಂಬ ನಂಬಿಕೆಯಿದೆ. ಈಗಿರುವ ದೇವಸ್ಥಾನ ನಿರ್ಮಾಣಗೊಂಡಿದ್ದು ೮೦೦ ವರ್ಷಗಳಷ್ಟು ಹಿಂದೆ ಕಳಿಂಗವನ್ನಾಳುತ್ತಿದ್ದ ನರಹರಿ ತೀರ್ಥರ ಕಾಲದಲ್ಲಿ. ಚೋಳರು, ಕಳಿಂಗರಾಜ ಗಂಗರು, ವಿಕ್ರಮ ಗಜಪತಿಯರು, ವಿಜಯನಗರ, ಆನಂದಗಜಪತಿಯರು ಹೀಗೆ ಹಲ ಸಾಮ್ರಾಜ್ಯಗಳ ಕಾಲದಲ್ಲಿ ಶ್ರೀಕುರ್ಮಮ್  ಪ್ರಮುಖ ಕೇಂದ್ರವಾಗಿ ಮೆರೆದಿತ್ತು. ಇದು ಮೂಲತಃ ಶೈವಕ್ಷೇತ್ರವಾಗಿದ್ದು ಇಲ್ಲೊಂದು ಲಿಂಗವಿತ್ತೆಂದು ಕೆಲ ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಕೂರ್ಮದ ಬಾಲದ ಹತ್ತಿರ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಚಿಕ್ಕದೊಂದು ಸಾಲಿಗ್ರಾಮವಿದೆ. ಮುಂದೆ ಕಳಿಂಗವನ್ನಾಳುತ್ತಿದ್ದ ಅನಂತವರ್ಮ ಚೋದಗಂಗದೇವನ ಕಾಲದಲ್ಲಿ ರಾಮಾನುಜಾಚಾರ್ಯರು ಈ ಕ್ಷೇತ್ರವನ್ನು ಸಂದರ್ಶಿಸಿದ್ದರು. ಆ ಸಮಯದಲ್ಲಿ ಶೈವ ಮತ್ತು ವೈಷ್ಣವರ ನಡುವೆ ಮೂಲದೈವದ ವಿಗ್ರಹವು ಶಿವಲಿಂಗವೋ ಅಥವಾ ಕೂರ್ಮವೋ ಎಂಬುದರ ಬಗ್ಗೆ ವಿವಾದ ಚಾಲ್ತಿಯಲ್ಲಿತ್ತಂತೆ. ಈ ವಿವಾದವನ್ನು ಬಗೆಹರಿಸಲು ಶ್ರೀವೈಷ್ಣವರಾಗಿದ್ದ ರಾಮಾನುಜರು ಗರ್ಭಗುಡಿಯಲ್ಲಿ ವಿಗ್ರಹದ ಹಿಂದೆ ನಿಂತು ಇದು ವಿಷ್ಣುರೂಪಿಯಾಗಿದ್ದರೆ ತನ್ನತ್ತ ತಿರುಗುವಂತೆ ಪ್ರಾರ್ಥಿಸಿದರಂತೆ. ಅಷ್ಟರವರೆಗೆ ಪೂರ್ವಾಭಿಮುಖವಾಗಿದ್ದ ವಿಗ್ರಹ ರಾಮಾನುಜರ ಕೋರಿಕೆಯ ಮೇರೆಗೆ ಪಶ್ಚಿಮಾಭಿಮುಖವಾಗಿ ಅವರತ್ತ ತಿರುಗಿ ನಿಂತಿತಂತೆ. ಅಂದಿನಿಂದ ಈ ವಿಗ್ರಹದ ಕುರಿತಾದ ವಿವಾದ ಬಗೆಹರಿಯಿತು. ಇದು ಆಚಾರ್ಯರ ಸೂಕ್ತಿಮುಕ್ತಾವಲಿಯಲ್ಲಿಯೂ ಉಲ್ಲೇಖಿಸಲ್ಪಟ್ಟಿದೆ. ಇದರ ಕುರುಹಾಗಿ ದೇವಸ್ಥಾನದಲ್ಲಿ ಎರಡು ಧ್ವಜಸ್ಥಂಭಗಳನ್ನು ಕಾಣಬಹುದು. ಮೂಲದ್ದು ಪೂರ್ವದಲ್ಲಿದ್ದರೆ, ರಾಮಾನುಜರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಪಶ್ಚಿಮ ಭಾಗದಲ್ಲಿದೆ. ಎರಡೂ ದಿಕ್ಕುಗಳಲ್ಲಿ ಧ್ವಜಸ್ಥಂಭ ಮತ್ತು ಪ್ರವೇಶದ್ವಾರವನ್ನು ಹೊಂದಿರುವ ಪ್ರಪಂಚದ ಅತ್ಯಂತ ಅಪರೂಪದ ಮಂದಿರವಿದು. ಅಷ್ಟೇ ಅಲ್ಲ, ಶ್ರೀಕುರ್ಮಮ್ ಪ್ರಸಿದ್ದಿಯಾಗಿರುವುದಕ್ಕೆ ಇನ್ನೂ ಕೆಲ ಕಾರಣಗಳಿವೆ. ೧೧ನೇ ಶತಮಾನದಲ್ಲಿ ಮಹಮ್ಮದ್ ಗಜನಿಯ ದಂಡಯಾತ್ರೆಯ ಕಾಲದಲ್ಲಿ ಕೊಳ್ಳೆಹೊಡೆಯಲ್ಪಡುವ ಭಯದಿಂದ ಮೂಲ ದೇವಸ್ಥಾನವನ್ನು ಮಣ್ಣಿನಲ್ಲಿ ಮುಚ್ಚಿ ಎದುರು ಸಣ್ಣದೊಂದು ಹೊಸ ನಿರ್ಮಿತಿಯನ್ನು ರಚಿಸಲಾಗಿತ್ತಂತೆ. ಅಂದಿನ ದಾಳಿಯಲ್ಲಿ ಹಾಳಾಗಿ ಉಳಿದ ಕೆಲ ರಚನೆಗಳನ್ನು ಇಂದಿಗೂ ಇಲ್ಲಿ ನೊಡಬಹುದು. 
ಶ್ರೀಕೂರ್ಮನಾಥ 

ಶ್ರೀಕುರ್ಮಮ್
 ದೇಗುಲದ ಐತಿಹ್ಯದ ಪ್ರಕಾರ ರಾಮನ ಮಕ್ಕಳಾದ ಲವ ಕುಶರು ಇಲ್ಲಿಗೆ ಶನಿದೋಷ ನಿವಾರಣೆಗಾಗಿ ಭೇಟಿ ನೀಡಿದ್ದರು. ಉತ್ತರ ರಾಮಾಯಣ ತಿಳಿಸುವಂತೆ ಕುಶನ ರಾಜ್ಯವಾಗಿದ್ದ ದಕ್ಷಿಣ ಕೋಸಲ ಇದೇ ಭಾಗದಲ್ಲಿತ್ತು. ಮಧ್ಯಭಾರತದಲ್ಲಿ ಕಂಡುಬರುವ ಕುರ್ಮಿ  ಜನಾಂಗ ತಮ್ಮನ್ನು ಕುಶನ ಕುಲದವರೆಂದುಕೊಳ್ಳುತ್ತದೆ. ಅಲ್ಲದೇ ಇವರು ಕುರ್ಮನಾಥನ ಆರಾಧಕರೆಂದೂ ಹಾಗಾಗಿ ಕಶ್ಯಪ ಗೋತ್ರದವರೆಂದೂ ಕರೆದುಕೊಳ್ಳುತ್ತಾರೆ. ಸಂಸ್ಕೃತದಲ್ಲಿ ಕಶ್ಯಪವೆಂದರೆ ಕೂರ್ಮವೆಂದೇ ಅರ್ಥ. ಜೊತೆಗೆ ಓರಿಸ್ಸಾದಲ್ಲಿ ವಿಶೇಷವಾಗಿ ಕಂಡುಬರುವ ನಿಲ್ಸೋನಿಯಾ ಗ್ಯಾಂಗೇಟಿಕಾ ಮತ್ತು ನಿಲ್ಸೋನಿಯಾ ಹುರುಮ್ ಎಂಬ ಜಾತಿಯ ನಕ್ಷತ್ರ ಆಮೆಗಳ ರಕ್ಷಿತ ತಾಣವಾಗಿಯೂ ಶ್ರೀಕುರ್ಮಮ್ ಪ್ರಸಿದ್ಧಿ. ಈ ದೇವಸ್ಥಾನ ಈಗಿನ ಕಟ್ಟಡ ನಿರ್ಮಾಣಗೊಂಡಿದ್ದು ಕಳಿಂಗವನ್ನಾಳಿದ್ದ ನರಹರಿ ತೀರ್ಥರ ಕಾಲದಲ್ಲಿ ಎಂದೆನಷ್ಟೆ. ಇದೇ ನರಹರಿ ತೀರ್ಥರು ಮುಂದೆ ಮಧ್ವಾಚಾರ್ಯರ ಅನುಯಾಯಿಯಾಗಿ ಉತ್ತರಾದಿ ಮಠದ ಪೀಠಾಧಿಪತಿಗಳಾದರು. ಆಂಧ್ರ ಯಕ್ಷಗಾನ ಮತ್ತು ಕುಚಿಪುಡಿಯಿಂದ ಪ್ರೇರಿತಗೊಂಡು ಕರ್ನಾಟಕದ ಕರಾವಳಿಯಲ್ಲಿ ಯಕ್ಷಗಾನ ಮತ್ತು ಕೇರಳದ ಕಥಕ್ಕಳಿಯನ್ನು ಪ್ರಾರಂಭಿಸಿದ ಕೀರ್ತಿ ಇವರಿಗೇ ಸಲ್ಲಬೇಕು.
