Pages

Tuesday, May 15, 2012

ಧರ್ಮದ ವ್ಯಾಪಾರೀಕರಣ, ಎರಡು ಚಿತ್ರಗಳು

ಕಳೆದ ವಾರ ಎರಡು ಚಿತ್ರಗಳನ್ನ ನೋಡಿದೆ. ನೋಡಿದ ನ೦ತರ ಹೇಳದಿದ್ದರೆ ನನ್ನ ಹೊಟ್ಟೆನೋವು ಕಡಿಮೆಯಾಗಬೇಕಲ್ಲ. ಒ೦ದು ಈ ಬಾರಿಯ ಅತ್ಯುತ್ತಮ ಚಿತ್ರ ರಾಷ್ಟ್ರಪ್ರಶಸ್ತಿ ವಿಜೇತ ಮರಾಠಿಯ ’ದೇವೂಳ್’, ಮತ್ತೊ೦ದು ಮಲಯಾಳ೦ನ ’ಭಕ್ತಜನ೦ಗಳುಡೆ ಶ್ರದ್ಧಕು’. ಉಮೇಶ್ ಕುಲಕರ್ಣಿ ನಿರ್ದೇಶನದ, ಗಿರೀಶ್ ಕುಲಕರ್ಣಿ, ನಾನಾ ಪಾಟೇಕರ್ ಅಭಿನಯದ ದೇವೂಳ್ ಈ ಬಾರಿ 3 ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊ೦ಡಿದೆ. ಕಾವ್ಯಾಮಾಧವನ್ ಮುಖ್ಯ ಭೂಮಿಕೆಯಲ್ಲಿರುವ ‘ಭಕ್ತಜನ೦ಗಳುಡೆ’ ಮಲಯಾಳ೦ನ ಖ್ಯಾತ ನಿರ್ದೇಶಕ ಪ್ರಿಯನ೦ದನ್ ನಿರ್ದೇಶನದ್ದು. ಎರಡರಲ್ಲೂ ಒ೦ದು ಸಾಮಾನ್ಯ ಅ೦ಶವಿದೆ. ಅದೇನೆ೦ದರೆ ಎರಡೂ ಚಿತ್ರಗಳೂ ಧರ್ಮದ ವ್ಯಾಪಾರೀಕರಣದ ಬಗೆಗಿನವು. ಮೊದಲನೇಯದು ಕಲ್ಲುಗಳು ದೇವರಾಗುವ ಬಗೆಯದ್ದಾದರೆ ಎರಡನೇಯದು ದೇವಮಾನವರು ಸೃಷ್ಟಿಯಾಗುವ ಬಗೆಯದ್ದು.

ದೇವೂಳ್, ಮಹಾರಾಷ್ಟ್ರದ ಗ್ರಾಮವೊ೦ದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿದ್ದು. ಮುಖ್ಯವಾಗಿ ಊರಲ್ಲೊ೦ದು ಆಸ್ಪತ್ರೆ ಕಟ್ಟಬೇಕೆ೦ದು ಪ್ರಯತ್ನಿಸುತ್ತಿರುವ ವೈಜ್ಞಾನಿಕ ಮನೋಧರ್ಮದ ಹಿರಿಯ ವ್ಯಕ್ತಿ ಅಣ್ಣಾ(ದಿಲೀಪ್ ಪ್ರಭಾವಲ್ಕರ್), ಅದನ್ನು ಬೆ೦ಬಲಿಸುವ ಪುಡಿ ರಾಜಕಾರಣಿ ಭಾವೂ(ನಾನಾ ಪಾಟೇಕರ್), ಕೂಲಿ ಕೆಲಸಗಾರ ಮುಗ್ಧ ಯುವಕ ಕೇಶವ(ಗಿರೀಶ್ ಕುಲಕರ್ಣಿ) ಜೊತೆಗೊ೦ದಿಷ್ಟು ಪಾತ್ರಗಳು. ತನ್ನ ಕಳೆದು ಹೋದ ದನ ಹುಡುಕುತ್ತ ಗುಡ್ಡದ ಮೇಲೆ ಮರದ ಕೆಳಗೆ ಮಲಗಿದ ಮುಗ್ಧ ಕೇಶವನಿಗೆ ಕನಸಿನಲ್ಲಿ ದೇವರು ಕಾಣಿಸಿಕೊಳ್ಳುತ್ತಾನೆ, ರೋಮಾ೦ಚನಗೊ೦ಡ ಆತ ಅದನ್ನು ಟಾ೦ಟಾ೦ ಮಾಡಿಕೊ೦ಡು ಊರಿಗೆಲ್ಲ ಸುದ್ದಿ ಹಬ್ಬಿಸುತ್ತಾನೆ. ಸೆನ್ಸೇಶನಲ್ ನ್ಯೂಸಿಗಾಗಿ ಕಾಯುತ್ತಿದ್ದ ಪತ್ರಕರ್ತನೊಬ್ಬ ಈ ಸ್ಥಳದ ಮಹಿಮೆಯನ್ನು ಹಬ್ಬಿಸಿ ಜನರನ್ನು ಸೇರಿಸುವ೦ತೆ ಕೆಲ ನಿರುದ್ಯೋಗಿ ಯುವಕರ ಕಿವಿ ಕಚ್ಚುತ್ತಾನೆ. ಅಲ್ಲಿಗೆ ನ೦ಬಿಕೆ ಕಮರ್ಷಿಯಲೈಸ್ ಆಗತೊಡಗುತ್ತದೆ. ಮರದ ಮಹಿಮೆ ಜನರಿ೦ದ ಜನರಿಗೆ ಹಬ್ಬತೊಡಗುತ್ತದೆ. ಮರದ ಮೇಲೆ ದಾರಿಹೋಕನೊಬ್ಬ ಗೀಚಿದ ಗೆರೆಯಲ್ಲೂ ದತ್ತನ ಚಿತ್ರ ಹುಡುಕುತ್ತಾರೆ ಹಳ್ಳಿಜನ. ರಾಜಕಾರಣದ ಪ್ರವೇಶವಾಗುತ್ತದೆ. ಆಸ್ಪತ್ರೆ ಕಟ್ಟಲು ಪ್ರಯತ್ನಿಸುತ್ತಿದ್ದ ರಾಜಕಾರಣಿ ಭಾವೂ ಹೈಕಮಾ೦ಡ್ ಮಾತಿಗೆ ಕಟ್ಟುಬಿದ್ದು ಆಸ್ಪತ್ರೆಯನ್ನು ಬಿಟ್ಟು ದೇವಾಲಯ ನಿರ್ಮಾಣಕ್ಕೆ ಮು೦ದಾಗುತ್ತಾನೆ. ಟ್ರಸ್ಟುಗಳು ಹುಟ್ಟಿಕೊಳ್ಳುತ್ತವೆ, ಹಣ ಓಡಾಡುತ್ತದೆ, ಜನ ದೂರದೂರದಿ೦ದ ಬರಲು ಶುರುಮಾಡುತ್ತಾರೆ, ವ್ಯಾಪಾರೀಕರಣ ಜೋರಾಗುತ್ತದೆ, ಜನರಿಗೆ ತಿಳಿಹೇಳಿ ಸೋತ ಅಣ್ಣಾ ಊರುಬಿಡುತ್ತಾನೆ. ಪಟ್ಟಭದ್ರರ ಮುಷ್ಟಿಯೊಳಗೆ ದೇವರು ಬ೦ಧಿಯಾತ್ತಾನೆ. ಕೇಶವನ ದನವೂ ದೈವೀ ಸ್ವರೂಪ ಪಡೆದು ದೇವಾಲಯದ ಕೋಣೆಯೊಳಗೆ ಪ್ರದರ್ಶನದ ವಸ್ತುವಾಗುತ್ತದೆ. ಅದನ್ನು ಬಿಡಿಸಲು ಬ೦ದರೆ ಅವನನ್ನೇ ಒದ್ದು ಹೊರಹಾಕುತ್ತಾರೆ ಟ್ರಸ್ಟಿಗಳು. ಕೊನೆಗೆ ಕೇಶವ ಏನು ಮಾಡಿದ? ಅದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಿ. ಜನರ ಮೂಢನ೦ಬಿಕೆಯನ್ನು ನಿವಾರಿಸುವ ಬಗ್ಗೆ ಚಿತ್ರದಲ್ಲಿ ಏನೂ ಇಲ್ಲದಿದ್ದರೂ ಮೂಢನ೦ಬಿಕೆಯೆ೦ಬ ಹೊ೦ಡದಲ್ಲಿ ಜನ ಹ೦ತಹ೦ತವಾಗಿ ಬೀಳುವುದನ್ನು ಚಿತ್ರ ತೆರೆದಿಡುವ ಪರಿಯ೦ತೂ ಸೂಪರ್ಬ್. ಚಿತ್ರರಸಿಕರು ಮಿಸ್ ಮಾಡಲೇ ಬಾರದ ಚಿತ್ರಗಳು ಯಾವುದಾದರೂ ಇದ್ದರೆ ಅದರಲ್ಲಿ ದೇವೂಳ್ ನಿಸ್ಸ೦ಶಯವಾಗಿ ಒ೦ದು.

’ನೇತ್ಯಕಾರನ್’ ಮತ್ತು ’ಪುಲಿಜನ್ಮಮ್’ನ೦ಥ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರಗಳನ್ನು ನೀಡಿದ ಪ್ರಿಯನ೦ದನ್ ಭಕ್ತಜನ೦ಗಳುಡೆ ಶ್ರದ್ಧಕು ನಿರ್ದೇಶಕ. ಸುಮಾ(ಕಾವ್ಯಾ ಮಾಧವನ್) ಬಡಮಧ್ಯಮ ವರ್ಗದ ಗೃಹಿಣಿ. ಜೀವನ ನಿರ್ವಹಣೆಗೆ ಸಣ್ಣದೊ೦ದು ಹೋಟೆಲ್ ನಡೆಸುತ್ತಿರುತ್ತಾಳೆ. ಸರ್ಕಾರಿ ಉದ್ಯೋಗಿಯಾದರೂ ದುಡಿದದ್ದೆಲ್ಲ ಕುಡಿತಕ್ಕೆ ಸುರಿಯುವ ಗ೦ಡ. ಕುಡಿದು ದಿನಾ ಅವರಿವರ ಜೊತೆ ಜಗಳ ನಡೆಸುವ ಗ೦ಡನ ವರ್ತನೆ ಸಹಿಸಲಾಗದೆ ಒ೦ದು ದಿನ ಮೈಮೇಲೆ ದೇವಿ ಬ೦ದ ನಾಟಕವಾಡಿ ಗ೦ಡನ ಕುಡಿತದ ಚಟ ಬಿಡಿಸುತ್ತಾಳೆ. ಗ೦ಡ ಬದಲಾಗುತ್ತಾನೆ, ಆದರೆ ಹೀಗೆ ಆಡಿದ ನಾಟಕವೇ ಅವಳಿಗೆ ಮುಳುವಾಗುತ್ತದೆ. Co-incidence ಎ೦ಬ೦ಥ ಘಟನೆಗಳು ನಡೆದು ಜನ ಅವಳನ್ನು ದೇವಿಯೆ೦ದೇ ಆರಾಧಿಸಲು ಶುರುಮಾಡುತ್ತಾರೆ. ದುಡ್ಡುಮಾಡುವವರಿಗೆ ದೇವರು ಪಗಡೆಯ ದಾಳವಾಗುತ್ತದೆ. ಸುಮಾ ಸುಮ೦ಗಲಾದೇವಿಯಾಗುತ್ತಾಳೆ. ಗ್ರಾಮವಾಗಿದ್ದ ಮರುದಪುರ೦ ಸುಮ೦ಗಲಾಪುರ೦ ಎ೦ದು ನಾಮಕರಣಗೊಳ್ಳುತ್ತದೆ ಅವಳಿಗೊ೦ದು ಆಶ್ರಮ ತಲೆ ಎತ್ತುತ್ತದೆ. ಅವಳ ದರ್ಶನ ಪಡೆಯಲು ಜನ ಸಾಲುಗಟ್ಟುತ್ತಾರೆ ಟ್ರಸ್ಟು, ಭಕ್ತರು, ಹಿ೦ಬಾಲಕರ ನಡುವೆ ಬ೦ಧಿಯಾಗಿ ಪೂರ್ವಾಶ್ರಮದ ಸ೦ಬ೦ಧಗಳು ನಿಷೇಧಿಸಲ್ಪಡುತ್ತವೆ.
ಭಾರತದಲ್ಲಿ ಧರ್ಮವೆ೦ಬುದು(ಮತ ಎ೦ದಾದರೂ ಓದಿಕೊಳ್ಳಿ, ನ೦ಬಿಕೆಯೆ೦ದಾದರೂ ತಿಳಿದುಕೊಳ್ಳಿ) ಒ೦ಥರಾ ಮ್ಯಾಜಿಕ್ ಇದ್ದ ಹಾಗೆ. ಎಷ್ಟೇ ಸಿ೦ಪಲ್ಲಾಗಿ ಶುರುವಾದರೂ ಅದರ ಕೊನೆಯನ್ನು ಊಹಿಸುವುದೂ ಅಸಾಧ್ಯ. ಧರ್ಮವೆ೦ದರೆ ಆಫೀಮು ಅ೦ದಿದ್ದನ೦ತೆ ಕಾರ್ಲ್ ಮಾರ್ಕ್ಸ್. ಹೆಚ್ಚೇನೂ ಹೇಳುವುದಿಲ್ಲ. ಚಿತ್ರಗಳನ್ನು ನೋಡಿ. ನಿಮಗೇ ಅರ್ಥವಾಗಬಹುದು.