ವರಾಹಾವತಾರ
ಭೂದೇವಿಯನ್ನೆತ್ತಿರುವ ವರಾಹದ ಉಬ್ಬುಶಿಲ್ಪ, ಮಹಾಬಲಿಪುರಂ
ಖುಜರಾಹೋದ ಪ್ರಸಿದ್ಧ ವರಾಹಮೂರ್ತಿ
       ಭಾರತದಲ್ಲಿ ಏಳು ಕಡೆಗಳಲ್ಲಿ ಪ್ರಸಿದ್ಧ ವರಾಹ ಕ್ಷೇತ್ರಗಳಿವೆಯಂತೆ. ಓರಿಸ್ಸಾದ ವೈತರಣಿ ನದಿದ್ವೀಪದಲ್ಲಿರುವ ಯಜ್ಞವರಾಹ ದೇವಾಲಯ, ಖುಜರಾಹೋದ ವರಾಹ ಮಂದಿರ, ಮಹಾಬಲಿಪುರದ ವರಾಹ ಗುಹಾಂತರ್ದೇವಾಲಯ, ತಿರುಮಲದ ಪುಷ್ಕರಣೀ ನದೀತಟದ ಆದಿವರಾಹ ಕ್ಷೇತ್ರ, ಚಿದಂಬರಂನ ಬಳಿಯ ಶ್ರೀಮುಷ್ಣಂನ ಸ್ವಯಂಭು ಭೂವರಾಹ ಕ್ಷೇತ್ರಗಳು ಸುಪ್ರಸಿದ್ಧವಾದವು. ಬಹಳಷ್ಟು ಜನರಿಗೆ ತಿಳಿಯದ್ದೇನೆಂದರೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆಯಲ್ಲಿ ಅರಬ್ಬೀ ಸಮುದ್ರ ಮತ್ತು ಸೌಪರ್ಣಿಕಾ ನದಿಯ ಮಧ್ಯದ ಕಿರಿದಾದ ಭೂಭಾಗದಲ್ಲಿರುವ ಮಹಾರಾಜಸ್ವಾಮಿ ವರಾಹ ದೇವಾಲಯ ಭಾರತದ ಏಳೇ ಏಳು ವರಾಹ ಕ್ಷೇತ್ರಗಳಲ್ಲೊಂದು. ವಿಷ್ಣುವಿನೊಡನೆ ವರಾಹ ಮತ್ತು ನರಸಿಂಹಾವತಾರಗಳು ಒಂದೇ ಗರ್ಭಗುಡಿಯಲ್ಲಿ ಪೂಜಿಸಲ್ಪಡುವುದು ಈ ದೇವಸ್ಥಾನದ ವೈಶಿಷ್ಟ್ಯ. ಮೂರು ಮೂರ್ತಿಗಳಿಗೆ ಪ್ರತ್ಯೇಕ ಪ್ರವೇಶ ದ್ವಾರಗಳಿದ್ದರೂ ಎಡನಾಳಿ ಮತ್ತು ಮುಖಮಟಂಪ ಮಾತ್ರ ಒಂದೇ. ಮೂರು ದೇವರಿಗೂ ಪೂಜೆ ನಡೆದರೂ ಪೂಜೆ ಉತ್ಸವಗಳೆಲ್ಲ ವರಾಹ ಕೇಂದ್ರಿತ. ಹಿಂದೆ ತ್ರೇತೆಯಲ್ಲಿ ಗೌತಮನ ಶಾಪವಿಮೋಚನೆಗಾಗಿ ಇಂದ್ರ ಬೃಹಸ್ಪತಿಯ ಸೂಚನೆಯಂತೆ ಸೌಪರ್ಣಿಕಾ ನದಿದಡದಲ್ಲಿ ಗಂಗಾಧರವೆಂಬ ಲಿಂಗವನ್ನು ಸ್ಥಾಪಿಸಿ ಪೂಜಿಸಿದನಂತೆ. ಮುಂದೆ ೨೮ನೇ ಕಲಿಯುಗದಲ್ಲಿ ಅರಸನೊಬ್ಬನಿಗಾದ ದೈವೀ ಪ್ರೇರಣೆಯಂತೆ ಗಂಗಾಧರೇಶ್ವರ ಸನ್ನಿಧಿಯಲ್ಲಿ ವರಾಹ, ನರಸಿಂಹ ಸಹಿತವಾದ ವಿಷ್ಣುಮೂರ್ತಿಗಳನ್ನು ಸ್ಥಾಪಿಸಿದನಂತೆ. ಇದು ಇಂದು ಮಾರಸ್ವಾಮಿ ವರಾಹ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಮರವಂತೆಯ ಮನಮೋಹಕ ಕಡಲ ತೀರದಲ್ಲಿ ಸಮುದ್ರ ಮತ್ತು ಸೌಪರ್ಣಿಕಾ ನದಿಗಳ ಮಧ್ಯ ಈ ದೇವಸ್ಥಾನವಿದೆ. ಮರವಂತೆಯ ಸುಂದರ ಸೂರ್ಯಾಸ್ತ ಸವಿಯಲು ಬರುವ ಪ್ರಯಾಣಿಕರು ಈ ದೇವಸ್ಥಾನಕ್ಕೊಮ್ಮೆ ಭೇಟಿ ಕೊಡಲೇ ಬೇಕು.
ಮರವಂತೆ ಮಾರಸ್ವಾಮಿ ಕಡಲತೀರ
ಮಹಾರಾಜ ವರಾಹಸ್ವಾಮಿ ಮಂದಿರ, ಮರವಂತೆ
ಸೌಪರ್ಣಿಕಾ ನದಿ

ಒಂದೇ ಗರ್ಭಗುಡಿಯಲ್ಲಿ ವಿಷ್ಣು, ನರಸಿಂಹರೊಟ್ಟಿಗೆ ಪೂಜಿಸಲ್ಪಡುವ ವರಾಹಸ್ವಾಮಿ
       ಒಂದಾನೊಂದು ಕಾಲದಲ್ಲಿ ಸ್ವಾಯಂಭುವ ಮನ್ವಂತರದಲ್ಲಿ ಭೂಮಿಯನ್ನು ನಾಶಮಾಡಬೇಕೆಂದು ಆದಿ ದೈತ್ಯ ಹಿರಣ್ಯಾಕ್ಷ ಭೂಮಿಯನ್ನು ಕಕ್ಷೆಯಿಂದ ಕಳಚಿ ಹೊತ್ತೊಯ್ದನಂತೆ. ಸ್ವಾಯಂಭು ಮನುವು ಬ್ರಹ್ಮನನ್ನು ರಕ್ಷಿಸುವಂತೆ ಪ್ರಾರ್ಥಿಸಿದಾಗ ಬ್ರಹ್ಮ ವಿಷ್ಣುವಿನ ಮೊರೆಹೊಕ್ಕ. ವಿಷ್ಣುವು ವರಾಹಾವತಾರದಲ್ಲಿ ಬಂದು ಹಿರಣ್ಯಾಕ್ಷನನ್ನು ಕೊಂದು ಭೂಮಿಯನ್ನು ಮತ್ತೆ ಕಕ್ಷೆಯಲ್ಲಿ ಎತ್ತಿಟ್ಟನಂತೆ. ಸಣ್ಣವರಿರುವಾಗ ನಾವೆಲ್ಲ ಈ ರೋಚಕ ಕಥೆಯನ್ನು ಬಾಯ್ತೆರೆದು ಕೇಳಿದ್ದೇವೆ. ಆದರೆ ಅಷ್ಟು ದೊಡ್ಡ ಭೂಮಿಯನ್ನ ರಾಕ್ಷಸನೊಬ್ಬ ಹೇಗೆ ಹೊತ್ತುಕೊಂಡು ಹೋದ ಎಂದು ತಿರುಗಿ ಯಾರೂ ಕೇಳಿದಂತಿಲ್ಲ. ದೈತ್ಯನಿಂದ ಕಕ್ಷೆ ತಪ್ಪಿ ನಾಶವಾಗುತ್ತಿದ್ದ ಭೂಮಿಯನ್ನು ಶ್ರೀಹರಿ ವರಾಹ ರೂಪದಲ್ಲಿ ಬಂದು ಎತ್ತಿ ಹಿಡಿದನೆಂಬುದು ಕಥೆ. ಖ್ಯಾತ ರಷ್ಯನ್ ವಿಜ್ಞಾನಿ ವೆಲಿಕೋಸ್ಕಿ ಇದರ ಬಗ್ಗೆಯೇ ವರ್ಲ್ಡ್ಸ್ ಇನ್ ಕೊಲಿಷನ್ ಎಂಬ ಪುಸ್ತಕ ಬರೆದಿದ್ದಾನೆ. ವಿಜ್ಞಾನಿಗಳು ಹೇಳುವಂತೆ ವೈಜ್ಞಾನಿಕವಾಗಿ ಸಾವಿರಾರು ವರ್ಷದ ಹಿಂದೊಮ್ಮೆ ಆಕಾಶಕಾಯವೊಂದರಿಂದಾಗಿ ಭೂಮಿ ತನ್ನ ಕಕ್ಷೆಯಿಂದ ಬೇರ್ಪಟ್ಟಿತ್ತಂತೆ. ಕಕ್ಷೆಯಿಂದ ಕಳಚಿಕೊಂಡರೆ ಅದು ಬೇರೆ ಗ್ರಹಗಳಿಗೆ ಢಿಕ್ಕಿ ಹೊಡೆದು ನಾಶವಾಗುತ್ತದೆ. ಆದರೆ ಮತ್ತೆ ಅದು ಕಕ್ಷೆಗೆ ಪುನಃ ಇದ್ದಕ್ಕಿದ್ದಂತೆ ಬಂದು ಕುಳಿತುಬಿಟ್ಟಿತು. ಹೇಗೆ? ವಿಜ್ಞಾನಿಗಳಿಗೂ ಗೊತ್ತಿಲ್ಲ. ಕಕ್ಷೆಯಿಂದ ಕಳಚಿಕೊಂಡಿದ್ದರ ಕಾರಣ ತಿಳಿದಿದ್ದರೂ ಪುನಃ ಬಂದು ಕುಳಿತ ಕಾರಣ ವಿಜ್ಞಾನಿಗಳಿಗೂ ಗೊತ್ತಿಲ್ಲ. ಅದನ್ನೇ ನಮ್ಮ ಪುರಾಣಕಾರರು ಭಗವಚ್ಛಕ್ತಿ ಎಂದರು. ಆ ಶಕ್ತಿ ನಮ್ಮ ಸನಾತನ ಋಷಿಗಳಿಗೆ ವರಾಹ ರೂಪದಲ್ಲಿ ಕಂಡಿತು. ವರವೆಂದರೆ ಶ್ರೇಷ್ಟ. ವರಾಹನೆಂದರೆ ದೊಡ್ಡದು ಎಂಬರ್ಥವೇ ಹೊರತೂ ಹಂದಿಯೆಂದಲ್ಲ. ಹರಿ ವರಾಹಾವತಾರದಲ್ಲಿ ಹಂದಿಯ ರೂಪತಾಳಿ ಭೂಮಿಯನ್ನು ಎತ್ತಿದ್ದರಿಂದ ಹಂದಿಗಳಿಗೆಲ್ಲ ವರಾಹವೆಂಬ ಹೆಸರು ಬಂದಿದ್ದು. ಹಂದಿಗೆ ಭೂದಾರವೆಂಬ ಹೆಸರಿದೆ. ನೆಲದೊಳಗಿನ ಗಡ್ಡೆಯನ್ನು ಅಗೆದು ತಿಂದು ಬದುಕುವ ಪ್ರಾಣಿಯೆಂಬರ್ಥದಲ್ಲಿ. ಆದರೆ ಈ ಪದದ ಅರ್ಥ ವಿಶೇಷವಾದದ್ದು. ಸಂಸ್ಕೃತದಲ್ಲಿ ’ದಾರ’ ಎಂದರೆ ಹೆಂಡತಿ. ತನ್ನ ಹೆಂಡತಿಯಾದ ಭೂದೇವಿಯನ್ನು ರಕ್ಷಿಸಲು ಭಗವಂತ ತಾಳಿದ ಅವತಾರವಿದೆ. ವರೇಣ್ಯವೆಂಬ ಗಾಯತ್ರಿಯಲ್ಲಿರುವ ಶಬ್ದವೂ ಭೂಮಿಯನ್ನು ಧಾರಣೆ ಮಾಡಿದ ವರಾಹ ರೂಪದ ವರ್ಣನೆಯೇ. ಕೃಷ್ಣ ಗೀತೆಯಲ್ಲಿ ’ಗ್ರಾಮ್ ಧಾರಯಾಮಿ’ ಎನ್ನುತ್ತಾನೆ. ಗ್ರಾಮ್ ಎಂದರೆ ಭೂಮಿ. ಭೂಮಿಯಲ್ಲಿರುವ ಸರ್ವಜೀವಿಗಳ ಒಳಗೆ ಜೀವಾತ್ಮನಾಗಿದ್ದು ಭೂಮಿಯನ್ನು ಹೊತ್ತು ರಕ್ಷಿಸುವವನು ಅವನು. ’ಯ ಪ್ರಥಿವಿ ಅಂತರೋ ಯಮಯತಿ ಏಷತ ಆತ್ಮಾ ಅಂತರ್ಯಾಮಿ ಅಮೃತಃ’ ಎಂಬ ಉಪನಿಷದ್ವಾಣಿ ಹೇಳುವಂತೆ ಭೂಮಿಯೊಳಗಿದ್ದು ನಮ್ಮೆಲ್ಲರನ್ನು ರಕ್ಷಿಸುವವನವನು.
ನಮ್ಮ ಪುರಾಣಗಳೆಂದರೆ ತಮಾಷೆಯಲ್ಲ.

Tuesday, April 28, 2015

ಅಹಿಚ್ಛತ್ರ ಬ್ರಾಹ್ಮಣಾಗಮನಕಥಾ - ೨

ಶಾತವಾಹನ ಸಾಮ್ರಾಜ್ಯ
ಕಳೆದ ಲೇಖನದಲ್ಲಿ ಕದಂಬರು ಅಹಿಚ್ಛತ್ರದಿಂದ ಬ್ರಾಹ್ಮಣರನ್ನು ಕರೆತಂದು ಇಲ್ಲಿ ನೆಲೆಗೊಳಿಸಿದ್ದರ ವಿಷಯವಾಗಿ ಕೆಲ ಉತ್ತರ ಸಿಗದ ಪ್ರಶ್ನೆಗಳಿವೆ ಎಂದಿದ್ದೆನಷ್ಟೆ!
       ಶಾತವಾಹನರ ಯಜ್ಞಾನುಷ್ಟಾನಗಳಿಗೋಸ್ಕರ ಉತ್ತರದ ಅಹಿಚ್ಛತ್ರದಿ೦ದ ಅವರ ರಾಜ್ಯಕ್ಕೆ ಬ೦ದು ಗೋದಾವರಿ ನದಿಯ ದಕ್ಷಿಣಕೂಲದಲ್ಲಿ ನೆಲೆನಿ೦ತಿದ್ದ ವೈದಿಕರನ್ನೇ ಕದ೦ಬರು ಕರೆತ೦ದು ಇಲ್ಲಿ ನೆಲೆಗೊಳಿಸಿದರೆ? ಆರನೇ ಶತಮಾನದ್ದೆನ್ನಲಾಗುವ ಚ೦ದ್ರವಳ್ಳಿಯ ಶಾಸನದ ಪ್ರಕಾರ ಕದ೦ಬರ ರಾಜ್ಯ ಉತ್ತರದಲ್ಲಿ ಮಹಾರಾಷ್ಟ್ರದ ಭರೂಚದವರೆಗೂ, ಪೂರ್ವದಲ್ಲಿ ಆ೦ಧ್ರದವರೆಗೂ ವಿಸ್ತರಿಸಿತ್ತು. ತ್ರೈಕೂಟ, ಅಭೀರ, ಪಲ್ಲವ, ಪಾರಿಯಾತ್ರಿಕ, ಸೇ೦ದ್ರಕ, ಪುನ್ನಾಟ, ಮೌಖರಿ, ಪಶ್ಚಿಮ ವಿ೦ಧ್ಯ ಪ್ರದೇಶಗಳನ್ನೊಳಗೊ೦ಡಿತ್ತು. ಅವರ ರಾಜ್ಯದ ಒಳಗೇ ಇರುವ ಗೋದಾವರಿ ಮೂಲದ ಅಹಿಚ್ಛತ್ರದಿ೦ದ ಬ್ರಾಹ್ಮಣರನ್ನು ಕರೆಸಿ ಇಲ್ಲಿ ನೆಲೆನಿಲ್ಲಿಸಿರಬಹುದೇ? ಹಾಗಾದರೆ ಈ ಗೋದಾವರಿ ತೀರವಿರುವುದು ಮಹಾರಾಷ್ಟ್ರದಲ್ಲೇ ಅಥವಾ ಆ೦ಧ್ರದಲ್ಲೇ?
ಕದ೦ಬ ರಾಜರ ಕು೦ತಳ  ರಾಜ್ಯದಲ್ಲಿ ತುಳುನಾಡಿನ ಆಲುಪರು ದರ್ಮಾಭಿಮಾನಿಗಳೂ, ಸತ್ಯಪುತ್ರರೂ ಆಗಿದ್ದರಿ೦ದ ಅವರ ಆಶಯ ಪ್ರೋತ್ಸಾಹವೂ ಸೇರಿ ಕ್ರಿ.ಶ. ಮೂರನೇ ಶತಮಾನದ ಸುಮಾರಿಗೆ ಅಹಿಚ್ಛತ್ರದ ಬ್ರಾಹ್ಮಣರು ಬ೦ದರೇ? ಹಾಗೆ ಬಂದವರು ಬ್ರಾಹ್ಮಣರು ಮಾತ್ರವಲ್ಲ. ನಂಬೂದಿರಿಗಳು, ತಮಿಳಿನ ಗೌಂಡರ್ ಸಮುದಾಯ, ನಾಗಾ ಸಮುದಾಯಕ್ಕೆ ಸೇರಿದ ಕೇರಳದ ನಾಯರರು, ತುಳುನಾಡಿನ ಬಂಟರು, ಆಂಧ್ರದ ನಾಯ್ಡುಗಳು ಕೂಡ ಇದ್ದಾರೆ. ಇವರೆಲ್ಲರ ಇತಿಹಾಸಗಳೂ ಅಹಿಚ್ಛತ್ರವನ್ನೇ ಉಲ್ಲೇಖಿಸುತ್ತವೆ. ಹಾಗಾದರೆ ಆ ಅಹಿಚ್ಛತ್ರ ಒಂದೇ ಆಗಿತ್ತೇ ಅಥವಾ ಹಲವು ಪ್ರದೇಶಗಳಿಗೆ ಆ ಹೆಸರಿತ್ತೇ? ಒಂದೇ ಪ್ರದೇಶದಿಂದ ಬೇರೆ ಬೇರೆ ಸಮುದಾಯಗಳ ಅಷ್ಟು ದೊಡ್ಡ ಮಟ್ಟಿನ ವಲಸೆಗೆ ಕಾರಣಗಳೇನು?
       ಕೋಟ ಬ್ರಾಹ್ಮಣರು ಅಹಿಚ್ಛತ್ರದಿ೦ದ ಆಂಧ್ರದ ಗೋದಾವರಿ, ಗೋದಾವರಿಯಿ೦ದ ಬನವಾಸಿ, ಬನವಾಸಿಯ ಬಳಿಕ ಈ ಹಾದಿಯಲ್ಲಿ ಹಾಡುವಳ್ಳಿ, ಬೈ೦ದೂರು ಮಾರ್ಗವಾಗಿ ಸಹ್ಯಾದ್ರಿಯ ತಪ್ಪಲಿನ ಪ್ರಮುಖ ಸ೦ಪರ್ಕಪ್ರದೇಶವಾದ ಗ೦ಗನಾಡಿಗೆ ಬ೦ದು ನೆಲೆಸಿದರೆಂದು ಪಿ.ಎನ್. ನರಸಿ೦ಹಮೂರ್ತಿಯವರು ಸಂಪಾದಿಸಿದ ಕು೦ದನಾಡಿನ ಶಾಸನಗಳಲ್ಲಿ ತಿಳಿಸಲಾಗಿದೆ. ಶಾಂಕರ, ಮಾಧ್ವ ಮತಗಳ ಪ್ರಭಾವಕ್ಕೊಳಗಾಗದೇ ತಮ್ಮ ಮೂಲ ಆಚರಣೆಗಳನ್ನು ಉಳಿಸಿಕೊಂಡು ಬಂದ ಕರಾವಳಿಯ ಏಕೈಕ ಬ್ರಾಹ್ಮಣ ಸಮುದಾಯವಿದ್ದರೆ ಅದು ಕೂಟ ಬ್ರಾಹ್ಮಣರು. ಅವರ ಆರಾಧ್ಯ ದೈವ ನರಸಿಂಹ. ಆಂಧ್ರದಲ್ಲಿರುವಷ್ಟು ದೊಡ್ಡ ಮಟ್ಟಿನ ನರಸಿಂಹಾರಾಧನೆಯನ್ನು ಬೇರಾವ ರಾಜ್ಯಗಳಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂಬುದೊಂದು ವಿಶೇಷ. ’ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ ವಿಪ್ರರ ವಲಸೆಯನ್ನು ಪ್ರೋತ್ಸಾಹಿಸಿತು. ಕ್ರಿ.ಪೂ ೫೦ ರಿ೦ದ ಕ್ರಿ.ಶ ೨೦೦ರ ತನಕ ದಕ್ಷಿಣದಲ್ಲಿ ರಾಜ್ಯವಾಳಿದ ಶಕಪುರುಷ, ದಕ್ಷಿಣಾಪಥಪತಿ ಶಾಲಿವಾಹನ ಚಕ್ರವರ್ತಿಯ ಆಶ್ರಯ, ನಿರ೦ತರ ಯಜ್ಞಯಾಗದಿ೦ದ ಇವರ ವಲಸೆಗೆ ನೆರವು ಸಿಕ್ಕಿತು’ ಎಂದು ಉಪ್ಪುಂದ ಚಂದ್ರಶೇಖರ ಹೊಳ್ಳರು ತಮ್ಮ ’ಕೂಟಮಹಾಜಗತ್ತು’ ಎಂಬ ಸಂಶೋಧನಾ ಗ್ರಂಥದಲ್ಲಿ ಹೇಳಿದ್ದಾರೆ. ಅವರ ಊಹೆ ಸರಿಯಾದುದಾದರೂ, ಗ್ರಹಿಕೆ ಸರಿಯಿಲ್ಲವೆನ್ನುವುದು ನನ್ನಭಿಪ್ರಾಯ. ಮೌರ್ಯರಿದ್ದುದು ಕ್ರಿ.ಪೂ ಹತ್ತನೇ ಶತಮಾನಕ್ಕೂ ಹಿಂದೆ, ಅಲೆಕ್ಸಾಂಡರ್ ದಾಳಿಮಾಡಿದ್ದು ಗುಪ್ತರ ಕಾಲದಲ್ಲಿ, ಮೇಲಾಗಿ ಅಸಲಿ ಶಾಲಿವಾಹನನಾಳಿದ್ದು ಉಜ್ಜೈನಿಯನ್ನೇ ಹೊರತೂ ದಕ್ಷಿಣಾಪಥವನ್ನಲ್ಲ, ಕ್ರಿ.ಶ ೭೮ರಲ್ಲಿ ಪ್ರಾರಂಭವಾದ ಶಾಲಿವಾಹನ ಶಕೆಯ ಪ್ರಾರಂಭಕರ್ತೃ ಶಕಪುರುಷ ಶಾಲಿವಾಹನನೆಂದೇ ತಲೆಕೆಟ್ಟ ಬ್ರಿಟಿಷ್ ಇತಿಹಾಸಕಾರರಿಂದ ಗುರುತಿಸಲ್ಪಟ್ಟ ದಕ್ಷಿಣಾಪಥಪತಿ, ತ್ರಿಸಮುದ್ರತೋಯಪೀತವಾಹನನೆಂದೆಲ್ಲ ಬಿರುದಾಂಕಿತ ಗೌತಮೀಪುತ್ರಶಾತಕರ್ಣಿ ಆಳ್ವಿಕೆ ನಡೆಸಿದ ಕಾಲ ಕ್ರಿ.ಪೂ ೪ನೇ ಶತಮಾನ. ಈ ಮೂರೂ ಅಂಶಗಳಿಗೂ ತಾಳಮೇಳವಿಲ್ಲ. ಮೇಲಾಗಿ ಅಲೆಕ್ಸಾಂಡರಿನ ಆಕ್ರಮಣವಾದರೂ ಆತ ಸಿಂಧೂನದಿಯನ್ನು ದಾಟಲಾಗಲಿಲ್ಲವೆಂಬುದು ಸತ್ಯ. ಕಾರಣ, ಆಗ ಉತ್ತರ ಭಾರತವನ್ನಾಳುತ್ತಿದ್ದುದು ಯಾವುದೋ ಸಣ್ಣ ಪುಟ್ಟ ಚಿಲ್ಲರೆ ರಾಜವಂಶವಲ್ಲ. ಭಾರತದ ಸ್ವರ್ಣಯುಗದ ಸೃಷ್ಟಿಕರ್ತೃರೆನಿಸಿಕೊಂಡ ಗುಪ್ತರು ಅಲ್ಲಿ ಪಟ್ಟಕ್ಕೇರಿದ್ದರು. ವೈದಿಕ ಸಂಸ್ಕೃತಿ, ಸಂಪ್ರದಾಯಗಳ ರಕ್ಷಣೆಗೆ ಗುಪ್ತರ ಕೊಡುಗೆ ಕಡಿಮೆಯೇನಲ್ಲ. ಅಲೆಕ್ಸಾಂಡರಿನಂಥ ವೀರನೇ ಭಾರತದೊಳಬರಲು ಹೆದರಿದ್ದನೆಂದರೆ ಸಮಕಾಲೀನ ರಾಜನೀತಿಯಲ್ಲಿ ಗುಪ್ತರ ಪ್ರಾಬಲ್ಯವನ್ನು ಊಹಿಸಬಹುದು. ಅಂಥಹುದರಲ್ಲಿ ಉತ್ತರ ಭಾರತದಲ್ಲಿ ವಿದೇಶಿಗರ ಆಕ್ರಮಣ ತಾಳಲಾರದೇ ಬ್ರಾಹ್ಮಣರು ಅಲ್ಲಿಂದ ದಕ್ಷಿಣಕ್ಕೆ ವಲಸೆಬಂದರೆಂಬುದು ಸಾಧುವಾದವಲ್ಲ.
       ಸುದೀರ್ಘ ೫೦ ವರ್ಷಗಳ ಕಾಲ ರಾಜ್ಯವಾಳಿದ ಸಮುದ್ರಗುಪ್ತ , ಸಪ್ತಸಿ೦ಧೂ ಪ್ರದೇಶಗಳನ್ನು ಆಕ್ರಮಿಸಿ ಆ ಭಾಗದ ಯೌಧೇಯರನ್ನು ತನ್ನ ಅಧೀರರನ್ನಾಗಿಸಿದ ವಿಚಾರ ಅವನ ಅಲಹಾಬಾದಿನ ಸ್ತಂಭ ಶಾಸನದಲ್ಲಿ ಉಲ್ಲೇಖಿತವಾಗಿದೆ. ಅದರಲ್ಲಿ ಸಮುದ್ರಗುಪ್ತನು ಸಟ್ಲೇಜ್ ನದಿ ಪ್ರದೇಶದ ಬ್ರಹ್ಮಾವರ್ತವನ್ನೂ,  ದಕ್ಷಿಣಾಪಥವನ್ನೂ ಆಕ್ರಮಿಸಿ ಅಹಿಚ್ಛತ್ರದ ರಾಜನಾದ ಅಚ್ಯುತನನ್ನೂ, ಚಂಪಾವತಿಯ ನಾಗಸೇನನನ್ನೂ, ಕೋಟದ ಮುಖ್ಯಸ್ಥನನ್ನೂ ಜಯಿಸಿದನೆ೦ದು ಹೇಳಿಕೊಂಡಿದ್ದಾನೆ. ಪೊಳಲಿ ನಾರಾಯಣ ಮಯ್ಯರು ’ಕೂಟಬಂಧು’ ಮಾಸಿಕದಲ್ಲಿ ಇದನ್ನೊಮ್ಮೆ ಪ್ರಸ್ತಾವಿಸಿದ್ದರು. ಆಂಧ್ರದ ಗೋದಾವರಿಯ ದಕ್ಷಿಣಕ್ಕೆ ಚಂಪಾವತಿ ನದಿಮುಖಜ ಭೂಮಿಯ ಪ್ರದೇಶಕ್ಕೆ ಚಂಪಾವತಿಯೆಂದು ಹೆಸರು. ಅವೆರಡೂ ಒಂದೇ ಆಗಿರಬಹುದೇ? ಕೋಟ ಎಂಬ ಹೆಸರಿನ ಊರು ಕರ್ನಾಟಕದ ಉಡುಪಿ ಹಾಗೂ ಆಂಧ್ರಪ್ರದೇಶ ನೆಲ್ಲೂರು ಈ ಎರಡೂ ಕಡೆಯೂ ಇವೆ(ರಾಜಸ್ಥಾನ, ಮಲೇಷಿಯಾಗಳಲ್ಲೂ ಇವೆ). ಅಹಿಚ್ಛತ್ರವೂ ಅಲ್ಲೆಲ್ಲೋ ಹತ್ತಿರದಲ್ಲೇ ಇರಬಹುದೇ? ಇದೇ ಸಮುದ್ರಗುಪ್ತ ಪಲ್ಲವರೊಡನೆ ಕಾದಾಡಿ ಶಿವಸ್ಕಂಧವರ್ಮನನ್ನು ಸೋಲಿಸಿದ್ದ. ಈ ಸೋಲಿನಿಂದ ಪಲ್ಲವರು ಬಲಗುಂದಿದ್ದನ್ನೇ ನೋಡಿಕೊಂಡು ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಸಮುದ್ರಗುಪ್ತ, ಪಲ್ಲವರ ಶಿವಸ್ಕಂಧವರ್ಮ ಮತ್ತು ಕದಂಬರ ಮಯೂರವರ್ಮ ಈ ಮೂವರೂ ನಿಸ್ಸಂದೇಹವಾಗಿ ಸಮಕಾಲೀನರು. ಸಮುದ್ರಗುಪ್ತನ ಕಾಲವನ್ನು ತಪ್ಪುತಪ್ಪಾಗಿ ಲೆಕ್ಕಹಾಕಿದ ಇತಿಹಾಸಕಾರರ ಬಗ್ಗೆ ಹಿಂದಿನ ಲೇಖನದಲ್ಲಿ ಬರೆದಿದ್ದೆ. ಮಹಾಭಾರತ ಯುದ್ಧ ನಡೆದ ಸುಮಾರು 1500 ವರ್ಷಗಳಿಗೆ ಅಂದರೆ ಕ್ರಿ.