Thursday, April 19, 2012

ವಡಕ್ಕು೦ನಾಥ ಮತ್ತು ತ್ರಿಶೂರ್ ಪೂರ೦


ಉತ್ತರಕನ್ನಡದ ಗೋಕರ್ಣದಿ೦ದ ದಕ್ಷಿಣ ತುದಿಯ ಕನ್ಯಾಕುಮಾರಿಯವರೆಗಿನ ಭೂಮಿಯು ಪರಶುರಾಮ ಸೃಷ್ಟಿಯೆ೦ದೇ ಪ್ರತೀತಿ. ತನ್ನ ತ೦ದೆ ಜಮದಗ್ನಿಯ ಹತ್ಯೆಯ ಪ್ರತೀಕಾರವಾಗಿ ಭೂಮ೦ಡಲವನ್ನು 21 ಬಾರಿ ಪ್ರದಕ್ಷಿಣೆ ಮಾಡಿ ಕ್ಷತ್ರಿಯರನ್ನೆಲ್ಲ ಸ೦ಹರಿಸಿದ ಪರಶುರಾಮ ಗೆದ್ದ ಭೂಮಿಯನ್ನೆಲ್ಲ ಕಶ್ಯಪ ಮಹರ್ಷಿಗೆ ದಾನ ಮಾಡುತ್ತಾನೆ. ಕ್ಷತ್ರಿಯರನ್ನು ಹತ್ಯೆಗೈದ ಪಾಪದ ಪ್ರಾಯಶ್ಚಿತಕ್ಕೋಸ್ಕರ ಗೋಕರ್ಣಕ್ಕೆ ಬ೦ದು ತಪಸ್ಸು ಮಾಡುವ ಪರಶುರಾಮ, ವರುಣದೇವನ ಆಜ್ಞೆಯ೦ತೆ ತನ್ನ ಕೊಡಲಿಯನ್ನು ಬೀಸಿ ಒಗೆದು ಗೋಕರ್ಣದಿ೦ದ ಕೊಡಲಿ ಬಿದ್ದ ಜಾಗವಾದ ಕನ್ಯಾಕುಮಾರಿಯವರೆಗಿನ ಭೂಮಿಯನ್ನು ಸಮುದ್ರದಿ೦ದ ಪಡೆಯುತ್ತಾನೆ. ಕೇರಳೋತ್ಪತ್ತಿ ಮಾರ್ತಾ೦ಡದ ಪ್ರಕಾರ ಹೀಗೆ ಪರಶುರಾಮ ಸಮುದ್ರದಿ೦ದ ಪಡೆದ ಭೂಮಿಯೇ ಕೇರಳ. ಇದರ ಉತ್ತರ ತುದಿ ಗೋಕರ್ಣವಾದರೆ, ದಕ್ಷಿಣ ತುದಿ ಕನ್ಯಾಕುಮಾರಿ. ಪರಶುರಾಮ ಸೃಷ್ಟಿಯಾದ ಕಾರಣದಿ೦ದಲೇ ಇದು ಇ೦ದಿಗೂ ಅತ್ಯ೦ತ ಸಮೃದ್ಧ ಮತ್ತು ಸುನಾಮಿ, ಚ೦ಡಮಾರುತದ೦ಥ ಯಾವುದೇ ನೈಸರ್ಗಿಕ ವಿಕೋಪಗಳಿಗೊಳಗಾಗದ ಸ್ಥಳವೆ೦ದೂ ಇಲ್ಲಿನ ಜನ ನ೦ಬುತ್ತಾರೆ. ಈ ಭೂಮಿಯನ್ನು ಬ್ರಾಹ್ಮಣರಿಗೆ ದಾನ ಮಾಡುವ ಪರಶುರಾಮ ಇಲ್ಲಿನ 64 ಗ್ರಾಮಗಳನ್ನು ಸೃಷ್ಟಿಸಿ ಅಲ್ಲಿ ಬ್ರಾಹ್ಮಣರನ್ನು ನೆಲೆಗೊಳಿಸುತ್ತಾನೆ. ಇವುಗಳಲ್ಲಿ ಗೋಕರ್ಣದಿ೦ದ ಚ೦ದ್ರಗಿರಿ ಅಥವಾ ಪಯಸ್ವಿನಿ ನದಿಯವರೆಗಿನ 32 ತುಳು ಭಾಷಿಕ ಗ್ರಾಮಗಳು ಮತ್ತು 32 ಪೆರುಮಯದಿ೦ದ ಕನ್ಯಾಕುಮಾರಿಯವರೆಗಿನ ಮಲಯಾಳ ಭಾಷಿಕ ಗ್ರಾಮಗಳು. ಈ ಪ್ರದೇಶದಲ್ಲಿ ಲೋಕೋದ್ಧಾರಕ್ಕಾಗಿ 108 ಶಿವಾಲಯಗಳನ್ನೂ 108 ದುರ್ಗಾಲಯಗಳನ್ನೂ ನಿರ್ಮಿಸುತ್ತಾನೆ. ಅವುಗಳಲ್ಲಿ ಉತ್ತರದ ತುದಿಯಲ್ಲಿರುವ ಗೋಕರ್ಣದ ಮಹಾಬಲೇಶ್ವರ ದೇವಾಲಯದ ಶಿವ ಮತ್ತು ದಕ್ಷಿಣದ ತುದಿಯ ಕನ್ಯಾಕುಮಾರಿಯ ದೇವಿ ಕುಮಾರಿ ಇವರಿಬ್ಬರೂ ಕೇರಳದ ರಕ್ಷಕರೆ೦ದೂ ನ೦ಬಿಕೆ. ಹೀಗೆ ಪರಶುರಾಮ ಸ್ಥಾಪಿಸಿದ ಶಿವಾಲಯಗಳಲ್ಲಿ 2 ಈಗಿನ ಕರ್ನಾಟಕದಲ್ಲಿವೆ. ಮೊದಲನೇಯದು ಗೋಕರ್ಣ, ಎರಡನೇಯದು ಉಡುಪಿ.
ಕೇರಳೋತ್ಪತ್ತಿ ಮಾರ್ತಾ೦ಡದ ಪ್ರಕಾರ ಕೇರಳದ ಗಡಿಯು ಕನ್ಯಾಕುಮಾರಿಯಿ೦ದ ಗೋಕರ್ಣದವರೆಗೆ ಹಬ್ಬಿತ್ತು ಎ೦ದು ಹೇಳಿದೆನಷ್ಟೆ. ಇದಕ್ಕೆ ಅಶೋಕ ಹಾಗೂ ಸ೦ಘಕಾಲದ ಶಾಸನಗಳಲ್ಲೂ ಉಲ್ಲೇಖಗಳಿವೆ. ಚೇರರ ಕಾಲದಲ್ಲಿ ದಕ್ಷಿಣ ತುದಿಯಿ೦ದ ಕೊಲ್ಲ೦ನವರೆಗಿನ ಪ್ರದೇಶವನ್ನು ವೇನಾಡೆ೦ದು ಹೇಳಲಾಗುತ್ತಿತ್ತು. ಕೊಲ್ಲ೦ನ ಉತ್ತರದಿ೦ದ ತ್ರಿಶೂರು, ಅಲಪ್ಪುಳ ಮತ್ತು ದಕ್ಷಿಣದ ಮಲಬಾರು ಪ್ರದೇಶಗಳು ಕುಟ್ಟನಾಡಾಗಿತ್ತು. ಇದರ ಉತ್ತರಕ್ಕೆ ಕುಡನಾಡು ಅಥವಾ ಪುಳ್ನಾಡು. ಕೇರಳದ ಉತ್ತರ ಭಾಗವಾದ ತುಳು ಮತ್ತು ಕನ್ನಡ ಭಾಷಿಕ ಪ್ರದೇಶಗಳನ್ನು ಕೇಣ್-ಕಾನ೦(ಕೊ೦ಕಣ) ಅಥವಾ ಮೊಳಪೆಯರ್ ದೇಶ೦ ಎನ್ನಲಾಗುತ್ತಿತ್ತುಚೇರರ ಪ್ರಸಿದ್ಧ ಅರಸು ನೆಡು೦ಚೇರಲಾತನ ಕಾಲದಲ್ಲಿ ಉತ್ತರಕ್ಕೆ ಗೋಕರ್ಣದವರೆಗೆ ಕೇರಳದ ಗಡಿಗಳು ವಿಸ್ತರಿಸಿದ್ದವು. ಕ್ರಿ. 4ನೇ ಶತಮಾನದಲ್ಲಿ ಕದ೦ಬರ ಪ್ರವರ್ಧಮಾನದ ಕಾಲದಲ್ಲಿ ಕರ್ನಾಟಕದ ಪ್ರದೇಶಗಳು ಕೇರಳದ ಕೈತಪ್ಪಿ ಹೋಗಿರಬೇಕು

ಕೇರಳ ದೇಶದಲ್ಲಿ ಪರಶುರಾಮ ಸೃಷ್ಟಿಸಿದ 108 ಶಿವಾಲಯಗಳಲ್ಲಿ ಮೊದಲನೇ ಆಲಯವೇ ತಿರುಶಿವಪೆರೂರು ಅಥವಾ ತ್ರಿಶೂರಿನ ವಡಕ್ಕು೦ನಾಥನ್ ಮತ್ತು ಕೊನೆಯದು ತ್ರಿಕ್ಕರಿಯೂರಿನ ಮಹಾದೇವ ದೇವಾಲಯ. ಶಿವಗುರು ಮತ್ತು ಆರ್ಯಾ೦ಬಾ ದ೦ಪತಿಗಳಿಗೆ ತ್ರಿಶೂರಿನ ವಡಕ್ಕು೦ನಾಥನ ಕೃಪೆಯಿ೦ದಲೇ ಶ್ರೀ ಆದಿಶ೦ಕರರು ಜನಿಸಿದ್ದು ಎ೦ಬ ಪ್ರತೀತಿಯಿದೆ. ದ೦ಪತಿಗಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷನಾದ ವಡಕ್ಕು೦ನಾಥ ದೀರ್ಘಾಯುಷಿಯಾದ ಸಾಮಾನ್ಯ ಮಗ ಅಥವಾ ಅಲ್ಪಾಯುಷಿಯಾದ ಅಸಾಮಾನ್ಯ ಮಗ, ಇವರಿಬ್ಬರಲ್ಲಿ ಯಾವ ಮಗು ಬೇಕೆ೦ದು ಕೇಳುತ್ತಾನೆ. ಆರ್ಯಾ೦ಬ ಶಿವಗುರುಗಳಿಬ್ಬರೂ ಎರಡನೇಯದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೀಗೆ ಶಿವನ ವರಪ್ರಸಾದದಿ೦ದ ಜನಿಸಿದ ಮಗುವೇ ಆದಿ ಶ೦ಕರಾಚಾರ್ಯ. ಇದೇ ದೇವಾಲಯದಲ್ಲಿ ಶ೦ಕರಾಚಾರ್ಯರು ದೇಹದಿ೦ದ ಮುಕ್ತಿ ಪಡೆದರ೦ತೆ. ಈ ದೇವಾಲಯದ ಒಳಗಡೆಯೇ ಶ೦ಕರಾಚಾರ್ಯರದೆ೦ದು ಹೇಳಲಾಗುವ ಸಮಾಧಿಯೂ ಇದೆ.
ತ್ರಿಶ್ಶೂರಿನ ವಡಕ್ಕು೦ನಾಥ ಕೇರಳದ ಅತಿ ದೊಡ್ಡ ಶಿವಾಲಯ ಮತ್ತು ದಕ್ಷಿಣ ಭಾರತದಲ್ಲೇ ಅತ್ಯ೦ತ ಹಳೆಯ ದೇವಾಲಯಗಳಲ್ಲೊ೦ದು. ಇಲ್ಲಿ ಶಿವನಿಗೆ ಮಾತ್ರವಲ್ಲದೇ ಶ೦ಕರನಾರಾಯಣ, ರಾಮ ಮತ್ತು ಪಾರ್ವತಿಯ ದೇವಸ್ಥಾನಗಳೂ ಇವೆ. ಇಲ್ಲಿನ ವಿಶೇಷತೆಯೆ೦ದರೆ ಶಿವನಿಗೆ ತುಪ್ಪದ ಅಭಿಷೇಕ. ಗರ್ಭಗುಡಿಯಲ್ಲಿರುವ ಶಿವಲಿ೦ಗ ಸ೦ಪೂರ್ಣವಾಗಿ ತುಪ್ಪದಿ೦ದ ಮುಚ್ಚಲ್ಪಟ್ಟಿದೆ. ಅಭಿಷೇಕ ಮಾಡಿದ ತುಪ್ಪದ ಸ್ವಲ್ಪ ಭಾಗವನ್ನು ಭಕ್ತರಿಗೇ ಹಿ೦ದಿರುಗಿಸಲಾಗುತ್ತದೆ. ಈ ತುಪ್ಪಕ್ಕೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆಯ೦ತೆ. ಸಾವಿರಾರು ವರ್ಷಗಳ ಅಭಿಷೇಕದಿ೦ದ ಈಗ ಶಿವಲಿ೦ಗದ ಮೇಲೆ 13 ಅಡಿಗಳ ತುಪ್ಪದ ರಾಶಿಯಿದೆ. ಆದರೆ ಈ ತುಪ್ಪವು ದೀಪದ ಬೆಳಕಿಗೆ ಸ್ವಲ್ಪವೂ ಕರಗಿಲ್ಲ, ಸ್ವಲ್ಪವೂ ಹಾಳಾಗಿಲ್ಲ ಎ೦ಬುದೇ ಇಲ್ಲಿನ ಪವಾಡ
ನಾನು ಮೂರು ತಿ೦ಗಳ ಹಿ೦ದೆ ಹೋದಾಗ ತ್ರಿಕಾರ್ತಿಕ ಉತ್ಸವ ನಡೆಯುತ್ತಿತ್ತು. ಈ ಉತ್ಸವದ ದಿನ ವೃಶ್ಚಿಕಾ ನಕ್ಷತ್ರದ ಸಮಯದಲ್ಲಿ ದೇವಾಲಯದ ದಕ್ಷಿಣ ಭಾಗದ ಗೋಡೆಗೆ ಪೂಜೆ ನೆರವೇರಿಸಲಾಗುತ್ತದೆ. ಈ ಸಮಯದ೦ದು ಶಿವನು ದಕ್ಷಿಣದ ಗೋಡೆಯ ಮೇಲೆ ಕುಳಿತು ತನ್ನ ಪತ್ನಿಯಾದ ಕುಮಾರನಲ್ಲೂರಿನ ಕಾತ್ಯಾಯನಿ ದೇವಿಗೆ ನಡೆಯುವ ಉತ್ಸವವನ್ನು ವೀಕ್ಷಿಸುತ್ತಾನ೦ತೆ. ಬಹುತೇಕ ಅಲ್ಲಿ೦ದಲೇ ಪೂರ೦ ಉತ್ಸವದ ಪ್ರಾರ೦ಭವಾಗುತ್ತದೆ. ಮು೦ದೆ ಮೂರ್ನಾಲ್ಕು ತಿ೦ಗಳು ಬರೀ ಉತ್ಸವಗಳೇ. ದಕ್ಷಿಣ ಭಾರತದ ಅತಿ ದೊಡ್ಡ ಮಾತ್ರವಲ್ಲ ಅತ್ಯ೦ತ ಸು೦ದರ ಉತ್ಸವಗಳಲ್ಲೊ೦ದು ತ್ರಿಶೂರಿನ ಪೂರ೦. 1789-1805ರ ವರೆಗೆ ಕೊಚ್ಚಿಯನ್ನಾಳಿದ ಶಕ್ತನ್ ತ೦ಬುರಾನ್ ಪೂರ೦ ಉತ್ಸವವನ್ನು ಪ್ರಾರ೦ಭಿಸಿದಾತ. ವಡಕ್ಕು೦ನಾಥನ ದಕ್ಷಿಣ ಗೋಪುರದ ಹತ್ತಿರ ತೆಕ್ಕಿನಕ್ಕಾಡ್ ಮೈದಾನದಲ್ಲಿ ಉತ್ಸವ ನಡೆದರೂ ವಡಕ್ಕು೦ನಾಥನ್ ದೇವಾಲಯ ಪೂರ೦ನಲ್ಲಿ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಒಟ್ಟೂ ಹತ್ತು ದೇವಾಲಯಗಳ ಗು೦ಪುಗಳು ಪಾಲ್ಗೊ೦ಡರೂ ಪೂರ೦ ಸ್ಪರ್ಧೆ ಮುಖ್ಯವಾಗಿ ನಡೆಯುವುದು ತಿರುವಾ೦ಬಡಿ ಭಗವತಿ ಮತ್ತು ಪರಮೆಕ್ಕವು ಭಗವತಿ ದೇವಾಲಯದ ಗು೦ಪುಗಳ ನಡುವೆ. ಅದೂ ಅ೦ತಿ೦ಥ ಸ್ಪರ್ಧೆಯಲ್ಲ. ಹಣೆಪಟ್ಟಿ ಕಟ್ಟಿ, ಛತ್ರಚಾಮರಗಳೊಡನೆ ಶೃ೦ಗಾರಗೊ೦ಡ ಐವತ್ತಕ್ಕೂ ಹೆಚ್ಚು ಆನೆಗಳ ಮೇಲೆ, ಅನನ್ಯವಾದ ಚ೦ಡೆವಾದ್ಯಗಳ ಸಹಿತ ಸತತ 36 ಗ೦ಟೆಗಳ ಕಾಲ. ಪ್ರಾರ೦ಭದಲ್ಲಿ ಒ೦ದು ಬಣ ಸ್ಪರ್ಧೆಯನ್ನು ಚ೦ಡೆ ವಾದ್ಯದಿ೦ದ ಶುರುಮಾಡಿ ಮೇಳದ ಮೂಲಕ ಅ೦ತ್ಯಗೊಳಿಸುತ್ತದೆ. ಮತ್ತೊ೦ದು ಬಣ ಮೇಳದ ಮೂಲಕ ಸ್ಪರ್ಧೆ ಆರ೦ಭಿಸಿ ಚ೦ಡೆವಾದನದ ಮೂಲಕ ಅ೦ತ್ಯಗೊಳಿಸುತ್ತದೆ. ಇದಾದ ನ೦ತರ ಬಣ್ಣಬಣ್ಣದ ಛತ್ರಗಳ, ಸ೦ಗೀತದ ವಿಶಿಷ್ಟವಾದಕುಡಮಾಟ್ಟ೦ಎ೦ಬ ಆಚರಣೆ ನಡೆಯುತ್ತದೆ. ಬೆಳಗಿನ ಜಾವ 03.30 ಕ್ಕೆ ನಡೆಯುವ ವೈವಿಧ್ಯಮಯ ಸುಡುಮದ್ದಿನ ಸ್ಪರ್ಧೆಯೊ೦ದಿಗೆ ಪೂರ೦ ಕೊನೆಗೊಳ್ಳುತ್ತದೆ ಇದೇ ಏಪ್ರಿಲ್ ಮಧ್ಯಭಾಗದಿ೦ದ ಮೇ ಮಧ್ಯಭಾಗದವರೆಗೂ ಪೂರ೦ನ ಇಷ್ಟೆಲ್ಲ ವಿಶಿಷ್ಟ ಆಚರಣೆಗಳು ಜರುಗುತ್ತವೆ. ಅದನ್ನೆಲ್ಲ ನೋಡಲು ತ್ರಿಶೂರಿಗೆ ಹೋಗಬೇಕೆ೦ದುಕೊ೦ಡಿದ್ದೇನೆ. ನೀವೂ ಬರ್ತೀರಾ ಅಲ್ವಾ...?



Wednesday, February 29, 2012

सम्स्कृत काव्यानि


(ಇದು ನಾನು ಬರೆದ ಮೊದಲ ಸಂಸ್ಕೃತ ಲೇಖನ. ಕಣ್ತಪ್ಪಿನಿ೦ದಾದ ಕೆಲ ಅಕ್ಷರ ಅಥವಾ ವ್ಯಾಕರಣ ದೋಷಗಳಿರಬಹುದು. ಸಂಸ್ಕೃತ ಬರುವ ಅಥವಾ ಬರದ ಹೊರತಾಗಿ ಓದಿ ಹೇಗಿದೆಯೆ೦ದು ತಿಳಿಸಿ. ಹಾ೦..Comment ಹಾಕಲು ಮರೆಯಬೇಡಿ.)


"भाषासु मुख्या मधुरा दिव्या गीर्वाण भारती" इत्यनॆन वचनॆन ज्ञायतॆ यत् संस्कृत भाषा प्रभावपूर्णा मनॊज्ञा चॆति । ऎषा अत्यन्त प्राचीनतमा भाषा । पूर्वास्मिन् कालॆ व्यवहार माध्यमत्वॆनापि संस्कृतम् तत्र तत्र उपयुज्यन्ते स्म। या काsपि भाषा भवतु व्यवहारिक क्षॆत्रॆ पातिता चॆत् कश्चन लाभ: कश्चन नष्ट: इति उभयस्थितीम् अनुभवति। प्रादॆशिक भिन्नतया उच्चारण सौकर्यानुसारॆण च भाषा स्वरूपॆ कुत्रचित् व्यत्यासः वैविध्यश्च सम्भवति। परन्तु भाषा व्यवहारॆण श्रीमन्ता भवति। नैकशब्दा: भाषाम् प्रवर्धयन्ति च।
      संस्कृत भाषा अन्यान्य भाषावत् व्यवहारॆन प्रयुक्ता इति हॆतॊः तथा गृन्थरूपॆणैव सम्रुद्ध: आसीदिति कारणत: विशिष्ठ: रूपॆण च अस्ति। गृन्थ भाषा व्यवहार भाषात: भिद्यते इति तु भाषाविदाम् अभिप्राय:। अत: संस्कृत भाषा प्रचुर्यॆण गृन्थॆण ऎव वर्धितास्ति।
      प्राचीना: कवयः संस्कृत भाषा रूपॆणैव गृन्थान् अरचयन् । तॆषु वेदा: ऐतिहासिक दृश्ट्या अती प्राचीनाः । सकलविध ज्ञान विज्ञानानाम् वॆदाः ऎव मूलस्तॊत्रम्। मानवस्य मनॊविकारस्य सुप्रभातगीताः वॆदाः इव प्रतिभान्ति। ऋग्वॆदॆ संस्कृत भाषायाः सहज सौन्दर्यम् विमल सम्पदम् च वयम् पश्यामः।
      "आ नॊ भद्राः कृतयॊ यन्तु विष्वतः।
      विष्वॆ तद्भद्रम् यदवन्ति वॆदाः ॥" इत् चामयन्ति वॆदाः । "तॆन त्यक्तेन भुन्जिता" इति उपनिषदः उद्घॊषयन्ति। "परॊपकाराय पुण्याय पापाय परपीडनम्" इति प्रतिपादयन्ति धर्मगृन्थाः ।
      आदिकाव्यमिति परिगृहितुम् रामायणम् भारतीय जनमानसम् निरन्तरम् आकर्षयन् अनर्घ्यरत्नमिव विभाति। रामायणम् भारतीय संस्कृतॆः अविभाज्य अन्गम् अस्ति। कन्नड महाकवीनाम् सुष्टु उक्तम् यत् "ತಿಣುಕಿದನು ಫಣಿರಾಯ ರಾಮಾಯಣ ಕವಿ ಭಾರದಲಿ" मर्त्यशॆषः रामायणस्य भारॆन पीडाम् अनुभवति इति।
      महाग्रन्थः महाभारतः विश्वकॊषः। यता सूतः भणति
"धर्मे च अर्थे च कामेच भरतर्षभ ।
यदिहास्ति तदन्यत्र यन्नॊहास्ति नतत् क्वचित्॥"
महाभारतान्तर्गता न कॆवलम् तत्वशास्त्रम् किन्तु जीवन शास्त्रम् अपि। स्वस्य लघुम् मुखॆ यथा यशॊदायै ब्रह्मान्डम् अदर्शयति तथा परिमित कालॆषु अस्मिन् लघुगृन्थे सकल आध्यात्मिक तत्वानि जीवन शास्त्रॆण समन्वयन् निरूपयति गीताचार्यः। भवरॊगॆन पीडितॆभ्य: चरवैद्यः इव सिद्धौषधरूपम् वॆदॊपनिदाम् रहस्यम् नवीनरीत्या हृदयङ्गमरूपॆण उद्घाटयति श्रीकृष्णः ।
      ऎवमॆव समस्तमपि सम्स्कृत वाङ्मयम् अस्मात् पूर्वजैः अस्माकमॆव समुत्कर्षाय हितसाधनाय च महता परिशृमॆण च तपश्चर्यया च विरचितमस्ति। सम्स्कृत कृतयः खलु अस्माकम् परम्परागतम् सर्वॊत्कृष्ट धनमस्ति। अतः वयम् सर्वॆ सम्स्कृतकाव्यानाम् अध्ययनशीलाः भवॆम ।

Wednesday, February 8, 2012

ಚಳಿಗಾಲದ ಮು೦ಜಾವಲ್ಲೊಮ್ಮೆ ಜಾಗಿ೦ಗ್ ಹೊರಟಾಗ.......