ಪೂ 1634ರಲ್ಲಿ ಮಗಧದಲ್ಲಿ ಮಹಾಪದ್ಮನಂದನ ಪಟ್ಟಾಭಿಷೇಕ ನಡೆಯಿತು. ಅವನೂ ಅವನ ಮಕ್ಕಳೂ ಸೇರಿ ನವನಂದರು ನೂರು ವರ್ಷಗಳವರೆಗೆ ಆಳ್ವಿಕೆ ನಡೆಸಿದರು. ತನಗಾದ ಅವಮಾನಕ್ಕೆ ಪ್ರತೀಕಾರವಾಗಿ ನಂದರ ಕೊನೆಯ ಅರಸ ಧನನಂದನನ್ನು ಚಂದ್ರಗುಪ್ತ ಮೌರ್ಯನೆಂಬ ಯುವಕನ ಸಹಾಯದಿಂದ ಕೊಲ್ಲಿಸಿದ ಚಾಣಕ್ಯ ಅವನನ್ನೇ ಕ್ರಿ.ಪೂ 1534ರಲ್ಲಿ ಮಗಧದ ಸಿಂಹಾಸನವನ್ನೇರಿಸಿದ. 316 ವರ್ಷಗಳ ಮೌರ್ಯವಂಶದ ಆಳ್ವಿಕೆಯ ನಂತರ 891 ವರ್ಷಗಳು ಶುಂಗ, ಕಾಣ್ವ ಮತ್ತು ಆಂಧ್ರ ಶಾತವಾಹನ ವಂಶಗಳು ಆಳ್ವಿಕೆ ನಡೆಸಿದವು. ಆಂಧ್ರವಂಶದ ಚಂದ್ರಶ್ರೀ ಅಥವಾ ಚಂದ್ರಮಸುವಿನ ಆಳ್ವಿಕೆಯಲ್ಲೇ ಅಲೆಕ್ಸಾಂಡರಿನ ದಂಡಯಾತ್ರೆ ನಡೆದದ್ದು. ಈ ಚಂದ್ರಮಸುವನ್ನೇ ಗ್ರೀಕ್ ಲೇಖಕರು Agrammes ಅಥವಾ Xandramus ಎಂದಿದ್ದು. ಅದೇ ವರ್ಷ ಚಂದ್ರಮಸುವನ್ನೂ ಅವನ ಮಗ ಪುಲೋಮನನ್ನೂ ಹತ್ಯೆಗೈದು ಆಂಧ್ರ ಭೃತ್ಯ ವಂಶವನ್ನು ಸ್ಥಾಪಿಸಿ ಪಾಟಲೀಪುತ್ರವನ್ನು ರಾಜಧಾನಿಯನ್ನಾಗಿಸಿ ಅಧಿಕಾರಕ್ಕೇರಿದವನು ಮೊದಲನೇ ಚಂದ್ರಗುಪ್ತ. ’ಆಂಧ್ರಭೃತ್ಯಾಸ್ಸಪ್ತಃ’ಎಂದು ವಿಷ್ಣುಪುರಾಣವೂ, ’ಆಂಧ್ರಾಣಾಂ ಸಂಸ್ಥಿತಾರಾಜ್ಯೇತೇಷಾಂ ಭೃತ್ಯಾನ್ವಯೇ ಸಪ್ತೈವಾಂಧ್ರಾ ಭವಿಷ್ಯಂತಿ’ಎಂದು ಮತ್ಸ್ಯ ಪುರಾಣವೂ ಆಂಧ್ರರ ಬಳಿಕ ಆಂಧ್ರಭೃತ್ಯವಂಶದ ಏಳು ರಾಜರುಗಳು ರಾಜ್ಯವಾಳಿದ್ದನ್ನು ತಿಳಿಸುತ್ತದೆ. ಈ ಆಂಧ್ರಭೃತ್ಯರು ಗುಪ್ತರಲ್ಲದೇ ಮತ್ಯಾರೂ ಅಲ್ಲ. ಸಮುದ್ರಗುಪ್ತ ಪಟ್ಟಕ್ಕೆ ಬಂದಿದ್ದು ಕಲಿಯುಗದ ೨೭೮೩ನೇ ವರ್ಷದಲ್ಲಿ ಅಂದರೆ ಸುಮಾರಿಗೆ ಕ್ರಿ.ಪೂ ೩೨೦ರ ಆಜುಬಾಜು. ಹಾಗಿದ್ದಲ್ಲಿ ಮಯೂರವರ್ಮನೂ ಅದೇ ಕಾಲದವನಾಗಬೇಕಾಯಿತಲ್ಲವೇ? ಅಲ್ಲಿಗೆ ಬ್ರಾಹ್ಮಣರು ಅಹಿಚ್ಛತ್ರದಿಂದ ವಲಸೆಬಂದರೆನ್ನಲಾದ ಕಾಲ ಸುಮಾರು ಐನೂರು ವರ್ಷಗಳಷ್ಟು ಹಿಂದೆ ದೂಡಲ್ಪಟ್ಟಿತು(?).
       ಕರಾವಳಿಯಲ್ಲಿ ಮೊದಲೇ ಬ್ರಾಹ್ಮಣ ವಸತಿ ಇದ್ದಿತ್ತು ಎಂದಿಟ್ಟುಕೊಳ್ಳೋಣ. ಆದರೆ ಯಜ್ಞಯಾಗಾದಿಗಳನ್ನು ಋಷಿಸ೦ಪ್ರದಾಯ ಪ್ರವರ್ತಕರೂ, ಮ೦ತ್ರವೇತ್ತರೂ, ಮ೦ತ್ರದೃಷ್ಟಾರರೂ ಅಗಿರುವವರಿ೦ದಲೇ ಮಾಡಿಸಬೇಕಿತ್ತು. (ಹೆಚ್ಚಿನ ವಿವರ ವೇ.ಬ್ರ. ಬನವತಿ ರಾಮಕೃಷ್ಣ ಶಾಸ್ತ್ರಿಗಳ ’ಗೋತ್ರಪ್ರವರ ವಿಷಯ’). ಹಾಗಾಗಿದ್ದರಿಂದಲೇ ಮಯೂರ ವರ್ಮ ವೇದಪಾರಂಗತರನ್ನು ಬೇರೆಡೆಯಿಂದ ಕರೆಸಬೇಕಾಯ್ತು. ಕರ್ನಾಟಕ ಚರಿತ್ರೆ ಸ೦ಪುಟ ೧ ಪುಟ ೩೧೬ರಲ್ಲಿಯೂ ಉಲ್ಲೇಖಿಸಿದ೦ತೆ ನಾಸಿಕದ ಮಾಧವಪುರ ಷಟ್‌ಕೋನ ಸ್ಯೂಪಸ್ಥ೦ಭ ಶಾಸನವು ಸಾಕೇತ ಅಯೋಧ್ಯೆಯಿ೦ದ ಬ೦ದ ಕಾಶ್ಯಪ ಗೋತ್ರದ ಕಠಶಾಖೆಯ ಸೋಮಯಶಸ್ ಬ್ರಾಹ್ಮಣನು ಕ್ರಿ.ಶ ೧೦೨ರಲ್ಲಿ(?) ವಾಜಪೇಯ ಯಾಗವನ್ನು ಶಾತವಾಹನ ರಾಜರ ಪರವಾಗಿ ನೇರವೇರಿಸಿದ ಎಂದಿದೆ. ಈ ಶಾತವಾಹನರ ಪ್ರಾ೦ತೀಯ ರಾಜಧಾನಿ ಬನವಾಸಿಯಾಗಿತ್ತು.  ಶಾತವಾಹನರ ಬಳಿಕ ಕರಾವಳಿ ಮ೦ಡಲವನ್ನಾಳತೊಡಗಿದ ಒ೦ದನೇ ಚುಟುಕುಲಾನ೦ದ ಶಾತಕರ್ಣಿ ಮತ್ತವನ ಮಗ ಎರಡನೇ ಮಗ ವಿಣ್ಹೆ ಚುಟುಕುಲಾನ೦ದ ಶಾತಕರ್ಣಿಯರು ಅನೇಕ ಯಾಗಗಳನ್ನು ನೆರವೇರಿಸಿ ದಾನದತ್ತಿ ನೀಡಿದ ಬಗ್ಗೆ ಶಾಸನಗಳಿವೆ. ಶಾತವಾಹನರು ಹಾರೀತ ಪುತ್ರರೆ೦ದೂ, ಮಾನ್ಯ ಗೋತ್ರದವರೆ೦ದೂ ತಮ್ಮನ್ನು ಕರೆದುಕೊ೦ಡಿದ್ದರು. ಅವರ ನ೦ತರ ಆಳ್ವಿಕೆಗೆ ಬ೦ದ ಮಯೂರವರ್ಮ ತಾನು ಶಿವಸ್ಕ೦ದವರ್ಮನ ಮರಿಮೊಮ್ಮಗ, ವೀರಶರ್ಮನ ಮೊಮ್ಮಗ, ಬ೦ಧುಷೇಣನ ಮಗನೆಂದೂ ಹಾರೀತ ಪುತ್ರ, ಮಾನ್ಯ ಗೋತ್ರದವನೆ೦ದೂ ಹೇಳಿಕೊಂಡು ತನ್ನ ಮೂಲವನ್ನು ಶಾಲಿವಾಹನರ ಜೊತೆ ಗುರುತಿಸಿಕೊಂಡಿದ್ದಾನೆ.
        ಉತ್ತರದಲ್ಲಿ ಅಲೆಕ್ಸಾ೦ಡರಿನ ದಾಳಿಯ ನ೦ತರ ಹೆಚ್ಚಾದ ಪರದೇಶಿ ಆಕ್ರಮಣಗಳು, ಅಶೋಕನ ಕಾಲದಲ್ಲಿ ಬೌದ್ಧ ಧರ್ಮಕ್ಕೆ ಸಿಕ್ಕ ಪ್ರೋತ್ಸಾಹ,  ಅಶೋಕನ ಮೊಮ್ಮಗ ಸಮ್ಪ್ರತಿಯ ಕಾಲದಲ್ಲಿ ಆ೦ಧ್ರದ ಗೋದಾವರಿ ತಟದವರೆಗೆ ಹಬ್ಬಿದ್ದ ಕಳಿ೦ಗರಾಜ್ಯದಲ್ಲಿ ಜೈನಮತಾಚರಣೆ ವ್ಯಾಪಕಗೊ೦ಡಿದ್ದು ವಿಪ್ರರ ವಲಸೆಯನ್ನು ಗೋದಾವರಿಯ ದಕ್ಷಿಣಕ್ಕೆ ಪ್ರೋತ್ಸಾಹಿಸಿತು. ಕಳಿ೦ಗ ರಾಜ್ಯದ ರಾಜಧಾನಿ ಕಳಿ೦ಗಪಟ್ಟಣವಿರುವುದು ಆ೦ಧ್ರದ ಗೋದಾವರಿ ತೀರದ ಶ್ರೀಕಾಕುಳ೦ನಲ್ಲಿ. ಖಾರವೇಲರ ಕಾಲದಲ್ಲಿ ಉತ್ತರ ಆ೦ಧ್ರದ ಬಹುಭಾಗ ಜೈನಮತ ಪ್ರವರ್ಧಮಾನಕ್ಕೆ ಬ೦ದು ವೈದಿಕ ಮತ ಅನಾದರಕ್ಕೆ ಕಾರಣವಾಗಿತ್ತು. ಅದೇ ಕಾರಣಕ್ಕೋ ಏನೋ ಕಳಿ೦ಗ ರಾಜ್ಯಕ್ಕೆ ಕಾಲಿಟ್ಟರೆ ಪ್ರಯಶ್ಚಿತ್ತ ಮಾಡಿಕೊಳ್ಳಬೇಕೆ೦ದು ಬೋಧಾಯನ ಒ೦ದು ಕಡೆ ಹೇಳುತ್ತಾನೆ. ಹಾಗೆ ನೋಡಿದರೆ ಯಜುರ್ವೇದದ ಸೂತ್ರಕಾರರಾದ ಆಪಸ್ತಂಭ ಮತ್ತು ಬೋಧಾಯನರಿಬ್ಬರೂ ಆಂಧ್ರದೇಶದವರೇ.(’Encyclopaedia of the History of Science, Technology, and Medicine in Non-Western Cultures edited by Helaine Selin’). ಅದರರ್ಥ ಆಂಧ್ರದೇಶವು ಮೊದಲಿನಿಂದಲೂ ವೈದಿಕ ಚಟುವಟಿಕೆಗಳ ಮುಖ್ಯಕೇಂದ್ರವಾಗಿತ್ತು. ಉತ್ತರದಿಂದ ಗೋದಾವರೀ ತೀರಕ್ಕೆ ಬಂದಿರಬಹುದಾಗಿದ್ದ ವಿಪ್ರರು ಶಾತವಾಹನರ ನಂತರ ಅಲ್ಲಿಂದ ಮತ್ತೆ ದಕ್ಷಿಣದತ್ತ ಉನ್ನತ ಸ್ಥಾನಮಾನವನ್ನರಸಿ ತೆರಳಿರಬಹುದು.
       ಶಾತವಾಹನ ಸಾಮ್ರಾಜ್ಯದಲ್ಲಿ ಮೊದಲ ಮಗ ಪಟ್ಟಕ್ಕೇರುತ್ತಿದ್ದ. ಉಳಿದ ಮಕ್ಕಳು ಮತ್ತು ಅಳಿಯಂದಿರು ವಿವಿಧ ಮಂಡಳಗಳ ಅಥವಾ ಪ್ರಾಂತ್ಯಗಳ ಅಧಿಪತಿಗಳಾಗುತ್ತಿದ್ದರು. ಶಾತವಾಹನರ ಕೊನೆಯ ಅರಸು ಪುಲೋಮಶ್ರೀ ಶಾತಕರ್ಣಿಯ ಕಾಲದಲ್ಲಿ ಸಾಮ್ರಾಜ್ಯ ಶಿಥಿಲವಾಗಿತ್ತು. ಚಿಕ್ಕ ಚಿಕ್ಕ ಪ್ರಾಂತ್ಯಗಳ ಆಡಳಿತಾಧಿಕಾರಿಗಳಾಗಿದ್ದ ವಂಶಸ್ಥರೆಲ್ಲ ದಾಯಾದಿ ಕಲಹದಲ್ಲಿ ತೊಡಗಿ ಹೊಡೆದಾಡತೊಡಗಿದರು. ಅವರಲ್ಲಿ ಕೆಲವರು ಸ್ವಾತಂತ್ರ್ಯವನ್ನು  ಘೋಷಿಸಿಕೊಂಡು ತಮ್ಮದೇ ರಾಜ್ಯ ಕಟ್ಟಿಕೊಂಡರು. ಮುಂದೆ ಶಾತವಾಹನ ಸಾಮ್ರಾಜ್ಯ ಹನ್ನೆರಡು ಕವಲುಗಳಾಗಿ ಒಡೆದು ಹೋಯಿತೆಂದು ಬ್ರಹ್ಮಾಂಡಪುರಾಣ(ಅಂಧ್ರಾರಾಮ್ ಸಂಸ್ಥಿತಾಃ ಪಂಚ ತೇಷಾಮ್ ವಸಶ್ಚಃ ಯೇ ಪುನ ಸಪ್ತೈವತು ಭವಿಷ್ಯಂತಿ -ಅಧ್ಯಾಯ ೭೭, ೧೭೧) ಮತ್ತು ವಾಯುಪುರಾಣಗಳು ತಿಳಿಸುತ್ತವೆ. ಪಲ್ಲವರು, ಸೇನ, ಕದಂಬ, ವಿಷ್ಣುಕೌಂಡಿನ್ಯ, ಬೃಹತ್ಪಾಲ, ಬಾಣ, ರಾಜಪುತ್ರ, ಸಾಲಂಖ್ಯಾಯನ, ವಕಟಕ, ವಲ್ಲಭೀ, ವೈದುಂಬ, ನೊಳಂಬರೆಲ್ಲರ ಮೂಲವೂ ಆಂಧ್ರಶಾತವಾಹನರೇ. ಶಾತವಾಹನ ವಂಶಸ್ಥರು ಕಾಶ್ಮೀರವನ್ನೂ ಆಳಿದ್ದರೆಂದು ಕಲ್ಹಣನ ರಾಜತರಂಗಿಣಿ ತಿಳಿಸುತ್ತದೆ. ಪಲ್ಲವರು ಮುಂದೆ ಕಂಚಿಯನ್ನು ರಾಜಧಾನಿಯನ್ನಾಗಿಸಿಕೊಂಡರೂ ಅವರ ಮೂಲ ತೆಲುಗು ನಾಡೇ. ಅವರು ಮೊದಲು ಆಳಿದ್ದು ಕೃಷ್ಣಾ ಮತ್ತು ಗುಂಟೂರು ವಲಯವನ್ನು. ಮುಂದೆ ಸ್ಕಂದವರ್ಮನ ಕಾಲದಲ್ಲಿ ಅದು ಕೃಷ್ಣಾ ನದಿಯಿಂದ ದಕ್ಷಿಣದಲ್ಲಿ ಪೆನ್ನಾರ್ ವರೆಗೂ ಪಶ್ಚಿಮದಲ್ಲಿ ಬಳ್ಳಾರಿಯವರೆಗೂ ವಿಸ್ತರಣೆಯಾಯಿತು. ಪಲ್ಲವ ಶಬ್ದಾರ್ಥವೇ ಬಳ್ಳಿ ಅಥವಾ ಎಲೆ.