ಕಳೆದ ವಾರ ಒ೦ದೆರಡು ದಿನ ಥೇಟ್ ಉತ್ತರ ಭಾರತದ೦ತೆ ಚಳಿ ಅಟಕಾಯಿಸಿಕೊ೦ಡಿತ್ತು. ಮಡಿಕೇರಿಯಲ್ಲಿ 4 ಡಿಗ್ರಿ, ಮೈಸೂರಿನಲ್ಲಿ 8 ಡಿಗ್ರಿಯಷ್ಟು ಕಡಿಮೆ ತಾಪಮಾನ ಎ೦ಬುದು ಪಕ್ಕಾ ಕರಾವಳಿಗನಾದ ನನಗೆ ಹೆದರಿಕೆ ಹುಟ್ಟಿಸುವ ಸ೦ಗತಿ. ನನಗೂ ಚಳಿಗೂ ಅಷ್ಟು ದೂರ. ಗ್ರಹಚಾರಕ್ಕೆ ಅದೇ ದಿನ ನಮ್ಮ ಶಿರಸಿಯ ಮನೆಯಲ್ಲಿದ್ದೆ. ಶಿರಸಿಯ ಛಳಿ ಎ೦ದರೆ ಕೇಳಬೇಕೇ? ಅದನ್ನು ಕ೦ಬಳಿಗಳ ಲೆಕ್ಕದಲ್ಲೇ ಅಳೆಯಬೇಕು. ಬಾಗಿಲು ತೆರೆಯದಿದ್ದರೂ ಕಿಡಕಿಯ ಸ೦ದಿನಿ೦ದ ಒಳನುಗ್ಗುವ ಕಾವಳ ಬೇಡಬೇಡವೆ೦ದರೂ ಮೈಮನಗಳನ್ನು ಪುಳಕಗೊಳಿಸುತ್ತದೆ. ಇರುಳ ಚಾದರದೊಳಗೆ ತಲೆಮರೆಸಿಕೊ೦ಡಿದ್ದ ಬೆಳಗು ಮ೦ಜಿನ ರಾಶಿಯನ್ನು ಮೀರಿಬರುವುದು ತೀರಾ ನಿಧಾನ. ಗ೦ಟೆ ಎ೦ಟು ಕಳೆದರೂ ಕ೦ಬಳಿ ಬಿಟ್ಟೇಳದ ಜನ. ಜೊತೆಯಲ್ಲಿ ಜನವಿದ್ದರೆ ನಿಟ್ಟೆಯಲ್ಲಿದ್ದಾಗ ಪ್ರತಿನಿತ್ಯ ಬೆಳ್ಳ೦ಬೆಳಗೆ ವಾಕಿ೦ಗ್ ಹೋಗುತ್ತಿದ್ದೆ. ಶನಿವಾರ ಬ೦ತೆ೦ದರೆ ಬೆಳಗ್ಗೆ ನಾಲ್ಕೂವರೆಗೆ ಎದ್ದು ಘೋರ ಕಪ್ಪಿನಲ್ಲಿ ಗವ್ವೆನ್ನುವ ಹಾದಿಯಲ್ಲಿ ನಡೆದು ಐದೂವರೆಗೆ ಬರುವ ಮೊದಲ ಬಸ್ಸು ಹಿಡಿದು ಸುರತ್ಕಲ್ಲಿನಲ್ಲಿಳಿದು ಅಲ್ಲಿ೦ದ ರೈಲು ಹತ್ತಿ ಕುಮಟಾಕ್ಕೂ, ಕುಮಟಾದಿ೦ದ ರವಿವಾರ ಮಧ್ಯರಾತ್ರಿ ಕಳೆದು ಮೂರೂವರೆಗೆ ಬರುವ ಮತ್ಸ್ಯಗ೦ಧ ಹತ್ತಿ ಎ೦ಟೂವರೆಯೊಳಗೆ ನಿಟ್ಟೆ ತಲುಪುವುದನ್ನು ಎರಡು ವರ್ಷ ತಪ್ಪದೇ ಆಚರಿಸಿಕೊ೦ಡುಬ೦ದ ನನಗೆ ಮು೦ಜಾವಿನ ಮಬ್ಬಿನಲ್ಲಿ ಸತ್ತುಬಿದ್ದ ಖಾಲಿ ರಸ್ತೆಗಳನ್ನೂ, ಮ೦ಜಿನ ಟೊಪ್ಪಿ ತೊಟ್ಟ ಪುಟ್ಟ ಬೆಟ್ಟಗಳನ್ನೂ, ನಿಷೆ ಕಳೆದು ಮೆಲ್ಲನೆ ಉದಯಿಸುವ ಉಷೆಯ ಪ್ರಥಮ ನೋಟವನ್ನೂ ನೋಡುವುದೆ೦ದರೆ ಅದೇನೋ ಖುಷಿ. ಮನೆಯಲ್ಲಾಗಿದ್ದರೆ ಒಬ್ಬನೇ ಮುಸುಕು ಹೊದ್ದು ಮಲಗುತ್ತಿದ್ದೆನೇನೋ. ಶಿರಸಿಯ ಕೊರೆಯುವ ಚಳಿ ನೋಡಿ ಬೆಳಗ್ಗೆದ್ದು  ಒ೦ದು ರೌ೦ಡ್ ವಾಕಿ೦ಗ್ ಹೋಗಲೇಬೇಕು ಎ೦ದು ನಿರ್ಧರಿಸಿದೆ. ಬೆಳಗ್ಗೆ ಐದೂವರೆಗೆದ್ದು ನೋಡಿದರೆ ಸುತ್ತಲೂ ಏನೂ ಕಾಣಿಸದಷ್ಟು ಮಬ್ಬುಗತ್ತಲು. ರಾತ್ರಿಯೆಲ್ಲ ಸುರಿದ ಮ೦ಜಿನಿ೦ದ ನೆಲ ವಿಚಿತ್ರವಾಗಿ ತೊಯ್ದಿತ್ತು. ಹೊರಬ೦ದರೆ ಮೂಗು ಕಟ್ಟಿಕೊ೦ಡು, ಹಲ್ಲುಗಳು ಕಟಕಟ ಎನ್ನಲು ಶುರುಮಾಡಿದವು. ಈ ಚಳಿಯಲ್ಲಿ ಯಾರು ಹೋಗುತ್ತಾರಪ್ಪ ಎ೦ದು ಆಲೋಚಿಸುತ್ತ ನಿ೦ತೆ. ಅಷ್ಟರಲ್ಲಿ ಪಕ್ಕದ ಮನೆಯ ಅಜ್ಜಿ ಅ೦ಗಳ ಗುಡಿಸಲು ಪೊರಕೆ ಹಿಡಿದು ಹೊರಬ೦ದಳು. ಅಬ್ಬ, ಘಾಟಿ ಮುದುಕಿ! ಚಳಿ-ಗಿಳಿ ಒ೦ದೂ ಆಗಲ್ವೇ ಇವಳಿಗೆ, ನನಗಿ೦ತಾ ಇವಳೇ ಬೆಟರ್ ಅ೦ದುಕೊಳ್ಳುತ್ತ ಕು೦ಬಾರಓಣಿಯಿ೦ದ ಗಣೇಶ ದೇವಸ್ಥಾನದ ರಸ್ತೆಯಲ್ಲಿ ಮೇಲೆ ಹತ್ತಿ ಬಸ್ಟ್ಯಾ೦ಡಿನ ದಾರಿಗೆ ಬ೦ದರೆ ಜನರ ಸುಳಿವೇ ಇರಲಿಲ್ಲ. ಅ೦ಗಡಿಗಳೆಲ್ಲ ಮ೦ಜಿನ ಶಟರ್ ಎಳೆದು ಮಲಗಿದ್ದವು. ಸ್ವಲ್ಪ ಮು೦ದೆ ಹೋದರೆ ಈಗ ತಾನೇ ತರಕಾರಿ ತು೦ಬಿಕೊ೦ಡು ಬ೦ದ ಲಾರಿಯಿ೦ದ ಇಳಿದ ಡ್ರೈವರನೊಬ್ಬ ಬೀಡಿ ಹಚ್ಚುತ್ತಿದ್ದ. ದೂರದ ಗೂಡ೦ಗಡಿಯಲ್ಲಿ ಹೆ೦ಗಸು ಮತ್ತವಳ ಗ೦ಡ ಬೆಳಗಿನ ಗಿರಾಕಿಗಳಿಗಾಗಿ ಚಹಾ ಬಿಸಿಮಾಡುತ್ತಿದ್ದರುಬಲಕ್ಕೆ ತಿರುಗಿ ಸೀದಾ ಮಾರಿಕಾ೦ಬ ದೇವಸ್ಥಾನದ ದಾರಿ ಹಿಡಿದೆ. ಅದಾಗಲೇ ತನ್ನ ದಿನಚರಿ ಆರ೦ಭಿಸಿದ್ದ ಕತ್ತಲೆಯಷ್ಟೇ ಕಪ್ಪಾದ ಕಾಗೆಯೊ೦ದು ತನ್ನದೇ ಬಣ್ಣದ ಪ್ಲಾಸ್ಟಿಕ್ಕಿನೊಳಗೆ ಅದೇನನ್ನೋ ಹುಡುಕುತ್ತಿತ್ತು. ಅದಕ್ಕೆ ಬೇಕಾದ್ದು ಸಿಕ್ಕಿತೇನೋ, ಪ್ಲಾಸ್ಟಿಕ್ಕನ್ನು ಕಚ್ಚಿಕೊ೦ಡು ಹಾರಿಹೋದ ಅದು ಊರಿಗೆಲ್ಲ ಕತ್ತಲೆ ಹ೦ಚುತ್ತಿದ್ದ೦ತೆ ಭಾಸವಾಯ್ತು. ದೇವಸ್ಥಾನದ ಎದುರಿನ ಮರದ ಮೇಲೆ ಅಲ್ಲಾಡದಿದ್ದ ಗೆಲ್ಲಿನಲ್ಲಿ ಬೆಳಗಿನ ಮೌನ ಅಲ್ಲಾಡುವ೦ತೆ ಮೆಲ್ಲ ಹಾಡುತ್ತಿದ್ದ ಹಕ್ಕಿಗಳು ಯಾರನ್ನೋ ಎಚ್ಚರಿಸುತ್ತಿದ್ದವು. ಅದು ಸೂರ್ಯನನ್ನೋ, ದೇವಿಯನ್ನೋ ಅಥವಾ ಜನರನ್ನೋ...! ಬಾನಿನ್ನೂ ಕೆ೦ಪಾಗಿರಲಿಲ್ಲ. ಸೂರ್ಯನಿನ್ನೂ ಮೂಡಲು ಸ್ವಲ್ಪ ಹೊತ್ತಿತ್ತು. ಹಾಲಿನ ವ್ಯಾನಿನಿ೦ದ ಹುಡುಗನೊಬ್ಬ ಹಾಲಿನ ಪ್ಯಾಕೆಟ್ಟುಗಳನ್ನು ಇಳಿಸುತ್ತಿದ್ದ. ಹೆ೦ಗಸೊಬ್ಬಳು ಅದಾಗಲೇ ಹೂವಿನ ರಾಶಿಯೆದುರು ಕುಳಿತು ಮಾಲೆ ಕಟ್ಟಲು ಆರ೦ಭಿಸಿದ್ದಳು. ಇನ್ನೊ೦ದಿಷ್ಟು ಜನ ವಾಕಿ೦ಗೋ ಅಥವಾ ಇನ್ನೇನೋ ಮಾಡುತ್ತಿದ್ದರು. ಜನ ಸೂರ್ಯನಿಗಾಗಿ ಅಥವಾ ಇನ್ನೊಬ್ಬನಿಗಾಗಿ ಕಾಯುತ್ತ ಕೂರುವುದಿಲ್ಲ ಅಲ್ಲವೇ? ಅಲ್ಲಿ೦ದ ಕೃಷಿ ವಿಶ್ವವಿದ್ಯಾಲಯದವರೆಗೂ ಯಾರೂ ಇರಲಿಲ್ಲ. ಇದ್ದರೂ ನನ್ನದೇ ಲಹರಿಯಲ್ಲಿ ನಡೆಯುತ್ತ ಹೋದವನಿಗೆ ಯಾರೂ ಇದ್ದ೦ತೆ ಅನಿಸಲಿಲ್ಲ. "ಅ೦ಜಾನ್ ಶೆಹರ್ ಮೆ ಅ೦ಜಾನ್ ರಾಸ್ತೆ, ಅ೦ಜಾನ್ ಲೋಗ್. ಮೈ ಬಹುತ್ ದೇರ್ ತಕ್ ಚಲತಾ ರಹಾ, ತುಮ್ ಬಹುತ್ ದೇರ್ ತಕ್ ಯಾದ್ ಆತೇ ರಹೇ" ಎ೦ದು ನಾನೇ ಅ೦ದೊಮ್ಮೆ ಬರೆದಿದ್ದ ಕವಿತೆ ನೆನಪಾಯ್ತು. ಯಾರಿಗಾಗಿ ಬರೆದಿದ್ದೆನೋ ಅವರೇ ನೆನಪಾಗಲಿಲ್ಲ. ಮನೆಯೊಳಗೆ ರಗ್ಗುಗಳು ಮಗ್ಗಲು ಬದಲಾಯಿಸುತ್ತಿದ್ದವು. ಪೂರ್ವದಲ್ಲಿ ಉದಯರಾಗ ಹೊಮ್ಮಲು ಅದಾಗಲೇ ಶುರುವಾಗಿತ್ತುಹಿ೦ದಿರುಗಿ ನೋಡಿದರೆ ಮೂರ್ನಾಲ್ಕು ಕಿಲೋಮೀಟರ್ ಬ೦ದುಬಿಟ್ಟಿದ್ದೆ. ಪುನಃ ತಿರುಗಿ ಯಾರು ನಡೆಯುತ್ತಾರೆ, ಮನೆಗೆ ಫೋನ್ ಮಾಡಿ ಬೈಕ್ ತರಲು ಹೇಳಿದರಾಯ್ತೆ೦ದು ಕಿಸೆಗೆ ಕೈ ಹಾಕಿದರೆ ಮೊಬೈಲ್ ಮರೆತು ಬ೦ದಿದ್ದೆ. ಅಕ್ಕ-ಪಕ್ಕ ಯಾರೂ ಕಾಣಲಿಲ್ಲ. ಥತ್ ಗ್ರಹಚಾರವೇ, ಒಳ್ಳೆ ಕತೆ ಆಯ್ತಲ್ಲ ಈ ಜಾಗಿ೦ಗ್ ಸಹವಾಸ, ಇನ್ಮು೦ದೆ ಬೈಕ್ ತರದೇ ಯಾವ ಜಾಗಿ೦ಗಿಗೂ ಬರಬಾರದು ಎ೦ದು ಬೈದುಕೊಳ್ಳುತ್ತ ತಿರುಗಿ ಮನೆಯೆಡೆ ನಡೆಯಲು ಶುರುಮಾಡಿದೆ.

Friday, January 13, 2012

ಇತಿ ಪತ್ನಿ ಪುರಾಣಂ



ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ ಎಂಬುದು ಕೆಲವರ ಹಾಡಾದರೆ, ಹೆಂಡತಿ ಪ್ರಾಣ ಹಿಂಡುತಿ ಎಂಬುದು ಕೆಲವರ ಹಳಿವು. ಮದುವೆಯಾಗದವರಿಗೆ ಹೆಂಡತಿಯ ಜಾತಕ ತಿಳಿಯಲು ಕುತೂಹಲವಿದ್ದರೆ ಮದುವೆಯಾದವರ ಜಾತಕ ಹೇಗೂ ಹೆಂಡತಿಯ ಕೈಯಲ್ಲೇ ಇರುತ್ತದೆ. ಹೆಂಡತಿಯ ಜಾತಕ ತಿಳಿಯಲು ಯಾರಿಗೆ ಇಷ್ಟವಿಲ್ಲ ಹೇಳೀ?
ಸರಸೋದಾರಪದಾಸರಸ್ವತಿಯೆಂದೇ ಬಿರುದಾಂಕಿತಳಾದ ವಿಜಯನಗರದ ಅರಸು ಕಂಪಣನ ರಾಜಮಹಿಷಿ ಗಂಗಾದೇವಿ ತನ್ನಮಧುರಾ ವಿಜಯವೆಂಬ ಐತಿಹಾಸಿಕ ಕಾವ್ಯದಲ್ಲಿ ಹೀಗೆ ಬರೆದಿದ್ದಾಳೆ.
ನಿರ್ದೋಷಾಪ್ಯಗುಣಾ ವಾಣೀ ನ ವಿದ್ವಜ್ಜನರಂಜಿನೀ |
ಪತಿವ್ರತಾಪ್ಯರೂಪಾ ಸ್ತ್ರೀ ಪರಿಣೇತ್ರೇ ನ ರೋಚತೇ ||
ದೋಷರಹಿತವಾಗಿರುವ ಮಾತ್ರಕ್ಕೆ ಕಾವ್ಯವು ವಿದ್ವಾಂಸರ ಮನಸೆಳೆಯಲಾರದು. ವಿದ್ವಾಂಸರಿಗಿಷ್ಟವಾದರೂ ಒಳ್ಳೆಯ ಕಾವ್ಯ ಜನರಿಗಿಷ್ಟವಾಗಬೇಕಲ್ಲ?( ನನ್ನ ಕತೆಯೂ ಅದೇ. ಚೆನ್ನಾಗಿದೆ, ಆದ್ರೆ ಅರ್ಥ ಆಗ್ಲಿಲ್ಲ ಅನ್ನೋರೇ ಜಾಸ್ತಿ). ಪತಿವ್ರತೆಯಾಗಿದ್ದರೂ ಸುಂದರಳಲ್ಲದ ಪತ್ನಿಯನ್ನು ಯಾವ ಪತಿಯೂ ಇಷ್ಟಪಡುವುದಿಲ್ಲ. ಎಲ್ಲ ಗಂಡಂದಿರಿಗೂ ಹೆಂಡತಿ ಪತಿವ್ರತೆಯಲ್ಲದಿದ್ದರೂ ನೋಡಲು ಸುಂದರವಾಗಿದ್ದರೆ ಸಾಕು. ಸುಂದರಿ ಎಂದ ಕೂಡಲೇ ಸಂಸ್ಕೃತದ ಮತ್ತೊಂದು ಸುಭಾಷಿತಭಾರ್ಯಾ ರೂಪವತೀ ಶತೃನೆನಪಾಯ್ತು. ಸುಂದರವಾದ ಹೆಂಡತಿಯೇ ಗಂಡನ ಶತ್ರು ಎಂದು ಕೇಳಿದ ಪುಣ್ಯಾತ್ಮನೊಬ್ಬ ಮದುವೆಯ ರಾತ್ರಿ ತನ್ನ ಹೆಂಡತಿಯ ಮೂಗು ಕತ್ತರಿಸಿದ್ದನಂತೆ. ಹೆಂಡತಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಯಾರು ಕೂರುತ್ತಾರೆ ಎಂಬ ದೂರಾಲೋಚನೆಯಿರಬಹುದು.!!!
ಇದೇನಪ್ಪ, ಇವನಿಗೆ ಮದುವೆಯಾಗದಿದ್ದರೂ(ಮದುವೆಯಾಗಿಲ್ಲ ಅಷ್ಟೆ ಹೊರತೂ ಬ್ರಹ್ಮಚಾರಿಯಲ್ಲ!!!) ಹೆಂಡತಿಯ ಬಗ್ಗೆ ಇಷ್ಟೆಲ್ಲ ಬರೆಯುತ್ತಿದ್ದಾನೆಂದು ಆಶ್ಚರ್ಯಪಡಬೇಡಿ. ಮದುವೆಯಾಗದೇ ಹೆಂಡತಿಯ ಬಗ್ಗೆ ಕಮೆಂಟ್ ಮಾಡಿದರೆ ಹುಷಾರ್, ಪ್ರತಿಭಟನೆ ಎದುರಿಸಬೇಕಾದೀತು ಎಂದು ನನ್ನ ಗೆಳತಿಯೊಬ್ಬಳು ಈಗಾಗಲೇ ಬೆದರಿಕೆ ಹಾಕಿದ್ದಾಳೆ. ಕೋಳಿಯಂತೆ ಮೊಟ್ಟೆಯಿಡದಿದ್ದರೂ ಆಮ್ಲೆಟ್ ಬಗ್ಗೆ ಕೋಳಿಗಿಂತ ಜಾಸ್ತಿಯೇ ಗೊತ್ತು ನನಗೆ. ಅಷ್ಟಕ್ಕೂ ಹೆಂಡತಿಯನ್ನು ಕಟ್ಟಿಕೊಂಡು ನನಗೇನೂ ಆಗಬೇಕಾಗಿಲ್ಲ(ಸದ್ಯಕ್ಕೆ). ಆದರೂ ನಾನು ಕಲಿತ ಡಿಜಿಟಲ್ ಎಲೆಕ್ಟ್ರಾನಿಕ್ಸಿಗಿಂತ ಭಾಷಾಶಾಸ್ತ್ರದ ಬಗ್ಗೆ ಹುಚ್ಚು ಹೆಚ್ಚಿರುವುದರಿಂದ ಹೆಂಡತಿಯೆಂಬ ಶಬ್ದ ಮತ್ತು ಅದರ ವ್ಯುತ್ಪತ್ತಿಯ ಬಗ್ಗೆಯೇ ಇಲ್ಲಿ ಬರೆಯುತ್ತಿದ್ದೇನೆ.
ಹೆಂಡತಿಶಬ್ದದ ಮೂಲ ಕನ್ನಡ ರೂಪ ಪೆಂಡಿತಿ’. ಇದರ ಬಹುವಚನ ಪ್ರಯೋಗ ಪೆಂಡಿರ್’. ಹೆಂಡತಿಗೆ ಬಹುವಚನ ಯಾರು ಕೊಡುತ್ತಾರೆ ಎನ್ನಬೇಡಿ. ಇದು ಕಲಿ ಪ್ರಭಾವವೇನೂ ಅಲ್ಲ. ಸಂಸ್ಕೃತದಲ್ಲಿ ದಾರಾಅರ್ಥಾತ್ ಹೆಂಡತಿಪುಲ್ಲಿಂಗ ಬಹುವಚನ, ಗಂಡನದ್ದು ಬರಿ ಏಕವಚನ. ಸಂಸ್ಕೃತದ ಸ್ತ್ರೀಶಬ್ದ ಪ್ರಾಕ್ರತದಲ್ಲಿ ಇತ್ಥೀಆಗಿ ತನ್ಮೂಲಕ ಕನ್ನಡದಲ್ಲಿ ಇತ್ತಿ, ಇತಿ, ತಿ ಮತ್ತು ಇಪ್ರತ್ಯಯಗಳಾಯ್ತು. ಪ್ರತ್ಯಯವಾದ ಇದು ಪುಲ್ಲಿಂಗ ನಾಮಪದಗಳ ಅಂತ್ಯದಲ್ಲಿ ಸೇರಿಕೊಂಡು ಸ್ತ್ರೀಲಿಂಗವಾಚಕವಾಗುತ್ತದೆಉದಾಹರಣೆಗೆ ಹೂವಾಡಿಗಎಂಬ ಪುಲ್ಲಿಂಗ ಶಬ್ದದ ಅಂತ್ಯದಲ್ಲಿ ಇತ್ತಿಪ್ರತ್ಯಯ ಸೇರಿ ಹೂವಾಡಿಗಿತ್ತಿ(ಹೂವಾಡಗಿತ್ತಿ)ಆಗುತ್ತದೆ. ಇತಿಪ್ರತ್ಯಯವು ಕುಂಬಾರಶಬ್ದದ ಅಂತ್ಯದಲ್ಲಿ ಸೇರಿ ಕುಂಬಾರಿತಿಆಗುತ್ತದೆ. ಅದೇ ರೀತಿ ತಿಪ್ರತ್ಯಯವು ಗೆಳೆಯಶಬ್ದದ ಜೊತೆ ಸೇರಿ ಗೆಳತಿಯಾಯ್ತು. ಅರಸ ಶಬ್ದಕ್ಕೆಪ್ರತ್ಯಯ ಸೇರಿ ಅರಸಿಯಾಯ್ತು. ಇದೇ ರೀತಿ ಪೆಣ್ ಶಬ್ದಕ್ಕೆತಿಪ್ರತ್ಯಯ ಸೇರಿಪೆಣ್ತಿಯಾಗಿರಬಹುದೇ? ಆದರೆ ಹಳೆಗನ್ನಡದಲ್ಲಿ ಈ ಪದಪ್ರಯೋಗವಿದೆಯೋ ಇಲ್ಲವೋ ತಿಳಿದಿಲ್ಲ. ಹಳೆಗನ್ನಡದಲ್ಲಿಪಕಾರವಿರುವ ಕೆಲ ಶಬ್ದಗಳು ಹೊಸಗನ್ನಡದಲ್ಲಿಹಕಾರವಾಗುತ್ತವೆ. ಉದಾಹರಣೆಗೆ ಪುಲಿ-ಹುಲಿ, ಪೆಣ್ಣು-ಹೆಣ್ಣು, ಪೋಗು-ಹೋಗು ಇತ್ಯಾದಿ. ಅದೇ ರೀತಿಹೆಣ್ತಿಎಂಬ ಶಬ್ದಕ್ಕೂ ಹಳೆಯ ಒಂದು ರೂಪವಿದ್ದಿರಬೇಕು. ಸಂಸ್ಕೃತದ ಅಂತಃಪುರಕ್ಕೆ ಹಳೆಗನ್ನಡದಲ್ಲಿಪೆಂಡವಾಸಎಂಬೊಂದು ಶಬ್ದವಿದೆ. ಇದರ ಅರ್ಥ ಪೆಂಡಿರ+ವಾಸ(ಹೆಂಡತಿಯರ ವಾಸ). ಹೆಂಡತಿಯನ್ನು ಸಂಬೋಧಿಸಲು ಸಂಸ್ಕೃತದಲ್ಲಿಶ್ರೀಮತಿಎಂಬ ಪದವನ್ನು ಬಳಸುತ್ತಾರೆ. ಆಹ್ವಾನ ಪತ್ರಿಕೆಗಳಲ್ಲಿ ಶ್ರೀ ಮತ್ತು ಶ್ರೀಮತಿ ಎಂದಿರುತ್ತದೆ. ಅದ್ಯಾವ ಲೆಕ್ಕದಲ್ಲಿ ಇವೆರಡು ಶಬ್ದಗಳನ್ನು ಬಳಸುತ್ತಾರೋ ಗೊತ್ತಿಲ್ಲ. ಯಾಕೆಂದರೆ ಎರಡೂ ಸ್ತ್ರೀಲಿಂಗ ಶಬ್ದಗಳೇ. ಶ್ರೀಮತಿಯ ಸರಿಯಾದ ರೂಪ ಈಕಾರಾಂತ ಸ್ತ್ರೀಲಿಂಗವಾದಶ್ರೀಮತೀ’. ಅಂಗ್ರೇಜಿಯಲ್ಲಿ ’madam' ಎಂಬ ಪದ ನಿಮಗೆ ತಿಳಿದಿದೆ. ಮಹಿಳೆಯರಿಗೆ ಗೌರವಸೂಚಕವಾಗಿ ಇದನ್ನು ಉಪಯೋಗಿಸುತ್ತಾರಾದರೂ ಪ್ರತಿಬಾರಿ ಮೇಡಮ್ ಎಂದು ಕರೆಯುವಾಗಲೂ ನನಗೆ ತೀರಾ ಮುಜುಗರವಾಗುತ್ತದೆ. ಕಾರಣ ಮೇಡಂನ ಮೂಲ ಫ್ರೆಂಚಿನ ’madame’  ಪದ. ಇದರರ್ಥನನ್ನ ಹೆಂಗಸು’. ಇದರ ಮೂಲ ವ್ಯುತ್ಪತ್ತಿ ಲ್ಯಾಟಿನ ಭಾಷೆಯ 'mea domina'. ಲ್ಯಾಟಿನ್ನಿನಲ್ಲಿ ಹೀಗೆಂದರೆನನ್ನ ಹೆಂಡತಿ’. ಪ್ರತಿಬಾರಿ ಮಹಿಳೆಯರನ್ನೆಲ್ಲ ಮಾತು ಮಾತಿಗೆ ಮೇಡಂ ಮೇಡಂ( ನನ್ನ ಹೆಂಡತಿ, ನನ್ನ ಹೆಂಡತಿ) ಎನ್ನುವ ಮೊದಲು ಸ್ವಲ್ಪ ಅರ್ಥ ತಿಳಿದುಕೊಳ್ಳಿ. ಭಾಷಾಶಾಸ್ತ್ರವನ್ನು ಕಟ್ಟಿಕೊಂಡು ಯಾರಿಗೇನಾಗಬೇಕು ಎಂದು ಉಡಾಫೆ ಹಾರಿಸುವವರೆಲ್ಲ ಮಾತಾಡುವ ಮೊದಲು ತಾವು ಉಪಯೋಗಿಸುವ ಪದಗಳ ಅರ್ಥ ತಿಳಿದಿದ್ದರೆ ಒಳಿತು ಅಲ್ಲವೇ? ಅಂಗ್ರೇಜಿಯಲ್ಲಿ ಹೆಂಡತಿಯಗೆ ’Mistress' ಎಂದೂ ಕರೆಯುತ್ತಾರೆ. ಯಾರನ್ನಾದರೂ ಪರಿಚಯಿಸುವಾಗ "she is my Mistress" ಎನ್ನುತ್ತಾರೆ. ಕೂಡಲೇ ನಾನು ಕೇಳುತ್ತೇನೆ ''Really? are you sure?''. ನಾನೇನೋ ತಮಾಷೆ ಮಾಡುತ್ತಿದ್ದೇನೆಂದು ಅವರ ಲೆಕ್ಕ. ಆದರೆ ಮೊದಲು ಇಂಗ್ಲೆಂಡಿನಲ್ಲಿ ಪತ್ನಿಯಲ್ಲದ ಆದರೆ ವ್ಯಕ್ತಿಯೊಡನೆ ಅಕ್ರಮ ಸಂಬಂಧ ಹೊಂದಿರುವ ಹೆಂಗಸನ್ನು ಆತನ ಮಿಸೆಸ್ ಎನ್ನುತ್ತಿದ್ದರು. ನಿಘಂಟಿನಲ್ಲೂ ಕೂಡ ಇದೇ ಅರ್ಥವಿದೆ. ಬೇಕಾದರೆ Cambridge ಅಥವಾ ಇನ್ನಾವುದೇ ನಿಘಂಟನ್ನು ತೆಗೆದು ನೋಡಿ. ಇನ್ನು ಮುಂದಾದರೂ ನಿಮ್ಮ ಹೆಂಡತಿಯನ್ನು ಯಾರಿಗಾದರೂ(ಕನಿಷ್ಟ ಪಕ್ಷ ನನ್ನಂಥವರಿಗೆ) ಪರಿಚಯಿಸುವಾಗ ಇವಳು ನನ್ನ ಮಿಸೆಸ್ ಎನ್ನಬೇಡಿ. ನೀವು ಒಳ್ಳೆಯವರಾದರೂ ನನ್ನಂಥವರು ಅನುಮಾನ ಪಡುತ್ತಾರೆ.
ತಿರುಗಿ ಹಳೆಗನ್ನಡಕ್ಕೆ ಬರುವುದಾದರೆಪೆಣ್(ಹೆಣ್)’ ಶಬ್ದಕ್ಕೆಇತಿಎಂಬ ಪ್ರತ್ಯಯ ಸೇರಿ ಪೆಣ್ಣಿತಿ, ಪೆಣ್ತಿ ಅಥವಾ ಹೆಣ್ತಿಯಾಗಿದೆ. ಆದರೆ ಹೆಂಡತಿಯಾಗಬೇಕಾದರೆಹೆಂಡಕ್ಕೆ ಇತಿ ಪ್ರತ್ಯಯ ಸೇರಬೇಕಾಗುತ್ತದೆ. ಹಾಗಾದರೆ ಹೆಂಡಕ್ಕೂ ಹೆಂಡತಿಗೂ ಏನಾದರೂ ಸಂಬಂಧವಿದೆಯೇ? ಗಂಡನಲ್ಲಿರುವಕಾರ ರೂಪ ಸಾಮ್ಯದಿಂದ ಹೆಣ್ತಿಯ ಮಧ್ಯಕಾರ ಆದೇಶವಾಗಿ ಸೇರಿ ಹೆಂಡತಿಯಾಗಿರಬಹುದಾದ ಸಾಧ್ಯತೆಗಳಿವೆ. ಆದ್ದರಿಂದಪೆಣ್ಣಿತಿಯು ಪೆಂಡಿತಿ-ಪೆಂಡತಿ-ಹೆಂಡತಿಯಾಗಿದೆ.
ಇತಿ ಪೆಂಡತಿ ಪುರಾಣಂ ಸಂಪೂರ್ಣಂ. ಬರಿ ಮದುವೆ ಆದರೆ ಸಾಲದು. ಹೆಂಡ್ತಿ ಜಾತಕಾನೂ ಸ್ವಲ್ಪ ತಿಳಿದಿಟ್ಕೊಳ್ಳಿ ನನ್ನ ಥರಾ.
ವಿ.ಸೂ: ಗಂಡನ ಜಾತಕವನ್ನು ಪ್ರತಿ ಹೆಂಡತಿಯೂ ಬರೆಯುವುದರಿಂದ ಅದನ್ನಿಲ್ಲಿ ಪ್ರತ್ಯೇಕವಾಗಿ ಬರೆಯುತ್ತಿಲ್ಲ. ನಿಮಗೆ ಬೇಕಾದರೆ ಹೆಂಡತಿಯನ್ನೇ ಕೇಳಿಕೊಳ್ಳಿ(ನಿಮ್ಮದೇ ಹೆಂಡತಿಯನ್ನು).

Tuesday, December 13, 2011

FDIನಿ೦ದ ಲಾಭಗಳು ಸಾಕಷ್ಟಿವೆ, ಆದರೆ....?

FDI ಬಗೆಗಿನ ಹಿಂದಿನ ಲೇಖನ ಓದಿದ ನನ್ನ ಗೆಳೆಯನೊಬ್ಬ ಇದರಿಂದ ಲಾಭಗಳೂ ಇವೆ, ಮೇಲಾಗಿ ಸರ್ಕಾರಕ್ಕೆ ಎಷ್ಟೆಲ್ಲ ತೆರಿಗೆ ಸಂಗ್ರಹವಾಗುತ್ತದೆ. ನೀನು ಬರೆದಿದ್ದು ತೀರಾ ಏಕಪಕ್ಷೀಯವಾಯ್ತು ಎಂದ. ವಸ್ತುನಿಷ್ಟತೆಯೆಂದರೆ ಅದಲ್ಲ. ವಸ್ತುನಿಷ್ಟತೆಯೆಂದರೆ ಲಾಭಗಳ ಬಗ್ಗೆಯೂ ಹೇಳಬೇಕು ಅಂದಅಭಿಪ್ರಾಯ ಭೇದಗಳು ಸಹಜ. ಆದರೆ ನಾನು ಬರೆದಿದ್ದರಲ್ಲಿ ತಪ್ಪೇಲ್ಲಿದೆ ತೋರಿಸು. ಮಾತ್ರವಲ್ಲ ಸಂತೆಯಲ್ಲಿ ತರಕಾರಿ ಮಾರುವವಳು 1೦ರೂ.ಗೆ 3 ಕಟ್ಟು ಬಸಳೆ ಸೊಪ್ಪು ಎಂದರೆ ಅವಳೊಡನೆ ಜಗಳ ಮಾಡಿ ಪಕ್ಕದಲ್ಲಿದ್ದವಳ ಹತ್ತಿರ ಚೌಕಾಸಿಯಲ್ಲಿ 8ರೂ.ಗೆ ನಾಲ್ಕು ಕಟ್ಟು ಕೊಳ್ಳುವವರು ನಾವು. ಅದೇ ರೀತಿ ಬಿಗ್ ಬಜಾರಿನಲ್ಲೋ, ವಾಲ್-ಮಾರ್ಟಿನಲ್ಲೋ ಜಗಳ ಮಾಡಕ್ಕಾಗತ್ತಾ? ಯಾವುದು ಲಾಭ ಹೇಳು ಅಂದೆ. ಆದರೆ ಅವನು ಹೇಳುವುದೂ ಒಂದು ರೀತಿ ಸರಿಯೇ. 4 ಕೋಟಿ ಚಿಲ್ಲರೆ ವ್ಯಾಪಾರಿಗಳು ಬೀದಿ ಪಾಲಾದರೂ ವಾಲ್-ಮಾರ್ಟಿನಂಥ ನಾಲ್ಕೈದು ಕಂಪನಿಗಳಿಗೆ ಲಾಭ ತಾನೇ? ಮೇಲಾಗಿ ಇದರಿಂದ 9೦ ಲಕ್ಷ ಉದ್ಯೋಗ ಸೃಷ್ಟಿಯಾಗುತ್ತದೆಂದು ಸರ್ಕಾರ ಹೇಳುತ್ತಿದ್ದೆ. ಒಬ್ಬರ ಉದ್ಯೋಗ ಕಿತ್ತುಕೊಂಡರೂ ಮತ್ತೊಬ್ಬರಿಗೆ ಉದ್ಯೋಗ ದೊರೆಯುತ್ತೆ. ಜನ ಹಾಳಾಗಿ ಹೋಗಲಿ ಬಿಡಿ, ಸರ್ಕಾರಕ್ಕೆ ಎಷ್ಟು ತೆರಿಗೆ ಸಂಗ್ರಹವಾಗುತ್ತೆ, ಎಷ್ಟು ರಾಜಕಾರನಿಗಳ ಕಿಸೆ ತುಂಬುತ್ತೆ ಅಲ್ವಾ? ಈಗಾಗಲೇ ಕರ್ನಾಟಕದಲ್ಲಿ ಜರ್ಮನಿಯ ಮೆಟ್ರೊ ಕಂಪನಿಯ ಮಳಿಗೆಗಳಿವೆ. ಮಾರುಕಟ್ಟೆ ಪ್ರವೇಶಿಸಿದ ಒಂಭತ್ತು ತಿಂಗಳುಗಳಲ್ಲಿ 2.5 ಲಕ್ಷಲಾಯಲ್ಟಿ ಕಾರ್ಡ್ಗಳನ್ನು ವಿತರಿಸಿದ ಮೆಟ್ರೊ ವ್ಯಾಪಾರಿಗಳಿಗೆ ಮಾತ್ರ ಸಗಟು ವ್ಯಾಪಾರ ಮಾಡಬೇಕೆಂಬ ನಿಯಮ ಉಲ್ಲಂಘಿಸಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲಾರಂಭಿಸಿತ್ತು. ಲಾಯಲ್ಟಿ ಕಾರ್ಡುಗಳೆಂದರೆ ಇಂತಿಷ್ಟು ಖರೀದಿ ಮಾಡಿದರೆ ಇಷ್ಟು ಬೋನಸ್ ಪಾಯಿಂಟ್ ಸಿಗುತ್ತದೆ. ಒಬ್ಬನೇ ವ್ಯಾಪಾರಿಯ ಬಳಿ ಖರೀದಿಸಿದರೆ, ಕಾರ್ಡ ತೋರಿಸಿ ಇಷ್ಟು ಪರ್ಸೆಂಟ್ ರಿಯಾಯಿತಿ ಪಡೆಯಬಹುದು. ಹೀಗೆ ಬೇಕಾಬಿಟ್ಟಿಯಾಗಿ ವೈದ್ಯರು, ಇಂಜಿನಿಯರುಗಳು, ವಕೀಲರೆನ್ನದೇ ವ್ಯಾಪಾರಿಗಳಲ್ಲದ ವ್ಯಕ್ತಿಗಳಿಗೂ ಲಾಯಲ್ಟಿ ಕಾರ್ಡ್ ನೀಡಲಾಗಿದೆ. ಇದರಿಂದ ಒಂದೆರಡು ರೂಪಾಯಿ ಕಡಿಮೆ ಬೆಲೆಗೆ ಸರಕುಗಳು ಸಿಗುತ್ತವೆಂದು ಯೋಚಿಸುವ ಬದಲು ಪಕ್ಕದ ಮನೆಯ ಸಣ್ಣ ವ್ಯಾಪಾರಿ ಬೀದಿಪಾಲಾಗುತ್ತಾನೆ ಎಂದು ಯೋಚಿಸಿದಾಗ ಪರಿಸ್ಥಿತಿಯ ಗಂಭೀರತೆ ಅರಿವಾಗುತ್ತದೆ. ನೀವು ಪಕ್ಕದ ಮನೆಯವ ಬೀದಿಪಾಲಾದರೆ ನನಗೇನು ಎನ್ನುವ ವ್ಯಕ್ತಿಗಳಾದರೆ ನನ್ನದು no comments.
ಇದು ಕೇವಲ ವಾಲ್-ಮಾರ್ಟ್ ಅಥವಾ FDI ಪ್ರಶ್ನೆಯಲ್ಲ. ವಿದೇಶಿ ಕಂಪನಿಗಳಿಗೆ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆದ ಪರಿಣಾಮ ಭಾರತದ ಗೃಹಕೈಗಾರಿಕಾ ಕ್ಷೇತ್ರ ಸರ್ವನಾಶವಾಗಿದೆ. ಮೊದಲ ಮೂರ್ನಾಲ್ಕು ವರ್ಷ ನಷ್ಟವಾದರೂ ಪರವಾಗಿಲ್ಲ, ಒಂದು ಸಲ ಮಾರುಕಟ್ಟೆ ತಮ್ಮ ಕೈಗೆ ಬಂದಮೇಲೆ ತಾವು ಹೇಳಿದ್ದೇ ಬೆಲೆ ಎಂಬ ಮನಸ್ಥಿಯಿಟ್ಟುಕೊಂಡಿರುವ ಕಂಪನಿಗಳ ವಿರುದ್ಧ ಸ್ಪರ್ಧಿಸುವ ಶಕ್ತಿ ಯಾರಲ್ಲಿದೆ? ಈಗಾಗಲೇ ಚೀನಾ ತನ್ನ ಅಗ್ಗದ ಎಲೆಕ್ಟ್ರಾನಿಕ್ ವಸ್ತುಗಳನ್ನು ನಮ್ಮ ಮಾರುಕಟ್ಟೆಯಲ್ಲಿ ತಂದು ಸುರಿಯುತ್ತಿದೆ. ಇನ್ನೇನು ತೈವಾನಿನ ಸಿದ್ಧ ಉಡುಪುಗಳು 2೦ ರೂ.ಗೆ ಸಿಗುವ ಕಾಲ ಬರಲಿವೆ. ತಾಕತ್ತಿದ್ದರೆ ಅದರೊಂದಿಗೆ ಸ್ಪರ್ಧಿಸಿ ನೋಡೋಣ. ಕಾರಣ ಸಿಂಪಲ್. ತೈವಾನ್ ತನ್ನ ಡೊಮೆಸ್ಟಿಕ ಇಂಡಸ್ತ್ರಿಗಳಿಗೆ ವಸ್ತುಗಳ ರಫ್ತಿನಲ್ಲಿ ಭಾರೀ ರಿಯಾಯಿತಿ ನೀಡುತ್ತದೆ. ಸಣ್ಣ ಕೈಗಾರಿಕೋದ್ಯಮಿಗಳಿಗೆ 3% ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಅದೇ ಭಾರತದಲ್ಲಿ ಬಡ್ಡಿದರ 14% ಕ್ಕಿಂತ ಹೆಚ್ಚು. ಯಾವ ಸಣ್ಣ ವ್ಯಾಪಾರಿ ಅಥವಾ ಕೈಗಾರಿಕೋದ್ಯಮಿ ಅದರೆದುರು ಸ್ಪರ್ಧಿಸಲು ಸಾಧ್ಯ? ಅಷ್ಟಕ್ಕೂ ಗೃಹಕೈಗಾರಿಕೆಗಳಿಗೆ ನಮ್ಮ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವಾದರೂ ಎಷ್ಟು? ಮೇಲಾಗಿ ಸ್ವದೇಶಿ ವಸ್ತುಗಳು ಎಂದೊಡನೆ ಮೂಗು ಮುರಿಯುವವರೇ ಹೆಚ್ಚು. ಇತ್ತೀಚೆಗಂತೂ ಸ್ವದೇಶಿಗೆ ಬಯ್ಯುವುದೆಂದರೆ ಅದೊಂದು ಹೊಸ ರೀತಿಯ ಫ್ಯಾಶನ್, ಜೊತೆಗೆ ಅವರಿಗೆ progressive ಎಂಬ ಬಿರುದು ಬೇರೆ. ಸ್ವದೇಶಿಯನ್ನು ಸಮರ್ಥಿಸುವವರೆಲ್ಲ ಮುಂದುವರೆಯಲು ಬಯಸದ 18 ಶತಮಾನದ ಪಳೆಯುಳಿಕೆಗಳು. ನಮ್ಮ ಕರ್ಮವೆಂದರೆ ರಾಷ್ಟ್ರೀಯತೆ ಅಥವಾ ಭಾಷಾಪ್ರೇಮವನ್ನು ತಿಳಿಸಲೂ ನಮಗೆ ಚೀನಾ ಅಥವಾ ಜಪಾನುಗಳ ಉದಾಹರಣೆಗಳು ಬೇಕು. ನಮ್ಮ ದೇಶದ ಉದಾಹರಣೆ ನೀಡಿ ನಾವು ರಾಷ್ಟ್ರೀಯತೆಯ ವ್ಯಾಖ್ಯಾನ ನೀಡುವಂತಿಲ್ಲ.
ಒಂದೆಡೆ ಬೇಡದ ವಿದೇಶಿ ಕಂಪನಿಯ ವಸ್ತುಗಳು ಕಡಿಮೆ ಬೆಲೆಗೆ ಸಿಗುತ್ತಿದ್ದರೆ ಇನ್ನೊಂದೆಡೆ ಅವಶ್ಯ ವಸ್ತುಗಳ ಮಾರುಕಟ್ಟೆಯೂ ಸಂಪೂರ್ಣವಾಗಿ ಅವುಗಳ ಪಾಲಾಗುತ್ತಿದೆ. ಉಪ್ಪಿನ ಮೇಲೆ ವಿಧಿಸಿದ ತೆರಿಗೆಯನ್ನು ವಿರೋಧಿಸಿ ಅಂದು ಗಾಂಧೀಜಿ ಅಂದು ನಡೆಸಿದ್ದ ಸತ್ಯಾಗ್ರಹ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿತ್ತು. ಅದೇ ಇಂದು ಜಾಗತೀಕರಣದ ಪರಿಣಾಮವಾಗಿ 5೦ ಪೈಸೆಗೆ ಸಿಗಬೇಕಿದ್ದ ಉಪ್ಪು 1೦ ರೂ.ಗೆ ಮಾರಾಟವಾಗುತ್ತಿದೆ. ಅದೂ ಹಿಂದುಸ್ತಾನ್ ಲೀವರ್ ಎಂಬ ಅಪ್ಪಟ ವಿದೇಶಿ ಕಂಪನಿಯಅನ್ನಪೂರ್ಣಎಂಬ ಶುದ್ಧ ಭಾರತೀಯ ಹೆಸರಿನಿಂದ. ಜೊತೆಗೆ ನಮ್ಮ ಕೇಂದ್ರ ಸರ್ಕಾರಆಯೋಡಿನ್ಯುಕ್ತ ಪುಡಿ ಉಪ್ಪನ್ನು( ’ಅನ್ನಪೂರ್ಣಎಂದು ಓದಿಕೊಳ್ಳಿ) ಮಾತ್ರ ಮಾರಾಟಮಾಡಬೇಕೆಂದು ಕಾನೂನು ರೂಪಿಸಿದೆ. ಅಯೋಡಿನ್ ಎಲ್ಲ ಬಗೆಯ ಉಪ್ಪುಗಳಲ್ಲೂ ಇರುತ್ತದೆ ಮತ್ತು ಮನುಷ್ಯನಿಗೆ ದಿನವೊಂದಕ್ಕೆ ಅಬ್ಬಬ್ಬ ಎಂದರೆ 125 ಮೈಕ್ರೋ ಗ್ರಾಮ್ ಅಯೋಡಿನ್ ಸಾಕು ಎನ್ನುವುದು ವಿಜ್ಞಾನ ಬಲ್ಲವರಿಗೆಲ್ಲ ತಿಳಿದ ಸಂಗತಿ. ಮಾತ್ರವಲ್ಲ ಪರ್ವತ ಪ್ರದೇಶದವರನ್ನು ಹೊರತುಪಡಿಸಿ ಉಳಿದವರಿಗೆ ಅಯೋಡಿನ್ ಕೊರತೆಯಿಂದ ಬರುವ ರೋಗಗಳು ತೀರಾ ಕಡಿಮೆ. ಆದರೂ ದೇಶೀ ಉಪ್ಪಿನಲ್ಲಿ ಅಯೋಡಿನ್ ಇಲ್ಲವೆಂದು, ಅದರಿಂದ ಜನರಿಗೆ ಗಳಗಂಡದಂಥ ರೋಗಗಳು ಬರಬಹುದೆಂಬ so called ಅತೀವ ಕಾಳಜಿಯಿಂದ ಸರ್ಕಾರ ವಿದೇಶಿ ಕಂಪನಿಗೆ ಉಪ್ಪು ಮಾರಾಟಮಾಡಲು ಅವಕಾಶ ಮಾಡಿಕೊಟ್ಟಿದೆ. ಇದೇ ಕಂಪನಿಗಳು ಕೇವಲ ಉಪ್ಪಿನ ಹೆಸರಿನಲ್ಲೇ ವರ್ಷವೊಂದಕ್ಕೆ 2೦೦೦ ಕೋಟಿ ರೂ.ಗಳನ್ನು ಲೂಟಿ ಹೊಡೆಯುತ್ತಿವೆ.ಉಳ್ಳವರು ದಿನಕ್ಕೆರಡು ಬಾರಿಕಾಫೀ ಡೇನಲ್ಲಿ ಕಾಫಿ ಕುಡಿಯಬಹುದು. ಮಾಂಟೇಕ್ ಸಿಂಗ್ ಅಹ್ಲುವಾಲಿಯಾನಂಥ 5 star ಅರ್ಥಶಾಸ್ತ್ರಿಗಳು 26 ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರೆಲ್ಲ ಶ್ರೀಮಂತರೇ ಎನ್ನಬಹುದು. ಆದರೆ ಇವತ್ತಿಗೂ ದೇಶದ 4೦ ಕೋಟಿ ಜನರ ದಿನದ ಆದಾಯ 1೦ರೂ.ಗಿಂತ ಕಡಿಮೆ. ಅವರು ತಮ್ಮ ದಿನದ ಊಟಕ್ಕೂ 1೦ರೂ. ಕೊಟ್ಟೇ ಉಪ್ಪು ಖರೀದಿಸಬೇಕು. ಇಲ್ಲವಾದರೆ ಅದೂ ಇಲ್ಲ ಎಂಬುದು ವ್ಯವಸ್ಥೆಯ ಕ್ರೂರ ವ್ಯ೦ಗ್ಯ.
ಈಗ ತುರ್ತಾಗಿ ಆಗಬೇಕಿರುವ ಕೆಲಸವೆ೦ದರೆ ರೈತರ ಉತ್ಪನ್ನಗಳಿಗೆ ಬೆ೦ಬಲ ಬೆಲೆ ನೀಡುವುದು. ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ವಸ್ತುಗಳು ಲಭ್ಯವಾಗಲು ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವುದು ಮತ್ತು APMC ವ್ಯವಸ್ತೆಯನ್ನು ಬಲಪಡಿಸುವುದು. ಇವೆಲ್ಲವೂ ಕೂಡ ಸರ್ಕಾರದ ಕರ್ತವ್ಯ. ಅದನ್ನು ಬಿಟ್ಟು ವಿದೇಶಿ ಕ೦ಪನಿಗಳಿಗೆ ರತ್ನಗ೦ಬಳಿ ಹಾಸುವುದು ಸಮಸ್ಯೆಗೆ ಪರಿಹಾರ ಅಲ್ಲವೇ ಅಲ್ಲ.
Last byte: ಭಾರತ ಸೂಪರ್ ಪವರ್ ಆಗುತ್ತಿದೆಯೆ೦ಬುದು ಎಲ್ಲರ ಕನಸು. ಈಗಿನ ಪರಿಸ್ಥಿತಿಯಲ್ಲಿ ಸೂಪರ್ ಪಾಪರ್ ಆಗದಿದ್ದರೆ ಸಾಕೆ೦ದು ನಮ್ಮ ಆಶಯ.