     
ಪಲ್ಲವ ರಾಜ್ಯ
ಅದು ಮುಂದೆ ತಮಿಳೀಕರಣಗೊಂಡು ಪಲ್ಲವರು ತೊಂಡೈಯಾರರೆಂದು ಹೆಸರಾದರು. ತೊಂಡೆ ಬಳ್ಳಿಯನ್ನು ಲಾಂಛನವಾಗಿ ಹೊಂದಿದವರೆಂಬರ್ಥದಲ್ಲಿ. ಪಲ್ಲವರ ತಮಿಳು ಶಾಸನಗಳಲ್ಲೆಲ್ಲ ತೊಂಡೈಯಾರ ಮತ್ತು ಕಡುವೆಟ್ಟಿ ಎಂಬ ಶಬ್ದಗಳು ಸಮಾನಾರ್ಥಕಗಳಾಗಿ ಹಲವೆಡೆ ಉಲ್ಲೇಖಿಸಲ್ಪಟ್ಟಿದೆ. ತೆಲುಗು ಪಲ್ಲವರ ಮೂಲಪುರುಷ ತ್ರಿನೇತ್ರ ಪಲ್ಲವ ಅಥವಾ ಮುಕ್ಕಂಟಿ ಕಡುವೆಟ್ಟಿ ಪಲ್ಲವನ ಹೆಸರು ಅವರ ಮೊದಮೊದಲ ನೆಲ್ಲೂರು ಶಾಸನದಿಂದ ಹಿಡಿದು ಹೆಚ್ಚಿನೆಲ್ಲ ಶಾಸನಗಳಲ್ಲಿ ಬಳಕೆಯಾಗಿದೆ.(Butterworth, Nellore inscriptions, I, p.389, I, p. 671, XI, p. 340 ಮತ್ತು Prof. Eilson, catalogue of the Oriental Manuscripts of Colonel Mackenzie) ವೇಲನಾಡು ಹಾಗೂ ಕೊಂಡಪದ್ಮಟಿ ಸಾಮಂತರಸರ ಶಾಸನಗಳಲ್ಲಲ್ಲದೇ ನೊಳಂಬರ ದಾಖಲೆಗಳಲ್ಲೂ ಮುಕ್ಕಂಟಿ ಪಲ್ಲವನನ್ನು ಹೊಗಳಲಾಗಿದೆ. ತೆಲುಗು ಚೋಳರು ತಮ್ಮ ಮೂಲಪುರುಷ ಕರಿಕಾಲ ಚೋಳನನ್ನು ಎಲ್ಲೆಡೆಯೂ ನೆನೆದಂತೆ ತೆಲುಗು ಪಲ್ಲವರೂ ’ಕಾಡುಕಡಿದು ನಾಡು ಕಟ್ಟಿದವನೆಂದು, ಬ್ರಾಹ್ಮಣರ ಭಾಗ್ಯವಿಧಾತನೆಂದೂ’ ಮುಕ್ಕಂಟಿಯನ್ನು ಹೊಗಳುವ ಯಾವ ಅವಕಾಶವನ್ನೂ ತಮ್ಮ ಶಾಸನಗಳಲ್ಲಿ ಕಳೆದುಕೊಂಡಿಲ್ಲ. ಪಿ.ಟಿ ಶ್ರೀನಿವಾಸ್ ಅಯ್ಯಂಗಾರ್ ತಮ್ಮ History of the Tamils from the Earliest Times to 600 A.D ಗ್ರಂಥದಲ್ಲಿ ಇದನ್ನು ಸವಿವರವಾಗಿ ಚರ್ಚಿಸಿದ್ದಾರೆ. ಈ ತ್ರಿಲೋಚನನ ಬಗ್ಗೆ ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲದಿದ್ದರೂ ಅವನ ಬಗ್ಗೆ ಸಾಕಷ್ಟು ಸಂಶೋಧನೆಗಳಿನ್ನೂ ನಡೆದಿಲ್ಲ. ಈತ ಕರಿಕಾಲ ಚೋಳನ ಸಮಕಾಲೀನ. ಕರಿಕಾಲ ಚೋಳನ ಕಾಲ ಈಗ ನಂಬಲ್ಪಡುವಂತೆ Gajabahu synchronismನ ಪ್ರಕಾರ ಕ್ರಿ.ಶ ೧೯೦. ಅಂದರೆ ಮಯೂರ ವರ್ಮನಿಗಿಂತ ಕನಿಷ್ಟ ನೂರೈವತ್ತು ವರ್ಷಗಳ ಹಿಂದೆ. ಇದೇ ಕರಿಕಾಲ ಚೋಳ ಕಾವೇರಿ ತೀರದಲ್ಲಿ ತ್ರಿನೇತ್ರ ಪಲ್ಲವನನ್ನು ಸೋಲಿಸಿದ್ದನೆಂದು ಚೋಳರ ಶಾಸನಗಳಲ್ಲಿ ದಾಖಲಾಗಿದೆ(ಕರುಣಾ ಸರೋರುಹ ವಿಹಿತ ವಿಲೋಚನ ಪಲ್ಲವ ತ್ರಿಲೋಚನ ಪ್ರಮುಖ ಕಿಲಪ್ರಿಥ್ವೀಶ್ವರ ಕರಿತ ಕಾವೇರಿ ತೀರ- ಪುಣ್ಯಕುಮಾರನ ಮೇಲಪಾಡು ತಾಮ್ರಶಾಸನ). ಈ ತ್ರಿನೇತ್ರ ಪಲ್ಲವ ಈಗಿನ ಕಡಪ ಪ್ರಾಂತ್ಯದಲ್ಲಿ ತ್ರಿಲೋಚನಪುರಿಯೆಂಬ ನಗರವನ್ನು ಕಟ್ಟಿಸಿದ್ದನಂತೆ. ಅದೀಗ ಪೆದ್ದಮುಡಿಯಂ ಎಂದು ಹೆಸರಾಗಿದೆ. ಜೊತೆಗೆ ತೆಲುಗು ಚೋಳರ ಶಾಸನಗಳಲ್ಲಿ ಈತ ಪೆರುಗಂದೂರಿನಲ್ಲಿ ೫೨ ಬ್ರಾಹ್ಮಣರಿಗೆ ದಾನನೀಡಿದ ಸಾಲುಗಳಿವೆ. ಗುಂಟೂರಿನ ಶಾಸನವೊಂದರಲ್ಲಿ ಬಾಪಟ್ಲದಲ್ಲಿ ೭ ಗ್ರಾಮಗಳನ್ನು ಬ್ರಾಹ್ಮಣರಿಗೆ ದಾನಮಾಡಿದ್ದಕ್ಕೆ ಆಧಾರವಿದೆ. ಆದರೆ ಈತ ಅತಿ ಹೆಚ್ಚಾಗಿ ನೆನೆಯಲ್ಪಟ್ಟಿದ್ದು ಶ್ರೀಪರ್ವತದಲ್ಲಿ ಅಹಿಚ್ಛತ್ರದಿಂದ ೭೦ ಬ್ರಾಹ್ಮಣ ಕುಟುಂಬಗಳನ್ನು ಕರೆಸಿ ನೆಲೆಗೊಳಿಸಿದ ಕಾರ್ಯಕ್ಕೆ. ಮುಂದೆ ಈ ಪ್ರಾಂತ್ಯವನ್ನಾಳಿದ್ದ ಮಯೂರವರ್ಮ ಅದೇ ಬ್ರಾಹ್ಮಣರನ್ನು ಕರಾವಳಿಗೆ ಕರೆತಂದನೇ? ಇದೇ ಮುಕ್ಕಂಟಿಯ ಕುರಿತು ವಲ್ಲಭಾಬ್ಯುದಯಮ್ ಮತ್ತು ಶ್ರೀಕಾಕುಳಂನ ಇತಿಹಾಸದ ಬಗೆಗಿನ ಶ್ರೀಕಾಕುಳ ಮಹಾತ್ಮ್ಯಮ್‌ಗಳಲ್ಲಿ ಎರಡು ಆಸಕ್ತಿದಾಯಕ ಕಥೆಯಿದೆ. ಧರಣೀಕೋಟವನ್ನಾಳುತ್ತಿದ್ದ ಮುಕ್ಕಂಟಿ ಪಲ್ಲವ ಶಿವನ ವರಪ್ರಸಾದದಿಂದ ಜನಿಸಿದವನು. ಅದೇ ಕಾರಣಕ್ಕಾಗಿ ಅವನಿಗೆ ಹಣೆಯ ಮೇಲೆ ಮೂರನೇ ಕಣ್ಣೊಂದಿತ್ತಂತೆ(ಮಯೂರನನ್ನೊಮ್ಮೆ ನೆನಪಿಸಿಕೊಳ್ಳಿ). ಈತ ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಹಾರುವ ಪಾದರಕ್ಷೆಗಳನ್ನು ಪಡೆದುಕೊಂಡಿದ್ದ. ಒಂದು ದಿನ ನಾರದರ ಮಾತಿನಂತೆ ಗಂಗಾ ನದೀ ತೀರದ ಅಹಿಚ್ಛತ್ರದಲ್ಲಿರುವ ಶ್ರೀವಲ್ಲಭನನ್ನು ಪೂಜಿಸಲು ತೆರಳಿದ. ಆತ ಗಂಗೆಯಲ್ಲಿ ಸ್ನಾನಮಾಡುವಾಗ ಕಳಚಿಟ್ಟ ಪಾದರಕ್ಷೆಗಳು ಹಿಂದಿರುಗಿ ಬರುವಾಗ ಕಳುವಾಗಿದ್ದವು. ಆಗ ಅಲ್ಲಿದ್ದ ಬ್ರಾಹ್ಮಣರು ತಮ್ಮ ತಪಶ್ಶಕ್ತಿಯಿಂದ ಕಳುವಾಗಿದ್ದ ಪಾದುಕೆಗಳನ್ನು ಹುಡುಕಿ ಕೊಟ್ಟರಂತೆ. ಅವರ ಶಕ್ತಿಯನ್ನು ನೋಡಿ ಪ್ರಭಾವಿತಗೊಂಡ ಮುಕ್ಕಂಟಿ ಪಲ್ಲವ ಆರು ಸಾವಿರ ಬ್ರಾಹ್ಮಣರನ್ನು ತನ್ನ ರಾಜ್ಯಕ್ಕಾಹ್ವಾನಿಸಿ ಶ್ರೀಕಾಕುಳದಲ್ಲಿ ನೆಲೆಗೊಳಿಸಿದನಂತೆ. ಜೊತೆಗೆ ತನ್ನ ರಾಜ್ಯದಲ್ಲಿ ಶ್ರೀವಲ್ಲಭನಿಗೆ ದೇವಸ್ಥಾನವೊಂದನ್ನೂ ಕಟ್ಟಿಸಿದ. ಆನಂತರ ಅವರನ್ನು ಶ್ರೀಪರ್ವತಕ್ಕೂ ಕರೆಸಿಕೊಂಡ. ಮೂಲ ಹಸ್ತಪ್ರತಿಗಳಲ್ಲಿ ದೊರಕದಿದ್ದರೂ ಶ್ರೀಕಾಕುಳಮಹಾತ್ಮ್ಯಮ್‌ ಬ್ರಹ್ಮಾಂಡಪುರಾಣದ ಉತ್ತರಖಂಡದ್ದೆನ್ನಲಾಗಿದೆ. ಹಾಗಲ್ಲದಿದ್ದರೂ ಅದು ಐತಿಹಾಸಿಕವಾಗಿ ಬಹಳ ಮಹತ್ವಪೂರ್ಣ ಕೃತಿ, ಅದರ ಪ್ರಕಾರ ಕಳಿಂಗದಲ್ಲಿ ಜೈನಮತಕ್ಕೂ, ಅಮರಾವತಿ, ನಾಗಾರ್ಜುನಕೊಂಡಗಳಲ್ಲಿ ಬೌದ್ಧಮತಕ್ಕೂ ಮನ್ನಣೆ ಹೆಚ್ಚಾಗಿ ಆಂಧ್ರದೇಶದಲ್ಲಿ ಅವೈದಿಕ ಮತಗಳ  ಪ್ರಾಬಲ್ಯ ಜಾಸ್ತಿಯಾಯಿತು. ಬ್ರಾಹ್ಮಣರಿಗೂ ಬೌದ್ಧರಿಗೂ ವಾದ ವಾಗ್ವಾದಗಳು ಜಾಸ್ತಿಯಾದವು. ಒಮ್ಮೆ ಅದೇ ಪ್ರಾಂತ್ಯವನ್ನಾಳುತ್ತಿದ್ದ ಮಹಾಮತಿ ಎಂಬ ಅರಸ ಶ್ರೀವಲ್ಲಭನನ್ನು ಅರ್ಚಿಸಲು ಶ್ರೀಕಾಕುಳಕ್ಕೆ ತೆರಳಿದ್ದನಂತೆ. ವೈದಿಕ-ಬೌದ್ಧರನ್ನು ಪರೀಕ್ಷಿಸಲು ಕೊಡವೊಂದರಲ್ಲಿ ಹಾವನ್ನಿಟ್ಟು ಅದರೊಳಗಿರುವ ವಸ್ತುವಾವುದೆಂದು ತಿಳಿಸಲು ಇಬ್ಬರಿಗೂ ಪಂಥಾಹ್ವಾನವೊಡ್ಡಿದ. ಬೌದ್ಧ ಗುರು ಅದರಲ್ಲಿರುವ ವಸ್ತು ಹಾವೆಂದರೆ, ಬ್ರಾಹ್ಮಣರು ಅದರಲ್ಲಿರುವುದು ಕೊಡೆಯೆಂದರಂತೆ. ಮುಚ್ಚಳ ತೆಗೆದು ನೋಡಲಾಗಿ ಹಾವು ಬೆಳ್ಗೊಡೆಯಾಗಿ ಬದಲಾಗಿತ್ತು. ವೈದಿಕರ ಶಕ್ತಿಯಿಂದ ಸಂತೋಷಗೊಂಡ ಅರಸ ಅವರನ್ನು ಬಹುವಾಗಿ ಸತ್ಕರಿಸಿದನಂತೆ. ಅಂದಿನಿಂದ ಆ ಸ್ಥಳ ದಕ್ಷಿಣದ ಅಹಿಚ್ಛತ್ರವೆಂದು ಹೆಸರಾಯಿತು(ಅಹಿ=ಹಾವು, ಛತ್ರ=ಕೊಡೆ). ಬ್ರಹ್ಮ ವೈವರ್ತತ ಪುರಾಣದಲ್ಲಿ ಕದ್ರುವಿನ ಶಾಪದಿಂದ ತಪ್ಪಿಸಿಕೊಳ್ಳಲು ಅನಂತನು ಸರ್ಪಪುರವೆಂಬಲ್ಲಿ ಮಹಾವಿಷ್ಣುವನ್ನು ಕುರಿತು ತಪಸ್ಸನ್ನಾಚರಿಸಿದನಂತೆ. ತಪಸ್ಸಿಗೆ ಮೆಚ್ಚಿದ ವಿಷ್ಣುವು ತಾನು ಅನಂತಶಯನನಾಗುವುದಾಗಿ ವರವಿತ್ತ. ಅನಂತನು ವಿಷ್ಣುವಿಗೆ ನೆರಳಾದ ಹಿನ್ನೆಲೆಯಲ್ಲಿ ಸ್ಥಳ ಅಹಿಚ್ಛತ್ರವೆಂಬ ಹೆಸರು ಪಡೆಯಿತೆಂಬ ಕಥೆಯಿದೆ. ಮುಕ್ಕಂಟಿ ಪಲ್ಲವ ವಲ್ಲಭನನ್ನೂ, ಬ್ರಾಹ್ಮಣರನ್ನೂ ಉತ್ತರ ಅಹಿಚ್ಛತ್ರದಿಂದ ದಕ್ಷಿಣದ ಅಹಿಚ್ಛತ್ರಕ್ಕೆ ಕರೆತಂದನೆಂದೆನಷ್ಟೆ. ವಲ್ಲಭಾಭ್ಯುದಯದ ಪ್ರಕಾರ ಮುಂದೆ ನೆರೆಯಲ್ಲಿ ದೇವಸ್ಥಾನ ನಾಶವಾದಾಗ ವಲ್ಲಭಸ್ವಾಮಿ ಪುನಃ ತನ್ನ ಅಹಿಚ್ಛತ್ರಕ್ಕೆ ತಿರುಗಿ ಹೋದನಂತೆ. ಇದಾದ ಎಷ್ಟೋ ಕಾಲದ ನಂತರ ಕಳಿಂಗದಲ್ಲಿ ಪೂರ್ವ ಗಂಗರ ಆಳ್ವಿಕೆ ಸುರುವಾಗಿ ಹೈಂದವ ಮತಾಚರಣೆ ಪ್ರವರ್ಧಮಾನಕ್ಕೆ ಬಂದಿತು. ಕಳಿಂಗವನ್ನಾಳಿದ್ದ ಅನಂಗಭೀಮನ ಮಗ ನರಸಿಂಹವರ್ಮ ತೀರ್ಥಯಾತ್ರೆಗಾಗಿ ಈ ಸ್ಥಳಕ್ಕೆ ಬಂದಾಗ ವಲ್ಲಭನನ್ನು ಪುನರ್ಪ್ರತಿಷ್ಟಾಪಿಸಲಿಚ್ಛಿಸಿದ. ಆಗ ನರಸಿಂಹವರ್ಮನ ಕನಸ್ಸಿನಲ್ಲಿ ಕಾಣಿಸಿಕೊಂಡ ವಲ್ಲಭಸ್ವಾಮಿ ತಾನು ದೇವಸ್ಥಾನದ ಬ್ರಹ್ಮಕುಂಡದ ಪಕ್ಕದಲ್ಲಿನ ಕರವೀರ ಗಿಡದ ಮೂಲೆಯಲ್ಲಿ ವಾಸವಾಗಿರುವುದಾಗಿ ತಿಳಿಸಿದನಂತೆ. ಅಲ್ಲಿ ಸಿಕ್ಕ ವಿಗ್ರಹವನ್ನು ಪ್ರತಿಷ್ಟಾಪಿಸಿ ನರಸಿಂಹವರ್ಮ ಹೊಸ ದೇವಾಲಯವನ್ನು ಕಟ್ಟಿಸಿದನಂತೆ. ವಲ್ಲಭಾಬ್ಯುದಯದ ಈ ಕಥೆ ಐತಿಹಾಸಿಕವಾಗಿ ಸತ್ಯವೋ ಅಥವಾ ಸುಳ್ಳೋ, ದೇವಾಲಯ ನಿಜವಾಗಿ ಕೊಚ್ಚಿ ಹೋಗಿ ವಿಷ್ಣು ಪುನಃ ಹಿಂದಿರುಗಿದನೇ ಎಂಬ ವಿಮರ್ಶೆ ಬೇರೆ. ಆದರೆ ಇದು ಆ ಕಾಲದ ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಹತ್ವದ ಬೆಳಕು ಚೆಲ್ಲುತ್ತದೆ. ಬೌದ್ಧಮತದ ಬಲ ಹೆಚ್ಚಾಗಿ ವೈದಿಕ ಮತ ಅನಾದರಕ್ಕೊಳಗಾಗಿರಬಹುದು ಮತ್ತು ಆಗಿತ್ತು ಕೂಡ. ಇದು ಅಲ್ಲಿನ ವಿಪ್ರರನ್ನು ಪುನಃ ತಮ್ಮ ಮೂಲಸ್ಥಳದೆಡೆಗೋ ಅಥವಾ ಇತರೆಡೆಗಿನ ವಲಸೆಗೆ ಪ್ರೋತ್ಸಾಹಿಸಿರಬಹುದು. ವಲ್ಲಭನ ಕಥೆ ಅದಕ್ಕೊಂದು ರೂಪಕವಿರಬೇಕು. ಮುಂದೆ ಅವೈದಿಕ ಮತಗಳು ಬಲಗುಂದಿದಾಗ ಪುನಃ ವಲ್ಲಭ ಸ್ವಾಮಿ ಪ್ರತಿಷ್ಟಾಪಿಸಲ್ಪಟ್ಟಂತೆ ವೈದಿಕರು ಹಿಂದಿರುಗಿ ಬಂದರು. ವೈದಿಕ ಮತಾಚರಣೆ ಆ ಭಾಗದಲ್ಲಿ ಹೆಚ್ಚಾಯಿತು. ಇದೇ ಘಟನೆಯನ್ನೇ ತಾನೆ ನಾವು ಮಯೂರ ವರ್ಮನ ಕಥೆಯಲ್ಲಿಯೂ ಓದಿದ್ದು?